‘ಮನೋಹರ ಗ್ರಂಥಮಾಲಾ’ ಸಂಸ್ಥೆಯು ಗಿರಡ್ಡಿ ಗೋವಿಂದ್ ರಾಜ್ ಬರೆದ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಪುಸ್ತಕವನ್ನು ಇತ್ತೀಚೆಗೆ ಹೊರತಂದಿದೆ. ಇದು ಈ ಸಂಸ್ಥೆಯ ೨೦೦೯ನೆಯ ವರ್ಷದ ನಾಲ್ಕನೆಯ ಪುಸ್ತಕ.
ಗಿರಡ್ಡಿಯವರು ದೀರ್ಘಕಾಲದಿಂದ ಕನ್ನಡ ಸಾಹಿತ್ಯಲೋಕದಲ್ಲಿ ವಿಮರ್ಶಕರೆಂದು ಹೆಸರು ದಾಖಲಿಸಿಕೊಂಡವರು. ಅವರಿಗೆ ಏನು ಉಮೇದಿ ಬಂದಿತೋ, ಪ್ರಬಂಧಸಾಹಿತ್ಯಕ್ಕೆ ಕೈ ಹಚ್ಚಿದರು. ಎರಡು ವರ್ಷಗಳ ಹಿಂದೆ ಇದೇ ಸಂಸ್ಥೆಯು ಅವರ ಲಲಿತಪ್ರಬಂಧಗಳ ಸಂಕಲನವೊಂದನ್ನು ಪ್ರಕಟಿಸಿತು. ‘ಹಿಡಿಯದ ಹಾದಿ’ ಎಂದು ಅದರ ಹೆಸರು. ಅದನ್ನು ಓದಿದಾಗ ಅನ್ನಿಸಿದ್ದು : ಗಿರಡ್ಡಿಯವರು ಪ್ರಬಂಧಬರಹದ ಈ ಹಾದಿಯನ್ನು ಹಿಡಿಯದಿದ್ದರೇ ಚೆನ್ನಾಗಿತ್ತು.
ಈ ವರ್ಷ(೨೦೦೯) ಇದೇ ಸಂಸ್ಥೆಯು ಗಿರಡ್ಡಿಯವರ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಲೇಖನಸಂಕಲನವೊಂದನ್ನು ಪ್ರಕಟಗೊಳಿಸಿದೆ. ಗಿರಡ್ಡಿಯವರು ತಮ್ಮ ಲೇಖನಗಳಿಗೆ ಪ್ರಸಂಗಸಾಹಿತ್ಯವೆಂದು ಕರೆಯುತ್ತ ಈ ರೀತಿಯಾಗಿ ಹೇಳಿದ್ದಾರೆ:
ಗಿರಡ್ಡಿಯವರ ಸಂಕಲನದ ಉದ್ದೇಶ ಹಾಗು ತಿರುಳು ಅರ್ಥವಾಯಿತೆ? ಸಾಹಿತಿಗಳಿಗೆ ಸಂಬಂಧಿಸಿದ “ಋಣಾತ್ಮಕ ಅಂಶ”ಗಳನ್ನು ಅವರು ಈ ಸಂಕಲನದಲ್ಲಿಬಣ್ಣಿಸಿದ್ದಾರೆ. “ಋಣಾತ್ಮಕ ಅಂಶ”ಗಳೆಂದರೇನು? ಇದು ಅವರವರ ನಿಲುವು ಹಾಗೂ ವ್ಯಾಖ್ಯಾನದ ಮೇಲೆ ಹೋಗುತ್ತದೆ. ಉದಾಹರಣೆಗೆ ‘ಸುರಾಪಾನ’ವು ಹಿರಿಯ ಕನ್ನಡ ಸಾಹಿತಿಗಳಾದ ಮಾಸ್ತಿ, ಬೇಂದ್ರೆ, ಕುವೆಂಪು, ದೇವುಡು ಹಾಗು ಡಿವಿಜಿ ಇಂಥವರಿಗೆ ಋಣಾತ್ಮಕ ಅಂಶವಾಗಿ ಕಂಡರೆ, ನವ್ಯ ಸಾಹಿತಿಗಳಿಗೆ ಅಂದರೆ ಅನಂತ ಮೂರ್ತಿ, ಗಿರೀಶ ಕಾರ್ನಾಡ ಹಾಗು ಗಿರಡ್ಡಿಯಂಥವರಿಗೆ ಅದು ಧನಾತ್ಮಕ ಅಂಶವಾಗಿ ಕಾಣಬಹುದು. ಹಿರಿಯ ಸಾಹಿತಿಗಳಲ್ಲಿ ಸುರಾಪಾನಿಗಳು ಸಿಗುವದಿಲ್ಲ. ಕೆಲವರಂತೂ ‘ಚಾ-ಪಾಣಿ’ಗಳೂ ಆಗಿರಲಿಕ್ಕಿಲ್ಲ.ಆದುದರಿಂದ ಇವರಲ್ಲಿ ಇರಬಹುದಾದ ಮಾನವಸಹಜ ಕುಂದು ಕೊರತೆಗಳಿಗೆ ಬಣ್ಣ ಕೊಟ್ಟು, ಹಿಗ್ಗಿಸಿ ಬರೆದಾಗ, ಲೇಖನಕ್ಕೆ ‘ಸಂಕೀರ್ಣತೆ’ ಬರುತ್ತದೆ! ಇಂತಹ ಸಂಕೀರ್ಣತೆ ವ್ಯಕ್ತಿಚಿತ್ರಗಳಲ್ಲಿ ಅಥವಾ ಅಭಿನಂದನ ಗ್ರಂಥಗಳಲ್ಲಿ ಸಿಗುವದಿಲ್ಲ ಎನ್ನುವದು ಗಿರಡ್ಡಿಯವರ ಕೊರಗು ಹಾಗು ಅಮೂಲ್ಯ ಅಭಿಪ್ರಾಯ.
ಹೀಗಾಗಿ ತಮ್ಮ ಸಂಕಲನದ ಅನೇಕ ಲೇಖನಗಳನ್ನು ಗಿರಡ್ಡಿಯವರು ಈ ‘ಋಣಾತ್ಮಕ ಸಂಕೀರ್ಣತೆ’ಗಾಗಿಯೇ ಮೀಸಲಿಟ್ಟಿದ್ದಾರೆ. ಅವು ಇಂತಿವೆ:
(೧) ರಾಜೀ ಊಟ
(ಬೇಂದ್ರೆ-ಕುವೆಂಪು ವೈಮನಸ್ಸು!)
(೨) ಕವಿತೆಯ ಓದು
(ಸುಮತೀಂದ್ರ ನಾಡಿಗರ ಸ್ವಮೋಹ)
(೩) ಅನ್ನದ ರಿಣ
(ರಂ.ಶ್ರೀ. ಮುಗಳಿಯವರ ಸ್ವಮೋಹ)
(೪) ಒಂದು ಲೋಟ ನೀರು
(ಕುವೆಂಪುರವರ unhospitality)
(೫) ಕುರ್ಚಿಯ ಗೌರವ
(ಗಿರಡ್ಡಿಯವರು ಸರೋಜಿನಿ ಶಿಂತ್ರಿಯವರ ಬಾಲ ಕತ್ತರಿಸಿದ್ದು)
(೬) ಬೀದಿ ಬದಿಯ ರದ್ದಿ ಪುಸ್ತಕಗಳ ಅಂಗಡಿಯಲ್ಲಿ
( ಹಾ. ಮಾ. ನಾಯಕರ complex)
(೭) ಜಾರೆ ಅಮೃತಮತಿ
(ಬಿ.ವಿ. ಕಾರಂತರ ಕುಡುಕತನ)
(೮) ಮೈ ಹಿಂದೀ ಮೆ ನಹೀ ಬೋಲೂಂಗಾ
(ಬಿ.ವಿ. ಕಾರಂತರ ಕುಡುಕತನ)
(೯) ಬಿ. ವಿ. ಕಾರಂತರ ಬಾಥ್ ರೂಮ್
(ಬಿ.ವಿ. ಕಾರಂತರ ಕುಡುಕತನ)
(೧೦) ಸಾಲಿ ರಾಮಾಯಣ
(ಬೇಂದ್ರೆಯವರ ಕ್ಷುಲ್ಲಕತನ ಹಾಗು ಗುಂಪುಗಾರಿಕೆ)
(೧೧) ಒಂದು ಸ್ನೇಹದ ಕಥೆ
(ಬೇಂದ್ರೆಯವರಿಗೆ ಮಾಸ್ತಿಯವರ ಬಗೆಗಿದ್ದ ಅಸಮಾಧಾನ)
(೧೨) ಯುಗದ ಕವಿ, ಜಗದ ಕವಿ
(ಬೇಂದ್ರೆಯವರಿಗೆ ಕುವೆಂಪು ಬಗೆಗಿದ್ದ ಅಸೂಯೆ)
(೧೩) ತಂದೆ-ಮಗ
(ಶ್ರೀರಂಗರ ತಂದೆಗೆ ಶ್ರೀರಂಗರ ಬಗೆಗಿದ್ದ ಅಸಮಾಧಾನ)
(೧೪) ಶಂಬಾ-ಬೇಂದ್ರೆ ಪುರಾಣ
( ಬೇಂದ್ರೆ-ಶಂ. ಬಾ. ಜೋಶಿಯವರ ಜಗಳ)
(೧೫) ಶಂ.ಬಾ. ಅವರ ಬಲೂನುಗಳು
(ಶಂ. ಬಾ. ಜೋಶಿಯವರ ತಿಕ್ಕಲುತನ)
(೧೬) ಹದಿನೈದು ಪೈಸೆ ಕಾರ್ಡುಗಳು
(ಶಂ. ಬಾ. ಜೋಶಿಯವರ ತಿಕ್ಕಲುತನ)
ಒಟ್ಟು ೫೬ ಪ್ರಸಂಗಗಳಲ್ಲಿ ೧೬ ಪ್ರಸಂಗಗಳು ಈ ತರಹದ ಋಣಾತ್ಮಕ ಸಂಕೀರ್ಣತೆಗೆ ಮೀಸಲಾಗಿವೆ. (ವ್ಯವಹಾರದ ಭಾಷೆಯಲ್ಲಿ ಇದಕ್ಕೆ ‘ಛಿದ್ರಾನ್ವೇಷಣೆ’ ಎನ್ನಬಹುದೇನೊ?) ಕೇವಲ ‘ಋಣಾತ್ಮಕ’ ಪ್ರಸಂಗಗಳನ್ನು ವರ್ಣಿಸಿದರೆ ಪುಸ್ತಕವೇ ‘ಋಣಾತ್ಮಕ ಸಂಕಲನ ’ ಎನ್ನುವ ಹೊಗಳಿಕೆಗೆ ಪಾತ್ರವಾಗಬಹುದಲ್ಲವೆ? ಆದುದರಿಂದ ಗಿರಡ್ಡಿಯವರು ಧನಾತ್ಮಕವಾದ, ಪ್ರಶಂಸಾಪೂರ್ವಕವಾದ ಹಲವು ಲೇಖನಗಳನ್ನೂ ಬರೆದಿದ್ದಾರೆ. ಈ ಲೇಖನಗಳೆಲ್ಲ ಸಂಕಲನದ ಮೊದಲಲ್ಲೇ ಬಂದಿವೆ. ಆದರೆ ಈ ಪ್ರಶಂಸೆ ಎಲ್ಲ ಸ್ವಪ್ರಶಂಸೆಯಾಗಿರುವದೇ ಓದುಗರಿಗೆ ಮನೋರಂಜನೆಯನ್ನು ಒದಗಿಸಬಹುದು! ಇಂತಹ ಲೇಖನಗಳ ಪಟ್ಟಿ ಇಲ್ಲಿದೆ. ಸಂಕಲನದ ಮೊದಲನೆಯ ಲೇಖನವೇ ಇವರ ‘ಬಾಲ್ಯಪ್ರತಿಭೆ’ಯ ಕೊಂಡಾಟವಾಗಿರುವದನ್ನು ಗಮನಿಸಬೇಕು:
(೧) ಮೂಗಿನ ಕೆಳಗೆ ಮೀಸೆ
(ಬಂಕಾಪುರ ಎನ್ನುವ ಪತ್ರಕರ್ತರು ಗಿರಡ್ಡಿಯವರ ಕಿಶೋರಾವಸ್ಥೆಯ ಲೇಖನ ಮೆಚ್ಚಿಕೊಂಡಿದ್ದು)
(೨) ಕೈತೋಟದ ಎರಡು ಹಗರಣಗಳು
(ಭೈರಪ್ಪನವರು ಇವರ ಕತೆಗಳನ್ನು ಮೆಚ್ಚಿಕೊಂಡಿದ್ದು)
(೩) ಸಾಹಿತ್ಯದ ಕಾಡುವ ಗುಣ
( ಸಾಮಾನ್ಯ ಓದುಗಳೊಬ್ಬಳು ಇವರ ಕತೆ ಮೆಚ್ಚಿಕೊಂಡಿದ್ದು)
(೪) Brilliant Young Man
( ವಿ.ಸೀ.ಯವರು ಇವರ ಲೇಖನ ಮೆಚ್ಚಿಕೊಂಡಿದ್ದು)
(೫) ಹದಿನಾರೂವರೆ ವರ್ಷದ ವಿವೇಕ
(ಕಿಶೋರಾವಸ್ಥೆಯ ವಿವೇಕ ಶಾನಭಾಗ ಇವರ ಕತೆ ಮೆಚ್ಚಿಕೊಂಡಿದ್ದು)
(೬) ಅಜ್ಞಾತದಿಂದ ಒಂದು ಪತ್ರ
(ಲಕ್ಷ್ಮೀನರಸಿಂಹ ಎನ್ನುವ ಅಪರಿಚಿತರು ಇವರ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದು)
(೭) Felicity of Expression
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೮) ಸ್ವಾತಂತ್ರ್ಯೋತ್ಸವದ ಆ ದಿನ
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೯) Promising Poet
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೦) ನಿನ್ನ ಕಾವ್ಯಸ್ಫೂರ್ತಿ ಮುಂಬರಿಯಲಾವುದಡ್ಡಿ?
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೧) ಬಾಣದ ಬಿರಸು
(ಗಿರಡ್ಡಿಯವರು ವಿದ್ಯಾರ್ಥಿಯಾಗಿದ್ದಾಗ ಪ್ರೊಫೆಸರ್ ಮಾಳವಾಡರ ಎದುರಿಗೆ ತೋರಿದ ಧೈರ್ಯ)
(೧೨) ಚಮತ್ಕಾರ
(ಗಿರಡ್ಡಿಯವರು ಬೇಂದ್ರೆಯವರನ್ನು ತಮಾಶೆ ಮಾಡಿದ್ದು)
ಈ ರೀತಿಯಾಗಿ ೫೬ ಪ್ರಸಂಗಗಳಲ್ಲಿ ಮೊದಲಿನ ೧೨ ಪ್ರಸಂಗಗಳು ಧನಾತ್ಮಕ ಸಂಕೀರ್ಣತೆಗೂ (ಸ್ವಪ್ರಶಂಸೆಗೂ),ನಂತರದ ೧೬ ಪ್ರಸಂಗಗಳು ಋಣಾತ್ಮಕ ಸಂಕೀರ್ಣತೆಗೂ (ಛಿದ್ರಾನ್ವೇಷಣೆಗೂ) ಮೀಸಲಾಗಿವೆ.ಇಂತಹ ಲೇಖನಗಳನ್ನು ನೋಡಿಯೇ ಚೆನ್ನವೀರ ಕಣವಿಯವರು ಈ ಪುಸ್ತಕಕ್ಕೆ ‘ಅಧಿಕ ಪ್ರಸಂಗಗಳು’ ಎನ್ನುವ ಹೆಸರನ್ನು ಸೂಚಿಸಿರಬಹುದು! ಉಳಿದ ೨೮ ಪ್ರಸಂಗಗಳು ಅಂದರೆ ಶೇಕಡಾ ೫೦ ಪ್ರಸಂಗಗಳು ಅತಿ ಸಾಮಾನ್ಯವೆನ್ನಿಸಬಹುದಾದ ಲೇಖನಗಳು. ಉದಾಹರಣೆಗೆ ‘ಧಾರವಾಡದಲ್ಲಿ ಕವಿಗಳು’ ಎನ್ನುವ ಲೇಖನ ನೋಡಬಹುದು. ಈ ಲೇಖನವನ್ನು ಗಿರಡ್ಡಿಯವರು ಯಾಕೆ ಬರೆದರೋ ತಿಳಿಯದು. ಮಾಧ್ಯಮಿಕ ಶಾಲೆಯ ಹುಡುಗರು ಇಂತಹ ನಿಬಂಧವನ್ನು ಬರೆಯಬಹುದು. ಓದುಗರು ಈ ನಿಬಂಧದ evaluationಅನ್ನು ಸ್ವತಃ ಮಾಡಲಿ ಎನ್ನುವ ಉದ್ದೇಶದಿಂದ ಲೇಖನದ ಕೊನೆಯಲ್ಲಿ ಆ ನಿಬಂಧವನ್ನು ಅಂದರೆ ಅವರ ಪ್ರತಿಭೆಯ ಒಂದು ಸ್ಯಾಂಪಲ್ ಅನ್ನು ಉದ್ಧರಿಸುತ್ತಿದ್ದೇನೆ. ದಯವಿಟ್ಟು ಕ್ಷಮಿಸಬೇಕು.
ವ್ಯಕ್ತಿಚರಿತ್ರೆ ಹಾಗು ಆತ್ಮಚರಿತ್ರೆಗಳು ಕನ್ನಡ ಸಾಹಿತ್ಯದಲ್ಲಿ ಅಪರೂಪವೇನಲ್ಲ. ಅದೇ ರೀತಿಯಾಗಿ ನಾಡಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳ ತುಣುಕು ಚರಿತ್ರೆಗಳು, ಪ್ರಸಿದ್ಧರಾಗಿರದಿದ್ದರೂ ಸಹ ಶೀಲವಂತರಾದ ವ್ಯಕ್ತಿಗಳ ತುಣುಕು ಪ್ರಸಂಗಗಳೂ ಸಹ ಕನ್ನಡ ಸಾಹಿತ್ಯದಲ್ಲಿ ಸ್ಥಾನ ಪಡೆದಿವೆ. ಇಂತಹ ಸಾಹಿತ್ಯವನ್ನು ನಿರ್ಮಿಸಿದ ಹಿರಿಯರಲ್ಲಿ ಡಿ. ವ್ಹಿ. ಗುಂಡಪ್ಪನವರು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ವಿ. ಸೀತಾರಾಮಯ್ಯನವರು ಹಾಗು ಸಿದ್ಧವ್ವನಹಳ್ಳಿ ಕೃಷ್ಣಶರ್ಮರು ಪ್ರಮುಖರು. ಗುಂಡಪ್ಪನವರ ‘ಜ್ಞಾಪಕ ಚಿತ್ರಶಾಲೆ’, ಗೊರೂರರ ‘ಹಳ್ಳಿಯ ಹತ್ತು ಸಮಸ್ತರು’, ವಿ.ಸೀ.ಯವರ ‘ವ್ಯಕ್ತಿಚಿತ್ರಸಂಪುಟ’ ಹಾಗು ಕೃಷ್ಣಶರ್ಮರ ‘ದೀಪಮಾಲೆ’ ಕೃತಿಗಳಲ್ಲಿ ಬಾಳಿಗೆ ಬೆಳಕು ಕೊಡುವಂತಹ ವ್ಯಕ್ತಿಚಿತ್ರಣಗಳಿವೆ. ಅದರ ಜೊತೆಗೆ, ಆ ಕಾಲದ ಸಂಸ್ಕೃತಿಯ ಹಾಗು ಜೀವನವಿಧಾನದ ಮಿಂಚು ನೋಟ ಸಹ ಈ ಕೃತಿಗಳಲ್ಲಿ ಚಿತ್ರಿತವಾಗಿದೆ. ಅದರಂತೆ ದೀರ್ಘ ಹಾಗು ಗಾಢವಾದ ವ್ಯಕ್ತಿಚಿತ್ರಗಳ ಬದಲು, ಕೆಲವು ಪ್ರಸಂಗಗಳ ಮೂಲಕ ಕೆಲವಾರು ವ್ಯಕ್ತಿಗಳ ಪಾರ್ಶ್ವನೋಟದ ಚಿತ್ರವನ್ನು ಕೊಡುವ ಸಾಹಿತ್ಯಕೃತಿಗಳೂ ನಮ್ಮಲ್ಲಿ ಸಾಕಷ್ಟಿವೆ. ಹಾ. ಮಾ. ನಾಯಕರು ಬರೆದ ‘ವೆಂಕಣ್ಣಯ್ಯ ಕೆಲ ಪ್ರಸಂಗಗಳು’, ಬೆಳಗೆರೆ ಕೃಷ್ಣಶಾಸ್ತ್ರೀಯವರು ಬರೆದ ‘ಸಾಹಿತಿಗಳ ಸಂಗದಲ್ಲಿ’, ‘ಮರೆಯಲಾದೀತೆ?’, ‘ಎಲೆಮರೆಯ ಅಲರು’, ಬಿ. ಎಸ್. ಕೇಶವರಾವರು ಬರೆದ ‘ಪ್ರಸಂಗಪ್ರವಾಹ’, ‘ನಾ ಕಂಡ ಪುಂಡ ಪಾಂಡವರು’ ಹಾಗು ವಿಷ್ಣು ನಾಯ್ಕರು ಬರೆದ ‘ಅರೆ ಖಾಸಗಿ’ ಕೃತಿಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಒಬ್ಬನೇ ಸಾಹಿತಿಯ ಬಗೆಗೆ ಅನೇಕ ಲೇಖಕರು ಬರೆದ ಅಭಿನಂದನೆಯ ಗ್ರಂಥಗಳು ಅಥವಾ ಸ್ಮರಣೆಯ ಕೃತಿಗಳೂ ಸಹ ಸಾಕಷ್ಟಿವೆ. (ಉದಾಹರಣೆ: ‘ತೇಜಸ್ವಿ ನೆನಪು’). ಲಂಕೇಶರು ತಮ್ಮ ಪತ್ರಿಕೆಯಲ್ಲಿ ಅನೇಕ ಸಾಹಿತಿಗಳನ್ನು ಹಾಗು ತಮ್ಮ ಗೆಳೆಯರನ್ನೇ ಟೀಕಿಸಿದ್ದಾರೆ. ಆದರೆ ಅದು ಸಾಹಿತ್ಯಕ ಹಾಗು ಸಾಮಾಜಿಕ ಕಾರಣಗಳಿಗಾಗಿಯೇ ಹೊರತು, ವೈಯಕ್ತಿಕ ಛಿದ್ರಾನ್ವೇಷಣೆಗಾಗಿ ಅಲ್ಲ.
ಇದಲ್ಲದೆ, ನಮ್ಮ ಪತ್ರಿಕೆಗಳಲ್ಲೂ ಸಹ ಇಂತಹ ಲೇಖನಮಾಲೆಗಳು ಪ್ರಕಟವಾಗಿವೆ. ‘ಪ್ರಪಂಚ’ ವಾರಪತ್ರಿಕೆಯ ಸಂಪಾದಕರಾದ ಶ್ರೀ ಪಾಟೀಲ ಪುಟ್ಟಪ್ಪನವರು ಐದು ದಶಕಗಳಷ್ಟು ಹಿಂದೆಯೇ ತಮ್ಮ ವಾರಪತ್ರಿಕೆಯಲ್ಲಿ ‘ದೊಡ್ಡವರ ಸಣ್ಣತನ’ ಎನ್ನುವ ಸ್ಥಿರಮಾಲಿಕೆಯಲ್ಲಿ ಅನೇಕ ರಾಜಕೀಯ ಮುಂದಾಳುಗಳ ಸಣ್ಣತನದ ಪ್ರಸಂಗಗಳನ್ನು ರೋಚಕವಾಗಿ ಬಣ್ಣಿಸುತ್ತಿದ್ದರು. ಅವರೇ ಮುಂದೆ ‘ಪಾಪು ಪ್ರಪಂಚ’ ಎನ್ನುವ ಪುಸ್ತಕವನ್ನೂ ಹೊರತಂದರು. ತಮ್ಮ ಲೇಖನಗಳಲ್ಲಿ ಪಾಟೀಲ ಪುಟ್ಟಪ್ಪನವರು ರಾಜಕಾರಣಿಗಳ ಹುಳಕನ್ನು ಬಯಲಿಗೆಳದಿದ್ದಾರೆ. ಪುಟ್ಟಪ್ಪನವರ ಉದ್ದೇಶ ನಾಗರಿಕಪ್ರಜ್ಞೆಯನ್ನು ಜಾಗೃತಗೊಳಿಸುವದಾಗಿತ್ತೇ ಹೊರತು ಛಿದ್ರಾನ್ವೇಷಣೆಯಾಗಿರಲಿಲ್ಲ. ಈ ರೀತಿಯಾಗಿ ಎರಡು ಶತಮಾನಗಳ ಕಾಲವನ್ನು ವ್ಯಾಪಿಸಿದ, ಅದರಂತೆ ಇದೇ ದಶಕದಲ್ಲಿ ಪ್ರಕಟವಾದ ಸಾಹಿತ್ಯಕೃತಿಗಳು ಕನ್ನಡದಲ್ಲಿ ಸಾಕಷ್ಟಿದ್ದರೂ ಸಹ, ಕರ್ನಾಟಕದ ಹೆಮ್ಮೆಯ ಪ್ರಕಾಶನಸಂಸ್ಥೆಯೆಂದು ಹೇಳಿಕೊಳ್ಳುವ ‘ಮನೋಹರ ಗ್ರಂಥಮಾಲಾ’ ಸಂಸ್ಥೆಯ ಮಾಲಕರಾದ ರಮಾಕಾಂತ ಜೋಶಿಯವರಿಗೆ ಪ್ರಸಂಗಸಾಹಿತ್ಯವು ಇತ್ತೀಚಿನ ಬೆಳವಣಿಗೆಯಂತೆ ಕಾಣುತ್ತಿರುವದು ಅಚ್ಚರಿಯ ಸಂಗತಿ. (ಪ್ರಕಾಶಕರ ಮಾತು ನೋಡಿರಿ: “ಇತ್ತೀಚೆಗೆ ಸಾಹಿತ್ಯಪ್ರಕಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗತೊಡಗಿದ್ದು, ಶುದ್ಧ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾಹಿತ್ಯ ಲೋಕದ ಆಜೂ ಬಾಜೂ ನಡೆದಿರಬಹುದಾದ, ನಡೆದ ಪ್ರಸಂಗಗಳನ್ನು ಅರಿಯುವ ಕುತೂಹಲ ಓದುಗರಿಗೆ ಹೆಚ್ಚಾಗತೊಡಗಿದೆ.)
ಗಿರಡ್ಡಿಯವರ ಶೈಲಿಯ ಬಗೆಗೆ ಒಂದು ಮಾತು. ತಮ್ಮ ಸ್ವಪ್ರಶಂಸೆಯು ಢಾಳಾಗಿ ಕಾಣಬಾರದೆಂದೊ ಅಥವಾ gentleman image ಇಟ್ಟುಕೊಳ್ಳುವ ಉದ್ದೇಶದಿಂದಲೋ ಗಿರಡ್ಡಿಯವರು ತಮ್ಮ ಲೇಖನಗಳನ್ನು ಸಂಕೋಚಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಆದರೆ ಇದರ ಪರಿಣಾಮ ಹೇಗಾಗಿದೆಯಂದರೆ ಇವರ ಲೇಖನಗಳು ನಿಸ್ಸತ್ವ, ನಿಸ್ಸಾರ ಶೈಲಿಯ ನಿರರ್ಥಕ ಚಿತ್ರಗಳಂತೆ ಕಾಣುತ್ತವೆ. ಪುಸ್ತಕವನ್ನು ಓದಿದ ಬಳಿಕ ಓದುಗನಿಗೆ ತನ್ನ ಸಮಯವು ಹಾಳಾಯಿತಲ್ಲ ಎಂದು ಪರಿತಾಪವಾಗಲಾರದೆ ಇರಲಾರದು. ಗುಜರಿಯಲ್ಲಿ ಬಿಕರಿಯಾಗಬೇಕಾದ ಕೃತಿಯನ್ನು ಮನೋಹರ ಗ್ರಂಥಮಾಲೆಯು ತನ್ನ ಚಂದಾದರರಿಗೆ ಕೊಡಮಾಡಿದೆ ಎನ್ನಲು ವಿಷಾದವಾಗುತ್ತಿದೆ.
ಗಿರಡ್ಡಿಯವರ ನಿಬಂಧ ಇಲ್ಲಿದೆ. ತಾಳ್ಮೆ ಇದ್ದವರು ಓದಬಹುದು. ದಯವಿಟ್ಟು ನನ್ನನ್ನು ಕ್ಷಮಿಸಿರಿ.