Saturday, September 25, 2010

ವಿವೇಕಾನಂದರ ‘ಕಾಳೀಮಾತಾ’………ಬೇಂದ್ರೆಯವರ ‘ರೌದ್ರಿ’

ಸ್ವಾಮಿ ವಿವೇಕಾನಂದರು ಕಾಶ್ಮೀರದಲ್ಲಿರುವ  ಕ್ಷೀರಭವಾನಿ ದೇವಿಯ ದರ್ಶನ ಪಡೆದ ಬಳಿಕ ದಾಲ್ ಸರೋವರದಲ್ಲಿಯ ದೋಣಿ-ಮನೆಗೆ ಮರಳುತ್ತಾರೆ. ಆ ಸಂದರ್ಭದಲ್ಲಿ ಅವರು ಬರೆದ ಕವನವಿದು. ದೇವಿಯು ಜಗಜ್ಜನನಿಯಾದಂತೆಯೇ ಜಗತ್ತಿನ ಸಂಹಾರಕಾರಣಿಯೂ ಹೌದು. ದೇವಿಯ ಅಂತಹ  ಉಗ್ರ ಸ್ವರೂಪದ ಬಗೆಗಿನ ಚಿಂತನ ಅವರ ಈ ಕವನದಲ್ಲಿದೆ:
                                 Kali, the Mother
                        The stars are blotted out,
                        The clouds are covering clouds.
                        It is darkness vibrant, sonant.
                        In the roaring, whirling wind
                        Are the souls of a million lunatics
                        Just loosed from the prison-house,
                        Wrenching trees by the roots,
                        Sweeping all from the path.
                        The sea has joined the fray,
                        And swirled up mountain-waves,
                        To reach the pitchy sky.
                        The flash of lurid light
                        Reveals on every side
                        A thousand, thousand shades
                        Of Death begrimed and black-
                        Scattering plagues and sorrows,
                        Dancing mad with joy,
                        Come, Mother, come!
                        For terror is Thy name,
                        Death is in thy breath,
                        And every shaking step
                        Destroys a world for e'er.
                        Thou Time, the All-destroyer!
                        Come, O Mother, come!
                        Who dares misery love,
                        And hug the form of Death,
                        Dance in destruction's dance
                        To him the Mother comes.


ವಿವೇಕಾನಂದರ ಈ ಕವನದ ಅನುವಾದವನ್ನು ಬೇಂದ್ರೆಯವರು ಮಾಡಿದ್ದಾರೆ. ಅನುವಾದಿತ ಕವನವನ್ನು ‘ಹೃದಯಸಮುದ್ರ’ ಸಂಕಲನದಲ್ಲಿ ಅಳವಡಿಸಲಾಗಿದೆ. ಅದು ಇಂತಿದೆ:

                       
ರೌದ್ರಿ
                             ಭಾಗ-೧
                        ಚಿಕ್ಕೆ ಬಾನೊಳಿಂಗಿವೆ
                        ಮೋಡ ಮುಗಿಲನುಂಗಿವೆ
                        ಜಿರಗುಟ್ಟುವ ದುರಗುಟ್ಟುವ
                        ಕತ್ತಲೋ ಕತ್ತಲು
                        ಸುಟ್ಟುರೆಯೇ ಬಿರುಗಾಳಿಯೇ
                        ಲೋಕದತ್ತಲಿತ್ತಲೆ
                        ಮುರಿದು ಸೆರೆ ಬಂತು ನೆರೆ
                        ಮರುಳಪಡೆಯೆ ಬೆತ್ತಲೆ
                                    ಭಾಗ-೨
                        ಮರ ಕಿತ್ತಿವೆ ಬುಡ ತಳ
                        ಹಾದಿ ಉಡುಗೆ ಝಳಝಳ
                        ಕಡಲು ಕುಣಿಯೆ ಗೊಂದಣ
                        ತೆರೆ-ಮುರಿ-ನೊರೆ ಧಂಧಣ
                        ಮಬ್ಬೆ ಮಳೆಯು ನಾಡಿಗೆ
                        ಮುಗಿಲಿನಂಚು ಕಾಡಿಗೆ
                        ಸಾವು ಹೊಂಚು, ಅಯ್ಯೊ ಮಿಂಚು
                        ಕಣ್ತೆರೆದೆಡೆ ಸುತ್ತಿಗೊಂಡ
                        ಲಕ್ಷಕೋಟಿ ರೂಪುಗೊಂಡ
                        ಸಾವಿನಿಂದ ಮುತ್ತುತ
                        ಕಷ್ಟ ನಷ್ಟ ಬಿತ್ತುತ
                        ಹಿಗ್ಗುಗೊಂಡು ಹುಚ್ಚೆದ್ದು
                        ಕುಣಿವ ತಾಯಿ ಬಾ!
                               ಭಾಗ-೩
                        ರೌದ್ರಿ ನಿನ್ನ ಹೆಸರು
                        ಮೃತ್ಯು ನಿನ್ನ ಉಸಿರು
                        ನಿನ್ನ ಒಂದು ನಡೆ ಅಡಿ
                        ಜಗವ ಮಾಡೆ ಪುಡಿ ಪುಡಿ
                        ಪ್ರಳಯಂಕರಿ ಓ ಕಾಳಿ
                        ಬಾ ತಾಯಿಯೆ ಬಾ!

ಕವನರಚನೆಯ ಸಂದರ್ಭದಲ್ಲಿ ಕವಿಯ ಮನಸ್ಸಿನಲ್ಲಿ ಒಂದು ಭಾವ ಇರುತ್ತದೆ. ಅದು ಕವನದ ಆತ್ಮ. ಈ ಭಾವಕ್ಕೆ ಅನುರೂಪವಾದ ಛಂದಸ್ಸನ್ನು, ಪದಗಳನ್ನು ಹಾಗು toneಅನ್ನು ಕವಿಯು ಸೃಷ್ಟಿಸುತ್ತಾನೆ. ಅದು ಕವನದ ದೇಹ. ಅನುವಾದಕನು ಕವನವನ್ನು ಅನುವಾದಿಸುವಾಗ ಕವನದ ಆತ್ಮವನ್ನು ಹಾಗು ದೇಹವನ್ನು ತನ್ನ ಅನುವಾದದಲ್ಲಿ ಸಮರ್ಪಕವಾಗಿ ಮೂಡಿಸಿದರೆ ಅದು ಉತ್ತಮ ಅನುವಾದ. ಬೇಂದ್ರೆಯವರ ಅನುವಾದಗಳು ಇನ್ನೂ ಮೇಲ್ಮಟ್ಟದವು. ವಿವೇಕಾನಂದರ ಈ ಕವನವದ ಉದಾಹರಣೆಯನ್ನೇ ತೆಗೆದುಕೊಳ್ಳಿ.

ವಿವೇಕಾನಂದರು ಕಾಶ್ಮೀರದಲ್ಲಿ ದೇವಿಯ ದರ್ಶನವನ್ನು ಪಡೆದ ನಂತರ, ಪಾರಮಾನಸ ಪ್ರಜ್ಞೆಯಲ್ಲಿ, ದೇವಿಯ ಸಂಹಾರಕಾರಿ ರೂಪವನ್ನು ಅನುಭವಿಸಿ ಬರೆದಿರಬಹುದಾದ ಕವನವಿದು. ಆ ಅನುಭವಕ್ಕೆ ತಕ್ಕ ಛಂದಸ್ಸು ಹಾಗು ಪದಗಳನ್ನು ಅವರು ತಮ್ಮ ಕವನದಲ್ಲಿ ಬಳಸಿದ್ದಾರೆ. ಬೇಂದ್ರೆಯವರು ಕನ್ನಡದಲ್ಲಿ ಅಂತಹದೇ ಛಂದಸ್ಸು ಹಾಗು ಅದೇ ಜಾತಿಯ ಪದಗಳನ್ನು ಬಳಸಿದ್ದಾರೆ. ಮೂಲ ಕವನದ toneಅನ್ನು ಸಹ ಅನುವಾದದಲ್ಲಿ ಸಮರ್ಥವಾಗಿ ಇಳಿಸಿದ್ದಾರೆ. ಇಷ್ಟೇ ಆದರೆ ಇದೊಂದು ಉತ್ತಮ ಅನುವಾದವಾಗಬಹುದಾಗಿತ್ತು. ಆದರೆ ಇದೊಂದು ಶ್ರೇಷ್ಠ ಅನುವಾದವಾಗಲು ಬೇರೊಂದು ಕಾರಣವಿದೆ. ಬೇಂದ್ರೆಯವರು ತಮ್ಮ ಮನೋಲೋಕದ ಬಸಿರಲ್ಲಿ ಮೂಲಕವನವನ್ನು ಹೊತ್ತು, ಆ ಕವನಕ್ಕೆ ಮರುಹುಟ್ಟು ನೀಡಿದ್ದಾರೆ. ಇದು ಕೇವಲ ಪ್ರತಿಕೃತಿಯಲ್ಲ, ಇದು ಮೂಲಕವನದ ಮರುಜನ್ಮ.

ಮಗುವಿಗೆ ಜನ್ಮ ಕೊಡುವ ಕ್ರಿಯೆಗೆ ಕನ್ನಡದಲ್ಲಿ ‘ಹಡೆಯುವದು’ ಎನ್ನುತ್ತಾರೆ. ಇದು ‘ಪಡೆಯುವದು’ ಪದದಿಂದ ಬಂದಿದೆ. ‘ಹಡೆಯುವದಕ್ಕೆ’ ಮೊದಲು ‘ಪಡೆಯಬೇಕಾಗುತ್ತದೆ’. ಬೇಂದ್ರೆಯವರು ವಿವೇಕಾನಂದರಿಂದ ಮೂಲಕವನದ ಭಾವವನ್ನು ಹಾಗು ದೇಹವನ್ನು ‘ಪಡೆದರು’, ಬಳಿಕ ಅದನ್ನೇ ಕನ್ನಡದಲ್ಲಿ ‘ಹಡೆದರು’! ಈ ಪಡೆಯುವ ಹಾಗು ಹಡೆಯುವ ಕ್ರಿಯೆಯ ನಡುವೆ ಮಗುವಿನ ತಾಯಿಯು ತನ್ನದೇ ಆದ ಸತ್ವವನ್ನು ಮಗುವಿಗೆ ನೀಡುತ್ತಾಳೆ. Value addition ಎಂದು ಹೇಳುತ್ತಾರಲ್ಲ, ಆ ರೀತಿಯಲ್ಲಿ. ಈ ಕವನದಲ್ಲಿ ಬೇಂದ್ರೆಯವರು ಅದನ್ನೂ ಮಾಡಿದ್ದಾರೆ. ಹೀಗಾಗಿ ಮೂಲಕ್ಕೆ ವಿರೋಧವಾಗದೇ ಈ ಕವನಕ್ಕೆ ಹೆಚ್ಚಿನ ಸೊಬಗು ಬಂದಿದೆ.

ವಿವೇಕಾನಂದರ ಮೂಲಕವನದ ಪ್ರತಿಯೊಂದು ಸಾಲನ್ನು ಅರ್ಥವ್ಯತ್ಯಾಸವಿಲ್ಲದೆ ಬೇಂದ್ರೆಯವರು ಕನ್ನಡಕ್ಕೆ ಹೇಗೆ ಇಳಿಸಿದ್ದಾರೆ ಎನ್ನುವದನ್ನು ಅರಿಯಬೇಕಾದರೆ, ಪ್ರತಿ ಸಾಲಿನ ಮೂಲವನ್ನು ಹಾಗು ಅನುವಾದವನ್ನು ಜೊತೆಜೊತೆಗೇ ಇಟ್ಟು ಪರೀಕ್ಷಿಸಬೇಕು:

ಮೂಲ/ಅನುವಾದ:
The stars are blotted out,
ಚಿಕ್ಕೆ ಬಾನೊಳಿಂಗಿವೆ
The clouds are covering clouds.
ಮೋಡ ಮುಗಿಲ ನುಂಗಿವೆ.
It is darkness vibrant, sonant
ಜಿರಗುಟ್ಟುವ ದುರುಗುಟ್ಟುವ ಕತ್ತಲೋ ಕತ್ತಲು
(vibrant ಎನ್ನುವ ಪದಕ್ಕೆ ದುರುಗುಟ್ಟುವ ಎನ್ನುವ ಪದವನ್ನು ಹಾಗು sonant ಎನ್ನುವ ಪದಕ್ಕೆ ಜಿರಗುಟ್ಟುವ ಎನ್ನುವ ಪದವನ್ನು ಬೇಂದ್ರೆಯವರು ಬಳಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಅಥವಾ ಕಾಡಿನಲ್ಲಿ ಕತ್ತಲೆ ಕವಿದ ಇರುಳಿನಲ್ಲಿ ಏಕಾಕಿಯಾಗಿ ನಡೆಯುತ್ತಿರುವವನಿಗೆ ಈ ದುರುಗುಟ್ಟುವ ಹಾಗು ಜಿರಗುಟ್ಟುವ ಕತ್ತಲೆಯು ಅನುಭವಕ್ಕೆ ಬಂದಿರುತ್ತದೆ.)
In the roaring, whirling wind
ಸುಟ್ಟುರೆಯೆ ಬಿರುಗಾಳಿಯೆ ಲೋಕದತ್ತಲಿತ್ತಲೆ
Are the souls of a million lunatics just loosed from the prison house
ಮುರಿದು ಸೆರೆ ಬಂತು ನೆರೆ ಮರುಳ ಪಡೆಯೆ ಬೆತ್ತಲೆ.
(ಸೆರೆಯಲ್ಲಿ ಬಂಧಿಸಿಟ್ಟ ಹುಚ್ಚು ಆತ್ಮಗಳನ್ನೆಲ್ಲ ಥಟ್ಟನೆ ಬಿಡುಗಡೆ ಮಾಡಿದರೆ ಹೇಗಿರಬೇಕು? ಅಂತಹ ಒಂದು chaotic ಚಿತ್ರಣವನ್ನು ವಿವೇಕಾನಂದರು ಊಹಿಸಿಕೊಳ್ಳುತ್ತಾರೆ. ಬೇಂದ್ರೆಯವರು ಈ lunatic souls ಅನ್ನುವದನ್ನು ‘ಮರಳು ಪಡೆ’ ಎಂದು ಬಣ್ಣಿಸುತ್ತಾರೆ. ರಣರಂಗದಲ್ಲಿ  ಸತ್ತವರ ಮತ್ತು ಅರೆಸತ್ತವರ ದೇಹಗಳನ್ನು ಭಕ್ಷಿಸಲು ಬರುವ spirits ಇವು. ಕುರುಕ್ಷೇತ್ರದ ರಣರಂಗದಲ್ಲಿ ಇಂತಹ ಒಂದು ಸನ್ನಿವೇಷವನ್ನು ಕಲ್ಪಿಸಿ ರನ್ನನ ‘ಗದಾಯುದ್ಧ’ದಲ್ಲಿ ಮರಳು ಪಡೆಯ ಭೀಭತ್ಸ ಕಾರ್ಯವನ್ನು ಚಿತ್ರಿಸಲಾಗಿದೆ.)
Wrenching trees by the roots
ಮರ ಕಿತ್ತಿವೆ ಬುಡ ತಳ
Sweeping all from the path
ಹಾದಿ ಉಡುಗೆ ಝಳ ಝಳ
The sea has joined the fray
ಕಡಲು ಕುಣಿಯೆ ಗೊಂದಣ
And swirled up mountain waves
ತೆರೆ-ಮುರಿ-ನೊರೆ ಧಂಧಣ
To reach the pitchy sky
ಮಬ್ಬೆ ಮಳೆಯು ನಾಡಿಗೆ, ಮುಗಿಲಿನಂಚು ಕಾಡಿಗೆ.
The flash of lurid light reveals on every side a thousand thousand shades of Death begrimed and black
ಸಾವು ಹೊಂಚು, ಅಯ್ಯೊ ಮಿಂಚು, ಕಣ್ತೆರೆದೆಡೆ ಸುತ್ತಿಗೊಂಡ, ಲಕ್ಷಕೋಟಿ ರೂಪುಗೊಂಡ
Scattering plagues and sorrows
ಸಾವಿನಿಂದ ಮುತ್ತುತ, ಕಷ್ಟ ನಷ್ಟ ಬಿತ್ತುತ
Dancing mad with joy, Come, mother, come!
ಹಿಗ್ಗುಗೊಂಡು ಹುಚ್ಚೆದ್ದು ಕುಣಿವ ತಾಯಿ ಬಾ!
For terror is thy name
ರೌದ್ರಿ ನಿನ್ನ ಹೆಸರು
Death is in thy breath
ಮೃತ್ಯು ನಿನ್ನ ಉಸಿರು
And every shaking step
ನಿನ್ನ ಒಂದು ನಡೆ ಅಡಿ
Destroys a world for e’er
ಜಗವ ಮಾಡೆ ಪುಡಿ ಪುಡಿ
Thou Time,
ಓ ಕಾಳಿ(=ಕಾಲ ಅಂದರೆ Time)
Who dares misery love, and hug the form of Death, dance in the destruction’s dance
ಪ್ರಳಯಂಕರಿ
Come, O Mother, come!
ಬಾ, ತಾಯಿಯೆ ಬಾ!

ಸೃಷ್ಟಿಯನ್ನಷ್ಟೇ ಬಯಸುವದು ಪ್ರತಿ ಜೀವಿಗೂ ಸಹಜ. ಆದರೆ, ಸೃಷ್ಟಿ-ಸ್ಥಿತಿ-ಸಂಹಾರ ಇವು ಭಗವಂತನ ಅನಿವಾರ್ಯ ಕರ್ತವ್ಯಗಳು. ಈ ಸೃಷ್ಟಿ ಹಾಗು ಸಂಹಾರ ಕಾರ್ಯಗಳು ಲಕ್ಷ ಲಕ್ಷ ರೂಪದಲ್ಲಿ ಪ್ರತಿದಿನವೂ ನಡದೇ ಇರುತ್ತವೆ. ವಿವೇಕಾನಂದರು ತಮ್ಮ ಪಾರಮಾನಸ ಪ್ರಜ್ಞೆಯಲ್ಲಿ ಇದನ್ನು ಅನುಭವಿಸುತ್ತಿದ್ದಾರೆ. ದೇವಿಯ ಎಲ್ಲ ರೂಪಗಳೂ ಮನುಷ್ಯನಿಗೆ ಪೂಜ್ಯವೇ. ಆದುದರಿಂದಲೇ ಈ ಸಂಹಾರರೂಪಿಣಿ ದೇವಿಯನ್ನು ಈ ಕವನದಲ್ಲಿ ಅವರು ಆಹ್ವಾನಿಸಿದ್ದಾರೆ, ಭಜಿಸಿದ್ದಾರೆ. ಈ ಆಹ್ವಾನಕ್ಕೆ ಮತ್ತೂ ಒಂದು ಕಾರಣವಿರಬಹುದು. ಭಾರತದಲ್ಲಿ ಆ ಸಮಯದಲ್ಲಿ ಹರಡಿದ ಅಜ್ಞಾನ, ಬಡತನ, ಕ್ಷೋಭೆ ಇವೆಲ್ಲವುಗಳಿಂದ ನೊಂದ ವಿವೇಕಾನಂದರು ಇವು ನಿರ್ಮೂಲವಾಗಿ ಹೊಸ ಸೃಷ್ಟಿಯೊಂದು ಮೈದಳೆಯಲಿ ಎಂದು ಆಶಿಸಿರಬಹುದು. ಪ್ರಳಯದ ನಂತರ ಹೊಸ ಸೃಷ್ಟಿ ಎನ್ನುವದು ಕಾಲಗತಿಯೇ ಆಗಿದೆ. ಈ ಕಾರಣಕ್ಕಾಗಿಯೂ ವಿವೇಕಾನಂದರು ಪ್ರಳಯಕಾಳಿಯನ್ನು ಆಹ್ವಾನಿಸುತ್ತಿರಬಹುದು!

ತಮ್ಮ ಅನುವಾದ-ಕವನದಲ್ಲಿ ಬೇಂದ್ರೆಯವರು ಮೂರು ಭಾಗಗಳನ್ನು ಮಾಡಿರುವದನ್ನು ಗಮನಿಸಬೇಕು. ಮೂಲಕವನದ ಸೊಬಗನ್ನು ಸವಿಯಲು ಓದುಗನಿಗೆ ಇದು ನೆರವು ನೀಡುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪದ ಕರಾಳ ವರ್ಣನೆ ಇದೆ. ಇದು ಕಲಾವಿದನು ತನ್ನ ಚಿತ್ರಕ್ಕೆ ಕೊಡುವ ಹಿನ್ನೆಲೆಯ ವರ್ಣವಿದ್ದಂತೆ. ಈ ಭಾಗದಲ್ಲಿಯೇ ವಿವೇಕಾನಂದರು ‘ಮರಳು ಪಡೆ’ಯು ಸೆರೆಯಾಗಿ ಇರುವದನ್ನು ಚಿತ್ರಿಸಿದ್ದಾರೆ.

ಎರಡನೆಯ ಭಾಗದಲ್ಲಿ ಈ ಮರಳು-ಪಡೆಯು ಬಿಡುಗಡೆಗೊಂಡು ಮಾಡುವ ಅನಾಹುತವನ್ನು ಚಿತ್ರಿಸಲಾಗಿದೆ. ಮೊದಲ ಭಾಗದಲ್ಲಿ static ಇದ್ದ ಚಿತ್ರಣವು, ಎರಡನೆಯ ಭಾಗದಲ್ಲಿ dynamic ಆಗಿದೆ. ನಿಸರ್ಗವೆಲ್ಲ ಅಲ್ಲೋಲ ಕಲ್ಲೋಲವಾಗಿದೆ. ಇದರ ಪರಿಣಾಮವಾಗಿ ಎಲ್ಲೆಡೆಯೂ ಸಾವು, ನೋವು ಹಬ್ಬಿವೆ. ಈ ಸಾವು ನೋವಿನ, ಈ ವಿಧ್ವಂಸಕಾರ್ಯದ ಅಧಿಷ್ಠಾತ್ರಿಯು ಬೇರಾರೂ ಅಲ್ಲ; ಅವಳೇ ದೇವಿ!  ಇದು ಅವಳಿಗೆ ಹಿಗ್ಗು ನೀಡುತ್ತಿರುವ ಪ್ರಳಯ-ನೃತ್ಯ!

ಮೂರನೆಯ ಭಾಗದಲ್ಲಿ ವಿವೇಕಾನಂದರು ಈ ದೇವಿಯ ಲಕ್ಷಣಗಳನ್ನು ಬಣ್ಣಿಸುತ್ತಾರೆ. ಅವಳ ಹೆಸರೇ ಭಯಂಕರಿ (terror). ಮೃತ್ಯುವೇ ಅವಳ ಉಸಿರು! ವಿವೇಕಾನಂದರು ಅವಳ ಹೆಜ್ಜೆಯನ್ನು shaking step ಎಂದು ಬಣ್ಣಿಸುತ್ತಾರೆ. ಯಾಕೆಂದರೆ ತನ್ನ ಆನಂದದಲ್ಲಿಯೇ ಅವಳು ಮದೋನ್ಮತ್ತಳಾಗಿದ್ದಾಳೆ. ಈ ಹೆಜ್ಜೆಯ ಕೆಳಗೆ ಸಿಲುಕಿದ(--ಬೇರೆ ಮಾರ್ಗವೇ ಇಲ್ಲ!--) ಜಗತ್ತು ಪುಡಿಪುಡಿಯಾಗಿ ಹೋಗುತ್ತದೆ. ಇದು ಯಾಕೆ ಅನಿವಾರ್ಯವೆಂದರೆ ಈ ಸೃಷ್ಟಿ ಹಾಗು ಸಂಹಾರ ಇವು ಕಾಲನಿಯಾಮಕವಾಗಿವೆ. (ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ‘ಕಾಲೋ ಜಗದ್ಭಕ್ಷಕಃ’ = Time swallows the worlds ಎಂದು ಹೇಳಿದ್ದಾರೆ.) ದೇವಿಯು ‘ಕಾಲಿ’, ಅಂದರೆ ಅವಳೇ ಕಾಲದೇವತೆ.

ವಿವೇಕಾನಂದರು ತಮ್ಮ ಕಾಲಾವಧಿಯಲ್ಲಿ ತಮ್ಮ ಸುತ್ತಲೂ ಹರಡಿದ್ದ ಕಷ್ಟ, ಕಾರ್ಪಣ್ಯ ಹಾಗು ಸಾವು, ನೋವುಗಳನ್ನು ನೋಡಿದವರು. ಇದರಿಂದ ವ್ಯಥಿತರಾದ ಅವರು ‘Diabolical is the scheme of the universe!’ ಎಂದು ಉದ್ಗರಿಸಿದ್ದಾರೆ. ಅದರೆ ಇದೆಲ್ಲ ದೈವಯೋಜನೆ ಎಂದು ಅರಿತು, ಆ ದೈವಕ್ಕೆ ತಮ್ಮನ್ನು  ಒಪ್ಪಿಕೊಂಡಿದ್ದಾರೆ. ಹಾಗೆಂದು ಅವರು ಕೈಕಟ್ಟಿ ಕೂಡುವ ಸ್ವಭಾವದವರಲ್ಲ. ಜನಸೇವೆಯೆ ಜನಾರ್ದನನ ಸೇವೆ ಎಂದು ಘೋಷಿಸಿದ ವೀರಸನ್ಯಾಸಿ ಅವರು. ಈ ಕವನದಲ್ಲಿ ಅವರು ಆ ಪ್ರಳಯಂಕರಿ ಕಾಳಿಯನ್ನೇ ಆಹ್ವಾನಿಸುವ ಧೀರತೆಯನ್ನು ತೋರಿಸಿದ್ದಾರೆ. ಈ ವಿನಾಶವನ್ನು ಅವರು ‘souls of a million lunatics just losed' ಎಂದು ವರ್ಣಿಸಬೇಕಾದರೆ, ವಿಶ್ವದ ಈ diabolical scheme ಬಗೆಗೆ ಅವರಿಗಿರುವ ಅತೃಪ್ತಿಯನ್ನು ಅರಿಯಬಹುದು!

ವಿವೇಕಾನಂದರ ಕವನಕ್ಕೆ ಬೇಂದ್ರೆಯವರು ನೀಡಿದ ಕೆಲವು value-additions ಹೀಗಿವೆ:
(೧) ಕವನವನ್ನು ಮೂರು ಭಾಗಗಳಲ್ಲಿ ವಿಭಾಗಿಸಿರುವದರಿಂದ ಓದುಗನಿಗೆ, ಕವನದ ಆಂತರ್ಯವನ್ನು ಹಾಗು ಸೊಬಗನ್ನು ಗ್ರಹಿಸಲು ಅನುಕೂಲವಾಗುತ್ತದೆ.
(೨) ಎರಡನೆಯ ಭಾಗದ ಕೊನೆಯ ಸಾಲನ್ನು ಬೇಂದ್ರೆಯವರು ಅನುವಾದಿಸಿದ ರೀತಿ ಅಪೂರ್ವವಾದದ್ದು.
‘Dancing mad with joy, Come, mother, come!’ ಅನ್ನುವ ಸಾಲನ್ನು ಬೇಂದ್ರೆಯವರು
‘ಹಿಗ್ಗುಗೊಂಡು ಹುಚ್ಚೆದ್ದು ಕುಣಿವ ತಾಯಿ ಬಾ!’ ಎಂದು ಅನುವಾದಿಸಿದ್ದಾರೆ. ಮೂಲದಲ್ಲಿ ಇರದ ಆವೇಶ ಅನುವಾದದಲ್ಲಿ ಮೈದೋರಿದೆ.ಇದರ ತಾಂತ್ರಿಕ ಕಾರಣವೆಂದರೆ, ಈ ಪದಭಾಗದ ಮೇಲೆ ಒತ್ತು ಬರುವಂತೆ ಬೇಂದ್ರೆಯವರು ಕವನದ ಓಟವನ್ನು ರೂಪಿಸಿದ್ದಾರೆ.
(೩) ಉದ್ವೇಗ ತುಂಬಿದ ಎರಡನೆಯ ಭಾಗ ಮುಗಿದು ಮೂರನೆಯ ಭಾಗವು ಪ್ರಾರಂಭವಾದಾಗ, ಅನುವಾದದಲ್ಲಿ ಸುವ್ಯಕ್ತವಾಗಿ ಕಾಣುವ ತಾತ್ವಿಕ resignation, ಮೂಲಭಾಗದಲ್ಲಿ ಅಸ್ಪಷ್ಟವಿದೆ.

ವಿವೇಕಾನಂದರ ಕವನವು ಬೇಂದ್ರೆಯವರಲ್ಲಿ ಮರುಹುಟ್ಟು ಪಡೆದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

[ಟಿಪ್ಪಣಿ:
Raghavendra said...
ಪ್ರೀತಿಯ ಸುನಾಥ್ ಸರ್, ವಿವೇಕಾನಂದರ ಈ ಕವನದ ಬೇಂದ್ರೆಯವರ ಅನುವಾದ ಅತ್ಯಂತ ಸುಂದರವಾಗಿದೆ. ಆದರೆ, ವಿವೇಕಾನಂದರ ಈ ಕವನದ ಆತ್ಮ ಎಂದು ಯಾವ ಭಾಗವನ್ನು ಕರೆಯಬಹುದೋ ಅದೇ ಬೇಂದ್ರೆಯವರ ಅನುವಾದದಲ್ಲಿ ಮಿಸ್ ಆಗಿಬಿಟ್ಟಿದೆ. ನನಗಂತೂ ತುಂಬ ನಿರಾಸೆಯಾಗಿದೆ. ನಾನು ಆ ಭಾಗವನ್ನು ಬೇಂದ್ರೆಯವರು ಹೇಗೆ ಅನುವಾದಿಸಿರಬಹುದು ಎಂಬ ಕುತೂಹಲದಿಂದ ಓದುತ್ತ ಹೋದರೆ ಅದು ಇಲ್ಲವೇ ಇಲ್ಲವಾಗಿದೆ. Who dares misery love, And hug the form of Death, Dance in destruction's dance To him the Mother comes. ಈ ಭಾಗ ಇಡೀ ಕವನದ ಆತ್ಮಭಾಗ ಅಂತ ನನಗೆ ಅನ್ನಿಸುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪವು ಎರಡನೆಯ ಭಾಗದಲ್ಲಿ ಅತ್ಯಂತ ರೌದ್ರವಾದ ಚಲನೆಯನ್ನು ಪಡೆದುಕೊಳ್ಳುತ್ತದೆ, ಮತ್ತು ಮೂರನೆಯ ಭಾಗದಲ್ಲಿ ಮೃತ್ಯುವೇ ಆದ ಆ ದೇವಿಯನ್ನು ವಿವೇಕಾನಂದರು ಬಣ್ಣಿಸುತ್ತಾರೆ. ಈ ಮೂರು ಭಾಗಗಳಲ್ಲಿಯೂ ಹೊರಗೇ ಘಟಿಸುವ ಈ ಘಟನೆ ನಾಲ್ಕನೆಯ ಭಾಗದಲ್ಲಿ ಆಂತರ್ಯಕ್ಕೆ ಸಾಗುತ್ತದೆ. ಆ ಸಾಲುಗಳನ್ನು ಸ್ಥೂಲವಾಗಿ ಅನುವಾದಿಸುವುದಾದರೆ: "ಯಾರು ಸಾವಿನ ದೇವತೆಯ ಪ್ರೇಮವನ್ನು ಒಪ್ಪಿಕೊಳ್ಳುತ್ತಾನೆ, ಯಾರು ಲಯಕಾರಕಳಾದ ಕಾಳಿಯನ್ನು ಅಪ್ಪಿಕೊಳ್ಳುತ್ತಾನೆ ಮತ್ತು ಆ ವಿಧ್ವಂಸಕ ನರ್ತನದ ಜೊತೆಗೇ ನರ್ತಿಸಲು ಸಿದ್ಧನಾಗುತ್ತಾನೆ ಅಂತವನಲ್ಲಿಗೆ ಆ ದೇವಿ ಬರುತ್ತಾಳೆ, ದೈವತ್ವ ಅವನದಾಗುತ್ತದೆ" ಬ್ರಹ್ಮಾಂಡದಲ್ಲಿ ಹುಟ್ಟು-ಸಾವು ಒಟ್ಟಿಗೇ ಘಟಿಸುತ್ತಿರುತ್ತದೆ, ಸೃಷ್ಠಿಯಾಗುತ್ತಿದ್ದಂತೆ ಲಯವೂ ಒಟ್ಟೊಟ್ಟಿಗೇ ಆಗುತ್ತಿರುತ್ತದೆ. (ಪ್ರತೀ ಒಳ-ಉಸಿರೂ ಹುಟ್ಟು, ಪ್ರತೀ ಹೊರ-ಉಸಿರೂ ಸಾವು.) ಆದರೆ ಎಷ್ಟು ಜನರಿಗೆ ಆ ಮರಣವು ಮಹಾನವಮಿ ಎಂದು ಸ್ವೀಕರಿಸುವ ಚೈತನ್ಯವಿದ್ದೀತು? ಅಂತಹ ಚೈತನ್ಯವಿದ್ದವನಿಗೆ ಮಾತ್ರ ದೇವಿ ದೊರೆಯುತ್ತಾಳೆ ಎಂಬುದು ಕೊನೆಯ ಪ್ಯಾರಾದ ಅರ್ಥ ಎಂದು ನನಗನ್ನಿಸುತ್ತದೆ. ತಾಂಡವವಾಡುವ ಕಾಳಿಯ ವಿನಾಶೀ ವಿಜ್ರಂಭಣೆಯನ್ನು ಒಪ್ಪಿಕೊಳ್ಳುವವ, ಆ ವಿಜ್ರಂಭಣೆಯನ್ನು ತನ್ನಲ್ಲಿ ಸ್ವೀಕರಿಸುವವ ದೇವೀ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಎಂಬುದೇ ಈ ಕವಿತೆಯ ಮುಖ್ಯ ಅರ್ಥ. ಆದರೆ ಬೇಂದ್ರೆಯವರು ಇದನ್ನು ಬಿಟ್ಟಿದ್ದಾರೆಯೇ? ನಿಮ್ಮ ವಿವರಣೆಯಲ್ಲಿಯೂ ಈ ಭಾಗ ನನಗೆ ಕಾಣಲಿಲ್ಲ. ಈ ನನ್ನ ಅನಿಸಿಕೆ ಸರಿಯೇ ತಿಳಿಸಿ.
sunaath said...
ರಾಘವೇಂದ್ರರೆ, ನೀವು ತೋರಿಸಿದ ಅನುವಾದ ಲೋಪವು ಅತ್ಯಂತ ಸಮಂಜಸವಾಗಿದೆ. ಮತ್ತು ಅದರ ಅನುವಾದವನ್ನು ನೀವು ಅತ್ಯಂತ ಸಮರ್ಪಕವಾಗಿ ಗದ್ಯರೂಪದಲ್ಲಿ ನೀಡಿದ್ದೀರಿ. ಬೇಂದ್ರೆ ಯಾಕೆ ಈ ಭಾಗವನ್ನು ಬಿಟ್ಟರು ಎನ್ನುವದನ್ನು ನಾನು ಊಹಿಸಿಕೊಳ್ಳಲಾರೆ.ಒಟ್ಟಿನಲ್ಲಿ ಇದು ಬೇಂದ್ರೆಯವರಿಂದ ಘಟಿಸಿದ ಲೋಪ ಎಂದು ಹೇಳಲೇಬೇಕು. ದೇವಿಯ ವಿನಾಶಕಾರಿ ರೂಪದಿಂದ ತನ್ನ ಮನಸ್ಸಿಗೆ ಆಘಾತವಾಗುತ್ತಿದ್ದರೂ ಸಹ, ತಾನು ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಲೇಬೇಕೆನ್ನುವದು ವಿವೇಕಾನಂದರ ಆಶಯ. ಆ ಆಶಯವನ್ನು ಬಿಟ್ಟು, ಕೇವಲ ದೇವಿಯ ರೂಪವನ್ನು ಚಿತ್ರಿಸುವದಷ್ಟೇ ಬೇಂದ್ರೆಯವರ ವಿಚಾರವಿದ್ದಿದ್ದೀತು. ಆದರೆ, ಅನುವಾದಕನು ಇಂತಹ ಸ್ವಾತಂತ್ರ್ಯವನ್ನು ವಹಿಸಬಾರದು. ನಿಮ್ಮ ಆಕ್ಷೇಪಣೆಯು ಮೌಲಿಕವಾಗಿರುವದರಿಂದ, ಈ ಆಕ್ಷೇಪಣೆಯನ್ನು ಹಾಗು ಅದಕ್ಕೆ ನನ್ನ ಸಮ್ಮತಿಯನ್ನು ನಾನು ಮೂಲಲೇಖನದ ಟಿಪ್ಪಣಿಯಲ್ಲಿ ಸೇರಿಸುತ್ತೇನೆ (ನಿಮ್ಮ ಅನುಮತಿಯ ಪೂರ್ವಗ್ರಹಿಕೆಯೊಂದಿಗೆ!)

Monday, September 20, 2010

‘ಮನುವಿನ ಮಕ್ಕಳು’...............ಬೇಂದ್ರೆ

ಅಂಬಿಕಾತನಯದತ್ತರ ‘ಮನುವಿನ ಮಕ್ಕಳು’ ಕವನವು ಅವರ ‘ನಾದಲೀಲೆ’ ಕವನಸಂಗ್ರಹದಲ್ಲಿ ಅಡಕವಾಗಿದೆ. ಈ ಕವನಸಂಕಲನವು ೧೯೩೮ರಲ್ಲಿ ಪ್ರಕಟವಾಯಿತು. ಭಾರತದಲ್ಲಿ ಹಾಗು ಜಗತ್ತಿನಲ್ಲಿ ಇದು ಉದ್ವಿಗ್ನತೆಯ ಕಾಲ. ಯುರೋಪಿಯನ್ನರ ಶೋಷಣಾ ನೀತಿಯಿಂದಾಗಿ ಏಶಿಯಾ ಹಾಗು ಆಫ್ರಿಕಾ ಖಂಡಗಳಲ್ಲಿದ್ದ ಅವರ ವಸಾಹುತುಗಳು ನಿರ್ಜೀವ ಅಸ್ಥಿಪಂಜರಗಳಾಗಿದ್ದವು. ಭಾರತದಲ್ಲಿಯೂ ಸಹ ಉಳ್ಳವರು ಇಲ್ಲದವರನ್ನು ಕಾಲ ಕೆಳಗೆ ತುಳಿದೇ ಮೇಲೇರುತ್ತಿದ್ದರು. ಅನೇಕ ಭಾರತನಿವಾಸಿಗಳಂತೆ ಬೇಂದ್ರೆಯವರೂ ಸಹ ಈ ಅವಧಿಯಲ್ಲಿ ವೈಯಕ್ತಿಕ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಅವರಲ್ಲಿಯ ಕವಿ ಹೃದಯವು ತನ್ನ ಬವಣೆಯನ್ನಷ್ಟೇ ನೋಡದೆ, ಈ ಸಂಕಟಕಾಲದ ಸಾರ್ವತ್ರಿಕತೆಯನ್ನು ಗ್ರಹಿಸಿಕೊಳ್ಳುತ್ತದೆ. ಈ ಅನುಭೂತಿಯ ಫಲವೇ ‘ಮನುವಿನ ಮಕ್ಕಳು’.

ಬ್ರಹ್ಮನಿರ್ಮಿತ ಸೃಷ್ಟಿಯಲ್ಲಿ ಸ್ವಾಯಂಭೂ ಮನು ಹಾಗು ಶತರೂಪಾ ಇವರು ಮೊದಲ ದಂಪತಿಗಳು. ಇವರಿಂದಲೇ ಪ್ರಜೆಗಳ ಉತ್ಪತ್ತಿಯಾಗಿದೆ. ಮನುವಿನ ಮಕ್ಕಳು ಮನುಜರು ಅಥವಾ ಮಾನವರು.
ನಿಸರ್ಗ-ಚೈತನ್ಯಗಳಾದ ಗಾಳಿ,ಬೆಳಕು ಹಾಗು ನೀರು ಇವೆಲ್ಲ ಜೀವಪೋಷಣೆಯಲ್ಲಿ ತೊಡಗಿವೆ. ಆದುದರಿಂದಲೆ ಇವು ದೇವತೆಗಳು. ಗಾಳಿಯು ವಾಯುದೇವನಾದರೆ, ನೀರು ಜಲದೇವಿ. ಬೆಳಕು ಕೊಡುವ ಸೂರ್ಯನೂ ಸಹ ದೇವನೇ.

ನಿಸರ್ಗ ಹಾಗು ಸಸ್ಯಸಂಕುಲದಲ್ಲಿ ಸಾಮರಸ್ಯವಿದೆ. ಆದರೆ ಪ್ರಾಣಿಸಂಕುಲದಲ್ಲಿ ಶ್ರೇಣೀಕೃತ ಭಕ್ಷಣೆಯೇ ವಾಡಿಕೆಯಾಗಿದೆ. ಪುರಾಣಕಾಲದಲ್ಲಿಯ ಭಾರತದ ಚಕ್ರವರ್ತಿಗಳಾದ ಶಿಬಿ, ದಿಲೀಪ ಹಾಗು ಸಂವೇದನಾಶೀಲ ವ್ಯಕ್ತಿಯಾದ ಜೀಮೂತವಾಹನರು ಈ ಭಕ್ಷಣೆಯನ್ನು ತಪ್ಪಿಸಲು ವೈಯಕ್ತಿಕ ಬಲಿದಾನಕ್ಕೂ ಸಹ ಮುಂದಾಗುತ್ತಿದ್ದರು. ಇಂತಹ ಪರಂಪರೆಯ ಭಾರತದಲ್ಲಿ  ಕಾಲಗತಿಯಿಂದಾಗಿ ವರ್ತಮಾನ ಪರಿಸ್ಥಿತಿಯು ವಿಪರ್ಯಸ್ತವಾಗಿದೆ.

 ‘ಮನುವಿನ ಮಕ್ಕಳು’ ಕವನದ ಪೂರ್ತಿಪಾಠ ಹೀಗಿದೆ:

ಗಾಳಿಯು ಸುಳಿ ಸುಳಿ ಸೂಸುವದು
               ಬಿಮ್ಮನೆ ಬೀಸುವದು.
     ಪ್ರಾಣತರಂಗಿಣಿ ತುಳುಕುವಳು
              ದಡಗಳ ದುಡುಕುವಳು.
ಹೂಗಂಪಿನ ಹುಡಿ ಮಿಸುಕುವದು
            ಗಮಗಮ ಮಸುಕುವದು.

ಬಾಳಿನ ಕೊಳಲುಲಿ ಕೇಳುವವರೆಗೂ
                    ಕೇಳಲು ಕಿವಿಯಿಲ್ಲ.
ಬೆಳುದಿಂಗಳು ಬಿಸಿಲಾಡಿದರೇನು—
                      ನಾಲಿಗೆ ಸವಿಯಿಲ್ಲ.
ಜಗವು ಕಲ್ಲಿಗೂ ಕಡೆಗಾಗಿರುವದು
                       ಜೀವವು ಕವಿಯಲ್ಲ.

ಪಾರಿವಾಳಗಳ ಮೈಜೋಡು
                                          ಗಿಡುಗದ ಮುಖಕೀಡು.
ಆವಿಗೆ ದಿನದಿನವೂ ಕುತ್ತು
                                         ಸಿಂಹಕೆ ಸವಿತುತ್ತು.
ಮಲಸಂಬಂಧದ ಭಾಗಾದಿ
                                    ಹದ್ದಿಗೆ ಹಳೆಹಾದಿ.

ಶಿಬಿ ದಿಲೀಪ ಜೀಮೂತವಾಹನರು
                                    ಮಣ್ಣನು ಮುಕ್ಕಿದರು.
ಸ್ವರ್ಗದೊಳಿದ್ದೂ ಸಂಶಯ ಬಂದಿತು
                             ಕಣ್ಗಳು ತಿಕ್ಕಿದರು.
ತಮ್ಮ ನಾಡಿನಲಿ ನಡೆದಿಹ ಲೀಲೆಯ
                               ನೋಡುತ ಬಿಕ್ಕಿದರು.

ದುಡಿವರ ಉಸಿರಿಗೆ ದಣಿವಿಲ್ಲ
                        ಕೊನೆಗೂ ತಣಿವಿಲ್ಲ.
ಕೂಸುಗಳಾಟಕೆ ಕಳೆಯಿಲ್ಲ
                         ಭೂಮಿಗೆ ಬೆಳೆಯಿಲ್ಲ.
ಹೆಣ್ಣಿನ ಕಂಬನಿ ತೊಡೆದಿಲ್ಲ
                         ಗಂಡಿಗೆ ಬಿಡುವಿಲ್ಲ.
                       
ಹಸಿವಿನ ಕೂಗಿನ ಕಹಳೆಯ ಕೇಳಿ
                         ಜೀವವು ನಡುಗುವದು.
   ಸಾವಿನ ಎದೆಗಳ ಭೇರಿಗೆ ಎತ್ತೋ
                           ಓಡಲು ತೊಡಗುವದು.
     ಮನುವಿನ ಮಕ್ಕಳ ಬೇಟೆಯ ಕಂಡು
                                    ತನ್ನೊಳಗಡಗುವದು.

ಧರ್ಮಕೆ ‘ಧರ್ಮs’ ಎನಬೇಡಾ
                        ಕರ್ಮವು ಇದು ನೋಡಾ;
ಹಗರಣದೊಳಗಿನ ಸೋಗುಗಳು
                        ಅವುಗಳ ಕೂಗುಗಳು.
ಜೀವದೇವನೇ ಮೈವೆತ್ತು
                        ನೀನೇ ತಲೆಯೆತ್ತು.

ವೇದಾಂತಿಯ ಮುಖಮುದ್ರೆಯ ನೋಡಿ
                        ಕನಿಕರ ಹುಟ್ಟುವದು.
ಹತ್ತವತಾರದ ಹೇಡಿತನಕ್ಕೆ
                                    ಮನ ಗೊಣಗುಟ್ಟುವದು.
ಗಾಳಿಗೆ ಗಾಳಿಯು ಬಯಲಿಗೆ ಬಯಲು
                                    ತಲೆ ರಣಗುಟ್ಟುವದು.



ಕವನದ ಮೊದಲ ನುಡಿ:
ಗಾಳಿಯು ಸುಳಿ ಸುಳಿ ಸೂಸುವದು
               ಬಿಮ್ಮನೆ ಬೀಸುವದು.
     ಪ್ರಾಣತರಂಗಿಣಿ ತುಳುಕುವಳು
              ದಡಗಳ ದುಡುಕುವಳು.
ಹೂಗಂಪಿನ ಹುಡಿ ಮಿಸುಕುವದು
            ಗಮಗಮ ಮಸುಕುವದು.

ಗಾಳಿ ಹಾಗು ನೀರು ಇವು ಸಕಲ ಜೀವಿಗಳಿಗೆ ಅವಶ್ಯವಾದಂತಹ ನಿಸರ್ಗದ ಮೂಲ ಚೈತನ್ಯಗಳು. ಇವು ಸೃಷ್ಟಿಯಲ್ಲಿಯ ಜೀವಿಗಳನ್ನು ಪೋಷಿಸುತ್ತವೆ. ಗಾಳಿ ಹಾಗು ನೀರು ಇಲ್ಲದೆ ಯಾವ ಜೀವಿಯೂ ಬದುಕಲಾರದು. ಈ ನುಡಿಯ ಮೊದಲ ನಾಲ್ಕು ಸಾಲುಗಳಲ್ಲಿ ಕವಿಯು ಈ ಚೈತನ್ಯಗಳ ಸ್ವಭಾವವನ್ನು ಬಣ್ಣಿಸುತ್ತಾನೆ:

ಗಾಳಿಯು ಒಮ್ಮೊಮ್ಮೆ ಮೆಲ್ಲಗೆ ಸುಳಿಸುಳಿಯಾಗಿ ಸೂಸುತ್ತದೆ, ಮತ್ತೊಮ್ಮೆ ಬಿಮ್ಮನೆ(=ತೀವ್ರವಾಗಿ) ಬೀಸುತ್ತದೆ. ಈ ಎರಡೂ ಕ್ರಿಯೆಗಳು ಜೀವಿಗಳಿಗೆ ಉಲ್ಲಾಸ ನೀಡುವ ಕ್ರಿಯೆಗಳೇ ಆಗಿವೆ. ಗಾಳಿಯಂತೆಯೆ ನಿಸರ್ಗದ ಮತ್ತೊಂದು ಮೂಲ ಚೈತನ್ಯವಾದ ನೀರನ್ನು ಕವಿಯು ಪ್ರಾಣತರಂಗಿಣಿ ಎಂದು  ಬಣ್ಣಿಸುತ್ತಾನೆ. ತರಂಗಿಣಿ ಎಂದರೆ ತರಂಗಗಳು (=ಅಲೆಗಳು) ಇದ್ದಂಥವಳು ಅರ್ಥಾತ್ ನದಿ. ಈ ತರಂಗಗಳು ಅಂದರೆ ತೆರೆಗಳು ಸಕಲ ಪ್ರಾಣಿಗಳಿಗೆ ಜೀವಾಧಾರವಾಗಿವೆ. ಆದುದರಿಂದ ನದಿಯು ಪ್ರಾಣತರಂಗಿಣಿ. ಈ ವಾತ್ಸಲ್ಯಮಯಿ ನದಿಯು ಅರೆಬರೆಯಾಗಿ ಹರಿಯುತ್ತಿಲ್ಲ. ಅವಳು ಸಕಲ ಜೀವಿಗಳಿಗೆ ತನ್ನ ಪೋಷಣೆಯನ್ನು ಧಾರಾಳವಾಗಿ ಹಂಚಲು ತುಳುಕುತ್ತ ಧಾವಿಸುತ್ತಾಳೆ. ಈ ಆತುರದಲ್ಲಿ ನದಿಯು ತನ್ನ ದಡಗಳನ್ನು ಉಕ್ಕಿ ಹರಿಯುತ್ತಾಳೆ. ತಾಯಿಗೆ ಮಾತ್ರ ಸಹಜವಾದ ಈ ಸಂಭ್ರಮವನ್ನು ಸೂಚಿಸಲು ಕವಿಯು ಇವಳಿಗೆ ‘ದಡಗಳ ದುಡುಕುವಳು’ ಎಂದು ಬಣ್ಣಿಸುತ್ತಾನೆ. ಹಸುಗೂಸಿಗೆ ಮೊಲೆಯೂಡಿಸಲು ತಾಯಿ ಕಾತುರಳಾಗಿ ಬರುವಂತೆ, ನದಿಯೂ ಸಹ ‘ದಂಡೆಗಳನ್ನು ದುಡುಕುತ್ತಾಳೆ’.

ನಿಸರ್ಗದ ಈ ಚೈತನ್ಯಗಳಾದ ಗಾಳಿ ಹಾಗು ನೀರನ್ನು ಹೀರಿಕೊಂಡು ಬೆಳೆಯುವ ಸಸ್ಯಗಳು ಸುತ್ತಲೆಲ್ಲ ಸುಗಂಧವನ್ನು ಪಸರಿಸುತ್ತವೆ. ಹೂಗಂಪಿನ ಹುಡಿ (ಎಂದರೆ ಹೂವಿನ ಸುವಾಸನೆಯನ್ನು ಹೊತ್ತುಕೊಂಡಂತಹ ಪರಾಗರೇಣುಗಳು) ಎಲ್ಲೆಲ್ಲೂ ಹರಡಿಕೊಂಡು, ವಾತಾವರಣವನ್ನು ಸುಗಂಧಮಯವನ್ನಾಗಿ ಮಾಡುತ್ತವೆ.

ಗಾಳಿಯನ್ನು ವಾಯುದೇವ ಎಂದು ಕರೆಯುವ ವಾಡಿಕೆಯಿದೆ. ಆದುದರಿಂದ ಗಾಳಿ ಪುರುಷರೂಪಿ. ನದಿಯು ಜಲದೇವಿ, ಅಂದರೆ ಸ್ತ್ರೀರೂಪಿಣಿ. ಇವರು ಜಗತ್ತನ್ನು ಪೋಷಿಸುವದರಿಂದ, ಜಗದ ತಂದೆ-ತಾಯಿ ಇದ್ದಂತೆ. ಇವರ ಪೋಷಣೆಯನ್ನು ಪಡೆದ ಸಸ್ಯಸಂಕುಲವು ಇವರ ಸಂತತಿಯಿದ್ದಂತೆ. ಆದುದರಿಂದ ನಿಸರ್ಗದ ಚೈತನ್ಯಗಳಿಗೆ ಹಾಗು ನಿಸರ್ಗದಲ್ಲಿಯ ಸಸ್ಯಸಂಕುಲಕ್ಕೆ ಸಾಮರಸ್ಯವಿದೆ.
ಈ ಸಾಮರಸ್ಯವು ಪ್ರಾಣಿಸಂಕುಲದಲ್ಲಿ ಇಲ್ಲ ಎನ್ನುವದನ್ನು ಬೇಂದ್ರೆಯವರು ಮುಂದಿನ ನುಡಿಗಳಲ್ಲಿ ಹೇಳುತ್ತಾರೆ:

ಬಾಳಿನ ಕೊಳಲುಲಿ ಕೇಳುವ ವರೆಗೂ
                    ಕೇಳಲು ಕಿವಿಯಿಲ್ಲ.
ಬೆಳುದಿಂಗಳು ಬಿಸಿಲಾಡಿದರೇನು—
                      ನಾಲಿಗೆ ಸವಿಯಿಲ್ಲ.
ಜಗವು ಕಲ್ಲಿಗೂ ಕಡೆಗಾಗಿರುವದು
                       ಜೀವವು ಕವಿಯಲ್ಲ.

ಬಾಳಿನ ಕೊಳಲು ಎಂದರೆ ಬದುಕಿನಲ್ಲಿಯ ಸಾಮರಸ್ಯ. (ಕೃಷ್ಣ ಪರಮಾತ್ಮನ ಕೊಳಲಿಗೆ ಇಲ್ಲಿ ಸಾಮ್ಯವಿದೆ.) ಈ ಕೊಳಲ ಧ್ವನಿಯನ್ನು ಕೇಳುವ ಒಲವು ಇಲ್ಲದಿದ್ದಾಗ, ಕಿವಿಯು ಇದ್ದರೂ ಇಲ್ಲದಂತೆ. ಸಕಲ ಜೀವಿಗಳಿಗೆ ಸುಖವನ್ನು ನೀಡುವ ಬೆಳದಿಂಗಳು ನಿಸರ್ಗದ ಆಪ್ಯಾಯಮಾನತೆಗೆ ಒಂದು ಉದಾಹರಣೆ. ನಾಲಿಗೆಯು ಸಂವೇದನೆಯನ್ನು ಕಳೆದುಕೊಂಡಾಗ ಎಂತಹ ತೀವ್ರ ರುಚಿಯನ್ನೂ ಅದು ಅರಿಯಲಾರದು. ಅದರಂತೆಯೇ ಸಂವೇದನಾಶಕ್ತಿ ಇಲ್ಲದ ಜೀವಿಗೆ ನಿಸರ್ಗದ ಈ ಸುಖದಾಯಿ ಬೆಳದಿಂಗಳು ನಿಷ್ಪ್ರಯೋಜಕ. ಬೆಳದಿಂಗಳೇ ಆಗಲಿ, ಬಿಸಿಲೇ ಆಗಲಿ ಅದರಿಂದ ಏನೂ ವ್ಯತ್ಯಾಸವಾಗದು. ಕವಿ ಎಂದರೆ ಸಂವೇದನಾಶೀಲ ಜೀವಿ. ‘ಜೀವಿಯು ಕವಿಯಲ್ಲ’ ಅಂದರೆ ಅವನು ಸಂವೇದನಾಶೂನ್ಯನಾಗಿದ್ದಾನೆ ಎಂದರ್ಥ. ಕೊಳಲ ನಾದವನ್ನು ಕೇಳಲಾರದ, ಬೆಳದಿಂಗಳಲ್ಲಿ ಸುಖಿಸಲಾರದ ಇಂತಹ ಜೀವಿಯ ಪಾಲಿಗೆ ಈ ಜಗತ್ತು ನಿರ್ಜೀವವಾದ ಕಲ್ಲಿನಂತೆಯೇ ಸರಿ.

ಈ ಸಂವೇದನಾಶೂನ್ಯ ಪ್ರಾಣಿಸಂಕುಲದಲ್ಲಿ ಶ್ರೇಣೀಕೃತ ಶೋಷಣೆ ಇದೆ. ಗಿಡುಗವು ಪಾರಿವಾಳಗಳನ್ನು ಬೇಟೆಯಾಡುತ್ತಿದೆ. ಗೋವು ಸಿಂಹಕ್ಕೆ ಸಿಹಿತುತ್ತಾಗಿದೆ. ಹದ್ದಿನ ಭಾಗಾದಿ ಎಂದರೆ ಹಾವು. ಅದು ಹದ್ದಿನ ಊಟವಾಗಿದೆ:

ಪಾರಿವಾಳಗಳ ಮೈಜೋಡು
                                          ಗಿಡುಗದ ಮುಖಕೀಡು.
ಆವಿಗೆ ದಿನದಿನವೂ ಕುತ್ತು
                                         ಸಿಂಹಕೆ ಸವಿತುತ್ತು.
ಮಲಸಂಬಂಧದ ಭಾಗಾದಿ
                                    ಹದ್ದಿಗೆ ಹಳೆಹಾದಿ.

ಬೇಂದ್ರೆಯವರು ಇಲ್ಲಿ ಕೊಟ್ಟ ಮೂರೂ ಉದಾಹರಣೆಗಳು ಮೂರು ಪುರಾಣಕತೆಗಳನ್ನು ಅವಲಂಬಿಸಿವೆ.  ಮೊದಲನೆಯ ಕತೆ ಹೀಗಿದೆ. ಪುರಾಣಕಾಲದಲ್ಲಿ ಭಾರತದೇಶವನ್ನಾಳಿದ ಚಕ್ರವರ್ತಿಗಳಲ್ಲಿ ಶಿಬಿಯು ತನ್ನ ನ್ಯಾಯತತ್ಪರತೆಗೆ ಹೆಸರಾದವನು. ಒಮ್ಮೆ ಆತನ ಆಸ್ಥಾನಕ್ಕೆ ಪಾರಿವಾಳಗಳ ಜೋಡೊಂದು ಹಾರಿ ಬರುತ್ತದೆ ಹಾಗು ಆ ಪಾರಿವಾಳಗಳು ಶಿಬಿಯಲ್ಲಿ ರಕ್ಷಣೆಯನ್ನು ಕೋರುತ್ತವೆ. ಅದೇ ಸಮಯದಲ್ಲಿ ಅವುಗಳನ್ನು ಅಟ್ಟಿಸಿಕೊಂಡು ಒಂದು ಗಿಡುಗವು ಅಲ್ಲಿಗೆ ಬರುತ್ತದೆ. ಪಾರಿವಾಳಗಳು ತನ್ನ ಆಹಾರವಾಗಿದ್ದರಿಂದ ಅವುಗಳನ್ನು ತನಗೆ ಒಪ್ಪಿಸಬೇಕೆಂದು ಗಿಡುಗವು ನ್ಯಾಯ ಕೇಳುತ್ತದೆ. ಶಿಬಿಗೆ ಇದೊಂದು ಧರ್ಮಸಂಕಟ. ಆಗ ಆತನು ತನ್ನ ಮಾಂಸವನ್ನೇ ಗಿಡುಗಕ್ಕೆ ನೀಡಿ, ಪಾರಿವಾಳಗಳನ್ನು ರಕ್ಷಿಸುವ ನಿರ್ಧಾರ ಕೈಗೊಳ್ಳುತ್ತಾನೆ. ಪಕ್ಷಿವೇಷದಲ್ಲಿದ್ದ ದೇವತೆಗಳು ನಿಜರೂಪ ತಾಳಿ ಶಿಬಿಯನ್ನು ಶ್ಲಾಘಿಸುತ್ತಾರೆ.

ಎರಡನೆಯ ಕತೆಯು ರಘುವಂಶದ ಪ್ರಸಿದ್ಧ ಚಕ್ರವರ್ತಿಯಾದ ದಿಲೀಪನಿಗೆ ಸಂಬಂಧಿಸಿದ ಕತೆ. ದಿಲೀಪನಿಗೆ ಮಕ್ಕಳಿರಲಿಲ್ಲ. ಕಾಮಧೇನುವಿನ ಮಗಳಾದ ಸುರಭಿಯ ಸೇವೆಯನ್ನು ಮಾಡಿದರೆ ಮಕ್ಕಳಾಗುವರು ಎಂದು ಋಷಿಗಳು ಆತನಿಗೆ ಹೇಳುತ್ತಾರೆ. ದಿಲೀಪನು ಅಡವಿಯಲ್ಲಿ ಒಂದು ಆಶ್ರಮವನ್ನು ಕಟ್ಟಿಕೊಂಡು ಸುರಭಿಯ ಸೇವಾಕೈಂಕರ್ಯವನ್ನು ನಿಷ್ಠೆಯಿಂದ ಕೈಕೊಳ್ಳುತ್ತಾನೆ.

ಸುರಭಿಯನ್ನು ಒಮ್ಮೆ ಹುಲ್ಲು ಮೇಯಿಸಲೆಂದು ಕರೆದುಕೊಂಡು ಹೋದಾಗ, ಸಿಂಹವೊಂದು ಸುರಭಿಯನ್ನು ಅಡ್ಡಗಟ್ಟಿ ತಿನ್ನಲು ಸಿದ್ಧವಾಗುತ್ತದೆ. ದಿಲೀಪನು ಸಿಂಹಕ್ಕೆ ತನ್ನನ್ನೇ ಬಲಿ ಕೊಟ್ಟು ಸುರಭಿಯನ್ನು ಉಳಿಸಲು ಸಿದ್ಧನಾಗುತ್ತಾನೆ. ಆ ಸಿಂಹವು ಕೇವಲ ಮಾಯಾಸಿಂಹವಾಗಿದ್ದು, ದೇವತೆಗಳು ದಿಲೀಪನ ನಿಷ್ಠೆಯನ್ನು ಮೆಚ್ಚಿಕೊಳ್ಳುತ್ತಾರೆ.

ಮೂರನೆಯ ಕತೆಯು ಗರುಡ ಹಾಗು ಸರ್ಪಗಳ ವೈರಕ್ಕೆ ಸಂಬಂಧಿಸಿದ ಕತೆಯಾಗಿದೆ. ಗರುಡ ಹಾಗು ನಾಗರು ಒಂದೇ ತಂದೆಯ ಇಬ್ಬರು ಹೆಂಡಂದಿರಲ್ಲಿ ಹುಟ್ಟಿದವರು. ಮಲತಾಯಿ ಮಕ್ಕಳಾದ ಇವರನ್ನು  ಕವಿಯು ‘ಮಲಸಂಬಂಧದ ಭಾಗಾದಿ’ ಎಂದು ಬಣ್ಣಿಸುತ್ತಾರೆ. (ಭಾಗಾದಿ ಎಂದರೆ ಆಸ್ತಿಯಲ್ಲಿ ಭಾಗ ಪಡೆಯುವ ಹಕ್ಕನ್ನು ಹೊಂದಿದವನು.) ಹೀಗಾಗಿ ಇವರಲ್ಲಿ ಜಾತವೈರವಿರುತ್ತದೆ. ಗರುಡನು ನಾಗರಿಗಿಂತ ಬಲಿಷ್ಠನಾಗಿದ್ದರಿಂದ, ನಾಗರ ಪ್ರದೇಶದಲ್ಲಿ ಹೊಕ್ಕು, ಕಂಡಕಂಡ ನಾಗರನ್ನೆಲ್ಲ ಕುಕ್ಕಿ ತಿನ್ನಲು ಪ್ರಾರಂಭಿಸುತ್ತಾನೆ. ಆಗ ನಾಗರೆಲ್ಲರೂ ಗರುಡನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಒಪ್ಪಂದದ ಮೇರೆಗೆ ಪ್ರತಿದಿನವೂ ಸರದಿಯ ಪ್ರಕಾರ ಒಬ್ಬ ನಾಗನು ಗರುಡನಿಗೆ ಬಲಿಯಾಗಬೇಕು.

ಜೀಮೂತವಾಹನ ಎನ್ನುವ ವಿದ್ಯಾಧರನು ಅಕಸ್ಮಾತ್ತಾಗಿ ಬಲಿಗೆ ಸಿದ್ಧನಾದ ಓರ್ವ ನಾಗನನ್ನು ನೋಡುತ್ತಾನೆ. ರೋದಿಸುತ್ತಿರುವ ಅವನ ತಾಯಿಯನ್ನು ನೋಡಿ, ಮರುಕಗೊಂಡ ಜೀಮೂತವಾಹನನು ನಾಗನನ್ನು ಕಳುಹಿಸಿಬಿಟ್ಟು ತಾನೇ ಬಲಿವೇಷದಲ್ಲಿ ಅಲ್ಲಿ ನಿಂತುಕೊಳ್ಳುತ್ತಾನೆ. ಜೀಮೂತವಾಹನನನ್ನೇ ನಾಗನೆಂದು ಭಾವಿಸಿದ ಗರುಡನು ಅವನನ್ನು ಕುಕ್ಕಿ ತಿನ್ನುವಾಗ, ಈತನು ನಾಗನಲ್ಲ ಎಂದು ಅರಿಯುತ್ತಾನೆ. ಜೀಮೂತವಾಹನನನ್ನು ಬಿಡುಗಡೆ ಮಾಡಿದ ಗರುಡನು ನಾಗರ ಹತ್ಯೆಯನ್ನು ನಿಲ್ಲಿಸಿ ಬಿಡುತ್ತಾನೆ.

ಈ ಮೂರೂ ಪುರಾಣಕತೆಗಳಲ್ಲಿ ಒಂದು ಸಂದೇಶವಿದೆ. ಬಲಿಷ್ಠ ಜೀವಿಯು ದುರ್ಬಲ ಜೀವಿಯನ್ನು ಭಕ್ಷಿಸುವದು ಪ್ರಾಣಿಸಂಕುಲದ ವ್ಯವಸ್ಥೆಯಾಗಿದೆ. ಮಾನವೀಯ ಸಂವೇದನೆಯುಳ್ಳ ಶಿಬಿ , ದಿಲೀಪ ಹಾಗು ಜೀಮೂತವಾಹನರು  ಸ್ವಂತ ಬಲಿದಾನದ ಮೂಲಕ ಈ ಶೋಷಣೆಯನ್ನು ತಪ್ಪಿಸಲು ಪ್ರಯತ್ನಿಸಿದರು. ಅದೇ ಪ್ರಕಾರ ಮಾನವ ಜಗತ್ತಿನಲ್ಲಿಯೂ ಸಹ ಶೋಷಣೆ ನಡದೇ ಇದೆ. ಬಲಿಷ್ಠರು ದುರ್ಬಲರನ್ನು ಶೋಷಿಸುವ ಸಾಮಾಜಿಕ ಶೋಷಣೆ ನಿರಂತರವಾಗಿದೆ.  ಇದನ್ನು ತಡೆಗಟ್ಟುವ ಶಿಬಿ, ದಿಲೀಪ ಹಾಗು ಜೀಮೂತವಾಹನರು ಮಾತ್ರ ಈಗ ಇಲ್ಲಿಲ್ಲ! ಈ ಆದರ್ಶವು ನಮ್ಮ ನಾಡಿನಲ್ಲಿ ಈಗ ಮಾಯವಾಗಿದೆ.
ಈ ಆಲೋಚನೆಯು ಕವನದ ಕೊನೆಯ ನುಡಿಯಲ್ಲಿ ವ್ಯಕ್ತವಾಗಿದೆ:

ಶಿಬಿ ದಿಲೀಪ ಜೀಮೂತವಾಹನರು
                                    ಮಣ್ಣನು ಮುಕ್ಕಿದರು.
ಸ್ವರ್ಗದೊಳಿದ್ದೂ ಸಂಶಯ ಬಂದಿತು
                             ಕಣ್ಗಳು ತಿಕ್ಕಿದರು.
ತಮ್ಮ ನಾಡಿನಲಿ ನಡೆದಿಹ ಲೀಲೆಯ
                               ನೋಡುತ ಬಿಕ್ಕಿದರು.

ಶಿಬಿ, ದಿಲೀಪ ಹಾಗು ಜೀಮೂತವಾಹನರು ಭಾರತೀಯ ಆದರ್ಶದ ಶಿಖರಗಳು. ಈ ಆದರ್ಶಗಳು ನಮ್ಮ ನಾಡಿನಲ್ಲಿ ಈಗ ಮಾಯವಾಗಿವೆ. ‘ಮಣ್ಣನು ಮುಕ್ಕಿದರು’ ಎಂದು ಹೇಳುವಾಗ ಈ ಆದರ್ಶಪುರುಷರು ಮರಣಹೊಂದಿದರು ಎಂದು ಹೇಳುತ್ತಲೇ, ಅವರ ಆದರ್ಶಗಳೂ ಸಹ ಮಣ್ಣು ಮುಕ್ಕಿದವು ಎಂದು ಕವಿಯು ಶ್ಲೇಷೆಯನ್ನು ಸೂಚಿಸುತ್ತಾನೆ. ಸ್ವರ್ಗಸ್ಥರಾದ ಅವರು ತಮ್ಮ ನಾಡಿನ ದುರವಸ್ಥೆಯನ್ನು ನೋಡಿದಾಗ, ‘ಇದು ನಿಜವೇ?!’ ಎಂದು ಕಣ್ಣುಗಳನ್ನು ವಿಸ್ಮಯದಿಂದ ತಿಕ್ಕಿಕೊಳ್ಳುತ್ತಾರೆ! ಮತ್ತು ತಮ್ಮ ನಾಡಿನ ನೈತಿಕ, ಸಾಂಸ್ಕೃತಿಕ ದುರವಸ್ಥೆಯನ್ನು ಕಂಡು ವ್ಯಥೆಯಿಂದ ಬಿಕ್ಕುತ್ತಿದ್ದಾರೆ ಎಂದು ಕವಿಯು ಹೇಳುತ್ತಾನೆ. ಇಂತಹ ವ್ಯವಸ್ಥೆ ಬದಲಾದೀತೆನ್ನುವ ಆಶಾಭಾವವನ್ನು ಕವನದ ಕೊನೆಯಲ್ಲಿ ಕವಿಯು ತೋರಿಸುವದಿಲ್ಲ. ಅನಾದಿ ಕಾಲದಿಂದ ನಡೆದು ಬಂದ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎನ್ನುವ ಅರಿವು ಕವಿಗಿದೆ.

ಶಿಬಿ ಮೊದಲಾದ ನಮ್ಮ ಪೂರ್ವಜರು ಪುಣ್ಯವಂತರು . ಅವರು ಸ್ವರ್ಗವಾಸಿಗಳು. ಆದರೆ ಅಲ್ಲಿಯೂ ಅವರು ಕಣ್ಣೀರಿಡುವಂತಹ ಯಾವ ಆಟವನ್ನು ಅವರು ಭಾರತದಲ್ಲಿ ನೋಡುತ್ತಲಿದ್ದಾರೆ ಎನ್ನುವದನ್ನು ಕವಿ ಮುಂದಿನ ನುಡಿಯಲ್ಲಿ ಹೇಳುತ್ತಾರೆ:

ದುಡಿವರ ಉಸಿರಿಗೆ ದಣಿವಿಲ್ಲ
                        ಕೊನೆಗೂ ತಣಿವಿಲ್ಲ.
ಕೂಸುಗಳಾಟಕೆ ಕಳೆಯಿಲ್ಲ
                         ಭೂಮಿಗೆ ಬೆಳೆಯಿಲ್ಲ.
ಹೆಣ್ಣಿನ ಕಂಬನಿ ತೊಡೆದಿಲ್ಲ
                                                                                ಗಂಡಿಗೆ ಬಿಡುವಿಲ್ಲ
 ಶೋಷಣಾಜಾಲದಲ್ಲಿ ಸಿಲುಕಿದ ಶ್ರಮಿಕರು ದಣಿವೆನ್ನದೇ ದುಡಿಯುತ್ತಲೆ ಇದ್ದಾರೆ. ಆದರೆ ಕೊನೆಗೂ ಇವರ ದುಡಿತಕ್ಕೆ ‘ತಣಿವು’ ಅಂದರೆ ತೃಪ್ತಿ ಸಿಗುತ್ತಿಲ್ಲ. ದುಡಿದವನಿಗೆ ತೃಪ್ತಿ ಸಿಗುವದು ಯಾವಾಗ? ತನ್ನ ಸಂಸಾರದ ಪ್ರಾಥಮಿಕ ಅವಶ್ಯಕತೆಗಳನ್ನಾದರೂ ಪೂರೈಸಲು ಅವನಿಗೆ ಶಕ್ಯವಾದಾಗ ತಾನೆ? ತನ್ನ ಹೆಂಡತಿ, ಮಕ್ಕಳಿಗೆ ಅರೆಹೊಟ್ಟೆ ಊಟ ಹಾಕಲೂ ಸಹ ಅವನಿಗೆ ಸಾಧ್ಯವಾಗದಿದ್ದರೆ? ಆ ಸಮಯದಲ್ಲಿ ಆಟವಾಡುವ ಮಕ್ಕಳೂ ಸಹ ಕಳಾಹೀನ ಮುಖ ಹೊತ್ತುಕೊಂಡು ನಿಲ್ಲುವರು. ಅದನ್ನು ನೋಡುತ್ತಿರುವ ತಾಯಿ ಕಣ್ಣೀರು ಹಾಕದಿರುವಳೆ? ಆದರೇನು, ಅಸರಂತ ದುಡಿಮೆಯ ಚಕ್ರದಲ್ಲಿ ಸಿಲುಕಿದ ಗಂಡಿಗೆ ತನ್ನ ಹೆಂಡತಿಯ ಕಣ್ಣೀರು ಒರೆಸಲೂ ಸಹ ಸಮಯವಿಲ್ಲ! ಆ ಕಾಲದ ನಮ್ಮ ನಾಡಿನ ಬಹುತೇಕ ಸಂಸಾರಗಳ ಬವಣೆಯನ್ನು ಕವಿ ಮೇಲಿನಂತೆ ಚಿತ್ರಿಸಿದ್ದಾರೆ.

ತನ್ನ ಸಂಸಾರದ ಸಂಕಷ್ಟವನ್ನು ಪರಿಹರಿಸಲಾಗದೆ, ಅಸಹಾಯಕತೆಯಿಂದ ಬಳಲುವವನ ಮನೋಸ್ಥಿತಿ ಹೇಗಿರುತ್ತದೆ? ಅದನ್ನು ಕವಿಯು ಹೀಗೆ ಬಣ್ಣಿಸುತ್ತಾನೆ:

ಹಸಿವಿನ ಕೂಗಿನ ಕಹಳೆಯ ಕೇಳಿ
                         ಜೀವವು ನಡುಗುವದು.
   ಸಾವಿನ ಎದೆಗಳ ಭೇರಿಗೆ ಎತ್ತೋ
                           ಓಡಲು ತೊಡಗುವದು.
     ಮನುವಿನ ಮಕ್ಕಳ ಬೇಟೆಯ ಕಂಡು
                                    ತನ್ನೊಳಗಡಗುವದು.

ಕಹಳೆ ಮತ್ತು ಭೇರಿ ಇವು ರಣರಂಗದಲ್ಲಿ ಬಳಸುವ ವಾದ್ಯಗಳು. ಕವಿಯು ನೋಡುತ್ತಿರುವದು ಸಂಸಾರದ ರಣರಂಗ. ಇಲ್ಲಿ ಈತನು ಎದುರಿಸುತ್ತಿರುವದು ಹಸಿವು ಹಾಗು ಸಾವು ಎನ್ನುವ ವೈರಿಗಳನ್ನು. ‘ಹಸಿವು, ಹಸಿವು’ ಎನ್ನುವ ಕೂಗೇ ಇವನಿಗೆ ಕಹಳೆಯ ಧ್ವನಿಯಂತೆ ಕೇಳುತ್ತದೆ. ಹಸಿವು ಹಾಗು ರೋಗ ರುಜಿನ ಇವು ಶೋಷಿತರ ಸಾವಿನ ಸರಣಿಯನ್ನೇ ಹೆಣೆದಿವೆ. ಇವರ ಎದೆಗಳ ತೊಗಲನ್ನೇ ಭೇರಿ ಮಾಡಿ ಬಾರಿಸಲಾಗುತ್ತಿದೆ. ಆದರೆ ಈ ರಣರಂಗದಲ್ಲಿ 
ಶೋಷಿತರಿಗೆ ಹೋರಾಡುವ ಅವಕಾಶವೇ ಇಲ್ಲ. ಆದುದರಿಂದ ಇಲ್ಲಿ ನಡೆದದ್ದು ಬರಿ ಯುದ್ಧವಲ್ಲ, ಮಾನವ-ಬೇಟೆ.

ಈ ಬೇಟೆಯಲ್ಲಿ ಶೋಷಿತನು ಪ್ರತಿಕ್ರಿಯಿಸುವ ಬಗೆ ಹೇಗೆ? ಪ್ರಾಣಿಗಳ ಬೇಟೆಯನ್ನು ನೋಡಿರುವಿರಾ? ಬೇಟೆಗಾರರ ಸದ್ದಿಗೆ ಬೇಟೆಯ ಮೊದಲ ಪ್ರತಿಕ್ರಿಯೆ ಎಂದರೆ ಭಯ. ಬಳಿಕ ಈ ಪ್ರಾಣಿಯು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ದಾರಿ ಕಂಡತ್ತ ಓಡತೊಡುಗುವದು. ಬೇಟೆಗಾರನ ಕೈಗೆ ಸಿಕ್ಕಿಬೀಳುವ ಸಂದರ್ಭ ಬಂದಾಗ ಬೇಟೆಯು ತನ್ನಲ್ಲೇ ಮುರುಟಿಕೊಳ್ಳುವದು. ಈ ಪ್ರತಿಕ್ರಿಯೆಗಳನ್ನು ಕವಿಯು ಶೋಷಿತರಿಗೂ ಅನ್ವಯಿಸಿ, ‘ಜೀವವು ನಡುಗುವದು…ಓಡಲು ತೊಡಗುವದು………ತನ್ನೊಳು ಅಡಗುವದು.’ ಎಂದು ಹೇಳಿದ್ದಾನೆ. ಆದರೆ ಇಲ್ಲಿ ನಡೆಯುತ್ತಿರುವದು ಪ್ರಾಣಿ-ಬೇಟೆಯಲ್ಲ; ಮನುವಿನ ಮಕ್ಕಳ ಬೇಟೆ, ಮಾನವ-ಬೇಟೆ.

ಇದಕ್ಕೆ ಪರಿಹಾರವೇನು? ನಮ್ಮ ಭಾರತೀಯ ತಾತ್ವಿಕತೆಯಲ್ಲಿ ಇದಕ್ಕೆ ಪರಿಹಾರವಿಲ್ಲವೆಂದು ಕವಿಯು ಸಂಕಟದಿಂದ ಹೇಳುತ್ತಾನೆ.

ಧರ್ಮಕೆ ‘ಧರ್ಮs’ ಎನಬೇಡಾ
                        ಕರ್ಮವು ಇದು ನೋಡಾ;
ಹಗರಣದೊಳಗಿನ ಸೋಗುಗಳು
                        ಅವುಗಳ ಕೂಗುಗಳು.
ಜೀವದೇವನೇ ಮೈವೆತ್ತು
                        ನೀನೇ ತಲೆಯೆತ್ತು.

ಯಾವುದಕ್ಕೆ ನಾವು ‘ಧರ್ಮಮಾರ್ಗ’ ಎಂದು ಉನ್ನತಭಾವದಲ್ಲಿ ನೋಡುತ್ತ ಬಂದಿದ್ದೇವೆಯೋ ಅದು ನಿಜವಾಗಿಯೂ ಧರ್ಮವೇ ಅಲ್ಲ.  ಈ ತಪ್ಪು ಕರ್ಮದ ಫಲವನ್ನು ನಾವೀಗ ಉಣ್ಣಬೇಕಾಗಿದೆ! ಧರ್ಮ, ನೀತಿ ಇಂತಹ ದೊಡ್ಡ ದೊಡ್ಡ ಮಾತುಗಳೆಲ್ಲ ಹಗರಣಗಳ(=ಪ್ರಕರಣಗಳ=ನಾಟಕದ) ಸೋಗುಗಳ(=ಪಾತ್ರಗಳ) ಬುಡುಬುಡಿಕೆ ಅಷ್ಟೇ! ಈ ನಾಟಕವನ್ನು ನೋಡುತ್ತ ಕೂಡಬೇಡಿರಿ ಎಂದು ಕವಿ ಕರೆ ನೀಡುತ್ತಾರೆ. ಪ್ರತಿವ್ಯಕ್ತಿಯು ತನ್ನ ಅಂತರಂಗದ ವಿವೇಚನೆಯನ್ನು ಅನುಸರಿಸಬೇಕೇ ಹೊರತು ಕುರುಡು ಧರ್ಮಶಾಸ್ತ್ರಗಳನ್ನಲ್ಲ ಎನ್ನುವದು ಕವಿಯ ಕರೆಯಾಗಿದೆ. ಈ ಕರೆಯು ಶೋಷಿತರಿಗಿಂತ ಹೆಚ್ಚಾಗಿ ಶೋಷಕರಿಗೆ ನೀಡಿದ ಕರೆಯಾಗಿದೆ. ನಮ್ಮ ನಾಡಿನವರೇ ಆದ ಶೋಷಕವರ್ಗವೂ ಸಹ ಶ್ರಮಿಕರ ಶೋಷಣೆಯಲ್ಲಿ ಹಿಂದೆ ಬಿದ್ದಿರಲಿಲ್ಲ. ಈ ಶೋಷಕರಿಗೆ ಕವಿಯು ಕೊಡುತ್ತಿರುವ ಕರೆ ಇದು: “ಧರ್ಮದ ಒಣ ಸೋಗುಗಳನ್ನು ಬಿಟ್ಟು ಬಿಡಿ, ನೀವೇ ಒಳಿತನ್ನು ಅರಿತುಕೊಂಡು ಜೀವದೇವರಾಗಿರಿ!”

ಇಲ್ಲಿಯವರೆಗೆ ಭಾರತದಲ್ಲಿ ನಡೆದ ಒಣ ವೇದಾಂತ, ಒಣ ಶಾಸ್ತ್ರಾರ್ಥಗಳು ಜೀವೋಪಕಾರಿಯಾಗಿಲ್ಲ ಎಂದು ಕವಿಯು ಬೇಸರಿಸುತ್ತಾನೆ. ಇಂತಹ ತತ್ವಜ್ಞಾನಿಗಳ ಬಗೆಗೆ ಅವನಿಗೆ ಕನಿಕರವೇ ಹುಟ್ಟುತ್ತದೆ:

ವೇದಾಂತಿಯ ಮುಖಮುದ್ರೆಯ ನೋಡಿ
                        ಕನಿಕರ ಹುಟ್ಟುವದು.
ಹತ್ತವತಾರದ ಹೇಡಿತನಕ್ಕೆ
                                    ಮನ ಗೊಣಗುಟ್ಟುವದು.
ಗಾಳಿಗೆ ಗಾಳಿಯು ಬಯಲಿಗೆ ಬಯಲು
                                    ತಲೆ ರಣಗುಟ್ಟುವದು.

‘ಧರ್ಮವನ್ನು ಸ್ಥಾಪಿಸಲು ಪುನ: ಪುನ: ಹುಟ್ಟುತ್ತೇನೆ’ ಎನ್ನುವ ಭರವಸೆ ನೀಡಿದ ದೇವರ ಹತ್ತು ಅವತಾರಗಳು ಧರ್ಮವನ್ನು ಸ್ಥಾಪಿಸಿದವೆ? ಶೋಷಣೆಯಿಂದ ಮಾನವನನ್ನು ಪಾರು ಮಾಡಿದವೆ? ಇದನ್ನು ಸಾಧ್ಯ ಮಾಡಲಾರದ ಈ ದಶಾವತಾರಗಳು ಹೇಡಿ ಅವತಾರಗಳು ಎಂದು ಕವಿಯು ತನ್ನಲ್ಲಿ ತಾನೇ ಗೊಣಗಿಕೊಳ್ಳುತ್ತಾನೆ. ಯಾಕೆಂದರೆ, ಈ ಮಾತನ್ನು ಉದ್ಘೋಷಿಸಿ ಕ್ರಾಂತಿಯನ್ನು ಮಾಡೇನು ಎನ್ನುವ ವಿಶ್ವಾಸ ಆತನಲ್ಲಿ ಇಲ್ಲ. ಗಾಳಿಗೆ ಗಾಳಿ ಡಿಕ್ಕಿ ಹೊಡೆದರೆ ಅಥವಾ ಬಯಲಿಗೆ ಬಯಲು ಡಿಕ್ಕಿ ಹೊಡೆದರೆ, ವಾಸ್ತವ ಬದುಕು ಬದಲಾಗುವದಿಲ್ಲ. ನಮ್ಮ ಸಮಾಜದಲ್ಲಿ ಕ್ರಾಂತಿ ಹುಟ್ಟುವದಿಲ್ಲ. ಇದು ಕವಿಯ ಅಸಹಾಯಕ ನಿರ್ಣಯ. ಈ ಮಾತಿನ ಮನವರಿಕೆಯಿಂದಾಗಿ ಆತನ ತಲೆ ರಣಗುಟ್ಟುತ್ತಿದೆ.


ಈ ಕವನದ ಕೆಲವು ವೈಶಿಷ್ಟ್ಯಗಳು:
(೧) ಸಂವೇದನಾಶೀಲನಾದ ಕವಿಯ ನಿಟ್ಟುಸಿರಿನ ಕವನವಿದು. ಆದುದರಿಂದ ಈ ಕವನದಲ್ಲಿ ಅಬ್ಬರವಿಲ್ಲ, ಆಕ್ರೋಶವಿಲ್ಲ. ಇಂತಹ ಕವನಕ್ಕೆ ಅವಶ್ಯವಾದ ಪುಟ್ಟ ಪದಗಳ, ಪುಟ್ಟ ಸಾಲುಗಳ ಛಂದಸ್ಸನ್ನು ಕವಿ ಬಳಸಿದ್ದಾನೆ. ಕವನದಲ್ಲಿ ಬಳಕೆಯಾದ ಪದಗಳೂ ಸಹ ಮೃದು ಪದಗಳೇ ಆಗಿವೆ. ಪದಗಳು ಹಾಗು ಛಂದಸ್ಸು ಇವು ಕವಿತೆಯ ದೇಹವಿದ್ದಂತೆ. ಕಾವ್ಯವಸ್ತು ಅಂದರೆ ಕವನದ ಆತ್ಮವಿದ್ದಂತೆ. ಇವೆರಡೂ ಈ ಕವನದಲ್ಲಿ ಒಂದಕ್ಕೊಂದು ಸಂಪೂರ್ಣ ಅನುರೂಪವಾಗಿವೆ.

(೨) ಪದ-ಸಂರಚನೆಯು ಬೇಂದ್ರೆಯವರಲ್ಲಿ ಕಂಡು ಬರುವ ಒಂದು ವಿಶಿಷ್ಟವಾದ ಅದ್ಭುತ ಪ್ರತಿಭೆ. ‘ಪ್ರಾಣತರಂಗಿಣಿ’ ಎನ್ನುವ ಪದ-ಸಂರಚನೆಯನ್ನೇ ನೋಡಿರಿ. ತರಂಗಗಳು ಇರುವದರಿಂದ ನದಿಯನ್ನು ತರಂಗಿಣಿ ಎಂದು ಸ್ತ್ರೀರೂಪದಲ್ಲಿ ಕರೆಯಬಹುದು. ಪ್ರಾಣಪೋಷಣೆ ಮಾಡುವ ಇವಳ ಕಾರ್ಯವನ್ನು ಸೂಚಿಸಲು ಬೇಂದ್ರೆಯವರು ನದಿಯನ್ನು ‘ಪ್ರಾಣತರಂಗಿಣಿ’ ಎಂದು ಸಂಕೇತಿಸಿದ್ದಾರೆ.

(೩) ಪದ-ಸಂರಚನೆಯಷ್ಟೇ ಅಲ್ಲ, ಪದಗಳ ಅರ್ಥವನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಬೇಂದ್ರೆಯವರಿಗಿದೆ. ‘ದುಡುಕು’ ಪದಕ್ಕೆ `ಅವಿವೇಕದಿಂದ ಮುನ್ನುಗ್ಗು’ ಎನ್ನುವ ಅರ್ಥವಿದೆ. ಈ ಕವನದಲ್ಲಿ ನದೀದೇವಿಯು ‘ದಡಗಳ ದುಡುಕುವಳು’ ಎನ್ನುವ ಸಾಲನ್ನು ಪರೀಕ್ಷಿಸಿರಿ. ನದೀದೇವಿಯು ಇಲ್ಲಿ ವಿವೇಚನೆಯಿಲ್ಲದ ಕೆಲಸ ಮಾಡುತ್ತಿಲ್ಲ. ಆದರೆ ವಾತ್ಸಲ್ಯಮಯಿ ತಾಯಿಯು ತನ್ನ ಕೂಸುಗಳಿಗೆ ಮೊಲೆಯೂಡಿಸಲು ಧಾವಿಸುವಂತೆ, ಜೀವಪೋಷಣೆಗಾಗಿ ಅವಳು ತನ್ನ ದಂಡೆಗಳನ್ನು ಮೀರಿ ಹರಿಯುತ್ತಿದ್ದಾಳೆ. ಈ ಮಮತಾಸ್ವರೂಪದ ಅರ್ಥವನ್ನು ಎರಡೇ ಪದಗಳಲ್ಲಿ ಸಂಗ್ರಹಿಸಿ ಬಿಂಬಿಸಲು ಬೇಂದ್ರೆಯವರು ‘ದಡಗಳ ದುಡುಕುವಳು’ ಎಂದು ಹೇಳಿದ್ದಾರೆ. ಪದದ ಅರ್ಥವನ್ನು ಮಾರ್ಪಡಿಸಬಲ್ಲ ಪ್ರತಿಭೆ ಎಂದರೆ ಇದು! ವರಕವಿಗೆ ಮಾತ್ರ ಇದು ಸುಲಭದ ಸಿದ್ಧಿ!

Saturday, September 11, 2010

‘ನಾದಲೀಲೆ’…………...........ಬೇಂದ್ರೆ

ಗೋಪಾಲಕೃಷ್ಣ ಅಡಿಗರು ಕನ್ನಡದಲ್ಲಿ ನವ್ಯಕಾವ್ಯದ ಜನಕರೆಂದೇ ಖ್ಯಾತರಾದವರು. ಗೌರೀಶ ಕಾÊಕಿಣಿಯವರು ಕನ್ನಡದ ಶ್ರೇಷ್ಠ  ಸಾಹಿತ್ಯಚಿಂತಕರು. ಅಡಿಗರು ಒಮ್ಮೆ ಕಾÊಕಿಣಿಯವರನ್ನು ಗೋಕರ್ಣದಲ್ಲಿ ಭೆಟ್ಟಿಯಾದ ಸಂದರ್ಭದಲ್ಲಿ ಸಾಹಿತ್ಯ ಸಂವಾದ ನಡೆಯಿತು. ಆ ಸಂದರ್ಭದಲ್ಲಿ ಅಡಿಗರು  ಕಾವ್ಯರಚನೆಯ ಪ್ರಯತ್ನ ಹಾಗು ಕಾವ್ಯಸಾಫಲ್ಯದ ಬಗೆಗೆ ಹೀಗೆ ಹೇಳಿದ್ದರು:
“ಕವಿಯ ಕಾವ್ಯರಚನಾಸಂಕಲ್ಪ ಹಾಗು ಆತನ ಕಾವ್ಯಸಿದ್ಧಿ ಇವುಗಳ ನಡುವೆ ಅಂತರವಿದ್ದೇ ಇರುತ್ತದೆ. ಕನ್ನಡದಲ್ಲಿ ಈ ಸಂಕಲ್ಪ ಹಾಗು ಸಿದ್ಧಿಗಳ ನಡುವೆ ಏನೂ ಅಂತರವಿಲ್ಲದ ಒಬ್ಬರೇ ಕವಿಯೆಂದರೆ ಬೇಂದ್ರೆ.”
ಬೇಂದ್ರೆಯವರ ‘ನಾದಲೀಲೆ’ ಕವನವನ್ನು ಅಭ್ಯಾಸ ಮಾಡಿದಾಗ, ಅಡಿಗರ ಮಾತಿನ ಸತ್ಯ ಗೋಚರಿಸುತ್ತದೆ.

‘ನಾದಲೀಲೆ’ ಕವನದ ತಿರುಳು ಹೀಗಿದೆ:
ಹುಟ್ಟು ಮತ್ತು ಸಾವು ಇವು ಸಾರ್ವತ್ರಿಕ ಸತ್ಯಗಳು. ಈ ಬದುಕೆಂದರೆ ಹುಟ್ಟು ಮತ್ತು ಸಾವಿನ ನಡುವಿನ ಆಟವಾಗಿದೆ. ಸಾವಿನ ಕತ್ತಿ ತಲೆಯ ಮೇಲೆಯೇ ತೂಗುತ್ತಿದ್ದರೂ ಸಹ ಅದರ ಅರಿವು ಮಾತ್ರ ಯಾವ ಜೀವಿಗೂ ಇರುವದಿಲ್ಲ. ಈ ಅಜ್ಞಾನಸುಖದಿಂದಲೇ ಪ್ರತಿ ಜೀವಿಯೂ ಜೀವನ್ಮುಖಿಯಾಗಿ ಬದುಕಿನ ಆಹ್ಲಾದವನ್ನು ಅನುಭವಿಸುತ್ತದೆ. ಆದರೆ ಈ ಜೀವಿಗೆ ತಿಳಿಯದಂತೆಯೇ ಮೃತ್ಯು ಅದನ್ನು ಹಿಂಬಾಲಿಸುತ್ತಿರುತ್ತದೆ. ಇದು ವಿಶ್ವಸತ್ಯ. ಹಾಗಿದ್ದರೆ ಈ ಬದುಕೊಂದು ನಿರರ್ಥಕ ಪ್ರಯಾಣವೆ?  ಅಲ್ಲವೆನ್ನುತ್ತಾರೆ ಬೇಂದ್ರೆಯವರು. ಈ ಬದುಕು ದೇವನಾಡುತ್ತಿರುವ ಲೀಲೆ. ಆತ ನಮ್ಮ ಕಣ್ಣಿಗೆ ಕಾಣಲಾರ. ದೇವನು ಕಾಣದಿದ್ದರೂ ಸಹ ಆತನ ಸೃಷ್ಟಿಯ ಮಹತ್ತು ನಮ್ಮ ಕಣ್ಣೆದುರಿಗಿದೆ. ಅದನ್ನು ಅರಿತು ನಾವು ಬದುಕಿನ ಕೋಲಾಟದಲ್ಲಿ ಶ್ರದ್ಧೆಯಿಟ್ಟು ಭಾಗವಹಿಸಬೇಕು.

ಕವನದ ವಿಧಾನ ಹೀಗಿದೆ:
ಕವನವು ಪ್ರಾರಂಭವಾಗುವದು ಕೋಲಾಟದ ಹಾಡಿನ ಪಲ್ಲದೊಂದಿಗೆ. ವರ್ಷಾಕಾಲವು ಮುಗಿದು, ಆಹ್ಲಾದಕರ ವಾತಾವರಣವು ಎಲ್ಲೆಲ್ಲೂ ಹಬ್ಬಿರುವಾಗ, ಹೆಂಗಳೆಯರು ಕೋಲಾಟದ ಹಬ್ಬವನ್ನು ಉತ್ಸಾಹದಿಂದ ಜರುಗಿಸುತ್ತಾರೆ. ಮುಖ್ಯ ಹಾಡನ್ನು ಒಬ್ಬರು ಅಥವಾ ಇಬ್ಬರು ಹಾಡಿದರೆ, ಉಳಿದ ಗೆಳತಿಯರು ಗುಂಪಾಗಿ, “ಕೋಲೆ ಸಖೀ, ಚಂದ್ರಮುಖೀ…..” ಎಂದು ಪಲ್ಲವನ್ನು ಹಾಡುತ್ತಿರುತ್ತಾರೆ.

ಆದರೆ ಈ ಗೀತೆಯಲ್ಲಿ, ಹಾಡು ಹೇಳುತ್ತಿರುವ ವ್ಯಕ್ತಿ ಓರ್ವ ಗಂಡಸು. ಆತ ನಿಸರ್ಗದಲ್ಲಿಯ ಅರುಣೋದಯದ ಸಮಯದ ಮೂರು ದೃಶ್ಯಗಳನ್ನು ಮೂರು ನುಡಿಗಳಲ್ಲಿ ಬಣ್ಣಿಸಿ ತನ್ನ ನಲ್ಲೆಗೆ ಹೇಳುತ್ತಿದ್ದಾನೆ. ನಾಲ್ಕನೆಯ  ನುಡಿಯಲ್ಲಿ  ಆತನ ಕಾಣ್ಕೆ ಇದೆ.

ಅರುಣೋದಯವು ಬದುಕಿನ ಪ್ರಾರಂಭದ ಸಂಕೇತವಾಗಿದೆ. ಕವಿಯು ಅರುಣೋದಯದಲ್ಲಿ ನಿಸರ್ಗದಲ್ಲಿಯ ಜೀವಿಗಳ ಜೀವನೋತ್ಸಾಹವನ್ನು ಬಣ್ಣಿಸುತ್ತಲೇ, ಆ ಜೀವಿಗಳ ಕಣ್ಣಿಗೆ ಬೀಳದಂತಹ ಮೃತ್ಯುವಿನ ಕಡೆಗೆ ತನ್ನ ನಲ್ಲೆಯ ಗಮನ ಸೆಳೆಯುತ್ತಾನೆ. ಮೊದಲನೆಯ ನುಡಿಯಲ್ಲಿ ಕಾಡಿನ ಮುಗ್ಧ ಪ್ರಾಣಿಗಳಾದ ಚಿಗರಿಗಳ ಆಟವನ್ನು ವರ್ಣಿಸಲಾಗಿದೆ. ಎರಡನೆಯ ನುಡಿಯಲ್ಲಿ ನಾಡಿನ ಪ್ರಾಣಿಗಳಾದ ಗೋಸಮೂಹದ ಉಲ್ಲಾಸದ ವರ್ಣನೆ ಇದೆ. ಮೂರನೆಯ ನುಡಿಯಲ್ಲಿ ಮಾನವಜೀವಿಯ ಪ್ರಣಯದಾಟವಿದೆ. ಈ ಮೂರೂ ನುಡಿಗಳಲ್ಲಿ ಬದುಕಿನ ಕೋಲಾಟವನ್ನು ಕೆಡೆಯಬಲ್ಲ ಮೃತ್ಯುವಿನ ಸೂಚನೆ ಇದೆ. ಈ ಜೀವಿಗಳನ್ನು ಕಾಯುವ ಗೋಪಾಲಕ ಎಲ್ಲಿಹನೋ ಎಂದು ಕವಿಯು ಆತಂಕಗೊಳ್ಳುತ್ತಾನೆ. ಮರುಕ್ಷಣದಲ್ಲಿಯೇ ಆ ಗೋಪಾಲನ ವಿಶ್ವಾತ್ಮರೂಪವನ್ನು ಅರಿತುಕೊಳ್ಳುತ್ತಾನೆ; ನಾಲ್ಕನೆಯ ನುಡಿಯಲ್ಲಿ ಎಲ್ಲ ಜೀವಿಗಳ ರಕ್ಷಕನಾದ ಭಗವಂತನ ಕೋಲಾಟವಿದು ಎನ್ನುವ ದರ್ಶನವಿದೆ. ಕವಿಗೆ ದೇವನಲ್ಲಿಯ ಶ್ರದ್ಧೆ ದೃಢವಾಗುತ್ತದೆ.

‘ನಾದಲೀಲೆ’ ಕವನದ ಪೂರ್ತಿಪಾಠ ಹೀಗಿದೆ:

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ  ||ಪಲ್ಲ||
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
                                                                         ಕೋಲು ಸಖೀ. . . .

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ.
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
                                                                           ಕೋಲು ಸಖೀ. . . .

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ.
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
                                                                   ಕೋಲು ಸಖೀ. . . .

ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವೆಲ್ಲ, ಬೇಟದ ಬಗೆ, ನಾರಿ.
                                                                    ಕೋಲು ಸಖೀ. . . .

ಈಗ ಕವನದ ಮೊದಲ ನುಡಿಯನ್ನು ಗಮನಿಸೋಣ:

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ  ||ಪಲ್ಲ||
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ
                                                                         ಕೋಲು ಸಖೀ. . . .

ಮುಂಜಾವಿನ ಹೊತ್ತಿನಲ್ಲಿ ಆಹ್ಲಾದಕರವಾದ ತಣ್ಣನೆಯ ಗಾಳಿಯು ಬೀಸುತ್ತಿರುತ್ತದೆ. ಕಾಡಿನ ಮುಗ್ಧ ಪ್ರಾಣಿಗಳಾದ ಚಿಗರೆಗಳು ಈ ಎಲರನ್ನು ಅಂದರೆ ಗಾಳಿಯನ್ನು ಮೂಸಿ ನೋಡುತ್ತ ಬದುಕಿನ  ಆನಂದವನ್ನು ಸವಿಯುತ್ತಿವೆ.  ಕವಿಯು ಸಾತ್ವಿಕ ಹಾಗು ಸುಂದರ ಪ್ರಾಣಿಗಳಾದ ಚಿಗರೆಗಳನ್ನಷ್ಟೇ ವರ್ಣಿಸುತ್ತಿರುವದನ್ನು ಗಮನಿಸಬೇಕು. ಈ ಚಿಗರೆಗಳಾದರೂ ಎಂತಹವು? ತರಳ ಎರಳೆ ಅಂದರೆ ಪುಟ್ಟ ಚಿಗರೆ ಮರಿ, ಚಿಗುರ ಚಿಗರೆ ಅಂದರೆ ಪ್ರಾಯವು ಚಿಗುರುತ್ತಿರುವ (=adolescent) ಚಿಗುರೆ ಹಾಗು ಹೂವು ಹೂವು ಹುಲ್ಲೆ ಅಂದರೆ ಗರ್ಭಧಾರಣೆಯ ಯೋಗ್ಯ ವಯಸ್ಸನ್ನು ತಲುಪಿದ ಚಿಗುರೆ. ಪ್ರಕೃತಿಯು ಸೃಷ್ಟಿಸುವದನ್ನು ಬಯಸುತ್ತದೆ, ಬೆಳೆಯುವದನ್ನು ಬಯಸುತ್ತದೆ ಎನ್ನುವ ಪ್ರಕೃತಿಯ ಹಂಬಲವನ್ನು ಈ ಎಳೆವಯಸ್ಸಿನ ಸಂಕೇತಗಳು ಹೇಳುತ್ತವೆ. ಈ ಸಾತ್ವಿಕ ಪ್ರಾಣಿಗಳ ಕಣ್ಣುಗಳ ಮುಂದೆ ಇರುವದು ಕಂಗೊಳಿಸುವ ಕೆಂಪು ಅಂದರೆ ಅರುಣೋದಯ, ಸೂರ್ಯೋದಯಕ್ಕಿಂತ ಮೊದಲು ಬಾನು ಕೆಂಪಾಗಿ ಕಾಣುವ ದೃಶ್ಯ. ಇದು ಬದುಕಿನಲ್ಲಿ ಉತ್ಸಾಹ ತುಂಬುವ ನೋಟ. ಆದರೆ ಈ ಮುಗ್ಧ ಪ್ರಾಣಿಗಳಿಗೆ ತಮ್ಮ ಹಿಂದೆ ಕಂಗೆಡಿಸುವ ಅಂದರೆ ಧೈರ್ಯಗುಂದಿಸುವಂತಹ ಮಂಜು ಇದೆ ಎನ್ನುವದು ಕಾಣುತ್ತಿಲ್ಲ. ಆ ಮಂಜಿನ ಪರದೆಯ ಹಿಂದೆ ಅಡಗಿರುವವನು ಬೇಟೆಗಾರ ಅಂದರೆ ಮೃತ್ಯು. ಇದರ ಅರಿವಿಲ್ಲದ ಈ ಮುಗ್ಧ ಪ್ರಾಣಿಗಳು ಜೀವಸ್ನೇಹಿಯಾದ ಮುಂಜಾವಿನ ಗಾಳಿಯನ್ನು ಸೇವಿಸುತ್ತ ಆನಂದದಿಂದಿವೆ.
(ಮೃತ್ಯುವು ಕ್ರೂರ ಪ್ರಾಣಿಗಳ ರೂಪದಲ್ಲಿಯೂ ಇರಬಹುದು  ಎನ್ನುವ ಕಾರಣಕ್ಕಾಗಿ, ಕವಿಯು ಕೇವಲ ಸಾತ್ವಿಕ ಪ್ರಾಣಿಗಳ ಆಟವನ್ನು, ಆನಂದವನ್ನು ಬಣ್ಣಿಸಿದ್ದಾನೆ.)

ಈಗ ಎರಡನೆಯ ನುಡಿಯನ್ನು ನೋಡೋಣ:
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ.
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
                                                                           ಕೋಲು ಸಖೀ. . . .

ಎರಡನೆಯ ನುಡಿಯಲ್ಲಿಯೂ ಸಹ ಎಳೆಯ, ಮುಗ್ಧ, ಸಾತ್ವಿಕ ಪ್ರಾಣಿಗಳ ಸಂಕೇತಗಳಿವೆ. ಆದರೆ ಈ ಪ್ರಾಣಿಗಳು ಕಾಡಾಡಿ ಪ್ರಾಣಿಗಳಲ್ಲ. ಮನುಷ್ಯನ ನಾಗರಿಕತೆಯ ಮೊದಲ ಮೆಟ್ಟಲಿನಲ್ಲಿ ಅವನ ಜೊತೆಗೆ ನಾಡಿನಲ್ಲಿ ನೆಲೆಸಿದ ಗೋ-ಸಮೂಹ. ಕರೆವ ಕರು ಅಂದರೆ female calf. ಕುಣಿವ ಮಣಕ ಅಂದರೆ male calf.  ಇವು ಸಂತಾನವನ್ನು ಬೆಳೆಯಿಸುವ ಉತ್ಸಾಹದಲ್ಲಿರುವ ಎಳೆ ಜೀವಿಗಳು. ‘ಗೋಗಭೀರೆ’ ಅಂದರೆ ಈಗಾಗಲೇ ಸಂತಾನವನ್ನು ಪಡೆದಿರುವ ಗೋವು. ಇವಳನ್ನು ‘ ತೊರೆವ ಅಂದರೆ ಸಮೃದ್ಧಿಯಾಗಿ ಹಾಲು ನೀಡುತ್ತಿರುವ, ಪ್ರೌಢ ವಯಸ್ಸಿನ ಗೋವು ಎಂದು ಕವಿ ಬಣ್ಣಿಸುತ್ತಾನೆ. ಮುಂಜಾವಿನಲ್ಲಿ ಎಲ್ಲೆಲ್ಲೂ ಬೀಸುತ್ತಿರುವ ಪ್ರಾಣವಾಯುವನ್ನು (=oxygen) ಈ ಗೋ-ಸಮೂಹವೂ ಸಹ ಹೀರುತ್ತಿದೆ. ಇವುಗಳಿಗೂ ಸಹ ಅರುಣೋದಯದ ಕೆಂಪು ಕಾಣುತ್ತಿದೆಯೇ ಹೊರತು, ತಮ್ಮ ಹಿಂದೆ ಇರುವ ಮಂಜು ಕಾಣುತ್ತಿಲ್ಲ. ಈ ಗೋವುಗಳನ್ನು ಸಂರಕ್ಷಿಸಬೇಕಾದ, ಕೊಳಲು ಹಿಡಿದ ಗೋಪಾಲಕನು ಕವಿಗೆ ಕಾಣುತ್ತಿಲ್ಲ. ಆದರೆ ಆತನು ಎಲ್ಲೆಲ್ಲೂ ಇರುವನು ಹಾಗು ಈ ಗೋಸಮೂಹವನ್ನು ರಕ್ಷಿಸುವನು ಎನ್ನುವ ಭರವಸೆ ಕವಿಗಿದೆ. ಆದುದರಿಂದಲೇ ಗೋಪಾಲಕನು ‘ಎಲ್ಲು ಇಹನು’ ಎಂದು ಕವಿ ಹೇಳುತ್ತಾನೆ. ಕವಿಯು ಅಪ್ರತ್ಯಕ್ಷವಾಗಿ ವಿಶ್ವರಕ್ಷಕನಾದ ಭಗವಂತನ ಬಗೆಗೆ ಪ್ರಸ್ತಾವಿಸುತ್ತಾನೆ.
(‘ಗೋ’ ಪದಕ್ಕೆ ‘ಜೀವಿ’ ಎನ್ನುವ ಅರ್ಥವೂ ಇದೆ. ಆದುದರಿಂದ ಗೋಪಾಲನೆಂದರೆ ಎಲ್ಲ ಜೀವಿಗಳನ್ನು ಪಾಲಿಸುವ ಭಗವಂತನೇ ಆಗುತ್ತಾನೆ.)

ಮೂರನೆಯ ನುಡಿ ಹೀಗಿದೆ:
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ.
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
                                                                   ಕೋಲು ಸಖೀ. . . .

ಮೊದಲ ನುಡಿಯಲ್ಲಿ ಕವಿಯು ಕಾಡಿನಲ್ಲಿಯ ಸಾತ್ವಿಕ ಪ್ರಾಣಿಗಳನ್ನು ಬಣ್ಣಿಸಿದ್ದರೆ, ಎರಡನೆಯ ನುಡಿಯಲ್ಲಿ ನಾಡಿನಲ್ಲಿ ನೆಲೆ ನಿಂತ ಮಾನವ-ಸ್ನೇಹಿ ಮುಗ್ಧ ಜೀವಿಗಳನ್ನು ಬಣ್ಣಿಸಿದ್ದಾನೆ. ಇದೀಗ ಮೂರನೆಯ ನುಡಿಯಲ್ಲಿ ಸಂಸ್ಕೃತಿಯ ಮುಂದಿನ ಮೆಟ್ಟಲಾದ ಮಾನವರ  ವಿಚಾರವಿದೆ. ಮಾನವರು  ಪ್ರಾಣಿಗಳಿಗಿಂತ ಹೆಚ್ಚಿನ ಪ್ರಜ್ಞೆಯುಳ್ಳವರು. ಉತ್ಕ್ರಾಂತಿಯ ಕಾಲಮಾನದಲ್ಲಿ ಹೇಳುವದಾದರೆ, ಪ್ರಾಣಿಗಳು ಅರುಣೋದಯ ಕಾಲದವರಾದರೆ, ಮನುಷ್ಯ ಜೀವಿಗಳು ಬೆಳ್ಳಿಚುಕ್ಕೆ ಮುಳುಗಿದ ಕಾಲದವರು; ಅಂದರೆ ಅರುಣೋದಯದ ನಂತರದ ಸೂರ್ಯೋದಯದ ಕಾಲದವರು. ಅದನ್ನು ತೋರಿಸಲೆಂದು ಕವಿ ಬೆಳ್ಳಿಚುಕ್ಕೆಯು(=ಶುಕ್ರ ಗ್ರಹವು) ಈಗ ಚಿಕ್ಕೆಯಾಗಿ ಮುಳುಗಿದೆ ಎಂದು ಹೇಳುತ್ತಾನೆ.   ಆದರೇನು,  ಮಾನವರೂ ಸಹ ಪ್ರಕೃತಿಯ ಕೂಸುಗಳೇ. ಬದುಕಿನ ಮುಂದುವರಿಕೆಯು ಪ್ರಕೃತಿಯ ಅಪೇಕ್ಷೆಯಾಗಿದೆ. ಆದುದರಿಂದಲೇ ಇಲ್ಲಿ ಕಾದಲೆಯು ಅಂದರೆ ಪ್ರಿಯತಮೆಯು ತನ್ನ ಕಾದಲನಿಗೆ ಬೇಡಲು ಬರುತ್ತಿದ್ದಾಳೆ. ಅವಳು ಬೇಡುತ್ತಿರುವದು ಪ್ರಣಯವನ್ನು. ಪ್ರಣಯದ ಸಂಕೇತವಾದ ಹೂಮಾಲೆಯೇ ಅವಳಾಗಿದ್ದಾಳೆ. ಆದರೆ ಈ ಮಾನವರಿಗೂ ಸಹ ಕಣ್ಣು ಮುಂದಿನ ಕೆಂಪು ಕಾಣುತ್ತದೆಯೇ ಹೊರತು, ಅದರ ಹಿಂದಿನ ಮಂಜು ಕಾಣುತ್ತಿಲ್ಲ.
(ಇಲ್ಲಿ ಕೆಂಪು ಬಣ್ಣವು ಜೀವನದ ಸಂಕೇತವಾಗಿ, ಉತ್ಸಾಹದ ಸಂಕೇತವಾಗಿ ಬಂದಿದೆ, ಹಾಗು ಮಂಜು ನಮ್ಮ ಅರಿವಿಗೆ ಕಾಣದ ಮೃತ್ಯುವಿನ ಸಂಕೇತವಾಗಿದೆ.)

ಕೊನೆಯ ನುಡಿ ಹೀಗಿದೆ:
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.
                                                                    ಕೋಲು ಸಖೀ. . . .

ಮೊದಲ ಮೂರು ನುಡಿಗಳಲ್ಲಿ ಹುಟ್ಟು ಸಾವುಗಳ ನಡುವಿನ ಬದುಕಿನ ವರ್ಣನೆ ಇದ್ದರೆ, ಕೊನೆಯ ನುಡಿಯಲ್ಲಿ ಇದು ವಿಶ್ವಾತ್ಮನ ಆಟವೆನ್ನುವ ದರ್ಶನವಿದೆ. ಆದುದರಿಂದ ಇದು ಬೇಟೆಯಲ್ಲ. ಇದೆಲ್ಲ (ಅವನ) ಆಟ; ಇದು ಬೇಟ, ಅಂದರೆ ಪ್ರಣಯದ ಒಂದು ರೀತಿ ಎಂದು ಕವಿ ಹೇಳುತ್ತಾರೆ. ಈ ಪ್ರಣಯವು ಪ್ರಕೃತಿ ಹಾಗು ವಿಶ್ವಾತ್ಮನಾದ ಪುರುಷ ಇವರೀರ್ವರ ನಡುವಿನ ಪ್ರಣಯ. ಈ ‘ಪುರುಷ’ನ ಸ್ವರೂಪವನ್ನು ವಿಶದೀಕರಿಸಲು ಕವಿಯು “ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ” ಎನ್ನುವ ಒಂದು ಅದ್ಭುತ ರೂಪಕವನ್ನು ಅಚಾನಕವಾಗಿ ಬಳಸಿ ಓದುಗರನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾರೆ.

ಆ ವಿಶ್ವಾತ್ಮನಿಗೆ ಮುಗಿಲೇ ಬಾಯಿ, ಗಾಳಿಯೇ ಅವನ ಕೊಳಲು ಹಾಗು ಬೆಳಕೇ ಆತನ ಹಾಡು. ಮುಗಿಲು, ಗಾಳಿ ಹಾಗು ಬೆಳಕು ಇವು ಪಂಚಮಹಾಭೂತಗಳಾದ ಪೃಥ್ವಿ, ಅಪ್, ತೇಜ, ಆಕಾಶ ಹಾಗು ವಾಯು ಇವುಗಳಲ್ಲಿ ಮೂರು ಮಹಾಭೂತಗಳ ಅಂದರೆ ಆಕಾಶ, ವಾಯು ಹಾಗು ತೇಜ ಇವುಗಳ ಸಂಕೇತವಾಗಿವೆ ಎನ್ನುವದನ್ನು ಗಮನಿಸಬೇಕು.

ಜೊತೆಜೊತೆಗೇ ವಿಶ್ವಾತ್ಮನನ್ನು ಕೃಷ್ಣನಿಗೆ ಹೋಲಿಸುವ ಕೆಲವು ಸಂಕೇತಗಳನ್ನು ಈ ಕವನದಲ್ಲಿ ಬಳಸಲಾಗಿದೆ. ತಾಯಿ ಯಶೋದೆಗೆ ಪುಟ್ಟ ಕೃಷ್ಣನು ತನ್ನ ಬಾಯಿಯಲ್ಲಿ ಸಕಲ ಲೋಕಗಳನ್ನು ಅನಿರೀಕ್ಷಿತವಾಗಿ ತೋರಿಸಿ ಬೆರಗುಗೊಳಿಸಿದನು. ಈ ಗೀತೆಯಲ್ಲಿ ಕವಿಯು ಗೋಪಾಲಕನನ್ನು ವಿಶ್ವಾತ್ಮನಿಗೆ ಹೋಲಿಸುವಂತಹ ರೂಪಕವನ್ನು  ಥಟ್ಟನೆ ಬಳಸಿ ಓದುಗನನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾನೆ. ಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸುವಂತೆ, ಕವಿಯು ಓದುಗರಿಗೆ ‘ಮುಗಿಲ ಬಾಯ, ಗಾಳಿ ಕೊಳಲ, ಬೆಳಕ ಹಾಡ’ ಎನ್ನುವ ವಿಶ್ವರೂಪವನ್ನು ತೋರಿಸುತ್ತಾನೆ. ಓದುಗರನ್ನು ಸಾಧಾರಣ ನೋಟದಿಂದ ಅಸಾಧಾರಣ ನೋಟಕ್ಕೆ ಒಯ್ಯುವ  ಈ ರೂಪಕವು ಕನ್ನಡ ಕಾವ್ಯದಲ್ಲಷ್ಟೇ ಅಲ್ಲ, ಜಗತ್ತಿನ ಕಾವ್ಯದಲ್ಲೇ ಒಂದು ಅದ್ಭುತ, ಅನನ್ಯ ರೂಪಕವಾಗಿದೆ.

ಈ ವಿಶ್ವಾತ್ಮನಲ್ಲಿ ನಂಬಿಕೆ ಇರುವ ಕಾರಣದಿಂದಲೇ ಕವಿಯ ಮನಸ್ಸಿನಲ್ಲಿ ಒಂದು ಸತ್ಯ ಹೊಳೆಯುತ್ತದೆ. ಅದನ್ನು ಕವಿಯು ತನ್ನ ನಲ್ಲೆಗೆ ಉದ್ಘೋಷಿಸುವದಿಲ್ಲ; ಉಸುರುತ್ತಾನೆ. ಆದುದರಿಂದ ಆ ಸತ್ಯದ ಪ್ರಥಮಾರ್ಧವನ್ನು ಸ್ವಗತರೂಪದಲ್ಲಿ, ಕಂಸಿನಲ್ಲಿ ತೋರಿಸಲಾಗಿದೆ: (ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ). ಹಾಗು ಈ ಸತ್ಯದ ದ್ವಿತೀಯಾರ್ಧವನ್ನು ಕವಿಯು ಅಪ್ತವಾಗಿ ತನ್ನ ನಲ್ಲೆಗೆ ಬೋಧಿಸುತ್ತಾನೆ:  “ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?”

ಕೋಲಾಟದ ಪಲ್ಲದೊಂದಿಗೆ ಈ ಗೀತೆ ಮುಗಿಯುತ್ತದೆ.

ಈ ಗೀತೆಯ ವೈಶಿಷ್ಟ್ಯಗಳು:
(೧) ಅನೇಕ ವೈಶಿಷ್ಟ್ಯಗಳ ಆಗರವಾಗಿದೆ ಈ ಗೀತೆ. ಮೊದಲನೆಯದಾಗಿ ಇದು ಕೋಲಾಟದ ಧಾಟಿಯಲ್ಲಿಯೇ ಹಾಡಬಹುದಾದ ಗೀತೆ. ಆದುದರಿಂದ ಇದನ್ನು ಕವನ ಎನ್ನುವದಕ್ಕಿಂತ ಗೀತೆ ಎನ್ನುವದೇ ಸರಿಯಾಗುತ್ತದೆ.
ವೈಯುಕ್ತಿಕವಾಗಿ ಹೊಳೆವ ಸತ್ಯವಾದರೆ ವೈಯಕ್ತಿಕ ಓದಿನ ಕವನವನ್ನು ರಚಿಸಬಹುದು. ಆದರೆ ಇಲ್ಲಿ ಕವಿ ತೋರಬಯಸುತ್ತಿರುವದು ಒಂದು ವಿಶ್ವಸತ್ಯವನ್ನು. ಆದುದರಿಂದಲೇ ಕವಿಯು ಒಂದು ಸಮೂಹಗೀತೆಯ ರಚನೆಯನ್ನು ಬಳಸಿಕೊಂಡಿದ್ದಾನೆ. ಅಲ್ಲದೆ ಬದುಕಿನ ವೈರುಧ್ಯಗಳ ನಡುವೆಯೂ ಸಹ, ಜೀವನೋತ್ಸಾಹವು ನಶಿಸಿ ಹೋಗಬಾರದು ಎನ್ನುವದನ್ನು ತೋರಿಸುವ ಉದ್ದೇಶದಿಂದಲೇ ಹುರುಪು ಹುಮ್ಮಸ್ಸಿನ ಪ್ರತೀಕವಾದ ಕೋಲಾಟದ ಧಾಟಿಯನ್ನು ಕವಿಯು ಉಪಯೋಗಿಸಿಕೊಂಡಿದ್ದಾನೆ. ಎರಡನೆಯದಾಗಿ ಕೋಲಾಟದ ಪದಗಳು ಹೆಚ್ಚಾಗಿ ಕೃಷ್ಣಲೀಲೆಯ ಪದಗಳು. 
(ಉದಾ: ಕೋಲನಾಡುತ ಬಂದಾ / ಕಾವೇರಿ ರಂಗಾ). 
ಈ ಗೀತೆಯಲ್ಲಿಯೂ ಸಹ ಬದುಕು ಮುರಲೀಧರನ ಲೀಲೆ ಎನ್ನುವ ಶ್ರದ್ಧೆ ವ್ಯಕ್ತವಾಗಿದೆ.

(೨) ವಿಶ್ವಸತ್ಯದ ಲಕ್ಷಣವೆಂದರೆ ಅದು ಅನಾದಿ ಕಾಲದ ಸತ್ಯ. ಆದುದರಿಂದ ಕವಿಯು ಉತ್ಕ್ರಾಂತಿಯ ವಿವಿಧ ಮಜಲುಗಳನ್ನು ಕಾಲಾನುಸಾರವಾಗಿ ತೋರಿದ್ದಾನೆ. ಮೊದಲ ನುಡಿಯಲ್ಲಿ ಕಾಡಿನ ಮುಗ್ಧ ಜೀವಿಗಳಾದ ಚಿಗರೆಗಳ ಸಂಕೇತವಿದ್ದರೆ, ಎರಡನೆಯ ನುಡಿಯಲ್ಲಿ ನಾಡಿನಲ್ಲಿ ಈಲಾದ ಗೋಸಮೂಹವಿದೆ. ಮೂರನೆಯ ನುಡಿಯಲ್ಲಿ ಪ್ರಜ್ಞಾವಂತ ಮಾನವಜೀವಿಗಳ ಸಂಕೇತವಿದೆ. ಮೊದಲ ಎರಡು ನುಡಿಗಳಲ್ಲಿ ಅರುಣೋದಯದ ಸಂಕೇತವಾಗಿ ‘ಕಂಗೊಳಿಸುವ ಕೆಂಪು’ ಎನ್ನುವ ವರ್ಣನೆ ಇದ್ದರೆ, ಮೂರನೆಯ ನುಡಿಯಲ್ಲಿ ಅರುಣೋದಯವು ಮುಗಿದು ಸೂರ್ಯೋದಯವು ಆಗುತ್ತಿರುವ ಸಂಕೇತವಾಗಿ ‘ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ’ ಎನ್ನುವ ವರ್ಣನೆ ಇದೆ. ಅರುಣೋದಯ ಹಾಗು ಸೂರ್ಯೋದಯಗಳು ಈ ಗೀತೆಯಲ್ಲಿ ಕಾಲಗತಿಯ ಮಾನದಂಡಗಳಾಗಿವೆ.

(೩) ಸಂಪೂರ್ಣ ಕವನವೇ ಪ್ರತಿಮಾಮಯವಾಗಿರುವದು ಈ ಕವನದ ಪ್ರಮುಖ ವೈಶಿಷ್ಟ್ಯವಾಗಿದೆ.
ಮೊದಲ ನುಡಿಯಲ್ಲಿ ಎಳೆಯ ಜೀವಿಗಳನ್ನು ಸೂಚಿಸುವ ಉದ್ದೇಶದಿಂದ ತರಳ, ಚಿಗುರು ಹಾಗು ಹೂವು ಎನ್ನುವ ವಿಶೇಷಣಗಳನ್ನು ಬಳಸಲಾಗಿದೆ. ಸಸ್ಯದಲ್ಲಿ ಮೊದಲು ಬರುವದು ಚಿಗುರು ಹಾಗು ಬಳಿಕ ಕಾಣುವದು ಹೂವು ಎನ್ನುವದನ್ನು ಗಮನಿಸಬೇಕು. ಅದರಂತೆ ಎರಡನೆಯ ನುಡಿಯಲ್ಲಿ ‘ಕರೆವ ಕರು ಹಾಗು ಕುಣಿವ ಮಣಕ’ಗಳು ಎಳೆತನವನ್ನು ಸೂಚಿಸಿದರೆ ‘ತೊರೆವ ಗೋಗಭೀರೆಯು’ ಪ್ರೌಢಾವಸ್ಥೆಯನ್ನು ಸೂಚಿಸುತ್ತಾಳೆ.

ಮೂರನೆಯ ನುಡಿಯಲ್ಲಿ ನಿಸರ್ಗದಲ್ಲಿ ಸಾಮರಸ್ಯದಿಂದ ಜೀವಿಸುತ್ತಿರುವ ಮಾನವ-ಜೀವಿಗಳ ವರ್ಣನೆ ಇದೆ. ಸಾಮರಸ್ಯವನ್ನು ಸೂಚಿಸುವ ಉದ್ದೇಶದಿಂದ, “ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ ” ಎನ್ನುವ ವರ್ಣನೆ ಬಂದಿದೆ.

(೪) ಬದುಕು ಬೆಳವಣಿಗೆಯ ದಿಕ್ಕಿನಲ್ಲಿ ಹರಿಯುತ್ತಿರುತ್ತದೆ ಎನ್ನುವದನ್ನು ತೋರಿಸಲು ಬೇಂದ್ರೆಯವರು ಕವನದ ಮೂರೂ ನುಡಿಗಳಲ್ಲಿ ನಿಸರ್ಗವಸ್ತುಗಳ ಬೆಳವಣಿಗೆಯನ್ನು ವಿಶೇಷಣಗಳಂತೆ ಬಳಸಿಕೊಂಡಿದ್ದಾರೆ. ಉದಾಹರಣೆಗಾಗಿ ಮೊದಲ ನುಡಿಯಲ್ಲಿ ಬರುವ “ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ” ಎನ್ನುವ ರೂಪಕವನ್ನು ನೋಡಿರಿ. ತರಳ(=ಎಳೆಯ), ಚಿಗುರ(=ಚಿಗುರಿದ) ಹಾಗು ಹೂವ(=ಪೂರ್ಣವಾಗಿ ಅರಳಿದ) ಎನ್ನುವ ಪ್ರತಿಮೆಗಳು ಸಸ್ಯದ ಬೆಳವಣಿಗೆಯ ದಿಕ್ಕನ್ನು ತೋರಿಸುತ್ತಿವೆ.
ಅದರಂತೆ ಮೂರನೆಯ ನುಡಿಯಲ್ಲಿ ಮುಕುಲ(=ಮೊಗ್ಗೆ), ಅಲರು(=ಬಿರಿಯುತ್ತಿರುವ ಹೂವು), ಹಾಗು ಮಲರು(=ಅರಳಿದ ಹೂವು) ಈ ಪ್ರತಿಮೆಗಳು ಕಾಲಗತಿಯನ್ನು ತೋರಿಸುವ ಪ್ರತಿಮೆಗಳಾಗಿವೆ.
ಎರಡನೆಯ ನುಡಿಯಲ್ಲಿ ಕರು/ಮಣಕ ಹಾಗು ಗೋವು ಇವು ಬದುಕಿನ ಬೆಳವಣಿಗೆಯ ಸಂಕೇತಗಳಾಗಿವೆ.

(೫) ಮೊದಲ ಮೂರು ನುಡಿಗಳ ಮೂರನೆಯ ಸಾಲಿನಲ್ಲಿ ಅಂದರೆ ನಡುವಿನ ಸಾಲಿನಲ್ಲಿ ಮೃತ್ಯುವಿನ ಆತಂಕವು ವ್ಯಕ್ತವಾಗಿದೆ: “ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ”. ಈ ಆತಂಕವನ್ನು ಎದುರಿಸುವ ಉದ್ದೇಶದಿಂದ ಪ್ರತಿ ನುಡಿಯ ಮೊದಲ ಹಾಗು ಕೊನೆಯ ಸಾಲುಗಳು ಬದುಕಿನಲ್ಲಿ ಭರವಸೆಯನ್ನು ನೀಡುವ ಸಾಲುಗಳಾಗಿವೆ. ಆದುದರಿಂದಲೇ ಪ್ರತಿ ನುಡಿಯ ಮೊದಲ ಸಾಲನ್ನು, ಕೊನೆಯ ಅಂದರೆ ಐದನೆಯ ಸಾಲಿನಲ್ಲಿ ಆವರ್ತಿಸಲಾಗಿದೆ.
ಉದಾಹರಣೆಗೆ:
ಮೊದಲ ನುಡಿಯ ಮೊದಲ ಹಾಗು ಕೊನೆಯ ಸಾಲು:
“ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ”

ಎರಡನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:
“ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ”

ಮೂರನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:
ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ

ಕೊನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.

ಅಲ್ಲದೆ ಕೊನೆಯ ನುಡಿಯ ಮಧ್ಯದ ಸಾಲಿನಲ್ಲಿ ಮೃತ್ಯುವಿನ motifದಲ್ಲಿ ಆದ ಬದಲಾವಣೆಯನ್ನು ಗಮನಿಸಬೇಕು:
“(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)”.
ಈ ರೀತಿಯಾಗಿ ಕವಿಯು ಕೋಲಾಟದ ಗೀತೆಯು ಬದುಕಿನ ಗೀತೆ ಎನ್ನುವದನ್ನು ದೃಢಪಡಿಸುತ್ತಾನೆ.

(೬) ಇಂಗ್ಲಿಶ್ ಕವನಗಳಲ್ಲಿ ಬಳಸಲಾಗುತ್ತಿರುವ enjambment ಅನ್ನುವ ಕವನವಿಶಿಷ್ಟತೆಯನ್ನು ಬೇಂದ್ರೆಯವರು ಈ ಗೀತೆಯಲ್ಲಿ ಬಳಸಿದ್ದಾರೆ. ಉದಾಹರಣೆಗೆ ಐದು ಸಾಲುಗಳ ನುಡಿಯ ಮಧ್ಯದ ಸಾಲು ಲಯಭಂಗದ ಮೂಲಕ, ಹಾಗು ಅರ್ಥಪಲ್ಲಟದ ಮೂಲಕ ಅರ್ಥವಿಸ್ತರಣೆಯನ್ನು ಸಾಧಿಸುತ್ತದೆ. ಇದೇ ವಿಶಿಷ್ಟತೆಯನ್ನು ಬೇಂದ್ರೆಯವರು ತಮ್ಮ “ಚಿಗರಿಗಂಗಳ ಚೆಲುವಿ” ಕವನದಲ್ಲಿಯೂ ಬಳಸಿದ್ದಾರೆ.

(೭) ವ್ಯಥೆಯನ್ನು ಒಳಗೊಂಡ ಕವನಗಳನ್ನು ಬರೆಯುವಾಗ ಬೇಂದ್ರೆಯವರು ಮೂರು ವಿಭಿನ್ನ ರೀತಿಗಳಲ್ಲಿ ಬರೆಯುವದನ್ನು ಗಮನಿಸಬೇಕು:
(i) ಸಾರ್ವತ್ರಿಕ ಅಥವಾ ತಾತ್ವಿಕ ಸ್ವರೂಪದ ವ್ಯಥೆ
(ii) ಸಂಪೂರ್ಣವಾಗಿ ವೈಯಕ್ತಿಕವಾದ ವ್ಯಥೆ
(iii) ಸಾರ್ವಜನಿಕ ಸಂಬಂಧವುಳ್ಳ ವೈಯಕ್ತಿಕ ವ್ಯಥೆ

(i) ಸಾರ್ವತ್ರಿಕ ಅಥವಾ ತಾತ್ವಿಕ ಸ್ವರೂಪದ ವ್ಯಥೆ:
‘ನಾದಲೀಲೆ’ ಕವನದಲ್ಲಿ ವ್ಯಕ್ತವಾಗುತ್ತಿರುವ ಮೃತ್ಯುವಿನ ಕಳವಳವು ಸಾರ್ವತ್ರಿಕ ಹಾಗು ತಾತ್ವಿಕ ಆತಂಕ. ಈ ಗೀತೆಯಲ್ಲಿ ಕವಿಯು ಗ್ರಾಂಥಿಕ ಕನ್ನಡವನ್ನು ಹಾಗು ಹಳೆಗನ್ನಡಕ್ಕೆ ಹತ್ತಿರವಾದ ಕನ್ನಡವನ್ನು ಬಳಸಿದ್ದಾನೆ. ಹಾಗು ಕವನದಲ್ಲಿ  ಮೃದು ಪದಗಳನ್ನು ಬಳಸಲಾಗಿದೆ.

ಗೀತರಚನೆಯನ್ನು ಹಳೆಗನ್ನಡ ಕವನಗಳ ‘ಉತ್ಸಾಹ ಮಾತ್ರಾ’ ಛಂದಸ್ಸನ್ನು ಅನುಸರಿಸಿ ಮಾಡಲಾಗಿದೆ.
ಈ ಛಂದಸ್ಸಿನಲ್ಲಿ ಪ್ರತಿ ಪಾದದಲ್ಲಿ ಏಳು ತ್ರಿಮಾತ್ರಾಗಣಗಳು, ಕೊನೆಗೊಂದು ಗುರು ಬರುತ್ತವೆ. ಈ ರೀತಿಯಾದ ನಾಲ್ಕು ಸಾಲುಗಳು ಇರುತ್ತವೆ. ಬೇಂದ್ರೆಯವರು ಪ್ರತಿ ಪಾದದಲ್ಲಿ ಮೂರು ಮಾತ್ರೆಯ ಏಳು ಗಣಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಕೊನೆಯಲ್ಲಿ ಗುರುವನ್ನು ಇಟ್ಟುಕೊಂಡಿಲ್ಲ. ನಾಲ್ಕು ಸಾಲುಗಳ ಬದಲಾಗಿ ಐದು ಸಾಲುಗಳನ್ನು ಬಳಸಿಕೊಂಡಿದ್ದಾರೆ. (ಮಧ್ಯದ ಸಾಲನ್ನು enjambment ತರಹ ಉಪಯೋಗಿಸಿಕೊಂಡಿದ್ದಾರೆ.)

 (ii) ಸಂಪೂರ್ಣವಾಗಿ ವೈಯಕ್ತಿಕವಾದ ವ್ಯಥೆ:
ಬೇಂದ್ರೆಯವರ ಅನೇಕ ಕವನಗಳು ವೈಯಕ್ತಿಕ ದುಃಖದ ಅಗ್ನಿಯಲ್ಲಿ ಬೆಂದು ಬಂದ ಚಿನ್ನದ ಒಡವೆಗಳಾಗಿವೆ.
‘ನೀ ಹೀಂಗ ನೋಡಬ್ಯಾಡ ನನ್ನ’, ‘ಬಿಸಿಲುಗುದುರೆ’, ‘ಹುದುಗಲಾರದ ದುಃಖ’, ‘ನನ ಕೈಯ ಹಿಡಿದಾಕೆ’ ಮೊದಲಾದ ಕವನಗಳು ಇಂತಹ ವೈಯಕ್ತಿಕ ದುಃಖದ ಕವನಗಳು. ಇಂತಹ ಕವನಗಳಲ್ಲಿ ಇರುವ ಭಾಷೆ ದೇಸಿ ಭಾಷೆ, ರಚನೆ ಸಹ ಸರಳವಾದ ದೇಸಿ ಶೈಲಿ, ಉಪಮೆಗಳು ದೇಸಿ ಉಪಮೆಗಳು.
(ಉದಾಹರಣೆ: 
ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?)

(iii) ಸಾರ್ವಜನಿಕ ಸಂಬಂಧವುಳ್ಳ ವೈಯಕ್ತಿಕ ವ್ಯಥೆ:
ವೈಯಕ್ತಿಕ ದುಃಖಕ್ಕೆ ಸಾರ್ವಜನಿಕ ಸಂಬಂಧವಿದ್ದಾಗಿನ ಸಂದರ್ಭದಲ್ಲಿ ಬೇಂದ್ರೆಯವರು ಬರೆದ ಕವನಗಳು ಈ ವರ್ಗದಲ್ಲಿ ಬರುತ್ತವೆ. ಉದಾಹರಣೆಗೆ, ಬೇಂದ್ರೆಯವರು ಧಾರವಾಡವನ್ನು ಬಿಟ್ಟು ಹೋಗುವಂತಹ ಪರಿಸ್ಥಿತಿ ಉದ್ಭವವಾಯಿತು. ಧಾರವಾಡವೆಂದರೆ ಕವಿಗೆ ಜೀವದ ಉಸಿರು; ಆತನು ಹುಟ್ಟಿ, ಬೆಳೆದ ಊರು; ಗೆಳೆಯರ ಬಳಗವನ್ನು ಕಟ್ಟಿ ಸಾಹಿತ್ಯದ ಸಲ್ಲಾಪವಾಡಿದ ಊರು. ಆ ಹೊತ್ತಿನಲ್ಲಿ ಅವರಿಂದ ಹೊರಬಂದ ಕವನ: “ನಾವು ಬರತೇವಿನ್ನ”.

ಧಾರವಾಡದ ಕನ್ನಡವು ಪ್ರಾಕೃತ, ಪಾರಸಿ ಹಾಗು ಮರಾಠಿ ಭಾಷೆಗಳೊಡನೆ ಒಡನಾಡಿದ ಕನ್ನಡ. ಆದುದರಿಂದ ಈ ‘ವೈಯಕ್ತಿಕ-ಸಾರ್ವಜನಿಕ’ ಕವನದಲ್ಲಿ ಬೇಂದ್ರೆಯವರು ಇಂತಹ ಕನ್ನಡವನ್ನೇ ಬಳಸಿದ್ದಾರೆ. ಉದಾಹರಣೆಗೆಂದು ಈ ಕವನದ ಒಂದು ನುಡಿಯನ್ನು ಇಲ್ಲಿ ಕೊಡುತ್ತಿದ್ದೇನೆ:
“ಜೋಲಿ-- ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು-- ಲೋಕದಾಗ ?
ನಾವು-- ಮರತೇವದನ ಹ್ಯಾಂಗ ?”

(೮) `ನಾದಲೀಲೆ’ ಗೀತೆಯ ಪ್ರತಿಯೊಂದು ನುಡಿಯ ಮೊದಲೆರಡು ಸಾಲುಗಳು ಒಂದು ಭೌತಿಕ ನೋಟವನ್ನು (physical sight) ತೋರಿಸುತ್ತವೆ. ಉದಾಹರಣೆಗೆ ಚಿಗರಿಗಳು ಅಥವಾ ಹಸುಗಳು ಆಡುತ್ತಿರುವ ದೃಶ್ಯ.  ಮೂರನೆಯ ಸಾಲು ಥಟ್ಟನೆ ಪಾರಭೌತಿಕ ಸತ್ಯವನ್ನು (metaphysical truth) ಹೇಳುತ್ತದೆ (“ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ”).
ಇದರಂತೆಯೇ ಮೊದಲ ಮೂರು ನುಡಿಗಳು ಭೌತಿಕ ವಿಷಯವನ್ನು ಹೇಳಿದರೆ, ಕೊನೆಯ ನುಡಿಯು ಪಾರಭೌತಿಕ ಸತ್ಯವನ್ನು ಹೇಳುತ್ತದೆ. ಕವಿಯು ಬದುಕಿನ ಸಾಧಾರಣ ಸಂಗತಿಗಳನ್ನು ಹೇಳುತ್ತಲೇ, ಅವುಗಳ ಹಿಂದೆ ನಿಹಿತವಾಗಿರುವ ಅಸಾಧಾರಣ ತತ್ವವನ್ನು ತೋರಿಸುತ್ತಿರುವದು ಗಮನಿಸಬೇಕಾದ ವಿಷಯವಾಗಿದೆ.

(೯) ಕಾವ್ಯಪ್ರತಿಭೆ ಎಂದರೆ ಏನು?
ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಕವಿಯ ಸಂಕಲ್ಪ ಹಾಗು ಕಾವ್ಯಸಿದ್ಧಿಯಲ್ಲಿ ಅಂತರ ಇರುತ್ತದೆ. ಕಾವ್ಯಸಂಕಲ್ಪವನ್ನು ಪೂರ್ಣವಾಗಿ ಸಿದ್ಧಿಯಲ್ಲಿ ಪರಿವರ್ತಿಸಬಲ್ಲವನೇ ಪ್ರತಿಭಾವಂತ ಕವಿ. ಕೆಲವರು ಪ್ರತಿಭೆ ಎನ್ನುವದನ್ನು ಒಪ್ಪುವದಿಲ್ಲ. ಜಾಗೃತ ಮನಸ್ಸು, ಅರೆಜಾಗೃತ ಮನಸ್ಸು ಹಾಗು ಸುಪ್ತ ಮನಸ್ಸುಗಳ ಸುಸಂಯೋಜಿತ ಪರಿಶ್ರಮವೇ ಪ್ರತಿಭೆಯಂತೆ ಭಾಸವಾಗುತ್ತದೆ ಎಂದು ಇವರು ಹೇಳುತ್ತಾರೆ. ಇದ್ದಿರಬಹುದು. ಆದರೆ ಇತರರಿಗೆ ಪರಿಶ್ರಮವೆನ್ನುವದು ಈ ಪ್ರತಿಭಾವಂತರಿಗೆ ಅನಾಯಾಸವಾಗಿರುತ್ತದೆ. ಒಂದು ಉದಾಹರಣೆ ಕೊಡಬಹುದಾದರೆ ಗಣಿತಪ್ರತಿಭೆಯ ಶ್ರೀಮತಿ ಶಕುಂತಲಾದೇವಿಯವರು ೧೩ ಅಂಕಿಗಳುಳ್ಳ ಎರಡು ಸಂಖ್ಯೆಯ ಗುಣಾಕಾರವನ್ನು ೨೮ ಸೆಕೆಂಡುಗಳಲ್ಲಿ ಉತ್ತರಿಸಿದ್ದರ ದಾಖಲೆಯಿದೆ. ಇದು ಅನಾಯಾಸದ ಪ್ರತಿಭೆ. ಬೇಂದ್ರೆಯವರ ಕಾವ್ಯಪ್ರತಿಭೆಯು ಇದೇ ರೀತಿಯದು. ಅನೇಕ ವೈಶಿಷ್ಟ್ಯಗಳ ಈ ಗೀತೆಯು ಅವರ ಅನಾಯಾಸ ಪ್ರತಿಭೆಯ ಫಲವಾಗಿದೆ.

(೧೦) ‘ನಾದಲೀಲೆ’:
ಈ ವಿಶ್ವವು ಕೃಷ್ಣನ ಕೊಳಲಿನ ಮೋಹಕ ನಾದವನ್ನು ಪಸರಿಸುವ ಕೋಲಾಟವಾಗಿದೆ. ಕೋಲಾಟಕ್ಕೆ ಗೆಳೆಯ, ಗೆಳತಿಯರ ಸಮೂಹ ಬೇಕು. ಅದರಂತೆ ಪರಮಾತ್ಮನಿಗೂ ಸಹ ವಿಶ್ವವು ಬೇಕು. (ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ). ಆದುದರಿಂದ ಈ ಗೀತೆಗೆ ‘ನಾದಲೀಲೆ’ ಎನ್ನುವ ಶೀರ್ಷಿಕೆ ಸಾರ್ಥಕವಾಗಿದೆ.

‘ನಾದಲೀಲೆ’ ಕವನಸಂಕಲನವು ೧೯೩೮ರಲ್ಲಿ ಪ್ರಕಟವಾಯಿತು.