Showing posts with label ಸಾಹಿತ್ಯ/ ಉಮೇಶ ದೇಸಾಯಿ. Show all posts
Showing posts with label ಸಾಹಿತ್ಯ/ ಉಮೇಶ ದೇಸಾಯಿ. Show all posts

Sunday, April 18, 2021

‘ಅನುಪಮಾಆಖ್ಯಾನ ಹಾಗು ಇತರೆ ಕಥೆಗಳು’...........ಉಮೇಶ ದೇಸಾಯಿ

ಉಮೇಶ ದೇಸಾಯಿಯವರು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪರಿಸರದ ಸುಳಿಗಾಳಿಯನ್ನು ಸಂಚಲಿಸಿದವರು. ಈ ನನ್ನ ಮಾತಿಗೆ ಕೆಲವೊಂದು ಆಕ್ಷೇಪಣೆಗಳು ಬರಬಹುದು. ದೇಸಾಯಿಯವರಿಗಿಂತ ಮೊದಲು ಆಧುನಿಕತೆ ಕನ್ನಡ ಸಾಹಿತ್ಯದಲ್ಲಿ ಇರಲಿಲ್ಲವೆ; ಕನ್ನಡ ಸಾಹಿತಿಗಳು ಆಧುನಿಕರಿರಲಿಲ್ಲವೆ?; ಇತ್ಯಾದಿ. ಯಾರು ಇಲ್ಲವೆನ್ನುತ್ತಾರೆ? ನನ್ನ ಹೇಳಿಕೆಯನ್ನು ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿರಿ.

ಆಧುನಿಕತೆ ಪದವೇಅಧುನಾಎನ್ನುವ ಸಂಸ್ಕೃತ ಪದದಿಂದ ಬಂದಿದೆ. ‘ಅಧುನಾಪದದ ಅರ್ಥಈ ಕ್ಷಣದ’, ಅಂದರೆ  `up to date’ ಎನ್ನುವ ಅರ್ಥ. ಕನ್ನಡ ಸಾಹಿತ್ಯದಲ್ಲಿ up-to-date ಆಗಿರುವ ಸಾಹಿತ್ಯವನ್ನು ಯಾವ ಸಾಹಿತಿಗಳು ರಚಿಸಿದ್ದಾರೆ, ಹೇಳಿ. ನವೋದಯ ಕಾಲದ ಸಾಹಿತ್ಯವು ಹೊಸ ಭಾಷೆಯನ್ನು ಕಟ್ಟಿತು; ಹೊಸ ಶೈಲಿಯನ್ನು ಕಟ್ಟಿತು. ಆದರೆ ಈ ಸಾಹಿತ್ಯದ ತಿರುಳು ಮಾತ್ರ ಹಳೆಯ ಹೂರಣವೇ, ಅರ್ಥಾತ್ ಆದರ್ಶ, ನಿಸರ್ಗ ಇತ್ಯಾದಿ. ಮುಂಬಯಿ ನಗರದಲ್ಲಿರುವ ಸಾಹಿತಿಗಳಲ್ಲಿ ಕೆಲವರು ಕರ್ನಾಟಕದ ಸಿದ್ಧಭಾಷೆಯನ್ನು ಬಿಟ್ಟು ಬೇರೆ ರೀತಿಯಲ್ಲಿ ಬರೆದಿದ್ದರೆ ಅದಕ್ಕೆ ಮುಂಬಯಿ ನಗರವೇ ಕಾರಣವಾಗಿದೆ. ಇದರಂತೆಯೇ ಕೊಡಗಿನ ಗೌರಮ್ಮನವರು ಆಧುನಿಕವಾಗಿ ಬರೆದದ್ದರ ಕಾರಣವೆಂದರೆ ಅವರು ಬೆಂಗಳೂರು, ಮೈಸೂರುಗಳಿಂದ ದೂರವಾಗಿದ್ದ ಕೊಡಗಿನಲ್ಲಿ ಇದ್ದದ್ದರಿಂದ. ಕನ್ನಡದಲ್ಲಿ ನಾನು ಓದಿದ್ದ ಮೊದಲ ಆಧುನಿಕ ಕಥೆಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದವರುಆನಂದಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಏ. ಸೀತಾರಾಮ ಎನ್ನುವ ಖ್ಯಾತ ಲೇಖಕರು. ಈ ಕಥೆಯನ್ನು ಇವರು ಸುಮಾರು ೬೫ ವರ್ಷಗಳ ಹಿಂದೆ ಆನುವಾದಿಸಿರಬಹುದು.

೬೫ ವರ್ಷಗಳ ಹಿಂದಿನ ಮರಾಠಿ ಸಾಹಿತ್ಯವು ಈಗಿನ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚು ಆಧುನಿಕವೆ? ನಾನುಆಧುನಿಕ ಪರಿಸರದ ಬಗೆಗೆ ಹೇಳುತ್ತಿದ್ದೇನೆ ಎನ್ನುವುದನ್ನು ದಯವಿಟ್ಟು ನೆನಪಿಸಿಕೊಳ್ಳಿರಿ. ಮುಂಬಯಿ ನಗರಕ್ಕೆ ಭಾರತದ ಮೂಲೆ ಮೂಲೆಗಳಿಂದ ವಿಭಿನ್ನ ಮಾದರಿಯ ಜನರು ವಲಸೆ ಬರುತ್ತಿದ್ದರು. ಅವರ ಮಿಲನದಿಂದ ಮುಂಬಯಿ ನಗರವು ಆಧುನಿಕ ನಗರವಾಯಿತು. ಈ ಭಾಗ್ಯವು ಭಾರತದ ಇತರ ನಗರಗಳಿಗೆ ಸಿಕ್ಕಿಲ್ಲ!

ಕನ್ನಡ ಸಾಹಿತ್ಯದಲ್ಲಿಆಧುನಿಕತೆಇಲ್ಲವೇ ಇಲ್ಲವೆ? ಯಾಕಿಲ್ಲ? ಎಚ್. ಸಾವಿತ್ರಮ್ಮ, ತ್ರಿವೇಣಿ ಇವರಂತಹ ಲೇಖಕಿಯರು ತಮ್ಮ ಸಾಹಿತ್ಯದಲ್ಲಿ ಹೆಣ್ಣಿನ ಮನಸ್ಸನ್ನು ಬಿಚ್ಚುಬೀಸಾಗಿ ಚರ್ಚಿಸಿದ್ದಾರೆ. ಆದರೆ ಕಥೆಗಳ ಪರಿಸರಮಾತ್ರ ಸಾಂಪ್ರದಾಯಿಕ ಪರಿಸರವೇ!

ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ದೇವನೂರು ಮಹಾದೇವರಂತಹ ಶ್ರೇಷ್ಠ ಕತೆಗಾರರು ನಮ್ಮವರು. ಅನಂತಮೂರ್ತಿಯವರು ತಮ್ಮ ವೈಯಕ್ತಿಕ ದ್ವಂದವನ್ನು ಸಾಹಿತ್ಯದಲ್ಲಿ ಪರಿವರ್ತಿಸಿ ಹೆಸರು ಪಡೆದರು. ಲಂಕೇಶರು ತಮ್ಮ ಪೂರ್ವಭಾಗದಲ್ಲಿ ಶ್ರೇಷ್ಠ ಕತೆಗಾರರಾಗಿದ್ದರೂ ಸಹ ಉತ್ತರಭಾಗದಲ್ಲಿ ಕೆಳಗೆ ಜಾರಿದರು. ಭೈರಪ್ಪನವರು ಸ್ತ್ರೀಯರನ್ನು ಎರಡನೆಯ ದರ್ಜೆಯ, ಪುರುಷವಿಧೇಯಿ ಜೀವಿಗಳನ್ನಾಗಿ ಮಾಡುವ ಪಕ್ಕಾ ಸಂಪ್ರದಾಯವಾದಿಗಳು. ಇವರಲ್ಲಿ ಯಾರೂಆಧುನಿಕ ಪರಿಸರವನ್ನು ತಮ್ಮ ಸಾಹಿತ್ಯದಲ್ಲಿ ಸೃಷ್ಟಿಸಿಲ್ಲ.

ಇಂತಹ ಒಂದು ಸಾಹಿತ್ಯಿಕವಾಗಿ ಉಸುರುಗಟ್ಟಿಸುವ ವಾತಾವರಣದಲ್ಲಿ ಆಧುನಿಕ ಪರಿಸರವನ್ನು ಕೆಲವೇ ಸಾಹಿತಿಗಳು ಸೃಷ್ಟಿಸಿದ್ದಾರೆ. ಇವರಲ್ಲಿ ನಾನು ಸಿಂಧೂ ರಾವ, ತೇಜಸ್ವಿನಿ ಭಟ್ಟ, ಶ್ರೀದೇವಿ ಕಳಸದ ಹಾಗು ಜಯಶ್ರೀ ದೇಶಪಾಂಡೆ ಇವರನ್ನು ನೆನೆಯುತ್ತೇನೆ. ಆದರೆ ಇಲ್ಲಿಯೂ ಸಹ ಇವರ ಎಲ್ಲ ಕಥೆಗಳು ಆಧುನಿಕ ವಾತಾವರಣದ ಕೊಡುಗೆಗಳಲ್ಲ!

ಉಮೇಶ ದೇಸಾಯಿಯವರು ಆಧುನಿಕ ಮರಾಠಿ ಸಾಹಿತ್ಯವನ್ನು ಓದಿಕೊಂಡವರು. ಪುಣೆ, ಮುಂಬಯಿ ಮೊದಲಾದ ವಿಶಾಲ ನಗರಗಳೊಡನೆ ಸಂಪರ್ಕ ಹೊಂದಿದವರು. ಇದು ಇವರ ಸಾಹಿತ್ಯವನ್ನುಆಧುನಿಕ ಪರಿಸರದ ಸಾಹಿತ್ಯವನ್ನಾಗಿ ಮಾಡಲು ನೆರವಾಗಿದೆ.

ಇವರು ಇತ್ತೀಚೆಗೆ ಪ್ರಕಟಿಸಿದಅನುಪಮಾ ಆಖ್ಯಾನವು ಸಂಪೂರ್ಣವಾಗಿ ಆಧುನಿಕ ಪರಿಸರದ ಕಥೆ. ಈ ನೀಳ್ಗತೆಯ ಬಗೆಗೆ ನಾನು ಈಗಾಗಲೇ ಟಿಪ್ಪಣಿಯನ್ನು ಬರೆದಿದ್ದು, ಅದನ್ನು ನೋಡಲು ಈ ಕೊಂಡಿಯನ್ನು ಬಳಸಿರಿ: https://sallaap.blogspot.com/2020/09/blog-post.html

ಅನುಪಮಾ ಆಖ್ಯಾನಕಥಾಸಂಕಲನದಲ್ಲಿ ಇನ್ನೂಐದು ಕಥೆಗಳಿವೆ.

ಅಪ್ಪ, ಅಮ್ಮ ಇವರಿಬ್ಬರೂ ದುಡಿಯುತ್ತಿರುವ ಕಥೆಆಯ್ಕೆಗಳು’. ಇವರ ಮಗುವಿನ ಮಾನಸಿಕ ಚಿತ್ರಣವೇ ಈ ಕಥೆಯ ವಿಷಯ. ‘ಬಿಡುಗಡೆಕಥೆಯ ವಿಷಯ ಇನ್ನೂ ಗಂಭೀರವಾದದ್ದು. ಚಿತ್ರನಟಿಯೊಬ್ಬಳ ಮಗಳ ಲೈಂಗಿಕ ಆಯ್ಕೆ ಹಾಗು ಅವಳ ಅಮ್ಮ ಅಂದರೆ ಆ ಚಿತ್ರನಟಿ ತೆಗೆದುಕೊಳ್ಳುವ ನಿರ್ಣಯ ಈ ಕಥೆಯ ವಸ್ತು. ‘ದಾಟುಕಥೆಯಲ್ಲಿ ಮಧ್ಯಮ ವರ್ಗದ ತಂದೆಯೊಬ್ಬ  ತನ್ನ ಮಗಳ ಲೈಂಗಿಕ ಆಯ್ಕೆಯನ್ನು ಒಪ್ಪಿಕೊಳ್ಳುವ ವಿಷಯವಿದೆ. ‘ದೀಪದ ಕೆಳಗಿನ ಕತ್ತಲೆಯು ಸಂಕೀರ್ಣವಾದ ಕಥಾವಸ್ತುವನ್ನು ಹೊಂದಿದೆ. ‘ವಿದಾಯಕಥೆಯಲ್ಲಿ ಆಧುನಿಕ ಪರಿಸರ ಇದೆ ಎಂದು ಹೇಳಲು ಆಗಲಾರದು. ಆದರೆ ಲೇಖಕರ ಮನೋಧರ್ಮ ಮಾತ್ರ ಆಧುನಿಕವಾಗಿಯೇ ಇದೆ.

ಆಧುನಿಕ ಪರಿಸರದ ಕಥೆಗಳನ್ನು ನಮಗೆ ಕೊಡುತ್ತಿರುವ ಉಮೇಶ ದೇಸಾಯರಿಗೆ ಅಭಿನಂದನೆಗಳು. ಇನ್ನಿಷ್ಟು ಇಂತಹ ಕಥೆಗಳನ್ನು ಅವರು ನಮಗೆ ನೀಡಲಿ ಎಂದು ಹಾರೈಸುತ್ತೇನೆ.

Saturday, September 12, 2020

ಉಮೇಶ ದೇಸಾಯಿಯವರ ‘ಅನುಪಮಾ ಆಖ್ಯಾನ’

ಶ್ರೀ ಉಮೇಶ ದೇಸಾಯಿಯವರ `ಅನುಪಮಾ ಆಖ್ಯಾನ’ವು ಶ್ರಾವ್ಯಕೃತಿಯಾಗಿ ಡಿಜಿಟಲ್ ರೂಪದಲ್ಲಿ ಹೊರಬಂದಿದೆ. ಈ ಪ್ರಯೋಗಶೀಲ ಸಾಹಿತ್ಯಕರ್ಮಿಯ ಹೊಚ್ಚ ಹೊಸ ಪ್ರಯೋಗವಿದು. ಇದಕ್ಕೂ ಮೊದಲು ಅವರು ಗಝಲ್‘ಗಳನ್ನು, ಕಥೆಗಳನ್ನು ಬರೆದಿದ್ದರು. ಅಷ್ಟಕ್ಕೇ ತೃಪ್ತರಾಗದ ದೇಸಾಯರು ‘ಮೈತ್ರಿ ಪ್ರಕಾಶನ’ ಎನ್ನುವ ತಮ್ಮದೇ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ತನ್ಮೂಲಕ ಹೊಸ ಲೇಖಕರ ರಚನೆಗಳನ್ನು ಸಂಕಲಿಸಿ ಹೊರತರುವ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದರು. ಬ್ಯಾಂಕ್ ಉದ್ಯೋಗಿಯಾಗಿ ನೌಕರಿ ಮಾಡುತ್ತಲೇ, ಸಾಹಿತ್ಯಕೃತಿಗಳನ್ನು ಬರೆಯುವುದು, ಬರೆಯಿಸುವುದು, ಪ್ರಕಾಶಿಸುವುದು ಇವುಗಳಲ್ಲಿ ನಿರತರಾದ, ಎಡವಯಸ್ಸಿನ ಈ ಸಾಹಸಜೀವಿಯನ್ನು ನಾನು ಬೆರಗಿನಿಂದ ನೋಡುತ್ತೇನೆ. ಪ್ರತಿಯೋರ್ವ ಸಾಹಿತಿಯ ಒಳಗೆ ಒಂದು ಪ್ರೇರಕ ಶಕ್ತಿ ಕೆಲಸ ಮಾಡುತ್ತಿರುತ್ತದೆ. ಉಮೇಶ ದೇಸಾಯಿಯವರು ನಮ್ಮ ಸಮಾಜದ ಸಾಂಪ್ರದಾಯಿಕ ಮುಖವನ್ನು ಗಮನಿಸಿದವರು. ಅದರಂತೆಯೇ ಆಧುನಿಕ ಸಮಾಜದಲ್ಲಿ ಪ್ರವರ್ತಿಸುತ್ತ, ಹೊಸ ಮಾದರಿಯ ಮುಖವನ್ನೂ ನೋಡಿದವರು. ಮರಾಠೀ ಸಾಹಿತ್ಯದಲ್ಲಿಯೂ ಗತಿ ಇದ್ದವರು. ಹೀಗಾಗಿ ಸಮಾಜದ ವಿವಿಧ ಮುಖಗಳ ಒಳಿತು, ಕೆಡುಕಗಳ ಪರಿಚಯ ಅವರಿಗೆ ಮನೋಗತವಾಗಿದೆ; ಅವರ ಸಾಹಿತ್ಯಕ್ಕೆ ಇದು ಪ್ರಧಾನ ಪ್ರೇರಕ ಶಕ್ತಿಯಾಗಿದೆ. ‘ಅನುಪಮಾ ಆಖ್ಯಾನ’ವು ಈ ವಿವಿಧ ಶಕ್ತಿಗಳ ಘರ್ಷಣೆಯ ನಾಟಕವಾಗಿದೆ. ‘ನಾಟಕ’ ಎಂದೆನಲ್ಲವೇ ನಾನು? ‘ಅನುಪಮಾ ಆಖ್ಯಾನ’ವು ರಚನೆಯಲ್ಲಿ ನಾಟಕವಲ್ಲ. ಇದನ್ನು ಕಿರುಕಾದಂಬರಿ ಎನ್ನಬೇಕೊ ಅಥವಾ ನೀಳ್ಗತೆ ಎನ್ನಬೇಕೊ ಎನ್ನುವ ಸಂದಿಗ್ಧತೆಯಲ್ಲಿ ಸಿಲುಕಲು ನಾನು ಬಯಸುವುದಿಲ್ಲ. ಆದರೆ ‘ಅನುಪಮಾ ಆಖ್ಯಾನ’ವು ಒಂದು ಪ್ರಭಾವಶಾಲೀ, ಪರಿಣಾಮಕಾರೀ ಕಥಾನಕ ಎಂದಷ್ಟೇ ಹೇಳಲು ಇಚ್ಛಿಸುತ್ತೇನೆ. ಕೇವಲ ೭೧೮೯ ಪದಗಳನ್ನು ಒಳಗೊಂಡ ಈ ಕಥಾನಕವನ್ನು ನಾಲ್ವರು ವ್ಯಕ್ತಿಗಳು ನಿರೂಪಿಸಿದ್ದಾರೆ. ಈ ತಂತ್ರದಿಂದಾಗಿ ಅವರವರು ಭಾವಿಸುವ ಸತ್ಯವನ್ನು ಅವರವರ ಬಾಯಿಯಿಂದಲೇ ಹೇಳಿಸಲು ದೇಸಾಯರಿಗೆ ಸಾಧ್ಯವಾಗಿದೆ. ಇವರೆಲ್ಲರನ್ನು ಸಾಕ್ಷಿರೂಪದಲ್ಲಿ ನೋಡುವ ಮತ್ತೊಂದು ವ್ಯಕ್ತಿ ಇಲ್ಲಿದೆ. ಆದರೆ ಅವಳು ನ್ಯಾಯಾಧಿಶನ ಪಾತ್ರವನ್ನು ವಹಿಸಲು ಬಯಸುವದಿಲ್ಲ. ಅವಳ ಕೆಲಸವೆಂದರೆ ಇವರೆಲ್ಲರಿಗೂ ವಾಸ್ತವತೆಯನ್ನು ತೋರಿಸುವ ಹಾಗು ಆ ಮೂಲಕ ಇವರ ತೊಡಕುಗಳನ್ನು ಬಿಡಿಸುವ ಕಾರ್ಯ. ಇದರಿಂದಾಗಿ ಸತ್ಯದ ವಿವಿಧ ಮುಖಗಳನ್ನು ಯಾವುದೇ ಪಕ್ಷಪಾತವಿಲ್ಲದೇ ನಿರೂಪಿಸಲು ಲೇಖಕರಿಗೆ ಸಾಧ್ಯವಾಗಿದೆ.ಇದು ನಮ್ಮ ಸಮಾಜದ ಸಮಸ್ಯೆ. ತಲೆಮಾರುಗಳ ನಡುವೆ ನಡೆಯುವ ತಿಕ್ಕಾಟದ ಸಮಸ್ಯೆ. ಈ ತಿಕ್ಕಾಟವನ್ನು ಬಗೆಹರಿಸುವ ಜಾಣ್ಮೆಯ ಅಗತ್ಯತೆಯ ಕಥೆ. ಲೇಖಕನೋರ್ವನು ತನ್ನ ಭಾವನೆಯನ್ನು ಹೇಳಲು, ತನ್ನ ಕಾಣ್ಕೆಯನ್ನು ಇತರರಿಗೆ ಕಾಣಿಸಲು ಕಥೆಗಳನ್ನು ಹೆಣೆಯುತ್ತಾನೆ. ಈ ಹೆಣಿಕೆಗೆ ಅಗತ್ಯವೆನಿಸುವ ಪಾತ್ರಗಳನ್ನು ರೂಪಿಸಲು, ಘಟನೆಗಳನ್ನು ನಿರೂಪಿಸಲು ಆತನು ಸರ್ವತಂತ್ರ ಸ್ವತಂತ್ರನು. ದೇಸಾಯರ ‘ಅನುಪಮಾ ಆಖ್ಯಾನ’ದಲ್ಲಿ ನಾಲ್ಕೇ ನಾಲ್ಕು ಪ್ರಧಾನ ಪಾತ್ರಗಳಿವೆ. ಅನುಪಮಾ ಬುದ್ಧಿವಂತೆ; ಅತ್ಯಾಧುನಿಕ ಮನೋಭಾವದ ತರುಣಿ. ಅವಳ ತಂದೆ ಮಗಳನ್ನು ಅಚ್ಛೆಯಿಂದ ಬೆಳೆಸಿದ್ದಾರೆ. ಮೂಲತಃ ಧಾರವಾಡದವಳಾದ ಇವಳು ಬೆಂಗಳೂರಿನ ಒಂದು ದೊಡ್ಡ I.T.ಕಂಪನಿಯಲ್ಲಿ ಮಹತ್ವದ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳು ಮ್ಯಾಟ್ರಿಮೋನಿಯಲ್ ಸಂಸ್ಥೆಯೊಂದರ ಮೂಲಕ ಅನಿಯನ್ನು ಮದುವೆಯಾಗುತ್ತಾಳೆ. ಇವರಿಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡೇ ಮದುವೆಯಾಗಿದ್ದಾರೆ. ಆದರೆ ಅನುಪಮಾಳ ಗಂಡ ತಂದೆಯಾಯಿಯರಿಗೆ ಅತ್ಯಂತ ವಿಧೇಯನಾಗಿ ನಡೆಯುತ್ತಿರುವ ಹುಡುಗ. ಇವನ ಅಪ್ಪ ಸರ್ವಾಧಿಕಾರಿ ವರ್ತನೆಯ, ಸಂಪ್ರದಾಯನಿಷ್ಠ ಮನುಷ್ಯ. ಸರಿ, ಇವರ ನಡುವೆ ತಿಕ್ಕಾಟ ನಡೆಯಲು ಇಷ್ಟು ಸಾಕಲ್ಲವೆ? ಲೇಖಕರ ಪ್ರತಿಭೆ ಇರುವುದು ಇಂತಹ ಘಟನೆಗಳಿಗೆ ಸರಿಯಾದ ಸಾಮಗ್ರಿಯನ್ನು ಹುಡುಕುವದರಲ್ಲಿ ಹಾಗು ನಿರೂಪಿಸುವದರಲ್ಲಿ. ದೇಸಾಯರಲ್ಲಿ ಈ ಪ್ರತಿಭೆ ಹೇರಳವಾಗಿದೆ. ಹಾಗಾಗಿಯೇ ಈ ಸಾಹಿತ್ಯಕೃತಿಯು ರೋಚಕವಾಗಿದೆ ಹಾಗು convincing ಆಗಿದೆ. ದೇಸಾಯರ ಕೃತಿಗಳ ವೈಶಿಷ್ಟ್ಯವೆಂದರೆ, ಅವರ ಕಥೆಗಳಲ್ಲಿಯ ಪಾತ್ರಗಳು. ಅವರ ಪಾತ್ರಗಳು ಜೀವಂತಿಕೆ ತುಂಬಿದ ಪಾತ್ರಗಳು. ಅವುಗಳ ಓಡಾಟಗಳನ್ನು ನಾವು ನೋಡಬಲ್ಲೆವು; ಅವುಗಳ ಭಾವನೆಗಳು ನೇರವಾಗಿ ನಮ್ಮ ಹೃದಯದಲ್ಲಿ ಇಳಿಯುತ್ತವೆ. ಅವರ ಪಾತ್ರಗಳಲ್ಲಿ ಚಲನಶೀಲತೆ ಇರುತ್ತದೆ. ಅವರ ಭಾಷೆಯೂ ಹಾಗೇ ಇದೆ. ನಿಸ್ಸತ್ವ ಪಾತ್ರವನ್ನು ಹಾಗು ನಿಸ್ಸತ್ವ ಭಾಷೆಯನ್ನು ದೇಸಾಯರ ಕೃತಿಗಳಲ್ಲಿ ನಾವು ಕಾಣಲಾರೆವು.ಇದರಂತೆಯೇ ವಾತಾವರಣವನ್ನು ನಿರ್ಮಿಸುವದರಲ್ಲಿಯೂ ದೇಸಾಯರ ಪ್ರತಿಭೆಯನ್ನು ನಾವು ನೋಡಬಹುದು. ಕಥಾನಕಕ್ಕೆ ಅವಶ್ಯವಾದ ವಿವಿಧ ಪ್ರಸಂಗಗಳ ವಿವರಗಳು ಸಹಜವಾಗಿವೆ. ಈ ಕೃತಿಯ ವಿವರಗಳನ್ನು ನಾನು ಮುಂಗಡವಾಗಿಯೇ ನೀಡುವುದು ಸರಿಯಲ್ಲ. ಈ ಕೃತಿಯನ್ನು ಓದಬಯಸುವ ಓದುಗರ ಆಸಕ್ತಿಯನ್ನು ಹಾಗು ಕುತೂಹಲವನ್ನು ಖಿಲಗೊಳಿಸದೇ ಇಡುವುದು ನನ್ನ ಕರ್ತವ್ಯ. ಆದುದರಿಂದ ಇಷ್ಟಕ್ಕೇ ನಾನು ವಿರಮಿಸುತ್ತೇನೆ. ದೇಸಾಯರ ಕೃತಿಗಳನ್ನು ಮೆಚ್ಚುವ ಓದುಗರಿಗೆ, ‘ಇಗೋ ಇಲ್ಲಿದೆ ಅವರ ಮತ್ತೊಂದು ರೋಚಕ ಕೃತಿ’ ಎಂದಷ್ಟೇ ಹೇಳಬಯಸುತ್ತೇನೆ.

Tuesday, July 30, 2019

‘ಅನಂತಯಾನ’....ಉಮೇಶ ದೇಸಾಯಿಯವರ ಹೊಸ ಕಾದಂಬರಿ



ಉಮೇಶ ದೇಸಾಯಿಯವರು ಹೊಸ ಕಾದಂಬರಿ ಬರೀತಿದ್ದಾರ ಅಂತ ಗೊತ್ತಾತು. ಆಹೊತ್ತಿನಿಂದ ಅದನ್ನ ಓದಲಿಕ್ಕೆ ನಾ ಚಡಪಡಿಸಲಿಕ್ಕೆ ಹತ್ತಿದೆ. ದೇಸಾಯರದು ವೈವಿಧ್ಯಪೂರ್ಣ ಸಾಹಿತ್ಯ. ಗಝಲಗಳನ್ನು ಬರದಾರ, ಕಥೆಗಳನ್ನು ಬರದಾರ, ಕಾದಂಬರಿಯನ್ನೂ ಬರದಾರ. ಅವರಭಿನ್ನಕಾದಂಬರಿಯಂತೂ ಕನ್ನಡ ಸಾಹಿತ್ಯಪ್ರಪಂಚದಲ್ಲಿಯೇ ವಿಶಿಷ್ಟ ಸ್ಥಾನ ಪಡೆದ ಕಾದಂಬರಿ ಆಗೇದ ಅಂತ ನನ್ನ ಅಭಿಪ್ರಾಯ. ಹೊಸ ಕಾದಂಬರಿಯೂ (‘ಅನಂತಯಾನ’) ಸ್ವಾರಸ್ಯಕರ ಆಗಿರಲೇ ಬೇಕು ಅನ್ನೋದು ನನ್ನ ನಂಬಿಕೆ ಆಗಿತ್ತು. ಅದಕ್ಕಂತನ ಅವರನ್ನು ಆಗಾಗ ಸಂಪರ್ಕಿಸಿ ಕಾಡತಿದ್ದೆ. ‘ದೇಸಾಯರ, ನಿಮ್ಮ ಕಾದಂಬರೀನ ಲಗೂನ ಮುಗಸರಿ; ನನಗ ಒಂದು ಕಾ˘ಪಿ ಮೇಲ್ ಮಾಡಿ ಕಳಸರಿ. ಅದರ ಮುದ್ರಣ ಆಗೂತನಕ ಕಾಯೋ ತಾಳ್ಮೆ ನನ್ನಲ್ಲಿಲ್ಲ.’

ಈ ಬೇತಾಳದ  ಕಾಟ ತಾಳಲಾರದ ದೇಸಾಯರು ಕಾದಂಬರಿಯನ್ನು ಮುಗಿಸಿ, ನನಗೊಂದು ಪ್ರತಿಯನ್ನು ಮೇಲ್ ಮೂಲಕ ಕಳಿಸಿದರು! ಓದಿದ ಮ್ಯಾಲೆ, ನಾನು ಇವರಿಗೆ ಇಷ್ಟು ಕಾಟಾ ಕೊಟ್ಟದ್ದು ಸಾರ್ಥಕ ಆತು ಅಂತ ಅನಿಸಿತು.

ದೇಸಾಯರ ಕಥೆಗಳು ನಡೆಯುವುದು ಹುಬ್ಬಳ್ಳಿ, ಬೆಳಗಾವಿ, ಮುಂಬಯಿ ಮೊದಲಾದ ಪಟ್ಟಣಗಳ ಹಾಗು ಅವುಗಳ ಸುತ್ತುಮುತ್ತಲಿನ ಊರುಗಳಲ್ಲಿ. ಊರುಗಳ ವಾತಾವರಣವನ್ನು ದೇಸಾಯರು ವಾಸ್ತವಿಕವಾಗಿ ಹಾಗು ದಟ್ಟವಾಗಿ ಕಣ್ಣಿಗೆ ಕಾಣುವಂತೆ ಚಿತ್ರಿಸುತ್ತಾರೆ. ‘ಅನಂತಯಾನಕಾದಂಬರಿಯ ಪೂರ್ವಭಾಗ ಗಿರಕಿ ಹೊಡೆಯುವುದು ಇಂತಹ ಒಂದು ಊರಿನ ದೇಸಾಯರ ವಾಡೇದಾಗ. ಅಲ್ಲಿಯ ಅಣ್ಣತಮ್ಮಂದಿರು, ಅವರ ಹೆಂಡಂದಿರು. ಅವರ ಸ್ವಭಾವ, ಅವರ ಹಾಲಚಾಲ, ಇವರೆಲ್ಲರ ಕೂಡುಕುಟುಂಬದಾಗಿನ ಶ್ರೇಣೀಕರಣ ಇವು ಕಥೆಯನ್ನು ಹೇಗೆ ನಡೆಸುತ್ತವೆ ಹಾಗು ಕಥೆಗೆ ಹೇಗೆ ತಿರುವು ಕೊಡುತ್ತವೆ ಎನ್ನುವುದನ್ನು ಓದಿದಾಗ, ದೇಸಾಯರ ಕಥನಶಕ್ತಿಯು  ಓದುಗನನ್ನು ರೋಮಾಂಚನಗೊಳಿಸುತ್ತದೆ.

ಈ ಕಾದಂಬರಿಯನ್ನು ಓದುತ್ತಿದ್ದಂತೆ ನನಗೆ ಶ್ರೀಮತಿ ಶಶಿ ದೇಶಪಾಂಡೆಯವರ ಆಂಗ್ಲ ಕಾದಂಬರಿ ‘Roots and Shadows’ ನೆನಪಾಯಿತು. ಕಾದಂಬರಿಯಲ್ಲಿ ಒಂದು ಜಮೀನುದಾರಿ ಮನೆತನವು ಆಧುನಿಕ ವಾತಾವರಣದಲ್ಲಿ ಹೇಗೆ ಬದಲಾಯಿತು ಎನ್ನುವದನ್ನು ಬರೆಯಲಾಗಿದೆ. ಆಂಗ್ಲ ಕಾದಂಬರಿಯನ್ನು ಓದುವಾಗ, ಕನ್ನಡ ಕಾದಂಬರಿಯನ್ನು ಓದುತ್ತಿರುವಂತೆ ಅನಿಸುವುದು ಶಶಿ ದೇಶಪಾಂಡೆಯವರ ಹೆಗ್ಗಳಿಕೆಯಾಗಿದೆ.

ದೇಸಾಯರ ಈ ಕಾದಂಬರಿಯಲ್ಲಿ ಇಂತಹ ಬದಲಾವಣೆ ಕೇವಲ ಪ್ರಾಸಂಗಿಕವಾದದ್ದು. ಒಂದು ಗತಕಾಲದಲ್ಲಿ ಮನೆತನದ ಒಬ್ಬ ವ್ಯಕ್ತಿಯ ಬಗೆಗೆ, ಪ್ರವಾಹದಲ್ಲಿ ತೇಲುವ ಕಾಷ್ಠದಂತೆ ಅವನ ಅಳಿವಿಗೆ ಮೀರಿ ಅವನಲ್ಲಾದ ಬದಲಾವಣೆಗಳ ಬಗೆಗೆ, ಇಲ್ಲಿ ಬರೆಯಲಾಗಿದೆ. ಕೊನೆಯವರೆಗೂ ಕಥೆಯ ನಡೆಯ ಕುತೂಹಲವನ್ನು ಕಾಯ್ದುಕೊಂಡು ಹೋಗುವ ದೇಸಾಯರ ಪ್ರತಿಭೆ ಶ್ಲಾಘನೀಯವಾದದ್ದು.

ದೇಸಾಯರು ಬ್ಯಾಂಕ ಅಧಿಕಾರಿ ನಿಜ. ಆದರೆ ಅವರು ಮನೋವಿಜ್ಞಾನದಲ್ಲಿ ತರಬೇತಿ ಪಡೆದಿದ್ದರೋ ಏನೋ ಎನ್ನುವ ಅನುಮಾನ ನನಗಿದೆ. ಅವರ ಕಥೆ-ಕಾದಂಬರಿಗಳಲ್ಲಿ ನಡೆಯುವ ಪ್ರಸಂಗಗಳು ಮನೋವಿಜ್ಞಾನವನ್ನು ಅನುಸರಿಸಿಯೇ ನಡೆಯುತ್ತವೆ. ಸಂದರ್ಭಗಳಲ್ಲಿ ಕಾದಂಬರಿಯ ಪಾತ್ರಗಳಿಗೆ ಅಪಚಾರವಾಗಬಾರದಲ್ಲ! ಆದುದರಿಂದ ಕಾದಂಬರಿಯ ಪಾತ್ರಗಳು ಕೆಲವೊಮ್ಮೆ ಹಿನ್ನೆನಪುಗಳಲ್ಲಿ ಕಥೆಯನ್ನು ನಡೆಯಿಸುವ ವಿಧಾನವನ್ನು ಇಲ್ಲಿ ಕಾಣುತ್ತೇವೆ. ವಿಧಾನದ ಒಂದು  ಅನುಕೂಲವೆಂದರೆ, ಕಥಾನಕದ ಎಲ್ಲ ಪಾತ್ರಗಳಿಗೂ (ಅವು ಎಷ್ಟೇ ಚಿಕ್ಕ ಪುಟ್ಟ ಪಾತ್ರಗಳಿದ್ದರೂ ಸಹ) ಸಮಾನವಾದ ಸ್ಥಾನಮಾನ ಇಲ್ಲಿ ದೊರೆಯುತ್ತದೆ. ಇದರ ಪರಿಣಾಮವೆಂದರೆ, ಈ ಕಥಾನಕವು ನಿಮ್ಮ ಕಣ್ಣೆದುರಿಗೇ ನಡೆಯುತ್ತಿರುವ ರಂಗನಾಟಕ ಎನ್ನುವ ಆಪ್ತಭಾವ ನಿಮ್ಮಲ್ಲಿ ಒಡಮೂಡುತ್ತದೆ.

ದೇಸಾಯರ ಕಾದಂಬರಿಗಳ ವೈಶಿಷ್ಟ್ಯವೆಂದರೆ ರೋಚಕತೆ ಎನ್ನಲೆ? ಕೌಟಂಬಿಕ ಪ್ರಸಂಗಗಳೇ ಕಥಾನಕದ ಜೀವಾಳವಾಗಿದ್ದರೂ ಸಹ, ರಹಸ್ಯಮಯತೆ, ಇದರಿಂದ ಹುಟ್ಟುವ ಕುತೂಹಲ, ಇವು ಅವರ ಕಾದಂಬರಿಗಳನ್ನು ರಂಜನೀಯವಾಗಿಸುತ್ತವೆ. ಇದಲ್ಲದೆ ಉತ್ತರ ಕರ್ನಾಟಕದ ಕಾಲಾನುಸಾರಿ ಬದಲಾಗುತ್ತಿದ್ದ ಪ್ರಾದೇಶಿಕ ವಾತಾವರಣ, ಭಾಷೆ ಇವೆಲ್ಲ ಓದುಗನಲ್ಲಿ ಕಚಕುಳಿಯನ್ನಿಡುತ್ತಿವೆ.

ಒಂದು ಕಾದಂಬರಿ ಎಂದರೆ ಒಬ್ಬ ವ್ಯಕ್ತಿ ಇದ್ದಂತೆ. ವ್ಯಕ್ತಿಯ ಡ್ರೆಸ್ಸು, ಸ್ಟೈಲು ಇವೆಲ್ಲ ನೋಡುಗನನ್ನು impress ಮಾಡುತ್ತವೆ. ಆದರೆ ವ್ಯಕ್ತಿಯ ಬಗೆಗೆ ನಮಗೆ ಗೌರವ ಬರುವುದು, ಅವನ ಬಗೆಗೆ ಸ್ನೇಹ ಹುಟ್ಟುವುದು ಅವನ ಅಂತರಂಗ ಅರ್ಥವಾದಾಗ. ಕಾದಂಬರಿಯ ಬಗೆಗೂ ಇದೇ ಮಾತನ್ನು ಹೇಳಬಹುದು. ದೇಸಾಯರ ಕಾದಂಬರಿಗಳ ಬಗೆಗೆ ಗೌರವ ಹುಟ್ಟುವುದು ಅವರ ಕಾದಂಬರಿಯ ಜೀವಾಳದಿಂದ. ‘ಅನಂತಯಾನ’ದ ಜೀವಾಳ ಸುರುಚಿಯಿಂದ ಕೂಡಿದೆ. ಆದುದರಿಂದ ಅನಂತನ ಯಾನದಲ್ಲಿ ಓದುಗರು ನಿಶ್ಶಂಕವಾಗಿ ಭಾಗಿಯಾಗಬಹುದು, ಖಂಡಿತವಾಗಿಯೂ  ಖುಶ್ ಆಗುತ್ತಾರೆ ಎನ್ನುವ ನಂಬಿಕೆ ನನಗಿದೆ!