Showing posts with label ಭಾಷೆ. Show all posts
Showing posts with label ಭಾಷೆ. Show all posts

Saturday, April 27, 2024

ಭಾಷೆ ಎನ್ನುವುದು ಯಂತ್ರವೂ ಹೌದು, ಮಂತ್ರವೂ ಹೌದು.

ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರೆಲ್ಲ ಕಾಡಾಡಿಗಳಾಗಿದ್ದರು. ಅವರು ಸಣ್ಣ ಸಣ್ಣ ಗುಂಪುಗಳಲ್ಲಿ ಬೇಟೆಗಾಗಿ ಸಂಚರಿಸುವಾಗ, ಅವರಿಗೆ ತಮ್ಮ ಸನಿಹದಲ್ಲಿಯೇ ‘ಹುಲಿ’ ಇದೆ ಎನ್ನುವ ಸುಳಿವು ಸಿಕ್ಕಿತು ಎಂದಿಟ್ಟುಕೊಳ್ಳಿ. ಒಬ್ಬರನ್ನೊಬ್ಬರು ಎಚ್ಚರಿಸಬೇಕೆಂದರೆ, ಈ ಗುಂಪುಗಳಲ್ಲಿ ಇನ್ನೂ ಭಾಷೆಯ ಬೆಳವಣಿಗೆಯಾಗಿಲ್ಲ. ಆದುದರಿಂದ ಅವರು ಹ್ರಸ್ವಧ್ವನಿಗಳನ್ನು ಉಚ್ಚರಿಸುತ್ತ, ‘ಪುಲ್, ಪುಲ್’ ಎಂದು ಅಂದಿರಬಹುದು. ಈ ಪುಲ್ ಎನ್ನುವ ಪದವೇ ಮುಂದೆ ಪುಲಿಯಾಗಿ, ಬಳಿಕ ಹುಲಿಯಾಗಿ ಮಾರ್ಪಟ್ಟಿರಬಹುದು! ಒಂದೊಂದೇ ಪದಗಳು ಈ ರೀತಿಯಾಗಿ ಬೆಳೆದು, ವಾಕ್ಯಗಳು ಸೃಷ್ಟಿಯಾಗಿ, ಭಾಷೆ ಬೆಳೆದಿರಬಹುದು! ಇದು ಜೋಕ್ ಅಲ್ಲ, ಒಂದು ಸಂಭಾವ್ಯತೆ. ಆದರೆ, ನಾನು ಹೇಳಬಯಸುವ ವಿಷಯ ಬೇರೆಯದೇ ಆಗಿದೆ:

 

ಕನ್ನಡದ ಕಥಾಬ್ರಹ್ಮ, ಜ್ಞಾನಪೀಠಪ್ರಶಸ್ತಿವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ಸಂಸ್ಕೃತ ಪಂಡಿತರೊಬ್ಬರು ಒಮ್ಮೆ ಹೀಗೆ ಹೇಳಿದರು: `ಅಲ್ಲಯ್ಯ, ಯಾವುದೇ ಭಾಷೆಯ ಪದವಾಗಲಿ, ಅದು ಭಾವವನ್ನು ಸಮರ್ಥವಾಗಿ ವ್ಯಕ್ತಗೊಳಿಸಬೇಕು. ಈಗ ನೋಡಿ, ಕನ್ನಡದಲ್ಲಿ ನೀವು ‘ಹುಲಿ’ ಎನ್ನುತ್ತೀರಿ. ಹೀಗೆ ಅಂದಾಗ, ನಿಮಗೆ ಹುಲಿಯ ಭೀಕರತೆಯ ಅನುಭವ ಆಗುವುದೆ? ಆದರೆ, ಸಂಸ್ಕೃತದಲ್ಲಿ ‘ವ್ಯಾಘ್ರ’ ಎನ್ನುವ ಉಗ್ರ ಪದವಿದೆ. ಹೌದಲ್ಲವೆ?’

 

ಈ ಮಾತಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಉತ್ತರ ಹೀಗಿತ್ತು: ಸ್ವಾಮಿ, ಇರುವೆಯಂತಹ ಸಣ್ಣ ಪ್ರಾಣಿಗೆ ಕನ್ನಡದಲ್ಲಿ ಇರುವೆ ಎನ್ನುವ ಸಣ್ಣ ಪದವೇ ಇದೆ. ಸಂಸ್ಕೃತದಲ್ಲಿ ಇದಕ್ಕೆ ‘ಪಿಪೀಲಿಕಾ’ ಎನ್ನುವ ದೀರ್ಘ ಪದವನ್ನು ಬಳಸುತ್ತಾರಲ್ಲ! ಇದಕ್ಕೆ ಏನು ಹೇಳುತ್ತೀರಿ?’ ಸಂಸ್ಕೃತದ  ಅಭಿಮಾನಿ ಪಂಡಿತರು ಬಾಯಿ ಮುಚ್ಚಿಕೊಂಡು ಕೂತರು!

 

ಮಾನವನ ಮನಸ್ಸಿನಲ್ಲಿ ಮೊದಲು ಹುಟ್ಟುವುದು ಭಾವ, ಬಳಿಕ ಅದಕ್ಕೆ ತಕ್ಕಂತಹ ಒಂದು ಪದ ಹುಟ್ಟುತ್ತದೆ. ಕನ್ನಡಿಗರಿಗೆ ಹುಲಿಯನ್ನು ನೋಡಿದಾಗ ಏನೂ ಭೀತಿಯಾಗುತ್ತಿರಲಿಕ್ಕಿಲ್ಲ. (ಈ ಮಾತಿಗೆ ನಮ್ಮ ‘ಸಳ’ನೇ ಸಾಕ್ಷಿಯಾಗಿದ್ದಾನೆ.) ಅದಕ್ಕೇ ಆ ಪ್ರಾಣಿಯನ್ನು ಅವರು ಸಹಜವಾಗಿ ‘ಹುಲಿ’ ಎಂದು ಬಿಟ್ಟರು. ಆದರೆ ಭಯಭೀತರಾದ ಸಂಸ್ಕೃತ ಪಂಡಿತರು ಅದೇ ಪ್ರಾಣಿಯನ್ನು ‘ವ್ಯಾಘ್ರ’ ಎಂದು ಕರೆದಿದ್ದರಲ್ಲಿ ಆಶ್ಚರ್ಯವಿಲ್ಲ! 

 

ಸಂಸ್ಕೃತದಲ್ಲಿ  ಸಹ ಭಾವವನ್ನು ವ್ಯಕ್ತ ಮಾಡದಂತಹ ಅನೇಕ ಪದಗಳಿದ್ದು, ನಮ್ಮ ಕನ್ನಡಿಗರು, ಅಂತಹ ಪದಗಳನ್ನು ‘ತಿದ್ದಿ’ಕೊಂಡಿದ್ದಾರೆ. ಸಂಸ್ಕೃತದಲ್ಲಿ ಅಲ್ಪಪ್ರಾಣ ಪದಗಳಿಲ್ಲ, ಇರುವದೆಲ್ಲವೂ ಮಹಾಪ್ರಾಣ ಪದಗಳೇ ಎನ್ನುವ ಭ್ರಮೆ ನಮ್ಮ ಕನ್ನಡಿಗರಿಗೆ ಇದೆ. ಹೀಗಾಗಿ ‘ಗರ್ಜನೆ’; ಎನ್ನುವ ಸಂಸ್ಕೃತ ಪದವನ್ನು ಕನ್ನಡಿಗರು ‘ಘರ್ಜನೆ’ ಎಂದು ತಿದ್ದಿಕೊಂಡಿದ್ದಾರೆ. ‘ಕ್ರೋಡೀಕರಣ’ ಪದವನ್ನು ‘ಕ್ರೋಢೀಕರಣ’ ಎಂದು ಬದಲಾಯಿಸಿಕೊಂಡಿದ್ದಾರೆ. ಇನ್ನು, ಉಚ್ಚ, ಉಚ್ಚಾರ, ಉಚ್ಚಾಟನೆ ಎನ್ನುವ ಪದಗಳಂತೂ ಉಚ್ಛ, ಉಚ್ಛಾರ, ಉಚ್ಛಾಟನೆ ಎಂದು upgraded ಆಗಿವೆ! ಭಲೇ ಕನ್ನಡಿಗ! ಅಥವಾ ಈ ತರಹದ ತಿದ್ದುವಿಕೆಯನ್ನು ಕನ್ನಡಿಗರ ಜಾಯಮಾನ ಎನ್ನೋಣವೇ!

 

ಮೈಸೂರು ಸಂಸ್ಥಾನವು ಬ್ರಿಟಿಶರ ಸುಪರ್ದಿಯಲ್ಲಿ ಇದ್ದಾಗ, ತಮಿಳುನಾಡಿನ ಅನೇಕ ಸುಶಿಕ್ಷಿತ ವ್ಯಕ್ತಿಗಳು ಮೈಸೂರಿನಲ್ಲಿ ಸರಕಾರಿ ಕೆಲಸದಲ್ಲಿ ಇರುತ್ತಿದ್ದರು. ತಮಿಳಿನಲ್ಲಿ ಅಂಕಿಗಳಿಗೆ ಸಂಕೇತಗಳಿಲ್ಲ. ಹೀಗಾಗಿ ಅವರು ಇಂಗ್ಲಿಶ್ ಅಂಕಿಗಳನ್ನೇ ಬಳಸುತ್ತಿದ್ದರು. ಕನ್ನಡದಲ್ಲಿ ಅಂಕಿಗಳಿಗೆ ಸಂಕೇತಗಳು ಇದ್ದರೂ ಸಹ, ನಾವು ಪ್ರಭುಗಳನ್ನು ಅನುಸರಿಸಿ, ಇಂಗ್ಲಿಶ್ ಅಂಕಿಗಳನ್ನೇ ಬಳಸತೊಡಗಿದೆವು. ಹೀಗಾಗಿ, ಕನ್ನಡದಲ್ಲಿ ೧, ೨, ೩,೪........ಗಳ ಬದಲಾಗಿ, 1,2,3,4.......ರೂಢವಾದವು. ಕರ್ನಾಟಕ ಏಕೀಕರಣವಾಗಿ ೬೮ ವರ್ಷಗಳ ನಂತರವೂ ಸಹ, ನಾವು ಈ ರೂಢಿಯ ಗುಲಾಮರೇ ಆಗಿ ಉಳಿದಿದ್ದೇವೆ!


ಕನ್ನಡಿಗರು ಮರೆತು ಬಿಟ್ಟ ಮಾತು ಏನೆಂದರೆ:

ಭಾಷೆ ಎನ್ನುವುದು ಯಂತ್ರವಷ್ಟೇ ಅಲ್ಲ, ಮಂತ್ರವೂ ಹೌದು!

Sunday, February 4, 2024

ಭಾಷಾ ಅಜ್ಞಾನ

ಬ್ರೆಕ್ (break) ಮತ್ತು ಬ್ರೇಕ್ (brake) ಇವುಗಳ ನಡುವಿನ ವ್ಯತ್ಯಾಸವೇನು, ಗೆಳೆಯರೆ? ನಿಮಗೆಲ್ಲರಿಗೂ ಗೊತ್ತಿರುವಂತೆ ಬ್ರೆಕ್ (break) ಅಂದರೆ ತುಂಡು ಮಾಡುವುದು, ಮುರಿಯುವುದು ಇತ್ಯಾದಿ. ಹೀಗಾಗಿ ಇಂಗ್ಲೀಶರು ‘Dawn is breaking’, `She broke the engagement”, `Breaking news” ಮೊದಲಾದ ವಾಕ್ಯಗಳನ್ನು ಬಳಸುತ್ತಾರೆ. ಎರಡನೆಯದಾಗಿ ಬ್ರೇಕ್ (brake) ಅಂದರೆ ವಾಹನಗಳಿಗೆ ನಿಲ್ಲುತಡೆ ಹಚ್ಚಿ ನಿಲ್ಲಿಸುವುದು. 

 ನಮ್ಮ ಟೀವಿ ವಾಹಿನಿಗಳಿಗೆ ಇಂಗ್ಲಿಶ್ ಸ್ವಲ್ಪ ತುಟ್ಟಿ ಅಂತ ಕಾಣುತ್ತೆ. ( ಕನ್ನಡವು ಅದಕ್ಕೂ ಜಾಸ್ತಿಯೇ ತುಟ್ಟಿ ಇರಬಹುದು!) ಈ ಟೀವಿ ವಾಹಿನಿಗಳು ತಮ್ಮ ತೋರುಪಟದ ಮೇಲೆ ಬ್ರೇಕಿಂಗ್ ನ್ಯೂಜ್ ಎಂದು ಕನ್ನಡ ಅಕ್ಷರಗಳಲ್ಲಿ ಬರೆದಿದ್ದು ನೋಡಿ ಅಚ್ಚರಿ ಹಾಗು ಬೇಸರ ಎರಡೂ ಆಯಿತು. ಮೊದಲನೆಯದಾಗಿ, ಇಂಗ್ಲಿಶ್ ಪದವನ್ನು ಕನ್ನಡ ಅಕ್ಷರದಲ್ಲಿ ಬರೆಯುವುದು ಯಾತಕ್ಕೆ? ತಮ್ಮ ಇಂಗ್ಲಿಶ್ ಪಾಂಡಿತ್ಯವನ್ನು ಅಥವಾ ಆಧುನಿಕತೆಯನ್ನು(?) ಮೆರೆಸುವದಕ್ಕೆ? ನಮ್ಮ ಮುದ್ದಣನು ಹೇಳಿದಂತೆ ಇದು ಮುತ್ತುಮ್ ಮೆಣಸುಮ್ ಕೋದಂತಹ ಅಲಂಕಾರವಷ್ಟೆ! ಎರಡನೆಯದಾಗಿ, ಬ್ರೇಕಿಂಗ್ ನ್ಯೂಜ್ ಎಂದರೆ ಏನರ್ಥ? ನಿಲ್ಲುತಡೆ ಹಾಕಿ ನಿಲ್ಲಿಸಿದ ಸಮಾಚಾರ ಎಂದಲ್ಲವೆ? ಈ ರೀತಿಯಾಗಿ, ನಮ್ಮ ವಾಹಿನಿಗಳು ಎರಡು ಅತ್ಯಾಚಾರಗಳನ್ನು ಮಾಡುತ್ತಿವೆ. ಒಂದು, ಕನ್ನಡ ಹಾಗು ಇಂಗ್ಲಿಶ್ ಭಾಷೆಗಳ ಕೊಲೆ. ಎರಡನೆಯದಾಗಿ, ನೋಡುಗರಲ್ಲಿ, ವಿಶೇಷತ: ಅಮಾಯಕ ಬಾಲಕರಲ್ಲಿ ತಮ್ಮ ಸ್ವಂತ ಅಜ್ಞಾನವನ್ನು ವಿಸ್ತರಿಸುವ ಹೀನ ಕಾರ್ಯ!

 ನಮ್ಮ ಟೀವಿ ವಾಹಿನಿಗಳ ಸಂಪಾದಕರು ಕುರುಡರಷ್ಟೇ ಅಲ್ಲ,ಕಿವುಡರೂ ಹೌದು ಎಂದು ತೋರುತ್ತದೆ. ಇತ್ತೀಚೆಗೆ ಲಕ್ಷದ್ವೀಪವು ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಲಕ್ಷದ್ವೀಪದ ನಿವಾಸಿಗಳು ತಮ್ಮ ಆಡುಭಾಷೆಯಲ್ಲಿ ಈ ದ್ವೀಪವನ್ನು ‘ಲಖದೀವ್’ ಎಂದು ಕರೆಯುತ್ತಾರೆ. ಅವರು ‘ಖ’ ಎನ್ನುವ ಮಹಾಪ್ರಾಣಾಕ್ಷರವನ್ನು ಬಳಸುತ್ತಿದ್ದಾರೆಯೇ ಹೊರತು ‘ಕ’ ಎನ್ನುವ ಅಲ್ಪಪ್ರಾಣಿಯನ್ನಲ್ಲ ಎನ್ನುವುದನ್ನು ಗಮನಿಸಿರಿ. ಹೀಗಿರುವಾಗ, ನಮ್ಮ ವಾಹಿನಿಯೊಂದರ ತೋರುಪಟದಲ್ಲಿ, ‘ಲಕ್ ದೀವ್’ ಎಂದು ಬರೆಯಲಾಗಿದೆ! ಅಲ್ಲಿಯ ಜನರು ಬಳಸುವ ‘ಖ’ ಎನ್ನುವ ಮಹಾಪ್ರಾಣವನ್ನು ನಮ್ಮ ಕಿವುಡರು ‘ಕ್’ ಎನ್ನುವ ಅಲ್ಪಪ್ರಾಣವಾಗಿ ಬದಲಾಯಿಸಲು ಏನಾದರೂ ಕಾರಣವಿದೆಯೆ? ಯಾವುದೇ ಪದವನ್ನು ಬಳಸಬೇಕಾದರೂ ಅಲ್ಲಿಯ ಮೂಲಭಾಷಿಕರ ಉಚ್ಚಾರವನ್ನೇ ನಾವು ಅನುಸರಿಸಬೇಕೆ ಹೊರತು ನಮ್ಮ ಶೋಕಿ ಪದವನ್ನಲ್ಲ. ‘ಅದು ಹೀಗಲ್ಲ’, ಎಂದು ಕೆಲವು ಜ್ಞಾನಿಗಳು ತಮ್ಮದೇ ಆದ ವಿವರಣೆಯನ್ನು  ನೀಡಬಹುದು. ಅರ್ಥಾತ್ ಕನ್ನಡದ ‘ಜಾಯಮಾನ’ದಲ್ಲಿ ಮಹಾಪ್ರಾಣವಿಲ್ಲ! ಕನ್ನಡಿಗರು ಅಲ್ಪಪ್ರಾಣಿಗಳು ಎನ್ನುವ ತರ್ಕವನ್ನು ಅವರು ನಿಮ್ಮ ಮುಂದೆ ಇಡಬಹುದು! ಆದರೆ ಗೆಳೆಯರೆ, ನಾವು ಪರಭಾಷೆಯ ಹೆಸರುಗಳನ್ನು ಹಾಗು ಪದಗಳನ್ನು ಬಳಸಬೇಕಾದರೆ, ಅಲ್ಲಿಯ ಭಾಷಿಕರ ಉಚ್ಚಾರವನ್ನು ಬಳಸಬೇಕೆ ಹೊರತು ನಮ್ಮ ಭಾಷೆಯ, ‘ತಥಾಕಥಿತ ಜಾಯಮಾನ’ವನ್ನಲ್ಲ! ಈ ಜಾಯಮಾನದ ಬೆನ್ನು ಹತ್ತಿದರೆ, ಆಗುವ ಅನಾಹುತವನ್ನು ನಿಮಗೆ ಹೇಳುವೆ! ಕೆಲವು ಸ್ಥಳಿಕ ಕನ್ನಡಿಗರು ‘ಹಾಸನ’ಕ್ಕೆ ‘ಆಸನ’ ಎಂದೂ, ‘ಅರಸೀಕೆರೆ’ಗೆ ‘ಹರಸೀಕೆರೆ’ ಎಂದೂ ಉಚ್ಚರಿಸುತ್ತಾರೆ. ಇದು ಸ್ಥಳೀಯ ‘ಜಾಯಮಾನ’! ನಾವೂ ಸಹ ಸ್ಥಳೀಯ ಕನ್ನಡದ ಜಾಯಮಾನವನ್ನೇ ಅನುಸರಿಸಬೇಕಾದದ್ದು ಸಭ್ಯತನ. ಈ ಕಾರಣದಿಂದಾಗಿ ನಾವೂ ಸಹ ಆಸನ ಹಾಗು ಹರಸೀಕೆರೆ ಎಂದೇ ಉಚ್ಚರಿಸುವುದು ನಾವು ‘ಜಾಯಮಾನ’ಕ್ಕೆ ಕೊಡುವ ಮರ್ಯಾದೆಯಾಗುತ್ತದೆ. ಇದನ್ನು ಒಪ್ಪುಲಾಗದು ಎಂದು ನಿಮಗೆ ಅನಿಸುತ್ತಿದ್ದರೆ, ‘ಕನ್ನಡದ ಜಾಯಮಾನ’ವನ್ನು ಬಿಟ್ಟುಬಿಟ್ಟು ‘ಲಖದೀವ್’ ಎಂದು ಬರೆಯಿರಿ ಹಾಗು ‘ಲಖದೀವ್’ ಎಂದು ಉಚ್ಚರಿಸಿರಿ. 

ನಿಜ ಹೇಳಬೇಕೆಂದರೆ, ನಮಗೆ ಅಂದರೆ ಕನ್ನಡಿಗರಿಗೆ ನಮ್ಮ ಭಾಷೆಯ ಎಷ್ಟೋ ಮೂಲಪದಗಳೇ ತಿಳಿದಿಲ್ಲ. ಉದಾಹರಣೆಗೆ: ‘ಕಾರವಾರ’. ಕಾರವಾರದ ಮೂಲ ಹೆಸರು ‘ಕಡೇವಾಡ’. (ಇದು ಕಾರವಾರ ಜಿಲ್ಲೆಯ ಕಟ್ಟಕಡೆಯ ಹಳ್ಳಿಯಾಗಿದ್ದು ಸಮುದ್ರಕ್ಕೆ ಸನಿಹವಾಗಿದೆ.) ಇಲ್ಲಿ ಬಂದಿಳಿದ ಬ್ರಿಟಿಶರಿಗೆ ಕಡೇವಾಡ ಎಂದು ಉಚ್ಚರಿಸಲು ಕಷ್ಟವಾಗುತ್ತಿದ್ದ ಕಾರಣದಿಂದಾಗಿ, ಅವರು ‘ಕಾರವಾರ’ ಎಂದು ಕರೆದರು. ಅವರ ಆಳಿಕೆಯಲ್ಲಿ ಇದ್ದ ನಾವೂ ಸಹ ‘ಕಾರವಾರ’ಎಂದೇ ಹೇಳುತ್ತ ಬಂದೆವು. ಈಗ ನಾವು ಕಡೇವಾಡವೇ ಕಾರವಾರದ ಮೂಲ ಎನ್ನುವುದನ್ನು ಮರೆತೇ ಬಿಟ್ಟಿದ್ದೇವೆ. ಇಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕದಲ್ಲಿ ಇವೆ. ಉದಾಹರಣೆಗೆ, ದಂಡೀಹಳ್ಳಿ>>ದಾಂಡೇಲಿ. ಮರಾಠಿಗರ ಬಾಯಿಯಲ್ಲಿ ಮಿರಜಗಿ ಎನ್ನುವ ಸ್ಥಳವು ಕೇವಲ ಮಿರಜ ಆಯಿತು; ಕಂದಹಾಳವು ಖಂಡಾಲಾ ಆಯಿತು! ಡೊಂಬ ಸಮುದಾಯದ  ಡೊಂಬಿಹಳ್ಳಿಯು ಡೊಂಬಿವಲಿ ಆಯಿತು, ಮಲ್ಲಹಾರವು ಮಲಾರ ಆಯಿತು! ಮರಾಠಿಗರು Bombayಅನ್ನು ಮುಂಬಯಿ ಎಂದು ಮರುನಾಮಕರಣ ಮಾಡಿದರು. ಆದರೆ ಮುಂಬಯಿಯ ಸಮೀಪದಲ್ಲಿದ್ದ ಖಂಡಾಲಾ, ಡೊಂಬಿವಲಿ, ಮಲಾರ ಇವುಗಳನ್ನು ಮೂಲಹೆಸರುಗಳಿಗೆ ಪರಿವರ್ತಿಸಲು ಹೋಗಲಿಲ್ಲ. ಏಕೆಂದರೆ, ಹಾಗೆ ಮಾಡುವದರಿಂದ ಅವು ಎಲ್ಲಿ ಒಂದು ಕಾಲಕ್ಕೆ ಕರ್ನಾಟಕದಲ್ಲಿ ಇದ್ದವು ಎನ್ನುವುದು ಸಿದ್ಧವಾಗುತ್ತದೆಯೊ ಎನ್ನುವ ಹೆದರಿಕೆ ಅವರಿಗೆ!

 ಕನ್ನಡಿಗರು ಅಲ್ಪಪ್ರಾಣಿಗಳಾಗಲು ಕಾರಣವೇನು? ಇದಕ್ಕೆ ಹಳೆಮೈಸೂರು ಪ್ರಾಂತದ ಜನರಿಂದ ಥಟ್ಟನೆ ಬರುವ ಉತ್ತರವೇನೆಂದರೆ, ಕನ್ನಡವು ದ್ರಾವಿಡ ಭಾಷೆಯಾಗಿದ್ದು, ಇಲ್ಲಿ ಮಹಾಪ್ರಾಣವಿಲ್ಲ! ಅಯ್ಯೋ ದೇವರೆ, ನಮ್ಮ ಅಲ್ಪಪ್ರಾಣಿತ್ವವು ತಮಿಳಿನ ಕುರುಡು ಅನುಕರಣೆಯಲ್ಲದೆ, ಮತ್ತೇನೂ ಅಲ್ಲ! ನಿಮಗೆಲ್ಲರಿಗೂ ಗೊತ್ತಿರುವಂತೆ, ತಮಿಳು ಬರಹದಲ್ಲಿ, ಮಹಾಪ್ರಾಣದ ಅಕ್ಷರಗಳು ಇಲ್ಲ. ಉದಾಹರಣೆಗೆ, ಕನ್ನಡದಲ್ಲಿ ಕ, ಖ, ಗ, ಘ ಮೊದಲಾದ ಅಕ್ಷರಗಳಿದ್ದರೆ, ತಮಿಳಿನಲ್ಲಿ ಈ ನಾಲ್ಕೂ ಅಕ್ಷರಗಳಿಗೆ   ಕ ಎನ್ನುವ ಒಂದೇ ಅಕ್ಷರವನ್ನು ಬಳಸಲಾಗುತ್ತದೆ. ಇದರಂತೆಯೇ ಚ, ಛ, ಜ, ಝ ಇತ್ಯಾದಿ. ಆದುದರಿಂದ ಅವರಿಗೆ ಮಹಾಪ್ರಾಣವೆಂದರೇ ಗೊತ್ತಿಲ್ಲ. ಈ ಕಾರಣಕ್ಕಾಗಿ, ಅವರನ್ನು alphabetically primitive ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ! ಇಂತಹ  ಕಾಗುಣಿತ ಅರಿಯದ ಕಾಡುಜನರನ್ನು, ನಾವು ಅಂದರೆ ಕನ್ನಡಿಗರು ಕುರುಡರಂತೆ ಅನುಸರಿಸಬೇಕೆ?  ಇಬ್ಬರು ಗೆಳೆಯರಿದ್ದರಂತೆ. ಅವರಲ್ಲಿ ಒಬ್ಬನು ಕುಂಟ. ಇವನನ್ನು ನೋಡಿದ ಮತ್ತೊಬ್ಬನು, ‘ನಾವು ದ್ರಾವಿಡರು, ಕುಂಟುತನವೇ ನಮ್ಮ ಜಾಯಮಾನ’ ಎಂದು ಭಾವಿಸಿ ತಾನೂ ಕುಂಟುತ್ತಲೇ ನಡೆಯುತ್ತಿದ್ದನಂತೆ. ಆದುದರಿಂದ ಬಂಧುಗಳೇ, ಈ ಅಲ್ಪಪ್ರಾಣಿತ್ವದ ಕುಂಟು ನಡೆ ನಮ್ಮ ಜಾಯಮಾನವಲ್ಲ ಎನ್ನುವುದನ್ನು ತಿಳಿಯಿರಿ! ಎರಡೂ ಕಾಲುಗಳನ್ನು ಬಳಸಿಕೊಂಡು, ಧೀರವಾಗಿ ನಡೆಯಿರಿ! ಮಹಾಪ್ರಾಣ ಉಚ್ಚಾರವನ್ನು ಸಹಜವಾಗಿ ಮಾಡಿರಿ, ಸಂಕೋಚ ಬೇಡ!

 Coming back to break and brake, ಗೆಳೆಯರೆ, ದೇವನಾಗರಿ ಲಿಪಿಯಲ್ಲಿ ಎ ಹಾಗು ಏ ಎನ್ನುವ ಭಿನ್ನ ಉಚ್ಚಾರಗಳಿಲ್ಲ. ಅವರಲ್ಲಿ ಏ ಎನ್ನುವ ಒಂದೇ ಉಚ್ಚಾರವಿದೆ. ಹೀಗಾಗಿ ಅವರು ಪೆನ್(pen) ಎನ್ನಲು ಪೇನ್(pain) ಎನ್ನುತ್ತಾರೆ. ಹೆಡ್ ಎನ್ನಲು ಹೇಡ್ ಎನ್ನುತ್ತಾರೆ! ಇದನ್ನು ತಿಳಿಯದ ನಮ್ಮ ಟೀವಿ ಜ್ಞಾನಿಗಳು ‘ಬ್ರೆಕಿಂಗ್ ನ್ಯೂಜ್’ ಎಂದು ಬರೆಯುವ ಬದಲಾಗಿ ‘ಬ್ರೇಕಿಂಗ್ ನ್ಯೂಜ್’ ಎಂದು ಬರೆಯುತ್ತಾರೆ!

Saturday, January 13, 2024

ಲಕ್ಷದ್ವೀಪ ಹಾಗು ಮಾಲ್ದೀವ್ಸ್

ಲಕ್ಷದ್ವೀಪವು ಇದೀಗ ತುಂಬಾ ಸುದ್ದಿಯಲ್ಲಿದೆ. ಜೊತೆಗೇ ‘ಲಕ್ಷದ್ವೀಪ’ ಪದದ ವ್ಯುತ್ಪತ್ತಿಯ ಬಗೆಗೂ ಖಚಿತ ಅಭಿಪ್ರಾಯವು ಹರಡುತ್ತಿದೆ. ಲಕ್ಷ (ಅಂದರೆ ಅನೇಕ) ದ್ವೀಪಗಳ ಸಮೂಹವೇ ಲಕ್ಷದ್ವೀಪ ಎನ್ನುವುದು, ಈ ಅಭಿಪ್ರಾಯದ ತಿರುಳು. ಈ ಅಭಿಪ್ರಾಯವನ್ನು ಭಾಷಾಶಾಸ್ತ್ರದ ಮೂಲಕ ಸ್ವಲ್ಪ ವಿವೇಚಿಸೋಣ.

 

ಬಂಗಾಲದ ಖ್ಯಾತ ಭಾಷಾವಿಜ್ಞಾನಿಗಳಾದ ಸುನೀತಿಕುಮಾರ ಚಟರ್ಜಿಯವರು, ‘ಲಕ್’ ಈ ಪದವು ದ್ರಾವಿಡ ಪದವಾಗಿದ್ದು ಇದರ ಅರ್ಥ ನಡುಗಡ್ಡೆ ಎಂದು ಹೇಳಿದ್ದರು. ಆದುದರಿಂದ, ಲಕ್ ಪದದ ರೂಪಾಂತರವಾದ  ‘ಲಂಕಾ’ ಪದವು ‘ನಡುಗಡ್ಡೆ’ ಎಂದೇ ಆಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ( ದ್ರಾವಿಡ ಎನ್ನುವುದು ಚಟರ್ಜಿಯವರು ಬಳಸಿದ ಪದ. ಅವರಿಗೆ ಕನ್ನಡದ ಬಗೆಗೆ ವಿಶೇಷವಾಗಿ ಗೊತ್ತಿರಲಿಕ್ಕಿಲ್ಲ. ನನ್ನ ಅಭಿಪ್ರಾಯದ ಮೇರೆಗೆ, ‘ಲಕ್’ ಎನ್ನುವುದು ಕನ್ನಡ ಪದ.)

 

ಲಕ್ಷದ್ವೀಪವು ‘ಲಖ್-ದೀವ್’ ಎನ್ನುವ ಕನ್ನಡ (ಅರ್ಥಾತ್ ದ್ರಾವಿಡ) ಪದದ ಸಂಸ್ಕೃತೀಕರಣ. ಇದರಲ್ಲಿಯ ಲಖ್ ಎನ್ನುವುದು ಕನ್ನಡ ಪದವಾದರೆ, ‘ದೀವ್’ ಎನ್ನುವುದು ‘ದ್ವೀಪ’ ಎನ್ನುವ ಸಂಸ್ಕೃತ ಪದದ ಪ್ರಾಕೃತ ರೂಪ. ಅಂದರೆ, ಲಕ್ ಮತ್ತು ದೀವ್ ಎನ್ನುವ ಎರಡು ವಿಭಿನ್ನ ಭಾಷೆಯ ಪದಗಳನ್ನು ಜೋಡಿಸಿ, ‘ಲಖ್-ದೀವ್’ ಎನ್ನುವ ಜೋಡು ಪದದ ನಿರ್ಮಾಣವಾಗಿದೆ. ಇಂತಹ ಜೋಡು ಪದಗಳು ನಮ್ಮಲ್ಲಿ ಸರ್ವೇಸಾಮಾನ್ಯವಾಗಿವೆ ಹಾಗು ಹೇರಳವಾಗಿವೆ. ಉದಾಹರಣೆಗಳು ಹೀಗಿವೆ: ‘ಗೇಟ್ ಬಾಗಿಲು, ಕ್ಯಾಚ್ ಹಿಡಿ, ಆಕಳ ಗೋಮೂತ್ರ ಇತ್ಯಾದಿ.’ ಒಂದು ಕಾಲದಲ್ಲಿ ವಿಭಿನ್ನ ಭಾಷೆಗಳ ಸಮುದಾಯಗಳು ಒತ್ತಟ್ಟಿಗೆ ಬಂದಾಗ ಇಂತಹ ಜೋಡು ಪದಗಳ ನಿರ್ಮಾಣವು ಅನಿವಾರ್ಯವಾಗಿತ್ತು.

 

ಇನ್ನು ‘ಮಾಲ್ದೀವ್ಸ’ ಪದಕ್ಕೆ ಬರೊಣ. ನಮ್ಮ ಸಂಸ್ಕೃತ ಪಂಡಿತರು, ‘ಮಾಲ್ದೀವ್ಸ್’ ಇದು ‘ಮಾಲಾದ್ವೀಪ’ ಎನ್ನುವ ಸಂಸ್ಕೃತ ಪದದ ಅಪಭ್ರಂಶ ಎನ್ನುವ ನಿರ್ಣಯಕ್ಕೆ ತಟ್ಟನೆ ಜಿಗಿದು ಬಿಡುತ್ತಾರೆ! ಒಂದು ಕಾಲದಲ್ಲಿ ‘ಮಲ್ಲ’ ಎನ್ನುವ ಸಮುದಾಯವು ಭಾರತದ ತುಂಬೆಲ್ಲ ಹರಡಿತ್ತು. ‘ಮಲ್ಲ’ರು ನೇಪಾಳದಲ್ಲಿ ಅರಸರಾಗಿ ಆಳಿದ್ದರು ಹಾಗು ಕುರುಕ್ಷೇತ್ರದ ಯುದ್ಧದಲ್ಲಿ ಭಾಗವಹಿಸಿದ್ದರು ಎನ್ನುವ ಆಖ್ಯಾಯಿಕೆಯನ್ನು ಮಹಾಭಾರತದಲ್ಲಿ ಓದಬಹುದು. ಹೆಸರಾಂತ ದರೋಡೆಖೋರಳಾದ ಫೂಲನ್ ದೇವಿಯು ಮಲ್ಲ ಸಮುದಾಯದವಳು. ಈ ಮಲ್ಲರು ನೀರಿನಲ್ಲಿ ಬೆಳೆಯುವ ನಾರಿನಿಂದ ‘ನಾರುಮಡಿ’ಯನ್ನು ತಯಾರಿಸುತ್ತಿದ್ದರು. ಬಹುಶಃ, ಶ್ರೀರಾಮಚಂದ್ರ, ಲಕ್ಷ್ಮಣ ಹಾಗು ಸೀತಾದೇವಿಯವರಿಗೆ, ವನವಾಸಗಮನ ಸಂದರ್ಭದಲ್ಲಿ ಮಲ್ಲರೇ ನಾರುಮಡಿಯನ್ನು ಕೊಟ್ಟಿರಬಹುದೇನೊ! ಕೇರಳ ರಾಜ್ಯದ ಒಂದು ಜಿಲ್ಲೆಗೆ ಮಲಪ್ಪೂರ ಎನ್ನುವ ಹೆಸರೇ ಇದೆಯಲ್ಲ! ಕರ್ನಾಟಕದಲ್ಲಿಯೇ ‘ಮಲ್ಲ’ ಪದದಿಂದ ಪ್ರಾರಂಭವಾಗುವ ೩೮೫ ಸ್ಥಳಗಳಿವೆ. ಮಹಾರಾಷ್ಟ್ರದಲ್ಲಿ ಮುಂಬಯಿಯ ಹತ್ತಿರ ಇರುವ ‘ಮಲಾಡ’ವು, ಕನ್ನಡದ ‘ಮಲ್ಲಹಾಡಿ’ಯೇ ಹೌದು!. ಅಷ್ಟೇ ಏಕೆ, ನನ್ನ ಅಜ್ಜಿಯು ನಾನು ಚಿಕ್ಕವನಿದ್ದಾಗ, ನನಗೆ ‘ಮಲಪೂರಿ’ ಎನ್ನುವ ಯಕ್ಷಿಣಿಯೊಬ್ಬಳ ಕಥೆಯನ್ನು ಹೇಳುತ್ತಿದ್ದಳು. ಈ ಮಲ್ಲರೇ, ‘ಮಾಲ್ದೀವ್ಸ್’ದ ಮೂಲನಿವಾಸಿಗಳು. ಇವರಿಂದಲೇ ‘ಮಲ್ಲದ್ವೀಪ’ವು ಬಂದಿದ್ದು, ಅದನ್ನು ಸಂಸ್ಕೃತ-ಉತ್ಸಾಹಿಗಳು ‘ಮಾಲಾದ್ವೀಪ’ ಎಂದು ಘೋಷಿಸಿದ್ದಾರೆ. ಆದುದರಿಂದ, ವಿವೇಚನಾಶೀಲರಾದ ನನ್ನ ಕನ್ನಡ ಬಾಂಧವರೇ, ಸಂಸ್ಕೃತದ ಈ ಬಲೆಯಲ್ಲಿ ಕಣ್ಣು ತೆರೆದುಕೊಂಡೇ ಬೀಳದಿರಿ! ಲಕ್ಷದ್ವೀಪವು ‘ಲಕ್-ದೀವ್’ ಹಾಗು ಮಾಲ್ದೀವ್ಸ್ ಇದು ಮಲ್ಲದ್ವೀಪ ಎನ್ನುವುದನ್ನು ಅರಿಯಿರಿ!

Thursday, March 26, 2020

ಲೇಖನಿಯ ಪಿಡುಗು

 ‘ವಿಶ್ವವಾಣಿದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಹೊಸದೊಂದು ಆಂಗ್ಲ ಪದವನ್ನು ಸೃಷ್ಟಿಸಿದ್ದಾರೆ. ಇದು `Pendemic’ ಎನ್ನುವ ಪದ. ೧೫--೨೦ರವಿಶ್ವವಾಣಿದಿನಪತ್ರಿಕೆಯಲ್ಲಿ ಈ ಹೊಸ ಪದವು ಹುಟ್ಟಿಕೊಂಡಿದೆ. Pendemic ಪದದ ಅರ್ಥವೇನು? Pen ಅಂದರೆ ಲೇಖನಿ ; demic ಎನ್ನುವುದು endemic ಪದದ ಹ್ರಸ್ವ ರೂಪ ; ಕನ್ನಡದಲ್ಲಿ ಇದಕ್ಕೆ ಪಿಡುಗು ಎನ್ನುತ್ತಾರೆ. ಆದುದರಿಂದ Pendemic ಪದಕ್ಕೆ ಲೇಖನಿಯ ಪಿಡುಗು ಅಥವಾ ಲೇಖನಿಯ ಹಾವಳಿ ಎನ್ನುವ ಅರ್ಥವಿರಬಹುದೆ!?

ಅಥವಾ Pendemic ಪದದ ಮೂಲಕ ವಿಶ್ವೇಶ್ವರ ಭಟ್ಟರು ಆತ್ಮಶೋಧನೆಯನ್ನೇನಾದರೂ ಮಾಡಿಕೊಳ್ಳುತ್ತಿದ್ದಾರೆಯೆ? ಛೆ! ಛೆ! ಇರಲಾರದು; ಏಕೆಂದರೆ ಈ ಲೇಖನವನ್ನು ಕರೋನಾ ಪಿಡುಗಿನ ಸಂದರ್ಭದಲ್ಲಿ ಬರೆಯಲಾಗಿದೆ ಹಾಗೂ ಜಾಗತಿಕ ಆರೋಗ್ಯ ಸಂಘಟನೆಯು ಕರೋನಾ ಪಿಡುಗನ್ನು Pandemic ಎಂದು ಕರೆದಿದೆ. ಬಹುಶಃ ಭಟ್ಟರ ಲೇಖನವನ್ನು ಅಚ್ಚಿಸುವಾಗ ಏನಾದರೂ ಮುದ್ರಣದೋಷವಾಯಿತೆ? ಸಾಧ್ಯವಿಲ್ಲ, ಏಕೆಂದರೆ Pandemic ಎನ್ನುವುದರ ಬದಲಾಗಿ Pendemic ಎನ್ನುವ ಪದವು ಈ ಲೇಖನದಲ್ಲಿ ಎರಡು ಬಾರಿ ತನ್ನ ಮುಖವನ್ನು ತೋರಿಸಿದೆ!

 ಹಾಗಿದ್ದರೆ ಹೊಸ ವರುಷದ ಆ˘ಕ್ಸಫರ್ಡ ಪದಕೋಶಕ್ಕೆ ವಿಶ್ವೇಶ್ವರ ಭಟ್ಟರ ಕೊಡುಗೆಯೆಂದು Pendemic (=ಲೇಖನಿಯ ಪಿಡುಗು) ಎನ್ನುವ ಈ ಪದವನ್ನು ಸಮರ್ಪಿಸಬಹುದು! ಜೈ ಹೋ  ವಿಶ್ವೇಶ್ವರ ಭಟ್ಟ!

ವಿಶ್ವೇಶ್ವರ ಭಟ್ಟರನ್ನು ತಿರುಚುಪದಗಳ ಬ್ರಹ್ಮ ಎಂದು ಕರೆಯಬಹುದು. ಅವರು ನಿರ್ಮಿಸಿದ ತಿರುಚು ಪದಗಳು ರಂಜಕವಾಗಿರುತ್ತವೆ. ಅವರ ವಕ್ರತುಂಡೋಕ್ತಿ ಹಾಗುಭಟ್ಟರ ಸ್ಕಾ˘ಚ್ಇವು  ನನಗೆ ಪ್ರತಿದಿನದ ವಿನೋದದ ಗುಳಿಗೆಗಳಾಗಿವೆ. ಆದರೆ ಬಂಧುಗಳೆ, ದುರ್ದೈವದಿಂದ ಪತ್ರಕರ್ತರ ಲೇಖನಿಯ ರಭಸದಲ್ಲಿ, ಕೆಲವೊಮ್ಮೆ ಪದಗಳಷ್ಟೇ ಅಲ್ಲ. ಭಾಷೆಯೂ ಸಹ ತಿರುಚಿ ಹೋಗುತ್ತದೆ. ಮೇಲೆ ಕೊಟ್ಟ Pendemic ಇದಕ್ಕೆ ಒಂದು ಉದಾಹರಣೆ.ರಭಸವುರಾಸಭವಾಗಬಾರದಷ್ಟೆ!

ಭಟ್ಟರ ಪ್ರಭಾವವು ಕನ್ನಡದ ಅನೇಕ ಪತ್ರಿಕೆಗಳ ಮೇಲೆ ಆಗಿದೆ. ಆದುದರಿಂದ ಇನ್ನೂ ಕೆಲವು ಪತ್ರಿಕೆಗಳು ತಿರುಚು ಪದಗಳನ್ನು ಹಾಗುಕತ್ತರಿಸಿ-ಕೂಡಿಸುಪದಗಳ ಹೆರಿಗೆಯನ್ನು ಮಾಡುತ್ತಲೇ ಇವೆ. ಕರ್ನಾಟಕದಲ್ಲಿ ಅತಿವೃಷ್ಟಿ ಹಾಗು ನೆರೆಹಾವಳಿ ಆದಂತಹ ಸಂದರ್ಭದಲ್ಲಿ  ‘ವಿಜಯವಾಣಿಪತ್ರಿಕೆಯುನೆರೆಕನ್ನಎನ್ನುವ ಪದದ ಹುಟ್ಟು ಹಾಕಿತ್ತು. ನಿಮಗೆ ಈ ಪದವು ಅರ್ಥವಾಯಿತೆ? ನೆರೆಹಾವಳಿಯ ಸಂದರ್ಭದಲ್ಲಿ ಪ್ರವಾಹಪೀಡಿತರಿಗೆ ನೀಡಲಾದ ನೆರವಿಗೆ  ಸರಕಾರಿ ಅಧಿಕಾರಿಗಳು ಹಾಕುತ್ತಿರುವ ಕನ್ನ ಎನ್ನುವ ಅರ್ಥದಲ್ಲಿ, ವಿಜಯವಾಣಿ ಪತ್ರಿಕೆಯು ಈನೆರೆಕನ್ನಪದವನ್ನು ಪ್ರಸೂತಿಸಿತ್ತು!

ಸಂಪಾದಕರೆ, ನಾವು ಪತ್ರಿಕೆಗಳನ್ನು ಓದುವುದು ಸಮಾಚಾರವನ್ನು ತಿಳಿಯಲಿಕ್ಕಾಗಿಯೇ ಹೊರತು ಪದಬಂಧ ಕ್ವಿಝ್ ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕೆ ಅಲ್ಲ. ಇಂತಹ ತುಂಡು-ಮುಂಡ ಪದಗಳು, ತಿರುಚು ಪದಗಳು ಓದಿನ ಓಘವನ್ನು ತಡೆಯುತ್ತವೆ ; ಮುಖ್ಯವಾಗಿ ಬಾಲಕರಲ್ಲಿ ತಪ್ಪು ಭಾಷೆಯನ್ನು ಹರಡುತ್ತವೆ. ದಯವಿಟ್ಟು ಈ ಪಾಂಡಿತ್ಯಪ್ರದರ್ಶನವನ್ನು ನಿಮ್ಮ ಕಸದ ಬುಟ್ಟಿಯಲ್ಲಿ ಬಿಸಾಕಿ ಬಿಡಿ; ಶುದ್ಧವಾದ ಪದಗಳನ್ನು ಹಾಗು ಶುದ್ಧವಾದ ಭಾಷೆಯನ್ನು ಬಳಸಲು ಕಲಿಯಿರಿ; ನಿಮ್ಮ ಸಿಬ್ಬಂದಿಗೂ ಕಲಿಸಿರಿ.

ವಿಜಯವಾಣಿಪತ್ರಿಕೆಯ ೧೮--೨೦೨೦ರ ಸಂಚಿಕೆಯಲ್ಲಿ ನಿಮ್ಮ ಮೊಬೈಲಿನಲ್ಲಿ ಕೀಟಾಣು ಇದೆಯೆ?’ ಎನ್ನುವ ಲೇಖನವು ಪ್ರಕಟವಾಗಿದೆ.  ‘virus’ ಎನ್ನುವ ಆಂಗ್ಲ ಪದಕ್ಕೆ ಸಂವಾದಿಯಾಗಿಕೀಟಾಣುಎನ್ನುವ ಪದವನ್ನು ಇಲ್ಲಿ ಬಳಸಲಾಗಿದೆ. ಈ ಲೇಖನವನ್ನು ಬರೆದವರು ಟಿ.ಜಿ. ಶ್ರೀನಿಧಿ. ಇವರು ವಿಜ್ಞಾನ ಹಾಗು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ವಿಜಯವಾಣಿ ಪತ್ರಿಕೆಯಲ್ಲಿ ಬರೆದಿದ್ದಾರೆ. ಸಾಮಾನ್ಯ ಓದುಗನಿಗೆ ಇದರಿಂದ ಬಹಳಷ್ಟು ಪ್ರಯೋಜನವಾಗುತ್ತಿದೆ. ಆದರೆ, ಈ ಸಲ, ‘ಕೀಟಾಣುಎನ್ನುವ ಪದವನ್ನು ಬಳಸುವ ಮೂಲಕ ಇವರು ಓದುಗನನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆಕೀಟ ಎಂದರೆ insect; ಅಣು ಎಂದರೆ atom. ಕೀಟಾಣು ಎಂದರೆ an insect as small as an atom ಎಂದು ನಾವು ಅರ್ಥೈಸಿಕೊಳ್ಳಬೇಕೆ? ಅಥವಾ an atom which behaves like an insect ಎಂದು ತಿಳಿದುಕೊಳ್ಳಬೇಕೆ?  ಈಗಾಗಲೇ virus ಪದಕ್ಕೆ ವೈರಾಣು ಎನ್ನುವ ಸಮರ್ಪಕ ಪದ ಸಾರ್ವತ್ರಿಕವಾಗಿ ಬಳಕೆಯಲ್ಲಿ ಇರುವಾಗ ಬೇರೊಂದು ತಪ್ಪು ಪದವನ್ನು ಸಾರ್ವಜನಿಕ ಬಳಕೆಯಲ್ಲಿ ತೂರಿಸುವುದರಲ್ಲಿ ಏನಾದರೂ ಅರ್ಥವಿದೆಯೆ? ಇದು ಅಕ್ಷಮ್ಯ; ಒಬ್ಬ ಜವಾಬುದಾರಿಯುತ ಓದುಗನಾಗಿ, ನಾನು ಇದನ್ನು ವಿರೋಧಿಸುತ್ತೇನೆ.

ವಿಶ್ವವಾಣಿ ಪತ್ರಿಕೆಯು ಪದಸಂಹಾರವನ್ನು ಮಾಡುವಾಗ ಕನ್ನಡ, ಇಂಗ್ಲಿಶ್, ಹಿಂದೀ, ಸಂಸ್ಕೃತ ಎನ್ನುವ ಭೇದವನ್ನು ಮಾಡುವುದಿಲ್ಲ. ‘ವಿಮೆನ್ಸ್ಡೇಎನ್ನುವ ಇಂಗ್ಲಿಶ್ ಪದವನ್ನುವುಮೆನ್ಸ್ ಡೇಎಂದು ಬರೆಯಲಿಕ್ಕಾಗಲೀ, ‘ದೋಪಹರಎನ್ನುವ ಹಿಂದೀ ಪದವನ್ನುದೂಪಹರ್ಎಂದು ತಿರುಚಲಿಕ್ಕಾಗಲೀ ವಿಶ್ವವಾಣಿಯ ಸುದ್ದಿಗಾರರಿಗೆ ಏನೂ ಮುಜುಗರವಾಗುವುದಿಲ್ಲ. ಇನ್ನುಸೃಷ್ಟಿಎನ್ನುವ ಸಂಸ್ಕೃತ ಪದವನ್ನುಸೃಷ್ಠಿಎಂದು ಬದಲಾಯಿಸುವುದು ಇವರ ಮೂಲಭೂತ ಹಕ್ಕು. ಏಕೆಂದರೆ ಮಹಾಪ್ರಾಣವು ಸಂಸ್ಕೃತ ಭಾಷೆಯ ಜಾಯಮಾನ ಎಂದು ಈ ಕನ್ನಡ ಪಂಡಿತರು ನಿರ್ಣಯ ಕೊಟ್ಟಿದ್ದಾರಲ್ಲ! ಈ ಸಂಹಾರ ಕಾರ್ಯಕ್ರಮವು ಶೀರ್ಷಿಕೆಗಳನ್ನೂ ಬಿಟ್ಟಿಲ್ಲ. ಇವರ ಮೇರೆಗೆ ನಮ್ಮ ಚಾಮುಂಡೇಶ್ವರಿಯು ಮಾಡಿರುವುದು ದುಷ್ಟರ ಮರ್ದನವಲ್ಲ ; ‘ದುಷ್ಟರ ಮರ್ಧನ’!

ಇವರ ಪತ್ರಿಕೆಗಳಲ್ಲಿ ಬಜರಂಗ ಪೂನಿಯಾ ಎನ್ನುವ ಕ್ರೀಡಾಪಟು ಭಜರಂಗನಾಗುತ್ತಾನೆ. ಮತ್ತೆ ಕರ್ನಾಟಕದಲ್ಲಿ ಎಲ್ಲರೂ ಭಜರಂಗ ಎಂದೇ ಹೇಳುತ್ತಾರಲ್ಲ ಎನ್ನುವ ಸಂಶಯವನ್ನು ನಮ್ಮ ಪತ್ರಿಕಾಪಂಡಿತರು ವ್ಯಕ್ತಪಡಿಸಬಹುದು. ಸಾರ್ವಜನಿಕರು ತಾವು ಓದುವ ಪತ್ರಿಕೆಗಳನ್ನು ಸಹಸಾ ನಂಬುತ್ತಾರೆ ; ನಂಬಿ ಕೆಡುತ್ತಾರೆ; ತಪ್ಪನ್ನೇ ಸರಿ ಎಂದು ಭಾವಿಸಿ, ತಾವೂ ಅದನ್ನೇ ರೂಢಿಸಿಕೊಳ್ಳುತ್ತಾರೆ. ಸರಿಯಾಗಿ ಬರೆಯುವದು ಪತ್ರಿಕೆಗಳ ಕರ್ತವ್ಯ. ನೋಡಿ, ‘ವಜ್ರಾಂಗಎನ್ನುವ ಸಂಸ್ಕೃತ ಪದವು ಹನುಮಪ್ಪನ ಹೆಸರು. ವಜ್ರಾಂಗ ಪದವು ಹಿಂದಿಯಲ್ಲಿಬಜರಂಗಎಂದು ಬದಲಾಗುತ್ತದೆಯೆ ಹೊರತುಭಜರಂಗಎಂದಲ್ಲ. ಎರಡನೆಯದಾಗಿ ನೀವು ಉಲ್ಲೇಖಿಸುತ್ತಿರುವ ಬಜರಂಗ ಎನ್ನುವುದು ಒಬ್ಬ ವ್ಯಕ್ತಿಯ (--ಬಜರಂಗ ಪೂನಿಯಾ, ಕುಸ್ತಿ ಕ್ರೀಡಾಪಟು--) ಹೆಸರು. ನಿಮ್ಮ ಮನಸ್ಸಿಗೆ ಬಂದಂತೆ, ನಿಮ್ಮ ಬುದ್ಧಿಗೆ ಎಟುಕಿದಂತೆ ಇದನ್ನು ಬದಲಾಯಿಸಲು ನಿಮಗೇನು ಅಧಿಕಾರವಿದೆ? ಉದಾಹರಣೆಗೆ ವಿಶ್ವೇಶ್ವರ ಭಟ್ಟರ ಹೆಸರನ್ನುವಿಸವೇಸೂರ ಬತ್ತಎಂದು ಯಾರಾದರೂ (=ಸಂಗರ ಬಟ್ಟರು) ಬದಲಾಯಿಸಿದರೆ, ಭಟ್ಟರು ಸುಮ್ಮನಿರುತ್ತಾರೆಯೆ? ಒಪ್ಪಿಕೊಳ್ಳುವೆ, ನಾವು ಬಳಸುವ ಭಾಷೆಯೇ ಅಸಮರ್ಥವಾಗಿದ್ದರೆ ಇದು ಕ್ಷಮ್ಯ. ಉದಾಹರಣೆಗೆ, ‘ಕೃಪಾಎನ್ನುವ ಹೆಸರು ತಮಿಳರ ಬರಹದಲ್ಲಿ ಹಾಗು ಆ ಕಾರಣಕ್ಕಾಗಿ ಅವರ ಬಾಯಿಯಲ್ಲಿಕಿರುಬಾಆಗಿ ಮಾರ್ಪಡುತ್ತದೆ. (ಇದೊಳ್ಳೇ ಕತ್ತೇಕಿರುಬ!) ದಯವಿಟ್ಟು ತಮಿಳರನ್ನು ಕ್ಷಮಿಸಿರಿ, ಕೃಪಾ ಮೇಡಮ್! ಅವರು ನಿಮ್ಮ ಅವಹೇಳನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿಲ್ಲ!

ಕೇವಲ ವ್ಯಕ್ತಿಗಳ ಹೆಸರುಗಳನ್ನಷ್ಟೇ ಅಲ್ಲ, ರಾಜ್ಯಗಳ ಹೆಸರುಗಳನ್ನೂ ಸಹ ಈ ಪತ್ರಕರ್ತರು ಬದಲಾಯಿಸಿ ಬಿಡುತ್ತಾರೆ. ಹಿಂದೀಯಲ್ಲಿಝಾಡಎಂದರೆ ಪೊದೆ. ಈ ಪದದಿಂದಾಗಿಯೇ ಕಸಬರಿಗೆಗೆ ಝಾಡೂ ಎಂದೂ, ಕಸ ಉಡುಗುವವನನ್ನು ಝಾಡಮಾಲೀ ಎಂದೂ ಕರೆಯುತ್ತಾರೆ. ‘ಝಾಡಖಂಡಎನ್ನುವ ರಾಜ್ಯಕ್ಕೆ ಆ ಹೆಸರು ಬಂದದ್ದು ಆ ಪ್ರದೇಶದಲ್ಲಿ ವಿಸ್ತಾರವಾಗಿ ಬೆಳೆಯುವ ಝಾಡ (=ಪೊದೆ)ಗಳಿಂದಾಗಿ. ಈ ಹೆಸರಿರುವ ರಾಜ್ಯವನ್ನು ನಮ್ಮ ಪತ್ರಿಕಾಕರ್ತರು (ಹಾಗು ಕನ್ನಡ ಟೀವಿ ಜಾಣರು) ‘ಜಾರ್ಕಂಡ್ಎಂದೇಕೆ ಕರೆಯುತ್ತಾರೆ, ಬರೆಯುತ್ತಾರೆ ಎನ್ನುವುದು ನನಗೆ ಅರ್ಥವಾಗದ ವಿಷಯ! ಅಲ್ರೀ ಸsರಗಳೇ, ನೀವು ನಿಮ್ಮ ತಪ್ಪು, ಒಪ್ಪುಗಳನ್ನು ತಿಳಿಯಲು ಒಂದೇ ಸೆಕೆಂಡು ಸಾಕು ; ವಿಕಿಪೀಡಿಯಾ ನಿಮ್ಮ ಬೆರಳುಗಳ ತುದಿಯಲ್ಲೇ ನಿಮಗೆ ಬ್ರಹ್ಮಾಂಡಜ್ಞಾನವನ್ನೇ ಕೊಡುವುದು! ಒಬ್ಬ ವ್ಯಕ್ತಿಯ ಅಥವಾ ಒಂದು ಸ್ಥಳದ ಹೆಸರನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಾಶಿಸುವ ಮೊದಲು, ದಯವಿಟ್ಟು ವಿಕಿಪೀಡಿಯಾವನ್ನು ಒಮ್ಮೆ ನೋಡಿ,ಸಾಕು.
                       
ಈ ಕನ್ನಡ ಪಂಡಿತರ ಪ್ರಕಾರ ಅಲ್ಪಪ್ರಾಣವು ಕನ್ನಡದ ಜಾಯಮಾನ; ಅಂದರೆ ಹುಟ್ಟುಡುಗೆ! ಆದುದರಿಂದಅಲ್ಪಸಂಖ್ಯಾತರ ಅನುದಾನವು ವಿಶ್ವವಾಣಿಯಲ್ಲಿಕೋತಾಆಗುವುದೇ ಹೊರತುಖೋತಾಆಗುವುದಿಲ್ಲ! ಕಾಮಾಖ್ಯ ದೇವಸ್ಥಾನವು ಕಾಮಾಕ್ಯ ದೇವಸ್ಥಾನವಾಗುವುದು! (ದೇವಿ, ಅವರು ನಿನ್ನ (ಮಹಾ)ಪ್ರಾಣವನ್ನು ತೆಗೆಯುತ್ತಿದ್ದಾರೆಂದು ಅವರಿಗೆ ಗೊತ್ತಿಲ್ಲ; ಅವರ ಅಪರಾಧವನ್ನು ಕ್ಷಮಿಸು!)

ಕಾಗುಣಿತದ ದೋಷಗಳಷ್ಟೇ ವಿಶ್ವವಾಣಿಯ ವೈಶಿಷ್ಟ್ಯ ಎಂದೇನಲ್ಲ. ವ್ಯಾಕರಣದೋಷಗಳೂ ಇಲ್ಲಿ ಕಣ್ಣಿಗೆ ಹೊಡೆಯುತ್ತವೆ. ಒಂದು ಉದಾಹರಣೆಯನ್ನು ನೋಡಿರಿ: ‘ಕರೋನಾಗೆ ಕರ್ನಾಟಕದಲ್ಲಿ ಭಯ ಬೇಡ’. ಈ ವಾಕ್ಯದ ಸೌಂದರ್ಯವನ್ನು ನೋಡಿದಿರಾ? ಇದಕ್ಕೆ ದ್ವಂದ್ವಾರ್ಥ ಅಲಂಕಾರ ಎನ್ನುವ ಹೆಸರನ್ನು ಕೊಡಬಹುದು! ಕರೋನಾ ಎನ್ನುವ ರೋಗಕ್ಕೆ ಕರ್ನಾಟಕದಲ್ಲಿ ಯಾವುದೇ ಭಯವಿಲ್ಲ; ಇಲ್ಲಿ ಆರಾಮಾಗಿ ಪ್ರವೇಶಿಸಬಹುದು ಎನ್ನುವುದು ಮೇಲ್ನೋಟದ ಅರ್ಥ. ಬೇರೆ ಏನಾದರೂ ಅರ್ಥವಿದ್ದರೆ, ಬರೆದವರೇ ಹೇಳಬೇಕು. (‘ಗಿರಿಬಸಕನೇವದರಿಬಈ ಪದಸಮುಚ್ಚಯವನ್ನು ತಿರುವುಮುರುವಾಗಿ ಓದಿರಿ.)

ಇದಕ್ಕಿಂತ ಹೆಚ್ಚಿನ ಪ್ರತಿಭೆಯ ಮತ್ತೊಂದು ಶೀರ್ಷಿಕೆ ಹೀಗಿದೆ: ‘ಅತ್ಯಾಚಾರ ಸಂತ್ರಸ್ತೆ ತಂದೆ ಕೊಂದ ಆರೋಪಿ’. ಈ ವಾಕ್ಯದಲ್ಲಿ ಯಾರು ಯಾರನ್ನು ಕೊಂದರು? ಸರಿಯಾದ ಉತ್ತರವನ್ನು ಥಟ್ಟನೆ ಹೇಳಿದವರಿಗೆ ವಿಶ್ವವಾಣಿ ಪತ್ರಿಕೆಯ ಒಂದು ಪ್ರತಿಯನ್ನು ಉಚಿತವಾಗಿ ಕೊಡಲಾಗುವುದು! (ವಿಭಕ್ತಿ ಪ್ರತ್ಯಯಗಳು, ವ್ಯಾಕರಣ ಇವೆಲ್ಲ ಯಾರಿಗೆ ಬೇಕು?. ಪತ್ರಿಕಾಕರ್ತರ ಪ್ರಕಾರ ಅವರದು ಸ್ವತಂತ್ರ ಪ್ರತಿಭೆ; ಅವರಿಗೆ ಕನ್ನಡ ವ್ಯಾಕರಣದ ನಿಯಮಗಳು ಅನ್ವಯಿಸುವುದಿಲ್ಲ.)

ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಲು ಯಾರಿಗಾದರೂ ಅಧಿಕಾರವಿದೆಯೆ? ನಮ್ಮ ಬುದ್ಧಿಜೀವಿಗಳಿಗೆ ಇದು ದೇವದತ್ತ ಅಧಿಕಾರ. ನೋಬೆಲ್ ಬಹುಮಾನ ವಿಜೇತರಾದ ರಬೀಂದ್ರನಾಥ ಠಾಕೂರರು ಭಾರತದ ಹೆಮ್ಮೆ. ಇವರ ಹೆಸರನ್ನು ಯಾರಾದರೂ ಸರಿಯಾಗಿ ಉಚ್ಚರಿಸದಿದ್ದರೆ, ಭಾರತೀಯರು ಅಸಮಾಧಾನಗೊಳ್ಳಬೇಕು. ಆದರೆ ಜ್ಞಾನಪೀಠಸ್ಥರಾದ ಅನಂತಮೂರ್ತಿಯವರು ಠಾಕೂರರನ್ನು ಯಾವಾಗಲೂಟ್ಯಾಗೋರ್ಎಂದೇ  ()ರೆದಿದ್ದಾರೆ. ಇತರ ಜ್ಞಾನಿಗಳು ಇವರನ್ನು ಅನುಕರಿಸುವುದು ಸಹಜವೇ ಆಗಿದೆ. ಅಂದ ಮೇಲೆ ವಿಶ್ವವಾಣಿಯವರು ಸುಮ್ಮನಿದ್ದಾರೆಯೆ? ‘ಟ್ಯಾಗೋರ್ ಕಿನಾರೆಯ ಮೇಲೆ ಯುದ್ಧವಿಮಾನವನ್ನು ಇಳಿಸಿಯೇ ಬಿಟ್ಟರು! ನಮ್ಮ ಊರುಗಳ ತಪ್ಪು ತಪ್ಪು ಹೆಸರುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಸರಿಪಡಿಸಿದ್ದೇವೆ. ಉದಾಹರಣೆಗೆ: ಬ್ಯಾಂಗಲೋರ್>>ಬೆಂಗಳೂರು, ಬೆಳಗಾಮ್>>ಬೆಳಗಾವಿ, ಕೂರ್ಗ್>>ಕೊಡಗು ಇತ್ಯಾದಿ. ಹಾಗಿರುವಾಗ ವ್ಯಕ್ತಿಗಳ ಹೆಸರುಗಳನ್ನು ತಪ್ಪಾಗಿ ಬರೆದು, ಉಚ್ಚರಿಸಿ, ಆ ವ್ಯಕ್ತಿಗಳಿಗೆ ಏಕೆ ಅವಹೇಳನ ಮಾಡಬೇಕು? ಇಂಗ್ಲಿಶ್ ಮಾದರಿಯನ್ನು ಹಿಂಬಾಲಿಸುವುದು ನಮಗೆ ಗಣ್ಯತೆಯ ಪ್ರಭಾವಳಿಯನ್ನು, ಬುದ್ಧಿವಂತನ ಮುಖವಾಡವನ್ನು ಕೊಡುತ್ತದೆ ಎನ್ನುವ ಕಾರಣಕ್ಕಾಗಿಯೆ?!

ಈ ವಿಶ್ವವಾಣಿ ಪತ್ರಿಕೆಯವರಿಗೆ ಕನ್ನಡದಲ್ಲಿ ಪದಗಳು ಸಿಗುವುದಿಲ್ಲವೇನೊ? ಅನವಶ್ಯಕ ಆಂಗ್ಲ ಪದಗಳು ಪತ್ರಿಕೆಯಲ್ಲಿ ಎಲ್ಲೆಲ್ಲೂ ತುಂಬಿರುತ್ತವೆ, ಮುಖ್ಯವಾಗಿ ಶೀರ್ಷಿಕೆಗಳಲ್ಲಿ. ಉದಾಹರಣೆಗೆ, ‘ಪ್ರಾತಿನಿಧ್ಯ ಪ್ರಾಬ್ಲಂ?’ ಎನ್ನುವ ಶೀರ್ಷಿಕೆಯನ್ನು ನೋಡಿರಿ. ‘ಪ್ರಾತಿನಿಧ್ಯ ಸಮಸ್ಯೆಎನ್ನುವದಕ್ಕೆ ಇವರಿಗೆ ಏನಿದೆ ಸಮಸ್ಯೆ? ಅನೇಕರು ತಾವು ಸುಶಿಕ್ಷಿತರೆಂದು ತೋರಿಸಿಕೊಳ್ಳಲು, ತಮ್ಮ ಮಾತಿನಲ್ಲಿ ಇಂಗ್ಲೀಶ್ ಪದಗಳನ್ನು ಬಳಸುತ್ತಿರುತ್ತಾರೆ. ಬಹುಶಃ ವಿಶ್ವವಾಣಿ ಪತ್ರಿಕೆಯವರೂ ತಮ್ಮನ್ನು ಸುಶಿಕ್ಷಿತರೆಂದು ತೋರಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆಯೆ? ಬ್ಯಾಡರೀ, ಇದು ವ್ಯರ್ಥ ಪ್ರಯತ್ನ ಕಣ್ರೀ!

ವಿಶ್ವವಾಣಿಯುಪ್ರತಿದಿನದ ಕ್ವಿಝ್ಅನ್ನುವ ಮತ್ತೊಂದು ಕಾರ್ಯಕ್ರಮವನ್ನು ಓದುಗರ ಎದುರಿಗೆ ಇಡುತ್ತಿದೆ. ಅದೆಂದರೆ ಒಂದು ಪದದ ಕೆಲವು ಅಕ್ಷರಗಳನ್ನು ಹಿಂದೆ ಮುಂದೆ ಮಾಡಿ ಅಥವಾ ಬದಲಾಯಿಸಿ , ಹೊಸ ಪದವನ್ನು ನಿಮ್ಮೆದುರಿಗೆ ಇಡುತ್ತಾರೆ. ನೀವು ಸರಿಯಾದ ಪದಗಳನ್ನು ಊಹಿಸಬೇಕು: ಕೆಲವು ಉದಾಹರಣೆಗಳು ಇಲ್ಲಿವೆ:
() ಗಂಜೇದ್ರಗಡದಲ್ಲಿ ಮೂರು ದಿನ ಆಚರಣೆ
() ಗುಬ್ಬಿ ತಹಸೀಲ್ದಾರ ಮರ ನೇಮಕಕ್ಕೆ ಒತ್ತಾಯ
() ಮೆಲೇಷ್ಯಾದಿಂದ ಸಕ್ಕರೆ ಖರೀದಿ
() ನಮ್ಮ ದೇಶಕ್ಕೆ ಬೇಕಿರುವುದು ತಾತ್ವಿತ ಜೀವಿಗಳು
() ವಿಶ್ವ ಅರಣ್ಯ ಮರಕ್ಷಣಾ ದಿನಾಚರಣೆ

ಸರಿಯಾದ ಉತ್ತರಗಳು ಇಲ್ಲಿವೆ:
() ಗಜೇಂದ್ರಗಡದಲ್ಲಿ ಮೂರು ದಿನ ಆಚರಣೆ
() ಗುಬ್ಬಿ ತಹಸೀಲ್ದಾರರ ಮರು ನೇಮಕಕ್ಕೆ ಒತ್ತಾಯ
() ಮಲೇಶಿಯಾದಿಂದ ಸಕ್ಕರೆ ಖರೀದಿ
() ನಮ್ಮ ದೇಶಕ್ಕೆ ಬೇಕಿರುವವರು ತಾತ್ವಿಕ ಜೀವಿಗಳು
() ವಿಶ್ವ ಅರಣ್ಯ ಮರ ರಕ್ಷಣಾ ದಿನಾಚರಣೆ
ಈ ಪದಗಳನ್ನು ಊಹಿಸಲು ನಿಮಗೆ ಕಷ್ಟವಾಗಿರಲಿಕ್ಕಿಲ್ಲ. ಆದರೆ ವಾಕ್ಯಗಳೇ ಅರ್ಥವಾಗದ ಕೆಲವು ಮಹಾಮಾದರಿಗಳು ಇಲ್ಲಿವೆ. ಇವುಗಳನ್ನು ಸಾರ್ವಜನಿಕ ಮನರಂಜನೆಯ ಉದ್ದೇಶದಿಂದ ಇಲ್ಲಿ ಹೂಬಹೂ ನೀಡುತ್ತಿದ್ದೇನೆ:

() ಕಲಾಕೃತಿಗಳನ್ನು ಚಾಕ್ ಮೂಲಕ ಲಾಂಛನಗಳು, ಇಪ್ಪತ್ತನಾಲ್ಕು ಜೈನತೀರ್ಥಂಕರರ ಮೂರ್ತಿಗಳು, ನಾಟ್ಯಗಣಪತಿ, ದುರ್ಗಾ, ಹನುಮಂತ, ಶಿರಡಿಸಾಯಿ, ಕನ್ನಡದ ಜ್ಞಾನಪೀಠಪ್ರಶಸ್ತಿಪುರಸ್ಕೃತ ಡಾ.ರಾಜ್ ಕುಮಾರ್ , ಸರ್ ಎಂವಿ, ಸ್ವಾಮಿ ವಿವೇಕಾನಂದ, ಶ್ರೀ ಶಿವಕುಮಾರ ಸ್ವಾಮೀಜಿ, ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ, ಸಚಿನ್ ತೆಂಡುಲ್ಕರ್, ಅಮಿತಾ ಬಚ್ಚನ್, ರಜನಿಕಾಂತ್

ಈ ಸ್ವತಂತ್ರ ಪರಿಚ್ಛೇದದ ಅರ್ಥವೇನು? ಇಲ್ಲಿ ಕರ್ತೃ, ಕರ್ಮ, ಕ್ರಿಯಾಪದಗಳು ಇಲ್ಲ. ಆದುದರಿಂದ ಇದನ್ನು ಒಂದು ವಾಕ್ಯವೆಂದು ಕರೆಯುವುದು ಸಾಧ್ಯವಿಲ್ಲ. ಬಳಿಕ ಇಪ್ಪತ್ತುನಾಲ್ಕು ಎಂದು ಬರೆಯುವ ಬದಲಾಗಿ ಇಪ್ಪತ್ತನಾಲ್ಕು ಎಂದು ಬರೆದಿದ್ದಾರೆ. ಮುಂದೆ ಬನ್ನಿರಿ. ಶಿರಡಿ ಸಾಯಿಬಾಬಾ ಎನ್ನುವ ಮಹಾನ್ ಚೈತನ್ಯಕ್ಕೆ ಶಿರಡಿಸಾಯಿ ಎಂದು ಬರೆದು ಅಪಮಾನ ಮಾಡಬಾರದು. ಇರಲಿ ಬಿಡಿ, ಇವರು ಒಂದು ಒಳ್ಳೆಯ ಕೆಲಸವನ್ನೂ ಮಾಡಿದ್ದಾರೆ. ಕನ್ನಡಿಗರೆಲ್ಲರ ನೆಚ್ಚಿನ ನಟ, ಪದ್ಮಭೂಷಣ ಡಾ˘. ರಾಜಕುಮಾರರಿಗೆವಿಶ್ವವಾಣಿಪತ್ರಿಕೆಯುಜ್ಞಾನಪೀಠ ಪ್ರಶಸ್ತಿಯನ್ನು ನೀಡಿದೆ! ರಾಜಕುಮಾರರ ಯಾವ ಸಾಹಿತ್ಯಗ್ರಂಥಕ್ಕೆ ಈ ಪ್ರಶಸ್ತಿಯನ್ನು ಕೊಡಲಾಯಿತು ಎನ್ನುವುದನ್ನು ವಿಶ್ವವಾಣಿಯ ಸಂಪಾದಕರು ನಮ್ಮಂತಹ ಅಜ್ಞಾನಿಗಳಿಗೆ ತಿಳಿಸಿದರೆ, ಕನ್ನಡಿಗರ ಸಂತೋಷಕ್ಕೆ ಮೇರೆ ಇರದು! ಇನ್ನು ಸಚಿನ ತೆಂಡೂಲಕರ ಇವರನ್ನು ತೆಂಡುಲ್ಕರ್ ಎಂದು ಬರೆದರೆ, ಇವರಿಗೆ ತೆಂಡೂಲ ಹಾಗು ತೆಂಡುಲ ಎನ್ನುವ ಪದಗಳ ನಡುವಿನ ವ್ಯತ್ಯಾಸ ತಿಳಿದಿಲ್ಲವೆನ್ನುವುದು ಜಗಜ್ಜಾಹೀರಾಗುತ್ತದೆ. ಮತ್ತೆ ಅಮಿತಾ ಬಚ್ಚನ ಎನ್ನುವ ವ್ಯಕ್ತಿಯ ಹೆಸರು ಇಲ್ಲಿದೆ. ಇವರು ಯಾರೆಂದು ನಮಗೆ ತಿಳಿದಿಲ್ಲ. ಇವರು ಅಮಿತಾಭ ಬಚ್ಚನರ ಸಂಬಂಧಿ ಇರಬಹುದೆ?

() ಬನಹಟ್ಟಿಯ ಹಿರೇಮಠದಲ್ಲಿ ಡಾ.ಡಿ..ಬಾಗಲಕೋಟ ಅವರ ಕತ್ತಲೆಯೊಳಗಿನ ಮಹಾಬೆಳಗು ಶಿವಯೋಗಮೀಮಾಂಸೆ ಪುಸ್ತಕ ಬಿಡುಗಡೆ ಮಾಡಿದರು.
ಬಿಡುಗಡೆ ಮಾಡಿದ್ದು ಸಂತೋಷ. ಆದರೆ ಬಿಡುಗಡೆ ಮಾಡಿದವರು ಯಾರು ಎನ್ನುವುದನ್ನು ಇಲ್ಲಿ ರಹಸ್ಯವಾಗಿ ಇಡಲಾಗಿದೆ. ಈ ವಿಷಯವನ್ನು ಪತ್ತೇದಾರ ಪುರುಷೋತ್ತಮನಿಗೋ, ಶೆರ್ಲಾಕ್ ಹೋಮ್ಸನಿಗೋ ಬಿಡೋಣ.

() ಈ ಕೆಳಗಿನ ಸಮಾಚಾರದ ಬರವಣಿಗೆಗಂತೂ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲೇಬೇಕು:
ಈ ಕುರಿತಂತೆ ಶಾಸಕ ಮುರಗೇಶ ನಿರಾಣಿ ಸಹೋದರ ಸಂಗಂಮೇಶ ನಿರಾಣಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ವಿರುದ್ಧ ವಾಚಾಳಿ ಆರಂಭಿಸಿ ಯತ್ನಾಳರ ರಾಜಕೀಯ ಅಜ್ಞಾತ ವಾಸದ ಸಂದಿಗ್ಧ ಸ್ಥಿತಿಯನ್ನು ಇಚೆ ಹಾಕಿದ್ದು ಗೊಂದಲಕ್ಕೆ ತುಪ್ಪ ಸುರಿದಂತಾಗಿದೆ.
ಇದೊಂದು ರಾಜಕೀಯ ಸವಾಲು-ಜವಾಬಿಗೆ ಇಂಬು ನೀಡಿದ್ದು, ವಿವಾದ ಯಾವ ರೀತಿ ತಿರುವು ಪಡೆಯುತ್ತೆ, ಯಾರ ಸುತ್ತ ಗಿರಕಿ ಹಾಕುತ್ತೆ ಯಾರ ಭವಿಷ್ಯಕ್ಕೆ ಕಂಟಕವಾಗುತ್ತೆ ಎಂಬುದನ್ನು ಕಾಲವೆ ಉತ್ತರಿಸಲಿದೆ.
ಬಿಜೆಪಿ ವಲಯದಲ್ಲಿ ಸಾಕಷ್ಟು ಅಂತೆ-ಕಂತೆಗಳು ಆಚೆ-ಇಚೆ ಬರುತ್ತಿದ್ದು ವರಿಷ್ಠರು ಪ್ರಕರಣಕ್ಕೆ ಏನೂ ಮುಲಾಮು ಹಾಕುವರು ಎಂಬುದನ್ನು ಕಾಯಬೇಕಿದೆ. ಯತ್ನಾಳ-ನಿರಾಣಿ ರಾಜಕೀಯ ಜಿದ್ದಿಗೆ ಬೀಳುತ್ತಾ…? ಈ ಕಿಚ್ಚಿನಲ್ಲಿ ಜಿಲ್ಲೆಯ ಮತ್ಯಾರಿಗೆ ಮಂತ್ರಿಗಿರಿ ಭಾಗ್ಯ ಲಭಿಸಲಿದೆ ಎಂದು ಜನರು ಕಾಯುತ್ತಿದ್ದಾರೆ.”

ಈ ವರದಿಗಾರರು ಅಲ್ಪವಿರಾಮ, ಅರ್ಧವಿರಾಮ ಮೊದಲಾದ ಚಿಹ್ನೆಗಳ ಬಗೆಗೆ ಬೇಫಿಕೀರ್ ಆಗಿದ್ದಾರೆ. ಕಾಗುಣಿತಗಳಿಗೂ ಅದೇ ದುರ್ಗತಿ. ಕೆಲವು ನವೀನ ಪ್ರತಿಮೆಗಳಿವೆ. ಉದಾಹರಣೆಗೆ, ‘ಗೊಂದಲಕ್ಕೆ ತುಪ್ಪ ಸುರಿದಂತಾಗಿದೆ.’ ನಾನು ಬೆಂಕಿಗೆ ತುಪ್ಪ ಸುರಿಯುತ್ತಾರೆ ಎಂದು ತಿಳಿದಿದ್ದೆ; ಗೊಂದಲಕ್ಕೆ ತುಪ್ಪ ಸುರಿಯುವುದು ನನಗೆ ಗೊತ್ತಿರಲಿಲ್ಲ!

ಸುಳ್ಳು ಯಾಕೆ ಬರೆಯುತ್ತೀರಿ?
() ವಿಶ್ವವಾಣಿ ಪತ್ರಿಕೆಯಲ್ಲಿ ಸುಳ್ಳು ಮಾಹಿತಿಗಳು ಯಾಕೆ ಪ್ರಕಟವಾಗುತ್ತಿವೆ ಎನ್ನುವುದು ಒಡೆಯಲಾರದ ಒಗಟಾಗಿದೆ! ಈ ಸಮಾಚಾರವನ್ನು ಓದಿರಿ:
ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತ-ಪಾಕ್ ಯುದ್ಧದ ವೇಳೆ ಭಾರತದಲ್ಲಿ ತಲೆದೋರಿದ್ದ ಆಹಾರ ಕ್ಷಾಮವನ್ನು ನಿವಾರಿಸಲು, ಪ್ರತಿಯೊಬ್ಬರೂ ಶನಿವಾರ ಒಂದು ಹೊತ್ತು ಊಟ ಬಿಡಬೇಕು ಎಂದು ಕರೆ ನೀಡಿದ್ದರು.

ಶಾಸ್ತ್ರಿಯವರು ಸೋಮವಾರದಂದು ಒಪ್ಪತ್ತು ಊಟವನ್ನು ಬಿಡಲು ಹೇಳಿದ್ದರೇ ಹೊರತು ಶನಿವಾರದಂದು ಅಲ್ಲ. ಬಹುಶಃ ಈ ವರದಿಯನ್ನು ತಯಾರಿಸಿದವರು ಮಾರುತಿಯ ಭಕ್ತರೇನೊ? ಆದುದರಿಂದ ಶನಿವಾರ ಎಂದು ಹೇಳಿದ್ದಾರೇನೊ?!
ಎರಡನೆಯದಾಗಿ ಮೇಲಿನ ವರದಿಯನ್ನು ನಾನು ಹೂಬಹೂ ನಕಲು ಮಾಡಿದ್ದೇನೆ. ಇದರಲ್ಲಿ ಭಾಷಾದೋಷಗಳು ಏನಾದರೂ ಇದ್ದರೆ, ಅವು ವಿಶ್ವವಾಣಿಯವು.

() ಈಗ ವಿಶ್ವೇಶ್ವರ ಭಟ್ಟರ ವಿಶ್ಲೇಷಣೆಯೊಂದನ್ನು ನೋಡಿರಿ:
"ಭಾಷೆ ವಿಷಯದಲ್ಲಿ ಫ್ರೆಂಚ ಮಂದಿ ಮಹಾ ಮಡಿವಂತರು. ಇಂಗ್ಲಿಷರಂತೆ ಉದಾರಿಗಳಲ್ಲ. ಹೀಗಾಗಿ ಫ್ರೆಂಚ್ ಭಾಷೆ ದೇಶವನ್ನು ಬಿಟ್ಟು ಹೊರಗೆ ಹೋಗಿಲ್ಲ. ಆದರೆ ಇಂಗ್ಲಿಷ್ ಹಾಗಲ್ಲ. ಇಡೀ ಜಗತ್ತನ್ನು ಸುತ್ತು ಹಾಕುತ್ತಿದೆ."

ಇಂಗ್ಲಿಶರು ಹಾಗು ಫ್ರೆಂಚರು ಜಗತ್ತಿನ ಅನೇಕ ದೇಶಗಳನ್ನು ಆಕ್ರಮಿಸಿದಾಗ, ಅವರ ಭಾಷೆಗಳು ಅಲ್ಲೆಲ್ಲ    ಪ್ರಚಲಿತವಾದವು. ಫ್ರೆಂಚ್ ಭಾಷೆಯು ದಕ್ಷಿಣಪೂರ್ವ ಏಶಿಯಾದಲ್ಲಿ ಪ್ರಚಲಿತವಾದರೆ, ಇಂಗ್ಲೀಶು ಭಾರತ ಹಾಗು ಆಫ್ರಿಕಾದ ಕೆಲ ಭಾಗಗಳಲ್ಲಿ ಪ್ರಚಲಿತವಾಯಿತು. ಈ ಭಾಷೆಗಳ ಪ್ರಸರಣಕ್ಕೆ  ಪ್ರಭುತ್ವ ಕಾರಣವೇ ಹೊರತು ಮಡಿವಂತಿಕೆ ಅಲ್ಲ.

ಪ್ರಭುತ್ವದ ಭಾಷೆಯೇ ಪ್ರಜೆಗಳ ಭಾಷೆಯಾಗುವುದು ಒಂದು ಕಹಿ ಸತ್ಯ. ಉತ್ತರ ಕರ್ನಾಟಕದ ಪ್ರಜೆಗಳು ಒಂದು ಕಾಲಕ್ಕೆ ಮರಾಠಿಯನ್ನು ಸ್ವೀಕರಿಸಿದ್ದೂ ಸಹ ಇದೇ ಕಾರಣದಿಂದ . ಆದುದರಿಂದ ಫ್ರೆಂಚ್ ಮಡಿವಂತ ಭಾಷೆ; ಇಂಗ್ಲೀಶ್ ಹಾಗಲ್ಲ ಎನ್ನುವುದು ಒಂದು ವಿಚಿತ್ರ ತರ್ಕವಷ್ಟೆ!

ಇದೆಲ್ಲವನ್ನು ನೋಡಿದಾಗ ಒಂದೆರಡು ಮಾತುಗಳು ಅರ್ಥಗಳಾಗುವುವು. ವಿಶ್ವವಾಣಿಯವರಿಗೆ ಸರಿಯಾದ ಸಮಾಚಾರವನ್ನು ಶುದ್ಧ ಭಾಷೆಯಲ್ಲಿ ಕೊಡಬೇಕೆನ್ನುವ ದರ್ದು ಇಲ್ಲ. ಓದುಗರಿಂದ ಬರುವ ದುಡ್ಡಿಗಿಂತ ಹೆಚ್ಚು ಹಣವು ಜಾಹೀರಾತುಗಳಿಂದ ಬರುವಾಗ, ಯಾರಿಗೆ ಬೇಕು ಇದೆಲ್ಲ ತಲೆನೋವು!

Tuesday, September 18, 2018

ನನಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಕು




೧೯೫೬ನೆಯ ಇಸವಿಯಲ್ಲಿ ಕರ್ನಾಟಕ ಏಕೀಕರಣವಾದಾಗ, ಉತ್ತರ ಕರ್ನಾಟಕದ ಕನ್ನಡಿಗರು ಬಹಳ ಸಂಭ್ರಮಿಸಿದರು. ಆದರೆ ಇದೀಗ ಯಾಕಾದರೂ ಏಕೀಕರಣವಾಯಿತೊ ಎಂದು ದುಃಖಿಸುತ್ತಿದ್ದಾರೆ. ಇದಕ್ಕೆ ಅನೇಕ ಆರ್ಥಿಕ ಹಾಗು ರಾಜಕೀಯ ಕಾರಣಗಳು ಇದ್ದಿರಬಹುದು. ಆದರೆ ಉತ್ತರ ಕರ್ನಾಟಕದ ಕನ್ನಡಿಗರು ತಮ್ಮ ಕನ್ನಡ ಭಾಷೆ ಕಳೆದು ಹೋದದ್ದಕ್ಕಾಗಿ, ವಿರೂಪಗೊಂಡಿದ್ದಕ್ಕಾಗಿ ಹಳಹಳಿಸುತ್ತಿದ್ದಾರೆ ಎನ್ನುವುದೂ ಒಂದು ಮುಖ್ಯ ಕಾರಣವಾಗಿದೆ.

ಒಂದು ಕಾಲದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಉತ್ತರ ಕರ್ನಾಟಕದ ಸಾಹಿತಿಗಳು ಹಾಗು ರಾಜಕೀಯ ಮುಖಂಡರು ಹೋರಾಟ ನಡೆಸಿದರು. ಧಾರವಾಡದ ರಾ..ದೇಶಪಾಂಡೆಯವರುಸಿರಿಗನ್ನಡಂ ಗೆಲ್ಗೆಎನ್ನುವ ಘೋಷಣೆಯನ್ನು ಕೊಟ್ಟರುಹರಿದು ಹಂಚಿ ಹೋದ ಕನ್ನಡ ನಾಡಿನಲ್ಲಿ ಒಂದು ಭಾಗದ ಜನರ ಮಾತು ಮತ್ತೊಂದು ಭಾಗದವರಿಗೆ ಅರ್ಥವಾಗುವುದಿಲ್ಲವಲ್ಲ ಎಂದು ಕನ್ನಡಿಗರು ಅಚ್ಚರಿಪಟ್ಟಿಕೊಳ್ಳುತ್ತಿದ್ದರು. ಶ್ರೀರಂಗರು ಈ ವಿಪರ್ಯಾಸದ ಬಗೆಗೆ ಒಂದು ಪ್ರಹಸನವನ್ನೇ ಬರೆದರು!  

() ಸರಿ, ಕರ್ನಾಟಕ ಏಕೀಕರಣವಂತೂ ಆಯಿತು. ಇದೀಗ ಸಿರಿಗನ್ನಡದ ಬದಲಾಗಿ ಬರಗನ್ನಡವು ಕರ್ನಾಟಕದಲ್ಲಿ ಹರಡಿದೆ. ಏಕರೂಪ ಕನ್ನಡದ ಬದಲಾಗಿಏಕ ವಿರೂಪದಕನ್ನಡ ಎಲ್ಲೆಡೆಗೂ ವ್ಯಾಪಿಸಿದೆ. ಪಾಠಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಹಾಗು ವರ್ತಮಾನ ಪತ್ರಿಕೆಗಳಲ್ಲಿಏಕರೂಪ ಕನ್ನಡಎನ್ನುವ ನೆವದಲ್ಲಿ ವಿಜೃಂಭಿಸುತ್ತಿರುವ ಕನ್ನಡವು ಸಿರಿಗನ್ನಡವಲ್ಲ. ಅಥವಾ ಸಮಗ್ರ ಕರ್ನಾಟಕದ ಎಲ್ಲ ಪ್ರದೇಶಗಳ ಸಾರಸತ್ವವಾದ ಕನ್ನಡವೂ ಅಲ್ಲ. ನಿರ್ದಾಕ್ಷಿಣ್ಯದಿಂದ ಹೇಳಬೇಕೆಂದರೆ ಇದು ಮೈಸೂರು ಕನ್ನಡ. ತನ್ನೆಲ್ಲ ದೋಷಗಳ ಸಹಿತವಾಗಿ ಇತರ ಕರ್ನಾಟಕದ ಮೇಲೆ ಹೇರಲಾದ ಮೈಸೂರು ಕನ್ನಡ. ಆದರೆ ಕರ್ನಾಟಕವನ್ನು ಒಡೆಯುವದರಿಂದ ವಿರೂಪಕನ್ನಡವು ಸುರೂಪವಾಗುವುದೆ?  

ಹೌದು, ಏಕೆಂದರೆ ಏಕೀಕರಣದ ಸಮಯದಲ್ಲಿ ಇತರ ಕನ್ನಡಿಗರು ಮೈಸೂರು ಕನ್ನಡದ ದೋಷಗಳನ್ನು ಅವರಿಗೆ ತೋರಿಸಿದರೂ ಸಹ, ಮೈಸೂರಿಗರು ಹಠ ಸಾಧಿಸಿದರು. ಸ್ವಪ್ರಭುತ್ವದಲ್ಲಿದ್ದ ಮೈಸೂರಿಗರಿಗೆ ಪರಪ್ರಭುತ್ವದಲ್ಲಿದ್ದ ಇತರ ಕನ್ನಡಿಗರು ತಲೆ ಬಗ್ಗಿಸಬೇಕಾಯಿತು.

ಮೈಸೂರು ಕನ್ನಡವು ಸೊಗಸಾದ ಹಾಗು ಸೌಮ್ಯವಾದ ಕನ್ನಡ. ಇದು ನನಗೆ ತುಂಬ ಇಷ್ಟವಾದ ಕನ್ನಡ. ಆದರೆ ಇತರ ಕರ್ನಾಟಕದ ಮೇಲೆ ಹೇರಲಾದ ಈ ಕನ್ನಡದಲ್ಲಿ ಕೆಲವು ದೋಷಗಳಿವೆ. ಅನೇಕ ವರ್ಷಗಳಿಂದ ಈ ದೋಷಗಳೊಡನೆ ಬಾಳುತ್ತಿರುವ ಮೈಸೂರಿಗರು ಇವು ಸರಿಯಾದ ರೂಪಗಳು ಎನ್ನುವ ಭ್ರಮೆಯಲ್ಲಿದ್ದಾರೆ ಹಾಗು ಈ ದೋಷಗಳನ್ನು ಬಿಡಲು ಸಿದ್ಧರಿಲ್ಲಈ ಹೇಳಿಕೆಗೆ ಏನು ಸಮರ್ಥನೆ ಇದೆ ಎಂದು ಕೇಳುವಿರಾ? ಅದು  ಹೀಗಿದೆ: ಮೈಸೂರಿನವರ ಬರಹ ಹಾಗು ಉಚ್ಚಾರಗಳು ವ್ಯಾಕರಣವಿರೋಧಿಯಾಗಿದ್ದು ಇವನ್ನೇ ಸಮಗ್ರ ಕರ್ನಾಟಕದ ಮೇಲೆ ಹೇರಲಾಗಿದೆ. ಹುಬ್ಬೇರಿಸಬೇಡಿ, ಇದನ್ನು ವಿವರವಾಗಿ ಹೇಳುತ್ತೇನೆ:  

ಕನ್ನಡದಲ್ಲಿ, ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುವ ಅಕ್ಷರಮಾಲೆಯಲ್ಲಿ ೧೪ ಸ್ವರಗಳು ಹಾಗು ಅಂ ಮತ್ತು ಅಃ ಎನ್ನುವ ಅನುಸ್ವಾರ ಹಾಗು ವಿಸರ್ಗಳಿವೆ ಎನ್ನುವುದನ್ನು ನಾವೆಲ್ಲರೂ ಎಷ್ಟೋ ವರ್ಷಗಳಿಂದ ಕಲಿತಿದ್ದೇವೆ. ಈ ಅಕ್ಷರಮಾಲೆಯಲ್ಲಿವನ್ನು ಉತ್ತರ ಕರ್ನಾಟಕದವರು ಹೇಗೆ ಉಚ್ಚರಿಸುತ್ತಾರೆ? ‘ಅರಸಎನ್ನುವ ಪದದಲ್ಲಿಯದ ಉಚ್ಚಾರದಂತೆ ಅಲ್ಲವೆ? ಹಳೆಯ ಮೈಸೂರಿಗರ ಮೇರೆಗೆಇದುಎನ್ನುವ ಸ್ವರದ ಹೃಸ್ವರೂಪವಂತೆ. ಆದುದರಿಂದ ಈ ಸ್ವರವನ್ನುಸ್ವರದ ಹೃಸ್ವದಂತೆ ಉಚ್ಚರಿಸಬೇಕಂತೆ! (--ಇದು ನನಗೆ ತಿಳಿಯಲೇ ಇಲ್ಲ--). ಅವರು ನೀಡುವ ಸಮರ್ಥನೆ ಏನೆಂದರೆ ಎಲ್ಲ ಸ್ವರಗಳಿಗೆ ಒಂದು ಹೃಸ್ವರೂಪ ಹಾಗು ಒಂದು ದೀರ್ಘರೂಪ ಇವೆ. ಉದಾಹರಣೆಗೆ ಇ ಮತ್ತು ಈ; ಉ ಮತ್ತು ಊ. ಆದುದರಿಂದ ಅ ಇದು ಆ ಎನ್ನುವ ಸ್ವರದ ಹೃಸ್ವರೂಪ. ಹೀಗಾಗಿಎನ್ನುವದನ್ನು ಎಂದಂತೆಯೇ ಆದರೆ ಹೃಸ್ವವಾಗಿ ಉಚ್ಚರಿಸಬೇಕು. (--ಇದು ನನಗೆ ಸಾಧ್ಯವಾಗಲೇ ಇಲ್ಲ--). ಈ ತರ್ಕಕ್ಕೆ ಜೋತು ಬಿದ್ದು ಅವರು ಅಕ್ಷರಮಾಲೆಯ ಸ್ವರಗಳ ಅಭ್ಯಾಸ ಮಾಡುವಾಗ, ‘ಸ್ವರವನ್ನು (=ಅರಸ ಪದದಲ್ಲಿಯ ರೀತಿಯಲ್ಲಿ) ಉಚ್ಚರಿಸದೇ,  ‘, , , …’ ಎಂದೇ ಹೇಳುತ್ತಾರೆ. ಹಾಗಿದ್ದರೆ, ‘ಅರಸಪದದಲ್ಲಿರುವಸ್ವರವನ್ನು ಹೇಗೆ ಉಚ್ಚರಿಸುತ್ತೀರಿ; ಅದುಸ್ವರದ ಹೃಸ್ವರೂಪ ಅಲ್ಲವಲ್ಲಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ! ಹಾಗಿದ್ದರೆ ಈ (ಅರಸ ಪದದಲ್ಲಿ ಇರುವಂತಹ ಅ ಸ್ವರಕ್ಕೆ) ಬೇರೊಂದು ಪ್ರತ್ಯೇಕ ಚಿಹ್ನೆಯನ್ನು ನಾವು ಹೊಸದಾಗಿಯಾದರೂ ರೂಪಿಸಬೇಕಲ್ಲವೆ

ಆ ಚಿಹ್ನೆಯನ್ನು a ಎಂದಿಟ್ಟುಕೊಳ್ಳಿರಿ. ಆವಾಗ ಕನ್ನಡ ವರ್ಣಮಾಲೆಯು, ..’ ಆಗುವ ಬದಲು  ‘a, , …’ ಎಂದಾಗುವುದು. ಹಾಗು ಅರಸ , ಅಡವಿ ಮೊದಲಾದ ಪದಗಳನ್ನು aರಸ, aಡವಿ ಎಂದು ಬರೆಯಬೇಕಾದೀತು. ಈ ಚಿಹ್ನೆಗಳ ವಿವರಣೆ ಹೀಗಿದೆ:
a = ‘ರಸದಲ್ಲಿಯ ಅ
= ಹೃಸ್ವ ಆ 
= ದೀರ್ಘ ಆ
(ವಿನೋದವೆಂದರೆ ಮೈಸೂರಿಗರು ಅಕ್ಷರಮಾಲೆಎನ್ನುವಾಗವನ್ನು aತರಹವೇ ಉಚ್ಚರಿಸುತ್ತಾರೆ! ಅದನ್ನೇ, .. ’ ಎನ್ನುವಾಗ, ‘, ಎನ್ನುತ್ತಾರೆ.)

ಈ ಮಾತು ಇನ್ನಿಷ್ಟು ಸ್ಪಷ್ಟವಾಗಬೇಕಾದರೆ ನಾವು ವ್ಯಂಜನಗಳ ಉದಾಹರಣೆಯನ್ನು ನೋಡಬೇಕಾಗುತ್ತದೆ: ‘ಕನಕಎನ್ನುವ ಪದವನ್ನು ತೆಗೆದುಕೊಳ್ಳಿರಿ. ಹಳೆಮೈಸೂರಿನಲ್ಲಿ ಕನಕಾಎನ್ನುವ ಹುಡುಗಿಯ ಹೆಸರನ್ನುಕನಕಎಂದು ಬರೆಯುತ್ತಾರೆ. ಈ ಪದದಲ್ಲಿ ಮೊದಲನೆಯವನ್ನುಕಣ್ಣುಎನ್ನುವ ಪದದಲ್ಲಿಯದಂತೆ ಉಚ್ಚರಿಸುತ್ತಾರೆ. (ಇದು ಸರಿಯಾದದ್ದು.) ಆದರೆ ಎರಡನೆಯವನ್ನುಕಾಗೆಎನ್ನುವ ಪದದಲ್ಲಿಯಕಾದಂತೆ ಉಚ್ಚರಿಸುತ್ತಾರೆ. ಇದು ತಪ್ಪು. ಏಕೆಂದರೆ ಒಂದೇ ಅಕ್ಷರಕ್ಕೆ ಎರಡು ಭಿನ್ನ ಉಚ್ಚಾರಗಳು! ಇದೆಂಥ ಅಕ್ಷರಮಾಲೆ, ಇದೆಂಥ ವ್ಯಾಕರಣ! ಮೈಸೂರು ಪ್ರದೇಶದಲ್ಲಿಯ ಕಾರಾಂತ ಹೆಣ್ಣು ಹೆಸರುಗಳ ಬರವಣಿಗೆ ಕೊನೆಗೊಳ್ಳುವುದು ಹೃಸ್ವಸ್ವರದಲ್ಲಿ, ಆದರೆ ಉಚ್ಚರಿತವಾಗುವುದು ದೀರ್ಘದಲ್ಲಿ! ಉದಾಹರಣೆಗೆ: ಬರೆಯುವುದು ಸರಸ; ಉಚ್ಚರಿಸುವುದು ಸರಸಾ! ಇದು ತಪ್ಪಲ್ಲವೆ? ಅಲ್ಲವೆಂದರೆ, ‘ಸರಸ ಸಂಭಾಷಣೆ’ ಎನ್ನುವ ವಾಕ್ಯವನ್ನು ‘ಸರಸಾ ಸಂಭಾಷಣೆ’ ಎಂದು ಹೇಳುತ್ತೀರಾ?

ನಮ್ಮ ಕನಕದಾಸರ ಹೆಸರಿನಲ್ಲಿಯಕನಕಭಾಗವನ್ನಷ್ಟೇ ತೆಗೆದುಕೊಳ್ಳಿರಿ. ಮೈಸೂರಿಗರಿಗೆ ಇದುಕನಕಾಎನ್ನುವ ಹೆಣ್ಣಿನ ಹೆಸರು. ಇದೀಗ ಕನಕದಾಸರ ಲಿಂಗಪರಿವರ್ತನೆಯಾದಂತಾಯಿತು. ವರ್ತಮಾನದ ನೈಜಜೀವನದಲ್ಲಿಯೂ ಇದೇ ರೀತಿಯ ಘಟನೆಯಾಗಿದೆ. ‘ನೇಮಿಚಂದ್ರಎಂದರೆ ಯಾರು ಹೇಳಿ? ಥಟ್ಟನೆ ನಿಮಗೆ ಹಳೆಗನ್ನಡದ ನೇಮಿಚಂದ್ರನ ನೆನಪಾದೀತು. ಇದು ಪುರುಷನ ಹೆಸರಲ್ಲವೆ? ತಾಳಿ, ತಾಳಿ…. ವರ್ತಮಾನ ಕಾಲದಲ್ಲಿನೇಮಿಚಂದ್ರ’  ಎನ್ನುವ ಲೇಖಕಿ ಇದ್ದಾರೆ. ಇವರುನೇಮಿಚಂದ್ರಾಆಗಬೇಕಿತ್ತು. ಆದರೆ ಮೈಸೂರಿಗರ ಪದ್ಧತಿಯಂತೆನೇಮಿಚಂದ್ರಆಗಿದ್ದಾರೆ. ಹಾಗಿದ್ದರೆ ಪುರುಷ ನೇಮಿಚಂದ್ರನನ್ನುನೇಮಿಚಂದ್ರ್ಎಂದೂ, ಪುರುಷ ಕನಕನನ್ನುಕನಕ್ಎಂದೂ ಬರೆಯಬೇಕೆ!?                            
(ಲೇಖಕಿ ನೇಮಿಚಂದ್ರಾರ ಹೆಸರನ್ನು ಬಳಸಿಕೊಳ್ಳುವುದು ಅನಿವಾರ್ಯವಾಯಿತು; ಅವರ ಕ್ಷಮೆ ಕೋರುತ್ತೇನೆ.)

ಈ ಅಧ್ವಾನವು ವ್ಯಕ್ತಿಗಳ ಹೆಸರಿಗಷ್ಟೇ ಸೀಮಿತವಾಗಿಲ್ಲ. ಒಂದು ವಿಚಿತ್ರ ಘಟನೆಯನ್ನು ಹೇಳುತ್ತೇನೆ, ಕೇಳಿ. ಧಾರವಾಡದಿಂದ ನವಿಲುಗುಂದಕ್ಕೆ ಹೋಗುವ ದಾರಿಯಲ್ಲಿ ಬ್ಯಾಹಟ್ಟಿ ಎನ್ನುವ ಪುಟ್ಟ ಊರೊಂದಿದೆ. ಇಲ್ಲಿಯ ಬಸ್ ನಿಲ್ದಾಣದ ಪಕ್ಕದ ಸರಕಾರಿ ಕಟ್ಟಡವೊಂದರ ಮೇಲೆ ಫಲಕವೊಂದನ್ನು ನೇಣು ಹಾಕಲಾಗಿದೆ: ಶಿಶುಪಾಲನ ಕಚೇರಿ’. 

ಇದನ್ನು ಓದಿದ ನಾನು ಒಂದು ಕ್ಷಣ ದಿಙ್ಮೂಢನಾದೆ. ‘ಶಿಶುಪಾಲನಎನ್ನುವ ಪದದ ಅರ್ಥಶಿಶುಪಾಲ ಎನ್ನುವವನಎಂದಾಗುವದಲ್ಲವೆ? ಮಹಾಭಾರತದ ಶಿಶುಪಾಲನು ಇಲ್ಲೇಕೆ ತನ್ನ ಕಚೇರಿಯನ್ನು ತೆರೆದಿದ್ದಾನೆ? ಧೈರ್ಯ ಮಾಡಿ ಅಲ್ಲಿಯ ಓರ್ವ ಸಿಬ್ಬಂದಿಯನ್ನು ಕೇಳಿಯೇ ಬಿಟ್ಟೆ. ಅವರುಇದು ಶಿಶುಪಾಲನು  ತೆಗೆದ ಕಚೇರಿ ಅಲ್ಲ; ಕರ್ನಾಟಕ ಸರಕಾರದವರುಶಿಶುಪಾಲನಾ ಕಚೇರಿಯನ್ನು ಇಲ್ಲಿ ತೆಗೆದಿದ್ದಾರೆಎಂದು ಹೇಳಿದರು. ‘ಹಾಗಿದ್ದರೆ, ಶಿಶುಪಾಲನಾ ಎಂದು ಬರೆಯಿಸುವ ಬದಲಾಗಿ ಶಿಶುಪಾಲನ ಎಂದೇಕೆ ಬರೆಯಿಸಿದ್ದೀರಿ?’ ಎಂದು ಅವರಿಗೆ ಕೇಳಿದೆ. ‘ಇದು ಸರಕಾರ ಕಳುಹಿಸಿಕೊಟ್ಟ ಫಲಕ. ಅವರು ಮೈಸೂರಿನ ಪದ್ಧತಿಯಂತೆ ಬರೆಯಿಸಿದ್ದಾರೆಎಂದು ಅಲ್ಲಿಯ ಸಿಬ್ಬಂದಿ ವಿವರಿಸಿದರು

ಏಕೀಕರಣದಿಂದಾಂತಹ ಏಕರೂಪತೆ ಅಥವಾ ವಿರೂಪತೆ ಇದು. ಈ ವಿರೂಪತೆ ಸರಕಾರದ ಫಲಕಗಳಿಗೆ, ಸರಕಾರೀ ಕಡತಗಳಿಗೆ ಹಾಗು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿದೆ ಎಂದಲ್ಲ. ನಮ್ಮ ವರ್ತಮಾನ ಪತ್ರಿಕೆಗಳೂ ಸಹ ಈ ಏಕರೂಪತೆಯನ್ನು ಹೃತ್ಪೂರ್ವಕವಾಗಿ ಅಪ್ಪಿಕೊಂಡು ಕನ್ನಡವನ್ನು ಕೊಲ್ಲುತ್ತಿವೆ. ಇತ್ತೀಚೆಗೆ ನಮ್ಮ ವರ್ತಮಾನ ಪತ್ರಿಕೆಗಳು ಅನೇಕ ಸ್ಥಳಗಳಿಂದ ಪ್ರಕಟವಾದರೂ ಸಹ, ಭಾಷಾರೂಪ ಮಾತ್ರ ಒಂದೇ ಆಗಿದೆ….ಅದು ಮೈಸೂರು ಭಾಷಾವಿರೂಪ

ಒಂದು ಉದಾಹರಣೆಯನ್ನು ಕೊಡುತ್ತೇನೆ. ಭಾರತಕ್ಕೆ ಪದಕವನ್ನು ಗೆದ್ದು ಕೊಟ್ಟಂತಹಹಿಮಾ ದಾಸ’, ವಿಜಯ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯ ಪತ್ರಿಕೆಯ ವರದಿಯಲ್ಲಿಹಿಮದಾಸಆಗಿದ್ದಾಳೆ. ಹಿಮದಾಸ ಎಂದರೆ ಏನುಹಿಮದ ದಾಸ ಎಂದೆ? ಅದೇ ಪತ್ರಿಕೆಯಲ್ಲಿ ಪ್ರಕಟವಾದ  ಅನುಷ್ಕಾ ಶರ್ಮಾಳ ಸುದ್ದಿಯನ್ನು ಗಮನಿಸಿರಿ. ಸಸ್ಯಾಹಾರಿಯಾದ ಇವಳುಸಸ್ಯಹಾರಿಆಗಿದ್ದಾಳೆ. ಸಸ್ಯಾಹಾರಿ ಎಂದರೆಸಸ್ಯ+ ಆಹಾರಿ.’ ಅರ್ಥಾತ್ ಸಸ್ಯವನ್ನು ಆಹಾರವಾಗಿ ಸ್ವೀಕರಿಸುವವನು. ‘ಸಸ್ಯಹಾರಿಎಂದರೆ ಸಸ್ಯವನ್ನು ಹಾರದಂತೆ ಹಾಕಿಕೊಂಡಿರುವ ಪುರುಷ

ಇದು ಪತ್ರಕರ್ತರ ತಪ್ಪಲ್ಲ. ಇಂತಹ ತಪ್ಪು ಅಭ್ಯಾಸವು ಮೈಸೂರು ಪ್ರದೇಶದಲ್ಲಿ ದೀರ್ಘಕಾಲದಿಂದ ಬಳಕೆಯಲ್ಲಿ ಇರುವಂತೆ ಕಾಣುತ್ತದೆ. ಮುಮತಾಜ ಅಲಿ ಎನ್ನುವ ಸಜ್ಜನ ಮಂತ್ರಿಗಳೊಬ್ಬರು ಕರ್ನಾಟಕ ಸರಕಾರದಲ್ಲಿ ಇದ್ದದ್ದು ತಮಗೆ ಗೊತ್ತಿರಬಹುದು. ಅವರು ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಿಗೆ ಬರೆದ ಪತ್ರವೊಂದರಲ್ಲಿಶಿಲಾನ್ಯಾಸಎನ್ನುವ ಪದದ ಬದಲಾಗಿಶಿಲನ್ಯಾಸಎಂದು ಬರೆದಿದ್ದರು. ಅವರೋ ಅಥವಾ ಮತ್ತೊಬ್ಬರೋ, ‘ಶುಭಾಶಯಗಳುಎನ್ನುವುದನ್ನುಶುಭಶಯಗಳುಎಂದು ಬರೆದಿದ್ದರು. ಅಂದರೆ ಕೊನೆಯಲ್ಲಿರುವ ಅಕ್ಷರವನ್ನಷ್ಟೇ ಅಲ್ಲ, ಮಧ್ಯದಲ್ಲಿರುವ ಅಕ್ಷರವನ್ನೂ ಸಹ ಮೈಸೂರಿಗರು ಹೃಸ್ವವಾಗಿ ಬರೆದು ದೀರ್ಘವಾಗಿ ಉಚ್ಚರಿಸುತ್ತಾರೆ. ಈ ತರ್ಕದ ಪ್ರಕಾರಆಧುನಿಕ ನಾರಿಪದವನ್ನು ಅವರು ಆಧುನಿಕ ನರಿಎಂದು ಬರೆಯಬೇಕು!   

ಇಲ್ಲಿಯವರೆಗೆ  ಉತ್ತರ ಕರ್ನಾಟಕದವರು ಈ ತಪ್ಪುಗಳನ್ನು ಬರಹದಲ್ಲಿ ಮಾತ್ರ ನೋಡುತ್ತಿದ್ದರು. ದೂರದರ್ಶನ ಬಂದ ಮೇಲೆ ಇಂತಹ ತಪ್ಪುಗಳನ್ನು ಆಲಿಸುವ  ದೌರ್ಭಾಗ್ಯ ಸಹ ನಮಗೆ ಒದಗಿ ಬಂದಿದೆ. ಚಂದನ ದೂರದರ್ಶನದಲ್ಲಿ ಡಾ. ಸೋಮೇಶ್ವರರು ನಡೆಯಿಸಿ ಕೊಡುವಥಟ್ಟಂತ ಹೇಳಿಕಾರ್ಯಕ್ರಮದಲ್ಲಿಅಂಕಪದವನ್ನು ಅವರುಅಂಕಾಎಂದೇ ಉಚ್ಚರಿಸುತ್ತಾರೆ. ‘ಅಂಕಪದದಲ್ಲಿಯವನ್ನುಕರಡಿಯಲ್ಲಿಯದಂತೆ ಉಚ್ಚರಿಸಬೇಕೇ ಹೊರತುಕಾಳಿಯಲ್ಲಿಯಕಾದಂತೆ ಅಲ್ಲ. ಈ ಅಭ್ಯಾಸವನ್ನು ಮುಂದುವರೆಸಿದರೆ ಏನಾಗುತ್ತದೆ? ‘ಅಂಕದ ಪರದೆಯು ಜಾರಿದ ಮೇಲೆ..’ ಎನ್ನುವ ಸಿನಿಮಾದ ಹಾಡನ್ನು ನಮ್ಮ ಅನೇಕ ಸಹೃದಯ ಓದುಗರು ಕೇಳಿರಬಹುದು. ಇದನ್ನುಆಂಕಾದಾ ಪಾರಾದೆಯು ಜಾರಿದಾ ಮೇಲೆ……’ಎಂದು ಹಾಡಬೇಕಾದೀತು! (ಈ ರಸಪ್ರಶ್ನೆ ಕಾರ್ಯಕ್ರಮ ತುಂಬ ಸೊಗಸಾಗಿದೆ. ನನ್ನ ಆಕ್ಷೇಪವುಅಂಕಾಕ್ಕೆ ಮಾತ್ರ.)

ಕನ್ನಡ ಹಾಗು ಸಂಸ್ಕೃತ ಭಾಷೆಗಳು ಅನ್ಯೋನ್ಯ ಭಾಷೆಗಳು. ಮೈಸೂರು ಕನ್ನಡಿಗರು ಸಂಸ್ಕೃತ ಶ್ಲೋಕಗಳನ್ನು ಓದುವದನ್ನು ಕೇಳಿ ನನಗೆ ಸಂಕಟವಾಗುತ್ತದೆ. ಉದಾಹರಣೆಗೆ, ‘ಅಗಚ್ಛತ್ಎನ್ನುವ ಪದವನ್ನುಅಗಚ್ಛತಎಂದು ಉಚ್ಚರಿಸಿದಾಗ ಎಂತಹ ವಿಪರ್ಯಾಸವಾಗುತ್ತದೆ!

ಕನ್ನಡ ಭಾಷೆಗೆ ಕೆಲವು ಹೊಸ ಚಿಹ್ನೆಗಳ ಅಗತ್ಯವಿದೆ. ಉದಾಹರಣೆಗೆ  ಅರ್ಧಚಂದ್ರದ  ಉಪಯೋಗ. John ಪದವನ್ನು ಕನ್ನಡದಲ್ಲಿ ಬರೆಯುವ ವಿಧಾನ. ಈ ಪದವನ್ನು ಮೈಸೂರಿಗರುಜಾನ್ಎಂದು ಬರೆಯುತ್ತಾರೆ. ಮಂಗಳೂರಿಗರುಜೋನ್ಎಂದು ಬರೆಯುತ್ತಾರೆ.  ಜಾನ್ ಎಂದಾಗ ಉಚ್ಚಾರ ತಪ್ಪುತ್ತದೆ. ಜೋನ್ ಎನ್ನುವುದು ಹುಡುಗಿಯ ಹೆಸರು! ಈ ಪದವನ್ನು ಏಕೀಕರಣಕ್ಕಿಂತ ಮೊದಲು ಹೇಗೆ ಬರೆಯುತ್ತಿದ್ದರು? ಹುಬ್ಬಳ್ಳಿಯಿಂದ ಪ್ರಕಟವಾಗುವ ಪತ್ರಿಕೆಗಳು ಈ ಪದವನ್ನು ಜಾನ್ ಎಂದು ಬರೆಯುತ್ತಿದ್ದವು. ಆದರೆ ಉತ್ತರ ಕರ್ನಾಟಕದ ಅರ್ಧಚಂದ್ರ ಚಿಹ್ನೆಯನ್ನು ಮೈಸೂರಿಗರು ಬಳಸುವುದು ಸಾಧ್ಯವೆ? ಇದು ಅವರಿಗೆ ಅವಮಾನವಲ್ಲವೆ? ಆದುದರಿಂದ ಈ ಅರ್ಧಚಂದ್ರ ಚಿಹ್ನೆಗೆ ಅರ್ಧಚಂದ್ರ ಪ್ರಯೋಗವಾಯಿತು!

() ಮೈಸೂರು ಕನ್ನಡಿಗರಲ್ಲಿ ಒಂದು ವಿಚಿತ್ರವಾದ ಸಿದ್ಧಾಂತವಿದೆ. ಇದನ್ನು ಅವರುಜಾಯಮಾನ ಸಿದ್ಧಾಂತಎಂದು ಹೇಳುತ್ತಾರೆ. ಈ ಸಿದ್ಧಾಂತದ ಮೇರೆಗೆ ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣವಿಲ್ಲ. ಆದುದರಿಂದ ನಾವು ಮಹಾಪ್ರಾಣವಿರುವ ಪದಗಳನ್ನು ಅಲ್ಪಪ್ರಾಣವಾಗಿಯೇ ಉಚ್ಚರಿಸಬೇಕು. ಉದಾಹರಣೆಗೆ ನಮ್ಮ ರಾಷ್ಟ್ರಗೀತೆಯಲ್ಲಿರುವಭಾರತ ಭಾಗ್ಯ ವಿಧಾತಾಎನ್ನುವ ಸಾಲನ್ನು ಕನ್ನಡಿಗರುಬಾರತ ಬಾಗ್ಯ ವಿದಾತಾಎಂದೇ ಹಾಡಬೇಕು

(ಕನ್ನಡದ ಪ್ರಸಿದ್ಧ ಗಾಯಕರಾದ ಅಶ್ವತ್ಥರು ಒಮ್ಮೆ ಧಾರವಾಡಕ್ಕೆ ಬಂದಾಗ ಸಾರ್ವಜನಿಕ ಸಂಗೀತ ಶಿಬಿರವನ್ನು ಏರ್ಪಡಿಸಿದ್ದರು. ಅಶ್ವತ್ಥರುಬಾರತ ಬಾಗ್ಯ ವಿದಾತಾಎಂದು ಹಾಡಿದರೂ ಸಹ ಧಾರವಾಡದ ಜನರುಭಾರತ ಭಾಗ್ಯ ವಿಧಾತಾಎಂದೇ ಉಚ್ಚರಿಸುತ್ತಿದ್ದರು, ಅಪ್ರಯತ್ನವಾಗಿ. ಸಿಟ್ಟಿನಿಂದ ಅಶ್ವತ್ಥರು ಮತ್ತೆ ಮತ್ತೆ  ‘ಬಾರತ ಬಾಗ್ಯ ವಿದಾತಾಎಂದು ಪುನರುಚ್ಚರಿಸುತ್ತಿದ್ದರು. ಇಲ್ಲಿಯ ಜನ ಅಪ್ರಯತ್ನವಾಗಿ, ಮತ್ತೆ ಮತ್ತೆ ಭಾರತ ಭಾಗ್ಯ ವಿಧಾತಾಎಂದೇ ಹೇಳುತ್ತಿದ್ದರು. ಅಶ್ವತ್ಥರುಈ ಮುಠ್ಠಾಳರನ್ನು ತಿದ್ದುವುದು ಅಸಾಧ್ಯಎಂದು ತಿಳಿದರೇನೊ? ತಮ್ಮ ಪ್ರಯತ್ನದ ಕೈ ಬಿಟ್ಟರು.)

ಜಾಯಮಾನದ ಪ್ರಶ್ನೆಯನ್ನು ಎತ್ತಿದಾಗ, ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಹಳೆಯದು ಎಂದು (ತಪ್ಪಾಗಿ) ಗ್ರಹಿಸಲಾದ ತಮಿಳು ಭಾಷೆಯನ್ನೇ ಪ್ರಮಾಣವೆಂದು ಹಿಡಿಯಲಾಗುತ್ತಿದೆ. ತಮಿಳಿನಲ್ಲಿ ಮಹಾಪ್ರಾಣವಿಲ್ಲ; ಆದುದರಿಂದ ಕನ್ನಡದಲ್ಲಿಯೂ ಅದು ಇರತಕ್ಕದ್ದಲ್ಲ. ತಮಿಳಿನಲ್ಲಿಕೃಪಾಎನ್ನುವ ಪದಕ್ಕೆಕಿರುಬಾಎನ್ನುತ್ತಾರೆ. ನಾವೂ ಹಾಗೆಯೇ ಅನ್ನೋಣವೆ, ಬರೆಯೋಣವೆ?  ‘ಗಾಂಧಿಗೆಕಾಂದಿಎನ್ನುತ್ತಾರೆ. ನಾವೂ ಹಾಗೆಯೆ ಅನ್ನೋಣವೆ, ಬರೆಯೋಣವೆ? ಕನ್ನಡದಲ್ಲಿ ಅಂಕೆಗಳಿಗೆ ಸ್ವಂತ ಚಿಹ್ನೆಗಳು ಇರುವಂತೆ  ತಮಿಳಿನಲ್ಲಿ ಇಲ್ಲ. ಆದುದರಿಂದ ಅವರು ರೋಮನ್ ಅಂಕೆಗಳನ್ನೇ ಬಳಸುತ್ತಾರೆ. ಮೈಸೂರು ಸಂಸ್ಥಾನದಲ್ಲಿ ತಮಿಳು ಅಧಿಕಾರಿಗಳ ಪ್ರಾಬಲ್ಯವಿದ್ದಾಗ, ಇಲ್ಲಿಯೂ ಸಹ ರೋಮನ್ ಅಂಕೆಗಳ ಬಳಕೆ ಪ್ರಾರಂಭವಾಯಿತು. ಇದೂ ಈಗಲೂ ಇರುವುದೇಕೆ  ಎನ್ನುವುದೆ ನನ್ನ ಅಳಲು.

ಓದುಗರೆ, ಭಾಷೆಯು ನಿಂತ ನೀರಲ್ಲ, ನಿಂತ ನೀರಾದರೆ ಅದು ಬೆಳೆಯಲಾರದು. ಸಾವಿರಾರು ವರ್ಷಗಳ ಹಿಂದೆ, ಕನ್ನಡದಲ್ಲಿ ಇಷ್ಟೆಲ್ಲ ಪದಗಳು ಹಾಗು ಉಚ್ಚಾರಗಳು ಇರಲೇ ಇಲ್ಲ. ಎಲ್ಲಾ ದ್ರಾವಿಡ ಭಾಷೆಗಳು ಇತರ ಅನೇಕ ಭಾಷೆಗಳಿಂದ ಆಮದಾದ ಉಚ್ಚಾರಗಳನ್ನು ಹಾಗು ಪದಗಳನ್ನು ಸ್ವೀಕರಿಸಿಯೇ ಬೆಳೆದಿವೆಉದಾಹರಣೆಗೆ ಲಿಂಗವೆನ್ನುವುದು ಆರ್ಯಭಾಷೆಯ ಪದವೂ ಅಲ್ಲ, ದ್ರಾವಿಡ ಭಾಷೆಯ ಪದವೂ ಅಲ್ಲ. ಇದು ಕೋಲ (Austro-Asiatic) ಜನಾಂಗದ ಭಾಷಾವರ್ಗಕ್ಕೆ ಸೇರಿದ ಪದವೆಂದು ಪ್ರಿಲಸ್ಕಿಯವರು ಪ್ರತಿಪಾದಿಸುತ್ತಾರೆ. (Bagachi P.C.: Pre-Aryan and Pre-Dravidian in India, p8).) ಇಲ್ಲಿಗೆ ಕನ್ನಡ ಹಾಗು ಇತರ ಭಾರತೀಯ ಭಾಷೆಗಳು ಎಲ್ಲೆಲ್ಲಿಂದ ಪದಗಳನ್ನು ಆಮದು ಮಾಡಿಕೊಂಡಿವೆ ಎಂದು ಅಚ್ಚರಿಯಾಗಲಿಕ್ಕಿಲ್ಲವೆ? ಅಷ್ಟೇ ಏಕೆ, ಕನ್ನಡ ಲಿಪಿಯು ಸಹ ಉತ್ತರಮೂಲದ ಬ್ರಾಹ್ಮೀ ಲಿಪಿಯ ಒಂದು ರೂಪವಷ್ಟೇ. ಇದನ್ನು ನಾವು ಬಿಸಾಕಿ ಬಿಟ್ಟು ಲಿಪಿಹೀನ ವಿಕಲಾಂಗರಾಗಬೇಕೆ?

ಒಂದು ಕಾಲಕ್ಕೆ ದ್ರಾವಿಡರು ಲಂಗೋಟಿಯನ್ನಷ್ಟೇ ಹಾಕಿಕೊಂಡು ತಿರುಗುತ್ತಿದ್ದರು ಎನ್ನುವ ಕಾರಣಕ್ಕಾಗಿ, ‘ಲಂಗೋಟಿಯೇ ಕನ್ನಡಿಗರ ಜಾಯಮಾನಎನ್ನಲಾದೀತೆ? ‘ಲಂಗೋಟಿ ಬಲು ದೊಡ್ಡದಣ್ಣಎಂದು ದಾಸರಂತೆ ಹಾಡುತ್ತ, ಅಮೇರಿಕಾದಲ್ಲಿ ನಡೆಯುವಅಕ್ಕಸಮ್ಮೇಲನಕ್ಕೆ ಕೇವಲ ಲಂಗೋಟಿಯನ್ನಷ್ಟೇ ಧರಿಸಿ ಹೋಗುತ್ತೀರಾ? ಹಾಗೆ ಹೋದರೆ ಕರ್ನಾಟಕಕ್ಕೆ ಇದ್ದಿರಬಹುದಾದ ಅಷ್ಟಿಷ್ಟು ಮಾನವೂ ಸಹ ಹಾರಿ ಹೋಗಲಿಕ್ಕಿಲ್ಲವೆ

ಜಾಯಮಾನಕ್ಕಿಂತ ಕಾಲಮಾನ ದೊಡ್ಡದು ಎನ್ನುವುದನ್ನು ಕನ್ನಡಿಗರು ಅರಿತುಕೊಳ್ಳಬೇಕು. ಅದಲ್ಲದೆ, ಮಹಾಪ್ರಾಣವು ಉತ್ತರ ಕರ್ನಾಟಕದ ಕನ್ನಡಿಗರಲ್ಲಿ (ಸರಿಯಾದ ಪದಗಳಲ್ಲಿ) ಈಗಾಗಲೇ ಬಳಕೆಯಲ್ಲಿದೆ. ಹಾಗಿದ್ದಾಗ ಅದನ್ನು ಸ್ವೀಕರಿಸಲು ಮೈಸೂರಿಗರಿಗೆ ಏನು ತೊಂದರೆ? ನಾನು ಊಹಿಸಬಲ್ಲೆ: ಇದು ಮೈಸೂರಿಗರ ದೀರ್ಘಕಾಲದ ಅಭ್ಯಾಸ ಬಲ. (ತಮಿಳಿನಿಂದ ಬಂದಂತಹ ಅಭ್ಯಾಸ.) ನನ್ನ ಮಾತಿಗೆ ಎದುರುವಾದಿಗಳು ಯಾವ ತಿರುಗೇಟು ಕೊಡಬಲ್ಲರು ಎನ್ನುವುದನ್ನೂ ನಾನು ಊಹಿಸಬಲ್ಲೆ. ಉತ್ತರ ಕರ್ನಾಟಕದಲ್ಲಿರುವ ಮಹಾಪ್ರಾಣವು ಮರಾಠಿಯ ಪ್ರಭಾವ ಅಲ್ಲವೇನು ಎಂದು ಎದುರುವಾದಿಗಳು ಕೇಳಿಯಾರು.

ಮರಾಠಿಯೇ ಕನ್ನಡದ ಕೂಸಾಗಿರುವಾಗ, ಅದರ ಪ್ರಭಾವವು ಕನ್ನಡದ ಮೇಲೆ ಹೇಗಾದೀತು? ಆದರೂ ಸಹ ತಪ್ಪು ತಿಳಿವಳಿಕೆಗಳು ಬೇರೂರಿರುತ್ತವೆ. ಒಂದು ಉದಾಹರಣೆ: ಮೈಸೂರು ಭಾಷಿಕರಗಡಿಯಾರಹಾಗು ಉತ್ತರ ಕರ್ನಾಟಕದವರಘಡಿಯಾರಇವೆರಡರಲ್ಲಿ ಯಾವುದು ಸರಿ? ರಾಜಪುರೋಹಿತ ಎನ್ನುವ ಭಾಷಾಪಂಡಿತರು ಹೇಳುವುದನ್ನು ಕೇಳಿ: ‘ಗಡಿಯಾರವೇ ಸರಿಯಾದ ಉಚ್ಚಾರ. ಉತ್ತರ ಕರ್ನಾಟಕದವರು ಇದನ್ನು ತಪ್ಪಾಗಿಘಡಿಯಾರಎಂದು ಉಚ್ಚರಿಸುತ್ತಾರೆ’. 

ಅಯ್ಯೊ, ಶಿವನೆ! ಸಂಸ್ಕೃತದಘಟೀಎನ್ನುವ ಪದವು ಹಿಂದಿಯಲ್ಲಿಘಡೀ’  ಎಂದಾಗಿದೆ. ಇದರಿಂದ ಹುಟ್ಟಿದ ಪದ: ಘಡಿಯಾರ. ಇದನ್ನು ಉತ್ತರ ಕನ್ನಡಿಗರುಘಡಿಯಾರಎಂದು ಸರಿಯಾಗಿಯೇ ಉಚ್ಚರಿಸುತ್ತಾರೆ. ರಾಜಪುರೋಹಿತರು ಉತ್ತರ ಕರ್ನಾಟಕದವರೇ. ಬಹುಶಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು ಇರಬಹುದು. ನಂತರ ಮೈಸೂರಿನಲ್ಲಿ ನೆಲೆಸಿದರು. ಇವರೂ ಸಹ ಸರಿಯಾದ ಉಚ್ಚಾರಕ್ಕೆ ಗುಂಡಿ ತೋಡುತ್ತಾರೆ ಎಂದರೆ ಇದೇನು ಕಾಲಮಾನದ ಮಹಿಮೆಯೊ, ಜಾಯಮಾನದ ಮಹಿಮೆಯೊ, ಅಥವಾ ಸ್ಥಳಮಹಿಮೆಯೊ?

() ಕಾಣೆಯಾದ ಹಾಗು ಕಾಣೆಯಾಗುತ್ತಿರುವ ಉತ್ತರ ಕರ್ನಾಟಕದ ಪದಗಳು:
ನಾನು ಓದಿದ ಹಳೆಯ ಪಠ್ಯ ಪುಸ್ತಕಗಳಲ್ಲಿ ಪೇರಲ ಹಣ್ಣು, ಚಿಕ್ಕು ಹಣ್ಣು ಇದ್ದವು. ಇದೀಗ ಕನ್ನಡ ಪಠ್ಯ ಪುಸ್ತಕಗಳಲ್ಲಿ ಕೇವಲ ಸೀಬೆ ಹಣ್ಣು ಅಥವಾ ಸಪೋಟಾ ಹಣ್ಣು ಸಿಗುತ್ತವೆ. ಮೊದಲೆಲ್ಲ ನಾವು ಪೇಟೆಗೆ ಹೋದಾಗ ಅವರೆಕಾಯಿ, ತಿಂಗಳವರೆಕಾಯಿ, ಚವಳಿಕಾಯಿ, ಡೊಣ್ಣಮೆಣಸಿನಕಾಯಿ, ಗಜ್ಜರಿ ಮುಂತಾದ ಕಾಯಿಪಲ್ಲೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ಈಗ ಕೇವಲ ಬೀನ್ಸ, ಫ್ರೆಂಚ್ ಬೀನ್ಸ, ಕ್ಯಾಪ್ಸಿಕಮ್, ಕ್ಯಾರಟ್ ಎನ್ನುವ ಅಪರಿಚಿತ ಪದಗಳೇ ಕಿವಿಯ ಮೇಲೆ ಬೀಳುತ್ತವೆ. ನಾನು ಕಾಯಿಪಲ್ಲೆ ತೆಗೆದುಕೊಳ್ಳುತ್ತಿರುವ ಅಂಗಡಿಯವನಿಗೆ, ‘ಯಾಕಪಾ, ಈಗೇನು ಇಂಗ್ಲೀಶ್ ಪಂಡಿತನಾಗೀಯಾ!’ ಎಂದು ಚೇಷ್ಟೆ ಮಾಡಿದೆ. ಆತ, ‘ಹಂಗೇನಿಲ್ರೀ, ಅವರಿಗೆ ನಮ್ಮ ಕನ್ನಡ ತಿಳಿಯೂದಿಲ್ಲಾಎಂದು ತಿಳಿ ಹೇಳಿದ! ಇದು ಏಕೀಕರಣದ ಪ್ರಭಾವ.

ನಾನು ಹಳೆಯ ಮೈಸೂರಿಗರನ್ನು ದೂರುತ್ತಿಲ್ಲ. ಕಾರಣಾಂತರಗಳಿಂದ ಕರ್ನಾಟಕದ ಅನೇಕ ಭಾಗಗಳಲ್ಲಿ ಕನ್ನಡವು ವಿಭಿನ್ನ ರೂಪಗಳನ್ನು ತಾಳಿದೆ. ಅವರಿಗೆ ಅವರದು ಸರಿ, ನಮಗೆ ನಮ್ಮದು ಸರಿ ಎನ್ನುವ ಜಗಳಾಟ ಸರಿಯಲ್ಲ. ನಾವು ಕೂಡಿ ಬಾಳಬೇಕೆ ಹೊರತು ಹೊಡೆದಾಡಿ ಬೇರೆಯಾಗಬಾರದು. ಆದರೆ ಉತ್ತರ ಕರ್ನಾಟಕದ ಕನ್ನಡವು ಕನ್ನಡವೇ ಅಲ್ಲ ಎನ್ನುವಂತೆ ಕಡೆಗಣಿಸಿದರೆ, ಸರಿಯಾದ ಕನ್ನಡವನ್ನು ವಿರೂಪಗೊಳಿಸಿದರೆ, ಕೇವಲ ಮೈಸೂರು ಕನ್ನಡವನ್ನು ಸಿಂಹಾಸನದ ಮೇಲೆ ಕೂಡಿಸಿದರೆ, ಎಲ್ಲಿಯವರೆಗೆ ನಾವು ಸಹಿಸಿಕೊಳ್ಳಲು ಸಾಧ್ಯ? ಆದುದರಿಂದ ಹಳೆಯ ಮೈಸೂರಿಗರಿಗೆ ನನ್ನ ಕಳಕಳಿಯ ವಿನಂತಿ ಹೀಗಿದೆ:

ಮೈಸೂರಿನವರದೇ ಸರಿ, ಆ ಕನ್ನಡವನ್ನೇ ಇತರರು ಅನುಸರಿಸಬೇಕು ಎನ್ನುವ ಭ್ರಾಂತಿಯನ್ನು ದಯವಿಟ್ಟು ಬಿಡಿ. ಜಾಯಮಾನ ಎನ್ನುವ ಕುತರ್ಕವನ್ನು ದೂರ ಮಾಡಿರಿ. ಸರಿಯಾದ ಕನ್ನಡವನ್ನು ನಿಷ್ಪಕ್ಷಪಾತವಾಗಿ ಗ್ರಹಿಸಿಕೊಳ್ಳಿರಿ. ನಾವೆಲ್ಲರೂ ಕೂಡಿಕೊಂಡುಸರಿಗನ್ನಡಮ್ ಗೆಲ್ಗೆಎನ್ನೋಣ. ಇದು ನಿಮಗೆ ತಪ್ಪೆನಿಸಿದರೆ, ಪ್ರೀತಿಯಿಂದಲೇ ಇಬ್ಭಾಗವಾಗೋಣ!