Sunday, June 22, 2014

‘ನವಿಲು’....................ದ.ರಾ.ಬೇಂದ್ರೆಕಲಘಟಗಿ ಇದು ಧಾರವಾಡದಿಂದ ೩೫ ಕಿಲೋಮೀಟರ ದೂರದಲ್ಲಿರುವ ತಾಲುಕಾ ಸ್ಥಳ. ಧಾರವಾಡವು ಮಲೆನಾಡಿನ ಸೆರಗಾದರೆ, ಕಲಘಟಗಿಯು ಪೂರ್ಣ ಮಲೆನಾಡಾಗಿದೆ. ಬೇಂದ್ರೆಯವರು ಒಮ್ಮೆ ಧಾರವಾಡದಿಂದ ಕಲಘಟಗಿಗೆ ಪ್ರಯಾಣಿಸುತ್ತಿದ್ದಾಗ ದಾರಿಯ ಬದಿಯ ಗದ್ದೆಯಲ್ಲಿ ನವಿಲೊಂದನ್ನು ನೋಡಿದ್ದಾರೆ. ಅದು ಬಹುಶಃ ಬೇಸಿಗೆಯ ಕಾಲವಿರಬೇಕು. ನವಿಲುಗಳು ಬೇಸಿಗೆಯ ಕಾಲದಲ್ಲಿ ಸಂತಾನೋತ್ಪಾದನೆಯನ್ನು ಮಾಡುತ್ತವೆ. ಬೇಸಿಗೆಯಲ್ಲಿ ಅಡ್ಡ ಮಳೆಗಳು ಹುಯ್ಯುವ ಸಮಯದಲ್ಲಿ ಗಂಡು ನವಿಲು ತನ್ನ ರೆಕ್ಕೆಗಳನ್ನು ಹರಡಿಕೊಂಡು ಕುಣಿಯುತ್ತದೆ ಹಾಗು ಜೊತೆಗೂಡಲೆಂದು ಹೆಣ್ಣು ನವಿಲನ್ನು ಆಹ್ವಾನಿಸುತ್ತದೆ. ಮಳೆ ಬರುವ ಮುನ್ಸೂಚನೆ ಹಕ್ಕಿಗಳಿಗೆ ತಿಳಿಯುವುದು ಅಸಹಜವೇನಲ್ಲ. ಅನೇಕ ಜೀವಿಗಳಲ್ಲಿ ಈ ಪೂರ್ವಸಂವೇದನಾ ಶಕ್ತಿ ಇದ್ದೇ ಇರುತ್ತದೆ. ಆದುದರಿಂದ ನವಿಲು ಕುಣಿದರೆ ಮಳೆ ಬರುತ್ತದೆ ಎಂದು ನಮ್ಮ ಗ್ರಾಮೀಣ ಪೂರ್ವಜರು ಭಾವಿಸುತ್ತಿದ್ದರು. 

ಆದರೆ ಬೇಂದ್ರೆಯವರು ನೋಡಿದ ನವಿಲು ತನ್ನ ಪಂಖವನ್ನು ಮುಚ್ಚಿಕೊಂಡು ಸುಮ್ಮನೇ ನಿಂತಿದೆ. ಇದು ಬೇಂದ್ರೆಯವರಲ್ಲಿ ಒಂದು ಕಲ್ಪನೆಯನ್ನು ಹುಟ್ಟಿಸಿರಬಹುದು. ಮಳೆಯು ಆಗದೇ ಇರುವದರಿಂದ, ಭೂಮಿ ಒಣಗಿ ಹೋಗಿದೆ, ಜನ ತತ್ತರಿಸುತ್ತಿದ್ದಾರೆ. ಈ ನವಿಲು ಕುಣಿದರೆ ಮಳೆ ಬಂದೀತೆ ಎಂದು ಬೇಂದ್ರೆಯವರ ಮನಸ್ಸು ಹೊಯ್ದಾಡಿರಬಹುದು. ಆಗ ಬೇಂದ್ರೆಯವರಲ್ಲಿ ಮೂಡಿದ ಹಾಡು, ‘ಕುಣಿ ಕುಣಿ ನವಿಲೇ ಕುಣೀ ಕುಣೀ’! ಕವಿತೆಯ ಪೂರ್ಣಪಾಠ ಹೀಗಿದೆ:

ಕುಣಿ ಕುಣಿ, ನವಿಲೇ, ಕುಣೀ ಕುಣೀ || ಪಲ್ಲವಿ ||
ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ,
ಕುದಿವುದು ಮೋಡವು, ತೊಟ್ಟಿಡದಿದೆ ಮಳೆ,
ಬತ್ತಿತು ಹಳ್ಳವು, ಅತ್ತಿತು ತೊರೆ ಹೊಳೆ,
ತಾಪವ ನೀ ಮರೆ, ಕುಣೀ ಕುಣೀ
ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ,
ಸರಸತಿ ಅರಳಿಸಿದೀ ಶತಪತ್ರ,
ರೋಮಾಂಚನದೊಳು ಕುಣೀ ಕುಣೀ
ನೀ ಕುಣಿ, ಜೊತೆಗಾತಿಯನೂ ಕುಣಿಸು;
ನಿನ್ನ ನೋಡಿ ಜಗ ಮರೆವರ ತಣಿಸು.
ಹರುಷ ಬಾಷ್ಪಗಳನೆತ್ತಲು ಹಣಿಸು;
ಕೇಕೆಯ ಹಾಕುತ ಕುಣೀ ಕುಣೀ
ನಭಕ್ಕೆ ಏನಿದೆ ನೆಲದಲಿ ಆಸೆ?
ನೆಲಕಿದೆ ಆರದ ಶುಷ್ಕ ಪಿಪಾಸೆ!
ಮೊಳಗಲಿ ನಿನ್ನಾನಂದದ ಭಾಷೆ
ನೆಲೆ ಮುಗಿಲನು ಹೆಣೆದೀತು ಮಳೆ
ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ.
..........................................................................................
ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ,
ಕುದಿವುದು ಮೋಡವು, ತೊಟ್ಟಿಡದಿದೆ ಮಳೆ,
ಬತ್ತಿತು ಹಳ್ಳವು, ಅತ್ತಿತು ತೊರೆ ಹೊಳೆ,
ತಾಪವ ನೀ ಮರೆ, ಕುಣೀ ಕುಣೀ

ಕ್ರಮಬದ್ಧ ಬೆಳೆವಣಿಗೆಯು   ಬೇಂದ್ರೆಯವರ ಕವನಗಳ ಅಚೂಕ ವೈಶಿಷ್ಟ್ಯವಾಗಿದೆ. ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಭೂಮಿಯ ಬವಣೆಯನ್ನು ಬಣ್ಣಿಸುತ್ತಿದ್ದಾರೆ. ಬಾಯಾರಿಕೆಯಿಂದ ಭೂತಾಯಿ ಬಾಯ್ಬಿಡುತ್ತಿದ್ದಾಳೆ ಎಂದು ಹೇಳುವಾಗ, ಬೇಂದ್ರೆಯವರು ಎರೆಮಣ್ಣಿನ ಹೊಲಗಳಲ್ಲಿ ಎದ್ದಿರುವ ಬಿರುಕುಗಳನ್ನು ಚಿತ್ರಿಸುತ್ತಿದ್ದಾರೆ. ಈ ಪರೋಕ್ಷ ವರ್ಣನೆ ಬೇಂದ್ರೆಯವರ ಕವನಗಳ ಮತ್ತೊಂದು ಲಕ್ಷಣವಾಗಿದೆ. ಭೂತಾಯಿಯ ಬಾಯಾರಿಕೆಗೆ ಕಾರಣವೆಂದರೆ ಮಳೆ ಇಲ್ಲ. ಮಳೆ ಇಲ್ಲದ್ದರಿಂದ ತೊರೆ, ಹಳ್ಳಗಳೆಲ್ಲ ಬತ್ತಿ ಹೋಗಿವೆ. ಮಳೆಯನ್ನು ಸುರಿಸುವ ಮೋಡವು ಸುಡುಬೇಸಿಗೆಯಿಂದಾಗಿ ಕಾಯ್ದಿದೆ. ಕಾಯ್ದ ಮೋಡವು ಮೇಲೇರಿ ಹೋಗುವುದು ಹಾಗು ಮಳೆಯನ್ನು ಸುರಿಸದೆ ಇರುವುದು ವೈಜ್ಞಾನಿಕ ಸತ್ಯವಾಗಿದೆ. ಅರ್ಥಾತ್ ಬೇಂದ್ರೆಯವರ ಕವನಗಳಲ್ಲಿ ಕಲ್ಪನೆಯು ಯಾವಾಗಲೂ ಸತ್ಯವನ್ನು ಅನುಸರಿಸುತ್ತದೆ. ಮಳೆಯೇ ಇಲ್ಲವಾದಾಗ, ಹಳ್ಳ ಬತ್ತಿ ಹೋಗುವುದು ಸಹಜವಾಗಿದೆ; ಸ್ವಲ್ಪ ನೀರು ಇರಬಹುದಾದ ತೊರೆ ಹಾಗು ಹೊಳೆಗಳಲ್ಲಿ ಈ ನೀರು, ಹೊಳೆಯು ಅತ್ತಿದ್ದರ ಪರಿಣಾಮದಂತೆ ಕಾಣುವುದು ಕಲ್ಪನೆಯ ಪರಮಶಿಖರವಾಗಿದೆ! ಇಷ್ಟೆಲ್ಲ ಸಂಕಟವು ಸುತ್ತಲೂ ಸುತ್ತಿರುವಾಗಲೂ ಸಹ, ಬೇಂದ್ರೆಯವರು ನವಿಲಿಗೆ ಕುಣಿಯಲು ಕರೆಯುತ್ತಿದ್ದಾರೆ. ‘ತಾಪವನ್ನು ಮರೆ’ ಎಂದು ಹೇಳುವಾಗ, ‘ಬಿಸಿಲಿನ ಶಕೆ’ ಎಂದು ಸೂಚಿಸುವದರ ಜೊತೆಗೆ ‘ಮಾನಸಿಕ ಸಂತಾಪ’ ಎನ್ನುವ ಅರ್ಥವನ್ನೂ ಬೇಂದ್ರೆಯವರು ಸೂಚಿಸುತ್ತಿದ್ದಾರೆ.

ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ,
ಸರಸತಿ ಅರಳಿಸಿದೀ ಶತಪತ್ರ,
ರೋಮಾಂಚನದೊಳು ಕುಣೀ ಕುಣೀ

ನವಿಲು ಕುಣಿದ ಮಾತ್ರಕ್ಕೆ ಮಳೆ ಆದೀತೆ ಎನ್ನುವ ಸಂಶಯ ಯಾರಿಗಾದರೂ ಬರುವುದು ಸಹಜವೇ ಆಗಿದೆ. ಬೇಂದ್ರೆಯವರಿಗೂ ಸಹ ಈ ಸಂಶಯ ಬಂದಿರಬಹುದು. ಆದುದರಿಂದ ಅವರು ನವಿಲಿನ ಅಲೌಕಿಕತೆಯನ್ನು ಆಲೋಚಿಸುತ್ತಾರೆ. ನವಿಲು ನಮ್ಮೆಲ್ಲರಂತೆ ಕೇವಲ ಭೂಜೀವಿ ಅಲ್ಲ. ದೇವಲೋಕದ ಸರಸ್ವತಿಯು ‘ಶತಪತ್ರ’ದ ಮೇಲೆ ಎಂದರೆ ಕಮಲದ ಹೂವಿನ ಮೇಲೆ ಆಸೀನಳಾಗಿರುತ್ತಾಳೆ. ನವಿಲಿನ ರೆಕ್ಕೆಗಳೂ ಸಹ ಶತಪತ್ರಗಳು ಅಂದರೆ ನೂರು ಕಣ್ಣಿನ ಗರಿಗಳಾಗಿವೆ. ಈ ರೆಕ್ಕೆಗಳಿಂದ ಮಾಡಿದ ಬೀಸಣಿಗೆಯು ಗಾಳಿಯನ್ನು ಬೀಸಿಕೊಳ್ಳುವುದಕ್ಕಾಗಿ ಭೂಲೋಕದಲ್ಲಿ ಬಳಕೆಯಾಗುತ್ತದೆ. ಸ್ವರ್ಗ ಹಾಗು ಪಾತಾಳ ಲೋಕದಲ್ಲಿ ಇದು ಅಲಂಕಾರವಾಗಿ ಉಪಯೋಗಿಸಲ್ಪಡುತ್ತದೆ. ಅಲ್ಲದೆ ನವಿಲು ಸರಸ್ವತಿಯ ವಾಹನವೂ ಅಹುದು. ಇದೆಲ್ಲವೂ ನವಿಲಿಗಿರುವ ದೇವಸಂಬಂಧವನ್ನು ತಿಳಿಸುತ್ತದೆ. ಇಂತಹ ಅಸಾಮಾನ್ಯ ಜೀವಿಯಾದ ನವಿಲು ಕುಣಿದರೆ ಮಳೆ ಆಗದಿದ್ದೀತೆ? ಜೊತೆಗಾತಿಯ ಜೊತೆಗೆ ನರ್ತಿಸುವುದು ನವಿಲಿಗೆ ರೋಮಾಂಚನವನ್ನು ಮಾಡಿದರೆ, ಮಳೆ ಆದೀತೆನ್ನುವ ಆಸೆ ಮಾನವರನ್ನು ರೋಮಾಂಚನಗೊಳಿಸುತ್ತದೆ!

ನೀ ಕುಣಿ, ಜೊತೆಗಾತಿಯನೂ ಕುಣಿಸು;
ನಿನ್ನ ನೋಡಿ ಜಗ ಮರೆವರ ತಣಿಸು.
ಹರುಷ ಬಾಷ್ಪಗಳನೆತ್ತಲು ಹಣಿಸು;
ಕೇಕೆಯ ಹಾಕುತ ಕುಣೀ ಕುಣೀ

ಮಳೆಯು ಆಗಲಿ ಎನ್ನುವ ಹಂಬಲದಿಂದ ಬೇಂದ್ರೆಯವರು ನವಿಲಿಗೆ ಕುಣಿಯಲು ಆಹ್ವಾನವನ್ನೇನೊ ಇತ್ತರು. ಆದರೆ ಬೇಂದ್ರೆಯವರಿಗೆ ನವಿಲಿನ ಕುಣಿತದ ಮೂಲೋದ್ದೇಶ ಚೆನ್ನಾಗಿ ಗೊತ್ತು. ಆದುದರಿಂದಲೇ ‘ ನಿನ್ನ ಜೊತೆಗಾತಿಯನ್ನೂ ಕುಣಿತಕ್ಕೆ ಕರೆ; ನಿಮ್ಮ ಲೋಕಸಂಗ್ರಹ ಕಾರ್ಯ ನೆರವೇರಲಿ’ ಎನ್ನುತ್ತಾರೆ. ಈ ಕುಣಿತವನ್ನು ನೋಡಿದ ಜನ ಹರ್ಷಿತರಾಗುತ್ತಾರೆ. ಏಕೆ ಎನ್ನುತ್ತೀರಾ? ಇದು ಕೇವಲ ನವಿಲಿನ ನರ್ತನವನ್ನು ನೋಡಿದ ಆನಂದವಲ್ಲ, ಅಥವಾ ಒಂದು ಗಳಿಗೆಯ ಮಟ್ಟಿಗಾದರೂ ಜನರು ಸುತ್ತಲಿನ ತಾಪವನ್ನು ಮರೆತಿದ್ದಾರೆ ಎನ್ನುವ ಆನಂದವಲ್ಲ. ನಿಸರ್ಗವು ಸಂತೋಷದಿಂದ ಇದ್ದರೆ, ಜಗತ್ತಿಗೆಲ್ಲ ಒಳ್ಳೆಯದಾಗುತ್ತದೆ ಎನ್ನುವ ತಿಳಿವಳಿಕೆಯು ಈ ಆನಂದಕ್ಕೆ ಕಾರಣ. ಕಾಲಕಾಲಕ್ಕೆ ಮಳೆ ಬರಬೇಕು, ನವಿಲು ಕುಣಿಯಬೇಕು, ಸಕಲ ಜೀವಿಗಳು ತೃಪ್ತರಾಗಿರಬೇಕು ಎನ್ನುವ ಜೀವನದರ್ಶನ.

ನಭಕ್ಕೆ ಏನಿದೆ ನೆಲದಲಿ ಆಸೆ?
ನೆಲಕಿದೆ ಆರದ ಶುಷ್ಕ ಪಿಪಾಸೆ!
ಮೊಳಗಲಿ ನಿನ್ನಾನಂದದ ಭಾಷೆ
ನೆಲೆ ಮುಗಿಲನು ಹೆಣೆದೀತು ಮಳೆ

ಇಲ್ಲಿ ಕವಿಯಲ್ಲಿ ಒಂದು ಸಂಶಯ ಹುಟ್ಟುತ್ತದೆ. ಆಕಾಶವು ಮಳೆಯನ್ನು ಏಕೆ ಸುರಿಸಬೇಕು. ಅಂತಹ ಹಂಗು ಏನಿದೆ ಅದಕ್ಕೆ?  ಆದರೆ ಭೂಮಿಗೆ ಮಾತ್ರ ಯಾವಾಗಲೂ ತೀರದಂತಹ ಬಾಯಾರಿಕೆ ಇದೆ. ಆ ಕಾರಣದಿಂದ ಆಕಾಶವು ಮಳೆಯನ್ನು ಅನುಗ್ರಹಿಸಬೇಕು. ಇದೇ ‘ದ್ಯಾವಾ ಪೃಥವಿ’ಗಳ ನಡುವಿನ ಸಂಬಂಧ, ಇದೇ ಲೌಕಿಕ ಹಾಗು ಅಲೌಕಿಕಗಳ ನಡುವಿನ ಪ್ರೇಮಸಂಬಂಧ. (ಇಲ್ಲಿ ಬಸವಣ್ಣನವರ ‘ಹಳೆಯ ನಾನು, ಕೆಳೆಯ ನೀನು’ ಎನ್ನುವ ವಚನ ನೆನಪಾಗುತ್ತದೆ.) ಆದುದರಿಂದ, ನವಿಲೇ, ನೀನು ಕೇಕೆ ಹಾಕುತ್ತ ಕುಣಿ. ಆ ಕರೆಗೆ ಸ್ಪಂದಿಸಿ ಮಳೆ ಭೂಲೋಕವನ್ನು ತಲುಪೀತು!

ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ.

ನವಿಲಿನ ಮೂಲಕ ಬೇಂದ್ರೆಯವರು ದೇವರನ್ನೂ ಸಹ ಪ್ರಾರ್ಥಿಸುತ್ತಿದ್ದಾರೆ. ಈ ಪ್ರಾರ್ಥನೆಯ ಫಲಶ್ರುತಿ ಏನು? ಮಳೆಯು ಕೆಳಗೆ ಧುಮ್ಮಿಕ್ಕುವದರಿಂದ ಬೆಳೆ ಮೇಲೆ ಉಕ್ಕುವುದು. ಭೂತಾಯಿಯು ಸಂತುಷ್ಟಳಾಗಿ ಆಕಾಶಕ್ಕೆ ಜಿಗಿದಂತೆ ಇದು ತೋರುವುದು. ಆದುದರಿಂದ ಸಾವಿರ ಚಿಕ್ಕೆಗಳು ಇರುಳಿನ ಆಗಸದಲ್ಲಿ ಹೊಳೆಯುವಂತೆ, ನಿನ್ನ ರೆಕ್ಕೆಗಳನ್ನು ಹರಡಿಕೊಂಡು ಕುಣಿ ಎಂದು ಬೇಂದ್ರೆಯವರು ನವಿಲಿಗೆ ಕೇಳಿಕೊಳ್ಳುತ್ತಾರೆ. ಇದು ಮತ್ತೊಮ್ಮೆ ಭೂಲೋಕ ಹಾಗು ದೇವಲೋಕದ ಸಂಬಂಧವನ್ನು ನೆನಪಿಸುತ್ತದೆ. ಇದು ಬೇಂದ್ರೆಯವರು ನವಿಲಿಗೆ ಮಾಡುವ ಪ್ರಾರ್ಥನೆಯೂ ಹೌದು ; ದೇವರಲ್ಲಿ ಅವರು ಮಾಡುವ ಪ್ರಾರ್ಥನೆಯೂ ಹೌದು.