Showing posts with label ಸಾಹಿತ್ಯ / ಜಯಶ್ರೀ ದೇಶಪಾಂಡೆ. Show all posts
Showing posts with label ಸಾಹಿತ್ಯ / ಜಯಶ್ರೀ ದೇಶಪಾಂಡೆ. Show all posts

Sunday, December 17, 2023

ಜಯಶ್ರೀ ದೇಶಪಾಂಡೆಯವರಿಂದ ಒಂದು ವಿಮರ್ಶಾಕಮ್ಮಟದ ಪರಿಚಯ

ಶ್ರೀಮತಿ ಜಯಲಕ್ಷ್ಮಿ ಪಾಟೀಲರು ಬೆಂಗಳೂರಿನಲ್ಲಿ ಅನೇಕ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಸಂಘಟಿಸುತ್ತಿದ್ದಾರೆ. ಇತ್ತೀಚೆಗೆ ಇವರು ‘ಕನ್ನಡದಲ್ಲಿಯ ವಿಮರ್ಶಾ ಸಾಹಿತ್ಯ’ದ ಬಗೆಗೆ ಒಂದು ಕಮ್ಮಟವನ್ನು ಏರ್ಪಡಿಸಿದ್ದರು. ಇದೊಂದು ಅತ್ಯಂತ ಮಹತ್ವದ ಕಾರ್ಯಕ್ರಮ. ಏಕೆಂದರೆ  ಕಥೆ,ಕವನಗಳ ಬಗೆಗೆ ಕಾರ್ಯಕ್ರಮಗಳು ನಡೆಯುವುದು ವಾಡಿಕೆಯಾಗಿದೆಯೇ ಹೊರತು, ವಿಮರ್ಶೆಯ ಬಗೆಗೆ ಅಲ್ಲ. ಈ ಒಂದು ಕೊರತೆಯನ್ನು  ಶ್ರೀಮತಿ ಜಯಲಕ್ಷ್ಮಿ ಪಾಟೀಲರು ತುಂಬಿದಂತಾಯಿತು. ಬೆಂಗಳೂರಿನಲ್ಲಿಯೇ ಇರುವ ಆಸಕ್ತರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದಿದ್ದಾರೆ. ಆದರೆ ಬೆಂಗಳೂರಿನ ಹೊರಗೆ ಇರುವ ಆಸಕ್ತರು ಈ ಚಟುವಟಿಕೆಗಳಿಂದ ವಂಚಿತರಾಗುವುದು ಸಹಜ. ಇಂತಹ ಆಸಕ್ತರಿಗೆ ಅಲ್ಲಿ ನಡೆದ ಕಾರ್ಯಕ್ರಮಗಳ ವಿವರಗಳನ್ನು ಕೊಡುವುದರಿಂದ ಈ ಸಹೃದಯರ ಬಾಯಾರಿಕೆ ಸ್ವಲ್ಪವಾದರೂ ತಣಿದೀತು. ದೂರದ ಈ ರಸಿಕರಿಗೆ ಈ ಚಟುವಟಿಕೆಯ ವಿವರಗಳು ತಿಳಿಯುವುದಾದರೂ ಹೇಗೆ? ಆ ಕೊರತೆಯನ್ನು ತುಂಬಿದವರು ಮತ್ತೊಬ್ಬ ಉತ್ಸಾಹಿ ಸಾಹಿತಿಯಾದ ಶ್ರೀಮತಿ ಜಯಶ್ರೀ ದೇಶಪಾಂಡೆಯವರು.

 ಶ್ರೀಮತಿ ಜಯಶ್ರೀ ದೇಶಪಾಂಡೆಯವರು ಸೂಕ್ಷ್ಮಗ್ರಾಹಿಗಳು, ಕುಶಾಗ್ರಮತಿಗಳು ಹಾಗು ಭಾಷಾಪಂಡಿತರು. ಏಳು ಜನ ವಿದ್ವಾಂಸರ ಪ್ರತಿಪಾದನೆಗಳನ್ನು ಅವರು ಸಾರವತ್ತಾಗಿ ಸಂಗ್ರಹಿಸಿ, ಫೇಸ್ ಬುಕ್ಕಿನಲ್ಲಿ ಒಂದು ಲೇಖನದಲ್ಲಿ ನೀಡಿದ್ದಾರೆ. ಈ ವಿದ್ವಾಂಸರ ಸಾಹಿತ್ಯಿಕ ಒಲವು ಹಾಗು ಧೋರಣೆಗಳು ವಿಭಿನ್ನವಾಗಿರುತ್ತವೆ. ಅವನ್ನೆಲ್ಲ ಊನವಿಲ್ಲದಂತೆ ಸಂಗ್ರಹಿಸಿ, ಅಪಚಾರವಾಗದಂತೆ ಪ್ರಸ್ತಾವಿಸುವುದು ಪರಿಶ್ರಮದ ಹಾಗು ತಾಳ್ಮೆಯ ಕೆಲಸ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀಮತಿ ಜಯಶ್ರೀ ದೇಶಪಾಂಡೆಯವರಿಗೆ ಅಭಿನಂದನೆಗಳು ಹಾಗು ಕೃತಜ್ಞತೆಗಳು. ಅವರ ಲೇಖನವನ್ನು ಆಧರಿಸಿ, ಆ ಪ್ರಸ್ತಾವನೆಗಳ ಒಂದು ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ನಾನು ನೀಡುತ್ತಿದ್ದೇನೆ:

 ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ೭ ಜನ ವಿದ್ವಾಂಸರು: ಎಸ್.ದಿವಾಕರ, ಸಿ.ಎನ್.ರಾಮಚಂದ್ರನ್, ಜಿ.ಬಿ.ಹರೀಶ, ಕೆ.ಎಸ್. ಮಧುಸೂದನ, ಬಿ.ಎನ್. ಸುಮಿತ್ರಾಬಾಯಿ, ಕೆ.ಎಸ್.ನಾರಾಯಣಸ್ವಾಮಿ ಹಾಗು ಓ.ಎಲ್.ನಾಗಭೂಷಣಸ್ವಾಮಿ. ಮೊದಲಿಗೆ ಭಾಷಣ ಮಾಡಿದವರು ಶ್ರೀಮಾನ್ ಎಸ್.ದಿವಾಕರರು. ಸಂಸ್ಕೃತಿ, ಸಾಹಿತ್ಯ ಹಾಗು ವಿಮರ್ಶೆಗಳ ನಡುವಿನ ಸಂಬಂಧವನ್ನು ದಿವಾಕರರು ಎರಡು ವಾಕ್ಯಗಳಲ್ಲಿ ತೂಗಿ ಹೇಳಿದರು:  ಸ೦ಸ್ಕೃತಿಯ ವಾಹಕವಾಗಿ ಭಾಷೆ ಸಾಹಿತ್ಯದ ಸೃಷ್ಟಿಯನ್ನು ಸಾಧ್ಯವಾಗಿಸಿತು. ಹೀಗೆ ಹುಟ್ಟಿಬ೦ದ ಸಾಹಿತ್ಯವನ್ನು ವಿಮರ್ಶೆ ಎ೦ಬ ತಕ್ಕಡಿ ತೂಗಿ ಹೇಳುತ್ತದೆ. ಜೊಳ್ಳನ್ನು ಬೇರ್ಪಡಿಸಿ ಗಟ್ಟಿ ಕಾಳುಗಳನ್ನು ಆಸ್ವಾದಿಸಲು ಅನುವು ಮಾಡಿ ಕೊಡುವುದೇ ವಿಮರ್ಶೆ ಎ೦ದರು. ವಿಮರ್ಶಕರ ಸಹಾಯ ಇಲ್ಲದೆ ಯಾವುದೇ ಸಾಹಿತ್ಯದ ಉತ್ತುಂಗ ರಚನೆಗಳನ್ನು ಓದಿ, ಆನಂದಿಸುವುದು ಅಸಾಧ್ಯ ಎನ್ನುವುದು ದಿವಾಕರರ ಅಭಿಪ್ರಾಯವಾಗಿದೆ. ಪಾಶ್ಚಾತ್ಯ ಸಾಹಿತ್ಯದ ನೆರಳಿನಲ್ಲಿಯೇ ಬೆಳೆದು ಬಂದಿದ್ದರೂ ಸಹ, ಕನ್ನಡದಲ್ಲಿ ವಿಮರ್ಶೆಯು ಸಮಾಜನಿಷ್ಠ ಹಾಗು ಕೃತಿನಿಷ್ಠ ಎನ್ನುವ ಪ್ರಯೋಗಗಳನ್ನು ಮಾಡಿದೆ, ಅಲ್ಲದೆ, ಸ್ವವಿಮರ್ಶೆಯಂತಹ ರೂಪವೂ ಇಲ್ಲಿದೆ ಎಂದು ವಿವರಿಸಿದರು.

 ಸಿ.ಎನ್.ರಾಮಚಂದ್ರನ್ ಅವರು ವಿಮರ್ಶೆಯ ಓದು ಈಗ ಮಹತ್ವವನ್ನು ಕಳೆದುಕೊಂಡಿರುವುದಕ್ಕೆ ವಿಷಾದಿಸಿದರು. ಪಾಶ್ಚಿಮಾತ್ಯ ಸಾಹಿತ್ಯದ ಅಂಗವೆ೦ಬಂತೆ ಬೆಳೆದು ಬಂದ ವಿಮರ್ಶೆ ಎಂಬುದರ ಹೊಸ ರೆಕ್ಕೆಗಳು 'ಸಹೃದಯ' ಮತ್ತು 'ಲಾಕ್ಷಣಿಕ 'ಎಂಬ ಪದಗಳ ರೂಪದಲ್ಲಿ ಸಂಸ್ಕೃತ ಹಾಗೂ ಕನ್ನಡಗಳಲ್ಲಿ ಪೂರ್ವೀಭಾವಿಯಾಗಿಯೇ ಸ್ಥಿತವಾದುವುಗಳಾಗಿದ್ದರೂ ಇ೦ಗ್ಲೀಶಿನವರ 'ಕ್ರಿಟಿಸಿಸಂ' ಹಾಗೂ 'ಕ್ರಿಟಿಕ್' ಶಬ್ದಕ್ಕೆ ಇವು ಮು೦ದೆ ಸ೦ವಾದಿಯಾಗಿ ಬಳಕೆಗೆ ಬಾರದೆ ವಿಮರ್ಶೆ ಎ೦ಬುದಾಗಿ ಪ್ರಚಲಿತವಾಯಿತು . ಇಲ್ಲಿ ಕೇವಲ 'ಮೌಲ್ಯಮಾಪನ' ಎ೦ಬುದಾಗಿ ವಿಮರ್ಶೆಯನ್ನು ಮಿತಿಗೊಳಿಸುವ ಅಗತ್ಯವಿಲ್ಲ ಇದು ಬಹುವಿಸ್ತ್ರತ ಕ್ಷೇತ್ರವಾಗಿದ್ದು ಸಾಹಿತ್ಯ ಅಥವಾ ಜೀವನದಲ್ಲಿ ಸಾಮಯಿಕ ಸ೦ಗತಿಗಳೊ೦ದಿಗೆ ಸಾಹಿತ್ಯದ ಜೋಡಣೆಯ ಸ್ವರೂಪವನ್ನು ಅರಿಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ವಿಮರ್ಶೆ ಇ೦ಗ್ಲೀಷ್ ಸಾಹಿತ್ಯದ ವಿಮರ್ಶೆಯಿ೦ದ ಪ್ರಭಾವಿತವಾಗಿ ಮು೦ದುವರಿದರೂ ಕನ್ನಡ ಭಾಷೆಯಲ್ಲಿ ತನ್ನದೇ ಗಟ್ಟಿ ಸ್ಥಾನವನ್ನು ಉಳಿಸಿಕೊ೦ಡಿದೆ. ಕನ್ನಡದ ಮೊದಲ ವಿಮರ್ಶಕರೆನ್ನಲಾದ ಎ ಆರ್ ಕೃಶ್ಣಶಾಸ್ತ್ರಿಯವರಿ೦ದ ಮೊದಲುಗೊ೦ಡು ನವೋದಯಪೂರ್ವ , ಹಾಗೂ ನವೋದಯ ಮತ್ತು ನವ್ಯ ಕಾಲಘಟ್ಟದಲ್ಲಿ ರಚನೆಯಾದ ಸಾಹಿತ್ಯವನ್ನು ಅತ್ಯ೦ತ ಸೂಕ್ಷ್ಮವಾಗಿ, ವಿವರವಾಗಿ ಅಭ್ಯಸಿಸಿ ತೌಲನಿಕ ಅಭಿಪ್ರಾಯಗಳನ್ನು ಕೊಟ್ಟ ಅನೇಕ ಸಾಹಿತಿಗಳ ಬಗ್ಗೆ ಉದಾಹರಣೆಗಳನ್ನು ಸಿ.ಎನ್.ರಾಮಚಂದ್ರನ್ ಅವರು ನೀಡಿದರು. ಅಲ್ಲದೆ, ಕನ್ನಡ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಿದ ಅನೇಕ ಮಹಾನ್ ಲೇಖಕರು ಹಾಗೂ ಲೇಖಕಿಯರ ಕೃತಿಗಳ ಬಗ್ಗೆ ತುಲನಾತ್ಮಕ ಸಮೀಕ್ಷೆಯನ್ನು ಮಾಡಿದರು. ಅವುಗಳಲ್ಲಿನ ಗುಣಾತ್ಮಕತೆ ಅಥವಾ ನಕಾರಾತ್ಮಕತೆಗಳ ಬಗ್ಗೆ ಚರ್ಚಿಸಿದರು. ಬೇ೦ದ್ರೆಯವರ ಕವನಗಳು, ಮಾಸ್ತಿಯವರ ಕಥೆಗಳು, ಕಾರ೦ತರ ಕಾದ೦ಬರಿಗಳು, ಶ್ರೀರ೦ಗರ ನಾಟಕಗಳು ಕನ್ನಡ ಸಾಹಿತ್ಯದ ಮಹಾ ವೃಕ್ಷದ ಹಿರಿ ರೆ೦ಬೆಗಳಾಗಿ ಗುರುತಿಸಿಕೊ೦ಡದ್ದನ್ನು ಬಿಡಿಸಿ ಹೇಳಿದರು.

 ನವೋದಯ ಕಾಲದ ಸಹೃದಯ ವಿಮರ್ಶೆಯ ಮೂಲವನ್ನು ಮೂರು ಪ್ರವಾಹಗಳ ಸ್ವರೂಪದಲ್ಲಿ ಅರ್ಥವಿವರಣೆ ಕೊಟ್ಟವರು ಡಾ. ಜಿ. ಬಿ. ಹರೀಶ. ಕ್ರಿಟಿಕ್ ಹಾಗೂ ಕ್ರಿಟಿಸಿಸಮ್ ಎ೦ಬುದಾಗಿ ಬ್ರಿಟಿಶ್ ಇ೦ಗ್ಲಿಶ್ ಸಾಹಿತ್ಯದ ಉತ್ಪನ್ನದ ರೂಪದಲ್ಲಿ ಪ್ರಪ೦ಚದ ಬೇರೆ ಬೇರೆ ಭಾಷೆಗಳಿಗೂ ತನ್ನನ್ನೇ ಆಯಾತ ಮಾಡಿಕೊ೦ಡು ಬ೦ದ ವಿಮರ್ಶಾ ಪ್ರಕಾರವೇ ನವೋದಯ ಸಾಹಿತ್ಯ ವಿಮರ್ಶೆ ಎಂದು ಹರೀಶರು ವಿವರಿಸಿದರು. ನವೋದಯ ಕಾಲದಲ್ಲಿ ವಿಕಸನ ಶೀಲವಾಗಿ ಹರಡಿದ ವಿಮರ್ಶಾ ಪೃಥೆ ವಿಮರ್ಶಕರ ನಡುವಿನ ಸ೦ವಾದದ ರೂಪದಲ್ಲಿಯೂ ವಿಸ್ತಾರಗೊ೦ಡಿತು. ನಾಸ್ತಿಕ ಅನಿಸಿದ್ದ ಕಾರ೦ತರು, ಆಸ್ತಿಕ ಡಿ ವಿ ಜಿಯವರು, ಅಧ್ಯಾತ್ಮ- ವೈಚಾರಿಕತೆ ಎರಡಕ್ಕೂ ಒತ್ತು ಕೊಟ್ಟ ಕುವೆ೦ಪು, ಹಾಗೂ ವರಕವಿ ಬೇ೦ದ್ರೆಯವರು ತಮ್ಮ ಅಭಿಪ್ರಾಯ ಭೇದಗಳನ್ನೂ ಚರ್ಚೆಯ ಮೂಲಕ ಔನ್ನತ್ಯಕ್ಕೊಯ್ದರು.

 ಕನ್ನಡ ಕಾವ್ಯ, ನಾಟಕ, ಕಾದಂಬರಿ ರೂಪದ ಮೂರು ಮುಖ್ಯ ಕವಲುಗಳನ್ನು ಪಡೆದು ಸಹೃದಯ ವಿಮರ್ಶಾ ರೂಪದಲ್ಲಿ ನೆಲೆಗೊ೦ಡು ಓದು ಮತ್ತು ಚಿ೦ತನಗಳ ವಿವಿಧ ಮಗ್ಗಲುಗಳನ್ನು ವಿಮರ್ಶಕರ ನಡುವಿನ ಸಂವಾದದ ರೂಪದಲ್ಲಿ ಪ್ರಸ್ತುತಪಡಿಸಿದರೂ ಅದು ಅವರ ನಡುವಿನ ವೈಚಾರಿಕ ಸಂಘರ್ಷ ಹಾಗೂ ಪ್ರತಿರೋಧಕ ಅ೦ಶಗಳನ್ನೂ ಬಹಿರ೦ಗಪಡಿಸಿತು. ಮೂರು ತಲೆಮಾರುಗಳನ್ನು ಕ೦ಡ ನವೋದಯ ವಿಮರ್ಶೆ ಆ ಕಾಲಘಟ್ಟದ ನೂರಾರು ಸಾಹಿತಿಗಳ ಅಮೂಲ್ಯ ಕೃತಿಗಳನ್ನು ಗುಣಾತ್ಮಕ, ತೌಲನಿಕ, ಸಹೃದಯೀ ಮೌಲ್ಯ ಮಾಪನಗಳನ್ನು ಮಾಡುತ್ತ ಅವರನ್ನು ಬೆಳೆಸಿತು ಎಂದು ಹರೀಶರು ವಿಮರ್ಶಿಸಿದರು.

 ಡಾ. ಕೆ ಎಸ್ ಮಧುಸೂದನ್ ಇಪ್ಪತ್ತನೆಯ ಶತಮಾನದ ಹೊತ್ತಿಗೆ ವಿಮರ್ಶೆ ಎಷ್ಟು ಪ್ರಭಾವಶಾಲಿಯಾಗಿ ಬೆಳೆದು ಬ೦ತು ಎ೦ಬ ಬಗ್ಗೆ ಸೋದಾಹರಣ ವಿವರಿಸಿದರು.ವಿಮರ್ಶಾಕಾರರು ಕೇವಲ ಸಾಹಿತ್ಯ ವಿಮರ್ಶಕರೆ೦ದೇನೂ ಅಲ್ಲ, ಸಾಮಾಜಿಕ ಚಿ೦ತನೆಗಳನ್ನು ಮಾಡುವವರು,ರಾಜಕೀಯ ಚಿ೦ತಕರು ಇವರೂ ಸಹ ವಿಮರ್ಶಕರೇ. ಸಾಹಿತ್ಯ ವಿಮರ್ಶೆಯಲ್ಲಿ ಲೇಖಕ ಕೇ೦ದ್ರಿತ, ಕೃತಿ ಕೇ೦ದ್ರಿತ ಮತ್ತು ವಾಚಕ ಕೇ೦ದ್ರಿತ ಎ೦ಬ ಪರಿಮಾಣಗಳ ಅಡಿಯಲ್ಲಿ ಸಾಮಾನ್ಯವಾಗಿ ಕೃತಿಯ ಮೌಲ್ಯ ಮಾಪನವಾಗುತ್ತದೆ. ವಿಮರ್ಶೆ ಪರಿಪೂರ್ಣವಾಗಬೇಕಾದರೆ ಇ೦ಥ ಹಾಗೂ ಇತರ ಉಪ ಪರಿಮಾಣಗಳನ್ನು ಒಳಗೊ೦ಡು ತೂಗಿದ ಲೇಖನವಾಗಿರುತ್ತದೆ. ಯಾವುದೇ ಕೃತಿಯೊಳಗಿನ ಪಾತ್ರ ಹಾಗೂ ಆಶಯಗಳೇ ವಿಮರ್ಶೆಗೆ ಸಾಕ್ಷ್ಯಗಳಾಗಿರುತ್ತವೆ. ಒ೦ದು ಕೃತಿಯ ಬಗ್ಗೆ ಒ೦ದೇ ಬಗೆಯ ತೀರ್ಮಾನ ಅಥವಾ ಯಾವುದೇ ಖಚಿತ ನಿರ್ಧಾರವನ್ನು ಕೊಡುವುದು ಅಸಾಧ್ಯ, ಸಾಹಿತ್ಯದ ಚರ್ಚೆ ಸಂವಾದಗಳು ಯಾವುದೇ ಕೃತಿಯ ಬಗ್ಗೆ ಜನರು ನಿರ್ಧರಿಸಲು ಸಹಾಯ ಮಾಡುತ್ತವೆ ಎ೦ದರು.

 ಬಿ ಎನ್ ಸುಮಿತ್ರಾಬಾಯಿವರ ಸ್ತ್ರೀವಾದಿ ವಿಮರ್ಶೆಯ ಆಯಾಮಗಳ ಸ್ಥೂಲ ಮಂಡನೆಗಳಲ್ಲಿ ಎದ್ದು ಕಂಡಿದ್ದು ಸಾವಿರಾರು ವರ್ಷಗಳ ಮಹಿಳಾ ಇತಿಹಾಸ, ವರ್ತಮಾನ, ಮತ್ತು ಭವಿಷ್ಯದ ಮುಖಗಳು ಎಂದರೆ ತಪ್ಪಲ್ಲ. ಪುರುಷ ಪ್ರಧಾನ, ಪಿತೃ ಪ್ರಧಾನ ವ್ಯವಸ್ಥೆಯನ್ನು ಮೌನವಾಗಿ ಒಪ್ಪಿಕೊಳ್ಳುತ್ತಾ ಬ೦ದ ನಮ್ಮ ದೇಶದ ಸ್ತ್ರೀಯರ ಮೇಲೆ ಪ್ರಭಾವ ಬೀರಿ ಸ್ವ೦ತಿಕೆ, ಸ್ವಾತ೦ತ್ರ್ಯಗಳ ಬಗ್ಗೆ ಚಿ೦ತಿಸುವ೦ತೆ ಮಾಡಿದ್ದು ಪಾಶ್ಚಾತ್ಯ ದೇಶಗಳಲ್ಲಿ ನಡೆದ ಸ್ತ್ರೀ ವಿಮೋಚನಾ ಚಳುವಳಿಗಳಿ೦ದ ಎನ್ನುತ್ತಾರೆ ಸುಮಿತ್ರಾಬಾಯಿವರು. ಸ್ತ್ರೀವಾದದ ವಿಮರ್ಶೆ ಹುಟ್ಟಿದ್ದು ಸಾಹಿತ್ಯದ ತರಗತಿಗಳಲ್ಲಿ. ಆದರೂ ಮು೦ದೆ ಫ್ರೆಂಚ್ ಲೇಖಕಿ ಸೈಮನ್ ದ ಬೋವಾಲ ಅವರ ವ್ಯಾಪಕ ಬರವಣಿಗೆ, ಯೂರೋಪ ಅಮೇರಿಕಾಗಳಲ್ಲಿ ನಿರ೦ತರ ಸ್ತ್ರೀಪರ ಚಳುವಳಿಗಳಲ್ಲಿ ಪಾಲ್ಗೊಳ್ಳುವಿಕೆಗಳು ಇಪ್ಪತ್ತನೆಯ ಶತಮಾನದಲ್ಲಿ ತಮ್ಮ ಪ್ರಭಾವವನ್ನು ಅನೇಕ ದೇಶಗಳಿಗೆ ಹರಡಿ ಭಾರತದಲ್ಲೂ ಒ೦ದು ಹೊಸ ಚಿ೦ತನೆಯನ್ನು ಹುಟ್ಟು ಹಾಕಿತು.ಈ ದಿಶೆಯಲ್ಲಿ ಮೇರಿ ವೂಲ್ಸ್ಟನ್ ಕ್ರಾಫ್ಟ್ ಬರೆದ ''ಸ್ತ್ರೀಯರ ಹಕ್ಕುಗಳ ಸಮರ್ಥನೆ" ಎ೦ಬ ಬರಹವನ್ನು ಇವತ್ತಿಗೂ ಸ್ತ್ರೀನಿಷ್ಠ ಧೋರಣೆಯ ಪ್ರಥಮ ಮತ್ತು ಮುಖ್ಯ ಪ್ರತಿಪಾದನೆ ಎ೦ದು ಗಣಿಸಿದ್ದಾರೆ. ಅ೦ದರೆ ಅದಕ್ಕಿ೦ತ ಮೊದಲು ಈ ಬಗೆಯ ಆಲೋಚನೆಗಳಿರಲೇ ಇಲ್ಲವ೦ತಲ್ಲ, ಆದರೂ ಒ೦ದು ನಿರ್ದಿಷ್ಟ ಕಾಲಮಾನದಲ್ಲೇ ಈ ಪರಿವರ್ತನೆ ನಡೆದದ್ದು ನಿಜ. ಸ್ತ್ರೀವಾದದ ಮ೦ಡನೆಗಳು ಅಥವಾ ವಿವರಣೆಗಳು ಒ೦ದು ಪ೦ಥ ಎoದು ಅಲ್ಲ, ಮಹಿಳೆಯರ ನೋವುಗಳೇ ಅಭಿವ್ಯಕ್ತಿಯಾಗಿ ಜನಿಸಿದ ಚಳುವಳಿಗಳೇ ಇದಕ್ಕೆ ಮೂಲ ಆಗಿದ್ದುವು. ನಿರ್ಬ೦ಧಗಳು, ಶಾರೀರಿಕ ಅನಿವಾರ್ಯತೆಗಳು, ಸ್ತ್ರೀಯ ಹೋರಾಟಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಸಫಲವಾಗದೆ ಸ್ತ್ರೀವಾದ ಹಾಗೂ ವಿಮರ್ಶೆಗಳ ಯಾನ ಮು೦ದುವರಿಯಿತು, ಎಂದು ಸುಮಿತ್ರಾಬಾಯಿಯವರು ಪ್ರತಿಪಾದಿಸಿದರು.

 ಬಂಡಾಯ ವಿಮರ್ಶೆಯ ಮೂಲಗಳನ್ನು ತೆರೆದಿಡುತ್ತಾ ಹೋದ ಡಾ. ಕೆ ಎಸ್ ನಾರಾಯಣ ಸ್ವಾಮಿಯವರು ಕನ್ನಡ ಸಾಹಿತ್ಯದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯ ಅವ್ಯವಸ್ಥೆಗಳ ವಿರುದ್ಧ ಎತ್ತಿದ ಧ್ವನಿಯ ರೂಪವಾಗಿ ಬ೦ಡಾಯ ಸಾಹಿತ್ಯ ಉದ್ಭವಿಸಿತು ಎ೦ದರು. ಇದರಲ್ಲಿ ಮೊಟ್ಟ ಮೊದಲಾಗಿ ರಾಜಕೀಯ, ಆಡಳಿತಾತ್ಮಕ ಅಸಮಾನತೆ. ತುರ್ತು ಪರಿಸ್ಥಿತಿ, ಜಾತಿವಾದ, ಅವಕಾಶ ವ೦ಚಿತತೆ, ಹಾಗೂ ಎಲ್ಲಕ್ಕಿ೦ತ ಹೆಚ್ಚಾಗಿ ಮತ್ತು ಮುಖ್ಯವಾಗಿ ಪುರೋಹಿತ ಶಾಹಿಯನ್ನು ವಿರೋಧಿಸಿ ಎದ್ದು ನಿ೦ತ ವಾದವೇ ಬ೦ಡಾಯವಾದ, ಇದೇ ದಲಿತರ ಆ೦ತರ್ಯದ ವಾಣಿಯೂ ಆಗಿ ನೆಲೆಗ೦ಡಿತು. ಸಮಾಜದಲ್ಲಿನ ಬಿರುಕುಗಳ ಫಲಸ್ವರೂಪಿಯಾಗಿ ಅಲ್ಲಿ ಬೇರೂರಿದ ಓರೆ ಕೋರೆಗಳನ್ನು ತೀಕ್ಷ್ಣವಾಗಿ ಟೀಕಿಸುತ್ತ ಬರೆದ ಹಲವಾರು ಲೇಖಕರನ್ನು ಕುರಿತು ನಾರಾಯಣಸ್ವಾಮಿ ಒಡನುಡಿದರು.

 ಡಾ. ಓ ಎಲ್ ನಾಗಭೂಷಣಸ್ವಾಮಿ ನವ್ಯೋತ್ತರ ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಯೇ ಒ೦ದು ಪ್ರಕಾರ ಎ೦ದು ಗುರುತಿಸಲಾಗದು ಎನ್ನುತ್ತ 'ಮೂಲ' ಎ೦ಬ ಖಚಿತತೆಯೇ ಎಲ್ಲೂ ಇಲ್ಲ, ಎಲ್ಲವೂ ಪ್ರತಿಕೃತಿಗಳೇ ಎ೦ದು ಅಭಿಪ್ರಾಯ ಕೊಟ್ಟರು. ಯಾವುದೇ ವಸ್ತು ಯಾ ಚರ್ಚಿತ ವಿಷಯದ ಬಾಹ್ಯ ನೋಟದಲ್ಲಿ ನೋಡುಗರು ಯಾ ಕೇಳುಗರ ಸ್ವನಿರ್ಧಾರ ರಚಿತವಾದ ದೃಷ್ಟಿಕೋನವೇ ಮುಖ್ಯವಾಗುತ್ತದೆ. ಮೂಲ ಎಲ್ಲಿಯೂ ಇಲ್ಲ ಎಲ್ಲವೂ ''ರಚನೆ'ಗಳೇ, ಯಾವುದೇ ಸ೦ಗತಿಯೂ ಪ್ರತಿಯೊಬ್ಬರ ಮನಸ್ಸು ಹಾಗು ಭಾವಗಳು ಗ್ರಹಿಸುವ, ಗ್ರಹಿಸಿ ಅರ್ಥೈಸಿಕೊಳ್ಳುವ ಹಾಗೂ ಅರ್ಥೈಸಿಕೊ೦ಡು ತಮ್ಮದೇ ಆದ ವಿಧಾನದಲ್ಲಿಯೇ ಸ್ವೀಕರಿಸುವ ಪದ್ಧತಿ. ಹಾಗಾಗಿ ನವ್ಯೋತ್ತರ ಕಾಲದ ವಿಮರ್ಶೆಯಲ್ಲಿ ಸಿಗ್ನಿಫೈಡ್ ಗಿ೦ತಲೂ ಸಿಗ್ನಿಫೈಯರ್ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಅ೦ದರು. ಅರ್ಥಾತ್ ಯಾವುದೇ ಸ೦ಗತಿಯೂ ನಮ್ಮ ನಮ್ಮ ದೃಷ್ಟಿಕೋನದ ಪರಿಣಾಮವೇ ಆಗಿದೆಯೇ ಹೊರತು ಇದಮಿತ್ಥ೦ ಎ೦ಬುದಾಗಿ ಯಾವುದೇ ವಿಮರ್ಶೆಯಿಲ್ಲ ಎನ್ನುತ್ತ ಅತ್ಯ೦ತ ರ೦ಜನೀಯವಾಗಿ, ಹಾಸ್ಯಮಿಶ್ರಿತ ಶೈಲಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ನಮ್ಮೆದುರು ತೆರೆದಿಟ್ಟರು.

 ''ವಿಮರ್ಶೆಯೆ೦ದರೆ ಅನುಭವಗಳ ನಡುವೆ ಸೂಕ್ಷ್ಮ ಭೇದಗಳನ್ನು ಗುರುತಿಸಿ ಅವುಗಳಿಗೆ ಬೆಲೆ ಕಟ್ಟುವ ಪ್ರಯತ್ನ '' ಎಂದು ಹೇಳಿರುವ ಐ. ಎ. ರಿಚರ್ಡ್ಸ್ ನ ಮಾತು ಈ ಕಮ್ಮಟದಲ್ಲಿ ಮಾತನಾಡಿದ ಎಲ್ಲಾ ವಿದ್ವಾಂಸರ ಶಬ್ದಗಳಲ್ಲಿದ್ದ ಧ್ವನಿಯಾಗಿತ್ತು. ಕಾವ್ಯ ಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆಗಳು ಅತ್ಯಂತ ಸು೦ದರ, ಅರ್ಥಪೂರ್ಣ, ಹಾಗೂ ಅನುಭವಭರಿತ ಹಿನ್ನೆಲೆಯ ಬೌದ್ಧಿಕ ವ್ಯಾಖ್ಯಾನಗಳಾಗಿದ್ದು ಇವುಗಳ ಬಗ್ಗೆ ಎರಡು ದಿನಗಳ ಕಾಲ ನಡೆದ ಸಾಹಿತ್ಯ ವಿಮರ್ಶಾ ಕಮ್ಮಟವು ಸಾಹಿತ್ಯಾಸಕ್ತರಿಗೆ ರಸದೌತಣವೇ ಆಗಿತ್ತು.

 ಕೊನೆಯಲ್ಲಿ ಜಯಶ್ರೀ ದೇಶಪಾಂಡೆಯವರು ಕಮ್ಮಟದ ರೂವಾರಿಗಳಾದ ಶ್ರೀಮತಿ ಜಯಲಕ್ಷ್ಮೀ ಪಾಟೀಲರನ್ನು ಹಾಗು ತಮ್ಮ ಭಾಷಣಗಳ ಮೂಲಕ ರಸಿಕರ ಮನ ತಣಿಸಿದ ವಿದ್ವಾಂಸರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ಅವರ ಮಾತುಗಳಲ್ಲಿಯೇ ಹೇಳುವುದಾದರೆ, "ಅಚ್ಚುಕಟ್ಟಾದ ವ್ಯವಸ್ಥೆಗಳೊಂದಿಗೆ ನೆರವೇರಿದ ಕಮ್ಮಟ ನನ್ನ ಹಾಗೆಯೇ ಬ೦ದಿದ್ದ ಎಲ್ಲರ ಮನಸ್ಸನ್ನೂ ಗೆದ್ದಿದ್ದರಲ್ಲಿ ಸ೦ಶಯವೇ ಇಲ್ಲ! ಕಮ್ಮಟದ ರೂವಾರಿ ಜಯಲಕ್ಷ್ಮೀ ಪಾಟೀಲ್ ಮತ್ತವರ ತಂಡದ ಅದ್ಭುತ ಕರ್ತತ್ವಶಕ್ತಿ, ಕಮ್ಮಟಕ್ಕೆ ದಿಕ್ಕು ದೆಸೆ ತೋರಿಸಿ ಯಶಸ್ವೀಗೊಳಿಸಿದ ಎಸ್ ದಿವಾಕರ್ ಸರ್, ಜಯಶ್ರೀ ಕಾಸರವಳ್ಳಿ ಅವರಲ್ಲದೆ ಸಮಯಕ್ಕೆ ಬ೦ದು ತಮ್ಮ ವಿದ್ವತ್ಪೂರ್ಣ ಪ್ರವಚನಗಳನ್ನು ನೀಡಿದ ಎ೦ಟು ಜನ ಕನ್ನಡದ ವಿದ್ವಾಂಸ ದಿಗ್ಗಜರ ಸಹಕಾರವು ಒಂದು ಎರಡು ದಿನಗಳೂ ಒಂದು ಅನನ್ಯ ಅನುಭವವನ್ನು ನನಗೆ ಇತ್ತದ್ದು ನಿಜ."

ಜಯಶ್ರೀ ದೇಶಪಾಂಡೆಯವರು ಶ್ರೀಮತಿ ಜಯಲಕ್ಷ್ಮಿ ಪಾಟೀಲರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ನಾನೂ ಸಹ ಈ ಕಮ್ಮಟದ ಸಾರಸಂಗ್ರಹ ಮಾಡಿ, ನಮಗೆ ನೀಡಿದ ಜಯಶ್ರೀ ದೇಶಪಾಂಡೆಯವರಿಗೆ ಅಭಿನಂದನೆಗಳನ್ನು ಹಾಗು ಧನ್ಯವಾದಗಳನ್ನು ಅರ್ಪಿಸುತ್ತೇನೆ.

Tuesday, August 30, 2022

ಹಲವು ನಾಡು ಹೆಜ್ಜೆ ಹಾಡು..ಜಯಶ್ರೀ ದೇಶಪಾಂಡೆ-----ಭಾಗ ೨

 ಪ್ರಜ್ಞಾವಂತ ನಾಗರಿಕನಿಗೆ ಸಾಹಿತ್ಯದಿಂದ ಸಿಗುವಷ್ಟು ಸುಖವು ಮತ್ತೆ ಯಾವ ಕಲೆಯಿಂದಲೂ ಸಿಗಲಾರದು. ಸಾಹಿತ್ಯಸುಖದಲ್ಲಿ ಎರಡು ಅಂಶಗಳಿವೆ. ಒಂದು ಸಾಹಿತ್ಯಕೃತಿಯ ಅಂತರಂಗ; ಎರಡನೆಯದು ಬಹಿರಂಗ. ಈ ಬಹಿರಂಗಕ್ಕೇ ಶೈಲಿ ಎಂದೂ ಕರೆಯಬಹುದು. ನಮ್ಮ ಪ್ರಾಚೀನ ಸಾಹಿತ್ಯದ ದಿಗ್ಗಜರಾದ ಕಾಲೀದಾಸ, ಭಾರವಿ, ದಂಡಿ ಹಾಗು ಮಾಘ ಇವರ ಶೈಲಿಯ ವೈಶಿಷ್ಟ್ಯದ ಬಗೆಗೆ ಹೀಗೊಂದು ಶ್ಲೋಕವಿದೆ:

‘ಉಪಮಾ ಕಾಲಿದಾಸಸ್ಯ, ಭಾರವೇರರ್ಥಗೌರಮಮ್;

ದಂಡಿನ: ಪದಲಾಲಿತ್ಯಮ್, ಮಾಘೇ ಸಂತಿ ತ್ರಯೋ ಗುಣಾ:’

ಈ ಗುಣಗಳಿಂದಲೇ ಇವರು ಶ್ರೇಷ್ಠರಾದರು ಎಂದರ್ಥವಲ್ಲ ; ಅದರೆ ಈ ಗುಣಗಳು ಅವರ ಸಾಹಿತ್ಯಕ್ಕೆ ಮೆರಗು ಕೊಟ್ಟಿವೆ.

 

ಜಯಶ್ರೀ ದೇಶಪಾಂಡೆಯವರು ರಚಿಸಿದ ‘ಹಲವು ನಾಡು, ಹೆಜ್ಜೆ ಹಾಡು’ ಕೃತಿಯನ್ನು ಓದುವಾಗ, ಈ ಶ್ಲೋಕ ನನ್ನ ಮನದಲ್ಲಿ ಸುಳಿದಾಡಿತು. ಜಯಶ್ರೀ ದೇಶಪಾಂಡೆಯವರ ಕೃತಿಗೆ ಮೆರಗು ಕೊಟ್ಟಂತಹ ಅನೇಕ ಗುಣಗಳು ಇಲ್ಲಿವೆ. ಅವರ ಕೃತಿಯ ಅಂತರಂಗದ ಬಗೆಗೆ ಈಗಾಗಲೇ ನಾನು ನನ್ನ ‘ಸಲ್ಲಾಪ’ದಲ್ಲಿ ಬರೆದಿದ್ದೇನೆ. (https://sallaap.blogspot.com/2022/07/blog-post.html) ಈಗ ಅವರ ಕೃತಿಯ ಬಹಿರಂಗಗುಣಗಳ ಬಗೆಗೆ ಅಂದರೆ ಶೈಲಿಯ ಬಗೆಗೂ ಒಂದಿಷ್ಟು ಮಾತನ್ನು ಹೇಳದಿದ್ದರೆ, ನನಗೆ ಸಮಾಧಾನವಿರದು!

 

ಜಯಶ್ರೀ ದೇಶಪಾಂಡೆಯವರ ತಾಯಿನುಡಿ ಕನ್ನಡ, ಮನೆಯಲ್ಲಿ ಸಂಸ್ಕೃತದ ದಟ್ಟ ಛಾಯೆ. ವ್ಯಾವಹಾರಿಕ ಪರಿಸರ ಹಾಗು ಮರಾಠಿ ಸಂಗೀತವು ಇವರ ಮೇಲೆ ಆಳವಾದ ಪ್ರಭಾವ ಬೀರಿದೆ. ಇಂಗ್ಲಿಶ್ ಭಾಷೆ ಇವರ ಪ್ರೌಢ ಶಿಕ್ಷಣದ ಮಾಧ್ಯಮ. ಹಿಂದೀ ಭಾಷೆಯು ಮಾಧ್ಯಮಿಕ ಶಾಲೆಯ ಉಪಭಾಷೆ ಹಾಗು ಚಲನಚಿತ್ರಗಳ ಕೊಡುಗೆ! ಈ ರೀತಿಯಾಗಿ ಪಂಚಭಾಷಾ ಪ್ರವೀಣರಾದ ಜಯಶ್ರೀಯವರ ಶೈಲಿಯು ಅವರ ಕೃತಿಗಳಿಗೆ ವಿಶಿಷ್ಟವಾದ ಮೆರಗನ್ನು ನೀಡಿದೆ.

 

ಮಾರ್ದವತೆ ಜಯಶ್ರೀ ದೇಶಪಾಂಡೆಯವರ ಸಾಹಿತ್ಯದ ಪ್ರಧಾನ ಗುಣವಾಗಿದೆ. ಇವರ ಶೈಲಿಯು ದಟ್ಟ ಕಾನನದಲ್ಲಿ ಜುಳುಜುಳು ಎಂದು ಹರಿಯುವ ತೊರೆಯಂತಿದೆ, ಅರ್ಭಟದ ಪ್ರವಾಹದಂತಲ್ಲ. ಇಂತಹ ತೊರೆಯಲ್ಲಿ ಚಾರಣಿಗನು ಸುಖದಿಂದ ತೊರೆಯ ತಂಪನ್ನು ಅನುಭವಿಸಬಹುದು. ಅವನಿಗೆ ತೊರೆಯ ಜೊತೆಗೆ ಲಭಿಸುವ ಆತ್ಮೀಯತೆಯು ಅರ್ಭಟದ ಪ್ರವಾಹದ ಜೊತೆಗೆ ಸಿಗಲಾರದು. ಇಂತಹ ಶೈಲಿಯು ಜಯಶ್ರೀ ದೇಶಪಾಂಡೆಯವರಿಗೆ ಸಹಜವಾದ ಭಾಷಾಪ್ರೌಢಿಮೆಯಿಂದ ಸಾಧ್ಯವಾಗಿದೆ. ಮಾದರಿಗೆಂದು ಅವರ ಕೃತಿಯಿಂದ ಕೆಲವು ಸಾಲುಗಳನ್ನು ಎತ್ತಿಕೊಂಡು ಇಲ್ಲಿ ಸಾದರಪಡಿಸುತ್ತೇನೆ:

 

(೧) ಸರೋವರದ ಎರಡೂ ದಂಡೆಗುಂಟ ಸ್ವಪ್ನ ಸದೃಶ ಕಿರುಚಿತ್ರಗಳ ಹಾಗೆ ಅಂಟಿಕೊಂಡ ಬಣ್ಣದ ಹೆಂಚಿನ                         ಮನೆಗಳ ರಾಶಿ ಪೇರಿಸಿಕೊಂಡ ಊರುಗಳು ಕೈಬೀಸಿ ಬೀಳ್ಕೊಟ್ಟವು.

(೨) ಪಕ್ಕನೆ ನೆನಪಿನ ನೆರಳಿನಿಂದ ಎದ್ದು ಬಂದಳಾಕೆ, ಹಿಮದ ಹುಡುಗಿ!

(೩) ಭಾವ ನಿರ್ಭಾವದ ನಡುವಿನ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು

(೪) ಬೆರಗಿಗೆ ಹೊಸ ಅರ್ಥ ಕಂಡಂತಾಯಿತು. 

(೫) ಸ್ವಚ್ಛ ಶುಭ್ರ ಬಿಸಿಲಿನ ಆಕಾಶ ಕೆಲವೇ ಮೋಡಗಳಿಗೆ ಹಾದು ಹೋಗಲು ಅನುಮತಿ ನೀಡಿ ಉಳಿದೆಲ್ಲ ವಿಸ್ತಾರಕ್ಕೂ ನೀಲಿಯನ್ನು ಹಾಸಿತ್ತು.

 (೬) ಸ್ವಾಗತ ಪ್ರಾಂಗಣದಲ್ಲಿ ಎಡಬಲಕ್ಕೂ ಚಾಚಿದ ಗೋಡೆಗುಂಟ ಅಸಂಖ್ಯಾತ ಕಿರುಗೂಡುಗಳ ಒಡಲುಗಳಲ್ಲಿ ನಾನಾ ಧ್ಯಾನಸ್ಥ ವಿನ್ಯಾಸಮುದ್ರೆಯಲ್ಲಿರುವ ಬುದ್ಧ ಪ್ರತಿಮೆಗಳ ಪ್ರತಿಫಲಿತ ಮಿರುಗು............

 (೭) ಸೃಷ್ಟಿ ಸ್ಥಿತಿಗಳ ಸಮೀಕರಣದ ಯೋಗಭಾಗವನ್ನು ತನ್ನ ಪ್ರಖರತೆಯ  ಉನ್ಮೀಲನದಲ್ಲಿ ತುಂಬಿ ಚೆಲ್ಲುತ್ತಿದ್ದ ಸವಿತೃವಿನ ಆ ಕ್ಷಣದ ಅಸ್ತಿತ್ವ ನಮ್ಮ ಚಿತ್ತದಲ್ಲಿ ನೆಲೆಗೊಳ್ಳ ತೊಡಗಿತು.....

(೮) ಇನ್ನುಳಿದಂತೆ ದಂಡೆಸಾಲು ಹಿಡಿದು ಉದ್ದುದ್ದಕ್ಕೆ ಸಾಲುಗಟ್ಟಿದ ಹಸಿರುಡುಗೆಯ ಮರಗಳು ಚೆಲ್ಲುವ ನೆರಳಿನ ಚಿತ್ತಾರದ ವಿನ್ಯಾಸ

(೯) ನಿರಂತರ ಗುಂಗೀಹುಳವಾಗಿ ಕಾಡಿದ್ದು ಮರೆಯಲಸದಳ

(೧೦) ....ಅವರ ಈ ಗಂಗೆ ನೂರಾ ಎಪ್ಪತ್ತೈದು ಅಡಿಗಳೆತ್ತರದ ಹಿಂಭಾಗದಲ್ಲಿ  ಸಮಪಾತಳಿಯಲ್ಲಿ ಅಗಲವಾಗಿ ಹರಡಿ ಹಾಸಿ ಪ್ರಶಾಂತವಾದ ಜುಳು ಜುಳು ಗಾನಕ್ಕೆ ತನ್ನನ್ನೇ ತಂತಿಯಾಗಿಸಿಕೊಳ್ಳುತ್ತ ಸಲಿಲಗಾನ ಗುನುಗುತ್ತ ಬಂದವಳು ತೇಲು ತೇಲುತ್ತ ತಟಾರನೆ ಬುಡ ಕಡಿದ ಬಾಳೆಯಾಗಿ ಗರ್ಜಿಸುತ್ತ ಅಂಚಿನಿಂದ ಉರುಳುವಾಗ ಅಲ್ಲಿ ಜಗತ್ತೇ ಬೆರಗಾಗಿ ಕಣ್ಣರಸುವ ಅಚ್ಚರಿಯನ್ನು ಹೆರುತ್ತಾಳೆ............

 

 

ಜಯಶ್ರೀ ದೇಶಪಾಂಡೆಯವರು ಅನೇಕ ಪದಗಳನ್ನು ಸಹಜವಾಗಿ, ಅನಾಯಾಸವಾಗಿ ಸೃಷ್ಟಿಸುತ್ತಾರೆ. ಅಂತಹ ಕೆಲವು ಪದಗಳು ಇಲ್ಲಿವೆ: 

ಕಿರುಗರ್ವ

ನಿಸರ್ಗಪರ್ವ

ಹೆಗಲೆಣೆ

ಭಾಸ್ಕರನ ಉರಿಚೆಂಡಿನ ಉಪಸ್ಥಿತಿ

ಕಾಡುಮನೆ

ಚಾಚುಹಲಗೆ

ಸಪ್ತಮಾತೃಕೆಯರು (ಏಳು ಗೊಂಬೆಗಳು)

ಸಮಯಸೂಚಿಯ ಬೊಂಬೆಯಾಟ

ಸುಣ್ಣಗಲ್ಲಿನ ಶಿಲ್ಪಗಳು

ಇರಸರಿಕೆ

ಆಕಾಶಕಿಂಡಿ

ಉರುಳುಬಂಡಿ

ಬೆಂಕಿಗೂಡು

ಹಂದಿಗೂಡು

ಕಿರುಗೂಡು

ಸ್ವಾಗತ ಪ್ರಾಂಗಣ

ದೇಗುಲಸೂಚೀ ಹೂವು

ವಧುವಿನ ಮುಸುಕು

ಜಲಧೂಮ

ಜಲಪಾತ ಗೀತೆ

ಸ್ಮಶಾನ ಪ್ರವಾಸ

ಕಂದರಾಗ್ರೇಸರ

ಮೃತಾವಾಸ

 

ಕನ್ನಡದ ವಿವಿಧ ಲೇಖಕರು ಹಾಗು ವಿವಿಧ ಭಾಷೆಯ ಲೋಕನುಡಿಗಳನ್ನೂ ಸಹ ಸಹ ಜಯಶ್ರೀ ದೇಶಪಾಂಡೆಯವರು ಈ ಕೃತಿಯಲ್ಲಿ ಸಮಯೋಚಿತವಾಗಿ ಉದ್ಧರಿಸಿದ್ದಾರೆ. ಬಂಗಾರಕ್ಕೆ ಕುಂದಣವನ್ನಿಟ್ಟಂತೆ ಈ ವಿಶೇಷಣಗಳು ಓದುಗನನ್ನು ರಂಜಿಸುತ್ತವೆ. ಪ್ರವಾಸಕಥನದಲ್ಲಿ ಇಂತಹ ಉದ್ಧರಣೆಗಳು ಅನಿರೀಕ್ಷಿತವಾಗಿ, ಮೋದಕರವಾಗಿವೆ. ಅಂತಹ ಕೆಲವು ಉದ್ಧರಣೆಗಳು ಹೀಗಿವೆ:

(೧) ‘ಈ ಬಾನು.... ಈ ಹೂವು... ಈ ಹಕ್ಕಿ.... ಈ ಚುಕ್ಕಿ ತೇಲಿ ಸಾಗುವ ಈ ಮುಗಿಲು’... (ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವನ).

 

(೨) ಮರಣದಿಂ ಮುಂದೇನು? ಪ್ರೇತವೋ? ಭೂತವೋ? ಪರಲೋಕವೋ? ಪುನರ್ಜನ್ಮವೋ? ಅದೇನೋ!

ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ! ಧರೆಯ ಬಾಳ್ಗದರಿನೇಂ? ಮಂಕುತಿಮ್ಮ!

 

(೩) ಆಕಾಶಕ್ಕೆ ನೀಲಿ ಬಳಿದವನಾರೋ

 

(೪) ಜಿಸ್ಕೀ ಲಾಠೀ ಉಸ್ಕೀ ಭೈಂಸ್

 

(೫) ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ

 

()  ಅಗರ್ಫಿರ್ದೌಸ್ ಬರೂ--ಜಮೀನ್ ಅಸ್ತ, ಹಮೀನಸ್ತ, ಹಮೀನಸ್ತ,ಹಮೀನಸ್ತ.

 

 

ಯಾವುದೇ ಲೇಖಕನ ಒಂದು ಕೃತಿ ಓದುಗನಿಗೆ ಮೆಚ್ಚುಗೆಯಾಗಲು ಎರಡು ಕಾರಣಗಳಿವೆ: (೧) ಕೃತಿಯ ಅಂತರಂಗ (೨) ಕೃತಿಯ ಬಹಿರಂಗ.

 

ಜಯಶ್ರೀ ದೇಶಪಾಂಡೆಯವರ ‘ಹಲವು ನಾಡು ಹೆಜ್ಜೆ ಹಾಡು’  ಕೃತಿಯು ಅವರು ಸಂದರ್ಶಿಸಿದ ದೇಶಗಳ ನಿಸರ್ಗ, ಸಂಸ್ಕೃತಿ, ಸಾಹಿತ್ಯ ಹಾಗು ಜನಜೀವನಗಳ ಪರಿಚಯವನ್ನು ಮಾಡಿಕೊಟ್ಟಿದೆ. ಇಲ್ಲಿ ಬಳಸಲಾದ ಸರಸ ಶೈಲಿಯು ಈ ಕೃತಿಯನ್ನು ಸುರಸ ಕೃತಿಯನ್ನಾಗಿ ರೂಪಿಸಿದೆ.  (https://sallaap.blogspot.com/2022/07/blog-post.html)

 

ಭಾಷೆಯನ್ನು ವಿವಿಧ ರೂಪಗಳಲ್ಲಿ ಸಲೀಲವಾಗಿ ಬಳಸುವ ಜಯಶ್ರೀ ದೇಶಪಾಂಡೆಯವರ ಈ ಸಾಮರ್ಥ್ಯ ಓದುಗನಿಗೆ ಸಾಹಿತ್ಯದ ಸುಖವನ್ನು  ಕೊಡುವುದರಲ್ಲಿ ಆಶ್ಚರ್ಯವೇನಿದೆ?

Friday, July 8, 2022

ಹಲವು ನಾಡು ಹೆಜ್ಜೆ ಹಾಡು---ಜಯಶ್ರೀ ದೇಶಪಾಂಡೆ....ಭಾಗ ೧

 ‘ಹಲವು ನಾಡು ಹೆಜ್ಜೆ ಹಾಡು’ ಇದು ಜಯಶ್ರೀ ದೇಶಪಾಂಡೆಯವರು ರಚಿಸಿದ ಪ್ರವಾಸಕಥನ. ಈ ಕೃತಿಯನ್ನು ಸರಸ ಸಾಹಿತ್ಯ ಹಾಗು ಸುರಸ ಸಾಹಿತ್ಯ ಎಂದು ಕರೆಯಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಇದು ಶುಷ್ಕ ಪ್ರವಾಸವರ್ಣನೆಯಾಗಿರದೆ, ಆ ಎಲ್ಲ ನಾಡಿಗರ ಜೊತೆಗೆ ಜಯಶ್ರೀಯವರು ಸಾಧಿಸಿದ ಆಪ್ತಸಂವಹನೆ, ಆ ದೇಶಗಳ ವಿವಿಧ ವೈಶಿಷ್ಟಗಳು ಹಾಗು ಅದರಿಂದ  ತಮ್ಮ ಮನಸ್ಸು ವಿಸ್ತಾರವಾದ ಪರಿಯನ್ನು ಹಾಗು ಮುದಗೊಂಡ ಪರಿಯನ್ನು, ಜಯಶ್ರೀಯವರು ಪರಿಪರಿಯಾಗಿ ವರ್ಣಿಸಿದ್ದಾರೆ. ಈ ಪರದೇಶಗಳ ಭೌತಿಕ ಹಾಗು ಸಾಂಸ್ಕೃತಿಕ ವೈಭವವನ್ನು ಗ್ರಹಿಸಲು ತೆರೆದ ಕಣ್ಣುಗಳು, ತೆರೆದ ಮನಸ್ಸು ಹಾಗು ಸಹೃದಯ ರಸಿಕತೆ ಬೇಕು. ಅದು ಈ ಲೇಖಕಿಯಲ್ಲಿ ಇದೆ ಎನ್ನುವುದು ನಿಸ್ಸಂದೇಹವಾಗಿದೆ. ಅದರ ಜೊತೆಗೇ ಭಾರತೀಯ ಮನಸ್ಸೂ ಜ್ವಲಂತವಾಗಿದೆ. ಆದುದರಿಂದಲೇ, ಈ ಕೃತಿಯನ್ನು ಓದುತ್ತಿರುವಾಗ ನಮಗೆ ನಮ್ಮವನೇ ಆದ ಆದಿಕವಿ ಪಂಪನು ‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಉದ್ಗರಿಸಿದ್ದು ನೆನಪಿಗೆ ಬರುತ್ತದೆ. ಇಲ್ಲಿ ಬನವಾಸಿಯ ಬದಲಾಗಿ ಹಲವು ಪಾಶ್ಚಿಮಾತ್ಯ ದೇಶಗಳಿವೆ! ಇಷ್ಟಲ್ಲದೆ, ಈ ದೇಶಗಳ ಸಾಂಸ್ಕೃತಿಕ, ರಾಜಕೀಯ ಹಾಗು ಐತಿಹಾಸಿಕ ಹಿನ್ನೆಲೆಗಳನ್ನೂ ಸಹ ಜಯಶ್ರೀ ದೇಶಪಾಂಡೆಯವರು ನೀಡಿರುವದರಿಂದ ಈ ಕೃತಿಯನ್ನು ೩೬೦ ಡಿಗ್ರೀಗಳ ಸಂಪೂರ್ಣ ಕಥನವೆನ್ನಬೇಕು.

 ‘ಹಲವು ನಾಡು ಹೆಜ್ಜೆ ಹಾಡು’ ಕೃತಿಯನ್ನು ನಾವು ಎರಡು ದೃಷ್ಟಿಕೋನಗಳಿಂದ ವಿಶ್ಲೇಷಿಸುವುದು ಅವಶ್ಯಕವಾಗಿದೆ. ಮೊದಲನೆಯದು ಕಥನಕೌಶಲ; ಎರಡನೆಯದು ಭಾಷಾಪ್ರತಿಭೆ. ಜಯಶ್ರೀ ದೇಶಪಾಂಡೆಯವರ ಕಥೆಗಳನ್ನು ಹಾಗು ಕಾದಂಬರಿಗಳನ್ನು ಓದಿದವರಿಗೆ ಅವರ ಕಥನಕೌಶಲದ ಬಗೆಗೆ ಹೇಳಬೇಕಾಗಿಲ್ಲ. ಅದೇ ಕುಶಲತೆಯು ಈ ಪ್ರವಾಸ ಕಥನದಲ್ಲೂ ವ್ಯಕ್ತವಾಗಿದೆ. ತಮ್ಮ ಆಪ್ತರೊಂದಿಗೆ ಆರಾಮವಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿರುವಂತೆ ಬರೆಯುತ್ತಾರೆ ಜಯಶ್ರೀಯವರು. ಹೀಗಾಗಿ ಅವರ ಮಾತು ನೇರವಾಗಿ ಓದುಗರ ಹೃದಯವನ್ನು ತಲುಪುತ್ತದೆ.

 ಫಿನ್ ಲ್ಯಾಂಡಿನ ಬಗೆಗೆ ಅವರು ಬರೆದ ಲೇಖನದ ಒಂದು ತುಣುಕನ್ನು ಇಲ್ಲಿ ಉದಾಹರಣೆಗೆಂದು ಎತ್ತಿಕೊಳ್ಳುತ್ತೇನೆ:

" ಮುಂಜಾವಿನ ಸೂರ್ಯ ಈರ್ಯಾಳೊಂದಿಗೆ ನಮ್ಮನ್ನು ನಗುತ್ತ ಸ್ವಾಗತಿಸಿದ್ದ. ಆಹ್ಲಾದಕರ ಗಾಳಿ, ಎಲ್ಲೆಲ್ಲೂ ಹಸರು ಮತ್ತು ಗಿಣಿಹಸುರಿನ ಆಚ್ಛಾದನೆ...... ಸರೋವರದ ತುಂಬ ನೀಲಿ ನೀಲಿಯಾಗಿ ಚಲಪಲ ಅನ್ನುವ ನೀರು ಅದನ್ನೇ ಎವೆಯಿಕ್ಕದೆ ನೋಡುವಂತೆ ಮಾಡಿತ್ತು. ಬೆಳಗಿನ ಕಾಫಿಯೊಂದಿಗೆ ಅವಳೇ ತಯಾರಿಸಿದ ಹಣ್ಣುಗಳ ಕೇಕ್ ತುಂಬಾ ರುಚಿ ಎನಿಸಿತ್ತು. ನಮ್ಮೊಂದಿಗೆ ಒಯ್ದಿದ್ದ ರವೆ ಉಂಡಿಗಳನ್ನು ಅವಳೂ ಬಹಳ ಪ್ರೀತಿಯಿಂದ ಅಸ್ವಾದಿಸಿದಳು.....................". ಈ ಕಥನದಲ್ಲಿ ಬರುವ ಸೂರ್ಯ, ಗಾಳಿ, ನಿಸರ್ಗದ ಬಣ್ಣಗಳು, ನೀರಿನ ಚಲಪಲ , ಈರ್ಯಾ ಹಾಗು ಅವಳು ತಯಾರಿಸಿದ ಬೆಳಗಿನ ಕಾಫೀ ಮತ್ತೂ ಕೇಕ್, ಜೊತೆಗೆ ಜಯಶ್ರೀಯವ ರವೆ ಉಂಡಿಗಳು ಎಂತಹ ಉಲ್ಲಾಸಭರಿತ ಆತ್ಮೀಯತೆಯನ್ನು ಸೃಷ್ಟಿಸುತ್ತವೆಯಲ್ಲವೆ?

ಫಿನ್ ಲ್ಯಾಂಡಿನ ವರ್ಣನೆಯನ್ನು ಜಯಶ್ರೀಯವರು ಪ್ರಾರಂಭಿಸುವುದು ಒಂದು ಅಪೂರ್ವ ಘಟನೆಯಾದ ಮಧ್ಯರಾತ್ರಿಯ ಸೂರ್ಯನೊಂದಿಗೆ. ಫಿನ್ ಲ್ಯಾಂಡಿನ ಈ ಸೂರ್ಯನನ್ನು ನೋಡಿದಾಗ ಜಯಶ್ರೀಯವರಿಗೆ ನೆನಪಾಗುವುದು ವಸಂತರಾವ ದೇಶಪಾಂಡೆ ಎನ್ನುವ ಪ್ರಸಿದ್ಧ ಮರಾಠೀ ಗಾಯಕರೊಬ್ಬರು ಹಾಡಿದ  ಸೂರ್ಯಸ್ತುತಿ ಗಾಯನ:

" ತೇಜೋನಿಧಿ ಲೋಹಗೋಳ.....ಭಾಸ್ಕರ ಹೇ ಗಗನರಾಜ...

ದಿವ್ಯ ತುಝಾ ತೇಜಾನೇ ಝಗಮಗಲೇ ಗಗನ ಆಜ.......".

 ಜಯಶ್ರೀಯವರ ನೋಟ ಫಿನ್ ಲ್ಯಾಂಡಿನ ಸೂರ್ಯನಲ್ಲಿ; ಅವರ ಭಾವೋದ್ದೀಪನೆ ಭಾರತೀಯ ಸಂಗೀತದಲ್ಲಿ!

 ರಾತ್ರಿ ಒಂದೂವರೆ ಗಂಟೆಗೆ ಜಯಶ್ರೀ ದೇಶಪಾಂಡೆ ಹಾಗು ಇತರರು ಮನೆಗೆ ಮರಳುತ್ತಾರೆ. ಆದರೆ ಫಿನ್ ಲ್ಯಾಂಡಿನ ಸೂರ್ಯನಿಗೆ ಎಲ್ಲಿದೆ ವಿಶ್ರಾಂತಿ? ಜಯಶ್ರೀಯವರು ಹೇಳುತ್ತಾರೆ:

‘ಬಾನು ನಸುಬೆಳ್ಳಗೆ ಬೆಳಗಿಕೊಂಡೇ ಇತ್ತು! ಸೂರ್ಯ ಆಕಾಶದಲ್ಲಿ ನಗುತ್ತಲೇ ಇದ್ದ!’

 ಜಯಶ್ರೀಯವರು ಕುತೂಹಲಿಗಳು ಅರ್ಥಾತ್ ಜ್ಞಾನಪಿಪಾಸುಗಳು. ಅವರು ಅಲ್ಲಿಯ ಜನರೊಡನೆ ನಡೆಸಿದ ಸಂಭಾಷಣೆಗಳು ಪರಸ್ಪರ ಮೈತ್ರಿಯನ್ನು ಹೆಚ್ಚಿಸುವದಷ್ಟೇ ಅಲ್ಲ, ಆ ನಾಡುಗಳ ಬಗೆಗಿನ ನಮ್ಮ ಜ್ಞಾನವನ್ನೂ ಸಹ ಹೆಚ್ಚಿಸುತ್ತವೆ. 

 ಫಿನ್ ಲ್ಯಾಂಡಿನಲ್ಲೆಲ್ಲ ಹಬ್ಬಿಕೊಂಡ ಕಾಡು  ಅಲ್ಲಿಯ ಪ್ರಜೆಗಳ ವೈಯಕ್ತಿಕ ಆಸ್ತಿಯಾಗಿದೆ. ಹೀಗಾಗಿ ಇಲ್ಲಿಯ ಜನರು ಜೂನ್, ಜುಲಾಯ್ ಹಾಗು ಅಗಸ್ಟು ತಿಂಗಳುಗಳಲ್ಲಿ ತಮ್ಮ ತಮ್ಮ ವೈಯಕ್ತಿಕ ಕಾಡುಗಳಲ್ಲಿ ಇರುವ ಕಾಡುಮನೆಗಳಿಗೆ ಧಾವಿಸುತ್ತಾರೆ. ಅಲ್ಲಿ ಬೋಟಿಂಗ್, ಶಿಬಿರಾಗ್ನಿ, ಮೊದಲಾದ ಮೋಜಿನ ಹಾಗು ಸಾಹಸದ ಆಟಗಳನ್ನು ಆಡುತ್ತಾರೆ. ಜಯಶ್ರೀ ದೇಶಪಾಂಡೆಯವರು ಸಹ ಇವೆಲ್ಲವುಗಳಲ್ಲಿ ಭಾಗವಹಿಸಿ ಸಹೃದಯ ಸಂಗಾತಿಗಳ ಜೊತೆಗೆ ಖುಶಿ ಪಟ್ಟಿದ್ದಾರೆ. ಅದರಲ್ಲಿಯೂ ಸೌನಾ ಸ್ನಾನದ ಸಂಭ್ರಮವಂತೂ ಶರೀರ ಹಾಗು ಮನಸ್ಸುಗಳೆರಡನ್ನೂ ತಣಿಸುವಂತಹ ಆಹ್ಲಾದಕರ ಸಂಗತಿಯಾಗಿದೆ!

 ಫಿನ್ ಲ್ಯಾಂಡಿನ ನಿಸರ್ಗವನ್ನು ಸವಿದ ಬಳಿಕ, ಅಲ್ಲಿಯ ಜನಜೀವನವನ್ನು ವರ್ಣಿಸದಿದ್ದರೆ, ಪ್ರವಾಸಕಥನವು ಪೂರ್ಣವಾದೀತೆ? ಜಯಶ್ರೀಯವರು ಈ ಕಥನದ ಭಾಗವಾಗಿ ಫಿನ್ನಿಶ್ ಜನರ ಬಗೆಗೆ ಹೇಳುವ ಒಳನೋಟದ ಮಾತುಗಳ ಒಂದು ಭಾಗ ಇಲ್ಲಿದೆ:

 " ಇಲ್ಲಿನ ಸ್ತ್ರೀ, ಪುರುಷರು ಒಬ್ಬಂಟಿಗರಾಗಿ ಬದುಕುವದು ಅಪರೂಪದ ಸಂಗತಿಯೇ ಅಲ್ಲ, ಹಾಗೆ ಇರಲು ಅಗತ್ಯವಿರುವ ದೈಹಿಕ, ಮಾನಸಿಕ, ಸಾಮಾಜಿಕ ಅನುಕೂಲಗಳನ್ನು ಅವರು ಗಳಿಸಿಕೊಂಡಿರುತ್ತಾರೆ. ಸಿಂಗಲ್ ಮದರ್, ಸಿಂಗಲ್ ಫಾದರ್ ಇವೆರಡೂ ಸರ್ವೇ ಸಾಮಾನ್ಯ. ಮಕ್ಕಳಾಗಲು ಮದುವೆಯಾಗಲೇಬೇಕು ಎನ್ನುವ ಕಡ್ಡಾಯವಿಲ್ಲ..... ಕೊನೆಯವರೆಗೂ ಜೊತೆ ಇರಲಿ, ಇಲ್ಲದಿರಲಿ ತಾವು ತಾವಾಗಿಯೇ ಜೀವನವನ್ನು ಆರೋಗ್ಯಪೂರ್ಣವಾಗಿ ಬದುಕಿ ದಾಟಿಬಿಡುವ ಇವರ ಜೀವನಶೈಲಿಯ ಹಿಂದಿರುವುದು ಇವರ ದೈಹಿಕ/ ಮಾನಸಿಕ ಗಟ್ಟಿಮುಟ್ಟುತನ ಅಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ......"

 (ಫಿನ್ ಲ್ಯಾಂಡಿನ ಸಮಾಜದ ರೀತಿ,ನೀತಿಗಳನ್ನು ಟೀಕಿಸದೆ, ಅವುಗಳನ್ನು ಒಪ್ಪಿಕೊಳ್ಳುವಂತಹ ಸರ್ವಗುಣಗ್ರಾಹಿ ಮನೋಭಾವವನ್ನು ಇಲ್ಲಿ ನಾವು ನೋಡಬಹುದು. ಇದು ಯಾವುದೇ ಲೇಖಕನಲ್ಲಿ ಇರಲೇಬೇಕಾದ ಗುಣ.)

 ಇನ್ನು ಫಿನ್ ಲ್ಯಾಂಡಿನ ಇತಿಹಾಸ ಹಾಗು ರಾಜಕಾರಣದ ಬಗೆಗೆ ಒಂದು ಮಾತು ಬೇಡವೆ? ಈ ಅನುಭವ ಅವರಿಗೆ ದೊರೆಯುವುದು ಪ್ರವಾಸೀ ಬಸ್ ಒಂದರಲ್ಲಿ. ಫಿನ್ ಲ್ಯಾಂಡಿನಿಂದ ರಶಿಯಾದ ಸೇಂಟ್ ಪೀಟರ್ಸ್ ಬರ್ಗ ನಗರಕ್ಕೆ ಬಸ್ ಒಂದರಲ್ಲಿ ಜಯಶ್ರೀಯವರು ಹೊರಟುಬಿಡುತ್ತಾರೆ. ಸುದೈವದಿಂದ ಮೈಯಾ ವೆಕೇವಾ ಎನ್ನುವ ಹೆಣ್ಣು ಮಗಳೊಬ್ಬಳು ಜಯಶ್ರೀಯವರಿಗೆ ಆಕಸ್ಮಿಕ ಜೊತೆಗಾತಿಯಾಗಿ ದೊರೆತಳು. ಒಂಬತ್ತು ಭಾಷೆಗಳನ್ನು ತಿಳಿದ ಹಾಗು ಪೋಲೀಸ್ ಇಲಾಖೆಯಲ್ಲಿ ತರ್ಜುಮೆಕಾರಳಾಗಿ ಕೆಲಸ ಮಾಡುತ್ತಿದ್ದ ಅವಳು ತಿಳಿಸಿದ ಸಂಗತಿಯೆಂದರೆ ರಶಿಯಾ ಹಾಗು ಸ್ವೀಡನ್ ದೇಶಗಳ ನಡುವೆ ಸಿಲುಕಿದ ಫಿನ್ ಲ್ಯಾಂಡ್ ಈ ದೇಶಗಳ ದಬ್ಬಾಳಿಕೆಯಿಂದಾಗಿ ನಲುಗಿ ಹೋಗಿತ್ತು. ಕಷ್ಟಪಟ್ಟು ಮೇಲೆದ್ದುಕೊಂಡು ನಿಂತಿದ್ದು ಈ ಪುಟ್ಟ ದೇಶದ ದೊಡ್ಡ ಸಾಧನೆ. ಮೈಯಾಳ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಂಡ ಜಯಶ್ರೀಯವರು, ಫಿನ್ ಲ್ಯಾಂಡಿನ ಸಂಕಟಗಳನ್ನು ಹಾಗು ಸಾಹಸಮಯ ಪುನರುತ್ಥಾನವನ್ನು ಅರಿತುಕೊಂಡು ಓದುಗರಿಗೆ ಸರಳವಾಗಿ ತಿಳಿಸಿದ್ದಾರೆ.

 ಫಿನ್ ಲ್ಯಾಂಡಿನ ನಂತರ ಜಯಶ್ರೀಯವರು, ನಮ್ಮನ್ನು ರಶಿಯಾಕ್ಕೆ ಕರೆದುಕೊಂಡು ಹೋಗುತ್ತಾರೆ. ರಶಿಯಾದ ಅವರ ಪ್ರವಾಸ ಒಂದೇ ದಿನದ್ದು. ಆದರೆ ಅಲ್ಲಿ ಅವರು ಪಡೆದ ಅನುಭವ ಮನ ತಣಿಸುವಂತಹದು. ಸೇಂಟ್ ಪೀಟರ್ಸಬರ್ಗ ಇದು ರಶಿಯಾದಲ್ಲಿ ಪ್ರಸಿದ್ಧವಾದ ಪ್ರವಾಸಿತಾಣ. ಇಲ್ಲಿರುವ ಕೆಥೆಡ್ರಾಲ್ ತನ್ನ ವಾಸ್ತುಶಿಲ್ಪ ಹಾಗು ವರ್ಣಚಿತ್ರಗಳಿಂದಾಗಿ ಆಕರ್ಷಕವಾಗಿದೆ.

 ಹೆರಿಟೇಜ್ ಎನ್ನುವ ವಸ್ತುಸಂಗ್ರಹಾಲಯವೂ ಸಹ ದಿಙ್ಭ್ರಮೆಗೊಳಿಸುವಂತಹದು. ಇಲ್ಲಿ ಭಾರತೀಯ ಮೂಲದ ಪ್ರತಿಮೆಗಳೂ ಇವೆ. ಈ ವಸ್ತುಸಂಗ್ರಹಾಲಯವನ್ನು ಇಷ್ಟು ಶ್ರೀಮಂತಗೊಳಿಸಿದವಳು ಎಲಿಸಬೆಥ್ ಎನ್ನುವ ರಶಿಯಾದ ರಾಣಿ. ಇವಳ ಬಗೆಗಿನ ಒಂದು ಪಕ್ಷಿನೋಟವನ್ನು ಜಯಶ್ರೀಯವರು ಪುಸ್ತಕದ ಕೊನೆಯಲ್ಲಿ ಕೊಟ್ಟಿದ್ದಾರೆ. ಇದನ್ನೆಲ್ಲ ಕಣ್ಣಾರೆ ನೋಡಿದ ಹಾಗು ಮುಕ್ತಮನಸ್ಸಿನಿಂದ ಅನುಭವಿಸಿದ ಜಯಶ್ರೀಯವರು ಪ್ರತಿಯೊಂದು ದೇಶವು ತನ್ನ ಇತಿಹಾಸದಿಂದ ಹಾಗು ಪರಂಪರೆಯಿಂದ ಸಮೃದ್ಧವಾಗಿರುತ್ತದೆ ಎಂದು ಉದ್ಗರಿಸುತ್ತಾರೆ.

 ಜಯಶ್ರೀಯವರು ತಮ್ಮ ಕಣ್ಣುಗಳನ್ನು ಯಾವಾಗಲೂ ತೆರೆದುಕೊಂಡೇ ಇರುವವರು. ಹೀಗಾಗಿ ರಶಿಯಾದ ಶ್ರೀಮಂತ ಮ್ಯೂಜಿಯಮ್ ಬಳಿಯ ರಸ್ತೆಗಳಲ್ಲಿ ಬಡ ಮುದುಕಿಯರು ತಮ್ಮ ಹತ್ತಿರವಿರುವ ಆಟದ ವಸ್ತುಗಳನ್ನು ಹಾಗು ಬೊಂಬೆಗಳನ್ನು ಮಾರಾಟ ಮಾಡಲು ಎಷ್ಟು ಪರದಾಡುತ್ತಾರೆ ಎನ್ನುವುದನ್ನು ನವಿರಾಗಿ ವಿವರಿಸುತ್ತಾರೆ. ಈ ಮುದುಕಿಯರು ಮಾರುತ್ತಿರುವ ‘ಆಟದ ಗಾಡಿ’ಯನ್ನು ನೋಡಿದಾಗ ಜಯಶ್ರೀಯವರಿಗೆ ನಮ್ಮ ‘ಮೃಚ್ಛಕಟಿಕ’ದ ನೆನಪಾಗುತ್ತದೆ! (ಇದನ್ನೇ ನೋಡಿ, ಭಾರತೀಯತೆ ಎನ್ನುವುದು!)

ಚಾಣಾಕ್ಷ ಮೋಸಗಾರಿಕೆ ಹಾಗು ಕಳ್ಳತನದ ಬಗೆಯೂ ಇಲ್ಲಿ ಕೆಲವು ಅನುಭವದ ಮಾತುಗಳಿವೆ. (ರಶಿಯಾದ ಅರ್ಥವ್ಯವಸ್ಥೆಯ ಬಗೆಗೆ ಇದು ಒಂದು ಪಾರ್ಶ್ವನೋಟವೆಂದು ಹೇಳಬಹುದು.)  ಹಾಗೆಂದು ಅಲ್ಲಿಯ ಆಟದ ಬೊಂಬೆಗಳ ಹೆಚ್ಚುಗಾರಿಕೆಯನ್ನು ಕಂಡು ಆನಂದಿಸಲು ಹಾಗು ಕೊಂಡಾಡಲು ಜಯಶ್ರೀಯವರು ಹಿಂದೆ ಬೀಳುವುದಿಲ್ಲ. ನಿಷ್ಪಕ್ಷಪಾತವಾದ ಸತ್ಯದರ್ಶನಕ್ಕೆ ಇದು ಉದಾಹರಣೆಯಾಗಿದೆ. ಈ ಬೊಂಬೆಗಳನ್ನು ಜಯಶ್ರೀಯವರು ನೋಡಿ ಸುಮ್ಮನೆ ಹೋಗದೆ ಆ ಬೊಂಬೆಗಳ ಹಿನ್ನೆಲೆಯನ್ನು ಅರಿತುಕೊಂಡು, ನಮಗೂ ತಿಳಿಸುತ್ತಾರೆ. ಅದು ಹೀಗಿದೆ:

“ ಮಾತ್ರೋಷ್ಕಾ ಬೊಂಬೆ  ರಷ್ಯಾದ ಜಾನಪದ ಕಲೆಯ ಹೆಗ್ಗಳಿಕೆ, ಹೆಗ್ಗುರುತು. ಮರಗೆಲಸದ ಕಲಾಕುಸುರಿಯ ದ್ಯೋತಕ.......ಕಣ್ಣಿಗೆ ರಾಚದೇ ತಂಪೇ ಉಣಿಸುವ ಚೆಲುವು....... ಭಾವ, ನಿರ್ಭಾವದ ನಡುವಣ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು..... ಬಾರ್ಬಿಯಂಥ ಕೃತಕತೆಯ ಸುಳಿವಿಲ್ಲದ ಮಾರ್ದವ.......”.

 ರಶಿಯಾದ ಕ್ಷಿಪ್ರದರ್ಶನದ ನಂತರ ಜಯಶ್ರೀಯವರು ನಮ್ಮನ್ನು ಸ್ವೀಡನ್ನಿನಲ್ಲಿರುವ ಸ್ಟಾಕ್ ಹೋಮಿಗೆ ಕರೆದೊಯ್ದು, ಅಲ್ಲಿಯ ನೋಬೆಲ್ ಪ್ರಶಸ್ತಿಯ ಸಭಾಂಗಣದ ದರ್ಶನ ಮಾಡಿಸುತ್ತಾರೆ. ಅಲ್ಲಿಂದ ಎಸ್ತೋನಿಯಾ ಎನ್ನುವ ಪುಟ್ಟ ದೇಶದ ದರ್ಶನ. ಈ ದೇಶದ ರಾಜಧಾನಿ ತಾಲೀನ್. ತಾಂತ್ರಿಕತೆ-ಆಧುನಿಕತೆಯೊಂದಿಗೆ ಮಧ್ಯಯುಗೀನ ಇತಿಹಾಸವನ್ನೂ ಸಮೃದ್ಧವಾಗಿ ಈ ನಗರವು ಉಳಿಸಿ, ಬೆಳೆಸಿಕೊಂಡು ಬಂದಿದೆ ಎನ್ನುವುದು ಲೇಖಕಿಯ ಟಿಪ್ಪಣಿ.

 ಝೆಕ್ ರಿಪಬ್ಲಿಕ್ಕಿನ ಪ್ರಾಗ್ ನಗರದ ಖಗೋಳಗಡಿಯಾರವು ತುಂಬ ಖ್ಯಾತವಾದ ಪ್ರವಾಸೀ ಆಕರ್ಷಣೆ. ಈ ಗಡಿಯಾರದ ಎಲ್ಲ ವಿವರಗಳನ್ನು ನೀಡುವುದರ ಜೊತೆಗೇ, ಜಯಶ್ರೀಯವರು ಆ ನಗರದ ಇತಿಹಾಸ ಹಾಗು ಕಟ್ಟಡಗಳ  ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನೂ ನಮ್ಮೆದುರಿಗೆ ಇಡುತ್ತಾರೆ.

 ಹಂಗೆರಿಯ ಬುಡಾಪೆಸ್ಟಿನಲ್ಲಿರುವ ಬೆಸಿಲಿಕಾದ ಬಗೆಗೆ ಜಯಶ್ರೀಯವರು ಬರೆಯುವುದು ಹೀಗಿದೆ:

“ತನ್ನ ಊರು, ದೇಶ, ಮಠ, ಪರಂಪರೆ, ಆಗಿ ಹೋದ ಸಂತರು, ಗೈದ ಸಾಧನೆಗಳು, ನಡೆಸಿದ ಸೇವೆಗಳು...ಮುಂದಾಗಲಿರುವ ಬೆಳವಣಿಗೆ ಇವೆಲ್ಲವನ್ನೂ ಸಚಿತ್ರವಾಗಿ, ಮೂರ್ತಿಸಹಿತವಾಗಿ, ಕಣ್ಣು ಕೋರೈಸುವ ವರ್ಣವೈಭವ, ಗಾಜಿನ ಮೇಲಿನ ವರ್ಣಚಿತ್ತಾರಗಳು, ಚಿತ್ರಗಳು ಇದೆಲ್ಲದರ ಇತಿಹಾಸವನ್ನು ಇಂದಿನ ವರ್ತಮಾನಕ್ಕೆ ತಂದಿಳಿಸುವ ಅವರ ಪರಿಗೆ ಬೆರಗಾಗುತ್ತಲೇ ಒಳಗೆ ಹೋದ ನನಗೆ ಇನ್ನೊಂದು ಅಲಭ್ಯ ಲಾಭ ದೊರೆಯಿತು.....”

 ‘ಕಬ್ಬಿಣದ ಶೂಗಳ ಸ್ಮಾರಕ’ ಮಾತ್ರ ಅತ್ಯಂತ ಭಯಾನಕವಾದ ಸ್ಮಾರಕವಾಗಿದೆ. ಜ್ಯೂ ಕೈದಿಗಳನ್ನು ನೇಣಿಗೇರಿಸುವ ಮೊದಲು, ಅವರ ತಲೆ ಬೋಳಿಸಿ, ಶೂಗಳನ್ನು ಕಳಿಚಿ ಇಡಲು ಹೇಳಲಾಗುತ್ತಿತ್ತು. ಶಿಲ್ಪಿ ಗ್ಯೂಲಾ ಫೊವರ್ ಮತ್ತು ಸಿನಿಮಾ ನಿರ್ಮಾಪಕ ಕೈನ ಟೊಗೇ ಅವರಿಗೆ ಇಂತಹ ದುರ್ಮರಣಗಳಿಗೆ ಒಂದು ಸ್ಮಾರಕ ಬೇಕೆನಿಸಿತು. ಹಂಗೆರಿಯ ಪಾರ್ಲಿಮೆಂಟಿನ ಎದುರಿನಲ್ಲಿ, ಡಾನ್ಯೂಬ್ ನದಿಯ ಪಕ್ಕದಲ್ಲಿ ಅವರು ಒಂದು ಸ್ಮಾರಕವನ್ನು ನಿರ್ಮಿಸಿದರು. ಆದರೆ ಇಲ್ಲಿ ನಿಜವಾದ ಶೂಗಳ ಬದಲು, ಕಬ್ಬಿಣದ ಶೂಗಳನ್ನು ಇಡಲಾಗಿದೆ.

 ‘ಎಂಬತ್ತು ದಿನಗಳಲ್ಲಿ ಧರಣಿಮಂಡಲದ ಸುತ್ತ’ ಎನ್ನುವ ಫ್ರೆಂಚ್ ಲೇಖಕ ಜೂಲ್ಸ್ ವರ್ನನ ಕಾದಂಬರಿಯನ್ನು ನೀವು ಓದಿರಬಹುದು. ಜಯಶ್ರೀ ದೇಶಪಾಂಡೆಯವರು ಎಷ್ಟು ದಿನಗಳಲ್ಲಿ ತಮ್ಮ  ಪ್ರಯಾಣವನ್ನು ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಧರಣಿಮಂಡಲದ ಅನೇಕ ದೇಶಗಳನ್ನು ಇವರು ಸುತ್ತಿ ಹಾಕಿದ್ದಾರೆ. ಇವರು ಪಯಣಿಸಿದ ಹಾಗು ಈ ಕೃತಿಯಲ್ಲಿ ನಮ್ಮನ್ನು ಕರೆದೊಯ್ದ ಇತರ ದೇಶಗಳೆಂದರೆ, ಆಸ್ಟ್ರಿಯಾ, ಜರ್ಮನಿ, ಸ್ವಿಝರ್ ಲ್ಯಾಂಡ, ಫ್ರಾನ್ಸ್, ಪೋಲ್ಯಾಂಡ್, ಸಿಂಗಪುರ ಹಾಗು ಅಮೆರಿಕಾ. ಇವುಗಳಲ್ಲಿ ಆಸ್ಟ್ರಿಯಾ ಹಾಗು ಜರ್ಮನಿಗಳಲ್ಲಿ ಜ್ಯೂ ಜನರ ಹತ್ಯಾಕಾಂಡದ ಸಂಗ್ರಹಾಲಯಗಳಿವೆ.

 ಇನ್ನು ಸ್ವಿಝರ್-ಲ್ಯಾಂಡಿನಲ್ಲಿ ನಿಸರ್ಗದಚೆಲುವು ಮೈತುಂಬಿಕೊಂಡು ನಿಂತಿದೆ. ಅದನ್ನು ಸವಿದ ಲೇಖಕಿಯು ಅದನ್ನು ವರ್ಣಿಸುವುದು ಫಿರ್ದೌಸನ ಶೇರ್ ಒಂದರ ಮೂಲಕ:

“ಅಗರ್ ಫಿರ್ದೌಸ್ ಬರೂ-ಎ-ಜಮೀನ್ ಅಸ್ತ,

ಹಮೀನಸ್ತ, ಹಮೀನಸ್ತ,ಹಮೀನಸ್ತ.

(ಈ ಭೂಮಿಯ ಮೇಲೆ ಸ್ವರ್ಗವೆಂಬುದು ಇರುವದಾದರೆ, ಅದು ಇಲ್ಲಿದೆ, ಅದು ಇಲ್ಲಿದೆ, ಅದು ಇಲ್ಲಿದೆ.”

ಸ್ವತಃ ಜಯಶ್ರೀಯವರೇ ಸ್ವಿಝರ್-ಲ್ಯಾಂಡಿನ ಚೆಲುವನ್ನು ಕಂಡು, ಬೆರಗಾಗಿ ಹೀಗೇ ಹೇಳುತ್ತಾರೆ:

“ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ”.

 ಜಗತ್ತಿನ ಅತಿ ಶ್ರೀಮಂತ ದೇಶವಾದ ಅಮೆರಿಕಾದ ಪ್ರವಾಸ ಹೇಗಿದ್ದೀತು? ಸುದೈವದಿಂದ ಈ ದೇಶದಲ್ಲಿ ಪ್ರಾಕೃತಿಕ ಚೆಲವು ಹರಡಿಕೊಂಡಷ್ಟೇ ಧಾರಾಳವಾಗಿ, ಡಾಲರ್ ಮೂಲಕ ಸೂರೆ ಮಾಡಬಹುದಾದ ಸೌಕರ್ಯಗಳೂ ಸಾಕಷ್ಟಿವೆ! ಇವೆಲ್ಲವುಗಳ ವಿವರವಾದ ವರ್ಣನೆಯನ್ನು ಲೇಖಕಿ ಕೊಟ್ಟಿದ್ದಾರೆ.

 ಇವೆಲ್ಲ ಪಾಶ್ಚಿಮಾತ್ಯ ದೇಶಗಳಾದವು. ಪೌರ್ವಾತ್ಯ ದೇಶಗಳ ಪ್ರವಾಸ ಬೇಡವೆ? ನಿಮಗೆ ಹಾಗೆ ಎನಿಸಿದರೆ ಜಯಶ್ರೀ ದೇಶಪಾಂಡೆಯವರು ನಿಮ್ಮನ್ನು ಸಿಂಗಪುರಕ್ಕೆ ಕರೆದೊಯ್ಯುತ್ತಾರೆ. ಜಯಶ್ರೀಯವರು ಸಿಂಗಪುರದಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದು, ಬುದ್ಧನ ದಂತಾವಶೇಷ ಮಂದಿರ. ಈ ದಂತಾವಶೇಷವನ್ನು ಶೀ ಫಝಾವ್ ಎನ್ನುವ ಓರ್ವ ಚೀನೀ ಸಂತನು ಮ್ಯಾನ್ಮಾರದ ಬುದ್ಧಮಠದಿಂದ ಬೇಡಿಕೊಂಡು ತಂದು ಸಿಂಗಪುರದಲ್ಲಿ ಪ್ರತಿಷ್ಠಾಪಿಸುತ್ತಾನೆ. ಇಲ್ಲಿರುವ ಪ್ರಾರ್ಥನಾಚಕ್ರವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಾರ್ಥನಾ ಚಕ್ರವಂತೆ.  ಮಕ್ಕಳಿಗೆ ಬುದ್ಧನ ಸಹಸ್ರ ನಾಮಾವಳಿಯನ್ನು ಹೇಳಿಕೊಡುತ್ತಿರುವ ಅನೇಕ ಕುಟುಂಬಗಳನ್ನು ಜಯಶ್ರೀಯವರು ಇಲ್ಲಿ ಕಂಡರು. ಹೊರಬರುವಾಗ ಅವರ ಮನಸ್ಸಿನ ತುಂಬ ನಮ್ಮ ಸಿದ್ಧಾರ್ಥ ಗೌತಮ ಬುದ್ಧನೇ ತುಂಬಿಹೋಗಿದ್ದ.

                                                                                                             ಇದೆಲ್ಲವು ಜಯಶ್ರೀ ದೇಶಪಾಂಡೆಯವರು ನೋಡಿದ ಹಾಗು ನಮಗೆ ತೋರಿಸಿದ ದೇಶಗಳ ಪ್ರವಾಸವರ್ಣನೆಯಾಯಿತು. ಅವರ ಕಥನಕೌಶಲವು ನಮ್ಮನ್ನು ನಿರಾಯಾಸವಾಗಿ ಎಲ್ಲೆಡೆ ಅಲೆದಾಡಿಸುತ್ತದೆ. ಈ ಕೌಶಲದ ಒಂದು ಭಾಗವಾದ ಅವರ ಭಾಷಾಪ್ರತಿಭೆಯನ್ನು ನಾವು ಈ ಲೇಖನದ ಮುಂದಿನ ಭಾಗದಲ್ಲಿ ನೋಡೋಣ.

  ಉತ್ತಮ ಸಾಹಿತ್ಯಕೃತಿಯನ್ನು ಹಾಗು ಪ್ರವಾಸವರ್ಣಮೆಯನ್ನು ನೀಡಿದ ಜಯಶ್ರೀ ದೇಶಪಾಂಡೆಯವರಿಗೆ ವಂದನೆಗಳು.

Thursday, May 12, 2022

ನೋಟ್‌ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ

ʼನೋಟ್‌ ಬುಕ್ಕಿನ ಕಡೆಯ ಪುಟʼ ಈ ಹಾಸ್ಯಪಂಚವಿಂಶತಿಯನ್ನು ಬರೆದ ಶ್ರೀಮತಿ ಜಯಶ್ರೀ ದೇಶಪಾಂಡೆಯವರಿಗೆ ಹಾಗು ಪ್ರಕಟಿಸಿದ ಶ್ರೀ ಅಣಕು ರಾಮನಾಥರಿಗೆ ಅಭಿನಂದನೆಗಳನ್ನು ಹಾಗು ಧನ್ಯವಾದಗಳನ್ನು ಮೊದಲಿಗೆ ಸಲ್ಲಿಸುತ್ತೇನೆ.‌  ಇವರಿಂದಾಗಿ ಕನ್ನಡಿಗರಿಗೆ ಒಂದು ಉತ್ತಮ ಸಾಹಿತ್ಯಕೃತಿ ದೊರೆತಿದೆ.

ವೈಚಾರಿಕತೆ ಹಾಗು ಭಾವನಾತ್ಮಕತೆ ಜಯಶ್ರೀ ದೇಶಪಾಂಡೆಯವರ ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ರೀತಿಯನ್ನು ನೋಡಿದರೆ ಅವರ ಕಥೆಗಳನ್ನು ಕರಿಗಡಬಿಗೆ ಹೋಲಿಸುವುದು ಉಚಿತವೆನಿಸುತ್ತದೆ! ವೈಚಾರಿಕತೆಯು ಕರಿಗಡಬಿನ ಮೇಲ್-ಪದರದಂತೆ ಆಕರ್ಷಕವಾಗಿದ್ದರೆ ಒಳತಿರುಳು ಸಿಹಿಯಾದ ಭಾವನಾಪ್ರಪಂಚವಾಗಿದೆ....ಕರಿಗಡಬಿನ ಹೂರಣದಂತೆ! ಅವರ ಸಾಹಿತ್ಯವನ್ನು ಓದುವಾಗ (-ಅದು ಕತೆಯೇ ಇರಲಿ, ಲಲಿತ ಪ್ರಬಂಧವೇ ಇರಲಿ-) ಅದರಲ್ಲಿಯ ವೈಚಾರಿಕತೆಯಿಂದ ಆಕರ್ಷಿತನಾಗುವ ಓದುಗನು, ಓದುತ್ತ ಹೋದಂತೆ, ಕೃತಿಯನ್ನು ಸೊಗಸುಗೊಳಿಸುವ ಭಾವುಕತೆಗೆ ಮರಳಾಗುತ್ತಾನೆ. ಈ ಎರಡು ಅಂಶಗಳಲ್ಲದೇ ಅವರ ಸಾಹಿತ್ಯವನ್ನು ಸೀಕರಣೆಯಂತೆ ಸವಿ ಮಾಡುವ ಮೂರನೆಯ ಗುಣವೊಂದು ಅವರ ಕೃತಿಗಳಲ್ಲಿದೆ. ಅದು ಅವರ ಭಾಷಾವಿದ್ವತ್ತು. ಇಂಗ್ಲಿಶ್‌  ಭಾಷೆಯನ್ನೇನೊ ಅವರು ಕಾ^ಲೇಜಿನಲ್ಲಿ ಐಚ್ಛಿಕ ವಿಷಯವಾಗಿ ಕಲಿತರು. ಇದರ ಹೊರತಾಗಿ ಅವರ ಭಾಷೆಯಲ್ಲಿ ಹಿಂದೀ ಹಾಗು ಸಂಸ್ಕೃತ ಪದಗಳು ಅನಾಯಾಸವಾಗಿ ಇಣಿಕುತ್ತವೆ. ಇದು ಅವರ ತಾಯಿಮನೆಯಿಂದ ಹಾಗು ಪರಿಸರದಿಂದ ಅವರಿಗೆ ದೊರೆತ ಬಳುವಳಿ ಎನ್ನುವುದು ನನ್ನ ಊಹೆ. ಈ ಭಾಷೆಗಳು ಅವರಿಗೆ ಸಹಜಸಿದ್ಧಿಯಾದ ಭಾಷೆಗಳೇ ಆಗಿವೆ. ಇದರ ಪರಿಣಾಮವಾಗಿ, ಮಜ್ಜಿಗೆಯನ್ನು ಕಡೆದಾಗ ಬರುವ ಬೆಣ್ಣೆಯಂತೆ ಹೊಸ ಹೊಸ ಪದಗಳು ಅವರ ಕಥೆಗಳಲ್ಲಿ ಸಹಜವಾಗಿ ತೇಲಿ ಬರುತ್ತವೆ, ಉದಾಹರಣೆಗೆ ಹಿಂಪುಟ, ತೇಲುತೆಪ್ಪ, ಉಬ್ಬುಬೆನ್ನು, ತೀವ್ರವೇಗಿ. ರಾಗಾಧಾರೀ ಇತ್ಯಾದಿ. 

ಜಯಶ್ರೀಯವರು ತಮ್ಮ ಲೇಖನಗಳಲ್ಲಿ ಆಡುನುಡಿಯ ಪದಗಳನ್ನು ಬಳಸಿದ್ದಾರೆ ಹಾಗು ಬಳಸುತ್ತಾರೆ. ಈ ಆಡುನುಡಿಯು ಅವರ ಕತೆಗಳ ಕಾಲ ಹಾಗು ಪರಿಸರದ ನಿರ್ಣಾಯಕಗಳಾಗಿವೆ. ಇದರಿಂದಾಗಿ ಅವರ ಕತೆಗಳಿಗೆ ಅಥವಾ ಲೇಖನಗಳಿಗೆ ವಿಶಿಷ್ಟವಾದ ಕಾಲ-ದೇಶ ನಿರ್ಮಾಣವಾಗುತ್ತದೆ. ಉದಾಹರಣೆಗೆ ʻಸುಂಠಿʼಯ ಬಗೆಗೆ ಬರೆಯುವಾಗ ಕಾಢೆ, ಜಾಂಬು, ಗೌತಿ ಚಹಾ ಇವೆಲ್ಲ ತಮ್ಮ ಮುಖವನ್ನು ತೋರಿಸುತ್ತವೆ. ʻಅಲ್ಲೇಪಾಕʼವನ್ನು ಮಾರುವ ಮಾಮಡ್ಯಾನ ಕಥೆಯಂತೂ ಪರಿಸರಸೃಷ್ಟಿಗೆ ಉತ್ತಮ ನಿದರ್ಶನವಾಗಿದೆ. ಅಲ್ಲೇಪಾಕ ಹಾಗು ಮಾಮಡ್ಯಾನ ಬಗೆಗೆ ಹೇಳುತ್ತಲೇ ಜಯಶ್ರೀಯವರು ತಾವು ಬಾಲ್ಯದಲ್ಲಿ ನೋಡಿದ ಬೆಳಗಾವಿ ಕಿಲ್ಲೆಯ ಸಂದು ಸಂದುಗಳನ್ನು ಬಿಡದೆ ತೋರಿಸಿದ್ದಾರೆ. ಕಿಲ್ಲೆಯ ಮೇಲೆ ಹತ್ತಿ  ದೂರದ ಲಕ್ಷ್ಮೀ ಟೇಕಡಿಯವರೆಗೂ ಕಣ್ಣು ಹಾಯಿಸಿದ್ದಾರೆ. ಓದುಗನೂ ಸಹ ಅನಾಯಾಸವಾಗಿ ಈ time machineದಲ್ಲಿ ಬೆಳಕಿನ ವೇಗದಲ್ಲಿ ಪಯಣಿಸುವುದು ಜಯಶ್ರೀಯವರ ಕಥನಕೌಶಲವನ್ನು ತೋರಿಸುತ್ತದೆ. 

ಇವೆಲ್ಲ ಜಯಶ್ರೀಯವರ ಬಾಲ್ಯದ ನೋಟಗಳು ಎನ್ನುವುದು ಓದುಗನಿಗೆ ಹೇಗೆ ತಿಳಿಯುತ್ತದೆ?  ಜಯಶ್ರೀಯವರು ಬೆಳಗಾವಿಯ ಕಿಲ್ಲೆಯಲ್ಲಿ ತಮ್ಮ ಸೈಕಲ್ಲಿನ ಮೇಲೆ ಹೊಡೆಯುವ ಹನ್ನೆರಡು ಸುತ್ತುಗಳಿಂದಾಗಿ ಈ ವಿಷಯವು ಓದುಗನಿಗೆ ಸ್ಪಷ್ಟವಾಗುತ್ತದೆ! ಬರಿ ಪರಿಸರಸೃಷ್ಟಿಯು ಜಯಶ್ರೀಯವರ ಲೇಖನಗಳಲ್ಲಿ ಇದೆ ಅಂತಲ್ಲ;  ʻಅಜ್ಜನ ಹೋಲ್ಡಾಲʼ ಲೇಖನವು ಆ ಕಾಲದ ವಾತಾವರಣದ ಬಗೆಗೆ ಹೇಳುವುದಲ್ಲದೆ, ಆ ಕಾಲದ ಜನರ ದೈವಭಕ್ತಿ, ತಾತ್ವಿಕ  ಮನೋಸ್ಥಿತಿ ಇವುಗಳನ್ನೂ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ; ಈ ಹೋಲ್ಡಾಲಿನಲ್ಲಿ ಏನೆಲ್ಲ ಸಾಮಾನುಗಳನ್ನು ಅಜ್ಜ ಒಯ್ಯುತ್ತಿದ್ದರು ಎನ್ನುವದನ್ನು ನೋಡಿದರೆ ನೀವು ದಂಗಾಗುತ್ತೀರಿ. ಇವೆಲ್ಲುವುಗಳ ಜೊತೆಗೆ ಒಂದು ಪುಟ್ಟ ಗಂಗಾಗಿಂಡಿಯೂ ಆ ಹೋಲ್ಡಾಲಿನಲ್ಲಿ ಇರುತ್ತಿತ್ತು. ಇದರ ಕಾರಣ ತಿಳಿದಾಗ ಓದುಗನ ಕಣ್ಣಿನಲ್ಲಿಯೂ ಗಂಗೆ ಜಿನುಗುವದರಲ್ಲಿ ಸಂದೇಹವಿಲ್ಲ!

ಜಯಶ್ರೀಯವರ ಕಥನಕೌಶಲವು ಪದನಿರ್ಮಾಣಕ್ಕಷ್ಟೇ ಸೀಮಿತವಾಗಿಲ್ಲ. ವಸ್ತುವರ್ಣನೆಯ ಸಂದರ್ಭದಲ್ಲಿ ಅವರು ಬಳಸುವ ವಿಶೇಷಣಗಳು ವಸ್ತುವಿನ ಅಂತರಂಗ-ಬಹಿರಂಗದ ಪರಿಚಯವನ್ನು ಮಾಡಿಕೊಡುತ್ತವೆ. ಉದಾಹರಣೆಗೆ ʻಸಾಗರ ಸುಮನʼ ಲೇಖನದಲ್ಲಿರುವ ಈ ಸಾಲನ್ನು ನೋಡಿರಿ:

“ಅಮೇರಿಕ, ಇಂಗ್ಲೆಂಡ್ ನಡುವೆ ಅಂದಾಜು ಆರುಸಾವಿರದಾ ಎಂಟುನೂರ ಐವತ್ತು ಕಿಲೋಮೀಟರು ದೊಪ್ಪೆಂದು ಬಿದ್ದುಕೊಂಡ ನೀರು.” 

ʻ ಅಂದಾಜು ಆರುಸಾವಿರದಾ ಎಂಟುನೂರ ಐವತ್ತು ಕಿಲೋಮೀಟರುʼ ಎನ್ನುವದು ಆ ಸಾಗರದ ಬಹಿರಂಗದ ಪರಿಚಯವಾದರೆ, ʻ ದೊಪ್ಪೆಂದು ಬಿದ್ದುಕೊಂಡ ನೀರುʼ ಎನ್ನುವುದು, ಜಯಶ್ರೀಯವರ ಅಂತರಂಗದಲ್ಲಿ ಮೂಡಿದ ಭಾವನೆಯನ್ನು ಹೊರಹೊಮ್ಮಿಸುತ್ತದೆ! ʻಕಿರಿದರೊಳ್ಪಿರಿದರ್ಥವನ್ನು ಹೇಳುವುದುʼ ಎಂದರೇ ಇದೇ ಅಲ್ಲವೆ? ಇದೇ ಕಥನದಲ್ಲಿ ಅಟ್ಲಾಂಟಿಕ ಸಾಗರದಲ್ಲಿರುವ ಕ್ಲಿಫ್‌  ಹಾಗು  ಬರ್ಮುಡಾ ತ್ರಿಕೋನಗಳ ಬಗೆಗೂ ಸ್ವಾರಸ್ಯಕರವಾಗಿ ಹೇಳುತ್ತ ಜಯಶ್ರೀಯವರು ತಮ್ಮ ಲೇಖನವನ್ನು ೩೬೦ ಡಿಗ್ರೀ ಪೂರ್ಣಗೊಳಿಸಿದ್ದಾರೆ.

ರಾಮಚಂದ್ರ ಕುಲಕರ್ಣಿಯವರ (ರಾ.ಕು.) ಹರಟೆಗಳ ಸಂಗ್ರಹವಾದ ʻಗಾಳಿಪಟʼದ ಮುನ್ನುಡಿಯಲ್ಲಿ ವರಕವಿ ಬೇಂದ್ರೆಯವರು ಒಂದು ಮಾತು ಹೇಳಿದ್ದಾರೆ: ʻಇವರ ಲೇಖನಗಳಲ್ಲಿ ಲಾಘವವಿದೆ, ಲಘುತ್ವವಿಲ್ಲʼ. ಜಯಶ್ರೀಯವರ ಲೇಖನಗಳ ಬಗೆಗೂ ಇದೇ ಮಾತನ್ನು ಹೇಳಬಹುದು. ʻಕೋಪಗೃಹ ವಾರ್ತೆಗಳು…ʼ ಎನ್ನುವ ಪ್ರಬಂಧವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 

ಈ ಲೇಖನದಲ್ಲಿ ಅಂದರೆ ʻಕೋಪಗೃಹ..ʼದಲ್ಲಿ ಬರುವ, “ಬಿದರ್ದೆತ್ತಿ ಖಟ್ವಾಂಗಮಂಬರವು ಕವ್ವಳಿಸೆ…” ಎಂದು ಪ್ರಾರಂಭವಾಗುವ ಚೌಪದಿಯು ಮೊದಲಿಗೆ ನನ್ನನ್ನು ಹಳೆಗನ್ನಡದ ಬಲೆಯಲ್ಲಿ ಮಿಸುಕಾಡದಂತೆ ಸಿಲುಕಿಸಿತು.ಅವರು ಕೊಟ್ಟ ವಿವರಣೆಯಿಂದಾಗಿ ತಿಳಿವು ಮೂಡಿ, ಖುಶಿಯಾಯಿತು. ಮುಂದಿನ ಮೂರನೆಯ ಪರಿಚ್ಛೇದದಲ್ಲಿಯೇ ʻಪ್ರಾಣ ಜಾಯೇ ಪರ ವಚನ ನಾ ಜಾಯೇʼ ಎನ್ನುವ ಹಿಂದೀ ಸಿನೆಮಾದ ಹೆಸರಿನ ಪರಿಪಾಕ! ಮುಂದುವರೆದಂತೆ ಕನ್ನಡದ ಸಿನೆಮಾದ ಜನಪ್ರಿಯ ಹಾಡೊಂದು ನನ್ನನ್ನು ಹಿಡಿದು ಹಾಕಿತು: 

“ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣಾ,

ಇಟ್ಟಾಯ್ತು ನಿನ ಮ್ಯಾಲೆ ನನ ಪ್ರಾಣಾ”

ಒಂದರ ಮೇಲೊಂದರಂತೆ, ಆದರೆ ಎಲ್ಲಿಯೂ ಸೂತ್ರವು ಶಿಥಿಲವಾಗದಂತೆ ಕೋಪದ ವಿವಿಧ ರೂಪಗಳನ್ನು, ವಿವಿಧ ಶೈಲಿಗಳಲ್ಲಿ ಚಿತ್ರಿಸಿದ ಜಯಶ್ರೀಯವರು ಈ ಲೇಖನಕ್ಕೆ ಭರತವಾಕ್ಯವನ್ನು ಹೇಳದಿರುವರೆ? ಇದಂತೂ ಎಲ್ಲರೂ ಪಾಲಿಸಲೇಬೇಕಾದ ಸದುಪದೇಶ.

“ಉತ್ತಮೇಸ್ಯಾತ್ಕ್ಷಣಂಕೋಪಂ

ಮಧ್ಯಮೇ ಘಟಿಕಾದ್ವಯಮ್

ಅಧಮೇಸ್ಯಾದಹೋರಾತ್ರಂ

ಪಾಪಿಷ್ಠೇ ಮರಣಾಂತಿಕಮ್”

ಹಳೆಯ ನೆನಪುಗಳ ಮರುಕಳಿಕೆಯನ್ನು ಜಯಶ್ರೀಯವರು ಅಂತಃಕರಣದಿಂದ ಓದುಗರ ಎದುರಿಗೆ ಹರಡುತ್ತಾರೆ. ಡೇಲಿಯಾ, ವೋ ಕಾಗಜಕೀ ಕಶ್ತಿ ವೋ ಬಾರಿಶ್ಕಾ ಪಾನೀ, ಇಲಕಲ್ಆಯೀ ಇವೆಲ್ಲ ಇಂತಹ ಹಿನ್ನೋಟದ ಪ್ರಕರಣಗಳು. ಇನ್ನು ʻಒಂದು angry ಬರ್ಡ ಸಮಾಚಾರʼ, ʻಮುಂಬಯಿ ಮಳೆʼ, ʻಒಂದು ಪುಸ್ತಕವೂ, ನಾಲ್ಕು ನಕ್ಷತ್ರಗಳೂʼ, ʻಸೌನಾ ಸುಗ್ಗಿಯೂ ಹೆಸರು ಬೇಳೆ ಹುಗ್ಗಿಯೂʼ ಇವೆಲ್ಲ ಹೊಸ ಅನುಭವಗಳ ಲೇಖನಗಳು. 

ಜಯಶ್ರೀಯವರ ಲೇಖನಗಳ ಮತ್ತೊಂದು ವೈಶಿಷ್ಟ್ಯವೆಂದರೆ ಪೂರ್ವಸೂರಿಗಳ ಅಪ್ರತ್ಯಕ್ಷ ಸ್ಮರಣೆ. ಬೇಂದ್ರೆಯವರ ಕವನಗಳಲ್ಲಿಯೂ ಸಹ ಪೂರ್ವಸೂರಿಗಳ ಪ್ರಭಾವದ ಛಾಯೆ ಉದ್ದೇಶಪೂರ್ವಕವಾಗಿಯೇ ಮೂಡಿರುತ್ತದೆ. ಜಯಶ್ರೀಯವರು ತಮ್ಮ ಲೇಖನಗಳ ಶೀರ್ಷಿಕೆಗಳಲ್ಲಿ ಅಥವಾ ಒಳಭಾಗಗಳಲ್ಲಿ ಪೂರ್ವಸೂರಿಗಳ ವಾಕ್ಯಗಳನ್ನು ಉದ್ಧರಿಸಿ, ಅವರ ಸುಖದಾಯಕ ಪ್ರಭಾವವನ್ನು ಸ್ಮರಿಸಿಕೊಳ್ಳುತ್ತಾರೆ. ಉದಾಹರಣೆಗೆ: ʻಪ್ರಾಣ ಜಾಯೇ ಪರ ವಚನ ನಾ ಜಾಯೇʼ, ʻವೋ ಕಾಗಜಕೀ ಕಶ್ತಿ ವೋ ಬಾರಿಶ್ಕಾ ಪಾನೀʼ, ʻಒಂದಿರುಳು ರೈಲಿನಲಿ..ʼ ಇವೆಲ್ಲ ಇಂತಹ ಉದಾಹರಣೆಗಳು. ಕೆ.ಎಸ್.ನರಸಿಂಹಸ್ವಾಮಿಯವರು ʻಒಂದಿರುಳು ಕನಸಿನಲಿ..ʼ ಎಂದಿದ್ದರೆ, ಜಯಶ್ರೀಯವರು, ʻಒಂದಿರುಳು ರೈಲಿನಲಿ..ʼ ಎಂದಿದ್ದಾರೆ. ಅಷ್ಟೇ ಫರಕು! ಇದು ನಮ್ಮ ಸಾಹಿತ್ಯಸಂಪ್ರದಾಯವನ್ನು, ಮರೆತು ಹೋಗದಂತೆ ಜೀವಂತವಾಗಿಡುವ ಸತ್ಕಾರ್ಯ.

ಕನ್ನಡದ ಹಾಸ್ಯಬ್ರಹ್ಮರಾದ ರಾ.ಶಿಯವರು ʻಹಾಸ್ಯವು subtleದಲ್ಲಿಯ ʻbʼಯ ಹಾಗೆ ಇರಬೇಕುʼ ಎಂದು ಹೇಳಿದ್ದರು. ಜಯಶ್ರೀಯವರ ವಿನೋದವು ಹಾಗೆಯೇ ಇದೆ. ಆದರೆ ಇದು ಕೇವಲ ಹಾಸ್ಯವಲ್ಲ; ಹಾಸ್ಯರಸಾಯನ. ಈ ರಸಾಯನದಲ್ಲಿ ನೀವು ವಿವಿಧ ರೀತಿಯ ರಸಗಳನ್ನು ಸವಿಯುತ್ತೀರಿ. ಕೋಮಲತೆ ಜಯಶ್ರೀಯವರ ಲೇಖನಗಳ ಮತ್ತೊಂದು ವೈಶಿಷ್ಟ್ಯ. ಈ ಲೇಖನಗಳನ್ನು ಆ ಕಾರಣಕ್ಕಾಗಿ ʻಹೂಗೊಂಚಲುʼ ಎಂದು ಕರೆಯುವುದು ಉಚಿತವಾದೀತು. ಆದರೆ ಜಯಶ್ರೀಯವರು ತಮ್ಮ ʻನೋಟ್  ಬುಕ್ಕಿನ ಕಡೆಯ ಪುಟʼದವರೆಗೂ ಲೇಖನಗಳ ನಗೆತೊರೆಗಳನ್ನೇ ಹರಿಸಿರುವ ಕಾರಣದಿಂದ, ʻನೋಟ್‌ ಬುಕ್ಕಿನ ಕಡೆಯ ಪುಟʼ ಎನ್ನುವುದೇ ಸಮುಚಿತವಾದ ಶೀರ್ಷಿಕೆಯಾಗಿದೆ. 

ಆತ್ಮೀಯತೆಯು ಜಯಶ್ರೀ ದೇಶಪಾಂಡೆಯವರ ಮನಸೆಳೆವ ಗುಣ. ತಮ್ಮ ʻನೋಟ್‌ ಬುಕ್ಕಿನ ಕಡೆಯ ಪುಟʼ ಸಂಕಲನದಲ್ಲಿ ಜಯಶ್ರೀ ದೇಶಪಾಂಡೆಯವರು ೨೫ ಕರಿಗಡಬುಗಳನ್ನು ತಮಗೆ ಸಹಜವಾದ ನಿಸ್ಸಂಕೋಚ ಆತ್ಮೀಯತೆಯಿಂದ ಓದುಗರಿಗೆ ಹಂಚಿದ್ದಾರೆ. ಇಕೋ, ಸವಿಯಿರಿ!   

Tuesday, May 28, 2019

ಜಯಶ್ರೀ ದೇಶಪಾಂಡೆಯವರ ಸಾಹಿತ್ಯ--ಭಾಗ ೩



ಜಯಶ್ರೀ ದೇಶಪಾಂಡೆಯವರು ತಮ್ಮ ಕವನಸಂಕಲನವನ್ನುಯತ್ಕಿಂಚಿತ್’ (ಏನೋ ಅಷ್ಟಿಷ್ಟು) ಎಂದು ಕರೆದಿದ್ದಾರೆ. ಆದರೆ ಈ ಸಂಕಲನವು ಅನೇಕ ಸಾಹಿತ್ಯಿಕ ಗುಣಗಳಿಂದ  ತಾನುಅಷ್ಟಿಷ್ಟಲ್ಲ’, ‘ಬಹಳಷ್ಟುಎನ್ನುವುದನ್ನು ತೋರಿಸಿಕೊಡುತ್ತದೆ.
ಓದುಗನ ಮೆಚ್ಚುಗೆಗೆ ಪಾತ್ರವಾಗುವ ಮೊದಲ ಸಾಹಿತ್ಯಿಕ ಗುಣವೆಂದರೆ ಲೇಖಕಿಯ ಭಾಷಾಪ್ರಭುತ್ವ. ಆಧುನಿಕ ಕನ್ನಡ, ಹಳೆಗನ್ನಡ, ಪ್ರಾದೇಶಿಕ ಕನ್ನಡ, ಸಂಸ್ಕೃತ, ಇಂಗ್ಲಿಶ್ ಹೀಗೆ ಎಲ್ಲ ಭಾಷೆಗಳ ಪದಗಳು ಫ್ರುಟ್-ಸಲಾಡಿನಲ್ಲಿಯ ವಿವಿಧ ಹಣ್ಣುಗಳ ಹೋಳುಗಳಂತೆ ಸಮರಸವಾಗಿ, ಕವನದ ಅನುಭವವನ್ನು ಉದ್ದೀಪನಗೊಳಿಸುವಂತೆ ಸಹಜವಾಗಿ ಬೆರೆತುಕೊಂಡಿವೆ. ಇದಲ್ಲದೆ, ಇಲ್ಲಿಯ ಕವನಗಳನ್ನು ಓದಿದಾಗ, ಲೇಖಕಿಯ ವಿಸ್ತಾರವಾಚನದ ಅರಿವು ನಮ್ಮನ್ನು ಬೆರಗುಗೊಳಿಸುತ್ತದೆ. ಹಳೆಯ ಸಾಹಿತ್ಯ, ಆಧುನಿಕ ಸಾಹಿತ್ಯ, ದಾಸಸಾಹಿತ್ಯ, ಶರಣಸಾಹಿತ್ಯ ಇವೆಲ್ಲವೂ ಈ ಲೇಖಕಿಯಲ್ಲಿ ಆತ್ಮಸಾತ್ ಆಗಿ, ಅವರ ಕವನಗಳಲ್ಲಿ ಅಲ್ಲಲ್ಲಿ ಮಿಂಚಿವೆ. ಇದು ಸರಿಯಾದ ಕ್ರಮ. ಇದು ನಮ್ಮ ಪೂರ್ವಸೂರಿಗಳಲ್ಲಿ ನಮಗಿರುವ ಗೌರವ ಹಾಗು ಅಭಿಮಾನದ ಪ್ರತೀಕ. ವೈದಿಕ ಆಚರಣೆಗಳ ಜ್ಞಾನವೂ ಸಹ ಲೇಖಕಿಯಲ್ಲಿ ಇರುವುದು ಇಲ್ಲಿ ವ್ಯಕ್ತವಾಗಿದೆ. ಈ ಗುಣಗಳು ಉಸಿರಾಟದಷ್ಟೇ ಸಹಜವಾಗಿ, ಯಾವುದೇ ಬಿಂಕವಿಲ್ಲದೆ ಕವನಗಳಲ್ಲಿ ಏಕರಸವಾಗಿರುವುದು ಪ್ರಶಂಸನೀಯವಾಗಿದೆ.

ನವೋದಯ ಕಾಲದ ಸಾಹಿತಿಗಳು ಕೇವಲ ಸಾಹಿತ್ಯವನ್ನಷ್ಟೇ ಸೃಷ್ಟಿಸಲಿಲ್ಲ. ಆಧುನಿಕ ಸಾಹಿತ್ಯಕ್ಕೆ ಅವಶ್ಯವಿರುವ ಕನ್ನಡ ಪದಗಳನ್ನು, ಭಾಷೆಯನ್ನು ಸಹ ಅವರು ಸೃಷ್ಟಿಸಿದರು. ಜಯಶ್ರೀಯವರು ನವೋದಯ, ನವ್ಯ, ನವ್ಯೋತ್ತರವೆನ್ನುವ  ವರ್ಗೀಕರಣಕ್ಕೆ ಸೀಮಿತರಲ್ಲ. ಆದುದರಿಂದಲೇ ಅವರ ಕವನಗಳಲ್ಲಿ ಈ ಮಾದರಿಗಳನ್ನು ದಾಟಿದ  ಪದಸೃಷ್ಟಿಗಳನ್ನು, ಭಾಷೆಯ ಬಳಕೆಗಳನ್ನು ಕಾಣುತ್ತೇವೆ:
ವೈಯಾರಜಾಲ, ಬೂದಿಭಾರದ ತತ್ವಜ್ಞಾನಿ, ಗುಪಿತಗಳ ಒದ್ದೆಗಂಟ, ತನಿಲೇಪ, ಬಿಟ್ಟಂದೂರು, ಹಿಗ್ಗು ಹಾಸದಿರು, ಅನಿವಾರ್ಯಜನಿತ, ಸೂರ್ಯಸಮ್ಮೋಹ, ಬೆಳಕ ಝಲ್ಲರಿ….ಇಂತಹ ಅನೇಕ ಪ್ರಯೋಗಗಳನ್ನು ನಾವು ಇಲ್ಲಿಯ ಕವನಗಳಲ್ಲಿ ಕಾಣುತ್ತೇವೆ.
ಇವೆಲ್ಲ ಬಹಿರಂಗದ ಲಕ್ಷಣಗಳಾದವು.

ಜಯಶ್ರೀಯವರ ಕವನಗಳ ಅಂತರಂಗವೇನು?
ಆತ್ಮಶೋಧನೆ ಭಾವಜೀವಿಗಳ ವೈಶಿಷ್ಟ್ಯವಾಗಿದೆ. ಜಯಶ್ರೀಯವರು ಸಹ ಇದಕ್ಕೆ ಹೊರತಾಗಿಲ್ಲ. ‘ಅಳಿಲು ನನಗಿಷ್ಟ’, ‘ಗರಿಕೆಕವನಗಳಲ್ಲಿ `Small and sincere is beautiful’ ಎನ್ನುವುದು ಜಯಶ್ರೀಯವರ ಕಾಣ್ಕೆಯಾಗಿದೆ. ಆದರೆ ಚುಕ್ಕಿ’, ‘ಸುಳ್ಳಾಡಬೇಡ ಕನ್ನಡಿಮುಂತಾದ ಕವನಗಳಲ್ಲಿ ಲೇಖಕಿ ತಾನೊಬ್ಬ ಅಲ್ಪಜೀವಿ ಎಂದು ಹೇಳಿಕೊಳ್ಳುತ್ತಾರೆ.

ಎಲ್ಲ ಸರಿ, ಎಲ್ಲವೂ ಸರಿಯೆಂದು ನನ್ನ
ನಂಬಿಸದಿರು ಕನ್ನಡಿಯೇ, ಹುಲುಜೀವ ನಾನು,
…………………………………..
……………………………………..
ಇದ್ದುದನ್ನು ಇದ್ದಂತೆಯೇ ಹೇಳು ಕನ್ನಡಿಯೇ
ನೀ ಚಂದ, ನೀ ಸುಂದರವೆಂದು ನನ್ನ
ನಂಬಿಸದಿರು, ಹಿಗ್ಗು ಹಾಸದಿರು, ಮರಳು ಮಾಡದಿರು
…………………………………..”
(…………ಸುಳ್ಳಾಡಬೇಡ ಕನ್ನಡಿ)              

ತಾವು ಅಲ್ಪಜೀವಿ ಎಂದು ಹೇಳಿಕೊಳ್ಳುವ ಅವರ ಮಾತನ್ನು ನಾವು ನಂಬುವುದಿಲ್ಲ! ಇದು ಬಹುತೇಕ ಭಾರತೀಯ ತತ್ವಶಾಸ್ತ್ರಗಳ ದರ್ಶನವಾಗಿದೆ. ಹೀಗಾಗಿ ಭಾರತೀಯ ಮನಸ್ಸಿನಲ್ಲಿ ಇದು ಆಳವಾಗಿ ನೆಲೆಸಿದೆಯಷ್ಟೆ. ಕವಿಯು ತತ್ವಜ್ಞಾನಿಯೂ ಆದುದರಿಂದ ಜಯಶ್ರೀಯವರೂ ಹೀಗೇ ಭಾವಿಸುತ್ತಿರಬಹುದು! ಹಾಗೆಂದು ಹುಲುಜೀವವನ್ನು ಕಡೆಗಣಿಸಬೇಕಂತಿಲ್ಲ. ಝಂಝಾವಾತವನ್ನು ಎದುರಿಸುವ ಸಾಮರ್ಥ್ಯ ಒಂದು ಹುಲ್ಲುಗರಿಕೆಗೆ ಇರುವುದನ್ನು ಜಯಶ್ರೀಯವರುಗುರಿಯಲ್ಲಿ ಪ್ರೀತಿಯಿಂದ ವರ್ಣಿಸುತ್ತಾರೆ:
‘………………………………………..
ನಾಕ ನರಕದ ಗಾಳಿಗುಡುಗಿನ ನಡುವೆ ನಸುಬಾಗಿ
ಝಂಝಾವಾತಕ್ಕೆ ಕಿರುಗರಿಕೆ ಕಲಿಸಿದ ಪಾಠ ನೋಡೇ…..

ದಾಟಿ ಹೋದ ಗಾಳಿ ಹಿಂದೊಮ್ಮೆ ಕಣ್ಣ ಹಾಯಿಸಲು
ಗರಿಕೆ ನಕ್ಕ ಚೆಲುವ ನೋಡೇ……’

ಆದರೇನು, ಮನಸ್ಸಂತೂ ಹಾರಾಡುವ ಗಾಳಿಪಟವೇ ಅಲ್ಲವೆ?ಮನಸುಖರಾಯನ ಮನಸುಎನ್ನುವ ಕವನದಲ್ಲಿ ಲೇಖಕಿ ಹೇಳುವ ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ! ಕವನದಲ್ಲಿ ಬರುವ ಒಂದು ನುಡಿಯನ್ನು ಗಮನಿಸಿರಿ:

ಚಿತ್ತ ಹುತ್ತಗಟ್ಟಿತೆನ್ನುವ ನೆವ ತೆಗೆದು ಅದೆಲ್ಲೋ ಕಾಡು ಮೇಡು,
ಕೋಟೆ ಕೊತ್ತಳ, ಘೋರೆನ್ನುವ ನದಿ, ಭೋರೆನ್ನುವ ಸಾಗರ,
ಗುಯ್ಯೆನ್ನುವ ಅಡವಿ, ಮಿಣಮಿಣವನುವ ಬೆಂಕಿಹುಳ

ಸರಿ ಇನ್ನೇನು? ಮನಸಿಗೊಂದು ಹುಚ್ಚು ಅಲ್ಲವೇನು?
ಎಲ್ಲಿಳಿಯಬೇಕು ಎಲ್ಲಿ ನಿಲ್ಲಬೇಕೆಂಬ ಪರಿಜ್ಞಾನ ಇದೆಯೇನು?
ಹೇಳೀಕೇಳೀ ಮನಸುಖರಾಯನಂತೆ ಅದು

ಚಿತ್ತ ಹುತ್ತಗಟ್ಟಿತೆನ್ನುವಎನ್ನುವ ಪದಪುಂಜವನ್ನು ಗಮನಿಸಿರಿ. ಅಡಿಗರಶ್ರೀರಾಮನವಮಿಯ ದಿವಸಎನ್ನುವ ಕವನದಲ್ಲಿಯೂ ಇಂತಹದೇ ಪದಪುಂಜವಿದೆ ಎನ್ನುವದನ್ನು ನೆನಪಿಸಿಕೊಳ್ಳಿರಿ:
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಅಂಥ ರೂಪರೇಖೆ.’
ಅಡಿಗರ ಕವನದಲ್ಲಿ ಇರುವಹುತ್ತಗಟ್ಟದೆ ಚಿತ್ತಎನ್ನುವ ಪದಪುಂಜವನ್ನೇ  ಜಯಶ್ರೀಯವರು ತಮ್ಮ ಕವನದಲ್ಲಿಯೂ ಬಳಸಿಕೊಂಡಿದ್ದಾರೆ, ಆದರೆ ವ್ಯತ್ಯಸ್ತ ಭಾವದಲ್ಲಿ!

ಇದೇ ಕವನದ ಕೊನೆಯಲ್ಲಿ ಜಯಶ್ರೀಯವರು ಬೇಂದ್ರೆಯವರನ್ನು ಸಹ ನಮ್ಮನೆನೆಪಿಗೆ ತರುತ್ತಾರೆ:
ಆದರೇನು ಎನ್ನ ಹರಣ ನಿನಗೆ ಶರಣ ಮೂರು ಸುತ್ತಿನ ಮುಗಿತ
ಎಂದಿಗಾದೀತೆಂಬ ಹವಣದಲಿ ಸ್ತಬ್ಧವಾದ ಮನಸು
(ಇಲ್ಲಿಹವಣಎನ್ನುವ ಪದಪ್ರಯೋಗವು ಎಷ್ಟು ಸಮರ್ಪಕವಾಗಿದೆ ಎನ್ನುವುದನ್ನು ಗಮನಿಸಿರಿ. ಸಮರ್ಪಕ ಪದಗಳು ಚಿತ್ತಕ್ಕೆ ಹೊಳೆಯುವುದು ಪ್ರತಿಭಾವಂತ ಕವಿಗಷ್ಟೇ ಸಾಧ್ಯ.)

ಮುಗ್ಧ ಬಾಲ್ಯವು ಬದುಕಿನ ಸುಂದರ ಸಮಯ. ‘ಪ್ಯಾರಾಡೈಸ್ ಲಾ˘ಸ್ಟ್!’ ಎನ್ನುವ ಅವರ ಕವನದಲ್ಲಿಯ ಸಾಲನ್ನು ನೋಡಿರಿ:
ಬಾರೀ ಗಿಡದಾಗ ನಾ ಕೂತೇ, ಬಸ್ರಿ ಗಿಡದಾಗ ನೀ ಕೂತೀ,’
ಸಾಲನ್ನು ಓದಿದ ಯಾರಿಗಾದರೂ ಚಿಕ್ಕ ಹುಡುಗರ ಹುಡುಗಾಟದ ದಿನಗಳು ಕಣ್ಮುಂದೆ ಬಂದೇ ಬರುವವು. ಅದಕ್ಕೂ ಮುಖ್ಯವಾಗಿ ಇದು ಬೆಳಗಾವಿಯ ಸುತ್ತಮುತ್ತಲಿನ ಪರಿಸರ ಎನ್ನುವ ಪ್ರಾದೇಶಿಕ ವಾಸ್ತವಿಕತೆ ಥಟ್ಟನೆ ಅರಿವಿಗೆ ಬರುವುದು! ಹುಡುಗಾಟವಷ್ಟೇ ಅಲ್ಲ, ಪ್ರಕೃತಿಯ ಚೆಲುವೂ ಸಹ ಮನಸ್ಸನ್ನು ಅರಳಿಸುವ ವಯಸ್ಸಿದು. ಈ ಭಾವೋತ್ಕಟತೆ ಯಾವ ವಯಸ್ಸಿನಲ್ಲಿಯಾದರೂ ಇದ್ದದ್ದೇ.

ಅಂತಹ ಒಂದು ಕವನ ಇಲ್ಲಿದೆ:
ಅಷ್ಟದಿಕ್ ಚತುರ್ದಶ ಕೋನಗಳ ಬ್ರಹ್ಮಾಂಡದೋಟ
ಬೆನ್ನಲ್ಲಿ ಹೊತ್ತು ಹೊನ್ನರಶ್ಮಿಯ ಕುದುರೆಗಳೇರಿ
ಹೊರಡುವ ನಿನಗೆ ನನ್ನ ಬೆನ್ನಟ್ಟುವ ಹುಕಿ ಬಂದದ್ಯಾಕೋ
ಭಾಸ್ಕರಾ?”
(………………ಸೂರ್ಯಸಮ್ಮೋಹದ ಬೆಳಗು)

ನಿಸರ್ಗದ ಚೆಲುವು ಮನಸ್ಸನ್ನು ಅರಳಿಸುವಂತೆಯೇ ಸುಂದರ ಕಲಾಕೃತಿಯೂ ಮನಸ್ಸಿಗೆ ಮುದವನ್ನು ಕೊಡುವಂತಹದೇ ಆಗಿದೆ. ಮದನಿಕೆಯ ಶಿಲ್ಪವನ್ನು ನೋಡಿದ ಜಯಶ್ರೀಯವರು ಆ ಪ್ರತಿಮೆಗೆ ರೀತಿಯಾಗಿ ಬಿನ್ನವಿಸುತ್ತಾರೆ:
ಬಾ ಇನ್ನು ಬಂದುಬಿಡು, ಮುನಿಸು ತೊರೆದು ಹೊರಳಿಬಿಡು,
ಶಿಲೆಯ ಸ್ತಬ್ಧಶೀತಲತೆಯೊಳಗಿಂದ ಹಾಡಾಗಿ ಹರಿದುಬಿಡು,
ಹನಿಯಾಗಿ ಇನಿದಾಗಿ ಶ್ರಾವಣದ ಸೊನೆಯಾಗಿ, ಗಂಗಾವತರಣವ
ನೀ ನರ್ತನದೆ ತುಂಬಿಬಿಡು,
ಬಾ ನಾಗವೇಣಿಯೆ ಬಾ!’
(………ಮದನಿಕೆಗೊಂದು ಬಿನ್ನವತ್ತಳೆ)

ಹಾಗೆಂದು ಜಯಶ್ರೀಯವರ ಮನಸ್ಸು ಕೇವಲ ದೃಶ್ಯ ಚೆಲುವಿಗೆ ಮಾತ್ರ ಮಾರು ಹೋಗುವದೆಂದು ಭಾವಿಸಬೇಡಿರಿ. ಅಂತಃಕರಣದ ಚೆಲುವೇ ಅವರ ಅಂತರಂಗದ ಪ್ರೇರಣಾಸ್ರೋತ. ‘ಭಾರತಎನ್ನುವುದು ಅವರ ಅಂತಹ ಒಂದು ಕವನವಾಗಿದೆ. ಅಜ್ಜಿ ಹಾಗು ಮೊಮ್ಮಗಳ ನಡುವಿನ ಅಂತಃಸಂಬಂಧ ಕವನದ ಹೂರಣವಾಗಿದೆ. ಕವನದ ಎರಡು ಸಾಲುಗಳನ್ನು ನೋಡಿರಿ:
ಸೊಲಿಗಿ ಹೂರಣ, ಅದ್ದೇಲಿ ತುಪ್ಪ ಪಂಚಪಾಂಡವರಿಗಿಟ್ಟು
ಮುಗದ್ಹೋದ ಮಹಾಭಾರತ ಕಲಿಸಿದ್ದು ಮರಿಬ್ಯಾಡ್ರೆನ್ನುವಾಕಿ.’
( ಕವನವು ಭಾರತೀಯ ಸಂಸ್ಕೃತಿಯ ದರ್ಶನವೂ ಆಗಿದೆ.)

ಜಯಶ್ರೀಯವರ ಕವನಗಳು ಕೇವಲ ಕಲ್ಪನೆಯಲ್ಲಿ ತೇಲುವ ಕವನಗಳಲ್ಲ, ಇವು ಕಟು ವಾಸ್ತವತೆಯ ಕವನಗಳೂ ಆಗಿವೆ. ಹದಿಹರೆಯದ ಸಮಯವೆಂದರೆ ಹಗಲುಗನಸಿನ ಸಮಯ. ಜೊತೆಜೊತೆಗೇ ಇದು ತೀವ್ರ ಅಪಾಯಕಾರಿ ಸಮಯವೂ ಹೌದು, ವಿಶೇಷತಃ ಹುಡುಗಿಯರಿಗಾಗಿ.
ಉತ್ಪ್ರೇಕ್ಷಿತ....? ಎನ್ನುವ ಅವರ ಕವನದ ಮೊದಲ ನುಡಿಯನ್ನು ನೋಡಿರಿ:
ಭಯವಾಗುತ್ತದೆ ನನಗೆ
ಕೆಫೆ, ಕ್ಲಬ್ಬು, ಪಬ್ಬುಗಳ
ಗಾಜಿನ ಕಿಣಿಕಿಣಿಯ ನಡುವೆ ಕಳೆದು ಹೋಗುವ
ಹುಡುಗಿಯರ ಕನಸುಗಳ ಬಗ್ಗೆ,
ಉತ್ಪ್ರೇಕ್ಷಿತ, ಉತ್ಕಂಠಿತ ಆಸೆಗಳ ಹೊಂಡದಲ್ಲಿಳಿದು
ಸುತ್ತುಮುತ್ತುವ ಮತ್ತೇಭವಿಕ್ರೀಡಿತರ
ಹೊತ್ತುಗಾಣದ ಸೇವೆಗಳ ಹಾದಿಯಲ್ಲಿ,
ಕೆಲವೊಮ್ಮೆ ಗಾದಿಯಲ್ಲಿ ಕಳಕೊಳ್ಳುವ
ಷೋಡಶಿಯರ ಬಗ್ಗೆ!’

ಇದು ಆ ಷೋಡಶಿಯರ ತಾಯಂದಿರಗಂತೂ ಒಳಒಳಗೇ ಚಡಪಡಿಸುವ ಸಮಯವೂ ಆಗಿದೆ:
ಏಳು ಮಲ್ಲಿಗೆಯಲ್ಲ ಮಗಳು, ಆದರೂ ಕಣ್ಣುಗಳ ಮಣಿ ಹೌದೇ,
ಏರೇರಿ ಬೆಳೆದ ಅಂಗಾಂಗಳು.
……………………………………………….
……………………………………………..
ನಾವು ಕಾಪಿಡಬೇಕು ವಿಧಿಯಿಲ್ಲ. ಮೊನ್ನೆ ಬಸ್ಸಿಳಿದು
ಬರುವಾಗ ಮಿಡಿಗಾಯಿ ಮುರಿದು ನೆತ್ತರಿಗೊಡ್ಡಿದ್ದಲ್ಲದೆ ಕತ್ತು ಕುಯಿದರಲ್ಲ!
ರಾಕ್ಷಸರೇ? ಇಲ್ಲವಲ್ಲ ಇಲ್ಲ. ಮನುಜರಂತೆ.
ಬಾ˘ಯ್ಸ್ ಆರ್ ಬಾ˘ಯ್ಸ್! ತಪ್ಪಾದರೇನಂತೆ?
ಶಿಕ್ಷೆ ಸಲ್ಲದು, ತಿದ್ದಿಕೊಂಡಾರು
ಸಮಯ ಕೊಡಿ, ಚೀರಾಡಬೇಡಿ, ಮತ್ತೆ ಮಾಡಿದರೆ ನೋಡೋಣ.’
(……………..ಅಪುತ್ರಸ್ಯ ಗತಿರ್ನಾಸ್ತಿ)

ಈ ರೀತಿಯಲ್ಲಿ ಯಾವತ್ತೂ ಕಳವಳದಲ್ಲಿಯೇ ಬದುಕಬೇಕಾದ ಸ್ಥಿತಿ ಹುಡುಗಿಯರ ತಾಯಂದಿರದು. ಈ ನುಡಿಯಲ್ಲಿಯ ಬಾ˘ಯ್ಸ್ ಆರ್ ಬಾ˘ಯ್ಸ್!’ ಎನ್ನುವ ಪದಗಳನ್ನು ಗಮನಿಸಿರಿ. ನೆನಪಾಯಿತೆ, ಮಹಾವಾಕ್ಯವನ್ನು ಘೋಷಿಸಿದ ಮಹಾಪುರುಷರು ಯಾರು, ಯಾವಾಗ, ಎಲ್ಲಿ ಎನ್ನುವುದು? ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾಗಿದ್ದವರೊಬ್ಬರು
ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಹುಡುಗರನ್ನು ಒಪ್ಪವಿಟ್ಟುಕೊಂಡು ಹೇಳಿದ ಕೊಳಕು ಮಾತಿದು. ಇಂತಹ insensitive ಮುಖ್ಯಮಂತ್ರಿಯನ್ನುಗಲ್ಲಿಗೇರಿಸುವ ಬದಲಾಗಿ-- ಮತ್ತೆ ಮತ್ತೆ ಗಾದಿಗೇರಿಸುವ ನಮ್ಮ ಕುರುಡ ಮತದಾರರು ತಮ್ಮ ಸಮುದಾಯವನ್ನು ಕಣ್ಣು ಮುಚ್ಚಿಕೊಂಡು ನೋಡುತ್ತಾರೆಯೇ ಹೊರತು ಯೋಗ್ಯತೆಯನ್ನಲ್ಲ. ಬುದ್ಧಿಜೀವಿಗಳೆಲ್ಲರೂ ಬಾಯ್ಮುಚ್ಚಿಕೊಂಡಿದ್ದ ಈ ಸಂದರ್ಭದಲ್ಲಿ ಜಯಶ್ರೀಯವರು ತಮ್ಮಲ್ಲಿ ಕುದಿಯುತ್ತಿರುವ ಕೋಪವನ್ನು ಕವನದ ಮೂಲಕ ವ್ಯಕ್ತಪಡಿಸಿದ್ದಾರಷ್ಟೆ.

ಕಾ˘ಲೇಜು ಹುಡುಗ, ಹುಡುಗಿಯರನ್ನು ನೀವೆಲ್ಲರೂ ನೋಡಿರುವಿರಷ್ಟೆ? ಅವರ ಕಣ್ಣುಗಳಲ್ಲಿಯ ಹೊಳಪೇನು, ಕಿಲಿಕಿಲಿ ನಗುವೇನು, ಕನಸುಗಳ ಬಣ್ಣಗಳೇನು? ಕಾ˘ಲೇಜಿನ ಶಿಕ್ಷಣದ ಬಳಿಕ ಹುಡುಗರೇನೋ ಆಕಾಶಕ್ಕೆ ಹಾರಲು ತಯಾರಾಗಿರುತ್ತಾರೆ. ಹುಡುಗಿಯರು? ಕೆಲವರು ಮೊದಲು ಉದ್ಯೋಗವನ್ನು ಹಿಡಿದು, ಬಳಿಕ ಮದುವೆಯಾಗುತ್ತಾರೆ; ಕೆಲವರು ಮೊದಲೇ ಮದುವೆಯಾಗಿ ಬಿಡುತ್ತಾರೆ. ಒಟ್ಟಿನಲ್ಲಿ ಇವರೆಲ್ಲರಿಗೂ ಮದುವೆಯಂತೂ ತಪ್ಪಿದ್ದಲ್ಲ! ಇವರ ಮುಂದಿನ ಬದುಕು ಹೇಗಿರುತ್ತದೆ?

ಭಾರತವೇ ಇರಲಿ, ಅಮೇರಿಕವೇ ಇರಲಿ, ಹೆಣ್ಣುಮಕ್ಕಳಿಗೆ ದಾಂಪತ್ಯದಲ್ಲಿ ದುಮ್ಮಾನ ಇರುವುದು ಸಹಜ(!) ಸಂಗತಿಯಾಗಿದೆ. ದುಮ್ಮಾನ ಹುಟ್ಟುವುದು ಅಸಮಾನತೆಯ ಅಸಮಾಧಾನದಿಂದ ಎಂದು ಹೇಳುವ ಅವಶ್ಯಕತೆ ಇಲ್ಲ. ಮದುವೆಯ ಸಂದರ್ಭದಲ್ಲಿ ಹಾಲುಧಾರೆಯ ಸುಖಸಂಭ್ರಮದಲ್ಲಿ ತೇಲುತ್ತಿರುವ ಹುಡುಗಿ, ತನ್ನದೆಲ್ಲವನ್ನೂ ಸಮರ್ಪಿಸಿಕೊಂಡು ಕಣ್ಣು ತೆರೆದ ಬಳಿಕ ಕಾಣುವ ವಾಸ್ತವವೇನು?
ಕನಸುಗಳನ್ನು ಕಟ್ಟಿಟ್ಟ ಚಿತ್ತಾರದ ಪೆಟ್ಟಿಗೆಯ
ಮರಮರಳಿ ನೋಡಿ, ಎದೆಗೊತ್ತಿ ನಸುನಗೆಯ
ಉಡುಗೊರೆಯನಿಟ್ಟು ಮುಚ್ಚಿ, ಅಟ್ಟಳಿಗೆಯನಿಳಿದಾಗ
ಸೊಂಟಕ್ಕೆ ಬಿಗಿದ ಸೆರಗಿನ ನೆನಪು
…………………………….
ಅವನ ಕನಸುಗಳಿಗೆ ಕೋಟಿ ಬೆಲೆ
ನನ್ನದಕ್ಕೇನು ಅದೂ ಒಂದು ಕನಸೇ?!’
……………………………..
ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ಕಾಣಾ,
ಅಂದಿಲ್ಲವೇ ಅಕ್ಕ!
(………………ನತ್ತು / ಹಕೀಕತ್ತು)          
(ಟಿಪ್ಪಣಿ: ‘ಉಡುಗೊರೆಯನಿಟ್ಟು ಮುಚ್ಚಿ, ಅಟ್ಟಳಿಗೆಯನ್ನಿಳಿದಾಗ
ಸೊಂಟಕ್ಕೆ ಬಿಗಿದ ಸೆರಗಿನ ನೆನಪು’……….., ಸಾಲಿನಲ್ಲಿ ಸುಖದ ಕನಸುಗಳನ್ನು ಹೊತ್ತ ಹೆಣ್ಣು ಕೆಳಗಿಳಿದು ಬರುವಾಗ, ತನ್ನ ದುಡಿತದ ಮಣಭಾರಕ್ಕೆ ಸಜ್ಜಾಗಬೇಕೆನ್ನುವ ಭಾವವಿರುವುದನ್ನು ಗಮನಿಸಿರಿ.)

ಏಳು ಹೆಜ್ಜೆ ಜೊತೆಗಿಟ್ಟ ಒಡನಾಡಿಯೇ ತನ್ನ ಬದುಕಿನ ಭವಿಷ್ಯ ಎಂದು ಭಾವಿಸುವ ಹೆಣ್ಣಿಗೆ, ಮದುವೆಯ ಮರುದಿನ ಕಾಣುವುದೇನು?
ಹೆಜ್ಜೆ ಜೋಡಿಸಿ ಹೊಸ ಹಾದಿ ಹುಡುಕಹೊರಟ ಸಮಯ,
ದಿಕ್ಕು ತಪ್ಪಿಸಿ ದೂರ ಹೋದೆ
ನಿನ್ನ ನೆವಕೆ ನನ್ನ ಕಾರಣ.
………………………..
ಸಪ್ತಪದಿಗೂ ತಾಕುವುದೇ ಕಿಲುಬು?
ಸುಖದುಃಖೇ ಸಮೇಕೃತ್ವಾ ವಚನಶೂರ
ನೀನು ಕಣೋ! ನಾನಲ್ಲ.
…………………………..
ವೃಂದಾವನದ ತುಳಸಿ ಮನೆಯೊಳಗೆ ಬಾರಳು,
ನೇರ ಹರಿವ ಹೊನಲಾಗದೆ ನೀ ಕವಲೊಡೆದೆಯಲ್ಲ,
ದಾರ ಕಟ್ಟುವ ಮೊದಲು ಯೋಚಿಸಬೇಕಿತ್ತೆ?
(………….ಬಂಧ)
 (‘ಸುಖದುಃಖೇ ಸಮೇಕೃತ್ವಾ, ಲಾಭಾಲಾಭೌ ಜಯಾಜಯೌಎನ್ನುವುದು  ಸ್ಥಿತಪ್ರಜ್ಞನನ್ನು ವರ್ಣಿಸುವಾಗ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವ ಮಾತು. ಜಯಶ್ರೀಯವರು ಇದನ್ನು ಇಲ್ಲಿ ಬೇರೆಯೇ ಆದ ಅರ್ಥದಲ್ಲಿ ಬಳಸಿದ್ದಾರೆ!)

`ಸಸಾರ ಅಲ್ಲವೋ ಸಂಸಾರಎನ್ನುವ ಕವನವು ಪ್ರಾದೇಶಿಕ ನುಡಿ-ಚೌಕಟ್ಟಿನಲ್ಲಿರುವ ಒಂದು ಅಪೂರ್ವ ಕವನವಾಗಿದೆ.  ರುಚಿಯನ್ನು ಅರಿಯಲು ಕೆಲವು ಸಾಲುಗಳನ್ನು ಉದ್ಧರಿಸುತ್ತಿದ್ದೇನೆ:
ಇದ್ಲೀ ಒಲಿ ಮ್ಯಾಲಿನ ನಿಗಿ ನಿಗಿ
ಕೆಂಡದಂಥಾ ಕೋಪಿಷ್ಠ ನೀನು,
ಬರ್ಫದ ಮ್ಯಾಲಿನ ತಿಳಿನೀರಂಥಾ
ಥಣ್ಣಗಿನ ಆಕಿ…………..
……………………….
ಎದ್ದು ಎದಿಗೊದ್ದಂಥಾ ಮಾತಾಡಿ
ಮತ್ತ ಮರಮರ ಮರಗಿ…………..
……………………………
ಏಳು ಹೆಜ್ಜಿ ಎಂಟು ವಚನ
ಮುಟ್ಟಿ ಎದಿ, ಇಟ್ಟು ಕಣ್ಣಾಗ ಕಣ್ಣು
ನಾತಿ ಚರಾಮಿ ನೀನು…..
ಕುಟುಂಬಂ ಪಾಲಯಿಷ್ಯಾಮಿಆಕಿ
…………………………….’
(………ಸಸಾರ ಅಲ್ಲವೋ ಸಂಸಾರ)

ದಾಂಪತ್ಯದ ದುಸುಮುಸು ಮನದ ಮೇಲೆ ಕಲೆಗಳನ್ನು ಉಳಿಸದಿದ್ದೀತೆ?
ಎದೆಗೂಡ ಹಣತೆಯ ನಿಶ್ಶಬ್ದ ಬೆಳಕಲ್ಲಿ
ಅಂತರಂಗಕ್ಕಷ್ಟೇ ಕಾಣಿಸಿ
ಮಾತಿಲ್ಲದೆ ಅತ್ತು, ಪಿಸಗುಟ್ಟುವ
ಉಸಿರಲ್ಲಿ ತನ್ನ ಗಾಯದ ಕತೆ ಹೇಳುವ ಕಲೆ!’

ಗಡಿದಾಟಿಸಿ ಬೀಸಿದ್ದ
ಶಬ್ದಗಳ ಹೊಡೆತದ ಕಲೆ,
ಅದರೊಳಗೆ ಕಲಸಿ ನನ್ನನಿನ್ನಾಳದ
ವಿಷ ತಣಿದು ಅಮೃತವಾಗದೆ
ಉಕ್ಕಿ ಹರಿದ ಕತೆಯ ಕಲೆ!
(…….ಒಂದು ಶಾಲು ಬೇಕಾಗಿದೆ)

ಸರಿ, ಹರಿದು ಹೋದ ಹಚ್ಚಡವನ್ನು ಸರಿಪಡಿಸಲಾದೀತೆ?
ಸವೆದು ಹೋದ ದಾರದಿಂದ ಕಟ್ಟಬಾರದು ಕೆಳೆತನ
………………………………………..
……………………………………………
ಹೆಜ್ಜೆ ಜೋಡಿಸಿ ಹೊಸ ಹಾದಿ ಹುಡುಕಹೊರಟ ಸಮಯ,
ದಿಕ್ಕು ತಪ್ಪಿಸಿ ದೂರ ಹೋದೆ
ನಿನ್ನ ನೆವಕೆ ನನ್ನ ಕಾರಣ.
…………………………….
……………………….
ಹೊಸಿಲಕ್ಕಿಯ ಘಲ್ಲುಮಳೆ ಹರಡಿ
ಮನೆತುಂಬಿ ನಕ್ಕ ಪರಿಗೆ ಜೋತುಕೊಂಡೆನಲ್ಲ?
ಸ್ಥಾವರಕ್ಕಳಿವಿನ ಪರಿವೆಯಿಲ್ಲದೆ?
……………………………
……………………..
ನೇರ ಹರಿವ ಹೊನಲಾಗದೆ ನೀ ಕವಲೊಡೆದೆಯಲ್ಲ
ದಾರ ಕಟ್ಟುವ ಮೊದಲು ಯೋಚಿಸಬೇಕಿತ್ತೆ?’
(……………….…..ಬಂಧ)
(ಟಿಪ್ಪಣಿ: ‘ದಾರ ಕಟ್ಟುವುದುಎಂದು ಲೇಖಕಿ ಬರೆದಿದ್ದಾರೆ, ಆದರೆಮಾಂಗಲ್ಯಮ್ ತಂತು ನಾನೇನಎನ್ನುವ ವಿಶೇಷ ಅರ್ಥವೂ ಇಲ್ಲಿ ಹೊಳೆಯುತ್ತದೆ!)

ಸುಖದ ಸಮಯಗಳಲ್ಲಿ ಮನಸ್ಸುಗಳು ಒಂದಾಗಿಯೇ ಇದ್ದಾವು; ಆದರೆ ದುಃಖದ ಸಮಯದಲ್ಲಿ? ಹೆಂಡತಿಯ ದುಃಖ ಗಂಡನದೂ ಅಲ್ಲವೆ?
ಅಲ್ಲೇ ಎಲ್ಲೋ ವಿಭಾಗಿಸಿಕೊಂಡುವು
ನನ್ನ ನಿನ್ನ ನೋವುಗಳು, ಎಲ್ಲಿ? ಅದೇ ಪ್ರಶ್ನೆ.
ಅಲ್ಲ, ನೋವುಗಳಿಗೆ ನಮ್ಮಲ್ಲಿ ಪ್ರೈವಸಿಯ
ಛಾಪು ಬಿದ್ದದ್ದು ಯಾವಾಗ?’
(……………ಗತ)

ಸೀಮಾಂತರದ ಗೆರೆಗಳು ಇತ್ತ ಹೊರಳುವ ಮುನ್ನ
ಅತ್ತ ನೋಡಿ ನಕ್ಕದ್ದೇಕೋ?
(………ಅಗಳ್ತೆ)

ಹರಿದು ಹೋದಇಂತಹ ಬದುಕಿಗೆ ತೇಪೆ ಹಚ್ಚಲು ಹೆಣ್ಣೇ ಒದ್ದಾಡಬೇಕು!
ಎದ್ದುಬಂದು ಎದೆಗೊದ್ದು ಒಳಗಿನ ಸರೋವರಕ್ಕೆ
ಕಲ್ಲಿಟ್ಟು ಕಲಕಿ ಹುಚ್ಚೆಬ್ಬಿಸಿ
ಎತ್ತಿ ಕಣ್ಣಿಗಿಡುವ ನೋವುಗಳನ್ನು ತಡೆಯುವುದು
ಈಗಲೀಗ ಮಾಡಬೇಕಿರುವ ಆದ್ಯತೆ.
ನಲ್ಲಿ ಸೋರಿದರೆ ಮನೆಯಂದ ಕೆಟ್ಟೀತು,
ಕಣ್ಣು ಸೋರಿದರೆ ಬದುಕು!’
(……..ನಲ್ಲಿಗಳು ಸೋರುತ್ತಿರುತ್ತವೆ)

ಆದರೂ ಸಹ, ದಾಂಪತ್ಯದ ಪರಾಮರ್ಶೆ ಆಗಲಿ, ಎಲ್ಲವೂ ಮತ್ತೆ ಸರಿಯಾದೀತು ಎನ್ನುವ ಭಾವನೆಯೊಂದು ಮಿಣುಕುತ್ತಿರುತ್ತದೆಯಲ್ಲವೆ? ಅದರ ಪರಿ ಹೀಗಿದೆ:
ಇದುವರೆಗಿಟ್ಟ ಹೆಜ್ಜೆಗಳ ಹಿಂದಿರುಗಿ ನೋಡೋಣ…..
ಅದೇ ಪರಾಗಸ್ಪರ್ಶಕ್ಕೆ
ಕಾದ ಹೂ ನಾನಾಗಿದ್ದರೆ ಅಥವಾ
ನನ್ನನ್ನೇ ಅರಸಿ ಸುತ್ತಿ ಸುಳಿವ ಭೃಂಗ
ನೀನಾಗಿದ್ದರೆ….
ಖಂಡಿತ ಮೊದಲಿನ ಪರಕಾಯ ಪ್ರವೇಶ ನಮ್ಮಲ್ಲಿ!’
(…………………ಪರಿಧಿ)

ಹೆಣ್ಣಿಗೆ ಹಾಕಿದ ನಿರ್ಬಂಧಗಳು ಅತಿಯಾದಾಗ, ಒಮ್ಮಿಲ್ಲೊಮ್ಮೆ ಹೆಣ್ಣು ಚೌಕಟ್ಟನ್ನು ಮೀರದಿರಲಾರಳೆ?
ರೇಖೋಲ್ಲಂಘನ ಮಾಡಿಯೇ ತೀರುವೆನೆನ್ನುವ ಕಾಲುಗಳ
ತಡೆಯುತ್ತೀರಾದರೂ ಎಷ್ಟು ದಿನ?’
(……………….ಗೆರೆಗಳು)

ಇದೆಲ್ಲಕ್ಕೂ ಉತ್ತರವನ್ನು ಕಾಲವೇ ಹೇಳಬೇಕು:
ಜೀವ ನೋವಿನ ಕಡಲು, ದೇಹ ದಣಿವಿನ ಮಡಿಲು
ಕುಗ್ಗಿದ ಕಾಯಕ್ಕೆ ಇನ್ನಿಲ್ಲ ಕಾಯಕಲ್ಪ!
……………………………………..
ಅವರವರ ಬದುಕು ಕಟ್ಟಿ ನಿಂತಿರುವವರು,
ಹಾಡಿಬಿಡು ಭೈರವಿಯ! ಬೇರೆ ರಾಗ-ಚರಣಗಳಿಲ್ಲ ಇನ್ನು.
…………………………………….
ಅಂದು ನೆಟ್ಟು ಬೆಳೆಸಿದ ಸಸಿಗಳಿಗೆ ನಿನ್ನ ನೀರಿನ
ಹಂಗಿಲ್ಲ, ತೇಲಿ ಹೊರಟಿರುವ ಹಾಯಿ ಹಡಗಂತೆ ಅವು,
ದಿಕ್ಕು ದೆಸೆಯ ಚುಕ್ಕಾಣಿಗೆ ಮುಕ್ಕಣ್ಣನ ದಯವಿರಲಿ!
………………………………………
ನಗುವಿನಲ್ಲಿ ಸಾಗಿದರೆ ಇರುವಷ್ಟು ಹಾದಿ,
ನಾಳಿನ ಬುತ್ತಿಗಿರಲಿ ಒಂದಿಷ್ಟು ಪ್ರೀತಿ!’
(………………ಕಾಲವೇ)                                     
(ಟಿಪ್ಪಣಿ: ಭೈರವಿ ರಾಗವು ಹಿಂದುಸ್ತಾನಿ ಸಂಗೀತದಲ್ಲಿ ಕಚೇರಿಯ  
ಕೊನೆಯಲ್ಲಿ ಹಾಡುವ ರಾಗವಾಗಿದೆ.)

ಸಂಸಾರದ ವಿವಿಧ ಮಗ್ಗಲುಗಳನ್ನು ಜಯಶ್ರೀಯವರ ಕವನಗಳು ಚಿತ್ರಿಸುತ್ತವೆ. ಅನುಭವಗಳಿಂದ ಜಯಶ್ರೀಯವರು ಹುಡುಗಿಯರಿಗೆ ನೀಡಬಹುದಾದ ಮಾರ್ಗದರ್ಶನ ಏನಾದರೂ ಇದೆಯೆ?  ನಿಮ್ಮ ಬದುಕಿನಲ್ಲಿ ಮೇಲೆ ಹೋಗುವ ಮೆಟ್ಟಲುಗಳನ್ನು ಕಟ್ಟಿಕೊಳ್ಳರಿ, ಅವು ಬೀಳುವಾಗ ಎದೆಗುಂದದಿರಿ ಎನ್ನುವ ಕವನವೊಂದು ಹೀಗಿದೆ:

ನೋಡಿಲ್ಲಿ, ನಾ ಇಟ್ಟಿಗೆಯ ರಾಶಿ ಹೊತ್ತು ತಂದೆ,
ಸುತ್ತ ಹರಡಿದ ಕಸಕಡ್ಡಿಗಳ ಸರಿಸಿ ಹೆಜ್ಜೆ ಹೆಜ್ಜೆಗೆ ಚುಚ್ಚಿದ ಮುಳ್ಳುಗಳ
ಕಿತ್ತಿ ಹಸನಾಗಿಸಿದೆ……………………….
………………..
ಇದೀಗ ಮಗಳ ಮೆಟ್ಟಿಲುಗಳು ಸಿದ್ಧವಾಗುತ್ತಿವೆ…………
…………………………………
ಮುಂದುವರಿ ಮಗಳೇ,
ನಾನಿಲ್ಲೆ ನಿನ್ನ ಬೆನ್ನ ಹಿಂದೆ.’
(…………..ಮೆಟ್ಟಿಲುಗಳು)

ರೀತಿಯಾಗಿ ಸ್ತ್ರೀಸಂವೇದನೆಯ ಕವನಗಳನ್ನು ನಾವಿಲ್ಲಿ ಕಾಣಬಹುದು. ಸ್ತ್ರೀಸಂವೇದನೆ ಎಂದರೆ ಇವರೇನು ಫೆಮಿನಿಸ್ಟಾ. ವಿಮೆನ್ಸ್ ಲಿಬ್ ಪ್ರತಿಪಾದಕರಾ ಎಂದು ಕೇಳದಿರಿ. ಪುರುಷಪ್ರಧಾನವಾದ ನಮ್ಮ ಸಮಾಜದಲಿ ಸ್ತ್ರೀಯರು ಅನೇಕ ಸಂಕಟಗಳಿಗೆ ಈಡಾಗುತ್ತಾರೆ. ಸಂಕಟಗಳಿಗೆ ಧ್ವನಿ ಬೇಡವೆ? ಜಯಶ್ರೀಯವರ ಕವನಗಳು ಇಂತಹ ಧ್ವನಿಯಾಗಿವೆ.

 ಕೊಳೆಗೇರಿಯಲ್ಲಿ ಬದುಕುವ ಹೆಣ್ಣೊಬ್ಬಳ ಸ್ಥಿತಿ ಎಷ್ಟು ದಾರುಣವಾಗಿದೆ, ಗಂಡನ ಪಶುಭಾವ ಹೇಗಿದೆ ಎನ್ನುವದನ್ನುಗರ್ಭಕವನವು ಸಾಂದರ್ಭಿಕವಾಗಿ ವರ್ಣಿಸುತ್ತದೆ:
ಚಪ್ಪಲಿ, ಸಬಳು, ಇಲ್ಲ ಮೊಳಕೈಯಲ್ಲೇ ಗುದ್ದಿ ಬಡಿದು
ಆದರೂ ಇಳಿಯದ ಹೆಂಡದ ನಶೆಗೆ ಮತ್ತವಳ
ಸೆಳೆದಮುಕಿಕೊಂಡ ಗಂಡನ ವೀರ್ಯ ಬಹು ಫಲವತ್ತು?’

ಇದಕ್ಕೆ ವಿಪರೀತವಾಗಿ ಕೂಸಿಗಾಗಿ ಹಂಬಲಿಸುವ ಸ್ಥಿತಿವಂತರ ಮನೆಯ ಹೆಣ್ಣೊಬ್ಬಳ ಪಾಡು ಹೀಗಿದೆ:
ಅಲ್ಲಿ ಲೆಕ್ಕಕ್ಕಿಲದ ಗರ್ಭ ಕಳಿತು ಚಿಮ್ಮಿದ ಕೂಸೆರಡು,
ಇಲ್ಲಿ ಕಸುಗಾಯಿ ಕಮರಿ,
ಬರೆದ ಬರದ ಹಾಡು
ಅಕ್ಕಿ ಕಚ್ಚಿನ ನೀರು ಚೆಲ್ಲಿ ಹೋಗುತ್ತದೆ.’
(…………….ಗರ್ಭ)

ಕನ್ನಡ ಸಾಹಿತ್ಯವೂ ಪುರುಷಪ್ರಧಾನವಾದದ್ದೇ. ಅದರಲ್ಲಿಯೇ ಮಾಸ್ತಿ ಹಾಗು ಬೀಚಿಯವರಂತಹ ಮಹಾನುಭಾವರು ಸ್ತ್ರೀಯರ ಬಗೆಗೆ ಸಹಾನುಭೂತಿಪರರಾಗಿದ್ದರು. ಲೇಖಕಿಯರಲ್ಲಿ ತ್ರಿವೇಣಿಯವರ ಕಾದಂಬರಿಗಳನ್ನು ನೋಡಿರಿ. ಹೆಣ್ಣಿಗೆ ಯಾರನ್ನಾದರೂ ಪ್ರೀತಿಸುವ ಹಕ್ಕಿದೆ, ಅದು ವಿಷಮವಿವಾಹದ ಪ್ರೀತಿಯಾಗಿರಲಿ ಅಥವಾ ವಿವಾಹಬಾಹ್ಯ ಪ್ರೀತಿಯಾಗಿರಲಿ ಎಂದು ಬರೆದ ಮೊದಲ ಲೇಖಕಿ ಇವರು.

ಜಯಶ್ರೀಯವರ ಕವನಗಳು ಸ್ತ್ರೀಸಂವೇದಿತ ಕವನಗಳಿಗೆ ಮಾತ್ರ ಸೀಮಿತವಾಗಿಲ್ಲ. ‘ಮಾತು ಕೇಳದ ಕತೆಯಲ್ಲಿ ಲೇಖಕರ ಪಾಡು ವರ್ಣಿತವಾಗಿದೆ. `ಕಾಣೆಯಾದ ಎಂಎಚ್-೩೭೦ವಿಮಾನದುರಂತಕ್ಕೆ ಆಹುತಿಯಾದವರ ಕರುಳಿನ ಕವನವಾಗಿದೆ.

೧೯೯೩ರಲ್ಲಿ ತೆರೆ ಕಂಡ ರುಡಾಲಿಎನ್ನುವ ಚಲನಚಿತ್ರವನ್ನು ಕೆಲವರಾದರೂ ಓದುಗರು ನೋಡಿರಬಹುದು. ಉತ್ತರ ಭಾರತದಲ್ಲಿ ಇರುವ ಪದ್ಧತಿ ಇದು. ಜಮೀನುದಾರರಂತಹ ಗಣ್ಯರ ಮನೆಯಲ್ಲಿ ಯಾರಾದರೂ ಸತ್ತಾಗ, ಶವದ ಮುಂದೆ ಕೂತು ಅಳಲೆಂದು, ಅಳುಗೂಲಿಗಳನ್ನು(!) ನೇಮಿಸಿಕೊಳ್ಳುತ್ತಾರೆ. ಅಂಥ ಹೆಣ್ಣುಗಳ ಹೆಸರುರುಡಾಲಿ’. ಈ ಕವನದ ಕೆಳಗಿನ ಎರಡು ನುಡಿಗಳಲ್ಲಿ ಎಂತಹ ರುದ್ರವ್ಯಂಗ್ಯ ತುಂಬಿದೆ ನೋಡಿ:
ಬೊಂಬು, ಚಾಪೆ, ಮಡಕೆ, ಬೂದಿ
ದಿನದಿನದ ಊಟ! ಅದೇ ಜೀವದಾಟ, ಅತ್ತು ದಣಿದು
ಸೋತ ಮನ ಇನ್ನಳಲಾರೆ ಅಂತಳುವಾಗ
ಅದಕ್ಕೊಂದು ತಪರಾಕಿ! ನಾಳೆ ಬೇಡವೆ ಹೊಟ್ಟೆಗೆ ಹಿಟ್ಟು?

ಅವರಳದಿದ್ದರೆ ನಾನಳಬೇಕು
ಮಸಣದ ಮನೆದೀಪದುರಿ ನನ್ನ ಮನೆದೀಪದ ದೊಂದಿ!
ದಿಟ್ಟಿನೆಟ್ಟು ದೂರ ಚಿತ್ತ, ಒಸಗೆ ಬಂತೆ? ಸಾವಿನೊಸಗೆ
ಅಲ್ಲ ನನ್ನ ಅನ್ನದೊಸೆಗೆ.’                               
(…………ರುಡಾಲಿಯ ಸ್ವಗತ…)

ಬೇಟಿಯ ಕತಿಎನ್ನುವ ಕವನದಲ್ಲಿ ಜಯಶ್ರೀಯವರು ಅಜ್ಜಿ ಹೇಳುವ ಜಾನಪದ ಕತೆಯ formatಅನ್ನು ಬಳಸಿದ್ದಾರೆ.
ಎರಡು ಹೆರಳಿನ-ಅರಳುಕಣ್ಣಿನ
ಪ್ರಶ್ನೆಸಾಲಿಗುತ್ರ ಹೇಳೋ ಸುಭಗ!
ಎನ್ನುವಾಗ ಕಥೆಯನ್ನು ಕೇಳುತ್ತಿರುವವಳು ಮುಗ್ಧ ಬಾಲಕಿ ಎನ್ನುವುದರ ಅರಿವಾಗುತ್ತದೆ. ಇದು ಎಳೆಯ ರಾಜಕುಮಾರಿಯನ್ನು ರಾಕ್ಷಸನು ಹೊತ್ತೊಯ್ದ ಕಥೆ.
ಒದ್ದಿ ಮುದ್ದಾಗಿ ಥರಥರ
ನಡಿಗಿ ಗಿಳಿಹಂಗ ಹೆಣ್ಣು,
ಎದಿ ಮುಚ್ಚಲ್ಯೋ
ಕೈಕೆಳಗ ಮಾಡಲ್ಯೋ? ಯಾವ ದಿಕ್ಕಿಗ್ಹೋದರ
ಉಳಿದಾವೆ ಮಾನ! ಇರೂದೊಂದೇ ಶೀಲ!’

ಇದು ಮಾನ ಅಥವಾ ಶೀಲವನ್ನು ಉಳಿಸಿಕೊಳ್ಳುವ ಪ್ರಶ್ನೆಯಷ್ಟೇ ಅಲ್ಲ; ಬದುಕಿನುದ್ದಕ್ಕೂ ನರಕದಲ್ಲಿ ಸುಡುವ ಪ್ರಶ್ನೆ. ಬಾಲೆಯನ್ನು ಉಳಿಸಲು ಯಾವ ರಾಜಕುಮಾರ ಬಂದಾನು? ಪ್ರಶ್ನೆಗೆ ಉತ್ತರವಿಲ್ಲ.
ಕವನ ಕೊನೆಯಾಗುವುದೇ ಹಾಗೆ:
 ಮುಂದೇನು ಪ್ರಶ್ನಿ?
ಅದೇತಗೀತೇನು ಚಿಲಕಾ?’
(…..‘ ಬೇಟಿಯ ಕತಿ’)

ಸಂಕಲನದ ಕವನಗಳ ಬಗೆಗೆ ಬರೆಯಲು ಹೊರಟರೆ, ಪ್ರತಿಯೊಂದು ಕವನಕ್ಕೂ ನಾಲ್ಕು ಪುಟಗಳಷ್ಟು ಬರೆಯಬೇಕಾದೀತು. ಆದುದರಿಂದ  ನನಗೆ ವೈಯಕ್ತಿಕವಾಗಿ ಅತಿ ಮೆಚ್ಚುಗೆಯಾದ ಎರಡು ಕವನಗಳೆಂದರೆ: () ‘ಅವಳು () ಮತ್ತು  ನಕ್ಷತ್ರ ಕಡ್ಡಿ ಎಂದಷ್ಟೇ ಹೇಳಬಯಸುತ್ತೇನೆ. ಏಕೆಂದರೆ ಎರಡೂ ಕವನಗಳಲ್ಲಿ ಅಂತಃಕರಣದ ಬುಗ್ಗೆ ಚಿಮ್ಮಿದೆ:
 ಒಲೆಯ ಮೇಲುಕ್ಕಿದ ಹತ್ತು ಹನಿ
ಹಾಲಿಗೆ ಸಕ್ಕರೆಯಿಟ್ಟುಕೃಷ್ಣ ಎನ್ನುವಾಗ
ಅವಳ ನೆನಪಾಗುತ್ತದೆ.
…………………
……………….
ಕೈಬೀಸಿ ಕರೆದವಳ
ಬೊಗಸೆದುಂಬಿ ಎದೆಗೆತ್ತಿಕೊಳ್ಳಹೊರಟಾಗ
ಕರಗಿಹೋಗುವ ಅವಳ ನೆನಪಾಗುತ್ತದೆ
ಕಣ್ಣೀರು ಕಟ್ಟೊಡೆದುಬಿಡುತ್ತದೆ.’
(……………ಅವಳು)

ನೀ ಹೀಗೆ ಬೊಚ್ಚು ಬಾಯಿಯ ನಗೆ ಸೂಸು ಹಗಲಿರುಳು,
ಇರಲಿ ಬಿಡು ಕೊನೆತನಕ ನಗು ತುಟಿಯಲ್ಲಿ.’
(…………….ನಕ್ಷತ್ರಕಡ್ಡಿ)

ಜಯಶ್ರೀಯವರು ತಮ್ಮ ಕವನಗಳನ್ನು ರೂಪಕಗಳಲ್ಲೇ ಹೆಣೆಯುತ್ತಾರೆ!
ಉದಾಹರಣೆಗೆ ನೋಡಿರಿ:
ವೃಂದಾವನದ ತುಳಸಿ ಮನೆಯೊಳಗೆ ಬಾರಳು,
ನೇರ ಹರಿವ ಹೊನಲಾಗದೆ ನೀ ಕವಲೊಡೆದೆಯಲ್ಲ,
(………………ಬಂಧ)

ಕಾಯಿ ಹಣ್ಣಾಗಿ ಕೊಳೆತು ಮಣ್ಣಾಗಿ
ಮತ್ತೆ ಚಿಗುರಿದ ಹಸಿ ರೆಂಬೆಗೆ ನೇತಾಡಿದ ಹೊಸ ಮರಿಗೆ
ಉಕ್ಕೇರಿದ ಹುಕಿ,
ಇತಿಹಾಸಕ್ಕೆ ಮರುಕಳಿಸುವ ಹುಚ್ಚಂತೆ
(……ಹಸಿ ರೆಂಬೆಗೆ ನೇತಾಡಿದ ಹೊಸ ಮರಿ)

ಜಯಶ್ರೀಯವರ ಕವನಗಳಲ್ಲಿ ಶ್ಲೇಷೆಗಳಿಗೇನೂ ಕೊರತೆಯಿಲ್ಲ.
ಉದಾಹರಣೆ:
()‘ಆ ಬೇಟಿಯ ಈ ಕತೆ’ : ಇಲ್ಲಿ ಬೇಟಿ ಎಂದರೆ ಮಗಳು ಎನ್ನುವ ಅರ್ಥವೂ ಹೌದು; ‘ಬೇಟೆ’ (=prey) ಎನ್ನುವ ಅರ್ಥವೂ ಹೌದು.
() ‘ಬಾಂಗಿನ ಮೊರೆತಕ್ಕೆ ಕಿಸ್ಸೆಂದು ಬಾಯಿ ತೆರೆದ ನಸುಕು’. ‘ಗರ್ಭಎನ್ನುವ ಕವನದಲ್ಲಿಯ ಸಾಲಿದು. ಇಲ್ಲಿ ಕಿಸ್ಸೆಂದು ಎನ್ನುವ ಪದವನ್ನುಕಿಸ್ ಎಂದುಎಂದು ಬದಲಾಯಿಸಿಕೊಂಡಾಗ ಹೊರಡುವ ಅರ್ಥವೇ ಬೇರೆ!
() ಬಣ್ಣ ರಮ್ಮು, ಜಿನ್ನು, ಕೆಚಪ್ಪುಗಳ
     ಗಾಢದಲ್ಲಿ ಕಲಸಿ ಅವರ ತುಂಡು ಸ್ಕರ್ಟಿನ ಮೇಲೆ
     ಶತಮಾನದ ಒತ್ತುಕಲೆ!
     (……..ಉತ್ಪ್ರೇಕ್ಷಿತ)
(‘ಒತ್ತುಕಲೆಎನ್ನುವ ಪದವನ್ನು ಗಮನಿಸಿರಿ. ಮಸಿಯನ್ನು ಒತ್ತಿ ಹಾಕುವ Blotting ಪೇಪರಿಗೆ ಕನ್ನಡದಲ್ಲಿ    ಒತ್ತುಕರಡು   ಎನ್ನುವ ರೂಢಿಯಿದೆ. Blot ಎನ್ನುವ ಪದಕ್ಕೆ ಕಲಂಕ ಎನ್ನುವ ಅರ್ಥವೂ ಇರುವುದನ್ನು ಗಮನಿಸಬೇಕು. ಸಾಮಾನ್ಯ ಅರ್ಥ, ಸೂಚ್ಯಾರ್ಥ ಹಾಗು ಶ್ಲೇಷಾರ್ಥಗಳನ್ನು ಒಳಗೊಂಡ ಪದವಿದು.)

()ಇನ್ನು ವಾಕ್ಯವೊಂದರಲ್ಲಿ ಒಂದು ಕೊಟೇಶನ್ ಚಿಹ್ನೆಯನ್ನು ಕೊಡುವ ಮೂಲಕ ಎರಡರ್ಥಗಳನ್ನು ಕೊಡುವ ಉದಾಹರಣೆಯೊಂದು ಹೀಗಿದೆ:
ಕಮಲದೆಲೆಯ ಮೇಲಣ ಇಬ್ಬನಿಯಾಗಿ
ಒಂದಿಲ್ಲೊಂದು ದಿನಅವಸರಿಸಿದಾಗ
ಸರಿದು ಹೋಗೋಣ…..
ಏನಂತೀರಿ?

ಅಶ್ವಹೃದಯವನ್ನು ಬಲ್ಲವರೇ ಕುದುರೆಯನ್ನು ಪಳಗಿಸಬಲ್ಲರು ಎಂದು ಹೇಳುತ್ತಾರಲ್ಲವೆ, ಹಾಗೆಯೇ ಭಾಷಾಹೃದಯವನ್ನು
ಬಲ್ಲವರೇ ಭಾಷೆಯನ್ನು ಪಳಗಿಸಬಲ್ಲರು. ಇವರೇ ಕವಿಗಳು!
ಜಯಶ್ರೀಯವರ ಕವನಶೈಲಿಯ ಬಗೆಗೆ ಹೇಗೆ ಹೇಳಲಿ? ಪದಸಂಪತ್ತಿಯ ಬಗೆಗೆ ಹೇಳಲೆ, ವರ್ಣನಾವೈಭವದ ಬಗೆಗೆ ಹೇಳಲೆ, ಅಲಂಕಾರಗಳ ಬಗೆಗೆ ಹೇಳಲೆ? ನಿಮ್ಮೆದುರಿಗೆ ಅವುಗಳನ್ನು ಪ್ರಸ್ತುತ ಪಡಿಸುವುದೇ ಉತ್ತಮ ಕಾರ್ಯವೆನಿಸುತ್ತದೆ. ಆದುದರಿಂದ ಕೆಲವು ಉದಾಹರಣೆಗಳನ್ನು ಮಾತ್ರ ಕೊಡುತ್ತೇನೆ:
() ರಾತ್ರಿ ಬರುತ್ತದೆ, ಬರುತ್ತಲೇ ಇರುತ್ತದೆ.
ಕ್ಷಿತಿಜ ಬಳಿದುಕೊಂಡಿದ್ದ ಸಂಜೆರಂಗಿಗೆ
ಮುಸುಕಿಟ್ಟು ನಗುತ್ತದೆ.
(………..ಚುಕ್ಕಿ)

() ಸುಪ್ತಭಾವದ ಸಂಕೀರ್ಣ ಹೊಳಹುಗಳ
ಮಿರುಗೆಲ್ಲವ ತಿಕ್ಕಿ ತೀಡಿ ಮುದುಡಿಸಿ
ತನ್ನದೇ ಮುಖವಾಡವಿಟ್ಟಿತು
(…..ಮಾತು ಕೇಳದ ಕತೆ!)

()ನಾನರಿಯೆ ಮರ್ತ್ಯಾಮರ್ತ್ಯಗಳ ಕುಹರಗರ್ಭಗಳಲ್ಲೇನಿದೆಯೆಂದು
………………………………………………..
ಜೀವಜಾತರ ಪ್ರಜ್ಞೆಸಾಲು ತೆರೆದ ನಚಿಕೇತನಾಗಿ
(……………ಯತ್ಕಿಂಚಿತ್)

() ಕೊನೆಗೆ ನದಿದಂಡೆಯಲಿ ಜಟಾಜೂಟಕ್ಕೊಂದಿಷ್ಟು
ಕಂಡವರು ತಂದ ನೀರು ಹನಿಸಿಕೊಂಡು
ಕೂತ ಬೂದಿಭಾರದ ತತ್ವಜ್ಞಾನಿ
ಮುಕ್ಕಣ್ಣನ ಮೂರನೆಯ ಕಣ್ಣು ತೆರೆಯದಿರಲಪ್ಪ

() ಸವೆದು ಹೋದ ದಾರದಿಂದ ಕಟ್ಟಬಾರದು ಕೆಳೆತನ
……………………………….
ಕ್ಷತಿಗಳಿಗೆ ಬಳಿವ ತನಿಲೇಪಕ್ಕೆ  ಹಾತೊರೆದೆ.
……………………………….
ಸಪ್ತಪದಿಗೂ ತಾಕುವುದೇ ಕಿಲುಬು?
(…………………ಬಂಧ)

() ಪಾರಿಜಾತ ಪುಲಕಿಸಿ ಅಂಗಳದ ತುಂಬ
ಮೈ ನಡುಗಿಸಿ ಉದುರಿ ಬಿಳಿಕೇಸರಿ ರಂಗೋಲಿ,
ಪೋಣಿಸಿ ಕೊಳಲೂದುವವನಿಗಿಡುವ ಹೊತ್ತು
………………………………..
ಉಗ್ಗಡಿಸಿ ಚೂತವನದಿಂಪಿನ ಮಧ್ಯಮಾವತಿ!
(…………..........…ಗರ್ಭ)
(ಟಿಪ್ಪಣಿ: ಕರ್ನಾಟಕ ಸಂಗೀತದಲ್ಲಿ ಮಧ್ಯಮಾವತಿ ರಾಗವು ಕಚೇರಿಯ 
ಕೊನೆಯಲ್ಲಿ ಹಾಡುವ ರಾಗ)

() ಉತ್ಪ್ರೇಕ್ಷಿತ, ಉತ್ಕಂಠಿತ ಆಸೆಗಳ ಹೊಂಡದಲ್ಲಿಳಿದು
ಸುತ್ತುಮುತ್ತುವ ಮತ್ತೇಭವಿಕ್ರೀಡಿತರ
(ಮತ್ತೇಭವಿಕ್ರೀಡಿತ ಎನ್ನುವುದು ಒಂದು ವೃತ್ತವೂ ಹೌದು; ಇಲ್ಲಿ ಮದವೇರಿದ ಆನೆಯ ಜಿಗಿದಾಟವೂ ಹೌದು. ಆನೆಗಳು  ಹೊಂಡದಲ್ಲಿಳಿದು ಚೆಲ್ಲಾಟವಾಡುತ್ತವೆ ಎನ್ನುವುದು ಒಂದು ವಾಸ್ತವಿಕತೆ.)

() ಮಸಣದ ದೀಪದುರಿ ನನ್ನ ಮನೆದೀಪದ ದೊಂದಿ
……………………………..
ಹೋ! ನನಗಿಲ್ಲ ನಾಚಿಕೆ ಎದೆಹೊಡೆದು ಗುದ್ದಿ
ಭೋರಾಡಿಪಂಚಮ, ಷಡ್ಜ, ತಾರಕಗಳೆಲೆಲ್ಲ ಇಳಿದ
ಘೋರ ಅಳು, ಸತ್ತ ಎಮ್ಮೆಗೆ ಸೇರು ಹಾಲು!
ಸದ್ಗುಣಗಾಥಾ ಪ್ರವಾಹ, ಹೊಗಳಿದಷ್ಟೂ ಮರುಕದೆರೆ,
ತಪ್ಪಿಲ್ಲ ಏನ, ಇದ್ದದ್ದೇ ಇಳಿದು ಬಂದ ಶೋಕಾವತರಣ.
(……………….ರುಡಾಲಿ)
(ಟಿಪ್ಪಣಿ: ಬೇಂದ್ರೆಯವರಗಂಗಾವತರಣವನ್ನು ನೆನೆಪಿಸಿಕೊಳ್ಳಿರಿ.)

()ಆದರೂ ಎದೆಯ ಸೆಲೆಬಿರಿದು ಉಕ್ಕುವ
ನೀರ ಝರಿಗೆ ಎಂದೆಂದೂ ಬತ್ತದ ಶಕ್ತಿ
ಎಷ್ಟು ಹರಿದರೂ ಮತ್ತೆ ತುಂಬಿಕೊಳ್ಳುವ ಕಸುವು
ಕಾರಣ ಇಷ್ಟೇ,
ಹೊಸ ನೋವುಗಳಿಗೆ ಬರವಿಲ್ಲದ ಬದುಕಿದು
(…..ನಲ್ಲಿಗಳು ಸೋರುತ್ತಿರುತ್ತವೆ)

(೧೦) ‘ಎದೆಹಾಲಿನ ಕತೆಗಿತೆ, ಮರುಳೆ ನಿನಗೆ? ರಬ್ಬಿಶ್!’
…………………………………
ಇತಿಹಾಸಕ್ಕೆ ಮರುಕಳಿಸುವ ಹುಚ್ಚಂತೆ.’
……………………
ಅಂದಂದಿನ ವರ್ತಮಾನಕ್ಕೆ
ಸುರಿದ ಭೂತದ ಕಣ್ಣೀರು!’
(…………….ಹಸಿ ರೆಂಬೆಗೆ ನೇತಾಡಿದ ಹೊಸ ಮರಿ)

(೧೦) ಕನಸಿಗೂ ಉಂಟೆ? ಆಯ್ದುಕೊಳ್ಳುವ ಹಕ್ಕು
(…………ಪ್ಯಾರಾಡೈಸ್ ಲಾ˘ಸ್ಟ್)

(೧೧) ‘ಶಬ್ದ ಈಸಿಕ್ವಲ್ ಟು ಬಾಣ
ಎನ್ನುವದಕ್ಕೇನರ್ಥ?’
(………….ಅಗಳ್ತೆ)

(೧೨) ಲಕ್ಷ ಅಕ್ಷರದ ಚಿತ್ತಾರ ಬಿಡಿಸಿದ ದವತಿಯ ಕರಿ ಶಾಯಿ.’
(……………..ದಾಹ)

(೧೩) ಧೂಳು ಮಣ್ಣೂ ಹರಡಿ ಉಚ್ಛೃಂಖಲ
ವ್ಯೋಮಧೂಮದ ಮಳೆ ಬಿದ್ದುಬಿಟ್ಟಿತ್ತು.
(……………..ಪ್ರತಿಮೆ)

(೧೪) ಜಗತ್ತಿಗೇನು? ಇಲ್ಲಿದೆ ಇಲ್ಲೇ ಇರುತ್ತೆ,
ಬಂಡಿ ಬಂದಾಗ ಏರಲು ಕಾದು ಕೂತವರ ಅಸ್ತವ್ಯಸ್ತ ಸಾಲುಸಾಲು!
(.......................................ಶೈಥಿಲ್ಯ)

(೧೫) ಪಡುವಣದ ನಲ್ಗಾಳಿ ಶುಕಪಿಕಗಳ ಗರಿ
ಕೊಕ್ಕಿನಡಿ ಬಚ್ಚಿಟ್ಟು ಒಯ್ಯುತಿರೆ
ಒಲವಿನ ಸಂದೇಶವನು ಮೂಡಣದೆಡೆಗೆ.      
(…………………ಪವನದ ಪರಿ)


ಇಷ್ಟು ಸಾಕು!
ಯತ್ಕಿಂಚಿತ್ಕವನಸಂಕಲನದ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೇ. ಬೆಲ್ಲದ ಸವಿಯನ್ನು ವರ್ಣಿಸಬಾರದು, ತಿಂದೇ ನೋಡಬೇಕು!
ಜಯಶ್ರೀ ದೇಶಪಾಂಡೆಯವರು ಇನ್ನಷ್ಟು ಸಾಹಿತ್ಯವನ್ನು ಸೃಷ್ಟಿಸಿ ನಮಗೆಲ್ಲರಿಗೂ ಮುದವೀಯಲಿ ಎಂದು ಆಶಿಸುತ್ತೇನೆ.
…………………………………………………………….
ಟಿಪ್ಪಣಿ:
()ಏಳು ಹೆಜ್ಜಿ: ವಧೂವರರು ಅಗ್ನಿಯ ಸುತ್ತಲೂ ತಿರುಗುವ ಸಪ್ತಪದಿ ಆಚರಣೆ
() ಎಂಟು ವಚನಗಳು: ಸಪ್ತಪದಿಯ ಸಮಯದಲ್ಲಿ ವರನು ವಧುವಿಗೆ ಹೇಳುವ ಎಂಟು ವಚನಗಳು (oath)ಹೀಗಿವೆ:
(ಇವುಗಳಲ್ಲಿ ಪಾಠಾಂತರಗಳೂ ಇವೆ.)
            () ಇಷೇ ಏಕಪದಾ ಭವ, ಸಾ ಮಾಮ್ ಅನುವ್ರತಾ ಭವ.
              (ಸಮೃದ್ಧಿಗಾಗಿ ಮೊದಲ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
            () ಊರ್ಜೇ ದ್ವಿಪದಾ ಭವ, ಸಾ ಮಾಮ್ ಅನುವ್ರತಾ ಭವ.
                (ಶಕ್ತಿಗಾಗಿ ಎರಡನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
            () ರಾಯಸ್ಪೋಷಾಯ ತ್ರಿಪದಾ ಭವ, ಸಾ ಮಾಮ್ ಅನುವ್ರತಾ ಭವ.
                 (ಧನದ ವೃದ್ಧಿಗಾಗಿ ಮೂರನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
            () ಮಾಯೋಭವಾಯ ಚತುಷ್ಪದಾ ಭವ, ಸಾ ಮಾಮ್ ಅನುವ್ರತಾ ಭವ.
              (ಮಮತೆಯುಂಟಾಗುವದಕ್ಕಾಗಿ ನಾಲ್ಕನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
() ಪ್ರಜಾಭ್ಯಃ ಪಂಚಪದಾ ಭವ, ಸಾ ಮಾಮ್ ಅನುವ್ರತಾ ಭವ.
  (ಸಂತಾನಕ್ಕಾಗಿ ಐದನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
()ಋತುಭ್ಯಃ ಷಟ್ಪದಾ ಭವ, ಸಾ ಮಾಮ್ ಅನುವ್ರತಾ ಭವ.    
(ಎಲ್ಲಋತುಗಳೂ ನಮಗೆ ಸಂತೋಷದಾಯಕವಾಗಲಿ,  
ಅದಕ್ಕಾಗಿ ನನ್ನೊಡನೆ ಆರನೆಯ ಹೆಜ್ಜೆಯನ್ನಿಡು.)                                                              
()  ಸಖಾ ಸಪ್ತಪದಾ ಭಾವ
  (ನಮ್ಮ ಪರಸ್ಪರ ಕೆಳೆತನಕ್ಕಾಗಿ ಏಳನೆಯ ಹೆಜ್ಜೆಯನ್ನಿಡೋಣ)
() ಸಖ್ಯಂ ತೇ ಗಮೇಯಮ್, ಸಖ್ಯಾತ್ ತೇ ಮಾಯೋಷಮ್, ಸಖ್ಯಾನ್ಮೇ ಮಾಯೋಷ್ಠಾ 
(ನಿನ್ನ ಗೆಳೆತನವು ನನಗೆ ದೊರೆಯಲಿ, ನಿನ್ನ ಗೆಳೆತನದಿಂದ ನಾನು ದೂರ ಸರಿಯದಿರಲಿ
 ನನ್ನ ಗೆಳೆತನದಿಂದ ನೀನೂ ದೂರ ಸರಿಯದಿರಲಿ.)

 ವಧುವಿನಎದೆಯನ್ನು ಮುಟ್ಟಿ ಹೇಳುವ ಮಾತು:
ಮಮ ವ್ರತೇ ತೇ ಹೃದಯಂ ದದಾಮಿ
ಮಮಚಿತ್ತಮನುಚಿತ್ತಂ ತೇ ಅಸ್ತು
ಮಮವಾಚಮೇಕಮನಾ ಜುಷಸ್ವ
ಪ್ರಜಾಪತಿಸ್ತ್ವಾನಿಯನಕ್ತಿ ಮಹ್ಯಮ್

(ನನ್ನ ವ್ರತದಲ್ಲಿ ನಿನಗೆ ನನ್ನ ಹೃದಯವನ್ನೇ ಕೊಡುತ್ತೇನೆ. ನಿನ್ನ ಚಿತ್ತವು ನನ್ನ ಚಿತ್ತಕ್ಕೆ ಅನುಕೂಲವಾಗಲಿ, ಒಂದೇ  ಮನಸ್ಸಿನಿಂದ ನೀನು ನನ್ನ ಮಾತುಗಳನ್ನು ಪಾಲಿಸಬೇಕು, ಪ್ರಜಾಪತಿಯು ನನಗಾಗಿ ನಿನ್ನನ್ನು ಯೋಜಿಸಲಿ)
…………………………………………………………………………………………..

ಈ ಕವನಸಂಕಲನವು ದೊರೆಯಬಹುದಾದ ಸ್ಥಳ:
ಮಾಧ್ಯಮ ಅನೇಕ ಪ್ರೈ.ಲಿ.’
# ೭೯೬, ೯ನೆಯ ಮೇನ್, ಮೆಟ್ರೋ ಸ್ಟೇಶನ್ ಹತ್ತಿರ
ಇಂದಿರಾನಗರ, ಬೆಂಗಳೂರು-೫೬೦ ೦೩೮.