Monday, October 8, 2018

ಅಕ್ರಮ-ವಿಕ್ರಮಎಂದಿನಂತೆ ಬೆಳಗಿನ ಆರು ಗಂಟೆಗೆ ಎದ್ದು ವಾಕಿಂಗ್ ಹೋಗಲು ತಯಾರಿ ಮಾಡುತ್ತಿದ್ದೆ. ಬಾಗಿಲು ತೆರೆಯುತ್ತಿರುವ ಸದ್ದಾಯಿತು. ನೋಡಿದರೆ ನನ್ನ ಕುಮಾರ ಕಂಠೀರವ ಅದಾಗಲೇ ಬೈಕ್ ಮೇಲೆ ಹತ್ತಿ ಕೂತಿದ್ದ. ಎಂದೂ ಮಧ್ಯಾಹ್ನದ ಒಳಗೆ ಏಳದವನು ಇಂದು ನೇಸರನ ಜೊತೆಗೇ ಎದ್ದಿದ್ದಾನಲ್ಲ ಎಂದು ಖುಶಿಯಾಯಿತು. ಪೀಯೂಸಿ ರಿಜಲ್ಟ ಬಂದಿದೆ, ಪಾಸಾಗಿದ್ದಾನೆ. ಬಹುಶಃ ಹುಡುಗರೆಲ್ಲರೂ ಕೂಡಿ ಎಲ್ಲಿಯಾದರೂ ಟ್ರಿಪ್ಪಿಗೆ ಹೊಂಟಾರೇನೊ ಎಂದುಕೊಂಡೆ.

, ಇದೇನೋ? ಎಲ್ಲಿಗೆ ಹೊಂಟೀ?” ಎಂದು ಕೇಳಿದೆ.
ಅಪ್ಪಾ, ‘ಎಲ್ಲಿಅಂತ ಕೇಳಿ, ಹೋಗೋ ಮುಂದ ಅಪಶಕುನ ಮಾಡಬ್ಯಾಡ.”, ಕುಮಾರ ಕಂಠೀರವ ಬೈಕ್ ಚಾಲೂ ಮಾಡಿಕೊಂಡು ಭರ್ರ ಅಂತ ಗಾಡಿ ಓಡಿಸಿದ.
ನಾನೂ ಅಷ್ಟು ಚಾ ಹೀರಿ, ವಾಕಿಂಗ್ ಮಾಡಿಕೋತ ಕರ್ನಾಟಕ ಕಾಲೇಜಿನ ಕಡೆಗೆ ನಡೆದೆ. ಆಶ್ಚರ್ಯ! ಅಲ್ಲಿ ಈಗಾಗಲೇ ಸಾವಿರಾರು ಜನಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತ್ಯೇಕವಾದ ಸರತಿಯ ಸಾಲಿನಲ್ಲಿ ನಿಂತಿದ್ದರು. ಓಹೋ, ಯಾರೋ ಸಿನಿಮಾ ಹೀರೋನ ಸಂಗೀತ ಸಂಜೆ ಇದ್ದಿರಬೇಕು; ಟಿಕೆಟ್ ತಗಿಯಾಕ ಈ ಮಂಗ್ಯಾಗೋಳು ಮುಂಜಮುಂಜಾನೆ ಬಂದಾವ ಅಂತ ಅನಸಿತು.

ಸಾಲಿನ ಕೊನೆಯಲ್ಲಿ ನಿಂತಿದ್ದ ಒಬ್ಬ ಹುಡುಗನ್ನ ಕೇಳಿದೆ: “ ಯಾಕೋ ತಮ್ಮಾ, ಯಾಕ ಈ ಪಾಟಿ ಗದ್ದಲೈತಿ ಇಲ್ಲಿ?”
ನನ್ನ ಭೋಲಾ ಪ್ರಶ್ನೆಗೆ ಮರುಕ ಪಡುತ್ತ, ಆ ಹುಡುಗ ಹೇಳಿದ:
ಅಂಕಲ್, ನಾವೆಲ್ಲಾ ಇಲ್ಲಿ LGBT Certificate ತಗೊಳ್ಳಾಕ ಬಂದೇವ್ರಿ.”

ನನಗೆ ಆಘಾತ! ಇಷ್ಟು ಮಂದಿ LGBT ಹುಡುಗೂರು, ಹುಡಿಗೇರೂ ಇದ್ದಾರ ಧಾರವಾಡದಾಗ! ಧಾರವಾಡದ, ಅರ್ಥಾತ್ ಕರ್ನಾಟಕದ, ಅರ್ಥಾತ್ ಭಾರತದ ಭವಿಷ್ಯ ಏನಾದೀತು?
ಕಣ್ಣಾಗಿನ ನೀರು ಒರಸಿಕೋತ ಕೇಳಿದೆ: “ ಹಿಂಗ್ಯಾಕೊ, ತಮ್ಮಾ?”

ಆ ಹುಡುಗ ನನ್ನೆಡೆಗೆ ಕನಿಕರದ ನೋಟ ಬೀರಿ ಹೇಳಿದ: ‘ಅಂಕಲ್, ನೀವು ಭೂತಕಾಲದಾಗನs ಬದಕತಿದ್ದೀರಿ. ವರ್ತಮಾನದ ಸುದ್ದಿ ನಿಮಗ ಅಪೂಟ ಗೊತ್ತಿಲ್ಲಾ. ಭಾರತ ಸರಕಾರದವರು LGBT ಜನಾನ minority ಅಂತ ಘೋಷಣಾ ಮಾಡ್ಯಾರ. ಅದರ ಲಗತ್ತನ ನಮ್ಮ ರಾಜ್ಯದ ಎಲ್ಲಾ ಶಾಸಕರು ಒಂದೊಂದು minority college ತಗದಾರ. ನಮಗ LGBT ಅಂತ certificate ಸಿಕ್ಕರ, ಅಲ್ಲಿ admission ಅರಾಮ ಸಿಗ್ತದ.”
ಎಲಎಲಾ, ಹಿಂಗೈತೇನು ಹಕೀಕತ್ತು! ಮತ್ತಿಷ್ಟು ಆಶ್ಚರ್ಯದಲೆ ಆ ಹುಡುಗನ್ನ ಹಿಡದು ಹಿಂಜೀದೆ:  ಹೌದಪಾ, ಆದರ ನಿಮಗ ಪ್ರಮಾಣಪತ್ರ ಕೊಡೋರ್ಯಾರು?”

ಅಂಕಲ್, ಅದಕ್ಕೊಂದು ಪ್ರೊಸೀಜರ್ ಐತ್ರಿ. ನಮ್ಮ ಸಾಲಿನ ಕಡೇಕ ಒಂದ ತಂಬೂ ಕಾಣತೈತೆಲ್ರಿ. ಅಲ್ಲಿ ಒಬ್ಬ ಡಾಕ್ಟರ ಕುಂತಾನ. ಆತ ನಮಗ ಪ್ರಮಾಣಪತ್ರ ಕೊಡತಾನ. ಹುಡಿಗೇರ ಸಾಲಿನ್ಯಾಗ ಒಬ್ಬಾಕಿ ಡಾಕ್ಟರತಿ ಕುಂತಾಳ. ಆಕಿ ಹುಡಿಗೇರಿಗೆ ಪ್ರಮಾಣಪತ್ರ ಕೊಡತಾಳ.”
ಇಷ್ಟಾದರ ಆತ? ಮತ್ತ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಬ್ಯಾಡೇನು? “
ಅಂಕಲ್, LGBT ಅನ್ನೋದs ಒಂದ ಜಾತಿ ಅಲ್ಲೇನ್ರಿ? ಉಳದ ಜಾತಿ, ಆದಾಯ ತಗೊಂಡು ಏನ ಮಾಡ್ತೀರಿ?”
ಭಲೇ, ಭಲೆ! ನಮ್ಮ ಸರಕಾರದವರು ಒಂದ ವಿಷಯಕ್ಕರ ಜಾತ್ಯತೀತ ಆಗ್ಯಾರಲ್ಲ; ಸಂತೋಷ ಆತು.”
ಆದರ ಅಂಕಲ್, ಇಷ್ಟಕ್ಕ ಮುಗೀಲಿಲ್ಲರಿ. ನಾವು ನಮ್ಮ ಪ್ರದೇಶದ ಎಮ್ಮೆಲ್ಲೇನ ಕಡಿಂದ ಒಂದ ಪ್ರಮಾಣಪತ್ರ ತಗೋ ಬೇಕಾಗ್ತದ.”
ಹೌದ? ಏನಂತ?”
ವಯಸ್ಸಿಗೆ ಬಂದಾಗಿನಿಂದ ಈ ಹುಡುಗ/ಹುಡುಗಿ LGBT ಇದ್ದಾನ/ಇದ್ದಾಳ. ನನ್ನ ಸ್ವಾನುಭವದಿಂದ ನನಗ ಈ ವಿಷಯ ಗೊತ್ತ ಅದ ಅಂತ ಎಮ್ಮೆಲ್ಲೆ ಪ್ರಮಾಣಪತ್ರ ಕೊಡಬೇಕಾಗ್ತದರಿ.”
ಈ ಹುಡುಗನಿಗೆ ‘Best of luck’ ಅಂತ ವಿಶ್ ಮಾಡಿ, ಮನೀ ಕಡಿಗೆ ಹೊರಳಿದೆ.
ಹೊತ್ತು ಏರೋದರೊಳಗ ಮನೀ ಮುಟ್ಟಿ ದೇವರ ಪೂಜಾ ಅಷ್ಟು ಮುಗಸಬೇಕಲ್ಲ.

ಮನೀಗೆ ಬರೋದರೊಳಗ ಕುಮಾರ ಕಂಠೀರವ ನಕ್ಕೋತ ಕುಂತಿದ್ದ.
ಯಾಕಪಾ, LGBT ಆಗೇ ಬಂದೇನು?” ಅಂತ ಕೇಳಿದೆ.
ನಿನ್ನ ಮಗಾ ಅಂದರ ನಿನ್ಹಂಗ ಅಲ್ಲೇನಪಾ ನಾನು? ಡಾಕ್ಟರ ಪ್ರಮಾಣಪತ್ರ ಹಿಡಕೊಂಡ ಬಂದೇನಿ! ಬರೇ ಎರಡು ಸಾವಿರ ಅಷ್ಟ ಖರ್ಚು ಬಂತು.” ಕಂಠೀರವನ ಉದ್ಗಾರ.
ಇನ್ನ ಎಮ್ಮೇಲೇಂದು?”
ಅಪ್ಪಾ, ಅದಕ್ಕೊಂದು ಐದು ಸಾವಿರ ಹತ್ತದ. ಇವತ್ತು ರೊಕ್ಕಾ ತಂದು ಕೊಡು. ಇವತ್ತs ಎಮ್ಮೇಲೇನ ಭೆಟ್ಟಿ ಆಗಿ ಪ್ರಮಾಣಪತ್ರ ಇಸಕೊಂಡು ಬರತೇನಿ. ಆಮ್ಯಾಲೆ ಕಾಲೇಜಿನ admission. ಹಾ, ಅದರ ಖರ್ಚು ಬ್ಯಾರೇನs ಐತೆಪ್ಪಾ.”

ದಿನಾ ಉರಳಿದವು. ಮಗಾ ಗ್ರ್ಯಾಜುಯೇಟ್ ಆದ. ನೌಕರಿ ಹುಡುಕತಿದ್ದ. ಒಂದ ದಿವಸ ಒಬ್ಬ ಹುಡುಗನ ಜೊತಿಗೆ ಮನಿಗೆ ಬಂದ.
ಅಪ್ಪಾ ಇವಾ ನನ್ನ boyfriend. ಇವನ ಜೋಡಿ ನನ್ನದು registered marriage ಆಗೋದದ. ನೀನು ಮತ್ತ ಅಮ್ಮ ಇಬ್ಬರೂ ಅಲ್ಲಿ ಕಚೇರಿಗೆ ಬಂದು ಸಾಕ್ಷಿ ಅಂತ ಸಹಿ ಹಾಕಬೇಕು.”
ನನ್ನ ಸಿಟ್ಟು ನೆತ್ತಿಗೇರಿತು.
ಥೂ ಹಾಳಾದವನ. ಸಲಿಂಗ ವಿವಾಹ ಆಗೋದಲ್ಲದ, ನನಗ ಸಾಕ್ಷಿ ಆಗು ಅಂತ ಕರೀಲಿಕ್ಕೆ ಹತ್ತೀಯಾ. ನನ್ನ ಎದುರಿಗೆ ನಿಂದರಬ್ಯಾಡ. ಮನೀ ಬಿಟ್ಟು ಹೋಗು.” ಅಂತ ಚೀರಿದೆ.
ಅಪ್ಪಾ, ಶಾಂತ ಆಗು. ಸರಕಾರಿ ನೌಕರಿ ಒಳಗ LGBTಯವರಿಗೆ ರಿಜರ್ವೇಶನ್ ಅದ. ಅದಕ್ಕs ನಾವಿಬ್ಬರೂ ಸಲಿಂಗ ವಿವಾಹ ಮಾಡಿಕೋತೇವಿ.”
ಸಿಟ್ಟಿನಿಂದ ಕುದೀಲಿಕ್ಕೆ ಹತ್ತಿದೆ ನಾನು.
ಮಗನs, ನೀ ಏನೊ ನೌಕರಿ ಸಲುವಾಗಿ ಸಲಿಂಗವಿವಾಹ ಆದಿ; ಮುಂದ ನಮ್ಮ ವಂಶ ಹ್ಯಾಂಗ ಬೆಳೀಬೇಕಲೆ, ಭಾಡ್ಯಾ!”
ಅಪ್ಪಾ, ನಮ್ಮ ಹಂಗ ಹುಡಿಗೇರೂ ಸಹ ಸಲಿಂಗವಿವಾಹ ಆಗಲಿಕ್ಕೆ ಹತ್ಯಾರ, ನೌಕರಿ ಸಲುವಾಗಿ.
ಇಂಥಾ ಇಬ್ಬರು ಹುಡಿಗೇರ ಜೋಡಿ ನಾವು ಈಗಾಗಲೇ ಮಾತಾಡಿ, ಅವರಿಬ್ಬರನೂ ಬುಕ್ ಮಾಡಿಕೊಂಡೇವಿ. ಅವರ ಪೈಕಿ ಒಬ್ಬ ಹುಡುಗಿ ಜೋಡಿ ನಾ ಸಂಸಾರ ಮಾಡತೇನಿ; ಮತ್ತೊಬ್ಬಾಕಿ ಜೋಡಿ ಇಂವಾ ಸಂಸಾರ ಮಾಡತಾನ. ನಿನ್ನ ವಂಶ ಸುರಳೀತ ಬೆಳೀತದ; ಘಾಬರಿ ಆಗಬ್ಯಾಡ.”
ಅವರ ಧರ್ಮ ಯಾವದೊ ಏನೋ? ಧಡ್ಡಮಂಗ್ಯಾನ ಹಂಗ ಮಾಡತೀಯಲ್ಲೊ!”
ಅಪ್ಪಾ, ಒಂಚೂರು ಸೆಕ್ಯೂಲರ್ ಆಗು…. ನನ್ನ ಸಲುವಾಗಿ!  ನಮ್ಮ ನಾಲ್ಕೂ ಮಂದೀದು ಬ್ಯಾರೆ ಬ್ಯಾರೆ ಧರ್ಮ, ಏನಪಾ. ಇದರಿಂದ ನಾವೆಲ್ಲಾರೂ ಸೆಕ್ಯೂಲರ ಆಗತೇವಪ್ಪಾ. ನಮಗ, ಮುಂದ ಹುಟ್ಟೋ ನಮ್ಮ ಮಕ್ಕಳಿಗೆ ಸರಕಾರಿ ಸವಲತ್ತು ಸಿಗತಾವಪ್ಪಾ.”
ಅದು ಹ್ಯಾಂಗೊ? ನಿಮ್ಮ ಅಕ್ರಮ ಸಂಬಂಧದ ಮಕ್ಕಳಿಗೆ ಹಕ್ಕು ಎಲ್ಲಿಂದ ಬರತದ?”
ಅಪ್ಪಾ, ನಮ್ಮ ಪರಮೋಚ್ಚ ನ್ಯಾಯಾಲಯನ ಹೇಳೇದಲ್ಲಾ. ಮದುವಿ ಆದವರು ಅಕ್ರಮ ಸಂಬಂಧ ಮಾಡಿದರ, ಅದನ್ನ ಸಕ್ರಮ ಅಂತ ತಿಳ್ಕೋಬೇಕು. ಅವರಿಗೆ ಹುಟ್ಟಿದ ಹುಡುಗೂರು ಸುದ್ದಾ ಸಕ್ರಮ ಸಂತಾನ ಆಗತಾರ ಅಂತ! ”

ನಾ ಬೆಪ್ಪನಂತೆ ನಿಂತೆ. ನನ್ನ ಸುಪುತ್ರ ನನ್ನನ್ನು ನೋಡಿ ಕಿಸಿಕಿಸಿ ನಕ್ಕ.