Thursday, December 27, 2012

ಅತ್ಯಾಚಾರೀ ಸಮಾಜ ಹಾಗು ಪರಿಹಾರದ ಹಕ್ಕು


ಈಗಿನ ಭಾರತೀಯ ಸಮಾಜವು ಅತ್ಯಾಚಾರೀ ಸಮಾಜವಾಗಿದೆ. ಸ್ತ್ರೀಯರ ಮೇಲಿನ ದೌರ್ಜನ್ಯದ ಹಾಗು ಸಾರ್ವಜನಿಕ ಅಪಮಾನದ ಸಮಾಚಾರಗಳು ಪ್ರತಿದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇವೆ. ಈ ದುಷ್ಕೃತ್ಯಗಳನ್ನು ಮಾಡುವ ನೀಚರನ್ನು ಗಲ್ಲಿಗೇರಿಸಬೇಕು ಎನ್ನುವ ಬೇಡಿಕೆಯು ಸರಿಯಾದದ್ದೇ. ಕೊಲೆಯಾದವನ ಯಾತನೆಯು ಒಂದೇ ಸಲಕ್ಕೆ ಮುಗಿಯುತ್ತದೆ. ಆದರೆ ಅತ್ಯಾಚಾರಕ್ಕೊಳಗಾದ ಸ್ತ್ರೀಯು ಪ್ರತಿದಿನವೂ ಮಾನಸಿಕ ಹಾಗು ಸಾಮಾಜಿಕ ಯಾತನೆಯನ್ನು ಅನುಭವಿಸುತ್ತಾಳೆ. ಆದುದರಿಂದ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಶಿಕ್ಷೆ ಸಮರ್ಪಕ ಶಿಕ್ಷೆಯಾಗಿದೆ. ಇಷ್ಟೇ ಸಾಲದು. ಅತ್ಯಾಚಾರಕ್ಕೊಳಗಾದ ಸ್ತ್ರೀಗೆ ಅಪರಾಧಿಯು ಭಾರೀ ಪರಿಹಾರವನ್ನು ನೀಡಬೇಕು. ಈ ಪರಿಹಾರವನ್ನು ನೀಡುವ ಆರ್ಥಿಕ ಸಾಮರ್ಥ್ಯ ಅವನಲ್ಲಿ ಇಲ್ಲದಿದ್ದರೆ, ಸರಕಾರವೇ ಆ ಮೊತ್ತವನ್ನು ಭರಿಸಬೇಕು.

ಒಂದು ಕೂಸು ಹುಟ್ಟಿದ ಗಳಿಗೆಯಲ್ಲಿ, ಅದು ಸರ್ವತಂತ್ರ ಸ್ವತಂತ್ರ ಜೀವಿಯಾಗಿರುತ್ತದೆ. ಆದರೆ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಟ್ಟ ಕ್ಷಣದಿಂದ, ಆ ಜೀವಿಯ ಸ್ವಾತಂತ್ರ್ಯ ನಷ್ಟವಾಗುತ್ತದೆ. ಉದಾಹರಣೆಗೆ, ಸ್ವತಂತ್ರ ಜೀವಿಯು ಕಾಡಿಗೆ ಹೋಗಿ, ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು. ತನ್ನನ್ನು ಕಾಡುವ ವೈರಿಗಳನ್ನು ಕೊಂದು ಹಾಕಬಹುದು. ಆದರೆ, ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗುವ ಅನಿವಾರ್ಯತೆಯಿಂದಾಗಿ ಇಂತಹ ಸ್ವಾತಂತ್ರ್ಯ ಹೊರಟುಹೋಗುತ್ತದೆ. ಅದರ ಬದಲಾಗಿ ಆ ಜೀವಿಗೆ ಕೆಲವೊಂದು ಹಕ್ಕುಗಳು ಲಭಿಸುತ್ತವೆ. ದುರಾಚಾರದಿಂದ ರಕ್ಷಣೆ ಪಡೆಯುವುದು ಪ್ರತಿಯೋರ್ವ ಜೀವಿಯ ಹಕ್ಕು ಹಾಗು ರಕ್ಷಣೆ ಕೊಡುವುದು ಸರಕಾರದ ಹೊಣೆಗಾರಿಕೆ. ರಕ್ಷಣೆ ಸಾಧ್ಯವಾಗದಿದ್ದರೆ, ಸಮುಚಿತ ಪರಿಹಾರವನ್ನು ಕೊಡಲೇಬೇಕು. ಅದು ಸರಕಾರದ ಕರ್ತವ್ಯ.

ಅತ್ಯಾಚಾರಿಗಳಿಗೆ ಶಿಕ್ಷೆ ಹಾಗು ದೌರ್ಜನ್ಯಪೀಡಿತರಿಗೆ ಪರಿಹಾರ ನೀಡುವದಷ್ಟೇ ಸಾಲದು. ಭಾರತೀಯ ಸಮಾಜದಲ್ಲಿ ಅತ್ಯಾಚಾರಗಳು ಏಕೆ ಹೆಚ್ಚಾಗುತ್ತಿವೆ ಎನ್ನುವುದನ್ನು ಅರಿತು, ಆ ಸಮಸ್ಯೆಯನ್ನು ಬಗೆಹರಿಸುವುದು ಅವಶ್ಯಕವಾಗಿದೆ. ಸಮಸ್ಯೆಯ ಕಾರಣವಂತೂ ಸ್ಪಷ್ಟವಾಗಿದೆ. ನಮ್ಮ ಸಮಾಜವು ತನ್ನ ತರುಣರಿಗೆ ತಪ್ಪು ಹಾದಿಯನ್ನು ತೋರಿಸುತ್ತಿದೆ. ನೈತಿಕ ಹಾಗು ಸಾಮಾಜಿಕ ಆದರ್ಶಗಳು ಮಾಯವಾಗಿವೆ. ಟೀವಿ ಹಾಗು ಸಿನೆಮಾಗಳಲ್ಲಿ ಆಶ್ಲೀಲತೆ ಹಾಗು ಮಿತಿಮೀರಿದ ಕ್ರೌರ್ಯದ ಪ್ರದರ್ಶನವಾಗುತ್ತಿದೆ.  ನಮ್ಮ ಶಾಸಕರಲ್ಲಿ ಶೇಕಡಾ ೩೦ರಷ್ಟು ಶಾಸಕರು ಒಂದಿಲ್ಲ ಒಂದು ನಮೂನೆಯ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಮ್ಮ ರಾಜಕೀಯ ಬಲದಿಂದಾಗಿ ಅನೇಕ ರಾಜಕಾರಣಿಗಳ ಅಪರಾಧಗಳು ಮುಚ್ಚಿ ಹೋಗುತ್ತಿವೆ. ಈ ನಾಯಕರೇ ನಮ್ಮ ತರುಣರಿಗೆ ಮಾದರಿಯಾಗಿದ್ದಾರೆ! ಹೀಗಿದ್ದಾಗ ನಮ್ಮ ಸಮಾಜವು ಅತ್ಯಾಚಾರೀ ಸಮಾಜವಾಗಿ ಬದಲಾದದ್ದರಲ್ಲಿ ಆಶ್ಚರ್ಯವೇನಿದೆ? ಯಥಾ ರಾಜಾ ತಥಾ ಪ್ರಜಾ!

ಗ್ಯಾಂಗ್‍ರೇಪ್‍ನಂತಹ ಅತ್ಯಾಚಾರಗಳು ಕಣ್ಣಿಗೆ ಎದ್ದು ಕಾಣುವಂತಹ ದೌರ್ಜನ್ಯಗಳಾಗಿವೆ. ಆದರೆ ಸಾರ್ವಜನಿಕರ ನಜರಿಗೆ ಬಾರದಿರುವ ದೌರ್ಜನ್ಯಗಳು ಇದರ ಸಾವಿರ ಪಟ್ಟಿನಷ್ಟಿವೆ. ಭಾರತದ ಮೆಟ್ರೋಗಳಲ್ಲಿ ದಿನವೂ ಅನೇಕ ಅಪಹೃತ ಬಾಲಿಕೆಯರ ಮಾರಾಟವಾಗುತ್ತಿದೆ. ಎರಡು ವರ್ಷಗಳ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದು ಪತ್ರಿಕೆಗಳಲ್ಲಿ ಬೆಳಕಿಗೆ ಬರುತ್ತಿದೆ. ಹೆಣ್ಣಾಗಿ ಹುಟ್ಟಿದ್ದೇ ಈ ಬಾಲಿಕೆಯರ ಹಾಗು ಶಿಶುಗಳ ಅಪರಾಧವೇ?

ಸರಕಾರಕ್ಕೆ ಇದು ಗೊತ್ತಿರದೆ ಏನು? ಆದರೆ ಅಪರಾಧ ಮಾಫಿಯಾ ದೊಡ್ಡ ಸಂಘಟನೆಯಾಗಿದೆ. ಇವರು ಗಳಿಸುವ ಕೊಳಕು ಹಣದಲ್ಲಿ ಸಮಾಜರಕ್ಷಕರಿಗೂ ಪಾಲಿರುತ್ತದೆ. ಸರಕಾರದ ಕನಿಷ್ಠ ಕರ್ಮಚಾರಿಯಿಂದ ಪ್ರಾರಂಭವಾಗಿ, ಸರಕಾರದ ವರಿಷ್ಠರವರೆಗೆ ಎಲ್ಲರಿಗೂ ಈ ಅರಿಷ್ಟ ಹಣದಲ್ಲಿ ಪಾಲಿರುವದು ಒಂದು ಬಹಿರಂಗ ರಹಸ್ಯ!

ಆದುದರಿಂದ ಅಪರಾಧಿಗಳಲ್ಲಿ ಹೆದರಿಕೆ ಹುಟ್ಟಿಸುವಂತಹ ಶಿಕ್ಷೆಯ ಜೊತೆಗೆ, ಭಾರತೀಯ ಸಮಾಜದಲ್ಲಿರುವ ಅನೈತಿಕ ಕೊಳಕನ್ನು ಗುಡಿಸುವ ಕೆಲಸವೂ ಆಗಬೇಕು. ಶಾಲೆಗಳಲ್ಲಿ ನೈತಿಕ ಶಿಕ್ಷಣ ದೊರೆಯಬೇಕು. ಟೀವಿ ಹಾಗು ಸಿನೆಮಾಗಳಲ್ಲಿ ಅಶ್ಲೀಲತೆ ಹಾಗು ಕ್ರೌರ್ಯದ ಪ್ರದರ್ಶನಗಳನ್ನು ಪ್ರತಿಬಂಧಿಸಬೇಕು. ಲಂಚಗುಳಿ ಹಾಗು ಲಂಪಟ ರಾಜಕಾರಣಿಗಳನ್ನು ಸಮಾಜವು ತಿರಸ್ಕರಿಸಬೇಕು. ಅಲ್ಲಿಯವರೆಗೂ ಸ್ತ್ರೀಯರ ಹಾಗು ಬಾಲಿಕೆಯರ ಮೇಲಿನ ದೌರ್ಜನ್ಯವು ನಿಲ್ಲುವದಿಲ್ಲ.

ಸಾಮಾಜಿಕ ಅಪರಾಧಗಳಿಗೆ ಇನ್ನೂ ಒಂದು ಕಾರಣವಿದೆ. ಅನೇಕ ವರ್ಷಗಳ ಹಿಂದೆ, ಪ್ರಾಣಿವಿಜ್ಞಾನಿಗಳು ವಿಭಿನ್ನ ಪ್ರದೇಶಗಳ ಮಂಗಗಳ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಾಣಿಗಳಲ್ಲಿ ಅವರು ಮೂರು ಗುಂಪುಗಳನ್ನು ಮಾಡಿದ್ದರು: ಅತಿ ದಟ್ಟವಾದ ಸಂಖ್ಯೆಯುಳ್ಳ ಗುಂಪು, ವಿರಳ ಸಂಖ್ಯೆಯ ಗುಂಪು ಹಾಗು ಮಧ್ಯಮ ಪ್ರಮಾಣದ ಸಂಖ್ಯೆಯ ಗುಂಪು. ಯಾವ ಗುಂಪಿನಲ್ಲಿ ಅತಿ ದಟ್ಟವಾದ ಪ್ರಾಣಿಸಂಖ್ಯೆ ಇದ್ದು, ನಾಯಕತ್ವವು ಬಲಹೀನವಾಗಿರುವಿದೋ, ಆ ಗುಂಪಿನ ಪ್ರಾಣಿಗಳಲ್ಲಿ ಪರಸ್ಪರ ಕಚ್ಚಾಟ ಹಾಗು ಅಪರಾಧಗಳು ವಿಶೇಷ ಪ್ರಮಾಣದಲ್ಲಿ ಕಂಡು ಬಂದವು. ಪ್ರಾಣಿಗಳಲ್ಲಿ ಸಾಧಾರಣವಾಗಿ ಕಂಡು ಬರದಂತಹ, ರೇಪ್ ಸಹ ಈ ಗುಂಪಿನಲ್ಲಿ ಕಂಡು ಬಂದಿತು. ಭಾರತದ ಸದ್ಯದ ಪರಿಸ್ಥಿತಿಯು ಇದೇ ರೀತಿಯಾಗಿರುವುದು ಸ್ಪಷ್ಟವಿದೆ. ನಮ್ಮಲ್ಲಿ ಮಿತಿ ಮೀರಿದ ಜನಸಂಖ್ಯೆ ಇದ್ದು, ಬಲಶಾಲಿ ನಾಯಕತ್ವದ ಅಭಾವವಿದೆ. 


ನಮ್ಮ ನಾಯಕರು ಮಧ್ಯರಾತ್ರಿಯ ಸಮಯದಲ್ಲಿ ನಿದ್ರಿಸುವ ಅಮಾಯಕ ಜನತೆಯ ಮೇಲೆ (--ಅವರಲ್ಲಿ ಅನೇಕರು ಮಹಿಳೆಯರು--) ಲಾಠೀಚಾರ್ಜ ಮಾಡಿಸುವ ಮೂಲಕ ತಮ್ಮ ಬಲಪ್ರದರ್ಶನ ಮಾಡುತ್ತಿದ್ದಾರೆ. ರಾಮಲೀಲಾ ಬಯಲಿನಲ್ಲಿ ರಾಮದೇವರ ಶಿಷ್ಯರ ಮೇಲೆ ನಡಿಸಿದ ಈ ದೌರ್ಜನ್ಯವು ಜಾಲಿಯಾನವಾಲಾ ಬಾಗಿನಲ್ಲಿ ಬ್ರಿಟಿಶರು ನಡೆಸಿದ ದೌರ್ಜನ್ಯಕ್ಕಿಂತ ಯಾವುದರಲ್ಲಿ ಕಡಿಮೆ ಇದೆ? ಅದರಂತೆ ಜಂತರಮಂತರ ಹಾಗು ಇಂಡಿಯಾ ಗೇಟಿನ ಬಳಿ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವು ಚೀನಾದಲ್ಲಿಯ ಟಿಯಾನಾನ್ಮನ್ ಚೌಕದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ನೆನಪಿಸುತ್ತದೆ. ನಮ್ಮ ಸರಕಾರದ ನೀತಿಯೆಂದರೆ, ಚಳುವಳಿಗಾರರನ್ನು ಇದೇ ರೀತಿಯಲ್ಲಿ ಸತಾಯಿಸುತ್ತ ಇರಬೇಕು. ಕೊನೆಗೊಮ್ಮೆ ಅವರೇ ದಣಿದು ತಮ್ಮ ಚಳುವಳಿಯನ್ನು ಸ್ಥಗಿತಗೊಳಿಸುತ್ತಾರೆ! ಇದಕ್ಕೆ ಬಲಶಾಲಿ ನಾಯಕತ್ವ ಎನ್ನುವುದಿಲ್ಲ. ಇದು ಮಹಾಭಾರತದ ದುರ್ಯೋಧನನ ನೀತಿ. ನಮಗೆ ಬೇಕಾಗಿರುವುದು ಸುಭಾಷಚಂದ್ರ ಭೋಸ ಹಾಗು ವಲ್ಲಭಬಾಯಿ ಪಟೇಲರಂಥವರ ಸ್ಥೈರ್ಯದ ಗುಣ!


ಇನ್ನು  ಮತಬ್ಯಾಂಕನ್ನು ಓಲೈಸುವ ರಾಜಕಾರಣಿಗಳು ಜನಸಂಖ್ಯಾನಿಯಂತ್ರಣದ ಬಗೆಗೆ ಕ್ರಮ ತೆಗೆದುಕೊಳ್ಳುವದಂತೂ ಕನಸಿನ ಮಾತು. ಜನಸಂಖ್ಯೆ ಹೆಚ್ಚಿದಂತೆಲ್ಲ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಸಮಸ್ಯೆಗಳ ದುರ್ಲಾಭ ಪಡೆಯುವದೇ ರಾಜಕಾರಣಿಗಳ ನೀತಿಯಾಗಿದೆ.  ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರೆದರೆ, ನಮ್ಮ ಭಾರತವು ಕೊಳಚೆಯ ಗೂಡಾಗುವದರಲ್ಲಿ ಸಂದೇಹವಿಲ್ಲ.

Friday, December 21, 2012

"ಬರುವದೇನೆ ನೆಪ್ಪಿಗೆ".........................ಬೇಂದ್ರೆ



ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.

                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.                                                           
ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು

                        ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

                        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
                        ಇಬ್ಬರನ್ನು ನೂಗಿಕೊಂಡು
                                    ಒಬ್ಬನಾಗಿ ಎದ್ದಿದೆ.
                        ಚಿತ್ತವೆಲ್ಲಿ ಎನುವಾಗಲೆ
                                ಕೊಡುವ ಮೊದಲೆ ಕದ್ದಿದೆ.

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.
……………………………………………………………..
‘ಬರುವದೇನೆ ನೆಪ್ಪಿಗೆ’ ಕವನದಲ್ಲಿ ಬೇಂದ್ರೆಯವರು ತಮ್ಮ ಕೆಳದಿಯೊಡನೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಈ ನೆನಪುಗಳು ಮೂರು ಕಾಲಘಟ್ಟಗಳಲ್ಲಿ ಹಂಚಿಹೋಗಿವೆ. ಪ್ರತಿಯೊಂದು ಘಟ್ಟದ ಪ್ರಾರಂಭದಲ್ಲಿಯೂ ಬೇಂದ್ರೆಯವರು ತಮ್ಮ ಮಡದಿಗೆ ‘ಬಂದಿತೇನೆ ನೆನಪಿಗೆ?’ ಎಂದು ಕೇಳುತ್ತಿದ್ದಾರೆ.

ಗಂಡ-ಹೆಂಡತಿಯ ಮೊದಲ ನೆನಪು ತಮ್ಮ ಮದುವೆಯ ಸಮಯದ್ದೇ ಆಗಿರುತ್ತದೆಯಲ್ಲವೆ? ಬೇಂದ್ರೆಯವರು ತಮ್ಮ ಮಡದಿಗೆ ನೆನಪು ಮಾಡಿಕೊಡುವುದೂ ಅದನ್ನೇ!

“ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.”

ಬೇಂದ್ರೆಯವರು ಮದುವೆಯಾದಾಗ ಅವರ ವಯಸ್ಸು ೨೩. ಅವರ ಹೆಂಡತಿಯ ವಯಸ್ಸು ೧೩ ! ಹಿರಿಯರೇ ಮದುವೆಯನ್ನು ನಿಶ್ಚಯಿಸುವ ಆ ಕಾಲದಲ್ಲಿ, ಮದುವೆಯಾಗುವ ಹುಡುಗನ ಹಾಗು ಹುಡುಗಿಯ ಒಪ್ಪಿಗೆಯನ್ನು ಕೇಳುವವರು ಯಾರು? ಅಂತೆಲೇ ಬೇಂದ್ರೆಯವರು ‘ನಮ್ಮ ನಿಮ್ಮ ಒಪ್ಪಿಗೆ’ ಎಂದು ವಿನೋದಿಸುತ್ತಾರೆ. ಅಂತಃಪಟವನ್ನು ಸರಿಸುವವರೆಗೂ ವಧುವರರು ಪರಸ್ಪರ ಮುಖವನ್ನು ಸಹ ನೋಡಿರುತ್ತಿರಲಿಲ್ಲ. ಆದುದರಿಂದಲೇ ಬೇಂದ್ರೆಯವರು ‘ಎಲ್ಲೊ ಏನೊ ನೋಡಿದೆ, ಹಾಗೆ ಬಂದು ಕೂಡಿದೆ’ ಎಂದು ಹೇಳುತ್ತಾರೆ. ತಮ್ಮ ಸಖೀಗೀತದಲ್ಲೂ ಸಹ, ಬೇಂದ್ರೆಯವರು ಈ ಪ್ರಸಂಗವನ್ನು “ಅಂತಃಪಟದಾಚೆ ವಿಧಿ ತಂದ ವಧು ನೀನು”  ಎಂದು ವರ್ಣಿಸಿದ್ದಾರೆ!

ಬೇಂದ್ರೆಯವರ ದಾಂಪತ್ಯಜೀವನ ಪ್ರಾರಂಭವಾಗುತ್ತದೆ. ದಾಂಪತ್ಯಧರ್ಮವನ್ನು ಅರಿತುಕೊಳ್ಳುವುದು ಬೆಳಕು. ದಂಪತಿಗಳಲ್ಲಿ ನೈಸರ್ಗಿಕವಾಗಿ ಜ್ವಲಿಸುತ್ತಿರುವುದು ಕಾಮದ ಬೆಂಕಿ. ಈ ಎರಡೂ ಸಮರಸವಾಗಿ ಬೆರೆತಿರಲು ದಂಪತಿಗಳ ಬದುಕು ಒಂದು ಹಬ್ಬ. ಇಂತಹ ಸಾಮರಸ್ಯದ ಬದುಕಿನಿಂದ ಮನದೊಳಗೆ ಭಾವೋದ್ದೀಪನವಾಗುತ್ತದೆ.
ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆಯವರು ಈ ತಾರುಣ್ಯದ ಹಬ್ಬವನ್ನು ಹೀಗೆ ವರ್ಣಿಸಿದ್ದಾರೆ:

“ಹಗಲೆಲ್ಲೊ ಹಾರಿದವು ಇರುಳೆಲ್ಲ ಜಾರಿದವು
ಋತು ನಿದ್ದೆಯಾಡಿದವು ಬುಗುರೆಯೊಲೆ”

ದಂಪತಿಗಳಲ್ಲಿ ಸಾಮರಸ್ಯ ಮೂಡಿದಾಗ ಬಾಳಿನಲ್ಲಿ ಉಲ್ಲಾಸ ಹಾಗು ಉತ್ಸಾಹ ಮೂಡುತ್ತವೆ.ಈ ಸಾಧನೆಯಾದಾಗ ಬಾಳು ಮೊಳೆಯುತ್ತದೆ. ಬಾಳಿನಲ್ಲಿ ಸುಗ್ಗಿ ಪ್ರವೇಶಿಸುತ್ತದೆ ಹಾಗು ಸುಖದ ಹೂವು ಅರಳುತ್ತದೆ. ಈ ಭಾಗವನ್ನು ಬೇಂದ್ರೆಯವರು ಹಾಡುವುದು ಹೀಗೆ:
                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.

ಈ ಕಾಲದಲ್ಲಿ ಗಂಡನ ಕಣ್ಣಿಗೆ ಹೆಂಡತಿ ಅಪ್ಸರೆಯೇ ಸೈ. ಅವಳ ಬೆಡಗು, ಬಿನ್ನಾಣ, ಅವಳ ಹುಬ್ಬಿನ ಕುಣಿತ ಅವನನ್ನು ಮರಳುಗೊಳಿಸುತ್ತವೆ. ಬೇಂದ್ರೆಯವರೂ ಇದಕ್ಕೆ ಹೊರತಾಗಿರಲಿಲ್ಲ.

(ಬೇಂದ್ರೆಯವರ ‘ಅಪರೂಪರಾಗ’ ಎನ್ನುವ ಕವನವು ಪ್ರಾರಂಭವಾಗುವುದೇ ‘ಆಹಾs ಚೆಲುವೆ’ ಎಂದು:
“ಆಹಾs ಚೆಲುವೆ, ಓಹೋs ಚೆಲುವೆ, ಏನುs ಚೆಲುವೆಯೋ
ನಿನ್ನ ನೀನೊ ಏನೊ ಏನೊ ನೋಡಿs ನಲಿವೆಯೋ”)

ತಾರುಣ್ಯದ ಈ ಮಬ್ಬು ಇಳಿದ ಬಳಿಕ, ದಂಪತಿಗಳು ತಾವು ಬಯಸಿದ್ದೇನು, ದೊರೆತದ್ದೇನು ಎಂದು ಯೋಚಿಸುತ್ತಾರೆ. ಬಯಸಿದ್ದೆಲ್ಲ ದೊರೆಯಲಿಕ್ಕಿಲ್ಲ. ಆದರೆ ಮೈಕಾವೇ ಅವರ ಮನಸ್ಸನ್ನೂ ಬೆಚ್ಚಗೆ ಮಾಡುತ್ತದೆ. ಅದೇ ಪರಸ್ಪರ ಪ್ರೀತಿಗೂ ಕಾರಣವಾಗುತ್ತದೆ. ಅದನ್ನು ಬೇಂದ್ರೆಯವರು ಹೇಳುವುದು ಹೀಗೆ:

ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬೇಂದ್ರೆ-ಬದುಕಿನ ಎರಡನೆಯ ಕಾಲಘಟ್ಟವು ೧೯೩೨ನೆಯ ಇಸವಿಯಿಂದ ಪ್ರಾರಂಭವಾಗುತ್ತದೆ ಎನ್ನಬಹುದು. ಬೇಂದ್ರೆಯವರು ಈಗಾಗಲೇ ಎರಡು ಗಂಡುಮಕ್ಕಳನ್ನು ಕಳೆದುಕೊಂಡಿದ್ದರು. ‘ನರಬಲಿ’ ಕವನವು ಅವರನ್ನು ಸೆರೆಮನೆಗೆ ಕಳಿಸಿತು. ೯ವರ್ಷಗಳವರೆಗೆ ಅಂದರೆ ೧೯೪೧ನೆಯ ಇಸವಿಯವರೆಗೆ ಅವರು ರಾಜಾಜ್ಞೆಯಿಂದಾಗಿ ಕೆಲಸವಿಲ್ಲದೆ ಅಲೆದಾಡಬೇಕಾಯಿತು. ಮದುವೆಯಾದದ್ದೇ ತಪ್ಪಾಯಿತೇನೊ ಎಂದು ಅವರಿಗೆ ಎನಿಸುವುದು ಸಹಜ. ಮಕ್ಕಳಾದದ್ದಂತೂ  ಮತ್ತೂ ದೊಡ್ಡ ತಪ್ಪು. ಇದೀಗ ಆ ತಪ್ಪಿನೊಡನೆ ಹೊಂದಿಕೊಂಡು ಹೋಗಲು ಏನೆಲ್ಲ ಕಸರತ್ತು ಮಾಡಬೇಕಲ್ಲವೆ? ಆದುದರಿಂದಲೇ ಬೇಂದ್ರೆಯವರು ತಮ್ಮ ಮಡದಿಗೆ ವಿಷಾದದಿಂದ ಹೇಳುತ್ತಾರೆ:

“ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು”

‘ಏನೊ ಏನೊ ನೂತೆವು’ ಎಂದು ಹೇಳುವಾಗ ಬೇಂದ್ರೆಯವರು ಜೇಡರಹುಳದ ರೂಪಕವನ್ನು ಬಳಸುತ್ತಿದ್ದಾರೆ. ಬೇಂದ್ರೆ ದಂಪತಿಗಳು ತಾವೇ ಹೆಣೆದಂತಹ ಸಂಸಾರವೆನ್ನುವ ಬಲೆಯಲ್ಲಿ ಸಿಲುಕಿದ್ದಾರೆ!

ಮಕ್ಕಳ ಸಲುವಾಗಿಯಾದರೂ ಈ ದಂಪತಿಗಳು ಬದುಕಿನ ತೆಳು ಎಳೆಗೆ ಜೋತು ಬೀಳುವುದು ಅನಿವಾರ್ಯವಾಗಿತ್ತು.
ಧಾರವಾಡ ಬೇಂದ್ರೆಯವರನ್ನು ಹೊರಗೆ ಹಾಕಿತು. ಬೇಂದ್ರೆಯವರ ವಾಸ ಪುಣೆಯಲ್ಲಿ.
ಕಕ್ಕನ ಆಸರೆ ಹಾಗು ಹಿರಿಯಣ್ಣನಂತಹ ಮಾಸ್ತಿಯವರ ನೆರವಿನಿಂದ ಬದುಕನ್ನು ಸಾಗಿಸಿದರು. ಆಗ ಬೇಂದ್ರೆಯವರ ಪಾಲಿಗೆ ನಾಡೆಲ್ಲ ಮೋಡ ಕವಿದ ವಾತಾವರಣ, ಕಣ್ಣು ಹೊರಳಿಸಿದಲ್ಲೆಲ್ಲ ಕಾರುಕತ್ತಲೆ.

ಈ ಮಾತನ್ನು ಅವರು ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ದೊರೆತ ನೆರವು ಅವರ ಪಾಲಿನ ಮಳೆಯ ಮಿಂಚು. ಏಕೆಂದರೆ ಈ ನೆರವು ಮಿಂಚಿನಂತೆ ಕ್ಷಣಿಕ ಹಾಗು ಅಲ್ಪ ಬೆಳಕನ್ನು ನೀಡುವಂತಹದು. ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಹೇಳುವದಾದರೆ, ಮಹಾತ್ಮಾ ಗಾಂಧಿ ಹಾಗು ಇತರ ದೇಶಭಕ್ತರು, ಮೋಡ ಕವಿದ ಭಾರತದಲ್ಲಿ ಮಿಂಚಿನಂತೆ ಬೆಳಕು ನೀಡುತ್ತಿದ್ದರು.

ಈ ಮಳೆ, ಈ ಮಿಂಚು ಬೇಂದ್ರೆ ಕುಟುಂಬಕ್ಕೆ ನೀಡಿದ ಫಲವೇನು? ‘ಮಣ್ಣಿನಲ್ಲಿ ಮಣ್ಣಾದ ಬೀಜ’ ಎಂದು ಬೇಂದ್ರೆ ಅದನ್ನು ವರ್ಣಿಸುತ್ತಾರೆ. ಅಂದರೆ ಅವರ ಹರಪ್ರಯತ್ನಗಳಿಗೆ ಯಾವ ಫಲವೂ ಸಿಗಲಿಲ್ಲ!
         ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಕಕ್ಕನ ನೆರವಿನಿಂದ ಪುಣೆಯಲ್ಲಿ ಕನ್ನಡ ಎಮ್.ಏ. ಪದವಿಯನ್ನು ಪೂರೈಸಿದ ಬೇಂದ್ರೆಯವರು ಒಂದು ಒಳಸಂಚಿನಿಂದಾಗಿ ಮೂರನೆಯ ದರ್ಜೆಯಲ್ಲಿ ಪಾಸಾದರು. ಆದುದರಿಂದ ಕಾಲೇಜು ಉಪನ್ಯಾಸಕ ಪದವಿಯನ್ನು ಪಡೆಯಲು ಅನರ್ಹರಾದರು! ಹೀಗಾಗಿ ೧೯೪೧ರಲ್ಲಿ ಗದುಗಿನ ವಿದ್ಯಾದಾನ ಸಮಿತಿ ಹೈಸ್ಕೂಲಿಗೆ ಹೆಡ್ ಮಾಸ್ತರ ಎಂದು ಹೋದರು. ೧೯೪೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಶ್ ಸ್ಕೂಲಿಗೆ ಶಿಕ್ಷಕರಾಗಿ ಬಂದರು. ಇದನ್ನೇ ಅವರು ‘ಸುಖದ ತೊಟ್ಟು ತೊಟ್ಟಿಗಾಗಿ ಹತ್ತು ಕಡೆಗೆ ಹಣಿಕಿದೆ’ ಎಂದು ಬಣ್ಣಿಸುತ್ತಾರೆ!

ಈ ರೀತಿಯಲ್ಲಿ ಬೇಂದ್ರೆ ದಂಪತಿಗಳು ಗೃಹಸ್ಥಜೀವನದ ಮೊದಲೆರಡು ಪುರುಷಾರ್ಥಗಳಾದ ಧರ್ಮ ಹಾಗು ಅರ್ಥ ಇವುಗಳನ್ನು ಸಂಚಯಿಸುವುದರಲ್ಲಿ ವಿಫಲರಾದರು. ಈ ವೈಫಲ್ಯದಲ್ಲಿ ಗಂಡಹೆಂಡಿರೇ ಒಬ್ಬರೊಬ್ಬರಿಗೆ ಆಸರೆಯನ್ನು ಕೊಡಬೇಕಲ್ಲವೆ? ವರಕವಿಗಳು ಈ ವೈಪಲ್ಯವನ್ನು, ಈ ಪರಸ್ಪರ ಆಲಂಬನವನ್ನು ವರ್ಣಿಸುವುದು ಹೀಗೆ:

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.
ಉಪ್ಪೂ ಸಹ ಸಿಗಲಾರದಂತಹ ಸಂಕಟಕಾಲದ ವರ್ಣನೆ ಇದು.

ಬೇಂದ್ರೆಯವರ ನೆನಪುಗಳ ಮೂರನೆಯ ಕಾಲಘಟ್ಟ ಈಗ ಪ್ರಾರಂಭವಾಗುತ್ತದೆ:
೧೯೪೩ರಲ್ಲಿ ಬೇಂದ್ರೆಯವರು ಪುದುಚೆರಿಯಲ್ಲಿ ಶ್ರೀಮಾತಾ ಹಾಗು ಅರವಿಂದರ ದರ್ಶನವನ್ನು ಪಡೆದರು. ೧೯೪೪ರಲ್ಲಿ ಮಹಾರಾಷ್ಟ್ರವು (ಸೊಲ್ಲಾಪುರದ ಡಿ.ಏ.ವ್ಹಿ. ಕಾಲೇಜು) ಇವರಿಗೆ ಕನ್ನಡ ಪ್ರಾಧ್ಯಾಪಕ ಹುದ್ದೆ ಕೊಟ್ಟು ಆದರಿಸಿತು.

ಇದು ಸ್ವಾತಂತ್ರ್ಯ ಚಳುವಳಿಯ ಮಹಾಕಾಲವೂ ಅಹುದು.ದೇಶಪ್ರೇಮಿಗಳೆಲ್ಲರೂ ‘ಗಾಂಧೀ ಟೊಪ್ಪಿಗೆ’ಯನ್ನು ತೊಡುತ್ತಿದ್ದ ಕಾಲ. ಬೇಂದ್ರೆಯವರು ಅದನ್ನು ಬಣ್ಣಿಸುವುದು ಹೀಗೆ:

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

ಟೊಪ್ಪಿಗೆ ಹಾಕಿಸಿಕೊಳ್ಳುವುದು ಅಂದರೆ ಮೋಸಹೋಗುವುದು ಎಂದರ್ಥ. ಬದುಕು ಬೇಂದ್ರೆ ದಂಪತಿಗಳನ್ನು ಮೋಸಗೊಳಿಸಿತು. ಆದರೆ, ಬೇಂದ್ರೆಯವರು ಮತ್ತೊಂದು ಟೊಪ್ಪಿಗೆಯನ್ನೂ ನೆನೆಸಿಕೊಳ್ಳುತ್ತಿದ್ದಾರೆ. ಅದು ಗಾಂಧೀ ಟೊಪ್ಪಿಗೆ. ಗಾಂಧೀ ಟೊಪ್ಪಿಗೆಯು ನಾಡಿನ ಜನರನ್ನು ಜಾಗೃತಗೊಳಿಸಿದ ಟೊಪ್ಪಿಗೆ. ಸಾಮಾನ್ಯ ಜನರಲ್ಲಿಯೂ ದೇಶಪ್ರೇಮವನ್ನು ಬಿತ್ತಿದ ಟೊಪ್ಪಿಗೆ. ಅನೇಕ ಜನ ಯುವಕರು ರಣೋತ್ಸಾಹದಿಂದ ಸ್ವಾತಂತ್ರ್ಯಯುದ್ಧದಲ್ಲಿ ಪಾಲ್ಗೊಳ್ಳಲು ಪ್ರೇರಣೆ ಕೊಟ್ಟ ಟೊಪ್ಪಿಗೆ. ಇದನ್ನು ಬೇಂದ್ರೆಯವರು ಹೇಳುವುದು ಹೀಗೆ:
        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
ಇದರ ಪರಿಣಾಮವು ಬೇಂದ್ರೆ ದಂಪತಿಗಳ ಮೇಲೆಯೂ ಆಯಿತು. ದಂಪತಿಗಳ ಸಂಬಂಧವು ಇನ್ನಷ್ಟು ಬಲವಾಯಿತು.         

 ಇಬ್ಬರನ್ನು ನೂಗಿಕೊಂಡು
  ಒಬ್ಬನಾಗಿ ಎದ್ದಿದೆ.
              ಚಿತ್ತವೆಲ್ಲಿ ಎನುವಾಗಲೆ
              ಕೊಡುವ ಮೊದಲೆ ಕದ್ದಿದೆ.

ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ‘ಕೊಡುವುದೇನು, ಕೊಂಬುವುದೇನು? ಒಲವು, ಸ್ನೇಹ, ಪ್ರೇಮ!’ ಎಂದಿದ್ದಾರೆ. ಈ ಅನುರಾಗ ಭಾವನೆಯನ್ನು ನಮಗರಿವಾಗದಂತೆಯೇ ಪರಸ್ಪರ ಕೊಟ್ಟುಕೊಂಡಿರುತ್ತೇವೆ.

ತಮ್ಮ ಬದುಕಿನಲ್ಲಿ ಬೇಂದ್ರೆ ದಂಪತಿಗಳು ಅನೇಕ ಸುಖ, ದುಃಖಗಳನ್ನು ಅನುಭವಿಸಿದರು. ಈ ಅನುಭವಗಳಿಂದ ಅವರಿಗೆ ದಕ್ಕಿದ ಕಾಣ್ಕೆ ಏನು?

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.

‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ’ ಎಂದಿದ್ದಾರೆ ಬಸವಣ್ಣನವರು. ನಮ್ಮ ಮನಸ್ಸನ್ನು ಮಾಗಿಸುವುದೇ ಭಗವಂತನ ಇಚ್ಛೆ. ಈ ನೋವು, ನಲಿವಿನ ಅನುಭವಗಳಿಂದ ಬೇಂದ್ರೆ ದಂಪತಿಗಳ ಮನಸ್ಸು ಮಾಗಿದೆ. ಕಳೆದು ಹೋದ ದಿನಗಳ ಬಗೆಗೆ ಅವರಿಗೆ ಯಾವುದೇ ಸಂತಾಪವಿಲ್ಲ, ಅವರ ‘ತಾಪ’ವೆಲ್ಲ ‘ತಪಸ್ಸಾ’ಗಿ ಪರಿವರ್ತಿತವಾಗಿದೆ. ಅಂತೆಯೇ ಅವರು ‘ಸಲ್ಲುವಲ್ಲಿ ಸಂದಿದೆ, ನಿಲ್ಲುವಲ್ಲಿ ನಿಂದಿದೆ’ ಎಂದು ಅರಿತಿದ್ದಾರೆ.

ದಾಂಪತ್ಯಜೀವನದ ಮೊದಲಲ್ಲಿ,‘ಎದೆಗೆ ಎದೆಯ ಅಪ್ಪುಗೆ’ ಎಂದು ಹಾಡಿದ ಬೇಂದ್ರೆಯವರು, ತಮ್ಮ ಹಾಡಿನ ಕೊನೆಯಲ್ಲಿ ‘ಜೀವಜೀವದಪ್ಪಿಗೆ’ ಎನ್ನುತ್ತಾರೆ. ಇದು ದಂಪತಿಗಳ ಕಾಮವು ಪ್ರೇಮವಾಗಿ ಪರಿವರ್ತಿತವಾಗಿದ್ದನ್ನು ಹಾಗು ಅವರ ದಾಂಪತ್ಯದ ಸಫಲತೆಯನ್ನು ಸೂಚಿಸುತ್ತದೆ.

ಏಕಾಂತದಲ್ಲಿ ಜರಗುವ ನೆನಪುಗಳ ಇಂತಹ ಸಿಂಹಾವಲೋಕನದ ಉದ್ದೇಶವೇನು? ಹಳೆಯದನ್ನು ನೆನೆಸಿಕೊಂಡಾಗಲೇ ಬದುಕಿನ ಅರ್ಥವು ಹೊಳೆಯುತ್ತದೆ.ಇದನ್ನೇ ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಹೀಗೆ ಹೇಳಿದ್ದಾರೆ:

“ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ.”

ಬೇಂದ್ರೆಯವರು ಇರುಳತಾರೆಗಳ ಈ ಬೆಳಕನ್ನು, ಈ ಸರಸವಾದ ರಸವನ್ನು, ತಮಗೆ ಕಂಡ ಕಾಣ್ಕೆಯನ್ನು ಸಹೃದಯರೊಡನೆ ಹಂಚಿಕೊಳ್ಳಲು ಬಯಸುತ್ತಾರೆ. ಅವರು ಸಹೃದಯರನ್ನು ಆಹ್ವಾನಿಸುವುದು ಹೀಗೆ:

“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ  ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”

ವರಕವಿಯ ಈ ಕರೆಗೆ ಕನ್ನಡಿಗರ ಹೃದಯ ಕರಗಬಹುದೆ?

Thursday, December 13, 2012

ವಿಶ್ವೇಶ್ವರ ಭಟ್ಟರ ‘ಸತ್ಯ, ವಿಶ್ವಾಸಾರ್ಹತೆ ಹಾಗು ಧಿಮಾಕು’



೬-೧೨-೨೦೧೨ನೆಯ ದಿನಾಂಕದ ‘ಕನ್ನಡಪ್ರಭಾ’ ಪತ್ರಿಕೆಯಲ್ಲಿ ‘ಸತ್ಯ, ವಿಶ್ವಾಸಾರ್ಹತೆ, ಧಿಮಾಕು....ಹೀಗೊಂದು ಪದ ಮೆಲಕು’ ಎನ್ನುವ ಶೀರ್ಷಿಕೆಯನ್ನು ಹೊಂದಿದ ಲೇಖನವೊಂದು ಪ್ರಕಟವಾಗಿದೆ. ಲೇಖನವನ್ನು ಸಂಪಾದಕರಾದ ವಿಶ್ವೇಶ್ವರ ಭಟ್ಟರು ಬರೆದಿದ್ದಾರೆ. ಈ ಲೇಖನದಲ್ಲಿ ಕನ್ನಡ ಭಾಷೆಗೆ ಹಾಗು ಕನ್ನಡದ ಸರ್ವಕಾಲೀನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತರಿಗೆ ಅಪಚಾರವಾಗಿದೆ. ಇದರಿಂದಾಗಿ ನನ್ನ ಮನಸ್ಸಿಗೆ ವ್ಯಥೆಯಾದರೂ ಸಹ, ನಿಮ್ಮೆದುರಿಗೆ ಅದನ್ನಿಡುವ ಮೊದಲು ನಾನು ಸಾಕಷ್ಟು ಯೋಚಿಸಬೇಕಾಯಿತು. ೬ರಿಂದ ೧೨ನೆಯ ದಿನಾಂಕದವರೆಗೆ ಡೋಲಾಯಮಾನವಾಗಿದ್ದ ನನ್ನ ಮನಸ್ಸು ಕೊನೆಗೂ ಒಂದು ನಿರ್ಧಾರಕ್ಕೆ ಬಂದಿತು. ನಾನೀಗ ಸುಮ್ಮನಿದ್ದರೆ, ಅಶಂಕ ವ್ಯಕ್ತಿಗಳಿಗೆ ತಪ್ಪು ಮಾಹಿತಿ ರವಾನೆಯಾದೀತು, ಇದನ್ನು ತಪ್ಪಿಸಿ, ‘ನಿಜವಾದ ಸತ್ಯ’ವನ್ನು (!) ನಿಮ್ಮ ಗಮನಕ್ಕೆ ತರದೆ ಇರುವುದು ಕರ್ತವ್ಯಲೋಪವಾಗುತ್ತದೆ ಎನ್ನಿಸಿತು. ಆದುದರಿಂದ ಆ ಲೇಖನದ ಪ್ರಸ್ತುತ ಭಾಗವನ್ನು (ಮಾತ್ರ) ಇಲ್ಲಿ ಉದ್ಧರಿಸುತ್ತಿದ್ದೇನೆ. ಅದು ಹೀಗಿದೆ:

ಅಷ್ಟಕ್ಕೂ audacity ಎಂದರೆ ಏನು? ಡಿಕ್ಷನರಿ ಡಾಟ್ ಕಾಮ್‍ನಲ್ಲಿ ಈ ಪದಕ್ಕೆ ಈ ಅರ್ಥವನ್ನು ಕೊಟ್ಟಿದ್ದಾರೆ
audacity Boldness or daring especially with confidant or arrogant disregard for personal safety. ಧೈರ್ಯ ಅಥವಾ ಅದಮ್ಯ ವಿಶ್ವಾಸ ಅಥವಾ ಆತ್ಮರಕ್ಷಣೆಯನ್ನೂ ಲೆಕ್ಕಿಸದ ಗರ್ವ. ಮತ್ತೊಂದು ಅರ್ಥ Unusually harsh boldness with brashness. ಈ ಪದವನ್ನು ವಾಕ್ಯದಲ್ಲಿ ಹೀಗೆ ಬಳಸಲಾಗಿದೆ-- His student's audacity shocked the lecturer. ಕನ್ನಡದಲ್ಲಿ ಈ ಪದಕ್ಕೆ ಎದೆಗಾರಿಕೆ, ಪೊಗರು, ಧಿಮಾಕು ಎಂದೆಲ್ಲ ಅರ್ಥೈಸಬಹುದು. ತುಸು ಒರಟಾಗಿ ತಿಕಕೊಬ್ಬು ಎಂದೂ ಅರ್ಥೈಸಬಹುದು. ಎಲ್ಲರಿಗೂ ಈ audacity ಪದವನ್ನು ಬಳಸಲು ಆಗುವದಿಲ್ಲ. ಚೆನ್ನಾಗಿ ಓದಿಕೊಂಡ, ತನ್ನ ವಿದ್ವತ್ತಿನ ಬಗ್ಗೆ ಹೆಮ್ಮೆಯ ಜಂಭವನ್ನು ಪ್ರದರ್ಶಿಸುವ, ತುಸು ಗರ್ವಿಷ್ಠನಿಗೆ ಈ ಪದವನ್ನು ಬಳಸಬಹುದು. ವಿದ್ವತ್ತಿನ ಬೆಂಬಲ, ಬುದ್ಧಿಯ ಒಲವು ಗಳಿಸಿಕೊಂಡವ ತುಸು ಜಂಭದಿಂದ ನಡೆದುಕೊಂಡರೆ ಅದೇನು ಅಪರಾಧವಲ್ಲ, ಅಸಹನೀಯವೂ ಅಲ್ಲ. ಅಂಥ ಕೊಬ್ಬಿನ ವರ್ತನೆಯನ್ನು ಅನೇಕರು ಮೆಚ್ಚುತ್ತಾರೆ.

ಈ ಗುಣ ಶಿವರಾಮ ಕಾರಂತರಲ್ಲಿತ್ತು. ಅಧ್ಯಯನ, ಅನುಭವದ ಸಮಪಾಕದಲ್ಲಿ ಬೆಂದು ರೂಪುಗೊಂಡ ಅವರ ವ್ಯಕ್ತಿತ್ವದಲ್ಲಿ ಈ audacity ಚೆನ್ನಾಗಿ ಮನೆ ಮಾಡಿತ್ತು.ಹಿರಿಯ ಕವಿಯೊಬ್ಬರು ಶಿವರಾಮ ಕಾರಂತರನ್ನು ಭೇಟಿ ಮಾಡಿ, ತಮ್ಮ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ಕೋರಿದಾಗ, ನಿಮ್ಮ ಕವನ ಓದುವುದು ಹಾಗು ಕೇಳುವುದೆಂದರೆ ದೊಡ್ಡ ಶಿಕ್ಷೆ. ಅಂಥ ಭಾಗ್ಯವನ್ನು ನನಗೆ ಕರುಣಿಸಬೇಡಿ. ನಿಮ್ಮ ಕಾರ್ಯಕ್ರಮಕ್ಕೆ ಬಂದು ಟೈಮ್ ವೇಸ್ಟ್ ಮಾಡಲು ನನಗೆ ಮನಸ್ಸಿಲ್ಲ’ ಎಂದು ಖಂಡತುಂಡಾಗಿ ಹೇಳಿದ್ದರು. ಕಾರಂತರ ಈ  audacityಯನ್ನು , ಧಿಮಾಕಿನ ನಡೆಯನ್ನು ಯಾರೂ ತಪ್ಪಾಗಿ ಭಾವಿಸುತಿರಲಿಲ್ಲ.  .....................................................ಧಿಮಾಕನ್ನು ಸೊಕ್ಕು ಎಂದು ತಪ್ಪಾಗಿ ಭಾವಿಸುವವರು ಪಡಪೋಶಿಗಳು.

ಮೊದಲನೆಯದಾಗಿ audacityಗೆ ನಿಖರವಾದ ಕನ್ನಡ ಪದವೊಂದಿದೆ: ‘ಧಾರ್ಷ್ಟ್ಯ’.  (‘ಅದಟು’ ಎನ್ನುವ ಹಳೆಗನ್ನಡ ಪದ ಬಳಕೆಯಲ್ಲಿ ಇಲ್ಲ.) ‘ಎದೆಗಾರಿಕೆ’ ಎಂದು ಹೇಳಿದರೆ ತಪ್ಪಿಲ್ಲ. ಆದರೆ ‘ಪೊಗರು, ಧಿಮಾಕು’ ಎನ್ನುವುದು ಸರಿಯಾದ ಅರ್ಥವಲ್ಲ. ಅದು  ಅನರ್ಥ! ‘ತಿಕಕೊಬ್ಬು’ ಎನ್ನುವುದಂತೂ ಅಸಹ್ಯ. ಭಟ್ಟರು ಬರೆದಿರುವಂತೆ audacity ಅಥವಾ ಧಾರ್ಷ್ಟ್ಯವು ಚೆನ್ನಾಗಿ ಓದಿಕೊಂಡ, ಅದರ ಬಗೆಗೆ ಹೆಮ್ಮೆ ಇರುವಂಥ ವ್ಯಕ್ತಿಗೇ ಇರಬೇಕೆಂದಿಲ್ಲ. ತನಗೆ ಸರಿ ಅನ್ನಸಿದ್ದನ್ನು ಜನಪ್ರಿಯ ನಂಬುಗೆಯ ಅಥವಾ ಪಂಡಿತರ ಹಾಗು ಮಾನ್ಯರ ವಿರೋಧದ ನಡುವೆಯೂ ಹೇಳುವ ವ್ಯಕ್ತಿಗೆ ಈ ಗುಣ ಇರುತ್ತದೆ. ಶಿವರಾಮ ಕಾರಂತರಲ್ಲಿ ಈ ಗುಣ ಇದ್ದದ್ದು ನಿಜ. ಇದಕ್ಕೆ ಕಾರಣ ಅವರ ನೇರ ನಡೆ ಹಾಗು ನೇರ ನುಡಿ. ಆದರೆ ಭಟ್ಟರು ಕೊಟ್ಟ ಉದಾಹರಣೆ ತಪ್ಪು. ಹಿರಿಯ ಕವಿಗೆ ಕಾರಂತರು ಹೇಳುವ ಮಾತು ಅವರ ನಿಷ್ಠುರತೆಯನ್ನು ತೋರಿಸುವ ಉದಾಹರಣೆಯಾಗಿದೆ. ಇನ್ನು ಅವರ ಧಾರ್ಷ್ಟ್ಯವನ್ನು ತೋರಿಸುವ ಸರಿಯಾದ ಎರಡು ಉದಾಹರಣೆಗಳು ಹೀಗಿವೆ:

(೧)ಬೀದರ ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದಾಗ, ಆ ವರುಷ ಬರಗಾಲವಿದ್ದದ್ದರಿಂದ, ಸಮ್ಮೇಳನವನ್ನು ರದ್ದು ಪಡಿಸಬೇಕೆಂದು ಅನೇಕರು ಆಗ್ರಹಿಸಿದರು. ಆಗ ಶಿವರಾಮ ಕಾರಂತರು ಸಮ್ಮೇಳನವನ್ನು ಬೆಂಬಲಿಸಿ ಹೇಳಿದ ಮಾತು: ‘ಬರಗಾಲ ಇದೆಯೆಂದು ಜನ ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೆಯೆ?’

(೨)ಅಯೋಧ್ಯೆಯಲ್ಲಿ ಬಾಬರಿ ಮಸೀದೆಯನ್ನು ಕೆಡವಿದ ಘಟನೆ ಸಂಭವಿಸಿದ ಬಳಿಕ ಕರ್ನಾಟಕದ ಎಲ್ಲ ಸ್ವಘೋಷಿತ-ಜಾತ್ಯತೀತ ಬುದ್ಧಿಜೀವಿಗಳು ಈ ಘಟನೆಯನ್ನು ಖಂಡಿಸಿದರು. ಶಿವರಾಮ ಕಾರಂತರು ನಾಸ್ತಿಕರು. ದೇವರು ಹಾಗು ಧರ್ಮ ಇವೆರಡರಲ್ಲೂ ಅವರಿಗೆ ನಂಬಿಗೆ ಇರಲಿಲ್ಲ. ಹಾಗಿದ್ದರೂ ಸಹ ಅವರು ‘ಅದರಲ್ಲೇನು ತಪ್ಪಿದೆ?’ ಎಂದು ಕೇಳಿದರು. ಇಂತಹ ಹೇಳಿಕೆಯಿಂದ ತಮ್ಮ ಸಾಮಾಜಿಕ ಹಾಗು ಸಾಹಿತ್ಯಕ image ಹಾಳಾಗಬಹುದೆನ್ನುವ ಶಂಕೆ ಅವರಿಗೆ ಬರಲಿಲ್ಲವೆ? ಯಾವುದೇ ಸ್ವಾರ್ಥಕಾರಣವಿಲ್ಲದೆ, ತನಗೆ ಸರಿ ಎಂದು ಕಂಡದ್ದನ್ನೇ ತಾನು ಹೇಳುವೆ ಎನ್ನುವ ಈ ಗುಣಕ್ಕೆ ಧಾರ್ಷ್ಟ್ಯ ಎನ್ನಬೇಕು! ಈ ಗುಣಕ್ಕೆ ಯಾರಾದರೂ ‘ಪೊಗರು, ಧಿಮಾಕು ಅಥವಾ....(ಛೀ!) ತಿಕಕೊಬ್ಬು’ ಎನ್ನಬಹುದೆ?
ಪಡಪೋಶಿಗಳಷ್ಟೇ ಹಾಗೆ ಅಂದಾರು!

ಸಮಾಜದಲ್ಲಿ ಹರಡಿದ ಅಜ್ಞಾನದ ಬಗೆಗೆ ಶಿವರಾಮ ಕಾರಂತರಲ್ಲಿ ಬೇಸರವಿತ್ತು. ಡಂಭಾಚಾರದ ಬಗೆಗೆ ಅಸಹನೆ ಇತ್ತು. ಆದರೆ ತಮ್ಮ ನಂಬುಗೆಗೆ ವಿರುದ್ಧವಾದ ಅನ್ಯರ ನಂಬುಗೆಗಳನ್ನು ಆದರಿಸುವ ಗುಣವೂ ಅವರಲ್ಲಿ ಇತ್ತು. ಅವರ ಕಾದಂಬರಿಗಳಾದ ‘ಮರಳಿ ಮಣ್ಣಿಗೆ’ ಹಾಗು ‘ಮೂಕಜ್ಜಿಯ ಕನಸುಗಳು’ ಈ ಮಾತಿಗೆ ಸಾಕ್ಷಿಯಾಗಿವೆ. ಸಮಾಜದಲ್ಲಿ ಮಾನವೀಯತೆಯನ್ನು ನೆಲೆಗೊಳಿಸುವದೇ ಅವರ ಎಲ್ಲ ಕಾದಂಬರಿಗಳ ಉದ್ದೇಶವಾಗಿತ್ತು. ಆದುದರಿಂದಲೇ ಅವರ ಕಾದಂಬರಿಗಳಲ್ಲಿ ಪೊಳ್ಳು ಅಲಂಕಾರಿಕ ಶೈಲಿಯಿಲ್ಲ. ಸತ್ಯವನ್ನು ಅವರು ನೇರವಾಗಿ, ನಿರಾಡಂಬರವಾಗಿ ಹೇಳುತ್ತಿದ್ದರು. ಇಷ್ಟು ನಿರಾಲಂಕೃತರಾದ ಈ ವ್ಯಕ್ತಿ ಶ್ರೇಷ್ಠ ಕಲಾಜೀವಿಯೂ ಆಗಿದ್ದರು.

ನಾನು ಸುರತ್ಕಲ್ ಇಂಜನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಅವಧಿಯಲ್ಲಿ, ಅಂದರೆ ಸುಮಾರು ೪೫ ವರ್ಷಗಳ ಹಿಂದಿನ ಘಟನೆಯೊಂದನ್ನು ಹೇಳುತ್ತೇನೆ. ಕಾಲೇಜಿಗೆ ರಜೆ ಬಂದಿತ್ತು.  ನಾನು ಹಾಗು ನನ್ನ ಗೆಳೆಯನೊಬ್ಬ ಶಿವರಾಮ ಕಾರಂತರನ್ನು ಭೇಟಿಯಾಗುವ ಉದ್ದೇಶದಿಂದ ಪುತ್ತೂರಿಗೆ ಓಡಿದೆವು. ಅವರ ಮನೆ ಹುಡುಕುತ್ತಾ ಹೋದೆವು. ಸುಮಾರು ೧೧ ಗಂಟೆಯ ಸಮಯ. ಕಾರಂತರು ಹೊರಗೆಲ್ಲೊ ಹೋಗಲೆಂದು ಬರುತ್ತಿದ್ದರು. ನಾವು ಅವರನ್ನು ಕಂಡು ನಮ್ಮ ಉದ್ದೇಶವನ್ನು ತಿಳಿಸಿದೆವು.

ಕಾರಂತರು ಪೂರ್ವನಿಯೋಜನವಿಲ್ಲದೇ ಯಾರನ್ನೂ ಭೆಟ್ಟಿಯಾಗರು ಎನ್ನುವ ಖ್ಯಾತಿ ಉಳ್ಳವರು. ಆದರೆ ಈ ಇಬ್ಬರು ಹುಡುಗರನ್ನು ಅವರು ಆದರದಿಂದಲೇ ಬರ ಮಾಡಿಕೊಂಡು ತಮ್ಮ ಮನೆಯೆಡೆಗೆ ಕರೆದೊಯ್ದರು. ಅವರು ಕೆಲಸ ಮಾಡುವ ಕೊಠಡಿ, ಅವರ ನಿವಾಸದಿಂದ ಸುಮಾರು ೫೦ ಅಡಿ ದೂರದಲ್ಲಿದೆ. ನಿವಾಸದ ಹೊರಗಡೆ ಅವರ ಹೆಂಡತಿ ಹಾಗು ಮಗಳು ಕೂತಿದ್ದರು. ಅಟ್ಟದ ಮೇಲಿರುವ ತಮ್ಮ ಕೊಠಡಿಗೆ ಹೋಗುವಾಗಲೇ, ತಮ್ಮ ಹೆಂಡತಿಯತ್ತ ನೋಡುತ್ತ, ಕಾರಂತರು ಎರಡು ಬೆರಳು ತೋರಿಸಿದರು.

ಕಾರಂತರ ಕೊಠಡಿಯಲ್ಲಿ ಹೆಚ್ಚಿಗೆ ವಸ್ತುಗಳು ಇರಲಿಲ್ಲ. ಇರುವ ಒಂದೆರಡು ವಸ್ತುಗಳೇ ಅವರ ಕಲಾಭಿಜ್ಞತೆಯನ್ನು ತೋರಿಸುತ್ತಿದ್ದವು. ಕರ್ನಾಟಕದ ಔದ್ಯೋಗಿಕ ಪ್ರಗತಿ ಹೇಗಾದೀತು ಎನ್ನುವ ನಮ್ಮ ಹುಚ್ಚು ಪ್ರಶ್ನೆಗೆ ಕಾರಂತರು ಸುಮಾರು ಒಂದು ಗಂಟೆಯವರೆಗೆ ತಿಳಿಸಿ ಹೇಳಿದರು. ಈ ನಡುವೆ ಅವರ ಮಗಳು ಎರಡು ಲೋಟಾ ಪಾನಕ ತಂದು ಕೊಟ್ಟಳು. ಕಾರಂತರು ಎರಡು ಬೆರಳು ತೋರಿಸಿದ್ದರ ಅರ್ಥ ಆಗ ಹೊಳೆಯಿತು.

ಶಿವರಾಮ ಕಾರಂತರ ಮಾನವೀಯ ಗುಣದ ಬಗೆಗೆ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಒಂದು ಪುಟ್ಟ ಬರಹ ಪ್ರಕಟವಾಗಿತ್ತು. ಪುತ್ತೂರಿನ ರಸ್ತೆಯಲ್ಲಿ ಹೆಂಗಸೊಬ್ಬಳು ಭಾರವಾದ ಚೀಲವೊಂದನ್ನು ಹೊತ್ತುಕೊಂಡು ಒಯ್ಯುತ್ತಿರುವಾಗ, ಅದನ್ನು ಕಂಡ ಕಾರಂತರು, ಆ ಅಪರಿಚಿತ ಹೆಣ್ಣು ಮಗಳ ಕೈಯಿಂದ ಭಾರವನ್ನು ಕಸಿದುಕೊಂಡು, ಅವಳ ಜೊತೆಗೆ ನಡೆದರು ಎನ್ನುವುದು ಆ ಬರಹದ ಸಾರಾಂಶವಾಗಿತ್ತು.

ಇಂತಹ ಕಾರಂತರಲ್ಲಿಯ ಯಾವ ಗುಣವು ವಿಶ್ವೇಶ್ವರ ಭಟ್ಟರಿಗೆ ಪೊಗರು ಅಥವಾ (ಛೀ!) ತಿಕಕೊಬ್ಬಿನಂತೆ ಕಂಡಿರಬಹುದು?

ವಿಶ್ವೇಶ್ವರ ಭಟ್ಟರು ಕನ್ನಡದಲ್ಲಿ ಗಣ್ಯರಾದ ಪತ್ರಿಕಾಸಂಪಾದಕರು. ಅವರು ಬರೆದದ್ದನ್ನು ಅಮಾಯಕರು ನಿಶ್ಶಂಕರಾಗಿ ನಂಬುತ್ತಾರೆ. ಆದುದರಿಂದ ಪತ್ರಿಕೆಯ ಓದುಗರ (--ವಿಶೇಷತಃ ಎಳೆಯ ಓದುಗರ--) ಹಾದಿಯನ್ನು ತಪ್ಪಿಸಬಾರದೆನ್ನುವ ಎಚ್ಚರಿಕೆಯು ಸಂಪಾದಕರಿಗೆ ಇರಬೇಕು. ಪದಗಳ ಬಳಕೆಯ ಬಗೆಗೆ ಹಾಗು ವ್ಯಕ್ತಿಗಳ ಬಗೆಗೆ ಬರೆಯುವಾಗ ಅಪಚಾರವಾಗದಂತೆ ಜಾಗೃತರಾಗಿರಬೇಕು. ಇದು ಅವರಿಗೆ ನನ್ನ ಸವಿನಯ ಪ್ರಾರ್ಥನೆ.

Thursday, October 18, 2012

ಬೇಂದ್ರೆಯವರ ‘ಭಾವಗೀತೆ’


ಬೇಂದ್ರೆಯವರ ಕವನಗುಚ್ಛ ‘ಗರಿ’ ೧೯೩೨ರಲ್ಲಿ ಪ್ರಕಟವಾಯಿತು.  ‘ನರಬಲಿ’ ಕವನವು ಈ ಮೊದಲೇ ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಈ ಸಂಕಲನದಲ್ಲಿ ಅಡಕವಾಗಿತ್ತು.

 ‘ನರಬಲಿ’ ಕವನವು ರಾಜದ್ರೋಹದ ಸಂದೇಶವನ್ನು ನೀಡುತ್ತದೆ ಎಂದು ನಿರ್ಣಯಿಸಿದ ಬ್ರಿಟಿಶ್ ಜಿಲ್ಲಾಧಿಕಾರಿಗಳು ಬೇಂದ್ರೆಯವರಿಗೆ ಸೆರೆಮನೆಯ ಶಿಕ್ಷೆಯನ್ನು ವಿಧಿಸಿದರು. ಬೇಂದ್ರೆಯವರು ಮೂರು ತಿಂಗಳು ಅವಧಿಯನ್ನು ಹಿಂಡಲಗಿಯ ಸೆರೆಮನೆಯಲ್ಲಿ ಕಳೆದ ಬಳಿಕ, ಇವರ ಕಕ್ಕನ ಅನಾರೋಗ್ಯದ ಕಾರಣದಿಂದಾಗಿ ಇವರನ್ನು ಮುಗದ ಎನ್ನುವ ಹಳ್ಳಿಯಲ್ಲಿ ನಜರಬಂದಿಯಲ್ಲಿ ಇಡಲಾಯಿತು. ಬೇಂದ್ರೆ ಅಲ್ಲಿ ಒಂಬತ್ತು ತಿಂಗಳುಗಳವರೆಗೆ ಇದ್ದರು. ಈ ನಡುವೆ ತಪ್ಪೊಪ್ಪಿಗೆಯ ಹೇಳಿಕೆಯನ್ನು ನೀಡಿದರೆ, ಅವರನ್ನು ಬಿಡುಗಡೆ ಮಾಡುವ ಆಮಿಶವನ್ನು ಬ್ರಿಟಿಶ್ ಸರಕಾರ ತೋರಿಸಿತ್ತು. ಆದರೆ ಬೇಂದ್ರೆಯವರು ಅದಕ್ಕೆ ಒಪ್ಪಲಿಲ್ಲ. ನನ್ನ ಕವನವು ದೇಶಪ್ರೇಮದ ಕವನವೇ ಹೊರತು ದೇಶದ್ರೋಹದ ಕವನವಲ್ಲ ಎಂದು ಅವರು ಹೇಳಿದರು. ಈ ಘಟನೆಯನ್ನು ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಹೀಗೆ ವರ್ಣಿಸಿದ್ದಾರೆ:

‘ನರಬಲಿ’ ಕವನವು ಬಲಿ ಮಾಡಿತೆನ್ನನು
ಹೆಳವನಿದ್ದಲ್ಲಿಗೆ ಹೊಳೆ ಬಂದಿತು
……………………………
…………………………….
ಪ್ರಾಣದ ಒಗರಷ್ಟು ಹಿಂಡಿತು ಹಿಂಡಲಿಗೆ
ಮುಗದದ ಮಳೆಗಾಳಿ ಮುಂದೆಳೆದಿತು.

ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ಈ ಅಗ್ನಿಪರೀಕ್ಷೆಯ ಅವಧಿಯಲ್ಲಿ ಹುಟ್ಟಿದವು. ಅವರ ಅತ್ಯುತ್ತಮ ಕವನಗಳಲ್ಲಿ ಒಂದಾದ ‘ಭಾವಗೀತೆ’ಯು  ಸಹ ಇದೇ ಕಾಲದಲ್ಲಿ ರಚಿತವಾಯಿತು. ಆ ಕವನದ ಹುಟ್ಟಿಗೆ ಕಾರಣವಾದ ಘಟನೆ ಹೀಗಿದೆ:  

ಮುಗದದಲ್ಲಿ ನಜರಬಂದಿಯಲ್ಲಿ ಇದ್ದ ಬೇಂದ್ರೆಯವರು, ಅಲ್ಲಿಯ ದೇವಿಯ ಗುಡಿಯೊಂದರಲ್ಲಿ ಒಮ್ಮೆ ಜೊಂಪಿಸುತ್ತ ಕೂತಿದ್ದಾಗ, ಹತ್ತಿರದಲ್ಲಿರುವ ಬಿದಿರಮೆಳೆಯಲ್ಲಿರುವ ಗುಂಗೀಹುಳವೊಂದು ಬಿದಿರನ್ನು ಕೊರೆಯುತ್ತಿರುವ ಧ್ವನಿ ಬೇಂದ್ರೆಯವರ ಕಿವಿಗೆ ಬೀಳುತ್ತದೆ. ನಾದಲೋಲರಾದ ಈ ವರಕವಿಯ ಮನದಲ್ಲಿ ಭಾವಲಹರಿಯೊಂದು ಉದ್ಭವಿಸಿ ಕವನವಾಗಿ ಹೊರಹೊಮ್ಮಿತು. ಅದೇ ‘ಭಾವಗೀತೆ’.  ಈ ಕವನದ ಪೂರ್ತಿಪಾಠ ಹೀಗಿದೆ:

‘ಭಾವಗೀತೆ’
“ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                         ಭೃಂಗದ ಬೆನ್ನೇರಿ ಬಂತು….

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ    
                                     ಭೃಂಗದ ಬೆನ್ನೇರಿ ಬಂತು….

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುಡುಕುವಂತೆ ತನ್ನ ಬಾಳ ಮೇಲಾ
                                        ಭೃಂಗದ ಬೆನ್ನೇರಿ ಬಂತು….

ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
                                       ಭೃಂಗದ ಬೆನ್ನೇರಿ ಬಂತು….

ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು ಅರಳಲಿತ್ತು, ಪ್ರೇಮಾ
                                       ಭೃಂಗದ ಬೆನ್ನೇರಿ ಬಂತು….

ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
                                     ಭೃಂಗದ ಬೆನ್ನೇರಿ ಬಂತು….

ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸುತಿತ್ತು ಕೂಟಾ
                                         ಭೃಂಗದ ಬೆನ್ನೇರಿ ಬಂತು….

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
‘ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ
                                          ಭೃಂಗದ ಬೆನ್ನೇರಿ ಬಂತು….

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
                                            ಭೃಂಗದ ಬೆನ್ನೇರಿ ಬಂತು….

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                         ಭೃಂಗದ ಬೆನ್ನೇರಿ ಬಂತು….


ಕವನಗಳು ಹುಟ್ಟುವುದನ್ನು ಕುರಿತೇ ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ. ಬೇಂದ್ರೆಯವರ ಕವನಗಳ ವೈಶಿಷ್ಟ್ಯವೆಂದರೆ, ಅವರು ಕವನಗಳನ್ನು ಕಟ್ಟುವದಿಲ್ಲ. ಅವರ ಮಾನಸ ಸರೋವರದಲ್ಲಿ ತರಂಗಗಳು ಎದ್ದಂತೆ ಅವರ ಕವನಗಳು ಹುಟ್ಟುತ್ತವೆ! ‘ಭಾವಗೀತೆ’ ಕವನದ ಮೊದಲ ನುಡಿಯನ್ನು ನೋಡಿರಿ:

“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                  ಭೃಂಗದ ಬೆನ್ನೇರಿ ಬಂತು….

ಗುಂಗೀಹುಳವೊಂದರ ಗುಂಯ್ಗುಡುವಿಕೆಯೇ ‘ಭಾವಗೀತೆ’ಯ ಹುಟ್ಟಿಗೆ ಕಾರಣವಾಗಿದೆ. ಬೇಂದ್ರೆಯವರು ಹೇಳಿಕೇಳಿ ನಾದಲೋಲರು.  ಭ್ರಮರನಾದದಲ್ಲಿ ತಲ್ಲೀನರಾದ ಅವರಿಗೆ ಕಲ್ಪನೆಯ ಪ್ರವಾಹವು ಹರಿಯಲು  ಇಷ್ಟೇ ಸಾಕಾಯಿತು. “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಎನ್ನುವ ಸಾಲು ಹೊರಹೊಮ್ಮಿತು.

ಗುಂಗು ಪದಕ್ಕೆ ತಲ್ಲೀನತೆ ಹಾಗು ಮರುಳು ಎನ್ನುವ ಅರ್ಥಗಳು ಇವೆ. ಭೃಂಗ ಅಥವಾ ಗುಂಗೀ ಹುಳುವು ತದೇಕಚಿತ್ತವಾಗಿ ಮರವನ್ನು ಕೊರೆಯುವಂತೆಯೇ ಕವಿಯೂ ಸಹ ತನ್ನ ಕಾವ್ಯಸೃಷ್ಟಿಯಲ್ಲಿ, ಕಾವ್ಯದ ನಾದದಲ್ಲಿ  ತಲ್ಲೀನನಾಗುತ್ತಾನೆ. ಕಾವ್ಯದ ಕಲ್ಪನಾವಿಲಾಸವನ್ನು ಹಿಂಬಾಲಿಸಿ ಹೋಗುತ್ತಾನೆ. ಇದು ಈ ಸಾಲಿನ ಮೇಲುನೋಟದ ಅರ್ಥ.

ಈ ಮೇಲುನೋಟದ ಅರ್ಥದೊಡನೆ, ಒಂದು ಒಳನೋಟದ ಅರ್ಥವೂ ಇಲ್ಲಿದೆ. ಅದು ಕವಿಕುಲಗುರು ಕಾಳಿದಾಸನ ಸ್ಮರಣೆ. ಕಾಳಿದಾಸನ ‘ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ, ಶಕುಂತಲಾ ಹಾಗು ದುಷ್ಯಂತರ ಪ್ರಣಯಕ್ಕೆ ಕಾರಣವಾಗುವುದೇ ಒಂದು ಭ್ರಮರ. ಈ ರಮ್ಯ ಕಲ್ಪನಾವಿಲಾಸವನ್ನು ಅನುಸರಿಸಿಕೊಂಡು, ನಾಟಕ ಮುಂದುವರಿಯುತ್ತದೆ. ಆದುದರಿಂದಲೇ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಎಂದು ಹೇಳುವಾಗ ವರಕವಿ ಬೇಂದ್ರೆಯವರು ಕವಿಕುಲಗುರು ಕಾಳಿದಾಸನನ್ನು ಪರೋಕ್ಷವಾಗಿ ಸ್ಮರಿಸುತ್ತಿದ್ದಾರೆ. ಈ ಒಳಅರ್ಥದ ಸೂಚನೆ ಕೊಡಲೆಂದೇ ಆ ಸಾಲನ್ನು inverted commasದಲ್ಲಿ ಬರೆದಿದ್ದಾರೆ.

(ಬೇಂದ್ರೆಯವರು ನಾದಲೋಲ ಕವಿಗಳು. ಅವರ ಕಾವ್ಯ ಜನಿಸುವುದೇ ನಾದದಲ್ಲಿ! ‘ನಾದಬೇಕು, ನಾದಬೇಕು, ನಾದಾನ್ನ ನಾದಬೇಕು’ ಎನ್ನುವ ಬೇಂದ್ರೆಯವರ ಕವನವೊಂದರ ಸಾಲುಗಳನ್ನು ನೆನೆಪಿಸಿಕೊಳ್ಳಿರಿ. ಇಲ್ಲಿ ನಾದ ಪದಕ್ಕೆ ನಾಲ್ಕು ಅರ್ಥಗಳಿವೆ. ಮೊದಲನೆಯದು ಧ್ವನಿ ಎನ್ನುವ ಅರ್ಥ. ಎರಡನೆಯದು ತಲ್ಲೀನತೆ ಎನ್ನುವ ಅರ್ಥ. ಮೂರನೆಯದಾಗಿ knead ಎನ್ನುವ ಅರ್ಥ. ನಾಲ್ಕನೆಯದಾಗಿ ‘ನಾದ’ ಪದಕ್ಕೆ ‘ಮರುಳು’ ಎನ್ನುವ ಅರ್ಥವೂ ಇದೆ. ಇದಲ್ಲದೆ,  ‘ನಾದಾನ್ನ’ ಪದವನ್ನು innocent ಎನ್ನುವ ಅರ್ಥದಲ್ಲಿಯೂ ಬಳಸಲಾಗಿದೆ.)

ಕಲ್ಪನಾವಿಲಾಸ ಪ್ರಾರಂಭವಾದರೆ ಸಾಕೆ? ಅದು ಕಾವ್ಯವಾಗಲು ಲಯ ಹಾಗು ತಾಳ ಬೇಡವೆ? ವರಕವಿ ಬೇಂದ್ರೆಯವರಿಗೆ ಇದು ಸಹಜಸಿದ್ಧಿ. ಗಾಳಿಯೇ ಚಿಟ್ಟೆಯಾಗಿ ಹಾರಲಾರಂಭಿಸಿದರೆ, ಅದರ ಮಸೆದಾಟವೇ ಅದರ ಪಕ್ಕಗಳಾಗುತ್ತವೆ. ಒಂದು ಪಕ್ಕ ತಾಳವಾದರೆ, ಮತ್ತೊಂದು ಪಕ್ಕ ಲಯ ಆಗುತ್ತದೆ. ವರಕವಿಯ ಭಾವಗೀತೆಗೆ ಗಾಳಿಯಾಟದಷ್ಟೇ ಸಹಜವಾಗಿ ಲಯ, ತಾಳ ಹಾಗು ಪ್ರಾಸ ಲಭಿಸುತ್ತವೆ. ಅಂತೆಯೇ ಅವರು ‘ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ’ ಎನ್ನುತ್ತಾರೆ. ಆ ಸ್ವಚ್ಛಂದ ಹಾರಾಟದ ರೇಷೆಯೇ (line of flight) ಒಂದು ಮಂದಹಾಸದಂತೆ ಮಿಂಚಿ ಮಾಯವಾಗುತ್ತದೆ. ( ಈ ಮಾತಿಗಾಗಿ ಬೇಂದ್ರೆಯವರ ಅನೇಕ ಕವನಗಳ ಉದಾಹರಣೆಗಳನ್ನು ನೀಡಬಹುದು. ಲೇಖನ ಕೈಮೀರಬಾರದೆಂದು ಅವುಗಳನ್ನು ಉಲ್ಲೇಖಿಸುತ್ತಿಲ್ಲ.)

ಕವಿಯು ಈ ನಾದವನ್ನು ಅನುಭವಿಸುತ್ತಾನೆ. ಅದನ್ನು ಅರಿತುಕೊಳ್ಳಲು ಅದರಲ್ಲಿಯೇ ಮುಳುಗುತ್ತಾನೆ. ಈ ಮಾತನ್ನು ಎರಡನೆಯ ನುಡಿಯಲ್ಲಿ ಈ ರೀತಿಯಾಗಿ ಹೇಳಲಾಗಿದೆ:

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ   
                                     ಭೃಂಗದ ಬೆನ್ನೇರಿ ಬಂತು….

ವಿಶ್ವದ ಸೃಷ್ಟಿಯಾಗುವಾಗ ಮೊದಲು ಹುಟ್ಟಿದ್ದೇ ಓಂಕಾರ ನಾದ. ಆದುದರಿಂದ ಪ್ರಣವವು (ಓಂಕಾರವು) ಪರಬ್ರಹ್ಮಸ್ವರೂಪಿಯಾಗಿದೆ. ಗುಂಗೀಹುಳದ ಗುಂಗುಂ ಗಾಯನವನ್ನು ಕೇಳಿದ ಕವಿಗೆ ಅದು ಜೇನಿನಷ್ಟು ಸಿಹಿಯಾದ ನಾದದಂತೆ ಭಾಸವಾಗುತ್ತದೆ. ಅದು ಪ್ರಣವನಾದಕ್ಕೆ ಅತಿ ಹತ್ತಿರವಾದ ನಾದವೆನ್ನಿಸುತ್ತದೆ. ಕವಿಯ ಕವನದಲ್ಲಿ  ಅನುಭವಿಸಬಹುದಾದ ಏಕತಾರಿಯ ನಾದಕ್ಕೆ ಸಮಾನವಾದ ನಾದವು ಇದಾಗಿದೆ.

ನಾದದಲ್ಲಿ ಲೀನವಾದ ಈ ಕಲ್ಪನಾವಿಲಾಸಕ್ಕೆ ಕಾವ್ಯರೂಪವು ಇನ್ನೂ ದೊರೆತಿಲ್ಲ. ಅದು ಕಾವ್ಯವಾಗಿ ಪರಿವರ್ತನೆಯಾಗುವ ವಿವಿಧ ಹಂತಗಳನ್ನು ಬೇಂದ್ರೆಯವರು ಹೇಳುತ್ತಾರೆ. ಮೂರನೆಯ ನುಡಿಯಲ್ಲಿ ಮೊದಲ ಹಂತದ ವರ್ಣನೆ ಇದೆ:

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುಡುಕುವಂತೆ ತನ್ನ ಬಾಳ ಮೇಲಾ
                                        ಭೃಂಗದ ಬೆನ್ನೇರಿ ಬಂತು….

ಮುಂಡಕೋಪನಿಷತ್ತಿನಲ್ಲಿ ಹೇಳುವಂತೆ, ಈ ವಿಶ್ವದ ಸೃಷ್ಟಿಗೆ ಕಾರಣನಾದ ಭಗವಂತನಿಗೆ ‘ಊರ್ಣನಾಭ’ ಎನ್ನುತ್ತಾರೆ. ಊರ್ಣ ಎಂದರೆ ಉಣ್ಣೆ. ಜೇಡವು ತನ್ನ ಹೊಕ್ಕಳಿನಿಂದ ಸ್ರವಿಸುವ ಊರ್ಣ ಅಥವಾ ನೂಲಿನಿಂದಲೇ ತನ್ನ ಬಲೆಯನ್ನು ಕಟ್ಟುತ್ತದೆ. ಭಗವಂತನೂ ಸಹ ಯಾವ ವಸ್ತುಗಳನ್ನೂ ಅವಲಂಬಿಸದೆ ತನ್ನಿಂದಲೇ ಈ ವಿಶ್ವವನ್ನು ಲೀಲೆಯಿಂದಲೇ ಸೃಷ್ಟಿಸುತ್ತಾನೆ. ಕವಿಯೂ ಸಹ ತನ್ನ ಕಾವ್ಯಸೃಷ್ಟಿಯನ್ನು  ತನ್ನ ಕಲ್ಪನೆಯಿಂದಲೇ, ನಿರಾಯಾಸವಾಗಿ ಮಾಡುತ್ತಾನೆ.

ಬ್ರಹ್ಮಸೃಷ್ಟಿಯ ಹಣೆಬರಹವನ್ನು ಬ್ರಹ್ಮನು ಬರೆಯುತ್ತಾನೆ. ಕವನದ ಹಣೆಬರಹವನ್ನು, ಬೇಂದ್ರೆಯವರ ಮೇರೆಗೆ ಕವನವೇ ಬರೆಯುತ್ತದೆ:  ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ’!  (ಭಾಲ = ಹಣೆ)
‘ಬಾಳ ಮೇಲಾ’ ಅಂದರೆ ಬಾಳಿನ ಉನ್ನತಿ ಅಥವಾ ಶ್ರೇಯಸ್ಸು. ಭ್ರೂಣಾವಸ್ಥೆಯಲ್ಲಿರುವ ಕವನವು ತನ್ನ ಉಸಿರನ್ನು ಹುಡುಕಿಕೊಂಡು (ಅಂದರೆ ಪ್ರಾಣಾಯಾಮದ ಮೂಲಕ) ತನ್ನ ಬಾಳಿನ ಮೇಲ್ಮೆಯನ್ನು ಸಾಧಿಸಬೇಕು. ಈ ಪ್ರಾಣವಾಯುವನ್ನು ಈ ಭ್ರೂಣಕ್ಕೆ ಅನುಗ್ರಹಿಸುವವರು ಯಾರು? ಅವಳೇ ವಾಗ್ದೇವಿ. ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ಈ ದೇವಿಯನ್ನು ಹೀಗೆ ಪ್ರಾರ್ಥಿಸುತ್ತಾರೆ:
‘ಮಾತುಗಳ ಮಾತೆ ನೀನು
ಮಾತಿನಲಿ ಹೂತು ಬರಬಾರದೇನು?
ಉಸಿರುಗಳ ಉಸಿರೆ ನೀನು
ಉಸಿರಿನಲಿ ಹಸಿರಾಗಿ ಹರಿದೆ ನಾನು.”
ಕಾವ್ಯಭ್ರೂಣಕ್ಕೆ ಉಸಿರಿನ ಅನುಗ್ರಹವಾದಾಗ, ಅದು ಸಜೀವವಾಗಿ ಸಂಚಲನೆಯನ್ನು ಪಡೆಯುವುದು.

ನಾಲ್ಕನೆಯ ನುಡಿಯಲ್ಲಿ ಕಾವ್ಯಭ್ರೂಣದ ಎರಡನೆಯ ಅವಸ್ಥೆಯ ವರ್ಣನೆ ಇದೆ:

ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
                                       ಭೃಂಗದ ಬೆನ್ನೇರಿ ಬಂತು….

ಸ್ಥೂಲರೂಪಿಯಾದ ಈ ಕಾವ್ಯಭ್ರೂಣಕ್ಕೆ ಜೀವವೇನೊ ಬಂದಿತು. ಆದುದರಿಂದ ಅದರಲ್ಲಿ ಚಲನೆಯೂ ಬಂದಿತು. ಆದರೆ ಅದರಲ್ಲಿ  ಇನ್ನೂ ‘ನುಡಿ’ ಬಂದಿಲ್ಲ. ಅದರ ಕಾವ್ಯಭಾವವು ಅದರೊಳಗೇ ಇನ್ನೂ ನಿಶ್ಶಬ್ದವಾಗಿಯೇ ಇದೆ. ಆದುದರಿಂದ ಅದು ಮೂಕಯಂತ್ರದಂತೆ ತನ್ನ ಸುತ್ತಲೂ ತಾನೇ ತಿರುಗುತ್ತ ವಾಕ್ ರೂಪವನ್ನು ಪಡೆಯಲು ಪ್ರಯತ್ನಿಸುತ್ತಿದೆ. ತನ್ನನ್ನು ಅರಿತುಕೊಳ್ಳುವ ಈ ಪ್ರಯತ್ನವೇ ‘ತಪಸ್’ ಆಗಿದೆ. ತಪಸ್ಸಿನ ಮೂಲಕವೇ ಸ್ವರೂಪದರ್ಶನ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಹೊಮ್ಮುವ ವಾಕ್ ಅಥವಾ ಅಭಿವ್ಯಕ್ತಿ ಅಂದರೆ ಸತತವಾಗಿ ಝೇಂಕಾರವಾಗುತ್ತಿರುವ ಮಂತ್ರ. ಈ ವಾಕ್ ಕಾವ್ಯಗರ್ಭದಲ್ಲಿ ಒಂದೇ  ಸವನೆ ಪಡಿನುಡಿಯುತ್ತಿದೆ ಅಂದರೆ ಪ್ರತಿಧ್ವನಿಸುತ್ತಿದೆ.

 (‘ವಾಕ್’ಗೆ ನಾಲ್ಕು ಅವಸ್ಥೆಗಳು: ಪರಾ, ಪಶ್ಯಂತೀ, ಮಧ್ಯಮಾ, ವೈಖರೀ. ನಿಷ್ಪಂದವಾಗಿ ಪರಾ ಅವಸ್ಥೆಯಲ್ಲಿರುವ ವಾಕ್, ಕೊನೆಯದಾದ ವೈಖರೀ ಅವಸ್ಥೆಯಲ್ಲಿ ವ್ಯಕ್ತರೂಪವನ್ನು ಪಡೆಯುತ್ತದೆ.)
   
ಬೇಂದ್ರೆಯವರಿಗೆ ಕಾವ್ಯವೆಂದರೆ ಮಂತ್ರ! ‘ನಾನೃಷಿ: ಕುರುತೇ ಕಾವ್ಯಮ್’ ಎನ್ನುವ ಮಾತೇ ಇದೆಯಲ್ಲ. ಬೇಂದ್ರೆಯವರೇ ತಮ್ಮ ಮತ್ತೊಂದು ಕವನದಲ್ಲಿ, ‘ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ;’ ಎಂದು ಹೇಳಿದ್ದಾರೆ. ಅದರಂತೆಯೆ ನಾದದ ಗರ್ಭದಲ್ಲಿ ಅಭಿವ್ಯಕ್ತಿಯನ್ನು ಪಡೆಯುವ ಉದ್ದೇಶದಿಂದ ತನ್ನ ಸುತ್ತಲೂ ತಾನೇ ತಿರುಗುತ್ತಿರುವ ಈ ಕಾವ್ಯಭ್ರೂಣವು ಮತ್ತೆ ಮತ್ತೆ ಕವಿಕಲ್ಪನೆಯಲ್ಲಿ ಮೂಡುತ್ತದೆ, ಮತ್ತೆ ಮತ್ತೆ ಮುಳುಗುತ್ತದೆ. ಈ ಕ್ರಿಯೆಯಲ್ಲಿ ಅದು ಸಂಪೂರ್ಣ ಸ್ವತಂತ್ರವಾದದ್ದು. ಕವಿಯ ಬಂಧನವೂ ಅದಕ್ಕೆ ಇರುವುದಿಲ್ಲ.

ಐದನೆಯ ನುಡಿ ಹೀಗಿದೆ:
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು ಅರಳಲಿತ್ತು, ಪ್ರೇಮಾ
                                       ಭೃಂಗದ ಬೆನ್ನೇರಿ ಬಂತು….

ಭ್ರೂಣಾವಸ್ಥೆಯು ಮುಗಿದು, ಈ ಕವನದ ‘ಸೃಷ್ಟಿ’ ಅಂದರೆ ಹೆರಿಗೆ ಪ್ರಾರಂಭವಾಗಬೇಕು. ಆ ಸಮಯದಲ್ಲಿ ಕವಿಯ ಮನಸ್ಸು ಸಂತೋಷವನ್ನು, ಮಂಗಳವನ್ನು ಅನುಭವಿಸುತ್ತದೆ ಎನ್ನುವುದನ್ನು ‘ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ’ ಎಂದು ಬೇಂದ್ರೆಯವರು ವರ್ಣಿಸಿದ್ದಾರೆ. ಕಾವ್ಯದ ಛಂದಸ್ಸು ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ ಎನ್ನುವುದನ್ನು ‘ಲಹರಿ ಲಹರಿ ಕಂಪಬಳ್ಳಿ’ ಎನ್ನುವ ಮೂಲಕ ಹೇಳುತ್ತಿದ್ದಾರೆ. ಕವನದ ಹುಟ್ಟಿಗೆ ಕಾರಣವಾದ ಮನೋಲಹರಿಗೆ ಸುಗಂಧವನ್ನೀಯುತ್ತಿರುವ ಬಳ್ಳಿ ದೊರಕುತ್ತಿದೆ. ಅರ್ಥಾತ್ ಛಂದಸ್ಸು ಲಭಿಸುತ್ತಿದೆ. (“ಹಬ್ಯಾವ ಛಂದದ ಬಳ್ಳಿ” ಎನ್ನುವ ಬೇಂದ್ರೆಯವರ ಕವನವನ್ನು ನೆನಪಿಸಿಕೊಳ್ಳಿ.) ಈ ಸಮಯದಲ್ಲಿ ಕವಿಯ ಮನಸ್ಸು ತಾಯಿಯ ಮನಸ್ಸಿನಂತೆ ಭೂಮರೂಪವನ್ನು ಅಂದರೆ ವೈಶಾಲ್ಯತೆಯನ್ನು ತಳೆದಿರುತ್ತದೆ, ಅಂದರೆ ಅದರಲ್ಲಿ ಯಾವುದೇ ಅಲ್ಪತನವು ಇರುವುದಿಲ್ಲ. ಅದು ಪ್ರೇಮಪೂರ್ಣವಾಗಿರುತ್ತದೆ. ಆದುದರಿಂದಲೇ ಅದು ಹೂವಿನ ಮೊಗ್ಗೆಗಳನ್ನು ಬಿಟ್ಟು, ಅರಳಲು ಉದ್ಯುಕ್ತವಾಗಿರುತ್ತದೆ.

ಆರನೆಯ ನುಡಿ ಹೀಗಿದೆ:
ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
                                     ಭೃಂಗದ ಬೆನ್ನೇರಿ ಬಂತು….

ಕಾವ್ಯಭ್ರೂಣವು ಕವಿಯ ಅಂದರೆ ತಾಯಿಯ ಮನಸ್ಸಿನಲ್ಲಿ ಅರಳಿರುವ ಹೂವುಗಳನ್ನು ವಜ್ರಮುಖದಿಂದ ಮುತ್ತುತ್ತಿದೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ. ಕವಿಯ ಮನಸ್ಸಿನಲ್ಲಿ ಅರಳಿರುವ ಅನೇಕ ನಾದರೂಪಗಳನ್ನು ಇಲ್ಲಿ ಅರಳಿರುವ ಹೂವುಗಳಿಗೆ ಹೋಲಿಸಲಾಗಿದೆ. ಕಾವ್ಯಭ್ರೂಣವನ್ನು ಜೇನುಹುಳಕ್ಕೆ ಹೋಲಿಸಲಾಗಿದೆ. ಹೂವುಗಳಿಂದ ಜೇನು ಸಂಗ್ರಹಿಸುವ ಜೇನುಹುಳದಂತೆ, ಕಾವ್ಯಭೃಂಗವು ಕವಿಯ ಚಿತ್ತದಲ್ಲಿ ಝೇಂಗುಟ್ಟುತ್ತಿರುವ ನಾದದ ಸಾರವನ್ನು ಹೀರಿ, ಪದಗಳನ್ನಾಗಿ ಪರಿವರ್ತಿಸುತ್ತದೆ.

ವಜ್ರಮುಖ ಅಂದರೆ ಜೇನುಹುಳದ ಕೊಂಡಿ. ಆ ಕೊಂಡಿಯಿಂದ ನೀರನ್ನು ಅಂದರೆ ವಾಕ್-ಸಾರವನ್ನು ಹೀರಿದ ಬಳಿಕ ಹೂವು ನೀರಸವಾಗಲೇ ಬೇಕಲ್ಲವೆ!? ಇದು ಹೂವಿಗೆ ನೋವು ಹಾಗು ಸಾವನ್ನು ಕೊಡುವಂತಹದು. ಆದುದರಿಂದ ಹೂವಿನ ಬಾಳು ಇಲ್ಲಿಗೆ ಮುಗಿಯಿತು. ಆದರೆ ಕಾವ್ಯಭೃಂಗಕ್ಕೆ ಪೋಷಣೆ ನೀಡಿರುವದರಿಂದ ಅದರ ಜೀವನವು ಸಫಲವೂ ಆಗಿದೆ!

ಏಳನೆಯ ನುಡಿ ಹೀಗಿದೆ:
ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸುತಿತ್ತು ಕೂಟಾ
                                         ಭೃಂಗದ ಬೆನ್ನೇರಿ ಬಂತು….

ಕಲ್ಪನಾವಿಲಾಸವನ್ನು ಹೊತ್ತುಕೊಂಡು ಹುಟ್ಟಲು ಎಳಸುತ್ತಿರುವ ಈ ಕಾವ್ಯಶಿಶುವಿನ ಅನಂತ ಸಾಮರ್ಥ್ಯವನ್ನು ಬೇಂದ್ರೆ ಬಣ್ಣಿಸುತ್ತಾರೆ: ಅದರ ಓಟವು ಗಾಳಿಯೊಡನೆ ತಿಳ್ಳಿಯಾಟವನ್ನು ಆಡುತ್ತಿತ್ತು ಹಾಗು ದಿಕ್ಕುಗಳನ್ನು ಹಾಯುತ್ತಿತ್ತು. ಬಿದಿಗೆ ಚಂದ್ರನನ್ನು ಹೋಲುವ ಅದರ ನೋಟವು ನಗುವ ಚಿಕ್ಕೆಯೊಡನೆ ಕೆಳೆತನವನ್ನು ಬೆಳೆಸುತ್ತಿತ್ತು ಎಂದು ಬೇಂದ್ರೆ ಹೇಳುತ್ತಾರೆ. ಮನೋವೇಗವೇ ಪರಮವೇಗವೆಂದ ಮೇಲೆ ಕಲ್ಪನೆಯ ಸವಾರಿಯನ್ನು ಮಾಡುತ್ತಿರುವ ಕಾವ್ಯಶಿಶುವಿಗೆ  ದಿಕ್ಕುಗಳನ್ನು ಹಾಯುವ ಸಾಮರ್ಥ್ಯವಿರುವುದು ಸಹಜವೇ ಆಗಿದೆ. ಇನ್ನು ಅದರ ನೋಟವು (ಶುಕ್ಲಪಕ್ಷದ) ಬಿದಿಗೆಯ ನೋಟವೇಕೆ? ಇದು ಇದೀಗ ಜನಿಸಬೇಕಾದ ಶಿಶು. ಆದುದರಿಂದ ಅದು (ಶುಕ್ಲಪಕ್ಷದ) ಬಿದಿಗೆಯ ಚಂದ್ರನಂತೆ ಇನ್ನೂ ಪುಟ್ಟದಾಗಿದ್ದು, ಪ್ರವರ್ಧಮಾನಕ್ಕೆ ಬರುವಂತಹದಾಗಿದೆ. ‘ನಕ್ಕು ನಗುವ ಚಿಕ್ಕೆ’ ಎಂದರೆ ಶುಕ್ರಗ್ರಹ. ಅಮವಾಸ್ಯೆಯ ನಂತರ, ಬಿದಿಗೆಯ ಚಂದ್ರನು ಸೂರ್ಯ, ಬುಧ ಹಾಗು ಶುಕ್ರಗ್ರಹಗಳಿಗೆ ಸನಿಹದಲ್ಲಿಯೇ ಇರುತ್ತಾನೆ. ಆದುದರಿಂದ ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೂ ಮೊದಲು, ಶುಕ್ರ ಹಾಗು ಚಂದ್ರಮರು ಸಂಗಮಿಸುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಬೆಳದಿಂಗಳು ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಇದೀಗ ಹೊರಬರುತ್ತಿರುವ ಕಾವ್ಯಶಿಶು ವೇಗಶಾಲಿ ಹಾಗು ಪ್ರಕಾಶಮಾನವಾಗಿದೆ.

ಎಂಟನೆಯ ನುಡಿಯಲ್ಲಿ ಬೇಂದ್ರೆಯವರು ಕಾವ್ಯಶಿಶುವಿನಲ್ಲಿ ಪ್ರಾಣಸಂಚಾರವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಚೆಲುವು ತಾನೇ ತಾನಾಗಿ ತಾಳವನ್ನು ಹಾಕುತ್ತಿದೆ. ಇದೆಲ್ಲವೂ ನಿರಾಯಾಸವಾದ ಲೀಲೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ.

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
‘ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ
                                          ಭೃಂಗದ ಬೆನ್ನೇರಿ ಬಂತು….

ಇನ್ನು ಈ ಭ್ರೂಣದ ಪ್ರಸವವಾಗಬೇಕಷ್ಟೆ? ಅದು ಕವಿಯನ್ನು ಅವಲಂಬಿಸಿರುವದಿಲ್ಲ. ಆಗುವದೆಲ್ಲವೂ ನಿಯತಿಯನ್ನು ಅನುಸರಿಸುತ್ತದೆ. ಆ ‘ಸಮಯವು ಬಂದಿತೆ?’ ಎಂದು ಕಾಲನು ಕೇಳುತ್ತಿದ್ದಾನೆ. ಆತನಿಗೆ ಅವಸರವಿಲ್ಲ. ಯಾಕೆಂದರೆ ಆತನು ಅನಂತನು; ಇಂತಹ ಅನೇಕೆ ಹೆರಿಗೆಗಳನ್ನು ಆತ ಕಂಡಿದ್ದಾನೆ.

(ಬೇಂದ್ರೆಯವರು ಇಲ್ಲಿ ಸಂಸ್ಕೃತದ ಕವಿ ಭವಭೂತಿಯನ್ನು ನೆನಸುತ್ತಿದ್ದಾರೆ. ‘ಕಾಲವು ಅನಂತವಾಗಿದೆ, ಪೃಥ್ವಿ ವಿಶಾಲವಾಗಿದೆ. ನನ್ನ ಕಾವ್ಯವನ್ನು ಆನಂದಿಸುವ ಒಬ್ಬನು ಇದ್ದೇ ಇರುತ್ತಾನೆ.’ ಎಂದು ಹೇಳಿದ ಕವಿ ಈತ.)

ಒಂಬತ್ತನೆಯ ನುಡಿ ಹೀಗಿದೆ:

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
                                            ಭೃಂಗದ ಬೆನ್ನೇರಿ ಬಂತು….

ಬೇಂದ್ರೆಯವರು ಈ ರೀತಿಯಲ್ಲಿ ಜನಿಸಿದ ಭಾವಗೀತೆಯ ಲಕ್ಷಣಗಳನ್ನು ವಿವರಿಸುತ್ತಿದ್ದಾರೆ.
ಭಾವಗೀತೆಯ ರಚನೆಯ ಸಮಯದಲ್ಲಿ ವಿಭಿನ್ನ ಪದಗಳ ಮಂಥನ ನಡೆಯುತ್ತದೆ. ಈ ಮಂಥನದಲ್ಲಿ ಅತ್ಯಂತ ಸಮಂಜಸವಾದ ಪದವು ಮಜ್ಜಿಗೆಯಲ್ಲಿ ಬೆಣ್ಣೆ ತೇಲಿ ಬರುವಂತೆ ಸಹಜವಾಗಿ ತೇಲಿ ಬರುತ್ತದೆ. ಇದು ಕವನದ ‘ನಾದ’ಕ್ಕೆ ಯುಕ್ತವಾಗಿರಬೇಕು. (‘ನವನೀತ’ವೆಂದರೆ ‘ಹೊಸದಾಗಿ ಕಡೆದಂತಹ’ ಎನ್ನುವ ಅರ್ಥವಿದೆ.) ಮಾತು ಎಂದರೆ ‘ವಾಕ್’. ನಾದದಲ್ಲಿ ತೇಲುವ ನವನೀತವೆಂದರೆ ಆ ವಾಕ್ ಪ್ರತಿಪಾದಿಸುವ ಅರ್ಥ. ಇವೆರಡರಲ್ಲಿ ಸಾಮರಸ್ಯವಿರಬೇಕು. ಆವಾಗಲೇ ಅದು ‘ಹೊಸ ಬೆಣ್ಣೆ’ಯ ಸವಿಯನ್ನು ನೀಡುವುದು. ಇಂತಹ ಸಿದ್ಧಿ ತನ್ನ ಕಾವ್ಯದಲ್ಲಿ ಸಾಧಿಸಲಿ ಎನ್ನುವುದಕ್ಕಾಗಿಯೇ ಕಾಳೀದಾಸನು ತನ್ನ ‘ಕುಮಾರಸಂಭವ’ ಕಾವ್ಯದ ಮೊದಲಲ್ಲಿ ದೇವರಲ್ಲಿ ಹೀಗೆ ಪ್ರಾರ್ಥಿಸಿದ್ದಾನೆ:
“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ.”
( “ವಾಕ್ ಮತ್ತು ಅರ್ಥಗಳ ಸುಯೋಗಕ್ಕಾಗಿ, ವಾಕ್ ಮತ್ತು ಅರ್ಥಗಳಂತೆ ಹೆಣೆದುಕೊಂಡಿರುವ, ಜಗತ್ತಿನ ತಂದೆ-ತಾಯಿಯರಾದ, ಪಾರ್ವತೀಪರಮೇಶ್ವರರನ್ನು ಪ್ರಾರ್ಥಿಸುತ್ತೇನೆ.”)

ಇದೀಗ ಜನಿಸಿದ ಈ ಕಾವ್ಯಶಿಶು ‘ಹಿಗ್ಗ ಬೀರಿ ಹಿಗ್ಗುವುದು’. ಅಂದರೆ ಸುತ್ತಲಿದ್ದವರಿಗೆ, ಎತ್ತಿಕೊಂಡವರಿಗೆ ಅದು ಹಿಗ್ಗನ್ನು ಕೊಡುತ್ತದೆ ಹಾಗು ಆ ಮೂಲಕ ತಾನೂ ಹಿಗ್ಗುತ್ತದೆ. ಹಿಗ್ಗುತ್ತದೆ ಅಂದರೆ ಆನಂದಿಸುತ್ತದೆ ಎನ್ನುವ ಅರ್ಥವಲ್ಲದೆ ಬೆಳೆಯುತ್ತದೆ ಅನ್ನುವ ಅರ್ಥವೂ ಇದೆ. ಭಾವಗೀತೆ ಎನ್ನುವ ಈ ಕೂಸು ಸ್ವಸಂತೋಷದಲ್ಲಿ ಮುಳುಗಿದೆ. ಕವಿಯ ಕಲ್ಪನೆಯಲ್ಲಿ ಹುಟ್ಟಿದ ಭಾವಗೀತೆ ಎನ್ನುವ ಈ ಕೂಸಿನ ಸಂತೋಷಕ್ಕೆ ಹೊರಗಿನ ಯಾವ ವಸ್ತುವೂ ಬೇಕಿಲ್ಲ. ತನ್ನಷ್ಟಕ್ಕೆ ತಾನೇ ಕೈಕಾಲು ಬಡಿಯುತ್ತ, ಆಡುತ್ತಿರುವ ಶಿಶುವನ್ನು ನೋಡಿದವರಿಗೆ, ಇದು (ಪರಬ್ರಹ್ಮನಂತೆ) ಸ್ವಂತ ಆನಂದಲ್ಲಿ ಮುಳುಗಿದೆ ಎನ್ನುವುದರ ಭಾಸವಾಗುವುದು. ಅದನ್ನೇ ಬೇಂದ್ರೆಯವರು ‘ತನ್ನ ತಾನೆ ಪ್ರೀತಾ’ ಎನ್ನುವುದರ ಮೂಲಕ ಹೇಳುತ್ತಾರೆ. ಈ ಕೂಸಿನ ಆನಂದದ ಆಟಕ್ಕೆ ಏನಾದರೂ ಅರ್ಥವಿದೆಯೆ? ಅಥವಾ ಯಾವುದಾದರೂ ಸ್ವಾರ್ಥಪರ ಉದ್ದೇಶದಿಂದ  ಕೂಸು ಈ ಆಟವನ್ನು ಆಡುತ್ತಿದೆಯೆ? ಭಾವಗೀತೆಯೂ ಸಹ ತನ್ನಲ್ಲಿಯೇ ಆನಂದವನ್ನು ಹುಟ್ಟಿಸುತ್ತದೆ ಹಾಗು ಆ ಆನಂದವನ್ನು ಇತರರೂ ಅನುಭವಿಸುತ್ತಾರೆ. ಆದುದರಿಂದ ಬೇಂದ್ರೆಯವರು ಭಾವಗೀತೆಯನ್ನು ‘ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತೆ’ ಎಂದು ಬಣ್ಣಿಸುತ್ತಾರೆ.

ಕೊನೆಯ ನುಡಿ:
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                  ಭೃಂಗದ ಬೆನ್ನೇರಿ ಬಂತು….

ಮೊದಲನೆಯ ನುಡಿಯನ್ನೇ ಬೇಂದ್ರೆಯವರು ಕೊನೆಯಲ್ಲಿ ಮರುಕಳಿಸಿದ್ದಾರೆ. ಆದರೆ ಇಲ್ಲಿ ‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸಾ’ ಎನ್ನುವ ಪದಪುಂಜಕ್ಕೆ  inverted commas ಬಳಸಿಲ್ಲ. ಯಾಕೆಂದರೆ ಮೊದಲ ನುಡಿಯಲ್ಲಿ ಅವರು ಕಾಳೀದಾಸನನ್ನು ಸ್ಮರಿಸಿದ್ದಾರೆ. ಇಲ್ಲಿ ಮಾತ್ರ ಅವರು ತಮ್ಮ ಕಾವ್ಯಾನುನುಭವವನ್ನೇ ಹೇಳುತ್ತಿದ್ದಾರೆ! ಭಾವಗೀತೆಯ ಕಾವ್ಯಾನುಭವವು ಆನಂದಮಯವಾದದ್ದು. ಬೇಂದ್ರೆಯವರ ಕಠಿಣಕಾಲದಲ್ಲಿ ಈ ಆನಂದದ ಗೀತೆ ಹುಟ್ಟಿರುವುದನ್ನು ಗಮನಿಸಿದಾಗ ಈ ಕವನವನ್ನು ‘ಅಗ್ನಿಯಲ್ಲಿ ಅರಳಿದ ಆನಂದದ ಹೂವು’ ಎನ್ನಬಹುದಲ್ಲವೆ?
………………………………………………………………
(ಟಿಪ್ಪಣಿ:
ಬೇಂದ್ರೆಯವರು ಮುಗದ ಹಳ್ಳಿಯಲ್ಲಿ ನಜರಬಂದಿಯಲ್ಲಿ ಇದ್ದರು. ಮುಗದವು ಹಳಿಯಾಳ ರಸ್ತೆಯ ಮೇಲೆ ಧಾರವಾಡದಿಂದ ಸುಮಾರು ೧೩ ಕಿಲೋಮೀಟರುಗಳ ದೂರದಲ್ಲಿದೆ. ‘ಗೆಳೆಯರ ಗುಂಪಿ’ನ ಗೆಳೆಯರಲ್ಲಿ ಒಬ್ಬರಾದ ಹಾಗು ಮನೋಹರ ಗ್ರಂಥಮಾಲೆಯನ್ನು ಸ್ಥಾಪಿಸಿದ ಶ್ರೀ ಜಿ.ಬಿ.ಜೋಶಿಯವರು ಪ್ರತಿ ದಿನವೂ ಸೈಕಲ್ ಮೇಲೆ ಹೋಗಿ ಬೇಂದ್ರೆಯವರಿಗೆ ಊಟವನ್ನು ಕೊಟ್ಟು ಬರುತ್ತಿದ್ದರು. ಈ ಮಾಹಿತಿಯನ್ನು ಶ್ರೀ ವ್ಯಾಸ ದೇಶಪಾಂಡೆ ನೀಡಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ.)