Showing posts with label ಸಾಹಿತ್ಯ/ವ್ಯಾಸ ದೇಶಪಾಂಡೆ. Show all posts
Showing posts with label ಸಾಹಿತ್ಯ/ವ್ಯಾಸ ದೇಶಪಾಂಡೆ. Show all posts

Monday, February 25, 2013

‘ಆಲಯವು ಬಯಲೊಳಗೊ’...ವ್ಯಾಸ ದೇಶಪಾಂಡೆಯವರ ಹೊಸ ನಾಟಕ


ಕನ್ನಡ ನಾಟಕಸಾಹಿತ್ಯದಲ್ಲಿ ಹೆಸರು ಮಾಡಿದ ಶ್ರೀ ವ್ಯಾಸ ದೇಶಪಾಂಡೆಯವರು ಈವರೆಗೆ ಐದು ನಾಟಕಗಳನ್ನು ರಚಿಸಿದ್ದಾರೆ. ಅವರ ಮೊದಲನೆಯ ನಾಟಕವಾದ ‘ಮುಂದೇನ ಸಖಿ ಮುಂದೇನ’ ಇದು ೧೯೭೪ರಲ್ಲಿ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಖ್ಯಾತ ರಂಗನಿರ್ದೇಶಕ ಶ್ರೀ ಬಿ.ವ್ಹಿ.ಕಾರಂತರು ಈ ನಾಟಕವನ್ನು ಮುಂಬಯಿಯ ರಂಗಭೂಮಿಯ ಮೇಲೆ ಪ್ರದರ್ಶಿಸಿದರು. ಕನ್ನಡದ ಪ್ರಾತಿನಿಧಿಕ ನಾಟಕಗಳ ಸಂಕಲನದಲ್ಲಿ ಅಡಕವಾದ ಈ ನಾಟಕವನ್ನು ಕನ್ನಡದ ಮೊದಲ ಫ್ಯಾಂಟಸಿ ನಾಟಕವೆಂದು ಭಾವಿಸಬಹುದು. ಅನಂತರ ಸಾಮಾಜಿಕ, ಐತಿಹಾಸಿಕ ಹಾಗು ಪೌರಾಣಿಕ ವಸ್ತುಗಳ ಮೂಲಕ ಮಾನವ ಸಮಸ್ಯೆಗಳನ್ನು ಚರ್ಚಿಸಿದ ಶ್ರೀ ವ್ಯಾಸ ದೇಶಪಾಂಡೆಯವರು ಇದೀಗ ‘ಆಲಯವು ಬಯಲೊಳಗೊ’ ನಾಟಕದ ಮೂಲಕ ಕನಕದಾಸರ ವ್ಯಕ್ತಿತ್ವವನ್ನು ಹಾಗು ಸಾಮಾಜಿಕ ಆಂದೋಲನದಲ್ಲಿ ಅವರ ಪಾತ್ರವನ್ನು ಶೋಧಿಸಲು ಪ್ರಯತ್ನಿಸಿದ್ದಾರೆ.ಜೊತೆಗೇ ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜವನ್ನು ಕಾಡುತ್ತಿರುವ ಒಂದು ಮೂಲಭೂತ ಸಮಸ್ಯೆಯಾದ ವರ್ಣಭೇದ ನೀತಿಯನ್ನು ಗುರುತಿಸಲು ಹಾಗು ಅದರ ಪರಿಹಾರವನ್ನು ಹುಡುಕಲೂ ಸಹ ಇಲ್ಲಿ ಪ್ರಯತ್ನಿಸಿದ್ದಾರೆ.

ನಾಟಕದ ಆಶಯ:
ಸನಾತನ ಸಂಪ್ರದಾಯದಲ್ಲಿ ರೂಡವಾದ ಜಾತಿಪದ್ಧತಿ ಹಾಗು ಮೇಲು, ಕೀಳುಗಳ ವಿರುದ್ಧ ಅನೇಕ ಜನಾಂದೋಲನಗಳು ಕರ್ನಾಟಕದಲ್ಲಿ ನಡೆದಿವೆ. ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳುವಳಿಯು ಕರ್ನಾಟಕದಲ್ಲಿ ನಡೆದ ಮಹತ್ವದ ಆಂದೋಲನವಾಗಿದೆ. ಹನ್ನೊಂದನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ರಾಮಾನುಜಾರ್ಯರ ನೇತೃತ್ವದಲ್ಲಿ ಪ್ರಾರಂಭವಾಗಿದ್ದ ಇಂತಹ ಸಂಚಲನೆ ಕರ್ನಾಟಕಕ್ಕೂ ಹರಡಿತ್ತು. ಹದಿಮೂರನೆಯ ಶತಮಾನದಲ್ಲಿ ವಿಜಯನಗರದ ಹರಿದಾಸಕೂಟದ ಪ್ರಮುಖ ಹರಿದಾಸರಲ್ಲಿ ಒಬ್ಬರಾದ ಕನಕದಾಸರು ಈ ಆಂದೋಲನವನ್ನು ಪುನಃ ಸಂಚಾಲಿಸಿದರು. ಆದರೆ ಕನಕದಾಸರು ತಮ್ಮ ಹರಿಭಕ್ತಿ ಹಾಗು ಮುಮುಕ್ಷತೆಗೆ ಹೆಸರಾದರೇ ವಿನಃ, ಅವರು ಸಂಚಾಲಿಸಿದ ಈ ಆಂದೋಲನವು ಜನಮಾನಸದ ವಿಸ್ಮರಣೆಗೆ ಹಾಗು ಇತಿಹಾಸದ ಅವಜ್ಞೆಗೆ ಒಳಗಾಯಿತು! ಈ ಜನಪರ ಆಂದೋಲನದಲ್ಲಿ ಕನಕದಾಸರ ಪಾತ್ರವೇನು, ಈ ಆಂದೋಲನದ ಯಶಸ್ಸು ಅಥವಾ ಅಪಯಶಸ್ಸಿನ ಪ್ರಮಾಣವೇನು, ಇದರ ಕಾರಣಗಳೇನು ಎನ್ನುವ ಸಂಗತಿಗಳು ಇತಿಹಾಸದ ಕಪ್ಪು ಕುಳಿಯಲ್ಲಿ ಹುದುಗಿ ಹೋಗಿವೆ. ಈ ಸಂಗತಿಗಳನ್ನು ಶೋಧಿಸಿ ಅರಿತುಕೊಳ್ಳುವುದೆಂದರೆ, ಕನಕದಾಸರ ವೈಯಕ್ತಿಕ, ಧಾರ್ಮಿಕ ಹಾಗು ಸಾಮಾಜಿಕ ಜೀವನವನ್ನು ಶೋಧಿಸಿ ಅರಿತುಕೊಂಡಂತೆ. ಆ ಶೋಧನೆಯನ್ನು ಎತ್ತಿಕೊಳ್ಳಲು ಐತಿಹಾಸಿಕ ಜ್ಞಾನ ಬೇಕು. ಅದರ ಜೊತೆಗೆ ತರ್ಕಶಕ್ತಿಯೊಡನೆಯೇ, ಕಲ್ಪನಾಶಕ್ತಿಯೂ ಬೇಕಾಗುತ್ತದೆ. ಪುಣ್ಯವಶಾತ್ ಶ್ರೀ ವ್ಯಾಸ ದೇಶಪಾಂಡೆಯವರು ಕನಕದಾಸರ ಬದುಕಿನ ವಿಸ್ತೃತವಾದ ಅಧ್ಯಯನವನ್ನು ಮಾಡಿದ್ದಾರೆ. ಕನಕದಾಸರ ಪದಗಳನ್ನು ಹಾಗು ಬದುಕಿನ ಘಟನೆಗಳನ್ನು ಆಧರಿಸಿ, ಕನಕದಾಸರ  ಬಹುಮುಖಿ, ಸಮಾಜಮುಖಿ ವ್ಯಕ್ತಿತ್ವವನ್ನು ಸಂಗ್ರಹಿಸಿದ್ದಾರೆ. ಸತ್ಯಕ್ಕೆ ಅಪಚಾರವಾಗದಂತೆ ಹಾಗು ವಾಸ್ತವ ಘಟನೆಗಳಿಗೆ ಹೊಂದಿಕೊಂಡಿರುವಂತೆ, ಆ ಕಾಲದಲ್ಲಿ ಜರುಗಿರಬಹುದಾದ ‘ನಾಟಕ’ವನ್ನು ನಮ್ಮ ಎದುರಿಗೆ ನಿಲ್ಲಿಸಿದ್ದಾರೆ. ಇಷ್ಟೇ ಆದರೆ, ಈ ನಾಟಕಕ್ಕೆ ಮಹತ್ವವಿರುತ್ತಿರಲಿಲ್ಲ. ಈ ನಾಟಕವು ಜನಸಾಮಾನ್ಯರ ಹಾಗು ಶಿಷ್ಟವರ್ಗದವರ ಬದುಕಿನ ವಿರೋಧಾಭಾಸಗಳನ್ನು, ಅವರ ನಂಬುಗೆ ಹಾಗು ಅಪನಂಬಿಕೆಗಳನ್ನು, ಅಲ್ಲದೆ ಧರ್ಮ ಹಾಗು ರಾಜಕಾರಣದ ವಿಚಿತ್ರ ಅವಲಂಬನೆಗಳನ್ನು ಪುನರ್ನಿರ್ಮಿಸುವುದರಲ್ಲಿ ಸಫಲವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಬದುಕನ್ನು ಸಾರ್ಥಕಗೊಳಿಸುವ ಧರ್ಮ ಯಾವುದು ಎನ್ನುವುದನ್ನು ಹಾಗು ಸಾಮಾನ್ಯ ಮಾನವರ  ಆಶೋತ್ತರಗಳು ಏನು ಎನ್ನುವುದನ್ನು ಈ ನಾಟಕವು ಬಿಂಬಿಸುತ್ತದೆ. ಇದೇ ಕನಕದಾಸರ ಆಶಯವಾಗಿದೆ. ಇದೇ ಈ ನಾಟಕದ ಆಶಯವೂ ಆಗಿದೆ.    

ಸಾಹಿತ್ಯ ವಿವೇಚನೆ:
ನಾಟಕವು ಮೂಲತಃ ರಂಗಮಾಧ್ಯಮ. ಆದರೆ ಇದು ಸಾಹಿತ್ಯಪ್ರಕಾರವೂ ಹೌದು. ರಂಗತಂತ್ರದಲ್ಲಿ ಪರಿಪೂರ್ಣವಾದ ನಾಟಕವು ಸಾಹಿತ್ಯಕವಾಗಿ ಸೊರಗಿದರೆ, ಆತ್ಮವಿಲ್ಲದ ಪ್ರಮಾಣಬದ್ಧವಾದ ಶರೀರದಂತಾಗುತ್ತದೆ. ಒಳ್ಳೆಯ ಸಾಹಿತ್ಯವಿದ್ದು ರಂಗತಂತ್ರವು ಸಮಂಜಸವಾಗಿರದಿದ್ದರೆ, ನಾಟಕವು ಶರೀರವಿಲ್ಲದ ಆತ್ಮವಾಗುತ್ತದೆ. ಆದುದರಿಂದ ಯಾವುದೇ ನಾಟಕಕ್ಕೂ ಸಮುಚಿತ ಸಾಹಿತ್ಯ ಹಾಗು ಸಮರ್ಪಕ ರಂಗತಂತ್ರಗಳು ಅವಶ್ಯಕವಾಗಿವೆ. ಆ ದೃಷ್ಟಿಯಿಂದ ಈ ನಾಟಕದ ಸಾಹಿತ್ಯವನ್ನು ಮೊದಲು ಸಮೀಕ್ಷಿಸೋಣ.

ಸನಾತನ ಸಂಪ್ರದಾಯದ ವಿರುದ್ಧ ಕರ್ನಾಟಕದಲ್ಲಿ ನಡೆದ ಆಂದೋಲನಗಳು ಅನೇಕ ಏಳುಬೀಳುಗಳನ್ನು ಕಂಡವು. ಕನಕದಾಸರ ಕಾಲದಲ್ಲಿ ಸನಾತನ ಧರ್ಮವು ಭದ್ರವಾಗಿ ತಳವೂರಿತ್ತು. ಆದರೂ ಸಹ ಪರಧರ್ಮದ ಆಕ್ರಮಣದ ಹೆದರಿಕೆಯಲ್ಲಿಯೇ ಇದು ಬದುಕಿತ್ತು. ಇಂತಹ ಸಂದರ್ಭದಲ್ಲಿ ಕನಕದಾಸರು ತಮ್ಮ ವ್ಯಕ್ತಿತ್ವದ ಬಲದಿಂದಲೇ ವ್ಯಾಸರಾಯರ ಶಿಷ್ಯತ್ವವನ್ನು ಪಡೆದರು. ಹರಿಭಕ್ತಿಯನ್ನು ಸಾರುವುದರ ಜೊತೆಗೇ, ಜನಸಾಮಾನ್ಯರಲ್ಲಿ ನೆಲೆಯೂರಿದ್ದ ಮೂಢರೂಢಿಗಳನ್ನು ನಿರ್ಮೂಲಗೊಳಿಸಲು ಪ್ರಯತ್ನಪಟ್ಟರು. ಜೊತೆಜೊತೆಗೇ ವರ್ಣಭೇದನೀತಿಯ ವಿರುದ್ಧ ಹೋರಾಡಿದರು. ಈ ಹೋರಾಟಕ್ಕೆ ಜನಸಾಮಾನ್ಯರಿಂದ ದೊರೆತ ಬೆಂಬಲವೇನು, ಸನಾತನಿಗಳ ವಿರೋಧವೇನು, ಈ ಇಬ್ಬಂದಿಯಲ್ಲಿ ನಾಡಪ್ರಭುತ್ವವು ಯಾರ ಪಕ್ಷವನ್ನು ವಹಿಸಿತು, ಸನಾತನವಿರೋಧಿ ಹೋರಾಟದ ಯಶಸ್ಸು ಯಾವ ಪ್ರಮಾಣದ್ದು ಎನ್ನುವ ಎಲ್ಲ ಸಂಗತಿಗಳನ್ನು ಒಂದು ಸಮಯಸೀಮಿತ ಚೌಕಟ್ಟಿನಲ್ಲಿ ಕೂಡಿಸಲು ಸಂಕೀರ್ಣವಾದ ನಾಟಕರಚನೆಯ ಅವಶ್ಯಕತೆ ಇದೆ.

ಈ ಸಮಸ್ಯೆಗಳನ್ನು ಪರಿಹರಿಸಲು ಲೇಖಕರು ಎತ್ತಿಕೊಂಡ ಸಾಹಿತ್ಯಕ ವಿಧಾನ ಹೀಗಿದೆ:
ನಾಟಕ ಪ್ರಾರಂಭವಾಗುವುದೇ ವರ್ತಮಾನ ಕಾಲದಲ್ಲಿ ಜರಗುವ ಒಂದು ತಿಕ್ಕಾಟದೊಂದಿಗೆ. ಕನಕದಾಸರು ವಿರಚಿಸಿದ ‘ರಾಮಧಾನ್ಯ’ ಕಾವ್ಯದ ಪಾತ್ರಗಳ ಅಂದರೆ ಅಕ್ಕಿ ಹಾಗು ರಾಗಿಗಳ ಮೇಲಾಟವನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಪೈರುಗಳು ಪ್ರಸಕ್ತ ಕಾಲದಲ್ಲಿ ಪ್ರೇಕ್ಷಕರ ಎದುರಿನಲ್ಲಿ ರಂಗಭೂಮಿಯ ಮೇಲೆ ಪ್ರತ್ಯಕ್ಷರಾಗಿ, ತಮ್ಮ ಆಟವನ್ನು ಪ್ರದರ್ಶಿಸುತ್ತವೆ. ಅಲ್ಲಿಂದ ಕಾಲವು ಐದುನೂರು ವರ್ಷಗಳಷ್ಟು ಹಿಂದಕ್ಕೆ ಜಾರುತ್ತದೆ. ಕನಕದಾಸರು ಈ ಬಯಲಾಟವನ್ನು ಸಾರ್ವಜನಿಕರ ಎದುರಿಗೆ ಆಡಿಸುತ್ತಿದ್ದಾರೆ. ಆಟದ ಸಮಯದಲ್ಲಿ ನೋಡಲು ಬಂದ ಗೊಲ್ಲರು ಉಡುಪಿಯ ಪರಿಶೆಯಲ್ಲಿ ತಮಗೆ ನಿರಾಕರಿಸಲಾಗುತ್ತಿರುವ ಕೃಷ್ಣದರ್ಶನದ ಬಗೆಗೆ ತಮ್ಮ ವ್ಯಥೆಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿಂದ ಪ್ರಾರಂಭವಾಗುತ್ತದೆ ಒಂದು ಶಕ್ತಿಯುತವಾದ ಜನಾಂದೋಲನ. ಕನಕದಾಸರೇ ಈ ಆಂದೋಲನಕ್ಕೆ ಪಥದರ್ಶಕರು. ದಾಸೂರಿನಿಂದ ಉಡುಪಿಯ ಕಡೆಗೆ ಕನಕದಾಸರು ಹಾಗು ಅವರ ಶಿಷ್ಯರು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ದಾರಿಯಲ್ಲಿರುವ ಹಳ್ಳಿಗಳಲ್ಲಿ ಇವರ ಮೇಳದಿಂದ ಆಟಗಳು ಜರಗುತ್ತಿರುತ್ತವೆ. ಈ ಆಟಗಳ ಮೂಲಕ ಕನಕದಾಸರು ತಮ್ಮ ಹೋರಾಟದ ಬಗೆಗೆ ಹೇಳುವುದಲ್ಲದೆ, ಮೂಢರೂಢಿಗಳ ವಿರುದ್ಧವೂ ಸಹ ಜಾಗೃತಿಯನ್ನು ಉಂಟು ಮಾಡುತ್ತಿರುತ್ತಾರೆ.

ಸನಾತನ ಸಂಪ್ರದಾಯವನ್ನು ಅನೂಚಾನವಾಗಿ ಮುಂದುವರಿಸಬೇಕೆನ್ನುವ ಮಠಾಧಿಪತಿಗಳು ಈ ಆಂದೋಲನದ ಕಡು ವಿರೋಧಿಗಳು. ಅವರ ಸಭೆಯನ್ನು ಎರಡನೆಯ ದೃಶ್ಯದಲ್ಲಿ ತೋರಿಸಲಾಗಿದೆ. ಮೊದಲ ದೃಶ್ಯದ ಜನಸಾಮಾನ್ಯರ ಉಡುಪು-ತೊಡಪು ಹಾಗು ಆಡುಮಾತಿನ ಧಾಟಿಗೆ ವಿರುದ್ಧವಾಗಿ, ಇಲ್ಲಿಯ ಶಿಷ್ಟರ ಆಡಂಬರದ ವೇಷಭೂಷಣಗಳು ಹಾಗು ಸಂಸ್ಕೃತಮಯ ಭಾಷಾಶೈಲಿ ಎದ್ದು ಕಾಣುತ್ತವೆ. ‘ಕನಕನ ಕಿಡಿಗೇಡಿತನ’ವನ್ನು ಹೇಗೆ ತೊಡೆದು ಹಾಕಬೇಕು ಎನ್ನುವುದೇ ಇವರ ಚರ್ಚೆಯ ವಿಷಯ. ಪ್ರಭುತ್ವವು ಸನಾತನ ಸಂಪ್ರದಾಯದ ಪರವಾಗಿಯೇ ಇರುತ್ತದೆ ಎನ್ನುವುದು ಇವರ ಅಚಲ ನಂಬುಗೆ. ಆದುದರಿಂದ ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ, ರಾಜಗುರುಗಳಾದ ವ್ಯಾಸರಾಯರ ಮೂಲಕ ವಿಜಯನಗರದ ಪ್ರಭುಗಳಿಗೆ ಬಿನ್ನಹ ಸಲ್ಲಿಸಲು ಇವರು ಯೋಚಿಸುತ್ತಾರೆ. ಆದರೆ ವ್ಯಾಸರಾಯರದು ಹೆಚ್ಚು ಉದಾರವಾದಿ ಭೂಮಿಕೆ. ಅವರು ಮಠಾಧಿಪತಿಗಳ ಮನಸ್ಸನ್ನೇ ಬದಲಿಸಲು ಪ್ರಯತ್ನಿಸುತ್ತಾರೆ. ಕೊನೆಗೆ ಈ ಮಠಾಧಿಪತಿಗಳ ವಕ್ತಾರರೊಬ್ಬರು ಬನವಾಸಿಯ ಹತ್ತಿರದಲ್ಲಿದ್ದ ವಿಜಯನಗರದ ಪ್ರಭು ಕೃಷ್ಣದೇವರಾಯರನ್ನು ಕಾಣಲು ತೆರಳುತ್ತಾರೆ. ಪ್ರಭುಗಳನ್ನು ಕಂಡು ತಿರುಗಿ ಬರುವಾಗ ಕಾಡಾನೆಯ ಕೈಯಲ್ಲಿ ಸಿಲುಕಿ ಬವಣೆಗೊಳಗಾದ ಇವರನ್ನು ರಕ್ಷಿಸಿದವರು ಕನಕದಾಸರೇ! ಕನಕದಾಸರ ಮಾನವೀಯತೆಯು ಈ ಕೇಶವತೀರ್ಥರ ಮನಃಪರಿವರ್ತನೆಯನ್ನು ಮಾಡುವುದು ನಾಟಕದ ಒಂದು ಅರ್ಥಪೂರ್ಣ ಅಂಗವಾಗಿದೆ.

ಈ ಮಧ್ಯದಲ್ಲಿ ಬೇಟೆಯಾಡಲು ಬಂದಂತಹ ವಿಜಯನಗರದ ಅರಸು ಕೃಷ್ಣದೇವರಾಯನನ್ನು ಕನಕದಾಸರು ಕಾಡಿನಲ್ಲಿ ನೋಡುತ್ತಾರೆ. ಆದರೆ, ಅವನೇ ಅರಸನೆಂಬುದು ಕನಕದಾಸರಿಗೆ ತಿಳಿಯದು. ಕನಕದಾಸರ ಆಹ್ವಾನದ ಮೇರೆಗೆ ಕೃಷ್ಣದೇವರಾಯನು ಬೇಟೆಗಾರನ ವೇಷದಲ್ಲಿಯೇ ಹೋಗಿ, ಅವರು ಆಡುತ್ತಿರುವ ಆಟವನ್ನು ನೋಡುತ್ತಾನೆ. ಕನಕದಾಸರ ಆಂದೋಲನದ ನೈಜತೆಯು ಹಾಗು ಅವರಿಗಿರುವ ಸಾಮಾನ್ಯ ಜನರ ಬೆಂಬಲವು ಅವನಿಗೆ ಅಲ್ಲಿಯೇ ಅರಿವಾಗುತ್ತದೆ. ಆದರೆ ನಾಡಪ್ರಭುವಾಗಿ ಆತನು ಸಮಸ್ಯೆಯನ್ನು ಪರಿಹರಿಸುವುದು ಹೇಗೆ? ರಾಜಗುರುಗಳಾಗಿ ಹಾಗು ಕನಕದಾಸರ ಗುರುಗಳೂ ಆಗಿ ವ್ಯಾಸರಾಯರು ಇಲ್ಲಿ ಯಾವ ಪಾತ್ರವನ್ನು ವಹಿಸಿರಬಹುದು?

ಇದು ಬಹುಮಟ್ಟಿಗೆ ಕಾಲ್ಪನಿಕ ನಾಟಕ. ಕನಕದಾಸರು ವರ್ಣಭೇದದ ವಿರುದ್ಧ ಹೋರಾಡಿದ್ದು ನಿಜ. ಸಮಾಜದಲ್ಲಿಯ ಕೆಳವರ್ಗಗಳನ್ನು ಒಂದುಗೂಡಿಸಿ, ಅವರಿಗೆ ಸ್ವಾಭಿಮಾನವನ್ನು ಕಲಿಸಲು ಯತ್ನಿಸಿದ್ದು ನಿಜ. ಸಮಾಜದಲ್ಲಿ ನೆಲೆಯೂರಿದ್ದ ಮೂಢರೂಢಿಗಳನ್ನು ತೊಳೆಯಲು ಯತ್ನಿಸಿದ್ದು ನಿಜ. ಉಡುಪಿಗೆ ಹೋಗಿ ಕೃಷ್ಣದರ್ಶನ ಪಡೆಯಲು ಯತ್ನಿಸಿದ್ದು ನಿಜ. ಕನಕದಾಸರು ಒಂಟಿಯಾಗಿ ಅಥವಾ ತಮ್ಮ ಶಿಷ್ಯರ ಜೊತೆಗೆ ಗುಡಿಯಲ್ಲಿ ಪ್ರವೇಶ ಪಡೆದರೆ? ಅಥವಾ ಗೋಡೆಯಲ್ಲಿ ಕಿಂಡಿಯಾಗುವ ಮೂಲಕ ಕೃಷ್ಣವಿಗ್ರಹವೇ ಕನಕದಾಸರಿಗೆ ದರ್ಶನ ಕೊಟ್ಟಿತೆ? ಈ ಪ್ರಶ್ನೆಗಳಿಗೆ ಸಾಧಾರ ಉತ್ತರವಿಲ್ಲ. ಆದುದರಿಂದ ಈ ನಾಟಕವು ವಾಸ್ತವತೆಗಿಂತ ಹೆಚ್ಚಾಗಿ, ಸಾಮಾಜಿಕ ಆಶೋತ್ತರಗಳ ಪ್ರತೀಕವಾಗಿ ಮೂಡಿ ಬಂದಿದೆ. ಇದನ್ನು ನಾವು ಸಾಹಿತ್ಯಕ ಸತ್ಯ ಎಂದು ಕರೆಯಬಹುದು!

ಈ ಎಲ್ಲ ಕಲ್ಪನಾರಚನೆಯಲ್ಲಿ ವಾಸ್ತವಕ್ಕೆ ಅತಿ ಹತ್ತಿರವಾಗಿ ನಿಲ್ಲುವುದು ಕನಕದಾಸರ ವ್ಯಕ್ತಿತ್ವ. ದಾಸೂರಿನಿಂದ ಉಡುಪಿಯವರೆಗಿನ ವಿವಿಧ ಘಟನಾವಳಿಗಳಲ್ಲಿ ಕನಕದಾಸರ ವ್ಯಕ್ತಿತ್ವವನ್ನು ಹಂತಾನುಹಂತವಾಗಿ ಕಟ್ಟಿಕೊಡಲಾಗಿದೆ. ಸಾಮಾಜಿಕ ಉದ್ದೇಶಕ್ಕಾಗಿ ಅವರು ತೊಡುವ ಸಾತ್ವಿಕ ಹಟವನ್ನು ಮೊದಲ ದೃಶ್ಯದಲ್ಲಿಯೇ ತೋರಿಸಲಾಗಿದೆ. ತಮ್ಮ ಜೊತೆಗಾರರಿಗೆ ಅವರು ಹೇಳುವುದು ಹೀಗೆ:

.....ತುಂಗಭದ್ರಾ ತಟದಿಂದ ಪಶ್ಚಿಮ ಸಮುದ್ರದವರೆಗೆ ನಮ್ಮ ಕಾಲುಗಳ ಮೇಲೆ ನಾವು ನಡಿಯೋಣ. ಉಡುಪಿಯ
ಕೃಷ್ಣಮಂದಿರದೊಳಗೆ ಪ್ರವೇಶಿಸಿ ಶ್ರೀಕೃಷ್ಣಮೂರ್ತಿಯ ದರ್ಶನ ಪಡೆಯೋಣ. ದರ್ಶನ ಕೊಡುವವರೆಗೂ ಮಂದಿರದ ಬಾಗಿಲಿನಲ್ಲಿ ನಾನು ಅನ್ನ, ನೀರು ಬಿಟ್ಟು ಕೃಷ್ಣ-ಕೃಷ್ಣ ಜಪಿಸುತ್ತ ನಿಂತುಕೊಳ್ಳುತ್ತೇನೆ.

ಈ ಸಾತ್ವಿಕ ಹಟವನ್ನು ಕೃಷ್ಣದೇವರಾಯರ ಗುರುಗಳಾದ ವ್ಯಾಸರಾಯರೂ ಅರಿತಿದ್ದಾರೆ. ಹಟಮಾರಿ ಎಂದರೆ ಹಟಮಾರಿ ನನ್ನ ಶಿಷ್ಯ. ಈ ಗುಣದಿಂದಲೇ ನನ್ನ ಹೃದಯ ಗೆದ್ದು ಬಿಟ್ಟಿದ್ದಾನೆ. ಎಂದು ತಮ್ಮಲ್ಲಿಯೇ ಅಂದುಕೊಳ್ಳುವ ವ್ಯಾಸರಾಯರು, ಈ ಮಾತಿನ ಮೂಲಕ ಕನಕದಾಸರ ಗುಣವನ್ನು ತೋರಿಸುವದಲ್ಲದೇ, ತಮ್ಮ ಗುಣಗ್ರಾಹೀ ಸ್ವಭಾವವನ್ನೂ ತೋರಿಸುತ್ತಾರೆ.

ಕನಕದಾಸರು ತಮ್ಮ ಯಾತ್ರಾಸಂದರ್ಭದಲ್ಲಿ ಕಾಡಿನಲ್ಲಿ ಸಂಚರಿಸುವ ದೃಶ್ಯವಂತೂ ಒಂದು ಮಹತ್ವದ ದೃಶ್ಯವಾಗಿದೆ. ತಮ್ಮ ಸರ್ವಸ್ನೇಹಿ ಭಾವದಿಂದ ಕನಕದಾಸರು ಕೇಶವತೀರ್ಥರ ಮನಸ್ಸನ್ನು ಗೆಲ್ಲುವ ದೃಶ್ಯವಿದು. ಇದೇ ದೃಶ್ಯದಲ್ಲಿಯೇ, ಕನಕದಾಸರು ಮೂಢನಂಬಿಕೆಗಳ ವಿರುದ್ಧ ಹಾಗು ಕ್ಷುದ್ರ ಆರಾಧನೆಗಳ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಘಟನೆಗಳಿವೆ.

ಕನಕಯಾತ್ರೆಯ ಮಧ್ಯದಲ್ಲಿ ಬರುವ ಆರನೆಯ ದೃಶ್ಯವು ಒಂದು ಅತ್ಯಂತ ಮಹತ್ವದ ದೃಶ್ಯ. ಸೋಂದಾ ಮಠಾಧೀಶರಾದ ವಾದಿರಾಜರು ರಚಿಸಿದ ಒಂದು ಕವನವನ್ನು ಬಳಸಿಕೊಂಡು, ಈ ದೃಶ್ಯವನ್ನು ಕಲ್ಪಿಸಲಾಗಿದೆ. ತಮ್ಮ ಯಾತ್ರಾಸಂದರ್ಭದಲ್ಲಿ ಕನಕದಾಸರು ವಿವಿಧ ಹಳ್ಳಿಗಳಲ್ಲಿ ಆಡುತ್ತಿರುವ ಆಟಗಳಲ್ಲಿ ಈ ದೃಶ್ಯದಲ್ಲಿರುವ ಆಟವೂ ಒಂದಾಗಿದೆ. ಬ್ರಾಹ್ಮಣವರ್ಗದ ಜಟಿಲ, ಕಪಟ ಆಚಾರಕ್ಕಿಂತ ಸರಳವಾದ ಪ್ರೇಮಭಾವನೆಯೇ ಭಗವಂತನಿಗೆ ಪ್ರಿಯವಾದದ್ದು ಎನ್ನುವುದನ್ನು ರೂಪಿಸುವ ವಾದಿರಾಜರ ಪದ್ಯವೇ ಇಲ್ಲಿ ಕನಕದಾಸರ ‘ಆಟ’ವಾಗಿ ಮೂಡಿದೆ. ಆದರೆ ಈ ಪ್ರಸಂಗವನ್ನು ಇಲ್ಲಿಗೇ ಮುಗಿಸದೆ, ಪುರೋಹಿತಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ ಭಗವಂತನಿಗೇ ಹೇಗೆ ‘ಟೋಪಿ’ ಹಾಕಬಹುದು ಎನ್ನುವುದು ಈ ಪ್ರಸಂಗದ ಮುಂದುವರಿದ ಭಾಗವಾಗಿದೆ.

ಕೊನೆಯ ದೃಶ್ಯವನ್ನು ಲೇಖಕರು ಅದ್ಭುತವಾದ ಕಲ್ಪನಾಕುಶಲತೆಯಿಂದ ನಿರ್ವಹಿಸಿದ್ದಾರೆ. ಕೃಷ್ಣಮಂದಿರದ ಒಳಗೆ ಯುದ್ಧಸನ್ನದ್ಧ(!)ರಾಗಿ ನಿಂತ ಪುರೋಹಿತವರ್ಗ, ಹೊರಗೆ ಅಸಂಖ್ಯ ಜನಸಾಗರ. ‘ಸಂಪ್ರದಾಯ ಸೋಲಲೊಪ್ಪುವದಿಲ್ಲ, ಬಂಡಾಯ ಬಾಗಲೊಪ್ಪುವದಿಲ್ಲ’ ಎನ್ನುವಂತಹ ಪರಿಸ್ಥಿತಿ. ಕನಕದಾಸರಿಗೆ ಹಾಗು ಅವರ ಸಹವರ್ತಿಯಾದ ಅಪಾರ ಜನಸ್ತೋಮಕ್ಕೆ ಆಲಯದ ಹೊರಗಿನ ಬಯಲೇ ಮಹಾಆಲಯವಾಗಿ ಪರಿವರ್ತಿತವಾಗಿದೆ. ಈ ಸಂದರ್ಭದಲ್ಲಿ ಕೃಷ್ಣದೇವರಾಯರ ರಾಜಕೀಯ ಮುತ್ಸದ್ದಿತನ, ಗುರು ವ್ಯಾಸರಾಯರ ವಿವೇಕಮಾರ್ಗ ಹಾಗು ಕನಕದಾಸರ ಸಹನೆ ಇವೇ ಸರ್ವೋಚಿತ ಪರಿಹಾರವನ್ನು ಕಂಡುಕೊಳ್ಳಲು ಸಹಾಯಕವಾಗುತ್ತವೆ. ಆದರೆ ಇದು ಒಂದು ಕಲ್ಪಿತ ನಾಟಕದ ಒಂದು ಕಲ್ಪಿತ ಅಂತ. ಸಮಸ್ಯೆಯು ಸುಖಾಂತ ಪರಿಹಾರವನ್ನು ಕಾಣಲಿ ಎನ್ನುವ ಆಶಯ ಅಷ್ಟೇ!

ಸಾಹಿತ್ಯಕವಾಗಿ ಇನ್ನೆರಡು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ ಕನಕದಾಸರ ‘ರಾಮಧಾನ್ಯ’ ಕಾವ್ಯದ ಪಾತ್ರಗಳೇ ಇಲ್ಲಿಯೂ ಸಹ ವೇಷಧಾರಿಗಳಾಗಿ ರಂಗದ ಮೇಲೆ ನಿಂತಿರುವುದು. ಕನಕದಾಸರ ಅಂತರಂಗದ ಆಶಯವನ್ನು ಪ್ರೇಕ್ಷಕರ ಎದುರಿಗೆ ಇಡಲು ಇದೊಂದು ಉತ್ತಮ ಸಾಧನವಾಗಿದೆ. ಎರಡನೆಯದಾಗಿ ನಾಟಕದ ಶೀರ್ಷಿಕೆ. ‘ಆಲಯವು ಬಯಲೊಳಗೊ’ ಎನ್ನುವ ನಾಟಕಶೀರ್ಷಿಕೆಯನ್ನು ಲೇಖಕರು ಕನಕದಾಸರ ಕೀರ್ತನೆಯೊಂದರಿಂದಲೇ ಎತ್ತಿಕೊಂಡಿದ್ದಾರೆ. ಕನಕದಾಸರು ಒಂದು ತಾತ್ವಿಕ ಹಿನ್ನೆಲೆಯಲ್ಲಿ ಈ ಮುಂಡಿಗೆಯನ್ನು ರಚಿಸಿದ್ದಾರೆ. ಆದರೆ ನಾಟಕದಲ್ಲಿ ಈ ಶೀರ್ಷಿಕೆಯನ್ನು ಒಂದು ಸಾಮಾಜಿಕ ಪ್ರಶ್ನೆಯ ಸಂಕೇತವನ್ನಾಗಿ ಬಳಸಲಾಗಿದೆ. ಆಲಯವು ಧಾರ್ಮಿಕ ವ್ಯವಸ್ಥೆಯ ಸಂಕೇತವಾಗಿ ಹಾಗು ಬಯಲು ಇದು ಜನಸಾಮಾನ್ಯರ ಪ್ರತೀಕವಾಗಿ ಇಲ್ಲಿ ನಿಂದಿವೆ.

ರಂಗಸಮೀಕ್ಷೆ:
ಸಾಧಾರಣವಾಗಿ ಕಥೆ, ಕಾದಂಬರಿ ಹಾಗು ನಾಟಕಗಳನ್ನು ಕಾಲಾನುಸಾರಿ ಸರಳರೇಖೆಯಲ್ಲಿ ರಚಿಸಲಾಗುತ್ತದೆ. ಕೆಲವೊಂದು ಕಾದಂಬರಿಗಳಲ್ಲಿ ಹಾಗು ಚಲನಚಿತ್ರಗಳಲ್ಲಿ ಫ್ಲ್ಯಾಶ್‍ಬ್ಯಾಕ್ ತಂತ್ರದ ಬಳಕೆಯನ್ನು ನೋಡಬಹುದು. ಈ ನಾಟಕದಲ್ಲಿ ಮೊದಲ ದೃಶ್ಯದಲ್ಲಿ ಬರುವ ‘ಪೈರುಗಳು’ ವರ್ತಮಾನ ಕಾಲದ ಪಾತ್ರಗಳು. ಐದು ಶತಮಾನಗಳ ಹಿಂದಿನ ಕತೆಯೊಂದನ್ನು ಹೇಳಲು ರಂಗದ ಮೇಲೆ ನಿಂತಂತಹ ಪಾತ್ರಗಳು. ಇವೇ ಪಾತ್ರಗಳು ನಾಟಕ ಮುಂದುವರಿದಂತೆ ನಾಟಕದ ಪಾತ್ರಗಳೂ ಆಗುವುದು ಇಲ್ಲಿಯ ವೈಶಿಷ್ಟ್ಯವಾಗಿದೆ. ಪ್ರತಿ ದೃಶ್ಯದ ಮೊದಲಲ್ಲಿ, ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಈ ಪೈರುಗಳು ದೃಶ್ಯದ ಆಶಯವನ್ನು ತಮ್ಮ ಕೋರಸ್ ಮೂಲಕ ವ್ಯಕ್ತಪಡಿಸುವುದು ಮತ್ತು ಅಲ್ಲಲ್ಲಿ ವಿವರಣೆ ನೀಡುವುದು ಪ್ರೇಕ್ಷಕನ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಈ ಕೋರಸ್ ಹಾಡುಗಳು ಸಹಸಾ ಕನಕದಾಸರ ಭಜನೆಗಳೇ ಆಗಿವೆ. ಆದುದರಿಂದ ಆ ಭಜನೆಗಳು ಕನಕದಾಸರ ವೈಯಕ್ತಿಕ ಪ್ರಾರ್ಥನೆಯಂತೆ ತೋರದೆ, ಜನತೆಯ ಒಡಲ ಒರಲಿನಂತೆ ಭಾಸವಾಗುತ್ತವೆ. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎನ್ನುವ ಕನಕದಾಸರ ಗೀತೆಯನ್ನು ಮೂರು ಭಾಗಗಳನ್ನಾಗಿ ವಿಭಜಿಸಿ ಮೂರು ಭಿನ್ನ ದೃಶ್ಯಗಳಲ್ಲಿ ಬಳಸಿದ್ದನ್ನು ಇದರ ನಿದರ್ಶನವನ್ನಾಗಿ ನೋಡಬಹುದು. ನಾಟಕದ ಆಶಯವನ್ನು ಪುನಃ ಪುನಃ ಆವರ್ತಿಸುವ ಕಾರ್ಯಕ್ಕಾಗಿ (motif) ಪ್ರತಿ ದೃಶ್ಯದಲ್ಲಿಯೂ ಈ ಪೈರುಗಳನ್ನು ಬಳಸಲಾಗಿದೆ. ಈ ನಾಟಕದಲ್ಲಿ ಇದೊಂದು ಅತ್ಯಂತ ಉಪಯುಕ್ತ ಹಾಗು ಯಶಸ್ವಿ ರಂಗತಂತ್ರವಾಗಿದೆ.  ಪೈರುಗಳ ಪಾತ್ರಗಳನ್ನು ಚಿಕ್ಕ ಮಕ್ಕಳೇ ಆಡುವುದರಿಂದ ಹಾಗು ವರ್ತಮಾನ ಮತ್ತು ಐತಿಹಾಸಿಕ ಕಾಲಗಳೆರಡರಲ್ಲೂ ಪೈರುಗಳು ಕಾಣಿಸಿಕೊಳ್ಳುವುದರಿಂದ, ಈ ಪಾತ್ರಗಳು ನಾಟಕದಲ್ಲಿಯ ಚಾರಿತ್ರಿಕ ಪಾತ್ರಗಳಿಗಿಂತ ಭಿನ್ನವಾಗಿ ಕಾಣುತ್ತ, ನಾಟಕದ ಕಾಲವನ್ನು ಮೀರಿದ ಸಾರ್ವಕಾಲಿಕತೆಯನ್ನು ಮೈಗೂಡಿಸಿಕೊಳ್ಳುತ್ತವೆ.

ಕನಕದಾಸರ ಆಂದೋಲನದ ಐದು ಶತಮಾನಗಳ ನಂತರ ಮಹಾತ್ಮಾ ಗಾಂಧಿಯವರ ಸಾಮಾಜಿಕ ಹಾಗು ರಾಜಕೀಯ ಚಳುವಳಿಗಳು ನಡೆದವು. ಎರಡೂ ಆಂದೋಲನಗಳ ನಡುವೆ ಅನೇಕ ಸಾಮ್ಯಗಳಿವೆ. ಪ್ರಾಥಮಿಕ ಹೋಲಿಕೆ ಎಂದರೆ ಇವೆರಡೂ ಹೋರಾಟಗಳು ಸಾಮಾನ್ಯ ಜನರ ಮೂಲಭೂತ ಹಕ್ಕಿಗಾಗಿ ನಡೆದಂತಹ ಹೋರಾಟಗಳು.
(ನಮ್ಮ ಸಂಕಟ ಅರ್ಥ ಮಾಡಿಕೊಳ್ಳಿ ಗುರುಗಳೇ. ನಮಗೆ ವಿದ್ಯೆಯ ಅಧಿಕಾರವಿಲ್ಲ, ಶಾಸ್ತ್ರಜ್ಞಾನದ ಅಧಿಕಾರವಿಲ್ಲ, ವಿಗ್ರಹದರ್ಶನದ ಅಧಿಕಾರವೂ ಇಲ್ಲವಲ್ಲ.)

ಈ ಎರಡೂ ಆಂದೋಲನಗಳ ಮುಂದಾಳುಗಳು ಸತ್ಯ, ಅಹಿಂಸೆ ಹಾಗು ಸರ್ವಪ್ರೇಮದಲ್ಲಿ ನಂಬಿಕೆ ಇಟ್ಟವರಾದರೆ, ಎರಡೂ ಆಂದೋಲನಗಳ ಸಹವರ್ತಿಗಳು ದುರ್ಬಲ ಜನವರ್ಗ. ಈ ಸಾಮ್ಯವನ್ನು ಬಿಂಬಿಸಲೆಂದೇ ನಾಟಕದಲ್ಲಿ ಗಾಂಧೀಜಿಯವರ ಆಂದೋಲನವನ್ನು ಹಾಗು ಅವರ ಸಹವರ್ತಿಗಳನ್ನು ನೆನಪಿಗೆ ತರುವ ಕೆಲವು ಕ್ರಮಗಳನ್ನು ಬಳಸಲಾಗಿದೆ. ದಾಸೂರಿನಿಂದ ಉಡುಪಿಯವರೆಗಿನ ಕನಕದಾಸರ ಕಾಲ್ನಡಿಗೆಯು ಗಾಂಧೀಜಿಯವರ ದಂಡೀಯಾತ್ರೆಯನ್ನು ನೆನಪಿಸಿದರೆ, ಹಳ್ಳಿಹಳ್ಳಿಗಳಲ್ಲಿ ಅವರು ಜರುಗಿಸುತ್ತಿದ್ದ ‘ಆಟ’ಗಳು ಗಾಂಧೀಜಿಯವರ ಪ್ರಾರ್ಥನಾಸಭೆಗಳನ್ನು , ನೆನಪಿಸುತ್ತವೆ. ಅದರಂತೆಯೇ ಕೃಷ್ಣದರ್ಶನಕ್ಕೆ ಬಂದಂತಹ ಜನತೆಯ ಮೇಲೆ ಆಕ್ರಮಣ ಮಾಡಲು ಬ್ರಾಹ್ಮಣ ವಟುಗಳು ಸಿದ್ಧರಾದಾಗ ‘ಪೈರು’ಗಳು ಹಾಡುವ, ವೈಷ್ಣವನೆಂಥವ, ಎಂಥವ ವೈಷ್ಣವ, ಕರಗುವನನ್ಯರ ನೋವಿನಲಿ ಎನ್ನುವ ಭಜನೆಯು ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ವೈಷ್ಣವ ಜನತೋ ತೇನೆ ಕಹಿಯೆ ಎನ್ನುವ ಪ್ರಾರ್ಥನೆಯ ಶಬ್ದಾನುವಾದವೇ ಆಗಿದೆ. ಈ ಸಮಯದಲ್ಲಿ ಕನಕದಾಸರು ತಮ್ಮ ಅನುವರ್ತಿಗಳಿಗೆ ಹೇಳುವ ಮಾತುಗಳೇನು?
ಯಾರ ಮೇಲೂ ಕೈಯೆತ್ತಬೇಡಿ. ನಿಮಗೆ ಶ್ರೀಕೃಷ್ಣನ ಮೇಲೆ ಆಣೆ. ಸಿಟ್ಟು, ಕೋಪಗಳೇ ಯಾವ ತೀರ್ಥಗಳೂ ತೊಳೆಯಲಾರದ ಮೈಲಿಗೆಗಳು..............ಬರ್ರಿ, ದಶಾವತಾರ ಕುಣಿಯೋಣ, ನಾವು ನಿಂತಿರುವ ಬಯಲನ್ನೇ ಭಗವಂತನ ಆಲಯ ಮಾಡೋಣ. ಈ ಮಾತುಗಳೂ ಸಹ ಗಾಂಧೀಜಿಯವರು ತಮ್ಮ ಅಹಿಂಸಾತ್ಮಕ ಚಳುವಳಿಯಲ್ಲಿ ಭಾಗವಹಿಸುತ್ತಿದ್ದವರಿಗೆ ಕೊಡುವ ಕರೆಯನ್ನೇ ಹೋಲುತ್ತವೆ.

ಹೋರಾಟದಿಂದ ಪ್ರಾರಂಭವಾಗಿ ಹೋರಾಟದಲ್ಲಿಯೇ ಕೊನೆಯಾಗುವ ಈ ನಾಟಕದ ಮಧ್ಯದಲ್ಲಿ ಬರುವ ಆರನೆಯ ವಿನೋದಪೂರ್ಣ ದೃಶ್ಯವು ಅತ್ಯಂತ ಮಹತ್ವದ ದೃಶ್ಯವಾಗಿದೆ. ಸೋಂದೆಯ ಮಠಾಧೀಶರಾದ ವಾದಿರಾಜ ಸ್ವಾಮಿಗಳು ರಚಿಸಿದ ಹಾಡನ್ನು ಕನಕದಾಸರು ಆಡಿಸುವ ‘ಆಟ’ದಲ್ಲಿ ಇಲ್ಲಿ ಬಳಸಿಕೊಳ್ಳಲಾಗಿದೆ. ಗೋಕುಲದಲ್ಲಿ ಬಾಲಕೃಷ್ಣನ ಲೀಲೆಯನ್ನು ತೋರಿಸುತ್ತಲೇ, ‘ಮಡಿ, ಮೈಲಿಗೆ’ ಎನ್ನುವ ಸಾಂಪ್ರದಾಯಕ ರೂಢಿಗಳನ್ನು ಲೇವಡಿ ಮಾಡುತ್ತಲೇ, ಭಗವಂತನು ಅವ್ಯಾಜ ಪ್ರೀತಿಗೆ ಒಲಿಯುತ್ತಾನೆ ಎನ್ನುವ ವಾದಿರಾಜರ ಸಂದೇಶವನ್ನು ಇಲ್ಲಿ ನೀಡಲಾಗಿದೆ. ಈ ವಿನೋದದ ಜೊತೆಗೇ, ಬಾಲಕೃಷ್ಣನ ವಿಗ್ರಹಲಕ್ಷಣಗಳನ್ನು ಗುರುತಿಸುತ್ತ ಸುತ್ತಲೂ ಮಂದಿರವನ್ನು ಕಟ್ಟುವ ಪುರೋಹಿತವರ್ಗದ ಸ್ವಾರ್ಥಮೂಲ ಪ್ರಯತ್ನವನ್ನು ಲೇಖಕರು ಕಟುವ್ಯಂಗ್ಯದಲ್ಲಿ ನಿರೂಪಿಸಿದ್ದಾರೆ. ಈ ದೃಶ್ಯದಲ್ಲಿ ನಂದಗೋಕುಲದಿಂದ ಕೆಳದಿಗೆ ಬದಲಾಗುವ ಕಾಲದ ಜಿಗಿತವು ಅಪೂರ್ವವಾದ ರಂಗತಂತ್ರವಾಗಿದೆ.

ಈ ದೃಶ್ಯದ ಮಹತ್ವದ ಗುಣವೆಂದರೆ ಇದು ನೀಡುವ ‘ವಿನೋದದ ಮಧ್ಯಾಂತರ’ವಾಗಿದೆ. ಪ್ರೇಕ್ಷಕರು ಒಂದು ಗಂಭೀರ ನಾಟಕವನ್ನು ಅರಗಿಸಿಕೊಳ್ಳುತ್ತಿರುವ ಸಮಯದಲ್ಲಿ ಇಂತಹ ಒಂದು ‘ರಿಲೀಫ್’ ಅವಶ್ಯಕ ಎನ್ನಬಹುದು. ಹಾಗೆಂದು ಈ ದೃಶ್ಯದ ಉಪಯೋಗ ವಿನೋದಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಆಟವಾಡಿದ ಬಾಲಕೃಷ್ಣನು ನಾಟಕದ ಕೊನೆಯ ದೃಶ್ಯದವರೆಗೂ ಆಟವಾಡಿದ್ದಾನೆ. ಕೃಷ್ಣವಿಗ್ರಹದ ಬದಲು ಈ ಬಾಲನನ್ನೇ ಕನಕದಾಸರು ಕೊನೆಯಲ್ಲಿ ಅಪ್ಪಿ ಮುದ್ದಾಡುತ್ತಾರೆ. ಬಾಲಕೃಷ್ಣನ ಪ್ರವೇಶವೇ ಈ ದೃಶ್ಯದ ಮುಖ್ಯ ಅಗತ್ಯವಾಗಿದೆ!

ಇನ್ನು ಸಂಪ್ರದಾಯಕ್ಕೂ ಬಂಡಾಯಕ್ಕೂ ತಿಕ್ಕಾಟ ನಡೆದಾಗ, ಪ್ರಭುತ್ವದ ನಡೆ ಏನು? ಈ ಸಮಸ್ಯೆಗೆ ವಿಜಯನಗರದ
ಸಿಂಹಾಸನಾಧೀಶ್ವರನಾದ ಕೃಷ್ಣದೇವರಾಯನು ನೀಡುವ ಉತ್ತರ ಹೀಗಿದೆ:
ಧಾರ್ಮಿಕ ಪ್ರಶ್ನೆಯಲ್ಲಿ ರಾಜಾಜ್ಞೆ ಹೊರಡಿಸುವುದು ನೀವು ಹೇಳುವಷ್ಟು ಸರಳವಲ್ಲ, ಕೇಶವತೀರ್ಥರೇ. ರಾಜ ಸರ್ವಶಕ್ತನಲ್ಲ. ಸಂಪ್ರದಾಯವೇ ಬಲಶಾಲಿ. ಸಂಪ್ರದಾಯ ರಾಜನಿಗೆ ಆಧೀನವಾಗಿಲ್ಲ. ಯುಗಯುಗಗಳಿಂದ ಬಲಿತು ನಿಂತಿರುವ ಸಂಪ್ರದಾಯವನ್ನು ಒಂದು ರಾಜಾಜ್ಞೆ ಮಣಿಸಬಲ್ಲದೆ? ಈಗ ಅಗತ್ಯವಿರುವದು ರಾಜಾಜ್ಞೆಯಲ್ಲ, ರಾಜನೀತಿ.....

ಸಮಾಜದ ವಿವಿಧ ಮೂಲಶಕ್ತಿಗಳ ಎದುರಿಗೆ ತಾನು ನಿಜವಾಗಿಯೂ ದುರ್ಬಲನು ಎನ್ನುವುದನ್ನು ಸಾರ್ವಭೌಮನು ಅರಿತಿರುತ್ತಾನೆ. ಆದರೂ ಸಹ ತಾನೇ ಸರ್ವಶಕ್ತನು ಎನ್ನುವ ಭ್ರಮೆಯನ್ನು ಆತನು ಪ್ರಜೆಗಳಲ್ಲಿ ನೆಲೆಯೂರಿಸಬೇಕಾಗುತ್ತದೆ. ಇದೇ ರಾಜನೀತಿ! ಈ ನಾಟಕದಲ್ಲಿಯೂ ಸಹ ಈ ಕೃಷ್ಣತಂತ್ರವನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲಾಗಿದೆ. ಬೇಟೆಗಾರನ ವೇಷದಲ್ಲಿದ್ದ ಕೃಷ್ಣದೇವರಾಯನು ತನ್ನ ಗುಟ್ಟನ್ನು ಕನಕದಾಸರಿಗೆ ಬಿಟ್ಟುಕೊಡುವುದಿಲ್ಲ. ಆದರೆ ಕನಕದಾಸರು ಹೋದ ಬಳಿಕ ಪರದೆಯ ಹಿಂದಿನಿಂದ ಸಿಂಹನಾಧೀಶ್ವರನ ನೆರಳು ಎತ್ತರವಾಗಿ ಬೆಳೆಯುತ್ತ ನಿಲ್ಲುವುದು, ಹಾಗು ರಾಯನ ಪರಾಕುಗಳು ಮೊಳಗುವವು. ಕೊನೆಯ ದೃಶ್ಯದಲ್ಲಿ ಇದೇ ಎತ್ತರದ ನೆರಳು ಕನಕದಾಸರಿಗೆ ತಲೆವಾಗುತ್ತದೆ. ಒಂದೇ ಒಂದು ದೃಶ್ಯದಲ್ಲಿ ಬರುವ ಹಾಗು ಮಾರುವೇಷದಲ್ಲಿ ಕಾಣಿಸಿಕೊಳ್ಳುವ ವಿಜಯನಗರದ ರಾಯನು ನಾಟಕದಲ್ಲಿ ಪ್ರಭಾವಿ ಪಾತ್ರವಾಗಿ ಹೊರಹೊಮ್ಮಿದ್ದಾನೆ. ರಾಜನೀತಿ ಹಾಗು ಸಮಾಜನೀತಿಗಳ ತಿಳಿವು ನೀಡುವ ರಾಯನ ವ್ಯಕ್ತಿಚಿತ್ರವು ನಾಟಕಕ್ಕೆ ಮಹತ್ವದ ಕೊಡುಗೆಯಾಗಿದೆ.

ಕನಕದಾಸರ ಅನುವರ್ತಿಗಳಾಗಿ ಬರುವ ಶಿವಪ್ಪ, ಭರಮಪ್ಪ, ಹನುಮಪ್ಪ, ಕೋಡಂಗಿ ಇವರೆಲ್ಲರೂ ನಾಟಕದಲ್ಲಿ ಮೊದಲಿನಿಂದ ಕೊನೆಯವರೆಗೂ ಇದ್ದು, ಕನಕದಾಸರ ವ್ಯಕ್ತಿತ್ವವನ್ನು ಪ್ರೇಕ್ಷಕರ ಎದುರಿಗೆ ಬಿಚ್ಚಿಡುವದರಲ್ಲಿ ಸಹಾಯಕರಾಗಿದ್ದಾರೆ. ಕೇಶವತೀರ್ಥರು ಪ್ರತಿಷ್ಠಿತ ಸಂಪ್ರದಾಯದ ಪ್ರತಿನಿಧಿಗಳಾಗಿ ರಂಗಪ್ರವೇಶ ಮಾಡಿದವರು, ಕನಕದಾಸರ ಮಾನವಪ್ರೇಮದಲ್ಲಿ ಮಿಂದು ಕೊನೆಗೆ ಬದಲಾದ ಮನುಷ್ಯರಾಗಿ ನಾಟಕಕ್ಕೆ ಕಳೆ ಕಟ್ಟಿದ್ದಾರೆ.

ವ್ಯಾಸರಾಯರ ಪಾತ್ರವು ರಂಗದಲ್ಲಿ ಚಿಕ್ಕದು. ಆದರೆ ನಿರ್ಣಾಯಕ ಸಮಯದಲ್ಲಿ ಬಲು ದೊಡ್ಡದು. ಕೃಷ್ಣದೇವರಾಯನದು ರಾಜಪ್ರಭುತ್ವವಾದರೆ, ವ್ಯಾಸರಾಯರದು ಧರ್ಮಪ್ರಭುತ್ವ. ಆದರೆ ಈ ಇಬ್ಬರೂ ಪ್ರಭುಗಳು ಪಟ್ಟಭದ್ರ ಸಮಾಜದ ಎದುರಿಗೆ ನಿಸ್ಸಹಾಯಕರು; ವ್ಯವಸ್ಥೆಯ ವಿರೋಧಿಯಾದ ಕ್ರಾಂತಿಯು ಎಷ್ಟೇ ನ್ಯಾಯಯುತವಾಗಿದ್ದರೂ ಸಹ ಸಮಾಜವನ್ನು, ಆಮೂಲಕ ರಾಜ್ಯವನ್ನು ವಿಚ್ಛಿದ್ರ ಮಾಡಬಲ್ಲದು ಎನ್ನುವ ಅರಿವಿನಿಂದ ಹಿಂಜರಿಯುವವರು.

ಈ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಧೈರ್ಯ ಹಾಗು ಹಟ ಇರುವುದು ಕನಕದಾಸರಿಗೆ ಮಾತ್ರ. ನಾಟಕದ ತುಂಬೆಲ್ಲ ಅರ್ಥಪೂರ್ಣವಾಗಿ ವ್ಯಾಪಿಸುವ ಪಾತ್ರವೆಂದರೆ ಇವರದೇ. ಭಾರತೀಯ ದರ್ಶನಗಳಲ್ಲಿ ‘ತಿತಿಕ್ಷೆ’ ಎನ್ನುವ ಪದ ಬರುತ್ತದೆ. ನಿಮಗೆ ಕೇಡು ಮಾಡಿದವರನ್ನೂ ಸಹ ಪ್ರೀತಿಸು ಹಾಗು ಅವರಿಗೆ ಹೃತ್ಪೂರ್ವಕವಾಗಿ ಒಳಿತನ್ನೇ ಆಶಿಸು ಎನ್ನುವುದು ಈ ಪದದ ತಿರುಳು. ಕನಕದಾಸರು ಈ ಪದದ ಸಾರ್ಥಕ ಮೂರ್ತಿಯಾಗಿ ಈ ನಾಟಕದಲ್ಲಿ ಹೊಮ್ಮಿದ್ದಾರೆ. ತಮ್ಮನ್ನು ಹತ್ತಿಕ್ಕಲು ರಾಜನಿಗೆ ದೂರು ಕೊಟ್ಟು ಬಂದಂತಹ ಕೇಶವತೀರ್ಥರ ಪ್ರಾಣವನ್ನು ಉಳಿಸಿ, ಅವರನ್ನು ಕಾವಡಿಯಲ್ಲಿ ಹೊತ್ತುಕೊಂಡು ಹೋಗುವ ಸಂದರ್ಭವು ಈ ಮಾತಿಗೆ ಸಮುಚಿತ ನಿದರ್ಶನವಾಗಿದೆ. ಅಲ್ಲಿಯೂ ಸಹ ಅವರ ಸಹಚರರು ಬಳಲಿದಾಗ, ಅವರು ಹೇಳುವ ಮಾತು ಎಂತಹದು!

ಕಾಲುಗಳು ಸೋತಾಗ
ಕಣ್ಣುಗಳು ಎಳೆವಾಗ
.......................
......................
ಕೃಷ್ಣಾ ಎನಬಾರದೇ!

ಸಮಾರೋಪ:
ಕನಕದಾಸರ ಯಾತ್ರೆಯ ಅಂತ್ಯವು ವಾಸ್ತವಿಕವಾಗಿ ಏನಾಯಿತು ಎನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಗೋಡೆಯಲ್ಲಿ ಕಿಂಡಿ ಬಿಟ್ಟು ಕೃಷ್ಣದರ್ಶನವಾಗಿದ್ದು ಪವಾಡವೇ ಅಥವಾ ಕನಕದಾಸರ ಪರಮಾನಸ ಶಕ್ತಿಯ ಪರಿಣಾಮವೆ? ಇದನ್ನು ನಂಬುವುದಾದರೂ ಹೇಗೆ? ಇದಕ್ಕೆ ಪರ್ಯಾಯವಾಗಿ, ವಾದಿರಾಜರ ಸಲಹೆಯ ಮೇರೆಗೆ, ದೇವಸ್ಥಾನದ ಅರ್ಚಕಗಣವೇ ಗೋಡೆಯಲ್ಲಿ ಕಿಂಡಿ ಮಾಡಿ, ಕನಕದಾಸರಿಗೆ ಉತ್ಸವಮೂರ್ತಿಯ ದರ್ಶನ ಮಾಡಿಸಿದರು ಎನ್ನುವ ಪ್ರತಿಪಾದನೆಯೂ ಇದೆ. ಲೇಖಕರು ಮಾತ್ರ ಇಲ್ಲಿ ಜಾಣ್ಮೆ ಹಾಗು ಮಾನವೀಯತೆ ತುಂಬಿದ ಪರಿಹಾರವನ್ನು ಕಾಣಿಸಿದ್ದಾರೆ. ತಮ್ಮ ಹಟವು ತಮಗೇ ತಿರುಗುಬಾಣವಾಗುವುದನ್ನು ಅರ್ಥ ಮಾಡಿಕೊಂಡ ದೇವಾಲಯದ ವ್ಯವಸ್ಥಾಪಕವರ್ಗವು, ವ್ಯಾಸರಾಯರ ಸಲಹೆಯ ಮೇರೆಗೆ ಕನಕದಾಸರಿಗೆ ಕೃಷ್ಣದರ್ಶನಕ್ಕೆ ಅನುಮತಿ ನೀಡುತ್ತದೆ. ಕೃಷ್ಣಮೂರ್ತಿಗೆ ಅಡ್ಡವಾಗಿದ್ದ ಪಡದೆ ತಟ್ಟನೆ ಕೆಳಗೆ ಬೀಳುತ್ತದೆ. ಆದರೆ ಗುಡಿಯ ಒಳಗೆ ಕಾಲಿಡದ ಕನಕದಾಸರು ‘ಮಾನವರೂಪೀ ಬಾಲಕೃಷ್ಣ’ನನ್ನೇ ಕರೆದು ಮುದ್ದಾಡುತ್ತಾರೆ. ಇಲ್ಲಿಗೆ ನಾಟಕವು ಕೊನೆಯಾಗುತ್ತದೆ.

ನಾಟಕದ ಅಂತ್ಯದಲ್ಲಿ ಬರುವ ಕನಕದಾಸರ ಹಾಡು ಅತ್ಯಂತ ಮಹತ್ವದ ಹಾಗು ಅರ್ಥಪೂರ್ಣ ಹಾಡಾಗಿದೆ. ಯಾಕೆಂದರೆ ಇದು ಕನಕದಾಸರ ಅನೇಕ ಕೀರ್ತನೆಗಳಂತೆ ಶಿಷ್ಟ ಭಾಷೆಯಲ್ಲಿರದೆ, ಹಳ್ಳಿಗರ ಆಡುನುಡಿಯಲ್ಲಿಯೇ ಇದೆ:
ದ್ಯಾವಿ ನಮ್ಮ ದ್ಯಾವರು ಬಂದಾರು ಬನ್ನಿರೇ.

ಕನಕದಾಸರನ್ನು ಹಿಂಬಾಲಿಸಿದ ನಿರ್ಬಲ ಜನವರ್ಗಕ್ಕೆ ಕೊನೆಗೂ ದೇವರು ಸಿಗುತ್ತಾನೆ. ಆದರೆ ಈ ದೇವರು ಕಲ್ಲಿನ ಮೂರ್ತಿಯಲ್ಲ. ಇವನು ಬಾಲರೂಪದ ಪ್ರೇಮಪುತ್ಥಳಿ! ಇದು ಶಿಷ್ಟವರ್ಗಕ್ಕೆ ಕನಕದಾಸರು ಕೊಡುವ ಆಹ್ವಾನವೂ ಹೌದು, ಪ್ರೇಮದ ಸಂದೇಶವೂ ಹೌದು.

ಪ್ರತಿಷ್ಠಿತ ಜನವರ್ಗ ಹಾಗು ಶೋಷಿತ ಜನವರ್ಗಗಳ ನಡುವೆ ಪ್ರಾಚೀನ ಕಾಲದಿಂದಲೂ ಸಂಘರ್ಷವು ನಡೆಯುತ್ತಲೇ ಇದೆ. ಕನಕದಾಸರ ಆಂದೋಲನವೂ ಸಹ ಅಂತಹ ಒಂದು ಹೋರಾಟ. ಈ ಹೋರಾಟವನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಚಿತ್ರಿಸುವಲ್ಲಿ, ಅದರಂತೆಯೇ ಇಪ್ಪತ್ತನೆಯ ಶತಮಾನದಲ್ಲಿ ನಡೆದ ಗಾಂಧೀಜಿಯವರ ಹೋರಾಟಕ್ಕೂ, ಈ ಐತಿಹಾಸಿಕ ಹೋರಾಟಕ್ಕೂ ಇರುವ ಸಾಮ್ಯವನ್ನು ಗ್ರಹಿಸುವಲ್ಲಿ ಮತ್ತು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಾಟಕವು ಸಂಪೂರ್ಣವಾಗಿ ಸಫಲವಾಗಿದೆ. ಆಮೂಲಕ ಮಾನವೀಯ ಹೋರಾಟಗಳ ಕೆಚ್ಚನ್ನು ಹಾಗು ಅದರ ಸಾರ್ವಕಾಲಿಕತೆಯನ್ನು ಇಲ್ಲಿ ಗುರುತಿಸಲಾಗಿದೆ. ಇಂತಹ ಒಂದು ಕಲಾಪೂರ್ಣ, ಶಕ್ತಿಯುತ ನಾಟಕವನ್ನು ನೀಡಿದ್ದಕ್ಕಾಗಿ ಲೇಖಕರಿಗೆ ಅಭಿನಂದನೆಗಳು.

Thursday, May 28, 2009

ಇವ ನಮ್ಮವ

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳವಳಿಯು ಕರ್ನಾಟಕದ ಇತಿಹಾಸದಲ್ಲಿಯೆ ಅತ್ಯಂತ ಮಹತ್ವದ ಸಾಂಸ್ಕೃತಿಕ ಘಟನೆಯಾಗಿದೆ. ಈ ಘಟನೆಯ ಕೇಂದ್ರವ್ಯಕ್ತಿಗಳಲ್ಲಿ ಬಸವಣ್ಣನವರು ಅಗ್ರಗಣ್ಯರು. ಬಸವಣ್ಣನವರ ವ್ಯಕ್ತಿತ್ವದಿಂದ ಬೆರಗುಗೊಂಡು, ಪ್ರಭಾವಿತರಾಗಿ ಅವರ ಬಗೆಗೆ ಸಾಹಿತ್ಯ ರಚಿಸಿದವರು ಅನೇಕರು. ಅವರ ಜೀವನಚರಿತ್ರೆಯನ್ನು ಕನ್ನಡದಲ್ಲಿ ರಚಿಸಿದವರಲ್ಲಿ ಹರಿಹರನು ಮೊದಲಿಗನು. ಆಧುನಿಕರಲ್ಲಿ, ದ. ರಾ. ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದರೂ ಸಹ ಅದು ಪ್ರಕಾಶನಗೊಳ್ಳಲಿಲ್ಲ. ಆಬಳಿಕ ಅ.ನ.ಕೃಷ್ಣರಾಯರು ‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ರಚಿಸಿದರೆ, ಪುಟ್ಟಸ್ವಾಮಿಗಳು ‘ಕಲ್ಯಾಣ ಕ್ರಾಂತಿ’ ಕಾದಂಬರಿಯನ್ನು ಬರೆದರು. ಶರಣ ಚಳುವಳಿಯನ್ನು ಸಾಮಾಜಿಕ ದೃಷ್ಟಿಕೋನದಿಂದ ಅರ್ಥೈಸಲು ಪ್ರಯತ್ನಿಸಿ ಲಂಕೇಶ ಹಾಗೂ ಶಿವಪ್ರಕಾಶ ಅವರು ‘ಸಂಕ್ರಾಂತಿ’ ಹಾಗು ’ಮಹಾಚೈತ್ರ’ ನಾಟಕಗಳನ್ನು ಬರೆದರು. ಗಿರೀಶ ಕಾರ್ನಾಡರು ತಾವು ರಚಿಸಿದ ನಾಟಕಕ್ಕೆ, ಬೇಂದ್ರೆಯವರ ಅನುಮತಿಯೊಂದಿಗೆ ’ತಲೆದಂಡ’ ಎನ್ನುವ ಹೆಸರನ್ನೇ ಬಳಸಿಕೊಂಡರು.

ಶ್ರೀ ವ್ಯಾಸ ದೇಶಪಾಂಡೆಯವರ “ಇವ ನಮ್ಮವ ” ನಾಟಕವು ಈ ಸರಣಿಯಲ್ಲಿಯೆ ಇತ್ತೀಚಿನ ಆದರೆ ಅತ್ಯಂತ ಭಿನ್ನವಾದ ನಾಟಕ. ೨೦೦೬ನೆಯ ಇಸವಿಯಲ್ಲಿ ರಚಿತವಾದ ಈ ನಾಟಕವು ಈವರೆಗೆ ಅನೇಕ ರಂಗಪ್ರಯೋಗಗಳನ್ನೂ ಕಂಡಿದೆ.

“ಇವ ನಮ್ಮವ ” ನಾಟಕವು ಕನ್ನಮಾರಿ ಎನ್ನುವ ಕಳ್ಳನೊಬ್ಬನು ಬಸವಣ್ಣನ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿ, ಸಿಕ್ಕಿಬಿದ್ದು, ಆ ಬಳಿಕ ಪರಿವರ್ತನೆಗೊಂಡು ಶರಣನಾದವನ ಕತೆಯನ್ನು ಆಧರಿಸಿದೆ. ಆದರೆ ಇದಿಷ್ಟೇ ಕತೆಯ ಮೂಲಕ ಲೇಖಕರು ಆ ಕಾಲದ ಸಾಮಾಜಿಕ, ಆರ್ಥಿಕ ಹಾಗು ರಾಜಕೀಯ ವಿಶ್ಲೇಷಣೆಯನ್ನು ಸಮಗ್ರವಾಗಿ ಮಾಡಿದ್ದಾರೆ. ಇದಲ್ಲದೆ ಆ ಕಾಲದ ಜನಸಾಮಾನ್ಯರ, ಶರಣಸಂಕುಲದ, ದುಡ್ಡುಳ್ಳವರ ಹಾಗೂ ಆಡಳಿತವರ್ಗದ ಅರ್ಥಪೂರ್ಣ ವಿಶ್ಲೇಷಣೆಯೂ ಇಲ್ಲಿದೆ. (ಆ ವಿಶ್ಲೇಷಣೆಯು ಇಂದಿಗೂ ಹಾಗೂ ಎಂದೆಂದಿಗೂ ನಮ್ಮೆಲ್ಲ ಸಮಾಜಗಳಿಗೆ ಅನ್ವಯಿಸುವಂತಿದೆ!)

ನಾಟಕದ ಪಾತ್ರಗಳು:
ಕನ್ನಮಾರಿ:
ನಾಟಕವನ್ನು ಮೊದಲಿನಿಂದ ಕೊನೆಯವರೆಗೂ ವ್ಯಾಪಿಸಿಕೊಂಡ ಕನ್ನಮಾರಿಯು ಈ ನಾಟಕದ ಮಹತ್ವದ ಪಾತ್ರ. ಆದರೂ ಆತ ನಾಟಕದ ನಾಯಕನಲ್ಲ. ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾಟಕದ ಪ್ರತಿಯೊಂದು ಚಿಕ್ಕ ಪಾತ್ರವೂ ಇಲ್ಲಿ ಮಹತ್ವದ ಪಾತ್ರವೇ. ಆದರೆ ನಾಟಕದ ನಾಯಕಪಟ್ಟ ಲಭ್ಯವಾಗುವದು ಬಸವಣ್ಣನಿಗೇ.

ಈವರೆಗೆ, ಕನ್ನಮಾರಿಯು ರಚಿಸಿದ ಮೂರು ವಚನಗಳು ಲಭ್ಯವಾಗಿವೆ. ಆತನ ಎರಡು ವಚನಗಳನ್ನು ಲೇಖಕರು ಈ ನಾಟಕದಲ್ಲಿ ಬಳಸಿಕೊಂಡಿದ್ದಾರೆ. ನಾಟಕದ ಆರಂಭದಲ್ಲಿಯೇ ಕನ್ನಮಾರಿಯು ತನ್ನ ಬಂಟರೊಡನೆ ರಂಗಪ್ರವೇಶ ಮಾಡುತ್ತ, ತನ್ನ ಕನ್ನಗಾರಿಕೆಯನ್ನು ಸಮರ್ಥಿಸುವ ತರ್ಕವನ್ನು ಪ್ರೇಕ್ಷಕಕರ ಎದುರಿಗೆ ಸಾರುತ್ತಾನೆ. ಬಸವಣ್ಣನವರು ಒಂದು ಧ್ರುವವಾದರೆ, ಕನ್ನಮಾರಿಯು ವಿರುದ್ಧ ಧ್ರುವ. ಕನ್ನಮಾರಿಯ ವಿಚಾರ ಹಾಗೂ ತರ್ಕಗಳನ್ನು ಎದುರಿಸುವದು ಸರಳವಲ್ಲ. ಕಲ್ಯಾಣರಾಜ್ಯವನ್ನೇ ಕಳ್ಳರ ರಾಜ್ಯವೆಂದು ಕರೆಯುತ್ತಾನೀತ.
ರಾಜ, ಆತನ ಅಧಿಕಾರಿಗಳು, ಸಮಾಜದ ಶ್ರೇಷ್ಠಿಗಳು ಇವರೆಲ್ಲ ಹಗಲುಗಳ್ಳರು, ಬಲುಗಳ್ಳರು ಎನ್ನುವದು ಇವನ ಅಭಿಪ್ರಾಯ. ಇವರೆಲ್ಲರೂ ದುಡಿಯುವ ಬಡವರನ್ನು ಶೋಷಿಸುತ್ತಾರೆ. ತಾನು ಉಳ್ಳವರ ಸಂಪತ್ತನ್ನು ಇಲ್ಲದವರಲ್ಲಿ ಹಂಚುತ್ತೇನೆ ಎನ್ನುವದು ಇವನ ಸಮರ್ಥನೆ!
ಸಮಾಜದ ವಿವಿಧ ಸ್ತರಗಳ ಜನತೆಯೊಡನೆ ಈತ ಮಾಡುವ ಸಂಭಾಷಣೆ ಹಾಗೂ ಮಂಡಿಸುವ ತರ್ಕಗಳ ಮೂಲಕ ಈತನ ವ್ಯಕ್ತಿತ್ವದ ಅನಾವರಣವಾಗುತ್ತದೆ. ಅನುಭವ ಮಂಟಪದಲ್ಲಿಯ ಶರಣರಿಗೇ ಎದುರಾಡಬಲ್ಲ ಧಾರ್ಷ್ಟ್ಯ ಈತನದು.
ಕನ್ನಮಾರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಸವಣ್ಣನವರ ವ್ಯಕ್ತಿತ್ವವು ಬೆಳಗಿದೆ. ಕನ್ನಮಾರಿಗೆ ಗೊತ್ತಿರುವ ತರ್ಕ ಹಾಗೂ ವಿಚಾರವೆಲ್ಲ ಬಸವಣ್ಣನವರಿಗೂ ಗೊತ್ತಿದೆ. ಅವರೂ ಸಹ ಕಲ್ಯಾಣಪ್ರಭುತ್ವವನ್ನು ಕಳ್ಳರ ಪ್ರಭುತ್ವವೆಂದೇ ಕರೆಯುತ್ತಾರೆ. ಆದರೆ ಕೇವಲ ತರ್ಕದಿಂದ ಸಮಾಜವನ್ನು ಸುಧಾರಿಸಲು ಸಾಧ್ಯವಿಲ್ಲವೆನ್ನುವದು ಅವರಿಗೆ ಗೊತ್ತಿದೆ.

ನಾಟಕದ ಆರಂಭದಲ್ಲಿ, ಮೊದಲಿಗೆ ಕನ್ನಮಾರಿಯ ಕೈಯಲ್ಲಿ ಸಿಗುವವರು ಭೋಳೇ ಜಂಗಮರು. ಅವರ ಭೋಳೇತನವನ್ನು ಹಂಗಿಸಿ ಈತ ಮಾತನಾಡುತ್ತಾನೆ. ಅವರೋ ಬಸವಣ್ಣನನ್ನು ಪವಾಡಪುರುಷನೆಂದು ಭಾವಿಸಿದವರು. ವಚನಗಳನ್ನು ಸಾರುವದರ ಮೂಲಕ ಕೆಡುಕರನ್ನು ಸುಧಾರಿಸಬಹುದೆನ್ನುವ ನಂಬಿಕೆ ಇಟ್ಟುಕೊಂಡವರು. ಜಂಗಮವೃತ್ತಿಯನ್ನೇ ಹೊಟ್ಟೆಪಾಡಿನ ಕಾಯಕ ಮಾಡಿಕೊಂಡವರು! ಹಾಗೂ ಪ್ರಸಂಗ ಬಂದಾಗ ಪ್ರಭುತ್ವಕ್ಕೆ ದಂಡನಮಸ್ಕಾರವನ್ನೂ ಹಾಕಬಲ್ಲವರು.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು, ಕನ್ನಮಾರಿಯು ಈ ಜಂಗಮರನ್ನೇ ಠಕ್ಕತನದಿಂದ ಕಟ್ಟಿಹಾಕಿ ಅವರೆಲ್ಲರ ವಸ್ತ್ರಭೂಷಣಗಳನ್ನು ಅಪಹರಿಸುವನು. ತಮ್ಮ ಸುರಕ್ಷತೆಯ ಉದ್ದೇಶದಿಂದ ಕನ್ನಮಾರಿ ಹಾಗೂ ಅವನ ಬಂಟರು ಶರಣರ ವೇಷದಲ್ಲಿ ಬಸವಣ್ಣನ ಮಹಾಮನೆಗೆ ತೆರಳುತ್ತಿರುವಾಗ ಅವರಿಗೆ ಭೆಟ್ಟಿಯಾಗುವಳು ಒಬ್ಬ ಹುಲ್ಲು ಹೊರುವ ಹೆಣ್ಣುಮಗಳು. ಸಮಾಜದ ಸಾಂಪ್ರದಾಯಕ ವ್ಯವಸ್ಥೆಯಲ್ಲಿ ತನ್ನ ಕೆಳಸ್ತರವನ್ನು ಒಪ್ಪಿಕೊಂಡು ಬಾಳುತ್ತಿರುವ ಈಕೆ ಬಸವಣ್ಣ ತನ್ನನ್ನು ಮೇಲೆತ್ತಿದ ರೀತಿಯನ್ನು ಕನ್ನಮಾರಿಗೆ ಹೇಳಿದಾಗ, ಆತ ಇವರೆಲ್ಲ ಮರಳು ಜನ ಎಂದು ಅಪಹಾಸ್ಯ ಮಾಡುತ್ತಾನೆ.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು ಕನ್ನಮಾರಿ ಬಸವಣ್ಣನ ಮಹಾಮನೆಗೇ ಬರುತ್ತಾನೆ. ಅಲ್ಲಿ ಅನುಭವ ಮಂಟಪದಲ್ಲಿ ಶರಣರು ದೈನಂದಿನ ಚರ್ಚೆಯನ್ನು ನಡೆಸಿರುತ್ತಾರೆ. ಕನ್ನಮಾರಿ ತನ್ನ ತಾರ್ಕಿಕ ಅಹಂಭಾವದಲ್ಲಿ, ಅವರಿಗೆ ಉದ್ಧಟ ಪ್ರಶ್ನೆಗಳನ್ನು ಕೇಳುತ್ತಾನೆ.
ಇದಿಷ್ಟು ಕನ್ನಮಾರಿಯ ಮೊದಲ ವ್ಯಕ್ತಿತ್ವ.
ಇಂತಹ ಕನ್ನಮಾರಿ ಶರಣನಾಗಿ ಪರಿವರ್ತಿತನಾಗುವದು ರೋಚಕವಾದ ಘಟನೆ.
ಕನ್ನಮಾರಿಯ ಮಾತುಗಳಲ್ಲಿಯೇ ಹೇಳುವದಾದರೆ :-
“ ಕಳ್ಳರು ಯಾರು, ಕಳ್ಳರ ಕಳ್ಳರು ಯಾರು, ಬಲುಗಳ್ಳರು ಯಾರಂತ ನಾನು ನಿಮ್ಮ ಮುಂದೆ ಒಗಟು ಇಟ್ಟೆ. ಬಸವೇಶ್ವರ, ಇದು ಕಳ್ಳರ ನಗರ. ಕಳ್ಳರ ನಗರದಲ್ಲಿ ನಾನು ಕಳ್ಳರ ಕಳ್ಳನಾಗಿದ್ದೆ. ಕದೀಲಿಕ್ಕೆ ಬಂದ ನನ್ನನ್ನು ನೀವು ನೆಟ್ಟನೇ ನುಂಗಿ ನಿಮ್ಮ ಹೊಟ್ಟೆಯೊಳಗೆ ಅರಗಿಸಿಕೊಂಡು ಬಿಟ್ರಿ. ನೀವೇ ಬಲುಗಳ್ಳರು!..”

ಬಿಜ್ಜಳ:
ಬಿಜ್ಜಳನು ಕಲ್ಯಾಣರಾಜ್ಯದ ಪ್ರಭು. ಬಸವಣ್ಣನ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಾಗಿ ರಾಜ್ಯಾಡಳಿತ ಸುಸೂತ್ರವಾಗಿ ನಡೆಯುತ್ತಿರುವದರಿಂದ ಈತನಿಗೆ ಬಸವಣ್ಣ ಬೇಕು. ಬಸವಣ್ಣ ರಾಜ್ಯದ ಮಂತ್ರಿಯಾಗಿ ಉಳಿಯಲೇ ಬೇಕು. ಅಲ್ಲದೆ ಬಸವಣ್ಣನನ್ನು ಆಡಳಿತದಲ್ಲಿ ಬಲವಂತವಾಗಿ ಇಟ್ಟುಕೊಳ್ಳಲು ಈತನಿಗೆ ಮತ್ತೊಂದು ಕಾರಣವಿದೆ. ಬಸವಣ್ಣನಿಗೇ ಬೇಕಾಗಿರದಿದ್ದರೂ ಸಹ ಆತ ಪ್ರಭುತ್ವಕ್ಕೆ ಹೊರತಾದ ಮತ್ತೊಂದು ಶಕ್ತಿಕೇಂದ್ರವಾಗಿರುವದನ್ನು ಬಿಜ್ಜಳ ಬಲ್ಲ. ಈ ಶಕ್ತಿಕೇಂದ್ರವನ್ನು ಜಾಣತನದಿಂದ ಸಂಭಾಳಿಸುವದು ಪ್ರಭುತ್ವದ ಹಿತದ ದೃಷ್ಟಿಯಿಂದ ಅವಶ್ಯವೆಂದು ಈತ ಅರಿತಿದ್ದಾನೆ.
ಬಸವಣ್ಣನ ಬಗೆಗೆ ಬಿಜ್ಜಳ ಹೇಳುವ ಮಾತುಗಳು ಹೀಗಿವೆ:
“…ಮಾರಾಯಾ ನಿನಗ ಯಾವ ಪದವಿನೂ ಬೇಕಾಗಿಲ್ಲ. ಇದು ನನಗ ಗೊತ್ತೈತಿ. ನಿನಗ ಪದವಿ ಯಾಕ ಬೇಕು? ನೀ ಎಲ್ಲಿ ಹೋಗಿ ನಿಲ್ಲತೀ ಅಲ್ಲಿ ದೀಪ ಬೆಳಗತಾರು; ಎಲ್ಲಿ ಹೋಗಿ ಕುಂದರತೀ ಅಲ್ಲಿ ಕಾಯಿ ಒಡೀತಾರು; ನೀ ಕಾಡು ಹೊಕ್ಕೊಂಡು ಮರದ ಕೆಳಗ ಕುಂತರೂ ಶರಣರ ಸಂತಿ ಅಲ್ಲೇ ನಡೀತೈತಿ….”

ಬಸವಣ್ಣನನ್ನು ಮನಸಾ ಗೌರವಿಸುತ್ತಿದ್ದರೂ ಸಹ ಬಿಜ್ಜಳನು ಪ್ರಭುತ್ವಕ್ಕೆ ಅವಶ್ಯವಾದ ಕೋರೆಹಲ್ಲು ಹಾಗೂ ಹುಲಿಯುಗುರುಗಳನ್ನು ಬೆಳೆಸಿಕೊಂಡವನೇ. ವ್ಯವಸ್ಥೆಯ ರಕ್ಷಣೆಯ ಉದ್ದೇಶ ಹಾಗೂ ಅದಕ್ಕೆ ಬೇಕಾದ ಕ್ರೌರ್ಯ ಇವು ಬಿಜ್ಜಳನ ವ್ಯಕ್ತಿತ್ವದ ಭಾಗಗಳಾಗಿವೆ.
ತನ್ನ ದಂಡನಾಯಕ ಮಂಚಣ್ಣನಾಯಕನಿಗೆ ಬಿಜ್ಜಳನ್ನು ಕೊಡುತ್ತಿರುವ ಆದೇಶವನ್ನು ನೋಡಿರಿ:
“…ಮಧ್ಯರಾತ್ರಿಗೆ ಸರಿಯಾಗಿ ನಾಕೂ ಕಡೆಯಿಂದ ಮಹಾಮನಿಗೆ ಮಿಂಚು ಹೊಡಧಾಂಗ ಮುತ್ತಿಗೆ ಹಾಕಬೇಕು……ಹೊರಗಿನ ಸುತ್ತಿನ್ಯಾಗ ಬ್ಯಾಟಿ ನಾಯಿಗಳನ್ನು ಬಿಡಿರಿ, ಬಿಲ್ಲಿನವರನ್ನು ಮರದ ಮ್ಯಾಲ ಏರಸರಿ. ಎರಡು ಕಾಲು ಓಡ್ತಿರೋದು ಕಂಡ್ರ ಸಾಕು, ಬಾಣ ಹೊಡೆದು ಭೂಮಿಗೆ ಬೀಳಿಸತಕ್ಕದ್ದೆಂದು ಕಟ್ಟಪ್ಪಣೆ ಮಾಡ್ರಿ….”

ಶರಣರು:
ಶರಣರಲ್ಲಿ ಭೋಳೇ ಜನರು ಇದ್ದಂತಯೇ, ಬೌದ್ಧಿಕವಾಗಿ ಹಾಗು ಆಧ್ಯಾತ್ಮಿಕವಾಗಿ ಎತ್ತರದ ಮಟ್ಟವನ್ನು ಏರಿದವರೂ ಇದ್ದರು. ಅನುಭವ ಮಂಟಪದ ನಿರ್ವಾಹಕರೆಂದು ಇವರನ್ನು ಕರೆಯಬಹುದು. ಬಸವಣ್ಣನ ಹೊರತಾಗಿಯೂ, ಶರಣಚಳುವಳಿಯನ್ನು ಸಾರ್ಥಕಗೊಳಿಸಬಲ್ಲ ಸಾಮರ್ಥ್ಯ ಉಳ್ಳವರು. ಶರಣನ ವೇಷದಲ್ಲಿಯ ಕನ್ನಮಾರಿಯ ಉದ್ದಟತನದಿಂದ ಇವರಲ್ಲಿ ಕೆಲವರು ವಿಚಲಿತರಾದರೆ, ಮುಂದಾಳುಗಳು ಮಾತ್ರ ಎಲ್ಲರನ್ನೂ ಶಾಂತ ಮಾಡಬಲ್ಲವರು.

ಬಸವಣ್ಣ:
ಈಗಾಗಲೇ ರಚಿತವಾದ ಸಾಹಿತ್ಯದಲ್ಲಿ ಬಸವಣ್ಣನು ರಾಜ್ಯದ ಉನ್ನತ ಅಧಿಕಾರಿಯಂತೆ ಕಾಣುವ ವ್ಯಕ್ತಿತ್ವಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ನಾಟಕಗಳಲ್ಲಿಯೂ ಸಹ ಆತ ಮಂತ್ರಿಯ ಪೋಷಾಕನ್ನು ಧರಿಸಿ ರಂಗದ ಮೇಲೆ ಬರುವದೇ ಜನಪ್ರಿಯವಾಗಿದೆ. ಆದರೆ ಈ ನಾಟಕದಲ್ಲಿ ಬಸವಣ್ಣನು ಸಾಮಾನ್ಯರೊಡನೆ ಸಮಾನನಾಗಿ ಇರಬಯಸುವ ವ್ಯಕ್ತಿ.

ನಾಟಕದ ಮೊದಲಲ್ಲಿಯೆ ಆತ ಕೆಳ ಸ್ತರದ ಹೆಣ್ಣುಮಗಳೊಬ್ಬಳಿಗೆ ಹುಲ್ಲು ಹೊರಿಸುವದನ್ನು, ಅವಳೊಡನೆ ಆತ್ಮೀಯವಾಗಿ ಸಂಭಾಷಿಸುವದನ್ನು ಹಾಗೂ ಅವಳಿಗೆ ಲಿಂಗಧಾರಣೆ ಮಾಡುವದನ್ನು flashbackನಲ್ಲಿ ತೋರಿಸಲಾಗಿದೆ.

ಆನಂತರ ಬಸವಣ್ಣನ ಉಲ್ಲೇಖವಾಗುವದು ಬಿಜ್ಜಳನ ಮಾತುಗಳಲ್ಲಿ:
“ಆತ ಮೊದಲೇ ಮಹಾ ತಲೆತಿರುಕ. …………..ಅಲ್ಲಾ ಮಂತ್ರಿಪದವಿ ಬ್ಯಾಡಾ ಅನ್ನೋ ತಲೆತಿರುಕ ಮತ್ತೊಬ್ಬನದಾನೇನು ಈ ದೇಶದೊಳಗ?”

ಹುಲ್ಲು ಹೊರುವ ಹೆಣ್ಣುಮಗಳೊಡನೆ ಆತ್ಮೀಯವಾಗಿ ಮಾತನಾಡುವಾಗ, ಕನ್ನಮಾರಿಯ ಪರವಾಗಿ ಶರಣರೊಡನೆ ಮಾತನಾಡುವಾಗ, ಬಿಜ್ಜಳನ ದಂಡನಾಯಕನು ತಂದ ಆದೇಶವನ್ನು ಧಿಕ್ಕರಿಸುವಾಗ, ತನ್ನ ಹೆಂಡತಿಯ ಉಪಾಯಕ್ಕೆ ಅಸಮಾಧಾನ ವ್ಯಕ್ತಪಡಿಸುವಾಗ ಬಸವಣ್ಣನ ವ್ಯಕ್ತಿತ್ವ ಪ್ರೇಕ್ಷಕರೆದುರಿಗೆ ಹೊಳೆಯುತ್ತದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ಅಪೂರ್ಣ ವಚನವೊಂದರ ಕೊನೆಯ ಸಾಲನ್ನು ಆತ ತನ್ನ ಹೆಂಡತಿ ಗಂಗಾಂಬಿಕೆಗೆ ಪ್ರೀತಿಯಿಂದ ಪೂರ್ಣಗೊಳಿಸಿ ಹೇಳುವ ಸನ್ನಿವೇಶವು ಬಸವಣ್ಣನ ಆದರ್ಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ತೋರಿಸುತ್ತದೆ ಎನ್ನಬಹುದು.

ನಾಟಕದ ಕಥಾನಕ:
ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ. ಬಸವಣ್ಣನ ರಂಗಪ್ರವೇಶವಾಗುವದು ಸಂಜೆಯಲ್ಲಿ (flash back ಹೊರತುಪಡಿಸಿ), ಅಂದರೆ ನಾಟಕದ ಕೊನೆಯ ಭಾಗದಲ್ಲಿ.
ಅಲ್ಲಿಯವರೆಗೂ ಕನ್ನಮಾರಿ ಹಾಗೂ ಅವನನ್ನು ಹಿಡಿಯಲೆತ್ನಿಸುತ್ತಿರುವ ಬಿಜ್ಜಳನ ಸೈನಿಕರೇ ರಂಗವನ್ನು ವ್ಯಾಪಿಸಿದ್ದಾರೆ.
ರಂಗದ ಮೇಲೆ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಬಹುಜನರು ಪ್ರಭುತ್ವಕ್ಕೆ ಹೆದರುವ, ಪ್ರಭುತ್ವ ಎಸೆಯುವ ರೊಟ್ಟಿಯ ತುಣುಕುಗಳಿಗೆ ಆಸೆ ಪಡುವ ಜನತೆ. ಇವರು ಅನಾದಿ ಕಾಲದಿಂದಲೂ ಹೀಗೇ ಇದ್ದವರು. ಬಸವಣ್ಣನ ಕಾಲದಲ್ಲೂ ಹಾಗೇ ಇದ್ದರು. ಈಗಲೂ ಹಾಗೇ ಇದ್ದಾರೆ. ಅದರಂತೆಯೇ ರಂಗದ ಮೇಲೆ ಕಾಣಿಸಿಕೊಳ್ಳುವ ಶ್ರೇಷ್ಠಿಗಳು ವ್ಯವಸ್ಥೆಯ ಮುಂದುವರಿಕೆಯಲ್ಲಿಯೇ ಆಸಕ್ತಿ ಉಳ್ಳವರು.

ಕನ್ನಮಾರಿಯು ಅನುಭವ ಮಂಟಪದಲ್ಲಿ ಶರಣರ ಜೊತೆಗೆ ಸೇರಿಕೊಂಡಿರುವದು ಬಿಜ್ಜಳನ ಗುಪ್ತಚಾರರಿಗೆ ಗೊತ್ತಾಗಲು ತಡವಾಗುವದಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಬಸವಣ್ಣನವರ ಮಹಾಮನೆಗೆ ಸೈನಿಕರು ಮುತ್ತಿಗೆ ಹಾಕುತ್ತಾರೆ. ಕನ್ನಮಾರಿ ತಮ್ಮೊಳಗೇ ಇದ್ದದ್ದು ಬಸವಣ್ಣನ ಹೆಂಡತಿ ಗಂಗಾಂಬಿಕೆಯ ಅರಿವಿಗೂ ಬಂದಿರುತ್ತದೆ. ಅವನನ್ನು ಹಿಡಿದು ಹಾಕಲು ಗಂಗಾಂಬಿಕೆ ಉಪಾಯವೊಂದನ್ನು ರೂಪಿಸುತ್ತಾಳೆ. ಬಂಗಾರದ ತನ್ನ ಒಡವೆಗಳನ್ನು ಗುಪ್ತವಾಗಿ ನೆಲವಿನಲ್ಲಿ ಇಟ್ಟಿರುವದಾಗಿ ಕನ್ನಮಾರಿಗೆ ನಂಬಿಕೆ ಬರುವಂತೆ ನಟಿಸುತ್ತಾಳೆ. ಕನ್ನಮಾರಿ ಹಾಗೂ ಅವನ ಬಂಟರು ಕಳ್ಳತನ ಮಾಡುತ್ತಿರುವಾಗ ಶರಣರ ಕೈಯಲ್ಲಿ ಸಿಕ್ಕು ಬೀಳುತ್ತಾರೆ.

ಇಲ್ಲಿಯವರೆಗೆ ಬಸವಣ್ಣ ಎಲ್ಲಿದ್ದ? ಗಂಗಾಂಬಿಕೆಯು ತನ್ನ ಉಪಾಯದ ಅಂಗವಾಗಿ ಬಂಗಾರದ ಒಡವೆಗಳನ್ನು ಧರಿಸಿರುತ್ತಾಳೆ. ತನ್ನ ಹೆಂಡತಿ ಬಂಗಾರ ಧರಿಸಿರುವದು ಬಸವಣ್ಣನಿಗೆ ಸಹ್ಯವಾಗುವದಿಲ್ಲ. ಆತ ವ್ಯಥಿತನಾಗಿ, ದಾಸೋಹದಲ್ಲಿರುವದನ್ನು ಬಿಟ್ಟು ತನ್ನ ಅರುಹಿನ ಮನೆಗೆ ಹೋಗಿ ಬಿಟ್ಟಿರುತ್ತಾನೆ. ಇದು ಗಂಗಾಂಬಿಕೆಗೆ ಅರ್ಥವಾಗುವದಿಲ್ಲ. ಬೆಳಿಗ್ಗೆ ಒಂದು ವಚನವನ್ನು ಅರ್ಧ ರಚನೆ ಮಾಡಿದವರು ಎಲ್ಲಿ ಹೋದರು? ‘ನೀರಿಗೆ ನೈದಿಲೆಯೆ ಶೃಂಗಾರ…..’ ಎಂದು ಅರ್ಧ ವಚನ ಹೇಳಿದವರು ಆ ವಚನ ಪೂರ್ತಿಗೊಳಿಸಲು ಹೋದರೆ? ಎಂದುಕೊಳ್ಳುತ್ತಾಳೆ. ಆದರೆ ಬಸವಣ್ಣನನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಾಗವ್ವೆ ಮಾತ್ರ ‘ಶಟಗೊಂಡವರ ಹಂಗ ದುಡುದುಡು ಹೋದಾ…’ ಎನ್ನುತ್ತಾಳೆ.

ಬಸವಣ್ಣನನ್ನು ಅರುಹಿನ ಮನೆಯಿಂದ ಕರೆದುಕೊಂಡು ಬಂದಾಗ ಕನ್ನಮಾರಿಯನ್ನು ಹಿಡಿದದ್ದಕ್ಕಾಗಿ ಶರಣರೆಲ್ಲ ಸಂತೋಷದಲ್ಲಿ ಮುಳುಗಿದ್ದರು. ಮಹಾಕಳ್ಳ ಕನ್ನಮಾರಿಯನ್ನು ರಾಜನಿಗೆ ಒಪ್ಪಿಸಬೇಕು ಎನ್ನುವದೇ ಎಲ್ಲ ಶರಣರ ಅಭಿಪ್ರಾಯ. ಬಸವಣ್ಣ ಅದಕ್ಕೆ ಒಪ್ಪುವದಿಲ್ಲ.

ಕನ್ನಮಾರಿಯ ತರ್ಕವನ್ನಾಗಲಿ, ಶರಣರ ತರ್ಕವನ್ನಾಗಲಿ , ಪ್ರಭುತ್ವದ ತರ್ಕವನ್ನಾಗಲಿ ಬಸವಣ್ಣನು ಒಪ್ಪುವವನಲ್ಲ. ಅಷ್ಟೇ ಏಕೆ, ಗಂಗಾಂಬಿಕೆಯ ಸ್ತ್ರೀಧನದ ತರ್ಕವನ್ನೂ ಆತ ಕಡೆಗಣಿಸುತ್ತಾನೆ. ಕನ್ನಮಾರಿಗೆ ಆಶ್ರಯ ಕೊಟ್ಟರೆ ಬಸವಣ್ಣನೂ ಅಪರಾಧಿಯೇ ಆಗುತ್ತಾನೆ ಎನ್ನುವ ಮಾತಿಗೂ ಆತ ಬೆಲೆ ಕೊಡುವದಿಲ್ಲ.ಬಿಜ್ಜಳನ ಸೇನಾಪತಿಗೆ ಬಸವಣ್ಣನು ಹೇಳುವ ಮಾತುಗಳಿವು:
"ದೇಶಕ್ಕೊಂದು ಶಾಸನ ಐತಿ ನಿಜ.ಆದರ ಶಾಸನಕ್ಕಂಜಿ ನನ್ನ ಅಂತರಾತ್ಮ ಒಪ್ಪದಿರುವಂಥಾ ಯಾವ ಕೆಲಸವನ್ನೂ ನಾನು ಮಾಡಲಾರೆ."

ಕನ್ನಮಾರಿಯ ಜೀವ ಉಳಿಸಲು ಆತನನ್ನು ತನ್ನ ಅಂದರೆ ಮಂತ್ರಿಯ ಮುತ್ತಿನ ಪಲ್ಲಕ್ಕಿಯಲ್ಲಿ, ಮಂತ್ರಿಯ ಕಿರೀಟ ತೊಡಸಿ, ಗಂಗಾಂಬಿಕೆಯ ಎಲ್ಲ ಒಡವೆಗಳನ್ನೂ ಆತನಿಗೇ ಕೊಟ್ಟು ಆತನನ್ನು ಪಾರು ಮಾಡುತ್ತಾನೆ.
ಆ ಸಮಯದಲ್ಲಿ ಬಸವಣ್ಣನು ಅರ್ಧ ರಚಿಸಿದ ತನ್ನ ವಚನವನ್ನು ಪೂರ್ತಿಗೊಳಿಸಿ ಗಂಗಾಂಬಿಕೆಗೆ ಹೇಳುವ ಭಾಗವು ನಾಟಕದ ಉತ್ತುಂಗಭಾಗವೆನ್ನಬಹುದು.

ಬಸವಣ್ಣನ ತರ್ಕವು ಬುದ್ಧಿಯಿಂದ ಬಂದದ್ದಲ್ಲ, ಅದು ಆತನ ಹೃದಯದಿಂದ ಹೊಮ್ಮಿದ್ದು ಎನ್ನುವದು ಇತರರಿಗೆಲ್ಲ ಆಗ ಅರ್ಥವಾಗುತ್ತದೆ. ಬಸವಣ್ಣ ಬಯಸುವ ಸಮಾಜದ ಆದರ್ಶವೂ ಆ ವಚನದಿಂದಲೇ ಅರಿವಾಗುತ್ತದೆ.

ನಾಟಕದ ಕೊನೆಯ ದೃಶ್ಯದಲ್ಲಿ ಬಿಜ್ಜಳನ ದಂಡನಾಯಕನು ಬಸವಣ್ಣನ ಸೆರೆ ಹಿಡಿಯಲು ಸನ್ನದ್ಧನಾಗಿ ಬರುತ್ತಾನೆ. ಅದೇ ಸಮಯದಲ್ಲಿ ಬಿಜ್ಜಳನು ಕನ್ನಮಾರಿಯೊಂದಿಗೆ ಅಲ್ಲಿಗೆ ಬರುತ್ತಾನೆ. ಯಾಕೆಂದರೆ ಕನ್ನಮಾರಿಯು ತನ್ನ ಜೀವ ಉಳಿಸಿದ ಬಸವಣ್ಣನ ಜೀವವು ಅಪಾಯದಲ್ಲಿರುವದನ್ನು ಅರಿತುಕೊಂಡು, ತಾನೇ ಸ್ವತಃ ಬಿಜ್ಜಳನ ಅರಮನೆಗೆ ತೆರಳಿ, ಅಲ್ಲಿ ತನ್ನನ್ನೇ ಒಪ್ಪಿಸಿಕೊಂಡಿರುತ್ತಾನೆ.

ಕನ್ನಮಾರಿಯ ಬಿಡುಗಡೆಯಾಗುತ್ತದೆ ಹಾಗು ಆತನೂ ಸಹ ಶರಣಜೀವನಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ.
ಇದಿಷ್ಟು ನಾಟಕದ ಕಥಾನಕ.

ನಾಟಕದ ವೈಶಿಷ್ಟ್ಯಗಳು:
ಕೇವಲ ಕಳ್ಳನೊಬ್ಬನು ಶರಣನಾದ ಕತೆಯನ್ನು ಹೇಳುವ ನಾಟಕವಲ್ಲವಿದು. ಕಳ್ಳನನ್ನು ಶರಣನನ್ನಾಗಿ ಪರಿವರ್ತಿಸಿದ ಬಸವಣ್ಣನ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಮಾಡಿದ ಪ್ರಯತ್ನವು ಇಲ್ಲಿದೆ. ಬಸವಣ್ಣನ ವ್ಯಕ್ತಿತ್ವ ಎಂತಹದು?
ಅಂಗುಲಿಮಾಲಾನನ್ನು ಪರಿವರ್ತಿಸಿದ ಬುದ್ಧನ ವ್ಯಕ್ತಿತ್ವವೆ? ಅಥವಾ ಸಮಾಜಸುಧಾರಕನ ವ್ಯಕ್ತಿತ್ವವೆ?
ಬಸವಣ್ಣನ ಬಗೆಗೆ ಬರೆದ ಲೇಖಕರೆಲ್ಲ ಆತನನ್ನು ಅರಿತುಕೊಳ್ಳಲು ಪ್ರಯತ್ನಿಸಿ ಬರೆದವರೇ.

ವ್ಯಾಸ ದೇಶಪಾಂಡೆಯವರು ಇಲ್ಲಿ ಬಸವಣ್ಣನ ವ್ಯಕ್ತಿತ್ವವನ್ನು ಇತರ ಪಾತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದ್ದಾರೆ.
ಕನ್ನಮಾರಿ vs ಬಸವಣ್ಣ , ಬಿಜ್ಜಳ vs ಬಸವಣ್ಣ , ಶರಣರು vs ಬಸವಣ್ಣ , ಕೊನೆಗೆ ಗಂಗಾಂಬಿಕೆ vs ಬಸವಣ್ಣ.

ಜೊತೆಜೊತೆಗೇ ಆ ಸಮಯದ ಸಮಾಜದ ವ್ಯವಸ್ಥೆ, ದುಡಿವ ವರ್ಗದ ಶೋಷಣೆ, ಪ್ರಭುತ್ವದ ರಾಜಕೀಯ ಇವೆಲ್ಲ ನಾಟಕದಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಇಂತಹ ವ್ಯವಸ್ಥೆಗೆ ಒಂದು ಪ್ರತಿವ್ಯವಸ್ಥೆ ಇದೆಯೆ?
ಆಧುನಿಕ ಭಾರತದಲ್ಲಿ,ಗಾಂಧೀಜಿ, ವಿನೋಬಾ, ಜಯಪ್ರಕಾಶ ನಾರಾಯಣ ಇವರೆಲ್ಲ ಇದಕ್ಕಾಗಿ ಪ್ರಯತ್ನಿಸಿದವರೆಂದು ನಾವು ಬಲ್ಲೆವು.

ಇಲ್ಲಿ ಬರುವ ಕನ್ನಮಾರಿ ಹಳೆಯ ಕಾಲದ Robin Hood ಹಾಗೂ ಈ ಕಾಲದ ನಕ್ಸಲೀಯರನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಾನೆ ಎನ್ನಬಹುದಾದರೂ ಲೇಖಕರು ಇಂತಹ ಸುಳಿವುಗಳು ನುಸಳದಂತೆ ಪ್ರಯತ್ನಪೂರ್ವಕವಾಗಿ ನಾಟಕವನ್ನು ರಚಿಸಿದ್ದಾರೆ. ಅದರಂತೆಯೆ ಮಾರ್ಕ್ಸಿಸ್ಟ್ ಗುರುತುಗಳನ್ನೂ ಸಹ ಇಲ್ಲಿ ಸುಳಿಯಗೊಟ್ಟಿಲ್ಲ.
(ಕಮ್ಯುನಿಸ್ಟ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ಮಾರ್ಕ್ಸನನ್ನು ಬಸವಣ್ಣನಿಗೆ ಹೋಲಿಸುವದು ದೊಡ್ಡ ತಪ್ಪು. ಏಕೆಂದರೆ ಮಾರ್ಕ್ಸನು State Ownershipಅನ್ನು ಹೇಳುತ್ತಿದ್ದ ಹಾಗೂ ಆಧ್ಯಾತ್ಮವನ್ನು ತಿರಸ್ಕರಿಸಿದ್ದ.)
ಬಸವಣ್ಣನವರು ಮಾನವ ಘನತೆಯನ್ನು ಸಾಮಾಜಿಕ ಸಮಾನತೆಯನ್ನು, ಕಾಯಕದ ಮಹತ್ವವನ್ನು ಹಾಗೂ ಆಧ್ಯಾತ್ಮಿಕ ಅವಶ್ಯಕತೆಯನ್ನು ಜೀವಿಸಿ ತೋರಿಸಿದವರು. ಈ ಎಲ್ಲ ಅಂಶಗಳು ೫೩ ಪುಟಗಳ ಈ ಚಿಕ್ಕ ನಾಟಕದಲ್ಲಿ ಸಮರ್ಥವಾಗಿ ಬಂದಿವೆ.

ಎರಡನೆಯದಾಗಿ ಬಸವಣ್ಣನವರ ಈ ಆದರ್ಶಸಮಾಜದ ಅಂಗವ್ಯಕ್ತಿಗಳು ಯಾರು ಅನ್ನುವದನ್ನೂ ಸಹ ನಾಟಕವು ಸ್ಪಷ್ಟಪಡಿಸುತ್ತದೆ. ಶರಣಚಳವಳಿಯು ಕೇವಲ ಕೆಳಸ್ತರದವರ ಚಳವಳಿಯಲ್ಲ ಅಥವಾ ಕೇವಲ ಚಿಂತಕರ ಚಳವಳಿಯೂ ಅಲ್ಲ. ಇದೊಂದು ಸರ್ವಸಮನ್ವಯ ಚಳವಳಿ. ಈ ಆದರ್ಶ ಸಮಾಜಕ್ಕೆ ಯಾರೂ ಹೊರತಲ್ಲ. ಇದರಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಅದಕ್ಕೆಂದೇ ಈ ನಾಟಕದ ಶೀರ್ಷಿಕೆ: “ಇವ ನಮ್ಮವ”.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಐತಿಹಾಸಿಕ ನಾಟಕವೂ ಹೌದು ಹಾಗೂ ಸಾಮಾಜಿಕ ನಾಟಕವೂ ಹೌದು ಎನ್ನುವದು ಸ್ಪಷ್ಟವಾಗುತ್ತದೆ. ಆದುದರಿಂದ ಇದನ್ನು ಐತಿಹಾಸಿಕ-ಸಾಮಾಜಿಕ ನಾಟಕವೆಂದು ಕರೆಯಬಹುದೇನೊ?

ಈ ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ , ಮುಕ್ತಾಯವಾಗುವದು ಮರುದಿನದ ಬೆಳಗಿನಲ್ಲಿ. ಹುಲ್ಲು ಹೊರುವ ಹೆಣ್ಣುಮಗಳು ಬಸವಣ್ಣನ ಜೊತೆಗೆ ಮಾತನಾಡುವ flashback ಹೊರತುಪಡಿಸಿ ನಾಟಕದ ಕಾಲ ಒಂದೇ ದಿನಮಾನದ್ದು.
ಸರಳ ಆಡುನುಡಿಯ ಸಂಭಾಷಣೆ ನಾಟಕದ ಸೊಬಗನ್ನು ಹೆಚ್ಚಿಸಿದೆ.
ನಾಟಕದ ಅಂತರಾಳ ಎಷ್ಟೇ ಗಂಭೀರವಾಗಿದ್ದರೂ ಸಹ ಸನ್ನಿವೇಶಗಳು ಹಾಗೂ ಸಂಭಾಷಣೆಗಳು ಸಹಜ ವಿನೋದವನ್ನು ಹೊಮ್ಮಿಸುತ್ತವೆ. ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎನ್ನುವ ಆಶಾಭಾವವನ್ನು ಹೊಮ್ಮಿಸುವ ಈ ನಾಟಕವು ಬಸವಣ್ಣನವರ ಬಗೆಗೆ ರಚಿಸಲಾದ ಉಳಿದೆಲ್ಲ ದುರಂತ ನಾಟಕಗಳಿಗಿಂತ ಮನಸ್ಸನ್ನು ತಟ್ಟುತ್ತದೆ.

ಈ ನಾಟಕಕ್ಕೆ ಒಂದು ಮಿತಿಯೂ ಇದೆ. ಕಿರಿದರೊಳ್ ಪಿರಿದರ್ಥವಂ ಹೇಳುವಾಗ ಹುಟ್ಟುವ ಮಿತಿ ಅದು. ನಾಟಕದ ವಸ್ತು ಎಷ್ಟೇ ಜಟಿಲವಾಗಿದ್ದರೂ ಸಹ, ರಚನೆ ಸರಳವಾಗಿದೆ. ಇದು ಈ ನಾಟಕದ ಅನಿವಾರ್ಯತೆ ಹಾಗೂ ಮಿತಿ.
ಒಟ್ಟಿನಲ್ಲಿ ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಇದು ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.
……………………………………………………………………………….
ಟಿಪ್ಪಣಿ: ವ್ಯಾಸ ದೇಶಪಾಂಡೆಯವರ ಬಗೆಗೆ ಹೆಚ್ಚಿನ ಮಾಹಿತಿಯನ್ನು
http://kn.wikipedia.org/wiki/%E0%B2%B5%E0%B3%8D%E0%B2%AF%E0%B2%BE%E0%B2%B8_%E0%B2%A6%E0%B3%87%E0%B2%B6%E0%B2%AA%E0%B2%BE%E0%B2%82%E0%B2%A1%E0%B3%86 ದಲ್ಲಿ ಪಡೆಯಬಹುದು.