Tuesday, December 13, 2011

ಠಕ್ಕರ ಬಾಳಪ್ಪ

ಬಾಳ ಠಾಕರೆಯವರಿಗೆ ಇತಿಹಾಸ ಗೊತ್ತಿಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನು ಓಡಿಸುವ ಮಾತುಗಳನ್ನು ಆಡುತ್ತಿರುವ ಅವರು ಭಾರತದ ಪ್ರಾಚೀನ ಇತಿಹಾಸವನ್ನು ಅರಿತುಕೊಳ್ಳುವದು ಒಳ್ಳೆಯದು. ಪ್ರಾಚೀನ ಕಾಲದಲ್ಲಿ ಅನೇಕ ಬುಡಕಟ್ಟುಗಳು ಭಾರತದಲ್ಲೆಲ್ಲ ಹರಡಿಕೊಂಡಿದ್ದವು. ಕನ್ನಡ ಬುಡಕಟ್ಟುಗಳು ಹಿಮಾಲಯದ ತಪ್ಪಲಿನಲ್ಲಿಯೂ ವಾಸಿಸುತ್ತಿದ್ದವು. ಇಂದಿನ ಗುಜರಾತ, ಮಹಾರಾಷ್ಟ್ರಗಳಲ್ಲಿಯೂ ಸಹ ಈ ಬುಡಕಟ್ಟುಗಳು ವಾಸಿಸುತ್ತಿದ್ದವು. ಬಹುಶಃ ಸಿಂಧು ಸಂಸ್ಕೃತಿಯ ನಾಗರಿಕರು ಕನ್ನಡಿಗರೇ ಆಗಿರಬಹುದು. ಈ ಎಲ್ಲ ಊಹೆಗಳಿಗೆ ಕನಿಷ್ಠ ಮೇಲ್ನೋಟದ ಸಾಕ್ಷಿಗಳಾದರೂ ಬೇಕಲ್ಲವೆ? ಅದೃಷ್ಟವಶಾತ್ ಕೀರ್ತಿಶೇಷ ಶಂ.ಬಾ. ಜೋಶಿಯವರ ಸಂಶೋಧನೆ ಈ ವಿಷಯದಲ್ಲಿ ದಿಕ್ಸೂಚಿಯಾಗಿದೆ. ಭಾಷೆ ಹಾಗು ಸ್ಥಳನಾಮಗಳು ಇತಿಹಾಸವನ್ನು ಶೋಧಿಸುವದರಲ್ಲಿ ಹೇಗೆ ಸಹಾಯಕವಾಗಬಲ್ಲವು ಎನ್ನುವದನ್ನು ಅವರು ತೋರಿಸಿಕೊಟ್ಟಿದ್ದಾರೆ. ಆ ಆಧಾರದ ಮೇಲೆ ಕನ್ನಡಿಗರ ಕುರುಹುಗಳು ಭಾರತದ ಉತ್ತರದಲ್ಲಿಯೂ ಲಭಿಸುವದನ್ನು ಪರಿಶೀಲಿಸಿ ಪ್ರಮಾಣಿಸಬಹುದು.

ಮೊದಲಿಗೆ ಮಹಾರಾಷ್ಟ್ರದ ಮೂಲವನ್ನು ಪರೀಕ್ಷಿಸೋಣ. ಮಹಾರಾಷ್ಟ್ರ ಎನ್ನುವ ಪದವು ಮರಹಟ್ಟ ಎನ್ನುವ ಕನ್ನಡ ಪದದ ಸಂಸ್ಕೃತೀಕರಣವಾಗಿದೆ.  ಪ್ರಾಚೀನ ಕಾಲದಲ್ಲಿ ಮಹಾರಾಷ್ಟ್ರವೆಲ್ಲ ಅರಣ್ಯಪ್ರದೇಶವಾಗಿತ್ತು. ಹಾಗೆ ನೋಡಿದರೆ ಭಾರತದ ಬಹುಭಾಗವೆಲ್ಲ ಅರಣ್ಯಪ್ರದೇಶವೇ ಆಗಿತ್ತು. ವಾಲ್ಮೀಕಿ ರಾಮಾಯಣದಲ್ಲಿ ಈ ಅರಣ್ಯಭಾಗದ ಸುಂದರ ವರ್ಣನೆಗಳು ಬರುತ್ತವೆ. ಅಟವಿ ಅಥವಾ ಅಡವಿಯಲ್ಲಿ ಇರುವವರು ಆಟವಿಕರು. ನಗರಿಗಳಲ್ಲಿ ಇರುವವರು ನಾಗರಿಕರು. ಅಡವಿ ಅಥವಾ ಮರಗಳ ಮಧ್ಯೆ ವಾಸಿಸುವವರು ಮರಹಾಡಿಗಳು ಅಥವಾ ಮರಹಟ್ಟರು. (ಕನ್ನಡಿಗರು ತಮ್ಮ ಬೀಡುಗಳನ್ನು ‘ಹಾಡಿ’, ‘ಹಟ್ಟಿ’ ಎಂದು ಕರೆಯುತ್ತಾರೆ.) ಆರ್ಯ ಅಥವಾ ಆರಿಯ ಜನಾಂಗಗಳು ಭಾರತವನ್ನು ಆಕ್ರಮಿಸತೊಡಗಿದಾಗ ಹಾಗು ಪ್ರಭಾವಶಾಲಿಗಳಾದಾಗ ಇಲ್ಲಿಯ ಪ್ರದೇಶನಾಮಗಳನ್ನು ತಮ್ಮ ನಾಲಗೆಗೆ ತಕ್ಕಂತೆ ಬದಲಾಯಿಸಿಕೊಂಡರು. ಮರಹಟ್ಟವು ಮರಹಾಟವಾಗಿ ಬಳಿಕ ಮಹಾರಾಷ್ಟ್ರವಾಯಿತು. ಇಲ್ಲಿಯ ನಿವಾಸಿಗಳು ಮರಾಠಾ ಆದರು. ‘ಮ’ಕಾರಕ್ಕೆ ವಕಾರ ಬಂದಲ್ಲಿ ಅದು ವರ್ಹಾಡ ಎನ್ನುವ ಸ್ಥಳವೂ ಆಯಿತು. ಅದರಂತೆ ಕರಹಾಡಿ ಗ್ರಾಮವು ಕರ್ಹಾಡ ಎಂದಾಯಿತು. ಇಂದು ಮಹಾರಾಷ್ಟ್ರದಲ್ಲಿರುವ ಅಥವಾ ಕರ್ನಾಟಕದಲ್ಲಿ ಮರಾಠಿ ಪ್ರಭಾವವಿರುವಂತಹ ಬಹಳಷ್ಟು ಊರುಗಳು ಕನ್ನಡ ಹೆಸರಿನ ಆರಯೀಕರಣವೇ ಆಗಿವೆ.
ಕೆಲವು ಉದಾಹರಣೆಗಳು ಇಂತಿವೆ:
ಕರ್ನಾಟಕದಲ್ಲಿ:
ಕಾಳೀನದಿಯ ದಂಡೆಯ ಮೇಲಿರುವ ‘ದಂಡೀಹಳ್ಳಿ’ಯು ‘ದಾಂಡೇಲಿ’ ಆಗಿದೆ.
ಚಾಪಿಹಳ್ಳಿಯು ಚಾಪೋಲಿ ಆಗಿದೆ.
ಮಹಾರಾಷ್ಟ್ರದಲ್ಲಿ:
ಸಂಗೊಳ್ಳಿಯು ಸಾಂಗ್ಲಿ ಆಗಿದೆ.
ಮಿರಜಿ ಇದು ಮಿರಜ ಆಗಿದೆ.
ಕಂದವಳ್ಳಿಯು ಕಾಂದೀವ್ಲಿ ಆಗಿದೆ.
ಕಂದಹಾಳವು ಖಂಡಾಲಾ ಆಗಿದೆ.
ಮುಂಬರಗಿಯು ಮುಂಬಯಿ ಆಗಿದೆ.
ಗುಜರಾತದಲ್ಲಿ:
ಕಂದಹಾಳವು ಕಾಂಡ್ಲಾ ಆಗಿದೆ.
ಬರ್ದಳ್ಳಿಯು ಬಾರ್ಡೋಲಿಯಾಗಿದೆ.
ಉತ್ತರ ಭಾರತದಲ್ಲಿ:
ದೇಹಳ್ಳಿಯು ದೆಹಲಿ ಆಗಿದೆ.

ಅಫಘಾನಿಸ್ತಾನದಲ್ಲಿರುವ ಕಂದಹಾರವು ಬದಲಾಗದೇ ಉಳಿದುಕೊಂಡಿದೆ. ಇದು ಕನ್ನಡದ ಊರು.
(ನೋಡಿರಿ:ಕಂದರು)
ಹಾಗಿದ್ದರೆ, ಆರಿಯ ಜನಾಂಗಗಳು ಮರಹಾಡಿಯನ್ನು ಆಕ್ರಮಿಸಿಕೊಂಡು ‘ಮಹಾರಾಷ್ಟ್ರ’ವನ್ನಾಗಿ ಮಾಡಿದವೆ? ಈ ಮಾತು ಪೂರ್ಣ ಸತ್ಯವಲ್ಲ. ಇಲ್ಲಿರುವ ಕನ್ನಡ ಬುಡಕಟ್ಟುಗಳೇ ಆಕ್ರಮಿಕ ಆರಿಯ ಜನಾಂಗದಲ್ಲಿ ಒಂದಾಗಿ ಹೋಗಿ,ಮರಹಟ್ಟರಿದ್ದವರು ಮರಾಠಾ ಆದರು. ತಮ್ಮ ಕನ್ನಡ ಭಾಷೆಯನ್ನು ಆರಯೀಕರಣಗೊಳಿಸಿದರು. ಇಂದು ಮಹಾರಾಷ್ಟ್ರದಲ್ಲಿರುವ ಮರಾಠಾ ಜನರಲ್ಲಿ ಶೇಕಡಾ ೯೦ರಷ್ಟು ಜನ ಮೂಲತಃ ಕನ್ನಡಿಗರೇ. ಇದು ಹೇಗೆನ್ನುತ್ತೀರಾ? ಇದರ ರುಜುವಾತು ಇಲ್ಲಿದೆ:

ಒಂದು ಜನಾಂಗವು ಯಾವುದೋ ಕಾರಣಕ್ಕಾಗಿ ತನ್ನ ಭಾಷೆಯನ್ನು ಬದಲಾಯಿಸಿಕೊಂಡಿರಬಹುದು. ಉದಾಹರಣೆಗೆ ಅಮೆರಿಕಾಕ್ಕೆ ವಲಸೆ ಹೋದ ಕನ್ನಡಿಗರ ಸಂತತಿ ಕಾಲಕ್ರಮೇಣ ತಮ್ಮ ಕುಟುಂಬದಲ್ಲಿ ಇಂಗ್ಲಿಶ್ ಭಾಷೆಯನ್ನೇ ಬಳಸಬಹುದು. ಆದರೆ ಇಂತಹ ಕುಟುಂಬದ ಮೊದಲ ತಲೆಮಾರಿನ ಸದಸ್ಯರು ತಮ್ಮ ಸಂಬಂಧಸೂಚಕ ಪದಗಳನ್ನು ಹಳೆಯ ಭಾಷೆಯಲ್ಲಿಯೇ ಹೇಳುತ್ತಿರುತ್ತಾರೆ. ಮರಾಠಿ ಭಾಷೆಯನ್ನು ಆಡುವ ಕುಟುಂಬಗಳು ಇವತ್ತಿಗೂ ‘ಅಪ್ಪಾ, ಅಣ್ಣಾ, ಆಯಿ’ ಎನ್ನುವ ಕನ್ನಡ ಭಾಷೆಯ ಸಂಬಂಧಸೂಚಕ ಪದಗಳನ್ನು ಬಳಸುತ್ತಾರೆಯೇ ಹೊರತು, ‘ಪಿತಾಜಿ, ಭಾಯಿ, ಮಾ’ ಎನ್ನುವ ಸಂಸ್ಕೃತಮೂಲ ಪದಗಳನ್ನು ಬಳಸುವದಿಲ್ಲ. ‘ಅಣ್ಣಾ ಹಜಾರೆ’ ಎಂದು ಪ್ರಸಿದ್ಧರಾದ ಕಿಸನ ಹಜಾರೆಯವರನ್ನು ‘ಅಣ್ಣಾ’ ಎಂದು ಕರೆದವರು ಅವರ ಹಳ್ಳಿಯ ಜನ. ಅವರನ್ನು ‘ಭಾಯೀ’ ಎಂದೇಕೆ ಅವರು ಕರೆಯುತ್ತಿಲ್ಲ?

ಮರಾಠಿ ಭಾಷೆಗೆ ಸಂಬಂಧಿಸಿದಂತೆ, ಪುಣೆಯ ನಾಗರಿಕರು ಕೊಲ್ಲಾಪುರದ ನಾಗರಿಕರನ್ನು ಮೂದಲಿಸುತ್ತಾರೆ. ಕೊಲ್ಲಾಪುರದ ಮರಾಠಿಯು ಪುಣೆಯ ಮರಾಠಿಗಿಂತ ಕೆಳಗಿನ ಮಟ್ಟದ್ದು ಎಂದು ಅವರ ಭಾವನೆ. ಉದಾಹರಣೆಗೆ ‘ಈ ಬದಿಯಲ್ಲಿ’ ಎಂದು ಹೇಳಲು ಕೊಲ್ಲಾಪುರದವರು `ಇಕಡೆ’ ಎನ್ನುತ್ತಾರಂತೆ. ಆದರೆ ಪುಣೆಯ ನಾಗರಿಕರು ಮಾತ್ರ ‘ಇಥs’ ಎಂದು ಉಲಿಯುತ್ತಾರಂತೆ.

ಪಾಪ! ಈ ಮರಾಠಿಗರಿಗೆ ‘ಇಕಡೆ’ ಪದವು ಕನ್ನಡದ ‘ಈ ಕಡೆಗೆ’ ಎನ್ನುವ ಪದದ ಹಾಗು ‘ಇಥs’ ಪದವು ಕನ್ನಡದ ‘ಇತ್ತ’ ಎನ್ನುವ ಪದದ ಮಾರ್ಪಾಡು, ಅರ್ಥಾತ್ ಎರಡೂ ಪದಗಳು ಕನ್ನಡ ಪದಗಳು ಎನ್ನುವದೇ ಗೊತ್ತಿಲ್ಲ! ಅನೇಕ ಪದಾರ್ಥವಾಚಕ ಮರಾಠೀ ಪದಗಳೂ ಸಹ ಕನ್ನಡಮೂಲದವೇ ಆಗಿವೆ. ಉದಾಹರಣೆಗೆ ಕನ್ನಡದ ‘ತುಪ್ಪ’ವು ಮರಾಠಿಯಲ್ಲಿ ‘ತೂsಪ’ ಆಗಿದೆ. ಅಷ್ಟೇ ಏಕೆ, ‘ಚಾಂಗು (=ಒಳ್ಳೆಯ)’ ಎನ್ನುವ ಕನ್ನಡ ವಿಶೇಷಣವನ್ನೇ ಮರಾಠಿಗರು ‘ಚಾಂಗಲಾ’ ಎಂದು ಬಳಸುತ್ತಾರೆ. ಒಟ್ಟಿನಲ್ಲಿ ಕನ್ನಡ ಪದಗಳನ್ನು ಎಳೆದು ಹಿಗ್ಗಿಸಿದಾಗ ಮರಾಠಿ ಪದಗಳು ಆಗುತ್ತವೆ ಎನ್ನಬಹುದೇನೊ!

ಹೀಗಿರಲು, ಬಾಳ ಠಾಕರೆಯವರಿಗೆ ತಮ್ಮ ಪೂರ್ವಜರು ಕನ್ನಡಿಗರು ಎನ್ನುವದೇ ಗೊತ್ತಿಲ್ಲ! ಅವರ ಹೆಸರನ್ನೇ ತೆಗೆದುಕೊಳ್ಳಿರಿ. ಆರಿಯ ಜನಾಂಗಗಳು ‘ಳ’ಕಾರವನ್ನು ಬಳಸುವದಿಲ್ಲ; ಕನ್ನಡಿಗರು ಬಳಸುತ್ತಾರೆ. ಆರಿಯರ ‘ಕಾಲೀ’ ದೇವಿ ನಮಗೆ ‘ಕಾಳಿ’ದೇವಿ. ಅವರ ‘ಬಾಲ(=ಬಾಲಕ=ಮಗು)’ ನಮಗೆ ‘ಬಾಳ’. ಠಾಕರೆಯವರು ‘ಬಾಳ’ರು, ‘ಬಾಲ’ರಲ್ಲ. ಆದರೆ ಅವರ ಬಾಲ ಮಾತ್ರ ಉದ್ದವಾಗಿದೆ!

ಅವರ ಅಡ್ಡಹೆಸರಾದ ‘ಠಾಕರೆ’ಯೂ ಸಹ ಮಾರ್ಪಾಡಾದ ಪದವೇ. ಭಾರತದ ವಾಯವ್ಯ ಭಾಗದಲ್ಲಿರುವ ಠಕ್ಕರ ಜನಾಂಗವು ಮುಸ್ಲಿಮ್ ಆಕ್ರಮಣಕ್ಕೊಳಗಾಗಿ ಗುಜರಾತಿಗೆ ಓಡಿ ಬಂದಿತು. ಅಲ್ಲಿಂದ ಮಹಾರಾಷ್ಟ್ರಕ್ಕೆ ಬಂದವರೇ ‘ಠಾಕರೇ’ ಆಗಿರಬಹುದು. ಇನ್ನೊಂದು ಸಾಧ್ಯತೆ ಎಂದರೆ ಕನ್ನಡದ ‘ಠಕ್ಕ’ರೇ ಮರಾಠಿಯಲ್ಲಿ ‘ಠಾಕರೇ’ ಆಗಿರಬಹುದು. ಈ ಸಾಧ್ಯತೆಯನ್ನು ನಗೆಚಾಟಿಕೆ ಎಂದು ತಳ್ಳಿ ಹಾಕುವಂತಿಲ್ಲ. ಇದರ ಕಾರಣ ಹೀಗಿದೆ:

ಬ್ರಿಟಿಶರು ತಮ್ಮ ಆಳ್ವಿಕೆಯಲ್ಲಿ ನಿಶ್ಶಸ್ತ್ರೀಕರಣಗೊಳಿಸಿದ ಅನೇಕ ಯೋಧ ಜನಾಂಗಗಳು ಉಪಜೀವನಕ್ಕಾಗಿ ಕುಟಿಲವೃತ್ತಿಗಳನ್ನು ಹಾಗು ದರೋಡೆಗಾರಿಕೆಯನ್ನು ಅವಲಂಬಿಸಿದವು. ‘ಠಕ್ಕ’ರೂ ಸಹ ಅಂತಹ ಒಂದು ಬುಡಕಟ್ಟು ಜನಾಂಗದವರು. ಇವರೇ ಮಹಾರಾಷ್ಟ್ರದ ‘ಠಾಕರೇ’ ಆಗಿದ್ದಾರು.

ಮಹಾರಾಷ್ಟ್ರದ ಅನೇಕ ಅಡ್ಡಹೆಸರುಗಳು ‘ಏ’ಕಾರಾಂತವಾಗುತ್ತವೆ:
ಕರ್ನಾಟಕದಲ್ಲಿಯ ‘ಸಕ್ಕರಿ’ ಎನ್ನುವ ಅಡ್ಡಹೆಸರು ಮರಾಠಿಯಲ್ಲಿ ‘ಸಾಖರೇ’ ಆಗುತ್ತದೆ.
(‘ಶಾಂತಕವಿ’ ಎನ್ನುವ ಕಾವ್ಯನಾಮದಿಂದ ಪ್ರಸಿದ್ಧರಾದ ಸಕ್ಕರಿ ಬಾಳಾಚಾರ್ಯರನ್ನು ನೆನಪಿಸಿಕೊಳ್ಳಿರಿ.)
ಕನ್ನಡ ಮಾತನಾಡುವ ಕುಟುಂಬಗಳಿಗೆ ಮರಾಠಿಗರು ‘ಕಾನಡೆ’ ಎನ್ನುವ ಅಡ್ಡಹೆಸರನ್ನು ಕೊಟ್ಟಿದ್ದಾರೆ. ಅದರಂತೆ ‘ಮರಾಠೆ’ ಎನ್ನುವ ಅಡ್ಡಹೆಸರಿನ ಶ್ರೇಷ್ಠ ಕನ್ನಡ ಸಂಶೋಧಕರೊಬ್ಬರು ಬೆಳಗಾವಿಯಲ್ಲಿದ್ದಾರೆ. ಅದರಂತೆ ದಾಬಡೇ, ಹಜಾರೇ, ಜಾಯದೇ ಮೊದಲಾದ ಅಡ್ಡಹೆಸರುಗಳು. ಆದರೆ ಕನ್ನಡಿಗರ ದೃಷ್ಟಿಯಿಂದ ಅತ್ಯಂತ ಮೋಜಿನ ಹೆಸರೆಂದರೆ: ‘ಲೇಲೇ’. ಕನ್ನಡಿಗರು ಆ ವ್ಯಕ್ತಿಯನ್ನು ‘ಲೇ, ಲೇ, ಲೇಲೇ’ ಎಂದು ಕರೆಯಬಹುದೇನೊ! ಈ ರೀತಿಯಲ್ಲಿ ‘ಠಕ್ಕರ ಬಾಳಪ್ಪ’ನೇ ಮರಾಠಿಯಲ್ಲಿ ‘ಬಾಳ ಠಾಕರೇ’ ಆಗಿದ್ದಾರೆ ಹಾಗು ತಮ್ಮ ಮೂಲಿಗರ ಸಂತತಿಯ ವಿರುದ್ಧವೇ ಗರ್ಜಿಸುತ್ತಿದ್ದಾರೆ! ಇದು ಇತಿಹಾಸದ ವೈಪರೀತ್ಯ!

ಬಾಳ ಠಾಕರೆಯವರು ಮರಾಠೇತರರನ್ನು ಮುಂಬಯಿ ಬಿಟ್ಟು ತೊಲಗಿ ಎಂದು ಗರ್ಜಿಸಿದರು. ಮರಾಠಿಗರಿಗೆ
ಮಹಾರಾಷ್ಟ್ರದಲ್ಲಿ  ಕಟ್ಟಿಗೆ ಕಡಿಯುವ ಹಾಗು ನೀರು ಹೊರುವ ಕೆಲಸಗಳು ಮಾತ್ರ ಸಿಗುತ್ತವೆ ಎಂದು ಸಾರ್ವಜನಿಕವಾಗಿ ವ್ಯಥೆ ಪಟ್ಟರು. ಈ ವ್ಯಥೆಯು ಅವರ ನೈಜ ವ್ಯಥೆಯೇ ಅಥವಾ ರಾಜಕೀಯ ಲಾಭಕ್ಕಾಗಿ ಮಾಡಿದ ವ್ಯಥೆಯೆ?
ಇದು ರಾಜಕೀಯ ವ್ಯಥೆಯಾಗಿದ್ದರೆ ಹಾಗು ಇದರಿಂದಾಗಿ ಅವರಿಗೆ ರಾಜಕೀಯ ಮತ್ತು ಆರ್ಥಿಕವಾಗಿ ಲಾಭವಾಗಿದ್ದರೆ, ಆ ವಿಷಯದಲ್ಲಿ ನಾನು ಏನೂ ಹೇಳಬಯಸುವದಿಲ್ಲ. ಯಾಕೆಂದರೆ ಕರ್ನಾಟಕದ ಕೆಲವು ರಾಜಕಾರಣಿಗಳೂ ಸಹ ಇಂತಹದೇ ಮಾತುಗಳನ್ನಾಡುತ್ತಾರೆ. ಭಾವನೆಗಳನ್ನು ಕೆರಳಿಸುವ ಇಂತಹ ಘೋಷಣೆಗಳಿಂದ ಎಲ್ಲಾ ಬಣ್ಣದ ರಾಜಕಾರಣಿಗಳು ಲಾಭವನ್ನೇ ಮಾಡಿಕೊಂಡಿದ್ದಾರೆ.

ಒಂದು ವೇಳೆ, ಇದು ನೈಜ ವ್ಯಥೆಯಾಗಿದ್ದರೆ? ಹಾಗಿದ್ದರೆ, ಇದರಂತಹ ಮೂರ್ಖತನ ಬೇರೊಂದಿಲ್ಲ. ಭಾರತದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವಿಭಿನ್ನ ಭಾಷಿಕರು ವಲಸೆ ಹೋಗುವದು ಸಾಮಾನ್ಯವಾಗಿದೆ. ಹೊಟ್ಟೆಪಾಡಿಗಾಗಿ ಎಲ್ಲಾದರೂ ಹೋಗಲೇ ಬೇಕಲ್ಲ. ಆದರೆ ಒಂದು ರಾಜ್ಯಕ್ಕೆ ಹೋದವರು ಅಲ್ಲಿಯ ನಾಡಭಾಷೆಯನ್ನು ಬಳಸಲು ಕಲಿಯಬೇಕು. ಈ ವಿಷಯದಲ್ಲಿ ಮಾತ್ರ ಕನ್ನಡಿಗರನ್ನು ಅಭಿಮಾನ್ಯಶೂನ್ಯರೆಂದು ಹೇಳಲೇ ಬೇಕು. ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು ಎನ್ನುವ ಪರಿಸ್ಥಿತಿ ಇಲ್ಲವೇ ಇಲ್ಲ. ತಮಿಳುನಾಡಿನಲ್ಲಿ ಅಥವಾ ಮಹಾರಾಷ್ಟ್ರದಲ್ಲಿ ಇದು ಸಾಧ್ಯವೆ? ಈ ಸಂದರ್ಭದಲ್ಲಿ ನನಗೆ ದಿವಂಗತ ರಾ.ಶಿ.ಯವರ ನಗೆಹನಿಯೊಂದು ನೆನಪಾಗುತ್ತದೆ. ಬೆಂಗಳೂರಿನಲ್ಲಿದ್ದ ಅವರ ದವಾಖಾನೆಗೆ ಬರುತ್ತಿದ್ದ ರೋಗಿಗಳು ತಮಿಳು, ತೆಲಗು, ಉರ್ದು ಮೊದಲಾದ ತಮ್ಮ ಭಾಷೆಗಳಲ್ಲಿಯೇ ಇವರ ಜೊತೆಗೆ ಮಾತನಾಡುತ್ತಿದ್ದರು. ಹೀಗಾಗಿ ಕನ್ನಡದಲ್ಲಿ ಮಾತನಾಡುವ ಅವಶ್ಯಕತೆ ಇವರಿಗೆ ಬರುತ್ತಿರಲಿಲ್ಲ. ಮನೆಗೆ ಹೋದ ಬಳಿಕ ಹೆಂಡತಿಯೊಡನೆ ಮಾತಂತೂ ಬೇಕಾಗಿಲ್ಲವಲ್ಲ. ಅಲ್ಲಿ ಏನಿದ್ದರೂ TARZAN! ರಾ.ಶಿ.ಯವರಿಗೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಅಗತ್ಯವೇ ಬರುತ್ತಿರಲಿಲ್ಲವಂತೆ!

ಬಾಳ ಠಾಕರೆಯವರಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ, ಕಲಿಯಬಾರದ್ದೂ ಸಾಕಷ್ಟಿದೆ!

[ಟಿಪ್ಪಣಿ: ಕನ್ನಡದ ಪ್ರಸಿದ್ಧ ವ್ಯಕ್ತಿಯೊಬ್ಬರು ಮುಂಬಯಿಗೆ ಸರಬರಾಜು ಆಗುವ ಹುಡುಗಿಯರು ವಿಜಾಪುರ ಭಾಗದ ಕನ್ನಡ ಹುಡುಗಿಯರು ಎಂದು ದುಃಖಿಸಿದ್ದರು. ಇದು ಮತ್ತೊಂದು ಮೂರ್ಖತನ. ಒಬ್ಬಳು ಹೆಣ್ಣುಕೂಸು ಸೂಳೆಯಾಗುವ ಪರಿಸ್ಥಿತಿ ಬಂದರೆ, ಆ ಹೆಣ್ಣುಮಗುವಿಗಾಗಿ ನಾವು ದುಃಖಿಸಬೇಕೆ ಹೊರತು, ಅವಳು ಕನ್ನಡಿಗಳು ಎನ್ನುವ ಕಾರಣಕ್ಕಾಗಿ ಅಲ್ಲ. ದೌರ್ಭಾಗ್ಯದಲ್ಲಿಯೂ ಸಹ ನಾವು ಭಾಷಾವಾದಿಗಳು ಆಗಬೇಕೆ? ಮಾನವೀಯತೆ ಎನ್ನುವದು ಇಲ್ಲವೆ?]