Monday, May 18, 2020

ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ; ಉಮೇಶ ದೇಸಾಯಿಯವರ ‘ಬಿಡುಗಡೆ’.

ಕನ್ನಡ ಸಾಹಿತ್ಯದಲ್ಲಿ ನವೋದಯ ಸಾಹಿತ್ಯ, ನವ್ಯ ಸಾಹಿತ್ಯ, ಬಂಡಾಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಅಂತರ್ಜಾಲ ಸಾಹಿತ್ಯ ಮೊದಲಾದ ಘಟ್ಟಗಳನ್ನು ಗುರುತಿಸಬಹುದು. ಈ ಎಲ್ಲ ಸಾಹಿತ್ಯಘಟ್ಟಗಳಲ್ಲಿ ಅನೇಕ ಉತ್ತಮವಾದ ಕೃತಿಗಳನ್ನು ನಮ್ಮ ಸಾಹಿತಿಗಳು ರಚಿಸಿದ್ದಾರೆ. ಇವರ ಬಗೆಗೆ ನಮಗೆ ಅಭಿಮಾನವಿದೆ. ಆದರೆ ಈ ಎಲ್ಲ ಪ್ರಕಾರಗಳಲ್ಲಿ ಆಧುನಿಕ ಎನ್ನುವ ಸಾಹಿತ್ಯವೆಂದು ಪರಿಗಣಿಸಬಹುದಾದ ರಚನೆಗಳು ಬೆರಳೆಣಿಕೆಯಷ್ಟೇ ಇರುವುದು ಕನ್ನಡ ಸಾಹಿತ್ಯದ ದೊಡ್ಡ ಕೊರತೆಯಾಗಿದೆ.

ಈ ಮಾತನ್ನು ಅನೇಕರು ವಿರೋಧಿಸಬಹುದು. ‘ನವೋದಯದವರನ್ನು ಬಿಡಿ, ನವ್ಯ ಸಾಹಿತಿಗಳು ಆಧುನಿಕರಲ್ಲವೆಎನ್ನುವ ತರ್ಕವನ್ನು ಮುಂದೆ ಮಾಡಬಹುದು. ಗೆಳೆಯರೆ, ಕನ್ನಡದ ನವ್ಯ ಸಾಹಿತಿಗಳು (----ಅಡಿಗರ ಹೊರತಾಗಿ; ಅಡಿಗರು ನವ್ಯಕಾವ್ಯದ ಶ್ರೇಷ್ಠ ಕವಿಗಳು--) ಕೇವಲ ಹೊಸದೊಂದು formatದಲ್ಲಿ ಸಾಹಿತ್ಯರಚನೆಯನ್ನು ಮಾಡಿದರೇ ಹೊರತು, ಕನ್ನಡಕ್ಕೆ ಆಧುನಿಕ ಮನೋಭಾವವನ್ನು ತರಲಿಲ್ಲ. ಪಾಶ್ಚಾತ್ಯ ಸಾಹಿತ್ಯದ ಕಾಫ್ಕಾ, ಸಾರ್ತ್ರೆ, ಇಲಿಯಟ್ ಇವರನ್ನು ಅನುಕರಿಸಿದರೆ ಹೊರತು, ಸ್ವತಃ ಆಧುನಿಕರಾಗಲಿಲ್ಲ.

ಆಧುನಿಕ ಮನೋಭಾವ ಎಂದರೆ ಏನು? ಈ ಮಾತನ್ನು ಅರಿಯಲು, ನಮ್ಮ ನೆರೆಯದೇ ಆದ ಮರಾಠೀ ಸಾಹಿತ್ಯವನ್ನು ಓದಿದರೆ ಸಾಕು. ಸುಮಾರು ಐವತ್ತು, ಅರುವತ್ತು ವರ್ಷಗಳಷ್ಟು ಹಿಂದೆಯೇ ನಾನು (ಕನ್ನಡ ಅನುವಾದದಲ್ಲಿ)  ಓದಿದ ಮರಾಠೀ ಸಾಹಿತ್ಯವು  ನಮ್ಮ ಈಗಿನ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚು ಆಧುನಿಕವಾಗಿದೆ. ಮುಂಬಯಿ ಹಾಗು ಪುಣೆಯಲ್ಲಿ ಬಂದು ನೆಲೆಸಿದ ವಿವಿಧ ಹಾಗು ನಿರ್ವಾಸಿತ ಸಮುದಾಯಗಳ ಭಿನ್ನ ಭಿನ್ನ ಆಚಾರವಿಚಾರಗಳ ಸಂಗಮವೇ ಈ ಆಧುನಿಕತೆಗೆ ಮುಖ್ಯ ಕಾರಣವಾಗಿದೆ. ಈ ಮಹಾನಗರಗಳಲ್ಲಿ ಬಂದು ನೆಲೆಸಿದ ಪಾರ್ಸೀ, ಮಾರವಾಡಿ, ಸಿಂಧಿ, ಪಂಜಾಬಿ, ಆಂಗ್ಲೋ ಇಂಡಿಯನ್ ಇತ್ಯಾದಿ ಸಮುದಾಯಗಳು ಮಧ್ಯಮ ವರ್ಗದ ನಗರವಾಸಿ ಮರಾಠೀ ಜನ  ಸಮುದಾಯವನ್ನು ಆಧುನಿಕತೆಯ ಪ್ರವಾಹದಲ್ಲಿ  ತೇಲಿಸಿ, ಮರಾಠಿ ಲೇಖಕರಲ್ಲಿ ಆಧುನಿಕತೆಯನ್ನು ತಂದರು. ಮುಂಬಯಿಯಲ್ಲಿ ನೆಲೆಸಿದ ಕನ್ನಡ ಸಾಹಿತಿಗಳೂ ಸಹ ಈ ಪ್ರಭಾವಕ್ಕೆ ಒಳಗಾದದ್ದನ್ನು ಗುರುತಿಸಬಹುದು. (ಉದಾಹರಣೆಗೆ ವ್ಯಾಸರಾಯ ಬಲ್ಲಾಳ.) ಇಂತಹ ಒಂದು ಆಧುನಿಕ ಪ್ರಭಾವವು ಬೆಂಗಳೂರು, ಮೈಸೂರು ಅಥವಾ ಧಾರವಾಡದ ಸಾಹಿತಿಗಳ ಮೇಲೆ ಆಗಲಿಲ್ಲ!   

ಕನ್ನಡದಲ್ಲಿ ಆಧುನಿಕ ಸಾಹಿತ್ಯವಿದೆಯೆ, ಇದ್ದರೆ ಎಷ್ಟರ ಮಟ್ಟಿಗೆ ಎಂದು ತಿಳಿಯಲು ಪ್ರಯತ್ನಿಸುವ ಮೊದಲು, ಆಧುನಿಕ ಸಾಹಿತ್ಯ ಎಂದರೆ ಏನು ಎನ್ನುವುದನ್ನು ಪರೀಕ್ಷಿಸೋಣ. ತಮ್ಮ ಸುತ್ತಮುತ್ತಲಿನ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಗೆ ಒಗ್ಗಿಕೊಂಡಂತಹ ಓದುಗರಿಗೆ ಒಂದು ನವೀನ ವಾತಾವರಣವನ್ನು ಹಾಗು ನವೀನ ವಿಚಾರಗಳನ್ನು ಪರಿಚಯಿಸುವ ಸಾಹಿತ್ಯಕ್ಕೆ ಆಧುನಿಕ ಸಾಹಿತ್ಯ ಎಂದು ಕರೆಯಬಹುದು. ತ್ರಿವೇಣಿಯವರ ಕಾದಂಬರಿಗಳಲ್ಲಿ ಹಾಗು ಸಣ್ಣ ಕತೆಗಳಲ್ಲಿ ನಾವು ಆಧುನಿಕ ಯುವ ಜಗತ್ತನ್ನು ಹಾಗು ಆಧುನಿಕ ವಿಚಾರಗಳನ್ನು ನೋಡುತ್ತೇವೆ. She wrote about free romance and an emancipated woman in a tradition-bound society. ಆದುದರಿಂದ ತ್ರಿವೇಣಿಯವರ ಸಾಹಿತ್ಯವನ್ನು ನಾವು ಆಧುನಿಕ ಸಾಹಿತ್ಯ ಎನ್ನಬಹುದು. ಆದರೂ ಸಹ, ಈ ಸಾಹಿತ್ಯವು ಪುಟ್ಟ ಕೌಟಂಬಿಕ ಪರಿಧಿಯಲ್ಲಿದೆ ಎನ್ನುವುದು ತ್ರಿವೇಣಿಯವರ ಸಾಹಿತ್ಯದ ಪರಿಮಿತಿಯಾಗಿದೆ.

ಕನ್ನಡದಲ್ಲಿ ಆಧುನಿಕ ಸಾಹಿತ್ಯದ ಗಾಳಿ ಬೀಸಿದ್ದು ಶಾಂತಿನಾಥ ದೇಸಾಯಿಯವರಿಂದ. ಅವರಮುಕ್ತಿಕಾದಂಬರಿಯಲ್ಲಿ ಇರುವ ಪಾತ್ರಗಳೆಲ್ಲವೂ ಸ್ವತಂತ್ರ ವಿಚಾರ, ಸ್ವತಂತ್ರ ವ್ಯಕ್ತಿತ್ವ ಹಾಗು ಸ್ವತಂತ್ರ ಅನ್ವೇಷಣೆಯ ಕಾ˘ಲೇಜು ವಿದ್ಯಾರ್ಥಿಗಳು. ಈ ಕಾದಂಬರಿಯ ನಾಯಕನಾದರೋ ತೊಳಲಾಟದಲ್ಲಿ ಸಿಲುಕಿದ ಹುಡುಗನೇ. ಧಾರವಾಡವನ್ನು ಬಿಟ್ಟು, ನೌಕರಿಗಾಗಿ ಮುಂಬಯಿಗೆ ಹೋದ ಮೇಲೆ, ಅಲ್ಲಿಯ ಆಧುನಿಕ ವಾತಾವರಣದಲ್ಲಿ ಈತನು ತನ್ನ ತೊಳಲಾಟಗಳಿಂದಮುಕ್ತಿಯನ್ನು ಪಡೆಯುತ್ತಾನೆ. ತನ್ನ ಅನ್ವೇಷಣೆಯ ಗುರಿಯನ್ನು ಅ-ಸಾಂಪ್ರದಾಯಕ ರೀತಿಯಲ್ಲಿ ಮುಟ್ಟುತ್ತಾನೆ!

ಶಾಂತಿನಾಥ ದೇಸಾಯಿಯವರ ಮತ್ತೊಂದು ಕಥೆಯ ನಾಯಕಿ ಮಹಾರಾಷ್ಟ್ರದ ಸಂಪ್ರದಾಯಸ್ಥ ಮಹಿಳೆಯಾಗಿದ್ದಾಳೆ. ಮದುವೆಯ ವಯಸ್ಸು ಮುಗಿಯುವ ಹೊಸ್ತಿಲಲ್ಲಿ ಇವಳಿದ್ದಾಳೆ. ಮರಾಠಿ ಶಾಲೆಯೊಂದರ ಪ್ರಾಧ್ಯಾಪಕಿ ಈಕೆ. ಯಾವುದೋ ಒಂದು ಸರಕಾರೀ ಸ್ಕೀಮಿನಲ್ಲಿ ಇವಳೀಗ ಇಂಗ್ಲಂಡಿಗೆ ಹೊರಟಿದ್ದಾಳೆ. ನಡುವಯಸ್ಸಿನ ಯುರೋಪಿಯನ್ ವ್ಯಕ್ತಿಯೊಬ್ಬನು ಹಡಗಿನ ಪ್ರವಾಸದ ವೇಳೆಗೆ ಇವಳಲ್ಲಿ ಆಸಕ್ತಿಯನ್ನು ತೋರಿಸುತ್ತಾನೆ. ಇವಳು ಆ ಹೊಸ ಸಂಸ್ಕೃತಿಗೆ ಒಗ್ಗಿಕೊಳ್ಳಲಾರಳು. ಆದರೆ ಹೊಸ ಬಗೆಯ ಸ್ವಚ್ಛಂದ ನಾಗರಿಕತೆ  ಇವಳನ್ನು ಸಾವಕಾಶವಾಗಿ ಆಕರ್ಷಿಸುತ್ತದೆ; ಇವಳಲ್ಲಿ ಹೊಸ ವಿಚಾರಗಳನ್ನು ಬಿತ್ತುತ್ತದೆ. ಇಂಗ್ಲಂಡದ ನೆಲದಲ್ಲಿ ಕಾಲಿಡುವ ಹೊತ್ತಿಗೆ, ಇವಳು ಆಧುನಿಕ ಜಗತ್ತನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧಳಾಗಿದ್ದಾಳೆ.  (ಈ ಕಥೆಯ ಹೆಸರುಕ್ಷಿತಿಜಎಂದು ಇರಬಹುದು.)

ಇದೀಗ ಮತ್ತೊಬ್ಬ ದೇಸಾಯಿಯವರ ಬಗೆಗೆ ಗಮನ ಹರಿಸೋಣ. ಇವರು ಉಮೇಶ ದೇಸಾಯಿ. ನಮ್ಮೆಲ್ಲ ಸಾಹಿತಿಗಳಂತೆ  ಉಮೇಶ ದೇಸಾಯಿಯವರೂ ಸಹ ಬದುಕಿನ ಅನ್ವೇಷಕರೇ. ಆದರೆ ಇವರು ಆಧುನಿಕ ದೃಷ್ಟಿಕೋನದ ಅನ್ವೇಷಕರು. ಹೀಗಾಗಿ ಇವರ ಅನ್ವೇಷಣೆಯ ಅಳತೆಗೋಲುಗಳು ಸಾಂಪ್ರದಾಯಿಕ ಅಳತೆಗೋಲುಗಳಲ್ಲ. ಇವರ ಮೊದಲ ಕಾದಂಬರಿಭಿನ್ನದಲ್ಲಿ ಇಬ್ಬರು ಸಲಿಂಗಕಾಮಿ ಹುಡುಗಿಯರ ವಿಶ್ಲೇಷಣೆಯನ್ನು ಆಧುನಿಕ ಮನೋವಿಜ್ಞಾನದ ಆಧಾರದಲ್ಲಿ  ಮಾಡಿದ್ದಾರೆ. ಎರಡನೆಯ ಕಾದಂಬರಿಅನಂತಯಾನದ ನಾಯಕನು ಹಳೆಯ ತಲೆಮಾರಿನ ವ್ಯಕ್ತಿಯಾಗಿದ್ದರೂ ಸಹ ಆತನ ಪರಿವರ್ತನೆಯನ್ನು ಗಮನಿಸುವ ಕಣ್ಣುಗಳು ಆಧುನಿಕ  ಕಣ್ಣುಗಳೇ.   

ಉಮೇಶ ದೇಸಾಯಿಯವರ ಇತ್ತೀಚಿನ ಕಥೆಬಿಡುಗಡೆಯು ಅಂತರ್ಜಾಲ ಮ್ಯಾಗಝಿನ್ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.

ಈ ಕಥೆಯ ನಾಯಕಿ ಓರ್ವ ಚಲನಚಿತ್ರನಾಯಕಿ. ರಾಜಕೀಯದೊಡನೆ ಇವಳಿಗೆ ಸಂಬಂಧ ಬಂದಿದೆ. ಇವಳ ವಿಶ್ವಾಸವನ್ನು ಸಂಪಾದಿಸಿದ ಪತ್ರಕರ್ತೆಯೋರ್ವಳು ಇವಳ ಮಗಳು ಸಲಿಂಗಕಾಮಿಯಾಗಿರುವ ಸಂಗತಿಯನ್ನು ಇವಳಿಂದಲೇ ತಿಳಿದುಕೊಂಡು, ಅದನ್ನೆಲ್ಲ ಟೇಪ್ ರಿಕಾ˘ರ್ಡರಿನಲ್ಲಿ ದಾಖಲಿಸಿಕೊಂಡು, ಭ್ರಷ್ಟ ದುರ್ವ್ಯವಹಾರಕ್ಕೆ ಇಳಿದಿದ್ದಾಳೆ. ನಮ್ಮ ನಾಯಕಿಯ ರಾಜಕೀಯ ಪಕ್ಷವು ಪೇಚಿನಲ್ಲಿ ಸಿಲುಕಿದೆ. ಇದೆಲ್ಲವನ್ನು ಸಾರಾಸಗಟಾಗಿ ನಿರಾಕರಿಸಲು ಇವಳಿಗೆ ಆದೇಶಿಸುತ್ತದೆ. ನಮ್ಮ ನಾಯಕಿಯು ತೆಗೆದುಕೊಳ್ಳುವ ನಿರ್ಣಯವನ್ನು ಹಾಗು ಅವಳು ಅದನ್ನು ಸಾದರಪಡಿಸುವ ರೀತಿಯನ್ನು ನಾನೇ ಇಲ್ಲಿ ಹೇಳಿಬಿಡುವುದು ಸರಿಯಾಗಲಾರದು. ಕತೆಯನ್ನು ಓದಿಯೇ ಅದನ್ನು ತಿಳಿದುಕೊಳ್ಳಬೇಕು. ಆಧುನಿಕ ಮನೋಭಾವದ ಮಹಿಳೆ ಮಾತ್ರ ಇಂತಹ ನಿರ್ಣಯವನ್ನು ತೆಗೆದುಕೊಳ್ಳಬಲ್ಲಳು ಎಂದಷ್ಟೇ ಹೇಳಬಯಸುವೆ.

ಚಲನಚಿತ್ರ ನಾಯಕಿಯರ ಬಗೆಗೆ ಕನ್ನಡದಲ್ಲಿ ಈಗಾಗಲೇ ಎರಡು ಕಾದಂಬರಿಗಳು ಬಂದಿವೆ. ವ್ಹಿ.ಎಮ್. ಇನಾಮದಾರ ಎನ್ನುವ ಲೇಖಕರು ಸುಮಾರು ೬೦ ವರ್ಷಗಳಷ್ಟು ಹಿಂದೆಯೇಮೋಹಿನಿಎನ್ನುವ ಕಾದಂಬರಿಯನ್ನು ಬರೆದಿದ್ದರು. ಮಾವಿನಕೆರೆ ರಂಗನಾಥನ್ ಎನ್ನುವ ಲೇಖಕರಜಲತರಂಗಎನ್ನುವ ಕಾದಂಬರಿಯನ್ನು, ‘ತರಂಗವಾರಪತ್ರಿಕೆಯು ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆಯೇ ಧಾರಾವಾಹಿಯಾಗಿ ಪ್ರಕಟಿಸಿತ್ತು. ಈ ಕಾದಂಬರಿಗಳಿಗೂ, ಉಮೇಶ ದೇಸಾಯಿಯವರಬಿಡುಗಡೆಗೂ ಇರುವ ಭಿನ್ನತೆ ಏನು? ಮೊದಲಿನ ಎರಡೂ ಕಾದಂಬರಿಗಳ ನಿರೂಪಣೆ ಸಾಂಪ್ರದಾಯಿಕ ಶೈಲಿಯಲ್ಲಿದೆ. ಅಂದರೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳ ಚಿತ್ರಣವೇ ಇವೆರಡರಲ್ಲೂ ಮುಖ್ಯವಾಗಿದೆ.

ಆದರೆಬಿಡುಗಡೆಕಥೆಯಲ್ಲಿ, ಆಧುನಿಕ ವಾತಾವರಣದಲ್ಲಿರುವ ಪಾತ್ರಗಳಿಗೆ ಇರುವ ಆಧುನಿಕ ವಿಚಾರಗಳ ಪ್ರಸ್ತಾವನೆ ಮುಖ್ಯವಾಗಿದೆ, ಅದೂ ಸಹ ಆಧುನಿಕ  ನಿರೂಪಣಾ ಶೈಲಿಯಲ್ಲಿ.

ಕನ್ನಡದಲ್ಲಿ ನನಗೆ ಗೊತ್ತಿರುವ ಆಧುನಿಕ ಕಥಾಲೇಖಕಿಯರಾದ ಸಿಂಧು ರಾವ್, ತೇಜಸ್ವಿನಿ ಹೆಗಡೆ, ಶ್ರೀದೇವಿ ಕಳಸದ, ಜಯಶ್ರೀ ದೇಶಪಾಂಡೆ, ಸ್ವರ್ಣಾ ಎನ್.ಪಿ. ಇವರೂ ಸಹ ಆಧುನಿಕ ಕಥಾನಕಗಳು ಇರುವ ಕಥೆಗಳನ್ನು ಬರೆದಿದ್ದಾರೆ. ಇವರೆಲ್ಲರೂ ಕನ್ನಡದ ಶ್ರೇಷ್ಠ ಲೇಖಕಿಯರೇ. ಆದರೆ ಆಧುನಿಕತೆಯೊಂದೇ ಇವರ ಕಥೆಗಳ ಜೀವಾಳವಲ್ಲ. ವೈಯಕ್ತಿಕ ಮಾನಸಿಕ ಚಿತ್ರಣವೂ ಸಹ ಈ ಲೇಖಕಿಯರಿಗೆ ಮುಖ್ಯವಾಗಿದೆ. ಹೀಗಾಗಿ ಇವರ ಸಾಹಿತ್ಯವು ಕನ್ನಡಸಾಹಿತ್ಯದ ಸುದೀರ್ಘ ಪರಂಪರೆಯ ಮುಂದುವರಿಕೆಯಾಗಿದೆ.

ನಮ್ಮ ಕಥನ ಪರಂಪರೆಗೆ ಹೊರತಾದ ರೀತಿಯಲ್ಲಿರುವುದೇ ಉಮೇಶ ದೇಸಾಯಿಯವರ ಸಮಗ್ರ ಕಥಾಸಾಹಿತ್ಯದ ವೈಶಿಷ್ಟ್ಯವಾಗಿದೆ. ಇವರ ಪಾತ್ರಗಳು ವೈಯಕ್ತಿಕ ಆಧುನಿಕತೆಗಿಂತ ಹೆಚ್ಚಾಗಿ ಸಾಮಾಜಿಕ ಆಧುನಿಕತೆಯನ್ನು ಬಿಂಬಿಸುತ್ತವೆ.