Wednesday, July 30, 2008

ಹೃದಯಸಮುದ್ರ....ದ.ರಾ.ಬೇಂದ್ರೆ

ಬೇಂದ್ರೆಯವರಿಗೆ ಅರವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಐದು ಕವನಸಂಕಲನಗಳನ್ನು ಕೂಡಿಸಿ ಅರಳು-ಮರಳುಎನ್ನುವ  ಬೃಹತ್-ಕವನಸಂಕಲನವನ್ನು ಪ್ರಕಟಿಸಲಾಯಿತು. ಆ ಐದು ಸಂಕಲನಗಳು ಇಂತಿವೆ:

(೧) ಸೂರ್ಯಪಾನ
(೨) ಹೃದಯಸಮುದ್ರ
(೩) ಮುಕ್ತಕಂಠ
(೪) ಚೈತ್ಯಾಲಯ
(೫) ಜೀವಲಹರಿ

ಹೃದಯಸಮುದ್ರ ಕವನಸಂಕಲನದ ಮೊದಲ ಕವನವೂ ಹೃದಯಸಮುದ್ರವೇ. ಈ ಕವನದ ಬಗೆಗೆ ಬೇಂದ್ರೆಯವರು ಈ ರೀತಿ ಟಿಪ್ಪಣಿ ನೀಡಿದ್ದಾರೆ:ಶ್ರೀ ಅರವಿಂದರ ಅತಿಮಾನಸ ಸಾಕ್ಷಾತ್ಕಾರದಿಂದ ಬಂದ ಸಂಸಾರೋತ್ತಾರಕ ಕರೆಯನ್ನೇ ನೆನಿಸಿ ಈ ಭಾವಲಹರಿ ಉತ್ಕಟತೆಯನ್ನು ತಾಳಿದೆ.

ಮನುಷ್ಯನು ಉತ್ಕ್ರಾಂತಿ ಪಥದಲ್ಲಿ ಮುಂದುವರೆಯುತ್ತಿದ್ದಾಗ ಕೊನೆಯ ಘಟ್ಟದಲ್ಲಿ ಅವನ ಪ್ರಜ್ಞೆಯುಸುಪ್ರಮಾನಸಅವಸ್ಥೆಯನ್ನು ತಲುಪುವದಾಗಿ ಶ್ರೀ ಅರವಿಂದರು ಹೇಳುತ್ತಿದ್ದರು. (ಸ್ವತಃ ಅವರು ಈ ಅವಸ್ಥೆಯನ್ನು ತಲುಪಿದ್ದರು).

ಲೌಕಿಕ ಪ್ರಜ್ಞೆಯಿಂದ ಅಲೌಕಿಕ ಪ್ರಜ್ಞೆಗೆ ಸಾಗಲು ಅವರು ನೀಡಿದ ಕರೆಯನ್ನು ಕವಿಸಂಸಾರೋತ್ತಾರಕ ಕರೆಎಂದು ಕರೆದಿದ್ದಾರೆ. ಗುರುವಿನ ಕರೆಯ ಪ್ರಭಾವದಿಂದ ಕವಿಯಲ್ಲಿ ಭಾವವು ಉಮ್ಮಳಿಸಿದಾಗ, ಈ ಕವನ ಹೊರಹೊಮ್ಮಿದೆ.

 ಹೃದಯಸಮುದ್ರಕವನದ ಪೂರ್ತಿಪಾಠ ಇಂತಿದೆ:

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ಉಪ್ಪು ನೀರ ಕಡಲಲ್ಲೊ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದs,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.
…………………………………………..

ಕವಿಯು ಆಧ್ಯಾತ್ಮ ಸಾಧಕನ ಹೃದಯವನ್ನೇ ಒಂದು ಸಮುದ್ರಕ್ಕೆ ಹೋಲಿಸಿ ಕವನವನ್ನು ಪ್ರಾರಂಭಿಸಿದ್ದಾರೆ.
ಆದರೆ ಈ ಸಮುದ್ರವು ಸದ್-ಭಾವನೆಗಳಿಂದ ತುಂಬಿದ ಹೃದಯಸಮುದ್ರ. ಅಂತೆಯೇ ಇದು ಬಂಗಾರ ನೀರಿನ ಸಮುದ್ರ.

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಅನಂತ ದೂರದಲ್ಲಿರುವ ಆಕಾಶದ ಬಣ್ಣ ನೀಲಿ. ಈ ಸಮುದ್ರದ ತೀರಗಳ ಬಣ್ಣವೂ ನೀಲಿಯೇ. ಯಾಕೆಂದರೆ ದೈವಿಭಾವದ ಈ ಸಮುದ್ರವೂ ಸಹ ಅನಂತವಾಗಿದೆ. ಇದರ ತೀರವು ತೀರದಂತಹದು, ಇದಕ್ಕೆ ಅಂತವಿಲ್ಲ.
ಈ ಸಮುದ್ರದಲ್ಲಿ ಏಳುವ ಸತ್-ಭಾವನೆಯ ತೆರೆಗಳು ಎಂತಹವು? ಅವು ಮಿಂಚಿನ ಬಳಗ!
ಮಿಂಚು ಪ್ರಕಾಶಮಾನವಾಗಿರುತ್ತದೆ. ಅದರ ಕಣ್ಣು ಕೋರೈಸುವ ಬೆಳಕು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಆದರೆ ಕೊನೆಯಿಲ್ಲದ ಮಿಂಚಿನ ಬಳಗ? ಅದು ಅಪೂರ್ವ ಸಿದ್ಧಿಯ ಮಾನಸಿಕ ಸ್ಥಿತಿಯಾಗಿದೆ.

[ಶಂಕರಾಚಾರ್ಯರು ತಮ್ಮ ಸೌಂದರ್ಯಲಹರಿಯಲ್ಲಿ ತಪಸ್ವಿಗಳು ದೇವಿಯು ಕಾಣುವ ಬಗೆಯನ್ನೂ ಇದೇ ರೀತಿಯಾಗಿ ಬಣ್ಣಿಸಿದ್ದಾರೆ.

ತಟಿಲ್ಲೇಖಾ ತನ್ವೀಂ, ತಪನಶಶಿವೈಶ್ವಾನರಮಯೀಮ್
ನಿಷಣ್ಣಾಂ ಷಣ್ಣಾಂ ಅಪ್ಯುಪರಿ ಕಮಲಾನಾಂ ತವ ಕಲಾಮ್
ಮಹಾಪದ್ಮಾಟವ್ಯಾಂ ಮೃದಿತಮಲಮಾಯೇನ ಮನಸಾ
ಮಹಾಂತಃ ಪಶ್ಯಂತಃ ದಧತಿ ಪರಮಾಹ್ಲಾದ ಲಹರೀಮ್ .

(ಹೇ ದೇವಿ, ಷಟ್ಚಕ್ರಗಳ ಮೇಲಿರುವ ಸಹಸ್ರದಳಕಮಲದಲ್ಲಿರುವ , ಮಿಂಚಿನ ಬಳ್ಳಿಯಂತಹ ರೂಪವುಳ್ಳ, ಸೂರ್ಯ, ಚಂದ್ರ ಹಾಗು ಅಗ್ನಿ ಸ್ವರೂಪಳಾದ ನಿನ್ನನ್ನು ವಿಮಲ ಮನಸ್ಸಿನ ತಪಸ್ವಿಗಳು ನೋಡುತ್ತಾರೆ.)]

ಅನೇಕ ಸಾಧಕರ ಅನುಭಾವ ಕವನಗಳು ವೈಯಕ್ತಿಕವಾಗಿರುವದನ್ನು ನೋಡುತ್ತೇವೆ. ಆದರೆ ಬೇಂದ್ರೆಯವರ ಈ ‘ಹೃದಯಸಮುದ್ರ’ವು  ವೈಯುಕ್ತಿಕ ಸ್ವರೂಪದ್ದಾಗಿರದೆ ಸಾಮುದಾಯಕ ರೂಪವನ್ನು ಪಡೆದಿದೆ. ಅಂತೆಯೇ ಈ ತಮ್ಮ ಮಾನಸಸಮುದ್ರದಲ್ಲಿ ಅವರು ಎಲ್ಲ ಸಹಯಾತ್ರಿಕರ ನೆಲೆಗಳನ್ನು ಕಾಣುತ್ತಾರೆ.
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ.
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಊರಿದರೆ ಮಾತ್ರ ಊರು ಸಿಗುವದು. ಊರುವದು ಧೀರನಿಗೇ ಸಾಧ್ಯ. ಧೀರನೆಂದರೆ ಸಾಧಕನೇ ಸೈ. ಎಲ್ಲಾ ಸಾಧಕರ ಮಾನಸಸಮುದ್ರ ಒಂದೇ. ಅದು ಭಗವಂತನು ವಾಸಿಸುವ ಹಾಲ್ಗಡಲು.
ಈ ಹಾಲ್ಗಡಲ ವಾಸವನ್ನು ನೆನಸಿಕೊಂಡೇ ಪುರಂದರದಾಸರು ಹಾಡಿದರಲ್ಲವೆ?
ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ!

ಅಂತಹ ಹೃದಯಸಮುದ್ರದಲ್ಲಿ ನಾವುಅಂದರೆ ಸಾಧಕರು ಇದ್ದೇವೆ ; ನಮ್ಮೊಳಗೆ ತಾವುಅಂದರೆ ಭಗವಂತ ಇದ್ದಾನೆ. ಬೇಂದ್ರೆಯವರ ಅನೇಕಾರ್ಥ ಪದ ಬಳಕೆ ಇಲ್ಲಿಯೂ ಕಾಣುತ್ತದೆ. ನಾವುಪದದ ಮತ್ತೊಂದು ಅರ್ಥ
ದೋಣಿ ; ‘ತಾವುಅಂದರೆ ಠಾವು, ಅಂದರೆ.ಬಂದರು;ಅದು ಇಲ್ಲವಣ್ಣ ದೂರಾ.ಯಾಕೆಂದರೆ ಸಮುದ್ರ, ದೋಣಿ ಹಾಗು ಬಂದರು ಎಲ್ಲವೂ ಸಾಧಕನ ಹೃದಯದಲ್ಲಿಯೇ ಇವೆ. ಆದುದರಿಂದ ನೀಲ ಕ್ಷಿತಿಜದಷ್ಟು ದೂರವಾಗಿ ಕಾಣುವ ಈ ತೀರ ಸಾಧಕನಿಗೆ ದೂರವಲ್ಲ ಎಂದು ಬೇಂದ್ರೆ ಹೇಳುತ್ತಾರೆ. ಇದೇ ಅರ್ಥವನ್ನು ಪುರಂದರದಾಸರೂ ಸಹ ತಮ್ಮ ಹಾಡಿನಲ್ಲಿ ಹೇಳಿದ್ದಾರೆ: ಒಂದೇ ಕೂಗಳತೆ ಕಾಣೊ ವೈಕುಂಠಕೆ”.

ಇಂತಹ ಮಾನಸಸಮುದ್ರದಲ್ಲಿರುವ ಸಾಧಕನ ಮುಂದಿನ ಘಟ್ಟವೇನು ಎನ್ನುವದನ್ನು ಕವನದ ಎರಡನೆಯ ನುಡಿಯಲ್ಲಿ ಬೇಂದ್ರೆ ಈ ರೀತಿಯಾಗಿ ವರ್ಣಿಸಿದ್ದಾರೆ:

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ದಿವ್ಯಗಳಿಗೆ ಅಂದರೆ ದೇವರು ಕರೆ ನೀಡುತ್ತಿರುವ ಗಳಿಗೆ. ಈ ಕರೆ ಎಷ್ಟು ಉತ್ಕಟವಾದದ್ದೆಂದರೆ ಇದು ಸಮುದ್ರದ ತೆರೆಗಳಂತೆ ಬಂದು ನಮ್ಮನ್ನು ತನ್ನಲ್ಲಿ ಮುಳುಗಿಸುತ್ತದೆ. ಇದು ನೆರೆ ಅಂದರೆ ಮಹಾಪೂರದಂತೆ ಬಂದು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತದೆ. ಈ ಕರೆಯ ತೆರೆಯತ್ತ ನಮ್ಮ ಭಾವ ಹರಿಯುತ್ತದೆ.

ಬೇಂದ್ರೆಯವರ ಕ್ರಮಬದ್ಧತೆಯನ್ನು ಇಲ್ಲಿ ಗಮನಿಸಬೇಕು. ಮೊದಲು ಬರುವುದು ಸಣ್ಣ ಪ್ರಮಾಣದ ತೆರೆ. ಸಾಧಕನ ಸಾಧನೆ ಹೆಚ್ಚಿದಂತೆ ಇದು ನೆರೆಯಾಗುತ್ತದೆ. ನೆರೆ’ ಎನ್ನುವ ಪದಕ್ಕೆ mature ಎನ್ನುವ ಅರ್ಥವೂ ಇದೆ.

ಹರಿತsದ ಭಾವ’; ನಮ್ಮ ಜೀವಭಾವವು ಈ ಕರೆಯತ್ತ, ಕರೆ ಕೊಡುವವನತ್ತ ಹರಿಯುತ್ತದೆ; ‘ಹರಿತsಅಂದರೆ ಹರಿತವಾಗುತ್ತದೆ, sharp ಆಗುತ್ತದೆ ಎಂದೂ ಬೇಂದ್ರೆ ಹೇಳುತ್ತಾರೆ. ಭಗವಂತನ ಈ ಕರೆಯೊಳಗೆ ನಮ್ಮ ಜೀವ ಬೆರತು ಹೋಗುತ್ತದೆ. ನಮಗೆ ಸ್ವತಂತ್ರ ಆತ್ಮಭಾವ ಉಳಿಯುವದೇ ಇಲ್ಲ. ನಮ್ಮ ಆತ್ಮಗಳಿಗೆಲ್ಲ ಇದೇ ಸಮಯ, ದೇವಚೈತನ್ಯದಲ್ಲಿ ಬೆರೆತುಹೋಗಬೇಕಾದ ಸಮಯ.ಆತ್ಮಗಳಿಗೆಎಂದರೆ ಆತ್ಮದ ಗಳಿಗೆ’ ( Devine Moment) ಎಂದೂ ಅರ್ಥೈಸಬಹುದು. ಇನ್ನು ನಾವು ಈ ಪ್ರಕ್ರಿಯೆಯಲ್ಲಿ ಸಂಶಯ ಪಡುವ ಕಾರಣವೇ ಇಲ್ಲ. ಯಾಕೆಂದರೆ ಈ ಪ್ರಕ್ರಿಯೆಯ ಕಾರಣಪುರುಷನು ನಮ್ಮನ್ನು ಸಾಗರ ದಾಟಿಸುವ ಅಂಬಿಗನಾಗಿದ್ದಾನೆ. ಅವನು ನಾವು ನಂಬಬಹುದಾದ, ನಂಬಲೇಬೇಕಾದ ನಂಬಿಗ.
ದಾಸರು ಹೇಳುವಂತೆ: ಅಂಬಿಗ, ನಾ ನಿನ್ನ ನಂಬಿದೆ; ಜಗದಂಬಾರಮಣ ನಿನ್ನ ನಂಬಿದೆ.

ಮೂರನೆಯ ನುಡಿಯಲ್ಲಿ ಬೇಂದ್ರೆ ಈ ಸಮುದ್ರವು ಲೌಕಿಕ ಸಾಗರವಲ್ಲ, ಅಲೌಕಿಕ ಸಾಗರ ; ಅರ್ಥಾತ್ ಕ್ಷುದ್ರ ಭಾವನೆಗಳ ಸಾಗರವಲ್ಲ , ದೈವೀ ಭಾವನೆಗಳ ಸಾಗರ ಎನ್ನುವದನ್ನು ಸ್ಪಷ್ಟಪಡಿಸುತ್ತಾರೆ.

ಇದು ಉಪ್ಪು ನೀರ ಕಡಲಲ್ಲೊ ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಉಪ್ಪನೀರ ಕಡಲು ಅಂದರೆ ಪ್ರಾಪಂಚಿಕ ಕಡಲು. ಈ ಕಡಲು ಪ್ರಾಪಂಚಿಕವಲ್ಲ, ನಮ್ಮ ಒಡಲು ಅಂದರೆ ನಮ್ಮ ಅಂತಃಕರಣದಲ್ಲಿಯೇ ಈ ಕಡಲಿನ ನೆಲೆ ಇದೆ. ಈ ನೆಲೆಯೇ ಈ ಕಡಲಿನ ಸೆಲೆಯು. ಕಂಡಕಂಡವರಿಗೆ ಇದರ ಬೆಲೆ ಗೊತ್ತಾಗದು. ಒಳಗಣ್ಣಿನಿಂದ ಕಂಡವರಿಗಷ್ಟೇ ಇದರ ಮೌಲ್ಯದ ಅರಿವಾಗುವದು. ಸಿಕ್ಕಸಿಕ್ಕಲ್ಲಿ ಈ ಸೆಲೆ ಒಡೆಯಲಾರದು. ಸಾಧನೆಯಿಂದ ಪವಿತ್ರಗೊಂಡ ತಾಣದಲ್ಲಿ ಮಾತ್ರ ಈ ಸೆಲೆ ಚಿಮ್ಮುವದು. ಯಾಕೆಂದರೆ ಇದು ತೀರ್ಥಕ್ಷೇತ್ರವಿದ್ದಂತೆ. ಇದರ ಕಾಂತಿ ನಮಗೆ ಹೊಳೆಯಬೇಕಾದರೆ ನಮ್ಮ ಕಣ್ಣು ಅರಳಿರಬೇಕು. ಈ ಅರಳಿದ ಕಣ್ಣು ಈ ದಿವ್ಯತೀರ್ಥದ ಕಡೆಗೆ ಹೊರಳಬೇಕು. ಆಗ ಮಾತ್ರ ದಿವ್ಯಪ್ರಭೆಯ ಈ ಕಾರಂಜಿ ನಮ್ಮ ಕಣ್ಣಿಗೆ ಹೊಳೆಯುವದು.

ಈ ಸಾಕ್ಷಾತ್ಕಾರವು ಕವಿಯನ್ನು ಆನಂದದಿಂದ ತುಂಬಿದೆ. ಅಂತೆಲೇ ಆತ ಉದ್ಘೋಷಿಸುತ್ತಿದ್ದಾನೆ:

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದs,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.

ಯಾರು ಬಂದಿದ್ದಾರೆಯೋ, ಅಂದರೆ ದಿವ್ಯಕರೆಯನ್ನು ಕೇಳಿ ಬಂದಿದ್ದಾರೆಯೊಅವರ ಬಳಿಗೆ ಈ ಮಹಾಪ್ರವಾಹ ಬಂದಿದೆ. ಯಾರು ಇಲ್ಲಿ ಬಂದು ನಿಂತಿದ್ದಾರೊ ಅವರ ಪಕ್ಕದಲ್ಲಿಯೆ(=ನೆರೆಗು) ಬಂದಿದೆ. ಅವರ ನೆರೆಗೆ (ಅಂದರೆ ಅವರನ್ನು ಪಕ್ವಗೊಳಿಸುವ ಸಲುವಾಗಿ) ನಿಂತುಕೊಂಡಿದೆ. ನಿಂದವರ ನೆರೆಗೆ ಅನ್ನುವದಕ್ಕೆ ಮತ್ತೊಂದು ಅರ್ಥವನ್ನು ಹೇಳಬಹುದು. ಯಾರು ಬಾರದೆ ಅಲ್ಲಿಯೇ ನಿಂತಿದ್ದಾರೆಯೋ ಅವರ ಪಕ್ಕಕ್ಕೂ ಸಹ ಈ ನೆರೆ ಬಂದು ನಿಂತಿದೆ.

ಕರೆಸಾಧಕನಿಗೆ ಏನು ಹೇಳುತ್ತಿದೆ?
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.

‘ನವಮನುವು ಬಂದಿರುವನು’ ಎನ್ನುವ ಈ ಘೋಷಣೆ ಶ್ರೀ ಅರವಿಂದರ ಕಾಣ್ಕೆಯ ವಿವರಣೆ.
ಅರವಿಂದರು ಮಾನವನ ಉತ್ಕ್ರಾಂತಿಯಲ್ಲಿ ನಂಬಿಗೆ ಇಟ್ಟವರು. ಮನುಷ್ಯನು ತನ್ನ ಕೆಳಮಟ್ಟದ ಮಾನಸಿಕ ಸ್ಥಿತಿಯಿಂದ ಮೇಲೆದ್ದು ಸುಪ್ರಮಾನಸ (supra mental, super mind) ಸ್ಥಿತಿಯನ್ನು ತಲುಪಬೇಕು, ತಲುಪಿಯೇ ತೀರುತ್ತಾನೆ ಎನ್ನುವದು ಅವರ ಕಾಣ್ಕೆ. ಬೇಂದ್ರೆಯವರು ಅದನ್ನೇ ನವಮನುವಿನ ರೂಪಕದ ಮೂಲಕ ಹೇಳುತ್ತಿದ್ದಾರೆ.

ಶ್ರೀ ಅರವಿಂದರನ್ನು ಮಾನಸಿಕವಾಗಿ ತಮ್ಮ ಗುರುವಾಗಿ ಸ್ವೀಕರಿಸಿದ ಬೇಂದ್ರೆಯವರು, ಶಿಷ್ಯರ ಸಾಧನೆ ಹಾಗು ಗುರುವಿನ ಅನುಗ್ರಹವನ್ನು ಹೃದಯಸಮುದ್ರಕವನದ ಮೂಲಕ ಚಿತ್ರಿಸಿದ್ದಾರೆ.

ಹೃದಯಸಮುದ್ರಕವನದಲ್ಲಿ ಬೇಂದ್ರೆಯವರ ವೈಶಿಷ್ಟ್ಯವಾದ ಅನೇಕಾರ್ಥ ಪದಗಳಿವೆ. ಅವರ ಎಲ್ಲ ಕವನಗಳಲ್ಲಿರುವ ಕ್ರಮಬದ್ಧತೆ, ವಾಸ್ತವಿಕ ನಿರೂಪಣೆ ಇಲ್ಲಿಯೂ ಇದೆ. ಆದರೂ ಸಹ ಓದುಗನ ಹೃದಯಕ್ಕೆ ತಟ್ಟುವಂತೆ ಸಾಧಕನ ಮನಃಸ್ಥಿತಿಯನ್ನು ಬಿಂಬಿಸುವದರಲ್ಲಿ ಕವನ ಸೋತಿದೆ ಎನ್ನಬಹುದು.
ಕನ್ನಡದ ಬೇರೆ ಕೆಲವು ಅನುಭಾವ ಗೀತೆಗಳು ಎಷ್ಟು ಸಮರ್ಥವಾಗಿ ಈ ಕಾರ್ಯವನ್ನು ಮಾಡಿವೆ ಎನ್ನುವದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದು:

(೧) ಮಧುರಚೆನ್ನರು ಸಾಧಕನ ಹಂಬಲವನ್ನು ಹೀಗೆ ವರ್ಣಿಸುತ್ತಾರೆ:
ನಿಲ್ಲು ನಿಲ್ಲೆಲೆ ನವಿಲೆ, ನಿನ್ನ ಕಣ್ಣುಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ!
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ,
ತಾಳಲಾರದು ಜೀವ, ಹೇಳಬಾರೆ!

(೨) ಅಕ್ಕ ಮಹಾದೇವಿಯ ವಚನವಂತೂ ಪ್ರಸಿದ್ಧವಿದೆ.
ಈ ವಚನದಲ್ಲಿ ಸಾಕ್ಷಾತ್ಕಾರ ಪಡೆದ ಸಾಧಕನ ಚಿತ್ರವಿದೆ:
ಅಕ್ಕ ಕೇಳವ್ವ, ನಾನೊಂದ ಕನಸ ಕಂಡೆ
ಅಕ್ಕ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು……”

ಇದರ ಕಾರಣ ಸ್ಪಷ್ಟ. ಅನುಭಾವದ ಸಾಕ್ಷಾತ್ ಅನುಭವವಿಲ್ಲದೆ, ಅನುಭಾವ-ಕವನ ರಚಿಸಲಾಗದು. ಬೇಂದ್ರೆಯವರ ಮಾತಿನಲ್ಲಿಯೇ ಹೇಳುವದಾದರೆ:
ಕಟ್ಟೋರೆಲ್ಲ ಕವಿಗಳಲ್ಲಾ, ಹುಟ್ಟೋರೆಲ್ಲಾ ಭವಿಗಳಲ್ಲಾ,
ಕರು ಕೂಡ ಕಟ್ಟಿದ್ದುಂಟು, ಬಸವಣ್ಣನೂ ಹುಟ್ಟಿದ್ದುಂಟು.

Thursday, July 24, 2008

ಹುಬ್ಬಳ್ಳಿಯಾಂವಾ....ದ.ರಾ.ಬೇಂದ್ರೆ


ಹುಬ್ಬಳ್ಳಿಯಾಂವಾಇದು ಬೇಂದ್ರೆಯವರ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ಬೇಂದ್ರೆಯವರು ಬರೆಯಬಯಸಿದ ಒಂದು ನಾಟಕದಲ್ಲಿ ಈ ಹಾಡು ಬರುತ್ತದೆ. ಪ್ರಣಯಭಂಗದಿಂದ ಹುಚ್ಚಳಂತಾದ ಸೂಳೆಯೊಬ್ಬಳು ಹಾಡುವ ಹಾಡಿದು.
ಹಾಡಿನ ಪೂರ್ತಿಪಾಠ ಇಲ್ಲಿದೆ :

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ||


ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ
ಇನ್ನೂ ಯಾಕ……….


ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ……….


ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ
ಇನ್ನೂ ಯಾಕ……….


ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ……….


ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ……….


ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ
ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?
ಇನ್ನೂ ಯಾಕ ಬರಲಿಲ್ಲಾ ?

ಬೇಂದ್ರೆಯವರು ಈ ಗೀತೆಯನ್ನು ೧೯೩೫ರಲ್ಲಿ ರಚಿಸಿದರು.
ಆ ಕಾಲದ ಸಮಾಜವ್ಯವಸ್ಥೆ ಹಾಗು ಜನರ ಜೀವನ ಪದ್ಧತಿಗಳು ಈ ಗೀತೆಗೆ ಹಿನ್ನೆಲೆಯಾಗಿ ನಿಂತಿವೆ.
ವ್ಯಾಪಾರ ಕೇಂದ್ರವಾದ ಹುಬ್ಬಳ್ಳಿಯಲ್ಲಿಯ ಒಬ್ಬ ಸಿರಿವಂತ ರಸಿಕ ಹುಡುಗ ವಾರದಲ್ಲಿ ಮೂರು ಸಾರೆ ಧಾರವಾಡಕ್ಕೆ ವ್ಯಾಪಾರದ ನೆವ ಮಾಡಿಕೊಂಡು ಹೋಗುತ್ತಿರುತ್ತಾನೆ. ಅಲ್ಲಿ ಅವನ ಶೋಕಿಯ ಹೆಣ್ಣುಇದ್ದಾಳೆ. ಆದರೆ ಈ ಹುಡುಗ ಕೇವಲ ಚಟಕ್ಕಾಗಿ ಹೆಣ್ಣುಗಳನ್ನು ಹುಡುಕುವವನಲ್ಲ ; ಈತನದು ರಸಿಕ ಹೃದಯ. ಒಮ್ಮೆ ಇವನಿಗೂ ಅವಳಿಗೂ ಯಾವುದೋ ಕಾರಣಕ್ಕಾಗಿ ಮನಸ್ತಾಪವಾಗುತ್ತದೆ. ಆತ ಇವಳಿದ್ದಲ್ಲಿ ಮತ್ತೆ ಕಾಲು ಹಾಕುವದಿಲ್ಲ. ಅವಳು ಈತನ ವಿರಹದಲ್ಲಿ ಹುಚ್ಚಿಯಂತಾಗಿ ಹಾಡಿದ ಹಾಡಿದು.

ಬೇಂದ್ರೆಯವರು ಬರೆಯುವ ಎಲ್ಲ ಕವನಗಳಲ್ಲಿಯೂ ಒಂದು ಕ್ರಮಬದ್ಧತೆ ಇರುತ್ತದೆ. ಈ ಕವನದಲ್ಲಿಯೂ ಸಹ ಅಂತಹ ಕ್ರಮಬದ್ಧತೆಯನ್ನು ಕಾಣಬಹುದು.

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರಸರತಿ ಬಂದು ಹೋದಾಂವಾ
ಎಂದು ಹಪಹಪಿಸುವ ವಿರಹಿಣಿಯ ವರ್ಣನೆಯಿಂದ ಕವನ ಪ್ರಾರಂಭವಾಗುತ್ತದೆ.

ಈ ಭ್ರಮಿಷ್ಠ ವಿರಹಿಣಿಯ ಒಳಗಣ್ಣಿಗೆ ಮೊದಲು ಕಾಣುವದು ಅವನ ಶಾರೀರಕ ನೋಟ.
ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ

ಈ ಸಾಲುಗಳು ಆ ಸೆಟ್ಟರ ಹುಡುಗನ ಡೌಲನ್ನು , ಅವನ ರಸಿಕತೆಯ ಬಾಹ್ಯಲಕ್ಷಣಗಳನ್ನು ತೋರಿಸುವವು.
ಆದರೆ ಅವನ ರಸಿಕತೆ ಕೇವಲ ಬಾಹ್ಯಲಕ್ಷಣಗಳಿಗೆ ಸೀಮಿತವಾಗಿಲ್ಲ. ಅವನಲ್ಲಿ ರಸಿಕಹೃದಯವಿದೆ. ಈ ಹೆಣ್ಣು ಅವನ ಪಾಲಿಗೆ ಕೇವಲ ಸೂಳೆಯಲ್ಲ. ಅವಳೊಡನೆ ಆತ ಚೇಷ್ಟೆಯಿಂದ ಮಾತನಾಡುತ್ತಾನೆ ; ಹಾಡು ಕಟ್ಟುತ್ತಾನೆ.

ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ

ಇಂತಹ ರಸಿಕತೆಗೆ ಯಾವ ಹೆಣ್ಣು ಮರಳಾಗಲಿಕ್ಕಿಲ್ಲ? ಇಂತಹ‘ಉದಾರ ಗಿರಾಕಿ’ಯಿಂದ ಒಬ್ಬ ಸೂಳೆ ಹಣಕ್ಕಿಂತ ಹೆಚ್ಚಾದ   ‘ಗೆಣೆತನ’ವನ್ನು ಬಯಸುವುದು ಸಹಜ. ಇವನೋ ಭರವಸೆಗಳ ಸರದಾರ! ಕನಸುಗಳ ಸೌದಾಗರ್!

ಈ ಕವನದ ನಾಯಕಿಯು ಸಾದಾ ಸೂಳೆಯೇನಲ್ಲ ; ಇವಳು ಯಲ್ಲಮ್ಮನ ಜೋಗತಿ”. ಆದರೇನು? ಇವಳು ಯಾರ ಹೆಂಡತಿಯೂ ಆಗಲಾರಳು. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಅವಳು ಎರಡನೆಯ ನುಡಿಯಲ್ಲಿ ಹಾಡಿಕೊಂಡಿದ್ದಾಳೆ :
ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ

ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. ತಾಳಿಯ ಮಧ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ಗರತಿಯಾಗುವ ಈ ಅಸಾಧ್ಯ ಕನಸನ್ನು(ಹಾಸ್ಯದಲ್ಲಿಯೇ ಆಗಲಿ)ಆತ ಅವಳಿಗೆ ಕಟ್ಟಿಕೊಡುತ್ತಾನೆ.

ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ

ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. (ಅರಿಶಿಣ, ಕುಂಕುಮಗಳು). ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ಆತ ತೋರುತ್ತಾನೆ. ಈ ಮಾತು ಚೇಷ್ಟೆಯಲ್ಲಿ ಆಡಿದ ಮಾತೇ ಆಗಿರಬಹುದು. ಆದರೆ ಅವಳಲ್ಲಿರುವ ಅವನ ಖಾಯಿಶ್ ಬರಿ ಚೇಷ್ಟೆಯದಲ್ಲ. ಮುಂದಿನ ಎರಡು ಸಾಲುಗಳಲ್ಲಿ ಇದು ವ್ಯಕ್ತವಾಗುತ್ತದೆ :

ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ

ತನ್ನ ಮೊದಲ ಅಡ್ಡಹೆಜ್ಜೆಗಳನ್ನು ಈ ಸಿರಿವಂತ ತರುಣನು ಕಸುಬಿನವರ (=professional prostitutes) ಮನೆಗಳಲ್ಲಿ ಇರಿಸಿದ್ದಾನೆ ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (=ದೇವರಿಗೆ ಬಿಟ್ಟವರು) ಜೊತೆಯಲ್ಲಿ ರಾತ್ರಿಗಳನ್ನು ಕಳೆದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯರ ಜೊತೆಗೆ ಇವನ ಪ್ರಣಯ ಪ್ರಾರಂಭವಾಗಿದೆ.

ಅಂತಹ ಜೋಗತಿಯರೆಲ್ಲರಲ್ಲಿ ಇವಳೇ ಶ್ರೇಷ್ಠಳು ಎಂದು ಆತ ಇವಳನ್ನು ಉಬ್ಬಿಸುತ್ತಾನೆ. ಈ ರಸಿಕನಿಗೆ ಹೆಣ್ಣನ್ನು ಹೊಗಳಿ ಮರಳು ಮಾಡುವ ಕಲೆ ಚೆನ್ನಾಗಿ ಸಿದ್ಧಿಸಿದ ಹಾಗೆ ಕಾಣುತ್ತದೆ.

ಇಷ್ಟೆಲ್ಲ ಹೊಗಳುವ ಗಂಡಸಿನ ಮೇಲೆ (--ಆತ ಬರೇ ಗಿರಾಕಿಯಾಗಿದ್ದರೂ ಸಹ--) ಯಾವ ಹೆಣ್ಣಿಗೆ ಒಲುಮೆ ಮೂಡಲಿಕ್ಕಿಲ್ಲ? ಅಂತಲೇ ಅವಳು ಈತನನ್ನು ಇನ್ನೂ ಇರು, ಯಾತಕ್ಕೆ ಇಷ್ಟು ಬೇಗನೇ ಹೊರಡುತ್ತೀಯಾ?” ಅಂತ ಜುಲುಮೆ ಮಾಡುತ್ತಾಳೆ. 
("ಆಜ ಜಾನೇಕಿ ಜಿದ್ ನಾ ಕರೋ, ಆಜ ಪೆಹಲೂ ಮೇ ಐಸೇ ಹಿ ಬೈಠೇ ರಹೋ"...ಫರೀದಾ ಖಾನ್ನುಮ್ ಅವರು ಹಾಡಿದ ಗೀತೆ).

ಆತ ಘಾಟಿ ಹುಡುಗ ! ಇವಳ ಬಲುಮೆಗೆ care ಮಾಡದೆ ಎದ್ದು ಬಿಡುತ್ತಾನೆ. (ಅಥವಾ ಹಾಗೆ ನಟಿಸುತ್ತಾನೆ). ಅವಳು ಖಿನ್ನಳಾಗಿ ಅವನತ ಮುಖಳಾದ ಕ್ಷಣವೇ ಈತ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಪ್ರಸನ್ನಗೊಳಿಸುತ್ತಾನೆ.

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ
(ಹೆಣ್ಣಿನ ಮನಸ್ಸನ್ನು --ಅವಳು ಸೂಳೆಯೇ ಆಗಿರಲಿ--ಈತ ನೋಯಿಸಲಾರ.)

ಮುಂದಿನ ಸಾಲುಗಳಲ್ಲಿ ನಾಯಕಿಯು ಆತನ ರಸಿಕ ಚೇಷ್ಟೆಗಳನ್ನು ನೆನಪಿಸಿಕೊಳ್ಳುತ್ತಾಳೆ :
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ”.

ಬೇಂದ್ರೆ ಇಲ್ಲಿ ತಮ್ಮ ಅನ್ಯಾದೃಶ ಚಮತ್ಕಾರೋಕ್ತಿಯನ್ನು ತೋರಿಸಿದ್ದಾರೆ.
ತನ್ನ ಬಗಲಬಂಡಿಯ ಕಿಸೆಯಲ್ಲಿ ಕೈಹಾಕಿ ಹಿಡಿಗಟ್ಟಲೆ ರೊಕ್ಕ ತಗದಂತೆ ನಟಿಸುವ ನಾಯಕ, ಈ ಅಮಾಯಕ ಹೆಣ್ಣು ಕೈಮುಂದೆ ಮಾಡಿದಾಗ ತಟ್ಟನೆ ಅವಳ ಕೈಯನ್ನು ಹಿಡಿದುಕೊಳ್ಳುತ್ತಾನೆ.
ಬರೀ ಶಬ್ದಚಮತ್ಕಾರ ಮಾತ್ರವಲ್ಲ ; ಇದು ಕಲ್ಪನಾಚಮತ್ಕಾರದ ಪರಾಕಾಷ್ಠೆಯೂ ಹೌದು.
ಒಬ್ಬ ಸೂಳೆ ಮತ್ತು ಅವಳ ಗಿರಾಕಿಯ ನಡುವೆ ನಡೆಯುವ ಇಂತಹ ಪ್ರಣಯದೃಶ್ಯ ಯಾವ ಕವಿಯ ಕಲ್ಪನೆಗೆ ಹೊಳೆಯಲು ಸಾಧ್ಯ ?

ಏನೇ ಮಾಡಿದರೂ, ಏನೇ ಹೇಳಿದರೂ ಈಕೆ ಅವನಿಗೆಷ್ಟರವಳು? ಅವಳು ಕೇವಲ ವಿನೋದವಸ್ತು ಮಾತ್ರ ಎನ್ನುವದೆ ವಾಸ್ತವತೆ ಅಲ್ಲವೆ? ಈ ವಾಸ್ತವತೆಯನ್ನೆ ಆತ ಎಷ್ಟು ವಿನೋದದಿಂದ ಹೇಳುತ್ತಾನೆ !
ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ”.

ಹೀಗೆಂದರೆ ಅವಳಿಗೆ ಸಿಟ್ಟು ಬರದಿದ್ದೀತೆ?
ಮುನಿಸಿಕೊಂಡ ಇವಳನ್ನು ರಮಿಸುವದು ಅವನಿಗೊಂದು ಆಟ.
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ”.

ಆದರೆ ಇಷ್ಟಕ್ಕೆಲ್ಲ ಇವಳು ಒಲಿಯುವವಳಲ್ಲ. ಆಗ ಆತ ಅವಳಿಗೆ ಕೊಡುವದು , ಸೂಳೆಯೊಬ್ಬಳಿಗೆ ಸಿಗಬಹುದಾದ ಅತಿ ಹೆಚ್ಚಿನ ಬೆಲೆ :- ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ

ಹೆಣ್ಣಿನ ಬೆರಳಿಗೆ ಉಂಗುರ ತೊಡಸುವದು ಅವಳ ಮದುವೆ ನಿಶ್ಚಯವಾಗುವಾಗ. ಅವಳಿಗೆ ಮೂಗುತಿ ತೊಡಿಸುವದು ಅವಳ ಮದುವೆಯ ಸಮಯದಲ್ಲಿ.

ಆತ ಅವಳಿಗೆ ಇವನ್ನೇ ಕೊಡುತ್ತಾನೆ. ಅವಳಿಗೆ ಗೊತ್ತು : ಈ ಉಂಗುರ, ಈ ಮೂಗುತಿ ಅವಳ status ಅನ್ನು ಬದಲಾಯಿಸುವದಿಲ್ಲ. ಅವಳು ಸಾಯುವವರೆಗೂ ಸೂಳೆಯೇ.
ಆದರೂ ಸಹ, token ಅವನ ಬಗೆಗಿರುವ ಅವಳ ಒಲುಮೆಯನ್ನು ಗಾಢವಾಗಿಸುತ್ತದೆ.
ಅವನೀಗ ಅವಳ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ :ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ

ಬೇಂದ್ರೆಯವರು ಕನ್ನಡದ ಪಡೆನುಡಿಗಳನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಸಾಲು ಅತ್ಯುತ್ತಮ ನಿದರ್ಶನವಾಗಿದೆ.

ಅವನ ಬಗೆಗಿನ ಅವಳ ಒಲವಿನ ಭಾವನೆಗಳು ಈ ಮುಂದಿನ ನುಡಿಯಲ್ಲಿ ವ್ಯಕ್ತವಾಗುತ್ತವೆ :

ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ

ಈತ ಹುಟ್ಟುತ್ತಲೆ ನಗಿಕ್ಯಾದಗಿ ಮುಡಿಸಿಕೊಂಡು ಬಂದಂಥವನು, ಸತತ ನಗೆಮೊಗದವನು. ಹೆಣ್ಣುಗಳ ಪ್ರೀತಿ ಸಂಪಾದಿಸುವದು ಇವನಿಗೊಂದು ಆಟ.ಯಾಕೆಂದರೆ ಹೆಣ್ಣುಗಳೇ ಇವನ ಮೇಲೆ ಮುಗಿ ಬೀಳುತ್ತವೆ. ಇಂಥವನಿಂದ ಇಷ್ಟೊಂದು ಪ್ರೀತಿ ಪಡೆದದ್ದೇ ತನ್ನದೊಂದು ದೊಡ್ಡ ಭಾಗ್ಯ.
ಇವನ ಹೆಂಡತಿಯಾಗುವ ಭಾಗ್ಯ ತನಗೆ ಯಾವ ಜನ್ಮದಲ್ಲೂ ಸಾಧ್ಯವಿಲ್ಲ.
ಹಾಗಿದ್ದರೆ, next best?
ತನ್ನೆಲ್ಲ ಜನ್ಮಗಳಲ್ಲಿಯೂ ಈತನೇ ತನಗೆ ಗೆಣೆಯನಾಗಿ ಸಿಕ್ಕರೆ ಸಾಕು.
ಅದು ಆತ ಕೊಡುತ್ತಿರುವ ವಚನ !
ತನ್ನ ಅತ್ಯಂತ ಪ್ರೀತಿಯ ಗೆಣತಿಯ ಪಟ್ಟ ಇವಳಿಗೇ !
(ಶರೀರದ ಮೇಲಿನ ಕೆಂಪು ಅಥವಾ ಕಪ್ಪು moleಗೆ ಗೆಳತಿಎಂದು ಕರೆಯುತ್ತಾರೆ).

ಇಂತಹ ನೆಚ್ಚಿನ ಗೆಣೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೊ ಏನೊ? ಆತ ಇವಳ ಕಡೆಗೆ ಬೆನ್ನು ತಿರುಗಿಸಿದ್ದಾನೆ. ಅವನ ದರುಶನವೇ ಇಲ್ಲ. ತನ್ನೆಲ್ಲ ಹ್ಯಾಂವ ಬಿಟ್ಟು ಅವಳು ಇವನಿಗಾಗಿ ಹಲಬುತ್ತಾಳೆ, ಹಂಬಲಿಸುತ್ತಾಳೆ. ಹುಚ್ಚಿಯಂತೆ ಹಾಡಿಕೊಳ್ಳುತ್ತ ಹಾದಿ-ಬೀದಿಗಳಲ್ಲಿ ತಿರುಗುತ್ತಾಳೆ :

ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ
ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?
ಇನ್ನೂ ಯಾಕ ಬರಲಿಲ್ಲಾ ?”

ಆತ ತನ್ನ ಮೇಲಿನ ಸಿಟ್ಟನ್ನು ಮರೆತು ಬಂದಾನೇ? ಇಲ್ಲಿ ಮತ್ತೊಂದು ವ್ಯಂಗ್ಯವನ್ನು ಗುರುತಿಸಬೇಕು. ಈತ ಸೆಟ್ಟರ ಹುಡುಗ. ಈತ ಸೆಡುವು ಮಾಡಿಕೊಂಡು ಹೋದರೆ ಈಕೆಯ ಬದುಕು ನಡೆಯುವದು ಹೇಗೆ? ಅದು ಕಟು ವಾಸ್ತವ. ಆತನ ಮೇಲೆ ಅವಳಿಗೆ ಇರುವ ನೆಚ್ಚು ಒಂದು ಭಾಗವಾದರೆ, ತನ್ನ ಉಪಜೀವನಕ್ಕಾಗಿ ಅಂತಹ ಗಿರಾಕಿ ಬೇಕಲ್ಲ ಎನ್ನುವ ದುಗುಡವು ಮತ್ತೊಂದು ಭಾಗವಾಗಿದೆ. ಆದುದರಿಂದಲೇ ಅವಳು ಹುಚ್ಚಿಯಾಗಿ ಹುಡುಕುತ್ತಿದ್ದಾಳೆ:

ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ


ಬೇಂದ್ರೆಯವರ ಕಲ್ಪನೆ ಅಗಾಧವಾಗಿದ್ದರೂ ಸಹ, ಅವರ ಕವನಗಳು ಯಾವಾಗಲೂ ವಾಸ್ತವತೆಯ ಅಂಚನ್ನು ದಾಟುವದಿಲ್ಲ. ಹೀಗಾಗಿ ಅವರ ಅನೇಕ ಕವನಗಳಿಗೆ documentary value ಬರುತ್ತದೆ.ಹುಬ್ಬಳ್ಳಿಯಾಂವಾಕವನದಲ್ಲಿ ವಾಸ್ತವತೆಯ ಇಂತಹ ನೋಟಗಳನ್ನು ಕಾಣಬಹುದು. ಉದಾಹರಣೆಗೆ ಸೂಳೆಯರ ಶ್ರೇಣೀಕರಣ:
ಮೊದಲಲ್ಲಿ ಕಸಬೆಯರು, ಅವರ ಮೇಲೆ ಬಸವಿಯರು, ಅವರಿಗಿಂತಲೂ ಮೇಲಿನ ಸ್ಥಾನದಲ್ಲಿ ಜೋಗತಿಯರು.

ಬೇಂದ್ರೆಯವರ ಕವನಗಳಲ್ಲಿ ಬರುವ ಆಡುನುಡಿಯ ಪದಪುಂಜಗಳು, ಅವರ ಕವನಗಳಿಗೆ ಹೆಚ್ಚಿನ ಸೊಬಗನ್ನು ಕೊಡುತ್ತವೆ. ಇದೇ ಕವನದಲ್ಲಿಯ ಕೆಲವು ಸಾಲುಗಳನ್ನು ಉದಾಹರಣೆಗಳೆಂದು ನೋಡಬಹುದು :

ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ

 ಹುಬ್ಬಳ್ಳಿಯಾಂವಾ ಕವನವು ತೋರಿಕೆಗೆ ರಂಜನೀಯ ಕವನವಾಗಿದೆ. ಬೇಂದ್ರೆಯವರ ಪದಚಮತ್ಕಾರ, ಅಸೀಮ ಕಲ್ಪನೆ ಇಲ್ಲಿಯೂ ಧಾರಾಳವಾಗಿ ಬಳಕೆಯಾಗಿವೆ. ಕಲ್ಪನೆಯು ಎಲ್ಲಿಯೂ ವಾಸ್ತವವನ್ನು ಅತಿಕ್ರಮಿಸದ ಎಚ್ಚರಿಕೆಯು ಇಲ್ಲಿದೆ. ಒಂದು ಕಾಲದ ಸಮಾಜವ್ಯವಸ್ಥೆಯ ದಾಖಲಾತಿ ಇಲ್ಲಿದೆ. ಆಡುನುಡಿಯನ್ನು ಸಮರ್ಥವಾಗಿ ಉಪಯೋಗಿಸುವ ಪ್ರತಿಭೆ ಇಲ್ಲಿದೆ. ಇದೆಲ್ಲವನ್ನೂ ಮೀರಿದ ಅಂಶವೆಂದರೆ ಈ ಗೀತೆಯ ಆಂತರ್ಯದಲಿ ಅಡಗಿದ ಸೂಳೆಯೊಬ್ಬಳ ಅಳಲು, ಬಳಸಿ ಬಿಸಾಡಬಹುದಾದ ಹೆಣ್ಣುಜೀವಿಯೊಂದು ತನ್ನ ಭಾವನೆಗಳಿಗೆ ಸ್ಪಂದಿಸುವ ಪರಿ.
ಹುಬ್ಬಳ್ಳಿಯಾಂವಾಕವನವು ಸಖೀಗೀತಕವನಸಂಕಲನದಲ್ಲಿ ಅಡಕವಾಗಿದೆ.