Wednesday, July 30, 2014

ಸೂಜಿಯೇ ನೀನು ಸೂಜಿಯೇ-------ಶಿಶುನಾಳ ಶರೀಫರುಸೂಜಿಯೇ ನೀನು ಸೂಜಿಯೇ
ಈ ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ           ||ಪಲ್ಲ||

ಹರಿಯ ಶಿರದ ಮ್ಯಾಲೆ ಮೆರೆದಂಥ ಸೂಜಿಯೇ
ಹರನ ಕಪಾಲದಿ ಬೆರೆದಂಥ ಸೂಜಿಯೇ
ಮರವಿಯ ಅರವಿಯ ಹೊಲಿದಂಥ ಸೂಜಿಯೇ
ಮರೆ ಮೋಸವಾಗಿ ಮಾಯವಾದಂಥ ಸೂಜಿಯೇ    ||೧||

ತಂಪುಳ್ಳ ಉಕ್ಕಿನೋಳ್ ಹುಟ್ಟಿದ ಸೂಜಿಯೇ
ಶಿಂಪಿಗರಣ್ಣಗೆ ಬಲವಾದ ಸೂಜಿಯೇ
ಇಂಪುಳ್ಳ ದಾರಕ್ಕೆ ಸೊಂಪುಗೂಡಿಸುವಂಥ
ಕಂಪನಿ ಸರಕಾರ ವಶವಾದ ಸೂಜಿಯೇ                ||೨||

ಅಂಗಳ ಬೈಲೊಳು ಹೋದಂಥ ಸೂಜಿಯೇ
ಸಿಂಗಾರದಂಗಿಯ ಹೊಲಿವಂಥ ಸೂಜಿಯೇ
ತುಂಗಶಿಶುನಾಳಧೀಶನ ಸೇವಕ
ರಂಗಿಲಿ ಹುಡುಕಲು ಸಿಗದಂಥ ಸೂಜಿಯೇ                        ||೩||

ಶಿಶುನಾಳ ಶರೀಫರ ಬಹುತೇಕ ಗೀತೆಗಳು ಭೌತಿಕ ವರ್ಣನೆಯಿಂದ ಪ್ರಾರಂಭವಾಗಿ ಪಾರಭೌತಿಕ ವರ್ಣನೆಯಲ್ಲಿ ಕೊನೆಗೊಳ್ಳುತ್ತವೆ. ಆದರೆ ಈ ಕವನವು ಪ್ರಾರಂಭವಾಗುವುದು ಪೌರಾಣಿಕ ವರ್ಣನೆಯಿಂದ; ಮಧ್ಯದಲ್ಲಿ ವರ್ಣಿಸುವುದು ಪ್ರಸ್ತುತ ವ್ಯಾವಹಾರಿಕ ಕಾಲದ ಮಾತನ್ನು. ಅಂತ್ಯಗೊಳ್ಳುವುದು ಪಾರಮಾರ್ಥಿಕ ಸಂದೇಶದೊಂದಿಗೆ. ಈ ವಿಪರ್ಯಾಸಕ್ಕೆ ಕಾರಣ ಇಂತಿದೆ:

ಸೂಜಿ ಎಂದರೆ ಒಂದು ಪುಟ್ಟ ಭೌತಿಕ ವಸ್ತು. ಆದರೆ  ಅದರ ಮೂಲಕ ಶರೀಫರು ಒಂದು ಮಹತ್ವದ ವಿಷಯವನ್ನು ತಿಳಿಸಹೊರಟಿದ್ದಾರೆ. ಆದುದರಿಂದ ಶರೀಫರು ಈ ಪುಟ್ಟ ಸೂಜಿಯನ್ನು ನಮ್ಮ ಪೌರಾಣಿಕ ದೇವತೆಗಳ ಸಂಗಾತಿಯನ್ನಾಗಿ ಮಾಡಿ, ಆ ಸೂಜಿಗೆ ಘನತೆಯನ್ನು ತಂದು ಕೊಡುತ್ತಿದ್ದಾರೆ. ಇದರ ಹಿನ್ನೆಲೆ ಹೀಗಿದೆ:

ಬ್ರಿಟಿಶರು ಭಾರತವನ್ನು ಆಕ್ರಮಿಸುತ್ತಿದ್ದಂತೆ, ಭಾರತದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿ, ಬ್ರಿಟನ್ನದ ತಿಜೋರಿಯನ್ನು ತುಂಬಲು ಪ್ರಾರಂಭಿಸಿದರು. ಭಾರತೀಯರು ಕೇವಲ ಕಚ್ಚಾ ವಸ್ತುಗಳನ್ನು ಉತ್ಪಾದಿಸಿ, ಬ್ರಿಟನ್ನಿಗೆ ಸೋವಿಯಾಗಿ ಒದಗಿಸಬೇಕು. ಬ್ರಿಟನ್ನಿನಲ್ಲಿ ಉತ್ಪಾದಿಸಿದ ವಸ್ತುಗಳು ದುಬಾರಿ ದರದಲ್ಲಿ ಭಾರತದಲ್ಲಿ ಮಾರಾಟವಾಗಬೇಕು. ಇಂತಹ ರಕ್ತಶೋಷಣೆಯ ಅರ್ಥನೀತಿಯನ್ನು ಬ್ರಿಟಿಶ್ ಪ್ರಭುತ್ವವು ತಮ್ಮ ವಸಾಹತುಗಳಲ್ಲಿ ಪ್ರಾರಂಭಿಸಿತು. ಗಾಂಧೀಜಿಯವರ ಚರಕಾ ಚಳವಳಿಯು ಇಂತಹ ಕುಹಕ ನೀತಿಗೆ ಸೆಡ್ಡು ಹೊಡೆದು ನಿಂತಿದ್ದು ನಮ್ಮ ಸ್ವಾತಂತ್ರ್ಯ ಹೋರಾಟದ ಒಂದು ಭಾಗವಾಗಿದೆ.

ಈ ನೀತಿಯ ದುಷ್ಪರಿಣಾಮವನ್ನು ಅನುಭವಿಸಿದವರು ಅನೇಕರು. ಉದಾಹರಣೆಗೆ  ಭದ್ರಾವತಿಯ(-- ಆ ಕಾಲದಲ್ಲಿ ಇದರ ಹೆಸರು ‘ಬೆಂಕಿಪುರ’ ಎಂದಿತ್ತು--) ಆಸುಪಾಸಿನ ಕಬ್ಬಿಣದ ಕೈಗಾರಿಕೆಗಳನ್ನು ಬ್ರಿಟಿಶರು ನಿರ್ಬಂಧಿಸಿದರು. ಅದರಿಂದಾಗಿ ಅನೇಕ ಕಮ್ಮಾರರು ತಮ್ಮ ಬದುಕನ್ನೇ ಕಳೆದುಕೊಂಡರು. ಇಂತಹ ದುಷ್ಕೃತ್ಯಗಳನ್ನು ಕಂಡು, ಪರಿತಪಿಸಿದವರಲ್ಲಿ ಶರೀಫರೂ ಒಬ್ಬರು. ಭಾರತದಲ್ಲಿ ಸೂಜಿಗಳನ್ನು ಸಹ ತಯಾರಿಸಕೂಡದು; ಒಂದು ಪುಟ್ಟ ಸೂಜಿಯೂ ಸಹ ಬ್ರಿಟನ್ನಿನಿಂದಲೇ ಭಾರತಕ್ಕೆ ಆಮದಾಗಿ ಬರಬೇಕು ಎನ್ನುವ ಕಟ್ಟಳೆಯನ್ನು ಬ್ರಿಟಿಶರು ವಿಧಿಸಿದಾಗ ಸೂಜಿ ತಯಾರಕರು ಮೌನವಾಗಿ ಈ ಕಟ್ಟಳೆಗೆ ಶರಣಾಗಿರಬಹುದು. ಆದರೆ ಶರೀಫರು ಮಾತ್ರ, ತಮ್ಮ ವ್ಯಥೆಗೆ ಕವನದ ರೂಪವನ್ನು ಕೊಟ್ಟರು. ಮಾಯದ ಸೂಜಿಯು ಅವರ ಗೀತೆಯಲ್ಲಿ ಮಾಯವಾದ ಸೂಜಿಯಾಯಿತು!

ಶರೀಫರ ತತ್ವಪದಗಳಲ್ಲಿ ವ್ಯಂಗ್ಯ ಇರುವದಿಲ್ಲ. ಆದರೆ ಈ ಗೀತೆಯು ತತ್ವಪದವಲ್ಲ. ಆದುದರಿಂದ ವ್ಯಂಗ್ಯವು ಈ ಗೀತೆಯ ಪಲ್ಲದಲ್ಲಿಯೇ ಕಾಣುತ್ತದೆ. ‘ಈ ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ’ ಎಂದು ಹಾಡುವಾಗ, ಶರೀಫರು ಬ್ರಿಟಿಶ್ ಪ್ರಭುತ್ವವನ್ನು ಅಣಕಿಸುತ್ತಿದ್ದಾರೆ. ಬ್ರಿಟಿಶ್ ಸರಕಾರವು ಒಂದು ಸೂಜಿಯನ್ನೂ ಸಹ ಬಿಡದೆ, ತನ್ನ ನಿರಂಕುಶ ಅಧಿಕಾರವನ್ನು ಭಾರತದಲ್ಲೆಲ್ಲ ಚಲಾಯಿಸಿದೆ ಎನ್ನುವುದು ಒಂದು ಅರ್ಥವಾದರೆ, ಈ ‘ತೇಜ’ ಅಂದರೆ ಈ ‘ಬಿಸಿ’ಯು ಭಾರತೀಯರನ್ನು ತಟ್ಟಿದೆ ಎನ್ನುವುದು ವಿಶೇಷ ಅರ್ಥವಾಗಿದೆ.

ಸೂಜಿ ನೋಡಲಿಕ್ಕೆ ಚಿಕ್ಕದು; ಅದರ ನಿರ್ಬಂಧದ ಹಿಂದಿನ ದುರ್ನೀತಿ ಮಹತ್ವದ್ದು ಎನ್ನುವುದನ್ನು ಅನ್ಯೋಕ್ತಿಯಿಂದ ತಿಳಿಸಲೆಂದೇ ಶರೀಫರು ಒಂದನೆಯ ನುಡಿಯಲ್ಲಿ ಈ ಕ್ಷುಲ್ಲಕ ಸೂಜಿಯ ಅಲೌಕಿಕ ಕಾರ್ಯವನ್ನು ವಿವರಿಸುತ್ತಾರೆ. ಸೃಷ್ಟಿಯ ನಿರ್ವಹಣೆಯು ಹರಿಯ ಕಾರ್ಯ. ಸೂಜಿಯ ಕಾರ್ಯವೂ ಸಹ ಬಟ್ಟೆಯ ನಿರ್ವಹಣೆ. ಆದುದರಿಂದಲೇ ಲೌಕಿಕ  ಮಾಯಾವಸನದ ಅಂದರೆ ಮಾಯಾಪ್ರಪಂಚದ ನಿರ್ವಹಣೆಯನ್ನು ಮಾಡುತ್ತಿರುವುದು ಈ ಸೂಜಿ. ಸೃಷ್ಟಿಯನ್ನು ಲಯಗೊಳಿಸುವುದು ಹರನ ಕೆಲಸ. ಶಿವನು ಬ್ರಹ್ಮನ ಒಂದು ಕಪಾಲವನ್ನು ತರಿದಾಗ, ಆ ಕಪಾಲವು ಅವನ ಹಸ್ತಕ್ಕೆ ಅಂಟಿಕೊಂಡಿತು. ಶರೀಫರು ಈ ಕಾರ್ಯದಲ್ಲಿಯೂ ಸಹ ಸೂಜಿಯು ಶಿವನೊಡನೆ ಭಾಗಿಯಾಗಿತ್ತು ಎಂದು ತಮಾಶೆ ಮಾಡುತ್ತಾರೆ. ಇಂತಹ ಸೂಜಿಯ ಸಹಾಯದಿಂದಲೇ ಶಿವನು ಮಾಯಾಪ್ರಪಂಚವನ್ನು ಲಯಗೊಳಿಸುತ್ತಾನೆ. ಎಂಥಾ ಮಹತ್ವದ ಸೂಜಿ ಇದು! ಇದೀಗ ಈ ಸೂಜಿಯು ಮರೆ, ಮೋಸದಿಂದ ಮಾಯವಾಗಿ ಹೋಗಿದೆ. ಈ ಕೈವಾಡವು ಬ್ರಿಟಿಶರದು ಎಂದು ಬಿಚ್ಚಿ ಹೇಳಬೇಕಾಗಿಲ್ಲ.

ಎರಡನೆಯ ನುಡಿಯಲ್ಲಿ ಶರೀಫರು ಪಾರಲೌಕಿಕದಿಂದ ಲೌಕಿಕಕ್ಕೆ ಇಳಿಯುತ್ತಾರೆ. ಸೂಜಿಯನ್ನು (ಆ ಕಾಲದಲ್ಲಿ ಭಾರತೀಯರು) ನಿರ್ಮಿಸುತ್ತಿದ್ದ ವಿಧಾನವೇನು? ಉಕ್ಕನ್ನು ಕಾಯಿಸಿ, ಹದವಾಗಿ ತಂಪುಗೊಳಿಸಿ ಸೂಜಿಯನ್ನು ನಿರ್ಮಿಸಬೇಕಾಗುತ್ತದೆ. ಈ ರೀತಿಯಾಗಿ ತಯಾರಾದ ಸೂಜಿಯನ್ನು ಉಪಯೋಗಿಸುವವನು ಬಟ್ಟೆ ಹೊಲಿಯುವ ಸಿಂಪಿಗನು.  ಈ ಎಲ್ಲ ಕೆಲಸಗಳು ನಿರಾಳವಾಗಿ ಸಾಗುತ್ತಿದ್ದಾಗ, ಈ ಸೂಜಿಯು  ಕಂಪನಿ ಸರಕಾರದ ವಶವಾಗಿರುವುದು ದುರದೃಷ್ಟಕರ.

ಕೊನೆಯ ನುಡಿಯಲ್ಲಿ ಶರೀಫರು ಮತ್ತೆ ತಮ್ಮ ಪಾರಮಾರ್ಥಿಕ ತತ್ವಕ್ಕೆ ಮರಳುತ್ತಾರೆ. ಬಯಲಾಗಿ ಹೋಗುವುದು ಎಂದರೆ ಮಾಯವಾಗುವುದು. ಲೌಕಿಕವಾಗಿ ಭಾರತೀಯರ ಕೈಯಿಂದ ಈ ಸೂಜಿ ಮಾಯವಾಗಿ ಬ್ರಿಟಿಶರ ಕೈವಶವಾಯಿತು. ಆದರೆ ಪಾರಲೌಕಿಕವಾಗಿ ಈ ಸೂಜಿ ನಮ್ಮಲ್ಲಿಯೇ ಇದೆ;  ‘ಸಿಂಗಾರದ ಅಂಗಿ’ಯನ್ನು ಅಂದರೆ ಅಲೌಕಿಕ ಅಂಗಿಯನ್ನು ಅದು ಹೊಲೆಯುತ್ತಲೇ ಇದೆ. ಆದರೆ ಅದು ಲೌಕಿಕ ಕಣ್ಣಿಗೆ ಬೀಳುವ ಸೂಜಿಯಲ್ಲ. ಶಿಶುನಾಳಾಧೀಶನ ಸೇವಕರಲ್ಲಿ ಹುಡುಕಿದರೂ ಸಹ, ಆ ಸೂಜಿಯು ಅಂದರೆ ಪರಮಾತ್ಮನ ಆ ಉಪಕರಣವು ಅದೃಶ್ಯವಾಗಿಯೇ ಇರುತ್ತದೆ.

ಈ ಕವನದ ಮೂಲಕ ಶರೀಫರು ತಮ್ಮ ಸುತ್ತಲಿನ ಸಾಮಾಜಿಕ ಹಾಗು ರಾಜಕೀಯ ಪರಿಸ್ಥಿತಿಯನ್ನು ಹೇಗೆ ಗ್ರಹಿಸುತ್ತಿದ್ದರು ಎನ್ನುವುದನ್ನು ನೋಡಬಹುದು. ಶರೀಫರ ಪ್ರಾಪಂಚಿಕ ಗ್ರಹಿಕೆ ಏನೇ ಇರಲಿ, ಅವರ ಮನಸ್ಸು ಸದಾಕಾಲ ಪಾರಮಾರ್ಥಿಕ ಒಳ ಅರ್ಥದ ಕಡೆಗೆ ಹರಿಯುತ್ತಿರುವುದು ಅವರ ಮನೋಧರ್ಮದ ಹಾಗು ಅವರ ಗೀತೆಗಳ ವೈಶಿಷ್ಟ್ಯವಾಗಿದೆ. ಆದುದರಿಂದಲೇ ಮಾಯವಾದ ಸೂಜಿಯು ಮಾಯದ ಸೂಜಿಯಾಗಿ ಅವರ ಕವನವನ್ನು ಹೆಣೆದಿದೆ!

(ಶರೀಫರ ಈ ಗೀತೆಯನ್ನು ನನಗೆ ಒದಗಿಸಿ, ನನ್ನೊಂದಿಗೆ ಚರ್ಚಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.)

Thursday, July 24, 2014

ವಂದೇ ಭಾರತಮ್-೨!


ನಮ್ಮ ಹದಿನೆಂಟು ಪುರಾಣಗಳು, ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಭಾರತದ ಇತಿಹಾಸವನ್ನು ವಿವರಿಸುವದಲ್ಲದೆ, ಆ ಕಾಲಘಟ್ಟದ ಸಾಮಾಜಿಕ ರೂಢಿಗಳನ್ನು ಹಾಗು ಪರಿಸ್ಥಿತಿಯನ್ನು ತೆರೆದು ತೋರಿಸುತ್ತವೆ. ಸಿಂಧು ಕೊಳ್ಳದ ನಾಗರಿಕತೆ ಹಾಗು ಆರ್ಯಾವರ್ತದ ನಾಗರಿಕತೆಯನ್ನು ಅರಿಯಲು ಇವು ಅನೇಕ ಸುಳಿವುಗಳನ್ನು ನೀಡುತ್ತವೆ. ಕೆಲವು ಉದಾಹರಣೆಗಳನ್ನು ಪರಿಶೀಲಿಸೋಣ:

(೧) ಹರಪ್ಪಾ, ಮೊಹೆಂಜೊದಾಡೊಗಳಲ್ಲಿ ದೊರೆತಂತಹ ಮುದ್ರಿಕೆಗಳಲ್ಲಿ  ನಮ್ಮ ಯೋಗೀಶ್ವರ ಶಿವನನ್ನು ಹೋಲುವ ಮುದ್ರಿಕೆ ಹಾಗು ವೃಷಭಮುದ್ರಿಕೆ ಲಭ್ಯವಾಗಿವೆ. ಕೈಲಾಸವಾಸಿ ಶಿವನೂ ಸಹ ವೃಷಭವಾಹನನೇ ಆದುದರಿಂದ ಈತನು ಸಿಂಧು ಸಂಸ್ಕೃತಿಯ ಯಜಮಾನ ವ್ಯಕ್ತಿಯೇ ಆಗಿರಬಹುದು. ಈ ಮುದ್ರಿಕೆಗಳಲ್ಲಿ ಅಥವಾ ಅಲ್ಲಿ ದೊರೆತ ಮಡಕೆಗಳ ಮೇಲಿನ ಕಲಾಕೃತಿ ಮೊದಲಾದವುಗಳಲ್ಲಿ ಕುದುರೆಯ ಚಿತ್ರ ಕಂಡು ಬಂದಿಲ್ಲ. ಆರ್ಯರು ಅಶ್ವಾರೋಹಿಗಳಾಗಿದ್ದುದು ಹಾಗು ಅಶ್ವಮೇಧ ಯಾಗಗಳನ್ನು ಮಾಡುತ್ತಿದ್ದುದು ತಿಳಿದ ಸಂಗತಿಯೇ ಆಗಿದೆ. ಆದುದರಿಂದ ಶಿವನು ಆರ್ಯೇತರನಾಗಿರುವ ಸಂಭವವೇ ಅಧಿಕವಾಗಿದೆ. ಶಿವನ ಮಗನ ಹೆಸರು ಗಣಪತಿ. ಅರ್ಥಾತ್ ಇವನು ಗಣ ಅಂದರೆ ‘ಜನಸಮುದಾಯ’ಗಳ ಧುರೀಣ, ಅಂದರೆ ಸಿಂಧೂ ಸಂಸ್ಕೃತಿಯಲ್ಲಿ ಇರಬಹುದಾದಂತಹ ‘ಸಮುದಾಯ ಆಡಳಿತ ಪದ್ಧತಿಯ’ ಪ್ರಮುಖ.

(೨) ಅಥರ್ವಣ ಸ್ತೋತ್ರದಲ್ಲಿ ಗಣಪತಿಯನ್ನು ‘ನಮೋ ವ್ರಾತಪತಯೇ’ ಎಂದು ಸಂಬೋಧಿಸಲಾಗಿದೆ. ವ್ರಾತರು ಅಂದರೆ ‘ಅಸಂಪ್ರದಾಯವಾದಿ’ಗಳು, heterodoxರು. ಅಥರ್ವಣವೇದವೂ ಸಹ ವೈದಿಕರು ಒಪ್ಪಿದ ವೇದವಲ್ಲ. ಇನ್ನು ಗಣಪತಿಯ ಹುಟ್ಟಿನ ಬಗೆಗೆ ಸ್ವಲ್ಪ ವಿಚಾರ ಮಾಡೋಣ. ಗಣಪತಿಯು ಪಾರ್ವತಿಪುತ್ರನು; ಶಿವನ ಜೈವಿಕ ಮಗನಲ್ಲ. ಅದರಂತೆ ಇವನ ಸೋದರನಾದ ಷಣ್ಮುಖನು ಶಿವಪುತ್ರನು; ಪಾರ್ವತಿಯ ಜೈವಿಕ ಮಗನಲ್ಲ. ಷಣ್ಮುಖನನ್ನು ಕೃತ್ತಿಕಾ ಮೊದಲಾದ ಆರು ತಾಯಂದಿರು ಪೋಷಿಸಿದ್ದರಿಂದಲೇ ಈತನಿಗೆ ಷಣ್ಮುಖ, ಕಾರ್ತಿಕೇಯ ಮೊದಲಾದ ಹೆಸರುಗಳು ಬಂದಿವೆಯಷ್ಟೇ. ಈ ಸಂಗತಿಯು ಆ ಕಾಲದ ಕುಟುಂಬವ್ಯವಸ್ಥೆಯ ಮೇಲೆ ಬೆಳಕನ್ನು ಬೀರುವದಲ್ಲವೆ?

(೩) ಪಾರ್ವತಿಯು ಹಿಮವಂತನ ಮಗಳು. ಪಾರ್ವತಿಯ ಸವತಿಯಾದ ಗಂಗೆಯೂ ಸಹ ಹಿಮವಂತನ ಮಗಳೇ! ಮಹಾಭಾರತಕ್ಕೆ ಕಾರಣನಾದ(!) ಶಂತನು ಮಹಾರಾಜನನ್ನು ಮದುವೆಯಾದ ಇವಳು ತನ್ನ ಏಳು ಮಕ್ಕಳನ್ನು ಗಂಗೆಯ ಮಡಲಿಗೆ ಅರ್ಪಿಸಿದಳು.
ಎಂಟನೆಯ ಮಗನಾದ ದೇವವ್ರತ(ಭೀಷ್ಮ)ನನ್ನು ಶಂತನುವಿಗೆ ಒಪ್ಪಿಸಿ ಇವಳು ತನ್ನ ತವರಿಗೆ ಮರಳಿ ಹೋದಳು. ಅರ್ಥಾತ್ ತನ್ನ ಮೊದಲ ಏಳೂ ಮಕ್ಕಳನ್ನು ಇವಳು ತನ್ನ ಕುಲದವರ ಮಡಿಲಿಗೆ ಒಪ್ಪಿಸಿದ್ದು, ಆನಂತರ ತಾನೂ ಸಹ ಅಲ್ಲಿಗೇ ಮರಳಿದಳು.
ಗಂಗೆ ಎಂದರೆ ಓರ್ವ ನಿರ್ದಿಷ್ಟ ಸ್ತ್ರೀ ಆಗಿರದೆ, ಗಂಗಾಕುಲಕ್ಕೆ ಸೇರಿದ ಯಾವುದೇ ಹೆಣ್ಣು ಮಗಳು ಆಗಿರಬಹುದು.
(ಕರ್ನಾಟಕದಲ್ಲಿ ಗಂಗಾಮತಸ್ಥರು, ಹಾಲುಮತಸ್ಥರು ಇರುವುದನ್ನು ಗಮನಿಸಬೇಕು.)

(೪) ಅಂಬಿಗರ ಹುಡುಗಿಯಾದ ಮತ್ಸ್ಯಗಂಧಿಯನ್ನು ಪರಾಶರ ಮುನಿಯು ನದಿಯ ಮಧ್ಯದಲ್ಲಿಯೇ ದೋಣಿಯಲ್ಲಿ ಕೂಡಿದ್ದು, ಅವಳಿಗೆ ವ್ಯಾಸ ಮಹರ್ಷಿ ಹುಟ್ಟಿದ್ದು ಇವೂ ಸಹ  ಎಲ್ಲರಿಗೂ ತಿಳಿದದ್ದೇ.

ಯಾವುದೇ ಪೂರ್ವಾಗ್ರಹವಿಲ್ಲದೇ ಈ ಎಲ್ಲ ಘಟನೆಗಳನ್ನು ಪರಾಮರ್ಶಿಸಿದಾಗ ಒಂದು ವಿಷಯ ಹೊಳೆಯುತ್ತದೆ: ಈ ಕಾಲಘಟ್ಟದಲ್ಲಿ ಹಿಮಾಲಯದಲ್ಲಿ ಹಾಗು ಗಂಗಾಕೊಳ್ಳದ ಪ್ರದೇಶದಲ್ಲಿ ನೆಲೆಯಾದ ಆರ್ಯೇತರ ಜನಾಂಗವು ‘ಸಮುದಾಯ ಪ್ರಧಾನ’ ಜನಾಂಗವಾಗಿತ್ತು. ಈ ಜನಾಂಗದಲ್ಲಿ ‘ಒಬ್ಬ ಗಂಡ, ಒಬ್ಬ ಹೆಂಡತಿ’ ಎನ್ನುವಂತಹ ದಾಂಪತ್ಯವು ರೂಢಿಯಲ್ಲಿ ಇರಲಿಲ್ಲ. ಸಮುದಾಯದಾಂಪತ್ಯವೇ ಅವರಲ್ಲಿ ರೂಢವಾಗಿತ್ತು. ಬಹುಶಃ ‘ವಿವಾಹ’ ಎನ್ನುವ ಪರಿಕಲ್ಪನೆಯೇ ಅವರಲ್ಲಿ ಇರಲಿಲ್ಲ. ಸಮುದಾಯದಲ್ಲಿ ಜನಿಸಿದ ಮಕ್ಕಳಿಗೆ ಗಂಡಸರೆಲ್ಲರೂ ತಂದೆಯ ಸ್ಥಾನದಲ್ಲಿ ಹಾಗು ಸ್ತ್ರೀಯರೆಲ್ಲರೂ ತಾಯಿಯ ಸ್ಥಾನದಲ್ಲಿ ಇರುತ್ತಿದ್ದರು. ಮಧ್ಯಪ್ರದೇಶದಲ್ಲಿ ಇರುವ ಬಸ್ತರ ಮೂಲನಿವಾಸಿ ಸಮುದಾಯದಲ್ಲಿಯೂ ಸಹ ‘ಸಮುದಾಯ ದಾಂಪತ್ಯ’ ಪದ್ಧತಿಯು ರೂಢಿಯಲ್ಲಿತ್ತು, ಈಗಲೂ ಇರಬಹುದು.

ಈ ಕಾಲಘಟ್ಟದ ಆರ್ಯರಲ್ಲಿ ‘ಒಬ್ಬ ಗಂಡ, ಅನೇಕ ಹೆಂಡಿರು’ ಪದ್ಧತಿಯ ವೈವಾಹಿಕ ಜೀವನವು ರೂಢಿಯಲ್ಲಿತ್ತು. ಆದರ್ಶಪುರುಷನೆನಿಸಿದ ಶ್ರೀರಾಮಚಂದ್ರನೇನೊ ಏಕಪತ್ನೀವ್ರತಸ್ಥನಾಗಿದ್ದ. ಆದರೆ ಅವನ ತಂದೆ ದಶರಥ ಮಹಾರಾಜನಿಗೆ ಮೂರು ಜನ ಪಟ್ಟದ ರಾಣಿಯರಲ್ಲದೆ ಮೂರುನೂರಾಅರುವತ್ತು ಜನ ದಾಸಿಯರು ಇದ್ದರು. ರಾಮಾಯಣದ ಕಥೆ ಹೀಗಾದರೆ, ಮಹಾಭಾರತದಲ್ಲಿ ಐದು ಜನ ಗಂಡಂದಿರು, ಒಬ್ಬಳೇ ಹೆಂಡತಿ!

ಇಂತಹ ವಿರೋಧಾಭಾಸದ ರೂಢಿಗಳಿಂದಲೇ, ಧರ್ಮರಾಜನಿಗೆ ‘ಯಾವುದು ಧರ್ಮ?’ ಎನ್ನುವ ಸಂದೇಹವು ಯಾವಾಗಲೂ ಕಾಡುತ್ತಿತ್ತು. ಕುರುಕ್ಷೇತ್ರದ ಯುದ್ಧವು ನಡೆದಾಗ, ಭೀಷ್ಮಪಿತಾಮಹನು ಶರಪಂಜರದ ಮೇಲೆ ನರಳುತ್ತ ಮಲಗಿದ ಸಂದರ್ಭದಲ್ಲಿ, ಅವನನ್ನು ಭೆಟ್ಟಿಯಾಗಲು ಬಂದಂತಹ ಧರ್ಮರಾಜನು ಅವನಿಗೆ ಕೇಳುವ ಪ್ರಶ್ನೆ ಹೀಗಿದೆ?’..”ಕೋ ಧರ್ಮ:?”
(“ಯಾವುದು ಧರ್ಮ?”)
ಇದಕ್ಕೆ ಭೀಷ್ಮನ ಉತ್ತರ ಹೀಗಿದೆ: “ಆಚಾರ: ಪ್ರಥಮೋ ಧರ್ಮಃ.” (=ಆಚಾರವೇ ಧರ್ಮ). ಆಚಾರ ಎನ್ನುವ ಪದಕ್ಕೆ ನಾವು ಸನ್ನಡತೆ ಎಂದು ಹೇಳಬಹುದು. ‘ಸನ್ನಡತೆಯೇ ಧರ್ಮ’ ಎಂದು ಘೋಷಿಸುವ ಭೀಷ್ಮನು ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಕಣ್ಣು ತೆರೆದುಕೊಂಡೇ ಕೂತಿದ್ದೇಕೆ ಎನ್ನುವ ಸಂದೇಹ ಉದ್ಭವಿಸಬಹುದು. ಇದಕ್ಕೆ ಉತ್ತರವು ಸ್ಪಷ್ಟವಿದೆ. ಆ ಕಾಲದಲ್ಲಿ ಜೂಜಾಡುವುದು ಹಾಗು ಹೆಂಡತಿ, ಮಕ್ಕಳನ್ನು ಪಣವಾಗಿಡುವುದು ಇವು ಸಮಾಜದಿಂದ ಸಮ್ಮತಿಸಲ್ಪಟ್ಟ ರೂಢಿಗಳಾಗಿದ್ದವು. ದಾಸಿಯರನ್ನು ಸಾರ್ವಜನಿಕವಾಗಿ ಬತ್ತಲೆ ಮಾಡುವ ಅಧಿಕಾರವು ಅವಳನ್ನು ಗೆದ್ದವನಿಗೆ ಅಥವಾ ಕೊಂಡವನಿಗೆ ಇತ್ತು! ಆದುದರಿಂದಲೆ ಜೂಜಾಟದಲ್ಲಿ ಹೆಂಡತಿಯನ್ನು ಪಣಕ್ಕಿಟ್ಟು ಸೋತವನು ‘ಧರ್ಮರಾಜ’ನಾದನು; ತುಂಬಿದ ಸಭೆಯಲ್ಲಿ ಅವಳ ವಸ್ತ್ರಾಪಹರಣವನ್ನು ತಡೆಯದ ಭೀಷ್ಮಪಿತಾಮಹನು ‘ಧರ್ಮಜ್ಞಾನಿ’ಯಾದನು! (ವೈಯಕ್ತಿಕ ಹಾಗು ಸಾಮಾಜಿಕ ನಡೆವಳಿಕೆಗಳನ್ನು ನಿರ್ದಿಷ್ಟಗೊಳಿಸುವ ‘ಮನುಸ್ಮೃತಿ’ ಬಹುಶಃ ಮಹಾಭಾರತದ ನಂತರ ರಚಿತವಾಯಿತು.)

‘ಸತ್ಯ ಹರಿಶ್ಚಂದ್ರ’ ಎಂದು ನಾವು ಕೊಂಡಾಡುವ ಹರಿಶ್ಚಂದ್ರನು ಮಾಡಿದ್ದೇನು? ತನ್ನ ಹೆಂಡತಿ ಹಾಗು ಮಗನನ್ನು ಸಾಲ ತೀರಿಸುವ ಉದ್ದೇಶದಿಂದ ಮಾರಾಟ ಮಾಡಲಿಲ್ಲವೆ? ಇಂತಹ ಮಹಾರಾಜನನ್ನು ಹೊಗಳುತ್ತಲೇ ನಾವು ಅವನ ಹೆಂಡತಿಯ ಹಾಗು ಮಗನ ಸ್ವತಂತ್ರತೆಯ ಹಕ್ಕುಗಳನ್ನು ಕಡೆಗಾಣಿಸುತ್ತಿಲ್ಲವೆ? ಒಟ್ಟಿನಲ್ಲಿ ಹೆಣ್ಣು ಮಗಳು ಆ ಕಾಲಘಟ್ಟದಲ್ಲಿ ಕೇವಲ ಮಾರಾಟದ ಹಾಗು ಮಕ್ಕಳನ್ನು ಹೆರುವ ವಸ್ತುವಾಗಿದ್ದಳು, ಇಲ್ಲವೆ ಭೋಗದಾಸಿಯಾಗಿದ್ದಳು.  ಗುರುದಕ್ಷಿಣೆಗಾಗಿ ತನ್ನ ಹೆಂಡತಿಯನ್ನು ಮೂರು ಜನರಿಗೆ ಪ್ರತ್ಯೇಕ ಸಮಯಗಳಲ್ಲಿ ವರ್ಷಭೋಗ್ಯಕ್ಕಾಗಿ ಒತ್ತೆ ಇಟ್ಟ ಗಾಲವನ ಕಥೆಯನ್ನು ಇಲ್ಲಿಓದಬಹುದು. 

ಈ ಕಾಲಘಟ್ಟದಲ್ಲಿ ‘ವಾನರ ಸಮುದಾಯದಲ್ಲಿ’ ಇದ್ದಂತಹ ರೂಢಿಗಳೇನು? ವಾಲಿ ಹಾಗು ಸುಗ್ರೀವರ ಕಥೆ ರಾಮಾಯಣದಲ್ಲಿ ಬರುತ್ತಿರುವದಷ್ಟೆ. ತನ್ನ ಅಣ್ಣ ವಾಲಿಯು ಸತ್ತನೆಂದು ಭಾವಿಸಿದ ಸುಗ್ರೀವನು ಅವನ ಹೆಂಡತಿ ತಾರೆಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಸುಗ್ರೀವನನ್ನು ಒಡಿಸಿದ ವಾಲಿಯು ಅವನ ಹೆಂಡತಿ ರುಮೆಯನ್ನು ತನ್ನ ಶಯ್ಯೆಗೆ ಸೆಳೆದ. ಆದರೆ ಈ ಪದ್ಧತಿಗೆ ಆ ಕಾಲದಲ್ಲಿ ಒಂದು ಉತ್ತಮ ಕಾರಣವಿತ್ತು. ಯುದ್ಧಗಳಲ್ಲಿ ಸೋದರನು ಮೃತನಾದಾಗ ಅವನ ಹೆಂಡತಿ ಅನಾಥಳಾಗಬಾರದು; ಅವಳ ಪತ್ನೀಪಟ್ಟವು ಅಬಾಧಿತವಾಗಿರಬೇಕು ಎನ್ನುವ ಸದುದ್ದೇಶದಿಂದಲೇ ಈ ಪದ್ಧತಿಯನ್ನು ಬಳಕೆಯಲ್ಲಿ ತರಲಾಗಿತ್ತು. ಈ ಪದ್ಧತಿ ಶೀಖ ಸಮುದಾಯದಲ್ಲಿ ಇನ್ನೂ ರೂಢಿಯಲ್ಲಿದೆ. ಖ್ಯಾತ ಲೇಖಕ ಖುಶವಂತ ಸಿಂಗರು ಈ ವಿಷಯವನ್ನು ಆಧರಿಸಿ ‘ಏಕ ಚದ್ದರ ಮೈಲೀಸಿ (ಒಂದು ಹೊಲಸು ಹಿಡಿದ ಹೊದಿಕೆ)’ ಎನ್ನುವ ಕಾದಂಬರಿಯನ್ನು ಬರೆದಿದ್ದಾರೆ.

ಪೂರ್ವ ಹಾಗು ಈಶಾನ್ಯ ಭಾರತಗಳಲ್ಲಿ ಮಾತೃಪ್ರಧಾನ ಪದ್ಧತಿಯು ರೂಢಿಯಲ್ಲಿತ್ತು. ಮಹಾಭಾರತದಲ್ಲಿ ಅರ್ಜುನನು ಪ್ರಮೀಳಾರಾಜ್ಯವೆಂದು ಕರೆಯಲಾಗುತ್ತಿದ್ದ ಮಣಿಪುರವನ್ನು ಗೆದ್ದು, ಅಲ್ಲಿಯ ರಾಣಿ ಚಿತ್ರಾಂಗದೆಯನ್ನು ಮದುವೆಯಾಗುವ ಪ್ರಸಂಗವನ್ನು ವರ್ಣಿಸಲಾಗಿದೆ. ಅರ್ಜುನ ಹಾಗು ಚಿತ್ರಾಂಗದೆಯರ ಮಗನೇ ಬಭ್ರುವಾಹನನು. ವಂಗದೇಶದಲ್ಲಿ ಪೂಜಿತಳಾಗುತ್ತಿರುವ ಕಾಳೀದೇವಿಯ ಚಿತ್ರವನ್ನು ನೀವು ನೋಡಿರಬಹುದು. ಅವಳು ಕೊರಳಲ್ಲಿ ರುಂಡಮಾಲೆಯನ್ನು ಧರಿಸಿದ್ದಲ್ಲದೆ, ತನ್ನ ಬಲಗಾಲಿನಡಿಯಲ್ಲಿ ಓರ್ವ ಪುರುಷನನ್ನು ತುಳಿದಿದ್ದಾಳೆ. ತಾಂತ್ರಿಕ ಪೂಜಾವಿಧಾನದಲ್ಲಿ ಮಾನವಕಪಾಲದಲ್ಲಿ ಮದ್ಯ ಅಥವಾ ಮಾಂಸವನ್ನು ಹಿಡಿದಿಟ್ಟು ಬಳಸುವ ಪದ್ಧತಿ ಇದ್ದುದರಿಂದ ಈ ಚಿತ್ರವು ಇದನ್ನು ಸೂಚಿಸುತ್ತಿರಬಹುದು. ಇನ್ನು  ಕೆಲವು ಸಂಶೋಧಕರು ಈ ಚಿತ್ರಕ್ಕೆ ನೀಡುವ ವಿಭಿನ್ನ ವಿವರಣೆ ಹೀಗಿದೆ:

ಈ ಭಾಗದ ಒಡತಿಯು ಉತ್ತಮ ಸಂತತಿಯನ್ನು ಪಡೆಯುವ ಉದ್ದೇಶದಿಂದ, ಪ್ರತಿ ವರ್ಷವೂ ಸುಯೋಗ್ಯನಾದ ಓರ್ವ ಹೊಸ ಪುರುಷನೊಂದಿಗೆ ಸಂಪರ್ಕ ಬೆಳಸುತ್ತಿದ್ದಳು. ಅವಳು ಬಸಿರಾಗಿ ಶಿಶುವನ್ನು ಪಡೆದ ಮೇಲೆ, ಆ ಪುರುಷನ ರುಂಡಛ್ಛೇದವನ್ನು ಮಾಡಲಾಗುತ್ತಿತ್ತು ಹಾಗು ಆ ಪುರುಷನ ಬುರುಡೆಯನ್ನು ಅವಳು ಕೊರಳಲ್ಲಿ ಧರಿಸುತ್ತಿದ್ದಳು.  ಇದು ತುಂಬ ಅನಾಗರಿಕ ಹಾಗು ಭೀಭತ್ಸ ವಿವರಣೆ ಅನಿಸುವದೆ? ಆದರೆ ಸುಮಾರು ಐದು ಸಾವಿರ ವರ್ಷಗಳ ಮೊದಲು ಇದು ಅಸಂಭಾವ್ಯವಾಗಿರಲಿಕ್ಕಿಲ್ಲ!

ಕರ್ನಾಟಕದ ಕರಾವಳಿಯಲ್ಲಿರುವ ತುಳುನಾಡಿನಲ್ಲಿಯೂ ಸಹ ಮಾತೃಪ್ರಧಾನ ಕುಟುಂಬವ್ಯವಸ್ಥೆ ಹಾಗು ಅಳಿಯಸಂತಾನ ಪದ್ಧತಿ ರೂಢಿಯಲ್ಲಿದೆ. ತುಳು ಎನ್ನುವ ಪದವೇ ಯೋನಿಸೂಚಕವಾಗಿದೆ. ತುಳಜಾ(=ತುಳಸಿ) ಎನ್ನುವ ದೇವಿಯ ಹೆಸರೇ ಸೂಚಿಸುವಂತೆ ಇವಳು ತುಳುನಾಡಿನಲ್ಲಿ ಹುಟ್ಟಿದವಳೇ ಆಗಿರಬಹುದು. ಇವಳು ಶಂಖಚೂಡ ಎನ್ನುವ ರಾಕ್ಷಸನ ಹೆಂಡತಿ. ಶಂಖಚೂಡನನ್ನು ಹತ್ಯೆಗೈದ ಬಳಿಕ ವಿಷ್ಣುವು ಇವಳನ್ನು ಅನುಗ್ರಹಿಸಿ, ‘ದೇವಿ’ ಪಟ್ಟವನ್ನು ಕೊಟ್ಟದ್ದು, ಒಂದು ‘ರಾಜಿ ಒಪ್ಪಂದ’ವನ್ನು ಸೂಚಿಸುತ್ತದೆ.

ಮಾತೃಪ್ರಧಾನ ವ್ಯವಸ್ಥೆಯ ಆರ್ಯೇತರ ಸಮುದಾಯಗಳು ಪಿತೃಪ್ರಧಾನ ವ್ಯವಸ್ಥೆಯ ಆರ್ಯ ಸಮುದಾಯಕ್ಕೆ ಸೋತು ಹೋದ ಕಥೆಗಳನ್ನು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಈ ಪಿತೃಪ್ರಧಾನ ಆರ್ಯರು ಮಾತೃಪ್ರಧಾನ ಸಮುದಾಯ ಒಂದರ ಸಹಾಯವನ್ನು ಪಡೆದು ಭಾರತದಲ್ಲಿ ನೆಲೆಸಿದ ಅನೇಕ ಮೂಲನಿವಾಸಿಗಳ ಮೇಲೆ ಜಯವನ್ನು ಸಾಧಿಸಿದರು. ಈ ಮೂಲನಿವಾಸಿಗಳನ್ನು ರಾಕ್ಷಸರೆಂದು ವರ್ಣಿಸಲಾಗಿದೆ. ಉದಾಹರಣೆಗೆ, ಕೋಲ, ಮುಂಡ, ಮೂಗ ಇತ್ಯಾದಿ. ಈ ಎಲ್ಲ ಸಮುದಾಯಗಳನ್ನು ಮೆಟ್ಟಿಹಾಕಿದ ಆ ರಣಚಂಡಿ ಯಾರು? ಇವಳು ಮಾತೃಪ್ರಧಾನ ಆರ್ಯಕುಲದವಳೆ ಅಥವಾ ಆರ್ಯೇತರಳೆ?

ರಾಕ್ಷಸರಿಂದ ಪರಾಜಿತರಾದ ದೇವತೆಗಳು, ರಾಕ್ಷಸಸಂಹಾರಕ್ಕಾಗಿ ‘ದೇವಿ’ಯನ್ನು ಪ್ರಾರ್ಥಿಸುತ್ತಾರೆ. ಇಂದ್ರನು ಮಾಡಿದ ದೇವೀಸ್ತೋತ್ರದಲ್ಲಿ ‘ಕೋಲಾಸುರ ಭಯಂಕರೀ’ ಎಂದು ಸಂಬೋಧಿಸಲಾಗಿದೆ. ಲಲಿತಾಸಹಸ್ರನಾಮದಲ್ಲಿ ಈ ದೇವಿಯನ್ನು ‘ಮುಂಡಮಥನೀ’ ಎಂದು ವರ್ಣಿಸಲಾಗಿದೆ. ವಾಸ್ತವದಲ್ಲಿ ಕೋಲರು ಹಾಗು ಮುಂಡರು ಭಾರತದ ಮೂಲನಿವಾಸಿಗಳು. ಕೋಲರು ಈಗ ತಮಿಳುನಾಡಿನ ನೀಲಗಿರಿಯಲ್ಲಿ ಮಾತ್ರ ಕಂಡು ಬರುತ್ತಾರೆ. ಇವರ ಭಾಷೆಯು ಸದ್ಯಕ್ಕೆ ತಮಿಳುಪ್ರಭಾವಿತ ಕನ್ನಡ ಭಾಷೆ. ಕರ್ನಾಟಕದಲ್ಲಿ ಕೊಲ್ಲೂರು ಹಾಗು ಕೋಲಾರ (=ಕೋಲ+ಹಾರ) ಇವು ಕೋಲರ ಬೀಡುಗಳಾಗಿವೆ. ಮಹಾರಾಷ್ಟ್ರದಲ್ಲಿ ‘ಹಾರ’ಕ್ಕೆ ಬದಲಾಗಿ ‘ಪುರ’ವು ಅಂಟಿಕೊಂಡು ‘ಕೋಲ್ಹಾಪುರ’ವಾಗಿದೆ. ಅಷ್ಟೇ ಏಕೆ, ಬಂಗಾಲದ ರಾಜಧಾನಿ ಕೋಲಕತ್ತಾ ಸಹ ಕೋಲರ ಕಟ್ಟೆಯೇ ಆಗಿರುವ ಸಾಧ್ಯತೆ ಇದೆ.

‘ಮುಂಡ’ರು ಮಾತ್ರ ಕೋಲರಂತೆ ಕ್ಷೀಣರಾಗಿಲ್ಲ. ಬಿರ್ಸಾ ಮುಂಡಾ ಎನ್ನುವವನು ಬ್ರಿಟಿಶರೊಡನೆ ಹೋರಾಡಿದ ಪ್ರಥಮ ಆದಿವಾಸಿ ನಾಯಕನಾಗಿದ್ದಾನೆ. ಮುಂಡೆ ಎನ್ನುವ ವ್ಯಕ್ತಿಯೊಬ್ಬರು ಮಹಾರಾಷ್ಟ್ರ ಸರಕಾರದಲ್ಲಿ ಮಂತ್ರಿಯಾಗಿದ್ದರು. ಕರಿಯಾ ಮುಂಡಾ ಎನ್ನುವವರು ವಾಜಪೇಯಿ ಸರಕಾರದಲ್ಲಿ ಮಂತ್ರಿಯಾಗಿದ್ದರಲ್ಲದೆ, ಲೋಕಸಭೆಯ ಉಪಸಭಾಪತಿಗಳೂ ಆಗಿದ್ದರು. ‘ಮುಂಡಾ’ ಸಮುದಾಯವು ಬಿಹಾರ ರಾಜ್ಯದಲ್ಲಿ ಮತ್ತು ಕರ್ನಾಟಕದ ಮೈಸೂರು ಹಾಗು ಕೊಡಗು ಜಿಲ್ಲೆಗಳಲ್ಲಿ ಇದೆ.

ಕೋಲರು ಹಾಗು ಮುಂಡರಲ್ಲದೆ ಮೂಗರು, ಮಲ್ಲರು ಇವರೆಲ್ಲ ಭಾರತದ ಮೂಲನಿವಾಸಿಗಳು. ಇವರ ಬಗೆಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಹಾಗು ಇಲ್ಲಿ ಪಡೆಯಬಹುದು.

ಈ ದೇವಿಯ ಆಯುಧಗಳ ವಿವರಗಳನ್ನು ‘ಬಗಲಾಮುಖಿ ಸ್ತೋತ್ರ’ದಲ್ಲಿ ಕಾಣಬಹುದು. ದೇವಿಯು ತನ್ನ ಎಡಗೈಯಲ್ಲಿ ಪಾಶ, ಅಂಕುಶ, ಶಕ್ತಿ, ಕೊಡಲಿ, ಹಾಗು ಬಲಗೈಯಲ್ಲಿ ಗದೆಯನ್ನು ಧರಿಸಿದವಳಾಗಿದ್ದಾಳೆ. ಈ ಆಯುಧಗಳಲ್ಲಿ ಬಿಲ್ಲು, ಬಾಣ ಇಲ್ಲದಿರುವುದು ಗಮನಾರ್ಹವಾಗಿದೆ. ಅಂದರೆ ರಾಮಾಯಣದವರೆಗೂ ಬಿಲ್ಲು, ಬಾಣಗಳನ್ನು ಯುದ್ಧಗಳಲ್ಲಿ ಬಳಸುತ್ತಿರಲಿಲ್ಲ ಎನ್ನಬಹುದು. ಶ್ರೀರಾಮಚಂದ್ರನನ್ನು ‘ಕೋದಂಡಪಾಣಿ’ ಎಂದು ಬಣ್ಣಿಸಿರುವದರಿಂದ ಈ ಕಾಲಘಟ್ಟದಲ್ಲಿ ಕಬ್ಬಿಣದ ಬಿಲ್ಲು, ಬಾಣಗಳ ಬಳಕೆ ಪ್ರಾರಂಭವಾಯಿತು ಎಂದು ಭಾವಿಸಬಹುದು. ಅಲ್ಲಿಯವರೆಗೆ ಬಿಲ್ಲು, ಬಾಣಗಳು ಕೇವಲ ಬೇಡರು ಬಳಸುವ ಬಿದಿರಿನ ಬಿಲ್ಲು, ಬಾಣಗಳಾಗಿರಬಹುದು.

ಕ್ಷಿಪ್ರಚಲನೆ ಹಾಗು ದೂರಗಾಮಿ, ಪ್ರಕ್ಷೇಪಿಸಬಲ್ಲ ಅಸ್ತ್ರಗಳು ಯುದ್ಧದಲ್ಲಿ ಜಯಸಂಪಾದನೆಯ ಪ್ರಮುಖ ಸಾಧನೆಗಳಾಗಿವೆ. ಭಾರತೀಯರಲ್ಲಿ ಈ ಸಾಧನಗಳ ಕೊರತೆ ಇದ್ದುದರಿಂದಲೇ ಇವರು ಅನೇಕ ಕಾಳಗಗಳಲ್ಲಿ ವಿದೇಶೀಯರಿಗೆ ಸೋತು ಹೋದರು.
ಈ ಸಂಗತಿಯು ಆಧುನಿಕ ಇತಿಹಾಸದ ಎರಡನೆಯ ಜಾಗತಿಕ ಯುದ್ಧವನ್ನು ನೆನಪಿಸುತ್ತದೆ.

ಹಿಟ್ಲರನು ಎರಡನೆಯ ಜಾಗತಿಕ ಯುದ್ಧವನ್ನು ಪ್ರಾರಂಭಿಸಿ ಪೋಲ್ಯಾಂಡನ್ನು ಆಕ್ರಮಿಸಿದಾಗ (ಸಾ.ಶ.೧೯೩೯), ಅವನ ಟ್ಯಾಂಕರುಗಳಿಗೆ ಎದುರಾದದ್ದು ಪೋಲಿಶ್ ಅಶ್ವಪಡೆ! ಸೈನ್ಯದ ಕ್ಷಿಪ್ರಚಲನೆ ಹಾಗು ಆಯುಧಗಳ ಆಧುನೀಕರಣದ ಮಹತ್ವವನ್ನು ಅರಿಯದೆ ಹೋದರೆ, ಯಾವ ದೇಶಕ್ಕೂ ಉಳಿಗಾಲವಿಲ್ಲ.

ಈ ಇತಿಹಾಸವು ಭಾರತದ ಮೊದಲ ಪ್ರಧಾನಮಂತ್ರಿ ನೆಹರೂರವರನ್ನು ಅಣ್ವಸ್ತ್ರಗಳ ನಿರ್ಮಾಣಕ್ಕೆ ಪ್ರೇರೇಪಿಸಿತು. ಸಾಂಪ್ರದಾಯಕ ಶಸ್ತ್ರ್ರಾಸ್ತ್ರಗಳನ್ನು ನೆಹರೂ ನಿರ್ಲಕ್ಷಿಸಿರಬಹುದು.  ಅವರ ಅನೇಕ ತಪ್ಪುಗಳಿಗಾಗಿ ನಾವು ಅವರನ್ನು ಇಂದು ಖಂಡಿಸಬಹುದು. ಆದರೆ ಅಣುಶಕ್ತಿಯ ಹಾಗು ಅಣ್ವಸ್ತ್ರಗಳ ನಿರ್ಮಾಣಕ್ಕೆ ನೆಹರೂ ಅವರೇ ಪ್ರೇರಕರು ಎನ್ನುವುದು ಇತಿಹಾಸದ ಗುಪ್ತಭಾಗವಾಗಿ ಉಳಿದಿಲ್ಲ. ಅಣ್ವಸ್ತ್ರದ ಶ್ರೇಯಸ್ಸನ್ನು ನಾವು ನೆಹರೂರವರಿಗೆ ಕೊಡಲೇಬೇಕು!

ಮುಂಬಯಿಯಲ್ಲಿ ‘ಅಪ್ಸರಾ ಅಣುಶಕ್ತಿ ಕೇಂದ್ರ’ವನ್ನು ಸ್ಥಾಪಿಸಿದಂತೆಯೇ, ಉತ್ತರ ಪ್ರದೇಶದ ನರೋನಾದಲ್ಲಿ ಸಹ ರಶಿಯಾದ ನೆರವಿನೊಂದಿಗೆ ಒಂದು ಅಣುಶಕ್ತಿಕೇಂದ್ರವನ್ನು ಸ್ಥಾಪಿಸಲಾಯಿತು. ಈ ಕೇಂದ್ರವು ಅಣುಶಕ್ತಿಯನ್ನು ಪಡೆಯುವದರಲ್ಲಿ ಸಫಲವಾಗಲಿಲ್ಲ ಎನ್ನುವ ಮುಖವಾಡದೊಂದಿಗೆ, ಅಣ್ವಸ್ತ್ರದ ನಿರ್ಮಾಣಕ್ಕಾಗಿ ಅಲ್ಲಿ ಪ್ರಯೋಗಗಳನ್ನು ನಡೆಯಿಸಲಾಯಿತು. 
ಭಾರತಕ್ಕೆ ಕೊನೆಗೂ ಯಶಸ್ಸು ದೊರೆತಿದ್ದು ಇಂದಿರಾ ಗಾಂಧಿಯವರ ಕಾಲದಲ್ಲಿ! ಈ ಅಣ್ವಸ್ತ್ರದ ಹಾಗು ಕ್ಷಿಪಣಿಗಳಲ್ಲಿ ಭಾರತವು ಸಾಧಿಸಿದ ಅದ್ಭುತ ಯಶಸ್ಸಿನಿಂದಾಗಿಯೇ ಭಾರತದ ಮೇಲೆ ನೇರ ಯುದ್ಧ ಮಾಡಲು ಪಾಕಿಸ್ತಾನ ಹಾಗು ಚೀನಾ ಹಿಂಜರಿಯುತ್ತಿವೆ.

ಮಹಾತ್ಮಾ ಗಾಂಧಿ ಹಾಗು ಜವಾಹರಲಾಲ ನೆಹರೂ ಎಂತಹ ವಿರುದ್ಧ ಮುಖಗಳ ಗುರು, ಶಿಷ್ಯರು ಎನ್ನುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಗಾಂಧೀಜಿಯವರು ಅಹಿಂಸಾವಾದಿಗಳು; ನೆಹರೂ ಅಣುಬಾಂಬಿನ ಹಿಂದೆ ಇದ್ದಂತಹ ಶಕ್ತಿ. ಗಾಂಧೀಜಿ ಗ್ರಾಮಕೈಗಾರಿಕೆಗಳ ಪ್ರತಿಪಾದಕರು; ನೆಹರೂ ಭಾರತದಲ್ಲಿ ಭಾರೀ ಉದ್ದಿಮೆಗಳನ್ನು ಸ್ಥಾಪಿಸಲು ಹಾಗು ಭಾರತದ ಔದ್ಯಮೀಕರಣಕ್ಕೆ ಪ್ರೇರಕರಾದವರು.

ಇಂತಹದೇ ವಿಪರ್ಯಾಸವನ್ನು ನಾವು ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರಲ್ಲಿ ಕಾಣಬಹುದು. ಪರಮಹಂಸರು ‘ಕುರುಡು ಆಚರಣೆಗಳಲ್ಲಿ(!)’ ನಂಬಿಕೆ ಇಟ್ಟವರು; ವಿವೇಕಾನಂದರು ಆಧುನಿಕ ಮನೋಭಾವದವರು. ಪರಮಹಂಸರು ಆಧುನಿಕ ಶಾಲೆ, ಆಸ್ಪತ್ರೆ ಮೊದಲಾದವುಗಳ ಸ್ಥಾಪನೆಯನ್ನು ಜರೆಯುತ್ತಿದ್ದರು; ವಿವೇಕಾನಂದರು ಬೆಂಗಳೂರಿನಲ್ಲಿ ಸ್ಥಾಪಿಸಲಾದ ‘ತಾತಾ ಮೂಲವಿಜ್ಞಾನ ಸಂಶೋಧನಾ ಕೇಂದ್ರ’ಕ್ಕೆ ಪ್ರೇರಣೆ ಇತ್ತವರು!

ಹೀಗಿದ್ದರೂ ಸಹ ನೆಹರೂರವರು ಪ್ರಧಾನ ಮಂತ್ರಿಯಾಗಲು ಗಾಂಧೀಜಿಯೇ ಕಾರಣರಾದರು; ವಿವೇಕಾನಂದರು ಸನ್ಯಾಸಿಯಾಗಲು  ಪರಮಹಂಸರೇ ಕಾರಣರಾದರು!

Sunday, July 6, 2014

ವಂದೇ ಭಾರತಮ್!--೧ಭಾರತದ ಪೂರ್ವೇತಿಹಾಸದ ಬಗೆಗೆ ಅಂದರೆ ಸಿಂಧು ಕೊಳ್ಳದ ಸಂಸ್ಕೃತಿಯ ಬಗೆಗೆ ತಿಳಿದುಕೊಳ್ಳಲು ಬಯಸುವವರು ಮೈಕೆಲ್ ಡ್ಯಾನಿನೊ ಎನ್ನುವ ಪುರಾತತ್ವಜ್ಞರ ಪುಸ್ತಕವನ್ನು ಓದಬೇಕು. ಮೈಕೆಲ್ ಡ್ಯಾನಿನೊ ಅವರ ಭಾರತಪ್ರೇಮವನ್ನು ಗಮನಿಸಿದರೆ ಇವರನ್ನು ಭಾರತೀಯರೆಂದೇ ಕರೆಯಬಹುದು. ಆದರೆ ಇದು ಕುರುಡುಪ್ರೇಮವಲ್ಲ, ಇದು ಇತಿಹಾಸವನ್ನು ಸಮಗ್ರವಾಗಿ ಹಾಗು ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿದ ವಿದ್ವಾಂಸರೊಬ್ಬರ ಪ್ರೀತಿಯಾಗಿದೆ. ೧೯೫೬ರಲ್ಲಿ ಫ್ರಾನ್ಸಿನ ಪಾರಿ (Paris)ಯಲ್ಲಿ ಜನಿಸಿದ ಮೈಕೆಲ್ ಡ್ಯಾನಿನೊ, ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಭಾರತಕ್ಕೆ ಆಗಮಿಸಿ ಇಲ್ಲಿಯ ಪ್ರಾಚೀನ ಸಂಸ್ಕೃತಿ ಹಾಗು ನಾಗರಿಕತೆಯನ್ನು ಅಭ್ಯಾಸ ಮಾಡಿದರು. ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಸಂಶೋಧನೆಗಷ್ಟೇ ಇವರು  ಸೀಮಿತಿಗೊಳಿಸಲಿಲ್ಲ. ೧೯೮೦ ಹಾಗು ೧೯೯೦ರಲ್ಲಿ ನೀಲಗಿರಿಯಲ್ಲಿರುವ ಶೋಲಾ ಅರಣ್ಯದ ಸಂರಕ್ಷಣೆಗಾಗಿ ಇವರು ಮಾಡಿದ ಪ್ರಯತ್ನಗಳಿಂದಾಗಿ ತಮಿಳುನಾಡು ಸರಕಾರವು ಅಲ್ಲಿಯ ಅರಣ್ಯರಕ್ಷಣಾಕಾರ್ಯವನ್ನು ಕೈಗೆತ್ತಿಕೊಂಡಿತು. ಸಿಂಧು ಕೊಳ್ಳದ ನಾಗರಿಕತೆಯ ಆಳವಾದ ಅಧ್ಯಯನವನ್ನು ಮಾಡಿದ ಇವರು `The lost river: On the trail of the Saraswati’ ಎನ್ನುವ ಪುಸ್ತಕವನ್ನು ಸಾಮಾನ್ಯ ಓದುಗನಿಗಾಗಿ ರಚಿಸಿದ್ದಾರೆ.

ಇಂತಹ ‘ವಿದೇಶಿ ಭಾರತೀಯ’ನನ್ನು ನಮ್ಮವರೇ ಆದ, ಅದರಲ್ಲೂ ಪ್ರಧಾನಮಂತ್ರಿಗಳಾದಂತಹ ಅವಧಿಯಲ್ಲಿಯೇ ಬ್ರಿಟಿಶರ ಪಾದಸ್ಪರ್ಶ ಮಾಡಿ ಬಂದಂತಹ ಮನಮೋಹನಸಿಂಗರೊಡನೆ ಸ್ವಲ್ಪ ಹೋಲಿಸಿ ನೋಡಿರಿ! ಲಂಡನ್ ವಿಶ್ವವಿದ್ಯಾಲಯದಿಂದ ಗೌರವ ಡಾ^ಕ್ಟರೇಟ್ ಪದವಿಯ ಅನುಗ್ರಹವನ್ನು ಪಡೆದಾಗ ಮಾಡಿದ ಭಾಷಣದಲ್ಲಿ ಡಾ‍^. ಮನಮೋಹನಸಿಂಗರು ಬ್ರಿಟಿಶರು ಭಾರತದಲ್ಲಿ ರೇಲವೇ, ಟೆಲಿಗ್ರಾಫ್ ಮೊದಲಾದ ಆಧುನಿಕ ಸುಧಾರಣೆಗಳನ್ನು ತಂದು ಭಾರತೀಯರ ಮೇಲೆ ‘ಮಹದುಪಕಾರ’ವನ್ನು ಮಾಡಿದ್ದಾರೆ ಎಂದು ಬಣ್ಣಿಸುತ್ತ ಬ್ರಿಟಿಶರ ಕಾಲು ಮುಟ್ಟಿ ಬಂದರು. ಒಂದು ಗೌರವ ಡಾ^ಕ್ಟರೇಟ್ ಪದವಿಗಾಗಿ ತನ್ನ ಹಾಗು ತನ್ನ ತಾಯಿನಾಡನ್ನು ಈ ಪರಿಯಾಗಿ ಕೀಳುಗೈಯಬೇಕೆ?

ಬ್ರಿಟಿಶರ ಈ ‘ಮಹದುಪಕಾರ’ವನ್ನು ಮೈಕೆಲ್ ಡ್ಯಾನಿನೊ ಯಾವ ರೀತಿಯಲ್ಲಿ ಗ್ರಹಿಸಿದ್ದಾರೆ ಎನ್ನುವುದನ್ನು ನೋಡಿರಿ:
Telegraph and railways, always projected as bringing `progress’ to India, were, in reality, first and foremost indispensable tools in the delicate exercise of keeping this huge territory under Britain’s ‘providential rule’.
(The lost River: On the trail of the Saraswati, pp 83)

ಇದಷ್ಟೇ ಅಲ್ಲ, ಬ್ರಿಟಿಶ್ ವ್ಹಾಯ್ಸರಾ^ಯ್ ಕರ್ಝನ್ ಭಾರತಕ್ಕೆ ಮಾಡಿದ ಅಪಕಾರವನ್ನು ನೆನಪು ಮಾಡಿಕೊಳ್ಳುತ್ತಲೇ, ಭಾರತದ ಪುರಾತತ್ವಶಾಸ್ತ್ರಕ್ಕೆ ಆತನಿಂದ ಆದ ಉಪಕಾರವನ್ನು ಡ್ಯಾನಿನೊ ಸ್ಮರಿಸಿಕೊಳ್ಳುವುದು ಹೀಗೆ:
Given the viceroy’s  contemptible political record in Bengal, it is good to remember this positive contribution of his: had he not stemmed the rot in the archeological establishment, India would have lost hundreds of more monuments, ancient and medieval.
(The lost River: On the trail of the Saraswati, pp 85 , italics and emphasis mine.)

ಮೈಕೆಲ್ ಡ್ಯಾನಿನೊ ಅವರ ಭಾರತಪ್ರೀತಿ ಅವರ ಹೃದಯದಿಂದ ಉಕ್ಕಿ ಬಂದಿದ್ದು. ‘ಮೇಘದೂತ’ ಕಾವ್ಯದಲ್ಲಿ ಕವಿ ಕಾಲೀದಾಸನು ಸರಸ್ವತಿ ನದಿಯ ಬಗೆಗೆ ಉಲ್ಲೇಖಿಸಿದ್ದನ್ನು, ತಮ್ಮ ಪುಸ್ತಕದಲ್ಲಿ ವಿವರಿಸುವಾಗ, ಡ್ಯಾನಿನೋ ಕಾಲೀದಾಸನಿಗೆ ‘ದೈವೀ ಕವಿ’ ಎಂದು ಕರೆಯುತ್ತಾರೆ.
In Meghadutam(the `Cloud Messenger’), India’s devine  poet Kalidasa(probably living in the first century BCE), entreats a cloud to visit.....
(The lost River: On the trail of the Saraswati, pp 44 , italics and emphasis mine)

ಒಂದು ವೇಳೆ ಕಾಲದಲ್ಲಿ ಹಿಂದೆ ಹೋಗುವ ಅವಕಾಶ ತಮಗೇನಾದರೂ ದೊರೆತರೆ, ತಾವು ಕ್ರಿ.ಪೂ. ೨೭೦೦ನೆಯ ಕಾಲಕ್ಕೆ ಹೋಗುವದಾಗಿ ಡ್ಯಾನಿನೊ ಹೇಳುತ್ತಾರೆ. ಏಕೆಂದರೆ ಆ ಅವಧಿಯಲ್ಲಿ ಸಿಂಧೂ ಕೊಳ್ಳದ ನಾಗರಿಕತೆಯು ಏರುಮುಖವಾಗಿ ಹರಡಿಕೊಳ್ಳುತ್ತಿತ್ತು.
Given a chance for a second trip on our time machine, I would unhesitatingly opt for 2700 BCE......................For atleast four millennia, a few regions of the Indo-Gangetic belt  had already harboured settled village communities.....
(The lost River: On the trail of the Saraswati, pp 83.)

ಸರಸ್ವತಿ ನದಿಯ ವರ್ಣನೆಗಳು ಋಗ್ವೇದದಲ್ಲಿ ಬರುವದನ್ನು ಮೈಕೆಲ್ ಡ್ಯಾನಿನೊ ಉಲ್ಲೇಖಿಸುತ್ತಾರೆ. ಸಿಂಧು ಕೊಳ್ಳದ ನಾಗರಿಕತೆ ಎಂದು ಕರೆಯಲಾಗುವ ನಾಗರಿಕತೆಯು ಒಂದು ಕಾಲಾವಧಿಯಲ್ಲಿ ಸರಸ್ವತಿ ನದಿಯ ಕೊಳ್ಳದಲ್ಲಿ ವ್ಯಾಪಕವಾಗಿ ನೆಲೆಸಿತ್ತು. ಸರಸ್ವತಿ ನದಿಯು ಬತ್ತಿ ಹೋದದ್ದರಿಂದ ಈ ನಾಗರಿಕತೆಯೂ ಸಹ ಕಾಣದಂತಾಯಿತು ಎಂದು ಡ್ಯಾನಿನೊ ಹೇಳುತ್ತಾರೆ. ಹಿಮಾಲಯ ಪರ್ವತಾವಳಿಯಲ್ಲಿ ಜರುಗಿದ ಭೂಸ್ತರಗಳ ಚಲನೆಯಿಂದಾಗಿ, ಸರಸ್ವತಿ ನದಿಗೆ ನೀರುಣ್ಣಿಸುತ್ತಿದ್ದ  ಯಮುನಾ ನದಿ ಹಾಗು ಇತರ ಎರಡು ನದಿಗಳು ಗಂಗಾ ನದಿಯ ಕೊಳ್ಳದತ್ತ ತಿರುಗಿಕೊಂಡವು. ಆ ಕಾರಣದಿಂದ ಸರಸ್ವತಿ ನದಿಯು ಬತ್ತಿ ಹೋಗಿರಬಹುದು ಎನ್ನುವ ಊಹೆಗೆ ಇವರು ವಿವಿಧ ದಾಖಲೆಗಳ ಬೆಂಬಲವನ್ನು ನೀಡುತ್ತಾರೆ.  

ಈ ಸಂದರ್ಭದಲ್ಲಿ ನಾವು ನಮ್ಮ ಪುರಾಣಗಳನ್ನು ನೆನಪಿಸಿಕೊಳ್ಳೋಣ. ಭಗೀರಥನ ತಪಸ್ಸಿನಿಂದಾಗಿ, ಗಂಗಾನದಿಯು ಭೂಮಿಗೆ ಧುಮ್ಮಿಕ್ಕಿದ ಬಳಿಕ, ಆ ಪ್ರವಾಹದ ರಭಸವನ್ನು ತಡೆಯಲು ಶಿವನು ಗಂಗೆಯನ್ನು ತನ್ನ ಜಡೆಯಲ್ಲಿ ಕಟ್ಟಿಹಾಕಿದನು ಎಂದು ಪುರಾಣಗಳಲ್ಲಿ ವರ್ಣಿಸಲಾಗುತ್ತದೆ. ಈ ಗಂಗಾವತರಣವು ಹಿಮಾಲಯದ ಭೂಸ್ತರಗಳ ಚಲನೆಯಿಂದಲೇ ಆಗಿರಬಹುದೆ? ಆದುದರಿಂದಲೇ ಯಮುನೆಯ ದಿಕ್ಕು ಬದಲಾಗಿ, ಸರಸ್ವತಿ ನದಿಯು ಬತ್ತಿರಬಹುದೆ? ಗಂಗಾ, ಯಮುನಾ ಹಾಗು ಗುಪ್ತಗಾಮಿನಿ ಸರಸ್ವತಿ ಇವುಗಳ ತ್ರಿವೇಣಿ ಸಂಗಮವು ಈ ಘಟನಾವಳಿಯನ್ನೇ ಸೂಚಿಸುತ್ತಿರಬಹುದೆ? ಭಾರತೀಯ ಪುರಾಣಗಳು ವಾಸ್ತವ ಇತಿಹಾಸವನ್ನೇ ಕಥಾರೂಪದಲ್ಲಿ ಹೇಳುತ್ತಿವೆ ಎಂದು ಭಾಸವಾಗುತ್ತದೆ.

ಭಾರತೀಯ ಇತಿಹಾಸದ ಬಗೆಗೆ ಮತ್ತೊಂದು ರೋಚಕವಾದ ಸಂಭಾವ್ಯತೆಯೊಂದನ್ನು  ಇದೀಗ ನಿಮ್ಮ ಮುಂದೆ ಇಡಲು ನಾನು ಬಯಸುತ್ತೇನೆ. ಅನೇಕ ವರ್ಷಗಳ ಹಿಂದೆ ನಾನು ಒಂದು ಇಂಗ್ಲಿಶ್ ಪುಸ್ತಕ ಓದಿದ್ದೆ. ಅದರ ಹೆಸರು ನನಗೀಗ ನೆನಪಿಲ್ಲ. ಬಹುಶಃ ಅದು Earth Magic ಆಗಿರಬಹುದು ಅಥವಾ Chariots of Gods ಆಗಿರಬಹುದು. ಆ ಪುಸ್ತಕದ ಪುಟವೊಂದರಲ್ಲಿ ಅಮೇರಿಕದ ಬಂಡೆಗಲ್ಲಿನ ಮೇಲೆ ಕೊರೆಯಲಾದ ಕೆಲವು ಬೃಹತ್ ಇತಿಹಾಸಪೂರ್ವ ಶಿಲ್ಪಗಳ ಚಿತ್ರಗಳನ್ನು ಕೊಟ್ಟಿದ್ದಾರೆ. ಆ ಶಿಲ್ಪಗಳಲ್ಲಿಯ ಒಂದು ಶಿಲ್ಪವನ್ನು ನೋಡಿ ನಾನು ದಂಗು ಬಡಿದೆ. ಆ ಶಿಲ್ಪದ ಕಟಿಪ್ರದೇಶದ ಹಿಂಬದಿಯಲ್ಲಿ ನಾವು ಬಾಲವೊಂದನ್ನು ಜೋಡಿಸಿದರೆ, ಅದು ಸಾಕ್ಷಾತ್ ನಮ್ಮ ಮಾರುತಿಯ ಪಡಿಯಚ್ಚಿನಂತೆ ಕಾಣುತ್ತದೆ. ಪುಸ್ತಕದ ಲೇಖಕನಿಗೆ ಇದು ಮಾರುತಿಯ ಶಿಲ್ಪವಿರಬಹುದು ಎಂದು ಊಹಿಸುವ ಅನುಕೂಲತೆ ಇಲ್ಲ. ಏಕೆಂದರೆ ಬರೆದವನು ಯುರೋಪಿಯನ್ನನು. ಆದರೆ ಭಾರತೀಯನಾದ ನನಗೆ ಇದು ಹೊಳೆಯದೇ ಇರಲಾರದು.

ಪುಸ್ತಕದ ಲೇಖಕನ ಮೇರೆಗೆ ಈ ಶಿಲ್ಪಗಳನ್ನು ಕೊರೆದವರು ಬೇರೆ ಗ್ರಹದಿಂದ ಭೂಮಿಗೆ ಬಂದು ನೆಲೆಸಿದವರು. ಈ ವಾದವನ್ನು ಇತರ ವಿಜ್ಞಾನಿಗಳು ತಿರಸ್ಕರಿಸಿದ್ದಾರೆ. ಇದೀಗ ನಾವು ನಮ್ಮ ಪುರಾಣಗಳನ್ನು ಸ್ವಲ್ಪ ಗಮನಿಸೋಣ. ಮಾರುತಿಯು ವಾಯುದೇವರ ಅನುಗ್ರಹದಿಂದ ಮನುಷ್ಯಳಾದ ಅಂಜನಾದೇವಿಗೆ ಜನಿಸಿದ ಮಗ. ಮಾರುತಿಯು ಹುಟ್ಟಿದ ತಕ್ಷಣ ಸೂರ್ಯಮಂಡಲವನ್ನು ತಿನ್ನಲು ಜಿಗಿದಿದ್ದ!  ಈ ಪುರಾಣಕಥೆಯನ್ನು ವಾಸ್ತವಕ್ಕೆ ಪರಿವರ್ತಿಸಲು ಪ್ರಯತ್ನಿಸಿದರೆ ಹೊಳೆಯುವದೇನು? ಮಾರುತಿಯು ಭೂಮಿಗೆ ಬಂದ ಅನ್ಯಗ್ರಹಜೀವಿಯ ಹಾಗು ಭೂನಿವಾಸಿ ಅಂಜನಾದೇವಿಯ ಸಂಕರ ಪುತ್ರನಾಗಿರಬಹುದು! ಹೀಗೆ ಭಾವಿಸುವುದು ಕಲ್ಪನಾವಿಲಾಸದ ಪರಮಾವಧಿಯೇ ಆಗಿರಲಿ, ಆದರೆ ಈ ತರ್ಕವನ್ನು ಬದಿಗಿರಿಸಿದರೆ, ಅಮೆರಿಕದಲ್ಲಿರುವ ಆ ಇತಿಹಾಸಪೂರ್ವ ಶಿಲ್ಪ ನಮ್ಮ ಮಾರುತಿಯನ್ನು ಏಕೆ ಹೋಲುತ್ತದೆ ಎನ್ನುವದಕ್ಕೆ ಬೇರೊಂದು ಉತ್ತರವನ್ನು ನಾವು ಹುಡುಕಬೇಕಾಗುತ್ತದೆ. ಜೈ ಬಜರಂಗ ಬಲಿ!

ಹರಪ್ಪಾ ಹಾಗು ಮೊಹೆಂಜೊದಾಡೊದಲ್ಲಿ ಕಂಡು ಬಂದಂತಹ ನಗರಗಳ ರಚನೆಗಳನ್ನು ನಾವು ಸರಸ್ವತಿ ನದಿಯ ಕೊಳ್ಳದಲ್ಲಿ , ಅದರಂತೆ ಗಂಗಾ ನದಿಯ ಕೊಳ್ಳದಲ್ಲೂ ಕಾಣುತ್ತೇವೆ. ಸರಸ್ವತಿ ನದಿಯ ಕೊಳ್ಳದಲ್ಲಿ ಸುಮಾರು ಕ್ರಿಸ್ತಪೂರ್ವ ಏಳುಸಾವಿರ ವರ್ಷಗಳ ಹಿಂದಿನಿಂದಲೇ ಮಾನವವಸತಿ ಪ್ರಾರಂಭವಾಗಿತ್ತು ಎಂದು ಇತಿಹಾಸತಜ್ಞರು ಭಾವಿಸುತ್ತಾರೆ. ಈ ನಾಗರಿಕತೆಯು ತನ್ನ ಶಿಖರಾವಸ್ಥೆಯಲ್ಲಿ ಇದ್ದಾಗ ಇಜಿಪ್ತ, ಮೆಸೊಪೊಟೆಮಿಯಾ ಮೊದಲಾದ ದೇಶಗಳ ಜೊತೆಗೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡಿತ್ತು. ಈ ನಾಗರಿಕತೆಯಲ್ಲಿ ಒಬ್ಬ ಅರಸನ ಏಕಾಧಿಪತ್ಯ ಇರದೆ, ಸಾಮುದಾಯಿಕ ಆಡಳಿತ ಇತ್ತು ಎನ್ನುವುದು ಮತ್ತೊಂದು ಊಹೆ. ಈ ನಾಗರಿಕತೆಯ ಚಿತ್ರಗಳಲ್ಲಿ ಅಥವಾ ಇತರ ಕಲಾಕೃತಿಗಳಲ್ಲಿ ಸೈನಿಕರನ್ನಾಗಲೀ, ಹಿಂಸೆಯನ್ನಾಗಲೀ ತೋರಿಸುವ ಯಾವುದೇ ಚಿತ್ರ ದೊರೆತಿಲ್ಲ. ಅಥವಾ ಆ ತರಹದ ಶಸ್ತ್ರಾಸ್ತ್ರಗಳೂ ದೊರೆತಿಲ್ಲ. ಆದುದರಿಂದ ಇವರು ಯುದ್ಧವಿಮುಖರಾದ, ಶಾಂತಿಪ್ರಿಯರಾದ, ಸಾಮರಸ್ಯ ಜೀವನದ, ಸಮುದಾಯಪ್ರಭುತ್ವದ ನಾಗರಿಕರಾಗಿದ್ದರು ಎಂದು ನಾವು ಊಹಿಸಬಹುದು.

ಇಂತಹ ಒಂದು ನಾಗರಿಕತೆ ಕಣ್ಮರೆಯಾಗಲು ಕಾರಣವೇನು? ಸರಸ್ವತಿ ನದಿಯು ಬತ್ತಿಹೋಗಿದ್ದರಿಂದ ಇವರು ಪೂರ್ವದಿಕ್ಕಿಗೆ ಗುಳೇ ಹೋಗಿ ಗಂಗಾ ನದಿಯ ಕೊಳ್ಳದಲ್ಲಿ ನೆಲೆಸಿರುವುದು ಒಂದು ಸಾಧ್ಯತೆಯಾಗಿದೆ. ಈ ಸಾಧ್ಯತೆಯನ್ನು ಡ್ಯಾನಿನೊ ಪುರಸ್ಕರಿಸುತ್ತಾರೆ. ಎರಡನೆಯ ಸಾಧ್ಯತೆ ಎಂದರೆ ಈ ನಾಗರಿಕತೆಯ ಮೇಲೆ ನಡೆದ ದಾಳಿಗಳು. ಈ ವಾದವನ್ನು ಡ್ಯಾನಿನೊ ಒಪ್ಪುವುದಿಲ್ಲ.

ನಮ್ಮ ಪುರಾಣಗಳಲ್ಲಿ ಶಿವನನ್ನು ತ್ರಿಪುರಸಂಹಾರಿ ಎಂದು ಕರೆಯಲಾಗಿದೆ. ತಾರಕಾಕ್ಷ, ಕಮಲಾಕ್ಷ, ಹಾಗು ವಿದ್ಯುನ್ಮಾಲಿ ಎನ್ನುವ ಮೂವರು ಅಸುರರು ಕಟ್ಟಿಕೊಂಡ ಮೂರು ಪುರಗಳನ್ನು ನಾಶ ಮಾಡಿದ್ದಕ್ಕಾಗಿ ಶಿವನಿಗೆ ಈ ಬಿರುದು ಬಂದಿದೆ. ಅದರಂತೆಯೇ ಇಂದ್ರನಿಗೆ ಪುರಂದರ ಎಂದರೆ ಪುರಗಳನ್ನು ಕೊಚ್ಚಿ ಹಾಕಿದವನು ಎನ್ನುವ ಬಿರುದಿದೆ! ಇವರೇ ಸಿಂಧು ನಾಗರಿಕತೆಯ ವಿನಾಶಕರೆ?

ಸಿಂಧು ಕೊಳ್ಳದ ನಾಗರಿಕತೆಯ ಮೇಲೆ ನಡೆದ ದಾಳಿ ಇರಾಣ ಹಾಗು ತುರ್ಕಮೆನಿಸ್ತಾನದಿಂದ ಬಂದಂತಹ ಆರ್ಯಜನಾಂಗದವರ ದಾಳಿ ಎನ್ನುವುದು ಒಂದು ಊಹೆ. ಸಿಂಧು ಕೊಳ್ಳದ ಜನರು ದ್ರಾವಿಡರು ಎನ್ನುವುದು ಮತ್ತೊಂದು ಊಹೆ. ಇವರು ದ್ರಾವಿಡರಲ್ಲ, ಇವರೂ ಸಹ ಆರ್ಯರೇ ಎನ್ನುವುದು ಇನ್ನೊಂದು ಊಹೆ. ಆರ್ಯಾವರ್ತದಲ್ಲಿ ನಡೆದ ಘರ್ಷಣೆಯು, ವಿಭಿನ್ನ ಕಾಲಾವಧಿಗಳಲ್ಲಿ ಭಾರತಕ್ಕೆ ಬಂದಂತಹ ಎರಡು ಆರ್ಯಜನಾಂಗಗಳ ನಡುವೆ ನಡೆದ ತಿಕ್ಕಾಟವೆಂದು ವರ್ಣಿಸಿ, ಲೂಯಿಸ್ ಎನ್ನುವವರು ಒಂದು ಕಾದಂಬರಿಯನ್ನು ಬರೆದಿದ್ದರು. ಆ ಕಾದಂಬರಿಯು ಧಾರಾವಾಹಿಯಾಗಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದೇನೇ ಇದ್ದರೂ ಸಿಂಧೂ ನಾಗರಿಕತೆಯು ನಷ್ಟವಾಗಲೇ ಇಲ್ಲ ; ಗಂಗಾ ನದಿಯ ಕೊಳ್ಳದಲ್ಲಿ ಇದು ಪುನರುಜ್ಜೀವನವನ್ನು ಹೊಂದಿತು ಎನ್ನುವ ತರ್ಕಕ್ಕೆ ಮೈಕೆಲ್ ಡ್ಯಾನಿನೊ ಅನೇಕ ದಾಖಲೆಗಳನ್ನು ನೀಡಿದ್ದಾರೆ. ಇದು ಸಂಭವನೀಯವಾಗಿದೆ.

ಸಮುದ್ರಮಥನದ ಕತೆಯನ್ನು ನಾವೆಲ್ಲ ಕೇಳಿದ್ದೇವೆ. ಸಮುದ್ರಮಥನದಲ್ಲಿ ಕಡೆಗೋಲಿನ ತರಹ ಬಳಸಲಾದ ಮಂದಾರ ಪರ್ವತವು ವಾಸ್ತವದಲ್ಲಿ ಇತ್ತೀಚೆಗೆ ಜನಿಸಿದ ಹಿಮಾಲಯ ಪರ್ವತವೇ ಆಗಿರಬಹುದು. ಈ ಬೃಹತ್ ಭೂಚಲನೆಯ ಸಮಯದಲ್ಲಿ ಅನೇಕ ಮಾನವಸಮುದಾಯಗಳು ಹಾಗು ಪ್ರಾಣಿಗಳು ಹಿಮಾಲಯದ ಸುತ್ತಲಿನ ಪ್ರದೇಶಗಳಿಂದ ಭಾರತಕ್ಕೆ ಬಂದಿರಬಹುದು. ಅಥವಾ ಈ ಜೀವಿಗಳು ಪಶ್ಚಿಮ ಏಶಿಯಾದ ದೇಶಗಳಿಂದ ಸಮುದ್ರಮಾರ್ಗವಾಗಿ ಭಾರತಕ್ಕೆ ಆಗಮಿಸಿರಲೂಬಹುದು. ಸಮುದ್ರಮಥನದ ಫಲಗಳೆಂದು ಹದಿನಾಲ್ಕು ರತ್ನಗಳನ್ನು ಹೇಳಲಾಗಿದೆ:

                                 ಲಕ್ಷ್ಮೀ ಕೌಸ್ತುಭ ಪಾರಿಜಾತಕ ಸುರಾ ಧನ್ವಂತರಿಶ್ಚಂದ್ರಮಾ: 
                                 ಗಾವಃ ಕಾಮದುಘೋ ಸುರೇಶ್ವರಗಜೋ ರಂಭಾದಿ ದೇವಾಂಗನಾ:
                                 ಅಶ್ವಃ ಸಪ್ತಮುಖೋ ಹರಿಧನುಃ ಶಂಖೋಮೃತಂ ಚಾಂಬುಧೇ:
                                 ರತ್ನಾನೀಹಿ ಚತುರ್ದಶಂ ಪ್ರತಿದಿನಂ ಕುರ್ವಂತು ವೋ ಮಂಗಲಮ್
                                   
ಈ ಶ್ಲೋಕದಲ್ಲಿ ಬರುವ ದೇವೇಂದ್ರನ ಆನೆಯನ್ನು ಐದು ಸೊಂಡಿಲುಗಳ ಐರಾವತ ಎಂದು ಕರೆಯಲಾಗುತ್ತದೆ. ಇದು ವಾಸ್ತವದಲ್ಲಿ ೪೫೦೦ ಸಾವಿರ ವರ್ಷಗಳ ಹಿಂದೆ ವಿನಷ್ಟವಾದ mammoth ಇರಬಹುದು.  ಇನ್ನು ಅಪ್ಸರೆ ಎಂದರೆ ‘ಅಪ್+ಸರಾ’ ಅರ್ಥಾತ್ ನೀರಿನಿಂದ ಬಂದವಳು. ಆದುದರಿಂದ ದೇವೇಂದ್ರನ ಸ್ವರ್ಗದಲ್ಲಿರುವ ರಂಭೆ ಮೊದಲಾದ ಅಪ್ಸರೆಯರು ಈಜಿಪ್ತಿನಿಂದ ಬಂದಂತಹ ನರ್ತಕಿಯರಾಗಿರಬಹುದು!

ಜಗತ್ತಿನಲ್ಲಿ ಇರುವ ಆಧುನಿಕ ಸಾಕು ಗೋವುಗಳೆಲ್ಲ ಹತ್ತೂವರೆಸಾವಿರ ವರ್ಷಗಳ ಹಿಂದೆ ಮೆಸೊಪೊಟೆಮಿಯಾದಲ್ಲಿ ಜನಿತವಾದ ಸಂಕರ ಗೋವುಗಳು ಎನ್ನುವುದು ವಿಜ್ಞಾನಿಗಳ ಅಬಿಪ್ರಾಯವಾಗಿದೆ. ಈ ಗೋವುಗಳೇ ಸಮುದ್ರಮಥನದಲ್ಲಿ ಕುದುರೆ, ಐರಾವತ, ಅಪ್ಸರೆ ಮೊದಲಾದ ‘ರತ್ನ’ಗಳ ಜೊತೆಗೆ ಭಾರತಕ್ಕೆ ಬಂದವೆ? ಹಾಗಿದ್ದರೆ ಭಾರತದಲ್ಲಿ ಮೊದಲು ಕುದುರೆ ಹಾಗು ಆಕಳು ಇರಲಿಲ್ಲವೆ? ಬಹುಶ: ನಮ್ಮಲ್ಲಿ ಕೇವಲ ಕತ್ತೆ ಹಾಗು ಎಮ್ಮೆ ಇದ್ದವು ಎನಿಸುತ್ತದೆ. ಕುದುರೆ ಹಾಗು ಆಕಳು ಇವು ಭಾರತಕ್ಕೆ ಪಶ್ಚಿಮ ದಿಕ್ಕಿನಿಂದ ಭೂಮಾರ್ಗವಾಗಿ ಅಥವಾ ಸಮುದ್ರಮಾರ್ಗವಾಗಿ ಬಂದಿರಬಹುದು. ಇದಕ್ಕೆ ಪೂರಕವಾಗಿ ಎರಡು ಅಂಶಗಳನ್ನು ಉಲ್ಲೇಖಿಸಬಹುದು:

(೧) ರಾವಣ ಹಾಗು ವಾಲಿ ಇವರನ್ನು ಹೀನಾಯವಾಗಿ ಸೋಲಿಸಿದ ಕಾರ್ತವೀರ್ಯಾರ್ಜುನ ಎನ್ನುವ ರಾಜನ ರಾಜಧಾನಿಯನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತು. ಮಾಹಿಷ್ಮತಿ ಎನ್ನುವ ಪದವು ಕನ್ನಡದ ‘ಎಮ್ಮಿಗನೂರು’ ಪದದ ಸಂಸ್ಕೃತೀಕರಣವಷ್ಟೆ. ಇದು ನರ್ಮದಾ ನದಿಯ ದಂಡೆಯ ಮೇಲಿತ್ತು. ಆಂಧ್ರಪ್ರದೇಶದಲ್ಲಿ ಎಮ್ಮಿಗನೂರು ಎನ್ನುವ ಊರು ಇದೆ. ಕರ್ನಾಟಕದಲ್ಲಿ ಇರುವ ಮೈಸೂರು ಇದು ‘ಮಹಿಷ+ಊರು’, ಅಂದರೆ ಮ್ಹೈಸೂರು ಅರ್ಥಾತ್ ಮೈಸೂರು. ಮೈಸೂರಿನ ‘ಮಹಿಷಾಸುರ’ನನ್ನು ಕೊಂದಂತಹ ಚಾಮುಂಡಿ ದೇವಿಯನ್ನು ಇಲ್ಲಿ ಸ್ಮರಿಸಬಹುದು.  ಕರ್ನಾಟಕದಲ್ಲಿ ಮಹಿಷವಾಡಿ ಎನ್ನುವ ಊರು ಸಹ ಇದೆ. ಆಷ್ಟೇ ಏಕೆ, ಮಹಾರಾಷ್ಟ್ರದಲ್ಲಿ ಇರುವ ‘ಮ್ಹೈಸಾಳ’ ಎನ್ನುವುದು ಕನ್ನಡದ ‘ಮಹಿಷ+ಹಾಳ’ವೇ ಸರಿ.

ಮಾಹಿಷ್ಮತಿಯ ಈ ಕಾರ್ತವೀರ್ಯಾರ್ಜುನನು ಸೋಮವಂಶೀಯನು. ಖ್ಯಾತ ಸಂಶೋಧಕ ಶಂ.ಬಾ.ಜೋಶಿಯವರ ಪ್ರಕಾರ ಆರ್ಯರು ಸೂರ್ಯಪೂಜಕರು ಹಾಗು ಅನಾರ್ಯರು ಚಂದ್ರಪೂಜಕರು. ಅರ್ಥಾತ್ ಕಾರ್ತವೀರ್ಯಾರ್ಜುನನು ಆರ್ಯಾವರ್ತದಲ್ಲಿ ಇದ್ದಂತಹ ಕನ್ನಡ ರಾಜನು. (ಕನ್ನಡ ಎಂದು ಹೇಳುವಾಗಲೆಲ್ಲ ನಾನು ಪುರಾಣಕಾಲದ ಕಂದಮಿಳ ಸಮುದಾಯವನ್ನು ಸೂಚಿಸುತ್ತಿರುತ್ತೇನೆ.) ರಾವಣ ಹಾಗು ವಾಲಿ ಇವರು ಆರ್ಯ ತಂದೆಗೆ ದೈತ್ಯ ಕುಲದ ತಾಯಿಯಲ್ಲಿ ಹುಟ್ಟಿದ ಮಕ್ಕಳು.

(೨) ಆರ್ಯರೇನೊ ಭಾರತಕ್ಕೆ ಕುದುರೆಗಳನ್ನೇರಿ ಬಂದರು. ಆದರೆ ಕನ್ನಡಿಗರು ಬಳಸುವ ‘ಕುದುರೆ’ ಪದವು ಈಜಿಪ್ತ ಭಾಷೆಯ `hytr’ ಪದದ ಅಪಭ್ರಂಶ ಎಂದು ಹೇಳಲಾಗುತ್ತಿದೆ. ಆದುದರಿಂದ ಸಮುದ್ರಮಥನದ ಸಪ್ತಮುಖೀ ಅಶ್ವವು ಈಜಿಪ್ತಿನಿಂದ ಆಮದಾದ ಕುದುರೆಯಾಗಿದ್ದರೆ ಆಶ್ಚರ್ಯವಿಲ್ಲ!

ಇದು ಭಾರತದ ಪೂರ್ವೇತಿಹಾಸವಾಯಿತು. ಆರ್ಯರ ಆಗಮನದ ಮೊದಲು ಭಾರತದಲ್ಲಿ ಎಮ್ಮೆಗಳು ಹಾಗು ಕತ್ತೆಗಳು ಇದ್ದವು ಎನ್ನುವುದನ್ನು ಇದು ಸೂಚಿಸುತ್ತದೆ. ಆಕಳು ಹಾಗು ಕುದುರೆಗಳು ಈಜಿಪ್ತಿನಿಂದ ಅಥವಾ ಆರ್ಯರ ಜೊತೆಗೆ ಭಾರತವನ್ನು ಪ್ರವೇಸಿರಬಹುದು. ಇನ್ನು ಭಾರತದ ಪುರಾಣಕಾಲದ ಅನೇಕ ಘಟನೆಗಳು ಗಂಗಾ-ಯಮುನಾ ಕೊಳ್ಳದಲ್ಲಿಯೇ ಜರುಗಿವೆ. ನಮ್ಮ ಪುರಾಣಗಳು ಹಾಗು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಈ ಇತಿಹಾಸವನ್ನು ದಾಖಲಿಸಿವೆ.

ರಾಮಾಯಣದ ನಾಯಕನಾದ ರಾಮಚಂದ್ರ ಹಾಗು ಖಳನಾಯಕನಾದ ರಾವಣ ಈರ್ವರೂ ಆರ್ಯರೇ! ರಾವಣನು ವಿಶ್ರವಸ್ ಎನ್ನುವ ಋಷಿಯ ಮಗ ಹಾಗು ಆರ್ಯದೇವತೆಯಾದ ಕುಬೇರನ ಸೋದರ ಸಂಬಂಧಿ. ಅದರಂತೆ ರಾವಣನು ಕೆಣಕಿದ ವಾಲಿಯೂ ಸಹ ಆರ್ಯನೇ. ಏಕೆಂದರೆ ಅವನು ಇಂದ್ರನ ಮಗನು! ರಾವಣನ ನೆಲೆ ಯಾವುದು? Of course ಲಂಕೆ! ಆದರೆ ಈ ಲಂಕೆ ಎಲ್ಲಿದೆ? ಶ್ರೀಲಂಕಾ ದ್ವೀಪವೆ ಈ ಲಂಕೆಯೆನ್ನುವುದು  ಜನಪ್ರಿಯ ಗ್ರಹಿಕೆ. ಆದರೆ ಇದು ಗೋದಾವರಿ ನದಿಯಲ್ಲಿದ್ದಂತಹ ಯಾವುದೋ ಒಂದು ನಡುಗಡ್ಡೆ ಆಗಿರಬಹುದು ಎನ್ನುವುದು ಕೆಲವು ಸಂಶೋಧಕರ ಅಭಿಪ್ರಾಯವಾಗಿದೆ. ಯಾಕೆಂದರೆ ದ್ರಾವಿಡ ಭಾಷೆಯಲ್ಲಿ ಲಂಕಾ ಅಥವಾ ಲಕ್ ಪದದ ಅರ್ಥವೇ ನಡುಗಡ್ಡೆ. (ಆರ್ಯಾವರ್ತದಲ್ಲಿ ಹಾಗು ಹಿಮಾಲಯದ ಅಡಿಭಾಗದಲ್ಲಿ ಆರ್ಯರಲ್ಲದೇ ಭಾರತದ ಇತರ ಮೂಲನಿವಾಸಿಗಳೂ ವಾಸಿಸುತ್ತಿದ್ದರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.)ಅಷ್ಟೇ ಏಕೆ, ವಾರಾಣಸಿಯಿಂದ ೩೨ ಕಿಲೋಮೀಟರ ದೂರದಲ್ಲಿ  ಲಂಕಾ ಎನ್ನುವ ಊರು ಇರುವುದನ್ನು ನಾವು ಗಮನಿಸಬೇಕು. ಶಿವಭಕ್ತನಾದ ರಾವಣನು ಕಾಶಿಗೆ ಸಮೀಪದಲ್ಲಿರುವ ಲಂಕೆಯ ರಾಜನಾಗಿರಬಹುದೆ? ಆದರೆ ಶ್ರೀಲಂಕೆಯಲ್ಲಿ ಗುಡ್ಡವೊಂದರ ಮೇಲೆ ಇರುವ ಪುರಾತನ ಕೋಟೆಯು, ರಾವಣನ ಕೋಟೆ ಎಂದು ಅಲ್ಲಿಯ ಜನ ಭಾವಿಸುತ್ತಾರೆ.

ಇನ್ನು ರಾವಣ ಅಥವಾ ರಾವಳ ಎನ್ನುವ ಹೆಸರನ್ನು ಹೊತ್ತ ಅನೇಕ ವ್ಯಕ್ತಿಗಳನ್ನು ಅಥವಾ ಊರುಗಳನ್ನು ಬೃಹತ್ ಭಾರತದ ಅನೇಕ ಪ್ರದೇಶಗಳಲ್ಲಿ ನಾವು ನೋಡಬಹುದು. ರಾವಳಗಾವ ಎನ್ನುವ ಊರು ಮಹಾರಾಷ್ಟ್ರದಲ್ಲಿದೆ. ರಾವಳಪಿಂಡಿಯು ಪಾಕಿಸ್ತಾನದಲ್ಲಿರುವ ದೊಡ್ಡ ಪಟ್ಟಣ. ರವಳನಾಥ ಎನ್ನುವ ಪ್ರಸಿದ್ಧ ವ್ಯಕ್ತಿಯೊಬ್ಬನು ನಾಥ ಸಂಪ್ರದಾಯದ ಯೋಗಿಯಾಗಿದ್ದಾನೆ. ನಾಥ ಸಂಪ್ರದಾಯವು ಅವೈದಿಕ ಸಂಪ್ರದಾಯ ಎನ್ನುವುದನ್ನು ನಾವು ಗಮನಿಸಬೇಕು.

ರಾವಣನ ಹೆಂಡತಿಯು ಮಂಡೋದರಿ, ಅರ್ಥಾತ್ ಇವಳು ‘ಮಂಡ’ ಕುಲದವಳು. ಈ ಕುಲದ ಹೆಸರನ್ನು ಹೊತ್ತ ಅನೇಕ ಊರುಗಳು ಕರ್ನಾಟಕದಲ್ಲಿವೆ. ಉದಾಹರಣೆಗೆ, ಮಂಡ್ಯ, ಮಂಡಾಳ, ಮಂಡೂರು ಇತ್ಯಾದಿ. ಈ ಕುಲಸ್ಥರು ಕೇವಲ ಭಾರತಕ್ಕೆ ಸೀಮಿತರಾಗಿರಲಿಲ್ಲ. ಏಕೆಂದರೆ ಪುರಾಣಕಾಲದ ಭಾರತವು ಈಗಿನ ಭಾರತಕ್ಕಿಂತ ತುಂಬಾ ವಿಸ್ತಾರವಾಗಿತ್ತು. ಭಾರತೀಯರು ಬ್ರಹ್ಮದೇಶವೆಂದು ಕರೆಯುತ್ತಿದ್ದ ಇಗಿನ ಮೈನ್ಮಾರ ದೇಶದಲ್ಲಿರುವ ಮಂಡಾಲೆಯ ಸೆರೆಮನೆಯಲ್ಲಿ ನಮ್ಮ ಲೋಕಮಾನ್ಯ ತಿಲಕರನ್ನು ಕೈದಿಯನ್ನಾಗಿ ಇಡಲಾಗಿತ್ತಲ್ಲವೆ? ಈ ಮಂಡಾಲೆ ಎಂದರೆ ಮಂಡಹಾಳ ಅಂದರೆ ಮಂಡರ ಹಳ್ಳಿ!
ಈ ಮಂಡ ಹೆಸರಿನ ಊರುಗಳು ಪಾಕಿಸ್ತಾನದಲ್ಲಿಯೂ ಸಹ ಸಿಗುತ್ತವೆ!

ನಾಲ್ಕು ವೇದಗಳು, ಹದಿನೆಂಟು ಪುರಾಣಗಳು ಹಾಗು ಮಹಾಕಾವ್ಯಗಳೆಂದು ಪ್ರಸಿದ್ಧವಾದ ರಾಮಾಯಣ ಹಾಗು ಮಹಾಭಾರತ ಇವು ಭಾರತದ ಪ್ರಾಚೀನ ಇತಿಹಾಸದ ಆಕರಗ್ರಂಥಗಳಾಗಿವೆ. ಋಗ್ವೇದದ ರಚನೆ ಕ್ರಿ.ಶ.ಪೂ.೨೦೦೦ದಲ್ಲಿ ಆಯಿತು ಎನ್ನಲಾಗುತ್ತದೆ. ಋಗ್ವೇದದಲ್ಲಿ ‘ಪಣ’ ಎನ್ನುವ ಅನಾರ್ಯ ಜನಾಂಗದವರ ವರ್ಣನೆ ಇದೆ. ಆದುದರಿಂದ ಈ ಜನಾಂಗದವರು ಆರ್ಯರೊಡನೆ ಸಂಪರ್ಕ ಬಂದಂತಹ ಕಾಲದಲ್ಲಿ ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿರಬಹುದು. ಪಣರಿಗೂ ಆರ್ಯರಿಗೂ ಅನೇಕ ಯುದ್ಧಗಳಾಗಿವೆ. ಈ ಜನಾಂಗದವರು ಸೋತು ಓಡಿ ಹೋಗಿ ಭಾರತದ ವಿವಿಧ ಪ್ರದೇಶಗಳಲ್ಲಿ ನೆಲೆಸಿದರು. ಇವರು ನೆಲೆಸಿದ ಪ್ರದೇಶಗಳು ಇವರ ಹೆಸರುಗಳನ್ನು ಸೂಚಿಸುವುದು ಸಹಜವಾಗಿದೆ. ಉದಾಹರಣೆಗೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಪಣಂಬೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಪಣಸೋಳಿ ಹಾಗು ಗೋವಾದಲ್ಲಿ ಇರುವ ಪಣಜಿ ಇವು ಕರಾವಳಿಯಲ್ಲಿ ಹಬ್ಬಿದ ಈ ಜನಾಂಗದ ನೆಲೆಗಳಾಗಿವೆ. ಬೀದರ ಜಿಲ್ಲೆಯಲ್ಲಿ ‘ಹಣಬ’ ಎನ್ನುವ ಸಮುದಾಯವಿದೆ. ಓಡಿಸಾದಲ್ಲಿ ನೆಲೆಸಿದ ಪಣ ಜನಾಂಗದವರನ್ನು ಅಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿಸಲಾಗಿದೆ. ಪಣ ಜನಾಂಗಕ್ಕೆ ಹಾಗು ಕಂದ ಜನಾಂಗಕ್ಕೆ ನಡೆದ ತಿಕ್ಕಾಟಗಳು ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕಂದ ಜನಾಂಗದವರನ್ನು ಓಡಿಸಾದಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಕಂದವರ್ಗದವರು ನೆಲೆಸಿದ ಅನೇಕ ಬೀಡುಗಳು ಕರ್ನಾಟಕದಲ್ಲಿ ಇವೆ. ಉದಾ: ಕಂದಕೂರು, ಕಂಡೊಳ್ಳಿ ಇತ್ಯಾದಿ. ಮುಂಬಯಿಯಲ್ಲಿರುವ ಕಾಂದೀವ್ಲಿ ಇದು ಕಂದವಳ್ಳಿಯೇ ಸರಿ. ಅಫಘಾನಿಸ್ತಾನದಲ್ಲಿರುವ ಹಾಗು ಅದರಂತೆ ಮಹಾರಾಷ್ಟ್ರದಲ್ಲಿರುವ ‘ಕಂದಹಾರ’’ ಇವು ಕಂದರ ನೆಲೆಗಳೇ ಆಗಿವೆ. ಗುಜರಾತದಲ್ಲಿರುವ ‘ಕಾಂಡ್ಲಾ’ ಬಂದರು ಸಹ ಕಂದಹಾಳದಿಂದಲೇ ಬಂದಿದೆ. (ಆರ್ಯ ಜನಾಂಗದವರು ಕನ್ನಡ ಉಚ್ಚಾರಗಳನ್ನು ದೀರ್ಘೀಕರಿಸುತ್ತಾರೆ. ಉದಾಹರಣೆಗೆ, ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ಯು ಆರಿಯರ ನಾಲಿಗೆಯಲ್ಲಿ ‘ದಾಂಡೇಲಿ’ ಆಗಿದೆ. ಇದರಂತೆಯೆ ಕಾಂಡ್ಲಾ.)

ಪಣ ಜನರನ್ನು ವೇದಗಳಲ್ಲಿ ಗುರುತಿಸಿದಂತೆ ಕಂದ ಜನಾಂಗವನ್ನು ಮಹಾಭಾರತದಲ್ಲಿ ಗುರುತಿಸಬಹುದು. ಕಂದ ಸಮುದಾಯದ ದಾರುಣ ನರಮೇಧವನ್ನು ಮಾಡಿದ ಅರ್ಜುನನನ್ನು ಮಹಾಭಾರತದಲ್ಲಿ ಮಹಾವೀರನೆಂದು ಗುರುತಿಸಲಾಗುತ್ತಿದೆ. ಇದು ಬಹುಶಃ ಭಾರತದಲ್ಲಿ ಜರುಗಿದ ಅತ್ಯಂತ ದೊಡ್ಡ ನರಮೇಧವಾಗಿರಬಹುದು. ಇದು ಹೀಗಿದೆ: ಕಂದ ಪದದಿಂದಲೇ ಸಂಸ್ಕೃತದಲ್ಲಿ ‘ಖಾಂಡವ’ ಪದ ಬಂದಿದೆ. ಇದರ ಅರ್ಥ: ‘ಕಂದ ಸಮುದಾಯಕ್ಕೆ ಸಂಬಂಧಿಸಿದ  ’ಎಂದಾಗುತ್ತದೆ. ಈ ಖಾಂಡವ ವನವನ್ನು ಅರ್ಜುನನು ಸುಟ್ಟು ಹಾಕಿದ ಬಳಿಕ, ಪಾಂಡವರು ಅಲ್ಲಿ ತಮ್ಮ ರಾಜಧಾನಿಯಾದ ಇಂದ್ರಪ್ರಸ್ತ ನಗರವನ್ನು ಕಟ್ಟಿದರು. ಆ ಅಡವಿಯಲ್ಲಿ ನೆಲೆಸಿದ್ದ ಸರ್ಪಗಳನ್ನು ಅರ್ಜುನನು ಅಗ್ನಿಯಲ್ಲಿ ಬೂದಿ ಮಾಡಿದನು. ಆ ಸರ್ಪಗಳ ಪೈಕಿ ತಕ್ಷಕ ಎನ್ನುವ ಸರ್ಪವೊಂದೇ ತಪ್ಪಿಸಿಕೊಂಡು ಹೋಯಿತು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ಸರ್ಪಗಳು ಎಂದರೆ ನಾಗ ಜನಾಂಗದವರು. ಈ ನಾಗರು ಹಾಗು ಕಂದರು ಬೇರೆಯಲ್ಲ.  ಖಾಂಡವವನದಿಂದ ಓಡಿ ಹೋದ ಕಂದರು ಕರ್ನಾಟಕದಲ್ಲಿ  ಬಂದು ನೆಲೆಸಿದ ಪ್ರದೇಶವೇ ‘ನಾಗರಖಂಡ’. ಸರ್ಪಭೂಷಣನಾದ  ಸುಬ್ರಹ್ಮಣ್ಯ ಸ್ವಾಮಿಯು ಇವರ ದೇವರು. ಈತನು ‘ಸ್ಕಂದ’ ಎಂದರೆ ‘ಕಂದ’ದ ಸಂಸ್ಕೃತೀಕೃತ ನಾಮಧಾರಿ. ಈತನ ಪರಿಸರದಲ್ಲಿಯೇ ನಾಗಪೂಜೆಯನ್ನು, ನಾಗಪ್ರತಿಷ್ಠೆಯನ್ನು ಮಾಡಲಾಗುತ್ತಿದೆ. ಇದರಂತೆಯೇ ಇತರ ಅನೇಕ ಆದಿವಾಸಿಗಳು ಸಹ ತಮ್ಮ ನೆಲೆಯನ್ನು ಬಿಟ್ಟು ದಕ್ಷಿಣಕ್ಕೆ ಓಡಿದ್ದಾರೆ. ಇವರನ್ನು ಪರಾಭವಗೊಳಿಸಿದವಳು ಒಬ್ಬ ಮಹಿಳೆ. ಇವಳು ಮಾತೃಪ್ರಧಾನ ಕುಲದ ಒಡತಿ. ಇವಳ ಕಥೆಯನ್ನು ಮುಂದೆ ನೋಡೋಣ.