Thursday, September 4, 2014

ಬೇಂದ್ರೆದರ್ಶನ-೧ತಾಯಿ ಕನಿಮನೆಯೇ ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
          ಮಗಳೊ ನನ್ನೆದೆಯ ಮುಗುಳೊ?”

ಬೇಂದ್ರೆಯವರು ಬರೆದ ‘ಗಂಡಸು-ಹೆಂಗುಸಿಗೆ’ ಎನ್ನುವ ಕವನದ ಮೊದಲ ನುಡಿಯಿದು. ಸ್ತ್ರೀಚೈತನ್ಯವು ಬೇಂದ್ರೆಯವರ ಜೀವನದಲ್ಲಿ ಪಡೆದ ಉನ್ನತವಾದ ಸ್ಥಾನವನ್ನು ಈ ನುಡಿಯು ತೋರಿಸುತ್ತದೆ.ಅವರ ಬದುಕನ್ನು ರೂಪಿಸುವಲ್ಲಿ ಅವರ ಹೆತ್ತ ತಾಯಿ ಅಂಬಿಕಾ ಹಾಗು ಅವರ ತಾಯಿಯ ತಾಯಿ ಗೋದುಬಾಯಿಯವರು ಮಹತ್ವದ ಪಾತ್ರಗಳನ್ನು ಆಡಿದ್ದಾರೆ. ಅಲ್ಲದೆ ಪುದುಚೆರಿಯಲ್ಲಿರುವ ಅರವಿಂದರಲ್ಲಿ ಹಾಗು ‘ಮಾತೆ’ಯವರಲ್ಲಿಯೂ  ಸಹ ಬೇಂದ್ರೆಯವರು ಆಳವಾದ ಶ್ರದ್ಧೆಯುಳ್ಳವರಾಗಿದ್ದರು. ‘ಶ್ರೀಮಾತಾ’ ಎನ್ನುವ ಅವರ ಮನೆಯ ಹೆಸರು ಈ ಶ್ರದ್ಧೆಯ ಸಂಕೇತವಾಗಿದೆ.

ನರಗುಂದ ಬಾಬಾಸಾಹೇಬನ ಪತನದ ನಂತರ ಬೇಂದ್ರೆಯವರ ಮುತ್ತಜ್ಜ ತಮ್ಮ ಮಗಳನ್ನು ಪರಾಶ್ರಯದಲ್ಲಿ ಬಿಟ್ಟು ಕಾಶಿಗೆ ಹೋಗಿಬಿಟ್ಟರು. ಅವರ ಮಗಳು ಅಂದರೆ ಬೇಂದ್ರೆಯವರ ಅಜ್ಜಿ ಗೋದೂಬಾಯಿ ಚಿಕ್ಕಂದಿನಿಂದಲೇ ಪರರ ಮನೆಯಲ್ಲಿ ಬೆಳೆಯಬೇಕಾಯಿತು. ಮದುವೆಯಾದ ಬಳಿಕ ಅವರಿಗೆ ಹುಟ್ಟಿದ ಹದಿನೇಳು ಮಕ್ಕಳಲ್ಲಿ ಹದಿನಾರು ಮಕ್ಕಳನ್ನು ಅವರು ಕಳೆದುಕೊಂಡರು. ಉಳಿದವಳು ಒಬ್ಬಳೇ ಹೆಣ್ಣುಮಗಳು. ಆ ಮಗಳನ್ನು ಬೇಂದ್ರೆಯವರ ತಂದೆಗೆ ಮದುವೆ ಮಾಡಿ ಕೊಡಲಾಯಿತು. ಬೇಂದ್ರೆಯವರ ತಂದೆ ಗಂಡಮಾಲಿ ಎನ್ನುವ ರೋಗದ ಕಾರಣದಿಂದಾಗಿ ಅಕಾಲದಲ್ಲಿಯೇ ತೀರಿಕೊಂಡರು. ಅಂತಹ ಸಂಕಷ್ಟದ ಸಂದರ್ಭದಲ್ಲಿ ಬೇಂದ್ರೆಯವರ ಅಜ್ಜಿ ಗೋದೂಬಾಯಿಯವರು ಎದೆಗುಂದದೆ, ಸಂಸಾರದ ಬಂಡಿಯನ್ನು ಜಗ್ಗಿದರು. ಒಂದು ಊಟದ ಮನೆಯನ್ನು ನಡೆಯಿಸುತ್ತ ಮಗಳನ್ನು ಹಾಗು ಮೊಮ್ಮಕ್ಕಳನ್ನು ಸಾಕಿ ಸಲುಹಿದರು. ಅವರು ಕಲಿಸಿದ ಬದುಕಿನ ಪಾಠವನ್ನು ಬೇಂದ್ರೆಯವರು ಹೀಗೆ ನೆನಸುತ್ತಾರೆ:

 ಹದಿನೇಳು ಹಡೆದರು ಹೆಣ್ಣೊಂದೆ ಉಳಿದರು
ಜಗ್ಗದ ಕುಗ್ಗದ ಎದೆಯವಳು
ಹುಲಿ ಹಾಲ ಕುಡಿಸಿದಳು ತಂತಿಯಲಿ ನಡೆಸಿದಳು
ಸೂಜಿಯ ಮೊನೆಯಲಿ ನಿಲಿಸಿದಳು.
(-ಮತ್ತೆ ಶ್ರಾವಣಾ ಬಂತು, ಬಾಲ್ಯಕಾಂಡ, ಪು.೪)

ತನ್ನ ಮೊಮ್ಮಕ್ಕಳಿಗೆ ಭಿಕ್ಷಾನ್ನವನ್ನು ಹಾಕಲಿಲ್ಲ ಅವರ ಅಜ್ಜಿ , ಬದಲಾಗಿ ಆತ್ಮಗೌರವದ ಹುಲಿಯ ಹಾಲನ್ನು ಕುಡಿಸಿ ಬೆಳೆಸಿದಳು ; ತನ್ನ ಮೊಮ್ಮಕ್ಕಳಿಗೆ  ತಂತಿಯ ಮೇಲೆ ನಡೆಯುವದನ್ನು ಅಂದರೆ ಲೌಕಿಕ ವ್ಯವಹಾರದಲ್ಲಿ ವಿವೇಕವನ್ನು ಕಲಿಸಿದಳು ; ಅಷ್ಟೇ ಅಲ್ಲ, ‘ಸೂಜಿಯ ಮೊನೆಯಲಿ ನಿಲಿಸಿದಳು’, ಅಂದರೆ ಧರ್ಮಾಧರ್ಮದ ಸೂಕ್ಷ್ಮತೆಯನ್ನು ಆ ಪುಟ್ಟ ಮಕ್ಕಳ ಚಿತ್ತದಲ್ಲಿ ಬಿಂಬಿಸಿದಳು. ಈ ವಿವೇಚನಾ ಬುದ್ಧಿಯು ಬೇಂದ್ರೆಯವರ ಬದುಕನ್ನು ರೂಪಿಸುವದರಲ್ಲಿ ಮಹತ್ವದ ಅಂಗವಾಗಿದೆ. ಇಂತಹ ಅಜ್ಜಿ ಹಾಗು ತಾಯಿಯ ಪ್ರಭಾವದಿಂದಾಗಿ ಬೇಂದ್ರೆಯವರ ದೃಷ್ಟಿ ಸಮಗ್ರ ವಿಶ್ವವನ್ನೆ ಮಾತೃಚೈತನ್ಯವೆಂದು ಕಾಣುವಷ್ಟು ವಿಶಾಲವಾಗಿ ಬೆಳೆಯಿತು. ಆ ಮಾತೃಶಕ್ತಿಗೆ ಮಣಿಯುವ ವ್ಯಕ್ತಿತ್ವವು ಬೇಂದ್ರೆಯವರ ಕುರುಹು ಆಯಿತು.  ‘ನಾನು’ ಎನ್ನುವ ಅವರ ಕವನವು ಬೇಂದ್ರೆಯವರ ಆತ್ಮಗ್ರಹಿಕೆಯ (self identity) ನಿದರ್ಶನವಾಗಿದೆ.

“ನಾನು”

ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
      ಪರಮಾಣು ಕೀರ್ತಿ ನಾನು |

ಭೂಮಿತಾಯಿಯ ಮೈಯಹಿಡಿಮಣ್ಣು ಗುಡಿಗಟ್ಟಿ
      ನಿಂತಂಥ ಮೂರ್ತಿ ನಾನು |

ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
      ಮಿನುಗುತಿಹ ಜ್ಯೋತಿ ನಾನು |

ಕನ್ನಡದ ತಾಯಿ-ತಾವರೆಯ ಪರಿಮಳವುಂಡು
      ಬೀರುತಿಹ ಗಾಳಿ ನಾನು |

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
      ಜೀವಂತ ಮಮತೆ ನಾನು |

ಈ ಐದು ಐದೆಯರೆ ಪಂಚಪ್ರಾಣಗಳಾಗಿ
      ಈ ಜೀವ ದೇಹನಿಹನು |

ಹೃದಯಾರವಿಂದದಲ್ಲಿರುವ ನಾರಾಯಣನೆ
      ತಾನಾಗಿ ದತ್ತನರನು |

ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
      ಅಂಬಿಕಾತನಯನಿವನು |
     
ತಾನು ಈ ಅಪರಂಪಾರ ವಿಶ್ವದ ಒಂದು ಸೂಕ್ಷ್ಮಾತಿಸೂಕ್ಷ್ಮ ಭಾಗವೆನ್ನುವ ಅರಿವಿನಿಂದ ಪ್ರಾರಂಭವಾಗುವ ಈ ಕವನವು ಪ್ರತಿಯೊಂದು ನುಡಿಯಲ್ಲಿ ಹೆಚ್ಚೆಚ್ಚು ನಿಖರವಾಗುತ್ತ , ಭೂತಾಯಿಯನ್ನು , ಭಾರತಮಾತೆಯನ್ನು , ಕನ್ನಡ ತಾಯಿಯನ್ನು ನೆನೆಸುತ್ತ, ಕೊನೆಗೆ ತನ್ನ ತಾಯಿ ಅಂಬಿಕೆಯನ್ನು ತಲುಪುತ್ತದೆ. ಮತ್ತೊಂದು ಕೌತುಕವೂ ಇಲ್ಲಿದೆ. ವಿಶ್ವಮಾತೆ , ಭೂತಾಯಿ , ಭರತಮಾತೆ , ಕನ್ನಡತಾಯಿ ಹಾಗು ಬೇಂದ್ರೆಯವರ ತಾಯಿ ಇವರು ಒಂದಕ್ಕೊಂದು ಕಿರಿದಾಗುತ್ತ ಹೋದಂತೆ, ಬೇಂದ್ರೆಯವರು ಒಂದು ಕೀರ್ತಿಶಾಲಿ ಪರಮಾಣುವಿನಷ್ಟೇ ಸೂಕ್ಷ್ಮ ಅಂಶದಿಂದ ಪ್ರಾರಂಭವಾಗಿ, ವ್ಯಕ್ತರೂಪದಲ್ಲಿ ಬೆಳೆಯುತ್ತ ಹೋಗುತ್ತಾರೆ. 

ಭಾರತೀಯ ಪರಂಪರೆಯ ಗ್ರಹಿಕೆಗಳು ಬೇಂದ್ರೆಯವರ ಕವನಗಳಲ್ಲಿ ಹಾಸುಹೊಕ್ಕಾಗಿರುತ್ತವೆ. ವ್ಯಕ್ತರೂಪದಲ್ಲಿರುವ ಈ ಶರೀರವು (ಪೃಥ್ವಿ, ಆಪ್, ತೇಜ, ಆಕಾಶ ಹಾಗು ವಾಯು ಎನ್ನುವ) ಪಂಚಮಹಾಭೂತಗಳಿಂದ ನಿರ್ಮಿತವಾಗಿದೆ ಹಾಗು (ಪ್ರಾಣ, ಅಪಾನ, ವ್ಯಾನ, ಉದಾನ ಹಾಗು ಸಮಾನ ಎನ್ನುವ) ಪಂಚಪ್ರಾಣಗಳಲ್ಲಿ ನಿಂತಿದೆ ಎನ್ನುವುದು ಒಂದು ಗ್ರಹಿಕೆ.

ಬೇಂದ್ರೆಯವರ ಈ ಕವನದಲ್ಲಿ ವಿಶ್ವಮಾತೆಯು ಆಕಾಶವನ್ನು ಸಂಕೇತಿಸಿದರೆ, ಭೂತಾಯಿಯು ಪೃಥ್ವಿಯನ್ನು , ಭರತಮಾತೆಯ ಕಾರ್ತಿಕೋತ್ಸವವು ತೇಜವನ್ನು , ಕನ್ನಡದ ಪರಿಸರವು ವಾಯುವನ್ನು ಹಾಗು ತನ್ನ ಸ್ವಂತ ತಾಯಿ ಅಂಬಿಕೆಯ ಹಾಲು ಹಾಗು ನೆತ್ತರಗಳು ಆಪ್ ಅನ್ನು ಸಂಕೇತಿಸುತ್ತವೆ. ವಿಶ್ವಮಾತೆಯ ಗರ್ಭಕಮಲವು ಲಕ್ಷ್ಮೀರೂಪಿಣಿಯಾದ ಸೃಷ್ಟಿಯ ಪ್ರತೀಕವಾಗಿದೆ. ಈ ಕಮಲದಲ್ಲಿ ಅನಂತಪರಾಗಗಳಿದ್ದು, ಬೇಂದ್ರೆಯವರು ಆ ಪರಾಗದ ಒಂದು ಉಜ್ಜ್ವಲ ಪರಮಾಣು ಮಾತ್ರ. ಈ ಕಲ್ಪನೆಯು ಪ್ರತಿ ಜೀವಿಯೂ ಪವಿತ್ರಜೀವಿ ಎನ್ನುವ ಗ್ರಹಿಕೆಯ ಭಾಗವಾಗಿದೆ. ಅದರ ಮುಂದುವರಿದ ಭಾಗವಾಗಿ ಬೇಂದ್ರೆಯವರು ತಾನು ಭಾರತಮಾತೆಯ ಕೋಟಿ ಜ್ಯೋತಿಗಳಲ್ಲಿ ಒಂದು ಎಂದು ಹೇಳುತ್ತಾರೆ. ಇದು ಭಾರತಮಾತೆಯ ಮಹತ್ತನ್ನು ಹಾಗು ಬೇಂದ್ರೆಯವರ ವಿನಯಪೂರ್ಣ ಆತ್ಮಗೌರವವನ್ನು ತೋರಿಸುತ್ತದೆ. ಮುಂದಿನ ಸಾಲಿನಲ್ಲಿ ಬೇಂದ್ರೆಯವರು ತನ್ನ ಕಾರ್ಯವನ್ನು ಸ್ಪಷ್ಟಪಡಿಸುತ್ತಾರೆ. ಕನ್ನಡದ ಸಾರವನ್ನು ಹೀರಿ, ಅದನ್ನು ಎಲ್ಲೆಡೆಗೂ ಹರಡುವ ಸುಗಂಧಮಯ ಗಾಳಿ ತಾನು ಎಂದು ಹೇಳುತ್ತಾರೆ.

ಬೇಂದ್ರೆಯವರು ತನ್ನ ತಾಯಿಯ ನೆತ್ತರನ್ನು ಕುಡಿದದ್ದಾಗಿ ಹೇಳುವದು ಅನೇಕ ಅರ್ಥಗಳನ್ನು ಹೊಮ್ಮಿಸುತ್ತದೆ. ತಾಯಗರ್ಭದಲ್ಲಿದ್ದಾಗ, ಪ್ರತಿಯೊಂದು ಕೂಸು ತನ್ನ ತಾಯಿಯ ಜೀವರಸವನ್ನು ಕುಡಿದೇ ಬೆಳೆಯಬೇಕು. ಅದಲ್ಲದೆ, ಕೂಸು ದೊಡ್ಡದಾದ ಮೇಲೂ ಸಹ, ತಾಯಿಯು ತನ್ನ ನೆತ್ತರನ್ನು ಬಸಿದು ಅಂದರೆ ಕಷ್ಟಗಳನ್ನು ಸಹಿಸಿ, ತನ್ನ ಮಗುವನ್ನು ಬೆಳೆಸುತ್ತಾಳೆ. ಈ ಋಣವನ್ನು ಸ್ಪಷ್ಟ ಪಡಿಸಲೆಂದೇ ಬೇಂದ್ರೆಯವರು ‘ಅಂಬಿಕಾತನಯದತ್ತ’ ಎನ್ನುವ ಕವನದಲ್ಲಿ ಹೀಗೆ ಹೇಳುತ್ತಾರೆ:

ನಿನ್ನ ಲಲ್ಲೆಯಲ್ಲಿ ಹುಟ್ಟಿ ಬೆಳೆದು ಬಂದ ಸೊಲ್ಲಿದು |
        ಬೇರೆ ಏನು ಬಲ್ಲದು ||
ನಿನ್ನ ಉದರದೊಂದ ಹೂವ ಸರಸ್ವತಿಗೆ ಸಲಿಸಿದೆ |
         ಚುಕ್ಕೆಯಾಗಿ ನೆಲೆಸಿದೆ ||
ಸಾವಿರದ ಮನೆಗಳಲ್ಲಿ ನನಗೆ ಮನೆಯ ಮಾಡಿದೆ |
         ತಾಯಿ ಆಟ ಹೂಡಿದೆ ||
ನಿನ್ನ ಹೆಸರಿನಲ್ಲಿ ನಾನು ಬರೆವುದೇನು ಸೋಜಿಗ |
         ತಿಳಿಯಲಾರದೀ ಜಗ ||

( ‘ಸಾವಿರದ ಮನೆಗಳಲ್ಲಿ’ ಎನ್ನುವಲ್ಲಿ ‘ಸಾವಿರ’ ಎನ್ನುವ ಸಂಖ್ಯಾವಾಚಕ ಅರ್ಥದೊಡನೆ, ‘ಸಾವು+ ಇರದ’ ಎನ್ನುವ ಅರ್ಥವೂ ಹೊಮ್ಮುತ್ತದೆ !)

ಬೇಂದ್ರೆಯವರ ಕಾವ್ಯದ ರಸಾನುಭವಕ್ಕಾಗಿ ಪುರಾಣಗಳ ತಿಳಿವಳಿಕೆಯೂ ಬೇಕು. ‘ನಾನು’ ಎನ್ನುವ ಈ ಕವನದಲ್ಲಿಯ ನರ ಹಾಗು ನಾರಾಯಣರು ಇಬ್ಬರು ಮುನಿಗಳು. ಅವರಲ್ಲಿ ನರನು ಜೀವಾತ್ಮನಾದರೆ, ನಾರಾಯಣನು ಪರಮಾತ್ಮನು. ಆದುದರಿಂದ  ತನ್ನ  ಹೃದಯದಲ್ಲಿರುವ ಪರಮಾತ್ಮನೆ ತನ್ನಿಂದ ನುಡಿಸುತ್ತಾನೆ ಎಂದು ಬೇಂದ್ರೆ ಹೇಳುತ್ತಾರೆ. ಅರ್ಥಾತ್ ಬೇಂದ್ರೆಯವರು ತನ್ನಲ್ಲಿರುವ ಕಾವ್ಯಪ್ರತಿಭೆ ತನ್ನದು ಎಂದು ಭಾವಿಸಿಲ್ಲ. ಇದು ‘ನಾರಾಯಣ’ನ ಅಂದರೆ ದೇವರ ಕೊಡುಗೆ. ವಿಶ್ವದ ಒಳನುಡಿಯನ್ನು ಕನ್ನಡದಲ್ಲಿ ಮೂಡಿಸುವದಷ್ಟೇ ನಾರಾಯಣದೇವನು ತನಗೆ ಅಂದರೆ ‘ನರ’ನಿಗೆ ವಹಿಸಿದ ಕಾರ್ಯ ಎಂದು ಅವರು ತಿಳಿದಿದ್ದಾರೆ.  ಬೇಂದ್ರೆಯವರು ತಮ್ಮನ್ನು ತಾವು ಗುರುತಿಸಿಕೊಂಡ ಬಗೆಯನ್ನು ಈ ಕವನದಲ್ಲಿ ಪೂರ್ಣಾರ್ಥದಲ್ಲಿ ನೋಡಬಹುದು. ಈ ಕವನಕ್ಕೆ ‘ನಾನು’ ಎನ್ನುವುದು ಸಾರ್ಥಕವಾದ ಶೀರ್ಷಿಕೆಯಾಗಿದೆ.

ಬೇಂದ್ರೆಯವರು ಬೆಳೆದ ಧಾರವಾಡವು ಗ್ರಾಮೀಣ ಹಿನ್ನೆಲೆಯ ಒಂದು ಶಹರವಾಗಿತ್ತು. ಈಗಲೂ ಸಹ ಇದನ್ನು ಒಂದು ದೊಡ್ಡ ಹಳ್ಳಿಯೆಂದು ಕರೆಯಬಹುದಷ್ಟೆ ! ಇಲ್ಲಿ ಜಾನಪದ ಸಂಸ್ಕೃತಿಯ ಜೊತೆ ಜೊತೆಗೆ, ಕನ್ನಡ ಹಾಗು ಮರಾಠಿ ನಾಟಕಗಳ ಪ್ರಯೋಗಗಳು , ಪುರಾಣ ಪ್ರವಚನಗಳು ಜರಗುತ್ತಿದ್ದವು. ಶಾಲೆಯಲ್ಲಂತೂ ಇಂಗ್ಲಿಶ್ ಸಾಹಿತ್ಯದ ಓದು ಹಾಗು ವಾರ್ಷಿಕ ಸಮ್ಮೇಲನಗಳಲ್ಲಿ ಚುಟುಕು ನಾಟಕ ಪ್ರಯೋಗಗಳು ಇದ್ದೇ ಇರುತ್ತಿದ್ದವು. ಶಾಲೆಯ ವಾಚನಾಲಯದಿಂದ ತಂದ ಪುಸ್ತಕಗಳೆಲ್ಲವೂ ಬಾಲಕ ದತ್ತನ ಹಾಸಿಗೆಯ ಸುತ್ತಲೂ ಬಿದ್ದಿರುತ್ತಿದ್ದವು. ಈ ರೀತಿಯಾಗಿ ಚಿಕ್ಕಂದಿನಿಂದಲೇ ಬೇಂದ್ರೆಯವರು ತಮ್ಮ ಕಣ್ಣು ಹಾಗು ಕಿವಿಗಳನ್ನು ತೆರೆದಿಟ್ಟುಕೊಂಡು ಬಹುಶ್ರುತರೂ, ಬಹುವಾಚಿತರೂ ಆಗಿ ಬೆಳೆದರು. ಆದುದರಿಂದ ಬೇಂದ್ರೆಯವರ ಕಾವ್ಯವು ವಿಷಯದಲ್ಲಿ ಹಾಗು ಶೈಲಿಯಲ್ಲಿ ವೈವಿಧ್ಯಪೂರ್ಣವಾಗಿದೆ. ಈ ಕಾರಣದಿಂದಲೇ ಅವರು ಕಂದಪದ್ಯಗಳನ್ನು , ಷಟ್ಪದಿಗಳನ್ನು , ದೇಸಿನುಡಿಯ ಪದ್ಯಗಳನ್ನು , ಮಾರ್ಗ ಶೈಲಿಯ ಕವನಗಳನ್ನು , ಅಭಂಗ ಶೈಲಿಯ ಗೀತೆಗಳನ್ನು , ಸರಳ ರಗಳೆಗಳನ್ನು ರಚಿಸಬಲ್ಲವರಾದರು. ಪ್ರತಿಮಾಪ್ರಯೋಗವನ್ನೇ ನವ್ಯಕಾವ್ಯಶೈಲಿ ಎಂದು ಕರೆಯುವದಾದರೆ, ಬೇಂದ್ರೆಯವರ ‘ನಾಕು ತಂತಿ’ ಕವನವು ನವ್ಯಕಾವ್ಯದ ಉತ್ಕೃಷ್ಟ ಉದಾಹರಣೆಯಾದೀತು ! ಇನ್ನು ಅವರ ಪದಪ್ರಯೋಗಗಳ ಬಗೆಗೆ ಹೇಳುವದಾದರೆ ಇಲ್ಲಿ ಅಚ್ಚಗನ್ನಡ ಪದಗಳ , ಸಂಸ್ಕೃತ ಹಾಗು ಪ್ರಾಕೃತ ಪದಗಳ, ಉರ್ದೂ ಪದಗಳ ಹಾಗು ಆಂಗ್ಲ ಪದಗಳ ಅತ್ಯಂತ ಸಮಯೋಚಿತವಾದ ಬಳಕೆಯಾಗಿದೆ. ತಮ್ಮ ಕಾವ್ಯದ ಈ ಎಲ್ಲ ಮೂಲಗಳನ್ನು ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಸ್ಮರಿಸುವುದು ಹೀಗೆ:

ಗರತಿಯರೆದೆವಾತು, ನೆರೆವಾತುಗಳ ಬೆರೆತು
ಲಾವಣಿಯಲಂಕಾರದಲಿ ಹೊಂದಿದೆ
ಪಂಡಿತ, ಪಾಮರರಿಬ್ಬರ ನಾಲಿಗೆ-
ಯೊಳು ಒಡಂಬಡುವಂತೆ ರಂಜಿಸಿದೆ.

೧೯೧೩ರಲ್ಲಿ ಬೇಂದ್ರೆಯವರ ಅಜ್ಜಿ ಗೋದೂಬಾಯಿಯವರು ತೀರಿಕೊಂಡರು. ಅದೇ ವರುಷ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಬೇಂದ್ರೆಯವರು ಉತ್ತೀರ್ಣರಾದರು. ಬೇಂದ್ರೆಯವರ ತಾಯಿ ತಮ್ಮ ಎಲ್ಲ ಮಕ್ಕಳೊಡನೆ ಪುಣೆಯಲ್ಲಿರುವ ಅವರ ಕಾಕಾನ ಮನೆಯಲ್ಲಿ ನೆಲೆನಿಂತರು. ಬೇಂದ್ರೆಯವರ ಕಾಲೇಜ ಶಿಕ್ಷಣ ಅಲ್ಲಿಯೇ ಆಯಿತು.

ತನಗೆ ಇಪ್ಪತ್ತು ತುಂಬಿದಾಗ (೧೯೧೬ರಲ್ಲಿ) ಅವರು ‘ವೀಸ ವಯಾ ಝಾಲೀ’ ಎನ್ನುವ ಮರಾಠಿ ಕವನವೊಂದನ್ನು ಬರೆದರು. ಕಾಲೇಜ ಮ್ಯಾಗಝಿನ್‍ದಲ್ಲಿ Ben Ramson ಎನ್ನುವ ಕಾವ್ಯನಾಮದಿಂದ ಆಂಗ್ಲ ಕವನಗಳನ್ನೂ ಬರೆಯುತ್ತಿದ್ದರು. ಧಾರವಾಡಕ್ಕೆ ಮರಳಿದ ಬಳಿಕ, ೧೯೧೮ರಲ್ಲಿ ಅವರ ‘ತುತ್ತೂರಿ’ ಕವನವು ‘ಪ್ರಭಾತ’ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದೇ ವರ್ಷ ಧಾರವಾಡದಲ್ಲಿ ಜರುಗಿದೆ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ‘ಕೋಗಿಲೆ’ ಎನ್ನುವ ಕವನವು ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಈ ರೀತಿಯಾಗಿ ಕನ್ನಡ ಸಾಹಿತ್ಯಕ್ಷಿತಿಜದಲ್ಲಿ ‘ಅಂಬಿಕಾತನಯದತ್ತ’ ಎನ್ನುವ ನಕ್ಷತ್ರವೊಂದರ ಉದಯವಾಯಿತು !

ಬೇಂದ್ರೆಯವರು ಎಷ್ಟು ಆತ್ಮನಿಷ್ಠರಾಗಿದ್ದರೋ, ಅಷ್ಟೇ ಸ್ನೇಹಶೀಲರೂ ಹೌದು. ಈ ಹೊತ್ತಿಗೆ ವ್ಹಿಕ್ಟೋರಿಯಾ ಹಾಯ್‍ಸ್ಕೂಲಿನಲ್ಲಿ (--ಈಗಿನ ವಿದ್ಯಾರಣ್ಯ ಹಾಯ್‍ಸ್ಕೂಲು--) ಮಾಸ್ತರಿಕಿಯನ್ನು ಪ್ರಾರಂಭಿಸಿದ ಬೇಂದ್ರೆಯವರು ತಮ್ಮ ಗೆಳೆಯರನ್ನು ಕೂಡಿಸಿಕೊಂಡು ‘ಗೆಳೆಯರ ಗುಂಪು ’ ಎನ್ನುವ ಸಾಹಿತ್ಯ-ಸಾಂಸ್ಕೃತಿಕ ಮಂಡಲಿಯನ್ನು ಪ್ರಾರಂಭಿಸಿದರು. ಅವರ ಬಾಲ್ಯದ ಗೆಳೆಯರಾದ ಶ್ರೀಧರ ಖಾನೋಳಕರ ಅಲ್ಲದೆ, ರಂ.ಶ್ರೀ. ಮುಗಳಿ, ಬೆಟಗೇರಿ ಕೃಷ್ಣಶರ್ಮ, ಶಂ.ಬಾ. ಜೋಶಿ, ವಿನೀತ ರಾಮಚಂದ್ರರಾಯರು, ಶೇ. ಗೋ. ಕುಲಕರ್ಣಿ ,  ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವಿ. ಕೃ. ಗೋಕಾಕ ಹಾಗು ಬೇಂದ್ರೆಯವರ ಅತ್ಯಂತ ಆಪ್ತಮಿತ್ರರಾದ ಹಲಸಂಗಿ ಚೆನ್ನಮಲ್ಲಪ್ಪ (‘ಮಧುರಚೆನ್ನ’) ಇವರೆಲ್ಲ ಈ ಗೆಳೆಯರ ಗುಂಪಿನ ಸದಸ್ಯರು. ಈ ಗೆಳೆಯರು ತಾವು ವೈಯಕ್ತಿಕವಾಗಿ ಬರೆದ ಕವನ ಅಥವಾ ಲೇಖನಗಳಿಗೆ ತಮ್ಮ ಹೆಸರನ್ನು ಕೊಡದೆ, ‘ಗೆಳೆಯರ ಗುಂಪು’ ಎನ್ನುವ ಸಾಂಘಿಕ ಹೆಸರನ್ನೇ ಕೊಡುತ್ತಿದ್ದರು. ಸಾಹಿತ್ಯಕ್ಕಷ್ಟೇ ಸೀಮಿತವಾಗದ ಈ ಗೆಳೆಯರ ಗುಂಪು, ಪಂಪೋತ್ಸವ, ವಿದ್ಯಾರಣ್ಯ ದಿನಾಚರಣೆ, ಶಾಂತಕವಿ ದಿನಾಚರಣೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಯಿಸುತ್ತಿತ್ತು. ಏನು ಕಾರಣವೋ ಏನೋ, ಈ ಗೆಳೆಯರ ಗುಂಪು ಬಹುಕಾಲ ಬಾಳಲಿಲ್ಲ. ಆದರೆ ಈ ಗೆಳೆಯರ ಮೈತ್ರಿ ಮಾತ್ರ ಕೊನೆಯವರೆಗೂ ಅಬಾಧಿತವಾಗಿತ್ತು.

ಬೇಂದ್ರೆಯವರ ತಾರುಣ್ಯದ ದಿನಗಳು ಆದರ್ಶದ ದಿನಗಳಾಗಿದ್ದವು. ನಾಡು ಹಾಗು ನುಡಿಗಳನ್ನು ಕಟ್ಟುವ ಆದರ್ಶ, ದೇಶದ ಸ್ವಾತಂತ್ರ್ಯದ ಆದರ್ಶ, ಗೆಳೆತನದ ಆದರ್ಶ ಹಾಗು ಆಧ್ಯಾತ್ಮ ಸಾಧನೆಯ ಆದರ್ಶ ಈ ನಾಲ್ಕು ತಂತಿಗಳು ಬೇಂದ್ರೆಯವರ ತರುಣ ಜೀವನದ ನಾಲ್ಕು ತಂತಿಗಳಾಗಿದ್ದವು. ಈ ಎಲ್ಲ ಆದರ್ಶಗಳು ಅವರ ಮನಸ್ಸಿನಲ್ಲಿ ಹೊಳೆದು, ಆ ಆದರ್ಶಗಳ ಬಗೆಗೆ ಅವರು ಕನಸು ಕಟ್ಟುವುದನ್ನು ಹಾಗು ಆ ಆದರ್ಶಗಳ ಸಿದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸುವುದನ್ನು ‘ಬಾ ಕೈ ತಾ’ ಎನ್ನುವ ಅವರ ಕವನದಲ್ಲಿ ಕಾಣಬಹುದು.  ಆ ಕವನದ ಮೊದಲ ನುಡಿ ಹೀಗಿದೆ:

ಮನಸಿನಲ್ಲಿ ಹೊಳೆದವನೆ
ಕನಸಿನಲ್ಲಿ ಬೆಳೆದವನೆ
ಜೀವನವನೆ ತೊಳೆದವನೆ
ಎಲ್ಲಿರುವೆ ಬಾ !
ಚೆಲುವಿನಲ್ಲಿ ಮಾಗಿರುವೆ
ಒಲವಿನಲ್ಲಿ ಬಾಗಿರುವೆ
ಜಗದ ರೂಪವಾಗಿರುವೆ
ಕೈಗೆ ಕೈಯ ತಾ !

ಭಕ್ತನು ಭಗವಂತನಲ್ಲಿ ಇಟ್ಟಿರುವ ಸಖ್ಯಭಾವದ ಭಕ್ತಿಯು ಈ ಕವನದಲ್ಲಿ ಬಿಂಬಿತವಾಗಿದೆ. ಅರ್ಜುನನಿಗೆ ಶ್ರೀಕೃಷ್ಣನಲ್ಲಿರುವ ಸಖ್ಯಭಕ್ತಿಯನ್ನು ಇದು ನೆನಪಿಸುತ್ತದೆ. ಈ ನುಡಿಯ ಐದನೆಯ ಸಾಲನ್ನು ಗಮನಿಸಿರಿ.
ಬೇಂದ್ರೆಯವರು ಪರಮಾತ್ಮನಿಗೆ ‘ಚೆಲುವಿನಲ್ಲಿ ಮಾಗಿರುವೆ’ ಎಂದು ಹೇಳುತ್ತಾರೆ. ಅಂದರೆ ಈ ಚೆಲುವು ಮಾಗಿದ ಚೆಲುವು : Graceful, ultimate beauty! ಇದು ಭಗವಂತನಿಗೆ ಮಾತ್ರ ಸಾಧ್ಯ. ಭಕ್ತನ ಭಕ್ತಿಯನ್ನು ‘ಒಲವಿನಲ್ಲಿ ಬಾಗಿರುವುದು’ ಎಂದು ಹೇಳುವುದು ಅತ್ಯಂತ ಉಚಿತವಾಗಿದೆ.