Showing posts with label ಸಮಾಜ/ವ್ಯಕ್ತಿ. Show all posts
Showing posts with label ಸಮಾಜ/ವ್ಯಕ್ತಿ. Show all posts

Saturday, February 28, 2009

ಕೃಷ್ಣ ಗೋಪಾಳ ಜೋಶಿ--ಅಗ್ನಿಸಂದೇಶ

ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ ಎಂದು ಹೇಳಬಹುದು. ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಈ ಮಾತು ಸರಿಯಾಗಿ ಅನ್ವಯಿಸುತ್ತದೆ. ದೇಶದ ಒಳಿತಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಅನೇಕ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದೂ ನಮಗೆ ಅದರ ಅರಿವೇ ಇಲ್ಲದವರಂತೆ ನಾವು ಬದಕುತ್ತಿದ್ದೇವೆ.

ಶ್ರೀ ಕೃಷ್ಣ ಗೋಪಾಳ ಜೋಶಿಯವರನ್ನು ನಾನು ಮೊದಲ ಸಲ ನೋಡಿದ್ದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ೧೪ ವರ್ಷಗಳ ಬಳಿಕ. ಆಗ ಇವರು ೫೨ ವರ್ಷದವರು. ಧಾರವಾಡದ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿದ್ದರು. ಸುಮಾರು ಆರಡಿ ಎತ್ತರದ ದೃಢಕಾಯ, ತಲೆಗೆ ಗಾಂಧಿ ಟೊಪ್ಪಿಗೆ, ಶಿಸ್ತು ಹಾಗೂ ಮಮತೆಗಳನ್ನು ಸೂಸುವ ಮುಖಭಾವ.
ಈ ವ್ಯಕ್ತಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವ್ಯಕ್ತಿ ಎಂದು ಆ ಶಾಲೆಯ ವಿದ್ಯಾರ್ಥಿಗಳಿಗಾಗಲೀ, ಅಲ್ಲಿಯ ಅನೇಕ ಶಿಕ್ಷಕರಿಗಾಗಲೀ ಗೊತ್ತೇ ಇರಲಿಲ್ಲ.

ಕೃಷ್ಣ ಗೋಪಾಳ ಜೋಶಿಯವರು ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಸಾಮಾನ್ಯ ಶಕೆ ೧೯೦೯ರಲ್ಲಿ ಜನಿಸಿದರು. ಏಳನೆಯ ಇಯತ್ತೆಯಲ್ಲಿ ತೇರ್ಗಡೆಯಾದ ಬಳಿಕ, ಇವರು ವೈದಿಕೀ ವೃತ್ತಿ ಮಾಡಿಕೊಂಡಿರಲಿ ಎನ್ನುವದು ಇವರ ಹಿರಿಯರ ಅಭಿಪ್ರಾಯವಾಗಿತ್ತು. ಆದರೆ ಕೃಷ್ಣ ಜೋಶಿಯವರದು ಬಾಲ್ಯದಿಂದಲೂ ಸಾಹಸದ ಸ್ವಭಾವ. ಮನೆ ಬಿಟ್ಟು ವಿಜಾಪುರಕ್ಕೆ ಓಡಿ ಹೋದರು. ಮಲ ಅಕ್ಕನ ಮನೆಯಲ್ಲಿ ಇದ್ದುಕೊಂಡು, ವಾರಾನ್ನ ಹಚ್ಚಿಕೊಂಡು ವಿದ್ಯಾಭ್ಯಾಸ ಸಾಗಿಸಿದರು.

ವಿಜಾಪುರದಲ್ಲಿ ಇವರ ಪಾಲಕರು ತೀರಿಕೊಂಡಿದ್ದರಿಂದ ಮಲ ಅಕ್ಕನ ಜೊತೆಗೆ ಇವರೆಲ್ಲ ಧಾರವಾಡಕ್ಕೆ ಬರಬೇಕಾಯಿತು. ಅಲ್ಲಿ ಕರ್ನಾಟಕ ಹಾಯ್‍ ಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಇದು ಜೋಶಿಯವರ ಜೀವನದಲ್ಲಿಯ turning point.

ಕರ್ನಾಟಕ ಹಾಯ್‍ಸ್ಕೂಲ ಎಂದರೆ ಸ್ವಾತಂತ್ರ್ಯ ಹೋರಾಟಗಾರರ ಕಮ್ಮಟವಾಗಿತ್ತು. ಶಿನೋಳಿಕರ ಎನ್ನುವ ತರುಣ ವಿಜ್ಞಾನಿ ಬೆಂಗಳೂರಿನಲ್ಲಿಯ ತಾತಾ ವಿಜ್ಞಾನ ಕೇಂದ್ರದಲ್ಲಿಯ ತಮ್ಮ ಆಕರ್ಷಕ ವೈಜ್ಞಾನಿಕ ಹುದ್ದೆಯನ್ನು ತ್ಯಜಿಸಿ, ಈ ಶಾಲೆಯ ಮುಖ್ಯಾಧ್ಯಾಪಕರಾಗಲು ಬಂದಿದ್ದರು. ಇದಲ್ಲದೆ ಧಾರವಾಡದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಡಾ^. ಕಬ್ಬೂರ, ಶ್ರೀ ದ.ಪ. ಕರಮರಕರ (--ಇವರು ಸ್ವಾತಂತ್ರ್ಯಾನಂತರ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು--), ಶ್ರೀ ಮುಧೋಳಕರ ಇವರೆಲ್ಲ ಈ ಸಂಸ್ಥೆಯ ಕಾರ್ಯಕರ್ತರು. “ಗುದ್ಲಿ ಪಾರ್ಟಿ” ಎನ್ನುವ ಗುಂಪೊಂದನ್ನು ನಿರ್ಮಿಸಿಕೊಂಡು ಇವರೆಲ್ಲ ತಮ್ಮ ಕೈಗಳಿಂದಲೇ ಶಾಲೆಗೆ ಅವಶ್ಯಕವಿರುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. (ಖ್ಯಾತ ಸಾಹಿತಿ ಹಾಗೂ ಕೇಂದ್ರ ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಶ್ರೀ ಗಂಗಾಧರ ಚಿತ್ತಾಳರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಅವರೂ ಸಹ ಇಂತಹ ಸಾಂಸ್ಕೃತಿಕ-ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೇ. ಶ್ರೀ ಚಿತ್ತಾಳರು ಆಗಿನ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ಉತ್ತೀರ್ಣರಾದರು.)

ಕೃಷ್ಣ ಗೋಪಾಳ ಜೋಶಿಯವರು ಈ ಧುರೀಣರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ೧೯೨೮ರಲ್ಲಿ ಡಾ^. ನಾ.ಸು. ಹರ್ಡೀಕರರ ಸೇವಾದಳ ಕಾರ್ಯಕರ್ತರಾಗಿ ಸೇವಾದಳ ಶಿಬಿರದಲ್ಲಿ ಭಾಗವಹಿಸಿದರು.

ಎಪ್ರಿಲ್ ೧೯೩೦ರಲ್ಲಿ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು. ಜೋಶಿಯವರು ಹಾಗೂ ಹೋರಾಟಕ್ಕಿಳಿದ ಇತರ ತರುಣರು ಸುಮಾರು ೪೦ ಕಿಲೊಮೀಟರ ದೂರದ ಬೆಣ್ಣಿಹಳ್ಳಕ್ಕೆ ಹೋಗಿ, ಉಪ್ಪು ತಯಾರಿಸಿ ತಂದು ಧಾರವಾಡದಲ್ಲಿ ಹಂಚಿದರು.

೧೯೩೧ರಲ್ಲಿ ಅಸಹಕಾರ ಚಳುವಳಿ ತಾರಕಕ್ಕೇರಿತು. ತಮ್ಮ ಜೊತೆಗಾರರೊಂದಿಗೆ ವಿದೇಶಿ ವಸ್ತ್ರಗಳ ವಿರುದ್ಧ ಪಿಕೆಟಿಂಗ್ ಪ್ರಾರಂಭಿಸಿದರು. ಅದೇ ಕಾಲದಲ್ಲಿ ಸೆರೆ-ಸಿಂದಿ ಅಂಗಡಿಗಳಿಗೆ ಬಹಿಷ್ಕಾರ ಹಾಕಲಾಯಿತು. ಜೋಶಿಯವರು ಹಾಗೂ ಜೊತೆಗಾರರು ಸಿಂದಿ ಅಂಗಡಿಗಳ ಎದುರಿಗೆ ಪಿಕೆಟಿಂಗ ಚಾಲೂ ಮಾಡಿದರು. ಅಷ್ಟೇ ಅಲ್ಲದೆ, ಶಿಂದಿಯ ಉತ್ಪಾದನೆಯನ್ನೇ ನಿಲ್ಲಿಸುವ ಉದ್ದೇಶದಿಂದ ಸಿಂದಿ ಮರಗಳನ್ನು ಕಡಿದು ಹಾಕತೊಡಗಿದರು. ಧಾರವಾಡದ ಜಕ್ಕಣಿ ಬಾವಿಯ ಬಳಿಯಲ್ಲಿ ನಡೆದ ಪಿಕೆಟಿಂಗ ಸಮಯದಲ್ಲಿ ಜರುಗಿದ ಪೋಲೀಸ್ ಗೋಳೀಬಾರಿನಲ್ಲಿ ಮಲಿಕಸಾಬ ಎನ್ನುವ ಹುಡುಗನ ಬಲಿದಾನವಾಯಿತು.


೧೯೩೧ರಲ್ಲಿ, ಶ್ರೀ ಕರಮರಕರರು ಅಂಕೋಲಾ ತಾಲೂಕಿನಲ್ಲಿ ಕರನಿರಾಕರಣೆ ಚಳುವಳಿಯನ್ನು ಸಂಘಟಿಸಿದರು. ಜೋಶಿಯವರು ಅಲ್ಲಿ ಅವರ ಸಹಾಯಕರಾಗಿ ಕೆಲಸ ಮಾಡಿದರು. ಅಂಕೋಲಾ ತಾಲೂಕಿನ ಈ ಕರನಿರಾಕರಣ ಚಳುವಳಿಯನ್ನು ಸರದಾರ ವಲ್ಲಭಭಾಯಿ ಪಟೇಲರು ಬಾರ್ಡೋಲಿಯಲ್ಲಿ ಸಂಘಟಿಸಿದ ಚಳುವಳಿಗೆ ಹೋಲಿಸಲಾಗುತ್ತದೆ. ಅಂಕೋಲಾ ತಾಲೂಕಿನ ಭೂಮಾಲೀಕರು ಹಾಗೂ ಗೇಣಿದಾರರು ಒಟ್ಟಾಗಿಯೇ ಈ ಚಳುವಳಿಯಲ್ಲಿ ಭಾಗವಹಿಸಿದರು. ಪೋಲೀಸರಿಂದ ಕ್ರೂರ ಅತ್ಯಾಚಾರಗಳು ಜರುಗಿದವು. ಆದರೆ ಅಂಕೋಲೆಯ ಜನತೆ ಎಲ್ಲವನ್ನೂ ಸಹಿಸಿಕೊಂಡು, ಕೆಚ್ಚಿನಿಂದ ಬ್ರಿಟಿಶರ ವಿರುದ್ಧ ಹೋರಾಡಿತು.

ಧಾರವಾಡದಿಂದ ದ.ಪ.ಕರಮರಕರ, ಭಾಲಚಂದ್ರ ಘಾಣೇಕರ, ಕೆ.ಜಿ.ಜೋಶಿಯವರು ಕಾರ್ಯಕರ್ತರಾಗಿ ಬಂದಿದ್ದರು. ಇವರೊಡನೆ ಸೂರ್ವೆಯ ಬೊಮ್ಮಣ್ಣ ನಾಯಕರು, ಕಣಗಿಲದ ಬೊಮ್ಮಾಯ ತಿಮ್ಮಣ್ಣ ನಾಯಕರು, ಹಿಚಕಡದ ಹಮ್ಮಣ್ಣ ನಾಯಕರು ಮತ್ತು ಬೀರಣ್ಣ ನಾಯಕರು ಕೈಗೂಡಿಸಿದ್ದರು. ಕೊನೆಗೊಮ್ಮೆ ಜೋಶಿಯವರ ಹಾಗೂ ಶ್ರೀ ಕರಮರಕರರ ಬಂಧನವಾಯಿತು. ಜೋಶಿಯವರಿಗೆ ೧೧ ತಿಂಗಳ ಸಶ್ರಮ ಶಿಕ್ಷೆಯಾಯಿತು. ಅಹ್ಮದನಗರದ ವಿಸಾಪುರ ಜೇಲಿನಲ್ಲಿ ಇವರನ್ನು ಇಡಲಾಯಿತು.

ವಿಸಾಪುರದಿಂದ ಬಂದ ಬಳಿಕ ಜೋಶಿಯವರು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಮತ್ತೆ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೩೪ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೩೮ರಲ್ಲಿ ಕರ್ನಾಟಕ ಕಾ^ಲೇಜಿನಿಂದ ಬಿ.ಏ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಬಳಿಕ ಕಾಂದೀವಲಿಯ ಶಾರೀರಕ ಶಿಕ್ಷಣ ಕಾ^ಲೇಜಿನಲ್ಲಿ ಒಂದು ವರ್ಷ ಕಲಿತು, ೧೯೩೯ರಲ್ಲಿ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಾರೀರಕ ಶಿಕ್ಷಕರೆಂದು ಕೆಲಸ ಮಾಡಹತ್ತಿದರು.

೧೯೪೨ರಲ್ಲಿ ಗಾಂಧೀಜಿಯವರ “Quit India” ಘೋಷಣೆ ಹೊರಬಿದ್ದಿತು. ಜೋಶಿಯವರು ಮತ್ತೇ ಅಂಕೋಲೆಗೆ ಮರಳಿದರು.
ಅಲ್ಲಿ ಶ್ರೀ ದಯಾನಂದ ಪ್ರಭು ಹಾಗೂ ಬೀರಣ್ಣ ನಾಯಕರ ಜೊತೆಗೆ ಹೋರಾಟದ ರೂಪು ರೇಷೆಗಳು ಸಿದ್ಧವಾದವು. ಬ್ರಿಟಿಶ ಆಡಳಿತದ ಸಂಪರ್ಕಜಾಲವನ್ನು ಕಡಿದು ಹಾಕುವ ಉದ್ದೇಶದಿಂದ ತಂತಿ ಸಂಪರ್ಕವನ್ನು ನಾಶಪಡಿಸಲಾಯಿತು. ಸಣ್ಣ ಪುಟ್ಟ ರಸ್ತೆ ಸೇತುವೆಗಳು ವಿಧ್ವಸ್ತವಾದವು.

ಇದಾದ ಬಳಿಕ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿದ್ಧಪಡಿಸಲಾಯಿತು :
ಉತ್ತರ ಕನ್ನಡ ಜಿಲ್ಲೆಯ ಕಾಡಿನ ಸಂಪತ್ತೆಲ್ಲವನ್ನೂ ಬ್ರಿಟಿಶರು ಕೊಳ್ಳೆ ಹೊಡೆಯುತ್ತಿದ್ದರು. ಇಲ್ಲಿಯ ತೇಗಿನ ಮರದ ಹಾಗೂ ಇತರ ಮರಗಳ ಮರಮಟ್ಟುಗಳನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಪರದೇಶಗಳಿಗೂ ಸಹ ಸಾಗಿಸಿ ಮಾರಲಾಗುತ್ತಿತ್ತು. ಮರಗಳನ್ನು ಕಡಿಯುವ ಗುತ್ತಿಗೆದಾರರು ಈ ಮರಗಳನ್ನು ಕಡಿದು, ಜಂಗಲ್‍‍ಗಳ ಮೂಲಕ ಬಂದರುಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಅವುಗಳನ್ನು ಹಡಗುಗಳ ಹಿಂಬದಿಗೆ ಕಟ್ಟಿದರೆ, ಅವು ಅನಾಯಾಸವಾಗಿ ಪರದೇಶ ಪ್ರಯಾಣ ಮಾಡುತ್ತಿದ್ದವು. ಇಂಗ್ಲಂಡಿನಲ್ಲಿರುವ ಬಕಿಂಗ್‍ಹ್ಯಾಮ ಅರಮನೆಯ ಕಿಟಕಿ, ಬಾಗಿಲು ಹಾಗೂ ಇತರ ಕಟ್ಟಿಗೆಯ ಉತ್ಪಾದನೆಗಳು ಈ ರೀತಿ ಪುಕ್ಕಟೆ ಪ್ರಯಾಣ ಮಾಡಿದ “ದಾಂಡೇಲಿ ತೇಗಿನ ಮರ”ದಿಂದಾಗಿವೆ. (ದಾಂಡೇಲಿ ತೇಗು ಉತ್ಕೃಷ್ಟತೆಗಾಗಿ ಜಗತ್ಪ್ರಸಿದ್ಧವಾದ ತೇಗು.)

ಜೋಶಿಯವರು, ಕಣಗಿಲ ಹಮ್ಮಣ್ಣ ನಾಯಕ, ಹಮ್ಮಣ್ಣ ಬೊಮ್ಮ ನಾಯಕ, ಸಗಡಗೇರಿಯ ವೆಂಕಟರಮಣ ನಾಯಕ, ಬೀರಣ್ಣ ನಾಯಕ ಹಾಗೂ ದಯಾನಂದ ಪ್ರಭುಗಳು ಇವರೆಲ್ಲ ಸೇರಿ “ಬ್ರಿಟಿಶರಿಗೆ ತೇಗಿನ ಉಡುಗೊರೆ” ಕೊಡಲು ನಿಶ್ಚಯಿಸಿ ಕೂರ್ವೆಯಲ್ಲಿ ಸೇರಿದರು. ಮರಮಟ್ಟು ಸಾಗಿಸುತ್ತಿರುವ ‘ಜಂಗಲ್’ ಹಾಗೂ ೪೦ ಜನ ಪೋಲಿಸರನ್ನು ಸಾಗಿಸುತ್ತಿದ್ದ ‘ಜಂಗಲ್’ ಇವರಿದ್ದಲ್ಲಿ ಬಂದ ತಕ್ಷಣ ಇವರೆಲ್ಲ ಪೋಲೀಸರ ಮೇಲೆ ಮುಗಿಬಿದ್ದು ಅವರನ್ನು ಕಟ್ಟಿ ಹಾಕಿ ನಿ:ಶಸ್ತ್ರಗೊಳಿಸಿದರು. ಆ ಬಳಿಕ ಕಟ್ಟಿಗೆಯ ಹೊರೆಗಳನ್ನು ಡೋಣಿಗಳಲ್ಲಿ ತುಂಬಿ, ಚಿಮಣಿ ಎಣ್ಣೆಯನ್ನು ಸುರುವಿ ಬೆಂಕಿ ಹಚ್ಚಿ ಹೊಳೆಯಲ್ಲಿ ದೂಡಲಾಯಿತು.
ಸುಮಾರು ೨೦ ಕಿಲೊಮೀಟರುಗಳಷ್ಟು ದೂರದವರೆಗೆ ಅಂದರೆ ಕಡಲು ಸೇರುವವರೆಗೂ ಧಗಧಗನೆ ಉರಿಯುವ ಆ ಮರಮಟ್ಟು ಬ್ರಿಟಿಶರಿಗೆ ಒಂದು ‘ಅಗ್ನಿಸಂದೇಶ’ವನ್ನು ನೀಡಿದವು: “ Quit India!
ಅದರಂತೆ ಅದನ್ನು ನೋಡುತ್ತಿದ್ದ ಭಾರತೀಯ ತರುಣರಲ್ಲೂ ಅವು ಒಂದು ಕಿಚ್ಚನ್ನು ಹೊತ್ತಿಸುತ್ತಿದ್ದವು: “ಮಾಡು ಇಲ್ಲವೆ ಮಡಿ!

ಈ ಘಟನೆಯಿಂದ ಅಂಕೋಲೆಗೆ ಹೋಗುವ ರಹದಾರಿ ಬಂದಾಯಿತು. ಕಾರ್ಯಕರ್ತರೆಲ್ಲರೂ ತಮ್ಮ ತಮ್ಮ ಹಳ್ಳಿಗಳನ್ನು ಸೇರಿಕೊಂಡರು. ಜೋಶಿಯವರು ಗೋಕರ್ಣಕ್ಕೆ ಹೋದರು. ಮರುದಿನ ಜಿಲ್ಲಾ ಪೋಲೀಸ ಅಧಿಕಾರಿ ನಾನಾವಟಿಯವರಿಂದ ಹಳ್ಳಿ ಹಳ್ಳಿಗಳಲ್ಲಿ ಅತ್ಯಾಚಾರ ಸತ್ರ ಪ್ರಾರಂಭವಾಯಿತು. ೩೯ ತರುಣರನ್ನು ಬಂಧಿಸಲಾಯಿತು. ರಾಮಚಂದ್ರ ನಾಯಕ ಸಗಡಗೇರಿ, ಮಂಜುಗೌಡ, ಗಣಪತಿ ರಾಮಕೃಷ್ಣ ನಾಯಕ, ಹಮ್ಮಣ್ಣ ಹಿಚಕಡ ಇವರನ್ನೆಲ್ಲ ಬಂಧಿಸಿ ಥಳಿಸಲಾಯಿತು. ರಾಮಾ ಬೀರಣ್ಣ ನಾಯಕರನ್ನು ಕೆಳಗೆ ಕೆಡವಿ ತುಳಿದಿದ್ದರಿಂದ ಅವರ ಹಲ್ಲುಗಳು ಮುರಿದು ಹೋದವು. ಆದರೆ ‘ದೋಶಿ’ (= ಜೋಶಿ)ಯವರ ಮಾಹಿತಿಯನ್ನು ಯಾರೂ ಬಿಟ್ಟು ಕೊಡಲಿಲ್ಲ.

‘ಅಗ್ನಿಸಂದೇಶ’ ನಡೆದಾಗ, ಜೋಶಿಯವರು ತಲೆಗೆ ಕಟ್ಟಿಕೊಂಡ ಪಂಜೆ ಉಚ್ಚಿ ಕೆಳಗೆ ಬಿದ್ದಿತ್ತು. ಜೋಶಿಯವರ ತಲೆಕೂದಲು ಅಕಾಲದಲ್ಲೇ ಬೆಳ್ಳಗಾಗಿದ್ದವು. ಅಲ್ಲದೆ, ಆರಡಿ ಎತ್ತರದ ದೇಹ. ಇದರಿಂದಾಗಿ, ಆ ಸಮಯದಲ್ಲಿಯೇ ಪೋಲೀಸನೊಬ್ಬನು ಜೋಶಿಯವರನ್ನು ಗುರುತಿಸಿದ್ದನು. ‘ಬದಾಮಿ’ ಎನ್ನುವ ಈ ಪೋಲೀಸನು ಜೋಶಿಯವರ ಜೊತೆಗೆ ವಿಸಾಪುರ ಜೈಲಿನಲ್ಲಿ ರಾಜಕೀಯ ಕೈದಿಯಾಗಿದ್ದನು. ಆ ಬಳಿಕ ಪೋಲೀಸ ಕೆಲಸಕ್ಕೆ ಭರ್ತಿಯಾಗಿದ್ದನು! ಜೋಶಿಯವರು ಗೋಕರ್ಣದಿಂದ ಮುಂಡಗೋಡಕ್ಕೆ ಯಾತ್ರಿಕನ ವೇಷದಲ್ಲಿ ತೆರಳುತ್ತಿದ್ದಾಗ, ಈ ಪೋಲೀಸನು ವೇಷ ಮರೆಸಿಕೊಂಡು ಅದೇ ಬಸ್ಸಿನಲ್ಲಿ ಬರುತ್ತಿದ್ದನು. ಮುಂಡಗೋಡಿನಲ್ಲಿ ಇವರನ್ನು ಕೆಳಗೆ ಇಳಿಸಿ ಬಂಧಿಸಲಾಯಿತು.

ಕಾರವಾರದಲ್ಲಿ ಎಲ್ಲ ೩೯ ಕೈದಿಗಳ ವಿಚಾರಣೆ ನಡೆಯಿತು. ಎಲ್ಲಾ ಕೈದಿಗಳು ತಾವು ಬ್ರಿಟಿಶ್ ಸತ್ತೆಯನ್ನು ಮಾನ್ಯ ಮಾಡುವದಿಲ್ಲ ಎಂದು ಘೋಷಿಸಿದರು. ಜೋಶಿಯವರಿಗೆ ೫+೫ ವರ್ಷಗಳ ಸಶ್ರಮ ಶಿಕ್ಷೆ ಹಾಗೂ ೧೦೦ ರೂ. ದಂಡ, ತಪ್ಪಿದರೆ ಮತ್ತೆ ೧ ವರ್ಷದ ಶಿಕ್ಷೆಯನ್ನು ನೀಡಲಾಯಿತು.
ಇವರನ್ನೆಲ್ಲ ಮೊದಲು ಹಿಂಡಲಗಿ ಜೇಲಿನಲ್ಲಿ ಒಂದೂವರೆ ವರ್ಷ ಇಡಲಾಯಿತು. ಬಳಿಕ ಯರವಡಾ ಜೇಲಿಗೆ ಒಯ್ಯಲಾಯಿತು. ಅಲ್ಲಿಂದ ನಾಸಿಕ ಜೈಲಿಗೆ ವರ್ಗಾವಣೆ.

೧೯೪೭ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಜೋಶಿಯವರ ಬಿಡುಗಡೆಯಾಯಿತು.
ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿಯಹತ್ತಿದರು.
ದ.ಪ.ಕರಮರಕರರು ಆಗ ಕೇಂದ್ರ ಸರಕಾರದಲ್ಲಿ ಉಪಸಚಿವರಾಗಿದ್ದರು. ಜೋಶಿಯವರನ್ನು ದಿಲ್ಲಿಗೆ ಕರೆಯಿಸಿಕೊಂಡು ತಮ್ಮ ಆಪ್ತಸಹಾಯಕರನ್ನಾಗಿ ಮಾಡಿಕೊಂಡರು. ಆದರೆ, ಡಾ^. ಕಬ್ಬೂರರ ಒತ್ತಾಯದ ಮೇರೆಗೆ ಜೋಶಿಯವರು ಮತ್ತೆ ಕರ್ನಾಟಕ ಹಾಯ್‍ಸ್ಕೂಲಿಗೆ ಮರಳಿದರು. ೧೯೫೯ರಲ್ಲಿ ಜೋಶಿಯವರು ಮುಖ್ಯಾಧ್ಯಾಪಕರಾಗಿ ನಿಯುಕ್ತರಾದರು. ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಶಾರೀರಕ ಹಾಗೂ ನೈತಿಕ ಹೆಗ್ಗಳಿಕೆಯನ್ನು ತರಲು ಜೋಶಿ ಮಾಸ್ತರರು ಅಕ್ಷರಶ: ಹಗಲಿರುಳು ದುಡಿದರು.

ಕೆ.ಇ.ಬೋರ್ಡ ಸಂಸ್ಥೆಯ ಮೂರು ಶಾಲೆಗಳಾದ ಕರ್ನಾಟಕ ಹಾಯ್‍ಸ್ಕೂಲ, ವಿದ್ಯಾರಣ್ಯ ಹಾಯ್‍ಸ್ಕೂಲ ಹಾಗೂ ಕೆ.ಇ.ಬೋರ್ಡ ಹಾಯ್‍ಸ್ಕೂಲ ಇವು ಒಂದು ಘೋಷವಾಕ್ಯವನ್ನು ಹೊಂದಿವೆ:
ತೇಜಸ್ವಿನಾವಧೀತಮಸ್ತು.”

ಈ ವಾಕ್ಯದ ಪೂರ್ಣಪಾಠ ಹೀಗಿದೆ:
“ ಓಂ ಸಹನಾವವತು, ಸಹನೌ ಭುನಕ್ತು, ಸಹವೀರ್ಯಮ್ ಕರವಾವ ಹೈ
ತೇಜಸ್ವಿನಾವಧೀತಮಸ್ತು, ಮಾ ವಿದ್ವಿಷಾವಹೈ, ಓಂ ಶಾಂತಿ:, ಶಾಂತಿ:, ಶಾಂತಿ:”

ಉಪನಿಷತ್ತಿನ ಈ ವಾಕ್ಯವನ್ನು ಗುರುವು ತನ್ನ ಶಿಷ್ಯನಿಗೆ ಹೇಳುತ್ತಿದ್ದಾನೆ:
“ನಾವಿಬ್ಬರೂ ಕೂಡಿಯೇ ಕಲಿಯೋಣ,
ನಾವಿಬ್ಬರೂ ಕೂಡಿಯೇ ಸೇವಿಸೋಣ,
ನಾವಿಬ್ಬರೂ ಕೂಡಿಯೇ ಶಕ್ತಿವಂತರಾಗೋಣ,
ನಾವಿಬ್ಬರೂ ಕೂಡಿಯೇ ತೇಜಸ್ವಿಗಳಾಗೋಣ,
ನಾವು ಪರಸ್ಪರರನ್ನು ದ್ವೇಷಿಸುವದು ಬೇಡ,
ನಮ್ಮಿಬ್ಬರ ಮನಸ್ಸು ಶಾಂತವಾಗಿರಲಿ!”

ಈ ಘೋಷವಾಕ್ಯವೇ ಜೋಶಿ ಮಾಸ್ತರರ ಬಾಳಿನ ಧ್ಯೇಯವಾಕ್ಯವಾಗಿತ್ತು. ಇದರಂತೆಯೇ ಬಾಳಿದ ಅವರ ಮುಖದಲ್ಲಿ ಯಾವಾಗಲೂ ಶಿಸ್ತು, ಮಮತೆ ಹಾಗೂ ತೇಜಸ್ಸು ಎದ್ದು ಕಾಣುತ್ತಿದ್ದವು.

ಜೋಶಿಯವರು ಸುಮಾರು ೯೦ ವರ್ಷಗಳವರೆಗೆ ಜೀವಿಸಿದರು. ವೃದ್ಧಾಪ್ಯ ಬಂದಂತೆ ಅವರ ಸ್ಮರಣಶಕ್ತಿ ಕುಂದಲಾರಂಭಿಸಿತು. ತಮ್ಮ ಪ್ರೀತಿಯ ವಿದ್ಯಾರ್ಥಿಗಳ ಗುರುತೂ ಅವರಿಗೆ ಆಗುತ್ತಿರಲಿಲ್ಲ. ಅವರ ಆರ್ಥಿಕ ಚೈತನ್ಯ ಮೊದಲಿನಿಂದಲೂ ಕಡಿಮೆಯೇ ಇತ್ತು. ಸ್ವಾತಂತ್ರ್ಯದ ನಂತರ ಕೆಲವು ಹೋರಾಟಗಾರರು ಸರಕಾರದ ಸವಲತ್ತುಗಳನ್ನು ಪಡೆದರು. ಕೆಲವರು ಗಾಂಧಿ ಟೋಪಿಯನ್ನು ಭಾರತಕ್ಕೇ ತೊಡಿಸಿದರು. ಜೋಶಿಯವರು ಮಾತ್ರ ಶಿಕ್ಷಣವೃತ್ತಿಗೇ ತಮ್ಮನ್ನು ಅರ್ಪಿಸಿಕೊಂಡರು. ನಿವೃತ್ತಿಯ ನಂತರವೂ ಅವರು ಅಧ್ಯಾಪನ ಮಾಡುತ್ತಲೇ ಇದ್ದರು.
“ನಿವೃತ್ತನಾದ ಮೇಲೆ, ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಾಗದಿದ್ದರೆ, ನಾನು ಕರ್ನಾಟಕ ಹಾಯ್‍ಸ್ಕೂಲಿನ ಅಂಗಳದ ಕಸ ಗುಡಿಸುತ್ತ ಬದುಕು ಸವೆಸುತ್ತೇನೆ” ಎಂದು ಅವರು ಒಮ್ಮೆ ಹೇಳಿದ್ದರು.

ನಾನು ಕರ್ನಾಟಕ ಹಾಯ್‍ಸ್ಕೂಲಿನಲ್ಲಿ ಎರಡು ವರ್ಷಗಳ ಮಟ್ಟಿಗೆ ವಿದ್ಯಾರ್ಥಿಯಾಗಿದ್ದಾಗ, ಜೋಶಿ ಮಾಸ್ತರರು ನಮ್ಮ ಮುಖ್ಯಾಧ್ಯಾಪಕರಾಗಿದ್ದರು.
..................................................................................
[ಟಿಪ್ಪಣಿ:
ಮಾಧ್ಯಮಿಕ ಶಾಲೆಯಲ್ಲಿ ನಾವು ವಿದ್ಯಾರ್ಥಿಗಳಾಗಿದ್ದಾಗ ‘ಬೋಸ್ಟನ್ ಟೀ ಪಾರ್ಟಿ’ಯ ಬಗೆಗೆ ನಮಗೆ ರೋಮಾಂಚಕವಾಗಿ ಕಲಿಸಲಾಗುತ್ತಿತ್ತು. ಬ್ರಿಟನ್ ವಿರುದ್ಧ ಹೋರಾಡಲು ಅಮೆರಿಕನ್ ಜನತೆಗೆ ಹೇಗೆ ಈ ಘಟನೆ ಪ್ರೇರಕವಾಯಿತು ಎನ್ನುವದನ್ನು ಹೇಳಿಕೊಡಲಾಗುತ್ತಿತ್ತು.
ಬ್ರಿಟನ್ನಿನಿಂದ ಬಂದ ಚಹ ತುಂಬಿದ ಹಡಗುಗಳಲ್ಲಿಯ ಚಹದ ಪೆಟ್ಟಿಗೆಗಳನ್ನು ಬಂಡುಕೋರ ಅಮೆರಿಕನ್ ಯುವಕರು ಸಮುದ್ರದಲ್ಲಿ ಬಿಸಾಕಿದ ಕತೆಯಿದು.
ಈ ಘಟನೆಗಿಂತ ನೂರು ಪಟ್ಟು ರೋಮಾಂಚಕವಾದ ‘ಅಗ್ನಿಸಂದೇಶ’ಕ್ಕೆ ನಮ್ಮ ಇತಿಹಾಸದಲ್ಲಿ ಸ್ಥಾನವಿಲ್ಲ ಎನ್ನುವದು ವಿಚಿತ್ರ ಆದರೂ ಸತ್ಯ!]

Tuesday, May 6, 2008

ಶಂ. ಬಾ. ಜೋಶಿ

ಶಂ. ಬಾ. ಜೋಶಿಯವರು ಕರ್ನಾಟಕದ ಅದ್ವಿತೀಯ ಸಂಶೋಧಕರು ಹಾಗು ಸಾಂಸ್ಕೃತಿಕ ಚಿಂತಕರು.

ಶಂಕರ ಬಾಳದೀಕ್ಷಿತ ಜೋಶಿಯವರು ಬೆಳಗಾವಿ ಜಿಲ್ಲೆಯಲ್ಲಿಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ (-- ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾದ ‘ರೇಣುಕಾಸಾಗರ’ ಆಣೆಕಟ್ಟಿನ ಹಿನ್ನೀರಿನಲ್ಲಿ ಈ ಗ್ರಾಮ ಈಗ ಮುಳುಗಿ ಹೋಗಿದೆ.--) ಜನಿಸಿದರು.

ಸಂಶೋಧನೆ ಹಾಗು ಸಾಂಸ್ಕೃತಿಕ ಚಿಂತನೆಯ ಕ್ಷೇತ್ರಗಳನ್ನು ತಮ್ಮ ಪ್ರತಿಭೆಯಿಂದ ಬೆಳಗಿದ ಶಂ.ಬಾ.ಜೋಶಿ ಹಾಗು ವರಕವಿ ದ.ರಾ. ಬೇಂದ್ರೆ ಇವರೀರ್ವರೂ ೧೮೯೬ರ ಜನೆವರಿ ತಿಂಗಳಿನಲ್ಲಿಯೇ ಜನಿಸಿದ್ದು ಒಂದು ಯೋಗಾಯೋಗ. ಶಂ.ಬಾ. ಜೋಶಿಯವರು ಜನೆವರಿ ೪ರಂದು ಜನಿಸಿದರೆ, ಜನೆವರಿ ೩೧ರಂದು ಜನಿಸಿದ ದ.ರಾ. ಬೇಂದ್ರೆ ೨೭ದಿನಗಳಿಂದ ಚಿಕ್ಕವರು. ರಾಷ್ಟ್ರೀಯ ಮನೋಭಾವದ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿಯೇ (--ಆನಂತರದ ‘ವಿದ್ಯಾರಣ್ಯ ಹಾಯ್ ಸ್ಕೂಲು’--) ಇಬ್ಬರೂ ಸೇವೆ ಸಲ್ಲಿಸಿದ್ದರು. ಇಬ್ಬರೂ ಬಡತನದಲ್ಲಿ ಬೆಂದವರು. ಇಲ್ಲಿಗೇ ಇವರೀರ್ವರ ಸಾಮ್ಯ ಮುಗಿದಂತೆ. ಉಳಿದದ್ದೆಲ್ಲ ವೈಷಮ್ಯದ ಕತೆ. ತಮ್ಮ ಕೊನೆಗಾಲದವರೆಗೂ ಈ ದಿಗ್ಗಜಗಳು ಧಾರವಾಡದ ನೆಲದಲ್ಲಿ ದೀರ್ಘ ಹೋರಾಟವನ್ನೇ ನಡೆಯಿಸಿದವು. ಬೇಂದ್ರೆಯವರ ಕೊನೆಯ ದಿನಗಳಲ್ಲಿ, ಶಂ.ಬಾ., ಬೇಂದ್ರೆಯವರನ್ನು ಭೆಟ್ಟಿಯಾದರು. ವೈಚಾರಿಕ ಕುರುಕ್ಷೇತ್ರದಲ್ಲಿ ಗದಾಯುದ್ಧವನ್ನು ನಡೆಸಿದ ಈ ಮಲ್ಲರು ಕೊನೆಗಾಲದಲ್ಲಿ ಶಾಂತಿಮಂತ್ರವನ್ನು ಪಠಿಸಿದರು.

ಶಂ. ಬಾ. ಜೋಶಿಯವರು ಗುರ್ಲಹೊಸೂರಿನಲ್ಲಿಯೇ ಕನ್ನಡ ಏಳನೆಯ ಇಯತ್ತೆಯವರೆಗೆ ಶಾಲೆ ಕಲಿತರು. ತಂದೆಯಿಂದ ಅವರಿಗೆ ವೇದಶಿಕ್ಷಣ ದೊರೆತಿತ್ತು. ತಾಯಿಯಿಂದ ಸಂಗೀತಜ್ಞಾನವನ್ನು ಪಡೆದಿದ್ದರು. ೧೯೧೪ರಲ್ಲಿ ಮಲಪ್ರಭಾ ನದಿಗೆ ಬಂದ ಮಹಾಪೂರದಿಂದಾಗಿ ಇಡೀ ಹಳ್ಳಿಯೇ ಜಲಮಯವಾಗಿ ನಾಶವಾಯಿತು. ಚಿಕ್ಕಂದಿನಲ್ಲಿಯೆ ತಂದೆಯನ್ನು ಕಳೆದುಕೊಂಡಿದ್ದ ಅವರ ಮನೆಯವರೆಲ್ಲ ಪುಣೆಗೆ ಹೋದರು. ಅಲ್ಲಿ ಇವರ ಅಣ್ಣ ಭಾನು ದೀಕ್ಷಿತ ಜೋಶಿಯವರು ಪೌರೋಹಿತ್ಯ ಮಾಡುತ್ತಿದ್ದರು. ಇವರೂ ಅಲ್ಲಿಯೇ ಪೌರೋಹಿತ್ಯದಲ್ಲಿ ಮುಂದುವರಿಯಬಹುದಾಗಿತ್ತು. ಆದರೆ ಧಾರವಾಡಕ್ಕೆ ಮರಳಿದ ಜೋಶಿಯವರು ಶಿಕ್ಷಕರ ಟ್ರೇನಿಂಗ ಕಾಲೇಜ ಸೇರಿದರು. ೧೯೨೦ರಲ್ಲಿ ಚಿಕ್ಕೋಡಿಯಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದರು. ಮಹಾತ್ಮಾ ಗಾಂಧೀಜಿಯವರು ಆ ಸಮಯದಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಅವರೊಡನೆ ಶಂ.ಬಾ. ಮಾಡಿದ ಸಂಚಾರದ ಫಲವಾಗಿ ಉಗರಗೋಳವೆಂಬ ಕುಗ್ರಾಮಕ್ಕೆ ವರ್ಗಾವಣೆಯಾಯಿತು. ಅಲ್ಲಿ ಕೆಲ ಕಾಲ ಕಳೆದ ಶಂ.ಬಾ. ಕೆಲಸಕ್ಕೆ ರಾಜೀನಾಮೆ ಕೊಟ್ಟು, ಧಾರವಾಡಕ್ಕೆ ಮರಳಿದರು. ‘ಕರ್ನಾಟಕ ವೃತ್ತ’, ‘ಧನಂಜಯ’, ‘ಕರ್ಮವೀರ’ ಮೊದಲಾದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಕಾಲ ಲೇಖನವ್ಯವಸಾಯ ಮಾಡಿದರು. ೧೯೨೬-೨೭ರ ಅವಧಿಯಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿದರು. ೧೯೨೮ರಿಂದ ೧೯೪೬ರವರೆಗೆ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿ
(--ಆಬಳಿಕ ಅದು ‘ವಿದ್ಯಾರಣ್ಯ ಹಾಯ್ ಸ್ಕೂಲ್ ಆಯಿತು.’--) ಸೇವೆ ಸಲ್ಲಿಸಿ ನಿವೃತ್ತರಾದರು.

ಶಂ.ಬಾ. ಅವರು ಶ್ರೇಷ್ಠ ಶಿಕ್ಷಕರೂ ಆಗಿದ್ದರು. ತಮ್ಮ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಅವರು ಹೂಡಿಕೊಂಡ ಯೋಜನೆಗಳು ಅನೇಕ. ತಾವೇ ಬಡತನದಲ್ಲಿದ್ದಾಗಲೂ ಸಹ, ತಮ್ಮ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಸಹ ಅವರು ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ವೈಚಾರಿಕತೆಯನ್ನು ಬೆಳೆಯಿಸುವದಕ್ಕೆ ಅವರು ಮಹತ್ವ ನೀಡುತ್ತಿದ್ದರು. ಅವರ ವಿದ್ಯಾರ್ಥಿಯಾಗಿದ್ದವರು (ಶ್ರೀ ವ್ಹಿ. ಬಿ. ಕುಲಕರ್ಣಿ) ಸಮಾರಂಭವೊಂದರಲ್ಲಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರಂತೆ. ತಕ್ಷಣವೇ ಶಂ.ಬಾ. ಸಿಡಿನುಡಿದರು : “ಇನ್ನೂ ಎಷ್ಟು ದಿವಸ ಗುಲಾಮಗಿರಿಯೊಳಗ ಇರಾವಪಾ ನೀ?”

ಶಂ. ಬಾ. ಜೋಶಿಯವರ ಹೆಂಡತಿ ಪಾರ್ವತಿ. ಇವರಿಗೆ ಮೂವರು ಮಕ್ಕಳು; ಮೊದಲನೆಯ ಹಾಗು ಕೊನೆಯ ಮಕ್ಕಳು ಗಂಡುಮಕ್ಕಳು, ಹೆಣ್ಣುಮಗಳು ನಡುವಿನವಳು. ಗಂಡು ಮಕ್ಕಳಿಬ್ಬರು ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಧರರು. ಶಂ.ಬಾ. ಜೋಶಿ ಕೇವಲ ೭ನೆಯ ಇಯತ್ತೆಯವರೆಗೆ ಕಲಿತು, ಶಿಕ್ಷಕರ ತರಬೇತಿ ಪಡೆದವರು. ತಮ್ಮ ೨೪ನೆಯ ವಯಸ್ಸಿನಲ್ಲಿ ಸ್ವಂತ ಪ್ರಯತ್ನದಿಂದ ಇಂಗ್ಲಿಶ್ ಕಲಿತರು.

ಶಂ. ಬಾ. ಜೋಶಿಯವರು ೨೮ ಸಪ್ಟಂಬರ ೧೯೯೧ರಂದು ನಿಧನರಾದರು. ಮಾರನೆಯ ದಿನ ಅವರ ಹೆಂಡತಿ ಶಂ.ಬಾ.ರನ್ನು ಹಿಂಬಾಲಿಸಿ ನಡೆದರು.
**********************************************

ಶಂ. ಬಾ. ಜೋಶಿಯವರ ಸಾಹಿತ್ಯ ಹಾಗು ಸಂಶೋಧನೆ:

ರಾಷ್ಟ್ರೀಯ ಮನೋಭಾವದ ಶಂ.ಬಾ. ಮೊದಲಲ್ಲಿ ಲೋಕಮಾನ್ಯ ತಿಲಕ ಹಾಗೂ ಅರವಿಂದ ಮಹರ್ಷಿಗಳ ಪ್ರಭಾವಕ್ಕೆ ಒಳಗಾದವರು. ಅವರ ಮೊದಲ ಕೃತಿ, “ ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು”, ೧೯೨೧ರಲ್ಲಿ ಪ್ರಕಟವಾಯಿತು. ೧೯೩೨ರಲ್ಲಿ “ಟಿಳಕ ಕಥಾಮೃತಸಾರ ” ಹೊರಬಂದಿತು. (ತಮ್ಮ ವಿಚಾರಗಳ ಮಾರ್ಪಾಟಿನೊಂದಿಗೆ ಶಂ.ಬಾ.ರವರು ಅರವಿಂದರನ್ನು ಟೀಕಿಸಿದ್ದಾರೆ. ಶಂ.ಬಾ. ಅವರ ನಿಷ್ಠೆ ವ್ಯಕ್ತಿಗಲ್ಲ , ತಾವು ಕಂಡ ಸತ್ಯಕ್ಕೆ ಮಾತ್ರ.)

೧೯೧೭ರಲ್ಲಿ ಕರ್ನಾಟಕ ಕುಲಪುರೋಹಿತರೆಂದು ಹೆಸರಾಂತ ಆಲೂರು ವೆಂಕಟರಾಯರ ಕೃತಿ “ ಕರ್ನಾಟಕದ ಗತವೈಭವ ” ಶಂ.ಬಾ.ರನ್ನು ತೀವ್ರ ಚಿಂತನೆಗೆ ಈಡುಮಾಡಿತು. ‘ಕಾವೇರಿಯಿಂದಮಾ ಗೋದಾವರಿವರೆಗಿರ್ದ’ ಈ ನಾಡು ಈಗೇಕೆ ಕುಗ್ಗಿ ಹೋಗಿದೆ ಎನ್ನುವ ಪ್ರಶ್ನೆ ಅವರನ್ನು ಸಂಶೋಧನಾ ಕ್ಷೇತ್ರಕ್ಕೆ ಎಳೆಯಿತು. ಅಲ್ಲಿಯವರೆಗೂ ಪ್ರಾಚ್ಯ ಸಂಶೋಧನೆ ಎಂದರೆ ಶಾಸನಗಳ , ನಾಣ್ಯಗಳ ಹಾಗು ಪ್ರವಾಸಿಕರ ಗ್ರಂಥಗಳ ಪರಿಶೀಲನೆಗೆ ಪರಿಮಿತವಾಗಿತ್ತು. ಶಂ.ಬಾ.ಜೋಶಿ, ಭಾರತದಲ್ಲಿಯೇ ಮೊದಲ ಬಾರಿಗೆ (--ಹಾಗು simultaneously in Europe--), ಭಾಷೆಯಲ್ಲಿಯ ಅಂತಃಸ್ಥ ಕುರುಹಗಳ ಮೂಲಕ, ಭಾಷೆಯಲ್ಲಿಯ ಬದಲಾವಣೆಯ ಮೂಲಕ ಇತಿಹಾಸವನ್ನು ಅರಿಯುವ ಪ್ರಯತ್ನವನ್ನು ಮಾಡಿದರು. ಇದರ ಜೊತೆಜೊತೆಗೇ ಭಾಷಾವಿಜ್ಞಾನ, ಮಾನವಶಾಸ್ತ್ರ, ವಂಶವಿಜ್ಞಾನ, ಪುರಾಣಶಾಸ್ತ್ರ ಮೊದಲಾದ ಸಂಬಂಧಿತ ಶಾಸ್ತ್ರಗಳ ತಿಳುವಳಿಕೆಯ ಅವಶ್ಯಕತೆಯನ್ನು ಅವರು ಅರಿತುಕೊಂಡರು. ಕನ್ನಾಡಿಗರ (=ಕನ್ನಡಿಗರ=ಕನ್ನರ) ಮೂಲನೆಲೆಯನ್ನು ಹುಡುಕುತ್ತ, ಭಾರತದ ಈಶಾನ್ಯ ದಿಕ್ಕನ್ನು ತಲುಪಿ ಬಂದರು. (ಇವರ ಸಂಶೋಧನಾ ಕಾರ್ಯಕ್ಕೆ ಯಾವ ಸಂಸ್ಥೆಯ ಸಹಾಯವೂ ಇರಲಿಲ್ಲವೆನ್ನುವದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.) ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನಗಳ ಭಾಗವಾದ ‘ಖಾನದೇಶ’ವು ಮೂಲತಃ ಕನ್ನಡಿಗರ(=ಕನ್ನರ) ದೇಶವೆನ್ನುವದನ್ನು ಸಿದ್ಧ ಮಾಡಿದರು. ಹಿಮಾಲಯದ ಅಡಿಯಲ್ಲಿದ್ದ ಕನ್ನಡಿಗರ ಎಡೆಗಳನ್ನು ಕನ್ನಡಿಗರ ಕಣ್ಣೆದುರಿಗೆ ಹಿಡಿದರು. ಕನ್ನರ ನಾಡು ಕಂನಾಡು, ಕನ್ನರ ನುಡಿ ಕಂನುಡಿ ಎನ್ನುವದನ್ನು ತೋರಿಸಿದರು. ಇದು ಶಂ.ಬಾ.ರ ಸಂಶೋಧನಾ ಕಾರ್ಯದ ಮೊದಲ ಮಜಲು. (“ಕಣ್ಮರೆಯಾದ ಕನ್ನಡ, ಎಡೆಗಳು ಹೇಳುವ ಕಂನಾಡ ಕತೆ, ಮಹಾರಾಷ್ಟ್ರದ ಮೂಲ”)

ಇಷ್ಟೆಲ್ಲ ವಿಸ್ತಾರವಾಗಿ ಹರಡಿದ್ದ ಕಂನಾಡು ಕುಗ್ಗಿ ಹೋಗಲು ಕಾರಣವನ್ನು ಹುಡುಕುತ್ತಿದ್ದಾಗ ಅವರು ವೇದ ಹಾಗು ಪುರಾಣಗಳನ್ನು ಸಂಶೋಧಕನ ದೃಷ್ಟಿಯಿಂದ ಅಧ್ಯಯನ ಮಾಡಿದರು. ವೇದಗಳಲ್ಲಿ ನಿರ್ದಿಷ್ಟರಾದ ಜನಾಂಗಗಳ ಅಭ್ಯಾಸವನ್ನು ಅವರು ಕೈಗೆತ್ತಿಕೊಂಡರು. ಇದು ಶಂ.ಬಾ. ಅವರನ್ನು ಸಂಸ್ಕೃತಿ-ಸಂಶೋಧನೆಯ ಹಾದಿಯಲ್ಲಿ ಒಯ್ದಿತು. ಇದು ಅವರ ಸಂಶೋಧನಾ ಕಾರ್ಯದ ಎರಡನೆಯ ಮಜಲು.

ವೇದಗಳಲ್ಲಿ ನಿರ್ದಿಷ್ಟರಾದ ಅವೈದಿಕ ಜನಾಂಗಕ್ಕೆ(=ಪತ್ತಿ), ಶಂ.ಬಾರವರು ‘ಹಟ್ಟಿಕಾರ’ರೆನ್ನುವ ಹೆಸರನ್ನು ಕೊಟ್ಟರು. ಈ ಹಟ್ಟಿಕಾರರೇ ಹೇಗೆ ಕಂದಮಿಳರಾದರು , ಮತ್ತು ಪಂಚದ್ರಾವಿಡರಾದರು ಎನ್ನುವದನ್ನು ತೋರಿಸಿದರು. (“ಕರ್ಣಾಟಸಂಸ್ಕೃತಿಯ ಪೂರ್ವಪೀಠಿಕೆ”).

ವೇದಾಧ್ಯಯನ ಹಾಗೂ ಜನಾಂಗೀಯ ಅಧ್ಯಯನವು ಶಂ.ಬಾ. ಅವರನ್ನು ಸಾಂಸ್ಕೃತಿಕ ಚಿಂತನೆಗೆ ಹಚ್ಚಿತು. ಈ ಎಳೆಯನ್ನು ಹಿಡಿದುಕೊಂಡು ಹೊರಟ ಶಂ.ಬಾ. ವೇದಗಳಲ್ಲಿಯ ಚಿಂತನೆಯು ‘ಜೀವನ- ಪ್ರವೃತ್ತಿ’ಯಿಂದ ‘ಜೀವನ-ನಿವೃತ್ತಿ’ಗೆ ಬದಲಾದ ರೀತಿಯನ್ನು ಬಿಡಿಸಿ ತೋರಿಸಿದರು. ಸಮಷ್ಟಿ-ಪ್ರಜ್ಞೆಯ ಬದಲಾಗಿ ವ್ಯಷ್ಟಿ-ಮೇಲ್ಮೆಯ ತತ್ವವನ್ನು ಆಲಂಗಿಸಿಕೊಂಡ ಹಿಂದುಗಳ ಸಮಾಜವು ಹಾಳಾದ ರೀತಿಯನ್ನು ಶಂ.ಬಾ. ವಿವರಿಸಿದರು. (“ಪ್ರವಾಹಪತಿತರ ಕರ್ಮ ಹಿಂದೂ ಎಂಬ ಧರ್ಮ, ಬುಧನ ಜಾತಕ, ಬಿತ್ತಿದ್ದನ್ನು ಬೆಳಕೊ ”).

ಶಂ.ಬಾ. ಅವರು ಪುರಾಣ-ಸಂಕೇತ ಹಾಗು ಭಾಷಾ-ಸಂಕೇತಗಳನ್ನು ವಿಶ್ಲೇಷಿಸಿ ತಮ್ಮ ಪ್ರಮೇಯಗಳನ್ನು ಬರೆದಿದ್ದಾರೆ. ಅವರ ಲೇಖನಗಳೂ ಸಹ ಈ ಸಾಂಕೇತಿಕ ಭಾಷೆಯಲ್ಲಿಯೇ ಇರುವದರಿಂದ, ಅವುಗಳನ್ನು ಅನುಸರಿಸುವದು ಸುಲಭವಾಗುವದಿಲ್ಲ. ಅಷ್ಟೇ ಏನು, ಅವು ತಪ್ಪಾಗಿಯೂ ಅರ್ಥೈಸಲ್ಪಟ್ಟವೆ. “ಋಗ್ವೇದಸಾರ : ನಾಗಪ್ರತಿಮಾ ವಿಚಾರ ” ಇದು ಶಂ.ಬಾ.ರವರ ಪ್ರಖ್ಯಾತ ಸಂಶೋಧನಾ ಗ್ರಂಥ. ಋಗ್ವೇದದಲ್ಲಿಯ ಜೀವನ್ಮುಖಿ ತತ್ವಗಳು ಮೃತ್ಯುಮುಖಿ ತತ್ವವಾಗಿ ಬದಲಾಗಿದ್ದನ್ನು ಅವರು ಸಾಧಾರವಾಗಿ ತೋರಿಸಿದ್ದಾರೆ. ಭಗವದ್ಗೀತೆಯನ್ನು ಅವರು ‘ಕಣ್ಕಟ್ಟು’ ಎಂದು ಬಣ್ಣಿಸಿದ್ದಾರೆ. ವೈವಸ್ವತ ಮನುವಿನ ಧರ್ಮವು ಸ್ವಯಂಭೂ ಮನುವಿನ ಧರ್ಮವಾಗಿ ಬದಲಾಯಿತು ಎಂದು ಮರುಗಿದ್ದಾರೆ. ಈ ರೀತಿಯಾಗಿ ಅವರೂ ಸಹ ವೈದಿಕ ಸಂಕೇತಗಳನ್ನೇ ಬಳಸಿದ್ದು , ಓದುಗರಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗಿದೆ. ಸತ್ಯಕ್ಕೆ ಅಂಟಿಕೊಂಡ ಈ ನಿಷ್ಠುರ ಸಂಶೋಧಕನನ್ನು ಅನೇಕರು ಪಾಷಂಡಿ ಎಂದು ತಪ್ಪಾಗಿ ತಿಳಿದಿದ್ದಾರೆ.

ಶಂ.ಬಾ. ಕೇವಲ ಶ್ರೇಷ್ಠ ಸಂಶೋಧಕರಷ್ಟೇ ಅಲ್ಲ , ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಚಿಂತಕರೂ ಅಹುದು. ಅಂತೆಯೆ ಪಾ.ವೆಂ. ಆಚಾರ್ಯರು ಶಂ.ಬಾ. ಜೋಶಿಯವರನ್ನು ಬಣ್ಣಿಸಿದ ಬಗೆ ಅತ್ಯಂತ ಸಮಂಜಸವಾಗಿದೆ:
ಶಂ. ಬಾ. ಜೋಶಿಯವರು ಬೆಳಕಿನ ಬೆನ್ನುಹತ್ತಿದ ಸಂಶೋಧಕರು.”


ಶಂ.ಬಾ. ಕೃತಿಗಳು:
೧) ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು (೧೯೨೧)
೨) ಟಿಳಕ ಕಥಾಮೃತಸಾರ (೧೯೩೨)
೩) ಕಣ್ಮರೆಯಾದ ಕನ್ನಡ (೧೯೩೩)
೪) ಮಹಾರಾಷ್ಟ್ರದ ಮೂಲ (೧೯೩೪)
೫) ಕರ್ನಾಟಕದ ವೀರ ಕ್ಷತ್ರಿಯರು (೧೯೩೬)
೬) ಕಂನುಡಿಯ ಹುಟ್ಟು ಅಥವಾ ನಿರುಕ್ತ (೧೯೩೭)
೭) ಕನ್ನಡದ ನೆಲೆ (೧೯೩೯)
೮) ಶಿವರಹಸ್ಯ ಅಥವಾ ವೇದದಲ್ಲಿ ಕಾಣುವ ವೀರಶೈವ ಮತದ ಬೇರುಗಳು (೧೯೩೯)
೯) ರೂಢಿ ಹಾಗು ಭಾವಿಕ ಕಲ್ಪನೆಗಳು (೧೯೪೦)
೧೦) ದಾರಿಯ ಬುತ್ತಿ (೧೯೪೩)
೧೧) ಎದ್ದೇಳು ಕನ್ನಡಿಗಾ ಅಥವಾ ಅಸಂತೋಷವೇ ಏಳ್ಗೆಯ ಮೂಲ (೧೯೪೩)
೧೨) ಕನ್ನಡ ನುಡಿಯ ಜೀವಾಳ (೧೯೪೪)
೧೩) ಅಗ್ನಿವಿದ್ಯೆ (೧೯೪೬)
೧೪) ಎಡೆಗಳು ಹೇಳುವ ಕಂನಾಡ ಕತೆ (೧೯೪೭)
೧೫) ಕರ್ಣನ ಮೂರು ಚಿತ್ರಗಳು (೧೯೪೭)
೧೬) ಯಕ್ಷಪ್ರಶ್ನೆ ಅಥವಾ ಬರಲಿರುವ ಸಮಾಜ (೧೯೪೮)
೧೭) ಸಮಾಜ ದರ್ಶನ (೧೯೪೯)
೧೮) ಸೌಂದರ್ಯ ವಿಚಾರ (೧೯೪೯)
೧೯) ಮರಾಠೀ ಸಂಸ್ಕೃತಿ : ಕಾಹೀ ಸಮಸ್ಯಾ (೧೯೫೨)
೨೦) ಹಾಲುಮತ ದರ್ಶನ (೧೯೬೦)
೨೧) ವೈವಸ್ವತ ಮನು ಪ್ರಣೀತ ಮಾನವಧರ್ಮದ ಆಕೃತಿ (೧೯೬೭)
೨೨) ಕರ್ಣಾಟ ಸಂಸ್ಕೃತಿಯ ಪೂರ್ವಪೀಠಿಕೆ (೧೯೬೭)
೨೩) ಋಗ್ವೇದ ಸಾರ : ನಾಗಪ್ರತಿಮಾ ವಿಚಾರ (೧೯೭೧)
೨೪) ಸತ್-ತ್ಯ ಮತ್ತು ಸತ್ಯ (೧೯೭೫)
೨೫) ಭಾಷೆ ಮತ್ತು ಸಂಸ್ಕೃತಿ (೧೯೭೫)
೨೬) ಪ್ರವಾಹಪತಿತರ ಕರ್ಮ ಹಿಂದೂ ಎಂಬ ಧರ್ಮ (೧೯೭೬)
೨೭) ಶ್ರೀಮತ್ ಭಗವದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ (೧೯೭೭)
೨೮) ಸಾಂಸ್ಕೃತಿಕ ಮೂಲದಲ್ಲಿನ ತಾತ್ವಿಕ ಚಿಂತನೆಗಳು (೧೯೭೮)
೨೯) ಬುಧನ ಜಾತಕ (೧೯೮೦)
೩೦) ಕಂನಾಡವರ ಸಂಸ್ಕೃತಿಯ ಗತಿ-ಸ್ಥಿತಿ (೧೯೮೧)
೩೧) ಬಿತ್ತಿದ್ದನ್ನು ಬೆಳಕೊ (೧೯೮೪)
೩೨) ಜೀವನ ಅರ್ಥಗ್ರಹಣ ಪದ್ಧತಿ (೧೯೮೬)
೩೩) ಸ್ಥಿತ್ಯಂತರ (೧೯೯೯)