Saturday, September 5, 2009

ಕವಿಗಳು ಬಳಸುವ ಭಾಷೆ

ಮೈಸೂರೆನ್ನಿ, ಕನ್ನಡವೆನ್ನಿ,
ಮಲ್ಲಿಗೆಯನ್ನಿ ಒಂದೇ.
ಒಡೆಯರ ಮುಕುಟದ ರತ್ನವಿದೆನ್ನಿ
ಒಡೆಯರ ಕನ್ನಡವೆನ್ನಿ
ಇರುಳನು ಕಾಣದ ಕನ್ನಡವೆನ್ನಿ
ಒಡೆಯದ ಕನ್ನಡವೆನ್ನಿ
ಕವಿಗಳು ಬಳಸುವ ಭಾಷೆಯಿದೆನ್ನಿ
ಒಳಗಿನ ಹೂರಣ ಒಂದೇ.

‘ಮೈಸೂರು ಮಲ್ಲಿಗೆ’ಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಕವನಸಂಕಲನದ ಸ್ವಾಗತ ಪುಟದಲ್ಲಿ, ಕನ್ನಡ ಭಾಷೆಯನ್ನು ಬಣ್ಣಿಸುವ ಒಂದು ಪುಟ್ಟ ಕವನವನ್ನು ಬರೆದಿದ್ದಾರೆ. ಆ ಪುಟ್ಟಕವನದಲ್ಲಿ ಅವರು ಕನ್ನಡವನ್ನು ‘ಕವಿಗಳು ಬಳಸುವ ಭಾಷೆ’ ಎಂದು ಕರೆದಿದ್ದಾರೆ. ಕನ್ನಡಕ್ಕೆ ಸಂದಿರಬಹುದಾದ,ಸಲ್ಲಬಹುದಾದ ಅತ್ಯುಚ್ಚ ಪ್ರಶಂಸೆ ಇದು.

ನಮ್ಮ ಕನ್ನಡ ಭಾಷೆ ಅವಿದ್ಯಾವಂತರ ಭಾಷೆ ಅಲ್ಲ. ಇದರಲ್ಲಿ ಅಪಾರ ಪದಸಂಪತ್ತಿದೆ. ಮನಸ್ವಿನಿಯಂತೆ ಬಳುಕಬಲ್ಲ ಸಾಮರ್ಥ್ಯ ಈ ಭಾಷೆಗಿದೆ. ಶಿಷ್ಟರು (elite) ಕಾವ್ಯರಚನೆಗೆ ಬಳಸಲು ಇಷ್ಟಪಡುವ ಭಾಷೆ ಇದು ಎನ್ನುವದು ಕೆ.ಎಸ್. ನರಸಿಂಹಸ್ವಾಮಿಯವರ ಅಭಿಮತ. ಆದರೆ ಈ ಭಾಷೆಯನ್ನು ಶಿಷ್ಟರಷ್ಟೇ ಅಲ್ಲ, ಜಾನಪದ ಕವಿಗಳೂ ಸಹ ಇಷ್ಟಪಟ್ಟೇ ಬಳಸಿದ್ದಾರೆ. ಕನ್ನಡ ಜಾನಪದ ಕಾವ್ಯದ ಮೇಲ್ಮೆ ಶಿಷ್ಟಕಾವ್ಯಕ್ಕಿಂತ ಏನೂ ಕಡಿಮೆ ಇಲ್ಲ.

ಕನ್ನಡ ಭಾಷೆಗೇನೋ ಅಪಾರ ಸಾಮರ್ಥ್ಯವಿದೆ. ಆದರೆ ಬಳಸಿದ ಬಟ್ಟೆಯನ್ನೇ ಬಳಸಿದರೆ ಹಳಸಲು ವಾಸನೆ ಬರಬಹುದು. ಅಲ್ಲದೆ, ಸಾಮಾಜಿಕ ಸ್ಥಿತಿ ಬದಲಾದಂತೆ ಕಾವ್ಯರಚನಾಶೈಲಿಯೂ ಬದಲಾಗಬೇಕಾಗುತ್ತದೆ. ಈ ಬದಲಾವಣೆಯು ಅನೇಕ ಸಲ ಕವಿಯ ಆಂತರಿಕ ಅವಶ್ಯಕತೆಯೂ ಆಗಿರುತ್ತದೆ.

ಸಾವಿರಾರು ವರ್ಷಗಳವರೆಗೆ ಕನ್ನಡ ನಾಡನ್ನು ಆಳುವವರ ಭಾಷೆ ಕನ್ನಡವಾಗಿರಲಿಲ್ಲ. ಹೀಗಾಗಿ ಆ ಕಾಲದಲ್ಲಿ ಸಂಸ್ಕೃತ ಹಾಗೂ ಪ್ರಾಕೃತಗಳೇ ಕವಿಗಳು ಬಳಸುವ ಭಾಷೆಗಳಾಗಿದ್ದವು. ಕನ್ನಡ ನಾಡಿನ ರಾಜರು ಕನ್ನಡವನ್ನು ನುಡಿಯುವವರೇ ಆದಬಳಿಕ ಈ ಪರಿಸ್ಥಿತಿಯು ಬದಲಾಗಲು ಆರಂಭಿಸಿತು. ಕನ್ನಡ ನಾಡಿಗೆ ಸಾಮ್ರಾಜ್ಯದ ಪಟ್ಟ ದೊರೆತ ಕಾಲದಲ್ಲಿ ಕನ್ನಡ ಭಾಷೆಗೂ ರಾಜಭಾಷೆಯ ಸ್ಥಾನಮಾನ ದೊರೆಯಿತು. ಈ ಸಂದರ್ಭದಲ್ಲಿ ಕನ್ನಡ ನಾಡಿನ ಕವಿಗಳು ರಾಜಭಾಷೆಯಾದ ಕನ್ನಡದಲ್ಲಿಯೇ ಕಾವ್ಯರಚನೆಯನ್ನು ಪ್ರಾರಂಭಿಸಿದರು. ಆದರೆ ಕಾವ್ಯಶೈಲಿ ಮಾತ್ರ ಈ ಮೊದಲೇ ಮನ್ನಣೆ ಪಡೆದ ಶಿಷ್ಟಮಾನ್ಯ ಶೈಲಿಯಾಗಿತ್ತು. ಆದುದರಿಂದ ಕನ್ನಡದ ಆದಿಕವಿ ಪಂಪ (ಕ್ರಿ.ಶ.೯೪೦), ಆನಂತರದ ರನ್ನ, ಪೊನ್ನ, ನಾಗಚಂದ್ರ ಮೊದಲಾದವರೆಲ್ಲ ಮಾರ್ಗಶೈಲಿಯಲ್ಲಿಯೇ ಚಂಪೂಕಾವ್ಯರಚನೆ ಮಾಡಿ ಅದ್ಭುತ ಕಾವ್ಯಸೃಷ್ಟಿ ಮಾಡಿದರು. ಕನ್ನಡ ಸಾಮ್ರಾಜ್ಯದ ಉನ್ನತಿಯು ಕನ್ನಡ ಕಾವ್ಯದ ಉನ್ನತಿಗೂ ಕಾರಣವಾಯಿತು. ಈ ಅವಧಿಯನ್ನು ಕನ್ನಡದ Classical Age ಎಂದು ಕರೆಯಬಹುದೇನೊ? ಇಂತಹ ಕಾಲದಲ್ಲಿ ಬರೆದ ಕವಿಗಳು ಮಾರ್ಗ ಶೈಲಿಯಲ್ಲಿಯೇ ಬರೆದರೂ ಸಹ, ಕನ್ನಡದ ದೇಸಿ ಭಾಷೆಯನ್ನು ತಮ್ಮ ಕಾವ್ಯದಲ್ಲಿ ಹದನರಿತು ಬಳಸಿಕೊಂಡಿದ್ದಾರೆ. ಪಂಪನೇ ತನ್ನ ಮಹಾಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಈ ರೀತಿಯಾಗಿ ಹೇಳಿದ್ದಾನೆ:

“ಬಗೆ ಪೊಸತಪ್ಪುದಾಗಿ ಮೃದು ಬಂಧದೊಳೊಂದುವುದೊಂದಿ ದೇಸಿಯೊಳ್
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ, ಕಾವ್ಯಬಂಧಮೊ
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊರೆಯಿಂ ಬಳಲ್ದು ತುಂ
ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್”

ಸಾಮಾಜಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಉದ್ದೇಶವಾಗಿಟ್ಟುಕೊಂಡ ಶರಣಚಳವಳಿಯು (ಕ್ರಿಶ.೧೧೫೦) ಕನ್ನಡಕಾವ್ಯದ ಶೈಲಿಯನ್ನೇ ಬದಲಿಸಿತು. ಕವಿಗಳು ಬಳಸುವ ಭಾಷೆಯು ಸಾಮಾನ್ಯರು ಬಳಸುವ ಭಾಷೆಯಾಯಿತು. ಸಾಮಾನ್ಯ ಜನರಿಗಾಗಿ ಬರೆಯುತ್ತಿದ್ದ ಶರಣರು ಆಡುನುಡಿಯಲ್ಲಿಯೇ ತಮ್ಮ ಅಸಾಮಾನ್ಯ ವಚನಗಳನ್ನು ರಚಿಸಿದರು. ಶರಣರ ಅನೇಕ ವಚನಗಳು ಬೋಧನಾತ್ಮಕ ವಚನಗಳಾಗಿದ್ದವು.
ಉದಾಹರಣೆಗೆ: “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ;
“ಛಲ ಬೇಕು ಶರಣಂಗೆ ಪರಧನವನೊಲೆನೆಂಬ” ಇತ್ಯಾದಿ.
ಆದುದರಿಂದಲೆ ಆ ವಚನಕಾರ ಕವಿಗಳ ಭಾಷೆಯೂ ಸಹ ಸರಳ ಹಾಗೂ ನೇರ ಭಾಷೆಯಾಗಿರುತ್ತಿತ್ತು.

ಜೈನಕವಿಗಳಿಗೆ ಶಿಷ್ಟಮಾನ್ಯ ಕಾವ್ಯ ರಚಿಸುವ ಅವಶ್ಯಕತೆ ಇದ್ದರೆ ವೀರಶೈವ ಕವಿಗಳಿಗೆ ಜನಸಾಮಾನ್ಯರಿಗಾಗಿ ಕಾವ್ಯ ರಚಿಸುವ ಅವಶ್ಯಕತೆ ಇತ್ತು. ಹೀಗಾಗಿ ವಚನಕಾರರ ನಂತರ ಬಂದ ವೀರಶೈವ ಕವಿಗಳು ಬಳಸಿದ ಭಾಷೆಯು ಮಾರ್ಗಶೈಲಿಯ ಚಂಪೂರಚನೆಯನ್ನು ತ್ಯಜಿಸಿ ‘ದೇಸಿ ಶೈಲಿ’ಗೆ ಹೊರಳಿತು. ಹರಿಹರ ಹಾಗೂ ರಾಘವಾಂಕರು ಈ ಬದಲಾವಣೆಯ ನೇತಾರರು.

ಶಿವಭಕ್ತರ ಚರಿತ್ರೆಯನ್ನು ಬರೆಯಲು ಹರಿಹರನು (ಕ್ರಿ.ಶ.೧೨೦೦) ರಗಳೆಗಳ ರೂಪವನ್ನು ಬಳಸಿದನು. ಹರಿಹರನ ರಸಾವೇಶದ ಕಥನಕ್ಕೆ, ವರ್ಣನೆಗಳಿಗೆ, ಅನಿಯಮಿತ ಪಾದಸಂಖ್ಯೆಯುಳ್ಳ ರಗಳೆ ಯೋಗ್ಯ ವಾಹನವಾಯಿತು. ಬಸವಣ್ಣನು ಶಿವಪೂಜೆಗೈಯುತ್ತಿರುವಾಗ ಅವನಲ್ಲಿ ಮೂಡಿದ ಸಾತ್ವಿಕ ಆವೇಶವನ್ನು ಹರಿಹರನು ಬಣ್ಣಿಸುವಾಗ ಚಿಕ್ಕ ಚಿಕ್ಕ ಕ್ರಿಯಾಪದಗಳನ್ನೇ ದ್ವಿರುಕ್ತಿಗೊಳಿಸಿ, ಭಾವಾವೇಷವನ್ನು ಸಾಧಿಸುವ ಬಗೆ ಈ ರೀತಿಯಾಗಿದೆ:

ಮಣಿಮಣಿದು ಕುಣಿಕುಣಿದು ಕಲೆಕಲೆದು ನಲಿದಾಡಿ
ತಣಿತಣಿದು ತಕ್ಕೈಸಿ ಮಿಕ್ಕು ಮಲೆಮಲೆದಾಡಿ
ಆಡುತಾಡುತ್ತಲ್ಲಿ ಪೊಗುಳ್ವದೆ ನೆರೆ ಮರೆತು
ನೋಡನೋಡತ್ತಲ್ಲಿ ನೋಟಮಂ ಮಿಗೆ ಮರೆದು
ಕಣ್ಮುಚ್ಚಿ ಗದಗದಿಸಿ ಜೋಲ್ದು ಜೊಂಪಿಸಿ ಬಿದ್ದು
ಉಣ್ಮುವ ಶಿವಾನಂದರಸದ ಹೊನಲೊಳಗಿದ್ದು
ಈಸಾಡಿ ಗಂಗಾಧರನ ಚರಣಮಂ ಪಿಡಿದು
ಲೇಸಾಗಿ ಚಿತ್ತದೊಳು ಸಂಗನಂ ಸೆರೆ ಹಿಡಿದು

ಹರಿಹರನ ಶಿಷ್ಯನಾದ ರಾಘವಾಂಕನಿಗೆ ಷಟ್ಪದಿಗಳ ಮೊದಲಿಗ ಎನ್ನಬಹುದು. ರಾಘವಾಂಕನ ವಿಸ್ತಾರವಾದ ಕಥನಕ್ಕೆ, ನಾಟಕೀಯ ಸಂಭಾಷಣೆಗಳಿಗೆ ವಾರ್ಧಕ ಷಟ್ಪದಿಯೇ ಯೋಗ್ಯವಾದ ಸಾಧನವಾಯಿತು.
ಉದಾಹರಣೆಗಾಗಿ ಹರಿಶ್ಚಂದ್ರಕಾವ್ಯದಲ್ಲಿ ನಕ್ಷತ್ರಿಕನು ವಿಶ್ವಾಮಿತ್ರನಿಗೆ ಹೇಳುವ ಈ ನುಡಿಯೊಂದನ್ನು ನೋಡಿರಿ:

ಬಿಸಿಲಾಗಿ, ಬಿರುಗಾಳಿಯಾಗಿ, ಕಲು ನೆಲವಾಗಿ,
ವಿಷಮಾಗ್ನಿಯಾಗಿ, ನಾನಾ ಕ್ರೂರಮೃಗವಾಗಿ,
ಮಸಗಿ ಘೋರಾರಣ್ಯವಾಗಿ, ಗರ್ಜಿಸಿ ಕವಿದ ಭೂತಬೇತಾಳರಾಗಿ
ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂ
ಧಿಸಿ ಹುಂ ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ
ಹುಸಿಗೆ ಹುಂ ಕೊಳಿಸುವೆಂ ಭೂಭೂಜನನೆನ್ನಿಂದ ಬಲ್ಲಿದರಾರೆಂದನು

ಷಟ್ಪದಿಯ ದಾರಿಯಲ್ಲಿ ನಡೆದು, ಆಡುನುಡಿಯ ಭಂಡಾರವನ್ನೇ ಸೂರೆಗೈದವನು ಕುಮಾರವ್ಯಾಸ. (ಕ್ರಿ.ಶ. ೧೪೦೦). ಈತನ ಭಾಷೆಯಲ್ಲಿ ಕನ್ನಡದ ದೇಶಿ ಪದಗಳು ಹಾಗೂ ಕನ್ನಡದಲ್ಲಿ ಬೆರೆತ, ಅರಬಿ, ಪಾರಸಿ ಹಾಗೂ ಮರಾಠಿಯಿಂದ ಬಂದಂತಹ ಅನ್ಯದೇಶಿ ಪದಗಳು ಹೇರಳವಾಗಿವೆ. ರಾಘವಾಂಕನ ವಾರ್ಧಕ ಷಟ್ಪದಿಯು ವಿಸ್ತಾರ ಕಥನಕ್ಕೆ ಯೋಗ್ಯವಾಗುತ್ತಿತ್ತು. ಚುಟುಕಾದ ಪದಗಳಲ್ಲಿ ರಸಸೃಷ್ಟಿಯ ಉದ್ದೇಶವಿಟ್ಟುಕೊಂಡ ಕುಮಾರವ್ಯಾಸನು ಬಳಸಿಕೊಂಡದ್ದು ಭಾಮಿನಿ ಷಟ್ಪದಿಯನ್ನು.

ಆನಂತರದ (ಕ್ರಿ.ಶ. ೧೫೦೦) ವೀರಶೈವ ಕವಿಗಳಾದ ನಿಜಗುಣಿ ಶಿವಯೋಗಿ, ಸರ್ಪಭೂಷಣ ಶಿವಯೋಗಿ ಇವರ ಕಾಲದಲ್ಲಿ ಕನ್ನಡ ಭಾಷೆಯು ಹೊಸಗನ್ನಡಕ್ಕೆ ಹತ್ತಿರವಾಗಿತ್ತು. ಉನ್ನತ ತತ್ವಜ್ಞಾನವನ್ನು ಅವರು ಅಚ್ಚಕನ್ನಡದಲ್ಲಿಯೆ ಸರಳವಾಗಿ ಹೇಳಲು ಶಕ್ತರಾಗಿದ್ದರು. ಮುಪ್ಪಿನ ಷಡಕ್ಷರಿಯವರ ಈ ಗೀತೆ ಅದಕ್ಕೆ ಉದಾಹರಣೆಯಾಗಿದೆ:

ಅವರವರ ದರುಶನಕೆ, ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ, ಅವರವರ ಭಕ್ತಿಗೆ
ಅವರವರಿಗೆಲ್ಲ ದೇವ ನೀನೊಬ್ಬನೆ
ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ಎಲೆ ದೇವನೆ!

ಕ್ರಿ.ಶ.೧೭೦೦ರ ಸುಮಾರಿನಲ್ಲಿ ಜೀವಿಸಿದ ಸರ್ವಜ್ಞನು ಲೋಕಹಿತದ ಪದಗಳನು ಬರೆಯುವ ಉದ್ದೇಶದಿಂದ ತನ್ನ ಕಾವ್ಯಕ್ಕೆ ಜನಪದ ಛಂದಸ್ಸಾದ ತ್ರಿಪದಿಯನ್ನು ಬಳಸಿ ಜನಪದ ಕವಿಯೇ ಆದನು. ಇದೇ ಕಾಲದ (ಕ್ರಿ.ಶ.೧೬೭೫) ರಂಗನಾಥನು ಕವಿಗಳು ಬಳಸುವ ಭಾಷೆಯಾದ ಕನ್ನಡದ ಬಗೆಗೆ ಒಂದು ಅಂತಿಮ ನಿರ್ಣಯ ಕೊಟ್ಟಿದ್ದಾನೆ:

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?

ಈ ರೀತಿಯಾಗಿ ಕವಿಗಳು ಬಳಸುವ ಭಾಷೆಯಾದ ಕನ್ನಡವು ಆದಿಕವಿ ಪಂಪನಿಂದ ಸರ್ವಜ್ಞನವರೆಗೆ ವಿವಿಧ ರೀತಿಯಲ್ಲಿ ತನ್ನ ಬೆಡಗನ್ನು ತೋರಿಸಿ ಕನ್ನಡಿಗರನ್ನು ನಲಿಸಿತು. ಹಳೆಗನ್ನಡವು ನಡುಗನ್ನಡಕ್ಕೆ ಹಾಗೂ ನಡುಗನ್ನಡವು ಹೊಸಗನ್ನಡಕ್ಕೆ ಬದಲಾದಂತೆ ಕವಿಗಳಲ್ಲಿ ಕೇವಲ ಭಾಷೆಯ ಬದಲಾವಣೆ ಅಷ್ಟೇ ಅಲ್ಲ, ಸಂಕೇತಗಳಲ್ಲಿಯೂ ಸಹ ಆಶ್ಚರ್ಯಕರ ಬದಲಾವಣೆಗಳಾದವು.

ಉದಾಹರಣೆಗೆ ಮಾರ್ಗಸಂಪ್ರದಾಯದಲ್ಲಿ ವಸಂತ ಋತುವಿನ ಆಗಮನದ ಸಂಕೇತವಾಗಿದ್ದ, ಅಲಂಕಾರಶಾಸ್ತ್ರದ ಪುಟ್ಟ ಒಡವೆಯಾಗಿದ್ದ, ಕನ್ನಡ ಕವಿಗಳಿಗೆ ಪರಮಾಪ್ತವಾದ ಕೋಗಿಲೆಯು, ನಿಜಗುಣಿ ಶಿವಯೋಗಿಗಳ ಕವನದಲ್ಲಿ (“ಕೋಗಿಲೆ, ಚೆಲ್ವ ಕೋಗಿಲೆ”) ಮನಸ್ಸಿನ ಸಂಕೇತವಾಗಿದೆ. ನವೋದಯ ಕಾವ್ಯದಲ್ಲಿ ಬೇಂದ್ರೆಯವರು ತಮ್ಮ ಕವನಗಳಲ್ಲಿ ನಿಜಗುಣಿ ಶಿವಯೋಗಿಗಳನ್ನೇ ಅನುಸರಿಸಿದ್ದಾರೆ. (“ಮನದ ಮಾಮರದ ಕೊನಿಗೆ ಕೋಗಿಲೊಂದು ಕೂಗುತಿತ್ತ”). ಆದರೆ ಕುವೆಂಪು ಕೋಗಿಲೆಯನ್ನು ಕವಿಯ ಸ್ವಾತಂತ್ರ್ಯದ ಸಂಕೇತವಾಗಿ ಬಳಸಿದ್ದಾರೆ. (“ಕೋಗಿಲೆ ಹಾಗು ಸೋವಿಯಟ್ ರಶಿಯಾ”). ನವ್ಯಕಾವ್ಯದಲ್ಲಿ ನಿಸಾರ ಅಹಮದರು ಕಾಗೆಯನ್ನು ಕೋಗಿಲೆಗೆ ಪರ್ಯಾಯ ಸಂಕೇತವಾಗಿ ಬಳಸಿದ್ದಾರೆ. (“ಕಾಗೆ ಕೂಗದ ಮುನ್ನ ಏನಿತ್ತಣ್ಣ ಜಗದಿ?”)

ಹಳೆಯ ಛಂದೋಬದ್ಧ ಕಾವ್ಯಮಾರ್ಗವನ್ನು ತ್ಯಜಿಸಿ, ಕನ್ನಡ ಕಾವ್ಯಕ್ಕೆ ನವೋದಯದ ಮಾರ್ಗವನ್ನು ತೋರಿಸುವ ಅವಶ್ಯಕತೆಯನ್ನು ಕಂಡವರು ಕನ್ನಡದ ಕಣ್ವ ಶ್ರೀ ಬಿ.ಎಮ್. ಶ್ರೀಕಂಠಯ್ಯನವರು. ಇವರ ಸಮಯದಲ್ಲಿ, ಆಂಗ್ಲ ಪ್ರಭುತ್ವವು ತನ್ನ ವಿಚಾರ ಹಾಗು ತನ್ನ ಶಿಕ್ಷಣವನ್ನು ಭಾರತದ ಮೇಲೆ ಹೇರಿತ್ತು. ಹೀಗಾಗಿ ಆಂಗ್ಲ ಸಾಹಿತ್ಯದ ಪ್ರಭಾವವು ಭಾರತೀಯರ ಮೇಲೆ, ಅದರಂತೆ ಕನ್ನಡಿಗರ ಮೇಲೂ ಆಗಿತ್ತು.ಆಂಗ್ಲ ಸಾಹಿತ್ಯದ ಸವಿಯನ್ನು ಉಂಡ ಶ್ರೀಕಂಠಯ್ಯನವರು ಆಂಗ್ಲಭಾಷೆಯ ಭಾವಗೀತೆಗಳ ಸೊಗಸನ್ನು ಕನ್ನಡಕ್ಕೆ ತರಲು ಬಹುವಾಗಿ ಶ್ರಮಿಸಿದರು. ಅವರ ಮಾತಿನಲ್ಲಿಯೇ ಹೇಳುವದಾದರೆ:
“ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ,
ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ.”
ಅದುದರಿಂದ ಇಂದಿನ ಕವಿಗಳು ಬಳಸುವ ಕನ್ನಡ ಭಾಷೆಯು ಶ್ರೀಕಂಠಯ್ಯನವರ ಕೊಡುಗೆ ಎನ್ನಬಹುದು.

ನವೋದಯ ಕಾಲವು ಆದರ್ಶದ ಕಾಲ, ನಿಸರ್ಗಪ್ರೇಮದ ಕಾಲ. ಇದರ ಫಲವಾಗಿ ನವೋದಯದ ಕವಿಗಳು ನಾಡಪ್ರೇಮದ ಬಗೆಗೆ, ನಿಸರ್ಗದ ಬಗೆಗೆ , ಕನ್ನಡದ ಅಭಿಮಾನದ ಬಗೆಗೆ ವಿಪುಲವಾಗಿ ಬರೆದರು. ನವೋದಯ ಕಾಲದ ಪ್ರಮುಖ ಕವಿಗಳೆಂದರೆ ಬೇಂದ್ರೆ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ ಹಾಗೂ ಜಿ.ಪಿ.ರಾಜರತ್ನಮ್. ಈ ನಾಲ್ವರೂ ಕಾವ್ಯರಚನೆಯಲ್ಲಿ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮದೇ ಕವಿಭಾಷೆಯನ್ನು ರೂಪಿಸಿದರು. ಈ ಕವಿಗಳಲ್ಲಿ ಬೇಂದ್ರೆಯವರದು ಸರಳ ಭಾಷೆಯಾದರೆ, ಕುವೆಂಪುರವರದು ಅಲಂಕಾರಿಕ ಭಾಷೆ. ನರಸಿಂಹಸ್ವಾಮಿಯವರದು ಆಪ್ತಭಾಷೆ. ರಾಜರತ್ನಮ್ ಅವರದು ಆಡುನುಡಿಯ ವೇಷವನ್ನು ತೊಟ್ಟ ಭಾಷೆ.

ಬೇಂದ್ರೆಯವರದು ಅತ್ಯಂತ inter active ಸ್ವಭಾವ. ಅವರ ಪಾಂಡಿತ್ಯವೂ ಅಗಾಧವಾದದ್ದು. ಅದರೊಡನೆ ಅವರಿಗೆ ಒಲಿದ ಬಂದ ಮಾತಿನ ಚತುರತೆ. ಹಾಗೆಂದು ಅವರು ಬರೆಯುವವದು ಪಂಡಿತರಿಗಾಗಿ ಅಲ್ಲ. ಸಂತೆಯಲ್ಲಿಯ ಸಾಮಾನ್ಯ ಮನುಷ್ಯನನ್ನು ಗೆಳೆಯನಂತೆ ಗಣಿಸಿ ಹರಟೆ ಹೊಡೆಯುವ ರೀತಿಯ ಕಾವ್ಯಭಾಷೆ ಅವರದು. ಇವೆಲ್ಲಾ ಒಟ್ಟುಗೂಡಿ ಅವರ ಕವನದ ಭಾಷೆಯನ್ನು ರೂಪಿಸಿವೆ.
ಬೇಂದ್ರೆ ಕಾವ್ಯವು ಜನಪದ ಸತ್ವವನ್ನು ಹೀರಿದ ಕಾವ್ಯ. ಅವರು ತಮ್ಮ ಕೇಳುಗರಿಂದ ಬಯಸುತ್ತಿದ್ದದ್ದು ಶ್ರಾವಕನ ಸಹ-ಅನುಭೂತಿಯನ್ನು.
“ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ, ಆ ಸವಿಯ ಹಣಿಸು ನನಗೆ.”, ಎನ್ನುತ್ತಾರೆ ಬೇಂದ್ರೆ.
ಈ ತರಹದ ಕಾವ್ಯದ ಅತ್ಯುತ್ತಮ ಉದಾಹರಣೆಗಳೆಂದರೆ ‘ಬೆಳದಿಂಗಳ ನೋಡs’, ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾವಾ’ ಇತ್ಯಾದಿ.

ಆದರೆ ಈ ಕಾರಣದಿಂದಲೇ ಅವರ ಭಾಷೆ ಕೆಲವೊಮ್ಮೆ ಅತಿ ಸರಳವಾಗಿ ಬಿಡುತ್ತದೆ. ಒಳಗಿನ ಭಾವ ಎಷ್ಟೇ ಸಂಕೀರ್ಣವಾಗಿರಲಿ, ಹೊರಗಿನ ಮುಖಮುದ್ರೆ ಅತಿ ಸರಳ.
ಇದು ಅವರ ಕಾವ್ಯಭಾಷೆಯ ದೋಷವೆಂದೇ ಹೇಳಬೇಕಾಗುತ್ತದೆ.

ಉದಾಹರಣೆಗೆ, ‘ಕರಡಿ ಕುಣಿತ’ವೆನ್ನುವ ಅವರ ಕವನದ ಈ ನುಡಿಯನ್ನು ನೋಡಿರಿ:
“ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ
ಧಣಿ ದಾನ ಕೊಡುವನು ಎಂದಾನೊ.”

ಕರಡಿ ಕುಣಿಸುವವನ ಸಾಧಾರಣ ಮಾತುಗಳಂತೆ ತೋರುವ ಈ ಸಾಲುಗಳಲ್ಲಿ ಹುದುಗಿದ ಅರ್ಥ ಅಸಾಧಾರಣವಾದದ್ದು. ಕಾಡಾಡಿಯಾದ ಮಾನವನು, ತನ್ನ ಆದಿಮಾನವನ ಅವಸ್ಥೆಯಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದವನು, ನಾಗರಿಕತೆ ಬೆಳೆದಂತೆ feudal ವ್ಯವಸ್ಥೆಗೆ ಹೇಗೆ ಬಲಿಯಾದನು ಎನ್ನುವ ವರ್ಣನೆ ಇಲ್ಲಿದೆ.
ಈ ಆದಿಮಾನವ ಸಮಾಜ ಎಷ್ಟು ಹಳೆಯದು ಆತ ಎಷ್ಟು ಸ್ವಚ್ಛಂದವಾಗಿ ಬದಕುತ್ತಿದ್ದ ಎನ್ನುವದನ್ನು ಈ ಮತ್ತೊಂದು ನುಡಿಯಲ್ಲಿ ನೋಡಬಹುದು:

“ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನೋ
ಜಂಬೂನದಿ ದಂಡೀಯ ಜಾಂಬುನೀರಲ ಹಣ್ಣು
ಕಲಿಯುಗದ ಕೊನೆಗೀವ ಉಂಡಾನೋ”

(ಜಾಂಬುವಂತ ಎನ್ನುವ communityಯು ಭಾರತದ ಅತ್ಯಂತ ಹಳೆಯ communityಗಳಲ್ಲಿ ಒಂದು ಎನ್ನುವದನ್ನು ಗಮನಿಸಬೇಕು.)
ಈ ವಿಶೇಷ ಅರ್ಥವು ಕವನದ ಸರಳ ಭಾಷೆಯಲ್ಲಿ ಎದ್ದು ಕಾಣುವದಿಲ್ಲ.

“ಕರಿಮರಿ ನಾಯಿ” ಎನ್ನುವ ಅವರ ಮತ್ತೊಂದು ಕವನದಲ್ಲಿಯೂ ಈ ದೋಷವನ್ನು ಕಾಣಬಹುದು.
“ಕರಿಮರಿ ನಾಯಿ ಕುಂಯ್ ಗುಡುತಿತ್ತು
ಭಟ್ಟರ ಬಾಯಿ ಒಟಗುಡತಿತ್ತು
ಬೆಚ್ಚನ ಮನೆಯ ಹೊಚ್ಚಲದೊಳಗೆ
ನಿಂತರು ಭಟ್ಟರು ಹಣಕುತ ಹೊರಗೆ”

ಈ ನುಡಿಯಲ್ಲಿಯ ‘ಭಟ್ಟರ ಬಾಯಿ ಒಟಗುಡತಿತ್ತು’ ಎನ್ನುವ ಸಾಲಿನಲ್ಲಿ ಅರ್ಥಹೀನ ಪುರೋಹಿತಶಾಹಿಯ ಪ್ರಾಬಲ್ಯವನ್ನೂ, ‘ಬೆಚ್ಚನ ಮನೆಯ ಹೊಚ್ಚಲದೊಳಗೆ’ ಎನ್ನುವ ಸಾಲಿನಲ್ಲಿ ಸುಭದ್ರ ಜೀವನದ ವರ್ಣನೆಯನ್ನೂ ಕಾಣಬಹುದು. ಆದರೆ ‘ಬಂಡಾಯಗಾರರ’ ಕಣ್ಣಿಗೆ ಈ ಸರಳ ಸಾಲುಗಳಲ್ಲಿಯ ವೈಚಾರಿಕತೆ ಕಾಣದೇ ಹೋಗುತ್ತದೆ.

ನವೋದಯ ಯುಗದ ಮತ್ತೊಬ್ಬ ಮಹತ್ವದ ಕವಿ ಎಂದರೆ ಕುವೆಂಪು. ಕುವೆಂಪುರವರ ಕಾವ್ಯಭಾಷೆಯ ವೈಶಿಷ್ಟ್ಯಗಳೆಂದರೆ ಸಂಸ್ಕೃತಭೂಯಿಷ್ಠವಾದ, ವಾಗಾಡಂಬರದ ಪದಸಂಯೋಜನೆ ಹಾಗೂ ಆದೇಶಶೈಲಿ. ಇಂತಹ ಕಾವ್ಯಭಾಷೆಯನ್ನು ಬಳಸಲು ಅವರಿಗಿದ್ದ ಕಾರಣಗಳೇನು? ಅವರ ಕವನಗಳಲ್ಲಿ ಸಂಸ್ಕೃತಪದಗಳ ಬಾಹುಲ್ಯಕ್ಕೆ ಮೂರು ಕಾರಣಗಳಿವೆ. ಮೊದಲನೆಯದು ಕರ್ಣಮಧುರ ಪದಸಂಯೋಜನೆಯ ಉದ್ದೇಶ. ಎರಡನೆಯ ಉದ್ದೇಶವೆಂದರೆ ಕುವೆಂಪುರವರ ಒಂದು ವೈಯುಕ್ತಿಕ ಮನೋಧರ್ಮ. ಅವರ ಕಾದಂಬರಿ (ಕಾನೂರು ಸುಬ್ಬಮ್ಮ ಹೆಗ್ಗಡಿತಿ)ಯ ನಾಯಕನಾದ ಹೂವಯ್ಯನು ಕುವೆಂಪುರವರ ಪ್ರತ್ಯಾತ್ಮ (alter ego)ನಾಗಿದ್ದಾನೆ ಎನ್ನಲಾಗುತ್ತದೆ. ಸಾಮಾನ್ಯ ಜನತೆಯಿಂದ ಹೂವಯ್ಯನು ಮಾನಸಿಕವಾಗಿ ಎಷ್ಟು ದೂರವಿದ್ದನೋ, ಕುವೆಂಪು ಸಹ ಮಾನಸಿಕವಾಗಿ ಅಷ್ಟೇ ದೂರವಿದ್ದರು ಎನ್ನಬಹುದು. ಹೀಗಾಗಿ ಕುವೆಂಪುರವರು ಎಷ್ಟೇ ಜನಪರ ಕವಿಯಾಗಿದ್ದರೂ ಸಹ ಜನತೆಯಿಂದ ಒಂದು ವಿಶಿಷ್ಟ ದೂರವನ್ನು ಕಾಯ್ದುಕೊಳ್ಳಲು ಬಯಸುತ್ತಿದ್ದರು. ಹೀಗಾಗಿ ಆಡುನುಡಿಯ ಶೈಲಿ ಅವರ ಕಾವ್ಯದಲ್ಲಿ ಸಹಸಾ ಕಂಡುಬರುವದಿಲ್ಲ. ಮೂರನೆಯ ಉದ್ದೇಶವೆಂದರೆ ಕುವೆಂಪು ತಮ್ಮ ಕವನಗಳ ಮೂಲಕ ಓದುಗರಿಗೆ ಒಂದು ವಿಚಾರವನ್ನು ತಲುಪಿಸಲು ಬಯಸುತ್ತಿದ್ದರು. ಆದರೆ ಈ ವಿಚಾರವನ್ನು ಸರಳವಾದ ಭಾಷೆಯಲ್ಲಿ ನೀಡುವದು ಸಾಧ್ಯವಿರಲಿಲ್ಲ. ಸರಳವಾದ ಭಾಷೆಯಲ್ಲಿ ವಿಚಾರವನ್ನು ಮಂಡಿಸಿದ ಬೇಂದ್ರೆಯವರ ಕವನಗಳು ಅಯಶಸ್ವಿಯಾಗಿದ್ದನ್ನು ನಾವು ನೋಡಿದ್ದೇವೆ. ಇಂತಹ ತಪ್ಪನ್ನು ಕುವೆಂಪು ಮಾಡಲಿಲ್ಲ.
ಇದಕ್ಕೆ ಉದಾಹರಣೆಯಾಗಿ ಕುವೆಂಪು ಅವರ ಕವನವೊಂದರ ಈ ಸಾಲನ್ನು ನೋಡಿ:
“ಬಾಗಿಲಲಿ ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ”

ಈ ಸಾಲುಗಳಲ್ಲಿ ಕವಿ ಓದುಗನಿಗೆ ‘ನೀನು ಭಾರತೀಯ ಪರಂಪರೆಯ ಈ ಕಲೆಯನ್ನು ಗೌರವಿಸು’ ಎಂದು ಹೇಳಬಯಸುತ್ತಾನೆ. ಆದರೆ ಈ ಆದೇಶವನ್ನು ನೇರನುಡಿಯಲ್ಲಿ, ಆಡುಮಾತಿನಲ್ಲಿ ಹೇಳಲು ಇಷ್ಟಪಡದ ಕವಿ ಸಂಸ್ಕೃತ ಭೂಯಿಷ್ಠ ಭಾಷೆಯ ಮೂಲಕ ಸುತ್ತು ಬಳಸಿ ಹೇಳುತ್ತಿದ್ದಾರೆ.

ಇದರಂತೆ ಅವರ ಮತ್ತೊಂದು ಕವನದ ಕೆಲವು ಸಾಲುಗಳನ್ನು ನೋಡಿರಿ:
“ಓ ನನ್ನ ಚೇತನಾ, ಆಗು ನೀ ಅನಿಕೇತನಾ!”
ತಮ್ಮನ್ನೇ ಸಂಬೋಧಿಸುತ್ತಿರುವಂತೆ ತೋರುವ ಈ ಸಾಲಿನಲ್ಲಿ ಕುವೆಂಪು , ಒಂದು ಸಾರ್ವಜನಿಕ ಕರೆಯನ್ನೇ ನೀಡುತ್ತಿದ್ದಾರೆ: “ನಿಮ್ಮ ಪರಿಮಿತ ಹಾಗೂ ಸ್ವಾರ್ಥಪೂರ್ಣ ಉಪಾಧಿಗಳನ್ನು ತ್ಯಜಿಸಿರಿ” ಎಂದು.
ಹಾಗೆಂದು ಅವರ ಸಂಸ್ಕೃತ ಭೂಯಿಷ್ಠ ಆದೇಶಗಳು ಯಾವಾಗಲೂ ಯಶಸ್ವಿಯಾಗಿವೆ ಅಂತಲ್ಲ.
ಉದಾಹರಣೆಗೆ ಈ ಕವನವನ್ನು ನೋಡಿರಿ:

“ ಪ್ರಿಯ ಬಂಧು ಇದೆ ಹೊತ್ತು ಧ್ಯಾನಕ್ಕೆ: ಹೃದ್ಗ್ರಂಥ
ಪ್ರಳಯಕ್ಕೆ; ಏಳು ಸಮಾಧಿಸ್ಥಾ ವಿಶ್ವದಲ್ಲಿ
ತಲ್ಲೀನವಾಗುವಂ ಛವಿ ಕವಿಯೊಳಾಗುವಂತೆ”.

ಇಲ್ಲಿ ಕವಿ ಬಳಸಿದ ಸಂಸ್ಕೃತ ಭಾಷೆಯೇ ಕೃತಕವಾಗುತ್ತದೆ. ತಲ್ಲೀನತೆ ತಾನಾಗಿ ಬರಬೇಕಲ್ಲದೆ, ಅದನ್ನು ಆಹ್ವಾನಿಸಲಾಗದು.
ಆಡುನುಡಿಯಲ್ಲಿ, ಸರಳ ಕನ್ನಡದಲ್ಲಿ ಆದೇಶವನ್ನು ನೀಡಿದಂತಹ ಕುವೆಂಪುರವರ ಕವನಗಳೂ ಸಹ ಅಯಶಸ್ವಿಯಾಗಿವೆ. ಉದಾಹರಣೆಗೆ ಈ ಕವನವನ್ನು ನೋಡಿರಿ:

“ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ, ಬೇಗ ಸಖಿ
ಬೃಂದಾವನದಿ ಹಾಲನು ಕೊಳ್ಳುವರಾರಿಹರೆ ಹೇಳಿಂದುಮುಖಿ”

ಭಾರತದ ಕೋಗಿಲೆ ಎಂದು ಹೆಸರಾದ ಶ್ರೀಮತಿ ಸರೋಜಿನಿ ನಾಯಡು ಅವರು ಬರೆದ ಕವನವೊಂದನ್ನು ಈ ಕವನವು ಹೋಲುತ್ತದೆ. ಸರೋಜಿನಿ ನಾಯಡು ಅವರ ಆ ಮನೋಹರ ಕವನದಲ್ಲಿ, ಹಾಲು ಮಾರುವ ಗೋಪಿಕಾ ಸ್ತ್ರೀಯಲ್ಲಿ ಕಂಡು ಬರುವುದು ಆತ್ಮಸಮರ್ಪಣೆ ಹಾಗೂ ಸತತ ಕೃಷ್ಣಧ್ಯಾನ. ಆದರೆ ಕುವೆಂಪುರವರ ಕವನದಲ್ಲಿ ಕಂಡುಬರುವದು ದೈಹಿಕ ಶೃಂಗಾರ ಲೋಲುಪತೆ ಹಾಗೂ ಆದೇಶಶೈಲಿ. ಕುವೆಂಪುರವರ ಕವನದ ಗೋಪಸ್ತ್ರೀ ತನ್ನ ಸಖಿಗೆ ಹೇಳುವದು ಹೀಗೆ:
“ತೊಂಡೆಯ ಹಣ್ಣನು ತುಟಿಗಳು ನಗಲಿ,
ವದನವು ಮೀರಲಿ ತಾವರೆಯ”.

‘ಕೃಷ್ಣದರ್ಶನಕ್ಕೆ ಹೋಗುವಾಗ ನಿನ್ನ ತುಟಿಗಳು ತೊಂಡೆಯ ಹಣ್ಣುಗಳಂತೆ ಕೆಂಪಾಗಿ ಕಾಣಿಸಲಿ’ ಎಂದು ಗೋಪಸ್ತ್ರೀ ತನ್ನ ಸಖಿಗೆ ಆದೇಶ ನೀಡುತ್ತಿದ್ದಾಳೆ. ಈ ಆದೇಶದಲ್ಲಿ ಮಹತ್ವವಿರುವದು ದೈಹಿಕ ಸೌಂದರ್ಯಕ್ಕೆ!
ದೈಹಿಕ ಸೌಂದರ್ಯದ ಆರಾಧನೆ ಕುವೆಂಪುರವರ ಕವನಗಳ ಮತ್ತೊಂದು ಲಕ್ಷಣ. ಅವರ ಜನಪ್ರಿಯ ಕವನವಾದ “ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ” ಇದರ ಈ ಸಾಲುಗಳನ್ನು ಗಮನಿಸಿರಿ:

“ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.”

ಈ ಸಾಲುಗಳಲ್ಲಿ “ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ” ಎನ್ನುವ ಪದಗಳು ಸೂಕ್ಷ್ಮಜ್ಞ ಓದುಗನಲ್ಲಿ ತಟಕ್ಕನೆ ಒಂದು ತರಹದ ಅರುಚಿಯನ್ನು ಹುಟ್ಟಿಸುತ್ತವೆ. ‘ಮೂಡುವೆಣ್ಣಿ’ಗೆ ಸರೂಪವಾದ ‘ಬೆಲೆವೆಣ್ಣು’ ಎನ್ನುವ ಪದ ಮಿಂಚಿನಂತೆ ಮನಸ್ಸಿನಲ್ಲಿ ಹೊಳೆದು ಹೋಗುತ್ತದೆ. ಮತ್ತು ಇಂತಹ ಒಂದು ಕಾರಣಕ್ಕಾಗಿ “ಆಕೆಗೆ ಸುಪ್ರಭಾತವ ಬಯಸಿರಿ” ಎನ್ನುವ ಆದೇಶ ಓದುಗನಲ್ಲಿ ಹುಟ್ಟಿದ ಅರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಕವನದ ಕೊನೆಯ ಸಾಲೂ ಸಹ ಆದೇಶದಲ್ಲಿಯೇ ಕೊನೆಯಾಗುತ್ತದೆ: “ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇರಲಿ ಈದಿನ ಇಂದಿಗೆ.”
ಸೂಕ್ಷ್ಮಗ್ರಾಹಿ ಓದುಗನಿಗೆ ಇಂತಹ ಅದೇಶಶೈಲಿ ಹಾಗೂ ದೈಹಿಕ ಶೃಂಗಾರ ಲೋಲುಪತೆ ಸರಿ ತೋರದು. ಇಲ್ಲಿಯೂ ಸಹ ಆಡುನುಡಿಯ ಬಳಕೆಯೇ ಈ ವ್ಯತ್ಯಸ್ತ ಪರಿಸ್ಥಿತಿಗೆ ಕಾರಣವಾಗಿರಬಹುದು. ಆದರೂ ಸಹ ಕುವೆಂಪುರವರ ಈ ಕವನ ತುಂಬ ಜನಪ್ರಿಯವಾಗಿದೆ. ಈ ಕವನದ ಕರ್ಣಮಧುರತೆಯೇ ಅದಕ್ಕೆ ಕಾರಣವಾಗಿರಬಹುದು.

ಅನೇಕ ಸಲ ಕುವೆಂಪುರವರ ಸಂಸ್ಕೃತಭೂಯಿಷ್ಠ ವಾಗಾಡಾಂಬರದ ಭಾಷೆಯು ಅನುಕೂಲಕರ ಪರಿಣಾಮವನ್ನೇ ಉಂಟು ಮಾಡುತ್ತದೆ. ಈ ಭಾಷೆಯ ಅನುಕೂಲವೆಂದರೆ ಸಾಧಾರಣ ಕಾವ್ಯವೂ ಅಸಾಧಾರಣವಾಗಿಯೇ ತೋರುವದು. ಕವನದಲ್ಲಿ ವೈಚಾರಿಕತೆ ಇದ್ದಂತೆ ಭಾಸವಾಗುವದು. ಈ ವಾಗಾಡಂಬರದ (high sounding) ಶಬ್ದಜಾಲದಲ್ಲಿ ಕಾವ್ಯದ ವಾಗರ್ಥವು ಅಳಿಸಿ ಹೋದರೆ ಆಶ್ಚರ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಈ ಮೊದಲು ಉದ್ಧರಿಸಿದ ಅವರ ಕವನವೊಂದರ ಸಾಲುಗಳನ್ನೇ ಮತ್ತೊಮ್ಮೆ ನೋಡಿರಿ:
“ಬಾಗಿಲಲಿ ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ”

“ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ” ಎಂದು ಹೇಳುವಾಗ ಕುವೆಂಪು ಪ್ರಾಸದ ಬಲೆಗೆ ಸಿಕ್ಕು ಬಿದ್ದಿರುವರೆಂದು ಅನ್ನಿಸದೇ ಇರದು. ಅಲ್ಲದೆ ‘ಕಲೆಯ ಬಲೆಯು’ ಅನ್ನುವಾಗ ಕಲೆಯು ಬಲೆಯಾಗಲು ಹೇಗೆ ಸಾಧ್ಯ ಎನ್ನುವ ಸಂದೇಹ ಬಾರದಿರದು. ಈ ದೋಷಗಳ ಹೊರತಾಗಿಯೂ ಸಹ ಈ ಕವನ ಜನಪ್ರಿಯವಾಗಲು ಕಾರಣವೆಂದರೆ (೧) ಕರ್ಣಮಧುರ ಭಾಷೆ (೨) ಆದೇಶಶೈಲಿ (೩) ಹಾಗೂ ವಾಗಾಡಂಬರ.

ತಮ್ಮ ಕಾವ್ಯದಲ್ಲಿ ಇಂತಹ ಭಾಷೆಯನ್ನು ಬಳಸಿದ ಕುವೆಂಪು ತಮ್ಮ ಕಾದಂಬರಿಯಲ್ಲಿ ಬಳಸುವ ಭಾಷೆಯೇ ಬೇರೆ.
ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ನಿಸರ್ಗದ ಮಡಿಲಲ್ಲಿಯೇ ಬೆಳೆದ ಒಂದು ಗಂಡು,ಅಂತಹದೇ ಒಂದು ಹೆಣ್ಣಿನ ಜೊತೆಗೆ ನಿಸರ್ಗದಲ್ಲಿಯೇ ಕೂಡುವ ಒಂದು ಸಂದರ್ಭವನ್ನು ಕುವೆಂಪು ಇಲ್ಲಿ ಬರೆದಿದ್ದಾರೆ. ಇಲ್ಲಿ ಬಳಸಿದ ಭಾಷೆ ಅಚ್ಚಕನ್ನಡ. ಅದಕ್ಕೆ ಕಾರಣವೆಂದರೆ ಕುವೆಂಪು ಯಾವುದು ಸಹಜವೋ ಅದನ್ನು ಸಹಜವೆನ್ನುವಂತೆ ತೋರಿಸಲು ಬಯಸುತ್ತಾರೆ. ಇಲ್ಲಿ ಸಂಸ್ಕೃತ ಭಾಷೆಯ ಪದಗಳನ್ನು ಬಳಸಿದ್ದರೆ, ಈ ಕೂಟವು ಸಹಜಕ್ರಿಯೆ ಆಗುತ್ತಿರಲಿಲ್ಲ. ಬದಲು ಶೃಂಗಾರವರ್ಣನೆ ಆಗುತ್ತಿತ್ತು. ಆದುದರಿಂದ ಇಲ್ಲಿಯ ರತಿಕ್ರೀಡೆಯ ವರ್ಣನೆಯನ್ನು ಓದಿದಾಗ ಅದು ಸಹಜಕ್ರಿಯೆಯಂತೆಯೇ ಭಾಸವಾಗುತ್ತದೆ. ನಿಸರ್ಗದ ಮಕ್ಕಳ ಸಹಜ ಮನಸ್ಸಿನ ಸಹಜಭಾವವು ಅತ್ಯಂತ ಸಹಜವಾಗಿಯೇ ವ್ಯಕ್ತವಾಗುತ್ತದೆ.

ನವ್ಯಕಾವ್ಯದ ಜನಕರಾದ ಗೋಪಾಲಕೃಷ್ಣ ಅಡಿಗರ ನವ್ಯಕಾವ್ಯಭಾಷೆಯು ಬೇಂದ್ರೆಯವರ ಸರಳಭಾಷೆಗೆ ಅತ್ಯಂತ ವಿರುದ್ಧವಾದ ಭಾಷೆ. ಅಡಿಗರು ತಮ್ಮ ಕವನಗಳಲ್ಲಿ ಇಂಗ್ಲಿಶ್, ಸಂಸ್ಕೃತ ಹಾಗೂ ಉರ್ದು/ಹಿಂದಿ ಪದಗಳನ್ನು ಮೋಹಕವಾಗಿ ಪೋಣಿಸುತ್ತಾರೆ.
ಉದಾಹರಣೆಗಳು:

“ಈಡಿಪಸ್ಸಿನ ಗೂಢಪಾಪಲೇಪಿತ ನಾನು;
ಟ್ರ್ಯಾಕ್ಟರನ್ನೇರಿದೆನು; ಉತ್ತೆ, ಸಿಗಿದೆ.
ಬಿತ್ತಿದೆನು, ಬೆಳೆದೆ ಅಟಂಬಾಂಬು ಕಾಳುಗಳ:
ಮಾರಕ ಕ್ರಿಮಿಪೈರ ಗೋರಿ ನಲಿದೆ.”

“ಕುಡಿದು ಬಿಟ್ಟಿದೆ ಕಣೊ ಕಡಲ ಪಡಖಾನೆಯಲಿ
ನೊರೆಗರೆವ ವ್ಹಿಸ್ಕಿ ಸೋಡಾ”

“ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆಯೆ ಮುಟ್ಟೆನೆಂಬುಡಾಫೆ”.

ಆದರೆ, ಬೇಂದ್ರೆಯವರಿಗೆ ಹಾಗೂ ಅಡಿಗರಿಗೆ ಇರುವ ಮುಖ್ಯ ವ್ಯತ್ಯಾಸವು ಭಾಷೆಯ ಶೈಲಿಯಲ್ಲಿ ಇರದೆ, ಕಾವ್ಯೋದ್ದೇಶದಲ್ಲಿ ಇದೆ. ಬೇಂದ್ರೆಯವರ ಕಾವ್ಯಾಂತರಂಗದಲ್ಲಿ ಇರುವದು mystical ಅನುಭವ. ಅಡಿಗರ ಕವನಗಳಲ್ಲಿ ಇರುವದು intellectual revelation. ಬೇಂದ್ರೆಯವರು ತಮ್ಮ ಕಾವ್ಯವನ್ನು mystify ಮಾಡುತ್ತಾರೆ. ಅಡಿಗರು ತಮ್ಮ ಕವನಗಳನ್ನು demystify ಮಾಡುತ್ತಾರೆ.

ನವೋದಯ ಕಾಲದ ಮತ್ತೊಬ್ಬ ಪ್ರಮುಖ ಕವಿ ಎಂದರೆ ಕೆ.ಎಸ್. ನರಸಿಂಹಸ್ವಾಮಿ. ಇವರ ಕಾವ್ಯಕ್ಕೆ ಒಲವೇ ಮೂಲಸ್ರೋತ. ಕನ್ನಡವನ್ನು ‘ಕವಿಗಳು ಬಳಸುವ ಭಾಷೆ’ ಎಂದು ಕರೆದ ಇವರ ಭಾಷೆ ಸುಕೋಮಲ ಭಾಷೆ, ಮೈಸೂರು ಮಲ್ಲಿಗೆಯ ಹಾಗೆ. ಅಡಿಗರು ನರಸಿಂಹಸ್ವಾಮಿಗಳ ಕಾವ್ಯವನ್ನು ‘ತೆಳು ಅನುಭವದ ಕಾವ್ಯ’ ಎಂದು ಟೀಕಿಸಿದ್ದು ದೊಡ್ಡ ತಪ್ಪು ಹಾಗೂ ನರಸಿಂಹಸ್ವಾಮಿಗಳಿಗೆ ಮಾಡಿದ ಅನ್ಯಾಯ. ಇದಕ್ಕೆ ಉತ್ತರವಾಗಿ ನರಸಿಂಹಸ್ವಾಮಿಗಳು ತಮ್ಮ ಭಾಷೆಯು “ಇಬ್ಬರು ಆಪ್ತಮಿತ್ರರು ಸಂಜೆಯ ಸಮಯದಲ್ಲಿ ಜೊತೆಯಾಗಿ ಕುಳಿತು ಮಾತನಾಡಿದಂತೆ” ಎಂದು ತಮ್ಮ ಕವನವೊಂದರಲ್ಲಿ ವರ್ಣಿಸಿದ್ದಾರೆ. ಅಲ್ಲದೆ ಅಡಿಗರ ಕವನವನ್ನು “ಯಕ್ಷಗಾನದ ಅಬ್ಬರ” ಎಂದು ಕರೆದಿದ್ದಾರೆ.

“ರತ್ನನ ಪದಗಳು” ಮೂಲಕ ರಾಜರತ್ನಮ್ ಪ್ರಸಿದ್ಧರಾದರು. ತಮ್ಮ ಕವನಗಳಲ್ಲಿ ಬಳಸಿದ ‘ಕುಡುಕನ ಆಡುಭಾಷೆ’ಯನ್ನು ಅರಿತುಕೊಳ್ಳುವ ಉದ್ದೇಶದಿಂದ ತಾವು ವೇಷ ಮರೆಸಿಕೊಂಡು ಕುಡುಕರ ಅಡ್ಡಾಗಳ ಸುತ್ತಮುತ್ತ ಸುಳಿದದ್ದಾಗಿ ರಾಜರತ್ನಮ್ ಹೇಳುತ್ತಾರೆ. ಆದರೆ, "ರಾಜರತ್ನಮ್ ಅವರ ಭಾಷೆ ನಿಜವಾಗಿಯೂ ಕುಡುಕರ ಆಡುಭಾಷೆ ಅಲ್ಲ, ಇದೊಂದು ಕೃತಕ ಭಾಷೆ" ಎಂದು ಲಂಕೇಶರವರು ಟೀಕಿಸಿದ್ದಾರೆ. ಇದೊಂದು ತುಂಬ ಅನುದಾರವಾದ ಟೀಕೆ.

ನೇರವಾಗಿ ಹೇಳಲಾಗದ್ದನ್ನು ಕುವೆಂಪು ಸಂಸ್ಕೃತಭೂಯಿಷ್ಠ ಭಾಷೆಯನ್ನು ಬಳಸಿ ಹೇಳಿದರು. ರಾಜರತ್ನಮ್ ಸಹ ಅದೇ ಕಾರಣಕ್ಕಾಗಿ ನೇರವಾಗಿ ಹೇಳಲಾಗದ್ದನ್ನು ಕೃತಕ ಆಡುನುಡಿಯ ಮೂಲಕ ಹೇಳಿದರು.
ಬುದ್ಧಿವಂತ ನಾಗರಿಕನು ಹೇಳಿದರೆ ಯಾವುದು ಆಭಾಸವಾಗಿ ಕಾಣುತ್ತದೆಯೊ ಅದನ್ನು ವಿದ್ಯೆಯಿಲ್ಲದ ಕುಡುಕನೇ ಹೇಳಬೇಕಷ್ಟೆ. ನಿಜ ಹೇಳಬೇಕೆಂದರೆ ರತ್ನನ ಪದಗಳ ಭಾಷೆ ಕುಡುಕನ ಭಾಷೆ ಅಲ್ಲ; ಇದೂ ಸಹ ಕವಿಗಳು ಬಳಸುವ ಭಾಷೆಯೇ.
ರಾಜರತ್ನಮ್ ಅವರ ಕವನವೊಂದನ್ನು ನಿದರ್ಶನವೆಂದು ಹಾಗೂ ಈ ಲೇಖನದ ಮಂಗಳಗೀತೆಯೆಂದು ಇಲ್ಲಿ ಕೊಡುತ್ತಿದ್ದೇನೆ.

ಯೆಂಡಾ, ಯೆಡ್ತಿ, ಕನ್ನಡ ಪದಗೋಳ್
ಅಂದ್ರೆ ರತ್ನಂಗ್ ಪ್ರಾಣಾ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ ಪದಗೋಳ್ ಬಾಣಾ!

ಬಗವಂತ್ ಏನಾರ್ ಬೂಮಿಗಿಳ್ದು
ನನ್ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಅವ್ನು
ಬಕ್ತನ್ ಮೇಲ್ ಅವನ್ ಕಣ್ಣು.

‘ಯೆಂಡಾ ಕುಡಿಯಾದ್ ಬುಟ್ಬುಡ್ ರತ್ನಾ’
ಅಂತ ಅವನೇನಾರಂದ್ರೆ
ಮೂಗ್ ಮೂರ್ ಚೂರಾಗ್ ಮುರಸ್ಕೊಂತೀನಿ
ದೇವರ ಮಾತ್ಗಡ್ ಬಂದ್ರೆ!

‘ಯೆಂಡಾ ಬುಟ್ಟೆ, ಎಡ್ತೀನ್ ಬುಟ್ ಬುಡ್’
ಅಂತವನೇನಾರಂದ್ರೆ
ಕಳೆದೊಯ್ತಂತಾ ಕುಣದಾಡ್ತೀನಿ
ದೊಡ್ ಒಂದ್ ಕಾಟಾ ತೊಂದ್ರೆ!

‘ಕನ್ನಡ ಪದಗೋಳ್ನ್ ಆಡೋದ್ನೆಲ್ಲಾ
ನಿಲ್ಲಿಸ್ ಬುಡ್ಬೇಕ ರತ್ನಾ’
ಅಂತವನಂದ್ರೆ ದೇವ್ರಾದ್ರೇನು
ಮಾಡ್ತೇನ್ ಅವಂಗೆ ಖತ್ನಾ

ಆಗ್ನೆ ಮಾಡೋ ಅಯ್ಗೋಳೆಲ್ಲಾ
ದೇವ್ರೆ ಆಗ್ಲಿ ಎಲ್ಲಾ
ಕನ್ನಡ ಸುದ್ದಿಗ್ ಏನಾರ್ ಬಂದ್ರೆ
ಮಾನಾ ಉಳಿಸಾಕಿಲ್ಲ

ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೂ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ ನೀ ಕಾಣೆ!

ಯೆಂಡಾ ಓಗ್ಲಿ, ಯೆಡ್ತಿ ಓಗ್ಲಿ
ಎಲ್ಲಾ ಕೊಚ್ಕೊಂಡ್ ಓಗ್ಲಿ
ಪರ್ಪಂಚ್ ಇರೋ ತನಕಾ ಮುಂದೆ
ಕನ್ನಡ ಪದಗೋಳ್ ನುಗ್ಲಿ!

ಶಿಷ್ಟಮಾರ್ಗದಲ್ಲಿಯೇ ಆಗಲಿ, ದೇಸಿ ರೂಪದಲ್ಲಿಯೇ ಆಗಲಿ, ಜನಪದ ಹಾಡುಗಬ್ಬವೇ ಆಗಲಿ, ಅಥವಾ ಆಧುನಿಕ ಕಾವ್ಯವೇ ಆಗಲಿ ಕನ್ನಡವು ‘ಕವಿಗಳು ಬಳಸುವ ಭಾಷೆ’ಯಾಗಿ ತನ್ನ ಚೆಲವನ್ನು ಮೆರೆದಿದೆ.