Monday, May 21, 2012

‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’--ದಿನಕರ ದೇಸಾಯಿ


ಕನ್ನಡದಲ್ಲಿ ನಾಲ್ಕು ಸಾಲುಗಳ ಚುಟುಕುಗಳನ್ನು ಜನಪ್ರಿಯ ಗೊಳಿಸಿದ ದಿನಕರ ದತ್ತಾತ್ರೇಯ ದೇಸಾಯಿಯವರನ್ನು ಕನ್ನಡಿಗರು ‘ಚುಟುಕು ಬ್ರಹ್ಮ’ ಎಂದೇ ಗುರುತಿಸುತ್ತಾರೆ. ಹಾಗಿದ್ದರೂ ಸಹ, ‘ಚುಟುಕು’ ಇದು ಅವರ ಪ್ರತಿಭೆಯ ಹಾಗು ಸಾಧನೆಯ ಒಂದು ಅತಿ ಸಣ್ಣ ಅಂಶ ಮಾತ್ರವಾಗಿದೆ.

ದಿನಕರ ದೇಸಾಯಿಯವರು ಬೆಂಗಳೂರಿನಲ್ಲಿ ಹಾಗು ಮೈಸೂರಿನಲ್ಲಿ ಪದವಿಶಿಕ್ಷಣ ಪೂರೈಸಿದರು. ಕೊನೆಯ ವರ್ಷದಲ್ಲಿ ಅವರಿಗೆ ಇತಿಹಾಸದಲ್ಲಿ ‘ಕ್ಯಾಂಡಿ ಪಾರಿತೋಷಕ’ ಲಭಿಸಿತು. ಬಳಿಕ ಸ್ನಾತಕೋತ್ತರ ಶಿಕ್ಷಣವನ್ನು ಹಾಗು ಕಾನೂನು ಪದವಿಯನ್ನು ದೇಸಾಯಿಯವರು  ಮುಂಬಯಿಯಲ್ಲಿ ಮುಗಿಸಿದರು.

ದಿನಕರ ದೇಸಾಯಿಯವರಿಗೆ ‘ದಿನಕರನ ಚೌಪದಿ’ ಕವನಸಂಕಲನಕ್ಕಾಗಿ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.  ಆದರೆ ದೇಸಾಯಿಯವರು ಸಾಹಿತ್ಯದ ದಂತಗೋಪುರದಲ್ಲಿ  ಬದುಕಲಿಲ್ಲ. ಮುಂಬಯಿಯಲ್ಲಿ ಅವರಿಗೆ ಕಾರ್ಮಿಕ ಸಂಘಟನೆಗಳ ಮುಖಂಡರೊಡನೆ ಲಭಿಸಿದ ಸಂಪರ್ಕದಿಂದಾಗಿ ದೇಸಾಯಿಯವರು ತಮ್ಮ ಜೀವನವನ್ನೆಲ್ಲ ಶೋಷಿತವರ್ಗಗಳ ಪರವಾದ ಹೋರಾಟಕ್ಕೆ ಮುಡುಪಿಟ್ಟರು. ಗೋಕಾಕದ ಹತ್ತಿ ಗಿರಣಿಯ ಕಾರ್ಮಿಕರ ಪರವಾಗಿ ಅವರ ಹೋರಾಟದ ಜೀವನ ಪ್ರಾರಂಭವಾಯಿತು. ಬಳಿಕ ಮುಂಬಯಿಯಲ್ಲಿ  ಕಡಲಕಾರ್ಮಿಕರ ಸಂಘಟನೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಪ್ರತಿಭಾವಂತ ಮಗನು ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆಂದು ಹಾರೈಸುತ್ತ ಕುಳಿತಿದ್ದ ಬಡ ‘ದತ್ತಣ್ಣ ಮಾಸ್ತರ’ರಿಗೆ ಇದೊಂದು ನಿರಾಶಾದಾಯಕ ಸಂಗತಿಯಾಯಿತು. ( ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯವರಾದರೆ,ಇವರಂತೆಯೇ ಮುಂಬಯಿಯ ರೇಲ್ವೇ ಕಾರ್ಮಿಕರ ಸಂಘಟನೆಗಾಗಿ ದುಡಿದ ಜಾರ್ಜ ಫರ್ನಾಂಡಿಸರು ದಕ್ಷಿಣ ಕನ್ನಡ ಜಿಲ್ಲೆಯವರು ಎನ್ನುವದು ಗಮನಾರ್ಹವಾಗಿದೆ.)

ದೇಸಾಯಿಯವರು ತಮ್ಮ ಸೇವಾಕ್ಷೇತ್ರವನ್ನು ಮುಂಬಯಿಗೆ ಮಾತ್ರ ಸೀಮಿತಗೊಳಿಸಲ್ಲ. ತಮ್ಮ ತವರುಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಚಳುವಳಿಯನ್ನು ಪ್ರಾರಂಬಿಸಿ ಐದು ವರ್ಷ ಗಡಿಪಾರು ಶಿಕ್ಷೆಯನ್ನು ಅನುಭವಿಸಿದರು.ಹಾಲಕ್ಕಿ ಜನಾಂಗದ ಬಗೆಗೆ ಅಧ್ಯಯನವನ್ನು ಪ್ರಕಟಿಸಿ, ಆ ಜನಾಂಗವನ್ನು ಗಿರಿಜನ ಸಮುದಾಯವೆಂದು ಗುರುತಿಸಲು ದಿನಕರ ದೇಸಾಯಿಯವರೇ ಕಾರಣರು.

ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ, ವಿಶೇಷತಃ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗಾಗಿ, ‘ಕೆನರಾ ವೆಲ್‍ಫೇರ್ ಟ್ರಸ್ಟ್’ ಸ್ಥಾಪಿಸಿ ಶಾಲೆ ಹಾಗು ಕಾಲೇಜುಗಳನ್ನು ತೆರೆದರು. ಅನೇಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಸಹಾಯ ನೀಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ದಿನಕರ ದೇಸಾಯಿಯವರಿಗೆ ಸಲ್ಲುತ್ತದೆ.

ದಿನಕರ ದೇಸಾಯಿಯವರು  ಗೋಪಾಲಕೃಷ್ಣ ಗೋಖಲೆಯವರಿಂದ ಮುಂಬಯಿಯಲ್ಲಿ ಸ್ಥಾಪಿತವಾದ ‘ಭಾರತ ಸೇವಕ ಸಮಾಜ’ದ ಸದಸ್ಯರಾಗಿದ್ದರು. ಈ ಸಂಸ್ಥೆಯ ನಿಯಮಗಳ ಮೇರೆಗೆ ತಮಗೆ ಬಂದ ಯಾವುದೇ ಸಂಭಾವನೆಯನ್ನು ಸಂಸ್ಥೆಗೆ ಸಲ್ಲಿಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸುತ್ತಿದ್ದರು. ತಾವು ಲೋಕಸಭಾ ಸದಸ್ಯರಾಗಿದ್ದಾಗ, ಆ ಪದನಿಮಿತ್ತ ಸಂಭಾವನೆಯನ್ನೂ ಸಹ ನೇರವಾಗಿ ಭಾರತ ಸೇವಕ ಸಮಾಜಕ್ಕೆ ಸಲ್ಲಿಸುತ್ತಿದ್ದರು. ಸ್ವಾಮಿ ವಿವೇಕಾನಂದರಂತೆ ಇವರೂ ಸಹ ದರಿದ್ರನಾರಾಯಣನಿಗೆ ಸಲ್ಲಿಸುವ ಸೇವೆಯೇ ನಿಜವಾದ ಹರಿಪೂಜೆ ಎಂದು ಭಾವಿಸಿದವರು. ಆ ಮನೋಭಾವವನ್ನು ಬಿಂಬಿಸುವ ಅವರ ಕವನ ಹೀಗಿದೆ:

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?
ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ?

ಹುಚ್ಚ! ನೀನು ಹಳ್ಳಿಗೋಡು
ದೀನ ಜನರ ಪಾಡ ನೋಡು
ಇರಲು ಗುಡಿಯು ಇಲ್ಲವಲ್ಲ
ಹೊಟ್ಟೆ ತುಂಬ ಅನ್ನವಿಲ್ಲ!
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?

ದೀನಗೊಂದು ಗೂಡು ಸಾಕು
ದೇವಗೊಂದು ವಿಶ್ವ ಬೇಕು
ಮಣ್ಣ ಹುಲ್ಲ ಸಣ್ಣ ಗೂಡು
ಬಡವಗದುವೆ ಸಿರಿಯ ಬೀಡು
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?

ಜಗಕೆ ಗೋಡೆ ಹಾಕಿ ಗುಡಿಯ ಕಟ್ಟಬಲ್ಲೆಯಾ?
ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ?
ಹರಿಯ ವಿಶ್ವರೂಪವನ್ನು ಮರೆತುಬಿಟ್ಟೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ?

ದಿನಕರ ದೇಸಾಯಿಯವರು ಶೋಷಿತರ ಪರವಾಗಿ ಹೋರಾಡಿದವರು. ಆದರೆ ಅವರು ಮಾರ್ಕ್ಸವಾದಿಗಳಲ್ಲ ಹಾಗು ನಾಸ್ತಿಕರಲ್ಲ. ಅವರಿಗೆ ಹರಿಯಲ್ಲಿ ನಂಬುಗೆ ಇದೆ. ಹಾಗೆಂದು ಹರಿಪೂಜೆಗಾಗಿ ಸಮಯವನ್ನು ‘ವ್ಯರ್ಥ’ ಮಾಡುವವರಲ್ಲ. ಸಾಮಾಜಿಕ ಹೋರಾಟದಲ್ಲಿ ಇದ್ದವರಾದರೂ ಸಹ ರಾಜಕಾರಣಿಯಲ್ಲ.  ಇವರು ಒಂದು ಅವಧಿಗಾಗಿ ಲೋಕಸಭಾ ಸದಸ್ಯರಾಗಿದ್ದರೂ ಸಹ ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ. (ಭಾರತ ಸೇವಕ ಸಮಾಜದ ನಿಯಮಗಳ ಮೇರೆಗೆ ಇವರು ರಾಜಕೀಯ ಪಕ್ಷಗಳನ್ನು ಸೇರುವಂತಿರಲಿಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ, ದಿನಕರ ದೇಸಾಯಿಯವರಿಗೆ ಮಂತ್ರಿ ಪದವಿಯನ್ನು ನೀಡಲು ಸಿದ್ಧರಿದ್ದರು. ಆದರೆ ತತ್ವನಿಷ್ಠರಾದ ದೇಸಾಯಿಯವರು ಆ ಆಮಿಷವನ್ನು ತಿರಸ್ಕರಿಸಿದರು.)

ತಮ್ಮ ನಿಬಿಡ ಜನಸೇವಾ ಕಾರ್ಯಕ್ರಮಗಳ ನಡುವೆ ಇವರಿಗೆ ಸಾಹಿತ್ಯರಚನೆಗೆ ಸಮಯ ಸಿಕ್ಕುವದೇ ಅಪರೂಪವಾಗಿತ್ತು. ಹಾಗಿದ್ದರೂ ಸಹ ದಿನಕರ ದೇಸಾಯಿಯವರು ‘ಜನಸೇವಕ’ ಎನ್ನುವ ಪತ್ರಿಕೆಯನ್ನು ನಡೆಯಿಸಿದರು. ಐದು ಕವನಸಂಕಲನಗಳನ್ನು ಹಾಗು ‘ನಾ ಕಂಡ ಪಡುವಣ’ ಎನ್ನುವ ಪ್ರವಾಸಸಾಹಿತ್ಯವನ್ನು ರಚಿಸಿದರು. ಈ ಪ್ರವಾಸಕಥನವು ಅವರ ಸೂಕ್ಷ್ಮ ಸಾಮಾಜಿಕ ಹಾಗು ರಾಜಕೀಯ ಒಳನೋಟವನ್ನು ಪ್ರತಿಬಿಂಬಿಸುತ್ತದೆ. ಇವನ್ನೆಲ್ಲ ಗಮನಿಸಿದಾಗ ಸಮಯದ ಅಭಾವದ ಮೂಲಕ ದಿನಕರ ದೇಸಾಯಿಯವರು ಬಹುಶಃ ಚುಟುಕುಗಳ ಕಡೆಗೆ ಒಲಿದಿರಬಹುದು ಎನ್ನಿಸುತ್ತದೆ.

‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’ ಕವನವು ದಿನಕರ ದೇಸಾಯಿಯವರ ಸಾಮಾಜಿಕ ಸಂವೇದನೆಯನ್ನು ವ್ಯಕ್ತ ಪಡಿಸುತ್ತದೆ. ಈ ಕವನಕ್ಕೆ ಪ್ರತಿಯಾಗಿ ಪು.ತಿ. ನರಸಿಂಹಾಚಾರ್ಯರು ಒಂದು ಕವನವನ್ನು ರಚಿಸಿದ್ದಾರೆ ಎಂದು ಶ್ರೀ ವ್ಯಾಸ ದೇಶಪಾಂಡೆಯವರು ನನಗೆ ತಿಳಿಸಿದಾಗ ನಾನು ಚಕಿತನಾದೆ. ಅದ್ಭುತ ಸ್ಮರಣಶಕ್ತಿಯ ಶ್ರೀ ವ್ಯಾಸ ದೇಶಪಾಂಡೆಯವರು ಆ ಕವನವನ್ನು ತಮ್ಮ ನೆನಪಿನಿಂದಲೇ ನನಗೆ ಹೇಳಿದರು. ಅದನ್ನೇ ನಾನು ಇಲ್ಲಿ ಉದ್ಧರಿಸುತ್ತಿದ್ದೇನೆ:

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆನು
ದೀನಗಿಂತ ದೇವ ಬಡವನೆಂದು ಬಗೆವೆನು.

ನಿಜವು ವಿಷ್ಣು ವಿಶ್ವಕರನು, ವಿಶ್ವಧಾಮನು
ಒಂದೆ ಹೆಜ್ಜೆ ಇಟ್ಟು ಬುವಿಯ ನಾಕವಳೆದನು
ಬೆಳ್ಳಿಬೆಟ್ಟದೊಡೆಯ ಶಿವನು ಚಂದ್ರಮೌಳಿಯು
ಪ್ರೇಮಮೂರ್ತಿ ಗಿರಿಜೆ ಅವನ ಪ್ರಣಯಕಾರ್ತೆಯು

ಆದರವನ ಬೀಡು ಮಸಣ, ಲೇಪ ಬೂದಿಯು
ಚರ್ಮ ಉಡುಗೆ, ಹಾವು ತೊಡುಗೆ, ಬದುಕು ಬಿಕ್ಕೆಯು
ದೀನಗೊಂದು ವಿಶ್ವ ಸಾಲದಾಸೆ ತಣಿಸಲು
ದೇವನೆದೆಯ ಗುಡಿಯು ಸಾಕು ನಲಿದು ನಲಿಸಲು
                        (--ಪು.ತಿ.ನರಸಿಂಹಾಚಾರ್)

ದಿನಕರ ದೇಸಾಯಿಯವರ ಕವನಕ್ಕೆ ಸಾಮಾಜಿಕ ಪ್ರೇರಣೆ ಇದ್ದರೆ, ಪು.ತಿ. ನ. ಅವರ ಕವನಕ್ಕೆ ಆಧ್ಯಾತ್ಮಿಕ ಪ್ರೇರಣೆ ಇದೆ.
‘ಅವರವರ ಭಾವಕ್ಕೆ,
ಅವರವರ ಭಕುತಿಗೆ,
ಅವರವರ ತೆರನಾಗಿ
ಇರುತಿಹನು ಶಿವಯೋಗಿ’ ಎಂದುಕೊಳ್ಳಬಹುದಷ್ಟೆ!

ದಿನಕರ ದೇಸಾಯಿಯವರ ಮೂರು ಕವನಗಳು ನನ್ನ ಅಚ್ಚುಮೆಚ್ಚಿನ ಕವನಗಳು. ‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’ ಕವನವು ಅವುಗಳಲ್ಲೊಂದು. ‘ನನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ’ ಎನ್ನುವದು ಮತ್ತೊಂದು ಕವನ. ಈ ಕವನ ಹೀಗಿದೆ:

ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನು ಹಿಡಿಯುವಲ್ಲಿ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು.

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂರವರು ಸಹ ತಮ್ಮ ಮೃತ್ಯುಪತ್ರದಲ್ಲಿ ತಮ್ಮ ದೇಹದ ಬೂದಿಯನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಹಾಗು  ನದಿಗಳಲ್ಲಿ ತೂರಿ ಬಿಡಲು ಬರೆದಿದ್ದಾರೆ. ನೆಹರೂರವರು ತಮ್ಮ ಮೃತ್ಯುಪತ್ರವನ್ನು ೧೯೪೮ರಲ್ಲಿಯೇ ಬರೆದಿದ್ದರೂ ಸಹ, ಅವರ ಮರಣದ ನಂತರ ಅಂದರೆ ೧೯೬೨ರಲ್ಲಿ ಅದು ಪ್ರಕಟವಾಯಿತು. ದಿನಕರ ದೇಸಾಯಿಯವರು ತಮ್ಮ ಈ ಕವನವನ್ನು ೧೯೬೨ಕ್ಕಿಂತ ಮೊದಲೇ ಬರೆದಿದ್ದಾರೆ.
ನೆಹರೂರ ಇಚ್ಛೆಯು ಭಾವನಾತ್ಮಕವಾಗಿದೆ. ದಿನಕರ ದೇಸಾಯಿಯವರ ಕವನದಲ್ಲಿ, ತನ್ನ ಬದುಕು ಹಾಗು ತನ್ನ ಸಾವು ಎರಡರಿಂದಲೂ ಈ ಜಗತ್ತಿಗೆ ಉಪಯೋಗವಾಗಲಿ ಎನ್ನುವ ತೀವ್ರ ಕಳಕಳಿಯಿದೆ.

ದಿನಕರ ದೇಸಾಯಿಯವರು ೧೯೮೨ ನವ್ಹಂಬರ ೬ರಂದು ತೀರಿಕೊಂಡರು. ಅವರ ಕವನದಲ್ಲಿಯ ಕೋರಿಕೆಯನ್ನು ಮನ್ನಿಸಲಾಯಿತೊ ಇಲ್ಲವೊ ತಿಳಿಯದು. ಆದರೆ ಕನ್ನಡನಾಡಿನ ಈ ಸುಪುತ್ರನ ಜನ್ಮವು ಜನಸೇವೆಯಲ್ಲಿ ಸಾರ್ಥಕವಾಗಿರುವದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.

ಇಂದಿರಾ ಇವರು ದಿನಕರ ದೇಸಾಯಿಯವರ ಹೆಂಡತಿ. ಈ ಮರಾಠಿ ತರುಣಿ ದೇಸಾಯಿಯವರನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತ ಪಡಿಸಿದಾಗ, ದೇಸಾಯಿಯವರು, ‘ನನ್ನ ಅಂಗಿಗೆ ಜೇಬು ಇಲ್ಲ’ ಎಂದು ಹೇಳಿದ್ದರು. ‘ಅದಕ್ಕಾಗಿಯೇ ನಾನು ನಿಮ್ಮನ್ನು ಮದುವೆಯಾಗಲು ಬಯಸುವುದು’ ಎಂದು ಇಂದಿರಾ ಮರುನುಡಿದರಂತೆ!


ದಿನಕರ ದೇಸಾಯಿಯವರ ನನ್ನ ಮೆಚ್ಚಿನ ಮೂರನೆಯ ಕವನ: ‘ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!’
ಇದೊಂದು ಅದ್ಭುತ ಮಕ್ಕಳ ಗೀತೆ. ನಾನು ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವಾಗ  ಈ ಕವನ ನಮ್ಮ ಪಠ್ಯದಲ್ಲಿತ್ತು.
ಕವನ ಹೀಗಿದೆ:

ಗಂಟೆಯ ನೆಂಟನೆ ಓ ಗಡಿಯಾರ,
ಬೆಳ್ಳಿಯ ಬಣ್ಣದ ಗೋಲಾಕಾರ,
ವೇಳೆಯ ತಿಳಿಯಲು ನೀನಾಧಾರ,
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಹಗಲೂ ಇರುಳೂ ಒಂದೇ ಬಾಳು,
ನೀನಾವಾಗಲು ದುಡಿಯುವ ಆಳು,
ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಮುಖ ಒಂದಾದರು ದ್ವಾದಶ ನೇತ್ರ!
ಎರಡೇ ಕೈಗಳು ಏನು ವಿಚಿತ್ರ!
ಯಂತ್ರ ಪುರಾಣದ ರಕ್ಕಸ ಪುತ್ರ!
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಟಿಕ್ ಟಿಕ್ ಎನ್ನುತ ಹೇಳುವೆಯೇನು?
ನಿನ್ನೀ ಮಾತಿನ ಒಳಗುಟ್ಟೇನು?
‘ಕಾಲವು ನಿಲ್ಲದು’ ಎನ್ನುವಿಯೇನು?
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ದುಡಿಯುವದೊಂದೇ ನಿನ್ನಯ ಕರ್ಮ
ದುಡಿಸುವದೊಂದೇ ನಮ್ಮಯ ಧರ್ಮ
ಇಂತಿರುವುದು ಕಲಿಯುಗದೀ ಮರ್ಮ
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಈ ಬಾಲಗೀತೆಯಲ್ಲಿಯೂ ಸಹ ದಿನಕರ ದೇಸಾಯಿಯವರ ಶೋಷಿತಸಂವೇದನೆಯ ಸಮಾಜಮುಖೀ ಧೋರಣೆ ವ್ಯಕ್ತವಾಗುತ್ತಿದೆ! ‘ನೀನಾವಾಗಲು ದುಡಿಯುವ ಆಳು’ ಹಾಗು ‘ಯಂತ್ರಪುರಾಣದ ರಕ್ಕಸಪುತ್ರ’ ಎನ್ನುವ ಸಾಲುಗಳು ಈ ಧೋರಣೆಯನ್ನು ಸ್ಪಷ್ಟಪಡಿಸುತ್ತವೆ.

ದಿನಕರ ದೇಸಾಯಿಯವರು ತಮ್ಮ ಜೀವನದ ಪ್ರತಿ ಗಳಿಗೆಯನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ದೇವರಲ್ಲಿ ಅವರಿಗೆ ನಂಬುಗೆ ಇದ್ದರೆ, ಅದು ಅವರ ಅಂತರಂಗಕ್ಕೆ ಮಾತ್ರ ತಿಳಿದಿರಬಹುದು. ಮರಣಶಯ್ಯೆಯಲ್ಲಿದ್ದಾಗ ಅವರು ರಚಿಸಿದ ಚುಟುಕು ಹೀಗಿದೆ:

ಜಗದೀಶ್ವರನು ಮೊನ್ನೆ ಮಾಡಿ ಟೆಲಿಫೋನು
ಕೇಳಿದನು, ‘ದೇಸಾಯಿ, ಹೇಗಿದ್ದಿ ನೀನು?’
ಮುಗಿಯಲಿಲ್ಲವೆ ನಿನ್ನ ಚುಟುಕುಗಳ ಹುಚ್ಚು
ಇನ್ನೆರಡು ಬರೆದು ನೀ ಪುಸ್ತಕವ ಮುಚ್ಚು!’

ದಿನಕರ ದೇಸಾಯಿಯವರು ತಮ್ಮ ಅಂತ್ಯವನ್ನು ಅರಿತಿರಬಹುದು. ಅದಕ್ಕೂ ಮುಖ್ಯವೆಂದರೆ, ತನ್ನನ್ನು ಹಿಡಿದುಕೊಂಡೇ ಯಾರೂ ಅಮರನಾಗಿರುವಷ್ಟು ಮುಖ್ಯ ಅಲ್ಲ ಎಂದು ಅವರು ಅರಿತಿರಬಹುದು. ಅಥವಾ ಒಂದು ಜ್ಯೋತಿ ನಂದಿದರೆ, ಅದು ಹೊತ್ತಿಸಿದ ನೂರು ಜ್ಯೋತಿಗಳು ಅಲ್ಲಿ ಬೆಳಗುತ್ತವೆ ಎನ್ನುವುದನ್ನು ಅವರು ಅರಿತಿರಬಹುದು.

ಗೋಖಲೆ ಸೆಂಟೆನರಿ ಕಾಲೇಜಿನಲ್ಲಿ ಅವರ ಎದೆಯಳತೆಯ ಮೂರ್ತಿಯನ್ನು ಸ್ಥಾಪಿಸಲು ಅವರ ಶಿಷ್ಯರು ಬಯಸಿದ್ದರು. ಹಾಗೇನಾದರೂ ಮಾಡಿದರೆ ತಾನು ರಾಜೀನಾಮೆ ಕೊಡುವದಾಗಿ ದೇಸಾಯಿಯವರು ಬೆದರಿಕೆ ಹಾಕಿದರು. ದಿನಕರ ದೇಸಾಯಿಯವರ ನಿಧನದ ನಂತರ, ಅವರ ನೆನಪಿಗಾಗಿ ಎದೆಯಳತೆಯ ಪುತ್ಥಳಿಯೊಂದನ್ನು ಅಲ್ಲಿ ನಿಲ್ಲಿಸಲಾಗಿದೆ.

ದಿನಕರ ದೇಸಾಯಿಯವರು ಶೋಷಿತರ ಹಾಗು ತಮ್ಮ ಅನೇಕ ಶಿಷ್ಯರ ಹೃದಯಗಳಲ್ಲಿ ನಿರಂತರವಾಗಿ ಬೆಳಗುತ್ತಿದ್ದಾರೆ.

(ಈ ಲೇಖನದ ಬಹ್ವಂಶ ಮಾಹಿತಿಯನ್ನು ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.
                                                                                                                     -ಸುನಾಥ)