Tuesday, November 24, 2015

ಹಿಂಡಬಾರದು ಮಲ್ಲಿಗೆಯ ದಂಡೆಯನು.........ಮಾಲಿನಿ ಗುರುಪ್ರಸನ್ನ ಅವರ ಲೇಖನ

ಶ್ರೀಮತಿ ಮಾಲಿನಿ ಗುರುಪ್ರಸನ್ನರು  ಸರಸ ಶೈಲಿಯ ಲೇಖಕಿ ಹಾಗು ಸೂಕ್ಷ್ಮ ದೃಷ್ಟಿಯ ವಿಮರ್ಶಕಿಯಾಗಿದ್ದಾರೆ.  ‘ಚುಕುಬುಕು’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಅವರ ಒಂದು ಲೇಖನವನ್ನು,  (‘ಬೇಂದ್ರೆ...ನನ್ನ ಓದು’.) ಅವರ ಅನುಮತಿಯಿಂದ ‘ಸಲ್ಲಾಪ’ದಲ್ಲಿ ಈಗಾಗಲೇ ಬಳಸಿಕೊಂಡಿದ್ದೇನೆ. ಅದೇ ಪತ್ರಿಕೆಯಲ್ಲಿ ಪ್ರಕಟವಾದ, ಕೆ.ಎಸ್.ನರಸಿಂಹಸ್ವಾಮಿಯವರ ಬಗೆಗೆ ಬರೆದ ಅವರ ಮತ್ತೊಂದು ಲೇಖನವನ್ನು ‘ಸಲ್ಲಾಪ’ದಲ್ಲಿ ಬಳಸಿಕೊಳ್ಳಲು ಅವರು ಅನುಮತಿಸಿದ್ದಾರೆ. ಅವರಿಗೆ ಅನೇಕ ಧನ್ಯವಾದಗಳು.
..........................................................................ಹಿಂಡಬಾರದು ಮಲ್ಲಿಗೆಯ ದಂಡೆಯನು
ಮಾಲಿನಿ ಗುರುಪ್ರಸನ್ನ

ಘಟನೆ ೧
ಸುಮಾರು ೫೫ನೇ ಇಸವಿಯ ಒಂದು ಮಧ್ಯಾಹ್ನ ಒಂದು ಪುಟ್ಟ ಮನೆಯಲ್ಲಿ ಮನೆ ಮಂದಿಯೆಲ್ಲ ಊಟಕ್ಕೆ ಕುಳಿತಿದ್ದಾರೆ. ಕುಂಕುಮದ ಹಣೆಯಲ್ಲಿ ಬೆವರು,ಅವಸರದಲ್ಲಿ ಹೆಣೆದ ಸೊಟ್ಟ ಜಡೆ, ಜಡೆಯಲ್ಲಿದ್ದ ಮಲ್ಲಿಗೆಗೆ ಮುಡಿಯೇರಿದ ಉತ್ಸಾಹವಿಲ್ಲ. ಮುಡಿದವಳಿಗೆ ಮುಡಿಯಲೇಬೇಕೆಂಬ ಹಟವೂ ಇದ್ದಂತಿಲ್ಲ. ಬಳೆ ತೊಟ್ಟ ಕೈಗಳು ಬಡಿಸುವುದರಲ್ಲಿ ಮಗ್ನವಾಗಿವೆ.

ಇಂತಿಪ್ಪ ಸಮಯದಲ್ಲೇ ಮನೆಯೊಡೆಯನ ಆರ್ಭಟ ಕೇಳಿಬರುತ್ತದೆ. " ಲೇ ಅಪಭ್ರಂಶು ಬಾರೆ ಇಲ್ಲಿ." ಮುಂದಾಗುವುದು ಮನೆಮಂದಿಗೆಲ್ಲ ವೇದ್ಯ. ಆಕೆ ಮೌನವಾಗಿ ಬಂದು ಪಂಕ್ತಿಯ ಮುಂದೆ ಕುಳಿತುಕೊಳ್ಳುತ್ತಾಳೆ. ಆಪೋಶನ ತೆಗೆದುಕೊಳ್ಳಲೂ ಪುರುಸೊತ್ತಿಲ್ಲದ ಮನೆಯೊಡೆಯ ಎದ್ದುಬಂದು ಅನಾಮತ್ತಾಗಿ ಹುಳಿಯ ಪಾತ್ರೆಯನ್ನೆತ್ತಿ ಅವಳ ಮೇಲೆ ಸುರಿಯುತ್ತಾನೆ. ಅವಳು ಮುಡಿದ ಮಲ್ಲಿಗೆ, ಇಟ್ಟ ಕುಂಕುಮ, ತೊಟ್ಟ ಬಳೆ,ಸುತ್ತಿಕೊಂಡ ಸೀರೆ ಎಲ್ಲವೂ ಮಾಯವಾಗಿ ಹುಳಿಯ ರಾಜ್ಯಭಾರ.

ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಹುಳಿಗೆ ಕೊಂಚ ಉಪ್ಪು ಜಾಸ್ತಿ. ಅವಳ ಮುಖ ಬಾಡಿತ್ತಾ,ಮನ ನೊಂದಿತ್ತಾ ಕಂಡವರಾರು? ಕೇಳಿದವರಾರು?ಎದ್ದು ಬಚ್ಚಲಿಗೆ ನಡೆಯುತ್ತಾಳೆ. ಶುಚಿರ್ಭೂತಳಿಗೆ ಮತ್ತೆ ಅಡುಗೆ ಮಾಡುವ ಗಡಿಬಿಡಿಯಲ್ಲೂ ಸುರಿದ ಹುಳಿಯನ್ನುಸ್ವಚ್ಛಗೊಳಿಸುವ ಮನೆ ಒರೆಸುವ ಕಾಯಕ. ಇವರಿಗೆಲ್ಲಾ ಬಡಿಸಿ ಇವರ ಹೊಟ್ಟೆ ತುಂಬಿದ ನಂತರವೇ ಆಗಬೇಕಾದ ಅವಳ ಊಟದ ಬಗ್ಗೆ ಕೇಳುವವರಾರು?

ಘಟನೆ ೨
ಇದು ಇತ್ತೀಚಿನದು. ಮನೆಗೆ ನೆಂಟರು ಬಂದಿದ್ದಾರೆ. ಮನೆಯೊಡೆಯನಿಗೆ ಅವರನ್ನು ಸತ್ಕರಿಸುವ ಸಂಭ್ರಮ. ಪ್ರೇಕ್ಷಣೀಯ ಸ್ಥಳಗಳಿಗೆ ಹೆಸರುವಾಸಿ ಊರದು. ಬಂದ ನೆಂಟರು ತಿಂಡಿ ತಿಂದ ತಟ್ಟೆಯಲ್ಲೇ ಕೈ ತೊಳೆದು ಊರು ನೋಡ ಹೊರಡುತ್ತಾರೆ. ತಟ್ಟೆ ತೆಗೆಯ ಹೊರಟವರನ್ನು ಮನೆಯೊಡೆಯ ತಡೆಯುತ್ತಾನೆ. " ಊರು ನೋಡಲು ಸಮಯ ಬೇಕು. ನಿಮ್ಮ ಕೈಲಿ ಮಾಡಿಸುವುದೇ? ಅವಳು ಮಾಡ್ಕೋತಾಳೆ ಬಿಡಿ ಬಿಡಿ". ಸಮಯ ಮೀರಿದ ೮ ಗಂಟೆಯ ಬೆಳಗಿನಲ್ಲಿ ನೆಂಟರು ಹೊರಡುತ್ತಾರೆ. ಎಲ್ಲ್ಲವನ್ನೂ ತೆಗೆದು ತೊಳೆದು ಬಟ್ಟೆಬರೆ ಒಗೆದು ಮನೆ ಶುಚಿಗೊಳಿಸಿದ ಗೃಹಿಣಿ ತಾನು ತಿಂಡಿ ತಿನ್ನಲೂ ಪುರುಸೊತ್ತಿಲ್ಲದೆ ಅಡುಗೆಗೆ ಕೂರುತ್ತಾಳೆ.

' ನೆಂಟರು ಒಂದು ಗಂಟೆಗೆಲ್ಲಾ ಊಟಕ್ಕೆ ಬರುತ್ತಾರೆ. ಅವರಿಗೆ ಔತಣವಾಗಬೇಕು.' ಗಂಡನ ಆಜ್ಞೆ. ಅಡುಗೆ ಮಾಡುತ್ತಾ ಅಡಿಗಡಿಗೆ ಗಂಡನಿಗೆ, ಮಕ್ಕಳಿಗೆ ಕಾಫಿ ಕಷಾಯಗಳನ್ನು ಪೂರೈಸುತ್ತಾ ಇನ್ನೇನು ಬೋಂಡಾ ಕರಿಯಲು ಬಾಣಲೆಯಿಡುತ್ತಿರುವ ಹೊತ್ತಿಗೆ ಅದೋ ನೆಂಟರು ಬಂದೇಬಿಟ್ಟರು. ಏಸೀ ಕಾರಿನಲ್ಲಿ ಕುಳಿತು ಯಾರೋ ಕಟ್ಟಿದ ಕೋಟೆಕೊತ್ತಲ ನೋಡಿಬಂದ ನೆಂಟರಿಗೆ ಊಟಕ್ಕೆ ತಡವಾದಾಗ ಮನೆಯೊಡೆಯನ ಮನ ಮಿಡಿಯುತ್ತದೆ. ಅವರ ಹಸಿವಿನ ಅರಿವಿಲ್ಲದೆ ಅಡುಗೆ ನಿಧಾನ ಮಾಡಿದ ಹೆಂಡತಿಗೆ ಶಿಕ್ಷೆ ಬೇಡವೇ? ಅಡುಗೆ ಮನೆಯ ಪಂಪ್ ಸ್ಟೋವ್ ಸದ್ದಿನಲ್ಲಿ ಗಂಡನ ಹೊಡೆತದ ಸದ್ದು ನೆಂಟರ ಕಿವಿ ಮುಟ್ಟುವುದಿಲ್ಲ. ಇಂಗಿನ ಒಗ್ಗರಣೆಯ ಘಮ ಅವರ ಮೂಗುಗಳನ್ನು ಆಡರುತ್ತಿದೆ. ಆ ಮನೆಯೊಡೆಯನ ವಯಸ್ಸು ೭೮. ಮನೆಯೊಡತಿ(?)ಗೆ ೬೬.!!!!

ಈ ಘಟನೆಗಳನ್ನು ಸಧ್ಯಕ್ಕೆ ಇಲ್ಲಿಯೇ ಬಿಟ್ಟು ಬಿಡೋಣ. ನನಗಾಗ ೧೫ರ ಹರೆಯ. ಮೊದಲ ಕಥೆ ಪ್ರಕಟವಾದ ಪುಳಕ ಪೊಗರು ಎರಡೂ ಮೈಗೆ ಅಡರಿದ್ದ ಕಾಲ. ಒಂದು ದಿನ ನನ್ನ ಕೈಗೆ ಸಿಕ್ಕ ಕವನವೊಂದರ ಮೊದಲ ಸಾಲನ್ನು ಓದಿ ಬಿದ್ದು ಬಿದ್ದು ನಕ್ಕು ಬಿಟ್ಟೆ. ಜಗಲಿಯಲ್ಲಿ ಕುಳಿತು ಏನೋ ಓದುತ್ತಿದ್ದ ಅಣ್ಣನ(ತಂದೆ) ಮುಂದೆ ನಿಂತು ಪದ್ಯದ ಮೊದಲ ಸಾಲನ್ನು ಓದಿದೆ 'ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ ಆದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ' "ಇದೆಂಥಾ ಕವನ ಅಣ್ಣಾ ನವಿಲೂರಿನೊಳಗೆಲ್ಲ ಅವಳೇ ಬಹಳ ಚೆಲುವೆಯಂತೆ ಅದಕ್ಕೆ ಇವರಿಗೆ ನಾಳೆಯೇ ಮದುವೆಯಂತೆ. ಊರಿನ ಚೆಲುವೆಯನ್ನೇ ಮದುವೆ ಮಾಡಿಕೊಳ್ಳಬೇಕೆಂದು ಇತರರೂ ಹಟ ಹಿಡಿದರೆ ಗತಿಯೇನು. ಅವಳು ಚೆಲುವೆಯಲ್ಲದಿದ್ದರೇ ಇವರು ಮದುವೆಯಾಗುತ್ತಿರಲಿಲ್ಲವೋ......." ಮುಂದುವರೆಯುತ್ತಿದ್ದ ನನ್ನ ಮಾತುಗಳನ್ನು ನನ್ನಣ್ಣನ ಮಾತುಗಳು ತುಂಡರಿಸಿದವು.

"ನೀನು ಎರಡನೇ ಸಾಲನ್ನು ಓದಿ ನಂತರ ಮೊದಲ ಸಾಲನ್ನು ಓದು". ಅರ್ಥವಾಗದೆ ಅವರ ಮುಖ ನೋಡಿದೆ. ಅವರೇ ಬಿಡಿಸಿ ಹೇಳಬೇಕಾಯಿತು. " ಹಾಗಲ್ಲ, ಅವನಿಗೆ ನಾಳೆ ಮದುವೆ ಹಾಗೆಂದೇ ನವಿಲೂರಿನೊಳಗೆಲ್ಲ ಅವಳು ಚೆಲುವೆ. ಅವನು ಅವಳಲ್ಲಿ ಆ ಚೆಲುವನ್ನು ಹುಡುಕುತ್ತಿದ್ದಾನೆ..ಕಾಣುತ್ತಿದ್ದಾನೆ. ಆ ಪದ್ಯದ ಸರಳತೆ ನಿನ್ನ ದಿಕ್ಕು ತಪ್ಪಿಸುತ್ತಿದೆ. ಅದನ್ನು ಓದುವ ರೀತಿಯೇ ಬೇರೆ. ಅವರ ಕೆಲವು ಪದ್ಯಗಳನ್ನಾದರೂ ಓದಿಕೋ. ನಂತರ ಮಾತನಾಡೋಣ" ಎಂದೂ ಖಡಕ್ಕಾಗಿ ಮಾತನಾಡದ ನನ್ನ ಅಣ್ಣನ ಮಾತುಗಳು ತುಸು ಚುರುಕಾಗೆ ಇತ್ತು.

ಅಂದಿನಿಂದ ಆರಂಭವಾದ ನರಸಿಂಹ ಸ್ವಾಮಿಯವರ ಪದ್ಯಗಳ ಓದು ಇಂದಿನವರೆಗೂ ಸಾಗಿದೆ. ನಿಜ ಹೇಳಬೇಕೆಂದರೆ ಹೆಣ್ಣನ್ನು ನರಸಿಂಹ ಸ್ವಾಮಿಯಷ್ಟು ಗೌರವಿಸಿದ ಕವಿಗಳು ನಮ್ಮಲ್ಲಿ ಬಹಳ ಕಡಿಮೆ. (ಅಥವಾ ಹೆಂಡತಿಯನ್ನು) . ನೀನಿದ್ದರೆ ಕೋಟಿ ರೂಪಾಯಿ ನಿನ್ನೆದುರು ನಾನು ಸಿಪಾಯಿ ಎನ್ನುವ ಮೂಲಕ ಗಂಡಿನ ಸಹಜ ಹಕ್ಕೆನಿಸಿರುವ ಬಿಂಕ ಬಿಗುಮಾನಗಳನ್ನು ಮೂಲೆಗೆಸೆಯುತ್ತಾರೆ. ಶಿಕಾರಿಪುರದ ಹಳ್ಳಿಯೊಂದರ ಹಸಿರು ದಾರಿಯಲ್ಲಿ ನಡೆವಾಗ, ಹರಿಹರಪುರದ ಹೊಳೆಯ ದಂಡೆಯ ಮೇಲೆ ಕುಳಿತು ಹರಿವ ಹೊಳೆಯಲ್ಲಿ ಕಾಲು ಅಲ್ಲಾಡಿಸುವಾಗ ಪದೇ ಪದೇ ನನಗೆ ನೆನಪಾಗುತ್ತಿದ್ದುದು ಅವರ ಪದ್ಯಗಳೇ. ಆಗ ಮಾರುದ್ದವಿದ್ದ ನನ್ನ ಜಡೆಯಲ್ಲಿ ಮಲ್ಲಿಗೆ ದಂಡೆ ಏರಿದಾಗ ಶಾನುಭೋಗರ ಮನೆಯ ಹುಡುಗಿಯೇ ಆಗಿಬಿಡುತ್ತಿದ್ದೆ. ( ಕಾಕತಾಳೀಯ ಎಂದರೆ ನನ್ನಜ್ಜನೂ ಶಾನುಭೋಗರೇ) .ಒಂದು ದಿನ ಕುತೂಹಲಕ್ಕೆಂಬಂತೆ ಪುಸ್ತಕ ತೆಗೆದು ಪ್ರಕಟಣೆಯ ವರ್ಷ ನೋಡಿದಾಗ ನಿಜಕ್ಕೂ ನಿಬ್ಬೆರಗಾಗಿದ್ದೆ. ೧೯೪೨!!!!! ನನ್ನ ತಂದೆಗಾಗ ೭ ವರ್ಷ..ನನ್ನಮ್ಮ ಹುಟ್ಟಿದ ವರ್ಷ. ಇದು ನನ್ನಲ್ಲಿ ಇಂದಿಗೂ ಬೆರಗು ಮೂಡಿಸುತ್ತದೆ.

ಈ ಲೇಖನದ ಆರಂಭದಲ್ಲಿರುವ ಎರಡು ಘಟನೆಗಳೂ ೧೯೪೨ರ ನಂತರ ಸಂಭವಿಸಿದ್ದು. ಮೊದಲನೆಯದು ನಾನು ಕೇಳಿದ ನನ್ನ ಬಂಧುಗಳ ಮನೆಯೊಂದರಲ್ಲೇ ನಡೆದ ಘಟನೆ. ಎರಡನೆಯದು ನಾನು ಕಣ್ಣಾರೆ ಕಂಡಿದ್ದು, ನೆಂಟರ ಗುಂಪಿನಲ್ಲಿ ನಾನೂ ಒಬ್ಬಳಾಗಿದ್ದು. ಹೆಣ್ಣನ್ನು ದೈಹಿಕವಾಗಿ ಮಾನಸಿಕವಾಗಿ ವೃದ್ಧಾಪ್ಯದಲ್ಲೂ ಶೋಷಿಸುತ್ತಿದ್ದ, ಅದು ಶೋಷಣೆಯಲ್ಲದೆ ತಮ್ಮ ಕರ್ತವ್ಯವೆಂದು ಹೆಣ್ಣುಗಳೂ ಒಪ್ಪಿಕೊಳ್ಳುವಂತೆ ಮಾಡಿದ್ದ ಕಾಲದಲ್ಲಿ ನರಸಿಂಹಸ್ವಾಮಿಯವರು ' ನನ್ನವಳು ನನ್ನೆದೆಯ ಹೊನ್ನಾಡನಾಳುವಳು" ಎಂದು ಸಂಭ್ರಮಿಸಿದರು. ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ ಎಂದು ಪುಳಕಗೊಂಡರು. ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿದೆ ಎಂದು ನಂಬಿದರು. ತಮ್ಮ ಮೈಮನದ ಹಸಿವು ತೀರಿದೊಡನೆ ಮುಖ ತಿರುಗಿಸಿ ನಡೆವ, ಕನಿಷ್ಟ ಹೆಂಡತಿಯ ಹೊಟ್ಟೆಯ ಬಗ್ಗೆಯೂ ಯೋಚಿಸದ, ಕಾಳಜಿ ವಹಿಸದ ಗಂಡುಗಳ ಮಧ್ಯೆ ' ನಿನ್ನ ತಟ್ಟೆಯ ತುಂಬಾ ಅನ್ನ ನೊರೆ ಹಾಲು ' ತುಂಬಿಸುವ ಭರವಸೆಯಿತ್ತವರು. ಪ್ರತಿಯಾಗಿ ಪ್ರೀತಿಯೊಂದನ್ನೇ ಅವಳಿಂದ ಬೇಡಿದವರು. ನರಸಿಂಹ ಸ್ವಾಮಿಯವರನ್ನು ಹೆಣ್ಣು ಕುಲ ಇಂದಿಗೂ ನೆನೆಯುವುದು ಇಂತಹಾ ಕಾರಣಗಳಿಗೆ.

ಹಾಗೆಂದು ನರಸಿಂಹ ಸ್ವಾಮಿಯವರ ಕವನಗಳ ಗಂಡು ಹೆಂಡತಿಯ ದಾಸನಲ್ಲ, ಹೇಡಿಯಲ್ಲ, ಕೋಪತಾಪಗಳಿಲ್ಲದ ಸಂತನೂ ಅಲ್ಲ. ಸಿಟ್ಟಿಗೆದ್ದರೆ ಹೆಂಡತಿಯ ಹೂ ಮೂಡಿಸುವ ಶಾಸ್ತ್ರಕ್ಕೂ ಚಕ್ಕರ್ ಹೊಡೆಯುವವ. ಬಳೆಗಾರನೇ ಬಂದು ಇವನಿಗೆ ದಮ್ಮಯ್ಯಗುಡ್ಡೆ ಹಾಕಬೇಕು. ದುಂಡುಮಲ್ಲಿಗೆಯ ದಂಡೆಯವಳು ಎಂಬುದನ್ನು ನೆನಪಿಸಬೇಕು. ಹೆಂಡತಿ ತೌರಿಗೆ ಹೊರಟರೆ ಸಿಡಿಮಿಡಿ ಗೊಳ್ಳುವವನು. ಪದೇ ಪದೇ ಕರೆಯದಿರಿ ಎಂದು ಮಾವನಿಗೆ ತಾಕೀತು ಮಾಡುವವನು. 'ಹೋಗಿ ಬರುವುದಕೆಲ್ಲ ತೌರುಮನೆ ಬಲು ಸೊಗಸು ಆರದಿರಲದರ ಬೆಳಕು. ಹಾಗೆಂದು ಹಗಲೆಲ್ಲಾ ಹಿಂಡಿದರೆ ಕಳುಹೆಂದು ನಿಮ್ಮೂರ ದಾರಿ ಬಳಸು.' ಎಂದು ಮಾವನಿಗೆ ಎಚ್ಚರಿಕೆ ಕೊಡುತ್ತಾನೆ. ಅಳಿಯನೇ ಬೇಡ ನಿಮಗೆಂದು ಮುನಿಯುತ್ತಾನೆ. ಹೀಗಿದ್ದರೂ ಮಗಳಿಗೆ ಕೋಪವಿಲ್ಲ. ಒಬ್ಬಳನೆ ಕಳುಹುವಿರಾ ಎಂದು ಸೂಚ್ಯವಾಗಿ ಮುಡಿದ ಹೂವನ್ನು ಮುಟ್ಟಿ ತುಂಟ ನಗೆ ಚೆಲ್ಲುತ್ತಾಳೆ. ಅವನ ಮುನಿಸಿನ ಮೂಲ ಇವಳಿಗೂ ಪ್ರಿಯವೇ. ದಾಂಪತ್ಯಕ್ಕೆ ಬೇಕಾದ ಹುಸಿಮುನಿಸು, ನಸುನಗೆ ಇದ್ದರೇನೇ ಸೊಗಸೆಂದು ಇಬ್ಬರಿಗೂ ಗೊತ್ತು.

ಅವರ ಒಂದಿರುಳು ಕನಸಿನಲಿ ಪದ್ಯದಲ್ಲಿ ಬರುವ ಸಾಲುಗಳನ್ನೇ ನೋಡಿ. " ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ ಬಳುಕುತಿತರೆ ಕಂಪ ಸೂಸಿ" ಅಲ್ಲಿ ಮಲ್ಲಿಗೆಯ ಮೊಗ್ಗುಗಳಿಗೆ ಮುಳ್ಳು ಬೇಲಿಯನ್ನು ವರಿಸುವ ಅನಿವಾರ್ಯತೆ..... ಎಲ್ಲಿಯ ಮುಳ್ಳು..ಎಲ್ಲಿಯ ಮಲ್ಲಿಗೆಯ ಮೊಗ್ಗು..ನವಿರು ಕುಲದ ಇನ್ನೂ ಪೂರ್ತಿಯಾಗಿ ಅರಳದ ಮಲ್ಲಿಗೆ ತನ್ನ ಸಹಜ ಕೋಮಲತೆಯೊಂದಿಗೆ ಮುಳ್ಳು ಬೇಲಿಯನ್ನು ಸುತ್ತಿಕೊಂಡಿದೆ. ತನ್ನ ಪರಿಸ್ಥಿತಿಗೆ ಅದು ನೋಯುತ್ತಿಲ್ಲ. ನಲುಗುತ್ತಿಲ್ಲ. ಬಾಗಿ ಬಳುಕಿ ನಲಿಯುತ್ತಿದೆ ಅದೂ ಹೇಗೆ...ಕಂಪಚೆಲ್ಲುವ ಮೂಲಕ. ಮೊಗ್ಗನ್ನು ವರಿಸಿದ ಮುಳ್ಳಿನ ರೀತಿಯಾದರೂ ಎಂತಹದ್ದು. ತನ್ನ ಮುಳ್ಳನ್ನು ಮೊಗ್ಗಿಗೆ ತಾಗದಂತೆ ಕಾಯುತ್ತಾ ಅದಕ್ಕಿನಿತೂ ನೋವಾಗದಂತೆ, ಅದು ಬಳುಕುವಂತೆ, ಮೊಗ್ಗನ್ನು ಹೂವಾಗುವಂತೆ ಕಾಪಿಡುತ್ತಿದೆ. ಮೊಗ್ಗಿಗೆ ಮುಳ್ಳಿನ ಜೊತೆ ನಲಿಯುವ ಸಂಭ್ರಮ, ಮುಳ್ಳಿಗೆ ಅದರ ನಲಿವನ್ನು ಕಂಡ ಸಾರ್ಥಕತೆ. ಓದುತ್ತಿದ್ದಾಗ ಪದೇ ಪದೇ ನನಗೆ ನೆನಪಾಗುವುದು ಅವರು ಈ ಕವನಗಳನ್ನು ರಚಿಸಿದ ಕಾಲಘಟ್ಟ. ಆ ಕಾಲದಲ್ಲೇ ಮಲ್ಲಿಗೆಯ ವನ ಅವರ ಮನ.

(ಮೊದಲೇ ಹೇಳಿಬಿಡುತ್ತೇನೆ ನಾನು ಅಡಿಗರ ಅಭಿಮಾನಿಯೂ ಹೌದು. ಇಲ್ಲಿ ನಾನು ಸೂಚಿಸುವ ಸಾಲುಗಳು ಆ ಪದ್ಯಕ್ಕಷ್ಟೆ ಸೀಮಿತ) ಒಲುಮೆಯೊಳಗೊಂದು ನಾವು ನಮಗಿಲ್ಲ ನೋವು ಸಾವು ಎನ್ನುವ ಕವಿಯನ್ನು ಯಾವ ಮೋಹನ ಮುರಳಿಯ ಕರೆಯು ಕರೆಯುವುದಿಲ್ಲ. ಗಂಡನ್ನು ಮಾತ್ರ ಕಾಡುವ ಮೋಹನ ಮುರಳಿ ಹೆಣ್ಣನ್ನೇಕೆ ಕಾಡುವುದಿಲ್ಲ? ಒಂದು ವೇಳೆ ಹೆಣ್ಣಿಗೆ ಕಾಡಿದರೆ ಗತಿಯೇನು? ' ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನಗಳನ್ನು ತನ್ನ ಹಕ್ಕೆಂಬಂತೆ ಅನುಭವಿಸುವ ಗಂಡಿಗೆ ಅವೆಲ್ಲವನ್ನೂ ತೊರೆದು ಮೋಹನ ಮುರಳಿಯ ಕರೆಗೆ ಓಗೊಡುವುದು ಹೊರಡುವುದು ಹಳೆಬಟ್ಟೆ ಕಳಚಿದಷ್ಟೆ ಸುಲಭ. ಹಾಗೆ ಹೊರಡುವಾಗ ಅವನಿಗೆ ಯಾವ ಜವಾಬ್ದಾರಿಯೂ ಬಾಧಿಸುವುದಿಲ್ಲ.'ಒಲಿದ ಮಿದುವಾದ ಎದೆಯನ್ನು ಮೈಯನ್ನು ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ ಎಂದು ಬಣ್ಣಿಸುವವನಿಗೆ ತನ್ನ ಮೈಯ್ಯೂ ಅದೇ ಪಂಜರ ಎನ್ನುವುದು ನೆನಪಾಗುವುದಿಲ್ಲ. ಆ ಪಂಜರದೊಳಗಿನ ಹೆಣ್ಣು ಜೀವದ ತುಡಿತ ಅವನಿಗೆ ತಾಕುವುದೇ ಇಲ್ಲ. . ಬೇಲಿಯೊಳಗೆ ಕುಣಿಯುತ್ತಿರುವ ಬಯಕೆಗಳೆಲ್ಲಾ ತೀರಿದ ಮೇಲೆ ಎದುರಿಗಿದ್ದವಳ ಭಾವನೆಗಳನ್ನೂ ಗಮನಿಸದೆ ಗಂಡು ತನಗಿನ್ನುಇವೆಲ್ಲಾ ಸಾಕು ಎಂದು ಶಸ್ತ್ರಸನ್ಯಾಸ ತೆಗೆದು ಕೊಳ್ಳುತ್ತಾನೆ. ಎದುರಿದ್ದವಳಅಸಹಾಯಕ ಪ್ರಶ್ನೆ ಕಿವಿಗೆ ಬೀಳದವನಿಗೆ ಇನ್ನೂ ಹುಟ್ಟದ ಅಲೆಗಳ ಮೂಕ ಮರ್ಮರ ಕಾಡುತ್ತದೆ. ಸಪ್ತಸಾಗರದಾಚೆ ಕಣ್ಣು ಹಾಯಿಸುತ್ತಾನೆ. ಇದ್ದಕ್ಕಿದ್ದಂತೆ ಕರೆಯುವ ಮೋಹನ ಮುರಳಿ .. ಚಾಚುವ ಮಿಂಚಿನ ಕೈ ಹೆಣ್ಣಿನ ಅನುಭವಕ್ಕೆ ಬರಲು ಸಾಧ್ಯವೇ? ಅವಳಿಗಿರುವುದು ತನ್ನ ಒಲವಿತ್ತ ಜವಾಬ್ದಾರಿಯನ್ನು ನಿಭಾಯಿಸುವುದು ಮಾತ್ರ. . ಅಡಿಗರ ಈ ಅತ್ಯಂತ ಸೊಗಸಾದ ಕವನ ಏಕಪಕ್ಷೀಯ ಎಂದು ಅಡಿಗರ ಉತ್ಕಟ ಅಭಿಮಾನಿಯೂ ಆದ ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ.

ನನ್ನ ಹೆಣ್ತನ ನರಸಿಂಹಸ್ವಾಮಿಯವರನ್ನು ಒಪ್ಪಿಕೊಳ್ಳುವುದು ಈ ಕಾರಣಗಳಿಗಾಗಿಯೇ. ಅವರು ತಾವು ಮಾಗಲು ಹೆಣ್ಣನ್ನು ಮೆಟ್ಟಿಲಾಗಿ ಬಳಸುವುದಿಲ್ಲ. ಅವಳ ಜೊತೆ ಜೊತೆಗೇ ಮಾಗುತ್ತಾರೆ. ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ ಪ್ರೇಮಗಂಗೆ ಇವರಿದ್ದಲ್ಲಿಗೆ ಬರುತ್ತಾಳೆ..ಅವಳ ಒಲುಮೆಯಿಂದ ಬಾಳು ಬೆಳಕಾಗುವಂತೆ ಮಾಡುತ್ತಾಳೆ. ಹಾಗೆಂದೇ ಅವಳು ಚಂದ್ರಮುಖಿ.

ಒಮ್ಮೆ ಕಲ್ಪಿಸಿಕೊಳ್ಳಿ.. ನಿಮ್ಮ ಮನೆಯಲ್ಲಿ ರಾಗದಲ್ಲೇ ಚಂದ್ರನ ತರುವಷ್ಟು ಸಾಮರ್ಥ್ಯವಿರುವ ನಾಗರಕುಚ್ಚಿನ ನಿಡುಜಡೆಯವಳು ಓಡಾಡುತ್ತಿದ್ದಾಳೆ. ಅವಳು ಮುಡಿದ ಮಲ್ಲಿಗೆಯ ಘಮ ನಿಮ್ಮ ಮನೆಮನವನ್ನುತುಂಬಿದೆ. ಚಿಕ್ಕ ಮನೆಯಲ್ಲೂ ಅಕ್ಕರೆಯ ದನಿಯಲ್ಲಿ ಮಾತಾಡುತ್ತಿದ್ದಾಳೆ. ಒಲುಮೆ ಅವಳ ಮಾತಲ್ಲಿ ನಡೆಯಲ್ಲಿ ಉಕ್ಕುತ್ತಿದೆ. ಒಂದಿಷ್ಟು ಒಲುಮೆಯನ್ನು ನೀವಿತ್ತರೆ ಸಡಗರದಲ್ಲಿ ಒಂದಾಗಿ ಬಾಳಲು ರತ್ನನೌಕೆಯಂತೆ ತೇಲಿ ಬರುತ್ತಾಳೆ.

ನಿಮಗಾಗ ಯಾವ ಮೋಹನ ಮುರಳಿಯ ಕರೆಯೂ ಕೇಳುವುದಿಲ್ಲ.