ಎಸ್.ಎಲ್.ಭೈರಪ್ಪನವರು ಇಂದು ಕನ್ನಡದ ಅತ್ಯಂತ ವಿವಾದಾತ್ಮಕ ಲೇಖಕರಾಗಿ ಖ್ಯಾತಿ ಪಡೆದಿದ್ದಾರೆ. ತಮ್ಮ ಮೊದಲ ಪ್ರಕಟಿತ ಕಾದಂಬರಿ ‘ಧರ್ಮಶ್ರೀ’ಯಿಂದಲೇ ಭೈರಪ್ಪನವರು ಪ್ರತಿಗಾಮಿ ಲೇಖಕ ಎಂದು ಗುರುತಿಸಲ್ಪಟ್ಟರು. ‘ಕವಲು’ ಕಾದಂಬರಿಯು ಪ್ರಕಟವಾದ ಬಳಿಕ ಇವರಿಗೆ ‘ಸ್ತ್ರೀವಿರೋಧಿ’ ಹಣೆಪಟ್ಟಿಯೂ ದೊರೆತಿದೆ. ಇದಕ್ಕೂ ಮೊದಲು ‘ಆವರಣ’ ಕಾದಂಬರಿಯು ಪ್ರಕಟವಾದಾಗ ‘ಅಲ್ಪಸಂಖ್ಯಾತ ವಿರೋಧಿ’ ಎನ್ನುವ ಬಿರುದು ಸಹ ಇವರಿಗೆ ಲಭಿಸಿತ್ತು. ಸ್ವತಃ ಭೈರಪ್ಪನವರು ಹಾಗು ಅವರ ಪ್ರತಿಪಾದಕರು ಈ ಮಾತುಗಳನ್ನು ಒಪ್ಪುವದಿಲ್ಲ.
ಹಾಗಿದ್ದರೆ ಎಸ್. ಎಲ್. ಭೈರಪ್ಪನವರ ವಾಸ್ತವ ರೂಪ ಯಾವುದು? ಈ ಸ್ವಾರಸ್ಯಕರ ವಿಷಯದ ಚರ್ಚೆಗಾಗಿ ಅವರ ಸಮಗ್ರ ಕಾದಂಬರಿಗಳ ಅವಲೋಕನ ಅವಶ್ಯವಾಗಿದೆ. ಭೈರಪ್ಪನವರ ಮೊದಲ ಪ್ರಕಟಿತ ಕಾದಂಬರಿ: ‘ಧರ್ಮಶ್ರೀ’. ಅಲ್ಲಿಂದ ಇಲ್ಲಿಯವರೆಗೆ, ಅಂದರೆ ‘ಕವಲು’ ಕಾದಂಬರಿಯವರೆಗೆ ಅವರು ೨೧ ಕಾದಂಬರಿಗಳನ್ನು ೪೦ ವರ್ಷಗಳಲ್ಲಿ ಪ್ರಕಟಿಸಿದ್ದಾರೆ.
‘ಧರ್ಮಶ್ರೀ’ ಕಾದಂಬರಿಯ ಕಥಾವಸ್ತುವು ತೋರಿಕೆಗೆ ಮತಾಂತರವಿದ್ದಂತೆ ಭಾಸವಾದರೂ ಮತಾಂತರದ ಜೊತೆಜೊತೆಗೇ ಸಂಸ್ಕೃತಿಯ ಬದಲಾವಣೆ ಆಗುವದೇ ಈ ಕಾದಂಬರಿಯ ನಿಜವಾದ ವಸ್ತುವಾಗಿದೆ. ಕಾದಂಬರಿಯ ನಾಯಕನ ಅಂತರಂಗದ ತೊಳಲಾಟಕ್ಕೆ ಇದೇ ಪ್ರಮುಖ ಕಾರಣವಾಗಿದೆ. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿಯೂ ಸಹ ಎರಡು ಸಂಸ್ಕೃತಿಗಳ (--ಸಾಂಪ್ರದಾಯಕ ಭಾರತೀಯ ಸಂಸ್ಕೃತಿ ಹಾಗು ಪಾಶ್ಚಾತ್ಯ ಸಂಸ್ಕೃತಿ--) ನಡುವಿನ ಘರ್ಷಣೆಯೇ ಕಥಾವಸ್ತುವಾಗಿದೆ.
ತಮ್ಮ ಕಾದಂಬರಿಗಳಲ್ಲಿ ಭೈರಪ್ಪನವರು ಭಾರತೀಯ ಸಾಂಪ್ರದಾಯಕ ಸಂಸ್ಕೃತಿಯ ವಕಾಲತ್ತನ್ನು ಮಾಡುವವರಂತೆ ಕಾಣಿಸುತ್ತಾರೆ. ಇದು ಬಹುಮಟ್ಟಿಗೆ ನಿಜವಾದರೂ ಸಂಪೂರ್ಣ ಸತ್ಯವಲ್ಲ. ಉದಾಹರಣೆಗೆ ಅವರ ಸುಪ್ರಸಿದ್ಧ ಕಾದಂಬರಿ ‘ವಂಶವೃಕ್ಷ’ ವನ್ನೇ ತೆಗೆದುಕೊಳ್ಳಿರಿ. ಈ ಕಾದಂಬರಿಯ ನಾಯಕಿ ‘ಕಾತ್ಯಾಯನಿ’ಯು ವಿಧವೆಯಾದ ಬಳಿಕ ಕಾಲೇಜು ಶಿಕ್ಷಣ ಪಡೆಯುತ್ತಾಳೆ ಹಾಗು ಪ್ರೇಮವಿವಾಹ ಮಾಡಿಕೊಳ್ಳುತ್ತಾಳೆ. ಸಾಂಪ್ರದಾಯಕ ಕುಟುಂಬದಲ್ಲಿ ಬೆಳೆದ ಅವಳಲ್ಲಿ ಇದರಿಂದಾಗಿ ಪಾಪಪ್ರಜ್ಞೆ ಬೆಳೆದಿದ್ದರೆ ಹಾಗು ಅದರಿಂದಾಗಿ ಸತತ ಗರ್ಭಪಾತಗಳಾದರೆ, ಅದರಲ್ಲಿ ಮನೋವೈಜ್ಞಾನಿಕ ತಪ್ಪೇನೂ ಇಲ್ಲ. ಭೈರಪ್ಪನವರ ಕೆಲವು ವಿಮರ್ಶಕರು ಇದನ್ನು ಸ್ತ್ರೀವಿರೋಧಿ ವರ್ಣನೆ ಎಂದು ಸಾಧಿಸುವದು ಸರಿಯಲ್ಲ. ಕಾತ್ಯಾಯನಿಯ ವಿಚಾರಗಳ ವಿರುದ್ಧವಾದ ಧ್ರುವದಲ್ಲಿ ಇರುವವರು ಅವಳ ಮಾವನಾದ ಶಾಸ್ತ್ರಿಗಳು. ಅವಳ ಮೊದಲ ಮದುವೆಯ ಮಗನು ಶಾಸ್ತ್ರಿಗಳ ವಂಶಕ್ಕೆ ಸೇರಿದವನೆನ್ನುವ ಕಾರಣಕ್ಕಾಗಿ ಶಾಸ್ತ್ರಿಗಳು ಆತನನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಕಾದಂಬರಿಯ ವೈಚಾರಿಕ ಘರ್ಷಣೆ ಪ್ರಾರಂಭವಾಗುವದು ಇದರ ನಂತರವೇ. ಸ್ವತಃ ಶಾಸ್ತ್ರಿಗಳೇ ತಮ್ಮ ತಂದೆಗೆ ಹುಟ್ಟಿದವರಲ್ಲವೆನ್ನುವ ಆಘಾತಕಾರಿ ಸತ್ಯ ಅವರಿಗೆ ತಿಳಿದು ಬರುತ್ತದೆ. ಇದು ಅವರ ಸಂಪ್ರದಾಯ ನಿಷ್ಠೆಯನ್ನು ಬುಡಸಹಿತ ಅಲುಗಾಡಿಸಿ ಬಿಡುತ್ತದೆ. ‘ವಂಶವೃಕ್ಷ’ ಕಾದಂಬರಿಯು ಕಂದಾಚಾರವನ್ನು ಎತ್ತಿ ಹಿಡಿಯುವ ಕಾದಂಬರಿ ಎನ್ನುವವರು ಈ ಅಂತಿಮ ಸತ್ಯದರ್ಶನ ಕ್ಷಣದ ಬಗೆಗೆ ಏನು ಹೇಳುತ್ತಾರೆ?
ಶಾಸ್ತ್ರಿಗಳು ಸನಾತನ ಧರ್ಮದ ಆದೇಶಗಳಲ್ಲಿ ಹಾಗು ಆದರ್ಶಗಳಲ್ಲಿ ನಿಷ್ಠೆಯನ್ನು ಹೊಂದಿದವರು. ಅವರ ಹೆಂಡತಿಯೊಡನೆ ರಮಿಸುವದು ಅವರಿಗೆ ವೈದ್ಯಕೀಯವಾಗಿ ಅಸಾಧ್ಯವಾದಾಗ ಬ್ರಹ್ಮಚರ್ಯೆಯನ್ನು ಶ್ರದ್ಧೆಯಿಂದ ಪಾಲಿಸಿದವರು. ಇಂತಹ ಸಂದರ್ಭದಲ್ಲಿ ಅವರ ಹೆಂಡತಿಯೇ ಅವರಿಗಾಗಿ ಒಂದು ‘ಬದಲಿ ವ್ಯವಸ್ಥೆ’ಯನ್ನು ಮಾಡಲು ಹೊರಟಾಗ, ಆ ಆಮಿಷದಿಂದ ಹೊರಬಂದವರು. ಇಂತಹ ಒಂದು ಉದಾತ್ತ ವ್ಯಕ್ತಿಯನ್ನು ಚಿತ್ರಿಸುವದರಲ್ಲಿ ತಪ್ಪೇನಿದೆ? ಈ ವ್ಯಕ್ತಿಯನ್ನು ಅನಂತಮೂರ್ತಿಯವರು ಬರೆದ ‘ಸಂಸ್ಕಾರ’ ಕಾದಂಬರಿಯ ಪ್ರಾಣೇಶಾಚಾರ್ಯರ ಜೊತೆಗೆ ಹೋಲಿಸಿರಿ. ಪ್ರಾಣೇಶಾಚಾರ್ಯರೂ ಸಹ ರೋಗಿಷ್ಠ ಹೆಂಡತಿಯ ಸೇವೆ ಮಾಡುತ್ತ, ಇಂದ್ರಿಯನಿಗ್ರಹವನ್ನು ಸಾಧಿಸಿಕೊಂಡು ಇದ್ದವರು. ಆದರೂ ಸಹ ಒಂದು ಸಂದರ್ಭದಲ್ಲಿ ಇವರು ಕಾಮಕ್ಕೆ ಬಲಿಯಾಗುತ್ತಾರೆ. ಆ ಕ್ಷಣದಲ್ಲಿ ಅವರಿಗೆ ಸತ್ಯದರ್ಶನ(!)ವಾಗುತ್ತದೆ. ಇಷ್ಟೇ ಆದರೆ ಇದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಅನಂತಮೂರ್ತಿಯವರ ನಿಜವಾದ ಗುರಿ ಬೇರೆಯದೇ ಆಗಿದೆ. (‘ಕಹೀಂ ಪೆ ನಿಗಾಹೆ, ಕಹೀಂ ಪೆ ಇಶಾರೆ!)
‘ಸಂಸ್ಕಾರ’ ಕಾದಂಬರಿಯಲ್ಲಿ ಅನಂತಮೂರ್ತಿಯವರು ಅಸ್ತಿತ್ವವಾದದ ವಕೀಲಿ ಮಾಡಲು ಹೊರಟಿದ್ದಾರೆ. ಮನುಷ್ಯನು ಮೂಲತಃ ಪ್ರಾಣಿಯೇ ಆಗಿರುವದರಿಂದ, ಪ್ರಾಣಿಸಹಜವಾದ ಕಾಮನೆಗಳನ್ನು ನಿಗ್ರಹಿಸುವದರಲ್ಲಿ ಅರ್ಥವಿಲ್ಲ, ಮನುಷ್ಯನಿಗೆ ‘ಸಂಸ್ಕಾರ’ಗಳು ಬೇಕಾಗಿಲ್ಲ ಎನ್ನುವ ವಾದವನ್ನು ಅನಂತಮೂರ್ತಿಯವರು ಪ್ರತಿಪಾದಿಸಲು ಬಯಸುತ್ತಾರೆ. ಆದರೆ ಇದನ್ನು ಸೀದಾ ಹೇಳಿಬಿಟ್ಟರೆ, ಓದುಗನು ತಮ್ಮ ವಾದವನ್ನು ತಿರಸ್ಕರಿಸಬಹುದು ಎನ್ನುವ ಶಂಕೆ ಅವರಿಗಿದೆ. ಆದುದರಿಂದ ಅವರು ಈ ಕತೆಯಲ್ಲಿ ಧೂರ್ತತನದಿಂದ ಮತ್ತೊಂದು ಕತೆಯನ್ನು ಜೋಡಿಸಿದ್ದಾರೆ. ಪ್ರಾಣೇಶಾಚಾರ್ಯರ ಊರಿನಲ್ಲಿ ಇವರ antithesis ಆದ ಓರ್ವ ವ್ಯಕ್ತಿಯ ಸಾವು ಘಟಿಸುತ್ತದೆ. ಆತನ ಶವಸಂಸ್ಕಾರ ಮಾಡಲು ಬ್ರಾಹ್ಮಣರು ಯಾರೂ ಮುಂದೆ ಬರುವದಿಲ್ಲ. ಇದಕ್ಕೆ ಬ್ರಾಹ್ಮಣರ ಕುರುಡು ಸಂಪ್ರದಾಯ ಪಾಲನೆಯೇ ಕಾರಣ ಎಂದು ಅನಂತಮೂರ್ತಿಯವರು ಸೂಚಿಸುತ್ತಾರೆ. ಈ ರೀತಿಯಾಗಿ ಬ್ರಾಹ್ಮಣರ ಕುರುಡು ಸಂಪ್ರದಾಯಗಳನ್ನು ಟೀಕಿಸುವ ನೆಪದಿಂದ, ಸಂಪ್ರದಾಯಸ್ಥ ಬ್ರಾಹ್ಮಣನೊಬ್ಬನ ಮನೋನಿಗ್ರಹದ ಆದರ್ಶವನ್ನು ಲೇವಡಿ ಮಾಡುವದರಲ್ಲಿ ಅನಂತಮೂರ್ತಿಯವರು ಸಫಲರಾಗಿದ್ದಾರೆ. ಇದು ಅನಂತಮೂರ್ತಿಯವರ ಧೂರ್ತ ಬರವಣಿಗೆಯ ಮಾದರಿ.
ಭೈರಪ್ಪನವರ ವಕಾಲತ್ತುಗಳನ್ನು ನಾವು ಮೆಚ್ಚದಿದ್ದರೂ ಸಹ ಅವರು ಇಂತಹ ಧೂರ್ತತನವನ್ನು ಮಾಡುವದಿಲ್ಲ ಎನ್ನುವದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಅವರ ಕಾದಂಬರಿಗಳು ಜನಪ್ರಿಯವಾಗಲು ಕಾರಣವೆಂದರೆ, ಆ ಕಾದಂಬರಿಗಳ ನಾಯಕನಿಗೆ ಇರುವ passion, fervour ಹಾಗು sincerity.
ಭೈರಪ್ಪನವರ ಕಾದಂಬರಿಗಳು ‘ಆಧುನಿಕ ಸ್ತ್ರೀ ವಿರೋಧಿ’ ಕಾದಂಬರಿಗಳು. ಅವರ ಕಾದಂಬರಿಗಳಲ್ಲಿ ಬರುವ ಒಳ್ಳೆಯ ನಾಯಕಿಯರು ಗಂಡನ ಸೇವೆಯನ್ನು ಮಾಡುವ ಪತಿವ್ರತೆಯರು! ಆದರೆ ಈ ಪತಿವ್ರತಾ ಸ್ತ್ರೀಯರ ಗಂಡಂದಿರೂ ಸಹ ಆದರ್ಶ ವ್ಯಕ್ತಿಗಳೇ ಆಗಿದ್ದಾರೆ. (ಉದಾಹರಣೆ: ದೂರ ಸರಿದರು, ಮತದಾನ, ಗ್ರಹಣ ಇತ್ಯಾದಿ.)
ಒಟ್ಟಿನಲ್ಲಿ ಭೈರಪ್ಪನವರು ತಮ್ಮ ಕಾದಂಬರಿಗಳ ಮೂಲಕ ಸಾಂಪ್ರದಾಯಕ ಸಂಸ್ಕೃತಿ ಹಾಗು ಆಧುನಿಕ ಸಂಸ್ಕೃತಿ ಇವುಗಳ ತುಲನೆಯನ್ನು ಮಾಡಲು ಬಯಸುತ್ತಾರೆ. ಅವರನ್ನು ನಮ್ಮ ಸಾಂಸ್ಕೃತಿಕ ಅನ್ವೇಷಕ ಎಂದು ಕರೆಯುವದರಲ್ಲಿ ಏನೂ ತಪ್ಪಿಲ್ಲ, ಅವರ ಪ್ರತಿಪಾದನೆಗಳನ್ನು ನಾವು ಒಪ್ಪದಿದ್ದರೂ ಸಹ!