Friday, October 24, 2008

ಸುಷ್ಮಸಿಂಧುರವರ ಕನಸು

ಕನಸುಗಳಿಗಾಗಿಯೇ ಮೀಸಲಾಗಿಟ್ಟ ಕನ್ನಡ ತಾಣವೆಂದರೆ ಸುಷ್ಮಸಿಂಧುರವರ
ಕಂಡೆನೊಂದು ಕನಸು.
ಹಾಗೆಂದು ಇದು ಹಗಲುಗನಸಿನ ತಾಣವಲ್ಲ. ಅವರ ನೈಜ ಕನಸುಗಳ ತಾಣವಿದು.

ಕನಸುಗಳ ವೈಜ್ಞಾನಿಕ ಸಂಶೋಧನೆ ಖ್ಯಾತ ಮನೋವಿಜ್ಞಾನಿ ಫ್ರಾಯ್ಡ್‌ನಿಂದ ಆರಂಭವಾಯಿತೆನ್ನಬಹುದು. ಮನದ ಆಳದಲ್ಲಿ ಸರಿಸಿದ (repressed) ಅಥವಾ ಹುದುಗಿದ (suppressed) ಭಾವನೆಗಳು ಕನಸುಗಳನ್ನು ಹೇಗೆ ರಚಿಸುತ್ತವೆ ಎನ್ನುವದಕ್ಕೆ ಫ್ರಾಯ್ಡ್ ಅನೇಕ ವಿವರಣೆಗಳನ್ನು ನೀಡಿದರು.

ಸುಷ್ಮಸಿಂಧುರವರ ಕನಸುಗಳು ಸಾಮಾನ್ಯ ಕನಸುಗಳಿಗಿಂತ ಭಿನ್ನವಾಗಿವೆ ಎನ್ನುವದನ್ನು ಅವರ ತಾಣಕ್ಕೆ ಭೆಟ್ಟಿಯಿತ್ತವರೆಲ್ಲ ಕಂಡಿದ್ದಾರೆ.
ಈ ಕನಸುಗಳನ್ನು ಆಧರಿಸಿ, ಸುಷ್ಮಸಿಂಧುರವರು “ಪಯಣ ಸಾಗಿದಂತೆ” ಎನ್ನುವ ಒಂದು ಕಥಾಸಂಕಲನವನ್ನೇ ಬರೆದರು (೨೦೦೫).
ಇಲ್ಲಿಯ ಕತೆಗಳೂ ಸಹ ಸಾಮಾನ್ಯ ಕತೆಗಳಿಗಿಂತ ಭಿನ್ನವಾಗಿಯೇ ಇವೆ.

ಈ ಕತೆಗಳನ್ನು ನಾನು ‘ಅಂತರಂಗದ ತೊಳಲಾಟದ ಕತೆಗಳು’ ಎಂದು ಕರೆಯಲು ಬಯಸುತ್ತೇನೆ.
ಪ್ರತಿವ್ಯಕ್ತಿಯ ಮನಸ್ಸಿನಲ್ಲಿಯೂ ಅನೇಕ ದ್ವಂದ್ವಗಳು ಉದ್ಭವಿಸುತ್ತವೆ.
ಈ ದ್ವಂದ್ವಗಳು ಜೊತೆಜೊತೆಯಾಗಿಯೇ ಸಹವಾಸ ಮಾಡುತ್ತವೆ, ಹೋರಾಡುತ್ತವೆ;
ಕೆಲವೊಮ್ಮೆ ಒಂದು normal ಭಾವನೆಯ ಕೈ ಮೇಲಾಗಬಹುದು, ಕೆಲವೊಮ್ಮೆ ಅಸ್ವಾಭಾವಿಕ ಭಾವನೆಯೇ ಮೇಲೇರಬಹುದು.
ಈ ಭಾವನೆಗಳಿಗೆ ವ್ಯಕ್ತಿರೂಪ ನೀಡಿ ಬರೆದ ಕತೆಗಳು ಈ ಸಂಕಲನದಲ್ಲಿವೆ.

ಈ ಸಂಕಲನದ ಮೊದಲ ಕತೆ “ಅನ್ಯ” ಕಸ್ತೂರಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಶವಾಗಾರದ ರಾತ್ರಿ-ಕಾವಲುಗಾರನೊಬ್ಬನ ಕತೆಯಿದು.
ಈ ಕಾವಲುಗಾರನ inter action ಇರುವದು ಅಲ್ಲಿಯ ಶವಗಳ ಜೊತೆಗೆ ಮಾತ್ರ.
ಆತನಿಗೆ real ವ್ಯಕ್ತಿಗಳ ಜೊತೆಗೆ ಸಂಬಂಧ ಸಾಧ್ಯವಿಲ್ಲ.
ತನ್ನ ಅಂತರಂಗದಲ್ಲಿಯೇ ಬಂದಿಯಾದ ವ್ಯಕ್ತಿಯ ಚಿತ್ರಣ ಇಲ್ಲಿ ಸಮರ್ಥವಾಗಿ ಬಂದಿದೆ.

“ಬೆಳಕನ್ನರಸುತ್ತಾ” ಹಾಗು “ಶೋಧನಾ” ಕತೆಗಳಲ್ಲಿ ಕಾಣುವ ಮನೋಸ್ಥಿತಿ ಬೇರೆ ಬಗೆಯದು.
ಅಂತಿಮ ಸತ್ಯ ಏನು ಎನ್ನುವದನ್ನು ಅರಿತುಕೊಳ್ಳಲು ಸಿದ್ಧಾರ್ಥನು ಮಧ್ಯರಾತ್ರಿಯಲ್ಲಿ ಎದ್ದು ಹೋದನಲ್ಲ----ಆ ಬಗೆಯ ತೊಳಲಾಟದ ಕತೆಗಳಿವು.

ಈ ಕಥಾಸಂಕಲನದ ವಿವಿಧ ಕತೆಗಳಲ್ಲಿ ನಾವು ಕಾಣುವದು ಈ ತೊಳಲಾಟವನ್ನು ;
ಪಂಜರದಲ್ಲಿ ಸಿಲುಕಿದ ಹಕ್ಕಿ ಹೊರಹಾರಲೆಂದು ರೆಕ್ಕೆ ಬಡೆಯುವ ಯತ್ನವನ್ನು.

ಉತ್ತಮ ಲೇಖಕಿಯೂ ಆದ ಸುಷ್ಮಸಿಂಧು ತಮ್ಮ ಕನಸುಗಳಿಂದಾಗಿ ನಮ್ಮೆಲ್ಲರ ಕುತೂಹಲ ಕೆರಳಿಸಿದ್ದಾರೆ.
ಅವರ ಮನೋಪಕ್ಷಿಯ ಪಯಣ ಸಫಲವಾಗಲಿ.

Wednesday, October 15, 2008

ವಸುಧೇಂದ್ರರ ಸಂವೇದನಾ ಲೋಕ

ವಸುಧೇಂದ್ರರು ಈವರೆಗೆ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ:
(೧) ಮನೀಷೆ
(೨) ಚೇಳು
(೩) ಯುಗಾದಿ.

ಈ ಮೂರು ಕಥಾಸಂಕಲನಗಳಲ್ಲಿ ಒಟ್ಟು ೩೭ ಕಥೆಗಳಿವೆ.
ಈ ಮೂವತ್ತೇಳೂ ಕತೆಗಳನ್ನು ಓದಿದಾಗ ಅವುಗಳಲ್ಲಿ ಮೂರು ಮೂಲಲಕ್ಷಣಗಳನ್ನು ಗುರುತಿಸಬಹುದು:

(೧) ವಸುಧೇಂದ್ರರ ಕತೆಗಳಲ್ಲಿ ಬರುವ ಸಮಾಜಗಳು ಎರಡು ತರಹದವು . ಒಂದು ಸಾಂಪ್ರದಾಯಕ ಸಮಾಜ; ಮತ್ತೊಂದು ಆಧುನಿಕ ಸಮಾಜ. ಇವೆರಡೂ ಸಮಾಜಗಳಲ್ಲಿ ವಸುಧೇಂದ್ರರು ಗುರುತಿಸುವ ಸಾಮಾನ್ಯ ಅಂಶವೆಂದರೆ ನಿಷ್ಕರುಣಿಯಾದ ಸಮಾಜವ್ಯವಸ್ಥೆ. ಕತೆಯ ಹಿನ್ನೆಲೆ ಸಾಂಪ್ರದಾಯಕ ಸಮಾಜದ್ದೇ ಇರಲಿ ಅಥವಾ ಆಧುನಿಕ ಸಮಾಜದ್ದೇ ಇರಲಿ, ಈ ಸಮಾಜವ್ಯವಸ್ಥೆಯು ಎಷ್ಟು ನಿರ್ದಯದಿಂದ ಅಸಹಾಯಕರನ್ನು ಹೊಸಕಿ ಹಾಕುತ್ತದೆ ಎನ್ನುವದು ಇಲ್ಲಿಯ ಕತೆಗಳ ಒಂದು ಮೂಲ ಲಕ್ಷಣ.

(೨) ಸಾಂಪ್ರದಾಯಕ ಸಮಾಜದ ಇಂತಹ ವ್ಯವಸ್ಥೆಯಲ್ಲಿ ತೊಳಲಾಡುತ್ತಿರುವ ಅಸಹಾಯಕ ಜೀವಿಗಳಲ್ಲಿ ಉಳಿದಿರುವ ಮೌಲ್ಯನಿಷ್ಠೆಯ ಚಿತ್ರಣವು ಇಲ್ಲಿಯ ಕತೆಗಳ ಎರಡನೆಯ ಮೂಲಲಕ್ಷಣ.

(೩) ಮೂರನೆಯದಾಗಿ ಇಂತಹ ವ್ಯವಸ್ಥೆಯ ಯಲ್ಲಿ ಸಿಲುಕಿ ನಲುಗುತ್ತಿರುವ ಅಸಹಾಯಕ ಜೀವಿಗಳ ಬಗೆಗೆ ವಸುಧೇಂದ್ರರಿಗೆ ಇರುವ ಅನುಕಂಪ.

ಅಸಹಾಯಕರ ಕತೆಗಳನ್ನು ಬರೆದಿರುವವರಲ್ಲಿ ವಸುಧೇಂದ್ರರು ಮೊದಲಿಗರೇನೂ ಅಲ್ಲ. ಕನ್ನಡದ ಶ್ರೇಷ್ಠ ಕತೆಗಾರರಾದ ದೇವನೂರು ಮಹಾದೇವ ಸಹ feudal ಸಮಾಜವ್ಯವಸ್ಥೆಯಲ್ಲಿ ಸಿಲುಕಿ ನಲುಗುತ್ತಿರುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅವರ “ಮಾರಿಕೊಂಡವರು” ಕತೆ ವಿಶ್ವದ ಅತ್ಯುತ್ತಮ ಕತೆಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಈ ಕತೆ ಸಾಮಾಜಿಕ ವ್ಯವಸ್ಥೆ ನಿರ್ಮಿಸಿದ ಶೋಷಣೆಯನ್ನು ನಿರುದ್ವಿಗ್ನವಾಗಿ ಹೇಳುವ ಕತೆ. ಅಮರೇಶ ನುಗಡೋಣಿಯವರ ಕತೆಗಳನ್ನೂ ಸಹ ಇದೇ ವರ್ಗದಲ್ಲಿ ಸೇರಿಸಬಹುದು.
ಇನ್ನು ರಾಘವೇಂದ್ರ ಖಾಸನೀಸರು ಸಹ ತಮ್ಮ ಎಲ್ಲ ಕತೆಗಳಲ್ಲಿಯೂ ಅಸಹಾಯಕ ಜೀವಿಗಳನ್ನೇ ಮುಖ್ಯ ಪಾತ್ರಗಳನ್ನಾಗಿ ಮಾಡಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ವೈಯಕ್ತಿಕ ಅಥವಾ ಕೌಟಂಬಿಕ ಸಮಸ್ಯೆಯೇ ಅಸಹಾಯಕತೆಯ ಕಾರಣವಾಗಿದೆ. ಅವರ ಕತೆಗಳಲ್ಲಿ ಕಾಣುವದು ಕರುಣರಸವೇ ಹೊರತು ಸಹಾನುಭೂತಿಯಲ್ಲ.

ದೇವನೂರ ಮಹಾದೇವ, ಅಮರೇಶ ನುಗಡೋಣಿ ಹಾಗು ರಾಘವೇಂದ್ರ ಖಾಸನೀಸರ ಕತೆಗಳಿಗೂ ಮತ್ತು ವಸುಧೇಂದ್ರರ ಕತೆಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಸಮಾಜದ ವ್ಯವಸ್ಥೆಯಲ್ಲಿ ಬಲಿಪಶುಗಳಾದವರಿಗೆ ವಸುಧೇಂದ್ರರ ಹೃದಯದಲ್ಲಿ ಉಕ್ಕುತ್ತಿರುವ ಸಹಾನುಭೂತಿ; ಹೀಗಾಗಿ ಅವರ ಕತೆಗಳಲ್ಲಿ ಅನುಕಂಪವೇ ಪ್ರಧಾನ ರಸವಾಗುತ್ತದೆ.

ಈ ಮೇಲಿನ ಮೂರು ಕಥಾಸಂಕಲನಗಳಲ್ಲಿ, ವಸುಧೇಂದ್ರರು ಮೊದಲು ಒಂದು ಸಾಂಪ್ರದಾಯಕ ಸಮಾಜದ ಕತೆಯನ್ನು, ಆನಂತರ ಒಂದು ಆಧುನಿಕ ಸಮಾಜದ ಕತೆಯನ್ನು ಕೊಡುತ್ತಾ ಹೋಗಿದ್ದಾರೆ. ಈ ರೀತಿಯಾಗಿ ತಮ್ಮ ಸಂಕಲನಗಳಲ್ಲಿ ಒಂದು ರೀತಿಯ ಸಮತೋಲನವನ್ನು ಸಾಧಿಸಲು ಯತ್ನಿಸಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ಸಂಕಟಪಡುವ ಪಾತ್ರವೆಂದರೆ ಒಬ್ಬ ಅಸಹಾಯಕ ಹೆಣ್ಣು ಮಗಳು.

“ಮನೀಷೆ” ಕಥಾಸಂಕಲನದ ಮೊದಲ ಕಥೆಯಾದ “ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೊಳ್ರೋ” ಕತೆಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಒಂದು ಹಳೆಯ ಕಾಲಘಟ್ಟದ ಬ್ರಾಹ್ಮಣ ಸಮಾಜದ ಚಿತ್ರಣ ಇಲ್ಲಿದೆ.
ಮೈಗೆ ಅಲ್ಲಲ್ಲಿ ಬಿಳುಪು ಹತ್ತುತ್ತಿರುವ ತನ್ನ ಮಗನ ಭವಿಷ್ಯದ ಬಗೆಗೆ ಹೌಹಾರಿದ ವಿಧವೆಯ ಕತೆ ಇದು.
ಮಗನ ರೋಗಶಮನಕ್ಕಾಗಿ ಇವಳಿಗೆ ರಾಘವೇಂದ್ರಸ್ವಾಮಿಗಳ ಹರಕೆಯೇ ದಿವ್ಯೌಷಧ.

ನಡು ವಯಸ್ಸಿನಲ್ಲಿಯೆ ಗಂಡನನ್ನು ಕಳೆದುಕೊಂಡ ಬ್ರಾಹ್ಮಣ ಹೆಣ್ಣುಮಗಳೊಬ್ಬಳು ತನ್ನ ಹಾಗು ತನ್ನ ಚಿಕ್ಕ ಮಗನ ಹೊಟ್ಟೆ ತುಂಬಿಸಲು ಅಡುಗೆ ಕೆಲಸವನ್ನಲ್ಲದೆ ಬೇರಾವ ಕೆಲಸ ಮಾಡಬಲ್ಲಳು? ಇವಳಿಗೆ ಅಣ್ಣನೊಬ್ಬನಿದ್ದಾನೆ. ಆದರೆ ಎಲ್ಲ ಅಣ್ಣಂದಿರಂತೆ ಇವಳ ಅಣ್ಣನೂ ಸಹ ತನ್ನ ಹೆಂಡತಿಯ ಕೈಗೊಂಬೆ. ಅವನಿಗೆ ಇವಳ ಮೇಲೆ, ಇವಳ ಮಗನ ಮೇಲೆ ಕನಿಕರವಿರಬಹುದು. ಆದರೆ ಅದು ಪ್ರಯೋಜನಕ್ಕೆ ಬಾರದ ಕನಿಕರ. ಅಲ್ಲದೆ ಬ್ರಾಹ್ಮಣ ಸಮಾಜದ ಕ್ರೂರ ಕಟ್ಟಳೆಗಳು ಬೇರೆ. ಹೀಗಾಗಿ ಅವನೂ ಅಸಹಾಯಕ.

ಈ ಕತೆಯಲ್ಲಿಯ ಬ್ರಾಹ್ಮಣ ಸಮಾಜ ಕೊಳೆಯುತ್ತಿರುವ ಸಮಾಜವಲ್ಲ ; ಈಗಾಗಲೇ ಕೊಳೆತು ಹೋದ ಸಮಾಜ.
ಬಿಳುಪು ಕಾಣುತ್ತಿರುವ ತನ್ನ ಚಿಕ್ಕ ಮಗನಿಗೆ ಬ್ರಾಹ್ಮಣಸಮಾಜದಲ್ಲಿ acceptance ಕೊಡಿಸಲು ಈ ವಿಧವೆ ಸಂಕಟಪಡುತ್ತಿದ್ದಾಳೆ. ಮಠದ ಸ್ವಾಮಿಗಳ ಸಮಾರಂಭದಲ್ಲಿ, ತಾನು ಅಡುಗೆ ಮಾಡಿ, ತನ್ನ ಮಗನ ಕೈಯಿಂದ ನೀರು ಬಡಿಸಲು ಇವಳು ಶತಪ್ರಯತ್ನ ಮಾಡುತ್ತಾಳೆ. ಆದರೆ, ಕೊನೆಗೂ ಸ್ವಾಮಿಗಳ ಬಾಯಿಂದ ಛೀತ್ಕಾರ:
“ ದೇವರ ಪೂಜೆ ಮಾಡುವ ಈ ಕೈಗಳಿಗೆ, ಈ ತೊನ್ನು ಹತ್ತಿದವನ ಸ್ಪರ್ಷವೇ! ತೊಲಗಿಸಿರಿ ಇವನನ್ನು ಇಲ್ಲಿಂದ!”
ಬಹುಶ: ಈ ಮಾತನ್ನು ಈ ಕತೆಯ climax ಎನ್ನಬಹುದು.
(‘ದಯವೇ ಧರ್ಮದ ಮೂಲವಯ್ಯ’ ಎನ್ನುವ ಬಸವಣ್ಣನವರ ಮಾತು ಅಪ್ರಯತ್ನವಾಗಿ ಓದುಗನ ಮನಸ್ಸಿನಲ್ಲಿ ಆಗ ಸುಳಿಯದಿರದು.)

ಆದರೆ ಕತೆಯ ಹೆಚ್ಚುಗಾರಿಕೆ ಕೇವಲ ಈ climaxನಲ್ಲಿ ಮಾತ್ರವಿಲ್ಲ.
ಈ ಭರ್ತ್ಸನೆಯ ನಂತರವೂ ಆ ವಿಧವೆ ಎದೆಗುಂದುವದಿಲ್ಲ. ತನ್ನ ಮಗನ ಒಳಿತಿಗಾಗಿ ಅವಳ ಹೋರಾಟ ನಿಲ್ಲುವದಿಲ್ಲ.
ಕತೆಯ ಹೆಚ್ಚುಗಾರಿಕೆ ಇರುವದು ಇಂತಹ ಪರಾಭವದಲ್ಲೂ ಆ ವಿಧವೆ ತೋರಿಸುವ ಧೈರ್ಯದಲ್ಲಿದೆ. ಸಾಂಪ್ರದಾಯಕ ಸಮಾಜದ ಮೌಲ್ಯಗಳು ಒಬ್ಬ ಅಸಹಾಯಕ ವಿಧವೆಯಲ್ಲಿ ತುಂಬಬಹುದಾದ ಕೆಚ್ಚನ್ನು ತೋರಿಸುವದರಲ್ಲಿ ಈ ಕತೆಯ ಹೆಚ್ಚುಗಾರಿಕೆ ಇದೆ.

ಸಮಾಜದಿಂದ ಹಾಗೂ ತನ್ನ ಸ್ವಂತ ಗಂಡನಿಂದ ಅನ್ಯಾಯಕ್ಕೊಳಗಾಗಿಯೂ, ಕೆಚ್ಚಿನಿಂದ ಬದುಕು ಸಾಗಿಸಿದ ಹೆಣ್ಣು ಮಗಳ ಚಿತ್ರಣ ಸಿಗುವದು “ಚೇಳು” ಕತೆಯಲ್ಲಿ.
ತನ್ನ ಹೆಂಡತಿಗೆ ಮಕ್ಕಳಾಗಲೆಂದು ಭೈರವ ಬಾಬಾನ ಆಶೀರ್ವಾದ ಪಡೆಯಲು, ಮನಸ್ಸಿಲ್ಲದ ಹೆಂಡತಿಯನ್ನು ಕುರಿಯಂತೆ ನೂಕಿದ ಗಂಡ, ಬಾಬಾನ ಕಾಮಲೀಲೆಯನ್ನು ಕಂಡಾಗ, ಸಾರ್ವಜನಿಕವಾಗಿ ಹೆಂಡತಿಯ ಮಾನ ತೆಗೆಯಲು ಹೇಸುವದಿಲ್ಲ. ಅವಳ ತವರುಮನೆಯವರೂ ಸಹ ಈ ‘ಪತಿತೆ’ಯನ್ನು ತಿರಸ್ಕರಿಸುತ್ತಾರೆ. ಆದರೆ ಬಾಬಾ ತಾನು ಮಾಡಿದ ತಪ್ಪನ್ನು ಅರಿತು, ಈ ಅಸಹಾಯಕ ಹೆಣ್ಣು ಮಗಳಿಗೆ ಚೇಳಿನ ಮಂತ್ರವನ್ನು ಅನುಗ್ರಹಿಸಿ ಹೋಗುತ್ತಾನೆ. ಅವಳ ಬದುಕು ಈ ಚೇಳಿನ ಮಂತ್ರದ ಸಹಾಯದಿಂದ ಹೇಗೋ ಸಾಗುತ್ತಿರುತ್ತದೆ. ಆ ಸಮಯದಲ್ಲಿ ಆಧುನಿಕ ವೈಜ್ಞಾನಿಕ ಅನ್ವೇಷಣೆ ಅವಳ ಬದುಕಿಗೆ ಕುಠಾರವಾಗಿ ಬರುತ್ತದೆ. ಈ ಸಮಸ್ಯೆಗೆ ಅವಳು ಕಂಡುಕೊಳ್ಳುವ ಪರಿಹಾರವು ಅಸಹಾಯಕ ಜೀವಿಗಳು ಮೊರೆ ಹೋಗುವ ಏಕೈಕ ಮಾರ್ಗವಾಗಿದೆ. ಇಂತಹ ದುರಂತ ಕತೆಯನ್ನು ಸಹನೀಯವಾಗಿ ಮಾಡುವದು ವಸುಧೇಂದ್ರರ ವಿನೋದಪೂರ್ಣ ಶೈಲಿ.

ವಸುಧೇಂದ್ರರು ಬರೆದ ಇಂತಹ ಸಾಂಪ್ರದಾಯಿಕ ಸಮಾಜದ ಕತೆಗಳಲ್ಲಿಯೇ ಶ್ರೇಷ್ಠವಾದದ್ದು ‘ಚೇಳು’ ಕಥಾಸಂಕಲನದಲ್ಲಿಯ ಕತೆ: “ ಹೊಟ್ಟೆಯೊಳಗಿನ ಗುಟ್ಟು”.

ವಿಧವೆಯೊಬ್ಬಳು ಬ್ರಾಹ್ಮಣ ಕುಟುಂಬವೊಂದರಲ್ಲಿ ಮನೆಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದಾಳೆ. ದೀರ್ಘ ಕಾಲದ ನಂತರ ಅವಳ ಯಜಮಾನಿಯೂ ಸಹ ವಿಧವೆಯಾಗಿದ್ದಾಳೆ. ಇದಿಷ್ಟು ಕತೆಯಲ್ಲಿ ಬರೆಯದೆ ಇದ್ದ ಹಿನ್ನೆಲೆ.
ಇದೀಗ, ಯಜಮಾನಿಯ ಶ್ರಾದ್ಧದ ಕೊನೆಯ ವಿಧಿಯಾದ ಕಾಕಪಿಂಡದಿಂದ ಕತೆ ಪ್ರಾರಂಭವಾಗುತ್ತದೆ.

ನಗರದಲ್ಲಿ ವಾಸಿಸುತ್ತಿರುವ ಅವಳ ಮಗ ಶ್ರಾದ್ಧಕರ್ಮಕ್ಕಾಗಿ ಮನೆಗೆ ಬಂದಿದ್ದಾನೆ. ಕಾಕಪಿಂಡ ಆಗುತ್ತಿಲ್ಲ.
ಅಲ್ಲಿರುವ ಸಂಬಂಧಿಕರೆಲ್ಲರೂ ಪ್ರಯತ್ನಿಸುತ್ತಾರೆ. ಆದರೂ ಕಾಕಪಿಂಡ ಆಗುವದಿಲ್ಲ.
ಕೊನೆಗೊಮ್ಮೆ ಈ ಮನೆಕೆಲಸದ ಮುದಿ ವಿಧವೆಯಿಂದ ಕಾಕಪಿಂಡ ಆಗುತ್ತದೆ.
ಅವಳು ತನ್ನ ಯಜಮಾನಿಯ ಪಿಂಡಕ್ಕೆ ಹೇಳಿದ್ದೇನು?
ಅದು ಕತೆಯ ಮುಕ್ತಾಯದಲ್ಲಿಯೂ ಗುಟ್ಟಾಗಿಯೇ ಉಳಿಯುತ್ತದೆ.

ಈ ಕತೆಯಲ್ಲಿ, ಈ ಮನೆಗೆಲಸದ ವಿಧವೆಯ ಸಂಕಷ್ಟಗಳ ಬಗೆಗೆ ಎಲ್ಲಿಯೂ ಪ್ರತ್ಯಕ್ಷವಾಗಿ ಹೇಳಿಲ್ಲ. ಆದರೆ ಓರ್ವ ಅಸಹಾಯಕ ವಿಧವೆಯನ್ನು ಅವಳ ಆಶ್ರಯದಾತರು ಹಾಗೂ ಸಮಾಜ ಯಾವ ರೀತಿಯಲ್ಲಿ ಶೋಷಿಸಿರಬಹುದು, ಅವಳ ತಾಪಗಳಿಗೆ ಅವರು ಎಷ್ಟರ ಮಟ್ಟಿಗೆ insensitive ಆಗಿರಬಹುದು ಎನ್ನುವ ಕಲ್ಪನೆ ಓದುಗನ ಚಿತ್ತದಲ್ಲಿ ಕ್ಷಣಮಾತ್ರಕ್ಕೆ ಮಿಂಚುತ್ತದೆ. ಇಷ್ಟಾಗಿಯೂ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಶೋಷಿತಳಾದ ಆ ಮುದಿ ವಿಧವೆಯ ಹೃದಯದಲ್ಲಿ ಮಿಣುಕುತ್ತಿರುವ ಸಾಂಪ್ರದಾಯಕ ಮೌಲ್ಯಗಳನ್ನು ತೋರಿಸುವದೇ ವಸುಧೇಂದ್ರರ ಮುಖ್ಯ ಗುರಿಯಾಗಿದೆ.

ಅಸಹಾಯಕತೆಯ ಪರಮಾವಧಿಯನ್ನು ನೋಡಬೇಕಾದರೆ , “ ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ ” ಕತೆಯನ್ನು ಓದಬೇಕು. ಈ ಕತೆಯಲ್ಲಿ ಮನೆಯ ಯಜಮಾನ ಮಾನಸಿಕವಾಗಿ ಅತ್ಯಂತ ಬಲಹೀನ ಮನುಷ್ಯ. ಆತನ ಕುಟುಂಬಕ್ಕೆ ಅವನ ಹೆಂಡತಿಯೇ ಧೈರ್ಯದ ಆಧಾರ. ಆದರೆ, ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅವರಲ್ಲಿ ಇಲ್ಲ. ಆದರೆ ಶೋಷಣೆಗೆ ಒಳಗಾಗಿಯೂ, ಗಂಡನಲ್ಲಿ ಹಾಗು ಮಕ್ಕಳಲ್ಲಿ ಧೈರ್ಯವನ್ನು ತುಂಬುವವಳು, ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುವವಳು ಹೆಂಡತಿಯೇ.

ಸಾಂಪ್ರದಾಯಕ ಸಮಾಜದಲ್ಲಿಯ ಅಸಹಾಯಕ ಹೆಣ್ಣುಮಗಳ ಶ್ರೇಷ್ಠ ಕತೆ ಎಂದರೆ “ಸೀಳು ಲೋಟ”. ಈ ಕತೆ ಇಲ್ಲಿ ತೋರಿಸಿದ ಮೂರು ಸಂಕಲನಗಳಲ್ಲಿ ಇಲ್ಲ. ಇದನ್ನು ಓದಬಯಸುವವರು ದಯವಿಟ್ಟು
ಇಲ್ಲಿನೋಡಿರಿ.
ಈ ಕತೆಯಲ್ಲಿಯೂ ಸಹ ಬಲಹೀನ ಗಂಡ, ಅಸಹಾಯಕ ಅಣ್ಣ ಹಾಗು ನೆರೆಹೊರೆಯವರ ಔದಾರ್ಯದ ಮೇಲೆ ಬದುಕು ಸಾಗಿಸಬೇಕಾದಂತಹ ಹೆಂಗಸಿನ ಕತೆ ಇದು.

ಇಷ್ಟೆಲ್ಲ ಕಾರ್ಪಣ್ಯಗಳ ನಡುವೆಯೂ ಆಕೆ ಸಾಂಪ್ರದಾಯಿಕ ಸಮಾಜ ನೀಡಿದ ಸಂಸ್ಕಾರದ ಮೌಲ್ಯಗಳನ್ನು ಬಿಟ್ಟಿಲ್ಲ. ಕತೆಯ ಕೊನೆಕೊನೆಯಲ್ಲಿ ಅವಳು ತನ್ನ ಮಗನಿಂದ ಆಣೆ ಹಾಕಿಸಿಕೊಳ್ಳುವ ಭಾಗವು ಕತೆಯ ಪರಾಕಾಷ್ಠೆ ಎನ್ನಬಹುದು.
ಫ್ರಾನ್ಸ್ ದೇಶದ ಕತೆಗಾರ ಮೊಪಾಸಾನ ಕತೆಗಳನ್ನು ನೆನಪಿಸುವ ಈ ಕತೆ ಕನ್ನಡದ ಒಂದು ಶ್ರೇಷ್ಠ ಕತೆಯಾಗಿದೆ.

ಈ ಎಲ್ಲ ಕತೆಗಳಲ್ಲಿಬರುವ ಹೆಣ್ಣುಮಕ್ಕಳು ಸಮಾಜದ ನೀತಿಯನ್ನು ಒಪ್ಪಿಕೊಂಡಂತಹ ಸಾಮಾನ್ಯ ಜೀವಿಗಳು. ಸಮಾಜದ ವಿಧಿಗಳನ್ನು ದಾಟದಯೇ, ಕೆಚ್ಚಿನಿಂದ ಬದುಕು ಮಾಡಿದವರು. ಸ್ವತಃ ಶೋಷಣೆಗೆ ಒಳಗಾಗಿದ್ದರೂ, ಮಾನವೀಯತೆಯನ್ನು ಮರೆತವರಲ್ಲ. ಅರ್ಥಾತ್, ಇವಳು ಸಾಮಾನ್ಯ ಭಾರತೀಯ ಹೆಣ್ಣು ಮಗಳು. ತನ್ನ ದುಗುಡ ದುಮ್ಮಾನಗಳು ಏನೇ ಇರಲಿ, ಸಂಪ್ರದಾಯವು ತನಗೆ ಚಿಕ್ಕಂದಿನಿಂದ ಕಲಿಸಿದ ಮೌಲ್ಯಗಳನ್ನು ಬಾಳಿನಲ್ಲಿ ಅರಗಿಸಿಕೊಂಡ ಭಾರತೀಯ ಹೆಣ್ಣುಮಗಳು.

ವಸುಧೇಂದ್ರರು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳನ್ನೂ ಸಹ ಕೊಟ್ಟಿದ್ದಾರೆ. “ ಕ್ಷಿತಿಜ ಹಿಡಿಯ ಹೊರಟವರಾರು, ಹೆಡ್ ಹಂಟರ, ಕಣ್ತೆರದು ನೋಡಲ್ಲಿ ಗೆದ್ದಲು ಮರ ಕೆಡವಲಿದೆ, ಗುಳ್ಳೆ ” ಮುಂತಾದವು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳು. ಆಧುನಿಕ ಸಮಾಜದ ಆರ್ಥಿಕ ಆಸೆಬುರುಕತನ ಈ ಎಲ್ಲ ಕತೆಗಳಿಗೆ ಹಿನ್ನೆಲೆಯಾಗಿದೆ.

ಇವಲ್ಲದೆ, ಮತ್ತೊಂದು ವರ್ಗದ ಅಸಹಾಯಕ ಜೀವಿಗಳ ಕತೆಯೂ ಇಲ್ಲಿವೆ. ಸಮಾಜದ ಚೌಕಟ್ಟಿಗೆ ಸಂಬಂಧವಿರದೆ, ತನ್ನೊಳಗಿನ ವೈಯಕ್ತಿಕ ಅಥವಾ ಆರ್ಥಿಕ ಕಾರಣದಿಂದಾಗಿ ಕಷ್ಟಪಡುತ್ತಿರುವ ಅಸಹಾಯಕ ಜೀವಿಗಳ ಕತೆಗಳಿವು.

“ ಅಪಸ್ವರದಲ್ಲೊಂದು ಆರ್ತನಾದ ” ಕತೆಯಲ್ಲಿ ಮನೆಯ ಪರಿಸ್ಥಿತಿಯಿಂದಾಗಿ, ಮದುವೆಯಾಗದೇ ಇರುವ ಒಬ್ಬಳು ಹುಡುಗಿ ಹಾಗೂ ಅವಳ ವಿಧವೆ ಅಮ್ಮನ ತೊಳಲಾಟಗಳ ಚಿತ್ರಣವಿದೆ.
“ ಅನಘ ” ಕತೆಯಲ್ಲಿ ಹಳ್ಳಿಯಲ್ಲಿರುವ transvestite ಹುಡುಗನೊಬ್ಬನ ಸಮಸ್ಯೆಯ ಚಿತ್ರಣವಿದೆ. ಈ ಕತೆಯಲ್ಲಿ ಹುಡುಗನ ಬಲಹೀನತೆ ಹಾಗು ಅವನ ಅಪ್ಪನ ಪೌರುಷಗಳಿಗೆ ಮುಖಾಮುಖಿಯಾಗಿ ನಿಲ್ಲುವದು ಸೂಳೆಯೊಬ್ಬಳಲ್ಲಿ ಮಿನಗುತ್ತಿರುವ ಮಾನವೀಯತೆ.
“ಯುಗಾದಿ” ಕತೆಯಲ್ಲಿ ಬದಲಾದ ಸಾಮಾಜಿಕ ಮೌಲ್ಯಗಳಿಂದಾಗಿ ಒದ್ದಾಡುತ್ತಿರುವ ಹಿರಿಯ ಜೀವಿಯೊಬ್ಬನ ಅಸಹಾಯಕತೆಯ ಚಿತ್ರಣವಿದೆ. ಇಲ್ಲಿಯೂ ಸಹ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ವ್ಯಕ್ತಿಗಳು ಉಳಿಸಿಕೊಂಡು ಬಂದಿರುವ ಸಾಂಪ್ರದಾಯಕ ಮೌಲ್ಯಗಳೇ ಕತೆಯ ತಿರುಳಾಗಿವೆ.

ಹಾಗಾದರೆ, ವಸುಧೇಂದ್ರರ ಕತೆಗಳು ಕೇವಲ ಅಸಹಾಯಕರ ಕತೆಗಳೇ ಎನ್ನುವ ಸಂದೇಹ ಬರಬಹುದು.
ನಿಜ ಹೇಳಬೇಕೆಂದರೆ, ವಸುಧೇಂದ್ರರ ಕತೆಗಳು ಮೌಲ್ಯವನ್ನು ಹುಡುಕುತ್ತಿರುವ ಕತೆಗಳು.
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಹೀನರಾದವರಲ್ಲಿಯೇ ಅಂದರೆ ಶೋಷಣೆಗೆ ಒಳಗಾದವರಲ್ಲಿಯೇ ಈ ಮೌಲ್ಯಗಳು ಉಳಿದುಕೊಂಡಿರುವದು ಈ ಕತೆಗಳಲ್ಲಿಯ ವೈಶಿಷ್ಟ್ಯ.

ವಸುಧೇಂದ್ರರು ಮೌಲ್ಯಗಳನ್ನು ಹುಡುಕಲು ಬಲಹೀನರನ್ನೇ ಆರಿಸಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಯೂ ಬರಬಹುದು. ಆದರೆ ಇದು ಕೇವಲ ಸಾಂದರ್ಭಿಕ. ವಸುಧೇಂದ್ರರರದು ಸೂಕ್ಷ್ಮ ಸಂವೇದನಾ ಮನಸ್ಸು. ಎಲ್ಲೇ ಸಂತಾಪ ಕಾಣಲಿ, ಅವರ ಮನ ಮಿಡಿಯುತ್ತದೆ. ಅದರ ಫಲವೇ ಈ ಕತೆಗಳು.

ವಸುಧೇಂದ್ರರ ಕತೆಗಳು ಅವರ ಆಪ್ತ ಪರಿಸರದಿಂದ ಹೊಮ್ಮಿವೆ. ಸಾಂಪ್ರದಾಯಕ ಸಮಾಜದ ಕತೆಗಳೆಲ್ಲ ಸಂಡೂರಿನ ಸುತ್ತಮುತ್ತಲಿನ ಕತೆಗಳು. ಇಲ್ಲಿಯ ಪರಿಸರವನ್ನು ವಿನೋದಪೂರ್ಣವಾಗಿ ಕಟ್ಟಿಕೊಡುವದರಲ್ಲಿ ವಸುಧೇಂದ್ರರು ಯಶಸ್ವಿಯಾಗಿದ್ದಾರೆ. ಈ ಕತೆಗಳು ಸಾಂಪ್ರದಾಯಕ ಸಮಾಜದ ಕೊಳಕನ್ನು ತೋರಿಸುವಂತೆಯೇ, ಆ ಸಮಾಜವು ನೀಡಿದ ಮೌಲ್ಯಗಳನ್ನೂ ತೋರಿಸುತ್ತವೆ.
ಆಧುನಿಕ ಸಮಾಜದ ಕತೆಗಳೆಲ್ಲ ಬೆಂಗಳೂರು ನಗರದ ಕತೆಗಳು. ದುಡ್ಡೇ ದೊಡ್ಡಪ್ಪ ಎನ್ನುವದೇ ಇಲ್ಲಿಯ ಮೌಲ್ಯ.
ತೆಳುವಿನೋದದ ತಿಳಿಲೇಪನವಿರುವದರಿಂದ ವಸುಧೇಂದ್ರರ ಕತೆಗಳಲ್ಲಿಯ ಸಂಕಟವು ಸಹನೀಯವಾಗಿದೆ.

Tuesday, October 7, 2008

ಕೋಡಗನ್ನ ಕೋಳಿ ನುಂಗಿತ

‘ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಒಡಪಿನ ಅಥವಾ ಬೆಡಗಿನ ಹಾಡು.
ಇಂತಹ ಹಾಡುಗಳನ್ನು ಶರೀಫರಲ್ಲದೆ, ಕನಕದಾಸರು ಹಾಗೂ ಪುರಂದರದಾಸರೂ ಸಹ ರಚಿಸಿದ್ದಾರೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಿನ್ನ ಒಳಗೊ’ ಎನ್ನುವ ಕನಕದಾಸರ ಹಾಡನ್ನು ಉದಾಹರಣೆಗೆ ನೋಡಬಹುದು.

ಅದರಂತೆ ಪುರಂದರದಾಸರ ಈ ರಚನೆ ಸಹ ಪ್ರಸಿದ್ಧವಿದೆ:
“ಸುಳ್ಳು ನಮ್ಮಲ್ಲಿಲ್ಲವಯ್ಯಾ
ಸುಳ್ಳೆ ನಮ್ಮನಿ ದೇವರು”.
………………………………………………………….
‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಕೋಳಿಯ ಕೂಗು ಬೆಳಗಿನ ಸೂಚನೆ. ಶರೀಫರ ಹಾಡಿನಲ್ಲಿ ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ.

ಪುರಂದರದಾಸರೂ ಸಹ ತಮ್ಮ ಒಂದು ರಚನೆಯಲ್ಲಿ ಮರ್ಕಟದಂತಿರುವ ಮನಸ್ಸನ್ನು ಡೊಂಕು ಬಾಲದ ನಾಯಿಗೆ ಹೋಲಿಸಿದ್ದಾರೆ. ತಿದ್ದಲು ಎಷ್ಟೇ ಪ್ರಯತ್ನಿಸಿದರೂ ಸಹ ಈ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಉಳಿಯುತ್ತದೆ. ಅರ್ಥಾತ್ ಈ ಮನಸ್ಸಿಗೆ ಜ್ಞಾನೋದಯವಿನ್ನೂ ಆಗಿಲ್ಲ. ಪುರಂದರದಾಸರ ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ಹಾಡಿನ ಪಲ್ಲವನ್ನು ನೋಡೋಣ:

“ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?” ||ಪಲ್ಲ||

ಡೊಂಕು ಬಾಲದ ನಾಯಕರು ಎಂದರೆ ‘ನಾಯಿ’ ಎನ್ನುವದು ತಿಳಿದ ವಿಷಯವೇ.
ಆದರೆ ‘ನಾಯಕರು’ ಎನ್ನುವಲ್ಲಿ ಒಂದು ಹೆಚ್ಚಿನ ಅರ್ಥವಿದೆ.
ಪುರಂದರದಾಸರ ಪೂರ್ವಾಶ್ರಮದ ಹೆಸರು: ಶ್ರೀನಿವಾಸ ನಾಯಕ.
ದಾಸರು “ಡೊಂಕು ಬಾಲದ ನಾಯಕರೆ” ಎನ್ನುವಾಗ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿದ್ದಾರೆ !
. . .. .. . . . . . . .. . . . . . . . . . .. . . . . . . .

ಶರೀಫರ ರಚನೆಯ ಪೂರ್ತಿ ಪಾಠ ಹೀಗಿದೆ:

ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||
. . .. . . . . .. . . . . . . .. . . . . . . . .. . .

ಶರೀಫರು ಆಧುನಿಕ ಕಾಲದ ಕವಿಗಳಂತೆ, ಮುಚ್ಚಿದ ಕೋಣೆಯಲ್ಲಿ ಕುಳಿತು, ಪೆನ್ನು ಅಥವಾ ಪೆನ್ಸಿಲಿನಿಂದ ಕವನ ಬರೆಯುವ ಕವಿ ಅಲ್ಲ. ತಮ್ಮ ಸುತ್ತ ನೆರೆದಿರುವ ಜನಸಮುದಾಯದ ಎದುರಿಗೆ ಸ್ಫೂರ್ತಿಯುತವಾಗಿ ಕವನ ಹಾಡುವದು ಅವರ ಪದ್ಧತಿ. ಜನಸಮುದಾಯಕ್ಕೆ ಜ್ಞಾನದ ಬೆಳಕು ಸಿಗಲಿ ಎನ್ನುವದು ಅದರ ಉದ್ದೇಶ.
ಹೀಗಾಗಿ ಇವರ ಕವನಗಳ ರಚನೆಯನ್ನು ಗಮನಿಸಿದಾಗ, ಕೆಲವೊಂದು ಕವನದ ಸಾಲುಗಳಲ್ಲಿ repetitiveness ಕಾಣುವದು ಸಹಜ.

‘ಕೋಡಗನ್ನ ಕೋಳಿ ನುಂಗಿತ’ ಕವನದ ಎಲ್ಲಾ ನುಡಿಗಳಲ್ಲಿ ಕಂಡು ಬರುವದು ಒಂದೇ ಅರ್ಥ.
ಮೊದಲ ನುಡಿಯ ನಂತರ, ಕವನ ಮುಂದೆ ಸಾಗಿದಂತೆ ಅರ್ಥದ ಬೆಳವಣಿಗೆ ಸಾಗುವದಿಲ್ಲ.
ಆದರೆ ಆ ಕಾರಣಕ್ಕಾಗಿ ಕವನದ ಸೌಂದರ್ಯವೇನೂ ಕಡಿಮೆಯಾಗಿಲ್ಲ.

ಕವನದ ಪಲ್ಲದಲ್ಲಿ ಕವಿಯು ‘ಕೋಳಿ ಅಂದರೆ ಆಧ್ಯಾತ್ಮಿಕ ಜ್ಞಾನೋದಯವು ಕೋಡಗವನ್ನು ಅಂದರೆ ಮಂಗನಂತಿರುವ ಮನಸ್ಸನ್ನು ತಿಂದು ಹಾಕಿದೆ’ ಎಂದು ಹೇಳುತ್ತಾರೆ. ಇದೇ ಮಾತನ್ನು ಮುಂದಿನ ನುಡಿಯಲ್ಲಿ, ವಿಭಿನ್ನ ರೂಪಕಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಾರೆ:

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
ಇಂತಹ ಆನೆಯನ್ನು ಆಡಿನಂತಿರುವ ಜ್ಞಾನ ತಿಂದು ಹಾಕಿಬಿಡುತ್ತದೆ ಎಂದು ಶರೀಫರು ಹಾಡುತ್ತಾರೆ.

(ಈ ಸಂದರ್ಭದಲ್ಲಿ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳಬಹುದು:
“ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?” )

ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ. ಗೋಡೆಯ surface ಮತ್ತೂ ನಿರ್ವರ್ಣವಾಗಿ, ಶುಭ್ರವಾಗಿಯೇ ಉಳಿಯುತ್ತದೆ.

ಆಡಲು ಬಂದ ಪಾತರದವಳು ಅಂದರೆ ಕುಣಿಯಲು ಬಂದ ನರ್ತಕಿ, ಅರ್ಥಾತ್ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.

ಈ ರೂಪಕಕ್ಕೆ ಒಂದು ವಿಶಿಷ್ಟ ಹಿನ್ನೆಲೆ ಇದೆ. ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಕಾವ್ಯದಲ್ಲಿ ಅಲ್ಲಮನಿಗೂ, ಮಾಯಾದೇವಿಗೂ ಸ್ಪರ್ಧೆ ಏರ್ಪಡುತ್ತದೆ. ಅಲ್ಲಮ ಮದ್ದಲೆ ಬಾರಿಸುತ್ತಿದ್ದಂತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯಲು ಮಾಯಾದೇವಿಗೆ ಸಾಧ್ಯವಾಗುವದಿಲ್ಲ. ಅವಳು ಸೋಲೊಪ್ಪಿಕೊಳ್ಳುತ್ತಾಳೆ.

‘ಪ್ರಭುಲಿಂಗ ಲೀಲೆ’ ಶರೀಫರಿಗೆ ಪ್ರಿಯವಾದ ಕಾವ್ಯ.
ತಾವೇ ಮಾಡಿಕೊಂಡ ಇದರ ಹಸ್ತಪ್ರತಿಯೊಂದನ್ನು ಅವರು ಯಾವಾಗಲೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರಂತೆ.

ಎರಡನೆಯ ನುಡಿಯಲ್ಲಿ ಶರೀಫರು ಸಂಸಾರದಲ್ಲಿರುವ ಸಾಧಕನ ಪ್ರಗತಿಯ ರೀತಿಯನ್ನು ವರ್ಣಿಸಿದ್ದಾರೆ:

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ.
ಈ ಜೀವಾತ್ಮ is hammered on the anvil of life.
ಆದರೆ ಆತ ಪಕ್ವವಾದಾಗ, ಆತನ ಕರ್ಮಗಳು ಕರಗಿ ಹೋಗುತ್ತವೆ.
ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.

ಮೂರನೆಯ ನುಡಿಯಲ್ಲಿ ಶರೀಫರು ಸಂಸಾರ ಹಾಗೂ ಕರ್ಮಗಳನ್ನು ಬೇರೊಂದು ರೀತಿಯಲ್ಲಿ ವರ್ಣಿಸುತ್ತಾರೆ:

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ

ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು.
ಮಗ್ಗದಲ್ಲಿ ಒಮ್ಮೆ ಅತ್ತ(=ಒಳ್ಳೆಯದರತ್ತ) ಒಮ್ಮೆ ಇತ್ತ(=ಕೆಡುಕಿನತ್ತ) ಸರಿಯುವ ಲಾಳಿ ಎಂದರೆ ಜೀವಾತ್ಮನೆಸಗುವ ಕರ್ಮಗಳು.
ಜ್ಞಾನವನ್ನು ಬಯಸುವ ಸಾಧಕನು ಈ ಸಂಸಾರದಲ್ಲಿ ಸಿಲುಕಲಾರ.
ಆತನ ಮನಸ್ಸು ಈ ಸಂಸಾರವನ್ನು ತಿಂದು ಹಾಕುತ್ತದೆ ಅಂದರೆ ನಾಶ ಮಾಡುತ್ತದೆ ಎಂದು ಶರೀಫರು ಹೇಳುತ್ತಾರೆ.
ಇದಾದ ಮೇಲೆ ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ (=space excavated below the loom for footwork) ನುಂಗಿ ಹಾಕುತ್ತದೆ.
ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !

ನಾಲ್ಕನೆಯ ನುಡಿಯಲ್ಲಿಯೂ ಸಹ ಇದೇ ವಿಷಯವನ್ನು ಶರೀಫರು ಬೇರೆ ರೂಪಕಗಳ ಮೂಲಕ ವಿವರಿಸುತ್ತಾರೆ:

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ

ಹೊಲವನ್ನು ಊಳಲು ಎತ್ತಿನ ಕೊರಳಿಗೆ ಜತ್ತಗಿ (=ನೊಗಕ್ಕೆ ಹಾಗು ಎತ್ತಿನ ಕೊರಳಿಗೆ ಕಟ್ಟುವ ಪಟ್ಟಿ) ಕಟ್ಟಿರುತ್ತಾರೆ.
ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು ಇದು.
ಇದು ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ. (ಸಾಧನೆಯ ಸಹಾಯದಿಂದ).

ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ, ನೈವೇದ್ಯ.
ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ.
ಅರ್ಥಾತ್ ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ.
ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ), ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ (=?) ನುಂಗಿ ಹಾಕಿದೆ. ಮೇಳಿ ಅಂದರೆ ಒಕ್ಕಲುತನದ ಸಾಧನವಿರಬಹುದು.

ಐದನೆಯ ನುಡಿಯಲ್ಲಿ ಶರೀಫರು ಸಾಧಕನು ಆಧ್ಯಾತ್ಮದ ಕೊನೆ ಮುಟ್ಟಿದ್ದನ್ನು ವಿವರಿಸಿದ್ದಾರೆ:

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ

ಬಹುಶ: ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ.
ಈ ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (=ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು ಅಂದರೆ ಕಾಲ ದೇಶದಿಂದ ಬಂಧಿತನಾದ ಅಸ್ತಿತ್ವವನ್ನು ಅಂದರೆ ಜೀವಾತ್ಮನನ್ನು ನುಂಗಿ ಹಾಕಿದೆ.
ಇದರರ್ಥವೆಂದರೆ ಪರಮಾತ್ಮನಲ್ಲಿ ಜೀವಾತ್ಮ ಲೀನವಾಗಿದೆ.
ಇದೇ ಮಾತನ್ನು ಶರೀಫರು ಹೀಗೂ ಹೇಳಿದ್ದಾರೆ:
‘ಗುರುಗೋವಿಂದನ ಪಾದ ಆತ್ಮ ನುಂಗಿತ ’.

ಶರೀಫರ ಈ ಒಡಪಿನ ಗೀತೆಯಲ್ಲಿರುವ ಒಂದು ರಚನಾವೈಶಿಷ್ಟ್ಯವನ್ನು ಗಮನಿಸಬೇಕು.
ಪ್ರತಿಯೊಂದು ನುಡಿಯಲ್ಲಿ ಮೊದಲ ಎರಡು ಸಾಲುಗಳು ನಿರ್ಜೀವ ಉಪಕರಣಗಳನ್ನು ಬಣ್ಣಿಸುತ್ತವೆ.
ಉದಾ: ಒಳ್ಳು, ಒನಕೆ, ಬಿಸುವ ಕಲ್ಲು. ಗೋಡೆ, ಹಗ್ಗ, ಮಗ್ಗ ಇತ್ಯಾದಿ.
ಪ್ರತಿ ನುಡಿಯ ಕೊನೆಯ ಸಾಲಿನಲ್ಲಿ ಜೀವಾತ್ಮನ ವರ್ಣನೆ ಇದೆ;
ಉದಾ: ಪಾತರದವಳು, ಮುದಕಿ, ಅಣ್ಣ ಹಾಗು ಆತ್ಮ .

ಈ ರೀತಿಯಾಗಿ, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ.
ಆದರೆ, ಕವನದಲ್ಲಿ ಸಾಧಕನ ಹಂತಹಂತದ ಬೆಳವಣಿಗೆಯನ್ನು ತೋರಿಸಿಲ್ಲ.
ವಿಭಿನ್ನ ರೂಪಕಗಳನ್ನು ಉಪಯೋಗಿಸುತ್ತ, ಅದೇ ಸಾರವನ್ನು ಶರೀಫರು ಮತ್ತೆ ಮತ್ತೆ ಹೇಳಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ.
ಏಕೆಂದರೆ ಇದು ಕೋಣೆಯಲ್ಲಿ ಕುಳಿತು ರಚಿಸಿದ ಕವನವಲ್ಲ .
ತಮ್ಮ ಎದುರಿಗೆ ನೆರೆದು ನಿಂತಿರುವ ಸಾಮಾನ್ಯ ಹಳ್ಳಿಗರನ್ನು ಉದ್ದೇಶಿಸಿ, ಸ್ಫೂರ್ತಿ ಉಕ್ಕಿದಾಗ ಹಾಡಿದ ಹಾಡಿದು.
ಹಾಡು ಕೇಳುತ್ತಿರುವ ಸಾಮಾನ್ಯ ಹಳ್ಳಿಗನಿಗಾಗಿ ಅವನ ಹೃದಯಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಹಾಡಿದ ಹಾಡಿದು.
………………………………………………………..
( ಈ ಲೇಖನ ಬರೆಯುವಾಗ ಸಹಾಯ ಮಾಡಿದ ನನ್ನ ಶ್ರೀಮತಿ ವನಮಾಲಾಳಿಗೆ ಋಣಿಯಾಗಿದ್ದೇನೆ.)

Friday, October 3, 2008

ಅಳಬೇಡ ತಂಗಿ ಅಳಬೇಡ

ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಗೀತೆಗಳು ಸಂದರ್ಭಾನುಸಾರವಾಗಿ ಹೊರಹೊಮ್ಮಿದ ಹಾಡುಗಳು. ಇಂತಹ ಹಾಡುಗಳಲ್ಲಿ “ಬಿದ್ದೀಯಬೆ ಮುದುಕಿ”, “ಗಿರಣಿ ವಿಸ್ತಾರ ನೋಡಮ್ಮ” , “ಅಳಬೇಡ ತಂಗಿ ಅಳಬೇಡ” ಮೊದಲಾದವು ಪ್ರಸಿದ್ಧವಾದ ಹಾಡುಗಳಾಗಿವೆ.

ಶರೀಫರು ಒಮ್ಮೆ ತಮ್ಮ ಊರಿನಲ್ಲಿ ನಡೆದು ಹೋಗುತ್ತಿದ್ದಾಗ, ಅದೇ ಮದುವೆಯಾದ ಹುಡುಗಿಯನ್ನು ಗಂಡನ ಮನೆಗೆ ಕಳಸಿ ಕೊಡುತ್ತಿರುವ ನೋಟವನ್ನು ನೋಡಿದರು. ಶರೀಫರ ಕಾಲದಲ್ಲಿ ಬಾಲ್ಯವಿವಾಹಗಳೇ ನಡೆಯುತ್ತಿದ್ದವು. ಹೀಗಾಗಿ, ಗಂಡನ ಮನೆಗೆ ಹೋಗುತ್ತಿರುವ ಹುಡುಗಿ ಅಳುವದು ಸಾಮಾನ್ಯ ದೃಶ್ಯವಾಗಿತ್ತು.

ಆಗ ಶರೀಫರ ಬಾಯಿಂದ ಹೊರಹೊಮ್ಮಿದ ಹಾಡು: ಅಳಬೇಡ ತಂಗಿ ಅಳಬೇಡ.
ಆ ಹಾಡು ಹೀಗಿದೆ:

ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪಲ್ಲ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತs
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ ||೩||
..................................

ಹಾಡು ಪ್ರಾರಂಭವಾಗುವದು ಸಮಾಧಾನಪಡಿಸುವ ಮಾತುಗಳಿಂದ:
“ತಂಗೆವ್ವಾ, ನೀ ಎಷ್ಟs ಅತ್ತರೂ, ಅದರಿಂದ ಏನೂ ಪ್ರಯೋಜನ ಇಲ್ಲ.
ಇಲ್ಲಿ ಕೂಡಿದವರು ನಿನ್ನನ್ನು ಕಳಸುವವರೇ ಹೊರತು, ಉಳಿಸಿಕೊಳ್ಳೋರಲ್ಲಾ”.
ಈ ಮಾತುಗಳಲ್ಲಿಯ ವ್ಯಂಗ್ಯವನ್ನು ಗಮನಿಸಬೇಕು. ತೊಂದರೆ ಕೊಟ್ಟವನನ್ನು ಅಥವಾ ಅಪಕಾರ ಮಾಡಿದವನನ್ನು ಬೈಯಲು ಉಪಯೋಗಿಸುವ ಪದಪುಂಜವಿದು : “ ಏನಪಾ, ನಮ್ಮನ್ನೇನ ಕಳಸಬೇಕಂತ ಮಾಡಿಯೇನ?”

ಆದರೆ, ಇಲ್ಲಿ ಕಳಿಸುತ್ತಿರುವದು ಗಂಡನ ಮನೆಗೆ, ಅಂದರೆ ಸಂಸಾರವೆಂಬ ಮಾಯಾಲೋಕಕ್ಕೆ. ಇಂತಹ ಮಾಯಾಪ್ರಪಂಚಕ್ಕೆ ಈ ಹುಡುಗಿಯನ್ನು ನೂಕುತ್ತಿರುವವರ ಸಡಗರ ನೋಡಿರಿ:
“ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ”.

ಗಂಡನ ಮನೆಗೆ ಕಳಿಸುವಾಗ ಮಗಳ ಉಡಿಯಲ್ಲಿ ಅಕ್ಕಿ ತುಂಬಿ ಕಳಿಸುವ ಸಂಪ್ರದಾಯವಿದೆಯಲ್ಲವೆ?
ಹಾಗಾಗಿ, ಈ ಹುಡುಗಿಯ ಉಡಿಯಲ್ಲಿ ಖಡಕ್ಕಾಗಿ (=full) ಅಕ್ಕಿ ತುಂಬಿ, ಬಳಿಕ ದುಡುಕುತ್ತ(=ಜೋರಿನಿಂದ) ಅವಳನ್ನು ಮುಂದೆ ನೂಕಿದರಂತೆ!
ಇದೆಲ್ಲ ಹುಡುಗಿಗೂ ಬೇಕಾದದ್ದೆ! ಅವಳು ಮಿಡುಕಿ, ಮಿಡುಕಿ ಅಂದರೆ ಹಂಬಲಿಸಿ ಮದುವೆಯಾದವಳು.
ಈ ಮಾಯೆಯ ಸಂಸಾರವನ್ನು ತಾನೇ ಹುಡುಕಿ ಹೊಕ್ಕವಳು.
ಒಮ್ಮೆ ಹೊಕ್ಕ ಮೇಲೆ ಮುಗಿಯಿತು.
ಇನ್ನು ಅವಳಿಗೆ ಮರಳುವ ಮಾರ್ಗವಿಲ್ಲ. This is path of no return.
ಈಗಾಗಲೇ ಅವಳಿಗೆ ಮಿಂಡರು ಗಂಟು ಬಿದ್ದಿದ್ದಾರೆ.
ಮಿಂಡರು ಅಂದರೆ ಮನಸ್ಸನ್ನು ಹಾದಿಗೆಡಿಸುವ ಪ್ರಲೋಭನೆಗಳು.

ತನ್ನಲ್ಲಿ ಸಂಪತ್ತು ಕೂಡಬೇಕು, ತನ್ನ ಅಂತಸ್ತು ಇತರರಿಗಿಂತ ಹೆಚ್ಚಾಗಬೇಕು, ತಾನು ಸರೀಕರೆದುರಿಗೆ ಮೆರೆಯಬೇಕು, ಇಂತಹ ಸಾಮಾನ್ಯ ಅಪೇಕ್ಷೆಗಳು ಮನಸ್ಸನ್ನು ಸನ್ಮಾರ್ಗದಿಂದ ದೂರ ಸರಿಸುವದರಿಂದ ಇವೆಲ್ಲ ಮಿಂಡರಿದ್ದ ಹಾಗೆ.
ದೇವರ ಆಲೋಚನೆ ಅಂದರೆ ಪಾತಿವ್ರತ್ಯ ; ಇತರ ಆಲೋಚನೆಗಳು ಹಾದರ.
ಇಷ್ಟೇ ಅಲ್ಲದೆ, ಇವಕ್ಕೆಲ್ಲ ಪ್ರೋತ್ಸಾಹ ಕೊಡುವ ‘ಐವರು ರಂಡೆಯರು’ ಅಂದರೆ ನಮ್ಮ ಪಂಚ ಇಂದ್ರಿಯಗಳು : ಕಣ್ಣು, ಕಿವಿ, ಮೂಗು,ನಾಲಗೆ ಹಾಗು ಚರ್ಮ.
ಈ ಐದು ಇಂದ್ರಿಯಗಳೂ ಸಹ ಸುಖಾಪೇಕ್ಷೆ ಮಾಡುತ್ತವೆ, ಅಲ್ಲವೆ?

“ಇಷ್ಟೆಲ್ಲ ಬಂಧನಗಳು ಇದ್ದಾಗ, ಇಲ್ಲಿ ಬಂದಿರುವ ಬಂಧುಗಳ ಕಾಲಿಗೆ ಬಿದ್ದರೆ, ನಿನಗೆ ಸದ್ಗತಿ ಹೇಗೆ ಸಿಕ್ಕೀತು, ತಂಗೆವ್ವಾ? ಇನ್ನು ನಿನಗೆ ಮಾಯಾಸಂಸಾರ ತಪ್ಪದು. ಮೋಜು ಬಯಸಿ ಮದಿವ್ಯಾದಿ, ಈಗ ಮೋಜನ್ನು ಅನುಭವಿಸು”, ಎಂದು ಶರೀಫರು ಹೇಳುತ್ತಾರೆ.

ಶರೀಫರು ಆ ಹುಡುಗಿಗೆ ಈ ಮಾಯಾಸಂಸಾರದಲ್ಲಿದ್ದ ಉತ್ಸಾಹವನ್ನು , ಆಸಕ್ತಿಯನ್ನು ಗಮನಿಸಿ ಈ ರೀತಿ ಹೇಳುತ್ತಾರೆ:
“ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ”
ದಡಿ ಅಂದರೆ ಅಂಚು. ರಂಗೀಲಿ(=ರಂಗಿನಲ್ಲಿ) ಅಂದರೆ ಉತ್ಸಾಹದಿಂದ ರೇಶಿಮೆ ಸೀರೆ ಉಟ್ಟಿದ್ದಾಳೆ.
ಆದರೆ, ಈ ಹುಡುಗಿ ಹಂಗನೂಲಿನ ಪರವಿಯನ್ನು ಮರೆತು ಬಿಟ್ಟಿದ್ದಾಳೆ.
ಹಂಗನೂಲು ಅಂದರೆ, ಕೈಯಿಂದ ತಯಾರಿಸಿದ ಹತ್ತಿಯ ನೂಲು. ಅದರ ಪರವಿಯನ್ನು ಈ ಹುಡುಗಿ ಮರೆತಿದ್ದಾಳೆ. ಪರವಿ ಅಂದರೆ ಪರವಾಹ್ ಅನ್ನುವ ಉರ್ದು ಪದ ಅಂದರೆ ಕಾಳಜಿ, ಚಿಂತೆ, care, bother.
ಹೇಗೆ ಕೈಮಗ್ಗದ ಹತ್ತಿಯ ಬಟ್ಟೆ ನಿಸರ್ಗಸಹಜವಾಗಿದೆಯೊ ಹಾಗೆಯೇ ದೇವರ ನೆನಪು ನಮ್ಮ ಮನಸ್ಸಿಗೆ ಹತ್ತಿರವಾದದ್ದು. ಕೃತಕ ಹಾಗು ಆಡಂಬರದ ರೇಶಿಮೆ ಸೀರೆ ಎಂದರೆ ಸಂಸಾರದ ವೈಭವ. ಈ ವೈಭವಕ್ಕೆ ನೀನು ಮನಸೋತರೆ, ನೀನು ಮಂಗಳಮೂರುತಿ ದೇವರ ಸಾನ್ನಿಧ್ಯಕ್ಕೆ ಹೊರತಾಗುತ್ತೀ ಎಂದು ಶರೀಫರು ಎಚ್ಚರಿಸುತ್ತಾರೆ.
ಶರೀಫರು ‘ಮಂಗಳಮೂರುತಿ’ ಎನ್ನುವ ಪದವನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ಏಕೆಂದರೆ, ultimately ನಮಗೆ ಮಂಗಳವಾಗುವದು ಪಾರಮಾರ್ಥಿಕ ಚಿಂತನೆಯಿಂದಲೇ ಹೊರತು, ಸಾಂಸಾರಿಕ ಆಡಂಬರದಿಂದಲ್ಲ.

ಲೌಕಿಕ ಪ್ರತಿಮೆಗಳಿಗೆ ಆಧ್ಯಾತ್ಮಿಕ ಅರ್ಥವನ್ನು ನೀಡುವದು ಶರೀಫರ ವೈಶಿಷ್ಟ್ಯವಾಗಿದೆ. ಮಿಂಡೇರ ಬಳಗ, ರೇಶಿಮೆ ಸೀರಿ ಮೊದಲಾದ ಪ್ರತಿಮೆಗಳು ಅಚ್ಚ ದೇಸಿ ಪ್ರತಿಮೆಗಳು. ಇದರ ಜೊತೆಗೇ ಮಾಯದ ಮರದಂತಹ ಅಚ್ಚರಿಯ ಪ್ರತಿಮೆಗಳನ್ನೂ ಅವರು ಸಂಯೋಜಿಸುತ್ತಾರೆ. ಈ ರೀತಿಯಲ್ಲಿ ಶರೀಫರು ಲೌಕಿಕವಾಗಿ ಪ್ರಾರಂಭಿಸಿದ ಹಾಡನ್ನು ಆಧ್ಯಾತ್ಮಿಕ ಚಿಂತನೆಗೆ ಅತ್ಯಂತ ಸಹಜವಾಗಿ ತಿರುಗಿಸುತ್ತಾರೆ.