Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is lead forward by thee into ever-widening thought and action-
Into that heaven of freedom, my Father, let my country awake.
ಗುರುದೇವ ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ ಕವನ ಸಂಕಲನದಲ್ಲಿ ಬರುವ ಗೀತೆಯಿದು. ಈ ಕವನಕ್ಕೆ ಶೀರ್ಷಿಕೆ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಈ (ಮೂಲ ಬಂಗಾಲಿ) ಕವನದಲ್ಲಿ ಠಾಕೂರರು ದೇವರಲ್ಲಿ ಪ್ರಾರ್ಥಿಸುತ್ತಿರುವುದು, ಕೇವಲ ತಮ್ಮ ದೇಶದ ರಾಜಕೀಯ ಸ್ವಾತಂತ್ರ್ಯವನ್ನಷ್ಟೇ ಅಲ್ಲ. ತಮ್ಮ ನಾಡಿನ ಜನ ಧೀಮಂತರಾಗಬೇಕು ಎನ್ನುವದು ಅವರ ಅಭೀಪ್ಸೆ. ಆದುದರಿಂದ ನಾವು ಈ ಗೀತೆಗೆ ‘ಧೀಮಂತ ನಾಡು’ ಎನ್ನುವ ಶೀರ್ಷಿಕೆಯನ್ನು ಕೊಡಬಹುದೇನೊ? ಈ ಕವನದ ಭಾವಾನುವಾದ ಇಂತಿದೆ:
ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು,
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;
ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;
ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;
ಅನವರತ ಅರಳುತಿಹ ತಿಳಿವನ್ನು, ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.
‘ಗೀತಾಂಜಲಿ’ ಕ್ರಿ.ಶ. ೧೯೧೩ರ ಸುಮಾರಿಗೆ ಇಂಗ್ಲೀಶಿನಲ್ಲಿ ಪ್ರಕಟವಾಯಿತು. ಅದಕ್ಕೂ ಮೊದಲೇ ಬಂಗಾಲಿಯಲ್ಲಿ ಈ ಗೀತೆಗಳು ತುಂಬ ಜನಪ್ರಿಯವಾಗಿದ್ದವು. ಇಂಗ್ಲಿಶ್ ಆವೃತ್ತಿಗೆ ಇದೀಗ ೯೭ ವರ್ಷಗಳು ತುಂಬಿದವು. ಬಹುಶ: ರವೀಂದ್ರನಾಥ ಠಾಕೂರರು ಈ ಮೇಲಿನ ಗೀತೆಯನ್ನು ರಚಿಸಿ ಈಗ ನೂರು ವರ್ಷಗಳು ಆಗಿರಬಹುದು. ಆದರೆ ‘ಧೀಮಂತ ನಾಡಿ’ನ ಅವರ ಕನಸು ಕನಸಾಗಿಯೇ ಉಳಿದಿದೆ. ದೇವರಲ್ಲಿ ಅವರು ಮಾಡಿದ ಪ್ರಾರ್ಥನೆ ಇನ್ನೂ ಫಲಪ್ರದವಾಗಬೇಕಾಗಿದೆ.
ಈ ಗೀತೆಯ ಮೊದಲ ನುಡಿಯನ್ನು ನೋಡಿರಿ:
ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;
ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ, ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
‘ನಿರ್ಭೀತ ಮನ’ ಎಂದರೇನು? ತನಗೆ ಕಂಡ ಸತ್ಯವನ್ನು ಭಯವಿಲ್ಲದೇ ಹೇಳುವ ಮನಸ್ಸು. ಈ ಭಯ ಯಾತಕ್ಕೆ ಬರಬೇಕು? ಸಮಾಜದಲ್ಲಿ oppression ಇದ್ದಾಗ ಭಯವಿರುತ್ತದೆ. ಇದು ಸರಕಾರದ ಭಯವಿರಬಹುದು ಅಥವಾ ಸಮಾಜದ ಭಯವಿರಬಹುದು. ಸದ್ಯಕ್ಕೆ ನಮ್ಮ ದೇಶದಲ್ಲಿ ಒಂದು ಮಣ್ಣು ಹುಳವೂ ಸಹ ಸರಕಾರಕ್ಕೆ ಅಂಜುತ್ತಿಲ್ಲ. ಅಂದ ಮೇಲೆ ಉಳಿದದ್ದು ಸಮಾಜದ ಭಯ.
ಭಾರತ ದೇಶದಲ್ಲಿ ಅನೇಕ ಧರ್ಮಗಳಿವೆ, ಅನೇಕ ಸಮಾಜಗಳಿವೆ. ಇವುಗಳಲ್ಲಿ ಕೆಲವು ಸಮಾಜಗಳು ಮುಕ್ತ ಸಮಾಜಗಳು. ಅಂದರೆ ಇಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿದೆ. ಕೆಲವು ಸಮಾಜಗಳು ಮುಚ್ಚಿದ ಸಮಾಜಗಳು. ಇಲ್ಲಿ ಟೀಕೆಗಳಿಗೆ, ಸ್ವತಂತ್ರ ಆಲೋಚನೆಗಳಿಗೆ ಅವಕಾಶವಿಲ್ಲ. ಇಂತಹ ಸಮಾಜಗಳು ಸುಧಾರಿಸುವದು ಹೇಗೆ? ನಮ್ಮ ದೇಹದ ಒಂದು ಭಾಗದಲ್ಲಿ ಹುಣ್ಣಾದರೆ, ಅದನ್ನು ತಕ್ಷಣವೇ ಗುಣಪಡಿಸದಿದ್ದರೆ, ಇಡೀ ದೇಹಕ್ಕೇ ಅಪಾಯ. ಅದೇ ರೀತಿಯಲ್ಲಿ, ಒಂದು ಸಮಾಜವು ರೋಗಗ್ರಸ್ತವಾದರೆ, ಇಡೀ ದೇಶವೇ ರೋಗಿಯಾಗುತ್ತದೆ. ಇದನ್ನು ಅರಿತುಕೊಂಡು, ಆ ಸಮಾಜವು ತನ್ನನ್ನು ತಾನು ತಿದ್ದಿಕೊಳ್ಳಬೇಕು. ಅದಾಗದಿದ್ದರೆ, ಸರಕಾರವೇ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕು. ಅದು ಸದ್ಯದ ‘ಮತಪ್ರಜಾಪ್ರಭುತ್ವ’ದಲ್ಲಿ ಸಾಧ್ಯವೆ? ಹಾಗಿದ್ದಾಗ, ರವೀಂದ್ರನಾಥ ಠಾಕೂರರ ಈ ಕನಸು ಕನಸಾಗಿಯೇ ಉಳಿಯುವದು.
ಯಾವುದೇ ಸಮಾಜದಲ್ಲಿಯ ದೋಷವನ್ನು ತೋರಿಸುವ ಮುಕ್ತ ಮನಸ್ಸು ಭಾರತೀಯನಿಗೆ ಇರಬೇಕು. ಆದರೆ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ನಿಮ್ಮ ಸಮಾಜವನ್ನೇ ನೀವು ಟೀಕಿಸಿದಾಗ ಪಾಖಂಡಿಗಳಾಗುತ್ತೀರಿ. ಬೇರೆ ಸಮಾಜವನ್ನು ಟೀಕಿಸಿದರೆ ಕೋಮುವಾದಿ ಆಗುತ್ತೀರಿ. ಹೀಗಿದ್ದಾಗ, ಗುರುದೇವ ಠಾಕೂರರು ಬಯಸುವ ‘ತಲೆ ಎತ್ತಿ ನಿಲುವ ನಿಲುವು’ ಹೇಗೆ ಸಾಧ್ಯವಾದೀತು? ಅದರ ಬದಲಾಗಿ ತಲೆ ತಪ್ಪಿಸಿ ಬದುಕುವ ಪರಿಸ್ಥಿತಿ ಬಂದಿದೆ, ಸತ್ಯವಂತರಿಗೆ. ಇಂಥವರ ಅಜ್ಞಾತವಾಸವು ನಿಜಕ್ಕೂ ಮರುಕವನ್ನು ಹುಟ್ಟಿಸುವಂತಹದು.
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು ಸಂಕೋಲೆಯಿರದ ಒಲವು”:
ಹಿಂದೂ ಸಮಾಜದಲ್ಲಿರುವ ವ್ಯಕ್ತಿಗಳಿಗೆ ಒಂದೇ faith ಎನ್ನುವದಿಲ್ಲ. ಆತ ವೈದಿಕನಿರಬಹುದು, ಅವೈದಿಕನಿರಬಹುದು, pagan ಇರಬಹುದು ಅಥವಾ ನಾಸ್ತಿಕನೂ ಆಗಿರಬಹುದು. ಆತನು Hindu by culture. ಆದರೆ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮಾಜಗಳಲ್ಲಿ ಆ ವ್ಯಕ್ತಿಯು ತನ್ನ ಸಮಾಜದ ಮೂಲತತ್ವಗಳಲ್ಲಿ ಶ್ರದ್ಧೆ ಇಡಬೇಕಾಗುತ್ತದೆ. ಅಂದರೆ ಅವನು ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಆಗಿರುವದು by faith.
ಈ ರೀತಿಯ ವ್ಯವಸ್ಥೆಯಿಂದಾಗಿ ಹಿಂದೂ ಸಮಾಜಕ್ಕೆ ಒಳ್ಳೆಯದೂ ಆಗಿದೆ, ಕೆಟ್ಟದ್ದೂ ಆಗಿದೆ. ಒಳ್ಳೆಯದೆಂದರೆ ಆತನಿಗೆ ಸಂಕೋಲೆಯಿಲ್ಲದ ಜ್ಞಾನಸಾಧನೆಗೆ ಅನುಕೂಲವಾಯಿತು. ಈ ಉದಾಹರಣೆ ನೋಡಿರಿ:
ಸೂರ್ಯನ ಸುತ್ತಲೂ ಪೃಥ್ವಿಯು ತಿರುಗುತ್ತಿದೆ ಎಂದು ಗೆಲಿಲಿಯೋ ಹೇಳಿದಾಗ, ಧರ್ಮನಿಂದನೆಯ ಅಪವಾದಕ್ಕೆ ಗುರಿಯಾಗಬೇಕಾಯಿತು. ಯಾಕೆಂದರೆ ಇದು ಕ್ರಿಶ್ಚಿಯನ್ ಶ್ರದ್ದೆಯ ವಿರುದ್ಧವಾದ ಹೇಳಿಕೆ ಎಂದು. ಆದರೆ, ಗೆಲಿಲಿಯೋನಿಗಿಂತ ಸಾವಿರ ವರ್ಷಗಳ ಮೊದಲೇ ಆರ್ಯಭಟನು ಪೃಥ್ವಿ ಹಾಗು ಇತರ ಗ್ರಹಗಳು ಸೂರ್ಯನ ಸುತ್ತಲೂ ತಿರುಗುತ್ತವೆ ಎಂದು ಹೇಳಲು ಹೆದರಿಕೆ ಅಥವಾ ಸಂಕೋಚ ಪಡಬೇಕಾಗಿರಲಿಲ್ಲ. ವೇದಗಳಲ್ಲಿ ಏನೇ ಹೇಳಿರಲಿ, ಶಾಸ್ತ್ರಗಳ ಶ್ರದ್ಧೆ ಏನೇ ಇರಲಿ, ಜ್ಞಾನಸಾಧನೆಗೆ ಅದು ಸಂಕೋಲೆಯಾಗಬಾರದು ಎನ್ನುವ ವಿವೇಕ ಇಲ್ಲಿದೆ.
ಇನ್ನು ಈ ವ್ಯವಸ್ಥೆಯಿಂದ ಆದಂತಹ ಕೆಡಕೆಂದರೆ ಹಿಂದೂ ಸಮಾಜವು ವಿಭಿನ್ನ ತತ್ವಗಳನ್ನು ಪ್ರತಿಪಾದಿಸುವ ಉಪಸಮಾಜಗಳಲ್ಲಿ ಒಡೆದು ಹೋಯಿತು. ಶ್ರದ್ಧೆಯನ್ನು ಪ್ರಶ್ನಿಸುವ ವ್ಯಕ್ತಿಗಳೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವದರಿಂದ ಹಿಂದೂ ಸಮಾಜದಲ್ಲಿ ಒಕ್ಕಟ್ಟು ಎನ್ನುವದು ಇರದೇ ಹೋಯಿತು. ಇರಲಿ, ಗುರುದೇವ ಠಾಕೂರರು ಇಂತಹ ಜ್ಞಾನಾನ್ವೇಷಣೆಯ ಒಲವನ್ನು ಎಲ್ಲ ಭಾರತೀಯರಲ್ಲೂ ಮೂಡಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.
ಈಗ ಈ ಗೀತೆಯ ಎರಡನೆಯ ನುಡಿ:
ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;
‘ವಸುಧೈವ ಕುಟುಂಬಕಮ್’, ಇಡೀ ಜಗತ್ತೇ ಒಂದು ಕುಟುಂಬ.
ಈ ಜಗತ್ತು ದೇಶದೇಶಗಳಲ್ಲಿ, ಧರ್ಮಗಳಲ್ಲಿ ಒಡೆದು ಹೋಗುವದು ಬೇಡವೆನ್ನುವದು ಗುರುದೇವರ ಆಶಯವಾಗಿದೆ. ಆದರೆ ಅವರ ಈ ಆಶಯವೂ ಸಹ ಫಲಿಸಲಿಲ್ಲ. ವಾಸ್ತವದಲ್ಲಿ, ನಮ್ಮ ದೇಶದಲ್ಲಿಯೇ ನೂರಾರು ಹೊಸ ಗೋಡೆಗಳು ಎದ್ದಿವೆ. ಈ ಗೋಡೆಗಳನ್ನು ಸಮರ್ಥಿಸುವವರಿಗೇ ಮನ್ನಣೆ ಸಿಗುತ್ತಿದೆ.
ನಿಜವನ್ನು ಅರಿತವರು, ಕೆಲವೊಮ್ಮೆ ಕಣ್ಣು ಮುಚ್ಚಿಕೊಂಡಿರುತ್ತಾರೆ, ಕೆಲವೊಮ್ಮೆ ಭಯದಿಂದ ಬಾಯಿ ಮುಚ್ಚಿಕೊಂಡಿರುತ್ತಾರೆ.
ನಿಷ್ಠುರವಾದ ಒಡಲಾಳದ ನಿಜವು ಅನಾಥವಾಗಿದೆ.
ಗುರುದೇವರ ಗೀತೆಯ ಮೂರನೆಯ ನುಡಿಯು ಹೀಗಿದೆ:
ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;
ಪೂರ್ಣತೆಯನ್ನು ಸಾಧಿಸಲು ಅನವರತ ಶ್ರಮ ಬೇಕು. ರವೀಂದ್ರನಾಥ ಠಾಕೂರರೇ, ಮತ್ತೊಂದೆಡೆಯಲ್ಲಿ ಹೀಗೆ ಹೇಳಿದ್ದಾರೆ: ‘ಒಂದು ಗುಲಾಬಿ ಹೂವನ್ನು ರೂಪಿಸಲು ದೇವರು ಲಕ್ಷ ವರ್ಷಗಳನ್ನು ತೆಗೆದುಕೊಂಡಿದ್ದಾನೆ.’
ಆದುದರಿಂದ ಈಗಿನ ನಮ್ಮ ಲಘುಸಾಧನೆಯೇ ಪರಮೋಚ್ಚವೆನ್ನುವ ಭ್ರಮೆ ಹೋಗಬೇಕು.
ಆದರೆ ಈ ಸಾಧನೆಗೆ ಜ್ಞಾನವೂ ಬೇಕಲ್ಲವೆ? ನಮ್ಮ ಕುರುಡು ಸಂಪ್ರದಾಯಗಳೆನ್ನುವ ಮರಳುಗಾಡಿನಲ್ಲಿ ತಿಳಿವಿನ ತೊರೆಯು ಬತ್ತಿ ಹೋಗಿ ಬಿಡಬಹುದು. ಆದುದರಿಂದ, ನಮ್ಮ ತಿಳಿವು, ನಮ್ಮ ತರ್ಕ ಇವು ಸಂಪ್ರದಾಯವನ್ನು ಯಾವಾಗಲೂ ಪರೀಕ್ಷಿಸುತ್ತಲೇ ಇರಬೇಕು ಹಾಗೂ ತಪ್ಪು ಸಂಪ್ರದಾಯಗಳನ್ನು ದಾಕ್ಷಿಣ್ಯವಿಲ್ಲದೇ ತ್ಯಜಿಸಬೇಕು.
ನಾಲ್ಕನೆಯ ನುಡಿ:
ಅನವರತ ಅರಳುತಿಹ ತಿಳಿವನ್ನು,ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.
ತಮ್ಮ ತಿಳಿವು ಕೊನೆಯ ಘಟ್ಟವನ್ನು ಮುಟ್ಟಿಬಿಟ್ಟಿದೆ ಎಂದು ಗುರುದೇವರು ಭಾವಿಸುವದಿಲ್ಲ. ಇದು ಯಾವಾಗಲೂ ಅರಳುತ್ತಿರಲೇ ಇರಬೇಕಾದ ತಿಳಿವು. ಆದುದರಿಂದ ಇದು ದೈವಶ್ರದ್ಧೆಯಿಂದ ಲಭಿಸುವ ತಿಳಿವು. ಈ ತಿಳಿವಿಗೆ ತಕ್ಕಂತೆ ನಮ್ಮ ಕ್ರಿಯೆಯೂ ಸಹ ಉನ್ನತ ಸ್ತರಕ್ಕೆ ಏರುತ್ತಿರಬೇಕು. ಆ ತಿಳಿವಳಿಕೆ ಮೂಡಿದ ನಾಡೇ ನಿಜವಾದ ಸ್ವತಂತ್ರ ನಾಡು. ದೇವರೆ, ನಿನ್ನ ಅನುಗ್ರಹದಿಂದ ನನ್ನ ನಾಡಿಗೆ ಅಂತಹ ಸ್ವಾತಂತ್ರ್ಯ ಲಭಿಸಲಿ ಎಂದು ಗುರುದೇವರು ಪ್ರಾರ್ಥಿಸುತ್ತಾರೆ.
ಗುರುದೇವರ ಬಯಕೆ ಸಫಲವಾಗಲಿ.
Amen!