ಹಳ್ಳsದ
ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು
ನಗಿ ಇತ್ತs
ಏನೊಂದು
ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತs || ಪಲ್ಲ ||
ನಕ್ಕೊಮ್ಮೆ
ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತs || ಅನುಪಲ್ಲ ||
೧
ಕಣ್ಣಾನ
ಬೆಳಕೇನs ಮಾರ್ಯಾಗಿನ ತುಳುಕೇನ
ತುಟಿಯಾಗಿನ ಝುಳುಕೇನ
ಉಡುಗಿಯ
ಮಾಟೇನs ನಡಿಗಿಯ ಥಾಟೇನ
ಹುಡುಗಿ ಹುಡುಗಾಟೇನ !
೨
ಕಂಡ್ಹಾಂಕಾಣsಲಿಲ್ಲ
ಅಂದ್ಹಾಂಗನ್ನsಲಿಲ್ಲ
ಬಂದ್ಹಾಂಗ ಬರಲಿಲ್ಲಾ
ಚಂದಾನ
ಒಂದೊಂದ ಅಂದೇನಿ ಬೇರೊಂದ
ಅರಿವನs
ಇರಲಿಲ್ಲ !
೩
ಬಡತನದ
ಬಲಿಯಾಗ ಕರುಳಿನ ಕೊಲಿಯಾಗ
ಬಾಳ್ವಿಯ ಒಲಿಮ್ಯಾಗ
ಸುಟ್ಟು
ಹಪ್ಪಳದ್ಹಾಂಗ ಸೊರಗಿದಿ ಸೊಪ್ಪ್ಹಾಂಗ
ಬಂತಂತ ಮುಪ್ಪು ಬ್ಯಾಗ !
೪
ಕಣಕಣ್ಣ
ನೆನಸೇನ ಮನಸಿಲೆ ಬಣಿಸೇನ
ಕಂಡೀತೆಂತೆಣಿಸೇನ
ಬಿಸಿಲುಗುದುರೀ
ಏರಿ ನಿನ ನಗೆಯ ಸವ್ವಾರಿ
ಹೊರಟಿತ್ತು ಕನಸೇನ ?
೫
ಮುಂಗಾರಿ
ಕಣಸನ್ನಿ ಹಾಂಗ ನಿನ ನಗಿ ಚೆನ್ನಿ
ಮುಂಚ್ಯೊಮ್ಮೆ
ಮಿಂಚಿತ್ತ
ನಿನ
ಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿ ದಿಟ್ಟಿಗೆ
ನೋಡ್ತೇನಿ
ನಾನಿತ್ತ !
೬
ನಕ್ಕೊಮ್ಮೆ
ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ
ಎತ್ತೆತ್ತ
ಹಳ್ಳದ
ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು
ನಗಿ ಇತ್ತs
ಏನೊಂದು
ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತ !!
ಎಳೆಹರಯದ
ಸೊಗಸೇ ಸೊಗಸು. ನೂರು ಕನಸುಗಳು ಕಣ್ಣಲ್ಲಿ ತುಂಬಿರುತ್ತವೆ, ಅವುಗಳನ್ನು ಸಾಧಿಸುವ ಛಲ ಮನದಲ್ಲಿ ಪುಟಿಯುತ್ತಿರುತ್ತದೆ.
ಪರಸ್ಪರ ಒಲಿದ ಗಂಡು ಹೆಣ್ಣುಗಳಂತೂ ಸಂಸಾರಸುಖದ ಕಾಮನಬಿಲ್ಲನ್ನು ಹೆಣೆಯುತ್ತಿರುತ್ತಾರೆ. ಆದರೆ ಕನಸೇ
ಬೇರೆ, ವಾಸ್ತವವೇ ಬೇರೆ. ಸುಮಾರು ಎಂಬತ್ತು ವರ್ಷಗಳ ಹಿಂದೆ, ಬೇಂದ್ರೆಯವರು ಕಂಡುಕೊಂಡ ಸತ್ಯವಿದು.
ಈಗಲೂ ಸಹ ಇದು ಸತ್ಯವಾಗಿಯೇ ಇದೆ.
ಬೇಂದ್ರೆಯವರ
ಪ್ರಣಯಕವನಗಳು ಗ್ರಾಮೀಣ ಶೈಲಿಯ ಕವನಗಳಾಗಿರುವುದನ್ನು ಗಮನಿಸಬೇಕು. ಈ ಕವನಕ್ಕೆ ಪ್ರಥಮಪ್ರಣಯದ ಹಿನ್ನೆಲೆ
ಇದ್ದರೂ ಇದು ಪ್ರಣಯಕವನವೇನಲ್ಲ ; ಸಂಸಾರದ ಸಂಕಷ್ಟಗಳಲ್ಲಿ ಸೋತು ಹೋದ ದಂಪತಿಗಳ ನಿಟ್ಟುಸಿರೇ ಇಲ್ಲಿ
ಕವನರೂಪ ತಾಳಿದೆ. ಈ ಕವನವೂ ಸಹ ಗ್ರಾಮೀಣಶೈಲಿಯಲ್ಲಿ ಅಭಿವ್ಯಕ್ತವಾಗಿರುವುದು ಇದರ ವೈಶಿಷ್ಟ್ಯವಾಗಿದೆ.
ಕವನದ ಮೊದಲಲ್ಲಿ ಕವಿಯು ತನ್ನ ಹಾಗು ತನ್ನ ನಲ್ಲೆಯ ಮೊದಲ ಮುಖಾಮುಖಿಯನ್ನು ನೆನಪಿಸಿಕೊಳ್ಳುತ್ತಾನೆ.
ಹೊಸ ಹರೆಯದ ಆ ದಿನಗಳಲ್ಲಿ ಮುಖದಲ್ಲಿ ತುಂಟತನ ತುಳುಕುತ್ತಿರುತ್ತದೆ. ತುಟಿಗಳಲ್ಲಿ ನಗೀನವಿಲು ಕುಣಿಯುತ್ತಿರುತ್ತದೆ.
ಇದು ಕವನದ ಮೊದಲ ನಾಲ್ಕು ಸಾಲುಗಳು ಹೇಳುವ ಸುಖದ ಪಲ್ಲ. ಆದರೆ ಈ ಸುಖವನ್ನು ಅನುಸರಿಸಿ, ಸಂಸಾರದ ಸಂಕಷ್ಟಗಳು
ಪ್ರಾರಂಭವಾಗುತ್ತವೆ. ಆದುದರಿಂದ ಪಲ್ಲದ ನಂತರದ ಎರಡು ಸಾಲುಗಳು ಈ ಕಷ್ಟಕೋಟಲೆಯ ಅನುಪಲ್ಲವಾಗಿವೆ!
ಹಳ್ಳsದ
ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು
ನಗಿ ಇತ್ತs
ಏನೊಂದು
ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತs || ಪಲ್ಲ ||
ನಕ್ಕೊಮ್ಮೆ
ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತs || ಅನುಪಲ್ಲ ||
ಹಳ್ಳಿಯ
ಹುಡುಗಿಯರು ನೀರು ತರಲು ಪಕ್ಕದಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಹೋಗುವುದು ಒಂದು ಕಾಲದ ಅನಿವಾರ್ಯತೆಯಾಗಿತ್ತು.
ಆ ಹುಡುಗಿಯರನ್ನು ನೋಡಲು ಹರೆಯದ ಹುಡುಗರೂ ಸಹ ಈಜುವ ನೆಪದಲ್ಲಿ ಹಳ್ಳಕ್ಕೆ ಹೋಗುತ್ತಿದ್ದರು. ಹೀಗಾಗಿ
ತರುಣ ತರುಣಿಯರ ಕಣ್ಣಾಟ, ಕಳ್ಳಾಟಗಳು ಹಳ್ಳದ ದಂಡೆಯ ಮೇಲೆ ಆಗುತ್ತಿದ್ದವು! ಪರಸ್ಪರನ್ನು ಆಕರ್ಷಿಸಲು
ಹಾಗು ಪ್ರೇಮಸಮ್ಮತಿ ನೀಡಲು ನಗುವೇ ಪ್ರಮುಖ ಸಾಧನವಾಗಿರುತ್ತಿತ್ತು. ಆ ನಗೆಯ ಪರಿಯನ್ನು ಬೇಂದ್ರೆ
ವಿವರವಾಗಿ ಚಿತ್ರಿಸಿದ್ದಾರೆ. ‘ಏನೊಂದು ನಗಿ’ ಎಂದರೆ
ವರ್ಣಿಸಲು ಸಾಧ್ಯವಾಗದ ರಹಸ್ಯಮಯವಾದ ನಗಿ; ‘ಏಸೊಂದು ನಗಿ’ ಎಂದರೆ ವಿವಿಧ ಭಾವಗಳನ್ನು ಸೂಚಿಸುವ,
ಕೊನೆಯಿಲ್ಲದ ನಗೆಗಳು ; ಏರಿಕಿ ನಗಿ ಎಂದರೆ ಉಕ್ಕುವ ಪ್ರಾಯದ ನಗಿ. ಈ ಎಲ್ಲ ನಗೆಗಳು ‘ಬಾಳು ಎಂದರೆ ಚೆಲುವು’ ಎನ್ನುವ ಭಾವವನ್ನು
ಸೂಸುವ ನಗೆಗಳು. ಇವೆಲ್ಲವೂ ನಲ್ಲ, ನಲ್ಲೆಯರು ಸಂಸಾರದಲ್ಲಿ ಕಾಲಿರಿಸುವ ಮೊದಲಿನ ಸಂಗತಿ. ಕವಿಯು ಅದನ್ನು
ಹಿನ್ನೋಟದಲ್ಲಿ ನೆನಪಿಸಿಕೊಂಡು ತನ್ನ ಕೆಳದಿಗೂ ಸಹ ನೆನಪಿಸುತ್ತಿದ್ದಾನೆ.
ಈ
ಕೆಳೆಯರು ಮದುವೆಯ ಬಂಧನಕ್ಕೆ ಒಳಗಾಗಿ ಸಂಸಾರದ ಒಜ್ಜೆಯನ್ನು ಹೊತ್ತುಕೊಂಡ ಬಳಿಕ ಈ ಸೊಗಸಿನ ಭಾವವು
ನೀರ್ಗುಳ್ಳೆಯಂತೆ ಒಡೆಯಲು ಎಷ್ಟು ಹೊತ್ತು ಬೇಕು? ‘ಆ ನಗೆ ಈಗ ಎಲ್ಲಿ ಮಾಯವಾಗಿ ಹೋಗಿದೆ?’ ಎಂದು ಕವಿ
ತನ್ನ ಜೊತೆಗಾತಿಯನ್ನು ಕೇಳುತ್ತಿದ್ದಾನೆ. ಅವಳನ್ನು ‘ಚೆನ್ನಿ’ ಎಂದು ಸಂಬೋಧಿಸುವ ಮೂಲಕ, ‘ಸುಖದ ಕಾಲದಲ್ಲಿ
ನೀನು ನನಗೆ ಚೆನ್ನಿ (=ಪ್ರಿಯಸಖಿ)ಯಾಗಿದ್ದೆ ; ಕಷ್ಟದ ಕಾಲದಲ್ಲಿಯೂ ನೀನು ನನಗೆ ಚೆನ್ನಿಯೇ ಆಗಿರುವೆ’ ಎನ್ನುವುದನ್ನು
affirm ಮಾಡುತ್ತಾನೆ. ‘ನಕ್ಕೊಮ್ಮೆ ಹೇಳು’ ಎನ್ನುವ ಮಾತಿನಲ್ಲಿ ದ್ವಂದ್ವಾರ್ಥವಿದೆ. ‘ನಿನ್ನ ಅಳಲನ್ನು
ಮರೆತು ಒಮ್ಮೆ ನಗು ; ಆಮೂಲಕ ನನಗೂ ಸಾಂತ್ವನವನ್ನು ನೀಡು’ ಎನ್ನುವುದು ಒಂದು ಅರ್ಥವಾದರೆ, ‘ಮೊದಲಿನ
ನಗುವಿನ ದಿನಗಳೆಲ್ಲ ಒಂದು ಭ್ರಮೆಯಾಗಿದ್ದವು’ ಎನ್ನುವ ಪರಿಹಾಸದ ಮತ್ತೊಂದು ಅರ್ಥವೂ ಇಲ್ಲಿದೆ. ‘ಹಳ್ಳದ ದಂಡ್ಯಾಗ’ ಎನ್ನುವಾಗ ಈ ಜೀವನವೇ ಒಂದು ಪ್ರವಾಹ,
ನಾವೆಲ್ಲರೂ ಈ ಪ್ರವಾಹದ ದಂಡೆಯಲ್ಲಿ ನಿಂತಿರುವ ಪಯಣಿಗರು ಎನ್ನುವ ಸಂಕೇತಾರ್ಥವೂ ಇಲ್ಲಿ ಸೂಚಿತವಾಗಿದೆ.
೧
ಕಣ್ಣಾನ
ಬೆಳಕೇನs ಮಾರ್ಯಾಗಿನ ತುಳುಕೇನ
ತುಟಿಯಾಗಿನ ಝುಳುಕೇನ
ಉಡುಗಿಯ
ಮಾಟೇನs ನಡಿಗಿಯ ಥಾಟೇನ
ಹುಡುಗಿ ಹುಡುಗಾಟೇನ !
ಹಳ್ಳದ
ದಂಡೆಯ ಮೇಲೆ ಕಲೆತ ಈ ಹುಡುಗಿಯರ ಹುಡುಗಾಟವು ಅಲ್ಲಿ ನೆರೆದ ಹುಡುಗರನ್ನು ಆಕರ್ಷಿಸುತ್ತದೆ. ತನ್ನ
ನಲ್ಲನನ್ನು ಕಂಡ ನಲ್ಲೆಯ ಕಣ್ಣುಗಳಲ್ಲಿ ಪ್ರೀತಿಯ ಬೆಳಕು ತುಂಬುತ್ತದೆ. ಅದು ತುಳುಕಿ ಮುಖದಲ್ಲಿ ಹರಡಿ,
ತುಟಿಗಳಲ್ಲಿ ಕಾಂತಿಯಾಗುತ್ತದೆ. ಪ್ರತಿಯೊಬ್ಬ ಹುಡುಗನೂ ತನ್ನ ಹುಡುಗಿಯನ್ನು ಕಂಡು ‘ಅಬ್ಬಾ! ಈ ಹುಡುಗಿ!’
ಎನ್ನುತ್ತಾನೆ.
ತಂದೆ
ತಾಯಿಯ ಪೋಷಣೆಯಲ್ಲಿರುವವರೆಗೆ ಈ ಹುಡುಗ ಹುಡುಗಿಯರಿಗೆ ಸಂಸಾರದ ಬಿಸಿ ಇನ್ನೂ ಹತ್ತಿರುವದಿಲ್ಲ. ಬಾಳಿನ
ಸುಖವನ್ನು ಹೀರಬೇಕು ಎನ್ನುವ ಉತ್ಸಾಹ ಮನದಲ್ಲಿ ಪುಟಿಯುತ್ತಿರುತ್ತದೆ. ಈ ಉತ್ಸಾಹವು ಇಲ್ಲದ ವ್ಯಕ್ತಿಗಳ
ಕಣ್ಣುಗಳನ್ನು ನೋಡಿರಿ. ಅವು ಎಷ್ಟು ಕಳಾಹೀನವಾಗಿರುತ್ತವೆ. ಅದರಂತೆ ಉತ್ಸಾಹ ತುಂಬಿದವರ ಕಣ್ಣುಗಳಲ್ಲಿ
ಎಂಥಾ ತೇಜವಿರುತ್ತದೆ ಎನ್ನುವುದನ್ನು ಗಮನಿಸಿರಿ. ಆ ತೇಜವು ಅವರ ಕಣ್ಣುಗಳಿಂದ ಹೊರಸೂಸಿ ಮುಖದಲ್ಲಿಯೂ ಸಹ ತುಳುಕುತ್ತಿರುತ್ತದೆ. ತನ್ನ ಮನದಲ್ಲಿ ಅಡಗಿರುವ
ಅಭಿಲಾಷೆಯನ್ನು ಮಾತಿನಲ್ಲಿ ವ್ಯಕ್ತಪಡಿಸಬಹುದೋ, ಬೇಡವೋ ಎನ್ನುವ ದ್ವಂದ್ವದಿಂದ, ಅವರ ತುಟಿಯಲ್ಲಿ
ಮಿಂಚು ಹೊಯ್ದಾಡುತ್ತಿರುತ್ತದೆ. ಆದರೆ ಮಾತಿನಲ್ಲಿ ಹೇಳಲಾಗದ್ದನ್ನು ಹುಡುಗಿಯರು ತಮ್ಮ ಒನಪು, ವೈಯಾರದಿಂದ
ಹೇಳಬಹುದಲ್ಲವೆ? ಉಡುವುದನ್ನೇ ಆಕರ್ಷಕವಾಗುವಂತೆ ಮಾಡಬಹುದಲ್ಲವೆ? ತಮ್ಮ ತಮ್ಮಲ್ಲಿಯೇ ತುಂಟತನ, ಹುಡುಗಾಟ
ಮಾಡುವ ಮೂಲಕ ಹುಡುಗರಿಗೆ ಸಂದೇಶವನ್ನೂ ನೀಡಬಹುದಲ್ಲವೆ? ಇವೆಲ್ಲವೂ ಪ್ರಾಯಕ್ಕೆ ಕಾಲಿಡುತ್ತಿರುವ ಎಳೆಯರ
ಗುಣಲಕ್ಷಣಗಳೇ ಆಗಿವೆ !
ಬೇಂದ್ರೆಯವರು
‘ನಡಿಗಿಯ ಥಾಟೇನ’ ಎನ್ನುವ ಪದಪುಂಜವನ್ನು ಬಳಸಿದ್ದನ್ನು ಗಮನಿಸಿರಿ. ಈ ‘ಥಾಟ’ ಎನ್ನುವ ಪದವು ಕುದುರೆಯ
ನಡಿಗೆಗಾಗಿ ಬಳಸಲಾಗುವ ಪದವಾಗಿದೆ. ಕಾಠೇವಾಡಿ ಥಾಟು, ಅರಬ್ಬಿ ಥಾಟು ಎನ್ನುವ ಪದಗಳು ಇದರಿಂದಲೇ ಹುಟ್ಟಿಕೊಂಡಿವೆ.
ಥಾಟು ಎನ್ನುವ ಪದದಿಂದಲೇ ಧಾಟಿ ಎನ್ನುವ ಪದವೂ ಹುಟ್ಟಿದೆ.
ಬೇಂದ್ರೆಯವರು
ಈ ನುಡಿಯ ಮೊದಲ ಎರಡು ಸಾಲುಗಳಲ್ಲಿ ಏರುಜವ್ವನದ ಅಂಗಲಕ್ಷಣಗಳನ್ನು ಬಣ್ಣಿಸಿ, ಮುಂದಿನ ಎರಡು ಸಾಲುಗಳಲ್ಲಿ
ಉಡುಗೆ ಹಾಗು ನಡಿಗೆಗಳನ್ನು ಬಣ್ಣಿಸುತ್ತಾರೆ. ಇದು ಅವರ ಕವನಗಳಲ್ಲಿಯ ಕ್ರಮಬದ್ಧತೆಯನ್ನು ಸೂಚಿಸುತ್ತದೆ.
೨
ಕಂಡ್ಹಾಂಕಾಣsಲಿಲ್ಲ
ಅಂದ್ಹಾಂಗನ್ನsಲಿಲ್ಲ
ಬಂದ್ಹಾಂಗ ಬರಲಿಲ್ಲಾ
ಚಂದಾನ
ಒಂದೊಂದ ಅಂದೇನಿ ಬೇರೊಂದ
ಅರಿವನs
ಇರಲಿಲ್ಲ !
ಈ
ಸಂಪೂರ್ಣ ನುಡಿಯೇ ಎರಡರ್ಥಗಳ ಒಂದು ಶ್ಲೇಷೆಯಾಗಿದೆ.
ಕವನದ ಮೊದಲ ನುಡಿಯನ್ನು ಅನುಸರಿಸಿ ಮುಂದುವರೆದಾಗ ಮೊದಲ ಅರ್ಥ ಈ ರೀತಿಯಾಗುತ್ತದೆ:
ಹಳ್ಳದ
ದಂಡೆಯ ಮೇಲಿನ ಬೇಟವು ಇದೀಗ ವಿವಾಹಬಂಧನದಲ್ಲಿ ಕೊನೆಗೊಂಡಿದೆ.
ಸಂಸಾರದ
ಪ್ರಾರಂಭದ ದಿನಗಳಲ್ಲಿ ನಲ್ಲ ನಲ್ಲೆಯರ ಶೃಂಗಾರ ಹಾಗು ಪರಸ್ಪರ ಅನ್ವೇಷಣೆ ನಡೆದೇ ಇರುತ್ತದೆ. ಆದುದರಿಂದ
ಅವರು ಒಮ್ಮೆ ಕಂಡಂತೆ ಮತ್ತೊಮ್ಮೆ ಕಾಣುವುದಿಲ್ಲ. ಅವರ ನುಡಿ ಹಾಗು ನಡೆ ಯಾವಾಗಲೂ ಹೊಸ ಹೊಸ ರೀತಿಯಲ್ಲಿ
ತೋರುತ್ತಿರುತ್ತದೆ. ತನ್ನ ಕೆಳದಿಯ ಚಂದನ್ನ ಹೊಸ ನೋಟಗಳನ್ನು ಕೆಳೆಯನು ಬೆರಗುಬಟ್ಟು ವರ್ಣಿಸುತ್ತಲೇ
ಹೋಗುತ್ತಾನೆ. ಅವನಿಗೆ ಬಾಹ್ಯಪ್ರಪಂಚದ ಅರಿವೇ ಇರುವುದಿಲ್ಲ.
ಆದರೆ
ಮೂರನೆಯ ನುಡಿಯಲ್ಲಿಯ ಖೇದವನ್ನು ಗಮನಿಸಿದರೆ, ಎರಡನೆಯ ನುಡಿಯನ್ನು ಅದರ ಮುನ್-ನುಡಿಯಂದು ಭಾವಿಸಬಹುದು.
ಆವಾಗ ಅದನ್ನು ಹೀಗೆ ಅರ್ಥೈಸಬಹುದು :
ಹಳ್ಳದ
ದಂಡೆಯಲ್ಲಿ ಮೊದಲ ಮಿಲನದಲ್ಲಿ ಕಂಡ ನೋಟ ಈಗ ಬದಲಾಗಿದೆ. ಮೊದಲಿನ ನಡೆ, ನುಡಿ ಈಗ ಉಳಿದಿಲ್ಲ. ಆದರೆ
ನಲ್ಲನಿಗೆ ಇದರ ಅರಿವೇ ಆಗಿಲ್ಲ. ಆತ ಹಳೆಯ ಸೊಗಸಿನ ಭ್ರಮೆಯಲ್ಲಿಯೇ ಇನ್ನೂ ಉಳಿದುಕೊಂಡಿದ್ದಾನೆ. ಆದರೆ
ಆ ಭ್ರಮೆ ಹರಿದು, ಸಂಸಾರದಲ್ಲಿ ಬೆಂದು, ಬಸವಳಿದ ದಂಪತಿಗಳ ಚಿತ್ರವನ್ನು ಮೂರನೆಯ ನುಡಿಯು ತೀಕ್ಷ್ಣವಾಗಿ
ಹಾಗು ನೇರವಾಗಿ ಕೊಡುತ್ತದೆ:
೩
ಬಡತನದ
ಬಲಿಯಾಗ ಕರುಳಿನ ಕೊಲಿಯಾಗ
ಬಾಳ್ವಿಯ ಒಲಿಮ್ಯಾಗ
ಸುಟ್ಟು
ಹಪ್ಪಳದ್ಹಾಂಗ ಸೊರಗಿದಿ ಸೊಪ್ಪ್ಹಾಂಗ
ಬಂತಂತ ಮುಪ್ಪು ಬ್ಯಾಗ !
ಬೇಂದ್ರೆಯವರ
ನಿರುದ್ಯೋಗ ಪರ್ವ ದೊಡ್ಡದು. ಸರಕಾರದ ಅವಕೃಪೆಗೆ ಒಳಗಾಗಿ ಇವರು ಕೆಲಕಾಲ ನಜರಬಂದಿಯಲ್ಲಿದ್ದರು. ಏಳು
ವರ್ಷಗಳವರೆಗೆ ಯಾವ ಸಂಸ್ಥೆಯೂ ಇವರಿಗೆ ಉದ್ಯೋಗ ನೀಡಬಾರದೆಂದು ಸರಕಾರದ ಆದೇಶವಿತ್ತು. ಹೆಂಡತಿ-ಮಕ್ಕಳು
ಹಾಗು ಬೇಂದ್ರೆಯವರು ಪರಸ್ಪರ ದೂರವಾಗಿ ಪರಾಶ್ರಯದಲ್ಲಿ ಬದುಕಬೇಕಾಯಿತು.
ಬಡತನದ
ಬಲೆಯಲ್ಲಿ ಸಿಲುಕಿದ ಇವರಿಗೆ, ಆ ಬಲೆಯಿಂದ ಹೊರಬರುವ ಉಪಾಯವೇ ತೋಚದಂತಾಯಿತು. ತಮ್ಮ ನೋವನ್ನು ಪರಸ್ಪರ
ಹಂಚಿಕೊಳ್ಳುವ ಅವಕಾಶವೂ ಇವರಿಗಿಲ್ಲ. ಅದನ್ನು ‘ಕರುಳಿನ ಕೊಲೆ’ ಎಂದು ಬೇಂದ್ರೆ ಬಣ್ಣಿಸುತ್ತಾರೆ.
ಬಾಳೆಂಬುದು ದಿನದಿನವೂ ಭಗಭಗಿಸುವ ಉರಿಯ ಒಲೆಯಾಗಿದೆ. ಇಂತಹ ಬದುಕಿನಲ್ಲಿ ತಮ್ಮ ಹೆಂಡತಿಯು ಸುಟ್ಟ
ಹಪ್ಪಳದಂತೆ ಆಗಿದ್ದಾಳೆ, ಬಾಡಿ ಹೋದ ಸೊಪ್ಪಿನಂತೆ ಸೊರಗಿ ಹೋಗಿದ್ದಾಳೆ ಎಂದು ಬೇಂದ್ರೆಯವರು ವ್ಯಥೆ
ಪಡುತ್ತಾರೆ. ಈ ಎರಡೂ ಉಪಮೆಗಳು ಊಟದ ಪದಾರ್ಥಗಳು ಆಗಿರುವದನ್ನು ಗಮನಿಸಬೇಕು. (ಬೇಂದ್ರೆಯವರ ಮತ್ತೊಂದು
ಕವನದಲ್ಲಿ ‘ಉಪ್ಪಿಗೂ ಹೊರತಾದೆವು ’ ಎನ್ನುವ ಮಾತು
ಬರುತ್ತದೆ.) ಇಂತಹ ಪರಿಸ್ಥಿತಿಯಲ್ಲಿ ಮೊದಲಿನ ಹುಡುಗಾಟದ ಹುಡುಗಿಯು, ತಮ್ಮ ಚೆನ್ನಿಯು ಎಷ್ಟು ಬೇಗನೇ
ಮುದುಕಿಯಾಗಿಬಿಟ್ಟಳಲ್ಲ , ಪ್ರಾಯದಲ್ಲಿಯೇ ಅಕಾಲವಾರ್ಧಕ್ಯವನ್ನು ಹೊಂದಿದಳಲ್ಲ ಎಂದು ಬೇಂದ್ರೆಯವರು
ಹಲಬುತ್ತಾರೆ.
೪
ಕಣಕಣ್ಣ
ನೆನಸೇನ ಮನಸಿಲೆ ಬಣಿಸೇನ
ಕಂಡೀತೆಂತೆಣಿಸೇನ
ಬಿಸಿಲುಗುದುರೀ
ಏರಿ ನಿನ ನಗೆಯ ಸವ್ವಾರಿ
ಹೊರಟಿತ್ತು ಕನಸೇನ ?
ಕಣ್ಣುಗಳನ್ನು
ಅರೆಮುಚ್ಚಿಕೊಂಡು ಬೇಂದ್ರೆಯವರು ತಮ್ಮ ಹಳೆಯ ನೆನಪುಗಳಿಗೆ ಜಾರುತ್ತಾರೆ. ಸೋತು ಹೋದ ತಮ್ಮ ಜೋಡಿಯನ್ನು
ಮನಸ್ಸಿನಲ್ಲಿಯೇ ಮತ್ತೊಮ್ಮೆ ಮೊದಲಿನಿಂದ ನೋಡುತ್ತಾರೆ. ಹಳೆಯ ಕನಸು ಮತ್ತೊಮ್ಮೆ ಕಂಡೀತೆ ಎಂದು ಲೆಕ್ಕಿಸುತ್ತಾರೆ.
ತನ್ನ ಕೆಳದಿ ನೆನಸಿದ ಸುಖವು ಬರೀ ಕನಸೆ ಎಂದು ವಿಭ್ರಮಿಸುತ್ತಾರೆ.
‘ಬಿಸಿಲುಗುದುರೆ’
ಎಂದರೆ mirage ಅಥವಾ ಮಾಯಾಮೃಗ. ಬೇಸಿಗೆಯ ಕಾಲದಲ್ಲಿ ಅನತಿ ದೂರದಲ್ಲಿ ನೀರು ಹರಿಯುತ್ತಿರುವಂತೆ ಭಾಸವಾಗುತ್ತದೆ.
ಎಷ್ಟೇ ನಡೆದರೂ, ಆ ಮಾಯಾದೃಶ್ಯ ಮತ್ತೆ ಸ್ವಲ್ಪ ಮುಂದಕ್ಕೆ ಕಾಣುತ್ತ ಹೋಗುತ್ತದೆ. ಈ ದೃಶ್ಯಕ್ಕೆ ಬಿಸಿಲುಗುದುರೆ
ಎನ್ನುತ್ತಾರೆ. ಸುಖ ಸಿಕ್ಕೀತು ಎನ್ನುವುದು ಸಹ ಇಂತಹ ಬಿಸಿಲುಗುದುರೆಯೇ ಆಗಿದೆ. ತನ್ನ ಕೆಳದಿಯ ಮೊದಲಿನ
ಹುಡುಗಾಟದ ನಗೆ ಎಲ್ಲವೂ ಇಂತಹ ಬಿಸಿಲುಗುದುರೆಯನ್ನು ಏರಿದ ಸವಾರಿಯೇ ಅಲ್ಲವೆ? ಅಂತಹ ಭ್ರಮಾತ್ಮಕ ಸುಖಕ್ಕೂ
ಸಹ ನಾವು ಎರವಾಗಿ ಬಿಟ್ಟೆವೆ? ಅದೂ ಸಹ ಇದೀಗ ಕನಸಾಗಿ ಬಿಟ್ಟಿದೆಯೆ ಎಂದು ಬೇಂದ್ರೆಯವರು ತಮ್ಮ ಕೆಳದಿಯನ್ನು
ಕೇಳುತ್ತಿದ್ದಾರೆ.
[‘ಬಿಸಿಲುಗುದುರೀ ಏರಿ ನಿನ ನಗೆಯ ಸವ್ವಾರಿ, ಹೊರಟಿತ್ತು
ಕನಸೇನ ?’ ಎನ್ನುವ ರೂಪಕವು ಆ ಕಾಲದ ಅನೇಕ ತರುಣರ ಬಾಳಿಗೆ ಅನ್ವಯಿಸುವ ವಸ್ತುಸ್ಥಿತಿಯಾಗಿತ್ತು.
ಕನ್ನಡದ ಖ್ಯಾತ ನಾಟಕಕಾರರಾದ ಶ್ರೀರಂಗರೂ ಸಹ ಇಂತಹ ಅಗ್ನಿಪರೀಕ್ಷೆಯಲ್ಲಿ ಬದುಕಿದವರೇ. ತಮ್ಮ ಹೆಂಡತಿಗೆ
ಔಷಧಿ ತರಲು ದುಡ್ಡು ಇಲ್ಲದ ಶ್ರೀರಂಗರು ಮತ್ತೊಬ್ಬ ಸಾಹಿತಿ ದ.ಬಾ.ಕುಲಕರ್ಣಿಯವರ ಹತ್ತಿರ ಒಂದು ರೂಪಾಯಿ
ಸಾಲ ಕೇಳಿದ್ದರು. ಒಬ್ಬ ಭಿಕ್ಷುಕನು ಮತ್ತೊಬ್ಬ ಭಿಕ್ಷುಕನ ಬಳಿ ಬೇಡಿದಂತೆ! ದ.ಬಾ. ರ ಜೇಬೂ ಬರಿದೇ.
ಆಗ ದ.ಬಾ.ರವರು ತಮ್ಮ ಗುರುತಿನ ಔಷಧಿಯ ಅಂಗಡಿಯಿಂದ ಶ್ರೀರಂಗರಿಗೆ ಔಷಧಿಯನ್ನು ಉದ್ದರಿ ಕೊಡಿಸಿದರು.]
೫
ಮುಂಗಾರಿ
ಕಣಸನ್ನಿ ಹಾಂಗ ನಿನ ನಗಿ ಚೆನ್ನಿ
ಮುಂಚ್ಯೊಮ್ಮೆ
ಮಿಂಚಿತ್ತ
ನಿನ
ಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿ ದಿಟ್ಟಿಗೆ
ನೋಡ್ತೇನಿ
ನಾನಿತ್ತ !
ಮುಂಗಾರಿ
ಮಳೆ ಪ್ರಾರಂಭವಾಗುವ ಪೂರ್ವದಲ್ಲಿ ಮೋಡಗಳು ಮಿಂಚಿನ ಮೂಲಕ ಕಣ್ಣುಸನ್ನಿಯನ್ನು ಅಂದರೆ ಮಳೆ ಪ್ರಾರಂಭವಾಗುವ
ಪೂರ್ವಸೂಚನೆಯನ್ನು ನೀಡುತ್ತವೆ. ಆ ಬಳಿಕ ಮಳೆ ಧೋಧೋ ಎಂದು ಪ್ರಾರಂಭವಾಗುತ್ತದೆ. ಸಂಸಾರ ಪ್ರಾರಂಭವಾದ
ತರುಣದಲ್ಲಿ ಬೇಂದ್ರೆಯವರ ಕೆಳದಿಯ ಮುಖದಲ್ಲಿ ಒಮ್ಮೆ ನಗು ಮಿಂಚಿತ್ತು. ಆ ನಗುವನ್ನು ಮುಂಗಾರಿನ ಮಿಂಚಿಗೆ
ಬೇಂದ್ರೆಯವರು ಹೋಲಿಸುತ್ತಿದ್ದಾರೆ. ಕಷ್ಟಗಳ ಕಾರ್ಮೋಡಗಳು ಕವಿಯುವುದು ನಿಶ್ಚಿತ. ತಮ್ಮ ಕೆಳದಿಯ ಕಣ್ಣುಗಳಿಂದ
ಧಾರೆ ಸುರಿಯುವುದು ನಿಶ್ಚಿತ ಎಂದು ಈ ನಗೆಮಿಂಚು ಸೂಚಿಸುತ್ತಿದೆ. ಈ ಮಿಂಚಿಗೆ ಮರುಳಾಗಬಹುದೆ? ಇದು
ತನ್ನ ನೋವನ್ನು ಮುಚ್ಚಿಡಲು ಕೆಳದಿ ಉಕ್ಕಿಸುತ್ತಿರುವ ಸುಳ್ಳು ನಗೆಯೆ ಅಥವಾ ನೈಜ ನಗೆಯೆ ಎನ್ನುವುದನ್ನು
ಅರಿಯಲು ಬೇಂದ್ರೆಯವರು ತನ್ನ ಕೆಳದಿಯ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅವಳು ಹೇಳದೆ ಇರುವ
ಸತ್ಯ ಏನು ಎಂದು ಅರಿಯಲು ಪ್ರಯತ್ನಿಸುತ್ತಾರೆ.
೬
ನಕ್ಕೊಮ್ಮೆ
ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ
ಎತ್ತೆತ್ತ
ಹಳ್ಳದ
ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು
ನಗಿ ಇತ್ತs
ಏನೊಂದು
ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತ !!
ಬೇಂದ್ರೆಯವರಿಗೂ
ಗೊತ್ತು, ಅವರ ಕೆಳದಿಗೂ ಗೊತ್ತು: ಆ ಏರಿಕೆಯ ನಗಿ ಈಗ ಎಲ್ಲಿ ಹೋಗಿದೆ ಎನ್ನುವುದು! ಆದರೆ ಒಂದು ಕ್ಷಣವಾದರೂ
ಸಹ ಸಂಸಾರದ ಸಂಕಟಗಳನ್ನೆಲ್ಲ ಮರೆತು ಆ ಹಳ್ಳದ ದಂಡೆಯ ಮೊದಲ ಮುಖಾಮುಖಿಯನ್ನು, ಆ ಹುಡುಗಾಟದ ಸುಖದ
ನೆನಪನ್ನು ಮಾಡಿಕೊಳ್ಳೋಣ ಎನ್ನುತ್ತಿದ್ದಾರೆ ಬೇಂದ್ರೆಯವರು.
ಹಳೆಯ ಸುಖದ ನೆನಪು ಸದ್ಯದ ಸಂಕಟವನ್ನು
ಮರೆಸಬಹುದು !
‘ಬಿಸಿಲುಗುದುರೆ’
ಕವನವು ಬೇಂದ್ರೆಯವರ ‘ಗರಿ’ ಕವನಸಂಕಲನದಲ್ಲಿ ಅಡಕವಾಗಿದೆ.