Thursday, April 23, 2015

ಮತ್ತಿಷ್ಟು ಪದಗಳು


‘ಅಂತರ್ರಾಷ್ಟ್ರೀಯ’ ಎನ್ನುವ ಪದವು ಸರಿಯೊ ಅಥವಾ ‘ಅಂತರರಾಷ್ಟ್ರೀಯ’ ಎನ್ನುವ ಪದವು ಸರಿಯೋ ಎನ್ನುವ ಚರ್ಚೆಯು ಆಗಾಗ ನಡೆಯುತ್ತಿರುತ್ತದೆ. ಈ ಪದಗಳ ವ್ಯತ್ಯಾಸವನ್ನು ಅರಿತುಕೊಳ್ಳಲು, ‘ಅಂತಃ’ ಮತ್ತು ‘ಅಂತರ’ ಈ ಪದಗಳ ವ್ಯತ್ಯಾಸವನ್ನು ಪರಿಶೀಲಿಸಬೇಕು.

‘ಅಂತಃ’ ಪದದ ಅರ್ಥವು ‘ಒಳಗಿನ’ ಎಂದಾಗುತ್ತದೆ. ಉದಾಹರಣೆಗೆ ಅಂತಃಪುರ; ರಾಜವನಿತೆಯರಿಗಾಗಿ ಅರಮನೆಯ ಒಳಭಾಗದಲ್ಲಿ ಕಟ್ಟಲಾಗಿರುವ ಭಾಗವೇ ಅಂತಃಪುರ. ಇದರಂತೆ ಅಂತಃಕರಣ, ಅಂತಃಶತ್ರು ಇತ್ಯಾದಿ. Inland letter ಎನ್ನುವ ಆಂಗ್ಲ ಪದದ ಅರ್ಥವು ‘ಒಳನಾಡ ಅಂಚೆ’. ಇದರ ಸಂಸ್ಕೃತ ಅಥವಾ ಹಿಂದಿ ಅನುವಾದವು ‘ಅಂತಃ+ದೇಶೀಯ = ಅಂತರ್ದೇಶೀಯ’ ಎಂದಾಗುತ್ತದೆ. ಅದರಂತೆ ರಾಷ್ಟ್ರದ ಆಂತರಿಕ ಸಂದರ್ಭವನ್ನು ಸೂಚಿಸಲು, ‘ಅಂತಃ + ರಾಷ್ಟ್ರೀಯ = ಅಂತರ್ರಾಷ್ಟ್ರೀಯ’ ಎನ್ನುವ ಪದವನ್ನು ಬಳಸಬಹುದು. ಉದಾಹರಣೆಗೆ, ರಾಷ್ಟ್ರದ ಒಳಗಿನ ತುರ್ತು ಪರಿಸ್ಥಿತಿಗೆ ‘ಅಂತರ್ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಎನ್ನಬಹುದು.

ಇನ್ನು ‘ಅಂತರ’ ಎನ್ನುವ ಪದವನ್ನು ಬಳಸಿದ ಸಂದರ್ಭಗಳನ್ನು ನೋಡಿರಿ:
ದೇಶಾಂತರಮ್ = ಅನ್ಯೋ ದೇಶಃ = ಬೇರೊಂದು ದೇಶ
ಕಾಲಾಂತರಮ್ = ಅನ್ಯೋ ಕಾಲಮ್ = ಬೇರೊಂದು ಕಾಲ

ಒಟ್ಟಿನಲ್ಲಿ,  ಬಾಹ್ಯ ಸಂಗತಿಯನ್ನು ಸೂಚಿಸಲು ‘ಅಂತರ’ ಪದವನ್ನು ಬಳಸುತ್ತಾರೆ ಎಂದು ಅರ್ಥೈಸಿಕೊಳ್ಳಬಹುದು. ಆದುದರಿಂದ ‘ವಿಭಿನ್ನ ರಾಷ್ಟ್ರಗಳ’ ನಡುವಿನ ಸಮಸ್ಯೆಯನ್ನು ಸೂಚಿಸಲು ‘ಅಂತರರಾಷ್ಟ್ರೀಯ ಸಮಸ್ಯೆ’ ಎಂದು  ಹೇಳುವುದು ಉಚಿತವಾಗಿದೆ. ಭಿನ್ನ ಜಾತಿಯ ಗಂಡು, ಹೆಣ್ಣುಗಳ ವಿವಾಹವನ್ನು ಅಂತರಜಾತೀಯ ಎಂದು ಹೇಳಬೇಕೇ ಹೊರತು, ಅಂತರ್ಜಾತೀಯ ಎಂದಲ್ಲ! (ಅಂತರ್ಜಾತೀಯ ಪದದ ಅರ್ಥವು ‘ಜಾತಿಯ ಒಳಗಿನ’ ಎಂದಾಗುತ್ತದೆ.) ಇದೇ ರೀತಿಯಲ್ಲಿ internet ಪದದ ಅನುವಾದವು  ‘ಅಂತರಜಾಲ’ ಎಂದು ಆಗುತ್ತದಯೆ ಹೊರತು ‘ಅಂತರ್‍ಜಾಲ’ ಎಂದಲ್ಲ. ‘ಅಂತರ್ಜಾಲ’ಕ್ಕೆ intranet ಎನ್ನುವ ಅರ್ಥ ಬರುತ್ತದೆ.
(ಖ್ಯಾತ ಸಾಹಿತಿ ಶ್ರೀರಂಗರು ‘ಗಂಡಾಂತರ’ ಪದವನ್ನು ‘ಅನ್ಯೋ ಗಂಡಃ (ಬೇರೊಬ್ಬರ ಗಂಡ) = ಗಂಡಾಂತರಮ್’ ಎಂದು ತಮಾಶೆ ಮಾಡುತ್ತಿದ್ದರು.)

ಆಧುನೀಕರಣ ಹಾಗು ಅಧುನಿಕೀಕರಣ ಪದಗಳ ನಡುವೆ ಇದೇ ತರಹದ ಸಂದಿಗ್ಧತೆಯನ್ನು ನೋಡುತ್ತೇವೆ. ‘ಆಧುನಿಕ’ ಪದವು ‘ಅಧುನಾ’ ಎನ್ನುವ ಸಂಸ್ಕೃತ ಪದದ ಮೂಲಕ ಬಂದಿದೆ. ಅಧುನಾ ಎಂದರೆ ಈಗ, ಈ ಕ್ಷಣದಲ್ಲಿ, ಸದ್ಯದಲ್ಲಿ ಇತ್ಯಾದಿ ಅರ್ಥಗಳನ್ನು ಕೊಡುತ್ತದೆ. ಹೀಗಾಗಿ ‘ಆಧುನಿಕ’ ಪದದ ಅರ್ಥವು ‘up to date person’, ಆದುದರಿಂದ ‘modern person’ ಎಂದಾಗುತ್ತದೆ. ಹೀಗಾಗಿ ‘updating ಅಥವಾ modernization’ ಎನ್ನುವ ಪದಗಳಿಗೆ ‘ಆಧುನೀಕರಣ’ ಎನ್ನುವುದೇ ಸಮಂಜಸವಾಗಿದೆ.

‘ಶಾಕ’ ಅಂದರೆ ಕಾಯಿಪಲ್ಲೆ. ‘ಶಾಕಾಹಾರ’ ಎಂದರೆ ‘ಸಸ್ಯಮೂಲ ಆಹಾರ = ಸಸ್ಯಾಹಾರ’. ಆದರೆ ಅನೇಕರು ಇದನ್ನು ‘ಶಾಖಾಹಾರ’ ಎಂದು ತಪ್ಪಾಗಿ ಬರೆಯುತ್ತಾರೆ. ‘ಶಾಖ’ ಎಂದರೆ ಬಿಸಿಯಾದದ್ದು. ಆದುದರಿಂದ ‘ಶಾಖಾಹಾರ’ ಇದರ ಅರ್ಥವು ‘ಬಿಸಿಯಾದ ಅಡುಗೆ’ ಎಂದಾಗುತ್ತದೆ!

ಬಿಸಿಲು ಹೆಚ್ಚಾದಾಗ ನಮಗೆ ‘ಶಕೆ’ಯಾಗುವುದಲ್ಲವೆ? ಕನ್ನಡದ ‘ಶಕೆ’ ಎನ್ನುವ ಪದವು ಸಂಸ್ಕೃತದ ‘ಶಾಖ’ ಪದದ ತದ್ಭವವಾಗಿದೆ. ವೈಶಾಖ ಮಾಸದಲ್ಲಿ ಶಕೆ ಹೆಚ್ಚು. ನಮ್ಮ ‘ಬೇಸಿಗೆ’ ಪದವು ‘ವೈಶಾಖ’ ಪದದ ತದ್ಭವವಾಗಿದೆ. ಉತ್ತರ ಭಾರತೀಯರಿಗೆ ಸೂರ್ಯನು ವಿಶಾಖಾ ನಕ್ಷತ್ರದ ಸನಿಹದಲ್ಲಿದ್ದಾಗ  ವೈಶಾಖ ಮಾಸವು ಪ್ರಾರಂಭವಾಗುತ್ತದೆ. (ಉತ್ತರ ಭಾರತದಲ್ಲಿ ಮಾಸಗಳು ಕೃಷ್ಣ ಪ್ರತಿಪದೆಯಿಂದ ಪ್ರಾರಂಭವಾಗುತ್ತವೆ; ನಮ್ಮಲ್ಲಿ ಶುಕ್ಲ ಪ್ರತಿಪದೆಯಿಂದ ಪ್ರಾರಂಭವಾಗುತ್ತವೆ.) ವಿಶಾಖಾ ಎಂದರೆ ವಿಶೇಷವಾದ ಶಾಖವುಳ್ಳದ್ದು. ಜ್ಯೋತಿಷ್ಯ ಶಾಸ್ತ್ರದ ಮೇರೆಗೆ, ಅಗ್ನಿಯು ವಿಶಾಖಾ ನಕ್ಷತ್ರದ ಅಧಿಪತಿಯಾಗಿದ್ದಾನೆ!

Saturday, April 11, 2015

ಕನ್ನಡ-ಸಂಸ್ಕೃತ



ಕನ್ನಡಿಗರು ನಿತ್ಯಜೀವನದಲ್ಲಿ ಬಳಸುವ ಪದಗಳನ್ನು ಪರೀಕ್ಷಿಸಿದಾಗ, ಇವರು ನಿಧಾನ ಸ್ವಭಾವದವರು ಅಂತ ತೋರುತ್ತದೆ. ಏಕೆಂದರೆ ಕನ್ನಡ ಭಾಷೆಯಲ್ಲಿ fast ಅನ್ನುವ ಪದಕ್ಕೆ ಸಮಾನವಾದ ಕನ್ನಡ ಮೂಲದ ಪದಗಳು ಇದ್ದಂತೆ ಕಾಣುವದಿಲ್ಲ. ‘ಬೇಗ’ ಎನ್ನುವ ಪದವು ಸಂಸ್ಕೃತದ ‘ವೇಗ’ ಪದದ ತದ್ಭವವಾಗಿದೆ. ‘ಲಗು’ ಎನ್ನುವ ಪದವು ‘ಲಘು’ ಎನ್ನುವ ಪದದ ರೂಪಾಂತರವಾಗಿದೆ. ‘ಜೋರ’ ಮತ್ತು ‘ದೌಡ’ ಎನ್ನುವ ಪದಗಳು ಹಿಂದೀ ಪದಗಳಾಗಿವೆ. ಆದುದರಿಂದ ಕನ್ನಡಿಗರು ಸ್ವಭಾವತಃ fast ಅಲ್ಲ! ಇನ್ನು  slow  ಎನ್ನುವ ಪದಕ್ಕೆ ಸಮಾನವಾದ ‘ಮೆಲ್ಲಗೆ’  ಎನ್ನುವ ಪದವು ಕನ್ನಡದಲ್ಲಿ ಸಿಗುತ್ತದೆ. ಆದುದರಿಂದ ಕನ್ನಡಿಗರನ್ನು ನಿಧಾನಸ್ಥರೆಂದು ಕರೆಯುವುದೇ ಸರಿ.ಈಗ ಈ ವಿನೋದವನ್ನು ಬದಿಗಿರಿಸಿ ಪರಾಮಱ್ಷಿಸಿದಾಗ ಹೊಳೆಯುವದೇನೆಂದರೆ ದೈನಂದಿನ ಕನ್ನಡಕ್ಕೆ ಸಂಸ್ಕೃತದಿಂದ ಅನೇಕ ಪದಗಳ ಆಯಾತವಾಗಿದೆ. ವಾಸ್ತವದಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಬಂದಷ್ಟೇ ಪದಗಳು, ಕನ್ನಡದಿಂದ ಸಂಸ್ಕೃತಕ್ಕೂ ಹೋಗಿವೆ. ಇದು ಕನ್ನಡ ಹಾಗು ಸಂಸ್ಕೃತದ ಅನ್ಯೋನ್ಯ ಸಂಬಂಧವನ್ನು ತೋರಿಸುತ್ತದೆ. (ಈ ಮಾತು ಇತರ ಭಾರತೀಯ ಭಾಷೆಗಳಿಗೂ ಅನ್ವಯಿಸುತ್ತದೆ, ಉಱ್ದು ಹಾಗು ಇಂಗ್ಲಿಶ್ ಹೊರತುಪಡಿಸಿ.)

‘ಸಂಸ್ಕೃತಮ್’ ಎನ್ನುವ ಪದದ ಅರ್ಥ: refined, processed, ಸಂಸ್ಕರಿಸಲ್ಪಟ್ಟದ್ದು ಇತ್ಯಾದಿ. ಜನಸಾಮಾನ್ಯರು (ಅಂದರೆ ಆಱ್ಯ ಜನಸಾಮಾನ್ಯರು) ತಮ್ಮ ದೈನಂದಿನ ಮಾತುಕತೆಯಲ್ಲಿ ಇಂತಹ ವ್ಯಾಕರಣಬದ್ಧ‘ಸಂಸ್ಕೃತ’ವನ್ನು ಬಳಸುತ್ತಿದ್ದಿಲ್ಲ. (ಯಾರು ಬಳಸುತ್ತಾರೆ, ಹೇಳಿ!) ಆದುದರಿಂದ ಆಱ್ಯಜನಾಂಗದ ಆಡುಭಾಷೆಗೆ ‘ಆಱ್ಯಭಾಷೆ’ ಎಂದಷ್ಟೇ ಕರೆಯುವುದು ಸಮಂಜಸವಾಗಿದೆ. ಆಱ್ಯರ ಆಡುಭಾಷೆಯನ್ನು ವ್ಯಾಕರಣದ ಚೌಕಟ್ಟಿಗೆ ಒಳಪಡಿಸಿ, ಸಂಸ್ಕರಿಸಿ ‘ಸಂಸ್ಕೃತ’ವನ್ನಾಗಿ ಪರಿವರ್ತಿಸಿದವರು ವೈಯಾಕರಣಿಗಳು. ಆಱ್ಯರು ಉತ್ತರ ಭಾರತವನ್ನು ಪ್ರವೇಶಿಸಿದಾಗ ಅಲ್ಲಿ ವಾಸವಾಗಿದ್ದ ಮೂಲನಿವಾಸಿಗಳ ಜೊತೆಗೆ --(ಉದಾ: ಕನ್ನಡಿಗರು, ಕೋಲರು, ಗೊಂಡರು, ಮುಂಡರು ಇತ್ಯಾದಿ)-- ಮುಖ್ಯತಃ ಕನ್ನಡಿಗರ ಜೊತೆಗೆ ಆಱ್ಯರ ಮುಖಾಮುಖಿಯಾಯಿತು. ಇವರೀಱ್ವರ ಆಡುನುಡಿಗಳು ಬೆರೆತುಕೊಂಡು, ವಿವಿಧ ಬಗೆಯ ಪ್ರಾಕೃತ ಭಾಷೆಗಳು ಹುಟ್ಟಿಕೊಂಡವು, ಉದಾಹರಣೆಗೆ ಶೂರಸೇನೀ, ಮಾಗಧೀ, ಮಹಾರಾಷ್ಟ್ರೀ ಇತ್ಯಾದಿ. ಪ್ರಾಕೃತ ಎಂದರೆ ಪ್ರಕೃತಿಸಹಜವಾದದ್ದು; ಸಂಸ್ಕೃತಮ್ ಎಂದರೆ ಸಂಸ್ಕರಿಸಲ್ಪಟ್ಟದ್ದು.

ಈ ಪ್ರಾಕೃತ ಭಾಷೆಗಳಿಗೆ ಕನ್ನಡದ ಕೊಡುಗೆ ಗಣನೀಯವಾಗಿದೆ. ಉದಾಹರಣೆಗೆ ಹಿಂದೀ ಭಾಷೆಯ ‘ಪೌಧಾ’ ಎನ್ನುವ ಪದವು ಕನ್ನಡದ ‘ಪೊದೆ’ ಎನ್ನುವ ಪದದಿಂದ ಬಂದಿದೆ. ಮರಾಠಿಯ ‘ಚಾಂಗಲಾ’ ಪದವು ಕನ್ನಡದ ‘ಚಾಂಗು’ ಪದದಿಂದ ಬಂದಿದೆ.  ಉತ್ತರ ಭಾರತದಲ್ಲಿಇರುವ ಅನೇಕ ಸ್ಥಳನಾಮಗಳು ಕನ್ನಡ ಹೆಸರುಗಳೇ ಆಗಿವೆ. ಮರಾಠೀ ಹಾಗು ಗುಜರಾತಿ ಭಾಷೆಗಳು ಕನ್ನಡ ಭಾಷೆಯ ತಳಪಾಯದ ಮೇಲೆ ನಿಂತಿವೆ ಎನ್ನುವುದನ್ನು ಭಾಷಾತಜ್ಞರು ತೋರಿಸಿದ್ದಾರೆ.

ಆಱ್ಯಭಾಷೆಯನ್ನು ಸಂಸ್ಕರಿಸಿದ ವೈಯಾಕರಣಿಗಳಿಗೆ ಭಾರತೀಯರೆಲ್ಲರೂ ಕೃತಜ್ಞರಾಗಿರಬೇಕು. ಸಂಸ್ಕೃತ ಭಾಷೆಯ ವ್ಯಾಕರಣದಂತಹ ಸುವ್ಯವಸ್ಥಿತ ವ್ಯಾಕರಣವನ್ನು ನಾವು ಜಗತ್ತಿನ ಯಾವ ಭಾಷೆಯಲ್ಲಿಯೂ ಕಾಣುವದಿಲ್ಲ. ಈ ವೈಯಾಕರಣಿಗಳು ಧ್ವನಿಯ ಮೂಲವನ್ನು ಆಧರಿಸಿ, ಈ ಧ್ವನಿಗಳನ್ನು ‘ತಾಲವ್ಯ, ಕಂಠವ್ಯ, ದಂತವ್ಯ,ಓಷ್ಠವ್ಯ,ಮೂರ್ಧನ್ಯ’ ಎಂದು ವಱ್ಗೀಕರಿಸಿದರು. ಒಂದು ಮೂಲಪದದಿಂದ ಅನೇಕ ಪದಗಳನ್ನು ಸೃಷ್ಟಿಸುವ ಬಗೆಗಳನ್ನು ತೋರಿಸಿದರು. ಈ ವ್ಯಾಕರಣವನ್ನೇ ಎಲ್ಲ ಭಾರತೀಯ ಭಾಷೆಗಳು ಹೆಚ್ಚುಕಡಿಮೆ ಅನುಸರಿಸುತ್ತಿವೆ (ಉರ್ದು ಹಾಗು ಇಂಗ್ಲಿಶ್ ಹೊರತುಪಡಿಸಿ!) ಹೀಗಾಗಿ ಈ ಎಲ್ಲ ಭಾರತೀಯ ಭಾಷೆಗಳಲ್ಲಿ ಒಂದು ಸಾಮ್ಯತೆ ಇದೆ. ಕನ್ನಡದ ಕೆಲವು ವಿತಂಡವಾದಿಗಳು ‘ಕನ್ನಡದ ಜಾಯಮಾನವೇ ಬೇರೆ; ಆದುದರಿಂದ ಕನ್ನಡದ ವ್ಯಾಕರಣವೇ ಬೇರೆ’ ಎಂದು ವಾದಿಸುತ್ತಾರೆ. ಇವರ ವಾದದ ಒಂದು ಪ್ರಮುಖ ಗುರಿ ಎಂದರೆ ಅಲ್ಪಪ್ರಾಣ ಹಾಗು ಮಹಾಪ್ರಾಣಗಳು! ಮಹಾಪ್ರಾಣವನ್ನು ಉಚ್ಚರಿಸಲಾರದಷ್ಟು ಮಂದಮತಿಗಳೇ ಕನ್ನಡಿಗರು? ಇಂಗ್ಲೀಶಿನ fast ಪದವನ್ನು ಇವರೇನು past ಎಂದು ಉಚ್ಚರಿಸುತ್ತಾರೆಯೆ? ಅನೇಕ ಕನ್ನಡಿಗರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ; ಅಲ್ಲಿಯೇ ನೆಲಸಿಯೂ ಇದ್ದಾರೆ. ಇವರೆಲ್ಲ ವಿದೇಶಗಳಲ್ಲಿ ಮಹಾಪ್ರಾಣ ಪದಗಳನ್ನು ಸರಿಯಾಗಿ ಉಚ್ಚರಿಸಬಲ್ಲರು; ಇಲ್ಲಿ ಬಂದ ತಕ್ಷಣ ಅಲ್ಪಪ್ರಾಣಿಗಳಾಗಿ ಬದಲಾಗುತ್ತಾರೆಯೆ? ಇದನ್ನು ಗಮನಿಸಿದಾಗ, ಈ ‘ಜಾಯಮಾನ ಪ್ರಚಾರ’ವು  ಕೆಲವು ವಿಶಿಷ್ಟ ಹಿತಾಸಕ್ತಿಗಳ ದುರುದ್ದೇಶಪೂರ್ಣ ತಿಪ್ಪರಲಾಗ ಎಂದು ಭಾಸವಾಗುತ್ತದೆ. (ಲಾಗ ಎನ್ನುವ ಕನ್ನಡ ಪದವು ಲಾಘವ ಎನ್ನುವ ಸಂಸ್ಕೃತ ಪದದ ತದ್ಭವವಾಗಿದೆ.) ಅದೂ ಅಲ್ಲದೆ, ‘ಜಾಯಮಾನಕ್ಕಿಂತ ಕಾಲಮಾನ ಹೆಚ್ಚಿನದು’  ಎನ್ನುವುದನ್ನು ನಾವು ಅರಿಯಬೇಕು. ಸಾವಿರಾರು ವಱ್ಷಗಳ ಹಿಂದೆ, ಕನ್ನಡಿಗರು ದಂಡಕಾರಣ್ಯದಲ್ಲಿ ಮರಗಳ ಮೇಲೆ ಜಿಗಿದಾಡುತ್ತಿದ್ದರು, ಶಿಲಾಯುಧಗಳನ್ನು ಬಳಸುತ್ತಿದ್ದರು ಹಾಗು ತೊಗಟೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದರು. ಇದು ಕನ್ನಡಿಗರ ಜಾಯಮಾನವೆಂದು ಈಗಲೂ ಸಹ ಅವೇ ಪದ್ಧತಿಗಳನ್ನು ನಾವು ಅನುಸರಿಸಬಹುದೆ? ಈ ತಿಳಿಗೇಡಿತನಕ್ಕೆ ನಾವು ಶರಣಾದರೆ, ಕನ್ನಡ ಭಾಷೆಯು ಮಲೆತ ಮಡುವಾಗುತ್ತದೆ. ಕನ್ನಡಿಗರು ಆ ಮಲೆತ ಕೆಸರಿನಲ್ಲಿ ಕಿರಚುವ ಕಪ್ಪೆಗಳಾಗುತ್ತಾರೆ!

ಎಲ್ಲ ಭಾರತೀಯ ಲಿಪಿಗಳಿಗೆ ಬ್ರಾಹ್ಮೀ ಲಿಪಿಯೇ ಮೂಲವಾಗಿದೆ. ಆದರೆ ಈ ಎಲ್ಲ ಸೋದರ ಲಿಪಿಗಳಲ್ಲಿ ಕನ್ನಡ ಲಿಪಿಯೇ ಶ್ರೇಷ್ಠವಾಗಿದೆ. ಕನ್ನಡ ಲಿಪಿಯ ಶ್ರೇಷ್ಠತೆಯನ್ನು ಅರಿಯಲು ಭಾರತದ ಇತರ ಭಾಷೆಗಳ ಲಿಪಿಗಳ ಜೊತೆಗೆ ಕನ್ನಡ ಲಿಪಿಯನ್ನು ಹೋಲಿಸಿ ಪರೀಕ್ಷಿಸಬೇಕು. ಉದಾಹರಣೆಗೆ ಬಂಗಾಲೀ ಲಿಪಿಯಲ್ಲಿ ‘ವ್’ ಎನ್ನುವ ವ್ಯಂಜನವಿಲ್ಲ. ಹೀಗಾಗಿ ಬಂಗಾಲಿಗಳು ‘ವಂಗಹಾಳ’ವನ್ನು ‘ಬೊಂಗ್ಲಾ’ ಎಂದು ಕರೆಯುತ್ತಾರೆ. ಬಂಗಾಲಿಯಲ್ಲಿ ತ್ ಹಾಗು ದ್ ವ್ಯಂಜನಗಳಿದ್ದಾಗೂ ಸಹ ‘ತುರಂತ’ ಪದಕ್ಕೆ ಇವರು ‘ದುರಂತೊ’ ಎಂದು ಯಾಕೆ ಅನ್ನುತ್ತಾರೊ, ದೇವರಿಗೇ ಗೊತ್ತು. ಹೀಗಾಗಿ ಮೊಮೊತಾ ಬಂದೋಪಾಧ್ಯಾಯರು (=ಮಮತಾ ಬ್ಯಾನಱ್ಜೀಯವರು) ಕೇಂದ್ರದಲ್ಲಿ ರೇಲವೆ ಮಂತ್ರಿಗಳಾಗಿದ್ದಾಗ, ‘ದಿಲ್ಲಿ-ಕೋಲಕತ್ತಾ ಎಕ್ಸಪ್ರೆಸ್ಸಿ’ಗೆ ‘ತುರಂತ ಎಕ್ಸಪ್ರೆಸ್’ ಎನ್ನುವದರ ಬದಲಾಗಿ ‘ದುರಂತೊ ಎಕ್ಸಪ್ರೆಸ್’ ಎಂದು ನಾಮಕರಣವನ್ನು ಮಾಡಿದರು. ಎಂತಹ ದುರಂತ, ಬಂಧುಗಳೆ!  

ಬ್ರಾಹ್ಮೀ ಲಿಪಿಯಿಂದ ಹುಟ್ಟಿದ ದೇವನಾಗರೀ, ಬಂಗಾಲೀ, ಗುಜರಾತೀ, ಮರಾಠೀ ಇತ್ಯಾದಿ ಲಿಪಿಗಳಲ್ಲಿ ‘ಏ,ಓ’ ಎನ್ನುವ ದೀಱ್ಘ ಸ್ವರಗಳಿಲ್ಲ. ಹೀಗಾಗಿ ಈ ಭಾಷೆಗಳಲ್ಲಿ red ಹಾಗೂ raid ಎರಡನ್ನೂ ‘ರೇಡ್’ ಎಂದೇ ಉಚ್ಚರಿಸುತ್ತಾರೆ. ಕನ್ನಡದ ‘ಕೊಡು’ ಹಾಗು ‘ಕೋಡು’ ಈ ಭಾಷೆಗಳಲ್ಲಿ ‘ಕೋಡು’ ಮಾತ್ರ ಆಗುತ್ತವೆ. ಈ ಧ್ವನಿಸಂಕೇತಗಳ ಕೊರತೆಯಿಂದಾಗಿ, ಈ ಭಾಷೆಗಳಲ್ಲಿ ಪದಸಂಪತ್ತು ಕಡಿಮೆಯಾಗುವುದು ಸಹಜ. ತಮಿಳು ಭಾಷೆಯಂತೂ ಆಂಡವನಿಗೇ ಪ್ರೀತಿ. ಧ್ವನಿಸಂಕೇತಗಳ ಕೊರತೆ ಹಾಗು ವಿಚಿತ್ರ ಭಾಷಾರೂಢಿಯಿಂದಾಗಿ ‘ಗೋಕಱ್ಣದ ಗಣಪತಿ’ಯು ತಮಿಳಿನಲ್ಲಿ ‘ಕೋಗಱ್ಣದ ಕಣಪದಿ’ಯಾಗುತ್ತಾನೆ; ‘ಗಿಟಾರ್’ ಪದವು ‘ಕಿಟಾರ್’ ಎಂದು ಕಿರಿಚಿಕೊಳ್ಳುತ್ತದೆ. ‘ಗಾಂಧೀ’ಯವರು ‘ಕಾಂದೀ’ ಆಗುತ್ತಾರೆ; ‘ಕಾಂತೀ’ ಸಹ ‘ಕಾಂದೀ’ ಆಗುತ್ತಾಳೆ. (ಇದು ತಮಿಳಿನ ಜಾಯಮಾನ?!) ಬಂಗಾಲಿ ಹಾಗು ತಮಿಳು ಲಿಪಿಯಲ್ಲಿ ಕೆಲವು ಕಾಗುಣಿತಗಳು ಉಚ್ಚಾರವನ್ನು ಅನುಸರಿಸುವದಿಲ್ಲ. ಉದಾಹರಣೆಗೆ ‘ಕೈ’ ಪದವನ್ನು ತಮಿಳಿನಲ್ಲಿ ‘ಕ್‍ಅಇ’ ಎಂದು ಸಂಯೋಜಿಸದೆ, ‘ಅಕ್‍ಇ’ ಎಂದು ಲೇಖಿಸುತ್ತಾರೆ. ಬಂಗಾಲಿಯಲ್ಲಂತೂ ಈ ಸ್ವರಸಂಕೇತಗಳನ್ನು ಹಿಂದೆ ಅಥವಾ ಮುಂದೆ ಎಲ್ಲಾದರೂ ಬರೆಯಬಹುದಂತೆ! ಇದೆಲ್ಲವನ್ನು ಗಮನಿಸಿದಾಗ ನಮ್ಮ ಕನ್ನಡ ಲಿಪಿಯು ಇವೆಲ್ಲ ಲಿಪಿಗಳಿಗಿಂತ ಎಷ್ಟೋ ಪಾಲು ಉತ್ತಮವಾಗಿದೆ ಹಾಗು ಸುಸಂಬದ್ಧ ಲಿಪಿಯಾಗಿದೆ ಎನ್ನುವದರ ಅರಿವಾಗುತ್ತದೆ; ಕನ್ನಡ ಲಿಪಿಯ ಶ್ರೀಮಂತಿಕೆಯ ಬಗೆಗೆ ಹೆಮ್ಮೆಯಾಗುತ್ತದೆ. ಆದರೆ ಕೆಲವರು ಕುಲಕುಠಾರರು ಕನ್ನಡದ ಬುಡಕ್ಕೇ ಕೊಡಲಿ ಏಟು ಹಾಕಲು ಬಯಸುತ್ತಿರುವುದು ವಿಷಾದದ ಸಂಗತಿಯಾಗಿದೆ.

ಕನ್ನಡಿಗರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದಲೇ ಒಬ್ಬ ಭಟ್ಟರು ಭಾಷೆಯಲ್ಲಿ ರಾಜಕೀಯವನ್ನು ಮಾಡುತ್ತಿದ್ದಾರೆ. ಕನ್ನಡದ ಬರಹವು ಹಿಂದುಳಿದವರನ್ನು ಹಿಂದೆ ಉಳಿಸುವ ಸಲುವಾಗಿಯೇ ಸಂಕೀಱ್ಣಗೊಳಿಸಲ್ಪಟ್ಟಿದೆ ಎನ್ನುವ ವಿಚಿತ್ರ ತಱ್ಕವನ್ನು ಇವರು ಅಮಾಯಕರ ಕಿವಿಯಲ್ಲಿ ಊದುತ್ತಿದ್ದಾರೆ. ಈ ತಱ್ಕವನ್ನು ವಿಸ್ತರಿಸುತ್ತ, ಬಾಯಿಲೆಕ್ಕದ ಗಣಿತವು ಸಾಕಾಗುತ್ತಿದ್ದಾಗಲೂ ಸಹ, ಹಿಂದುಳಿದವರನ್ನು ಹಿಂದೆ ಎಳೆಯುವ ಉದ್ದೇಶದಿಂದಲೇ ಬೀಜಗಣಿತ, ಭೂಮಿತಿ ಮೊದಲಾದ ಸಂಕೀಱ್ಣ ಗಣಿತವನ್ನು ಹೇರಲಾಯಿತು ಎಂದು ಇವರು ಹೇಳಿಯಾರು! ಸಂಕೀಱ್ಣ ಗಣಿತ ಹಾಗು ಸಂಕೀಱ್ಣ ವಿಜ್ಞಾನದಲ್ಲಿ ಮೇಲ್ಮೆಯನ್ನು ಸಾಧಿಸಿದ ಅನೇಕ ಭಾರತೀಯರು ತಥಾಕಥಿತ ಹಿಂದುಳಿದ ವಱ್ಗಗಳಿಂದ ಬಂದವರು ಎನ್ನುವುದನ್ನು ನೋಡಿದಾಗ ಭಟ್ಟರ ಬುಡುಬುಡಿಕೆ ಅಱ್ಥವಾಗದಿರದು. ಅಷ್ಟೇ ಏಕೆ, ರಾಮಾಯಣ ಮೊದಲಾದ ಮಹಾಕಾವ್ಯಗಳನ್ನು ರಚಿಸಿದವರು, ಅನೇಕ ಉಪನಿಷತ್ತುಗಳನ್ನು ರಚಿಸಿದವರು ತಥಾಕಥಿತ ಹಿಂದುಳಿದ ವಱ್ಗದವರೇ ಆಗಿದ್ದಾರೆ.


ಲಿಪಿಯ ಬಗೆಗೆ ನಾನು ಮಾಡಿದ  ಟೀಕೆಯನ್ನು ದಯವಿಟ್ಟು ಈ ಭಾಷೆಗಳ ಸಾಹಿತ್ಯಕ್ಕೆ ಅನ್ವಯಿಸಬಾರದೆಂದು ನಾನು ನಮ್ರತೆಯಿಂದ ಕೋರುತ್ತೇನೆ. ತಮಿಳು,ತೆಲಗು, ಬಂಗಾಲಿ ಹಾಗು ಮರಾಠಿ ಭಾಷೆಯ ಸಾಹಿತ್ಯವನ್ನು ಕನ್ನಡ ಅನುವಾದದಲ್ಲಿ ಓದಿದ ನಾನು, ಆ ಭಾಷೆಗಳ ಸಾಹಿತ್ಯವು ಶ್ರೇಷ್ಠವಾಗಿದೆ ಎಂದು ಅರಿತಿದ್ದೇನೆ. ಬೊಂಗ್ಲಾ ಭಾಷೆಯ ಲಿಪಿಯಲ್ಲಿ ಎಷ್ಟೇ ಕೊರತೆಗಳಿದ್ದರೂ ಸಹ, ಭಾರತಕ್ಕೆ ‘ನೋಬೆಲ್ ಬಹುಮಾನ’ವನ್ನು ಗಳಿಸಿಕೊಟ್ಟದ್ದು ಇದೇ ಭಾಷೆ. ಲಿಪಿಯ ಕೊರತೆಯು ಸಾಹಿತ್ಯದ ಕೊರತೆಯಲ್ಲ.

ಸಂಸ್ಕೃತ ಜ್ಞಾನವಿಲ್ಲದ ನಮ್ಮ ಪತ್ರಿಕಾಕಱ್ತರು ಕನ್ನಡದಲ್ಲಿ ಎಷ್ಟೆಲ್ಲ ತಪ್ಪುಗಳನ್ನು ಮಾಡುತ್ತಾರೆ ಎನ್ನುವುದು ಓದುಗರೆಲ್ಲರಿಗೆ ಬಂದಂತಹ ಅನುಭವವಾಗಿದೆ. ಒಂದು ಉದಾಹರಣೆಯನ್ನು ನೋಡೋಣ:
ದಿನಾಂಕ ೨-೧೧-೨೦೧೪ರಂದು ಪ್ರಕಟವಾದ ‘ಸಂಯುಕ್ತ ಕಱ್ನಾಟಕ’ ಪತ್ರಿಕೆಯಲ್ಲಿ ಲಿಖಿತವಾದ ಐದು ಕಾ*ಲಮ್ಮುಗಳ ಶೀಱ್ಷಿಕೆಯೊಂದು ಹೀಗಿದೆ:
‘ಗಡಿ ಸಮಸ್ಯೆ, ಜನಪ್ರತಿನಿಧಿಗಳಲ್ಲಿ ಇಚ್ಚಾಸಕ್ತಿ ಕೊರತೆ’
ಈ ಶೀಱ್ಷಿಕೆ ಹೀಗಿರಬೇಕಿತ್ತು:
‘ಗಡಿ ಸಮಸ್ಯೆ: ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಕೊರತೆ’
ಬಹುಶಃ ‘ಸಂಯುಕ್ತ ಕಱ್ನಾಟಕ’ದ ಪತ್ರಿಕಾವರದಿಗಾರರು ಅನಕ್ಷರಸ್ಥರಿರಬೇಕೆಂದು ನನಗೆ ಭಾಸವಾಗುತ್ತದೆ. ಇನ್ನು ಸಂಪಾದಕರು? ಇಂತಹ ವರದಿಯನ್ನು ತಿದ್ದಲು ತಿಳಿಯದ ಸಂಪಾದಕರನ್ನು ಅಕ್ಷರಜ್ಞಾನಿಗಳು ಎಂದು ಕರೆಯಬಹುದೆ? ಇಂತಹ ಪರಿಸ್ಥಿತಿಗೆ ಮೂಲ ಕಾರಣವೆಂದರೆ ನಮ್ಮ ಶಾಲೆಗಳಲ್ಲಿ ಸಂಸ್ಕೃತ ಬೋಧನೆಯನ್ನು ಅಲಕ್ಷಿಸುತ್ತಿರುವುದು.

ಸಂಸ್ಕೃತ ಹಾಗು ಭಾರತೀಯ ಭಾಷೆಗಳಿಗೆ (-ಉರ್ದು ಹಾಗು ಇಂಗ್ಲಿಶ್ ಹೊರತುಪಡಿಸಿ-) ಅನ್ಯೋನ್ಯ ಸಂಬಂಧವಿದೆ. ಸಂಸ್ಕೃತದ ಸದ್ಬಳಕೆಯ ಮೂಲಕ ಕನ್ನಡವನ್ನು ಇನ್ನಷ್ಟು ಬಲಪಡಿಸಬಹುದು. ಆ ಕಾಱ್ಯಕ್ಕಾಗಿ ನಾವು ಕಟಿಬದ್ಧರಾಗೋಣ.

Monday, April 6, 2015

ಶಾಸಕರ ಹೊಣೆಗಾರಿಕೆ



ರಾಹುಲ ಗಾಂಧಿಯವರು ಅಮೇಠಿ ಕ್ಷೇತ್ರದಿಂದ ಚುನಾಯಿತರಾದ ಶಾಸಕರು. ಆ ಕ್ಷೇತ್ರದ ಜನತೆಗೆ ಇವರು ಜವಾಬುದಾರರು ಹಾಗು ಲೋಕಸಭೆಯು ನಿಗದಿಪಡಿಸಿದ ಕರ್ತವ್ಯಗಳಿಗೆ ಇವರು ಬಾಧ್ಯಸ್ಥರು. ಆದರೆ ಇವರು ಇತ್ತೀಚೆಗೆ ‘ಕಾಣದಂತೆ ಮಾಯವಾದನೊ ಶಿವಾ’ ಎಂದು ಮಾಯವಾಗಿ ಬಿಟ್ಟಿದ್ದಾರೆ. ಇದು ಅಕ್ಷಮ್ಯ ಕರ್ತವ್ಯಚ್ಯುತಿ. ಲೋಕಸಭೆಯ ಸದಸ್ಯರಾಗಿ ಇವರು ವೇತನ, ಭತ್ತೆ ಹಾಗು ಇತರ ಅನೇಕ  ಹೆಚ್ಚುವರಿ ಸೌಲಭ್ಯಗಳನ್ನು ಪಡೆಯುತ್ತಾರೆ. ತಮ್ಮ ದೀರ್ಘಕಾಲೀನ ಅನುಪಸ್ಥಿತಿಯಲ್ಲಿ ಈ ‘ಸಂಪಾದನೆ’ಯನ್ನು ಅವರು ತ್ಯಾಗ ಮಾಡುತ್ತಾರೆಯೆ?

ಒಬ್ಬ ಚುನಾಯಿತ ಶಾಸಕನು ತನ್ನ ಸಂಪೂಱ್ಣ ಸಮಯವನ್ನು ತನ್ನ ಕರ್ತವ್ಯಗಳಿಗೆ ಮೀಸಲಿಡಬೇಕು. ಯಾಕೆಂದರೆ ಅವನು ‘ಅರೆಕಾಲೀನ ಶಾಸಕ’ನಲ್ಲ. ಅವರು ತಾವು ಗಳಿಸಿದ ಆಸ್ತಿಯ ಬಗೆಗೆ ಪಾರದಱ್ಶಕರಾಗಿದ್ದರೆ ಸಾಲದು; ತಮ್ಮ ಸಮಯವಿನಿಯೋಗದ ಬಗೆಗೂ ಅವರು ಪಾರದಱ್ಶಕರಾಗಿರಬೇಕು. ಆದರೆ ನಮ್ಮ ಅನೇಕ ಶಾಸಕರು ಶಾಸನಸಭೆಯ ಅವಧಿಯಲ್ಲಿ ಮಾತ್ರ ರಾಜಧಾನಿಯಲ್ಲಿ ಇರುತ್ತಾರೆ. ಉಳಿದ ಸಮಯದಲ್ಲಿ ಅವರು ಎಲ್ಲಿ ಇರುತ್ತಾರೆ, ಏನು ಮಾಡುತ್ತಾರೆ ಎನ್ನುವುದು ನಮಗಾರಿಗೂ ತಿಳಿದಿರುವುದಿಲ್ಲ. ಕೇವಲ ಆಕಸ್ಮಿಕವಾಗಿ ಅವರ ‘ಹಾಲಿ ವಸ್ತಿ’ ನಮಗೆ ತಿಳಿದು ಬಿಡುತ್ತದೆ. ಉದಾಹರಣೆಗೆ ನಮ್ಮ ಶಾಸಕರೊಬ್ಬರು ಕೆಲ ವಱ್ಷಗಳ ಹಿಂದೆ ವಿದೇಶಪ್ರಯಾಣ ಮಾಡಿದ್ದು ತಿಳಿದು ಬಂದ ಕಾರಣವೆಂದರೆ, ಆ ದೇಶದಲ್ಲಿ ಅವರು ಏನೋ ತೊಂದರೆಯನ್ನು ಎದುರಿಸಿ, ಸರಕಾರದ ನೆರವನ್ನು ಕೋರಿದ್ದು!

ನಮ್ಮ ಮುಖ್ಯ ಮಂತ್ರಿ ಒಬ್ಬರು ಒಮ್ಮೆ ಸಿಂಗಪೂರಕ್ಕೆ ತೆರಳುತ್ತಿದ್ದವರು, ತುಱ್ತು ಕಾರಣದಿಂದ ಪ್ರಯಾಣವನ್ನು ರದ್ದುಗೊಳಿಸಿ, ಬೆಂಗಳೂರು ವಿಮಾನನಿಲ್ದಾಣದಲ್ಲಿಯೇ ಮರಳಿದರು. ಸೂಟು, ಬೂಟು ಹಾಕಿಕೊಂಡು ಮಿರಮಿರ ಮಿಂಚುತ್ತ,ಅವರು ಯಾವುದೋ ಖಾಸಗಿ ಉದ್ದೇಶದಿಂದ ವಿದೇಶಪ್ರವಾಸ ಕೈಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಅದು ಆರಂಭದಲ್ಲಿಯೇ ಮೊಟಕುಗೊಂಡಿತು. ಆ ಸಮಾಚಾರವನ್ನು ಹಾಗು ಅವರ ಮರಳುತ್ತಿರುವ ಚಿತ್ರವನ್ನು ನೋಡಿರದಿದ್ದರೆ, ನಮಗೆ ಅಂದರೆ ಕಱ್ನಾಟಕದ ಪ್ರಜೆಗಳಿಗೆ ಈ ವಿಷಯ ತಿಳಿಯುತ್ತಲೇ ಇರಲಿಲ್ಲ.

ಶಾಸಕರ ಸಮಯದ ಮೇಲೆ ಕ್ಷೇತ್ರದ ಜನತೆಗೆ ಅನಿಱ್ಬಂಧಿತ ಹಕ್ಕು ಇದೆ. ಆದುದರಿಂದ ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಎನ್ನುವದನ್ನು ತಿಳಿಯುವುದು ಪ್ರಜೆಗಳ ಅಧಿಕಾರವಾಗಿದೆ. ಅವರ ಪ್ರಯಾಣವು ಸರಕಾರಿ ಉದ್ದೇಶದ ಪ್ರಯಾಣವೊ ಅಥವಾ ಖಾಸಗಿ ಉದ್ದೇಶದ ಪ್ರಯಾಣವೊ ಎನ್ನುವುದನ್ನು ಅವರು ಸ್ಪಷ್ಟ ಪಡಿಸಬೇಕು. ಖಾಸಗಿ ಉದ್ದೇಶದ ಪ್ರಯಾಣವಾಗಿದ್ದರೆ, ಶಾಸಕರು ಆ ಖರ್ಚನ್ನು ತಮ್ಮ ಸ್ವಂತ ಜೇಬಿನಿಂದ ನಿಭಾಯಿಸುತ್ತಿದ್ದಾರೊ ಅಥವಾ ಬೇರೊಬ್ಬರಿಂದ ಪ್ರಾಯೋಜಿತರಾಗುತ್ತಿದ್ದಾರೊ ಎನ್ನುವುದನ್ನು ಪ್ರಜೆಗಳಿಗೆ ತಿಳಿಸಬೇಕು. ಸ್ವಂತ ಖಱ್ಚಾದರೆ, ಅಷ್ಟು ಹಣವನ್ನುಅವರು ಖಱ್ಚು ಮಾಡಲು ಹೇಗೆ ಶಕ್ತರಾದರು ಎನ್ನುವುದನ್ನು ಜನತೆ ತಿಳಿಯಬೇಕು. ಒಂದು ವೇಳೆ, ಖಾಸಗಿ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ಪ್ರಾಯೋಜಿತ ಪ್ರವಾಸವಾಗಿದ್ದರೆ, ಇದರಲ್ಲಿ ಏನಾದರೂ ‘ಪರಸ್ಪರ ಲಾಭ’ವಿದೆಯೋ (quid pro quo) ಎನ್ನುವುದರ ತನಿಖೆಯಾಗಬೇಕು.

ರಾಹುಲ ಗಾಂಧಿಯವರು ತಮ್ಮ ಕ್ಷೇತ್ರವಾದ ಅಮೇಠಿಯಿಂದ ಹಾಗು ಲೋಕಸಭೆಯ ಕಲಾಪಗಳಿಂದ ದೀಱ್ಘಕಾಲದವರೆಗೆ ದೂರವಾಗಿ ಉಳಿದಿದ್ದಾರೆ. ಅವರ ಹೊಗಳುಭಟ್ಟರು ಈ ಅನುಪಸ್ಥಿತಿಗೆ ಅನೇಕ ಪ್ರಶಂಸನೀಯ ಕಾರಣಗಳನ್ನು (ಉದಾಹರಣೆಗೆ ಆತ್ಮಾವಲೋಕನ, ಜ್ಞಾನಾರ್ಜನೆ ಇತ್ಯಾದಿ) ಕೊಡುತ್ತಿದ್ದಾರೆ. ಆದರೆ ಜನತೆ ಇದನ್ನು ನಂಬುವುದೆ? ಸೋನಿಯಾರಿಗೆ ಆದಂತೆ ರಾಹುಲ ಗಾಂಧಿಯವರಿಗೂ ಏನಾದರೂ ರೋಗವಾಗಿದೆಯೆ, ಅಥವಾ ಅವರು ಕೇವಲ ವಿಶ್ರಾಂತಿಗಾಗಿ ‘ಯಾರಿಗೂ ಹೇಳೋಣ ಬ್ಯಾಡಾ’ ಎಂದು ಎಲ್ಲಾದರೂ ಜಿಗಿದಿದ್ದಾರೆಯೊ ಎನ್ನುವಂತಹ ಸಂಶಯಗಳು ಜನರ ಮನಸ್ಸಿನಲ್ಲಿ ಏಳುವುದು ಸ್ವಾಭಾವಿಕವಾಗಿದೆ. ಅಥವಾ ಅವರು ನಿಜವಾಗಿಯೂ ಬೋಧಿವೃಕ್ಷದ ಕೆಳಗೆ ತಪಸ್ಸು ಮಾಡಲು ತೆರಳಿದ್ದಾರೊ? ಈ ಪ್ರಹಸನವನ್ನು ನೋಡಿದಾಗ, ವರಕವಿ ಬೇಂದ್ರೆಯವರ ಸಾಲೊಂದು ನೆನಪಿಗೆ ಬರುತ್ತದೆ:
‘ಬುದ್ಧ—
ಜಗವೆಲ್ಲ ಮಲಗಿರಲು, ಇವನೊಬ್ಬ ಎದ್ದ!’
ಸಿದ್ಧಾರ್ಥನು ಬುದ್ಧನಾದಂತೆ, ಸಿದ್ಧಾರ್ಥನ ಮಗನ ಹೆಸರನ್ನು ಇಟ್ಟುಕೊಂಡ ರಾಹುಲರೂ ಸಹ ಪ್ರಬುದ್ಧರಾಗಲಿ ಎಂದು ಹಾರೈಸುತ್ತೇನೆ. ನಮ್ಮ ಎಲ್ಲ ಶಾಸಕರು ಸಂಪೂಱ್ಣವಾಗಿ ಪಾರದಱ್ಶಕರಾಗಲಿ ಹಾಗು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.