Tuesday, February 20, 2018

ಮೊದಲಗಿತ್ತಿ………………….ಬೇಂದ್ರೆಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ |
ಮೊದಲಗಿತ್ತಿಯಂತೆ ಮೆರೆಯುತಿಹೆ                  || ||

ಹಿಂಡಾಗಿ ಪುಂಡರು ಅಂಡಲೆಯಲು ನಿನ್ನ
                        ನೆತ್ತರು ಒರೆಹಚ್ಚಿ ನೋಡಿರುವೆ
ಪಾತಾಳ ಕಂಡರು ಕೆಲ ತಾಯಿಗ್ಗಂಡರು
                        ಅವರನ್ನೂ ಮಡಿಲಾಗ ಮಡಗಿಸಿಹೆ
ಹದಿನಾರು ರಾಜರು ತಲೆಕೆಳಗಾದರು
                        ಆದರು ತಲೆಯೆತ್ತಿ ನಿಂತಿರುವೆ
ನಿನ್ನ ತೇಜದ ಮುಂದೆ ರಾಜತೇಜವು ಕೂಸು
                        ಮೊದಲಗಿತ್ತಿಯು ನೀನು ಮೆರೆಯುತಿಹೆ.

ಒಕ್ಕುಡಿತೆ ಅರೆಮುಕ್ಕು ಎನುತೆನುತೆ ಹಲಕೆಲವು
                        ಪಾನಿಪತ್ತುಗಳನ್ನು ಮುಕ್ಕುಳಿಸುವೆ
ಕೊಡಲಿರಾಮನು ಎರೆದ ಕೆನ್ನೀರ ಜಳಕಕ್ಕೆ
                        ಕೂದಲು ನನೆಯಲಿಲ್ಲೆನುತಿಹೆ
ಅವತಾರಕೊಂದೊಂದು ಅಭಿಷೇಕ ಮಾಡಿದರು
                        ಎಣ್ಣೆಮಜ್ಜನ ಬೇರೆ ಬೇಕೆನುವೆ
ನೆತ್ತರ ಮೀಯಿಸುವ ಕೆಂಚರ ಕೈಯಿಳಿಸಿ
                        ಮೊದಲಗಿತ್ತಿಯೆ ನೀನು ಮೆರೆಯುತಿಹೆ.

ಹಾಲಿನ ಹೃದಯಕ್ಕೆ ಕುಬ್ಬುಸವನು ತೊಡಿಸಿ
            ಹೂಮುಡಿಸಿಕೊಂಡೆಂದು ನೀನಲಿವೆ.
ಬಸಿರು ತುಂಬಲು ಹಸಿರುಡಿಗೆಯನುಟ್ಟೆಂದು
            ವನಮಾಸ ನವಮಾಸ ತೀರಿಸುವೆ.

ಮುನ್ನಿಲ್ಲ ಇನ್ನಾರೆ ಮಕ್ಕಳ ದಿನವೆಂದು
            ಮೂಡೀತು ಹೇಳವ್ವ ಬಿನ್ನವಿಸುವೆ.
ಎಂದು ಮಂಗಲ ನಿನ್ನ ದೇವಗರ್ಭಕೆ?—ಇನ್ನೂ
            ಮೊದಲಗಿತ್ತಿಯಂತೆ ಮೆರೆಯುತಿಹೆ!
……………………………………………………………………….

ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ |
ಮೊದಲಗಿತ್ತಿಯಂತೆ ಮೆರೆಯುತಿಹೆ              || ||

ಮಹಾಭಾರತದ ಸಮಯದಿಂದಲೂ ಭಾರತವು ಕಾಳಗಗಳ ಕಣವೇ ಆಗಿದೆ. ಭಾರತದ ಹೊರಗೂ ಸಹ, ಜಗತ್ತಿನೆಲ್ಲಡೆ ಯುದ್ಧಗಳು ಜರುಗುತ್ತಲೇ ಇವೆ.  ಬೇಂದ್ರೆಯವರ ಕಾಲದಲ್ಲಿ ಎರಡು ಜಾಗತಿಕ ಯುದ್ಧಗಳು ಜರುಗಿದವು. ಎಲ್ಲ ಸಂಘರ್ಷಗಳು ಮಾನವರ ಗುಂಪುಗಳ ನಡುವೆ ಮಾತ್ರ ನಡೆಯುತ್ತವೆ ಎನ್ನುವುದನ್ನು ಗಮನಿಸಬೇಕು. ಅನೇಕ ಕಾಡುಪ್ರಾಣಿಗಳು ಆಹಾರಕ್ಕಾಗಿ ಹಿಂಸೆಯನ್ನು ಮಾಡುತ್ತಿರಬಹುದು. ಆದರೆ ಮಾನವಪ್ರಾಣಿಯು ಮಾತ್ರ  ತನ್ನ ಸ್ವಾರ್ಥ ಹಾಗು ದುರಾಸೆಗಾಗಿ ಹಿಂಸೆಯ ಮೊರೆಹೊಕ್ಕಿದೆ. ಮೊದಲಗಿತ್ತಿ ಕವನವು ಈ ಹಿಂಸೆಯ ಬವಣೆಯನ್ನು ಹೇಳುವ ಕವನವಾಗಿದೆ.

ಮೊದಲಗಿತ್ತಿಕವನದಲ್ಲಿ ಬೇಂದ್ರೆಯವರು ಭೂತಾಯಿಯನ್ನುಹೊಸ ಮದುವಣಗಿತ್ತಿಗೆಹೋಲಿಸುತ್ತಿದ್ದಾರೆ. ಇವಳು ಏರುಜವ್ವನೆ. ಈಗಷ್ಟೇ ಮದುವೆಯಾಗಿರುವ, ಇನ್ನೂ ಬಸಿರು ಧರಿಸದ ಹೊಸ ಮದುವಣಗಿತ್ತಿ. ತಾಯಿಯಲ್ಲಿ ಇರುವ, ಮಾತೃವಾತ್ಸಲ್ಯ, ಮೃದುತ್ವ ಗಳು  ಇವಳಲ್ಲಿ ಕಾಣಲಾರವು. ಇವಳಲ್ಲಿ ಸಾತ್ವಿಕತೆ ಇನ್ನೂ ಮೂಡಿರುವದಿಲ್ಲ. ಇವಳದು ಇನ್ನೂ ರಾಜಸ ಮುಖಮುದ್ರೆ. ಇಂತಹ ಭೂಮಿಯನ್ನು ತಮ್ಮ ನಿವಾಸಸ್ಥಾನವಾದ ಮಾಡಿಕೊಂಡ ಜೀವಿಗಳು ಹೇಗಿರಬೇಡ? ಇವರ ವರ್ಣನೆ ಕವನದ ಮೊದಲನೆಯ ಹಾಗು ಎರಡನೆಯ ನುಡಿಗಳಲ್ಲಿ ಬಂದಿದೆ. ಮೂರನೆಯ ಹಾಗು ನಾಲ್ಕನೆಯ ನುಡಿಗಳಲ್ಲಿ ಬೇಂದ್ರೆಯವರು ಭೂತಾಯಿಗೆ ಬಿನ್ನವಿಸುತ್ತಿದ್ದಾರೆ: ‘ತಾಯೇ, ನೀನು ಈ ರೌದ್ರಪೌರುಷವನ್ನು ಬಿಟ್ಟುಬಿಡು; ಮಾತೃಹೃದಯವನ್ನು ತೋರಿಸು. ನಿನ್ನ ಸೃಷ್ಟಿಯೆಲ್ಲ, ನಿನ್ನ ಮಕ್ಕಳೆಲ್ಲ ಪರಸ್ಪರ ಸ್ನೇಹದಿಂದ ನಲಿಯಲಿ. ಸರ್ವೇ ಜನಾಃ ಸುಖಿನೋ ಭವಂತು.’

ಭೂಮಿಯುಹೊಸ ಮದುವಣಿಗಿತ್ತಿಯಂತೆಮೆರೆಯುತ್ತಿರಬಹುದು. ಆದರೆ ಅವಳು ಮೂಲತಃ ತಾಯಿಯೇ. ಆದುದರಿಂದ ಬೇಂದ್ರೆಯವರು, ಭೂಮಿಯನ್ನುಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿಎಂದೇ ಸಂಬೋಧಿಸುತ್ತಿದ್ದಾರೆ.


--
ಹಿಂಡಾಗಿ ಪುಂಡರು ಅಂಡಲೆಯಲು ನಿನ್ನ
                   ನೆತ್ತರು ಒರೆಹಚ್ಚಿ ನೋಡಿರುವೆ
ಪಾತಾಳ ಕಂಡರು ಕೆಲ ತಾಯಿಗ್ಗಂಡರು
                   ಅವರನ್ನೂ ಮಡಿಲಾಗ ಮಡಗಿಸಿಹೆ
ಹದಿನಾರು ರಾಜರು ತಲೆಕೆಳಗಾದರು
                   ಆದರು ತಲೆಯೆತ್ತಿ ನಿಂತಿರುವೆ
ನಿನ್ನ ತೇಜದ ಮುಂದೆ ರಾಜತೇಜವು ಕೂಸು
                   ಮೊದಲಗಿತ್ತಿಯು ನೀನು ಮೆರೆಯುತಿಹೆ.

ಭೂಮಿಯ ಮೇಲೆ ಅನೇಕ ಪ್ರಾಣಿಗಳಿವೆ. ಪ್ರಾಣಿಗಳಿಗೆ (ವಿಶೇಷತಃ ಶಾಕಾಹಾರಿ ಪ್ರಾಣಿಗಳಿಗೆ) ಅವುಗಳದೇ ಆದ ಗುಂಪುಗಳಿವೆ. ಇನ್ನು ಹಿಂಸ್ರ ಪ್ರಾಣಿಗಳು ಎನ್ನಿಸಿಕೊಳ್ಳುವ ಪ್ರಾಣಿಗಳ ಹಿಂಸೆ ಕೇವಲ ಹೊಟ್ಟೆಪಾಡಿಗಾಗಿ. ಆದರೆ ಮಾನವ ಟೋಳಿಗಳು ಮಾಡಿದ್ದೇನು, ನಡೆಯಿಸಿದ ಪುಂಡಾಟಿಕೆ ಎಂತಹದು? ಇತರ ಮಾನವ ಗುಂಪುಗಳನ್ನು ಘಾತಿಸುವುದು, ಓಡಿಸುವುದು, ಅವರ ನೆಲೆಗಳನ್ನು ಆಕ್ರಮಿಸುವುದು, ಇವು ಮಾನವ ಗುಂಪುಗಳ ಕಾರ್ಯಕ್ರಮಗಳು! ಈ ಹೊಡೆದಾಟದಲ್ಲಿ ಗೆದ್ದ ಗುಂಪಿನ ಮುಂದಾಳುಅಹಹಾ! ನೋಡಿದೆಯಾ ನನ್ನ ಭುಜಬಲದ ಪರಾಕ್ರಮವನ್ನು!’ ಎಂದು ಜಂಭ ಕೊಚ್ಚಿಕೊಳ್ಳುವುದೇನು, ಹೊಗಳಿಸಿಕೊಳ್ಳುವದೇನು! ಇನ್ನು ಹಿಂಸಾವಿನೋದಕ್ಕಾಗಿಯೇ ಅಂಡಲೆಯುವ (ಅಂದರೆ ತಮ್ಮ ಬೇಟೆಗಾಗಿ ಎಲ್ಲೆಲ್ಲೋ ಅಲೆದಾಡುವ) ಮಾನವಪ್ರಾಣಿಗಳ ಗುಂಪುಗಳೆಷ್ಟು! ಪುಂಡರ ಪುಂಡಾಟ, ರಕ್ತದೋಕಳಿ ಇವೆಲ್ಲ ಏನೂ ಅಲ್ಲ ಎಂದು ಭೂತಾಯಿಗೆ ಅನಿಸುತ್ತಿದೆಯೆ? ಬಂಗಾರದ ಶುದ್ಧತೆ ತಿಳಿಯಲು, ಚಿನ್ನವನ್ನು ಒರೆಗಲ್ಲಿಗೆ ಹಚ್ಚಿ ನೋಡುತ್ತಾರೆ. ಹಾಗೆಯೇ, ಪುಂಡರ  ರಕ್ತಕ್ರೌರ್ಯವನ್ನು ಅರಿಯಲು ಭೂತಾಯಿಯು  ಅವರ ನೆತ್ತರನ್ನು ತನ್ನ ನೆತ್ತರಿನ ಒರೆಗಲ್ಲಿಗೆ ಹಚ್ಚಿ ನೋಡುತ್ತಾಳಂತೆ!

ಪುಂಡರು ಎಂದು ಹೇಳುವಾಗ ಮಾನವಸಮಾಜವು ಇನ್ನೂ ಅವ್ಯವಸ್ಥಿತ ಟೋಳಿಗಳಲ್ಲಿಇತ್ತು, ವ್ಯವಸ್ಥೆಗೆ ಒಳಪಟ್ಟ ಸಮಾಜವಾಗಿರಲಿಲ್ಲ, ಎಂದು ಬೇಂದ್ರೆಯವರು ಸೂಚಿಸುತ್ತಾರೆ. ಬೇಂದ್ರೆಯವರ ಕವನಗಳಲ್ಲಿ ಸಹಜವಾಗಿರುವ ಕ್ರಮಬದ್ಧತೆಯನ್ನು ಇಲ್ಲಿಯೂ ನೋಡಬಹುದು. ಮಾನವಸಮಾಜವು ಮೊದಮೊದಲು ಅವ್ಯವಸ್ಥಿತ ಟೋಳಿಗಳಿಂದ ಪ್ರಾರಂಭವಾಗಿ, ಆಬಳಿಕ ಪಾಳೆಯಗಾರಿಕೆಯತ್ತ ಮುನ್ನಡೆಯಿತು.  ಆ ಸ್ಥಿತ್ಯಂತರವು ಮುಂದಿನ ಸಾಲುಗಳಲ್ಲಿ ವ್ಯಕ್ತವಾಗಿದೆ.

ಎಲ್ಲ ಮಾನವಜೀವಿಗಳು ಭೂತಾಯಿಯ ಮಕ್ಕಳೇ, ಭೂಪುತ್ರರೇ. ಆದರೆ ಹಲವರನ್ನು ದೋಚಿ, ಕೊಂದು ಹಾಕಿ, ರಾಜಕಿರೀಟವನ್ನು ನೆತ್ತಿಯ ಮೇಲಿಟ್ಟುಕೊಂಡ ಕೆಲವು ಸೊಕ್ಕಿನವರು ತಮ್ಮನ್ನುಭೂಪತಿಎಂದು ಕರೆದುಕೊಳ್ಳುತ್ತ ಬೀಗುತ್ತಾರೆ. ಭೂಪತಿಗಳಾದ ಭೂಪುತ್ರರನ್ನು ಬೇಂದ್ರೆಯವರುತಾಯಿಗ್ಗಂಡರುಎಂದು ಮೂದಲಿಸುತ್ತಾರೆ. ಇಂತಹ ಭೂಪತಿಗಳನ್ನೂ ಸಹ ಭೂತಾಯಿಯು ತನ್ನ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾಳೆ!  ಮಡಿಲಲ್ಲಿ ಮಡಗಿಸುಎನ್ನುವ ಪದಪುಂಜವು ಎರಡು ವಿರುದ್ಧಾರ್ಥದ ಶ್ಲೇಷೆಯನ್ನು ಒಳಗೊಂಡಿದೆ. ಒಂದು ಮಾತೃವಾತ್ಸಲ್ಯವನ್ನು ತೋರಿಸಿದರೆ, ಮತ್ತೊಂದುಹುಗಿದು ಹಾಕುಎನ್ನುವಲ್ಲಿಯ ಕ್ರೌರ್ಯವನ್ನು ತೋರಿಸುತ್ತದೆ. ಒಮ್ಮಿಲ್ಲ ಒಮ್ಮೆ ಭೂಮಿಯನ್ನು ಬಿಡಲೇಬೇಕಾದ ಮರ್ತ್ಯ ಭೂಪತಿಗಳು ಕೊನೆಗಾಲದಲ್ಲಿ ಭೂಮಿಯ ಒಳಗೆ ಹುಗಿದು ಹೋಗಲೇ ಬೇಕಲ್ಲವೆ?

ಇಂತಹ ರಾಜರನೇಕರು ತಮ್ಮ ನಡುವಿನ ಕಾದಾಟಗಳಲ್ಲಿ ಸೋತು, ತಲೆ ಕೆಳಗೆ ಹಾಕಿಕೊಂಡು, ಮೀಸೆ ಮಣ್ಣಾಗಿ ಹೋದರು. ಆದರೆ, ಭೂತಾಯಿಯೆ, ನೀನು ಮಾತ್ರ ಗರ್ವದಿಂದ ತಲೆ ಎತ್ತಿ ನಿಂತಿರುವೆ! ನಿನ್ನ ತೇಜಸ್ಸಿನ ಮುಂದೆ ರಾಜರುಗಳ ಕ್ಷಾತ್ರತೇಜವು ಅತ್ಯಲ್ಪ!  ನೀನು ಇನ್ನೂ ಹೊಸ ಮದುವಣಗಿತ್ತಿಯಂತೆ ಮೆರೆಯುತ್ತಲೇ ಇರುವೆ. ನಿನ್ನಲ್ಲಿ ತಾಯ್ತನ ಇನ್ನೂ ಮೂಡಿಲ್ಲ.

ಇಲ್ಲಿ  ಹದಿನಾರು ರಾಜರು ತಲೆ ಕೆಳಗಾದರುಎಂದು ಬೇಂದ್ರೆಯವರು ಹೇಳುತ್ತಾರೆ. ಅವರು ನಿರ್ದಿಷ್ಟವಾಗಿಹದಿನಾರುಎಂದು ಹೇಳಲು ಕಾರಣವೇನು? ಭಾರತದಲ್ಲಿ ನಡೆದ ಘರ್ಷಣೆಗಳ ಅತಿ ಹಿಂದಿನ ಇತಿಹಾಸದಿಂದ ಪ್ರಾರಂಭಿಸಿ ಇಲ್ಲಿಯವರೆಗಿನ ಇತಿಹಾಸದವರೆಗೆ ಬೇಂದ್ರೆಯವರು ಹೇಳಲು ಬಯಸುತ್ತಾರೆ. ಭಾರತೀಯ ದಾಖಲಿತ ಯುದ್ಧೇತಿಹಾಸ ಪ್ರಾರಂಭವಾಗುವುದುಮಹಾಭಾರತದಿಂದ. ಕುರುಕ್ಷೇತ್ರದಲ್ಲಿ ಕಾದಾಡಿದ ರಾಜರುಗಳ ಸಂಖ್ಯೆ ಹದಿನಾರು. (ಕೆಲವು ರಾಜರುಗಳು ಕೌರವರ ಅಥವಾ ಪಾಂಡವರ ಪಕ್ಷಕ್ಕೆ ಸೇರಿಕೊಳ್ಳದೆ, ತಟಸ್ಥರಾಗಿ ಉಳಿದರು. ಇನ್ನು ಕೆಲವರು ಮರಿರಾಜರುಗಳು ಎನ್ನುವ ಕಾರಣಕ್ಕಾಗಿ ಪಟ್ಟಿಯಲ್ಲಿ ಬಂದಿರಲಿಕ್ಕಿಲ್ಲ. ನನಗೆ ತಿಳಿದ ಹದಿನಾರು ರಾಜರು ಹೀಗಿದ್ದಾರೆ:
() ಕೌರವ, ಅಂಗ, ವಂಗ, ಕಳಿಂಗ, ಪುಂಡ್ರ, ಸಿಂಧು, ಗಾಂಧಾರ, ಬಾಹ್ಲೀಕ, ಮದ್ರ
() ಪಾಂಡವ, ಪಾಂಚಾಲ, ಮತ್ಸ್ಯ, ಸಿವಿ, ಕಾಶಿ, ಪಾಂಡ್ಯ, ಕೇಕಯ
( ಪಟ್ಟಿಯಲ್ಲಿ ಬರದ ಇನ್ನೂ ಕೆಲವ ರಾಜರು ಇರಬಹುದು.)

ಕುರುಕ್ಷೇತ್ರದಲ್ಲಿ ಎಲ್ಲ ರಾಜರು ಸೋತು ತಲೆ ತಗ್ಗಿಸಿದರು! ಭೂತಾಯಿ ಮಾತ್ರ ತನ್ನ ತಲೆಯನ್ನು ಇನ್ನೂ ಮೇಲೆತ್ತಿಕೊಂಡು, ‘ಇನ್ನೂ ಯಾರಾದರೂ ಭೂಪತಿಯು ಉಳಿದಿದ್ದಾನೆಯೆ?’ ಎಂದು ನೋಡುತ್ತಿರುವಳು! ಆದುದರಿಂದ ಭೂಮಿಯ ಕಂಗೆಡಿಸುವ ತೇಜಸ್ಸಿನ ಎದುರಿಗೆ, ರಾಜರುಗಳ ಮುಖಗಳು ಮಖಾಳವಾಗಿವೆ.

--
ಒಕ್ಕುಡಿತೆ ಅರೆಮುಕ್ಕು ಎನುತೆನುತೆ ಹಲಕೆಲವು
                        ಪಾನಿಪತ್ತುಗಳನ್ನು ಮುಕ್ಕುಳಿಸುವೆ
ಕೊಡಲಿರಾಮನು ಎರೆದ ಕೆನ್ನೀರ ಜಳಕಕ್ಕೆ
                        ಕೂದಲು ನನೆಯಲಿಲ್ಲೆನುತಿಹೆ
ಅವತಾರಕೊಂದೊಂದು ಅಭಿಷೇಕ ಮಾಡಿದರು
                        ಎಣ್ಣೆಮಜ್ಜನ ಬೇರೆ ಬೇಕೆನುವೆ
ನೆತ್ತರ ಮೀಯಿಸುವ ಕೆಂಚರ ಕೈಯಿಳಿಸಿ
                        ಮೊದಲಗಿತ್ತಿಯೆ ನೀನು ಮೆರೆಯುತಿಹೆ.

ಮೊದಲಗಿತ್ತಿಯಾಗಿರುವ ಭೂತಾಯಿಯು ಇಷ್ಟು ರಕ್ತಪಾತಕ್ಕೆ ಕಂಗೆಡುವಳೆ? ಅವಳದು ತೀರದ ರಕ್ತದಾಹ. ಮಹಾಭಾರತದಲ್ಲಿ ಹರಿದ ನೆತ್ತರು ಅವಳ ದಾಹವನ್ನು ತಣಿಸಿಲ್ಲ. ಇದೀಗ ಅವಳು ಭಾರತದಲ್ಲಿ ಜರುಗಿದ ಇತರ ಕಾಳಗಗಳಲ್ಲಿ ಹರಿದ ನೆತ್ತರನ್ನು ಮುಕ್ಕಳಿಸುತ್ತಿದ್ದಾಳೆ. ಇವೆಲ್ಲವನ್ನು ಒಗ್ಗೂಡಿಸಿ, ‘ಪಾನಿಪತ್ತುಗಳುಎಂದು ಬೇಂದ್ರೆಯವರು ಸಾರವಾಗಿ ಹೇಳುತ್ತಿದ್ದಾರೆ. ಆದರೆ ಪಾನಿಪತ್ತುಗಳಿಂದ ಆಕೆಯ ರಕ್ತದಾಹ ಹಿಂಗಿಲ್ಲ. ಇದುಒಕ್ಕುಡಿತೆ’ (=ಒಂದೇ ಬೊಗಸೆ); ‘ಅರೆಮುಕ್ಕು’ (=ಅರ್ಧ ಮುಷ್ಟಿ) ಎಂದು ಭೂತಾಯಿಯು ಇವುಗಳನ್ನು ಮುಕ್ಕಳಿಸಿ ಉಗುಳುತ್ತಿದ್ದಾಳೆ.

ಇತಿಹಾಸವನ್ನು ಹೇಳಿದ ಬೇಂದ್ರೆಯವರು ಒಮ್ಮೆಲೆ ಪುರಾಣವನ್ನು ನೆನಪಿಸಿಕೊಳ್ಳುತ್ತಾರೆ. ಸ್ವತಃ ಅವತಾರಪುರುಷನಾದ ಪರಶುರಾಮನು ಜರುಗಿಸಿದಕ್ಷತ್ರಿಯಹನನವನ್ನು ಹೇಳುತ್ತಾರೆ. ಪರಶುರಾಮನು ಇಪ್ಪತ್ತೊಂದು ಸಲ ಪೃಥ್ವಿಯನ್ನು ಸುತ್ತುಹಾಕಿ,ಹರಿಸಿದ ಕ್ಷತ್ರಿಯರಕ್ತವೆಷ್ಟು! ಕೆಂಪನೆಯ ರಕ್ತಧಾರೆಯನ್ನು ಭೂತಾಯಿಯ ಜಡೆಯ ಮೇಲೆ ಎಷ್ಟೇ ಸುರಿದರೂ, ‘ನನ್ನ ಕೂದಲೂ ಸಹ ನೆನೆಯಲಿಲ್ಲ!’ ಎಂದು ಬಿಂಕ ಮಾಡುತ್ತಿರುವಳು ಭೂತಾಯಿ.

ಪರಶುರಾಮನದಷ್ಟೇ ಏಕೆ? ಈವರೆಗಿನ ಎಲ್ಲ ವತಾರಗಳಲ್ಲೂ, ದುಷ್ಟಸಂಹಾರವಾಗಿ, ಭೂತಾಯಿಗೆ ಅಭಿಷೇಕವಾಗಿದೆಯಲ್ಲವೆ? ಆದರೂ ಭೂತಾಯಿಗೆ ಸಂತೃಪ್ತಿಯಿಲ್ಲ. ನನಗಿನ್ನೂ ಎಣ್ಣೆಮಜ್ಜನವಾಗಿಲ್ಲ ಎನ್ನುವುದು ಅವಳ ಅಸಮಾಧಾನ. ಭಾರತೀಯ ಯುದ್ಧಾಳುಗಳನ್ನು ಬಿಡಿ; ‘ಕೆಂಚರು (=ಯುರೋಪಿಯನ್ನರು) ಭಾರತೀಯರಿಗಿಂತ ಕ್ರೂರ ಯುದ್ಧಾಳುಗಳಲ್ಲವೆ? ಅವರಂತೂ ಭೂತಾಯಿಗೆ ನೆತ್ತರಿನಿಂದಲೇ ಸ್ನಾನ ಮಾಡಿಸುತ್ತಾರೆ. ಅಂತಹವರನ್ನೂ ಸಹ ಭೂತಾಯಿಯು ಅಸಹನೆಯಿಂದ ದೂಡುತ್ತಿದ್ದಾಳೆ. ಇದು ಮೊದಲಗಿತ್ತಿಯ ತಣಿಯದ ರೌದ್ರ!

--
ಹಾಲಿನ ಹೃದಯಕ್ಕೆ ಕುಬ್ಬುಸವನು ತೊಡಿಸಿ
            ಹೂಮುಡಿಸಿಕೊಂಡೆಂದು ನೀನಲಿವೆ.
ಬಸಿರು ತುಂಬಲು ಹಸಿರುಡಿಗೆಯನುಟ್ಟೆಂದು
            ವನಮಾಸ ನವಮಾಸ ತೀರಿಸುವೆ.

ಸಾಕು ಪೌರುಷದ ಮೇಲಾಟ. ಭೂತಾಯಿಯೇ, ಇನ್ನು ನೀನು ತಾಯ್ತನವನ್ನು ಧರಿಸು. ರಣದಾಹವನ್ನು ನಿಲ್ಲಿಸಿ, ಮಾತೃಹೃದಯವನ್ನು ಧರಿಸು ಎಂದು ಬೇಂದ್ರೆಯವರು ಭೂತಾಯಿಗೆ ಬಿನ್ನವಿಸುತ್ತಿದ್ದಾರೆ. ನರಕಪಾಲಗಳನ್ನು ಧರಿಸಿದ ನಿನ್ನ ವಕ್ಷಸ್ಥಲವನ್ನು ಇನ್ನು ತೋರಿಸಬೇಡ, ತಾಯಿ; ಅದೀಗ ಹಾಲು ತುಂಬಿದ ಹೃದಯವಾಗಲಿ. ವಕ್ಷಸ್ಥಲವನ್ನು ಕುಪ್ಪುಸದಿಂದ ಮುಚ್ಚಿಕೊಂಡು ಗೌರವದ ಗೃಹಿಣಿಯಾಗು. ಹೂಮುಡಿದುಕೊಂಡು ಸಂತಸ ಬೀರುವ ನಾರಿಯಾಗು.  ಬಸಿರಾದ ಹೆಣ್ಣುಮಕ್ಕಳು ಹಸಿರು ಸೀರೆಯನ್ನು ಉಡುತ್ತಾರಲ್ಲವೆ? ಹಾಗೆಯೆ, ನೀನೂ ಸಹ ಸಸ್ಯಗಳಿಂದ ತುಂಬಿದ ಹಸಿರುಡುಗೆಯನ್ನು ಉಟ್ಟುಕೊ.

ನಿನ್ನ ಮೇಲಾಗುತ್ತಿರುವ ರಕ್ತಪಾತಗಳನ್ನು ನಿಲ್ಲಿಸಿ, ಸಸ್ಯಶ್ಯಾಮಲೆಯಾಗಿ, ಎಲ್ಲ ಜೀವಿಗಳನ್ನು ಧರಿಸು.  ವನಮಾಸಎಂದರೆ ವನಭೋಜನಗಳಿಂದ ತುಂಬಿದ ಮಾಸ. ಬಸಿರಾದ ಹೆಣ್ಣುಮಗಳಿಗೆ, ಆನಂದಿತಳನ್ನಾಗಿ ಮಾಡಲು ವನಭೋಜನಗಳಿಗೆ ಕರೆದೊಯ್ಯುವ ಸಂಪ್ರದಾಯವಿದೆ. ರೀತಿಯಾಗಿ ನೀನು ಒಂಬತ್ತು ತಿಂಗಳುಗಳನ್ನು ಪೂರೈಸಿ, ಜೀವಪ್ರೀತಿಯ ಮಕ್ಕಳನ್ನು ಹೆರು ಎಂದು ಕವಿ ಕೋರುತ್ತಿದ್ದಾನೆ.

--
ಮುನ್ನಿಲ್ಲ ಇನ್ನಾರೆ ಮಕ್ಕಳ ದಿನವೆಂದು
            ಮೂಡೀತು ಹೇಳವ್ವ ಬಿನ್ನವಿಸುವೆ.
ಎಂದು ಮಂಗಲ ನಿನ್ನ ದೇವಗರ್ಭಕೆ?—ಇನ್ನೂ
            ಮೊದಲಗಿತ್ತಿಯಂತೆ ಮೆರೆಯುತಿಹೆ!

ಮುನ್ನಿಲ್ಲಎಂದರೆ ಈವರೆಗಂತೂ ಇರಲಿಲ್ಲ. ಇನ್ನು ಮೇಲಾದರೂ ನಿಸರ್ಗಪ್ರೀತಿಯ, ನಿಸರ್ಗಸಹಜ ಮಕ್ಕಳನ್ನು ಎಂದು ಹೆರುವೆ, ಭೂತಾಯಿ? ನಿನ್ನ ಗರ್ಭವು ರಾಕ್ಷಸಗರ್ಭವಾಗದೆ ದೇವಗರ್ಭವಾಗುವ ದಿನವು  ಎಂದು ಬಂದೀತು ಎಂದು ಕವಿ ಕೇಳುತ್ತಾನೆ. ಏಕೆಂದರೆ, ಸದ್ಯಕ್ಕಂತೂ, ಭೂತಾಯಿಯು ಮೊದಲಗಿತ್ತಿಯಂತೆಯೇ ಮೆರೆಯುತ್ತಿದ್ದಾಳೆ!

ಮೊದಲಗಿತ್ತಿ ಕವನವುನಾದಲೀಲೆ  ಕವನಸಂಕಲನದಲ್ಲಿ ಸೇರ್ಪಡೆಯಾಗಿದೆ.

ಬೇಂದ್ರೆಯವರು ಭೂರಂಗವು ರಣರಂಗವಾದಂತಹ ಪರಿಸ್ಥಿತಿಗೆ ವಿಷಾದ ವ್ಯಕ್ತ ಪಡಿಸುತ್ತ  ಚಿಗರಿಗಂಗಳ ಚೆಲುವಿಎನ್ನುವ ಮತ್ತೊಂದು ಕವನವನ್ನು ಬರೆದಿದ್ದಾರೆ. ಕವನದಲ್ಲಿ ಭೂತಾಯಿಯನ್ನುಹೆದರಿದ ಹುಲ್ಲೆಗೆ ಹೋಲಿಸ ಲಾಗಿದೆ ಹಾಗು ಯುದ್ಧಾಳುಗಳನ್ನು ಭೂಮಿಯನ್ನು ಬೇಟೆಯಾಡಲು ಹೊರಟ ಬೇಟೆಗಾರರಂತೆ ಚಿತ್ರಿಸಲಾಗಿದೆ. ಚಿಗರಿಗಂಗಳ ಚೆಲುವಿ ಇದು ಸ್ವತಃ ಬೇಂದ್ರೆಯವರಿಗೆ ಪ್ರಿಯವಾದ ಕವನವಾಗಿತ್ತು. ಈ ಕವನವು ‘ಸಖೀಗೀತ’ ಕವನಸಂಕಲನದಲ್ಲಿದೆ.