ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು
ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.
ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.
ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.
……………………………………………………………………………………………
ಬೇಂದ್ರೆಯವರ ಕಾವ್ಯಜೀವನವನ್ನು ಸ್ಥೂಲವಾಗಿ ಮೂರು ಘಟ್ಟಗಳಲ್ಲಿ ವಿಭಾಗಿಸಬಹುದು. ೧೯೨೨ನೆಯ ಇಸವಿಯಲ್ಲಿ ಅಂದರೆ ಬೇಂದ್ರೆಯವರು ೨೬ ವರ್ಷದವರಿದ್ದಾಗ ಅವರ ಮೊದಲ ಕೃತಿ “ಕೃಷ್ಣಾಕುಮಾರಿ” ಪ್ರಕಟವಾಯಿತು. ಅಲ್ಲಿಂದ ೧೯೫೧ರಲ್ಲಿ ‘ಗಂಗಾವತರಣ’ ಕವನಸಂಕಲನವು ಪ್ರಕಟವಾಗುವವರೆಗಿನ ಅವಧಿಯು ಬೇಂದ್ರೆಯವರ ಕಾವ್ಯಜೀವನದ ಮೊದಲ ಘಟ್ಟ. ಈ ಘಟ್ಟವು ಬೇಂದ್ರೆ-ಕಾವ್ಯವು ಸಿದ್ಧಿಯ ಹಾಗು ಪ್ರಸಿದ್ಧಿಯ ಪರಮೋಚ್ಚ ಶಿಖರವನ್ನು ತಲುಪಿದ ಘಟ್ಟ. ಈ ಅವಧಿಯಲ್ಲಿ ಪ್ರಕಟವಾದ ಬೇಂದ್ರೆ ಕಾವ್ಯರಚನೆಗಳು ಇಂತಿವೆ:
(೧) ಕೃಷ್ಣಾಕುಮಾರಿ, (೨) ಗರಿ, (೩) ಸಖೀಗೀತ, (೪) ಮೂರ್ತಿ, (೫) ಕಾಮಕಸ್ತೂರಿ, (೬) ಉಯ್ಯಾಲೆ, (೭) ನಾದಲೀಲೆ, (೮) ಮೇಘದೂತ (ಅನುವಾದ), (೯) ಹಾಡು-ಪಾಡು ಹಾಗು (೧೦) ಗಂಗಾವತರಣ.
೧೯೫೬ರಲ್ಲಿ ಬೇಂದ್ರೆಯವರಿಗೆ ೬೦ ವರ್ಷಗಳು ತುಂಬಿದವು. ೧೯೫೭ರಲ್ಲಿ ‘ಅರಳು ಮರಳು’ ಕವನಸಂಕಲನ ಪ್ರಕಟವಾಯಿತು. ಈ ಬೃಹತ್ ಸಂಕಲನದಲ್ಲಿ ೫ ಉಪಸಂಕಲನಗಳಿವೆ:
(೧) ಹೃದಯ ಸಮುದ್ರ, (೨) ಸೂರ್ಯಪಾನ, (೩) ಮುಕ್ತಕಂಠ, (೪) ಚೈತ್ಯಾಲಯ ಹಾಗು (೫) ಜೀವಲಹರಿ.
ಬೇಂದ್ರೆಯವರ ಕಾವ್ಯಪಥವು ಬದಲಾದದ್ದನ್ನು ಈ ಸಂಕಲನಗಳಲ್ಲಿ ಕಾಣಬಹುದು. ನಿಸರ್ಗಪ್ರೀತಿ, ಆದರ್ಶ ಹಾಗು ಬದುಕಿನ ಒಲವನ್ನು ಬಿಂಬಿಸುತ್ತಿದ್ದ ಜೀವನ್ಮುಖಿ ಕಾವ್ಯವು ಇದೀಗ ಸೂರ್ಯಪಾನದಂತೆ ಪರಮಾರ್ಥಮುಖಿಯಾಗಿ ಬದಲಾಯಿತು. ಯಾವುದೇ ವ್ಯಕ್ತಿಯ ಜೀವನದಲ್ಲಿ ಇದು ಸಹಜವಾದದ್ದೇ. ೧೯೪೩ರಲ್ಲಿ ಬೇಂದ್ರೆಯವರು ಶ್ರೀ ಅರವಿಂದ ಹಾಗು ಶ್ರೀಮಾತಾ ಇವರ ದರ್ಶನ ಪಡೆದರು. ಬೇಂದ್ರೆಯವರ ಗೆಳೆಯರ ದೊಡ್ಡ ಗುಂಪೇ ಅರವಿಂದರಿಂದ ಪ್ರಭಾವಿತವಾಗಿತ್ತು. ಇವರಲ್ಲಿ ‘ಮಧುರಚೆನ್ನ ’ ಕಾವ್ಯನಾಮದಿಂದ ಖ್ಯಾತರಾದ ಹಲಸಂಗಿ ಚೆನ್ನಮಲ್ಲಪ್ಪನವರು, ಶ್ರೀ ಸಿಂಪಿ ಲಿಂಗಣ್ಣನವರು ಹಾಗು ಶ್ರೀ ವಿನಾಯಕ ಗೋಕಾಕರು ಪ್ರಮುಖರು. ೧೯೪೮ರಲ್ಲಿ ಬೇಂದ್ರೆಯವರಿಗೆ ತತ್ವಜ್ಞಾನಿ ಶ್ರೀ ಜಿಡ್ಡು ಕೃಷ್ಣಮೂರ್ತಿಯವರ ಭೆಟ್ಟಿ ಹಾಗು ಶ್ರೀ ಗುಳವಣಿ ಮಹಾರಾಜರ ದರ್ಶನವಾಯಿತು. ೧೯೫೨ರಲ್ಲಿ ಪ್ರಭಾಕರ ಮಹಾರಾಜರ ದರ್ಶನ ಪಡೆದರು. ೧೯೫೪ರಲ್ಲಿ ಶ್ರೀ ರಾಮದಾಸರ ದರ್ಶನಲಾಭವಾಯಿತು. ಬೇಂದ್ರೆಕುಟುಂಬವು ಪಾರಂಪರಿಕವಾಗಿ ಗೋಂದಾವಲಿಯ ಶ್ರೀ ಬ್ರಹ್ಮಚೈತನ್ಯರ ಶಿಷ್ಯವರ್ಗಕ್ಕೆ ಸೇರಿದ್ದು. ಇದೆಲ್ಲದರ ಪರಿಣಾಮವು ಅವರ ಸಾಹಿತ್ಯದಲ್ಲಿ ಬಿಂಬಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಈ ಅವಧಿಯ ಕಾವ್ಯದಲ್ಲಿ ಕಾವ್ಯ ಹಾಗು ಪಾರಮಾರ್ಥಿಕತೆಯ ಸಂಯೋಗವನ್ನು ಕಾಣುತ್ತೇವೆ.
೧೯೫೭ರ ನಂತರದ ಬೇಂದ್ರೆ-ಕಾವ್ಯವು ಮೂರನೆಯ ಘಟ್ಟದ ಕಾವ್ಯ. ಈ ಅವಧಿಯಲ್ಲಿ ಪ್ರಕಟಗೊಂಡ ಸಂಕಲನಗಳು ಇಂತಿವೆ:
(೧) ನಮನ, (೨) ಸಂಚಯ, (೩) ಉತ್ತರಾಯಣ, (೪) ಮುಗಿಲ ಮಲ್ಲಿಗೆ, (೫) ಯಕ್ಷ ಯಕ್ಷಿ, (೬) ನಾಕು ತಂತಿ, (೭) ಮರ್ಯಾದೆ, (೮) ಶ್ರೀಮಾತಾ, (೯) ಇದು ನಭೋವಾಣಿ, (೧೦) ಮತ್ತೆ ಶ್ರಾವಣಾ ಬಂತು ಹಾಗು (೧೧) ಚತುರೋಕ್ತಿ ಮತ್ತು ಇತರ ಕವನಗಳು.
ಅವರ ಮರಣೋತ್ತರ (೧೯೮೧ರ ನಂತರದಲ್ಲಿ) ಪ್ರಕಟವಾದ ಕವನಸಂಕಲನಗಳು ಇಂತಿವೆ:
(೧) ಪರಾಕಿ, (೨) ಕಾವ್ಯವೈಖರಿ, (೩) ತಾ ಲೆಕ್ಕಣಕಿ ತಾ ದೌತಿ, (೪) ಬಾಲಬೋಧೆ, (೫) ಪ್ರತಿಬಿಂಬಗಳು ಹಾಗು (೬) ಶತಮಾನ.
ಈ ಮೂರನೆಯ ಘಟ್ಟದ ಕಾವ್ಯವು ಐಹಿಕ ಸಿದ್ಧಿ ಹಾಗು ಪ್ರಸಿದ್ಧಿಯ ಆಚೆಗಿನ ಕಾವ್ಯ. ಕವಿಯು ಧ್ಯಾನಸ್ಥನಾದ ಸಮಯದ ಕಾವ್ಯವಿದು. ಈ ಕಾವ್ಯದಲ್ಲಿ ಬೆಡಗು, ಬಿನ್ನಾಣಗಳಿಲ್ಲ. ಬದಲಿಗೆ ನಿಗೂಢತೆ ಇದೆ. ಹೀಗಾಗಿ ಇದೆಂತಹ ಕಾವ್ಯ ಎಂದು ಕೆಲವರಿಗೆ ಅನ್ನಿಸಬಹುದು. ‘ಅರಳು ಮರಳು’ ನಂತರದ ಬೇಂದ್ರೆ ಕಾವ್ಯವು ಕಾವ್ಯವೇ ಅಲ್ಲ ಎಂದು ಕೆಲವು ವಿಮರ್ಶಕರು ಹೇಳಿದ್ದುಂಟು. ಅವರ ದೃಷ್ಟಿದೋಷವೇ ಈ ಹೇಳಿಕೆಗೆ ಕಾರಣ. ಬೇಲೂರು ಶಿಲಾಬಾಲಿಕೆಯಂತಹ ಕುಸುರಿ ಕೆಲಸದ ಶಿಲ್ಪಸೌಂದರ್ಯವನ್ನು ನೋಡಿದ ಬಳಿಕ, ಗೊಮ್ಮಟೇಶ್ವರನನ್ನು ನೋಡಿ, ಈ ಕೆತ್ತನೆಯಲ್ಲಿ ಏನಿದೆ ಎಂದು ಹೀಯಾಳಿಸುವ ಕುರುಡುತನ ಈ ವಿಮರ್ಶಕರದು.
ಬೇಂದ್ರೆಯವರು ರಚಿಸಿದ ‘ಗಣಪತಿ’ ಕವನವು ಅವರ ಧ್ಯಾನಸ್ಥ ಘಟ್ಟದ ಕವನ. ಗಣಪತಿಯನ್ನು ಧ್ಯಾನಿಸುತ್ತಿರುವಾಗ, ಆ ದೇವತೆಯು ಅವರ ಅಂತರಂಗದಲ್ಲಿ ಮೂಡುತ್ತಿದ್ದಾನೆ. ಆ ದೇವತೆಯೇ ಸಾಧಕನಿಗೆ ತನ್ನ ಸ್ವರೂಪವನ್ನು ತೆರೆಯುತ್ತಿರುವ ರೀತಿಯಲ್ಲಿ ಈ ಕವನವಿದೆ.
ಕವನದ ಮೊದಲ ನುಡಿಯನ್ನು ನೋಡಿ:
“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”
“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ”:
ತಾಯ ಗರ್ಭದಲ್ಲಿ ಇರುವ ಕೂಸು ಗರ್ಭಚೀಲದಲ್ಲಿ (placenta) ಇರುತ್ತದೆ. ಇದಕ್ಕೆ ‘ಮಾಸ’ ಎಂದೂ ಹೇಳುತ್ತಾರೆ. ಇದು ಹೊಲಸಿನ ಚೀಲ. ಶಿಶುವು ಪ್ರಸವ ಸಮಯದಲ್ಲಿ ಈ ಹೊಲಸಿನ ಚೀಲವನ್ನು ಹರಿದುಕೊಂಡು ಹೊರಬರುತ್ತದೆ. ಸಾಧಕನ ಅಂತರಂಗವೂ ಸಹ ಅರಿಷಡ್ವರ್ಗಗಳಿಂದ ಮಲಿನವಾದದ್ದೇ. ಇಂತಹ ಅಶುದ್ಧ ಅಂತರಂಗದಲ್ಲಿಯೂ ಸಹ ಭಕ್ತನ ಸಾಧನೆಯಿಂದಾಗಿ ಗಣಪತಿಯು ಮೂಡುತ್ತಾನೆ. ಸಾಧನೆಯ ಅಂತಿಮ ಹಂತದಲ್ಲಿ ಶಿಶುರೂಪದಲ್ಲಿ ಇರುವ ಗಣಪತಿಯು, ಭಕ್ತನಿಗೆ ವ್ಯಕ್ತವಾಗುವಾಗ, ಈ ಹೊಲಸಿನ ಚೀಲವನ್ನು ಬಿಚ್ಚಿ ಹೊರಬರುತ್ತಾನೆ. ದೇವಶಿಶುವಿನ ಆಗಮನದಿಂದ ಮಲಿನ ಅಂತರಂಗವು ಪಾವನವಾಗಿ, ಅಲ್ಲಿ ಸುಗಂಧ ಹರಡುತ್ತದೆ.
ಈ ಸುಗಂಧವು ಅತೀಂದ್ರಿಯ ಅನುಭವಕ್ಕೆ ಮಾತ್ರ ಸಿಲುಕುವಂತಹದು. ಸುಗಂಧವು ನಮ್ಮನ್ನು ಆಹ್ಲಾದಗೊಳಿಸುವಂತೆ, ದೇವನ ಆಗಮನವೂ ಸಹ ನಮ್ಮ ಅಂತರಂಗವನ್ನು ಆಹ್ಲಾದಗೊಳಿಸುತ್ತದೆ.
“ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ”:
ಗಣಪತಿಯ ಅಂದರೆ ಇಷ್ಟದೇವತೆಯ ಸಾಕ್ಷಾತ್ಕಾರದಿಂದ ಅಂತರಂಗದಲ್ಲಿ ಬ್ರಹ್ಮಾನಂದದ ಝರಿ ಹರಿಯುತ್ತದೆ. ಸದ್ಗುಣಗಳು ಪುಷ್ಟಿಗೊಳ್ಳುತ್ತವೆ. ಇದುವೇ ಭಕ್ತನಿಗೆ ಗಣಪತಿಯು ಉಣ್ಣಿಸುವ ಮಕರಂದ. ಆದರೆ ಈ ಮಕರಂದವೂ ಸಹ ಇಂದ್ರಿಯಗಳ ಅನುಭವಕ್ಕೆ ಸಿಗದ ಅಲೌಕಿಕ ಪದಾರ್ಥ, ಇದು transcendental joy!
“ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”:
ಅಪರೂಪದ ಗೆರೆ ಎಂದರೆ ಮಿಂಚಿ ಮಾಯವಾಗುವ ಗೆರೆ. ಯೋಗಿಗಳು ಸಮಾಧಿಸ್ಥಿತಿಯಲ್ಲಿ ಭಗವದ್ದರ್ಶನ ಪಡೆದಾಗ ಅದನ್ನು “ತಟಿಲ್ಲತಾ ಸಮರುಚಿಃ” ಎಂದರೆ ಕೋಲ್ಮಿಂಚು ಎಂದು ವರ್ಣಿಸುತ್ತಾರೆ. ಗಣಪತಿಯು ವ್ಯಕ್ತವಾಗುವದೂ ಸಹ ಕೋಲ್ಮಿಂಚಿನಂತೆ. ಸಾಧಕನ ಅಂತರಂಗದ ಬಾನಿನಲ್ಲಿ ಗಣಪತಿಯು ಮಿಂಚಿನಂತಹ ಅಪರೂಪದ ಗೆರೆಯಾಗಿ ಕಾಣುತ್ತಾನೆ. ಇಂತಹ ಸತತ ಕೋಲ್ಮಿಂಚುಗಳ ಕಟ್ಟೇ ಅವನಾಗಿದ್ದಾನೆ. ಆದರೆ ಸಾಧಕನಿಗೆ ಆ ಕಟ್ಟಿನ ಗುರುತು ಸರಳಸಾಧ್ಯವಲ್ಲ! ಆ ಕೋಲ್ಮಿಂಚು ಸಾಧಕನಿಗೆ ಕಾಣಬೇಕಾದರೆ, ಆ ದೇವತಾದರ್ಶನವು ಅವನಿಗೆ ಆಗಬೇಕಾದರೆ ಅವನ ಶರೀರಗಳು (ಸ್ಥೂಲ ಹಾಗು ಸೂಕ್ಷ್ಮ ಶರೀರಗಳು), ಸಾಧನೆಯಿಂದ ಹುರಿಗೊಳ್ಳಬೇಕು.
‘ಹುರಿಗೊಳ್ಳುವದು’ ಎಂದರೇನು? ನೂಲಿನ ಬೇರೆ ಬೇರೆ ಎಳೆಗಳು ಒಂದಾಗಿ ಗಟ್ಟಿಯಾಗುವದಕ್ಕೆ ಹುರಿಗೊಳ್ಳುವದು ಎನ್ನುತ್ತಾರೆ. ಹಾಗಾದಾಗ ಮಾತ್ರ ಆತ ತನ್ನ ಅಂತರಂಗದಲ್ಲಿಯ ದೇವತೆಯನ್ನು ಮುಟ್ಟಬಲ್ಲ, ಅನುಭವಿಸಬಲ್ಲ. ‘ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು’ ಎನ್ನುವದರ ಅರ್ಥವಿದು.
ಈಗ ಎರಡನೆಯ ನುಡಿಯನ್ನು ನೋಡಿರಿ:
“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”
“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು”
‘ನಾನು ಬರಿಸದ್ದು’ ಎನ್ನುವದರ ಒಂದು ಅರ್ಥ ‘ನಾನು ಬರಿಸದೇ ಇದ್ದದ್ದು’, ಎಂದರೆ ಸೃಷ್ಟಿಸದೇ ಇದ್ದದ್ದು ಎಂದು ಆಗಬಹುದು. ‘ತಾನು (=ಭಗವಂತ) ಇದ್ದದ್ದು’ ಎಂದರೆ ‘ಸತ್’ ಎನ್ನುವ ಅರ್ಥ; ‘ಇಲ್ಲದ್ದು’ ಎಂದರೆ ‘ಅಸತ್’ ಎನ್ನುವ ಅರ್ಥ. ಸತ್ ಹಾಗು ಅಸತ್ ಈ ಎರಡೂ ಪ್ರಪಂಚಗಳು ಅವನು ಬರಿಸದೇ ಇದ್ದದ್ದು, ಅವನು ಮಾಡದೇ ಇದ್ದದ್ದು. ಗಣಪತಿಯು ಈ ಸತ್ ಹಾಗು ಅಸತ್ ಪ್ರಪಂಚಗಳನ್ನು ಸೃಷ್ಟಿಸದೇ ಇದ್ದರೆ, ಈ ಪ್ರಪಂಚಗಳು ವ್ಯಕ್ತವಾಗುವದೇಕೆ ಎನ್ನುವ ಸಂದೇಹ ಬರುತ್ತದೆ. ಈ ಸಂದೇಹಕ್ಕೆ ಉತ್ತರ ಶಂಕರಾಚಾರ್ಯರ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿದೆ.
“ಯಸ್ಯೈವ ಸ್ಫುರಣಂ ಸದಾತ್ಮಕಮಸತ್ ಕಲ್ಪಾರ್ಥಕಂ ಭಾಸತೇ”. ಅಂದರೆ, ಭಗವಂತನ ಸ್ಫುರಣಕ್ರಿಯೆಯಿಂದಾಗಿ ಸತ್ ಮತ್ತು ಅಸತ್ ಎನ್ನುವ ಪ್ರಪಂಚಗಳು ನಿರಂತರವಾಗಿ ಭಾಸವಾಗುತ್ತವೆ. ಅರ್ಥಾತ್ ಅವು ವಾಸ್ತವಿಕವಾಗಿ ಇಲ್ಲ. ಈ ಅವಾಸ್ತವ ಪ್ರಪಂಚಗಳ ಹೊರಗೆ ಇರುವದರಿಂದಲೇ ಗಣಪತಿಯು ‘ನಾನು ಎಣಿಕೆಗೆ ಹೊರಗೆ’ ಎನ್ನುತ್ತಾನೆ. ಇದೇ ಮಾತನ್ನು ‘ಅತ್ಯತಿಷ್ಠತ್ ದಶಾಂಗುಲಮ್’ ಎಂದೂ ಹೇಳಲಾಗಿದೆ. ಅಂದರೆ, ಈ ಪ್ರಪಂಚಗಳನ್ನೆಲ್ಲ ವ್ಯಾಪಿಸಿಯೂ, ಭಗವಂತನು ಇದರ ಹೊರಗೆ ಸಹ ಇರುತ್ತಾನೆ. ಆ ಕಾರಣದಿಂದಾಗಿ ಅವನು ಪ್ರಾಪಂಚಿಕರ ಎಣಿಕೆಗೆ ಸಿಗಲಾರ. ಪ್ರಪಂಚಗಳಲ್ಲಿ ಇರುವ ಭಗವಂತನು ಪ್ರಾಪಂಚಿಕರ ಅನುಭವಕ್ಕೆ ಬರದಂತೆ ಇರುತ್ತಾನೆ. ಆದುದರಿಂದಲೇ ಗಣಪತಿಯು ಹೇಳುವದು: “ನಾನು ಇರುವೆನು ಕದ್ದು.”
‘ನಾನು ಬರಿಸದ್ದು’ ಎನ್ನುವ ಪದಪುಂಜವನ್ನು ‘ನಾನು ಬರಿ ಸದ್ದು’ ಎಂದು ಬಿಡಿಸಿಯೂ ಓದಬಹುದು. ಸದ್ದು ಎಂದರೆ ನಾದ. ಭಗವಂತನು ‘ಓಂ’ ನಾದದ ಮೂಲಕ ಪ್ರಕಟವಾಗುತ್ತಾನೆ ಎಂದು ಹೇಳುತ್ತಾರೆ. ಗಣಪತಿಯೂ ಸಹ ಸಾಧಕನಿಗೆ ಓಂಕಾರದ ಮೂಲಕ ಪ್ರಕಟವಾಗಬಹುದು. ‘ತಾನಿದ್ದದ್ದು’ ಎಂದರೆ ಈ ಓಂಕಾರ ನಾದಕ್ಕೆ ಸಂಗೀತದ ‘ತಾನ್’ ಇರಲೂ ಬಹುದು, ಇರದಿರಲೂ ಬಹುದು. ಸಾಧಕನ ಸಾಧನೆಯ ಮಟ್ಟದ ಮೇಲೆ ಇದು ಹೋಗುತ್ತದೆ.
“ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”
ಈ ಭಗವಂತನು ಭಕ್ತರ ಕಾಣಿಕೆಗಳಿಗೆ ಮರುಳಾಗುತ್ತಾನೆಯೆ? ಇಲ್ಲ. ಏಕೆಂದರೆ ಕಾಣಿಕೆಗಳಲ್ಲಿ ‘ತಾನು ಕೊಟ್ಟಿದ್ದು’ ಎನ್ನುವ ಅಹಂಕಾರವಿರುತ್ತದೆ ಮತ್ತು ಕಾಣಿಕೆಗಳು ಅಲ್ಪಾಯುಗಳು. ಪ್ರೀತಿ ಮಾತ್ರ ನಿರಂತರವಾದದ್ದು. ಆದುದರಿಂದ ಗಣಪತಿಯು ಅಹಂಕಾರದ ಈ ಅಲ್ಪಾಯು ಕಾಣಿಕೆಗಳನ್ನು ಕುಣಿಗೆ (ಅಂದರೆ burial pitಗೆ) ಎಸೆಯುತ್ತಾನೆ. ಆತನಿಗೆ ಬೇಕಾದದ್ದು ಭಕ್ತರ ನಿರ್ವ್ಯಾಜ ಪ್ರೇಮ. ಹಾಗೆಂತಲೇ ಆತ ತನ್ನನ್ನು ‘ತುಟಿಯ ಮೇಲಿನ ಮುತ್ತು’ ಎಂದು ಕರೆದುಕೊಳ್ಳುತ್ತಾನೆ. ತುಟಿಯ ಮೇಲಿನ ಮುತ್ತು ಅನ್ಯೋನ್ಯ ಪ್ರೀತಿಯ ದ್ಯೋತಕ. ಮುತ್ತು ಕೊಟ್ಟ ಮೇಲೂ ಸಹ, ಆ ಭಾಸ ನಿರಂತರವಾಗಿ ಉಳಿಯುತ್ತದೆ. ಗಣಪತಿಯು ದೇವತೆಯೂ ಹೌದು; ಭಕ್ತ ಹಾಗು ದೇವತೆಯ ನಡುವಿನ ಪ್ರೀತಿಯೂ ಹೌದು.
ಬೇಂದ್ರೆಯವರು ಅಪಾರ ಶ್ರದ್ಧೆ ಹಾಗು ನಿಷ್ಠೆಯನ್ನು ಇಟ್ಟಿದ್ದ ಬ್ರಹ್ಮಚೈತನ್ಯ ಮಹಾರಾಜರಿಗೆ ಅವರ ಶಿಷ್ಯರೊಬ್ಬರು ಒಮ್ಮೆ ತಕರಾರು ಹೇಳಿದರು: “ಮಹಾರಾಜ, ನಾನು ನನ್ನ ಸರ್ವಸ್ವವನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ. ಆದರೂ ದೇವರು ನನಗೇಕೆ ದರ್ಶನ ಕೊಟ್ಟಿಲ್ಲ?”
ಅದಕ್ಕೆ ಮಹಾರಾಜರ ಉತ್ತರ ಹೀಗಿತ್ತು: “ನೀವು ನಿಮ್ಮ ಸರ್ವವನ್ನೂ ಕೊಟ್ಟಿದ್ದೀರಿ. ಆದರೆ ‘ಸ್ವ’ವನ್ನು ಮಾತ್ರ ಇನ್ನೂ ಕೊಟ್ಟಿಲ್ಲ!”
ಇದರಂತೆಯೇ, ಸಾಧಕನು ಕೊಟ್ಟ ಸರ್ವ ಕಾಣಿಕೆಗಳನ್ನು ಗಣಪತಿಯು ಕುಣಿಗೆ ಎಸೆಯುತ್ತಾನೆ. ಅವನಿಗೆ ಬೇಕಾದದ್ದು ‘ಸ್ವ’ ಮಾತ್ರ!
ಈಗ ಮೂರನೆಯ ನುಡಿಯನ್ನು ನೋಡಿರಿ:
ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.
“ನಾನು ನೀನಿನ ನೂಲು ಈ ದಿಗಂಬರ ಪಟವು”:
ಬಸವಣ್ಣನವರು ತಮ್ಮ ವಚನವೊಂದರಲ್ಲಿ ದೇವರಿಗೆ ಹೇಳುತ್ತಾರೆ: “ಹಳೆಯ ನಾನು, ಕೆಳೆಯ ನೀನು.”
ಈ ಪ್ರಪಂಚ ಕೂಡ ದೇವರಷ್ಟೇ ಸನಾತನವಾದದ್ದು. ದೇವರು ಈ ಪ್ರಪಂಚದ ಪ್ರಿಯಕರ. ಬೇಂದ್ರೆಯವರು ಸಹ ‘ನಾನು’ ಹಾಗು ‘ನೀನು’ ಎನ್ನುವ ನೂಲುಗಳು ಹಾಸು ಮತ್ತು ಹೊಕ್ಕು ಇದ್ದಂತೆ ; ಇವೆರಡೂ ಇದ್ದರೇ, ಸೃಷ್ಟಿ ಎನ್ನುವ ‘ಪಟ’ (=ಬಟ್ಟೆ, ನಕಾಶೆ) ತಯಾರಾಗುವದು ಎಂದು ಹೇಳುತ್ತಾರೆ. ಆದರೆ ಈ ಪಟವು ‘ದಿಗಂಬರ ಪಟ’ ವಾಗಿದೆ. ದಿಕ್ಕುಗಳೇ ಅಂಬರವಾಗಿರುವದು ಅಂದರೆ ಬಟ್ಟೆಯಾಗಿರುವದು ದಿಗಂಬರ. ಭಕ್ತ ಹಾಗು ಭಗವಂತರ ಈ ಪಟವು ಎಷ್ಟು ವಿಶಾಲವಾಗಿದೆ ಎಂದರೆ, ಅದು ದಿಕ್ಕುಗಳನ್ನೆಲ್ಲ ವ್ಯಾಪಿಸಿದೆ. ಈ ಎಲ್ಲ ಪ್ರಪಂಚಗಳು ಭಗವಂತನ ಹಾಗು ಭಕ್ತರ ದಿಗಂಬರ ಪಟವೇ ಆಗಿವೆ.
ದಿಗಂಬರ ಎನ್ನುವದು ದತ್ತಾತ್ರೇಯನ ವರ್ಣನೆಯೂ ಅಹುದು. ಆತನಿಗೆ ದಿಕ್ಕುಗಳೇ ಅಂಬರ ಎಂದರೆ ಆತ ಬತ್ತಲೆ ಯತಿ. ಭಕ್ತ ಹಾಗು ಭಗವಂತರ ಜೋಡಣೆಯಿಂದಾದ ಈ ಪಟಕ್ಕೆ ದಿಗಂಬರನೇ ಅಂದರೆ ಭಗವಂತನೇ ಒಡೆಯ. ಆದುದರಿಂದ ಈ ಪಟವು (=ನಕಾಶೆಯು) ದಿಗಂಬರ ಬರೆದ, ಆತನ ಒಡೆತನದ ಪಟ(=ನಕಾಶೆ).
“ಉಸಿರಿಗೇಕೊ ಬೆಸಿಗೆ?”
ತಾಯ ಗರ್ಭದಲ್ಲಿದ್ದ ಶಿಶುವಿನ ಉಸಿರು ಹಾಗು ಶಿಶುವನ್ನು ಹೊತ್ತ ತಾಯಿಯ ಉಸಿರು ಬೇರೆಯಾಗಿಲ್ಲ. ಅದೇ ರೀತಿಯಲ್ಲಿ ಭಕ್ತ ಹಾಗು ಭಗವಂತನ ನಡುವಿನ ಉಸಿರು ಒಂದೇ ಆಗಿದೆ. ಬೇರೆಯಾಗಿದ್ದರೆ ಮಾತ್ರ ಬೆಸುಗೆ ಬೇಕು. ಭಕ್ತನು ಭಗವಂತನ ಶಿಶು; ಭಗವಂತನೂ ಸಹ ಭಕ್ತನ ಅಂತರಂಗದಲ್ಲಿಯ ಶಿಶು. ಇವರಿಬ್ಬರಿಗೂ ಇರುವದು ಪರಸ್ಪರ ತಾಯಿ-ಮಗುವಿನ ಸಂಬಂಧ. ಹೀಗಿರುವಾಗ ಈ ಉಸಿರಿಗೆ ಬೆಸುಗೆ ಏತಕೆ ಬೇಕು?
ಉಸಿರಿನ ಬೆಸುಗೆ ಎಂದರೆ ಪ್ರಾಣಾಯಾಮ ಎಂದೂ ಅರ್ಥವಾಗುವದು. ಭಗವತ್-ದರ್ಶನಕ್ಕೆ ಪ್ರಾಣಾಯಾಮ ಮೊದಲಾದ ಹಠಸಾಧನೆಗಳ ಅವಶ್ಯಕತೆ ಏನಿದೆ ಎಂದು ಗಣಪತಿಯು ಕೇಳುತ್ತಾನೆ.
” ಆರೆಂಟರೀ ಹಠವು?”:
ಆರೆಂಟು ಅರ್ಥಾತ್ ಆರು ಹಾಗು ಎಂಟುಗಳನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದು.
ಮೊದಲನೆಯ ಅರ್ಥವನ್ನು ನೋಡೋಣ:
‘ಆರು’ ಎಂದರೆ ಷಟ್-ದರ್ಶನಗಳು:
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಮೀಮಾಂಸಾ ಹಾಗು ಉತ್ತರಮೀಮಾಂಸಾ ಇವು ಆರು ಆಸ್ತಿಕ ದರ್ಶನಗಳು ; ಚಾರ್ವಾಕ, ಆರ್ಹತ, ವೈಭಾಷಿಕ, ಸಾತ್ರಾಂತಿಕ, ಯೋಗಾಚಾರ, ಮಾಧ್ಯಮಿಕ ಇವು ಆರು ನಾಸ್ತಿಕ ದರ್ಶನಗಳು.
‘ಎಂಟು’ ಅಂದರೆ ಅಷ್ಟಾಂಗ ಯೋಗ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗು ಸಮಾಧಿ ಇವು ಯೋಗದ ಎಂಟು ಅಂಗಗಳು.
ಭಕ್ತ ಹಾಗು ಭಗವಂತರು ಹಾಸು-ಹೊಕ್ಕಾಗಿ ಪಟವನ್ನು ನೇಯ್ದಾಗ ಆರು ದರ್ಶನಗಳ ಹಾಗು ಎಂಟು ಯೋಗಗಳ ಅವಶ್ಯಕತೆ ಉಳಿಯುವದಿಲ್ಲ ಎನ್ನುವದು ಮೊದಲನೆಯ ಅರ್ಥ.
ಈಗ ಎರಡನೆಯ ಅರ್ಥವನ್ನು ನೋಡೋಣ:
ಅಂತರಂಗದಲ್ಲಿ ಅಮೂರ್ತವಾಗಿ ಇರುವ ಗಣಪತಿ ಎನ್ನುವ ಭಾವನೆಯು ಮೂರ್ತರೂಪ ತಾಳಬೇಕಾದರೆ ಅವನಿಗೆ ಘನರೂಪ ಬೇಕು. ಘನಕ್ಕೆ ಇರುವದು ಆರು ಪಾತಳಿಗಳು ಹಾಗು ಎಂಟು ಕೋನಬಿಂದುಗಳು. ಈ ಆರು ಹಾಗು ಎಂಟರ ಅಂದರೆ ಘನರೂಪವನ್ನು ತಾಳುವ ಅರ್ಥಾತ್ ಮೂರ್ತರೂಪ ತಾಳುವ ಅವಶ್ಯಕತೆ ಇಲ್ಲವೆಂದು ಗಣಪತಿಯು ಭಕ್ತನಿಗೆ ಹೇಳುತ್ತಾನೆ. ಇದಕ್ಕೆ ಎರಡು ಕಾರಣಗಳಿವೆ. ಮೂರ್ತರೂಪವನ್ನು ತಾಳಿದಾಗ, ಆತನು ಅಂತರಂಗದ ಹೊರಗೆ ಬಂದು ಬಹಿರಂಗನಾಗಬೇಕಾಗುತ್ತದೆ. ಎರಡನೆಯದಾಗಿ ಮೂರ್ತರೂಪಕ್ಕೆ ಅಂತ್ಯವೆನ್ನುವದಿದೆ. ‘ಗಣಪತಿ ಅಥರ್ವ ಶೀರ್ಷ’ದಲ್ಲಿ ಗಣಪತಿಯನ್ನು ‘ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತ:’ ಎಂದು ಬಣ್ಣಿಸಿದ್ದಾರೆ. ಗಣಪತಿಯು ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳಿಲ್ಲದವನು. ಈ ಮೂರು ಗುಣಗಳ ವಿವಿಧ ಪ್ರಮಾಣದ ಬೆರಕೆಯಿಂದಲೆ, ಸೃಷ್ಟಿಯ ವಿವಿಧ ಜೀವಿಗಳಿಗೆ ವಿವಿಧ ರೂಪದ ದೇಹಗಳು ಬರುವವು. ದೇಹವು ವಿನಾಶಕ್ಕೆ ಒಳಪಟ್ಟಿದೆ. ಗಣಪತಿಯು ನಿರ್ಗುಣನು, ಆದುದರಿಂದ ನಿರ್ದೇಹಿಯು, ಆದುದರಿಂದ ಅವಿನಾಶನು, ಕಾಲಾತೀತನು. ಅಂತಹ ದೇವತೆಯನ್ನು ಮೂರ್ತರೂಪದಲ್ಲಿ, ಬಹಿರಂಗದಲ್ಲಿ ಕಾಣಬೇಕೆನ್ನುವ ಭಕ್ತನ ಹಠವು ಸರಿಯಲ್ಲ ಎಂದು ಗಣಪತಿಯು ಹೇಳುತ್ತಿದ್ದಾನೆ.
ಈಗ ಮೂರನೆಯ ಅರ್ಥವನ್ನು ನೋಡೋಣ:
ಸಾಧಕನು ದೇವತೆಯನ್ನು ಪೂಜಿಸುವಾಗ, ತನ್ನ ದೇಹದ ಆರು ಅಂಗಗಳಲ್ಲಿ ದೇವತೆಯನ್ನು ನ್ಯಾಸ ಮಾಡಿಕೊಳ್ಳುತ್ತಾನೆ. ಆ ಅಂಗಗಳು ಇಂತಿವೆ: ಹೃದಯ, ತಲೆ, ಶಿಖೆ, ಭುಜಗಳು, ಕಣ್ಣುಗಳು ಹಾಗು ಕರತಲ. ಇದು ಪಿಂಡಾಂಡ. ಇದೇ ದೇವತೆಯು ಬ್ರಹ್ಮಾಂಡದಲ್ಲಿ ಎಂಟು ರೂಪಗಳಲ್ಲಿ ಸ್ಥಿತನಾಗಿರುತ್ತಾನೆ. ಅವು ಇಂತಿವೆ: ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಅಗ್ನಿ,ವಾಯು, ಸೂರ್ಯ ಮತ್ತು ಚಂದ್ರ (ಗಣಪತಿ-ಅಥರ್ವಶೀರ್ಷದ ಮೇರೆಗೆ.)
ಪಿಂಡಾಂಡದಲ್ಲಿಯೇ ಆಗಲಿ ಅಥವಾ ಬ್ರಹ್ಮಾಂಡದಲ್ಲಿಯೇ ಆಗಲಿ, ದೇವತೆಯ ಮೂರ್ತರೂಪವನ್ನು ಕಾಣುವ ಹಠ ಭಕ್ತನಿಗೆ ಬೇಡವೆನ್ನುವದು ಗಣಪತಿಯ ಅಭಿಮತವಾಗಿರಬಹುದು.
ಯಾಕೆ? ಇದಕ್ಕೆ ಉತ್ತರ ಮುಂದಿನ ಸಾಲುಗಳಲ್ಲಿದೆ.
“ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.”
ಭಕ್ತ ಹಾಗು ಭಗವಂತನ ನಡುವೆ ಇರುವ ಸಂಬಂಧವು ಪೂರಕ ಸಂಬಂಧ.
(ಬಸವಣ್ಣನವರ ವಚನವೂ ಸಹ ಈ ಪೂರಕ ಸಂಬಂಧವನ್ನೇ ಬಣ್ಣಿಸುತ್ತದೆ:
“ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ, ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ, ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ಆಕಾರವಾಗಿರ್ದಲ್ಲಿ,ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನೆನ್ನ ಭವವ ಕೊಂದಿಹೆನೆಂದು ಜಂಗಮ-ಲಾಂಛನವಾಗಿ ಬಂದೆಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ, ಕೂಡಲ ಸಂಗಮ ದೇವಾ.”)
ಈ ಪೂರಕ ಸಂಬಂಧವು ಎಂತಹದು?
ಭಕ್ತನು ಮಾಡಬೇಕಾದ ಅಡುಗೆಗೆ, ಸಾಹಿತ್ಯವನ್ನು ಪೂರೈಸುವವನೇ ಭಗವಂತನು.
ಭಕ್ತನು ಮಾಡುವ ಅಡುಗೆ ಯಾವುದು? ಭಕ್ತಿಯೇ ಅವನು ಅಟ್ಟು ಬಡಿಸುವ ನೈವೇದ್ಯ. ಆ ಭಕ್ತಿಗೆ ಬೇಕಾದ ಸಾಹಿತ್ಯವನ್ನು ಅಂದರೆ ಭಾವನೆಯನ್ನು ಕೊಡುವವನೇ ಗಣಪತಿ.
ಪಾಕಪದಾರ್ಥಕ್ಕೆ ಇನ್ನೂ ಹಲವು ಅರ್ಥಗಳಿವೆ. ಪಾಕವಾದದ್ದು ಎಂದರೆ ಹದವಾದದ್ದು, maturityಯನ್ನು ಪಡೆದದ್ದು ಎಂದು ಅರ್ಥ. ಭಕ್ತನು ಪಾಕಗೊಳ್ಳಲು ಅಂದರೆ maturityಯನ್ನು ಪಡೆಯಲು ಬೇಕಾಗುವ ಸಾಹಿತ್ಯವನ್ನು ಕೊಡುವವನು ಭಗವಂತನೇ!
ಮೂರನೆಯ ಅರ್ಥವೊಂದನ್ನು ಗಮನಿಸಿರಿ.
ಬೇಂದ್ರೆಯವರು ಸಾಹಿತ್ಯರಸಿಕರಿಗೆ ಉಣ್ಣಿಸಿದ ಪಾಕ(=ಅಡುಗೆ) ಯಾವುದು? ಅದು ಪದಾರ್ಥ(=ಪದ+ಅರ್ಥ)ದ ಅಡುಗೆ, ಅಂದರೆ ಸಾಹಿತ್ಯದ ಅಡುಗೆ. ಅವರು ಪಾಕಗೊಳ್ಳದೆ (=ಹಣ್ಣಾಗದೆ,) ಅಂತಹ ಸಾಹಿತ್ಯವನ್ನು ಉಣ್ಣಿಸಲು ಸಾಧ್ಯವೆ? ಸ್ವತಃ ಬೇಂದ್ರೆಯವರೆ ಹೇಳಿಲ್ಲವೆ?
“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ……..”
ಬೇಂದ್ರೆಯವರು ಪಾಡು ಆಗದೆ(=ಹಣ್ಣು ಆಗದೆ), ಇಂತಹ ಸಾಹಿತ್ಯ ಕೊಡಲು ಸಾಧ್ಯವೆ? ಆದರೆ ಅವರು ಪಾಡಾಗಲು, ಪಾಕವಾಗಲು ಸಾಹಿತ್ಯವನ್ನು(=ಪರಿಸ್ಥಿತಿಯನ್ನು) ಕೊಟ್ಟವನು ಗಣಪತಿಯೇ!
ಈ ಸಂದರ್ಭದಲ್ಲಿ ಕವಿಗುರು ಕಾಳಿದಾಸನ ನಾಂದೀಪದ್ಯವೊಂದು ನೆನಪಿಗೆ ಬರುತ್ತದೆ:
“ವಾಗರ್ಥಾವಿವ ಸಂಪೃಕ್ತೌ, ವಾಗರ್ಥಪ್ರತಿಪತ್ತಯೇ
ಜಗತ: ಪಿತರೌ ವಂದೇ ಪಾರ್ವತೀಪರಮೇಶ್ವರೌ.”
“ವಾಕ್ ಮತ್ತು ಅರ್ಥ ಇವುಗಳ ಸುಸಂಯೋಗಕ್ಕಾಗಿ, ವಾಕ್ ಮತ್ತು ಅರ್ಥಗಳಂತೆ ಒಂದಾಗಿರುವ ಪಾರ್ವತೀ-ಪರಮೇಶ್ವರರಿಗೆ ವಂದಿಸುತ್ತೇನೆ”, ಎಂದು ಕಾಳಿದಾಸನು ಪ್ರಾರ್ಥಿಸುತ್ತಾನೆ. ಬೇಂದ್ರೆಯವರೂ ಸಹ ಪದ(=ವಾಕ್) ಮತ್ತು ಅದರ ಅರ್ಥಗಳ ಸುಸಂಯೋಗಕ್ಕಾಗಿ ಗಣಪತಿಯಿಂದಲೇ ಪದಾರ್ಥ-ಸಾಹಿತ್ಯವನ್ನು ಪಡೆಯುತ್ತಾರೆ.
(ಆಂಗ್ಲ ವಿಮರ್ಶಕನೊಬ್ಬನ ಹೇಳಿಕೆಯೊಂದನ್ನು ಇಲ್ಲಿ ಸೇರಿಸಿದರೆ ಅಪ್ರಸ್ತುತವಾಗಲಿಕ್ಕಿಲ್ಲ:
“ಒಂದು ಪದವನ್ನು ಕೇಳಿದಾಗ, ಆ ಪದದ ಎಲ್ಲ ಪುರಾತನ, ನೂತನ ಅರ್ಥಗಳು ಯಾರಿಗೆ ಹೊಳೆಯುತ್ತವೆಯೋ ಅವನೇ ಕವಿ.”)
ಗಣಪತಿಯ ಈ ಪ್ರಸಾದವನ್ನು ರಸಿಕರು ಮಾತ್ರ ಮೆಚ್ಚಿಕೊಂಡು ಭುಂಜಿಸಬಲ್ಲರು. ಅರ್ಥ ತಿಳಿಯದ ಅರಸಿಕರಿಗೆ ಈ ಊಟವೂ ವ್ಯರ್ಥ ; ಈ ಕೂಟವೂ ವ್ಯರ್ಥ!
ಇನ್ನು ನಾಲ್ಕನೆಯ ನುಡಿಯನ್ನು ನೋಡೋಣ:
“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”
ಭಕ್ತನ ಅಂತರಂಗದಲ್ಲಿ ಅರಳುವ ಗಣಪತಿಯ ಸ್ವರೂಪವನ್ನು ಅನುಭವಿಸಿದ್ದಾಯ್ತು. ಈ ಗಣಪತಿಯ ಹಾಗು ಭಕ್ತರ ನಡುವಿನ ಸಂಬಂಧವನ್ನು ತಿಳಿದದ್ದಾಯ್ತು. ಇನ್ನು ಗಣಪತಿಯು ಭಕ್ತರಿಗೆ ನೀಡುವ ಫಲವೇನು ಎಂದು ಫಲಶ್ರುತಿಯನ್ನು ಹೇಳುವ ಕೊನೆಯ ಭಾಗವು ಇದಾಗಿದೆ.
“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ”:
ಭಕ್ತರಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ನೀಡುವ ಸಾಕ್ಷಿಪುರುಷನು ತಾನಾಗಿದ್ದೇನೆ ಎಂದು ಗಣಪತಿಯು ಹೇಳುತ್ತಾನೆ. ಭಗವಂತನು ಯಾವಾಗಲೂ ಎಲ್ಲ ಜೀವಿಗಳ ಅಂತರಂಗದಲ್ಲಿ ಸಾಕ್ಷಿಯಾಗಿ ನಿಂತುಕೊಂಡಿರುತ್ತಾನೆ. ಈ ಜೀವಿಗಳು ಮಾಡುವ ಕರ್ಮಕ್ಕೆ ಅನುಸಾರವಾಗಿ ಆತ ಫಲ ನೀಡುತ್ತಾನೆ ಎಂದು ಹೇಳಲಾಗುತ್ತಿದೆ. ಗಣಪತಿ-ಸಹಸ್ರನಾಮಾವಳಿಯಲ್ಲಿ ‘ಸಾಕ್ಷಿ’ ಎಂದು ಗಣಪತಿಯನ್ನು ಕರೆಯಲಾಗಿದೆ.
“ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು”:
ಭಗವಂತನಿಗೆ ‘ರಸ’ ಎಂದು ಕರೆಯಲಾಗಿದೆ. (‘ರಸೋ ವೈ ಸಃ.’) ರಸಿಕ ಎಂದರೆ ಭಗವಂತನನ್ನು ಅರಿತುಕೊಂಡವನು. ಆ ರಸಿಕನಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ಮೀರಿದ ನಾಲ್ಕನೆಯ ಪುರುಷಾರ್ಥವಾದ ಮುಕ್ತಿ ದೊರೆತಿದೆ. ಆದುದರಿಂದ ಆತ ಮುಕ್ತನು. ಆತ ಸಾರಸ ಪಕ್ಷಿಯಂತೆ ಧನ್ಯನು. ಸಾರಸ ಪಕ್ಷಿಯು (ಅಂದರೆ ಬಕಪಕ್ಷಿಯು) ನೀರಿನ ಅಂಚಿನಲ್ಲಿ ಧ್ಯಾನಸ್ಥವಾಗಿ ನಿಂತುಕೊಂಡಿರುತ್ತದೆ. ಅದೇ ರೀತಿಯಲ್ಲಿ ಸಾಧಕನೂ ಸಹ ಪ್ರಪಂಚದ ಅಂಚಿನಲ್ಲಿ ಧ್ಯಾನಸ್ಥನಾಗಿ ನಿಂತಿರುತ್ತಾನೆ. ‘ಸಾರಸ’ ಪದಕ್ಕೆ ‘ಸಹ ರಸ’ ಎಂದು ಅರ್ಥೈಸಬಹುದು. ಅಂದರೆ ಈ ಪಕ್ಷಿಯು ಭಗವಂತನ ಧ್ಯಾನದಲ್ಲಿಯೇ ಇರುತ್ತದೆ. ಅದು ಭಕ್ತನ ನೋಂಪಿ(=ತಪಸ್ಸು). ಭಕ್ತನ ಈ ತಪಸ್ಸಿನ ಗಂಟೇ(=ಐಶ್ವರ್ಯವೇ), ಭಗವಂತನು ಪಡುವ ಸುಖ (=ಹದುಳ). ಭಕ್ತ ಮತ್ತು ಭಗವಂತನಿಗಿರುವ ಪರಸ್ಪರ ಸಂಬಂಧವಿದು. “ಪರಸ್ಪರಂ ಭಾವಯಂತಃ” ಎನ್ನುವ ಗೀತಾವಾಕ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”:
ಇಲ್ಲಿಯವರೆಗೂ ಗಣಪತಿಯ ಸ್ವಸ್ವರೂಪ ವರ್ಣನೆಯನ್ನು ಅನುಭವಿಸಿದ ಕವಿ-ಋಷಿ ಈಗ ಹಿಗ್ಗಿನಿಂದ ಹೇಳುತ್ತಾನೆ:
“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”
ದೇವತೆಯಿಂದ ಸ್ಫುರಣವಾದದ್ದು ಮಂತ್ರ. ಪ್ರತಿಯೊಂದು ಮಂತ್ರಕ್ಕೆ ‘ಕೀಲಕ’ ಎನ್ನುವದಿರುತ್ತದೆ. ಗಣಪತಿ ಮಂತ್ರಕ್ಕೆ ಶಿವ-ಶಕ್ತಿಯೇ ಕೀಲಕ.
ಗಣಪತಿ-ಮಂತ್ರವನ್ನು ಬೇಂದ್ರೆಯವರು ಧ್ಯಾನಸ್ಥ ಸ್ಥಿತಿಯಲ್ಲಿ ನೋಡಿದರು. (ಅವರು ‘ಮಂತ್ರ-ದೃಷ್ಟಾರರು’.)
ಸೂತ್ರರೂಪದಲ್ಲಿ ನಮ್ಮೆದುರಿಗೆ ಇಟ್ಟರು. ತಿಳಿದುಕೊಳ್ಳುವದು ನಮ್ಮ ಹೊಣೆ.
“ಕಂಡವರಿಗಲ್ಲ, ಕಂಡವರಿಗಷ್ಟೆ ಹೊಳೆಯುವದು ಇದರ ಕಳೆಯು!”(---ಹೃದಯ ಸಮುದ್ರ)
ಬೇಂದ್ರೆಯವರು ಕಾವ್ಯಾಕಾಶದಲ್ಲಿ ಹಕ್ಕಿಯಂತೆ ಹಾರಾಡಿದ್ದನ್ನು ನೋಡಿದವರು, ಮೆಚ್ಚಿಕೊಂಡವರು ಅನೇಕರಿದ್ದಾರೆ. ಈ ರಾಜಹಂಸವು ಆಗಸದಲ್ಲಿ ಹಾರಾಟ ನಿಲ್ಲಿಸಿ, ಧ್ಯಾನಸ್ಥವಾಗಿ ನಿಂತುಕೊಂಡಾಗ, ಆ ಚೆಲುವನ್ನು ಕಾಣದವರೂ ಇದ್ದಾರೆ. ಇಂತಹ ವಿಮರ್ಶಕರ ನಿಲುವಿನಿಂದ ಆ ರಾಜಹಂಸದ ಚೆಲುವಿಗೆ ಕುಂದಿಲ್ಲ!
(ಈ ಕವನವನ್ನು ನನಗೆ ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.)