Tuesday, October 12, 2010

ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ


ಎಸ್.ಎಲ್.ಭೈರಪ್ಪನವರು ಇಂದು ಕನ್ನಡದ ಅತ್ಯಂತ ವಿವಾದಾತ್ಮಕ ಲೇಖಕರಾಗಿ ಖ್ಯಾತಿ ಪಡೆದಿದ್ದಾರೆ. ತಮ್ಮ ಮೊದಲ ಪ್ರಕಟಿತ ಕಾದಂಬರಿ ‘ಧರ್ಮಶ್ರೀ’ಯಿಂದಲೇ ಭೈರಪ್ಪನವರು ಪ್ರತಿಗಾಮಿ ಲೇಖಕ ಎಂದು ಗುರುತಿಸಲ್ಪಟ್ಟರು. ‘ಕವಲು’ ಕಾದಂಬರಿಯು ಪ್ರಕಟವಾದ ಬಳಿಕ ಇವರಿಗೆ ‘ಸ್ತ್ರೀವಿರೋಧಿ’ ಹಣೆಪಟ್ಟಿಯೂ ದೊರೆತಿದೆ. ಇದಕ್ಕೂ ಮೊದಲು ‘ಆವರಣ’ ಕಾದಂಬರಿಯು ಪ್ರಕಟವಾದಾಗ ‘ಅಲ್ಪಸಂಖ್ಯಾತ ವಿರೋಧಿ’ ಎನ್ನುವ ಬಿರುದು ಸಹ ಇವರಿಗೆ ಲಭಿಸಿತ್ತು. ಸ್ವತಃ ಭೈರಪ್ಪನವರು ಹಾಗು ಅವರ ಪ್ರತಿಪಾದಕರು ಈ ಮಾತುಗಳನ್ನು ಒಪ್ಪುವದಿಲ್ಲ.

ಹಾಗಿದ್ದರೆ ಎಸ್. ಎಲ್. ಭೈರಪ್ಪನವರ ವಾಸ್ತವ ರೂಪ ಯಾವುದು? ಈ ಸ್ವಾರಸ್ಯಕರ ವಿಷಯದ ಚರ್ಚೆಗಾಗಿ ಅವರ ಸಮಗ್ರ ಕಾದಂಬರಿಗಳ ಅವಲೋಕನ ಅವಶ್ಯವಾಗಿದೆ. ಭೈರಪ್ಪನವರ ಮೊದಲ ಪ್ರಕಟಿತ ಕಾದಂಬರಿ: ‘ಧರ್ಮಶ್ರೀ’. ಅಲ್ಲಿಂದ ಇಲ್ಲಿಯವರೆಗೆ, ಅಂದರೆ ‘ಕವಲು’ ಕಾದಂಬರಿಯವರೆಗೆ ಅವರು ೨೧ ಕಾದಂಬರಿಗಳನ್ನು ೪೦ ವರ್ಷಗಳಲ್ಲಿ ಪ್ರಕಟಿಸಿದ್ದಾರೆ.

‘ಧರ್ಮಶ್ರೀ’ ಕಾದಂಬರಿಯ ಕಥಾವಸ್ತುವು ತೋರಿಕೆಗೆ ಮತಾಂತರವಿದ್ದಂತೆ ಭಾಸವಾದರೂ ಮತಾಂತರದ ಜೊತೆಜೊತೆಗೇ ಸಂಸ್ಕೃತಿಯ ಬದಲಾವಣೆ ಆಗುವದೇ ಈ ಕಾದಂಬರಿಯ ನಿಜವಾದ ವಸ್ತುವಾಗಿದೆ. ಕಾದಂಬರಿಯ ನಾಯಕನ ಅಂತರಂಗದ ತೊಳಲಾಟಕ್ಕೆ  ಇದೇ ಪ್ರಮುಖ ಕಾರಣವಾಗಿದೆ. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿಯೂ ಸಹ ಎರಡು ಸಂಸ್ಕೃತಿಗಳ (--ಸಾಂಪ್ರದಾಯಕ ಭಾರತೀಯ ಸಂಸ್ಕೃತಿ ಹಾಗು ಪಾಶ್ಚಾತ್ಯ ಸಂಸ್ಕೃತಿ--) ನಡುವಿನ ಘರ್ಷಣೆಯೇ ಕಥಾವಸ್ತುವಾಗಿದೆ.

ತಮ್ಮ ಕಾದಂಬರಿಗಳಲ್ಲಿ ಭೈರಪ್ಪನವರು ಭಾರತೀಯ ಸಾಂಪ್ರದಾಯಕ ಸಂಸ್ಕೃತಿಯ ವಕಾಲತ್ತನ್ನು ಮಾಡುವವರಂತೆ ಕಾಣಿಸುತ್ತಾರೆ. ಇದು ಬಹುಮಟ್ಟಿಗೆ ನಿಜವಾದರೂ ಸಂಪೂರ್ಣ ಸತ್ಯವಲ್ಲ.  ಉದಾಹರಣೆಗೆ ಅವರ ಸುಪ್ರಸಿದ್ಧ ಕಾದಂಬರಿ ‘ವಂಶವೃಕ್ಷ’ ವನ್ನೇ ತೆಗೆದುಕೊಳ್ಳಿರಿ. ಈ ಕಾದಂಬರಿಯ ನಾಯಕಿ ‘ಕಾತ್ಯಾಯನಿ’ಯು ವಿಧವೆಯಾದ ಬಳಿಕ ಕಾಲೇಜು ಶಿಕ್ಷಣ ಪಡೆಯುತ್ತಾಳೆ ಹಾಗು ಪ್ರೇಮವಿವಾಹ ಮಾಡಿಕೊಳ್ಳುತ್ತಾಳೆ. ಸಾಂಪ್ರದಾಯಕ ಕುಟುಂಬದಲ್ಲಿ ಬೆಳೆದ ಅವಳಲ್ಲಿ ಇದರಿಂದಾಗಿ ಪಾಪಪ್ರಜ್ಞೆ ಬೆಳೆದಿದ್ದರೆ ಹಾಗು ಅದರಿಂದಾಗಿ ಸತತ ಗರ್ಭಪಾತಗಳಾದರೆ, ಅದರಲ್ಲಿ ಮನೋವೈಜ್ಞಾನಿಕ ತಪ್ಪೇನೂ ಇಲ್ಲ. ಭೈರಪ್ಪನವರ ಕೆಲವು ವಿಮರ್ಶಕರು ಇದನ್ನು ಸ್ತ್ರೀವಿರೋಧಿ ವರ್ಣನೆ ಎಂದು ಸಾಧಿಸುವದು ಸರಿಯಲ್ಲ. ಕಾತ್ಯಾಯನಿಯ ವಿಚಾರಗಳ ವಿರುದ್ಧವಾದ ಧ್ರುವದಲ್ಲಿ ಇರುವವರು ಅವಳ ಮಾವನಾದ ಶಾಸ್ತ್ರಿಗಳು. ಅವಳ ಮೊದಲ ಮದುವೆಯ ಮಗನು ಶಾಸ್ತ್ರಿಗಳ ವಂಶಕ್ಕೆ ಸೇರಿದವನೆನ್ನುವ ಕಾರಣಕ್ಕಾಗಿ ಶಾಸ್ತ್ರಿಗಳು ಆತನನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಕಾದಂಬರಿಯ ವೈಚಾರಿಕ ಘರ್ಷಣೆ ಪ್ರಾರಂಭವಾಗುವದು ಇದರ ನಂತರವೇ. ಸ್ವತಃ ಶಾಸ್ತ್ರಿಗಳೇ ತಮ್ಮ ತಂದೆಗೆ ಹುಟ್ಟಿದವರಲ್ಲವೆನ್ನುವ ಆಘಾತಕಾರಿ ಸತ್ಯ ಅವರಿಗೆ ತಿಳಿದು ಬರುತ್ತದೆ. ಇದು ಅವರ ಸಂಪ್ರದಾಯ ನಿಷ್ಠೆಯನ್ನು ಬುಡಸಹಿತ ಅಲುಗಾಡಿಸಿ ಬಿಡುತ್ತದೆ. ‘ವಂಶವೃಕ್ಷ’ ಕಾದಂಬರಿಯು ಕಂದಾಚಾರವನ್ನು ಎತ್ತಿ ಹಿಡಿಯುವ ಕಾದಂಬರಿ ಎನ್ನುವವರು ಈ ಅಂತಿಮ ಸತ್ಯದರ್ಶನ ಕ್ಷಣದ ಬಗೆಗೆ ಏನು ಹೇಳುತ್ತಾರೆ?   

ಶಾಸ್ತ್ರಿಗಳು ಸನಾತನ ಧರ್ಮದ ಆದೇಶಗಳಲ್ಲಿ ಹಾಗು ಆದರ್ಶಗಳಲ್ಲಿ ನಿಷ್ಠೆಯನ್ನು ಹೊಂದಿದವರು. ಅವರ ಹೆಂಡತಿಯೊಡನೆ ರಮಿಸುವದು ಅವರಿಗೆ ವೈದ್ಯಕೀಯವಾಗಿ ಅಸಾಧ್ಯವಾದಾಗ ಬ್ರಹ್ಮಚರ್ಯೆಯನ್ನು ಶ್ರದ್ಧೆಯಿಂದ ಪಾಲಿಸಿದವರು. ಇಂತಹ ಸಂದರ್ಭದಲ್ಲಿ ಅವರ ಹೆಂಡತಿಯೇ ಅವರಿಗಾಗಿ ಒಂದು ‘ಬದಲಿ ವ್ಯವಸ್ಥೆ’ಯನ್ನು ಮಾಡಲು ಹೊರಟಾಗ, ಆ ಆಮಿಷದಿಂದ ಹೊರಬಂದವರು. ಇಂತಹ ಒಂದು ಉದಾತ್ತ ವ್ಯಕ್ತಿಯನ್ನು ಚಿತ್ರಿಸುವದರಲ್ಲಿ ತಪ್ಪೇನಿದೆ? ಈ ವ್ಯಕ್ತಿಯನ್ನು ಅನಂತಮೂರ್ತಿಯವರು ಬರೆದ ‘ಸಂಸ್ಕಾರ’ ಕಾದಂಬರಿಯ ಪ್ರಾಣೇಶಾಚಾರ್ಯರ ಜೊತೆಗೆ ಹೋಲಿಸಿರಿ. ಪ್ರಾಣೇಶಾಚಾರ್ಯರೂ ಸಹ ರೋಗಿಷ್ಠ ಹೆಂಡತಿಯ ಸೇವೆ ಮಾಡುತ್ತ, ಇಂದ್ರಿಯನಿಗ್ರಹವನ್ನು ಸಾಧಿಸಿಕೊಂಡು ಇದ್ದವರು. ಆದರೂ ಸಹ ಒಂದು ಸಂದರ್ಭದಲ್ಲಿ ಇವರು ಕಾಮಕ್ಕೆ ಬಲಿಯಾಗುತ್ತಾರೆ. ಆ ಕ್ಷಣದಲ್ಲಿ ಅವರಿಗೆ ಸತ್ಯದರ್ಶನ(!)ವಾಗುತ್ತದೆ. ಇಷ್ಟೇ ಆದರೆ ಇದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಅನಂತಮೂರ್ತಿಯವರ ನಿಜವಾದ ಗುರಿ ಬೇರೆಯದೇ ಆಗಿದೆ. (‘ಕಹೀಂ ಪೆ ನಿಗಾಹೆ, ಕಹೀಂ ಪೆ ಇಶಾರೆ!)

‘ಸಂಸ್ಕಾರ’ ಕಾದಂಬರಿಯಲ್ಲಿ ಅನಂತಮೂರ್ತಿಯವರು ಅಸ್ತಿತ್ವವಾದದ ವಕೀಲಿ ಮಾಡಲು ಹೊರಟಿದ್ದಾರೆ. ಮನುಷ್ಯನು ಮೂಲತಃ ಪ್ರಾಣಿಯೇ ಆಗಿರುವದರಿಂದ, ಪ್ರಾಣಿಸಹಜವಾದ ಕಾಮನೆಗಳನ್ನು ನಿಗ್ರಹಿಸುವದರಲ್ಲಿ ಅರ್ಥವಿಲ್ಲ, ಮನುಷ್ಯನಿಗೆ ‘ಸಂಸ್ಕಾರ’ಗಳು ಬೇಕಾಗಿಲ್ಲ ಎನ್ನುವ ವಾದವನ್ನು ಅನಂತಮೂರ್ತಿಯವರು ಪ್ರತಿಪಾದಿಸಲು ಬಯಸುತ್ತಾರೆ. ಆದರೆ ಇದನ್ನು ಸೀದಾ ಹೇಳಿಬಿಟ್ಟರೆ, ಓದುಗನು ತಮ್ಮ ವಾದವನ್ನು ತಿರಸ್ಕರಿಸಬಹುದು ಎನ್ನುವ ಶಂಕೆ ಅವರಿಗಿದೆ. ಆದುದರಿಂದ ಅವರು ಈ ಕತೆಯಲ್ಲಿ ಧೂರ್ತತನದಿಂದ ಮತ್ತೊಂದು ಕತೆಯನ್ನು ಜೋಡಿಸಿದ್ದಾರೆ. ಪ್ರಾಣೇಶಾಚಾರ್ಯರ ಊರಿನಲ್ಲಿ ಇವರ antithesis ಆದ ಓರ್ವ ವ್ಯಕ್ತಿಯ ಸಾವು ಘಟಿಸುತ್ತದೆ. ಆತನ ಶವಸಂಸ್ಕಾರ ಮಾಡಲು ಬ್ರಾಹ್ಮಣರು ಯಾರೂ ಮುಂದೆ ಬರುವದಿಲ್ಲ. ಇದಕ್ಕೆ ಬ್ರಾಹ್ಮಣರ ಕುರುಡು ಸಂಪ್ರದಾಯ ಪಾಲನೆಯೇ ಕಾರಣ ಎಂದು ಅನಂತಮೂರ್ತಿಯವರು ಸೂಚಿಸುತ್ತಾರೆ. ಈ ರೀತಿಯಾಗಿ ಬ್ರಾಹ್ಮಣರ ಕುರುಡು ಸಂಪ್ರದಾಯಗಳನ್ನು ಟೀಕಿಸುವ ನೆಪದಿಂದ, ಸಂಪ್ರದಾಯಸ್ಥ ಬ್ರಾಹ್ಮಣನೊಬ್ಬನ ಮನೋನಿಗ್ರಹದ ಆದರ್ಶವನ್ನು ಲೇವಡಿ ಮಾಡುವದರಲ್ಲಿ ಅನಂತಮೂರ್ತಿಯವರು ಸಫಲರಾಗಿದ್ದಾರೆ. ಇದು  ಅನಂತಮೂರ್ತಿಯವರ ಧೂರ್ತ ಬರವಣಿಗೆಯ ಮಾದರಿ.

ಭೈರಪ್ಪನವರ ವಕಾಲತ್ತುಗಳನ್ನು ನಾವು ಮೆಚ್ಚದಿದ್ದರೂ ಸಹ ಅವರು ಇಂತಹ ಧೂರ್ತತನವನ್ನು ಮಾಡುವದಿಲ್ಲ ಎನ್ನುವದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಅವರ ಕಾದಂಬರಿಗಳು ಜನಪ್ರಿಯವಾಗಲು ಕಾರಣವೆಂದರೆ, ಆ ಕಾದಂಬರಿಗಳ ನಾಯಕನಿಗೆ ಇರುವ passion, fervour ಹಾಗು sincerity.

ಭೈರಪ್ಪನವರ ಕಾದಂಬರಿಗಳು ‘ಆಧುನಿಕ ಸ್ತ್ರೀ ವಿರೋಧಿ’ ಕಾದಂಬರಿಗಳು. ಅವರ ಕಾದಂಬರಿಗಳಲ್ಲಿ ಬರುವ ಒಳ್ಳೆಯ ನಾಯಕಿಯರು ಗಂಡನ ಸೇವೆಯನ್ನು ಮಾಡುವ ಪತಿವ್ರತೆಯರು! ಆದರೆ ಈ ಪತಿವ್ರತಾ ಸ್ತ್ರೀಯರ ಗಂಡಂದಿರೂ ಸಹ ಆದರ್ಶ ವ್ಯಕ್ತಿಗಳೇ ಆಗಿದ್ದಾರೆ. (ಉದಾಹರಣೆ: ದೂರ ಸರಿದರು, ಮತದಾನ, ಗ್ರಹಣ ಇತ್ಯಾದಿ.)

ಒಟ್ಟಿನಲ್ಲಿ ಭೈರಪ್ಪನವರು ತಮ್ಮ ಕಾದಂಬರಿಗಳ ಮೂಲಕ ಸಾಂಪ್ರದಾಯಕ ಸಂಸ್ಕೃತಿ ಹಾಗು ಆಧುನಿಕ ಸಂಸ್ಕೃತಿ ಇವುಗಳ ತುಲನೆಯನ್ನು ಮಾಡಲು ಬಯಸುತ್ತಾರೆ. ಅವರನ್ನು ನಮ್ಮ ಸಾಂಸ್ಕೃತಿಕ ಅನ್ವೇಷಕ ಎಂದು ಕರೆಯುವದರಲ್ಲಿ ಏನೂ ತಪ್ಪಿಲ್ಲ, ಅವರ ಪ್ರತಿಪಾದನೆಗಳನ್ನು ನಾವು ಒಪ್ಪದಿದ್ದರೂ ಸಹ!

63 comments:

  1. ಸುನಾಥ್ ಸರ್,

    ಭೈರಪ್ಪನವರು ನನ್ನ ಮೆಚ್ಚಿನ ಲೇಖಕರುಗಳಲ್ಲಿ ಒಬ್ಬರು. ಅವರ 'ನಾಯಿ-ನೆರಳು' ನಂಗೆ ತುಂಬಾ ಹಿಡಿಸಿತ್ತು. ಎಲ್ಲಾ ಪುಸ್ತಕಗಳಿಗೆ ಹೋಲಿಸಿದರೆ 'ಕವಲು' ನನಗೆ ಸ್ವಲ್ಪ ನಿರಾಸೆಯನ್ನು ಮೂಡಿಸಿದ್ದಂತು ನಿಜ.ಅವರೂ ಹೇಳಿದ್ದನ್ನು ನಾವು ಒಪ್ಪಲೇಬೇಕು ಅಂತ ಏನು ಇಲ್ಲವಲ್ಲ, ಎಲ್ಲಾ ವಿಷಯಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಕಂಡುಬರುವುದಿಲ್ಲ. ಎಲ್ಲರ ದೃಷ್ಟಿಕೋನ ಗಳು ವಿಭಿನ್ನವಾಗಿರುತ್ತವೆ, ಅವರ ಕೆಲವು ಕಾದಂಬರಿಗಳಲ್ಲಿ ಬರುವ ವಿಚಾರಧಾರೆಗಳನ್ನು ಸುಂದರವಾಗಿ ನಿರೂಪಿಸಿದ್ದೀರಿ. ಅವರು ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ ಎಂಬುದನ್ನು ನಾನು ಒಪ್ಪುತ್ತೇನೆ. ಉತ್ತಮ ಲೇಖನ.

    ReplyDelete
  2. ಕಾಕ ನೀವೆಂದಂತೆ ಭೈರಪ್ಪನವರು ಸಾಂಕೃತಿಕ ಅನ್ವೇಷಣೆಯ ಸಾಹಿತಿಯೆಂಬುದು ಸರಿಯಾದ ತೀರ್ಮಾನ. ಅವರ ಕವಲು ಓದಿಕೊಂಡು ಸ್ತ್ರೀ ವಿರೋಧಿ ಎನ್ನುವುದೂ ಆವರಣ ಓದಿ ಅಲ್ಪಸಂಖ್ಯಾತ ವಿರೋಧಿ ಎನ್ನುವುದೂ ಸರಿಯಲ್ಲವೆಂದು ನನ್ನ ಅಭಿಪ್ರಾಯ. ಏಕೆಂದರೆ ಅವರ ಗೃಹಭಂಗ , ದಾಟು , ಜಲಪಾತ , ಸಾರ್ಥ ಮುಂತಾದ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳನ್ನು ಉದಾತ್ತವಾಗಿ ಚಿತ್ರಿಸಿದ್ದಾರೆ . ಹಾಗೆ ಅವರ ಅನೇಕ ಕಾದಂಬರಿಗಳಲ್ಲಿ ಹಿಂದೂ ಧರ್ಮದಲ್ಲಿರುವ ಹುಳುಕನ್ನೂ ಎತ್ತಿ ಹಿಡಿದಿದ್ದಾರೆ.
    ಕವಲು ವಿಷಯದಲ್ಲಿ ಸಮಸ್ಯೆಯೊಂದನ್ನು ಸಮರ್ಥವಾಗಿ ಬಿಂಬಿಸುವಲ್ಲಿ ಅವರು ಸೋತಿದ್ದಾರೆಂಬುದು ನನ್ನ ಅನಿಸಿಕೆ.

    ReplyDelete
  3. ಭೈರಪ್ಪನವರ ಕಾದ೦ಬರಿಲೋಕದ ಸ್ಥೂಲ ಪರಿಚಯದೊ೦ದಿಗೆ ಅವರ ವ೦ಶವೃಕ್ಷ ಮತ್ತು ಅನ೦ತಮೂರ್ತಿಯವರ ಸ೦ಸ್ಕಾರ ವನ್ನು ಅಕ್ಕಪಕ್ಕಕ್ಕೆ ಇಟ್ಟು ವಿಶ್ಲೇಷಣೆ ಮಾಡಿದ್ದೀರಿ. ಹೌದು, ಭೈರಪ್ಪ ಕಾದಂಬರಿಕಾರರಾಗಿ ಜನಪ್ರಿಯ. ಅವರ ಬರಹಗಳಲ್ಲಿರುವ ಸಾ೦ಪ್ರದಾಯಿಕ ಮತ್ತು ಆಧುನಿಕ ಸ೦ಸ್ಕ್ರತಿಗಳ ತುಲನೆ ಆಯಾ ಕೃತಿಗಳ ಮೌಲ್ಯವರ್ಧನೆಗೆ ಮಾತ್ರವಲ್ಲದೆ ಕೆಲವೊಮ್ಮೆ ವಿವಾದಕ್ಕೂ ಕಾರಣವಾಗಿದ್ದಿದೆ. ಒ೦ದ೦ತೂ ನಿಜ, ಅವರು ಏನನ್ನಾದರೂ ಬರೆಯಬೇಕಾದರೆ ಆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ, ಐತಿಹಾಸಿಕ ದಾಖಲೆಗಳನ್ನು ಕಲೆಹಾಕಿ ಬರೆಯುತ್ತಾರೆ.

    ReplyDelete
  4. ಅಶೋಕ,
    ಭೈರಪ್ಪನವರು ಸಾಂಪ್ರದಾಯಕ ಸಂಸ್ಕೃತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಎತ್ತಿ ಹಿಡಿಯುತ್ತಾರೆ. ಕೆಲವೊಮ್ಮೆ ಕೆಟ್ಟ ಅಂಶಗಳನ್ನೂ ಅವರು ಎತ್ತಿ ಹಿಡಿಯಬಹುದು. ಒಪ್ಪುವದು ಅಥವಾ ಬಿಡುವದು ಓದುಗನಿಗೆ ಬಿಟ್ಟ ವಿಷಯ!

    ReplyDelete
  5. ಸುಮಾ,
    ಭೈರಪ್ಪನವರ ಕಾದಂಬರಿಗಳಲ್ಲಿ ನಾನು ತುಂಬ ಮೆಚ್ಚಿಕೊಂಡ ಕಾದಂಬರ ಎಂದರೆ ‘ಸಾರ್ಥ’. ಈ ಒಂದು ಕಾದಂಬರಿಯಲ್ಲಿ ಭೈರಪ್ಪನವರು ಸ್ತ್ರೀಯನ್ನು ಪುರುಷನಿಗಿಂತ ಹೆಚ್ಚಾಗಿ ತೋರಿಸಿದ್ದಾರೆ. ‘ಕವಲು’ ಕಾದಂಬರಿಯನ್ನು ನಾನು ಓದಿಲ್ಲ. ಬಹುಶಃ ಇಲ್ಲಿ ಅವರು ಸೋತಿರಬಹುದು!

    ReplyDelete
  6. ಪರಾಂಜಪೆಯವರೆ,
    ಭೈರಪ್ಪನವರ ಕಾದಂಬರಿಗಳ ಹಿಂದೆ ಆಳವಾದ ಅಧ್ಯಯನ ಇದೆ ಎನ್ನುವದು ಸರಿಯೇ. ಇನ್ನು ದೃಷ್ಟಿಕೋನಗಳು ಬೇರೆ ಬೇರೆಯಾಗಿರುವದು ಸಹಜ. We do not have to agree with him.

    ReplyDelete
  7. ಎಸ್. ಎಲ್. ಭೈರಪ್ಪನವರ ಕಾದ೦ಬರಿಗಳು ಹಿಡಿಸುತ್ತವೆ.
    ಇತ್ತೀಚಿಗೆ ಆವರಣ ಓದಿದ್ದೇನೆ. ಬಿಟ್ಟರೆ ಎಲ್ಲಾ ಕಾಲೇಜಿನ ದಿನಗಳಲ್ಲೆ ಓದಿದ್ದು.ಮರೆತೆ ಹೋಗಿದೆ..
    ಭೈರಪ್ಪನವರ ಕೃತಿಗಳ ಕುರಿತು ಮಾಹಿತಿ..ವಿಶ್ಲೇಷಣೆಗಳನ್ನೊಳಗೊ೦ಡ ಲೇಖನ ಚೆನ್ನಾಗಿದೆ.ನನಗೆ ಊರಿಗೆ ಹೋದಾಗ ಪುಸ್ತಕಗಳನ್ನು ಕೊ೦ಡು ತ೦ದು ಓದಲು ಅನುಕೂಲವಾಯ್ತು. ಧನ್ಯವಾದಗಳು.

    ReplyDelete
  8. ಮನಮುಕ್ತಾ,
    ಭೈರಪ್ಪನವರ ಕಾದಂಬರಿಗಳ ನಾಯಕನಲ್ಲಿ ಕಾಣುವ ಛಲ ಹಾಗು
    passion ಈ ಗುಣಗಳು ಅವರ ಕಾದಂಬರಿಯನ್ನು ರೋಚಕವನ್ನಾಗಿ ಮಾಡುತ್ತವೆ.

    ReplyDelete
  9. ಭೈರಪ್ಪನವರು ನನ್ನ ಮೆಚ್ಚಿನ ಕಾದಂಬರಿಕಾರರಲ್ಲಿ ಒಬ್ಬರು. ತಬ್ಬಲಿಯು ನೀನಾದೆ ಮಗನೆ, ದೂರ ಸರಿದರು, ವಂಶವೃಕ್ಷ, ಆವರಣ ನಾನು ಓದಿದ ಕೆಲ ಕಾದಂಬರಿಗಳು. ಆವರಣ ಮಧ್ಯಕಾಲದ ಭಾರತದ ಸ್ಥಿತಿ, ಮತ್ತು ಇಂದಿನ ಖೊಟ್ಟಿ ಜಾತ್ಯಾತೀಯತೆಯನ್ನು ಚೆನ್ನಾಗಿ ವಿಶ್ಲ್ಲೇಷಿಸುತ್ತದೆ

    ReplyDelete
  10. ಸುನಾಥ್ ಕಾಕಾ,

    ಭೈರಪ್ಪ ಮತ್ತು ಅನಂತಮೂರ್ತಿಯವರ ಉದ್ದೇಶಗಳ ಬಗ್ಗೆ ವಿಶ್ಲೇಷಣೆ ಹಿಡಿಸಿತು.

    ಎನೇ ಹೇಳಿದರೂ, ಕನ್ನಡದಲ್ಲಿ ಜನ ದುಡ್ಡು ಕೊಟ್ಟು ಪುಸ್ತಕಗಳನ್ನು ಕೊಂಡು ಭೈರಪ್ಪ ಓದುವಂತೆ ಮಾಡಿದಿದ್ದು ಒಂದು ಸಾಧನೆ!

    ReplyDelete
  11. ದೀಪಸ್ಮಿತ,
    ಆವರಣ ಕಾದಂಬರಿಗಾಗಿ ಭೈರಪ್ಪನವರು ಕೊಟ್ಟ ಅಧ್ಯಯನದ ಪುಸ್ತಕಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ತುಂಬ ಆಳವಾದ ಅಧ್ಯಯನ ಅವರದು.

    ReplyDelete
  12. ಅಪ್ಪ-ಅಮ್ಮ,
    ಕಾದಂಬರಿಯನ್ನು ಕೊಂಡುಕೊಂಡು ಓದುವಂತೆ ಮಾಡಿದ ಶ್ರೇಯಸ್ಸು, ನೀವು ಹೇಳಿದಂತೆ, ಭೈರಪ್ಪನವರಿಗೆ ಸಲ್ಲಬೇಕು. ಶೇಕ್ಸಪಿಯರನ ನಾಟಕದ ಮಾತೊಂದನ್ನು ಬದಲಾಯಿಸಿ ಹೇಳುವದಾದರೆ, "Give Bhairappa what is due to him!"

    ReplyDelete
  13. ಕಾಕಾಶ್ರೀ,

    ಅನ್ವೇಷಣೆಯ ಸಾಹಿತಿ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಸಂತೆಶಿವರ ದಂತಹ ಹಳ್ಳಿಯಲ್ಲಿ ಹುಟ್ಟಿ ಸ್ವಾತಂತ್ರಾನಂತರ ಕಾಲದಲ್ಲಿ ಅವರು ಕಂಡ ಹತ್ತು ಹಲವು ಘಟನೆಗಳು ಅನುಭವಾಂತರ್ಗತವಾಗಿ ಅವರ ಕಾದಂಬರಿಗಳಲ್ಲಿ ಒಡಮೂಡಿದೆ ಎಂಬುದನ್ನು ಅವರ ಕಾದಂಬರಿಗಳಿಂದಲೇ ತಿಳಿಯಬಹುದು. ಸಾರ್ಥದ ಜೊತೆಗೆ ದಾಟುವಿನಲ್ಲೂ ಹೆಣ್ಣಿನ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ವಿಚಾರಗಳನ್ನು ಇಟ್ಟಿದ್ದಾರೆಂದು ನನ್ನ ಅನಿಸಿಕೆ.

    ಆವರಣದಲ್ಲಿ ಅವರು ಹೇಳಿದ ಅನೇಕ ಐತಿಹಾಸಿಕ ವಿಚಾರಗಳು ಇತಿಹಾಸವನ್ನು ಉಪೇಕ್ಷಿಸುವ ಮಂದಿಗೂ ತಲುಪಿತು ಎನ್ನುವುದೇ ಸಮಾಧಾನ. ಅವರ ಪುಸ್ತಕಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಈ ನಿಟ್ಟಿನಲ್ಲಿ ಒಳ್ಳೆಯದೇ ಅನಿಸುತ್ತದೆ.

    ಅನಂತಮೂರ್ತಿಯವರ ಸಾಹಿತ್ಯಕ್ಕೂ ಭೈರಪ್ಪನವರ ಸಾಹಿತ್ಯಕಕ್ಕೂ ತಾಳೆ ಹಾಕೆ ವಿವರಿಸಿದ್ದು ಅರ್ಥಪೂರ್ಣವಾಗಿತ್ತು.

    ಪೋಸ್ಟಿನ ಕೊನೆಯ ವಾಕ್ಯಕ್ಕೆ ನನ್ನದೂ ಸಮ್ಮತಿಯಿದೆ. ಧನ್ಯವಾದಗಳು.

    ReplyDelete
  14. ಕಾ ಕಾ,

    ಭೈರಪ್ಪನ ಬಗೆಗಿನ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.

    ಆದರೆ ಅನಂತ ಮೂರ್ತಿಯವರದು 'ಧೂರ್ತ' ಬರವಣಿಗೆ ಎಂಬುದು ಚರ್ಚಿಸಬೇಕಾದ ವಿಷಯ. 'ಸಂಸ್ಕಾರ' ಕೆಲವು ಗೊಡ್ಡು ಸಂಸ್ಕಾರಗಳು ಹಾಗು ಸಂಪ್ರದಾಯದ ಬಗೆಗಿನ ಪ್ರಶ್ನೆಗಳನ್ನು ಒಂದು ವಿಚಾರಧಾರೆಯಾಗಿ ಮುಂದಿಟ್ಟಿದೆಯೇ ಹೊರತು, ಎಲ್ಲೂ ಮನುಷ್ಯನಿಗೆ ಸಂಸ್ಕಾರ ಇರಬಾರದು ಎಂಬುದಾಗಲೀ, ಅಥವಾ ಲೇವಡಿ ಮಾಡುವುದಾಗಲೀ ಅದರ ಉದ್ದೇಶವಲ್ಲ ಎಂಬುದು ನನ್ನ ಅಭಿಪ್ರಾಯ. ಅದರಲ್ಲೂ ಪ್ರಾಣೇಶಾಚಾರ್ಯರ ಪಾತ್ರ ಕಥೆಯಲ್ಲಿ ಬ್ರಾಹ್ಮಣ್ಯ ಅಥವಾ ಸಂಸ್ಕಾರಕ್ಕೂ ಮೀರಿ ಮಾನವನ ಮಿತಿಗಳು, ಆತನ ಒಳಮನಸಿನ ತೊಳಲಾಟಗಳನ್ನೂ ಬಿಂಬಿಸಿ ಒಂದು ರಿಮಾರ್ಕಬಲ್ ಕ್ಯಾರೆಕ್ಟರ್ ಸೃಷ್ಟಿಸಲು ಯಶಸ್ವಿಯಾಗಿದೆ ಎನಿಸುತ್ತದೆ.

    ReplyDelete
  15. ಪುತ್ತರ್,
    ಭೈರಪ್ಪನವರ ಜೀವನಾನುಭವ ದೊಡ್ಡದು. ಅವರ ಕಾದಂಬರಿಗಳ ನಾಯಕನು ಅವರ alter ego ಅಂದರೆ ತಪ್ಪಾಗಲಿಕ್ಕಿಲ್ಲ.

    ReplyDelete
  16. ಕನಸು,
    ನಿಮ್ಮ ಜಿಜ್ಞಾಸೆ ತುಂಬ ಚೆನ್ನಾಗಿದೆ. I welcome the argument. ಈ ವಿಷಯದ ಬಗೆಗೆ ಮತ್ತೊಮ್ಮೆ thorough ಚರ್ಚೆ ಮಾಡೋಣ.

    ReplyDelete
  17. ಕ್ಷಮಿಸಿ..
    ನನಗೆ ಭೈರಪ್ಪ ಅವರ ಬಗ್ಗೆ ಕಿಂಚಿತ್ತೂ ತಿಳಿದಿಲ್ಲ.. ಅವರ ಯಾವ ಕಾದಂಬರಿಯನ್ನು ಇನ್ನೂ ಓದಿಲ್ಲ..
    ಆದ್ರೆ ಇತ್ತೀಚಿಗೆ ಅವರ 'ಕವಲು' ಕಾದಂಬರಿಯ ವಿಮರ್ಶೆಯನ್ನು ಹಲವು ಬ್ಲಾಗಿನಲ್ಲಿ ಓದಿದ್ದೇನೆ..


    ..ಬನ್ನಿ ನನ್ನ 'ಮನಸಿನಮನೆ'ಗೆ..

    ReplyDelete
  18. ಗುರುಪ್ರಸಾದರೆ,
    ಕತ್ತಲೆ ಮನೆಯನ್ನು ಬಿಟ್ಟು ಮನಸಿನ ಮನೆಗೆ ಬಂದಿರುವಿರಿ. ಇದು ಸಂತೋಷದ ವಿಷಯ. ನಿಮ್ಮ ಮನೆಯಲ್ಲಿ ಯಾವಾಗಲೂ ಪ್ರೀತಿ ಹಾಗು ಬೆಳಕು ತುಂಬಿರಲಿ.

    ReplyDelete
  19. ಸುತಾಥ್ ಜೀ,
    ಶ್ರೀಯುತ ಭೈರಪ್ಪನವರ ಕಾದ್ಂಬರಿಗಳೆಲ್ಲವೂ ಸ್ತ್ರೀ ವಿರೋದಿ ಎಳೆಯಿಂದ ಕೂಡಿರುತ್ತವೆ ಎಂಬ ಅಂಶ ನನಗೂ ಅನಿಸಿದೆ. ಆದರೆ ಅವರ ಕಾದಂಬರಿಗಳ ಅಭಿಮಾನಿ ನಾನು. ನಾಯಿ-ನೆರಳು, ಗೃಹಭಂಗ , ದಾಟು, ಜಲಪಾತ, ತಬ್ಬಲಿಯು ನೀನಾದೆ ಮಗನೆ, ದೂರ ಸರಿದರು, ವಂಶವೃಕ್ಷ, ಆವರಣ..........ಹೀಗೆ ಹಲವಾರು ಕಾದಂಬರಿಗಳು ನನಗಿಷ್ಟ.
    ಎಲ್ಲಾ ಕಾದಂಬರಿಗಳೂ ಸಾಮಾಜಿಕ ವ್ಯವಸ್ತೆಯ ಕನ್ನಡಿಗಳು ಎಂಬುದು ನನ್ನ ಅಭಿಪ್ರಾಯ. ಇದ್ದಿದ್ದನ್ನು ನೇರವಾಗಿ ಹೇಳಲು ಆಗದು. ಅದಕ್ಕೆಂದೇ ಕಾದಂಬರಿಯ ಮೂಲಕ ತಮ್ಮ ಮನದಿಂಗಿತವನ್ನು ಸಾಹಿತಿಗಳು ಚನ್ನಾಗಿ ಬಿಚ್ಚಿಡುತ್ತಾರೆ ಅಲ್ವಾ?
    ಒಳ್ಳೆಯ ಮಾಹಿತಿಯುಕ್ತ ಬರಹ.

    ReplyDelete
  20. ಸುನಾಥ್ ಕಾಕಾ

    ಸಂಸ್ಕಾರ ಮತ್ತು ವಂಶವೃಕ್ಷಗಳ ತುಲನೆ ತುಂಬಾ ಚೆನ್ನಾಗಿದೆ. ನಂಗೆ ಇಷ್ಟವಾಯಿತು ಮತ್ತು ಎರಡನ್ನೂ ಮತ್ತೆ ಓದಬೇಕು ಅನ್ನಿಸಿತು. ವಂಶವೃಕ್ಷ ಓದಿ ತುಂಬಾ ವರ್ಷಗಳಾಗಿವೆ... ನನಗೂ ’ಕವಲು’ ಬಗ್ಗೆ ತಿಳಿದಿಲ್ಲ. ಕೊಂಡು ತಂದು ಸುಮಾರು ದಿನಗಳಾದರೂ ಅದೇಕೋ ಓದಲು ಶುರುವೇ ಆಗಿಲ್ಲ... :-) ಧನ್ಯವಾದಗಳು ಕಾಕಾ..

    ಶ್ಯಾಮಲ

    ReplyDelete
  21. ಸುನಾತ್ ಸರ್ ಅವರಿಗೆ ವ೦ದನೆಗಳು. ಭೈರಪ್ಪನವರ ಕಾದ೦ಬರಿಗಳ ವಿಶ್ಲೇಷಣೆಯನ್ನು ಧಮ೯ಶ್ರೀ ಇ೦ದ ಆರ೦ಭಿಸಿ ಇತ್ತೀಚಿನ ಕವಲುವಿನ ವರೆಗೂ ಉತ್ಮಮವಾಗಿ ಮೂಡಿಸಿದ್ದೀರಿ. "ಕಾದಂಬರಿಗಳ ಮೂಲಕ ಸಾಂಪ್ರದಾಯಕ ಸಂಸ್ಕೃತಿ ಹಾಗು ಆಧುನಿಕ ಸಂಸ್ಕೃತಿ ಇವುಗಳ ತುಲನೆಯನ್ನು ಮಾಡಲು ಬಯಸುತ್ತಾರೆ." - ನಿಜ. ಆದರೆ ಪೌರಾಣಿಕ ಕಥೆಗಳ ಮೂಲ ರೂಪವನ್ನು ಬದಲಿಸಿ ಅದನ್ನು ತಮಗೆ ತಿಳಿದ ರೀತಿಯಲ್ಲಿ ವಿಶ್ಲೇಷಿಸುತ್ತ, ದಾಖಲೆಗಳನ್ನೂ ತಮ್ಮದೇ ಧಾಟಿಯಲ್ಲಿ ಒದಗಿಸುತ್ತ, ಓದುಗರಿಗೆ ಗೊ೦ದಲ ಉ೦ಟು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಪರ್ವ ಕಾದ೦ಬರಿಯ ಬಗ್ಗೆ ಹೇಳುತ್ತಿದ್ದೇನೆ. ಸಾಮಾಜಿಕ ಕಥೆಗಳಲ್ಲಿ ಈ ಸಮಸ್ಯೆ ಬರುವುದಿಲ್ಲ. ಅದರ ಮೂಲ ಲೇಖಕರು ಅವರೇ ಆಗಿರುತ್ತಾರೆ. ಅಭಿಪ್ರಾಯ ಒಪ್ಪುವುದು ಅಥವಾ ಬಿಡುವುದು ಓದುಗರಿಗೆ ಬಿಟ್ಟಿದ್ದು. ಆದರೆ ಚಾರಿತ್ರಿಕ, ಪೌರಾಣಿಕ ಕಥೆಗಳಲ್ಲಿ ಮೂಲ ಲೇಖಕರು ಇವರು ಆಗಿರುವುದಿಲ್ಲ..ಅದನ್ನು ಮನ ಬ೦ದ೦ತೆ ಬದಲಾಯಿಸಿ ಬರೆಯುವುದು ಸರಿಯಾಗುತ್ತದೆಯೇ? (ಇದು ಕ೦ಭ, ಪ೦ಪ,ನಾಗಚ೦ದ್ರ, ಕುವೆ೦ಪು ರಾಮಾಯಣಗಳಿಗೂ ಅನ್ವಯಿಸುತ್ತದೆ!).. ಸರ್.. ತಮ್ಮ ಅನಿಸಿಕೆಗೆ ಕುತೂಹಲದಿ೦ದ ಕಾಯುತ್ತೇನೆ.

    ಅನ೦ತ್

    ReplyDelete
  22. ಕಾಕಾ,"ಕವಲು" ಓದಿದೆ. ಅದರ ಬಗ್ಗೆ ಬಂದ ಹಲವಾರು ವಿಮರ್ಶಾ ಲೇಖನಗಳನ್ನು ಮೊದಲೇ ಓದಿಕೊಂಡಿದ್ದರಿಂದಲೋ ಏನೋ, ಕಾದಂಬರಿ ಓದುವ ಮೊದಲೇ ಅದರ ಬಗ್ಗೆ ಒಂದು ಅಭಿಪ್ರಾಯಕ್ಕೆ ಬಂದುಬಿಟ್ಟಿದ್ದೆ ಅನ್ನಿಸಿತು.

    ನೀವು ಓದಿದ್ದರೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

    ReplyDelete
  23. ಕಾಕಾ ಭೈರಪ್ಪ ಅವರ ಅಭಿಮಾನಿ ಓದುಗರಲ್ಲಿ ನಾನೂ ಒಬ್ಬ. ಒಮ್ಮೊಮ್ಮೆ ಭೈರಪ್ಪ ನಮ್ಮ ಸಾಂಸ್ಕೃತಿಕತೆ ಯ
    ದ್ಯೋತಕ ಅಂತ ಅನಿಸಿದರೆ ಮತ್ತೊಂದೆಡೆ ಎಲ್ಲೋ ಒಂದು ದ್ವಂದ್ವ ಹುಟ್ಟುಹಾಕುತ್ತಾರೆ. ಅವರ ತಬ್ಬಲಿ...ಕಾದಂಬರಿ
    ಉದಾಹರಣೆಯಾಗಿ ತಗೊಂಡರೆ ಅವರು ಮೌಲ್ಯಗಳನ್ನು ಬಿತ್ತುವ ಕಾಯಕದಲ್ಲಿ ತೊಡಗಿದ್ದಾರೆ ಅನಿಸುತ್ತದೆ.
    ಅದರ ಮೇಲೆ ತಯಾರಾದ ಸಿನೇಮ ಕಾದಂಬರಿಗಿಂತ ಚೆನ್ನಾಗಿತ್ತು ,ಹಾಗೆಯೇ ಅವರು ಸೃಷ್ಟಿಸುವ ಪಾತ್ರ ಅವುಗಳ
    ಒಳತೋಟಿ,ದ್ವಂದ್ವಗಳು ಅವನ್ನು ಅವರು ನಿರೂಪಿಸುವ ಬಗೆ ಅನನ್ಯ.ಬೇರೆ ಲೇಖಕರಿಗೆ ಹೋಲಿಸಿದರೆ ಭೈರಪ್ಪ
    ಸ್ಕೋರ್ ಮಾಡುವುದು ಇಲ್ಲಿಯೇ

    ReplyDelete
  24. ಸುನಾಥರೇ, ಮೊನ್ನೆಯೇ ಓದಿದ್ದರೂ ಸಮಯಾಭಾವದಿಂದ ಪ್ರತಿಕ್ರಿಯಿಸಲಾಗಿರಲಿಲ್ಲ, ಭೈರಪ್ಪನವರನ್ನು ಕೆಲವರು ಒಳಗೊಳಗೇ ಮೆಚ್ಚುವ ಮಹಿಳೆಯರಿದ್ದಾರೆ. ಹೊರನೋಟಕ್ಕೆ ತಾನು ನಾಸ್ತಿಕ ಎನ್ನುವವ ದೇವಸ್ಥಾನದಲ್ಲಿ ಪ್ಯಾಂಟಿನ ಕಿಸೆಯಲ್ಲಿ ಕೈಹಾಕಿಕೊಂಡು ಅಲ್ಲೇ ಕೈಮುಗಿದ ಹಾಗೇ! ದಾರ್ಷ್ಟ್ಯತನದಿಂದ, ಯಾವುದೇ ಪೂರಾಗ್ರಹವಿಲ್ಲದೇ ಒಪ್ಪಬಹುದಾದ, ಎಲ್ಲವನ್ನೂ ಸಹಿಸಿ ಬರೆಯುವ ಸಾಮರ್ಥ್ಯವಿರುವ ಸಾಹಿತಿ ಭೈರಪ್ಪನವರು, ಚೆನ್ನಾಗಿ ಹೇಳಿದ್ದೀರಿ, ಧನ್ಯವಾದಗಳು

    ReplyDelete
  25. ಪ್ರವೀಣ,
    ನಿಮ್ಮ ಮಾತು ನಿಜ. ಭೈರಪ್ಪನವರ
    ಕಾದಂಬರಿಗಳು ತೋರಿಕೆಗೆ ವೈಯಕ್ತಿಕ ಸಮಸ್ಯೆಯ ಕಾದಂಬರಿಗಳಾದರೂ, ಸಾಮಾಜಿಕ ಘರ್ಷಣೆಯೇ ಈ ಕಾದಂಬರಿಗಳ ಒಳತಿರುಳಾಗಿದೆ.

    ReplyDelete
  26. ಶ್ಯಾಮಲಾ,
    ಸಂಸ್ಕಾರ ಮತ್ತು ವಂಶವೃಕ್ಷ ಕಾದಂಬರಿಗಳಲ್ಲಿ ಅನೇಕ ಭಿನ್ನತೆಗಳಿವೆ. ಆದರೆ ಎರಡರಲ್ಲೂ ಒಂದು ವಿಷಯ ಸಾಮಾನ್ಯವಾಗಿದೆ: Basic instinct of the human being.ಈ ಈರ್ವರೂ ಲೇಖಕರು ಈ ಅಂಶವನ್ನು ನಿರ್ವಹಿಸಿದ ರೀತಿ ಭಿನ್ನವಾಗಿದೆ. ತುಂಬ ಸ್ವಾರಸ್ಯಾಕರ ಚರ್ಚೆಯಾಗಬಹುದು.

    ReplyDelete
  27. ಅನಂತರಾಜರೆ,
    ‘ಪರ್ವ’ ಕಾದಂಬರಿಯ ಬಗೆಗೆ ನಾನು ನಿಮ್ಮ ಅಭಿಪ್ರಾಯವನ್ನು ಶತಶಃ ಸಮ್ಮತಿಸುತ್ತೇನೆ. ನನ್ನ ಮುಖ್ಯ ಆಕ್ಷೇಪಣೆ ಎಂದರೆ, ಈ ಕಾದಂಬರಿಯಲ್ಲಿ ಭೈರಪ್ಪನವರು ಪಾತ್ರಗಳ ಘನತೆಯನ್ನು ಹಾಳು ಮಾಡಿ, ಅವರನ್ನೆಲ್ಲ ಚಿಲ್ಲರೆ ವ್ಯಕ್ತಿಗಳನ್ನಾಗಿ ಮಾಡಿ ಬಿಟ್ಟಿದ್ದಾರೆ.

    ReplyDelete
  28. ತ್ರಿವೇಣಿ,
    ‘ಕವಲು’ ಕಾದಂಬರಿಯನ್ನು ನಾನು ಓದಿಲ್ಲ. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ.

    ReplyDelete
  29. ಉಮೇಶ,
    ಸರಿಯಾಗಿ ಹೇಳಿದಿರಿ. ಭೈರಪ್ಪನವರ ಪಾತ್ರಗಳ ಒಳತೋಟಿಯ ಚಿತ್ರಣವೇ ಅವರ ಕಾದಂಬರಿಗಳ ಆಕರ್ಷಕ ಅಂಶವಾಗಿದೆ.‘ವಂಸವೃಕ್ಷ’ ಹಾಗು ‘ತಬ್ಬಲಿಯು ನೀನಾದೆ ಮಗನೆ’ ಚಲನಚಿತ್ರಗಳು ಕಾದಂಬರಿಗಿಂತ ಉತ್ತಮವಾಗಿದ್ದವು ಎನ್ನುವದನ್ನು ನಾನು ಹೃತ್ಪೂರ್ವಕವಾಗಿ ಒಪ್ಪುತ್ತೇನೆ.

    ReplyDelete
  30. ಭಟ್ಟರೆ,
    ಕೆಲವು ಬುದ್ದಿಜೀವಿಗಳೂ ಸಹ ಹೊರಗೆ ನಾಸ್ತಿಕರು, ಒಳಗೆ ಏನಿದ್ದಾರೊ ದೇವರೇ ಬಲ್ಲ! ಶ್ರೀಮತಿ ಪ್ರೇಮಾ ಕಾರಂತರು ತಮ್ಮ ಆತ್ಮಕಥನದಲ್ಲಿ ಶ್ರೀ ಅನಂತಮೂರ್ತಿಯವರು ಕಾರಂತರ ರೋಗವನ್ನು ಗುಣಪಡಿಸಲು, ಬೆಂಗಳೂರಿನಲ್ಲಿ ಅದ್ಧೂರಿ ಸಮಾರಂಭ ಮಾಡಿಕೊಂಡ ಒಬ್ಬ evangelistನನ್ನು ಭೆಟ್ಟಿಯಾಗಲು ಸೂಚಿಸಿದ್ದನ್ನು ಬರೆದಿದ್ದಾರೆ!

    ReplyDelete
  31. ಕಾಕ
    ನಾನು ಓದಿದ ಭೈರಪ್ಪನವರ ಕಾದ೦ಬರಿಗಳಲ್ಲಿ ನನಗೆ ತು೦ಬಾ ಇಷ್ಟವಾಗಿದ್ದು ಆವರಣ. ಇತಿಹಾಸ ಹೇಗೆ ತಿರುಚಿ ಬರೆಯಲಾಗುತ್ತಿದೆ ಅನ್ನುವುದು ಇದರಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ..ಎಷ್ಟೋ ಅಸತ್ಯಗಳನ್ನು ಸತ್ಯವೆ೦ದೆ ಶಾಲೆಯಲ್ಲಿ ಕಲಿಸಲಾಗುತ್ತಿದೆ..ಇತಿಹಾಸ ಹೇಗಿದೆಯೋ ಹಾಗೆ ಅದನ್ನು ತೆರೆದಿಡಬೇಕೆ ಹೊರತೂ ಅವರವರ ಅಭಿಪ್ರಾಯಗಳನ್ನಲ್ಲ ಅನ್ನುವುದನ್ನು ಯಾವುದೇ ಪೂರ್ವಾಗ್ರಹ ಇಲ್ಲದೆ ನಿರೂಪಿಸಿದ್ದಾರೆ ಅನ್ನುವುದು ನನ್ನ ಭಾವನೆ.

    ReplyDelete
  32. ವಿಜಯಶ್ರೀ,
    The country that does not know its past has no future either! ಭೈರಪ್ಪನವರು ನಿರ್ಭಿಡೆಯಿಂದ, ನಿಷ್ಪಕ್ಷಪಾತವಾಗಿ ಇತಿಹಾಸದ ಅನಾವರಣ ಮಾಡಿದ್ದಾರೆ. ಯಾರೂ ಈ ವಿಷಯವನ್ನು ತಪ್ಪಾಗಿ ಅರ್ಥೈಸಬಾರದು.

    ReplyDelete
  33. ಸರ್,
    ಅನಂತಮೂರ್ತಿಯವರ ಸಂಸ್ಕಾರದ ಹಿಂದೆ ಅಸ್ತಿತ್ವವಾದದ ಈ ರೀತಿ ವಕಾಲತ್ತಿದೆ ಎಂಬ ಆಯಾಮ ನನಗೆ ಗೊತ್ತಿರಲಿಲ್ಲ. ಅನೇಕರು ಈ ಕಾದಂಬರಿಯ ಉದ್ದೇಶವನ್ನು ತೆಗಳುವಾಗ ಅದು ಯಾಕೆ ಎಂದು ನನಗೆ ಗೊತ್ತಾಗಿರಲಿಲ್ಲ. ಮತ್ತು ಅವರು ಪ್ರಾಣೇಶಾಚಾರ್ಯ ಚಂದ್ರಿಯರ ಘಟನೆಯನ್ನು ಬ್ರಹ್ಮಚರ್ಯದ ಆದರ್ಶವನ್ನು ಲೇವಡಿ ಮಾಡುವ ಉದ್ದೇಶದಿಂದ ಮಾಡಿದ್ದಾರೆ ಎಂಬುದೂ ಅರಿವಾಗಿರಲಿಲ್ಲ. ತುಂಬ ಸೂಕ್ಷ್ಮವಾಗಿ ಓದಿದರೆ, ಮತ್ತು ಆಳವಾದ ಓದು ಇದ್ದವರಿಗೆ ಮಾತ್ರ ಇಂತಹ
    ಸಂಗತಿಗಳು ಹೊಳೆಯುತ್ತವೆ ಎನ್ನಿಸುತ್ತದೆ....

    ಪಾಶ್ಚಾತ್ಯರ ಅಸ್ತಿತ್ವವಾದಕ್ಕೆ ಆಧಾರವಾಗಿದ್ದುದು ಕೇವಲ ನಮ್ಮ instinct ಗಳು ಮಾತ್ರ. ಭಾರತೀಯವಾಗಿ ಅಸ್ತಿತ್ವವಾದದ ಶ್ರೇಷ್ಠ ಅಭಿವ್ಯಕ್ತಿ ಕೃಷ್ಣನೇ ಇರಬೇಕು ಅನ್ನಿಸುತ್ತದೆ...

    ReplyDelete
  34. ರಾಘವೇಂದ್ರ,
    ಬ್ರಾಹ್ಮಣ ಸಮಾಜದ ಹುಳುಕುಗಳನ್ನು ತೆಗಳುವದರಲ್ಲಿ ತಪ್ಪಿಲ್ಲ.
    ಇಂತಹ ಕೆಲಸವನ್ನು ಅನಂತಮೂರ್ತಿಯವರಿಗಿಂತ ಮೊದಲೇ ಕ್ರಾಂತಿಕಾರಿ ನಾಟಕಕಾರರಾದ ಶ್ರೀರಂಗ ಮೊದಲಾದವರು ಮಾಡಿದ್ದಾರೆ. ಅನಂತಮೂರ್ತಿಯವರು ಬ್ರಹ್ಮಚರ್ಯದ ಆದರ್ಶವನ್ನು ಪಾಲಿಸುತ್ತಿದ್ದ ಪ್ರಾಣೇಶಾಚಾರ್ಯರನ್ನು ಈ ಸಮಾಜದ product ಎಂದು ಬಿಂಬಿಸುತ್ತ, ಸಾಅಮಾಜಿಕ ಹುಳುಕುಗಳಿಗೆ ವೈಯಕ್ತಿಕ ಸಾಧನೆಯನ್ನು ಬಲಿ ಮಾಡಿದ್ದಾರೆ. ಇದೆಲ್ಲವೂ ಪಶ್ಚಿಮದಿಂದ ಆಮದು ಮಾದಿಕೊಂಡ ಅಸ್ತಿತ್ವವಾದದ
    ಉದ್ಧಾರಕ್ಕಾಗಿ!
    ಶ್ರೀಕೃಷ್ಣನಂತಹ ತತ್ವವೇತ್ತನನ್ನು ಹೇಗೆ ಕರೆಯುವದೋ ತಿಳಿಯದಾಗಿದೆ!

    ReplyDelete
  35. ಬೈರಪ್ಪನವರನ್ನು ಓದಲು ಪ್ರೇರೇಪಿಸುವಂತಹ ಲೇಖನ.
    ಸುಂದರವಾಗಿದೆ.

    ReplyDelete
  36. ವೆಂಕಟಕೃಷ್ಣರೆ,
    ಭೈರಪ್ಪನವರ ಕಾದಂಬರಿಗಳಲ್ಲಿ ಒಳ್ಳೆಯ ಅಂಶವಿದ್ದಂತೆ, ಕೆಟ್ಟ ಅಂಶಗಳೂ ಇವೆ. Beware!

    ReplyDelete
  37. ಶಿವಶಂಕರರೆ,
    I concur with you.

    ReplyDelete
  38. ಸುನಾಥರೇ,
    ಬೈರಪ್ಪನವರಲ್ಲಿ ಒಳ್ಳೆಯ ಅಂಶವಿದೆ ಅಂತ ನಾನೇನೂ ಹೇಳಿಲ್ಲವಲ್ಲಾ..
    ಅಂದಹಾಗೆ...
    ಜಗತ್ತಿನಲ್ಲಿ ಒಳ್ಳೆಯದು/ಕೆಟ್ಟದ್ದು ಅವರವರ ಭಾವಕ್ಕೆ ಅಂತ ನಾನು ಅಂದುಕೊಂಡಿದ್ದೇನೆ.
    ಮತ್ತೆ
    ಕೆಲವರನ್ನುವಂತೆ
    ಒಂದೆರಡು ಕಾದಂಬರಿಗಳು ಚೆನ್ನಾಗಿಲ್ಲದಿದ್ದರೆ,
    ಆತ ಒಳ್ಳೆಯ ಕಾದಂಬರಿಕಾರನೇ ಅಲ್ಲ. ಎನ್ನುವುದನ್ನು
    ನಾನು ಇಷ್ಟಪಡುವುದಿಲ್ಲ.

    ReplyDelete
  39. ಶ್ರೀನಿವಾಸ ಮ. ಕಟ್ಟಿ, Dublin.OH,USAOctober 17, 2010 at 5:33 AM

    ಭೈರಪ್ಪನವರು ಸ್ತ್ರೀವಿರೋಧಿ ಎಂಬುದು ಬರಿ ಬಯಲಿನಪವಾದ. ಅದರಲ್ಲಿ ಎಳ್ಳಷ್ಟೂ ಸತ್ಯವಿಲ್ಲ ! ಆದರೆ ಆಧುನಿಕತೆಯ ಹೆಸರಿನಲ್ಲಿ, ಸ್ತ್ರೀ ಸ್ವಾತಂತ್ರ ಅಥವಾ ಸ್ತ್ರೀ ವಿಮೋಚನೆಯ ಸೋಗಿನಲ್ಲಿ, ಸಮಾಜದ ಸಮತೋಲನವನ್ನು ಹಾಳುಮಾಡುವದರ ವಿರೋಧವನ್ನು ಭೈರಪ್ಪನವರು ಖಂಡಿತವಾಗಿಯೂ ತಮ್ಮ ಕಾದಂಬರಿಗಳ ಮೂಲಕ ಮಾಡಿದ್ದಾರೆ. ವಿಶಾಲ ದೃಷ್ಟಿಯಿಂದ ನೋಡಿದರೆ, ಸ್ತ್ರೀ ಅಥವಾ ಪುರುಷ ಇಬ್ಬರಿಗೂ ಸಮಾಜ ವ್ಯವ್ಯಸ್ಥೆಯಲ್ಲಿ ಪೂರ್ಣ ಸ್ವಾತಂತ್ರವೆಂಬುದು ಇಲ್ಲ. ಇಬ್ಬರಿಗೂ ಸಮಾಜದ ಕಟ್ಟುಪಾಡುಗಳಿವೆ. ಈ ಕಟ್ಟುಪಾಡುಗಳನ್ನು ಸ್ತ್ರೀ-ಪುರುಷರಲ್ಲಿ ಯಾರೊಬ್ಬರು ಮೀರಿದರೂ, ಸಮಾಜದ ಮತ್ತು ಕುಟುಂಬದ ಸಮತೋಲನ ತಪ್ಪುವದು ಖಂದಿತ. ಇದನ್ನೇ ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ವ್ಯಕ್ತ ಮಾಡಿದ್ದಾರೆ.

    ಸ್ವಯಂ ಘೋಷಿತ ಬುದ್ಧಿಜೀವಿ ಯು.ಆರ್.ಎ.ಮೂರ್ತಿಯವರ ಬಗ್ಗೆ ಬರೆಯುವದು ಗುಡ್ಡಕ್ಕೆ ಕಲ್ಲು ಹೊತ್ತಂತೆ ! ಅವರ ’ಸಂಸ್ಕಾರ’ ಕನ್ನಡದ ಅತ್ಯಂತ ಕಳಪೆ ಕಾದಂಬರಿ. ಅವರಿಂದ ಕನ್ನಡ ಸಾಹಿತ್ಯ ಲೋಕವನ್ನು ದೇವರೇ ಕಾಯಬೇಕು.

    ReplyDelete
  40. ಪ್ರ. ಭೀ. ಸತ್ಯಪ್ಪವರ, ಬೆಂಗಳೂರು.October 17, 2010 at 5:41 AM

    ಭೈರಪ್ಪನವರ ಕಾದಂಬರಿಗಳು ಜನರನ್ನಿ ಇಷ್ಟೊಂದು ಏಕೆ ಮತ್ತು ಹೇಗೆ ಆಕರ್ಷಿಸುತ್ತವೆ ? ಅವುಗಳಲ್ಲಿ ಎನೋ ಒಂದು ಅಂತಃಸತ್ವ ಇರಲೇಬೇಕಲ್ಲವೆ ? ಆವರನ್ನು ಪ್ರತಿಗಾಮಿ ಎಂದು ಜರೆಯುವದಕ್ಕಿಂತ, ಆ ಅಂತಃಸತ್ವವನ್ನು ಹುಡುಕಿ ಇನ್ನೊಂದು ಲೇಖನ ಬರೆಯಿರಿ. ಅದು ಹೆಚ್ಚು ಸಮಂಜಸವಾದೀತು !

    ReplyDelete
  41. ಅನಾಮಿಕಾOctober 17, 2010 at 5:52 AM

    ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ಈ ವರೆಗೆ ಭೈರಪ್ಪನಂತಹ ಜನಪ್ರೀಯ ಕಾದಂಬರಿಕಾರರು ಯಾರಾದರೂ ಆಗಿದ್ದಾರೆಯೆ ? ಯಾರದಾದರೂ ಕಾದಂಬರಿ ಪ್ರಕಟವಾಗಿ ೨-೩ ತಿಂಗಳುಗಳಲ್ಲಿ ೪-೫ ಮರುಮುದ್ರಣ ಕಂಡ ಉದಾಹರಣೆಗಳಿವೆಯೆ ? ಕನ್ನಡದ ಯಾವ ಪುಸ್ತಕ ೨೩ ಮರುಮುದ್ರಣ ಕಂಡಿದೆ ? ಮರು ಮುದ್ರಣವೇ ಕಾದಂಬರಿಯ ಗುಣಾವಗುಣಗಳ ಅಳತೆಗೋಲು ಅಲ್ಲವಾದರೂ, ಜನಪ್ರೀಯತೆಯ ಅಳತೆಗೋಲಂತೂ ನಿಜ. ಜನಪ್ರೀಯತೆಗೆ ಕಾರಣವೇನು ? ಕನ್ನಡದ ಕೋಟಿ-ಕೋಟಿ ಜನ ಭೈರಪ್ಪನವರ ಕಾದಂಬರಿಗಳನ್ನು ಕೊಂಡು ಓದುವದು ಸುಮ್ಮನೆಯೆ ? ಅವರ ಕಾದಂಬರಿಗಳ ಪಾತ್ರಗಳು ಅತ್ಯಂತ ಸ್ಫುಟ ಮತ್ತು ನಿರ್ದಿಷ್ಟ. ಯಾವ ಪಾತ್ರವೂ ವಿನಾಕಾರಣವಲ್ಲ. ನಿಮಗೆ ಭೈರಪ್ಪನವರ್ ಕುರಿತು ಏನೋ ಒಂದು ‘ಪೂರ್ವಗ್ರಹ’ ಇದೆ. ಅದನ್ನು ಪ್ರಾಮಾಣಿಕವಾಗಿ ನಿವಾರಿಸಿಕೊಂಡು ಅವರನ್ನು ಅಭ್ಯಸಿಸಬೇಕೆಂದು ನನ್ನ ಸಲಹೆ.

    ReplyDelete
  42. ಭೈರಪ್ಪನವರ ಕಾದ೦ಬರಿಗಳ ಒಳ ಸತ್ವದ ಬಗ್ಗೆ ಉತ್ತಮ ನೋಟವನ್ನು ನೀಡಿದ್ದೀರಿ ಸರ್,ಧನ್ಯವಾದಗಳು. ಭೈರಪ್ಪನವರು ನಮಗೆ ತತ್ವಸಾಸ್ತ್ರದ ಉಪನ್ಯಾಸಕರಾಗಿದ್ದರು. ಆಳವಾದ ಅಧ್ಯಯನ ಮಾಡಿಯೇ ಅವರು ಕಾದ೦ಬರಿಗಳನ್ನು ಬರೆಯುತ್ತಾರೆ ಎ೦ದು ತಿಳಿದಿದ್ದೀನೆ. ಲೇಖಕ ತಾನು ಕ೦ಡ ಸತ್ಯವನ್ನು ಪ್ರಾಮಾಣಿಕವಾಗಿ ಮೂಡಿಸಿದರೆ ಅದು ಉತ್ತಮ ಲೇಖನವಾಗುವುದರಲ್ಲಿ ಸ೦ಶಯವಿಲ್ಲ. ಆದರೆ ಪೂರ್ವಾಗ್ರಹ ಪೀಡಿತರಾದರೆ ಓದುಗರಿಗೆ ಮೊಸಮಾಡಿದ೦ತೆ. ಅವರವರ ಭಾವಕ್ಕೆ!

    ReplyDelete
  43. ವೆಂಕಟಕೃಷ್ಣ,
    ಲೋಕೋ ಭಿನ್ನರುಚಿ:. ಒಬ್ಬರಿಗೆ ಒಳ್ಳೆಯದಾಗಿ ಕಾಣುವದು ಮತ್ತೊಬ್ಬರಿಗೆ ಕೆಟ್ಟದಾಗಿ ಕಾಣಬಹುದು. ಏನೇ ಆದರೂ, ಭೈರಪ್ಪನವರು ಜನಪ್ರಿಯ ಕಾದಂಬರಿಕಾರರು ಎನ್ನುವದರಲ್ಲಿ ಸಂದೇಹವಿಲ್ಲ.

    ReplyDelete
  44. ಕಟ್ಟಿಯವರೆ,
    ಭೈರಪ್ಪನವರು ಸ್ತ್ರೀವಿರೋಧಿ ಅಲ್ಲ ಎಂದು ನೀವು ಹೇಳುತ್ತೀರಿ. ಆದರೆ ಸ್ತ್ರೀಯರನೇಕರು ಅವರನ್ನು ಸ್ತ್ರೀವಿರೋಧಿ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಸ್ತ್ರೀಯರ ಅಭಿಪ್ರಾಯಕ್ಕೆ ನಾವು weightage ಕೊಡಬೇಕಲ್ಲವೆ?

    ReplyDelete
  45. ಸತ್ಯಪ್ಪನವರೆ,
    ಭೈರಪ್ಪನವರನ್ನು ಪ್ರತಿಗಾಮಿ ಎಂದು ನಾನು ಕರೆದಿಲ್ಲ. ಹಾಗೆ ಹೆಸರಿಸುವವರು so called ಬುದ್ಧಿಜೀವಿಗಳು. ಭೈರಪ್ಪನವರು ಜನಪ್ರಿಯ ಲೇಖಕರೆಂದು ನಾನು ಅರಿತಿದ್ದೇನೆ. ಅವರ ಜನಪ್ರಿಯತೆಯ ಕಾರಣಗಳನ್ನು ನಾನು ಊಹಿಸಿದಂತೆ, ಈ ಲೇಖನದಲ್ಲಿ ಸೂಚಿಸಿದ್ದೇನೆ.

    ReplyDelete
  46. ಅನಾಮಿಕಾ ನಿಮ್ಮ ಸಲಹೆಗೆ ಧನ್ಯವಾದಗಳು. ಭೈರಪ್ಪನವರ ಬಗೆಗೆ ನನಗೆ ಯಾವ ಪೂರ್ವಾಗ್ರಹವೂ ಇಲ್ಲ. ಭೈರಪ್ಪನವರು ಅನಂತಮೂರ್ತಿಗಿಂತ ಹೆಚ್ಚಿಗೆ ಪ್ರಾಮಾಣಿಕರು ಎನ್ನುವ ನನ್ನ ಅಭಿಪ್ರಾಯವನ್ನು ಇದೇ ಲೇಖನದಲ್ಲಿ ನಾನು ಹೇಳಿದ್ದೇನೆ. ಭೈರಪ್ಪನವರು ಸಾಂಪ್ರದಾಯಕ ಸಂಸ್ಕೃತಿಯ ಪ್ರತಿಪಾದಕರು. ಅದು ಅವರವರ ವಿಚಾರ. ಆದರೆ ಅವರ ಕಾದಂಬರಿಗಳಲ್ಲಿ ‘ಅತಿಗಂಡಸ್ತನ ಭ್ರಮಾವಿಲಾಸ’ ಇದೆ ಎಂದು ನಾನು ಇದೇ ಬ್ಲಾಗಿನಲ್ಲಿ ಉದಾಹರಣೆ ಸಹಿತವಾಗಿ ಬರೆದಿದ್ದೇನೆ. ದಯವಿಟ್ಟು ನೋಡಿರಿ.

    ReplyDelete
  47. ಪ್ರಭಾಮಣಿಯವರೆ,
    ಲೇಖಕನು ತಾನು ಕಂಡ ಸತ್ಯವನ್ನು ಪ್ರಾಮಾಣಿಕವಾಗಿ ಬರೆಯಬೇಕೆನ್ನುವದು ಅತ್ಯಂತ ಸತ್ಯವಾದ ಮಾತಾಗಿದೆ. ಭೈರಪ್ಪನವರು ಈ ವಿಷಯದಲ್ಲಿ ಹದಿನಾರಾಣೆ ಪ್ರಾಮಾಣಿಕರು. ಅವರು ಬರೆದಿದ್ದನ್ನು ಕೆಲವರು ಒಪ್ಪಬಹುದು, ಕೆಲವರು ಒಪ್ಪಲಿಕ್ಕಿಲ್ಲ.ಆದರೆ ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವದಿಲ್ಲ.

    ReplyDelete
  48. @ ಅನಾಮಿಕಾ,

    ಜನಪ್ರಿಯತೆಯ ಆಧಾರದ ಮೇಲೆ ಕೃತಿಯೊಂದರ ಮೌಲ್ಯಮಾಪನ ಮಾಡುವುದೇ! ಕೃತಿಯೊಂದನ್ನು ಸ್ವತಃ ಓದಿನೋಡಿ ಗುಣಾವಗುಣಗಳನ್ನು ತೂಗಿ ನೋಡುವ ಬೌದ್ಧಿಕ ಕ್ರಿಯೆಗೆ ಅರ್ಥವೇ ಇಲ್ಲವೇ? ಅಂಥದ್ದೊಂದು ಕ್ರಿಯೆಯ ಫಲ ಕೇವಲ ಜನಾಭಿಪ್ರಾಯದೊಂದಿಗೆ ಹೊಂದುವುದಿಲ್ಲವೆಂದ ಮಾತ್ರಕ್ಕೆ ಅದಕ್ಕೆ ಪೂರ್ವಾಗ್ರಹವೆಂದು ಹೆಸರಿಟ್ಟುಬಿಡಬೇಕೇ? ಪೂರ್ವಾಗ್ರಹವಿಲ್ಲದ ವಿಮರ್ಶೆ ಸಾಧ್ಯವೇ ಆಗುವುದಾದರೆ ಭೈರಪ್ಪನವರ ಬಗ್ಗೆ ಅದನ್ನು ಸುನಾಥರು ಸಾಕಷ್ಟು ಸಮರ್ಥವಾಗಿಯೇ ಮಾಡಿದ್ದಾರೆಂದೇ ನನ್ನ ಅನಿಸಿಕೆ. ಇನ್ನು ಪೂರ್ವಾಗ್ರಹದ ವಿಷಯಕ್ಕೆ ಬಂದರೆ ಅದು ಅವರಿಗೆ ಭೈರಪ್ಪನವರ ಬಗೆಗಿಂತಾ ಅನಂತಮೂರ್ತಿಯವರ ಬಗೆಗೆ ತುಸು ಮಟ್ಟಿಗೆ ಇದೆಯೆಂದು ನನ್ನ ಅನಿಸಿಕೆ. ಇದರ ಬಗ್ಗೆ ಬೇರೆಯೇ ಪ್ರತಿಕ್ರಿಯೆ ಕಾಣಿಸುತ್ತೇನೆ.

    ReplyDelete
  49. ಸುನಾಥ ಕಾಕಾ,

    ಭೈರಪ್ಪನವರ ಬಗೆಗಿನ ಚರ್ಚೆಯಲ್ಲಿ ಅನಂತಮೂರ್ತಿಯ ಪ್ರಸ್ತಾಪ ಬರಬೇಕಾದ ಯಾವುದೇ ಸಾಹಿತ್ಯಕ ಕಾರಣಗಳೂ ನನಗಂತೂ ಕಾಣುವುದಿಲ್ಲ. ಇಬ್ಬರ ಬರಹಗಳ ದಿಕ್ಕು ದೆಸೆಗಳು ನೀತಿ-ನಿಲುವುಗಳು, ಸೊಗಸುಗಳು ಬೇರೆಯೇ.

    ಇನ್ನು specific ಆಗಿ "ಸಂಸ್ಕಾರ"ದ ಬಗ್ಗೆ ಮಾತಾಡುವುದಾದರೆ, ಸಂಸ್ಕಾರದ ಕತೆ ಅಥವ ಅದರ "ಒಳಕತೆ"ಯಲ್ಲಿ, ಹಾಗೆ ಅದನ್ನು ಬಳಸುವ ತಂತ್ರಗಾರಿಕೆಯಲ್ಲಿ ತಾವು ಹೇಳುವ ದೂರ್ತತನವಾಗಲೀ ಅಥವ ಆ ದೂರ್ತತನ ಮಾಡುವ ಅಗತ್ಯವಾಗಲೀ ಕಾಣಬರುವುದಿಲ್ಲ. ಕತೆಯ ರೀತಿಯೇ ಅದಲ್ಲವೇ? ಹೇಳುವುದನ್ನು ಸಾಫ ಸೀದಾ ಹೇಳಿಬಿಟ್ಟರೆ ಅದು ಕತೆಯಾಗುವುದಿಲ್ಲ, ಬದಲಿಗೆ ಲೇಖನವೋ ಭಾಷಣವೋ ಇನ್ನೇನೋ ಆಗುವುದು, ಅಲ್ಲವೇ? ಆದರೆ ಇಲ್ಲಿ ಕತೆಗಾರನ ಉದ್ದೇಶ ಇದನ್ನು ಲೇಖನವೋ ಭಾಷಣವೋ ಆಗಿಸುವುದಲ್ಲ, ಬದಲಿಗೆ ಕತೆಯಾಗಿಯೇ ಉಳಿಸಿಕೊಳ್ಳುವುದು. ಮತ್ತು ಇದರಲ್ಲಿ ದೂರ್ತತನವನ್ನು ಆರೋಪಿಸುವ ಮೊದಲು ಸಂಸ್ಕಾರದ ಕತೆ ಬಂದ ಕಾಲಘಟ್ಟವನ್ನು ಗಮನಿಸಬೇಕು. ಅವತ್ತಿನ ಸಮಾಜ ಇವತ್ತಿನಷ್ಟು ಲಿಬರಲ್ ಆಗಿರಲಿಲ್ಲ. ಸಂಸ್ಕಾರದ "ಪ್ರತಿಭಟನೆ" ಅವತ್ತಿನ ಕಾಲಘಟ್ಟಕ್ಕಂತೂ ಖಂಡಿತಾ ಪ್ರಸ್ತುತವಾಗಿತ್ತು. ವ್ಯವಸ್ಥೆಯೇ ಬಲವಾಗಿದ್ದಾಗ ಅದರ ಬಗೆಗಿನ ಪ್ರತಿಭಟನೆ "ಲೇವಡಿ"ಯೆನ್ನಿಸಿಕೊಳ್ಳುವುದೇ? ಆದರೆ ಇವತ್ತು ಕಾಲ ಬದಲಾಗಿದೆ. ಸಮಾಜ ಹೆಚ್ಚು ಲಿಬರಲ್ ಆಗಿದೆ, ವ್ಯವಸ್ಥೆ ಮೊದಲಿನಷ್ಟು ಬಲವಾಗಿಲ್ಲ. ಆದ್ದರಿಂದ ಅದೇ ಕತೆ ಇವತ್ತಿನ ಕಾಲಘಟ್ಟದಲ್ಲಿ ಬಂದರೆ, ಬದಲಾದ ಬ್ರಾಹ್ಮಣ ಸಮಾಜದ ಹಿನ್ನೆಯಲ್ಲಿ ಅನಂತಮೂರ್ತಿಯವರ ಅಂಥ ಪ್ರಯತ್ನ ದೂರ್ತತನವೂ ಬ್ರಾಹ್ಮಣ ಸಮಾಜದ ಲೇವಡಿಯೂ ಖಂಡಿತ ಆಗುತ್ತಿತ್ತು, ಆದರೆ ಸಂಸ್ಕಾರದ ಅವತ್ತಿನ ಕಾಲಘಟ್ಟದಲ್ಲಿ ಅಲ್ಲ.

    ಇದರ ಅರ್ಥ ಅನಂತಮೂರ್ತಿಯವರ ಇಂದಿನ ಅನೇಕ ಸಾಹಿತ್ಯೇತರ ಸಾಮಾಜಿಕ ನಿಲುವುಗಳಲ್ಲಿ ದೂರ್ತತನವಿಲ್ಲವೆಂದಲ್ಲ, ಅದನ್ನು ನಾನು ಸಮರ್ಥಿಸುತ್ತೇನೆಂದೂ ಅಲ್ಲ. ಅವರ "ಅಲ್ಪಸಂಖ್ಯಾತ" ಧ್ವನಿಯನ್ನು ತಾತ್ವಿಕವಾಗಿ ನಾನು ಸಮರ್ಥಿಸಿದರೂ ಅದು ಅತಿರೇಕಕ್ಕೆ ಹೋದಾಗೆಲ್ಲಾ ಕಟುವಾಗಿ ವಿರೋಧಿಸಿದವರಲ್ಲಿ ನಾನೂ ಒಬ್ಬ. ಆದರೂ ವ್ಯಕ್ತಿಯೊಬ್ಬನಿಗೆ ಸಾರಾಸಗಟಾಗಿ ದೂರ್ತ/ಸರಳ ಎಂಬ ಹಣೆಪಟ್ಟಿ ಹಚ್ಚುವುದಾಗಲೀ ಆ "ದೂರ್ತತನ/ಸರಳತೆ"ಗಳನ್ನು ಅವನ ಎಲ್ಲಾ (ಕಾಲಘಟ್ಟಗಳ) ಬರವಣಿಗೆಗೂ ಸಾರಾಸಗಟಾಗಿ ಅನ್ವಯಿಸುವುದು ಸಾಹಿತ್ಯಕ್ಕೆ, ಸೃಜನಶೀಲತೆಗೆ ಅಪಚಾರವಲ್ಲವೇ?

    ತಮ್ಮದು ವಿಚಾರಪ್ರಚೋದಕ ಲೇಖನ. ಇದಕ್ಕೆ ನಾನು ಹಾಕಹೊರಟ ಕಾಮೆಂಟು ತೀರ ಉದ್ದವಾಗಿ, ಅದೊಂದು ಲೇಖನವೇ ಆದದ್ದರಿಂದ ಅದನ್ನು ಇಲ್ಲಿ ಹಾಕಲು ಆಗದೇ ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಅದು ಇಲ್ಲಿದೆ: http://nannabaraha.blogspot.com/2010/10/blog-post.html

    ReplyDelete
  50. ಮಂಜುನಾಥ,
    ‘ಪೂರ್ವಾಗ್ರಹ’ ಎಂದರೆ ವಿಷಯಕ್ಕೆ ಸಂಬಂಧಿಸಿರದ ಬಾಹ್ಯ ಕಾರಣಗಳಿಂದಾಗಿ, ಮೊದಲೇ ರೂಪಿಸಿಕೊಂಡ ಅಭಿಪ್ರಾಯ. ಸರಿ ತಾನೇ? ಅನಂತಮೂರ್ತಿಯವರ ಬಗೆಗಿನ ನನ್ನ ಅಭಿಪ್ರಾಯವು ಅವರ ಸಾಹಿತ್ಯದ contentನಿಂದಾಗಿ ರೂಪಿತವಾಗಿಲ್ಲ, ಆದರೆ ಸಾಹಿತ್ಯದ styleನಿಂದ ರೂಪಿತವಾಗಿದೆ. ಭೈರಪ್ಪನವರ ಬಗೆಗೂ ಇದೇ ಮಾತನ್ನು ಹೇಳುತ್ತೇನೆ.
    ಇನ್ನು ಮತ್ತೊಂದು ಸಂಗತಿ ಇದೆ. ನಾವು ಯಾರನ್ನಾದರೂ ತೆಗಳಿದಾಗ, ಅದು ಪೂರ್ವಾಗ್ರಹವೆನಿಸುವ ಸಾಧ್ಯತೆ. ನಾನು ಅನಂತಮೂರ್ತಿಯವರನ್ನು, ಭೈರಪ್ಪನವರನ್ನು ಹಾಗು ಕುವೆಂಪುರವರನ್ನು ಸಹ ಕಟುವಾಗಿ ಟೀಕಿಸಿದ್ದೇನೆ. ಬೇಂದ್ರೆಯವರನ್ನು ಇಲ್ಲಿಯವರೆಗೂ ಟೀಕಿಸಿಲ್ಲ. ಆದರೆ ಯಾವತ್ತಾದರೂ ಅವರ ಸಾಹಿತ್ಯದ ಅವಗುಣಗಗಳನ್ನೂ ಟೀಕಿಸಬಹುದು.
    ಸಮಸ್ಯೆ ಎಂದರೆ, blogನಲ್ಲಿ ಸಮಗ್ರ ವಿಮರ್ಶೆಗೆ ಸ್ಥಳಾನುಕೂಲತೆ ಆಗಲಾರದು. ಕೆಲವೇ ಅಂಶಗಳನ್ನು ಬರೆಯವದರಿಂದ ‘ಪೂರ್ವಾಗ್ರಹ’ದ ಭಾಸವಾಗುವದು!

    ReplyDelete
  51. ಮಂಜುನಾಥ,
    ನಿಮ್ಮ blogನಲ್ಲಿ ನಿಮ್ಮ ವಿಮರ್ಶೆಯನ್ನು ಓದಿದೆ. ತುಂಬ ಉತ್ತಮವಾದ ಲೇಖನ. ನಾನು ಬಿಟ್ಟ ಅನೇಕ ಅಂಶಗಳನ್ನು ಅಲ್ಲಿ ಪರಿಗಣಿಸಿದ್ದೀರಿ. ಧನ್ಯವಾದಗಳು. ಕೆಲವೊಂದು ಅಂಶಗಳ ಬಗೆಗೆ ನನ್ನ ಸ್ಪಷ್ಟೀಕರಣವನ್ನು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದೇನೆ.

    ReplyDelete
  52. ಶ್ರೀನಿವಾಸ ಮ. ಕಟ್ಟಿ, ಡಬ್ಲಿನ್, ಓಹೈಒ, ಅಮೆರಿಕOctober 17, 2010 at 10:15 PM

    ಭೈರಪ್ಪನವರು ಸ್ತ್ರೀ ವಿರೋಧಿ ಎಂದು ಹಣೆಪಟ್ಟಿ ಕಟ್ಟಿದ ಸ್ತ್ರೀಯರ ಕೌಟುಂಬಿಕ, ಸಾಮಾಜಿಕ ಮತ್ತು ವೈಯುಕ್ತಿಕ ಪೂರ್ವಾಪರಗಳನ್ನು ಕುಲಂಕೂಷವಾಗಿ ನೋಡಿದರೆ ಅವರ ಅಭಿಪ್ರಾಯದ ಸತ್ಯಾಸತ್ಯತೆ ಅರ್ಥವಾಗುವದು ! ಬೇರೆ ವಿವರ್ನೇ ಅನಗತ್ಯವೆಂದು ನನ್ನ ಅಭಿಪ್ರಾಯ.

    ReplyDelete
  53. ಅನಾಮಿಕಾOctober 17, 2010 at 10:36 PM

    ಶ್ರೀ ಮಂಜುನಾಥರಿಗೆ ವಂದನೆಗಳು.

    ನನ್ನ ಅಭಿಪ್ರಾಯದಲ್ಲಿ, ಬುದ್ಧಿವಂತ್ರೆನಿಸಿಕೊಂಡ ಅಥವಾ ತಮ್ಮನ್ನು ತಾವೇ ಬುದ್ಧಿಜೀವಿ ಎಂದುಕೊಂಡ ೬-೮ ಜನ ಕಾದಂಬರಿಯನ್ನು ಓದಿ, ತಮ್ಮ-ತಮ್ಮ ಯೋಗ್ಯತೆಗನುಸಾರವಾಗಿ ಬರೆದ ವಿಮರ್ಶೆಗಿಂತ, ಲಕ್ಷಾಂತರ ಜನ, ಬೆವರಿಳಿಸಿ ಗಳಿಸಿದ ಹಣ ಕೊಟ್ಟು ಕಾದಂಬರಿಯನ್ನು ಕೊಂಡು, ಅಪ್ರತ್ಯಕ್ಷವಾಗಿ ಕಾದಂಅರಿಯ ಬಗ್ಗೆ ತೋರಿದ ಮೆಚ್ಚಿಕೆ ಹೆಚ್ಚಿನ ಮಹತ್ವದ್ದು. ಅದೇ ನಿಜವಾದ ವಿಮರ್ಶೆ ! ನೀವು ನನ್ನ ಅಭಿಪ್ರಾಯವನ್ನು ಒಪ್ಪದೇ ಇರಬಹುದು. ಆದರೆ, ಅದರಿಂದ ಭೈರಪ್ಪನವರಿಗಾಗಲಿ, ಅವರ ಕಾದಂಬರಿಗಳಿಗಾಗಲೀ ಯಾವದೇ ಏನೂ ವ್ಯತ್ಯಾಸವಾಗುವದಿಲ್ಲ. "ಚೋರ ನಿಂದಿಸಿ ಶಶಿಯ ಬೈದರೆ..." ಎಂಬ ಕುಮಾರವ್ಯಾಸನ ಪ್ರಸಿದ್ಧ ಪದ್ಯವನ್ನು ನೀವು ಓದಿರಬಹುದು ಎಂದುಕೊಳ್ಳುತ್ತೇನೆ.

    ReplyDelete
  54. ಅನಾಮಿಕರೇ, ಸಾಹಿತ್ಯವಿಮರ್ಶೆಯ ಈ ಹೊಸ ಮಾನದಂಡ ಸುಲಭವಾಗಿ ಸರಳವಾಗಿದ್ದು ಎದೆ ಮುಟ್ಟುವಂತಿದೆ. ಇಷ್ಟಕ್ಕೂ ಹೃದಯ ಕೆಲಸಮಾಡುವ ಕಡೆ ಬುದ್ಧಿಗೇನು ಕೆಲಸ.

    ತಾವು ತಿಳಿಸಿಕೊಟ್ಟ ಪದ್ಯವನ್ನು ಹುಡುಕಿ ಓದುತ್ತೇನೆ. ಧನ್ಯವಾದಗಳು.

    ReplyDelete
  55. ಒ೦ದು ಒಳ್ಳೆಯ ಬ್ಲಾಗ್ ಗೆ ತಡವಾಗಿ ಬ೦ದದ್ದಕ್ಕೆ ಬೇಸರವಿದೆ.ಓದಿದ್ದಕ್ಕೆ ಸ೦ತೋಷವಿದೆ.ನನಗನ್ನಿಸಿದ೦ತೆ ಭೈರಪ್ಪನವರ ಕಾದ೦ಬರಿಗಳು ನಮ್ಮ ಆಶಯ ಮತ್ತು ಮನೋಸ್ತಿತಿಗನುಸಾರವಾಗಿ ಅರ್ಥವನ್ನು ಪಡೆಯುತ್ತದೆ.ಇರುವುದನ್ನು ಹೇಳದೇ ಉಳಿದವರ ಮದ್ಯೆ ಭೈರಪ್ಪನವರು ಹೇಳುವ ಧೈರ್ಯ ಮಾಡುತ್ತಾರೆ.ಅಭಿನ೦ದನೆಗಳು.

    ReplyDelete
  56. ಕುಸು ಅವರೆ,
    ಒಂಟಿಯಾಗಿ ನಿಂತು ಹೋರಾಡುವ ಈ ಧೋರಣೆಯೇ ಭೈರಪ್ಪನವರನ್ನು ಜನಪ್ರಿಯ ಮಾಡಿದೆ ಎನ್ನಬಹುದು!

    ReplyDelete
  57. ಅನಾಮಿಕಾOctober 23, 2010 at 12:51 AM

    ಮಂಜುನಾಥರೆ, ನನ್ನ ಅಭಿಪ್ರಾಯ ನಿಮ್ಮ ಮನಸ್ಸಿಗೆ ನೋವುಂಟು ಮಾಡಿತೆಂದು ಭಾಸವಾಗುತ್ತದೆ. ನನ್ನ ನಿಷ್ಟುರತೆಗೆ ಕ್ಷಮೆ ಇರಲಿ. ಆದರೆ, ಕನ್ನಡ ಸಾಹಿತ್ಯದ ವಿಮರ್ಶಾ ಕ್ಷೇತ್ರದಲ್ಲಿ ‘ಮೌಲ್ಯಾಧಾರಿತ ವಿಮರ್ಶೆ’ ಇಲ್ಲವೇ ಇಲ್ಲ ! ಬಹುತೇಕ ವಿಮರ್ಶೆಗಳ ಹಿಂದೆ ರಾಜಕೀಯ, ಸ್ವಯಂಪ್ರತಿಷ್ಠೆ, ಅಹಂಭಾವ ಮುಂತಾದವು ಇವೆ.

    ReplyDelete
  58. ಅನಾಮಿಕಾ ಅವರೆ,
    ವೈಚಾರಿಕ ಕ್ಷೇತ್ರದಲ್ಲಿ ಘರ್ಷಣೆ ಇರುವದೇ ಒಳ್ಳೆಯದಲ್ಲವೆ? ಭಾರತೀಯರಲ್ಲಿರುವ ಈ ಲಕ್ಷಣವನ್ನು ಅನುಲಕ್ಷಿಸಿಯೇ, ಅಮರ್ತ್ಯಸೇನರು ‘The Argumentative Indian' ಬರೆದಿದ್ದಾರೆ. ವೇದಕಾಲದಲ್ಲಿ, ಬುದ್ಧ ಕಾಲದಲ್ಲಿ ಭಾರತದಲ್ಲಿ ಬರೆಯಲಾದ theologic ತಿಕ್ಕಾಟದ ಗ್ರಂಥಗಳ ಪ್ರಮಾಣವನ್ನು ನೋಡಿದರೆ ಆಶ್ಚರ್ಯವಾಗುವಂತಿದೆ

    ReplyDelete
  59. ಸುನಾಥ್ ಸರ್,

    ಬೈರಪ್ಪನವರ ಕಾದಂಬರಿ ವಂಶವೃಕ್ಷ ಮತ್ತು ಅನಂತ ಮೂರ್ತಿಯವರ ಸಂಸ್ಕಾರದ ಬಗ್ಗೆ ಒಂದು ಪುಟ್ಟ ಅವಲೋಕನವನ್ನು ಮಾಡಿದ್ದೀರಿ. ಎರಡನ್ನು ನಾನು ಓದಿಲ್ಲವಾದ್ದರಿಂದ ಅದರ ಬಗ್ಗೆ ನಾನು ಮಾತಾಡುವುದು ಸರಿಯಲ್ಲವೆನಿಸುತ್ತದೆ..ನಿಮ್ಮ ವಿಶ್ಲೇಷಣೆಯಿಂದಾಗಿ ಒಂದಷ್ಟು ವಿಚಾರಗಳು ತಿಳಿಯುತ್ತವೆ..ಧನ್ಯವಾದಗಳು.

    ReplyDelete
  60. ಶಿವು,
    ಈ ಎರಡೂ ಕಾದಂಬರಿಗಳನ್ನು ತುಲನಾತ್ಮಕವಾಗಿ ಓದುವದು ಒಂದು ರೋಚಕ ವಿಷಯವಾಗುತ್ತದೆ. Go ahead!

    ReplyDelete
  61. ತಮ್ಮ ಲೇಖನ ತಡವಾಗಿ ಓದಿದ್ದಕ್ಕೆ ಬೇಜಾರಿಲ್ಲ. ಪ್ರಿಕ್ರಿಯೆಗಳು ಮತ್ತು ಅದಕ್ಕೆ ತಮ್ಮ ಮರುಪ್ರತಿಕ್ರಿಯೆಗಳು ನಮ್ಮನ್ನು ತುಂಬಾ ವಿಷಯವನ್ನೂ ತಿಳಿದುಕೊಳ್ಳುವಂತೆ ಮಾಡಿದವು.

    ಭೈರಪ್ಪನವರು ಒಬ್ಬ ಅಧ್ಯಯನಶೀಲ ಸಾಹಿತಿ ಎನ್ನುವದರಲ್ಲಿ ಸಂದೇಹವಿಲ್ಲ -ಅವರ ಪುಸ್ತಕಗಳು ಮಾರಾಟವಾಗುವ ಪರಿ ಮತ್ತು ವಿಷಯ ಮ೦ಥನಗಳೇ ಅದರ ಮಾನದಂಡ.
    ವಿಷಯ ಒಪ್ಪುವದು ಬಿಡುವದು ಅದು ಅವರವರ ನ೦ಬಿಕೆಗಳಿಗೆ ಒಳಗಾದ ಕ್ರಿಯೆ.

    ಅನ೦ತಮೂರ್ತಿಯವರ ಹೋಲಿಕೆ ಇಲ್ಲಿ ಅಪ್ರಸ್ತುತವೆನಿಸಿತು.

    ReplyDelete
  62. ಸೀತಾರಾಮರೆ,
    ನಿಮ್ಮ ಸ್ಪಂದನಕ್ಕೆ ಯಾವಾಗಲೂ ಸ್ವಾಗತ. ಅನಂತಮೂರ್ತಿ ಹಾಗು ಭೈರಪ್ಪನವರ ತುಲನೆಯನ್ನು ಈ ಲೇಖನದಲ್ಲಿ ಮಾಡಿದ್ದು ಅಪ್ರಸ್ತುತವಾಗಿರಬಹುದು. ಆದರೆ, ಅನೇಕ ಕಾರಣಗಳಿಗಾಗಿ ಈ ತುಲನೆ ಅವಶ್ಯಕ. ಅದಕ್ಕಾಗಿಯೇ ಒಂದು ಪ್ರಬಂಧರಚನೆಯ ಅವಶ್ಯಕತೆ ಇದೆ ಎಂದು ಅನ್ನಿಸುತ್ತದೆ.

    ReplyDelete
  63. "..ಭಾರತೀಯರಲ್ಲಿರುವ ಈ ಲಕ್ಷಣವನ್ನು ಅನುಲಕ್ಷಿಸಿಯೇ, ಅಮರ್ತ್ಯಸೇನರು ‘The Argumentative Indian' ಬರೆದಿದ್ದಾರೆ..."

    ಇಲ್ಲಿ ಇದರ ಬಗ್ಗೆ ಹೇಳಲೇಬೇಕನಿಸುತ್ತಿದೆ. ಈ ’Argumentative Indian' ಹೊತ್ತಗೆಯಲ್ಲಿ ಒಂದೇ ಒಂದು ವಿಶಯವಾದರೂ ತೆಂಕಣ ಭಾರತದವರ ಬಗ್ಗೆ ಇದಿಯೇ? ನಾನೂ ಓದಿದ್ದೇನೆ. ಕನ್ನಡಿಗರಲ್ಲಿ ಒಬ್ಬರಾದರೂ ’Argumentative Indian' ಸೇನರಿಗೆ ಕಾಣಲಿಲ್ಲವೆ?
    ಅದನ್ನು ’Argumentative North Indian' ಅನ್ನಬಹುದೇನೊ?

    -ಹದುಳವಿರಲಿ,
    ಬರತ್

    ReplyDelete