Monday, February 21, 2011

ಕಾಮಕಸ್ತೂರಿ....................ದ.ರಾ.ಬೇಂದ್ರೆ


ಕಾಮಕಸ್ತೂರಿ
(ಹೊಲದ ಹತ್ತರ)

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~

ಬೇಂದ್ರೆಯವರು ರಚಿಸಿದ ‘ಕಾಮಕಸ್ತೂರಿ’ ಕವನವು ಅದೇಹೆಸರಿನ ಸಂಕಲನದಲ್ಲಿ ಅಡಕವಾದ ಮೊದಲನೆಯ ಕವನ. ಕಾಮಕಸ್ತೂರಿ ಇದು ವಿಶಿಷ್ಟ ಸುವಾಸನೆಯ ಒಂದು ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು Ocimum basilicum. ತುಳಸಿಯ ದಳವನ್ನು ದೇವರ ಪೂಜೆಗೆ ಬಳಸುವಂತೆಯೇ, ಈ ಸಸ್ಯದ ಹೂವನ್ನು ಸಹ ದೇವರ ಪೂಜೆಗೆ ಬಳಸುತ್ತಾರೆ. 
ಗಂಡು ಹೆಣ್ಣಿನ ನಡುವಿನ ಆಕರ್ಷಣೆಯು  ಕಾಮಮೂಲವಾಗಿರಬಹುದು; ಆದರೆ ಇದು ಕಾಮಕ್ಕೆ ಸೀಮಿತವಾಗಬಾರದು. ಕಸ್ತೂರಿಯಂತೆ ಇದು ಮೃಗಮಲವಾಗಬಾರದು; ಆದರೆ ಕಾಮಕಸ್ತೂರಿಯಂತೆ ಸುಗಂಧದ ಸಸ್ಯವಾಗಬೇಕು ಎನ್ನುವದು ಬೇಂದ್ರೆಯವರ ಆಶಯವಾಗಿದೆ.

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

‘ಕಾಮಕಸ್ತೂರಿ’ ಕವನದ ಮೊದಲ ನುಡಿಯಲ್ಲಿ ಹಳ್ಳಿಯ ತರುಣನೊಬ್ಬ ತನ್ನ ನಲ್ಲೆಯನ್ನು ಕಂಡಾಗ ಅವನ ಮನದಲ್ಲಿ ಮೂಡಿದ ಭಾವನೆಗಳ ವರ್ಣನೆ ಇದೆ. ಈ ತರುಣನಿಗೆ ತನ್ನ ನಲ್ಲೆಯ ಬಗೆಗೆ ಆಕರ್ಷಣೆ ಇದೆ. ಅವಳ ಚೆಲುವನ್ನು ಆತ ಗಮನಿಸುತ್ತಾನೆ. ‘ತುಂಬಿತುರುಬಿನವಳೆ’ ಎಂದು ಅವಳನ್ನು ಬಣ್ಣಿಸುತ್ತಾನೆ. ಅವಳಿಗೆ ತನ್ನ ಪ್ರಣಯದ ಸಂಕೇತವಾಗಿ ಕಾಮಕಸ್ತೂರಿಯ ತೆನೆಯೊಂದನ್ನು ತುರುಬಿನಲ್ಲಿ ಮುಡಿಯಲು ನೀಡುತ್ತಾನೆ. ದೈಹಿಕ ಆಕರ್ಷಣೆಯ ನಿರೂಪಣೆ ಇಲ್ಲಿಗೇ ಮುಗಿಯುತ್ತದೆ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಎರಡನೆಯ ನುಡಿಯಲ್ಲಿ ಆತನ ಅಪೇಕ್ಷೆಯನ್ನು ನಿರೂಪಿಸಲಾಗಿದೆ. ಕಾಮಕಸ್ತೂರಿಯನ್ನು ಮುಡಿದ ತನ್ನ ನಲ್ಲೆಯಿಂದ ಆತ ಬಯಸುವದು ಏನನ್ನು? ಅವಳ ದೈಹಿಕ ಸಾಮೀಪ್ಯವನ್ನು ಆತ ಬೇಡುತ್ತಿಲ್ಲ. ಅವಳ ಮುಡಿಯ ಮೇಲೆ ನವಿರಾಗಿ ಬೀಸಿದ ಗಾಳಿಯ ಸುಳಿಯೊಂದು, ಆ ಕಾಮಕಸ್ತೂರಿಯ ಪರಿಮಳವನ್ನು ಹೊತ್ತು ತಂದು ತನ್ನನ್ನು ತಗಲಿದರೆ ಸಾಕು ಎನ್ನುವದು ಅವನ ಹಂಬಲ. ಅಷ್ಟರಿಂದಲೇ ಅವನ ಮನಸ್ಸು ತಣಿದು ತೃಪ್ತವಾಗುವದು. ಗಂಡು ಹೆಣ್ಣುಗಳ ನಡುವೆ ದೈಹಿಕ ಆಕರ್ಷಣೆಯನ್ನು ಮೀರಿದ ಪ್ರೀತಿಯನ್ನು ಬೇಂದ್ರೆಯವರು ಈ ರೀತಿಯಲ್ಲಿ ತೋರಿಸುತ್ತಿದ್ದಾರೆ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.

ಮೂರನೆಯ ನುಡಿಯಲ್ಲಿ ಈ ಪ್ರೀತಿಯ ಗಾಢತೆಯನ್ನು, ಉದಾತ್ತತೆಯನ್ನು ಬೇಂದ್ರೆ ಹೇಳುತ್ತಿದ್ದಾರೆ.  ಇವರ ಪ್ರಣಯಭಾವವನ್ನು ಕಂಡಂತಹ ಜನ ಏನೇ ಟೀಕೆಯನ್ನು ಮಾಡಲಿ, ಅದನ್ನು ಉಪೇಕ್ಷಿಸು ಎಂದು ನಾಯಕನು ತನ್ನ ನಲ್ಲೆಗೆ ಸೂಚಿಸುತ್ತಾನೆ. ತಮ್ಮ ನಡುವಿನ ಪ್ರೇಮವು ಅಸಾಮಾನ್ಯವಾಗಿದೆ. ತನ್ನ ನಲ್ಲೆಯೂ ಸಹ ಅಸಾಮಾನ್ಯಳೇ. ಅವಳು ಹಾಗು ಅವಳ ಪ್ರೀತಿ ಸಾಮಾನ್ಯ ಮಟ್ಟದ ಜನರಿಗೆ ಹೊರತಾಗಿದೆ ಎನ್ನುವದು ನಾಯಕನ ಭಾವನೆ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~
ಟಿಪ್ಪಣಿ:
(೧) ಬೇಂದ್ರೆಯವರು ರಚಿಸಿದ ಪ್ರಣಯಕವನಗಳು ಹೆಚ್ಚಾಗಿ ಗ್ರಾಮೀಣ ಪರಿಸರದ ಕವನಗಳಾಗಿರುವದು ಕುತೂಹಲದ ಸಂಗತಿಯಾಗಿದೆ. ಈ ಕವನಗಳಲ್ಲಿ ಅವರು ಬಳಸುವ ಭಾಷೆಯೂ ಸಹ ಹಳ್ಳಿಯ ಮಾತಿನ ಭಾಷೆಯೇ ಆಗಿದೆ. ಇದರ ಕಾರಣವೇನಿರಬಹುದು? ಬೇಂದ್ರೆಯವರ ವೈಚಾರಿಕತೆ ಹಾಗು ಆದರ್ಶ ಇವು ನಗರ ಪರಿಸರದಿಂದ ಪ್ರಭಾವಿತವಾಗಿವೆ. ಆದರೆ ಅವರ ಎದೆಯಾಳದ ಭಾವನೆಗಳ ಪ್ರೇರಣೆ ಜಾನಪದದಲ್ಲಿದೆ. ‘ಟೊಂಕದ ಮೇಲೆ ಕೈ ಇಟಗೊಂಡು ಬಿಂಕದಾಕಿ ಯಾರ ಈಕಿ’ ಎನ್ನುವ ಅವರ ಕವನವು ಪ್ರಣಯಕವನವೇನಲ್ಲ.  ಹೆಣ್ಣಿನ ಚೆಲುವನ್ನು, ಅವಳ ಒಟ್ಟು ವ್ಯಕ್ತಿತ್ವವನ್ನು ಗಮನಿಸುತ್ತ, ಆಸ್ವಾದಿಸುತ್ತ ಬೆರಗು ಪಡುತ್ತಿರುವ ವ್ಯಕ್ತಿಯೋರ್ವನ ಹಾಡು ಇದು. ಈ ಕವನವೂ ಸಹ ಗ್ರಾಮೀಣ ಧಾಟಿಯಲ್ಲಿಯೇ ಇದೆ ಎನ್ನುವದನ್ನು ಗಮನಿಸಿಬೇಕು. ಅದರಂತೆಯೆ ‘ಬೆಳದಿಂಗಳs ನೋಡ’ ಅಥವಾ ‘ಶೀಗಿ ಹುಣ್ಣಿವೆ ಮುಂದೆ ಸೋಗಿನ ಚಂದ್ರಮ’ ಕವನಗಳ ಜಾನಪದ ಧಾಟಿ ಹಾಗು ಭಾಷೆಗಳನ್ನು ಗಮನಿಸಿದಾಗ ಅವರ ಭಾವನೆಗಳ ಮೂಲದ ಕುರುಹು ಹೊಳೆದಂತಾಗುತ್ತದೆ. ಒಟ್ಟಿನಲ್ಲಿ ಶಿಷ್ಟ ಭಾಷೆ ಬೇಂದ್ರೆಯವರ ವೈಚಾರಿಕ ಭಾಷೆ ಹಾಗು ದೇಸಿ ಅಥವಾ ಜಾನಪದ ಭಾಷೆ ಅವರ ಭಾವನೆಗಳ ಭಾಷೆ ಎನ್ನಬಹುದು.

(೨) ನವೋದಯದ ಹಿರಿಯ ಸಾಹಿತಿಗಳಿಗೂ, ನವ್ಯ ಸಾಹಿತಿಗಳಿಗೂ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ ‘ಕಾಮ’ದ ಬಗೆಗೆ ಅವರಿಗಿರುವ ದೃಷ್ಟಿಕೋನ. ಗಂಡು ಹೆಣ್ಣಿನ ನಡುವೆ ಇರಬೇಕಾದ ದೈಹಿಕ ಕಾಮವು ಸೃಷ್ಟಿಗೆ ಅವಶ್ಯವಾದಂತಹ ಒಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಇದ್ದಂತೆಯೆ ಒಪ್ಪಿಕೊಳ್ಳಲು ನವೋದಯ ಸಾಹಿತಿಗಳಿಗೆ ಇರಸು ಮುರಸು ಆಗುತ್ತಿತ್ತೇನೊ. ಆದುದರಿಂದ ಅವರು ‘ಕಾಮ’ಕ್ಕಿಂತ ‘ಪ್ರೇಮ’ ಉಚ್ಚವಾದದ್ದು ಎಂದು ಸಾರಿದರು. ಬೇಂದ್ರೆಯವರನ್ನು ಈ ಧೋರಣೆಯ ಲಕ್ಷಣಕವಿಗಳು ಎನ್ನಬಹುದು.

ನವೋದಯದ ಉತ್ತರಭಾಗದ ಲೇಖಕರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರು ಗಂಡು, ಹೆಣ್ಣಿನ ನಡುವಿನ ಕಾಮ ಹಾಗು ಪ್ರೇಮವನ್ನು ಅಭೇದವಾಗಿ ನೋಡಿದರು. ದಾಂಪತ್ಯಗೀತೆಗಳ ಗುಚ್ಛವಾದ ‘ಮೈಸೂರು ಮಲ್ಲಿಗೆ’ ಕವನಸಂಕಲನವು ಈ ಧೋರಣೆಯ ಲಕ್ಷಣಕಾವ್ಯ ಎನ್ನಬಹುದು.

ನವ್ಯ ಲೇಖಕರು ತಮ್ಮನ್ನು ಮಡಿವಂತರೆಂದು ಹೀಯಾಳಿಸುತ್ತಿದ್ದದ್ದರಿಂದ ಮನನೊಂದಂತಹ ನವೋದಯದ ಕೆಲವು ಶ್ರೇಷ್ಠ ಲೇಖಕರು ತಾವು ‘ಸಂಭಾವಿತ’ರಲ್ಲ ಎಂದು ತೋರಿಸಲೆಂದೇ ಸಣ್ಣ ಪುಟ್ಟ  ಕಸರತ್ತು ಮಾಡಿದರು. ರಾಜರತ್ನಂ ಅವರ ಉದಾಹರಣೆಯನ್ನು ಇಲ್ಲಿ ಕೊಡಬಹುದು. ಬೀchiಯವರಿಗೆ ಉತ್ತರರೂಪದಲ್ಲಿ ರಚಿಸಿದ ತಮ್ಮ ಕೃತಿ `ನಿರ್ಭಯಾಗ್ರಾಫಿ’ಯಲ್ಲಿ ಅವರು ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ಅದು ಹೀಗಿದೆ:
ಅ.ನ. ಕೃಷ್ಣರಾಯರೊಡನೆ ನಡೆದ ಒಂದು ಸಂಭಾಷಣೆಯಲ್ಲಿ ‘ಜಗನ್ನಾಥ ಪಂಡಿತ’ನ ‘ಮನೋರಮಾ ಕುಚಮರ್ದಿನೀ’ ಎನ್ನುವ ಕೃತಿಯ ಹೆಸರು ಬಂದಾಗ, ತಾವಿಬ್ಬರು ಪರಸ್ಪರ ನೋಟ ವಿನಿಮಯ ಮಾಡಿಕೊಂಡು ನಕ್ಕಿದ್ದಾಗಿ ರಾಜರತ್ನಂ ಬರೆದಿದ್ದಾರೆ. ಈ ಮೂಲಕ ತಾವು ‘ಸಂಭಾವಿತ’ರಲ್ಲವೆಂದು ರಾಜರತ್ನಂ ಸಾರ್ವಜನಿಕವಾಗಿ ತಿಳಿಸಿ ಹೇಳಿ ಸಮಾಧಾನಪಟ್ಟುಕೊಂಡರು!

ಬನ್ನಂಜೆ ಗೋವಿಂದಾಚಾರ್ಯರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ತಾವು ತಮ್ಮ ಎಳವೆಯಲ್ಲಿ ‘ಪೋಲಿ’ಯಾಗಿದ್ದೆ ಎಂದು ಸಾಬೀತುಪಡಿಸಲು, ತಾವು ತಮ್ಮ ತರಗತಿಯ ಓರ್ವ ಹುಡುಗಿಗೆ ಬರೆದ ದ್ವಂದ್ವಾರ್ಥದ ಪತ್ರವೊಂದನ್ನು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಕನಕದಾಸರ ಕೀರ್ತನೆಗಳ ಬಗೆಗೆ ಅವರು ರಚಿಸಿದ ‘ಕನಕೋಪನಿಷತ್’ದಂತಹ ಗ್ರಂಥದಲ್ಲಿ  ಈ ಅಸಭ್ಯ ಉಲ್ಲೇಖವಿರುವದು ಬೇಸರದ ಸಂಗತಿಯಾಗಿದೆ.

ಆಡಿಗರನ್ನು ಹೊರತುಪಡಿಸಿ ಇತರ ನವ್ಯ ಲೇಖಕರ ಮನೋವ್ಯಾಪಾರ ಇನ್ನೂ ವಿಚಿತ್ರವಾದದ್ದು. ತಮ್ಮ ಪೂರ್ವಜರ ಸಭ್ಯತೆಯ ವಿರುದ್ಧ ಬಂಡಾಯವೇಳುವದೇ ಮಹತ್ವದ ಸಾಹಿತ್ಯಕಾರ್ಯವೆಂದು ಭಾವಿಸಿದ ಇವರ ಸಾಹಿತ್ಯವು ಕಾಮದಿಂದ ಹೊರಬರಲಾರದೆ ತೊಳಲಾಡುವ ಸಾಹಿತ್ಯವಾಯಿತು. ಅನಂತಮೂರ್ತಿ, ಲಂಕೇಶ ಹಾಗು ರಾಮಚಂದ್ರ ಶರ್ಮರನ್ನು ಇಂತಹ ಸಾಹಿತ್ಯಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇದು ಅವರ ಸಾಹಿತ್ಯಗುಣದ ಟೀಕೆಯಲ್ಲ. ಅವರ ಮನೋಧರ್ಮವನ್ನು ಗುರುತಿಸುವ ಪ್ರಯತ್ನವಷ್ಟೇ.

ಸುದೈವದಿಂದ ನವ್ಯೋತ್ತರ ಸಾಹಿತಿಗಳಿಗೆ  ನವ್ಯಸಾಹಿತಿಗಳ ಇಂತಹ complex ಇಲ್ಲ.  ಅವರು ಆರೋಗ್ಯಕರವಾದ ಸಾಮಾಜಿಕ ಹಾಗು ವೈಯಕ್ತಿಕ ನೆಲೆಯ ವಿವಿಧ ಮುಖಗಳನ್ನು ತೋರಿಸುವ ಸಾಹಿತ್ಯವನ್ನು ರಚಿಸುತ್ತಿರುವದು ಕನ್ನಡ ಸಾಹಿತ್ಯಕ್ಕೆ ಶುಭಸೂಚನೆಯಾಗಿದೆ. ಹಿರಿಯರಾದ ದೇವನೂರು ಮಹಾದೇವ ಹಾಗು ನಂತರದ ಲೇಖಕರಲ್ಲಿ ಅಮರೇಶ ನುಗಡೋಣಿಯವರನ್ನು  ಇಂತಹ ಸಾಹಿತ್ಯದ ಪ್ರಮುಖರೆಂದು ನೆನೆಸಿಕೊಳ್ಳಬಹುದು.

Thursday, February 17, 2011

ಕಾವುದಾನತ ಜನವ ಗದುಗಿನ ವೀರನಾರಯಣ

ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯನ್ನು ಅಂತರಜಾಲದಲ್ಲಿ ತರಲು ಶ್ರೀ ಮಂಜುನಾಥರು ಪ್ರೇರಕರಾದ ಬಳಿಕ, ಅವರ ಪ್ರಯತ್ನದಲ್ಲಿ ಅಳಿಲುಸೇವೆಯನ್ನು ಸಲ್ಲಿಸುವ ಸುಯೋಗ ನನಗೂ ದೊರಕಿತು. `ಕುಮಾರವ್ಯಾಸ ಭಾರತ'ದ ಕೆಲ ಭಾಗಗಳನ್ನು ಮತ್ತೊಮ್ಮೆ ಓದಲು ಇದರಿಂದ ನನಗೆ ಅನುಕೂಲ ಒದಗಿ ಬಂದಿತು. ಹೀಗೆ ಓದುತ್ತಿರುವಾಗ ನನ್ನನ್ನು ಬಹುವಾಗಿ ಆಕರ್ಷಿಸಿದ ನುಡಿ ಎಂದರೆ ಈ ಮಹಾಕಾವ್ಯದ ಪ್ರಪ್ರಥಮ ನುಡಿ. ಆದಿಪರ್ವದ ಮೊದಲ ಸಂಧಿಯ ಆ ಮೊದಲ ನುಡಿ ಹೀಗಿದೆ:

ಶ್ರೀವನಿತೆಯರಸನೆ, ವಿಮಲ ರಾ
ಜೀವಪೀಠನ ಪಿತನೆ, ಜಗಕತಿ
ಪಾವನನೆ, ಸನಕಾದಿ ಸಜ್ಜನನಿಕರದಾತಾರ|
ರಾವಣಾಸುರಮಥನಶ್ರವಣಸು
ಧಾವಿನೂತನ ಕಥನಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ||

ಕುಮಾರವ್ಯಾಸನು ತನ್ನ ಮಹಾಕಾವ್ಯದ ಪ್ರಾರಂಭವನ್ನು ಸಂಪ್ರದಾಯಕ್ಕನುಸಾರವಾಗಿ ದೇವತಾಸ್ತುತಿಯೊಡನೆ ಮಾಡುತ್ತಾನೆ. ಕರ್ಣಾಟಭಾರತದ ಸೂತ್ರಧಾರನು ಶ್ರೀಕೃಷ್ಣನೇ ತಾನೆ. ಆದುದರಿಂದ ಶ್ರೀಕೃಷ್ಣನ ಅಂದರೆ ನಾರಾಯಣನ ಸ್ತುತಿಯಿಂದ ಭಾರತವು ಪ್ರಾರಂಭವಾಗುತ್ತದೆ. ಅಲ್ಲದೆ ನಾರಾಯಣನು ಆದಿಪುರುಷನು. ಆದುದರಿಂದ ಅವನಿಗೇ ಅಗ್ರಪೂಜೆ ಸಲ್ಲಬೇಕು. ಈ ನಾರಾಯಣನು ಲಕ್ಷ್ಮಿಯಿಂದ ಅಭೇದನಾದವನು. ಆದುದರಿಂದ ಲಕ್ಷ್ಮೀಸಹಿತನಾದ ನಾರಾಯಣನನ್ನೇ ಯಾವಾಗಲೂ ಸ್ಮರಿಸಬೇಕು. ಈ ಲಕ್ಷ್ಮಿಯಾದರೊ ಸಕಲ ಕಲಾಸಂಪನ್ನಳು, ಸಕಲವಿಭೂತಿರೂಪಳು. ಅರ್ಥಾತ್ ಅವಳು ನಾರಾಯಣನ ‘ಶ್ರೀ’. ಆದುದರಿಂದ ನಾರಾಯಣಸ್ತುತಿಯು ಶ್ರೀಲಕ್ಷ್ಮೀಸಹಿತನಾದ ನಾರಾಯಣನ ಅಂದರೆ ‘ಶ್ರೀವನಿತೆಯ ಅರಸ’ನ ಸ್ತುತಿಯೇ ಆಗಿದೆ.

ಆದಿಪುರುಷನಾದ ಈ ನಾರಾಯಣನು ಸಕಲ ಸೃಷ್ಟಿಗೆ ಮೊದಲು ಬ್ರಹ್ಮನಿಗೆ ಜನ್ಮ ನೀಡಿದನು. ಆದುದರಿಂದ ಕುಮಾರವ್ಯಾಸನು ಸೃಷ್ಟಿಮೂಲನಾದ ಬ್ರಹ್ಮನ ತಂದೆ ಎಂದು ನಾರಾಯಣನನ್ನು ಸಂಬೋಧಿಸುತ್ತಾನೆ. ಈ ಬ್ರಹ್ಮನ ಸೃಷ್ಟಿಯು ಸತ್ವ, ರಜಸ್ ಹಾಗು ತಮಸ್ ಎನ್ನುವ ತ್ರಿಗುಣಗಳಿಂದ ಕೂಡಿದೆ. ನಾರಾಯಣನು ತ್ರಿಗುಣಾತೀತನು. ಆದುದರಿಂದ ಈತನು ಜಗಕತಿ ಪಾವನನು.

ಸೃಷ್ಟಿ, ಸ್ಥಿತಿ ಹಾಗು ಸಂಹಾರ ಇವು ಭಗವಂತನು ಮಾಡುವ ಮೂರು ಕ್ರಿಯೆಗಳು. ಇವುಗಳಲ್ಲಿ ಮೊದಲನೆಯದಾದ ಸೃಷ್ಟಿಕ್ರಿಯೆಯ ಕಾರಣಪುರುಷನಾದ ನಾರಾಯಣನನ್ನು ಕುಮಾರವ್ಯಾಸನು ಮೇಲೆ ಬಣ್ಣಿಸಿದನು. ಎರಡನೆಯದು ಸ್ಥಿತಿ ಅಥವಾ ಸಂರಕ್ಷಣೆ. ತನ್ನ ಭಕ್ತರಾದ ಸನಕ ಮೊದಲಾದ ಸಜ್ಜನರಿಗೆ ಅನುಗ್ರಹಿಸುವ ಮೂಲಕ ಭಗವಂತನು ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಾನೆ. ಈ ಭಕ್ತರಿಗೆ ಕುಮಾರವ್ಯಾಸನು ‘ಸಜ್ಜನ’ ಎನ್ನುವ ವಿಶೇಷಣವನ್ನು ಜೋಡಿಸುತ್ತಾನೆ. ಸದಾಕಾಲವೂ ಭಗವಚ್ಚಿಂತನೆಯಲ್ಲಿ ಮುಳುಗಿರುತ್ತ, ಸತ್ಸಂಗವಾಸಿಗಳಾದವರೇ ಸತ್+ಜನರು=ಸಜ್ಜನರು. ಇವರು ಭಗವಂತನ ಸ್ಮರಣೆಯ ಸುಖವನ್ನು ಬಿಟ್ಟು ಮತ್ತೇನನ್ನೂ ಅಪೇಕ್ಷಿಸುವದಿಲ್ಲ. ಭಗವಂತನು ಇವರಿಗೆ ಭಕ್ತಿಸುಖದ ಹೊರತಾಗಿ ಬೇರೆ ಏನನ್ನೂ ಕೊಡುವದೂ ಇಲ್ಲ! ಅವರ ನಿಕರಕ್ಕೆ ಅಂದರೆ ಬಳಗಕ್ಕೆ ಬೇಕಾದ್ದನ್ನು ಕೊಡುವ ‘ದಾತಾರ’ ಇವನು. ಇದೇ ಭಗವಂತನ ಸಂರಕ್ಷಣಾ ಕ್ರಿಯೆ.

ಮೂರನೆಯದು ಸಂಹಾರಕ್ರಿಯೆ. ಅನವರತವೂ ನಡೆಯುತ್ತಿರುವ ಮೃತ್ಯುವೇ ಸಂಹಾರಕಾರ್ಯ ಎನಿಸಬಹುದು. ಆದರೆ ಭಗವಂತನು ತಮೋಗುಣದ ಸಂಹಾರವನ್ನು ಪ್ರಕಟವಾಗಿ ಮಾಡುವದನ್ನು ಕುಮಾರವ್ಯಾಸನಿಗೆ ತೋರಿಸಬೇಕಾಗಿದೆ. ಇದರಿಂದ ‘ಶಿಷ್ಟರಕ್ಷಕ ಹಾಗು ದುಷ್ಟಸಂಹಾರಕ’ ಎನ್ನುವ ಭಗವಂತನ ಬಿರುದೂ ಸಾರ್ಥಕವಾಗುವದು. ಈ ಎರಡು ಕಾರ್ಯಗಳನ್ನು ಮಾಡಿದವನು ಕೃಷ್ಣನಿಗೂ ಮೊದಲಿನ ಅವತಾರವಾದ ಶ್ರೀರಾಮಚಂದ್ರನು. ಅಲ್ಲದೆ ಮಹಾಭಾರತಕ್ಕಿಂತ ಮೊದಲೇ ರಾಮಾಯಣವು ಆದಿಕವಿ ವಾಲ್ಮೀಕಿಯಿಂದ ರಚಿಸಲ್ಪಟ್ಟಿತು. ಆ ಆದಿಕವಿಯನ್ನು ಪರೋಕ್ಷವಾಗಿ ನೆನಸುತ್ತ, ರಾಮಾಯಣದ ಕಾರಣಪುರುಷನಾದ ಶ್ರೀರಾಮಚಂದ್ರನನ್ನು ಕುಮಾರವ್ಯಾಸನು ಸ್ತುತಿಸುತ್ತಾನೆ.

ಈ ರೀತಿಯಾಗಿ ಸೃಷ್ಟಿ, ಸ್ಥಿತಿ ಹಾಗು ಸಂಹಾರಕಾರ್ಯಗಳಲ್ಲಿ ತೊಡಗಿಕೊಂಡ, ಶ್ರೀಸಹಿತನಾದ ಆದಿಪುರುಷ ನಾರಾಯಣನಿಗೆ ಪ್ರಾರ್ಥನೆ ಸಲ್ಲಿಸುವದರೊಂದಿಗೆ ಕರ್ಣಾಟಭಾರತ ಕಥಾಮಂಜರಿಯು ಪ್ರಾರಂಭವಾಗುತ್ತದೆ.  ಸ್ತುತಿಪದ್ಯದ ಮುಕ್ತಾಯವು ‘ಗದುಗಿನ ವೀರನಾರಾಯಣನು ಆನತಜನರನ್ನು ಅಂದರೆ ಭಕ್ತರನ್ನು ಕಾಯಲಿ’ ಎಂದು ಮುಕ್ತಾಯವಾಗುತ್ತದೆ. ಇಲ್ಲಿ ‘ಗದುಗಿನ ವೀರನಾರಾಯಣ’ ಎನ್ನುವ ನಿರ್ದಿಷ್ಟ ದೇವತೆ ಏಕೆ ಬೇಕಾಯಿತು? ಇದಕ್ಕೆ ಅನೇಕ ಕಾರಣಗಳಿವೆ. ಗದುಗಿನ ವೀರನಾರಾಯಣನು ಕುಮಾರವ್ಯಾಸನ ಕುಲದೇವತೆಯೊ ಅಥವಾ ಇಷ್ಟದೇವತೆಯೊ ಆಗಿರಬಹುದು. ಅದಕ್ಕಿಂತ ಮುಖ್ಯವಾಗಿ ಅನಾದಿಪುರುಷನ ಅನಂತಸೃಷ್ಟಿಯಿಂದ ಪ್ರಾರಂಭವಾದ ಈ ಸ್ತುತಿಯು ಒಂದು ನಿರ್ದಿಷ್ಟ ಗ್ರಾಮದಲ್ಲಿ, ನಿರ್ದಿಷ್ಟ ದೇವತೆಯಲ್ಲಿ ಕೇಂದ್ರೀಕೃತಗೊಳ್ಳುವದರೊಂದಿಗೆ ಮುಕ್ತಾಯವಾಗುತ್ತದೆ. ಇದು ಸನಾತನ ಧರ್ಮದ ವೈಶಿಷ್ಟ್ಯವೇ ಆಗಿದೆ. ಆಧುನಿಕ ಧರ್ಮಗಳಲ್ಲಿ ದೇವರು ಅಮೂರ್ತನು ಹಾಗು ಅಜ್ಞೇಯನು. ಆದರೆ ಸನಾತನ ಧರ್ಮದ(ಗಳ)ಲ್ಲಿ ದೇವರ ತೀವ್ರ ವೈಯಕ್ತೀಕರಣವಿದೆ.

ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯ ಮೊದಲ ಸಂಧಿಯ ಸ್ತುತಿಪದ್ಯವೇ ಇಷ್ಟೆಲ್ಲ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪೂರ್ಣ ಕಾವ್ಯವನ್ನು ಸವಿದ ಓದುಗನಿಗಂತೂ ಕಾವ್ಯಸೌಂದರ್ಯದ ಮಹಾಪ್ರವಾಹದಲ್ಲಿ ತೇಲುತ್ತಿರುವ ಅನುಭವವಾಗುತ್ತದೆ. ಇಂತಹ ಮಹಾಕವಿ ತನ್ನನ್ನು ‘ಹಲಗೆ ಬಳಪವ ಪಿಡಿಯದವ’ ಎಂದು ಕರೆದುಕೊಳ್ಳುತ್ತಾನೆ! ಆ ಕವಿಗೆ ನನ್ನ ಅನಂತ ನಮನಗಳು. ಆ ಮಹಾಕಾವ್ಯದ ಓದುಗರನ್ನು ಗದುಗಿನ ವೀರನಾರಾಯಣನು ಅನವರತವೂ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ.
‘ಕಾವುದಾನತ ಜನವ ಗದುಗಿನ ವೀರನಾರಯಣ’.

Friday, February 11, 2011

‘ಹೊಸ ವರುಷ’…..........................ರೂಪಾ ಕೆ.


ಗೋಡೆಯಂಚಿನಲ್ಲಿ ಬಂದಿತು ಹೊಸದೊಂದು,
ಹೊಸ ವರುಷದ ಕ್ಯಾಲೆಂಡರ.
ಅದೇ ಜನೇವರಿ, ಅದೇ ಡಿಸೆಂಬರ,
ಆದರೆ ಇತ್ತು ದಿನ, ದಿನಾಂಕಗಳ ಬದಲಾವಣೆ.
ಅದೇಕೊ ಮನಸ್ಸಿಗೆ ಅನ್ನಿಸಿತ್ತು
ಸುಖ, ದುಃಖಗಳ ಬದಲಾವಣೆ ಎಂದು,
ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.

ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು,
ಬಾಳಿನ ಬುತ್ತಿಯನ್ನು ಹಂಚಿಕೊಂಡ ಆ ದಿನಗಳು;
ಮುಸ್ಸಂಜೆ ಹೊತ್ತಿನಲ್ಲಿ ಮೂಡಲಿ
ಮತ್ತೊಂದು ದಿನದ ಆಶಾಕಿರಣ.

ಆಶಿಸೋಣ ಹೊಸ ವರುಷಕೆ, ಹೊಸ ಬದುಕಿನ
ಹೊಸತನ ಮೂಡಲಿ ಎಂದು.
                                   --ರೂಪಾ ಕೆ.
                                    ಜನೆವರಿ ೨೦೧೧
. . . . . . . . . . . . . . . . . . . . . . . . . . . . . . . . . . . . . . . . . . . .

ಹುಬ್ಬಳ್ಳಿಯ ನಿವಾಸಿಯಾದ ರೂಪಾ ಕೆ. ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ವಿವಾಹಜೀವನವನ್ನು ಪ್ರವೇಶಿಸಿದರು. ಅನವರತವೂ ಗೃಹಕೃತ್ಯಗಳಲ್ಲಿ ಮುಳುಗಿರುವ ಈ ಗೃಹಿಣಿಯ ಪ್ರತಿಭೆ ಮನೆಗೆಲಸದಲ್ಲಿಯೇ ಮುಚ್ಚಿಕೊಂಡಂತಿದೆ. ಆದರೆ, ಮೋಡ ಸರಿದಾಗ ಮಾತ್ರ ಕಣ್ಣಿಗೆ ಬೀಳುವ ಚಂದ್ರನಂತಿರುವ ಅವರ ಪ್ರತಿಭೆಯನ್ನು ಕಾಣುವ ಅವಕಾಶವೊಂದು ಇತ್ತೀಚೆಗೆ ನನಗೆ ಸುದೈವದಿಂದ ದೊರಕಿತು. ೨೦೧೧ನೆಯ ಕ್ರಿಸ್ತವರ್ಷ ಪ್ರಾರಂಭವಾದಾಗ, ಮಾಮೂಲಿಯಂತೆ ಹೊಸ ವರ್ಷದ ಕ್ಯಾಲೆಂಡರ ಒಂದನ್ನು ಅವರು ಗೋಡೆಗೆ ತೂಗು ಹಾಕುತ್ತಿದ್ದರು. ಆ ಸಮಯದಲ್ಲಿ ತಮ್ಮ ಅಂತಃಕರಣದಲ್ಲಿ ಹೊಳೆದ ಕವನವೊಂದನ್ನು ಅದೇಕೊ ಅವರು ಗೀಚಿ ಒಗೆದಿದ್ದರು. ಅಲ್ಲಿ ಇಲ್ಲಿ ಬಿದ್ದಾಡಿದ ಈ ಕವನ ಕೆಲವು ದಿನಗಳ ಹಿಂದೆ ನನ್ನ ಕೈಸೇರಿತು. ಅದನ್ನು ಓದಿದಾಗ, ಈ ಗೃಹಿಣಿಯಲ್ಲಿ ಅಡಗಿರುವ ಕವಯಿತ್ರಿಯನ್ನು ಕಂಡು ನಾನು ಚಕಿತನಾದೆ.
ಅವರ ಕವನವನ್ನು ಇಲ್ಲಿ ಸಾದರಪಡಿಸುವ ಸ್ವಾತಂತ್ರ್ಯವನ್ನು ನಾನು ಸಲಿಗೆಯ ಅಧಿಕಾರದಿಂದ ಗ್ರಹಿಸಿಕೊಂಡಿದ್ದೇನೆ.
. . . . . . . . . . . . . . . . . . . . . . . . . . . . . . . . . . . . . . . . . .

ಹಳೆಯ ವರುಷದ ಮಧ್ಯರಾತ್ರಿ ಕಳೆದು, ಹೊಸ ವರುಷ ಪ್ರಾರಂಭವಾಗುತ್ತಿದ್ದಂತೆಯೇ, ಹೊಸ ವರ್ಷದ ಶುಭಾಶಯಗಳು, Happy New Year” ಎನ್ನುವ ಘೋಷಣೆಗಳು ಎಲ್ಲೆಡೆಯೂ ಮೊಳಗುವುವು. ಹೊಸ ವರ್ಷದ ಕ್ಯಾಲೆಂಡರನ್ನು ಗೋಡೆಗೆ ತೂಗುಹಾಕುವಾಗ ಏನೋ ಒಂದು ಸಂಭ್ರಮದ ಭಾವನೆ ಮನಸ್ಸಿನಲ್ಲಿ ಕುಣಿಯುವುದು. ಆದರೆ ಬಾಳಿನಲ್ಲಿ ಬೇವು, ಬೆಲ್ಲಗಳನ್ನು ಉಂಡ ವ್ಯಕ್ತಿಗೆ ವಾಸ್ತವತೆಯ ಅರಿವಿರುವದು. ಹೊಸ ವರ್ಷದ ಕ್ಯಾಲೆಂಡರಿನಲ್ಲಿ ಬದಲಾದದ್ದು ಕೇವಲ ದಿನ ಹಾಗು ದಿನಾಂಕಗಳು. ಅದರಂತೆಯೆ ನಮ್ಮ ಬದುಕಿನಲ್ಲಿಯೂ ಸಹ ಸುಖ ಹಾಗು ದುಃಖಗಳ ಬದಲಾವಣೆಯಾಗುವದೇ ಹೊರತು, ಸುಖದ ಸುಗ್ಗಿ ನಿರಂತರವಾಗಿರುವದಿಲ್ಲ.

ಆದರೆ ರೂಪಾ ಅವರು ಸಿನಿಕರೂ ಅಲ್ಲ, ಭ್ರಮಿಕರೂ ಅಲ್ಲ. ಅವರು ವಾಸ್ತವಪ್ರಜ್ಞೆಯುಳ್ಳ ಆಶಾವಾದಿಗಳು.
‘ಕಭೀ ತೊ ಮಿಲೇಗಿ ಬಹಾರೋಂಕೆ ಮಂಜಿಲ್, ರಾಹೀ!’ ಎನ್ನುವ ವಿಶ್ವಾಸ ಅವರಿಗಿದೆ. ಆದುದರಿಂದಲೇ ಅವರ ಹೊಸ ವರ್ಷದ ಪ್ರತೀಕ್ಷೆಯಲ್ಲಿ, ಹರುಷದ ಎಚ್ಚರದ ನಿರೀಕ್ಷೆಯೂ ಇದೆ:
ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.

ಬಾಳಪಥದಲ್ಲಿ ಕೆಚ್ಚಿನಿಂದ ಮುನ್ನಡೆಯಲು ಬೇಕಾಗುವದೇನು ಎನ್ನುವ ಅರಿವು ಅವರಿಗಿದೆ.ಅದನ್ನು ಅವರು ಹೇಳುವ ರೀತಿ ಹೀಗಿದೆ:
ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು.

ಬೇಂದ್ರೆಯವರು, ಇರುಳ ತಾರೆಗಳಂತೆ ಬೆಳಕೊಂದು ಮಿನಗುವದು, ಕಳೆದ ದುಃಖಗಳಲ್ಲಿ ನೆನೆದಂತೆಯೆ, ಎಂದು ತಮ್ಮ ಸಖೀಗೀತದಲ್ಲಿ ಹಾಡಿದರು.
ಆದರೆ ಈ ತಂಗಿ ಆಲೋಚಿಸುವ ಬಗೆಯೇ ಬೇರೆ. ಕಹಿದಿನಗಳ ನೆನಪೇ ಬೇಡ, ಸಿಹಿ ಸಿಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ ಎಂದು ರೂಪಾ ಆಶಿಸುತ್ತಾರೆ. ತನ್ನ ಸಹಪಯಣಿಗರೊಡನೆ ಹಂಚಿಕೊಂಡ ಕನಸುಗಳೇ ಬಾಳಿನ ಮುಂದಿನ ಪಯಣದ ಬುತ್ತಿ ಎನ್ನುವದು ರೂಪಾ ಅವರ ಭಾವನೆ. ಮುಸ್ಸಂಜೆ ಕವಿಯುತ್ತಿರುವಾಗಲೂ ಸಹ, ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಅವರು ಹಾರೈಸುತ್ತಾರೆ.

ಅದಮ್ಯ ಆಶಾವಾದಿಗಳೂ, ವಾಸ್ತವಪ್ರಜ್ಞೆಯುಳ್ಳವರೂ ಆದ ರೂಪಾ ಅವರಿಂದ ಚೆಲುವಾದ ಇನ್ನಿಷ್ಟು ಕವನಗಳನ್ನು ಆಶಿಸೋಣ.