Showing posts with label ಸಾಹಿತ್ಯ/ವಸುಧೇಂದ್ರ. Show all posts
Showing posts with label ಸಾಹಿತ್ಯ/ವಸುಧೇಂದ್ರ. Show all posts

Sunday, January 12, 2014

ಮೋಹನಸ್ವಾಮಿ.....ವಸುಧೇಂದ್ರ



ವಸುಧೇಂದ್ರರು ಬರೆದ ‘ಮೋಹನಸ್ವಾಮಿ’ ಕಥಾಸಂಕಲನದಲ್ಲಿ ೧೧ ಕತೆಗಳಿವೆ. ಇವುಗಳಲ್ಲಿ ೬ ಕಥೆಗಳು ಸಲಿಂಗಕಾಮಕ್ಕೆ ಸಂಬಂಧಿಸಿದ ಕಥೆಗಳಾಗಿವೆ. ಇವುಗಳ ಪೈಕಿ ೫ ಕಥೆಗಳಲ್ಲಿ ಮೋಹನಸ್ವಾಮಿಯೇ ನಾಯಕ (ಕಿ)! ಮೋಹನಸ್ವಾಮಿ ಎನ್ನುವ ಹೆಸರೇ ಈ ಕಥೆಗಳ ಆಂತರ್ಯವನ್ನು ಸೂಚಿಸುವಂತಿದೆ! ಸಲಿಂಗಕಾಮದ ಬಗೆಗೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಂದ ಬಳಿಕ, ಈ ವಿಷಯದಲ್ಲಿ ಸಾಕಷ್ಟು ಪರ ಹಾಗು ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ವಸುಧೇಂದ್ರರು ಈ ಕತೆಗಳನ್ನು ಈ ವಿವಾದದ ನಂತರ ಬರೆದದ್ದಲ್ಲ. ಈ ಸಂಕಲನದಲ್ಲಿ ಪ್ರಕಟವಾದ ‘ಇಂತಹ’ ಎರಡು ಕಥೆಗಳನ್ನು ೨೦೦೯ನೆಯ ಇಸವಿಯಲ್ಲಿಯೇ ಅವರು ಬರೆದಿದ್ದಾರೆ. ಸಲಿಂಗಕಾಮಕ್ಕೆ ಸಂಬಂಧಿಸಿದ ಅವರ ಮತ್ತೊಂದು ಕಥೆಯು ಈಗಾಗಲೇ ಬೇರೊಂದು ಕಥಾಸಂಕಲನದಲ್ಲಿ ಪ್ರಕಟವಾಗಿದೆ. ೨೦೧೧ರಲ್ಲಿ ಬರೆದ ಎರಡು ಕಥೆಗಳು ಹಾಗು ೨೦೧೩ರಲ್ಲಿ ಬರೆದ ಮೂರು ಕಥೆಗಳು ಈ ಸಂಕಲನದಲ್ಲಿ ಅಡಕವಾಗಿವೆ. ಸಲಿಂಗಕಾಮದದ ಬಗೆಗೆ ಇಷ್ಟು ವಿಪುಲವಾಗಿ ಬರೆಯಲು  ವಸುಧೇಂದ್ರರಿಗೆ ಇರುವ (ಸಾಹಿತ್ಯಕ) ಆಕರ್ಷಣೆ ಏನು? ನನಗೆ ಅನಿಸುವುದು ಹೀಗೆ:

ವಸುಧೇಂದ್ರರ ಇತರ ಕಥಾಸಂಕಲನಗಳಲ್ಲಿ ಇರುವ ಬೇರೆ ಬೇರೆ ಕಥೆಗಳನ್ನು ಓದಿದಾಗ, ಅವರ ಮನೋಧರ್ಮದ ಒಂದು ವಿಶೇಷತೆಯ ಅರಿವು ಮೂಡುತ್ತದೆ. ಅಸಹಾಯಕತೆಯನ್ನು ಕಂಡಾಗ ವಸುಧೇಂದ್ರರ ಕರಳು ಮಿಡಿಯುತ್ತದೆ. ಈ ಅಸಹಾಯಕತೆಯು (೧)ಸಾಮಾಜಿಕ ಕ್ರೂರತೆಯ ಅಥವಾ (೨)ವೈಯಕ್ತಿಕ ಪರಿಸ್ಥಿತಿಯ ಅಥವಾ (೩)ಮಾನಸಿಕ ಗುಣವಿಶೇಷದ ಪರಿಣಾಮವಾಗಿರಬಹುದು. ವಸುಧೇಂದ್ರರು ಆ ಅಸಹಾಯಕ ವ್ಯಕ್ತಿಯನ್ನು ಅನುಕಂಪಮಾತ್ರದಿಂದ ನೋಡುತ್ತಾರೆ. ಮೋಹನಸ್ವಾಮಿಯ ಕಥೆಗಳಲ್ಲಿ ವಸುಧೇಂದ್ರರಿಗೆ ತಮ್ಮ ನಾಯಕನು(ಕಿಯು) ಸಲಿಂಗಕಾಮಿಯಾಗುವ ಮಾನಸಿಕ ಅಥವಾ ವೈದ್ಯಕೀಯ ಕಾರಣಗಳು ಅಗಣ್ಯ. ಈ ವ್ಯಕ್ತಿಯು ಪಡುವ ಅಸಹನೀಯ ಪಾಡು ಅವರ ಕಥೆಗಳ ಅಂತರಂಗವಾಗಿದೆ. ಅವರ ಇತರ ಕಥೆಗಳಲ್ಲಿಯೂ ಸಹ, ಕಥಾನಾಯಕರು ಬಹುತೇಕವಾಗಿ ಅಸಹಾಯಮೂರ್ತಿಗಳು. ಅವರ ಸ್ತ್ರೀಪಾತ್ರಗಳು ಬದುಕನ್ನು ನೇರ್ಪಡಿಸಲು ಇನ್ನಿಲ್ಲದಂತೆ ಒದ್ದಾಡುತ್ತಿರುವ ಸಹಿಷ್ಣುಗಳು.

ವಸುಧೇಂದ್ರರ ಕಥೆಗಳ ವೈಶಿಷ್ಟ್ಯವೇನೆಂದರೆ, ಕಥಾವಸ್ತು ಇಲ್ಲಿ ಅಮುಖ್ಯ. ಈ ಕಥೆಗಳಲ್ಲಿ ಬರುವ ಪಾತ್ರಗಳ ಸ್ವಭಾವ, ಸ್ವರೂಪಗಳೇ ಇಲ್ಲಿ ಪ್ರಧಾನವಾಗಿರುತ್ತವೆ. ಆ ಸ್ವಭಾವದ ಸುತ್ತಲೂ ಕಥೆಗಳು ಬೆಳೆಯುತ್ತವೆ. ನನಗೆ ಅತ್ಯಂತ ಇಷ್ಟವಾದ ಅವರ ಕಥೆ ‘ಹೊಟ್ಟೆಯೊಳಗಿನ ಗುಟ್ಟು’ ಮತ್ತು ‘ಸೀಳು ಲೋಟ’ ಈ ವೈಶಿಷ್ಟ್ಯದ ಉತ್ಕೃಷ್ಟ ಮಾದರಿಗಳಾಗಿವೆ ಎನ್ನಬಹುದು.

ಮೋಹನಸ್ವಾಮಿಯ ಕಥೆಗಳಲ್ಲಿಯೂ ಸಹ ಈತ ಒಬ್ಬ ಮೆತುಗ ಸಲಿಂಗಕಾಮಿ. ಸಲಿಂಗಕಾಮಿಗಳಲ್ಲಿಯೂ ಎರಡು ಬಗೆಗಳಿವೆಯಲ್ಲವೆ? ಗಂಡಿನ ಪಾತ್ರವನ್ನು ವಹಿಸುವ ಅಥವಾ ಹೆಣ್ಣಿನ ಪಾತ್ರವನ್ನು ವಹಿಸುವ ಸಲಿಂಗಕಾಮಿಗಳು. ಮೋಹನಸ್ವಾಮಿ ಹೆಣ್ಣಿಗ, ಸದೃಢ ಗಂಡಸನ್ನು ಕಂಡರೆ ಆಸೆಪಡುವವನು. ನಮ್ಮ ಸಮಾಜವು ಯಾವ ಗುಣಗಳನ್ನು ಹೆಣ್ಣಿನ ಮೇಲೆ ಆರೋಪಿಸಿದೆಯೋ ಆ ಗುಣಗಳನ್ನು ಹೊಂದಿರುವವನು. ಇಂತಹ ಪಾತ್ರವನ್ನು ಸಮರ್ಪಕವಾಗಿ ಸೃಷ್ಟಿಸುವ ಉದ್ದೇಶದಿಂದ ಲೇಖಕರು, ಮೋಹನಸ್ವಾಮಿಯು ಮಾಡಲು ಬಯಸುವ ಅನೇಕ ಗೃಹಕೃತ್ಯಗಳನ್ನು ಹಾಗು ಸೇವಾಕಾರ್ಯಗಳನ್ನು ಸವಿವರವಾಗಿ ಬಣ್ಣಿಸುತ್ತಾರೆ. ಮೋಹನಸ್ವಾಮಿ ಹಾಗು ಆತನ ಗೆಣೆಯನ ನಡುವೆ ಹೆಂಡತಿ ಹಾಗು ಗಂಡನ ನಡುವಿನ ತರಹದ ಸಂಬಂಧವಿತ್ತು ಎನ್ನುವದನ್ನು ಚಿತ್ರಿಸುವ ವರ್ಣನೆಯು ಶೃಂಗಾರಪೂರ್ಣವಾಗಿದೆ ಎಂದು ಹೇಳಬಹುದು!

ಸಾಂಪ್ರದಾಯಕ ಹೆಂಡತಿಯು ಗಂಡನನ್ನು ಮೆಚ್ಚಿಸಲು ಯಾವ ರೀತಿಯಲ್ಲಿ ಆತನ ವೈಯಕ್ತಿಕ ಸೇವೆಯನ್ನು ಹಾಗು ಆತ ಬಯಸುವ ರುಚಿ ರುಚಿ ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುವುಳೊ, ಮೋಹನಸ್ವಾಮಿಯು ಅದನ್ನೆಲ್ಲ ಮಾಡುತ್ತಿರುತ್ತಾನೆ.
ಇಲ್ಲಿ ಒಂದು ಪ್ರಶ್ನೆ ಬರುತ್ತದೆ. ಗಂಡನಿಗೆ ಅಡಿಯಾಳಾಗಿ ಇರುವದೇ ಹೆಣ್ಣಿಗೆ ಆದರ್ಶವೆ? ವಸುಧೇಂದ್ರರ ಅಭಿಪ್ರಾಯ ಹಾಗಿರಲಿಕ್ಕಿಲ್ಲ; ಆದರೆ ಈ ಕಥೆಯಲ್ಲಿಯ ಪಾತ್ರದ ಮನೋಧರ್ಮ ಹಾಗಿದೆ ಎಂದು ನಾನು ಭಾವಿಸುತ್ತೇನೆ. ಮೋಹನಸ್ವಾಮಿಯ ಕಥೆಗಳ ಬಗೆಗೆ ಹೆಚ್ಚಿನ ವಿವರಗಳನ್ನು ಕೊಟ್ಟರೆ, ಇನ್ನು ಮುಂದೆ ಓದುವಂತಹ ವಾಚಕರಿಗೆ ಕಥೆಗಳ ಸ್ವಾರಸ್ಯವು ಭಂಗವಾದೀತೆನ್ನುವ ಭಯದಿಂದ, ನಾನು ವಿವರಗಳನ್ನು ಇಲ್ಲಿಗೇ ನಿಲ್ಲಿಸುತ್ತೇನೆ.

ಈ ಸಂಕಲನವನ್ನು ವಸುಧೇಂದ್ರರು ಅರ್ಪಣೆ ಮಾಡಿದ್ದು ಈ ರೀತಿಯಾಗಿದೆ:
                                                 ಮೋಹನಸ್ವಾಮಿಯ ಗೆಳೆಯರಿಗೆ
        ಮೋಹನಸ್ವಾಮಿಯ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗೆ
                              ಮೋಹನಸ್ವಾಮಿಯ ಅಪ್ಪ, ಅಜ್ಜ, ಮುತ್ತಜ್ಜರಿಗೆ

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಲೇಖಕರು ಮೋಹನಸ್ವಾಮಿಗೆ ಮಕ್ಕಳನ್ನು ದಯಪಾಲಿಸಿದ್ದಾರೆ. ಅರ್ಥಾತ್ ಮೋಹನಸ್ವಾಮಿಯು ಕಾಲಾನುಕ್ರಮದಲ್ಲಿ ಸಲಿಂಗಕಾಮವನ್ನು ಬಿಟ್ಟು ‘ಸಹಜ ವ್ಯಕ್ತಿ’ಯಾಗುತ್ತಾನೆ; ಮದುವೆಯಾಗಿ (?) ಅಥವಾ ಆಗದೆ (!) ಮಕ್ಕಳನ್ನು ಪಡೆಯುತ್ತಾನೆ ಇತ್ಯಾದಿ.  ಹಾಗಿದ್ದರೆ, ತಮ್ಮ ಅರ್ಪಣೆಯ ಮೂಲಕ ವಸುಧೇಂದ್ರರು ವಾಚಕರಿಗೆ ಏನು ಸಂದೇಶ ನೀಡಬಯಸುತ್ತಿದ್ದಾರೆ? ಸಲಿಂಗಕಾಮಿಯು ವಿಲಿಂಗಕಾಮಿಯಾಗುವುದು ಸಹಜಸ್ವಭಾವ ಎಂದಲ್ಲವೆ? ಅಥವಾ ಇದು ನಮ್ಮ ಸಮಾಜವ್ಯವಸ್ಥೆಯಲ್ಲಿ ಅನಿವಾರ್ಯ ಎಂದೆ? ಅದಲ್ಲದೆ, ಮುತ್ತಜ್ಜರನ್ನು ಹಾಗು ಮರಿಮೊಮ್ಮಕ್ಕಳನ್ನು ಉಲ್ಲೇಖಿಸುವ ಮೂಲಕ ಸಲಿಂಗಕಾಮವು ಅನಾದಿ-ಅನಂತವಾಗಿದೆ ಎಂದು ವಸುಧೇಂದ್ರರು ಸೂಚಿಸುತ್ತಿದ್ದಾರೆಯೆ? ಅಥವಾ ಇದು ‘ಅಸಹಜ ವ್ಯಕ್ತಿಗಳ’ ಬಗೆಗೆ ಅವರು ತೋರುತ್ತಿರುವ ಸಹಾನುಭೂತಿಯೆ?

ಈ ಕಥಾಸಂಕಲನದ ಮೋಹನಸ್ವಾಮಿಯ ಕಥೆಗಳ ಸರಣಿಯಲ್ಲಿ ‘ತುತ್ತ ತುದಿಯಲ್ಲಿ ಮೊತ್ತ ಮೊದಲು’ ಎನ್ನುವುದು ಮೊದಲನೆಯ ಕಥೆ; ‘ಕಿಲಿಮಂಜಾರೊ’ ಕೊನೆಯ ಕಥೆ. ಮೊದಲನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ತೊಳಲಾಟದ ಚಿತ್ರವಿದ್ದರೆ ಕೊನೆಯ ಕಥೆಯಲ್ಲಿ ಮೋಹನಸ್ವಾಮಿಯ ಮಾನಸಿಕ ಹೋರಾಟದ ದರ್ಶನ ನಮಗಾಗುತ್ತದೆ. ತನ್ನ ವಿಭಿನ್ನ ವರ್ತನೆಯಿಂದಾಗಿ ಸಮಾಜಕ್ಕೆ ಹೆದರುತ್ತ, ಮಖೀನ ವ್ಯಕ್ತಿಯಾದ ಮೋಹನಸ್ವಾಮಿ ಇಲ್ಲಿ ಕಿಲಿಮಂಜಾರೊ ಪರ್ವತದ ದುರ್ಗಮ ಶಿಖರವನ್ನು ಚಾರಣಿಸುವಲ್ಲಿ ಯಶಸ್ವಿಯಾಗುತ್ತಾನೆ.

ಈ ಮೂಲಕ ಲೇಖಕರು ಕೊಡುವ ಸಂದೇಶವೇನು?—‘ಆತ ತನ್ನನ್ನು ತಾನೇ ಗೆದೆಯುತ್ತಾನೆ’ ಎಂದಲ್ಲವೆ? ತನ್ನ ಭಿನ್ನ ವ್ಯಕ್ತಿತ್ವದಿಂದ ಇತರರು ತನ್ನನ್ನು ಕೀಳಾಗಿ ನೋಡುವದನ್ನು ನಾನು ಲೆಕ್ಕಿಸುವದಿಲ್ಲ ಎನ್ನುವ ಭಾವ ಇದರಲ್ಲಿದೆಯೆ?

ಮೋಹನಸ್ವಾಮಿ ತುಂಬ ಪ್ರೀತಿಸಬಹುದಾದ ಪಾತ್ರ. (ಅಯ್ಯೊ, ನಾನು ಸಲಿಂಗಕಾಮಿಯಲ್ಲ!) ಅವನಿಗೆ ನಾವು ಹೇಳಬಹುದಾದ ಕೊನೆಯ ಮಾತೊಂದು ಹೀಗಿದೆ: ಹಕೂನ ಮಟಾಟಾ!

‘ತಗಣಿ’ ಈ ಸಂಕಲನದ ಮತ್ತೊಂದು ಸಲಿಂಗಕಾಮಿ ಕಥೆ. ಹೊರಗಿನ ಯಾವುದೇ ಒತ್ತಡವಿಲ್ಲದೆ, ದೈಹಿಕವಾಗಿ ದಷ್ಟಪುಷ್ಟ ಗಂಡಸಾಗಿದ್ದರೂ ಸಹ ಮಾನಸಿಕವಾಗಿ ಹೆಣ್ಣಾಗಿರುವ ವ್ಯಕ್ತಿಯ ದುರಂತ ಕಥೆ ಇದು. ಸಮಾಜದಲ್ಲಿ ಹಾಗು ತನ್ನ ಕುಟುಂಬದಲ್ಲಿ ಆತ ಯಾವ ರೀತಿಯಲ್ಲಿ ಅವಹೇಳನೆಗೆ ಈಡಾಗುತ್ತಾನೆ ಎನ್ನುವ ಚಿತ್ರ ಇಲ್ಲಿದೆ.


ಈ ಕಥಾಸಂಕಲನದಲ್ಲಿ ನಾನು ಬಹಳವಾಗಿ ಮೆಚ್ಚಿದ ಎರಡು ಕಥೆಗಳೆಂದರೆ: (೧) ದುರ್ಭಿಕ್ಷ ಕಾಲ ಮತ್ತು (೨) ಪೂರ್ಣಾಹುತಿ
ವರ್ತಮಾನ ಸಮಾಜದ ವಿಶಿಷ್ಟ ಚಿತ್ರಣ ಈ ಎರಡು ಕಥೆಗಳಲ್ಲಿದೆ.

ಈ ಸಂಕಲನದ ಕಥೆಗಳ ಬಗೆಗೆ ನಾನು ಸ್ವಲ್ಪ ವಿವರವಾಗಿ ಬರೆದರೂ ಸಹ ಇನ್ನು ಮುಂದಿನ ವಾಚಕರಿಗೆ ರಸಭಂಗವಾದೀತು 
ಎನ್ನುವ ಭಯದಿಂದ ನಾನು ಇಲ್ಲಿಗೇ ಮುಕ್ತಾಯಗೊಳಿಸುತ್ತಿದ್ದೇನೆ. ವಸುಧೇಂದ್ರರಿಗೆ ಅಭಿನಂದನೆಗಳು.

Sunday, May 16, 2010

"ಹರಿಚಿತ್ತ ಸತ್ಯ"--ವಸುಧೇಂದ್ರರ ಮೊದಲ ಕಾದಂಬರಿ

ವಸುಧೇಂದ್ರರು  ತಮ್ಮ ಸಣ್ಣ ಕತೆಗಳ ಮೂಲಕ ಈಗಾಗಲೇ ಕನ್ನಡ ಓದುಗರಿಗೆ ಸುಪ್ರಿಯರಾಗಿದ್ದಾರೆ. “ಹರಿಚಿತ್ತ ಸತ್ಯ” ಇದು ವಸುಧೇಂದ್ರರ ಮೊದಲ ಕಾದಂಬರಿ ; ‘ದೇಶ ಕಾಲ ವಿಶೇಷ ’ (೨೦೧೦) ಸಂಚಿಕೆಯಲ್ಲಿ ಇದು ಪ್ರಕಟವಾಗಿದೆ.

ಸಣ್ಣ ಕತೆಗಳ ರಚನಾ ವಿಧಾನಕ್ಕೂ, ಕಾದಂಬರಿಯ ರಚನಾವಿಧಾನಕ್ಕೂ ತುಂಬ ಅಂತರವಿದೆ. ಸಣ್ಣ ಕತೆಗಳಲ್ಲಿ ಕಥಾನಕದ ಬೆಳವಣಿಗೆ ಕ್ಷಿಪ್ರವಾದದ್ದು. ಕಾದಂಬರಿಯಲ್ಲಿ ಸಂಯಮದ ಹಾಗು ತಾಳ್ಮೆಯ ಬರವಣಿಗೆಯ ಅಗತ್ಯವಿದೆ.   ಸಣ್ಣ ಕತೆಗಳು ಸಂಕೀರ್ಣವಾಗಿರುವದು ವಿರಳ. ಹೀಗಾಗಿ ಸಣ್ಣ ಕತೆಗಳಲ್ಲಿ focus ನಿರ್ಮಿಸುವದು ಸುಲಭ. ಆದರೆ ಕಾದಂಬರಿಗಳ ವಿಸ್ತಾರ ಹಾಗು ಸಂಕೀರ್ಣತೆಯನ್ನು ಗಮನಿಸಿದಾಗ, ಕಾದಂಬರಿಗೊಂದು focus ನಿರ್ಮಿಸುವದು ಹಾಗು ಬೆಳವಣಿಗೆಯಲ್ಲಿ ಸಮತೋಲನ ಕಾಯ್ದುಕೊಂಡು ಹೋಗುವದು ಕಷ್ಟದ ಕೆಲಸ. ಸಣ್ಣ ಕತೆಗಳ ರಚನೆಯಲ್ಲಿ ಪರಿಣತರಾದ ವಸುಧೇಂದ್ರರು ತಮ್ಮ ಮೊದಲ ಕಾದಂಬರಿಯ ರಚನೆಯಲ್ಲಿ ಯಶಸ್ವಿಯಾಗಿದ್ದಾರೆಯೆ?

“ಹರಿಚಿತ್ತ ಸತ್ಯ” ಕಾದಂಬರಿಯಲ್ಲಿ ಎರಡು ಸಮಾಂತರ ಕತೆಗಳಿವೆ. ಪ್ರವಾಹದಲ್ಲಿ ಸಿಲುಕಿದ ಕಟ್ಟಿಗೆಯ ಎರಡು ತುಂಡುಗಳು ಒಂದನ್ನೊಂದು ತಾಕುವ ಹಾಗು ಬೇರೆಯಾಗುವ ತರಹದಲ್ಲಿ ಈ ಎರಡೂ ಕತೆಗಳಲ್ಲಿಯ ಪಾತ್ರಧಾರಿಗಳ ವಿಯೋಗ, ಸಂಯೋಗವಿದೆ. ಆದರೆ ವಸುಧೇಂದ್ರರಿಗೆ ಕಥಾನಕವೇ ಮುಖ್ಯವಲ್ಲ. ತಮ್ಮ ಕೃತಿಗಳ ಮೂಲಕ ವಸುಧೇಂದ್ರರು ಅನೇಕ ವಿಷಯಗಳನ್ನು ಓದುಗರ ಕಣ್ಣೆದುರಿಗೆ ತರುತ್ತಾರೆ.

ಒಂದು ಸಂಪ್ರದಾಯನಿಷ್ಠ ಸಮಾಜದ ವಿವರಗಳು, ಆ ಸಮಾಜದ ಕಠಿಣವಾದ ಚೌಕಟ್ಟಿನಲ್ಲಿ ಬದುಕಬೇಕಾದ ಜೀವಿಗಳ ತೊಳಲಾಟ, ಆ ಮೂಲಕ ಅವರು ರೂಪಿಸಿಕೊಂಡ ವ್ಯಕ್ತಿತ್ವ ಹಾಗು ಸಮಾಜದ ಸಡಿಲಾಗುತ್ತಿರುವ ನಿಯಮಗಳು ಇವೆಲ್ಲವನ್ನು ಓದುಗರಿಗೆ ತಲುಪಿಸುವದು ವಸುಧೇಂದ್ರರ ಮುಖ್ಯ ಆಸಕ್ತಿಯಾಗಿದೆ.

“ಹರಿಚಿತ್ತ ಸತ್ಯ”  ಕಾದಂಬರಿಯ ನಾಯಕ ಮತ್ತು ನಾಯಕಿ ಯಾರು? ಔಪಚಾರಿಕ ನಾಯಕ ಮತ್ತು ನಾಯಕಿ ಅಲ್ಲದೆ, ಈ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಇಲ್ಲಿ ಅಷ್ಟೇ ಮಹತ್ವದ್ದಾಗಿವೆ. ಇವರನ್ನು ಬಂಧಿಸಿರುವ ವ್ಯವಸ್ಥೆಯೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸುವದರಿಂದ, ಈ ವ್ಯವಸ್ಥೆಯನ್ನೂ ನಾಯಕ ಎನ್ನಬಹುದು. ಆದರೆ ಈ ಕಾದಂಬರಿಯ ನಿಜವಾದ ನಾಯಕನೆಂದರೆ ‘ವಿಧಿ’! ಅಂತಲೇ “ಹರಿಚಿತ್ತ ಸತ್ಯ” ಎನ್ನುವ ಹೆಸರು ಈ ಕಾದಂಬರಿಗೆ ಯಥಾರ್ಥವಾಗಿದೆ.

ವಸುಧೇಂದ್ರರ “ಹರಿಚಿತ್ತ ಸತ್ಯ” ಕಾದಂಬರಿಯ ಅವಲೋಕನಕ್ಕೂ ಮೊದಲಿಗೆ, ಕನ್ನಡ ಕಾದಂಬರಿಕಾರರು ತಮ್ಮ ಕಾದಂಬರಿಗಳ ರಚನೆಯಲ್ಲಿ ಬಳಸುವ ಕೆಲವು ವಿಧಾನಗಳನ್ನು ಗಮನಿಸೋಣ. ಕನ್ನಡದ ಮೊದಲ ಕಾದಂಬರಿಗಳಲ್ಲಿ ಲೇಖಕನ ನೇರ ಕಥನವಿರುತ್ತಿತ್ತು. ಅನಕೃ, ತರಾಸು, ಕಾರಂತ, ಮಾಸ್ತಿ,ಕುವೆಂಪು ಮೊದಲಾದವರು ಈ ವಿಧಾನವನ್ನು ಬಳಸಿದ ಲೇಖಕರು. ಶ್ರೀರಂಗರು ತಮ್ಮ ಕಾದಂಬರಿಗಳ ರಚನೆಗೆ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿದ್ದಾರೆ. ನಾಯಕಿಯ first person ಕಥನ ಹಾಗು ಪೋಷಕ ಪಾತ್ರದ first person ಕಥನವನ್ನು ತ್ರಿವೇಣಿಯವರು ತಮ್ಮ “ಮೊದಲ ಹೆಜ್ಜೆ” ಕಾದಂಬರಿಯಲ್ಲಿ ಬಳಸಿದ್ದಾರೆ. ಈ ವಿಧಾನ ಬಳಸಿದವರಲ್ಲಿ ಬಹುಶ: ತ್ರಿವೇಣಿಯವರೇ ಮೊದಲಿಗರಿರಬಹುದು. ಕಣ್ಣಿಗೆ ಕಾಣುವ ಸತ್ಯವನ್ನು ಕಣ್ಣಿಗೆ ಕಾಣುವಂತೆ ಹೇಳಲು ಮುಜುಗರ ಪಟ್ಟ ದೇವನೂರು ಮಹಾದೇವರು “ಕುಸುಮ ಬಾಲೆ”ಗೆ ಆಡುನುಡಿಯ ಮುಸುಕನ್ನು ಹಾಕಿದರು ಹಾಗು mystic realism ವಿಧಾನ ಬಳಸಿದರು. ಇದೇ ಉದ್ದೇಶದಿಂದ ಕುಂ.ವೀರಭದ್ರಪ್ಪನವರು ತಮ್ಮ “ಅರಮನೆ” ಕಾದಂಬರಿಗೆ ಪೌರಾಣಿಕ ಆಕೃತಿ ಬಳಸಲು ಹೋಗಿ ಸೋತುಬಿಟ್ಟರು.  ಇವಲ್ಲದೆ flash back, ಪ್ರಯತ್ನಪೂರ್ವಕ ಸರಳತೆ ಅಥವಾ ಸಂಕೀರ್ಣತೆ ಇವೆಲ್ಲ ಕಾದಂಬರಿಯ ರಚನಾವಿಧಾನಗಳು. ವಸುಧೇಂದ್ರರ ಕಾದಂಬರಿಯ ರಚನಾವಿಧಾನ ಎಂತಹದು?

ವಸುಧೇಂದ್ರರು ತಮ್ಮ ಕಾದಂಬರಿಯ ನೆಯ್ಗೆಯಲ್ಲಿ  ವಿನೋದ  ಹಾಗೂ ಮರುಕ ಇವುಗಳನ್ನು ಹಾಸು ಮತ್ತು ಹೊಕ್ಕುಗಳಂತೆ ಬಳಸಿಕೊಳ್ಳುತ್ತಾರೆ.  ಇಡೀ ಕಾದಂಬರಿಯಲ್ಲಿ ಹೆಜ್ಜೆ ಹೆಜ್ಜೆಗೂ ತೆಳು ವಿನೋದವು ಹೊಮ್ಮುತ್ತಿದೆ. ಕೆಲವೊಂದು ಸಂದರ್ಭಗಳಂತೂ ತುಂಬ delightful ಮತ್ತು hilarious ಆಗಿವೆ. ಅಲ್ಲದೆ ಈ ನೆಯ್ಗೆಯ ಮೇಲೆ caricatureದ ಕಸೂತಿ ಬೇರೆ. ಆದರೆ ಓದುಗನನ್ನು  ನಗಿಸುವದಷ್ಟೇ ಈ ವಿನೋದದ ಸೀಮಿತ ಉದ್ದೇಶವಲ್ಲ. ಇಲ್ಲಿರುವ caricature ಸಮಾಜವನ್ನು target ಮಾಡಿದ ವ್ಯಂಗ್ಯವೇ ಹೊರತು ಪಾತ್ರಗಳ ಅವಹೇಳನವಲ್ಲ.

ವಿನೋದ ಅಥವಾ ಹಾಸ್ಯವನ್ನು ಬಳಸಿ ಮರುಕವನ್ನು ಸೃಷ್ಟಿಸಿದ ಪೂರ್ವಸೂರಿಗಳು ಕನ್ನಡ ಸಾಹಿತ್ಯದಲ್ಲಿ ಈ ಮೊದಲೂ ಇದ್ದರು. ಬೀchiಯವರು ಈ ಮಾತಿಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. (ಬೀchiಯವರು ಸಹ ಬಳ್ಳಾರಿಯವರೇ ಆಗಿದ್ದದು ಕಾಕತಾಳೀಯವೆ?) ಆದರೆ ಬೀchiಯವರ ಹಾಸ್ಯ ಸ್ವಲ್ಪ ಕಟುತರವಾದದ್ದು. ವಸುಧೇಂದ್ರರ ವಿನೋದ ಎಳೆ ಮಗುವಿನ ನಗೆಯಂತಹದು. ಅವರ ವಿನೋದದ ಕೆಲವು sampleಗಳನ್ನು ಇಲ್ಲಿ ನೋಡಬಹುದು:

ವಿಧವೆ ರಂಗಮ್ಮ ತನ್ನ ಮಗಳು ಪದ್ಮಾವತಿಯನ್ನು ಕನ್ಯಾಪರೀಕ್ಷೆಗೆಂದು ಕರೆದುಕೊಂಡು ಹೊರಟಿದ್ದಾಳೆ.  ಕಾಡು ಜಾಗದ ನಡುವೆ ಬಸ್ಸು ಕೆಟ್ಟು ನಿಲ್ಲುತ್ತದೆ. ಪ್ರಯಾಣಿಕರೆಲ್ಲ ಕೆಳಗಿಳಿದ ಮೇಲೆ ಗಂಡಸರೆಲ್ಲ ಮೂತ್ರವಿಸರ್ಜನೆಗೆ ರಸ್ತೆ ಬದಿಗೆ ಸಾಗುತ್ತಾರೆ. ಆಗ ರಂಗಮ್ಮ ಮಾಡುವ ಟೀಕೆಯನ್ನು ಕೇಳಿ:
[“ಈ ದರಿದ್ರ ಬಿಸಿಲಿಗೆ ಸ್ನಾನ ಮಾಡೋ ಹಂಗೆ ಬೆವರು ಇಳೀತಾ ಅದೆ. ಈ ರಂಡೇಗಂಡರಿಗೆ ಅದೆಲ್ಲಿಂದ ಉಚ್ಚಿಗೆ ಅವಸರ ಆಗಿದ್ದೀತು ಹೇಳೆ ಪದ್ದಿ? ನೆಪ ಸಿಕ್ಕರೆ ಸಾಕು, ಬಿಚ್ಚಿ ನಿಂತುಗೊಳ್ಳೋ ಚಟ ನೋಡು ಇವಕ್ಕೆ.” ]

ಈ ವಿಧವೆಗೆ ಜೊತೆಗಾರರಾಗಿ ಹೊರಟ ದಂಪತಿಗಳು ಸುಭದ್ರಮ್ಮ ಹಾಗು ಶ್ರೀಪತಿ.  ಬಸ್ಸು ಕೆಟ್ಟು ನಿಂತದ್ದು ರಂಗಮ್ಮನಿಗೆ ಆತಂಕದ ವಿಷಯವಾದರೆ, ರಂಗಮ್ಮನ ಆತಂಕವು ಇತರರಿಗೆ ನಗೆಚಾಟಿಕೆಯ ವಿಷಯವಾಗುತ್ತದೆ. ರಂಗಮ್ಮನ ಜೊತೆಗಾರ ಶ್ರೀಪತಿಯಂತೂ ಈ ಕಾಡಿನಲ್ಲಿ ಹನುಮಂತನ ಗುಡಿಯನ್ನು ಹುಡುಕುತ್ತ ಹೊರಟು ಬಿಟ್ಟಿದ್ದಾನೆ. ’ಕಂಡ ಕಂಡ ದೇವರಿಗೆ ಕೈ ಮುಗಿಯುವ ಶ್ರೀಪತಿ’ ಎನ್ನುವ ಅವನ ಖ್ಯಾತಿ ವರನ ಊರಿಗೂ ಸಹ ತಲುಪಿ ಬಿಟ್ಟಿದೆ. ಕನ್ಯಾಪರೀಕ್ಷೆಯ ಘಟನೆಯಂತೂ ವಿನೋದೋಲ್ಲಾಸದ ಪರಮಶಿಖರವನ್ನು ಮುಟ್ಟಿದೆ. ಆದರೆ…! ಅಲ್ಲಿಯೂ ಸಹ ಈ ಸಮಾಜದ ರಿವಾಜುಗಳನ್ನು ವಿಮರ್ಶೆಯ ಕಣ್ಣಿನಿಂದ ನೋಡುವದೇ ಮುಖ್ಯ ಉದ್ದೇಶವಾಗಿದೆ. ಈ ಉದಾಹರಣೆ ನೋಡಿ:
[ಸಾಲಿನ ಕೊನೆಯಲ್ಲಿದ್ದ ಪೂಜೆ ಮಾಡುತ್ತಿರುವ ಮಹನೀಯರ ಫೋಟೋಕ್ಕೆ ಭಕ್ತಿಯಿಂದ ಕೈಮುಗಿದ ಶ್ರೀಪತಿ ‘ಇವರು ಯಾವ ಮಠದ ಸ್ವಾಮಿಗಳು?’ ಎಂದು ಕೇಳಿದ. ಅತ್ಯಂತ ಸಾವಧಾನದ ದನಿಯಲ್ಲಿ ರಾಮರಾಯರು ‘ಅವರು ನಮ್ಮಪ್ಪ. ಮೂರು ಸಲ ಮದುವಿ ಆಗಿದ್ದರು. ಎಲ್ಲಾ ಸೇರಿ ಹತ್ತು ಮಕ್ಕಳು. ನಾನು ಕಡಿಯಾಕಿ ಮಗ’ ಎಂದರು.]

ಕಥಾನಾಯಕ ರಾಘವೇಂದ್ರನ  ಹಸುಗೂಸು ಸರಿರಾತ್ರಿಯಲ್ಲಿ ಎಚ್ಚರಾಗಿ ಅಳುತ್ತಿದೆ. ಅದನ್ನು ಸಮಾಧಾನಪಡಿಸಲು ಆತ ಸಂಡೂರಿನ ಓಣಿ ಓಣಿಗಳಲ್ಲಿ ಠಿಕಾಣಿ ಹೂಡಿರುವ ಹಂದಿಗಳನ್ನು ಹಾಗು ನಾಯಿಗಳನ್ನು ತೋರಿಸಲು ಹೋಗುತ್ತಾನೆ! ಅವನ ಶೈಲಿಯನ್ನಷ್ಟು ನೋಡಿರಿ:
[“ಅಗೋ ಅಲ್ಲಿ ದೊಡ್ಡ ಹಂದಿ ಅದೆ ನೋಡು. ಎಷ್ಟು ಮಕ್ಕಳವಮ್ಮಾ  ಹಂದೀಗೆ? ಒಂದು,ಎರಡು, ಮೂರು…..
ಅಬ್ಬಬ್ಬಾ, ಏಳು ಪುಟ್ಟಮ್ಮ ಮಕ್ಕಳು ಅವೇ ನೋಡೆ ನಮ್ಮ ಹಂದೀಗೆ………..”]

ಹಿಂದು ಸಮಾಜವು ರೂಢಿಸಿಕೊಂಡ ವಾತಾವರಣವು ಈ ರೀತಿಯಾಗಿ ಕೊಳೆತು ನಾರುತ್ತಿದ್ದರೆ, ಕ್ರಿಶ್ಚಿಯನ್ ಸಮಾಜದ ಶಿಕ್ಷಿತ ವ್ಯಕ್ತಿಗಳ ಆರೋಗ್ಯಕರ ಪರಿಸರದ ವರ್ಣನೆಯನ್ನು ಗಮನಿಸಿ:
[“…..ರಂಗಮ್ಮ ಮತ್ತು ಪದ್ದಿ ಇಬ್ಬರಿಗೂ ಭಯವಾಗಿತ್ತು. ಆದರೆ ರೂಮಿನ ಒಳಗೆ ಹೋದಾಗ ನಗುಮುಖದ
ಡಾಕ್ಟರರನ್ನು ಕಂಡು  ಸ್ವಲ್ಪ ಗೆಲುವಾದರು. ಟೇಬಲಿನ ತುದಿಯಲ್ಲಿ ಕೋತಿಯೊಂದು ಮರದ ಟೊಂಗೆಗೆ ಜೋಕಾಲಿ ಆಡುವ ಫೋಟೋ ಇತ್ತು. ಆ ಚಿತ್ರದ ಕೆಳಗೆ ಮನಸ್ಸು ಮರ್ಕಟ ಎಂದು ಬರೆದ ಒಂದು ನಾಮಫಲಕವಿತ್ತು…………….
‘ತಾಯಿ ಹೇಳಿ, ಯಾರಿಗೆ ಕಾಯಿಲೆ ಆಗಿದೆ?’ ಎಂದು ವಿನಯಪೂರ್ವಕವಾಗಿ ಡಾಕ್ಟರ ಥಾಮಸ್ ಕೇಳಿದರು…..”]

ಆಧುನಿಕ ಶಿಕ್ಷಣವು ಡಾಕ್ಟರ್ ಥಾಮಸ್ ಅವರಿಗೆ ನೀಡಿದ ಆರೋಗ್ಯಕರ ಹಾಗು ವಿನಯಶೀಲ ವ್ಯಕ್ತಿತ್ವವನ್ನು ರೂಢಿನಿಷ್ಠ ಬ್ರಾಹ್ಮಣ ಸಮಾಜದ ಆಢ್ಯರ ವ್ಯಕ್ತಿತ್ವದೊಡನೆ ಹೋಲಿಸಿದಾಗ, ಈ ಸಮಾಜಗಳ contrast ಎದ್ದು ಕಾಣುವಂತಿದೆ.

ಹಳೆಯ ತಲೆಗಳ ಸಂಪ್ರದಾಯನಿಷ್ಠೆಗೆ ವಿರುದ್ಧವಾಗಿ ಹೊಸ ತಲೆಗಳು ಬದಲಾವಣೆಯ ಗಾಳಿಯನ್ನು ಹೆದರುತ್ತಲೆ ಸ್ವೀಕರಿಸುತ್ತಿವೆ.  ಕಥಾನಾಯಕಿ ಪದ್ಮಾವತಿ ತನ್ನ ಗೆಳತಿ ಪಂಕಜಾಳೊಡನೆ ಸಿನೆಮಾಕ್ಕೆ ಹೋಗುವ ಸಂಭ್ರಮವನ್ನು ನೋಡಬೇಕು. ಪಂಕಜಾಳ ಗಂಡ ದುಬಾಯಿಯಿಂದ ಕಳಿಸಿದ ಸಲ್ವಾರ-ಕಮೀಜನ್ನು ಹಾಕಿಕೊಳ್ಳುವ ಧೈರ್ಯ ಸ್ವತಃ ಅವಳಿಗೇ ಇಲ್ಲ. ಅವಿವಾಹಿತೆಯಾಗಿದ್ದ ಪದ್ಮಾವತಿ ತಾನೇ ಆ ವೇಷವನ್ನು ಧರಿಸುತ್ತಾಳೆ. ಹೆದರುತ್ತಲೇ, ಎಲ್ಲರ ಕಣ್ಣು ತಪ್ಪಿಸುತ್ತಲೇ ಗೆಳತಿಯರಿಬ್ಬರೂ ಸಿನೆಮಾಗೆ ಹೋಗುತ್ತಾರೆ. ಹರೆಯದ ಈ ಗೆಳತಿಯರ ಮಾತುಗಳನ್ನು ಸಂಪ್ರದಾಯನಿಷ್ಠ ಹೆಂಗಸರು ಕನಸಿನಲ್ಲೂ ಆಡಲಾರರು!
[“..ಆದರೆ ಇಬ್ಬರೂ ಒಂದು ವಿಷಯದಲ್ಲಿ ಒಮ್ಮತಕ್ಕೆ ಬಂದಿದ್ದರು. ‘ರಾಜ್ ಕುಮಾರ್ ಬರೀ ಮೈಲೆ ಕಾಣಿಸಿಕೊಂಡಾಗ  ಅವನನ್ನ ಅಪ್ಪಿಗೊಂಡು ಅದೇ ಚಾದರದಾಗೆ ನಾನೂ ಅವನ ಜೋಡಿ ಮಲ್ಕೋಬೇಕು ಅನ್ನಿಸ್ತೇ’ ಎಂದು ಪಂಕಜ ಹೇಳಿದರೆ, ಪದ್ದಿ ಸೀಮೋಲ್ಲಂಘನೆ ಮಾಡಿ ’ಒಂದು ಸೀನಿನಾಗೆ ಆತ ಬಗ್ಗಿ ಪೆನ್ನು ಎತ್ತಿಗೊಳ್ತಾನೆ ನೋಡು, ಆಗ ನಂಗಂತೂ ಆತನ ಕುಂಡಿ ಸವರಬೇಕು ಅಂತ ಅನ್ನಿಸಿಬಿಡ್ತು’ ಎಂದಳು………”]

ವಿನೋದದ ಮುಖವಾಡ ಹೊತ್ತ ಈ ಕತೆಯ ಬೆಳವಣಿಗೆಯಲ್ಲಿ ವಿಧಿಯ ಪಾತ್ರವೇ ಮಹತ್ವದ್ದಾಗಿದೆ.  ಈ ಕಾದಂಬರಿಯಲ್ಲಿ ವಿಧಿಯು ಆಡುವ ಕುವಾಡಗಳಿಗೆ ಲೆಕ್ಕವಿಲ್ಲ. ಈ ಕಾದಂಬರಿಯ ಉದ್ದೇಶವು ಕೇವಲ ಕತೆ ಹೇಳುವದಲ್ಲ ಎನ್ನುವ ಮಾತನ್ನು ಗಮನಿಸಿದಾಗ, ಓದುಗನು ಈ ವಿಧಿಯಾಟವನ್ನು ಸಮಚಿತ್ತದಿಂದ ಸ್ವೀಕರಿಸುತ್ತಾನೆ. ಇಂತಹ ವಿಧಿಲೀಲೆಗಳನ್ನು ಪಟ್ಟಿ ಮಾಡಿದರೆ, ಕಾದಂಬರಿಯ ಸ್ವಾರಸ್ಯ ಬಯಲಾಗುತ್ತದೆ. ಆದುದರಿಂದ, ಆ ಪಟ್ಟಿಯನ್ನು ಬದಿಗಿಟ್ಟುಬಿಡೋಣ.

ಇನ್ನು ಈ ಕಾದಂಬರಿಯ ಕೆಲವು ಪಾತ್ರಗಳನ್ನು ನೋಡೋಣ:
ವಸುಧೇಂದ್ರರ ಕತೆಗಳಲ್ಲಿ ಹಾಗು ಈ ಕಾದಂಬರಿಯಲ್ಲಿ ಹೆಂಗಸರು ಸಹಸಾ ಗಟ್ಟಿಗಿತ್ತಿಯರಾಗಿ ಹೊರಹೊಮ್ಮುತ್ತಾರೆ. ಕಥಾನಾಯಕಿ ಪದ್ಮಾವತಿ ಇನ್ನೂ ಎಂಟು ವರುಷದ ಚಿಕ್ಕ ಹುಡುಗಿ ಇರುವಾಗಲೆ ಅವಳ ತಾಯಿ ರಂಗಮ್ಮ ವಿಧವೆಯಾಗುತ್ತಾಳೆ. ಅವಳ ಹಿತೈಷಿಗಳು ತಲೆ ಬೋಳಿಸಿಕೊಳ್ಳುವದು ಬೇಡವೆಂದು ಹೇಳಿದರೂ ಸಹ, ಅವಳು ಕೇಶಮುಂಡನಕ್ಕೆ ಹಟ ಮಾಡುತ್ತಾಳೆ. ಅದರ ಕಾರಣವನ್ನಷ್ಟು ನೋಡಿರಿ:
[“ ‘ಮಡಿ ಆದರೆ ನಾಲ್ಕು ಮನಿ ಅಡಿಗಿ ಕೆಲಸ ಆದರೂ ಸಿಗ್ತದೆ. ಮಗಳು ದೊಡ್ಡೋಳು ಆಗೋ ತಂಕಾ ಹೆಂಗೋ ಹೊಟ್ಟಿ ಹೊರಕೋಬೇಕಲ್ಲ. ಕೂದಲಿಗೆ ಆಸಿ ಪಡ್ತೀನಿ ಅಂದ್ರೆ ಹೊಟ್ಟಿ ಸುಮ್ಮನಿರ್ತದೇನು?’ ಎಂದು ತಿಳಿಹೇಳಿದ್ದಳು.”]

ಎಂತಹ ಸಮಸ್ಯೆಗಳು ಬಂದು ಮುತ್ತಿಕೊಂಡಾಗಲೂ, ರಂಗಮ್ಮ ಧೈರ್ಯದಿಂದ ಸಂಭಾಳಿಸಿಕೊಂಡು, ಸಂಸಾರದ ಬಂಡಿಯನ್ನು ಸಾಗಿಸುತ್ತಾಳೆ.  ಪದ್ಮಾವತಿ ಹಾಗು ಅವಳ ಗೆಳತಿ ಪಂಕಜರೂ ಸಹ ವಿಧಿಲೀಲೆಗೆ ಬಲಿಯಾದವರೇ. ಅವರೂ ಸಹ ಬಂದದ್ದನ್ನೆಲ್ಲ ಎದುರಿಸಿಯೇ ಮುಂದುವರಿದವರು.

ವಸುಧೇಂದ್ರರ ಕತೆಗಳಲ್ಲಿ ಗಂಡಸರು ಸಾಮಾನ್ಯವಾಗಿ ಅಸಹಾಯಕ ವ್ಯಕ್ತಿತ್ವವುಳ್ಳವರು. ಈ ಕಾದಂಬರಿಯ ನಾಯಕ ರಾಘವೇಂದ್ರನದೂ ಅಂತಹ ವ್ಯಕ್ತಿತ್ವವೇ. ಹಬ್ಬದಡುಗೆಗಾಗಿ ಹೂರಣವನ್ನು ರುಬ್ಬುತ್ತಲೇ, ತನಗೊಬ್ಬ ಕನ್ಯೆ ಸಿಗುತ್ತಿಲ್ಲವೆಂದು ಈತ ತನ್ನ ತಾಯಿಯೆದುರಿಗೆ ತಕರಾರು ಹೇಳುತ್ತಾನೆ. ಈತನಿಗೆ ಕೊನೆಗೊಮ್ಮೆ ಸಿಕ್ಕ ಕನ್ಯೆ ಸುಧಾ ಮಾತ್ರ ಧೈರ್ಯಸ್ಥ ಹೆಣ್ಣು. ಪ್ರಸಂಗ ಬಂದರೆ, ಓಡುತ್ತಿರುವ ರೈಲಿನಿಂದ ಕಾಲುವೆಗೆ ಜಿಗಿಯಬಲ್ಲ ಗಟ್ಟಿಗಿತ್ತಿ. ಹಸಿ ಬಾಣಂತಿಯಿದ್ದಾಗಲೇ, ಮತ್ತೆ ಬೀಜಾರೋಪಣ ಮಾಡಿದ ಗಂಡನಿಗೆ ಇವಳು ಸಮಾಧಾನ ಹೇಳುವ ಪರಿಯನ್ನು ನೋಡಿ:
[“ಅತ್ತ ವನಮಾಲಾಬಾಯಿ ಮಠಕ್ಕೆ ಹೋಗಿದ್ದೇ ಇತ್ತ ರಾಘವೇಂದ್ರ ಸುಧಾಳ ಬಳಿ ಹಗೂರಕ್ಕೆ ಬಂದ. ಅತ್ಯಂತ ಕಳವಳದಿಂದ ’ನಿಂಗೆ ಏನಾದ್ರೂ ಆಗ್ತದೆ ಅಂತಾಳಲ್ಲೇ ಅಮ್ಮ’ ಎಂದ. ಅದಕ್ಕೆ ಮುಸಿಮುಸಿ ನಕ್ಕ ಸುಧಾ ‘ಏನೂ ಆಗಲ್ಲ ಸುಮ್ಮನಿರಿ. ನಾನು ಗಟ್ಟಿಮುಟ್ಟ ಹೆಣ್ಣು. ಪ್ರತಿಭಾಳ ಹುಟ್ಟಿದ ಹಬ್ಬ,  ಕೂಸಿನ ಹುಟ್ಟಿದ ಹಬ್ಬ ಒಂದೇ ದಿನ ಮಾಡೋಣಂತೆ’ ಎಂದು ಧೈರ್ಯ ತುಂಬಿದಳು. ರಾಘವೇಂದ್ರನಿಗೆ ಈಗ ಸಮಾಧಾನವಾಯ್ತು.”]

ಕಾದಂಬರಿಯಲ್ಲಿ ಬರುವ ಇತರ ಪಾತ್ರಗಳೂ ಸಹ ಮನಸ್ಸಿನಲ್ಲಿ ನಾಟುವಂತಿವೆ.  ಈ ಪಾತ್ರಗಳು ಕ್ಷಣಿಕ ಪಾತ್ರಗಳಾಗಿರಬಹುದು; ಈ ಪಾತ್ರಗಳಿಗೆ ಮಹತ್ವವಿರಲಿಕ್ಕಿಲ್ಲ. ಆದರೂ ಸಹ ಪ್ರಮುಖ ಪಾತ್ರಗಳಷ್ಟೇ ಗಟ್ಟಿಯಾಗಿ ಈ ಪಾತ್ರಗಳೂ ಸಹ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುತ್ತವೆ. ಕನ್ಯಾಪರೀಕ್ಷೆಗಾಗಿ ಬರುತ್ತಿರುವ ಟೋಳಿಗೆ ಮಾರ್ಗದರ್ಶನ ಮಾಡಲು ಬಂದ ಹುಡುಗ ಸುಧೀಂದ್ರನೇ ಆಗಲಿ, ಜಾಗಂಟೆ ಬಾರಿಸುವ ಹುಡುಗ ವಾಜಿಯೇ ಆಗಲಿ ಓದುಗನ ಚಿತ್ತಾಪಹರಣ ಮಾಡದೆ ಬಿಡುವದಿಲ್ಲ. ಇದಕ್ಕೆ ಕಾರಣವೇನು? ನನಗೆ ಅನಿಸುವದು ಹೀಗೆ: ವಸುಧೇಂದ್ರರ basic ಅಸಕ್ತಿ ಇರುವದು ಮನುಷ್ಯಜೀವಿಗಳಲ್ಲಿ ; ಪ್ರತಿಯೊಂದು ವ್ಯಕ್ತಿಯ ಭಾವನೆಗಳ ಬಗೆಗೂ ಅವರಿಗೆ ಅಪಾರ ಕಳಕಳಿ. ಹೀಗಾಗಿ ಅವರ ಕತೆಗಳಲ್ಲಿ ಪಾತ್ರಗಳು ಬಹಳ ಮುಖ್ಯವಾಗಿ ಬಿಡುತ್ತವೆ. ಅವರ ಕತೆಗಳಿಗೆ Human panorama ಎಂದು ಕರೆಯಬಹುದೇನೊ! ಈ ಕಾದಂಬರಿಯಲ್ಲಂತೂ ಮಾನವಾಸಕ್ತಿಗೆ ವಿಪುಲ ಅವಕಾಶವಿದೆ. ಈ ಮಾನವಾಸಕ್ತಿಯೇ ಈ ಕಾದಂಬರಿಯ ಪ್ರಮುಖ ಗುಣವಾಗಿದೆ.

“ಹರಿಚಿತ್ತ ಸತ್ಯ” ಕಾದಂಬರಿಯಲ್ಲಿ ಓದುಗನ ಮನಸ್ಸನ್ನು ವಿನೋದದ ಜೊತೆಗೇ ಉಲ್ಲಾಸದಿಂದ ತುಂಬುವ ಘಟನೆಗಳೂ ಇವೆ. ಕಥಾನಾಯಕ ರಾಘವೇಂದ್ರನು ತನ್ನ ಹೆಂಡತಿಯ ಮನೆ ಬಿಜಾಪುರಕ್ಕೆ ಹೋಗಿದ್ದು ಒಂದು ಅಂತಹ ಘಟನೆ. ಅವನಿಗೆ ಅಲ್ಲಿ ತನ್ನ ಹೆಂಡತಿಯ ಭೆಟ್ಟಿಯಾದ ಸಂದರ್ಭ ಮಾತ್ರ ಅವಿಸ್ಮರಣೀಯವಾಗಿದೆ!

ಕಾದಂಬರಿಯಲ್ಲಿ ಕೇವಲ ವಿನೋದ ತುಂಬಿದೆ ಎಂದಲ್ಲ. ಪಂಕಜಾ ಹಾಗು ಪದ್ಮಾವತಿಯ ಬಾಳಿಗೆ ತಿರುವು ಕೊಡುವ ಘಟನೆಗಳು ಕಳವಳವನ್ನು ಹಾಗು ಕನಿಕರವನ್ನು ಹುಟ್ಟಿಸುವಂತಿವೆ. ತಾಳ್ಮೆಯಿಂದ, ತಿಳಿವಳಿಕೆಯಿಂದ ಹಾಗು ಸೂಕ್ಷತೆಯಿಂದ ವಸುಧೇಂದ್ರರು ವರ್ಣಿಸಿದ ಈ ವಿವರಗಳನ್ನು ಓದುತ್ತಿದ್ದಂತೆ, ಈ ಲೇಖಕರ ಬಗೆಗೆ ಓದುಗನಲ್ಲಿ ಗೌರವ ಹಾಗು ಅಭಿಮಾನ ಹುಟ್ಟುತ್ತವೆ.

ಕಾದಂಬರಿಯ ಕಥಾನಕದ ಎಲ್ಲ ಹಂತಗಳನ್ನು ಅಥವಾ ವಿವರಗಳನ್ನು ಇಲ್ಲಿ ಕೊಡುವದು ಸರಿಯಲ್ಲ. ರಸಗುಲ್ಲಾದಲ್ಲಿ ಏನೇನನ್ನು ಬಳಸಿದ್ದಾರೆ ಎಂದು  ಚರ್ಚಿಸುವದಕ್ಕಿಂತ  ಸ್ವತಃ ಸವಿಯುವದೇ ಉತ್ತಮವಾದದ್ದು.
“ಹರಿಚಿತ್ತ ಸತ್ಯ” ಕಾದಂಬರಿಯನ್ನು ಈಗಾಗಲೇ ಓದಿದವರು ನನ್ನೊಡನೆ  ಸಹಮತ ತಾಳುತ್ತಾರೆನ್ನುವ ನಂಬಿಕೆ ನನಗಿದೆ. ಇನ್ನೂ ಓದಬೇಕಾದವರಿಗೆ ಹೇಳುವದಿಷ್ಟೆ: Read and enjoy!
ವಸುಧೇಂದ್ರರು ಕನ್ನಡ ಓದುಗರಿಗೆ ಇನ್ನಷ್ಟು ಇಂತಹ ಕೃತಿಗಳನ್ನು ನೀಡಲಿ ಎಂದು ಹಾರೈಸೋಣ.

Friday, January 23, 2009

‍ಹಂಪಿ ಎಕ್ಸ್ ಪ್ರೆಸ್

'ಹಂಪಿ ಎಕ್ಸ್ ಪ್ರೆಸ್' ಇದು ವಸುಧೇಂದ್ರರ ಹೊಚ್ಚಹೊಸ ಕಥಾಸಂಕಲನ.
ಬೆಂಗಳೂರಿನಲ್ಲಿ ನೆಲೆಸಿದ್ದರೂ ಸಹ ವಸುಧೇಂದ್ರರು ತಮ್ಮ ತವರನ್ನು ಮರೆಯಲಾರರು.
ಸಂಡೂರಿನಲ್ಲಿಯ ತಮ್ಮ ಬಾಲ್ಯದ ಗೆಳೆಯರ, ಅಲ್ಲಿಯ ಸಾಂಪ್ರದಾಯಕ ಸಮಾಜದ ನೆನಪುಗಳು ಅವರನ್ನು ಯಾವಾಗಲೂ ಕಾಡುತ್ತಲೇ ಇರುತ್ತವೆಯೇನೊ?
ಅಂತೆಯೇ ಬೆಂಗಳೂರನ್ನು ಸಂಡೂರಿಗೆ connect ಮಾಡುವ ಹಂಪಿ ಎಕ್ಸ್ ಪ್ರೆಸ್ ಹೆಸರನ್ನೇ ವಸುಧೇಂದ್ರರು ತಮ್ಮ ಕಥಾಸಂಕಲನಕ್ಕೆ ಕೊಟ್ಟಿದ್ದಾರೆ.

ಈ ಸಂಕಲನದಲ್ಲಿ ಸಂಡೂರಿನ ಕತೆಗಳಲ್ಲದೇ ಬೆಂಗಳೂರಿನ ಕತೆಗಳೂ ಇವೆ. ಸಂಡೂರು ಸಣ್ಣ ಊರಾದರೆ, ಬೆಂಗಳೂರು metro. ಸಂಡೂರು ಅವರ ಬಾಲ್ಯಕಾಲ; ಬೆಂಗಳೂರು ಅವರ ವರ್ತಮಾನ. ಈ ಎರಡೂ ಕಾಲಗಳನ್ನು connect ಮಾಡುವ ನೆನಪಿನ ಬಂಡಿ ಎಂದರೆ ಹಂಪಿ ಎಕ್ಸ್ ಪ್ರೆಸ್.

Small town ಹಾಗು metro ಈ ಎರಡೂ ಸಮಾಜಗಳ ಅಂತರಂಗವನ್ನು, ಸುಖ-ದುಃಖಗಳನ್ನು ವಸುಧೇಂದ್ರರು ಸಾಕ್ಷೀಪ್ರಜ್ಞೆಯಿಂದ ನೋಡುತ್ತ ಈ ಸಮಾಜಗಳ ಕತೆಗಳನ್ನು ಅತ್ಯಂತ ಕಲಾತ್ಮಕವಾಗಿ ಓದುಗರಿಗೆ ತಲುಪಿಸುತ್ತಿದ್ದಾರೆ.

ವಸುಧೇಂದ್ರರದು ಮೂಲಭೂತವಾಗಿ ಅನುಕಂಪದ ಮನಸ್ಸು.
ಇವರನ್ನು ‘ಹೆಂಗರುಳಿನ ಲೇಖಕ’ ಎಂದು ಬಣ್ಣಿಸಿದರೆ ತಪ್ಪಾಗಲಿಕ್ಕಿಲ್ಲ.
ವಸುಧೇಂದ್ರರ ಕೃತಿಗಳನ್ನು ಓದಿದವರಿಗೆ ಥಟ್ಟನೆ ಕಾಣುವ ಮಾತೆಂದರೆ ಅಸಹಾಯಕರಿಗಾಗಿ ಮಿಡಿಯುವ ಇವರ ಮನಸ್ಸು.
ಸಂಡೂರೇ ಆಗಲಿ, ಬೆಂಗಳೂರೇ ಆಗಲಿ, ಗಂಡೇ ಆಗಲಿ, ಹೆಣ್ಣೇ ಆಗಲಿ ಅಥವಾ ಅರೆಗಂಡೇ ಆಗಲಿ, ವಸುಧೇಂದ್ರರು ಎಲ್ಲರನ್ನೂ ಸಹಾನುಭೂತಿಯಿಂದಲೇ ನೋಡುತ್ತಾರೆ.
ಮನುಷ್ಯರಷ್ಟೇ ಅಲ್ಲ, ಕೋತಿಗಳೂ ಸಹ ಇವರ ಸಹಾನುಭೂತಿಗೆ ಪಾತ್ರವಾಗುತ್ತವೆ.
……………………………………………………………………..
‘ಹಂಪಿ ಎಕ್ಸ್ ಪ್ರೆಸ್’ ಸಂಕಲನದಲ್ಲಿ ೮ ಕತೆಗಳಿವೆ.
‘ಕ್ಷಮೆಯಿಲ್ಲದೂರಿನಲಿ’ ಹಾಗೂ ‘ಹೊಸ ಹರಯ’ ಈ ಎರಡು ಕತೆಗಳು metro ನಾಗರಿಕತೆಯ ಕತೆಗಳು.
‘ಸೀಳುಲೋಟ’, ‘ಎರಡು ರೂಪಾಯಿ’ ಹಾಗೂ ‘ಪೆದ್ದಿ ಪದ್ಮಾವತಿ’ ಇವು ಸಾಂಪ್ರದಾಯಕ ಸಮಾಜದಲ್ಲಿ ಬದಕುತ್ತಿರುವವರ ಕತೆಗಳು.
‘ಕೆಂಪು ಗಿಣಿ’, ಕತೆಯು ಬದಲಾಗುತ್ತಿರುವ ಪರಿಸ್ಥಿತಿಯ ಕತೆಯಾಗಿದೆ.
‘ಕೆಂಧೂಳಿ’, ಹಾಗೂ ‘ನವಿರುಗರಿ’ ಇವು ವೈಯಕ್ತಿಕ ಭಾವನಾಪ್ರಪಂಚಕ್ಕೆ ಸಂಬಂಧಿಸಿದ ಕತೆಗಳಾಗಿವೆ.

ವಸುಧೇಂದ್ರರ ‘ಸೀಳುಲೋಟ’ವು ಕನ್ನಡದ ಶ್ರೇಷ್ಠ ಕತೆಗಳಲ್ಲೊಂದಾಗಿದೆ ಎನ್ನುವದು ನಿಸ್ಸಂದೇಹ.
‘ಸೀಳುಲೋಟ’ದ ಕತೆಯಲ್ಲಿ ಕಾರ್ಪಣ್ಯದಲ್ಲಿಯೇ ಬದಕುತ್ತಿರುವ ಒಂದು ಸಾಂಪ್ರದಾಯಕ ಕುಟುಂಬದ ಚಿತ್ರಣವಿದೆ.
ಈ ಕತೆಯಲ್ಲಿ ಬರುವ ಹೆಣ್ಣುಮಗಳು, ರಮಾಬಾಯಿ ತನ್ನ ಸಂಸಾರವನ್ನು ತೂಗಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತಾಳೆ.
ಅವಳ ಗಂಡನೋ ಅಲ್ಪಸಂಬಳಕ್ಕಾಗಿ ದಿನವೆಲ್ಲ ದುಡಿಯುವ ನಿರುಪದ್ರವಿ, ನಿರುಪಯೋಗಿ ವ್ಯಕ್ತಿ.
ಇವಳ ಅಣ್ಣನಿಗೆ ಇವಳ ಮೇಲೆ ನೈಜ ಪ್ರೀತಿಯಿದ್ದರೂ ಸಹ, ತನ್ನ ಹೆಂಡತಿಯ ಕೈಯಲ್ಲಿ ಸಿಕ್ಕಿಕೊಂಡಿದ್ದಾನೆ. ಹೀಗಾಗಿ ಇವಳು ಕೆಲವರ ಎದುರಿಗೆ ಗಯ್ಯಾಳಿಯಂತೆ, ಇನ್ನು ಕೆಲವರ ಎದುರಿಗೆ ಅವನತ ಭಾವದಿಂದ ವರ್ತಿಸುತ್ತ ಸಂಸಾರವನ್ನು ನಡೆಯಿಸುತ್ತಿದ್ದಾಳೆ.
ಇವಳ ಸಾಂಪ್ರದಾಯಕ ವರ್ತನೆಯನ್ನು ಹಾಗೂ ಗಯ್ಯಾಳಿತನವನ್ನು ತೋರಿಸಲು, ವಸುಧೇಂದ್ರರು ಬಳಸುವ ವಿನೋದಮಯ ಶೈಲಿ ಹೀಗಿದೆ:
“ರಪರಪನೆ ಕಸ ಬಳಿದು, ಅಂಗಳಕ್ಕೆ ನಿರನ್ನು ಜಡಿದು, ಆಕಾಶಕ್ಕೆ ಒಂದು ತಂಬಿಗೆ ನೀರು ಉಗ್ಗಿ “ಏಬ್ರಾಸಿ ಮುಂಡೇದೆ, ಎದ್ದೇಳು” ಎಂದು ಸೂರ್ಯನಿಗೆ ಉಗಿಯುತ್ತಾಳೆ.”

ಪರಿಸ್ಥಿತಿಯ ಜೊತೆಗೆ compromise ಮಾಡಿಕೊಳ್ಳುವದು ರಮಾಬಾಯಿಯ ಜೀವನದ ಒಂದು ಅನಿವಾರ್ಯ ಭಾಗ.
ತನ್ನನ್ನು ಮದುವೆಯಾಗಲು ಒಪ್ಪಿದ ಗಂಡು ಇವಳಿಗಿಂತ ಕಡಿಮೆ ರೂಪ ಹಾಗೂ ತರಗತಿಯವನೇ ಆಗಿದ್ದರೂ ಸಹ, ರಮಾಬಾಯಿ ತನ್ನ ಅಣ್ಣನಿಗೆ ತನ್ನ ಒಪ್ಪಿಗೆಯನ್ನು ತಿಳಿಸುವ ಪರಿ ಹೀಗಿದೆ:
“ ಕೊಡದ ನೀರನ್ನು ಪೂರ್ತಿಯಾಗಿ ಬಳ್ಳಿಗೆ ಸುರಿದ ರಮಾಬಾಯಿ ‘ಗಂಡಂತೂ ಹೌದಲ್ಲಣ್ಣ…ಅಷ್ಟು ಸಾಕು…ವಾಮನ ರೂಪದಾಗೆ ಬಂದಿರೋ ದೇವರು ಅಂದುಕೊಳ್ತೀನಿ’ ಎಂದು ನಿರ್ಭಾವುಕವಾಗಿ ಹೇಳಿಬಿಟ್ಟಳು. ವರದಣ್ಣ ಪೆಚ್ಚಾಗಿ ನಿಂತ. ನನ್ನ ಹಂಗೆ ಹಲ್ಲು ಉಬ್ಬು ಇಲ್ಲ ಬಿಡು ವರದಣ್ಣ” ಎಂದು ನಕ್ಕಳು.ವರದಣ್ಣನೂ ನಕ್ಕ.”

ತನ್ನ ಬಗೆಗೆ ಸ್ವಲ್ಪ ಅನುಕಂಪವನ್ನು, ಸ್ವಲ್ಪ ಉದಾರತನವನ್ನು ತೋರಿಸುತ್ತಿರುವ ವ್ಯಕ್ತಿಗಳ ಬಗೆಗೆ ರಮಾಬಾಯಿಯು ಅವನತಭಾವದಿಂದ ವರ್ತಿಸುವದು ಅನಿವಾರ್ಯವೇ ಆಗಿದೆ.
ಇದನ್ನು ವಸುಧೇಂದ್ರರು ತೋರಿಸುವ ಬಗೆ ಹೀಗಿದೆ:
“ಕೆಲಸದ ನರಸಕ್ಕ ಕೈಕೊಟ್ಟಿದ್ದರಿಂದ ಪದ್ದಕ್ಕ ಎಲ್ಲಾ ಮುಸುರೆ ಪಾತ್ರೆಗಳನ್ನು ಹರಡಿಕೊಂಡು ಕುಳಿತಿದ್ದಳು.
‘ಎದ್ದೇಳ್ರಿ ಪದ್ದಕ್ಕ, ನೀವೇನು ತೊಳಿತೀರಿ ಬಿಡ್ರಿ….ಏಳ್ರಿ, ಏಳ್ರಿ…’ ಎಂದು ಪದ್ದಕ್ಕನನ್ನು ಎಬ್ಬಿಸಿದಳು.”

‘ಸೀಳುಲೋಟ’ ಕತೆಯ ಪ್ರತಿಯೊಂದು ವಾಕ್ಯವನ್ನು ಈ ರೀತಿಯಾಗಿ ವಿಶ್ಲೇಷಿಸುತ್ತ ಹೋಗಬಹುದು. ಕತೆಯನ್ನು ಓದದೇ ಇರುವ ಓದುಗರು ಕತೆಯ ಸ್ವಾರಸ್ಯವನ್ನು first hand ಆಗಿ ಆಸ್ವಾದಿಸಲಿ ಎನ್ನುವ ಉದ್ದೇಶದಿಂದ ಈ ವಿಶ್ಲೇಷಣೆಯನ್ನು ಕೊನೆಗೊಳಿಸುತ್ತಿದ್ದೇನೆ.

ಪರಿಸ್ಥಿತಿ ನೀಡಿದ ಕಾರ್ಪಣ್ಯ ಏನೇ ಇದ್ದರೂ, ರಮಾಬಾಯಿ ಬೆಳೆದು ಬಂದ ಸಂಪ್ರದಾಯವು ಅವಳಿಗೆ ಒಂದು ಜೀವನಮೌಲ್ಯವನ್ನು ನೀಡಿದೆ.
ಬದುಕಿನ ಹೋರಾಟದಲ್ಲಿ ಅವಳ ವ್ಯಕ್ತಿತ್ವವು ಬೆಲೆ ಕಳೆದುಕೊಂಡಿರಬಹುದು, ಆದರೆ ಅವಳು ಎದೆಗೊತ್ತಿಕೊಂಡಿರುವ ಜೀವನಮೌಲ್ಯವು ಬೆಲೆ ಕಳೆದುಕೊಂಡಿಲ್ಲ.
ವಸುಧೇಂದ್ರರ ‘ಸೀಳುಲೋಟ’ದಲ್ಲಿ ಹಾಗೂ ಅವರ ಇನ್ನೂ ಕೆಲವು ಕತೆಗಳಲ್ಲಿ ಈ ಮಹತ್ತರ ಆಶಯ ವ್ಯಕ್ತವಾಗಿದೆ. (ಈ ಕಥಾಸಂಕಲನದಲ್ಲಿಯ ಕತೆ ‘ಎರಡು ರೂಪಾಯಿ’ ಹಾಗೂ ಬೇರೊಂದು ಕಥಾಸಂಕಲನದ ಕತೆ
‘ಹೊಟ್ಟೆಯಲ್ಲಿಯ ಗುಟ್ಟು’ ಇವುಗಳನ್ನು ಉದಾಹರಣೆ ಎಂದು ಹೇಳಬಹುದು.)

‘ಸೀಳುಲೋಟ’ ದ climax ಅಂತೂ ಅದ್ಭುತ. ಆದರೆ ಆ climax ಬಗೆಗೆ ಬರೆದು ಮೊದಲ ಓದುಗರ ಆಸಕ್ತಿಯನ್ನು ಕಳೆಯುವದು ಅನ್ಯಾಯದ ಕೆಲಸವಾಗುತ್ತದೆ.
‘ಎರಡು ರೂಪಾಯಿ’ ಸಹ ಸಾಂಪ್ರದಾಯಕ ಜೀವನದ ಕಷ್ಟ ಕಾರ್ಪಣ್ಯಗಳ ನಡುವೆಯೇ, ಅದು ಕಲಿಸುವ ಜೀವನನೀತಿಯನ್ನು ಮೈಗೂಡಿಸಿಕೊಂಡ ಮುದುಕಿಯೊಬ್ಬಳ ಚಿತ್ರಣವಾಗಿದೆ.

ಆಧುನಿಕ metro ಸಮಾಜದ ಬೆಡಗನ್ನು ವರ್ಣಿಸುತ್ತಲೇ, ಇಂತಹ ಸಮಾಜವು ನೈಜ ಸಂಬಂಧಗಳ ಬದಲು, virtual relationಅನ್ನು ಹೇಗೆ ಬೆಳೆಸುತ್ತದೆ, ಹೇಗೆ ಇದು ಮನುಷ್ಯರನ್ನು dehumanize ಮಾಡುತ್ತದೆ ಎನ್ನುವದರ ವರ್ಣನೆಯು ‘ಕ್ಷಮೆಯಿಲ್ಲದೂರಿನಲಿ’ ಕತೆಯಲ್ಲಿ ವರ್ಣಿತವಾಗಿದೆ.
ವಿನೋದದಲ್ಲಿಯೇ ಪ್ರಾರಂಭವಾಗಿ, ವಿನೋದದಲ್ಲಿಯೇ ಸಾಗುವ ಈ ಕತೆ ದುರಂತದಲ್ಲಿ ಕೊನೆಯಾಗಿದೆ.
‘ಹೊಸ ಹರಯ’ ಇದು ಆಧುನಿಕ metro ಸಮಾಜದ ಮತ್ತೊಂದು ಕತೆ.
ಈ ಕತೆಯಲ್ಲಿ ಆಧುನಿಕ ಹಾಗೂ ಅತ್ಯಾಧುನಿಕ ತಲೆಮಾರುಗಳೆರಡರ ತಿಕ್ಕಾಟದ ವರ್ಣನೆಯಿದೆ.

‘ಕೆಂಪು ಗಿಣಿ’ ಈ ಸಂಕಲನದ ಮತ್ತೊಂದು ಮಹತ್ವದ ಕತೆ.
ಆಧುನಿಕ ಅರ್ಥವ್ಯವಸ್ಥೆ , ಅದರೊಳಗಿನ ದುರಾಸೆ ಇವೆಲ್ಲ ಹೇಗೆ ಒಂದು ಹಳ್ಳಿಯ ಹಣೆಬರಹವನ್ನೇ ಬದಲಾಯಿಸಿಬಿಡುಬಹುದೆನ್ನುವ ಚಿತ್ರಣ ಈ ಕತೆಯಲ್ಲಿದೆ.
ಹಳ್ಳಿಯ ಸಾಂಪ್ರದಾಯಕ ಸಮಾಜದಲ್ಲಿರುವ ಮುಗ್ಧ ಬಾಲಕನೊಬ್ಬ ಕಾಣುವ ಅದ್ಭುತರಮ್ಯ fantasyಯು, ಅವನು ಬೆಳೆದು, ಪಟ್ಟಣಕ್ಕೆ ಹೋಗಿ, ಮರಳಿದಾಗ nightmarish reality ಆಗಿ ಬದಲಾಗಿರುವದು ಈ ಕತೆಯ ಹಂದರ.

‘ಕೆಂಧೂಳಿ’ ಹಾಗೂ ‘ನವಿರುಗರಿ’ ಇವು ವ್ಯಕ್ತಿಗಳ ಭಾವನಾಪ್ರಪಂಚಕ್ಕೆ ಸಂಬಂಧಿಸಿದ ಕತೆಗಳು.
‘ನವಿರುಗರಿ’ಯ ಶೀರ್ಷಿಕೆಯೇ ಸೂಚಿಸುವಂತೆ ಇದು ನವಿರಾದ ನವಿಲುಗರಿ. ಈ ಕತೆಯ ಪಾತ್ರಗಳ ಭಾವನಾಲೋಕವನ್ನು, nostalgiaವನ್ನು ಇಲ್ಲಿ ನವಿರಾಗಿ ಬಿಚ್ಚಿ ತೋರಿಸಲಾಗಿದೆ.

ಈ ಸಂಕಲನದಲ್ಲಿ ಬರುವ ಎಂಟೂ ಕತೆಗಳು ಓದುಗನಿಗೆ ಸಾಹಿತ್ಯಕ ತೃಪ್ತಿಯನ್ನು ನೀಡುತ್ತವೆ.
ಕತೆಗಳನ್ನು ಇನ್ನೂ ಓದದ ಓದುಗನಿಗೆ ಅನ್ಯಾಯವಾಗಬಾರದೆನ್ನುವ ಉದ್ದೇಶದಿಂದ ಇಲ್ಲಿ ಪ್ರತ್ಯೇಕವಾಗಿ, ವಿಸ್ತಾರವಾಗಿ ವಿಶ್ಲೇಷಿಸಿಲ್ಲ.
ವಸುಧೇಂದ್ರರ ಕತೆಗಳಲ್ಲಿ ಕರುಣರಸವೇ ಪ್ರಧಾನವಾದರೂ ಸಹ ತೆಳುವಿನೋದದ ಲೇಪನದ ಶೈಲಿಯಿಂದಾಗಿ ಇವರ ಕತೆಗಳಲ್ಲಿಯ ಎಂತಹ ಕರುಣಾಮಯ ಪರಿಸ್ಥಿತಿಯೂ ಸಹ ಸಹ್ಯವಾಗುತ್ತದೆ.
ಓದುಗನ ಕಣ್ಣಿನಲ್ಲಿ ನೀರು ಹಾಗೂ ತುಟಿಯ ಮೇಲೆ ನಗು ಎರಡೂ ಒಟ್ಟಿಗೆ ಕಾಣುವಂತೆ ಮಾಡುವ ಸಾಮರ್ಥ್ಯ ಈ ಕತೆಗಳಿಗಿದೆ.

ವಸುಧೇಂದ್ರರು ತಮ್ಮ ಕತೆಗಳ ಪ್ರತಿಯೊಂದು ಪಾತ್ರವನ್ನೂ ಅನುಕಂಪದಿಂದ, ಪ್ರೀತಿಯಿಂದ, ಇಷ್ಟಪಟ್ಟು ರೂಪಿಸುತ್ತಾರೆ.
ಆ ಪಾತ್ರಗಳ ನೀತಿ, ನಿಲುವುಗಳ ಬಗೆಗೆ ಅವರು judgment ಕೊಡಲು ಬಯಸುವದಿಲ್ಲ.
ಹೀಗಾಗಿ ಈ ಕತೆಗಳ ಪಾತ್ರಗಳು ನೆರೆಮನೆಯ ವ್ಯಕ್ತಿಗಳಷ್ಟೇ ಜೀವಂತ ಪಾತ್ರಗಳಾಗುತ್ತವೆ.
ಈ ತರಹದ ಪಾತ್ರರಚನೆ ವಸುಧೇಂದ್ರರ ವೈಶಿಷ್ಟ್ಯವಾಗಿದೆ.
ಕನ್ನಡದ ಶ್ರೇಷ್ಠ ಕತೆಗಾರರಾದ ಮಾಸ್ತಿಯಾಗಲಿ, ಲಂಕೇಶ ಆಗಲಿ ಅಥವಾ ದೇವನೂರು ಮಹಾದೇವರೇ ಆಗಲಿ, ತಮ್ಮ ಪಾತ್ರಗಳ ಮೂಲಕ ಸಮಾಜದ ಒಂದು ರೂಪವನ್ನು ಓದುಗರಿಗೆ ತೋರಿಸಲು ಬಯಸುತ್ತಾರೆ.
ಆದರೆ ವಸುಧೇಂದ್ರರು ತಮ್ಮ ಪಾತ್ರಗಳ ಕತೆಯನ್ನು ಮಾತ್ರ ಓದುಗರ ಎದುರಿಗೆ ಇಡುತ್ತಾರೆ.
ಹೀಗಾಗಿ ವಸುಧೇಂದ್ರರ ಪಾತ್ರಗಳು ಓದುಗನ ಮನದಲ್ಲಿ ಚಿರಸ್ಥಾಯಿಯಾಗುತ್ತವೆ.

ವಸುಧೇಂದ್ರರಿಂದ ಇನ್ನೂ ಇಂತಹ ಅನೇಕ ಕತೆಗಳು ಬರಲಿ, ಕನ್ನಡ ಓದುಗರನ್ನು ಖುಶಿ ಪಡಿಸಲಿ ಎಂದು ಹಾರೈಸುತ್ತೇನೆ.

Wednesday, October 15, 2008

ವಸುಧೇಂದ್ರರ ಸಂವೇದನಾ ಲೋಕ

ವಸುಧೇಂದ್ರರು ಈವರೆಗೆ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ:
(೧) ಮನೀಷೆ
(೨) ಚೇಳು
(೩) ಯುಗಾದಿ.

ಈ ಮೂರು ಕಥಾಸಂಕಲನಗಳಲ್ಲಿ ಒಟ್ಟು ೩೭ ಕಥೆಗಳಿವೆ.
ಈ ಮೂವತ್ತೇಳೂ ಕತೆಗಳನ್ನು ಓದಿದಾಗ ಅವುಗಳಲ್ಲಿ ಮೂರು ಮೂಲಲಕ್ಷಣಗಳನ್ನು ಗುರುತಿಸಬಹುದು:

(೧) ವಸುಧೇಂದ್ರರ ಕತೆಗಳಲ್ಲಿ ಬರುವ ಸಮಾಜಗಳು ಎರಡು ತರಹದವು . ಒಂದು ಸಾಂಪ್ರದಾಯಕ ಸಮಾಜ; ಮತ್ತೊಂದು ಆಧುನಿಕ ಸಮಾಜ. ಇವೆರಡೂ ಸಮಾಜಗಳಲ್ಲಿ ವಸುಧೇಂದ್ರರು ಗುರುತಿಸುವ ಸಾಮಾನ್ಯ ಅಂಶವೆಂದರೆ ನಿಷ್ಕರುಣಿಯಾದ ಸಮಾಜವ್ಯವಸ್ಥೆ. ಕತೆಯ ಹಿನ್ನೆಲೆ ಸಾಂಪ್ರದಾಯಕ ಸಮಾಜದ್ದೇ ಇರಲಿ ಅಥವಾ ಆಧುನಿಕ ಸಮಾಜದ್ದೇ ಇರಲಿ, ಈ ಸಮಾಜವ್ಯವಸ್ಥೆಯು ಎಷ್ಟು ನಿರ್ದಯದಿಂದ ಅಸಹಾಯಕರನ್ನು ಹೊಸಕಿ ಹಾಕುತ್ತದೆ ಎನ್ನುವದು ಇಲ್ಲಿಯ ಕತೆಗಳ ಒಂದು ಮೂಲ ಲಕ್ಷಣ.

(೨) ಸಾಂಪ್ರದಾಯಕ ಸಮಾಜದ ಇಂತಹ ವ್ಯವಸ್ಥೆಯಲ್ಲಿ ತೊಳಲಾಡುತ್ತಿರುವ ಅಸಹಾಯಕ ಜೀವಿಗಳಲ್ಲಿ ಉಳಿದಿರುವ ಮೌಲ್ಯನಿಷ್ಠೆಯ ಚಿತ್ರಣವು ಇಲ್ಲಿಯ ಕತೆಗಳ ಎರಡನೆಯ ಮೂಲಲಕ್ಷಣ.

(೩) ಮೂರನೆಯದಾಗಿ ಇಂತಹ ವ್ಯವಸ್ಥೆಯ ಯಲ್ಲಿ ಸಿಲುಕಿ ನಲುಗುತ್ತಿರುವ ಅಸಹಾಯಕ ಜೀವಿಗಳ ಬಗೆಗೆ ವಸುಧೇಂದ್ರರಿಗೆ ಇರುವ ಅನುಕಂಪ.

ಅಸಹಾಯಕರ ಕತೆಗಳನ್ನು ಬರೆದಿರುವವರಲ್ಲಿ ವಸುಧೇಂದ್ರರು ಮೊದಲಿಗರೇನೂ ಅಲ್ಲ. ಕನ್ನಡದ ಶ್ರೇಷ್ಠ ಕತೆಗಾರರಾದ ದೇವನೂರು ಮಹಾದೇವ ಸಹ feudal ಸಮಾಜವ್ಯವಸ್ಥೆಯಲ್ಲಿ ಸಿಲುಕಿ ನಲುಗುತ್ತಿರುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅವರ “ಮಾರಿಕೊಂಡವರು” ಕತೆ ವಿಶ್ವದ ಅತ್ಯುತ್ತಮ ಕತೆಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಈ ಕತೆ ಸಾಮಾಜಿಕ ವ್ಯವಸ್ಥೆ ನಿರ್ಮಿಸಿದ ಶೋಷಣೆಯನ್ನು ನಿರುದ್ವಿಗ್ನವಾಗಿ ಹೇಳುವ ಕತೆ. ಅಮರೇಶ ನುಗಡೋಣಿಯವರ ಕತೆಗಳನ್ನೂ ಸಹ ಇದೇ ವರ್ಗದಲ್ಲಿ ಸೇರಿಸಬಹುದು.
ಇನ್ನು ರಾಘವೇಂದ್ರ ಖಾಸನೀಸರು ಸಹ ತಮ್ಮ ಎಲ್ಲ ಕತೆಗಳಲ್ಲಿಯೂ ಅಸಹಾಯಕ ಜೀವಿಗಳನ್ನೇ ಮುಖ್ಯ ಪಾತ್ರಗಳನ್ನಾಗಿ ಮಾಡಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ವೈಯಕ್ತಿಕ ಅಥವಾ ಕೌಟಂಬಿಕ ಸಮಸ್ಯೆಯೇ ಅಸಹಾಯಕತೆಯ ಕಾರಣವಾಗಿದೆ. ಅವರ ಕತೆಗಳಲ್ಲಿ ಕಾಣುವದು ಕರುಣರಸವೇ ಹೊರತು ಸಹಾನುಭೂತಿಯಲ್ಲ.

ದೇವನೂರ ಮಹಾದೇವ, ಅಮರೇಶ ನುಗಡೋಣಿ ಹಾಗು ರಾಘವೇಂದ್ರ ಖಾಸನೀಸರ ಕತೆಗಳಿಗೂ ಮತ್ತು ವಸುಧೇಂದ್ರರ ಕತೆಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಸಮಾಜದ ವ್ಯವಸ್ಥೆಯಲ್ಲಿ ಬಲಿಪಶುಗಳಾದವರಿಗೆ ವಸುಧೇಂದ್ರರ ಹೃದಯದಲ್ಲಿ ಉಕ್ಕುತ್ತಿರುವ ಸಹಾನುಭೂತಿ; ಹೀಗಾಗಿ ಅವರ ಕತೆಗಳಲ್ಲಿ ಅನುಕಂಪವೇ ಪ್ರಧಾನ ರಸವಾಗುತ್ತದೆ.

ಈ ಮೇಲಿನ ಮೂರು ಕಥಾಸಂಕಲನಗಳಲ್ಲಿ, ವಸುಧೇಂದ್ರರು ಮೊದಲು ಒಂದು ಸಾಂಪ್ರದಾಯಕ ಸಮಾಜದ ಕತೆಯನ್ನು, ಆನಂತರ ಒಂದು ಆಧುನಿಕ ಸಮಾಜದ ಕತೆಯನ್ನು ಕೊಡುತ್ತಾ ಹೋಗಿದ್ದಾರೆ. ಈ ರೀತಿಯಾಗಿ ತಮ್ಮ ಸಂಕಲನಗಳಲ್ಲಿ ಒಂದು ರೀತಿಯ ಸಮತೋಲನವನ್ನು ಸಾಧಿಸಲು ಯತ್ನಿಸಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ಸಂಕಟಪಡುವ ಪಾತ್ರವೆಂದರೆ ಒಬ್ಬ ಅಸಹಾಯಕ ಹೆಣ್ಣು ಮಗಳು.

“ಮನೀಷೆ” ಕಥಾಸಂಕಲನದ ಮೊದಲ ಕಥೆಯಾದ “ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೊಳ್ರೋ” ಕತೆಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಒಂದು ಹಳೆಯ ಕಾಲಘಟ್ಟದ ಬ್ರಾಹ್ಮಣ ಸಮಾಜದ ಚಿತ್ರಣ ಇಲ್ಲಿದೆ.
ಮೈಗೆ ಅಲ್ಲಲ್ಲಿ ಬಿಳುಪು ಹತ್ತುತ್ತಿರುವ ತನ್ನ ಮಗನ ಭವಿಷ್ಯದ ಬಗೆಗೆ ಹೌಹಾರಿದ ವಿಧವೆಯ ಕತೆ ಇದು.
ಮಗನ ರೋಗಶಮನಕ್ಕಾಗಿ ಇವಳಿಗೆ ರಾಘವೇಂದ್ರಸ್ವಾಮಿಗಳ ಹರಕೆಯೇ ದಿವ್ಯೌಷಧ.

ನಡು ವಯಸ್ಸಿನಲ್ಲಿಯೆ ಗಂಡನನ್ನು ಕಳೆದುಕೊಂಡ ಬ್ರಾಹ್ಮಣ ಹೆಣ್ಣುಮಗಳೊಬ್ಬಳು ತನ್ನ ಹಾಗು ತನ್ನ ಚಿಕ್ಕ ಮಗನ ಹೊಟ್ಟೆ ತುಂಬಿಸಲು ಅಡುಗೆ ಕೆಲಸವನ್ನಲ್ಲದೆ ಬೇರಾವ ಕೆಲಸ ಮಾಡಬಲ್ಲಳು? ಇವಳಿಗೆ ಅಣ್ಣನೊಬ್ಬನಿದ್ದಾನೆ. ಆದರೆ ಎಲ್ಲ ಅಣ್ಣಂದಿರಂತೆ ಇವಳ ಅಣ್ಣನೂ ಸಹ ತನ್ನ ಹೆಂಡತಿಯ ಕೈಗೊಂಬೆ. ಅವನಿಗೆ ಇವಳ ಮೇಲೆ, ಇವಳ ಮಗನ ಮೇಲೆ ಕನಿಕರವಿರಬಹುದು. ಆದರೆ ಅದು ಪ್ರಯೋಜನಕ್ಕೆ ಬಾರದ ಕನಿಕರ. ಅಲ್ಲದೆ ಬ್ರಾಹ್ಮಣ ಸಮಾಜದ ಕ್ರೂರ ಕಟ್ಟಳೆಗಳು ಬೇರೆ. ಹೀಗಾಗಿ ಅವನೂ ಅಸಹಾಯಕ.

ಈ ಕತೆಯಲ್ಲಿಯ ಬ್ರಾಹ್ಮಣ ಸಮಾಜ ಕೊಳೆಯುತ್ತಿರುವ ಸಮಾಜವಲ್ಲ ; ಈಗಾಗಲೇ ಕೊಳೆತು ಹೋದ ಸಮಾಜ.
ಬಿಳುಪು ಕಾಣುತ್ತಿರುವ ತನ್ನ ಚಿಕ್ಕ ಮಗನಿಗೆ ಬ್ರಾಹ್ಮಣಸಮಾಜದಲ್ಲಿ acceptance ಕೊಡಿಸಲು ಈ ವಿಧವೆ ಸಂಕಟಪಡುತ್ತಿದ್ದಾಳೆ. ಮಠದ ಸ್ವಾಮಿಗಳ ಸಮಾರಂಭದಲ್ಲಿ, ತಾನು ಅಡುಗೆ ಮಾಡಿ, ತನ್ನ ಮಗನ ಕೈಯಿಂದ ನೀರು ಬಡಿಸಲು ಇವಳು ಶತಪ್ರಯತ್ನ ಮಾಡುತ್ತಾಳೆ. ಆದರೆ, ಕೊನೆಗೂ ಸ್ವಾಮಿಗಳ ಬಾಯಿಂದ ಛೀತ್ಕಾರ:
“ ದೇವರ ಪೂಜೆ ಮಾಡುವ ಈ ಕೈಗಳಿಗೆ, ಈ ತೊನ್ನು ಹತ್ತಿದವನ ಸ್ಪರ್ಷವೇ! ತೊಲಗಿಸಿರಿ ಇವನನ್ನು ಇಲ್ಲಿಂದ!”
ಬಹುಶ: ಈ ಮಾತನ್ನು ಈ ಕತೆಯ climax ಎನ್ನಬಹುದು.
(‘ದಯವೇ ಧರ್ಮದ ಮೂಲವಯ್ಯ’ ಎನ್ನುವ ಬಸವಣ್ಣನವರ ಮಾತು ಅಪ್ರಯತ್ನವಾಗಿ ಓದುಗನ ಮನಸ್ಸಿನಲ್ಲಿ ಆಗ ಸುಳಿಯದಿರದು.)

ಆದರೆ ಕತೆಯ ಹೆಚ್ಚುಗಾರಿಕೆ ಕೇವಲ ಈ climaxನಲ್ಲಿ ಮಾತ್ರವಿಲ್ಲ.
ಈ ಭರ್ತ್ಸನೆಯ ನಂತರವೂ ಆ ವಿಧವೆ ಎದೆಗುಂದುವದಿಲ್ಲ. ತನ್ನ ಮಗನ ಒಳಿತಿಗಾಗಿ ಅವಳ ಹೋರಾಟ ನಿಲ್ಲುವದಿಲ್ಲ.
ಕತೆಯ ಹೆಚ್ಚುಗಾರಿಕೆ ಇರುವದು ಇಂತಹ ಪರಾಭವದಲ್ಲೂ ಆ ವಿಧವೆ ತೋರಿಸುವ ಧೈರ್ಯದಲ್ಲಿದೆ. ಸಾಂಪ್ರದಾಯಕ ಸಮಾಜದ ಮೌಲ್ಯಗಳು ಒಬ್ಬ ಅಸಹಾಯಕ ವಿಧವೆಯಲ್ಲಿ ತುಂಬಬಹುದಾದ ಕೆಚ್ಚನ್ನು ತೋರಿಸುವದರಲ್ಲಿ ಈ ಕತೆಯ ಹೆಚ್ಚುಗಾರಿಕೆ ಇದೆ.

ಸಮಾಜದಿಂದ ಹಾಗೂ ತನ್ನ ಸ್ವಂತ ಗಂಡನಿಂದ ಅನ್ಯಾಯಕ್ಕೊಳಗಾಗಿಯೂ, ಕೆಚ್ಚಿನಿಂದ ಬದುಕು ಸಾಗಿಸಿದ ಹೆಣ್ಣು ಮಗಳ ಚಿತ್ರಣ ಸಿಗುವದು “ಚೇಳು” ಕತೆಯಲ್ಲಿ.
ತನ್ನ ಹೆಂಡತಿಗೆ ಮಕ್ಕಳಾಗಲೆಂದು ಭೈರವ ಬಾಬಾನ ಆಶೀರ್ವಾದ ಪಡೆಯಲು, ಮನಸ್ಸಿಲ್ಲದ ಹೆಂಡತಿಯನ್ನು ಕುರಿಯಂತೆ ನೂಕಿದ ಗಂಡ, ಬಾಬಾನ ಕಾಮಲೀಲೆಯನ್ನು ಕಂಡಾಗ, ಸಾರ್ವಜನಿಕವಾಗಿ ಹೆಂಡತಿಯ ಮಾನ ತೆಗೆಯಲು ಹೇಸುವದಿಲ್ಲ. ಅವಳ ತವರುಮನೆಯವರೂ ಸಹ ಈ ‘ಪತಿತೆ’ಯನ್ನು ತಿರಸ್ಕರಿಸುತ್ತಾರೆ. ಆದರೆ ಬಾಬಾ ತಾನು ಮಾಡಿದ ತಪ್ಪನ್ನು ಅರಿತು, ಈ ಅಸಹಾಯಕ ಹೆಣ್ಣು ಮಗಳಿಗೆ ಚೇಳಿನ ಮಂತ್ರವನ್ನು ಅನುಗ್ರಹಿಸಿ ಹೋಗುತ್ತಾನೆ. ಅವಳ ಬದುಕು ಈ ಚೇಳಿನ ಮಂತ್ರದ ಸಹಾಯದಿಂದ ಹೇಗೋ ಸಾಗುತ್ತಿರುತ್ತದೆ. ಆ ಸಮಯದಲ್ಲಿ ಆಧುನಿಕ ವೈಜ್ಞಾನಿಕ ಅನ್ವೇಷಣೆ ಅವಳ ಬದುಕಿಗೆ ಕುಠಾರವಾಗಿ ಬರುತ್ತದೆ. ಈ ಸಮಸ್ಯೆಗೆ ಅವಳು ಕಂಡುಕೊಳ್ಳುವ ಪರಿಹಾರವು ಅಸಹಾಯಕ ಜೀವಿಗಳು ಮೊರೆ ಹೋಗುವ ಏಕೈಕ ಮಾರ್ಗವಾಗಿದೆ. ಇಂತಹ ದುರಂತ ಕತೆಯನ್ನು ಸಹನೀಯವಾಗಿ ಮಾಡುವದು ವಸುಧೇಂದ್ರರ ವಿನೋದಪೂರ್ಣ ಶೈಲಿ.

ವಸುಧೇಂದ್ರರು ಬರೆದ ಇಂತಹ ಸಾಂಪ್ರದಾಯಿಕ ಸಮಾಜದ ಕತೆಗಳಲ್ಲಿಯೇ ಶ್ರೇಷ್ಠವಾದದ್ದು ‘ಚೇಳು’ ಕಥಾಸಂಕಲನದಲ್ಲಿಯ ಕತೆ: “ ಹೊಟ್ಟೆಯೊಳಗಿನ ಗುಟ್ಟು”.

ವಿಧವೆಯೊಬ್ಬಳು ಬ್ರಾಹ್ಮಣ ಕುಟುಂಬವೊಂದರಲ್ಲಿ ಮನೆಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದಾಳೆ. ದೀರ್ಘ ಕಾಲದ ನಂತರ ಅವಳ ಯಜಮಾನಿಯೂ ಸಹ ವಿಧವೆಯಾಗಿದ್ದಾಳೆ. ಇದಿಷ್ಟು ಕತೆಯಲ್ಲಿ ಬರೆಯದೆ ಇದ್ದ ಹಿನ್ನೆಲೆ.
ಇದೀಗ, ಯಜಮಾನಿಯ ಶ್ರಾದ್ಧದ ಕೊನೆಯ ವಿಧಿಯಾದ ಕಾಕಪಿಂಡದಿಂದ ಕತೆ ಪ್ರಾರಂಭವಾಗುತ್ತದೆ.

ನಗರದಲ್ಲಿ ವಾಸಿಸುತ್ತಿರುವ ಅವಳ ಮಗ ಶ್ರಾದ್ಧಕರ್ಮಕ್ಕಾಗಿ ಮನೆಗೆ ಬಂದಿದ್ದಾನೆ. ಕಾಕಪಿಂಡ ಆಗುತ್ತಿಲ್ಲ.
ಅಲ್ಲಿರುವ ಸಂಬಂಧಿಕರೆಲ್ಲರೂ ಪ್ರಯತ್ನಿಸುತ್ತಾರೆ. ಆದರೂ ಕಾಕಪಿಂಡ ಆಗುವದಿಲ್ಲ.
ಕೊನೆಗೊಮ್ಮೆ ಈ ಮನೆಕೆಲಸದ ಮುದಿ ವಿಧವೆಯಿಂದ ಕಾಕಪಿಂಡ ಆಗುತ್ತದೆ.
ಅವಳು ತನ್ನ ಯಜಮಾನಿಯ ಪಿಂಡಕ್ಕೆ ಹೇಳಿದ್ದೇನು?
ಅದು ಕತೆಯ ಮುಕ್ತಾಯದಲ್ಲಿಯೂ ಗುಟ್ಟಾಗಿಯೇ ಉಳಿಯುತ್ತದೆ.

ಈ ಕತೆಯಲ್ಲಿ, ಈ ಮನೆಗೆಲಸದ ವಿಧವೆಯ ಸಂಕಷ್ಟಗಳ ಬಗೆಗೆ ಎಲ್ಲಿಯೂ ಪ್ರತ್ಯಕ್ಷವಾಗಿ ಹೇಳಿಲ್ಲ. ಆದರೆ ಓರ್ವ ಅಸಹಾಯಕ ವಿಧವೆಯನ್ನು ಅವಳ ಆಶ್ರಯದಾತರು ಹಾಗೂ ಸಮಾಜ ಯಾವ ರೀತಿಯಲ್ಲಿ ಶೋಷಿಸಿರಬಹುದು, ಅವಳ ತಾಪಗಳಿಗೆ ಅವರು ಎಷ್ಟರ ಮಟ್ಟಿಗೆ insensitive ಆಗಿರಬಹುದು ಎನ್ನುವ ಕಲ್ಪನೆ ಓದುಗನ ಚಿತ್ತದಲ್ಲಿ ಕ್ಷಣಮಾತ್ರಕ್ಕೆ ಮಿಂಚುತ್ತದೆ. ಇಷ್ಟಾಗಿಯೂ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಶೋಷಿತಳಾದ ಆ ಮುದಿ ವಿಧವೆಯ ಹೃದಯದಲ್ಲಿ ಮಿಣುಕುತ್ತಿರುವ ಸಾಂಪ್ರದಾಯಕ ಮೌಲ್ಯಗಳನ್ನು ತೋರಿಸುವದೇ ವಸುಧೇಂದ್ರರ ಮುಖ್ಯ ಗುರಿಯಾಗಿದೆ.

ಅಸಹಾಯಕತೆಯ ಪರಮಾವಧಿಯನ್ನು ನೋಡಬೇಕಾದರೆ , “ ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ ” ಕತೆಯನ್ನು ಓದಬೇಕು. ಈ ಕತೆಯಲ್ಲಿ ಮನೆಯ ಯಜಮಾನ ಮಾನಸಿಕವಾಗಿ ಅತ್ಯಂತ ಬಲಹೀನ ಮನುಷ್ಯ. ಆತನ ಕುಟುಂಬಕ್ಕೆ ಅವನ ಹೆಂಡತಿಯೇ ಧೈರ್ಯದ ಆಧಾರ. ಆದರೆ, ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅವರಲ್ಲಿ ಇಲ್ಲ. ಆದರೆ ಶೋಷಣೆಗೆ ಒಳಗಾಗಿಯೂ, ಗಂಡನಲ್ಲಿ ಹಾಗು ಮಕ್ಕಳಲ್ಲಿ ಧೈರ್ಯವನ್ನು ತುಂಬುವವಳು, ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುವವಳು ಹೆಂಡತಿಯೇ.

ಸಾಂಪ್ರದಾಯಕ ಸಮಾಜದಲ್ಲಿಯ ಅಸಹಾಯಕ ಹೆಣ್ಣುಮಗಳ ಶ್ರೇಷ್ಠ ಕತೆ ಎಂದರೆ “ಸೀಳು ಲೋಟ”. ಈ ಕತೆ ಇಲ್ಲಿ ತೋರಿಸಿದ ಮೂರು ಸಂಕಲನಗಳಲ್ಲಿ ಇಲ್ಲ. ಇದನ್ನು ಓದಬಯಸುವವರು ದಯವಿಟ್ಟು
ಇಲ್ಲಿನೋಡಿರಿ.
ಈ ಕತೆಯಲ್ಲಿಯೂ ಸಹ ಬಲಹೀನ ಗಂಡ, ಅಸಹಾಯಕ ಅಣ್ಣ ಹಾಗು ನೆರೆಹೊರೆಯವರ ಔದಾರ್ಯದ ಮೇಲೆ ಬದುಕು ಸಾಗಿಸಬೇಕಾದಂತಹ ಹೆಂಗಸಿನ ಕತೆ ಇದು.

ಇಷ್ಟೆಲ್ಲ ಕಾರ್ಪಣ್ಯಗಳ ನಡುವೆಯೂ ಆಕೆ ಸಾಂಪ್ರದಾಯಿಕ ಸಮಾಜ ನೀಡಿದ ಸಂಸ್ಕಾರದ ಮೌಲ್ಯಗಳನ್ನು ಬಿಟ್ಟಿಲ್ಲ. ಕತೆಯ ಕೊನೆಕೊನೆಯಲ್ಲಿ ಅವಳು ತನ್ನ ಮಗನಿಂದ ಆಣೆ ಹಾಕಿಸಿಕೊಳ್ಳುವ ಭಾಗವು ಕತೆಯ ಪರಾಕಾಷ್ಠೆ ಎನ್ನಬಹುದು.
ಫ್ರಾನ್ಸ್ ದೇಶದ ಕತೆಗಾರ ಮೊಪಾಸಾನ ಕತೆಗಳನ್ನು ನೆನಪಿಸುವ ಈ ಕತೆ ಕನ್ನಡದ ಒಂದು ಶ್ರೇಷ್ಠ ಕತೆಯಾಗಿದೆ.

ಈ ಎಲ್ಲ ಕತೆಗಳಲ್ಲಿಬರುವ ಹೆಣ್ಣುಮಕ್ಕಳು ಸಮಾಜದ ನೀತಿಯನ್ನು ಒಪ್ಪಿಕೊಂಡಂತಹ ಸಾಮಾನ್ಯ ಜೀವಿಗಳು. ಸಮಾಜದ ವಿಧಿಗಳನ್ನು ದಾಟದಯೇ, ಕೆಚ್ಚಿನಿಂದ ಬದುಕು ಮಾಡಿದವರು. ಸ್ವತಃ ಶೋಷಣೆಗೆ ಒಳಗಾಗಿದ್ದರೂ, ಮಾನವೀಯತೆಯನ್ನು ಮರೆತವರಲ್ಲ. ಅರ್ಥಾತ್, ಇವಳು ಸಾಮಾನ್ಯ ಭಾರತೀಯ ಹೆಣ್ಣು ಮಗಳು. ತನ್ನ ದುಗುಡ ದುಮ್ಮಾನಗಳು ಏನೇ ಇರಲಿ, ಸಂಪ್ರದಾಯವು ತನಗೆ ಚಿಕ್ಕಂದಿನಿಂದ ಕಲಿಸಿದ ಮೌಲ್ಯಗಳನ್ನು ಬಾಳಿನಲ್ಲಿ ಅರಗಿಸಿಕೊಂಡ ಭಾರತೀಯ ಹೆಣ್ಣುಮಗಳು.

ವಸುಧೇಂದ್ರರು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳನ್ನೂ ಸಹ ಕೊಟ್ಟಿದ್ದಾರೆ. “ ಕ್ಷಿತಿಜ ಹಿಡಿಯ ಹೊರಟವರಾರು, ಹೆಡ್ ಹಂಟರ, ಕಣ್ತೆರದು ನೋಡಲ್ಲಿ ಗೆದ್ದಲು ಮರ ಕೆಡವಲಿದೆ, ಗುಳ್ಳೆ ” ಮುಂತಾದವು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳು. ಆಧುನಿಕ ಸಮಾಜದ ಆರ್ಥಿಕ ಆಸೆಬುರುಕತನ ಈ ಎಲ್ಲ ಕತೆಗಳಿಗೆ ಹಿನ್ನೆಲೆಯಾಗಿದೆ.

ಇವಲ್ಲದೆ, ಮತ್ತೊಂದು ವರ್ಗದ ಅಸಹಾಯಕ ಜೀವಿಗಳ ಕತೆಯೂ ಇಲ್ಲಿವೆ. ಸಮಾಜದ ಚೌಕಟ್ಟಿಗೆ ಸಂಬಂಧವಿರದೆ, ತನ್ನೊಳಗಿನ ವೈಯಕ್ತಿಕ ಅಥವಾ ಆರ್ಥಿಕ ಕಾರಣದಿಂದಾಗಿ ಕಷ್ಟಪಡುತ್ತಿರುವ ಅಸಹಾಯಕ ಜೀವಿಗಳ ಕತೆಗಳಿವು.

“ ಅಪಸ್ವರದಲ್ಲೊಂದು ಆರ್ತನಾದ ” ಕತೆಯಲ್ಲಿ ಮನೆಯ ಪರಿಸ್ಥಿತಿಯಿಂದಾಗಿ, ಮದುವೆಯಾಗದೇ ಇರುವ ಒಬ್ಬಳು ಹುಡುಗಿ ಹಾಗೂ ಅವಳ ವಿಧವೆ ಅಮ್ಮನ ತೊಳಲಾಟಗಳ ಚಿತ್ರಣವಿದೆ.
“ ಅನಘ ” ಕತೆಯಲ್ಲಿ ಹಳ್ಳಿಯಲ್ಲಿರುವ transvestite ಹುಡುಗನೊಬ್ಬನ ಸಮಸ್ಯೆಯ ಚಿತ್ರಣವಿದೆ. ಈ ಕತೆಯಲ್ಲಿ ಹುಡುಗನ ಬಲಹೀನತೆ ಹಾಗು ಅವನ ಅಪ್ಪನ ಪೌರುಷಗಳಿಗೆ ಮುಖಾಮುಖಿಯಾಗಿ ನಿಲ್ಲುವದು ಸೂಳೆಯೊಬ್ಬಳಲ್ಲಿ ಮಿನಗುತ್ತಿರುವ ಮಾನವೀಯತೆ.
“ಯುಗಾದಿ” ಕತೆಯಲ್ಲಿ ಬದಲಾದ ಸಾಮಾಜಿಕ ಮೌಲ್ಯಗಳಿಂದಾಗಿ ಒದ್ದಾಡುತ್ತಿರುವ ಹಿರಿಯ ಜೀವಿಯೊಬ್ಬನ ಅಸಹಾಯಕತೆಯ ಚಿತ್ರಣವಿದೆ. ಇಲ್ಲಿಯೂ ಸಹ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ವ್ಯಕ್ತಿಗಳು ಉಳಿಸಿಕೊಂಡು ಬಂದಿರುವ ಸಾಂಪ್ರದಾಯಕ ಮೌಲ್ಯಗಳೇ ಕತೆಯ ತಿರುಳಾಗಿವೆ.

ಹಾಗಾದರೆ, ವಸುಧೇಂದ್ರರ ಕತೆಗಳು ಕೇವಲ ಅಸಹಾಯಕರ ಕತೆಗಳೇ ಎನ್ನುವ ಸಂದೇಹ ಬರಬಹುದು.
ನಿಜ ಹೇಳಬೇಕೆಂದರೆ, ವಸುಧೇಂದ್ರರ ಕತೆಗಳು ಮೌಲ್ಯವನ್ನು ಹುಡುಕುತ್ತಿರುವ ಕತೆಗಳು.
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಹೀನರಾದವರಲ್ಲಿಯೇ ಅಂದರೆ ಶೋಷಣೆಗೆ ಒಳಗಾದವರಲ್ಲಿಯೇ ಈ ಮೌಲ್ಯಗಳು ಉಳಿದುಕೊಂಡಿರುವದು ಈ ಕತೆಗಳಲ್ಲಿಯ ವೈಶಿಷ್ಟ್ಯ.

ವಸುಧೇಂದ್ರರು ಮೌಲ್ಯಗಳನ್ನು ಹುಡುಕಲು ಬಲಹೀನರನ್ನೇ ಆರಿಸಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಯೂ ಬರಬಹುದು. ಆದರೆ ಇದು ಕೇವಲ ಸಾಂದರ್ಭಿಕ. ವಸುಧೇಂದ್ರರರದು ಸೂಕ್ಷ್ಮ ಸಂವೇದನಾ ಮನಸ್ಸು. ಎಲ್ಲೇ ಸಂತಾಪ ಕಾಣಲಿ, ಅವರ ಮನ ಮಿಡಿಯುತ್ತದೆ. ಅದರ ಫಲವೇ ಈ ಕತೆಗಳು.

ವಸುಧೇಂದ್ರರ ಕತೆಗಳು ಅವರ ಆಪ್ತ ಪರಿಸರದಿಂದ ಹೊಮ್ಮಿವೆ. ಸಾಂಪ್ರದಾಯಕ ಸಮಾಜದ ಕತೆಗಳೆಲ್ಲ ಸಂಡೂರಿನ ಸುತ್ತಮುತ್ತಲಿನ ಕತೆಗಳು. ಇಲ್ಲಿಯ ಪರಿಸರವನ್ನು ವಿನೋದಪೂರ್ಣವಾಗಿ ಕಟ್ಟಿಕೊಡುವದರಲ್ಲಿ ವಸುಧೇಂದ್ರರು ಯಶಸ್ವಿಯಾಗಿದ್ದಾರೆ. ಈ ಕತೆಗಳು ಸಾಂಪ್ರದಾಯಕ ಸಮಾಜದ ಕೊಳಕನ್ನು ತೋರಿಸುವಂತೆಯೇ, ಆ ಸಮಾಜವು ನೀಡಿದ ಮೌಲ್ಯಗಳನ್ನೂ ತೋರಿಸುತ್ತವೆ.
ಆಧುನಿಕ ಸಮಾಜದ ಕತೆಗಳೆಲ್ಲ ಬೆಂಗಳೂರು ನಗರದ ಕತೆಗಳು. ದುಡ್ಡೇ ದೊಡ್ಡಪ್ಪ ಎನ್ನುವದೇ ಇಲ್ಲಿಯ ಮೌಲ್ಯ.
ತೆಳುವಿನೋದದ ತಿಳಿಲೇಪನವಿರುವದರಿಂದ ವಸುಧೇಂದ್ರರ ಕತೆಗಳಲ್ಲಿಯ ಸಂಕಟವು ಸಹನೀಯವಾಗಿದೆ.