Saturday, February 28, 2009

ಕೃಷ್ಣ ಗೋಪಾಳ ಜೋಶಿ--ಅಗ್ನಿಸಂದೇಶ

ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ ಎಂದು ಹೇಳಬಹುದು. ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಈ ಮಾತು ಸರಿಯಾಗಿ ಅನ್ವಯಿಸುತ್ತದೆ. ದೇಶದ ಒಳಿತಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಅನೇಕ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದೂ ನಮಗೆ ಅದರ ಅರಿವೇ ಇಲ್ಲದವರಂತೆ ನಾವು ಬದಕುತ್ತಿದ್ದೇವೆ.

ಶ್ರೀ ಕೃಷ್ಣ ಗೋಪಾಳ ಜೋಶಿಯವರನ್ನು ನಾನು ಮೊದಲ ಸಲ ನೋಡಿದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ೧೪ ವರ್ಷಗಳ ಬಳಿಕ. ಆಗ ಇವರು ೫೨ ವರ್ಷದವರು. ಧಾರವಾಡದ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿದ್ದರು. ಸುಮಾರು ಆರಡಿ ಎತ್ತರದ ದೃಢಕಾಯ, ತಲೆಗೆ ಗಾಂಧಿ ಟೊಪ್ಪಿಗೆ, ಶಿಸ್ತು ಹಾಗೂ ಮಮತೆಗಳನ್ನು ಸೂಸುವ ಮುಖಭಾವ.
ಈ ವ್ಯಕ್ತಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವ್ಯಕ್ತಿ ಎಂದು ಆ ಶಾಲೆಯ ವಿದ್ಯಾರ್ಥಿಗಳಿಗಾಗಲೀ, ಅಲ್ಲಿಯ ಅನೇಕ ಶಿಕ್ಷಕರಿಗಾಗಲೀ ಗೊತ್ತೇ ಇರಲಿಲ್ಲ.

ಕೃಷ್ಣ ಗೋಪಾಳ ಜೋಶಿಯವರು ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಸಾಮಾನ್ಯ ಶಕೆ ೧೯೦೯ರಲ್ಲಿ ಜನಿಸಿದರು. ಏಳನೆಯ ಇಯತ್ತೆಯಲ್ಲಿ ತೇರ್ಗಡೆಯಾದ ಬಳಿಕ, ಇವರು ವೈದಿಕೀ ವೃತ್ತಿ ಮಾಡಿಕೊಂಡಿರಲಿ ಎನ್ನುವದು ಇವರ ಹಿರಿಯರ ಅಭಿಪ್ರಾಯವಾಗಿತ್ತು. ಆದರೆ ಕೃಷ್ಣ ಜೋಶಿಯವರದು ಬಾಲ್ಯದಿಂದಲೂ ಸಾಹಸದ ಸ್ವಭಾವ. ಮನೆ ಬಿಟ್ಟು ವಿಜಾಪುರಕ್ಕೆ ಓಡಿ ಹೋದರು. ಮಲ ಅಕ್ಕನ ಮನೆಯಲ್ಲಿ ಇದ್ದುಕೊಂಡು, ವಾರಾನ್ನ ಹಚ್ಚಿಕೊಂಡು ವಿದ್ಯಾಭ್ಯಾಸ ಸಾಗಿಸಿದರು.

ವಿಜಾಪುರದಲ್ಲಿ ಇವರ ಪಾಲಕರು ತೀರಿಕೊಂಡಿದ್ದರಿಂದ ಮಲ ಅಕ್ಕನ ಜೊತೆಗೆ ಇವರೆಲ್ಲ ಧಾರವಾಡಕ್ಕೆ ಬರಬೇಕಾಯಿತು. ಅಲ್ಲಿ ಕರ್ನಾಟಕ ಹಾಯ್‍ ಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಇದು ಜೋಶಿಯವರ ಜೀವನದಲ್ಲಿಯ turning point.

ಕರ್ನಾಟಕ ಹಾಯ್‍ಸ್ಕೂಲ ಎಂದರೆ ಸ್ವಾತಂತ್ರ್ಯ ಹೋರಾಟಗಾರರ ಕಮ್ಮಟವಾಗಿತ್ತು. ಶಿನೋಳಿಕರ ಎನ್ನುವ ತರುಣ ವಿಜ್ಞಾನಿ ಬೆಂಗಳೂರಿನಲ್ಲಿಯ ತಾತಾ ವಿಜ್ಞಾನ ಕೇಂದ್ರದಲ್ಲಿಯ ತಮ್ಮ ಆಕರ್ಷಕ ವೈಜ್ಞಾನಿಕ ಹುದ್ದೆಯನ್ನು ತ್ಯಜಿಸಿ, ಈ ಶಾಲೆಯ ಮುಖ್ಯಾಧ್ಯಾಪಕರಾಗಲು ಬಂದಿದ್ದರು. ಇದಲ್ಲದೆ ಧಾರವಾಡದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಡಾ^. ಕಬ್ಬೂರ, ಶ್ರೀ ದ.ಪ. ಕರಮರಕರ (--ಇವರು ಸ್ವಾತಂತ್ರ್ಯಾನಂತರ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು--), ಶ್ರೀ ಮುಧೋಳಕರ ಇವರೆಲ್ಲ ಈ ಸಂಸ್ಥೆಯ ಕಾರ್ಯಕರ್ತರು. “ಗುದ್ಲಿ ಪಾರ್ಟಿ” ಎನ್ನುವ ಗುಂಪೊಂದನ್ನು ನಿರ್ಮಿಸಿಕೊಂಡು ಇವರೆಲ್ಲ ತಮ್ಮ ಕೈಗಳಿಂದಲೇ ಶಾಲೆಗೆ ಅವಶ್ಯಕವಿರುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. (ಖ್ಯಾತ ಸಾಹಿತಿ ಹಾಗೂ ಕೇಂದ್ರ ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಶ್ರೀ ಗಂಗಾಧರ ಚಿತ್ತಾಳರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಅವರೂ ಸಹ ಇಂತಹ ಸಾಂಸ್ಕೃತಿಕ-ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೇ. ಶ್ರೀ ಚಿತ್ತಾಳರು ಆಗಿನ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ಉತ್ತೀರ್ಣರಾದರು.)

ಕೃಷ್ಣ ಗೋಪಾಳ ಜೋಶಿಯವರು ಈ ಧುರೀಣರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ೧೯೨೮ರಲ್ಲಿ ಡಾ^. ನಾ.ಸು. ಹರ್ಡೀಕರರ ಸೇವಾದಳ ಕಾರ್ಯಕರ್ತರಾಗಿ ಸೇವಾದಳ ಶಿಬಿರದಲ್ಲಿ ಭಾಗವಹಿಸಿದರು.

ಎಪ್ರಿಲ್ ೧೯೩೦ರಲ್ಲಿ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು. ಜೋಶಿಯವರು ಹಾಗೂ ಹೋರಾಟಕ್ಕಿಳಿದ ಇತರ ತರುಣರು ಸುಮಾರು ೪೦ ಕಿಲೊಮೀಟರ ದೂರದ ಬೆಣ್ಣಿಹಳ್ಳಕ್ಕೆ ಹೋಗಿ, ಉಪ್ಪು ತಯಾರಿಸಿ ತಂದು ಧಾರವಾಡದಲ್ಲಿ ಹಂಚಿದರು.

೧೯೩೧ರಲ್ಲಿ ಅಸಹಕಾರ ಚಳುವಳಿ ತಾರಕಕ್ಕೇರಿತು. ತಮ್ಮ ಜೊತೆಗಾರರೊಂದಿಗೆ ವಿದೇಶಿ ವಸ್ತ್ರಗಳ ವಿರುದ್ಧ ಪಿಕೆಟಿಂಗ್ ಪ್ರಾರಂಭಿಸಿದರು. ಅದೇ ಕಾಲದಲ್ಲಿ ಸೆರೆ-ಸಿಂದಿ ಅಂಗಡಿಗಳಿಗೆ ಬಹಿಷ್ಕಾರ ಹಾಕಲಾಯಿತು. ಜೋಶಿಯವರು ಹಾಗೂ ಜೊತೆಗಾರರು ಸಿಂದಿ ಅಂಗಡಿಗಳ ಎದುರಿಗೆ ಪಿಕೆಟಿಂಗ ಚಾಲೂ ಮಾಡಿದರು. ಅಷ್ಟೇ ಅಲ್ಲದೆ, ಶಿಂದಿಯ ಉತ್ಪಾದನೆಯನ್ನೇ ನಿಲ್ಲಿಸುವ ಉದ್ದೇಶದಿಂದ ಸಿಂದಿ ಮರಗಳನ್ನು ಕಡಿದು ಹಾಕತೊಡಗಿದರು. ಧಾರವಾಡದ ಜಕ್ಕಣಿ ಬಾವಿಯ ಬಳಿಯಲ್ಲಿ ನಡೆದ ಪಿಕೆಟಿಂಗ ಸಮಯದಲ್ಲಿ ಜರುಗಿದ ಪೋಲೀಸ್ ಗೋಳೀಬಾರಿನಲ್ಲಿ ಮಲಿಕಸಾಬ ಎನ್ನುವ ಹುಡುಗನ ಬಲಿದಾನವಾಯಿತು.


೧೯೩೧ರಲ್ಲಿ, ಶ್ರೀ ಕರಮರಕರರು ಅಂಕೋಲಾ ತಾಲೂಕಿನಲ್ಲಿ ಕರನಿರಾಕರಣೆ ಚಳುವಳಿಯನ್ನು ಸಂಘಟಿಸಿದರು. ಜೋಶಿಯವರು ಅಲ್ಲಿ ಅವರ ಸಹಾಯಕರಾಗಿ ಕೆಲಸ ಮಾಡಿದರು. ಅಂಕೋಲಾ ತಾಲೂಕಿನ ಈ ಕರನಿರಾಕರಣ ಚಳುವಳಿಯನ್ನು ಸರದಾರ ವಲ್ಲಭಭಾಯಿ ಪಟೇಲರು ಬಾರ್ಡೋಲಿಯಲ್ಲಿ ಸಂಘಟಿಸಿದ ಚಳುವಳಿಗೆ ಹೋಲಿಸಲಾಗುತ್ತದೆ. ಅಂಕೋಲಾ ತಾಲೂಕಿನ ಭೂಮಾಲೀಕರು ಹಾಗೂ ಗೇಣಿದಾರರು ಒಟ್ಟಾಗಿಯೇ ಈ ಚಳುವಳಿಯಲ್ಲಿ ಭಾಗವಹಿಸಿದರು. ಪೋಲೀಸರಿಂದ ಕ್ರೂರ ಅತ್ಯಾಚಾರಗಳು ಜರುಗಿದವು. ಆದರೆ ಅಂಕೋಲೆಯ ಜನತೆ ಎಲ್ಲವನ್ನೂ ಸಹಿಸಿಕೊಂಡು, ಕೆಚ್ಚಿನಿಂದ ಬ್ರಿಟಿಶರ ವಿರುದ್ಧ ಹೋರಾಡಿತು.

ಧಾರವಾಡದಿಂದ ದ.ಪ.ಕರಮರಕರ, ಭಾಲಚಂದ್ರ ಘಾಣೇಕರ, ಕೆ.ಜಿ.ಜೋಶಿಯವರು ಕಾರ್ಯಕರ್ತರಾಗಿ ಬಂದಿದ್ದರು. ಇವರೊಡನೆ ಸೂರ್ವೆಯ ಬೊಮ್ಮಣ್ಣ ನಾಯಕರು, ಕಣಗಿಲದ ಬೊಮ್ಮಾಯ ತಿಮ್ಮಣ್ಣ ನಾಯಕರು, ಹಿಚಕಡದ ಹಮ್ಮಣ್ಣ ನಾಯಕರು ಮತ್ತು ಬೀರಣ್ಣ ನಾಯಕರು ಕೈಗೂಡಿಸಿದ್ದರು. ಕೊನೆಗೊಮ್ಮೆ ಜೋಶಿಯವರ ಹಾಗೂ ಶ್ರೀ ಕರಮರಕರರ ಬಂಧನವಾಯಿತು. ಜೋಶಿಯವರಿಗೆ ೧೧ ತಿಂಗಳ ಸಶ್ರಮ ಶಿಕ್ಷೆಯಾಯಿತು. ಅಹ್ಮದನಗರದ ವಿಸಾಪುರ ಜೇಲಿನಲ್ಲಿ ಇವರನ್ನು ಇಡಲಾಯಿತು.

ವಿಸಾಪುರದಿಂದ ಬಂದ ಬಳಿಕ ಜೋಶಿಯವರು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮತ್ತೆ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೩೪ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೩೮ರಲ್ಲಿ ಕರ್ನಾಟಕ ಕಾ^ಲೇಜಿನಿಂದ ಬಿ.ಏ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಕಾಂದೀವಲಿಯ ಶಾರೀರಕ ಶಿಕ್ಷಣ ಕಾ^ಲೇಜಿನಲ್ಲಿ ಒಂದು ವರ್ಷ ಕಲಿತು, ೧೯೩೯ರಲ್ಲಿ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಾರೀರಕ ಶಿಕ್ಷಕರೆಂದು ಕೆಲಸ ಮಾಡಹತ್ತಿದರು.

೧೯೪೨ರಲ್ಲಿ ಗಾಂಧೀಜಿಯವರ “Quit India” ಘೋಷಣೆ ಹೊರಬಿದ್ದಿತು. ಜೋಶಿಯವರು ಮತ್ತೇ ಅಂಕೋಲೆಗೆ ಮರಳಿದರು.
ಅಲ್ಲಿ ಶ್ರೀ ದಯಾನಂದ ಪ್ರಭು ಹಾಗೂ ಬೀರಣ್ಣ ನಾಯಕರ ಜೊತೆಗೆ ಹೋರಾಟದ ರೂಪು ರೇಷೆಗಳು ಸಿದ್ಧವಾದವು. ಬ್ರಿಟಿಶ ಆಡಳಿತದ ಸಂಪರ್ಕಜಾಲವನ್ನು ಕಡಿದು ಹಾಕುವ ಉದ್ದೇಶದಿಂದ ತಂತಿ ಸಂಪರ್ಕವನ್ನು ನಾಶಪಡಿಸಲಾಯಿತು. ಸಣ್ಣ ಪುಟ್ಟ ರಸ್ತೆ ಸೇತುವೆಗಳು ವಿಧ್ವಸ್ತವಾದವು.

ಇದಾದ ಬಳಿಕ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿದ್ಧಪಡಿಸಲಾಯಿತು :
ಉತ್ತರ ಕನ್ನಡ ಜಿಲ್ಲೆಯ ಕಾಡಿನ ಸಂಪತ್ತೆಲ್ಲವನ್ನೂ ಬ್ರಿಟಿಶರು ಕೊಳ್ಳೆ ಹೊಡೆಯುತ್ತಿದ್ದರು. ಇಲ್ಲಿಯ ತೇಗಿನ ಮರದ ಹಾಗೂ ಇತರ ಮರಗಳ ಮರಮಟ್ಟುಗಳನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಪರದೇಶಗಳಿಗೂ ಸಹ ಸಾಗಿಸಿ ಮಾರಲಾಗುತ್ತಿತ್ತು. ಮರಗಳನ್ನು ಕಡಿಯುವ ಗುತ್ತಿಗೆದಾರರು ಈ ಮರಗಳನ್ನು ಕಡಿದು, ಜಂಗಲ್‍‍ಗಳ ಮೂಲಕ ಬಂದರುಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಅವುಗಳನ್ನು ಹಡಗುಗಳ ಹಿಂಬದಿಗೆ ಕಟ್ಟಿದರೆ, ಅವು ಅನಾಯಾಸವಾಗಿ ಪರದೇಶ ಪ್ರಯಾಣ ಮಾಡುತ್ತಿದ್ದವು. ಇಂಗ್ಲಂಡಿನಲ್ಲಿರುವ ಬಕಿಂಗ್‍ಹ್ಯಾಮ ಅರಮನೆಯ ಕಿಟಕಿ, ಬಾಗಿಲು ಹಾಗೂ ಇತರ ಕಟ್ಟಿಗೆಯ ಉತ್ಪಾದನೆಗಳು ಈ ರೀತಿ ಪುಕ್ಕಟೆ ಪ್ರಯಾಣ ಮಾಡಿದ “ದಾಂಡೇಲಿ ತೇಗಿನ ಮರ”ದಿಂದಾಗಿವೆ. (ದಾಂಡೇಲಿ ತೇಗು ಉತ್ಕೃಷ್ಟತೆಗಾಗಿ ಜಗತ್ಪ್ರಸಿದ್ಧವಾದ ತೇಗು.)

ಜೋಶಿಯವರು, ಕಣಗಿಲ ಹಮ್ಮಣ್ಣ ನಾಯಕ, ಹಮ್ಮಣ್ಣ ಬೊಮ್ಮ ನಾಯಕ, ಸಗಡಗೇರಿಯ ವೆಂಕಟರಮಣ ನಾಯಕ, ಬೀರಣ್ಣ ನಾಯಕ ಹಾಗೂ ದಯಾನಂದ ಪ್ರಭುಗಳು ಇವರೆಲ್ಲ ಸೇರಿ “ಬ್ರಿಟಿಶರಿಗೆ ತೇಗಿನ ಉಡುಗೊರೆ” ಕೊಡಲು ನಿಶ್ಚಯಿಸಿ ಕೂರ್ವೆಯಲ್ಲಿ ಸೇರಿದರು. ಮರಮಟ್ಟು ಸಾಗಿಸುತ್ತಿರುವ ‘ಜಂಗಲ್’ ಹಾಗೂ ೪೦ ಜನ ಪೋಲಿಸರನ್ನು ಸಾಗಿಸುತ್ತಿದ್ದ ‘ಜಂಗಲ್’ ಇವರಿದ್ದಲ್ಲಿ ಬಂದ ತಕ್ಷಣ ಇವರೆಲ್ಲ ಪೋಲೀಸರ ಮೇಲೆ ಮುಗಿಬಿದ್ದು ಅವರನ್ನು ಕಟ್ಟಿ ಹಾಕಿ ನಿ:ಶಸ್ತ್ರಗೊಳಿಸಿದರು. ಆ ಬಳಿಕ ಕಟ್ಟಿಗೆಯ ಹೊರೆಗಳನ್ನು ಡೋಣಿಗಳಲ್ಲಿ ತುಂಬಿ, ಚಿಮಣಿ ಎಣ್ಣೆಯನ್ನು ಸುರುವಿ ಬೆಂಕಿ ಹಚ್ಚಿ ಹೊಳೆಯಲ್ಲಿ ದೂಡಲಾಯಿತು.
ಸುಮಾರು ೨೦ ಕಿಲೊಮೀಟರುಗಳಷ್ಟು ದೂರದವರೆಗೆ ಅಂದರೆ ಕಡಲು ಸೇರುವವರೆಗೂ ಧಗಧಗನೆ ಉರಿಯುವ ಆ ಮರಮಟ್ಟು ಬ್ರಿಟಿಶರಿಗೆ ಒಂದು ‘ಅಗ್ನಿಸಂದೇಶ’ವನ್ನು ನೀಡಿದವು: “ Quit India!
ಅದರಂತೆ ಅದನ್ನು ನೋಡುತ್ತಿದ್ದ ಭಾರತೀಯ ತರುಣರಲ್ಲೂ ಅವು ಒಂದು ಕಿಚ್ಚನ್ನು ಹೊತ್ತಿಸುತ್ತಿದ್ದವು: “ಮಾಡು ಇಲ್ಲವೆ ಮಡಿ!

ಈ ಘಟನೆಯಿಂದ ಅಂಕೋಲೆಗೆ ಹೋಗುವ ರಹದಾರಿ ಬಂದಾಯಿತು. ಕಾರ್ಯಕರ್ತರೆಲ್ಲರೂ ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಂಡರು. ಜೋಶಿಯವರು ಗೋಕರ್ಣಕ್ಕೆ ಹೋದರು. ಮರುದಿನ ಜಿಲ್ಲಾ ಪೋಲೀಸ ಅಧಿಕಾರಿ ನಾನಾವಟಿಯವರಿಂದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಚಾರ ಸತ್ರ ಪ್ರಾರಂಭವಾಯಿತು. ೩೯ ತರುಣರನ್ನು ಬಂಧಿಸಲಾಯಿತು. ರಾಮಚಂದ್ರ ನಾಯಕ ಸಗಡಗೇರಿ, ಮಂಜುಗೌಡ, ಗಣಪತಿ ರಾಮಕೃಷ್ಣ ನಾಯಕ, ಹಮ್ಮಣ್ಣ ಹಿಚಕಡ ಇವರನ್ನೆಲ್ಲ ಬಂಧಿಸಿ ಥಳಿಸಲಾಯಿತು. ರಾಮಾ ಬೀರಣ್ಣ ನಾಯಕರನ್ನು ಕೆಳಗೆ ಕೆಡವಿ ತುಳಿದಿದ್ದರಿಂದ ಅವರ ಹಲ್ಲುಗಳು ಮುರಿದು ಹೋದವು. ಆದರೆ ‘ದೋಶಿ’ (= ಜೋಶಿ)ಯವರ ಮಾಹಿತಿಯನ್ನು ಯಾರೂ ಬಿಟ್ಟು ಕೊಡಲಿಲ್ಲ.

‘ಅಗ್ನಿಸಂದೇಶ’ ನಡೆದಾಗ, ಜೋಶಿಯವರು ತಲೆಗೆ ಕಟ್ಟಿಕೊಂಡ ಪಂಜೆ ಉಚ್ಚಿ ಕೆಳಗೆ ಬಿದ್ದಿತ್ತು. ಜೋಶಿಯವರ ತಲೆಕೂದಲು ಅಕಾಲದಲ್ಲೇ ಬೆಳ್ಳಗಾಗಿದ್ದವು. ಅಲ್ಲದೆ, ಆರಡಿ ಎತ್ತರದ ದೇಹ. ಇದರಿಂದಾಗಿ, ಆ ಸಮಯದಲ್ಲಿಯೇ ಪೋಲೀಸನೊಬ್ಬನು ಜೋಶಿಯವರನ್ನು ಗುರುತಿಸಿದ್ದನು. ‘ಬದಾಮಿ’ ಎನ್ನುವ ಈ ಪೋಲೀಸನು ಜೋಶಿಯವರ ಜೊತೆಗೆ ವಿಸಾಪುರ ಜೈಲಿನಲ್ಲಿ ರಾಜಕೀಯ ಕೈದಿಯಾಗಿದ್ದನು. ಆ ಬಳಿಕ ಪೋಲೀಸ ಕೆಲಸಕ್ಕೆ ಭರ್ತಿಯಾಗಿದ್ದನು! ಜೋಶಿಯವರು ಗೋಕರ್ಣದಿಂದ ಮುಂಡಗೋಡಕ್ಕೆ ಯಾತ್ರಿಕನ ವೇಷದಲ್ಲಿ ತೆರಳುತ್ತಿದ್ದಾಗ, ಈ ಪೋಲೀಸನು ವೇಷ ಮರೆಸಿಕೊಂಡು ಅದೇ ಬಸ್ಸಿನಲ್ಲಿ ಬರುತ್ತಿದ್ದನು. ಮುಂಡಗೋಡಿನಲ್ಲಿ ಇವರನ್ನು ಕೆಳಗೆ ಇಳಿಸಿ ಬಂಧಿಸಲಾಯಿತು.

ಕಾರವಾರದಲ್ಲಿ ಎಲ್ಲ ೩೯ ಕೈದಿಗಳ ವಿಚಾರಣೆ ನಡೆಯಿತು. ಎಲ್ಲಾ ಕೈದಿಗಳು ತಾವು ಬ್ರಿಟಿಶ್ ಸತ್ತೆಯನ್ನು ಮಾನ್ಯ ಮಾಡುವದಿಲ್ಲ ಎಂದು ಘೋಷಿಸಿದರು. ಜೋಶಿಯವರಿಗೆ ೫+೫ ವರ್ಷಗಳ ಸಶ್ರಮ ಶಿಕ್ಷೆ ಹಾಗೂ ೧೦೦ ರೂ. ದಂಡ, ತಪ್ಪಿದರೆ ಮತ್ತೆ ೧ ವರ್ಷದ ಶಿಕ್ಷೆಯನ್ನು ನೀಡಲಾಯಿತು.
ಇವರನ್ನೆಲ್ಲ ಮೊದಲು ಹಿಂಡಲಗಿ ಜೇಲಿನಲ್ಲಿ ಒಂದೂವರೆ ವರ್ಷ ಇಡಲಾಯಿತು. ಬಳಿಕ ಯರವಡಾ ಜೇಲಿಗೆ ಒಯ್ಯಲಾಯಿತು. ಅಲ್ಲಿಂದ ನಾಸಿಕ ಜೈಲಿಗೆ ವರ್ಗಾವಣೆ.

೧೯೪೭ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಜೋಶಿಯವರ ಬಿಡುಗಡೆಯಾಯಿತು.
ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿಯಹತ್ತಿದರು.
ದ.ಪ.ಕರಮರಕರರು ಆಗ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು. ಜೋಶಿಯವರನ್ನು ದಿಲ್ಲಿಗೆ ಕರೆಯಿಸಿಕೊಂಡು ತಮ್ಮ ಆಪ್ತಸಹಾಯಕರನ್ನಾಗಿ ಮಾಡಿಕೊಂಡರು. ಆದರೆ, ಡಾ^. ಕಬ್ಬೂರರ ಒತ್ತಾಯದ ಮೇರೆಗೆ ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿಗೆ ಮರಳಿದರು. ೧೯೫೯ರಲ್ಲಿ ಜೋಶಿಯವರು ಮುಖ್ಯಾಧ್ಯಾಪಕರಾಗಿ ನಿಯುಕ್ತರಾದರು. ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಶಾರೀರಕ ಹಾಗೂ ನೈತಿಕ ಹೆಗ್ಗಳಿಕೆಯನ್ನು ತರಲು ಜೋಶಿ ಮಾಸ್ತರರು ಅಕ್ಷರಶ: ಹಗಲಿರುಳು ದುಡಿದರು.

ಕೆ.ಇ.ಬೋರ್ಡ ಸಂಸ್ಥೆಯ ಮೂರು ಶಾಲೆಗಳಾದ ಕರ್ನಾಟಕ ಹಾಯ್‍ಸ್ಕೂಲ, ವಿದ್ಯಾರಣ್ಯ ಹಾಯ್‍ಸ್ಕೂಲ ಹಾಗೂ ಕೆ.ಇ.ಬೋರ್ಡ ಹಾಯ್‍ಸ್ಕೂಲ ಇವು ಒಂದು ಘೋಷವಾಕ್ಯವನ್ನು ಹೊಂದಿವೆ:
ತೇಜಸ್ವಿನಾವಧೀತಮಸ್ತು.”

ಈ ವಾಕ್ಯದ ಪೂರ್ಣಪಾಠ ಹೀಗಿದೆ:
“ ಓಂ ಸಹನಾವವತು, ಸಹನೌ ಭುನಕ್ತು, ಸಹವೀರ್ಯಮ್ ಕರವಾವ ಹೈ
ತೇಜಸ್ವಿನಾವಧೀತಮಸ್ತು, ಮಾ ವಿದ್ವಿಷಾವಹೈ, ಓಂ ಶಾಂತಿ:, ಶಾಂತಿ:, ಶಾಂತಿ:”

ಉಪನಿಷತ್ತಿನ ಈ ವಾಕ್ಯವನ್ನು ಗುರುವು ತನ್ನ ಶಿಷ್ಯನಿಗೆ ಹೇಳುತ್ತಿದ್ದಾನೆ:
“ನಾವಿಬ್ಬರೂ ಕೂಡಿಯೇ ಕಲಿಯೋಣ,
ನಾವಿಬ್ಬರೂ ಕೂಡಿಯೇ ಸೇವಿಸೋಣ,
ನಾವಿಬ್ಬರೂ ಕೂಡಿಯೇ ಶಕ್ತಿವಂತರಾಗೋಣ,
ನಾವಿಬ್ಬರೂ ಕೂಡಿಯೇ ತೇಜಸ್ವಿಗಳಾಗೋಣ,
ನಾವು ಪರಸ್ಪರರನ್ನು ದ್ವೇಷಿಸುವದು ಬೇಡ,
ನಮ್ಮಿಬ್ಬರ ಮನಸ್ಸು ಶಾಂತವಾಗಿರಲಿ!”

ಈ ಘೋಷವಾಕ್ಯವೇ ಜೋಶಿ ಮಾಸ್ತರರ ಬಾಳಿನ ಧ್ಯೇಯವಾಕ್ಯವಾಗಿತ್ತು. ಇದರಂತೆಯೇ ಬಾಳಿದ ಅವರ ಮುಖದಲ್ಲಿ ಯಾವಾಗಲೂ ಶಿಸ್ತು, ಮಮತೆ ಹಾಗೂ ತೇಜಸ್ಸು ಎದ್ದು ಕಾಣುತ್ತಿದ್ದವು.

ಜೋಶಿಯವರು ಸುಮಾರು ೯೦ ವರ್ಷಗಳವರೆಗೆ ಜೀವಿಸಿದರು. ವೃದ್ಧಾಪ್ಯ ಬಂದಂತೆ ಅವರ ಸ್ಮರಣಶಕ್ತಿ ಕುಂದಲಾರಂಭಿಸಿತು. ತಮ್ಮ ಪ್ರೀತಿಯ ವಿದ್ಯಾರ್ಥಿಗಳ ಗುರುತೂ ಅವರಿಗೆ ಆಗುತ್ತಿರಲಿಲ್ಲ. ಅವರ ಆರ್ಥಿಕ ಚೈತನ್ಯ ಮೊದಲಿನಿಂದಲೂ ಕಡಿಮೆಯೇ ಇತ್ತು. ಸ್ವಾತಂತ್ರ್ಯದ ನಂತರ ಕೆಲವು ಹೋರಾಟಗಾರರು ಸರಕಾರದ ಸವಲತ್ತುಗಳನ್ನು ಪಡೆದರು. ಕೆಲವರು ಗಾಂಧಿ ಟೋಪಿಯನ್ನು ಭಾರತಕ್ಕೇ ತೊಡಿಸಿದರು. ಜೋಶಿಯವರು ಮಾತ್ರ ಶಿಕ್ಷಣವೃತ್ತಿಗೇ ತಮ್ಮನ್ನು ಅರ್ಪಿಸಿಕೊಂಡರು. ನಿವೃತ್ತಿಯ ನಂತರವೂ ಅವರು ಅಧ್ಯಾಪನ ಮಾಡುತ್ತಲೇ ಇದ್ದರು.
“ನಿವೃತ್ತನಾದ ಮೇಲೆ, ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗದಿದ್ದರೆ, ನಾನು ಕರ್ನಾಟಕ ಹಾಯ್‍ಸ್ಕೂಲಿನ ಅಂಗಳದ ಕಸ ಗುಡಿಸುತ್ತ ಬದುಕು ಸವೆಸುತ್ತೇನೆ” ಎಂದು ಅವರು ಒಮ್ಮೆ ಹೇಳಿದ್ದರು.

ನಾನು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಎರಡು ವರ್ಷಗಳ ಮಟ್ಟಿಗೆ ವಿದ್ಯಾರ್ಥಿಯಾಗಿದ್ದಾಗ, ಜೋಶಿ ಮಾಸ್ತರರು ನಮ್ಮ ಮುಖ್ಯಾಧ್ಯಾಪಕರಾಗಿದ್ದರು.
..................................................................................
[ಟಿಪ್ಪಣಿ:
ಮಾಧ್ಯಮಿಕ ಶಾಲೆಯಲ್ಲಿ ನಾವು ವಿದ್ಯಾರ್ಥಿಗಳಾಗಿದ್ದಾಗ ‘ಬೋಸ್ಟನ್ ಟೀ ಪಾರ್ಟಿ’ಯ ಬಗೆಗೆ ನಮಗೆ ರೋಮಾಂಚಕವಾಗಿ ಕಲಿಸಲಾಗುತ್ತಿತ್ತು. ಬ್ರಿಟನ್ ವಿರುದ್ಧ ಹೋರಾಡಲು ಅಮೆರಿಕನ್ ಜನತೆಗೆ ಹೇಗೆ ಈ ಘಟನೆ ಪ್ರೇರಕವಾಯಿತು ಎನ್ನುವದನ್ನು ಹೇಳಿಕೊಡಲಾಗುತ್ತಿತ್ತು.
ಬ್ರಿಟನ್ನಿನಿಂದ ಬಂದ ಚಹ ತುಂಬಿದ ಹಡಗುಗಳಲ್ಲಿಯ ಚಹದ ಪೆಟ್ಟಿಗೆಗಳನ್ನು ಬಂಡುಕೋರ ಅಮೆರಿಕನ್ ಯುವಕರು ಸಮುದ್ರದಲ್ಲಿ ಬಿಸಾಕಿದ ಕತೆಯಿದು.
ಈ ಘಟನೆಗಿಂತ ನೂರು ಪಟ್ಟು ರೋಮಾಂಚಕವಾದ ‘ಅಗ್ನಿಸಂದೇಶ’ಕ್ಕೆ ನಮ್ಮ ಇತಿಹಾಸದಲ್ಲಿ ಸ್ಥಾನವಿಲ್ಲ ಎನ್ನುವದು ವಿಚಿತ್ರ ಆದರೂ ಸತ್ಯ!]

Thursday, February 19, 2009

“ಚರ್ಚು ಏನಿದು ಪರ್ಚು?”

ಅನಂತ ಕಲ್ಲೋಳರು ಕನ್ನಡದ ಸುಪ್ರಸಿದ್ಧ ವಿನೋದ ಸಾಹಿತಿಗಳು. ವಿನೋದ ಸಾಹಿತಿ ಎಂದಾಕ್ಷಣ ಕೇವಲ ವಿನೋದಕ್ಕೆ ಸೀಮಿತ ಲೇಖನಗಳನ್ನು ಬರೆಯುತ್ತಾರೆಂದು ತಿಳಿಯದಿರಿ. ಅವರ ವಿನೋದವು ವೈಚಾರಿಕತೆಗೆ ಹೊದಿಸಿದ ಮೇಲುಪರದೆ ಅಷ್ಟೆ.

‘ಚರ್ಚು ಏನಿದು ಪರ್ಚು? ’ ಎನ್ನುವ ಈ ವಿನೋದ ಲೇಖನ ಕನ್ನಡಿಗರು ಮರೆತು ಬಿಟ್ಟ ಕೆಲವು ಪದಗಳನ್ನು ಅವರ ಕಣ್ಣೆದುರಿಗೆ ಹಿಡಿಯುತ್ತಲೇ, ಅನೇಕ ಸತ್ಯದರ್ಶನಗಳನ್ನು ಮಾಡಿಸುತ್ತದೆ.

ಶ್ರೀ ಅನಂತ ಕಲ್ಲೋಳರ ಮತ್ತೊಂದು ಲೇಖನ “ಹೆಸರಿನ ಕುಸುರು ಪಸರಿಸಿದಾಗ”ವನ್ನು ಸಹ ‘ಸಲ್ಲಾಪ’ದಲ್ಲಿ ಈಗಾಗಲೇ ಕೊಡಲಾಗಿದೆ. ಆ ಲೇಖನಕ್ಕಾಗಿ http://sallaap.blogspot.com/2008/06/blog-post_28.html ನೋಡಿರಿ.

ಲೇಖನವನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಅನುಮತಿ ಇತ್ತ ಶ್ರೀ ಅನಂತ ಕಲ್ಲೋಳರಿಗೆ ಅನಂತ ಧನ್ಯವಾದಗಳು.
...................................
“ಚರ್ಚು ಏನಿದು ಪರ್ಚು?”
ಪದಗಳ ಅರ್ಥ ಸಂದಿಗ್ಧವಾದಾಗ ಸಂಶಯದಗ್ಧನಾದ ನಾನು ಮುಗ್ಧಭಾವದಿಂದ ನಿಘಂಟು ತೆರೆದು ನೋಡುತ್ತೇನೆ. ಚರ್ಚು ಎಂದರೇನೆಂದು ತಿಳಿಯಲು ನಾನು ‘ಸಂಕ್ಷಿಪ್ತ ಕನ್ನಡ ನಿಘಂಟು’ ತೆರೆದು ನೋಡಿದಾಗ ಕಂಡ ಮೊದಲನೇ ಅರ್ಥ ‘ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳು’ ಎಂದಾದರೆ ಎರಡನೇ ಅರ್ಥ ‘ಕ್ರಿಶ್ಚಿಯನ್ನರ ದೇವಾಲಯ’ ಎಂಬುದು ನನಗೆ ಬಲು ಮೋಜೆನಿಸಿತು. ಕನ್ನಡ ಚರ್ಚು ಎಂದರೆ ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳುವದು ಎಂಬುದು ಸದ್ಯ ಬಳಕೆಯಲ್ಲಿ ಉಳಿದಿಲ್ಲವಾದರೂ, ಇಂಗ್ಲಿಷಿನಿಂದ ಕನ್ನಡಿಸಿಕೊಂಡ ಚರ್ಚು ಭರ್ಜರಿಯಾಗಿ ಬಳಕೆಯಲ್ಲಿ ಉಳಿದು ಬೆಳೆದಿದೆ. ನಾವು ಕನ್ನಡಿಗರು ಆಂಗ್ಲ ಪದಗಳಿಗೆ ಕೊನೆಯಲ್ಲಿ ‘ಉ’ಕಾರದ ಕೊಂಡಿಯನ್ನು ತೊಡಿಸಿ ಸುಲಭವಾಗಿ ಕನ್ನಡ ಪದವನ್ನಾಗಿ ಬ್ಯಾಪ್ಟಾಯಿಸು ಮಾಡುತ್ತೇವೆ, ದೀಕ್ಷೆ ನೀಡುತ್ತೇವೆ. ಕೋರ್ಟು, ಜೈಲು, ಹ್ಯಾಟು, ಬ್ಯಾಟು, ಕೋಟು ಹೀಗೆ ಪುಂಖಾನುಪುಂಖವಾಗಿ ನಿರೂಪಿಸಬಹುದು, ಈ ಕನ್ನಡ ದೀಕ್ಷಾಬದ್ಧ ಆಂಗ್ಲ ಪದಗಳನ್ನು. ಗನ್ನು, ಪೆನ್ನು, ಬಾಂಬು, ಸೈನೈಡು, ಗ್ರೆನೇಡು ಏನೆಲ್ಲ ಆವಿರ್ಭವಿಸಿವೆಯಲ್ಲ ನಮ್ಮ ಕಸ್ತೂರಿ ಕನ್ನಡದಲ್ಲಿ,ಈ ದೀಕ್ಷಾ ಪ್ರಕ್ರಿಯೆಯಲ್ಲಿ. ನನಗೆ ಚರ್ಚು ಏನಿದು ಪರ್ಚು ಎಂಬ ಸಂದಿಗ್ಧತೆಯು ಕಾಡಿದಾಗ ಮೂಡಿದ ಮೂಡು ಇದು; ಗಮನವಿರಲಿ ಈ ಮೂಡು ಕೂಡ ಕನ್ನಡೀಕರಣದ ದೀಕ್ಷೆಗೆ ಒಳಪಟ್ಟ ಆಂಗ್ಲ ಪದವೇ!

ನಮಗೀಗ ಹೀಗೆ ಮತಾಂತರಿತವಾದ ಪದಗಳು ಎಷ್ಟೊಂದು ರೂಢಿಯಾಗಿವೆ ಎಂದರೆ ನಮ್ಮ ಕನ್ನಡದ ಮೂಲ ಪದಗಳೇ ಅಸ್ಪೃಶ್ಯವಾಗಿ, ಅವಾಚ್ಯವಾಗಿ, ಅದೃಶ್ಯವಾಗಿ ಹೋದಂತಾಗಿವೆ. ಚರ್ಚು ಏನಿದು ಪರ್ಚು? ಎಂದು ನಾನು ತಲೆ ಕೆರೆಯುತ್ತಿದ್ದರೆ ನೀವು ‘ಪರ್ಚು’ ಎಂದರೇನೆಂದು ತಲೆ ಖರ್ಚು ಮಾಡುತ್ತಿರಬಹುದು. ಪರ್ಚು ಎಂದರೆ ‘ಪಿಸು ಮಾತನ್ನಾಡು’ ‘ಪಿಸುಗುಟ್ಟು’ ಮತ್ತು ‘ಗುಟ್ಟು’ ಎಂಬುದಾಗಿ ವಿವಿಧಾರ್ಥಗಳಿವೆ. ಈ ಪರ್ಚು ಆಂಗ್ಲಭಾಷೆಯಿಂದ ಮತಾಂತರಿತ ಪದ ಅಲ್ಲರೀ ಮತ್ತ, ಅಪ್ಪಟ ಕನ್ನಡ ಪದ. ಅಪ್ಪಟ ಕನ್ನಡ ಪದ ಅನ್ನೋದಕ್ಕೆ ಪುರಾವೆ ಏನೆಂದರೆ ಕನ್ನಡಿಗರು ಅದನ್ನು ಬಳಸುವದಿಲ್ಲ; ಮಿಶ್ರ ತಳಿಯ ಅಥವಾ ಬ್ಯಾಪ್ಟಾಯಿಸುಗೊಂಡ ಪದಗಳೇ ಅವರಿಗೆ ಪ್ರಿಯ. ಈ ಚಾಳಿ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ರತ್ನಕೋಶ ಎಂಬಕಿರುಹೊತ್ತಿಗೆಯಲ್ಲಿ ‘ಚರ್ಚು’ ಎಂಬುದಕ್ಕೆ ಕ್ರಿಶ್ಚಿಯನ್ನರ ದೇವಾಲಯ ಎಂಬ ಅರ್ಥವನ್ನು ಮಾತ್ರ ನೀಡಲಾಗಿದೆ; ಕನ್ನಡದ ಮೂಲಾರ್ಥವಾದ ‘ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳು’ ಎಂಬುದಕ್ಕೆ ‘ಖೊಕ್’ ಕೊಡಲಾಗಿದೆ.

ಆಂಗ್ಲ ಪದಗಳನ್ನು ‘ಉ’ಕಾರದ ದೀಕ್ಷೆಯೊಂದಿಗೆ ಕನ್ನಡಪದಗಳನ್ನಾಗಿ ಪರಿವರ್ತಿಸುವದಕ್ಕೆ ಇನ್ನೂ ಯಾರೂ ತಕರಾರು ಮಾಡಿದಂತಿಲ್ಲ. ಅದನ್ನು ಬಲವಂತದ ಧರ್ಮಾಂತರ, ಆಮಿಷ ಒಡ್ಡಿ ಮಾಡಿದ ಮತಪರಿವರ್ತನೆ ಎಂಬಂತಾಗಿ ವಿರೋಧ ಮಾಡಿದ್ದೂ ಇಲ್ಲ. ಆಂಗ್ಲಭಾಷಿಕರು ಸಹ ನಮ್ಮ ಪದಗಳಿಗೆ ಹೀಗೆ ದೀಕ್ಷೆ ನೀಡಿ ಅಪಹರಿಸಿದ್ದಾರೆಂದು ಹುಯಿಲು ಎಬ್ಬಿಸಿಲ್ಲ. ಕಾರಣವೇನೆಂದರೆ ಹೀಗೆ ಕನ್ನಡ ಭಾಷೆಯವರು ಅವರ ಪದಗಳನ್ನು ದೋಚಿದ್ದರಿಂದ ಅವರಿಗೆ ನಷ್ಟವೇನೂ ಆಗಿಲ್ಲ. ಬದಲಾಗಿ ದಾನ ನೀಡಿದ ಹಿರಿಮೆಯ ಗರಿಮೆ ಪೆರ್ಮೆಗಟ್ಟಿದೆ. ಪದಗಳನ್ನು ಬೇರೆ ಭಾಷಿಕರು ಅವರವರ ನುಡಿಯ ಜಾಯಮಾನಕ್ಕೆ ಅನುಗುಣವಾಗಿ ದೀಕ್ಷೆ ಕೊಟ್ಟು ಅಂಗೀಕರಿಸಿಕೊಂಡರೂ ಮೂಲಭಾಷೆಯಲ್ಲಿಯ ಆ ಪದಗಳ ಅಸ್ತಿತ್ವಕ್ಕೇನೂ ಊನ ಉಂಟಾಗದಲ್ಲ! ಇಂಥ ಧರ್ಮಾಂತರ ಅಥವಾ ಭಾಷಾ-ಅಂತರವೆನ್ನಿ, ಸಮಾಜದಲ್ಲಿ ಕ್ಷೋಭೆಗೆ ಕಾರಣವಾಗುವದಿಲ್ಲ; ಬದಲಿಗೆ ನುಡಿಗಳ ಶೋಭೆಗೆ ಹೂರಣವಾಗುವವು. ನಿರ್ಜೀವ ಅಮೂರ್ತ ಪದಗಳ ದೀಕ್ಷಾಂತರ, ಧರ್ಮಾಂತರ, ಮತಾಂತರದಿಂದಾಗಿ ಸಮಾಜದಲ್ಲಿ ಶಾಂತಿ ಕದಡುವ ಪ್ರಮೇಯ ಕಡಮೆ; ಆದರೆ ಅದೇ ದೀಕ್ಷಾಂತರ, ಧರ್ಮಾಂತರ, ಮತಾಂತರ ವ್ಯಕ್ತಿಯ ಸಂಬಂಧದಲ್ಲಿ ನಡೆದಾಗ ಪರಿಸ್ಥಿತಿಯು ಹದಗೆಡುವದನ್ನು ಕಾಣುತ್ತೇವೆ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಇಂಥ ಧರ್ಮಾಂತರ, ದೀಕ್ಷಾಂತರ, ಮತಾಂತರಗಳಿಂದ ಮೂಲ ಧರ್ಮದಲ್ಲಿಯ ಜನರ ಸಂಖ್ಯೆ ಖೋತಾ ಆಗುತ್ತದೆ ಹಾಗು ಧರ್ಮಾಂತರದಿಂದಾಗಿ ಅದನ್ನು ಎಸಗಿದವರ ಸಂಖ್ಯೆ ಉಬ್ಬರಗೊಳ್ಳುತ್ತದೆ. ವಿವೇಕಾನಂದರಂತಹ ವಿವೇಕವಂತರು ಸಹ ಇದನ್ನು ಸರಿಯಾಗಿ ಪರೀಕ್ಷಿಸಿ ಒಬ್ಬ ಹಿಂದೂ ಅನ್ಯಧರ್ಮಕ್ಕೆ ದೀಕ್ಷಾಂತರಗೊಂಡಲ್ಲಿ ಹಿಂದೂಗಳ ಸಂಖ್ಯೆ ಒಂದರಿಂದ ಕೊರೆಯಾದರೆ ಪ್ರತಿಸ್ಪರ್ಧಿಯ ಬಲ ಒಂದರಿಂದ ಅಧಿಕಗೊಳ್ಳುತ್ತದೆ , ಅಂದರೆ ಇಮ್ಮಡಿ ಕೊರೆತ ಎಂದು ಮನಗಂಡಿದ್ದರು.


ಚರ್ಚು ಎಂದರೆ ‘ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳು’ ಎಂಬ ಅರ್ಥ ಉಂಟಷ್ಟೆ. ಅದನ್ನು ಗಮನದಲ್ಲಿಟ್ಟು ಕೆಲ ಚರ್ಚುಗಳು ಕಂಡ ಕಂಡ ಕೂಸುಗಳನ್ನೆಲ್ಲ ಚಾಕ್ಲೆಟ್, ಪೆಪ್ಪರ್ಮಿಂಟ್ಗಳ ಆಮಿಷ ಒಡ್ಡಿ ತಮ್ಮ ಕಂಕುಳಲ್ಲಿ ಕುಳ್ಳಿರಿಸಿಕೊಂಡು ಹೋಗುವಂತಾದಾಗ ಹುಯಿಲೇಳುವದು ಸಹಜವೇ. ಮಕ್ಕಳಕಳ್ಳರನ್ನು ಬೆನ್ನಟ್ಟಿ ಬಾರಿಸುವ ಸುದ್ದಿಗಳು ಬರ್ತಾನೆ ಇರ್ತಾವಲ್ಲ.

ನಿಮ್ಮ ಮನೆಯವರು ದುಷ್ಟರಿದ್ದಾರೆ. ಅನ್ಯಾಯ ಮಾಡ್ತಾರೆ. ನಿಮ್ಮ ದೇವರು ದಿಂಡರು ಹಾಗೆ ಹೀಗೆ; ನಮ್ಮದೆಲ್ಲ ಅಪ್ಪಟ ಚಿನ್ನ. ಆದ್ದರಿಂದ ನಿಮ್ಮನ್ನು ಚರ್ಚುತ್ತೇವೆ ಅಂದರೆ ನಮ್ಮ ಕಂಕುಳಲ್ಲಿ ಕೂಡ್ರಿಸಿಕೊಳ್ಳುತ್ತೇವೆ ಎಂದು ಗದ್ದಲವೆಬ್ಬಿಸಿದವರಿಗೆ ಅವರ ಧರ್ಮದವರೇ ಆದ ಶ್ರೀ ಬೆಂಜಮಿನ್, ಅಲ್ಬುಕರ್ಕ್ ಮೊದಲಾದವರು ಆ ಧರ್ಮದ ಇತಿಹಾಸ, ಅಲ್ಲಿಯ ಕರಾಳ ವಿಷಯಗಳನ್ನು ಜಾಹೀರು ಪಡಿಸಿದ್ದು ಇತ್ತೀಚಿನ ಸುದ್ದಿಪತ್ರಿಕೆಗಳಲ್ಲಿ ಪ್ರಸಿದ್ಧವಾಗಿದೆ. ಹೀಗಿರುವಾಗ ಕೆಲ ಅತ್ಯುತ್ಸಾಹಿ ಚರ್ಚುಗಳು ನಾವು ಕರುಣೆಯಿಂದ, ಪ್ರೀತಿಯಿಂದ ಚರ್ಚುತ್ತೇವೆ ಎಂದಾಗ ಏನಿದರ ಪರ್ಚು? ಏನಿದರ ಗುಟ್ಟು ಎಂದು ಪಿಸುಗುಡುವದನ್ನು ಕೇಳುತ್ತೇವೆ. ಈ ಕುರಿತು ಚಿಂತನೆ ಮಾಡುವಾಗ ಅಮ್ಮ ಯಶೋದೆ, ‘ ಪೋಗದಿರು ರಂಗಾ ಹೊಸ್ತಿಲನು ದಾಟಿ, ಗುಮ್ಮ ಎತ್ತಿಕೊಂಡು ಪೋಗುವನೋ’ ಎಂದು ಆರ್ತವಾಗಿ ಪಾಡಿದ ಸನ್ನಿವೇಶ ನೆನಪಾಗುತ್ತದೆ. ಈ ಸಂಕೀರ್ಣ ಸಂಗತಿಗಾಗಿ ಎಷ್ಟು ತಲೆ ಖರ್ಚು ಮಾಡಿದರೂ ಕಡಮೆಯೇ! ನಾವು ನಮ್ಮವರನ್ನು ಚರ್ಚಿಕೊಳ್ಳುವದೇ ಅಂದರೆ ಕಂಕುಳಲ್ಲಿ ಎತ್ತಿಕೊಳ್ಳುವದೇ ತರಣೋಪಾಯ ಎಂಬುದು ಸರ್ಚು ಮಾಡಿದಾಗ, ರಿಸರ್ಚು ಮಾಡಿದಾಗ ಬೆಳಗುವ ಟಾರ್ಚು.
-ಅನಂತ ಕಲ್ಲೋಳ

Sunday, February 15, 2009

ನಿರ್ದೇಶಕರ ಆಶಯ

೧೯೫೦ರ ದಶಕದಲ್ಲಿ ರಾಜಕಪೂರ, ದಿಲೀಪಕುಮಾರ ಹಾಗೂ ದೇವ ಆನಂದ ಇವರು ಹಿಂದಿ ಚಿತ್ರಜಗತ್ತಿನಲ್ಲಿ ಹೆಸರಾಂತ ನಟರಾಗಿದ್ದರು.
ರಾಜಕಪೂರ ತನ್ನ ಸ್ವಂತ ಚಿತ್ರನಿರ್ಮಾಣ ಪ್ರಾರಂಭಿಸಿದ ಮೇಲೆ ಸಾಮಾಜಿಕ ಪ್ರಜ್ಞೆಯುಳ್ಳ ಹಲವು ಚಿತ್ರಗಳನ್ನು (ಉದಾ: ಬೂಟ್ ಪಾ^ಲಿಶ್, ಜಾಗತೇ ರಹೋ, ಜಿಸ್ ದೇಶ ಮೆ ಗಂಗಾ ಬಹತೀ ಹೈ ಇತ್ಯಾದಿ ಚಲನಚಿತ್ರಗಳನ್ನು ನಿರ್ಮಿಸಿದರು.
ಬಹುಶ: ಚಾರ್ಲಿ ಚಾಪ್ಲಿನ್ನನ Tramp ಇಮೇಜಿನಿಂದ ಪ್ರೇರಿತರಾದ ಇವರು ತಮ್ಮ ಅನೇಕ ಚಿತ್ರಗಳಲ್ಲಿ ಸದ್ಭಾವನೆಯಿಂದ ತುಂಬಿದ, ಆದರೆ ವ್ಯವಹಾರ ಬುದ್ಧಿಯಿಲ್ಲದ ಅಮಾಯಕ ತರುಣನ ಪಾತ್ರವನ್ನು ನಿರ್ಮಿಸಿದ್ದಾರೆ.

‘ಅನಾಡಿ’ ಚಲನಚಿತ್ರವು ಇಂತಹ ಒಂದು romantic film.
ರಾಜಕಪೂರ ಇದರಲ್ಲಿ ‘ಅನಾಡಿ’, ಅಂದರೆ ವ್ಯವಹಾರ ಬುದ್ಧಿ ಇಲ್ಲದ ಅಮಾಯಕನಾದ ಒಳ್ಳೆ ಹುಡುಗನ ಪಾತ್ರ ನಿರ್ವಹಿಸಿದ್ದಾರೆ.

ಸರಳ ಬುದ್ಧಿಯ ರಾಜಕಪೂರ ಹೊಟ್ಟೆಪಾಡಿಗಾಗಿ ಹೊಟೆಲ್ ಒಂದರಲ್ಲಿ ವೇಟರ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.
ಅಡುಗೆ ಮನೆಯಿಂದ ತಿಂಡಿ ತಂದು ಗಿರಾಕಿಗಳಿಗೆ ಕೊಡಬೇಕಷ್ಟೆ.
ಆ ಸಮಯದಲ್ಲಿ ತಿಂಡಿ ತಯಾರಿಸುವ ಪದಾರ್ಥದಲ್ಲಿ ಜೊಂಡಿಗವೊಂದು ಬಿದ್ದದ್ದನ್ನು ನೋಡಿದ ಈತ, “ಜೊಂಡಿಗ” ಎಂದು ಗಲಾಟೆ ಮಾಡುತ್ತ ಹೊರಬರುತ್ತಾನೆ.
ಗಿರಾಕಿಗಳು ಬೈಯುತ್ತ ಎದ್ದು ಹೊರಗೆ ಹೋಗುತ್ತಾರೆ.
ಹೊಟೆಲ್ ಮಾಲಕ ಈತನನ್ನು ಒದ್ದು ಹೊರಗೆ ಹಾಕುತ್ತಾನೆ.

ಇಲ್ಲಿಗೆ ಈತನ ಅಮಾಯಕ ಬುದ್ಧಿಯನ್ನು ತೋರಿಸಿದಂತಾಯಿತು.
ಆದರೆ ನಿರ್ದೇಶಕರಿಗೆ ಇರುವ ಆಶಯ ಇನ್ನೂ ಹೆಚ್ಚಿನದು.
ಅವರಿಗೆ ಈ ದಡ್ಡ ವ್ಯಕ್ತಿಯ ಹೃದಯದಲ್ಲಿ ಇರುವ ಕರುಣೆಯನ್ನು , ಜಗದ ಎಲ್ಲ ಜೀವಿಗಳ ಬಗೆಗೆ ಇವನಿಗೆ ಇರುವ ಮರುಕವನ್ನು ತೋರಿಸಬೇಕಾಗಿದೆ.

ಅದಕ್ಕಾಗಿ ಒಂದು ಹಾಡಿನ ದೃಶ್ಯವನ್ನು ತರಲಾಗಿದೆ:
“ಕಿಸೀಕೆ ಮುಸ್ಕುರಾಹಟೋಂಪೆ ಜೀ ಉಠಾ
ಕಿಸೀಕೆ ದರ್ದ ಹೋ ಸಕೇ ತೊ ಲೇ ಉಧಾರ
ಕಿಸೀಕೆ ವಾಸತೆ ಹೊ ದಿಲ್ ಮೆ ಪ್ಯಾರ
ಜೀನಾ ಇಸೀಕಾ ನಾಮ ಹೈ.”

(ಯಾರದೋ ನಗುವಿನಿಂದ ಮನವು ಅರಳಿದೆ,
ಯಾರದೋ ನೋವು ಕಡವಾಗಿ ಬಂದಿದೆ,
ಯಾರಿಗಾಗಿ ಏನೊ ಇಲ್ಲಿ ಪ್ರೀತಿ ತುಂಬಿದೆ,
ಇದೇ ನೋಡು ಜೀವನ ಎಂದು ಅಂದಿದೆ.)

ಈ ಹಾಡನ್ನು ಹಾಡುತ್ತ ರಾಜಕಪೂರ ಹೊರ ಸಾಗಿದಾಗ ಅವನ ಬೂಟಿನ ಕೆಳಗೆ ಒಂದು ಹುಳ ಕಾಣುತ್ತದೆ.
ರಾಜಕಪೂರ ತಕ್ಷಣವೆ ಬಾಗಿ, ಅದನ್ನೆತ್ತಿ ದಾರಿಯ ಬದಿಯಲ್ಲಿ ಬಿಡುತ್ತಾನೆ.
ಈ ಒಂದು ದೃಶ್ಯವನ್ನು ನಿರ್ಮಿಸಲು ನಿರ್ದೇಶಕರು ಎಷ್ಟು ಪರಿಶ್ರಮಪಟ್ಟಿದ್ದಾರು ಎನ್ನುವದನ್ನು ಊಹಿಸಲು ಸಾಧ್ಯವಿಲ್ಲ.
ಮೊದಲಿಗೆ, ಈ ದೃಶ್ಯದ ಕಲ್ಪನೆ, ಬಳಿಕ ಚಿತ್ರಕತೆಯ ಲೇಖಕರೊಂದಿಗೆ ಸನ್ನಿವೇಶದ ಚರ್ಚೆ ಹಾಗೂ ಬರಹ, ಸಂಗೀತಗಾರರು ಹಾಗೂ ಗೀತೆಯ ಲೇಖಕರ ಜೊತೆಗೆ ಚರ್ಚೆ ಹಾಗೂ ಗೀತೆಯ ರಚನೆ ಇವೆಲ್ಲವೂ perfect ಆಗಿ ಬಂದ ಮೇಲೆ, ರಾಜಕಪೂರನಿಂದ ಸನ್ನಿವೇಶದ ಅಭಿನಯ, ಕೆಮರಾ ನಿರ್ದೇಶನ ಆಗಬೇಕು.
ಇವೆಲ್ಲ ಮುಗಿದು ಚಿತ್ರಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರ ಸ್ಪಂದನವನ್ನು ನಿರೀಕ್ಷಿಸಬೇಕು.
ಪ್ರೇಕ್ಷಕರು ಶೈಲೇಂದ್ರ ಬರೆದ ಈ ಗೀತೆಯನ್ನು, ಮುಖೇಶ ಅವರ ಹಾಡುಗಾರಿಕೆಯನ್ನು, ಶಂಕರ-ಜೈಕಿಶನ್ ಅವರ ಸಂಗೀತವನ್ನು ಹಾಗೂ ರಾಜಕಪೂರರ ಅಭಿನಯವನ್ನು ಮೆಚ್ಚಿದರೆಂದು ಹೇಳಬೇಕಾಗಿಲ್ಲ.
ಆ ಚಿತ್ರದ ಅತ್ಯಂತ ಯಶಸ್ವೀ ದೃಶ್ಯವಾಯಿತಿದು.
ನಿರ್ದೇಶಕರ ಆಶಯ ಈ ರೀತಿಯಾಗಿ ಸಫಲವಾಯಿತು.

ಇದೇ ರೀತಿಯಾಗಿ ಇರಾಣಿ ನಿರ್ದೇಶಕ ಮಜೀದ ಮಜೀದಿಯವರ ಚಲನಚಿತ್ರಗಳಲ್ಲಿ ಯಾವಾಗಲೂ ಮರುಕದ ಸಂದೇಶವನ್ನು ನೋಡಬಹುದು.
ಅವರ ನಿರ್ದೇಶನದ ‘ಬಚೇಹಾ-ಏ-ಅಸೇಮಾನ್’ (Children of Heaven) ಚಿತ್ರವು ಇರಾಣ ದೇಶದ ಬದುಕನ್ನು ಕಟ್ಟಿಕೊಡುತ್ತದೆ.
ಆ ದೇಶದ ಸಂಪ್ರದಾಯ ಬದ್ಧ ಜೀವನ, ಬಡತನ, ಪುರುಷಪ್ರಧಾನ ಸಮಾಜವ್ಯವಸ್ಥೆ ಇವುಗಳ ಚೌಕಟ್ಟಿನಲ್ಲಿ ಬದಕುತ್ತಿರುವ ಬಡ ಕುಟುಂಬವೊಂದರ ಚಿತ್ರವಿದು.
ಈ ಕುಟುಂಬದಲ್ಲಿರುವ ೧೦-೧೨ ವಯಸ್ಸಿನ ಹುಡುಗ ಹಾಗೂ ಅವನ ೮-೧೦ ವರ್ಷದ ತಂಗಿ ಇವರ ಸುತ್ತ ಕತೆ ಹೆಣೆಯಲಾಗಿದೆ.
ತಂಗಿಯ ಶಾಲಾ ಬೂಟುಗಳನ್ನು ದುರಸ್ತಿಗಾಗಿ ಒಯ್ದ ಅಣ್ಣ ಆಕಸ್ಮಿಕವಾಗಿ ಅವುಗಳನ್ನು ಕಳೆದುಕೊಳ್ಳುತ್ತಾನೆ. ತಂದೆಯ ಎದುರಿಗೆ ಹೇಳಲು ಅವರಿಗೆ ಹೆದರಿಕೆ.
ತಂಗಿಯ ಶಾಲೆ ಬೆಳಗಿನಲ್ಲಿ; ಅಣ್ಣನ ಶಾಲೆ ಮಧ್ಯಾಹ್ನ.
ಆದುದರಿಂದ ತಂಗಿ ಅಣ್ಣನ ಸ್ವಲ್ಪ ದೊಡ್ಡವಿರುವ ಬೂಟುಗಳನ್ನೇ ಹಾಕಿಕೊಂಡು ತನ್ನ ಶಾಲೆಗೆ ಹೋಗಬೇಕು. ಶಾಲೆಯಿಂದ ಓಡೋಡಿ ಬಂದು, ಕಾಯುತ್ತಿರುವ ಅಣ್ಣನಿಗೆ ಬೂಟುಗಳನ್ನು ಕೊಟ್ಟ ಬಳಿಕ ಆತ ಶಾಲೆಗೆ ಹೋಗಬೇಕು.
ಈ ironic situationಅನ್ನು ಮಜೀದಿ ಸಾಕಷ್ಟು ಜಾಣ್ಮೆಯಿಂದ ನಿರ್ದೇಶಿಸಿದ್ದಾರೆ.
ಆದರೆ ಅಲ್ಲಿಗೇ ಅವರು ನಿಲ್ಲುವದಿಲ್ಲ.
Tight screen play ಇರಬೇಕೆನ್ನುವ ನಿರ್ದೇಶಕರ ಗುಂಪಿಗೆ ಅವರು ಸೇರಿದವರಲ್ಲ.
ತಮ್ಮ ಚಿತ್ರದ ಮೂಲಕ ಅನುಕಂಪದ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸಬೇಕೆನ್ನುವದಷ್ಟೇ ಅವರ ಕಳಕಳಿ. ಆದುದರಿಂದ ಅವರು ಚಿತ್ರದಲ್ಲಿ ಈ ಮುಂದಿನ ದೃಶ್ಯವನ್ನು ಸೇರಿಸಿದ್ದಾರೆ:
ಒಮ್ಮೆ ತಂಗಿಯು ಶಾಲೆಯಿಂದ ಬರುತ್ತಿರುವಾಗ ಧಾರಾಕಾರ ಮಳೆ ಪ್ರಾರಂಭವಾಗುತ್ತದೆ.
ಗಟಾರಗಳು ತುಂಬಿ ಹರಿಯುತ್ತವೆ.
ಈ ಹುಡುಗಿ ಗಟಾರವನ್ನು ದಾಟುವಾಗ, ಒಂದು ಬೂಟು ಕಳಚಿ ಗಟಾರದಲ್ಲಿ ಬಿದ್ದು ತೇಲಿ ಹೋಗುತ್ತದೆ.
ಅದನ್ನು ನೋಡಿದ ಪಕ್ಕದ ಅಂಗಡಿಯಾತ ಅದನ್ನು ಎತ್ತಿಕೊಡಲು ಧಾವಿಸುತ್ತಾನೆ.
ಅವನಿಗೆ ಸಹಾಯ ಮಾಡಲು ಮತ್ತಿಬ್ಬರು ಸೇರಿಕೊಳ್ಳುತ್ತಾರೆ.
ಕೊನೆಗೂ ಬೂಟು ಅವಳಿಗೆ ದೊರೆಯುತ್ತದೆ.

ಇಲ್ಲಿ ನಿರ್ದೇಶಕನಿಗೆ ತೋರಿಸಬೇಕಾದದ್ದು ಆ ಹುಡುಗಿಯ ತೊಂದರೆಗಳನ್ನಲ್ಲ.
ಸಾದಾ ಮನುಷ್ಯರ ಮನದಲ್ಲಿ ಮೂಲಭೂತವಾಗಿ ಇರುವ ಅನುಕಂಪವನ್ನು ತೋರಿಸಲು ಮಜೀದಿ ಪ್ರಯತ್ನಿಸುತ್ತಿದ್ದಾರೆ.
ಆದುದರಿಂದ ಈ ಒಂದು ಬೂಟನ್ನು ಎತ್ತಿಕೊಡಲು ಅದೆಷ್ಟು ಸಾಮಾನ್ಯ ಜನ ಪ್ರಯತ್ನಿಸುತ್ತಾರೆ ಎನ್ನುವದನ್ನು ಮಜೀದಿ ತೋರಿಸಿದ್ದಾರೆ.
ಆ ಚಿತ್ರದ ಹೃದಯಸ್ಪರ್ಶಿ ದೃಶ್ಯಗಳಲ್ಲಿ ಇದೂ ಒಂದು ಎಂದು ಹೇಳಬಹುದು.

ಮಜೀದಿಯವರ ಮತ್ತೊಂದು ಚಿತ್ರ ‘ರಂಗ-ಏ-ಖೊದಾ’ (Color of Paradise)ದಲ್ಲಿ ೧೦-೧೨ ವರ್ಷದ ಕುರುಡ ಹುಡುಗನ ಸುತ್ತ ಕತೆ ಹೆಣೆಯಲಾಗಿದೆ.
ಈ ಕುರುಡ ಹುಡುಗ ಬೇಸಿಗೆಯ ರಜೆಗಾಗಿ ಶಾಲೆ ಬಿಟ್ಟ ಮೇಲೆ, ಕರೆದುಕೊಂಡು ಹೋಗಲು ಬರುವ ತಂದೆಗಾಗಿ ಕಾಯುತ್ತ ರಸ್ತೆಯ ಬೆಂಚಿನ ಮೇಲೆ ಕೂತಿದ್ದಾನೆ.
ರಸ್ತೆಯ ಮತ್ತೊಂದು ಭಾಗದಲ್ಲಿ ಅವನ ಎದುರಿಗೆ ಗಿಡ ಮರಗಳಿದ್ದು ಅಲ್ಲಿ ಹಕ್ಕಿಯೊಂದು ಗೂಡು ಕಟ್ಟಿದೆ. ಕಾಡು ಬೆಕ್ಕೊಂದು ಆ ಹಕ್ಕಿಯ ಮರಿಗಳನ್ನು ತಿನ್ನಲು ಬಂದದ್ದನ್ನು ಈ ಕುರುಡ ಹುಡುಗ ಧ್ವನಿಗಳ ಮೇಲೆ ಅರ್ಥ ಮಾಡಿಕೊಳ್ಳುತ್ತಾನೆ.
ತಕ್ಷಣವೇ ಅಲ್ಲಿ ಅಂದಾಜಿನ ಮೇಲೆ ಹೋಗಿ, ಅಂದಾಜಿನ ಮೇಲೆ ಆ ಮರವನ್ನು ಹತ್ತಿ, ಆ ಹಕ್ಕಿ ಮರಿಯನ್ನು ಉಳಿಸುವದರಲ್ಲಿ ಯಶಸ್ವಿಯಾಗುತ್ತಾನೆ.
ಅವನ ಕಣ್ಣು ಕುರುಡಾಗಿರಬಹುದು, ಆತನ ಮನಸ್ಸಲ್ಲ.

ಇವರ ಹಳ್ಳಿಯಲ್ಲಿ ಈ ಹುಡುಗನ ಅಜ್ಜಿಯೊಬ್ಬಳಿದ್ದಾಳೆ.
ಅವಳು absolutely orthodox.
ಅವಳು ಒಮ್ಮೆ ಮನೆಯ ಎದುರಿನ ತೊರೆಯನ್ನು ದಾಟುವಾಗ, ಅಲ್ಲಿ ಕೆಸರಲ್ಲಿ ಸಿಲುಕಿ ಒದ್ದಾಡುತ್ತಿರುವ ಮೀನನ್ನು ಎತ್ತಿ ಮತ್ತೆ ನೀರಿನಲ್ಲಿ ಬಿಡುವ ದೃಶ್ಯವನ್ನು ತೋರಿಸಲಾಗಿದೆ.

ಕತೆಗೆ ಈ ಎರಡೂ ದೃಶ್ಯಗಳ ಅವಶ್ಯಕತೆ ಏನು ಎಂದು ವಿಚಾರಿಸುವದು ಇಲ್ಲಿ ಅವಶ್ಯಕವಾಗಿದೆ.
ಕುರುಡ ಹುಡುಗನ ತಾಯಿ ತೀರಿಕೊಂಡಿದ್ದಾಳೆ.
ಅವನ ತಂದೆಗೆ ಎರಡನೆಯ ಮದುವೆಯಾಗಬೇಕಾಗಿದೆ.
ಎರಡನೆಯ ಸಂಬಂಧದ ಬೀಗರಿಗೆ ತನ್ನ ಕುರುಡು ಮಗನ ಬಗೆಗೆ ತಿಳಿಯುವದು ಆತನಿಗೆ ಬೇಕಾಗಿಲ್ಲ.
ಈ ವಿಷಯಕ್ಕೆ ಆತನಲ್ಲಿ ಮಾನವ ಸಹಜ ಸ್ವಾರ್ಥ ಅಡಗಿದೆ.
ತನ್ನ ಕುರುಡ ಮಗ ನೀರಲ್ಲಿ ಕೊಚ್ಚಿ ಹೋಗುವಾಗ ಸಹ, ಆತನನ್ನು ರಕ್ಷಿಸಲು ಒಂದು ಅರೆಕ್ಷಣದಷ್ಟು ವಿಳಂಬವನ್ನು ಆತ ಮಾಡುತ್ತಾನೆ.

ಇದಕ್ಕೆ contrast ಆಗಿ, ಕುರುಡ ಹುಡುಗನ ಹಾಗು ಅವನ ಅಜ್ಜಿಯ (ಅಂದರೆ ತಾಯಿಯ ತಾಯಿಯ) ಮಾನವೀಯ ಗುಣಗಳನ್ನು highlight ಮಾಡುವದು ಚಿತ್ರದ ನಿರ್ದೇಶಕನ ಆಶಯವಾಗಿದೆ.
ತನ್ಮೂಲಕ ಕರುಣೆಯ ಸಂದೇಶವನ್ನು ಆತ ಪ್ರೇಕ್ಷಕರಿಗೆ ತಲುಪಿಸಬಯಸುತ್ತಾನೆ.

ಸಂಕಟ, ತೊಂದರೆ ಇವು ಜಗತ್ತಿನ ಎಲ್ಲೆಡೆಯೂ ಇವೆ. ಆದರೆ ಬದುಕನ್ನು ಸುಂದರವಾಗಿ ಮಾಡಲು ಬೇಕಾದದ್ದು ಮಾನವೀಯ ಅನುಕಂಪ ಎನ್ನುವ ಸಂದೇಶವನ್ನು ಮಜೀದ ಮಜೀದಿ ನಮಗೆ ಹೇಳಬಯಸುತ್ತಾರೆ.
……………………………………………………………………….....
[ಟಿಪ್ಪಣಿ: ಮಜೀದ ಮಜೀದಿಯವರ ಚಿತ್ರಗಳ ಪ್ರತಿಗಳನ್ನು ಕೊಟ್ಟಿದ್ದಕ್ಕಾಗಿ ನಾನು
ಶ್ರೀ ಅಮರ ಅವರಿಗೆ ಋಣಿಯಾಗಿದ್ದೇನೆ.
-ಸುನಾಥ]

Wednesday, February 11, 2009

ನಿರ್ದೇಶಕನ ಪ್ರತಿಭೆ

ಕತೆ, ಕಾದಂಬರಿಗಳಲ್ಲಿ ಒಂದು ಸನ್ನಿವೇಶವನ್ನು ಸೃಷ್ಟಿಸುವದು ಸುಲಭ.
ಲೇಖಕರು ಆ ಸನ್ನಿವೇಶವನ್ನು ಪುಟಗಟ್ಟಲೆ ವರ್ಣನೆ ಮಾಡಬಹುದು ಹಾಗು ಪಾತ್ರಗಳ ಅಭಿವ್ಯಕ್ತಿಯನ್ನು ವಿಸ್ತಾರವಾಗಿ ಬರೆಯಬಹುದು.
ಉದಾಹರಣೆಗೆ ಒಂದು ರೋದನ ಸನ್ನಿವೇಶದ ವರ್ಣನೆಯನ್ನು ಹತ್ತು ಪುಟದಷ್ಟು ವಿಸ್ತಾರವಾಗಿ ಬರೆಯಬಹುದು.
ಇಂತಹ ಒಂದು ಅನುಕೂಲತೆ ಚಲನಚಿತ್ರದ ನಿರ್ದೇಶಕನಿಗೆ ಇರುವದಿಲ್ಲ.
ಆತನೇನಾದರೂ ಹತ್ತು ನಿಮಿಷದವರೆಗೆ ರೋದನ ಸನ್ನಿವೇಶನವನ್ನು ತೋರಿಸಿದರೆ, ಪ್ರೇಕ್ಷಕರು ಥಿಯೇಟರ್ ಖಾಲಿ ಮಾಡುತ್ತಾರೆ ; ನಿರ್ಮಾಪಕ ರೋದನ ಪ್ರಾರಂಭಿಸುತ್ತಾನೆ.

ನಿರ್ದೆಶಕನ ಪ್ರತಿಭೆ ವ್ಯಕ್ತವಾಗುವದು ಇಂತಹ ಸನ್ನಿವೇಶಗಳಲ್ಲಿಯೇ.
ಮೂಕಿ ಚಿತ್ರಗಳ ಕಾಲದಿಂದಲೇ ಪ್ರತಿಭಾವಂತ ನಿರ್ದೇಶಕರು ತಮ್ಮ ಜಾಣ್ಮೆಯನ್ನು ಇಂತಹ ಸನ್ನಿವೇಶಗಳ ಸೃಷ್ಟಿಯಲ್ಲಿ ತೋರಿಸುತ್ತಿದ್ದಾರೆ.
Hollywoodದಲ್ಲಿ ಮೂಕಿ ಚಿತ್ರಗಳನ್ನು ನಿರ್ಮಿಸಿದ ಚಾರ್ಲಿ ಚಾಪ್ಲಿನ್ ಇಂತಹ ಪ್ರತಿಭಾವಂತರಲ್ಲೊಬ್ಬ.
ಆತ ನಿರ್ಮಿಸಿದ ‘The Kid’ ಎನ್ನುವ ಮೂಕಿ ಚಲನಚಿತ್ರ ಸಾರ್ವಕಾಲಿಕ ಸರ್ವಶ್ರೇಷ್ಠ ಚಿತ್ರಗಳಲ್ಲೊಂದು.
ಈ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಹೊಟ್ಟೆ ಹೊರೆದುಕೊಳ್ಳಲು ಒದ್ದಾಡುತ್ತಿರುವ, ಕಿಮ್ಮತ್ತಿಲ್ಲದ, ಒಬ್ಬ ಪುಕ್ಕಲು ಮನುಷ್ಯ.
ಈತ ಒಂದು ದಿನ ರಸ್ತೆ ಬದಿಯ ಕಸದ ಕುಂಡೆಯಲ್ಲಿ ಪರಿತ್ಯಕ್ತ ಪುಟ್ಟ ಕೂಸೊಂದನ್ನು ನೋಡುತ್ತಾನೆ.
ಅದನ್ನು ತನ್ನ ಮುರುಕಲು ಮನೆಗೆ ಕರೆತಂದು ತಾನೇ ಪಾಲನೆ ಮಾಡುತ್ತಾನೆ.
ಅದು ದೊಡ್ಡದಾದಂತೆ, ಜನರ ಮನೆಗಳ ಖಿಡಕಿಗಳಿಗೆ ಕಲ್ಲು ಎಸೆದು ಕಾಜು ಒಡೆಯಲು ಕಲಿಸಿಕೊಡುತ್ತಾನೆ.
ಅದು ಕಾಜು ಒಡೆದು ಓಡಿ ಹೋದ ಬಳಿಕ, ಈತ ತನ್ನ ಉಪಕರಣಗಳೊಂದಿಗೆ, ಆ ರಸ್ತೆಯಲ್ಲಿ ಖಿಡಕಿ ಕಾಜು ದುರಸ್ತಿಗಾರನಾಗಿ ಬರುತ್ತಾನೆ.
ಈ ರೀತಿಯಾಗಿ ಇವರಿಬ್ಬರೂ ಹೊಟ್ಟೆ ತುಂಬಿಸಿಕೊಳ್ಳುತ್ತಿರುವಾಗ, ಅಮೇರಿಕಾದಲ್ಲಿದ್ದ ಕಾನೂನುಗಳ ಮೇರೆಗೆ, ಪೋಲೀಸರು ಆ ಅನಾಥ ಪೋರನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಈಗ ನಿರ್ಮಿಸಬೇಕಾದ ಭಾವಪೂರ್ಣ ಸನ್ನಿವೇಶವನ್ನು ಗಮನಿಸಿರಿ:
Authority ವಿರುದ್ಧ ಚಾರ್ಲಿ ಚಾಪ್ಲಿನ್ ಅಸಹಾಯಕ.
ಆತನಿಗೆ ತಾನು ಸಾಕಿದ ಪೋರನ ಮೇಲೆ ಮಮತೆ.
ಆದರೆ ಈ ಕಿಮ್ಮತ್ತಿಲ್ಲದ ದರಿದ್ರ ವ್ಯಕ್ತಿಯ ಅಳಲು ಅರಣ್ಯರೋದನವೇ ಸೈ.
ತನ್ನ ಪೋರನನ್ನು ತಾನು ತಿರುಗಿ ಪಡೆದೇನೆ ಎನ್ನುವ ಹತಾಶೆಯ ಜೊತೆಗೆ, ಪಡೆಯುವ ತೀವ್ರ ಬಯಕೆ.
ಮೂಕಿ ಚಿತ್ರಗಳ ಆ ಕಾಲದಲ್ಲಿ, ಮಾತುಗಳ ಸಹಾಯವಿಲ್ಲದೆ, ಹಿನ್ನೆಲೆ ಸಂಗೀತದ ಸಹಾಯವಿಲ್ಲದೆ ಇಂತಹ ಸನ್ನಿವೇಶವನ್ನು ಸೃಷ್ಟಿಸುವದು ಹೇಗೆ?

ದಿನವೆಲ್ಲಾ ತಿರುಗಿ ದಣಿದ ಚಾಪ್ಲಿನ್ ರಾತ್ರಿ ವೇಳೆ ಒಂದು ಮನೆಯ ಮುಚ್ಚಿದ ಬಾಗಿಲಿನ ಮೆಟ್ಟಲುಗಳ ಮೇಲೆ ಕುಸಿದು ಕೂಡುತ್ತಾನೆ, ಹಾಗೆಯೇ ಜೊಂಪಿನಲ್ಲಿ ಇಳಿಯುತ್ತಾನೆ.
ಆಗ ಕನಸೊಂದನ್ನು ಕಾಣುತ್ತಾನೆ.
ಕನಸಿನಲ್ಲಿ ಆತನಿಗೆ ರೆಕ್ಕೆಗಳಿವೆ. ರೆಕ್ಕೆಗಳ ಸಹಾಯದಿಂದ ಆತ ತನ್ನ ಪೋರನನ್ನು ಎತ್ತಿಕೊಂಡು ಹಾರಾಡುತ್ತಾನೆ; ಪೋಲೀಸ ಅಧಿಕಾರಿಯನ್ನು ಅನಾಯಾಸವಾಗಿ evade ಮಾಡುತ್ತಾನೆ.
ತನ್ನ ಪೋರನನ್ನು ತಾನು ಮರಳಿ ಕಸಿದುಕೊಳ್ಳುವದರಲ್ಲಿ ಯಶಸ್ವಿಯಾಗುತ್ತಾನೆ.
ಅಷ್ಟರಲ್ಲಿ ಬೆಳಗಾಗುತ್ತದೆ.
ಈತ ಕುಸಿದು ಕುಳಿತ ಮನೆಯ ಬಾಗಿಲು ತೆರೆಯುತ್ತದೆ.
ಮನೆಯಾತ ಈತನನ್ನು ಗದರಿಸಿ ದಬ್ಬುತ್ತಾನೆ.

'The Kid' ಚಿತ್ರವನ್ನು ಅಭಿಜಾತ ಚಲನಚಿತ್ರವನ್ನಾಗಿ ಮಾಡಿದ ಶ್ರೇಯಸ್ಸು ಈ fantasy sceneಗೆ ಸಲ್ಲಬೇಕು.
ಈ ಚಲನಚಿತ್ರದ ಯಾವ ದೃಶ್ಯದಲ್ಲೂ ವಾಸ್ತವತೆಯ ಹೂಬಾಹೂಬ ನಕಲು ಇಲ್ಲ.
ತನ್ನ ಪೋರನನ್ನು ಕಾಡುತ್ತಿದ್ದ ಕಿಡಿಗೇಡಿ ಹುಡುಗರ ಜೊತೆಗೆ ಹೋರಾಡಬೇಕಾದಂತಹ ಅನಿವಾರ್ಯ ಸನ್ನಿವೇಶದಲ್ಲಿಯೂ, ಅವಾಸ್ತವತೆಯೇ ಚಿತ್ರದ moving ಅಂಶವಾಗಿದೆ.
ಮುಖ್ಯವಾಗಿ ಚಾಪ್ಲಿನ್ fantasyಯ ಮಾಸ್ಟರ್.
ತಮ್ಮ ಅನೇಕ ಮೂಕಿ ಚಲನಚಿತ್ರಗಳಲ್ಲಿ ಅವರು fantasyಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಭಾರತೀಯ ಚಿತ್ರಗಳಲ್ಲಿ ಸಂಕೇತವನ್ನು ಬಳಸಿದವರಲ್ಲಿ ಬಹುಶ: ಸತ್ಯಜಿತ ರಾಯರೇ ಮೊದಲಿಗರು.
‘ಪಥೇರ ಪಾಂಚಾಲಿ’ ಚಿತ್ರದ ಮುಂದಿನ ಭಾಗವಾದ ‘ಅಪರಾಜಿತೊ’ ಚಿತ್ರದಲ್ಲಿ ನಾಯಕಿಯ ಪತಿ ಹೃದಯಾಘಾತದಿಂದ ತೀರಿಕೊಳ್ಳುತ್ತಾನೆ.
ಆಕಾಶದಲ್ಲಿ ಹಕ್ಕಿಗಳು ಹಾರುವ ಮೂಲಕ ಆತ ನಿಧನ ಹೊಂದಿದ್ದನ್ನು ತೋರಿಸಲಾಗಿದೆ.
ಆ ಬಳಿಕ ಇದೊಂದು ಹಳಸಲು common scene ಆಗಿ ಹೋಯಿತು.
ಆದರೆ ಇದರ ಪ್ರಥಮ ಶ್ರೇಯಸ್ಸು ಸತ್ಯಜಿತ ರಾಯರಿಗೆ ಸಲ್ಲಬೇಕು.

ಸತ್ಯಜಿತ ರಾಯರ ಸಹಾಯಕರಾದ ಎನ್. ಲಕ್ಷ್ಮೀನಾರಾಯಣ ಇವರು ಕನ್ನಡದಲ್ಲಿ ‘ನಾಂದಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದರು.
ಆ ಅವಧಿಯಲ್ಲಿ ತುಂಬಾ ಪ್ರಸಿದ್ಧಿ ಪಡೆದ ಚಿತ್ರವಿದು.
ರಾಜಕುಮಾರರು ಈ ಚಿತ್ರದ ನಾಯಕ.
ಇವರ ಮೊದಲ ಹೆಂಡತಿಯಾಗಿ ಕಲ್ಪನಾ ಅಭಿನಯಿಸಿದ್ದಾರೆ.
ಕಲ್ಪನಾ ದುರ್ಮರಣಕ್ಕೀಡಾಗುತ್ತಾರೆ ಹಾಗು ಕೆಲಕಾಲದ ನಂತರ ರಾಜಕುಮಾರ ಎರಡನೆಯ ಮದುವೆಯಾಗುತ್ತಾರೆ.
ಹರಿಣಿ ಇವರ ಎರಡನೆಯ ಹೆಂಡತಿ.
ಇವಳು ಕಿವುಡಿ ಹಾಗೂ ಮೂಕಿ.
ಈ ಮಾತನ್ನು ಪ್ರೇಕ್ಷಕರಿಗೆ ತಿಳಿಸುವದು ಹೇಗೆ?

ಈಗ ಲಕ್ಷ್ಮೀನಾರಾಯಣರ ಜಾಣ್ಮೆಯನ್ನು ನೋಡಿರಿ:
ಮದುವೆಯ ದೃಶ್ಯಗಳನ್ನು ತೋರಿಸದೆ, ಹರಿಣಿ ಹೆಂಡತಿಯಾಗಿ ರಾಜಕುಮಾರರ ಮನೆಗೆ ಬಂದಲ್ಲಿಂದ ದೃಶ್ಯ ಪ್ರಾರಂಭವಾಗುತ್ತದೆ.
ರಾಜಕುಮಾರರು ಮನೆಯ ಒಂದು ಕೋಣೆಯಲ್ಲಿ ನಿಂತಿದ್ದಾರೆ.
ಪಕ್ಕದ ಕೋಣೆಯಲ್ಲಿ ಹರಿಣಿ ನಿಂತಿದ್ದಾರೆ.
ಅಲ್ಲಿಯೆ ಮೂಲೆಯಲ್ಲಿ ಮೊದಲ ಹೆಂಡತಿ ಕಲ್ಪನಾ ಬಳಸುತ್ತಿದ್ದ ತಂಬೂರಿ ಇದೆ.
ಹರಿಣಿ ತಂಬೂರಿಯ ತಂತಿಗಳ ಮೇಲೆ ಬೆರಳು ಎಳೆಯುತ್ತಾರೆ.
ಅವಳಿಗೆ ಏನೂ ಕೇಳಿಸುವದಿಲ್ಲ , ಆದರೆ ಪಕ್ಕದ ಕೋಣೆಯಲ್ಲಿದ್ದ ರಾಜಕುಮಾರರಿಗೆ ತಂಬೂರಿಯ ನಾದ ಕೇಳಿಸುತ್ತದೆ.

ಇಲ್ಲಿಯವರೆಗೂ ನೇರ ನಿರ್ದೇಶನದ ಚಲನಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕರಿಗೆ ಈ indirect suggestion ತಂತ್ರದ ದೃಶ್ಯದಿಂದ ರೋಮಾಂಚನವಾಯಿತು.
ಉತ್ತಮ ನಿರ್ದೇಶನದ ಕನ್ನಡ ಚಿತ್ರಗಳಿಗೆ ನಾಂದಿ pioneer ಆಯಿತು.
ಈ ಚಿತ್ರದಿಂದ ಲಕ್ಷ್ಮೀನಾರಾಯಣ ಕನ್ನಡಿಗರ ಮನೆಮಾತಾದರು.

ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲ ಸಹ ಚಿತ್ರರಂಗ ಪ್ರವೇಶ ಮಾಡಿದರು.
‘ಗೆಜ್ಜೆಪೂಜೆ’ ಚಿತ್ರದಲ್ಲಿ ಪುಟ್ಟಣ್ಣನವರು ಒಂದು reverse technique ಬಳಸಿದ್ದಾರೆ.
ಗೆಜ್ಜೆಪೂಜೆ ಸಮಾರಂಭಕ್ಕೆ ನಾಯಕಿ ಕಲ್ಪನಾ ಮನಸ್ಸಿಲ್ಲದೇ ಒಪ್ಪಿಕೊಂಡಿದ್ದಾರೆ.
ಪೂಜೆಯ ಅಂಗವಾಗಿ ಅವರು ಗುಡಿಯೊಂದರಲ್ಲಿ ನರ್ತಿಸುತ್ತಿದ್ದಾರೆ.
ಪುರಂದರದಾಸರ “ಭಾಗ್ಯದಾ ಲಕ್ಷ್ಮೀ ಬಾರಮ್ಮಾ…” ಹಾಡನ್ನು ಹೆಂಗಸರು ಸಾಂಪ್ರದಾಯಕ ಶೈಲಿಯಲ್ಲಿ ಹಾಡುತ್ತಿದ್ದಾರೆ.
ಈ ದೃಶ್ಯಕ್ಕೆ ಪುಟ್ಟಣ್ಣನವರು ಯಾವುದೇ ಹಿನ್ನೆಲೆ ಸಂಗೀತ ಒದಗಿಸಿಲ್ಲ.
ಮತ್ತು ಆ ಕಾರಣಕ್ಕಾಗಿಯೇ ಈ ದೃಶ್ಯವು ತುಂಬಾ explosive ಆಯಿತು.
ಈ ದೃಶ್ಯವನ್ನು ನೋಡುತ್ತಿದ್ದಾಗ ಥಿಯೇಟರ್ ತುಂಬೆಲ್ಲ ಪ್ರೇಕ್ಷಕರು ಅಳುವದನ್ನು ನಾನು ಕೇಳಿದ್ದೇನೆ.

ಪುಟ್ಟಣ್ಣನವರು ನಿರ್ದೇಶಿಸಿದ ‘ಕಪ್ಪು ಬಿಳುಪು’ ಚಿತ್ರದಲ್ಲಿ ಕಲ್ಪನಾಗೆ double role.
ಒಬ್ಬಳು ಸಾತ್ವಿಕ ಹಳ್ಳಿಯ ಹುಡುಗಿ; ಇನ್ನೊಬ್ಬಳು ಪಟ್ಟಣದಲ್ಲಿದ್ದ ಅವಳ ಬಿನ್ದಾಸ್ ಸೋದರಿ.
ಒಳ್ಳೆ ಹುಡುಗಿ ಕಲ್ಪನಾಳ ಮುಗ್ಧತೆಯನ್ನು ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ಪರಿಚಯಿಸುವದು ಹೇಗೆ?
ಪುಟ್ಟಣ್ಣನವರ ಜಾಣ್ಮೆಯನ್ನು ಈ ದೃಶ್ಯದಲ್ಲಿ ನೋಡಿರಿ:
ಕಥಾನಾಯಕ ರಾಜೇಶರ ಮನೆಯ ಹಿತ್ತಿಲಿನಲ್ಲಿ, ಸಾತ್ವಿಕ ಹುಡುಗಿ ಕಲ್ಪನಾ ಹೂವು ಕೊಯ್ಯುತ್ತಿರುವಾಗ, ರಾಜೇಶ ಅಲ್ಲಿ ಬರುತ್ತಾರೆ ಹಾಗೂ ಕಲ್ಪನಾಳನ್ನು ಗದರಿಸುತ್ತಾರೆ.
ಕಲ್ಪನಾ ಗಡಗಡ ನಡಗುತ್ತಾಳೆ.
ಅವಳ ಕೈಯಿಂದ ಹೂವು ಜಾರಿ ಕೆಳಗೆ ಬೀಳುತ್ತದೆ.
ಗಾಬರಿಯಲ್ಲಿ ಅವಳು ಹೂವನ್ನು ಮರಳಿ ಬಳ್ಳಿಗೆ ಹಚ್ಚಲು ಪ್ರಯತ್ನಿಸುತ್ತಾಳೆ.
ಇಂತಹ ಒಂದೇ ದೃಶ್ಯದಿಂದ ನಿರ್ದೇಶಕರು ಕಲ್ಪನಾಳ ಮುಗ್ಧ ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ತೆರೆದಿಟ್ಟು ತೋರಿಸಿದರು.

‘ಸಂಸ್ಕಾರ’ ಚಿತ್ರವು ಕನ್ನಡದ ಪ್ರಥಮ ನವ್ಯ ಚಿತ್ರ.
ಅನಂತಮೂರ್ತಿಯವರು ತಮ್ಮ ಕಾದಂಬರಿಯಲ್ಲಿ ಸಂಸ್ಕಾರ vs ಮೂಲ ಪ್ರಕೃತಿ ಅಂದರೆ cultivated values versus basic instincts ಬಗೆಗೆ ಚರ್ಚೆ ಮಾಡಿದ್ದಾರೆ.
ಪ್ರಾಣೇಶಾಚಾರ್ಯರು ವೈದಿಕ ಸಂಸ್ಕಾರಗಳ ಪ್ರತಿನಿಧಿ.
ನಾರಣಪ್ಪನು ಸ್ವಚ್ಛಂದ ಪ್ರವೃತ್ತಿಯ ಪ್ರತಿನಿಧಿ.
ನಾರಣಪ್ಪ ಸತ್ತು ಹೋದಾಗ ಅವನ ಹೆಣದ ಸಂಸ್ಕಾರದ ಪ್ರಶ್ನೆ ಬರುತ್ತದೆ.
ಇದಕ್ಕೆ ಸಮಾಧಾನ ಕಂಡುಕೊಳ್ಳಲು ಪ್ರಾಣೇಶಾಚಾರ್ಯರು ಊರ ಹೊರಗಿನ ಹಣಮಪ್ಪನ ಗುಡಿಯಲ್ಲಿ , ಹಣಮಪ್ಪನ ಎದುರಿಗೆ ಕೂತು ಬಿಡುತ್ತಾರೆ.
ಮಧ್ಯರಾತ್ರಿಯಾದರೂ ಹಣಮಪ್ಪನಿಂದ ಯಾವ ಉತ್ತರವೂ ದೊರಕಿಲ್ಲ.
ಆಗ ಸತ್ತ ನಾರಣಪ್ಪನ ಸೂಳೆ ಚಂದ್ರಿ ಅಲ್ಲಿಗೆ ಬರುತ್ತಾಳೆ.
ದಣಿವಿನಿಂದ ಬಳಲಿದ ಪ್ರಾಣೇಶಾಚಾರ್ಯರು ಇವಳ ತೊಡೆಯ ಮೆಲೆ ಬೀಳುತ್ತಾರೆ.
ಅಲ್ಲಿಂದ ಮುಂದೆ, ಅವರು ಕಾಲು ಜಾರುತ್ತಾರೆ.
ನಿರ್ದೇಶಕರು ಇಲ್ಲಿಗೆ ಸಂಸ್ಕಾರಕ್ಕಿಂತ ಮೂಲಪ್ರಕೃತಿ ಹೆಚ್ಚಿಗೆ ಎಂದು ಹೇಳಿದಂತಾಯಿತು.
ಬರಿ ಹೇಳಿದರೆ ಸಾಕೆ? ಈ ಚರ್ಚಾವಸ್ತುವನ್ನು ದೃಶ್ಯಮಾಧ್ಯಮದಲ್ಲಿ ತೋರಿಸಬೇಡವೆ?
ಪ್ರಾಣೇಶಾಚಾರ್ಯರು ಚಂದ್ರಿಯೊಂದಿಗೆ ಕ್ರೀಡೆಯನ್ನು ಪ್ರಾರಭಿಸಿದಾಗ ದೂರದಲ್ಲಿ, ಹಳ್ಳಿಯಲ್ಲಿ ನಡೆಯುತ್ತಿರುವ ಬಯಲಾಟದ ಪಾತ್ರಧಾರಿಗಳ ಅಬ್ಬರ ಕೇಳಬರುತ್ತದೆ.
ಬಯಲಾಟದ ಅಬ್ಬರ ಇಲ್ಲಿ ಮೂಲಪ್ರಕೃತಿಯ ಪ್ರತಿನಿಧಿಯಾಗುತ್ತದೆ.
ಕಾದಂಬರಿಯಲ್ಲಿ ಇಲ್ಲದೇ ಇದ್ದ ಈ ಬಯಲಾಟದ ಅಬ್ಬರ, ಕಾದಂಬರಿಯ ಆಶಯವನ್ನು perfect ಆಗಿ ಪೂರೈಸುತ್ತದೆ.
ಇದು ನಿರ್ದೇಶಕರ ಪ್ರತಿಭೆ.

‘ವಂಶವೃಕ್ಷ’ ಚಲನಚಿತ್ರದಲ್ಲಿ ಕಾತ್ಯಾಯಿನಿಯ death wish ತೋರಿಸಲು ಕನಸಿನ ದೃಶ್ಯವನ್ನು ಬಳಸಲಾಗಿದೆ.
ಚಲನಚಿತ್ರದಲ್ಲಿ ಹೆಣದ ಮೆರವಣಿಗೆ ದೂರದಿಂದ ಬರುತ್ತಿರುವ ದೃಶ್ಯವನ್ನು ತೋರಿಸಲಾಗುತ್ತಿದೆ.
ಹೆಣದ ಚಟ್ಟ ಪ್ರೇಕ್ಷಕನ ಕಣ್ಣೆದುರಿಗೆ ಬರುತ್ತಿದ್ದಂತೆಯೇ, ಹೆಣವು ಸಟ್ಟನೆ ತನ್ನ ಮುಖವನ್ನು ತನ್ನ ಎಡಕ್ಕೆ ಅಂದರೆ ಪ್ರೇಕ್ಷಕರಿಗೆ ಎದುರಾಗಿ ಹೊರಳಿಸುತ್ತದೆ.
ಅದು ಕಾತ್ಯಾಯನಿಯ ಮುಖ!
ಅವಳ death wish ಈ ರೀತಿಯಾಗಿ ಪ್ರೇಕ್ಷಕನ ಮನಸ್ಸನ್ನು ಮುಟ್ಟುತ್ತದೆ.

ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ Cultural alienationದ ಚರ್ಚೆಯಿದೆ.
ಅಮೇರಿಕನ್ ಹುಡುಗಿಯನ್ನು ಮದುವೆ ಮಾಡಿಕೊಂಡು, ಕಥಾನಾಯಕ ತನ್ನ ಹಳ್ಳಿಗೆ ಮರಳುತ್ತಾನೆ.
ಅಲ್ಲಿ ಅವನ ಮೂಕಿ ಅವ್ವ ಮನೆತನವನ್ನು, ಒಕ್ಕಲುತನವನ್ನು ನೋಡಿಕೊಂಡು ಇರುತ್ತಿದ್ದಾಳೆ.
ನಾಯಕ ಹಾಗು ನಾಯಕನ ಹೆಂಡತಿ ಇಲ್ಲಿಯ ಪದ್ಧತಿಗಳನ್ನು ಬದಲಾಯಿಸಲು ಬಯಸುತ್ತಾರೆ.
ತಮ್ಮಲ್ಲಿದ್ದ ಆಕಳುಗಳನ್ನೆಲ್ಲ ನಾಯಕಿಯು ಕಟುಕರಿಗೆ ಮಾರಿ ಬಿಡುತ್ತಾಳೆ.
ನಾಯಕನ ಮನಸ್ಸು ಈಗ ಬದಲಾಗಿದೆ.
ಆತ ಆಕಳುಗಳನ್ನು ಮರಳಿ ಪಡೆಯಲು ಪಟ್ಟಣದ ಕಡೆಗೆ ಓಡುತ್ತಾನೆ.
ಹೋಗುತ್ತಿರುವಾಗಲೇ ಆತ ದನಗಳ ದೊಡ್ಡ ಮಂದೆ ಹೋಗುವದನ್ನು ನೋಡುತ್ತಾನೆ.
ಆದರೆ ಆತನಿಗೆ ತನ್ನ ದನಗಳ ಗುರುತೇ ಹತ್ತುವದಿಲ್ಲ!
ಇಷ್ಟೇ ಆಗಿದ್ದರೆ alienation ಎಂದು ಸುಮ್ಮನಾಗಿ ಬಿಡಬಹುದಿತ್ತು
ಆದರೆ ನಿರ್ದೇಶಕರ ಪ್ರತಿಭೆ ಮುಂದಿನ ನೋಟದಲ್ಲಿ ವ್ಯಕ್ತವಾಗಿದೆ.
ಈತನಿಗೆ ದನಗಳ ಗುರುತು ಹತ್ತದಿದ್ದರೇನಾಯ್ತು, ದನಗಳಿಗೆ ಈತನ ಗುರುತು ಹತ್ತಬಹುದಲ್ಲ; ಆದುದರಿಂದ ದನಗಳ ಹೆಸರನ್ನು ಹಿಡಿದು ಕೂಗಿ ಕರೆಯಿರಿ ಎಂದು ಒಬ್ಬರು ಸೂಚಿಸುತ್ತಾರೆ.
ಆತ “ಗಂಗೇ, ತುಂಗೇ, ಪುಣ್ಯಕೋಟಿ” ಎಂದು ಕೂಗುತ್ತಾನೆ.
ದನಗಳು ಈತನ ದನಿಯನ್ನು ಗುರುತಿಸದೆ ಹೋಗಿ ಬಿಡುತ್ತವೆ.
ಇಲ್ಲಿಗೆ alienation ಪೂರ್ಣವಾದಂತಾಯಿತು.
Neither he recognizes his cattle, nor the cattle recognize him.

ಇವೆಲ್ಲ ದೃಶ್ಯಗಳು cinema specific ದೃಶ್ಯಗಳು.
ಸಿನೆಮಾದ ವೈಯಕ್ತಿಕ ಚೌಕಟ್ಟನ್ನು ಮೀರಿದ ದೃಶ್ಯವೊಂದು ‘ಉಮರಾವ್ ಜಾನ್’ ಹಿಂದಿ ಚಲನಚಿತ್ರದಲ್ಲಿದೆ.
ಮೊಗಲರ ಕಾಲದ ಕತೆ ಇದು.
ಸುಮಾರು ಹನ್ನೆರಡು ಹದಿಮೂರು ವರ್ಷದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಮನೆಯ ಅಂಗಳದಲ್ಲಿ ಇತರ ಪುಟ್ಟ ಹುಡುಗ ಹುಡುಗಿಯರೊಂದಿಗೆ ಆಡುತ್ತಿದ್ದಾಳೆ.
ಆ ಕುಟುಂಬದೊಡನೆ ದ್ವೇಷವಿರುವ ವ್ಯಕ್ತಿಯೊಬ್ಬ ಎತ್ತಿನ ಬಂಡಿಯಲ್ಲಿ ಅಲ್ಲಿ ಹಾಯ್ದು ಹೋಗುತ್ತಿರುವಾಗ ಇವರನ್ನು ನೋಡುತ್ತಾನೆ.
ದ್ವೇಷ ಸಾಧಿಸಲೆಂದು ಆ ಹುಡುಗಿಯನ್ನು ಪಟ್ಟನೆ ತನ್ನ ಬಂಡಿಯಲ್ಲಿ ಎತ್ತಿ ಹಾಕಿಕೊಂಡು ಹೋಗಿ ಬಿಡುತ್ತಾನೆ.
ಲಖನೌ ಮುಟ್ಟಿದ ಬಳಿಕ ಅವಳನ್ನು ವೇಷ್ಯಾಗೃಹವೊಂದಕ್ಕೆ ಮಾರುತ್ತಾನೆ.
ಆ ಹುಡುಗಿಯೇ ಮುಂದೆ ಹೆಸರುವಾಸಿ ವೇಷ್ಯೆ ಉಮರಾವ್ ಜಾನ್ ಆಗುತ್ತಾಳೆ.
ಹುಡುಗಿಯ ಅಪಹರಣದ ದೃಶ್ಯದ ನಂತರ ಅವಳನ್ನು ಮಾರುವ ದೃಶ್ಯವನ್ನು ತೋರಿಸಿದ್ದರೆ ಕತೆಯಲ್ಲಿ ಏನೂ ವ್ಯತ್ಯಾಸವಾಗುತ್ತಿರಲಿಲ್ಲ.
ಆದರೆ ಈ ಚಿತ್ರದ ನಿರ್ದೇಶಕರು ಚಿತ್ರದ ಆಶಯವನ್ನು ಮೀರಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ನಿರ್ಜನ ರಸ್ತೆಯಲ್ಲಿ ಬಂಡಿ ಸಾಗುತ್ತಿದೆ.
ಈಗಾಗಲೇ ಕತ್ತಲೆ ಕವಿದಿದೆ.
ಮಾರ್ಗಮಧ್ಯದಲ್ಲಿ ಬಂಡಿಯ ಹಿಂಭಾಗದಲ್ಲಿ ಆ ಹುಡುಗಿಯ ಮುಖವನ್ನು ಬಂಡಿಯ ಹೊರಗೆ ತೋರಿಸಲಾಗಿದೆ.
ಆ ಹುಡುಗಿಯ ಮುಖದ ಮೇಲೆ ಅಸಹಾಯಕತೆ ಹಾಗೂ resignation ಕೆತ್ತಿದಂತಿವೆ.
ಆ ದೃಶ್ಯವನ್ನು ನೋಡುತ್ತಿರುವ ಪ್ರೇಕ್ಷಕರಿಗೆ ಇದು ಕೇವಲ ಒಬ್ಬ ಉಮರಾವ್ ಜಾನ್ ಕತೆಯಾಗಿ ಉಳಿಯುವದಿಲ್ಲ.
ಭಾರತದಲ್ಲಿ ಪ್ರತಿ ದಿನವೂ ನೂರಾರು ಉಮರಾವ್ ಜಾನ್‌ಗಳು ಅಸಹಾಯಕರಾಗಿ ತಮ್ಮನ್ನು ಕ್ರೌರ್ಯಕ್ಕೆ ಒಪ್ಪಿಸಿಕೊಳ್ಳುತ್ತಿದ್ದಾರೆ.
ಇದನ್ನು ಹೇಳುವ ಮೂಲಕ ನಿರ್ದೇಶಕರು ಪ್ರೇಕ್ಷಕನ ಮನದ ತಂತಿಯೊಂದನ್ನು ಮಿಡಿಯುತ್ತಾರೆ.

ಉಮರಾವ್ ಜಾನ್ ಒಂದು specific ಕತೆಯುಳ್ಳ ಸಿನೆಮಾ.
ಆದರೆ social theme ಇರುವ ಕೆಲವು ಕತೆಗಳಿವೆ.
ಶ್ಯಾಮ ಬೆನಗಲ್ಲರ ಅಂಕುರ, ನಿಶಾಂತ ಮೊದಲಾದವುಗಳು ಇಂತಹ ಕತೆಗಳು.
ಬೆನಗಲ್ಲರಲ್ಲಿ ಕೆಮರಾಮನ್ ಆಗಿ ಕೆಲಸ ಮಾಡಿದ ಗೋವಿಂದ ನಿಹಲಾನಿ ಸ್ವತಃ ಒಂದು ಚಿತ್ರವನ್ನು ನಿರ್ದೇಶಿಸಿದರು.
ಅವರು ನಿರ್ದೇಶಿಸಿದ ಚಲನಚಿತ್ರ ‘ಆಕ್ರೋಶ’ದಲ್ಲಿ ಓಮ್ ಪುರಿ ಓರ್ವ ಅತಿ ಹಿಂದುಳಿದ communityಯ ಕೂಲಿ ಕೆಲಸಗಾರ.
ಊರಿನ ಪ್ರಮುಖ ವ್ಯಕ್ತಿಗಳಾದ ಜಮೀನುದಾರ, ನ್ಯಾಯಾಧೀಶ, ಪೋಲೀಸ ಅಧಿಕಾರಿ ಮೊದಲಾದವರೆಲ್ಲ ಆತನ ಹೆಂಡತಿಯ(ಸ್ಮಿತಾ ಪಾಟೀಲಳ) ಮೇಲೆ ಒಂದು ರಾತ್ರಿ ಅತ್ಯಾಚಾರ ಮಾಡುತ್ತಾರೆ.
(ಗಮನಿಸಿ: ಅತ್ಯಾಚಾರದ ದೃಶ್ಯವನ್ನು ತೋರಿಸಿಲ್ಲ!)
ಸಾಮೂಹಿಕ ಅತ್ಯಾಚಾರದಿಂದಾಗಿ ಅಕೆ ಸತ್ತು ಹೋಗುತ್ತಾಳೆ.
ಅವಳ ಹೆಣವನ್ನು ಬಾವಿಯಲ್ಲಿ ಒಗೆದು ಅವಳ ಗಂಡನ ಮೆಲೆ ಕೊಲೆಯ ಕೇಸನ್ನು ಹಾಕುತ್ತಾರೆ.
ಸಿನೆಮಾದ titles ಪ್ರಾರಂಭವಾಗುವದೇ ನ್ಯಾಯಾಲಯದ ದೃಶ್ಯದಿಂದ.
ಕೊಲೆಯಾದ ಸ್ಮಿತಾ ಪಾಟೀಲ ಹಾಗೂ ಓಮ್ ಪುರಿಯ ಶಿಶುವನ್ನು ಅವನ ತಂಗಿ ನ್ಯಾಯಾಲಯದಲ್ಲಿ ಎತ್ತಿಕೊಂಡು ಕೂತಿರುತ್ತಾಳೆ.
ನ್ಯಾಯಾಲಯದ scenes ಮುಗಿಯುತ್ತ ಬಂದಂತೆ, ಆ ಕೂಸು ಸಣ್ಣದಾಗಿ ಅಳಲು ಪ್ರಾರಂಭಿಸುತ್ತದೆ. ನ್ಯಾಯದಾನ ನೀಡುತ್ತಿದ್ದಂತೆಯೇ, ಆ ಕೂಸಿನ ಅಳು ಜೋರಾಗುತ್ತ, ಇಡೀ ನ್ಯಾಯಾಲಯವನ್ನು ತುಂಬಿಕೊಂಡು ಬಿಡುತ್ತದೆ.
ಭಾರತದ ಕನಿಷ್ಠ ಪ್ರಜೆಗಳು ಅಸಹಾಯಕ ಶಿಶುವಿನಂತೆ ಹೇಗೆ ನ್ಯಾಯವಂಚಿತರಾಗಿದ್ದಾರೆ, ಹೇಗೆ ಅವರು ಆಕ್ರೋಶಿಸುತ್ತಿದ್ದಾರೆ ಎನ್ನುವ ತಮ್ಮ ಕಥಾ-ಆಶಯವನ್ನು ಗೋವಿಂದ ನಿಹಲಾನಿ ಸಿನೆಮಾದ ಮೊದಲಲ್ಲೇ ತೋರಿಸಿಬಿಡುತ್ತಾರೆ.

ಬಹುಶ: ಈ ದೃಶ್ಯಕ್ಕೆ ಸ್ವಲ್ಪ ಮಟ್ಟಿನ ಪ್ರೇರಣೆ Alfred Hitchcock ಅವರ ಚಿತ್ರವೊಂದರಿಂದ ದೊರೆತಿರಬಹುದು.
ಆ ಚಿತ್ರದಲ್ಲಿ ಬರುವ ಯುವಕನೊಬ್ಬ rash ಆಸಾಮಿ, ತಲೆತಿರುಕ ಎನ್ನಬಹುದು.
ಆತನ ಮೇಲೆ ಕೊಲೆಯ ಆರೋಪವಿದೆ.
Scotland Yardನ ಅಧಿಕಾರಿಗಳು ಎಲ್ಲ ಸಾಕ್ಷ್ಯಗಳನ್ನು ಹುಡುಕಿ, ಪರಿಶೀಲಿಸಿ ಆತನ ಮೇಲೆ ಖಟ್ಲೆ ಹಾಕಿದ್ದಾರೆ.
ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತಿರುವಾಗ, ಮನೆಯಲ್ಲಿ ಊಟ ಮಾಡುತ್ತ ಕುಳಿತಿದ್ದ Yardನ ಅಧಿಕಾರಿಗೆ ತಟ್ಟನೆ ಈ ವ್ಯಕ್ತಿ ನಿರಪರಾಧಿ ಎಂದು ಹೊಳೆಯುತ್ತದೆ.
ತಾವು ಮಾಡಿದ ತಪ್ಪು ಆತನಿಗೆ ಗೊತ್ತಾಗುತ್ತದೆ.
ಆತ ನ್ಯಾಯಾಲಯಕ್ಕೆ ಧಾವಿಸುತ್ತಾನೆ.
ನ್ಯಾಯಾಲಯವನ್ನು ಆತ ತಲುಪಿದಾಗ, ಮುಚ್ಚಿದ ಕಾಜಿನ ಬಾಗಿಲುಗಳಿಂದ ಒಳಗಿನ ದೃಶ್ಯ ಗೋಚರವಾಗುತ್ತದೆ.
ಆರೋಪಿಯು ಜೋರಾಗಿ ಕೈಗಳನ್ನು ಅಲ್ಲಾಡಿಸುತ್ತಿರುತ್ತಾನೆ, ಬಹುಶ: ತಾನು ನಿರಪರಾಧಿಯೆಂದು ಹೇಳುತ್ತಿರಬಹುದು.
ಆತ ಹೇಳುವದು ಇವನಿಗೆ ಹಾಗೂ ಪ್ರೇಕ್ಷಕರಿಗೆ ಕೇಳುವದಿಲ್ಲ.
ಈತ ಗಾಜಿನ ಬಾಗಿಲನ್ನು ತೆರೆಯುತ್ತಿದ್ದಂತೆ, ನ್ಯಾಯಧೀಶರು ಆತನಿಗೆ ದಂಡನೆ ನೀಡುವ ತೀರ್ಪು ಕೇಳಿಸುತ್ತದೆ.
ಸಮಾಜದ ವ್ಯವಸ್ಥೆಯು ಆರೋಪಿಯ ಕೂಗಿಗೆ ಹೇಗೆ ಕಿವುಡಾಗಿದೆ ಎನ್ನುವ ಆಶಯವನ್ನು ವ್ಯಕ್ತಪಡಿಸುವ ಮೂಲಕ Alfred Hitchcock ಇವರು ಈ ಸಿನೆಮಾವನ್ನು ಸಾಮಾನ್ಯ ಪತ್ತೇದಾರಿ ಸಿನೆಮಾಗಿಂತ ಎತ್ತರದ ಸಾಮಾಜಿಕ ಸಿನೆಮಾ ಆಗಿ ಪರಿವರ್ತಿಸಿದ್ದಾರೆ.

ಇಲ್ಲಿ ಉದಾಹರಿಸಲಾದ ಕೆಲವು ಚಿತ್ರಗಳು ೪೦, ೫೦ ವರ್ಷಗಳಷ್ಟು ಹಳೆಯವು.
ಆ ಕಾಲದಲ್ಲಿ ಸಿನೆಮಾ ತಂತ್ರಜ್ಞಾನ ಅಷ್ಟಕ್ಕಷ್ಟೇ.
ಆದರೆ, ನಿರ್ದೇಶಕರು ಪ್ರತಿಭಾವಂತರಾಗಿದ್ದರು.
ಅಂತೆಯೇ ಇಷ್ಟು ವರ್ಷಗಳ ನಂತರವೂ ಇವು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ನಿಂತಿವೆ.

ಇಂತಹ ಒಂದಾದರೂ ಪ್ರತಿಭಾವಂತ ದೃಶ್ಯವು Slumdog millionaire ಚಿತ್ರದಲ್ಲಿ ಇದೆಯೆ?
ಇಂತಹ ಪ್ರತಿಭೆಯ ಒಂದೇ ಉದಾಹರಣೆಯನ್ನಾದರೂ ಈ ಚಿತ್ರದಲ್ಲಿ ನೋಡಬಹುದೆ?
ಬಾಲಕ ಜಮಾಲ ಸಂಡಾಸದ ಹೊಲಸಿನಲ್ಲಿ ಹಾರುವ ಒಂದೇ ದೃಶ್ಯವಲ್ಲ, ಇಡೀ ಚಲನಚಿತ್ರವೇ ಸಂಡಾಸದ ಹೊಲಸಾಗಿದೆ!
Slumdog millionaire is just toilet shit.