Tuesday, October 26, 2010

ಬೇಂದ್ರೆಯವರ ‘ದೀಪ’

ಬೇಂದ್ರೆಯವರಿಗೆ ಪ್ರಣಯವು ಒಂದು ವೈಯಕ್ತಿಕ ಕಾಮನೆಯಲ್ಲ. ಇದೊಂದು ವಿಶ್ವಲೀಲೆ. ಅವರ ಅನೇಕ ಪ್ರಣಯಗೀತೆಗಳು ವಿಶ್ವಪ್ರಣಯವನ್ನು ತೋರಿಸುವ ಗೀತೆಗಳೇ ಆಗಿವೆ. ಅವರ ಸುಪ್ರಸಿದ್ಧ ಗೀತೆಯಾದ ‘ಅನಂತ ಪ್ರಣಯ’ವು (‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ….’) ವಿಶ್ವದ ಅಂತರಂಗದಲ್ಲಿ ಚಿಮ್ಮುತ್ತಿರುವ ಪ್ರಣಯವನ್ನು ತೋರಿಸುತ್ತದೆ. ಅವರ ‘ಕಾಮಕಸ್ತೂರಿ’ ಕವನಸಂಕಲನದಲ್ಲಿ ಇರುವ ‘ನನ್ನವಳು’ ಕವನವಂತೂ ಸಮಗ್ರ ಜಗತ್ತಿನ ಶ್ರೇಷ್ಠ ಪ್ರಣಯಕವನಗಳಲ್ಲಿ ಒಂದಾಗಿದೆ. ಈ ಕವನದಲ್ಲಿ ನಿಸರ್ಗದ ದೈನಂದಿನ ಬದಲಾವಣೆಗಳಾದ ಹಗಲು,ಸಂಜೆ ಹಾಗು ಇರುಳುಗಳ ಜೊತೆಗೆ ತನ್ನ ಕೆಳದಿಯನ್ನು ಸಮೀಕರಿಸಿ ಬೇಂದ್ರೆಯವರು ಹಾಡಿದ್ದಾರೆ. ತಮ್ಮ ವೈಯಕ್ತಿಕ ಪ್ರಣಯವನ್ನು ವಿಶ್ವಪ್ರಣಯದೊಂದಿಗೆ ಸಮೀಕರಿಸಿ ಅವರು ಹಾಡಿದ ಮತ್ತೊಂದು ಕವನವೆಂದರೆ ‘ದೀಪ’. ಈ ಕವನವು ‘ನಾದಲೀಲೆ’ ಸಂಕಲನದಲ್ಲಿದೆ. ಈ ಕವನದ ಪೂರ್ತಿಪಾಠ ಹೀಗಿದೆ:

                                    ಬಂತಿದೊ ಶೃಂಗಾರಮಾಸ
                                    ಕಂತು ನಕ್ಕ ಚಂದ್ರಹಾಸ
                                    ಎಂತು ತುಂಬಿತಾsಕಾಶ
                                                ಕಂಡವರನು ಹರಸಲು.

                                    ಕಿರಿಬೆರಳಲಿ ಬೆಳ್ಳಿಹರಳು
                                    ಕರಿಕುರುಳೊಳು ಚಿಕ್ಕೆ ಅರಳು
                                    ತೆರಳಿದಳಿದೊ ತರಳೆ ಇರುಳು
                                                 ತನ್ನರಸನನರಸಲು.

                                    ಗಂಗೆ ಯಮುನೆ ಕೂಡಿ ಹರಿದು
                                    ಸಂಗಮ ಜಲ ಬಿಳಿದು ಕರಿದು
                                    ತಿಂಗಳ ನಗೆ ಮೇರೆವರಿದು
                                                ಬೇರೆ ಮಿರುಗು ನೀರಿಗು.

                                    ಪಂಥದಿಂದ ಮನೆಯ ತೊರೆದು
                                    ಪಾಂಥ ನೆನೆದನತ್ತು ಕರೆದು :
                                    ಇಂಥ ಸಮಯ ಬೇರೆ ಬರದು
                                                 ದಂಪತಿಗಳಿಗಾರಿಗು !

                                    ನಾನು ನೀನು ಜೊತೆಗೆಬಂದು
                                    ಈ ನದಿಗಳ ತಡಿಗೆ ನಿಂದು
                                    ಸಾನುರಾಗದಿಂದ ಇಂದು
                                                 ದೀಪ ತೇಲಿಬಿಟ್ಟೆವೇ—
                                                ದೀಪ ತೇಲಿ ಬಿಟ್ಟೆವು.

ಬ್ರಾಹ್ಮೀ ಮುಹೂರ್ತದಲ್ಲಿ ನದಿಯಲ್ಲಿ ದೀಪಗಳನ್ನು ತೇಲಿ ಬಿಡುವದು ಧಾರಿäಕ ವಿಧಿಯ ಒಂದು ಭಾಗವಾಗಿದೆ. ಬೇಂದ್ರೆಯವರು ತಮ್ಮ ಹೆಂಡತಿಯೊಡನೆ ಪ್ರಯಾಗಕ್ಕೆ ಹೋದಾಗ ಅಲ್ಲಿ ಗಂಗಾ ಹಾಗು ಯಮುನಾ ನದಿಗಳ ಸಂಗಮದಲ್ಲಿ ದೀಪವನ್ನು ತೇಲಿ ಬಿಡುತ್ತಾರೆ. ಇದು ಈ ಕವನದ ಸಂದರã. ಗಂಡ,ಹೆಂಡತಿಯರು ಜೊತೆಯಾಗಿ ಯಾವುದೇ ಕಾರåವನ್ನು ಮಾಡಲಿ, ಆ ಸಂದರãವು ಅವರಿಗೆ ಸಹಜವಾಗಿಯೇ ಪ್ರೇಮಭಾವದ ಉದ್ದೀಪನದ ಕಾರಣವೂ ಆಗಬಲ್ಲದು.  ಇನ್ನೂ ನಸುಗತ್ತಲೆ ಇರುವ ಸಮಯದಲ್ಲಿ ಬೇಂದ್ರೆ ದಂಪತಿಗಳು ಒಂದು ಧಾರಿäಕ ವಿಧಿಯನ್ನು ನೆರವೇರಿಸಲು ಜೊತೆಯಾಗಿ ನದಿಯ ದಂಡೆಗೆ ಬಂದಿದ್ದಾರೆ. ಬೆಳದಿಂಗಳು ಇನ್ನೂ ತನ್ನ ಪೂರÚ ಪ್ರಭೆಯಲ್ಲಿದೆ. ನದಿಯಲ್ಲಿ ತೇಲುತ್ತಿರುವ ದೀಪಗಳು ಭಾವೋದ್ದೀಪನವನ್ನು ಮಾಡುತ್ತಿವೆ. ಹೀಗಾಗಿ ಜೊತೆಯಾಗಿರುವ ದಂಪತಿಗಳಿಗೆ ಇದು ಶೃಂಗಾರಮಾಸದಂತೆ ಭಾಸವಾದರೆ ಆಶÑåವಿಲ್ಲ. ಕವಿಯಲ್ಲಿ ಮೂಡಿದ ಆ ಭಾವನೆಯ ಫಲವೇ ಈ ಕವನ : ಶೃಂಗಾರ ಮಾಸ’. ಆದರೆ ಬೇಂದ್ರೆಯವರು ‘ಶೃಂಗಾರಮಾಸ’ವನ್ನು ಕೇವಲ ರೂಪಕವಾಗಿ ಬಳಸುತ್ತಿಲ್ಲ. ಋತುಮಾನವನ್ನು ಸೂಚಿಸಲೂ ಸಹ ಅವರು ಈ ಪದವನ್ನು ಪ್ರಯೋಗಿಸಿದ್ದಾರೆ. ‘ಶೃಂಗಾರಮಾಸ’ ಎಂದರೆ ಚೈತ್ರಮಾಸ. ವಸಂತ ಋತುವಿನ ಮೊದಲ ಮಾಸವಾದ ಚೈತ್ರದಲ್ಲಿಯೇ, ನಿಸರÎವು ತನ್ನನ್ನು ಹೂವುಗಳಿಂದ ಸಿಂಗರಿಸಿಕೊಳ್ಳುವದು ಹಾಗು ಫಲವತಿಯಾಗಲು ಕಾಯುವದು.
(ಬೇಂದ್ರೆಯವರ ಮತ್ತೊಂದು ಕವನವಾದ ‘ಯುಗಾದಿ’ಯಲ್ಲಿಯೂ ಸಹ ಇದೇ ಧ್ವನಿಯಿದೆ :
“ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.”)
ಆದುದರಿಂದ ಶೃಂಗಾರಮಾಸವೆಂದರೆ ಚೈತ್ರಮಾಸದ ಕಾಲ. ಮುಂದಿನ ಸಾಲುಗಳಲ್ಲಿ ಬೇಂದ್ರೆಯವರು ಇನ್ನೂ ನಿರಿÝಷ್ಟವಾದ ಕಾಲಸೂಚನೆಗಳನ್ನು ನೀಡುತ್ತಾರೆ. ಮೊದಲ ನುಡಿಯನ್ನು ಎಳೆಎಳೆಯಾಗಿ ಪರೀಕ್ಷಿಸಿದಾಗ ಈ ಸೂಚನೆಗಳು ಹೊಳೆಯುವವು:
                        ಬಂತಿದೊ ಶೃಂಗಾರಮಾಸ
                        ಕಂತು ನಕ್ಕ ಚಂದ್ರಹಾಸ
                        ಎಂತು ತುಂಬಿತಾsಕಾಶ
                                ಕಂಡವರನು ಹರಸಲು.

ಕಂತುವದು ಎಂದರೆ ಮುಳುಗುವದು. ‘ಕಂತು ನಕ್ಕ ಚಂದ್ರಹಾಸ’ ಎಂದರೆ, ಮುಳುಗುತ್ತಿರುವ ಚಂದ್ರ. ಬೆಳದಿಂಗಳು ಆಕಾಶವನ್ನೆಲ್ಲ ತುಂಬಿಕೊಂಡಾಗ, ಚಂದ್ರನು ಮುಳುಗುತ್ತಿದ್ದಾನೆ ಎಂದರೆ ಇದು ಹುಣ್ಣಿವೆಯ ದಿನ ಹಾಗೂ ಈ ಸಮಯವು ಸೂರೋåದಯಕ್ಕಿಂತ ಮೊದಲಿನ ಸಮಯ. ಆದುದರಿಂದ ಬೇಂದ್ರೆಯವರು ಚೈತ್ರಪೂರಿÚಮೆಯಂದು ಇರುಳಿನ ಕೊನೆಯ ಜಾವದಲ್ಲಿ ದೀಪಗಳನ್ನು ತೇಲಿಬಿಡಲು ಅಲ್ಲಿ ತೆರಳಿದ್ದರು ಎಂದು ಸೂಚಿಸುತ್ತಿದ್ದಾರೆ. ಇದು ಪೂರಿÚಮೆಯ ದಿನವಾದದ್ದರಿಂದಲೇ ಆಕಾಶವೆಲ್ಲ ಬೆಳದಿಂಗಳಿನಿಂದ ತುಂಬಿದೆ. ಅದನ್ನೇ ಬೇಂದ್ರೆಯವರು ‘ಎಂತು ತುಂಬಿತಾsಕಾಶ’ ಎಂದು ಹಾಡಿದ್ದಾರೆ. ಶೃಂಗಾರಮಾಸದ ವರÚನೆಯನ್ನು ಪರಿಪೂರÚಗೊಳಿಸುತ್ತಲೇ, ಬೇಂದ್ರೆಯವರು ಕಾಲವನ್ನು ಸೂಚಿಸುವ ಪರಿ ಇದು.

 ‘ಕಂತು’ ಪದಕ್ಕೆ ಕಾಮದೇವ ಎನ್ನುವ ಅರÜವೂ ಇದೆ. ಹೀಗಾಗಿ ‘ಕಂತು ನಕ್ಕ ಚಂದ್ರಹಾಸ’ ಎಂದರೆ ಕಾಮದೇವನ ನಗೆಯೇ ಬೆಳದಿಂಗಳಾಯಿತು ಎನ್ನುವ ಭಾವನೆಯೂ ಇಲ್ಲಿ ಬರುತ್ತದೆ.  ಪ್ರಣಯಭಾವನೆಯನ್ನು ಜಾಗೃತಗೊಳಿಸುವ ಈ ಕಾಮದೇವನ ಉದ್ದೇಶವೇನು? ಈತನು ಕೇವಲ ಸಾಧಾರಣ ಕಾಮನಲ್ಲ ; ಈತನು ದೇವನು ಎನ್ನುವದನ್ನು ಗಮನದಲ್ಲಿ ಇಟ್ಟುಕೊಳ್ಳಿ. (ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ’ದೇವಕಾಮವೆ ಕಾಮದೇವನಾಗಿ’ ಎಂದು ಹೇಳಿದ್ದಾರೆ.) ದೇವತೆಯಲ್ಲಿ ಸದಾಕಾಲವೂ ಅನುಗ್ರಹ ಭಾವನೆಯು ತುಂಬಿರುತ್ತದೆ. ಅದರಂತೆ ಕಾಮದೇವನೂ ಸಹ ತನ್ನ ಚಂದ್ರಹಾಸದಿಂದ ಅಂದರೆ ಬೆಳದಿಂಗಳಿನಿಂದ ಆಕಾಶವನ್ನೆಲ್ಲ ತುಂಬುವದು ಅನುಗ್ರಹ ನೀಡುವ ಕಾರಣಕ್ಕಾಗಿ. ಈ ಅನುಗ್ರಹವು ಕೇವಲ ಪ್ರಣಯಿಗಳಿಗಾಗಿ ಮಾತ್ರ ಅಲ್ಲ, ‘ಕಂಡವರನು ಹರಸಲು’.  ಇದರ ಅರÜ ಕಣ್ಣಿಗೆ ಬಿದ್ದ ಕೆಲವರನ್ನು ಮಾತ್ರ ಹರಸುವದು ಎಂದಲ್ಲ. ಆಕಾಶವನ್ನೆಲ್ಲ ಬೆಳದಿಂಗಳ ರೂಪದ ನಗೆಯಿಂದ ವ್ಯಾಪಿಸಿದ ಆ ಕಾಮದೇವನಿಗೆ ಕೆಳಗಿರುವ ಸೃಷ್ಟಿಯೆಲ್ಲ ಕಾಣದಿದ್ದೀತೆ? ಆದುದರಿಂದ ಸಕಲ ಚರಾಚರ ಜಗತ್ತನ್ನೆಲ್ಲ ಹರಸಲು ಕಾಮದೇವನು ಕಾತರನಾಗಿದ್ದಾನೆ ಎನ್ನುವದು ಈ ಸಾಲುಗಳ ಮರä.

ಮೊದಲನೆಯ ನುಡಿಯಲ್ಲಿ ಪ್ರಕೃತಿಯಲ್ಲಿ ಹರಡಿದ ಪ್ರಣಯ ಭಾವನೆಯನ್ನು ತೋರಿಸುತ್ತಲೇ ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ವಿಶ್ವಪ್ರಣಯದ ನಾಯಕ, ನಾಯಕಿಯರನ್ನು ತೋರಿಸುತ್ತಿದ್ದಾರೆ.  ಜೊತೆಜೊತೆಗೇ ಕಾಲಸೂಚನೆಯನ್ನೂ ಮಂಡಿಸುತ್ತಿದ್ದಾರೆ :
                        ಕಿರಿಬೆರಳಲಿ ಬೆಳ್ಳಿಹರಳು
                        ಕರಿಕುರುಳೊಳು ಚಿಕ್ಕೆ ಅರಳು
                        ತೆರಳಿದಳಿದೊ ತರಳೆ ಇರುಳು
                                  ತನ್ನರಸನನರಸಲು.
ಇರುಳು ಎಂಬ ಚಿಕ್ಕ ವಯಸ್ಸಿನ ಯುವತಿ (=ತರಳೆ) ತನ್ನ ಅರಸನನ್ನು ಅರಸಲು ಅಂದರೆ ಹುಡುಕಲು ಹೊರಟಿದ್ದಾಳೆ ಎನ್ನುವದು ಈ ನುಡಿಯ ತಿರುಳು. ರಾತ್ರಿ ಎನ್ನುವ ಈ ಯುವತಿ ಅನಾದಿಕಾಲದಿಂದಲೂ ತನ್ನ ಅರಸನನ್ನು ಅರಸುತ್ತಳೇ ಇದ್ದಾಳೆ. ಹೀಗಾಗಿ ಇವಳು ಚಿರಯೌವನೆ. ಆದುದರಿಂದಲೇ ಇವಳು ‘ತರಳೆ’. ಈ ತರಳೆಯ ಅರಸ ಯಾರು? ರಾತ್ರಿಕುಮಾರಿಯ ಅರಸನು ಚಂದ್ರನೇ ತಾನೆ? ಆದುದರಿಂದ ಚಂದ್ರನೇ ಇವಳು ಅರಸುತ್ತಿರುವ ಪ್ರಣಯಿ.  ಚಂದ್ರ ಎಲ್ಲಿದ್ದಾನೆ? ಆತನು ಕಂತು (=ಮುಳುಗು)ತ್ತಿದ್ದಾನೆ ಎಂದು ಬೇಂದ್ರೆಯವರು ಮೊದಲನೆಯ ನುಡಿಯಲ್ಲಿಯೇ ಹೇಳಿದ್ದಾರೆ. ಮುಳುಗುತ್ತಿರುವ ಚಂದ್ರನ ಹಿಂದೆಯೇ ಇರುಳೂ ಕೂಡ ಸರಿಯುತ್ತಿದೆ.  ಈ ರಾತ್ರಿಕುವರಿಯ ಒಡವೆಗಳನ್ನಷ್ಟು ನೋಡಿರಿ. ಇವಳು ಕಿರಿಬೆರಳಿನಲ್ಲಿ ಬೆಳ್ಳಿಹರಳಿರುವ ಉಂಗುರವನ್ನು  ಹಾಗು ಕಪ್ಪು ಕುರುಳಿನಲ್ಲಿ ಚಿಕ್ಕೆಗಳ ಅರಳು ಎಂದರೆ ಹೂವುಗಳನ್ನು ಧರಿಸಿದ್ದಾಳೆ. ಬೆಳ್ಳಿಹರಳು ಎಂದರೆ ಶುಕ್ರಗ್ರಹ. ಶುಕ್ರಗ್ರಹಕ್ಕೆ ಕನ್ನಡದಲ್ಲಿ ‘ಬೆಳ್ಳಿ ಚಿಕ್ಕಿ’ ಎಂದೇ ಕರೆಯುತ್ತಾರೆ. ಇವಳ ಕಪ್ಪು ಕುರುಳು ಎಂದರೆ ಆಕಾಶ. ಆಕಾಶದ ಅರಳುಗಳು ಎಂದರೆ ನಕ್ಷತ್ರಗಳು. ಇಷ್ಟು ಶೃಂಗಾರದೊಡನೆ ರಾತ್ರಿಕುಮಾರಿ ಚಂದ್ರನ ಬೆನ್ನು ಹತ್ತಿ ನಡೆದಿದ್ದಾಳೆ. ಇದಿಷ್ಟು ವಿಶ್ವಪ್ರಣಯಿಗಳ ವರÚನೆಯಾದರೆ, ಇದರಲ್ಲಿ ಅಡಗಿರುವ ಕಾಲಸೂಚನೆಯನ್ನಷ್ಟು ನೋಡೋಣ :

ಶುಕ್ರಗ್ರಹವು ಸೂರೋåದಯಕ್ಕಿಂತ ಮೊದಲು ಅಥವಾ ಸೂರಾåಸ್ತದ ನಂತರ ಕಾಣಿಸುತ್ತದೆ. 
ಈ ಸಂದರãದಲ್ಲಿ ಇದು ಸೂರೋåದಯದ ಮೊದಲಿನ ವರÚನೆ. ಇದನ್ನು ದೃಢೀಕರಿಸಲು ಬೇಂದ್ರೆಯವರು ‘ಕಿರಿಬೆರಳಲಿ ಬೆಳ್ಳಿಹರಳು’ ಎಂದು ಹೇಳುತ್ತಾರೆ. ರಾತ್ರಿಕುವರಿಯು ತನ್ನ ಯಾವುದೇ ನಾಲ್ಕು ಬೆರಳುಗಳಲ್ಲಿ ಉಂಗುರ ಧರಿಸಬಹುದಾಗಿತ್ತು. ಆದರೆ ಅವಳು ತನ್ನ ಕಿರಿಬೆರಳಲ್ಲಿ ಧರಿಸಿದ್ದಾಳೆ. ಈಗ ತೋರುಬೆರಳಿನಿಂದ  ಬೆರಳುಗಳನ್ನು ಎಣಿಸಿರಿ : (೧) ತೋರುಬೆರಳು, (೨) ನಡುವಿನ ಬೆರಳು, (೩) ಉಂಗುರ ಬೆರಳು ಹಾಗು (೪) ಕಿರಿಬೆರಳು. ಈ ಎಣಿಕೆಯಲ್ಲಿ ಕಿರಿಬೆರಳು ನಾಲ್ಕನೆಯ ಬೆರಳಾಗುತ್ತದೆ. ಆದುದರಿಂದ ಈ ಸಮಯವು ರಾತ್ರಿಯ ನಾಲ್ಕನೆಯ ಜಾಮ. ಆದರೆ ನಕ್ಷತ್ರಗಳು ಇನ್ನೂ ಕಾಣುತ್ತಲೇ ಇವೆ. ಆದುದರಿಂದ ಇದು ನಾಲ್ಕನೆಯ ಜಾಮದ ಪೂರಾéÞ ಅರಾÜತ್ ಬ್ರಾಹ್ಮೀ  ಮುಹೂರÛ.

ಮೂರನೆಯ ನುಡಿಯಲ್ಲಿ ಬೇಂದ್ರೆಯವರು ಆಕಾಶದಿಂದ ಭೂಮಿಗೆ ಇಳಿಯುತ್ತಾರೆ ಹಾಗು ಭೂಮಿಯ ಮೇಲಿನ ಪ್ರಣಯವನ್ನು ಅಂದರೆ ಗಂಗಾ-ಯಮುನಾ ನದಿಗಳ ಸಂಗಮವನ್ನು ವರಿÚಸುತ್ತಾರೆ :
                        ಗಂಗೆ ಯಮುನೆ ಕೂಡಿ ಹರಿದು
                        ಸಂಗಮ ಜಲ ಬಿಳಿದು ಕರಿದು
                        ತಿಂಗಳ ನಗೆ ಮೇರೆವರಿದು
                                ಬೇರೆ ಮಿರುಗು ನೀರಿಗು.

ಗಂಗೆಯ ನೀರಿನ  ಬಣ್ಣ ಬಿಳಿ ಹಾಗು ಯಮುನೆಯ ನೀರಿನ ಬಣ್ಣ ಕರಿ. ಈ ನದಿಗಳ ಸಂಗಮದ ಜಲವು ಬಿಳಿ ಹಾಗು ಕರಿಯ ಬಣ್ಣಗಳ ಮಿಶ್ರಣವಾಗುತ್ತದೆ. ಈ ಮಿಶ್ರಣದ ಮೇಲೆ ತಿಂಗಳಿನ ನಗೆ ಅಂದರೆ ಬೆಳದಿಂಗಳು ಬಿದ್ದಾಗ ಆ ನೀರಿಗೆ ಒಂದು ವಿಭಿನ್ನ ಮಿರುಗು ಬರುತ್ತದೆ. ದಾಂಪತ್ಯದಲ್ಲೂ ಸಹ ಗಂಡ ಹಾಗು ಹೆಂಡತಿಯ ಸ್ವಭಾವಗಳು ಭಿನ್ನವಾಗಿರುತ್ತವೆ. ಆದರೆ ಸರಸ ಪ್ರೇಮದ ಬೆಳದಿಂಗಳಿನಲ್ಲಿ ಮಿಂದಾಗ ಆ ದಾಂಪತ್ಯಕ್ಕೆ ಒಂದು ಹೊಸ ಸೊಬಗು ಬರುತ್ತದೆ ಎಂದು ಬೇಂದ್ರೆಯವರು ಅನ್ಯೋಕ್ತಿಯ ಮೂಲಕ ಹೇಳುತ್ತಿದ್ದಾರೆ.

ನಾಲ್ಕನೆಯ ನುಡಿ ಹೀಗಿದೆ :
                        ಪಂಥದಿಂದ ಮನೆಯ ತೊರೆದು
                        ಪಾಂಥ ನೆನೆದನತ್ತು ಕರೆದು :
                        ಇಂಥ ಸಮಯ ಬೇರೆ ಬರದು
                                  ದಂಪತಿಗಳಿಗಾರಿಗು !

ಮೇಲಿನ ಮೂರು ನುಡಿಗಳಲ್ಲಿ ಬೇಂದ್ರೆಯವರು ಆಕಾಶದಲ್ಲಿಯ ಪ್ರಣಯವನ್ನು ಹಾಗು ಭೂಮಿಯ ಮೇಲಿನ ಪ್ರಣಯವನ್ನು ಬಣ್ಣಿಸಿದರು. ಆದರೆ ತಮ್ಮದೇ ಸಂಸಾರದಲ್ಲಿ ಅವರು ಒಂದು ಮನಸ್ತಾಪವನ್ನು ಅನುಭವಿಸುತ್ತಿದ್ದಾರೆ. ಇದರ ಸುಳಿವು ಈ ನಾಲ್ಕನೆಯ ನುಡಿಯಲ್ಲಿದೆ.

ಪಂಥ ಎಂದರೆ ಜಿದ್ದು , ಹಟ. ಪಾಂಥ ಎಂದರೆ ದಾರಿಕಾರ, ಪ್ರಯಾಣಿಕ.  ಯಾವ ಕಾರಣಕ್ಕಾಗಿ ಬೇಂದ್ರೆ ದಂಪತಿಗಳಲ್ಲಿ ವಿರಸ ಹುಟ್ಟಿತು ಎನ್ನುವದನ್ನು ಬೇಂದ್ರೆಯವರು ತಿಳಿಸಿಲ್ಲ. ಒಟ್ಟಿನಲ್ಲಿ ಹಟಮಾರಿತನ, ಸಿಟ್ಟು, ಸೆಡವು ಇವೆಲ್ಲ ಭಾವನೆಗಳು ಇಬ್ಬರಲ್ಲೂ ಬಂದು ಹೋಗಿವೆ. ಇಬ್ಬರಿಗೂ ದುಃಖವಾಗಿದೆ ಎನ್ನುವದು ‘ಅತ್ತು ಕರೆದು’ ಎನ್ನುವದರ ಮೂಲಕ ಸ್ಪಷ್ಟವಾಗಿದೆ. ಇಂತಹ ಸಂದರãವು ಬೇರೆ ಯಾವ ದಂಪತಿಗಳಿಗೂ ಬಂದಿರಲಿಕ್ಕಿಲ್ಲ ಹಾಗು ಬರದಿರಲಿ ಎಂದು ಬೇಂದ್ರೆಯವರು ಹಾರೈಸುತ್ತಾರೆ. ಆದರೆ ಗಂಗೆ-ಯಮುನೆಗಳ ಸಂಗಮದ ತಟದಲ್ಲಿ ಇವರೀರéರೂ ಆ ಅಸುಖೀ ಭಾವನೆಯಿಂದ ಈಗ ಹೊರಬಂದಿದ್ದಾರೆ. ವಿಶ್ವಪ್ರಣಯದ ಬೆಳದಿಂಗಳಿನಲ್ಲಿ ಮಿಂದು, ಮತ್ತೆ ಸರಸ, ಸಮಾಧಾನದ ಭಾವಕ್ಕೆ ಮರಳಿದ್ದಾರೆ. ಈ ಭಾವನೆಯು ಅವರ ಮುಂದಿನ (ಕೊನೆಯ) ನುಡಿಯಲ್ಲಿ ವ್ಯಕ್ತವಾಗುತ್ತಿದೆ :
                        ನಾನು ನೀನು ಜೊತೆಗೆಬಂದು
                        ಈ ನದಿಗಳ ತಡಿಗೆ ನಿಂದು
                        ಸಾನುರಾಗದಿಂದ ಇಂದು
                                  ದೀಪ ತೇಲಿಬಿಟ್ಟೆವೇ—
                                  ದೀಪ ತೇಲಿ ಬಿಟ್ಟೆವು.

ಸಾನುರಾಗದಿಂದ ಎಂದು ಹೇಳುವಾಗ ಅವರೀರéರಲ್ಲಿ ಮತ್ತೆ ಅನುರಾಗ ಭಾವ ಬಂದಿರುವದನ್ನು ಬೇಂದ್ರೆಯವರು ಸ್ಪಷ್ಟ ಪಡಿಸುತ್ತಾರೆ. ದೀಪ ತೇಲಿ ಬಿಡುವ ವಿಧಿಯನ್ನು ಜೊತೆಯಾಗಿ ಮಾಡುವದರ ಮೂಲಕ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡಿರ ಸಾಮರಸ್ಯವನ್ನು ಸೂಚಿಸುತ್ತಾರೆ. ಅಲ್ಲದೆ, ಈ ದೀಪವು ಬಾಳಿಗೆ ಬೆಳಕು ನೀಡುವ ದೀಪವೂ ಹೌದು ಎಂದು ಸೂಚಿಸುತ್ತಾರೆ.
……………………………………………………………….
ಟಿಪ್ಪಣಿ (೧):
ಬೇಂದ್ರೆಯವರ ಕವನಗಳಲ್ಲಿ ಪದಗಳ ಶ್ಲೇಷೆಯನ್ನು ಕಾಣುವದು ಅತಿ ಸಹಜ. ಉದಾಹರಣೆಗೆ ‘ಸಾವಿರದ ಮನೆಯಲೊಂದು ಮನೆಯ ಮಾಡಿದೆ’ ಎಂದು ಹೇಳುವಾಗ ‘ಸಾವಿರದ’ ಪದಕ್ಕೆ ‘ಅನೇಕ’ ಎನ್ನುವ ಅರÜ ಇರುವಂತೆಯೇ ‘ಸಾವು+ಇರದ’ ಎನ್ನುವ ಅರÜವೂ ಇದೆ. ಕೆಲವೊಮ್ಮೆ ವಿರುದ್ಧಾರÜದ ಶ್ಲೇಷೆಯನ್ನೂ ಅವರು ಮಾಡುತ್ತಾರೆ. ಉದಾಹರಣೆಗೆ, ಈ ಸಾಲು ನೋಡಿರಿ: ‘ಅಮೃತಂತ ಬಾಯಿ ಚಪ್ಪರಿಸತಾವ, ಕೇಳಿ ಕಣ್ಣು ಮಿಟಕತದ ರಾತ್ರಿ.’
ನಲ್ಲ, ನಲ್ಲೆಯರು ಮುತ್ತು ಕೊಟ್ಟುಕೊಳ್ಳುವಾಗ ‘ಇದು ಅಮೃತ’ ಎನ್ನುತ್ತ ಬಾಯಿ ಚಪ್ಪರಿಸುತ್ತಾರೆ. ಇದನ್ನು ಕೇಳಿದ ರಾತ್ರಿಯು ಕಣ್ಣು ಹೊಡೆಯುತ್ತದೆ ಎನ್ನುವದು ಒಂದು ಅರÜ. ಮತ್ತೊಂದು ಅರÜ ಹೀಗಿದೆ: ಇದು ಅಮೃತ ಎಂದರೆ ನಿರಂತರ ಎಂದು ಪ್ರಣಯಿಗಳು ಭಾವಿಸುತ್ತಾರೆ. ಆದರೆ ಇದರ ಅವಧಿ ಅತ್ಯಲ್ಪ ಅರ್ಥಾತ್ ಕಣ್ಣು ಮಿಟುಕಿಸುವ ಸಮಯದಷ್ಟು ಮಾತ್ರ.

‘ದೀಪ’ ಕವನದಲ್ಲಿ ಮೊದಲಿನ ಎರಡೂ ನುಡಿಗಳೇ ಶ್ಲೇಷೆಯಿಂದ ಕೂಡಿರುವದು ಈ ಕವನದ ಒಂದು ಹೆಚ್ಚುಗಾರಿಕೆ. ಈ ನುಡಿಗಳು ವಿಶ್ವಪ್ರಣಯವನ್ನು ಹಾಗು ನಾಯಕ, ನಾಯಕಿಯರನ್ನು ವರಿÚಸುವದರ ಜೊತೆಗೇ ಕಾಲಸೂಚನೆಯನ್ನೂ ಮಾಡುವದು ಬೇಂದ್ರೆಯವರ ಶ್ಲೇಷಪ್ರತಿಭೆಯ ನಿದರêನವಾಗಿದೆ.
…………………………………………………………………………….
ಅಕ್ಟೋಬರ ೨೬ ಬೇಂದ್ರೆಯವರ ಪುಣ್ಯತಿಥಿ. ೧೯೮೧ ಅಕ್ಟೋಬರ ೨೬ರಂದು ಬೇಂದ್ರೆಯವರು ಮುಂಬಯಿಯಲ್ಲಿ ನಿಧನರಾದರು. ಅಂದು ನರಕಚತುರÝಶಿಯ ದಿನವಾಗಿತ್ತು. ಅವರು ಕಾಲವಶರಾಗಿ ಇಂದಿಗೆ ಎರಡು ದಶಕಗಳು ಸಂದವು.
……………………………………………………………
ಟಿಪ್ಪಣಿ (೨):
ಇದು ಬ್ಲಾಗಿಗರೆಲ್ಲ ಖುಶಿ ಪಡುವ ಹಾಗು ಹೆಮ್ಮೆ ಪಟ್ಟುಕೊಳ್ಳುವ ತಿಂಗಳಾಗಿದೆ. ಮೂರು ಜನ ಬ್ಲಾಗಿಗರು ಸಾಹಿತ್ಯಸಮ್ಮಾನವನ್ನು ಪಡೆದದ್ದನ್ನು ಈ ತಿಂಗಳಿನಲ್ಲಿ ಕೇಳುತ್ತಿದ್ದೇವೆ. ಮೊದಲನೆಯವರು ‘ಛಾಯಾಕನ್ನಡಿ’ಯ ಶಿವು. ಇವರಿಗೆ ಬೇಂದ್ರೆ ಸ್ಮಾರಕ ಟ್ರಸ್ಟಿನ ಪ್ರಶಸ್ತಿಯು ಲಲಿತ ಪ್ರಬಂಧಗಳ ವಿಭಾಗದಲ್ಲಿ ದೊರಕಿದೆ. ಎರಡನೆಯವರು ‘ಮೌನಗಾಳದ’ ಸುಶ್ರುತ ದೊಡ್ಡೇರಿ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ದೊರೆತಿದೆ. ಮೂರನೆಯವರು ‘ಕಂಡೆ ನಾನೊಂದು ಕನಸು’ ಎನ್ನುವ ಸುಷ್ಮಾಸಿಂಧು. ಇವರ ಕತೆಗೆ ಕಾರವಾರದ ‘ಹಣತೆ’ ಸಂಘಟನೆಯ ಪ್ರಥಮ ಬಹುಮಾನ ದೊರೆತಿದೆ. ಕಳೆದ ತಿಂಗಳಿನಲ್ಲಿ ಕನ್ನಡದ ಖ್ಯಾತ ವಿಮರêಕ ರಹಮತ್ ತರೀಕೆರೆಯವರು ಭಾಷಣ ಮಾಡುತ್ತ ಬ್ಲಾಗ್ ಸಾಹಿತ್ಯದ ಬಗೆಗೆ ಲಘುವಾಗಿ ಮಾತನಾಡಿದ್ದರು. ನಮ್ಮ ಬ್ಲಾಗಿಗರು ಅವರಿಗೆ ಸತ್ಯವನ್ನು ತೋರಿಸಿದ್ದಾರೆ.
ಮೂವರಿಗೂ ಶುಭಾಶಯಗಳು.

Tuesday, October 12, 2010

ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ


ಎಸ್.ಎಲ್.ಭೈರಪ್ಪನವರು ಇಂದು ಕನ್ನಡದ ಅತ್ಯಂತ ವಿವಾದಾತ್ಮಕ ಲೇಖಕರಾಗಿ ಖ್ಯಾತಿ ಪಡೆದಿದ್ದಾರೆ. ತಮ್ಮ ಮೊದಲ ಪ್ರಕಟಿತ ಕಾದಂಬರಿ ‘ಧರ್ಮಶ್ರೀ’ಯಿಂದಲೇ ಭೈರಪ್ಪನವರು ಪ್ರತಿಗಾಮಿ ಲೇಖಕ ಎಂದು ಗುರುತಿಸಲ್ಪಟ್ಟರು. ‘ಕವಲು’ ಕಾದಂಬರಿಯು ಪ್ರಕಟವಾದ ಬಳಿಕ ಇವರಿಗೆ ‘ಸ್ತ್ರೀವಿರೋಧಿ’ ಹಣೆಪಟ್ಟಿಯೂ ದೊರೆತಿದೆ. ಇದಕ್ಕೂ ಮೊದಲು ‘ಆವರಣ’ ಕಾದಂಬರಿಯು ಪ್ರಕಟವಾದಾಗ ‘ಅಲ್ಪಸಂಖ್ಯಾತ ವಿರೋಧಿ’ ಎನ್ನುವ ಬಿರುದು ಸಹ ಇವರಿಗೆ ಲಭಿಸಿತ್ತು. ಸ್ವತಃ ಭೈರಪ್ಪನವರು ಹಾಗು ಅವರ ಪ್ರತಿಪಾದಕರು ಈ ಮಾತುಗಳನ್ನು ಒಪ್ಪುವದಿಲ್ಲ.

ಹಾಗಿದ್ದರೆ ಎಸ್. ಎಲ್. ಭೈರಪ್ಪನವರ ವಾಸ್ತವ ರೂಪ ಯಾವುದು? ಈ ಸ್ವಾರಸ್ಯಕರ ವಿಷಯದ ಚರ್ಚೆಗಾಗಿ ಅವರ ಸಮಗ್ರ ಕಾದಂಬರಿಗಳ ಅವಲೋಕನ ಅವಶ್ಯವಾಗಿದೆ. ಭೈರಪ್ಪನವರ ಮೊದಲ ಪ್ರಕಟಿತ ಕಾದಂಬರಿ: ‘ಧರ್ಮಶ್ರೀ’. ಅಲ್ಲಿಂದ ಇಲ್ಲಿಯವರೆಗೆ, ಅಂದರೆ ‘ಕವಲು’ ಕಾದಂಬರಿಯವರೆಗೆ ಅವರು ೨೧ ಕಾದಂಬರಿಗಳನ್ನು ೪೦ ವರ್ಷಗಳಲ್ಲಿ ಪ್ರಕಟಿಸಿದ್ದಾರೆ.

‘ಧರ್ಮಶ್ರೀ’ ಕಾದಂಬರಿಯ ಕಥಾವಸ್ತುವು ತೋರಿಕೆಗೆ ಮತಾಂತರವಿದ್ದಂತೆ ಭಾಸವಾದರೂ ಮತಾಂತರದ ಜೊತೆಜೊತೆಗೇ ಸಂಸ್ಕೃತಿಯ ಬದಲಾವಣೆ ಆಗುವದೇ ಈ ಕಾದಂಬರಿಯ ನಿಜವಾದ ವಸ್ತುವಾಗಿದೆ. ಕಾದಂಬರಿಯ ನಾಯಕನ ಅಂತರಂಗದ ತೊಳಲಾಟಕ್ಕೆ  ಇದೇ ಪ್ರಮುಖ ಕಾರಣವಾಗಿದೆ. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿಯೂ ಸಹ ಎರಡು ಸಂಸ್ಕೃತಿಗಳ (--ಸಾಂಪ್ರದಾಯಕ ಭಾರತೀಯ ಸಂಸ್ಕೃತಿ ಹಾಗು ಪಾಶ್ಚಾತ್ಯ ಸಂಸ್ಕೃತಿ--) ನಡುವಿನ ಘರ್ಷಣೆಯೇ ಕಥಾವಸ್ತುವಾಗಿದೆ.

ತಮ್ಮ ಕಾದಂಬರಿಗಳಲ್ಲಿ ಭೈರಪ್ಪನವರು ಭಾರತೀಯ ಸಾಂಪ್ರದಾಯಕ ಸಂಸ್ಕೃತಿಯ ವಕಾಲತ್ತನ್ನು ಮಾಡುವವರಂತೆ ಕಾಣಿಸುತ್ತಾರೆ. ಇದು ಬಹುಮಟ್ಟಿಗೆ ನಿಜವಾದರೂ ಸಂಪೂರ್ಣ ಸತ್ಯವಲ್ಲ.  ಉದಾಹರಣೆಗೆ ಅವರ ಸುಪ್ರಸಿದ್ಧ ಕಾದಂಬರಿ ‘ವಂಶವೃಕ್ಷ’ ವನ್ನೇ ತೆಗೆದುಕೊಳ್ಳಿರಿ. ಈ ಕಾದಂಬರಿಯ ನಾಯಕಿ ‘ಕಾತ್ಯಾಯನಿ’ಯು ವಿಧವೆಯಾದ ಬಳಿಕ ಕಾಲೇಜು ಶಿಕ್ಷಣ ಪಡೆಯುತ್ತಾಳೆ ಹಾಗು ಪ್ರೇಮವಿವಾಹ ಮಾಡಿಕೊಳ್ಳುತ್ತಾಳೆ. ಸಾಂಪ್ರದಾಯಕ ಕುಟುಂಬದಲ್ಲಿ ಬೆಳೆದ ಅವಳಲ್ಲಿ ಇದರಿಂದಾಗಿ ಪಾಪಪ್ರಜ್ಞೆ ಬೆಳೆದಿದ್ದರೆ ಹಾಗು ಅದರಿಂದಾಗಿ ಸತತ ಗರ್ಭಪಾತಗಳಾದರೆ, ಅದರಲ್ಲಿ ಮನೋವೈಜ್ಞಾನಿಕ ತಪ್ಪೇನೂ ಇಲ್ಲ. ಭೈರಪ್ಪನವರ ಕೆಲವು ವಿಮರ್ಶಕರು ಇದನ್ನು ಸ್ತ್ರೀವಿರೋಧಿ ವರ್ಣನೆ ಎಂದು ಸಾಧಿಸುವದು ಸರಿಯಲ್ಲ. ಕಾತ್ಯಾಯನಿಯ ವಿಚಾರಗಳ ವಿರುದ್ಧವಾದ ಧ್ರುವದಲ್ಲಿ ಇರುವವರು ಅವಳ ಮಾವನಾದ ಶಾಸ್ತ್ರಿಗಳು. ಅವಳ ಮೊದಲ ಮದುವೆಯ ಮಗನು ಶಾಸ್ತ್ರಿಗಳ ವಂಶಕ್ಕೆ ಸೇರಿದವನೆನ್ನುವ ಕಾರಣಕ್ಕಾಗಿ ಶಾಸ್ತ್ರಿಗಳು ಆತನನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಕಾದಂಬರಿಯ ವೈಚಾರಿಕ ಘರ್ಷಣೆ ಪ್ರಾರಂಭವಾಗುವದು ಇದರ ನಂತರವೇ. ಸ್ವತಃ ಶಾಸ್ತ್ರಿಗಳೇ ತಮ್ಮ ತಂದೆಗೆ ಹುಟ್ಟಿದವರಲ್ಲವೆನ್ನುವ ಆಘಾತಕಾರಿ ಸತ್ಯ ಅವರಿಗೆ ತಿಳಿದು ಬರುತ್ತದೆ. ಇದು ಅವರ ಸಂಪ್ರದಾಯ ನಿಷ್ಠೆಯನ್ನು ಬುಡಸಹಿತ ಅಲುಗಾಡಿಸಿ ಬಿಡುತ್ತದೆ. ‘ವಂಶವೃಕ್ಷ’ ಕಾದಂಬರಿಯು ಕಂದಾಚಾರವನ್ನು ಎತ್ತಿ ಹಿಡಿಯುವ ಕಾದಂಬರಿ ಎನ್ನುವವರು ಈ ಅಂತಿಮ ಸತ್ಯದರ್ಶನ ಕ್ಷಣದ ಬಗೆಗೆ ಏನು ಹೇಳುತ್ತಾರೆ?   

ಶಾಸ್ತ್ರಿಗಳು ಸನಾತನ ಧರ್ಮದ ಆದೇಶಗಳಲ್ಲಿ ಹಾಗು ಆದರ್ಶಗಳಲ್ಲಿ ನಿಷ್ಠೆಯನ್ನು ಹೊಂದಿದವರು. ಅವರ ಹೆಂಡತಿಯೊಡನೆ ರಮಿಸುವದು ಅವರಿಗೆ ವೈದ್ಯಕೀಯವಾಗಿ ಅಸಾಧ್ಯವಾದಾಗ ಬ್ರಹ್ಮಚರ್ಯೆಯನ್ನು ಶ್ರದ್ಧೆಯಿಂದ ಪಾಲಿಸಿದವರು. ಇಂತಹ ಸಂದರ್ಭದಲ್ಲಿ ಅವರ ಹೆಂಡತಿಯೇ ಅವರಿಗಾಗಿ ಒಂದು ‘ಬದಲಿ ವ್ಯವಸ್ಥೆ’ಯನ್ನು ಮಾಡಲು ಹೊರಟಾಗ, ಆ ಆಮಿಷದಿಂದ ಹೊರಬಂದವರು. ಇಂತಹ ಒಂದು ಉದಾತ್ತ ವ್ಯಕ್ತಿಯನ್ನು ಚಿತ್ರಿಸುವದರಲ್ಲಿ ತಪ್ಪೇನಿದೆ? ಈ ವ್ಯಕ್ತಿಯನ್ನು ಅನಂತಮೂರ್ತಿಯವರು ಬರೆದ ‘ಸಂಸ್ಕಾರ’ ಕಾದಂಬರಿಯ ಪ್ರಾಣೇಶಾಚಾರ್ಯರ ಜೊತೆಗೆ ಹೋಲಿಸಿರಿ. ಪ್ರಾಣೇಶಾಚಾರ್ಯರೂ ಸಹ ರೋಗಿಷ್ಠ ಹೆಂಡತಿಯ ಸೇವೆ ಮಾಡುತ್ತ, ಇಂದ್ರಿಯನಿಗ್ರಹವನ್ನು ಸಾಧಿಸಿಕೊಂಡು ಇದ್ದವರು. ಆದರೂ ಸಹ ಒಂದು ಸಂದರ್ಭದಲ್ಲಿ ಇವರು ಕಾಮಕ್ಕೆ ಬಲಿಯಾಗುತ್ತಾರೆ. ಆ ಕ್ಷಣದಲ್ಲಿ ಅವರಿಗೆ ಸತ್ಯದರ್ಶನ(!)ವಾಗುತ್ತದೆ. ಇಷ್ಟೇ ಆದರೆ ಇದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಅನಂತಮೂರ್ತಿಯವರ ನಿಜವಾದ ಗುರಿ ಬೇರೆಯದೇ ಆಗಿದೆ. (‘ಕಹೀಂ ಪೆ ನಿಗಾಹೆ, ಕಹೀಂ ಪೆ ಇಶಾರೆ!)

‘ಸಂಸ್ಕಾರ’ ಕಾದಂಬರಿಯಲ್ಲಿ ಅನಂತಮೂರ್ತಿಯವರು ಅಸ್ತಿತ್ವವಾದದ ವಕೀಲಿ ಮಾಡಲು ಹೊರಟಿದ್ದಾರೆ. ಮನುಷ್ಯನು ಮೂಲತಃ ಪ್ರಾಣಿಯೇ ಆಗಿರುವದರಿಂದ, ಪ್ರಾಣಿಸಹಜವಾದ ಕಾಮನೆಗಳನ್ನು ನಿಗ್ರಹಿಸುವದರಲ್ಲಿ ಅರ್ಥವಿಲ್ಲ, ಮನುಷ್ಯನಿಗೆ ‘ಸಂಸ್ಕಾರ’ಗಳು ಬೇಕಾಗಿಲ್ಲ ಎನ್ನುವ ವಾದವನ್ನು ಅನಂತಮೂರ್ತಿಯವರು ಪ್ರತಿಪಾದಿಸಲು ಬಯಸುತ್ತಾರೆ. ಆದರೆ ಇದನ್ನು ಸೀದಾ ಹೇಳಿಬಿಟ್ಟರೆ, ಓದುಗನು ತಮ್ಮ ವಾದವನ್ನು ತಿರಸ್ಕರಿಸಬಹುದು ಎನ್ನುವ ಶಂಕೆ ಅವರಿಗಿದೆ. ಆದುದರಿಂದ ಅವರು ಈ ಕತೆಯಲ್ಲಿ ಧೂರ್ತತನದಿಂದ ಮತ್ತೊಂದು ಕತೆಯನ್ನು ಜೋಡಿಸಿದ್ದಾರೆ. ಪ್ರಾಣೇಶಾಚಾರ್ಯರ ಊರಿನಲ್ಲಿ ಇವರ antithesis ಆದ ಓರ್ವ ವ್ಯಕ್ತಿಯ ಸಾವು ಘಟಿಸುತ್ತದೆ. ಆತನ ಶವಸಂಸ್ಕಾರ ಮಾಡಲು ಬ್ರಾಹ್ಮಣರು ಯಾರೂ ಮುಂದೆ ಬರುವದಿಲ್ಲ. ಇದಕ್ಕೆ ಬ್ರಾಹ್ಮಣರ ಕುರುಡು ಸಂಪ್ರದಾಯ ಪಾಲನೆಯೇ ಕಾರಣ ಎಂದು ಅನಂತಮೂರ್ತಿಯವರು ಸೂಚಿಸುತ್ತಾರೆ. ಈ ರೀತಿಯಾಗಿ ಬ್ರಾಹ್ಮಣರ ಕುರುಡು ಸಂಪ್ರದಾಯಗಳನ್ನು ಟೀಕಿಸುವ ನೆಪದಿಂದ, ಸಂಪ್ರದಾಯಸ್ಥ ಬ್ರಾಹ್ಮಣನೊಬ್ಬನ ಮನೋನಿಗ್ರಹದ ಆದರ್ಶವನ್ನು ಲೇವಡಿ ಮಾಡುವದರಲ್ಲಿ ಅನಂತಮೂರ್ತಿಯವರು ಸಫಲರಾಗಿದ್ದಾರೆ. ಇದು  ಅನಂತಮೂರ್ತಿಯವರ ಧೂರ್ತ ಬರವಣಿಗೆಯ ಮಾದರಿ.

ಭೈರಪ್ಪನವರ ವಕಾಲತ್ತುಗಳನ್ನು ನಾವು ಮೆಚ್ಚದಿದ್ದರೂ ಸಹ ಅವರು ಇಂತಹ ಧೂರ್ತತನವನ್ನು ಮಾಡುವದಿಲ್ಲ ಎನ್ನುವದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಅವರ ಕಾದಂಬರಿಗಳು ಜನಪ್ರಿಯವಾಗಲು ಕಾರಣವೆಂದರೆ, ಆ ಕಾದಂಬರಿಗಳ ನಾಯಕನಿಗೆ ಇರುವ passion, fervour ಹಾಗು sincerity.

ಭೈರಪ್ಪನವರ ಕಾದಂಬರಿಗಳು ‘ಆಧುನಿಕ ಸ್ತ್ರೀ ವಿರೋಧಿ’ ಕಾದಂಬರಿಗಳು. ಅವರ ಕಾದಂಬರಿಗಳಲ್ಲಿ ಬರುವ ಒಳ್ಳೆಯ ನಾಯಕಿಯರು ಗಂಡನ ಸೇವೆಯನ್ನು ಮಾಡುವ ಪತಿವ್ರತೆಯರು! ಆದರೆ ಈ ಪತಿವ್ರತಾ ಸ್ತ್ರೀಯರ ಗಂಡಂದಿರೂ ಸಹ ಆದರ್ಶ ವ್ಯಕ್ತಿಗಳೇ ಆಗಿದ್ದಾರೆ. (ಉದಾಹರಣೆ: ದೂರ ಸರಿದರು, ಮತದಾನ, ಗ್ರಹಣ ಇತ್ಯಾದಿ.)

ಒಟ್ಟಿನಲ್ಲಿ ಭೈರಪ್ಪನವರು ತಮ್ಮ ಕಾದಂಬರಿಗಳ ಮೂಲಕ ಸಾಂಪ್ರದಾಯಕ ಸಂಸ್ಕೃತಿ ಹಾಗು ಆಧುನಿಕ ಸಂಸ್ಕೃತಿ ಇವುಗಳ ತುಲನೆಯನ್ನು ಮಾಡಲು ಬಯಸುತ್ತಾರೆ. ಅವರನ್ನು ನಮ್ಮ ಸಾಂಸ್ಕೃತಿಕ ಅನ್ವೇಷಕ ಎಂದು ಕರೆಯುವದರಲ್ಲಿ ಏನೂ ತಪ್ಪಿಲ್ಲ, ಅವರ ಪ್ರತಿಪಾದನೆಗಳನ್ನು ನಾವು ಒಪ್ಪದಿದ್ದರೂ ಸಹ!

Friday, October 8, 2010

ಬೇಂದ್ರೆ ಕಾವ್ಯದಲ್ಲಿ ಪದಸಂಧಾನ (concordance)……………................(‘ಗರಿ’ ಸಂಕಲನ)

ಪಾಶ್ಚಾತ್ಯ ಸಾಹಿತ್ಯದ ಅಧ್ಯಯನಕಾರರು concordance ಎನ್ನುವ ಒಂದು ಭಾಷಾಸಾಧನವನ್ನು  ಬಳಸುತ್ತಾರೆ. ಓರ್ವ ಲೇಖಕನು ತನ್ನ ಸಾಹಿತ್ಯದಲ್ಲಿ ಬಳಸಿದ ಪದಗಳ ಅಂಕಿ ಸಂಖ್ಯೆಗಳನ್ನು ಆಧರಿಸಿ ಲೇಖಕನ ಅಂತರಂಗವನ್ನು ಅಭ್ಯಸಿಸುವ ಯತ್ನವಿದು. ಸಾಹಿತಿಯ ಶೈಲಿಯನ್ನು ಕಟ್ಟಡದ ವಾಸ್ತುಶಿಲ್ಪ ಎಂದು ಕರೆಯಬಹುದಾದರೆ, concordanceಅನ್ನು ಕಟ್ಟಡಕ್ಕೆ ಬಳಸಲಾದ ಸಾಮಗ್ರಿ ಎಂದು ಕರೆಯಬಹುದು. ಶೈಲಿಯು ಲೇಖಕನ ಸಾರ್ವಜನಿಕ ಮುಖವಾದರೆ, concordance ಆತನ ಅಂತರಂಗದ ಮುಖ ಎನ್ನಬಹುದು.

ಪದಸಂಧಾನ:
Concordance ಅನ್ನುವ ಪದಕ್ಕೆ ಕನ್ನಡದಲ್ಲಿ ಸದ್ಯಕ್ಕೆ ಯಾವುದೇ ಬದಲು ಪದವಿಲ್ಲ. ಇದು ಪದಗಳ ಬಳಕೆಯನ್ನು ಹಾಗು ವಿಶ್ಲೇಷಣೆಯನ್ನು  ಅವಲಂಬಿಸಿರುವ ಕಾರಣದಿಂದ ಪದಶ್ಲೇಷಣೆ, ಪದಯೋಜನೆ, ಪದವಣಿಕೆ, ಪದಸಂಧಾನ ಇತ್ಯಾದಿ ಪದಗಳೆಲ್ಲ ನನ್ನ ಆಲೋಚನೆಯಲ್ಲಿ ಸುಳಿದು ಹೋದವು. ಆಬಳಿಕ ‘ಸಂಧಾನ’ ಪದವು ಓರ್ವ ವ್ಯಕ್ತಿ ಹಾಗು ಆತನು ಬಳಸಬಯಸುವ ಪದದ ನಡುವಿನ ಅನುಸಂಧಾನವನ್ನು ಸೂಚಿಸುವ ಸಂಕೇತವೆಂದುಕೊಂಡು concordance ಪದಕ್ಕೆ ‘ಪದಸಂಧಾನ’ ಎನ್ನುವ ಪದವನ್ನು  ಉಪಯೋಗಿಸುವದೇ ಉಚಿತವೆಂದು ಭಾವಿಸಿ ಇಲ್ಲಿ ‘ಪದಸಂಧಾನ’ ಎನ್ನುವ ಪದವನ್ನು ಬಳಸಿದ್ದೇನೆ.

ಕನ್ನಡದಲ್ಲಿ ಪದಸಂಧಾನದ ಪ್ರಯತ್ನವೊಂದು ಈವರೆಗೂ ನಡೆದಂತೆ ಕಾಣುವದಿಲ್ಲ. ಬೇಂದ್ರೆಯವರ ಕಾವ್ಯವನ್ನು ಈ ಪದಸಂಧಾನಕ್ಕೆ ಅಳವಡಿಸಲು ನಾನು ಕೆಲವು ತಿಂಗಳುಗಳ ಹಿಂದೆ ಇಂತಹ ಪ್ರಯೋಗವನ್ನು ಕೈಗೆತ್ತಿಕೊಂಡೆ. ಪ್ರಯತ್ನವನ್ನು ಪ್ರಾರಂಭಿಸಿದ ಬಳಿಕ, ಇದು ಹಿಮಾಲಯವನ್ನು ಹತ್ತುವಂತಹ ಸಾಹಸವೆಂದು ಅರ್ಥವಾಯಿತು.  ಏಕೆಂದರೆ ಬೇಂದ್ರೆಯವರು ೧೫೦೦ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಪುನಃ ಬರೆದು, ಪದಗಳನ್ನು ವಿಂಗಡಿಸಿ ಮಾಡಬೇಕಾದ ಕಾರ್ಯಕ್ಕೆ ಕಠಿಣ ಶ್ರಮ ಹಾಗು ದೀರ್ಘ ಕಾಲ ಬೇಕಾಗುತ್ತವೆ. ಆದುದರಿಂದ ಅವರ ಮೊದಲ ಕಾವ್ಯಸಂಕಲನಗಳಲ್ಲಿ ಒಂದಾದ ‘ಗರಿ’ ಸಂಕಲನವನ್ನು ಮಾತ್ರ ಆರಿಸಿಕೊಂಡು ಮುನ್ನಡೆದೆ. ಈ ಸಂಕಲನದಲ್ಲಿ ೫೫ ಕವನಗಳಿವೆ. ಅವೆಲ್ಲವನ್ನೂ ಪುನಃ ಬರೆದು, ಪದಗಳನ್ನು ವಿಂಗಡಿಸಲು ನನಗೆ ಕೆಲವು ತಿಂಗಳುಗಳೇ ಬೇಕಾದವು. ಗಣಕಯಂತ್ರದ ಸಹಾಯದಿಂದ ಅವುಗಳನ್ನು ಅಕಾರಾದಿ ಕ್ರಮದಲ್ಲಿ ಅಳವಡಿಸಲು ಕಷ್ಟವಾಗಲಿಲ್ಲ. ಆ ಬಳಿಕ ಆ ಪದಗಳ ಲಕ್ಷಣವನ್ನು ಗುರುತಿಸಲು ಪ್ರಯತ್ನಿಸಿದೆ. ನನ್ನ ಪ್ರಯತ್ನದ ಫಲವನ್ನು ಪ್ರಾಜ್ಞರಾದ ನಿಮ್ಮ ಎದುರಿಗೆ ಇಡುತ್ತಿದ್ದೇನೆ.

‘ಗರಿ’ ಕವನಸಂಕಲನದಲ್ಲಿಯ ೫೫ ಕವನಗಳನ್ನು ಈ ರೀತಿಯಾಗಿ ವರ್ಗೀಕರಿಸಬಹುದು:

ಕ್ರಮಸಂಖ್ಯೆ
ಕವನಗಳ ವರ್ಗೀಕರಣ
ಕವನಗಳ ಸಂಖ್ಯೆ
ಆದರ್ಶ
೧೧
ಸಮಾಜ, ದೇಶ
ಕನ್ನಡ ನಾಡು, ನುಡಿ
ದೇಶಪ್ರೇಮ
ತತ್ವ
ನಿಸರ್ಗ
ವೈಯಕ್ತಿಕ, ಕೌಟಂಬಿಕ
ಇತರ
೧೪
_____
ಒಟ್ಟು
೫೫

ಈ ವರ್ಗೀಕರಣದಲ್ಲಿ ದೋಷಗಳು ಇರಬಹುದು. ಇದ್ದರೆ, ದಯವಿಟ್ಟು ಮನ್ನಿಸಿರಿ.  ಬೇಂದ್ರೆಯವರ ಕವನಗಳನ್ನು ಎಂಟು ವಿಭಾಗಗಳಲ್ಲಿ ವರ್ಗೀಕರಿಸಿದರೂ ಸಹ, ಈ ಎಲ್ಲ ಕವನಗಳಲ್ಲಿ ಅವರು ಯಾವ ಪದಗಳ ಬಳಕೆಯನ್ನು ಎಷ್ಟು ಮಾಡಿದ್ದಾರೆ ಎನ್ನುವದೇ ಈ ‘ಪದಸಂಧಾನ’ದ ಸ್ವಾರಸ್ಯವಾಗಿದೆ. ಪದಸಂಧಾನದ ಎಲ್ಲ ಅಂಕಿ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

ಒಟ್ಟು ಕವನಗಳ ಸಂಖ್ಯೆ
೫೫
ಅತ್ಯಧಿಕ
ಪದಗಳ
ಸಂಖ್ಯೆ
ಬಳಸಲಾದ ಒಟ್ಟು
ಪದಗಳ ಸಂಖ್ಯೆ
೭೧೫೦
ಆತ್ಮೀಯವಾಚಕ ಪದಗಳು
ಉದಾ: ನಾನು, ನೀನು, ತಾನು
೨೯೩
ದರ್ಶನಸೂಚಕ ಪದಗಳು
ಉದಾ: ದೃಷ್ಟಿ, ನೋಟ, ಕಾಣು, ನೋಡು
೧೪೩
ಅಸ್ತಿತ್ವಸೂಚಕ ಪದಗಳು
ಉದಾ: ಇರು, ಆಗು
೧೩೭
ಕ್ರಿಯಾತ್ಮಕ ಪದಗಳು
ಉದಾ: ಮಾಡು, ಆಡು, ಹಾಡು, ಆಟ
೧೧೨
ಭಾವನಾಸೂಚಕ ಪದಗಳು
ಉದಾ: ಮನಸ್ಸು, ಭಾವ, ಅಂತರಂಗ
೧೧೦
ಪ್ರಶ್ನಾರ್ಥಕ ಪದಗಳು
ಉದಾ: ಏನು, ಯಾರು, ಎಲ್ಲಿ, ಏಸು
೯೫
ಆಮಂತ್ರಣ, ಆಹ್ವಾನ
ಉದಾ: ಬಾ, ಬರು, ಬಂದ
೯೫
ಹರ್ಷ, ಉಲ್ಲಾಸ
ಉದಾ: ನಗು, ಸುಖ, ಆನಂದ
೭೪
ಕಣ್ಣು
ಉದಾ: ಕಣ್ಣು ಕಂಗಳು
೬೪
ಕಾಲಮಾನ
ಉದಾ: ದಿನ
೫೮
ಏಕತೆ
ಉದಾ: ಒಂದು, ಒಂದಾಗು
೪೫
ಸಂಬೋಧನಾತ್ಮಕ
ಉದಾ: ಓ, ಏ, ಎಲವೊ
೩೯
ಬೆಳಕು
ಉದಾ: ಬೆಳಕು, ಬೆಳಗು
೩೯
ಹೊಸತು
ಉದಾ: ಹೊಸ
೩೬
ಚೆಲುವು
ಉದಾ: ಚೆಲವು, ಸೊಬಗು, ಸೊಗಸು
೨೯

‘ಗರಿ’ ಕವನಸಂಕಲನ ಪ್ರಕಟವಾಗಿದ್ದು ೧೯೩೨ರಲ್ಲಿ. ಅದು ಸ್ವಾತಂತ್ರ್ಯಹೋರಾಟದ ಹಾಗು ಆದರ್ಶಸ್ಫೂರ್ತಿಯ ಕಾಲ. ಆದುದರಿಂದಲೇ, ಈ ಸಂಕಲನದಲ್ಲಿ ೧೫ ಕವನಗಳು ಸಮಾಜ, ದೇಶ, ದೇಶಪ್ರೇಮ ಹಾಗು ಕನ್ನಡ ನಾಡು-ನುಡಿಯ ಬಗೆಗೆ ಇವೆ ; ೧೧ ಕವನಗಳು ವೈಯಕ್ತಿಕ ಆದರ್ಶದ ಕವನಗಳಾಗಿವೆ; ನಿಸರ್ಗ ಕವನಗಳ ಸಂಖ್ಯೆ ಕೇವಲ ೫.

ಇನ್ನು ಪದಸಂಧಾನದ ಅಂಕಿ ಅಂಶಗಳನ್ನು ವಿಶ್ಲೇಷಿಸೋಣ:
ಬೇಂದ್ರೆಯವರ ಕವನಗಳಲ್ಲಿ ಅತ್ಯಧಿಕವಾಗಿ ಬಳಕೆಯಾದ ಪದಗಳು ಆತ್ಮೀಯವಾಚಕ ಪದಗಳು (೨೯೩), (ಉದಾ: ನಾನು, ನೀನು, ಆನು ಇತ್ಯಾದಿ). ಇದು ಅವರ ಕವನಗಳಲ್ಲಿ ಕಂಡು ಬರುವ motif ಆಗಿದೆ. ಈ ಆತ್ಮೀಯವಾಚಕ ಪದಗಳು ಅವರ ಅಂತರಂಗಕ್ಕೆ ಹಿಡಿದ ಕನ್ನಡಿಯಾಗಿವೆ.

ಬೇಂದ್ರೆಯವರು ತಮ್ಮ ಓದುಗರೊಂದಿಗೆ ಯಾವಾಗಲೂ interactionಅನ್ನು ಬಯಸುತ್ತಾರೆ. ಅವರ ಕಾವ್ಯವಿರುವದು ಸಹೃದಯ ರಸಿಕರಿಗಾಗಿ. ಇದು ಬೇಂದ್ರೆ ಕಾವ್ಯದ ಮಹತ್ವದ ಲಕ್ಷಣ. ಈ ಕಾವ್ಯ-ನೀತಿಯು ಅವರ ಕವನವೊಂದರಲ್ಲಿ ಸ್ಪಷ್ಟವಾಗಿಯೇ ಕಾಣುತ್ತದೆ:
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”

ಬೇಂದ್ರೆಯವರ ಅನೇಕ ಕವನಗಳು ಹಳ್ಳಿಯ ಕವಿಯೊಬ್ಬ ಮರದಕಟ್ಟೆಯ ಮೇಲೆ ಕುಳಿತುಕೊಂಡು  ಸುತ್ತಲೂ ನೆರೆದ ಜನರೆದುರಿಗೆ ಕೈಯೆತ್ತಿ ಹಾಡುತ್ತಿರುವ ನೋಟವನ್ನು ನೆನಪಿಸುವಂತಿವೆ. ಬೇಂದ್ರೆಯವರ ಪಾಂಡಿತ್ಯವು ಅಗಾಧವಾಗಿದ್ದರೂ ಸಹ ಅವರು ಒಂದರ್ಥದಲ್ಲಿ ಜಾನಪದ ಕವಿಗಳು. ‘ಗರಿ’ ಕವನಸಂಕಲನದಲ್ಲಿ ಬಳಸಲಾದ ಒಟ್ಟು ೭೧೫೦ ಪದಗಳ ಪೈಕಿ, ೪೯೭ ಅಂದರೆ ಶೇಕಡಾ ೭ರಷ್ಟು ಪದಗಳು ಮಾತ್ರ ಸಂಸ್ಕೃತ ಪದಗಳು. ಹಾಗಿರಲು ಬೇಂದ್ರೆಯವರನ್ನು ‘ಅಚ್ಚಕನ್ನಡ ಕವಿ’ ಎಂದು ಕರೆಯುವದರಲ್ಲಿ ಏನೂ ತಪ್ಪಿಲ್ಲ.

(ಇಲ್ಲಿ ಒಂದು ವಿವರಣೆಯನ್ನು ಕೊಡುವದು ಅವಶ್ಯವಾಗಿದೆ. ಕನ್ನಡಿಗರು ಸಾಮಾನ್ಯವಾಗಿ ಬಳಸುವ ಸಂಸ್ಕೃತ ಪದಗಳನ್ನು ಕನ್ನಡ ಪದಗಳೆಂದೇ ಗ್ರಹಿಸಲಾಗಿದೆ. ಉದಾಹರಣೆಗೆ ಕನ್ನಡದಲ್ಲಿ ‘ಸಿದ್ಧ’ ಹಾಗು ‘ಶಿಖರ’ ಎನ್ನುವ ಸಂಸ್ಕೃತ ಪದಗಳನ್ನು ಕನ್ನಡ ಪದಗಳಂತೆಯೇ ಬಳಸಲಾಗುತ್ತಿದೆ. ಆದರೆ ‘ಸಿದ್ಧಶಿಖರ’ ಎನ್ನುವ ಪದವನ್ನು ಸಾಮಾನ್ಯವಾಗಿ ಬಳಸುವದಿಲ್ಲ. ಆದುದರಿಂದ, ‘ಸಿದ್ಧ’ ಹಾಗು ‘ಶಿಖರ’ ಪದಗಳನ್ನು ಕನ್ನಡ ಪದಗಳೆಂದು ಗ್ರಹಿಸಲಾದರೂ ಸಹ ‘ಸಿದ್ಧಶಿಖರ’ವನ್ನು ಸಂಸ್ಕೃತ ಪದವೆಂದು ಗ್ರಹಿಸಲಾಗಿದೆ. ಇನ್ನು ಬೇಂದ್ರೆಯವರು ಕನ್ನಡದಲ್ಲಿ ಅನೇಕ ಜೋಡು ಪದಗಳನ್ನು ಸೃಷ್ಟಿಸಿದ್ದು ಅವುಗಳನ್ನು ಮುಂದೆ ಕೊಡಲಾಗಿದೆ.)

ಆತ್ಮೀಯವಾಚಕ ಪದಗಳ ನಂತರ, ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪದಗಳು ದರ್ಶನಸೂಚಕ ಪದಗಳಾಗಿವೆ. ಇವುಗಳ ಸಂಖ್ಯೆ ೧೪೩ .  ಬೇಂದ್ರೆಯವರು ಕನ್ನಡದ ಕನಸುಗಾರರಾಗಿದ್ದರು. ಅಲ್ಲದೆ ಅವರು ಆಧ್ಯಾತ್ಮಿಕ ಒಲವುಳ್ಳವರೂ ಆಗಿದ್ದರು. ಆದುದರಿಂದ ‘ಕಾಣ್ಕೆ’, ‘ನೋಟ’ ಮೊದಲಾದ ಪದಗಳು ಎರಡನೆಯ ಸ್ಥಾನ ಪಡೆದಿದ್ದರಲ್ಲಿ ಆಶ್ಚರ್ಯವಿಲ್ಲ. ಇನ್ನು ೧೩೭ ಪದಗಳುಳ್ಳ ಅಸ್ತಿತ್ವಸೂಚಕ ಪದಗಳು ೩ನೆಯ ಸ್ಥಾನದಲ್ಲಿ ಇವೆ. ಇದೂ ಸಹ ತಾತ್ವಿಕ ಒಲವಿನಿಂದಲೇ ಆದದ್ದು. ಮಹರ್ಷಿ ಅರವಿಂದರು ತಮ್ಮ ಕೃತಿಯೊಂದರಲ್ಲಿ ‘To be or to become is the whole endeavor of the Nature’ ಎಂದು ಹೇಳಿದ್ದಾರೆ. ಬೇಂದ್ರೆಯವರು ಅರವಿಂದರ ಭಕ್ತರು. ತತ್ವಶಾಸ್ತ್ರವನ್ನು ಅರೆದು ಕುಡಿದವರು. ಆದುದರಿಂದ ಅಸ್ತಿತ್ವಸೂಚಕವಾದ ಪದಗಳು ಬೇಂದ್ರೆಯವರ ಕವನಗಳಲ್ಲಿ ಮೂರನೆಯ ಸ್ಥಾನದಲ್ಲಿವೆ.

ನಾಲ್ಕನೆಯ ಸ್ಥಾನದಲ್ಲಿರುವ ಕ್ರಿಯಾತ್ಮಕ ಪದಗಳನ್ನು ಗಮನಿಸಿರಿ. ಇವು ಸಾಮಾನ್ಯವಾಗಿ ‘ಮಾಡು, ಆಡು, ಹಾಡು’ ಈ ತರಹದ ಪದಗಳಾಗಿವೆ. ಈ ಜಗದಲ್ಲಿ ನಡೆಯುತ್ತಿರುವದೆಲ್ಲವೂ ಭಗವಂತನ ಲೀಲೆ ಅಂದರೆ ಆಟ ಎನ್ನುವ ನಂಬಿಗೆಯ ಬೇಂದ್ರೆಯವರು ಮಾಡು, ಆಡು, ಹಾಡು ಮೊದಲಾದ ಕ್ರಿಯೆಗಳನ್ನು ಸೂಚಿಸುವ ೧೧೨ ಪದಗಳನ್ನು ಬಳಸಿದ್ದಾರೆ.

ಐದನೆಯ ಸ್ಥಾನದಲ್ಲಿ ಭಾವನಾತ್ಮಕ ಪದಗಳು (೧೧೦) ಬರುತ್ತವೆ. ಉದಾಹರಣೆಗೆ ಮನಸ್ಸು, ಅಂತರಂಗ ಇತ್ಯಾದಿ. ಬೇಂದ್ರೆಯವರ ಸಂಬಂಧಗಳು ಯಾವಾಗಲೂ ಭಾವನಾತ್ಮಕ ಸಂಬಂಧಗಳು. ನಾಡು ಅವರ ಪಾಲಿಗೆ ನಾಡತಾಯಿ; ಓದುಗ ಅವರ ಪಾಲಿಗೆ ಅಂತರಂಗದ ಗೆಳೆಯ. ಪ್ರೀತಿ ಹಾಗು ಕಲಹ ಇವು ಮಾನಸಸರೋವರದಲ್ಲಿ ನಿತ್ಯವೂ ಏಳುವ ತೆರೆಗಳು. ಇದರ ಪರಿಣಾಮವೇ ಅವರ ಕವನಗಳಲ್ಲಿ ಮನೋಸೂಚಕ ಪದಗಳ ಆಧಿಕ್ಯ.
ಇದೇ ರೀತಿ ಉಳಿದ ಪದಗಳನ್ನೂ ಸಹ ವಿಶ್ಲೇಷಿಸಬಹುದು.

ಬೇಂದ್ರೆಯವರ ಪದಸಂಪತ್ತು ಅಪಾರವಾದದ್ದು. ಈ ಕೆಳಗಿನ ಕೋಷ್ಟಕದಿಂದ ಅದು ಸ್ಪಷ್ಟವಾಗುತ್ತದೆ:

‘ಗರಿ’ ಸಂಕಲನದ ೫೫ ಕವನಗಳಲ್ಲಿ
ಸಂಖ್ಯೆ
ಒಂದೇ ಸಲ ಬಳಸಿದ ಪದಗಳು
೧೧೮೦
೨ ಸಲ ಮಾತ್ರ ಬಳಸಿದ ಪದಗಳು
೩೨೦
೩ ಸಲ ಮಾತ್ರ ಬಳಸಿದ ಪದಗಳು
೧೮೪
೪ ಸಲ ಮಾತ್ರ ಬಳಸಿದ ಪದಗಳು
೧೦೭
೫ ಸಲ ಮಾತ್ರ ಬಳಸಿದ ಪದಗಳು
೭೩
೬ ಸಲ ಬಳಸಿದ ಪದಗಳು
೫೨
೭ ಸಲ ಬಳಸಿದ ಪದಗಳು
೩೪
೮ ಸಲ ಬಳಸಿದ ಪದಗಳು
೨೧
೯ ಸಲ ಬಳಸಿದ ಪದಗಳು
೨೪
೧೦ ಸಲ ಬಳಸಿದ ಪದಗಳು
೧೨
೧೧ ಸಲ ಬಳಸಿದ ಪದಗಳು
೧೬
೧೨ ಸಲ ಬಳಸಿದ ಪದಗಳು
೧೪
೧೩ ಸಲ ಬಳಸಿದ ಪದಗಳು
೧೨
೧೪ ಸಲ ಬಳಸಿದ ಪದಗಳು
೧೫ ಸಲ ಬಳಸಿದ ಪದಗಳು
೧೨
೧೬ ಸಲ ಬಳಸಿದ ಪದಗಳು
೧೭ ಸಲ ಬಳಸಿದ ಪದಗಳು
೧೮ ಸಲ ಬಳಸಿದ ಪದಗಳು
೧೯ ಸಲ ಬಳಸಿದ ಪದಗಳು
೨೦ ಸಲ ಬಳಸಿದ ಪದಗಳು
೨೨ ಸಲ ಬಳಸಿದ ಪದಗಳು
೨೩ ಸಲ ಬಳಸಿದ ಪದಗಳು
೨೪ ಸಲ ಬಳಸಿದ ಪದಗಳು
೨೭ ಸಲ ಬಳಸಿದ ಪದಗಳು
೨೯ ಸಲ ಬಳಸಿದ ಪದಗಳು
೩೧ ಸಲ ಬಳಸಿದ ಪದಗಳು
೩೨ ಸಲ ಬಳಸಿದ ಪದಗಳು
೩೫ ಸಲ ಬಳಸಿದ ಪದಗಳು
೩೬ ಸಲ ಬಳಸಿದ ಪದಗಳು
೩೯ ಸಲ ಬಳಸಿದ ಪದಗಳು
೪೧ ಸಲ ಬಳಸಿದ ಪದಗಳು
೪೫ ಸಲ ಬಳಸಿದ ಪದಗಳು
೪೭ ಸಲ ಬಳಸಿದ ಪದಗಳು
೪೮ ಸಲ ಬಳಸಿದ ಪದಗಳು
೫೦ ಸಲ ಬಳಸಿದ ಪದಗಳು
೫೨ ಸಲ ಬಳಸಿದ ಪದಗಳು
೫೩ ಸಲ ಬಳಸಿದ ಪದಗಳು
೫೫ ಸಲ ಬಳಸಿದ ಪದಗಳು
೫೮ ಸಲ ಬಳಸಿದ ಪದಗಳು
೬೪ ಸಲ ಬಳಸಿದ ಪದಗಳು
೮೪ ಸಲ ಬಳಸಿದ ಪದಗಳು
೯೯ ಸಲ ಬಳಸಿದ ಪದಗಳು
೧೦೨ ಸಲ ಬಳಸಿದ ಪದಗಳು
೧೦೬ ಸಲ  ಬಳಸಿದ ಪದಗಳು
೧೩೨ ಸಲ ಬಳಸಿದ ಪದಗಳು

ಬೇಂದ್ರೆಯವರು ಇಲ್ಲಿ ಬಳಸಿದ ಒಟ್ಟು ೭೧೫೦ ಪದಗಳ ಪೈಕಿ ೨೧೨೮ ಅಂದರೆ ಶೇಕಡಾ ೩೦ರಷ್ಟು ಪದಗಳು ವಿಭಿನ್ನ ಪದಗಳು ಹಾಗು ೧೧೮೦ ಪದಗಳನ್ನು (ಅಜಮಾಸು ೧೬.೫%) ಒಂದೇ ಸಲ ಬಳಸಿದ್ದಾರೆ. ಅತ್ಯಧಿಕವಾಗಿ ಬಳಸಿದ ಪದವೂ ಸಹ ೧೩೨ ಬಾರಿ, ಅಂದರೆ ಶೇಕಡಾ ೧.೮೫ ಸಲ ಮಾತ್ರ. ಈ ಅಂಕಿ ಅಂಶಗಳು ಬೇಂದ್ರೆಯವರ ಅಪಾರ ಪದಸಂಪತ್ತಿಗೆ ಸಾಕ್ಷಿಯಾಗಿವೆ ಎಂದು ಹೇಳಬಹುದು.

ಬೇಂದ್ರೆಯವರ ಪದಭಾಂಡಾರದಲ್ಲಿ ಇರುವ ದೇಶಿ ಹಾಗು ಪ್ರಾದೇಶಿಕ ಪದಗಳೂ ಸಹ ಎಣಿಕೆಗೆ ಮಿಕ್ಕುವಂತಹವು. ಉದಾಹರಣೆಗೆ ‘ಗರಿ’ ಸಂಕಲನದ ಎರಡು ಕವನಗಳನ್ನು ಪರೀಕ್ಷಿಸಬಹುದು:

(೧) ‘ಚಳಿಯಾಕೆ’ ಕವನದಲ್ಲಿ ಬಳಸಲಾದ ಆಭರಣಸೂಚಕ ಪದಗಳು:
            (೧) ಓಲೆಕೊಪ್ಪ (=ವಾಲೆ=ಕರ್ಣಾಭರಣ)
            (೨) ಚಳತುಂಬ (=One kind of ear-drop)
            (೩) ಹೊನ್ನ ಸೇವಂತಿಗೆ (=ಬಂಗಾರದ ಕೇಶಾಭರಣ)
            (೪) ಹೆರಳು ಬಂಗಾರ (= ಜಡೆಗೆ ಹಾಕಿಕೊಳ್ಳುವ ಚಿನ್ನದ ಆಭರಣ)

(ಸ್ವತಃ ಬೇಂದ್ರೆಯವರು ಪತ್ನಿಗೆ ಒಂದೂ ಆಭರಣ ಕೊಡಿಸದಿದ್ದರೂ, ಕವನಕನ್ನೆ ‘ಚಳಿಯಾಕೆ’ಗೆ ಇಷ್ಟೆಲ್ಲ ಆಭರಣ ತೊಡಿಸಿದ್ದಾರೆ!)

            (೨) ‘ಪಾತರಗಿತ್ತಿ ಪಕ್ಕ’ ಕವನದಲ್ಲಿ ಬರುವ ಸಸ್ಯಗಳ ಹೆಸರುಗಳು:
ಕ್ರ.ಸಂ.
ಬೇಂದ್ರೆ ಬಳಸಿದ ಪದ
ಸಸ್ಯಶಾಸ್ತ್ರೀಯ ಪದ
(ಆಧಾರ: ಕಿಟ್ಟೆಲ್ ನಿಘಂಟು)
ಸೂರೇಪಾನ
Helianthus annus
ತುರುಬಿ (ತುರುವೆ)
Sida indica
ತುಂಬಿ (ತುಂಬೆ)
Phlomis indica
ಕಳ್ಳಿ
Euphoria tirukalli
ನಾಯಿ ಛತ್ತರಗಿ
----------------------
ರುದ್ರಗಂಟಿ
(ದಾಸವಾಳ)
Hibiscus rosa sinesis

ವಿಷ್ಣುಗಂಟಿ
Evolulus alsinoides
ಹೇಸಿಗೆ ಹೂವು
Lantana aculeate
ಮದಗುಣಕಿ
Bauhinia variegate
೧೦
ಸೀಗಿಬಳ್ಳಿ
Acacia concinna
೧೧
ಗೊರಟಿಗೆ
Odina wodier
೧೨
ಮಾಲಿಂಗನ ಬಳ್ಳಿ
Bryonia lacinoisa
೧೩
ಗುಲಬಾಕ್ಷಿ
-----------------
೧೪
ಅಡವಿ ಮಲ್ಲಿಗಿ
Clitoria ternatea
೧೫
ಅಂಚಿಗಂಟಿ
(ಬದುವಿನ ಕಂಟಿ)
-----------------------





















ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ‘ವಿಷ್ಣುಗಂಟಿ’ ಎನ್ನುವ ಸಸ್ಯದ ನಿಜವಾದ ಹೆಸರು ‘ವಿಷ್ಣುಕಾಂತಿ’. ಹಾಗು  ರುದ್ರಗಂಟಿ ಸಸ್ಯದ ನಿಜವಾದ ಹೆಸರು ದಾಸವಾಳ. ಬೇಂದ್ರೆಯವರು ಈ ಹೆಸರುಗಳನ್ನು ಬದಲಾಯಿಸಿಕೊಳ್ಳುವ ಉದ್ದೇಶವು ಪ್ರಾಸಾನುಕೂಲತೆಯಲ್ಲ. ಇದಕ್ಕೆ ಬೇರೊಂದು ಕಾರಣವಿದೆ. ಯೋಗಶಾಸ್ತ್ರದ ಮೇರೆಗೆ ಅನಾಹತ ಚಕ್ರದ ಮೇಲೆ ಇರುವದು ವಿಷ್ಣುಗ್ರಂಥಿ; ಆಜ್ಞಾಚಕ್ರದ ಮೇಲಿರುವದು ರುದ್ರಗ್ರಂಥಿ. ಕುಂಡಲಿನಿ ದೇವಿಯು ಈ ಗ್ರಂಥಿಗಳನ್ನು ಭೇದಿಸಿ, ಸಹಸ್ರಾರ ಚಕ್ರಕ್ಕೆ ಮುನ್ನಡೆಯುವಳು. ಗ್ರಂಥಿ ಎನ್ನುವ ಸಂಸ್ಕೃತ ಪದವು ಕನ್ನಡದಲ್ಲಿ ‘ಗಂಟಿ(=ಕಂಟಿ)’ ಎಂದಾಗುತ್ತದೆ. ಈ ರೀತಿಯಲ್ಲಿ, ಪಾತರಗಿತ್ತಿಯ ಬಳಸು ಹಾರಾಟವನ್ನು ಬೆನ್ನು ಹತ್ತಿದ ಬೇಂದ್ರೆಯವರು ಕುಂಡಲಿನಿಯ ಪಥವನ್ನು ಸೂಚಿಸುತ್ತಿದ್ದಾರೆ! ದಾಸವಾಳ ಸಸ್ಯಕ್ಕೆ ರುದ್ರಗಂಟಿ ಎಂದು ಹೇಳುವ ಮತ್ತೊಂದು ಕಾರಣವೆಂದರೆ, (ಕೆಂಪು) ದಾಸವಾಳವು ರುದ್ರಪುತ್ರ ಗಣೇಶನಿಗೆ ಪ್ರಿಯವಾದ ಪುಷ್ಪ!
           
ಇನ್ನು ಬೇಂದ್ರೆಯವರು ಟಂಕಿಸಿದ ಅಚ್ಚಕನ್ನಡ ಜೋಡುಪದಗಳನ್ನಷ್ಟು ನೋಡಬೇಕು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ ಹಾಗು ಸಂಸ್ಕೃತದ  ಜೋಡುಪದಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ನೀಡಲಾಗಿದೆ:
            (೧) ಅರೆಬೆದರು
            (೨) ಇಡುಗಂಗೆ
            (೩) ಇದಿರುಗಣ್ಣು
            (೪) ಇನಿಹನಿ
            (೫) ಇಳಿಗೂದಲು
            (೬) ಉದರದಂಗಳ
            (೭) ಎದೆಮುಗಳು
            (೮) ಎದೆಯಕಟುಕ
            (೯) ಎಲ್ಲೆಕಟ್ಟು
            (೧೦) ಒಳಹದುಳ
            (೧೧) ಕಡಲಟ್ಟ
            (೧೨) ಕಡೆಕೂಳು
            (೧೩) ಕಡೆಗೋಲು (=oar)
            (೧೪) ಕಣ್ಣನಂಜು
            (೧೫) ಕತ್ತಲೆಕಾಳು
            (೧೬) ಕನಿಮನೆ
            (೧೭) ಕರುಳಮಲ್ಲಿಗೆ
            (೧೮) ಕಾಲತೊಡರು
            (೧೯) ಕೊನೆಬಿಕ್ಕು
            (೨೦) ಗಂಡುಗಣ್ಣು
            (೨೧) ಗುಬ್ಬಿಬೆಳಸಿ
            (೨೨) ಗುಬ್ಬಿಮನೆ
            (೨೩) ಗುಬ್ಬಿಮಾನವ
            (೨೪) ಗೊನೆಮಿಂಚು
            (೨೫) ಜನ್ನಗುದುರೆ
            (೨೬) ಜೊನ್ನಮಗ್ಗ
            (೨೭) ತನಿಗುಸುರು
            (೨೮) ತಪ್ಪಡಿ (=ತಪ್ಪು ಅಡಿ)
            (೨೯) ತಿರುಹಾಡು
            (೩೦) ತುಟಿಹಾಲು
            (೩೧) ತೊತ್ತುಳಿಗೊಳ್ಳು
            (೩೨) ದೊರೆವಾಡು
            (೩೩) ಧೂಳಿಸ್ನಾನ (=ಪರಾಗಸ್ಪರ್ಶ)
            (೩೪) ನಗಿಹೂ
            (೩೫) ನಗೀನವಿಲು
            (೩೬) ನನಿಕೊನೆ
            (೩೭) ನನ್ನಿಕಾವ
            (೩೮) ನನ್ನಿವಾತು
            (೩೯) ನಿಡುದುದಿ
            (೪೦) ನೀರಮಣಿ
            (೪೧) ನೆತ್ತರಹೇಡಿ
            (೪೨) ನೆತ್ತರಹೂವು
            (೪೩) ಪಟ್ಟವಣೆ
            (೪೪) ಪಡಿನೆಳಲು
            (೪೫) ಪಣ್ಯಕಾವ್ಯ
            (೪೬) ಪರಪ್ರಾಣ
            (೪೭) ಪಿರಿಸೆರೆ
            (೪೮) ಪೆರಗನ್ನಡಿ
            (೪೯) ಬಣಗುಮಾತು
            (೫೦) ಬಾನಬಟ್ಟೆ
            (೫೧) ಬಾಳ್ವಣ್ಣು
            (೫೨) ಬಿಚ್ಚುಜೀವ
            (೫೩) ಬೀರಕಡಗ
            (೫೪) ಬೀರಬೊಬ್ಬೆ
            (೫೫) ಬೆಂಡುಗೊಳ್ಳು
            (೫೬) ಬೆರಗುಗತೆ
            (೫೭) ಬೆವರಬಳ್ಳಿ
            (೫೮) ಬೆಳಕಿನೊಡೆಯ
            (೫೯) ಮಳ್ಳಗಾಳಿ
            (೬೦) ಮಿಕ್ಕುಗಾಳು
            (೬೧) ಮುಂಗಾವಲು
            (೬೨) ಮುಂಗುರುಹು
            (೬೩) ಮುಂಗೆಲಸ
            (೬೪) ಮುಗಿಲಿನಂಗಳ
            (೬೫) ಮೆಚ್ಚುಬೆರಳು
            (೬೬) ಸವಿಕೂಟ
            (೬೭) ಸಿರಿಮುಖ
            (೬೮) ಸುಖದ ಹೂವು
            (೬೯) ಸುಳಿಗಾಲ
            (೭೦) ಸುಳ್ಳೆಣಕಿ
            (೭೧) ಸೂಳೆಬೆಡಗು
            (೭೨) ಹಾದಿಹುಡಿ
            (೭೩) ಹಾಲಗಂಗೆ
            (೭೪) ಹಿಂಜಾಪು
            (೭೫) ಹುಡಿಯಣು
            (೭೬) ಹುಲುಗಡಣ
            (೭೭) ಹೂತುಟಿನೀರು
            (೭೮) ಹೊಂಗೆಳತಿ 
            (೭೯) ಹೊರಮಿಂಚು
           
ಇವಲ್ಲದೆ ಬೇಂದ್ರೆಯವರು ಕೆಲವೊಂದು ಪದಗಳನ್ನು ಸ್ವತಃ ಟಂಕಿಸಿಕೊಂಡಿದ್ದಾರೆ ಅಥವಾ ರೂಪಾಂತರಿಸಿಕೊಂಡಿದ್ದಾರೆ. ಅವು ಯಾವುದೇ ಶಬ್ದಕೋಶದಲ್ಲಿ ಸಿಗಲಿಕ್ಕಿಲ್ಲ.
ಉದಾಹರಣೆ:
ಅಟಮಟಿಸು, ಉಗೆವಾಡ, ಕಟ್ಟಡಕ, ಕಾಳವ, ಚಲಮಲ ಇತ್ಯಾದಿ.
ಈ ಪದಗಳ ಅರ್ಥವನ್ನು ಸಾಂದರ್ಭಿಕವಾಗಿಯೇ ಮಾಡಿಕೊಳ್ಳಬೇಕಾಗುತ್ತದೆ.

ಕೆಲವೊಂದು ಪದಗಳು ಕಾಲಾಂತರದಲ್ಲಿ ಕನ್ನಡದಿಂದ ಕಣ್ಮರೆಯಾಗಿವೆ. ಆದರೆ ಬೇರೆ ಭಾಷೆಗಳಲ್ಲಿ ಈ ಪದಗಳ ರೂಪಾಂತರಗಳು ಬಳಕೆಯಲ್ಲಿವೆ. ಉದಾಹರಣಗೆ ‘ನರಬಲಿ’ ಕವನದಲ್ಲಿ ಬೇಂದ್ರೆಯವರು ‘ಕಕ್ಕಡ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಇದರ ಅರ್ಥ ಹಿಲಾಲು, ಮಶಾಲ , torch. ಈ ಪದವು ಮರಾಠಿಯಲ್ಲಿ ‘ಕಾಕಡಾ’ ಅಗಿ ಬಳಕೆಯಲ್ಲಿದೆ. ದೇವಾಲಯಗಳಲ್ಲಿ ಸೂರ್ಯೋದಯಪೂರ್ವದ ಆರತಿಗೆ ‘ಕಾಕಡಾರತಿ’ ಎನ್ನುತ್ತಾರೆ. ವಿದ್ಯುಚ್ಛಕ್ತಿ ಇಲ್ಲದ ಹಳೆಯ ದಿನಗಳಲ್ಲಿ ಕಕ್ಕಡವನ್ನು ಬಳಸಿ, ಭಕ್ತರು ಆರತಿಗಾಗಿ ಗುಡಿಗೆ ಬರುತ್ತಿದ್ದರು. ಆದುದರಿಂದ ‘ಕಾಕಡಾರತಿ’ ಎನ್ನುವ ಹೆಸರು. ಅದರಂತೆ ಹಳೆಯ ಕಾಲದ ಅಡುಗೆ ಸ್ಟೋವುಗಳಿಗೆ ಬಿಸಿ ಮಾಡಲು ಬಳಸುವ ಉಪಕರಣಕ್ಕೆ ‘ಕಾಕಡಾ’ ಎನ್ನುತ್ತಿದ್ದರು. ಈ ಮರಾಠಿ ಪದಕ್ಕೆ ಕನ್ನಡದ ‘ಕಕ್ಕಡ’ವೇ ಮೂಲವಾಗಿದೆ.

ಬೇಂದ್ರೆಯವರ ಬಳಸಿದ ಕೆಲವು ಪದಗಳು ಸಾಮಾನ್ಯ ಅರ್ಥದ ವಿರೋಧಾಭಾಸದಲ್ಲಿ ಬಳಕೆಯಾಗಿವೆ. ಉದಾಹರಣೆಗೆ ‘ಸುಖ’ ಎನ್ನುವ ಪದವನ್ನು ಪರೀಕ್ಷಿಸೋಣ. ಬೇಂದ್ರೆಯವರು ‘ಗರಿ’ ಕವನ ಸಂಕಲನದ  ೭ ಕವನಗಳಲ್ಲಿ ಒಟ್ಟು ೧೦ ಸಲ ‘ಸುಖ’ ಎನ್ನುವ ಪದವನ್ನು ಬಳಸಿದ್ದಾರೆ. ಆದರೆ ಒಂದು ಸಲವೂ ಈ ಪದದ ಅರ್ಥವು ಸುಖವನ್ನು ಕೊಡುವದಿಲ್ಲ . ಈ ಕವನಗಳನ್ನು ಪರೀಕ್ಷಿಸೋಣ:

ಸುಖವು ಮೃಗಜಲ ಎನ್ನುವ ಅರ್ಥದಲ್ಲಿ ಈ ನಾಲ್ಕು ಕವನಗಳಲ್ಲಿ ಬಳಸಲಾಗಿದೆ:
(೧) ಕುಣಿಯೋಣು ಬಾರs ಕುಣಿಯೋಣು ಬಾ:
                                    ಬಿಸಿ ದುಃಖದರಿವ್ಯಾಕ
                                    ಹುಸಿ ಸುಖದ ಪರಿವ್ಯಾಕ
                                    ಕುಣಿಯೋಣು ಬಾರs ಕುಣಿಯೋಣು ಬಾ.
(೨) ಹುದುಗಲಾರದ ದುಃಖ:
                                    ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
                                    ಸುಳ್ಳು ಸುಖ ಮೆರೆಸಬಹುದೆ?
                                    ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
                                    ನಿಜದುಃಖ ಮರೆಸಬಹುದೆ?
(೩) ನನ್ನ ಕಿನ್ನರಿ:
                                    ಬಾಡಿದ ಮುಖದಿಂದ
                                    ಹತ್ತಿದೆ ಸುಖದ್ಹಿಂದ
                                    ಸಿಗದsನ ಸಿಗದsನ ಸಿಗದsನ
                                    ಸಿಗು ಬದುಕಲ್ಲೆಂದು ಬಗೆದೇನ.
(೪) ನನ್ನ ಹಾಡು:
                                    ಸುಖದ ಮಿಷವು,
                                    ದುಃಖ ವಿಷವು
                                    ಹಿಗ್ಗಿ ಪ್ರಾಣಪೂರಣಾ

ಆದರ್ಶದ ಕವನಗಳಲ್ಲಿ ಸುಖವು ಆದರ್ಶಕಾಲದಲ್ಲಿ ದೊರೆಯಬೇಕಾದ ವಸ್ತುವಾಗಿದೆ!
            (೧) ಕೋಗಿಲೆ:
                                    ವ್ಯೋಮಮಂಡಲ ಸುಖಧಾಮವಾಗುsವಂತೆ
                                    ಕಾಮರತಿಯ ಮೀರಿ ಕೋಗಿಲೇ!
                                    ಪ್ರೇಮಕವಿಯು ಕಂಡ ಸಾಮವೇದವ ನೀನು
                                    ಕೂಗುವಿಯಾ ಹೇಳು ಕೋಗಿಲೇ!
            (೨) ಕೀರ್ತಿ:
                                    ತನ್ನ ಹಿಗ್ಗಿಗೆ ತೆರೆದ ಆ ಸುಖಸರೋವರದ
                                    ನಗೆಯ ನೈದಿಲವೆ ನಂದನದ ಕಂಪು
            (೩) ಕೀರ್ತಿ:
                                    ಸುಖದ ಬಂಗಾರ ಜೀವನದ ಸಿಂಗಾರ
                                    ಹೆಸರ ಕೀರ್ತಿಯು ಮಾತ್ರ ವಜ್ರಪಾತ

ಕೆಲವು ಕವನಗಳಲ್ಲಿ ವ್ಯಂಗ್ಯರೂಪವಾಗಿ ‘ಸುಖ’ ಬಂದಿದೆ. ಉದಾಹರಣೆ:
            (೧)ಕೆಲಸವಿಲ್ಲದವರ ಹಾಡು:
                                    ಬಾರೈ ಬಣ್ಣದ ಮಾತಿನ ಅಣ್ಣ!
                                    ಸುಖಸಾಮ್ರಾಜ್ಯದ ಕನಸಿಗ ನೀನು.
                                    ಅಟ್ಟ ಮುರಿಯುವೀ ಕುಣಿತವಿದೇನು?

ಈ ರೀತಿಯಾಗಿ ಬೇಂದ್ರೆಯವರ ಕವನಗಳಲ್ಲಿ ‘ಸುಖ’ ಪದದ ಮರ್ಮವು ಅದರ ಅರ್ಥಕ್ಕಿಂತ ಭಿನ್ನವಾಗಿದೆ!

ಒಟ್ಟಿನಲ್ಲಿ ಬೇಂದ್ರೆಯವರ ‘ಗರಿ’ ಕವನಸಂಕಲನದ ಪದಸಂಧಾನವನ್ನು ಪರೀಕ್ಷಿಸಿದಾಗ ಈ ಕೆಳಗಿನ ನಿರ್ಣಯಗಳಿಗೆ ತಲುಪಬಹುದು:
(೧) ಸಹೃದಯ ಓದುಗರೊಡನೆ ಆತ್ಮೀಯತೆ ಬೇಂದ್ರೆ-ಕಾವ್ಯದ ಮುಖ್ಯ ಲಕ್ಷಣ.
(೨) ವೈಯಕ್ತಿಕ ಆದರ್ಶ, ನಾಡು ಹಾಗು ನುಡಿಯ ಪ್ರೇಮ ಇವು ‘ಗರಿ’ ಸಂಕಲನದ ಕವನಗಳ ಸ್ಫೂರ್ತಿಮೂಲಗಳು.
(೩) ತತ್ವಜ್ಞಾನ, ಯೋಗಶಾಸ್ತ್ರ ಇವೆಲ್ಲವೂ ಬೇಂದ್ರೆ-ಕಾವ್ಯದಲ್ಲಿ ಹಾಸುಹೊಕ್ಕಾಗಿವೆ.
(೪) ಬೇಂದ್ರೆ ಪದಭಾಂಡಾರ ಅಪಾರವಾದದ್ದು ಹಾಗು ಪದಗಳನ್ನು ಟಂಕಿಸುವ ಬೇಂದ್ರೆ ಪ್ರತಿಭೆ ಅಗಾಧವಾದದ್ದು.
(೫) ಬೇಂದ್ರೆಯವರು ಕನ್ನಡ ಪದಗಳನ್ನೇ ಅತಿ ಹೆಚ್ಚಾಗಿ ಬಳಸಿದ್ದಾರೆ.

ಇದು ಬೇಂದ್ರೆ ಸಮಗ್ರಕಾವ್ಯದ ಪದಸಂಧಾನವಲ್ಲ.
ಕೇವಲ ‘ಗರಿ’ ಕವನಸಂಕಲನದ ಕವನಗಳ ಪದಸಂಧಾನದ ವಿಶ್ಲೇಷಣೆಯಿಂದ ಇದಿಷ್ಟು ನನಗೆ ಹೊಳೆದ ತಿಳಿವು. ಸಮಗ್ರ ಪದಸಂಧಾನದಿಂದ ಹೆಚ್ಚಿನ ತಿಳಿವು ಸಾಧಿಸೀತು.

ಪದಸಂಧಾನ ತುಲನೆ:
ತುಲನಾತ್ಮಕ ಪದಸಂಧಾನವು ಈರ್ವರು ಕವಿಗಳ ತುಲನಾತ್ಮಕ ಅಧ್ಯಯನಕ್ಕೆ ನೆರವು ನೀಡುತ್ತದೆ. ಉದಾಹರಣೆಗೆ ಬೇಂದ್ರೆ ಹಾಗು ಕುವೆಂಪುರವರನ್ನು ಈ ರೀತಿಯಾಗಿ ಅಭ್ಯಸಿಸಬಹುದು. ನಾನು ಕುವೆಂಪುರವರ ಯಾವುದೇ ಕವನಸಂಕಲನದ ಪದಸಂಧಾನವನ್ನು ಮಾಡಿರದಿದ್ದರೂ ಸಹ ಎಲ್ಲರೂ ತಿಳಿದಿರುವಂತೆ, ಕುವೆಂಪುರವರಲ್ಲಿ ಸಂಸ್ಕೃತ ಪದಗಳ ಆಧಿಕ್ಯವಿದೆ. ಎರಡನೆಯದಾಗಿ ಕುವೆಂಪುರವರ ಕವನಗಳಲ್ಲಿ ಆದೇಶಾತ್ಮಕ ಪದಗಳ ಆಧಿಕ್ಯವಿದೆ. ಬೇಂದ್ರೆ ಹಾಗು ಕುವೆಂಪು ಈರ್ವರೂ ‘ಬೆಳಗಿ’ನ ಬಗೆಗೆ ಬರೆದ ಕವನಗಳನ್ನೇ ನೋಡಿರಿ.

ಬೇಂದ್ರೆ: “ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣಾ, ಇದು ಬರಿ ಬೆಳಗಲ್ಲೊ ಅಣ್ಣಾ!”
ಕುವೆಂಪು: “ಸೂರ್ಯೋದಯ, ಚಂದ್ರೋದಯ ದೇವರ ದಯೆ ಕಾಣಾ!”

ಬೇಂದ್ರೆಯವರ ಕವನದಲ್ಲಿ ಆತ್ಮೀಯವಾಚಕ ಅಥವಾ ಸಂಬಂಧವಾಚಕವಾದ ‘ಅಣ್ಣಾ’ ಪದದ ಬಳಕೆಯ ಹಾಗು ವಿಸ್ಮಯದ ಸೂಚನೆ ಇದ್ದರೆ, ಕುವೆಂಪುರವರ ಕವನದಲ್ಲಿ ಆದೇಶಾತ್ಮಕ ‘ಕಾಣಾ’ ಪದದ ಹಾಗು ಓದುಗನನ್ನು ‘keeping at a distance’ ಭಾವನೆ ಎದ್ದು ಕಾಣುತ್ತದೆ.

ಈ ರೀತಿಯ ತುಲನಾತ್ಮಕ ಅಧ್ಯಯನವನ್ನು ಸಹ ಪದಸಂಧಾನದ ಮೂಲಕ ಮಾಡಬಹುದು.