Wednesday, July 11, 2018

ಕನಸಿನೊಳಗೊಂದು ಕಣಸು......................ಬೇಂದ್ರೆ                                 ಕನಸಿನೊಳಗೊಂದು ಕಣಸು

                                           ತಾಯಿ ಮಕ್ಕಳ ಸಂವಾದ
                             (ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ)

                                                            (೧)
“ ಯಾರು ನಿಂದವರಲ್ಲಿ ತಾಯೆ ” ಎಂದೆ.
            “ ಯಾರು ಕೇಳುವರೆನಗೆ, ಯಾಕೆ ತಂದೆ? “  
                  
(೨)
“ ಬೇಸರದ ದನಿಯೇಕೆ ಹೆಸರ ಹೇಳಲ್ಲ.”
            “ ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ.”
                       
(೩)
                   “ ನೀನಾರ ಮನೆಯವಳು ಮುತ್ತೈದೆ ಹೇಳು. ”
                                    “ನಾನಾರ ಮನೆಯವಳೊ ಬಯಲನ್ನೆ  ಕೇಳು.”

                    (೪)
“ ಆಪ್ತರಿಲ್ಲವೆ ನಿನಗೆ ಇಷ್ಟರಿಲ್ಲೇ ? ”
            “ ಗುಪ್ತರಾದರೊ ಏನೊ ಇಷ್ಟರಲ್ಲೆ ! ”

                        (೫)
“ ಇರುವರೇ ಇದ್ದರೇ ಮಕ್ಕಳೆಂಬವರು ? ”
            “ ಇರುವರೆಂದರು ಕೂಡ ಯಾರು ನಂಬುವರು ? ”
                      
(೬)
                                    “ ಮನೆಯಿಲ್ಲವೇ ಇರಲು ಪರದೇಶಿಯೇನು? “
                                                “ ಮನೆಯೆ ಮುನಿದೆದ್ದಿರಲು ಯಾ ದೇಶವೇನು ? ”

(೭)
                        “ ನಿನ್ನ ಮಾತಿನಲಿಹುದು ಒಡಪಿನಂದ ! ”
                                    “ ನನ್ನ ಹತ್ತಿರದೊಂದೆ ಉಳಿದಿಹುದು ಕಂದ. ”  

                                                (೮)
                        “ ರಾಜಮುಖಿ ನಿನ್ನಲ್ಲಿ ರಾಜಕಳೆ ಇಹುದು ! ”
                                    “ ಸಾಜಮಾದರು ಪಕ್ಷವಿದು ವದ್ಯವಹುದು !”

                                                (೯)
                        “ ಯಾವುದಾದರು ನಾಡದೇವಿಯೇ ನೀನು ? ”
                                    “ ಭಾವುಕರ ಕಂಗಳಿಗೆ ದೇವಿಯೇ ನಾನು.”

                                                (೧೦)
                        “ ಈಗ ಬಂದಿಹುದೇಕೆ ಏನು ಬೆಸನ ? ”
                                    “ ಯೋಗವಿಲ್ಲದೆ ತಿಳಿಯದೆನ್ನ ವೆಸನ ! ”        
           
                                                (೧೧)
                        “ ಹಾದಿ ಯಾವುದು ಹೇಳು, ಯಾವ ಯೋಗ ? ”
                                    “ ಆದಿ ಅಂತವು ಇಲ್ಲದಂಥ ತ್ಯಾಗ ! ”

                                                (೧೨)
                        “ ಬೇಡಬಂದಿಹೆ ಏನು ಏನಾದರೊಂದು ? ”
                                    “ ಬೇಡಿದರೆ ಬೇಡಿದುದ ಕೊಡುವೆಯಾ ಇಂದು ? ”
                                               
(೧೩)
                        “ ಅಹುದು ಕೊಡುವೆನು ಎಂದು ನಾನೆನ್ನಬಹುದೇ ? ”
                                    “ ಬಹುದು-ಗಿಹುದಿನ ಶಂಕಿ ವೀರನಹುದೇ ? ”

                                                (೧೪)
                        “ ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ. ”          
                                    “ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ. ”       

                                                 (೧೫)
                        “ ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ.”
                                    “ ಬಲ್ಲವರು ದೈವವನು ಪರಿಕಿಸವರೊಮ್ಮೆ ! ”

                                                (೧೬)
                        “ ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ? ”
                                    “ಗಂಡುಸಾದರೆ ನಿನ್ನ ಬಲಿಕೊಡುವಿಯೇನು ? ”
                                               
                                  *          *            *

                                          (೧೭)
                        ಮನವು ನಡುಗಿತು ತನುವು ನವಿರಿಗೊಳಗಾಯ್ತು:
                                    ನೆನವು ನುಗ್ಗಿತು—ಹೊರಗೆ ಕಂಡೆ—ಬೆಳಗಾಯ್ತು.


ಬೇಂದ್ರೆಯವರ ಈ ಕವನದ ಹೆಸರು ‘ಕನಸಿನೊಳಗೊಂದು ಕಣಸು’. ಕಣಸು ಪದಕ್ಕೆ ನೋಟ, ದೃಶ್ಯ ಎನ್ನುವ ಅರ್ಥಗಳಿವೆ. ಇಲ್ಲಿ ಈ ಪದವನ್ನು ನಾವು ಕಾಣ್ಕೆ (=vision) ಎಂದು ಅರ್ಥೈಸಿಕೊಳ್ಳೋಣ. ಅಂದರೆ ಇದು ಪ್ರತಿನಿತ್ಯ ಬೀಳಬಹುದಾದ ಸಾಮಾನ್ಯ ಕನಸಲ್ಲ; ಬೇಂದ್ರೆಯವರ ಮನದಲ್ಲಿ (--ವಸ್ತುತಃ ಆ ಅವಧಿಯ ಎಲ್ಲ ಕನ್ನಡಪ್ರೇಮಿಗಳ ಮನದಲ್ಲಿ--) ಕನ್ನಡದ ಬಗೆಗೆ ಇರುವ ಚಡಪಡಿಕೆ ಹಾಗು ಅಭಿಲಾಷೆ.

ಬೇಂದ್ರೆಯವರು ಈ ಕವನವನ್ನು ರಚಿಸುವ ಸಂದರ್ಭದಲ್ಲಿ ಕನ್ನಡ ನಾಡು ನಾಲ್ಕು ತುಂಡುಗಳಲ್ಲಿ ಹರಿದು ಹಂಚಿ ಹೋಗಿತ್ತು. ಹಳೆಯ ಮೈಸೂರು ಸಂಸ್ಥಾನವೊಂದನ್ನು ಬಿಟ್ಟರೆ, ಮುಂಬಯಿ ಕರ್ನಾಟಕ, ಹೈದರಾಬಾದ ಕರ್ನಾಟಕ ಹಾಗು ಮದ್ರಾಸ ಕರ್ನಾಟಕಗಳಲ್ಲಿ ಕನ್ನಡಿಗರ ಸ್ಥಿತಿ ಶೋಚನೀಯವಾಗಿತ್ತು. ಮರಾಠಿ, ಉರ್ದು, ತೆಲಗು ಹಾಗು ತಮಿಳು ಭಾಷೆಗಳ ದೊಡ್ಡಾಟದಲ್ಲಿ ಕನ್ನಡ ಭಾಷೆಯು ತಲೆ ಬಗ್ಗಿಸಿಕೊಂಡು ಬಾಳಬೇಕಾಗಿತ್ತು.  ಕನ್ನಡವು ಇಂತಹ ಸ್ಥಿತಿಯಿಂದ ಹೊರಬರಬೇಕು, ತನ್ನ ಗತವೈಭವವನ್ನು ಮತ್ತೆ ಕಾಣಬೇಕು ಎನ್ನುವುದು ಆಲೂರು ವೆಂಕಟರಾಯರು, ಬೆಟಗೇರಿ ಕೃಷ್ಣಶರ್ಮರು, ಬೇಂದ್ರೆಯವರು, ಶ್ರೀರಂಗ ಮೊದಲಾದ ಕನ್ನಡಪ್ರೇಮಿಗಳ, ಕನ್ನಡ ಸಾಹಿತಿಗಳ ಕನಸಾಗಿತ್ತು, ಕಾಣ್ಕೆಯಾಗಿತ್ತು. ಈಗ ಬೇಂದ್ರೆಯವರ ಕನಸನ್ನಷ್ಟು ನೋಡೋಣ:

ಬೇಂದ್ರೆಯವರ ಮನೆಯ ಬಾಗಿಲಿನ ಹೊರಗೆ ಒಬ್ಬ ಗೌರವಸ್ಥ ಆದರೆ ಮಲಿನ ಬಟ್ಟೆಗಳನ್ನು ಧರಿಸಿದ ಓರ್ವ ಪ್ರೌಢ ಸ್ತ್ರೀಯನ್ನು ಬೇಂದ್ರೆಯವರು ಕಾಣುತ್ತಾರೆ.  ಇವಳು ಯಾರು ಎನ್ನುವುದು ಬೇಂದ್ರೆಯವರಿಗೆ ತಿಳಿಯದು. ಆದರೆ ‘ತಾಯಿ ಮಕ್ಕಳ ಸಂವಾದ’ ಎಂದು ಮೊದಲೇ  ಹೇಳಿ ಬಿಡುವ ಮೂಲಕ ಹಾಗು ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ ಎಂದು ಕಂಸಿನಲ್ಲಿ ಹೇಳುವ ಮೂಲಕ ಇವಳು ಕನ್ನಡ ತಾಯಿ ಎಂದು ಓದುಗರಿಗೆ ಬೇಂದ್ರೆಯವರು ಸ್ಪಷ್ಟಪಡಿಸುತ್ತಿದ್ದಾರೆ. ಹೀಗೇಕೆ ಎಂದು ಓದುಗರು ಕೇಳಬಹುದು. ಕನಸಿನಲ್ಲಿ ನಡೆದ ಈ ಸಂವಾದದಲ್ಲಿ ಬೇಂದ್ರೆಯವರು ಪ್ರತಿಯೊಂದು ನುಡಿಯಲ್ಲಿಯೂ ಕನ್ನಡ ಮಾತೆಯ ಚಿತ್ರವನ್ನು ಹಂತಹಂತವಾಗಿ ವಿಶಾಲಿಸುತ್ತ ಹೊರಟಿದ್ದಾರೆ. ಅವಳ ಸದ್ಯದ ಸ್ಥಿತಿ ಹಾಗು ಮೊದಲೊಮ್ಮೆ ಅವಳಿಗಿದ್ದ ಪ್ರತಿಷ್ಠಿಕೆಯನ್ನು ತೋರಿಸಲು, (ಕವಿಗೆ ತಿಳಿಯದ ಆದರೆ ಓದುಗರಿಗೆ ತಿಳಿದಿರುವ) ಈ ವಿಧಾನವು ಅನುಕೂಲಕರವಾದ ಸಾಧನವಾಗಿದೆ.

ಸರಿ, ಬೇಂದ್ರೆಯವರು ಆ ಸ್ತ್ರೀಯನ್ನು ನೋಡಿದರು. ಗೌರವ ಹುಟ್ಟುವಂತಹ ನಿಲುವು ಅವಳದು. ಇದೀಗ ಇವಳೇಕೆ ಇಲ್ಲಿ ಬಂದು ನಿಂತಿಹಳು ಎನ್ನುವ ಸಹಜ ಕುತೂಹಲದಿಂದ ಬೇಂದ್ರೆಯವರು ಆ ಸ್ತ್ರೀಗೆ ಗೌರವದಿಂದಲೇ ಕೇಳುತ್ತಾರೆ:
           “ ಯಾರು ನಿಂದವರಲ್ಲಿ ತಾಯೆ ” ಎಂದೆ.
ಇದೀಗ ಚಕಿತಳಾಗುವುದು ಆ ಸ್ತ್ರೀಯ ಸರದಿ. ತನ್ನನ್ನು ಮಾತನಾಡಿಸುವವರೆ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ, ತನ್ನನ್ನು ‘ತಾಯಿ’ ಎಂದು ಸಂಬೋಧಿಸಿ ಮಾತನಾಡುವ ಇವರು ಯಾರು ಎಂದು ಆ ಸ್ತ್ರೀ ಅಚ್ಚರಿ ಪಡುತ್ತಾಳೆ. ಹೀಗಾಗಿ ಅವಳು ಬೇಂದ್ರೆಯವರನ್ನೇ ಮರಳಿ ಕೇಳುತ್ತಾಳೆ:
“ ಯಾರು ಕೇಳುವರೆನಗೆ, ಯಾಕೆ ತಂದೆ? ” 

ಆದರೆ ‘ಈ ಸ್ತ್ರೀಯು ನಿರ್ಲಕ್ಷಿಸುವಂತಹ ವ್ಯಕ್ತಿಯಲ್ಲ. ಇವಳು ಚೆನ್ನಾಗಿ ಬಾಳಿದ ಗೌರವಸ್ಥ ಮನೆತನದ ಹೆಣ್ಣುಮಗಳು. ಏನೋ ಸಮಸ್ಯೆ ಬಂದುದರಿಂದ ಇದೀಗ ಇವಳು ಬೇಸರದಲ್ಲಿದ್ದಾಳೆ’ ಎನ್ನುವುದು ಬೇಂದ್ರೆಯವರ ಅನಿಸಿಕೆಯಾಗಿದೆ. ಆದುದರಿಂದ ಅವಳನ್ನು ಸಮಾಧಾನಪಡಿಸುತ್ತ ಅವರು ಮರುಪ್ರಶ್ನಿಸುತ್ತಾರೆ:
         “ ನೀನಾರ ಮನೆಯವಳು ಮುತ್ತೈದೆ ಹೇಳು. ”
ಇಲ್ಲಿ ನೋಡಿ. ಬೇಂದ್ರೆಯವರು ಅವಳಿಗೆ ‘ಮುತ್ತೈದೆ’  ಎಂದು ಸಂಬೋಧಿಸುತ್ತಿದ್ದಾರೆ. ‘ತಾಯೆ’ ಎಂದು ಮೊದಲಿಗೆ ಕರೆದಾಗ, ಅದು ಕೇವಲ ನಯ-ವಿನಯದ ಕರೆಯಾಗುತ್ತದೆಯೇ ಹೊರತು, ಗೌರವಸೂಚಕ ಸಂಬೋಧನೆಯಾಗುವುದಿಲ್ಲ. ‘ಮುತ್ತೈದೆ’ ಎನ್ನುವ ಪದವು ಒಬ್ಬ ಹೆಣ್ಣುಮಗಳ ಹಿರಿತನವನ್ನು ಸೂಚಿಸುವ ಪದವಾಗಿದೆ. 
ಈ ಪ್ರಶ್ನೆಗೆ ಅವಳ ಉತ್ತರವೇನು?
“ ನಾನಾರ ಮನೆಯವಳೊ ಬಯಲನ್ನೆ  ಕೇಳು.”
ಇದೊಂದು ಆಘಾತಕಾರಿ ಹಾ ಚಮತ್ಕಾರಿ ಉತ್ತರ. ಕವಿಯ ಸರಳ ಪ್ರಶ್ನೆಗೆ ಅವಳು ಸರಳ ಉತ್ತರ ಕೊಡುವುದಿಲ್ಲ. ವ್ಯಾವಹಾರಿಕವಾಗಿ ಅರ್ಥೈಸಿಕೊಳ್ಳುವದಾದರೆ, ಮನೆಯಿಲ್ಲದವರಿಗೆ ಬಯಲೇ ಒಂದ ಮನೆ. ಇದು ಸಾಮಾನ್ಯ ಊಹೆ. ಇದು ಕವಿಗೆ ಅವಳು ಕೊಡುವ ಕಠೋರವಾದ, ನಿರ್ದಾಕ್ಷಿಣ್ಯವಾದ  ಉತ್ತರ.

ಆದರೆ ಈ ಹೆಣ್ಣುಮಗಳ ಉತ್ತರ ಬಹಳ ಅರ್ಥಗರ್ಭಿತವಾಗಿದೆ. ‘ಬಯಲು’ ಅಂದರೆ ‘ನಾಡು’. ಈ ವಿಶಾಲವಾದ ನಾಡೆಲ್ಲವೂ ಅವಳ ಮನೆಯೇ. ಇದು ಶ್ಲೇಷಾತ್ಮಕ ಉತ್ತರ. ಆದುದರಿಂದಲೇ ಆ ಹೆಣ್ಣುಮಗಳು ಕವಿಗೆ ‘ಬಯಲನ್ನೆ ಕೇಳು’ ಎನ್ನುವ ತಪರಾಕಿಯನ್ನು ಸೌಮ್ಯವಾಗಿಯೇ ಕೊಡುತ್ತಾಳೆ! (ಅದನ್ನು ಬೇಂದ್ರೆಯ ಊಹಿಸಿರಬಹುದು. ಆದುದರಿಂದಲೇ ಅವರು ತಮ್ಮ ಮುಂದಿನೊಂದು ಪ್ರಶ್ನೆಯಲ್ಲಿ, ‘ಯಾವುದಾದರು ನಾಡದೇವಿಯೆ ನೀನು?’ ಎಂದು ಕೇಳಿದ್ದು.)

ಆಯಿತು ಬಿಡಿ. ಇವಳಿಗೆ ಮನೆ ಇದ್ದಂತಿಲ್ಲ. ಆದರೆ ಸಮಾನಶ್ರೇಣಿಯ, ಹಿರಿಕಿರಿಯರಾದ ಆಪ್ತೇಷ್ಟರು ಇವಳಿಗೆ ಇರಬಹುದಲ್ಲ? ಅವರು ಇವಳಿಗೆ ತಮ್ಮ ಮನೆಯಲ್ಲಿ ಆಶ್ರಯ ಕೊಡಬಹುದಲ್ಲ? ಆದುದರಿಂದ ಬೇಂದ್ರೆಯವರು ಮತ್ತೆ ಕೇಳುತ್ತಾರೆ:
          “ ಆಪ್ತರಿಲ್ಲವೆ ನಿನಗೆ ಇಷ್ಟರಿಲ್ಲೇ? ”
ಬೇಂದ್ರೆಯವರ ಕವನಗಳಲ್ಲಿ ಇರುವ ಕ್ರಮಬದ್ಧತೆಯನ್ನು ಗುರುತಿಸಿರಿ. ಈ ಮುತ್ತೈದೆ ತನ್ನ ಮನೆಯಿಂದ ಯಾವುದೋ ಕಾರಣಕ್ಕಾಗಿ ಹೊರಬಿದ್ದಿದ್ದಾಳೆ. ಆದರೆ ಇವಳಿಗೆ ತನ್ನ ತವರಿನಲ್ಲಿ ಅಥವಾ ಆಪ್ತೇಷ್ಟರಲ್ಲಿ ಸ್ವಾಗತ ಇರಬಹುದಲ್ಲವೆ? ಅವರು ಇವಳಿಗೆ ಆಶ್ರಯ ಕೊಡಬಹುದಲ್ಲವೆ? ಆದುದರಿಂದ ಬೇಂದ್ರೆಯವರು ಇವಳ ಆಪ್ತರ ಬಗೆಗೆ ಪ್ರಶ್ನಿಸಿದರು. ಈ ಆಪ್ತರು ಇಲ್ಲವಂತಲ್ಲ. ಆದರೆ ದುರ್ದಶೆ ಬಂದಾಗ ಆಪ್ತೇಷ್ಟರು ಕಣ್ಮರೆಯಾಗುವುದು ಸಹಜ!
“ ಗುಪ್ತರಾದರೊ ಏನೊ ಇಷ್ಟರಲ್ಲೆ! ”

ಆಪ್ತೇಷ್ಟರು ದೂರವಾದಾರು; ಆದರೆ ಮಕ್ಕಳು ಮಾತ್ರ ತಮ್ಮ ತಾಯಿಯ ಕೈ ಬಿಡಲಾರರು ಎನ್ನುವುದು ಸಾಮಾನ್ಯ ಕಲ್ಪನೆ. ಇದಕ್ಕೆ ಅಪವಾದಗಳೂ ಇವೆ. ಆದುದರಿಂದ ಬೇಂದ್ರೆಯವರು ಇನ್ನು ಅವಳ ಮಕ್ಕಳ ಬಗೆಗೆ ಸ್ವಲ್ಪ ಗಡುಚಾಗಿಯೇ ಕೇಳುತ್ತಾರೆ:
“ ಇರುವರೇ ಇದ್ದರೇ ಮಕ್ಕಳೆಂಬವರು ? ”
         
ತಾಯಿಗೆ ಮಕ್ಕಳೇ ದೊಡ್ಡ ಸಂಪತ್ತು. ಅವರು ಇದ್ದರೆ, ಈ ತಾಯಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆದುದರಿಂದ ಬೇಂದ್ರೆಯವರು ಶಂಕಿಸುತ್ತಲೇ “ಇರುವರೇ ಇದ್ದರೇ ಮಕ್ಕಳೆಂಬವರು ?” ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಅವಳೊಂದು ಮತ್ತೊಂದು ಆಘಾತಕಾರೀ ಉತ್ತರವನ್ನೇ ಕೊಡುತ್ತಾಳೆ:
“ ಇರುವರೆಂದರು ಕೂಡ ಯಾರು ನಂಬುವರು ? ”
ಇವಳಿಗೆ ಮಕ್ಕಳಿದ್ದಾರೆ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ! ಅಪುತ್ರಾಯಾಃ ಗತಿರ್ನಾಸ್ತಿ!

ಪಾಪ, ಇವಳಿಗೆ ಬಂಧು ಬಳಗವಿಲ್ಲ; ಮಕ್ಕಳಿಲ್ಲ. ಈ ಅನಾಥೆ ಎಲ್ಲಿರಬೇಕು?  ಹಾಗಾಗಿ ಮತ್ತೊಂದು ಸಹಜವಾದ ಪ್ರಶ್ನೆ ಬೇಂದ್ರೆಯವರ ಮನದಲ್ಲಿ ಮೂಡುತ್ತದೆ:
“ ಮನೆಯಿಲ್ಲವೇ ಇರಲು ಪರದೇಶಿಯೇನು? ”
ಪರದೇಶಿ ಎನ್ನುವಲ್ಲಿಯ ಶ್ಲೇಷೆಯನ್ನು ಗಮನಿಸಿರಿ. ಪರದೇಶಿ ಪದಕ್ಕೆ ಅನಾಥ ಎನ್ನುವ ಅರ್ಥವಿರುವಂತೆಯೇ, ಬೇರೆ ನಾಡಿನವಳು ಎನ್ನುವ ಅರ್ಥವೂ ಇದೆ. ಎಂತಹ ಸಂಕಟದ ವಿಷಯ. ಕನ್ನಡ ಮಾತೆಯು ತನ್ನ ನಾಡಿನಲ್ಲಿಯೆ, ಬೇರೊಂದು ನಾಡಿನವಳು (alien) ಎನ್ನಿಸಿಕೊಳ್ಳಬೇಕೆ? ಕನ್ನಡ ನಾಡಿನಲ್ಲಿ ಕನ್ನಡಿಗರೇ ತಮ್ಮ ತಾಯಿನುಡಿಯನ್ನು ಮರೆತು ಇತರ ಭಾಷೆಗಳಿಗೆ ಮರುಳಾದದ್ದೇ ಇದಕ್ಕೆ ಕಾರಣವಾಗಿರಬಹುದು. (ಕನ್ನಡಿಗರು ಸತತವಾಗಿ ಪರಭಾಷಾಪ್ರಭುಗಳ ಅಡಿಯಲ್ಲಿ ಬದುಕಿದ್ದೂ ಇದಕ್ಕೆ ಕಾರಣವಾಗಿರಬಹುದು.) ಆ ಸ್ತ್ರೀಯು ತನ್ನ ಸಂಕಟವನ್ನು ಈ ರೀತಿ ತೋಡಿಕೊಳ್ಳುತ್ತಾಳೆ:
“ ಮನೆಯೆ ಮುನಿದೆದ್ದಿರಲು ಯಾ ದೇಶವೇನು ? ”
ತಾನು ಪರದೇಶಿಯಲ್ಲ. ಆದರೆ ತನ್ನ ಮನೆಯ ಮಕ್ಕಳೇ ತನಗೆ ಮುನಿದುಕೊಂಡಿದ್ದಾರೆ. ತಮ್ಮಾಯಿನುಡಿಯನ್ನು ಅವು ಮೆತಿದ್ದಾರೆ. ಆದುದರಿಂದ ತನಗೆ ತನ್ನ ಮನೆ ಎನ್ನುವದೊಂದು ಉಳಿದಿಲ್ಲ ಎನ್ನುವ ವ್ಯಥೆ ಇಲ್ಲಿ ಕಾಣುತ್ತದೆ.

ಇಲ್ಲಿಯವರೆಗಿನ ಆರು ನುಡಿಗಳಲ್ಲಿ ಕವಿಗೆ ಈ ಸ್ತ್ರೀಯ ಬಗೆಗೆ ಇರುವ ಕನಿಕರ ಮಾತ್ರ ಾಣುತ್ತದೆ. ಇನ್ನು ಮುಂದಿನ ಹತ್ತು ನುಡಿಗಳಲ್ಲಿ ಅವಳ ಬಗೆಗೆ ಕವಿಗೆ ಗೌರವ ಹೆಚ್ಚುತ್ತಲೇ ಹೋಗುತ್ತದೆ ಎನ್ನುವುದನ್ನು ಕಾಣಬಹುದು. ಅವಳ ಮಾತುಗಳಲ್ಲಿ ಏನೋ ಗೂಢವಿದೆ, ಇವಳು ಸಾಮಾನ್ಯ ಸ್ತ್ರೀ ಅಲ್ಲ; ಇವಳು ಸುಸಂಸ್ಕೃತೆ, ಚೆನ್ನಾಗಿ ಬಾಳಿದವಳು ಎನ್ನುವ ಭಾವನೆಯಿಂದ ಕವಿ ಮತ್ತೆ ಕೇಳುತ್ತಾನೆ:
“ ನಿನ್ನ ಮಾತಿನಲಿಹುದು ಒಡಪಿನಂದ ! ”
ಈ ಪ್ರಶ್ನೆಗೂ ಆ ಸ್ತ್ರೀ ಗೂಢವಾಗಿಯೇ ಉತ್ತರಿಸುತ್ತಾಳೆ. ಜೊತೆಗೆ ತನ್ನ ಸದ್ಯದ ಸ್ಥಿತಿಯನ್ನೂ ತಿಳಿಸುತ್ತಾಳೆ:
                                    “ ನನ್ನ ಹತ್ತಿರದೊಂದೆ ಉಳಿದಿಹುದು ಕಂದ. ”     
ಇವಳ ಬಗೆಗೆ ಕವಿಯಲ್ಲಿ ಗೌರವ ಹೆಚ್ಚುತ್ತಿರುವಂತೆಯೇ, ತನಗೆ ಅನುಕಂಪ ತೋರುತ್ತಿರುವ ಈ ಕವಿಯ ಬಗೆಗೆ ಆ ಸ್ತ್ರೀಯಲ್ಲೂ ಸಹ ವಾತ್ಸಲ್ಯಭಾವ ಉದಯಿಸುತ್ತದೆ. ಆದುದರಿಂದಲೇ ಅವಳು ಕವಿಗೆ ‘ಕಂದ’ ಎಂದು ಸಂಬೋಧಿಸುತ್ತಾಳೆ.

ತಾನು ಕೇಳಿದ ಪ್ರಶ್ನೆಗಳಿಗೆ, ಈ ಹೆಣ್ಣುಮಗಳು ಕೊಡುವ ಉತ್ತರಗಳ ಧಾಟಿಯನ್ನು ನೋಡಿದಾಗ, ಕವಿಗೆ ಒಂದು ಅರಿವು ದೃಢವಾಗುತ್ತಿದೆ, ಇವಳು ಒಂದು ಕಾಲದಲ್ಲಿ ಸಾಂಸ್ಕೃತಿಕವಾಗಿ ಹಾಗು ಸಾಮಾಜಿಕವಾಗಿ ಬಹು ದೊಡ್ಡ ಸ್ತರದಲ್ಲಿ ಇದ್ದವಳು ಎಂದು. ಆದುದರಿಂದಲೇ ಆತ ಉದ್ಗರಿಸುತ್ತಾನೆ:
“ ರಾಜಮುಖಿ ನಿನ್ನಲ್ಲಿ ರಾಜಕಳೆ ಇಹುದು !”
ಇದೇನೂ ಸುಳ್ಳಲ್ಲವಲ್ಲ! ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದಿಂದ ಆಳಿದ ಕರ್ನಾಟಕ ಚಕ್ರವರ್ತಿಗಳು ಇವರೆಲ್ಲ ಕನ್ನಡ ಧ್ವಜವನ್ನು ಮೆರೆಸಿದವರೇ ಅಲ್ಲವೆ? ಆದರೆ ಈಗಿನ ಪರಿಸ್ಥಿತಿ ಏನು? ಕನ್ನಡ ನಾಡಿನ ಶುಕ್ಲಪಕ್ಷ ಮುಗಿದಿದೆ. ಇದೀಗ ಕೃಷ್ಣಪಕ್ಷ. ಅದನ್ನೇ ಕನ್ನಡ ಾಜಾಜೇಶ್ವಿ ಹೀಗೆ ಹೇಳುತ್ತಾಳೆ:
“ ಸಾಜಮಾದರು ಪಕ್ಷವಿದು ವದ್ಯವಹುದು ! ”
ನ್ನಲ್ಿ ರಾಜೆ ಇರುವುದು ಸಾದದ್ದೆ. ಆದ ಇದೀಗ ಕೃಷ್ಣಪಕ್ಷ ಬಂದಿದೆ; ಇದೇನು ಸ್ಥಿರವಲ್ಲ. ಶುಕ್ಲಪಕ್ಷ ಮತ್ತೆ ಬರಲೇಬೇಕು. ಇದ ಕನ್ನಡ ತಾಯಿಯ ಆಸೆ, ಆಶಯ.

ಈ ಮಾತನ್ನು ಕೇಳುತ್ತಿದ್ದಂತೆಯೆ ಬೇಂದ್ರೆಯವರಿಗೆ ಸ್ಪಷ್ಟವಾದ ಅರಿವು ಮೂಡತೊಡಗಿದೆ. ಮೊದಲು, ರಾಜಮುಖಿ ಎಂದವರು ಇದೀಗ ಇವಳು ದೇವತಾಸ್ವರೂಪಳು ಎನ್ನುವ ಭಾಸವಾಗುತ್ತದೆ. ಆದುದರಿಂದ ಅವರು ಮತ್ತೆ ಕೇಳುತ್ತಾರೆ:
“ ಯಾವುದಾದರು ನಾಡದೇವಿಯೇ ನೀನು ? ”
ಆ ತಾಯಿ ‘ಹೌದು’ ಎನ್ನುವುದಿಲ್ಲ. ಯಾರು ತನ್ನ ತಾಯಿನಾಡು ಹಾಗು ತಾಯಿನುಡಿಯಲ್ಲಿ ಭಕ್ತಿಯನ್ನು ಇಡುತ್ತಾರೆಯೋ, ಯಾರ ಅಂತಂಗಲ್ಲಿ ಅಮೂರ್ತಳಾದ ತಾನು ಮೂರ್ತಸ್ವರೂಪಳಾಗುತ್ತೇನೆಯೊ, ಅಂಥವರಿಗೆ ಮಾತ್ರ ತಾನು ದೇವಿ ಎನ್ನುವ ಅಂತಃಸತ್ಯ ಅವಳಿಗೆ ತಿಳಿದಿದೆ. ಆದುದರಿಂದ ಅವಳು ಮತ್ತೊಂದು ಒಡಪನ್ನು ಹೇಳುತ್ತಾಳೆ:
                                    “ ಭಾವುಕರ ಕಂಗಳಿಗೆ ದೇವಿಯೇ ನಾನು.”
ೇಂದ್ರೆಯರ ಕಲ್ಪಾಶಕ್ತಿ ಎಷ್ಟೇ ಅಗಾಗಿದ್ದೂ, ಅದು ವಾಸ್ತೆಯಿಯನ್ನು ಅತಿಕ್ರಿಸುವುದಿಲ್ಲ ಎನ್ನುವುದಕ್ಕೆ ಈ ವಾಕ್ಯೇ ಸಾಕ್ಿಯಾಗಿದೆ. ಕನ್ನೇವಿ ಎನ್ನುವ ಓರ್ವೇವಿ ವಾಸ್ತಲ್ಲಿ ಇರುವೇ? ಆ ದೇವಿ ಇರುವುದು ಅವಕ್ತಂದಿರಲ್ಲಿ ಮಾತ್ರ. ಆದುದಿಂದ ‘ಭಾವುಕಂಗಿಗೆ ದೇವಿಯೇ ನಾನು’ ಎನ್ನುವುದು ಇಲ್ಲಿಯ ಉತ್ತ.

ಇಂತಹ ಉಚ್ಚ ಸ್ಥಿತಿಯಲ್ಲಿ ಇದ್ದಂತಹ, ರಾಜ್ಞಿಯಾಗಿದ್ದಂತಹ, ದೇವಿ ಎಂದೆನಿಸುವ ಹೆಣ್ಣುಮಗಳಿಗೆ ಇಂತಹ ಸಂತಾಪದ ಸ್ಥಿತಿ ಬಂದಿರುವದಾದರೂ ಏಕೆ? ಇದು ಬೇಂದ್ರೆಯವರ ಪ್ರಶ್ನೆ:
“ ಈಗ ಬಂದಿಹುದೇಕೆ ಏನು ಬೆಸನ ? ”
( ಈ ಮಾತಿನಲ್ಲಿಯ ಶ್ಲೇಷೆಯನ್ನು ಗಮನಿಸಿರಿ. ಬೆಸನ ಇದು ವ್ಯಸನದ ತದ್ಭವ. ಅದರಂತೆಯೇ, ‘ಏನು ಬೆಸನ’ ಎಂದರೆ, ‘ಏನನ್ನು ಆದೇಶಿಸುತ್ತಿರುವೆ? ’ ಎನ್ನುವ ಅರ್ಥವೂ ಬರುತ್ತದೆ.)

ಈ ಸರಳವಾದ ಪ್ರಶ್ನೆಗೆ ಸರಳವಾದ ಉತ್ತರ ಇಲ್ಲವಲ್ಲ! ಯಾರು ತನ್ನ ನಾಡನ್ನು, ನುಡಿಯನ್ನು ತಾನೇ ಎಂದು ತಿಳಿದು ಪ್ರೇಮಪರವಶನಾಗುತ್ತಾನೋ ಅವನಿಗೆ ಮಾತ್ರ ಈ ಸಮಸ್ಯೆ ಏನೆಂದು ಹೊಳೆದೀತು. ಇದು ಯೋಗಸಾಧನೆಯಿಂದ ಮಾತ್ರ ಸಾಧ್ಯ. ಯೋಗ ಎಂದರೆ ತನ್ನ ಧ್ಯೇಯವಸ್ತುವಿನೊಡನೆ ಅಭೇದವಾಗುವುದು. ಅದಕ್ಕಾಗಿಯೇ ಕನ್ನಡಮಾತೆ ತನ್ನ ಮಕ್ಕಳಿಗೆ ಹೇಳುವ ಮಾತು ಹೀಗಿದೆ:
                                    “ ಯೋಗವಿಲ್ಲದೆ ತಿಳಿಯದೆನ್ನ ವೆಸನ ! ” 
ನನ್ನೊಡನೆ ಒಂದಾಗು, ನನ್ನನ್ನು ಅರಿತುಕೊ. ಅಂದರೆ ನನ್ನ ವ್ಯಸನ ನಿನಗೆ ತಿಳಿದೀತು ಎನ್ನುವುದು ಕನ್ನಡ ನಾಡದೇವಿಯ ‘ಯೋಗ’ ಎನ್ನುವ ಮಾತಿನ ಮರ್ಮ.

ಸ್ವಾತಂತ್ರ್ಯ ಹೋರಾಟದ ಕಾಲವು ಆದರ್ಶದ ಕಾಲ. ಯಾವುದೇ ಹೋರಾಟಕ್ಕಾಗಲಿ, ಆಧ್ಯಾತ್ಮದ ಬೆಂಬಲ ಬೇಕೇ ಬೇಕು. ಆದುದರಿಂದಲೇ, ಲೋಕಮಾನ್ಯ ತಿಲಕರು ಮಂಡಾಲೆಯಲ್ಲಿ ಸೆರೆಮನೆಯಲ್ಲಿದ್ದಾಗ ಭಗವದ್ಗೀತೆಗೆ ವ್ಯಾಖ್ಯಾನ ರಚಿಸಿದರು, ಗಾಂಧೀಜಿಯವರು ಪ್ರಾರ್ಥನಾಸಭೆಗಳನ್ನು ಮಾಡುತ್ತಿದ್ದರು. ಅನೇಕ ತರುಣರು ಗೀತಾಪ್ರಣೀತ ಕರ್ಮಯೋಗವನ್ನು ಅನುಸರಿಸಿ ಹೋರಾಡಿದರು, ವಿಧಾಯಕ ಕಾರ್ಯಕ್ರಮಗಳನ್ನು ಕೈಗೊಂಡರು (ಉದಾಹರಣೆಗೆ: ವಿನೋಬಾ ಭಾವೆಯವರು ಗ್ರಾಮಸೇವೆಯನ್ನು ಪ್ರಾರಂಬಿಸಿದರು. ಕನ್ನಡ ನಾಡಿನಲ್ಲಿ ಹರ್ಡೇಕರ ಮಂಜಪ್ಪನವರು ‘ಹುಬ್ಬಳ್ಳಿ ಸೇವಾದಳ’ವನ್ನು ಸ್ಥಾಪಿಸಿದರು.  ರಂಗನಾಥ ದಿವಾಕರರು ‘ಕರ್ಮವೀರ’ ಪತ್ರಿಕೆಯನ್ನು ಪ್ರಾರಂಭಿಸಿದರು.) ಬೇಂದ್ರೆಯವರ ಅನೇಕ ಕವನಗಳಲ್ಲಿ ಯೋಗದ ಪ್ರಸ್ತಾಪ ಬರುತ್ತದೆ. (ಉದಾ: ಹರಕೆ, ಪುನರ್ಯೋಗಾರೂಢ, ತರುಣ ತಪಸ್ವಿ, ಹಂಪೀ-ವಿಜಯನಗರ ದರ್ಶನ ಇತ್ಯಾದಿ. )

ಈಗ ನಮ್ಮ ಕವಿಯು ತಾಯಿಯ ಆಣತಿಯನ್ನು ಅನುಸರಿಸಲು ಸಿದ್ಧನಾಗಿದ್ದಾನೆ. ತಾಯಿಯ ಕೈಂಕರ್ಯಕ್ಕಾಗಿ ಅವನು ಅನುಸರಿಸಬೇಕಾದ ಯೋಗ ಎಂತಹದು?
“ ಹಾದಿ ಯಾವುದು ಹೇಳು, ಯಾವ ಯೋಗ ?
 ಈ ಯೋಗವನ್ನು ಅನುಸರಿಸಬೇಕಾದವನು ತನ್ನ ಇಡೀ ಜೀವನವನ್ನೇ ಈ ಕಾಯಕಕ್ಕೆ ಮುಡುಪಿಡಬೇಕು. ತನ್ನ ಸರ್ವಸ್ವವನ್ನು ಇದಕ್ಕಾಗಿ ತ್ಯಾಗ ಮಾಡಬೇಕು. ತನ್ನ ಮಕ್ಕಳಿಂದ ಕನ್ನಡ ತಾಯಿ ಬಯಸುವ ಯೋಗವಿದು:
“ ಆದಿ ಅಂತವು ಇಲ್ಲದಂಥ ತ್ಯಾಗ ! ”

ಇಷ್ಟಾದರೂ ಕವಿಗೆ ತಾಯಿ ಬಯಸುವ ತ್ಯಾಗದ ಕಲ್ಪನೆ ಬಂದಿಲ್ಲ. ಈ ಹೆಣ್ಣುಮಗಳು ಕೇಳುವುದು ಅಂತಹ ದೊಡ್ಡ ವಸ್ತುವೇನಲ್ಲ; ಸರಳವಾಗಿ ಕೊಡಬಹುದು ಎನ್ನುವ ಭ್ರಮೆಯಲ್ಲಿಯೇ ಇದ್ದಾನೆ. ಆದುದರಿಂದ ಮತ್ತೆ ಅವಳನ್ನು ಕೇಳುತ್ತಾನೆ:
“ ಬೇಡಬಂದಿಹೆ ಏನು ಏನಾದರೊಂದು ? ”
ಆದರೆ ಕನ್ನಡ ತಾಯಿಯು ತನ್ನ ಮಕ್ಕಳಿಂದ ಅಪೇಕ್ಷಿಸುತ್ತಿರುವುದು ಸಣ್ಣ ವಸ್ತುವಲ್ಲ. ಇದನ್ನು ಕೊಡುವ ಶಕ್ತಿಯು ಎಲ್ಲರಲ್ಲಿಯೂ ಇಲ್ಲ ಎನ್ನುವುದು ಆವಳಿಗೆ ಗೊತ್ತಿದೆ. ಆದುದರಿಂದಲೇ ಇವನ ಮಾತನ್ನು ಖಚಿತೊಳಿಸಿಕೊಳ್ಳಲು ಅವಳು ಬಯಸುತ್ತಾಳೆ.
                                    “ ಬೇಡಿದರೆ ಬೇಡಿದುದ ಕೊಡುವೆಯಾ ಇಂದು ? ”

ಈ ಹೆಣ್ಣುಮಗಳು ಇಷ್ಟರವರೆಗೆ ಹೇಳುತ್ತಿರುವದನ್ನು ಕೇಳುತ್ತಿದ್ದ ಕವಿಯು ಅವಳ ವ್ಯಕ್ತಿತ್ವವು ತನ್ನ ಕಣ್ಣಳತೆಯನ್ನು ಮೀರುತ್ತಿರುವುದನ್ನು ಅನುಭವಿಸುತ್ತಿದ್ದಾನೆ. ಇವಳು ಏನು ಕೇಳಬಹುದು, ಅದನ್ನು ಕೊಡಲು ತನ್ನಿಂದ ಸಾಧ್ಯವಾದೀತೆ ಎನ್ನುವ ಶಂಕೆ ಅವನದು. ಆದುದರಿಂದಲೇ ಅವನು ನಿಶ್ಚಿತವಾದ ಉತ್ತರ ಕೊಡಲಾರ:
“ ಅಹುದು ಕೊಡುವೆನು ಎಂದು ನಾನೆನ್ನಬಹುದೇ ? ”
ಇಂತಹ ಅಳ್ಳಕತನವನ್ನು ಕಂಡ ಕನ್ನಡತಾಯಿ ಇವನನ್ನು ಛೇಡಿಸುತ್ತಾಳೆ:
                                    “ ಬಹುದು-ಗಿಹುದಿನ ಶಂಕಿ ವೀರನಹುದೇ ? ”

ಕವಿ ಈಗ ಸಾವಕಾಶವಾಗಿ ಬದಲಾಗುತ್ತಿದ್ದಾನೆ. ‘ನಾನೇನೊ ಸಿದ್ಧ; ಆದರೆ ನನಗೆ ಇನ್ನೂ ಸ್ವಲ್ಪ ಹಿಂಜರಿಕೆಯಿದೆ’ ಎನ್ನುವುದು ಅವನ ಸಮರ್ಥನೆ.
“ ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ. ”
ಕನ್ನಡ ತಾಯಿಯು ಇದೀಗ ತನ್ನ ಪುಕ್ಕ ಮಗನನ್ನು ಪುಸಲಾಯಿಸಲು ಹಾಗು ಅವನಿಗೆ ಧೈರ್ಯ ನೀಡಲು ಪ್ರಯತ್ನಿಸುತ್ತಾಳೆ:
                                    “ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ. ”
         
 ಕವಿಯ ಮನಸ್ಸು ಈಗ ವಿಚಲಿತವಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ ಬಿಡೋಣ ಎನ್ನುವ ಹಂತಕ್ಕೆ ಅವನೀಗ ಬಂದಿದ್ದಾನೆ.
“ ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ.”
‘ಅಮ್ಮೆ’ ಎನ್ನುವ ಆತ್ಮೀಯ ಸಂಬೋಧನೆಯನ್ನು ಗಮನಿಸಿರಿ. ಮೊದಲು ‘ತಾಯೆ’ ಎನ್ನುವ ಸಾರ್ವತ್ರಿಕ ಸಂಬೋಧನೆಯಿಂದ ಮಾತನಾಡಿದ ಕವಿಯು, ಈಗ ‘ಅಮ್ಮೆ’ ಎಂದು  ಆತ್ಮೀಯವಾಗಿ ಸಂಬೋಧಿಸುತ್ತಿದ್ದಾನೆ.

ಈ ನಿಲುವನ್ನು ಆ ಹೆಣ್ಣುಮಗಳು ಪ್ರೋತ್ಸಾಹಿಸುತ್ತಾಳೆ. ಅವನಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಅವಳು ಹೇಳುತ್ತಾಳೆ:                                “ ಬಲ್ಲವರು ದೈವವನು ಪರಿಕಿಸವರೊಮ್ಮೆ ! ”
                                   
ಈ ಹೆಣ್ಣುಮಗಳು ಸಾಮಾನ್ಯಳಲ್ಲ; ಇವಳ ಬೇಡಿಕೆಯೂ ಸಾಮಾನ್ಯವಲ್ಲ ಎನ್ನುವ ಅರಿವು ಕವಿಗೆ ಇದೀಗ ಆಗಿದೆ. ಇವಳೊಬ್ಬ ದೇವಿ. ಈ ಉಗ್ರಕಾಳಿಯ ಎದುರಿಗೆ ತಾನು ನಿಂತಿದ್ದೇನೆ ಎನ್ನುವ ಭಾವನೆ ಅವನಲ್ಲಿ ಮೂಡಿದೆ. ಆದುದರಿಂದ ಆತನೂ ಸಹ ಅಸಾಮಾನ್ಯ ಧೈರ್ಯದಿಂದ ಅವಳಲ್ಲಿ ನಿವೇದಿಸುತ್ತಾನೆ:
                                    “ ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ? ”
ಇವನ ನಿವೇದನೆಯನ್ನು ಆ ದೇವಿಯು ಸ್ವೀಕರಿಸುತ್ತಾಳೆ. ನಾಡ ಉದ್ಧಾರಕ್ಕಾಗಿ ಅವಳಿಗೆ ಬಲಿ ಬೇಕು! ಯಾವ ಬಲಿ ಬೇಕು ಅವಳಿಗೆ?                                     
“ ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು ? ”
ಕೇಳುತ್ತಿರುವವನ ನರಬಲಿ, ಆತ್ಮರ್ಪ!
…………………………………
                                   
“ ಮನವು ನಡುಗಿತು, ತನುವು ನಿಮಿರಿಗೊಳಗಾಯ್ತು:
                            ನೆನವು ನುಗ್ಗಿತು—ಹೊರಗೆ ಕಂಡೆ—ಬೆಳಗಾಯ್ತು.”

ದೇವಿಯ ಕೇಳಿಕೆಯನ್ನು ಕೇಳಿದ ಯಾರ ಮನಸ್ಸು ನಡುಗಲಿಕ್ಕಿಲ್ಲ? ಯಾರ ಮೈಮೇಲೆ ಮುಳ್ಳುಗಳು ಏಳಲಿಕ್ಕಿಲ್ಲ? ಸಹಜವಾಗಿಯೇ ಕವಿಗೂ ಇದೇ ಅನುಭವವಾಯಿತು. ಅವರಿಗೆ ಥಟ್ಟನೆ ಎಚ್ಚರವಾಯಿತು. ಕನಸಿನಲ್ಲಿ ನಡೆದದ್ದೆಲ್ಲ ಅವರ ನೆನಪಿನಲ್ಲಿ ಮತ್ತೆ ಮರುಕಳಿಸಿ ಅವರ ಮೈಮೇಲೆ ಮುಳ್ಳುಗಳು ಎದ್ದಂತೆನಿಸಿತು. ೆನು ‘ನುಗ್ಗಿತು’ ಎಂದು ಬೇಂದ್ರೆಯು ಹೇಳುತ್ತಾರೆ. ಅಂದಾಹ್ಯಸ್ಮೆಯು ಪ್ರಾಹೋಪಾದಿಯಲ್ಲಿ ಅವನ್ನಬ್ಬಿತು. ಇದೀಗ ಪೂರಾ ಎಚ್ಚರವಾಗಿ ಅವರು ಕಣ್ತೆರೆದು ನೋಡಿದರು; ಹೊಸ ದಿನ ಪ್ರಾರಂಭವಾಗಿದೆ, ಹೊರಗೆಲ್ಲ ಬೆಳಕು ತುಂಬಿದೆ. ತಮಗೆ ಕಂಡ ಕಾಣ್ಕೆಯನ್ನು ಕಾರ್ಯರೂಪಕ್ಕೆ ತರಲು ಅವರು ಇದೀಗ ಕೃತನಿಶ್ಚಯರಾಗಿದ್ದಾರೆ.
  .............................................................                            
ಬೇಂದ್ರೆಯವರ ಎಲ್ಲ ಕವನಗಳ ವಿಶಿಷ್ಟತೆ ಎಂದರೆ, ಅವುಗಳಲ್ಲಿ ಕಂಡು ಬರುವ ಕ್ರಮಬದ್ಧತೆ ಹಾಗು ಕಲ್ಪನಾಪ್ರವಾಹ. ಈ ಕವನದಲ್ಲಿಯೂ ಸಹ ಕನ್ನಡದೇವಿಯು ಕವಿಯ ಮನಸ್ಸಿನಲ್ಲಿ ಬೆಳೆಯುತ್ತ ಹೋಗುತ್ತಿರುವಲ್ಲಿ ಇರುವ ಕ್ರಮಬದ್ಧತೆಯನ್ನು ಹಾಗು ಕಲ್ಪನಾಪ್ರವಾಹವನ್ನು  ಗಮನಿಸಬೇಕು.  ಕೊನೆಯ ಸಾಲಿನಲ್ಲಿ ‘ಮನವು ನಡುಗಿತು, ತನುವು ನಿಮಿರಿಗೊಳಗಾಯ್ತು’ ಎನ್ನುವಲ್ಲಿ ಸಹ ಮನೋವಿಜ್ಞಾನದ ಕ್ರಮಬದ್ಧತೆ ಇದೆ. ಕವಿಯೂ ಸಹ ಬದಲಾಗುತ್ತ ಹೋಗುತ್ತಿರುವಲ್ಲಿ ಇರುವ ಕ್ರಮಬದ್ಧತೆಯೂ ಸಹ ಕಣ್ಣಿಗೆ ಕಾಣುವಂತಿದೆ. ಕವನದ ಹಂತಾನುಸಾರೀ ಬೆಳವಣಿಗೆಯೂ ಸಹ ಮೆಚ್ಚತಕ್ಕಂತಹದೇ.  ಕೊನೆಗೊಮ್ಮೆ ದೇವಿಯು ‘ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು? ’ಎಂದು ಥಟ್ಟನೆ ಉದ್ಗರಿಸುವಾಗ, ಓದುಗರಿಗೂ ಸಹ ವಜ್ರಾಘಾತದ ಅನುಭವವಾಗುತ್ತದೆ!

ಒಂದು ಕಾಲದ ಕನ್ನಡದ ಹಾಗು ಕನ್ನಡಿಗರ ಶೋಚನೀಯ ಸ್ಥಿತಿಯ ಬಗೆಗೆ ಅನೇಕರು ಪ್ರಬಂಧಗಳನ್ನು ಬರೆದಿರಬಹುದು. ಆದರೆ ಈ ಕವನವು ಸೃಷ್ಟಿಸುವ ಅನುಭವವನ್ನು ಹಾಗು ಉತ್ತೇಜಕ ಮನೋಸ್ಥಿತಿಯನ್ನು ಸೃಷ್ಟಿಸಲು ಯಾವುದೇ ಬೇರೊಂದು ಕೃತಿಗೆ ಸಾಧ್ಯವಾಗಿಲ್ಲ.

‘ಕನಸಿನೊಳಗೊಂದು ಕಣಸು’ ಕವನವು ‘ಗರಿ’ ಸಂಕಲನದಲ್ಲಿ ಪ್ರಕಟವಾಗಿದೆ.