Wednesday, January 20, 2010

ಪದಶೋಧ

ಅಡುಗೆಯ ಸ್ಟೋ, ಸೈಕಲ್ ಅಥವಾ ಮತ್ಯಾವುದೇ ಚಿಕ್ಕಪುಟ್ಟ ಯಂತ್ರೋಪಕರಣಗಳನ್ನು  ರಿಪೇರಿ ಮಾಡಿಸಲು ಒಯ್ದಾಗ, ರಿಪೇರಿ ಮಾಡುವವನು , “ಇದರ ‘ವ್ಹಾಯ್ಸರ್’ ಹೋಗೇದರಿ; ಬ್ಯಾರೆ ವ್ಹಾಯ್ಸರ್ ಹಾಕಿಕೊಡ್ತೇನಿ”, ಎಂದು ಹೇಳುವದನ್ನು ನೀವು ಕೇಳಿರಬಹುದು. ಈ ‘ವ್ಹಾಯ್ಸರ್’ ಅನ್ನೋದು ನಿಜವಾಗಿಯೂ washer ಅನ್ನುವ ಆಂಗ್ಲ ಪದದ ಅಪಭ್ರಂಶ. ರಿಪೇರಿ ಮಾಡುವವನಿಗೆ ‘ವಾಶರ್’ ಅನ್ನೋದು ಸಾಕಷ್ಟು ಇಂಗ್ಲಿಶ್ ಅನ್ನಿಸುತ್ತಿರಲಿಕ್ಕಿಲ್ಲ. ಆಂಗ್ಲ ಪದವನ್ನು ಮತ್ತಷ್ಟು ಆಂಗ್ಲೀಕರಣ ಮಾಡುವ ಉದ್ದೇಶದಿಂದ ಆತ ‘ವಾಶರ್’ಅನ್ನು ‘ವ್ಹಾಯ್ಸರ್’ ಮಾಡಿದ್ದಾನೆ.

ಆಂಗ್ಲ ಪದಗಳನ್ನು  ಇನ್ನಷ್ಟು ಆಂಗ್ಲೀಕರಿಸುವಂತೆಯೇ ಸಂಸ್ಕೃತ ಪದಗಳನ್ನು ಇನ್ನಷ್ಟು ಸಂಸ್ಕೃತೀಕರಿಸುವದರಲ್ಲಿಯೂ ನಮ್ಮವರಿಗೆ ಅಂದರೆ ಕನ್ನಡಿಗರಿಗೆ ತುಂಬಾ ಪ್ರೀತಿ ಹಾಗು ಅಪರಿಮಿತ ಕೌಶಲ್ಯ.
ಅದರಲ್ಲಿಯೂ ನಮ್ಮ ಕನ್ನಡ ಚಿತ್ರನಿರ್ಮಾಪಕರ ಕೈಯಲ್ಲಿ ಸಿಕ್ಕ ಪದಗಳ ಗೋಳನ್ನಂತೂ ಕೇಳುವದೇ ಬೇಡ.
ದ್ವಾರಕೀಶರು ‘ಗಿರಿಜಾ’ ಎನ್ನುವ ಯುವತಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವಾಗ ಅವಳ ಹೆಸರನ್ನು ಬದಲಾಯಿಸಿ ‘ಶೃತಿ’ ಎಂದು ಕರೆದರು. ‘ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥವಿದೆ. ‘ಶ್ರುತಿ’ ಪದಕ್ಕೆ ವೇದ, ಉಪನಿಷತ್ತು ಹಾಗು ಸಂಗೀತದ tuning ಎನ್ನುವ ಅರ್ಥವಿದೆ. ದ್ವಾರಕೀಶರ ಮನಸ್ಸಿನಲ್ಲಿ ಇರುವ ಅರ್ಥ ಯಾವುದೋ ಅವರಿಗೇ ಗೊತ್ತು. (ಹೌದೆ?)  ಬಹುಶ: ಅವರಿಗೆ ‘ಶ್ರುತಿ’ ಇದು ‘ಶೃತಿ’ಯಷ್ಟು ಸಂಸ್ಕೃತ ಎನ್ನಿಸಿರಲಿಕ್ಕಿಲ್ಲ. ಒಟ್ಟಿನಲ್ಲಿ ದ್ವಾರಕೀಶರ ಕೈಯಲ್ಲಿ ಸಿಕ್ಕ ಗಿರಿಜಾ ಸಂಗೀತದ ಶ್ರುತಿಯಾಗುವ ಬದಲು ಬೇಯಿಸಿದ ಕೋಳಿಯಾಗಿ ಬಿಟ್ಟಳು!
ಇದರಂತೆಯೇ ‘ಧ್ರುವ’ ಪದವನ್ನು ‘ಧೃವ’ ಎಂದು, ‘ಶ್ರದ್ಧಾ’ ಪದವನ್ನು ‘ಶೃದ್ಧಾ’ ಎಂದು ಬರೆದು ಮತ್ತಷ್ಟು ಸಂಸ್ಕೃತೀಕರಿಸುವ ಒಲವು ಹಲವು ಕನ್ನಡಿಗರಲ್ಲಿದೆ.

ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ?  ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ  ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ?  ‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ?   ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು.

ಸಂಯುಕ್ತ ಕರ್ನಾಟಕ ಹಾಗು ವಿಜಯ ಕರ್ನಾಟಕ ಈ ಎರಡೂ ಪತ್ರಿಕೆಗಳು ‘ಅಲ್-ಕೈದಾ’ ವನ್ನು ‘ಅಲ್-ಖೈದಾ’ ಎಂದು ಮುದ್ರಿಸುತ್ತಾರೆ. ಯಾಕೆ? ಉಗ್ರಗಾಮಿಗಳು ಅಲ್ಪಪ್ರಾಣಿಗಳಾಗಿರಲು ಸಾಧ್ಯವಿಲ್ಲವೆಂದೆ? ಹಾಗಿದ್ದರೆ ‘ಕುರ್ಬಾನಿ’ಯಂತಹ(=ತ್ಯಾಗ) ಒಳ್ಳೆಯ ಪದವನ್ನು ‘ಖುರ್ಬಾನಿ’ ಎಂದು ಯಾಕೆ ಬರೆಯುತ್ತಾರೊ ತಿಳಿಯದು!
ಹಾಗೆಂದು ಎಲ್ಲಾ ಹಿಂದಿ/ಉರ್ದು ಪದಗಳನ್ನು ಮಹಾಪ್ರಾಣೀಕರಿಸುತ್ತಾರೆ ಎನ್ನುವಂತಿಲ್ಲ. ‘ಧಾಬಾ’ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಇದನ್ನು ಕನ್ನಡದಲ್ಲಿ ‘ಡಾಬಾ’ ಮಾಡಲಾಗಿದೆ! ಒಟ್ಟಿನಲ್ಲಿ, ನಮ್ಮ ಪತ್ರಿಕೆಗಳು ಒಂದು ಭಾಷೆಯ ಪದವನ್ನು ಕನ್ನಡ ಭಾಷೆಗೆ ತೆಗೆದುಕೊಳ್ಳುವಾಗ ಅಪಭ್ರಂಶ ಮಾಡಲೇಬೇಕೆನ್ನುವದನ್ನು ವ್ಯಾಕರಣದ ನಿಯಮದಂತೆ ಪರಿಪಾಲಿಸುತ್ತಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ಮಾಡುತ್ತಿರುವ ಭಾಷಾದೋಷಗಳನ್ನು ಈ ಮೊದಲೇ ನಾನು ಇಲ್ಲಿ, ಹಾಗು ಇಲ್ಲಿ  ತೋರಿಸಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯೂ ಸಹ ಈ ವಿಷಯದಲ್ಲಿ ಹಿಂದೆ ಬೀಳಲು ಸುತರಾಮ್ ತಯಾರಿಲ್ಲ! ವಿಜಯ ಕರ್ನಾಟಕ ಪತ್ರಿಕೆಯ ‘ಪದೋನ್ನತಿ’ ಎನ್ನುವ ಸ್ಥಿರ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗುವ ಮಾಹಿತಿಯು ಸಹ ತಪ್ಪಿನಿಂದ ಕೂಡಿರುತ್ತದೆ. ದಿ:೧೯ ಜನೆವರಿಯಂದು ಪ್ರಕಟವಾದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ:

‘ಶೀತ್ನಿ’ ಪದದ ಅರ್ಥ ‘ಸೀ ತೆನೆ’. ‘ಸೀ ತೆನೆ’ಗೆ ‘ಬೆಳಸಿ’ ಎಂದೂ ಕರೆಯುತ್ತಾರೆ, ‘ಹಾಲು ತೆನೆ’ ಎಂದೂ ಕರೆಯುತ್ತಾರೆ. ಜೋಳದ ಬೆಳೆಗೆ ತೆನೆ ಬಿಟ್ಟಾಗ, ಈ ತೆನೆಯು ಇನ್ನೂ ಬಲಿಯದೆ ಇದ್ದಾಗ, ಇದನ್ನು ಹಾಗೇ ತಿನ್ನಬಹುದು. ಆ ಕಾರಣಕ್ಕಾಗಿಯೇ ಇದಕ್ಕೆ ‘ಸೀ ತೆನೆ’, sweet corn ಎಂದು ಕರೆಯುವದು. ವಿಜಯ ಕರ್ನಾಟಕದ ‘ಪದೋನ್ನತಿ’ಯ ಪಂಡಿತರಿಗೆ ಇದು ಚಾದಂಗಡಿಯಲ್ಲಿ ದೊರೆಯುವ ‘ಸಿಹಿ ತಿನಿಸು’ ತರಹ ಕಂಡಿದ್ದು ಆಶ್ಚರ್ಯಕರವಾಗಿದೆ!
………………………………………………………………..
ಕನ್ನಡಿಗರು ವ್ಯಾಕರಣದ ನಿಯಮಗಳನ್ನು ನಾಲಿಗೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳುವದರಲ್ಲಿ ನಿಸ್ಸೀಮರು. ‘ಹೆಣ್ಣು ಕೂಸು’ ಎನ್ನುವ ಜೋಡು ಪದವು ಮೊದಲು ‘ಹೆಂಗೂಸು’ ಆಗಿ, ಬಳಿಕ ‘ಹೆಂಗಸು’ ಆಯಿತು.
ಅದರತೆಯೇ, ‘ಗಂಡು ಕೂಸು’ ಪದವು ‘ಗಂಡಸು’ ಆಯಿತು. ಇದರಿಂದ ಉಚ್ಚಾರ ಸುಲಭವಾಯಿತು. ಆದರೆ ವ್ಯಾಕರಣಕ್ಕೇನೂ ಭಂಗ ಬರಲಿಲ್ಲ. ಇದೇ ಮಾತನ್ನು ‘ಆಕಳು’ ಪದಕ್ಕೆ ಹೇಳುವಂತಿಲ್ಲ. ‘ಆವು’ ಪದದ ಬಹುವಚನ ‘ಆವುಗಳು’. ಇದೇ ಕಾಲಾಂತರದಲ್ಲಿ ‘ಆಕಳು’ ಆಗಿದೆ. ಆದುದರಿಂದ ‘ಆಕಳು ಬಂದಿದೆ’ ಎಂದು ಹೇಳುವದು ಸರಿಯಲ್ಲ. ಇದು ‘ಆವು ಬಂದಿದೆ’ , ಅಥವಾ ‘ಆಕಳು ಬಂದಿವೆ’ ಎಂದು ಇರಬೇಕು!

ಕೆಲವೊಂದು ರೂಪಾಂತರಗಳಂತೂ ವಿನೋದವನ್ನು ಹುಟ್ಟಿಸುವಂತಿವೆ.  ಬೀದರ ಜಿಲ್ಲೆಯಲ್ಲಿ ‘ಹುಡುಗಿ’ ಎನ್ನುವ ಊರಿದೆ. ಈ ಊರಿಗೆ ಹೋಗಬಯಸುವ ಬಸ್ ಪ್ರಯಾಣಿಕರು ನಿರ್ವಾಹಕನಿಗೆ “ಒಂದು ಹುಡುಗಿ ಕೊಡಪ್ಪಾ” ಎಂದು ಚೇಷ್ಟೆ ಮಾಡುವದು ಸಾಮಾನ್ಯವಾಗಿದೆ. ಹುಡುಗಿ ಪದದ ಮೂಲರೂಪ ‘ಪುದುಗಿ’.   ‘ಪುದು’ ಇದರ ಅರ್ಥ ಹೊಸದಾದದ್ದು. 
‘ಪುದು’=new ;`ಗಿ’=habitat. 
ಹುಡುಗಿ=ಪುದುಗಿ= new habitat=ಹೊಸೂರು.
ತಮಿಳಿನಲ್ಲಿ ಹುಡುಗಿ ಅಥವಾ ಪುದುಗಿ ಎನ್ನುವ ಪದಕ್ಕೆ ಸಮಾನವಾದ ಪದ=ಪುದುಚೆರಿ. 
ಇಲ್ಲಿಯೂ ಸಹ ಪುದು=ಹೊಸ ಹಾಗೂ ಚೆರಿ=ಊರು.

ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು.  ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.
ಪುದು ಪದಕ್ಕೆ ವಿರುದ್ಧವಾದದ್ದು ಮುದು ಎನ್ನುವ ಪದ. ಮುದು=old. ಈ ಪದದಿಂದಲೇ ಮುದುಕ, ಮುದುಕಿ ಎನ್ನುವ ಪದಗಳು ಬಂದಿವೆ. ಮುದಗಲ್ಲು ಎನ್ನುವ ಊರಿನ ಅರ್ಥ ಹಳೆಯ ಊರು. ಇದಕ್ಕೆ ಸಮಾನವಾದ ಮತ್ತೊಂದು ಕನ್ನಡ ಪದ ಹಳೇಬೀಡು.

ಕನ್ನಡ ನುಡಿಯಲ್ಲಿ ‘ಪ’ಕಾರವು ‘ಹ’ಕಾರವಾಗಿ ಮಾರ್ಪಟ್ಟಿದ್ದರಿಂದ  ಅನೇಕ ಪದಗಳ ಉಚ್ಚಾರಗಳು ಬದಲಾದವು. ಉದಾಹರಣೆಗೆ ‘ಪಾವು’ ಪದವು ‘ಹಾವು’ ಎಂದು ಬದಲಾಯಿತು ; ‘ಪಣ್ಣು’ ಪದವು ‘ಹಣ್ಣಾ’ಯಿತು; ‘ಪೆಣ್ಣು’ ‘ಹೆಣ್ಣಾ’ದಳು. ಸಂಸ್ಕೃತದ ‘ಪರ್ವ’ವು ಕನ್ನಡದಲ್ಲಿ ‘ಹಬ್ಬ’ವಾಯಿತು. ಆದರೆ ‘ಪೆಂಟಿ’ ಎನ್ನುವ ಪದವು ‘ಹೆಂಟಿ’ಯಾಗಿ ಬದಲಾದಾಗ, ರೂಪಾಂತರದೊಡನೆ ಅರ್ಥಾಂತರವೂ ಆಯಿತು. ಬೆಲ್ಲದ ಗಟ್ಟಿಗೆ ಬೆಲ್ಲದ ಪೆಂಟಿ ಎಂದು ಕರೆಯುತ್ತೇವೆ, ಬೆಲ್ಲದ ಹೆಂಟಿ ಎಂದು ಕರೆಯುವದಿಲ್ಲ. ಹೆಂಟಿ ಪದವು ಮಣ್ಣಿನ ಗಟ್ಟಿಗೆ reserve ಆಗಿದೆ. ಇದೇ ರೀತಿಯಲ್ಲಿ ಗೆಳತಿ ಪದವು ಕೆಳದಿ ಪದದಿಂದಲೇ ಬಂದಿದ್ದರೂ ಸಹ ಅರ್ಥಗಳಲ್ಲಿ ಅಜಗಜಾಂತರವಿದೆ.
ಅದರಂತೆ, ತ ಮತ್ತು ದ ಧ್ವನಿಗಳು ಬದಲಾಗಬಲ್ಲ ಧ್ವನಿಗಳಾದರೂ ಸಹ (ಉದಾಹರಣೆ: ಹುಲಿಯ ತೊಗಲು=ಹುಲಿದೊಗಲು), ತಣಿವು ಮತ್ತು ದಣಿವು ಈ ಪದಗಳು ಅರ್ಥದಲ್ಲಿ ಪೂರ್ಣ ವಿಭಿನ್ನವಾಗಿವೆ.

ಒಂದು ಕಾಲದಲ್ಲಿ ದ್ರಾವಿಡ ಭಾಷೆಗಳಿಗೆಲ್ಲ common ಆದ ಕೆಲವು ಪದಗಳು ಕಾಲಾಂತರದಲ್ಲಿ ಒಂದೆರಡು ಭಾಷೆಗಳಿಂದ ವಜಾ ಆಗಿಬಿಟ್ಟಿವು. ಉದಾಹರಣೆಗೆ ತುಳು ಭಾಷೆಯಲ್ಲಿಯ ‘ವಣಸ’ ಪದವನ್ನೇ ತೆಗೆದುಕೊಳ್ಳಿರಿ. ತುಳು ಭಾಷೆಯಲ್ಲಿ ‘ಊಟ ಆಯಿತೆ?’ ಎಂದು ಕೇಳಲು ‘ವಣಸ ಆಂಡಾ?’ ಎಂದು ಕೇಳುತ್ತಾರೆ. ಈ ಪದವು ಕನ್ನಡದಲ್ಲಿಯೂ ಒಮ್ಮೆ ಬಳಕೆಯಲ್ಲಿ ಇದ್ದಿರಬಹುದು.  ವಣಸ ಪದದಿಂದ ವಾಣಸಿಗ ಪದ ಉತ್ಪನ್ನವಾಗಿದ್ದು, ಕನ್ನಡದಲ್ಲಿ ಅದು ‘ಬಾಣಸಿಗ’ ಎಂದು ಮಾರ್ಪಟ್ಟಿದೆ. 

ಇದರಂತೆಯೇ ‘ಬಾಗಿಲು’ ಎನ್ನುವ ಪದ.
ತುಳುವಿನಲ್ಲಿ ಮನೆ ಪದಕ್ಕೆ ಇಲ್ ಎನ್ನುವ ಪದವನ್ನೇ ಇನ್ನೂ ಬಳಸುತ್ತಾರೆ. ಇಲ್  (=ಮನೆ) ಹಾಗೂ ವಾಯಿ(=ಬಾಯಿ) ಪದಗಳು ಕೂಡಿ ‘ವಾಯಿಲ್’ (=ಮನೆಯ ಬಾಯಿ) ಪದವು ಉತ್ಪನ್ನವಾಯಿತು. ವಾಯಿಲ್ ಪದವು ವಾಕಿಲ್ ಆಯಿತು. ಕಾಲಾಂತರದಲ್ಲಿ  ಇದೇ ಪದವು ಬಾಗಿಲು  ಎಂದು ರೂಪಾಂತರಗೊಂಡಿತು. ಅದರಂತೆ ಇಲ್ (ಮನೆ) ಹಾಗೂ ಹಿಂತು ಪದಗಳು ಕೂಡಿ ‘ಹಿಂತಿಲ್’ (=ಹಿತ್ತಲು) ಪದ ರೂಪಗೊಂಡಿದೆ. ‘ಹಿಂತಿಲು’ ಈಗ ಹಿತ್ತಲಾಗಿದೆ. ಕನ್ನಡಿಗರು ‘ಇಲ್’ ಪದದ ಬದಲಾಗಿ ‘ಮನೆ’ಗೆ ಅಂಟಿಕೊಂಡಿದ್ದರಿಂದ, ಬಾಗಿಲು, ಹಿತ್ತಲು ಇವುಗಳ ಮೂಲರೂಪಗಳು ಮಸುಕಾಗಿ ಬಿಟ್ಟಿವೆ.

ಪದಮೂಲವನ್ನು ಶೋಧಿಸುವದು ನದೀಮೂಲವನ್ನು ಶೋಧಿಸುವಷ್ಟೇ ಸಾಹಸಕರವಾಗಿದೆ!


Sunday, January 10, 2010

‘ನನ್ನಾಸೆ’ (--ಶ್ರೀಮತಿ ಊರ್ಮಿಳಾ ದೇಶಪಾಂಡೆ)

ನಗರಸಂಸ್ಕೃತಿಯು ತನ್ನ ಒಡಲಿನಲ್ಲಿರುವ ನಾಗರಿಕರನ್ನು ಮರಳು ಮಾಡುವ ಮಾಯಾವಿ ಸಂಸ್ಕೃತಿಯಾಗಿದೆ. ಟೀವಿ, ಸಿನೆಮಾ ಮತ್ತು ಝಗಝಗಿಸುವ ಅಂಗಡಿಗಳು ನಾಗರಿಕರನ್ನು ಭ್ರಮಾಲೋಕಕ್ಕೆ ಸೆಳೆಯುತ್ತವೆ ಹಾಗು ಜೀವನವೆಂದರೆ ಇದೇ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಇದಕ್ಕೆ ತೀರ ವಿರುದ್ಧವಾದ, ಇದಕ್ಕಿಂತ ಹೆಚ್ಚು fulfilling ಆದಂತಹ ಬದುಕು ಸಾಧ್ಯವಿಲ್ಲವೆ? 
ಹಳ್ಳಿಗಳಲ್ಲಿ ಹಾಗು ನಿಸರ್ಗದ ಮಡಿಲಲ್ಲಿ ಬಾಳಿದ ನಮ್ಮ ಪೂರ್ವಜರ ಬದುಕು ನಗರಸಂಸ್ಕೃತಿಗಿಂತ ಹೆಚ್ಚು ಶ್ರೀಮಂತವಾಗಿತ್ತು. ಇಂತಹ ಒಂದು ಸಂಸ್ಕೃತಿಯ ಕನಸು ಶ್ರೀಮತಿ ಊರ್ಮಿಳಾ ದೇಶಪಾಂಡೆಯವರು ಬರೆದ ‘ನನ್ನಾಸೆ’ ಎನ್ನುವ ಈ ಕವನದಲ್ಲಿ ವ್ಯಕ್ತವಾಗಿದೆ.

 ಈ ಕವನದಲ್ಲಿ ಕವಯಿತ್ರಿಯ ಆಸೆಯನ್ನು ಎರಡು ವಿಧವಾಗಿ ವಿಶ್ಲೇಷಿಸಬಹುದು:
ಮೊದಲನೆಯದಾಗಿ ನಿಸರ್ಗದೊಡನೆ ಸಮರಸವಾಗಿ ಬಾಳುವ ಆಸೆ. ಎರಡನೆಯದಾಗಿ, ಯಾವುದೇ ಮಹತ್ವಾಕಾಂಕ್ಷೆ ಇಲ್ಲದ ಪುಟ್ಟ ಬದುಕೇ ಸಾಕು ಎನ್ನುವ ಆಸೆ,‘Small is beautiful’ ಎನ್ನುತ್ತಾರಲ್ಲ ಹಾಗೆ.
ಪರಿಮಳ ಬೀರುವ ಪುಟ್ಟ ಹೂವು, ಸ್ವಚ್ಛಂದವಾಗಿ ಹಾರುವ  ಮರಿಹಕ್ಕಿ, ಜುಳುಜುಳು ಹರಿಯುವ ಪುಟ್ಟ ತೊರೆ, ಕಮಲದೆಲೆಯ ಮೇಲಿನ ಇಬ್ಬನಿ ಇವು ಕವಯಿತ್ರಿ ಬಯಸುವ ಬದುಕಿನ ರೂಪಗಳು.

ಕೊನೆಯ ಸಾಲಿನಲ್ಲಿರುವ ಕಮಲದೆಲೆಯ ಮೇಲಿನ ಇಬ್ಬನಿಯ ಪ್ರತೀಕವನ್ನು ಗಮನಿಸಿರಿ. ಇಬ್ಬನಿಯ ಕ್ಷಣಭಂಗುರ ಜೀವನವನ್ನು ಈ ಪ್ರತೀಕ ಅಭಿವ್ಯಕ್ತಿಗೊಳಿಸುತ್ತದೆ. ಇದರೊಂದಿಗೇ ಭಾರತೀಯ ತತ್ವಜ್ಞಾನದ ಮಹತ್ವದ ಸಂದೇಶವೊಂದನ್ನೂ ಇದು ಸಾರುತ್ತದೆ: ‘ಕಮಲಪತ್ರಮಿವಾಂಭಸಿ.’ ಕಮಲದ ಎಲೆಯ ಮೇಲಿನ ನೀರಬಿಂದು ಹೇಗೆ ಕಮಲದೆಲೆಗೆ ಅಂಟಿಕೊಂಡಿರುವದಿಲ್ಲವೊ, ಅದೇ ರೀತಿಯಲ್ಲಿ  ಮನುಷ್ಯನು ಸಂಸಾರಕ್ಕೆ ಅಂಟಿಕೊಂಡಿರಬಾರದು ಎನ್ನುವದು ಈ ಸಂದೇಶ. ಆದರೆ, ಈ ಪ್ರತೀಕದಲ್ಲಿ ಇನ್ನೂ ಹೆಚ್ಚಿನ, ಇನ್ನೂ ಸುಂದರವಾದ ಮತ್ತೊಂದು ಸಂದೇಶವಿದೆ.
“ಸುತ್ತಲಿನ ನಿಸರ್ಗವನು ತನ್ನಲ್ಲಿ ಪ್ರತಿಫಲಿಸಿ……
.....ನನ್ನಲ್ಲಿ ಅಡಗಿದ ಆ ಸೌಂದರ್ಯವು ಅಮರವಹುದು…..”
ಸಂಸಾರಕ್ಕೆ ಅಂಟಿಕೊಳ್ಳಬಾರದು ಎನ್ನುವದು ನಿಜ. ಆದರೆ, ಈ ಜೀವನವೆಲ್ಲ ಭಗವಂತನ ನಿರ್ಮಿತಿ ; ಅದನ್ನು ತಾನು ಶುದ್ಧ ರೂಪದಲ್ಲಿ ಪ್ರತಿಫಲಿಸುತ್ತೇನೆ ಎನ್ನುವ ತಿಳಿವಳಿಕೆ ಈ ಸಾಲಿನಲ್ಲಿದೆ. ಇದು ಜೀವನವನ್ನು ‘ಸತ್ಯಮ್, ಶಿವಮ್, ಸುಂದರಮ್’ ಎಂದು ಭಾವಿಸುವ ತಿಳಿವಳಿಕೆ.


ಶ್ರೀಮತಿ ಊರ್ಮಿಳಾ ದೇಶಪಾಂಡೆ ನನ್ನ ತಾಯಿ. ಅತ್ಯಂತ ತೀಕ್ಷ್ಣ ಬುದ್ಧಿಯ ಇವಳು, ಮುಲ್ಕಿ (೭ನೆಯ) ತರಗತಿಯಲ್ಲಿದ್ದಾಗ, ತನ್ನ ತರಗತಿಯ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿಯಾಗಿದ್ದಳು. ಕಾ^ಲೇಜಿನಲ್ಲಿ ಕಲಿಯುವಾಗ, ಹಣದ ಅಭಾವದಿಂದ ಪಠ್ಯಪುಸ್ತಕಗಳನ್ನು ಕೊಳ್ಳುವದು ಹೋಗಲಿ,ನೋಟುಬುಕ್ಕುಗಳನ್ನು  ಕೊಳ್ಳಲೂ ಇವಳಿಗೆ ಸಾಧ್ಯವಿರಲಿಲ್ಲ.

‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿಯ ಅಕ್ಷರಗಳನ್ನು ತೋರಿಸುತ್ತ ನನಗೆ ವರ್ಣಮಾಲೆಯನ್ನು ಕಲಿಸಿದ  ಗುರು ಇವಳು. ಸ್ವತಃ voracious reader ಆದ ಇವಳಿಂದಾಗಿಯೇ ನನಗೆ  ಹಾಗು ನನ್ನ ಒಡಹುಟ್ಟಿದವರಿಗೆ  ಸಾಹಿತ್ಯವನ್ನು ಓದುವ, ಬರೆಯುವ ಚಟ ಅಂಟಿಕೊಂಡಿತು.

ನಾಲ್ಕು ವರ್ಷಗಳ ಹಿಂದೆ, ತನ್ನ ಎಂಬತ್ತೊಂದನೆಯ ವಯಸ್ಸಿನಲ್ಲಿ , ನನ್ನ ತಾಯಿ ತೀರಿಕೊಂಡಳು.

Tuesday, January 5, 2010

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ರೈತರ ಆತ್ಮಹತ್ಯೆಗಳು ೨೦೦೯ನೆಯ ವರ್ಷದಲ್ಲಿ ಎಂದಿನಂತೆ ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಭರವಸೆ ನೀಡಿದರು.
 ‘ರೈತರು ಸಾಲಕ್ಕೆ ಅಂಜಬಾರದು, ಗಟ್ಟಿ ಮನಸ್ಸಿನವರಾಗಬೇಕು, ಸರಕಾರ ರೈತರ ಹಿಂದೆಯೇ ಇದೆ’, ಎಂದು ರೈತರಲ್ಲಿ ವಿಶ್ವಾಸ ತುಂಬುವ, ಮನ:ಶಾಸ್ತ್ರ ಆಧಾರಿತ  ಕಾರ್ಯಕ್ರಮ ನಡೆಯಿತು. ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಮಾಡಲು ಆಯೋಗವನ್ನು ರಚಿಸಲಾಯಿತು. ‘ರೈತರ ಆತ್ಮಹತ್ಯೆಗೆ ಸರಕಾರ ಕಾರಣವಲ್ಲ ; ಕೌಟಂಬಿಕ ಕಾರಣಗಳಿಗಾಗಿ ಸಾಲ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆಯೋಗ ಗಿಳಿಪಾಠ ಹೇಳಿತು.

ಬೆಳೆಸಾಲ ತೀರಿಸಲಾರದ ರೈತ ತನ್ನ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವದನ್ನು ನಮ್ಮ ಮಾನಗೇಡಿ ಸಚಿವರು ಹೇಗೆ ತಾನೆ ಅರ್ಥ ಮಾಡಿಕೊಂಡಾರು? ಇತ್ತ ಗ್ರಾಹಕನಿಗೂ ಸಹ ಏನೂ ಸುಖವಿಲ್ಲ. ಆಹಾರ ಧಾನ್ಯಗಳ ಬೆಲೆ ಆಕಾಶವನ್ನು ಮುಟ್ಟಿದೆ. ನಮ್ಮ ಸಚಿವರು ಮಾತ್ರ ಭರವಸೆ ನೀಡುತ್ತಲೇ ಇದ್ದಾರೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ಮುಂಬಯಿಯಲ್ಲಿ, ಬೆಂಗಳೂರಿನಲ್ಲಿ ಉಗ್ರವಾದಿಗಳ ದಾಳಿಗಳು ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಮತ್ತೊಮ್ಮೆ ಭರವಸೆ ನೀಡಿದರು.
ಸಿಕ್ಕಿ ಬಿದ್ದ ಉಗ್ರವಾದಿಗಳಿಗೆ ಕಾರಾಗೃಹದಲ್ಲಿ ರಾಜೋಪಚಾರ ನಡೆಯುತ್ತಿದ್ದರೆ ಉಗ್ರವಾದಿಗಳಿಗೆ ಬಲಿಯಾದವರ ಕುಟುಂಬದ ಸದಸ್ಯರು ದಿಕ್ಕೇಡಿಗಳಾಗಿದ್ದಾರೆ. ಮತ್ತೊಮ್ಮೆ ಉಗ್ರರ ದಾಳಿ ನಡೆಯುವವರೆಗೆ, ಪರಿಸ್ಥಿತಿ ಹತೋಟಿಯಲ್ಲಿಯೇ ಇರುತ್ತದೆ.

ಪರದೇಶಗಳ ಆಕ್ರಮಣದ ವಿರುದ್ಧ ಭಾರತವು ಅನೇಕ ಸಲ ನೆಲ ಕಚ್ಚಿದೆ. ಈ ಅಪಜಯಕ್ಕೆ ಎರಡು ಮಹತ್ವದ ಕಾರಣಗಳಿವೆ. ಮೊದಲನೆಯದು ಭಾರತೀಯರಲ್ಲಿ ಭದ್ರವಾಗಿ ಮನೆ ಮಾಡಿರುವ ಅಹಿಂಸಾ ಮನೋಭಾವ. ಎರಡನೆಯ ಕಾರಣವು ನಮ್ಮ  inferior weaponry.

ಇದನ್ನು ಅರಿತಿದ್ದ ನೆಹರೂರವರು ಭಾರತವು ಅಣ್ವಸ್ತ್ರ ಶಕ್ತ ರಾಷ್ಟ್ರವಾಗಲು ತಳಪಾಯವನ್ನು ಹಾಕಿದರು.
ಉತ್ತರ ಪ್ರದೇಶದ ನರೋರಾದಲ್ಲಿ ಸ್ಥಾಪಿಸಿದ ‘ಅಣು ಶಕ್ತಿ ಕೇಂದ್ರ’ವು ಅಯಶಸ್ವಿಯಾಗಿದೆ ಎನ್ನುವ ಸುದ್ದಿಯನ್ನು ಗಾಳಿಯಲ್ಲಿ ತೇಲಿ ಬಿಡಲಾಗಿತ್ತು. ಆ ಸಮಯದಲ್ಲಿ, ಆ ಕೇಂದ್ರದಲ್ಲಿ ನಮ್ಮ ಅಣು ವಿಜ್ಞಾನಿಗಳು ದೇಸಿ ಅಣು ಬಾಂ^ಬಿನ ಉತ್ಪಾದನೆಯ ಪ್ರಯತ್ನದಲ್ಲಿ ತೊಡಗಿಕೊಂಡಿದ್ದರು. ಕಾಲಾಂತರದಲ್ಲಿ ಈ ಪ್ರಯತ್ನಕ್ಕೆ ಯಶಸ್ಸು ದೊರೆತದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

‘ಕುಂಬಾರನಿಗೊಂದು ವರುಷ, ಡೊಣ್ಣೆಗೊಂದು ನಿಮಿಷ’ ಎನ್ನುವಂತೆ, ಈಗಿನ ಪ್ರಧಾನಿ ಮನಮೋಹನ ಸಿಂಗರು ನಮ್ಮ ಅಣುಶಕ್ತಿ ಉತ್ಪಾದನ ಕೇಂದ್ರಗಳನ್ನು ಅಮೇರಿಕಾದ ಪರಿಶೀಲನೆಗೆ ಸಮರ್ಪಿಸಿ ಬಿಟ್ಟರು. ಭಾರತದ ಅಣುವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಬೇಕಾಗುವ ಇಂಧನವನ್ನು  ಪೂರೈಸಲು ನಮಗೆ ಅಮೆರಿಕಾದ ಮರ್ಜಿ ಹಿಡಿಯಲೇ ಬೇಕು ಎನ್ನುವ ಸೋಗನ್ನು ಮನಮೋಹನ ಸಿಂಗರು ಅಮಾಯಕ ಭಾರತೀಯರ ಎದುರಿಗೆ ಹಾಕಿದರು. ಈಗಿನ ಪರಿಸ್ಥಿತಿ ಏನೆಂದರೆ ಅಣುಶಕ್ತಿ ಸಬಲ ರಾಷ್ಟ್ರಗಳು ಭಾರತದ ಅಣು ಕೇಂದ್ರಗಳಿಗೆ ಇಂಧನ ಪೂರೈಸಲು ಹೊಸ ಹೊಸ ಶರತ್ತುಗಳನ್ನು ಹಾಕುತ್ತಿವೆ. ಅಲ್ಲದೆ, ಈ ಇಂಧನದ ಬೆಲೆಯನ್ನು ಆಕಾಶದೆತ್ತರಕ್ಕೆ ಏರಿಸುವದರಲ್ಲಿ ಏನೂ ಸಂದೇಹವಿಲ್ಲ. ಇಂತಹ ಮೋಸದ ವರ್ತನೆಯೂ ಮೊದಲೂ ಆಗಿದೆ.

ಭಾರತವು ಸ್ವದೇಶಿ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುವ ಹಂತದಲ್ಲಿದ್ದಾಗ, ಈ ಕ್ಷಿಪಣಿಗಳಿಗೆ ಅವಶ್ಯವಿರುವ ಇಂಧನವನ್ನು (ಆಗಿನ) ಸೋವಿಯಟ್ ರಶಿಯಾದಿಂದ ಖರೀದಿಸಲು ಪ್ರಾರಂಭಿಸಿತು. ತಕ್ಷಣವೇ ಅಮೆರಿಕಾವು ಒಂದು ‘Cryogenic Fuel Suppliers’ Club’ಅನ್ನು ಸ್ಥಾಪಿಸಿ, ಇಂಧನದ ಬೆಲೆಯನ್ನು ಎತ್ತರಿಸಿತು.
ಇದೆಲ್ಲಾ ಮನಮೋಹನ ಸಿಂಗರಿಗೆ ಗೊತ್ತಿಲ್ಲವೆಂತಲ್ಲ. ಆದರೆ ಅವರಿಗೆ ಒಂದು International Good Boy Image ಬೇಕಾಗಿದೆ,  at the cost of his motherland!

ಈ International Good Boy Image ಅಂದರೆ, ಕಾಲು ಕೆರೆದು ಒದೆಯಲು ಸಿದ್ಧವಿರುವ ರೌಡಿ ರಾಷ್ಟ್ರಗಳಿಂದ ಒದೆಯಿಸಿಕೊಳ್ಳಲು ಬೆನ್ನು ಕೊಟ್ಟು ನಿಂತ ಮೆದುಗ ಹುಡುಗನಂತೆ.
ಮನಮೋಹನ ಸಿಂಗರೆ, ನಿಮ್ಮ Good Boy Imageಗಾಗಿ ನಿಮಗೇನೂ Nobel Prize for Peace ಸಿಗುವದಿಲ್ಲ. ಅದೆಲ್ಲ ದಾಳಿಕೋರ USA Presidentರಿಗೇ ಮೀಸಲು!

ಚೀನಾ ಅಂತೂ ಭಾರತವನ್ನು ಒದೆಯುತ್ತಲೇ ಇದೆ. ಬ್ರಹ್ಮಪುತ್ರಾ ನದಿಯ ಮಾರ್ಗವನ್ನು ಚೀನಾ ತಿರುಗಿಸಲು ಹೊರಟರೆ, ಅದಕ್ಕೆ ಭಾರತದಿಂದ ಯಾವುದೇ ಪ್ರತಿಭಟನೆ ಇಲ್ಲ. ನಮ್ಮ ಪ್ರದೇಶದಲ್ಲಿ ಅವರು ತಮ್ಮ ಗಡಿಕಲ್ಲುಗಳನ್ನು ನೆಟ್ಟರೆ, ಅದಕ್ಕೆ ನಮ್ಮ ಪ್ರತಿಭಟನೆ ಇಲ್ಲ. ನಮ್ಮದೇ ಪ್ರದೇಶವಾದ ಲಡಾಖದಲ್ಲಿ ನಾವು ರಸ್ತೆ ನಿರ್ಮಿಸುತ್ತಿರುವಾಗ, ಚೀನಾ ಪ್ರತಿಭಟಿಸಿದರೆ, ನಮ್ಮ ಕೆಲಸವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು! ಆ^ಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಚಚ್ಚುತ್ತಲೇ ಇದ್ದಾರೆ. ಈ ನೀಚ ಕೃತ್ಯವನ್ನು Racist ಎಂದು ಕರೆದು ಆ^ಸ್ಟ್ರೇಲಿಯಾಕ್ಕೆ ಅಂತಾರಾಷ್ಟ್ರೀಯ ಛೀಮಾರಿ ಹಾಕಿಸುವ ಧೈರ್ಯವನ್ನು ನಮ್ಮ ಸರಕಾರ ತೋರಿಸುತ್ತಿಲ್ಲ.
ಇದೆಂತಹ ಛಕ್ಕಾ ಸರಕಾರ!
ಇದಕ್ಕೆಲ್ಲ ಮನಮೋಹನ ಸಿಂಗರದು ಒಂದೇ ಪ್ರತಿಕ್ರಿಯೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
ಯಾರ ಹತೋಟಿಯಲ್ಲಿ?

೧೯೬೨ರಲ್ಲಿ ಚೀನಾ ಭಾರತವನ್ನು ಪೂರ್ಣವಾಗಿ ಸದೆ ಬಡಿದದ್ದು ಎಲ್ಲರಿಗೂ  ಗೊತ್ತಿರುವ ಸಂಗತಿಯೇ. ಆದರೆ, ಈ ಸಂದರ್ಭದಲ್ಲಿ ಜರುಗಿದ ಒಂದು ಘಟನೆ ಬಹುಶ: ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಒಂದು ಪ್ರದೇಶದಲ್ಲಿ ಶತ್ರುಸೈನಿಕರ ಕೈ ಮೇಲಾಗುತ್ತಿರುವಂತಹ ಪರಿಸ್ಥಿತಿ ಒದಗಿದಲ್ಲಿ, ಕೇಂದ್ರಸರಕಾರವು ತನ್ನ ಪ್ರಭುತ್ವವನ್ನು ಆ ಪ್ರದೇಶದಿಂದ ತೆರವು ಮಾಡಿರುವದಾಗಿ ಘೋಷಿಸಬಹುದು. ಆ ಸಂದರ್ಭದಲ್ಲಿ ಅಲ್ಲಿಯ ನಾಗರಿಕರನ್ನು ರಕ್ಷಿಸುವ ಹೊಣೆಗಾರಿಕೆ ಸರಕಾರಕ್ಕೆ ಇರುವದಿಲ್ಲ.

೧೯೬೨ರ ಚೀನೀ ಆಕ್ರಮಣದ ಸಂದರ್ಭದಲ್ಲಿ, NEFA (ಈಗಿನ ಅರುಣಾಚಲ ಪ್ರದೇಶ)ದಲ್ಲಿಯ ತವಾಂಗ ಜಿಲ್ಲೆಯು ಚೀನೀ ಸೈನಿಕರ ಕೈವಶವಾಯಿತು. ಅಲ್ಲಿಂದ ಆಸಾಮ ರಾಜ್ಯದಲ್ಲಿಯ ದರಾಂಗ ಜಿಲ್ಲೆಯ ಕೇಂದ್ರಸ್ಥಳವಾದ ತೇಜಪುರವು  ಕೆಲವೇ ತಾಸುಗಳ ದೂರದಲ್ಲಿದೆ. ಚೀನೀ ಸೈನಿಕರು ತೇಜಪುರವನ್ನೂ ಆಕ್ರಮಿಸಬಹುದೆನ್ನುವ ಭೀತಿಯಿಂದ  ದರಾಂಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲ್ಲಿಯ ನಿವಾಸಿಗಳ ವಿತ್ತ, ಜೀವಿತಗಳಿಗೆ ಸರಕಾರವು ಹೊಣೆಯಾಗುವದಿಲ್ಲವೆಂದು ಘೋಷಿಸಿ, ನಗರವನ್ನು ತ್ಯಜಿಸಲು ನಾಗರಿಕರಿಗೆ ಸೂಚನೆ ನೀಡಿದರು. ಸೆರೆಮನೆಯಲ್ಲಿರುವ ಕೈದಿಗಳನ್ನೆಲ್ಲ ಬಿಡುಗಡೆ ಮಾಡಲಾಯಿತು. ಸರಕಾರಿ ಕೋಶದಲ್ಲಿರುವ ಹಣವನ್ನೆಲ್ಲ ಸುಟ್ಟು ಹಾಕಲಾಯಿತು. ಆ ಅವಧಿಯಲ್ಲಿ ಭಾರತ ಸರಕಾರದ ಪ್ರಭುತ್ವವು ಆ ಜಿಲ್ಲೆಯಲ್ಲಿ NIL ಆಯಿತು. ಜಿಲ್ಲಾಧಿಕಾರಿಗಳು ಈ ಎಲ್ಲ ಕ್ರಮಗಳನ್ನು ಕೈಕೊಳ್ಳುತ್ತಿದ್ದಾಗ, ಲೋಕಸಭೆಯಲ್ಲಿ ನಮ್ಮ ಪ್ರಧಾನಿಗಳು  ಜನತೆಗೆ ಭರವಸೆ ನೀಡುತ್ತಿದ್ದರು:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!

ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಸ್ಥಿತಪ್ರಜ್ಞನ ಲಕ್ಷಣಗಳನ್ನು ಸಾರಿದ್ದಾನೆ. ಯಾರು ಲಾಭ,ಹಾನಿಗಳಲ್ಲಿ ; ಜಯ, ಅಪಜಯಗಳಲ್ಲಿ ಮನಸ್ಸಿನ ಸಮಸ್ಥಿತಿಯನ್ನು ಕಾಯ್ದುಕೊಳ್ಳುತ್ತಾರೊ ಅವರೇ ಸ್ಥಿತಪ್ರಜ್ಞರೆಂದು ಭಗವಂತನು ಅಪ್ಪಣೆ ಕೊಡಿಸಿದ್ದಾನೆ. ಈ ಪ್ರಮಾಣದ ಮೇರೆಗೆ ನಮ್ಮ ರಾಜಕಾರಣಿಗಳೆಲ್ಲರೂ ಸ್ಥಿತಪ್ರಜ್ಞರೇ. ಯಾಕೆಂದರೆ ಇವರೆಲ್ಲರ ಸಂಪತ್ತು ಸ್ವಿಸ್ ಬ್ಯಾಂಕುಗಳಲ್ಲಿ ಭದ್ರವಾಗಿದೆ. ಇವರ ಮಕ್ಕಳು ವಿದೇಶಗಳಲ್ಲಿ ನೆಲಸಿದ್ದಾರೆ! ಭಾರತಕ್ಕೆ ಏನೇ ಆದರೂ ಇವರಿಗೆ ಆತಂಕವಿಲ್ಲ. ಪುರಾಣಕಾಲದಲ್ಲಿ ಮಿಥಿಲಾ ಪಟ್ಟಣವು ಬೆಂಕಿ ಬಿದ್ದು ಉರಿಯುತ್ತಿರುವಾಗ, ಆ ದೇಶದ ರಾಜನಾದ ಜನಕ ಮಹಾರಾಜನು ಹೇಳಿದನಂತೆ: “ಉರಿಯುತ್ತಿರುವ ಮಿಥಿಲೆಯಲ್ಲಿ ನನ್ನದೇನೂ ಉರಿಯುತ್ತಿಲ್ಲ!”
ನಮ್ಮ ರಾಜಕಾರಣಿಗಳೂ ಜನಕನಂಥವರೇ! ಉರಿಯುತ್ತಿರುವ ಭಾರತದಲ್ಲಿ ಇವರದೇನೂ ಉರಿಯುವದಿಲ್ಲ!
ಇಂತಹ ರಾಜಕಾರಣಿಗಳನ್ನು ಪ್ರಭುಗಳನ್ನಾಗಿ ಪಡೆದ ಪ್ರಜೆಗಳ ಭಾಗ್ಯವೇ ಭಾಗ್ಯ.

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
Happy New Year!