Saturday, November 7, 2020

ಹೆಸರಿನಲ್ಲೇನಿದೆ ಮಹಾ.....ಸುಧಾ ಸರನೋಬತ್

ನವೋದಯ ಕಾಲದ ಕನ್ನಡ ಲೇಖಕರು ಹೊಸಗನ್ನಡ ಭಾಷೆಯನ್ನು ಕಟ್ಟುವುದರ ಜೊತೆಗೇ, ತಿಳಿಹಾಸ್ಯದ ಹೊಳೆಯನ್ನೂ ಹರಿಸಿದರು. ಹಾಸ್ಯಬ್ರಹ್ಮರಾ.ಶಿ.’ಯವರುಕೊರವಂಜಿಮಾಸಪತ್ರಿಕೆಯನ್ನು ಪ್ರಾರಂಭಿಸುವದರ ಮೂಲಕ ಅನೇಕ ವೈನೋದಿಕರಿಗೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟರು. ಕೊರವಂಜಿಯ ಮಹಾನಿರ್ಯಾಣದ ನಂತರ, ‘ಅಪರಂಜಿಪ್ರಾರಂಭವಾಯಿತು. ಜೊತೆಗೇ ಕನ್ನಡದಲ್ಲಿ ಇನ್ನೂ ಅನೇಕ ನಿಯತಕಾಲಿಕಗಳು ಉದಯಿಸಿದವು.ಇದರಿಂದಾಗಿ, ನವೋದಯದ ನಂತರದ ಹಾಸ್ಯಲೇಖಕರಿಗೆ ಇನ್ನಷ್ಟು ಅವಕಾಶಗಳು ದೊರೆತವು. ಶ್ರೀಮತಿ ಸುಧಾ ಸರನೋಬತ್ ಅವರು ಎಲ್ಲ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಕನ್ನಡಿಗರಿಗೆ ಹಾಸ್ಯದೌತಣವನ್ನು ನೀಡುತ್ತ ಪರಿಚಿತರೇ ಆಗಿದ್ದಾರೆ.

ಸುಧಾಜೀಯವರು ರಚಿಸಿದಹೆಸರಿನಲ್ಲೇನಿದೆ ಮಹಾ….’ ಕೃತಿಯಲ್ಲಿ ಹನ್ನೆರಡು ವಿನೋದ ಲೇಖನಗಳಿವೆ. ಪ್ರತಿ ಲೇಖನವೂ ಹಾಸ್ಯದ ಪುಟ್ಟ ತೊರೆಯಾಗಿದೆ. ಅಂದರೆ, ಇವು ರಚನೆಯಲ್ಲಿ ಪುಟ್ಟ ಲೇಖನಗಳು. ಆದರೆ ನಿಮ್ಮ ಮುಖದಲ್ಲಿ ದೊಡ್ಡ ಮುಗುಳುನಗೆಯೊಂದನ್ನು  ಮೂಡಿಸದೆ ಬಿಡುವುದಿಲ್ಲ! ಇದು ಸುಧಾಜೀಯವರ ಸಾಧನೆ. ಇದನ್ನು ಅವರು ಹೇಗೆ ಸಾಧಿಸುತ್ತಾರೆ   ಎನ್ನುವ ಕುತೂಹಲದಿಂದಲೇ ನಾನು ಈ ಲೇಖನಗಳ ಅಧ್ಯಯನವನ್ನು ಮಾಡಿದೆ.

ಓದುಗನನ್ನು ಒಂದು ಸ್ನೇಹಪೂರ್ಣ ಕೌಟಂಬಿಕ ವರ್ತುಲದಲ್ಲಿ ಕೊಂಡೊಯ್ಯುವುದು ಅವರ ಮೊದಲ ಹೆಜ್ಜೆ. ಈ ವರ್ತುಲದಲ್ಲಿಯ ಪಾತ್ರಗಳು ಅಂದರೆ ಲೇಖಕಿ, ಅವರ ಪತಿ, ಮಕ್ಕಳು ಹಾಗು ಆಪ್ತೇಷ್ಟರು.  ಅನೇಕ ಕುಟುಂಬಗಳಲ್ಲಿ ಇರುವಂತೆ ಇಲ್ಲಿಯ ಪತಿರಾಯರೂ ಸಹ ಯಜಮಾನಿಯ ಮಾತಿಗೆ ಕಡ್ಡಾಯವಾಗಿ ಸಮ್ಮತಿ ಸೂಚಿಸುವವರೆ! (‘ಆಸ್ತಿ-ನಾಸ್ತಿ, ಮಾರ್ಜಾಲ ಪುರಾಣಇತ್ಯಾದಿ ಲೇಖನಗಳು ). ಎರಡನೆಯ ಹೆಜ್ಜೆ ಎಂದರೆ ಲೇಖನಗಳ ಸಹಜತೆ. ಕುಟುಂಬಗಳಲ್ಲಿ ಸಹಜವಾಗಿ ನಡೆಯುವ ಪ್ರಸಂಗಗಳು ಇವರ ಕಣ್ಣಿಗೆ ಬಿದ್ದಾಗ ಹಾಸ್ಯಪ್ರಸಂಗವಾಗಿ ರೂಪ ಪಡೆಯುತ್ತವೆ. (ಆದರೆ ಇವರ ಹಾಸ್ಯವು ಅಪಹಾಸ್ಯವಲ್ಲ). ಸುಧಾಜೀಯವರ ಮೂರನೆಯ ಹೆಜ್ಜೆ ಎಂದರೆ ಲೇಖನಗಳ ಸರಳತೆ. (ಕೆಲವೊಬ್ಬ ಲೇಖಕರ ಸಂಕೀರ್ಣ ಲೇಖನಗಳು ವಿನೋದರಸವನ್ನು ನುಂಗಿ ಹಾಕುತ್ತವೆ.) ಸುಧಾಜೀಯವರ ಈ ಮೂರು ಹೆಜ್ಜೆಗಳು ಅಂದರೆ ಆಪ್ತತೆ, ಸಹಜತೆ ಹಾಗು ಸರಳತೆಗಳು ವಾಮನನ ಮೂರು ಹೆಜ್ಜೆಗಳಂತೆ ಓದುಗನ ಮೂಲೋಕಗಳನ್ನು ಆಕ್ರಮಿಸಿಕೊಳ್ಳುತ್ತವೆ. ಆತ ಮನಃಪೂರ್ವಕವಾಗಿಬಲಿಯಾಗುತ್ತಾನೆ!

ಸುಧಾಜೀಯವರ ಲೇಖನಗಳು ಕೇವಲ ಹಾಸ್ಯಾಂತ ಲೇಖನಗಳಲ್ಲ.  ಗೌರಮ್ಮನ ದುಬೈ ಪ್ರ()ವಾಸಕಣ್ಣಲ್ಲಿ ಒಂದು ಹನಿ ನೀರನ್ನು ತರಿಸಿದರೆ, ‘ಗಂಡನ ಮೊದಲ ಪತ್ನಿ ಚೌಕಾಶಿಯು ಹೆಂಡತಿಯ ಬಗೆಗೆ ಸಹಾನುಭೂತಿಯನ್ನು ಹುಟ್ಟಿಸುತ್ತದೆ. ‘ಕೌನ ಬನೇಗಾ ರಮಾಪತಿಯಲ್ಲಿ ಸಹಾನುಭೂತಿ ಹೊರಳುವುದು ಪತಿಯ ಕಡೆಗೆ!

ಸುಧಾಜೀಯವರ ಲೇಖನಗಳು ಸಂದರ್ಭಪ್ರೇರಿತ ಲೇಖನಗಳು. ಸಾಮಾನ್ಯನ ಕಣ್ಣಿಗೆ ಎಲ್ಲ ಸಂದರ್ಭಗಳೂ ಸಾಮಾನ್ಯವೇ. ಆದರೆ ಸುಧಾಜೀಯವರ ಕಣ್ಣುಗಳು ಹಾಸ್ಯದ ಕಣ್ಣುಗಳು. ಹೀಗಾಗಿ ಸಾಮಾನ್ಯ ಸಂದರ್ಭವೆಂದು ಓದುಗನಿಗೆ ಅನಿಸುವುದರಲ್ಲಿ ಇವರು ಅಸಾಮಾನ್ಯ ವಿನೋದವನ್ನು ಹುಟ್ಟಿಸುತ್ತಾರೆ. ಆದುದರಿಂದಲೇ ಇವರ ಕನಸಿನಬಿಗ್ ಬಾಸ್ಕಾರ್ಯಕ್ರಮದಲ್ಲಿ ಕೋತಿ ತನ್ನ ಕಪಿಚೇಷ್ಟೆಗಳನ್ನು ತೋರಬಲ್ಲದು,( ‘ಮೇಟಿಗಿಂತ ಕೋಟಿ ಮೇಲು’). ‘ಮಹಿಳಾ ಮಂಡಳಿಯ ಗಂಭೀರ ಕ(ವಿ)ಲಾಪದಲ್ಲಿ, ಮಂತ್ರಿಣಿ ರಮಾಶ್ರೀಯವರು ಸದಸ್ಯೆಯರ ತಕರಾರುಗಳನ್ನು ಕುಟುಕುವ ಚುಟುಕು ಉತ್ತರದಿಂದ ಪರಿಹರಿಸಬಲ್ಲರು!

ಕೊನೆಯಲ್ಲಿ ಈ ಸಂಕಲನದಲ್ಲಿರುವ ಲೇಖನಗಳಿಗೆ ಮುಕುಟಪ್ರಾಯವಾಗಿರುವಅಮ್ಮಲೇಖನವನ್ನು ಇಲ್ಲಿ ಉಲ್ಲೇಖಿಸಲೇಬೇಕು. ಇದು ವಿನೋದಲೇಖನವಲ್ಲ. ಸುಧಾಜೀಯವರು ತಮ್ಮ ತಾಯಿಯ ಬಗೆಗೆ ಪ್ರೀತಿಯಿಂದ ಬರೆದು, ಅರ್ಪಿಸಿದ ಪುಷ್ಪಾಂಜಲಿ. 

Saturday, October 24, 2020

`ಕೂರ್ಗ ರೆಜಿಮೆಂಟ್’: ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು

ಆಧುನಿಕ ಕನ್ನಡದಲ್ಲಿ ಸೈನಿಕಸಾಹಿತ್ಯವು ಬಂದದ್ದು ತೀರ ಕಡಿಮೆ. ಸೈನಿಕಸಾಹಿತ್ಯ ಎನ್ನುವ ಪ್ರಕಾರದಲ್ಲಿ ರಚನಾಕ್ರಮವನ್ನು ಅನುಸರಿಸಿ ನಾವು ಮೂರು ವಿಭಾಗಗಳನ್ನು ಮಾಡಬಹುದು:

 

() ಯುದ್ಧರಂಗದ ಸಾಹಿತ್ಯ.

() ಸೈನಿಕರ ಬದುಕಿನ ಬಗೆಗೆ ಬರೆದ ಸಾಹಿತ್ಯ,

() ಸೈನಿಕರು ಬರೆದ ಸಾಹಿತ್ಯ

 

ಯುದ್ಧರಂಗದ ಸಾಹಿತ್ಯದ ಬಗೆಗೆ ಹೇಳುವುದಾದರೆ, ಕನ್ನಡದಲ್ಲಿ ಈ ಪ್ರಕಾರದ ಸ್ವತಂತ್ರ ಕೃತಿಗಳು ಅತಿ ಕಡಿಮೆ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಇಂಗ್ಲಿಶ್ ಭಾಷೆಯಲ್ಲಿ ಜಾ˘ನ್ ದಳವಿಯವರು ಬರೆದಹಿಮಾಲಯನ್ ಬ್ಲಂಡರ್ಕೃತಿಯ ಕನ್ನಡ ಅನುವಾದವನ್ನು ರವಿ ಬೆಳಗೆರೆ ಮಾಡಿದ್ದಾರೆ. ಬಹುಶಃ  ಇದೊಂದೇ ಕೃತಿಯು ಯುದ್ಧರಂಗದ ಬಗೆಗೆ ಇರುವ ಕನ್ನಡ (ಅನುವಾದಿತ) ಕೃತಿ. ಇತರ ಭಾರತೀಯ ಭಾಷೆಗಳಲ್ಲಿಯೂ ಇದೇ ಪರಿಸ್ಥಿತಿ ಇರಬಹುದು. ನನ್ನ ಹೇಳಿಕೆಯಲ್ಲಿ ತಪ್ಪಿದ್ದರೆ ದಯವಿಟ್ಟು ತಿದ್ದಲು ವಿನಂತಿಸುತ್ತೇನೆ. ೧೯೪೭-೪೮ರ ಅವಧಿಯಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಿ ಗೆಲವನ್ನು ಸಂಪಾದಿಸಿದ ಬಗೆಗೆ ‘ರಣವೀಳ್ಯ’ ಎನ್ನುವ ಕೃತಿಯೊಂದನ್ನು ರಚಿಸಲಾಗಿದೆ. ಇದನ್ನು ಪ್ರಕಟಿಸಿದವರು ‘ರಾಷ್ಟ್ರೋತ್ಥಾನ ಪರಿಷತ್’ನವರು. ಈ ವಿಷಯವನ್ನು ಇದೀಗ ನನಗೆ ತಿಳಿಸಿದವರು ಶ್ರೀ ವಿ.ರಾ.ಹೆ. ಅವರು. ಅವರಿಗೆ ನನ್ನ ಧನ್ಯವಾದಗಳು.

 

ಸೈನಿಕರ ಬಗೆಗೆ ಬರೆದ ಸಾಹಿತ್ಯದ ಬಗೆಗೆ ಹೇಳಬೇಕೆಂದರೆ ಶ್ರೀ ವೆಂ ಮು. ಜೋಶಿಯವರು ಇದಕ್ಕೆ ಶ್ರೀಕಾರ ಹಾಕಿದವರು. ಆಬಳಿಕ ಹೇಮಾತನಯ ಕಾವ್ಯನಾಮದ ಲೇಖಕರೊಬ್ಬರು ಸೈನ್ಯಾಧಿಕಾರಿಯೊಬ್ಬರ ಬಗೆಗೆ ಬರೆದ ಕಾದಂಬರಿಯೊಂದುಸಂಯುಕ್ತ ಕರ್ನಾಟಕಪತ್ರಿಕೆಯ ವಾರದ ಪುರವಣಿವಾಙ್ಮಯ ವಿಭಾಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ತನ್ನಂತರ ಶ್ರೀಮತಿ ಸಾರಾ ಅಬೂಬಕ್ಕರ ಅವರು ಬರೆದ ಕಾದಂಬರಿಯಲ್ಲಿ ಸೈನಿಕನೊಬ್ಬನು ಓರ್ವ ತರುಣಿಯನ್ನು ವಂಚಿಸಿ ಮದುವೆಯಾದ ಕಥೆ ಇದೆ

 

ಇನ್ನೀಗ ಸೈನಿಕರು ಬರೆದ ಸಾಹಿತ್ಯವನ್ನು ಗಮನಿಸೋಣ. ಲೆ|| ಶ್ರೀ.ಚಿ.ಸರದೇಶಪಾಂಡೆಯವರುನಾಗಾ ಜನಾಂಗ : ಖೆಮ್ನುಗನ್ನರುಎನ್ನುವ ಕೃತಿಯೊಂದನ್ನು ರಚಿಸಿದ್ದಾರೆ. ಭಾರತದ ಪೂರ್ವೋತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ಖೆಮ್ನುಗನ್ನರ ಬದುಕಿನ ಬಗೆಗೆ ಇರುವ ಕೃತಿಯು ಒಂದು ವೈಚಾರಿಕ ಕೃತಿಯಾಗಿದೆ. ಸರದೇಶಪಾಂಡೆಯವರುಗಡಿ ದಾಟಿದವರುಎನ್ನುವ ಕಾದಂಬರಿಯನ್ನೂ ಬರೆದಿದ್ದು, ಇವೆರಡೂ ಕೃತಿಗಳನ್ನು ಧಾರವಾಡದ ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ. ಕನ್ನಡಿಗರಾದ ಕರ್ನಲ್ ಆರ್. ಎಸ್. ಒಡೆಯರರು ಇಂಗ್ಲೀಶಿನಲ್ಲಿ ರಚಿಸಿದ ‘No Regrets' ಎನ್ನುವುದು ಅವರ ಆತ್ಮಚರಿತ್ರೆಯಾಗಿದೆ. ಇದನ್ನು ವಸಂತ ವಾಯಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ೨೦೧೨ರಲ್ಲಿ ಅನುವಾದವು ಪ್ರಕಟವಾಯಿತು.

 

ಈ ಸರಣಿಯಲ್ಲಿ ಇತ್ತೀಚಿನ ಕೃತಿಎಂದರೆ ಕೂರ್ಗ ರೆಜಿಮೆಂಟ್’. ಇದನ್ನು ಬರೆದವರು ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು.  ಡಾ˘ | ಕುಶ್ವಂತರ ಶೈಲಿಯು ಸೈನಿಕಶೈಲಿ ; ನೇರ ಹಾಗು ಸರಳ. ಬಂದೂಕಿನಿಂದ ಗುಂಡು ಹಾರಿಸಿದ ಹಾಗೆ. ಯಾವುದೇ ವಕ್ರಮಾರ್ಗದಲ್ಲಿ ಚಲಿಸದೆ, ಯಾವುದೇ ಆಡಂಬರವಿಲ್ಲದೆ ಈ ಗುಂಡು ತನ್ನ ಗುರಿಯನ್ನು ನಿಖರವಾಗಿ ತಲುಪುತ್ತದೆ.

 

ಕೃತಿಯಲ್ಲಿ ೧೨ ಕಥೆಗಳಿವೆ. ಇವು ಕುಶ್ವಂತರ ಅನುಭವವನ್ನು ಆಧರಿಸಿ ರಚಿತವಾದ ಕಥೆಗಳು. ಈ ಕಥೆಗಳು ಕೊಡಗಿನ ವೈಶಿಷ್ಟ್ಯಪೂರ್ಣ ಬದುಕನ್ನು ತೆರೆದಿಟ್ಟ ಕಥೆಗಳಾಗಿವೆ. ಜೊತೆಗೇ ಇವು ಸೈನಿಕರ ಬದುಕಿನ ಕಥೆಗಳೂ ಹೌದು.

 

ವಯಸ್ಸಿಗೆ ಬಂದ ಕೊಡವ ತರುಣನಿಗೆ ಮೂರು ಆಕರ್ಷಣೆಗಳಿವೆ:

() ಸೈನ್ಯ

() ಬೇಟೆ

() ಶರಾಬು

 

ಸೈನ್ಯವು ಕೊಡವರ ಪ್ರಪ್ರಥಮ ಆಕರ್ಷಣೆ. ಆದುದರಿಂದಲೇ ಈ ಸಂಕಲನವೂ ಸಹ ಕೂರ್ಗ್ ರೆಜಿಮೆಂಟ್ಎನ್ನುವ ಕಥೆಯಿಂದಲೇ ಪ್ರಾರಂಭವಾಗಿದೆ. ಕಥಾನಾಯಕನ ತಂದೆ ಯುದ್ಧರಂಗದಲ್ಲಿ ಮಡಿದಿದ್ದಾನೆ. ತಾಯಿನೆಲದಲ್ಲಿ ಈತನಿಗೆ ಸ್ವಲ್ಪ ಭೂಮಿ ಇದೆ. ಆದರೆ ಅದರ ದಾಖಲೆಗಳನ್ನು ಸರಿಪಡಿಸಬೇಕು, ಅತಿಕ್ರಮಣವನ್ನು ತೆಗೆಸಬೇಕು. ಮಗ ವಯಸ್ಸಿಗೆ ಬಂದು ಒಂದು ಕೆಲಸವನ್ನು ಹಿಡಿಯಲಿ, ಇದನ್ನೆಲ್ಲ ಆತ ಮಾಡಿಯಾನು ಎನ್ನುವುದು ಅವನ ತಾಯಿಯ ಆಸೆ. ಆದರೆ ಚಿಗುರು ಮೀಸೆಯ ಮಗ ತಾಯಿಗೂ ತಿಳಿಸದೆ ಸೈನ್ಯಕ್ಕೆ ಸೇರುತ್ತಾನೆ. ‘ಕೂರ್ಗ ರೆಜಿಮೆಂಟ್ಎಂದು ಬರೆದ ತನ್ನ ತಂದೆಯ ಟ್ರಂಕನ್ನು ಹೊತ್ತುಕೊಂಡು ಆತ ಮನೆ ಬಿಟ್ಟು ಹೊರಟು ಬಿಡುತ್ತಾನೆ. ಕೊಡವರ ರಕ್ತದಲ್ಲಿ ಹರಿಯುತ್ತಿರುವ ಸೈನ್ಯದ ಆಕರ್ಷಣೆ ಇದು! ಇದು ಕೊಡವರ ಪರಂಪರೆ! ಆದರೆ ತಾಯಿಯ ಎದೆಯಲ್ಲಿ ಪುಟಿಯುತ್ತಿರುವ ಭಾವನೆಗಳು…..ಏನು? ಈ ಕಥೆಯ ಕೊನೆಯಲ್ಲಿ ಲೇಖಕರು ಆ ಭಾವವನ್ನು ಅತಿ ಸುಂದರವಾಗಿ ವರ್ಣಿಸಿದ್ದಾರೆ:

 

ಮಗನ ರಕ್ತದಲ್ಲಿ ಹರಿಯುತ್ತಿರುವ ಆ ವಿಚಿತ್ರ ಸೆಳೆತ ಯಾವುದದು ತಾಯಿಯ ಕಣ್ಣಿಗೂ ಕಾಣಿಸದ್ದು?...ಕೂರ್ಗ್ ರೆಜಿಮೆಂಟಿನವರ ಬಳಿಯಿರುವ ಮಾಯಾಜಾಲ ಯಾವುದದು, ತಾಯಿಯ ಬಳಿಯಿಲ್ಲದ್ದು ಎಂದು ಯೋಚಿಸುತ್ತಾ ಕಾವೇರಿ ಹೂವಿನ ಗಿಡಕ್ಕೆ ನೀರು ಹಾಕುತ್ತಿದ್ದಳು. ಮಗ ಬಂದು ಅವಳ ಕಾಲಿಗೆ ಬಿದ್ದಾಗ ಅವನ ಜೇಬಿನಿಂದ ಹೊರಬಿದ್ದ ಕೂರ್ಗ್ ರೆಜಿಮೆಂಟಿನ ಪತ್ರ ಎಲ್ಲವನ್ನೂ ಹೇಳಿತು. ಅಪ್ಪನ ಟ್ರಂಕ್ ಮತ್ತೆ ನವವಧುವಿನಂತೆ ಸಿಂಗಾರಗೊಂಡಿತು. ಅಪ್ಪನ ಭಾವಚಿತ್ರಕ್ಕೆ ಅಕ್ಕಿ ಹಾಕಿ, ಹುತ್ತರಿಗೆ ಬರುತ್ತೇನೆಂದು ಗೂಡು ಬಿಟ್ಟ ಹಕ್ಕಿಯ ಹಾಗೆ ಗದ್ದೆ ಬೈಲಿನ ನಡುವೆ ಸರಸರನೆ ಇಳಿದು ಮಗ ಹೋಗುತ್ತಿದ್ದ. ಅವನ ಹೆಗಲ ಮೇಲಿದ್ದ  ಕಪ್ಪು ಟ್ರಂಕ್ ಮೇಲೆ ಬಿಳಿ ಪೈಂಟಿನಲ್ಲಿ ಬರೆದಿದ್ದ  ಕೂರ್ಗ್ ರೆಜಿಮೆಂಟ್ ಕಾಣಿಸುವಷ್ಟು ಸಮಯ ಅವಳು ಮಗ ಹೋದ ದಾರಿಯನ್ನೇ ನೋಡುತ್ತಿದ್ದಳು. ಮಗನ ಮತ್ತು ಮಣ್ಣಿನ ವಿಷಯದಲ್ಲಿ ಯಾವುದರ ಮೇಲೆ ತನಗೆ ಜಾಸ್ತಿ ಹಕ್ಕು ಇತ್ತೆಂದು ಯೋಚಿಸುತ್ತಾ ಕಾವೇರಿ ಜಗುಲಿಗೊರಗಿದಳು.”

 

ಈ ಕೊನೆಯ ಪರಿಚ್ಛೇದವು ಸೈನ್ಯಕ್ಕೆ ಹೊರಟ ಮಗನ ಬಗೆಗಷ್ಟೇ ಹೇಳುತ್ತಿಲ್ಲ. ಅವನ ತಾಯಿಯ ಬಗೆಗೂ ಹೇಳುತ್ತದೆ. ಕೊಡವರ ಬದುಕಿನ ಬಗೆಗೂ ಹೇಳುತ್ತದೆ. ಯುದ್ಧರಂಗದಲ್ಲಿ ಮಡಿದ ವೀರ ಪತಿ, ತಂದೆಯ ಮಾರ್ಗವನ್ನೇ ಅನುಸರಿಸಿ ಹೊರಟ ವೀರ ಪುತ್ರ, ತನ್ನ ಭೂಮಿಗಾಗಿ ತಾನು ಹೊಡೆದಾಡಬೇಕಾದ ಒಂಟಿ ವೀರಮಾತೆ….ಇದು ಕೊಡವರ ಜೀವನ

ಕುಶ್ವಂತರು ಸಮಂಜಸ ಪದಗಳ ಬಳಕೆಯಲ್ಲಿ ನಿಷ್ಣಾತರು. ಅವರ ಈ ಪ್ರತಿಭೆಯನ್ನು ನಾವು ಇಲ್ಲಿರುವ ಅನೇಕ ಕಥೆಗಳಲ್ಲಿ ನೋಡುತ್ತೇವೆ. ಆದರೆ ಇಲ್ಲಿ ಉದ್ಧರಿಸಿದ ಪರಿಚ್ಛೇದದ ಒಂದು ಪದಗುಚ್ಛವನ್ನು ಮಾತ್ರ ನಾನು ಉದಾಹರಣೆಗೆ ಎತ್ತಿಕೊಳ್ಳುತ್ತೇನೆ:

 

ಅಪ್ಪನ ಭಾವಚಿತ್ರಕ್ಕೆ ಅಕ್ಕಿ ಹಾಕಿ, ಹುತ್ತರಿಗೆ ಬರುತ್ತೇನೆಂದು ಗೂಡು ಬಿಟ್ಟ ಹಕ್ಕಿಯ ಹಾಗೆ ಗದ್ದೆ ಬೈಲಿನ ನಡುವೆ ಸರಸರನೆ ಇಳಿದು ಮಗ ಹೋಗುತ್ತಿದ್ದ.”

ಗೂಡು ಬಿಟ್ಟ ಹಕ್ಕಿಯ ಹಾಗೆ ಎನ್ನುವ ಪದಗುಚ್ಛವನ್ನು ಗಮನಿಸಿರಿ. ಕೊಡಗು ಈ ತರುಣನ ಗೂಡು. ಆದರೆ ಸ್ವತಂತ್ರವಾಗಿ ಬಾನಿನಲ್ಲಿ ಹಾರುವುದು ಹಕ್ಕಿಯ ಸ್ವಭಾವ. ಈ ತರುಣನೂ ಸಹ ತನ್ನ ಗೂಡನ್ನು ಬಿಟ್ಟು ವಿಶಾಲವಾದ ಜಗತ್ತಿಗೆ ಹಾರಿ ಹೋಗುತ್ತಿದ್ದಾನೆ. ತನ್ನ ನಿವೃತ್ತಿಯ ನಂತರ ತಾನು ಮರಳಿ ತನ್ನ ಗೂಡಿಗೇ ಬರುತ್ತೇನೆ ಎನ್ನುವುದು ಈ ಹಕ್ಕಿಗೆ ಗೊತ್ತಿದೆ. ಇದೆಲ್ಲವನ್ನೂಗೂಡು ಬಿಟ್ಟ ಹಕ್ಕಿಯ ಹಾಗೆಎನ್ನುವ ಮೂರು ಪದಗಳಲ್ಲಿ ಕುಶ್ವಂತರು ಅಳವಡಿಸಿದ್ದಾರೆ! ಇದರಂತೆಯೇಸರಸರನೆ ಇಳಿದು ಹೋದಎನ್ನುವ ಪದಗುಚ್ಛವನ್ನೂ ಗಮನಿಸಿರಿ. ಇದು ಸೈನ್ಯ ಸೇರಲು ಹೊರಟ ಆ ತರುಣನ ಉತ್ಸಾಹವನ್ನೂ ತೋರುತ್ತದೆ. ತನ್ನ ಕರುಳಿನ ತೊಡಕನ್ನು ಆತ ಅಲ್ಲಿಯೇ ಎತ್ತಿಟ್ಟು ತನ್ನ ಬಯಕೆಯ ಭವಿಷ್ಯಕ್ಕಾಗಿ ಹಾತೊರೆದು ಹೊರಟಿದ್ದಾನೆ.

 

ಕುಶ್ವಂತರು ವೀರಸೈನಿಕರೇನೊ ಹೌದು. ವೀರತ್ವದ ಜೊತೆಗೆ ಅವರಲ್ಲಿ ವಿನೋದ ಪ್ರವೃತ್ತಿಯೂ ಇದೆ. ಆದುದರಿಂದಲೇ ಅವರುಬೊಳ್ಳಮ್ಮ, ಗಣಿ ಬೋಪಣ್ಣ, ಮುತ್ತಿನ ಹಾರದಂತಹ ಕಥೆಗಳನ್ನೂಬೊಳ್ಳದಂತಹ ಜೀವನೋಲ್ಲಾಸದ ಕಥೆಯನ್ನೂ ಬರೆಯಲು ಸಾಧ್ಯವಾಗಿದೆ.

ಸೈನ್ಯದಲ್ಲಿರುವವರೆಗೆ ಸೈನಿಕರು ತಮ್ಮ ನಾಡನ್ನು ಕಾಯುವ ಕಾರ್ಯದ ಅಭಿಮಾನದಲ್ಲಿ, ಆನಂದದಲ್ಲಿ ಇರುತ್ತಾರೆ. ನಿವೃತ್ತಿಯ ನಂತರ ಅವರಿಗೆ ತಾಯ್ನಾಡಿನಲ್ಲಿ ಸಿಗುವ ಸ್ವಾಗತ ಹಾಗು ಬದುಕು ಎಂತಹದು? ಇವರಿಗೆ ಸಿಗುವ ಮದ್ಯದ ಕೋಟಾದ ಭಾಗಕ್ಕಾಗಿ ಮಾತ್ರ ಇವರನ್ನು ಓಲೈಸುವ ಕೆಲವರು ಸಿಕ್ಕಾರು. ಅದರ ಹೊರತಾಗಿ ತಾವು ಬಿಟ್ಟು ಹೋದ ಭೂಮಿಯ ಸ್ವಾಮಿತ್ವಕ್ಕಾಗಿ ಇವರು ದಾಯಾದಿಗಳೊಡನೆ ಹಾಗು ಕಂದಾಯ ಇಲಾಖೆಯೊಡನೆ ಹೊಡೆದಾಡಬೇಕಾದ ಪರಿಸ್ಥಿತಿ ಇದೆ. (‘ಸ್ವರ್ಗಕ್ಕೆ ಏಣಿ’)

ಈ ಸಂಕಲನದ ಅತ್ಯಂತ ಹೃದಯಸ್ಪರ್ಶಿ ಕತೆ ಎಂದರೆಒಂದು ಬೊಗಸೆ ಮಣ್ಣು’. ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ತನ್ನ ಊರಿನಿಂದ ಓಡಿ ಬಂದ ಹುಡುಗನೊಬ್ಬನು. ಸೈನ್ಯದಲ್ಲಿ ಸೇರಿದ ನಂತರ, ಪಾಕಿಸ್ತಾನದ ವಿರುದ್ಧ ನಡೆದ ಹೋರಾಟದಲ್ಲಿ ಶತ್ರುಸೈನಿಕರನ್ನು ಸೋಲಿಸುತ್ತ ತನ್ನ ಊರಿನವರೆಗೆ ಬಂದಿದ್ದಾನೆ. ಆ ಹಾಳೂರಿನ ಮಣ್ಣುಗುಪ್ಪೆಯ ಮೇಲೆ ಆತ ಕುಳಿತುಕೊಂಡು, ಒಂದು ಬೊಗಸೆ ಮಣ್ಣನ್ನು ಆತ ಕೈಯಲ್ಲಿ ಹಿಡಿದುಕೊಂಡು ರೋದಿಸುತ್ತಾನೆ

 

ಈ ಸಂಕಲನದ ಮೊದಲನೆಯ ಕಥೆಯು ಸೈನ್ಯವನ್ನು ಸೇರಲು ಆತುರಿಸಿದ ತರುಣನ ಕಥೆಯಾದರೆ, ಕೊನೆಯ ಕಥೆಯು ನಿವೃತ್ತಿಯನ್ನು ಹೊಂದಿದ ಕುಶಾಲಪ್ಪ ಎನ್ನುವ ಸೈನಿಕನೋರ್ವನ ಕೊನೆಯ ದಿನದ ಕಥೆಯಾಗಿದೆ. ತನ್ನ ಕೂರ್ಗ ರೆಜಿಮೆಂಟಿನ ಬಾಂಧವರು ನೀಡುತ್ತಿರುವವಿದಾಯ ಸಮಾರಂಭದಲ್ಲಿ ಈತ ಮಾತನಾಡಬೇಕು. ಆದರೆ ಸೈನಿಕರಿಗೆ ಬಂದೂಕಿನ ಗುಂಡು ಹಾರಿಸಲು ಬರುವುದೇ ಹೊರತು ಮಾತಿನ ಗುಂಡನ್ನಲ್ಲ. ಕುಶಾಲಪ್ಪ ಭಾರತೀಯ ಸೈನಿಕರ ಘೋಷವಾಕ್ಯವಾದ ಒಂದೇ ಮಾತನ್ನು ನುಡಿಯುತ್ತಾನೆ: ‘ಸರ್ವರತ ಇಝತ್ ಓ ಇಕ್ಬಾಲ್’ (ಹೋದಲ್ಲೆಲ್ಲವೂ ಘನತೆ ಮತ್ತು ಗೌರವದಿಂದ ಕೆಲಸ ಮಾಡಿದ್ದೇವೆ.)

 

ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು ಇವರಿಗೂ ಸಹ ಈ ಕಥಾಸಂಕಲನದ ಬಗೆಗೆ ನಾವು ಹೀಗೇ ಹೇಳಬಹುದು:

ಸರ್ವರತ ಇಝತ್ ಓ ಇಕ್ಬಾಲ್’ (ನಿಮ್ಮ ಎಲ್ಲ ಕಥೆಗಳೂ ಸುಸಂಪನ್ನವಾಗಿವೆ)!

Saturday, September 12, 2020

ಉಮೇಶ ದೇಸಾಯಿಯವರ ‘ಅನುಪಮಾ ಆಖ್ಯಾನ’

ಶ್ರೀ ಉಮೇಶ ದೇಸಾಯಿಯವರ `ಅನುಪಮಾ ಆಖ್ಯಾನ’ವು ಶ್ರಾವ್ಯಕೃತಿಯಾಗಿ ಡಿಜಿಟಲ್ ರೂಪದಲ್ಲಿ ಹೊರಬಂದಿದೆ. ಈ ಪ್ರಯೋಗಶೀಲ ಸಾಹಿತ್ಯಕರ್ಮಿಯ ಹೊಚ್ಚ ಹೊಸ ಪ್ರಯೋಗವಿದು. ಇದಕ್ಕೂ ಮೊದಲು ಅವರು ಗಝಲ್‘ಗಳನ್ನು, ಕಥೆಗಳನ್ನು ಬರೆದಿದ್ದರು. ಅಷ್ಟಕ್ಕೇ ತೃಪ್ತರಾಗದ ದೇಸಾಯರು ‘ಮೈತ್ರಿ ಪ್ರಕಾಶನ’ ಎನ್ನುವ ತಮ್ಮದೇ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ತನ್ಮೂಲಕ ಹೊಸ ಲೇಖಕರ ರಚನೆಗಳನ್ನು ಸಂಕಲಿಸಿ ಹೊರತರುವ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದರು. ಬ್ಯಾಂಕ್ ಉದ್ಯೋಗಿಯಾಗಿ ನೌಕರಿ ಮಾಡುತ್ತಲೇ, ಸಾಹಿತ್ಯಕೃತಿಗಳನ್ನು ಬರೆಯುವುದು, ಬರೆಯಿಸುವುದು, ಪ್ರಕಾಶಿಸುವುದು ಇವುಗಳಲ್ಲಿ ನಿರತರಾದ, ಎಡವಯಸ್ಸಿನ ಈ ಸಾಹಸಜೀವಿಯನ್ನು ನಾನು ಬೆರಗಿನಿಂದ ನೋಡುತ್ತೇನೆ. ಪ್ರತಿಯೋರ್ವ ಸಾಹಿತಿಯ ಒಳಗೆ ಒಂದು ಪ್ರೇರಕ ಶಕ್ತಿ ಕೆಲಸ ಮಾಡುತ್ತಿರುತ್ತದೆ. ಉಮೇಶ ದೇಸಾಯಿಯವರು ನಮ್ಮ ಸಮಾಜದ ಸಾಂಪ್ರದಾಯಿಕ ಮುಖವನ್ನು ಗಮನಿಸಿದವರು. ಅದರಂತೆಯೇ ಆಧುನಿಕ ಸಮಾಜದಲ್ಲಿ ಪ್ರವರ್ತಿಸುತ್ತ, ಹೊಸ ಮಾದರಿಯ ಮುಖವನ್ನೂ ನೋಡಿದವರು. ಮರಾಠೀ ಸಾಹಿತ್ಯದಲ್ಲಿಯೂ ಗತಿ ಇದ್ದವರು. ಹೀಗಾಗಿ ಸಮಾಜದ ವಿವಿಧ ಮುಖಗಳ ಒಳಿತು, ಕೆಡುಕಗಳ ಪರಿಚಯ ಅವರಿಗೆ ಮನೋಗತವಾಗಿದೆ; ಅವರ ಸಾಹಿತ್ಯಕ್ಕೆ ಇದು ಪ್ರಧಾನ ಪ್ರೇರಕ ಶಕ್ತಿಯಾಗಿದೆ. ‘ಅನುಪಮಾ ಆಖ್ಯಾನ’ವು ಈ ವಿವಿಧ ಶಕ್ತಿಗಳ ಘರ್ಷಣೆಯ ನಾಟಕವಾಗಿದೆ. ‘ನಾಟಕ’ ಎಂದೆನಲ್ಲವೇ ನಾನು? ‘ಅನುಪಮಾ ಆಖ್ಯಾನ’ವು ರಚನೆಯಲ್ಲಿ ನಾಟಕವಲ್ಲ. ಇದನ್ನು ಕಿರುಕಾದಂಬರಿ ಎನ್ನಬೇಕೊ ಅಥವಾ ನೀಳ್ಗತೆ ಎನ್ನಬೇಕೊ ಎನ್ನುವ ಸಂದಿಗ್ಧತೆಯಲ್ಲಿ ಸಿಲುಕಲು ನಾನು ಬಯಸುವುದಿಲ್ಲ. ಆದರೆ ‘ಅನುಪಮಾ ಆಖ್ಯಾನ’ವು ಒಂದು ಪ್ರಭಾವಶಾಲೀ, ಪರಿಣಾಮಕಾರೀ ಕಥಾನಕ ಎಂದಷ್ಟೇ ಹೇಳಲು ಇಚ್ಛಿಸುತ್ತೇನೆ. ಕೇವಲ ೭೧೮೯ ಪದಗಳನ್ನು ಒಳಗೊಂಡ ಈ ಕಥಾನಕವನ್ನು ನಾಲ್ವರು ವ್ಯಕ್ತಿಗಳು ನಿರೂಪಿಸಿದ್ದಾರೆ. ಈ ತಂತ್ರದಿಂದಾಗಿ ಅವರವರು ಭಾವಿಸುವ ಸತ್ಯವನ್ನು ಅವರವರ ಬಾಯಿಯಿಂದಲೇ ಹೇಳಿಸಲು ದೇಸಾಯರಿಗೆ ಸಾಧ್ಯವಾಗಿದೆ. ಇವರೆಲ್ಲರನ್ನು ಸಾಕ್ಷಿರೂಪದಲ್ಲಿ ನೋಡುವ ಮತ್ತೊಂದು ವ್ಯಕ್ತಿ ಇಲ್ಲಿದೆ. ಆದರೆ ಅವಳು ನ್ಯಾಯಾಧಿಶನ ಪಾತ್ರವನ್ನು ವಹಿಸಲು ಬಯಸುವದಿಲ್ಲ. ಅವಳ ಕೆಲಸವೆಂದರೆ ಇವರೆಲ್ಲರಿಗೂ ವಾಸ್ತವತೆಯನ್ನು ತೋರಿಸುವ ಹಾಗು ಆ ಮೂಲಕ ಇವರ ತೊಡಕುಗಳನ್ನು ಬಿಡಿಸುವ ಕಾರ್ಯ. ಇದರಿಂದಾಗಿ ಸತ್ಯದ ವಿವಿಧ ಮುಖಗಳನ್ನು ಯಾವುದೇ ಪಕ್ಷಪಾತವಿಲ್ಲದೇ ನಿರೂಪಿಸಲು ಲೇಖಕರಿಗೆ ಸಾಧ್ಯವಾಗಿದೆ.ಇದು ನಮ್ಮ ಸಮಾಜದ ಸಮಸ್ಯೆ. ತಲೆಮಾರುಗಳ ನಡುವೆ ನಡೆಯುವ ತಿಕ್ಕಾಟದ ಸಮಸ್ಯೆ. ಈ ತಿಕ್ಕಾಟವನ್ನು ಬಗೆಹರಿಸುವ ಜಾಣ್ಮೆಯ ಅಗತ್ಯತೆಯ ಕಥೆ. ಲೇಖಕನೋರ್ವನು ತನ್ನ ಭಾವನೆಯನ್ನು ಹೇಳಲು, ತನ್ನ ಕಾಣ್ಕೆಯನ್ನು ಇತರರಿಗೆ ಕಾಣಿಸಲು ಕಥೆಗಳನ್ನು ಹೆಣೆಯುತ್ತಾನೆ. ಈ ಹೆಣಿಕೆಗೆ ಅಗತ್ಯವೆನಿಸುವ ಪಾತ್ರಗಳನ್ನು ರೂಪಿಸಲು, ಘಟನೆಗಳನ್ನು ನಿರೂಪಿಸಲು ಆತನು ಸರ್ವತಂತ್ರ ಸ್ವತಂತ್ರನು. ದೇಸಾಯರ ‘ಅನುಪಮಾ ಆಖ್ಯಾನ’ದಲ್ಲಿ ನಾಲ್ಕೇ ನಾಲ್ಕು ಪ್ರಧಾನ ಪಾತ್ರಗಳಿವೆ. ಅನುಪಮಾ ಬುದ್ಧಿವಂತೆ; ಅತ್ಯಾಧುನಿಕ ಮನೋಭಾವದ ತರುಣಿ. ಅವಳ ತಂದೆ ಮಗಳನ್ನು ಅಚ್ಛೆಯಿಂದ ಬೆಳೆಸಿದ್ದಾರೆ. ಮೂಲತಃ ಧಾರವಾಡದವಳಾದ ಇವಳು ಬೆಂಗಳೂರಿನ ಒಂದು ದೊಡ್ಡ I.T.ಕಂಪನಿಯಲ್ಲಿ ಮಹತ್ವದ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳು ಮ್ಯಾಟ್ರಿಮೋನಿಯಲ್ ಸಂಸ್ಥೆಯೊಂದರ ಮೂಲಕ ಅನಿಯನ್ನು ಮದುವೆಯಾಗುತ್ತಾಳೆ. ಇವರಿಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡೇ ಮದುವೆಯಾಗಿದ್ದಾರೆ. ಆದರೆ ಅನುಪಮಾಳ ಗಂಡ ತಂದೆಯಾಯಿಯರಿಗೆ ಅತ್ಯಂತ ವಿಧೇಯನಾಗಿ ನಡೆಯುತ್ತಿರುವ ಹುಡುಗ. ಇವನ ಅಪ್ಪ ಸರ್ವಾಧಿಕಾರಿ ವರ್ತನೆಯ, ಸಂಪ್ರದಾಯನಿಷ್ಠ ಮನುಷ್ಯ. ಸರಿ, ಇವರ ನಡುವೆ ತಿಕ್ಕಾಟ ನಡೆಯಲು ಇಷ್ಟು ಸಾಕಲ್ಲವೆ? ಲೇಖಕರ ಪ್ರತಿಭೆ ಇರುವುದು ಇಂತಹ ಘಟನೆಗಳಿಗೆ ಸರಿಯಾದ ಸಾಮಗ್ರಿಯನ್ನು ಹುಡುಕುವದರಲ್ಲಿ ಹಾಗು ನಿರೂಪಿಸುವದರಲ್ಲಿ. ದೇಸಾಯರಲ್ಲಿ ಈ ಪ್ರತಿಭೆ ಹೇರಳವಾಗಿದೆ. ಹಾಗಾಗಿಯೇ ಈ ಸಾಹಿತ್ಯಕೃತಿಯು ರೋಚಕವಾಗಿದೆ ಹಾಗು convincing ಆಗಿದೆ. ದೇಸಾಯರ ಕೃತಿಗಳ ವೈಶಿಷ್ಟ್ಯವೆಂದರೆ, ಅವರ ಕಥೆಗಳಲ್ಲಿಯ ಪಾತ್ರಗಳು. ಅವರ ಪಾತ್ರಗಳು ಜೀವಂತಿಕೆ ತುಂಬಿದ ಪಾತ್ರಗಳು. ಅವುಗಳ ಓಡಾಟಗಳನ್ನು ನಾವು ನೋಡಬಲ್ಲೆವು; ಅವುಗಳ ಭಾವನೆಗಳು ನೇರವಾಗಿ ನಮ್ಮ ಹೃದಯದಲ್ಲಿ ಇಳಿಯುತ್ತವೆ. ಅವರ ಪಾತ್ರಗಳಲ್ಲಿ ಚಲನಶೀಲತೆ ಇರುತ್ತದೆ. ಅವರ ಭಾಷೆಯೂ ಹಾಗೇ ಇದೆ. ನಿಸ್ಸತ್ವ ಪಾತ್ರವನ್ನು ಹಾಗು ನಿಸ್ಸತ್ವ ಭಾಷೆಯನ್ನು ದೇಸಾಯರ ಕೃತಿಗಳಲ್ಲಿ ನಾವು ಕಾಣಲಾರೆವು.ಇದರಂತೆಯೇ ವಾತಾವರಣವನ್ನು ನಿರ್ಮಿಸುವದರಲ್ಲಿಯೂ ದೇಸಾಯರ ಪ್ರತಿಭೆಯನ್ನು ನಾವು ನೋಡಬಹುದು. ಕಥಾನಕಕ್ಕೆ ಅವಶ್ಯವಾದ ವಿವಿಧ ಪ್ರಸಂಗಗಳ ವಿವರಗಳು ಸಹಜವಾಗಿವೆ. ಈ ಕೃತಿಯ ವಿವರಗಳನ್ನು ನಾನು ಮುಂಗಡವಾಗಿಯೇ ನೀಡುವುದು ಸರಿಯಲ್ಲ. ಈ ಕೃತಿಯನ್ನು ಓದಬಯಸುವ ಓದುಗರ ಆಸಕ್ತಿಯನ್ನು ಹಾಗು ಕುತೂಹಲವನ್ನು ಖಿಲಗೊಳಿಸದೇ ಇಡುವುದು ನನ್ನ ಕರ್ತವ್ಯ. ಆದುದರಿಂದ ಇಷ್ಟಕ್ಕೇ ನಾನು ವಿರಮಿಸುತ್ತೇನೆ. ದೇಸಾಯರ ಕೃತಿಗಳನ್ನು ಮೆಚ್ಚುವ ಓದುಗರಿಗೆ, ‘ಇಗೋ ಇಲ್ಲಿದೆ ಅವರ ಮತ್ತೊಂದು ರೋಚಕ ಕೃತಿ’ ಎಂದಷ್ಟೇ ಹೇಳಬಯಸುತ್ತೇನೆ.

Friday, August 21, 2020

ಕರಣಂ ಇವರ ಕಾದಂಬರಿ ‘ಗ್ರಸ್ತ’...................... ಸುದರ್ಶನ ಗುರುರಾಜರಾವ ಇವರ ಒಂದು ವಿಶ್ಲೇಷಣೆ

ಸುದರ್ಶನ ಗುರುರಾಜರಾವ ಇವರು ಕರಣಂ ರಚಿಸಿದ ಕಾದಂಬರಿ ‘ಗ್ರಸ್ತ’ ಬಗೆಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾರೆ. ಇದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಸಂತೋಷವಾಗುತ್ತಿದೆ. ಈ ಲೇಖನದಲ್ಲಿ ಸುದರ್ಶನರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂಪೂರ್ಣವಾಗಿ ಅವರವೇ ಆಗಿವೆ. ‘ಸಲ್ಲಾಪ’ blogದ ಒಡೆಯರಿಗೆ ಇದರೊಡನೆ ಯಾವುದೇ ಸಂಬಂಧವಿಲ್ಲ. ------ಸುನಾಥ ..................... ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು ಓದಿದ್ದಾಯ್ತು. ಚಿಕ್ಕದಾದ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಯಿತು. ಬೆಂಗಳೂರಿನ ಬ್ರಾಹ್ಮಣ ಬಡಾವಣೆಯಲ್ಲಿ ಪ್ರಾರಂಭವಾಗುವ ಕಥೆ ಅಲ್ಲ್ಲಿಲ್ಲಿ ಹರಿದು, ಪ್ರಾಗ್ ಎಂಬ ವಿದೇಶಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬಂದು, ತಿರುವು ಪಡೆದು ಮಲೆನಾಡಿನ ಮಲೆಯೊಂದರ ಮೇಲೆ ಬಂದು ನಿಲ್ಲುತ್ತದೆ. ಅದು ಮುಕ್ತಾಯವೋ ಹೊಸ ಆರಂಭವೋ ಎಂಬುದನ್ನು ಓದುಗರು ಊಹಿಸಿಕೊಳ್ಳಬೇಕು. ಕೆಳ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಕಣ್ಣಿನ ತುಂಬಾ ಕನಸು ಹೊತ್ತ ಯುವತಿ, ಸರಿಯಾಗಿ ತಿಳಿಯದೆ, ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆ ಮಾಡಿಕೊಳ್ಳುವ ಜಯಶ್ರೀ; ಕನಸುಗಳೊಂದೂ ಸಾಕಾರವಾಗದೆ ಬರೀ ಬೀಳುಗಳ ಹಾದಿಯಲ್ಲಿ ಕ್ರಮಿಸುತ್ತಲೇ ಇನ್ನೇನು ಸ್ವಲ್ಪ ಏಳು ಕಾಣುತ್ತಿದೆ ಎಂಬಲ್ಲಿ ಹೃದಯಾಘಾತದಿಂದ ನಿಧನಳಾಗುತ್ತಾಳೆ. ಕನಸುಗಳು ತುಂಬಿದ ಜೀವವೊಂದು, ಕನಸುಗಳೇ ಇಲ್ಲದ, ಕೆಲಸ ಮಾಡುವ ಕಸುವೂ ಇಲ್ಲದ ಒಬ್ಬನನ್ನು ಓಡಿಹೋಗಿ ಮದುವೆಯಾಗುವ ವಿಪರ್ಯಾಸಗಳು ದಿನವೂ ಕಂಡು ಕೇಳುವ ವಿಚಾರವೇ. ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವಳ ಮಗನೇ ಅಸಾಧಾರಣ ಬುದ್ಧಿಮತ್ತೆ ಮತ್ತು ಅತೀಂದ್ರಿಯ ಮನ:ಶಕ್ತಿ ಇರುವ ಅವಿನಾಶ್! ಅವನ ತಾಯಿ ಜಯಶ್ರೀ ಗೆ ಅಡುಗೆ ಮಾಡಿ ಮನೆ ಸಂಭಾಳಿಸುವ ಕೆಲಸ ಕೊಟ್ಟಿದ್ದ ಪ್ರೊಫೆಸ್ಸರ್ ಗೋಪೀನಾಥ್ ಮನೆಯಲ್ಲೇ ಜಯಶ್ರೀ ಮತ್ತು ಶಿವಕುಮಾರ್ ಗೆ ಹುಟ್ಟಿದ ಮಗ ಅವಿನಾಶ ಕೆಲಸಕ್ಕೆ ಉಳಿಯುತ್ತಾನೆ. ಅವನೂ ತನ್ನ ಅಮ್ಮನಂತೆ ಅಡುಗೆಯಲ್ಲಿ ನುರಿತವನೇ. ಜಯಶ್ರೀಯಿಂದ ಒಮ್ಮೆ ಅವಳ ಕಥೆಯನ್ನು ಕೇಳಿ ತಿಳಿದು, ತಮ್ಮ ಸಾಂಪ್ರದಾಯಿಕ ಒತ್ತಡಗಳನ್ನು ಬದಿಗೆ ಸರಿಸಿ,ಮೀರಿ, ಆಕೆಯನ್ನು ಕೆಲಸಕ್ಕೆ ಇಟ್ಟುಕೊಂಡು ಅವಳ ಮಗನ ವಿದ್ಯಾಭ್ಯಾಸದ ಬಗೆಗೆಯೂ ಆಸಕ್ತಿ ವಹಿಸುವ ಗೋಪೀನಾಥರು ಅನಂತರವೂ ಅವನಿಗೆ ಮಾರ್ಗದರ್ಶನ ಮತ್ತಿತರ ಸಹಾಯ ಮಾಡುತ್ತಲೇ ಇರುತ್ತಾರೆ. ತಮ್ಮ ಕಾಲೇಜಿನಲ್ಲೇ ಕೆಲಸವನ್ನೂ ಕೊಡಿಸುತ್ತಾರೆ , ಅವನ ಸ್ಕಾಲರ್ಷಿಪ್ ಗೆ ತಮ್ಮದೇ ಥೀಸಿಸ್ ಕೊಟ್ಟಿರುತ್ತಾರೆ, ಅವನ ಏಳಿಗೆಯನ್ನು ಕಂಡು ಸಂತೋಷಿಸಿಯೂ ಇರುತ್ತಾರೆ. ವಿಜ್ಞಾನ -ತಂತ್ರಜ್ಞಾನ-ತತ್ವಶಾಸ್ತ್ರ ಇವುಗಳನ್ನು ಸಮನ್ವಯ ಸಾಧಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸುತ್ತಲೇ ಅವಿನಾಶನನ್ನೂ ಕಡೆಗೆ ಗಮನ ವಹಿಸಲು ಪ್ರಚೋದಿಸುತ್ತಾರೆ. ಅವಿನಾಶನ ತಂದೆ ತೀರಿಕೊಂಡಾಗ ತಮ್ಮ ಸಂಪ್ರದಾಯ, ಮಡಿ ಮೈಲಿಗೆ, ಆಚಾರಗಳನ್ನು ಮೀರಿ ಮಾನವೀಯತೆ ತೋರಿಸುತ್ತಾರೆ. ಅವರ ಮಗಳಿಗೆ ಅವಿನಾಶನೆಂದರೆ ಪ್ರೀತಿ. ಅವಿನಾಶನಿಗೂ ಅವಳನ್ನು ಮದುವೆಯಾಗುವ ಬಯಕೆ. ಈ ನಡುವೆ ರೇಖಾ ಎಂಬ ಸುಂದರಿಯೂ, ಜಾಣೆಯೂ,, ಸ್ಥಿತಿವಂತ ಮನೆತನದ, ಮದುವೆಯಾದ ಆದರೆ ದಾಂಪತ್ಯದಲ್ಲಿ ಅಸಂತುಷ್ಟಳಾದ ಹೆಣ್ಣಿನ ಪರಿಚಯ ಅವಿನಾಶನಿಗೆ ಆಗಿ, ಅವಳೊಂದಿಗೆ, ಅವಳ ಗಂಡನ ಅನುಪಸ್ಥಿತಿಯಲ್ಲಿ ದೇಹಸಂಪರ್ಕ ಬೆಳೆಸುತ್ತಾನೆ. ಹೇಳದೆ ಕೇಳದೆ ಅವಳಿಂದ ಬಿಡಿಸಿಕೊಂಡು ದೂರವೂ ಸರಿಯುತ್ತಾನೆ. ವಿದೇಶ ತಿರುಗಿ ವಾಪಸ್ಸು ಬಂದಮೇಲೆ, ಗಂಡನನ್ನು ಬಿಟ್ಟು ಹೊರಟು ಬಂದ ರೇಖಾ, ಮಗುವಿನ ಜೊತೆಗೆ, ಗೋಪೀನಾಥರ ಮಧ್ಯಸ್ಥಿಕೆಯಲ್ಲಿ ಅವಿನಾಶನ ಮನೆ ಸೇರುತ್ತಾಳೆ. ಅವನ ವಿಕ್ಷಿಪ್ತ ನಡವಳಿಕೆಗಳನ್ನು ಸಹಿಸಿಕೊಂಡು, ಅವನೂ ಅವಳನ್ನು ಒಪ್ಪಿಕೊಂಡು,ಬಾಳುವೆ ನಡೆಸುತ್ತಿರುತ್ತಾರೆ. ಅಷ್ಟರಲ್ಲಿ, ವಿದೇಶದಿಂದ ಇವನ ಸಂಶೋಧನೆಗೆ ಸಲ್ಲಬೇಕಾದ ಹಣದ ಮೊತ್ತವೊಂದು ಬರುತ್ತದೆ. ಈ ಮಧ್ಯೆ ಗೋಪೀನಾಥರ ಮಗಳ ಮದುವೆಯೂ ಆಗಿ ಆ ಕಹಿಯನ್ನು ಮೀರಿ ನಿರ್ಭಾವುಕನಾಗಿ ಯೋಚಿಸುವಾಗ ,ದೇಹ,ಮಾಂಸ, ಸೌಂದರ್ಯ,ಅದರ ಪ್ರಚೋದನೆ ಆ ಪ್ರಚೋದಕ ಶಕ್ತಿ,ಒಂದು ಆಕರವಾಗಿ,ಇನ್ನೊಂದು ಸ್ಪಂದಿಸಿ ಶಕ್ತಿ ಸೋರಿಕೆಯಾಗುವ ಐಡಿಯಾ ಬಂದುಬಿಡುತ್ತದೆ., ಅದೇ ಸ್ಪಷ್ಟವಾಗುತ್ತಾ ಹೋಗಿ ಇವನಿಗೆ ಧಿಗ್ಗನೆ ಪ್ರಪಂಚದಲ್ಲಿ ಸರ್ವವ್ಯಾಪಿಯಾಗಿರುವ ವಿದ್ಯುತ್ತನ್ನು ನಿಸ್ತಂತು ಮಾಧ್ಯಮದ ಮೂಲಕ ನಿರಂತರ ಚಾರ್ಜ್ ಮಾಡಬಲ್ಲ ವಿಧಾನದ ಸಾಕ್ಷಾತ್ಕಾರ ಹೊಳೆಯುತ್ತದೆ. ಅದನ್ನು ಭೌತಿಕವಾಗಿ ಕಾರ್ಯರೂಪಕ್ಕೆ ತರಲು ಮಲೆನಾಡಿನ ಮಧ್ಯದಲ್ಲಿ ಮನೆ ಮಾಡಿ , ಬೆಟ್ಟದ ಮೇಲೆ ತನ್ನ ಪ್ರಯೋಗ ನಡೆಸಿ, ತನ್ನ ಹೆಂಡತಿಯಂತೆಯೇ ಇದ್ದ ರೇಖಾಳನ್ನು ನಡುರಾತ್ರಿಯಲ್ಲಿ ಅಲ್ಲಿಗೆ ಕರೆದೊಯ್ದು, ಅವಳಿಂದ , ಅವಳ ಪ್ರತಿಭಟನೆ ಮೀರಿ, ಆಕಸ್ಮಿಕ ಅಕ್ರಮಣಕ್ಕೆ ಅವಳ ಗಂಡನಾದ ಸುಂದರನಿಂದಲೇ ಅತ್ಯಾಚಾರದ ಹೇಯ ಕೆಲಸಕ್ಕೆ ಪ್ರಮಾಣವನ್ನು ಪಡೆಯುತ್ತಾನೆ. ಅತಿಇಂದ್ರಿಯ ಶಕ್ತಿಯಿಂದಾಗಿ, ಮತ್ತೊಬ್ಬರ ಉದ್ದೇಶವನ್ನು ತಿಳಿಯುವ,ಘಟಿಸಿದ ಘಟನೆಯ ವಿವರಗಳನ್ನು ಅಪ್ರತ್ಯಕ್ಷವಾಗಿ ಅರಿಯುವ ಒಂದು ಜನ್ಮಜಾತ ಅಲೌಕಿಕ ಶಕ್ತಿ ಅವಿನಾಶನಿಗಿರುತ್ತದೆ!. ಅವನ ನಿಸ್ತಂತು ವಿದ್ಯುತ್ಪ್ರವಾಹದ ಉತ್ಪಾದನೆ,, ಪ್ರಸರಣ ಹಾಗೂ ಅದರ ಬಳಕೆಯನ್ನು ಮಾಡಿಕೊಳ್ಳುವ ಪ್ರಯೋಗದ ಸಾಫಲ್ಯವನ್ನೂ ಕಾಣುತ್ತಲೇ ಅವಳನ್ನು ಒಂಟಿಯಾಗಿ ಬಿಟ್ಟು ದಿಗಂಬರನಾಗಿ ಎತ್ತಲೋ ಕಳೆದು ಹೋಗುವಲ್ಲಿ ಕಥೆ ಬಂದು ನಿಲ್ಲುತ್ತದೆ. ಎಲ್ಲಿಯೂ ನಿಲ್ಲದೆ, ಹೆಚ್ಚು ಎಳೆದಾಡದೆ ಓದಿಸಿಕೊಂಡು ಹೋಗುವ ಕಥೆಯಲ್ಲಿ ಅಲ್ಲಲ್ಲಿ ಪ್ರಾಸ್ತವಿಕವಾಗಿ, ಉಪನಿಷತ್, ವೇದ, ಪ್ರಾಚೀನ ಭಾರತೀಯ ಗಣಿತ, ಅಮೂರ್ತವಾದದ್ದರ ಅದ್ಭುತ ಚಿಂತನೆ, ನಿಕೋಲಾ ಟೆಸ್ಲಾ ಸೇರಿದಂತೆ ಹಲವಾರು ವಿಜ್ಞಾನಿಗಳ ಉಲ್ಲೇಖ ಬಂದು ಹೋಗುತ್ತದೆ. ದೇಹದಿಂದ ಆತ್ಮ ಬೇರೆಯಾಗುವುದಲ್ಲ, ದೇಹವೇ ಅಖಂಡವಾದ ಆತ್ಮ ಎಂಬಂತೆ ನಾವು ಗ್ರಹಿಸುವ ಸರ್ವವ್ಯಾಪಿ ಶಕ್ತಿ ಎಂಬ ಜಾಲದಿಂದ ಬೇರ್ಪಡುತ್ತದೆ, ಎಂಬಂಥ ಹಲವು ಜಿಜ್ಞಾಸೆಗೆ ಒಡ್ಡಿಸಿಕೊಳ್ಳುವ ಹೇಳಿಕೆಗಳಿವೆ; ಚೆನ್ನಾಗಿವೆ. ನಿರ್ಗುಣ ನಿರಾಕಾರ ಬ್ರಹ್ಮ, ಪಂಚಭೂತಗಳಲ್ಲಿ ಬ್ರಹ್ಮವು ಪ್ರವೇಶಿಸಿ, ತಾನೇ ಅದಾಗುವುದು ಎಂಬ ರೀತಿಯ ಉಪನಿಷತ್ ವಾಕ್ಯಗಳನ್ನು ಯಥಾಯೋಗ್ಯವಾಗಿ ಬಳಸಿಕೊಂಡಿದ್ದಾರೆ. ಕಾದಂಬರಿಗೆ ಬೇಕಾದ ಬಿಗಿಯಾದ ಶೈಲಿ, ಸರಸರನೆ ನಡೆದು ಹೋಗುವ ಘಟನೆಗಳು, ಒಂದರಿಂದ ಇನ್ನೊಂದಕ್ಕೆ ತೆರೆದುಕೊಳ್ಳುವ ಬೆಳವಣಿಗೆಗಳು, ಒಂದು ದಿಕ್ಕಿಗೆ ಹರಿದ ಕಥೆ ಮತ್ತೊಂದು ದಿಕ್ಕಿಗೆ ಹರಿದು ಪುನಃ ಎಲ್ಲಿಗೆ ಬಿಟ್ಟಿತ್ತೋ ಅಲ್ಲಿಗೆ ಬಂದು ಮುಂದುವರಿದು ಅಂತ್ಯಕಾಣುವ ವರಸೆಯೂ ಚೆನ್ನಾಗಿದೆ. ವಿಭಿನ್ನ ಕಥಾವಸ್ತು, ಭಾಷೆ, ಸರಳತೆ ಎಲ್ಲದರಲ್ಲೂ ಆಪ್ತವೆನಿಸುವ ಈ ಕಿರುಕಾದಂಬರಿ ಬಹಳ ಕಡೆ ಕರ್ತೃವು ಎಡವಿದ ಅನುಭವ ನನಗೆ ನೀಡಿತು. ಕಳೆದ ಶತಮಾನ ಕಂಡ ಮೇಧಾವಿ ಆದರೆ ಹತಭಾಗ್ಯನಾದ ವಿಜ್ಞಾನಿ ನಿಕೋಲಾ ಟೆಸ್ಲಾ ೧೯೧೦-೧೨ ರಲ್ಲಿಯೇ ಇಡೀ ವಿಶ್ವಕ್ಕೆ ವಿದ್ಯುತ್ತನ್ನೂ , ಮಾಹಿತಿ ತರಂಗಗಳನ್ನೂ ಬೇಕಾದಷ್ಟು ಪ್ರಮಾಣದಲ್ಲಿ ಉಚಿತವಾಗಿ ಕೊಡುವ ಆಲೋಚನೆ ಹಾಕಿ ಅದಕ್ಕೆ ಆರಂಭಿಕ ಕೆಲಸವನ್ನೂ ಪ್ರಾರಂಭಿಸಿದ್ದ. ಎಡಿಸನ್ನ್ನನ ನಿರಂತರ ಕಿರುಕುಳ, ಆರ್ಥಿಕ ಪ್ರಹಾರ, ರಾಜಕೀಯ, ಮಾರ್ಕೋನಿಯ ಶೀಘ್ರ ಫಲಿತಾಂಶ ಕೊಟ್ಟ ಪ್ರಯೋಗಗಳು ಇವನಿಗೆ ಸಹಾಯ ಸಿಗದಂತೆ ಮಾಡಿ, ದಿವಾಳಿಯೆದ್ದುಹೋದ ಟೆಸ್ಲಾ, ಅಜ್ಞಾತನಾಗಿ ಸತ್ತುಹೋದ. ಅದೇನೋ ಕೆಲವರಿಗೆ ಬಾಳಿನಲ್ಲಿ ಅದೃಷ್ಟ ಎಂಬುದಿರುವುದಿಲ್ಲ. ಕನ್ನಡದ ಪಿ.ಬಿ.ಶ್ರೀನಿವಾಸ್, ಶ್ರೀನಿವಾಸ ರಾಮಾನುಜಂ, ಅಂತಹ ಕೆಲವರು. ಲೇಖಕರ ಕಥೆಗೆ ಇದು ತಳಹದಿಯೂ, ಸ್ಫೂರ್ತಿಯೂ ಆಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕರಣಂ ಅವರ ವೈಜ್ಞಾನಿಕ ಪರಿಕಲ್ಪನೆಯಲ್ಲಿ ಹೊಸದೆಂಬುದೇನೂ ಇಲ್ಲ; ಟೆಸ್ಲಾನಿಗೆ ತೋರಿಸಲು ಅವಕಾಶ ಆಗಲಿಲ್ಲ, ಅದನ್ನೇ ಇಲ್ಲಿ ಬಳಸಿಕೊಂಡಿದ್ದಾರೆ. ಅವಿನಾಶನ ಆವಿಷ್ಕಾರ ಎಂಬಂತೆ ಬಿಂಬಿಸಿ ಟೆಸ್ಲಾನ ನೇರ ಕಾಣಿಕೆಯನ್ನು ಮರೆಮಾಚಿದ್ದು ಯಾಕೋ ತಿಳಿಯಲಿಲ್ಲ. ಅವಿನಾಶನ ವ್ಯಕ್ತಿತ್ವದಲ್ಲಿ ಮಾಂತ್ರಿಕ ವಾಸ್ತವತೆಯ ಬಳಕೆ ಮಾಡಿಕೊಂಡಿದ್ದಾರೆ. ಅದನ್ನೇ ಬಳಸಿ ಈ ಪ್ರಯೋಗ-ಪರಿಕಲ್ಪನೆ- ಪರಿಣಾಮಗಳಿಗೆ ಟೆಸ್ಲಾನನ್ನು ಬೆಸೆದಿದ್ದರೆ ವಾಸ್ತವಕ್ಕೆ ನ್ಯಾಯ ಒದಗಿಸಿದಂತಾಗುತ್ತಿತ್ತು. ಕಥಾ ಸಮಯ ಎಂದು ರಿಯಾಯಿತಿ ತೋರಿಸಬಹುದೇನೋ!! ಶ್ರುತಿ -ಸ್ಮೃತಿಗಳು ವಿದ್ಯುತ್ ತರಂಗದ ರೂಪದಲ್ಲಿ ಒಬ್ಬರಿಂದ ಇನೋಬ್ಬರಿಗೆ ಇಳಿಯಬಹುದಾದರೆ ಅದನ್ನು ಭಾರತೀಯ ಭೌಗೋಲಿಕ ಮಿತಿಗೆ ನಿಯಂತ್ರಿಸುವುದರಲ್ಲಿ ಅರ್ಥವಿಲ್ಲ. ಕಥೆಯ ಮೂಲ ಎಳೆ, “ಹುಟ್ಟು ಮತ್ತದರ ಮೂಲ ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ” ಎಂದಾಗಿರುವುದರಿಂದ, ಒಂದು ಹುಟ್ಟನ್ನು ಬ್ರಾಹ್ಮಣ ಜಾತಿಗೆ ತಗುಲಿ ಹಾಕಲಾಗಿದೆ. ಇಂದಿನ ಕಾಲದ ಅವಶ್ಯಕತೆಯಾದ, ಎಲ್ಲರಿಂದಲೂ ಅನ್ನಿಸಿಕೊಳ್ಳುವ ಬ್ರಾಹ್ಮಣ, ಆ ಜಾತಿಯ ಸ್ಥಿತಿ, ಗತಿ, ಆಚಾರ ವಿಚಾರ ಎಲ್ಲವುಗಳನ್ನೂ ಲೇಖಕರು ಚೆನ್ನಾಗಿ ಬಳಸಿಕೊಂಡು, ಅದಕ್ಕೊಂದಷ್ಟು ಮಸಿಯನ್ನೂ ಬಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಂತ್ರಿಕ ವಾಸ್ತವವನ್ನು ಅವಿನಾಶನಿಗಷ್ಟೇ, ಅವನ ಉದ್ದೇಶಗಳಿಗಷ್ಟೇ ಬಳಸಿಕೊಂಡು, ಅವನನ್ನು ಲಾಂಚ್ ಮಾಡಲು ಇತರ ಪಾತ್ರಗಳನ್ನೂ ದುರ್ಬಲವನ್ನಾಗಿ ಚಿತ್ರಿಸಿರುವುದು ಲೇಖಕರು ಪೂರ್ವತಯಾರಿಯಲ್ಲಿ ಎಡವಿರುವುದನ್ನು ತೋರಿಸುತ್ತದೆ. ಜಾತಿಯಿಲ್ಲದೆಯೂ , ಬ್ರಾಹ್ಮಣ ಜಾತಿಯನ್ನು ಹೊರತುಪಡಿಸಿಯೂ ಈ ಕಥೆಯನ್ನು ವಿಭಿನ್ನ ನೆಲೆಯಲ್ಲಿ ಕಟ್ಟಬಹುದಿತ್ತೇ ಎಂದರೆ ಹೌದು ಎನ್ನಬಹುದು. ಗಾರ್ಸಿಯ ಮಾರ್ಕ್ವೆಜ್ ನ one hundred years of solitude ಅನ್ನು ಓದಿದವರಿಗೆ, ಪಾತ್ರಗಳನ್ನೂ ನಿರ್ವಚನೆಯಿಂದ ಬೆಳೆಸುವುದು ಹೇಗೆ ಎಂದು ತಿಳಿದೀತು. ‘ಪಾತ್ರಗಳ ಮೇಲೆ ಲೇಖಕನಿಗೆ ಹಿಡಿತವಿಲ್ಲ, ಅವು ತೆರೆದುಕೊಂಡಂತೆ ಬರೆಯುತ್ತಾನೆ’ ಎನ್ನುವುದಾದರೆ, ಒಂದು ಪಾತ್ರವನ್ನು ಜಾತಿ ಮತ ಇತ್ಯಾದಿಗಳಿಗೆ ಬಿಗಿದು ಅಧೋಗತಿಯ ಪ್ರಪಾತಕ್ಕೆ ಇಳಿಸುವಾಗ, ಅದಕ್ಕೆ ಸಂವಾದಿಯಾದ ಮತ್ತೊಂದು ಚಿತ್ರವನ್ನು ಕಟ್ಟಿ ಕೊಡಬೇಕಾಗುತ್ತದೆ ಮತ್ತು ಇದೇ ಲೇಖಕರ ‘ಕರ್ಮ' ಕಾದಂಬರಿಯಲ್ಲಿ ಆ ಕೆಲಸವನ್ನು ಅಯಾಚಿತವಾಗಿ ಮಾಡಿದ್ದಾರೆ. ಜೀವನದ ಸ್ವಾರಸ್ಯ, ಜಗತ್ತಿನ ವೈಚಿತ್ರ ಇರುವುದೇ ಅಲ್ಲಿ. ಆದರೆ ಪವನ ಪ್ರಸಾದರ ಈ ಪ್ರಪಂಚದಲ್ಲಿ ನಾಯಕನನ್ನು ಬಿಟ್ಟು ಉಳಿದೆಲ್ಲ ಪಾತ್ರಗಳೂ ದುರ್ಬಲವಾಗಬೇಕು, ಅಂದರೆ ನಾಯಕನ ಹೊಳಹು ಹೆಚ್ಚಿತು ಎಂದು ತಿಳಿದಂತಿದೆ. ಪಾತ್ರಗಳನ್ನ ಚಿತ್ರಿಸಿದ ರೀತಿಯಲ್ಲಿಯೂ ಲೇಖಕರು ಎಡವಿದ್ದಾರೆ ಎಂದೆನಲ್ಲ, ಅದನ್ನು ನೋಡೋಣ. ಈ ಮಾತನ್ನು ಹೇಳುವಾಗ ಪಾತ್ರಗಳನ್ನೂ ಅವುಗಳು ಇದ್ದಂತೆಯೇ ಒಪ್ಪಿಕೊಳ್ಳುವ ಅವಶ್ಯಕತೆಯನ್ನೂ. ಕಾದಂಬರಿಕಾರನ ಸ್ವಾತಂತ್ರ್ಯವನ್ನೂ ಅನುಲಕ್ಷ್ಯದಲ್ಲಿ ಇಟ್ಟುಕೊಂಡೆ ಹೇಳುತ್ತಿದ್ದೇನೆ. ಲೇಖಕರ ಅನುಭವದ ಮೂಸೆಯಿಂದ ಮೂಡಿದ ಪಾತ್ರಗಳೆಂದರೆ ಜಯಶ್ರೀ ಮತ್ತು ಶಿವಕುಮಾರ ಮಾತ್ರ. ಜಯಶ್ರೀ ಪಡುವ ಕಾರ್ಪಣ್ಯಗಳು, ಇಟ್ಟ ಹೆಜ್ಜೆಗಳು, ಅವಳ ಮಿತಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಅವಳ ಅಂತ್ಯ, ಅವಳ ಗಂಡನಾದ ಶಿವಕುಮಾರ, ಅವನ ನಿಷ್ಕ್ರಿಯತೆ, ನಡೆಸಿದ ದೈನೇಸಿ ಜೀವನ ಎಲ್ಲವೂ ವಾಸ್ತವದಿಂದ ಭಿನ್ನವಿಲ್ಲ. ಓದುಗ, ತನ್ನ ಸುತ್ತಲಿನ ಪ್ರಪಂಚದ ಜತೆಗೆ ಗುರುತಿಸಿಕೊಳ್ಳಬಹದು ಹಾಗೂ ಆ ಪಾತ್ರಗಳನ್ನೂ ಚೆನ್ನಾಗಿ ಕಟ್ಟಿಕೊಡಲಾಗಿದೆ. ಮತ್ತೊಂದು ಪ್ರಮುಖ ಪಾತ್ರವಾದ ಗೋಪೀನಾಥರು ತಮ್ಮ ಮಿತಿಯಲ್ಲಿ ತಮಗೆ ಯಾವುದೂ ಅಲ್ಲದ ಅವಿನಾಶನ ಕೈಹಿಡಿದು ಮೇಲೆತ್ತಿ, ಅವನ ಬದುಕಿಗೆ ಒಂದು ದಿಕ್ಕು, ಗುರಿ ತೋರಿಸುವ ತನಕ ಬೆಳೆಸಿ,ಅನಂತರದಲ್ಲಿ ಸ್ವಾರ್ಥಕ್ಕೆ ಪಕ್ಕಾಗಿ ಅವಿನಾಶನಿಗೆ ಮೋಸ ಮಾಡುವ ವಂಚಕನನ್ನಾಗಿ ಚಿತ್ರಿಸಲಾಗಿದೆ. ಅಲ್ಲಿಯೂ ಅವರು ತಮ್ಮ ಮಗಳನ್ನು ಇವನು ಮದುವೆಯಾಗುವ ಅನಿವಾರ್ಯತೆಯಿಂದ ತಪ್ಪಿಸಲು ಹಾಗೆ ಮಾಡಿದರು , ರೇಖಾಳಿಗೆ ಇವನನ್ನು ತಗುಲಿಹಾಕಲು ಮಾಧ್ಯಮವಾದರು, ಮಗಳ ಮದುವೆಗೆ ಕುಹಕದಿಂದ ಆಮಂತ್ರಿಸಿದರು, ಎಂದು ಓದುಗರನ್ನು ನಂಬಿಸಲು ಹರಸಾಹಸ ಪಟ್ಟಿದ್ದಾರೆ. ರೇಖಳಂಥ, ತಿಳಿದ ಬುದ್ಧಿವಂತ ಹೆಣ್ಣಿಗೆ ರೇಪು ಅಪಾದನೆ ಮಾಡಿ ಇವನನ್ನು ಬೀಳಿಸಲು, ವಯೋವೃದ್ಧರಾದ, ಧರ್ಮ ಕರ್ಮಗಳನ್ನು ಅರಿತ ಒಬ್ಬ ಸದ್ಬ್ರಾಹ್ಮಣಾನೇ ಬೇಕಿತ್ತ?.ಇಲ್ಲಿ ಪಾತ್ರಗಳನ್ನೂ ಸ್ವಾಭಾವಿಕವಾಗಿ ಬೆಳೆಯಲು ಬಿಡದೆ ತಮ್ಮ ಒಗ್ಗರಣೆ ಹಾಕಿರುವುದು ರಾಚುತ್ತದೆ. ಇದನ್ನು ಮೀರಿ, ಅವಿನಾಶನ ಬಾಯಲ್ಲಿ “ನಾನು ಬ್ರಾಹ್ಮಣನಲ್ಲದಿದ್ದರೆ ನೀವು ನನಗೆ ಅನ್ನ ಹಾಕುತ್ತಿದ್ದಿರಾ, ಸಹಾಯ ಮಾಡುತ್ತಿದ್ದೀರಾ, ಇಲ್ಲ; ನನ್ನ ಯೋಗ್ಯತೆಯಿಂದ ನೀವು ನನ್ನನ್ನು ಗಳಿಸಿಕೊಂಡಿರಿ, ನಿಮ್ಮ ಅಯೋಗ್ಯತೆಯಿಂದ ನನ್ನನ್ನು ಕಳೆದುಕೊಂಡಿರಿ ‘ಎಂಬ ಮಾತನ್ನು ಆಡಿಸಿ ,ಅದಕ್ಕೆ ಸಂವಾದಿಯಾಗಿ ಗೋಪಿನಾಥರಿಂದ, ಸ್ವಗತವೋ, ಇನ್ನೊಂದೋ ತಂದು ಆ ವಿಚಾರಗಳ ಸಮತೋಲನ ಸಾಧಿಸಲಿಲ್ಲ. ಇದು ನನಗೆ ಪೂರ್ವಾಗ್ರಹ ಎಂದೆನಿಸುತ್ತದೆ. ಮೊದಲು ರೇಖಾಳನ್ನಂತೂ ಒಂದು ಕೃತ್ರಿಮಿಯಾಗಿ ಬೆಳೆಸಿಕೊಂಡು ಹೋಗಿದ್ದಾರೆ, ಅನಂತರದಲ್ಲಿ ಸ್ವಂತಿಕೆಯಿಲ್ಲದ, ಬದುಕಲು ಏನೋ ಮಾಡುವ ಹತಾಶ ಹೆಣ್ಣಾಗಿ ಚಿತ್ರಿಸಿದ್ದಾರೆ. ಮದುವೇಗೆ ಮುಂಚೆ, ಮದುವೆಯ ನಂತರ, ಮದುವೆ ಮುರಿದ ಮೇಲೆ, ಎಲ್ಲಾ ಹಂತಗಳಲ್ಲೂ ಅವಳು ಒಂದು ರೀತಿ ಜಾರಿದ ಹೆಂಗಸು ಎನ್ನುವ ಭಾವ ಬರುವಹಾಗೆ ಚಿತ್ರಿಸಿದ್ದೂ ಅಲ್ಲದೆ ತನ್ನ ಗಂಡನಿಗೆ ಅನುಮಾನ ಬರುವಂತೆ ತಾನೇ ಸುಳಿವುಗಳನ್ನು ಸೃಷ್ಟಿಸಿದಳು ಎಂಬಲ್ಲಿಯವರೆಗೂ ಎಳೆದಿದ್ದಾರೆ. ಇದೂ ಸಹಾ ಒಂದು ವಾಸ್ತವದ ಚೌಕಟ್ಟಿನಲ್ಲಿ ಬೆಳೆಸಿದ ಪಾತ್ರವಲ್ಲ. ತೀರಾ ನಾಟಕೀಯತೆಯನ್ನು ಬಲವಂತವಾಗಿ ಹೇರಿರುವುದು ಓದುಗನಿಗೆ ಭಾರಿ ಎನಿಸದಿರದು. ಆನಂದತೀರ್ಥ ಎಂಬ ಜಯಶ್ರೀಯ ತಂದೆ, ಮಗಳು ಯಾರೊಂದಿಗೋ ಓಡಿಹೋದನಂತರ ನೇಣು ಬಿಗಿದು ಸತ್ತರೆ, ಅದಕ್ಕೂ ಜಯಶ್ರೀಯ ಬಾಯಲ್ಲಿ ಬಾಳು ನೀಗಿಸಲಾಗದ ಹೇಡಿ , ಸಂದರ್ಭವನ್ನು ಬಳಸಿಕೊಂಡು ನೇಣು ಬಿಗಿದು ಸತ್ತ ಎಂದು ಹೇಳಿಸಿ ಕೈತೊಳೆದುಕೊಂಡಿದ್ದಾರೆ;ಹೀಗೆ ಸಾಯುವ ತಂದೆ ತಾಯಿಯರು ಆತ್ಮಗೌರವವಿಲ್ಲದ ಆತ್ಮವಂಚನೆ ಬ್ರಾಹ್ಮಣರು ಎಂದಾಯಿತು... ಕಿರು ಪಾತ್ರವಾಗಿ ಬಂದುಹೋಗುವ ಸುಶ್ಮಾಳನ್ನೂ ಬಿಡದೆ, ಅವಳೂ ಯಾರೊಂದಿಗೋ ಒಂದು ರಾತ್ರಿ ಮಲಗಿ ವ್ಯಭಿಚಾರ ಮಾಡಿದಳು ಎಂದೂ ತೋರಿಸಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಭ್ರಷ್ಟ ಮನಸ್ಸಿನ ಆಷಾಢಭೂತಿಗಳು ಎಂದಾಯಿತು ಅನಿಸುವಂತಿದೆ ಅವಿನಾಶನ ಪಾತ್ರ ಈ ಕಾದಂಬರಿಯ ಕೇಂದ್ರಬಿಂದು. ಪಾತ್ರದ ಹುಟ್ಟು, ಬೆಳವಣಿಗೆ, ವಿಸ್ತಾರ ಎಲ್ಲಾ ಚೆನ್ನಾಗಿದೆ. ಇಲ್ಲವೆನ್ನಲಾಗದು. ಅವನ ದೂಷಣೆಗಳು, ಹೇಳಿಕೆಗಳು, ಎಲ್ಲವೂ ಅವನೊಬ್ಬ ವಿಕ್ಷಿಪ್ತ ವ್ಯಕ್ತಿ ಎಂದು ತಿಳಿದು ಬರುತ್ತದೆ. ಅವನ ಕಾಲೇಜಿನ ಕೆಲವು ಸಂದರ್ಭಗಳು, ಅವನ ಸ್ಕಾಲರ್ಷಿಪ್ ನ ಸಂದರ್ಶನ ಪರಿಣಾಮಕಾರಿಯಾಗಿಲ್ಲ. ಅಲ್ಲಿನ ಪ್ರಶ್ನೆಗಳು, ಇವನ ಉತ್ತರ, ಅವರ ನಿರ್ಧಾರ, ಮಾತುಕತೆಗಳು ಒಂದು ನಿಜ ಸಂದರ್ಶನದ ಅನುಭವವನ್ನು ಓದುಗನಿಗೆ ಕೊಡುವುದಿಲ್ಲ. ಹಲವ್ರು ಸಂದರ್ಶನಗಳನ್ನು ಎದುರಿಸಿದವನಾಗಿ, ಹಲವಾರು ಸಂದರ್ಶನಗಳನ್ನು ಮಾಡಿದವನಾಗಿ ಹೇಳುತ್ತೇನೆ; ಇಲ್ಲಿ ಇನ್ನಷ್ಷ್ಟು ಪರಿಶ್ರಮದ ಅವಶ್ಯಕತೆ ಇತ್ತು. ಪೇಲವತೆ ಇದೆ. ತನ್ನ ಅಲೌಕಿಕ ಶಕ್ತಿಯಿಂದ ಏನೇನನ್ನೋ ಗ್ರಹಿಸುವ, ಇತರರ ಮನಸ್ಸನ್ನು ಓದಬಲ್ಲ ಅವಿನಾಶನ ಆ ಗ್ರಹಿಕೆಗಳಿಗೆ ಸಂವಾದಿಯಾದ ಆಲೋಚನೆಗಳನ್ನೇ ಬೆಳೆಸದ ಕಾರಣ, ಈ ಕಾದಂಬರಿ, ಇಲ್ಲಿ ಬರುವ “ ಬ್ರಾಹ್ಮಣ” ಪಾತ್ರಗಳ ಬಗ್ಗೆ ಒಂದು ಘನವಾದ ತಪ್ಪು ಕಲ್ಪನೆಯನ್ನು ತಪ್ಪಾಗಿ ಮೂಡಿಸುವ ಪ್ರಮಾದವೆಸಗುತ್ತವೆ. ಕರ್ಮ ಕಾದಂಬರಿಯಲ್ಲಿ ಇರುವ ಸತ್ಯನಿಷ್ಠುರತೆ ಇಲ್ಲಿ ಪವನಪ್ರಸಾದರಿಗೆ ಸಿದ್ಧಿಸಿಲ್ಲ. ಈ ಕಾದಂಬರಿಯಲ್ಲಿ ಪಾತ್ರಗಳೆಲ್ಲವೂ ಕರಣಂ ಪವನ ಪ್ರಸಾದರ ಶಾಪಕ್ಕೆ “ಗ್ರಸ್ತ” ವಾಗಿವೆ..ಇಡೀ ಕಾದಂಬರಿಯೇ ಒಂದು ಅಜೇಂಡಾವೇನೋ ಅನ್ನಿಸಿಬಿಡುತ್ತದೆ, ಹಾಗೂ ವೈಜ್ಞಾನಿಕ ಆವಿಷ್ಕಾರದ ಕಥೆಯ ಎಳೆ ಅದಕ್ಕೆ ಕೇವಲ ದುರ್ಬಲ ಆಧಾರ ಒದಗಿಸುವಂತಿದೆ. ವೈಜ್ಞಾನಿಕ ವಿವರಣೆಗಳ ಬಗೆಗೂ ಬರೆಯುವುದಾದರೆ, ಸರಳವಾಗಿ ವಿವರಿಸುವ ಪ್ರಯತ್ನದಲ್ಲಿ ಒಂದಷ್ಟು ಮುಖ್ಯವಾದ ಅಂಶಗಳನ್ನು ಉಪೇಕ್ಷಿಸಿದ್ದಾರೆ. ಸಾಮಾನ್ಯ ಓದುಗನಿಗೆ ಅದರ ಅವಶ್ಯಕತೆ ಇಲ್ಲ. ಪರಿಪೂರ್ಣತೆಯ ದೃಷ್ಟಿಯಿಂದ ಬೇಕಿತ್ತೇನೋ ಎಂದು, ಭೌತಶಾಸ್ತ್ರದಲ್ಲಿ ಪ್ರವೇಶ ಇರುವ ಕೆಲವರಿಗೆ ಅನ್ನಿಸಬಹುದು. ದ್ರವ್ಯ-ಶಕ್ತಿಯ ಸಮನ್ವಯತೆಯನ್ನು, ವಿದ್ಯುತ್ತಿನ ವಿವಿಧ ಅಲೆಗಳ ತರಂಗಾಂತರಗಳನ್ನೂ ಹೇಗೆ ಪ್ರತ್ಯೇಕಿಸಿ ಬಳಸಬೇಕು, ವಿವಿಧ ಉಪಕರಣಗಳು ತರಂಗಾಂತರದ ವ್ಯತ್ಯಾಸವಿದ್ದಾಗ ಅದನ್ನು ಪ್ರಸರಿಯುವ ಟ್ರಾನ್ಸ್ಮಿಟರ್ ನಿಂದ ಹೇಗೆ ಪಡೆದುಕೊಳ್ಳುತ್ತವೆ? LED ಬಲ್ಬು ಮತ್ತು ತಂತಿಯ ಸುರುಳಿಯ ಬಲ್ಬುಗಳು ಒಂದೇ ಟ್ರಾನ್ಸ್ಮಿಟರ್ ನ ತರಂಗಗಳನ್ನು ಪಡೆದು ಹೇಗೆ ಕೆಲಸ ಮಾಡಬಲ್ಲವು, inductive ಟೆಕ್ನಾಲಜಿಯ ವಿವರಣೆ ಸರಿಯಾ? ಎಂಬ ಹಲವಾರು ಸಂದೇಹಗಳು ಬಂದು ಹೋದವು. ಇವು ಬೇಕಿಲ್ಲದ ಆಕ್ಷೇಪಣೆಗಳು. ಪರಿಪೂರ್ಣತೆಯ ದೃಷ್ಟಿಯಿಂದ ಮುಂದಿನ ಆವೃತ್ತಿಯಲ್ಲಿ ಗಣಿಸಬಹುದು. ಇಷ್ಟೆಲ್ಲಾ ಹೇಳಿದಮೇಲೆಯೂ, ಇದೊಂದು ಉತ್ತಮವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.ಓದುಗನನ್ನು ಚಿಂತನೆಗೆ ಹಚ್ಚುವ, ವಿಭಿನ್ನ ಕಥಾವಸ್ತು ಇರುವ ಕಾದಂಬರಿ. ಸುದೀರ್ಘವಾದ ಅವಲೋಕನ ಎಲ್ಲಿಯೂ ಇಲ್ಲದ ಕಾರಣ, ನನಗೆ ತಿಳಿದಷ್ಟು ನಾನಿಲ್ಲಿ ದಾಖಲಿಸಿದ್ದೇನೆ. (ಯಾವುದೇ ವ್ಯಕ್ತಿ ಇನ್ನೊಬ್ಬನಿಗೆ ಸಹಾಯ ಮಾಡುವಾಗ ಅಲ್ಲಿ ಹೆಚ್ಚು ಲೆಕ್ಖಕ್ಕೆ ಬರುವುದು ಸಹಾಯ ಪಡೆಯುವವನು ನಮ್ಮ ಮನೋಧರ್ಮಕ್ಕೆ ಎಷ್ಟು ಸ್ಪಂದಿಸುತ್ತಾನೆ ಎಂಬುದು. ಅಲ್ಲಿ ಜಾತಿಯೊಂದು ಅಂಶವಷ್ಟೇ. ಅದನ್ನು ಬಳಸಿ ಇಡೀ ಬ್ರಾಹ್ಮಣ ಜಾತಿಯಮೇಲೆ ಗೂಬೆ ಕೂರಿಸುವ ಅವಶ್ಯಕತೆ ಇರಲಿಲ್ಲ.ಅಸಲಿಗೆ, ಅವಿನಾಶ ಬ್ರಾಹ್ಮಣನೇ ಅಲ್ಲ. ತಾಯಿಯ ಸಂಸ್ಕಾರ ಅವನಿಗೆ ಸಿಕ್ಕಿದ್ದಷ್ಟೇ. ಜಿ.ಎಸ.ಶಿವರುದ್ರಪ್ಪ ಅವರನ್ನು ಬೆಳೆಸಿದ ತ.ಸು. ಶ್ಯಾಮರಾಯ, ಕು.ವೇಂಪು ಅವರನ್ನು ಬೆಳೆಸಿದ ಟಿ.ಎಸ. ವೆಂಕಣ್ಣಯ್ಯ , ಅಂಬೇಡ್ಕರ್, ಹೀಗೆ ಚಾಣಕ್ಯ-ಚಂದ್ರಗುಪ್ತನಿಂದ ಇತ್ತೀಚಿನವರೆಗೂ ಉದಾಹರಣೆಗಳನ್ನು ಕೊಡಬಹುದು.ಲೇಖಕನಿಗೆ, ತನ್ನ ಪ್ರಸ್ತುತ ಸಮಾಜದ , ಶೋಷಣೆಗೆ ಗುರಿಯಾಗುತ್ತಿರುವ ಒಂದು ವರ್ಗದ ಕುರಿತು ಸಾಮಾಜಿಕ ಜವಾಬ್ದಾರಿ ಇರಲಿ ಎಂಬುದಕ್ಕೆ ಈ ಮಾತು) --ಸುದರ್ಶನ ಗುರುರಾಜರಾವ

Wednesday, August 5, 2020

ಅಸ್ಪಷ್ಟ ತಲ್ಲಣಗಳು.......ಟಿ.ಎಸ್.ಶ್ರವಣಕುಮಾರಿ

‘ಅಸ್ಪಷ್ಟ ತಲ್ಲಣಗಳು’ ಎನ್ನುವ ಕಥಾಸಂಕಲನಕ್ಕಾಗಿ ಶ್ರೀಮತಿ ಟಿ.ಎಸ್. ಶ್ರವಣಕುಮಾರಿಯವರನ್ನು ಕನ್ನಡ ಓದುಗರು ಅಭಿನಂದಿಸಲೇಬೇಕು. ಈ ಕಥಾಸಂಕಲನದಲ್ಲಿಯ ಹನ್ನೆರಡು ಕಥೆಗಳು ಕನ್ನಡ ಸಾಹಿತ್ಯಕ್ಕೆ ಹೊಸ ಬಗೆಯ ಕಥೆಗಳಾಗಿವೆ. ಶ್ರವಣಕುಮಾರಿಯವರ ಈ ಕಥಾಸಂಕಲನವನ್ನು ಪ್ರಕಟಿಸುವ ಮೂಲಕ ‘ಮೈತ್ರಿ ಪ್ರಕಾಶನ’ವು ಕನ್ನಡ ಓದುಗರಿಗೆ ಒಂದು ಉಪಕಾರವನ್ನು ಮಾಡಿದೆ. ಆದುದರಿಂದ ಈ ಕಥಾಸಂಕಲನದ ಪ್ರಕಾಶಕರಾದ ‘ಮೈತ್ರಿ ಪ್ರಕಾಶನ’ದ ಒಡತಿ ಶ್ರೀಮತಿ ಅಂಜಲಿ ದೇಸಾಯಿಯವರಿಗೆ ನನ್ನ ಧನ್ಯವಾದಗಳು. ಶ್ರವಣಕುಮಾರಿಯವರ ಕಥೆಗಳನ್ನು ಬಿಡಿಬಿಡಿಯಾಗಿ ಓದಿದಾಗ ಈ ಕಥೆಗಳನ್ನು ಪೋಣಿಸುವ ಸೂತ್ರ ಒಂದಿದೆ ಎಂದು ಹೊಳೆಯಲಿಕ್ಕಿಲ್ಲ. ಇಲ್ಲಿಯ ಕಥಾಶೈಲಿಯ ಅನನ್ಯತೆ, ಕಥಾರಚನೆಯ ಹೊಸತನ ಹಾಗು ಕಥಾನಕಗಳ motif ಇವು, ಈ ಕಥೆಗಳನ್ನು ಒಟ್ಟಾಗಿ ಓದಿದಾಗ ಮಾತ್ರ ವೇದ್ಯವಾಗುತ್ತವೆ. ಶ್ರವಣಕುಮಾರಿಯವರ ಹನ್ನೆರಡು ಕಥೆಗಳಲ್ಲಿ ಹತ್ತು ಕಥೆಗಳು ಹೆಂಗೂಸುಗಳ ಕಥೆಗಳು. ಈ ಹತ್ತು ಕಥೆಗಳಲ್ಲಿ ಎರಡು ಕಥೆಗಳು ಕೆಳಸ್ತರದ ಹೆಂಗಸರ ಕಥೆಗಳಾಗಿವೆ. ಉಳಿದ ಎಂಟು ಕಥೆಗಳಲ್ಲಿ ಬರುವ ಮಹಿಳೆಯರು ಆಧುನಿಕರು, ದೊಡ್ಡ ನಗರಗಳಲ್ಲಿ ಕೆಲಸ ಮಾಡುವವರು, ಸ್ವತಂತ್ರ ವಿಚಾರಗಳುಳ್ಳವರು, ಆಧುನಿಕ ಜೀವನಶೈಲಿಯನ್ನು ರೂಢಿಸಿಕೊಂಡವರು ; ಕೆಲವರು ಗಂಡುದರ್ಪವನ್ನು ಎದುರಿಸಿ ವಿಚ್ಛೇದಿತರಾಗಿ ಬಾಳುತ್ತಿರುವವರು;ಇನ್ನು ಕೆಲವರು ಗಂಡನ ಮರ್ಜಿಯನ್ನು ಅನುಸರಿಸಿ ಬದುಕು ಸಾಗಿಸುತ್ತಿರುವವರು. ಮೊದಲನೆಯ ಪ್ರಕಾರದಲ್ಲಿ ಬರುವವರು ಸ್ವತಂತ್ರ ಜೀವನವನ್ನು ನಡೆಸುತ್ತಿರುವ ಕಾರಣದಿಂದಾಗಿಯೇ ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಇವರ ಕೌಟಂಬಿಕ ಬದುಕಿನಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿ ಆಪ್ತತೆಯ ಬೆಸುಗೆ ಇಲ್ಲಿ ಕಳಚಿ ಹೋಗಿದೆ. ಇವಳು ಒಂಟಿ ಹೆಣ್ಣು, ಅಸಹಾಯಕಳು. ಎರಡನೆಯ ಪ್ರಕಾರದಲ್ಲಿರುವವರು ಆರ್ಥಿಕ ವಿಷಯದಲ್ಲಿ ಗಂಡನ ಅನುಮತಿಗಾಗಿ ಕಾಯಬೇಕಾಗಿರುವ ಕಾರಣದಿಂದಾಗಿ ಮಾನಸಿಕ ದುಗುಡದಲ್ಲಿದ್ದಾರೆ. ಇದೂ ಸಹ ಆಪ್ತತೆಯ ಅಭಾವಕ್ಕೆ ಹಾಗು ಅದೃಶ್ಯ ಒಳಬಿರುಕಿಗೆ ಕಾರಣವಾಗಿದೆ! ಈ ಅಂಶಗಳನ್ನು ಜಾಣತನದಿಂದ ಹೆಣೆದಿರುವ ಈ ಕಥೆಗಳ ಒಂದು ಪಕ್ಷಿನೋಟವನ್ನು ನೋಡೋಣ: ಮೊದಲನೆಯ ಕಥೆಯ (‘ಅವಳ ಮಗಳು’) ಮೊದಲಲ್ಲಿಯೇ ಗಂಡ ಹಾಗು ಹೆಂಡತಿ ಬೇರೆಯಾಗಿ ಬದಕುತ್ತಿರುವ ಪ್ರಸಂಗವಿದೆ. ಪುಟ್ಟ ಮಗಳು ತಾಯಿಯ ಜೊತೆ ಬೆಳೆಯುತ್ತಾಳೆ. ಮಗಳು ಬೆಳೆಯುತ್ತ ಬಿನ್ ದಾಸ್ ಆದಾಗ, ಮಗಳನ್ನು ಸಂಭಾಳಿಸಲಾಗದ ಸಂಕಟವನ್ನೂ ಇವಳು ಅನುಭವಿಸಬೇಕು. ಗಂಡ ಇವಳನ್ನು ಭೌತಿಕವಾಗಿ ಹಾಗು ಮಾನಸಿಕವಾಗಿ ದೂರೀಕರಿಸಿದ್ದಾನೆ ; ಮಗಳು ತಾಯಿಯನ್ನು ಮಾನಸಿಕವಾಗಿ ದೂರ ಮಾಡಿ, ತನ್ನ ಲೋಕದಲ್ಲೇ ತಾನಿದ್ದಾಳೆ. ಅಲ್ಲಿ ತಾಯಿಗೆ ಪ್ರವೇಶವಿಲ್ಲ. ಗಂಡ ಹಾಗು ಮಗಳು ಇಬ್ಬರಿಗೂ ಅನಾಪ್ತಳಾದ ಒಂಟಿ ಹೆಣ್ಣುಮಗಳು ಎಂತಹ ಮಾನಸಿಕ ಬಿಕ್ಕಟ್ಟಿನಲ್ಲಿ ಒದ್ದಾಡುತ್ತಿರಬೇಕು! ಇಷ್ಟಲ್ಲದೆ, ಯಾರ ನೆರವಿಲ್ಲದೆ ದಿನ ನೂಕುತ್ತಿರುವ ಒಂಟಿ ಹೆಣ್ಣಿನ ದೈನಂದಿನ ಸಮಸ್ಯೆಗಳು ಬೇರೆ. ಇವೆಲ್ಲ ಸಾಮಾನ್ಯ ಲೇಖಕನ ಕೈಯಲ್ಲಿ ಸಿಕ್ಕರೆ, ಅದೊಂದು ರಾಮಾಯಣವಾಗುತ್ತದೆ. ಆದರೆ ಶ್ರವಣಕುಮಾರಿಯವರ ಪ್ರತಿಭೆಯನ್ನು ನಾವು ಮೆಚ್ಚಬೇಕು! ಕಥೆಯನ್ನು ರೂಟಿನ್ ಎಂಬಂತೆ ಸಹಜವಾಗಿ ಪ್ರಾರಂಭಿಸುವ ಅವರ ಚತುರತೆ, ಕಥೆಯನ್ನು ಬೆಳೆಯಿಸುವ ಅವರ ವಿಧಾನ, ಕಥಾವಿಸ್ತಾರದ ಭಯವಿಲ್ಲದೆ ಅವಶ್ಯವಿರುವ ಎಲ್ಲವನ್ನು ಬರೆಯುವ ಹಾಗು ಅನವಶ್ಯವಾದ ಏನನ್ನೂ ಬರೆಯದಿರುವ ಅವರ ಕಥನಕುಶಲತೆ ಇವು ಓದುಗನನ್ನು ಸೆರೆ ಹಿಡಿಯುತ್ತವೆ. ಇದಲ್ಲದೆ ಶ್ರವಣಕುಮಾರಿಯವರ ಕಥೆಗಳಲ್ಲಿ ಮನೋವಿಜ್ಞಾನವು ಹಾಸುಹೊಕ್ಕಾಗಿದೆ. ಒಂದೋ ಅವರು ಮನೋವಿಜ್ಞಾನದ ಅಧ್ಯಯನವನ್ನು ಮಾಡಿರಬೇಕು, ಇಲ್ಲಾ ಮನೋವಿಜ್ಞಾನದಲ್ಲಿ ಇವರಿಗೆ ಒಳನೋಟವಿದೆ. ಹೀಗಾಗಿ ಇಲ್ಲಿಯ ಕಥೆಗಳ ಪಾತ್ರಗಳ ನಡೆಯನ್ನು, ಒಳತೋಟಿಯನ್ನು ಅವರು ಬರೆಯುವಾಗ, ಓರ್ವ ಮನೋವಿಜ್ಞಾನಿ ಇದನ್ನೆಲ್ಲ ಬರೆಯುತ್ತಿದ್ದಾನೆ ಎನ್ನುವ ಅನುಭವ ಓದುಗನಿಗೆ ಆಗುತ್ತದೆ! ಎರಡನೆಯ ಕಥೆಯಾದ ‘ಅಸ್ಪಷ್ಟ ತಲ್ಲಣಗಳು’ ಸಹ ಇಂತಹದೇ ಕಥೆ. ಗಂಡನಿಲ್ಲದೆ, ಮಗಳನ್ನು ಬೆಳೆಯಿಸಿದ ಮಹಿಳೆಯ ಕಥೆ ಇದು. ಮಗಳು ಮನೆ ಬಿಟ್ಟು ತನ್ನ ಪ್ರಿಯಕರನ ಜೊತೆಗೆ ಹೋದಾಗ, ತಾಯಿಯ ಒಡಲಬೇಗುದಿಯೇ ಈ ಕಥೆಯ ವಸ್ತು. ಈ ಅನಾಪ್ತತೆ ಅನ್ನುವುದು ಕೇವಲ ದಂಪತಿಗಳ ನಡುವೆ ಅಥವಾ ತಂದೆತಾಯಿ ಹಾಗು ಮಕ್ಕಳ ನಡುವೆ ನಡೆಯುವ ಸಂಗತಿಯಲ್ಲ. ಬಾಲ್ಯದಲ್ಲಿ ಕೂಡಿ ಬೆಳೆದವರು, ದೊಡ್ಡವರಾಗಿ, ತಮ್ಮ ತಮ್ಮ ಸಂಸಾರದಲ್ಲಿ ಮಗ್ನರಾದಾಗ ಅವರಲ್ಲಿ ಕುಟುಂಬಸ್ವಾರ್ಥ ಬೆಳೆಯುವುದು ಸಹಜಸಾಧ್ಯ. ಅಂತಹ ಪ್ರಸಂಗವೊಂದು ‘ಪಾಲು’ ಎನ್ನುವ ಕಥೆಯಲ್ಲಿದೆ. ಇಲ್ಲಿಯೂ ಸಹ ಎಲ್ಲ ಸೋದರರು ಒಂದು ಕಡೆ ನಿಂತು ಹುಟ್ಟಿದ ಮನೆಯನ್ನು ಮಾರಾಟ ಮಾಡಲು ನಿಂತಾಗ, ಅವರ ಸೋದರಿ ತಲ್ಲಣಗೊಳ್ಳುತ್ತಾಳೆ, ಅಸಹಾಯಕತೆಯನ್ನು ಅನುಭವಿಸುತ್ತಾಳೆ. ಈ ಕಥೆಯ ಸೋದರರಲ್ಲಿ ಒಬ್ಬಾತನು ಒಳ್ಳೆಯ ನೌಕರಿಯನ್ನು ಮಾಡುತ್ತ ದೂರದೂರಿನಲ್ಲಿದ್ದಾನೆ. ಇನ್ನೊಬ್ಬನಿಗೆ ಸಂಪಾದನೆ ಸಾಲದು. ಆದರೆ ಇವರಿಬ್ಬರಿಗೂ ಮನೆ ಮಾರಾಟ ಹಾಗು ಪಾಲು ಬೇಕೇ ಬೇಕು. ಇವರ್ಯಾರಿಗೂ ಇಲ್ಲದ ತವರುಮನೆಯ ಪ್ರೇಮ,ಆ ಅಸಹಾಯಕ ಸೋದರಿಗೆ ಮಾತ್ರ ಇದೆ. ಇನ್ನೊಬ್ಬ ಸೋದರಿಯ ಕಥೆ ಸ್ವಲ್ಪ ಭಿನ್ನವಾಗಿದೆ. ಇವಳ ಪ್ರೀತಿಯ ಸೋದರ, ಮೊದಲೆಲ್ಲ ಒಳ್ಳೆಯ ರೀತಿಯಲ್ಲಿದ್ದವನು ಇದೀಗ ಭಿಕಾರಿಯಾಗಿದ್ದಾನೆ. ಅವನಿಗೆ ಈಕೆ ಆಗಾಗ ಸಹಾಯ ಮಾಡುತ್ತಿರುತ್ತಾಳೆ. ಆದರೆ ಕೊನೆಕೊನೆಗೆ ಈಕೆಯ ಗಂಡನಿಗೆ ಇದರಿಂದ ಅಸಮಾಧಾನವಾಗುತ್ತಿದೆ. ಹೆಂಡತಿಯು ಗಂಡನ ಮೇಲೆ ಆರ್ಥಿಕವಾಗಿ ಅವಲಂಬಿತಳಾಗಿದ್ದರೆ, ಸಮಸ್ಥಾನದಲ್ಲಿ ನಿಲ್ಲದಾದಾಗ ಅವಳೂ ಸಹ ಒಂದು ರೀತಿಯಲ್ಲಿ ಒಂಟಿಯೇ! ‘ಕಟ್ಟೆಯ ಮೇಲೆ ಕೂತವನು’ ಎನ್ನುವ ಈ ಕಥೆಯಲ್ಲಿ ಗಂಡ ತನಗೆ ಏನೆನ್ನುತ್ತಾನೊ ಎನ್ನುವದೊಂದೇ ಈ ಹೆಣ್ಣುಮಗಳ ಒಳಕುದಿಯಲ್ಲ, ತನ್ನ ಸೋದರ ತನ್ನ ಮನೆಗೆ ಬಂದು ಬಿಟ್ಟರೆ, ತಾನು ಹೇಗೆ ಆತನನ್ನು ಎದುರಿಸಬೇಕು ಎನ್ನುವುದೂ ಸಹ ಇವಳ ಸಂಕಟವಾಗಿದೆ. ಗಂಡನ ಅಕಾಲ ನಿಧನದ ಬಳಿಕ, ಎರಡು ವರ್ಷದ ಮಗನನ್ನು ಒಂಟಿಯಾಗಿ ಬೆಳೆಯಿಸಿದ ಮಹಿಳೆಯ ಕಥೆ ‘ಕಿತ್ತ ಕೊಂಡಿ’ಯಲ್ಲಿದೆ. ಇವಳ ಮಗ ಅಮೆರಿಕಾದಲ್ಲಿದ್ದಾನೆ. ಅಲ್ಲಿಯ ಹುಡುಗಿಯೊಬ್ಬಳನ್ನು ಮದುವೆಯಾಗುವ ತರದೂದಿನಲ್ಲಿ ಅವನಿದ್ದಾನೆ. ಇವಳಿಗೆ ಮಗ ಎಲ್ಲಿ ತನ್ನನ್ನು ಬಿಟ್ಟು ಅಲ್ಲಿಯೇ ನೆಲೆಸಿಬಿಡುತ್ತಾನೊ ಎನ್ನುವ ಹೆದರಿಕೆಯಾದರೆ, ಇವಳ ಜೊತೆಗೆ ಇರುವ ಇವಳ ಮುದುಕಿ ಅವ್ವನಿಗೆ ತನ್ನ ಮಗಳು ತನ್ನನ್ನು ಬಿಟ್ಟು ಎಲ್ಲಿ ಅಮೆರಿಕಾಕ್ಕೆ ಹೋಗಿ ಬಿಡುವಳೊ ಎನ್ನುವ ಹೆದರಿಕೆ. ಇಂತಹ ಹೆದರಿಕೆಯಲ್ಲಿ ಜೀವಿಸುವ ಎರಡು ಹೆಣ್ಣುಗಳ ಕಥೆ ಇಲ್ಲಿದೆ. ಆದರೆ ಇದಷ್ಟೇ ಅಲ್ಲ ; ಒಂಟಿ ಹೆಣ್ಣಿಗೆ ದೈನಂದಿನ ಸಣ್ಣಪುಟ್ಟ ಸಮಸ್ಯೆಗಳೂ ಸಹ ದೊಡ್ಡ ಸಂಕಟಗಳೇ ಆಗಿರುತ್ತವೆ. ತನ್ನ ಕಚೇರಿಯಲ್ಲಿಯ ಗಂಡುಗಳ ಕಣ್ಣುಗಳನ್ನು ಎದುರಿಸಬೇಕು, ಅವರ ಕೊಂಕು ಮಾತುಗಳನ್ನು ನಿಭಾಯಿಸಬೇಕು, ತನ್ನ ಹಳೆಯ ಕುಪ್ಪುಸದ ಹುಕ್ಕು ಎಲ್ಲಿ ಕಳಚೀತೊ ಎನ್ನುವ ಹೆದರಿಕೆಯಿಂದ ಅಲ್ಲಿ ಯಾವಾಗಲೂ ಒಂದು ನಿಗಾ ಇಟ್ಟಿರಬೇಕು, ಇವೆಲ್ಲ ಈ ಹೆಣ್ಣುಜೀವವನ್ನು ಸತತವಾಗಿ ಚುಚ್ಚುತ್ತಲೇ ಇರುತ್ತವೆ. ಅನಾಪ್ತತೆ, ಒಂಟಿತನ ಹಾಗು ಅದರಿಂದ ಹುಟ್ಟುವ ಅಸಹಾಯಕತೆ ಮತ್ತು ಖಿನ್ನತೆ ಇವನ್ನಷ್ಟೇ ಲೇಖಕಿ ಈ ಕಥೆಗಳ ಮೂಲಕ ಚಿತ್ರಿಸುತ್ತಿದ್ದಾಳೆ ಎನ್ನುವುದು ಸರಿಯಲ್ಲ. ಇವುಗಳನ್ನು ಉಪಶಮನಗೊಳಿಸುವ ಮದ್ದೂ ಸಹ ಲೇಖಕಿಗೆ ಗೊತ್ತು. ಅದು ಎರಡು ಜೀವಿಗಳ ನಡುವೆ ನಡೆಯಬೇಕಾದ ಆಪ್ತಸಂವಹನ. ಈ ಮದ್ದನ್ನು ಪ್ರತಿ ವ್ಯಕ್ತಿ ತಾನೇ ಕಂಡುಕೊಳ್ಳಬೇಕಾಗುತ್ತದೆ. ‘ಜೀವನ್ಮುಖಿ’ ಎನ್ನುವ ಕಥೆ ಈ ಅಂಶವನ್ನು ಸಮರ್ಥವಾಗಿ ಹೇಳುತ್ತದೆ. ಗಂಡನಿಗೆ ವರ್ಗಾವಣೆಯಾದಲ್ಲೆಲ್ಲ ಹೋಗಬೇಕಾದ ನೌಕರಿ. ಹೆಂಡತಿ ಒಬ್ಬಳೇ ಮಗಳನ್ನು ಬೆಳೆಯಿಸುವ ಭಾರವನ್ನು ಹೊತ್ತುಕೊಂಡು ತಮ್ಮ ನಗರದಲ್ಲಿ ಉಳಿಯುತ್ತಾಳೆ. ಗಂಡ ಯಾವಾಗಲೋ ಒಮ್ಮೆ ಬಂದು ಇವರನ್ನು ಭೆಟ್ಟಿಯಾಗುವನು. ಹೀಗಾಗಿ ಪುಟ್ಟ ಮಗಳ ಜೊತೆಗಂತೂ ಇವನ ಸಂವಹನ ಶೂನ್ಯ ಪ್ರಮಾಣದಲ್ಲಿದೆ. ಹಗಲಿನಲ್ಲಿ ಈತನಿಗೆ ಹೆಂಡತಿಯ ಜೊತೆಗೆ ಮಾತನಾಡಲು ಸಮಯವಿಲ್ಲ; ರಾತ್ರಿಯಲ್ಲಿ ಗಳಿಗೆಯ ಕಾರ್ಯಕ್ರಮಕ್ಕೆ ಮಾತೇಕೆ ಬೇಕು?! ಬೇಸತ್ತ ಹೆಂಡತಿಯು ನಿರ್ಭಿಡೆಯಿಂದ ಗಂಡನನ್ನು ದೂರಿ, ಆಶ್ರಮವನ್ನು ಸೇರುವ ತನ್ನ ನಿರ್ಧಾರವನ್ನು ಇವನಿಗೆ ಹೇಳುತ್ತಾಳೆ. ಪುಟ್ಟ ಮಗಳನ್ನು ಬೋರ್ಡಿಂಗ ಸ್ಕೂಲಿನಲ್ಲಿ ಇಡುವ ಅನಿವಾರ್ಯತೆ ಬರುತ್ತದೆ. ಇವನ ಮನೆಗೆ ಅಕಸ್ಮಾತ್ತಾಗಿ ಬರುವ ಅತಿಥಿಯೊಬ್ಬ ತನ್ನ ಹಾಗು ತನ್ನ ಪುಟ್ಟ ಮಗಳೊಡನೆ ಸಾಧಿಸಿದ ಸಲುಗೆಯನ್ನು ನೋಡಿ, ಜೀವನವನ್ನು ಹೊಸದಾಗಿ ಅರ್ಥ ಮಾಡಿಕೊಂಡ ಈತ ‘ಜೀವನ್ಮುಖಿ’ಯಾಗಿ ಪರಿವರ್ತನೆಯಾಗುತ್ತಾನೆ. ತನ್ನ ಮಗಳಿಗೆ ವಾತ್ಸಲ್ಯವನ್ನು ಕೊಟ್ಟು, ಅವಳ ಪ್ರೀತಿಯನ್ನು ಪಡೆಯಲು ಸಮರ್ಥನಾಗುತ್ತಾನೆ. ಈ ಎಲ್ಲ ಕಥೆಗಳಿಗಿಂತ ಭಿನ್ನವಾದದ್ದು ‘ಕಾಮಿನಿಯೂ ಚಿಕನ್ ಬಿರ್ಯಾನಿಯೂ’ ಎನ್ನುವ ಕಥೆ. ಹಸಿದ ಹೊಟ್ಟೆಗೆ ತುಸು ಕೂಳು ಹಾಕಲು ಸೂಳೆಯೊಬ್ಬಳು, ಬೀದಿ ಬದಿಯಲ್ಲಿ ಗಿರಾಕಿಗಳನ್ನು ಹುಡುಕುತ್ತ ನಿಂತಿದ್ದಾಳೆ. ಮೋಟರ ಸಾಯಕಲ್ ಮೇಲೆ ಬಂದ ಹುಡುಗನೊಬ್ಬ ಇವಳಿಗೆ ಚಿಕನ್ ಬಿರಿಯಾನಿಯ ಆಸೆ ಹಚ್ಚುತ್ತಾನೆ. ಅವನ ಮೋಟರ ಸೈಕಲ್ ಮೇಲೆ ಕುಳಿತಾಗ ಈ ಹುಚ್ಚು ಹೆಣ್ಣು ರಂಗೀನ ಕನಸುಗಳನ್ನು ಕಾಣುತ್ತಾಳೆ. ಇವಳನ್ನು ಭೋಗಿಸಿದ ಬಳಿಕ ಆತ ಮೋಸದಿಂದ ಓಡಿ ಹೋಗುತ್ತಾನೆ. ಇತ್ತ ದುಡ್ಡೂ ಇಲ್ಲದೆ, ಅತ್ತ ಹೊಟ್ಟೆಗೂ ಇಲ್ಲದೆ ನಿತ್ರಾಣವಾಗಿ ರೋದಿಸುತ್ತ, ಶಪಿಸುತ್ತ ಕುಳಿತಿರುವ ಇವಳನ್ನು ಕಂಡು ಮರುಗಿದ ತಲೆಹಿಡುಕನೊಬ್ಬ ತನ್ನ ಊಟವನ್ನು ಇವಳಿಗೆ ಕೊಡುತ್ತಾನೆ. ಅಸಹಾಯಕ ಹೆಣ್ಣುಮಕ್ಕಳ ಶೋಷಣೆಯ ಮತ್ತೊಂದು ಮುಖವಿದು. ಈ ಕಥೆಯ ವೈಶಿಷ್ಟ್ಯವೆಂದರೆ ಇಲ್ಲಿ ಬಳಸಲಾದ ಕೆಳವರ್ಗದ ಭಾಷೆ. ಇಂತಹದೇ ಭಾಷೆಯನ್ನು ಬಳಸಿದ ಮತ್ತೊಂದು ಕಥೆ ಎಂದರೆ ‘ಜೇಡನ ಬಲೆ’. ಕಷ್ಟಪಟ್ಟು ಕಾ˘ಲೇಜಿಗೆ ಸೇರಿದ ಕೆಳತರಗತಿಯ ಹುಡುಗಿಯೊಬ್ಬಳು ತನಗೆ ತಿಳಿಯದೆಯೇ ಶೋಷಕನ ಬಲೆಗೆ ಸಿಕ್ಕು, ಹಣವನ್ನು ಕಕ್ಕುತ್ತ ನರಳುತ್ತಾಳೆ. ಕೊನೆಗೊಮ್ಮೆ ಆತ ತನ್ನ ಕಾಮದಾಟಕ್ಕೆ ಇವಳನ್ನು ಕರೆದಾಗ, ಇವಳು ರೋಷದಿಂದ ಅವನನ್ನು ಎದುರಿಸಿ, ಅವನ ಬಲೆಯಿಂದ ಮುಕ್ತಳಾಗುತ್ತಾಳೆ. ಇಲ್ಲಿಯೂ ಸಹ ಗ್ರಾಮ್ಯ ಭಾಷೆಯನ್ನು ಸಹಜವಾಗಿ ಬಳಸಲಾಗಿದೆ. ‘ಮುಖಾಮುಖಿ’ಯು ಈ ಸಂಕಲನದ ಮನ ಕರಗಿಸುವ ಕಥೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮುದುಕನೊಬ್ಬನನ್ನು ಮದುವೆಯಾಗಿ, ಬಳಿಕ ವಿಧವೆಯಾಗಿ, ಪುರುಷಸುಖವಿಲ್ಲದೆ ಬಾಳಿದ ಹೆಣ್ಣುಮಗಳೊಬ್ಬಳು, ಸಮಾಜದ ಅಪಹಾಸ್ಯಕ್ಕೆ ಪಕ್ಕಾಗುತ್ತ ಕೊನೆಯವರೆಗೂ ತುತ್ತು ಅನ್ನಕ್ಕಾಗಿ ಏನೆಲ್ಲ ಪಾಡು ಪಡಬೇಕಾಯಿತು ಎನ್ನುವುದು ಈ ಕಥೆಯ ವಸ್ತು. ಕಥೆಯ ಕೊನೆಯಲ್ಲಿ ಬರುವ ದಾರುಣ ಅನಿರೀಕ್ಷಿತತೆ ಓದುಗನನ್ನು ಕಂಗೆಡಿಸುತ್ತದೆ. ಸಂಕಲನದ ಕೊನೆಯ ಕಥೆ ‘ರಾಧಾರಮಣ’ ಇದು ಈ ಎಲ್ಲ ಕಥೆಗಳಿಗಿಂತ ವಿಭಿನ್ನವಾದ ಕಥೆ. ಇದು ಹೆಣ್ಣಿನ ಶೋಷಣೆಯ ಕಥೆಯಲ್ಲ. ಇದು ಪೌರುಷವಿಲ್ಲದ ಗಂಡಸಿನ ಕಥೆ. ಈ ಕಥೆಯನ್ನು ಸಾಕ್ಷಿಯಾಗಿ ನೋಡುತ್ತಿರುವವಳು ಒಬ್ಬ ಕೆಳಸ್ತರದ ಹೆಣ್ಣು ಮಗಳು. ಅವಳಿಗೆ ಜೊತೆಯಾಗಿ ಇರುವುದು ಅವಳ ನಾಯಿ. ಓದುಗನಿಗೆ ಈ ನಾಯಿಯೂ ಸಹ ಆಪ್ತವಾಗುವುದು ಕಥೆಯಲ್ಲಿಯ ಸ್ವಾರಸ್ಯಕರ ಅಂಶವಾಗಿದೆ. ನಾಯಕಿಯ ಸುತ್ತ ಹೆಣೆಯುತ್ತ ಹೋದ ಇಲ್ಲಿಯ ಕಥೆಗಳು ಕೆಲವೊಮ್ಮೆ flash backನ ನೆರವನ್ನು ಪಡೆಯುತ್ತವೆ. ಹೀಗಾಗಿ ಕಥೆಗಳನ್ನು ಬಿಗಿಯಾಗಿ ಹೆಣೆಯಲು ಲೇಖಕಿಗೆ ಸಾಧ್ಯವಾಗಿದೆ. ಕಥೆಗಳ ಪಾತ್ರಗಳ ಮನೋವಿಶ್ಲೇಷಣೆಯನ್ನು ಸರಳವಾಗಿ ಬಿಡಿಸುತ್ತ ಹೋಗುವುದರಿಂದ ಕಥೆಗಳಲ್ಲಿ ಸಹಜತೆ ಹಾಗು ಜೀವಂತಿಕೆ ಸಾಧ್ಯವಾಗಿದೆ. ಅನೇಕ ಸಲ ಲೇಖಕನು ಕಥೆಗೆ ಬೇಕಾದಂತಹ ಪಾತ್ರಗಳನ್ನು, ಕಥಾನಕವನ್ನು ಸೃಷ್ಟಿಸಿಕೊಳ್ಳುತ್ತಾನೆ. ಇದು ಅವನ ಅಧಿಕಾರ. ಶ್ರವಣಕುಮಾರಿಯವರು ಒಂದು ಮಿತಿಯಲ್ಲಿಯೇ ಈ ಅಧಿಕಾರವನ್ನು ಸಮರ್ಥವಾಗಿ ಚಲಾಯಿಸಿದ್ದಾರೆ. ಕೆಲವೊಮ್ಮೆ ಈ ಮಿತಿಯನ್ನು ಸ್ವಲ್ಪವೇ ಮೀರಿದ ಒಂದೆರಡು ಕಥೆಗಳು ಇಲ್ಲಿವೆ. ಉದಾಹರಣೆಗಾಗಿ ‘ಮುಖಾಮುಖಿ’ ಕಥೆಯನ್ನೇ ನೋಡೋಣ. ತಂದೆಯ ವಯಸ್ಸಿನವನೊಬ್ಬನು ತನಗೆ ಮನಸ್ಸಿರದೇ ಹೋದರೂ ಬಾಲಕಿಯೊಬ್ಬಳನ್ನು ಮದುವೆಯಾಗುವ ಅನಿವಾರ್ಯತೆಯೆ ಇಲ್ಲಿಯ ಕಥೆ. ಈ ‘ಅನಿವಾರ್ಯತೆ’ಯನ್ನು ಲೇಖಕಿ ಸೃಷ್ಟಿಸಿರುವ ರೀತಿ ಕೃತಕವೆನಿಸುತ್ತದೆ. ಈ ಕೃತಕತೆಯನ್ನು ಮರೆಯಾಗಿಸುವ ಉದ್ದೇಶದಿಂದ ಲೇಖಕಿ ಮತ್ತೊಂದು ಪಾತ್ರವನ್ನು ಸೃಷ್ಟಿಸಿ, ಅವಳೆದುರಿಗೆ ಕಥೆಯನ್ನು ಬಿಚ್ಚಿಸಿದ್ದಾರೆ. ಪರಿಣಾಮತಃ ಓದುಗನು ಇಂತಹ ಅಸಂಭಾವ್ಯತೆಯನ್ನು ಒಪ್ಪಿಕೊಳ್ಳುತ್ತಾನೆ. ಇದೇ ರೀತಿಯಲ್ಲಿ ‘ಜೀವನ್ಮುಖಿ’ ಕಥೆಯಲ್ಲಿಯ ಹೆಂಡತಿಯ ನಿರ್ಧಾರ. ಇದೂ ಸಹ ಕಥೆಗೆ ಅವಶ್ಯಕವಾಗಿರುವದರಿಂದ ಒಪ್ಪಿಕೊಳ್ಳಲೇ ಬೇಕು. ಈ ಎಲ್ಲ ಅಸಂಭಾವ್ಯತೆಗಳನ್ನು ಓದುಗನು ಪಿಟಕ್ಕೆನ್ನದೆ ಒಪ್ಪಿಕೊಳ್ಳುವುದೇ ಲೇಖಕಿಯ ಕಥನಪ್ರತಿಭೆಗೆ ಸಾಕ್ಷಿಯಾಗಿದೆ. ‘ಜೇಡನ ಬಲೆ’ಯಲ್ಲಿ ಗ್ರಾಮ್ಯ ಭಾಷೆಯಲ್ಲಿ ಕಥೆ ಸಾಗಿದೆ. ಶೋಷಿತ ಹುಡುಗಿ ಹಾಗು ಶೋಷಕ ವ್ಯಕ್ತಿಯೊಬ್ಬನ ನಡುವೆ ನಡೆಯುವ ಮಾತುಗಳೂ ಸಹ ಗ್ರಾಮ್ಯಭಾಷೆಯಲ್ಲಿಯೇ ಇವೆ. ಹಿಗಿದ್ದರೂ ಸಹ ಆತನು ಒಮ್ಮೆ ಈ ಹುಡುಗಿಗೆ, “ನಿನ್ ಫೋಟೋ ನನಗೆ ಬಂಗಾರದ ಮೊಟ್ಟೆ ಇಡುವ ಕೋಳಿ” ಎನ್ನುವುದು ಹಾಗು “ಇದು ಜಾಣ ಕೋಳಿ ಥರಾ” ಎನ್ನುವುವು ಕನ್ನಡದ ಮಾತುಗಳು ಎನಿಸುವುದಿಲ್ಲ. ಇಂಗ್ಲೀಶಿನ ‘Hen laying the golden eggs’ ಹಾಗು `That’s like a wise girl’ ಎನ್ನುವುದರ ಭಾಷಾಂತರಗಳು ಎಂದೆನಿಸಿ ಬಿಡುತ್ತದೆ. ನನ್ನ ತಿಳಿವಳಿಕೆ ಸರಿ ಇರಲಿ, ಬಿಡಲಿ, ನನ್ನ ಮಟ್ಟಿಗೆ ಇವು ಕಥೆಯ ಓದಿನ ಓಘದಲ್ಲಿ ಸ್ವಲ್ಪ ಅಡಚಣೆಯನ್ನಂತೂ ಮಾಡಿದವು. ಆದರೆ ಒಳ್ಳೆಯ ಅಭಿರುಚಿಯ, ಇಷ್ಟು ಸೊಗಸಾದ ಕಥೆಗಳನ್ನು ಬರೆದ ಲೇಖಕಿಗೆ ಇಷ್ಟೂ ‘ಕವಿಸ್ವಾತಂತ್ರ್ಯ’ವನ್ನು ಕೊಡದಿರಲು ಹೇಗೆ ಸಾಧ್ಯ? ಕಥೆಗಳನ್ನು ಎಳೆದಾಡಿ, ಮೇಲೆ-ಕೆಳಗೆ ಮಾಡಿ ನಾನು ಬರೆಯುತ್ತಿರುವಾಗ, ಇವುಗಳ ಸ್ವಾರಸ್ಯವನ್ನು ನಾನು ಮಸಕುಗೊಳಿಸುತ್ತಿದ್ದೇನೆ ಎನ್ನುವ ಭಯ ನನಗಿದೆ. ವಾಸ್ತವದಲ್ಲಿ ಕಥೆಗಳು ತುಂಬ ಚೆನ್ನಾಗಿವೆ. ಓದುಗನು ಕಥೆಯ ಪಾತ್ರಗಳೊಡನೆ ಲೀನನಾಗಿ ಹೋಗುತ್ತಾನೆ. ಶ್ರವಣಕುಮಾರಿಯವರು ಕನ್ನಡಕ್ಕೆ ಆಸಕ್ತಿಕರವಾದ ಹೊಸ ಮಾದರಿಯ ಕಥೆಗಳನ್ನು ಕೊಟ್ಟಿದ್ದಾರೆ. ಇನ್ನಷ್ಟು ಕಥೆಗಳು ಇವರಿಂದ ಬರಲಿ ಎಂದು ಹಾರೈಸುತ್ತೇನೆ.

Friday, July 3, 2020

ನಿರ್ಬುದ್ಧ.......ಬೇಂದ್ರೆಯವರ ಕವನ

ನಾಗರಿಕತೆಯ ಇತಿಹಾಸವು ಹಿಂಸೆ ಹಾಗು ವೈರದಿಂದ ಕೂಡಿದ್ದಾಗಿದೆ. ಅಂಧಕಾರದಲ್ಲಿ ಮುಳುಗಿದ ಇಂತಹ ಸಮಾಜವನ್ನು ಬದಲಾಯಿಸಲು ಅನೇಕ ಮಹಾತ್ಮರು ಪ್ರಯತ್ನಪಟ್ಟಿದ್ದಾರೆ. ಅವರಲ್ಲಿ ಬುದ್ಧನೇ ಬಹುಶಃ ಪ್ರಥಮನುಬೇಂದ್ರೆಯವರು ಬರೆದ ಬುದ್ಧಎನ್ನುವ ಕವನವು ೧೯೫೧ನೆಯ ಇಸವಿಯಲ್ಲಿ ಪ್ರಕಟವಾದಗಂಗಾವತರಣಕವನಸಂಕಲನದಲ್ಲಿ ಸೇರಿದೆ.

`ಬುದ್ಧ, ಬುದ್ಧ­­­­­--
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ

ಬುದ್ಧಕವನದ ಮೊದಲಿನ ಎರಡು ಸಾಲುಗಳು ಇವು.
ಬುದ್ಧಎನ್ನುವ ಕವನವನ್ನು ಬರೆದ ಬೇಂದ್ರೆಯವರೇನಿರ್ಬುದ್ಧಎನ್ನುವ ಕವನವನ್ನೂ ಬರೆದಿದ್ದಾರೆ.
‘‘ನಿರ್ಬುದ್ಧಕವನವು ೧೯೬೪ನೆಯ ಇಸವಿಯಲ್ಲಿ ಪ್ರಕಟವಾದನಾಕು ತಂತಿಸಂಕಲನದಲ್ಲಿ ಪ್ರಕಟವಾಗಿದೆ.

ಹದಿಮೂರು ವರ್ಷಗಳಲ್ಲಿ ಬೇಂದ್ರೆಯವರ ಕಾಣ್ಕೆಯಲ್ಲಿ ಏನಾದರೂ ಬದಲಾವಣೆ ಆಗಿದೆಯೆ?
ಬುದ್ಧಎಂದರೆ ತಿಳಿದವನು. ‘ನಿರ್ಬುದ್ಧಇದುಬುದ್ಧ ವಿರೋಧ ಪದ. ಅಂದರೆ ತಿಳಿಗೇಡಿ. ಬುದ್ಧನು ಅಹಿಂಸಾಮೂರ್ತಿ, ನಿರ್ಬುದ್ಧನು ಹಿಂಸಾವೃತ್ತಿಯವನು.


ಬುದ್ಧಕವನದಲ್ಲಿ ಸಮಾಜ ಸುಧಾರಿಸೀತು ಎನ್ನುವ ಮಿಣುಕು ಆಸೆ ಇದೆ. ‘ನಿರ್ಬುದ್ಧಕವನದಲ್ಲಿ ಸಮಾಜ ಸುಧಾರಿಸಲಾರದು ಎನ್ನುವ ಹತಾಶ ಭಾವವಿದೆ. ಯಾಕೆ ಅಂತೀರಾ? ‘ನಿರ್ಬುದ್ಧಕವನದ ಮೊದಲ ನುಡಿಯಲ್ಲಿಯೇ ಬೇಂದ್ರೆಯವರ ಆಕ್ರೋಶವು ತಣ್ಣನೆಯ ನಿಟ್ಟುಸಿರಾಗಿ ಈ ಪ್ರಶ್ನೆಗೆ ಉತ್ತರವನ್ನು ಹೇಳುತ್ತಿದೆ:

ನಾವು ಪೂಜಿಸುತಿಹುದು ಹೊಟ್ಟೆಕಿಚ್ಚು
ಬೇರೆ ಎನ್ನುವುದೇಕೆಬೆಂಕಿ ಹಚ್ಚು?’’

ಹೊಟ್ಟೆಕಿಚ್ಚು, ಇದು ಮಾನವನ ಒಡಲಿನಲ್ಲಿಯೇ ಇರುವ ಬೆಂಕಿ! ನಮ್ಮ ನೆರೆಹೊರೆಯವರ ಬಗೆಗೆ, ನೆರೆಯ ಸಮುದಾಯಗಳ ಬಗೆಗೆ, ನೆರೆಯ ರಾಷ್ಟ್ರಗಳ ಬಗೆಗೆ ಇರುವ ಅಸೂಯೆ ಹಾಗು ಅದರಿಂದ ಉದ್ಭವವಾಗುವ ದ್ವೇಷ ಇವು ನಮ್ಮಲ್ಲಿ ಅಂತರ್ನಿಹಿತವಾಗಿರುವಾಗ, ನಾವು ನೆರೆಯವನಿಗೆ ಬೆಂಕಿ ಹಚ್ಚುಎಂದು ಬಾಯಿ ತೆಗೆದು ಹೇಳುವ ಅಗತ್ಯವಿದೆಯೆ? ಇದರ ಪರಿಣಾಮವೇನು? ಸಾರ್ವತ್ರಿಕ ನಾಶ; ಕೊಲ್ ಮತ್ತು ಸಾಯ್.

ಕೊಲ್ಲುವೆವು ಸಾಯುವೆವು ಇದೆ ಕಾಯಕ
ತಲೆಗೆ ಬೆಲೆ ಎಷ್ಟು ಕೇಳುವ ನಾಯಕ!’

ಇರಿ, ಕೊಲ್ಲು ಹಾಗು ಸಾಯಿ! ಇದೇ ನಮ್ಮ ದುಡಿಮೆ. ಬಸವಣ್ಣನವರುಕಾಯಕವೇ ಕೈಲಾಸಎಂದು ಹೇಳಿದರು. ಆದರೆ ನಮ್ಮ ಕಾಯಕವೆಂದರೆ ಮತ್ತೊಬ್ಬರನ್ನು ಮುಗಿಸುವುದು. ಇಂತಹ ಬುದ್ಧಿಗೇಡಿ ಅನುಯಾಯಿಗಳಿಗೆ ನಾಯಕನು ಕೊಡುವ ಆದೇಶವೇನುನೀನು ಕೊಂದ ವೈರಿಯ ತಲೆ ತಂದು ತೋರಿಸು; ನಿನಗೆ ಅದರ ಬೆಲೆಯನ್ನು ಕೊಡುತ್ತೇನೆ. ಇಂತಹ ಪ್ರೇರಣೆ ಇದ್ದಾಗ, ಸಮಾಜವು ಸ್ಮಶಾನವಾಗುವುದರಲ್ಲಿ ತಡೆ ಏನಿದೆ?

ಸಮಾಜ ಅನ್ನುವ ಸಂಸ್ಥೆ ಹುಟ್ಟಿದ್ದಾದರೂ ಹೇಗೆ? ಕಾಡಿನಲ್ಲಿ ಅಲೆಯುವ ಮನುಷ್ಯರ ಒಂದು ಗುಂಪು, ಒಂದು ಪ್ರದೇಶವನ್ನು ತನ್ನದೇ ಆದ ಪ್ರದೇಶ ಎಂದು ಘೋಷಿಸಿ, ಪ್ರದೇಶದ ಮೇಲೆ ಸ್ವಾಮಿತ್ವ ಸಾಧಿಸಬೇಕಾದರೆ ಗುಂಪಿಗೆ ಒಬ್ಬ ನಾಯಕ ಬೇಕು. ಆತ ಭೂಭಾಗದ ಪತಿ, ‘ಭೂಪತಿ’. ಭೂಮಿಯೇನೊ ಬರಿ ಮಣ್ಣು. ಆದರೆ ನಾಯಕನ ದೃಷ್ಟಿಯಲ್ಲಿ ಅಲ್ಲಿ ವಾಸಿಸುವ ಪ್ರಜೆಗಳ ಜೀವಕ್ಕಿರುವ ಬೆಲೆಯೂ ಅಷ್ಟೇ. ಇದು ನಮ್ಮ ನಾಗರಿಕತೆ ಬೆಳೆದು ಬಂದ ಹಾದಿ. ಇಂತಹ ನಾಗರಿಕತೆಯು ನಮ್ಮನ್ನು ಕೊಂಡೊಯ್ಯುವುದು ಉತ್ಕರ್ಷದ ಹಾದಿಯಲ್ಲಲ್ಲ, ಸುಡುವ ಸುಡುಗಾಡಿನ ಹಾದಿಯಲ್ಲಿ. ಕಾಡುಮನುಷ್ಯನು ನಾಗರಿಕನಾಗುವ ರೀತಿಯೆ ಇದು?

ಭೂಮಿ ಎನ್ನುವುದು ಮಣ್ಣು, ಪ್ರಜೆ ಎಂಬುದೂ ಮಣ್ಣು
ಸುಡುಗಾಡು ನಾಗರಿಕತೆ

ಕಾಡನ್ನು ಸುಲಿದು ನಾಡನ್ನು ಕಟ್ಟಿದ ಮಾನವನು ನಾಗರಿಕತೆಯ ಮುಂದಿನ ಮಜಲಿಗೆ ಬಂದಿದ್ದಾನೆ, ಇದೀಗ ಸುಧಾರಿಸಿದ್ದಾನೆ!’ ಶಾಸ್ತ್ರ, ಪಾಠ, ಪ್ರವಚನ ಇವು ನಮ್ಮ ಸುಸಂಸ್ಕೃತ ನಾಗರಿಕತೆಯ ಮುಖಗಳಾಗಿವೆ. ವಾಸ್ತವದಲ್ಲಿ ಈ ಮುಖಗಳು ಕೇವಲ ಮುಖವಾಡಗಳಷ್ಟೇ! ಏಕೆಂದರೆ:

ಒಳಗೆ ಮಸೆಯುತ್ತಿಹುದು ಶಸ್ತ್ರಾಸ್ತ್ರ ಒಳಸಂಚು
ಹೊರಗೆ ಶಾಸ್ತ್ರದ ಪಾಠ ಪ್ರವಚನಗಳು.’

ನಾಗರಿಕರ ಢೋಂಗೀ ಸೋಗನ್ನಷ್ಟು ನೋಡಿರಿ:
ವಚನ ವಾಚನವೇನು? ವಚನ ಗಾಯನವೇನು?
ವಚನ ಮುರಿಯುವದೊಂದೆ ರಚನಾಕೃತಿ.’   

ಬೇಂದ್ರೆಯವರು ಇಲ್ಲಿರಚನಾಕೃತಿಎನ್ನುವ ಪದವನ್ನು ಬಳಿಸಿದ್ದಾರೆ. ಇದನ್ನು ನಾವು format, pattern, template, motif  ಎನ್ನುವ ಅರ್ಥಗಳಲ್ಲಿ ತಿಳಿದುಕೊಳ್ಳಬಹುದು. ಬೇಂದ್ರೆಯವರ ಕವನಗಳಲ್ಲಿ ಹಲವೊಮ್ಮೆ ಇತಿಹಾಸವು ಅಡಗಿ ನಿಂತಿರುತ್ತದೆ. ಎರಡನೆಯ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಅಮೇರಿಕಾದ ಅಧ್ಯಕ್ಷ ಹಾಗು ಬ್ರಿಟನ್ನಿನ ಪ್ರಧಾನ ಮಂತ್ರಿಯವರು ತಮ್ಮೊಡನೆ ಯುದ್ಧದಲ್ಲಿ ಸಹಕರಿಸಿದ ಗುಲಾಮ ದೇಶಗಳಿಗೆ ಸ್ವಾತಂತ್ರ್ಯ ನೀಡುವುದಾಗಿಘೋಷಿಸಿದ್ದರು. ಇದನ್ನು ನಂಬಿಕೊಂಡ ಭಾರತವು ಈ ಯುದ್ಧದಲ್ಲಿ ಸಹಭಾಗಿಯಾಯಿತು. ಯುದ್ಧ ಮುಗಿದ ಬಳಿಕ ಈ ಪುಢಾರಿಗಳು ತಮ್ಮ ಘೋಷಣೆ ಯುರೋಪಿಯನ್ ರಾಷ್ಟ್ರಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಾರಿದರು. ಈ ಪಾಶ್ಚಾತ್ಯ ಶಕುನಿಗಳು ಇಂತಹ ರಚನಾಕೃತಿಯ ಮುಂದಾಳುಗಳು!

ಇದೇನೂ ಭಾರತಕ್ಕೆ ಬಂದಂತಹ ಮೊದಲ ಅನುಭವ ಅಲ್ಲ.

ಗುಂಪು ಗುಂಪಿನ ರಾಜಕಾರಣದ ತಂತ್ರದಲಿ
ಹಂಪೆಯಾಯಿತು ಕೊಂಪೆ-ಹಳೆಯ ಮಾತು.
ರಾಮರಾಜನ ರುಂಡ ಕಲ್ಲಾಗಿ ಬಿದ್ದಿಹುದು
ಎಲ್ಲರ ಪ್ರದರ್ಶನಕೆ ವಸ್ತುವಾಗಿ;

ವಿಜಯನಗರದಂತಹ ಸುಖೀ, ಸಮೃದ್ಧ, ಸಿರಿವಂತ ರಾಜ್ಯವು ದಕ್ಷಿಣದ ಸುಲ್ತಾನರ ಒಳಸಂಚಿನಿಂದಾಗಿ ಹಾಳುಕೊಂಪೆಯಾಯಿತು, ಸದ್ಧರ್ಮರಾಜ್ಯದ ಪತನದ ಪ್ರತೀಕವಾಯಿತು! ಕರ್ನಾಟಕ ಸಾಮ್ರಾಜ್ಯದ ಸಾಮ್ರಾಟನ ರುಂಡವು ಜನಸಾಮಾನ್ಯರಿಗೆ ಪ್ರದರ್ಶನಕ್ಕಿಟ್ಟಂತಹ ನಿಕೃಷ್ಟ ವಸ್ತುವಾಯಿತು. ಇವೆಲ್ಲದಕ್ಕೂ ನೆರೆರಾಜರ ಮತ್ಸರ ಹಾಗು ದ್ವೇಷವೇ ಕಾರಣವಲ್ಲವೆ?
ಹೋಗಲಿ, ಈ ನೆರೆರಾಜರಾದರೂ ಕೊನೆವರೆಗೂ ಬಾಳಿ ಬದುಕಿದರೆ?

ಹಲ್ಬಿದಾಯಾಆಗಿಹೋಯ್ತು ಆದಿಲ್ ಶಾಹಿ
ಹೊಳೆಗೆ ಹೋದವು ದೇವರು.
ಕಬರ ಕಬರೀಭಾರ, ಕವಡಿ ಕೊರಳಿಗೆ ಬಂತು
ಯಾ ಕಪರ್ದಿಯ ಬೂದಿ ಈ ವೈಭವ?

ಇಬ್ನ ಖಾತಿರ್ ಎನ್ನುವ ಇಸ್ಲಾಮಿನ ಓರ್ವ ಖ್ಯಾತ ಇತಿಹಾಸಕಾರನು (೧೩೦೦-೧೩೭೩) ‘ಅಲ್ ಬಿದಾಯಾ ವಾ ನ ನಿಹಾಯಾಎನ್ನುವ ಕೃತಿಯನ್ನು ರಚಿಸಿದ್ದಾನೆ. ‘ಅಲ್ ಬಿದಾಯಾ ವಾ ನ ನಿಹಾಯಾಅಂದರೆಪ್ರಾರಂಭ ಮತ್ತು ಅಂತ’. ಇದು ಅವನ ಸಮಯದ ಇಸ್ಲಾಮಿನ ಚರಿತ್ರೆಯನ್ನು ನಿರೂಪಿಸುತ್ತದೆ. ‘ಅಲ್ ಬಿದಾಯಾಎನ್ನುವುದುಹಲ್ಬಿದಾಯಾಎನ್ನುವ ಪ್ರಾದೇಶಿಕ ರೂಪವನ್ನು ತಾಳಿರಬಹುದು. (ಬೇರೆ ಅರ್ಥವಿದ್ದರೆ, ತಿಳಿದವರು ದಯವಿಟ್ಟು ತಿಳಿಸಬೇಕಾಗಿ ವಿನಂತಿ, ತಿದ್ದಿಕೊಳ್ಳುತ್ತೇನೆ.)

ವಿಜಯನಗರವನ್ನು ಹಾಳು ಹೊಡೆದ ದಕ್ಷಿಣದ ಸುಲ್ತಾನರ ಗತಿ ಏನಾಯಿತು? ೧೬೮೬ನೆಯ ಇಸವಿಯಲ್ಲಿ ಔರಂಗಜೇಬನು ದಕ್ಷಿಣಸುಲ್ತಾನಗಿರಿಯ ದಕ್ಷಿಣ ತುದಿಯಲ್ಲಿದ್ದ ವಿಜಯಪುರವನ್ನು ಆಕ್ರಮಿಸವದರೊಂದಿಗೆ, ಆದಿಲ್ ಶಾಹಿಯುಹಲ್ಬಿದಾಯಾಆಯಿತು, ಅಂದರೆ ಅದೂ ಸಹ ಕೊನೆಗೊಂಡಿತು.

ಇಸ್ಲಾಮದ ಇತಿಹಾಸದಲ್ಲಿಯ ಅತ್ಯಂತ ದುರ್ಭರ ಘಟನೆ ಎಂದರೆ ಕರ್ಬಲಾ ಕಾಳಗ. ಈ ಕಾಳಗದಲ್ಲಿ ಹಸನ್ ಹಾಗು ಹುಸೇನ್ ಎನ್ನುವ ಸೋದರರು ಮರಣ ಹೊಂದಿದರು. ಈ ಘಟನೆಯ ಶೋಕಾಚರಣೆಯ ದಿನದಂದು ಮುಸ್ಲಿಮ್ ಯುವಕರು ಹುಲಿ ವೇಷವನ್ನು ತೊಟ್ಟು ಅಣಕು ಕಾಳಗ ಪ್ರದರ್ಶನ ಮಾಡುತ್ತಾರೆ. ಕೈಯನ್ನು ಹೋಲುವ ಎರಡು ಪ್ರತಿಮೆಗಳನ್ನು (‘ಪಂಜಾಗಳನ್ನು) ಹಿಡಿದು ಹೊಳೆ ಅಥವಾ ಕೆರೆಗೆ ಹೋಗಿ, ಅಲ್ಲಿ ಈ ಎರಡೂ ಪಂಜಾಗಳನ್ನು ಮುಳುಗಿಸುತ್ತಾರೆ. ಸ್ಥಳೀಯ ಮುಸಲ್ಮಾನರು ಈ ಪಂಜಾಗಳನ್ನು ದೇವರು ಎಂದು ಭಾವಿಸುತ್ತಾರೆ. ಈ ಘಟನೆಯನ್ನೇ ಬೇಂದ್ರೆಯವರುಹೊಳೆಗೆ ಹೋದವು ದೇವರುಎಂದು ಹೇಳುತ್ತಿದ್ದಾರೆ.  ಈ ಎಲ್ಲ ಸಂಗತಿಗಳು ನಾಗರಿಕತೆಯ ದುರ್-ಅಂತವನ್ನು ತೋರಿಸುತ್ತವೆ.

ಕಬರ ಹಾಗು ಕಬರಿ ಎರಡಕ್ಕೂ ಒಂದೇ ಅರ್ಥವಿದೆ: ಜಟೆ. ಇಲ್ಲಿ ಕಬರವನ್ನು ಉರ್ದೂ ಭಾಷೆಯಕಬ್ರ’ (= ಕಬರಸ್ಥಾನ = ಸ್ಮಶಾನ) ಎಂದೂ ಅರ್ಥ ಮಾಡಿಕೊಳ್ಳಬಹುದು. ಕಪರ್ದ ಎಂದರೆ ಕವಡೆ. ಇದಕ್ಕೆ ಜಟೆ ಎನ್ನುವ ಅರ್ಥವೂ ಇದೆ. ಕಪರ್ದಿ ಎಂದರೆ ಕವಡಿಯನ್ನು ಹೋಲುವ ರೀತಿಯಲ್ಲಿ ಜಟೆಯನ್ನು ಕಟ್ಟಿಕೊಂಡಿರುವ, ಸ್ಮಶಾನವಾಸಿ ಶಿವ! ಆತ ಕೊರಳಿನಲ್ಲಿಯೂ ಸಹ ಕವಡಿಗಳನ್ನೇ ಧರಿಸಿಕೊಂಡು, ಭಸ್ಮಧಾರಿಯಾಗಿ ಸ್ಮಶಾನದಲ್ಲಿ ವಾಸಿಸುತ್ತಾನೆ! ಇದು ನಮ್ಮ ನಾಗರಿಕತೆಯ ವೈಭವ! ಇಂತಹ ಪರಿಸ್ಥಿತಿ ಏಕೊ?

ಕಬರ ಕಬರೀಭಾರಎಂದರೆ ಸ್ಮಶಾನವೆಲ್ಲ ಜಟೆಗಳಿಂದ ತುಂಬಿಹೋಯಿತು. ಹಿಂದುಸ್ತಾನದಲ್ಲಿ ಅನೇಕ ಯುದ್ಧಗಳು ನಡೆದಿವೆ. ಪ್ರತಿ ಯುದ್ಧದಲ್ಲಿಯೂ ಲಕ್ಷಗಟ್ಟಲೆ ಜನರು ಸತ್ತರು ಎಂದು ಇತಿಹಾಸಪುಸ್ತಕಗಳಲ್ಲಿ ಓದುತ್ತೇವೆ. ಇದು ಕಬರಸ್ತಾನವನ್ನು ಜಟೆಗಳಿಂದ ತುಂಬಿದೆ! (ಗೋರಿಗಳಲ್ಲಿ ಇರುವ ಹೆಣಗಳ ಮಾಂಸ ಹಾಗು ಮೂಳೆಗಳು ಕಾಲಾಂತರದಲ್ಲಿ ಮಣ್ಣಿನಲ್ಲಿ ಮಣ್ಣಾಗುತ್ತವೆ. ಆದರೆ ಕೂದಲು ಮಾತ್ರ ಹಾಗೆಯೇ ಉಳಿಯುತ್ತದೆ.)

ರಾಮನತ್ತರು ಚೆಂದ, ಕೃಷ್ಣನತ್ತರು ಚೆಂದ
ಇದ್ದವರ ಬಾಯಿಗೋ ಉಳ್ಳೆಗಡ್ಡಿ.
ನಮ್ಮ ಈ ನಾಗರಿಕತೆಯನ್ನು, ಸಂಸ್ಕೃತಿಯನ್ನು ಉನ್ನತೀಕರಿಸಲು ಬುದ್ಧ ಹಾಗು ಗಾಂಧಿಯಂತಹ ಮಾನವರಿಂದ ಸಾಧ್ಯವಿಲ್ಲವೆಂದು, ಸ್ವತಃ ದೇವರೇ  ರಾಮ ಹಾಗು ಕೃಷ್ಣರ ರೂಪದಲ್ಲಿ ಅವತಾರ ತಾಳಿ ಭೂಲೋಕಕ್ಕೆ ಬಂದನೇನೊ?
ಯದಾ ಯದಾಯ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಠಾನಾಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ಎಂದು ದೇವರೇ ಘೋಷಿಸಿದರೂ ಆದದ್ದೇನು?’ ನಮ್ಮ ನಾಗರಿಕತೆಯನ್ನು ನೋಡಿ ಈ ಅವತಾರಪುರುಷರು ಎಷ್ಟು ಕಣ್ಣೀರು ಸುರಿಸಿದರೂ, ಅದು ವ್ಯರ್ಥ. ಏಕೆಂದರೆ ಬದುಕುಳಿದ ಪ್ರಜೆಗಳಿಗೆ ಏನೂ ಸುಖವಿಲ್ಲ; ಅವರ ಬಾಯಿಗೆ ಕೊನೆಗೂ ಬರುವುದು ಕಣ್ಣೀರು ಹಾಕಿಸುವ ಉಳ್ಳೆಗಡ್ಡಿ ಮಾತ್ರ!

ಈ ಸಾಮಾನ್ಯ ಪ್ರಜೆಗಳು ಕುರಿಗಳಿದ್ದಂತೆ. ಆಳುವವರ ಆಡಂಬರದ ಯಜ್ಞಗಳಲ್ಲಿ ಇವರು ಹೋತಗಳು ಅಂದರೆ ಬಲಿಪಶುಗಳು. ಉಳಿದವುಗಳು ತಮ್ಮ ಮುಂದಾಳುವನ್ನು ಬ್ಯಾಂ ಅನ್ನುತ್ತ ಹಿಂಬಾಲಿಸುವ ಕುರಿಗಳು.
ಯಜ್ಞಆದರೂ ಏನು? ಹೋತ ಹೋದರೂ ಏನು?
ಕುರಿಯುಬ್ಯಾಂಅನ್ನುವುದು ತಪ್ಪಲಿಲ್ಲ.


ಧರ್ಮ, ದೇವರು ಇವೆಲ್ಲ ಮನುಷ್ಯನನ್ನು ಉನ್ನತಿಯೆಡೆಗೆ ಒಯ್ಯುವ ಸಾಧನಗಳಾಗಿರಬೇಕು. ಆದರೆ ವಾಸ್ತವದಲ್ಲಿ ಇಲ್ಲಿ ಘಟಿಸುತ್ತಿರುವದೇನು?
ನಮ್ಮ ದೇವರು ಹೆಚ್ಚು ನಿಮ್ಮ ದೇವರು ಹೆಚ್ಚು
ದೀಪ ಹಚ್ಚುವ ಕೈಯು ಕೊಲೆಗೆ ಬದ್ಧ.

ಧರ್ಮ ಹಾಗು ದೇವರು ಇವು ಒಂದು ಸಂಸ್ಕೃತಿಯ ಮಹೋನ್ನತ ತತ್ವಗಳು, ಇವು ನಾಗರಿಕತೆಯ ದೀಪಗಳು. ಆದರೆ ಇವುಗಳ ಹೆಸರಿನಲ್ಲಿ ನಡೆದ ಕೊಲೆ, ಅತ್ಯಾಚಾರಗಳು ಇತಿಹಾಸದ ತುಂಬ ತುಂಬಿವೆ. ಇತಿಹಾಸದ ಪುಟಗಳಲ್ಲಿ ದಾಖಲಾದ ಕ್ರುಸೇಡ್ ಹಾಗು ಜಿಹಾದಗಳು ಈ ಮಾತಿಗೆ ಸಾಕ್ಷಿಯಾಗಿವೆ. ಆದುದರಿಂದ ಬೇಂದ್ರೆಯವರು ಈ ಇತಿಹಾಸದಿಂದ ಪಾಠ ಕಲಿಯದಿದ್ದರೆ, ಎಂತಹ ಬುದ್ಧನೇ ಆಗಲಿ, ದೇವದೂತನೇ ಆಗಲಿ, ಮಾನವಕುಲವನ್ನು ರಕ್ಷಿಸಲಾರ , ಅಂತಹ ಪ್ರಜೆಗಳು ತಿಳಿಗೇಡಿಗಳು ಎಂದು ನಿಟ್ಟುಸಿರು ಬಿಡುತ್ತಾರೆ:

ಬುದ್ಧನೇ ನಿಜವಿರಲಿ, ಸಿದ್ಧನೇ ನಿಜವಿರಲಿ
ಇತಿಹಾಸ ತಿಳಿಯದವ ಶುದ್ಧ ನಿರ್ಬುದ್ಧ.

ಈ ಮಾತಿನ ಸತ್ಯವನ್ನು ನಾವು ಈವತ್ತೂ ಸಹ ನೋಡುತ್ತಿದ್ದೇವೆ.

ಬೇಂದ್ರೆಯವರ ಕವನಗಳ ಒಂದು ವೈಶಿಷ್ಟ್ಯವೆಂದರೆ, ಕವನಕ್ಕೆ ತಕ್ಕಂತಹ ಗತಿ. ಈ ಕವನದ ಗತಿಯು ನಿರಾಶೆಯನ್ನು ಪ್ರತಿಫಲಿಸುವ ಗತಿಯಾಗಿದೆ ಎನ್ನುವುದನ್ನು ಗಮನಿಸಬೇಕು.

Monday, May 18, 2020

ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ; ಉಮೇಶ ದೇಸಾಯಿಯವರ ‘ಬಿಡುಗಡೆ’.

ಕನ್ನಡ ಸಾಹಿತ್ಯದಲ್ಲಿ ನವೋದಯ ಸಾಹಿತ್ಯ, ನವ್ಯ ಸಾಹಿತ್ಯ, ಬಂಡಾಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಅಂತರ್ಜಾಲ ಸಾಹಿತ್ಯ ಮೊದಲಾದ ಘಟ್ಟಗಳನ್ನು ಗುರುತಿಸಬಹುದು. ಈ ಎಲ್ಲ ಸಾಹಿತ್ಯಘಟ್ಟಗಳಲ್ಲಿ ಅನೇಕ ಉತ್ತಮವಾದ ಕೃತಿಗಳನ್ನು ನಮ್ಮ ಸಾಹಿತಿಗಳು ರಚಿಸಿದ್ದಾರೆ. ಇವರ ಬಗೆಗೆ ನಮಗೆ ಅಭಿಮಾನವಿದೆ. ಆದರೆ ಈ ಎಲ್ಲ ಪ್ರಕಾರಗಳಲ್ಲಿ ಆಧುನಿಕ ಎನ್ನುವ ಸಾಹಿತ್ಯವೆಂದು ಪರಿಗಣಿಸಬಹುದಾದ ರಚನೆಗಳು ಬೆರಳೆಣಿಕೆಯಷ್ಟೇ ಇರುವುದು ಕನ್ನಡ ಸಾಹಿತ್ಯದ ದೊಡ್ಡ ಕೊರತೆಯಾಗಿದೆ.

ಈ ಮಾತನ್ನು ಅನೇಕರು ವಿರೋಧಿಸಬಹುದು. ‘ನವೋದಯದವರನ್ನು ಬಿಡಿ, ನವ್ಯ ಸಾಹಿತಿಗಳು ಆಧುನಿಕರಲ್ಲವೆಎನ್ನುವ ತರ್ಕವನ್ನು ಮುಂದೆ ಮಾಡಬಹುದು. ಗೆಳೆಯರೆ, ಕನ್ನಡದ ನವ್ಯ ಸಾಹಿತಿಗಳು (----ಅಡಿಗರ ಹೊರತಾಗಿ; ಅಡಿಗರು ನವ್ಯಕಾವ್ಯದ ಶ್ರೇಷ್ಠ ಕವಿಗಳು--) ಕೇವಲ ಹೊಸದೊಂದು formatದಲ್ಲಿ ಸಾಹಿತ್ಯರಚನೆಯನ್ನು ಮಾಡಿದರೇ ಹೊರತು, ಕನ್ನಡಕ್ಕೆ ಆಧುನಿಕ ಮನೋಭಾವವನ್ನು ತರಲಿಲ್ಲ. ಪಾಶ್ಚಾತ್ಯ ಸಾಹಿತ್ಯದ ಕಾಫ್ಕಾ, ಸಾರ್ತ್ರೆ, ಇಲಿಯಟ್ ಇವರನ್ನು ಅನುಕರಿಸಿದರೆ ಹೊರತು, ಸ್ವತಃ ಆಧುನಿಕರಾಗಲಿಲ್ಲ.

ಆಧುನಿಕ ಮನೋಭಾವ ಎಂದರೆ ಏನು? ಈ ಮಾತನ್ನು ಅರಿಯಲು, ನಮ್ಮ ನೆರೆಯದೇ ಆದ ಮರಾಠೀ ಸಾಹಿತ್ಯವನ್ನು ಓದಿದರೆ ಸಾಕು. ಸುಮಾರು ಐವತ್ತು, ಅರುವತ್ತು ವರ್ಷಗಳಷ್ಟು ಹಿಂದೆಯೇ ನಾನು (ಕನ್ನಡ ಅನುವಾದದಲ್ಲಿ)  ಓದಿದ ಮರಾಠೀ ಸಾಹಿತ್ಯವು  ನಮ್ಮ ಈಗಿನ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚು ಆಧುನಿಕವಾಗಿದೆ. ಮುಂಬಯಿ ಹಾಗು ಪುಣೆಯಲ್ಲಿ ಬಂದು ನೆಲೆಸಿದ ವಿವಿಧ ಹಾಗು ನಿರ್ವಾಸಿತ ಸಮುದಾಯಗಳ ಭಿನ್ನ ಭಿನ್ನ ಆಚಾರವಿಚಾರಗಳ ಸಂಗಮವೇ ಈ ಆಧುನಿಕತೆಗೆ ಮುಖ್ಯ ಕಾರಣವಾಗಿದೆ. ಈ ಮಹಾನಗರಗಳಲ್ಲಿ ಬಂದು ನೆಲೆಸಿದ ಪಾರ್ಸೀ, ಮಾರವಾಡಿ, ಸಿಂಧಿ, ಪಂಜಾಬಿ, ಆಂಗ್ಲೋ ಇಂಡಿಯನ್ ಇತ್ಯಾದಿ ಸಮುದಾಯಗಳು ಮಧ್ಯಮ ವರ್ಗದ ನಗರವಾಸಿ ಮರಾಠೀ ಜನ  ಸಮುದಾಯವನ್ನು ಆಧುನಿಕತೆಯ ಪ್ರವಾಹದಲ್ಲಿ  ತೇಲಿಸಿ, ಮರಾಠಿ ಲೇಖಕರಲ್ಲಿ ಆಧುನಿಕತೆಯನ್ನು ತಂದರು. ಮುಂಬಯಿಯಲ್ಲಿ ನೆಲೆಸಿದ ಕನ್ನಡ ಸಾಹಿತಿಗಳೂ ಸಹ ಈ ಪ್ರಭಾವಕ್ಕೆ ಒಳಗಾದದ್ದನ್ನು ಗುರುತಿಸಬಹುದು. (ಉದಾಹರಣೆಗೆ ವ್ಯಾಸರಾಯ ಬಲ್ಲಾಳ.) ಇಂತಹ ಒಂದು ಆಧುನಿಕ ಪ್ರಭಾವವು ಬೆಂಗಳೂರು, ಮೈಸೂರು ಅಥವಾ ಧಾರವಾಡದ ಸಾಹಿತಿಗಳ ಮೇಲೆ ಆಗಲಿಲ್ಲ!   

ಕನ್ನಡದಲ್ಲಿ ಆಧುನಿಕ ಸಾಹಿತ್ಯವಿದೆಯೆ, ಇದ್ದರೆ ಎಷ್ಟರ ಮಟ್ಟಿಗೆ ಎಂದು ತಿಳಿಯಲು ಪ್ರಯತ್ನಿಸುವ ಮೊದಲು, ಆಧುನಿಕ ಸಾಹಿತ್ಯ ಎಂದರೆ ಏನು ಎನ್ನುವುದನ್ನು ಪರೀಕ್ಷಿಸೋಣ. ತಮ್ಮ ಸುತ್ತಮುತ್ತಲಿನ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಗೆ ಒಗ್ಗಿಕೊಂಡಂತಹ ಓದುಗರಿಗೆ ಒಂದು ನವೀನ ವಾತಾವರಣವನ್ನು ಹಾಗು ನವೀನ ವಿಚಾರಗಳನ್ನು ಪರಿಚಯಿಸುವ ಸಾಹಿತ್ಯಕ್ಕೆ ಆಧುನಿಕ ಸಾಹಿತ್ಯ ಎಂದು ಕರೆಯಬಹುದು. ತ್ರಿವೇಣಿಯವರ ಕಾದಂಬರಿಗಳಲ್ಲಿ ಹಾಗು ಸಣ್ಣ ಕತೆಗಳಲ್ಲಿ ನಾವು ಆಧುನಿಕ ಯುವ ಜಗತ್ತನ್ನು ಹಾಗು ಆಧುನಿಕ ವಿಚಾರಗಳನ್ನು ನೋಡುತ್ತೇವೆ. She wrote about free romance and an emancipated woman in a tradition-bound society. ಆದುದರಿಂದ ತ್ರಿವೇಣಿಯವರ ಸಾಹಿತ್ಯವನ್ನು ನಾವು ಆಧುನಿಕ ಸಾಹಿತ್ಯ ಎನ್ನಬಹುದು. ಆದರೂ ಸಹ, ಈ ಸಾಹಿತ್ಯವು ಪುಟ್ಟ ಕೌಟಂಬಿಕ ಪರಿಧಿಯಲ್ಲಿದೆ ಎನ್ನುವುದು ತ್ರಿವೇಣಿಯವರ ಸಾಹಿತ್ಯದ ಪರಿಮಿತಿಯಾಗಿದೆ.

ಕನ್ನಡದಲ್ಲಿ ಆಧುನಿಕ ಸಾಹಿತ್ಯದ ಗಾಳಿ ಬೀಸಿದ್ದು ಶಾಂತಿನಾಥ ದೇಸಾಯಿಯವರಿಂದ. ಅವರಮುಕ್ತಿಕಾದಂಬರಿಯಲ್ಲಿ ಇರುವ ಪಾತ್ರಗಳೆಲ್ಲವೂ ಸ್ವತಂತ್ರ ವಿಚಾರ, ಸ್ವತಂತ್ರ ವ್ಯಕ್ತಿತ್ವ ಹಾಗು ಸ್ವತಂತ್ರ ಅನ್ವೇಷಣೆಯ ಕಾ˘ಲೇಜು ವಿದ್ಯಾರ್ಥಿಗಳು. ಈ ಕಾದಂಬರಿಯ ನಾಯಕನಾದರೋ ತೊಳಲಾಟದಲ್ಲಿ ಸಿಲುಕಿದ ಹುಡುಗನೇ. ಧಾರವಾಡವನ್ನು ಬಿಟ್ಟು, ನೌಕರಿಗಾಗಿ ಮುಂಬಯಿಗೆ ಹೋದ ಮೇಲೆ, ಅಲ್ಲಿಯ ಆಧುನಿಕ ವಾತಾವರಣದಲ್ಲಿ ಈತನು ತನ್ನ ತೊಳಲಾಟಗಳಿಂದಮುಕ್ತಿಯನ್ನು ಪಡೆಯುತ್ತಾನೆ. ತನ್ನ ಅನ್ವೇಷಣೆಯ ಗುರಿಯನ್ನು ಅ-ಸಾಂಪ್ರದಾಯಕ ರೀತಿಯಲ್ಲಿ ಮುಟ್ಟುತ್ತಾನೆ!

ಶಾಂತಿನಾಥ ದೇಸಾಯಿಯವರ ಮತ್ತೊಂದು ಕಥೆಯ ನಾಯಕಿ ಮಹಾರಾಷ್ಟ್ರದ ಸಂಪ್ರದಾಯಸ್ಥ ಮಹಿಳೆಯಾಗಿದ್ದಾಳೆ. ಮದುವೆಯ ವಯಸ್ಸು ಮುಗಿಯುವ ಹೊಸ್ತಿಲಲ್ಲಿ ಇವಳಿದ್ದಾಳೆ. ಮರಾಠಿ ಶಾಲೆಯೊಂದರ ಪ್ರಾಧ್ಯಾಪಕಿ ಈಕೆ. ಯಾವುದೋ ಒಂದು ಸರಕಾರೀ ಸ್ಕೀಮಿನಲ್ಲಿ ಇವಳೀಗ ಇಂಗ್ಲಂಡಿಗೆ ಹೊರಟಿದ್ದಾಳೆ. ನಡುವಯಸ್ಸಿನ ಯುರೋಪಿಯನ್ ವ್ಯಕ್ತಿಯೊಬ್ಬನು ಹಡಗಿನ ಪ್ರವಾಸದ ವೇಳೆಗೆ ಇವಳಲ್ಲಿ ಆಸಕ್ತಿಯನ್ನು ತೋರಿಸುತ್ತಾನೆ. ಇವಳು ಆ ಹೊಸ ಸಂಸ್ಕೃತಿಗೆ ಒಗ್ಗಿಕೊಳ್ಳಲಾರಳು. ಆದರೆ ಹೊಸ ಬಗೆಯ ಸ್ವಚ್ಛಂದ ನಾಗರಿಕತೆ  ಇವಳನ್ನು ಸಾವಕಾಶವಾಗಿ ಆಕರ್ಷಿಸುತ್ತದೆ; ಇವಳಲ್ಲಿ ಹೊಸ ವಿಚಾರಗಳನ್ನು ಬಿತ್ತುತ್ತದೆ. ಇಂಗ್ಲಂಡದ ನೆಲದಲ್ಲಿ ಕಾಲಿಡುವ ಹೊತ್ತಿಗೆ, ಇವಳು ಆಧುನಿಕ ಜಗತ್ತನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧಳಾಗಿದ್ದಾಳೆ.  (ಈ ಕಥೆಯ ಹೆಸರುಕ್ಷಿತಿಜಎಂದು ಇರಬಹುದು.)

ಇದೀಗ ಮತ್ತೊಬ್ಬ ದೇಸಾಯಿಯವರ ಬಗೆಗೆ ಗಮನ ಹರಿಸೋಣ. ಇವರು ಉಮೇಶ ದೇಸಾಯಿ. ನಮ್ಮೆಲ್ಲ ಸಾಹಿತಿಗಳಂತೆ  ಉಮೇಶ ದೇಸಾಯಿಯವರೂ ಸಹ ಬದುಕಿನ ಅನ್ವೇಷಕರೇ. ಆದರೆ ಇವರು ಆಧುನಿಕ ದೃಷ್ಟಿಕೋನದ ಅನ್ವೇಷಕರು. ಹೀಗಾಗಿ ಇವರ ಅನ್ವೇಷಣೆಯ ಅಳತೆಗೋಲುಗಳು ಸಾಂಪ್ರದಾಯಿಕ ಅಳತೆಗೋಲುಗಳಲ್ಲ. ಇವರ ಮೊದಲ ಕಾದಂಬರಿಭಿನ್ನದಲ್ಲಿ ಇಬ್ಬರು ಸಲಿಂಗಕಾಮಿ ಹುಡುಗಿಯರ ವಿಶ್ಲೇಷಣೆಯನ್ನು ಆಧುನಿಕ ಮನೋವಿಜ್ಞಾನದ ಆಧಾರದಲ್ಲಿ  ಮಾಡಿದ್ದಾರೆ. ಎರಡನೆಯ ಕಾದಂಬರಿಅನಂತಯಾನದ ನಾಯಕನು ಹಳೆಯ ತಲೆಮಾರಿನ ವ್ಯಕ್ತಿಯಾಗಿದ್ದರೂ ಸಹ ಆತನ ಪರಿವರ್ತನೆಯನ್ನು ಗಮನಿಸುವ ಕಣ್ಣುಗಳು ಆಧುನಿಕ  ಕಣ್ಣುಗಳೇ.   

ಉಮೇಶ ದೇಸಾಯಿಯವರ ಇತ್ತೀಚಿನ ಕಥೆಬಿಡುಗಡೆಯು ಅಂತರ್ಜಾಲ ಮ್ಯಾಗಝಿನ್ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.

ಈ ಕಥೆಯ ನಾಯಕಿ ಓರ್ವ ಚಲನಚಿತ್ರನಾಯಕಿ. ರಾಜಕೀಯದೊಡನೆ ಇವಳಿಗೆ ಸಂಬಂಧ ಬಂದಿದೆ. ಇವಳ ವಿಶ್ವಾಸವನ್ನು ಸಂಪಾದಿಸಿದ ಪತ್ರಕರ್ತೆಯೋರ್ವಳು ಇವಳ ಮಗಳು ಸಲಿಂಗಕಾಮಿಯಾಗಿರುವ ಸಂಗತಿಯನ್ನು ಇವಳಿಂದಲೇ ತಿಳಿದುಕೊಂಡು, ಅದನ್ನೆಲ್ಲ ಟೇಪ್ ರಿಕಾ˘ರ್ಡರಿನಲ್ಲಿ ದಾಖಲಿಸಿಕೊಂಡು, ಭ್ರಷ್ಟ ದುರ್ವ್ಯವಹಾರಕ್ಕೆ ಇಳಿದಿದ್ದಾಳೆ. ನಮ್ಮ ನಾಯಕಿಯ ರಾಜಕೀಯ ಪಕ್ಷವು ಪೇಚಿನಲ್ಲಿ ಸಿಲುಕಿದೆ. ಇದೆಲ್ಲವನ್ನು ಸಾರಾಸಗಟಾಗಿ ನಿರಾಕರಿಸಲು ಇವಳಿಗೆ ಆದೇಶಿಸುತ್ತದೆ. ನಮ್ಮ ನಾಯಕಿಯು ತೆಗೆದುಕೊಳ್ಳುವ ನಿರ್ಣಯವನ್ನು ಹಾಗು ಅವಳು ಅದನ್ನು ಸಾದರಪಡಿಸುವ ರೀತಿಯನ್ನು ನಾನೇ ಇಲ್ಲಿ ಹೇಳಿಬಿಡುವುದು ಸರಿಯಾಗಲಾರದು. ಕತೆಯನ್ನು ಓದಿಯೇ ಅದನ್ನು ತಿಳಿದುಕೊಳ್ಳಬೇಕು. ಆಧುನಿಕ ಮನೋಭಾವದ ಮಹಿಳೆ ಮಾತ್ರ ಇಂತಹ ನಿರ್ಣಯವನ್ನು ತೆಗೆದುಕೊಳ್ಳಬಲ್ಲಳು ಎಂದಷ್ಟೇ ಹೇಳಬಯಸುವೆ.

ಚಲನಚಿತ್ರ ನಾಯಕಿಯರ ಬಗೆಗೆ ಕನ್ನಡದಲ್ಲಿ ಈಗಾಗಲೇ ಎರಡು ಕಾದಂಬರಿಗಳು ಬಂದಿವೆ. ವ್ಹಿ.ಎಮ್. ಇನಾಮದಾರ ಎನ್ನುವ ಲೇಖಕರು ಸುಮಾರು ೬೦ ವರ್ಷಗಳಷ್ಟು ಹಿಂದೆಯೇಮೋಹಿನಿಎನ್ನುವ ಕಾದಂಬರಿಯನ್ನು ಬರೆದಿದ್ದರು. ಮಾವಿನಕೆರೆ ರಂಗನಾಥನ್ ಎನ್ನುವ ಲೇಖಕರಜಲತರಂಗಎನ್ನುವ ಕಾದಂಬರಿಯನ್ನು, ‘ತರಂಗವಾರಪತ್ರಿಕೆಯು ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆಯೇ ಧಾರಾವಾಹಿಯಾಗಿ ಪ್ರಕಟಿಸಿತ್ತು. ಈ ಕಾದಂಬರಿಗಳಿಗೂ, ಉಮೇಶ ದೇಸಾಯಿಯವರಬಿಡುಗಡೆಗೂ ಇರುವ ಭಿನ್ನತೆ ಏನು? ಮೊದಲಿನ ಎರಡೂ ಕಾದಂಬರಿಗಳ ನಿರೂಪಣೆ ಸಾಂಪ್ರದಾಯಿಕ ಶೈಲಿಯಲ್ಲಿದೆ. ಅಂದರೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳ ಚಿತ್ರಣವೇ ಇವೆರಡರಲ್ಲೂ ಮುಖ್ಯವಾಗಿದೆ.

ಆದರೆಬಿಡುಗಡೆಕಥೆಯಲ್ಲಿ, ಆಧುನಿಕ ವಾತಾವರಣದಲ್ಲಿರುವ ಪಾತ್ರಗಳಿಗೆ ಇರುವ ಆಧುನಿಕ ವಿಚಾರಗಳ ಪ್ರಸ್ತಾವನೆ ಮುಖ್ಯವಾಗಿದೆ, ಅದೂ ಸಹ ಆಧುನಿಕ  ನಿರೂಪಣಾ ಶೈಲಿಯಲ್ಲಿ.

ಕನ್ನಡದಲ್ಲಿ ನನಗೆ ಗೊತ್ತಿರುವ ಆಧುನಿಕ ಕಥಾಲೇಖಕಿಯರಾದ ಸಿಂಧು ರಾವ್, ತೇಜಸ್ವಿನಿ ಹೆಗಡೆ, ಶ್ರೀದೇವಿ ಕಳಸದ, ಜಯಶ್ರೀ ದೇಶಪಾಂಡೆ, ಸ್ವರ್ಣಾ ಎನ್.ಪಿ. ಇವರೂ ಸಹ ಆಧುನಿಕ ಕಥಾನಕಗಳು ಇರುವ ಕಥೆಗಳನ್ನು ಬರೆದಿದ್ದಾರೆ. ಇವರೆಲ್ಲರೂ ಕನ್ನಡದ ಶ್ರೇಷ್ಠ ಲೇಖಕಿಯರೇ. ಆದರೆ ಆಧುನಿಕತೆಯೊಂದೇ ಇವರ ಕಥೆಗಳ ಜೀವಾಳವಲ್ಲ. ವೈಯಕ್ತಿಕ ಮಾನಸಿಕ ಚಿತ್ರಣವೂ ಸಹ ಈ ಲೇಖಕಿಯರಿಗೆ ಮುಖ್ಯವಾಗಿದೆ. ಹೀಗಾಗಿ ಇವರ ಸಾಹಿತ್ಯವು ಕನ್ನಡಸಾಹಿತ್ಯದ ಸುದೀರ್ಘ ಪರಂಪರೆಯ ಮುಂದುವರಿಕೆಯಾಗಿದೆ.

ನಮ್ಮ ಕಥನ ಪರಂಪರೆಗೆ ಹೊರತಾದ ರೀತಿಯಲ್ಲಿರುವುದೇ ಉಮೇಶ ದೇಸಾಯಿಯವರ ಸಮಗ್ರ ಕಥಾಸಾಹಿತ್ಯದ ವೈಶಿಷ್ಟ್ಯವಾಗಿದೆ. ಇವರ ಪಾತ್ರಗಳು ವೈಯಕ್ತಿಕ ಆಧುನಿಕತೆಗಿಂತ ಹೆಚ್ಚಾಗಿ ಸಾಮಾಜಿಕ ಆಧುನಿಕತೆಯನ್ನು ಬಿಂಬಿಸುತ್ತವೆ.