Friday, July 8, 2022

ಹಲವು ನಾಡು ಹೆಜ್ಜೆ ಹಾಡು---ಜಯಶ್ರೀ ದೇಶಪಾಂಡೆ....ಭಾಗ ೧

 ‘ಹಲವು ನಾಡು ಹೆಜ್ಜೆ ಹಾಡು’ ಇದು ಜಯಶ್ರೀ ದೇಶಪಾಂಡೆಯವರು ರಚಿಸಿದ ಪ್ರವಾಸಕಥನ. ಈ ಕೃತಿಯನ್ನು ಸರಸ ಸಾಹಿತ್ಯ ಹಾಗು ಸುರಸ ಸಾಹಿತ್ಯ ಎಂದು ಕರೆಯಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಇದು ಶುಷ್ಕ ಪ್ರವಾಸವರ್ಣನೆಯಾಗಿರದೆ, ಆ ಎಲ್ಲ ನಾಡಿಗರ ಜೊತೆಗೆ ಜಯಶ್ರೀಯವರು ಸಾಧಿಸಿದ ಆಪ್ತಸಂವಹನೆ, ಆ ದೇಶಗಳ ವಿವಿಧ ವೈಶಿಷ್ಟಗಳು ಹಾಗು ಅದರಿಂದ  ತಮ್ಮ ಮನಸ್ಸು ವಿಸ್ತಾರವಾದ ಪರಿಯನ್ನು ಹಾಗು ಮುದಗೊಂಡ ಪರಿಯನ್ನು, ಜಯಶ್ರೀಯವರು ಪರಿಪರಿಯಾಗಿ ವರ್ಣಿಸಿದ್ದಾರೆ. ಈ ಪರದೇಶಗಳ ಭೌತಿಕ ಹಾಗು ಸಾಂಸ್ಕೃತಿಕ ವೈಭವವನ್ನು ಗ್ರಹಿಸಲು ತೆರೆದ ಕಣ್ಣುಗಳು, ತೆರೆದ ಮನಸ್ಸು ಹಾಗು ಸಹೃದಯ ರಸಿಕತೆ ಬೇಕು. ಅದು ಈ ಲೇಖಕಿಯಲ್ಲಿ ಇದೆ ಎನ್ನುವುದು ನಿಸ್ಸಂದೇಹವಾಗಿದೆ. ಅದರ ಜೊತೆಗೇ ಭಾರತೀಯ ಮನಸ್ಸೂ ಜ್ವಲಂತವಾಗಿದೆ. ಆದುದರಿಂದಲೇ, ಈ ಕೃತಿಯನ್ನು ಓದುತ್ತಿರುವಾಗ ನಮಗೆ ನಮ್ಮವನೇ ಆದ ಆದಿಕವಿ ಪಂಪನು ‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಉದ್ಗರಿಸಿದ್ದು ನೆನಪಿಗೆ ಬರುತ್ತದೆ. ಇಲ್ಲಿ ಬನವಾಸಿಯ ಬದಲಾಗಿ ಹಲವು ಪಾಶ್ಚಿಮಾತ್ಯ ದೇಶಗಳಿವೆ! ಇಷ್ಟಲ್ಲದೆ, ಈ ದೇಶಗಳ ಸಾಂಸ್ಕೃತಿಕ, ರಾಜಕೀಯ ಹಾಗು ಐತಿಹಾಸಿಕ ಹಿನ್ನೆಲೆಗಳನ್ನೂ ಸಹ ಜಯಶ್ರೀ ದೇಶಪಾಂಡೆಯವರು ನೀಡಿರುವದರಿಂದ ಈ ಕೃತಿಯನ್ನು ೩೬೦ ಡಿಗ್ರೀಗಳ ಸಂಪೂರ್ಣ ಕಥನವೆನ್ನಬೇಕು.

 ‘ಹಲವು ನಾಡು ಹೆಜ್ಜೆ ಹಾಡು’ ಕೃತಿಯನ್ನು ನಾವು ಎರಡು ದೃಷ್ಟಿಕೋನಗಳಿಂದ ವಿಶ್ಲೇಷಿಸುವುದು ಅವಶ್ಯಕವಾಗಿದೆ. ಮೊದಲನೆಯದು ಕಥನಕೌಶಲ; ಎರಡನೆಯದು ಭಾಷಾಪ್ರತಿಭೆ. ಜಯಶ್ರೀ ದೇಶಪಾಂಡೆಯವರ ಕಥೆಗಳನ್ನು ಹಾಗು ಕಾದಂಬರಿಗಳನ್ನು ಓದಿದವರಿಗೆ ಅವರ ಕಥನಕೌಶಲದ ಬಗೆಗೆ ಹೇಳಬೇಕಾಗಿಲ್ಲ. ಅದೇ ಕುಶಲತೆಯು ಈ ಪ್ರವಾಸ ಕಥನದಲ್ಲೂ ವ್ಯಕ್ತವಾಗಿದೆ. ತಮ್ಮ ಆಪ್ತರೊಂದಿಗೆ ಆರಾಮವಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿರುವಂತೆ ಬರೆಯುತ್ತಾರೆ ಜಯಶ್ರೀಯವರು. ಹೀಗಾಗಿ ಅವರ ಮಾತು ನೇರವಾಗಿ ಓದುಗರ ಹೃದಯವನ್ನು ತಲುಪುತ್ತದೆ.

 ಫಿನ್ ಲ್ಯಾಂಡಿನ ಬಗೆಗೆ ಅವರು ಬರೆದ ಲೇಖನದ ಒಂದು ತುಣುಕನ್ನು ಇಲ್ಲಿ ಉದಾಹರಣೆಗೆಂದು ಎತ್ತಿಕೊಳ್ಳುತ್ತೇನೆ:

" ಮುಂಜಾವಿನ ಸೂರ್ಯ ಈರ್ಯಾಳೊಂದಿಗೆ ನಮ್ಮನ್ನು ನಗುತ್ತ ಸ್ವಾಗತಿಸಿದ್ದ. ಆಹ್ಲಾದಕರ ಗಾಳಿ, ಎಲ್ಲೆಲ್ಲೂ ಹಸರು ಮತ್ತು ಗಿಣಿಹಸುರಿನ ಆಚ್ಛಾದನೆ...... ಸರೋವರದ ತುಂಬ ನೀಲಿ ನೀಲಿಯಾಗಿ ಚಲಪಲ ಅನ್ನುವ ನೀರು ಅದನ್ನೇ ಎವೆಯಿಕ್ಕದೆ ನೋಡುವಂತೆ ಮಾಡಿತ್ತು. ಬೆಳಗಿನ ಕಾಫಿಯೊಂದಿಗೆ ಅವಳೇ ತಯಾರಿಸಿದ ಹಣ್ಣುಗಳ ಕೇಕ್ ತುಂಬಾ ರುಚಿ ಎನಿಸಿತ್ತು. ನಮ್ಮೊಂದಿಗೆ ಒಯ್ದಿದ್ದ ರವೆ ಉಂಡಿಗಳನ್ನು ಅವಳೂ ಬಹಳ ಪ್ರೀತಿಯಿಂದ ಅಸ್ವಾದಿಸಿದಳು.....................". ಈ ಕಥನದಲ್ಲಿ ಬರುವ ಸೂರ್ಯ, ಗಾಳಿ, ನಿಸರ್ಗದ ಬಣ್ಣಗಳು, ನೀರಿನ ಚಲಪಲ , ಈರ್ಯಾ ಹಾಗು ಅವಳು ತಯಾರಿಸಿದ ಬೆಳಗಿನ ಕಾಫೀ ಮತ್ತೂ ಕೇಕ್, ಜೊತೆಗೆ ಜಯಶ್ರೀಯವ ರವೆ ಉಂಡಿಗಳು ಎಂತಹ ಉಲ್ಲಾಸಭರಿತ ಆತ್ಮೀಯತೆಯನ್ನು ಸೃಷ್ಟಿಸುತ್ತವೆಯಲ್ಲವೆ?

ಫಿನ್ ಲ್ಯಾಂಡಿನ ವರ್ಣನೆಯನ್ನು ಜಯಶ್ರೀಯವರು ಪ್ರಾರಂಭಿಸುವುದು ಒಂದು ಅಪೂರ್ವ ಘಟನೆಯಾದ ಮಧ್ಯರಾತ್ರಿಯ ಸೂರ್ಯನೊಂದಿಗೆ. ಫಿನ್ ಲ್ಯಾಂಡಿನ ಈ ಸೂರ್ಯನನ್ನು ನೋಡಿದಾಗ ಜಯಶ್ರೀಯವರಿಗೆ ನೆನಪಾಗುವುದು ವಸಂತರಾವ ದೇಶಪಾಂಡೆ ಎನ್ನುವ ಪ್ರಸಿದ್ಧ ಮರಾಠೀ ಗಾಯಕರೊಬ್ಬರು ಹಾಡಿದ  ಸೂರ್ಯಸ್ತುತಿ ಗಾಯನ:

" ತೇಜೋನಿಧಿ ಲೋಹಗೋಳ.....ಭಾಸ್ಕರ ಹೇ ಗಗನರಾಜ...

ದಿವ್ಯ ತುಝಾ ತೇಜಾನೇ ಝಗಮಗಲೇ ಗಗನ ಆಜ.......".

 ಜಯಶ್ರೀಯವರ ನೋಟ ಫಿನ್ ಲ್ಯಾಂಡಿನ ಸೂರ್ಯನಲ್ಲಿ; ಅವರ ಭಾವೋದ್ದೀಪನೆ ಭಾರತೀಯ ಸಂಗೀತದಲ್ಲಿ!

 ರಾತ್ರಿ ಒಂದೂವರೆ ಗಂಟೆಗೆ ಜಯಶ್ರೀ ದೇಶಪಾಂಡೆ ಹಾಗು ಇತರರು ಮನೆಗೆ ಮರಳುತ್ತಾರೆ. ಆದರೆ ಫಿನ್ ಲ್ಯಾಂಡಿನ ಸೂರ್ಯನಿಗೆ ಎಲ್ಲಿದೆ ವಿಶ್ರಾಂತಿ? ಜಯಶ್ರೀಯವರು ಹೇಳುತ್ತಾರೆ:

‘ಬಾನು ನಸುಬೆಳ್ಳಗೆ ಬೆಳಗಿಕೊಂಡೇ ಇತ್ತು! ಸೂರ್ಯ ಆಕಾಶದಲ್ಲಿ ನಗುತ್ತಲೇ ಇದ್ದ!’

 ಜಯಶ್ರೀಯವರು ಕುತೂಹಲಿಗಳು ಅರ್ಥಾತ್ ಜ್ಞಾನಪಿಪಾಸುಗಳು. ಅವರು ಅಲ್ಲಿಯ ಜನರೊಡನೆ ನಡೆಸಿದ ಸಂಭಾಷಣೆಗಳು ಪರಸ್ಪರ ಮೈತ್ರಿಯನ್ನು ಹೆಚ್ಚಿಸುವದಷ್ಟೇ ಅಲ್ಲ, ಆ ನಾಡುಗಳ ಬಗೆಗಿನ ನಮ್ಮ ಜ್ಞಾನವನ್ನೂ ಸಹ ಹೆಚ್ಚಿಸುತ್ತವೆ. 

 ಫಿನ್ ಲ್ಯಾಂಡಿನಲ್ಲೆಲ್ಲ ಹಬ್ಬಿಕೊಂಡ ಕಾಡು  ಅಲ್ಲಿಯ ಪ್ರಜೆಗಳ ವೈಯಕ್ತಿಕ ಆಸ್ತಿಯಾಗಿದೆ. ಹೀಗಾಗಿ ಇಲ್ಲಿಯ ಜನರು ಜೂನ್, ಜುಲಾಯ್ ಹಾಗು ಅಗಸ್ಟು ತಿಂಗಳುಗಳಲ್ಲಿ ತಮ್ಮ ತಮ್ಮ ವೈಯಕ್ತಿಕ ಕಾಡುಗಳಲ್ಲಿ ಇರುವ ಕಾಡುಮನೆಗಳಿಗೆ ಧಾವಿಸುತ್ತಾರೆ. ಅಲ್ಲಿ ಬೋಟಿಂಗ್, ಶಿಬಿರಾಗ್ನಿ, ಮೊದಲಾದ ಮೋಜಿನ ಹಾಗು ಸಾಹಸದ ಆಟಗಳನ್ನು ಆಡುತ್ತಾರೆ. ಜಯಶ್ರೀ ದೇಶಪಾಂಡೆಯವರು ಸಹ ಇವೆಲ್ಲವುಗಳಲ್ಲಿ ಭಾಗವಹಿಸಿ ಸಹೃದಯ ಸಂಗಾತಿಗಳ ಜೊತೆಗೆ ಖುಶಿ ಪಟ್ಟಿದ್ದಾರೆ. ಅದರಲ್ಲಿಯೂ ಸೌನಾ ಸ್ನಾನದ ಸಂಭ್ರಮವಂತೂ ಶರೀರ ಹಾಗು ಮನಸ್ಸುಗಳೆರಡನ್ನೂ ತಣಿಸುವಂತಹ ಆಹ್ಲಾದಕರ ಸಂಗತಿಯಾಗಿದೆ!

 ಫಿನ್ ಲ್ಯಾಂಡಿನ ನಿಸರ್ಗವನ್ನು ಸವಿದ ಬಳಿಕ, ಅಲ್ಲಿಯ ಜನಜೀವನವನ್ನು ವರ್ಣಿಸದಿದ್ದರೆ, ಪ್ರವಾಸಕಥನವು ಪೂರ್ಣವಾದೀತೆ? ಜಯಶ್ರೀಯವರು ಈ ಕಥನದ ಭಾಗವಾಗಿ ಫಿನ್ನಿಶ್ ಜನರ ಬಗೆಗೆ ಹೇಳುವ ಒಳನೋಟದ ಮಾತುಗಳ ಒಂದು ಭಾಗ ಇಲ್ಲಿದೆ:

 " ಇಲ್ಲಿನ ಸ್ತ್ರೀ, ಪುರುಷರು ಒಬ್ಬಂಟಿಗರಾಗಿ ಬದುಕುವದು ಅಪರೂಪದ ಸಂಗತಿಯೇ ಅಲ್ಲ, ಹಾಗೆ ಇರಲು ಅಗತ್ಯವಿರುವ ದೈಹಿಕ, ಮಾನಸಿಕ, ಸಾಮಾಜಿಕ ಅನುಕೂಲಗಳನ್ನು ಅವರು ಗಳಿಸಿಕೊಂಡಿರುತ್ತಾರೆ. ಸಿಂಗಲ್ ಮದರ್, ಸಿಂಗಲ್ ಫಾದರ್ ಇವೆರಡೂ ಸರ್ವೇ ಸಾಮಾನ್ಯ. ಮಕ್ಕಳಾಗಲು ಮದುವೆಯಾಗಲೇಬೇಕು ಎನ್ನುವ ಕಡ್ಡಾಯವಿಲ್ಲ..... ಕೊನೆಯವರೆಗೂ ಜೊತೆ ಇರಲಿ, ಇಲ್ಲದಿರಲಿ ತಾವು ತಾವಾಗಿಯೇ ಜೀವನವನ್ನು ಆರೋಗ್ಯಪೂರ್ಣವಾಗಿ ಬದುಕಿ ದಾಟಿಬಿಡುವ ಇವರ ಜೀವನಶೈಲಿಯ ಹಿಂದಿರುವುದು ಇವರ ದೈಹಿಕ/ ಮಾನಸಿಕ ಗಟ್ಟಿಮುಟ್ಟುತನ ಅಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ......"

 (ಫಿನ್ ಲ್ಯಾಂಡಿನ ಸಮಾಜದ ರೀತಿ,ನೀತಿಗಳನ್ನು ಟೀಕಿಸದೆ, ಅವುಗಳನ್ನು ಒಪ್ಪಿಕೊಳ್ಳುವಂತಹ ಸರ್ವಗುಣಗ್ರಾಹಿ ಮನೋಭಾವವನ್ನು ಇಲ್ಲಿ ನಾವು ನೋಡಬಹುದು. ಇದು ಯಾವುದೇ ಲೇಖಕನಲ್ಲಿ ಇರಲೇಬೇಕಾದ ಗುಣ.)

 ಇನ್ನು ಫಿನ್ ಲ್ಯಾಂಡಿನ ಇತಿಹಾಸ ಹಾಗು ರಾಜಕಾರಣದ ಬಗೆಗೆ ಒಂದು ಮಾತು ಬೇಡವೆ? ಈ ಅನುಭವ ಅವರಿಗೆ ದೊರೆಯುವುದು ಪ್ರವಾಸೀ ಬಸ್ ಒಂದರಲ್ಲಿ. ಫಿನ್ ಲ್ಯಾಂಡಿನಿಂದ ರಶಿಯಾದ ಸೇಂಟ್ ಪೀಟರ್ಸ್ ಬರ್ಗ ನಗರಕ್ಕೆ ಬಸ್ ಒಂದರಲ್ಲಿ ಜಯಶ್ರೀಯವರು ಹೊರಟುಬಿಡುತ್ತಾರೆ. ಸುದೈವದಿಂದ ಮೈಯಾ ವೆಕೇವಾ ಎನ್ನುವ ಹೆಣ್ಣು ಮಗಳೊಬ್ಬಳು ಜಯಶ್ರೀಯವರಿಗೆ ಆಕಸ್ಮಿಕ ಜೊತೆಗಾತಿಯಾಗಿ ದೊರೆತಳು. ಒಂಬತ್ತು ಭಾಷೆಗಳನ್ನು ತಿಳಿದ ಹಾಗು ಪೋಲೀಸ್ ಇಲಾಖೆಯಲ್ಲಿ ತರ್ಜುಮೆಕಾರಳಾಗಿ ಕೆಲಸ ಮಾಡುತ್ತಿದ್ದ ಅವಳು ತಿಳಿಸಿದ ಸಂಗತಿಯೆಂದರೆ ರಶಿಯಾ ಹಾಗು ಸ್ವೀಡನ್ ದೇಶಗಳ ನಡುವೆ ಸಿಲುಕಿದ ಫಿನ್ ಲ್ಯಾಂಡ್ ಈ ದೇಶಗಳ ದಬ್ಬಾಳಿಕೆಯಿಂದಾಗಿ ನಲುಗಿ ಹೋಗಿತ್ತು. ಕಷ್ಟಪಟ್ಟು ಮೇಲೆದ್ದುಕೊಂಡು ನಿಂತಿದ್ದು ಈ ಪುಟ್ಟ ದೇಶದ ದೊಡ್ಡ ಸಾಧನೆ. ಮೈಯಾಳ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಂಡ ಜಯಶ್ರೀಯವರು, ಫಿನ್ ಲ್ಯಾಂಡಿನ ಸಂಕಟಗಳನ್ನು ಹಾಗು ಸಾಹಸಮಯ ಪುನರುತ್ಥಾನವನ್ನು ಅರಿತುಕೊಂಡು ಓದುಗರಿಗೆ ಸರಳವಾಗಿ ತಿಳಿಸಿದ್ದಾರೆ.

 ಫಿನ್ ಲ್ಯಾಂಡಿನ ನಂತರ ಜಯಶ್ರೀಯವರು, ನಮ್ಮನ್ನು ರಶಿಯಾಕ್ಕೆ ಕರೆದುಕೊಂಡು ಹೋಗುತ್ತಾರೆ. ರಶಿಯಾದ ಅವರ ಪ್ರವಾಸ ಒಂದೇ ದಿನದ್ದು. ಆದರೆ ಅಲ್ಲಿ ಅವರು ಪಡೆದ ಅನುಭವ ಮನ ತಣಿಸುವಂತಹದು. ಸೇಂಟ್ ಪೀಟರ್ಸಬರ್ಗ ಇದು ರಶಿಯಾದಲ್ಲಿ ಪ್ರಸಿದ್ಧವಾದ ಪ್ರವಾಸಿತಾಣ. ಇಲ್ಲಿರುವ ಕೆಥೆಡ್ರಾಲ್ ತನ್ನ ವಾಸ್ತುಶಿಲ್ಪ ಹಾಗು ವರ್ಣಚಿತ್ರಗಳಿಂದಾಗಿ ಆಕರ್ಷಕವಾಗಿದೆ.

 ಹೆರಿಟೇಜ್ ಎನ್ನುವ ವಸ್ತುಸಂಗ್ರಹಾಲಯವೂ ಸಹ ದಿಙ್ಭ್ರಮೆಗೊಳಿಸುವಂತಹದು. ಇಲ್ಲಿ ಭಾರತೀಯ ಮೂಲದ ಪ್ರತಿಮೆಗಳೂ ಇವೆ. ಈ ವಸ್ತುಸಂಗ್ರಹಾಲಯವನ್ನು ಇಷ್ಟು ಶ್ರೀಮಂತಗೊಳಿಸಿದವಳು ಎಲಿಸಬೆಥ್ ಎನ್ನುವ ರಶಿಯಾದ ರಾಣಿ. ಇವಳ ಬಗೆಗಿನ ಒಂದು ಪಕ್ಷಿನೋಟವನ್ನು ಜಯಶ್ರೀಯವರು ಪುಸ್ತಕದ ಕೊನೆಯಲ್ಲಿ ಕೊಟ್ಟಿದ್ದಾರೆ. ಇದನ್ನೆಲ್ಲ ಕಣ್ಣಾರೆ ನೋಡಿದ ಹಾಗು ಮುಕ್ತಮನಸ್ಸಿನಿಂದ ಅನುಭವಿಸಿದ ಜಯಶ್ರೀಯವರು ಪ್ರತಿಯೊಂದು ದೇಶವು ತನ್ನ ಇತಿಹಾಸದಿಂದ ಹಾಗು ಪರಂಪರೆಯಿಂದ ಸಮೃದ್ಧವಾಗಿರುತ್ತದೆ ಎಂದು ಉದ್ಗರಿಸುತ್ತಾರೆ.

 ಜಯಶ್ರೀಯವರು ತಮ್ಮ ಕಣ್ಣುಗಳನ್ನು ಯಾವಾಗಲೂ ತೆರೆದುಕೊಂಡೇ ಇರುವವರು. ಹೀಗಾಗಿ ರಶಿಯಾದ ಶ್ರೀಮಂತ ಮ್ಯೂಜಿಯಮ್ ಬಳಿಯ ರಸ್ತೆಗಳಲ್ಲಿ ಬಡ ಮುದುಕಿಯರು ತಮ್ಮ ಹತ್ತಿರವಿರುವ ಆಟದ ವಸ್ತುಗಳನ್ನು ಹಾಗು ಬೊಂಬೆಗಳನ್ನು ಮಾರಾಟ ಮಾಡಲು ಎಷ್ಟು ಪರದಾಡುತ್ತಾರೆ ಎನ್ನುವುದನ್ನು ನವಿರಾಗಿ ವಿವರಿಸುತ್ತಾರೆ. ಈ ಮುದುಕಿಯರು ಮಾರುತ್ತಿರುವ ‘ಆಟದ ಗಾಡಿ’ಯನ್ನು ನೋಡಿದಾಗ ಜಯಶ್ರೀಯವರಿಗೆ ನಮ್ಮ ‘ಮೃಚ್ಛಕಟಿಕ’ದ ನೆನಪಾಗುತ್ತದೆ! (ಇದನ್ನೇ ನೋಡಿ, ಭಾರತೀಯತೆ ಎನ್ನುವುದು!)

ಚಾಣಾಕ್ಷ ಮೋಸಗಾರಿಕೆ ಹಾಗು ಕಳ್ಳತನದ ಬಗೆಯೂ ಇಲ್ಲಿ ಕೆಲವು ಅನುಭವದ ಮಾತುಗಳಿವೆ. (ರಶಿಯಾದ ಅರ್ಥವ್ಯವಸ್ಥೆಯ ಬಗೆಗೆ ಇದು ಒಂದು ಪಾರ್ಶ್ವನೋಟವೆಂದು ಹೇಳಬಹುದು.)  ಹಾಗೆಂದು ಅಲ್ಲಿಯ ಆಟದ ಬೊಂಬೆಗಳ ಹೆಚ್ಚುಗಾರಿಕೆಯನ್ನು ಕಂಡು ಆನಂದಿಸಲು ಹಾಗು ಕೊಂಡಾಡಲು ಜಯಶ್ರೀಯವರು ಹಿಂದೆ ಬೀಳುವುದಿಲ್ಲ. ನಿಷ್ಪಕ್ಷಪಾತವಾದ ಸತ್ಯದರ್ಶನಕ್ಕೆ ಇದು ಉದಾಹರಣೆಯಾಗಿದೆ. ಈ ಬೊಂಬೆಗಳನ್ನು ಜಯಶ್ರೀಯವರು ನೋಡಿ ಸುಮ್ಮನೆ ಹೋಗದೆ ಆ ಬೊಂಬೆಗಳ ಹಿನ್ನೆಲೆಯನ್ನು ಅರಿತುಕೊಂಡು, ನಮಗೂ ತಿಳಿಸುತ್ತಾರೆ. ಅದು ಹೀಗಿದೆ:

“ ಮಾತ್ರೋಷ್ಕಾ ಬೊಂಬೆ  ರಷ್ಯಾದ ಜಾನಪದ ಕಲೆಯ ಹೆಗ್ಗಳಿಕೆ, ಹೆಗ್ಗುರುತು. ಮರಗೆಲಸದ ಕಲಾಕುಸುರಿಯ ದ್ಯೋತಕ.......ಕಣ್ಣಿಗೆ ರಾಚದೇ ತಂಪೇ ಉಣಿಸುವ ಚೆಲುವು....... ಭಾವ, ನಿರ್ಭಾವದ ನಡುವಣ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು..... ಬಾರ್ಬಿಯಂಥ ಕೃತಕತೆಯ ಸುಳಿವಿಲ್ಲದ ಮಾರ್ದವ.......”.

 ರಶಿಯಾದ ಕ್ಷಿಪ್ರದರ್ಶನದ ನಂತರ ಜಯಶ್ರೀಯವರು ನಮ್ಮನ್ನು ಸ್ವೀಡನ್ನಿನಲ್ಲಿರುವ ಸ್ಟಾಕ್ ಹೋಮಿಗೆ ಕರೆದೊಯ್ದು, ಅಲ್ಲಿಯ ನೋಬೆಲ್ ಪ್ರಶಸ್ತಿಯ ಸಭಾಂಗಣದ ದರ್ಶನ ಮಾಡಿಸುತ್ತಾರೆ. ಅಲ್ಲಿಂದ ಎಸ್ತೋನಿಯಾ ಎನ್ನುವ ಪುಟ್ಟ ದೇಶದ ದರ್ಶನ. ಈ ದೇಶದ ರಾಜಧಾನಿ ತಾಲೀನ್. ತಾಂತ್ರಿಕತೆ-ಆಧುನಿಕತೆಯೊಂದಿಗೆ ಮಧ್ಯಯುಗೀನ ಇತಿಹಾಸವನ್ನೂ ಸಮೃದ್ಧವಾಗಿ ಈ ನಗರವು ಉಳಿಸಿ, ಬೆಳೆಸಿಕೊಂಡು ಬಂದಿದೆ ಎನ್ನುವುದು ಲೇಖಕಿಯ ಟಿಪ್ಪಣಿ.

 ಝೆಕ್ ರಿಪಬ್ಲಿಕ್ಕಿನ ಪ್ರಾಗ್ ನಗರದ ಖಗೋಳಗಡಿಯಾರವು ತುಂಬ ಖ್ಯಾತವಾದ ಪ್ರವಾಸೀ ಆಕರ್ಷಣೆ. ಈ ಗಡಿಯಾರದ ಎಲ್ಲ ವಿವರಗಳನ್ನು ನೀಡುವುದರ ಜೊತೆಗೇ, ಜಯಶ್ರೀಯವರು ಆ ನಗರದ ಇತಿಹಾಸ ಹಾಗು ಕಟ್ಟಡಗಳ  ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನೂ ನಮ್ಮೆದುರಿಗೆ ಇಡುತ್ತಾರೆ.

 ಹಂಗೆರಿಯ ಬುಡಾಪೆಸ್ಟಿನಲ್ಲಿರುವ ಬೆಸಿಲಿಕಾದ ಬಗೆಗೆ ಜಯಶ್ರೀಯವರು ಬರೆಯುವುದು ಹೀಗಿದೆ:

“ತನ್ನ ಊರು, ದೇಶ, ಮಠ, ಪರಂಪರೆ, ಆಗಿ ಹೋದ ಸಂತರು, ಗೈದ ಸಾಧನೆಗಳು, ನಡೆಸಿದ ಸೇವೆಗಳು...ಮುಂದಾಗಲಿರುವ ಬೆಳವಣಿಗೆ ಇವೆಲ್ಲವನ್ನೂ ಸಚಿತ್ರವಾಗಿ, ಮೂರ್ತಿಸಹಿತವಾಗಿ, ಕಣ್ಣು ಕೋರೈಸುವ ವರ್ಣವೈಭವ, ಗಾಜಿನ ಮೇಲಿನ ವರ್ಣಚಿತ್ತಾರಗಳು, ಚಿತ್ರಗಳು ಇದೆಲ್ಲದರ ಇತಿಹಾಸವನ್ನು ಇಂದಿನ ವರ್ತಮಾನಕ್ಕೆ ತಂದಿಳಿಸುವ ಅವರ ಪರಿಗೆ ಬೆರಗಾಗುತ್ತಲೇ ಒಳಗೆ ಹೋದ ನನಗೆ ಇನ್ನೊಂದು ಅಲಭ್ಯ ಲಾಭ ದೊರೆಯಿತು.....”

 ‘ಕಬ್ಬಿಣದ ಶೂಗಳ ಸ್ಮಾರಕ’ ಮಾತ್ರ ಅತ್ಯಂತ ಭಯಾನಕವಾದ ಸ್ಮಾರಕವಾಗಿದೆ. ಜ್ಯೂ ಕೈದಿಗಳನ್ನು ನೇಣಿಗೇರಿಸುವ ಮೊದಲು, ಅವರ ತಲೆ ಬೋಳಿಸಿ, ಶೂಗಳನ್ನು ಕಳಿಚಿ ಇಡಲು ಹೇಳಲಾಗುತ್ತಿತ್ತು. ಶಿಲ್ಪಿ ಗ್ಯೂಲಾ ಫೊವರ್ ಮತ್ತು ಸಿನಿಮಾ ನಿರ್ಮಾಪಕ ಕೈನ ಟೊಗೇ ಅವರಿಗೆ ಇಂತಹ ದುರ್ಮರಣಗಳಿಗೆ ಒಂದು ಸ್ಮಾರಕ ಬೇಕೆನಿಸಿತು. ಹಂಗೆರಿಯ ಪಾರ್ಲಿಮೆಂಟಿನ ಎದುರಿನಲ್ಲಿ, ಡಾನ್ಯೂಬ್ ನದಿಯ ಪಕ್ಕದಲ್ಲಿ ಅವರು ಒಂದು ಸ್ಮಾರಕವನ್ನು ನಿರ್ಮಿಸಿದರು. ಆದರೆ ಇಲ್ಲಿ ನಿಜವಾದ ಶೂಗಳ ಬದಲು, ಕಬ್ಬಿಣದ ಶೂಗಳನ್ನು ಇಡಲಾಗಿದೆ.

 ‘ಎಂಬತ್ತು ದಿನಗಳಲ್ಲಿ ಧರಣಿಮಂಡಲದ ಸುತ್ತ’ ಎನ್ನುವ ಫ್ರೆಂಚ್ ಲೇಖಕ ಜೂಲ್ಸ್ ವರ್ನನ ಕಾದಂಬರಿಯನ್ನು ನೀವು ಓದಿರಬಹುದು. ಜಯಶ್ರೀ ದೇಶಪಾಂಡೆಯವರು ಎಷ್ಟು ದಿನಗಳಲ್ಲಿ ತಮ್ಮ  ಪ್ರಯಾಣವನ್ನು ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಧರಣಿಮಂಡಲದ ಅನೇಕ ದೇಶಗಳನ್ನು ಇವರು ಸುತ್ತಿ ಹಾಕಿದ್ದಾರೆ. ಇವರು ಪಯಣಿಸಿದ ಹಾಗು ಈ ಕೃತಿಯಲ್ಲಿ ನಮ್ಮನ್ನು ಕರೆದೊಯ್ದ ಇತರ ದೇಶಗಳೆಂದರೆ, ಆಸ್ಟ್ರಿಯಾ, ಜರ್ಮನಿ, ಸ್ವಿಝರ್ ಲ್ಯಾಂಡ, ಫ್ರಾನ್ಸ್, ಪೋಲ್ಯಾಂಡ್, ಸಿಂಗಪುರ ಹಾಗು ಅಮೆರಿಕಾ. ಇವುಗಳಲ್ಲಿ ಆಸ್ಟ್ರಿಯಾ ಹಾಗು ಜರ್ಮನಿಗಳಲ್ಲಿ ಜ್ಯೂ ಜನರ ಹತ್ಯಾಕಾಂಡದ ಸಂಗ್ರಹಾಲಯಗಳಿವೆ.

 ಇನ್ನು ಸ್ವಿಝರ್-ಲ್ಯಾಂಡಿನಲ್ಲಿ ನಿಸರ್ಗದಚೆಲುವು ಮೈತುಂಬಿಕೊಂಡು ನಿಂತಿದೆ. ಅದನ್ನು ಸವಿದ ಲೇಖಕಿಯು ಅದನ್ನು ವರ್ಣಿಸುವುದು ಫಿರ್ದೌಸನ ಶೇರ್ ಒಂದರ ಮೂಲಕ:

“ಅಗರ್ ಫಿರ್ದೌಸ್ ಬರೂ-ಎ-ಜಮೀನ್ ಅಸ್ತ,

ಹಮೀನಸ್ತ, ಹಮೀನಸ್ತ,ಹಮೀನಸ್ತ.

(ಈ ಭೂಮಿಯ ಮೇಲೆ ಸ್ವರ್ಗವೆಂಬುದು ಇರುವದಾದರೆ, ಅದು ಇಲ್ಲಿದೆ, ಅದು ಇಲ್ಲಿದೆ, ಅದು ಇಲ್ಲಿದೆ.”

ಸ್ವತಃ ಜಯಶ್ರೀಯವರೇ ಸ್ವಿಝರ್-ಲ್ಯಾಂಡಿನ ಚೆಲುವನ್ನು ಕಂಡು, ಬೆರಗಾಗಿ ಹೀಗೇ ಹೇಳುತ್ತಾರೆ:

“ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ”.

 ಜಗತ್ತಿನ ಅತಿ ಶ್ರೀಮಂತ ದೇಶವಾದ ಅಮೆರಿಕಾದ ಪ್ರವಾಸ ಹೇಗಿದ್ದೀತು? ಸುದೈವದಿಂದ ಈ ದೇಶದಲ್ಲಿ ಪ್ರಾಕೃತಿಕ ಚೆಲವು ಹರಡಿಕೊಂಡಷ್ಟೇ ಧಾರಾಳವಾಗಿ, ಡಾಲರ್ ಮೂಲಕ ಸೂರೆ ಮಾಡಬಹುದಾದ ಸೌಕರ್ಯಗಳೂ ಸಾಕಷ್ಟಿವೆ! ಇವೆಲ್ಲವುಗಳ ವಿವರವಾದ ವರ್ಣನೆಯನ್ನು ಲೇಖಕಿ ಕೊಟ್ಟಿದ್ದಾರೆ.

 ಇವೆಲ್ಲ ಪಾಶ್ಚಿಮಾತ್ಯ ದೇಶಗಳಾದವು. ಪೌರ್ವಾತ್ಯ ದೇಶಗಳ ಪ್ರವಾಸ ಬೇಡವೆ? ನಿಮಗೆ ಹಾಗೆ ಎನಿಸಿದರೆ ಜಯಶ್ರೀ ದೇಶಪಾಂಡೆಯವರು ನಿಮ್ಮನ್ನು ಸಿಂಗಪುರಕ್ಕೆ ಕರೆದೊಯ್ಯುತ್ತಾರೆ. ಜಯಶ್ರೀಯವರು ಸಿಂಗಪುರದಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದು, ಬುದ್ಧನ ದಂತಾವಶೇಷ ಮಂದಿರ. ಈ ದಂತಾವಶೇಷವನ್ನು ಶೀ ಫಝಾವ್ ಎನ್ನುವ ಓರ್ವ ಚೀನೀ ಸಂತನು ಮ್ಯಾನ್ಮಾರದ ಬುದ್ಧಮಠದಿಂದ ಬೇಡಿಕೊಂಡು ತಂದು ಸಿಂಗಪುರದಲ್ಲಿ ಪ್ರತಿಷ್ಠಾಪಿಸುತ್ತಾನೆ. ಇಲ್ಲಿರುವ ಪ್ರಾರ್ಥನಾಚಕ್ರವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಾರ್ಥನಾ ಚಕ್ರವಂತೆ.  ಮಕ್ಕಳಿಗೆ ಬುದ್ಧನ ಸಹಸ್ರ ನಾಮಾವಳಿಯನ್ನು ಹೇಳಿಕೊಡುತ್ತಿರುವ ಅನೇಕ ಕುಟುಂಬಗಳನ್ನು ಜಯಶ್ರೀಯವರು ಇಲ್ಲಿ ಕಂಡರು. ಹೊರಬರುವಾಗ ಅವರ ಮನಸ್ಸಿನ ತುಂಬ ನಮ್ಮ ಸಿದ್ಧಾರ್ಥ ಗೌತಮ ಬುದ್ಧನೇ ತುಂಬಿಹೋಗಿದ್ದ.

                                                                                                             ಇದೆಲ್ಲವು ಜಯಶ್ರೀ ದೇಶಪಾಂಡೆಯವರು ನೋಡಿದ ಹಾಗು ನಮಗೆ ತೋರಿಸಿದ ದೇಶಗಳ ಪ್ರವಾಸವರ್ಣನೆಯಾಯಿತು. ಅವರ ಕಥನಕೌಶಲವು ನಮ್ಮನ್ನು ನಿರಾಯಾಸವಾಗಿ ಎಲ್ಲೆಡೆ ಅಲೆದಾಡಿಸುತ್ತದೆ. ಈ ಕೌಶಲದ ಒಂದು ಭಾಗವಾದ ಅವರ ಭಾಷಾಪ್ರತಿಭೆಯನ್ನು ನಾವು ಈ ಲೇಖನದ ಮುಂದಿನ ಭಾಗದಲ್ಲಿ ನೋಡೋಣ.

  ಉತ್ತಮ ಸಾಹಿತ್ಯಕೃತಿಯನ್ನು ಹಾಗು ಪ್ರವಾಸವರ್ಣಮೆಯನ್ನು ನೀಡಿದ ಜಯಶ್ರೀ ದೇಶಪಾಂಡೆಯವರಿಗೆ ವಂದನೆಗಳು.