Tuesday, March 29, 2016

ಮೃಚ್ಛಕಟಿಕಮ್-೨ಮೃಚ್ಛಕಟಿಕಮ್ ನಾಟಕವನ್ನು ಬರೆದ ಕವಿಯು ತನ್ನನ್ನು ಶೂದ್ರಕ ಎನ್ನುವ ಬ್ರಾಹ್ಮಣ ರಾಜ ಎಂದು ಹೇಳಿಕೊಂಡಿದ್ದಾನೆ. ನಾಟಕದಲ್ಲಿ ಬರುವ ವಿಸಂಗತಿಯು ಬಹುಶಃ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಈ ಕವಿಯು ಬ್ರಾಹ್ಮಣನಾಗಿದ್ದರೆ, ಇವನ ಹೆಸರು ‘ಶೂದ್ರಕ’ ಹೇಗಾಯಿತು? ಅಲ್ಲದೆ,  ನಾಟಕದಲ್ಲಿ ರಾಜಪ್ರಭುತ್ವದ ಹಾಗು ರಾಜನ ಸಂಬಂಧಿಗಳ ಅವಹೇಳನೆ ಇದೆ. ಪ್ರಭುತ್ವದ ವಿರುದ್ಧ  ದಂಗೆ ಎದ್ದ ಬಡ ಜನತೆಯು ರಾಜನ ಕೊಲೆ ಮಾಡಿ, ಪ್ರಭುತ್ವವನ್ನು ಕಿತ್ತೆಸೆಯುತ್ತಾರೆ. ರಾಜನ ಹೆಂಡತಿಯ ತಮ್ಮನು ದುರ್ಮಾರ್ಗದಲ್ಲಿ ನಡೆಯುತ್ತಿರುತ್ತಾನೆ ಹಾಗು ರಾಜ್ಯದ ಶಾಸನಕ್ಕೆ ಕವಡೆಕಾಸಿನಷ್ಟು ಬೆಲೆ ಕೊಡುತ್ತಿರಲಿಲ್ಲ ಎನ್ನುವುದು ನಾಟಕದಲ್ಲಿಯ ಪ್ರಮುಖ ವಿಷಯವಾಗಿದೆ. ಶೂದ್ರಕನು ರಾಜನಾಗಿದ್ದರೆ, ಹೀಗೆ ಬರೆಯಬಹುದಿತ್ತೆ? ನಾಟಕದ ನಾಂದಿ ಪದ್ಯದಲ್ಲಿ ಈ   ಕವಿಯು (ರಾಜನು) ನೂರುಹತ್ತು ವರುಷ ಬದುಕಿ, ಅಗ್ನಿಪ್ರವೇಶವನ್ನು ಮಾಡಿ ದೇಹತ್ಯಾಗ ಮಾಡಿದನು ಎಂದು ಹೇಳಲಾಗಿದೆ. ತಾನು ದೇಹತ್ಯಾಗ ಮಾಡಿದ ವಿಷಯವನ್ನು ಕವಿ ತಾನೇ ಬರೆಯಬಹುದೆ? ಕವಿಗೆ ಸಂಬಂಧಿಸಿದ ಈ ಎಲ್ಲ ಹೇಳಿಕೆಗಳು ಉದ್ದೇಶಪೂರ್ವಕವಾದ ಕಾಲೆಳತಗಳು ಎಂದು ಭಾವಿಸಲು ಆಸ್ಪದ ಮಾಡಿಕೊಡುತ್ತವೆ.

ಶೂದ್ರಕನಿಗಿಂತ ಮೊದಲು ನಾಟಕಗಳನ್ನು ರಚಿಸಿದ ಭಾಸ ಮತ್ತು ಕಾಲೀದಾಸ ಮೊದಲಾದವರು ರಾಜಾಸ್ಥಾನಕ್ಕಾಗಿ ಹಾಗು ಅಂತಃಪುರವಿನೋದಕ್ಕಾಗಿ ನಾಟಕಗಳನ್ನು ರಚಿಸುತ್ತಿದ್ದರು. ಇವರ ನಾಟಕಗಳು ರಾಜನನ್ನು ಧೀರೋದಾತ್ತ ನಾಯಕನನ್ನಾಗಿ ಬಿಂಬಿಸುತ್ತಿದ್ದವು. ಮೃಚ್ಛಕಟಿಕಮ್ ನಾಟಕದಲ್ಲಿ ಬಡತನದಲ್ಲಿ ಕಾಲಯಾಪನೆ ಮಾಡುತ್ತಿರುವ ಧೀಮಂತ ಬ್ರಾಹ್ಮಣನೊಬ್ಬನು ನಾಯಕನಾಗಿದ್ದಾನೆ. ರಾಜನ ಶ್ಯಾಲಕನು (ಹೆಂಡತಿಯ ತಮ್ಮನು) ಖಳನಾಯಕನು. ನಗರದ ಖ್ಯಾತ ಗಣಿಕೆಯು ನಾಯಕಿಯು. ಎಂತಹ ವಿರೋಧಾಭಾಸ ಅಲ್ಲವೆ ಇದು?

ಭಾಸನ ನಾಟಕಗಳಲ್ಲಿ ಕೆಲವು ನಾಟಕಗಳು ಕೇವಲ ಒಂದು ಗಂಟೆಯ ನಾಟಕಗಳು. ಆತನ ‘ಸ್ವಪ್ನವಾಸವದತ್ತಾ’ ನಾಟಕವು ಆರು ಅಂಕಗಳ ನಾಟಕವಾಗಿದೆ. ಆದರೆ, ‘ಮೃಚ್ಛಕಟಿಕಮ್’ ನಾಟಕವು ಹತ್ತು ಅಂಕಗಳ ನಾಟಕವಾಗಿದೆ. ಇಷ್ಟು ದೀರ್ಘವಾದ ನಾಟಕವನ್ನು ಹಳ್ಳಿಯ ದೊಡ್ಡಾಟ, ಬಯಲಾಟಗಳಂತೆ ಇಡೀ ರಾತ್ರಿ ಆಡಬೇಕಾಗುತ್ತಿತ್ತೇನೊ? ಅರ್ಥಾತ್ ಇದರ ಪ್ರೇಕ್ಷಕರು ಜನಸಾಮಾನ್ಯರು! ಬಹುಶಃ ಈ ಎಲ್ಲ ಸಂಗತಿಗಳು ನಮಗೆ ಸೂಚಿಸುವದೇನೆಂದರೆ, ಈ ನಾಟಕವು ಆ ಸಮಯದಲ್ಲಿ ಒಂದು ವಿಭಿನ್ನವಾದ ನಾಟಕವಾಗಿತ್ತು, ಒಂದು ವ್ಯವಸ್ಥಾವಿರೋಧೀ ನಾಟಕವಾಗಿತ್ತು!

ಮೊದಲನೆಯ ಅಂಕ:
ನಾಟಕದ ಮೊದಲನೆಯ ಅಂಕದಲ್ಲಿಯೇ ನಾಟಕಕಾರನು ನಾಯಕನಾದ ಚಾರುದತ್ತನನ್ನು, ಖಳನಾಯಕನಾದ ಶಕಾರನನ್ನು ಹಾಗು ನಾಯಿಕೆ ವಸಂತಸೇನೆಯನ್ನು ರಂಗದ ಮೇಲೆ ತರಬಯಸುತ್ತಾನೆ.  ಅರ್ಥಾತ್ ಚಾರುದತ್ತನ ಧೀಮಂತಿಕೆಯ, ಶಕಾರನ ದೌರ್ಜನ್ಯದ ಹಾಗು ವಸಂತಸೇನೆಯ ಸೌಶೀಲ್ಯ ಮತ್ತು ಅಸಹಾಯಕತೆಯ ಪರಿಚಯವು ನಾಟಕದ ಮೊದಲನೆಯ ಅಂಕದಲ್ಲಿ ಆಗುತ್ತದೆ. ಇದನ್ನು ಸಾಧಿಸಲು ನಾಟಕಕಾರನು ಸೂತ್ರಧಾರನನ್ನು ಹಾಗು ಚಾರುದತ್ತನ ಗೆಳೆಯನಾದ ಮೈತ್ರೇಯನನ್ನು ಬಳಸಿಕೊಂಡಿದ್ದಾನೆ.

ಸಂಸ್ಕೃತ ನಾಟಕಗಳಲ್ಲಿ ಸೂತ್ರಧಾರನ ಮಾತುಗಳು ವಿನೋದದಿಂದ ಕೂಡಿರುತ್ತವೆ.  ಮೃಚ್ಛಕಟಿಕಮ್ ನಾಟಕದ ಪ್ರಾರಂಭದಲ್ಲಿ ಸೂತ್ರಧಾರನು ತನ್ನ ಗೃಹಿಣಿಯೊಂದಿಗೆ ನಡೆಸುವ ಸರಸ ಸಂಭಾಷಣೆಯು ‘ರಾಮಾಶ್ವಮೇಧ’ದ ಮುದ್ದಣ, ಮನೋರಮೆಯರ ಸಂಭಾಷಣೆಯನ್ನು ನೆನಪಿಗೆ ತರುತ್ತದೆ.

ನಾಟಕ ಪ್ರಾರಂಭವಾಗುತ್ತಿರುವಂತೆಯೆ, ಸೂತ್ರಧಾರನಿಗೆ ತನ್ನ ಹಸಿವೆಯನ್ನು ತಣಿಸುವುದು ಮುಖ್ಯವಾದ ವಿಷಯವಾಗಿದೆ. ಆದುದರಿಂದ ತನ್ನ ಭೋಜನಕ್ಕಾಗಿ ಏನೆಲ್ಲವನ್ನು ಸಿದ್ಧಪಡಿಸಿರುವೆ ಎಂದು ಆತನು ತನ್ನ ಪತ್ನಿಯನ್ನು ಕೇಳುತ್ತಾನೆ. ಅವನ ಪತ್ನಿಯು, ಅವನಿಗೆ ಇಷ್ಟವಾದ ಖಾದ್ಯಗಳ ಒಂದು ಉದ್ದವಾದ ಪಟ್ಟಿಯನ್ನೇ ಹೇಳುತ್ತಾಳೆ. ಸೂತ್ರಧಾರನು ಸಂತುಷ್ಟನಾಗುತ್ತಾನೆ. ಈ ಎಲ್ಲ ಖಾದ್ಯಗಳನ್ನು ಬಡಿಸಲು ಪತ್ನಿಗೆ ಹೇಳಿದಾಗ, ‘ಇವೆಲ್ಲ ಖಾದ್ಯಗಳು ಅಡುಗೆ ಮನೆಯಲ್ಲಿ ಇಲ್ಲ, ಆದರೆ ಶೆಟ್ಟರ ಅಂಗಡಿಗಳಲ್ಲಿ ಇವೆ’ ಎಂದು ಅವನ ಹೆಂಡತಿಯು ಹಾಸ್ಯ ಮಾಡುತ್ತಾಳೆ. ಈ ಹಾಸ್ಯ ಸನ್ನಿವೇಶಕ್ಕೆ ಎರಡು ಉದ್ದೇಶಗಳಿವೆ. ಮೊದಲನೆಯದಾಗಿ ಉಜ್ಜಯಿನಿಯಲ್ಲಿ ಹರಡಿದ ಜನಸಾಮಾನ್ಯರ ಬಡತನಕ್ಕೆ  ನಾಟಕದಲ್ಲಿ ಈ ರೀತಿಯಲ್ಲಿ ಅಭಿವ್ಯಕ್ತಿಯನ್ನು ನೀಡಲಾಗಿದೆ. ಎರಡನೆಯದಾಗಿ ನಾಟಕದ ನಾಯಕನು ಬಡತನದಲ್ಲಿ ಬಾಳುತ್ತಿದ್ದಾಗ, ಸೂತ್ರಧಾರನದೂ ಅದೇ ಸ್ಥಿತಿ ಎಂದು ಹೇಳುವ ಮೂಲಕ ನಾಟಕಕ್ಕೆ ಒಂದು ಸಾಮಾನ್ಯ ಹಿನ್ನೆಲೆ ನೀಡಲಾಗಿದೆ.

ಈ ಅಪಹಾಸ್ಯದಿಂದ ಕೋಪಗೊಂಡ ಸೂತ್ರಧಾರನ ಕೋಪವನ್ನು ಪರಿಹರಿಸಲು, ಅವನ ಪತ್ನಿಯು ಒಂದು  ಉಪಾಯವನ್ನು ಹೂಡುತ್ತಾಳೆ.  ತನಗೆ ಒಳ್ಳೆಯ ಗಂಡನನ್ನು ಪಡೆಯಲು ತಾನು ಉಪವಾಸ ವ್ರತವನ್ನು ಮಾಡುತ್ತಿದ್ದೇನೆ. ಈ ವ್ರತದ ಅಂಗವಾಗಿ ಓರ್ವ ಬ್ರಾಹ್ಮಣನನ್ನು ತಾನು ಭೋಜನಕ್ಕಾಗಿ ಕರೆಯಬೇಕಾಗಿದೆ ಎಂದು ಹೇಳುತ್ತಾಳೆ. ಅಲ್ಲಿ ಇಲ್ಲಿ ನೋಡಿದ ಸೂತ್ರಧಾರನು, “ಆಶ್ಚರ್ಯ! ಇಷ್ಟು ಸಂಪನ್ನವಾದ ಉಜ್ಜಯಿನಿಯಲ್ಲಿ ನಮ್ಮ ಅಂತಸ್ತಿಗೆ ಯೋಗ್ಯನಾದ ಒಬ್ಬ ಬ್ರಾಹ್ಮಣನನ್ನು ಹುಡುಕೋ ಹಾಗಾಯಿತಲ್ಲ.” ಎಂದು ಉದ್ಗರಿಸುತ್ತಾನೆ. ಓದುಗರು ಇಲ್ಲಿರುವ ವಿಡಂಬನೆಯನ್ನು ಗಮನಿಸಬೇಕು. ಸೂತ್ರಧಾರನೇ ಉಪವಾಸ ಬೀಳುತ್ತಿರುವಾಗ, ಇವನ ಅಂತಸ್ತಿಗೆ ತಕ್ಕ ಬ್ರಾಹ್ಮಣ ಎಂಥವನು? ಇಲ್ಲಿ ಮತ್ತೂ ಒಂದು ಒಳಧ್ವನಿ ಇದೆ: ಉಜ್ಜಯಿನಿಯ ಬ್ರಾಹ್ಮಣರು ಅಧ್ಯಯನ,ಅಧ್ಯಾಪನ, ಪೌರೋಹಿತ್ಯ ಮೊದಲಾದ ಬ್ರಾಹ್ಮಣಕರ್ಮಗಳನ್ನು ಬಿಟ್ಟು ಧರ್ಮಭ್ರಷ್ಟರಾಗಿದ್ದಾರೆ. (ಸ್ವತಃ ನಾಟಕದ ನಾಯಕ ಚಾರುದತ್ತನೇ ತಲೆತಲಾಂತರಗಳಿಂದ ವ್ಯಾಪಾರೀವೃತ್ತಿಯನ್ನು ಅವಲಂಬಿಸಿದ್ದಾನೆ.)


ಆ ಸಮಯದಲ್ಲಿ ಸೂತ್ರಧಾರನು ಅಲ್ಲಿ ಬರುತ್ತಿರುವ ಬ್ರಾಹ್ಮಣನೊಬ್ಬನನ್ನು ನೋಡಿ, ಭೋಜನಕ್ಕೆ ಆಹ್ವಾನಿಸಿದಾಗ, ಬ್ರಾಹ್ಮಣನು ಸೂತ್ರಧಾರನ ಆಹ್ವಾನವನ್ನು ತಿರಸ್ಕರಿಸುತ್ತಾನೆ. ಈತನು ನಾಟಕದ ನಾಯಕನಾದ ಚಾರುದತ್ತನ ನಿಷ್ಠಾವಂತ ಮಿತ್ರನಾದ ಮೈತ್ರೇಯನು. ಚಾರುದತ್ತನ ಔದಾರ್ಯವನ್ನು ಕೊಂಡಾಡುತ್ತ, ಅವನು ಬಡವನಾದ ಬಳಿಕ, ತನಗೆ ಎಷ್ಟು ಕಷ್ಟವಾಗಿದೆ ಎಂದು ಹೇಳಿಕೊಳ್ಳುತ್ತ ಬರುತ್ತಿದ್ದಾನೆ. ಬ್ರಾಹ್ಮಣನನ್ನು ಭೋಜನಕ್ಕೆ ಕರೆಯುವ ನೆವದಲ್ಲಿ, ಕವಿಯು ಒಂದು ಮುಖ್ಯ ಪಾತ್ರದ ಪರಿಚಯವನ್ನು ಇಲ್ಲಿ ಮಾಡಿಸುತ್ತಾನೆ. ನಾಟಕದಲ್ಲಿ ಬರುವ ತಿರುವುಗಳಿಗೆ ಹಾಗು ಸಂಕಟಗಳಿಗೆ ಈ ಪ್ರಾಮಾಣಿಕ ಸಜ್ಜನನು ತನ್ನ ಎಡವಟ್ಟುತನದಿಂದಾಗಿ ಕಾರಣೀಭೂತನಾಗಿದ್ದಾನೆ.

 ಚಾರುದತ್ತನ ಮತ್ತೊಬ್ಬ ಗೆಳೆಯನು, ಚಾರುದತ್ತನ ಹೆಸರನ್ನು ಬರೆಯಿಸಿದ ಒಂದು ಶಾಲನ್ನು ಚಾರುದತ್ತನಿಗಾಗಿ ಮೈತ್ರೇಯನ ಜೊತೆಯಲ್ಲಿ ಕಳುಹಿಸಿದ್ದಾನೆ. ಈ ಶಾಲಿನ ಮಹತ್ವವು ಎರಡನೆಯ ಅಂಕದಲ್ಲಿ ಅರಿವಾಗುತ್ತದೆ. ಇದೀಗ ರಂಗದ ಮೇಲೆ ಚಾರುದತ್ತನ ಪ್ರವೇಶವಾಗುತ್ತದೆ. ಧರ್ಮನಿಷ್ಠನಾದ ಚಾರುದತ್ತನು ಮನೆಯ ದೇವತೆಗಳಿಗೆ ಸಂಧ್ಯಾಕಾಲದ ಬಲಿಯನ್ನು ಅರ್ಪಿಸಿ ರಂಗದ ಮೇಲೆ ಬರುತ್ತಿರುವುದನ್ನು ಮೈತ್ರೇಯನು ಕಾಣುತ್ತಾನೆ. ತನ್ನ ಆರ್ಥಿಕ ಪರಿಸ್ಥಿತಿಯಿಂದಾಗಿ  ಮನೆಯ ದೇವತೆಗಳಿಗೆ ಸಮರ್ಪಕವಾದ ಬಲಿಯನ್ನು ಅರ್ಪಿಸಲು ಸಹ ತನ್ನಿಂದ ಸಾಧ್ಯವಾಗುತ್ತಿಲ್ಲವಲ್ಲ ಎಂದು ಹಳಹಳಿಸುತ್ತ ಚಾರುದತ್ತನು ಪ್ರವೇಸಿಸುತ್ತಿದ್ದಾನೆ.

ಚಾರುದತ್ತ ಹಾಗು ಮೈತ್ರೇಯರ ನಡುವೆ ನಡೆದ ಮಾತುಕತೆಯಲ್ಲಿ, ಚಾರುದತ್ತನು ತನ್ನ ಸಂಪತ್ತು ನಷ್ಟವಾಗಿದ್ದಕ್ಕಾಗಿ ತನಗೆ ದುಃಖವಾಗುತ್ತಿಲ್ಲ, ಆದರೆ ತನ್ನ ಗೆಳೆಯರನೇಕರು ತನ್ನಿಂದ ದೂರವಾದರಲ್ಲ ಎಂದು ದುಃಖವಾಗುತ್ತಿದೆ ಎನ್ನುತ್ತಾನೆ. ಆಬಳಿಕ ಚಾರುದತ್ತನು ಮೈತ್ರೇಯನಿಗೆ ಮಾತೃಬಲಿಯನ್ನು ಕೊಡಲೆಂದು ಬೀದಿಯ ಚೌಕಕ್ಕೆ ಹೋಗು ಎನ್ನುತ್ತಾನೆ. ಮೈತ್ರೇಯನು ಹೋಗಲು ನಿರಾಕರಿಸುತ್ತಾನೆ. ಅವನು ಕೊಡುವ ಕಾರಣವೆಂದರೆ, ‘ಈ ಸಮಯದಲ್ಲಿ ರಾಜಬೀದಿಯಲ್ಲಿ ಸೂಳೆಯರು, ವಿಟರು ಹಾಗು ರಾಜನಿಗೆ ಬೇಕಾದವರು ತಿರುಗುತ್ತಿರುತ್ತಾರೆ!’ ಉಜ್ಜಯಿನಿಯು ಎಷ್ಟು ನೀತಿಭ್ರಷ್ಟವಾಗಿದೆ ಹಾಗು ರಾಜ್ಯಾಡಳಿತವು ಎಷ್ಟು ಶಿಥಿಲವಾಗಿದೆ ಎನ್ನುವುದು ಈ ಮಾತಿನ ಮೂಲಕ ಅರಿವಾಗುತ್ತದೆ.

ಹಾಗೆಂದು ಈ ಸೂಳೆಯರಿಗೆ ತಮ್ಮ ಕಸಬನ್ನು ಸುಸೂತ್ರವಾಗಿ ಸಾಗಿಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದಲ್ಲ. ಇವರನ್ನು ಶೋಷಿಸುವ ಗಣ್ಯಾತಿಗಣ್ಯರು ಇದ್ದೇ ಇದ್ದಾರೆ. (ಅವರಲ್ಲಿ ಊರ ರಾಜನ ಮೈದುನನಾದ ಶಕಾರನು ಮುಖ್ಯನು.)  ಇನ್ನು ಮೈತ್ರೇಯನು ಚಾರುದತ್ತನ ಮಾತನ್ನು ಕೇಳದೆ ಇರುವುದು ಮುಂದಿನ ಘಟನೆಗಳಿಗೆ ಅವಶ್ಯವಾದಂತಹ ಸಂಗತಿಯಾಗಿದೆ.

ಕವಿಯು ಮೊದಲ ಅಂಕದ ಪ್ರಾರಂಭದಲ್ಲಿ ನಾಟಕದ ನಾಯಕನಾದ ಚಾರುದತ್ತನನ್ನು ಹಾಗು ಆತನ ಆಪ್ತಮಿತ್ರನಾದ  ಮೈತ್ರೇಯನನ್ನು ನೋಡುಗರಿಗೆ ಪರಿಚಯಿಸಿದಂತಾಯಿತು. ಜೊತೆಗೇ, ಚಾರುದತ್ತನ ಕುಲೀನ ಸ್ವಭಾವದ ಪರಿಚಯವೂ  ಸಹ ನೋಡುಗರಿಗೆ ಆದಂತಾಯಿತು. ಇನ್ನೂ ಎರಡು ಮುಖ್ಯ ಪಾತ್ರಗಳು ಇದೇ ಅಂಕದಲ್ಲಿ ಪ್ರೇಕ್ಷಕರ ಎದುರಿಗೆ ಬರುತ್ತವೆ.

ಈ ದೃಶ್ಯವು ಉದ್ವಿಗ್ನಕಾರಿಯಾದ ದೃಶ್ಯವಾಗಿದೆ. ಚಾರುದತ್ತನ ಮನೋಧರ್ಮಕ್ಕೆ ವಿರುದ್ಧವಾದ ಶಕಾರನ ಸ್ವೈರವೃತ್ತಿಯನ್ನು ಹಾಗು ನಾಚಿಕೆಗೇಡಿತವನ್ನು ತೋರಿಸುವದರ ಜೊತೆಗೇ, ಗಣಿಕೆ ವಸಂತಸೇನೆಯ ಸುಶೀಲ ಮನೋಧರ್ಮವನ್ನು ಸಹ ಈ ದೃಶ್ಯದಲ್ಲಿ ತೋರಿಸಲಾಗಿದೆ.

ಚಾರುದತ್ತ ಹಾಗು ಮೈತ್ರೇಯರ ಮಾತುಕತೆ ಮುಗಿಯುತ್ತಿರುವಂತೆಯೇ ಪರದೆಯ ಹಿಂದಿನಿಂದ ಧ್ವನಿಗಳು ಕೇಳುತ್ತವೆ. ಶಕಾರ, ಅವನ ಗೆಳೆಯ ಹಾಗು ಒಬ್ಬ ಅನುಚರ ಇವರು ವಸಂತಸೇನೆಯ ಬೆನ್ನು ಹತ್ತಿದ್ದಾರೆ. ಮಹಾ ಹುಂಬನಾದ, ವಿದ್ಯಾವಿಹೀನನಾದ ಹಾಗು ಪಶುಸಮಾನನಾದ ಶಕಾರನು ವಸಂತಸೇನೆಯ ಬಗೆಗೆ ಆಡುವ ಮಾತುಗಳನ್ನು ಗಮನಿಸಿ:
ಇವಳು ಶೂಳೆಯ ಮಗಳು
ಶೂಳೆಗೇರಿಯ ಚೆಲುವೆ
ವೇಶ್ಯೆಬೆಲೆವೆಣ್ಣು
ಈ ಹತ್ತು ನಾಮಾವಳಿಯನಿವಳಿಗಿಟ್ಟಿರುವೆ
ಆದರೂ ಇವಳೆನ್ನ ಬಯಶುತಿಲ್ಲ!

ರಾವಣನ ಕೈಯಲ್ಲಿ ಕುಂತಿ ಶಿಕ್ಕಂತೆ
………………………….
ರಾಮನಿಗೆ ಹೆದರುವ ದ್ರೌಪದಿಯಂತೆ
…………………………..
ವಿಶ್ವಾವಶುವಿನಕ್ಕ ಶುಂದರಿ ಶುಭದ್ರೆಯನು
ಹನುಮಂತ ಹಾರಿ ಹಿಡಿದಂತೆ!
..............................................
…………………………………
ಕಾಡಿನಲಿ ಹೆಣ್‍ನರಿಯ ಬೆನ್ನು ಹತ್ತಿರುವಂಥ
ಬೇಟೆನಾಯಿಗಳಂತೆ
ನಾವು ಜೋರಾಗಿಯೇ ಬೆನ್ನು ಹತ್ತಿರುವೆವು.

ಈ ಶಕಾರನ ಸಹಚರನಾದ ವಿಟನು ಶಕಾರನಿಗಿಂತ ಸ್ವಲ್ಪ ಉತ್ತಮನೆಂದು ಕಾಣುತ್ತಾನೆ. ವಸಂತಸೇನೆಗೆ ಇವನು ಹೇಳುವ ಮಾತನ್ನು ಗಮನಿಸಿರಿ:
ಓರೆ ನೋಟವ ಬೀರಿ
ಕಣ್ತುಂಬ ಗಾಬರಿಯ ಸೂಸುತ್ತ
ಬೇಡ ಬೆನ್ನಟ್ಟಿರುವ ಹೆಣ್‍ಜಿಂಕೆಯಂತೆ
ಏಕೆ ಓಡುವೆ ಹೆಣ್ಣೆ ಭಯಭೀತಳಾಗಿ?’

ಈ ಶಕಾರನ ಸೇವಕನು ಹೇಳುವ ಮಾತು ಕೇಳಿರಿ. ಇವು ಸೇವಕನಿಗೆ ತಕ್ಕ ಮಾತುಗಳಾಗಿವೆ:
ರಾಜರಿಗೆ ಬೇಕಾದ ದೊಡ್ಡ ಜನ ಇವರು
ಇವರ ಮನವೊಲಿಸಿದರೆ ನಿಮಗು ಗಮ್ಮತ್ತು
ಮೀನು-ಮಾಂಸದ ಅಡಿಗೆ ಎರಡು ಹೊತ್ತು.

ಶಕಾರ ಹಾಗು ಅವನ ಅನುಚರರು ಓಡುತ್ತಿರುವ ವಸಂತಸೇನೆಯನ್ನು ಹಿಡಿದೇ ಬಿಡುತ್ತಾರೆ. ಶಕಾರನ ಅಹಂಕಾರದ ಮಾತುಗಳ ಜೊತೆಗೇ, ಅವನ ಸಹಚರನ ಹೀನಾಯದ ಮಾತುಗಳು ಹೀಗಿವೆ:
ಯೋಚಿಸು, ನೀನೂ ಒಬ್ಬಳು ಸೂಳೆಯೆ
ಬೀದಿಯ ಬದಿಯಲಿ ಬೆಳೆದಿಹ ಬಳ್ಳಿ!
ಬೆಲೆ ತೆತ್ತವರಿಗೆ ಮಾರಲಿಕೆಂದೇ
ಇರುವುದು ನಿನ್ನ ಶರೀರ
ಬೇಕಾಗಿರಲಿ, ಬೇಡಾಗಿರಲಿ
ದುಡ್ಡು ತೆತ್ತವರನು ತಣಿಸಬೇಕು
………………….
ಸೂಳೆಯಾದ ನೀನೂ ಹಾಗೆಯೇ
……………………..
ಸೂಳೆ ಎಲ್ಲರ ಸೊತ್ತು.
ಶಕಾರನ, ಅವನ ಸಹಚರನ ಹಾಗು ಅವನ ಅನುಚರನ ಮಾತುಗಳು ಉಜ್ಜಯಿನಿಯ ಸಾಂಸ್ಕೃತಿಕ ಅಧಃಪತನವನ್ನು ಸೂಚಿಸುತ್ತವೆ. ಶಕಾರನು ತನ್ನ ಜೊತೆಗಾರರೊಂದಿಗೆ ವಸಂತಸೇನೆಯನ್ನು ಬೆನ್ನಟ್ಟಿರುವ ಈ ದೃಶ್ಯವು ನಾಟಕದಲ್ಲಿ ರಭಸದ ಕ್ರಿಯೆಯನ್ನು ಹಾಗು ಉದ್ವೇಗವನ್ನು ತುಂಬುತ್ತವೆ.

ವಸಂತಸೇನೆಯು ವೇಶ್ಯೆ. ಇವಳಿಗೆ ಬೇಡಿಕೆ ಎಷ್ಟೇ ಇರಲಿ, ಇವಳಿಗೆ ಸಿಗುವ ಗೌರವ ಮಾತ್ರ ಸೊನ್ನೆ. ಓರ್ವ ವೇಶ್ಯೆಯು ಹೊಟ್ಟೆಪಾಡಿಗಾಗಿ ಹೀನರನ್ನು ಓಲೈಸಲೇ ಬೇಕು, ಸಜ್ಜನರು ಇವಳಿಗೆ ಬೇಕಾಗಿಲ್ಲ. ಆದರೆ ಸುಶೀಲಳಾದ ವಸಂತಸೇನೆಯು  ಚಾರುದತ್ತನ ಗುಣವರ್ಣನೆಗಳನ್ನು ಕೇಳಿ ಅವನೆಡೆಗೆ ಆಕರ್ಷಿತಳಾಗಿದ್ದಾಳೆ. (ಈ ನಾಟಕದಲ್ಲಿ ಬರುವ ಕೆಳವರ್ಗದ ಅನೇಕ ಜನರು ಚಾರುದತ್ತನನ್ನು ಗೌರವಿಸುವರೇ ಆಗಿದ್ದಾರೆ.)  ಒಂದು ಸಲ ಉದ್ಯಾನವನದಲ್ಲಿ ಚಾರುದತ್ತನನ್ನು ನೋಡಿ, ವಸಂತಸೇನೆಯು ಅವನಿಗೆ ಮರುಳಾಗಿದ್ದಾಳೆ. ಆದರೆ ಚಾರುದತ್ತನು ವಸಂತಸೇನೆಯನ್ನು  ಈವರೆಗೂ ನೋಡಿಲ್ಲ. ಇದೀಗ ಇವರೀರ್ವರ ಮುಖಾಮುಖಿಯು ಆಗುವದಿದ್ದು, ನಾಟಕಕಾರನು ತುಂಬ ಚಾಣಾಕ್ಷತನದಿಂದ ಈ ಸನ್ನಿವೇಶವನ್ನು ಸಂಯೋಜಿಸಿದ್ದಾನೆ.

ಶಕಾರನಿಂದ ತಪ್ಪಿಸಿಕೊಳ್ಳಲು ವಸಂತಸೇನೆಯು ಓಡಿ ಬರುತ್ತಿರುವಾಗ, ಚಾರುದತ್ತನ ಮನೆಯ ಸಮೀಪವೇ ಅವಳು ಬಂದಿದ್ದಾಳೆ. ಅದು ಅವಳಿಗೆ ಗೊತ್ತಿಲ್ಲ. ಆದರೆ, ಶಕಾರನಿಗೆ ಚಾರುದತ್ತನ ಮನೆಯು ಅಲ್ಲಿಯೇ ಇರುವುದು ಗೊತ್ತು. ವಸಂತಸೇನೆಯು ಚಾರುದತ್ತನ ಮನೆಗೆ ಹೋಗಬಹುದೆಂದು ಊಹಿಸಿ, ಮೂರ್ಖ ಶಕಾರನು, ‘ಚಾರುದತ್ತನ ಮನೆ ಇಲ್ಲಿಯೇ ಇದೆ, ಇವಳು ಅಲ್ಲಿ ನುಸುಳದಂತೆ ನೋಡಿಕೊ’ ಎಂದು ತನ್ನ ಸಹಚರನಿಗೆ ಹೇಳುತ್ತಾನೆ. ಈ ಹುಂಬನ ಕೈಗೆ ಸಿಗುವುದಕ್ಕಿಂತ ವಸಂತಸೇನೆಯು ಚಾರುದತ್ತನ ಮನೆಗೆ ಹೋಗುವುದೇ ಲೇಸೆಂದು ಬಗೆದ ಶಕಾರನ ಸಹಚರನು, ‘ಹೌದು, ಇಲ್ಲೇ ಎಡಗಡೆಗೆ ಇದೆ’ ಎಂದು ವಸಂತಸೇನೆಗೆ ತಿಳಿಯುವಂತೆ ಸೂಚನೆ ಕೊಡುತ್ತಾನೆ.

ಸೂಚನೆಯನ್ನು ಗ್ರಹಿಸಿದ ವಸಂತಸೇನೆಯು ಚಾರುದತ್ತನ ಮನೆಯ ಕಡೆಗೆ ಹೋಗಲು ಉದ್ಯಮಿಸಿದಾಗ, ಶಕಾರನಿಗೆ ಅವಳ ಗೆಜ್ಜೆಯ ಸಪ್ಪಳದ ಮೂಲಕ, ಅವಳ ಗಮ್ಯ ಗೊತ್ತಾಗುತ್ತದೆ. ಶಕಾರನ ಸಹಚರನು, ‘ವಸಂತಸೇನೆ, ನಿನ್ನ ಗೆಜ್ಜೆಗಳು ನಿನ್ನ ಇರವನ್ನು ಬಯಲು ಮಾಡುತ್ತಿವೆಎಂದು ಜನಾಂತಿಕವಾಗಿ ಹೇಳುತ್ತಾನೆ. ವಸಂತಸೇನೆ, ಗೆಜ್ಜೆಗಳನ್ನು ತೆಗೆದಿರಿಸಿಕೊಂಡು ಚಾರುದತ್ತನ ಮನೆಗೆ ಹೋಗುತ್ತಾಳೆ ಹಾಗು ಬಾಗಿಲು ತೆಗೆಯಲು ಹೋಗುತ್ತಾಳೆ. ಆದರೆ ಬಾಗಿಲು ಮುಚ್ಚಿಕೊಂಡಂತಿದೆ.

ಆ ಸಮಯದಲ್ಲಿ ಚಾರುದತ್ತನು ತನ್ನ ಜಪಾದಿಗಳನ್ನು ಮುಗಿಸಿಕೊಂಡು, ಹೊರಬಂದು ಗೆಳೆಯ ಮೈತ್ರೇಯನಿಗೆ ಮಾತೃಬಲಿಯನ್ನು ತೆಗೆದುಕೊಂಡು ಹೋಗಲು ಕೋರುತ್ತಾನೆ. ಆದರೆ ಮೈತ್ರೇಯನು ಹೋಗಲು ಒಪ್ಪುವುದಿಲ್ಲ. ಚಾರುದತ್ತನು ಬಡವನ ಮಾತನ್ನು ಗೆಳೆಯನೂ ಕೇಳುವುದಿಲ್ಲವಲ್ಲಎಂದು ವಿಷಾದಿಸುತ್ತಾನೆ. ಆಗ ಮೈತ್ರೇಯನು ತನ್ನ ಜೊತೆಗೆ ದೀಪವನ್ನು ಹಿಡಿದುಕೊಂಡು ರದನಿಕೆ ಎನ್ನುವ ಸೇವಿಕೆಯೂ ಬಂದರೆ ತಾನು ಹೋಗುವುದಾಗಿ ಹೇಳುತ್ತಾನೆ. ಮೈತ್ರೇಯನು ರದನಿಕೆಯ ಕೈಯಲ್ಲಿ ಬಲಿದ್ರವ್ಯವನ್ನು ಕೊಟ್ಟು ಬಾಗಿಲು ತೆರೆಯುತ್ತಾನೆ.

ಈ ಸಂದರ್ಭದಲ್ಲಿ ವಸಂತಸೇನೆಯು ಚಾರುದತ್ತನ ಮನೆಯ ಒಳಗೆ ನುಸುಳುತ್ತಾಳೆ. ದೀಪದ ಬೆಳಕಿನಲ್ಲಿ ತಾನು ಅಲ್ಲಿರುವದನ್ನು ಶಕಾರನು ನೋಡಿಯಾನು ಎನ್ನುವ ಭೀತಿಯಿಂದ, ತನ್ನ ಸೆರಗಿನಿಂದ ದೀಪವನ್ನಾರಿಸಿ ಒಳಗೆ ಹೋಗುತ್ತಾಳೆ. ದೀಪವು ಆರಿದ್ದನ್ನು ಗಮನಿಸಿದ ಮೈತ್ರೇಯನು ದೀಪವನ್ನು ಹಚ್ಚಿಕೊಂಡು ಬರಲು ಒಳಗೆ ಹೋಗುತ್ತಾನೆ.

ವಸಂತಸೇನೆಯು ಚಾರುದತ್ತನ ಮನೆಯಲ್ಲಿಯೇ ನುಸುಳಿದ್ದಾಳೆ ಎನ್ನುವ ಸಂದೇಹದಿಂದ ಶಕಾರನು ಚಾರುದತ್ತನ ಮನೆಯಲ್ಲಿ ತಾನೂ ನುಗ್ಗುತ್ತಾನೆ. ಕತ್ತಲಲ್ಲಿ ವಸಂತಸೇನೆ ಎಂದು ಭಾವಿಸಿ, ಮೂರ್ಖ ಶಕಾರನು ರದನಿಕೆಯನ್ನು ಹಿಡಿದು, ಅವಳನ್ನು ಕೂದಲಿನಿಂದ ಎಳೆಯುತ್ತಿರುತ್ತಾನೆ. ಅಷ್ಟರಲ್ಲಿ, ಅಲ್ಲಿಗೆ ಮೈತ್ರೇಯನು ದೀಪ ಹಚ್ಚಿಕೊಂಡು ರುತ್ತಾನೆ. ಅಲ್ಲಿ ರದನಿಕೆಯ ಪಾಡನ್ನು ಕಂಡು ಆಗಂತುಕರ ಮೇಲೆ ಕೋಪಿಸಿಕೊಳ್ಳುತ್ತಾನೆ. ಶಕಾರನ ಸಹಚರನು ಮೈತ್ರೇಯನನ್ನು ಸಮಾಧಾನಗೊಳಿಸುತ್ತಾನೆ. ಚಾರುದತ್ತನ ಸಜ್ಜನಿಕೆಯ ಬಗೆಗೆ ಸಹಚರನಿಗೂ ಸಹ ಗೌರವವಿದೆ.  ಇಲ್ಲಿಂದ ಹೊರಟು ಹೋಗೋಣ ಬಾ ಎಂದು ಅವನು ಶಕಾರನಿಗೆ ಹೇಳುತ್ತಾನೆ. ಆದರೆ ಶಠ ಶಕಾರನು ವಶಂತಶೇನೆಯನ್ನು ಹಿಡಿಯದೆ ನಾನು ಹೋಗೋದಿಲ್ಲ ಎಂದು ಪಟ್ಟು ಹಿಡಿದು ಅಲ್ಲಿಯೇ ನಿಲ್ಲುತ್ತಾನೆ. ಶಕಾರನು ತನ್ನ ಭಂಡ ಮಾತುಗಳಿಂದ ಮೈತ್ರೇಯನಿಗೆ ಬೆದರಿಕೆ ಹಾಕುತ್ತಾನೆ. ವಸಂತಸೇನೆಯು ಕಾಮದೇವಾಲಯದ ಉದ್ಯಾನದಲ್ಲಿ ಚಾರುದತ್ತನಿಗೆ ಮರುಳಾದಳಲ್ಲ ಎನ್ನುವ ರೊಚ್ಚನ್ನು ಅವನು ಮತ್ತೊಮ್ಮೆ ಆಡಿ ತೋರಿಸಿ, ಅಲ್ಲಿಂದ ತೆರಳುತ್ತಾನೆ.

ಮುಂದಿನ ದೃಶ್ಯದಲ್ಲಿ ಮೈತ್ರೇಯ ಹಾಗು ರದನಿಕೆಯರು ಬಲಿಯನ್ನು ಸಮರ್ಪಿಸಲು ಹೋಗುತ್ತಾರೆ. ಆಗ ತಾನೇ ಹೊರಬಂದ ಚಾರುದತ್ತನಿಗೆ  ವಸಂತಸೇನೆ ಒಳಬಂದಿರುವುದು ತಿಳಿದಿಲ್ಲ. ಅವನು ವಸಂತಸೇನೆಯನ್ನೇ ರದನಿಕೆ ಎಂದು ಭಾವಿಸಿ, ‘ಹೊರಗೆ ಆಟ ಆಡುತ್ತಿರುವ ತನ್ನ ಮಗ ರೋಹಿತನಿಗೆ ಶೀತವಾಗದಿರಲು, ಈ ಶಾಲನ್ನು ಹೊದಿಸಿ, ಒಳಗೆ ಕರೆದುಕೊಂಡು ಬಾಎಂದು ಹೇಳುತ್ತಾನೆ. ಅಷ್ಟರಲ್ಲಿ ಮೈತ್ರೇಯನು ರದನಿಕೆಯೊಡನೆ ಮರಳಿ ಬರುತ್ತಾನೆ, ನಡೆದದ್ದನ್ನೆಲ್ಲ ಹೇಳುತ್ತಾನೆ. ಚಾರುದತ್ತನು ವಸಂತಸೇನೆಯ ಕ್ಷಮೆ ಕೋರುತ್ತಾನೆ. ವಸಂತಸೇನೆಯು, ‘ನಾನೇ ತಪ್ಪುಗಾರಳು ಎಂದು ಚಾರುದತ್ತ  ಕ್ಷಮೆ ಕೋರುತ್ತಾಳೆ. ಮೈತ್ರೇಯನು ಇವಳು ವಸಂತಸೇನೆ, ಉದ್ಯಾನದಲ್ಲಿ ನಿನ್ನನ್ನು ನೋಡಿ ಮರುಳಾದವಳುಎಂದು ಹೇಳುತ್ತಾನೆ.

ಚಾರುದತ್ತನು, ‘ನನ್ನ ಸಂಪತ್ತೆಲ್ಲ ಕರಗಿದ ಮೇಲೆ, ಇವಳು ನನ್ನೆದೆಯಲ್ಲಿ ಬಯಕೆಯನ್ನು ಬಿತ್ತಿದಳಲ್ಲ ಎಂದು ನಿಟ್ಟುಸಿರು ಬಿಡುತ್ತಾನೆ. (ಈ ನಾಟಕವನ್ನು ಬರೆದ ಕಾಲಘಟ್ಟದಲ್ಲಿ ಸಜ್ಜನರ ವೇಶ್ಯಾಗಮನವನ್ನು ಸಮಾಜವು ತಿರಸ್ಕರಿಸುತ್ತಿರಲಿಲ್ಲ ಎಂದು ಕಾಣುತ್ತದೆ. ಅದೇನೇ ಇರಲಿ, ಚಾರುದತ್ತನಿಗೆ ಚೆಲುವೆಯಾದ ವಸಂತಸೇನೆಯ ಬಗೆಗೆ ಮೆಚ್ಚುಗೆ ಆಗಬಾರದು ಎಂದೇನಿಲ್ಲವಲ್ಲ. ಆದುದರಿಂದ ನಾಟಕಕಾರ ಶೂದ್ರಕನು ಚಾರುದತ್ತನ ಒಂದು ಮಾತಿನಿಂದ ಈ ಆಕರ್ಷಣೆಯ ಸೂಚನೆಯನ್ನು ನೀಡಿದ್ದಾನೆ.)

ವಸಂತಸೇನೆಯು ತಾನಿನ್ನು ಹೋಗುವುದು ಉಚಿತವೆಂದು ಭಾವಿಸುತ್ತಾಳೆ. ಆದರೆ ಇರುಳಿನ ಈ ಸಮಯದಲ್ಲಿ ತನ್ನ ಒಡವೆಗಳನ್ನು ಸುರಕ್ಷಿತವಾಗಿ ಒಯ್ಯಬಹುದೆ ಎನ್ನುವ ಹೆದರಿಕೆಯಿಂದ, ಆ ಆಭರಣಗಳನ್ನು ಚಾರುದತ್ತನ ಮನೆಯಲ್ಲಿ ಇಡಬಯಸುತ್ತಾಳೆ.

ಚಾರುದತ್ತನು ಒಡವೆಗಳನ್ನು ತಾನೇ ಕೈಮುಟ್ಟಿ ತೆಗೆದುಕೊಳ್ಳುವದಿಲ್ಲ. ಬದಲಾಗಿ ಮೈತ್ರೇಯನಿಗೆ ಒಡವೆಗಳನ್ನು ಸ್ವೀಕರಿಸು ಎಂದು ಹೇಳುತ್ತಾನೆ. ವಸಂತಸೇನೆಯು ತಾನು ಮನೆ ಮುಟ್ಟುವವರೆಗೆ ತನ್ನ ಜೊತೆಗೆ ಚಾರುದತ್ತನು ಬಂದಿದ್ದರೆ ಚೆನ್ನಾಗಿರುವುದು ಎಂದು ಹೇಳುತ್ತಾಳೆ.  ಚಾರುದತ್ತನು ಮೈತ್ರೇಯನಿಗೆ ಹೋಗಲು ಹೇಳುತ್ತಾನೆ.. ಮೈತ್ರೇಯನು ಚಾರುದತ್ತನಿಗೆ ನೀನೇ ಹೋಗುವುದು ಸರಿ ಎನ್ನುತ್ತಾನೆ. (ಚಾರುದತ್ತನು ದೀವಟಿಗೆಯನ್ನು ಹಚ್ಚಲು ತನ್ನ ಸೇವಕ ವರ್ಧಮಾನಕನಿಗೆ ಹೇಳುತ್ತಾನೆ. ಆದರೆ ಅವನ ಮನೆಯಲ್ಲಿ ದೀವಟಿಗೆಯನ್ನು ಹಚ್ಚಲು ಎಣ್ಣೆಯೇ ಇರುವುದಿಲ್ಲ!) ವಸಂತಸೇನೆಯನ್ನು ಅವಳ ಮನೆಗೆ ಕಳುಹಿ, ಚಾರುದತ್ತ ಹಾಗು ಮೈತ್ರೇಯರು ಚಾರುದತ್ತನ ಮನೆಗೆ ಮರಳುತ್ತಾರೆ.

ಇದೀಗ ವಸಂತಸೇನೆಯ ಒಡವೆಗಳನ್ನು ಕಾಯುವ ಕೆಲಸ ಚಾರುದತ್ತನ ಮೇಲೆ ಬಿದ್ದಿತಲ್ಲ.  ಹಗಲು ಹೊತ್ತಿನಲ್ಲಿ ಚಾರುದತ್ತನ ಸೇವಕನು ಹಾಗು ಇರುಳಿನಲ್ಲಿ ಮೈತ್ರೇಯನು ಆ ಒಡವೆಗಳನ್ನು ಕಾಯಬೇಕೆಂದು ಚಾರುದತ್ತನು ಒಡವೆಗಳ ಭದ್ರತೆಯ ಹೊಣೆಯನ್ನು  ನಿಯೋಜಿಸುತ್ತಾನೆ.

ನಾಟಕದಲ್ಲಿ ಇದು ಒಂದು ಮಹತ್ವದ ಸಂಗತಿಯಾಗಿದೆ. ಮೈತ್ರೇಯನು ಒಡವೆಗಳನ್ನು ಇಸಿದುಕೊಂಡು, ಒಂದು ಗಂಟಿನಲ್ಲಿ ಕಟ್ಟಿಕೊಂಡು ತನ್ನ ಬಳಿಯಲ್ಲಿ ಇಟ್ಟುಕೊಂಡು ಮಲಗುತ್ತಾನೆ.

ಈ ಅಂಕದಲ್ಲಿ ಚಾರುದತ್ತನ ಸಜ್ಜನಿಕೆಯನ್ನು, ಆ ಕಾರಣದಿಂದಾಗಿ ಅವನಿಗೆ ದೊರೆಯುತ್ತಿರುವ ಗೌರವವನ್ನು, ಶಕಾರನ ಅನುಚರನೂ ಸಹ ಚಾರುದತ್ತನ ಬಗೆಗೆ ಗೌರವ ಹಾಗು ಭಯದಿಂದ ನಡೆದುಕೊಳ್ಳುವದನ್ನು ತೋರಿಸಲಾಗಿದೆ. 

ವಸಂತಸೇನೆಯು ತನ್ನಲ್ಲಿ ಅನುರಕ್ತಳಾಗಿರುವಳು ಎನ್ನುವ ಶಕಾರನ ಮಾತನ್ನು ಮೈತ್ರೇಯನಿಂದ ತಿಳಿದರೂ ಸಹ, ಚಾರುದತ್ತನು ಅವಳನ್ನು ತುಂಬ ಗೌರವದಿಂದ ನೋಡಿಕೊಳ್ಳುತ್ತಾನೆ. ಅವಳಲ್ಲಿ ತನಗಾದ ಆಕರ್ಷಣೆಯನ್ನು ಅವಳೆದುರಿಗೆ  ವ್ಯಕ್ತ ಪಡಿಸುವದಿಲ್ಲ. ಮೈತ್ರೇಯನನ್ನು ಜೊತೆ ಮಾಡಿಕೊಂಡು ವಸಂತಸೇನೆಯನ್ನು ಅವಳ ಮನೆಯವರೆಗೆ ಕಳುಹಿಸಿ ಬರುತ್ತಾನೆ.

ಶಕಾರನ ಹುಂಬತನವನ್ನು, ವಿದ್ಯಾವಿಹೀನತೆಯನ್ನು  ಹಾಗು ರಾಜ್ಯಶಾಸನಗಳ ಬಗೆಗೆ ಅವನಿಗೆ ಯಾವುದೇ ಹೆದರಿಕೆ ಇಲ್ಲದಿರುವುದನ್ನು ಈ ಅಂಕದಲ್ಲಿ ತೋರಿಸಲಾಗಿದೆ. ಚಾರುದತ್ತನ ಮಗನಾದ ಬಾಲಕ ರೋಹಸೇನನು ಮನೆಯ ಹೊರಗಡೆ ಗೆಳೆಯರೊಡನೆ ಆಡುತ್ತಿರುತ್ತಾನೆ ಎನ್ನುವ ಸೂಚನೆಯನ್ನು ಇಲ್ಲಿ ಕೊಡಲಾಗಿದೆ. ಇದು ಒಂದು ಮಹತ್ವದ ಸೂಚನೆ. ನಾಟಕದ ನಾಲ್ಕನೆಯ ಅಂಕದಲ್ಲಿ ಈ ಸೂಚನೆಯ ಮಹತ್ವ ಗೊತ್ತಾಗುತ್ತದೆ.

ವಸಂತಸೇನೆಯ ಪಾತ್ರದ ಮೂಲಕ ವೇಶ್ಯಾವೃತ್ತಿಯು ಉಜ್ಜಯಿನಿಯಲ್ಲಿ ಸಮಾಜಮಾನ್ಯವಾಗಿತ್ತು ಹಾಗು ವೇಶ್ಯೆಯರು ಕಾಮುಕರಿಂದ ಹೀನಾಯಕ್ಕೆ ಒಳಗಾಗುತ್ತಿದ್ದರು ಎನ್ನುವುದನ್ನು ತೋರಿಸಲಾಗಿದೆ. ನಾಟಕದ ಕೊನೆಯಲ್ಲಿ ದುಷ್ಟ ರಾಜನ ಆಳಿಕೆಯು ಅಂತ್ಯವಾದ ಮೇಲೆ, ಆಡಳಿತದ ಚುಕ್ಕಾಣಿ ಹಿಡಿದಂತಹ ದಂಗೆಖೋರರ ಮುಖಂಡನು ವಸಂತಸೇನೆಗೆ ಚಾರುದತ್ತನ ಸಹಚರಿ ಎನ್ನುವ ಗೌರವವನ್ನು ಪ್ರದಾನಿಸುತ್ತಾನೆ. ಇದು ನಾಟಕದ ಆಶಯವನ್ನೂ ತೋರಿಸುತ್ತದೆ ಎನ್ನಬಹುದು.
ಮೊದಲ ಅಂಕವು ಇಲ್ಲಿಗೆ ಸಮಾಪ್ತವಾಗುತ್ತದೆ.

(ಇಲ್ಲಿ ಬರುವ ಸಂಸ್ಕೃತಮೂಲದ ಗೀತೆಗಳ ಕನ್ನಡ ಅನುವಾದಗಳನ್ನು ಬನ್ನಂಜೆ ಗೋವಿಂದಾಚಾರ್ಯರ ಭಾಷಾಂತರದಿಂದ ಪಡೆದಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು.)

Saturday, March 19, 2016

ಶೂದ್ರಕನ ‘ಮೃಚ್ಛಕಟಿಕಮ್’-೧


ಶೂದ್ರಕನು ಸಂಸ್ಕೃತದಲ್ಲಿ ರಚಿಸಿದ ‘ಮೃಚ್ಛಕಟಿಕಮ್’ ಒಂದು ಅದ್ಭುತ ನಾಟಕ. ತೋರಿಕೆಗೆ ಇದು ಉಜ್ಜಯಿನಿಯ ಓರ್ವ ಬಡ ಬ್ರಾಹ್ಮಣ ಹಾಗು ಆ ನಗರದ ಓರ್ವ ಖ್ಯಾತ ಗಣಿಕೆ ಇವರ ನಡುವಿನ ಪ್ರಣಯದ ಕಥೆಯಾಗಿದೆ. ಈ ಕಥೆಯ ಮುಸುಕಿನಡಿಯಲ್ಲಿ ಶೂದ್ರಕನು ತನ್ನ ಕಾಲದ ಉಜ್ಜಯಿನಿಯ ಭ್ರಷ್ಟ ಸಮಾಜವ್ಯವಸ್ಥೆಯನ್ನು ಹಾಸ್ಯದ ಮೂಲಕ, ಅಪಹಾಸ್ಯದ ಮೂಲಕ, ವ್ಯಂಗ್ಯದ ಮೂಲಕ, ವಿಡಂಬನೆಯ ಮೂಲಕ ಬತ್ತಲಿಸಿದ್ದಾನೆ. ಇಷ್ಟೇ ಅಲ್ಲದೆ, ಸಮಾಜದ ಕೆಳವರ್ಗದ ಜನತೆಯು ವ್ಯವಸ್ಥೆಯ ವಿರುದ್ಧ ದಂಗೆ ಎದ್ದು ಪ್ರಭುತ್ವವನ್ನು ಕಿತ್ತೊಗೆಯುವ ಕತೆಯೂ (ಆಶಯವೂ) ಇಲ್ಲಿದೆ.

ಚಾರುದತ್ತನು ಉಜ್ಜಯಿನಿಯ ಓರ್ವ ಬ್ರಾಹ್ಮಣ. ಬ್ರಾಹ್ಮಣನಾದವನು ಅಧ್ಯಯನ, ಅಧ್ಯಾಪನ ಹಾಗು ಪೌರೋಹಿತ್ಯಗಳಲ್ಲಿ ತೊಡಗಿರಬೇಕಷ್ಟೆ?  ಈತನಾದರೊ ವಂಶಪಾರಂಪರಿಕವಾಗಿ ಬಂದ ವ್ಯಾಪಾರದಲ್ಲಿ ಅಂದರೆ ವೈಶ್ಯವೃತ್ತಿಯಲ್ಲಿ ತೊಡಗಿಸಿಕೊಂಡವನು. ಈತನ ಬಳಿಯಲ್ಲಿ ಹಣವಿದ್ದಾಗ, ಈತನ ಸುತ್ತಲು ಗೆಳೆಯರಿದ್ದರು. ಆದರೆ ಉದಾರಹೃದಯದವನೂ, ಸಚ್ಛೀಲನೂ ಆದ ಚಾರುದತ್ತನು ತನ್ನ ಸಂಪತ್ತನ್ನೆಲ್ಲ ಕಳೆದುಕೊಂಡು ದರಿದ್ರಾವಸ್ಥೆಗೆ ಇಳಿದಿದ್ದಾನೆ. ಕೇವಲ ಬೆರಳೆಣಿಕೆಯಷ್ಟು ಗೆಳೆಯರು ಈತನಲ್ಲಿ ನಿಷ್ಠೆಯ ಸ್ನೇಹವನ್ನು ಇರಿಸಿಕೊಂಡಿದ್ದಾರೆ. ಆದರೆ ಈತನ ಬಗೆಗೆ ಇಡೀ ಉಜ್ಜಯಿನಿಯ ಪ್ರಜೆಗಳಿಗೆ ಗೌರವವಿದೆ. ‘ಮೃಚ್ಛಕಟಿಕಮ್’ ನಾಟಕದ ನಾಯಕನೇ ವರ್ಣಾಶ್ರಮಧರ್ಮವನ್ನು ಉಲ್ಲಂಘಿಸಿ, ವೈಶ್ಯವೃತ್ತಿಯನ್ನು ಅವಲಂಬಿಸಿದ್ದಾನೆ ಎನ್ನುವುದನ್ನು ಗಮನಿಸಬೇಕು.

ಈತನಲ್ಲಿ ಅನುರಕ್ತಳಾದವಳು ಉಜ್ಜಯಿನಿಯ ಅತ್ಯಂತ ಬೇಡಿಕೆಯ ಗಣಿಕೆ ವಸಂತಸೇನೆ.  ಚಾರುದತ್ತನ ಔದಾರ್ಯ ಹಾಗು ಸುಶೀಲತೆಗೆ ಮರುಳಾದವಳು. ಒಂದು ಸಲ ಅಕಸ್ಮಾತ್ತಾಗಿ ಉಪವನವೊಂದರಲ್ಲಿ ಚಾರುದತ್ತನನ್ನು ನೋಡಿದಾಗಿನಿಂದ, ಅವನ ಮಿಲನಕ್ಕಾಗಿ ಕಾತರಿಸುತ್ತಿರುವವಳು.  ತನ್ನ ಮೇಲೆ ಚಿನ್ನವನ್ನು ಸುರಿಯಲು ಸಿದ್ಧನಾದ ರಾಜನ ಶ್ಯಾಲಕನನ್ನು (ಹೆಂಡತಿಯ ತಮ್ಮನನ್ನು) ತಿರಸ್ಕರಿಸಿ, ಇವಳು ಅವನ ಹಗೆಯನ್ನು ಕಟ್ಟಿಕೊಂಡಿದ್ದಾಳೆ. ಇದು ವೇಶ್ಯಾವೃತ್ತಿಗೆ ವಿರುದ್ಧವಾದ ಧರ್ಮವೆಂದೇ ಹೇಳಬೇಕು.

ರಾಜನ ಶ್ಯಾಲಕ ಶಕಾರನು ಹುಂಬ ಶಿರೋಮಣಿ. ವಸಂತಸೇನೆಯಿಂದ ತಿರಸ್ಕೃತನಾದ ಇವನು, ಚಾರುದತ್ತ ಹಾಗು ವಸಂತಸೇನೆಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.  ಚಾರುದತ್ತನನ್ನು ಭೆಟ್ಟಿಯಾಗಲು, ವಸಂತಸೇನೆಯು ಉಪವನಕ್ಕೆ ಬಂದಾಗ, ಅವಳ ಕುತ್ತಿಗೆ ಹಿಚುಕುತ್ತಾನೆ. ಚಾರುದತ್ತನ ಮೇಲೆ ಕೊಲೆಯ ಆರೋಪವನ್ನು ಹೊರಿಸುತ್ತಾನೆ.

ನ್ಯಾಯದೇವತೆಯು ಹುಟ್ಟುಕುರುಡಿ ತಾನೆ? ಚಾರುದತ್ತನ ಮೇಲಿರುವ ಆರೋಪ ಸಿದ್ಧವಾಗುತ್ತದೆ. ಶಿಕ್ಷೆಯ ಪ್ರಮಾಣವನ್ನು ಮಹಾರಾಜನೇ ನಿರ್ಧರಿಸಬೇಕು. ಆತನು ಚಾರುದತ್ತನನ್ನು ಶೂಲಕ್ಕೇರಿಸುವ ನಿರ್ಣಯವನ್ನು ಹೇಳುತ್ತಾನೆ. ಚಾರುದತ್ತನನ್ನು ವಧಾಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿರುವಾಗ, ಚಾರುದತ್ತನ ಹೆಂಡತಿ ಧೂತಾದೇವಿಯು ಅಗ್ನಿಪ್ರವೇಶ ಮಾಡಲು ಸಿದ್ಧಳಾಗುತ್ತಾಳೆ.

ಆದರೆ ವಸಂತಸೇನೆಯು ಮೂರ್ಛೆ ಹೋಗಿರುತ್ತಾಳೆಯೇ ಹೊರತು, ಸತ್ತಿರುವದಿಲ್ಲ. ಓರ್ವ ಬೌದ್ಧ ಭಿಕ್ಷುವು ಅವಳನ್ನು ಉಪಚರಿಸಿ, ಬದುಕಿಸುತ್ತಾನೆ. ಅವಳು ಧಾವಿಸಿ, ವಧಾಸ್ಥಾನಕ್ಕೆ ಬರುತ್ತಾಳೆ. ಶಕಾರನ ಕುಟಿಲತೆ ಬಯಲಿಗೆ ಬರುತ್ತದೆ. ಚಾರುದತ್ತನ ವಧೆಯು ತಪ್ಪುತ್ತದೆ.

ಈ ನಡುವೆ, ಮಹಾರಾಜನ ವಿರುದ್ಧ ಸಾಮಾನ್ಯ ಜನತೆ ದಂಗೆ ಏಳುತ್ತದೆ. ಮಹಾರಾಜನ ಕೊಲೆಯಾಗುತ್ತದೆ. ದಂಗೆಯ ನಾಯಕನು ಸಿಂಹಾಸನವನ್ನು ಏರುತ್ತಾನೆ. ಚಾರುದತ್ತನಿಗೆ ಮನ್ನಣೆ ಸಿಗುತ್ತದೆ. ವಸಂತಸೇನೆಗೆ ಗೌರವ ಪ್ರಾಪ್ತಿಯಾಗುತ್ತದೆ. ನಾಟಕವು ಸುಖಾಂತವಾಗುತ್ತದೆ.

ಇದಿಷ್ಟು ನಾಟಕದ ಅಸ್ಥಿಪಂಜರ. ಇಷ್ಟೇ ಹೇಳಿದರೆ, ಇದು ಒಂದು ‘ಪತ್ತೇದಾರಿ ನಾಟಕ’ದಂತೆ ಭಾಸವಾಗಬಹುದೇನೊ? ಈ ನಾಟಕಕ್ಕೆ ‘ಮೃಚ್ಛಕಟಿಕಮ್’ (ಮಣ್ಣಿನ ಆಟದ ಬಂಡಿ) ಎನ್ನುವ ಶೀರ್ಷಿಕೆಯನ್ನು ಕೊಟ್ಟಿರುವ ಸಮಂಜಸತೆಯೂ  ಗೊತ್ತಾಗುವದಿಲ್ಲ. ಈ ನಾಟಕದ ಪ್ರತಿಯೊಂದು ಅಂಕವನ್ನು ವಿಶ್ಲೇಷಿಸುತ್ತ ಹೋದರೆ ಮಾತ್ರ, ನಾಟಕದ ಶ್ರೇಷ್ಠತೆ ಅರಿವಿಗೆ ಬರುತ್ತದೆ!

‘ಮೃಚ್ಛಕಟಿಕಮ್’ ನಾಟಕ ಕೇವಲ ತನ್ನ ತಿರುಳಿನ ಕಾರಣಕ್ಕಾಗಿ ಮಾತ್ರವಲ್ಲ, ತನ್ನ ರಚನಾತಂತ್ರದ ಮೂಲಕವೂ ಅದ್ಭುತ ನಾಟಕವಾಗಿದೆ. ಇಲ್ಲಿ ಬರುವ ಅನೇಕ ಪಾತ್ರಗಳು ಹಾಗು ಆ ಪಾತ್ರಗಳ ಕ್ರಿಯೆಗಳು ಒಂದರಲ್ಲೊಂದು ಹಾಸುಹೊಕ್ಕಾಗಿರುವದನ್ನು ನೋಡಿದಾಗ,  ನಾಟಕವನ್ನು ಮುನ್ನಡೆಯಿಸುವದನ್ನು ಹಾಗು ನಾಟಕಕ್ಕೆ ತಿರುವು ಕೊಡುವುದನ್ನು ನೋಡಿದಾಗ, ಇಂತಹ ನಾಟಕ, ಬಹುಶಃ ಜಗತ್ತಿನ ಯಾವ ಭಾಷೆಯಲ್ಲಿಯೂ ಇರಲಿಕ್ಕಿಲ್ಲ ಎನಿಸುವುದು.

Friday, March 11, 2016

ಬೇಂದ್ರೆ-ಕಾವ್ಯ-ವಾಗರ್ಥವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ
                                                      (---ಕಾಲೀದಾಸ, ‘ಕುಮಾರಸಂಭವ’ದಲ್ಲಿ)

ಬೇಂದ್ರೆಯವರನ್ನು ಪದಭಾಂಡಾರದ ಕುಬೇರ ಎಂದು ಕರೆಯಬಹುದೇನೊ.  ವಿವಿಧ ಭಾಷೆಗಳ ವಿವಿಧ ಪದಗಳನ್ನು ಅವರಷ್ಟು ಬಳಸಿದವರು ಕನ್ನಡದಲ್ಲಿ ಮತ್ತಾರೂ ಇಲ್ಲ. ಒಂದು ಪದವನ್ನು ಬಳಸುವಾಗ, ಆ ಪದದ ಹಿಂದಿನ ಹಾಗು ವರ್ತಮಾನದ ಎಲ್ಲ ಅರ್ಥಗಳು ಯಾರಿಗೆ ಹೊಳೆಯುವವೋ ಅವನೇ ನಿಜವಾದ ಕವಿ ಎಂದು ಒಬ್ಬ ಇಂಗ್ಲಿಶ್ ವಿಮರ್ಶಕ ಹೇಳಿದ್ದಾನೆ. ಬೇಂದ್ರೆಯವರಂತೂ ವರಕವಿಗಳು.  ತಮ್ಮ ಕಾವ್ಯದಲ್ಲಿ ರಸನಿರ್ಮಾಣಕ್ಕಾಗಿ ಹಾಗು ಕಾವ್ಯೋದ್ದೀಪನಕ್ಕಾಗಿ ಅವರು ಅನೇಕ ವಿಧಾನಗಳನ್ನು ಸಲೀಲವಾಗಿ ಬಳಸುತ್ತಿದ್ದರು.  ಮುಖ್ಯವಾಗಿ ಶ್ಲೇಷೆಯ ಮೂಲಕ ಪದಗಳಿಗೆ ವಿವಿಧಾರ್ಥಗಳನ್ನು ನೀಡುವ ಹಾಗು ಪದವಿನ್ಯಾಸದ ಮೂಲಕ ಕಾವ್ಯಕ್ಕೆ ಮೆರಗು ನೀಡುವ ವಿಶಿಷ್ಟ ಪ್ರತಿಭೆ ಬೇಂದ್ರೆಯವರದು. ಅವರ ಕವನಗಳಲ್ಲಿ ಬರುವ ಶ್ಲೇಷೆಯನ್ನು ಅರಿತುಕೊಳ್ಳಲು ಕನ್ನಡದ ಜೊತೆಗೆ ಸಂಸ್ಕೃತ  ಹಾಗು ಇಂಗ್ಲಿಶ್ ಅಲ್ಲದೆ, ಕೆಲವಾರು ಭಾರತೀಯ ಭಾಷೆಗಳ ಅರಿವೂ ಅನಿವಾರ್ಯವಾಗಿದೆ. ಅವರ ಈ ಪದಪ್ರತಿಭೆಯ ಒಂದು ಝಲಕನ್ನು ನೋಡಲು ಅವರು ಬಳಸಿದ ಎರಡು ವಿಧಾನಗಳನ್ನು ಮಾತ್ರ ಅಂದರೆ ಶ್ಲೇಷಾಲಂಕಾರ ಹಾಗು ಪದವಿನ್ಯಾಸಗಳ ಕೆಲವು ಉದಾಹರಣೆಗಳನ್ನು ನೋಡೋಣ.

ಶ್ಲೇಷಾಲಂಕಾರದ ಉದಾಹರಣೆಗಳು :
ಕವನ : ಹೃದಯಸಮುದ್ರ :

‘ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮ ಊರೊ ಧೀರಾ
ಅದರೊಳಗೆ ನಾವು ನಮ್ಮೊಳಗೆ ತಾವು / ಅದು ಇಲ್ಲವಣ್ಣ ದೂರಾ’

ಈ ಸಾಲಿನಲ್ಲಿ ಬರುವ ನಾವು ಹಾಗು ತಾವು ಎನ್ನುವ ಪದಗಳನ್ನು ಗಮನಿಸಿರಿ.  ಪರಮಾತ್ಮನ ಹೃದಯಸಮುದ್ರದೊಳಗೆ ‘ನಾವು’ (ಎಂದರೆ ಭಕ್ತರು) ಇದ್ದೇವೆ ಹಾಗು ನಮ್ಮ ಹೃದಯದಸಮುದ್ರದಲ್ಲಿ ‘ತಾವು’ ಎಂದರೆ ಪರಮಾತ್ಮನಿದ್ದಾನೆ. ಆದುದರಿಂದ ನಮ್ಮ ಗಮ್ಯವು ದೂರವಿಲ್ಲ ಎನ್ನುವುದು ಮೇಲ್ನೋಟದ ಅರ್ಥವಾಗಿದೆ.

‘ನಾವು’ ಎಂದರೆ ದೋಣಿ; ‘ತಾವು’ ಅಂದರೆ ಠಾವು ಅರ್ಥಾತ್ ದೋಣಿ ನಿಲ್ಲುವ ಬಂದರು. ಹೃದಯಸಮುದ್ರದೊಳಗೆ ದೋಣಿ ಇದೆ ಹಾಗು ನಮ್ಮ ಹೃದಯದಲ್ಲಿಯೇ ದೋಣಿ ನಿಲ್ಲುವ ಬಂದರು ಇದೆ ಎನ್ನುವುದು ಎರಡನೆಯ ಅರ್ಥ. 

ಈಗ ಮತ್ತೊಂದು ಉದಾಹರಣೆ:
ಕವನ : ಅಂಬಿಕಾತನಯದತ್ತ :
‘ನಿನ್ನ ಉದರದೊಂದ ಹೂವ ಸರಸ್ವತಿಗೆ ಸಲಿಸಿದೆ 
ಚುಕ್ಕೆಯಾಗಿ ನೆಲೆಸಿದೆ
ಸಾವಿರದ ಮನೆಗಳಲ್ಲಿ ನನಗೆ ಮನೆಯ ಮಾಡಿದೆ
ತಾಯಿ ಆಟ ಹೂಡಿದೆ’
‘ಉದರದೊಂದ ಹೂವ’ ಎಂದರೆ ತಾಯಿಯ ಗರ್ಭದಿಂದ ಜನ್ಮ ಪಡೆದ ಕಂದ ಎನ್ನುವುದು ಮೇಲ್ನೋಟದ ಅರ್ಥ. ಈ ಹೂವು ತಾಯಿಯಿಂದ ಉದರಿ ಬೇರ್ಪಡೆಯಾಗುವುದಿಲ್ಲ ಎನ್ನುವುದು ಎರಡನೆಯ ಅರ್ಥ. ಇದು ಬೇಂದ್ರೆಯವರಿಗೆ ತಮ್ಮ ತಾಯಿಯ ಜೊತೆಗೆ ಇದ್ದ ಅನ್ಯೋನ್ಯ ಸಂಬಂಧವನ್ನು ತೋರಿಸುತ್ತದೆ. ಅದರಂತೆ ‘ಸಾವಿರದ ಮನೆಗಳಲ್ಲಿ’ ಎನ್ನುವುದಕ್ಕೆ ಸಾವಿರಾರು ಮನೆಗಳಲ್ಲಿ ಎನ್ನುವ ಅರ್ಥದ ಜೊತೆಗೆ, ‘ಸಾವು ಇರದ’ ಎನ್ನುವ ಅರ್ಥವೂ ಕೂಡಿದೆ.

ತಮ್ಮ ‘ನೋss’ ಎನ್ನುವ ಕವನದಲ್ಲಿ ಬೇಂದ್ರೆಯವರು ‘ನೋ’ ಎನ್ನುವ ಪದವನ್ನು ಇಂಗ್ಲಿಶ್ ಭಾಷೆಯ ಎರಡು ಅರ್ಥಗಳಲ್ಲಿ ಬಳಸಿದ್ದಾರೆ.  ನೋ ಎಂದರೆ know ಎಂದು ಆಗುವಂತೆಯೇ no ಎಂದೂ ಆಗಬಲ್ಲದು. ಈ ಕವನದ ಮೊದಲ ನುಡಿಯ ಮೂರು ಸಾಲುಗಳು ಹೀಗಿವೆ:
‘ಅದು ಏsನೋ ಇತ್ತು
ನೋ, ನೋ, ನೋ ಎನುತಿತ್ತು
ಎನುತಲೆ ಇತ್ತು.’

ಅದು (ಭಗವತ್‍ಚೈತನ್ಯವು)  ಏsನೋ ಇತ್ತು. ಅಂದರೆ ನಮಗೆ ತಿಳಿಯಲು ಸಾಧ್ಯವಾಗದಂತೆ ಅದು ಇತ್ತು. ಅದು ಸಾಧಕರಿಗೆ Know, know, know ಎಂದು ಹೇಳುತ್ತಿತ್ತು ಅಂದರೆ ‘ನನ್ನನ್ನು ತಿಳಿಯಿರಿ’ ಎಂದು ಅದು ಹೇಳುತ್ತಿತ್ತು. ಸಾಧಕನು ತಿಳಿಯಲು ಪ್ರಯತ್ನಿಸಿದಾಗ ಆ ಚೈತನ್ಯವು no, no, no ಎಂದರೆ ‘ನೇತಿ, ನೇತಿ, ನೇತಿ (ಹಾಗಲ್ಲ, ಹಾಗಲ್ಲ, ಹಾಗಲ್ಲ)’ ಎನ್ನುವಂತೆ ಸಾಧಕನಿಗೆ ಭಾಸವಾಗುತ್ತಿತ್ತು.

ಒಂದು ಪದದ ಅರ್ಥವನ್ನು ಬದಲಿಸುವ ಅಥವಾ ಹಿಗ್ಗಿಸುವ ಪ್ರತಿಭೆಯನ್ನು ನಾವು ಬೇಂದ್ರೆಯವರ ಅನೇಕ ಕವನಗಳಲ್ಲಿ ಕಾಣುತ್ತೇವೆ. ಇದರ ನಿದರ್ಶನವಾಗಿ  ‘ಮನುವಿನ ಮಕ್ಕಳು’ ಎನ್ನುವ ಅವರ ಕವನದ ಈ ಸಾಲುಗಳನ್ನು ನೋಡಬಹುದು:
‘ಪ್ರಾಣತರಂಗಿಣಿ’ ತುಳುಕುವುಳು 
ದಡಗಳ ದುಡುಕುವಳು’.

ತರಂಗಿಣಿ ಎಂದರೆ ತರಂಗಗಳನ್ನು ಉಳ್ಳವಳು ಅರ್ಥಾತ್ ನದಿ. ಇವಳು ಎಲ್ಲ ಜೀವಿಗಳಿಗೂ ಪ್ರಾಣಶಕ್ತಿಯನ್ನು ಕೊಟ್ಟು ಪೋಷಿಸುವ ಪ್ರಾಣತರಂಗಿಣಿ.  ಇವಳಿಗೆ ದಂಡೆಗಳನ್ನು ದಾಟಿ ಪ್ರವಹಿಸುವ ದುಡುಕುಬುದ್ಧಿ ಏಕೆ? ಇವಳ ಈ ದುಡುಕಿಗೆ ಕಾರಣವೆಂದರೆ, ಎಲ್ಲ ಜೀವಿಗಳ ಪೋಷಣೆಗಾಗಿ ಅವರತ್ತ ಧಾವಿಸುವ ಇವಳ ಮಮತಾಭಾವ. ಈ ರೀತಿಯಾಗಿ ‘ದುಡುಕು’ ಪದದ ಹೀನ ಅರ್ಥವನ್ನು  ಬೇಂದ್ರೆಯವರು ಇಲ್ಲಿ ಸುಮಾನ-ಅರ್ಥಕ್ಕೆ ಹಿಗ್ಗಿಸಿದ್ದಾರೆ !

ಇದಕ್ಕಿಂತಲೂ ಮಿಗಿಲಾದ ಮತ್ತೊಂದು ಉದಾಹರಣೆಯು ‘ಪಂಪನ ನೆನೆದು’ ಎನ್ನುವ ಅವರ ಕವನದಲ್ಲಿದೆ:
ಮುಗಿಲ ಬಸಿರಿನಲ್ಲಿ ಈಗ ನಿಮ್ಮ ನುಡಿಯು ಅಡಗಿದೆ
ಭುಗಿಲು ಎಂದು ದಿಗಿಲು ಬಡಿಸಿ ಇಲ್ಲಿ ಏಳತೊಡಗಿದೆ.’

‘ಆದಿಕವಿ ಪಂಪನ ನುಡಿಯು  ಆಕಾಶದಲ್ಲಿ ಅಡಗಿತು’ ಎನ್ನುವ ವಾಕ್ಯದ ಸಾಮಾನ್ಯ ಅರ್ಥವೆಂದರೆ  ಪಂಪನು ಸ್ವರ್ಗಸ್ಥನಾದನು ಎಂದಲ್ಲವೆ? ಬೇಂದ್ರೆಯವರು ಆಕಾಶವನ್ನು ‘ಮುಗಿಲಬಸಿರು’ ಎಂದು ಕರೆಯುವ ಮೂಲಕ, ಪಂಪನ ಕಾವ್ಯವು ಮುಂದಿನ ಕಾವ್ಯಗಳಿಗೆ ಪ್ರೇರಣೆಯಾಗಿದೆ, ತಾಯಿಯಾಗಿದೆ ಎಂದು ಸೂಚಿಸುತ್ತಾರೆ! ಪಂಪನ ಆದಿಕಾವ್ಯದಿಂದ ಪ್ರಾರಂಭಿಸಿ, ಕನ್ನಡಕಾವ್ಯದ ಈವರೆಗಿನ ಎಲ್ಲ ಮಾದರಿಗಳವರೆಗೆ, ಪರಂಪರೆಯ ಸಾತತ್ಯವಿದೆ ಎನ್ನುವುದನ್ನೂ ಇದು ಸೂಚಿಸುತ್ತದೆ. ಈ ರೀತಿಯಾಗಿ ಒಂದು ಪದಕ್ಕೆ ಅನೇಕ ಅರ್ಥಗಳನ್ನು ಕೊಡುವ ಪ್ರತಿಭೆಯನ್ನು ಬೇಂದ್ರೆಯವರ ಕವನಗಳಲ್ಲಿ ಕಾಣಬಹುದು. ಈ ಪ್ರತಿಭೆಗೆ ನಿದರ್ಶನವಾಗಿ ‘ತಂಗಿ ಜಾನಕಮ್ಮ’ ಎನ್ನುವ ಮತ್ತೊಂದು ಕವನವನ್ನು ನೋಡೋಣ.

ಕವಯಿತ್ರಿ ಜಾನಕಮ್ಮ ಹಾಗು ಬೇಂದ್ರೆಯವರ ನಡುವೆ ಪತ್ರವ್ಯವಹಾರ ನಡೆದಿತ್ತು, ಆದರೆ ಇವರೀರ್ವರ ಭೇಟಿಯಾಗಿರಲಿಲ್ಲ. ಬೇಂದ್ರೆಯವರು ತಮ್ಮ ಕವನದಲ್ಲಿ ಜಾನಕಮ್ಮನನ್ನು ಸಂಬೋಧಿಸುವುದು ಹೀಗೆ:
‘ತಂಗಿ ಜಾನಕಿ ನಿನ್ನ
ವೈದೇಹದೊಲವಿನಲಿ
ಓಲೆ ಬಂದಿತು ಒಂದು ಇತ್ತ, ತೇಲಿ’

ಇಲ್ಲಿ ವೈದೇಹದೊಲವು ಪದಕ್ಕೆ ಇರುವ ಎರಡು ಅರ್ಥಗಳನ್ನು ನೋಡಿರಿ. ರಾಮಾಯಣದ ಸೀತೆ ವಿದೇಹದ ರಾಜನಾದ ಜನಕನ ಮಗಳು. ಆದುದರಿಂದ ಜಾನಕಿ ಹಾಗು ವೈದೇಹಿ ಎನ್ನುವ ಹೆಸರುಗಳೂ ಇವಳಿಗಿವೆ. ಆದುದರಿಂದ ವೈದೇಹಿಯ ಒಲವು ಎಂದರೆ ಜಾನಕಿಯ ಒಲವು. ವಿದೇಹ ಎಂದರೆ ದೇಹವಿಲ್ಲದಿರುವಿಕೆ ಎಂದೂ ಅರ್ಥವಾಗುತ್ತದೆ. ಆದುದರಿಂದ ವೈದೇಹದೊಲವು ಪರಸ್ಪರರ ಭೇಟಿಯಿಲ್ಲದೆ ಮೂಡಿದ ಒಲವು.

ಈ ಮೇಲಿನ ಉದಾಹರಣೆಗಳಲ್ಲಿ ಒಂದು ಪದದ ಅರ್ಥವು ಹಿಗ್ಗುವುದನ್ನು ನಾವು ನೋಡಿದೆವು. ಒಂದೇ ಪದದಲ್ಲಿ ವಿರುದ್ಧ ಸೂಚನೆಗಳನ್ನು ಕೊಡುವುದರ ಉದಾಹರಣೆಯಾಗಿ ‘ಕನಸಿನೊಳಗೊಂದು ಕಣಸು’ ಎನ್ನುವ ಕವನವನ್ನು ನೋಡಬಹುದು. ಬೇಂದ್ರೆಯವರು ತಮ್ಮ ಕನಸಿನಲ್ಲಿ ಓರ್ವ ಗೌರವಸ್ಥ  ಸ್ತ್ರೀಯನ್ನು  ಕಂಡು ಅವಳೊಡನೆ ಸಂಭಾಷಿಸುವ, ಅವಳನ್ನು ಪ್ರಶ್ನಿಸುವ ದೃಶ್ಯವು ಈ ಕವನದಲ್ಲಿದೆ. ಬೇಂದ್ರೆಯವರು ಆ ಹೆಣ್ಣುಮಗಳಿಗೆ ಕೇಳುವ ಪ್ರಶ್ನೆ ಹಾಗು ಅವಳು ಕೊಡುವ ಉತ್ತರ ಹೀಗಿವೆ:
(ಕವಿ:) ‘ನೀನಾರ ಮನೆಯವಳು ಮುತ್ತೈದೆ ಹೇಳು’
(ಸ್ತ್ರೀ:) ‘ನಾನಾರ ಮನೆಯವಳು ಬಯಲನ್ನೆ ಕೇಳು’

ಈ ಮುತ್ತೈದೆಗೆ ಬಯಲೇ  ಮನೆಯಾಗಿದೆ. ಇದು ಅವಳ ಅನಾಥ ಸ್ಥಿತಿಯ ಸೂಚನೆಯಾಗಿದೆ. ಇದಕ್ಕೆ ಸಂಪೂರ್ಣ ವಿರುದ್ಧವಾದ ಅರ್ಥವೆಂದರೆ ಈ ಬಯಲು, ಈ ವಿಸ್ತಾರವಾದ ಪ್ರದೇಶ ಇದೆಲ್ಲ ಅವಳದೇ ಮನೆ; ಯಾಕೆಂದರೆ ಇವಳು ಆ ನೆಲದ ಒಡತಿ, ಇವಳು ಕನ್ನಡ ತಾಯಿ!

ಬೇಂದ್ರೆ-ಕವನಗಳಲ್ಲಿರುವ ಶ್ಲೇಷೆಗಳನ್ನು ಅರಿತುಕೊಳ್ಳಲು ಕೇವಲ ಭಾಷಾಜ್ಞಾನವೊಂದೇ ಸಾಲದು. ಭಾರತೀಯ ಅಧ್ಯಾತ್ಮಸಾಧನಾಮಾರ್ಗಗಳ  ತಿಳಿವೂ ಅವಶ್ಯವಾಗಿದೆ. ‘ಓ ತಾಯಿ, ಮಾಯಿ, ಶಿವಜಾಯಿ ಕಾಯಿ’ ಎನ್ನುವ ಅವರ ಕವನವೊಂದರಲ್ಲಿ, ಭಕ್ತನೋರ್ವನು ಐಹಿಕ ಕಾಮದಲ್ಲಿ ತಾನು ಸಿಲುಕಿರುವದಾಗಿ ತಾಯಿಗೆ (ದೇವಿಗೆ) ನಿವೇದಿಸುತ್ತಾನೆ.
ತಾಯಿ (ದೇವಿ) ಅವನಿಗೆ ನೀಡುವ ಉತ್ತರ ಹೀಗಿದೆ :
‘ಹಾಂಗಲ್ಲೊ ಮಗನ ನೀ ಭೋಗ ಬೇಡಿದಲ್ಲಲ್ಲು ಬಾಗಿಲಾಗಿ
 ತೆರಿತಾವ ಹಾದಿ, ಅದಕಂತ ಕಾದಿ……………………’

ಭಕ್ತನು ತನ್ನ ಕಾಮಪೂರಣೆಗಾಗಿಯೇ ಕಾಯುತ್ತಿದ್ದ ; ಪ್ರಾರ್ಥನೆಯ ಮೂಲಕ ಅವನಿಗೆ ಪೂರಕ ಮಾರ್ಗಗಳು (ಹಾದಿ) ತೆರೆಯುತ್ತಿವೆ ಎನ್ನುವುದು ಮೇಲುನೋಟದ ಅರ್ಥ. ಹಾದಿ ಹಾಗು ಕಾದಿ ಇವು ತಾಂತ್ರಿಕ ವಿದ್ಯೆಯ ಎರಡು ಮಾರ್ಗಗಳು  ಎನ್ನುವುದು ತಂತ್ರಸಾಧನೆಯ ಮಾಹಿತಿ ಇರುವವರಿಗೆ ಮಾತ್ರ ತಿಳಿದಿರುವ ವಿಷಯ.

ಬೇಂದ್ರೆಯವರ ಕವನಗಳಲ್ಲಿ ಜೋಡುಪದಗಳ ಭಂಡಾರವೇ ಇದೆ. ನಾನು ನೋಡಿದ ಮಟ್ಟಿಗೆ ಇವೆಲ್ಲ ಕನ್ನಡ ಪದಗಳೇ ಆಗಿರುವುದು ಬೇಂದ್ರೆಯವರ ಕನ್ನಡ ಪ್ರೇಮವನ್ನು ಹಾಗು ಪ್ರತಿಭೆಯನ್ನು ತೋರಿಸುತ್ತದೆ ಎಂದು ಹೇಳಬಹುದು. ಅಂತಹ ಕೆಲವು ಉದಾಹರಣೆಗಳನ್ನು ನೋಡೋಣ:
ಕವನ : ‘ಅಹಹ ಸ್ವಾತಂತ್ರ್ಯದೇವೀ !’
‘ಜಿಂಕೆಯೊಲು ದೀಂಕಿಡುವ ಸೋಂಕು ಸೊಗವೇ
ಬಾರೆ ನಗೆಯೊಗಿಸಿ ನಗುವ ಮೊಗವೇ’

‘ಸೋಂಕುಸೊಗವು’ ಎನ್ನುವ ಈ ಜೋಡುಪದವು ಇಂಗ್ಲೀಶಿನ contagious joy ಎನ್ನುವುದರ ಕನ್ನಡ ಸಂವಾದೀ ಪದ. (ಸೋಂಕು=contagious, ಸೊಗ=ಸುಖ=joy). ಆದರೆ ಇದು ಕನ್ನಡದ ಮೂಲಪದ ಎನ್ನುವಷ್ಟರ ಮಟ್ಟಿಗೆ ಈ ಪದದಲ್ಲಿ ಕನ್ನಡತೆ ತುಂಬಿದೆ!

ಅಷ್ಟೇ ಏಕೆ, ಸಾಮಾನ್ಯ ಬಳಕೆಯಲ್ಲಿರುವ ಸಂಸ್ಕೃತ ಜೋಡುಪದಗಳ ಬದಲಾಗಿ ಕನ್ನಡ ಜೋಡುಪದಗಳನ್ನು ಅದಕ್ಕೂ ಹೆಚ್ಚು ಪರಿಣಾಮಕಾರಿಯಾಗಿ ಬೇಂದ್ರೆ ಬಳಸುತ್ತಾರೆ. ಉದಾಹರಣೆಗೆ ‘ಸಾಹಿತ್ಯ-ಕೇಳಿ’ ಎನ್ನುವ ಅವರ ಕವನದ ಈ ಸಾಲುಗಳನ್ನು ನೋಡಿರಿ:
‘ತಂತಾನೆ ತಣಿವಿನಲ್ಲಿದ್ದ ತಲ್ಲೀನತೆಯು
ನಿದ್ದೆ ತಿಳಿದೆದ್ದಾಗ ಎನಿತೆನಿತು ಶಾಂತಿ !
ಬಾಯಿಲ್ಲದನುಭವದ ನೆನವೆ ನನೆಕೊನೆಹೋಗಿ
ಕನಸೆ ನನಸಾಗಿರಲದಂಥ ನವ ಕಾಂತಿ !’

ಅನಿರ್ವಚನೀಯ ಅನುಭವ’ ಎನ್ನುವ ಸಂಸ್ಕೃತ ಜೋಡುಪದವು ಸಾಕಷ್ಟು ಬಳಕೆಯಲ್ಲಿದ್ದರೂ ಸಹ, ಬೇಂದ್ರೆಯವರು ‘ಬಾಯಿಲ್ಲದನುಭವದ’ ಎನ್ನುವ ಪದವನ್ನು ಟಂಕಿಸಿ, ಬಳಸಿ, ಇನ್ನೂ ಹೆಚ್ಚಿನ ಪರಿಣಾಮವನ್ನು ಪಡೆದಿದ್ದಾರೆ. ಇದರಂತೆಯೇ ‘ಏಳು ಕನ್ನಿಕೆಯರು’ ಎನ್ನುವ ಅವರ ಇನ್ನೊಂದು ಕವನವನ್ನು ನೋಡಬಹುದು:

‘ಅಯ್ಯೊ ಎಂದು ತಿಳಿಯದಾಗಿ
ಮೈಯೆ ಬಾಯಿಬಿಟ್ಟ ಹಾಗೆ
ಬೆವರು ಬಂದ ಮೈಯ ತುಂಬ
ನವಿರುಮುಳ್ಳು ನಿಂತಿತೋ—ನವಿರುಮುಳ್ಳು ನಿಂತಿತು.’
ವ್ಯವಹಾರದಲ್ಲಿ ಬಳಕೆಯಲ್ಲಿರುವ ‘ರೋಮಾಂಚನ’ಕ್ಕಿಂತ ಹೆಚ್ಚಿನ ಅರ್ಥವು ‘ನವಿರುಮುಳ್ಳು’ ಎನ್ನುವ ಪದದಲ್ಲಿ ಲಭ್ಯವಾಗುತ್ತದೆ.

ಇಂತಹದೇ ಇನ್ನೊಂದು ಉದಾಹರಣೆಯು ಅವರ ‘ಕಲ್ಪವೃಕ್ಷವೃಂದಾವನಗಳಲ್ಲಿ’ ಎನ್ನುವ ಕವನದಲ್ಲಿದೆ:
‘ಹೊನ್ನಿ ಹುಳಗಳೊಲು ಓರೆ ನೋಟಗಳು
ಹಾರಿ ಮಿನುಗುತಿಹವು
ಬಳ್ಳಿಮಾಡಗಳು ಸನ್ನೆ ಮಾಡುತಿವೆ
ನನಗು ನಿನಗು ಬರಲು.’
‘ಲತಾಮಂಟಪ’ ಎನ್ನುವ ಅತಿ-ಬಳಸಲಾದ ಸಂಸ್ಕೃತ ಪದಕ್ಕಿಂತ ‘ಬಳ್ಳಿಮಾಡ’ವು ನವೀನವೆನಿಸುತ್ತದೆ ಹಾಗು ಈ ಜೋಡುಪದವು ಈ ಗೀತೆಗೆ ಬೇಕಾದಂತಹ ಛಂದದಲ್ಲಿ ಸಲೀಸಾಗಿ ಹೊಂದಿಕೊಳ್ಳುತ್ತದೆ.

ಬೇಂದ್ರೆಯವರ ಕೆಲವು ಕವನಗಳಲ್ಲಿ ಹಳೆಗನ್ನಡದ ಅಥವಾ ನಡುಗನ್ನಡದ ಛಾಯೆ ಇದ್ದರೆ, ಇನ್ನು ಕೆಲವು ಕವನಗಳಲ್ಲಿ ಸಂಸ್ಕೃತದ ವಿಶೇಷತೆ ಇದೆ. ಇನ್ನೂ ಕೆಲವು ಕವನಗಳು ಆಧುನಿಕ ಕಾಲದ ಅಚ್ಚ ದೇಸೀಭಾಷೆಯಲ್ಲಿವೆ. ಈ ಕವನಗಳಲ್ಲಿ ಬಳಸಿದ ಜೋಡುಪದಗಳೂ ಸಹ ಇಂತಹದೇ ವೈಶಿಷ್ಟ್ಯವನ್ನು ಹೊಂದಿವೆ.
ನಡುಗನ್ನಡದ ಛಾಯೆಯ ಒಂದು ಕವನವನ್ನು ಈಗ ನೋಡೋಣ:

‘ಚೆನ್ನಕೇಶವನ ಕಣ್ಣಿದಿರು ಕುಣಿಕುಣಿವ
ನಲ್ಲರೂಹಿನ ಕಲ್ಲು !’

‘ನಲ್ಲ’ ಪದಕ್ಕೆ ‘ಒಳ್ಳೆಯ’ ಎನ್ನುವ ಅರ್ಥವಿದೆ. ಸಂಸ್ಕೃತದ ‘ರೂಪ’ವು ಕನ್ನಡದಲ್ಲಿ ರೂಹು ಎನ್ನುವ ಪದವಾಗಿದೆ. ಇವೆರಡನ್ನೂ ಜೋಡಿಸಿ ‘ನಲ್ಲರೂಹು’ ಎನ್ನುವ ಜೋಡುಪದವನ್ನು ಬೇಂದ್ರೆ ಸೃಷ್ಟಿಸಿದ್ದಾರೆ. ಈ ಪದವು ಬೇಲೂರಿನ ದೇವಾಲಯದ ನಿರ್ಮಾಣಕಾರ್ಯಯದ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತಹ ಪದವಾಗಿದೆ ಎನ್ನುವುದನ್ನು ಗಮನಿಸಬೇಕು.  ಇದೇ ಕವನದಲ್ಲಿ ‘ಕಲ್ನಾಟಿಸಿದ ವೀರರಾಡುಂಬೊಲವು’ ಎನ್ನುವ ಸಾಲು ಬರುತ್ತದೆ. ವೀರಗಲ್ಲುಗಳನ್ನು ಹಾಗು ಮಾಸತಿ ಕಲ್ಲುಗಳನ್ನು ಸ್ಥಾಪಿಸಲು ಕಾರಣರಾದ ವೀರಪುರುಷರನ್ನು ಹಾಗು ಗರತಿಯರನ್ನು ಬೇಂದ್ರೆಯವರು ‘ಕಲ್ನಾಟಿಸಿದ’ ಎನ್ನುವ ಅಚ್ಚಕನ್ನಡ ವಿಶೇಷಣದಿಂದ ಗೌರವಿಸುತ್ತಾರೆ.

‘ವನಸುಮ’ ಕವನದಲ್ಲಿ ಸಂಸ್ಕೃತದ ಬಳಕೆಯನ್ನು ನೋಡಬಹುದು:
ಗಂಧಬಾಂಧವನು ಸ್ವಚ್ಛಂದ ಮಾರುತನು
ಈ ಸೌಸವವ ಮೂಸಿ ಉಸಿರಾಡಿಸುವನು.’
ಮನಬಂದಂತೆ ಹರಿದಾಡುವ ಹಾಗು ಹೂವುಗಳ ಕಂಪನ್ನು ಎಲ್ಲೆಡೆಗೆ ಹರಡುವ ಗಾಳಿಯನ್ನು ಬೇಂದ್ರೆಯವರು ‘ಗಂಧಬಾಂಧವ’ ಎನ್ನುವ ಜೋಡುಪದದ ಮೂಲಕ ಬಣ್ಣಿಸುತ್ತಾರೆ.

‘ಸಿದ್ಧರಾಮರ ವಚನವನ್ನು ನೆನೆದು’ ಎನ್ನುವ ಕವನದಲ್ಲಿ ಸಂಸ್ಕೃತ ಜೋಡುಪದಗಳ ಜೊತೆಜೊತೆಗೆ ಕನ್ನಡದ ಧಾತುಸಾಧಿತ ಪದಗಳೂ ದೊರೆಯುತ್ತವೆ:
‘ಆದರೇನೆಲ್ಲೆಲ್ಲು ಗುಂಭಮೌನವೆ ತುಂಬಿ
ಮೂಢನ ಸಮಾಧಿಯಲಿ ಕತ್ತಲಿಸಿದೆ
ವೈಭವಕೆ ಕಳೆಯಿಲ್ಲ ಜ್ಞಾನಕ್ಕೆ ಬೆಳೆಯಿಲ್ಲ
ಅಜ್ಞಾನವೇ ಸುತ್ತ ಬತ್ತಲಿಸಿದೆ’.
ಈ ನುಡಿಯಲ್ಲಿ ‘ಗುಂಭಮೌನ’ ಎನ್ನುವ ಸಂಸ್ಕೃತ ಜೋಡುಪದವನ್ನೂ, ಕತ್ತಲಿಸು ಹಾಗು ಬತ್ತಲಿಸು ಎನ್ನುವ ಕನ್ನಡ ಧಾತುಸಾಧಿತ ಪದಗಳನ್ನೂ ಗಮನಿಸಬೇಕು.

ಪ್ರಸಕ್ತ ಕಾಲದ ಕನ್ನಡದ ದೇಸಿ ಪದಗಳನ್ನು ಜೋಡಿಸಿ ಬೇಂದ್ರೆಯವರು ಪಡೆದ ಜೋಡುಪದಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ:
ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ
ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು;’

‘ಬರಿದೊ ಬರಿದು ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ

 ಕೊನೆಬಿಕ್ಕು ಬಂದಾಗ
ಇಡುಗಂಗೆ ತಂದಾಗ
ಹನಿಯೊಂದು ಕುಡಿಸಿದರೆ ಏನು ತಣಿವು?
ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಗೋಳನ್ನು ‘ ಕೊನೆಬಿಕ್ಕು’ ಎನ್ನುವ ಜೋಡುಪದವು ಸಮರ್ಥವಾಗಿ ವರ್ಣಿಸುತ್ತದೆ.

ಬೇಂದ್ರೆಯವರ ‘ನರಬಲಿ’ ಕವನವು ಅವರನ್ನು ಸೆರೆಮನೆಗೆ ತಳ್ಳಿತು. ಮಹಾಕಾಳಿಯನ್ನು ಸಂಕೇತವಾಗಿ ಇಟ್ಟುಕೊಂಡು, ಜಾಗತಿಕ ಯುದ್ಧವನ್ನು ಟೀಕಿಸಿ ಬರೆದ ಈ ಕವನದಲ್ಲಿ ಅವರು ಅವಳ ಸ್ವಭಾವವನ್ನು ವರ್ಣಿಸುವುದು ಹೀಗೆ:
 ‘ಜೀವ ತಿನ್ನುವಾ ಹಸಿವೆ ಮತ್ತೆ ಆ ನೆತ್ತರ ನೀರಡಿಕೆ
‘ರಕ್ತಪಿಪಾಸು’ ಎನ್ನುವ ಸಂಸ್ಕೃತ ಸಮಾಸದ ಬದಲಾಗಿ ‘ನೆತ್ತರ ನೀರಡಿಕೆ’ ಎನ್ನುವ ಕನ್ನಡ ಜೋಡುಪದವನ್ನು ಬೇಂದ್ರೆ ಪರಿಣಾಮಕಾರಿಯಾಗಿ ಬಳಸಿದ್ದಾರೆ.

ಇದೇ ಕವನದಲ್ಲಿ ಗುಬ್ಬಿಮಾನವ, ಬೆವರಿನ ಬಳ್ಳಿ, ನೆತ್ತರ ಹೂವು, ಸಾವಿನ ಹಣ್ಣು, ಬಂಜೆಬೆಂಕಿ ಮೊದಲಾದ ಕನ್ನಡ ಜೋಡುಪದಗಳು ಬಂದಿವೆ. ಇವುಗಳಲ್ಲಿ ‘ಬಂಜೆಬೆಂಕಿ’ ಎನ್ನುವುದು ಸ್ವಾರಸ್ಯಕರವಾದ ಜೋಡುಪದವಾಗಿದೆ.
‘ನೆಲದಗಲಕೆ ಮುಗಿಲುದ್ದಕೆ ಹೊತ್ತಿಹ ಎಲೆಲೆ ಬಂಜೆಬೆಂಕಿ !
ಪ್ರಳಯಕಾಳಿ ಏ ರುದ್ರಕಾಳಿ ಎಲೆ ಎಲೆಲೆ ಮಹಾಂಕಾಳಿ !’

‘ಬಂಜೆ ಸಫಲಳಲ್ಲ. ಅದರಂತೆಯೇ ಈ ಯುದ್ಧವು ಒಳ್ಳೆಯದಾದ ಏನನ್ನೂ ಸಾಧಿಸುವುದಿಲ್ಲ, ಆದರೆ ಮಾನವಸಂತತಿಯನ್ನು ಸುಟ್ಟುಹಾಕುತ್ತದೆ’ ಎನ್ನುವ ಭಾವವು ಈ ಪದದಲ್ಲಿದೆ. ನಾಲ್ಕಕ್ಕರದ ಒಂದು ಜೋಡುಪದವು ಎಷ್ಟೆಲ್ಲ ಅರ್ಥವನ್ನು ಕೊಡಬಲ್ಲದು ಎನ್ನುವುದಕ್ಕೆ ‘ಬಂಜೆಬೆಂಕಿ’ ಸಾಕ್ಷಿಯಾಗಿದೆ.  ಬಂಜೆಬೆಂಕಿ, ಬೆವರಿನ ಬಳ್ಳಿ, ನೆತ್ತರನೀರಡಿಕೆ ಮೊದಲಾದ ಜೋಡುಪದಗಳಲ್ಲಿ ಬರುವ ಅನುರಣನವು ಆ ಪದಗಳ ಪರಿಣಾಮವನ್ನು ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತವೆ ಎನ್ನುವುದನ್ನು ಗಮನಿಸಬೇಕು.

ಗಂಡಿನಿಂದ ಸೋಲಿಸಲ್ಪಟ್ಟು, ಅವನಿಗೆ ಮರುಳಾಗಿ ಅವನನ್ನು ವಶಮಾಡಿಕೊಳ್ಳಲು ಬಯಸುವ ಹೆಣ್ಣು ತನ್ನನ್ನೇ ಬಣ್ಣಿಸಿಕೊಳ್ಳುವ ಒಂದು ಬಗೆಯನ್ನು ‘ಮಾಯಾಕಿನ್ನರಿ’ ಎನ್ನುವ ಕವನದಲ್ಲಿ ನೋಡಬಹುದು. ಮರುಳಸಿದ್ಧನೆನ್ನುವ ಯೋಗಿಯು ಮಾಯೆ ಎನ್ನುವ ಯೋಗಿನಿಯನ್ನು ಸೋಲಿಸಿ ಅವಳನ್ನು ಕಿನ್ನರಿ ಎನ್ನುವ ಸಂಗೀತದ ಉಪಕರಣವನ್ನಾಗಿ ಮಾರ್ಪಡಿಸುತ್ತಾನೆ. ಅವನಿಗೆ ಮನಸೋತ ಮಾಯೆಯು ಪ್ರಣಯಿನಿಯ ಛಲದಿಂದ ಹೇಳುವ ಹಾಡು ಹೀಗಿದೆ:
‘ಆಡುತಾಡುತ ಬಂದು ಸಿಂಗಾರಸೊಳ್ಳೀ ಹಾಂಗ
ಹಾಡಿಲೆ ಕಿವಿಗಲ್ಲ ಕಡಿದ್ಯೇನ’

 ‘ತಾನು ‘ಸಿಂಗಾರಸೊಳ್ಳಿ’ಯಂತೆ ಅವನ ಕಿವಿಯನ್ನು ಹೊಕ್ಕು ಗುಂಯ್‍ಗುಡುತ್ತೇನೆ; ವಿಲಾಸದಿಂದ ಅವನ ಗಲ್ಲವನ್ನು ಕಡಿಯುತ್ತೇನೆ’ ಎಂದು ಹೇಳುವ ಮಾತಿದು. ಸಿಂಗಾರಸೊಳ್ಳಿ ಎನ್ನುವ ಅಪೂರ್ವವಾದ ಜೋಡುನುಡಿಯನ್ನು ಬೇಂದ್ರೆಯವರು ಇಲ್ಲಿ ಸೃಷ್ಟಿಸುವ ಮೂಲಕ ‘ಮಾಯೆ’ಯ ಸ್ವಭಾವವನ್ನು ಒಂದೇ ಜೋಡುಪದದಲ್ಲಿ ವರ್ಣಿಸಿದ್ದಾರೆ

ಒಂದು ಸನ್ನಿವೇಶಕ್ಕೆ ಜೀವ ತುಂಬಲು ಬೇಂದ್ರೆಯವರ ಜೋಡುಪದಗಳು ತುಂಬ ಉಪಯುಕ್ತವಾಗಿವೆ. ಅವರ ‘ಕೊಳಲನೂದಿದ’ ಕವನದಲ್ಲಿ ಕೃಷ್ಣನ ಕೊಳಲದನಿಯನ್ನು ಕೇಳಿದ ನದಿ, ಗಾಳಿ, ಕರು ಇವೆಲ್ಲ ಮಂತ್ರಮುಗ್ಧವಾಗುವದನ್ನು ಚಿತ್ರಿಸಲು ಬೇಂದ್ರೆಯವರು ಜೋಡುಪದಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿದ್ದಾರೆ:
ಕಳೆದ ಕರುವಿಗಾಗಿ ಗೋಪಿ
ನೆಲವ ಮೂಸಿ ಮೂಸಿ ಮೂಸಿ
ಹುಡುಕುವಂತೆ ಹುಚ್ಚುಗಾಳಿ
ತಡೆದು ತಡವುತಿಹುದು ಇನ್ನೂ

ಸುಗ್ಗಿಗೊರಳ ಕೋಗಿಲಂತೆ
ನುಗ್ಗಿ ದನಿಯು ಪಂಚಮದಲ್ಲಿ
ಮುಗ್ಗಿ ಬಿದ್ದು ಮುಗಿಯದsನ
ಮುತ್ತುವಂತೆ ಸುತ್ತುವಂತೆ

ತಿರುವುಗಿವಿಯ ಮಾಡಿ ಆವು
ನಿಂತವಕ್ಕ ನಿಂತಲ್ಲೇನs
ನೀನು ಕೂಡ ಬೀದಿಯಲ್ಲೆ
ನಡಿಯದsನ ತಡೆದು ನಿಂತಿ

ಈ ಕವನದಲ್ಲಿ ಜೋಡುಪದಗಳ ಮೂಲಕ ಮಂತ್ರಮುಗ್ಧವಾದ ಚರಾಚರ ಪ್ರಕೃತಿಯನ್ನು ಸುಲಭವಾಗಿ  ವರ್ಣಿಸಲಾಗಿದೆ. ಆದರೆ ಆ ಅದೃಶ್ಯ ಪರಮಾತ್ಮನನ್ನು  ಸೂಚಿಸಲು ಅಸಾಮಾನ್ಯ ವಸ್ತುಗಳ ಜೋಡುಪದಗಳನ್ನು ಬಳಸಬೇಕಾಗುವದಲ್ಲವೆ? ಬೇಂದ್ರೆಯವರ ‘ನಾದಲೀಲೆ’ ಕವನದಲ್ಲಿ ಪರಮಾತ್ಮನು ಎಲ್ಲವನ್ನು ಆಟವಾಡಿಸುವ ಸೂತ್ರಧಾರನು ಎನ್ನುವ ಅರ್ಥವನ್ನು ಕೊಡುವ ಸಾಲುಗಳು ಹೀಗಿವೆ:
‘ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ,
ಮುಗಿಲಬಾಯ ಗಾಳಿಕೊಳಲ ಬೆಳಕಹಾಡ ಬೀರಿ

ಎರಡನೆಯ ಸಾಲಿನಲ್ಲಿರುವ ಪದಗಳನ್ನು ಗಮನಿಸಿರಿ. ಮುಗಿಲು, ಗಾಳಿ, ಬೆಳಕು ಇವು ಪಂಚಮಹಾಭೂತಗಳ ಪೈಕಿ ಮೂರು ಭೂತಗಳು. ಮುಗಿಲೇ ಬಾಯಾಗಿರುವ, ಗಾಳಿಯೇ ಕೊಳಲಾಗಿರುವ ಹಾಗು ಬೆಳಕೇ ಹಾಡಾಗಿರುವ ವಿಶ್ವಚೈತನ್ಯನನ್ನು ವರ್ಣಿಸಲು ಮತ್ತೇನು ಬೇಕು?

ಬೇಂದ್ರೆಯವರು ಜೋಡುಪದಗಳನ್ನಲ್ಲದೇ ಕೂಡುಪದಗಳನ್ನೂ ಸೃಷ್ಟಿಸಿದ್ದಾರೆ. ಉದಾಹರಣೆಗೆಂದು ಈ ಕೆಲವು ಪದಗಳನ್ನು ಹೇಳಬಹುದು:
ಹಿಂಜಾಪು = ದೀರ್ಘವಾದ ಹಿನ್ನಡೆತ (a long back-stride)
ಗಸಿಗಿಳಿಸು =ಸೋಸು
ಮಣಿಮಾಟ = ಮೈಯನ್ನು ಮಣಿಸುವ ಕುಶಲತೆ
ಮೇಗಿಲ್ಲದ = ಇದಕ್ಕೂ ಹೆಚ್ಚಿನದು ಇಲ್ಲದ
ಹಚ್ಚಂಗಿ = ಹಚ್ಚನೆಯ ಅಂಗಿ, ಹಸಿರು ಅಂಗಿ
ಉಕ್ಕಂದ = ಉಕ್ಕುವ ಅಂದ
ತಪ್ಪಡಿ =ತಪ್ಪುಹೆಜ್ಜೆ
ಹೊಕ್ಕರಣೆ = ಹೊಕ್ಕು ತುಂಬುವ ಪುಷ್ಕರಿಣಿ (ಹೊಂಡ)
ಒಕ್ಕುಡಿತೆ = ಒಕ್ಕಾಲು ಕುಡಿತಕ್ಕೆ ಮಾತ್ರ ಸಾಲುವಷ್ಟು
ಅರೆಮುಕ್ಕು = ಅರ್ಧ ಮುಕ್ಕಳಿಕೆಗೆ ಮಾತ್ರ ಸಾಲುವಷ್ಟು
ಸೊಗಸಿ-ಜೀವ =ಸ್ವಲ್ಪದರಲ್ಲಿಯೇ ಸುಖ ಪಡೆವ ಜೀವ
ಉಗುರುದಿಟ್ಟಿ = ಮುಖ ಕೆಳಗೆ ಮಾಡಿದ ನೋಟ

ಬೇಂದ್ರೆಯವರು ಕನ್ನಡ, ಸಂಸ್ಕೃತ, ಮರಾಠಿ ಹಾಗು ಇಂಗ್ಲಿಶ್ ಭಾಷೆಗಳಲ್ಲಿ ವಿಸ್ತೃತವಾದ ಅಧ್ಯಯನವನ್ನು ಮಾಡಿದವರು. ಈ ಓದಿನ ಪ್ರಭಾವವನ್ನು ಅವರು ತಮ್ಮ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಹಾಗು ಸೋದ್ದಿಶ್ಯವಾಗಿ ತೋರಿಸುತ್ತಾರೆ.

‘ಒಡಲು’ ಎನ್ನುವ ಕವನದ ಈ ಸಾಲನ್ನು ನೋಡಿರಿ:
ಒಡಲ-ಒಡೆಯನು ತೀರಿಕೊಳಲು ಹುಟ್ಟಿದ ಮನೆಗೆ
ಬಂದ ಹೆಣ್ಣಿನ ಹಾಗೆ…….’
ಗಂಡ ತೀರಿಕೊಂಡಾಗ, ಒಬ್ಬ ಹೆಣ್ಣುಮಗಳು ತವರು ಮನೆಗೆ ಮರಳಿ ಬಂದಿರುವ ಸನ್ನಿವೇಶವಿದು.‘ ಗಂಡ’ ಎನ್ನುವ ಪದದ ಬದಲಾಗಿ ಬೇಂದ್ರೆಯವರು ‘ಒಡಲ-ಒಡೆಯ’ ಎನ್ನುವ ಪದವನ್ನು ಬಳಸಿದ್ದಾರೆ. ಕಾಲೀದಾಸನು ತನ್ನ ‘ಕುಮಾರಸಂಭವ’ ಕಾವ್ಯದಲ್ಲಿ ಇಂತಹದೇ ಪದವನ್ನು ಬಳಸಿದ್ದಾನೆ. ಶಿವನ ಕೋಪಾಗ್ನಿಯಲ್ಲಿ ಮನ್ಮಥನು ಸುಟ್ಟು ಬೂದಿಯಾದಾಗ, ಅವನನ್ನು ಹುಡುಕಿಕೊಂಡು ಬಂದ ರತಿಯು, ಈ ರೀತಿಯಾಗಿ ಕೇಳುತ್ತಾಳೆ:
‘ಅಯಿ ಜೀವಿತನಾಥ, ಜೀವಸಿ? (= ಬದುಕಿನೊಡೆಯಾ ಬದುಕಿರುವೆಯಾ?)  
ಬೇಂದ್ರೆಯವರ ಕವನದಲ್ಲಿ ಜೀವಿತನಾಥನು ಒಡಲ-ಒಡೆಯನಾಗಿದ್ದಾನೆ.
ಬೇಂದ್ರೆಯವರು ಕಾಲೀದಾಸನನ್ನು ನೆನೆಸಿ, ಗೌರವಿಸುವ ಪರಿಯಿದು.
(ಇದಲ್ಲದೆ, ಒಡಲ-ಒಡೆಯ ಅಂದರೆ ಅವಳ ಸಂಪೂರ್ಣ ಯಜಮಾನ ಎನ್ನುವ ಅರ್ಥವೂ ಹೊಮ್ಮುತ್ತದೆ.)
ಇಂತಹದೇ ಮತ್ತೊಂದು ಗೌರವಸಮರ್ಪಣೆಪಾರಿಜಾತ’ ಎನ್ನುವ ಕವನದಲ್ಲಿದೆ:
‘ಚಿಕ್ಕೆಯೊಡನೆ ಮೂಡು ಮುಳುಗು;
ಆಗದದಕೆ ಹಗಲು ಬೆಳಗು;
ಜ್ಞಾನಿಯ ಗತಿ, ಇರುಳೊಳಗತಿ
ನಿಜ ಜಾಗೃತಿ ಇರುವದು.

ಪಾರಿಜಾತ ಹೂವಿಗೆ ಇರುಳಿನಲ್ಲಿ ‘ಒಳಗತಿ’ ಎಂದರೆ ಅಂತರ್ಜ್ಞಾನ ಇರುವದು.  ‘ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ’ ಎನ್ನುವ ಗೀತಾವಾಕ್ಯದ ಪ್ರಭಾವವನ್ನು ಇಲ್ಲಿ ಕಾಣಬಹುದು. ಬೇಂದ್ರೆ ಆ ಪ್ರಭಾವವನ್ನು ಒಪ್ಪಿಕೊಳ್ಳುತ್ತಾರೆ ಹಾಗು ಓದುಗರ ಎದುರಿಗೆ ಇಡುತ್ತಾರೆ.

ಬೇಂದ್ರೆಯವರ ಕವನಗಳಲ್ಲಿ ಸಂದರ್ಭಾನುಸಾರವಾಗಿ ಕನ್ನಡದಲ್ಲಿ ಬಳಕೆಯಲ್ಲಿರುವ, ಆದರೆ ಮೂಲತಃ ಕನ್ನಡದ್ದಲ್ಲದ ಅನೇಕ ಪದಗಳು ಬರುತ್ತವೆ. ಧಾರವಾಡವನ್ನು ಬಿಟ್ಟು ಹೋಗಬೇಕಾದ ಸಂದರ್ಭದಲ್ಲಿ ‘ನಾವು ಬರತೇವಿನ್ನ’ ಎನ್ನುವ ಕವನವನ್ನು ಅವರು ರಚಿಸಿದರು. ಆ ಕವನದ ಒಂದು ನುಡಿ ಹೀಗಿದೆ:
‘ಜೋಲಿ- ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು-ಲೋಕದಾಗ
ನಾವು-ಮರತೇವದನ ಹ್ಯಾಂಗ? ’

ತೋಲು ಇದು ‘ತೋಲನಾ=ತೂಕ ಮಾಡು’ ಎನ್ನುವ ಅರ್ಥವುಳ್ಳ ಹಿಂದೀ ಪದ. ಕನ್ನಡದಲ್ಲಿ ಇದಕ್ಕೆ ಜೋಲಿ ಹಿಡಿಯುವುದು ಎನ್ನುವ ಬೇರೆಯದೇ ಆದ ಅರ್ಥ ಪ್ರಾಪ್ತವಾಗಿದೆ. ‘ಮೋಲು’ ಇದು ಮೌಲ್ಯ ಎನ್ನುವ ಸಂಸ್ಕೃತ ಪದದ ಪ್ರಾಕೃತೀಕರಣ.

ಬೇಂದ್ರೆಯವರ ಪದಸಂಪತ್ತು ಅಪಾರವಾದದ್ದು. ‘ಗರಿ’ ಕವನಸಂಕಲನದಲ್ಲಿ ಇರುವ ಒಟ್ಟು ೭೧೫೦ ಪದಗಳಲ್ಲಿ ೧೧೮೦ ಪದಗಳನ್ನು ಕೇವಲ ಒಂದೇ ಬಾರಿಗೆ ಬಳಸಲಾಗಿದೆ. ಅವರ ಕವನಗಳಲ್ಲಿ ಹಳೆಗನ್ನಡ, ಹೊಸಗನ್ನಡ, ಪ್ರಾಕೃತ, ಸಂಸ್ಕೃತ, ಉರ್ದು ಹಾಗು ಇಂಗ್ಲಿಶ್ ಭಾಷೆಯ ಪದಗಳು ಕಾವ್ಯದ ತಿರುಳನ್ನು ಬೆಳಗಿಸಲು, ಕಾವ್ಯದ ಸ್ವರೂಪವನ್ನು ನಿಶ್ಚಯಿಸಲು ಬಳಕೆಯಾಗಿವೆ. ಆ ಪದಸಾಗರವನ್ನು ಅಳೆಯಲು ನನ್ನಂತಹ ಸಾಮಾನ್ಯನಿಗೆ ಸಾಧ್ಯವಿಲ್ಲ. ಇದು ಕೇವಲ ಒಂದು ಸಾಧಾರಣ ಪ್ರಯತ್ನವಷ್ಟೇ!

ಕಾಲೀದಾಸನು ತನ್ನ ಕಾವ್ಯದಲ್ಲಿ ವಾಕ್ ಮತ್ತು ಅರ್ಥಗಳು ಶಿವ-ಪಾರ್ವತಿಯರಂತೆ ಬೆಸೆದುಕೊಂಡಿರಲಿ ಎಂದು ಪ್ರಾರ್ಥಿಸಿದ್ದಾನೆ. ಆ ಪ್ರಾರ್ಥನೆಯು ಬೇಂದ್ರೆ ಕಾವ್ಯದಲ್ಲಿ ಸಫಲವಾಗಿದೆ ಎಂದು ಹೇಳಬಹುದು.

 (ಈ ಲೇಖನವು ‘ಪದಾರ್ಥಚಿಂತಾಮಣಿ’ಯಿಂದ ಪ್ರಕಟವಾದ ‘ಪದಸಂಸ್ಮರಣ-೨೦೧೬’ರಲ್ಲಿ ಪ್ರಕಟವಾಗಿದೆ. ‘ಪದಾರ್ಥಚಿಂತಾಮಣಿ’ಗೆ ನಾನು ಕೃತಜ್ಞನಾಗಿದ್ದೇನೆ.)