ಅನೇಕ ಶತಮಾನಗಳಿಂದ ಭಾರತೀಯ ಸಮಾಜದಲ್ಲಿ ಊಳಿಗಮಾನ್ಯ ಕೃಷಿ ಸಂಸ್ಕೃತಿಯು (feudal agricultural society) ಭದ್ರವಾಗಿ ಸ್ಥಾಪಿತವಾಗಿತ್ತು. ಈ ಸಂಸ್ಕೃತಿಯಲ್ಲಿ ಜಮೀನುದಾರರ ದಬ್ಬಾಳಿಕೆ ಹಾಗು ಅಸಹಾಯಕರ ಶೋಷಣೆ ನಡದೇ ಇದ್ದವು. ಈ ಕ್ರೌರ್ಯ ಹಾಗು ಮೂಢನಂಬಿಕೆಗಳ ಹೊರತಾಗಿಯೂ, ನಮ್ಮ ಸಾಂಪ್ರದಾಯಕ ಗ್ರಾಮೀಣ ಸಂಸ್ಕೃತಿಯಲ್ಲಿ ಅನೇಕ ಒಳ್ಳೆಯ ಅಂಶಗಳೂ ಇದ್ದವು. ಗ್ರಾಮೀಣ ಜನರಲ್ಲಿದ್ದ ಮಾನವೀಯ ಸಂಬಂಧಗಳು, ನೈತಿಕ ಶ್ರದ್ಧೆ, ದೈವನಿಷ್ಠೆ ಹಾಗು ಪರಿಸರದ ಜೊತೆಗೆ ಅವರಿಗಿದ್ದ ಅಭಿನ್ನತೆ (symbiosis) ಇವು ಈ ಸಂಸ್ಕೃತಿಯ ಒಳ್ಳೆಯ ಅಂಶಗಳು.
ಔದ್ಯೋಗೀಕರಣದ ಫಲವಾಗಿ ಇದೀಗ ಭಾರತದಲ್ಲಿ ಹಬ್ಬಿಕೊಂಡ ಆಧುನಿಕ, ವ್ಯಾಪಾರೀ ನಾಗರಿಕತೆಯು ಗ್ರಾಮೀಣರ ಶೋಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ; ಜೊತೆಗೇ ಗ್ರಾಮೀಣ ಸಂಸ್ಕೃತಿಯ ಉತ್ತಮ ಅಂಶಗಳನ್ನು ನಾಶ ಮಾಡುತ್ತಲಿದೆ. ಅಮರೇಶ ನುಗಡೋಣಿಯವರ ‘ಸವಾರಿ’ ಹಾಗು‘ಮುಸ್ಸಂಜೆಯ ಕಥಾನಕಗಳು’ ಸಂಕಲನಗಳಲ್ಲಿ ಬರುವ ಕತೆಗಳಲ್ಲಿ ಈ ಸಂಸ್ಕೃತಿವಿನಾಶದ ವಿಧಾನ ಹಾಗು ಇದರ ಪರಿಣಾಮಗಳು ಸಮರ್ಥವಾಗಿ ಚಿತ್ರಿಸಲ್ಪಟ್ಟಿವೆ.
ನಗರಗಳಲ್ಲಿ ಹಬ್ಬಿರುವ ನಯವಂಚಕ, ವ್ಯಾಪಾರೀ ನಾಗರಿಕತೆಯ ಹಾಗೂ ಅದಕ್ಕೆ ನಿಧಾನವಾಗಿ ಬಲಿಯಾದ ಗ್ರಾಮೀಣ ಮುಗ್ಧರ ವರ್ಣನೆ “ ದೈವಕ್ಕೆ ಮೊದಲು ಶರಣೆಂಬೆವು” ಕತೆಯಲ್ಲಿ ಬರುತ್ತದೆ.
ಮಾದಪ್ಪ ಹಾಗು ಪಾತವ್ವ ಇವರು ಕೃಷ್ಣಾ ನದಿಯ ನಡುಗಡ್ಡೆಯ ಊರೊಂದರಲ್ಲಿ ಇರುವ ಮುದಿ ದಂಪತಿಗಳು. `ಪಾತಪ್ಪ ದೇವರ' ಕತೆ ಹೇಳುವದೇ ಇವರ ಪಾರಂಪಾರಿಕ ಕಾಯಕ. ಪಾತಪ್ಪ ದೇವರ ಜಾತ್ರೆ ಆದಾಗ ಹಾಗು ಸುತ್ತು ಮುತ್ತಲಿನ ಹಳ್ಳಿಗಳಲ್ಲಿ ಇರುವ ಮನೆಗಳಲ್ಲಿ ಯಾವುದೇ ಒಂದು ಶುಭಕಾರ್ಯ ಜರಗುವ ಮೊದಲು ಈ ದಂಪತಿಗಳಿಂದ ಪಾತಪ್ಪ ದೇವರ ಕತೆ ಹೇಳಿಸುವದು ಅಲ್ಲಿಯ ವಾಡಿಕೆ. ಆ ಊರಿನ ಹುಡುಗನೊಬ್ಬ ಪಟ್ಟಣದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾನೆ. ಆತನ ವಿಷಯ ಜಾನಪದ ಅಧ್ಯಯನ. ಈ ದಂಪತಿಗಳನ್ನು ಪುಸಲಾಯಿಸಿ, ಇವರಿಂದ ಪಾತಪ್ಪ ದೇವರ ಹಾಡನ್ನು ಹಾಡಿಸಿ, ಟೇಪ್ ಮಾಡಿಕೊಂಡು ಹೋದ ಆ ಹುಡುಗ ತನ್ನ ಪದವಿಗಾಗಿ ಅದನ್ನು ಬಳಸಿಕೊಳ್ಳುತ್ತಾನೆ. ಆ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು ಅದನ್ನೇ ತಮ್ಮ ಸಂಶೋಧನೆ ಎಂದು ತೋರಿಸಿಕೊಳ್ಳುತ್ತಾರೆ. ರೇಡಿಯೋ ಹಾಗು ಟೀವಿಗಳಲ್ಲಿ ಇವರ ಸಂದರ್ಶನಗಳಾಗುತ್ತವೆ. ಇವರ ಹಾಡಿನ ಕ್ಯಾಸೆಟ್ ಹೊರಬರುತ್ತದೆ. ಇವರನ್ನು ಬಳಸಿಕೊಂಡವರು ಸಾಕಷ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಆದರೆ ಅದಾವದೂ ಇವರ ಅರಿವಿಗೇ ಬಂದಿಲ್ಲ. ಅವರು ಬಿಸಾಕಿದ ಸ್ವಲ್ಪ ಹಣವೇ ಮಾದಪ್ಪನಲ್ಲಿ ನವಿರಾದ ಧಿಮಾಕನ್ನು ಹುಟ್ಟಿಸಲು ಕಾರಣವಾಗಿ ಬಿಡುತ್ತದೆ. ತಮ್ಮ ಮನೆಗಳಲ್ಲಿಯ ಶುಭಕಾರ್ಯಗಳಿಗಾಗಿ ಹಾಡಲೆಂದು ಹಳ್ಳಿಗರು ಇವರನ್ನು ಆಹ್ವಾನಿಸಿದಾಗ, ಇವರು ತಮ್ಮ ಪಟ್ಟಣದಲ್ಲಿಯ ಕಾರ್ಯಕ್ರಮಗಳಿಂದಾಗಿ ಹಳ್ಳಿಗರ ಮನೆಗಳಿಗೆ ಹೋಗಲಾರದಂತಹ ಪ್ರಸಂಗಗಳು ನಡೆಯುತ್ತವೆ. ಬೇಸತ್ತ ಹಳ್ಳಿಗರು ಈ ದಂಪತಿಗಳನ್ನು ಜಾತ್ರೆಯಿಂದ ದೂರವಿಡುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಸಲದ ಪಾತಪ್ಪ ದೇವರ ಜಾತ್ರೆಗೆ ಈ ದಂಪತಿಗಳ ಬದಲಾಗಿ, ಹಾಡು ಬಲ್ಲ ಮತ್ತೊಬ್ಬನನ್ನು ಕರೆಯುತ್ತಾರೆ. ಮಾದಪ್ಪ ಹಾಗು ಪಾತಮ್ಮ ಇವರಿಗೆ ಎಲ್ಲಿಯೂ ನೆಲೆ ಇಲ್ಲದಂತಾಗುತ್ತದೆ. ತಮ್ಮ ತಪ್ಪನ್ನು ಅರಿತ ಈ ದಂಪತಿಗಳು ಸಮಸ್ತ ಹಳ್ಳಿಗಳ ದೈವದವರಿಗೆ ದೈನ್ಯದಿಂದ ಮೊರೆ ಇಡುತ್ತಾರೆ. ಆದರೆ ಅದಕ್ಕೆ ದೈವದವರು ಒಪ್ಪುವದಿಲ್ಲ. ಕೊನೆಗೂ ಈ ದಂಪತಿಗಳು ತಮ್ಮ ತಪ್ಪಿಗೆ ಪಶ್ಚಾತ್ತಾಪರೂಪದಲ್ಲಿ ದೇವರ ಹಾಡು ಹೇಳಲು ಅಲ್ಲಿಗೆ ಬರದೆ ಬಿಡುವದಿಲ್ಲ. ನಗರ ಸಂಸ್ಕೃತಿಯ ವಿಷವು ಈ ಮುಗ್ದ ಗ್ರಾಮೀಣರನ್ನು ಬಲಿ ತೆಗೆದುಕೊಂಡ ಬಗೆಯನ್ನು ನುಗಡೋಣಿಯವರು ಈ ಕತೆಯಲ್ಲಿ ಚಿತ್ರಿಸಿದ್ದಾರೆ.
…………………………………………………….
ಜಮೀನುದಾರಿಕೆಯ ವ್ಯವಸ್ಥೆಯಲ್ಲಿ ಶೋಷಣೆಯಿದ್ದರೂ ಸಹ, ಜಮೀನುದಾರನಿಗೆ ಹಾಗೂ ಆತನ ಆಳುಗಳಿಗೆ ವೈಯಕ್ತಿಕ ಹಾಗೂ ಮುಖಾಮುಖಿ ಸಂಬಂಧವಿರುತ್ತಿತ್ತು. ಜಮೀನುದಾರಿಕೆಯ ಬದಲಾಗಿ ಈಗ ಗಣಿಗಾರಿಕೆ ಬಂದಿದೆ. ಜಮೀನುದಾರಿಕೆಗಿಂತಲೂ ಹೆಚ್ಚು ಕ್ರೂರವಾದ ವ್ಯವಸ್ಥೆಯಿದು. ಇಲ್ಲಿ ಶೋಷಕನ ಅಪಾರವಾದ ಧನಬಲದ ಎದುರಿಗೆ ಶೋಷಿತನು ಮುಖವಿಲ್ಲದ ಗುಲಾಮ. ಶೋಷಕರ ಇಂತಹ ಬಕಾಸುರ ರೂಪವನ್ನು ತೋರಿಸುವ ಕತೆ : “ಒಡಲುಗೊಂಡವರು”.
ಹಳ್ಳಿಯೊಂದರಲ್ಲಿ ಘನತೆಯಿಂದ ಬಾಳಿದ ಕೆಳವರ್ಗದ ಕುಟುಂಬವೊಂದರ ಯಜಮಾನ ತನ್ನ ಒಬ್ಬ ಮಗಳನ್ನು ದೇವರಿಗೆ ಬಿಟ್ಟಿದ್ದಾನೆ. ಅವನ ಕಾಲ ಈಗ ಮುಗಿದಿದೆ. ಹಳ್ಳಿಯ ದುಡಿಮೆಯಿಂದ ಹೊಟ್ಟೆ ತುಂಬದ ಕಾರಣದಿಂದ ಈತನ ಒಬ್ಬ ಮಗ ಹಾಗು ಸೊಸೆ ದುಡಿಯಲು ಗೋವಾಕ್ಕೆ ಹೋಗಿದ್ದಾರೆ. ಈತನ ನಿಧನದ ನಂತರ ಈತನ ಮುದುಕಿ ಹೆಂಡತಿ ತನ್ನ ಕೊನೆಯ ಮಗ ಹರಿಶ್ಚಂದ್ರನ ಜೊತೆಗೆ ಇದ್ದಾಳೆ. ಮಗಳ ಮಗಳಾದ ರೇಣುಕಾಳನ್ನು ಈತ ಮದುವೆ ಮಾಡಿಕೊಳ್ಳಲಿ ಎನ್ನುವದು ಮುದುಕಿಯ ಹಾಗು ಹಿರಿಸೊಸೆಯ ಆಸೆ. ಹರಿಶ್ಚಂದ್ರನಾದರೋ ಗಣಿದಣಿಗಳ ವಿರುದ್ಧದ ಚಳುವಳಿಯಲ್ಲಿ ಭಾಗವಹಿಸುತ್ತ ಯೂನಿಯನ್ ನಾಯಕರೊಡನೆ ತಿರುಗುತ್ತಿರುತ್ತಾನೆ. ಇತ್ತ ಮೊಮ್ಮಗಳು ರೇಣುಕಾ ಸಹ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ನಗರದಲ್ಲಿ ನೌಕರಿಯನ್ನು ಮಾಡುತ್ತಿರುತ್ತಾಳೆ.
ಸಾಯಲಾಗಿದ್ದ ಮುದುಕಿಗೆ ತನ್ನ ಗಂಡನ ಸಮಾಧಿಯ ಪಕ್ಕದಲ್ಲೇ ಮಣ್ಣಾಗುವ ಆಸೆ. ಆದರೆ, ಹರಿಶ್ಚಂದ್ರ ತನ್ನ ಬಂಧುಗಳಾರಿಗೂ ತಿಳಿಯದಂತೆ ಆ ಜಮೀನನ್ನು ಗಣಿಗಾರಿಕೆಗೆ ಮಾರಿಕೊಂಡು ದುಡ್ಡು ಎತ್ತಿ ಹಾಕಿ ಬಿಟ್ಟಿದ್ದಾನೆ. (ಅಹಾ, ಹರಿಶ್ಚಂದ್ರ!) ತನ್ನ ಅವ್ವ ಸತ್ತರೆ ಮಣ್ಣು ಮಾಡಲು ಜಾಗವಿಲ್ಲದ್ದಕ್ಕಾಗಿ ಈತ ಗಣಿಧಣಿಯ ಕಾಲು ಕಟ್ಟಿಕೊಳ್ಳುವದು ಅನಿವಾರ್ಯವಾಗಿದೆ. ಬಡತನದಿಂದಾಗಿ ವ್ಯವಸ್ಥೆಯ ವಿರುದ್ದ ಹೋರಾಡಲಾಗದೆ, ಈತ ಬದುಕಿನಲ್ಲಿ ‘ರಾಜೀ’ ಮಾಡಿಕೊಳ್ಳುತ್ತಲೇ ಇದ್ದಾನೆ.
ಇತ್ತ ರೇಣುಕಾ ಸಹ ತನ್ನ ನೌಕರಿಗಾಗಿ ‘ಸಹಾಯದಾತರ’ ಜೊತೆಗೆ ರಾಜಿ ಮಾಡಿಕೊಂಡಾಗಿದೆ. ಇಂಥವಳೊಡನೆ ಮದುವೆಯಾಗಲು ಹರಿಶ್ಚಂದ್ರ ಸಿದ್ಧನಿಲ್ಲ. ಅವನಂತಹ ವಂಚಕನೊಡನೆ ಮದುವೆಯಾಗಲು ಅವಳೂ ಸಿದ್ಧಳಿಲ್ಲ.
ಧನಬಲದ ಎದುರು ಬಡವರ ನೈತಿಕತೆ, ಹೋರಾಟ ಹೇಗೆ ಕರಗಿ ಹೋಗುತ್ತದೆ, ಅವರ ಕುಟುಂಬಗಳು ಹೇಗೆ ಒಡೆದು ನುಚ್ಚುನೂರಾಗುತ್ತವೆ ಎನ್ನುವ ಚಿತ್ರಣ ಈ ಕತೆಯಲ್ಲಿದೆ.
..........................................................................................
ಗ್ರಾಮಸಂಸ್ಕೃತಿಯ ವಿನಾಶವು ಅಮರೇಶ ನುಗಡೋಣಿಯವರ ಕತೆಗಳ motif ಎನ್ನಬಹುದು. ಬಳ್ಳಾರಿಯಲ್ಲಿ ನಡೆದಿರುವ ಗಣಿಗಾರಿಕೆಯಿಂದಾಗಿ ಅಲ್ಲಿಯ ಹಳ್ಳಿಗರ ಕೌಟಂಬಿಕ ಜೀವನ ಹೇಗೆ ಛಿದ್ರವಾಗುತ್ತಿದೆ ಹಾಗು ಪರಂಪರಾಗತ ಗ್ರಾಮೀಣ ಸಂಸ್ಕೃತಿ ಹೇಗೆ ಹುಳಹತ್ತಿ ಹೋಗುತ್ತಿದೆ ಎನ್ನುವ ಚಿತ್ರಣವನ್ನು“ದಾಳಿ ನಡೆದಾವೋ ಅಣ್ಣಾ” ಕತೆಯಲ್ಲಿ ಕಾಣಬಹುದು :
ಚಿಕ್ಕ ಹಳ್ಳಿಯೊಂದರಲ್ಲಿ ಒಕ್ಕಲುತನ ಮಾಡುತ್ತ ಬದುಕು ಸಾಗಿಸುತ್ತಿರುವ ರೈತ ಮಲ್ಲಯ್ಯನಿಗೆ ತಾನು, ತನ್ನ ಪರಿಸರ ಹಾಗೂ ತನ್ನ ದೈವ ಮೈಲಾರಲಿಂಗ ಇವರಲ್ಲಿ ಭಿನ್ನತೆಯೇ ಇಲ್ಲ. ಈತನ ಎರಡು ಎತ್ತುಗಳಲ್ಲಿ ಒಂದರ ಹೆಸರು ಮಲ್ಲಯ್ಯ ; ಮತ್ತೊಂದರ ಹೆಸರು ಮೈಲಾರ.ಈತನ ತುಂಡು ಹೊಲ ಹಾಗೂ ಗುಡಿಸಿಲಿನ ನಡುವಿನ ಶಿವನಕೊಳ್ಳದಲ್ಲಿ ಒಂದು ಹಳ್ಳ ಹರಿದಿದೆ. ಒಮ್ಮೆ ಹಳ್ಳ ದಾಟುವಾಗ ಏಕಾಏಕಿ ಪ್ರವಾಹ ಬಂದಾಗ ಈತ ಮೈಲಾರನ ಬಾಲ ಹಿಡಿದುಕೊಂಡೇ ಹಳ್ಳ ದಾಟಿದ್ದಾನೆ. ಆದರೆ ಮತ್ತೊಂದು ಎತ್ತು ಮಲ್ಲಯ್ಯ ಆ ದುರ್ಘಟನೆಯಲ್ಲಿ ಜೀವ ನೀಗಿತು. ಅಂದಿನಿಂದ ಮಲ್ಲಯ್ಯ ಗಳೇ ಹೂಡಲಿಲ್ಲ.
ಮಲ್ಲಯ್ಯನ ಮಗಳು ಹುಲುಗಮ್ಮ ತನ್ನ ಗಂಡ ಹಾಗೂ ಮಕ್ಕಳೊಡನೆ ತಾಲೂಕು ಸ್ಥಾನದಲ್ಲಿದ್ದಾಳೆ. ಅವಳ ಗಂಡ ಕಾರಖಾನೆಯಲ್ಲಿ ದುಡಿಯುತ್ತಿದ್ದಾನೆ. ಕೆಲಸ ಮಾಡದ ಮಗ ಮೈಲಾರನದೇ ಚಿಂತೆ ಮಲ್ಲಯ್ಯನಿಗೆ. ಗಣಿದಣಿಗಳಿಗೆ ಹೊಲ ಮಾರುವಂತೆ ಮಲ್ಲಯ್ಯ ತನ್ನ ಅಪ್ಪ ಮೈಲಾರನನ್ನು ಪೀಡಿಸುತ್ತಿದ್ದಾನೆ. ಕೊನೆಗೊಮ್ಮೆ ಮಗ ಮನೆಯಿಂದ ಕಾಣದಾದ. ಲಾರಿ ಡ್ರೈವರ ಆಗಿದ್ದಾನೆ ಎಂದು ನೋಡಿದವರು ಹೇಳಿದರು. ಮಗನನ್ನು ನೋಡಲು ಅವನ ತಾಯಿ ನೀಲವ್ವ ಇಡೀ ದಿನವೆಲ್ಲ ಹೆದ್ದಾರಿಯ ಮೇಲೆ ಕಾಯುತ್ತ ನಿಂತಳು. ಬರುವ, ಹೋಗುವ ಲಾರಿಗಳಿಗೆಲ್ಲ ಕೈ ಮಾಡುತ್ತ ನಿಂತಳು. ತನ್ನನ್ನು ಕಂಡರೆ ಮಗ ನಿಲ್ಲಿಸದೆ ಹೋಗಲಾರ ಎನ್ನುವ ಭಾವನೆ ಅವಳದು. ಆದರೆ ಮಗ ಸಿಕ್ಕಿದ್ದು ಹೆಣವಾಗಿ.
ಇತ್ತ ಅಳಿಯ ಕೆಲಸ ಮಾಡುತ್ತಿದ್ದ ಕಾರಖಾನೆ ಮುಚ್ಚಿದ್ದರಿಂದ ಮಗಳ ಬಾಳುವೆಯೂ ಹದಗೆಟ್ಟಿತು. ಮಗಳೂ ಸಹ ಹೊಲ ಮಾರಿಕೊಂಡು ತನ್ನೊಡನೇ ಬಂದು ಇರು ಎಂದು ಅಪ್ಪನಿಗೆ ಹೇಳಿದಳು. ಆದರೆ ಮಲ್ಲಯ್ಯನಿಗೆ ಹೊಲ ಎಂದರೆ ಉಪಜೀವನದ ಸಾಧನ ಅಲ್ಲ ; ಅದೇ ಅವನ ಜೀವನ. ಆದರೆ ಅವನ ಈ ಜೀವನದ ದಾರಿಯನ್ನು ಸಹ ಸರಕಾರದವರು ಮುಚ್ಚಿ ಬಿಟ್ಟಿದ್ದಾರೆ. ತನ್ನ ಹೊಲಕ್ಕೆ ಹೋಗುವ ದಾರಿಯಾದ ಶಿವನಕೊಳ್ಳ ಇಲ್ಲಿಯವರೆಗೂ ಈ ಹಳ್ಳಿಗರ ನಿತ್ಯಜೀವನದ ಒಂದು ಭಾಗವಾಗಿತ್ತು. ಸರಕಾರವು ಅದನ್ನೀಗ ‘ರೆಸಾ^ರ್ಟ’ ಮಾಡಲು ಯಾರೋ ಖಾಸಗಿಯವರಿಗೆ ನೀಡಿದೆ.
ಅಂತಹ ಮಲ್ಲಯ್ಯನ ಶಿವನಕೊಳ್ಳ ಈಗ ಏನಾಗಿದೆ?
ಮಲ್ಲಯ್ಯನ ಊರ ಜನ ಈಗ ಏನಾಗಿದ್ದಾರೆ?
ಮಲ್ಲಯ್ಯ ಈಗ ಬಳಸುದಾರಿ ಹಿಡಿದು ತನ್ನ ಹೊಲಕ್ಕೆ ಹೋಗಬೇಕು. ಅಲ್ಲಿಂದ ನೋಡಿದಾಗ ಮೈಲಾರಲಿಂಗನ ಬೆಟ್ಟವೆಲ್ಲ ವಿಕಾರಗೊಂಡಿತ್ತು. ಧೂಳಿನಿಂದಾಗಿ ಹಕ್ಕಿಗಳು ದೇಶಾಂತರ ಹೋಗಿದ್ದವು. ಬೆಳೆ ಕುಂಠಿತವಾಗಿತ್ತು. ಹಳ್ಳದ ನೀರು ಕಲುಷಿತವಾಗಿತ್ತು. ನೀರು ಕುಡಿದ ಕೆಲವು ಜಾನುವಾರುಗಳು ಸತ್ತಿದ್ದವು.
ಮಲ್ಲಯ್ಯ ಹಿಂಬದಿಯ ಬೆಟ್ಟ ಹತ್ತಿ ತನ್ನ ಹೊಲಕ್ಕೆ ಬಂದ. ಹೊಲ ಈಗ ಹದಗೊಂಡಿತ್ತು.
ಒಂದು ಮಳೆಯಾದರೆ ಸಾಕು , ಬಿತ್ತಿಗೆ ಮಾಡಬಹುದು ಎಂದುಕೊಂಡ.
ಆದರೆ, ಅವನ ಹೊಲ ಅಲ್ಲಿ ಎಲ್ಲಿತ್ತು?
ಮಲ್ಲಯ್ಯನ ಸಮಸ್ತ ಪ್ರಪಂಚವೇ ಮುಳುಗಿ ಹೋದಂತಾಯಿತು.
ಊಳಿಗಮಾನ್ಯ ಕೃಷಿ ಸಂಸ್ಕೃತಿ ಈಗ ನಮ್ಮ ನಾಡಿನಿಂದ ಮಾಯವಾಗಿರಬಹುದು. ಆದರೆ ಅದಕ್ಕಿಂತ ಭಯಂಕರವಾದ ‘ಹಣ ಸಂಸ್ಕೃತಿ’ ನಮ್ಮ ಸಮಾಜದ ಸತ್ವವನ್ನು ಹಿಂಡಿ ಹಾಕಿದೆ. ಈ ಸಂಸ್ಕೃತಿಯಲ್ಲಿ ಉಳ್ಳವರು ಅನೈತಿಕ ಬಕಾಸುರರಾಗಿದ್ದರೆ, ಇಲ್ಲದವರು faceless zombieಗಳಾಗಿದ್ದಾರೆ. ತಮ್ಮ ಕತೆಗಳ ಮೂಲಕ ಅಮರೇಶ ನುಗಡೋಣಿಯವರು ಈ ದುಷ್ಟ ಸಂಸ್ಕೃತಿಯ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ.
ಒಂದು ಟಿಪ್ಪಣಿ:
ಇಬ್ಬರು ಸಮಕಾಲೀನ ಲೇಖಕರ ಸಾಹಿತ್ಯವನ್ನು ತುಲನೆ ಮಾಡುವದು ಸಾಧುವಲ್ಲ. ಆದರೂ ಸಹ ಕನ್ನಡದ ಇಬ್ಬರು ಶ್ರೇಷ್ಠ ಕತೆಗಾರರಾದ ಅಮರೇಶ ನುಗಡೋಣಿ ಹಾಗು ವಸುಧೇಂದ್ರ ಇವರ ಕತೆಗಳಲ್ಲಿಯ ಸಾಮ್ಯ ಹಾಗು ವೈಷಮ್ಯಗಳ ಬಗೆಗೆ ಒಂದೆರಡು ಸಾಲು ಬರೆಯಲು ತುಂಬಾ temptation ಆಗುತ್ತಿದೆ.
ಇವರಿಬ್ಬರೂ ಲೇಖಕರ ಬಹುತೇಕ ಕತೆಗಳು ಶೋಷಣೆಯ ಬಗೆಗೆ ಇವೆ. ನುಗಡೋಣಿಯವರ ಕತೆಗಳು ಗ್ರಾಮೀಣ ಹಿನ್ನೆಲೆ ಹೊಂದಿದಂತಹವು;ವಸುಧೇಂದ್ರರ ಬಹುತೇಕ ಕತೆಗಳಿಗೆ ನಗರದ ಹಿನ್ನೆಲೆ ಇದೆ. ನುಗಡೋಣಿಯವರ ಕತೆಗಳ ಪಾತ್ರಗಳು so called ಕೆಳವರ್ಗದ ಪಾತ್ರಗಳು; ವಸುಧೇಂದ್ರರ ಕತೆಗಳಲ್ಲಿ ಕಾಣುವವರು so called ಮೇಲುವರ್ಗದ ಪಾತ್ರಗಳು. ವಸುಧೇಂದ್ರರ ಕತೆಗಳಲ್ಲಿ ಕೌಟಂಬಿಕ ಚೌಕಟ್ಟಿದೆ; ನುಗಡೋಣಿಯವರ ಕತೆಗಳಿಗೆ ಸಾಮಾಜಿಕ ಚೌಕಟ್ಟಿದೆ. ವಸುಧೇಂದ್ರರ ಕತೆಗಳಲ್ಲಿ ಶೋಷಿತ ವ್ಯಕ್ತಿಗಳು ಶೋಷಣೆಯಲ್ಲಿಯೂ ಸಹ ವೈಯಕ್ತಿಕ ಗೆಲವನ್ನು ಸಾಧಿಸಿದವರು. ನುಗಡೋಣಿಯವರ ಪಾತ್ರಗಳು ದುರಂತ ಪಾತ್ರಗಳು. ವಸುಧೇಂದ್ರರ ಶೈಲಿಯಲ್ಲಿ ರಂಜನೆಯ ಅಂಶವಿದೆ; ನುಗಡೋಣಿಯವರದು ಗಂಭೀರ ಶೈಲಿ.
ಒಟ್ಟಿನಲ್ಲಿ, ಅಮರೇಶ ನುಗಡೋಣಿ ಹಾಗು ವಸುಧೇಂದ್ರ ಇವರೀರ್ವರು ಇಂದಿನ ಕನ್ನಡ ಕಥಾಸಾಹಿತ್ಯದ ಶ್ರೇಷ್ಠ ಪ್ರತಿನಿಧಿಗಳು ಎನ್ನಬಹುದು.