Tuesday, August 30, 2022

ಹಲವು ನಾಡು ಹೆಜ್ಜೆ ಹಾಡು..ಜಯಶ್ರೀ ದೇಶಪಾಂಡೆ-----ಭಾಗ ೨

 ಪ್ರಜ್ಞಾವಂತ ನಾಗರಿಕನಿಗೆ ಸಾಹಿತ್ಯದಿಂದ ಸಿಗುವಷ್ಟು ಸುಖವು ಮತ್ತೆ ಯಾವ ಕಲೆಯಿಂದಲೂ ಸಿಗಲಾರದು. ಸಾಹಿತ್ಯಸುಖದಲ್ಲಿ ಎರಡು ಅಂಶಗಳಿವೆ. ಒಂದು ಸಾಹಿತ್ಯಕೃತಿಯ ಅಂತರಂಗ; ಎರಡನೆಯದು ಬಹಿರಂಗ. ಈ ಬಹಿರಂಗಕ್ಕೇ ಶೈಲಿ ಎಂದೂ ಕರೆಯಬಹುದು. ನಮ್ಮ ಪ್ರಾಚೀನ ಸಾಹಿತ್ಯದ ದಿಗ್ಗಜರಾದ ಕಾಲೀದಾಸ, ಭಾರವಿ, ದಂಡಿ ಹಾಗು ಮಾಘ ಇವರ ಶೈಲಿಯ ವೈಶಿಷ್ಟ್ಯದ ಬಗೆಗೆ ಹೀಗೊಂದು ಶ್ಲೋಕವಿದೆ:

‘ಉಪಮಾ ಕಾಲಿದಾಸಸ್ಯ, ಭಾರವೇರರ್ಥಗೌರಮಮ್;

ದಂಡಿನ: ಪದಲಾಲಿತ್ಯಮ್, ಮಾಘೇ ಸಂತಿ ತ್ರಯೋ ಗುಣಾ:’

ಈ ಗುಣಗಳಿಂದಲೇ ಇವರು ಶ್ರೇಷ್ಠರಾದರು ಎಂದರ್ಥವಲ್ಲ ; ಅದರೆ ಈ ಗುಣಗಳು ಅವರ ಸಾಹಿತ್ಯಕ್ಕೆ ಮೆರಗು ಕೊಟ್ಟಿವೆ.

 

ಜಯಶ್ರೀ ದೇಶಪಾಂಡೆಯವರು ರಚಿಸಿದ ‘ಹಲವು ನಾಡು, ಹೆಜ್ಜೆ ಹಾಡು’ ಕೃತಿಯನ್ನು ಓದುವಾಗ, ಈ ಶ್ಲೋಕ ನನ್ನ ಮನದಲ್ಲಿ ಸುಳಿದಾಡಿತು. ಜಯಶ್ರೀ ದೇಶಪಾಂಡೆಯವರ ಕೃತಿಗೆ ಮೆರಗು ಕೊಟ್ಟಂತಹ ಅನೇಕ ಗುಣಗಳು ಇಲ್ಲಿವೆ. ಅವರ ಕೃತಿಯ ಅಂತರಂಗದ ಬಗೆಗೆ ಈಗಾಗಲೇ ನಾನು ನನ್ನ ‘ಸಲ್ಲಾಪ’ದಲ್ಲಿ ಬರೆದಿದ್ದೇನೆ. (https://sallaap.blogspot.com/2022/07/blog-post.html) ಈಗ ಅವರ ಕೃತಿಯ ಬಹಿರಂಗಗುಣಗಳ ಬಗೆಗೆ ಅಂದರೆ ಶೈಲಿಯ ಬಗೆಗೂ ಒಂದಿಷ್ಟು ಮಾತನ್ನು ಹೇಳದಿದ್ದರೆ, ನನಗೆ ಸಮಾಧಾನವಿರದು!

 

ಜಯಶ್ರೀ ದೇಶಪಾಂಡೆಯವರ ತಾಯಿನುಡಿ ಕನ್ನಡ, ಮನೆಯಲ್ಲಿ ಸಂಸ್ಕೃತದ ದಟ್ಟ ಛಾಯೆ. ವ್ಯಾವಹಾರಿಕ ಪರಿಸರ ಹಾಗು ಮರಾಠಿ ಸಂಗೀತವು ಇವರ ಮೇಲೆ ಆಳವಾದ ಪ್ರಭಾವ ಬೀರಿದೆ. ಇಂಗ್ಲಿಶ್ ಭಾಷೆ ಇವರ ಪ್ರೌಢ ಶಿಕ್ಷಣದ ಮಾಧ್ಯಮ. ಹಿಂದೀ ಭಾಷೆಯು ಮಾಧ್ಯಮಿಕ ಶಾಲೆಯ ಉಪಭಾಷೆ ಹಾಗು ಚಲನಚಿತ್ರಗಳ ಕೊಡುಗೆ! ಈ ರೀತಿಯಾಗಿ ಪಂಚಭಾಷಾ ಪ್ರವೀಣರಾದ ಜಯಶ್ರೀಯವರ ಶೈಲಿಯು ಅವರ ಕೃತಿಗಳಿಗೆ ವಿಶಿಷ್ಟವಾದ ಮೆರಗನ್ನು ನೀಡಿದೆ.

 

ಮಾರ್ದವತೆ ಜಯಶ್ರೀ ದೇಶಪಾಂಡೆಯವರ ಸಾಹಿತ್ಯದ ಪ್ರಧಾನ ಗುಣವಾಗಿದೆ. ಇವರ ಶೈಲಿಯು ದಟ್ಟ ಕಾನನದಲ್ಲಿ ಜುಳುಜುಳು ಎಂದು ಹರಿಯುವ ತೊರೆಯಂತಿದೆ, ಅರ್ಭಟದ ಪ್ರವಾಹದಂತಲ್ಲ. ಇಂತಹ ತೊರೆಯಲ್ಲಿ ಚಾರಣಿಗನು ಸುಖದಿಂದ ತೊರೆಯ ತಂಪನ್ನು ಅನುಭವಿಸಬಹುದು. ಅವನಿಗೆ ತೊರೆಯ ಜೊತೆಗೆ ಲಭಿಸುವ ಆತ್ಮೀಯತೆಯು ಅರ್ಭಟದ ಪ್ರವಾಹದ ಜೊತೆಗೆ ಸಿಗಲಾರದು. ಇಂತಹ ಶೈಲಿಯು ಜಯಶ್ರೀ ದೇಶಪಾಂಡೆಯವರಿಗೆ ಸಹಜವಾದ ಭಾಷಾಪ್ರೌಢಿಮೆಯಿಂದ ಸಾಧ್ಯವಾಗಿದೆ. ಮಾದರಿಗೆಂದು ಅವರ ಕೃತಿಯಿಂದ ಕೆಲವು ಸಾಲುಗಳನ್ನು ಎತ್ತಿಕೊಂಡು ಇಲ್ಲಿ ಸಾದರಪಡಿಸುತ್ತೇನೆ:

 

(೧) ಸರೋವರದ ಎರಡೂ ದಂಡೆಗುಂಟ ಸ್ವಪ್ನ ಸದೃಶ ಕಿರುಚಿತ್ರಗಳ ಹಾಗೆ ಅಂಟಿಕೊಂಡ ಬಣ್ಣದ ಹೆಂಚಿನ                         ಮನೆಗಳ ರಾಶಿ ಪೇರಿಸಿಕೊಂಡ ಊರುಗಳು ಕೈಬೀಸಿ ಬೀಳ್ಕೊಟ್ಟವು.

(೨) ಪಕ್ಕನೆ ನೆನಪಿನ ನೆರಳಿನಿಂದ ಎದ್ದು ಬಂದಳಾಕೆ, ಹಿಮದ ಹುಡುಗಿ!

(೩) ಭಾವ ನಿರ್ಭಾವದ ನಡುವಿನ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು

(೪) ಬೆರಗಿಗೆ ಹೊಸ ಅರ್ಥ ಕಂಡಂತಾಯಿತು. 

(೫) ಸ್ವಚ್ಛ ಶುಭ್ರ ಬಿಸಿಲಿನ ಆಕಾಶ ಕೆಲವೇ ಮೋಡಗಳಿಗೆ ಹಾದು ಹೋಗಲು ಅನುಮತಿ ನೀಡಿ ಉಳಿದೆಲ್ಲ ವಿಸ್ತಾರಕ್ಕೂ ನೀಲಿಯನ್ನು ಹಾಸಿತ್ತು.

 (೬) ಸ್ವಾಗತ ಪ್ರಾಂಗಣದಲ್ಲಿ ಎಡಬಲಕ್ಕೂ ಚಾಚಿದ ಗೋಡೆಗುಂಟ ಅಸಂಖ್ಯಾತ ಕಿರುಗೂಡುಗಳ ಒಡಲುಗಳಲ್ಲಿ ನಾನಾ ಧ್ಯಾನಸ್ಥ ವಿನ್ಯಾಸಮುದ್ರೆಯಲ್ಲಿರುವ ಬುದ್ಧ ಪ್ರತಿಮೆಗಳ ಪ್ರತಿಫಲಿತ ಮಿರುಗು............

 (೭) ಸೃಷ್ಟಿ ಸ್ಥಿತಿಗಳ ಸಮೀಕರಣದ ಯೋಗಭಾಗವನ್ನು ತನ್ನ ಪ್ರಖರತೆಯ  ಉನ್ಮೀಲನದಲ್ಲಿ ತುಂಬಿ ಚೆಲ್ಲುತ್ತಿದ್ದ ಸವಿತೃವಿನ ಆ ಕ್ಷಣದ ಅಸ್ತಿತ್ವ ನಮ್ಮ ಚಿತ್ತದಲ್ಲಿ ನೆಲೆಗೊಳ್ಳ ತೊಡಗಿತು.....

(೮) ಇನ್ನುಳಿದಂತೆ ದಂಡೆಸಾಲು ಹಿಡಿದು ಉದ್ದುದ್ದಕ್ಕೆ ಸಾಲುಗಟ್ಟಿದ ಹಸಿರುಡುಗೆಯ ಮರಗಳು ಚೆಲ್ಲುವ ನೆರಳಿನ ಚಿತ್ತಾರದ ವಿನ್ಯಾಸ

(೯) ನಿರಂತರ ಗುಂಗೀಹುಳವಾಗಿ ಕಾಡಿದ್ದು ಮರೆಯಲಸದಳ

(೧೦) ....ಅವರ ಈ ಗಂಗೆ ನೂರಾ ಎಪ್ಪತ್ತೈದು ಅಡಿಗಳೆತ್ತರದ ಹಿಂಭಾಗದಲ್ಲಿ  ಸಮಪಾತಳಿಯಲ್ಲಿ ಅಗಲವಾಗಿ ಹರಡಿ ಹಾಸಿ ಪ್ರಶಾಂತವಾದ ಜುಳು ಜುಳು ಗಾನಕ್ಕೆ ತನ್ನನ್ನೇ ತಂತಿಯಾಗಿಸಿಕೊಳ್ಳುತ್ತ ಸಲಿಲಗಾನ ಗುನುಗುತ್ತ ಬಂದವಳು ತೇಲು ತೇಲುತ್ತ ತಟಾರನೆ ಬುಡ ಕಡಿದ ಬಾಳೆಯಾಗಿ ಗರ್ಜಿಸುತ್ತ ಅಂಚಿನಿಂದ ಉರುಳುವಾಗ ಅಲ್ಲಿ ಜಗತ್ತೇ ಬೆರಗಾಗಿ ಕಣ್ಣರಸುವ ಅಚ್ಚರಿಯನ್ನು ಹೆರುತ್ತಾಳೆ............

 

 

ಜಯಶ್ರೀ ದೇಶಪಾಂಡೆಯವರು ಅನೇಕ ಪದಗಳನ್ನು ಸಹಜವಾಗಿ, ಅನಾಯಾಸವಾಗಿ ಸೃಷ್ಟಿಸುತ್ತಾರೆ. ಅಂತಹ ಕೆಲವು ಪದಗಳು ಇಲ್ಲಿವೆ: 

ಕಿರುಗರ್ವ

ನಿಸರ್ಗಪರ್ವ

ಹೆಗಲೆಣೆ

ಭಾಸ್ಕರನ ಉರಿಚೆಂಡಿನ ಉಪಸ್ಥಿತಿ

ಕಾಡುಮನೆ

ಚಾಚುಹಲಗೆ

ಸಪ್ತಮಾತೃಕೆಯರು (ಏಳು ಗೊಂಬೆಗಳು)

ಸಮಯಸೂಚಿಯ ಬೊಂಬೆಯಾಟ

ಸುಣ್ಣಗಲ್ಲಿನ ಶಿಲ್ಪಗಳು

ಇರಸರಿಕೆ

ಆಕಾಶಕಿಂಡಿ

ಉರುಳುಬಂಡಿ

ಬೆಂಕಿಗೂಡು

ಹಂದಿಗೂಡು

ಕಿರುಗೂಡು

ಸ್ವಾಗತ ಪ್ರಾಂಗಣ

ದೇಗುಲಸೂಚೀ ಹೂವು

ವಧುವಿನ ಮುಸುಕು

ಜಲಧೂಮ

ಜಲಪಾತ ಗೀತೆ

ಸ್ಮಶಾನ ಪ್ರವಾಸ

ಕಂದರಾಗ್ರೇಸರ

ಮೃತಾವಾಸ

 

ಕನ್ನಡದ ವಿವಿಧ ಲೇಖಕರು ಹಾಗು ವಿವಿಧ ಭಾಷೆಯ ಲೋಕನುಡಿಗಳನ್ನೂ ಸಹ ಸಹ ಜಯಶ್ರೀ ದೇಶಪಾಂಡೆಯವರು ಈ ಕೃತಿಯಲ್ಲಿ ಸಮಯೋಚಿತವಾಗಿ ಉದ್ಧರಿಸಿದ್ದಾರೆ. ಬಂಗಾರಕ್ಕೆ ಕುಂದಣವನ್ನಿಟ್ಟಂತೆ ಈ ವಿಶೇಷಣಗಳು ಓದುಗನನ್ನು ರಂಜಿಸುತ್ತವೆ. ಪ್ರವಾಸಕಥನದಲ್ಲಿ ಇಂತಹ ಉದ್ಧರಣೆಗಳು ಅನಿರೀಕ್ಷಿತವಾಗಿ, ಮೋದಕರವಾಗಿವೆ. ಅಂತಹ ಕೆಲವು ಉದ್ಧರಣೆಗಳು ಹೀಗಿವೆ:

(೧) ‘ಈ ಬಾನು.... ಈ ಹೂವು... ಈ ಹಕ್ಕಿ.... ಈ ಚುಕ್ಕಿ ತೇಲಿ ಸಾಗುವ ಈ ಮುಗಿಲು’... (ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವನ).

 

(೨) ಮರಣದಿಂ ಮುಂದೇನು? ಪ್ರೇತವೋ? ಭೂತವೋ? ಪರಲೋಕವೋ? ಪುನರ್ಜನ್ಮವೋ? ಅದೇನೋ!

ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ! ಧರೆಯ ಬಾಳ್ಗದರಿನೇಂ? ಮಂಕುತಿಮ್ಮ!

 

(೩) ಆಕಾಶಕ್ಕೆ ನೀಲಿ ಬಳಿದವನಾರೋ

 

(೪) ಜಿಸ್ಕೀ ಲಾಠೀ ಉಸ್ಕೀ ಭೈಂಸ್

 

(೫) ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ

 

()  ಅಗರ್ಫಿರ್ದೌಸ್ ಬರೂ--ಜಮೀನ್ ಅಸ್ತ, ಹಮೀನಸ್ತ, ಹಮೀನಸ್ತ,ಹಮೀನಸ್ತ.

 

 

ಯಾವುದೇ ಲೇಖಕನ ಒಂದು ಕೃತಿ ಓದುಗನಿಗೆ ಮೆಚ್ಚುಗೆಯಾಗಲು ಎರಡು ಕಾರಣಗಳಿವೆ: (೧) ಕೃತಿಯ ಅಂತರಂಗ (೨) ಕೃತಿಯ ಬಹಿರಂಗ.

 

ಜಯಶ್ರೀ ದೇಶಪಾಂಡೆಯವರ ‘ಹಲವು ನಾಡು ಹೆಜ್ಜೆ ಹಾಡು’  ಕೃತಿಯು ಅವರು ಸಂದರ್ಶಿಸಿದ ದೇಶಗಳ ನಿಸರ್ಗ, ಸಂಸ್ಕೃತಿ, ಸಾಹಿತ್ಯ ಹಾಗು ಜನಜೀವನಗಳ ಪರಿಚಯವನ್ನು ಮಾಡಿಕೊಟ್ಟಿದೆ. ಇಲ್ಲಿ ಬಳಸಲಾದ ಸರಸ ಶೈಲಿಯು ಈ ಕೃತಿಯನ್ನು ಸುರಸ ಕೃತಿಯನ್ನಾಗಿ ರೂಪಿಸಿದೆ.  (https://sallaap.blogspot.com/2022/07/blog-post.html)

 

ಭಾಷೆಯನ್ನು ವಿವಿಧ ರೂಪಗಳಲ್ಲಿ ಸಲೀಲವಾಗಿ ಬಳಸುವ ಜಯಶ್ರೀ ದೇಶಪಾಂಡೆಯವರ ಈ ಸಾಮರ್ಥ್ಯ ಓದುಗನಿಗೆ ಸಾಹಿತ್ಯದ ಸುಖವನ್ನು  ಕೊಡುವುದರಲ್ಲಿ ಆಶ್ಚರ್ಯವೇನಿದೆ?

Friday, July 8, 2022

ಹಲವು ನಾಡು ಹೆಜ್ಜೆ ಹಾಡು---ಜಯಶ್ರೀ ದೇಶಪಾಂಡೆ....ಭಾಗ ೧

 ‘ಹಲವು ನಾಡು ಹೆಜ್ಜೆ ಹಾಡು’ ಇದು ಜಯಶ್ರೀ ದೇಶಪಾಂಡೆಯವರು ರಚಿಸಿದ ಪ್ರವಾಸಕಥನ. ಈ ಕೃತಿಯನ್ನು ಸರಸ ಸಾಹಿತ್ಯ ಹಾಗು ಸುರಸ ಸಾಹಿತ್ಯ ಎಂದು ಕರೆಯಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಇದು ಶುಷ್ಕ ಪ್ರವಾಸವರ್ಣನೆಯಾಗಿರದೆ, ಆ ಎಲ್ಲ ನಾಡಿಗರ ಜೊತೆಗೆ ಜಯಶ್ರೀಯವರು ಸಾಧಿಸಿದ ಆಪ್ತಸಂವಹನೆ, ಆ ದೇಶಗಳ ವಿವಿಧ ವೈಶಿಷ್ಟಗಳು ಹಾಗು ಅದರಿಂದ  ತಮ್ಮ ಮನಸ್ಸು ವಿಸ್ತಾರವಾದ ಪರಿಯನ್ನು ಹಾಗು ಮುದಗೊಂಡ ಪರಿಯನ್ನು, ಜಯಶ್ರೀಯವರು ಪರಿಪರಿಯಾಗಿ ವರ್ಣಿಸಿದ್ದಾರೆ. ಈ ಪರದೇಶಗಳ ಭೌತಿಕ ಹಾಗು ಸಾಂಸ್ಕೃತಿಕ ವೈಭವವನ್ನು ಗ್ರಹಿಸಲು ತೆರೆದ ಕಣ್ಣುಗಳು, ತೆರೆದ ಮನಸ್ಸು ಹಾಗು ಸಹೃದಯ ರಸಿಕತೆ ಬೇಕು. ಅದು ಈ ಲೇಖಕಿಯಲ್ಲಿ ಇದೆ ಎನ್ನುವುದು ನಿಸ್ಸಂದೇಹವಾಗಿದೆ. ಅದರ ಜೊತೆಗೇ ಭಾರತೀಯ ಮನಸ್ಸೂ ಜ್ವಲಂತವಾಗಿದೆ. ಆದುದರಿಂದಲೇ, ಈ ಕೃತಿಯನ್ನು ಓದುತ್ತಿರುವಾಗ ನಮಗೆ ನಮ್ಮವನೇ ಆದ ಆದಿಕವಿ ಪಂಪನು ‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಉದ್ಗರಿಸಿದ್ದು ನೆನಪಿಗೆ ಬರುತ್ತದೆ. ಇಲ್ಲಿ ಬನವಾಸಿಯ ಬದಲಾಗಿ ಹಲವು ಪಾಶ್ಚಿಮಾತ್ಯ ದೇಶಗಳಿವೆ! ಇಷ್ಟಲ್ಲದೆ, ಈ ದೇಶಗಳ ಸಾಂಸ್ಕೃತಿಕ, ರಾಜಕೀಯ ಹಾಗು ಐತಿಹಾಸಿಕ ಹಿನ್ನೆಲೆಗಳನ್ನೂ ಸಹ ಜಯಶ್ರೀ ದೇಶಪಾಂಡೆಯವರು ನೀಡಿರುವದರಿಂದ ಈ ಕೃತಿಯನ್ನು ೩೬೦ ಡಿಗ್ರೀಗಳ ಸಂಪೂರ್ಣ ಕಥನವೆನ್ನಬೇಕು.

 ‘ಹಲವು ನಾಡು ಹೆಜ್ಜೆ ಹಾಡು’ ಕೃತಿಯನ್ನು ನಾವು ಎರಡು ದೃಷ್ಟಿಕೋನಗಳಿಂದ ವಿಶ್ಲೇಷಿಸುವುದು ಅವಶ್ಯಕವಾಗಿದೆ. ಮೊದಲನೆಯದು ಕಥನಕೌಶಲ; ಎರಡನೆಯದು ಭಾಷಾಪ್ರತಿಭೆ. ಜಯಶ್ರೀ ದೇಶಪಾಂಡೆಯವರ ಕಥೆಗಳನ್ನು ಹಾಗು ಕಾದಂಬರಿಗಳನ್ನು ಓದಿದವರಿಗೆ ಅವರ ಕಥನಕೌಶಲದ ಬಗೆಗೆ ಹೇಳಬೇಕಾಗಿಲ್ಲ. ಅದೇ ಕುಶಲತೆಯು ಈ ಪ್ರವಾಸ ಕಥನದಲ್ಲೂ ವ್ಯಕ್ತವಾಗಿದೆ. ತಮ್ಮ ಆಪ್ತರೊಂದಿಗೆ ಆರಾಮವಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿರುವಂತೆ ಬರೆಯುತ್ತಾರೆ ಜಯಶ್ರೀಯವರು. ಹೀಗಾಗಿ ಅವರ ಮಾತು ನೇರವಾಗಿ ಓದುಗರ ಹೃದಯವನ್ನು ತಲುಪುತ್ತದೆ.

 ಫಿನ್ ಲ್ಯಾಂಡಿನ ಬಗೆಗೆ ಅವರು ಬರೆದ ಲೇಖನದ ಒಂದು ತುಣುಕನ್ನು ಇಲ್ಲಿ ಉದಾಹರಣೆಗೆಂದು ಎತ್ತಿಕೊಳ್ಳುತ್ತೇನೆ:

" ಮುಂಜಾವಿನ ಸೂರ್ಯ ಈರ್ಯಾಳೊಂದಿಗೆ ನಮ್ಮನ್ನು ನಗುತ್ತ ಸ್ವಾಗತಿಸಿದ್ದ. ಆಹ್ಲಾದಕರ ಗಾಳಿ, ಎಲ್ಲೆಲ್ಲೂ ಹಸರು ಮತ್ತು ಗಿಣಿಹಸುರಿನ ಆಚ್ಛಾದನೆ...... ಸರೋವರದ ತುಂಬ ನೀಲಿ ನೀಲಿಯಾಗಿ ಚಲಪಲ ಅನ್ನುವ ನೀರು ಅದನ್ನೇ ಎವೆಯಿಕ್ಕದೆ ನೋಡುವಂತೆ ಮಾಡಿತ್ತು. ಬೆಳಗಿನ ಕಾಫಿಯೊಂದಿಗೆ ಅವಳೇ ತಯಾರಿಸಿದ ಹಣ್ಣುಗಳ ಕೇಕ್ ತುಂಬಾ ರುಚಿ ಎನಿಸಿತ್ತು. ನಮ್ಮೊಂದಿಗೆ ಒಯ್ದಿದ್ದ ರವೆ ಉಂಡಿಗಳನ್ನು ಅವಳೂ ಬಹಳ ಪ್ರೀತಿಯಿಂದ ಅಸ್ವಾದಿಸಿದಳು.....................". ಈ ಕಥನದಲ್ಲಿ ಬರುವ ಸೂರ್ಯ, ಗಾಳಿ, ನಿಸರ್ಗದ ಬಣ್ಣಗಳು, ನೀರಿನ ಚಲಪಲ , ಈರ್ಯಾ ಹಾಗು ಅವಳು ತಯಾರಿಸಿದ ಬೆಳಗಿನ ಕಾಫೀ ಮತ್ತೂ ಕೇಕ್, ಜೊತೆಗೆ ಜಯಶ್ರೀಯವ ರವೆ ಉಂಡಿಗಳು ಎಂತಹ ಉಲ್ಲಾಸಭರಿತ ಆತ್ಮೀಯತೆಯನ್ನು ಸೃಷ್ಟಿಸುತ್ತವೆಯಲ್ಲವೆ?

ಫಿನ್ ಲ್ಯಾಂಡಿನ ವರ್ಣನೆಯನ್ನು ಜಯಶ್ರೀಯವರು ಪ್ರಾರಂಭಿಸುವುದು ಒಂದು ಅಪೂರ್ವ ಘಟನೆಯಾದ ಮಧ್ಯರಾತ್ರಿಯ ಸೂರ್ಯನೊಂದಿಗೆ. ಫಿನ್ ಲ್ಯಾಂಡಿನ ಈ ಸೂರ್ಯನನ್ನು ನೋಡಿದಾಗ ಜಯಶ್ರೀಯವರಿಗೆ ನೆನಪಾಗುವುದು ವಸಂತರಾವ ದೇಶಪಾಂಡೆ ಎನ್ನುವ ಪ್ರಸಿದ್ಧ ಮರಾಠೀ ಗಾಯಕರೊಬ್ಬರು ಹಾಡಿದ  ಸೂರ್ಯಸ್ತುತಿ ಗಾಯನ:

" ತೇಜೋನಿಧಿ ಲೋಹಗೋಳ.....ಭಾಸ್ಕರ ಹೇ ಗಗನರಾಜ...

ದಿವ್ಯ ತುಝಾ ತೇಜಾನೇ ಝಗಮಗಲೇ ಗಗನ ಆಜ.......".

 ಜಯಶ್ರೀಯವರ ನೋಟ ಫಿನ್ ಲ್ಯಾಂಡಿನ ಸೂರ್ಯನಲ್ಲಿ; ಅವರ ಭಾವೋದ್ದೀಪನೆ ಭಾರತೀಯ ಸಂಗೀತದಲ್ಲಿ!

 ರಾತ್ರಿ ಒಂದೂವರೆ ಗಂಟೆಗೆ ಜಯಶ್ರೀ ದೇಶಪಾಂಡೆ ಹಾಗು ಇತರರು ಮನೆಗೆ ಮರಳುತ್ತಾರೆ. ಆದರೆ ಫಿನ್ ಲ್ಯಾಂಡಿನ ಸೂರ್ಯನಿಗೆ ಎಲ್ಲಿದೆ ವಿಶ್ರಾಂತಿ? ಜಯಶ್ರೀಯವರು ಹೇಳುತ್ತಾರೆ:

‘ಬಾನು ನಸುಬೆಳ್ಳಗೆ ಬೆಳಗಿಕೊಂಡೇ ಇತ್ತು! ಸೂರ್ಯ ಆಕಾಶದಲ್ಲಿ ನಗುತ್ತಲೇ ಇದ್ದ!’

 ಜಯಶ್ರೀಯವರು ಕುತೂಹಲಿಗಳು ಅರ್ಥಾತ್ ಜ್ಞಾನಪಿಪಾಸುಗಳು. ಅವರು ಅಲ್ಲಿಯ ಜನರೊಡನೆ ನಡೆಸಿದ ಸಂಭಾಷಣೆಗಳು ಪರಸ್ಪರ ಮೈತ್ರಿಯನ್ನು ಹೆಚ್ಚಿಸುವದಷ್ಟೇ ಅಲ್ಲ, ಆ ನಾಡುಗಳ ಬಗೆಗಿನ ನಮ್ಮ ಜ್ಞಾನವನ್ನೂ ಸಹ ಹೆಚ್ಚಿಸುತ್ತವೆ. 

 ಫಿನ್ ಲ್ಯಾಂಡಿನಲ್ಲೆಲ್ಲ ಹಬ್ಬಿಕೊಂಡ ಕಾಡು  ಅಲ್ಲಿಯ ಪ್ರಜೆಗಳ ವೈಯಕ್ತಿಕ ಆಸ್ತಿಯಾಗಿದೆ. ಹೀಗಾಗಿ ಇಲ್ಲಿಯ ಜನರು ಜೂನ್, ಜುಲಾಯ್ ಹಾಗು ಅಗಸ್ಟು ತಿಂಗಳುಗಳಲ್ಲಿ ತಮ್ಮ ತಮ್ಮ ವೈಯಕ್ತಿಕ ಕಾಡುಗಳಲ್ಲಿ ಇರುವ ಕಾಡುಮನೆಗಳಿಗೆ ಧಾವಿಸುತ್ತಾರೆ. ಅಲ್ಲಿ ಬೋಟಿಂಗ್, ಶಿಬಿರಾಗ್ನಿ, ಮೊದಲಾದ ಮೋಜಿನ ಹಾಗು ಸಾಹಸದ ಆಟಗಳನ್ನು ಆಡುತ್ತಾರೆ. ಜಯಶ್ರೀ ದೇಶಪಾಂಡೆಯವರು ಸಹ ಇವೆಲ್ಲವುಗಳಲ್ಲಿ ಭಾಗವಹಿಸಿ ಸಹೃದಯ ಸಂಗಾತಿಗಳ ಜೊತೆಗೆ ಖುಶಿ ಪಟ್ಟಿದ್ದಾರೆ. ಅದರಲ್ಲಿಯೂ ಸೌನಾ ಸ್ನಾನದ ಸಂಭ್ರಮವಂತೂ ಶರೀರ ಹಾಗು ಮನಸ್ಸುಗಳೆರಡನ್ನೂ ತಣಿಸುವಂತಹ ಆಹ್ಲಾದಕರ ಸಂಗತಿಯಾಗಿದೆ!

 ಫಿನ್ ಲ್ಯಾಂಡಿನ ನಿಸರ್ಗವನ್ನು ಸವಿದ ಬಳಿಕ, ಅಲ್ಲಿಯ ಜನಜೀವನವನ್ನು ವರ್ಣಿಸದಿದ್ದರೆ, ಪ್ರವಾಸಕಥನವು ಪೂರ್ಣವಾದೀತೆ? ಜಯಶ್ರೀಯವರು ಈ ಕಥನದ ಭಾಗವಾಗಿ ಫಿನ್ನಿಶ್ ಜನರ ಬಗೆಗೆ ಹೇಳುವ ಒಳನೋಟದ ಮಾತುಗಳ ಒಂದು ಭಾಗ ಇಲ್ಲಿದೆ:

 " ಇಲ್ಲಿನ ಸ್ತ್ರೀ, ಪುರುಷರು ಒಬ್ಬಂಟಿಗರಾಗಿ ಬದುಕುವದು ಅಪರೂಪದ ಸಂಗತಿಯೇ ಅಲ್ಲ, ಹಾಗೆ ಇರಲು ಅಗತ್ಯವಿರುವ ದೈಹಿಕ, ಮಾನಸಿಕ, ಸಾಮಾಜಿಕ ಅನುಕೂಲಗಳನ್ನು ಅವರು ಗಳಿಸಿಕೊಂಡಿರುತ್ತಾರೆ. ಸಿಂಗಲ್ ಮದರ್, ಸಿಂಗಲ್ ಫಾದರ್ ಇವೆರಡೂ ಸರ್ವೇ ಸಾಮಾನ್ಯ. ಮಕ್ಕಳಾಗಲು ಮದುವೆಯಾಗಲೇಬೇಕು ಎನ್ನುವ ಕಡ್ಡಾಯವಿಲ್ಲ..... ಕೊನೆಯವರೆಗೂ ಜೊತೆ ಇರಲಿ, ಇಲ್ಲದಿರಲಿ ತಾವು ತಾವಾಗಿಯೇ ಜೀವನವನ್ನು ಆರೋಗ್ಯಪೂರ್ಣವಾಗಿ ಬದುಕಿ ದಾಟಿಬಿಡುವ ಇವರ ಜೀವನಶೈಲಿಯ ಹಿಂದಿರುವುದು ಇವರ ದೈಹಿಕ/ ಮಾನಸಿಕ ಗಟ್ಟಿಮುಟ್ಟುತನ ಅಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ......"

 (ಫಿನ್ ಲ್ಯಾಂಡಿನ ಸಮಾಜದ ರೀತಿ,ನೀತಿಗಳನ್ನು ಟೀಕಿಸದೆ, ಅವುಗಳನ್ನು ಒಪ್ಪಿಕೊಳ್ಳುವಂತಹ ಸರ್ವಗುಣಗ್ರಾಹಿ ಮನೋಭಾವವನ್ನು ಇಲ್ಲಿ ನಾವು ನೋಡಬಹುದು. ಇದು ಯಾವುದೇ ಲೇಖಕನಲ್ಲಿ ಇರಲೇಬೇಕಾದ ಗುಣ.)

 ಇನ್ನು ಫಿನ್ ಲ್ಯಾಂಡಿನ ಇತಿಹಾಸ ಹಾಗು ರಾಜಕಾರಣದ ಬಗೆಗೆ ಒಂದು ಮಾತು ಬೇಡವೆ? ಈ ಅನುಭವ ಅವರಿಗೆ ದೊರೆಯುವುದು ಪ್ರವಾಸೀ ಬಸ್ ಒಂದರಲ್ಲಿ. ಫಿನ್ ಲ್ಯಾಂಡಿನಿಂದ ರಶಿಯಾದ ಸೇಂಟ್ ಪೀಟರ್ಸ್ ಬರ್ಗ ನಗರಕ್ಕೆ ಬಸ್ ಒಂದರಲ್ಲಿ ಜಯಶ್ರೀಯವರು ಹೊರಟುಬಿಡುತ್ತಾರೆ. ಸುದೈವದಿಂದ ಮೈಯಾ ವೆಕೇವಾ ಎನ್ನುವ ಹೆಣ್ಣು ಮಗಳೊಬ್ಬಳು ಜಯಶ್ರೀಯವರಿಗೆ ಆಕಸ್ಮಿಕ ಜೊತೆಗಾತಿಯಾಗಿ ದೊರೆತಳು. ಒಂಬತ್ತು ಭಾಷೆಗಳನ್ನು ತಿಳಿದ ಹಾಗು ಪೋಲೀಸ್ ಇಲಾಖೆಯಲ್ಲಿ ತರ್ಜುಮೆಕಾರಳಾಗಿ ಕೆಲಸ ಮಾಡುತ್ತಿದ್ದ ಅವಳು ತಿಳಿಸಿದ ಸಂಗತಿಯೆಂದರೆ ರಶಿಯಾ ಹಾಗು ಸ್ವೀಡನ್ ದೇಶಗಳ ನಡುವೆ ಸಿಲುಕಿದ ಫಿನ್ ಲ್ಯಾಂಡ್ ಈ ದೇಶಗಳ ದಬ್ಬಾಳಿಕೆಯಿಂದಾಗಿ ನಲುಗಿ ಹೋಗಿತ್ತು. ಕಷ್ಟಪಟ್ಟು ಮೇಲೆದ್ದುಕೊಂಡು ನಿಂತಿದ್ದು ಈ ಪುಟ್ಟ ದೇಶದ ದೊಡ್ಡ ಸಾಧನೆ. ಮೈಯಾಳ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಂಡ ಜಯಶ್ರೀಯವರು, ಫಿನ್ ಲ್ಯಾಂಡಿನ ಸಂಕಟಗಳನ್ನು ಹಾಗು ಸಾಹಸಮಯ ಪುನರುತ್ಥಾನವನ್ನು ಅರಿತುಕೊಂಡು ಓದುಗರಿಗೆ ಸರಳವಾಗಿ ತಿಳಿಸಿದ್ದಾರೆ.

 ಫಿನ್ ಲ್ಯಾಂಡಿನ ನಂತರ ಜಯಶ್ರೀಯವರು, ನಮ್ಮನ್ನು ರಶಿಯಾಕ್ಕೆ ಕರೆದುಕೊಂಡು ಹೋಗುತ್ತಾರೆ. ರಶಿಯಾದ ಅವರ ಪ್ರವಾಸ ಒಂದೇ ದಿನದ್ದು. ಆದರೆ ಅಲ್ಲಿ ಅವರು ಪಡೆದ ಅನುಭವ ಮನ ತಣಿಸುವಂತಹದು. ಸೇಂಟ್ ಪೀಟರ್ಸಬರ್ಗ ಇದು ರಶಿಯಾದಲ್ಲಿ ಪ್ರಸಿದ್ಧವಾದ ಪ್ರವಾಸಿತಾಣ. ಇಲ್ಲಿರುವ ಕೆಥೆಡ್ರಾಲ್ ತನ್ನ ವಾಸ್ತುಶಿಲ್ಪ ಹಾಗು ವರ್ಣಚಿತ್ರಗಳಿಂದಾಗಿ ಆಕರ್ಷಕವಾಗಿದೆ.

 ಹೆರಿಟೇಜ್ ಎನ್ನುವ ವಸ್ತುಸಂಗ್ರಹಾಲಯವೂ ಸಹ ದಿಙ್ಭ್ರಮೆಗೊಳಿಸುವಂತಹದು. ಇಲ್ಲಿ ಭಾರತೀಯ ಮೂಲದ ಪ್ರತಿಮೆಗಳೂ ಇವೆ. ಈ ವಸ್ತುಸಂಗ್ರಹಾಲಯವನ್ನು ಇಷ್ಟು ಶ್ರೀಮಂತಗೊಳಿಸಿದವಳು ಎಲಿಸಬೆಥ್ ಎನ್ನುವ ರಶಿಯಾದ ರಾಣಿ. ಇವಳ ಬಗೆಗಿನ ಒಂದು ಪಕ್ಷಿನೋಟವನ್ನು ಜಯಶ್ರೀಯವರು ಪುಸ್ತಕದ ಕೊನೆಯಲ್ಲಿ ಕೊಟ್ಟಿದ್ದಾರೆ. ಇದನ್ನೆಲ್ಲ ಕಣ್ಣಾರೆ ನೋಡಿದ ಹಾಗು ಮುಕ್ತಮನಸ್ಸಿನಿಂದ ಅನುಭವಿಸಿದ ಜಯಶ್ರೀಯವರು ಪ್ರತಿಯೊಂದು ದೇಶವು ತನ್ನ ಇತಿಹಾಸದಿಂದ ಹಾಗು ಪರಂಪರೆಯಿಂದ ಸಮೃದ್ಧವಾಗಿರುತ್ತದೆ ಎಂದು ಉದ್ಗರಿಸುತ್ತಾರೆ.

 ಜಯಶ್ರೀಯವರು ತಮ್ಮ ಕಣ್ಣುಗಳನ್ನು ಯಾವಾಗಲೂ ತೆರೆದುಕೊಂಡೇ ಇರುವವರು. ಹೀಗಾಗಿ ರಶಿಯಾದ ಶ್ರೀಮಂತ ಮ್ಯೂಜಿಯಮ್ ಬಳಿಯ ರಸ್ತೆಗಳಲ್ಲಿ ಬಡ ಮುದುಕಿಯರು ತಮ್ಮ ಹತ್ತಿರವಿರುವ ಆಟದ ವಸ್ತುಗಳನ್ನು ಹಾಗು ಬೊಂಬೆಗಳನ್ನು ಮಾರಾಟ ಮಾಡಲು ಎಷ್ಟು ಪರದಾಡುತ್ತಾರೆ ಎನ್ನುವುದನ್ನು ನವಿರಾಗಿ ವಿವರಿಸುತ್ತಾರೆ. ಈ ಮುದುಕಿಯರು ಮಾರುತ್ತಿರುವ ‘ಆಟದ ಗಾಡಿ’ಯನ್ನು ನೋಡಿದಾಗ ಜಯಶ್ರೀಯವರಿಗೆ ನಮ್ಮ ‘ಮೃಚ್ಛಕಟಿಕ’ದ ನೆನಪಾಗುತ್ತದೆ! (ಇದನ್ನೇ ನೋಡಿ, ಭಾರತೀಯತೆ ಎನ್ನುವುದು!)

ಚಾಣಾಕ್ಷ ಮೋಸಗಾರಿಕೆ ಹಾಗು ಕಳ್ಳತನದ ಬಗೆಯೂ ಇಲ್ಲಿ ಕೆಲವು ಅನುಭವದ ಮಾತುಗಳಿವೆ. (ರಶಿಯಾದ ಅರ್ಥವ್ಯವಸ್ಥೆಯ ಬಗೆಗೆ ಇದು ಒಂದು ಪಾರ್ಶ್ವನೋಟವೆಂದು ಹೇಳಬಹುದು.)  ಹಾಗೆಂದು ಅಲ್ಲಿಯ ಆಟದ ಬೊಂಬೆಗಳ ಹೆಚ್ಚುಗಾರಿಕೆಯನ್ನು ಕಂಡು ಆನಂದಿಸಲು ಹಾಗು ಕೊಂಡಾಡಲು ಜಯಶ್ರೀಯವರು ಹಿಂದೆ ಬೀಳುವುದಿಲ್ಲ. ನಿಷ್ಪಕ್ಷಪಾತವಾದ ಸತ್ಯದರ್ಶನಕ್ಕೆ ಇದು ಉದಾಹರಣೆಯಾಗಿದೆ. ಈ ಬೊಂಬೆಗಳನ್ನು ಜಯಶ್ರೀಯವರು ನೋಡಿ ಸುಮ್ಮನೆ ಹೋಗದೆ ಆ ಬೊಂಬೆಗಳ ಹಿನ್ನೆಲೆಯನ್ನು ಅರಿತುಕೊಂಡು, ನಮಗೂ ತಿಳಿಸುತ್ತಾರೆ. ಅದು ಹೀಗಿದೆ:

“ ಮಾತ್ರೋಷ್ಕಾ ಬೊಂಬೆ  ರಷ್ಯಾದ ಜಾನಪದ ಕಲೆಯ ಹೆಗ್ಗಳಿಕೆ, ಹೆಗ್ಗುರುತು. ಮರಗೆಲಸದ ಕಲಾಕುಸುರಿಯ ದ್ಯೋತಕ.......ಕಣ್ಣಿಗೆ ರಾಚದೇ ತಂಪೇ ಉಣಿಸುವ ಚೆಲುವು....... ಭಾವ, ನಿರ್ಭಾವದ ನಡುವಣ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು..... ಬಾರ್ಬಿಯಂಥ ಕೃತಕತೆಯ ಸುಳಿವಿಲ್ಲದ ಮಾರ್ದವ.......”.

 ರಶಿಯಾದ ಕ್ಷಿಪ್ರದರ್ಶನದ ನಂತರ ಜಯಶ್ರೀಯವರು ನಮ್ಮನ್ನು ಸ್ವೀಡನ್ನಿನಲ್ಲಿರುವ ಸ್ಟಾಕ್ ಹೋಮಿಗೆ ಕರೆದೊಯ್ದು, ಅಲ್ಲಿಯ ನೋಬೆಲ್ ಪ್ರಶಸ್ತಿಯ ಸಭಾಂಗಣದ ದರ್ಶನ ಮಾಡಿಸುತ್ತಾರೆ. ಅಲ್ಲಿಂದ ಎಸ್ತೋನಿಯಾ ಎನ್ನುವ ಪುಟ್ಟ ದೇಶದ ದರ್ಶನ. ಈ ದೇಶದ ರಾಜಧಾನಿ ತಾಲೀನ್. ತಾಂತ್ರಿಕತೆ-ಆಧುನಿಕತೆಯೊಂದಿಗೆ ಮಧ್ಯಯುಗೀನ ಇತಿಹಾಸವನ್ನೂ ಸಮೃದ್ಧವಾಗಿ ಈ ನಗರವು ಉಳಿಸಿ, ಬೆಳೆಸಿಕೊಂಡು ಬಂದಿದೆ ಎನ್ನುವುದು ಲೇಖಕಿಯ ಟಿಪ್ಪಣಿ.

 ಝೆಕ್ ರಿಪಬ್ಲಿಕ್ಕಿನ ಪ್ರಾಗ್ ನಗರದ ಖಗೋಳಗಡಿಯಾರವು ತುಂಬ ಖ್ಯಾತವಾದ ಪ್ರವಾಸೀ ಆಕರ್ಷಣೆ. ಈ ಗಡಿಯಾರದ ಎಲ್ಲ ವಿವರಗಳನ್ನು ನೀಡುವುದರ ಜೊತೆಗೇ, ಜಯಶ್ರೀಯವರು ಆ ನಗರದ ಇತಿಹಾಸ ಹಾಗು ಕಟ್ಟಡಗಳ  ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನೂ ನಮ್ಮೆದುರಿಗೆ ಇಡುತ್ತಾರೆ.

 ಹಂಗೆರಿಯ ಬುಡಾಪೆಸ್ಟಿನಲ್ಲಿರುವ ಬೆಸಿಲಿಕಾದ ಬಗೆಗೆ ಜಯಶ್ರೀಯವರು ಬರೆಯುವುದು ಹೀಗಿದೆ:

“ತನ್ನ ಊರು, ದೇಶ, ಮಠ, ಪರಂಪರೆ, ಆಗಿ ಹೋದ ಸಂತರು, ಗೈದ ಸಾಧನೆಗಳು, ನಡೆಸಿದ ಸೇವೆಗಳು...ಮುಂದಾಗಲಿರುವ ಬೆಳವಣಿಗೆ ಇವೆಲ್ಲವನ್ನೂ ಸಚಿತ್ರವಾಗಿ, ಮೂರ್ತಿಸಹಿತವಾಗಿ, ಕಣ್ಣು ಕೋರೈಸುವ ವರ್ಣವೈಭವ, ಗಾಜಿನ ಮೇಲಿನ ವರ್ಣಚಿತ್ತಾರಗಳು, ಚಿತ್ರಗಳು ಇದೆಲ್ಲದರ ಇತಿಹಾಸವನ್ನು ಇಂದಿನ ವರ್ತಮಾನಕ್ಕೆ ತಂದಿಳಿಸುವ ಅವರ ಪರಿಗೆ ಬೆರಗಾಗುತ್ತಲೇ ಒಳಗೆ ಹೋದ ನನಗೆ ಇನ್ನೊಂದು ಅಲಭ್ಯ ಲಾಭ ದೊರೆಯಿತು.....”

 ‘ಕಬ್ಬಿಣದ ಶೂಗಳ ಸ್ಮಾರಕ’ ಮಾತ್ರ ಅತ್ಯಂತ ಭಯಾನಕವಾದ ಸ್ಮಾರಕವಾಗಿದೆ. ಜ್ಯೂ ಕೈದಿಗಳನ್ನು ನೇಣಿಗೇರಿಸುವ ಮೊದಲು, ಅವರ ತಲೆ ಬೋಳಿಸಿ, ಶೂಗಳನ್ನು ಕಳಿಚಿ ಇಡಲು ಹೇಳಲಾಗುತ್ತಿತ್ತು. ಶಿಲ್ಪಿ ಗ್ಯೂಲಾ ಫೊವರ್ ಮತ್ತು ಸಿನಿಮಾ ನಿರ್ಮಾಪಕ ಕೈನ ಟೊಗೇ ಅವರಿಗೆ ಇಂತಹ ದುರ್ಮರಣಗಳಿಗೆ ಒಂದು ಸ್ಮಾರಕ ಬೇಕೆನಿಸಿತು. ಹಂಗೆರಿಯ ಪಾರ್ಲಿಮೆಂಟಿನ ಎದುರಿನಲ್ಲಿ, ಡಾನ್ಯೂಬ್ ನದಿಯ ಪಕ್ಕದಲ್ಲಿ ಅವರು ಒಂದು ಸ್ಮಾರಕವನ್ನು ನಿರ್ಮಿಸಿದರು. ಆದರೆ ಇಲ್ಲಿ ನಿಜವಾದ ಶೂಗಳ ಬದಲು, ಕಬ್ಬಿಣದ ಶೂಗಳನ್ನು ಇಡಲಾಗಿದೆ.

 ‘ಎಂಬತ್ತು ದಿನಗಳಲ್ಲಿ ಧರಣಿಮಂಡಲದ ಸುತ್ತ’ ಎನ್ನುವ ಫ್ರೆಂಚ್ ಲೇಖಕ ಜೂಲ್ಸ್ ವರ್ನನ ಕಾದಂಬರಿಯನ್ನು ನೀವು ಓದಿರಬಹುದು. ಜಯಶ್ರೀ ದೇಶಪಾಂಡೆಯವರು ಎಷ್ಟು ದಿನಗಳಲ್ಲಿ ತಮ್ಮ  ಪ್ರಯಾಣವನ್ನು ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಧರಣಿಮಂಡಲದ ಅನೇಕ ದೇಶಗಳನ್ನು ಇವರು ಸುತ್ತಿ ಹಾಕಿದ್ದಾರೆ. ಇವರು ಪಯಣಿಸಿದ ಹಾಗು ಈ ಕೃತಿಯಲ್ಲಿ ನಮ್ಮನ್ನು ಕರೆದೊಯ್ದ ಇತರ ದೇಶಗಳೆಂದರೆ, ಆಸ್ಟ್ರಿಯಾ, ಜರ್ಮನಿ, ಸ್ವಿಝರ್ ಲ್ಯಾಂಡ, ಫ್ರಾನ್ಸ್, ಪೋಲ್ಯಾಂಡ್, ಸಿಂಗಪುರ ಹಾಗು ಅಮೆರಿಕಾ. ಇವುಗಳಲ್ಲಿ ಆಸ್ಟ್ರಿಯಾ ಹಾಗು ಜರ್ಮನಿಗಳಲ್ಲಿ ಜ್ಯೂ ಜನರ ಹತ್ಯಾಕಾಂಡದ ಸಂಗ್ರಹಾಲಯಗಳಿವೆ.

 ಇನ್ನು ಸ್ವಿಝರ್-ಲ್ಯಾಂಡಿನಲ್ಲಿ ನಿಸರ್ಗದಚೆಲುವು ಮೈತುಂಬಿಕೊಂಡು ನಿಂತಿದೆ. ಅದನ್ನು ಸವಿದ ಲೇಖಕಿಯು ಅದನ್ನು ವರ್ಣಿಸುವುದು ಫಿರ್ದೌಸನ ಶೇರ್ ಒಂದರ ಮೂಲಕ:

“ಅಗರ್ ಫಿರ್ದೌಸ್ ಬರೂ-ಎ-ಜಮೀನ್ ಅಸ್ತ,

ಹಮೀನಸ್ತ, ಹಮೀನಸ್ತ,ಹಮೀನಸ್ತ.

(ಈ ಭೂಮಿಯ ಮೇಲೆ ಸ್ವರ್ಗವೆಂಬುದು ಇರುವದಾದರೆ, ಅದು ಇಲ್ಲಿದೆ, ಅದು ಇಲ್ಲಿದೆ, ಅದು ಇಲ್ಲಿದೆ.”

ಸ್ವತಃ ಜಯಶ್ರೀಯವರೇ ಸ್ವಿಝರ್-ಲ್ಯಾಂಡಿನ ಚೆಲುವನ್ನು ಕಂಡು, ಬೆರಗಾಗಿ ಹೀಗೇ ಹೇಳುತ್ತಾರೆ:

“ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ”.

 ಜಗತ್ತಿನ ಅತಿ ಶ್ರೀಮಂತ ದೇಶವಾದ ಅಮೆರಿಕಾದ ಪ್ರವಾಸ ಹೇಗಿದ್ದೀತು? ಸುದೈವದಿಂದ ಈ ದೇಶದಲ್ಲಿ ಪ್ರಾಕೃತಿಕ ಚೆಲವು ಹರಡಿಕೊಂಡಷ್ಟೇ ಧಾರಾಳವಾಗಿ, ಡಾಲರ್ ಮೂಲಕ ಸೂರೆ ಮಾಡಬಹುದಾದ ಸೌಕರ್ಯಗಳೂ ಸಾಕಷ್ಟಿವೆ! ಇವೆಲ್ಲವುಗಳ ವಿವರವಾದ ವರ್ಣನೆಯನ್ನು ಲೇಖಕಿ ಕೊಟ್ಟಿದ್ದಾರೆ.

 ಇವೆಲ್ಲ ಪಾಶ್ಚಿಮಾತ್ಯ ದೇಶಗಳಾದವು. ಪೌರ್ವಾತ್ಯ ದೇಶಗಳ ಪ್ರವಾಸ ಬೇಡವೆ? ನಿಮಗೆ ಹಾಗೆ ಎನಿಸಿದರೆ ಜಯಶ್ರೀ ದೇಶಪಾಂಡೆಯವರು ನಿಮ್ಮನ್ನು ಸಿಂಗಪುರಕ್ಕೆ ಕರೆದೊಯ್ಯುತ್ತಾರೆ. ಜಯಶ್ರೀಯವರು ಸಿಂಗಪುರದಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದು, ಬುದ್ಧನ ದಂತಾವಶೇಷ ಮಂದಿರ. ಈ ದಂತಾವಶೇಷವನ್ನು ಶೀ ಫಝಾವ್ ಎನ್ನುವ ಓರ್ವ ಚೀನೀ ಸಂತನು ಮ್ಯಾನ್ಮಾರದ ಬುದ್ಧಮಠದಿಂದ ಬೇಡಿಕೊಂಡು ತಂದು ಸಿಂಗಪುರದಲ್ಲಿ ಪ್ರತಿಷ್ಠಾಪಿಸುತ್ತಾನೆ. ಇಲ್ಲಿರುವ ಪ್ರಾರ್ಥನಾಚಕ್ರವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಾರ್ಥನಾ ಚಕ್ರವಂತೆ.  ಮಕ್ಕಳಿಗೆ ಬುದ್ಧನ ಸಹಸ್ರ ನಾಮಾವಳಿಯನ್ನು ಹೇಳಿಕೊಡುತ್ತಿರುವ ಅನೇಕ ಕುಟುಂಬಗಳನ್ನು ಜಯಶ್ರೀಯವರು ಇಲ್ಲಿ ಕಂಡರು. ಹೊರಬರುವಾಗ ಅವರ ಮನಸ್ಸಿನ ತುಂಬ ನಮ್ಮ ಸಿದ್ಧಾರ್ಥ ಗೌತಮ ಬುದ್ಧನೇ ತುಂಬಿಹೋಗಿದ್ದ.

                                                                                                             ಇದೆಲ್ಲವು ಜಯಶ್ರೀ ದೇಶಪಾಂಡೆಯವರು ನೋಡಿದ ಹಾಗು ನಮಗೆ ತೋರಿಸಿದ ದೇಶಗಳ ಪ್ರವಾಸವರ್ಣನೆಯಾಯಿತು. ಅವರ ಕಥನಕೌಶಲವು ನಮ್ಮನ್ನು ನಿರಾಯಾಸವಾಗಿ ಎಲ್ಲೆಡೆ ಅಲೆದಾಡಿಸುತ್ತದೆ. ಈ ಕೌಶಲದ ಒಂದು ಭಾಗವಾದ ಅವರ ಭಾಷಾಪ್ರತಿಭೆಯನ್ನು ನಾವು ಈ ಲೇಖನದ ಮುಂದಿನ ಭಾಗದಲ್ಲಿ ನೋಡೋಣ.

  ಉತ್ತಮ ಸಾಹಿತ್ಯಕೃತಿಯನ್ನು ಹಾಗು ಪ್ರವಾಸವರ್ಣಮೆಯನ್ನು ನೀಡಿದ ಜಯಶ್ರೀ ದೇಶಪಾಂಡೆಯವರಿಗೆ ವಂದನೆಗಳು.

Thursday, May 12, 2022

ನೋಟ್‌ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ

ʼನೋಟ್‌ ಬುಕ್ಕಿನ ಕಡೆಯ ಪುಟʼ ಈ ಹಾಸ್ಯಪಂಚವಿಂಶತಿಯನ್ನು ಬರೆದ ಶ್ರೀಮತಿ ಜಯಶ್ರೀ ದೇಶಪಾಂಡೆಯವರಿಗೆ ಹಾಗು ಪ್ರಕಟಿಸಿದ ಶ್ರೀ ಅಣಕು ರಾಮನಾಥರಿಗೆ ಅಭಿನಂದನೆಗಳನ್ನು ಹಾಗು ಧನ್ಯವಾದಗಳನ್ನು ಮೊದಲಿಗೆ ಸಲ್ಲಿಸುತ್ತೇನೆ.‌  ಇವರಿಂದಾಗಿ ಕನ್ನಡಿಗರಿಗೆ ಒಂದು ಉತ್ತಮ ಸಾಹಿತ್ಯಕೃತಿ ದೊರೆತಿದೆ.

ವೈಚಾರಿಕತೆ ಹಾಗು ಭಾವನಾತ್ಮಕತೆ ಜಯಶ್ರೀ ದೇಶಪಾಂಡೆಯವರ ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ರೀತಿಯನ್ನು ನೋಡಿದರೆ ಅವರ ಕಥೆಗಳನ್ನು ಕರಿಗಡಬಿಗೆ ಹೋಲಿಸುವುದು ಉಚಿತವೆನಿಸುತ್ತದೆ! ವೈಚಾರಿಕತೆಯು ಕರಿಗಡಬಿನ ಮೇಲ್-ಪದರದಂತೆ ಆಕರ್ಷಕವಾಗಿದ್ದರೆ ಒಳತಿರುಳು ಸಿಹಿಯಾದ ಭಾವನಾಪ್ರಪಂಚವಾಗಿದೆ....ಕರಿಗಡಬಿನ ಹೂರಣದಂತೆ! ಅವರ ಸಾಹಿತ್ಯವನ್ನು ಓದುವಾಗ (-ಅದು ಕತೆಯೇ ಇರಲಿ, ಲಲಿತ ಪ್ರಬಂಧವೇ ಇರಲಿ-) ಅದರಲ್ಲಿಯ ವೈಚಾರಿಕತೆಯಿಂದ ಆಕರ್ಷಿತನಾಗುವ ಓದುಗನು, ಓದುತ್ತ ಹೋದಂತೆ, ಕೃತಿಯನ್ನು ಸೊಗಸುಗೊಳಿಸುವ ಭಾವುಕತೆಗೆ ಮರಳಾಗುತ್ತಾನೆ. ಈ ಎರಡು ಅಂಶಗಳಲ್ಲದೇ ಅವರ ಸಾಹಿತ್ಯವನ್ನು ಸೀಕರಣೆಯಂತೆ ಸವಿ ಮಾಡುವ ಮೂರನೆಯ ಗುಣವೊಂದು ಅವರ ಕೃತಿಗಳಲ್ಲಿದೆ. ಅದು ಅವರ ಭಾಷಾವಿದ್ವತ್ತು. ಇಂಗ್ಲಿಶ್‌  ಭಾಷೆಯನ್ನೇನೊ ಅವರು ಕಾ^ಲೇಜಿನಲ್ಲಿ ಐಚ್ಛಿಕ ವಿಷಯವಾಗಿ ಕಲಿತರು. ಇದರ ಹೊರತಾಗಿ ಅವರ ಭಾಷೆಯಲ್ಲಿ ಹಿಂದೀ ಹಾಗು ಸಂಸ್ಕೃತ ಪದಗಳು ಅನಾಯಾಸವಾಗಿ ಇಣಿಕುತ್ತವೆ. ಇದು ಅವರ ತಾಯಿಮನೆಯಿಂದ ಹಾಗು ಪರಿಸರದಿಂದ ಅವರಿಗೆ ದೊರೆತ ಬಳುವಳಿ ಎನ್ನುವುದು ನನ್ನ ಊಹೆ. ಈ ಭಾಷೆಗಳು ಅವರಿಗೆ ಸಹಜಸಿದ್ಧಿಯಾದ ಭಾಷೆಗಳೇ ಆಗಿವೆ. ಇದರ ಪರಿಣಾಮವಾಗಿ, ಮಜ್ಜಿಗೆಯನ್ನು ಕಡೆದಾಗ ಬರುವ ಬೆಣ್ಣೆಯಂತೆ ಹೊಸ ಹೊಸ ಪದಗಳು ಅವರ ಕಥೆಗಳಲ್ಲಿ ಸಹಜವಾಗಿ ತೇಲಿ ಬರುತ್ತವೆ, ಉದಾಹರಣೆಗೆ ಹಿಂಪುಟ, ತೇಲುತೆಪ್ಪ, ಉಬ್ಬುಬೆನ್ನು, ತೀವ್ರವೇಗಿ. ರಾಗಾಧಾರೀ ಇತ್ಯಾದಿ. 

ಜಯಶ್ರೀಯವರು ತಮ್ಮ ಲೇಖನಗಳಲ್ಲಿ ಆಡುನುಡಿಯ ಪದಗಳನ್ನು ಬಳಸಿದ್ದಾರೆ ಹಾಗು ಬಳಸುತ್ತಾರೆ. ಈ ಆಡುನುಡಿಯು ಅವರ ಕತೆಗಳ ಕಾಲ ಹಾಗು ಪರಿಸರದ ನಿರ್ಣಾಯಕಗಳಾಗಿವೆ. ಇದರಿಂದಾಗಿ ಅವರ ಕತೆಗಳಿಗೆ ಅಥವಾ ಲೇಖನಗಳಿಗೆ ವಿಶಿಷ್ಟವಾದ ಕಾಲ-ದೇಶ ನಿರ್ಮಾಣವಾಗುತ್ತದೆ. ಉದಾಹರಣೆಗೆ ʻಸುಂಠಿʼಯ ಬಗೆಗೆ ಬರೆಯುವಾಗ ಕಾಢೆ, ಜಾಂಬು, ಗೌತಿ ಚಹಾ ಇವೆಲ್ಲ ತಮ್ಮ ಮುಖವನ್ನು ತೋರಿಸುತ್ತವೆ. ʻಅಲ್ಲೇಪಾಕʼವನ್ನು ಮಾರುವ ಮಾಮಡ್ಯಾನ ಕಥೆಯಂತೂ ಪರಿಸರಸೃಷ್ಟಿಗೆ ಉತ್ತಮ ನಿದರ್ಶನವಾಗಿದೆ. ಅಲ್ಲೇಪಾಕ ಹಾಗು ಮಾಮಡ್ಯಾನ ಬಗೆಗೆ ಹೇಳುತ್ತಲೇ ಜಯಶ್ರೀಯವರು ತಾವು ಬಾಲ್ಯದಲ್ಲಿ ನೋಡಿದ ಬೆಳಗಾವಿ ಕಿಲ್ಲೆಯ ಸಂದು ಸಂದುಗಳನ್ನು ಬಿಡದೆ ತೋರಿಸಿದ್ದಾರೆ. ಕಿಲ್ಲೆಯ ಮೇಲೆ ಹತ್ತಿ  ದೂರದ ಲಕ್ಷ್ಮೀ ಟೇಕಡಿಯವರೆಗೂ ಕಣ್ಣು ಹಾಯಿಸಿದ್ದಾರೆ. ಓದುಗನೂ ಸಹ ಅನಾಯಾಸವಾಗಿ ಈ time machineದಲ್ಲಿ ಬೆಳಕಿನ ವೇಗದಲ್ಲಿ ಪಯಣಿಸುವುದು ಜಯಶ್ರೀಯವರ ಕಥನಕೌಶಲವನ್ನು ತೋರಿಸುತ್ತದೆ. 

ಇವೆಲ್ಲ ಜಯಶ್ರೀಯವರ ಬಾಲ್ಯದ ನೋಟಗಳು ಎನ್ನುವುದು ಓದುಗನಿಗೆ ಹೇಗೆ ತಿಳಿಯುತ್ತದೆ?  ಜಯಶ್ರೀಯವರು ಬೆಳಗಾವಿಯ ಕಿಲ್ಲೆಯಲ್ಲಿ ತಮ್ಮ ಸೈಕಲ್ಲಿನ ಮೇಲೆ ಹೊಡೆಯುವ ಹನ್ನೆರಡು ಸುತ್ತುಗಳಿಂದಾಗಿ ಈ ವಿಷಯವು ಓದುಗನಿಗೆ ಸ್ಪಷ್ಟವಾಗುತ್ತದೆ! ಬರಿ ಪರಿಸರಸೃಷ್ಟಿಯು ಜಯಶ್ರೀಯವರ ಲೇಖನಗಳಲ್ಲಿ ಇದೆ ಅಂತಲ್ಲ;  ʻಅಜ್ಜನ ಹೋಲ್ಡಾಲʼ ಲೇಖನವು ಆ ಕಾಲದ ವಾತಾವರಣದ ಬಗೆಗೆ ಹೇಳುವುದಲ್ಲದೆ, ಆ ಕಾಲದ ಜನರ ದೈವಭಕ್ತಿ, ತಾತ್ವಿಕ  ಮನೋಸ್ಥಿತಿ ಇವುಗಳನ್ನೂ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ; ಈ ಹೋಲ್ಡಾಲಿನಲ್ಲಿ ಏನೆಲ್ಲ ಸಾಮಾನುಗಳನ್ನು ಅಜ್ಜ ಒಯ್ಯುತ್ತಿದ್ದರು ಎನ್ನುವದನ್ನು ನೋಡಿದರೆ ನೀವು ದಂಗಾಗುತ್ತೀರಿ. ಇವೆಲ್ಲುವುಗಳ ಜೊತೆಗೆ ಒಂದು ಪುಟ್ಟ ಗಂಗಾಗಿಂಡಿಯೂ ಆ ಹೋಲ್ಡಾಲಿನಲ್ಲಿ ಇರುತ್ತಿತ್ತು. ಇದರ ಕಾರಣ ತಿಳಿದಾಗ ಓದುಗನ ಕಣ್ಣಿನಲ್ಲಿಯೂ ಗಂಗೆ ಜಿನುಗುವದರಲ್ಲಿ ಸಂದೇಹವಿಲ್ಲ!

ಜಯಶ್ರೀಯವರ ಕಥನಕೌಶಲವು ಪದನಿರ್ಮಾಣಕ್ಕಷ್ಟೇ ಸೀಮಿತವಾಗಿಲ್ಲ. ವಸ್ತುವರ್ಣನೆಯ ಸಂದರ್ಭದಲ್ಲಿ ಅವರು ಬಳಸುವ ವಿಶೇಷಣಗಳು ವಸ್ತುವಿನ ಅಂತರಂಗ-ಬಹಿರಂಗದ ಪರಿಚಯವನ್ನು ಮಾಡಿಕೊಡುತ್ತವೆ. ಉದಾಹರಣೆಗೆ ʻಸಾಗರ ಸುಮನʼ ಲೇಖನದಲ್ಲಿರುವ ಈ ಸಾಲನ್ನು ನೋಡಿರಿ:

“ಅಮೇರಿಕ, ಇಂಗ್ಲೆಂಡ್ ನಡುವೆ ಅಂದಾಜು ಆರುಸಾವಿರದಾ ಎಂಟುನೂರ ಐವತ್ತು ಕಿಲೋಮೀಟರು ದೊಪ್ಪೆಂದು ಬಿದ್ದುಕೊಂಡ ನೀರು.” 

ʻ ಅಂದಾಜು ಆರುಸಾವಿರದಾ ಎಂಟುನೂರ ಐವತ್ತು ಕಿಲೋಮೀಟರುʼ ಎನ್ನುವದು ಆ ಸಾಗರದ ಬಹಿರಂಗದ ಪರಿಚಯವಾದರೆ, ʻ ದೊಪ್ಪೆಂದು ಬಿದ್ದುಕೊಂಡ ನೀರುʼ ಎನ್ನುವುದು, ಜಯಶ್ರೀಯವರ ಅಂತರಂಗದಲ್ಲಿ ಮೂಡಿದ ಭಾವನೆಯನ್ನು ಹೊರಹೊಮ್ಮಿಸುತ್ತದೆ! ʻಕಿರಿದರೊಳ್ಪಿರಿದರ್ಥವನ್ನು ಹೇಳುವುದುʼ ಎಂದರೇ ಇದೇ ಅಲ್ಲವೆ? ಇದೇ ಕಥನದಲ್ಲಿ ಅಟ್ಲಾಂಟಿಕ ಸಾಗರದಲ್ಲಿರುವ ಕ್ಲಿಫ್‌  ಹಾಗು  ಬರ್ಮುಡಾ ತ್ರಿಕೋನಗಳ ಬಗೆಗೂ ಸ್ವಾರಸ್ಯಕರವಾಗಿ ಹೇಳುತ್ತ ಜಯಶ್ರೀಯವರು ತಮ್ಮ ಲೇಖನವನ್ನು ೩೬೦ ಡಿಗ್ರೀ ಪೂರ್ಣಗೊಳಿಸಿದ್ದಾರೆ.

ರಾಮಚಂದ್ರ ಕುಲಕರ್ಣಿಯವರ (ರಾ.ಕು.) ಹರಟೆಗಳ ಸಂಗ್ರಹವಾದ ʻಗಾಳಿಪಟʼದ ಮುನ್ನುಡಿಯಲ್ಲಿ ವರಕವಿ ಬೇಂದ್ರೆಯವರು ಒಂದು ಮಾತು ಹೇಳಿದ್ದಾರೆ: ʻಇವರ ಲೇಖನಗಳಲ್ಲಿ ಲಾಘವವಿದೆ, ಲಘುತ್ವವಿಲ್ಲʼ. ಜಯಶ್ರೀಯವರ ಲೇಖನಗಳ ಬಗೆಗೂ ಇದೇ ಮಾತನ್ನು ಹೇಳಬಹುದು. ʻಕೋಪಗೃಹ ವಾರ್ತೆಗಳು…ʼ ಎನ್ನುವ ಪ್ರಬಂಧವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 

ಈ ಲೇಖನದಲ್ಲಿ ಅಂದರೆ ʻಕೋಪಗೃಹ..ʼದಲ್ಲಿ ಬರುವ, “ಬಿದರ್ದೆತ್ತಿ ಖಟ್ವಾಂಗಮಂಬರವು ಕವ್ವಳಿಸೆ…” ಎಂದು ಪ್ರಾರಂಭವಾಗುವ ಚೌಪದಿಯು ಮೊದಲಿಗೆ ನನ್ನನ್ನು ಹಳೆಗನ್ನಡದ ಬಲೆಯಲ್ಲಿ ಮಿಸುಕಾಡದಂತೆ ಸಿಲುಕಿಸಿತು.ಅವರು ಕೊಟ್ಟ ವಿವರಣೆಯಿಂದಾಗಿ ತಿಳಿವು ಮೂಡಿ, ಖುಶಿಯಾಯಿತು. ಮುಂದಿನ ಮೂರನೆಯ ಪರಿಚ್ಛೇದದಲ್ಲಿಯೇ ʻಪ್ರಾಣ ಜಾಯೇ ಪರ ವಚನ ನಾ ಜಾಯೇʼ ಎನ್ನುವ ಹಿಂದೀ ಸಿನೆಮಾದ ಹೆಸರಿನ ಪರಿಪಾಕ! ಮುಂದುವರೆದಂತೆ ಕನ್ನಡದ ಸಿನೆಮಾದ ಜನಪ್ರಿಯ ಹಾಡೊಂದು ನನ್ನನ್ನು ಹಿಡಿದು ಹಾಕಿತು: 

“ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣಾ,

ಇಟ್ಟಾಯ್ತು ನಿನ ಮ್ಯಾಲೆ ನನ ಪ್ರಾಣಾ”

ಒಂದರ ಮೇಲೊಂದರಂತೆ, ಆದರೆ ಎಲ್ಲಿಯೂ ಸೂತ್ರವು ಶಿಥಿಲವಾಗದಂತೆ ಕೋಪದ ವಿವಿಧ ರೂಪಗಳನ್ನು, ವಿವಿಧ ಶೈಲಿಗಳಲ್ಲಿ ಚಿತ್ರಿಸಿದ ಜಯಶ್ರೀಯವರು ಈ ಲೇಖನಕ್ಕೆ ಭರತವಾಕ್ಯವನ್ನು ಹೇಳದಿರುವರೆ? ಇದಂತೂ ಎಲ್ಲರೂ ಪಾಲಿಸಲೇಬೇಕಾದ ಸದುಪದೇಶ.

“ಉತ್ತಮೇಸ್ಯಾತ್ಕ್ಷಣಂಕೋಪಂ

ಮಧ್ಯಮೇ ಘಟಿಕಾದ್ವಯಮ್

ಅಧಮೇಸ್ಯಾದಹೋರಾತ್ರಂ

ಪಾಪಿಷ್ಠೇ ಮರಣಾಂತಿಕಮ್”

ಹಳೆಯ ನೆನಪುಗಳ ಮರುಕಳಿಕೆಯನ್ನು ಜಯಶ್ರೀಯವರು ಅಂತಃಕರಣದಿಂದ ಓದುಗರ ಎದುರಿಗೆ ಹರಡುತ್ತಾರೆ. ಡೇಲಿಯಾ, ವೋ ಕಾಗಜಕೀ ಕಶ್ತಿ ವೋ ಬಾರಿಶ್ಕಾ ಪಾನೀ, ಇಲಕಲ್ಆಯೀ ಇವೆಲ್ಲ ಇಂತಹ ಹಿನ್ನೋಟದ ಪ್ರಕರಣಗಳು. ಇನ್ನು ʻಒಂದು angry ಬರ್ಡ ಸಮಾಚಾರʼ, ʻಮುಂಬಯಿ ಮಳೆʼ, ʻಒಂದು ಪುಸ್ತಕವೂ, ನಾಲ್ಕು ನಕ್ಷತ್ರಗಳೂʼ, ʻಸೌನಾ ಸುಗ್ಗಿಯೂ ಹೆಸರು ಬೇಳೆ ಹುಗ್ಗಿಯೂʼ ಇವೆಲ್ಲ ಹೊಸ ಅನುಭವಗಳ ಲೇಖನಗಳು. 

ಜಯಶ್ರೀಯವರ ಲೇಖನಗಳ ಮತ್ತೊಂದು ವೈಶಿಷ್ಟ್ಯವೆಂದರೆ ಪೂರ್ವಸೂರಿಗಳ ಅಪ್ರತ್ಯಕ್ಷ ಸ್ಮರಣೆ. ಬೇಂದ್ರೆಯವರ ಕವನಗಳಲ್ಲಿಯೂ ಸಹ ಪೂರ್ವಸೂರಿಗಳ ಪ್ರಭಾವದ ಛಾಯೆ ಉದ್ದೇಶಪೂರ್ವಕವಾಗಿಯೇ ಮೂಡಿರುತ್ತದೆ. ಜಯಶ್ರೀಯವರು ತಮ್ಮ ಲೇಖನಗಳ ಶೀರ್ಷಿಕೆಗಳಲ್ಲಿ ಅಥವಾ ಒಳಭಾಗಗಳಲ್ಲಿ ಪೂರ್ವಸೂರಿಗಳ ವಾಕ್ಯಗಳನ್ನು ಉದ್ಧರಿಸಿ, ಅವರ ಸುಖದಾಯಕ ಪ್ರಭಾವವನ್ನು ಸ್ಮರಿಸಿಕೊಳ್ಳುತ್ತಾರೆ. ಉದಾಹರಣೆಗೆ: ʻಪ್ರಾಣ ಜಾಯೇ ಪರ ವಚನ ನಾ ಜಾಯೇʼ, ʻವೋ ಕಾಗಜಕೀ ಕಶ್ತಿ ವೋ ಬಾರಿಶ್ಕಾ ಪಾನೀʼ, ʻಒಂದಿರುಳು ರೈಲಿನಲಿ..ʼ ಇವೆಲ್ಲ ಇಂತಹ ಉದಾಹರಣೆಗಳು. ಕೆ.ಎಸ್.ನರಸಿಂಹಸ್ವಾಮಿಯವರು ʻಒಂದಿರುಳು ಕನಸಿನಲಿ..ʼ ಎಂದಿದ್ದರೆ, ಜಯಶ್ರೀಯವರು, ʻಒಂದಿರುಳು ರೈಲಿನಲಿ..ʼ ಎಂದಿದ್ದಾರೆ. ಅಷ್ಟೇ ಫರಕು! ಇದು ನಮ್ಮ ಸಾಹಿತ್ಯಸಂಪ್ರದಾಯವನ್ನು, ಮರೆತು ಹೋಗದಂತೆ ಜೀವಂತವಾಗಿಡುವ ಸತ್ಕಾರ್ಯ.

ಕನ್ನಡದ ಹಾಸ್ಯಬ್ರಹ್ಮರಾದ ರಾ.ಶಿಯವರು ʻಹಾಸ್ಯವು subtleದಲ್ಲಿಯ ʻbʼಯ ಹಾಗೆ ಇರಬೇಕುʼ ಎಂದು ಹೇಳಿದ್ದರು. ಜಯಶ್ರೀಯವರ ವಿನೋದವು ಹಾಗೆಯೇ ಇದೆ. ಆದರೆ ಇದು ಕೇವಲ ಹಾಸ್ಯವಲ್ಲ; ಹಾಸ್ಯರಸಾಯನ. ಈ ರಸಾಯನದಲ್ಲಿ ನೀವು ವಿವಿಧ ರೀತಿಯ ರಸಗಳನ್ನು ಸವಿಯುತ್ತೀರಿ. ಕೋಮಲತೆ ಜಯಶ್ರೀಯವರ ಲೇಖನಗಳ ಮತ್ತೊಂದು ವೈಶಿಷ್ಟ್ಯ. ಈ ಲೇಖನಗಳನ್ನು ಆ ಕಾರಣಕ್ಕಾಗಿ ʻಹೂಗೊಂಚಲುʼ ಎಂದು ಕರೆಯುವುದು ಉಚಿತವಾದೀತು. ಆದರೆ ಜಯಶ್ರೀಯವರು ತಮ್ಮ ʻನೋಟ್  ಬುಕ್ಕಿನ ಕಡೆಯ ಪುಟʼದವರೆಗೂ ಲೇಖನಗಳ ನಗೆತೊರೆಗಳನ್ನೇ ಹರಿಸಿರುವ ಕಾರಣದಿಂದ, ʻನೋಟ್‌ ಬುಕ್ಕಿನ ಕಡೆಯ ಪುಟʼ ಎನ್ನುವುದೇ ಸಮುಚಿತವಾದ ಶೀರ್ಷಿಕೆಯಾಗಿದೆ. 

ಆತ್ಮೀಯತೆಯು ಜಯಶ್ರೀ ದೇಶಪಾಂಡೆಯವರ ಮನಸೆಳೆವ ಗುಣ. ತಮ್ಮ ʻನೋಟ್‌ ಬುಕ್ಕಿನ ಕಡೆಯ ಪುಟʼ ಸಂಕಲನದಲ್ಲಿ ಜಯಶ್ರೀ ದೇಶಪಾಂಡೆಯವರು ೨೫ ಕರಿಗಡಬುಗಳನ್ನು ತಮಗೆ ಸಹಜವಾದ ನಿಸ್ಸಂಕೋಚ ಆತ್ಮೀಯತೆಯಿಂದ ಓದುಗರಿಗೆ ಹಂಚಿದ್ದಾರೆ. ಇಕೋ, ಸವಿಯಿರಿ!   

Sunday, January 30, 2022

ಮಳೆಗಾಲ.....ಬೇಂದ್ರೆ

 ಮಳೆಗಾಲವು ಬೇಂದ್ರೆಯವರಿಗೆ ಪ್ರೀತಿಯ ಕಾಲ. ಶ್ರಾವಣ ಮಾಸದ ಬಗೆಗೆ ಬೇಂದ್ರೆಯವರು ಹಾಡಿದ ಹಾಡುಗಳೆಷ್ಟೋ! ಮಳೆಗಾಲದಲ್ಲಿ ಅವರ ಹೃದಯವು ನವಿಲಿನಿಂತೆ ಗರಿಗೆದರುವುದು! ಮಳೆಗಾಲದ ಮೊದಲಲ್ಲಿ ಭರ್ರನೆ ಬೀಸಿ ಬರುವ ಮಳೆಯು ಅವರಿಗೆ ʻಭೈರವನ ರೂಪ ತಾಳಿ ಕುಣಿಯುತ್ತಿರುವಂತೆʼ ಕಾಣುತ್ತದೆ. ಮಳೆಯಲ್ಲಿ ತೊಯ್ಯುತ್ತಿರುವ ಕಲ್ಲುಬಂಡೆಗಳು ಅವರಿಗೆ ʻಅಭ್ಯಂಜನಗಯ್ಯುತ್ತಿರುವ ಸ್ಥಾವರಲಿಂಗಗಳಂತೆʼ ಕಾಣುವುವು. ಇಂತಹ ಕಾಣ್ಕೆ ವರಕವಿಗೆ ಮಾತ್ರ ಸಾಧ್ಯ. ಅದಕ್ಕೇ ಹೇಳುತ್ತಾರಲ್ಲವೆ,  ʻ ನಾನೃಷಿಃ ಕುರುತೇ ಕಾವ್ಯಂ ʼ ಎಂದು. 

ʻಮಳೆಗಾಲʼ ಎನ್ನುವ ಬೇಂದ್ರೆಯವರ ಕವನವು ನೋಡಲು ಅತ್ಯಂತ ಸರಳವಾದ ಕವನ. ಆದರೆ ಈ ಮುಖವಾಡದ ಒಳಗೆ ಅಡಗಿದೆ, ವಿಶ್ವದ ʻಋತʼ ಅರ್ಥಾತ್‌ ʻಶಾಶ್ವತ ಸತ್ಯʼ, ನಿಸರ್ಗವನ್ನು ನಡೆಯಿಸುತ್ತಿರುವ ಚೈತನ್ಯದ ಸಾಮರಸ್ಯ ಪ್ರಕ್ರಿಯೆ.

....................................................................................................................

ಮಳೆಗಾಲ

ಅಡಗಿದೆ ದೃಷ್ಟಿ-

ಆದರು ಸುರಿಯುತ್ತಿದೆ ವೃಷ್ಟಿ!

ಮೋಡದ ಮೇಲ್ಮೋಡ.

ತಿಳಿಯದು ಏನಿದೆಯೋ ಗೂಢ !

ನಸುಕಿನ ಹಕ್ಕಿಯ ಚಿಲಿಪಿಪಿಯಿಲ್ಲ.

ಗೊಟರ್ಗುಡುತಿದೆ ಕಪ್ಪೆ.

ಜೀರುಂಡೆಯ ಕಿಲಕಿಲ ಇರುಳಿಡುಗಿದೆ

ದುರ್ದಿನಕಿದು ತಪ್ಪೇ?

ಹಸಿರಿನ ಉಲ್ಲಾಸಕೆ ಮಿತಿಯಿಲ್ಲ.

ಕೆಸರಿಗಿಲ್ಲ ಕೊರತಿ.

ಪಾತರಗಿತ್ತಿಯು ಸುಳಿದಾಡುತ್ತಿದೆ,

ಮನೆ ಹಿಡಿದಳು ಗರತಿ.

ಬಾನ್ ತುಂಬಿದೆ, ಕೆರೆ ತುಂಬಿದೆ,

ಹೂ ತುಂಬಿದೆ ಬೇಲಿ.

ನೀರಲಿದಲಿ ರಸ ತುಂಬಿದೆ

ಮಿದುವಾಗಿದೆ ಜಾಲಿ. 

........................................................................................................

 ಮೊದಲಿನ ನುಡಿಯನ್ನು ನೋಡೋಣ. ಮಳೆಗಾಲದ ಒಂದು ಮುಂಜಾವು. ಬೇಂದ್ರೆಯವರು ಮನೆಯ ಬಾಗಿಲಿಗೆ ಬಂದು ಹೊರಗೆ ಇಣಕುತ್ತಾರೆ. ತಮ್ಮ ಭೌತಿಕ ದೃಷ್ಟಿಗೆ ಕಾಣುವ ನೋಟವನ್ನು ಎಣಿಸುತ್ತ, ಇದರ ಹಿಂದೆ ಇರುವ ಗೂಢವನ್ನು ಗುಣಿಸುತ್ತಿದ್ದಾರೆ. ʻಇದು ಏನೋ ನಿಸರ್ಗರಹಸ್ಯ, ಇದು ಏನು?ʼ ಎನ್ನುವ ಅಚ್ಚರಿಯಲ್ಲಿದ್ದಾರೆ. ಆಕಾಶವು ದಟ್ಟ ಮೋಡಗಳಿಂದ ತುಂಬಿದ್ದನ್ನು ಅವರು ನೋಡುತ್ತಾರೆ. ಆ ಮೋಡಗಳು ಮಳೆ ಸುರಿಸುತ್ತಿರುವುದನ್ನೂ ಅವರು ಕಾಣುತ್ತಾರೆ. ತಮ್ಮ ದೃಷ್ಟಿಯಾಚಗೆ ಏನೋ ಒಂದು ಇದೆ ಎನ್ನುವ ಕಲ್ಪನೆ ಅವರಿಗೆ ಬರುತ್ತದೆ. 

ಎರಡನೆಯ ನುಡಿಯಲ್ಲಿ ಬೇಂದ್ರೆಯವರ ಚಿತ್ತವು ನಿಸರ್ಗದ ದೃಶ್ಯದಿಂದ ನಿಸರ್ಗದ ಶ್ರಾವ್ಯದ ಕಡೆಗೆ ಹೊರಳುತ್ತದೆ. ʻಅಲ್ಲಪ್ಪಾ, ನಸುಕಿನ ಹಕ್ಕಿಗಳ ಸುಮಧುರ ಕಲರವ ಇಲ್ಲ, ಹೀಗೇಕೆ? ಆದರೆ ಕಪ್ಪೆಗಳ ಗುಟುರುವಿಕೆ ಹಾಗು ಜೀರುಂಡೆಗಳ ಗುಂಯ್ಗುಡುವಿಕೆ ಮಾತ್ರ ತಪ್ಪಿಲ್ಲವಲ್ಲ, ಎನ್ನುತ್ತಿದ್ದಾರೆ ಬೇಂದ್ರೆ. ʻಓಹೋ, ಇದು ಮಳೆಯ ಪಾರಿಣಾಮ! ಇದು ದುರ್ದಿನಕ್ಕೆ ಸಹಜವಾದದ್ದೇʼ ಎಂದುಕೊಳ್ಳುತ್ತಾರೆ ಬೇಂದ್ರೆ. ಸಂಸ್ಕೃತದಲ್ಲಿ ಮಳೆ ಬೀಳುವ ದಿನಕ್ಕೆ ದುರ್ದಿನ ಎನ್ನುತ್ತಾರೆ ಎನ್ನುವುದನ್ನು ಗಮನಿಸಬೇಕು. ಕನ್ನಡದಲ್ಲಿ ʻದುರ್ದಿನʼ ಎಂದರೆ ಕೆಟ್ಟ ದಿನ. ಕನ್ನಡದಲ್ಲಿ ಇರುವ ಅರ್ಥವನ್ನು ಹಾಗು ಸಂಸ್ಕೃತದಲ್ಲಿ ಇರುವ ಅರ್ಥವನ್ನು ಬೇಂದ್ರೆಯವರು ಶ್ಲೇಷೆಯಲ್ಲಿ ಬಳಸುವ ಜಾಣತನವನ್ನು ಗಮನಿಸಿರಿ.

 ಮೂರನೆಯ ನುಡಿಯಲ್ಲಿ ಬೇಂದ್ರೆಯವರು ಮಳೆಗಾಲದ ಸಂಕಟಗಳನ್ನು ಪಕ್ಕಕ್ಕೆ ಇಡುತ್ತಾರೆ ಹಾಗು ಮಳೆಗಾಲದ ಸುಖವನ್ನು ಅನುಭವಿಸುತ್ತಿದ್ದಾರೆ. ಭೂಮಿಯೆಲ್ಲ ಹಸಿರಿನಿಂದ ತುಂಬಿದೆ. ಈ ನೋಟವು ನೋಡುಗನಲ್ಲಿ ಉಲ್ಲಾಸವನ್ನು ತುಂಬುತ್ತಿದೆ. ಅದರ ಜೊತೆಗೇ ನೆಲವೆಲ್ಲ ಕೆಸರಿನಿಂದ ಕೂಡಿದೆ. (ರಾಜರತ್ನಮ್‌ ಅವರು ಹಾಡಿದಂತೆ ʻಎಲೆಲೆ ರಸ್ತೆ, ಏನು ಅವ್ಯವಸ್ಥೆʼ!). ಇದು ಮನುಷ್ಯರಿಗೆ ಸಂಕಟಕರವಾಗಿರಬಹುದು, ಆದರೆ ಪಾತರಗಿತ್ತಿಗೆ ಇದು ಹಬ್ಬ. ಪಾತರಗಿತ್ತಿಯು ನೆಲದ ಮೇಲೆ ಚಲಿಸುವುದಿಲ್ಲ; ಅದು ನೆಲದ ಮೇಲಕ್ಕೆ ಹಾರಾಡುತ್ತದೆ. ಪಾತರಗಿತ್ತಿಗೆ ಇದು ಸಹಜ ಪ್ರವೃತ್ತಿ, ಹೊಟ್ಟೆಗಾಗಿ ಅದರ ಪರದಾಟ. ಆದರೆ ಮನೆಯ ಕೆಲಸವನ್ನು ಮಾಡಬೇಕಾಗಿರುವ ಗೃಹಿಣಿಗೆ ಹೊರಗೆ ಹಣಿಕಿ ಹಾಕಲೂ ಸಹ ಆಗಲಾರದ ಪರಿಸ್ಥಿತಿ. ಮನೆಗೆ ಅಂಟಿಕೊಂಡೇ ಅವಳು ಕೂಡಬೇಕು. (ಇಲ್ಲಿ ಬರುವ ಒಂದು ದ್ವಂದ್ವಾರ್ಥವನ್ನು ಗಮನಿಸಿರಿ. ಪಾತರಗಿತ್ತಿ ಎಂದರೆ ಚೆಲ್ಲು ಹೆಣ್ಣು ಎಂದೂ , ವೇಶ್ಯೆ ಎಂದೂ ಅರ್ಥವಾಗುತ್ತದೆ. ಅವರವರ ಒದ್ದಾಟ ಅವರವರಿಗೆ!)


ಕೊನೆಯ ನುಡಿಯಲ್ಲಿ ಬೇಂದ್ರೆಯವರ ಅನುಭೂತಿ ವ್ಯಕ್ತವಾಗುತ್ತದೆ. ಈ ಅನುಭವವು ಬೇಂದ್ರೆಯವರನ್ನು ಆಧ್ಯಾತ್ಮಿಕ ಸ್ತರಕ್ಕೆ ಒಯ್ದಿದೆ. ತಾವು ಮೊದಲು ನೋಡಿದ ನೋಟಗಳನ್ನೇ ಬೇಂದ್ರೆ ಮತ್ತೊಮ್ಮೆ ನೋಡುತ್ತಾರೆ. ಆದರೆ ಅವರ ಒಳಗಣ್ಣಿಗೆ ಕಾಣುವ ನೋಟವೇ ಇದೀಗ ಬೇರೆ. ಬಾನು ಎಂದರೆ ಆಕಾಶವು ಮೋಡಗಳಿಂದ ತುಂಬಿದೆ. ಆ ಮೋಡಗಳು ಸುರಿಸುವ ನೀರಿನಿಂದ ನೆಲದ ಮೇಲಿರುವ ಕೆರೆ, ಕುಂಟಿಗಳೆಲ್ಲ ತುಂಬಿವೆ. ಅಲ್ಲಲ್ಲಿ ಇರುವ ಬೇಲಿಗಳು ತಕ್ಷಣವೇ ಹೂಬಿಟ್ಟು ಚೆಲುವಾಗಿ ಕಾಣುತ್ತಿವೆ. ಹೂವಾದ ಬಳಿಕ ಹಣ್ಣು ಬರಬೇಕಲ್ಲವೆ? ನೀರಲ ಗಿಡದಲ್ಲಿ ರಸಭರಿತ ಹಣ್ಣುಗಳು ಬಿಡಲಾರಂಭಿಸಿವೆ. ಜಾಲಿಯ ಗಿಡವು ಅತ್ಯಂತ ಗಟ್ಟಿಯಾದ ಬೊಡ್ಡೆಯನ್ನು ಹೊಂದಿರುವ ಮುಳ್ಳು ಗಿಡ. ಜಾಲಿಯ ಗಿಡವನ್ನು ದುರ್ಜನರಿಗೆ ಹೋಲಿಸುತ್ತಾರೆ. ಅದೂ ಸಹ ಮಿದುವಾಗಿ ಬಿಟ್ಟಿದೆ. ಇದೇನು ಸೃಷ್ಟಿವೈಚಿತ್ರ್ಯ ಎಂದು ಬೇಂದ್ರೆಯವರು ಬೆರಗಾಗುತ್ತಾರೆ!  ಇದು ವಿಶ್ವದ ಋತ, ಇದು ನಿಸರ್ಗದ ಸಾಮರಸ್ಯ, ಇದು ದೈವೀ ಚೈತನ್ಯದ ಕೃಪೆ ಎನ್ನುವುದು ಬೇಂದ್ರೆಯವರ ಅನುಭೂತಿಯಾಗಿದೆ.

ಪೃಥ್ವಿ, ಅಪ್‌, ತೇಜ, ಆಕಾಶ ಹಾಗು ವಾಯು ಎನ್ನುವ ಪಂಚಮಹಾಭೂತಗಳು ಈ ಸಾಮರಸ್ಯದ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದನ್ನು ನಾವು ಈ ಕವನದಲ್ಲಿ ಕಾಣಬಹುದು. 

Sunday, April 18, 2021

‘ಅನುಪಮಾಆಖ್ಯಾನ ಹಾಗು ಇತರೆ ಕಥೆಗಳು’...........ಉಮೇಶ ದೇಸಾಯಿ

ಉಮೇಶ ದೇಸಾಯಿಯವರು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪರಿಸರದ ಸುಳಿಗಾಳಿಯನ್ನು ಸಂಚಲಿಸಿದವರು. ಈ ನನ್ನ ಮಾತಿಗೆ ಕೆಲವೊಂದು ಆಕ್ಷೇಪಣೆಗಳು ಬರಬಹುದು. ದೇಸಾಯಿಯವರಿಗಿಂತ ಮೊದಲು ಆಧುನಿಕತೆ ಕನ್ನಡ ಸಾಹಿತ್ಯದಲ್ಲಿ ಇರಲಿಲ್ಲವೆ; ಕನ್ನಡ ಸಾಹಿತಿಗಳು ಆಧುನಿಕರಿರಲಿಲ್ಲವೆ?; ಇತ್ಯಾದಿ. ಯಾರು ಇಲ್ಲವೆನ್ನುತ್ತಾರೆ? ನನ್ನ ಹೇಳಿಕೆಯನ್ನು ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿರಿ.

ಆಧುನಿಕತೆ ಪದವೇಅಧುನಾಎನ್ನುವ ಸಂಸ್ಕೃತ ಪದದಿಂದ ಬಂದಿದೆ. ‘ಅಧುನಾಪದದ ಅರ್ಥಈ ಕ್ಷಣದ’, ಅಂದರೆ  `up to date’ ಎನ್ನುವ ಅರ್ಥ. ಕನ್ನಡ ಸಾಹಿತ್ಯದಲ್ಲಿ up-to-date ಆಗಿರುವ ಸಾಹಿತ್ಯವನ್ನು ಯಾವ ಸಾಹಿತಿಗಳು ರಚಿಸಿದ್ದಾರೆ, ಹೇಳಿ. ನವೋದಯ ಕಾಲದ ಸಾಹಿತ್ಯವು ಹೊಸ ಭಾಷೆಯನ್ನು ಕಟ್ಟಿತು; ಹೊಸ ಶೈಲಿಯನ್ನು ಕಟ್ಟಿತು. ಆದರೆ ಈ ಸಾಹಿತ್ಯದ ತಿರುಳು ಮಾತ್ರ ಹಳೆಯ ಹೂರಣವೇ, ಅರ್ಥಾತ್ ಆದರ್ಶ, ನಿಸರ್ಗ ಇತ್ಯಾದಿ. ಮುಂಬಯಿ ನಗರದಲ್ಲಿರುವ ಸಾಹಿತಿಗಳಲ್ಲಿ ಕೆಲವರು ಕರ್ನಾಟಕದ ಸಿದ್ಧಭಾಷೆಯನ್ನು ಬಿಟ್ಟು ಬೇರೆ ರೀತಿಯಲ್ಲಿ ಬರೆದಿದ್ದರೆ ಅದಕ್ಕೆ ಮುಂಬಯಿ ನಗರವೇ ಕಾರಣವಾಗಿದೆ. ಇದರಂತೆಯೇ ಕೊಡಗಿನ ಗೌರಮ್ಮನವರು ಆಧುನಿಕವಾಗಿ ಬರೆದದ್ದರ ಕಾರಣವೆಂದರೆ ಅವರು ಬೆಂಗಳೂರು, ಮೈಸೂರುಗಳಿಂದ ದೂರವಾಗಿದ್ದ ಕೊಡಗಿನಲ್ಲಿ ಇದ್ದದ್ದರಿಂದ. ಕನ್ನಡದಲ್ಲಿ ನಾನು ಓದಿದ್ದ ಮೊದಲ ಆಧುನಿಕ ಕಥೆಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದವರುಆನಂದಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಏ. ಸೀತಾರಾಮ ಎನ್ನುವ ಖ್ಯಾತ ಲೇಖಕರು. ಈ ಕಥೆಯನ್ನು ಇವರು ಸುಮಾರು ೬೫ ವರ್ಷಗಳ ಹಿಂದೆ ಆನುವಾದಿಸಿರಬಹುದು.

೬೫ ವರ್ಷಗಳ ಹಿಂದಿನ ಮರಾಠಿ ಸಾಹಿತ್ಯವು ಈಗಿನ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚು ಆಧುನಿಕವೆ? ನಾನುಆಧುನಿಕ ಪರಿಸರದ ಬಗೆಗೆ ಹೇಳುತ್ತಿದ್ದೇನೆ ಎನ್ನುವುದನ್ನು ದಯವಿಟ್ಟು ನೆನಪಿಸಿಕೊಳ್ಳಿರಿ. ಮುಂಬಯಿ ನಗರಕ್ಕೆ ಭಾರತದ ಮೂಲೆ ಮೂಲೆಗಳಿಂದ ವಿಭಿನ್ನ ಮಾದರಿಯ ಜನರು ವಲಸೆ ಬರುತ್ತಿದ್ದರು. ಅವರ ಮಿಲನದಿಂದ ಮುಂಬಯಿ ನಗರವು ಆಧುನಿಕ ನಗರವಾಯಿತು. ಈ ಭಾಗ್ಯವು ಭಾರತದ ಇತರ ನಗರಗಳಿಗೆ ಸಿಕ್ಕಿಲ್ಲ!

ಕನ್ನಡ ಸಾಹಿತ್ಯದಲ್ಲಿಆಧುನಿಕತೆಇಲ್ಲವೇ ಇಲ್ಲವೆ? ಯಾಕಿಲ್ಲ? ಎಚ್. ಸಾವಿತ್ರಮ್ಮ, ತ್ರಿವೇಣಿ ಇವರಂತಹ ಲೇಖಕಿಯರು ತಮ್ಮ ಸಾಹಿತ್ಯದಲ್ಲಿ ಹೆಣ್ಣಿನ ಮನಸ್ಸನ್ನು ಬಿಚ್ಚುಬೀಸಾಗಿ ಚರ್ಚಿಸಿದ್ದಾರೆ. ಆದರೆ ಕಥೆಗಳ ಪರಿಸರಮಾತ್ರ ಸಾಂಪ್ರದಾಯಿಕ ಪರಿಸರವೇ!

ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ದೇವನೂರು ಮಹಾದೇವರಂತಹ ಶ್ರೇಷ್ಠ ಕತೆಗಾರರು ನಮ್ಮವರು. ಅನಂತಮೂರ್ತಿಯವರು ತಮ್ಮ ವೈಯಕ್ತಿಕ ದ್ವಂದವನ್ನು ಸಾಹಿತ್ಯದಲ್ಲಿ ಪರಿವರ್ತಿಸಿ ಹೆಸರು ಪಡೆದರು. ಲಂಕೇಶರು ತಮ್ಮ ಪೂರ್ವಭಾಗದಲ್ಲಿ ಶ್ರೇಷ್ಠ ಕತೆಗಾರರಾಗಿದ್ದರೂ ಸಹ ಉತ್ತರಭಾಗದಲ್ಲಿ ಕೆಳಗೆ ಜಾರಿದರು. ಭೈರಪ್ಪನವರು ಸ್ತ್ರೀಯರನ್ನು ಎರಡನೆಯ ದರ್ಜೆಯ, ಪುರುಷವಿಧೇಯಿ ಜೀವಿಗಳನ್ನಾಗಿ ಮಾಡುವ ಪಕ್ಕಾ ಸಂಪ್ರದಾಯವಾದಿಗಳು. ಇವರಲ್ಲಿ ಯಾರೂಆಧುನಿಕ ಪರಿಸರವನ್ನು ತಮ್ಮ ಸಾಹಿತ್ಯದಲ್ಲಿ ಸೃಷ್ಟಿಸಿಲ್ಲ.

ಇಂತಹ ಒಂದು ಸಾಹಿತ್ಯಿಕವಾಗಿ ಉಸುರುಗಟ್ಟಿಸುವ ವಾತಾವರಣದಲ್ಲಿ ಆಧುನಿಕ ಪರಿಸರವನ್ನು ಕೆಲವೇ ಸಾಹಿತಿಗಳು ಸೃಷ್ಟಿಸಿದ್ದಾರೆ. ಇವರಲ್ಲಿ ನಾನು ಸಿಂಧೂ ರಾವ, ತೇಜಸ್ವಿನಿ ಭಟ್ಟ, ಶ್ರೀದೇವಿ ಕಳಸದ ಹಾಗು ಜಯಶ್ರೀ ದೇಶಪಾಂಡೆ ಇವರನ್ನು ನೆನೆಯುತ್ತೇನೆ. ಆದರೆ ಇಲ್ಲಿಯೂ ಸಹ ಇವರ ಎಲ್ಲ ಕಥೆಗಳು ಆಧುನಿಕ ವಾತಾವರಣದ ಕೊಡುಗೆಗಳಲ್ಲ!

ಉಮೇಶ ದೇಸಾಯಿಯವರು ಆಧುನಿಕ ಮರಾಠಿ ಸಾಹಿತ್ಯವನ್ನು ಓದಿಕೊಂಡವರು. ಪುಣೆ, ಮುಂಬಯಿ ಮೊದಲಾದ ವಿಶಾಲ ನಗರಗಳೊಡನೆ ಸಂಪರ್ಕ ಹೊಂದಿದವರು. ಇದು ಇವರ ಸಾಹಿತ್ಯವನ್ನುಆಧುನಿಕ ಪರಿಸರದ ಸಾಹಿತ್ಯವನ್ನಾಗಿ ಮಾಡಲು ನೆರವಾಗಿದೆ.

ಇವರು ಇತ್ತೀಚೆಗೆ ಪ್ರಕಟಿಸಿದಅನುಪಮಾ ಆಖ್ಯಾನವು ಸಂಪೂರ್ಣವಾಗಿ ಆಧುನಿಕ ಪರಿಸರದ ಕಥೆ. ಈ ನೀಳ್ಗತೆಯ ಬಗೆಗೆ ನಾನು ಈಗಾಗಲೇ ಟಿಪ್ಪಣಿಯನ್ನು ಬರೆದಿದ್ದು, ಅದನ್ನು ನೋಡಲು ಈ ಕೊಂಡಿಯನ್ನು ಬಳಸಿರಿ: https://sallaap.blogspot.com/2020/09/blog-post.html

ಅನುಪಮಾ ಆಖ್ಯಾನಕಥಾಸಂಕಲನದಲ್ಲಿ ಇನ್ನೂಐದು ಕಥೆಗಳಿವೆ.

ಅಪ್ಪ, ಅಮ್ಮ ಇವರಿಬ್ಬರೂ ದುಡಿಯುತ್ತಿರುವ ಕಥೆಆಯ್ಕೆಗಳು’. ಇವರ ಮಗುವಿನ ಮಾನಸಿಕ ಚಿತ್ರಣವೇ ಈ ಕಥೆಯ ವಿಷಯ. ‘ಬಿಡುಗಡೆಕಥೆಯ ವಿಷಯ ಇನ್ನೂ ಗಂಭೀರವಾದದ್ದು. ಚಿತ್ರನಟಿಯೊಬ್ಬಳ ಮಗಳ ಲೈಂಗಿಕ ಆಯ್ಕೆ ಹಾಗು ಅವಳ ಅಮ್ಮ ಅಂದರೆ ಆ ಚಿತ್ರನಟಿ ತೆಗೆದುಕೊಳ್ಳುವ ನಿರ್ಣಯ ಈ ಕಥೆಯ ವಸ್ತು. ‘ದಾಟುಕಥೆಯಲ್ಲಿ ಮಧ್ಯಮ ವರ್ಗದ ತಂದೆಯೊಬ್ಬ  ತನ್ನ ಮಗಳ ಲೈಂಗಿಕ ಆಯ್ಕೆಯನ್ನು ಒಪ್ಪಿಕೊಳ್ಳುವ ವಿಷಯವಿದೆ. ‘ದೀಪದ ಕೆಳಗಿನ ಕತ್ತಲೆಯು ಸಂಕೀರ್ಣವಾದ ಕಥಾವಸ್ತುವನ್ನು ಹೊಂದಿದೆ. ‘ವಿದಾಯಕಥೆಯಲ್ಲಿ ಆಧುನಿಕ ಪರಿಸರ ಇದೆ ಎಂದು ಹೇಳಲು ಆಗಲಾರದು. ಆದರೆ ಲೇಖಕರ ಮನೋಧರ್ಮ ಮಾತ್ರ ಆಧುನಿಕವಾಗಿಯೇ ಇದೆ.

ಆಧುನಿಕ ಪರಿಸರದ ಕಥೆಗಳನ್ನು ನಮಗೆ ಕೊಡುತ್ತಿರುವ ಉಮೇಶ ದೇಸಾಯರಿಗೆ ಅಭಿನಂದನೆಗಳು. ಇನ್ನಿಷ್ಟು ಇಂತಹ ಕಥೆಗಳನ್ನು ಅವರು ನಮಗೆ ನೀಡಲಿ ಎಂದು ಹಾರೈಸುತ್ತೇನೆ.

Sunday, February 28, 2021

ಕನಸಿನ ಕೆನಿ.....................................ದ. ರಾ. ಬೇಂದ್ರೆ

ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:

ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು ಏನಂತ ಹೊಳೀವಲ್ತು.”

ಬೇಂದ್ರೆಯವರ ಕವನಗಳೂ ಹೀಗೆಯೇ ಇವೆ. ಅವುಗಳ ಅರ್ಥ ಓದುಗರಿಗೆ ಸರಳವಾಗಿ ಆಗುತ್ತದೆ. ಆದರೆ ಅವುಗಳ ಅಂತರಾರ್ಥ ಸರಳವಾಗಿ ಆಗುವುದಿಲ್ಲ.

 ತಮ್ಮ ಕವನಗಳು ಹುಟ್ಟುವ ಪರಿಯನ್ನು ಬೇಂದ್ರೆಯವರು ತಮ್ಮ ಕವನಗಳ ಮೂಲಕವೇ ಸೂಚಿಸಿದ್ದಾರೆ. ಉದಾಹರಣೆಗೆ, ‘ಭಾವಗೀತೆಹಾಗೂಗರಿಎನ್ನುವ ಕವನಗಳು.  ‘ಕನಸಿನ ಕೆನಿಎನ್ನುವ ಕವನದಲ್ಲಿ ತಮ್ಮ ಕವನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ಬೇಂದ್ರೆಯವರು ಸೂಚಿಸುತ್ತಿದ್ದಾರೆ. ಕನಸು ಒಳಮನಸ್ಸಿನಲ್ಲಿ ಹುಟ್ಟುತ್ತದೆ. ಈ ಒಳಮನಸ್ಸಿನಲ್ಲಿ ಗೂಡುಗಟ್ಟಿದ ಆದರ್ಶಗಳು ಹಾಗು ಅನುಭವಗಳೇ ಬೇಂದ್ರೆಯವರ ಕನಸುಗಳಾಗಿವೆ. ಹಾಲು ಕಾಯ್ದು, ಕೆನೆಯು ಮೇಲೆ ಬರುವಂತೆ ಬೇಂದ್ರೆಯವರ ಕನಸುಗಳು ತಪಿಸಿ, ತಾಪಿಸಿ, ಕೆನೆಗಟ್ಟಿ ಮೇಲೆ ಬರುತ್ತವೆ. ಆದುದರಿಂದ ಇವುಕನಸಿನ ಕೆನಿಗಳು.

ಬೇಂದ್ರೆಯವರ ಕವನಗಳನ್ನು ನೋಡಿರಿ. ಬಹುತೇಕ ಎಲ್ಲ ಕವನಗಳು ಮತ್ತೊಬ್ಬರೊಡನೆ ಆಪ್ತವಾಗಿ ಹಂಚಿಕೊಂಡಂತಹ ಕವನಗಳೇ ಆಗಿವೆ. ಇಲ್ಲಿ ಬೇಂದ್ರೆಯವರು ತಮ್ಮ ಕವನವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ತಮ್ಮ ಗೆಳೆಯನಿಗೆ ಹೇಳುತ್ತಿದ್ದಾರೆ. ಬೇಂದ್ರೆಯವರುಗೆಳೆಯಎಂದು ಸಂಬೋಧಿಸದೆ, ‘ಗೆಣೆಯಎಂದು ಕರೆಯುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ‘ಗೆಣೆಯಎನ್ನುವದು ಆತ್ಮೀಯ ಗೆಳೆಯನಿಗೆ ಸಂಬೋಧಿಸಬಹುದಾದ ಪದ. ಮುಖ್ಯವಾಗಿ ಹೆಣ್ಣು ತನ್ನ ಪ್ರಣಯಿ ಗೆಳೆಯನನ್ನು ಕರೆಯುವಾಗ ಹೇಳಬಹುದಾದ ಪದ. ಬೇಂದ್ರೆಯವರು ಇಲ್ಲಿ ಅರ್ಥವನ್ನು ಬಳಸುತ್ತಿಲ್ಲ. ಈತ ಆಪ್ತ ಸಹೃದಯ ರಸಿಕ ಎನ್ನುವ ಅರ್ಥದಲ್ಲಿಗೆಣೆಯಎಂದು ಬೇಂದ್ರೆಯವರು ಕರೆಯುತ್ತಿದ್ದಾರೆ.

ಇದೀಗ ಕನಸಿನ ಕೆನೆಯ ಒಂದೊಂದೇ ನುಡಿಯನ್ನು ವಿಶ್ಲೇಷಿಸೋಣ:

ಕಿವೀs ಚ್ಯಾsಚ ಬ್ಯಾsಡಾ ಗೆಣಿಯಾs

ಒಳ ಒಳ ಒಳ ಹೋಗಬೇಕೋ                      || ಪಲ್ಲ ||

 

ಬಳ್ಳ ಬಳ್ಳ ಸೆಲೀಯೊಳಗs ನೆಳ್ಳ ನೀಡಬ್ಯಾಡಾ ನಿಂತು

ಮುಳುಗು ಹಾಕು ಮೂರು ಒಳಗ ಒಳಗ            ||ಅನುಪಲ್ಲ||

 ಬೇಂದ್ರೆಯವರ ಕವವನ್ನು ಅರ್ಥ ಮಾಡಿಕೊಳ್ಳಲು ಕೇವಲ ಹೊರಗಿನಿಂದ ಕಿವಿ ಚಾಚಿದರೆ ಉಪಯೋಗವಿಲ್ಲ. ಕವನದ ಅಂತರಂಗದೊಳಗೆ ನುಸುಳಬೇಕು. ‘ಒಳ ಒಳ ಹೋಗಬೇಕೋ’!

ಬೇಂದ್ರೆಯವರು ತಮ್ಮ ಕವನವನ್ನು ಒಂದು ನೀರಿನ ಸೆಲೆಗೆ ಹೋಲಿಸುತ್ತಿದ್ದಾರೆ. ಬಳ್ಳ ಅಂದರೆ ಒಂದು ಅಳತೆ, ಕೊಳಗದ ಅರ್ಧಭಾಗ. ಇಲ್ಲಿ ಸೆಲೆಯು ಯಾವಾಗಲೂ ನೀರನ್ನು ಚಿಮ್ಮುತ್ತಿರುವ ಸೆಲೆ ಎನ್ನುವ ಅರ್ಥವನ್ನು ಕೊಡುತ್ತದೆ. ಭೂಮಿಯ ಆಳದಿಂದ ಚಿಮ್ಮುವ ಬುಗ್ಗೆಯು, ನಿಸರ್ಗಸಹಜವಾಗಿರುತ್ತದೆ. ಬೇಂದ್ರೆಯವರ ಕವನಗಳೂ ಸಹ ಈ ಬುಗ್ಗೆಗಳಂತೆ ಸಹಜಸ್ಫೂರ್ತಿಯಿಂದ ಚಿಮ್ಮುವ ಕವನಗಳು; ಬೌದ್ಧಿಕ ಕಸರತ್ತಿನಿಂದ ಬರೆಯುವ ಕವನಗಳಲ್ಲ.  

 ಇಂತಹ ಸೆಲಿಯ ಮ್ಯಾಲ ನೀನು ನಿಂತುಕೊಂಡರೆ ಅದರ ಮೇಲೆ ನಿನ್ನ ವ್ಯಕ್ತಿತ್ವದ ನೆರಳು ಬೀಳುತ್ತದೆ. ನಿನಗೆ ಮೇಲುಮೇಲಿನ ಅರ್ಥವಷ್ಟೇ ಆಗುತ್ತದೆ; ಅದರ ನಿಜವಾದ ಭಾವವನ್ನು ನೀನು ತಿಳಿಯಲಾರೆ. ಸೆಲಿಯೊಳಗ ನೀನು ಆಳವಾಗಿ  ಮುಳುಗು ಹಾಕಬೇಕು ಎಂದು ಬೇಂದ್ರೆಯವರು ಹೇಳುತ್ತಾರೆ. ಅಂದರೆ ನಿನ್ನ ವೈಯಕ್ತಿಕ ಭಾವವನ್ನು ಕವನದ ಮೇಲೆ ಆರೋಪಿಸಬೇಡ; ಕವನದ ಅಂತರಾರ್ಥವನ್ನು ತಿಳಿಯಲು ಅದರಲ್ಲಿ ನೀನು ಸಮರಸನಾಗಬೇಕು. ಇದು ಕವನದ ಅಂತರಂಗವನ್ನು ಅರಿಯುವ ರೀತಿ.

ಮೂರು ಸಲ ಮುಳುಗು ಹಾಕು ಎಂದು ಬೇಂದ್ರೆಯವರು ಏಕೆ ಹೇಳುತ್ತಾರೆ? ಶ್ರದ್ಧಾಳುಗಳು  ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವುದನ್ನು ನೀವು ನೋಡಿರಬಹುದು. ಪ್ರತಿ ಜೀವಿಗೂ ಸ್ಥೂಲದೇಹ, ಸೂಕ್ಷದೇಹ ಹಾಗು ಕಾರಣದೇಹ ಎನ್ನುವ ಮೂರು ದೇಹಗಳು ಇರುತ್ತವೆ. ಮೂರು ದೇಹಗಳ ಶುದ್ಧಿಗಾಗಿ ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವ ಪದ್ಧತಿ ಇದೆ. ಓದುಗನೂ ಸಹ ತನ್ನೆಲ್ಲ ಅಂತರಂಗವನ್ನು ಕವನದಲ್ಲಿ ಮುಳುಗಿಸಿಬೇಕು, ತೊಯ್ಯಿಸಬೇಕು. ಮೊದಲನೆಯ ಮುಳುಗಿನಲ್ಲಿ, ಬೇಂದ್ರೆಯವರ ಕವನದ ಮೇಲುನೋಟದ ಅರ್ಥವಾಗುತ್ತದೆ. ಎರಡನೆಯ ಮುಳುಗಿನಲ್ಲಿ, ಇನ್ನಿಷ್ಟು ಒಳಗೆ ಹೋದಾಗ, ಒಳಮನಸ್ಸಿನ ಭಾವ ತಿಳಿಯುತ್ತದೆ. ಮೂರನೆಯ ಮುಳುಗಿನಲ್ಲಿ, ತಳಮಟ್ಟವನ್ನು ಮುಟ್ಟಿದಾಗ ಕವನದ ಅಂತರಾತ್ಮದ ಅರ್ಥವಾಗುತ್ತದೆ

 ಹೀಂಗs ಮಾಡಬೇಕೂ ; ಹಾಂಗೂ ಮಾಡಬೇಕೂs

ಹ್ಯಾಂಗಾರ ಮಾಡು ಬೆಳ್ಳಬೆಳಗs

ರಸಾ ತೀರಿದ ಮ್ಯಾಲs | ಗಸಿ ಐತಿ ಕೆಳಗs

ಅದಕ್ಕೂ ಹೋಗಬೇಕು ಕೆಳಗs

ಇದನ್ನೆಲ್ಲಾ ಕೇಳಿದ ಬೇಂದ್ರೆಯವರ ಗೆಳೆಯ ಅವರಿಗೆ  ‘ಹಂಗಾದರ, ನಿನ್ನ ಕವನವನ್ನ ಹ್ಯಾಂಗ ತಿಳಕೊಬೇಕಪಾ?’ ಅಂತ ಕೇಳತಾನ. ಅದಕ್ಕ ಬೇಂದ್ರೆಯವರು ಹೇಳತಾರ: ‘ಹಿಂಗs ಮಾಡಬೇಕು ಅನ್ನೋ ಅಂತಹ ಒಂದು ವಿಧಾನ ಇಲ್ಲಪಾ. ನೀ ಹ್ಯಾಂಗರ ಮಾಡು. ಆದರ ಅರ್ಥ ಹೊಳಿಯೋ ಹಂಗ ಬೆಳ್ಳಗ, ಬೆಳ್ಳಗ ಮಾಡು.’ ಇಲ್ಲಿ ಬೆಳ್ಳಬೆಳಗ ಅನ್ನುವ ಪದಕ್ಕ ಇರುವ ಶ್ಲೇಷಾರ್ಥವನ್ನು ಗಮನಿಸಿರಿ. ಪಾತ್ರೆಯನ್ನು ತಿಕ್ಕುವುದಕ್ಕೆಪಾತ್ರೆಯನ್ನು ಬೆಳಗುಎಂದು ಹೇಳುತ್ತಾರೆ. ಅಲ್ಲದೆ ಬೆಳ್ಳಬೆಳಗು ಎನ್ನುವ ಪದವು ಮುಂಜಾವು ಎನ್ನುವ ಅರ್ಥವನ್ನೂ ಕೊಡುತ್ತದೆ.

ಕವನದ ಪದಾರ್ಥ ತಿಳಿದು, ಅದರ ರಸವನ್ನೆಲ್ಲ ಓದುಗನು ಹೀರಿಕೊಂಡ ಬಳಿಕ, ಮುಗಿಯಿತೆ?

ಜೇನನ್ನು ಹಿಂಡಿ, ಮೇಲಿನ ರಸವನ್ನು ಸಂಗ್ರಹಿಸಿದ ಬಳಿಕ ಸಹ, ಕೆಳಗೆಗಸಿಉಳಿದಿರುತ್ತದೆ. ಬೇಂದ್ರೆಯವರ ಕವನದಲ್ಲಿ ಮೇಲ್ಮೇಲಿನ ರಸಗ್ರಹಣಕ್ಕಿಂತ ಕೆಳಗೆ ಇಳಿಯಬೇಕು. ಅಂದರೆ ಕವನದ ಗೂಢಾರ್ಥ ಹೊಳೆಯುತ್ತದೆ.

ಬೇಂದ್ರೆಯವರ ಕವನ ಇರುವುದೇ ಹೀಗೇ. ತಿಳಿದರೂ ಸಹ ಹೊಳೆದಿರುವುದಿಲ್ಲ; ಹೊಳದರೂ ಸಹ ತಿಳಿದಿರುವುದಿಲ್ಲ. ಅದಕ್ಕಾಗಿ ಓದುಗನು ಒಳಗ, ಒಳಗ, ಕೆಳಗ, ಕೆಳಗ  ಇಳಿದು ಅನುಭವಿಸಬೇಕು.

 ಇನ್ನು ಮೂರನೆಯ ನುಡಿ ಹೀಂಗದ:

ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂ

ನೀ ಗಂಟು ಹಾಕಬ್ಯಾಡ, ನೀ ಹೊರಗs

ಸೆರಗೀಗ ಕಟ್ಟು ಸೆರಗು | ಮಿರಗಕ್ಕ ಎಲ್ಲೀ ಮೆರಗು?

ಬೆರಗಿನ್ಯಾಗ ಬೆರ್ತುಹೋಗ ತಿರುಗs

ಬೇಂದ್ರೆಯವರ ಕವನಕ್ಕ ಅನೇಕ ಪಾತಳಿಗಳು ಇರ್ತಾವ, ಅನೇಕ ಅರ್ಥಗಳು ಇರ್ತಾವ. ‘ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂಅಂತ ಬೇಂದ್ರೆಯವರು ಇದನ್ನs ಹೇಳತಾರ. ಈ ಪಾತಳಿಗಳನ್ನ ಒಂದರೊಳಗೊಂದು ಗಂಟು ಹಾಕಿ, ತಿಳಕೊಳ್ಳಲಿಕ್ಕೆ ಹೋಗಬ್ಯಾಡ; ಹಾಂಗ ಮಾಡಿದರ, ಅರ್ಥ ಹೋಗಿ ಅನರ್ಥ ಆಗತದ. ನೀ ಕವನದ ಪದರುಗಳ ಒಳಗ ಸಿಕ್ಕುಬೀಳಬೇಡ,  ಹೊರಗ ನಿಂತುಕೋ; ಆದರ, ಕವನದ ಅರ್ಥ ಮಾಡಿಕೊಳ್ಳಲಿಕ್ಕೆ ಸೆರಗು ಕಟ್ಟು ಅಂದರ ದೃಢಸಂಕಲ್ಪನಾಗು ಅಂತ ಬೇಂದ್ರೆಯವರು ಹೇಳತಾರ.

ಮಿರುಗುವುದು ಅಂದರೆ ಹೊಳೆಯುವುದು. ‘ಮೆರಗುಅಂದರ polish. ಸ್ವತಃ ಹೊಳೆಯುವ ಕವನಕ್ಕ polish ಬೇಕಾಗುವುದಿಲ್ಲ. ಹಾಗು ಆ ಕೆಲಸಕ್ಕ ಕೈ ಹಾಕಲೂ ಬಾರದು. ಆ ಕವನ ಓದುಗನ ಮನಸ್ಸನ್ನ ತಟ್ಟುವುದೇ ಅದರ ಕಾರ್ಯಸಿದ್ಧಿ. ಅವನಿಗೆ ಬೆರಗಿನ ಅನುಭವವನ್ನು ಕೊಡುವುದೇ ಕವನದ  ಮೇಲ್ಮೆ. ಆ ಕವನ ನೀಡುವ ಬೆರಗಿನೊಳಗ, ಓದುಗ ತಿರುತಿರುಗಿ ಅಂದರ ಪುನಃಪುನಃ ಬೆರತು ಹೋಗಬೇಕು. ಕವನದಲ್ಲಿ ಓದುಗ ಒಂದಾಗಿ ಹೋಗಬೇಕು; ಇದೇ ಕವನದ ಸಾರ್ಥಕತೆ. ಶ್ರೇಷ್ಠ ಕವನವು ಓದುಗನನ್ನು ಬೆರಗುಗೊಳಿಸುತ್ತದೆ. ಹೀಗಾಗಲಿಕ್ಕೆ ಓದುಗನ ಮನಸ್ಸೂ ಸಹ ಪಾಕಗೊಂಡಿರಬೇಕು.

 ಮುಂದಿನ ನುಡಿ ಹಿಂಗದ:

ತಿರಗs ತಿರುಗತಿರು | ತಿರುಗೂಣಿ ತಿರುಗುsಣಿ

ಮಣಿ ಮಣಿ ಪೋಣೀಸಿsದ ಕೊರಗs

ದುರುಗಮ್ಮ ದುರುದೂರು | ಮರುಗಮ್ಮ ಮಳಿನೀರು

ಶಾಕಾ ಪಾಕಾ ಮಣ್ಣಿನ ಕಾವಿನೊಳಗs

 

ತನ್ನ  ಕವನದ ತಿರುಗುಣಿಯೊಳಗ ಮತ್ತೆ ಮತ್ತೆ  ಗಿರ್ಕಿ ಹೊಡೆಯುತ್ತ ಇರು ಎಂದು ಬೇಂದ್ರೆಯವರು ಓದುಗನಿಗೆ ಹೇಳ್ತಾರ. ಒಂದs ಓದಿಗೆ ತನ್ನ ಒಳಗನ್ನ ಬಿಟ್ಟು ಕೊಡೋ ಕವನ ಅಲ್ಲ ಇದು.  ಅಂದರ ಕವನ ಎಂಥಾದದ? ಇದುಮಣಿ ಮಣಿ ಪೋಣೀಸಿs ಕೊರಗು!’  ಸುಬದ್ಧವಾಗಿ ಪೋಣಿಸಿದ ಮಣಿಹಾರ ಎಷ್ಟು ಛಂದ ಕಾಣಸ್ತದನೋ, ಅಷ್ಟs ಛಂದ ಅದ ಬೇಂದ್ರೆಕವನ. ಆದರ ಮಣಿಗಳು ಕೊರಗಿನ ಮಣಿಗಳು. ಮಣಿಗಳ ಒಳಗ ವಿಷಾದ ತುಂಬೇದ.

 ದುರಗಮ್ಮ ಹಾಗು ಮರಗಮ್ಮ ಎನ್ನುವ ಎರಡು ಪ್ರತಿಮೆಗಳನ್ನು ಬಳಸಿ, ಬೇಂದ್ರೆಯವರು ತಮ್ಮ ಬದುಕಿನ ಸುಖದುಃಖಗಳನ್ನು ಹೇಳ್ತಾರ. ದುರಗಮ್ಮ ಎನ್ನುವ ದೇವತೆ ದುರುದುರು ಉರಿಯುತ್ತಿರುತ್ತಾಳೆ. ಮರಗಮ್ಮ ಯಾವಾಗಲೂ ಮರಗುತ್ತಲೇ ಇರುತ್ತಾಳೆ. ಇವಳ ಕಣ್ಣಿರೇ ಮಳಿಯಾಗುತ್ತದೆ. ಆದರೆ ದುರಗಮ್ಮ ಹಾಗು ಮರಗಮ್ಮ ಇಬ್ಬರೂ ದೇವತೆಗಳು. ಅವರು ಕೊಡುವ ಸಂಕಷ್ಟಗಳಿಂದಲೇ, ಬದುಕು ಚಿಗುರುತ್ತದೆ; ಬಾಳಿನಲ್ಲಿ ಸಾರ್ಥಕತೆ ಸಿಗುತ್ತದೆ.

 ದುರಗಮ್ಮ ಸೂರ್ಯನಂತಿದ್ದರೆ, ಮರಗಮ್ಮ ಮಳೆದೇವರಂತಿದ್ದಾಳೆ. ಬೇಸಿಗೆಯ ಉರಿ ಹಾಗು ಮಳೆಗಾಲದ ಮಳೆನೀರು ಭೂಮಿಯ ಮೇಲೆ ಬಿದ್ದು, ಒಳಗ ಇಳಿದಾಗ, ಏನಾಗತದ? ಮಣ್ಣು ಅಂದರೆ ನಮ್ಮ ಬದುಕು ತನ್ನ ಕಾವಿನಿಂದ ಅಂದರೆ ಅನುಭವಗಳಿಂದ ಶಾಕವನ್ನು (ಸಸಿಯನ್ನು) ಹುಟ್ಟಿಸತದ. ಶಾಕವೇ ಮುಂದೆ ಪಾಕವಾಗುತ್ತದೆ. ಪಾಕವೇ ಬೇಂದ್ರೆಕವನ. ಇಂತಹ ಕವನವನ್ನು ತಿಳಿದುಕೊಳ್ಳಲು, ಓದುಗನು ಬೇಂದ್ರೆಯವರ ಭಾವದೊಳಗ ಇಳಿಯಬೇಕಾಗ್ತದ.

ಇದೀಗ ಕೊನೆಯ ನುಡಿ. ಇಲ್ಲಿಯವರೆಗೆ ತಮ್ಮ ಕವನಗಳನ್ನು ಅರ್ಥ ಮಾಡಿಕೊಳ್ಳುವ ಬಗೆಗೆ ಹೇಳಿದ ಬೇಂದ್ರೆಯವರು, ಇದೀಗ ಓದುಗನಿಗೆ ಒಂದು ಸಿಹಿಯಾದ ಆದರೆ ಸುಲಭವಲ್ಲದ ಆಹ್ವಾನವನ್ನು ನೀಡುತ್ತಾರೆ.

ತೂ | ತೂತೂ | ತೂತೂ | ಹೂ ಹುತೂತುತೂ

| ಬಾ | ಅತ್ತs | ಅತ್ತs | ಅತ್ತsತ್ತs |

ಸಾರೀಗಮ್ಮತ್ತs | ಇದ್ದs ಹಿಮ್ಮತ್ತs

ಹಿಕಮತ್ತು ಮತ್ ಮತ್ ಮತ್ತs.

 

`ತೂ, ತೂ, ಹುತೂತೂ…’ ಎನ್ನುವುದುಹುಡತೂತು’ (=ಕಬಡ್ಡಿ) ಆಟದಲ್ಲಿ ಹೇಳುವ ಉಲಿ. ‘ಕಬಡ್ಡಿ, ಕಬಡ್ಡಿ….’ ಎನ್ನುವ ಬದಲಾಗಿಹುತೂತೂ….’ ಎಂದು ಹೇಳುತ್ತಾರೆ. ಬೇಂದ್ರೆಯವರು ಹೇಳುವ ಆಟದಲ್ಲಿ ಒಂದು ಭಾಗದಲ್ಲಿ ಕವಿ ನಿಂತಿದ್ದಾನೆ. ಮತ್ತೊಂದು ಭಾಗದಲ್ಲಿ ಓದುಗ ನಿಂತಿದ್ದಾನೆಬೇಂದ್ರೆಯವರು ರಸಿಕ ಓದುಗನಿಗೆ ಆಹ್ವಾನ ನೀಡುತ್ತಿದ್ದಾರೆ : ‘ಬಾ ಇನ್ನೂ ಹತ್ತರ ಬಾ. ನನ್ನ ಕವನದಾಗ ನಿನ್ನ ಹಿಡದ ಹಾಕತೇನಿ, ಬಾ! ಇದು ಸಾರಿಗಮನಿಸ ಎನ್ನುವ ಸಂಗೀತದ ಮೇಳ.  ಸಾರೀ(=ಇದೆಲ್ಲಾ) ಗಮ್ಮತ್ತ(=ಮೋಜು). ನಿನಗ ಧೈರ್ಯ (=ಹಿಮ್ಮತ್) ಇದ್ದರ, ಹಿಕಮತ್ತ (=ಕಾರ್ಯಯತ್ನ) ಇದ್ದರ, ಮತ್ತೇ ಮತ್ತೇ ಪ್ರಯತ್ನಿಸು. ಕವಿಯೊಡನೆ ಕಬಡ್ಡೀ ಆಡುಇಲ್ಲಿಮತ್ಎಂದರೆಬೇಡಎನ್ನುವ ಅರ್ಥವೂ ಸೂಚಿತವಾಗಿದೆ!

 ವರಕವಿಗಳು ತಮ್ಮ ಕವನಗಳ ಮೂಲಕ ಓದುಗನೊಡನೆ ನಿರಂತರವಾಗಿ ಕಬಡ್ಡಿಯಾಡಲು ಬಯಸುತ್ತಾರೆ. ಅವರ ಕವನಗಳ ತೆಕ್ಕೆಯಲ್ಲಿ ಹಿಡಿಬಿದ್ದು ಸೋಲುವುದು, ಗೆಲ್ಲುವುದು ಓದುಗನಿಗೆ ಇಷ್ಟವಾದ ಸಂಗತಿಯೇ ಆಗಿದೆ.