Showing posts with label ಸಾಹಿತ್ಯ/ಬೇಂದ್ರೆ. Show all posts
Showing posts with label ಸಾಹಿತ್ಯ/ಬೇಂದ್ರೆ. Show all posts

Monday, October 10, 2022

`ಇಳೆ ಎಂದರೆ ಬರಿ ಮಣ್ಣಲ್ಲ'..........ದ. ರಾ. ಬೇಂದ್ರೆ

      " ಇಳೆ ಎಂದರೆ ಬರಿ ಮಣ್ಣಲ್ಲ

ನಮಗೋ ನೋಡುವ ಕಣ್ಣಿಲ್ಲ

ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.

ಮೈಯೊಳು ಮಲಗಿದ ಆಳೆದ್ದರೆ ಬಾನೇ ಮನೆಯಲ್ಲೇ.

            ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ.

 

ಅಣ್ಣ ತಮ್ಮದಿರು ತಮ್ಮ ತಮ್ಮೊಳಗೆ ಕಾದಾಡಲು ಬೇಕೆ?

ನಲುಮೆಯ ನೀರನು ಕೆನ್ನೀರೆನ್ನುತಾ ಚೆಲ್ಲಾಡುವಿರೇಕೆ?

            ಮಣ್ಣಲಿ ನೀರಲಿ ಸೂರ್ಯನ ಕಿರಣ

            ಚಿತ್ರಿತವಾಗಲಿ ಅಪಾರವರಣ

ಬಾನುಲಿಯಲಿ ಮಾತಾಡುವ ಬನ್ನಿ ಗಾಳಿದೇರನೇರಿ

ರಸ ಮೀರಿ ರಸವೇರಿ ರಸರಸಿಕರು ಸೇರಿ

          ಅಕಾಂಡ ತಾಂಡವವೇತಕ್ಕೆ

            ಲಾಸ್ಯವೆ ಸಾಕು ಈತಕ್ಕೆ

ನಂದಾದೀಪದ ನಡೆಮಾಡಗಳೇ ಸಂಚರಿಸುವ ಹಾಗೆ

ಜೀವಜೀವಗಳ ಕಾರ್ತಿಕೋತ್ಸವವು ಮೊದಲಾಗಲಿ ಮೇಗೆ.

            ಋತುಗಳು  ನಡೆಸಲಿ ರಿಂಗಣಗುಣಿತ

            ಜೀವ ನುಡಿಸುತಿರೆ ವೀಣಾಕ್ವಣಿತ

ಮಾಲೆಯು ಕೊರಳಿಗೆ ಜೋತಿರುವಂತೆ ಹೃದಯಕೆ ಬಂದಾತು

ಸುಗ್ಗಿಯು ನೆಲವನೆ ಸುತ್ತುತ್ತಿರಲಿ ಮಧುಲೀಲೆಗೆ ಸೋತು. "

 ************************************

ಈ ಕವನದ ಅರ್ಥವನ್ನೇ ಬಿಂಬಿಸುವ ಬೇಂದ್ರೆಯವರ ಮತ್ತೊಂದು ಪುಟ್ಟ –ಆದರೆ ಮಹತ್ವಪೂರ್ಣ ಕವನ : ‘ಬೈರಾಗಿಯ ಹಾಡು’ ಅವರ ‘ಸಖೀಗೀತ’ ಸಂಗ್ರಹದಲ್ಲಿದೆ:

 

ಇಕೋ ನೆಲ- ಅಕೋ ಜಲ

ಅದರ ಮೇಲೆ ಮರದ ಫಲ

ಮನದೊಳಿದೆ ಪಡೆವ ಛಲ

ಬೆಳೆದವಗೆ ನೆಲವೆಲ್ಲ ಹೊಲ.

 

ಜಲಧಿವರೆಗು ಒಂದೆ ಕುಲ

ಅನ್ನವೆ ಧರ್ಮದ ಮೂಲ

ಪ್ರೀತಿಯೆ ಮೋಕ್ಷಕ್ಕೆ ಬಲ

ಇದೇ ಶೀಲ ಸರ್ವಕಾಲ    ||ಇಕೋ ನೆಲ....

**************************************************

ಬೇಂದ್ರೆಯವರ ಕವನಗಳು ಓದಲು ಎಷ್ಟು ಸರಳವಾಗಿರುವವೋ, ರಸಗ್ರಹಣಕ್ಕೆ ಅಷ್ಟೇ ಸಂಕೀರ್ಣವಾಗಿರುತ್ತವೆ. `ಇಳೆ ಎಂದರೆ ಬರಿ ಮಣ್ಣಲ್ಲ’ ಎನ್ನುವ ಕವನವೂ ಸಹ ರಸಪೂರ್ಣವಾದ ಹಾಗು ಅರ್ಥಗರ್ಭಿತವಾದ ಕವನವಾಗಿದೆ. ಕವನದ ಮೊದಲಿನ ಎರಡು ಸಾಲುಗಳಲ್ಲಿಯೇ ಬೇಂದ್ರೆಯವರು ಮಾನವನ ದೃಷ್ಟಿದೋಷವನ್ನು ತೋರಿಸುತ್ತಿದ್ದಾರೆ. ನಾವು ಭೂಮಿಗೆ ‘ಭೂತಾಯಿ’ ಎಂದು ಕರೆಯುತ್ತೇವೆ. ಆದರೆ ವ್ಯವಹಾರಕ್ಕೆ ಬಂದಾಗ ನಮ್ಮ ಮಟ್ಟಿಗೆ ಭೂಮಿ ಎಂದರೆ ಬರಿ ಕೊಡಕೊಳ್ಳುವ ಜಮೀನು ಮಾತ್ರ.

“ಇಳೆ ಎಂದರೆ ಬರಿ ಮಣ್ಣಲ್ಲ

ನಮಗೋ ನೋಡುವ ಕಣ್ಣಿಲ್ಲ

ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಈ ದೃಷ್ಟಿದೋಷವನ್ನು ತಿದ್ದುವ ಉದ್ದೇಶದಿಂದ ಬೇಂದ್ರೆಯವರು ‘ನಮಗೋ ನೋಡುವ ಕಣ್ಣಿಲ್ಲ’ ಎಂದು ಹೇಳುತ್ತಿದ್ದಾರೆ. ಈ ಭೂಮಿಯು ಎಲ್ಲರದೂ ಕರ್ಮಭೂಮಿಯಾದಾಗ ಮಾತ್ರ,

“ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಹೊನ್ನು, ಹೆಣ್ಣು, ಮಣ್ಣು ಇವು ಪುರುಷನ ಸ್ವಾರ್ಥಮೂಲ ಪ್ರಲೋಭನಗಳು. ನಮಗೆ ಅನ್ನ ಕೊಡುವ ಈ ತಾಯಿಯನ್ನು ನಾವು ಕೇವಲ ಮಣ್ಣು ಎಂದು ಭಾವಿಸಿ, ಅವಳ ಮೇಲಿನ ಅಧಿಪತ್ಯಕ್ಕಾಗಿ ಕಾದಾಡುತ್ತಿದ್ದೇವೆ.

ಇಲ್ಲಿಯವರೆಗೆ ಈ ಮಣ್ಣಿನ ಅಂದರೆ ಭೂಮಿಯ ಮೇಲೆ ನಡೆದ ಹೋರಾಟಗಳೆಲ್ಲವೂ ಮಣ್ಣಿಗಾಗಿ ಅಂದರೆ ಭೂಮಿಯ ಒಡೆತನಕ್ಕಾಗಿ ನಡೆದ ಹೋರಾಟಗಳಾಗಿವೆ. ಭೂಮಿತಾಯಿಯ ಮಕ್ಕಳಾದ ನಾವು ಭೂಮಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸಿ, ಭೂಪತಿಗಳಾಗುವದೆಂದರೆ `ತಾಯಿಗ್ಗಂಡರಾದಂತೆ!

(‘ನಾದಲೀಲೆ’ ಕವನಸಂಕಲನದಲ್ಲಿಯ “ಮೊದಲಗಿತ್ತಿ” ಕವನ:

ಪಾತಾಳ ಕಂಡರು ಕೆಲ ತಾಯಿಗ್ಗಂಡರು

ಅವರನ್ನೂ ಮಡಿಲಾಗ ಮಡಗಿಸಿಹೆ.”

‘ಮಡಿಲಾಗ’ ಎನ್ನುವ ಪದದಲ್ಲಿ ಇರುವ ಶ್ಲೇಷೆಯನ್ನು ಗಮನಿಸಿರಿ.)

 

ಈ ಭೂಮಿಯನ್ನು ನಾವು ತಾಯಿಯಂತೆ ತಿಳಿದರೆ, ನಾವೆಲ್ಲರೂ ಅಣ್ಣ-ತಮ್ಮಂದಿರಲ್ಲವೆ? ನಮ್ಮೆಲ್ಲ ಸೋದರರಿಗೂ ನಾವು ಪಾಲು ಕೊಡಲೇ ಬೇಕಲ್ಲವೆ? ಎಲ್ಲರಿಗೂ ಸಮಪಾಲು ಕೊಟ್ಟರೆ, ನಮಗೇನು ಉಳಿಯುತ್ತದೆ ಎಂದು ದಿಗಿಲುಗೊಳ್ಳಬೇಕಾಗಿಲ್ಲ. ಏಕೆಂದರೆ ಭೂಮಿಯ ಒಡಲಲ್ಲಿ, ಏಸು ತಿಂದರೂ ತೀರದಿದೆ. ಏಸು ತುಂಬಿಯೂ ಮೀರದಿದೆ.’

 

ಸರಿ,ಈ ಮಾತಿನ ಅರ್ಥವೇನು? ಎಲ್ಲರಿಗೂ ಸಾಕಾಗುವಷ್ಟು ಅನ್ನ ಭೂಮಿಯಲ್ಲಿದೆ. ಮತ್ತು ಮಾನವಕುಲಕ್ಕೆ ಬೇಕಾದಷ್ಟು ನೀಡಿಯೂ ಸಹ ಭೂತಾಯಿಯ ಒಡಲನ್ನು ಮೀರಿ ಹೊರಚೆಲ್ಲದಷ್ಟು ಅವಳ ಒಡಲು ವಿಶಾಲವಾಗಿದೆ. ಈ ಅನ್ನವನ್ನು ಎಲ್ಲರೂ ಹಂಚಿಕೊಂಡು ಉಣ್ಣಬೇಕಷ್ಟೆ.

 

“ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.

ಮೈಯೊಳು ಮಲಗಿದ ಆ ಆಳೆದ್ದರೆ ಬಾನೇ ಮನೆಯಲ್ಲೇ.

            ಈ ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ ”.

ಭೂತಾಯಿಯ ವೈಭವಕ್ಕೆ ಕೊನೆಯೇ ಇಲ್ಲ, ಕೊರತೆಯೇ ಇಲ್ಲ! ಆದುದರಿಂದ ಬೇಂದ್ರೆ ಹೇಳುತ್ತಾರೆ:

‘ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.’ ಅಮೃತ ಹಾಗು ಅನಂತ ಇವು ದೇವರ ಉಪಾಧಿಗಳು. (Immortal Infinite) ಅವು ಮಾನವನ ಕಾಲಿನಲ್ಲಿಯೇ ಇವೆ. ಏನಿದರಿದರರ್ಥ?

 

‘ಕಾಲಲ್ಲೇ ಇಲ್ಲೆ’ ಎನ್ನುವ ಮಾತಿನಲ್ಲಿ ಅಡಗಿದ ವಿವಿಧ ಅರ್ಥಗಳನ್ನು ಗಮನಿಸಿ. ನಮ್ಮ ಕಾಲುಗಳನ್ನು ಭೂಮಿಯಲ್ಲಿ ಒತ್ತಿ ನಾವು ದುಡಿದಾಗಲೇ, ನಮಗೆ ಅಮೃತ ಸಿಗುತ್ತದೆ. ಇಲ್ಲಿ ಕಾಲು ಎನ್ನುವುದು ಕಾರ್ಯಸೂಚಕವಾಯಿತು. ‘ಕಾಲ’ ಎಂದರೆ ಸಮಯ ಎನ್ನುವ ಅರ್ಥವೂ ಇದೆಯಲ್ಲವೆ? ಅನಂತವು ನಮ್ಮ ಕಾಲಲ್ಲೇ ಇದೆ ಎಂದರೆ, ‘ಆನಂತಕಾಲದವರೆಗೆ’ ಎನ್ನುವ ಅರ್ಥವೂ ಬಂದಂತಾಯಿತು.

ಭೂತಾಯಿ ನಮಗಾಗಿ ತನ್ನ ಅಮೃತದಂತಹ ಕೊಡುಗೆಯನ್ನು ಅನಂತಕಾಲದವರೆಗೆ ನೀಡಲು ಸಿದ್ಧಳಾಗಿದ್ದಾಳೆ. ಆದರೆ, ಈ ಸಾಧನೆಗಾಗಿ ಮಾನವನು ಮಾಡಬೇಕಾದದ್ದೇನು?

 

‘ಮೈಯೊಳು ಮಲಗಿದ ಆ ಆಳೆದ್ದರೆ ಬಾನೇ ಮನೆಯಲ್ಲೇ.ʼ ಈ ಸಂಕೀರ್ಣ ವಾಕ್ಯವು ವಿವಿಧ ಅರ್ಥಗಳ ವ್ಯಾಪ್ತಿಯುಳ್ಳದ್ದಾಗಿದೆ.  ಇದರ ಸಾಮಾನ್ಯ ಅರ್ಥವೇನೆಂದರೆ, ಮನುಷ್ಯನ ಪ್ರಯತ್ನಕ್ಕೆ ಕೊನೆಯಿಲ್ಲ, ಬಾನೇ ಆತನ ಮನೆ. (Sky is the limit!) ಎರಡನೆಯ ಅರ್ಥವೆಂದರೆ ಮಾನವನು ಇನ್ನೂ ಸುಪ್ತಾವಸ್ಥೆಯಲ್ಲಿಯೇ ಇರುವನೆಂಬುದರ ಸೂಚನೆಯಾಗಿದೆ ಇದೆ. ಈತನು ಎಚ್ಚತ್ತು ವಿವೇಕ ಬುದ್ಧಿಯವನಾದರೆ, ಆಕಾಶವೇ ಈತನ ಮನೆಯಾಗುತ್ತದೆ. ಇನ್ನು ಮೂರನೆಯ ಅರ್ಥವೊಂದನ್ನು ನೋಡೊಣ> ಅದು ಆಧ್ಯಾತ್ಮಿಕ ಅರ್ಥ:

 

ಸಂಸ್ಕೃತ ವೈಯಾಕರಣಿಗಳು ‘ಪುರುಷ’ ಪದವನ್ನು ‘ಪುರೇ ಶೇತಿ’ ಅಂದರೆ ‘ಶರೀರದಲ್ಲಿ ಮಲಗಿಕೊಂಡವನು’ ಎಂದು ಅರ್ಥೈಸುತ್ತಾರೆ. ‘ಮೈಯೊಳಗೆ ಮಲಗಿದವನು’ ಎಂದರೆ ಯಾರು? ಈತನೇ ‘ದೇಹಧಾರಿಯಾದ ಪುರುಷ’ ಅರ್ಥಾತ್ ಆತ್ಮ. ಈತನಿಗೆ ಪಶುಪ್ರಜ್ಞೆಯಷ್ಟೇ ಇದೆ. ಈತನು ಪಶುಜೀವನವನ್ನು ನಡೆಯಿಸುತ್ತಿದ್ದಾನೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ.  ಈತ ಎಚ್ಚೆತ್ತರೆ, ತನ್ನ ಪಶುಪ್ರಜ್ಞೆಯಿಂದ ಹೊರಬಂದರೆ, ಆತನಿಗೆ ಬಾನೇ ಮನೆ. ಬಾನೇ ಮನೆಯಾದವನು ದೇವಸ್ವರೂಪನು.  ಮಹರ್ಷಿ ಅರವಿಂದರು ಹೇಳುವ, ಮಾನವಚೈತನ್ಯದ ಪರಮಾವಸ್ಥೆಯನ್ನು ಸಹ ಇದು ಸೂಚಿಸುತ್ತದೆ. (Evolution of man to superman). ‘ಆಳು’ ಎಂದರೆ ಕೆಲಸ ಮಾಡುವ ಗಂಡಸು. ‘ಆಳು’ ಎಂದರೆ ‘ಆಳುವವನು’ ಎನ್ನುವ ಗುಪ್ತಾರ್ಥವನ್ನೂ ಬೇಂದ್ರೆಯವರು ಸೂಚಿಸುತ್ತಾರೆ. ಮಲಗಿದ ಆ ಆಳು ಎಚ್ಚೆತ್ತರೆ, ಆತನು ಆಳುವವನೇ ಆಗುತ್ತಾನೆ. ಆಗ, ಆತನಿಗೆ ಬಾನೇ ಮನೆಯಾಗುತ್ತದೆ. ಆತನು ‘ಕೆಳ ಪ್ರಜ್ಞೆ’ಯಿಂದ ಎಚ್ಚೆತ್ತು ‘ಮೇಲಿನ ಪ್ರಜ್ಞೆ’ಗೆ ಬಂದಾಗ, ಆತನು ದೇವರೇ ಆಗುತ್ತಾನೆ!

 

            ‘ಈ ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ.’

ಭೂಮಿಯನ್ನು ಸಮುದ್ರವು ಸುತ್ತುವರಿದಿದೆ.  ಆ ನೀರೆ ಭೂಮಿಗಿರುವ ಮೇರೆ. ನೀರು ಉಗಿಯಾಗಿ ಅಂದರೆ ಊರ್ಧ್ವಮುಖಿಯಾಗಿ ಮೇಲಕ್ಕೆ ಚಲಿಸುತ್ತದೆ. ಗಾಳಿಯೂ ಸಹ ಸರ್ವವ್ಯಾಪಿಯಾಗಿದೆ, ಗಾಳಿಯು ಆಕಾಶದವರೆಗೆ ವ್ಯಾಪಿಸಿದೆ. ಗಾಳಿ ಹಾಗು ನೀರು ಇವು ಪ್ರಕೃತಿಯ ಶಕ್ತಿಗಳು, ಪಂಚಮಹಾಭೂತಗಳಲ್ಲಿಯ ಎರಡು ಭೂತಗಳು.

(ಭೂ =ಆಗು ; ಭೂತ=ಆದದ್ದು =ವ್ಯಕ್ತವಾದದ್ದು).

 

ಆದರೆ ಮಾನವನು ಈ ಊರ್ಧ್ವಪಥವನ್ನು ಬಿಟ್ಟು ಅಡ್ಡಹಾದಿಯನ್ನು ಹಿಡಿದಿದ್ದಾನೆ. ಅಮೃತ ಹಾಗು ಅನಂತ ಇವು ದೇವರ ಉಪಾಧಿಗಳು, ದೇವರ ನಾಮಗಳು. ಇದರರ್ಥವೆಂದರೆ, ಮಾನವನು ಸಹ ಸಹ ಊರ್ಧ್ವಮುಖಿಯಾಗಬೇಕೆನ್ನುವುದು ಬೇಂದ್ರೆಯವರ (ಹಾಗು ಮಹರ್ಷಿ ಅರವಿಂದರ) ಆಶಯವಾಗಿದೆ.

 

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಮಾನವರು ಸರಿಯಾದ ಹಾದಿಯಲ್ಲಿ ನಡೆಯಲು, ಮಾಡಬಾರದ ಹಾಗು ಮಾಡಬೇಕಾದ ಕಾರ್ಯವನ್ನು ಸೂಚಿಸುತ್ತಾರೆ.

ಒಂದು ಪದಾರ್ಥಕ್ಕೆ ಇರುವ  ಸರ್ವಸಾಮಾನ್ಯವಾದ ಅರ್ಥವನ್ನು ಬೇಂದ್ರೆಯವರು ವಿಸ್ತರಿಸುವ ಪರಿಯನ್ನು ಇಲ್ಲಿ ನೋಡಿರಿ. ಸಾಮಾನ್ಯವಾಗಿ ನೀರು ಅಂದರೆ ಜಲ. ಆದರೆ ಬೇಂದ್ರೆಯವರು ‘ನಲುಮೆಯ ನೀರು’ ಅಂದರೆ ಪರಸ್ಪರ ಪ್ರೀತಿಯ ಸಂಬಂಧ ಎನ್ನುವ ಅರ್ಥವನ್ನು ಇಲ್ಲಿ ಸೃಷ್ಟಿಸಿದ್ದಾರೆ. ಇದನ್ನು ರಕ್ತವೆನ್ನುತ್ತ ರಕ್ತಪಾತವನ್ನು ಮಾಡುತ್ತಿರುವಿರೇಕೆ, ಮಾನವರೆಲ್ಲರೂ ಅಣ್ಣ ತಮ್ಮಂದಿರಾಗಿರಲು ಪರಸ್ಪರ ಕಾದಾಟವೇಕೆ, ಎಂದು ಬೇಂದ್ರೆಯವರು ಕೇಳುತ್ತಾರೆ. 

 

ಸೂರ್ಯನು ಇಡೀ ಜಗತ್ತಿಗೆ ಪೋಷಣೆಯನ್ನು ನೀಡುತ್ತಾನೆ. ಅವನ ಕಿರಣಗಳು ನಮ್ಮ ಭೂತಾಯಿಯ ಮಣ್ಣಿನ ಮೇಲೆ ಹಾಗು ನೀರಿನಲ್ಲಿ ಮಿಂಚುತ್ತಿವೆ. ಈ ರೀತಿಯಲ್ಲಿ ಸೂರ್ಯನು ಭೂತಾಯಿಗೆ ಹಾಗು ನೀರಿಗೆ ಅಂದರೆ ನೀರಿನಲ್ಲಿ ಇರುವ ಜೀವಿಗಳಿಗೆ ಪೋಷಣೆಯನ್ನು ನೀಡುತ್ತಿದ್ದಾನೆ. ಬೇಂದ್ರೆಯವರು ಹೇಳುವ ಸೂರ್ಯನು ಜ್ಞಾನಸೂರ್ಯನೂ ಆಗಿದ್ದಾನೆ. ಇದು ಮಾನವ ಹಾಗು ದೇವರ ನಡುವೆ ಇರುವ ಸಂಬಂಧ. ಇದನ್ನು ಗ್ರಹಿಸಿದ ಮಾನವನು ತನ್ನ ಪ್ರಜ್ಞೆಯನ್ನು ವಿಸ್ತರಿಸಿ ಅಪಾರವರಣವನ್ನು ಅಂದರೆ, ಮೇರೆಯಿಲ್ಲದ ತಿಳಿವನ್ನು ಹೊಂದಬೇಕು.

 

ಅಂತಹ ಸಮಯದಲ್ಲಿ ಮಾನವರು ಗಾಳಿಯ ತೇರನ್ನು ಏರಿ, ಅಂದರೆ ಅಧೋಮುಖಿಯಾದ ಪ್ರಾಣವನ್ನು ಯೋಗಶಕ್ತಿಯಿಂದ ಸಹಸ್ರಾರಕ್ಕೆ ಏರಿಸಿ ಬಾನುಲಿಯಲ್ಲಿ ಅಂದರೆ ಅತಿಮಾನವ ಸಂಭಾಷಣೆಯಲ್ಲಿ ತೊಡಗಬಹುದು!  ಭೂಮಿಗೆ ಬದ್ಧವಾದ ಪ್ರಾಪಂಚಿಕ  ಮಿತಿಯನ್ನು ಮೀರಿ ದೈವಿಕ ರಸವನ್ನು ತಲುಪಬಹುದು. ಇದನ್ನು ಸಾಧಿಸಲು ಮಾನವನು ತನ್ನ ʻಅಕಾಂಡ ತಾಂಡವʼವನ್ನು ಬಿಡಬೇಕು. ಅಂದರೆ ಹೊತ್ತಲ್ಲದ ಹೊತ್ತಲಲಿ ಮಾಡಬಾರದ್ದನ್ನು ಮಾಡುವದನ್ನು ಬಿಡಬೇಕು. ಹಾಗಿದ್ದರೆ ಆತ ಏನನ್ನು ಮಾಡಬೇಕು? ಆತ ಲಾಸ್ಯ ನರ್ತನವನ್ನು ಮಾಡಬೇಕು. { ತಾಂಡವವು ಶಿವನ ರುದ್ರನರ್ತನವಾದರೆ, ಲಾಸ್ಯವು ಪಾರ್ವತಿಯ ಸೌಮ್ಯ ನರ್ತನವಾಗಿದೆ.} ಇಷ್ಟೇ ಸಾಕು ಮಾನವನ ಉತ್ಕ್ರಾಂತಿಗೆ. ಆವಾಗ ಈ ಭೂಮಿ ಹೇಗೆ ಕಾಣುವುದು: ನಂದಾದೀಪದ ನಡೆಮಾಡಗಳೇ ಸಂಚರಿಸುವ ಹಾಗೆ!

 

ನಂದಾದೀಪ ಎಂದರೆ ದೇವರ ಎದುರಿಗೆ ಹಚ್ಚಿಡುವ ದೀಪ. ನಡೆಮಾಡ ಎಂದರೆ ದೇವರ ರಥ ಅಥವಾ ತೇರು. ಇದೀಗ ಮಾನವರೆಲ್ಲರೂ ದೈವತ್ವವನ್ನು ತಳೆದು, ತೇರು ಎಳೆಯುತ್ತಿರುವಂತಹ ದೃಶ್ಯ ಕಾಣುವುದು! ಕಾರ್ತೀಕ ಮಾಸದ ಗಾಢಾಂಧಕಾರಾದಲ್ಲಿದಲ್ಲಿ ಹೊರಟ ಉತ್ಸವದಂತೆ ಭಾಸವಾಗುವುದು.ಬೇಂದ್ರೆಯವರ ಕನಸು ಎಷ್ಟು ಉಚ್ಚಮಟ್ಟದ್ದಾಗಿದೆ ಎನ್ನುವುದನ್ನು ನೋಡಿದಿರಾ?

 

ಭೂಮಿ ಹಾಗು ಮಾನವ ಅಥವಾ ನಿಸರ್ಗ ಹಾಗು ಮಾನವ ಇವರ ನಡುವಿನ ಸಾಮರಸ್ಯವನ್ನು ಸೂಚಿಸುವದರ ಸಲುವಾಗಿ ಬೇಂದ್ರೆಯವರು ʻ ಋತುಗಳು ನಡೆಸಲಿ ರಿಂಗಣಗುಣಿತ, ಜೀವ ನುಡಿಸುತಿರೆ ವೀಣಾಕ್ವಣಿತʼ ಎಂದು ಹೇಳುತ್ತಾರೆ. ರಿಂಗಣಗುಣಿತ ಅಂದರೆ ವೃತ್ತಾಕಾರದಲ್ಲಿ ಒಂದರ ಹಿಂದೆ ಒಂದು ಕುಣಿಯುವ ನರ್ತನ. ಋತುಗಳೂ ಸಹ ಇದರಂತೆಯೇ ನಿಯಮಬದ್ಧವಾಗಿ ಬದಲಾಗುತ್ತಿರಲಿ ಎನ್ನುವ ಆಶಯ ಇಲ್ಲಿದೆ. ಮಾನವನೂ ಸಹ ನಿಸರ್ಗ ನಿಯಮವನ್ನು ಮೀರದಿದ್ದರೆ, ಆತನ ಬಾಳೂ ಸಹ ವೀಣೆಯ ಸ್ವರಬದ್ಧ ರಾಗದಂತಾಗುವುದು ಎನ್ನುವುದು ಕವಿಯ ಆಶಯ.

 

ಕೊನೆಯಲ್ಲಿ ಕವಿ ತಮ್ಮ ಕಾಣ್ಕೆಯನ್ನು ಹೀಗೆ ಹೇಳುತ್ತಾರೆ:

ಮಾಲೆಯು ಕೊರಳಿಗೆ ಜೋತಿರುವಂತೆ  ಹೃದಯಕೆ ಬಂದಾತು

 ಸುಗ್ಗಿಯು ನೆಲವನೆ ಸುತ್ತುತ್ತಿರಲಿ ಮಧುಲೀಲೆಗೆ ಸೋತು.

ಹೂವಿನ ಮಾಲೆ ಕೊರಳಿಗೆ ಜೋತು ಬಿದ್ದರೆ ಸಾಕು, ಅದು ಹೃದಯಕ್ಕೆ ಹತ್ತಿರವಾದಂತೆ. ನಮ್ಮ ಸಂಕಲ್ಪವೂ ಸಹ ಇದೇ ರೀತಿಯಾದರೆ ನಮ್ಮ ಬಾಳೂ ಸಹ ಹಸನಾಗುವುದು. ಇದು ಮಾನವರ ಸಹಜೀವನದ ಮಧುಲೀಲೆ. ಈ ಮಧುಲೀಲೆಗೆ ನಿಸರ್ಗವೂ ಸಹ ಮರುಳಾಗಿ ಸುಗ್ಗಿ ಎನ್ನುವುದು ತಪ್ಪದಂತೆ ನಮ್ಮನ್ನು ಸುತ್ತುತ್ತಲೇ ಇರುವುದು.

Sunday, January 30, 2022

ಮಳೆಗಾಲ.....ಬೇಂದ್ರೆ

 ಮಳೆಗಾಲವು ಬೇಂದ್ರೆಯವರಿಗೆ ಪ್ರೀತಿಯ ಕಾಲ. ಶ್ರಾವಣ ಮಾಸದ ಬಗೆಗೆ ಬೇಂದ್ರೆಯವರು ಹಾಡಿದ ಹಾಡುಗಳೆಷ್ಟೋ! ಮಳೆಗಾಲದಲ್ಲಿ ಅವರ ಹೃದಯವು ನವಿಲಿನಿಂತೆ ಗರಿಗೆದರುವುದು! ಮಳೆಗಾಲದ ಮೊದಲಲ್ಲಿ ಭರ್ರನೆ ಬೀಸಿ ಬರುವ ಮಳೆಯು ಅವರಿಗೆ ʻಭೈರವನ ರೂಪ ತಾಳಿ ಕುಣಿಯುತ್ತಿರುವಂತೆʼ ಕಾಣುತ್ತದೆ. ಮಳೆಯಲ್ಲಿ ತೊಯ್ಯುತ್ತಿರುವ ಕಲ್ಲುಬಂಡೆಗಳು ಅವರಿಗೆ ʻಅಭ್ಯಂಜನಗಯ್ಯುತ್ತಿರುವ ಸ್ಥಾವರಲಿಂಗಗಳಂತೆʼ ಕಾಣುವುವು. ಇಂತಹ ಕಾಣ್ಕೆ ವರಕವಿಗೆ ಮಾತ್ರ ಸಾಧ್ಯ. ಅದಕ್ಕೇ ಹೇಳುತ್ತಾರಲ್ಲವೆ,  ʻ ನಾನೃಷಿಃ ಕುರುತೇ ಕಾವ್ಯಂ ʼ ಎಂದು. 

ʻಮಳೆಗಾಲʼ ಎನ್ನುವ ಬೇಂದ್ರೆಯವರ ಕವನವು ನೋಡಲು ಅತ್ಯಂತ ಸರಳವಾದ ಕವನ. ಆದರೆ ಈ ಮುಖವಾಡದ ಒಳಗೆ ಅಡಗಿದೆ, ವಿಶ್ವದ ʻಋತʼ ಅರ್ಥಾತ್‌ ʻಶಾಶ್ವತ ಸತ್ಯʼ, ನಿಸರ್ಗವನ್ನು ನಡೆಯಿಸುತ್ತಿರುವ ಚೈತನ್ಯದ ಸಾಮರಸ್ಯ ಪ್ರಕ್ರಿಯೆ.

....................................................................................................................

ಮಳೆಗಾಲ

ಅಡಗಿದೆ ದೃಷ್ಟಿ-

ಆದರು ಸುರಿಯುತ್ತಿದೆ ವೃಷ್ಟಿ!

ಮೋಡದ ಮೇಲ್ಮೋಡ.

ತಿಳಿಯದು ಏನಿದೆಯೋ ಗೂಢ !

ನಸುಕಿನ ಹಕ್ಕಿಯ ಚಿಲಿಪಿಪಿಯಿಲ್ಲ.

ಗೊಟರ್ಗುಡುತಿದೆ ಕಪ್ಪೆ.

ಜೀರುಂಡೆಯ ಕಿಲಕಿಲ ಇರುಳಿಡುಗಿದೆ

ದುರ್ದಿನಕಿದು ತಪ್ಪೇ?

ಹಸಿರಿನ ಉಲ್ಲಾಸಕೆ ಮಿತಿಯಿಲ್ಲ.

ಕೆಸರಿಗಿಲ್ಲ ಕೊರತಿ.

ಪಾತರಗಿತ್ತಿಯು ಸುಳಿದಾಡುತ್ತಿದೆ,

ಮನೆ ಹಿಡಿದಳು ಗರತಿ.

ಬಾನ್ ತುಂಬಿದೆ, ಕೆರೆ ತುಂಬಿದೆ,

ಹೂ ತುಂಬಿದೆ ಬೇಲಿ.

ನೀರಲಿದಲಿ ರಸ ತುಂಬಿದೆ

ಮಿದುವಾಗಿದೆ ಜಾಲಿ. 

........................................................................................................

 ಮೊದಲಿನ ನುಡಿಯನ್ನು ನೋಡೋಣ. ಮಳೆಗಾಲದ ಒಂದು ಮುಂಜಾವು. ಬೇಂದ್ರೆಯವರು ಮನೆಯ ಬಾಗಿಲಿಗೆ ಬಂದು ಹೊರಗೆ ಇಣಕುತ್ತಾರೆ. ತಮ್ಮ ಭೌತಿಕ ದೃಷ್ಟಿಗೆ ಕಾಣುವ ನೋಟವನ್ನು ಎಣಿಸುತ್ತ, ಇದರ ಹಿಂದೆ ಇರುವ ಗೂಢವನ್ನು ಗುಣಿಸುತ್ತಿದ್ದಾರೆ. ʻಇದು ಏನೋ ನಿಸರ್ಗರಹಸ್ಯ, ಇದು ಏನು?ʼ ಎನ್ನುವ ಅಚ್ಚರಿಯಲ್ಲಿದ್ದಾರೆ. ಆಕಾಶವು ದಟ್ಟ ಮೋಡಗಳಿಂದ ತುಂಬಿದ್ದನ್ನು ಅವರು ನೋಡುತ್ತಾರೆ. ಆ ಮೋಡಗಳು ಮಳೆ ಸುರಿಸುತ್ತಿರುವುದನ್ನೂ ಅವರು ಕಾಣುತ್ತಾರೆ. ತಮ್ಮ ದೃಷ್ಟಿಯಾಚಗೆ ಏನೋ ಒಂದು ಇದೆ ಎನ್ನುವ ಕಲ್ಪನೆ ಅವರಿಗೆ ಬರುತ್ತದೆ. 

ಎರಡನೆಯ ನುಡಿಯಲ್ಲಿ ಬೇಂದ್ರೆಯವರ ಚಿತ್ತವು ನಿಸರ್ಗದ ದೃಶ್ಯದಿಂದ ನಿಸರ್ಗದ ಶ್ರಾವ್ಯದ ಕಡೆಗೆ ಹೊರಳುತ್ತದೆ. ʻಅಲ್ಲಪ್ಪಾ, ನಸುಕಿನ ಹಕ್ಕಿಗಳ ಸುಮಧುರ ಕಲರವ ಇಲ್ಲ, ಹೀಗೇಕೆ? ಆದರೆ ಕಪ್ಪೆಗಳ ಗುಟುರುವಿಕೆ ಹಾಗು ಜೀರುಂಡೆಗಳ ಗುಂಯ್ಗುಡುವಿಕೆ ಮಾತ್ರ ತಪ್ಪಿಲ್ಲವಲ್ಲ, ಎನ್ನುತ್ತಿದ್ದಾರೆ ಬೇಂದ್ರೆ. ʻಓಹೋ, ಇದು ಮಳೆಯ ಪಾರಿಣಾಮ! ಇದು ದುರ್ದಿನಕ್ಕೆ ಸಹಜವಾದದ್ದೇʼ ಎಂದುಕೊಳ್ಳುತ್ತಾರೆ ಬೇಂದ್ರೆ. ಸಂಸ್ಕೃತದಲ್ಲಿ ಮಳೆ ಬೀಳುವ ದಿನಕ್ಕೆ ದುರ್ದಿನ ಎನ್ನುತ್ತಾರೆ ಎನ್ನುವುದನ್ನು ಗಮನಿಸಬೇಕು. ಕನ್ನಡದಲ್ಲಿ ʻದುರ್ದಿನʼ ಎಂದರೆ ಕೆಟ್ಟ ದಿನ. ಕನ್ನಡದಲ್ಲಿ ಇರುವ ಅರ್ಥವನ್ನು ಹಾಗು ಸಂಸ್ಕೃತದಲ್ಲಿ ಇರುವ ಅರ್ಥವನ್ನು ಬೇಂದ್ರೆಯವರು ಶ್ಲೇಷೆಯಲ್ಲಿ ಬಳಸುವ ಜಾಣತನವನ್ನು ಗಮನಿಸಿರಿ.

 ಮೂರನೆಯ ನುಡಿಯಲ್ಲಿ ಬೇಂದ್ರೆಯವರು ಮಳೆಗಾಲದ ಸಂಕಟಗಳನ್ನು ಪಕ್ಕಕ್ಕೆ ಇಡುತ್ತಾರೆ ಹಾಗು ಮಳೆಗಾಲದ ಸುಖವನ್ನು ಅನುಭವಿಸುತ್ತಿದ್ದಾರೆ. ಭೂಮಿಯೆಲ್ಲ ಹಸಿರಿನಿಂದ ತುಂಬಿದೆ. ಈ ನೋಟವು ನೋಡುಗನಲ್ಲಿ ಉಲ್ಲಾಸವನ್ನು ತುಂಬುತ್ತಿದೆ. ಅದರ ಜೊತೆಗೇ ನೆಲವೆಲ್ಲ ಕೆಸರಿನಿಂದ ಕೂಡಿದೆ. (ರಾಜರತ್ನಮ್‌ ಅವರು ಹಾಡಿದಂತೆ ʻಎಲೆಲೆ ರಸ್ತೆ, ಏನು ಅವ್ಯವಸ್ಥೆʼ!). ಇದು ಮನುಷ್ಯರಿಗೆ ಸಂಕಟಕರವಾಗಿರಬಹುದು, ಆದರೆ ಪಾತರಗಿತ್ತಿಗೆ ಇದು ಹಬ್ಬ. ಪಾತರಗಿತ್ತಿಯು ನೆಲದ ಮೇಲೆ ಚಲಿಸುವುದಿಲ್ಲ; ಅದು ನೆಲದ ಮೇಲಕ್ಕೆ ಹಾರಾಡುತ್ತದೆ. ಪಾತರಗಿತ್ತಿಗೆ ಇದು ಸಹಜ ಪ್ರವೃತ್ತಿ, ಹೊಟ್ಟೆಗಾಗಿ ಅದರ ಪರದಾಟ. ಆದರೆ ಮನೆಯ ಕೆಲಸವನ್ನು ಮಾಡಬೇಕಾಗಿರುವ ಗೃಹಿಣಿಗೆ ಹೊರಗೆ ಹಣಿಕಿ ಹಾಕಲೂ ಸಹ ಆಗಲಾರದ ಪರಿಸ್ಥಿತಿ. ಮನೆಗೆ ಅಂಟಿಕೊಂಡೇ ಅವಳು ಕೂಡಬೇಕು. (ಇಲ್ಲಿ ಬರುವ ಒಂದು ದ್ವಂದ್ವಾರ್ಥವನ್ನು ಗಮನಿಸಿರಿ. ಪಾತರಗಿತ್ತಿ ಎಂದರೆ ಚೆಲ್ಲು ಹೆಣ್ಣು ಎಂದೂ , ವೇಶ್ಯೆ ಎಂದೂ ಅರ್ಥವಾಗುತ್ತದೆ. ಅವರವರ ಒದ್ದಾಟ ಅವರವರಿಗೆ!)


ಕೊನೆಯ ನುಡಿಯಲ್ಲಿ ಬೇಂದ್ರೆಯವರ ಅನುಭೂತಿ ವ್ಯಕ್ತವಾಗುತ್ತದೆ. ಈ ಅನುಭವವು ಬೇಂದ್ರೆಯವರನ್ನು ಆಧ್ಯಾತ್ಮಿಕ ಸ್ತರಕ್ಕೆ ಒಯ್ದಿದೆ. ತಾವು ಮೊದಲು ನೋಡಿದ ನೋಟಗಳನ್ನೇ ಬೇಂದ್ರೆ ಮತ್ತೊಮ್ಮೆ ನೋಡುತ್ತಾರೆ. ಆದರೆ ಅವರ ಒಳಗಣ್ಣಿಗೆ ಕಾಣುವ ನೋಟವೇ ಇದೀಗ ಬೇರೆ. ಬಾನು ಎಂದರೆ ಆಕಾಶವು ಮೋಡಗಳಿಂದ ತುಂಬಿದೆ. ಆ ಮೋಡಗಳು ಸುರಿಸುವ ನೀರಿನಿಂದ ನೆಲದ ಮೇಲಿರುವ ಕೆರೆ, ಕುಂಟಿಗಳೆಲ್ಲ ತುಂಬಿವೆ. ಅಲ್ಲಲ್ಲಿ ಇರುವ ಬೇಲಿಗಳು ತಕ್ಷಣವೇ ಹೂಬಿಟ್ಟು ಚೆಲುವಾಗಿ ಕಾಣುತ್ತಿವೆ. ಹೂವಾದ ಬಳಿಕ ಹಣ್ಣು ಬರಬೇಕಲ್ಲವೆ? ನೀರಲ ಗಿಡದಲ್ಲಿ ರಸಭರಿತ ಹಣ್ಣುಗಳು ಬಿಡಲಾರಂಭಿಸಿವೆ. ಜಾಲಿಯ ಗಿಡವು ಅತ್ಯಂತ ಗಟ್ಟಿಯಾದ ಬೊಡ್ಡೆಯನ್ನು ಹೊಂದಿರುವ ಮುಳ್ಳು ಗಿಡ. ಜಾಲಿಯ ಗಿಡವನ್ನು ದುರ್ಜನರಿಗೆ ಹೋಲಿಸುತ್ತಾರೆ. ಅದೂ ಸಹ ಮಿದುವಾಗಿ ಬಿಟ್ಟಿದೆ. ಇದೇನು ಸೃಷ್ಟಿವೈಚಿತ್ರ್ಯ ಎಂದು ಬೇಂದ್ರೆಯವರು ಬೆರಗಾಗುತ್ತಾರೆ!  ಇದು ವಿಶ್ವದ ಋತ, ಇದು ನಿಸರ್ಗದ ಸಾಮರಸ್ಯ, ಇದು ದೈವೀ ಚೈತನ್ಯದ ಕೃಪೆ ಎನ್ನುವುದು ಬೇಂದ್ರೆಯವರ ಅನುಭೂತಿಯಾಗಿದೆ.

ಪೃಥ್ವಿ, ಅಪ್‌, ತೇಜ, ಆಕಾಶ ಹಾಗು ವಾಯು ಎನ್ನುವ ಪಂಚಮಹಾಭೂತಗಳು ಈ ಸಾಮರಸ್ಯದ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದನ್ನು ನಾವು ಈ ಕವನದಲ್ಲಿ ಕಾಣಬಹುದು. 

Sunday, February 28, 2021

ಕನಸಿನ ಕೆನಿ.....................................ದ. ರಾ. ಬೇಂದ್ರೆ

ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:

ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು ಏನಂತ ಹೊಳೀವಲ್ತು.”

ಬೇಂದ್ರೆಯವರ ಕವನಗಳೂ ಹೀಗೆಯೇ ಇವೆ. ಅವುಗಳ ಅರ್ಥ ಓದುಗರಿಗೆ ಸರಳವಾಗಿ ಆಗುತ್ತದೆ. ಆದರೆ ಅವುಗಳ ಅಂತರಾರ್ಥ ಸರಳವಾಗಿ ಆಗುವುದಿಲ್ಲ.

 ತಮ್ಮ ಕವನಗಳು ಹುಟ್ಟುವ ಪರಿಯನ್ನು ಬೇಂದ್ರೆಯವರು ತಮ್ಮ ಕವನಗಳ ಮೂಲಕವೇ ಸೂಚಿಸಿದ್ದಾರೆ. ಉದಾಹರಣೆಗೆ, ‘ಭಾವಗೀತೆಹಾಗೂಗರಿಎನ್ನುವ ಕವನಗಳು.  ‘ಕನಸಿನ ಕೆನಿಎನ್ನುವ ಕವನದಲ್ಲಿ ತಮ್ಮ ಕವನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ಬೇಂದ್ರೆಯವರು ಸೂಚಿಸುತ್ತಿದ್ದಾರೆ. ಕನಸು ಒಳಮನಸ್ಸಿನಲ್ಲಿ ಹುಟ್ಟುತ್ತದೆ. ಈ ಒಳಮನಸ್ಸಿನಲ್ಲಿ ಗೂಡುಗಟ್ಟಿದ ಆದರ್ಶಗಳು ಹಾಗು ಅನುಭವಗಳೇ ಬೇಂದ್ರೆಯವರ ಕನಸುಗಳಾಗಿವೆ. ಹಾಲು ಕಾಯ್ದು, ಕೆನೆಯು ಮೇಲೆ ಬರುವಂತೆ ಬೇಂದ್ರೆಯವರ ಕನಸುಗಳು ತಪಿಸಿ, ತಾಪಿಸಿ, ಕೆನೆಗಟ್ಟಿ ಮೇಲೆ ಬರುತ್ತವೆ. ಆದುದರಿಂದ ಇವುಕನಸಿನ ಕೆನಿಗಳು.

ಬೇಂದ್ರೆಯವರ ಕವನಗಳನ್ನು ನೋಡಿರಿ. ಬಹುತೇಕ ಎಲ್ಲ ಕವನಗಳು ಮತ್ತೊಬ್ಬರೊಡನೆ ಆಪ್ತವಾಗಿ ಹಂಚಿಕೊಂಡಂತಹ ಕವನಗಳೇ ಆಗಿವೆ. ಇಲ್ಲಿ ಬೇಂದ್ರೆಯವರು ತಮ್ಮ ಕವನವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ತಮ್ಮ ಗೆಳೆಯನಿಗೆ ಹೇಳುತ್ತಿದ್ದಾರೆ. ಬೇಂದ್ರೆಯವರುಗೆಳೆಯಎಂದು ಸಂಬೋಧಿಸದೆ, ‘ಗೆಣೆಯಎಂದು ಕರೆಯುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ‘ಗೆಣೆಯಎನ್ನುವದು ಆತ್ಮೀಯ ಗೆಳೆಯನಿಗೆ ಸಂಬೋಧಿಸಬಹುದಾದ ಪದ. ಮುಖ್ಯವಾಗಿ ಹೆಣ್ಣು ತನ್ನ ಪ್ರಣಯಿ ಗೆಳೆಯನನ್ನು ಕರೆಯುವಾಗ ಹೇಳಬಹುದಾದ ಪದ. ಬೇಂದ್ರೆಯವರು ಇಲ್ಲಿ ಅರ್ಥವನ್ನು ಬಳಸುತ್ತಿಲ್ಲ. ಈತ ಆಪ್ತ ಸಹೃದಯ ರಸಿಕ ಎನ್ನುವ ಅರ್ಥದಲ್ಲಿಗೆಣೆಯಎಂದು ಬೇಂದ್ರೆಯವರು ಕರೆಯುತ್ತಿದ್ದಾರೆ.

ಇದೀಗ ಕನಸಿನ ಕೆನೆಯ ಒಂದೊಂದೇ ನುಡಿಯನ್ನು ವಿಶ್ಲೇಷಿಸೋಣ:

ಕಿವೀs ಚ್ಯಾsಚ ಬ್ಯಾsಡಾ ಗೆಣಿಯಾs

ಒಳ ಒಳ ಒಳ ಹೋಗಬೇಕೋ                      || ಪಲ್ಲ ||

 

ಬಳ್ಳ ಬಳ್ಳ ಸೆಲೀಯೊಳಗs ನೆಳ್ಳ ನೀಡಬ್ಯಾಡಾ ನಿಂತು

ಮುಳುಗು ಹಾಕು ಮೂರು ಒಳಗ ಒಳಗ            ||ಅನುಪಲ್ಲ||

 ಬೇಂದ್ರೆಯವರ ಕವವನ್ನು ಅರ್ಥ ಮಾಡಿಕೊಳ್ಳಲು ಕೇವಲ ಹೊರಗಿನಿಂದ ಕಿವಿ ಚಾಚಿದರೆ ಉಪಯೋಗವಿಲ್ಲ. ಕವನದ ಅಂತರಂಗದೊಳಗೆ ನುಸುಳಬೇಕು. ‘ಒಳ ಒಳ ಹೋಗಬೇಕೋ’!

ಬೇಂದ್ರೆಯವರು ತಮ್ಮ ಕವನವನ್ನು ಒಂದು ನೀರಿನ ಸೆಲೆಗೆ ಹೋಲಿಸುತ್ತಿದ್ದಾರೆ. ಬಳ್ಳ ಅಂದರೆ ಒಂದು ಅಳತೆ, ಕೊಳಗದ ಅರ್ಧಭಾಗ. ಇಲ್ಲಿ ಸೆಲೆಯು ಯಾವಾಗಲೂ ನೀರನ್ನು ಚಿಮ್ಮುತ್ತಿರುವ ಸೆಲೆ ಎನ್ನುವ ಅರ್ಥವನ್ನು ಕೊಡುತ್ತದೆ. ಭೂಮಿಯ ಆಳದಿಂದ ಚಿಮ್ಮುವ ಬುಗ್ಗೆಯು, ನಿಸರ್ಗಸಹಜವಾಗಿರುತ್ತದೆ. ಬೇಂದ್ರೆಯವರ ಕವನಗಳೂ ಸಹ ಈ ಬುಗ್ಗೆಗಳಂತೆ ಸಹಜಸ್ಫೂರ್ತಿಯಿಂದ ಚಿಮ್ಮುವ ಕವನಗಳು; ಬೌದ್ಧಿಕ ಕಸರತ್ತಿನಿಂದ ಬರೆಯುವ ಕವನಗಳಲ್ಲ.  

 ಇಂತಹ ಸೆಲಿಯ ಮ್ಯಾಲ ನೀನು ನಿಂತುಕೊಂಡರೆ ಅದರ ಮೇಲೆ ನಿನ್ನ ವ್ಯಕ್ತಿತ್ವದ ನೆರಳು ಬೀಳುತ್ತದೆ. ನಿನಗೆ ಮೇಲುಮೇಲಿನ ಅರ್ಥವಷ್ಟೇ ಆಗುತ್ತದೆ; ಅದರ ನಿಜವಾದ ಭಾವವನ್ನು ನೀನು ತಿಳಿಯಲಾರೆ. ಸೆಲಿಯೊಳಗ ನೀನು ಆಳವಾಗಿ  ಮುಳುಗು ಹಾಕಬೇಕು ಎಂದು ಬೇಂದ್ರೆಯವರು ಹೇಳುತ್ತಾರೆ. ಅಂದರೆ ನಿನ್ನ ವೈಯಕ್ತಿಕ ಭಾವವನ್ನು ಕವನದ ಮೇಲೆ ಆರೋಪಿಸಬೇಡ; ಕವನದ ಅಂತರಾರ್ಥವನ್ನು ತಿಳಿಯಲು ಅದರಲ್ಲಿ ನೀನು ಸಮರಸನಾಗಬೇಕು. ಇದು ಕವನದ ಅಂತರಂಗವನ್ನು ಅರಿಯುವ ರೀತಿ.

ಮೂರು ಸಲ ಮುಳುಗು ಹಾಕು ಎಂದು ಬೇಂದ್ರೆಯವರು ಏಕೆ ಹೇಳುತ್ತಾರೆ? ಶ್ರದ್ಧಾಳುಗಳು  ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವುದನ್ನು ನೀವು ನೋಡಿರಬಹುದು. ಪ್ರತಿ ಜೀವಿಗೂ ಸ್ಥೂಲದೇಹ, ಸೂಕ್ಷದೇಹ ಹಾಗು ಕಾರಣದೇಹ ಎನ್ನುವ ಮೂರು ದೇಹಗಳು ಇರುತ್ತವೆ. ಮೂರು ದೇಹಗಳ ಶುದ್ಧಿಗಾಗಿ ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವ ಪದ್ಧತಿ ಇದೆ. ಓದುಗನೂ ಸಹ ತನ್ನೆಲ್ಲ ಅಂತರಂಗವನ್ನು ಕವನದಲ್ಲಿ ಮುಳುಗಿಸಿಬೇಕು, ತೊಯ್ಯಿಸಬೇಕು. ಮೊದಲನೆಯ ಮುಳುಗಿನಲ್ಲಿ, ಬೇಂದ್ರೆಯವರ ಕವನದ ಮೇಲುನೋಟದ ಅರ್ಥವಾಗುತ್ತದೆ. ಎರಡನೆಯ ಮುಳುಗಿನಲ್ಲಿ, ಇನ್ನಿಷ್ಟು ಒಳಗೆ ಹೋದಾಗ, ಒಳಮನಸ್ಸಿನ ಭಾವ ತಿಳಿಯುತ್ತದೆ. ಮೂರನೆಯ ಮುಳುಗಿನಲ್ಲಿ, ತಳಮಟ್ಟವನ್ನು ಮುಟ್ಟಿದಾಗ ಕವನದ ಅಂತರಾತ್ಮದ ಅರ್ಥವಾಗುತ್ತದೆ

 ಹೀಂಗs ಮಾಡಬೇಕೂ ; ಹಾಂಗೂ ಮಾಡಬೇಕೂs

ಹ್ಯಾಂಗಾರ ಮಾಡು ಬೆಳ್ಳಬೆಳಗs

ರಸಾ ತೀರಿದ ಮ್ಯಾಲs | ಗಸಿ ಐತಿ ಕೆಳಗs

ಅದಕ್ಕೂ ಹೋಗಬೇಕು ಕೆಳಗs

ಇದನ್ನೆಲ್ಲಾ ಕೇಳಿದ ಬೇಂದ್ರೆಯವರ ಗೆಳೆಯ ಅವರಿಗೆ  ‘ಹಂಗಾದರ, ನಿನ್ನ ಕವನವನ್ನ ಹ್ಯಾಂಗ ತಿಳಕೊಬೇಕಪಾ?’ ಅಂತ ಕೇಳತಾನ. ಅದಕ್ಕ ಬೇಂದ್ರೆಯವರು ಹೇಳತಾರ: ‘ಹಿಂಗs ಮಾಡಬೇಕು ಅನ್ನೋ ಅಂತಹ ಒಂದು ವಿಧಾನ ಇಲ್ಲಪಾ. ನೀ ಹ್ಯಾಂಗರ ಮಾಡು. ಆದರ ಅರ್ಥ ಹೊಳಿಯೋ ಹಂಗ ಬೆಳ್ಳಗ, ಬೆಳ್ಳಗ ಮಾಡು.’ ಇಲ್ಲಿ ಬೆಳ್ಳಬೆಳಗ ಅನ್ನುವ ಪದಕ್ಕ ಇರುವ ಶ್ಲೇಷಾರ್ಥವನ್ನು ಗಮನಿಸಿರಿ. ಪಾತ್ರೆಯನ್ನು ತಿಕ್ಕುವುದಕ್ಕೆಪಾತ್ರೆಯನ್ನು ಬೆಳಗುಎಂದು ಹೇಳುತ್ತಾರೆ. ಅಲ್ಲದೆ ಬೆಳ್ಳಬೆಳಗು ಎನ್ನುವ ಪದವು ಮುಂಜಾವು ಎನ್ನುವ ಅರ್ಥವನ್ನೂ ಕೊಡುತ್ತದೆ.

ಕವನದ ಪದಾರ್ಥ ತಿಳಿದು, ಅದರ ರಸವನ್ನೆಲ್ಲ ಓದುಗನು ಹೀರಿಕೊಂಡ ಬಳಿಕ, ಮುಗಿಯಿತೆ?

ಜೇನನ್ನು ಹಿಂಡಿ, ಮೇಲಿನ ರಸವನ್ನು ಸಂಗ್ರಹಿಸಿದ ಬಳಿಕ ಸಹ, ಕೆಳಗೆಗಸಿಉಳಿದಿರುತ್ತದೆ. ಬೇಂದ್ರೆಯವರ ಕವನದಲ್ಲಿ ಮೇಲ್ಮೇಲಿನ ರಸಗ್ರಹಣಕ್ಕಿಂತ ಕೆಳಗೆ ಇಳಿಯಬೇಕು. ಅಂದರೆ ಕವನದ ಗೂಢಾರ್ಥ ಹೊಳೆಯುತ್ತದೆ.

ಬೇಂದ್ರೆಯವರ ಕವನ ಇರುವುದೇ ಹೀಗೇ. ತಿಳಿದರೂ ಸಹ ಹೊಳೆದಿರುವುದಿಲ್ಲ; ಹೊಳದರೂ ಸಹ ತಿಳಿದಿರುವುದಿಲ್ಲ. ಅದಕ್ಕಾಗಿ ಓದುಗನು ಒಳಗ, ಒಳಗ, ಕೆಳಗ, ಕೆಳಗ  ಇಳಿದು ಅನುಭವಿಸಬೇಕು.

 ಇನ್ನು ಮೂರನೆಯ ನುಡಿ ಹೀಂಗದ:

ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂ

ನೀ ಗಂಟು ಹಾಕಬ್ಯಾಡ, ನೀ ಹೊರಗs

ಸೆರಗೀಗ ಕಟ್ಟು ಸೆರಗು | ಮಿರಗಕ್ಕ ಎಲ್ಲೀ ಮೆರಗು?

ಬೆರಗಿನ್ಯಾಗ ಬೆರ್ತುಹೋಗ ತಿರುಗs

ಬೇಂದ್ರೆಯವರ ಕವನಕ್ಕ ಅನೇಕ ಪಾತಳಿಗಳು ಇರ್ತಾವ, ಅನೇಕ ಅರ್ಥಗಳು ಇರ್ತಾವ. ‘ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂಅಂತ ಬೇಂದ್ರೆಯವರು ಇದನ್ನs ಹೇಳತಾರ. ಈ ಪಾತಳಿಗಳನ್ನ ಒಂದರೊಳಗೊಂದು ಗಂಟು ಹಾಕಿ, ತಿಳಕೊಳ್ಳಲಿಕ್ಕೆ ಹೋಗಬ್ಯಾಡ; ಹಾಂಗ ಮಾಡಿದರ, ಅರ್ಥ ಹೋಗಿ ಅನರ್ಥ ಆಗತದ. ನೀ ಕವನದ ಪದರುಗಳ ಒಳಗ ಸಿಕ್ಕುಬೀಳಬೇಡ,  ಹೊರಗ ನಿಂತುಕೋ; ಆದರ, ಕವನದ ಅರ್ಥ ಮಾಡಿಕೊಳ್ಳಲಿಕ್ಕೆ ಸೆರಗು ಕಟ್ಟು ಅಂದರ ದೃಢಸಂಕಲ್ಪನಾಗು ಅಂತ ಬೇಂದ್ರೆಯವರು ಹೇಳತಾರ.

ಮಿರುಗುವುದು ಅಂದರೆ ಹೊಳೆಯುವುದು. ‘ಮೆರಗುಅಂದರ polish. ಸ್ವತಃ ಹೊಳೆಯುವ ಕವನಕ್ಕ polish ಬೇಕಾಗುವುದಿಲ್ಲ. ಹಾಗು ಆ ಕೆಲಸಕ್ಕ ಕೈ ಹಾಕಲೂ ಬಾರದು. ಆ ಕವನ ಓದುಗನ ಮನಸ್ಸನ್ನ ತಟ್ಟುವುದೇ ಅದರ ಕಾರ್ಯಸಿದ್ಧಿ. ಅವನಿಗೆ ಬೆರಗಿನ ಅನುಭವವನ್ನು ಕೊಡುವುದೇ ಕವನದ  ಮೇಲ್ಮೆ. ಆ ಕವನ ನೀಡುವ ಬೆರಗಿನೊಳಗ, ಓದುಗ ತಿರುತಿರುಗಿ ಅಂದರ ಪುನಃಪುನಃ ಬೆರತು ಹೋಗಬೇಕು. ಕವನದಲ್ಲಿ ಓದುಗ ಒಂದಾಗಿ ಹೋಗಬೇಕು; ಇದೇ ಕವನದ ಸಾರ್ಥಕತೆ. ಶ್ರೇಷ್ಠ ಕವನವು ಓದುಗನನ್ನು ಬೆರಗುಗೊಳಿಸುತ್ತದೆ. ಹೀಗಾಗಲಿಕ್ಕೆ ಓದುಗನ ಮನಸ್ಸೂ ಸಹ ಪಾಕಗೊಂಡಿರಬೇಕು.

 ಮುಂದಿನ ನುಡಿ ಹಿಂಗದ:

ತಿರಗs ತಿರುಗತಿರು | ತಿರುಗೂಣಿ ತಿರುಗುsಣಿ

ಮಣಿ ಮಣಿ ಪೋಣೀಸಿsದ ಕೊರಗs

ದುರುಗಮ್ಮ ದುರುದೂರು | ಮರುಗಮ್ಮ ಮಳಿನೀರು

ಶಾಕಾ ಪಾಕಾ ಮಣ್ಣಿನ ಕಾವಿನೊಳಗs

 

ತನ್ನ  ಕವನದ ತಿರುಗುಣಿಯೊಳಗ ಮತ್ತೆ ಮತ್ತೆ  ಗಿರ್ಕಿ ಹೊಡೆಯುತ್ತ ಇರು ಎಂದು ಬೇಂದ್ರೆಯವರು ಓದುಗನಿಗೆ ಹೇಳ್ತಾರ. ಒಂದs ಓದಿಗೆ ತನ್ನ ಒಳಗನ್ನ ಬಿಟ್ಟು ಕೊಡೋ ಕವನ ಅಲ್ಲ ಇದು.  ಅಂದರ ಕವನ ಎಂಥಾದದ? ಇದುಮಣಿ ಮಣಿ ಪೋಣೀಸಿs ಕೊರಗು!’  ಸುಬದ್ಧವಾಗಿ ಪೋಣಿಸಿದ ಮಣಿಹಾರ ಎಷ್ಟು ಛಂದ ಕಾಣಸ್ತದನೋ, ಅಷ್ಟs ಛಂದ ಅದ ಬೇಂದ್ರೆಕವನ. ಆದರ ಮಣಿಗಳು ಕೊರಗಿನ ಮಣಿಗಳು. ಮಣಿಗಳ ಒಳಗ ವಿಷಾದ ತುಂಬೇದ.

 ದುರಗಮ್ಮ ಹಾಗು ಮರಗಮ್ಮ ಎನ್ನುವ ಎರಡು ಪ್ರತಿಮೆಗಳನ್ನು ಬಳಸಿ, ಬೇಂದ್ರೆಯವರು ತಮ್ಮ ಬದುಕಿನ ಸುಖದುಃಖಗಳನ್ನು ಹೇಳ್ತಾರ. ದುರಗಮ್ಮ ಎನ್ನುವ ದೇವತೆ ದುರುದುರು ಉರಿಯುತ್ತಿರುತ್ತಾಳೆ. ಮರಗಮ್ಮ ಯಾವಾಗಲೂ ಮರಗುತ್ತಲೇ ಇರುತ್ತಾಳೆ. ಇವಳ ಕಣ್ಣಿರೇ ಮಳಿಯಾಗುತ್ತದೆ. ಆದರೆ ದುರಗಮ್ಮ ಹಾಗು ಮರಗಮ್ಮ ಇಬ್ಬರೂ ದೇವತೆಗಳು. ಅವರು ಕೊಡುವ ಸಂಕಷ್ಟಗಳಿಂದಲೇ, ಬದುಕು ಚಿಗುರುತ್ತದೆ; ಬಾಳಿನಲ್ಲಿ ಸಾರ್ಥಕತೆ ಸಿಗುತ್ತದೆ.

 ದುರಗಮ್ಮ ಸೂರ್ಯನಂತಿದ್ದರೆ, ಮರಗಮ್ಮ ಮಳೆದೇವರಂತಿದ್ದಾಳೆ. ಬೇಸಿಗೆಯ ಉರಿ ಹಾಗು ಮಳೆಗಾಲದ ಮಳೆನೀರು ಭೂಮಿಯ ಮೇಲೆ ಬಿದ್ದು, ಒಳಗ ಇಳಿದಾಗ, ಏನಾಗತದ? ಮಣ್ಣು ಅಂದರೆ ನಮ್ಮ ಬದುಕು ತನ್ನ ಕಾವಿನಿಂದ ಅಂದರೆ ಅನುಭವಗಳಿಂದ ಶಾಕವನ್ನು (ಸಸಿಯನ್ನು) ಹುಟ್ಟಿಸತದ. ಶಾಕವೇ ಮುಂದೆ ಪಾಕವಾಗುತ್ತದೆ. ಪಾಕವೇ ಬೇಂದ್ರೆಕವನ. ಇಂತಹ ಕವನವನ್ನು ತಿಳಿದುಕೊಳ್ಳಲು, ಓದುಗನು ಬೇಂದ್ರೆಯವರ ಭಾವದೊಳಗ ಇಳಿಯಬೇಕಾಗ್ತದ.

ಇದೀಗ ಕೊನೆಯ ನುಡಿ. ಇಲ್ಲಿಯವರೆಗೆ ತಮ್ಮ ಕವನಗಳನ್ನು ಅರ್ಥ ಮಾಡಿಕೊಳ್ಳುವ ಬಗೆಗೆ ಹೇಳಿದ ಬೇಂದ್ರೆಯವರು, ಇದೀಗ ಓದುಗನಿಗೆ ಒಂದು ಸಿಹಿಯಾದ ಆದರೆ ಸುಲಭವಲ್ಲದ ಆಹ್ವಾನವನ್ನು ನೀಡುತ್ತಾರೆ.

ತೂ | ತೂತೂ | ತೂತೂ | ಹೂ ಹುತೂತುತೂ

| ಬಾ | ಅತ್ತs | ಅತ್ತs | ಅತ್ತsತ್ತs |

ಸಾರೀಗಮ್ಮತ್ತs | ಇದ್ದs ಹಿಮ್ಮತ್ತs

ಹಿಕಮತ್ತು ಮತ್ ಮತ್ ಮತ್ತs.

 

`ತೂ, ತೂ, ಹುತೂತೂ…’ ಎನ್ನುವುದುಹುಡತೂತು’ (=ಕಬಡ್ಡಿ) ಆಟದಲ್ಲಿ ಹೇಳುವ ಉಲಿ. ‘ಕಬಡ್ಡಿ, ಕಬಡ್ಡಿ….’ ಎನ್ನುವ ಬದಲಾಗಿಹುತೂತೂ….’ ಎಂದು ಹೇಳುತ್ತಾರೆ. ಬೇಂದ್ರೆಯವರು ಹೇಳುವ ಆಟದಲ್ಲಿ ಒಂದು ಭಾಗದಲ್ಲಿ ಕವಿ ನಿಂತಿದ್ದಾನೆ. ಮತ್ತೊಂದು ಭಾಗದಲ್ಲಿ ಓದುಗ ನಿಂತಿದ್ದಾನೆಬೇಂದ್ರೆಯವರು ರಸಿಕ ಓದುಗನಿಗೆ ಆಹ್ವಾನ ನೀಡುತ್ತಿದ್ದಾರೆ : ‘ಬಾ ಇನ್ನೂ ಹತ್ತರ ಬಾ. ನನ್ನ ಕವನದಾಗ ನಿನ್ನ ಹಿಡದ ಹಾಕತೇನಿ, ಬಾ! ಇದು ಸಾರಿಗಮನಿಸ ಎನ್ನುವ ಸಂಗೀತದ ಮೇಳ.  ಸಾರೀ(=ಇದೆಲ್ಲಾ) ಗಮ್ಮತ್ತ(=ಮೋಜು). ನಿನಗ ಧೈರ್ಯ (=ಹಿಮ್ಮತ್) ಇದ್ದರ, ಹಿಕಮತ್ತ (=ಕಾರ್ಯಯತ್ನ) ಇದ್ದರ, ಮತ್ತೇ ಮತ್ತೇ ಪ್ರಯತ್ನಿಸು. ಕವಿಯೊಡನೆ ಕಬಡ್ಡೀ ಆಡುಇಲ್ಲಿಮತ್ಎಂದರೆಬೇಡಎನ್ನುವ ಅರ್ಥವೂ ಸೂಚಿತವಾಗಿದೆ!

 ವರಕವಿಗಳು ತಮ್ಮ ಕವನಗಳ ಮೂಲಕ ಓದುಗನೊಡನೆ ನಿರಂತರವಾಗಿ ಕಬಡ್ಡಿಯಾಡಲು ಬಯಸುತ್ತಾರೆ. ಅವರ ಕವನಗಳ ತೆಕ್ಕೆಯಲ್ಲಿ ಹಿಡಿಬಿದ್ದು ಸೋಲುವುದು, ಗೆಲ್ಲುವುದು ಓದುಗನಿಗೆ ಇಷ್ಟವಾದ ಸಂಗತಿಯೇ ಆಗಿದೆ.