Wednesday, March 12, 2014

ಪದವಿನೋದ-೨

ಸಿಂಧು ಸಂಸ್ಕೃತಿಯ ಜನಸಮುದಾಯವು ಆಡುತ್ತಿದ್ದ ಭಾಷೆ ಯಾವುದು ಎಂದು ತಿಳಿಯದು. ಅವರ ಬರಹದ ಅರ್ಥವನ್ನು ಬಿಡಿಸುವುದು ಇನ್ನೂ ಸಾಧ್ಯವಾಗಿಲ್ಲ. ಸಿಂಧು ತೀರದ ಜನರ ಮುದ್ರಿಕೆಗಳಲ್ಲಿ ನಮ್ಮ ಶಿವನನ್ನು ಹೋಲುವ ಚಿತ್ರವನ್ನು ಕಾಣಬಹುದು. ಇದರಿಂದ ಅವರು ನಮ್ಮ ಪೂರ್ವಜರು ಹೌದು ಎನ್ನುವುದು ಅತ್ಯಂತ ಸಂಭವನೀಯ ಸಂಗತಿ. ಇವರು ಆರ್ಯಪೂರ್ವದ ಭಾರತದ ನಿವಾಸಿಗಳು ಆಗಿರಬಹುದು, ಅರ್ಥಾತ್ ಇವರು ಕನ್ನಡಿಗರೇ ಆಗಿರಬಹುದು. ಕಟ್ಟಡಗಳಲ್ಲಿ ಇಟ್ಟಿಗೆಯನ್ನು ಬಳಸಿದ ಇವರು ‘ಇಟ್ಟಿಗೆ’ಗೆ ಏನೆಂದು ಕರೆಯುತ್ತಿದ್ದರು ಎನ್ನುವುದು ತಿಳಿಯದು. ಕನ್ನಡಿಗರು ಸದ್ಯದಲ್ಲಿ ಬಳಸುವ ‘ಇಟ್ಟಿಗೆ’ ಪದವು ಮೂಲತಃ ‘ಇಷ್ಟಕಾ’ ಎನ್ನುವ ಸಂಸ್ಕೃತ ಪದದಿಂದ ಹುಟ್ಟಿದೆ. ಇಷ್ಟಿ ಎಂದರೆ ಯಜ್ಞ. (ದಶರಥ ಮಹಾರಾಜನು ಕೈಕೊಂಡ ಪುತ್ರಕಾಮೇಷ್ಟಿಯನ್ನು ನೆನಪಿಸಿಕೊಳ್ಳಿರಿ.) ಇಷ್ಟಕಾ ಎಂದರೆ ಯಜ್ಞಕುಂಡಗಳಿಗಾಗಿ ಬಳಸುವ ಇಟ್ಟಿಗೆ. ಸಿಂಧು ಜನರು ಯಜ್ಞಗಳನ್ನು ಮಾಡಿದ ಯಾವುದೇ ಕುರುಹುಗಳು ದೊರೆತಿಲ್ಲ. ಆದುದರಿಂದ ಇವರು ಇಷ್ಟಕಾ ಎನ್ನುವ ಪದವನ್ನು ಬಳಸಿರುವುದು ಅಸಂಭವ. ಸದ್ಯಕ್ಕೆ ಕನ್ನಡಿಗರು ಬಳಸುತ್ತಿರುವ ಇಟ್ಟಿಗೆ ಪದವು ಸಂಸ್ಕೃತಜನ್ಯವಾದದ್ದು ಎಂದು ತಿಳಿಯಬಹುದು. ಕನ್ನಡ ನಾಡಿನ ಅನೇಕ ಸ್ಥಳಗಳಲ್ಲಿ ಇಟ್ಟಿಗೆ ಅಥವಾ ಇಟ್ಟಂಗಿಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದರೇನೊ? ಅಂತಹ ಊರುಗಳನ್ನು ಅವುಗಳ ಹೆಸರುಗಳಿಂದ ಗುರುತಿಸಬಹುದು. ಸದ್ಯದ ಕರ್ನಾಟಕದಲ್ಲಿ ಇಂತಹ ಹೆಸರುಗಳು ಬೇರೆ ಬೇರೆ ತಾಲೂಕುಗಳಲ್ಲಿ ಹೀಗಿವೆ:

ಇಟಗಾ ಎನ್ನುವ ನಾಲ್ಕು ಊರುಗಳು: (ಚಿತಾಪುರ ತಾಲೂಕು-೧, ಹುಮನಾಬಾದ ತಾಲೂಕು-೧, ಜೇವರಗಿ ತಾಲೂಕು-೨)
ಇಟಕಲ್ ಎನ್ನುವ ಒಂದು ಊರು: (ಸೇಡಮ್ ತಾಲೂಕು-೧)
ಇಟಕದಿಬ್ಬನಹಳ್ಳಿ  ಎನ್ನುವ ಒಂದು ಊರು: (ಮಧುಗಿರಿ ತಾಲೂಕು-೧)
ಇಟಗಿ ಎನ್ನುವ ಒಂಬತ್ತು ಊರುಗಳು: (ಖಾನಾಪುರ ತಾಲೂಕು-೧, ದೇವದುರ್ಗ ತಾಲೂಕು-೧, ಬಸವನ ಬಾಗೇವಾಡಿ-೧, ಯಲಬುರ್ಗಾ-೧, ರಾಣಿಬೆನ್ನೂರು-೧, ರೋಣ-೧, ಶಿರಹಟ್ಟಿ-೧, ಸಿದ್ದಾಪುರ-೧, ಕುಷ್ಟಗಿ-೧)
ಇಟಗಿಯಾಳ  ಎನ್ನುವ ಒಂದು ಊರು: (ಔರಾದ ತಾಲೂಕ-೧)
ಇಟಗುಳಿ  ಎನ್ನುವ ಒಂದು ಊರು: (ಶಿರಸಿ ತಾಲೂಕ-೧)
ಇಟಿಗಟ್ಟಿ  ಎನ್ನುವ ಒಂದು ಊರು: (ಧಾರವಾಡ ತಾಲೂಕ-೧)
ಇಟ್ಟಂಗಿಹಾಳ  ಎನ್ನುವ ಒಂದು ಊರು: (ಬಿಜಾಪುರ ತಾಲೂಕು-೧)
ಇಟ್ಟಂಗೂರು  ಎನ್ನುವ ಒಂದು ಊರು: (ಆನೇಕಲ್ ತಾಲೂಕ-೧)
ಇಟ್ಟಗಲ್ಲಾಪುರ  ಎನ್ನುವ ಒಂದು ಊರು: (ಬೆಂಗಳೂರು ತಾಲೂಕು-೧)
ಇಟ್ಟಗಳ್ಳಿ  ಎನ್ನುವ ಒಂದು ಊರು: (ಪಿರಿಯಾಪುರ ತಾಲೂಕು-೧)
ಇಟ್ಟಪಟ್ಣ  ಎನ್ನುವ ಒಂದು ಊರು: (ಅರಕಲಗೂಡು ತಾಲೂಕು-೧)
ಇಟ್ಟಮಡು  ಎನ್ನುವ ಒಂದು ಊರು: (ರಾಮನಗರ ತಾಲೂಕು-೧)
ಇಟ್ಟಸಂದ್ರ  ಎನ್ನುವ ಒಂದು ಊರು: (ಹೊಸಕೋಟೆ ತಾಲೂಕ-೧)
ಇಟ್ಟಿಗಿ  ಎನ್ನುವ ಎರಡು ಊರುಗಳು: (ಹಡಗಳಿ ತಾಲೂಕ-೧, ಹೊಸಪೇಟ -೧)
ಇಟ್ಟಗಿಹಾಳ  ಎನ್ನುವ ಒಂದು ಊರು: (ಶಿರಗುಪ್ಪಾ ತಾಲೂಕ-೧)
ಇಟ್ಟಿಗುಡಿ  ಎನ್ನುವ ಒಂದು ಊರು: (ಹರಪನಹಳ್ಳಿ ತಾಲೂಕ-೧)
ಇಟ್ಟಿಗೆ  ಎನ್ನುವ ಎರಡು ಊರುಗಳು: (ಚನ್ನಗಿರಿ ತಾಲೂಕ-೧, ತರಿಕೆರೆ-೧)
ಇಟ್ಟಿಗೆಹಳ್ಳಿ  ಎನ್ನುವ ಐದು ಊರುಗಳು:
(ತುರುವೆಕೆರೆ-೧, ಭದ್ರಾವತಿ-೧, ಶಿಕಾರಿಪುರ-೧, ಶಿವಮೊಗ್ಗಿ-೧, ಹೊಸದುರ್ಗ-೧)
ಇಟ್ನ ಎನ್ನುವ ಒಂದು ಊರು: (ಹೆಗ್ಗಡದೇವನಕೊಟೆ-೧)
ಇಟ್ನಾಳ ಎನ್ನುವ ಮೂರು ಊರುಗಳು: (ಚಿಕ್ಕೋಡಿ-೧, ಸವದತ್ತಿ-೧, ರಾಯಬಾಗ-೧)
 ಒಟ್ಟು ಊರುಗಳು: ೪೦

ಕನ್ನಡದ ಇಟ್ಟಿಗೆ ಮರಾಠಿಯಲ್ಲಿ ವೀಟ, ವೀಠಾ ಆಗಿದೆ. ವೀಟ (ವೀಠಾ)ಗಳನ್ನು ನಿರ್ಮಾಣ ಮಾಡುವ ಊರಿಗೆ ಏನೆಂದು ಕರೆಯಬೇಕು? ಮರಾಠಿ ವೀಟ (ವೀಠಾ) ಹಾಗು ಕನ್ನಡದ ‘ಹಾಳ’ ಎರಡನ್ನು ಜೊತೆ ಮಾಡಿ ‘ವೀಟ(ಠ)ಹಾಳ’ ಎಂದು ಕರೆದರು. ಅದು ಕನ್ನಡ-ಮರಾಠಿ ಮಿಶ್ರ ಉಚ್ಚಾರದಲ್ಲಿ ಕಾಲಕ್ರಮೇಣ ‘ವಿಠ್ಠಲ’ವಾಯಿತು. ಪಂಢರಪುರದ ವಿಠ್ಠಲನು ಇಟ್ಟಿಗೆಯ ಮೇಲೆ ಗಟ್ಟಿಯಾಗಿ ನಿಂತುಕೊಂಡಿರುವುದನ್ನು ಈಗಲೂ ನೋಡಬಹುದು. ಇದನ್ನು ನೋಡಿಯೇ ಬೇಂದ್ರೆಯವರು ‘ಇಟ್ಟಿಗೆಯ ಮೇಲೆ ಅಡಿಯಿಟ್ಟ ವಿಠ್ಠಲ’ ಎಂದು ಹಾಡಿದ್ದಾರೆ.
(ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಹ ವಿಟ್ಲ ಎನ್ನುವ ಒಂದು ಊರು ಇದೆ. ನರಸಿಂಹರಾಜಪುರ ಹಾಗು ಬಂಟವಾಳ ತಾಲೂಕುಗಳಲ್ಲಿ ವಿಟ್ಟಲ ಎನ್ನುವ ಹೆಸರಿನ ಊರುಗಳಿವೆ. ಇವೆಲ್ಲ ‘ವೀಟಹಾಳ’ಗಳೇ ಆಗಿರಬಹುದು.)

ವಿಷ್ಣು ಎನ್ನುವ ಪದವು ಮರಾಠಿಯಲ್ಲಿ ವಿಷ್ಟೋ ಎಂದಾಗಿ, ಕ್ರಮೇಣ ವಿಠ್ಠೋ ಆಯಿತು. ಬಿಷ್ಟೋ ಎನ್ನುವ ಹೆಸರು ಮರಾಠಿಯಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಆದುದರಿಂದ ಈ ದೇವರು ನೆಲೆಸಿದ ಸ್ಥಲವೂ ಸಹ ವಿಠ್ಠೋಹಾಳ ಅರ್ಥಾತ್ ವಿಠ್ಠಲ ಆಗಿರುವ ಸಂಭವವಿದೆ! ಆದುದರಿಂದಲೇ ಮಹಾರಾಷ್ಟ್ರದ ಮಹಾನ್ ಸಂತ ಜ್ಞಾನದೇವರು ವಿಠ್ಠಲನಿಗೆ ‘ಕಾನಡೀ ವಿಠ್ಠಲಾ’ ಎಂದು ಕರೆದಿದ್ದಾರೆ! ವೀಟಹಾಳದಲ್ಲಿ ಇರುವ ಕುಂಬಾರರ ಮನೆದೇವರು ‘ವಿಠ್ಠಲ’ನಾಗಿರಬಹುದು. ಕರ್ನಾಟಕದಲ್ಲಿ ವಿಠ್ಠಲರೂಪಿ ಹೆಸರನ್ನು ಜೋಡಿಸಿಕೊಂಡ ೪೫ ಹಳ್ಳಿಗಳಿವೆ.

ಸಿಂಧು ಸಂಸ್ಕೃತಿಯ ಜನರಿಗೆ ಹಾಗು ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿದ್ದ ಕನ್ನಡಿಗರಿಗೆ ಭಾರತದ ಪಶ್ಚಿಮದಲ್ಲಿರುವ ದೇಶಗಳೊಡನೆ ವಾಣಿಜ್ಯಸಂಪರ್ಕವಿತ್ತು.  ಇಂತಹ ಸಂಪರ್ಕದಿಂದಾಗಿ ಎರಡೂ ಭಾಷಿಕರಲ್ಲಿ ಪದಗಳ ಕೊಡುಕೊಳ್ಳುವಿಕೆ ಅನಿವಾರ್ಯವಾಗಿ ನಡೆಯುತ್ತಿತ್ತು. ಲ್ಯಾಟಿನ್, ಸಂಸ್ಕೃತ ಹಾಗು ಕನ್ನಡ ಈ ಮೂರು ಭಾಷೆಗಳಲ್ಲಿ ಇಂತಹ ಸಂಪರ್ಕದಿಂದಾಗಿ ಉದ್ಭವಿಸಿದ ಒಂದು ಪದವನ್ನು ನೋಡೋಣ. ಕನ್ನಡದಲ್ಲಿ ಉಣ್ಣೆ ಎಂದು ಕರೆಯಲಾಗುವ ಪದವು ಸಂಸ್ಕೃತದ ಊರ್ಣ ಪದದಿಂದ ಬಂದಿದೆ ಎಂದು ಸಂಸ್ಕೃತ ಪಂಡಿತರು ಹೇಳುತ್ತಾರೆ. ಆದರೆ ಇದು ಹೀಗೂ ಇರಬಹುದು:

ಕನ್ನಡದ ಉಣ್ಣೆ ಪದವು ‘ಊಲ್+ನೆಯ್’ ಎನ್ನುವ ಪದಗಳ ಜೋಡಣೆಯಿಂದ ಬಂದಿದೆ. ಈ ಊಲ್ ಪದವು ಇಂಗ್ಲೀಶಿನಲ್ಲಿ ಬಳಸಲಾಗುವ wool ಪದವೇ ಹೌದು. ಯುರೋಪದ ಅನೇಕ ಭಾಷೆಗಳಲ್ಲಿ ‘ವೂಲ್’ಗೆ ಸಮಾನವಾದ ಉಚ್ಚಾರವಿರುವ ಪದಗಳಿವೆ. ಇನ್ನು ನೆಯ್ ಅನ್ನುವುದು ಅಚ್ಚ ಕನ್ನಡ ಪದ. ಯುರೋಪಿಯನ್ ‘ವೂಲ್’ಅನ್ನು ಕನ್ನಡಿಗರು ನೆಯ್ದು ಉಣ್ಣೆಯನ್ನು ಮಾಡಿದರು. ಇದು ವ್ಯಾಪಾರ ಸಂಪರ್ಕದ ಫಲ. ಈ ಉಣ್ಣೆಯೇ ಸಂಸ್ಕೃತದಲ್ಲಿ ಊರ್ಣ ಎಂದು ಬದಲಾಗಿದೆ! ಆದರೆ ಸಂಸ್ಕೃತ ಪಂಡಿತರು ಊರ್ಣ ಪದದಿಂದಲೇ ಉಣ್ಣೆ ಎನ್ನುವ ಪದ ಬಂದಿದೆ ಎಂದು ಹೇಳುತ್ತಾರೆ. ಇದು ಮಗನಿಂದ ಅಪ್ಪ ಹುಟ್ಟಿದ ಎಂದು ಹೇಳಿದ ಹಾಗೆ!

[ಕನ್ನಡದಲ್ಲಿ ನೆಯ್ ಎನ್ನುವ ಕ್ರಿಯಾಪದದಿಂದ ಸಾಧಿಸಲ್ಪಟ್ಟ ಅನೇಕ ಪದಗಳಿವೆ.
ಎರಡು ಉದಾಹರಣೆಗಳು: ಎಳ್+ನೆಯ್ = ಎಣ್ಣೆ; ಬೆಳ್+ನೆಯ್ = ಬೆಣ್ಣೆ
ಇದರಂತೆಯೇ ‘ಊಲ್+ನೆಯ್’ = ಉಣ್ಣೆ.]

ಕನ್ನಡದ ಇನ್ನೂ ಕೆಲವು ಪದಗಳು ಯುರೋಪಿಗೆ ತೆರಳಿವೆ. ಉದಾಹರಣೆಗೆ ಕನ್ನಡದ ಬತ್ತ ಪದವು ಇಂಗ್ಲೀಶಿನಲ್ಲಿ paddy ಆಗಿದೆ. ಕಂದಮಿಳಿನ ಅರಿಶಿ ಪದವು ಇಂಗ್ಲೀಶಿನಲ್ಲಿ rice ಆಗಿದೆ. (ಕನ್ನಡದಲ್ಲಿ ಇದು ಅಕ್ಕಿಯಾಗಿ ಬದಲಾವಣೆ ಹೊಂದಿತು.)

ಆರ್ಯಭಾಷಿಕರು ಹಾಗು ಕನ್ನಡಿಗರು ವ್ಯಾಪಾರಕ್ಕಾಗಿ ಸಂಪರ್ಕಿಸಿದಾಗ ಇಬ್ಬರಿಗೂ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ದ್ವಿಭಾಷಿಕ ಜೋಡುಪದಗಳು ಹುಟ್ಟಿಕೊಂಡವು. ಉದಾಹರಣೆಗೆ: ಕರ್ಪಟ. ಕರ ಇದು ಸಂಸ್ಕೃತ ಪದವಾಗಿದೆ ಹಾಗು ಪಟ್ಟ ಇದು ಕನ್ನಡದ ಪದವಾಗಿದೆ. (ಪಟ್ಟ ಪದವೇ ಕಾಲಾನುಕ್ರಮದಲ್ಲಿ ಬಟ್ಟೆಯಾಗಿ ಬದಲಾಯಿತು. ಸಂಸ್ಕೃತದ ಮತ್ತೊಂದು ಪದ ‘ಅಂಶು’(=ನೂಲು) ಜೊತೆಗೆ ಕನ್ನಡದ ‘ಪಟ್ಟ’ ಕೂಡಿದಾಗ ‘ಅಂಶುಪಟ್ಟ’ ಎನ್ನುವ ಪದ ಹುಟ್ಟಿತು.)

ಈ ಕರ್ಪಟ ಪದದಿಂದ ಹಿಂದಿ ಭಾಷೆಯಲ್ಲಿ ಕಪಡಾ ಎನ್ನುವ ಪದ ಹುಟ್ಟಿಕೊಂಡಿತು. (ಹತ್ತಿಯ) ಬಟ್ಟೆಗಳನ್ನು ಮಾರುವವನು ‘ಕಪಾಡಿಯಾ’ ಅಥವಾ ‘ಕಪಟಕರ’ ಆದ. ( ಬೆಲ್ಲದ ವ್ಯಾಪಾರಿಯು ಕನ್ನಡದಲ್ಲಿ ‘ಬೆಲ್ಲದ’ ಆಗುತ್ತಾನೆ. ಈತನೇ ಮತಾಂತರಗೊಂಡ ಮೇಲೆ ‘ಗೂಡವಾಲಾ’ ಆಗುತ್ತಾನೆ ಎಂದು ನಾಡೋಜ ಪಾಟೀಲ ಪುಟ್ಟಪ್ಪನವರು ಮುನಿಸಿನಿಂದ ಹೇಳುತ್ತಿದ್ದರು!)

ಈ ‘ಪಟ್ಟ’ ಪದವು ಕನ್ನಡದಲ್ಲಿ ಎಷ್ಟೆಲ್ಲ ರೂಪಗಳಲ್ಲಿ ಬಳಕೆಯಲ್ಲಿ ಇದೆ ಎನ್ನುವುದನ್ನು ಗಮನಿಸಿರಿ:
ತಲೆಗೆ ಸುತ್ತುವ ಬಟ್ಟೆಯ ರುಮಾಲಿಗೆ ಪಟಕಾ(ಗಾ) ಎಂದು ಹೇಳುತ್ತಾರೆ. ಪಗಡೆಯನ್ನು ಆಡುವ ಹಾಸು ಇರುತ್ತದಲ್ಲ, ಅದಕ್ಕೆ ಪಗಡೆಪಟ್ಟ ಎಂದು ಕರೆಯುತ್ತಾರೆ. ವಸ್ತುಗಳನ್ನು ಕಟ್ಟಲು ಬಳಸುವ ಅರಿವೆಗೆ ಕಟ್ಟಾಪಟ್ಟಿ ಎನ್ನುತ್ತಾರೆ. ಬಟ್ಟೆಯ ಸೀರೆಗೆ ಪಟ್ಟೆಸೀರೆ ಎನ್ನುತ್ತಾರೆ. ಈ ಪಟ್ಟೆ ಸೀರೆಗೆ ಬಣ್ಣ ಹಾಕುವ ಸಮುದಾಯವನ್ನು ಪಟ್ಟೆಗಾರರು ಎಂದು ಕರೆಯುತ್ತಾರೆ.

(ಉತ್ತರಭಾರತದಲ್ಲಿ ತುರ್ಕರ ಆಕ್ರಮಣವಾದಾಗ ಕಾಳಗದಲ್ಲಿ ಸೋತಂತಹ ಭಾರತೀಯ ಪಡೆಗಳು ದಕ್ಷಿಣದಲ್ಲಿ ಆಶ್ರಯ ಪಡೆದರು. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯವಂಶದ ಕೆಲವು ಬಣಗಳು ಈ ಸಮಯದಲ್ಲಿ ಕರ್ನಾಟಕದಲ್ಲಿ ನೆಲೆಸಿದವು. ಇವರ ಕುಲದೇವಿಯಾದ ಹಿಂಗುಲಾಂಬಾ ದೇವಿಯ ಗುಡಿ ಪಾಕಿಸ್ತಾನದಲ್ಲಿ ಇದೆ. ಬಟ್ಟೆಗಳಿಗೆ ಬಣ್ಣ ಹಾಕುವ ಕಾಯಕವನ್ನು ಕೈಗೆತ್ತಿಕೊಂಡ ಈ ಬಣಗಳು ‘ಪಟ್ಟೆ(ಬಟ್ಟೆ)ಗಾರರಾದರು.  ಇದೀಗ ಈ ಕಸಬನ್ನು ಇವರು ಕೈಬಿಟ್ಟಿದ್ದಾರೆ ಹಾಗು ತಮ್ಮನ್ನು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.)

ಇದೇನಿದು, ಪ(ಬ)ಟ್ಟೆಸೀರೆ ಎಂದು ಯಾಕೆ ಹೇಳುತ್ತೀರಿ? ಸೀರೆ ಬಟ್ಟೆಯದೇ ಆಗಿರಬೇಕಲ್ಲವೆ ಎಂದು ಕೆಲವರು ಕೇಳಬಹುದು. ಇದು ಹಾಗಲ್ಲ. ಹತ್ತಿಯ ಬಟ್ಟೆಗಳು ಬಳಕೆಗೆ ಬರುವ ಪೂರ್ವದಲ್ಲಿ ಜನರು ತೊಗಲನ್ನೇ ಸುತ್ತಿಕೊಳ್ಳುತ್ತಿದ್ದರಲ್ಲವೆ? ದೇಹಕ್ಕೆ ಸುತ್ತಿಕೊಳ್ಳುವ ಹೊದಿಕೆಗೆ ಸಂಸ್ಕೃತದಲ್ಲಿ ‘ಚೀರ’ ಎನ್ನುತ್ತಾರೆ. ಚಿಗರಿಯ ಚರ್ಮವನ್ನು ಧರಿಸಿದವನು ‘ಚೀರಕೃಷ್ಣಾಜಿನಧರ’ನಾಗುತ್ತಾನೆ. ಈ ಚೀರವೇ ಕನ್ನಡದ ಸೀರೆ. ಹಿಂದಿಯಲ್ಲಿ ಇದು ‘ಸಾಡೀ’ ಆಗಿದೆ. ಸುತ್ತಿಕೊಂಡಾಗ ‘ಚೀರ’ವಾಗುವುದು, ಕೈಯಲ್ಲಿ ಹಿಡಿದುಕೊಂಡಾಗ ‘ಚೀಲ’ವಾಗುತ್ತದೆ. ತೊಗಲಿನ ಬದಲು ಹತ್ತಿಯ ಬಟ್ಟೆಯನ್ನು ಬಳಸಿದಾಗ ‘ಪಟ್ಟೆಚೀರ’ ಅಂದರೆ ಪಟ್ಟೆಸೀರೆ ಅರ್ಥಾತ್ ಹತ್ತಿಯ ಬಟ್ಟೆಯ ಸೀರೆ ಆಗುತ್ತದೆ!

ಪದಗಳಷ್ಟೇ ಅಲ್ಲ, ಕೆಲವೊಂದು ಊರುಗಳ ಹೆಸರುಗಳೂ ಸಹ ಇಂತಹ ‘ದ್ವಿಭಾಷಿಕ’ ಪದಗಳೇ ಆಗಿವೆ. ಉದಾಹರಣೆಗೆ ‘ಲಕ್ಷದ್ವೀಪ’ವನ್ನೇ ತೆಗೆದುಕೊಳ್ಳಿರಿ. ಇದರ ಮೂಲ ಹೆಸರು: ಲಕ್‍ದೀವ. ಕನ್ನಡದಲ್ಲಿ ಲಕ್ ಎಂದರೆ ನಡುಗಡ್ಡೆ. ಸಂಸ್ಕೃತದಲ್ಲಿ ದ್ವೀಪ ಎಂದರೆ ನಡುಗಡ್ಡೆ. ಲಕ್ ಮತ್ತು ದ್ವೀಪ(=ದೀವ್)ಗಳನ್ನು ಜೊತೆಗೂಡಿಸಿದಾಗ ಲಕ್‍ದೀವ ಹುಟ್ಟಿಕೊಂಡಿತು. ಅದನ್ನು ಮರುಸಂಸ್ಕೃತೀಕರಣಗೊಳಿಸಿದಾಗ, ಅದೇ ‘ಲಕ್ಷದ್ವೀಪ’ವಾಯಿತು! (‘ಲಂಕಾ’ದ ಅರ್ಥವು ಸಹ ದ್ವೀಪ ಎಂದೇ ಆಗಿದೆ.)

ಆರ್ಯಭಾಷೆಯ ದೀವ್‍ಗೆ ಕನ್ನಡದ ‘ಗಿ’ ಪ್ರತ್ಯಯ ಸೇರಿದಾಗ ದೀವಗಿ ಎನ್ನುವ ಊರು ಹುಟ್ಟುತ್ತದೆ. (ಕನ್ನಡದಲ್ಲಿ ‘ಗಿ’ ಹಾಗು ‘ಜಿ’ ಇವು ಸ್ಥಳವಾಚಕ ಪ್ರತ್ಯಯಗಳು. ಉದಾ: ನೀರಲಗಿ, ಜಂಬಗಿ, ಪಣಜಿ, ಕೊಂಡಜ್ಜಿ ಇತ್ಯಾದಿ.)
ಕನ್ನಡದ ಕೆಲವು ಪದಗಳು ಮಾತ್ರ ಪೂರ್ಣಶಃ ಆರ್ಯಭಾಷೆಗಳಿಂದ ಹುಟ್ಟಿಕೊಂಡತಹವು. ಉದಾಹರಣೆಗೆ ಕನ್ನಡದಲ್ಲಿರುವ ಮಡಕೆ ಹಾಗು ತಂಬಿಗೆ ಎನ್ನುವ ಪದಗಳನ್ನು ನೋಡಬಹುದು. ತಾಮ್ರದ ಉತ್ಖನನ ಹಾಗು ಬಳಕೆ ಪ್ರಾರಂಭವಾದ ನಂತರ, ತಾಮ್ರದಿಂದ ಮಾಡಿದ ಪಾತ್ರೆಗಳಿಗೆ ‘ತಾಂಬಾ’ ಎಂದು ಕರೆದರು. ಅದುವೇ ಕನ್ನಡದ ತಂಬಿಗೆ. ಸಂಸ್ಕೃತದಲ್ಲಿ ಮೃದ್ ಎಂದರೆ ಹಸಿಮಣ್ಣು (clay). (ಇಂಗ್ಲೀಶಿನ mudಅನ್ನು ನೆನಪಿಸಿಕೊಳ್ಳಿ.) ಮೃದ್‍ದಿಂದ ಮಾಡಿದ ಪಾತ್ರೆಯೇ ಮಡಕೆ! ಆರ್ಯಭಾಷೆಗಳಲ್ಲಿ ಇದು ಮಟಕಾ.

ಸಂಸ್ಕೃತದ ಸ್ಥಾಲಿ ಇದು ಕನ್ನಡದಲ್ಲಿ ಥಾಲಿ ಆಯಿತು. ಈ ಸ್ಥಾಲಿಯಲ್ಲಿ ‘ಪಿಷ್ಟ’ ಅಂದರೆ ಹಿಟ್ಟನ್ನು ಕಲಿಸಿ, ಬಡಿದು ಎಣ್ಣೆಯಲ್ಲಿ ಬೇಯಿಸಿದಾಗ ‘ಥಾಲಿಪೀಠ’ ಎನ್ನುವ ಸ್ವಾದಿಷ್ಟ ತಿನಿಸು ತಯಾರಾಗುತ್ತದೆ. ಕನ್ನಡಿಗರ ಬಾಯಿಯಲ್ಲಿ ಅದು ಚರ್ವಿತಚರ್ವಣಗೊಂಡು ‘ಥಾಲಿಪೆಟ್ಟು’ ಎನ್ನುವ ರೂಪವನ್ನು ತಾಳಿತು!

ಅಡುಗೆಯ ತಿನಿಸುಗಳಂತೂ ‘ಸಮಗ್ರ ಭಾರತೀಯ’ವಾಗಿವೆ. ಉದಾಹರಣೆಗೆ: ರೋಟಿ, ಭಾತ್ ಇತ್ಯಾದಿ.

ಅದೇಕೆ, ಜಾಗತೀಕರಣದ ಫಲವಾಗಿ ಪಾಶ್ಚಾತ್ಯರ ಪಿಝಾ ಕೂಡ ಈಗ ಭಾರತೀಯ ಪದವೇ ಆಗಿದೆ!