ಹೊಸ ವರುಷದ ಕ್ಯಾಲೆಂಡರ.
ಅದೇ ಜನೇವರಿ, ಅದೇ ಡಿಸೆಂಬರ,
ಆದರೆ ಇತ್ತು ದಿನ, ದಿನಾಂಕಗಳ ಬದಲಾವಣೆ.
ಅದೇಕೊ ಮನಸ್ಸಿಗೆ ಅನ್ನಿಸಿತ್ತು
ಸುಖ, ದುಃಖಗಳ ಬದಲಾವಣೆ ಎಂದು,
ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.
ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು,
ಬಾಳಿನ ಬುತ್ತಿಯನ್ನು ಹಂಚಿಕೊಂಡ ಆ ದಿನಗಳು;
ಮುಸ್ಸಂಜೆ ಹೊತ್ತಿನಲ್ಲಿ ಮೂಡಲಿ
ಮತ್ತೊಂದು ದಿನದ ಆಶಾಕಿರಣ.
ಆಶಿಸೋಣ ಹೊಸ ವರುಷಕೆ, ಹೊಸ ಬದುಕಿನ
ಹೊಸತನ ಮೂಡಲಿ ಎಂದು.
--ರೂಪಾ ಕೆ.
ಜನೆವರಿ ೨೦೧೧
. . . . . . . . . . . . . . . . . . . . . . . . . . . . . . . . . . . . . . . . . . . .
ಹುಬ್ಬಳ್ಳಿಯ ನಿವಾಸಿಯಾದ ರೂಪಾ ಕೆ. ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ವಿವಾಹಜೀವನವನ್ನು ಪ್ರವೇಶಿಸಿದರು. ಅನವರತವೂ ಗೃಹಕೃತ್ಯಗಳಲ್ಲಿ ಮುಳುಗಿರುವ ಈ ಗೃಹಿಣಿಯ ಪ್ರತಿಭೆ ಮನೆಗೆಲಸದಲ್ಲಿಯೇ ಮುಚ್ಚಿಕೊಂಡಂತಿದೆ. ಆದರೆ, ಮೋಡ ಸರಿದಾಗ ಮಾತ್ರ ಕಣ್ಣಿಗೆ ಬೀಳುವ ಚಂದ್ರನಂತಿರುವ ಅವರ ಪ್ರತಿಭೆಯನ್ನು ಕಾಣುವ ಅವಕಾಶವೊಂದು ಇತ್ತೀಚೆಗೆ ನನಗೆ ಸುದೈವದಿಂದ ದೊರಕಿತು. ೨೦೧೧ನೆಯ ಕ್ರಿಸ್ತವರ್ಷ ಪ್ರಾರಂಭವಾದಾಗ, ಮಾಮೂಲಿಯಂತೆ ಹೊಸ ವರ್ಷದ ಕ್ಯಾಲೆಂಡರ ಒಂದನ್ನು ಅವರು ಗೋಡೆಗೆ ತೂಗು ಹಾಕುತ್ತಿದ್ದರು. ಆ ಸಮಯದಲ್ಲಿ ತಮ್ಮ ಅಂತಃಕರಣದಲ್ಲಿ ಹೊಳೆದ ಕವನವೊಂದನ್ನು ಅದೇಕೊ ಅವರು ಗೀಚಿ ಒಗೆದಿದ್ದರು. ಅಲ್ಲಿ ಇಲ್ಲಿ ಬಿದ್ದಾಡಿದ ಈ ಕವನ ಕೆಲವು ದಿನಗಳ ಹಿಂದೆ ನನ್ನ ಕೈಸೇರಿತು. ಅದನ್ನು ಓದಿದಾಗ, ಈ ಗೃಹಿಣಿಯಲ್ಲಿ ಅಡಗಿರುವ ಕವಯಿತ್ರಿಯನ್ನು ಕಂಡು ನಾನು ಚಕಿತನಾದೆ.
ಅವರ ಕವನವನ್ನು ಇಲ್ಲಿ ಸಾದರಪಡಿಸುವ ಸ್ವಾತಂತ್ರ್ಯವನ್ನು ನಾನು ಸಲಿಗೆಯ ಅಧಿಕಾರದಿಂದ ಗ್ರಹಿಸಿಕೊಂಡಿದ್ದೇನೆ.
. . . . . . . . . . . . . . . . . . . . . . . . . . . . . . . . . . . . . . . . . .
ಹಳೆಯ ವರುಷದ ಮಧ್ಯರಾತ್ರಿ ಕಳೆದು, ಹೊಸ ವರುಷ ಪ್ರಾರಂಭವಾಗುತ್ತಿದ್ದಂತೆಯೇ, “ಹೊಸ ವರ್ಷದ ಶುಭಾಶಯಗಳು, Happy New Year” ಎನ್ನುವ ಘೋಷಣೆಗಳು ಎಲ್ಲೆಡೆಯೂ ಮೊಳಗುವುವು. ಹೊಸ ವರ್ಷದ ಕ್ಯಾಲೆಂಡರನ್ನು ಗೋಡೆಗೆ ತೂಗುಹಾಕುವಾಗ ಏನೋ ಒಂದು ಸಂಭ್ರಮದ ಭಾವನೆ ಮನಸ್ಸಿನಲ್ಲಿ ಕುಣಿಯುವುದು. ಆದರೆ ಬಾಳಿನಲ್ಲಿ ಬೇವು, ಬೆಲ್ಲಗಳನ್ನು ಉಂಡ ವ್ಯಕ್ತಿಗೆ ವಾಸ್ತವತೆಯ ಅರಿವಿರುವದು. ಹೊಸ ವರ್ಷದ ಕ್ಯಾಲೆಂಡರಿನಲ್ಲಿ ಬದಲಾದದ್ದು ಕೇವಲ ದಿನ ಹಾಗು ದಿನಾಂಕಗಳು. ಅದರಂತೆಯೆ ನಮ್ಮ ಬದುಕಿನಲ್ಲಿಯೂ ಸಹ ಸುಖ ಹಾಗು ದುಃಖಗಳ ಬದಲಾವಣೆಯಾಗುವದೇ ಹೊರತು, ಸುಖದ ಸುಗ್ಗಿ ನಿರಂತರವಾಗಿರುವದಿಲ್ಲ.
ಆದರೆ ರೂಪಾ ಅವರು ಸಿನಿಕರೂ ಅಲ್ಲ, ಭ್ರಮಿಕರೂ ಅಲ್ಲ. ಅವರು ವಾಸ್ತವಪ್ರಜ್ಞೆಯುಳ್ಳ ಆಶಾವಾದಿಗಳು.
‘ಕಭೀ ತೊ ಮಿಲೇಗಿ ಬಹಾರೋಂಕೆ ಮಂಜಿಲ್, ರಾಹೀ!’ ಎನ್ನುವ ವಿಶ್ವಾಸ ಅವರಿಗಿದೆ. ಆದುದರಿಂದಲೇ ಅವರ ಹೊಸ ವರ್ಷದ ಪ್ರತೀಕ್ಷೆಯಲ್ಲಿ, ಹರುಷದ ಎಚ್ಚರದ ನಿರೀಕ್ಷೆಯೂ ಇದೆ:
“ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.”
ಬಾಳಪಥದಲ್ಲಿ ಕೆಚ್ಚಿನಿಂದ ಮುನ್ನಡೆಯಲು ಬೇಕಾಗುವದೇನು ಎನ್ನುವ ಅರಿವು ಅವರಿಗಿದೆ.ಅದನ್ನು ಅವರು ಹೇಳುವ ರೀತಿ ಹೀಗಿದೆ:
“ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು.”
ಬೇಂದ್ರೆಯವರು, “ಇರುಳ ತಾರೆಗಳಂತೆ ಬೆಳಕೊಂದು ಮಿನಗುವದು, ಕಳೆದ ದುಃಖಗಳಲ್ಲಿ ನೆನೆದಂತೆಯೆ”, ಎಂದು ತಮ್ಮ ಸಖೀಗೀತದಲ್ಲಿ ಹಾಡಿದರು.
ಆದರೆ ಈ ತಂಗಿ ಆಲೋಚಿಸುವ ಬಗೆಯೇ ಬೇರೆ. ಕಹಿದಿನಗಳ ನೆನಪೇ ಬೇಡ, ಸಿಹಿ ಸಿಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ ಎಂದು ರೂಪಾ ಆಶಿಸುತ್ತಾರೆ. ತನ್ನ ಸಹಪಯಣಿಗರೊಡನೆ ಹಂಚಿಕೊಂಡ ಕನಸುಗಳೇ ಬಾಳಿನ ಮುಂದಿನ ಪಯಣದ ಬುತ್ತಿ ಎನ್ನುವದು ರೂಪಾ ಅವರ ಭಾವನೆ. ಮುಸ್ಸಂಜೆ ಕವಿಯುತ್ತಿರುವಾಗಲೂ ಸಹ, ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಅವರು ಹಾರೈಸುತ್ತಾರೆ.
ಅದಮ್ಯ ಆಶಾವಾದಿಗಳೂ, ವಾಸ್ತವಪ್ರಜ್ಞೆಯುಳ್ಳವರೂ ಆದ ರೂಪಾ ಅವರಿಂದ ಚೆಲುವಾದ ಇನ್ನಿಷ್ಟು ಕವನಗಳನ್ನು ಆಶಿಸೋಣ.
