Saturday, December 6, 2008

ಗಿರಣಿ ವಿಸ್ತಾರ ನೋಡಮ್ಮ

ಶರೀಫರದು ವಿಮರ್ಶಾತ್ಮಕವಾದ ಹರಿತ ದೃಷ್ಟಿ.
ತಾವು ಹೋದಲ್ಲೆಲ್ಲ ತಮ್ಮ ಕಣ್ಣಿಗೆ ಬಿದ್ದ ವಸ್ತುಗಳ ಮೇಲೆ ಅವರದೊಂದು ವಿಮರ್ಶಾತ್ಮಕ ಗೀತೆ ಹೊರಬರುತ್ತಿತ್ತು.

ಹುಬ್ಬಳ್ಳಿಯಲ್ಲಿ ಆಗ ತಾನೇ ಹತ್ತಿಯನ್ನು ಹಿಂಜುವ ಗಿರಣಿ (ginning mill) ಪ್ರಾರಂಭವಾಗಿತ್ತು.
ಆ ಕಾಲದಲ್ಲಿ ಇಂತಹ ಯಾಂತ್ರಿಕ ಗಿರಣಿ ನಮ್ಮವರಿಗೆ ಸೋಜಿಗದ ವಸ್ತುವಾಗಿತ್ತು.
ಶರೀಫರೂ ಸಹ ಈ ಗಿರಣಿಯನ್ನು ಕಂಡು, ಬೆರಗಾಗಿ ಅದನ್ನು ತಮ್ಮ ಸಖಿಗೆ ವರ್ಣಿಸುತ್ತಿದ್ದಾರೆ.
ಅವರ ಕವನದ ಪೂರ್ತಿಪಾಠ ಹೀಗಿದೆ:
…………………………………………………………..
ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||೧||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||೨||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||೩||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||೪||
............................................
ಶರೀಫರ ಹಾಡುಗಳ ಪದ್ಧತಿಯನ್ನು ಗಮನಿಸಿರಿ.
ಅವರ ಅನೇಕ ಹಾಡುಗಳು ಪ್ರಾರಂಭವಾಗುವದು ಒಬ್ಬ ಹೆಣ್ಣುಮಗಳು ತನ್ನ ಗೆಳತಿಗೆ ವಿಷಯವೊಂದನ್ನು ಬಣ್ಣಿಸುವ ರೀತಿಯಲ್ಲಿ.

ಶರೀಫರು ಶಿಶುನಾಳಧೀಶನಲ್ಲಿ ಪತ್ನೀಭಾವವನ್ನು ಇಟ್ಟುಕೊಂಡವರು.
ಆದುದರಿಂದ ಜೀವಾತ್ಮರೆಲ್ಲರೂ ಶಿಶುನಾಳಧೀಶನ ಪತ್ನಿಯರೇ.
ಹೀಗಾಗಿ ಅವರು ತಮ್ಮ ಆಪ್ತ ಗೆಳೆಯರನ್ನು ಸಖೀಭಾವದಲ್ಲಿ ನೋಡುವದು ಸಹಜವೇ ಆಗಿದೆ.

ಅದಲ್ಲದೆ, ಗೆಳತಿಯರ ನಡುವೆ ನಡೆಯುವ ಆಪ್ತಸಲ್ಲಾಪದಲ್ಲಿ ಯಾವುದೇ ಭಿಡೆ, ಸಂಕೋಚ, ದೊಡ್ಡಿಸ್ತನ ಇರುವದಿಲ್ಲ.
ಇದು ಒಂದು absolutely free inter-action.
ಇದೇ ಮಾತನ್ನು ಗೆಳೆಯರ ಬಗೆಗೆ ಹೇಳಲು ಆಗುವದಿಲ್ಲ.

ಆದುದರಿಂದ ಈ ಹಾಡಿನ ಮೊದಲಲ್ಲಿ ಶರೀಫರು ತಮ್ಮ ಗೆಳತಿಗೆ ‘ಶರಣಿ’ ಎಂದು ಕರೆಯುತ್ತಾರೆ.
ಅಂದರೆ ಈ ವ್ಯಕ್ತಿಯೂ ಸಹ ದೇವಭಕ್ತಳೇ ಆಗಿರಬೇಕಾಯಿತು.
ಈ ಆಪ್ತನನ್ನು ಶರೀಫರು ತಮ್ಮ ಬದಿಯಲ್ಲಿ ಕರೆದು ಕೂಡಿಸಿಕೊಂಡು, ಹುಬ್ಬಳ್ಳಿಯಲ್ಲಿ ಹೊಸದಾಗಿ ಪ್ರಾರಂಭವಾದ ಗಿರಣಿಯ ಬಗೆಗೆ ಕೌತುಕದಿಂದ ವರ್ಣಿಸಲು ಪ್ರಾರಂಭಿಸುತ್ತಾರೆ:

“ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ”

ಬ್ರಿಟಿಶರ ಆಳಿಕೆ ಭಾರತದಲ್ಲಿ ಪ್ರಾರಂಭವಾದದ್ದರಿಂದಲೇ ಯಾಂತ್ರಿಕ ಗಿರಣಿಗಳು ಇಲ್ಲಿ ಸ್ಥಾಪನೆಯಾದವು. ಈ ಹಿನ್ನೆಲೆಯನ್ನು ಶರೀಫರು ತಮ್ಮ ಹಾಡಿನ ಪ್ರಾರಂಭದಲ್ಲಿ ಹೇಳುತ್ತಾರೆ:

“ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ”

೧೮೫೭ರಲ್ಲಿ ನಡೆದ ಹೋರಾಟದ ಬಳಿಕ ವ್ಹಿಕ್ಟೋರಿಯಾ ರಾಣಿಯು ಭಾರತದ ಚಕ್ರವರ್ತಿನಿಯೆಂದು ಘೋಷಿಸಿಕೊಂಡಳು.
ಆ ಸಮಯದಲ್ಲಿ ಮರಾಠಾ ಸಾಮ್ರಾಜ್ಯವೆಲ್ಲ ಬ್ರಿಟಿಶರ ಆಡಳಿತಕ್ಕೊಳಪಟ್ಟು ಮುಂಬಯಿ ಪ್ರಾಂತವೆಂದು ಕರೆಯಲ್ಪಡುತ್ತಿತ್ತು.
೧೮೧೭ರಲ್ಲಿ (ಹಳೆ)ಹುಬ್ಬಳ್ಳಿಯನ್ನು ಸಾಂಗ್ಲಿ ಸಂಸ್ಥಾನಿಕರು ಬ್ರಿಟಿಶರಿಗೆ ಮಾರಿದರು.
೧೮೩೦ನೆಯ ಇಸವಿಯಲ್ಲಿ ಮುಂಬಯಿ ಪ್ರಾಂತದ ಭಾಗವಾಗಿ ಧಾರವಾಡ ಜಿಲ್ಲೆ ನಿರ್ಮಾಣವಾಯಿತು.
೧೮೮೮ರಲ್ಲಿ ಧಾರವಾಡದಲ್ಲಿ ರೇಲವೆ ಪ್ರಾರಂಭವಾಯಿತು.
ಆಬಳಿಕ ಅಮೆರಿಕದಿಂದ ಆಮದಾದ ಹತ್ತಿಯ ಬೀಜಗಳಿಂದ ಈ ಭಾಗದಲ್ಲಿ ಹೊಸ ತರದ ಹತ್ತಿಯನ್ನು ಬೆಳೆಯುವದು ಪ್ರಾರಂಭವಾಯಿತು.
ಹತ್ತಿಯನ್ನು ಹಿಂಜುವ ಕಾರಖಾನೆಗಳು ಪ್ರಾರಂಭವಾದವು.
ಸಾರ್ವಜನಿಕ ಶಾಲೆಗಳು ಪ್ರಾರಂಭವಾಗಿ ಸಾರ್ವತ್ರಿಕ ಶಿಕ್ಷಣ ಸುರುವಾಯಿತು.
ಇದರಿಂದ ಎಲ್ಲೆಡೆಯೂ ಹೊಸ ಗಾಳಿ ಬೀಸಲಾರಂಭಿಸಿತು.
ಬ್ರಿಟಿಶರು ತಮ್ಮ ಆರ್ಥಿಕ ಸ್ವಾರ್ಥಕ್ಕಾಗಿಯೇ ಭಾರತದಲ್ಲಿ ಆಧುನಿಕತೆಯನ್ನು ತಂದಿರಬಹುದು.
ಆದರೆ ಜನಸಾಮಾನ್ಯರಿಗೆ ಮಾತ್ರ ಇದು ಹೊಸ ಯುಗದ ಪ್ರಾರಂಭವೆನ್ನುವಂತೆ ತೋರುತ್ತಿತ್ತು.

ಆದುದರಿಂದ ಶರೀಫರು ಧರಣಿಪತಿಯಾದ, ಭೂಮಂಡಲದ ರಾಣಿಯಾದ, ಕರುಣಾಪೂರ್ಣಳಾದ ವ್ಹಿಕ್ಟೋರಿಯಾ ರಾಣಿ ತನ್ನ ಆಧೀನದಲ್ಲಿರುವ ಈ ರಾಜ್ಯಕ್ಕೆ ತರಿಸಿದ ಘನಚೋದ್ಯವಿದು ಎಂದು ಈ ಗಿರಣಿಯನ್ನು ಬಣ್ಣಿಸುತ್ತಾರೆ.
ಇಂತಹ ಒಂದು ಆಧುನಿಕ ಯಾಂತ್ರಿಕ ಸಾಧನವನ್ನು ಇಲ್ಲಿಯ ಸಾಮಾನ್ಯ ಜನತೆ ಈಮೊದಲು ನೋಡಿರಲಿಲ್ಲ. ಅವರಿಗೆ ಇದೊಂದು ಸೋಜಿಗದ ವಸ್ತು.
ಆದುದರಿಂದ ಶರೀಫರು ಇದನ್ನು ಘನಚೋದ್ಯವೆಂದು ಕರೆದಿದ್ದಾರೆ.

ಚೀನಾದಿಂದ ಸಹ ಆ ಕಾಲಕ್ಕೆ ಸಕ್ಕರೆ, ರೇಶಿಮೆ ಮೊದಲಾದ ವಸ್ತುಗಳು ಇಲ್ಲಿ ಆಮದಾಗುತ್ತಿದ್ದವು.
ಚೀನಾದ ಔದ್ಯೋಗಿಕ ಜಾಣ್ಮೆಯ ಬಗೆಗೆ ಭಾರತೀಯರಿಗೆ ಗೌರವವಿತ್ತು.
ಆದುದರಿಂದ ಈ ಗಿರಣಿಯನ್ನು ಚೀನಾದ ವಿದ್ಯೆಯಿರಬಹುದೆ ಎನ್ನುವ ಅನುಮಾನವನ್ನು ಶರೀಫರು ವ್ಯಕ್ತಪಡಿಸುತ್ತಾರೆ.

ಈ ಆಧುನಿಕ ಯಂತ್ರಸಾಧನೆಯು ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ವಿಸ್ಮಯವನ್ನು ಶರೀಫರು ಈಗ ತಮ್ಮ ಸಖಿಗೆ ಬಿಚ್ಚಿ ಹೇಳುತ್ತಾರೆ:

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||

ಕಲ್ಲಿದ್ದಲನ್ನು ಕಾಯಿಸಿ, ಬಾಯ್ಲರುಗಳ ಮುಖಾಂತರ ನೀರನ್ನು ಉಗಿಯನ್ನಾಗಿ ಪರಿವರ್ತಿಸಿ, ಚಕ್ರಗಳನ್ನು ತಿರುಗಿಸುವ ಈ ಯಂತ್ರವನ್ನು ಶರೀಫರು ಅರ್ಥ ಮಾಡಿಕೊಂಡಿರಬಹುದು.
ಆದುದರಿಂದಲೇ ಅವರು ಜಲ, ಅಗ್ನಿ, ವಾಯು ಒಂದಾಗಿ ಎಂದು ಬಣ್ಣಿಸುತ್ತಾರೆ.
ಗಿರಣಿಯ ಚಿಮಣಿಗಳಿಂದ ಹೊರಡುವ ಹೊಗೆಯ ಕಂಬವೂ ಸಹ ಅವರ ದೃಷ್ಟಿಗೆ ಚಲುವಾಗಿಯೇ ಕಂಡು ಬೆರಗನ್ನು ಉಂಟು ಮಾಡುತ್ತದೆ.

ಇದೇನೊ ಗಿರಣಿಯನ್ನು ಚಾಲಿಸುವ ಚೈತನ್ಯವಾಯಿತು.
ಗಿರಣಿಯ ಒಳಗಿರುವ ಚಮತ್ಕಾರ ಏನು ಎನ್ನುವದನ್ನು ಶರೀಫರು ಈಗ ತಮ್ಮ ಸಖಿಗೆ ಈ ರೀತಿಯಾಗಿ ಹೇಳುತ್ತಾರೆ:

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||

ಒಳಗಿನ ಚಕ್ರಕ್ಕೆ ಒಂಬತ್ತು ಹಲ್ಲುಗಳಿದ್ದು, ಅದರಲ್ಲಿ ನೂಲಿಗೆ ಆಧಾರವಾಗಿ (=ಸೂತ್ರಾಧಾರ) ಲಾಳಿ ಇದೆ. ಈ ಲಾಳಿಯಲ್ಲಿ ಮೂರು ಕೊಳವಿಗಳು ಇದ್ದು ಅವು ನೂಲಿನ ಎಳೆಯನ್ನು ತುಂಬುತ್ತಾ ಇವೆ.
ಶರೀಫರು ಹೇಳುವಂತೆ ಆ ಗಿರಣಿಯಲ್ಲಿ ಒಂಬತ್ತು ಹಲ್ಲುಗಳ ಚಕ್ರ ಹಾಗೂ ಮೂರು ಕೊಳವಿಗಳ ಲಾಳಿ ಇದ್ದವೊ ಇಲ್ಲವೊ ಎನ್ನುವದು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ.
ಆದರೆ, ಗಿರಣಿಯ ಪ್ರತೀಕದಲ್ಲಿ ಈ ವರ್ಣನೆಯನ್ನು ಶರೀಫರು ಜೀವಾತ್ಮನಿಗೆ ಹೋಲಿಸಿ ಹೇಳಿರುವದು ಮೇಲ್ನೋಟಕ್ಕೇ ತಿಳಿದು ಬಿಡುತ್ತದೆ.

ಜಲ, ಅಗ್ನಿ ಹಾಗೂ ವಾಯುಗಳು ಒಂದಾಗಿ ನೆಲದಿಂದ (=ಪೃಥ್ವಿ) ಗಗನಕ್ಕೆ ಮುಟ್ಟುತ್ತವೆ ಎಂದರೆ ಪಂಚಮಹಾಭೂತಗಳು (=ಪೃಥ್ವಿ,ಅಪ್,ತೇಜ,ಆಕಾಶ,ವಾಯು) ಒಂದಾಗಿ ಜೀವಿಗೆ ರೂಪ ಕೊಟ್ಟಿವೆ ಎನ್ನುವದು ಶರೀಫರ ಒಡಪಿನ ಮಾತು.
ಈ ಶರೀರದಲ್ಲಿ ಒಂಬತ್ತು ರಂಧ್ರಗಳು ಇರುವದಾಗಿ ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶರೀಫರು ಅದನ್ನೇ ಒಂಬತ್ತು ದಳಗಳ ಚಕ್ರ ಅಂದರೆ ಯಂತ್ರಸಾಧನೆ ಎಂದು ಕರೆದಿರಬಹುದು.
ಈ ಯಂತ್ರದಲ್ಲಿ ಮೂರು ಕೊಳವಿಯ ಲಾಳಿಯು ಸೂತ್ರಾಧಾರವಾಗಿ ಅಥವಾ ಸೂತ್ರಧಾರನಾಗಿ ಎಳೆಯನ್ನು ತುಂಬುತ್ತಿದೆ.
ಎಳೆ ಅಂದರೆ ಶ್ವಾಸೋಛ್ವಾಸ.
ಎಳೆಯನ್ನು ತುಂಬುತ್ತದೆ ಅಂದರೆ ಜೀವನದ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತ ನಡೆಯಿಸುತ್ತಿದೆ.
ತುಂಬಾ ಮಹತ್ವದ ಲಾಳಿಯಾಯಿತು ಇದು!
ಇದರ ಮೂರು ಕೊಳಿವೆಗಳು ಯಾವವು?
ಇಡಾ, ಪಿಂಗಲಾ ಹಾಗೂ ಸುಷುಮ್ನಾ ಎನ್ನುವ ಮೂರು ನಾಡಿಗಳೇ ಈ ಮೂರು ಕೊಳಿವೆಗಳು.
ಈ ಮೂರು ನಾಡಿಗಳಲ್ಲಿ ಶ್ವಾಸವನ್ನು ನಿಯಂತ್ರಿಸುವದರ ಮೂಲಕ ಯೋಗಿಯು ಪ್ರಾಣಾಯಾಮದ ಸಿದ್ಧಿಯನ್ನು ಪಡೆಯುತ್ತಾನೆ.

ಆ ನಾಡಿಗಳಲ್ಲಿ ಸಂಚರಿಸಿದ ಶ್ವಾಸವು ಹಿಂಜಿ ಅಂದರೆ ಶುದ್ಧವಾಗಿ ಹಂಜಿಯಾಗುತ್ತದೆ.
ಹಂಜಿ ಅಂದರೆ ಹಿಂಜಲ್ಪಟ್ಟಂತಹ ಅರಳೆ.

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||

ಹಿಂಜಿದ ಅರಳಿಯನ್ನು ದಾರದ ಎಳೆ ಮಾಡಲು ಎರಡು ಗಾಲಿಗಳು ಬೇಕಾಗುತ್ತವೆ.
ಮೂಲಬ್ರಹ್ಮ ಅಂದರೆ ಯಾವುದೇ ಗುಣಸ್ವಭಾವ ಇಲ್ಲದ ನಿರ್ಗುಣ ಬ್ರಹ್ಮ.
ನಿರ್ಗುಣ ಬ್ರಹ್ಮ ಅಂದರೆ ಶುದ್ಧವಾದ, ಹಿಂಜಿದ ಅರಳಿ.
ಇಡಾ ಹಾಗೂ ಪಿಂಗಳಾ ಎನ್ನುವ ಎರಡು ಗಾಲಿಗಳಲ್ಲಿ(= ನಾಡಿಗಳಲ್ಲಿ) ಸಂಚರಿಸಿ ಶುದ್ಧವಾದ ಶ್ವಾಸವು
ಹಿಂಜಿದ ಅರಳಿಯಂತೆ ಅಥವಾ ನಿರ್ಗುಣ ಬ್ರಹ್ಮನಂತೆ ಇರುತ್ತದೆ.
ಇದು ಸುಷುಮ್ನಾ ನಾಡಿಯಲ್ಲಿ ಸಂಚರಿಸಿದಾಗ ದಾರದ ಕುಕ್ಕಡಿ ತಯಾರಾಗುತ್ತದೆ.
ಕುಕ್ಕಡಿ ಅಂದರೆ ನೂಲಿನ ಅಳತೆ.
ಇದು ತಕಲಿ, ಚರಕಾ ಅಥವಾ ಯಂತ್ರದ ಕೊನೆಯಲ್ಲಿ ತಯಾರಾಗುವ ನೂಲಿನ ಗಂಟು.

ಇಲ್ಲಿಯವರೆಗೆ ನೂಲು ತಯಾರಾದಂತಾಯ್ತು.
ಇದರಿಂದ ತಯಾರಾದ ಅರಿವೆ ಎಂತಹದೆಂತೀರಿ?

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||

ಪಟ್ಟೆ ಅಂದರೆ ರೇಶಿಮೆ ಸೀರೆ.
ಇದು ಪರಮಾನ ಎನ್ನುವ ಪಟ್ಟೆ.
ಪರಮ ಅಂದರೆ ಶ್ರೇಷ್ಠ ಅಥವಾ ದಿವ್ಯ ಎನ್ನುವ ಅರ್ಥದಲ್ಲಿ ಶರೀಫರು ಹೇಳುತ್ತಿದ್ದಾರೆಯೆ?
ಅಲ್ಲದೆ ಫರ್ಮಾನ್ ಎನ್ನುವ ಉರ್ದು ಪದಕ್ಕೆ ರಾಜಾಜ್ಞೆ ಎನ್ನುವ ಅರ್ಥವಿದೆ.
ಈ ದಿವ್ಯವಾದ ರೇಶಿಮೆ ಸೀರೆಯ ಮೇಲೆ ಪರಮಾತ್ಮನ ರಾಜಾಜ್ಞೆಯನ್ನು ನೇಯಿಸಿ ಮಾರಾಟಕ್ಕೆ ಇಡಲಾಗಿದೆ ಎನ್ನುವ ಅರ್ಥ ಇಲ್ಲಿ ಇರಬಹುದು.
ಇಂತಹ ದಿವ್ಯವಾದ ಪಟ್ಟೆಯನ್ನು ಆಸ್ಥೆಯುಳ್ಳವರು ಯಾರಾದರೂ ಅಂದರೆ ಭಕ್ತರು ಕೊಳ್ಳಬಹುದು.

ವಿಶ್ವಕ್ಕೆ ನೇಯ್ಗೆಯನ್ನು ಕಲಿಸಿದವನು ದೇವಾಂಗ ಋಷಿ.
ಆ ದೇವಾಂಗ ಋಷಿಯಿಂದ(=ಪರಮಾತ್ಮನಿಂದ) ಈ ಹಚ್ಚಡ(= ಹೊದಿಕೆ) ನೇಯಲ್ಪಟ್ಟಿತು.
ಆದುದರಿಂದ ಇಡೀ ಲೋಕವೆ ಈ ಹಚ್ಚಡವನ್ನು ಮೆಚ್ಚಿಕೊಂಡಿದೆ.
ಪರಮಾತ್ಮನ ಆಣತಿಗಳನ್ನು ಪಾಲಿಸುವ ಭಕ್ತಜನರು ಅವನ ಕೃಪೆಯೆನ್ನುವ ಈ ಹಚ್ಚಡವನ್ನು ಹೊಚ್ಚಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದು ಎನ್ನುವುದು ಶರೀಫರ ಇಂಗಿತ.

ಈ ರೀತಿಯಾಗಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ಈ ರಚನೆ, ಗಿರಣಿಯನ್ನು ಮಾನವನಿಗೆ ಹೋಲಿಸಿ, ಅವನ ಒಳಿತನ್ನು ಅವನಿಗೆ ನೆನಪಿಸುವದರೊಂದಿಗೆ ಮುಕ್ತಾಯವಾಗುತ್ತದೆ.

[ಟಿಪ್ಪಣಿ:
ಇಲ್ಲಿ ಶರೀಫರು ವ್ಹಿಕ್ಟೋರಿಯಾ ರಾಣಿಯನ್ನು ಕರುಣಾಮಯಿಯಾದ ಭೂಮಂಡಲ-ಚಕ್ರವರ್ತಿನಿ ಎಂದು ಕರೆದಿರುವದು ಒಂದು ಅನುಮಾನಕ್ಕೆ ಕಾರಣವಾಗಿದೆ.
ಶರೀಫರು ವಸಾಹತುವಾದಿ ಬ್ರಿಟಿಶ್ ಆಳಿಕೆಯ ಪರವಾಗಿದ್ದರೆ ಎನ್ನುವದೆ ಆ ಅನುಮಾನ.
ಈ ಅನುಮಾನದ ವಿಶ್ಲೇಷಣೆ ಮಾಡಲು ಭಾರತದ ಮೇಲಾದ ಪರಕೀಯ ಆಕ್ರಮಣಗಳನ್ನು ಗಮನಿಸಬೇಕು.
ಪರ್ಶಿಯನ್ನರು, ತುರುಕರು, ಮಂಗೋಲರು, ಮುಗಲರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು.
ಈ ಆಕ್ರಮಣದ ಬಗೆಗೆ ಭಾರತೀಯರಲ್ಲೆ ಎರಡು ಭಿನ್ನ ಅಭಿಪ್ರಾಯಗಳಿದ್ದವು.
“ಜಾಣ ಹಾಗು practical” ಅಭಿಪ್ರಾಯವೆಂದರೆ, ಪರಕೀಯರ ಜೊತೆಗೆ ಸಂಧಾನ ಮಾಡಿಕೊಂಡು, ರಾಜ್ಯದ ಅಮಾಯಕ ಜನತೆಯನ್ನು ಸಂಕಟಕ್ಕೆ ಒಳಪಡಿಸದಿರುವದು.
ಅಕಬರನ ಜೊತೆಗೆ ರಾಜಿಯಾದ ರಾಜಾ ಮಾನಸಿಂಗನು ಈ ಧೋರಣೆಯ ಅಧ್ವರ್ಯು.
ಪರಕೀಯರ ಪ್ರಭುತ್ವವನ್ನು ಒಪ್ಪಿಕೊಂಡು ಆತ್ಮಗೌರವ ಕಳೆದುಕೊಳ್ಳುವದಕ್ಕಿಂತ, ಹೋರಾಡಿ ಸಾಯುವದು ಮೇಲು ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ ಏಕಾಕಿ ರಾಜನೆಂದರೆ ರಾಣಾ ಪ್ರತಾಪಸಿಂಹ.
ಅಕಬರನ ನಂತರದ ತುರುಕರ ಅತ್ಯಾಚಾರ ಅತಿಯಾದಾಗ, ಶಿವಾಜಿ ಇಲ್ಲಿಯ ನಾಡ ಮಕ್ಕಳಿಗಾಗಿ ಹೋರಾಡಿ, ಮರಾಠಾ ರಾಜ್ಯ ಸ್ಥಾಪನೆ ಮಾಡಿದ.
ಅದಕ್ಕೂ ಮೊದಲೇ ವಿಜಯನಗರ ರಾಜ್ಯ ಸ್ಥಾಪನೆಯಾಗಿತ್ತು.

ಅದಾಗ್ಯೂ ಸಹ ಭಾರತದ ಬಹುಭಾಗದಲ್ಲಿ ವಿದೇಶೀಯರ ಆಡಳಿತವೇ ಜಾರಿಯಲ್ಲಿತ್ತು.
ಭಾರತೀಯನಾಗಿ ಪರಿವರ್ತಿತನಾಗಿದ್ದನು ಎಂದು ಹೊಗಳಲ್ಪಟ್ಟ ಅಕಬರನ ಆಸ್ಥಾನದ ಒಂಬತ್ತು ಮುಖ್ಯರಲ್ಲಿ ಏಳು ಜನ ವಿದೇಶೀಯರೇ(=ಪರ್ಶಿಯನ್ನರು) ಇದ್ದರು ಎನ್ನುವದನ್ನು ಗಮನಿಸಿದರೆ, ಭಾರತದ ಆಡಳಿತವು ಪರಕೀಯರಿಂದ ನಿಯಂತ್ರಿತವಾಗುತ್ತಿತ್ತು ಹಾಗೂ ಭಾರತವು ಪರಕೀಯರ ಆಳಿಕೆಯನ್ನು ಒಪ್ಪಿಕೊಂಡಿತ್ತು ಎನ್ನುವದು ಸ್ಪಷ್ಟವಾಗುತ್ತದೆ.

ಅದರಂತೆಯೇ ಬ್ರಿಟಿಶ್ ಆಳಿಕೆಯನ್ನು ಸಹ ಭಾರತೀಯರು ಒಪ್ಪಿಕೊಂಡರು.
ತುರುಕರ ಆಳಿಕೆಗಿಂತ ಬ್ರಿಟಿಶರ ಆಳಿಕೆಯಲ್ಲಿ ಭಾರತದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಬಂದವು.
ಜನಸಾಮಾನ್ಯರು ಬಹುಶಃ ಇದನ್ನು ಸಂತೋಷದಿಂದ ಸ್ವಾಗತಿಸಿರಬಹುದು.
ಅಷ್ಟೇ ಏಕೆ, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ ನೆಹರೂ ಮಹಾತ್ಮಾ ಗಾಂಧಿಯವರಂತಹವರೂ ಕೂಡ ಮೊದಲಲ್ಲಿ ಬ್ರಿಟಿಶ್ ಆಳಿಕೆಯನ್ನು ವಿರೋಧಿಸಿರಲಿಲ್ಲ ಎನ್ನುವದನ್ನು ಗಮನಿಸಬೇಕು.
ಬ್ರಿಟಿಶರು ಯಾವ ರೀತಿಯಲ್ಲಿ ಭಾರತದ ಆರ್ಥಿಕ ಶೋಷಣೆಯನ್ನು ಮಾಡಿದರು ಎನ್ನುವದು ಜನಸಾಮಾನ್ಯರಿಗೆ ಹೊಗಲಿ, ಪಂಡಿತರಿಗೇ ಅರ್ಥವಾಗಿರಲಿಲ್ಲ. ಇದರ ಒಂದು ಉದಾಹರಣೆ ಹೀಗಿದೆ:

ಬ್ರಿಟಿಶರು ಭಾರತವನ್ನು ವ್ಯಾಪಾರಕ್ಕೆಂದು ಪ್ರವೇಶಿಸಿದಾಗ, ಒಂದು ಪೌಂಡಿನ ಬೆಲೆ ಒಂದು ರೂಪಾಯಿಯ ಬೆಲೆಗಿಂತ ಕಮ್ಮಿಯಾಗಿತ್ತು. ಬ್ರಿಟಿಶರು ಇಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ತಮ್ಮ ಪಾರ್ಲಿಮೆಂಟಿನಲ್ಲಿ ಒಂದು ಶಾಸನ ಮಾಡಿ, ರೂಪಾಯಿ ಬೆಲೆಯ ಅಪಮೌಲ್ಯ ಮಾಡಿದರು.
ಇದರಿಂದಾಗಿ ಭಾರತದಿಂದ ಬ್ರಿಟನ್ನಿಗೆ ಹೋಗುವ ಸಾಮಗ್ರಿಗಳು ಸೋವಿಯಾದವು.
ಭಾರತಕ್ಕೆ ಬ್ರಿಟನ್ನಿನಿಂದ ಆಮದಾದ ವಸ್ತುಗಳು ದುಬಾರಿಯಾಗಿ ಬ್ರಿಟಿಶರಿಗೆ ಅಪಾರ ಲಾಭವಾಗತೊಡಗಿತು. ಇದನ್ನು ಅರ್ಥ ಮಾಡಿಕೊಂಡ ಏಕಮೇವ ವ್ಯಕ್ತಿಯಂದರೆ ಮೋತಿಲಾಲ ನೆಹರೂ.
ಅವರು ಅನೇಕ ಭಾರತೀಯ ಗಣ್ಯರಿಗೆ ಈ ಅನರ್ಥವನ್ನು ತಿಳಿಸಿ ಪತ್ರ ಬರೆದರು.
ಆದರೆ ಭಾರತೀಯ ಗಣ್ಯರಿಗೆ ಇದು ಅರ್ಥವಾಗಲೇ ಇಲ್ಲ.
(ಆಧಾರ :ಶ್ರೀ ಬಿ. ಆರ್. ನಂದಾರವರು ಬರೆದ ಪುಸ್ತಕ, The Nehrus.)

ಬ್ರಿಟಿಶರ ಬಹುಮುಖ ಶೋಷಣೆಯ ಮತ್ತೊಂದು ಉದಾಹರಣೆ ಹೀಗಿದೆ:
ಮೈಸೂರಿನಲ್ಲಿ ತಯಾರಾಗುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ನಿರ್ಮಾಣಕ್ಕೆ ಆಸ್ಟ್ರೇಲಿಯಾದಿಂದ ಕುರಿಗಳ ಕೊಬ್ಬು(=sheep tallow) ಆಮದಾಗುತ್ತಿತ್ತು!
ನಾವು ಸ್ವದೇಶಿ ನಿರ್ಮಿತಿ ಎಂದು ತಿಳಿದ ಸಾಬೂನಿನ ಬೆಲೆಯ ಬಹುಭಾಗವು ಬ್ರಿಟಿಶ್ ಕೊಲೊನಿ ಆಸ್ಟ್ರೇಲಿಯಾದ ಉದ್ಧಾರಕ್ಕಾಗಿ ಹೋಗುತ್ತಿತ್ತು ಎನ್ನುವದನ್ನು ಗಮನಿಸಿದಾಗ ಭಾರತದ ಆರ್ಥಿಕ ಶೋಷಣೆಯ ಕಲ್ಪನೆ ಬಂದೀತು.

ಇವೆಲ್ಲ ವಿಚಾರಗಳು ಆರ್ಥಿಕ ಪಂಡಿತರಿಗೇ ತಿಳಿದಿರಲಿಲ್ಲ.
ಅಲ್ಲದೆ ರಾಜಕಾರಣ ಹಾಗು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಘಟಾನುಘಟಿಗಳೂ ಸಹ ಬ್ರಿಟಿಶ್ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು.
ಅಂದ ಮೇಲೆ ಶರೀಫರೂ ಸಹ ಅಂತಹದೇ ಅಭಿಪ್ರಾಯ ಹೊಂದಿದ್ದರೆ ಆಶ್ಚರ್ಯವಾಗಬಾರದು.]

37 comments:

  1. ಸುನಾಥ್ ಸಾರ್,

    ಶರೀಫರ ಒಂದೊಂದು ಹಾಡಿನ ಮೂಲವನ್ನಿಡಿದು ಅದರ ಸಾರಾಂಶದ ಮೂಲಕ ಬ್ರಿಟಿಷರ ಅಳ್ವಿಕೆ, ವಿಕ್ಟೋರಿಯಾ ರಾಣಿ, ಜಲ, ವಾಯು, ಅಗ್ನಿಯ ಸಮ್ಮಿಳತ ಮತ್ತು ಅದರ ಸೋಜಿಗ, ಅಲ್ಲಿಂದ ಮೂಲಬ್ರಹ್ಮನ ಸ್ವರೂಪ ಇಡ, ಪಿಂಗಳ, ಸುಸುಮ್ನಾ ನಾಡಿಗಳು, ಸ್ವಾಸ, ಇದೆಲ್ಲದರ ಜೊತೆಗೆ ಬ್ರಿಟೀಷರು ಪರೋಕ್ಷವಾಗಿ ಮೋಸ ಮಾಡಿದ್ದು.... ಊಪ್.. ನಾನಂತು ಬೆರಗಾದೆ. ಇದೆಲ್ಲವನ್ನು ಶರೀಪರ ಪದ್ಯವನ್ನಿಟ್ಟುಕೊಂಡು ಒಂದೇ ಹಳಿಯ ಮೇಲೆ ತಂದು ಇಷ್ಟೊಂದು ಸೊಗಸಾಗಿ ನಮಗೆ ಕಟ್ಟಿಕೊಡಲು ನಿಮಗೊಬ್ಬರಿಗೆ ಸಾದ್ಯವೆನಿಸುತ್ತದೆ. ಏನೇನೋ ಬರೆದು ಓದುವ ನಮಗೆ ನಿಮ್ಮಿಂದಾಗಿ ಶರೀಪರ ಹಾಡುಗಳು ಈ ರೀತಿ ನಮಗೆ ಸಿಕ್ಕು ನಮ್ಮ ಪಾಪಕರ್ಮಗಳೆಲ್ಲಾ ಕಿಂಚಿತ್ತದಾದರೂ ಕಡಿಮೆಯಾದವೇನೋ ಎಂಬ ಪುನೀತ ಭಾವನೆ ಉಂಟಾಗುತ್ತದೆ.
    ಆಹಾಂ! ಸಾರ್, ನನ್ನ ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ಮುಂಜಾನೆ ಸಂತೆಯಲೊಬ್ಬ ಹಿರಿಯಜ್ಜ ಬಂದಿದ್ದಾನೆ. ಬಿಡುವು ಮಾಡಿಕೊಂಡು ಬನ್ನಿ.

    ReplyDelete
  2. ಶಿವು,ಇವು ಹಳೆಗಾಲದ ಹಾಡುಗಳಲ್ಲವೆ!
    ಹೀಗಾಗಿ ಅದಕ್ಕೆ ಸಂಬಂಧಿಸಿದ referance ಕೊಡಲೇ ಬೇಕಾಗುತ್ತದೆ, ನೋಡಿ.

    ReplyDelete
  3. ಅಂಕಲ್,
    ಶರೀಫರ ಕವನದಲ್ಲಿ ಯಾವಾಗಲು ನಮ್ಮ ಜೀವನಕ್ಕೆ ಸಂಬಂಧಿಸಿದ ಅಂಶಗಳನ್ನು ಕುರಿತು ಬಾರೆದಿರುತ್ತಾರೆ ಅನಿಸುತ್ತೆ.
    ಮೊದಲು ಓದುವಾಗಲೇ ಎರಡು ಅರ್ಥ ಬರುವ ಹಾಗಿ ಬರೆದಿರುತಾರೆ ಎಂದು ಊಹಿಸಿದ್ದೆ.

    ರೂಪಾಯಿ ಬೆಲೆ ಕಡಿಮೆ ಆಗಿದ್ದು ಬ್ರಿಟಿಷರಿಂದ ಎಂದು ತಿಳಿಯಿತು.

    ಅಂದಹಾಗೆ, ನಮ್ಮ ರಾಷ್ಟ್ರಗೀತೆಯೂ ಬ್ರಿಟಿಷರನ್ನು ಕುರಿತಾಗಿದೆ ಎಂಬುದನ್ನು ಈ-ಮೈಲ್ ಮೂಲಕ ತಿಳಿದಿದ್ದೀನಿ. ನಿಜಾನಾ?

    ReplyDelete
  4. ಕಾಕಾ,

    ಶರೀಫರು ಪಾರಮಾರ್ಥಿಕ ವ್ಯಕ್ತಿಯಾಗಿಯೂ ಒಬ್ಬ ಸಾಮಾನ್ಯ ಪ್ರಜೆಯೂ ಆಗಿದ್ದರು, ರಾಜಕಾರಣದ ಒಳ ಬಣ್ಣಗಳನ್ನು ತಿಳಿಯದ ನಾಗರಿಕರಾಗಿದ್ದರು, ಅಲ್ಲವೆ? ಸಾಮಾನ್ಯ ನಾಗರಿಕರಿಗೆ, ಆ ಕಾಲದಲ್ಲಿ 'ಬ್ರಿಟಿಷ್ ಆಡಳಿತವೇ' ಚೆನ್ನಾಗಿದೆಯೆಂದೂ, ಸ್ವಾತಂತ್ಯಾನಂತರವೂ 'ಅದೇ' ಚೆನ್ನಾಗಿತ್ತೆಂದೂ ಅನಿಸುತ್ತಿದ್ದುದು ಸುಳ್ಳಲ್ಲ. ನಾನು ಹತ್ತಿರದಿಂದ ಕಂಡ ಕೆಲವು ಹಿರಿಯರು ಅದೇ ಅಭಿಪ್ರಾಯ ಹೊಂದಿದ್ದರು; ಆ ಮಾತು ಆಡುತ್ತಿದ್ದರು... ಅದರಲ್ಲೂ '೭೭ರ ತುರ್ತುಪರಿಸ್ಥಿತಿಯ ಸಮಯದಲ್ಲಿ ಇಂಥ ಮಾತುಗಳು ಬಹಳವೇ ಕೇಳಿಬಂದವು. ನಿಮಗೂ ಗೊತ್ತಿರಬಹುದು.

    ಶರೀಫರ ಈ ಪದ್ಯವನ್ನು ನಾನು ಕೇಳಿರಲಿಲ್ಲ, ಓದಿರಲಿಲ್ಲ. ಮೊದಲ ಓದಿಗೇ ಎರಡೆರಡು ಅರ್ಥ ಹೊಮ್ಮುವುದು ತಿಳಿಯುತ್ತದಾದರೂ ನೀವು ವಿವರಿಸಿ ಹೇಳುವುದನ್ನು ಓದುವುದೇ ಒಂದು ರಸಾನುಭವ, ಕಾಕಾ. ಇಂಥ ರಸಗ್ರಹಣಕ್ಕಾಗಿ ಮತ್ತು ಅದನ್ನು ನಮಗೆಲ್ಲ ಬಡಿಸುತ್ತಿರುವುದಕ್ಕಾಗಿ ವಂದನೆಗಳು.

    ReplyDelete
  5. ಶರೀಫರ ಈ ಪದವನ್ನು ನಾನು ಕೇಳಿರಲೇ ಇಲ್ಲ. ತುಂಬ ಚೆನ್ನಾಗಿದೆ. ಆದ್ಭುತ ರೀತಿಯಲ್ಲಿ ಅರ್ಥೈಸಿದ್ದೀರಿ. ರಾಜಾ ಮಾನಸಿಂಹನ ಕುರಿತು ನೀವು ಬರೆದದ್ದು ಸರಿಯಲ್ಲವೆಂದು ತೋರುತ್ತದೆ. ರಾಜಾ ಮಾನಸಿಂಹನಿಗೆ ಸಾಮಾನ್ಯ ಪ್ರಜೆಗಳ ಕುರಿತು ಯಾವದೇ ಕಾಳಜಿ ಇರಲಿಲ್ಲ. ಅಕಬರನೊಡನೆ ಅವನು ಮಾಡಿಕೊಂಡ ಒಪ್ಪಂದ, ಅಕಬರ-ಮಾನಸಿಂಹರ ಸ್ವಾರ್ಥಪೂರಿತ ಉದ್ದೇಶದಿಂದ ಕೂಡಿತ್ತು. ಅಕಬರ ಸಾಮ್ರಾಜ್ಯ ಪಿಪಾಸಿ, ಮಾನಸಿಂಹ ಧನ ಪಿಪಾಸಿ. ಸಂಪತ್ತಿನ ಮುಂದೆ ಮಾನಸಿಂಹನಿಗೆ ಸ್ವಾಭಿಮಾನವೂ ಮರೆತು ಹೋಯಿತು. ತನ್ನ ತಂಗಿಯನ್ನು ಅಕಬರನಿಗೆ ಕೊಟ್ಟು, ತಾನವನ ಮಂತ್ರಿಯಾಗಿ, ಸೇನಾಪತಿಯಾಗಿ ತನ್ನ ದೇಶ-ಬಾಂಧವರೊಡನೆಯೇ ಯುದ್ಧ ಮಾಡಿ, ಅವರ ರಾಜ್ಯಗಳನ್ನು ಮುಘಲರಿಗೆ ಒಪ್ಪಿಸಿ, ಯುದ್ಧದ ನಂತರದ ಲೂಟಿಯ ಸಂತ್ತನ್ನು ತನ್ನದಾಗಿಸಿಕೊಂಡ ಮಹಾಸ್ವಾರ್ಥಿಯವನು. ಇದು ಐತಿಹಾಸಿಕ ಸತ್ಯವಲ್ಲವೆ ?

    ReplyDelete
  6. ಜಯಶಂಕರ,
    ನಮ್ಮ ರಾಷ್ಟ್ರಗೀತೆಯನ್ನು ಬರೆದದ್ದು ಇಂಗ್ಲಂಡದ ರಾಜನ ಗೌರವದಲ್ಲಿ ಎಂದು ನಾನೂ ಕೇಳಿದ್ದೇನೆ. ಆದರೆ ಅದಕ್ಕೆ ಆಧಾರವಿಲ್ಲ.

    ReplyDelete
  7. ಜ್ಯೋತಿ,
    ಶರೀಫರ ಶಿಶುನಾಳವು ಬ್ರಿಟಿಶ್ ಆಳಿಕೆಯಲ್ಲಿದ್ದರೆ, ಹತ್ತಿರದಲ್ಲಿಯೆ ಇದ್ದ ಹಳ್ಳಿಗಳಲ್ಲಿ ಕೆಲವು ಸವಣೂರು ನವಾಬನ ಆಳಿಕೆಯಲ್ಲಿ, ಕೆಲವು ಜಮಖಂಡಿ ಹಾಗೂ ಕೆಲವು ಮುಧೋಳ ಸಂಸ್ಥಾನಿಕರ ಆಳಿಕೆಯಲ್ಲಿ ಇದ್ದವು.
    ಸಾಮಾನ್ಯ ಪ್ರಜೆಗಳು ಈ ಪ್ರಭುಗಳ ಆಡಳಿತದಲ್ಲಿಯ ಅಂತರವನ್ನು ಗಮನಿಸಿ, ಬ್ರಿಟಿಶ್ ಆಡಳಿತವನ್ನೇ ಮೆಚ್ಚಿಕೊಂಡಿದ್ದರಲ್ಲಿ ಆಶ್ಚರ್ಯವಿಲ್ಲ.

    ReplyDelete
  8. ಕಟ್ಟಿಯವರೆ,
    ರಾಜಾ ಮಾನಸಿಂಹ ಹಾಗೂ ಅಕಬರ ಇವರ ನಡುವೆ ಜರುಗಿದ ಒಪ್ಪಂದದ ಆಂತರ್ಯವನ್ನು ಅರಿತವರಾರು?
    ಮಾನಸಿಂಹನ ಪರವಾದ ಹಾಗೂ ವಿರೋಧಿಯಾದ ಎರಡೂ ಅಭಿಪ್ರ್ರಾಯಗಳನ್ನು ವಿಭಿನ್ನ ಇತಿಹಾಸಕಾರರು ಮಂಡಿಸುತ್ತಾರೆ.

    ReplyDelete
  9. ಸಾಮಾನ್ಯ ಜನಕ್ಕೆ ಬ್ರಿಟಿಶ್ ಸರಕಾರ ದೇಶವನ್ನು ಲೂಟಿ ಮಾಡುತ್ತಿರುವದು ಗೊತ್ತಾಗಲೇ ಇಲ್ಲ ! ನಮ್ಮ ರಾಜ-ಮಹಾರಾಜರು ( ಬೆರಳೆಣಿಕೆಯ ಕೆಲವರನ್ನು ಬಿಟ್ಟು) ವಿಲಾಸಿಗಳೂ, ಬೇಜವಾಬ್ದಾರರು ಆಗಿದ್ದರು. ಆದರೆ, ಭಾರತದ ನೈಸರ್ಗಿಕ ಸಂಪತ್ತನ್ನು ಪರದೇಶಕ್ಕೆ ಒಯ್ಯಲಿಲ್ಲ. ಜನಮತ ಯಾವಾಗಲೂ ಸರಿಯೆಂದು ಹೇಳಲಾಗುವದಿಲ್ಲ.ಇಂದಿರಾ ಗಾಂಧಿಯವರ "ತುರ್ತು ಪರಿಸ್ಥಿತಿ"ಯೇ ಚೆನ್ನಾಗಿತ್ತೆಂದು ಹೇಳುವ ಜನತೆ ನಮ್ಮಲ್ಲಿ ಕಡಿಮೆ ಇಲ್ಲ. ಶರೀಫರಿಂದ ವಿಷಯಾಮತರ ಮಾಡಿದ್ದಕ್ಕೆ ಕ್ಷಮೆ ಇರಲಿ.

    ReplyDelete
  10. ಸರ್

    ಮೊಟ್ಟಮೊದಲನೆಯದಾಗಿ ನಿಮಗೆ ನನ್ನ ಕೃತಜ್ಞತೆಗಳು. ನನ್ನ ಮನವಿಗೆ ಬೆಲೆಕೋಟ್ಟು ಎಷ್ಟುಬೇಗ ಎರಡು ಪದಗಳಿಗೂ ವಿವರಣೆ ಕೊಟ್ಟಿರುವಿರಿ.

    ಬಹಳ ವಿವರವಾಗಿ ಹಿನ್ನೆಲೆಯನ್ನು ಪರಿಚಯಿಸಿ ವಿಶ್ಲೇಷಿಸಿದ್ದೀರಿ. ಬಿ.ಎ. ಪಠ್ಯದಲ್ಲಿ ನಿಗದಿಯಾಗಿರುವ ಪದದಲ್ಲಿ ಅನೇಕ ಪಾಠಾಂತರಗಳಿವೆ.ತಾವು ಯಾವ ಪಠ್ಯವನ್ನು ನೋಡುತ್ತೀರೆಂಬುದನ್ನು ತಿಳಿಸಿದರೆ ಆ ಆಕರವನ್ನು ನಾನೂ ಗಮನಿಸಬಹುದು.

    ಪಂಚಭೂತಗಳ ವಿಶಯ, ಗಿರಣಿಗಳಲ್ಲಿ ನೂಲು ಹಾಗು ಬಟ್ಟೆ ಸಿದ್ಧವಾಗುವ ವಿಧಾನವನ್ನು ಬಹಳ ಸೊಗಸಾಗಿ ತಿಳಿಸಿರುವಿರಿ. ಮತ್ತೊಮ್ಮೆ ಧನ್ಯವಾದಗಳು.

    ReplyDelete
  11. ಚಂದ್ರಕಾಂತಾ,
    ಡಾ|ಶಿವಾನಂದ ಗುಬ್ಬಣ್ಣವರ ಅವರ ಕೃತಿ:"ಬರಕೊ ಪದಾ ಬರಕೊ" (೧೯೮೧ರ ಮುದ್ರಣ)ದಿಂದ ಈ ಹಾಡಿನ ಪಠ್ಯವನ್ನು ತೆಗೆದುಕೊಂಡಿದ್ದೇನೆ.
    ಶರೀಫರ ಪದಗಳಿಗೆ ವಿಭಿನ್ನ ಪಾಠಗಳು ಇವೆ.

    ReplyDelete
  12. ಸುನಾಥ್ ಸಾರ್,
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ನಾನು ಯಾರಿಗೂ ಟೋಪಿ ಹಾಕಿಲ್ಲ. ಹಾಕಿಕೊಂಡಿರುವವರನ್ನು ನೋಡಿ ಫೋಟೋ ಕ್ಲಿಕ್ಕಿಸುತ್ತೇನೆ.

    ReplyDelete
  13. ಸುನಾತ ಸರ್...
    ಮೇಲು ನೋಟಕ್ಕೆ ಅರ್ಥವಾಗದ ಭಾವರ್ತವನ್ನು ಚೆನ್ನಾಗಿ ಬಿಡಿಸಿ ಹೇಳಿದ್ದೀರಿ...
    ಇಷ್ಟೆಲ್ಲ ಅರ್ಥವಿದೆಯೆಂದು ನನಗಂತೂ ತಿಳಿದಿರಲಿಲ್ಲ..
    ವಿವರ ತಿಳಿಸಿದ್ದಕ್ಕೆ ವಂದನೆಗಳು...

    ಬ್ರಿಟಿಷರು ಎಷ್ಟೇ ದಬ್ಬಾಳಿಕೆ ಮಾಡಿದರೂ..
    ಹರಿದು ಚೂರು ಚೂರಾದ ಭಾರತವನ್ನು ಏಕಾಧಿಪತ್ಯಕ್ಕೆ ಒಳಪಡಿಸಿದರು...
    ಅಖಂಡ ಭಾರತದ ಕಲ್ಪನೆಯನ್ನು ಸಾಕಾರ ಗೊಳಿಸಿದರು..
    ಅಲ್ಲವಾ?

    ReplyDelete
  14. ಕಾಕಾ,

    ಕಾಕೂ ಹತ್ರ ಏನಾದ್ರೂ ಬರೆಯಿಸ್ರಿ :-) ಓದ್ಬೇಕು.

    ReplyDelete
  15. ಪ್ರಕಾಶ,
    ಸಾಂಸ್ಕೃತಿಕವಾಗಿ ಭಾರತ ಒಂದೇ ಎನ್ನುವ ಕಲ್ಪನೆಯಂತೂ ಇದ್ದೇ ಇತ್ತಲ್ಲ. ರಾಜಕೀಯವಾಗಿಯೂ ಸಹ ಅಶೋಕ ಚಕ್ರವರ್ತಿ ಮೊದಲಾದವರ ಕಾಲದಲ್ಲಿ, ಭಾರತದ ಬಹಳಷ್ಟು ಭಾಗ ರಾಜಕೀಯವಾಗಿ ಒಂದಾಗಿತ್ತು. ಬ್ರಿಟಿಶರು ಭಾರತದ ಚಕ್ರವರ್ತಿಗಳಾದದ್ದರಿಂದ, ರಾಜಕೀಯವಾಗಿ ಭಾರತವು ಒಂದೇ ಪ್ರಭೆಯಲ್ಲಿ ಬಂದಿತು. ಆದರೆ, ಬ್ರಿಟಿಶರು ಭಾರತವನ್ನು ಒಡೆದು ಹೋದ ಮೇಲೆ, ವಲ್ಲಭಭಾಯಿ ಪಟೇಲರೇ ಛಿದ್ರ ಭಾರತವನ್ನು ಒಗ್ಗೂಡಿಸಿದ್ದು ಅಲ್ಲವೆ?

    ReplyDelete
  16. ಭಾಗವತರೆ,
    ಕಾಕೂ ನನ್ನ ಹಣೆಬರಹವನ್ನೇ ಬರೆದಿದ್ದಾಳೆ.
    ದಯವಿಟ್ಟು ಅದನ್ನು ಓದಬೇಡಿ!

    ReplyDelete
  17. ಭಾರತವನ್ನು ಏಕಚಕ್ರಾಧಿಪತ್ಯಕ್ಕೆ ತರಲು ಪ್ರಪ್ರಥಮವಾಗಿ ಪ್ರಯತ್ನಿಸಿ ಸಫಲನಾದವನು ಚಾಣಕ್ಯ. ಇದು ಐತಿಹಾಸಿಕ ಸತ್ಯ. ಇದಕ್ಕಿಂತಲೂ ಮೊದಲು, ಧಾರ್ಮಿಕವಾಗಿ ಭಾರತ ಒಂದೇ ಆಗಿತ್ತು. ನಿತ್ಯಾನುಷ್ಠಾನಗಳಲ್ಲಿ " ಭರತ ದೇಶೆ, ಭರತ ಖಂಡೆ" ಎಂದು ಇಂದಿಗೂ ಸಂಕಲ್ಪ ಮಾಎಉವದೇ ಸಾಕ್ಷಿ. ಬ್ರಿಟಿಶ್ ರ ಕಾಲದಲ್ಲಿ ಕೂಡ 600+ ರಾಜ-ಮಹಾರಾಜರು ಇದ್ದೇ ಇದ್ದರಲ್ಲ ! ಚಾಣಕ್ಯನ ನಂತರ, ರಾಜಕೀಯವಾಗಿ, ಭಾರತ ಸಂಪೂರ್ಣವಾಗಿ ಒಂದಾದದ್ದು ಇಲ್ಲವೇ ಇಲ್ಲ. ಈಗಲೂ ಭಾರತದ ಭಾಗವಾಗಿರುವ ಪಾಕಿಸ್ತಾನ ಮತ್ತು ಬಾಂಗ್ಲಾಧೇಶಗಳು ಬೇರೆಯೇ ಇವೆಯಲ್ಲ !

    ReplyDelete
  18. ಸುನಾಥರೆ, ನಿಮ್ಮ ಉತ್ತಮ ಹಣೆಬರಹವು "ಕಾಕು"ರನ್ನು ನಿಮ್ಮ ಬಳಿ ತಂದಿದೆ ಎನ್ನುವದು ಹೆಚ್ಚು ಯೋಗ್ಯವಲ್ಲವೆ ?

    ReplyDelete
  19. ಅನಾಮಧೇಯರೆ,
    ಕಾಕೂ ನನಗೆ ಸಿಕ್ಕಿದ್ದು ನನ್ನ ಪುಣ್ಯ.
    ಅದರಂತೆ, ಹಣೆಬರಹ ಬರೆಸಿಕೊಳ್ಳಲು ಸಿದ್ಧನಾಗಿ ನಿಲ್ಲುವಂತಹ ನಾನು ಸಿಕ್ಕಿದ್ದು ಅವಳ ಪುಣ್ಯ!

    ReplyDelete
  20. ಕಟ್ಟಿಯವರೆ,
    ಭಾರತವು ಸಾಂಸ್ಕೃತಿಕವಾಗಿ ಒಂದೇ ಪ್ರದೇಶವಾಗಿತ್ತು ಎನ್ನುವದು ಸರಿಯಾದ ಮಾತು.

    ReplyDelete
  21. ಭಾರತೀಯ ದರ್ಶನದಲ್ಲಿ ಧರ್ಮವೇ ( ಧಾರ್ಯತಿ ಇತಿ ಧರ್ಮಃ ಎಂದೇ ನಮ್ಮಲ್ಲಿ ಧರ್ಮದ ವ್ಯಾಖ್ಯೆ ) ಸಂಸ್ಕೃತಿಯಲ್ಲವೆ ?

    ReplyDelete
  22. ನೀವಿಬ್ಬರೂ "ಸಲ್ಲಾಪ"ದಲ್ಲಿ ನಮಗೆ ಸಿಕ್ಕಿದ್ದು ಸಲ್ಲಾಪ ಬಳಗದ ನಮ್ಮೆಲ್ಲರ ಪುಣ್ಯ !!!

    ReplyDelete
  23. ಸುನಾತ ಸರ್...

    ನಾವು ಸಾಂಸ್ಕ್ರತಿಕವಾಗಿ ಒಂದೆ ಆಗಿದ್ದರೂ ರಾಜಕೀಯವಾಗಿ ಎಂದೂ ಒಂದಾಗಲಿರಲಿಲ್ಲ...
    ಭೌಗೋಳಿಕವಾಗಿ ಪೂರ್ತಿಯಾಗಿ ಒಂದಾಗಲಿರಲಿಲ್ಲ..
    ಅಶೋಕನ ಕಾಲದಲ್ಲೂ ಬಹಳಷ್ಟು ಸ್ವತಂತ್ರ ಸಣ್ಣ ಸಣ್ಣ ರಾಜರು ಇದ್ದರು..
    ಬೇರೆ ಬೇರೆ ರಾಜರುಗಳು ಇದ್ದರೂ "ಧರ್ಮ" ಒಂದೇ ಆಗಿತ್ತು...
    ನಮ್ಮಲ್ಲಿ ಒಗ್ಗಟ್ಟು ಇರಲಿಲ್ಲ..ಅದರ ಲಾಭ ಪಡೆದು ಬ್ರಿಟಿಷರು ತಮ್ಮ "ವ್ಯಾಪಾರ" ಲಾಭಕ್ಕಾಗಿ
    ಹಿಂದೂ" ದೇಶವನ್ನು ಒಂದಾಗಿ ಆಳಿದರು...
    ಹೀಗಾಗಿ ನಿಜವಾದ "ಅಖಂಡ ಭಾರತ:" ವನ್ನು ಅವರು ಆಳಿದರು
    ಹೋಗುವಾಗ "ಒಡೆದು" ಹೋದರು...
    ಯಾಕೆಂದರೆ..ನಮ್ಮಲ್ಲಿ "ಒಗ್ಗಟ್ಟಿರಲಿಲ್ಲ"

    ನಾನು ಹೇಳಿರುವದು ಸತ್ಯವಾ?

    ತಪ್ಪಿದ್ದರೆ ಕ್ಷಮಿಸಿ...

    ReplyDelete
  24. ಕಾಕಾ,
    ’ಸಲ್ಲಾಪ’ದ ಓದುಗ ಬಳಗದ ಪ್ರೀತಿಯ ಹಕ್ಕೊತ್ತಾಯವನ್ನು ಮನ್ನಿಸಿ ತಾವು ಕಾಕೂ ಅವರಿಂದ ಮುಂದಿನ ಬರಹವನ್ನು ಬರೆಯಿಸತಕ್ಕದ್ದು. ಇದನ್ನು ಮನ್ನಿಸದಿದ್ದರೆ ನಮ್ಮ ಏಕಸದಸ್ಯ ಆಯೋಗವು ’ಉಗ್ರಕ್ರಮ’*ವನ್ನು ಕೈಗೊಳ್ಳತ್ತದೆಂದು ಹೇಳಲಾಗುವುದಿಲ್ಲ.

    *ಉಗ್ರಕ್ರಮ - ಇದರ ಅರ್ಥವನ್ನು ನಮ್ಮ ಗೃಹಮಂತ್ರಿಗಳಲ್ಲಿ ಕೇಳತಕ್ಕದ್ದು

    ReplyDelete
  25. ಸುನಾಥ್ ಅವರೇ,

    ಶರೀಫರ ಈ ಅಪರೂಪದ ಹಾಡು ಕೇಳಿಸಿದ್ದಕ್ಕೆ ವಂದನೆಗಳು.
    ಹಂಗೆ ಆವಾಗಿನ ರಾಜಕೀಯ,ಭೂಗೋಳದ ಬಗ್ಗೆ ತಿಳಿಸಿದ್ದೀರಿ.
    ಶರೀಫರನ್ನು ಇನ್ನೊಂದು ಬೆಳಕಿನಲ್ಲಿ ಓದಿ, ರವೀಂದ್ರನಾಥ್ ಠ್ಯಾಗೋರರು ನೆನಪಾದರು

    ReplyDelete
  26. ಪ್ರಕಾಶ,
    ಭಾರತದ ಇತಿಹಾಸದ ಬಗೆಗೆ ನಮಗೆ ತಿಳಿಯದೆ ಇರುವದು ಸಾಕಷ್ಟಿದೆ.ಭಿನ್ನ ದೃಷ್ಟಿಕೋನದ ಇತಿಹಾಸಕಾರರು ಮುಚ್ಚಿಹಾಕುತ್ತಿರುವ, ಅಥವಾ ತಿದ್ದುತ್ತಿರುವ ಇತಿಹಾಸವೂ ಸಾಕಷ್ಟಿದೆ.
    ಯುರೋಪಿನ ಬಹುಶಃ ಎಲ್ಲಾ ರಾಷ್ಟ್ರಗಳೂ ಆಫ್ರಿಕಾ ಹಾಗೂ ಏಶಿಯಾಖಂಡದ ಒಂದಿಲ್ಲೊಂದು ಭಾಗವನ್ನು ಶೋಷಿಸಿದ್ದರಿಂದಲೇ, ಈದಿನ ಆ ದೇಶಗಳು are on the top of fortune!

    ReplyDelete
  27. ಭಾಗವತರೆ,
    ನಿಮ್ಮ ಹಕ್ಕೊತ್ತಾಯವನ್ನು ಕಾಕೂನ ಎದುರಿಗೆ ಮಂಡಿಸುವ ಧೈರ್ಯವನ್ನು ಮಾಡುತ್ತೇನೆ.
    ಅವಳು ನನ್ನ ಮೇಲೆ ಉಗ್ರ ಕ್ರಮ ಕೈಕೊಳ್ಳದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.
    ಮಾಶಾ ಅಲ್ಲಾ!

    ReplyDelete
  28. ಶಿವು,
    ಶರೀಫ ಹಾಗು ರವೀಂದ್ರನಾಥ ಠಾಕೂರರು ವಿಭಿನ್ನ ದೇಶ, ಕಾಲಕ್ಕೆ ಸೇರಿರಬಹುದು. ಆದರೆ, ಅವರೀರ್ವರ ಮನೋಧರ್ಮದಲ್ಲಿ ಕೆಲವೊಂದು ಸಾಮ್ಯತೆ ಇರುವದು ನಿಜ.

    ReplyDelete
  29. "ಸಿಮೆಂಟು ಮರಳಿನ ಮಧ್ಯೆ" ಅವರು ಹೇಳತ್ತಿರುವದು ಸತ್ಯವೆಂದೇ ನನ್ನ ಅನಿಸಿಕೆ. 200 ವರ್ಷ ಇಡೀ ಭಾರತ ದೇಶವನ್ನು ಶೋಶಿಸಿ, ಕೊನೆಗೆ ಇನ್ನೊಮ್ಮೆ, ಮಾಸಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಒಂದಾಗದಂತೆ ಒಡೆದಿಟ್ಟು ಹೋದರು . ಇದಕ್ಕೆ ಕಾರಣ, ಬ್ರಿಟಿಶರಿಗಿಂತಲೂ ಹೆಚ್ಚಾಗಿ ನಾವೇ ಅಂದರೆ ಭಾಋತೀಯರೆ ! ನಮ್ಮಲ್ಲಿಯ ಒಳಜಗಳ, ಸ್ವಾರ್ಥ, ಸಂಕುಚಿತತೆ, ಅದೂರದೃಷ್ಟಿ, "ಸವತಿ ವಿಧವೆಯಾಗಲಿ" ಎಂಬ ಕುತ್ಸಿತ ಮನೋಭಾವ ಬ್ರಿಟಿಶರಿಗೆ ಸಹಾಯ ಮಾಡಿದವು.

    ಸಿಸುನಾಳ ಶರೀಫರನ್ನು ಬಿಟ್ಟು ಎಲ್ಲೆಲ್ಲಿಯೋ ಹೋಗುತ್ತಿದ್ದೇವಲ್ಲ ? ಕ್ಷಮೆ ಇರಲಿ.

    ReplyDelete
  30. ಸುನಾತ ಸರ್...
    ನೀವು ಹೇಳುವದು ಅಕ್ಷರ ಸಹ ಸತ್ಯ.
    ನಮ್ಮ ಇತಿಹಾಸವನ್ನು ತಿರುಚಲಾಗಿದೆ...

    ಕಟ್ಟಿ ಸರ್...

    ಇನಾದರು ನಾವು ಪಾಠ ಕಲಿಯಬೇಕು..
    ಒಂದಾಗಿ, ಒಗ್ಗಟ್ಟಾಗಿ ಇರಬೇಕು...
    ( ವಿಷಯಾಂತರವಾದುದಕ್ಕೆ ಕ್ಷಮೆ ಇರಲಿ..)

    ನಿಮಗೆಲ್ಲರಿಗೂ..ವಂದನೆಗಳು..

    ReplyDelete
  31. kaka teacher,
    aha ..eshtu chanda bareyutteeri neevu!!

    "ಬ್ರಿಟಿಶರು ಭಾರತವನ್ನು ವ್ಯಾಪಾರಕ್ಕೆಂದು ಪ್ರವೇಶಿಸಿದಾಗ, ಒಂದು ಪೌಂಡಿನ ಬೆಲೆ ಒಂದು ರೂಪಾಯಿಯ ಬೆಲೆಗಿಂತ ಕಮ್ಮಿಯಾಗಿತ್ತು."!!

    ee thara eegaloo iruttiddare naanu uk yalli shopping maadalu swalpavoo yochane maaduvua agatyave iralilla!!

    kavana ondu..vivara halavu..super kaka!!

    preetiyinda,
    archana

    ReplyDelete
  32. ಸುನಾಥರೆ, ಬರೆಯದೆ ಬಹಳ ದಿನಗಳಾದವಲ್ಲ ? ನಾವು ಮತ್ತೆ ಅಂಬಿಕಾತನಯದತ್ತರತ್ತ ತಿರುಗೋಣವೆ ? ಅಥವಾ ವಚನ ಸಾಹಿತ್ಯ, ದಾಸ ಸಾಹಿತ್ಯವೂ ಆಗಬಹುದು !

    ReplyDelete
  33. ಅರ್ಚು,
    ೧ ಪೌಂಡ್ ಬೆಲೆ ೧ರೂಪಾಯಿಗಿಂತ ಕಮ್ಮಿಯಾಗುವ ದಿನಗಳನ್ನು
    ಎದುರು ನೋಡೋಣವೆ?
    -ಕಾಕಾ

    ReplyDelete
  34. ಕಟ್ಟಿಯವರೆ,
    ಸದ್ಯಕ್ಕೆ ಬೇರೊಂದು ಲೇಖನವನ್ನು ಸಿದ್ಧಪಡಿಸುತ್ತಿದ್ದೇನೆ. ಆ ಲೇಖನದಲ್ಲಿ ವ್ಯಕ್ತವಾಗುವ ನನ್ನ ದೃಷ್ಟಿಕೋನಕ್ಕೆ ಸಾಕಷ್ಟು ವಿರೋಧವೂ ಬರಬಹುದು.

    ReplyDelete
  35. ನಿಮ್ಮ ಲೇಖನವನ್ನು ಅತ್ಯಂತ ಕಾತುರದಿಂದ ಎದುರು ನೊಡುತ್ತಿದ್ದೇನೆ. " ವಾದೆ-ವಾದೆ ಜಾಯತೆ ಜ್ಞಾನ ಸಂಗ್ರಹಃ " ಎಂದು ಸಂಸ್ಕೃತದಲ್ಲಿ ಉಕ್ತಿಯೊಂದಿದೆ.

    ReplyDelete
  36. ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಬಟ್ಟೆ ನಿಯ್ಯುವ ಪದ್ಧತಿ ಮತ್ತು ಭಾರತಕ್ಕೆ ವಲಸೆ ಬಂದು ನಮ್ಮ ಭಾರತವನ್ನು ತಮ್ಮ ವಶಕ್ಕೆ ಪಡೆದುಕೊಂಡು ನಮ್ಮ ದೇಶವನ್ನು ಆಳುತ್ತಿದ್ದ ವಿಕ್ಟೋರಿಯದ ರಾಣಿ ನಮ್ಮ ದೇಶದಲ್ಲಿ ಬಟ್ಟೆಯನ್ನು ತಯಾರು ಮಾಡುವ ಯಂತ್ರವನ್ನು ಸ್ಥಾಪನೆ ಮಾಡಿದ್ದು ಅಥವಾ ಪರಿಚಯಿಸಿದ್ದು ನಮ್ಮಲ್ಲಿನ ಜನರಲ್ಲಿ ಒಂದು ಆಶ್ಚರ್ಯ ಮತ್ತು ವಿಸ್ಮಯವನ್ನ ತಂದಿತು. ಭಾರತೀಯ ಬಟ್ಟೆ ತಯಾರು ಮಾಡುವುದುಕೂ ಮತ್ತು ವಿಕ್ಟೋರಿಯಾ ರಾಣಿಯ ಬಟ್ಟೆ ತಯಾರು ಮಾಡುವ ಯಂತ್ರಕ್ಕೂ ನಮ್ಮ ಕರ್ನಾಟಕದ ಪ್ರಸಿದ್ಧ ತತ್ವಪದ ಹಾಡುಗಾರ ಹಿಂದೂ ಮುಸ್ಲಿಂ ಸಂಬಂಧವನ್ನು ಗಟ್ಟಿಗೊಳಿಸುವ ಗಾಯಕ ಸಮಾಜದಲ್ಲಿ ಸಮಾನತೆಯನ್ನು ಸಾರುವ ನಾಯಕ ನಮ್ಮ ಶಿಶುನಾಳ ಶರೀಫರು.

    ReplyDelete