ಮಂಜುನಾಥ ಕೊಳ್ಳೇಗಾಲರು ತಮ್ಮ ಲೇಖನದಲ್ಲಿ (http://nannabaraha.blogspot.in/2017/02/blog-post.html) ತುಂಬ ತರ್ಕಬದ್ಧವಾಗಿ ಹಾಗು ಅಷ್ಟೇ ಸರಳವಾಗಿ ವಿಷಯವನ್ನು ವಿಶ್ಲೇಷಿಸಿದ್ದಾರೆ. ಅಭಿನಂದನೆಗಳು ಹಾಗು ಧನ್ಯವಾದಗಳು. ಆದರೆ, ಅವರು ಮಾಡಿದಂತಹ ಎರಡು ಪೂರ್ವಗ್ರಹಿಕೆಗಳನ್ನು ಇಲ್ಲಿ ಪರೀಕ್ಷಿಸುವುದು ಒಳಿತು ಎಂದು ನನ್ನ ಭಾವನೆ:
(೧) "ಇಂಗ್ಲಿಷಿನ A ಅಕ್ಷರವು
ಸುಮಾರಾಗಿ ಅಕಾರಕ್ಕೆ ಯವೊತ್ತನ್ನು ಕೊಟ್ಟಂತೆ ಕೇಳುತ್ತದೆಯೇ ಹೊರತು ಅದು ಅದೇ ಅಲ್ಲ -
ಅ/ಆಕಾರದ್ದೇ ಮತ್ತೊಂದು ಪ್ರಭೇದವಷ್ಟೇ - ಆ ಎನ್ನುವ ಸ್ವರವೇ ಸ್ವಸ್ಥಾನದಿಂದ ಸ್ವಲ್ಪ ಮೇಲಿನ
ಜಾಗೆಯಿಂದ ಹೊರಡುತ್ತದೆ, ಮತ್ತು ಅದನ್ನುಚ್ಚರಿಸುವಾಗ ಎಂದುಚ್ಚರಿಸುವಾಗ
ನಾಲಿಗೆಗೂ ಬಾಯಿಯ ಮೇಲ್ಗೋಡೆಗೂ ನಡುವಿರುವ ಅವಕಾಶ ಸ್ವಲ್ಪ ಕಿರಿದಾಗಿ ಚಪ್ಪಟೆಯಾಗುತ್ತದೆ.
"A = ಅ (ಅರ್ಧ) + ಯಾ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ. ’ಸುಧಾರಣಾ’ವಾದಿಗಳು ಸಾವಿರ ಹೇಳುತ್ತಾರೆ, ಆದರೆ ಅವರ ಕಿವಿಗಳು ಮಂದವಾಗಿದೆಯೆನ್ನದೇ ಬೇರೆ ವಿಧಿಯಿಲ್ಲ."
ಈ ಸಂದರ್ಭದಲ್ಲಿ ನನಗೆ ಶಂಕರ ಭಟ್ಟರು ತಮ್ಮದೊಂದು ಪುಸ್ತಕದಲ್ಲಿ ಹೇಳಿದ
ಮಾತು ನೆನಪಿಗೆ ಬರುತ್ತದೆ: “ಉತ್ತರ ಕರ್ನಾಟಕದಲ್ಲಿ ಜನರು ‘ಮುಕ್ಯ ಮಂತ್ರಿ’ ಎಂದೇ ಅನ್ನುತ್ತಾರೆ.
ಆದರೆ ತಾವು ಮುಖ್ಯ ಮಂತ್ರಿ ಎಂದು ಅನ್ನುತ್ತಿದ್ದೇವೆ ಎಂದು ಭಾವಿಸುತ್ತಾರೆ.” ( ಅವರ ನಿಖರವಾದ ಪದಗಳಲ್ಲ.
ಅದರ ಭಾವವನ್ನು ಹೇಳುತ್ತಿದ್ದೇನೆ.)
ಇದೀಗ ಮಂಜುನಾಥರೂ ಸಹ "ಸುಧಾರಣಾವಾದಿಗಳು ಸಾವಿರ ಹೇಳುತ್ತಾರೆ, ಆದರೆ ಅವರ ಕಿವಿಗಳು
ಮಂದವಾಗಿದೆಯೆನ್ನದೇ ಬೇರೆ ವಿಧಿಯಿಲ್ಲ.” ಎನ್ನುವ ಆವೇಶದ ದೋಷಾರೋಪಣೆಯನ್ನು ಮಾಡುತ್ತಿದ್ದಾರೆ. Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು
ಕೊಟ್ಟಾಗ (ಆ್ಯ) ಇರುವಂತೆಯೇ
ಇರುತ್ತದೆ ಎಂದು ಮಂದಕಿವಿಯ ನಾವ್ಯಾರೂ ಹೇಳುತ್ತಿಲ್ಲ. ಆದರೆ ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ
ಹೇಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಈ ಭೂಮಂಡಲದ ಮೇಲೆ ಎಷ್ಟು ಮಾನವರಿದ್ದಾರೊ, ಅಷ್ಟೇ ಉಚ್ಚಾರಪ್ರಭೇದಗಳಿವೆ. ಆದುದರಿಂದ ಯಾವುದು ಗ್ರಾಹ್ಯ ಯಾವುದು ಅಗ್ರಾಹ್ಯ ಎನ್ನುವುದನ್ನು
ನಾವು ಸಮಾಧಾನದಿಂದ ಲೆಕ್ಕಿಸುವುದು ಒಳಿತು.
(೨) ."ಅದೇ ತರ್ಕದಲ್ಲಿ Apple ಪದವನ್ನು ಯಾಪಲ್ ಎಂದು ಬರೆಯಬಹುದು (ಸರಿಯಾದ
ಉಚ್ಚಾರಣೆಯಲ್ಲ, ಆದರೆ ಮೂಲಕ್ಕೆ ಹತ್ತಿರದ್ದು), ಅಥವಾ ಅದು ತೀರ ದೂರವೆನಿಸಿದರೆ ಸುಮ್ಮನೇ ಆಪಲ್ ಎಂದರೂ ಆಯಿತು.” ಎಂದು ಮಂಜುನಾಥರು ಹೇಳುತ್ತಾರೆ. ನಾನಾದರೂ ಸಹ ಅದೇ ತರ್ಕವನ್ನು ಬಳಸಿ ‘ಆ’ ಸ್ವರಕ್ಕೆ ‘ಯ’ದ ಒತ್ತು ಕೊಡಬೇಕು
"(ಆ್ಯ)". ಏಕೆಂದರೆ
ಅದೇ ಅತಿ ಹತ್ತಿರದ ಉಚ್ಚಾರ ಎಂದು ಹೇಳುತ್ತಿರುವುದು. ಅವರು ಹೇಳಿದಂತೆ, ‘ಯಾಪಲ್’ ಎಂದು ಬರೆದರೆ,
ಈ ಪದದ ಉಚ್ಚಾರವು yaple ಎಂದು ಆಗುವುದು!
(೩) “ಈ ಉಚ್ಚಾರಣೆಯನ್ನು ಕನ್ನಡದಲ್ಲಿ ತೋರಿಸುವ ಅಗತ್ಯವಿದೆಯೇ
ಎಂಬುದನ್ನು ಅನಂತರ ನೋಡೋಣ”.
ಏಕಿಲ್ಲ? ನಮ್ಮ ಪೂರ್ವಜರ ಪರಿಶ್ರಮ
ಹಾಗು ಜಾಣತನದಿಂದಾಗಿ ಕನ್ನಡಕ್ಕೆ ಅನೇಕ ಧ್ವನಿಸಂಕೇತಗಳು ಲಭ್ಯವಾಗಿವೆ. ಅವರ ಪ್ರಯತ್ನವನ್ನು ನಾವು
ಸ್ವಲ್ಪವಾದರೂ ಮುಂದುವರಿಸಿ, ಲಿಪಿವರ್ಧನೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಸರಿಯೊ ಅಥವಾ
ಇದ್ದ ಸಂಕೇತಗಳನ್ನು ಕತ್ತರಿಸಿ ಹಾಕಿ ನಮ್ಮ ದಡ್ಡ ಗೋಣನ್ನು ಮೇಲೆತ್ತುವುದು ಸರಿಯೊ? ಈ ಮಾತನ್ನು ಹೇಳಿದಾಕ್ಷಣ,
ಕೆಲವು ‘ಜಾಯಮಾನವಾದಿ’ಗಳು, ‘ಇದು ಕನ್ನಡದ ಜಾಯಮಾನವಲ್ಲ’ ಎಂದು ಬೊಬ್ಬೆ ಇಕ್ಕುತ್ತಾರೆ. ಅವರಿಗೆ ಅನೇಕ
ಸಲ ನಾನು ಈ ಪ್ರಶ್ನೆಯನ್ನು ಕೇಳಿದ್ದೇನೆ: ‘ಎಲೈ ಜಾಯಮಾನವಾದಿಗಳೆ, ಒಂದು ಕಾಲದಲ್ಲಿ ನಮ್ಮ ಪೂರ್ವಜರು, ಟೊಂಕಕ್ಕೊಂದು
ಲಂಗೋಟಿಯೂ ಸಹ ಇಲ್ಲದೆ, ಸಣ್ಣಪುಟ್ಟ ಜೀವಿಗಳನ್ನು ಬೇಟೆಯಾಡುತ್ತ, ಹಸಿಮಾಂಸವನ್ನು ತಿನ್ನುತ್ತ ಬದುಕುತ್ತಿದ್ದರು.
ನಾವು ಕಾಲಮಾನಕ್ಕೆ ತಕ್ಕಂತೆ ಸುಧಾರಿಸಿಲ್ಲವೆ? ಭಾಷೆಗೆ ಮಾತ್ರ ಜಾಯಮಾನದ ನೆಪವೆ?’
ಯಾವುದೇ ಭಾಷೆಯ ಪದಗಳ ಸರಿಯಾದ
ಉಚ್ಚಾರವನ್ನು ಮಾಡಲು ಹಾಗು ಬರೆಯಲು ಕನ್ನಡದಲ್ಲಿ ಅತಿ ಹೆಚ್ಚಿನ ಸಾಧ್ಯತೆಗಳಿವೆ. ನಾಗರೀ ಲಿಪಿಯ ಭಾಷೆಗಳಲ್ಲಿ
ಇದು ಸಾಧ್ಯವಿಲ್ಲ . ನಾವು ಸಂಸ್ಕೃತವನ್ನು ಗೌರವಿಸೋಣ. ಆದರೆ ನಾಗರಿ ಲಿಪಿಯ ಅಸಮರ್ಪಕತೆಯನ್ನು ಅಳವಡಿಸಿಕೊಳ್ಳುವುದು
ಬೇಡ. ಏಕೆಂದರೆ ದೇವನಾಗರಿ
ಲಿಪಿ ಇದೆಯಲ್ಲ, ಇದು inadequate ಲಿಪಿ.
ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ
ಅನ್ವಯಿಸಬಾರದು. ಈಗ ನೋಡಿ, ಸಂಸ್ಕೃತದಲ್ಲಿ ‘ಎ’ಕಾರ ಹಾಗು ‘ಏ’ಕಾರಕ್ಕೆ ಒಂದೇ ಸಂಕೇತವಿದೆ. ಇದರ ಪರಿಣಾಮವೆಂದರೆ ‘ಐ’ಕಾರವನ್ನು ಬರೆಯಲು ಅವರಿಗೆ ಸಾಧ್ಯವಾಗುತ್ತದೆಯೇ ಹೊರತು ‘ಆ’ಕ್ಕೆ ‘ಇ’ದ ಒತ್ತು ಕೊಡಲು ಸಾಧ್ಯವಾಗುವುದಿಲ್ಲ. ಇದರ ವಿವರಣೆ ಹೀಗಿದೆ:
च (ಚ )ಕಾರದ ಮೇಲ್ಕಟ್ಟಿನಲ್ಲಿ ಒಂದು ಮೇಲ್-ಗೆರೆ ಎಳೆದಾಗ चे (ಚೆ) ಆಗುತ್ತದೆ. ಎರಡು ಗೆರೆ ಎಳೆದಾಗ चै (ಚೈ) ಆಗುತ್ತದೆ. ಇದೇ ತತ್ವವನ್ನು ಅನುಸರಿಸಿ, चा (ಚಾ) ಕಾರದ ಮೇಲೆ ಎರಡು ಗೆರೆ ಎಳೆದಾಗ ಅದು chaai ಆಗಲಾದರು. ಏಕೆಂದರೆ ಅದು चौ (ಚೌ) ಆಗುತ್ತದೆ. ‘ಆ’ ಎನ್ನುವ ಸ್ವರಕ್ಕೆ ‘ಇ’ಸ್ವರವನ್ನು ಕೂಡಿಸಲು ಈ ಕಾರಣದಿಂದ ನಾಗರಿ ಲಿಪಿಯಲ್ಲಿ ಸಾಧ್ಯವೇ ಇಲ್ಲ. ಇದರಂತೆ ನಾಗರಿ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ನಾಗರಿ ಲಿಪಿಯಲ್ಲಿ ಒತ್ತಿನ ಸಂಕೇತವು ಪೂರ್ವಾಕ್ಷರದ ಮುಂದೆ ಬರುತ್ತದೆ. ಕನ್ನಡದಲ್ಲಿ ಇದು ಪೂರ್ವಾಕ್ಷರದ ಕೆಳಗೆ ಬರುತ್ತದೆ. ಆದುದರಿಂದ ಇದು ಕನ್ನಡದಲ್ಲಿ ಸಾಧ್ಯವಿದೆ. ಸಂಸ್ಕೃತ (ನಾಗರೀ) ಲಿಪಿಯು ಅಪರಿಪೂರ್ಣ, inadequate ಲಿಪಿ ಎನ್ನುವುದು ಈ ಎಲ್ಲ ಕಾರಣಗಳಿಂದ ಪ್ರತ್ಯಕ್ಷ ಅನುಭವಕ್ಕೆ ಬರುತ್ತದೆ. ಆದರೆ ಕನ್ನಡ ಲಿಪಿಯು ನಾಗರಿ ಲಿಪಿಗಿಂತ ಮೇಲ್ತರಗತಿಯದ್ದಾಗಿದೆ. ಆದುದರಿಂದ ಸೂಕ್ಷ್ಮ ಸ್ವರಭೇದವನ್ನು ಸಂಕೇತಿಸಲು ಕನ್ನಡ ಲಿಪಿಯಲ್ಲಿ ಸಾಧ್ಯವಿದೆ.
ಸಂಸ್ಕೃತದ ಮೋಹಕ್ಕೆ ಒಳಗಾದ ನಮ್ಮ ವೈಯಾಕರಣಿಗಳು ಸಂಸ್ಕೃತ (ನಾಗರೀ) ಲಿಪಿಯಲ್ಲಿ ಯಾವುದು ಸಾಧ್ಯವಿಲ್ಲವೋ ಅದು ಕನ್ನಡದಲ್ಲಿ ‘ಅಸಾಧು, ಅವ್ಯಾಕರಣ’ ಎಂದು ಹೇಳುತ್ತಾರೆ. ಇದನ್ನು ಒಂದು ದೃಷ್ಟಾಂತದಿಂದ ವಿವರಿಸಬಹುದು: ಒಬ್ಬ ಗುರುವಿನ ಒಂದು ಕಾಲು ಕುಂಟಾಗಿತ್ತು. ಆತ ಒಂದೇ ಕಾಲಿನ ಮೇಲೆ ಕುಂಟುತ್ತ ಸಾಗುವ ‘ಅಪೂರ್ವ ಸಾಧನೆ’ ಮಾಡಿದ್ದ. ಆತನ ಶಿಷ್ಯರಿಗೆ ಆರೋಗ್ಯಪೂರ್ಣವಾದ ಎರಡು ಕಾಲುಗಳು ಇದ್ದರೂ ಸಹ ಒಂದು ಕಾಲಿನಿಂದ ಕುಂಟುತ್ತ ಹೋಗುವುದೇ ಸರಿಯಾದದ್ದು ಎಂದು ತಿಳಿದು , ಕುಂಟುತ್ತ ನಡೆಯುತ್ತಿದ್ದಾರೆ. ಮಹನೀಯರೆ, ಸಂಸ್ಕೃತ ಲಿಪಿ ‘ಕುಂಟು ಲಿಪಿ’; ಕನ್ನಡ ಲಿಪಿ ಆರೋಗ್ಯಪೂರ್ಣ ಲಿಪಿಯಾಗಿದೆ. ನಾವು ಸಂಸ್ಕೃತದ ‘ಕುಂಟಾನುಕರಣೆ’ಯನ್ನು ನಮ್ಮ ವ್ಯಾಕರಣದಲ್ಲಿ ತರುವುದು ಬೇಡ. ಅಷ್ಟೇ ಅಲ್ಲ, ಹೆಚ್ಚಿನ ಧ್ವನಿಸಂಕೇತಗಳು ಅವಶ್ಯವಿದ್ದಲ್ಲಿ ಕನ್ನಡ ಲಿಪಿಗೆ ಅವುಗಳನ್ನೂ ಸೇರಿಸಿ, ಕನ್ನಡ ಲಿಪಿಯನ್ನು ಇನ್ನಿಷ್ಟು ಬೆಳೆಸುವ ಪ್ರಯತ್ನ ಮಾಡೋಣ.
(೪)”ಸ್ವರಕ್ಕೆ ಸ್ವತಂತ್ರ ಅಸ್ತಿತ್ವವಿದೆ (ಎಂದರೆ
ಉಚ್ಚಾರಣೆಯಲ್ಲಿ ಅದು ಸ್ವತಂತ್ರವಾಗಿ ತನ್ನಿಂತಾನೇ ಪ್ರಕಟಗೊಳ್ಳುತ್ತದೆ), ಆದರೆ ವ್ಯಂಜನಕ್ಕೆ ಇರುವುದು ಕೇವಲ ಸಾಂಕೇತಿಕ ಅಸ್ತಿತ್ವ
ಮಾತ್ರ”. ಎನ್ನುವುದು ಮಂಜುನಾಥರ ಸರಿಯಾದ ಹೇಳಿಕೆಯೇ ಆಗಿದೆ. ಅವರು ಹೇಳುವುದು ನೂರಕ್ಕೆ ನೂರರಷ್ಟು ಸರಿ. ಆದರೆ, ಮಾನವನು ನುಡಿಯಲು ಪ್ರಾರಂಭಿಸಿದಾಗ, ಆತನು ಪೂರ್ಣಾಕ್ಷರಗಳಲ್ಲಿಯೇ
ನುಡಿಯುತ್ತಿದ್ದ. ಒಂದು ಕಾಲ್ಪನಿಕ ಉದಾಹರಣೆಯನ್ನು ಹೇಳುತ್ತೇನೆ:
ಹುಲಿಯನ್ನು ಮೊದಲ ಸಲ ಕಂಡಾಗ ಆತನು ‘ಹು’ ಎನ್ನುವ ಹಾಗು
‘ಲಿ’ಯನ್ನುವ ಪದಗಳನ್ನು ಉಚ್ಚರಿಸಿದನಷ್ಟೇ. ಆ ಸಮಯದಲ್ಲಿ ಆತನಿಗೆ ‘ಹ್+ಉ’ ಕೂಡಿ ‘ಹು’ ಆಗುತ್ತದೆ
ಎನ್ನುವ ಜ್ಞಾನವಿರಲಿಲ್ಲ. ಅಷ್ಟೇ ಏಕೆ, ‘ಹ’ಕಾರದ ಬಳ್ಳಿಯಲ್ಲಿ ‘ಹು’ ಇದು ೫ನೆಯ ಪದ ಎನ್ನುವುದೂ ಗೊತ್ತಿರಲಿಲ್ಲ.
ವ್ಯಾಕರಣವನ್ನು ರೂಪಿಸುತ್ತಿರುವ ಸಂದರ್ಭದಲ್ಲಿ, ಈ ಬಳ್ಳಿಯನ್ನು ನಮ್ಮ ಪೂರ್ವಜರು ‘ಹೇ, ಹೊ, ಹಾ,
ಹೇ, ಹಂ. ಹಿ….’ ಎಂದೂ ಬರೆಯುತ್ತಿರಬಹುದು. ಆದುದರಿಂದ ಸ್ವರ ಹಾಗು ವ್ಯಂಜನಗಳ ಕಲ್ಪನೆಯು ಆಮೇಲಿನದು.
ಸ್ವರಗಳು ಸ್ವತಂತ್ರ ಹಾಗು ವ್ಯಂಜನಗಳು ಆಧೀನ ಸಂಕೇತಗಳು ಎನ್ನುವುದೂ, ತನ್ನಂತರದ ಸಂಶೋಧನೆ! ಇವೆಲ್ಲ
ವೈಯಾಕರಣಿಗಳ ಕಸರತ್ತು. ವ್ಯಾಕರಣವು ನಮ್ಮ ಅನುಕೂಲಕ್ಕಾಗಿ
ಇರಬೇಕೆ ಹೊರತು, ಭಾಷೆಯನ್ನು ಬಂಧಿಸಲಿಕ್ಕಲ್ಲ.
ಆದುದರಿಂದ, ಗೆಳೆಯರೆ, ‘ಆ’ಕಾರಕ್ಕೆ
‘ಯ’ಕಾರದ ಒತ್ತನ್ನು ಕೊಡಲು, ಯಾವುದೇ ಸ್ವಪ್ರೇರಿತ ಮುಜಗರವನ್ನು ಅನುಭವಿಸುವುದು ಬೇಡ, ಪ್ರಗತಿಯ ದಾರಿಯಲ್ಲಿ
ಹೆಜ್ಜೆ ಹಾಕೋಣ ಎಂದು ನಿಮ್ಮಲ್ಲಿ ಹಾಗು ಮಂಜುನಾಥ ಕೊಳ್ಳೇಗಾಲರಲ್ಲಿ ಕಳಕಳಿಯಿಂದ ಕೋರುತ್ತೇನೆ.