Friday, July 5, 2024

ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ

 “ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ 

 

ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯದಲ್ಲಿ ಹಿಮಾಲಯವನ್ನು ‘ದೇವತಾತ್ಮಾ’ ಎಂದು ಭಕ್ತಿಯಿಂದ, ಗೌರವದಿಂದ ಕರೆಯುವ ಸಾಲು ಇದು. ಭಾರತವು ಉತ್ತರದಲ್ಲಿ ಹಿಮಾಲಯದಿಂದ ಪ್ರಾರಂಭಿಸಿ, ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ ವ್ಯಾಪಿಸಿದ ವಿಶಾಲವಾದ ದೇಶವಾಗಿದ್ದು, ಈ ಭೂಪ್ರದೇಶದಲ್ಲಿ ಅನೇಕ ಸಮುದಾಯಗಳು ಹರಡಿದ್ದವು, ಹರಡಿವೆ. ಕಾಲಾಂತರದಲ್ಲಿ ಕೆಲ ಸಮುದಾಯಗಳು ಬಲಿಷ್ಠವಾದರೆ, ಕೆಲ ಸಮುದಾಯಗಳು ನಶಿಸಿ ಹೋದವು. ಆದರೆ ಅವುಗಳ ಕುರುಹುಗಳನ್ನು ನಮ್ಮ ಪುರಾಣಗಳಲ್ಲಿ, ನಮ್ಮ ಭಾಷೆಗಳಲ್ಲಿ ಹಾಗು ನಮ್ಮ ಸ್ಥಳನಾಮಗಳಲ್ಲಿ ಹುಡುಕಬಹುದು. ಈ ದಿಕ್ಕಿನಲ್ಲಿ ಶ್ರೇಷ್ಠ ಸಂಶೋಧಕರಾದ ಕೀರ್ತಿಶೇಷ ಶಂ. ಬಾ. ಜೋಶಿಯವರು ಏಶಿಯಾದಲ್ಲಿಯೇ ಪ್ರಪ್ರಥಮವಾಗಿ ವಿಸ್ತಾರವಾದ ಹಾಗು ಆಳವಾದ ಸಾಂಸ್ಕೃತಿಕ ಅಧ್ಯಯನವನ್ನು ಮಾಡಿದರು. ಶಂ. ಬಾ. ಜೋಶಿಯವರು ತಮ್ಮ ಸಂಶೋಧನೆಗಳಲ್ಲಿ ಉಲ್ಲೇಖಿಸಿದ ಸಮುದಾಯಗಳಿಗಿಂತ ಪೂರ್ವದಲ್ಲಿಯೇ ಭರತಖಂಡದ ಗೊಂಡಾರಣ್ಯದಲ್ಲಿ ಮತ್ತೂ ಒಂದು ಸಮುದಾಯದ ಕೆಲವರು ಪಾದಾರ್ಪಣೆ ಮಾಡಿದ್ದರು ಅನ್ನುವುದು ಅಚ್ಚರಿಯ ಸಂಗತಿಯಲ್ಲವೆ? ಅವರೇ ಬಾಹ್ಯಾಂತರಿಕ್ಷ ಯಾತ್ರಿಗಳು! ಆಶ್ಚರ್ಯವಾಗುವುದೆ, ಗೆಳೆಯರೆ? ಈ ಅನುಮಾನಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳನ್ನು, ನಮ್ಮ ಪುರಾಣಗಳಿಂದಲೇ ಹೆಕ್ಕಿ, ನಿಮ್ಮ ಮುಂದೆ  ಇದೀಗ ಇಡುತ್ತಿದ್ದೇನೆ.

 

ಮೊದಲನೆಯದಾಗಿ ಭಾರತದ ಸರ್ವಮಾನ್ಯ, ಜನಪ್ರಿಯ ದೇವರಾದ ಹನುಮಂತನನ್ನು ಪರಿಶೀಲಿಸೋಣ. (‘ಹನುಮಾನ್’ ಎನ್ನುವುದು ‘ಅನುಮಾನ್’ ಎನ್ನುವ ಅನ್ಯಭಾಷೆಯ ಪದದ ಅಪಭ್ರಂಶ ರೂಪ ಎಂದು ಭಾಷಾತಜ್ಞರೊಬ್ಬರು ಹೇಳುತ್ತಾರೆ; ಇದು ಬೇರೆಯ ವಿಷಯ.)  ಸಂಸ್ಕೃತ ಭಾಷೆಯಲ್ಲಿ ‘ಹನು’ ಎಂದರೆ ಗದ್ದ. ಉದ್ದವಾದ ಗದ್ದವಿದ್ದವನು ಹನುಮಾನ್. ಈ ದೈಹಿಕ ವೈಶಿಷ್ಟ್ಯವುಳ್ಳ ಕೆಲವರು ಉತ್ತರಪ್ರದೇಶದ ಒಂದು ಭಾಗದಲ್ಲಿ ಇದ್ದಾರಂತೆ. ಇದು ಒಂದು ದೂರದ ಊಹೆ ಎಂದು ಅನಿಸಬಹುದು. ಇದಕ್ಕಿಂತಲೂ ಹತ್ತಿರದ ಕೆಲವು ಸಾಧ್ಯತೆಗಳನ್ನು ನೋಡೋಣವೆ? ಹನುಮಂತನು ವಾಯುದೇವನ ಮಗನು. ನಮ್ಮ ಸ್ಪರ್ಶದ ಅನುಭವಕ್ಕೆ ಬರುತ್ತಿರುವ ವಾಯುವಷ್ಟೇ ವಾಯುದೇವನಲ್ಲ; ‘ನಿಲಿಂಪ’ರು ಹಾಗು ‘ಮರುತ’ರು ಎನ್ನುವುದು ವಾಯುದೇವತೆಗಳ ಗುಂಪುಗಳು. ನಮ್ಮ ಸ್ತೋತ್ರಮಂತ್ರಾದಿಗಳಲ್ಲಿ ಇವರ ಉಲ್ಲೇಖವಿದೆ. ಇವರನ್ನು ಅಂತರಿಕ್ಷ ಯಾತ್ರಿಗಳು ಎಂದು ಭಾವಿಸಬಹುದೆ? ಈ ವಾಯುದೇವರಲ್ಲಿಯ ಓರ್ವನು ಭೂವನಿತೆಯಾದ ‘ಅಂಜನಾ’ಳ ಜೊತೆಗೆ ಸಂಪರ್ಕ ಹೊಂದಿದ್ದರಿಂದ, ‘ಹನುಮಂತ’ನು ಜನಿಸಿದನೆ? ಇದು ಒಂದು ಅತಿರೇಕದ ಕಲ್ಪನೆ ಎಂದು ನಿಮಗೆ ಎನಿಸಿದರೆ, ಇದಕ್ಕೂ ಹೆಚ್ಚಿನ ಎರಡು ಸಂಭಾವ್ಯ ಪುರಾವೆಗಳನ್ನು ನಿಮ್ಮೆದುರಿಗೆ ಇಡುತ್ತೇನೆ:

 

ಹನುಮಂತನು ಸೀತಾದೇವಿಯನ್ನು ಹುಡುಕುತ್ತ ಕತ್ತಲೆಯ ಕಗ್ಗಾಡಿನಲ್ಲಿ ಅಲೆಯುತ್ತಿರುವಾಗ, ಒಂದು ಗುಹೆಯನ್ನು ನೋಡುತ್ತಾನೆ. ಆ ಗುಹೆಯಲ್ಲಿ ಆತನು ಪ್ರವೇಶಿಸಿದಾಗ, ತನ್ನ ಮೈಯಿಂದಲೇ ಬೆಳಕನ್ನು ಸೂಸುತ್ತಿರುವ ಓರ್ವ ಯೋಗಿನಿಯನ್ನು ನೋಡುತ್ತಾನೆ. ಅವಳ ಹೆಸರು ಸ್ವಯಂಪ್ರಭಾ. (ಸ್ವಯಂಪ್ರಭಾ ಎನ್ನುವುದು ಅವಳಿಗೆ ನಾವು ಕೊಟ್ಟ ಹೆಸರು ಎನ್ನುವುದು ಸ್ಪಷ್ಟವಿದೆ.) ಅವಳಿಗೆ ಈ ಬೆಳಕು ಎಲ್ಲಿಂದ ಬಂದಿತು? ಇದು ಅಣುಶಕ್ತಿಯ ಬೆಳಕು ಇರಬಹುದೆ? ಬಾಹ್ಯಾಂತರಿಕ್ಷದ ಸುದೂರದಿಂದ ಭೂಮಿಯವರೆಗೆ ಬಂದವರಿಗೆ, ಅಣುಶಕ್ತಿಯಿಂದಲೇ ಶಕ್ತಿಯನ್ನು ಹಾಗು ಬೆಳಕನ್ನು ಉತ್ಪಾದಿಸಿಕೊಳ್ಳುವ ತಂತ್ರ ಅನಿವಾರ್ಯವಲ್ಲವೆ?

 

ಇನ್ನೀಗ ಮತ್ತೊಂದು ಪುರಾವೆ. ಅಮೆರಿಕದ ಒಂದು ದೊಡ್ಡ ಬೆಟ್ಟದಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಕೆಲವು ಉಬ್ಬುಶಿಲ್ಪಗಳಿವೆ. ಅದರಲ್ಲಿಯ ಒಂದು ಶಿಲ್ಪವು ಥೇಟ್ ನಮ್ಮ ಹನುಮಂತನನ್ನೇ ಹೋಲುತ್ತದೆ. ನಾನು ೪೦ ವರ್ಷಗಳ ಹಿಂದೆ, ಎಷ್ಟೋ ವರ್ಷಗಳ ಹಿಂದಿನ ಒಂದು ಇಂಗ್ಲಿಶ್ ಪುಸ್ತಕದಲ್ಲಿ ಈ ಚಿತ್ರವನ್ನು ನೋಡಿದೆ. ಭಾರತೀಯನಾದ ನನಗೆ ಇದು ಹನುಮಂತನ ಚಿತ್ರವೆಂದು ಥಟ್ಟನೆ ಹೊಳೆಯಿತು. ಆದರೆ ನಮ್ಮ ಪುರಾಣಗಳ ಪರಿಚಯವಿರದ ಪಾಶ್ಚಾತ್ಯರಿಗೆ ಹಾಗೆ ಅನಿಸಲು ಸಾಧ್ಯವಿಲ್ಲ! ಇದೊಂದು ಆದಿವಾಸಿಗಳ ಕಲ್ಪನಾಚಿತ್ರವೆಂದು ಅವರು ಭಾವಿಸಿರಬಹುದು! (ಆದಿವಾಸಿಗಳು ತಮ್ಮ ಕಲ್ಪನೆಯ ಮೂಲಕ ಅಂತಹ ಒಂದು ಚಿತ್ರವನ್ನು ಸೃಜಿಸಲು ಸಾಧ್ಯವಿಲ್ಲ!) 

 

ಹೀಗಿರುವಾಗ ಭರತಖಂಡಕ್ಕೆ ಆಗಮಿಸಿದ ಅನೇಕ ಸಮುದಾಯಗಳಲ್ಲಿ ಬಾಹ್ಯಾಂತರಿಕ್ಷದ ಒಂದು ಸಮುದಾಯವೂ ಇದ್ದಿರಲು ಸಾಧ್ಯವಿದೆ. ಜಿಜ್ಞಾಸುಗಳು ಗಂಭೀರವಾದ ಸಂಶೋಧನೆಯನ್ನು ಮಾಡಲು ಈ ವಿಷಯವು ಯೋಗ್ಯವಾಗಿದೆ!

 

ಇನ್ನು ಬಾಹ್ಯಾಂತರಿಕ್ಷವನ್ನು ಬಿಟ್ಟು ಸಮುದ್ರಮಾರ್ಗಕ್ಕೆ ಬರೋಣ. ದೇವತೆಗಳು ಹಾಗು ಅಸುರರು ಜೊತೆಯಾಗಿ ಸಮುದ್ರಮಥನವನ್ನು ಮಾಡಿದಾಗ, ಸಮುದ್ರದ ಒಡಲಿನಿಂದ ಹದಿನಾಲ್ಕು ರತ್ನಗಳು ಹೊರಬಂದವು ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆ ರತ್ನಗಳಲ್ಲಿ ಏಳು ಮುಖದ ಕುದುರೆ ಸಹ ಒಂದು ರತ್ನ. ಸಮುದ್ರದ ಈ ರತ್ನಗಳು ಈಜಿಪ್ತಿನಿಂದ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದ ‘ರತ್ನಗಳು’ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಇವುಗಳಲ್ಲಿ ಕುದುರೆಯೂ ಸಹ ಇದೆ. ಪ್ರಾಚೀನ ಭಾರತದಲ್ಲಿ ಕುದುರೆಗಳು ಇರಲಿಲ್ಲ. ಈಜಿಪ್ತಿನಿಂದ ಕುದುರೆಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತಿತ್ತು. ಈಜಿಪ್ತದ ಭಾಷೆಯಲ್ಲಿ ಕುದುರೆಗೆ hytr ಎಂದು ಕರೆಯುತ್ತಾರೆ. ಅದೇ ಕನ್ನಡದಲ್ಲಿ ‘ಕುದುರೆ’ಯಾಗಿದೆ ಎಂದು ಕನ್ನಡದ ಕಣ್ವರೆಂದು ಖ್ಯಾತರಾದ ಬಿ.ಎಮ್.ಶ್ರೀಕಂಠಯ್ಯನವರು ತರ್ಕಿಸಿದ್ದಾರೆ. ಕರ್ನಾಟಕದ ಕರಾವಳಿಯಲ್ಲಿರುವ ಭಟಕಳವು ಒಂದು ಕಾಲದಲ್ಲಿ ಖ್ಯಾತ ಬಂದರು ಆಗಿತ್ತು ಹಾಗು ಈ ಬಂದರಿಗೆ ಈಜಿಪ್ತಿನ ಜೊತೆ ನೇರ ಸಂಪರ್ಕವಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅಲ್ಲಿಂದ ಬಂದ ಅರಬರು ಭಟಕಳದಲ್ಲಿ ನೆಲೆಸಿದರು. ಅವರಿಗೆ ‘ನವಾಯತರು’ ಎಂದು ಸ್ಥಳೀಯರು ಕರೆಯುತ್ತಾರೆ. (ನವಾಯತ=ನವ+ಆಯತ). ಇವರೀಗ ಪರಕೀಯರಾಗಿ ಉಳಿದಿಲ್ಲ! ನಮ್ಮ ನಾಡಿನ ಮುಖ್ಯ ಪ್ರವಾಹದಲ್ಲಿ ಇವರು ಮಿಳಿತರಾಗಿ ಹೋಗಿದ್ದಾರೆ.

 

(ಟಿಪ್ಪಣಿ: (೧) ಭಟಕಳ ಬಂದರಿನ ಅನುಕೂಲತೆಯನ್ನು ಅರಿತಂತಹ ಶ್ರೀ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ, ಭಟಕಳವನ್ನು ಮೈಸೂರಿಗೆ ಮಾರಲು ಕೊಡುವಂತೆ ಬ್ರಿಟಿಶರನ್ನು ಕೇಳಿಕೊಂಡಿದ್ದರು; ಆದರೆ ಬ್ರಿಟಿಶರು ಅದಕ್ಕೆ ಒಪ್ಪಲಿಲ್ಲ.

(೨) ಹಿಮಾಲಯವಾಸಿಯಾದ ಶಿವನ ವಾಹನವು ನಂದಿಯಾಗಿತ್ತೇ ಹೊರತು, ಕುದುರೆಯಾಗಿರಲಿಲ್ಲ. ಅವನ ಮಗನಾದ ಗಣಪತಿಯೂ ಸಹ ಗಜಮುಖನೇ ಹೊರತು, ಆಶ್ವಮುಖನಲ್ಲ! ಕುದುರೆಗಳ ಬಳಕೆಯು ಭಾರತದಲ್ಲಿ ರಾಮಾಯಣ ಹಾಗು ಮಹಾಭಾರತದ ಕಾಲಗಳಿಂದ ಅಂದರೆ ಆರ್ಯರ ಆಗಮನದ ನಂತರವೇ ಪ್ರಾರಂಭವಾಗುತ್ತದೆ.)

 

ಇದಿಷ್ಟು ಪ್ರಾಗೈತಿಹಾಸಿಕ ಭಾರತದ ಪುರಾಣ. ಇನ್ನು ಐತಿಹಾಸಿಕ ಭಾರತದಲ್ಲಿ ಸಿಗುವ ಕೆಲವು ಸಮುದಾಯಗಳನ್ನು ನೋಡೋಣ!

(೧) ಮಲ್ಲರು: ಮಲ್ಲರು ಭಾರತದಲ್ಲೆಲ್ಲ ಹರಡಿದ ದೊಡ್ಡ ಸಮುದಾಯ. ಕುರುಕ್ಷೇತ್ರ ಯುದ್ಧದಲ್ಲಿ ಮಲ್ಲರು ಭಾಗವಹಿಸಿದ್ದರು ಎಂದು ವ್ಯಾಸಭಾರತವು ಹೇಳುತ್ತದೆ. ಈ ಮಲ್ಲರ ವಾಸಸ್ಥಾನವು ಇದೀಗ ಪಾಕಿಸ್ತಾನದ ಪಂಜಾಬ ಹಾಗು ಭಾರತದ ಝಾರಖಂಡದಲ್ಲಿದೆ. ಇವರದು ಜಾಟ ಕುಲ. (ಜಾಟ >> ಜಾತ = ಕುಲೀನ). ಇವರು ಬಂಗಾಲವನ್ನು ಸಹ ಆಳಿದ್ದರು. ಅಲ್ಲಿ ಇವರು ಕಟ್ಟಿಸಿದ ಗುಡಿ-ಗುಂಡಾರಗಳಿವೆ. ಮಲ್ಲ ಅರಸರು ಕನ್ನಡ ನಾಡಿನವರೆಂದು ಸ್ಥಳೀಯ ಮಾರ್ಗದರ್ಶಿಗಳು ಹೇಳುತ್ತಾರೆ. ಕರ್ನಾಟಕದಲ್ಲಿ ಸಹ ಮಲ್ಲರು ಸಾಕಷ್ಟು ಸಂಖ್ಯೆಗಳಲ್ಲಿ ಹರಡಿಕೊಂಡಿದ್ದರು. ಇವರ ಅನೇಕ ನೆಲೆಗಳು ‘ಮಲ್ಲ’ ಎನ್ನುವ ಪೂರ್ವಪದದಿಂದ ಪ್ರಾರಂಭವಾಗುತ್ತವೆ. ಉದಾಹರಣೆಗೆ ಮಲ್ಲಾಡಿಹಳ್ಳಿ, ಮಲ್ಲಾಪುರ, ಮಲ್ಲೇಶ್ವರ ಇತ್ಯಾದಿ. ಕರ್ನಾಟಕದಲ್ಲಿ ಹರಿದ ಮಲಪ್ರಭಾ ನದಿಯು ವಾಸ್ತವದಲ್ಲಿ ‘ಮಲ್ಲಪ್ರಭಾ’!. ಸಂಸ್ಕೃತ ಪಂಡಿತರು ಇದನ್ನು ‘ಅಮಲಪ್ರಭಾ’ ಎಂದು ತಿದ್ದುವ ಜಾಣ ಕೆಲಸವನ್ನು ಮಾಡುತ್ತಾರೆ! ಕರ್ನಾಟಕದಲ್ಲಿ ಇರುವ ಅಜಮಾಸು ೩೦,೦೦೦ ಹಳ್ಳಿಗಳಲ್ಲಿ ಸುಮಾರು ೩೮೫ ಹಳ್ಳಿಗಳ ಹೆಸರುಗಳು ‘ಮಲ್ಲ’ ಎನ್ನುವ ಉಪಾಧಿಯೊಂದಿಗೆ ಪ್ರಾರಂಭವಾಗುತ್ತವೆ, ಅರ್ಥಾತ್ ಅಂದಾಜು ೧೩%. ಇದಲ್ಲದೆ ಕೇರಳದಲ್ಲಿಯೂ ಸಹ ಈ ಹೆಸರಿನ ಹಳ್ಳಿಗಳಿವೆ. ಕನ್ನಡದ ಜಾನಪದ ಕಥೆಗಳಲ್ಲಿ ‘ಮಲಪೂರಿ’ ಎನ್ನುವ ಒಬ್ಬ ಯಕ್ಷಿಣಿ ಬರುತ್ತಾಳೆ. ಅರ್ಥಾತ್ ಕರ್ನಾಟಕದಲ್ಲಿ ಈಗ ಹೇಳಹೆಸರಿಲ್ಲದಂತೆ ನಶಿಸಿ ಹೋಗಿದ್ದರೂ ಸಹ, ಈ ಮಲ್ಲರು ಒಂದು ಕಾಲಕ್ಕೆ ಕರ್ನಾಟಕದ ಒಂದು ಪ್ರಬಲ ಸಮುದಾಯವಾಗಿದ್ದರು. ಕರ್ನಾಟಕದಲ್ಲಿ ಇವರು ಈಗ ಇರದಿದ್ದರೂ ಸಹ ಉತ್ತರಭಾರತದಲ್ಲಿ ಇವರದು ದೊಡ್ಡ ಸಮುದಾಯವಾಗಿ ಉಳಿದಿದೆ. ಒಂದು ಕಾಲಕ್ಕೆ Bandit Queen ಎಂದು ಖ್ಯಾತಳಾಗಿದ್ದ ಫೂಲನ್ ದೇವಿಯು ಮಲ್ಲ ಕುಲದವಳು. ಮಲ್ಲರು ಜಲಗಾರರೂ ಸಹ ಅಹುದು. ಇವರು ‘ಗಂಗಾಮತಸ್ಥ’ರಿಗೆ ಹತ್ತಿರದವರಾಗಿರಬಹುದೆ? ಗಂಗಾಮತಸ್ಥರು ಕರ್ನಾಟಕದಲ್ಲಿ ಇನ್ನೂ ಇದ್ದಾರೆ. ಮಹಾಭಾರತದಲ್ಲಿ ನಾವು ಗುರುತಿಸಬಹುದಾದ,  ಗಂಗೆಗೆ ಸಂಬಂಧ ಪಟ್ಟ ಈರ್ವರು ಪ್ರಸಿದ್ಧಪುರುಷರೆಂದರೆ, (೧) ವ್ಯಾಸ ಮತ್ತು (೨) ಭೀಷ್ಮ.

 

ವ್ಯಾಸನು ಪರಾಶರ ಎಂಬ ಋಷಿ ಹಾಗು ಮತ್ಸ್ಯಗಂಧಿ ಎನ್ನುವ ಬೆಸ್ತ ತರುಣಿಯ ಮಗನು. ವ್ಯಾಸನ ಜನನದ ನಂತರ ಪರಾಶರನು, ಮತ್ಸ್ಯಗಂಧಿಗೆ ವಿದಾಯ ಹೇಳಿ ಹೊರಟು ಹೋದನು! ಮತ್ಸ್ಯಗಂಧಿಯೇ ವ್ಯಾಸನನ್ನು ತನ್ನ ಬೆಸ್ತಕುಲದಲ್ಲಿ ಬೆಳೆಸಿದಳು ಎಂದು ನಾವು ಭಾವಿಸಬಹುದು. ಅದರಂತೆಯೇ ಭೀಷ್ಮನು ಶಂತನು ಎನ್ನುವ ಮಹಾರಾಜ ಹಾಗು ಗಂಗಾದೇವಿಯ ಸಂಯೋಗದಿಂದ ಜನಿಸಿದನು. ಈ ಎರಡೂ ಘಟನೆಗಳಲ್ಲಿ ನಮಗೆ ಸ್ಪಷ್ಟವಾಗಿ ಗೋಚರವಾಗುವ ವಿಷಯವೆಂದರೆ, ಈ ಬೆಸ್ತ ಕನ್ಯೆಯರಿಗೆ ವಿವಾಹಬಂಧನವು ಕಡ್ಡಾಯವಾಗಿರಲಿಲ್ಲ. ಮಾತೃಪ್ರಧಾನ ಕುಲದವರಾದ ಬೆಸ್ತ ಕನ್ಯೆಯರಲ್ಲಿ ಆರ್ಯಕುಲದ ಗಂಡಸರಿಗೆ ಜನಿಸಿದವರು ಈ ಭೀಷ್ಮ ಹಾಗು ವ್ಯಾಸ ಮಹರ್ಷಿಗಳು. ಗಂಗೆಯು ತನ್ನಲ್ಲಿ ಹುಟ್ಟಿದ ಮೊದಲ ಏಳು ಮಕ್ಕಳನ್ನು ನದಿಯಲ್ಲಿ ಬಿಸುಟಳು ಎನ್ನುವದರ ಅರ್ಥವೇನು? ಈ ಬೆಸ್ತರ ಕುಲವು ಮಾತೃಪ್ರಧಾನವಾಗಿದ್ದು, ಇವಳು ತನ್ನ ಮಕ್ಕಳನ್ನು ತನ್ನ ಕುಲದವರ ಆಶ್ರಯದಲ್ಲಿ ಬೆಳೆಸಿದಳು; ಎಂಟನೆಯ ಮಗುವನ್ನು ಶಂತನು ರಾಜನು ಬೇಡಿಕೊಂಡಾಗ, ಅವನಿಗೆ ಒಪ್ಪಿಸಿ, ತಾನು ಮತ್ತೆ ತನ್ನ ಪೂರ್ವಸ್ಥಾನಕ್ಕೆ ಮರಳಿದಳು!

 

ವಾಸ್ತವದಲ್ಲಿ ಆರ್ಯರಲ್ಲಿಯೂ ಸಹ ವಿವಾಹಬದ್ಧತೆ ಮೊದಮೊದಲು ಇರಲಿಲ್ಲ. ಶ್ವೇತಕೇತು ಎನ್ನುವ ವಟುವಿನ ಕಥೆಯನ್ನು ಕೇಳಿರಿ. ಈ ವಟುವು ಒಂದು ಮಧ್ಯಾಹ್ನ ತನ್ನ ಆಶ್ರಮಕ್ಕೆ ಅನಿರೀಕ್ಷಿತವಾಗಿ ಬಂದಾಗ, ಅಲ್ಲಿ ತನ್ನ ತಾಯಿ ಒಬ್ಬ ಅಪರಿಚಿತ ಗಂಡಸಿನ ಜೊತೆಗೆ ಮಲಗಿರುವುದನ್ನು ನೋಡುತ್ತಾನೆ. ಅದು ಅವನಿಗೆ ಸಹ್ಯವಾಗುವುದಿಲ್ಲ. ತಕ್ಷಣವೇ ಆತನು ಶಾಪರೂಪದಲ್ಲಿ ಒಂದು ಕಟ್ಟಳೆಯನ್ನು ಮಾಡುತ್ತಾನೆ. ಇನ್ನು ಮೇಲೆ ಆರ್ಯ ಹೆಂಗಸರು ತಮ್ಮ ಗಂಡಂದಿರ ಜೊತೆಗೆ ಮಾತ್ರ ಮಲಗತಕ್ಕದ್ದು, ಬೇರೆ ಗಂಡಸರ ಜೊತೆಗೆ ಮಲಗಕೂಡದು. ಈ ವಿಷಯವನ್ನು ನಾವು ಪರೀಕ್ಷಿಸುವಾಗ, ಆರ್ಯರು ಭೂಮಿಯ ಉತ್ತರ ಭಾಗದಿಂದ ಭಾರತಕ್ಕೆ ಬಂದರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಉತ್ತರ ಧ್ರುವಕ್ಕೆ ಸಮೀಪದಲ್ಲಿರುವ ಎಸ್ಕಿಮೋಗಳಲ್ಲಿ ಸಂತಾನೋತ್ಪತ್ತಿ ಕಡಿಮೆ. ಅಲ್ಲಿಯ ಹವಾಮಾನ ಹಾಗು ಆಹಾರದ ಕೊರತೆಯಿಂದಾಗಿ ಇದು ಸಹಜವೇ. ಆದರೆ, ಎಲ್ಲ ಮನುಷ್ಯಕುಲಗಳಲ್ಲಿಯೂ ಸಂತಾನೋತ್ಪತ್ತಿಯ ಬಯಕೆ ಇದ್ದೇ ಇರುತ್ತದಲ್ಲವೆ? ಆದುದರಿಂದ ಓರ್ವ ಎಸ್ಕಿಮೊ ಕುಟುಂಬಕ್ಕೆ ಯಾರಾದರೂ ಪುರುಷನು ಅತಿಥಿಯಾಗಿ ಬಂದಂತಹ ಸಂದರ್ಭದಲ್ಲಿ, ಎಸ್ಕಿಮೋನ ಹೆಂಡತಿಯ ಜೊತೆಗೆ ಈ ವ್ಯಕ್ತಿಯು ಕಡ್ಡಾಯವಾಗಿ ಮಲಗಿಕೊಳ್ಳಲೇಬೇಕು! ಇದು ಅಲ್ಲಿಯ ರಿವಾಜು. ಭಾರತದಂತಹ ಅತಿಸಂತಾನ ದೇಶದಲ್ಲಿ ಏಕಪತಿತ್ವವು ಅನಿವಾರ್ಯವಾಗಿದೆ!

 

ಪ್ರಾಚೀನ ಕಾಲದ ಪ್ರಾಚೀನ ಭಾರತದಲ್ಲಿ, ಬೇಟೆಯ ಹಾಗು ಬೆಳೆಯ ಜಾಗಗಳ ಸಲುವಾಗಿ ವಿವಿಧ ಸಮುದಾಯಗಳು ಪರಸ್ಪರ ಹೋರಾಡುತಿದ್ದದ್ದು ಸಹಜವೇ ಆಗಿದೆ. ಹಾಗಿದ್ದರೆ, ಈ ಮಲ್ಲರ ಕಡು ವೈರಿ ಯಾರೆಂದಿರಾ? ಆತನೇ ನಮ್ಮ ಪುರಾಣಪ್ರಸಿದ್ಧ ದೇವನಾದ ಮಲ್ಲಾರಿ! ಈ ಮಲ್ಲಾರಿಗೆ ‘ಮಲ್ಲನಿಷೂದನ’ ಎಂದು ಸಂಬೋಧಿಸಲಾಗಿದೆ.ಒಂದು ಕಾಲಕ್ಕೆ ಶೂರ-ವೀರ ಕುಲದವರಾದ ಮಲ್ಲರು, ತಮ್ಮ ಹೋರಾಟಗಳಲ್ಲಿ ಮಣ್ಣು ಮುಕ್ಕಿದಾಗ, ಅವರು ಸಮಾಜಸೋಪಾನದಲ್ಲಿಯ ಅತ್ಯಂತ ಕೆಳಮಟ್ಟದ ಮೆಟ್ಟಲಿಗೆ ಇಳಿದರು!

 

ಈ ಎಲ್ಲ ಭಾರತೀಯ ಕುಲಗಳ ವೈವಿಧ್ಯಗಳೇನು, ಅವರುಗಳ ಸಂಸ್ಕೃತಿ ಹೇಗಿತ್ತು ಎನ್ನುವುದನ್ನು ಮತ್ತೊಮ್ಮೆ ಪರಿಶೀಲಿಸೋಣ.

Saturday, April 27, 2024

ಭಾಷೆ ಎನ್ನುವುದು ಯಂತ್ರವೂ ಹೌದು, ಮಂತ್ರವೂ ಹೌದು.

ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರೆಲ್ಲ ಕಾಡಾಡಿಗಳಾಗಿದ್ದರು. ಅವರು ಸಣ್ಣ ಸಣ್ಣ ಗುಂಪುಗಳಲ್ಲಿ ಬೇಟೆಗಾಗಿ ಸಂಚರಿಸುವಾಗ, ಅವರಿಗೆ ತಮ್ಮ ಸನಿಹದಲ್ಲಿಯೇ ‘ಹುಲಿ’ ಇದೆ ಎನ್ನುವ ಸುಳಿವು ಸಿಕ್ಕಿತು ಎಂದಿಟ್ಟುಕೊಳ್ಳಿ. ಒಬ್ಬರನ್ನೊಬ್ಬರು ಎಚ್ಚರಿಸಬೇಕೆಂದರೆ, ಈ ಗುಂಪುಗಳಲ್ಲಿ ಇನ್ನೂ ಭಾಷೆಯ ಬೆಳವಣಿಗೆಯಾಗಿಲ್ಲ. ಆದುದರಿಂದ ಅವರು ಹ್ರಸ್ವಧ್ವನಿಗಳನ್ನು ಉಚ್ಚರಿಸುತ್ತ, ‘ಪುಲ್, ಪುಲ್’ ಎಂದು ಅಂದಿರಬಹುದು. ಈ ಪುಲ್ ಎನ್ನುವ ಪದವೇ ಮುಂದೆ ಪುಲಿಯಾಗಿ, ಬಳಿಕ ಹುಲಿಯಾಗಿ ಮಾರ್ಪಟ್ಟಿರಬಹುದು! ಒಂದೊಂದೇ ಪದಗಳು ಈ ರೀತಿಯಾಗಿ ಬೆಳೆದು, ವಾಕ್ಯಗಳು ಸೃಷ್ಟಿಯಾಗಿ, ಭಾಷೆ ಬೆಳೆದಿರಬಹುದು! ಇದು ಜೋಕ್ ಅಲ್ಲ, ಒಂದು ಸಂಭಾವ್ಯತೆ. ಆದರೆ, ನಾನು ಹೇಳಬಯಸುವ ವಿಷಯ ಬೇರೆಯದೇ ಆಗಿದೆ:

 

ಕನ್ನಡದ ಕಥಾಬ್ರಹ್ಮ, ಜ್ಞಾನಪೀಠಪ್ರಶಸ್ತಿವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ಸಂಸ್ಕೃತ ಪಂಡಿತರೊಬ್ಬರು ಒಮ್ಮೆ ಹೀಗೆ ಹೇಳಿದರು: `ಅಲ್ಲಯ್ಯ, ಯಾವುದೇ ಭಾಷೆಯ ಪದವಾಗಲಿ, ಅದು ಭಾವವನ್ನು ಸಮರ್ಥವಾಗಿ ವ್ಯಕ್ತಗೊಳಿಸಬೇಕು. ಈಗ ನೋಡಿ, ಕನ್ನಡದಲ್ಲಿ ನೀವು ‘ಹುಲಿ’ ಎನ್ನುತ್ತೀರಿ. ಹೀಗೆ ಅಂದಾಗ, ನಿಮಗೆ ಹುಲಿಯ ಭೀಕರತೆಯ ಅನುಭವ ಆಗುವುದೆ? ಆದರೆ, ಸಂಸ್ಕೃತದಲ್ಲಿ ‘ವ್ಯಾಘ್ರ’ ಎನ್ನುವ ಉಗ್ರ ಪದವಿದೆ. ಹೌದಲ್ಲವೆ?’

 

ಈ ಮಾತಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಉತ್ತರ ಹೀಗಿತ್ತು: ಸ್ವಾಮಿ, ಇರುವೆಯಂತಹ ಸಣ್ಣ ಪ್ರಾಣಿಗೆ ಕನ್ನಡದಲ್ಲಿ ಇರುವೆ ಎನ್ನುವ ಸಣ್ಣ ಪದವೇ ಇದೆ. ಸಂಸ್ಕೃತದಲ್ಲಿ ಇದಕ್ಕೆ ‘ಪಿಪೀಲಿಕಾ’ ಎನ್ನುವ ದೀರ್ಘ ಪದವನ್ನು ಬಳಸುತ್ತಾರಲ್ಲ! ಇದಕ್ಕೆ ಏನು ಹೇಳುತ್ತೀರಿ?’ ಸಂಸ್ಕೃತದ  ಅಭಿಮಾನಿ ಪಂಡಿತರು ಬಾಯಿ ಮುಚ್ಚಿಕೊಂಡು ಕೂತರು!

 

ಮಾನವನ ಮನಸ್ಸಿನಲ್ಲಿ ಮೊದಲು ಹುಟ್ಟುವುದು ಭಾವ, ಬಳಿಕ ಅದಕ್ಕೆ ತಕ್ಕಂತಹ ಒಂದು ಪದ ಹುಟ್ಟುತ್ತದೆ. ಕನ್ನಡಿಗರಿಗೆ ಹುಲಿಯನ್ನು ನೋಡಿದಾಗ ಏನೂ ಭೀತಿಯಾಗುತ್ತಿರಲಿಕ್ಕಿಲ್ಲ. (ಈ ಮಾತಿಗೆ ನಮ್ಮ ‘ಸಳ’ನೇ ಸಾಕ್ಷಿಯಾಗಿದ್ದಾನೆ.) ಅದಕ್ಕೇ ಆ ಪ್ರಾಣಿಯನ್ನು ಅವರು ಸಹಜವಾಗಿ ‘ಹುಲಿ’ ಎಂದು ಬಿಟ್ಟರು. ಆದರೆ ಭಯಭೀತರಾದ ಸಂಸ್ಕೃತ ಪಂಡಿತರು ಅದೇ ಪ್ರಾಣಿಯನ್ನು ‘ವ್ಯಾಘ್ರ’ ಎಂದು ಕರೆದಿದ್ದರಲ್ಲಿ ಆಶ್ಚರ್ಯವಿಲ್ಲ! 

 

ಸಂಸ್ಕೃತದಲ್ಲಿ  ಸಹ ಭಾವವನ್ನು ವ್ಯಕ್ತ ಮಾಡದಂತಹ ಅನೇಕ ಪದಗಳಿದ್ದು, ನಮ್ಮ ಕನ್ನಡಿಗರು, ಅಂತಹ ಪದಗಳನ್ನು ‘ತಿದ್ದಿ’ಕೊಂಡಿದ್ದಾರೆ. ಸಂಸ್ಕೃತದಲ್ಲಿ ಅಲ್ಪಪ್ರಾಣ ಪದಗಳಿಲ್ಲ, ಇರುವದೆಲ್ಲವೂ ಮಹಾಪ್ರಾಣ ಪದಗಳೇ ಎನ್ನುವ ಭ್ರಮೆ ನಮ್ಮ ಕನ್ನಡಿಗರಿಗೆ ಇದೆ. ಹೀಗಾಗಿ ‘ಗರ್ಜನೆ’; ಎನ್ನುವ ಸಂಸ್ಕೃತ ಪದವನ್ನು ಕನ್ನಡಿಗರು ‘ಘರ್ಜನೆ’ ಎಂದು ತಿದ್ದಿಕೊಂಡಿದ್ದಾರೆ. ‘ಕ್ರೋಡೀಕರಣ’ ಪದವನ್ನು ‘ಕ್ರೋಢೀಕರಣ’ ಎಂದು ಬದಲಾಯಿಸಿಕೊಂಡಿದ್ದಾರೆ. ಇನ್ನು, ಉಚ್ಚ, ಉಚ್ಚಾರ, ಉಚ್ಚಾಟನೆ ಎನ್ನುವ ಪದಗಳಂತೂ ಉಚ್ಛ, ಉಚ್ಛಾರ, ಉಚ್ಛಾಟನೆ ಎಂದು upgraded ಆಗಿವೆ! ಭಲೇ ಕನ್ನಡಿಗ! ಅಥವಾ ಈ ತರಹದ ತಿದ್ದುವಿಕೆಯನ್ನು ಕನ್ನಡಿಗರ ಜಾಯಮಾನ ಎನ್ನೋಣವೇ!

 

ಮೈಸೂರು ಸಂಸ್ಥಾನವು ಬ್ರಿಟಿಶರ ಸುಪರ್ದಿಯಲ್ಲಿ ಇದ್ದಾಗ, ತಮಿಳುನಾಡಿನ ಅನೇಕ ಸುಶಿಕ್ಷಿತ ವ್ಯಕ್ತಿಗಳು ಮೈಸೂರಿನಲ್ಲಿ ಸರಕಾರಿ ಕೆಲಸದಲ್ಲಿ ಇರುತ್ತಿದ್ದರು. ತಮಿಳಿನಲ್ಲಿ ಅಂಕಿಗಳಿಗೆ ಸಂಕೇತಗಳಿಲ್ಲ. ಹೀಗಾಗಿ ಅವರು ಇಂಗ್ಲಿಶ್ ಅಂಕಿಗಳನ್ನೇ ಬಳಸುತ್ತಿದ್ದರು. ಕನ್ನಡದಲ್ಲಿ ಅಂಕಿಗಳಿಗೆ ಸಂಕೇತಗಳು ಇದ್ದರೂ ಸಹ, ನಾವು ಪ್ರಭುಗಳನ್ನು ಅನುಸರಿಸಿ, ಇಂಗ್ಲಿಶ್ ಅಂಕಿಗಳನ್ನೇ ಬಳಸತೊಡಗಿದೆವು. ಹೀಗಾಗಿ, ಕನ್ನಡದಲ್ಲಿ ೧, ೨, ೩,೪........ಗಳ ಬದಲಾಗಿ, 1,2,3,4.......ರೂಢವಾದವು. ಕರ್ನಾಟಕ ಏಕೀಕರಣವಾಗಿ ೬೮ ವರ್ಷಗಳ ನಂತರವೂ ಸಹ, ನಾವು ಈ ರೂಢಿಯ ಗುಲಾಮರೇ ಆಗಿ ಉಳಿದಿದ್ದೇವೆ!


ಕನ್ನಡಿಗರು ಮರೆತು ಬಿಟ್ಟ ಮಾತು ಏನೆಂದರೆ:

ಭಾಷೆ ಎನ್ನುವುದು ಯಂತ್ರವಷ್ಟೇ ಅಲ್ಲ, ಮಂತ್ರವೂ ಹೌದು!

Sunday, February 4, 2024

ಭಾಷಾ ಅಜ್ಞಾನ

ಬ್ರೆಕ್ (break) ಮತ್ತು ಬ್ರೇಕ್ (brake) ಇವುಗಳ ನಡುವಿನ ವ್ಯತ್ಯಾಸವೇನು, ಗೆಳೆಯರೆ? ನಿಮಗೆಲ್ಲರಿಗೂ ಗೊತ್ತಿರುವಂತೆ ಬ್ರೆಕ್ (break) ಅಂದರೆ ತುಂಡು ಮಾಡುವುದು, ಮುರಿಯುವುದು ಇತ್ಯಾದಿ. ಹೀಗಾಗಿ ಇಂಗ್ಲೀಶರು ‘Dawn is breaking’, `She broke the engagement”, `Breaking news” ಮೊದಲಾದ ವಾಕ್ಯಗಳನ್ನು ಬಳಸುತ್ತಾರೆ. ಎರಡನೆಯದಾಗಿ ಬ್ರೇಕ್ (brake) ಅಂದರೆ ವಾಹನಗಳಿಗೆ ನಿಲ್ಲುತಡೆ ಹಚ್ಚಿ ನಿಲ್ಲಿಸುವುದು. 

 ನಮ್ಮ ಟೀವಿ ವಾಹಿನಿಗಳಿಗೆ ಇಂಗ್ಲಿಶ್ ಸ್ವಲ್ಪ ತುಟ್ಟಿ ಅಂತ ಕಾಣುತ್ತೆ. ( ಕನ್ನಡವು ಅದಕ್ಕೂ ಜಾಸ್ತಿಯೇ ತುಟ್ಟಿ ಇರಬಹುದು!) ಈ ಟೀವಿ ವಾಹಿನಿಗಳು ತಮ್ಮ ತೋರುಪಟದ ಮೇಲೆ ಬ್ರೇಕಿಂಗ್ ನ್ಯೂಜ್ ಎಂದು ಕನ್ನಡ ಅಕ್ಷರಗಳಲ್ಲಿ ಬರೆದಿದ್ದು ನೋಡಿ ಅಚ್ಚರಿ ಹಾಗು ಬೇಸರ ಎರಡೂ ಆಯಿತು. ಮೊದಲನೆಯದಾಗಿ, ಇಂಗ್ಲಿಶ್ ಪದವನ್ನು ಕನ್ನಡ ಅಕ್ಷರದಲ್ಲಿ ಬರೆಯುವುದು ಯಾತಕ್ಕೆ? ತಮ್ಮ ಇಂಗ್ಲಿಶ್ ಪಾಂಡಿತ್ಯವನ್ನು ಅಥವಾ ಆಧುನಿಕತೆಯನ್ನು(?) ಮೆರೆಸುವದಕ್ಕೆ? ನಮ್ಮ ಮುದ್ದಣನು ಹೇಳಿದಂತೆ ಇದು ಮುತ್ತುಮ್ ಮೆಣಸುಮ್ ಕೋದಂತಹ ಅಲಂಕಾರವಷ್ಟೆ! ಎರಡನೆಯದಾಗಿ, ಬ್ರೇಕಿಂಗ್ ನ್ಯೂಜ್ ಎಂದರೆ ಏನರ್ಥ? ನಿಲ್ಲುತಡೆ ಹಾಕಿ ನಿಲ್ಲಿಸಿದ ಸಮಾಚಾರ ಎಂದಲ್ಲವೆ? ಈ ರೀತಿಯಾಗಿ, ನಮ್ಮ ವಾಹಿನಿಗಳು ಎರಡು ಅತ್ಯಾಚಾರಗಳನ್ನು ಮಾಡುತ್ತಿವೆ. ಒಂದು, ಕನ್ನಡ ಹಾಗು ಇಂಗ್ಲಿಶ್ ಭಾಷೆಗಳ ಕೊಲೆ. ಎರಡನೆಯದಾಗಿ, ನೋಡುಗರಲ್ಲಿ, ವಿಶೇಷತ: ಅಮಾಯಕ ಬಾಲಕರಲ್ಲಿ ತಮ್ಮ ಸ್ವಂತ ಅಜ್ಞಾನವನ್ನು ವಿಸ್ತರಿಸುವ ಹೀನ ಕಾರ್ಯ!

 ನಮ್ಮ ಟೀವಿ ವಾಹಿನಿಗಳ ಸಂಪಾದಕರು ಕುರುಡರಷ್ಟೇ ಅಲ್ಲ,ಕಿವುಡರೂ ಹೌದು ಎಂದು ತೋರುತ್ತದೆ. ಇತ್ತೀಚೆಗೆ ಲಕ್ಷದ್ವೀಪವು ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಲಕ್ಷದ್ವೀಪದ ನಿವಾಸಿಗಳು ತಮ್ಮ ಆಡುಭಾಷೆಯಲ್ಲಿ ಈ ದ್ವೀಪವನ್ನು ‘ಲಖದೀವ್’ ಎಂದು ಕರೆಯುತ್ತಾರೆ. ಅವರು ‘ಖ’ ಎನ್ನುವ ಮಹಾಪ್ರಾಣಾಕ್ಷರವನ್ನು ಬಳಸುತ್ತಿದ್ದಾರೆಯೇ ಹೊರತು ‘ಕ’ ಎನ್ನುವ ಅಲ್ಪಪ್ರಾಣಿಯನ್ನಲ್ಲ ಎನ್ನುವುದನ್ನು ಗಮನಿಸಿರಿ. ಹೀಗಿರುವಾಗ, ನಮ್ಮ ವಾಹಿನಿಯೊಂದರ ತೋರುಪಟದಲ್ಲಿ, ‘ಲಕ್ ದೀವ್’ ಎಂದು ಬರೆಯಲಾಗಿದೆ! ಅಲ್ಲಿಯ ಜನರು ಬಳಸುವ ‘ಖ’ ಎನ್ನುವ ಮಹಾಪ್ರಾಣವನ್ನು ನಮ್ಮ ಕಿವುಡರು ‘ಕ್’ ಎನ್ನುವ ಅಲ್ಪಪ್ರಾಣವಾಗಿ ಬದಲಾಯಿಸಲು ಏನಾದರೂ ಕಾರಣವಿದೆಯೆ? ಯಾವುದೇ ಪದವನ್ನು ಬಳಸಬೇಕಾದರೂ ಅಲ್ಲಿಯ ಮೂಲಭಾಷಿಕರ ಉಚ್ಚಾರವನ್ನೇ ನಾವು ಅನುಸರಿಸಬೇಕೆ ಹೊರತು ನಮ್ಮ ಶೋಕಿ ಪದವನ್ನಲ್ಲ. ‘ಅದು ಹೀಗಲ್ಲ’, ಎಂದು ಕೆಲವು ಜ್ಞಾನಿಗಳು ತಮ್ಮದೇ ಆದ ವಿವರಣೆಯನ್ನು  ನೀಡಬಹುದು. ಅರ್ಥಾತ್ ಕನ್ನಡದ ‘ಜಾಯಮಾನ’ದಲ್ಲಿ ಮಹಾಪ್ರಾಣವಿಲ್ಲ! ಕನ್ನಡಿಗರು ಅಲ್ಪಪ್ರಾಣಿಗಳು ಎನ್ನುವ ತರ್ಕವನ್ನು ಅವರು ನಿಮ್ಮ ಮುಂದೆ ಇಡಬಹುದು! ಆದರೆ ಗೆಳೆಯರೆ, ನಾವು ಪರಭಾಷೆಯ ಹೆಸರುಗಳನ್ನು ಹಾಗು ಪದಗಳನ್ನು ಬಳಸಬೇಕಾದರೆ, ಅಲ್ಲಿಯ ಭಾಷಿಕರ ಉಚ್ಚಾರವನ್ನು ಬಳಸಬೇಕೆ ಹೊರತು ನಮ್ಮ ಭಾಷೆಯ, ‘ತಥಾಕಥಿತ ಜಾಯಮಾನ’ವನ್ನಲ್ಲ! ಈ ಜಾಯಮಾನದ ಬೆನ್ನು ಹತ್ತಿದರೆ, ಆಗುವ ಅನಾಹುತವನ್ನು ನಿಮಗೆ ಹೇಳುವೆ! ಕೆಲವು ಸ್ಥಳಿಕ ಕನ್ನಡಿಗರು ‘ಹಾಸನ’ಕ್ಕೆ ‘ಆಸನ’ ಎಂದೂ, ‘ಅರಸೀಕೆರೆ’ಗೆ ‘ಹರಸೀಕೆರೆ’ ಎಂದೂ ಉಚ್ಚರಿಸುತ್ತಾರೆ. ಇದು ಸ್ಥಳೀಯ ‘ಜಾಯಮಾನ’! ನಾವೂ ಸಹ ಸ್ಥಳೀಯ ಕನ್ನಡದ ಜಾಯಮಾನವನ್ನೇ ಅನುಸರಿಸಬೇಕಾದದ್ದು ಸಭ್ಯತನ. ಈ ಕಾರಣದಿಂದಾಗಿ ನಾವೂ ಸಹ ಆಸನ ಹಾಗು ಹರಸೀಕೆರೆ ಎಂದೇ ಉಚ್ಚರಿಸುವುದು ನಾವು ‘ಜಾಯಮಾನ’ಕ್ಕೆ ಕೊಡುವ ಮರ್ಯಾದೆಯಾಗುತ್ತದೆ. ಇದನ್ನು ಒಪ್ಪುಲಾಗದು ಎಂದು ನಿಮಗೆ ಅನಿಸುತ್ತಿದ್ದರೆ, ‘ಕನ್ನಡದ ಜಾಯಮಾನ’ವನ್ನು ಬಿಟ್ಟುಬಿಟ್ಟು ‘ಲಖದೀವ್’ ಎಂದು ಬರೆಯಿರಿ ಹಾಗು ‘ಲಖದೀವ್’ ಎಂದು ಉಚ್ಚರಿಸಿರಿ. 

ನಿಜ ಹೇಳಬೇಕೆಂದರೆ, ನಮಗೆ ಅಂದರೆ ಕನ್ನಡಿಗರಿಗೆ ನಮ್ಮ ಭಾಷೆಯ ಎಷ್ಟೋ ಮೂಲಪದಗಳೇ ತಿಳಿದಿಲ್ಲ. ಉದಾಹರಣೆಗೆ: ‘ಕಾರವಾರ’. ಕಾರವಾರದ ಮೂಲ ಹೆಸರು ‘ಕಡೇವಾಡ’. (ಇದು ಕಾರವಾರ ಜಿಲ್ಲೆಯ ಕಟ್ಟಕಡೆಯ ಹಳ್ಳಿಯಾಗಿದ್ದು ಸಮುದ್ರಕ್ಕೆ ಸನಿಹವಾಗಿದೆ.) ಇಲ್ಲಿ ಬಂದಿಳಿದ ಬ್ರಿಟಿಶರಿಗೆ ಕಡೇವಾಡ ಎಂದು ಉಚ್ಚರಿಸಲು ಕಷ್ಟವಾಗುತ್ತಿದ್ದ ಕಾರಣದಿಂದಾಗಿ, ಅವರು ‘ಕಾರವಾರ’ ಎಂದು ಕರೆದರು. ಅವರ ಆಳಿಕೆಯಲ್ಲಿ ಇದ್ದ ನಾವೂ ಸಹ ‘ಕಾರವಾರ’ಎಂದೇ ಹೇಳುತ್ತ ಬಂದೆವು. ಈಗ ನಾವು ಕಡೇವಾಡವೇ ಕಾರವಾರದ ಮೂಲ ಎನ್ನುವುದನ್ನು ಮರೆತೇ ಬಿಟ್ಟಿದ್ದೇವೆ. ಇಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕದಲ್ಲಿ ಇವೆ. ಉದಾಹರಣೆಗೆ, ದಂಡೀಹಳ್ಳಿ>>ದಾಂಡೇಲಿ. ಮರಾಠಿಗರ ಬಾಯಿಯಲ್ಲಿ ಮಿರಜಗಿ ಎನ್ನುವ ಸ್ಥಳವು ಕೇವಲ ಮಿರಜ ಆಯಿತು; ಕಂದಹಾಳವು ಖಂಡಾಲಾ ಆಯಿತು! ಡೊಂಬ ಸಮುದಾಯದ  ಡೊಂಬಿಹಳ್ಳಿಯು ಡೊಂಬಿವಲಿ ಆಯಿತು, ಮಲ್ಲಹಾರವು ಮಲಾರ ಆಯಿತು! ಮರಾಠಿಗರು Bombayಅನ್ನು ಮುಂಬಯಿ ಎಂದು ಮರುನಾಮಕರಣ ಮಾಡಿದರು. ಆದರೆ ಮುಂಬಯಿಯ ಸಮೀಪದಲ್ಲಿದ್ದ ಖಂಡಾಲಾ, ಡೊಂಬಿವಲಿ, ಮಲಾರ ಇವುಗಳನ್ನು ಮೂಲಹೆಸರುಗಳಿಗೆ ಪರಿವರ್ತಿಸಲು ಹೋಗಲಿಲ್ಲ. ಏಕೆಂದರೆ, ಹಾಗೆ ಮಾಡುವದರಿಂದ ಅವು ಎಲ್ಲಿ ಒಂದು ಕಾಲಕ್ಕೆ ಕರ್ನಾಟಕದಲ್ಲಿ ಇದ್ದವು ಎನ್ನುವುದು ಸಿದ್ಧವಾಗುತ್ತದೆಯೊ ಎನ್ನುವ ಹೆದರಿಕೆ ಅವರಿಗೆ!

 ಕನ್ನಡಿಗರು ಅಲ್ಪಪ್ರಾಣಿಗಳಾಗಲು ಕಾರಣವೇನು? ಇದಕ್ಕೆ ಹಳೆಮೈಸೂರು ಪ್ರಾಂತದ ಜನರಿಂದ ಥಟ್ಟನೆ ಬರುವ ಉತ್ತರವೇನೆಂದರೆ, ಕನ್ನಡವು ದ್ರಾವಿಡ ಭಾಷೆಯಾಗಿದ್ದು, ಇಲ್ಲಿ ಮಹಾಪ್ರಾಣವಿಲ್ಲ! ಅಯ್ಯೋ ದೇವರೆ, ನಮ್ಮ ಅಲ್ಪಪ್ರಾಣಿತ್ವವು ತಮಿಳಿನ ಕುರುಡು ಅನುಕರಣೆಯಲ್ಲದೆ, ಮತ್ತೇನೂ ಅಲ್ಲ! ನಿಮಗೆಲ್ಲರಿಗೂ ಗೊತ್ತಿರುವಂತೆ, ತಮಿಳು ಬರಹದಲ್ಲಿ, ಮಹಾಪ್ರಾಣದ ಅಕ್ಷರಗಳು ಇಲ್ಲ. ಉದಾಹರಣೆಗೆ, ಕನ್ನಡದಲ್ಲಿ ಕ, ಖ, ಗ, ಘ ಮೊದಲಾದ ಅಕ್ಷರಗಳಿದ್ದರೆ, ತಮಿಳಿನಲ್ಲಿ ಈ ನಾಲ್ಕೂ ಅಕ್ಷರಗಳಿಗೆ   ಕ ಎನ್ನುವ ಒಂದೇ ಅಕ್ಷರವನ್ನು ಬಳಸಲಾಗುತ್ತದೆ. ಇದರಂತೆಯೇ ಚ, ಛ, ಜ, ಝ ಇತ್ಯಾದಿ. ಆದುದರಿಂದ ಅವರಿಗೆ ಮಹಾಪ್ರಾಣವೆಂದರೇ ಗೊತ್ತಿಲ್ಲ. ಈ ಕಾರಣಕ್ಕಾಗಿ, ಅವರನ್ನು alphabetically primitive ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ! ಇಂತಹ  ಕಾಗುಣಿತ ಅರಿಯದ ಕಾಡುಜನರನ್ನು, ನಾವು ಅಂದರೆ ಕನ್ನಡಿಗರು ಕುರುಡರಂತೆ ಅನುಸರಿಸಬೇಕೆ?  ಇಬ್ಬರು ಗೆಳೆಯರಿದ್ದರಂತೆ. ಅವರಲ್ಲಿ ಒಬ್ಬನು ಕುಂಟ. ಇವನನ್ನು ನೋಡಿದ ಮತ್ತೊಬ್ಬನು, ‘ನಾವು ದ್ರಾವಿಡರು, ಕುಂಟುತನವೇ ನಮ್ಮ ಜಾಯಮಾನ’ ಎಂದು ಭಾವಿಸಿ ತಾನೂ ಕುಂಟುತ್ತಲೇ ನಡೆಯುತ್ತಿದ್ದನಂತೆ. ಆದುದರಿಂದ ಬಂಧುಗಳೇ, ಈ ಅಲ್ಪಪ್ರಾಣಿತ್ವದ ಕುಂಟು ನಡೆ ನಮ್ಮ ಜಾಯಮಾನವಲ್ಲ ಎನ್ನುವುದನ್ನು ತಿಳಿಯಿರಿ! ಎರಡೂ ಕಾಲುಗಳನ್ನು ಬಳಸಿಕೊಂಡು, ಧೀರವಾಗಿ ನಡೆಯಿರಿ! ಮಹಾಪ್ರಾಣ ಉಚ್ಚಾರವನ್ನು ಸಹಜವಾಗಿ ಮಾಡಿರಿ, ಸಂಕೋಚ ಬೇಡ!

 Coming back to break and brake, ಗೆಳೆಯರೆ, ದೇವನಾಗರಿ ಲಿಪಿಯಲ್ಲಿ ಎ ಹಾಗು ಏ ಎನ್ನುವ ಭಿನ್ನ ಉಚ್ಚಾರಗಳಿಲ್ಲ. ಅವರಲ್ಲಿ ಏ ಎನ್ನುವ ಒಂದೇ ಉಚ್ಚಾರವಿದೆ. ಹೀಗಾಗಿ ಅವರು ಪೆನ್(pen) ಎನ್ನಲು ಪೇನ್(pain) ಎನ್ನುತ್ತಾರೆ. ಹೆಡ್ ಎನ್ನಲು ಹೇಡ್ ಎನ್ನುತ್ತಾರೆ! ಇದನ್ನು ತಿಳಿಯದ ನಮ್ಮ ಟೀವಿ ಜ್ಞಾನಿಗಳು ‘ಬ್ರೆಕಿಂಗ್ ನ್ಯೂಜ್’ ಎಂದು ಬರೆಯುವ ಬದಲಾಗಿ ‘ಬ್ರೇಕಿಂಗ್ ನ್ಯೂಜ್’ ಎಂದು ಬರೆಯುತ್ತಾರೆ!

Saturday, January 13, 2024

ಲಕ್ಷದ್ವೀಪ ಹಾಗು ಮಾಲ್ದೀವ್ಸ್

ಲಕ್ಷದ್ವೀಪವು ಇದೀಗ ತುಂಬಾ ಸುದ್ದಿಯಲ್ಲಿದೆ. ಜೊತೆಗೇ ‘ಲಕ್ಷದ್ವೀಪ’ ಪದದ ವ್ಯುತ್ಪತ್ತಿಯ ಬಗೆಗೂ ಖಚಿತ ಅಭಿಪ್ರಾಯವು ಹರಡುತ್ತಿದೆ. ಲಕ್ಷ (ಅಂದರೆ ಅನೇಕ) ದ್ವೀಪಗಳ ಸಮೂಹವೇ ಲಕ್ಷದ್ವೀಪ ಎನ್ನುವುದು, ಈ ಅಭಿಪ್ರಾಯದ ತಿರುಳು. ಈ ಅಭಿಪ್ರಾಯವನ್ನು ಭಾಷಾಶಾಸ್ತ್ರದ ಮೂಲಕ ಸ್ವಲ್ಪ ವಿವೇಚಿಸೋಣ.

 

ಬಂಗಾಲದ ಖ್ಯಾತ ಭಾಷಾವಿಜ್ಞಾನಿಗಳಾದ ಸುನೀತಿಕುಮಾರ ಚಟರ್ಜಿಯವರು, ‘ಲಕ್’ ಈ ಪದವು ದ್ರಾವಿಡ ಪದವಾಗಿದ್ದು ಇದರ ಅರ್ಥ ನಡುಗಡ್ಡೆ ಎಂದು ಹೇಳಿದ್ದರು. ಆದುದರಿಂದ, ಲಕ್ ಪದದ ರೂಪಾಂತರವಾದ  ‘ಲಂಕಾ’ ಪದವು ‘ನಡುಗಡ್ಡೆ’ ಎಂದೇ ಆಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ( ದ್ರಾವಿಡ ಎನ್ನುವುದು ಚಟರ್ಜಿಯವರು ಬಳಸಿದ ಪದ. ಅವರಿಗೆ ಕನ್ನಡದ ಬಗೆಗೆ ವಿಶೇಷವಾಗಿ ಗೊತ್ತಿರಲಿಕ್ಕಿಲ್ಲ. ನನ್ನ ಅಭಿಪ್ರಾಯದ ಮೇರೆಗೆ, ‘ಲಕ್’ ಎನ್ನುವುದು ಕನ್ನಡ ಪದ.)

 

ಲಕ್ಷದ್ವೀಪವು ‘ಲಖ್-ದೀವ್’ ಎನ್ನುವ ಕನ್ನಡ (ಅರ್ಥಾತ್ ದ್ರಾವಿಡ) ಪದದ ಸಂಸ್ಕೃತೀಕರಣ. ಇದರಲ್ಲಿಯ ಲಖ್ ಎನ್ನುವುದು ಕನ್ನಡ ಪದವಾದರೆ, ‘ದೀವ್’ ಎನ್ನುವುದು ‘ದ್ವೀಪ’ ಎನ್ನುವ ಸಂಸ್ಕೃತ ಪದದ ಪ್ರಾಕೃತ ರೂಪ. ಅಂದರೆ, ಲಕ್ ಮತ್ತು ದೀವ್ ಎನ್ನುವ ಎರಡು ವಿಭಿನ್ನ ಭಾಷೆಯ ಪದಗಳನ್ನು ಜೋಡಿಸಿ, ‘ಲಖ್-ದೀವ್’ ಎನ್ನುವ ಜೋಡು ಪದದ ನಿರ್ಮಾಣವಾಗಿದೆ. ಇಂತಹ ಜೋಡು ಪದಗಳು ನಮ್ಮಲ್ಲಿ ಸರ್ವೇಸಾಮಾನ್ಯವಾಗಿವೆ ಹಾಗು ಹೇರಳವಾಗಿವೆ. ಉದಾಹರಣೆಗಳು ಹೀಗಿವೆ: ‘ಗೇಟ್ ಬಾಗಿಲು, ಕ್ಯಾಚ್ ಹಿಡಿ, ಆಕಳ ಗೋಮೂತ್ರ ಇತ್ಯಾದಿ.’ ಒಂದು ಕಾಲದಲ್ಲಿ ವಿಭಿನ್ನ ಭಾಷೆಗಳ ಸಮುದಾಯಗಳು ಒತ್ತಟ್ಟಿಗೆ ಬಂದಾಗ ಇಂತಹ ಜೋಡು ಪದಗಳ ನಿರ್ಮಾಣವು ಅನಿವಾರ್ಯವಾಗಿತ್ತು.

 

ಇನ್ನು ‘ಮಾಲ್ದೀವ್ಸ’ ಪದಕ್ಕೆ ಬರೊಣ. ನಮ್ಮ ಸಂಸ್ಕೃತ ಪಂಡಿತರು, ‘ಮಾಲ್ದೀವ್ಸ್’ ಇದು ‘ಮಾಲಾದ್ವೀಪ’ ಎನ್ನುವ ಸಂಸ್ಕೃತ ಪದದ ಅಪಭ್ರಂಶ ಎನ್ನುವ ನಿರ್ಣಯಕ್ಕೆ ತಟ್ಟನೆ ಜಿಗಿದು ಬಿಡುತ್ತಾರೆ! ಒಂದು ಕಾಲದಲ್ಲಿ ‘ಮಲ್ಲ’ ಎನ್ನುವ ಸಮುದಾಯವು ಭಾರತದ ತುಂಬೆಲ್ಲ ಹರಡಿತ್ತು. ‘ಮಲ್ಲ’ರು ನೇಪಾಳದಲ್ಲಿ ಅರಸರಾಗಿ ಆಳಿದ್ದರು ಹಾಗು ಕುರುಕ್ಷೇತ್ರದ ಯುದ್ಧದಲ್ಲಿ ಭಾಗವಹಿಸಿದ್ದರು ಎನ್ನುವ ಆಖ್ಯಾಯಿಕೆಯನ್ನು ಮಹಾಭಾರತದಲ್ಲಿ ಓದಬಹುದು. ಹೆಸರಾಂತ ದರೋಡೆಖೋರಳಾದ ಫೂಲನ್ ದೇವಿಯು ಮಲ್ಲ ಸಮುದಾಯದವಳು. ಈ ಮಲ್ಲರು ನೀರಿನಲ್ಲಿ ಬೆಳೆಯುವ ನಾರಿನಿಂದ ‘ನಾರುಮಡಿ’ಯನ್ನು ತಯಾರಿಸುತ್ತಿದ್ದರು. ಬಹುಶಃ, ಶ್ರೀರಾಮಚಂದ್ರ, ಲಕ್ಷ್ಮಣ ಹಾಗು ಸೀತಾದೇವಿಯವರಿಗೆ, ವನವಾಸಗಮನ ಸಂದರ್ಭದಲ್ಲಿ ಮಲ್ಲರೇ ನಾರುಮಡಿಯನ್ನು ಕೊಟ್ಟಿರಬಹುದೇನೊ! ಕೇರಳ ರಾಜ್ಯದ ಒಂದು ಜಿಲ್ಲೆಗೆ ಮಲಪ್ಪೂರ ಎನ್ನುವ ಹೆಸರೇ ಇದೆಯಲ್ಲ! ಕರ್ನಾಟಕದಲ್ಲಿಯೇ ‘ಮಲ್ಲ’ ಪದದಿಂದ ಪ್ರಾರಂಭವಾಗುವ ೩೮೫ ಸ್ಥಳಗಳಿವೆ. ಮಹಾರಾಷ್ಟ್ರದಲ್ಲಿ ಮುಂಬಯಿಯ ಹತ್ತಿರ ಇರುವ ‘ಮಲಾಡ’ವು, ಕನ್ನಡದ ‘ಮಲ್ಲಹಾಡಿ’ಯೇ ಹೌದು!. ಅಷ್ಟೇ ಏಕೆ, ನನ್ನ ಅಜ್ಜಿಯು ನಾನು ಚಿಕ್ಕವನಿದ್ದಾಗ, ನನಗೆ ‘ಮಲಪೂರಿ’ ಎನ್ನುವ ಯಕ್ಷಿಣಿಯೊಬ್ಬಳ ಕಥೆಯನ್ನು ಹೇಳುತ್ತಿದ್ದಳು. ಈ ಮಲ್ಲರೇ, ‘ಮಾಲ್ದೀವ್ಸ್’ದ ಮೂಲನಿವಾಸಿಗಳು. ಇವರಿಂದಲೇ ‘ಮಲ್ಲದ್ವೀಪ’ವು ಬಂದಿದ್ದು, ಅದನ್ನು ಸಂಸ್ಕೃತ-ಉತ್ಸಾಹಿಗಳು ‘ಮಾಲಾದ್ವೀಪ’ ಎಂದು ಘೋಷಿಸಿದ್ದಾರೆ. ಆದುದರಿಂದ, ವಿವೇಚನಾಶೀಲರಾದ ನನ್ನ ಕನ್ನಡ ಬಾಂಧವರೇ, ಸಂಸ್ಕೃತದ ಈ ಬಲೆಯಲ್ಲಿ ಕಣ್ಣು ತೆರೆದುಕೊಂಡೇ ಬೀಳದಿರಿ! ಲಕ್ಷದ್ವೀಪವು ‘ಲಕ್-ದೀವ್’ ಹಾಗು ಮಾಲ್ದೀವ್ಸ್ ಇದು ಮಲ್ಲದ್ವೀಪ ಎನ್ನುವುದನ್ನು ಅರಿಯಿರಿ!