Sunday, August 25, 2013

ಹಿಂದs ನೋಡದs (ಒಂದು ಹಳೆಯ ಚಿತ್ರವನ್ನು ಕುರಿತು).......ಬೇಂದ್ರೆಹಿಂದs ನೋಡದs
(ಒಂದು ಹಳೆಯ ಚಿತ್ರವನ್ನು ಕುರಿತು)

ಹಿಂದs ನೋಡದs | ಗೆಳತಿ
               ಹಿಂದs ನೋಡದs

ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…

ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…

ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
…………………………………………………………..

ಹದಿಹರೆಯವು ಪ್ರೇಮಾಕರ್ಷಣೆಯ ಕಾಲವಾಗಿದೆ. ಈ ಅನುಭವವು ಎಲ್ಲರಿಗೂ ಆಗಿರುವಂತಹದೆ. ಬೇಂದ್ರೆಯವರು ಸ್ವತಃ ಈ ಆಕರ್ಷಣೆಯ ಜಾಲದಲ್ಲಿ ಸಿಲುಕಿರಲಿಕ್ಕಿಲ್ಲ. ಅದರೆ ಅಂತಹ ಪ್ರಸಂಗಗಳನ್ನು ಅವರು ಕಂಡಿರಬಹುದು. ಅವರು ರಚಿಸಿದ ಇಂತಹ ಪ್ರೇಮಕವನಗಳು ಬಹುತೇಕವಾಗಿ ನಾಯಿಕಾ-ಪ್ರಧಾನವಾಗಿವೆಯೇ ಹೊರತು ನಾಯಕ-ಪ್ರಧಾನವಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ. ಇದಕ್ಕೆ ಕಾರಣವೇನಿರಬಹುದು? ಹುಡುಗಿಯರು ಹುಡುಗರಿಗಿಂತ ಹೆಚ್ಚು ಭಾವಜೀವಿಗಳು ಎನ್ನುವುದು ಅವರ ಅಭಿಪ್ರಾಯವಾಗಿರಬಹುದೆ? ‘ಹುಡುಗರ ಭಾವನೆಗಳಲ್ಲಿ ವರ್ಣಿಸಲಿಕ್ಕೆ ಏನಿದೆ ಮಣ್ಣು?’ ಎನ್ನುವುದು ಅವರ ಅನಿಸಿಕೆಯಾಗಿರಬಹುದೆ!?‘ಹಿಂದs ನೋಡದs’ ಎನ್ನುವ ಕವನವು ಹದಿಹರೆಯದಲ್ಲಿ ಆಕರ್ಷಣೆಯ ಜಾಲಕ್ಕೆ ಮೊದಲ ಸಲ ಸಿಲುಕಿದ ಬಾಲೆಯೊಬ್ಬಳ ಭಾವಗೀತೆಯಾಗಿದೆ. ಆದರೆ ಈ ಅನುಭವದ ಅನೇಕ ವರ್ಷಗಳ ನಂತರ ಅವಳು ತನ್ನ ಸಖಿಯಲ್ಲಿ ಈ ಹಳೆಯ ಕತೆಯನ್ನು ಬಿಚ್ಚಿಡುತ್ತಿದ್ದಾಳೆ. ಆ ಕಾರಣದಿಂದಾಗಿಯೇ, ಕವನದ ಶೀರ್ಷಕದ ಕೆಳಗೆ `ಒಂದು ಹಳೆಯ ಚಿತ್ರವನ್ನು ಕುರಿತು’ ಎನ್ನುವ ಸೂಚನೆಯನ್ನು ವರಕವಿಗಳು ನೀಡಿದ್ದಾಳೆ. ಕಾಲವು ನೀರಿನಂತೆ ಹರಿದು ಹೋಗಿದೆ. ಆದರೆ  ಚಿಕ್ಕ ಮಕ್ಕಳು  ತಮ್ಮ ಪುಸ್ತಕದಲ್ಲಿ ನವಿಲುಗರಿಯನ್ನು ಪ್ರೀತಿಯಿಂದ ಇಟ್ಟುಕೊಳ್ಳುವಂತೆ ಈ ಹೆಣ್ಣುಮಗಳು ತನ್ನ ಮೊದಲ ಪ್ರೇಮಾನುಭವವನ್ನು ತನ್ನ ಹೃದಯದಲ್ಲಿ ಕಾಪಿಟ್ಟಿದ್ದಾಳೆ. ಆ ಅನುಭವವನ್ನು ವಾಸ್ತವ ದೃಷ್ಟಿಕೋನದಿಂದ ವಿಶ್ಲೇಷಿಸಿ ಹೇಳುವ ಪ್ರೌಢತೆ ಅವಳಿಗೆ ಈಗ ಬಂದಿದೆ.
……………………………………………………………
`ಹಿಂದs ನೋಡದs | ಗೆಳತಿ
               ಹಿಂದs ನೋಡದs’ ಎನ್ನುವ ಪದಪುಂಜವು ಈ ಕವನದಲ್ಲಿ ೫ ಸಲ ಉಕ್ತವಾಗಿದೆ. ಪ್ರತಿ ಸಲವೂ ಈ ಪದಪುಂಜಕ್ಕೆ ಬೇಂದ್ರೆಯವರು ವಿಭಿನ್ನ ಅರ್ಥವನ್ನೇ ನೀಡಿದ್ದಾರೆ. ‘ಹಿಂದೆ ನೋಡುವುದು’ ಎಂದರೆ ಹಳೆಯದನ್ನು ನೆನಪಿಸಿಕೊಳ್ಳುವುದು. ಸಖಿಯ ಜೊತೆಗೆ ತನ್ನ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಿರುವ ನಮ್ಮ ನಾಯಕಿಯು ‘ಹಿಂದs ನೋಡದs’ ಎಂದು ಹೇಳುವುದೇ ಒಂದು ವಿರೋಧಾಲಂಕಾರವಾಗಿದೆ.

ನಮ್ಮ ನಾಯಕಿಯನ್ನು ಈ ಪರಿ ಆಕರ್ಷಿಸಿದ ತರುಣನು ಅವಳಿಗೆ ಅಪರಿಚಿತ. ಅಕಸ್ಮಾತ್ತಾಗಿ ಅವಳಿಗೆ ಜಾತ್ರೆಯಲ್ಲಿ ಅಥವಾ ಒಂದು ಸಾರ್ವಜನಿಕ ಜಾಗದಲ್ಲಿ ಕಂಡವನು. ಅವನನ್ನು ನೋಡಿದ ತಕ್ಷಣ ನಮ್ಮ ನಾಯಕಿಯು ಅವನಿಗೆ ತನ್ನ ಹೃದಯವನ್ನು ಅರ್ಪಿಸಿದಳು. ಆತ ಯಾರು, ಆತನ ಕುಲಗೋತ್ರವೇನು ಇದಾವದನ್ನೂ ಅರಿಯದೆ ಅವನಿಗೆ ಮಾರು ಹೋದ ಹುಡುಗಿ ಇವಳು. ಆದುದರಿಂದಲೇ ತನ್ನ ಸಖಿಗೆ ಇವಳು  ‘ಹಿಂದೆ ಮುಂದೆ ನೋಡದೆ’ ಅವನಿಗೆ ಮರುಳಾದೆ ಎಂದು ಹೇಳುತ್ತಿದ್ದಾಳೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಮೊದಲನೆಯ ಅರ್ಥವಿದು.

ಇವಳ ನೋಟಕ್ಕೆ ಆ ತರುಣನ ಪ್ರತಿಕ್ರಿಯೆ ಏನು?
ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…
ಆತ ಇವಳ ಪ್ರೇಮಕಟಾಕ್ಷವನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಉತ್ತೇಜಿಸುವದಿಲ್ಲ. ಒಂದೇ ಸಲ ಇವಳನ್ನು ನೋಡುತ್ತಾನೆ. ಸಭ್ಯತೆಯ ಸಂಕೇತವೆಂಬಂತೆ ಒಂದು ಮುಗುಳುನಗೆಯನ್ನು ಬೀರಿ ಆತ ಮುನ್ನಡೆಯುತ್ತಾನೆ.  `ಹಾಂಗs ಬೀರಿ’ ಎನ್ನುವಾಗ ‘ತನಗೆ ಈ ಹುಡುಗಿಯೇನೂ ವಿಶೇಷವಲ್ಲ’ ಎನ್ನುವ ಭಾವನೆ ಇದೆ. ಆತ ಅಲ್ಲಿಯೇ ನಿಂತು ಇವಳೊಡನೆ ‘ಕಣ್ಣಾಟ’ವಾಡಬಹುದಾಗಿತ್ತು. ಆದರೆ ಅವನು ಅಂಥವನಲ್ಲ! ಹಾಗಾಗಿ ಆತನು ಹಿಂದೆ ತಿರುಗಿ ಸಹ ನೋಡುವದಿಲ್ಲ. ತನ್ನ ವಿಚಾರಗಳಲ್ಲಿಯೇ ಮಗ್ನನಾದ ಆತನು ಹಾಗೇ ಮುಂದೆ ಹೋಗಿ ಬಿಡುತ್ತಾನೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಎರಡನೆಯ ಅರ್ಥವಿದು.

ಆ ತರುಣನ ಇಂತಹ ಪ್ರತಿಕ್ರಿಯೆಯು ಅವನಲ್ಲಿ ಅವಳಿಗಿರುವ ಸೆಳೆತವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆತ ಕಾಣದಿದ್ದರೇನಾಯಿತು? ಅವಳ ಮನಸ್ಸು ಇಂದ್ರಿಯಾತೀತವಾಗಿ ಅವನ ಹಿಂದೆ ಹೋಗಿದೆಯಲ್ಲವೆ? ಅದನ್ನು ಅವಳು ಹೀಗೆ ಹೇಳುತ್ತಾಳೆ:
ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…
ಹೂವಿನ ಸುಗಂಧವು ಗಾಳಿಯ ಜೊತೆಗೆ ಬೆರೆತು, ಗಾಳಿ ಹೋದಲ್ಲೆಲ್ಲ ಹೋಗುತ್ತದೆ. ಗಾಳಿ ಬೀಸಿದಾಗ ಮೊದಲು ಅದರ ಸ್ಪರ್ಶದ ಅನುಭವ ಆಗುತ್ತದೆ. ಆಬಳಿಕ ಅದರ ಜೊತೆಗಿರುವ ಕಂಪಿನ ಅನುಭವ ಆಗುತ್ತದೆ. ಆದುದರಿಂದ ಸುಗಂಧವು ಗಾಳಿಯನ್ನು ಹಿಂಬಾಲಿಸುತ್ತದೆ.

‘ಹೆಜ್ಜೆ ಹಿಡಿದು ಹೋಗುವುದು’ ಎನ್ನುವುದಕ್ಕೆ ಇರುವ ಒಂದು ವಿಶೇಷ ಅರ್ಥವನ್ನೂ ಸಹ ಇಲ್ಲಿ ಗಮನಿಸಬೇಕು. ಬೇಟೆಗಾರನು ತನ್ನ ಬೇಟೆಯನ್ನು ಹಿಂಬಾಲಿಸುವದಕ್ಕೆ ‘ಹೆಜ್ಜೆ ಹಿಡಿಯುವುದು’ ಎನ್ನುತ್ತಾರೆ. ಅದರಂತೆ ನಮ್ಮ ನಾಯಕಿಯ ಪ್ರೇಮಿಯು ಎಲ್ಲಿಯೇ ಚಲಿಸುತ್ತಿರಲಿ, ಅವಳ ಮನಸ್ಸು ಆತನ ಹೆಜ್ಜೆಯನ್ನು ಕಂಡು ಹಿಡಿದು, ಅವನನ್ನು ಹಿಂಬಾಲಿಸುತ್ತಿದೆ. ಹಾಗೆಂದು ಅವಳ ಆಕರ್ಷಣೆಯ ಬಗೆಗೆ ತಪ್ಪು ತಿಳಿಯಬಾರದು. ಅದು ಸುಗಂಧಮಯ, ಅದು ಸುಮನಸ್ಸು. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಈ ಸುಗಂಧ ಚಲಿಸಲಾರದು. ಅದರ ದಾರಿಯು ನಿಶ್ಚಿತವಾಗಿದೆ. ಇದು ‘ಹಿಂದs ನೋಡದs’  ಎನ್ನುವ ಪದಪುಂಜದ ಮೂರನೆಯ ಅರ್ಥ.

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…
ಹೀಗೆ ಪರವಶಳಾಗಿ ಕುಳಿತಿರುವ ಹದಿಹರೆಯದ ಹುಡುಗಿಯನ್ನು ನೋಡಿದವರು ಏನಂದಾರು?
ಆದರೆ ತನ್ನ ಖಬರೇ ತನಗೆ ಇಲ್ಲದವಳು ಮಂದಿಯ ಮಾತಿಗೆ ಗಮನ ಕೊಡುವಳೆ?
ಅವಳ ಚಿತ್ತವು ಬಾಹ್ಯ ಪರಿಸರದತ್ತ ಗಮನ ಹರಿಸದೇ ತನ್ನ ಅಂತರಂಗದ ಭಾವದಲ್ಲಿಯೇ ತಲ್ಲೀನವಾಗಿ, ಸಮವೇಗದಲ್ಲಿ ನಡೆದಿದೆ. ಅವಳ ಮನಸ್ಸು ಪ್ರೇಮದ ದಾರಿಯಲ್ಲೇ ಮುನ್ನಡೆಯುವುದು. ಇದು ಈ ಪದಪುಂಜದ ನಾಲ್ಕನೆಯ ಅರ್ಥ.

ತನ್ನ ಪ್ರೇಮವು ತಾತ್ಪೂರ್ತಿಕ ಆಕರ್ಷಣೆಯಲ್ಲ. ತನ್ನ ಮನಸ್ಸು ಆ ತರುಣನಲ್ಲಿ ಶಾಶ್ವತವಾಗಿ ನೆಟ್ಟಿದೆ ಎಂದು ಅವಳು ಹೇಳುತ್ತಾಳೆ:
ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
ಸೂಜಿಯಲ್ಲಿ ಸಿಲುಕಿಸಿದ ದಾರವು ಸೂಜಿಯನ್ನೇ ಹಿಂಬಾಲಿಸುವುದು ಅನಿವಾರ್ಯ. ಕೊಳ್ಳದಲ್ಲಿ ಜಾರುವುದು ಒಂದು ಆಕಸ್ಮಿಕ. ಹಾಗೆ ಜಾರಿದ ವ್ಯಕ್ತಿ ಮತ್ತಿಷ್ಟು ಜಾರುತ್ತ ಹೋಗುವುದೇ ಸಹಜವಾದದ್ದು. ನಮ್ಮ ನಾಯಕಿಯ ಮನಸ್ಸು ಸಹ ಹಿಂದೆ ಬಾರದಂತೆ, ಅಂದರೆ ಬದಲಾಯಿಸಲು ಅಶಕ್ಯವಾದಂತೆ ಆ ತರುಣನಲ್ಲಿ ಸಿಲುಕಿದೆ. ನಮ್ಮ ನಾಯಕಿಯು ತನ್ನ ನಿರ್ಧಾರದಲ್ಲಿ ಹಾಗು ನಿಷ್ಠೆಯಲ್ಲಿ ಅಚಲಳಾಗಿದ್ದಾಳೆ. ಆದುದರಿಂದಲೇ ಅವಳು ‘ಹಿಂದs ನೋಡದs’ ಎಂದು ಹೇಳುತ್ತಿದ್ದಾಳೆ. ಇದು ಈ ಪದಪುಂಜದ ಐದನೆಯ ಅರ್ಥ.

ಮೊದಲ ಪ್ರೇಮದ ವಿವಿಧ ಸ್ಥಿತಿಗಳನ್ನು ಬೇಂದ್ರೆಯವರು ಸುಸಂಬದ್ಧವಾಗಿ ಇಲ್ಲಿ ವರ್ಣಿಸಿದ್ದಾರೆ. ಈ ಸುಸಂಬದ್ಧತೆ ಅವರ ಕವನಗಳ ವೈಶಿಷ್ಟ್ಯವೇ ಆಗಿದೆ. ಇನ್ನು ‘ಹಿಂದs ನೋಡದs’ ಎನ್ನುವ ಪದಪುಂಜವನ್ನು ವಿಭಿನ್ನಾರ್ಥಗಳಲ್ಲಿ ಬಳಸಿರುವುದು ಬೇಂದ್ರೆ-ಪ್ರತಿಭೆಯ ದ್ಯೋತಕವಾಗಿದೆ!

‘ಹಿಂದs ನೋಡದs’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.

Friday, August 16, 2013

ಯೇಟ್ಸ ಕವಿಯ ಕವನವೊಂದರ ಮೂರು ಅನುವಾದಗಳುಇಂಗ್ಲಿಶ್ ಸಾಹಿತ್ಯದ ಮಹಾನ್ ಕವಿಯಾದ ಯೇಟ್ಸ್ ಅವರು ಬರೆದ ಕವನವೊಂದು ಇಲ್ಲಿದೆ. ಮೂಲಕವನದ ಜೊತೆಗೆ ಆ ಕವನದ ಮೂರು ಅನುವಾದಗಳನ್ನೂ ಸಹ ಇಲ್ಲಿ ಕೊಡುತ್ತಿದ್ದೇನೆ. ಮೊದಲಿನ ಎರಡು ಅನುವಾದಗಳು ಕನ್ನಡದ ಉದ್ದಾಮ ಸಾಹಿತಿಗಳು ಮಾಡಿದ ಭಾಷಾಂತರಗಳಾಗಿವೆ. ಮೂರನೆಯ ಅನುವಾದವು ಬ್ಲಾ*ಗ್ ಲೋಕದಲ್ಲಿ ಸುಪರಿಚಿತರಾದ ಶ್ರೀ ಮಂಜುನಾಥ ಕೊಳ್ಳೇಗಾಲರದು.

Crazy Jane talks with the Bishop
I met the Bishop on the road
And much said he and I.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’

`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.

`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ಕವನವನ್ನು ಅನಂತಮೂರ್ತಿಯವರು ಅನುವಾದಿಸಿದ ಬಗೆ ಹೀಗಿದೆ:
ಮರಳಿ ಜೇನ್ ಗೌರವಾನ್ವಿತ ಬಿಶಪ್‍ಗೆ

ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.

ಅರಿತದ್ದೋ ಅದು—
ಪಾಪದ ತನು ವಿನಯದಲ್ಲಿ
ಹೃದಯ ಹೆಮ್ಮೆಯಲ್ಲಿ.
ರತ್ಯಾತುರ ಹೆಣ್ಣಿಗು ಇದೆ
ಲಜ್ಜೆಯ ಬಿಗುಮಾನ;
ಪ್ರೇಮವೆಬ್ಬಿಸಿದ ಸಿರಿಸೌಧದ ಠಾವೊ
ಮಲಮೂತ್ರದ ಜಘನ;

ಬಿಡಿ ನಿಂತಿದ್ದೂ ಇಡಿ ತುಂಬಿದ್ದೂ
ಬಗೆದದ್ದೇ ಎಲ್ಲ—ಹರಿಯದೆ
ಬಗೆದದ್ದೂ ಇಲ್ಲ.’

ಇದೇ ಕವನವನ್ನು ಲಂಕೇಶರು ಹೀಗೆ ಅನುವಾದಿಸಿದ್ದಾರೆ:
ಮಳ್ಳಿ ಜೇನ್ ಮತ್ತು ಬಿಶಪ್ ಮಾತಾಡಿದ್ದು
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ
ಉಬ್ಬಿ ಹೋಗುವುಳು ಸೆಡೆದು

ಕಾಮ ಮಾಡಿದ್ದೇನು, ಹಾಕಿದೆ ಡೇರೆ
ಮಲಮೂತ್ರ ಸ್ಥಾನ ಹಿಡಿದು,
ಇಲ್ಲಿ ಚಿಂದಿಯಾಗದೆ ಕಷ್ಟ, ಮತ್ತೆ
ಒಂದಾಗಿಸುವುದು ಹೊಲೆದು.’


ಈಗೊಂದು ಪ್ರಶ್ನೆ. ಮೂಲಕವನವು ಅರ್ಥವಾಗುವಷ್ಟು ಸರಳವಾಗಿ, ಮೂಲಕವನದ ಭಾವವು ಮನಸ್ಸಿಗೆ ತಟ್ಟುವಷ್ಟು ಸಮರ್ಥವಾಗಿ ಈ ಭಾಷಾಂತರಗಳು ಅರ್ಥವಾಗುತ್ತಿವೆಯೆ? ಈ ಎರಡೂ ಅನುವಾದಗಳು ಮೂಲಕವನದ ಛಂದಸ್ಸನ್ನು ನಿಖರವಾಗಿ ಹಿಂಬಾಲಿಸಿವೆ. ಎರಡೂ ಕವನಗಳಲ್ಲಿ ಪದಲೋಪವಾಗಿಲ್ಲ. ಆದರೆ ಕವನದ ಭಾವ(Spirit of the poem) ಹಾಗು ಸ್ವಭಾವ(Tone of the poem)ಗಳ ನಿರ್ಮಾಣದಲ್ಲಿ ಅನಂತಮೂರ್ತಿಯವರ ಅನುವಾದವು ಸಂಪೂರ್ಣವಾಗಿ ಸೋತು ಹೋಗಿದೆ. ಲಂಕೇಶರ ಅನುವಾದವು ಸ್ವಲ್ಪ ಮಟ್ಟಿಗೆ ಉತ್ತಮ.

ಈ ಮಾತನ್ನು ಚರ್ಚಿಸಲು ಕವನದ ಹಿನ್ನೆಲೆಯನ್ನು ಗಮನಿಸೋಣ. ಈ ಕವನದ ನಾಯಕಿ ಮೈಮಾರಿಕೊಂಡು ಜೀವಿಸುತ್ತಿರುವ,  ಹರೆಯವನ್ನು ದಾಟಿದ ಓರ್ವ ಸೂಳೆ. ಸಮಾಜದ ಚರಂಡಿಯಲ್ಲಿ ಬಿದ್ದುಕೊಂಡು ಬದುಕು ಕಟ್ಟಬೇಕಾದ ಪರಿಸ್ಥಿತಿ ಅವಳದು. ಅವಳು ದಾರಿಯಲ್ಲಿ ಹೋಗುತ್ತಿರುವಾಗ  ಅಕಸ್ಮಾತ್ತಾಗಿ ಆ ಭಾಗದ ಧರ್ಮಬೋಧಕನು ಅವಳನ್ನು ನೋಡುತ್ತಾನೆ. ‘ಪಾಪಿ’ಗಳನ್ನು ಉದ್ಧರಿಸುವುದೇ ಅವನ ಕರ್ತವ್ಯವಲ್ಲವೆ! ಈ ಸೂಳೆಯನ್ನು ಉದ್ಧರಿಸುವ ದಿವ್ಯ ಅಪೇಕ್ಷೆಯನ್ನು ಹೊಂದಿದ ಧರ್ಮಬೋಧಕನೇ ಅವಳೊಡನೆ ಮಾತನ್ನು ಪ್ರಾರಂಭಿಸುತ್ತಾನೆ ಹಾಗು ಇವಳು ಎಗ್ಗಿಲ್ಲದೆ ಅವನಿಗೆ ಪ್ರತಿಯಾಡುತ್ತಾಳೆ. ಇಷ್ಟೆಲ್ಲವನ್ನೂ ಏಟ್ಸ್ ಒಂದೇ ವಾಕ್ಯದಲ್ಲಿ ಹೇಳಿದ್ದಾನೆ:
I met the Bishop on the road
And much said he and I.
ಈ ಮಾತನ್ನು ಅನಂತಮೂರ್ತಿಯವರು ಅನುವಾದಿಸಿದ್ದು ಹೀಗೆ:
ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
ಬಿಶಪ್ಪನ ನೀತಿಬೋಧೆಯ ಆತುರವು ಈ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಆ ನೀತಿಬೋಧೆಯಿಂದಾಗಿಯೇ ನಮ್ಮ ನಾಯಕಿಯು ಕೆರಳುತ್ತಾಳೆ ಎನ್ನುವುದೂ ಇಲ್ಲಿ ತಿಳಿಯುವುದಿಲ್ಲ!
ಇನ್ನು ಲಂಕೇಶರ ಅನುವಾದವನ್ನು ನೋಡೋಣ:
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
‘ಬೀದಿಯಲ್ಲೊಬ್ಬ’ ಎಂದಾಗ ಅವನು ಯಾವುದೋ ಒಬ್ಬ ಪಾದ್ರಿ ಎನ್ನುವ ಗ್ರಹಿಕೆಯಾಗುವುದೇ ಹೊರತು, ಆ ಭಾಗದ ಧರ್ಮೋಪದೇಶಕ ಎನ್ನುವ ವಿಷಯ ತಿಳಿಯುವುದಿಲ್ಲ. ಇದು ತಪ್ಪು ಭಾಷಾಂತರ. ‘ಅದೂ ಇದೂ ಮಾತಾಡಿದೆವು’ ಎನ್ನುವಾಗ, ಆ ಪಾದ್ರಿ ಮತ್ತು ಸೂಳೆ ಲೋಕಾಭಿರಾಮವಾಗಿ ಮಾತನಾಡಿದರು ಎನ್ನುವ ಅರ್ಥವನ್ನು ಈ ಅನುವಾದವು ಕೊಡುತ್ತದೆ! ಇಲ್ಲಿ ಲಂಕೇಶರು ಅನಂತಮೂರ್ತಿಗಿಂತ ಕೆಟ್ಟದಾಗಿ ಅನುವಾದಿಸಿದ್ದಾರೆ.

ಮುಂದಿನ ನುಡಿಯಲ್ಲಿ, ನಮ್ಮ ಸೂಳೆಯ ಈಗಿನ ಅನಾಕರ್ಷಕ ರೂಪವನ್ನು ಆ ಧರ್ಮಬೋಧಕನು ನೇರವಾಗಿ ಹೀಗಳೆಯಲು ಪ್ರಾರಂಭಿಸುತ್ತಾನೆ. ಇದು ಅವನಿಗಿರುವ ಸಾಮಾಜಿಕ ಪ್ರತಿಷ್ಠೆಯ ಅಹಮ್ ಅನ್ನು ತೋರಿಸುತ್ತದೆ.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’
ಈ ಮಾತನ್ನು ಬೋಧಿಸುವಾಗ ಒಬ್ಬ ಹೆಣ್ಣುಮಗಳಿಗೆ (--ಅವಳು ಸೂಳೆಯೇ ಯಾಕಾಗಿರಲಿ--) ಗೌರವ ಕೊಡುವ ಅವಶ್ಯಕತೆ ಅವನಿಗೆ ಕಾಣುವದಿಲ್ಲ.

ಧರ್ಮಬೋಧಕನ ಇಂತಹ ಪ್ರತಿಷ್ಠಿಕೆಯ ಮನೋಭಾವ ಅನಂತಮೂರ್ತಿಯವರ ಅನುವಾದದಲ್ಲಿ ಕಾಣುವುದಿಲ್ಲ. ಬದಲಾಗಿ ಓರ್ವ ನಿರಪೇಕ್ಷ ವ್ಯಕ್ತಿಯ ನೈಜ ಉಪದೇಶದಂತೆ ಭಾಸವಾಗುತ್ತದೆ. ಯಾಕೆಂದರೆ ಅನಂತಮೂರ್ತಿಯವರು ಈ ಬೋಧನೆಯನ್ನು ಶಿಷ್ಟ, ಸುಸಂಸ್ಕೃತ ಭಾಷೆಯಲ್ಲಿ ಅನುವಾದಿಸಿದ್ದಾರೆ:
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ಈ ಮಾತನ್ನು ಲಂಕೇಶರು ಅನುವಾದಿಸಿದ್ದು ಹೀಗೆ:
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಲಂಕೇಶರ ಅನುವಾದದಲ್ಲಿ ಧರ್ಮಬೋಧಕನು ಬಳಸುವ ಅಶಿಷ್ಟ ಭಾಷೆಯು ಮೂಲಕವನದಲ್ಲಿ ಕಾಣಬರುವ ವ್ಯಂಗ್ಯಕ್ಕೆ ಸಮಾಂತರವಾಗಿದೆ. ಮೂಲಕವನದಲ್ಲಿ ಧರ್ಮಾಧಿಕಾರಿಯು ಬಳಸುವ ಚುಚ್ಚುಮಾತು ಹಾಗು ಅವಳ ಬಗೆಗೆ ಅವನಿಗೆ ಇರುವ ತಾತ್ಸಾರವು ಲಂಕೇಶರ ಅನುವಾದದಲ್ಲಿ ವ್ಯಕ್ತವಾದಂತೆ, ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗಿಲ್ಲ.

ಧರ್ಮಬೋಧಕನು ಮಾಡುವ ನಾಯಕಿಯ ತುಚ್ಛೀಕರಣಕ್ಕೆ ಅವಳ ಪ್ರತಿಕ್ರಿಯೆ ಏನು? ‘I cried’ ಎಂದರೆ ಆ ಸೂಳೆಯು ಚೀರುತ್ತಾಳೆ.
`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.
ಧರ್ಮಬೋಧಕನ ನೀತಿಪಾಠವು ಅವಳನ್ನು ಕೆಣಕಿದೆ ಹಾಗು ಕೆರಳಿಸಿದೆ. ಕೊಳಚೆಯಲ್ಲಿ ಒತ್ತಲ್ಪಟ್ಟ ಆ ನಾಗಿಣಿಯ ಹೆಡೆಯನ್ನು ಅವನು ತುಳಿದಿದ್ದಾನೆ. ಈ ‘ಪ್ರತಿಷ್ಠಿತ, ಸಭ್ಯ ಪುರುಷನ’ ಪ್ರತಿಯಾಗಿ ಇರುವ ಅಸಹಾಯಕತೆ ಹಾಗು ರೋಷ ಅವಳನ್ನು ಭುಸುಗುಟ್ಟುವಂತೆ ಮಾಡಿದೆ

ಇದು ಅವಳ ಸಹಜ ಸ್ವಭಾವ ಇರಬಹುದು ಅಥವಾ ಧರ್ಮಾಧಿಕಾರಿಯ ಚುಚ್ಚು ಮಾತಿಗೆ ಪ್ರತಿಕ್ರಿಯೆಯಾಗಿರಬಹುದು. ಅಲ್ಲದೆ ತನ್ನ ಬದುಕು ಎಂತಹದೇ ಇದ್ದರೂ ಸಹ, ಇದು ಸಮಾಜದ್ದೇ ಸೃಷ್ಟಿ ಎನ್ನುವ ಅರಿವಿನಿಂದ ಅವಳು ಕುದಿಯುತ್ತಾಳೆ. ಆದುದರಿಂದಲೇ, ಸೊಗಸು ಹಾಗು ಕೊಳಕು ಎರಡೂ ಸಂಬಂಧಿಗಳು ಎಂದು ಕುಟುಕುತ್ತಾಳೆ. ಅರ್ಥಾತ್ ಉದಾತ್ತ ಪ್ರೇಮ ಹಾಗು ಕೊಳಕು ಕಾಮ ಇವೆರಡೂ ಬಿಡಿಸಲಾರದ ಜೋಡಿ ಎಂದು ಅವನ ಮುಖಕ್ಕೆ ರಾಚಿದಂತೆ ಹೇಳುತ್ತಾಳೆ. ತನ್ನ ಕಸುಬಿನ ದೈಹಿಕ ಅವಮಾನ ಏನೇ ಇದ್ದರೂ ಸಹ, ತನ್ನ ಆತ್ಮಗೌರವಕ್ಕೆ ಅದರಿಂದ ಚ್ಯುತಿ ಇಲ್ಲ ಎಂದು ಗಂಭೀರವಾಗಿ ಉಸುರುತ್ತಾಳೆ.

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.
ಆ ಧರ್ಮಬೋಧಕನ ಮೇಲೆ ಇಷ್ಟೆಲ್ಲ ತಿರಸ್ಕಾರವಿರುವ ಆ ಹೆಣ್ಣು, ಅವನನ್ನು ‘ತಂದೆ’ ಎಂದು ಸಂಬೋಧಿಸಲು ಸಾಧ್ಯವೆ? ಕವನದ meter ಉಳಿಸಿಕೊಳ್ಳಲು ಅನಂತಮೂರ್ತಿಯವರು ಹಾಕಿರುವ ತಿಪ್ಪರಲಾಗ ಇದು! ಅಲ್ಲದೆ ಧರ್ಮಬೋಧಕನ ವಿರುದ್ಧ ಫೂತ್ಕರಿಸುತ್ತಿರುವ, ಕೊಳಚೆಯಲ್ಲಿ ಬದುಕುತ್ತಿರುವ ನಮ್ಮ ಸೂಳೆಯ ಬಾಯಿಯಿಂದ ಎಂತಹ ಅಭಿಜಾತ ಭಾಷೆ ಬರುತ್ತಿದೆ, ನೋಡಿರಿ!

ಮೂಲ ಇಂಗ್ಲಿಶ್ ಕವನವನ್ನು ಓದದೆ, ಈ ನುಡಿಯ ಅನುವಾದವನ್ನು ಮಾತ್ರ ಓದಿದರೆ, ಏನಾದರೂ ಅರ್ಥವಾದೀತೆ?  ಅಲ್ಲದೆ, ಧರ್ಮಬೋಧಕನ ಮಾತಿನಿಂದ ಆ ಹೆಣ್ಣಿಗೆ(--ಸೂಳೆಯಲ್ಲ, ಹೆಣ್ಣು--) ಆದ hurt ಕನ್ನಡ ಅನುವಾದದಲ್ಲಿ ಪ್ರತಿಫಲಿಸಿದೆಯೆ?

ಇನ್ನು ಈ ನುಡಿಯನ್ನು ಲಂಕೇಶರು ಹೇಗೆ ಅನುವಾದಿಸಿದ್ದಾರೆ?
ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಲಂಕೇಶರ ಅನುವಾದದ ಮೊದಲ ಎರಡು ಸಾಲುಗಳು ಮೂಲಕವನದ ಭಾವಕ್ಕೆ ಹೆಚ್ಚು ಹತ್ತಿರವಾಗಿದೆ ಎನ್ನಬಹುದು. ಆದರೆ ಕೊನೆಯ ಎರಡು ಸಾಲುಗಳ ಅನುವಾದದಲ್ಲಿ ಅವರು ಎಡವಿದ್ದಾರೆ. ‘Learned in bodily lowliness,
And in the heart’s pride’ ಎನ್ನುವಾಗ ಆ ಸೂಳೆಯು ‘ಹೊಲಸಿಗೂ ಸೊಗಸಿಗೂ ಬಿಡಿಸಲಾರದ ಮಿಲಾಖತ್ತು’ ಎನ್ನುವುದನ್ನು justify ಮಾಡುತ್ತಿರುವಳೇ ಹೊರತು, ‘ದೇಹದ ಪತನಕೆ ಹಿಗ್ಗಿದ ಹೃದಯ’ ಎಂದು ಭಾವಿಸುತ್ತಿಲ್ಲ.

ಕೊನೆಯ ನುಡಿಯಲ್ಲಿ ಯೇಟ್ಸ ಕವಿಯು ಪ್ರೇಮ-ಕಾಮಗಳ ವಾಸ್ತವತೆಯನ್ನು ಬಯಲು ಪಡಿಸುತ್ತಾನೆ.
`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ನುಡಿಯಲ್ಲಿಯ ಈ ಸಾಲುಗಳನ್ನು ಗಮನಿಸಿ:
`A woman can be proud and stiff
When on love intent;’

ಯೇಟ್ಸರ ನಾಯಕಿ ಸೂಳೆಯೇ ಆದರೂ ಸಹ ಅವಳಿಗೂ ಪ್ರೇಮಿಸಬಲ್ಲ ಹೃದಯ ಹಾಗು ಆತ್ಮಗೌರವ ಇವೆ. ತನ್ನ ನೈಜಪ್ರೇಮಿಯ ಜೊತೆಗೆ ಕೂಡುವಾಗ ಅವಳಿಗೆ ಪ್ರೇಮ ಹಾಗು ಕಾಮದ ಉತ್ಕಟತೆಯ ಅನುಭವ ಆಗಬಹುದು. ಅಂತಹ ಸ್ಥಿತಿಯನ್ನು ಅನಂತಮೂರ್ತಿಯವರು ‘ರತ್ಯಾತುರ ಹೆಣ್ಣು’ ಎಂದು ವರ್ಣಿಸುತ್ತಿದ್ದಾರೆ. ಅಂದರೆ ಮೂಲಕವನದಲ್ಲಿ ಇಲ್ಲದ ಅರ್ಥವನ್ನು ಅನಂತಮೂರ್ತಿಯವರು ತಮ್ಮ ಕವನದಲ್ಲಿ ಅನವಶ್ಯಕವಾಗಿ ಸೇರಿಸಿದ್ದಾರೆ. ಆದರೆ ‘ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ ಉಬ್ಬಿ ಹೋಗುವುಳು ಸೆಡೆದು’ ಎಂದು ಲಂಕೇಶರು ಅನುವಾದಿಸಿದ್ದು ಮೂಲಕ್ಕೆ ಹೆಚ್ಚು ಹತ್ತಿರವಾಗಿದೆ!

ಯೇಟ್ಸನ ಕವನದ ಕೊನೆಯ ನಾಲ್ಕು ಸಾಲುಗಳು ಹೀಗಿವೆ:
But love has pitched his mansion in
The place of excrement;
For nothing can be sole or whole
That has not been rent.’

ಕೊನೆಯ ಸಾಲುಗಳು ತುಂಬ ಅರ್ಥಗರ್ಭಿತವಾಗಿವೆ. ಯಾವುದನ್ನು ನಾವು ‘ಪ್ರೇಮ’ ಎಂದು ಕರೆಯುತ್ತೇವೆಯೋ, ಅದಕ್ಕೆ ಕಾಮದ drive ಬೇಕು.  ದಿವ್ಯಪ್ರೇಮವೆಂದು ಕರೆಯುವ ಭಾವವು ಮಲದ ಗುಂಡಿಯಲ್ಲಿಯೇ ತನ್ನ ಡೇರೆಯನ್ನು ಹೊಡೆದಿದೆ. ಇಲ್ಲಿ ಮತ್ತೊಂದು ಶ್ಲೇಷೆಯನ್ನು ಗಮನಿಸಬೇಕು:

ಇಂಗ್ಲೀಶಿನಲ್ಲಿ ನಪುಂಸಕಲಿಂಗದ ವಸ್ತುಗಳನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗದಲ್ಲಿ ಯೋಜಿಸುವುದು ವಾಡಿಕೆಯ ಮಾತಾಗಿದೆ. ಉದಾಹರಣೆಗೆ ship ಇದನ್ನು ಸ್ತ್ರೀಲಿಂಗದಲ್ಲಿ she ಎಂದು ಅವರು ಕರೆಯುತ್ತಾರೆ. ಇಲ್ಲಿ loveಅನ್ನು ಪುಲ್ಲಿಂಗದಲ್ಲಿ ಬಳಸುತ್ತ, `ಅವನು’ ತನ್ನ ಭವ್ಯಸೌಧವನ್ನು …..’ ಎಂದು ಹೇಳಲಾಗಿದೆ. ಅರ್ಥಾತ್ ಈ ಪ್ರೇಮ-ಕಾಮದ ವಿಪರ್ಯಾಸವು ಗಂಡಸರ ಕರಾಮತ್ತು ಎನ್ನುವ ಭಾವನೆ ಇಲ್ಲಿ ವ್ಯಕ್ತವಾಗುತ್ತಿದೆ.  ಎರಡನೆಯದಾಗಿ ಮೊದಲನೆಯ ನುಡಿಯಲ್ಲಿ ಧರ್ಮಬೋಧಕನು ಹೇಳುವ ‘Live in a heavenly mansion..’ ಎನ್ನುವಲ್ಲಿಯ mansionಗೆ ವ್ಯಂಗ್ಯವಾಗಿ, ನಮ್ಮ ನಾಯಕಿಯು  ‘But love has pitched his mansion..’ ಎಂದು ಹೇಳುತ್ತಿದ್ದಾಳೆ. ಈ ಎರಡು mansionಗಳ ನಡುವಿನ ಅಂತರವನ್ನು ಗಮನಿಸಬೇಕು! ಈ ವ್ಯಂಗ್ಯ ಅನಂತಮೂರ್ತಿಯವರ ಅನುವಾದದಲ್ಲಾಗಲೀ, ಲಂಕೇಶರ ಅನುವಾದದಲ್ಲಾಗಲೀ ಕಾಣುವದಿಲ್ಲ.


ಒಟ್ಟಿನಲ್ಲಿ, ಈ ಸಾಲುಗಳಲ್ಲಿರುವ ಅಡಗಿರುವ ಅರ್ಥವನ್ನು ಅನುವಾದದಲ್ಲಿ ತರಲು ಅನಂತಮೂರ್ತಿ ಹಾಗು ಲಂಕೇಶರು ಸೋತು ಹೋಗಿದ್ದಾರೆ. ಆದರೆ ಈ ಸಾಲುಗಳಲ್ಲಿರುವ ಭಾವವನ್ನು ಸೂಚಿಸುವಂತಹ ತ್ರಿಪದಿಯೊಂದು ಕನ್ನಡದಲ್ಲಿ ಇದೆ! ಆ ತ್ರಿಪದಿಯನ್ನು ಓದುವ ಮೊದಲು ಅದರ ಹಿಂದಿನ ಕತೆಯನ್ನಷ್ಟು ಕೇಳೋಣ:

ಹದಿನೇಳನೆಯ ಶತಮಾನದ ಮಹಾನ್ ಕವಿ ಹಾಗು ಲೋಕಶಿಕ್ಷಕನಾದ ಸರ್ವಜ್ಞನು ವೇಶ್ಯೆಯರ ಬಗೆಗೆ ಅನುದಾರವಾಗಿ ವಚನಿಸುವುದನ್ನು ಕಂಡ ಹೆಣ್ಣುಮಗಳೊಬ್ಬಳು ಅವನಿಗೆ ವಚನರೂಪದಲ್ಲಿಯೇ ಈ ರೀತಿಯಾಗಿ ತಿವಿಯುತ್ತಾಳಂತೆ:

ಉಚ್ಚೆಯಾ ಬಚ್ಚಲವು ತುಚ್ಛವೆನ್ನಲು ಬೇಡ    
ಅಚ್ಯುತನು ಬಿದ್ದ, ಅಜ  ಬಿದ್ದ, ನಿಮ್ಮಪ್ಪ
ಎಚ್ಚತ್ತೆ ಬಿದ್ದ, ಸರ್ವಜ್ಞ!

ಈ ತ್ರಿಪದಿಯನ್ನು ಹೇಳಿದ ಹೆಣ್ಣಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ, ಯೇಟ್ಸನ ನಾಯಕಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ ಸಾಮ್ಯತೆ ಇದೆಯಲ್ಲವೆ? ಯೇಟ್ಸನ ಕವನದಂತೆ ಈ ತ್ರಿಪದಿಯೂ ಸಹ ಭಾಷೆಯಲ್ಲಿ ಸರಳವಾಗಿ ಹಾಗು ಭಾವದಲ್ಲಿ ಸಂಕೀರ್ಣವಾಗಿ ಇರುವುದಲ್ಲವೆ! ಮೂಲಕವನದಲ್ಲಿ ಇರುವ ಸರಳತೆಯು ಅನಂತಮೂರ್ತಿಯವರ ಅನುವಾದದಲ್ಲಿ ಮಾಯವಾಗಿದೆ; ಅನುವಾದವು ಅರ್ಥವಾಗದಂತೆ ಜಟಿಲವಾಗಿದೆ. ಒಟ್ಟಿನಲ್ಲಿ ಅನಂತಮೂರ್ತಿ ಹಾಗು ಲಂಕೇಶರ ಅನುವಾದಗಳು ತಿಣುಕಾಟದ ಭಾಷಾಂತರಗಳಾಗಿವೆ.

ಹಾಗಿದ್ದರೆ ಸಮರ್ಪಕ ಅನುವಾದ ಅಥವಾ ‘ಸಾರ್ಥಕ ಅನುವಾದ’ವೆಂದು ಯಾವುದಕ್ಕೆ ಹೇಳಬೇಕು? ಪದಶಃ ಅನುವಾದವು ಕೇವಲ ಭಾಷಾಂತರವಾಗುತ್ತದೆಯೇ ಹೊರತು ‘ಸಾರ್ಥಕ ಅನುವಾದ’ವಾಗುವುದಿಲ್ಲ. ಮೂಲಕವನದ ಭಾವ(Spirit) ಹಾಗು ಸ್ವಭಾವ(Tone) ಇವು ಅನುವಾದದಲ್ಲಿ ಮೂಡಬೇಕು. ಯೇಟ್ಸನ ಕವನವು ಸರಳವಾಗಿದೆ. ಅದರ ಭಾವವು ಸ್ಪಷ್ಟವಾಗಿದೆ. ಆದರೆ ಅನಂತಮೂರ್ತಿಯವರ ಕವನದಲ್ಲಿ ಮೂಲಕವನದ ಭಾವವು ಕಾಣದಾಗಿದೆ. ಸಮಾಜದ ದೃಷ್ಟಿಯಲ್ಲಿ ಪತಿತಳಾದ ಈ ಹೆಣ್ಣಿನ Self, ಭದ್ರಸಮಾಜದವರಿಗಿಂತ ಕಡಿಮೆಯದಲ್ಲ ಎನ್ನುವ ಭಾವವು ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಲಂಕೇಶರ ಅನುವಾದದ ಹಣೆಬರಹವೂ ಅಷ್ಟೇ. ಅನಂತಮೂರ್ತಿ ಹಾಗು ಲಂಕೇಶ ಇವರೀರ್ವರೂ ಈ ಕವನದಲ್ಲಿ ಕಾಮಕ್ಕೆ ನೀಡಲಾದ ಸ್ಥಾನದ ಬಗೆಗೆ ಹೆಚ್ಚು ಉತ್ಸುಕರಾಗಿದ್ದಾರೆಯೇ ಹೊರತು, ಆ ಸೂಳೆಯು ಸಮಾಜದ ದ್ವಂದ್ವ ಮುಖದಿಂದ ತ್ರಸ್ತಳಾಗಿದ್ದಾಳೆ ಎನ್ನುವ ಮಹತ್ವದ ಅಂಶವನ್ನು ನಿರ್ಲಕ್ಷಿಸಿದ್ದಾರೆ.

ಇನ್ನು ಕವನದ ಸ್ವಭಾವವನ್ನು (Tone) ನಿಶ್ಚಿತಗೊಳಿಸುವದು ಅಲ್ಲಿ ಬಳಸಲಾದ ಭಾಷೆಯ ಕೆಲಸ. ಈ ಉದ್ದೇಶದಿಂದ ಯೇಟ್ಸ ಕವಿಯು ಸೂಳೆಯಾಡುವ ಭಾಷೆಯಲ್ಲಿ ಗಾವಿಲತನವನ್ನು ಬಳಸಿದ್ದಾನೆ. ಆದರೆ, ಅನಂತಮೂರ್ತಿಯವರದಾದರೋ ಸುಸಂಸ್ಕೃತ ಪಾಂಡಿತ್ಯಭರಿತ ಭಾಷೆ! ಎಂತಹ ಆಭಾಸ! ಲಂಕೇಶರ ಭಾಷೆಯು ಅನಂತಮೂರ್ತಿಯವರ ಭಾಷೆಗಿಂತ ಮೂಲಕವನಕ್ಕೆ ಹತ್ತಿರವಾಗಿದೆ ಎಂದಷ್ಟೇ ಹೇಳಬಹುದು.

ಸಮರ್ಪಕ ಅನುವಾದವನ್ನು ಹೇಗೆ ಮಾಡಬೇಕೆಂದು ಅರಿಯಬೇಕಾದರೆ, ಬೇಂದ್ರೆಯವರ ಅನುವಾದಗಳ ಅಧ್ಯಯನವನ್ನು ಮಾಡಬೇಕು. ವಿವೇಕಾನಂದರು ರಚಿಸಿದ ಕವನವೊಂದರ ಅನುವಾದವನ್ನು ಇಲ್ಲಿ ನೋಡಬಹುದು. ಅದರಂತೆ ಫಿಲಿಪೀನಾದ ಸ್ವಾತಂತ್ರ್ಯಯೋಧನಾದ ಜೋಸೆ ರಿಝಾಲನು ಗಲ್ಲಿಗೇರುವ ಮೊದಲು ರಚಿಸಿದ ಕವನದ ಅನುವಾದವನ್ನು ಬೇಂದ್ರೆ ಮಾಡಿದ್ದಾರೆ. ವಿಶ್ವಸಾಹಿತ್ಯದ ಶ್ರೇಷ್ಠ ಅನುವಾದಗಳಲ್ಲಿ ಈ ಅನುವಾದವನ್ನು ಸೇರಿಸಬಹುದು.

ಇನ್ನು ಕಾಳಿದಾಸನ ‘ಮೇಘದೂತ’ ಕಾವ್ಯದ ಬೇಂದ್ರೆಯವರ ಅನುವಾದವನ್ನು ಸ್ವಲ್ಪ ಪರಿಶೀಲಿಸೋಣ. ಆ ಕಾವ್ಯದ ನುಡಿಯೊಂದು ‘ಆಷಾಢಸ್ಯ ಪ್ರಥಮೇ ದಿವಸೇ’ (=ಆಷಾಢಮಾಸದ ಮೊದಲ ದಿನದಂದು) ಎಂದು ಪ್ರಾರಂಭವಾಗುತ್ತದೆ. ಬೇಂದ್ರೆಯವರು ಈ ಸಾಲನ್ನು ಪದಶಃ ಅನುವಾದಿಸದೆ, ‘ಕಾರಹುಣ್ಣಿವೆಯ ಮಾರನೆಯ ದಿನ’ ಎಂದು ಅನುವಾದಿಸಿದ್ದಾರೆ. ಇದರ ಕಾರಣವೆಂದರೆ, ಉತ್ತರ ಭಾರತದಲ್ಲಿ ಪ್ರತಿ ಮಾಸವು ಹುಣ್ಣಿವೆಯ ಮಾರನೆಯ ದಿನದಿಂದ ಪ್ರಾರಂಭವಾದರೆ, ದಕ್ಷಿಣ ಭಾರತದಲ್ಲಿ ಅಮವಾಸ್ಯೆಯ ಮಾರನೆಯ ದಿನದಿಂದ ಪ್ರಾರಂಭವಾಗುತ್ತದೆ. ಅನುವಾದಕರಿಗೆ ಇಂತಹ ಔಚಿತ್ಯಪ್ರಜ್ಞೆ ಅವಶ್ಯವಾಗಿದೆ. ಈ ಸಾಲನ್ನು ಪದಶಃ ಭಾಷಾಂತರಿಸಿದ್ದರೆ, ಅರ್ಥವು ಅನರ್ಥವಾಗುತ್ತಿತ್ತು!

ಯೇಟ್ಸ ಕವಿಯ ಕವನವನ್ನು ಅನುವಾದಿಸಿದವರು ವಿಶ್ವವಿದ್ಯಾಲಯದ ಬೋಧಕವರ್ಗದಲ್ಲಿದ್ದಂತಹ ಪಂಡಿತರು. ಆವರ ಅನುವಾದಗಳನ್ನಲ್ಲದೆ, ಶ್ರೀ ಮಂಜುನಾಥ ಕೊಳ್ಳೇಗಾಲರು ತಮ್ಮ ಬ್ಲಾ॑ಗಿನಲ್ಲಿ ಪ್ರಕಟಿಸಿದ ಅನುವಾದವೊಂದನ್ನು ಇಲ್ಲಿ ಕೊಡುತ್ತಿದ್ದೇನೆ. ಇವರ ಅನುವಾದವು  ಅನಂತಮೂರ್ತಿ ಹಾಗು ಲಂಕೇಶ ಇವರ ಭಾಷಾಂತರಗಳಿಗಿಂತ ಉತ್ತಮವಾಗಿರುವದನ್ನು ಗಮನಿಸಬಹುದು. ಇದರ ತಾತ್ಪರ್ಯವೇನೆಂದರೆ, ಒಂದು ಕವನದ ‘ಸಾರ್ಥಕ ಅನುವಾದ’ಕ್ಕೆ ಬೇಕಾದದ್ದು ಸರಿಯಾದ ಮನೋಧರ್ಮವೇ ಹೊರತು ವಿಶ್ವವಿದ್ಯಾಲಯದ ಪಾಂಡಿತ್ಯವಲ್ಲ!

ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"

"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"

"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"

ಮೂಲಕವನದ ಭಾವಕ್ಕೆ ಮಂಜುನಾಥರ ಅನುವಾದವು ಹತ್ತಿರದಲ್ಲಿದೆ ಎನ್ನಬಹುದು.

ಯೇಟ್ಸ ಕವಿಯ ಈ ಕವನದಲ್ಲಿ ಸಾಮಾಜಿಕ ವೈಷಮ್ಯದ ಜೊತೆಗೆ, ಪುರುಷಪ್ರಧಾನ ಸಮಾಜವ್ಯವಸ್ಥೆಯ ಭಂಡತನವೂ ಸಹ ವ್ಯಕ್ತವಾಗುತ್ತಿದೆ ಎನ್ನುವುದನ್ನು ಗಮನಿಸಬೇಕು.