Sunday, March 25, 2018

ಸಿಂಧು ರಾವ್ ಅವರ ಕಥಾಸಂಕಲನ, ‘ಸರ್ವಋತು ಬಂದರು’ ಹಾಗು ಸ್ತ್ರೀಯ sociological modelಇತ್ತೀಚೆಗೆ ಬಿಡುಗಡೆಯಾದ, ಸಿಂಧು ರಾವ್ ಅವರ ‘ಸರ್ವಋತು ಬಂದರು’ ಕಥಾಸಂಕಲನದಲ್ಲಿ ೧೮ ಕವನಗಳಿವೆ. ಅರೇ ಇದೇನು, ಕಥಾಸಂಕಲನದಲ್ಲಿ ಕವನಗಳೇ ಎಂದು ಬೆಚ್ಚದಿರಿ! ಸಿಂಧು ಅವರ ಶೈಲಿಯೇ ಹಾಗೆ. ಕಥೆಗಳು ನಿಮಗೆ ಭಾವಪೂರ್ಣವಾದ ಕಾವ್ಯದ ಅನುಭವವನ್ನು ಕೊಡುತ್ತವೆ. ಇಲ್ಲಿರುವ ಕಥೆಗಳು, ಪಾತ್ರಗಳ ಭಾವಲೋಕವನ್ನು ಅನ್ವೇಷಿಸುವ, ಭಾವನೆಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವ ಸ್ತ್ರೀಲೋಕದ ಕಥೆಗಳಾಗಿವೆ. ಹಾಗೆಂದುಕೊಂಡು ಇಲ್ಲಿಯ ಕಥೆಗಳು ಸ್ತ್ರೀಪ್ರಾಧಾನ್ಯ ಕಥೆಗಳು  ಎನ್ನುವ ಪೂರ್ವಗ್ರಹಣೆಗೆ ಒಳಗಾಗದಿರಿ. ಇಲ್ಲಿ ಸ್ತ್ರೀಪಾತ್ರಗಳಿಗಿರುವಷ್ಟೇ ಪ್ರಾಧಾನ್ಯವು ಪುರುಷ ಪಾತ್ರಗಳಿಗೂ ಇದೆ, ಆದರೆ ಇಲ್ಲಿಯ ಸ್ತ್ರೀಪುರುಷರ ನಡುವಿನ ಸಂಬಂಧವು ಕೇವಲ ಪ್ರೇಮಸಂಬಂಧವಲ್ಲ; ಇದು ಅಜ್ಜ, ಮೊಮ್ಮಗಳ ಪ್ರೀತಿಯ ಸಂಬಂಧವಾಗಿರಬಹುದು, ಗೆಳೆಯ-ಗೆಳತಿಯರ ಸ್ನೇಹಬಂಧವಾಗಿರಲೂಬಹುದು. ಮುಖ್ಯವಾಗಿ ಇಲ್ಲಿರುವ ಪಾತ್ರಗಳ ಚಿತ್ರಣವು ಸ್ತ್ರೀಯ ಕಣ್ಣಿನ ಮೂಲಕ, ಸ್ತ್ರೀಯ ಹೃದಯದ ಮೂಲಕ ಮೂಡಿದ್ದಾಗಿದೆ.

ಕನ್ನಡದಲ್ಲಿ ರಮ್ಯ ಸಾಹಿತ್ಯದ ಕ್ಷಿತಿಜದ ಮೇಲೆ, ಲೇಖಕಿಯರು ಉದಯಿಸಿದಾಗ, ಹುಟ್ಟಿದ ಸಾಹಿತ್ಯವು ಎಂತಹದು? ಇಲ್ಲಿಯ ನಾಯಕನು ಧೀರೋದಾತ್ತ ಪುರುಷಸಿಂಹನು; ನಾಯಕಿಯು ಅವನ ಗುಣಗಳಿಗೆ ನಿಬ್ಬೆರಗಾಗಿ ಅವನಿಗೆ ತನ್ನ ಮನಸ್ಸನ್ನು ಅರ್ಪಿಸಿಕೊಳ್ಳುವವಳು. (ಪಾಶ್ಚಾತ್ಯ ಸಾಹಿತ್ಯವೂ ಇಂತಹದೇ. ಉದಾಹರಣೆಗೆ ಹೆಸರಾಂತ ಲೇಖಕಿ Daphne du Maurier ಅವರ The Frenchman’s Creek ಮೊದಲಾದ ಕಾದಂಬರಿಗಳನ್ನು ನೋಡಬಹುದು.) ತನ್ನಂತರದ ಬೆಳವಣಿಗೆಯಲ್ಲಿ ಕನ್ನಡ ಲೇಖಕಿಯರು (ಉದಾಹರಣೆ: ತ್ರಿವೇಣಿ) ಸ್ತ್ರೀಗೂ ಒಂದು ಮನಸ್ಸಿದೆ, ಆಸೆ, ಆಕಾಂಕ್ಷೆಗಳಿವೆ ಎನ್ನುವುದನ್ನು ಗುರುತಿಸಿದರು. ಆದರೂ ಸಹ ಈ ಸಾಹಿತ್ಯವು ಆ ಕಾಲದ ವಾಸ್ತವತೆಗೆ ಅನುಗುಣವಾಗಿ, ನಾಯಕಿಯನ್ನು ಪುರುಷಾನುಚರಿಯ ರೂಪದಲ್ಲೇ ಚಿತ್ರಿಸುತ್ತಿತ್ತು. ಈಗಲಾದರೋ ನಾವು ಇಪ್ಪತ್ತೆರಡನೆಯ ಶತಮಾನದಲ್ಲಿದ್ದೇವೆ. ಹೆಣ್ಣುಮಕ್ಕಳ ಸ್ಥಿತಿಗತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಶತಮಾನದ ವಾಸ್ತವತೆಯನ್ನು ಹಾಗು ಆಧುನಿಕ ಮನೋಧರ್ಮವನ್ನು ಸಿಂಧು ಅವರ ಸಾಹಿತ್ಯವು ಪ್ರತಿಬಿಂಬಿಸುತ್ತದೆ. ಇಲ್ಲಿ ಸ್ತ್ರೀ ಹಾಗು ಪುರುಷರಲ್ಲಿ sub ordinate ಹಾಗು super ordinate ಎನ್ನುವ ಭೇದವಿಲ್ಲ. ವಿಶೇಷತಃ, ದಂಪತಿಗಳು ಎಂದರೆ co ordinates ಮಾತ್ರ. ಈ ಒಂದು ಭಾವನೆಯನ್ನು ಅಂತರಂಗೀಕರಿಸಿಕೊಂಡ ಕಥೆಯೆಂದರೆ: ‘ಜಗ್ಗಿ—ರಮ್ಮೀ’. ಜಗ್ಗಿ ಹಾಗು ರಮ್ಮೀ ಇವರ ಬಗೆಗೆ ನಾನು ಇಲ್ಲಿ ಹೆಚ್ಚಿಗೆ ಹೇಳಬಯಸುವುದಿಲ್ಲ. ಹಾಗೆ ಮಾಡಿದರೆ, ರಸಗುಲ್ಲಾದಂತಹ ಈ ಸವಿಯಾದ ಕಥೆಯನ್ನು  ನಾನು ಹೇಳಿದಂತೆಯೇ ಆದೀತು. ಅದು ಗುಟ್ಟಾಗಿಯೇ ಇರಲಿ. ಆದರೂ ಕಥೆಯಲ್ಲಿಯೇ ಬಳಸಿದ, ಬೇಂದ್ರೆಯವರ ‘ನಾನು ಬಡವಿ’ ಕವನದ ಒಂದು ಅರ್ಥಪೂರ್ಣ ಸಾಲನ್ನು ಇಲ್ಲಿ ಉದ್ಧರಿಸುವ ಆಸೆಯನ್ನು ತಡೆಯಲಾರೆ: ‘ತೋಳುಗಳಿಗೆ ತೋಳುಬಂದಿ, ಕೆನ್ನೆ ತುಂಬ ಮುತ್ತು’. 
‘ಜಗ್ಗಿ—ರಮ್ಮೀ’ ಇದು ಒಂದು ಸ್ವಾರಸ್ಯಕರವಾದ ಸರಸ ಕಥೆ. ಇದು ಒಲವಿನ ಸಹಜ ಬೆಳವಣಿಗೆಯ ಕಥೆ. ಹಾಗೆಂದು ಇದು ಕೇವಲ ಪ್ರೇಮಕಥೆ ಎಂದು ಭಾವಿಸದಿರಿ. ಕಥೆಯ ಕೊನೆಯ ಪರಿಚ್ಛೇದವನ್ನು ಓದಿದಾಗ, ಇದು ಜಾಣದಂಪತಿಗಳ ಕಥೆಯೂ ಹೌದು ಎನ್ನುವುದು ಅರಿವಾಗುತ್ತದೆ. ಇಲ್ಲಿಯ ಕಥೆಗಳಲ್ಲಿ ಸಹಸಾ ಹುಡುಗಿಯೇ ಜಾಣೆಯಾಗಿರುವುದು, ಈ ಕಥಾಸಂಕಲನದ ವೈಶಿಷ್ಟ್ಯ ಎನ್ನಬಹುದು!  ‘ಮಿಂಚು’ ಈ ಧೋರಣೆಯ ಉತ್ತಮ ಉದಾಹರಣೆಯಾಗಿದೆ. ಈ ಕಥೆಯಲ್ಲಿ, ಕಥೆಯ ಭಾಗವಾಗಿ ಬರುವ ಒಂದು ಕವನವು, ಸಿಂಧು ಅವರ ಕಾವ್ಯಪ್ರತಿಭೆಯ ಉದಾಹರಣೆಯಾಗಿದೆ. 

ಪ್ರೀತಿ ಹಾಗು ಪ್ರಣಯ ಇವು ತರುಣರಿಗೆ ಮಾತ್ರ ಮೀಸಲಾದ ವಿಷಯವಲ್ಲ.  ವೃದ್ಧ ದಂಪತಿಗಳ ಮಾಗಿದ ದಾಂಪತ್ಯದ ಕಥೆಯನ್ನು ಓದಬೇಕಾದರೆ, ‘ನಗೆ ಹೂವಿನ ಬಳ್ಳಿ’ ಯನ್ನು ಓದಬೇಕು. ಈ ಕಥೆಯು ಮುದ್ದಾಗಿರಲು ಈ ದಂಪತಿಗಳಿಗಿಂತ ಹೆಚ್ಚಾಗಿ, ಓರ್ವ ಹದಿಹರೆಯದ ಹುಡುಗಿಯು ಕಾರಣಳಾಗಿದ್ದಾಳೆ. ಓದಿ ನೋಡಿ; ನಿಮ್ಮ ಮುಖದ ಮೇಲೆ, ಮೊದಲಿನಿಂದ ಕೊನೆಯವರೆಗೂ ‘ನಗೆ ಹೂವಿನ ಬಳ್ಳಿ’ ಅರಳದೇ ಇರದು!

ಗಂಡುಹೆಣ್ಣಿನ ನಡುವಿನ ಪ್ರೇಮವೆಂದರೆ ಕೇವಲ ದಾಂಪತ್ಯ ಪ್ರೇಮ ಮಾತ್ರವೆ? ಇವರು ಗೆಳೆಯ ಗೆಳತಿಯರೂ ಆಗಿ ಇರಬಹುದಷ್ಟೆ? ‘ಕಥೆಯೊಂದು ಪೂರ್ತಿಯಾಗಿದ್ದು’, ‘ಚೈ—ವೈ’ ಕಥೆಗಳು ಇಂತಹ ಗೆಳೆತನದ ಚಿತ್ರಗಳಾಗಿವೆ. ನಮ್ಮ ಭಾರತೀಯ ಸಮಾಜವನ್ನು ನಾವು ಆಧುನಿಕ ಸಮಾಜ ಎಂದು ಭಾವಿಸಿಕೊಂಡರೂ ಸಹ, ಗಂಡು ಹೆಣ್ಣಿನ ಸಮಾನತೆ ನಮ್ಮ ಸಮಾಜದಲ್ಲಿ ಇನ್ನೂ ಬಂದಿಲ್ಲ. ಅವಳು ಕೆಲಸ ಮಾಡುತ್ತಿರುವ ಹೆಂಡತಿಯಾಗಿರಲಿ (ಸರ್ವಋತು ಬಂದರು), ಅಥವಾ ಮನೆಯಲ್ಲಿರುವ ಗೃಹಿಣಿಯಾಗಿರಲಿ( ಸಂ ಸಾರ), ಅವಳ ಮೇಲೆ ಗಂಡನ ಯಜಮಾನಿಕೆ ಇನ್ನೂ ನಿಂತಿಲ್ಲ. ಹಾಗೆಂದು ನಮ್ಮ ಸಮಾಜದಲ್ಲಿ ಒಳ್ಳೆಯ ಗಂಡಸರು ಇಲ್ಲವೆಂದಲ್ಲ! ‘ಸುಲೋಚನೆ’ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಇದರಂತೆಯೇ ‘ಮರು-ಕೊಳ್ಳಿ’ಯ ನಾಯಕಿಯು ನಿರ್ಲಜ್ಜ ತಂದೆಯ ಮಗಳಾದರೂ ಸಹ, ಜೀವಕರುಣಿಯಾದ ಗಂಡನನ್ನು ಪಡೆದವಳು.

ಇಲ್ಲಿಯ ಕಥೆಗಳು ಕೇವಲ ಪ್ರೇಮದ ಕಥೆಗಳಲ್ಲ. ‘ಸ್ನಾನ’, ‘ಎಲ್ಲ ನೋಟಗಳಾಚೆ’, ‘ಮೊದಲ ದಿನ ಮೌನ’ ಇವು ಮನಃಪರಿವರ್ತನೆಯ ಕಥೆಗಳಾದರೆ, ‘ಸಖೀಗೀತ’, ‘ಹಾಡುಹಕ್ಕಿ’, ‘ಕಾಗದದ ದೋಣಿ’ ಕಥೆಗಳು ಬದುಕಿನ ದರ್ಶನವನ್ನು ಮಾಡಿಸುತ್ತವೆ. ‘ಚಿಲ್ಲರೆ ವಿಷಯ’ವಂತೂ ಆಧುನಿಕ ಔದ್ಯಮಿಕ ಬಕಾಸುರನ ಕಥೆಯಾಗಿದೆ. ಅನಿವಾರ್ಯವಾಗಿ ಈ ಬಕಾಸುರನಿಗೆ ಶರಣು ಹೋಗುವವರ, ಬಲಿಯಾಗುವವರ ಕಥೆ ಇದಾಗಿದೆ. ಇಲ್ಲಿಯೂ ಸಹ ಕಥೆಯು ಸ್ತ್ರೀಯ ಸುತ್ತಲೇ ಹೆಣೆದ ಕಥೆಯಾಗಿದೆ.
ಹೀಗೆ, ವಿವಿಧ ಪರಿಸರಗಳ ಕಥೆಗಳನ್ನು ಹೇಳುತ್ತಿರುವಂತೆಯೇ, ಸಿಂಧು ಅವರು ವಿವಿಧ ಮನೋಧರ್ಮದ ಪಾತ್ರಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ಸಾಧಾರಣವಾಗಿ ಇಲ್ಲಿಯ ಸ್ತ್ರೀಯರು ಆಧುನಿಕ ಮನೋಧರ್ಮದವರು. ಹಾಗಿದ್ದರೂ ಸಹ ಇವರಲ್ಲಿ ಅನೇಕರು ಗಂಡಿನ ದೌರ್ಜನ್ಯಕ್ಕೆ ಒಳಗಾದವರೇ ಮತ್ತು ಈ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಿ, ಬದುಕು ಕಟ್ಟಿಕೊಂಡವರೇ! ಆದರೆ ಸದ್ಯದ ವಾಸ್ತವವಂತೂ ಹೆಣ್ಣಿಗೆ ವಿರೋಧವಾಗಿಯೇ ಇದೆ. ಉದಾಹರಣೆಗೆಂದು, ಈ ಕೆಲವು ಉದ್ಧರಣೆಗಳನ್ನು ನೋಡಿರಿ:

(೧) ಸಂ ಸಾರ:
‘ತಿಂಗಳ ಖರ್ಚಿಗೆ ಕೇಳಿದ ತನ್ನ ದೈನೇಸಿತನ, ಅದನ್ನು ಕೊಡದೆ ನಿನ್ನ ಹಿಡಿದಿಟ್ಟುಕೊಳ್ಳಬಲ್ಲೆ ಎಂಬ ಅವನ ಹೀನತನ, ಇಷ್ಟು ವರ್ಷ ಬದುಕಿದ ಘಳಿಗೆಗಳೆಲ್ಲ ಏನೂ ಅಲ್ಲ ಅನಿಸಿದ ಕ್ಷಣದ ಅಸಹಾಯಕತೆ,…….’

‘ಈ ಅಪನಂಬಿಕೆ ಕುಯ್ದ ಹಾಗೆ ಇನ್ನೇನೂ ಕುಯ್ಯುವುದಿಲ್ಲ…….ಗಂಡಸರೆಲ್ಲ ಹೀಗೆಯೇ? ಅವರ ಅಹಂ ಚುಚ್ಚುವ ಕ್ಷಣದಲ್ಲಿ ಮನುಷ್ಯತ್ವ ಮರೆತಾರೆಯೇ?.....’

ಆದರೆ ಈ ಹೆಣ್ಣು ದಿಟ್ಟೆ. ಅವಳು ಹೇಳುವ ಮಾತುಗಳು ಹೀಗಿವೆ:
‘ಇನ್ನೂ ಹೆಚ್ಚು ಎಳೆದರೆ ಹಗ್ಗ ತುಂಡಾಗಬಹುದು. ಯಾರಿಗೆ ಯಾರೂ ಅನಿವಾರ್ಯವಲ್ಲ ಅನಿಸುವಂತಹ ಕಾಲದಲ್ಲಿ ನಾವಿದ್ದೇವೆ. ಸುಮ್ಮನೆ ಒಬ್ಬರಿನ್ನೊಬ್ಬರು ಕುಯ್ದು ರಂಪ ಮಾಡುವದೇಕೆ?

(೨) ಸುಲೋಚನೆ:
“ಹೆಣ್ಣು ಜೀವ ದೊಡ್ಡದು ಸುಲೋಚನ. ಯಾವ ಹೊಟ್ಟೆಯಲ್ಲಿ ಏನು ನೋವಿರುತ್ತೆ ಅಂತ ಗಂಡು ಜಾತಿಗೆ ಗೊತ್ತಾಗೋದು ಕಷ್ಟ. ಇದೇ, ಇಷ್ಟೇ ಎಂದು ಗೆರೆ ಹಾಕಿ ಬಂಧಿಸಿಡುವುದು ಲೋಕಾರೂಢಿ. ಅದನ್ನು ಮೀರುವ ಚೇತನಗಳು ಎಷ್ಟೋ ಬಾರಿ ಆ ಮೀರುವಿಕೆಯನ್ನು ತಡಕೊಳ್ಳಲಾಗದೇ ಮತ್ತೆ ಬಂಧಕ್ಕೇ ವಾಪಸಾಗಿಬಿಡುತ್ತವೆ. ಎಲ್ಲೋ ಕೆಲವು ಮೀರುವಿಕೆಯನ್ನು ಲಂಬಿಸಿ ಮೇಲ್ ಚಿಮ್ಮುತ್ತಿರುತ್ತವೆ. ನಿನ್ನ ಹಾಗೇ?’

(೩) ಸರ್ವಋತು ಬಂದರು:
‘ಯಾಕೆ ಎಲ್ಲ ಆಲೋಚನೆಗಳ ಕೊನೆಯೂ ಮೊನೆಯೂ ಹೆಣ್ಣು ಜನ್ಮಕ್ಕೆ ಬಂದು ಅಟ್ಟುತ್ತದೆ ಎಂಬ ಅರ್ಥವಾಗದ ಅಯೋಮಯದಲ್ಲಿ ನಿದ್ದೆ ಯಾವಾಗಲೋ ಬಂದಿತ್ತು.’

ಹೀಗೇ ಉದ್ಧರಿಸುತ್ತ ಹೋದರೆ, ಇಡೀ ಸಂಕಲನವನ್ನೇ ಉದ್ಧರಿಸಬೇಕಾದೀತು. …ಅಲಮ್, ವಿಸ್ತರಣೇನ!

ಈ ಕಥೆಗಳಲ್ಲಿ ಎದ್ದು ಕಾಣುವ ವೈಶಿಷ್ಟ್ಯವೆಂದರೆ, ಸಿಂಧು ಅವರ ಭಾಷೆ. ಸಿಂಧು ಕಥೆಯನ್ನು ಬರೆಯುತ್ತಿದ್ದಾರೆಯೊ, ಕಾವ್ಯವನ್ನು ರಚಿಸುತ್ತಿದ್ದಾರೊ ಎಂದು ಓದುಗನಿಗೆ ಅನಿಸಿದರೆ, ಅದು ಸಹಜ. ಇಂತಹ ವಾಕ್ಯಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉದ್ಧರಿಸುವ ಸಾಹಸವನ್ನು ಮಾಡುತ್ತೇನೆ. ಈ ಸಾಹಸಕ್ಕೆ ಕಾವ್ಯಶೈಲಿಯಷ್ಟೇ ಕಾರಣವಲ್ಲ. ಒಂದೇ ವಾಕ್ಯದಲ್ಲಿ ಹಲವಷ್ಟು ಭಾವನೆಗಳನ್ನು, ಹಲವಷ್ಟು ಅರ್ಥಗಳನ್ನು ಹೇಳಬಲ್ಲ ಭಾಷೆ ಇದು:
(೧) ಬಿಸಿಲು ಬಣ್ಣಗೆಡುತ್ತಿತ್ತು.
(೨) ಅಂಗಳದಲ್ಲಿ ಅಡಿಕೆ ಚಪ್ಪರದಡಿಗೆ ಬಿಸಿಲು ರಂಗೋಲಿ ಹರಡಿತ್ತು.
(೩) ಕಾಡಿಗೆ ತೀಡಿದ್ದ ಕಣ್ಣ ಕೊಳದೊಳಗೆ ಕೆಂಪು ರಂಗು.
(೪) ಗೆಳತಿಯರ ಜೊತೆಗೆ ಬಾಗುತ್ತ, ಬಳಕುತ್ತ ಅರಳು ಕಂಗಳನ್ನ ಇನ್ನೂ ಅರಳಿಸಿ ಬರುತ್ತಿರುವ ಪ್ರತಿಬಿಂಬವನ್ನೇ ನೋಡಿದಳು. (ಟೀನ ಟಪೋರಿ)
(೫) ‘ಲೋಕಾಂತರಗಳ ಪಯಣದಲ್ಲಿ ನಾನೊಬ್ಬ ನಿತ್ಯ ಪಯಣಿಗ’.
(೬) ಹಾವು ಹರಿದಂಗೆ ಹರಿದ ಬದುಕಿನ ದಾರಿ ಸವೆಸಿದವಳು ಅವಳು.
(೭) ‘ಹಳತರ ಕಣಿವೆಗೆ ಬಗ್ಗಿ ನೋಡುತ್ತಿರುವ ಶಿಖರದ ನೆರಳಿತ್ತು’.
(೮) ಒಂದರೆ ಕ್ಷಣದ ಮೌನ ಮತ್ತೆ ಬಿರಿದು ಮಾತಿನ ಹೂವು ಪೋಣಿಸತೊಡಗಿತು.
(೯) ಈ ಪುಟ್ಟ ಹೂಬದುಕು ಮಣ್ಣಿಗುದುರಿ ಹೋಯಿತು.
(೧೦) ಸುಮ್ಮನಿರುವ ಕ್ಷಣಗಳು ಅತ್ತುಕೊಂಡು ಸಾಗಿದವು.
(೧೧) ಆ ಎಲ್ಲ ಸ್ವೀಟ್ ನಥಿಂಗ್ಸ್ ನಥಿಂಗ್ಸ್ ಆಗಿ ಬದಲಾದ ದಿನದ……
(೧೨) ..ಹೊರಗಡೆ ಸೊಳ್ಳೆ ಇರಬಹುದು….ಹೇಗೂ ಮಾಯಾಚಾಪೆಯ ಮೇಲಿರುತ್ತೇವಲ್ಲ…
(೧೩) ಬಯಲಿಗಿಟ್ಟ ಹಣತೆಯಂತಹ ಬದುಕನ್ನ ಕಾಲ ಎಷ್ಟು ಉಪಾಯವಾಗಿ ಕಾದು ಎತ್ತಿ ಮನಸ್ಸಿನೊಳಗಿಟ್ಟು ನೆನಪಿನ ಪ್ರಿಸರ್ವೆಂಟಲ್ಲಿ ಅದ್ದಿ ಜೋಪಾನ ಮಾಡುತ್ತದೆ…
(೧೪) ಹೆಣ್ಣು ಜೀವಕ್ಕೆ ಮಾತಾಡಿ ಗೊತ್ತಿರಲಿಲ್ಲ, ಕಣ್ಣೀರಿಡುವದಷ್ಟು ಗೊತ್ತಿತ್ತು.
(೧೫) --ನೋವಿನ ರಾಗವೊಂದರ ಚರಣದಂತೆ ನಕ್ಕರು.
(೧೬) ನಾವು ಏನೇ ಮಾಡಿದರೂ ಬದುಕು ತಾನೇ ತಾನಾಗಿ ಮುಂದೆ ಸಾಗುವ ಹಾಡು. ಅದಕ್ಕೆ ಬೇಕಾದ ರಾಗವನ್ನು ನಾವು ಸೇರಿಸಿ ಹಾಡಿಕೊಳ್ಳಬೇಕಷ್ಟೇ…
(೧೭) ಈಚೆ ಕೈಬೆರಳು ಹಿಡಿದು ಕುಣಿಯುತ್ತ ಬರುತ್ತಿರುವ ಜೀವನೋತ್ಸಾಹದ ಹಕ್ಕಿ.

ಇಂತಹ ವಾಕ್ಯಗಳು ನಿಮ್ಮನ್ನು ಪ್ರತಿ ಪರಿಚ್ಛೇದದಲ್ಲಿಯೂ ಧಾರಾಳವಾಗಿ ಎದುರುಗೊಳ್ಳುತ್ತವೆ.  ಸಿಂಧುರವರ ಒಂದು ಮಹತ್ವದ ಗುಣವೆಂದರೆ, ತಮ್ಮ ಕಥೆಗಳಲ್ಲಿ ಅವರು ಪೂರ್ವಸೂರಿಗಳನ್ನು ನೆನೆಸಿಕೊಳ್ಳುವ ಪರಿ. ಸಿಂಧುರವರ aesthetic ಬದುಕು ಅನೇಕ ಸಾಹಿತ್ಯ ಸಾಮ್ರಾಟರಿಂದ ಹಾಗು ಸಂಗೀತ ದಿಗ್ಗಜರಿಂದ ಪ್ರಭಾವಿತವಾಗಿದೆ, ಖುಶಿಯನ್ನು ಪಡೆದಿದೆ. ಅವರೆಲ್ಲರೂ ಇಲ್ಲಿಯ ಕಥೆಗಳಲ್ಲಿ ನೆನಪಿನ ಸ್ಥಾನವನ್ನು ಪಡೆದಿದ್ದಾರೆ. ಆ ಒಂದು ಯಾದಿಯನ್ನು ನಿಮ್ಮೆದುರಿಗೆ ಇಟ್ಟರೆ, ನಿಮಗೆ ದಿಗ್ಭ್ರಮೆಯಾದೀತು. ಆದರೆ ಅದು ಅತ್ಯಂತ ಅವಶ್ಯಕವಾದ ಕಾರ್ಯವಾಗಿದೆ. (ಇಲ್ಲಿರುವ ಯಾದಿಯು, ಕಥೆಗಳನ್ನು ಹಾಗು ಅಲ್ಲಿಯ ಅನುಕ್ರಮಣಿಕೆಯನ್ನು ಅನುಸರಿಸಿದೆ.)

ಸಾಹಿತಿಗಳು:
ತೋಳ್ಪಾಡಿಯವರು, ಬೇಂದ್ರೆಯವರು, ಶೆಲ್ಲಿ, ಕೆ.ಎಸ್. ಎನ್.,ವೈದೇಹಿಯವರು, ವ್ಹಿ.ಎಸ್. ಖಾಂಡೇಕರರು, ಶಾಂತಿನಾಥ ದೇಸಾಯಿಯವರು, ಗಳಗನಾಥರು, ಮಾಸ್ತಿಯವರು, ನಾಗ್ತಿಹಳ್ಳಿಯವರು, ಅಗಾಥಾ ಕ್ರಿಸ್ತೀ.

ಸಂಗೀತಕಾರರು:
ವೆಂಕಟೇಶಕುಮಾರರು, ವಿದ್ಯಾಭೂಷಣರು, ಆರ್.ಕೆ.ಯವರು, ಶ್ಯಾಮಲಾ ಭಾವೆಯವರು, ಹುಕ್ಕೇರಿ ಬಾಳಪ್ಪನವರು, ಗುಲಾಮ್ ಅಲಿಯವರು, ಅಬೀದಾ ಪರ್ವೀನ, ಕಿಶೋರಕುಮಾರ. ಲತಾ ಮಂಗೇಶಕರ, ಮಹಮ್ಮದ ರಫಿ, ಕಾಳಿಂಗರಾಯರು.

ಇದಲ್ಲದೆ, ಸಿಂಧುರವರು ಚಂದಮಾಮಾ, ತರಂಗ ಪತ್ರಿಕೆಗಳನ್ನು ಹಾಗು ಅಶ್ರು, ಮುಕ್ತಿ, ಮಾಧವ ಕರುಣಾವಿಲಾಸ, ಚುಕ್ಕಿಚಂದ್ರಮರ ನಾಡಿನಲ್ಲಿ, ವುದರಿಂಗ್ ಹೈಟ್ಸ್, ಸಖೀಗೀತ ಮೊದಲಾದ ಸಾಹಿತ್ಯಕೃತಿಗಳನ್ನೂ ಸಹ ತಮ್ಮ ಕಥೆಗಳಲ್ಲಿ ಉದ್ಧರಿಸಿದ್ದಾರೆ. ಇದಲ್ಲವೆ, ನಮ್ಮ ಮನಸ್ಸನ್ನು ಶ್ರೀಮಂತಗೊಳಿಸಿದ  ಪೂರ್ವಸೂರಿಗಳ ಬಗೆಗೆ ಇರುವ ಕೃತಜ್ಞತೆ? ಇದಲ್ಲವೆ ನಮಗೆ aesthetic ಸುಖ ಕೊಟ್ಟ ರಚನೆಗಳನ್ನು ಸ್ಮರಿಸುವ ಪರಿ?

ಇದೆಲ್ಲಕಿಂತ ಹೆಚ್ಚಾಗಿ, ಈ ಕಥೆಗಳಿಗೆ ಮತ್ತೊಂದು ವೈಶಿಷ್ಟ್ಯವಿದೆ: ಸ್ತ್ರೀಯ sociological model and role.
ಜೀವವಿಕಾಸದ ಕೆಳಹಂತದಲ್ಲಿರುವ ಎಂದು ನಾವು ಕರೆಯುವ ಪ್ರಾಣಿಗಳ ಗಂಡು ಹಾಗು ಹೆಣ್ಣುಗಳಲ್ಲಿ ಇರುವ ಭೇದವು ಕೇವಲ biological roleಗೆ ಸೀಮಿತವಾಗಿದೆ. ಮೊಟ್ಟೆಗಳನ್ನು ಇಡುವ ಪ್ರಾಣಿಗಳಲ್ಲಿ ಹೆಣ್ಣು ಅಧೀನ ಪ್ರಾಣಿಯಲ್ಲ. ಗರ್ಭ ಧರಿಸುವ ಪ್ರಾಣಿಗಳಲ್ಲಿ, ಬಸಿರಿನ ಅವಧಿಯಲ್ಲಿ ಹಾಗು ಶಿಶುಪಾಲನೆಯ ಅವಧಿಯಲ್ಲಿ ಹೆಣ್ಣುಜೀವಿಗೆ ಗಂಡನ್ನು ಅವಲಂಬಿಸುವ ಅವಶ್ಯಕತೆ ಆಯಿತೇನೊ? ಈ ಅವಲಂಬನೆಯು ಕೇವಲ ರಕ್ಷಣೆಗೆ ಮಾತ್ರ ಸೀಮಿತವಾಗಿತ್ತೇ ಹೊರತು, ಆಹಾರಸಂಪಾದನೆಗೆ ಅಲ್ಲ. ದುರ್ದೈವದಿಂದ, ಮಾನವ ಜೀವಿಯಲ್ಲಿ ಆಹಾರಸಂಪಾದನೆಗೂ ಸಹ ಹೆಣ್ಣುಜೀವಿಯು ಗಂಡಿನ ಮೇಲೆ ಅವಲಂಬಿಸುವ ಪರಿಸ್ಥಿತಿ ಉದ್ಭವಿಸಿತು. ಗಂಡಸು ಇದರ ದುರ್ಲಾಭ ಪಡೆದು ಹೆಣ್ಣನ್ನು ತನ್ನ ದಾಸಿಯನ್ನಾಗಿ ಮಾಡಿಕೊಂಡನು. ಆ ಬಳಿಕ, ಒಂದು ದೀರ್ಘ ಕಾಲಾವಧಿಯಲ್ಲಿ, ಹೆಣ್ಣಿನ sociological role ಹಾಗು ಅವಳ sociological model ಇವು ವಿಪರೀತ ಬದಲಾವಣೆಯನ್ನು ಹೊಂದಿದವು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ feminism, women’s lib ಮೊದಲಾದ ಚಳುವಳಿಗಳು ಅಲ್ಲಿಯ ಸ್ತ್ರೀಯರ sociological modelನಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ತಂದಿವೆ. ಮೊದಲಿನಂತೆ ಹೆಣ್ಣು ‘ಕ್ಷಮಯಾ ಧರಿತ್ರೀ, ಭೋಗೇಷು ದಾಸೀ’ ಎನ್ನುವ ಪತಿವ್ರತಾ role ಅನ್ನು ಕಿತ್ತೆಸೆದಿದ್ದಾಳೆ. ಹೆಣ್ಣಿಗೆ ಒಂದು ಸ್ವತಂತ್ರ ವ್ಯಕ್ತಿತ್ವ ಇದೆ ಎನ್ನುವ ಆಧುನಿಕ ಮನೋಧರ್ಮವನ್ನು ಈ ಕಥಾಸಂಕಲನದ ಕಥೆಗಳು ನಿರೂಪಿಸುತ್ತಿವೆ. ಹೆಣ್ಣಿಗೆ ಗಂಡಿನ ಮೇಲೆ ಹಾಗು ಗಂಡಿಗೆ ಹೆಣ್ಣಿನ ಮೇಲೆ ಯಾವುದೇ ಅವಲಂಬನೆ ಇದ್ದರೆ ಅದು ದಾಂಪತ್ಯದ ಒಲವಿನ ಅವಲಂಬನೆ, ಸ್ನೇಹ ಅವಂಬೆ, ಜವಾಬುದಾರಿಯುತ ನಡವಳಿಕೆ ಎನ್ನುವುದು ಇಲ್ಲಿಯ ಕಥೆಗಳಲ್ಲಿ ಬಿಂಬಿತವಾಗಿದೆ.

ಈ ಕಥಾಸಂಕಲನವು ಇಂತಹ ಅನೇಕ ಕಾರಣಗಳಿಂದಾಗಿ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಕೃತಿಯಾಗಿದೆ.