Thursday, November 21, 2019

ಶ್ರಾವಣ.................ದ.ರಾ.ಬೇಂದ್ರೆ

ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು
s ಹಸಿರ ಒಳಗೆ ಹೊರಗೆ
ನೀರ ಬೆಳಕು ತುಣುಕು ಮಿಣುಕು
ಅಲ್ಲಿನಿಂದ ಬಂದೆಯಾ !
ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು ತಂದೆಯಾ ?
ಏಕೆ ಬಂದೆ ? ಏನು ತಂದೆ?
ಹೇಳೊ ಹೇಳು ಶ್ರಾವಣಾ
ನೀನು ಬಂದ ಕಾರಣಾ.

ಪಡುವ ದಿಕ್ಕಿನಿಂದ ಹರಿವ
ಗಾಳಿ-ಕುದುರೆಯನ್ನು ಏರಿ
ಪರ್ಜನ್ಯ ಗೀತವನ್ನು

ಹಾsಡುತ್ತ ಬಂದಿತು.

ಬನದ ಮನದ ಮೇಳವೆಲ್ಲ

ಸೋs ಎಂದು ಎಂದಿತು

ಬಿದಿರ ಕೊಳಲ ನುಡಿಸಿತು

ಮಲೆಯ ಹೆಳಲ ಮುಡಿಸಿತು;
ಬಳ್ಳಿ ಮಾಡ ಬಾಗಿಸಿತ್ತು
ಗಿಡಗಳ ತಲೆದೂಗಿಸಿತ್ತು
ಮರದ ಹನಿಯ ಮಣಿಗಳನ್ನು
ಅತ್ತ ಇತ್ತ ತೂರುತಾ
ಹಸಿರು ಮುರಿದ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚೆಂದ  
ಸೂಸು ಸೊಗಸು ಆನಂದ

ಗುಳ್ಳಗಂಜಿ ತೊಡವ ತೊಟ್ಟು
ಹಾವಸೆಯಾ ಉಡುಪನುಟ್ಟು
ನಗುವ ತುಟಿಯ ನನೆದ ಎದೆಯ
ತರಳ ನೀನು ಶ್ರಾವಣಾ,
ಅಳಲು ನಗಲು ತಡವೆ ಇಲ್ಲ
ಇದುವೆ ನಿನಗೆ ಆಟವೆಲ್ಲ
ಬಾರೊ ದಿವ್ಯ ಚಾರಣಾ
ತುಂಟ ಹುಡುಗ ಶ್ರಾವಣಾ.

ನೀನು ನಡೆದ ಬಂದ ಮಾಸ
ಹೆಣ್ಗೆ ತವರು ಮನೆಯ ಮಾಸ 
ಬರಿಯ ಆಟ, ಬರಿಯ ಹಾಸ
ಮಧುಮಾಸಕು ಹಿರಿದದು
ಮಧುರಮಾಸ ಸರಿಯದು.


ಮೋಡಗವಿದ ಕಣ್ಣಿನವನು
ಮುದಿಯ  ತಂದೆ ಮುಗಿಲರಾಯ
ನಿನ್ನನ್ನೆ ಬಯಸಿದಾ
ಕಣ್ಣು ಕೆನ್ನೆ ತೊಯ್ಸಿದಾ.
ಬಿಸಿಲಹಣ್ಣ ತಿಂದು ಹೊತ್ತು
ಹೆತ್ತ ನಿನ್ನ ಭೂಮಿತಾಯಿ
ಪಾಪ, ನಿನ್ನ ನೆನಸಿತು
ಎದೆಯ ಸೆರಗು ನನೆಸಿತು
ಅಂತೆ ಬಂದೆ ಬಾರಣಾ 
ಬಾರೊ ಮಗುವೆ ಶ್ರಾವಣಾ!
........................................................................................................................

ಆಷಾಢಮಾಸವು ಬಿರುಬಿಸಿಲಿನ ಕಾಲ. ಮಳೆಗಾಲ ಪ್ರಾರಂಭವಾಗುವ ಮೊದಲೇ ರೈತರು ತಮ್ಮ ಹೊಲಗಳಲ್ಲಿ ನಟ್ಟು ಕಡೆಯುವುದು, ಕಳೆ ಕೀಳುವುದು ಮೊದಲಾದವುಗಳನ್ನು ಮಾಡುತ್ತಿರುತ್ತಾರೆ. ಬಳಿಕ ಮಳೆಗಾಗಿ ಕಾಯುತ್ತ ಕೂಡುತ್ತಾರೆ. ಬೇಂದ್ರೆಯವರು ನಿಸರ್ಗದಲ್ಲಿ ಒಂದಾಗಿ ಬೆಳೆದವರು.ಋತುಮಾನಗಳನ್ನು ಅಳೆದವರು. ಅವರೂ ಸಹ ಹುಬ್ಬಿಗೆ ಕೈಇಟ್ಟು ಮೋಡಗಳನ್ನು ಎದುರು ನೋಡುತ್ತಿರುವವರೆ. ‘ರವಿ ಕಾಣದ್ದನ್ನು ಕವಿ ಕಂಡಎನ್ನುವ ಗಾದೆ ಮಾತಿದೆ, ನೋಡಿ. ಬೇಂದ್ರೆಯವರ ಒಳಗಣ್ಣಿಗೆ ಇದೀಗ ಗರ್ಭಾವಸ್ಥೆಯಲ್ಲಿರುವ, ಮುಂಗಾರುಪೂರ್ವದ ಶ್ರಾವಣಕುಮಾರನು ಕಾಣುತ್ತಿದ್ದಾನೆ. ಎಲ್ಲಿ? ನೆಲ ಹಾಗು ಮುಗಿಲುಗಳು ಸಂಧಿಸುವ ಕ್ಷಿತಿಜದಲ್ಲಿ. ( ಕ್ಷಿತಿಜರೇಷೆಯಾಚೆಗೆ ನಮ್ಮ ದೃಷ್ಟಿ ಹೋಗದಲ್ಲ!)


ಶ್ರಾವಣಕವನದಲ್ಲಿಯ ಮಳೆಯು ಆಷಾಢವನ್ನು ದಾಟಿ ಇದೀಗ ಶ್ರಾವಣದ ಹೊಸ್ತಿಲಲ್ಲಿ ಕಾಲಿಡುತ್ತಿರುವ ಕೂಸು. ಬೇಂದ್ರೆಯವರ ದಿವ್ಯದೃಷ್ಟಿಗೆ ಈ ಕೂಸಿನ ಗರ್ಭಾವಸ್ಥೆಯಿಂದ ಹಿಡಿದು ಶೈಶವದವರೆಗಿನ ಮೆಟ್ಟಿಲುಗಳು ಕಾಣುತ್ತಿವೆ. ಈ ಮೆಟ್ಟಿಲುಗಳನ್ನು ಒಂದೊಂದಾಗಿ ಕಣ್ಣಿಗೆ ಕಟ್ಟುವಂತೆ, ಕಿವಿಯಲ್ಲಿ ಅನುರಣಿಸುವಂತೆ ಬೇಂದ್ರೆಯವರು ಹಾಡಿದ್ದಾರೆ. ಕವನದ ಮೊದಲ ನುಡಿಯನ್ನು ನೋಡಿರಿ:



ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು
s ಹಸಿರ ಒಳಗೆ ಹೊರಗೆ
ನೀರ ಬೆಳಕು ತುಣುಕು ಮಿಣುಕು
ಅಲ್ಲಿನಿಂದ ಬಂದೆಯಾ !
ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು ತಂದೆಯಾ ?
ಏಕೆ ಬಂದೆ? ಏನು ತಂದೆ?
ಹೇಳೊ ಹೇಳು ಶ್ರಾವಣಾ
ನೀನು ಬಂದ ಕಾರಣಾ.

ಬೇಂದ್ರೆಯವರಿಗೆ ನೆಲ ಹಾಗು ಆಗಸಗಳು ಕೂಡುವ ಕ್ಷಿತಿಜ ಭಾಗದಲ್ಲಿ ಏನೋ ಕಾಣಿಸುತ್ತಿದೆ.  ಅದು ಬರಿ ಬಿಸಿಲುಗುದುರೆಯಾಗಿರಬಹುದೆ? ಅಲ್ಲಲ್ಲ, ಇದು ಮರೀಚಿಕೆಯಲ್ಲ; ಭೂಮಿಯಲ್ಲಿ ಹಸಿರನ್ನು ಪಸರಿಸುವ ಹಸುಗೂಸೊಂದು ನೆಲಮುಗಿಲುಗಳ ನಡುವೆ ಮಿಸುಕಾಡುತ್ತಿದೆ. (ಮಳೆಯ ಸೃಷ್ಟಿಯೂ ಸಹ ನೆಲ-ಮುಗಿಲುಗಳ ಸಂಯೋಗಗಳಿಂದಲೇ ಅಲ್ಲವೆ?)


 ಇದು ಇನ್ನೂ ಬಸಿರಿನಲ್ಲಿರುವ ಶಿಶು. ಈ ಬಸಿರಿನಲ್ಲಿ  ಗರ್ಭಜಲವಿದೆ. ಈ ಗರ್ಭಸ್ಥ ಶ್ರಾವಣದ ಒಳಗೂ ಜಲವಿದೆ, ಹೊರಗೂ ಜಲವಿದೆ. ಅದು ಭೂಮಿಪುತ್ರರಿಗೆ ಆಸೆಯ ಮಂದಬೆಳಕನ್ನು ಹೊಳಪಿಸುತ್ತಿದೆ. ಬೇಂದ್ರೆಯವರು, ‘ಶ್ರಾವಣ ಕಂದಾ, ನೀನು ಆ ಬಸಿರಿನಿಂದ ಹೊರಬರುತ್ತಿರುವೆಯಾಎಂದು ಉದ್ಗರಿಸುತ್ತಿದ್ದಾರೆ. ಅಲ್ಲಿಂದ ಹೊರಬಂದ ಶ್ರಾವಣವು ತನ್ನ ಜೊತೆಗೆ ಏನನ್ನು ತರುತ್ತಿದೆ?.........ಕುಣಿವ, ಮಣಿವ ಹಾವುಗಳನ್ನು! ಇದೇನು ಬರಿ ಕವಿಕಲ್ಪನೆಯೆ ಅಥವಾ ಇದಕ್ಕೆ ಏನಾದರೂ ಅರ್ಥವಿದೆಯೆ? (  ಹೆಡೆಯಲ್ಲಿ ಮಣಿಗಳನ್ನು ಹೊತ್ತ, ಬಳಕಾಡುತ್ತಿರುವ  ಮಿಡಿನಾಗರಗಳು ಮಿಂಚಿನ ಬಳ್ಳಿಗಳಾಗಿರಬಹುದೆ?)



ಭಾರತೀಯ ಪುರಾಣಗಳ ಮೇರೆಗೆ  ಹಾವುಗಳ ನೆಲೆ ಇರುವುದು ಪಾತಾಳದಲ್ಲಿ. ಕಡಲನೀರು ಉಗಿಯಾಗಿ ಮೇಲೆದ್ದು ಮೋಡಗಳಾಗುತ್ತದೆ. ಇವು ಕುಣಿವ, ಮಣಿವ ಹಾಗು ಹೆಡೆಯಲ್ಲಿ ಜಗಮಗಿಸುವ ಮಣಿಗಳಿರುವ ಹೆಡೆಯ ನಾಗಶಿಶುಗಳು. (ದೇವನಾಗದ ಹೆಡೆಯಲ್ಲಿ ಮಣಿ ಇರುತ್ತದೆ ಎನ್ನುವುದು ಒಂದು ಪುರಾಣಕಲ್ಪನೆ).  ನಮ್ಮ ಶ್ರಾವಣಶಿಶುವು ಇಂತಹ ಕುಣಿವ, ಮಣಿವ ಹೆಡೆಯ ನಾಗಶಿಶುಗಳನ್ನು ಪಾತಾಳದಿಂದ ಹಿಡಿದು, ಆಗಸದಲ್ಲಿ ತೇಲುವ ಮೋಡಗಳನ್ನಾಗಿ ಮಾಡಿದೆ. ಆದರೆ ಇದು ಬೇಂದ್ರೆಯವರಿಗೆ ಸಮಾಧಾನವನ್ನು ತಂದು ಕೊಟ್ಟಿದೆಯೆ? ಅವರು ಇನ್ನೂ ಸಾಶಂಕರಾಗೇ ಇದ್ದಾರೆ. (ಈ ಮೋಡಗಳು ಧರೆಗೆ ಮಳೆಯನ್ನು ತಂದಾವೆಯೆ?) 


ಏಕೆ ಬಂದೆ? ಏನು ತಂದೆ?
ಹೇಳೊ ಹೇಳು ಶ್ರಾವಣಾ
ನೀನು ಬಂದ ಕಾರಣಾ.



ಧಾರವಾಡಕ್ಕೆಮಲೆನಾಡಿನ ಸೆರಗುಎಂದು ಕರೆಯುತ್ತಾರೆ. ಇದು ಸಹ್ಯಾದ್ರಿ ಘಟ್ಟದ ಅಂಚಿನಲ್ಲಿದೆ. ಸಾಧನಕೇರಿಯ ದಿಬ್ಬಗಳ ಮೇಲೆ ನಿಂತ ಬೇಂದ್ರೆಯವರು ಪಡುವಣದಿಂದ ಬರುವ ಪರ್ಜನ್ಯವು ಮೂಡಣಕ್ಕೆ ಧಾವಿಸುವುದನ್ನು ಪ್ರತ್ಯಕ್ಷವಾಗಿ ಕಾಣಬಲ್ಲರು.


ಚಿಕ್ಕ ಮಕ್ಕಳ ಚಿನ್ನಾಟವನ್ನು ಕಂಡಾಗ ಸಮಯ, ಆನಂದಮಯಎಂದು ಯಾರಿಗಾದರೂ ಅನಿಸುವುದು ಸಹಜವೇ. ನಮ್ಮ ತರಳ ಶ್ರಾವಣ ಬರುವಾಗ ನಿಸರ್ಗವೂ ಸಹ ಉಲ್ಲಾಸದಿಂದ ಅವನ ಜೊತೆಗೆ ಚೆಲ್ಲಾಟವನ್ನು ಆಡುವುದೇ, ಅವನ ಜೊತೆಗೆ ಹಾಡುವುದೇ!

ಬನದ ಮನದ ಮೇಳವೆಲ್ಲ
ಸೋs ಎಂದು ಎಂದಿತು.
ಬಿದಿರ ಕೊಳಲ ನುಡಿಸಿತು
ಮಲೆಯ ಹೆಳಲ ಮುಡಿಸಿತು;
ಬಳ್ಳಿ ಮಾಡ ಬಾಗಿಸಿತ್ತು
ಗಿಡಗಳ ತಲೆದೂಗಿಸಿತ್ತು;
ಮರದ ಹನಿಯ ಮಣಿಗಳನ್ನ
ಅತ್ತ ಇತ್ತ ತೂರುತಾ
ಹಸಿರು ಮುರಿವ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚೆಂದ
ಸೂಸು ಸೊಗಸು ಆನಂದ.

ಶ್ರಾವಣಕುಮಾರನಿಗೆ ಪಡುವಣ ತಿಟ್ಟಿನಲ್ಲಿ ಮೊದಲು ಕಾಣಸಿಗುವುದು ಗೇರುಗಿಡಗಳ ತೋಟಗಳು. ಮಳೆಗಾಗಿ ಕಾತರಿಸುತ್ತಿರುವ ಸಾಲುಸಾಲು ಗಿಡಗಳು ಶ್ರಾವಣಕುಮಾರನನ್ನುಸೋs’ ಎಂದು ಸ್ವಾಗತಿಸದೆ ಇರುವವೆ? ( ಸೋs ಎನ್ನುವ ಅನುರಣವು ಸೋಬಾನೆ ಗೀತದಲ್ಲಿಯೂ ಇರುತ್ತದೆ. (ಸೋಬಾನೆ = ಶೋಭನ. ಇದು ಸೃಷ್ಟಿಯ ಶೋಭನ. ಸೃಷ್ಟಿ ಫಲವತಿಯಾಗುವ ಮುನ್-ಹೆಜ್ಜೆ.) ಗೇರು ಗಿಡಗಳ ಬಳಿಕ ಕಾಣುವುದು ದಟ್ಟವಾದ ಬಿದಿರು ಮಳೆ.   ಮಳೆಗಳ ನಡುವೆ ಗಾಳಿಯು ಹಾಯ್ದು ಹೋಗುವಾಗ ಕೊಳಲು ನುಡಿಸಿದಂತೆ ಕೇಳುವುದು. ಇದು ಶ್ರಾವಣಕುಮಾರನಿಗೆ ವನರಾಜಿ ನೀಡುವ ಸ್ವಾಗತಸಂಗೀತ.

ಬೇಂದ್ರೆಯವರು ಕರಾವಳಿಯ ಅಂಚಿನಲ್ಲಿರುವ ಗೇರುಗಿಡಗಳನ್ನು ಹಾಗು ಅವಕ್ಕೂ ಮೇಲಿರುವ ಬಿದಿರುಮಳೆಗಳನ್ನು ವರ್ಣಿಸಿದ ಬಳಿಕ, ಮಲೆನಾಡಿನ ಮೇಲ್ಭಾಗಕ್ಕೆ ಬರುತ್ತಾರೆ. ಇಲ್ಲಿ ಹರಡಿರುವ, ಉದ್ದೋಉದ್ದನ್ನ ತೆಂಗಿನ ಮರಗಳ ತಲೆಗಿರುವ ಎಲೆಗಳು ಹಾಗು ದಟ್ಟವಾದ ಅಡವಿಯ ಇತರ ಗಿಡಗಳು ಅವರಿಗೆ ಮಲೆಯ ಹೆರಳಿನಂತೆ ತೋರುತ್ತವೆ. ಶ್ರಾವಣಕುಮಾರನು ಈ ಹೆರಳನ್ನು ಸವರಿ ಮುನ್ನಡೆಯುತ್ತಾನೆ.

ಈ ತೆಂಗಿನ ಗಿಡಗಳನ್ನು ಸುತ್ತಿಕೊಂಡು ಹಬ್ಬಿದ ವೀಳ್ಯದೆಲೆಗಳು ಒಂದಕ್ಕೊಂದು ಹೆಣೆದುಕೊಂಡು ಲತಾಮಂಟಪಗಳನ್ನು ಅಂದರೆ ಬಳ್ಳಿಮಾಡಗಳನ್ನು ರಚಿಸಿರುತ್ತವೆಯಲ್ಲವೆ? ಅವುಗಳನ್ನು ಬಾಗಿಸುವುದು ಈ ಬಾಲನಿಗೆ ಒಂದು ಆಟ. ಆಬಳಿಕ ಅದಕ್ಕೂ ಮೇಲಿರುವ ಗಿಡಗಳು ಈ ರಾಜಕುಮಾರನಿಗೆ ತಲೆದೂಗುತ್ತವೆ. ಈ ಗಿಡಗಳಿಗೂ ಮೇಲೆ ಮರಗಳು ಬೆಳೆದಿರುತ್ತವೆ. ಅಷ್ಟು ಎತ್ತರದಲ್ಲಿರುವ ಅವುಗಳ ಮೇಲೆ ಶ್ರಾವಣಕುಮಾರನು ಹಾದು ಹೋಗುವಾಗ, ಮಳೆಯ ಹನಿಗಳನ್ನು ಈ ಮರಗಳ ಮೇಲೆ ಅಲ್ಲಲ್ಲಿ ಒಸರಿ ಹೋಗಿರುತ್ತಾನೆ. ಮರಗಳಲ್ಲಿ ತೂಗಾಡುತ್ತಿರುವ ಶಾಖೆಗಳನ್ನು ಈ ಸುಕುಮಾರ ಅಲ್ಲಾಡಿಸುತ್ತ ಹೋಗುತ್ತಾನೆ.

ಇಲ್ಲಿಯವರೆಗೆ ಈತನ ಹೆಜ್ಜೆಗಳನ್ನು ಗುರುತಿಸಿದ ಬೇಂದ್ರೆಯವರು ಇದೀಗ ಸುಕುಮಾರನ ವರ್ಣನೆಯನ್ನು ಮಾಡುತ್ತಿದ್ದಾರೆ. ಆತನ ವೇಷಭೂಷಗಳು ಹೇಗಿವೆ?
                                          
ಗುಳ್ಳಗಂಜಿ ತೊಡವ ತೊಟ್ಟು
ಹಾವಸೆಯಾ ಉಡುಪನುಟ್ಟು
ನಗುವ ತುಟಿಯ ನನೆದ ಎದೆಯ
ತರಳ ನೀನು ಶ್ರಾವಣಾ,
ಅಳಲು ನಗಲು ತಡವೆ ಇಲ್ಲ
ಇದುವೆ ನಿನಗೆ ಆಟವೆಲ್ಲ
ಬಾರೊ ದಿವ್ಯ ಚಾರಣಾ
ತುಂಟ ಹುಡುಗ ಶ್ರಾವಣಾ.

ಆತ ತೊಟ್ಟಿದ್ದು ಗುಲಗಂಜಿಯ ಒಡವೆ. ಗುಲಗಂಜಿ ಎನ್ನುವುದು ಅತಿ ಚಿಕ್ಕದಾದ ಒಂದು ಬೀಜ. ಕೆಂಪು ಬಣ್ಣದ ಬೀಜದ ತಲೆಯ ಮೇಲೊಂದು ಕಪ್ಪು ಚಿಕ್ಕೆ ಇರುತ್ತದೆ. ಗುಲಗಂಜಿ ದೊರೆಯುವುದು ಮಳೆಗಾಲದ ಪ್ರಾರಂಭದಲ್ಲಿ. ಇದು ಶ್ರಾವಣಕುಮಾರನು ತೊಡುವ ಒಡವೆ. ಇನ್ನು ಗುಲಗಂಜಿಯನ್ನು ಬೇಂದ್ರೆಯವರು ಗುಳ್ಳಗಂಜಿ ಎಂದು ಕರೆದಿದ್ದಾರೆ. ಗುಳ್ಳ ಎಂದರೆ ಕುಳ್ಳ ಅಥವಾ ಚಿಕ್ಕದಾದ. ಕಾರಣದಿಂದಲೇ ಬಂಗಾರವನ್ನು ತೂಕ ಮಾಡುವಾಗ ಗುಲಗಂಜಿಯನ್ನು ಬಳಸುತ್ತಿದ್ದರು. ನೋಡಿದಿರಾ, ಗುಲಗಂಜಿಗಿರುವ ಕಿಮ್ಮತ್ತು? (ಗುಲಗಂಜಿಯ ಬಗೆಗಿರುವ ಒಂದು ಜಾನಪದ ಒಗಟು ಹೀಗಿದೆ: ‘ಅಡಿವ್ಯಾಗಿರೋ ಗಿಡಗೋವಿಂದಾ, ನಿನಗ್ಯಾರಿಟ್ಟರೋ ಸಾದಿನ ಬಟ್ಟು?’)

ಇದೀಗ ಬೇಂದ್ರೆಯವರು ನಮ್ಮ ಸುಕುಮಾರನ ಉಡುಪಿನ ಮೇಲೆ ಕಣ್ಣು ಹಾಯಿಸುತ್ತಾರೆ. ಮಳೆಗಾಲ ಸುರುವಾದಾಗ ನೆಲ ಹಸಿಯಾಗುತ್ತದೆ. ನೀರು ನಿಂತಲ್ಲೆಲ್ಲ ಹಾವಸೆ ಬೆಳೆಯುತ್ತದೆ. ಆದುದರಿಂದ ಈ ನಮ್ಮಸುಕುಮಾರ ರಾಜಕುಮಾರ ತೊಟ್ಟಿದ್ದು ಹಾವಸೆಯ ಹಸಿರುಡುಪು.ಇನ್ನೂ ಶೈಶವದಲ್ಲಿಯೇ ಇರುವ ಈತನ ನಗುವ ತುಟಿಗಳಿಂದ ಜೊಲ್ಲು ಒಸರಿ ಈತನ ಎದೆಯನ್ನು ನನೆಸುತ್ತಿದೆ.

ಕೂಸುಗಳನ್ನು ಆಡಿಸುವ ಎಲ್ಲರಿಗೂ ಗೊತ್ತಿರುವ ವಿಷಯವೆಂದರೆ, ಕೂಸುಗಳು ಕ್ಷಣದಲ್ಲಿ ನಕ್ಕರೆ, ಮುಂದಿನ ಕ್ಷಣದಲ್ಲಿ ಅಳಲು ಪ್ರಾರಂಭಿಸುತ್ತವೆ. ಇವಕ್ಕೆಲ್ಲ ಕಾರಣ ಬೇಕಿಲ್ಲ; ಇದೆಲ್ಲ ತರಳನ ಆಟ ಮಾತ್ರ. ನಿಸರ್ಗದ ಕ್ರಿಯೆಗಳೆಲ್ಲ ಆಟವಾಗಿರುವುದು ಯಾರಿಗೆ? ------- ದೇವರಿಗೆ ಮಾತ್ರ ಅಲ್ಲವೆ? ಆದುದರಿಂದ ಬೇಂದ್ರೆಯವರು ತರಳನನ್ನುದಿವ್ಯ ಚಾರಣಾಎಂದು ಸಂಬೋಧಿಸುತ್ತಾರೆ. (ಇಡೀ ಜಗತ್ತನ್ನೇ ಸುತ್ತುಹಾಕುವ ಶ್ರಾವಣಕುಮಾರನು ದಿವ್ಯಚಾರಣನೇ ಅಲ್ಲವೆ?) ಬಾಲಕೃಷ್ಣನಂತೆ ಈ ಶ್ರಾವಣನೂ ತುಂಟ ಹುಡುಗನೇ! ಇಲ್ಲಿಯವರೆಗೆ ಭೂಮ್ಯಾಕಾಶದಲ್ಲಿ ಸುಕುಮಾರನ ಶ್ರಾವಣಪಥವನ್ನು ನಿರುಕಿಸಿದ ಬೇಂದ್ರೆಯವರು ಇದೀಗ ಕಾಲದಲ್ಲಿ ಅವನ ಪಥವನ್ನು ಗುರುತಿಸುತ್ತಿದ್ದಾರೆ.

ನೀನು ನಡೆದ ಬಂದ ಮಾಸ
ಹೆಣ್ಗೆ  ತವರುಮನೆಯ ವಾಸ
ಬರಿಯ ಆಟ, ಬರಿಯ ಹಾಸ
ಮಧುಮಾಸಕು ಹಿರಿದದು
ಮಧುರಮಾಸ ಸರಿಯದು

ಆಷಾಢ ಮಾಸವನ್ನು ನವವಧುವು ತವರುಮನೆಯಲ್ಲಿ ಕಳೆಯುತ್ತಾಳೆ. ತವರು ಮನೆಯವರು ಪ್ರೀತಿಯ ಮಗಳಿಗೆ ಏನಾದರೂ ಕೆಲಸಗಳನ್ನು ಹಚ್ಚಲು ಸಾಧ್ಯವೆ? ಅಲ್ಲಿ ಅವಳದು ಬರಿಯ ಆಟ, ಸಂತೋಷ ತುಂಬಿದ ಕುಣಿದಾಟ.  ಆದುದರಿಂದ ಇದು ಮಧುರಮಾಸ. ಮಧುರಮಾಸವು ಮಧುಮಾಸಕ್ಕಿಂತ ಅಂದರೆ ಚೈತ್ರಮಾಸಕ್ಕಿಂತ ಹೆಚ್ಚಿನದು.ಅರ್ಥಾತ್, ಪತಿಯ ಜೊತೆಗೆ ಕಳೆದ ಶೃಂಗಾರಮಾಸಕ್ಕಿಂತ ಹೆಚ್ಚಿನದು. ತವರುಮನೆಯ ಸುಖವನ್ನು ಮತ್ತೊಮ್ಮೆ ಅನುಭವಿಸುವ ಸುಕಾಲ!

ಇದೀಗ ಬೇಂದ್ರೆಯವರ ದೃಷ್ಟಿಯು ಈ ಸುಕುಮಾರನನ್ನು ಪಡೆದ ಪುಣ್ಯವಂತ ತಂದೆ ತಾಯಿಯರ ಕಡೆಗೆ ಹೋಗುತ್ತದೆ:

ಮೋಡಗವಿದ ಕಣ್ಣಿನವನು
ಮುದಿಯ  ತಂದೆ ಮುಗಿಲರಾಯ
ನಿನ್ನನ್ನೆ ಬಯಸಿದಾ
ಕಣ್ಣು ಕೆನ್ನೆ ತೊಯ್ಸಿದಾ.
ಬಿಸಿಲಹಣ್ಣ ತಿಂದು ಹೊತ್ತು
ಹೆತ್ತ ನಿನ್ನ ಭೂಮಿತಾಯಿ
ಪಾಪ, ನಿನ್ನ ನೆನಸಿತು
ಎದೆಯ ಸೆರಗು ನನೆಸಿತು
ಅಂತೆ ಬಂದೆ ಬಾರಣಾ 
ಬಾರೊ ಮಗುವೆ ಶ್ರಾವಣಾ!

ಶ್ರಾವಣಮಾಸವು ನೆಲ-ಮುಗಿಲುಗಳ ಒಲವಿನ ಫಲ ಎಂದು ಬೇಂದ್ರೆ ಮೊದಲ ನುಡಿಯಲ್ಲಿಯೇ ಹೇಳಿದ್ದಾರೆ. ಈತನ ತಂದೆ ಅನಾದಿಕಾಲದಿಂದ ಇದ್ದಂತಹ ಆಕಾಶರಾಯ. ಅಂದ ಮೇಲೆ ಈತ ಮುದಿಯನೇ. ಅವನಿಗೆ ಬೇಂದ್ರೆಮೋಡಗಣ್ಣಿನವನುಎಂದು ಹೇಳುವಾಗಆತ ಕಣ್ಣು ಮಂಜಾದ ಮುದುಕಎಂದಷ್ಟೇ ಹೇಳುವುದಿಲ್ಲ. ಆತನ ಕಣ್ಣುಗಳು ಮೋಡಗಳನ್ನು ನೋಡಲು ಹಂಬಲಿಸುತ್ತಿವೆಎಂದೂ ಸೂಚಿಸುತ್ತಾರೆ. ಈತ ಶ್ರಾವಣಕುಮಾರನನ್ನೇ ಬಯಸಿ, ಬಯಸಿ ಈತನ ಕಣ್ಣುಗಳಿಂದ ಹರಿದ ಕಣ್ಣೀರಿನಿಂದ ಈತನ ಕೆನ್ನೆಗಳು ಒದ್ದೆಯಾಗಿವೆ.  

ಬೇಸಿಗೆಯ ಬಿಸಿಲಹಣ್ಣನ್ನು ತಿಂದು, ತನ್ನ ಒಡಲಲ್ಲಿ ಕಡಲ ಬಿಸಿಆವಿಯನ್ನು ಹೊತ್ತು, ಭೂಮಿತಾಯಿಯು ಶ್ರಾವಣನಿಗೆ ಜನ್ಮ ಕೊಟ್ಟಿದ್ದಾಳೆ. ಸಹಜವಾಗಿಯೇ ಆಕೆಯು ಈತನನ್ನು ನೆನೆದು, ಈತನಿಗಾಗಿ ಹಂಬಲಿಸುತ್ತಾಳೆ. ಅವಳೆದೆಯ ಸೆರಗು ವಾತ್ಸಲ್ಯದಿಂದ ಒದ್ದೆಯಾಗುತ್ತದೆ. ತಂದೆ-ತಾಯಿಯರ ಮಮತೆಯು ಕರೆಯುತ್ತಿರುವಾಗ ಶ್ರಾವಣನು ಸುಮ್ಮನಿರಲು ಸಾಧ್ಯವೆ? ಆದುದರಿಂದಲೇ ಆತ ಆಕಾಶದಲ್ಲಿ ಹಾರುತ್ತ ಬಂದು ಭೂಮಿಗೆ ತೆಕ್ಕೆ ಹಾಯುತ್ತಾನೆ

ಶ್ರಾವಣನನ್ನು ಧ್ಯಾನಿಸಿದ  ಬೇಂದ್ರೆಯವರು ಇದೀಗ ಅವನ ಮನಸ್ಸನ್ನು ಅರಿತಿದ್ದಾರೆ. ಭೂತಾಯಿಯ ಎದೆಯಾಳದ ಹಂಬಲವಾಗಿ ಅವಳಲ್ಲಿ ಅವಿತಿದ್ದ ಶ್ರಾವಣನು, ಆವಿಯಾಗಿ, ಮೇಲೆದ್ದು, ಮುಗಿಲರಾಯನ ಮನೆಯಲ್ಲಿ ಮೇಘರೂಪವ ತಾಳಿ, ಮತ್ತೆ ಮಳೆಯ ರೂಪದಲ್ಲಿ ಭೂತಾಯಿಯನ್ನು ಅಪ್ಪಿಕೊಳ್ಳಲು ಬರುತ್ತಿದ್ದಾನೆ

ಈ ಕಾಣ್ಕೆ ಬೇಂದ್ರೆಯವರ ಮನದಲ್ಲಿ ಮೂಡಿದೆ. ಅದನ್ನು ಅರಿತ ಬೇಂದ್ರೆಯವರು ಶ್ರಾವಣನಿಗೆ ಪ್ರೀತಿಯಿಂದ ಕರೆಯುತ್ತಾರೆ:
 ಅಂತೆ ಬಂದೆ ಬಾರಣಾ, ಬಾರೊ ಮಗುವೆ ಶ್ರಾವಣಾ!’

(ಈ ಕವನವು ‘ನಾದಲೀಲೆ’ ಕವನಸಂಗ್ರಹದಲ್ಲಿದೆ.ಇಲ್ಲಿ ಶ್ರಾವಣನನ್ನು ಸುಕುಮಾರನಂತೆ ಚಿತ್ರಿಸಿದ ಬೇಂದ್ರೆಯವರು ತಮ್ಮ ‘ಶ್ರಾವಣಾ’ ಎನ್ನುವ ಕವನದಲ್ಲಿ ಶ್ರಾವಣವನ್ನು ಅಬ್ಬರದ ಭೈರವನಂತೆ ಚಿತ್ರಿಸಿದ್ದಾರೆ.)