ನಮ್ಮ ಭಾರತ ದೇಶವನ್ನು ನಾವು ‘ಪುಣ್ಯಭೂಮಿ’ ಎಂದು ಕರೆಯುತ್ತೇವೆ.
ಇದರಂತಹ ಮಿಥ್ಯೆ ಇನ್ನೊಂದಿಲ್ಲ. ಇದು ಪಾಪಭೂಮಿ,ಇದು ಪಾಪಿಷ್ಠರ ಭೂಮಿ. ಯಾಕೆಂದರೆ ಇಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯವು ತಡೆಯಿಲ್ಲದೆ
ನಡೆದಿದೆ. ಸರಕಾರ ಹಾಗು ಸಮಾಜ ಇವೆರಡೂ ಈ ಅಪರಾಧದಲ್ಲಿ ಸಮಪಾಲು ಹೊಂದಿವೆ. ೨೦೧೩ರಲ್ಲಿ ಕೇಂದ್ರ
ಸರಕಾರವು ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಉದ್ದೇಶದಿಂದ ೨೦೦೫ರ ಅಪರಾಧೀ ಶಾಸನಕ್ಕೆ
ಬದಲಾವಣೆಗಳನ್ನು ತಂದಿತು. ಆದರೆ ಅದರಿಂದ ಏನೇನೂ ಪ್ರಯೋಜನವಾಗಿಲ್ಲ. ಇದಕ್ಕೆ ಕಾರಣ ಸ್ಪಷ್ಟವಿದೆ. ಇದೊಂದು ನಿರರ್ಥಕ ಶಾಸನವಾಗಿದೆ ಹಾಗು ಸ್ತ್ರೀದೌರ್ಜನ್ಯವನ್ನು
ತಡೆಗಟ್ಟಲು ಅಸಮರ್ಥವಾದ ಶಾಸನವಾಗಿದೆ. ಈ ಶಾಸನವನ್ನು ಮಾಡಿದ ನಮ್ಮ ಜನಪ್ರತಿನಿಧಿಗಳು ಸಂಕುಚಿತ
ಮನಸ್ಕರಾಗಿದ್ದಾರೆ. ಅವರಿನ್ನೂ ಸಾಂಪ್ರದಾಯಕ ಮನೋಧರ್ಮದಿಂದ ಹೊರಬಂದಿಲ್ಲ. ಇವರಲ್ಲಿ ಯಾರೊಬ್ಬರೂ
ಸ್ತ್ರೀಪರವಾದ ಆಧುನಿಕ ಹಾಗು ವಿಶಾಲ ಮನೋಭಾವನೆಯನ್ನು ಹೊಂದಿಲ್ಲ!
ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಇದು ಬಹುಸ್ಪಷ್ಟವಾಗಿ
ವ್ಯಕ್ತವಾಯಿತು. ಹೆಣ್ಣುಮಕ್ಕಳನ್ನು ಹಿಂಬಾಲಿಸದ ಗಂಡಸರು ಇದ್ದಾರೆಯೇ ಎಂದು ಕೇಳಿದ ಶಾಸಕರೊಬ್ಬರು
ತಮ್ಮ ನೈತಿಕ ಮಟ್ಟವನ್ನು ಮೆರೆದರು ಹಾಗು ಚರ್ಚೆಯ ಗಂಭೀರತೆಯನ್ನೇ ಹಾಳು ಮಾಡಿದರು.
ಹೆಣ್ಣುಮಕ್ಕಳು ಉದ್ರೇಕಕಾರಿ ಉಡುಪನ್ನು ಧರಿಸಬಾರದೆಂದು ಕೆಲವು ಜನಪ್ರತಿನಿಧಿಗಳು ಸಾರಿದರು.
ಮೂರು ವರ್ಷದ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುವಾಗ, ಶಿಶುವೇಶ್ಯೆಯರ ಹಿಂಡೇ ಈ ದೇಶದಲ್ಲಿ
ಇರುವಾಗ ಈ ಹೇಳಿಕೆಗೆ ಅರ್ಥವಿದೆಯೆ? ಇನ್ನು ಖಾಪ ಪಂಚಾಯತಗಳ ಬಗೆಗೆ ಹಾಗು ಕೆಲವೊಂದು ಧಾರ್ಮಿಕ
ಸಮುದಾಯಗಳ ಪಂಚಾಯತಿಗಳ ಬಗೆಗೆ ಹೇಳುವುದೇ ಬೇಡ. ಇವಿನ್ನೂ ಹದಿನೇಳನೆಯ ಶತಮಾನದಲ್ಲಿಯೇ
ಬದುಕುತ್ತಿವೆ!
ಇಷ್ಟೆಲ್ಲ ಚರ್ಚೆಯ ಬಳಿಕ ಅಂಗೀಕೃತಗೊಂಡ ವಿಧೇಯಕವಾದರೂ ಎಂತಹದು?
ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದಂತಾಯಿತೇ ಹೊರತು, ಹೆಣ್ಣುಮಕ್ಕಳಿಗೆ ರಕ್ಷಣೆ ಮಾತ್ರ
ದೊರೆಯಲಿಲ್ಲ.
‘ನಮ್ಮಲ್ಲಿ ಸಾಕಷ್ಟು ಶಾಸನಗಳಿವೆ, ಆದರೆ ಅವುಗಳನ್ನು ಸರಿಯಾಗಿ
ಪಾಲಿಸುತ್ತಿಲ್ಲ’ ಎನ್ನುವುದು ಕೆಲವರ ಅನುರಣಿಸುವ ಅಭಿಪ್ರಾಯವಾಗಿದೆ. ಆದರೆ ಈ ಎಲ್ಲ ಶಾಸನಗಳು
‘ಸರಿಯಾದ ಶಾಸನಗಳೇ?’ ಎನ್ನುವುದಕ್ಕೆ ಅವರಲ್ಲಿ ಉತ್ತರವಿಲ್ಲ. ಇತ್ತೀಚಿನ ಶಾಸನವೂ ಅದೇ
ರೀತಿಯದಾಗಿದೆ. ಹೆಣ್ಣು ಮಕ್ಕಳಿಗೆ ದೌರ್ಜನ್ಯದ ವಿರುದ್ಧ ಸರಿಯಾದ ರಕ್ಷಣೆಯನ್ನು ನೀಡುವುದು ನಮ್ಮ
ಶಾಸಕರ ಹಾಗು ನಮ್ಮ ಸಮಾಜದ ಗಂಭೀರ ಉದ್ದೇಶವಾಗಿದ್ದರೆ, ಈ ಕೆಳಗಿನ ಅಂಶಗಳನ್ನು ಶಾಸನದಲ್ಲಿ
ಅಳವಡಿಸಬೇಕಾಗಿತ್ತು ಎನ್ನುವುದು ನನ್ನ ಅನಿಸಿಕೆ.
(೧) ‘ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳು ಪೋಲೀಸ್ ಠಾಣೆಗೆ ತೆರಳಿ, ದೂರು
ದಾಖಲಿಸಲು ಹಿಂಜರಿಯುತ್ತಾಳೆ. ಅಥವಾ ಅವಳು ನೀಡಿದ ದೂರನ್ನು ಪೋಲೀಸರು ದಾಖಲಿಸಿಕೊಳ್ಳುವುದಿಲ್ಲ’
ಎನ್ನುವುದು ಒಂದು ಸಾಮಾನ್ಯವಾದ ತಕರಾರು ಆಗಿದೆ. ಆದುದರಿಂದ ದೂರು ದಾಖಲಿಸಲು ಪ್ರತಿಯೊಂದು
ತಾಲೂಕಾ ಕೇಂದ್ರದಲ್ಲಿ ಒಂದು ಮಹಿಳಾ ಕೇಂದ್ರವಿರಬೇಕು. ಈ ಕೇಂದ್ರದ ಮುಖ್ಯಸ್ಥಳಿಗೆ
ಅರೆ-ನ್ಯಾಯಾಧೀಶರ ಸವಲತ್ತುಗಳು ಇರಬೇಕು. ದೂರನ್ನು ದಾಖಲಿಸಿಕೊಂಡ ತಕ್ಷಣ, ಈ ಮುಖ್ಯಸ್ಥಳು
ಸಂಬಂಧಿಸಿದ ಪೋಲೀಸ್ ಠಾಣೆಗೆ ದೂರನ್ನು ವರ್ಗಾಯಿಸಬೇಕು ಹಾಗು ಸಂಬಂಧಿಸಿದ ಆರೋಗ್ಯಾಧಿಕಾರಿಗೆ
ದೂರು ನೀಡಿದವಳ ತಕ್ಷಣದ ವೈದ್ಯಕೀಯ ಪರೀಕ್ಷೆಗಾಗಿ ಆದೇಶ ನೀಡಬೇಕು.
(೨) ಸಂಬಂಧಿಸಿದ ಪೋಲೀಸ್ ಠಾಣೆಯು ೧೫ ದಿನಗಳ ಒಳಗಾಗಿ ಆರೋಪಿಗಳನ್ನು
ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಹಾಗು ಮಹಿಳಾಕೇಂದ್ರಕ್ಕೆ ಪ್ರತಿ ವಾರವೂ ಪ್ರಗತಿಯ
ವರದಿಯನ್ನು ನೀಡಬೇಕು. ಇದಕ್ಕೆ ತಪ್ಪಿದ ಪೋಲೀಸ್ ಸಿಬ್ಬಂದಿಯನ್ನು ಕೆಲಸದಿಂದ
ವಿಲಂಬಿತಗೊಳಿಸಬೇಕು.
(೩) ದೂರುದಾರಳು ಓರ್ವ
ವ್ಯಕ್ತಿಯನ್ನು ಅತ್ಯಾಚಾರದ ಅಪರಾಧಿ ಎಂದು ಬೊಟ್ಟು ಮಾಡಿದ ಬಳಿಕ, ತಾನು ಅಪರಾಧಿ ಅಲ್ಲ ಎಂದು ಸಾಬೀತುಪಡಿಸುವ ಹೊಣೆಯನ್ನು
ಆರೋಪಿತನ ಮೇಲೆ ಹೊರಿಸಬೇಕು. ಅಪರಾಧ ಸಾಬೀತುಗೊಳಿಸಲು ಯಾವುದೇ ಸಾಕ್ಷಿಯ ಅವಶ್ಯಕತೆ ಇರಕೂಡದು. DNA ಪರೀಕ್ಷೆಯಲ್ಲಿ ಆತ
ನಿರಪರಾಧಿ ಎಂದು ಸಾಬೀತಾದರೆ ಮಾತ್ರ, ಆತನನ್ನು ಮುಕ್ತಗೊಳಿಸಬಹುದು. ದೌರ್ಜನ್ಯದ ಕ್ರಿಯೆಯಲ್ಲಿ
ಸಹಾಯ ನೀಡಿದವನನ್ನೂ ಸಹ ಅದೇ ಪ್ರಮಾಣದ ಅಪರಾಧಿ ಎಂದು ಪರಿಗಣಿಸಬೇಕು.
(೪) ಪೋಲೀಸರು
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಒಂದು ತಿಂಗಳಿನೊಳಗಾಗಿ ನ್ಯಾಯದಾನದ
ಪ್ರಕ್ರಿಯೆ ಮುಗಿಯಬೇಕು. ಇಲ್ಲವಾದರೆ, ಆರೋಪಿಯ ಬೆಂಬಲಿಗರು ನ್ಯಾಯವನ್ನು ತಿರುಚುವ ಪ್ರಯತ್ನ
ಮಾಡಬಹುದು. ಇದಕ್ಕಾಗಿ ಕ್ಷಿಪ್ರ-ನ್ಯಾಯಾಲಯಗಳನ್ನು ಸ್ಥಾಪಿಸಬೇಕು.
(೫) ಅತ್ಯಾಚಾರಿಗೆ bobbit ಶಿಕ್ಷೆಯನ್ನು ವಿಧಿಸಬೇಕು.
(೬)
ದೌರ್ಜನ್ಯಕ್ಕೊಳಗಾದವಳ ಹೆಸರು, ದೆಸೆಗಳನ್ನು ಗುಪ್ತವಾಗಿ ಇರಿಸಬೇಕು. ಇದಕ್ಕೆ ಭಂಗ ತಂದಂತಹ
ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಬೇಕು.
ಅತ್ಯಾಚಾರದ
ಪ್ರಕರಣಗಳಲ್ಲದೆ, ಸ್ತ್ರೀಯರನ್ನು ಅವಮಾನಿಸುವ, ಹಿಂಸಿಸುವ ಪ್ರಕರಣಗಳೂ ಅನೇಕವಿವೆ. ಕೆಲವೊಂದು ಸಲ
ಪೋಲೀಸರೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವದನ್ನು ದೂರದರ್ಶನದಲ್ಲಿ ನಾವೆಲ್ಲರೂ ನೋಡಿದ್ದೇವೆ.
ಇಂತಹ ಪ್ರಕರಣಗಳ ಬಗೆಗೆ ಮಹಿಳಾಕೇಂದ್ರಗಳಲ್ಲಿ ದೂರು ನೀಡುವ ಅವಕಾಶವಿರಬೇಕು. ಈ ಮಹಿಳಾಕೇಂದ್ರಗಳ
ಮುಖ್ಯಸ್ಥರಿಗೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುವ ಅಧಿಕಾರವೂ ಇರಬೇಕು.
ಇದೆಲ್ಲ ಶಾಸನದ
ಮಾತಾಯಿತು. ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಸಾಮಾಜಿಕ ಕಾರಣಗಳೂ ಇವೆ. ಅವುಗಳನ್ನು ಈ
ರೀತಿಯಲ್ಲಿ ಪಟ್ಟಿ ಮಾಡಬಹುದು:
(೧) ಭಾರತೀಯ ಸಮಾಜವು
ಸ್ತ್ರೀವಿರೋಧಿ ಸಮಾಜವಾಗಿದೆ. ಹೆಣ್ಣುಮಗಳು ಗಂಡನ property, ಅವಳು ಮನೆಯಲ್ಲಿ
ದುಡಿಯುವ ಕೆಲಸಗಿತ್ತಿ ಹಾಗು ನಿರಾಕರಣೆಯ ಅಧಿಕಾರವಿಲ್ಲದ, ಪುಕ್ಕಟೆ ದೊರೆಯುವ ಭೋಗವಸ್ತು ಎಂದೇ ಈವರೆಗೂ
ಪರಿಗಣಿತಳಾಗಿದ್ದಾಳೆ. ಹೊರಗೆ ದುಡಿದು ಹಣ ಸಂಪಾದಿಸುವ ಸ್ತ್ರೀಯರೂ ಸಹ ಈ ಮಾತಿಗೆ ಹೊರತಾಗಿಲ್ಲ!
ಇದು ದೀರ್ಘಕಾಲದಿಂದಲೂ ನಡೆದು ಬರುತ್ತಿರುವ ಭಾರತೀಯ ಪರಂಪರೆ. ಇದಕ್ಕೆ ನಮ್ಮ ಪುರಾಣ,
‘ಪುಣ್ಯಕಥೆ’ಗಳಲ್ಲಿಯೇ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಗಮನಿಸೋಣ:
ಸತ್ಯವಂತನೆಂದು ಖ್ಯಾತನಾದ ಹರಿಶ್ಚಂದ್ರ ಮಹಾರಾಜನು ‘ತನ್ನ ಸತ್ಯ’ವನ್ನು
ಉಳಿಸಿಕೊಳ್ಳುವ ಸಲುವಾಗಿ ತನ್ನ ಹೆಂಡತಿ ತಾರಾಮತಿಯನ್ನು ಬಿಕರಿ ಮಾಡಿದ! ‘ಧರ್ಮರಾಯ’ನೆಂದು
ಖ್ಯಾತಿವೆತ್ತ ಮಹಾರಾಜನು ಜೂಜಾಟದಲ್ಲಿ ತನ್ನ ಹೆಂಡತಿಯನ್ನೇ ಪಣಕ್ಕಿಟ್ಟು ಸೋತ! ಇದಕ್ಕಿಂತಲೂ
ದಾರುಣವಾದ ಕತೆಯು ‘ಮಾಧವಿ’ ಎನ್ನುವ ಕನ್ಯೆಯದು. ಈ ಕತೆ ಹೀಗಿದೆ:
ಗಾಲವ ಎನ್ನುವ ಋಷಿಕುಮಾರನು ವಿಶ್ವಾಮಿತ್ರನ ಆಶ್ರಮದಲ್ಲಿ ತನ್ನ
ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ತಾನು ಸಲ್ಲಿಸಬೇಕಾದ ಗುರುದಕ್ಷಿಣೆ ಏನೆಂದು ಕೇಳಿದ. ಇದು
ಸಂಪೂರ್ಣವಾಗಿ ಪುಕ್ಕಟೆಯಾದ ಶಿಕ್ಷಣವೆಂದು ಗುರು ವಿಶ್ವಾಮಿತ್ರನು ಸಾರಿದರೂ ಸಹ ಗಾಲವನು
ಗುರುದಕ್ಷಿಣೆಯನ್ನು ಕೊಡುವ ತನ್ನ ಹಟವನ್ನು ಬಿಡಲಿಲ್ಲ. ಬೇಸತ್ತ ವಿಶ್ವಾಮಿತ್ರನು ತನಗೆ
ಎಂಟುನೂರು ಕುದುರೆಗಳನ್ನು ಕೊಡಬೇಕೆಂದು ಹೇಳಿದ. ಆದರೆ ಒಂದು ಶರ್ಯತ್ತು. ಈ ಕುದುರೆಗಳ ಮೈಯೆಲ್ಲ
ಬಿಳಿದಾಗಿದ್ದು, ಒಂದು ಕಿವಿ ಮಾತ್ರ ಕಪ್ಪಾಗಿರಬೇಕು! ಸರಿ, ಗಾಲವ ಮೊದಲಿಗೆ ಯಯಾತಿ ಎನ್ನುವ
ಮಹಾರಾಜನಲ್ಲಿ ತೆರಳಿ ಇಂತಹ ಕುದುರೆಗಳಿಗಾಗಿ ಪ್ರಾರ್ಥನೆ ಮಾಡಿದ. ಯಯಾತಿಯ ಹತ್ತಿರ ಇಂತಹ ಒಂದೂ
ಕುದುರೆ ಇರಲಿಲ್ಲ. ಛೇ! ಈ ಬ್ರಹ್ಮಚಾರಿಯನ್ನು ಬರಿಗೈಯಿಂದ ಮರಳಿ ಕಳಿಸುವುದೇ? ಧರ್ಮಿಷ್ಠ ಯಯಾತಿಯ
‘ಧರ್ಮನಿಷ್ಠೆ’ ಅದನ್ನೊಪ್ಪಲಿಲ್ಲ. ಆದುದರಿಂದ ಯಯಾತಿ ಮಹಾರಾಜನು ಕುದುರೆಗಳ ಬದಲಾಗಿ ತನ್ನ ಮಗಳು
ಮಾಧವಿಯನ್ನು ಗಾಲವನಿಗೆ ಧಾರೆ ಎರೆದು ಕೊಟ್ಟುಬಿಟ್ಟ. ‘ಬೇರೆ ಯಾರಾದರೂ ರಾಜನ ಬಳಿಗೆ ಹೋಗು.
ಅವನಲ್ಲಿ ಇಂತಹ ಕುದುರೆಗಳಿದ್ದರೆ, ನಿನ್ನ ಹೆಂಡತಿಗೆ ಬದಲಾಗಿ ಆ ಕುದುರೆಗಳನ್ನು ಪಡೆದುಕೊ’
ಎನ್ನುವ ಅದ್ಭುತ ಉಪಾಯ cum ಉಪದೇಶವನ್ನು ನೀಡಿದ. ಸರಿ, ಗಾಲವನು ಮಾಧವಿಗೆ ಮೂಗುದಾಣ ಹಾಕಿಕೊಂಡು ಮತ್ತೊಬ್ಬ ರಾಜನ ಬಳಿಗೆ ಎಳೆದುಕೊಂಡು ಹೋದ.
ಅವನಲ್ಲಿ ಇಂತಹ ಕುದುರೆಗಳು ಎರಡುನೂರು ಮಾತ್ರ ಇದ್ದವು. ಅವನಿಗೆ ಮಾಧವಿಯನ್ನು ಒಂದು ವರ್ಷದ
ಮಟ್ಟಿಗೆ ಭೋಗ್ಯಕ್ಕೆ ಹಾಕಿದ ಗಾಲವನು, ಎರಡುನೂರು ಕುದುರೆಗಳನ್ನು
ಸಂಪಾದಿಸಿಕೊಂಡೊಯ್ದು, ವಿಶ್ವಾಮಿತ್ರನಿಗೆ ಅರ್ಪಿಸಿದ. ಒಂದು ವರ್ಷದ ಅವಧಿಯಲ್ಲಿ ಮಾಧವಿಯು ಒಂದು
ಮಗುವನ್ನು ಹೆತ್ತಿದ್ದಳು. ಮರಳಿ ಬಂದ ಗಾಲವನು ಆ ಮಗುವನ್ನು ಅದೇ ರಾಜನಿಗೆ ಕೊಟ್ಟು, ತನ್ನ
ಹೆಂಡತಿ ಮಾಧವಿಯನ್ನು ಕರೆದೊಯ್ದ. ಈ ಕಥೆ ಮತ್ತೆ ಇಬ್ಬರು ರಾಜರಲ್ಲಿ ಪುನರಾವರ್ತಿಸಿತು. ಮಾಧವಿ
ಒಟ್ಟು ಮೂವರು ರಾಜರಿಂದ ಬಳಕೆಯಾಗಿ, ಮೂರು ಕಂದಮ್ಮಗಳನ್ನು ಅವರಿಗೆ ನೀಡಿದಳು. ಆದರೆ ಇನ್ನೂ
ಎರಡುನೂರು ಕುದುರೆಗಳು ಬಾಕಿ ಉಳಿದವಲ್ಲ! ಯಾವ ರಾಜನಲ್ಲೂ ಇಂತಹ ಒಂದು ಕುದುರೆಯೂ ಸಿಗಲೇ ಇಲ್ಲ.
ಆದುದರಿಂದ ಗಾಲವನು ಮಾಧವಿಯನ್ನೇ ಒಂದು ವರ್ಷದವರೆಗೆ ವಿಶ್ವಾಮಿತ್ರನಿಗೆ ಕೊಟ್ಟು, ತನ್ನ
ಗುರುದಕ್ಷಿಣೆಯನ್ನು ಚುಕ್ತಾ ಮಾಡಿದ. ವಾಹ್‍ವಾ, ಗಾಲವ! ಇದು ಪುರಾಣಕಾಲದಲ್ಲಿ ಭಾರತೀಯ
ಹೆಣ್ಣಿಗಿದ್ದ ಸ್ಥಾನಮಾನವನ್ನು ಹಾಗು ಹೆಣ್ಣಿನ ‘ಬೆಲೆ’ಯನ್ನು ಸೂಚಿಸುವ ಕತೆಯಾಗಿದೆ!
ಭಾರತದ ಮೇಲೆ ತುರುಕರ
ಹಾಗು ಮಂಗೋಲರ ದಾಳಿ ಪ್ರಾರಂಭವಾದ ಮೇಲಂತೂ ಹೆಣ್ಣಿನ ಪರಿಸ್ಥಿತಿ ಇನ್ನಿಷ್ಟು ಶೋಚನೀಯವಾಯಿತು.
ದಾಳಿಗೆ ತುತ್ತಾದ ಹೆಣ್ಣುಗಳು ದಾಳಿಕೋರರ ಉಪಭೋಗದ ತೊತ್ತುಗಳಾದವು. ಅವಳ ಸಾಮಾಜಿಕ ಸ್ಥಾನಮಾನಗಳು
ಶೂನ್ಯಮಟ್ಟಕ್ಕಿಳಿದವು.
ಬ್ರಿಟಿಶ್ ಆಡಳಿತವೇ
ಹೆಣ್ಣುಮಕ್ಕಳ ಸ್ಥಿತಿಯನ್ನು ಸುಧಾರಿಸಲು ಕಾರಣೀಭೂತವಾಯಿತು ಎನ್ನಬಹುದು. ‘ಸತಿ ಪದ್ಧತಿ’ಯನ್ನು
ನಿಷೇಧಿಸಿದ ಬ್ರಿಟಿಶ್ ಗವರ್ನರ ವಿಲಿಯಮ್ ಬೆಂಟಿಂಕನೇ ಬಾಲ್ಯವಿವಾಹ ನಿರೋಧ ಕಾಯದೆಯನ್ನೂ
೧೮೭೨ರಲ್ಲಿ ಜಾರಿಗೆ ತಂದನು. ಈ ಕಾಯದೆಯ ಪ್ರಕಾರ ೧೪ ವರ್ಷದ ಒಳಗಿನ ಹುಡುಗ ಹುಡುಗಿಯರ ವಿವಾಹವು
ಕಾನೂನುಬಾಹಿರವಾಯಿತು.
(೨)
ಜನಸಂಖ್ಯಾಸ್ಫೋಟದ ಪರಿಣಾಮವಾಗಿ, ಹಳ್ಳಿಗಳಲ್ಲಿರುವ
ರೈತಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಅವರೆಲ್ಲ ಕೆಲಸ ಹುಡುಕುತ್ತ ಪಟ್ಟಣಗಳಿಗೆ
ಹೋಗುತ್ತಿದ್ದಾರೆ. ಇವರಲ್ಲಿ ಬಹುಸಂಖ್ಯ ಜನರು ತಮ್ಮ ಹೆಂಡತಿ ಹಾಗು ಮಕ್ಕಳನ್ನು ಹಳ್ಳಿಗಳಲ್ಲಿಯೇ
ಬಿಟ್ಟು ಹೋಗುವಂತಹವರು. ಪಟ್ಟಣದಲ್ಲಿರುವ ಸ್ಥಿತಿವಂತರ ಲಂಗುಲಗಾಮಿಲ್ಲದ ಜೀವನವನ್ನು ನೋಡುವ
ಇವರಲ್ಲಿಯೂ ಸಹ ನೈತಿಕ ಮೌಲ್ಯಗಳು ಮಾಯವಾಗುತ್ತಿವೆ. ಕಾಮತೃಷೆಯನ್ನು ಹಿಂಗಿಸಲು ಅನೇಕರು
ಸೂಳೆಯರನ್ನು ಹುಡುಕಿಕೊಂಡು ಹೋಗುತ್ತಾರೆ. ಅಸಹಾಯಕ ಹೆಣ್ಣೊಂದು ಸಿಕ್ಕರೆ, ಅವಳ ಮೇಲೆ ಅತ್ಯಾಚಾರ
ಎಸಗಲು ಥಟ್ಟನೆ ಮುನ್ನುಗ್ಗುತ್ತಾರೆ ಹಾಗು ಸಾಕ್ಷಿಯನ್ನು ಅಳಿಸಲು ಅವಳ ಕೊಲೆ ಮಾಡುತ್ತಾರೆ.
ಇಂತಹ population migration ಅನ್ನು ನಾನು ಧಾರವಾಡದಂತಹ ಸಣ್ಣ ಊರಿನಲ್ಲಿಯೇ ನೋಡುತ್ತಿದ್ದೇನೆ.
ಇಲ್ಲಿಯ ರೈತಕಾರ್ಮಿಕರೆಲ್ಲ ಕಟ್ಟಡ ಮೊದಲಾದ ಕೆಲಸಗಳಲ್ಲಿ ದುಡಿಯಲು ಗೋವಾಕ್ಕೆ ಹೋಗುತ್ತಿದ್ದಾರೆ.
ಅದರಂತೆ ಉತ್ತರಪ್ರದೇಶದ ಮತ್ತುಬಿಹಾರದ ಚಿಕ್ಕಪುಟ್ಟ ಕೆಲಸಗಾರರು ಹಾಗು ಅರೆತಾಂತ್ರಿಕರು
ಧಾರವಾಡಕ್ಕೆ ಬರುತ್ತಿದ್ದಾರೆ. ಇವರೆಲ್ಲರೂ ರಜಾಸಮಯದಲ್ಲಿ ತಮ್ಮ ಮನೆಮಂದಿಯ ಭೆಟ್ಟಿಗಾಗಿ ತಮ್ಮ
ಊರುಗಳಿಗೆ ಮರಳುವಂತಹವರು. ಅಲ್ಲಿಯವರೆಗೂ ಇವರಿಗೆ ಸ್ಥಳೀಯ ಸೂಳೆಯರೇ ಗತಿ. ಇವರಿಂದಾಗಿಯೇ
ಸೂಳೆಗಾರಿಕೆ ಎಲ್ಲೆಲ್ಲೂ ದೊಡ್ಡ ಉದ್ದಿಮೆಯಾಗಿ ಬೆಳೆಯಲಾರಂಭಿಸಿದೆ!
ಇದು ಪೋಲೀಸರಿಗೂ
ಇಷ್ಟವಾದ ಸಂಗತಿಯೇ ಆಗಿರಬಹುದು. ಹೆಚ್ಚೆಚ್ಚು ಅಪರಾಧ ನಡೆಯುವ ಠಾಣೆಗಳು ಹೆಚ್ಚಿನ ಕಿಮ್ಮತ್ತಿಗೆ
ಹರಾಜು ಆಗುತ್ತವೆ ಅನ್ನುವ ವದಂತಿಯೊಂದಿದೆ. ಆ ಲೆಕ್ಕದಲ್ಲಿ ನೋಡಿದರೆ, ಮುಂಬಯಿ, ಕೋಲಕತ್ತಾ ಹಾಗು
ದಿಲ್ಲಿಯಂತಹ ನಗರಗಳ ಮುಖ್ಯ ಪೋಲೀಸ ಸ್ಥಾನಗಳ ಹರಾಜು ಕೋಟಿಯಲ್ಲಿಯೇ ಇರಬಹುದೇನೋ! ಇಂತಹ ಪೋಲೀಸರಿಗೆ
ಹೆಣ್ಣುಮಕ್ಕಳು ಕಾಲುಕಸದ ಸಮಾನ. ಅವರ ಜೊತೆಗೆ ಉದ್ಧಟತನದಿಂದ ವರ್ತಿಸುವುದು ಪೋಲೀಸರಿಗೆ ಸಹಜಸ್ವಭಾವವೇ
ಆಗಿಬಿಡುತ್ತದೆ.
(೩) ನಮ್ಮ ತರುಣರಲ್ಲಿ
ಮಾಯವಾಗುತ್ತಿರುವ ನೈತಿಕ ಮೌಲ್ಯಗಳಿಗೆ ಕಾರಣವೇನು? ಟೀವಿ, ಸಿನೆಮಾ ಮೊದಲಾದ ಮನೋರಂಜನೆಯ ಸಾಧನಗಳು
ಆಧುನಿಕತೆಯ ನೆವದಲ್ಲಿ, ಕೀಳು ಕಾಮನೆಗಳನ್ನು ಉತ್ತೇಜಿಸುತ್ತಿರುವದು ಒಂದು ಕಾರಣವಾದರೆ, ಯುವ
ಪೀಳಿಗೆಗೆ ಸರಿಯಾದ role modelಗಳು ಇಲ್ಲದೇ ಇರುವುದು ಮತ್ತೊಂದು ಕಾರಣವಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ
ಮಹಾತ್ಮಾ ಗಾಂಧೀ, ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿಗಳು ನಮ್ಮ ಆದರ್ಶ
ಪುರುಷರಾಗಿದ್ದರು. ಈಗಿನ ಆದರ್ಶ ಪುರುಷರು ಎಂಥವರು? ಕಾಮುಕ, ಲಂಚಬಡಕ, ಅಧಿಕಾರದ ದುರುಪಯೋಗ
ಮಾಡಿಕೊಳ್ಳುವ ರಾಜಕಾರಣಿಗಳು ಇಂದಿನ role model ಆಗಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಮೋಬೈಲುಗಳಲ್ಲಿ ನೀಲಿ ಚಿತ್ರಗಳನ್ನು
ನೋಡುವ ಶಾಸಕರು ಹಾಗು ವೃದ್ಧಾಪ್ಯದಲ್ಲಿಯೂ ಸಹ ಅನೈತಿಕ ಕಾಮಕೇಳಿಗಳಲ್ಲಿ ತೊಡುಗುವ ರಾಜ್ಯಪಾಲರು,
ಕುಡಿದು ಧಾಂಧಲೆ ಹಾಕುವ ಸಿರಿವಂತರ ಹಾಗು ಅಧಿಕಾರಸ್ಥರ ಮಕ್ಕಳು ನಮ್ಮ ಯುವಕರ ಕಣ್ಣೆದುರಿಗೆ ಇರುವ
ಆದರ್ಶಪುರುಷರಾಗಿದ್ದಾರೆ. ಹೀಗಿದ್ದಾಗ ನಮ್ಮ ಯುವಕರು ಇವರನ್ನೇ ಅನುಕರಿಸುವುದು ಸಹಜವೇ ಆಗಿದೆ.
(೪) ಇಲಿಗಳನ್ನು
ಹಾಗು ಕೋತಿಗಳನ್ನು ಬಳಸಿಕೊಂಡು ಪ್ರಾಣಿವರ್ತನಾ ವಿಜ್ಞಾನಿಗಳು ಮಾಡಿದ ಕೆಲವು ಪ್ರಯೋಗಗಳು ಅರ್ಥಪೂರ್ಣವಾಗಿವೆ:
ದಟ್ಟ ಅರಣ್ಯ, ಸಾಧಾರಣ ಅರಣ್ಯ ಹಾಗು ವಿರಳ ಅರಣ್ಯಗಳಲ್ಲಿ ವಾಸಿಸುತ್ತಿರುವ ಮಂಗಗಳ ಮೇಲೆ ಈ
ಪ್ರಯೋಗಗಳನ್ನು ಮಾಡಲಾಯಿತು. (ಧಾರವಾಡವೂ ಸಹ ಈ ಪ್ರಯೋಗದ ಒಂದು ಪ್ರದೇಶವಾಗಿತ್ತು ಎಂದು ಇಲ್ಲಿಯ
ಮಂಗಗಳು ಅಭಿಮಾನ ಪಡಬಹುದು!) ಅದರಂತೆ ಅಷ್ಟೇ ಇಲಿಗಳನ್ನು ಸಣ್ಣ ಜಾಗದಲ್ಲಿ, ಮಧ್ಯಮ ವಿಸ್ತಾರದ
ಜಾಗದಲ್ಲಿ ಹಾಗು ದೊಡ್ಡ ಜಾಗದಲ್ಲಿ ಬಂಧಿಸಿ ಪ್ರಯೋಗಗಳಿಗೆ ಒಳಪಡಿಸಲಾಯಿತು. ಪ್ರಯೋಗಗಳ
ಫಲಿತಾಂಶಗಳನ್ನು ಈ ರೀತಿಯಾಗಿ ಅರ್ಥೈಸಲಾಗುತ್ತಿದೆ:
(೧) ಜನಸಂಖ್ಯೆ
ವಿರಳವಾಗಿರುವ ಹಾಗು ಬಲಿಷ್ಠ ನಾಯಕನಿರುವ ಪ್ರದೇಶದಲ್ಲಿ ಶಿಸ್ತು ಕಂಡು ಬರುತ್ತದೆ.
(೨) ಜನಸಂಖ್ಯೆ
ಹೆಚ್ಚಿದ್ದಲ್ಲಿ ಹಾಗು ನಿರ್ಬಲ ನಾಯಕನಿರುವ ಪ್ರದೇಶದಲ್ಲಿ ಆಂತರಿಕ ದೌರ್ಜನ್ಯ ಕಂಡು ಬರುತ್ತದೆ.
ನಮ್ಮ ಈಗಿನ
ಜನಸಂಖ್ಯೆ ಹಾಗು ನಮ್ಮ ಈಗಿನ ರಾಜಕೀಯ ನಾಯಕತ್ವ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ
ಸಂಗತಿಯೇ ಆಗಿದೆ. ಹತ್ತು ಜನ ಕೂಡಬಹುದಾದ ದೋಣಿಯಲ್ಲಿ ನೂರು ಜನ ಕೂತರೆ ಏನಾಗಬಹುದು? ಇದು ಸದ್ಯದ
ನಮ್ಮ ಭಾರತದ ಪರಿಸ್ಥಿತಿ. ಇನ್ನು ಈ ದೋಣಿಯನ್ನು ನಡೆಯಿಸುವ ನಾವಿಕನು ಎಂತಹ ದುರ್ಬಲ
ವ್ಯಕ್ತಿಯಾಗಿದ್ದಾನೆ ಎನ್ನುವುದನ್ನು ಎಲ್ಲರೂ ಬಲ್ಲರು. ಇಷ್ಟಾದರೂ ಸಹ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವ
ಮಾತನ್ನೇ ಯಾರೂ ಆಡುವುದಿಲ್ಲ ಹಾಗು ತಮ್ಮ ಸ್ವಾರ್ಥಕ್ಕಾಗಿ ದುರ್ಬಲ ನಾಯಕನನ್ನೇ ಸಿಂಹಾಸನದ ಮೇಲೆ
ಸ್ಥಾಪಿಸುತ್ತಿದ್ದಾರೆ.!
ಪರಿಹಾರ:
ಈ ಸಮಸ್ಯೆಯ
ಪರಿಹಾರಕ್ಕಾಗಿ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಬಹುದು:
ಗಂಡಸರಿಗೆ ಸರಿಸಮಾನವಾದ
ಹಕ್ಕುಗಳನ್ನು ಹೆಣ್ಣುಮಕ್ಕಳಿಗೆ ಕೊಟ್ಟರೆ ಸಾಲದು. ಅವರಿಗೆ ವಿಶೇಷವಾದ ಸವಲತ್ತುಗಳನ್ನು
ಕೊಡುವುದು ಅವಶ್ಯವಾಗಿದೆ. ಇದಕ್ಕೆ ಕಾರಣ ಹೀಗಿದೆ:
ಸಂತಾನದ ವಿಪುಲತೆಯು
ನಿಸರ್ಗದ ಆಶಯವಾಗಿದೆ. ಆದುದರಿಂದಲೇ ಮಕ್ಕಳನ್ನು ಹೊರಬೇಕಾದ ಹಾಗು ಹೆರಬೇಕಾದ ಹೆಣ್ಣುಮಗಳು ಚಿಕ್ಕ
ವಯಸ್ಸಿನಲ್ಲಿಯೇ ಋತುಮತಿಯಾಗಿ ಬಿಡುತ್ತಾಳೆ; ಆದರೆ ಗಂಡುಮಗುವು ‘ವೀರ್ಯವಂತ’ನಾಗುವುದಕ್ಕೆ
ಹೆಚ್ಚಿಗೆ ಕಾಲ ಬೇಕಾಗುತ್ತದೆ. ಹೆಣ್ಣುಮಗುವು ತನ್ನ ದೈಹಿಕ ಚೈತನ್ಯದ ಬಹುಭಾಗವನ್ನು ಗರ್ಭಾಶಯದ
ಬೆಳವಣಿಗೆಯಲ್ಲಿ ವ್ಯಯಿಸಬೇಕಾಗುವದರಿಂದ, ಅವಳ ಇತರ ದೈಹಿಕ ಬೆಳವಣಿಗೆಯು ಗಂಡಸಿನ ಬೆಳವಣಿಗೆಯಷ್ಟು
ಆಗಲಾರದು. ಗರ್ಭವತಿ ಹೆಣ್ಣನ್ನು ಗಂಡು ರಕ್ಷಿಸುವುದು ಅನಿವಾರ್ಯವಾಗುವುದರಿಂದ, ಗಂಡಿನ ದೈಹಿಕ
ಬೆಳವಣಿಗೆಯು ಅಧಿಕವಾಗಿರುವುದು ಸಹಜವೇ ಆಗಿದೆ. ಈ ರೀತಿಯಾಗಿ ದೈಹಿಕವಾಗಿ ಹೆಚ್ಚಿಗೆ ಸಶಕ್ತನಾದ
ಗಂಡಸು ಹೆಣ್ಣಿನ ರಕ್ಷಣೆ ಮಾಡುವುದರ ಬದಲಾಗಿ ಅವಳ ಶೋಷಣೆ ಮಾಡತೊಡಗಿರುವುದು
ನಿಸರ್ಗವಿರೋಧಿಯಾಗಿದೆ, ಪರಮ ನೀಚತನವಾಗಿದೆ. ಹೆಣ್ಣಿಗೆ ಗರ್ಭಧಾರಣೆಯ ಅವಧಿಯಲ್ಲಿ ಹಾಗು
ಶಿಶುಪಾಲನೆಯ ಅವಧಿಯಲ್ಲಿ ವಿಶೇಷ ಸವಲತ್ತುಗಳನ್ನು ಕೊಡುವುದು ನಿಸರ್ಗಸಹಜವಾದ ಅವಶ್ಯಕತೆಯಾಗಿದೆ.
ಬಹುಶಃ ಈ
ಕಾರಣದಿಂದಲೇ ಮನು ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಹೇಳಿದನು. ಅವನ ಆಶಯವೆಂದರೆ,
ಹೆಣ್ಣನ್ನು ಬಾಲ್ಯಾವಸ್ಥೆಯಲ್ಲಿ ತಂದೆ, ಯೌವನದಲ್ಲಿ ಗಂಡ ಹಾಗು ವೃದ್ಧಾಪ್ಯದಲ್ಲಿ ಮಕ್ಕಳು
ನೋಡಿಕೊಳ್ಳಬೇಕು. ಅವಳು ಒಂಟಿಯಾಗಿ ಜೀವಿಸುವಂತೆ ಆಗಬಾರದು. ಇದು ಸ್ತ್ರೀಯ ವಿಶೇಷ ಹಕ್ಕಾಗಿದೆ.
ಸ್ತ್ರೀದೌರ್ಜನ್ಯವನ್ನು
ತಡೆಯಲು ಕೆಳಗಿನ ಶಾಸನಾತ್ಮಕ ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು:
(೧)
ಸ್ತ್ರೀದೌರ್ಜನ್ಯದ ದೂರುಗಳನ್ನು ಸ್ವೀಕರಿಸಲು quasi judicial ಅಧಿಕಾರವಿರುವ ಮಹಿಳಾಕೇಂದ್ರಗಳನ್ನು ಸ್ಥಾಪಿಸಬೇಕು. ಸದ್ಯಕ್ಕೆ domestic violence ತಡೆಗಟ್ಟಲು ಮಾತ್ರ ಇಂತಹ
ಕೇಂದ್ರಗಳಿದ್ದು, ಇವುಗಳ ಅಧಿಕಾರ ವಿಸ್ತರಣೆಯಾಗಬೇಕು. ಪೋಲೀಸ್ ಠಾಣೆಗಳಿಗೆ ಈ ಕೇಂದ್ರಗಳಿಂದ
ದೂರು ಹೋಗುವಂತಿರಬೇಕು. ಈ ಕೇಂದ್ರಗಳಿಗೆ ಪೋಲೀಸರಿಂದ ಪ್ರಗತಿವರದಿಯನ್ನು ನಿಯಮಿತವಾಗಿ
ಸಲ್ಲಿಸಬೇಕು. ವಿಳಂಬವಾದಲ್ಲಿ ಪೋಲೀಸರನ್ನು ವಿಲಂಬಿತಗೊಳಿಸಬೇಕು. ತಾನು ಅಪರಾಧಿಯಲ್ಲ ಎಂದು
ಸಾಬೀತು ಪಡಿಸುವ ಹೊಣೆಯನ್ನು ಆರೋಪಿಯ ಮೇಲೆ ಹೇರಬೇಕು. ಅತ್ಯಾಚಾರದ ಪ್ರಕರಣಗಳಲ್ಲಿ DNA ವರದಿಯನ್ನು
ಅವಲಂಬಿಸಿ ಆರೋಪಿಯನ್ನು ಮುಕ್ತಗೊಳಿಸಬಹುದು.
(೨) ತಕ್ಷಣವೇ
ಎಲ್ಲೆಡೆಗಳಲ್ಲಿ ಇರುವ ವೇಶ್ಯಾಗೃಹಗಳನ್ನು ಮುಚ್ಚಿ ಹಾಕಬೇಕು. ಇಲ್ಲಿ ಬಂಧಿಗಳಾಗಿ ಬಳಲುತ್ತಿರುವ
ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕು.
(೩) ಟೀವಿ, ಸಿನೆಮಾ
ಮೊದಲಾದ ಮನೋರಂಜನೆಗಳಲ್ಲಿ ಹೆಣ್ಣುಮಕ್ಕಳ ದೇಹಪ್ರದರ್ಶನವನ್ನು ಪ್ರತಿಬಂಧಿಸಬೇಕು. ಕುಡಿಯುವ
ತಾಣಗಳಲ್ಲಿ ನೃತ್ಯವನ್ನು ನಿಷೇಧಿಸಬೇಕು.
(೪) ಸಾರ್ವಜನಿಕ
ವಾಹನಗಳಲ್ಲಿ ಹಾಗು ಸಾರ್ವಜನಿಕ ಸ್ಥಾನಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸವಲತ್ತುಗಳನ್ನು
ಕೊಡಬೇಕು.
ಇಂತಹ ಶಾಸನವನ್ನು
ತರಲು ಪ್ರಜ್ಞಾವಂತರು ನಮ್ಮ ಶಾಸಕರನ್ನು ಒತ್ತಾಯಿಸಬೇಕು.