Sunday, December 17, 2023

ಜಯಶ್ರೀ ದೇಶಪಾಂಡೆಯವರಿಂದ ಒಂದು ವಿಮರ್ಶಾಕಮ್ಮಟದ ಪರಿಚಯ

ಶ್ರೀಮತಿ ಜಯಲಕ್ಷ್ಮಿ ಪಾಟೀಲರು ಬೆಂಗಳೂರಿನಲ್ಲಿ ಅನೇಕ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಸಂಘಟಿಸುತ್ತಿದ್ದಾರೆ. ಇತ್ತೀಚೆಗೆ ಇವರು ‘ಕನ್ನಡದಲ್ಲಿಯ ವಿಮರ್ಶಾ ಸಾಹಿತ್ಯ’ದ ಬಗೆಗೆ ಒಂದು ಕಮ್ಮಟವನ್ನು ಏರ್ಪಡಿಸಿದ್ದರು. ಇದೊಂದು ಅತ್ಯಂತ ಮಹತ್ವದ ಕಾರ್ಯಕ್ರಮ. ಏಕೆಂದರೆ  ಕಥೆ,ಕವನಗಳ ಬಗೆಗೆ ಕಾರ್ಯಕ್ರಮಗಳು ನಡೆಯುವುದು ವಾಡಿಕೆಯಾಗಿದೆಯೇ ಹೊರತು, ವಿಮರ್ಶೆಯ ಬಗೆಗೆ ಅಲ್ಲ. ಈ ಒಂದು ಕೊರತೆಯನ್ನು  ಶ್ರೀಮತಿ ಜಯಲಕ್ಷ್ಮಿ ಪಾಟೀಲರು ತುಂಬಿದಂತಾಯಿತು. ಬೆಂಗಳೂರಿನಲ್ಲಿಯೇ ಇರುವ ಆಸಕ್ತರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದಿದ್ದಾರೆ. ಆದರೆ ಬೆಂಗಳೂರಿನ ಹೊರಗೆ ಇರುವ ಆಸಕ್ತರು ಈ ಚಟುವಟಿಕೆಗಳಿಂದ ವಂಚಿತರಾಗುವುದು ಸಹಜ. ಇಂತಹ ಆಸಕ್ತರಿಗೆ ಅಲ್ಲಿ ನಡೆದ ಕಾರ್ಯಕ್ರಮಗಳ ವಿವರಗಳನ್ನು ಕೊಡುವುದರಿಂದ ಈ ಸಹೃದಯರ ಬಾಯಾರಿಕೆ ಸ್ವಲ್ಪವಾದರೂ ತಣಿದೀತು. ದೂರದ ಈ ರಸಿಕರಿಗೆ ಈ ಚಟುವಟಿಕೆಯ ವಿವರಗಳು ತಿಳಿಯುವುದಾದರೂ ಹೇಗೆ? ಆ ಕೊರತೆಯನ್ನು ತುಂಬಿದವರು ಮತ್ತೊಬ್ಬ ಉತ್ಸಾಹಿ ಸಾಹಿತಿಯಾದ ಶ್ರೀಮತಿ ಜಯಶ್ರೀ ದೇಶಪಾಂಡೆಯವರು.

 ಶ್ರೀಮತಿ ಜಯಶ್ರೀ ದೇಶಪಾಂಡೆಯವರು ಸೂಕ್ಷ್ಮಗ್ರಾಹಿಗಳು, ಕುಶಾಗ್ರಮತಿಗಳು ಹಾಗು ಭಾಷಾಪಂಡಿತರು. ಏಳು ಜನ ವಿದ್ವಾಂಸರ ಪ್ರತಿಪಾದನೆಗಳನ್ನು ಅವರು ಸಾರವತ್ತಾಗಿ ಸಂಗ್ರಹಿಸಿ, ಫೇಸ್ ಬುಕ್ಕಿನಲ್ಲಿ ಒಂದು ಲೇಖನದಲ್ಲಿ ನೀಡಿದ್ದಾರೆ. ಈ ವಿದ್ವಾಂಸರ ಸಾಹಿತ್ಯಿಕ ಒಲವು ಹಾಗು ಧೋರಣೆಗಳು ವಿಭಿನ್ನವಾಗಿರುತ್ತವೆ. ಅವನ್ನೆಲ್ಲ ಊನವಿಲ್ಲದಂತೆ ಸಂಗ್ರಹಿಸಿ, ಅಪಚಾರವಾಗದಂತೆ ಪ್ರಸ್ತಾವಿಸುವುದು ಪರಿಶ್ರಮದ ಹಾಗು ತಾಳ್ಮೆಯ ಕೆಲಸ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀಮತಿ ಜಯಶ್ರೀ ದೇಶಪಾಂಡೆಯವರಿಗೆ ಅಭಿನಂದನೆಗಳು ಹಾಗು ಕೃತಜ್ಞತೆಗಳು. ಅವರ ಲೇಖನವನ್ನು ಆಧರಿಸಿ, ಆ ಪ್ರಸ್ತಾವನೆಗಳ ಒಂದು ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ನಾನು ನೀಡುತ್ತಿದ್ದೇನೆ:

 ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ೭ ಜನ ವಿದ್ವಾಂಸರು: ಎಸ್.ದಿವಾಕರ, ಸಿ.ಎನ್.ರಾಮಚಂದ್ರನ್, ಜಿ.ಬಿ.ಹರೀಶ, ಕೆ.ಎಸ್. ಮಧುಸೂದನ, ಬಿ.ಎನ್. ಸುಮಿತ್ರಾಬಾಯಿ, ಕೆ.ಎಸ್.ನಾರಾಯಣಸ್ವಾಮಿ ಹಾಗು ಓ.ಎಲ್.ನಾಗಭೂಷಣಸ್ವಾಮಿ. ಮೊದಲಿಗೆ ಭಾಷಣ ಮಾಡಿದವರು ಶ್ರೀಮಾನ್ ಎಸ್.ದಿವಾಕರರು. ಸಂಸ್ಕೃತಿ, ಸಾಹಿತ್ಯ ಹಾಗು ವಿಮರ್ಶೆಗಳ ನಡುವಿನ ಸಂಬಂಧವನ್ನು ದಿವಾಕರರು ಎರಡು ವಾಕ್ಯಗಳಲ್ಲಿ ತೂಗಿ ಹೇಳಿದರು:  ಸ೦ಸ್ಕೃತಿಯ ವಾಹಕವಾಗಿ ಭಾಷೆ ಸಾಹಿತ್ಯದ ಸೃಷ್ಟಿಯನ್ನು ಸಾಧ್ಯವಾಗಿಸಿತು. ಹೀಗೆ ಹುಟ್ಟಿಬ೦ದ ಸಾಹಿತ್ಯವನ್ನು ವಿಮರ್ಶೆ ಎ೦ಬ ತಕ್ಕಡಿ ತೂಗಿ ಹೇಳುತ್ತದೆ. ಜೊಳ್ಳನ್ನು ಬೇರ್ಪಡಿಸಿ ಗಟ್ಟಿ ಕಾಳುಗಳನ್ನು ಆಸ್ವಾದಿಸಲು ಅನುವು ಮಾಡಿ ಕೊಡುವುದೇ ವಿಮರ್ಶೆ ಎ೦ದರು. ವಿಮರ್ಶಕರ ಸಹಾಯ ಇಲ್ಲದೆ ಯಾವುದೇ ಸಾಹಿತ್ಯದ ಉತ್ತುಂಗ ರಚನೆಗಳನ್ನು ಓದಿ, ಆನಂದಿಸುವುದು ಅಸಾಧ್ಯ ಎನ್ನುವುದು ದಿವಾಕರರ ಅಭಿಪ್ರಾಯವಾಗಿದೆ. ಪಾಶ್ಚಾತ್ಯ ಸಾಹಿತ್ಯದ ನೆರಳಿನಲ್ಲಿಯೇ ಬೆಳೆದು ಬಂದಿದ್ದರೂ ಸಹ, ಕನ್ನಡದಲ್ಲಿ ವಿಮರ್ಶೆಯು ಸಮಾಜನಿಷ್ಠ ಹಾಗು ಕೃತಿನಿಷ್ಠ ಎನ್ನುವ ಪ್ರಯೋಗಗಳನ್ನು ಮಾಡಿದೆ, ಅಲ್ಲದೆ, ಸ್ವವಿಮರ್ಶೆಯಂತಹ ರೂಪವೂ ಇಲ್ಲಿದೆ ಎಂದು ವಿವರಿಸಿದರು.

 ಸಿ.ಎನ್.ರಾಮಚಂದ್ರನ್ ಅವರು ವಿಮರ್ಶೆಯ ಓದು ಈಗ ಮಹತ್ವವನ್ನು ಕಳೆದುಕೊಂಡಿರುವುದಕ್ಕೆ ವಿಷಾದಿಸಿದರು. ಪಾಶ್ಚಿಮಾತ್ಯ ಸಾಹಿತ್ಯದ ಅಂಗವೆ೦ಬಂತೆ ಬೆಳೆದು ಬಂದ ವಿಮರ್ಶೆ ಎಂಬುದರ ಹೊಸ ರೆಕ್ಕೆಗಳು 'ಸಹೃದಯ' ಮತ್ತು 'ಲಾಕ್ಷಣಿಕ 'ಎಂಬ ಪದಗಳ ರೂಪದಲ್ಲಿ ಸಂಸ್ಕೃತ ಹಾಗೂ ಕನ್ನಡಗಳಲ್ಲಿ ಪೂರ್ವೀಭಾವಿಯಾಗಿಯೇ ಸ್ಥಿತವಾದುವುಗಳಾಗಿದ್ದರೂ ಇ೦ಗ್ಲೀಶಿನವರ 'ಕ್ರಿಟಿಸಿಸಂ' ಹಾಗೂ 'ಕ್ರಿಟಿಕ್' ಶಬ್ದಕ್ಕೆ ಇವು ಮು೦ದೆ ಸ೦ವಾದಿಯಾಗಿ ಬಳಕೆಗೆ ಬಾರದೆ ವಿಮರ್ಶೆ ಎ೦ಬುದಾಗಿ ಪ್ರಚಲಿತವಾಯಿತು . ಇಲ್ಲಿ ಕೇವಲ 'ಮೌಲ್ಯಮಾಪನ' ಎ೦ಬುದಾಗಿ ವಿಮರ್ಶೆಯನ್ನು ಮಿತಿಗೊಳಿಸುವ ಅಗತ್ಯವಿಲ್ಲ ಇದು ಬಹುವಿಸ್ತ್ರತ ಕ್ಷೇತ್ರವಾಗಿದ್ದು ಸಾಹಿತ್ಯ ಅಥವಾ ಜೀವನದಲ್ಲಿ ಸಾಮಯಿಕ ಸ೦ಗತಿಗಳೊ೦ದಿಗೆ ಸಾಹಿತ್ಯದ ಜೋಡಣೆಯ ಸ್ವರೂಪವನ್ನು ಅರಿಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ವಿಮರ್ಶೆ ಇ೦ಗ್ಲೀಷ್ ಸಾಹಿತ್ಯದ ವಿಮರ್ಶೆಯಿ೦ದ ಪ್ರಭಾವಿತವಾಗಿ ಮು೦ದುವರಿದರೂ ಕನ್ನಡ ಭಾಷೆಯಲ್ಲಿ ತನ್ನದೇ ಗಟ್ಟಿ ಸ್ಥಾನವನ್ನು ಉಳಿಸಿಕೊ೦ಡಿದೆ. ಕನ್ನಡದ ಮೊದಲ ವಿಮರ್ಶಕರೆನ್ನಲಾದ ಎ ಆರ್ ಕೃಶ್ಣಶಾಸ್ತ್ರಿಯವರಿ೦ದ ಮೊದಲುಗೊ೦ಡು ನವೋದಯಪೂರ್ವ , ಹಾಗೂ ನವೋದಯ ಮತ್ತು ನವ್ಯ ಕಾಲಘಟ್ಟದಲ್ಲಿ ರಚನೆಯಾದ ಸಾಹಿತ್ಯವನ್ನು ಅತ್ಯ೦ತ ಸೂಕ್ಷ್ಮವಾಗಿ, ವಿವರವಾಗಿ ಅಭ್ಯಸಿಸಿ ತೌಲನಿಕ ಅಭಿಪ್ರಾಯಗಳನ್ನು ಕೊಟ್ಟ ಅನೇಕ ಸಾಹಿತಿಗಳ ಬಗ್ಗೆ ಉದಾಹರಣೆಗಳನ್ನು ಸಿ.ಎನ್.ರಾಮಚಂದ್ರನ್ ಅವರು ನೀಡಿದರು. ಅಲ್ಲದೆ, ಕನ್ನಡ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಿದ ಅನೇಕ ಮಹಾನ್ ಲೇಖಕರು ಹಾಗೂ ಲೇಖಕಿಯರ ಕೃತಿಗಳ ಬಗ್ಗೆ ತುಲನಾತ್ಮಕ ಸಮೀಕ್ಷೆಯನ್ನು ಮಾಡಿದರು. ಅವುಗಳಲ್ಲಿನ ಗುಣಾತ್ಮಕತೆ ಅಥವಾ ನಕಾರಾತ್ಮಕತೆಗಳ ಬಗ್ಗೆ ಚರ್ಚಿಸಿದರು. ಬೇ೦ದ್ರೆಯವರ ಕವನಗಳು, ಮಾಸ್ತಿಯವರ ಕಥೆಗಳು, ಕಾರ೦ತರ ಕಾದ೦ಬರಿಗಳು, ಶ್ರೀರ೦ಗರ ನಾಟಕಗಳು ಕನ್ನಡ ಸಾಹಿತ್ಯದ ಮಹಾ ವೃಕ್ಷದ ಹಿರಿ ರೆ೦ಬೆಗಳಾಗಿ ಗುರುತಿಸಿಕೊ೦ಡದ್ದನ್ನು ಬಿಡಿಸಿ ಹೇಳಿದರು.

 ನವೋದಯ ಕಾಲದ ಸಹೃದಯ ವಿಮರ್ಶೆಯ ಮೂಲವನ್ನು ಮೂರು ಪ್ರವಾಹಗಳ ಸ್ವರೂಪದಲ್ಲಿ ಅರ್ಥವಿವರಣೆ ಕೊಟ್ಟವರು ಡಾ. ಜಿ. ಬಿ. ಹರೀಶ. ಕ್ರಿಟಿಕ್ ಹಾಗೂ ಕ್ರಿಟಿಸಿಸಮ್ ಎ೦ಬುದಾಗಿ ಬ್ರಿಟಿಶ್ ಇ೦ಗ್ಲಿಶ್ ಸಾಹಿತ್ಯದ ಉತ್ಪನ್ನದ ರೂಪದಲ್ಲಿ ಪ್ರಪ೦ಚದ ಬೇರೆ ಬೇರೆ ಭಾಷೆಗಳಿಗೂ ತನ್ನನ್ನೇ ಆಯಾತ ಮಾಡಿಕೊ೦ಡು ಬ೦ದ ವಿಮರ್ಶಾ ಪ್ರಕಾರವೇ ನವೋದಯ ಸಾಹಿತ್ಯ ವಿಮರ್ಶೆ ಎಂದು ಹರೀಶರು ವಿವರಿಸಿದರು. ನವೋದಯ ಕಾಲದಲ್ಲಿ ವಿಕಸನ ಶೀಲವಾಗಿ ಹರಡಿದ ವಿಮರ್ಶಾ ಪೃಥೆ ವಿಮರ್ಶಕರ ನಡುವಿನ ಸ೦ವಾದದ ರೂಪದಲ್ಲಿಯೂ ವಿಸ್ತಾರಗೊ೦ಡಿತು. ನಾಸ್ತಿಕ ಅನಿಸಿದ್ದ ಕಾರ೦ತರು, ಆಸ್ತಿಕ ಡಿ ವಿ ಜಿಯವರು, ಅಧ್ಯಾತ್ಮ- ವೈಚಾರಿಕತೆ ಎರಡಕ್ಕೂ ಒತ್ತು ಕೊಟ್ಟ ಕುವೆ೦ಪು, ಹಾಗೂ ವರಕವಿ ಬೇ೦ದ್ರೆಯವರು ತಮ್ಮ ಅಭಿಪ್ರಾಯ ಭೇದಗಳನ್ನೂ ಚರ್ಚೆಯ ಮೂಲಕ ಔನ್ನತ್ಯಕ್ಕೊಯ್ದರು.

 ಕನ್ನಡ ಕಾವ್ಯ, ನಾಟಕ, ಕಾದಂಬರಿ ರೂಪದ ಮೂರು ಮುಖ್ಯ ಕವಲುಗಳನ್ನು ಪಡೆದು ಸಹೃದಯ ವಿಮರ್ಶಾ ರೂಪದಲ್ಲಿ ನೆಲೆಗೊ೦ಡು ಓದು ಮತ್ತು ಚಿ೦ತನಗಳ ವಿವಿಧ ಮಗ್ಗಲುಗಳನ್ನು ವಿಮರ್ಶಕರ ನಡುವಿನ ಸಂವಾದದ ರೂಪದಲ್ಲಿ ಪ್ರಸ್ತುತಪಡಿಸಿದರೂ ಅದು ಅವರ ನಡುವಿನ ವೈಚಾರಿಕ ಸಂಘರ್ಷ ಹಾಗೂ ಪ್ರತಿರೋಧಕ ಅ೦ಶಗಳನ್ನೂ ಬಹಿರ೦ಗಪಡಿಸಿತು. ಮೂರು ತಲೆಮಾರುಗಳನ್ನು ಕ೦ಡ ನವೋದಯ ವಿಮರ್ಶೆ ಆ ಕಾಲಘಟ್ಟದ ನೂರಾರು ಸಾಹಿತಿಗಳ ಅಮೂಲ್ಯ ಕೃತಿಗಳನ್ನು ಗುಣಾತ್ಮಕ, ತೌಲನಿಕ, ಸಹೃದಯೀ ಮೌಲ್ಯ ಮಾಪನಗಳನ್ನು ಮಾಡುತ್ತ ಅವರನ್ನು ಬೆಳೆಸಿತು ಎಂದು ಹರೀಶರು ವಿಮರ್ಶಿಸಿದರು.

 ಡಾ. ಕೆ ಎಸ್ ಮಧುಸೂದನ್ ಇಪ್ಪತ್ತನೆಯ ಶತಮಾನದ ಹೊತ್ತಿಗೆ ವಿಮರ್ಶೆ ಎಷ್ಟು ಪ್ರಭಾವಶಾಲಿಯಾಗಿ ಬೆಳೆದು ಬ೦ತು ಎ೦ಬ ಬಗ್ಗೆ ಸೋದಾಹರಣ ವಿವರಿಸಿದರು.ವಿಮರ್ಶಾಕಾರರು ಕೇವಲ ಸಾಹಿತ್ಯ ವಿಮರ್ಶಕರೆ೦ದೇನೂ ಅಲ್ಲ, ಸಾಮಾಜಿಕ ಚಿ೦ತನೆಗಳನ್ನು ಮಾಡುವವರು,ರಾಜಕೀಯ ಚಿ೦ತಕರು ಇವರೂ ಸಹ ವಿಮರ್ಶಕರೇ. ಸಾಹಿತ್ಯ ವಿಮರ್ಶೆಯಲ್ಲಿ ಲೇಖಕ ಕೇ೦ದ್ರಿತ, ಕೃತಿ ಕೇ೦ದ್ರಿತ ಮತ್ತು ವಾಚಕ ಕೇ೦ದ್ರಿತ ಎ೦ಬ ಪರಿಮಾಣಗಳ ಅಡಿಯಲ್ಲಿ ಸಾಮಾನ್ಯವಾಗಿ ಕೃತಿಯ ಮೌಲ್ಯ ಮಾಪನವಾಗುತ್ತದೆ. ವಿಮರ್ಶೆ ಪರಿಪೂರ್ಣವಾಗಬೇಕಾದರೆ ಇ೦ಥ ಹಾಗೂ ಇತರ ಉಪ ಪರಿಮಾಣಗಳನ್ನು ಒಳಗೊ೦ಡು ತೂಗಿದ ಲೇಖನವಾಗಿರುತ್ತದೆ. ಯಾವುದೇ ಕೃತಿಯೊಳಗಿನ ಪಾತ್ರ ಹಾಗೂ ಆಶಯಗಳೇ ವಿಮರ್ಶೆಗೆ ಸಾಕ್ಷ್ಯಗಳಾಗಿರುತ್ತವೆ. ಒ೦ದು ಕೃತಿಯ ಬಗ್ಗೆ ಒ೦ದೇ ಬಗೆಯ ತೀರ್ಮಾನ ಅಥವಾ ಯಾವುದೇ ಖಚಿತ ನಿರ್ಧಾರವನ್ನು ಕೊಡುವುದು ಅಸಾಧ್ಯ, ಸಾಹಿತ್ಯದ ಚರ್ಚೆ ಸಂವಾದಗಳು ಯಾವುದೇ ಕೃತಿಯ ಬಗ್ಗೆ ಜನರು ನಿರ್ಧರಿಸಲು ಸಹಾಯ ಮಾಡುತ್ತವೆ ಎ೦ದರು.

 ಬಿ ಎನ್ ಸುಮಿತ್ರಾಬಾಯಿವರ ಸ್ತ್ರೀವಾದಿ ವಿಮರ್ಶೆಯ ಆಯಾಮಗಳ ಸ್ಥೂಲ ಮಂಡನೆಗಳಲ್ಲಿ ಎದ್ದು ಕಂಡಿದ್ದು ಸಾವಿರಾರು ವರ್ಷಗಳ ಮಹಿಳಾ ಇತಿಹಾಸ, ವರ್ತಮಾನ, ಮತ್ತು ಭವಿಷ್ಯದ ಮುಖಗಳು ಎಂದರೆ ತಪ್ಪಲ್ಲ. ಪುರುಷ ಪ್ರಧಾನ, ಪಿತೃ ಪ್ರಧಾನ ವ್ಯವಸ್ಥೆಯನ್ನು ಮೌನವಾಗಿ ಒಪ್ಪಿಕೊಳ್ಳುತ್ತಾ ಬ೦ದ ನಮ್ಮ ದೇಶದ ಸ್ತ್ರೀಯರ ಮೇಲೆ ಪ್ರಭಾವ ಬೀರಿ ಸ್ವ೦ತಿಕೆ, ಸ್ವಾತ೦ತ್ರ್ಯಗಳ ಬಗ್ಗೆ ಚಿ೦ತಿಸುವ೦ತೆ ಮಾಡಿದ್ದು ಪಾಶ್ಚಾತ್ಯ ದೇಶಗಳಲ್ಲಿ ನಡೆದ ಸ್ತ್ರೀ ವಿಮೋಚನಾ ಚಳುವಳಿಗಳಿ೦ದ ಎನ್ನುತ್ತಾರೆ ಸುಮಿತ್ರಾಬಾಯಿವರು. ಸ್ತ್ರೀವಾದದ ವಿಮರ್ಶೆ ಹುಟ್ಟಿದ್ದು ಸಾಹಿತ್ಯದ ತರಗತಿಗಳಲ್ಲಿ. ಆದರೂ ಮು೦ದೆ ಫ್ರೆಂಚ್ ಲೇಖಕಿ ಸೈಮನ್ ದ ಬೋವಾಲ ಅವರ ವ್ಯಾಪಕ ಬರವಣಿಗೆ, ಯೂರೋಪ ಅಮೇರಿಕಾಗಳಲ್ಲಿ ನಿರ೦ತರ ಸ್ತ್ರೀಪರ ಚಳುವಳಿಗಳಲ್ಲಿ ಪಾಲ್ಗೊಳ್ಳುವಿಕೆಗಳು ಇಪ್ಪತ್ತನೆಯ ಶತಮಾನದಲ್ಲಿ ತಮ್ಮ ಪ್ರಭಾವವನ್ನು ಅನೇಕ ದೇಶಗಳಿಗೆ ಹರಡಿ ಭಾರತದಲ್ಲೂ ಒ೦ದು ಹೊಸ ಚಿ೦ತನೆಯನ್ನು ಹುಟ್ಟು ಹಾಕಿತು.ಈ ದಿಶೆಯಲ್ಲಿ ಮೇರಿ ವೂಲ್ಸ್ಟನ್ ಕ್ರಾಫ್ಟ್ ಬರೆದ ''ಸ್ತ್ರೀಯರ ಹಕ್ಕುಗಳ ಸಮರ್ಥನೆ" ಎ೦ಬ ಬರಹವನ್ನು ಇವತ್ತಿಗೂ ಸ್ತ್ರೀನಿಷ್ಠ ಧೋರಣೆಯ ಪ್ರಥಮ ಮತ್ತು ಮುಖ್ಯ ಪ್ರತಿಪಾದನೆ ಎ೦ದು ಗಣಿಸಿದ್ದಾರೆ. ಅ೦ದರೆ ಅದಕ್ಕಿ೦ತ ಮೊದಲು ಈ ಬಗೆಯ ಆಲೋಚನೆಗಳಿರಲೇ ಇಲ್ಲವ೦ತಲ್ಲ, ಆದರೂ ಒ೦ದು ನಿರ್ದಿಷ್ಟ ಕಾಲಮಾನದಲ್ಲೇ ಈ ಪರಿವರ್ತನೆ ನಡೆದದ್ದು ನಿಜ. ಸ್ತ್ರೀವಾದದ ಮ೦ಡನೆಗಳು ಅಥವಾ ವಿವರಣೆಗಳು ಒ೦ದು ಪ೦ಥ ಎoದು ಅಲ್ಲ, ಮಹಿಳೆಯರ ನೋವುಗಳೇ ಅಭಿವ್ಯಕ್ತಿಯಾಗಿ ಜನಿಸಿದ ಚಳುವಳಿಗಳೇ ಇದಕ್ಕೆ ಮೂಲ ಆಗಿದ್ದುವು. ನಿರ್ಬ೦ಧಗಳು, ಶಾರೀರಿಕ ಅನಿವಾರ್ಯತೆಗಳು, ಸ್ತ್ರೀಯ ಹೋರಾಟಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಸಫಲವಾಗದೆ ಸ್ತ್ರೀವಾದ ಹಾಗೂ ವಿಮರ್ಶೆಗಳ ಯಾನ ಮು೦ದುವರಿಯಿತು, ಎಂದು ಸುಮಿತ್ರಾಬಾಯಿಯವರು ಪ್ರತಿಪಾದಿಸಿದರು.

 ಬಂಡಾಯ ವಿಮರ್ಶೆಯ ಮೂಲಗಳನ್ನು ತೆರೆದಿಡುತ್ತಾ ಹೋದ ಡಾ. ಕೆ ಎಸ್ ನಾರಾಯಣ ಸ್ವಾಮಿಯವರು ಕನ್ನಡ ಸಾಹಿತ್ಯದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯ ಅವ್ಯವಸ್ಥೆಗಳ ವಿರುದ್ಧ ಎತ್ತಿದ ಧ್ವನಿಯ ರೂಪವಾಗಿ ಬ೦ಡಾಯ ಸಾಹಿತ್ಯ ಉದ್ಭವಿಸಿತು ಎ೦ದರು. ಇದರಲ್ಲಿ ಮೊಟ್ಟ ಮೊದಲಾಗಿ ರಾಜಕೀಯ, ಆಡಳಿತಾತ್ಮಕ ಅಸಮಾನತೆ. ತುರ್ತು ಪರಿಸ್ಥಿತಿ, ಜಾತಿವಾದ, ಅವಕಾಶ ವ೦ಚಿತತೆ, ಹಾಗೂ ಎಲ್ಲಕ್ಕಿ೦ತ ಹೆಚ್ಚಾಗಿ ಮತ್ತು ಮುಖ್ಯವಾಗಿ ಪುರೋಹಿತ ಶಾಹಿಯನ್ನು ವಿರೋಧಿಸಿ ಎದ್ದು ನಿ೦ತ ವಾದವೇ ಬ೦ಡಾಯವಾದ, ಇದೇ ದಲಿತರ ಆ೦ತರ್ಯದ ವಾಣಿಯೂ ಆಗಿ ನೆಲೆಗ೦ಡಿತು. ಸಮಾಜದಲ್ಲಿನ ಬಿರುಕುಗಳ ಫಲಸ್ವರೂಪಿಯಾಗಿ ಅಲ್ಲಿ ಬೇರೂರಿದ ಓರೆ ಕೋರೆಗಳನ್ನು ತೀಕ್ಷ್ಣವಾಗಿ ಟೀಕಿಸುತ್ತ ಬರೆದ ಹಲವಾರು ಲೇಖಕರನ್ನು ಕುರಿತು ನಾರಾಯಣಸ್ವಾಮಿ ಒಡನುಡಿದರು.

 ಡಾ. ಓ ಎಲ್ ನಾಗಭೂಷಣಸ್ವಾಮಿ ನವ್ಯೋತ್ತರ ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಯೇ ಒ೦ದು ಪ್ರಕಾರ ಎ೦ದು ಗುರುತಿಸಲಾಗದು ಎನ್ನುತ್ತ 'ಮೂಲ' ಎ೦ಬ ಖಚಿತತೆಯೇ ಎಲ್ಲೂ ಇಲ್ಲ, ಎಲ್ಲವೂ ಪ್ರತಿಕೃತಿಗಳೇ ಎ೦ದು ಅಭಿಪ್ರಾಯ ಕೊಟ್ಟರು. ಯಾವುದೇ ವಸ್ತು ಯಾ ಚರ್ಚಿತ ವಿಷಯದ ಬಾಹ್ಯ ನೋಟದಲ್ಲಿ ನೋಡುಗರು ಯಾ ಕೇಳುಗರ ಸ್ವನಿರ್ಧಾರ ರಚಿತವಾದ ದೃಷ್ಟಿಕೋನವೇ ಮುಖ್ಯವಾಗುತ್ತದೆ. ಮೂಲ ಎಲ್ಲಿಯೂ ಇಲ್ಲ ಎಲ್ಲವೂ ''ರಚನೆ'ಗಳೇ, ಯಾವುದೇ ಸ೦ಗತಿಯೂ ಪ್ರತಿಯೊಬ್ಬರ ಮನಸ್ಸು ಹಾಗು ಭಾವಗಳು ಗ್ರಹಿಸುವ, ಗ್ರಹಿಸಿ ಅರ್ಥೈಸಿಕೊಳ್ಳುವ ಹಾಗೂ ಅರ್ಥೈಸಿಕೊ೦ಡು ತಮ್ಮದೇ ಆದ ವಿಧಾನದಲ್ಲಿಯೇ ಸ್ವೀಕರಿಸುವ ಪದ್ಧತಿ. ಹಾಗಾಗಿ ನವ್ಯೋತ್ತರ ಕಾಲದ ವಿಮರ್ಶೆಯಲ್ಲಿ ಸಿಗ್ನಿಫೈಡ್ ಗಿ೦ತಲೂ ಸಿಗ್ನಿಫೈಯರ್ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಅ೦ದರು. ಅರ್ಥಾತ್ ಯಾವುದೇ ಸ೦ಗತಿಯೂ ನಮ್ಮ ನಮ್ಮ ದೃಷ್ಟಿಕೋನದ ಪರಿಣಾಮವೇ ಆಗಿದೆಯೇ ಹೊರತು ಇದಮಿತ್ಥ೦ ಎ೦ಬುದಾಗಿ ಯಾವುದೇ ವಿಮರ್ಶೆಯಿಲ್ಲ ಎನ್ನುತ್ತ ಅತ್ಯ೦ತ ರ೦ಜನೀಯವಾಗಿ, ಹಾಸ್ಯಮಿಶ್ರಿತ ಶೈಲಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ನಮ್ಮೆದುರು ತೆರೆದಿಟ್ಟರು.

 ''ವಿಮರ್ಶೆಯೆ೦ದರೆ ಅನುಭವಗಳ ನಡುವೆ ಸೂಕ್ಷ್ಮ ಭೇದಗಳನ್ನು ಗುರುತಿಸಿ ಅವುಗಳಿಗೆ ಬೆಲೆ ಕಟ್ಟುವ ಪ್ರಯತ್ನ '' ಎಂದು ಹೇಳಿರುವ ಐ. ಎ. ರಿಚರ್ಡ್ಸ್ ನ ಮಾತು ಈ ಕಮ್ಮಟದಲ್ಲಿ ಮಾತನಾಡಿದ ಎಲ್ಲಾ ವಿದ್ವಾಂಸರ ಶಬ್ದಗಳಲ್ಲಿದ್ದ ಧ್ವನಿಯಾಗಿತ್ತು. ಕಾವ್ಯ ಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆಗಳು ಅತ್ಯಂತ ಸು೦ದರ, ಅರ್ಥಪೂರ್ಣ, ಹಾಗೂ ಅನುಭವಭರಿತ ಹಿನ್ನೆಲೆಯ ಬೌದ್ಧಿಕ ವ್ಯಾಖ್ಯಾನಗಳಾಗಿದ್ದು ಇವುಗಳ ಬಗ್ಗೆ ಎರಡು ದಿನಗಳ ಕಾಲ ನಡೆದ ಸಾಹಿತ್ಯ ವಿಮರ್ಶಾ ಕಮ್ಮಟವು ಸಾಹಿತ್ಯಾಸಕ್ತರಿಗೆ ರಸದೌತಣವೇ ಆಗಿತ್ತು.

 ಕೊನೆಯಲ್ಲಿ ಜಯಶ್ರೀ ದೇಶಪಾಂಡೆಯವರು ಕಮ್ಮಟದ ರೂವಾರಿಗಳಾದ ಶ್ರೀಮತಿ ಜಯಲಕ್ಷ್ಮೀ ಪಾಟೀಲರನ್ನು ಹಾಗು ತಮ್ಮ ಭಾಷಣಗಳ ಮೂಲಕ ರಸಿಕರ ಮನ ತಣಿಸಿದ ವಿದ್ವಾಂಸರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ಅವರ ಮಾತುಗಳಲ್ಲಿಯೇ ಹೇಳುವುದಾದರೆ, "ಅಚ್ಚುಕಟ್ಟಾದ ವ್ಯವಸ್ಥೆಗಳೊಂದಿಗೆ ನೆರವೇರಿದ ಕಮ್ಮಟ ನನ್ನ ಹಾಗೆಯೇ ಬ೦ದಿದ್ದ ಎಲ್ಲರ ಮನಸ್ಸನ್ನೂ ಗೆದ್ದಿದ್ದರಲ್ಲಿ ಸ೦ಶಯವೇ ಇಲ್ಲ! ಕಮ್ಮಟದ ರೂವಾರಿ ಜಯಲಕ್ಷ್ಮೀ ಪಾಟೀಲ್ ಮತ್ತವರ ತಂಡದ ಅದ್ಭುತ ಕರ್ತತ್ವಶಕ್ತಿ, ಕಮ್ಮಟಕ್ಕೆ ದಿಕ್ಕು ದೆಸೆ ತೋರಿಸಿ ಯಶಸ್ವೀಗೊಳಿಸಿದ ಎಸ್ ದಿವಾಕರ್ ಸರ್, ಜಯಶ್ರೀ ಕಾಸರವಳ್ಳಿ ಅವರಲ್ಲದೆ ಸಮಯಕ್ಕೆ ಬ೦ದು ತಮ್ಮ ವಿದ್ವತ್ಪೂರ್ಣ ಪ್ರವಚನಗಳನ್ನು ನೀಡಿದ ಎ೦ಟು ಜನ ಕನ್ನಡದ ವಿದ್ವಾಂಸ ದಿಗ್ಗಜರ ಸಹಕಾರವು ಒಂದು ಎರಡು ದಿನಗಳೂ ಒಂದು ಅನನ್ಯ ಅನುಭವವನ್ನು ನನಗೆ ಇತ್ತದ್ದು ನಿಜ."

ಜಯಶ್ರೀ ದೇಶಪಾಂಡೆಯವರು ಶ್ರೀಮತಿ ಜಯಲಕ್ಷ್ಮಿ ಪಾಟೀಲರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ನಾನೂ ಸಹ ಈ ಕಮ್ಮಟದ ಸಾರಸಂಗ್ರಹ ಮಾಡಿ, ನಮಗೆ ನೀಡಿದ ಜಯಶ್ರೀ ದೇಶಪಾಂಡೆಯವರಿಗೆ ಅಭಿನಂದನೆಗಳನ್ನು ಹಾಗು ಧನ್ಯವಾದಗಳನ್ನು ಅರ್ಪಿಸುತ್ತೇನೆ.

Sunday, October 29, 2023

ನ್ಯಾಯಿಕ ಅಸಂವೇದನೆ.

 

ನ್ಯಾಯಿಕ ಅಸಂವೇದನೆ.

 ಬಂಧುಗಳೆ,  ಅಪ್ರಾಪ್ತ ಹೆಂಡತಿಯ ಜೊತೆಗೆ ದೈಹಿಕ ಸಂಬಂಧ ಅತ್ಯಾಚಾರವಲ್ಲ! ಇದು ದೆಹಲಿ ಉಚ್ಚ ನ್ಯಾಯಾಲಯದ ತೀರ್ಪು. ಯಾಕೆ? ಯಾಕೆಂದರೆ, ‘ಆ ಅಪ್ರಾಪ್ತ ಹುಡುಗಿ’ ಅತ್ಯಾಚಾರಿಯ ಹೆಂಡತಿ ಅನ್ನುವ ಸಂಗತಿಯು ನ್ಯಾಯನಿರ್ಣಯದಲ್ಲಿಯ ಸವಲತ್ತಿಗೆ ಕಾರಣವಾಗಿದೆ. ಬಂಧುಗಳೆ, ಹುಡುಗಿ ಹೆಂಡತಿಯಾದರೆ, ಅವಳ ಗಂಡನು ಮಾಡುವ ಹಿಂಸೆಗೆ ‘ಬಾರಾ ಖೂನ್ ಮಾಫ್’ ಎನ್ನಬೇಕೆ? ಇದು ಹೊಡೆತ, ಬಡಿತ, ಅವಮಾನ,  ಗುದಮೈಥುನ, ಮುಖಮೈಥುನ ಮೊದಲಾದ ಅನೈಸರ್ಗಿಕ ಕಾಮಕ್ರೀಡೆಗಳಿಗೂ ಅನ್ವಯಿಸುವುದೆ? ಅಪ್ರಾಪ್ತ ವಯಸ್ಸಿನ ಸುಕೋಮಲ ಹುಡುಗಿ, ಧಡಿಯ ಗಂಡನ ಎಲ್ಲ ತರಹದ ಬಲಾತ್ಕಾರಗಳನ್ನು ಸಹಿಸಿಕೊಳ್ಳಬೇಕೆ? ಇಲ್ಲಿ ಹೇಳಲಾದ ಪ್ರಕರಣದಲ್ಲಿಯ ಅಪ್ರಾಪ್ತೆಯ ವಯಸ್ಸು ನನಗೆ ತಿಳಿದಿಲ್ಲ. ಆದರೆ ಬಂಧುಗಳೆ, ಹಳ್ಳಿಗಳಲ್ಲಿ ಇನ್ನೂವರೆಗೂ ಶಿಶುವಿವಾಹಗಳು, ಬಾಲ್ಯವಿವಾಹಗಳು ನಡೆಯುತ್ತಿವೆ ಎನ್ನುವುದನ್ನು ನೀವು ಅರಿತೇ ಇದ್ದೀರಿ. ಐದು ವರ್ಷದ ಬಾಲೆಯನ್ನು ಹದಿನೈದು ವರ್ಷದ ಹುಡುಗನಿಗೆ ಕೊಟ್ಟು ಮದುವೆ ಮಾಡುವುದು ಇಲ್ಲಿ ಸಾಮಾನ್ಯ ರೂಢಿಯಾಗಿದೆ. ಆತ ಅವಳನ್ನು ಬಲಾತ್ಕರಿಸುವುದು ಸಹಜ ಹಾಗೂ ಸಹಜಮಾನ್ಯ ಸಂಗತಿಯಾಗಿದೆ!

 ನೋಡಿದಿರಾ, ಬಂಧುಗಳೆ? ಈ ಆದೇಶವನ್ನು ನೀಡಿದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಪೋಕ್ಸೋ ಕಾಯದೆಯ ಬಗೆಗೆ ಏನಾದರೂ ತಿಳಿದಿದೆಯೆ? ಪೋಕ್ಸೋ ಕಾಯದೆಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿ ಎಂದಷ್ಟೇ ಹೇಳಿದ್ದಾರೆ. ಅವಳಿಗೆ ಹಾಗು ಆರೋಪಿಗೆ ಇರಬಹುದಾದ ಸಂಬಂಧವನ್ನು ಪರಿಗಣಿಸಿಲ್ಲ. ಆದರೆ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಇದು ಪ್ರಮುಖ ಮುದ್ದೆಯಾಗಿದೆ!

 ಅಪ್ರಾಪ್ತ ವಯಸ್ಸಿನ ಹುಡುಗಿಯ ಗಂಡನು ಅವಳನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದಾಗ, ಆ ಅಪ್ರಾಪ್ತೆಗೆ ನಿರಾಕರಿಸಲು ಧೈರ್ಯವೇ ಆಗುವುದಿಲ್ಲ. ಇದಕ್ಕೆ ಕೆಲವು ಕಾರಣಗಳು ಹೀಗಿವೆ:

(೧) ‘ಒಲ್ಲೆ’ ಎನ್ನಲು ಇರುವ ವೈಯಕ್ತಿಕ ಅಂಜಿಕೆ,

(೨) ತನ್ನ ಅತ್ತೆಮನೆಯವರು ಏನೆನ್ನುವರೋ ಎನ್ನುವ ಹೆದರಿಕೆ,  

(೩) ಗಂಡನ ಮಾತಿಗೆ ಮಣಿಯಲೇ ಬೇಕು ಎನ್ನುವ ಸಾಂಪ್ರದಾಯಿಕ ಮೂಢಭಾವನೆ.

 ಇವೆಲ್ಲವುಗಳ ಒಟ್ಟಾರೆ ಒತ್ತಾಸೆಯಿಂದ ಅಪ್ರಾಪ್ತೆಯು ಗಂಡನ ಬಲಾತ್ಕಾರಕ್ಕೆ ಬಾಯಿ ಮುಚ್ಚಿಕೊಂಡು ತನ್ನ ದೇಹವನ್ನು ಒಪ್ಪಿಸುತ್ತಾಳೆ. ಒಂದು ವೇಳೆ, ಅವಳ ಸ್ವೇಚ್ಛಾಸಮ್ಮತಿ ಇದ್ದರೂ ಸಹ, ಪೋಕ್ಸೋ ಕಾಯದೆಯ  ಪ್ರಕಾರ ಅದು ಬಲಾತ್ಕಾರವಾಗುತ್ತದೆ ಹಾಗು ಆ ಗಂಡಸು ಶಿಕ್ಷಾರ್ಹ ಅಪರಾಧಿಯಾಗುತ್ತಾನೆ ಎನ್ನುವುದು ನಮ್ಮ ನ್ಯಾಯಾಧೀಶರ ನ್ಯಾಯಿಕ ಅರಿವಿಗೆ ಬರಲಿಲ್ಲವೆ?

ಇದು ನ್ಯಾಯಿಕ ಅಸಂವೇದನೆಯಲ್ಲವೆ?

 ಇಂತಹ ಇನ್ನೂ ಹಲವು ಪ್ರಕರಣಗಳಿವೆ. ಮದ್ರಾಸ ಉಚ್ಚ ನ್ಯಾಯಾಲಯವು ಅತ್ಯಾಚಾರಕ್ಕೊಳಗಾದ ಯುವತಿಗೆ ಹೇಳಿದ ‘ಉಪದೇಶ’ವನ್ನಿಷ್ಟು ನೋಡಿರಿ. (ಅಹಾ, ಇದಕ್ಕೆ judicial advice ಎನ್ನಬೇಕೊ ಅಥವಾ senior old man’s  gentlemanly advice ಎನ್ನಬೇಕೊ ನನಗೆ ಗೊತ್ತಾಗುತ್ತಿಲ್ಲ!)

 ಈ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಯುವಕನು ‘ತಾನು ಅವಳನ್ನು ಮದುವೆಯಾಗಲು ಸಿದ್ಧನಿದ್ದೇನೆ; ಬಲಾತ್ಕಾರದ ಆರೋಪವನ್ನು ಕೈಬಿಡಬೇಕು’ ಎನ್ನುವ ಮನವಿಯನ್ನು ಮಾಡಿಕೊಂಡಿರಬೇಕು. ಆಗ ಘನತೆವೆತ್ತ ನ್ಯಾಯಾಧೀಶರು ಅವಳಿಗೆ, “ಏನಮ್ಮಾ. ಆತನು ನಿನಗೆ ಹೊಸ ಬಾಳನ್ನು ಕೊಡಲು ಸಿದ್ಧನಿದ್ದಾನೆ; ಈ ಪ್ರಕರಣವನ್ನು ಬಿಟ್ಟುಬಿಡೋಣ” ಎಂದು ಹೇಳಿರಬಹುದು!

 ನೋಡಿದಿರಾ ಬಂಧುಗಳೆ. ಇದೀಗ ಆ ಅತ್ಯಾಚಾರಿ ಯುವಕನಿಗೆ ಈ ಹುಡುಗಿಯ ಮೇಲೆ ದಿನವೂ ಅತ್ಯಾಚಾರ ಮಾಡಲು ಇದೀಗ judicial license ಸಿಕ್ಕಿತು. ತನ್ನನ್ನು ಸಾರ್ವಜನಿಕವಾಗಿ ನ್ಯಾಯಾಲಯಕ್ಕೆ ಎಳೆದ ಈ ಅಪ್ರಾಪ್ತೆಗೆ ಬುದ್ಧಿ ಕಲಿಸೋಣವೆಂದು, ಆ ಅತ್ಯಾಚಾರಿ ಯುವಕನು ಅವಳಿಗೆ ದಿನವೂ ಎಂಥೆಂಥಾ ‘ಹೊಸ ಬಾಳನ್ನು’ ಕೊಡುತ್ತಿರಬಹುದು ಎನ್ನುವುದು ಸಾಮಾನ್ಯನ ಊಹೆಗೆ ನಿಲುಕದ ವಿಷಯ!

ನಮ್ಮ ಉದಾರಬುದ್ಧಿಯ ನ್ಯಾಯಾಧೀಶರಿಗೆ ಇದು ಆತ್ಮಸಂತೃಪ್ತಿಯನ್ನು ಕೊಟ್ಟಿರಬಹುದು!

 ಇನ್ನು ನಾನು ಮಾಡಿದ ಟೀಕೆಗಾಗಿ ನನಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದರೆ, ಅದೂ ಸಹ ನ್ಯಾಯಿಕ ಅಸಂವೇದನೆಯೇ ಆಗಲಿಕ್ಕಿಲ್ಲವೆ!

God, do not forgive them; they knew what they were passing out as justice!

Tuesday, March 28, 2023

ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ

ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’ಯೊಳಗಿರುವ ಹತ್ತೂ ಕಥೆಗಳಲ್ಲಿ ನಾವು ಅಂದರೆ ಓದುಗರು ಈ ಅನುಕಂಪವನ್ನು ದಟ್ಟವಾಗಿ ಅನುಭವಿಸುತ್ತೇವೆ. ವಾಸ್ತವದಲ್ಲಿ, ತೇಜಸ್ವಿನಿಯವರು ಈವರೆಗೆ ಬರೆದ ಎಲ್ಲ ಕಥೆಗಳೂ ಸಹಕಂಪನ ಮನೋಭಾವನೆಯ ಲೇಖಕಿ ಬರೆದ ಕಥೆಗಳೇ. ಹಾಗೆಂದು ಕಥೆಯು ಕರುಣೆಯಲ್ಲಿ ತೊಯ್ದು ತಪ್ಪಡಿಯಾಗಬಾರದಷ್ಟೇ! ಕಥೆಯನ್ನು ನೇರವಾಗಿ ಹೇಳಿದರೆ, ಇಂತಹ ಸಾಧ್ಯತೆ ಇರುತ್ತದೆ. ಆದುದರಿಂದ ತೇಜಸ್ವಿನಿಯವರು ಕಥೆಯನ್ನು ಹೆಣೆಯುವಾಗ,ಮುಖ್ಯ ಪಾತ್ರಗಳ ಜೊತೆಗೆ, ಮತ್ತೊಂದು ಪಾತ್ರದ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಈ ಪಾತ್ರವು ಲೇಖಕಿಯ ಒಳಮನಸ್ಸೇ ಆಗಿರಬಹುದು! ಕನ್ನಡದ ಕಥಾಬ್ರಹ್ಮ ಮಾಸ್ತಿಯವರ ಕಥೆಗಳಲ್ಲಿಯೂ ಸಹ ಮೂರನೆಯ ಪಾತ್ರವೊಂದು ತಟಸ್ಥವಾಗಿ, ನಿರುದ್ವಿಗ್ನವಾಗಿ, ಕಥೆಯಲ್ಲಿಯ ನೈತಿಕತೆಯನ್ನು ಓದುಗರಿಗೆ ಮನದಟ್ಟು ಮಾಡುತ್ತದೆ. ತೇಜಸ್ವಿನಿಯವರ ಕಥೆಗಳೂ ಸಹ ಇದೇ ರೀತಿಯಲ್ಲಿವೆ. ಈ ಮಾತಿಗೆ ಉತ್ತಮ ಉದಾಹರಣೆಯೆಂದರೆ, ಕಥಾಸಂಕಲನದ ಮೊದಲ ಕಥೆಯಾದ ‘ರತ್ನಗಂಧಾ’.

 

‘ರತ್ನಗಂಧಾ’ ಎಂದರೆ ಸುಮಧುರ ವಾಸನೆಯುಳ್ಳ ಕೆಂಪು ಬಣ್ಣದ (ಅಥವಾ ಹಳದಿ ಬಣ್ಣದ) ಒಂದು ಹೂವು. ‘ರತ್ನಗರ್ಭಾ’ ಎಂದರೆ ಭೂಮಿ. ಭೂಮಿಯ ಒಡಲಲ್ಲಿ ಅನೇಕ ರತ್ನಗಳಿರುತ್ತವೆ. ಆದುದರಿಂದ ಅವಳು ರತ್ನಗರ್ಭಾ. ರತ್ನಗಂಧಾ ಎಂದಾಗ ‘ರತ್ನಗರ್ಭಾ’ ಎನ್ನುವ ಪದದ ನೆನಪೂ ಆಗುತ್ತದೆ. ಭೂಮಿಗೂ ಸಹ ಒಂದು ವಾಸನೆ ಇರುತ್ತದೆ. ಮೊದಲ ಮಳೆಯಿಂದ ತೊಯ್ದ ಭೂಮಿಯ ವಾಸನೆಯು ಯಾರನ್ನು ಸೊಗಯಿಸಲಿಕ್ಕಿಲ್ಲ! ತೇಜಸ್ವಿನಿಯವರು ಭೂಮಿಯ ಒಳಗಿನ ಸುಗಂಧ ಬಗೆಗೆ ಹಾಗು ರತ್ನಗಂಧಾ ಹೂವಿನ ಸುವಾಸನೆಯ ಬಗೆಗೆ ಹೇಳುತ್ತಿದ್ದಾರೆ; ಯಾವುದೇ ಐಶ್ವರ್ಯದ ಬಗೆಗೆ ಅಲ್ಲ. ಆದುದರಿಂದ ಈ ಕಥೆಯನ್ನು ‘ರತ್ನಗಂಧಾ’ ಎಂದು ಕರೆದಿದ್ದಾರೆ. 

ಈ ಕಥೆಯ ನಾಯಕಿಯೂ ಸಹ ‘ರತ್ನಗಂಧಾ’. ಅರ್ಥಾತ್ ರತ್ನಿ! ಇವಳು ವಯಸ್ಸಾದವಳು ಹಾಗು ವಿಧವೆ. ಇವಳ ಮಗನು ಅಮೇರಿಕಾದಲ್ಲಿ ಆರಾಮಾಗಿ ಇದ್ದಾನೆ. ಒಂಟಿಜೀವವಾಗಿ ಬದುಕಲು ಇವಳಿಗೆ ಸಾಧ್ಯವೆ? ಇವಳಿಗೆ ಒಂದು ಜೋಡು ಬೇಡವೆ? ಇದು ಅವಳ ದೈಹಿಕ ಕಾಮನೆಯಲ್ಲ. ಆದರೆ ಇವಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಸಮಾಜದ ಕಟ್ಟುಪಾಡುಗಳಲ್ಲಿಯೇ ಬದುಕುತ್ತಿರುವ ಅಲ್ಪ ಮನಸ್ಸಿನ ಸಾಮಾನ್ಯರಿಗೆ ಅರ್ಥವಾಗಲಾರದು.

 

ನಮ್ಮ ಸಾಂಪ್ರದಾಯಿಕ ಸಮಾಜವು ಈ ವಿಷಯದಲ್ಲಿ ಪ್ರತಿಗಾಮಿ ಮನೋಭಾವವನ್ನೇ ಹೊಂದಿದೆ. ಈ ಮುದುಕಿಗೆ ದಾಂಪತ್ಯದ ಸಾಂಗತ್ಯ ಏಕೆ ಬೇಕು? ಕೊನೆಗೆ ಒಬ್ಬ ಒಳ್ಳೆಯ ಹುಡುಗನನ್ನು ಜೊತೆಯಲ್ಲಿ ಇಟ್ಟುಕೊಂಡು ಸಾಕಿದರೆ ಸಾಲದೆ? ಇದು ನಮ್ಮ ಸಮಾಜದ ಮನೋಭಾವ. ಆದರೆ ರತ್ನಿ ಹೇಳುವುದು ಹೀಗಿದೆ: ಇವಳಿಗೆ ಬೇಕಾಗಿರುವ ಜೊತೆಗಾರ ಇವಳಂತಹ ರುಚಿ ಇದ್ದವನೇ ಆಗಿರಬೇಕು, ಕೇವಲ ತಿನ್ನುಣ್ಣುವದರಲ್ಲಿ ಅಲ್ಲ; ಜೊತೆಜೊತೆಯಾಗಿ ಹೆಜ್ಜೆ ಹಾಕುವಂತಹ ಜೊತೆಗಾರನು ಬೇಕು; ಇವಳಂತೆಯೆ ವಯಸ್ಸಾದವನು ಇವಳಿಗೆ ಬೇಕು. (“ನಂಗೆ ನನ್ನದೇ ವಯಸ್ಸಿನ ಮುದಿಜೀವ ಬೇಕಾಗಿರುವುದು........................ನನ್ನಮನೆಯ ಯಜಮಾಂತಿ ನಾನೇ ಆಗಿರಬೇಕಲ್ವಾ?”) ಈ ಮಾತುಗಳು ಕೇವಲ ಓರ್ವ ವೃದ್ಧ ವಿಧವೆಯ ಮಾತುಗಳಲ್ಲ. ಸಾಮಾನ್ಯವಾಗಿ ನಮ್ಮೆಲ್ಲರ ಮನೋಭಾವವೂ ಇದೇ ಆಗಿರುತ್ತದೆ.

 

ರತ್ನಿಯನ್ನು ಎಲ್ಲರೂ ತಮಾಶೆ ಮಾಡುತ್ತಿದ್ದರೂ ಸಹ, ಇವಳು ಮಾತನಾಡಲು ಸಾಧ್ಯವಾಗುವ ಎರಡು ಜೀವಿಗಳು ಈ ಹಳ್ಳಿಯಲ್ಲಿದ್ದಾರೆ. ಈ ಮೂವರ ಮಾತುಕತೆಯ ಸುತ್ತಲೂ ಕಥೆಯ ಕೊನೆಯನ್ನು ಹೆಣೆಯಲಾಗಿದೆ. ಇಷ್ಟು ಹೇಳಿದರೆ ಕಥೆಯನ್ನು ಸರಳೀಕರಿಸಿದಂತಾಯಿತಲ್ಲವೆ? ತೇಜಸ್ವಿನಿಯವರು ಒಂದು ಒಣ ಪ್ರಬಂಧವನ್ನು ಇಲ್ಲಿ ಬರೆಯುತ್ತಿಲ್ಲ. ಅವರು ಮನಸ್ಸನ್ನು ತಟ್ಟುವ ಕಥೆಯನ್ನು ಹೇಳುತ್ತಿದ್ದಾರೆ. ಆದುದರಿಂದ ಕಥೆಯನ್ನು ವಿವರಗಳನ್ನು ಇಲ್ಲಿ ಬರೆಯುವುದು ಸರಿಯಲ್ಲ. ಅದು ಮೈಸೂರುಪಾಕಿನಲ್ಲಿ ಇಷ್ಟು ಸಕ್ಕರೆ ಇದೆ, ಇಷ್ಟು ತುಪ್ಪ ಇದೆ, ಇಷ್ಟು ಗೋದೀ ಹಿಟ್ಟು ಇದೆ ಎಂದೆಲ್ಲ ಹೇಳಿದಂತಾಗುವುದು. ಓದುಗರೆ, ಮೈಸೂರುಪಾಕಿನ ರುಚಿಯನ್ನು ಸ್ವತಃ ನೀವೇ ಬಾಯಲ್ಲಿಟ್ಟುಕೊಂಡು ಸವಿಯಿರಿ!

 

ಇದರಂತೆಯೆ, ‘ಮುಸ್ಸಂಜೆಯ ಬೆಳಕು’ ಕಥೆಯು ಓರ್ವ ವೃದ್ಧನ ಇಳಿಗಾಲದ ಕಥೆಯಾಗಿದೆ. ಇಲ್ಲಿ ಈ ವೃದ್ಧನು ತನ್ನ ಗತಿಸಿದ ಜೊತೆಗಾತಿಯ ನೆನಪಿನಲ್ಲಿ ಜೀವಿಸುತ್ತಿದ್ದಾನೆ. ಈ ಕಥೆಯನ್ನು ನಿರೂಪಿಸುತ್ತಿರುವಳು ಆ ವೃದ್ಧನ ಹಳೆಯ ವಿದ್ಯಾರ್ಥಿನಿ. ಈ ನೆನಪುಗಳೇ ಅವನ ಸಂಜೆಗತ್ತಲಲ್ಲಿ ಅವನಿಗೆ ಬೆಳಕಾಗಿವೆ. ಎಂತಹ ಅರ್ಥಪೂರ್ಣ ಶೀರ್ಷಿಕೆಯಲ್ಲವೆ? 


ಮತ್ತೊಂದು ಕಥೆ, ‘ಹಸಿರು ಪತ್ತಲ’ವೂ ಸಹ ವೃದ್ಧನೋರ್ವನ ಕಥೆಯಾಗಿದೆ. ಆದರೆ ಇಲ್ಲಿಯ ವೃದ್ಧನು ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯ ನೆನಪು ನಿರೂಪಿಕೆಗೆ ಕೊನೆಯ ಕ್ಷಣದಲ್ಲಿ ಅರಿವಾಗುತ್ತದೆ!

 

‘ಬಾಳೆಮರ’ ಕಥೆಯು ಸಂಕೀರ್ಣ ಕಥೆಯಾಗಿದೆ. ಇಲ್ಲಿ ರಾಜೀವ ಹಾಗು ಸಕೀನಾ, ಮೋನಪ್ಪ ಮಾಸ್ತರು, ಸೀತಕ್ಕ, ಜಾನಕಿ ಇವರಲ್ಲಾ ಪಾತ್ರಧಾರಿಗಳಾಗಿದ್ದಾರೆ. ಇವರೆಲ್ಲರ ಬದುಕಿನ ತಳುಕನ್ನು ತೇಜಸ್ವಿನಿಯವರು ‘ಸು-ಸೂತ್ರ’ವಾಗಿ ನಮ್ಮೆದುರಿಗೆ ಹಿಡಿದಿದ್ದಾರೆ!

 

ಕೇವಲ ಮನುಷ್ಯರ ನಡುವಿನ ಪ್ರೀತಿಯಷ್ಟೇ ಇಲ್ಲಿಯ ಕಥೆಗಳಲ್ಲಿದೆ ಎಂದಲ್ಲ. ‘ಯಶವಂತಿ’ ಎನ್ನುವ ಕಥೆಯು ಒಂದು ಸೈನಿಕ ಉಡದ ಬಗೆಗೆ ಇದೆ! ಶಿವಾಜಿ ಮಹಾರಾಜರ ಸೇನಾಪತಿಯಾದ ತಾನಾಜಿ ಹಾಗು ಅವನು ಸಾಕಿದ ಉಡ ‘ಯಶವಂತಿ’ಯ ಹೃದಯವಿದ್ರಾವಕ ಕಥೆ ಇದು. ಪ್ರಾಣಿಗಳೂ ಸಹ ತಮ್ಮ ಒಡೆಯನನ್ನು ಮನಸಾರೆ ಪ್ರೀತಿಸುತ್ತವೆ ಹಾಗು ಅವನಿಗಾಗಿ ಪ್ರಾಣವನ್ನು ಕೊಡುತ್ತವೆ ಎನ್ನುವ ಕಥೆ ಇದು.

 

ಈ ಸಂಕಲನದ ಕಿರೀಟಪ್ರಾಯವಾದ ಕಥೆ ಎಂದರೆ ‘ಜೋತಯ್ಯನ ಬಿದಿರು ಬುಟ್ಟಿ.’ ಜೋತಯ್ಯನ ಬಾಲ್ಯಸ್ನೇಹಿತನಾದ ಅನಂತನು ಇದೀಗ ನಗರವಾಸಿಯಾಗಿದ್ದಾನೆ. ಅವನ ಹಾಗು ಜೋತಯ್ಯನ ಸಂಪರ್ಕ ಕಡಿಮೆಯಾಗಿದೆ. ಆದರೆ ಅನಂತನಿಗೆ ಜೋತಯ್ಯನ ಮೇಲಿರುವ ಬಾಲ್ಯದ ಒಲವು ಕಡಿಮೆಯಾಗಿಲ್ಲ. ಜೋತಯ್ಯ,-ಸಮಾಜದ ಕೆಳಸ್ತರದಲ್ಲಿರುವ ಒಬ್ಬ ವ್ಯಕ್ತಿ  ತನ್ನ ಅಂಗವಿಕಲ ಮಗನಿಗೆ ಏನು ಶುಶ್ರೂಷೆಯನ್ನು ಕೊಡಲು ಸಾಧ್ಯ--ಬುಟ್ಟಿಯಲ್ಲಿ ಹೊತ್ತುಕೊಂಡು ತಿರುಗುವದನ್ನು ಬಿಟ್ಟರೆ? ಇದಕ್ಕಾಗಿ ಆತನು ಪಡುವ ಸಂಕಷ್ಟವನ್ನು ಅನಂತನು ನಿರೂಪಿಸುತ್ತಿದ್ದಾನೆ. ತೇಜಸ್ವಿನಿಯವರು  ನಮ್ಮ ಅಂತಃಕರಣ ಮಿಡಿಯುವಂತೆ ಆದರೆ ಕಥೆಯು ಎಲ್ಲೂ melodrama ಆಗದಂತೆ ಎಚ್ಚರಿಕೆ ವಹಿಸುತ್ತ ರಚಿಸಿದ್ದಾರೆ. ತೇಜಸ್ವಿನಿಯವರು ಮನೋವಿಜ್ಞಾನವನ್ನು ಚೆನ್ನಾಗಿ ಅರಿತವರು. ಅವರ ಕಥೆಗಳಲ್ಲಿಯ ಪಾತ್ರಗಳು ಈ ಮಾತಿಗೆ ಒಳ್ಳೆಯ ನಿದರ್ಶನಗಳಾಗಿವೆ.

ಅವರಿಗೆ ಅನೇಕ ಅಭಿನಂದನೆಗಳು.  ಇಂತಹ ಉತ್ತಮ ಕಥೆಗಳು ಅವರ ಲೇಖನಿಯಿಂದ ಇನ್ನಿಷ್ಟು ಬರಲಿ ಎಂದು ಹಾರೈಸುತ್ತೇನೆ.