Wednesday, December 30, 2015

ಬೈರಾಗಿಯ ಹಾಡು……………ದ. ರಾ. ಬೇಂದ್ರೆ


ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ  ||ಇಕೋ ನೆಲ……
......................................................................................................
ವರಕವಿ ಬೇಂದ್ರೆಯವರು ಬರೆದ ಎಂಟೇ ಸಾಲುಗಳ ಪುಟ್ಟ ಕವನವಾದ ಬೈರಾಗಿಯ ಹಾಡುಮನುಕುಲದ ಧರ್ಮವನ್ನು ಸಾರುತ್ತದೆ. ಓರ್ವ ವ್ಯಕ್ತಿಯ ವೈಯಕ್ತಿಕ ಸಾಧನೆ ಹಾಗು ಸಮುದಾಯದ ಒಳಿತು ಇವೆರಡಕ್ಕೂ ಸಮಾನವಾಗಿ ಅನುವು ಮಾಡಿಕೊಡುವ ನೀತಿಯೇ ಉತ್ತಮವಾದ ಸಮಾಜದ ನೀತಿಯಾಗಿದೆ. ಈ ಸಾಧನೆಯ ಹಾದಿಯಲ್ಲಿ ಯಾವ ಜೀವಿಗೂ ಹಾನಿಯಾಗಬಾರದು ಎನ್ನುವುದು ವಿಶ್ವಧರ್ಮವಾಗಿದೆ.

ಪ್ರಾಚೀನ ಕಾಲದಲ್ಲಿ ಮನುಜ ಸಮುದಾಯವು ಅಲೆಮಾರಿಯಾಗಿತ್ತು. ಆಹಾರವನ್ನು ಅರೆಸುತ್ತ ಕಾಡುಗಳಲ್ಲಿ ತಿರುಗುತ್ತಿತ್ತು. ಶಿಲಾಯುಧಗಳನ್ನು ಸಂಶೋಧಿಸಿದ ಬಳಿಕ ಮನುಜನು ನೆಲವನ್ನು ತೋಡಿ, ತೋಟ (ತೋಡು>ತೋಟ) ಮಾಡಲು ಕಲಿತನು. ಆ ಕಾಲದಲ್ಲಿ, ಅವನಿಗೆ ಹೊಸ ಭೂಮಿಯನ್ನು ಹುಡುಕುವುದು ಅನಿವಾರ್ಯವಾಗುತ್ತಿತ್ತು. ಈ ನೆಲದ ಮೇಲೆ ಒಡೆತನ ಸ್ಥಾಪಿಸಲು ಹೊಡೆದಾಡಬೇಕಾಗುತ್ತಿತ್ತು. ಈ ಒಳಜಗಳಗಳು, ಹೋರಾಟಗಳು, ಒಡೆತನ ಹಾಗು ಸಂಪತ್ತಿನ ಲಾಲಸೆ ಇವು ಅಶಾಂತಿ ಹಾಗು ವಿನಾಶಕ್ಕೆ ಕಾರಣವಾಗುತ್ತಿದ್ದವು. ಆದರೆ ಇಂತಹ ಪರಿಸ್ಥಿತಿಯಲ್ಲೂ ಸಹ ಕೆಲವು ವಿವೇಕಿಗಳು ತಿಳಿವಿನ ವಾಣಿಯನ್ನು ಮನುಕುಲಕ್ಕೆ ಸಾರುತ್ತಿದ್ದರು. ನಮಗೆ ಗೊತ್ತಿರುವ ಇತಿಹಾಸದ ಪ್ರಕಾರ, ಬುದ್ಧನು ಇಂತಹ ಸಂತರಲ್ಲಿ ಮೊದಲಿಗನು.

ಮಾನವನಾಗರಿಕತೆಯು ಅನೇಕ ಮಜಲುಗಳಲ್ಲಿ ಹಾಯ್ದು ಬಂದಿದೆ. ಮನುಷ್ಯನು ಮನುಷ್ಯನನ್ನೇ ದಾಸನನ್ನಾಗಿ ಬಳಸುವ ಮಜಲೂ ಸಹ ಇವುಗಳಲ್ಲಿ ಒಂದು . ಈಜಿಪ್ತಿನ ಪ್ರಾಚೀನ ನಾಗರಿಕತೆಯಲ್ಲಿ ಯಹೂದಿಗಳನ್ನು ಗುಲಾಮರನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಈ ಯಹೂದಿಗಳ ಮುಂದಾಳಾದ ಮೋಶೆ ಅವರನ್ನು ದಾಸ್ಯದಿಂದ ಬಿಡಿಸಿ, ಹೊಸ ನಾಡಿಗೆ ಕರೆ ತಂದ. ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನುಎನ್ನುವುದು ಅವರ ಕನಸಾಗಿರಬಹುದು. ನಮ್ಮ ಶ್ರೀಕೃಷ್ಣನೂ ಸಹ ಮಥುರೆಯಿಂದ ಯಾದವರನ್ನು ಕಟ್ಟಿಕೊಂಡು, ಈಗಿನ ಗುಜರಾತದ ಕಡಲ ತೀರಕ್ಕೆ ಕರೆ ತಂದ.ಅವರೆಲ್ಲರೂ ಜೊತೆಯಾಗಿ  ದ್ವಾರಕಾ’ (The Door, The Portal) ಪಟ್ಟಣವನ್ನು ಕಟ್ಟಿಕೊಂಡರು.

ಶ್ರೀಕೃಷ್ಣ ಹಾಗು ಮೋಶೆ ಇವರು ತಮ್ಮ ಅನುಚರರಿಗೆ ಹೇಳಿದ ಸಂದೇಶ ಹೀಗಿರಬಹುದೆ?
ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ

ಅಣ್ಣ, ತಮ್ಮಂದಿರೆ, ಇಲ್ಲಿ ನೋಡಿರಿ. ನಮ್ಮ ಕಣ್ಣೆದುರಿಗೆ ವಿಶಾಲವಾದ ಭೂಮಿ ಹರಡಿದೆ. ನಮ್ಮ ತಣಿವಿಗೆ ಬೇಕಾಗುವಷ್ಟು ಗಂಗೆ ಇಲ್ಲಿ ಹರಿಯುತ್ತಿದ್ದಾಳೆ. ಸಮೃದ್ಧಳಾದ ಭೂತಾಯಿ ತನ್ನ ಮೈಯ ಮೇಲೆ ಸಸ್ಯಗಳನ್ನು ಹೊತ್ತು ನಿಂತಿದ್ದಾಳೆ. ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟು ಫಲಗಳನ್ನು ಈ ಸಸ್ಯಗಳಿಂದ ಪಡೆದುಕೊಳ್ಳಿರಿ. ಆದರೆ ಪ್ರಕೃತಿ ನೀಡುವ ಫಲವನ್ನು ಪಡೆಯಲು ಸತತ ದುಡಿಮೆ ಬೇಕು. ನೆಲವನ್ನು ಉತ್ತಿ, ಬಿತ್ತಿ ಫಲವನ್ನು ಪಡೆಯುವ ಛಲವು ನಿಮ್ಮಲ್ಲಿ ಬೇಕು. ಆಗ ಮಾತ್ರ, ಪ್ರಕೃತಿಯು ನಿಮಗೆ ಒಲಿಯುವುಳು.

ಈ ಮಾತುಗಳು ಮನುಷ್ಯನ ಸ್ವಾತಂತ್ರ್ಯಕ್ಕೆ, ಸದುದ್ದೇಶಕ್ಕೆ ಹಾಗು ಸಾಹಸಪ್ರವೃತ್ತಿಗೆ ಒತ್ತು ನೀಡುತ್ತವೆ. (ಶಿವರಾಮ ಕಾರಂತರ ಕಾದಂಬರಿಗಳ ನಾಯಕರು ಇಲ್ಲಿ ನೆನಪಾಗುತ್ತಾರೆ. ಅವರೂ ಸಹ ಸಾಹಸಪ್ರವೃತ್ತಿಯ ಜೀವನ್ಮುಖಿಗಳು.)

ಈ ಗೀತೆಯ ಮೊದಲಿನ ನಾಲ್ಕು ಸಾಲುಗಳು ವೈಯಕ್ತಿಕ ಪ್ರಯತ್ನದ ಮಹತ್ವವನ್ನು ಹೇಳುತ್ತವೆ. ಬೆಳೆವಗೆ ನೆಲವೆಲ್ಲ ಹೊಲಎನ್ನುವ ಮಾತಿನಲ್ಲಿ, ‘ನಿಮ್ಮ ಪ್ರಯತ್ನಕ್ಕೆ ಸಾಲುವಷ್ಟು ಭೂಮಿ ಇಲ್ಲಿದೆಎನ್ನುವ ಅರ್ಥದ ಜೊತೆಗೇ  ಸೋಮಾರಿಯಾದವನಿಗೆ ಏನೂ ಸಿಗದುಎನ್ನುವ ಅರ್ಥವೂ ಅಡಗಿದೆ. ಆದರೆ ಓರ್ವ ವ್ಯಕ್ತಿ ಸುಖವಾಗಿ ಬಾಳಿದರೆ ಸಾಲದು. ಇಡೀ ಸಮುದಾಯವೇ ಸುಖ ಹಾಗು ನೆಮ್ಮದಿಯನ್ನು ಪಡೆಯಬೇಕು. ಕೇವಲ ಒಂದು ಸಮುದಾಯವೂ ಅಲ್ಲ. ಸಮುದ್ರವೇ ಭೂಮಿಯ ಸೀಮೆಯಾಗಿರುವದರಿಂದ, ಸಮುದ್ರಸೀಮಾಂತ ಭೂಮಿಯ ಮೇಲಿರುವ ಎಲ್ಲ ಸಮುದಾಯಗಳೂ ಸುಖಿಗಳಾಗಬೇಕು. ಕನ್ನಡದ ಆದಿಕವಿ ಪಂಪನು ಇದೇ ಮಾತನ್ನು ಮನುಜಕುಲಂ ತಾನೊಂದೆ ವಲಮ್ಎನ್ನುವ ಮೂಲಕ ಹೇಳಿದ್ದಾನೆ. ಬೈರಾಗಿಯ ಹಾಡುಕವನದ ಕೊನೆಯ ನಾಲ್ಕು ಸಾಲುಗಳು ಈ ಹಿತವಚನವನ್ನೇ ಘೋಷಿಸುತ್ತವೆ:
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ  ||ಇಕೋ ನೆಲ……

 ಭಾರತೀಯ ಧರ್ಮಶಾಸ್ತ್ರಗಳು ಈ ಸಂದೇಶ ನೀಡಿದ ಅತ್ಯಂತ ಹಳೆಯ ಗ್ರಂಥಗಳಾಗಿವೆ. ಈಶಾವಾಸ್ಯೋಪನಿಷತ್ತಿನ ಮೊದಲ ಶ್ಲೋಕವೇ ಈ ಹಿತವಚನವನ್ನು ಉದ್ಘೋಷಿಸಿದೆ:
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧ ಕಸ್ಯಸ್ವಿದ್ಧನಮ್
( ಈ ವಿಶ್ವವೆಲ್ಲ ಪರಮಾತ್ಮನ ಆವಾಸಸ್ಥಾನವಾಗಿದೆ, ಆತ ಕೊಟ್ಟಿದ್ದರಲ್ಲಿ ಸಂತೃಪ್ತನಾಗು, ಪರರ ಸೊತ್ತಿಗೆ ದುರಾಸೆ ಪಡಬೇಡ.) ಇದೇ ಮಾತನ್ನೇ ನಮ್ಮ ಬಸವಣ್ಣನವರು ಸಹ ಛಲ ಬೇಕು ಶರಣಂಗೆ ಪರಧನವನೊಲೆನೆಂಬಎನ್ನುವ ವಚನದ ಮೂಲಕ ಹೇಳಿದ್ದಾರೆ.

ಬೈರಾಗಿಯು ಅನ್ನವೆ ಧರ್ಮದ ಮೂಲಎಂದು ಹೇಳುತ್ತಾನೆ. ಏಕೆಂದರೆ ಹಸಿವೆಯ ತಣಿವು ಮಾನವನ ಅತ್ಯಂತ ಮೂಲ ಅವಶ್ಯಕತೆಯಾಗಿದೆ. ಈ ಹಸಿವನ್ನು ಶೋಷಣೆಗಾಗಿ ಬಳಸಿಕೊಳ್ಳುವ ಜಾಣರು ಇದ್ದೇ ಇದ್ದಾರೆ. ಇದು ಅನೈತಿಕತೆ. ಆದುದರಿಂದಲೇ ನಮ್ಮ ಸರ್ವಜ್ಞನು ಅನ್ನದಾನಕ್ಕಿಂತ ಇನ್ನು ದಾನಗಳಿಲ್ಲಎಂದು ಹಾಡಿದ್ದಾನೆ. ಅದನ್ನೇ ಅನ್ನವೆ ಧರ್ಮದ ಮೂಲಎಂದು ಈ ಗೀತೆಯಲ್ಲಿ ಬೈರಾಗಿಯು ಹೇಳುತ್ತಾನೆ. ( ಈ ಸಂದರ್ಭದಲ್ಲಿ ಚೀನಾದೇಶದ ಮಹಾನ್ ತತ್ವಜ್ಞಾನಿಯಾದ ಕನ್ಫ್ಯೂಶಿಯಸ್ ನುಡಿದ ಮಾತೊಂದನ್ನು ಇಲ್ಲಿ ಸೇರಿಸುವುದು ಅಪ್ರಸ್ತುತವಾಗಲಾರದು:
ಸಮಾಜವು ಶ್ರೀಮಂತವಿದ್ದಾಗ, ನಿರ್ಗತಿಕನಾಗಿರುವುದು ಅಪರಾಧ; ಸಮಾಜವು ನಿರ್ಗತಿಕವಾದ ಸಮಯದಲ್ಲಿ, ಶ್ರೀಮಂತನಾಗಿರುವುದು ಪಾಪ.’)

ಧರ್ಮ ಎನ್ನುವುದನ್ನು ಸಾಮಾಜಿಕ ನೀತಿಎಂದು ಹೇಳಬಹುದು. ಧರ್ಮ ಎನ್ನುವುದಕ್ಕೆ ಆಧ್ಯಾತ್ಮಿಕ ಅರ್ಥವನ್ನೂ ಕೊಡಬಹುದು.  ಸಾಮಾಜಿಕವೇ ಆಗಲಿ, ಧಾರ್ಮಿಕವೇ ಆಗಲಿ, ಈ ಧರ್ಮದ ಅಂತಿಮ ಪರಿಣಾಮ ಏನು ಎನ್ನುವ ಪ್ರಶ್ನೆಗೆ, ಉತ್ತರ ಹೀಗಿದೆ: 
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ  ||
ಇಲ್ಲಿ ಮೋಕ್ಷವೆಂದರೆ, ಆಧ್ಯಾತ್ಮಿಕ ಮುಕ್ತಿಯೂ ಆಗಬಹುದು. ಅಥವಾ ಸರ್ವರಿಗೂ ಸಮಪಾಲುಎನ್ನುವ ಸಾಮಾಜಿಕ liberation ಸಹ ಆಗಬಹುದು. ಬೇಂದ್ರೆಯವರು ಇದು ಎಲ್ಲ ಕಾಲಕ್ಕೂ ಅನ್ವಯವಾಗುವ ವಿಧಿಎಂದು ಹೇಳುತ್ತಾರೆ.

ಬೈರಾಗಿಯ ಹಾಡುಸಾರ್ವಕಾಲಿಕ ಸತ್ಯವನ್ನು ಹೇಳುವ ಮನುಕುಲದ ಹಾಡಾಗಿದೆ. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಈ ಹಿತವಚನವನ್ನು ಹೇಳುವವನು ಬೈರಾಗಿಯೇ ಏಕಾಗಬೇಕು? ಒಂದು ಸಮುದಾಯದ ಮುಂದಾಳು ಹೇಳಿದರೆ ಆಗದೆ?

ಬೈರಾಗಿ ಎಂದರೆ ವಿರಕ್ತ. ಆತ ಸಂಸಾರವನ್ನು ತ್ಯಜಿಸಿದ ಅಲೆಮಾರಿ. ಪ್ರಪಂಚವನ್ನು ನೋಡುತ್ತ ತಿರುಗುವ ಇವನಿಗೆ ಒಳಿತು, ಕೆಡಕುಗಳ ತಿಳಿವಳಿಕೆ ಇದೆ. ಮನುಜರಿಗೆ ಉಪದೇಶ ಮಾಡುವ ಅನುಭವ ಹಾಗು ಅಧಿಕಾರ ಎರಡೂ ಇವನಿಗಿವೆ. ಸಂಕುಚಿತ ಸಂಸಾರದಲ್ಲಿ ಬದುಕುವ ವ್ಯಕ್ತಿಯ ನೋಟವೂ ಸೀಮಿತವಾಗಿರುತ್ತದೆ. ಆದರೆ ಮನೆಯಿಲ್ಲದ ಬೈರಾಗಿಯ ಕಣ್ಣಿಗೆ ವಿಶಾಲವಾದ ಭೂಮಿ ಕಾಣುತ್ತಿರುತ್ತದೆ. ವಸುಧೈವ ಕುಟುಂಬಕಮ್ಎನ್ನುವುದು ಬೈರಾಗಿಯ ನೀತಿ. ಅದಕ್ಕೆಂದೇ  ಭಾರತೀಯ ಸಮಾಜವು ಬೈರಾಗಿಗೆ ಅತಿ ಹೆಚ್ಚಿನ ಗೌರವವನ್ನು ಕೊಡುತ್ತದೆ. (ಬೇಂದ್ರೆಯವರ ಈ ಬೈರಾಗಿಯು ನಮ್ಮ ಸರ್ವಜ್ಞನನ್ನು ನೆನಪಿಸುತ್ತಾನೆ.) ಆದುದರಿಂದಲೇ ಬೇಂದ್ರೆಯವರು ಈ ಕವನಕ್ಕೆ ಬೈರಾಗಿಯ ಹಾಡುಎನ್ನುವ ಹೆಸರನ್ನು ಕೊಟ್ಟಿದ್ದು ಸಾರ್ಥಕವಾಗಿದೆ.

ಬೈರಾಗಿಯ ಹಾಡುಕವನವು ಸಖೀಗೀತಕವನಸಂಕಲನದಲ್ಲಿದೆ. ಈ ಕವನಕ್ಕೆ ಮನುಜಗೀತೆಎಂದೂ ಕರೆಯಬಹುದಲ್ಲವೆ? ಈ ಕವನಸಂಕಲನದ ಮೊದಲ ಗೀತೆಯಾದ ಸಖೀಗೀತವು ಬೇಂದ್ರೆಯವರ ವೈಯಕ್ತಿಕ ಬದುಕಿನ ದಾಂಪತ್ಯಗೀತೆಯಾಗಿದ್ದರೆ, ಕೊನೆಯ ಕವನವಾದ ಬೈರಾಗಿಯ ಹಾಡುಸಂಸಾರವಿರಕ್ತನಾದ ಬೈರಾಗಿಯು ಹಾಡುವ ಮನುಕುಲದ ಗೀತೆಯಾಗಿದೆ.

Monday, December 7, 2015

ಮಧುರಚೆನ್ನರು



‘ಮಧುರಚೆನ್ನ’ ಎನ್ನುವ ಹೆಸರಿನಿಂದ ಪರಿಚಿತರಾದ ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಯವರು ಕರ್ನಾಟಕದಲ್ಲಿ ೨೦ನೆಯ ಶತಮಾನದಲ್ಲಿ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಹಾಗು ಆಧ್ಯಾತ್ಮಿಕವಾಗಿ ಅದ್ಭುತ ಸಾಧನೆಯನ್ನು ಗೈದಂತಹ ಏಕೈಕ ವ್ಯಕ್ತಿ. ಮಧುರಚೆನ್ನರು ಬದುಕಿ, ಬಾಳಿದ  ಹಲಸಂಗಿಯು ವಿಜಯಪುರ ಜಿಲ್ಲೆಯ, ಇಂಡಿ ತಾಲೂಕಿನಲ್ಲಿರುವ ಒಂದು ಚಿಕ್ಕ ಹಳ್ಳಿ. ಆ ಕಾಲದಲ್ಲಿ ಈ ಹಳ್ಳಿಯ ಜನಸಂಖ್ಯೆ : ೧೭೦೦. ಹಲಸಂಗಿಯು ಜಿಲ್ಲಾಮುಖ್ಯಸ್ಥಳ ವಿಜಯಪುರದಿಂದ ಉತ್ತರಕ್ಕೆ ಸುಮಾರು ೨೦ ಕಿ.ಮೀ. ಹಾಗು ತಾಲೂಕಾ ಮುಖ್ಯಸ್ಥಳ ಇಂಡಿಯಿಂದ ಪಶ್ಚಿಮಕ್ಕೆ ಸುಮಾರು ೧೦ ಕಿ. ಮೀ. ದೂರದಲ್ಲಿ ಇರುತ್ತದೆ.

ಮಧುರಚೆನ್ನರು ೧೯೦೩ನೆಯ ಇಸವಿಯ ಜುಲೈ ೩೧ರಂದು ಲೋಣಿಯಲ್ಲಿ ಹುಟ್ಟಿದರು. ಇದು ಹಲಸಂಗಿಯಿಂದ ಪೂರ್ವಕ್ಕೆ ಸುಮಾರು ೧೦ ಕಿ.ಮೀ. ದೂರದಲ್ಲಿರುವ ಮತ್ತೊಂದು ಚಿಕ್ಕ ಹಳ್ಳಿ. ಸ್ಪರ್ಶಮಣಿಯು ಕಬ್ಬಿಣವನ್ನು ಬಂಗಾರವನ್ನಾಗಿ ಪರಿವರ್ತಿಸುತ್ತದೆ ಎಂದು ಹೇಳುತ್ತಾರೆ. ಅದರಂತೆ ಹಲಸಂಗಿಯು ಕೊಂಪೆಯಾಗಿದ್ದರೂ ಸಹ, ಮಧುರ ಚೆನ್ನರು ಇರುವವರೆಗೆ ಇದು `ವಿಚಾರವಂತರಿಗೆ ಯಾತ್ರಾಸ್ಥಳವಾಗಿತ್ತು, ಎಂದು ದ. ಬಾ. ಕುಲಕರ್ಣಿಯವರು ತಮ್ಮ ‘ಸೀಮಾಪುರುಷರು’ ಎನ್ನುವ ಕೃತಿಯಲ್ಲಿ ಹೇಳಿದ್ದಾರೆ. ಹಲಸಂಗಿಯ ಒಂದು ವೈಶಿಷ್ಟ್ಯವೆಂದರೆ ಈ ಊರು ನವಿಲುಗಳ ಬೀಡು. ಅಲ್ಲಿಯ ನವಿಲುಗಳ ಕುಣಿತವನ್ನು ಕಂಡೇ ಶಿವರಾಮ ಕಾರಂತರು ‘ಮೇಘಮಯೂರ’ ಎನ್ನುವ ನೃತ್ಯವನ್ನು ರೂಪಿಸಿದರು. (ಕಾರಂತರು ಮಧುರಚೆನ್ನರಿಗೆ ‘ಹೊಲಸಂಗಿ ಚೆನ್ನಮಲ್ಲಪ್ಪ’ ಎಂದು ತಮಾಶೆ ಮಾಡುತ್ತಿದ್ದರು.)

ಮಧುರಚೆನ್ನರ ತಂದೆಯವರು ಆಗರ್ಭ ಶ್ರೀಮಂತರಾಗಿದ್ದರೂ ಸಹ, ಕಳ್ಳತನದಿಂದಾಗಿ ತಮ್ಮ ಸಂಪತ್ತನ್ನು ಕಳೆದುಕೊಂಡರು. ತಮ್ಮ ೨೭-೨೮ನೆಯ ವಯಸ್ಸಿನಲ್ಲಿಯೇ ಇವರು ಕ್ಷಯರೋಗದಿಂದಾಗಿ ತೀರಿಕೊಂಡರು. ಮಧುರಚೆನ್ನರ ತಾಯಿ ಅಂಬಕ್ಕನೇ, ಮನೆತನದ ಸಾಲ-ಶೂಲಗಳನ್ನೆಲ್ಲ ತೀರಿಸಿ, ಸ್ವತಃ ಒಕ್ಕಲುತನವನ್ನು  ನಿರ್ವಹಿಸುತ್ತ ಮನೆತನವನ್ನು ನೋಡಿಕೊಂಡರು. ತಾಯಿಯ ನಿಧನದ ನಂತರ, ಮಧುರಚೆನ್ನರ ಹೆಂಡತಿ ಬಸಮ್ಮ ಮನೆಯ ನಿರ್ವಹಣೆಯನ್ನು ಮಾಡಿದರು. ಮಧುರಚೆನ್ನರು ಪ್ರಾಪಂಚಿಕ ವ್ಯವಹಾರದಲ್ಲಿ ನಿರಾಸಕ್ತರು. ಕಮಲದ ಎಲೆಯ ಮೇಲಿನ ನೀರಿನ ಹನಿಯಂತೆ, ಸಂಸಾರಕ್ಕೆ ಅಂಟಿಕೊಂಡವರು.

ಪ್ರಾಥಮಿಕ ವಿದ್ಯಾಭ್ಯಾಸ:
ಮಧುರಚೆನ್ನರು ಹಲಸಂಗಿಯ ಹಳ್ಳಿಯ ಶಾಲೆಯಲ್ಲಿಯೇ ಕಲಿತರು. ಚಿಕ್ಕವರಿದ್ದಾಗಿನಿಂದಲೇ ಇವರಿಗೆ ಕವನರಚನಾ ಪ್ರತಿಭೆ ಇತ್ತು. ಶಾಲಾನಾಟಕಗಳಲ್ಲಿಯೂ ಭಾಗವಹಿಸುತ್ತ ಪ್ರಶಂಸೆಯನ್ನು ಪಡೆದಿದ್ದರು. ಇವರ ಕಿರಿಯ ಗೆಳೆಯರಾದ ಸಿಂಪಿ ಲಿಂಗಣ್ಣನವರು ಮಧುರಚೆನ್ನರನ್ನು ಹೀಗೆ ವರ್ಣಿಸಿದ್ದಾರೆ:
‘ಎತ್ತರವಾದ ತೆಳ್ಳನೆಯ ಮೈಕಟ್ಟು, ರಸಮುಖ, ನಿಡಿದಾದ ಮೂಗು, ಒಲಸಿಕೊಳ್ಳುವ ಮುಗುಳುನಗೆ, ಚುರುಕುತನವನ್ನು ತೋರ್ಪಡಿಸುವ ನಿಚ್ಚಳವಾದ ಕಣ್ಣುಗಳಲ್ಲಿಯ ಹೊಳಪು…’

ಮಧುರಚೆನ್ನರು ೧೯೨೧ರಲ್ಲಿ ಮುಲ್ಕೀ ಪರೀಕ್ಷೆಗೆ (ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಗೆ) ಕುಳಿತು, ಮುಂಬಯಿ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಮೊದಲನೆಯವರಾಗಿ ಉತ್ತೀರ್ಣರಾದರು. ಮುಲ್ಕೀ ಪರೀಕ್ಷೆಯ ನಂತರ, ಇಂಗ್ಲಿಶ್ ಕಲಿಯಲು ವಿಜಯಪುರದ ಕೊಣ್ಣೂರು ಹಣಮಂತರಾಯರ ಬಳಿಗೆ ತೆರಳಿದರು. ಆದರೆ ತಾಯಿಯ ಒತ್ತಾಯದಿಂದಾಗಿ ಆರೇ ತಿಂಗಳುಗಳಲ್ಲಿ ಹಲಸಂಗಿಗೆ ಮರಳಿದರು.  (ಮುಳಿಯ ತಿಮ್ಮಪ್ಪ, ಬೆಟಗೇರಿ ಕೃಷ್ಣಶರ್ಮ, ಹಾಗು ಶಂ. ಬಾ. ಜೋಶಿಯವರು ಸಹ ಏಳನೆಯ ತರಗತಿಯವರೆಗೆ ಮಾತ್ರ ಕಲಿತವರು. ಇವರೆಲ್ಲರ ಸಾಹಿತ್ಯಕ ಹಾಗು ಸಂಶೋಧನಾತ್ಮಕ ಕಾರ್ಯ ಮಾತ್ರ ದಂಗು ಬಡಿಸುವಂತಹದು.)

ಕೌಟಂಬಿಕ ಜೀವನ:
ಮಧುರಚೆನ್ನರ ಮದುವೆಯಾಗಿದ್ದು ೧೯೨೨ರಲ್ಲಿ. ಇವರ ಹೆಂಡತಿ ಬಸಮ್ಮ ಇವರ ತಾಯಿಯ ಬಳಗದವಳೇ. ಬಸಮ್ಮನವರು  ಹುಟ್ಟಿದ್ದು ಸಹ ಹಲಸಂಗಿಯಲ್ಲಿಯೇ. ಬಸಮ್ಮನವರ ಜನ್ಮದಿನಾಂಕ: ೨೬-೯-೧೯೦೭. ಮಧುರಚೆನ್ನರ ತಾಯಿ ಅಂಬಕ್ಕನಿಗೆ ಹಾಗು ಬಸಮ್ಮನ ತಾಯಿಗೆ ಮೊದಲಿನಿಂದಲೂ ಜಗಳವಿದ್ದುದರಿಂದ, ಬಸಮ್ಮನಿಗೆ ಅತ್ತೆಯ ಮನೆಯು ಯಾತನಾಮಯವಾಗಿತ್ತು. ಇತ್ತ ಮಧುರಚೆನ್ನರ ಆರೋಗ್ಯವೂ ಸಹ ಮೇಲಿಂದ ಮೇಲೆ ಬಿಗಡಾಯಿಸುತ್ತಿತ್ತು.
ಮಧುರಚೆನ್ನರು ತಮ್ಮ ಅನಾರೋಗ್ಯದ ಕಾರಣದಿಂದಾಗಿ ೧೯೨೯ನೆಯ ಇಸವಿಯಲ್ಲಿ ಬಾಗಿಲುಕೋಟೆಯ ಆರೋಗ್ಯಧಾಮದಲ್ಲಿ ಹಾಗು ತಾರಾನಾಥರ ‘ಪ್ರೇಮಾಯತನ’ದಲ್ಲಿ ಕೆಲವು ತಿಂಗಳುಗಳನ್ನು ಕಳೆದರು. ಇದೆಲ್ಲವನ್ನೂ ಸಹಿಸಿಕೊಂಡು, ಸಂಸಾರವನ್ನು ಸಂಬಾಳಿಸುತ್ತಿದ್ದ ತಮ್ಮ ಹೆಂಡತಿಯನ್ನು ಮಧುರಚೆನ್ನರು ತಮ್ಮ ಆತ್ಮಕಥನದಲ್ಲಿ ರೋಹಿಣಿ ಹಾಗು ವಾಸಂತಿ ಎನ್ನುವ ಪ್ರೀತಿಯ ಹೆಸರುಗಳಿಂದ ಸಂಕೇತಿಸಿದ್ದಾರೆ.

ಮಧುರಚೆನ್ನರಿಗೆ ಒಟ್ಟು ೮ ಮಕ್ಕಳು ( ಇಬ್ಬರು ಮಕ್ಕಳು ಅವಳಿಜವಳಿಗಳು).
೧೯೨೪ರಲ್ಲಿ ಮಧುರಚೆನ್ನರಿಗೆ ಮೊದಲ ಮಗು (ಹೆಣ್ಣು ಮಗು) ಹುಟ್ಟಿತು.
೧೯೨೯ ಅಗಸ್ಟ ೨೫ರಂದು ಇವರಿಗೆ ಒಂದು ಗಂಡು ಮಗುವಾಯಿತು. ಆದರೆ ಆ ಸಮಯದಲ್ಲಿ ಮಧುರಚೆನ್ನರು ಬಾಗಿಲುಕೋಟೆಯ ಆರೋಗ್ಯಧಾಮದಲ್ಲಿದ್ದರು. ಅತ್ತೆ ಹಾಗು ತಾಯಿಯ ಜಗಳದಿಂದಾಗಿ, ಮಧುರಚೆನ್ನರ ಹೆಂಡತಿ ಬಸಮ್ಮನವರು ತಮ್ಮ ಬಾಣಂತತನವನ್ನು ತಾವೇ ಮಾಡಿಕೊಳ್ಳಬೇಕಾಯಿತು.
೧೯೩೨ನೆಯ ಇಸವಿಯಲ್ಲಿ  ಇವರಿಗೆ ಅವಳಿಜವಳಿ ಗಂಡುಮಕ್ಕಳು ಹುಟ್ಟಿದವು. ಆ ಸಮಯದ ಪರಿಸ್ಥಿತಿಯನ್ನು ಮಧುರಚೆನ್ನರು ತಮ್ಮ ‘ಕಾಳರಾತ್ರಿ’ ಕೃತಿಯಲ್ಲಿ ಹೀಗೆ ವರ್ಣಿಸಿದ್ದಾರೆ:

‘ಹಾಸಲಿಕ್ಕೆ ಹರಕು ಕೌದಿ, ಹೊದೆಯಲಿಕ್ಕೂ ಅಂತಹದೇ ಇನ್ನೊಂದು ರಗಟೆ, ಇಂಥ ವೈಭವದಲ್ಲಿ ರೋಹಿಣಿಯು ನಾಲ್ಕು ಮಕ್ಕಳನ್ನು ಮಗ್ಗಲಲ್ಲಿಟ್ಟುಕೊಂಡು ಮಲಗಿರುವಾಗ……. ಏಸೋ ವರ್ಷಗಳ ಹಿಂದೆ ಗೆಳೆಯನೊಬ್ಬನ ಕಡೆಯಿಂದ ಇಸಿದುಕೊಂಡ ರಗ್ಗು, ಅದು ಹರಿದು ಚಿಂದಿಯಾಗಿದೆ. ಒಳಗೆ ಜೋಡಿಸಿಕೊಳ್ಳಲಿಕ್ಕೆ ಹೆಂಡತಿಯದೊಂದು ಸೀರೆ, ಮಗ್ಗಲುಹಾಸಿಗೆಗೂ ಇನ್ನೊಂದು ಅದೇ…..” (ಕಾಳರಾತ್ರಿ)

ಈ ಸಮಯದಲ್ಲಿಯೇ ಮಧುರಚೆನ್ನರಿಗೆ ತೀವ್ರವಾದ ಹಲ್ಲುನೋವು ಹಾಗು ಮೊದಲ ಮಗನಿಗೆ ನೇತ್ರರೋಗ ಕಾಡತೊಡಗಿದ್ದವು. ಬಸಮ್ಮನವರು ಅತ್ತೆಯ ಕಾಟವನ್ನು ಸಹಿಸಿಕೊಳ್ಳುತ್ತ ಹಗಲೆಲ್ಲ ದುಡಿದ ಮೇಲೆ, ರಾತ್ರಿಯೆಲ್ಲ ಅವಳಿ ಮಕ್ಕಳನ್ನು ಸಂಬಾಳಿಸಬೇಕಾದ ಸಂಭ್ರಮ!
೧೯೩೫, ೧೯೩೮ ಹಾಗು ೧೯೪೨ರಲ್ಲಿ ಮಧುರಚೆನ್ನರಿಗೆ ಮತ್ತೆ ಗಂಡುಮಕ್ಕಳಾದವು. ಅವರ ಕೊನೆಯ ಮಗು (ಹೆಣ್ಣು ಮಗು) ೧೯೪೫ರಲ್ಲಿ ಹುಟ್ಟಿದಳು.

ಮಧುರಚೆನ್ನರು ತಮ್ಮ ಸಂಕಟಗಳನ್ನು ದೇವರ ಅಗ್ನಿಪರೀಕ್ಷೆ ಎಂದೇ ಭಾವಿಸುತ್ತಿದ್ದರು. ‘ಕಾಳರಾತ್ರಿ’ಯಲ್ಲಿ ಅವರು ಪ್ರಾಸಂಗಿಕವಾಗಿ ತಮ್ಮ ಪ್ರಾಪಂಚಿಕ ಸಂಕಷ್ಟಗಳನ್ನು ಹೇಳಿದ್ದರೂ ಸಹ, ತಮ್ಮ ಆಧ್ಯಾತ್ಮಿಕ ಸಾಧನೆಯ ಮೇಲೆ ಈ ಪ್ರಾಪಂಚಿಕ ಯಾತನೆಯ ಪರಿಣಾಮವನ್ನೇ ನಿರೂಪಿಸಿದ್ದಾರೆ. ಬೆಂಕಿಗೊಡ್ಡಿದ ಬಂಗಾರದಂತೆ ಈ ಎಲ್ಲ ಸಂಕಟಗಳಲ್ಲಿ ಅವರು ಇನ್ನಿಷ್ಟು ಪರಿಶುದ್ಧರಾಗಿ ಹೊರಬಂದರು.
……………………………………………………….

ಸಾಹಿತ್ಯಕ ಜೀವನ:
ತಮ್ಮ ವಯಸ್ಸಿನ ೧೪-೧೫ಕ್ಕೇ ಮಧುರಚೆನ್ನರು ಸಾಹಿತ್ಯಸೃಷ್ಟಿಗೆ ತೊಡಗಿದರು.
೧೯-೨೦ನೆಯ ವಯಸ್ಸಿಗೇ ಜಾನಪದ ಕವನಗಳ ಶೋಧನೆ ಹಾಗು ಸಂಕಲನ ಪ್ರಾರಂಭಿಸಿದರು.  ಅದೇ ಸಮಯದಲ್ಲಿ ಸುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿಯ ಶಿಲಾಲೇಖಗಳನ್ನು ಅಚ್ಚು ಮಾಡಿಕೊಂಡರು. ಶಾಸನಗಳ ಲಿಪಿ, ಭಾಷೆ ಇವುಗಳ ಪರಿಚಯ ಮಾಡಿಕೊಂಡರು. ತಮ್ಮ ೧೯ನೆಯ ವರ್ಷ, ೩ ತಿಂಗಳುಗಳಿಗೆ ‘ಬಾದಾಮಿ ಗುಡಿಗಳ ಜೀರ್ಣೋದ್ಧಾರ’ ಎನ್ನುವ ವಿಜಯನಗರದ ಶಾಸನವನ್ನು ಪರಾಮರ್ಶಿಸಿ ಪ್ರಕಟಿಸಿದರು. ‘ವಿಜಯಪುರದ ಶಾಸನ’ವನ್ನು ಮೊದಲಿಗೆ ಪ್ರಕಟಿಸಿದವರೂ ಇವರೇ. ಈ ಸಮಯದಲ್ಲಿ ಮಧುರಚೆನ್ನರಿಗೆ ಅನೇಕ ಸಂಶೋಧಕರ ನಿಕಟ ಸಂಪರ್ಕ ಒದಗಿತು.

ಅವರಲ್ಲಿಯ ಕೆಲವು ಖ್ಯಾತನಾಮರು  :
(೧) ಶಿ.ಚೆ. ನಂದೀಮಠ
(೨) ರಾವಸಾಹೇಬ ಹಳಕಟ್ಟಿ
(೩) ಆರ್. ನರಸಿಂಹಾಚಾರ್ಯರು
(೪) ದ.ಪ. ಕರಮರಕರ
(೫) ಶಂ.ಬಾ. ಜೋಶಿ

ಪುರಾತತ್ವ ಹಾಗು ಭಾಷಾಶಾಸ್ತ್ರದ ಸಂಶೋಧನೆಗಳಿಗಾಗಿ ಮತ್ತು ಸಾಹಿತ್ಯಕೃತಿಗಳ ಅನುವಾದ ಕಾರ್ಯಕ್ಕಾಗಿ  ಮಧುರಚೆನ್ನರು ತಮ್ಮ ಸ್ವಪ್ರಯತ್ನದಿಂದ ೨೨ ಭಾಷೆಗಳನ್ನು ಕಲಿತರು. ಅವುಗಳಲ್ಲಿ ಕೆಲವು ಹೀಗಿವೆ:
ತೆಲಗು, ತಮಿಳು, ಮಲೆಯಾಳಮ್, ತುಳು, ಬ್ರಾಹುಯೀ, ಮರಾಠೀ, ಹಿಂದೀ ಗುಜರಾತಿ, ಸಂಸ್ಕೃತ, ಬಂಗಾಲಿ, ಪಂಜಾಬಿ, ಪರ್ಶಿಯನ್, ಉರ್ದು, ಗ್ರೀಕ್, ಲ್ಯಾಟಿನ್, ಇಟ್ಯಾಲಿಯನ್ ಹಾಗು ಸ್ವಲ್ಪ ಮಟ್ಟಿಗೆ ಜಪಾನಿ

ಮಧುರಚೆನ್ನರ ಸಾಹಿತ್ಯಸೂಚಿ:
(I) ಸ್ವರಚಿತ ಕೃತಿಗಳು:
(೧) ನನ್ನ ನಲ್ಲ : (ಕವನ ಸಂಗ್ರಹ) : ೧೯೩೩
(೨) ಪೂರ್ವರಂಗ : ಆಧ್ಯಾತ್ಮಿಕ ಆತ್ಮಕಥನ : ೧೯೩೨
(೩) ಕಾಳರಾತ್ರಿ : ---“”---                    : ೧೯೩೩
(೪) ಬೆಳಗು :            -----“”------       : ೧೯೩೭
(೫) ಆತ್ಮಸಂಶೋಧನೆ (ಸ್ವಾನುಭವ ಕಥನ) : ೧೯೫೪
(೬) ಪೂರ್ಣಯೋಗದ ಪಥದಲ್ಲಿ (ಅರವಿಂದರ  ಯೋಗ ವಿಚಾರಗಳು) : ೧೯೬೦
(೭) ಕನ್ನಡಿಗರ ಕುಲಗುರು (ಸಿಂಪಿ ಲಿಂಗಣ್ಣನವರೊಡನೆ) : ೧೯೩೬

(II) ಅನುವಾದಿತ ಗ್ರಂಥಗಳು :
(೧) ವಿಸರ್ಜನ (ರವೀಂದ್ರನಾಥ ಠಾಕೂರರ ಬಂಗಾಲಿ ನಾಟಕ) : ೧೯೨೯
(೨) ಪೂರ್ಣಯೋಗ (ಅರವಿಂದರ ಯೋಗಿಕ್ ಸಾಧನ) : ೧೯೩೫
(೩) ಮಾತೃವಾಣಿ (ಶ್ರೀ ಮಾತೆಯವರ ವರ್ಡ್ಸ ಆ^ಫ್ ದ ಮದರ್‍ದ ಅರ್ಧಭಾಗ) : ೧೯೪೮
(೪) ಬಾಳಿನಲ್ಲಿ ಬೆಳಕು (ಟಾ^ಲ್‍ಸ್ಟಾ^ಯರ ಆತ್ಮಕಥನ, ಸಿಂಪಿ ಲಿಂಗಣ್ಣನವರ ಜೊತೆಗೆ) : ೧೯೩೫
(೫) ಧರ್ಮಕ್ಷೇತ್ರೇ ಕುರುಕ್ಷೇತ್ರೇ (ಸಿಂಪಿಯವರೊಡನೆ) : ೧೯೪೫-೪೬

(III) ಅಪ್ರಕಟಿತ ಕೃತಿಗಳು:
(೧) ವಿನೋದ ಕುಸುಮಾವಳಿ (ಕಾವ್ಯನಾಟಕ)
(೨) ಕನ್ನಡ ಪ್ರಾಚೀನ ಲಿಪಿಬೋಧಿನಿ (ಲಿಪಿಶಾಸ್ತ್ರ)
(೩) ನನ್ನ ಬಾಳು ಹಾಳು (ಸಣ್ಣ ಕತೆ)
(೪) ತಾಯಿ (ಶ್ರೀ ಹರಿದಾಸ ಚೌಧರಿಯವರ ಒಂದು ಲೇಖನದ ಅನುವಾದ)
(೫) ಮಾತೃವಾಣಿ (ಶ್ರೀ ಮಾತೆಯವರ Words of the Motherದಲ್ಲಿಯ ೬ನೆಯ ಮತ್ತು ೭ನೆಯ ಅಧ್ಯಾಯಗಳ ಕೆಲವು ಭಾಗಗಳ ಅನುವಾದ)
(೬) ಸಿರಿಯಾಳ ಸತ್ವಪರೀಕ್ಷೆ (ನಾಟಕ)
(೭) ರಾಕ್ಷಸೀ ಮಹತ್ವಾಕಾಂಕ್ಷೆ (ಶ್ರೀ ವಾ. ಮ. ಜೋಶಿಯವರ ಮರಾಠಿ ನಾಟಕದ ಅನುವಾದ)

(IV) ಬಿಡಿ ಲೇಖನಗಳು :
A . ಸಂಶೋಧನಾತ್ಮಕ :
(೧) ಬಾದಾಮಿಯ ಗುಡಿಗಳ ಜೀರ್ಣೋದ್ಧಾರ (ಜಯಕರ್ನಾಟಕ, ೧-೩)
(೨) ವಿಜಾಪುರ ಶಾಸನ (ಜಯಕರ್ನಾಟಕ, ೧-೭)
(೩) ಕೂಡಲ ಸಂಗಮದೇವ (ಜಯಕರ್ನಾಟಕ, ೨-೧)
(೪) ಅಭಿನವ ಪಂಪ ಮಹಾಕವಿ ಬರೆದ ವಿಜಾಪುರದ ಶಿಲಾಲಿಪಿ(ಜಯಕರ್ನಾಟಕ, ೮-೨,೩)
(೫) ಪ್ರಾಚೀನ ಕಾಲದ ಒಬ್ಬ ನಟಶ್ರೇಷ್ಠ ಹಾಗು ಒಬ್ಬ ಕವಿ (ಜಯಕರ್ನಾಟಕ, ೯-೫,೬)
(೬) ಅರ್ಜುನವಾಡದ ಶಾಸನ (ಶಿವಾನುಭವ, ೩-೯)
(೭) ಇತಿಹಾಸದ ಕಣಗಳು (ಶಿವಾನುಭವ, ೩-೧೧)
(೮) ’ಲಿಂಗ’ (ಜಯಕರ್ನಾಟಕ, ೮-೫)
(೯) ’ಲಿಂಗಿಗಳು’ (ಜಯಕರ್ನಾಟಕ, ೯-೧)
(೧೦) ಶ್ರೀ ಬಸವೇಶ್ವರರು ಹಾಗು ಶ್ರೀ ಚೆನ್ನಬಸವೇಶ್ವರರ ಪುನರಾಗಮನದ ಭಾವನೆ ಅಥವಾ ಮಧ್ಯಕಾಲದ ಮಹಾಪುರುಷರು (ಶಿವಾನುಭವ, ೨೨-೧೦)
(೧೧) ಶಿವಶರಣರ ಚಳುವಳಿಯ ಮುಂದಿನ ಪರಂಪರೆಯ ಇತಿಹಾಸ (ಶಿವಾನುಭವ, ೨೫-೪,೫)
(೧೨) ಹೂಲಿ ಪಂಚವಣ್ಣಿಗೆಯ ಮಠ (ಶಿವಾನುಭವ, ೨-೭)
(೧೩) ಕವಿ ಕಾಳಿದಾಸನ ಕಾಲನಿರ್ಣಯ (ಜೀವನ, ೯-೯)
(೧೪) ಹಲಸಂಗಿಯ ಹಿಂದಿನ ಇತಿಹಾಸ (ಸಂಗ್ರಹ) (ಜಯಕರ್ನಾಟಕ, ೨೨-೭)
B. ಸಾಹಿತ್ಯಕ :
(ಅ) ಜನಪದ ಸಾಹಿತ್ಯ ಕುರಿತು
(೧) ಹಳ್ಳಿಯ ಹಾಡುಗಳು (ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೮-೪)
(೨) ಹೆಣ್ಮಕ್ಕಳ ಗಾದೆಗಳು (ಜಯಕರ್ನಾಟಕ, ೧೭-೯)
(೩) ರಮ್ಯ ಜೀವನ (ಲಾವಣಿ ಕವಿ ಖಾಜಾಭಾಯಿಯ ಪರಿಚಯ) (ಜಯಕರ್ನಾಟಕ, ೧೨-೧೧)
(ಆ) ಕೆಲವು ಗ್ರಂಥಗಳಿಗೆ ಬರೆದ ಮುನ್ನುಡಿ ಇತ್ಯಾದಿ.
(೧) ಮಲ್ಲಿಗೆ ದಂಡೆ ( ಸಂಗ್ರಹ : ರೇವಪ್ಪ ಕಾಪಸೆ, ೧೯೩೫)
(೨) ಜನಜೀವನ (ನಾಟಕ : ಸಿಂಪಿ ಲಿಂಗಣ್ಣ, ೧೯೨೯)
(೩) ಭಕ್ತಿರಹಸ್ಯ(ನಾಟಕ : ಸಿಂಪಿ ಲಿಂಗಣ್ಣ, ೧೯೨೯)
(೪) ಭಕ್ತ ಪ್ರಹ್ಲಾದ (ನಾಟಕ : ಎ.ಜೆ. ಮಸಳಿ, ೧೯೫೨)
(೫) ವೀರಪಥಿಕ (ಕವನಸಂಗ್ರಹ : ಪಿ. ಧೂಲಾ, ೧೯೩೮)
(೬) ಮುಗಿಲುಜೇನು (ಕವನಸಂಗ್ರಹ : ಸಿಂಪಿ ಲಿಂಗಣ್ಣ, ೧೯೪೫)
(೭) ತರಂಗಿಣಿ (ಕವನಸಂಗ್ರಹ : ಎಸ್. ಡಿ. ಇಂಚಲ, ೧೯೪೯)
(೮) ನನ್ನ ಹಾಡು (ಕವನಸಂಗ್ರಹ : ಬ.ಗಿ.ಯಲ್ಲಟ್ಟಿ, ೧೯೫೦)
(೯) ಪುಷ್ಪಗುಚ್ಛ (ಕವನಸಂಗ್ರಹ : ಸಂಗಮೇಶ ಹೊಸಮನಿ, ೧೯೫೨)
(೧೦) ಗಾಂಧಿ ಉಪದೇಶಾಮೃತ (ಸಂ: ಜೀವಣ್ಣ ಮಸಳಿ, ೧೯೫೨)
(೧೧) ಸ್ತ್ರೀನೀತಿ ಸುಧಾಕರ (ಪತ್ರಸಾಹಿತ್ಯ: ಗಿರಿಯಪ್ಪಗೌಡರ ಓದುಗೌಡರ, ೧೯೫೩)

(ಇ) ಸಾಹಿತ್ಯಕ ಉಪನ್ಯಾಸಗಳು :
(೧) ಬೆಳಗಾಂವ ಜಿಲ್ಲೆಯ ಸಾಹಿತ್ಯಸಮ್ಮೇಲನದ ಅಧ್ಯಕ್ಷ ಭಾಷಣ (೧೯೪೭)
(೨) ಸೊಲ್ಲಾಪುರದಲ್ಲಿ ಜರುಗಿದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಲನದ ಕವಿಗೋಷ್ಠಿಯ ಅಧ್ಯಕ್ಷ ಭಾಷಣ (೧೯೫೦)

(ಈ) ಕವಿ ಪರಿಚಯಗಳು:
(೧) ದ್ರಷ್ಟಾರ ಕವಿ ಏ.ಈ. (ಜಯಕರ್ನಾಟಕ, ೧೫-೧೧)
(೨) ಸದ್ಯಕ್ಕೆ ದ್ಯಾಂಪುರವೆಂಬ ಹಳ್ಳಿ (ದ್ಯಾಂಪುರ ಚೆನ್ನಕವಿಗಳ ಅಲ್ಪ ಪರಿಚಯ)  (ಜಯಕರ್ನಾಟಕ, ೧೫-೧೧)

C. ಶ್ರೀ ಅರವಿಂದ ಮತ್ತು ಶರಣಸಾಹಿತ್ಯ
(೧) ಗುರು ಅರವಿಂದರ ಗೀತಾಪ್ರಬಂಧ (ಜೀವನ, ೧-೨)
(೨) ಶ್ರೀ ಅರವಿಂದರು ಹೊಸದೇನು ಹೇಳಿದರು? (ಜಯಕರ್ನಾಟಕ, ೧೨-೯)
(೩) ಶ್ರೀ ಅರವಿಂದರ ಯೋಗದಲ್ಲಿ ಹೊಸ ಮಾತಾವುದು ? (ಜಯಕರ್ನಾಟಕ, ೧೩-೯)
(೪) ಶ್ರೀ ಅರವಿಂದರ ಯೋಗದ ನಿಜಸ್ವರೂಪ (ಜಯಕರ್ನಾಟಕ, ೧೪-೧೦)
(೫) ಪೂರ್ಣಯೋಗದ ಪೂರ್ವಸೂಚನೆ (ಶಿವಾನುಭವ, ೧೦-೧೦)
(೬) ಶ್ರೀ ಅರವಿಂದ ಯೋಗಿಗಳ ಸಾಧನಸೂತ್ರ (ಶಿವಾನುಭವ, ೧೧-೧)
(೭) ಸತ್-ಚಿತ್ ಅಥವಾ ಶಿವಶಕ್ತಿಯರು (ಉದಯ ವಿಶೇಷ ಸಂಚಿಕೆ, ೧೫-೮-೧೯೪೮)
(೮) ಭಾರತೀಯ ನವಜನ್ಮ : ಅನು: ದ.ರಾ. ಬೇಂದ್ರೆ, ಪರಿಶಿಷ್ಟ   (೧೯೩೬)
(೯) ಬಸವಣ್ಣನ ಭಕ್ತಿ (ಕೆಲವು ವಚನಗಳ ಸಂಗ್ರಹ), (ಜಯಕರ್ನಾಟಕ, ೮-೭)
(೧೦) ಬಸವಣ್ಣನವರ ಭೋಜನಶಾಲೆ  (ಜಯಕರ್ನಾಟಕ, ೧೩-೨)
(೧೧) ಪ್ರಕಾಶಮಯ ಜೀವನ (ಶಿವಾನುಭವ, ೧೮-೧)
(೧೨) ಪ್ರಾಣಲಿಂಗಾರ್ಚನೆ (ಶಿವಾನುಭವ, ೨೧-೨)
(೧೩) ಸಗುಣ-ನಿರ್ಗುಣ ಸಮನ್ವಯ ಅಥವಾ ಶಿವಯೋಗರಹಸ್ಯ (ಸುಕುಮಾರ, ೨-೧)
(೧೪) ಶಿವಯೋಗೀಶ್ವರರ ಶಿವಪೂಜೆ (ಶಿವಾನುಭವ, ೨೧-೪)
(೧೫) ನಾಲ್ಕು ಶಕ್ತಿಗಳು (ಅರವಿಂದವಾಣಿ, ೧-೬)
(೧೬) ಗುರುದೇವ (ಅರವಿಂದವಾಣಿ, ೧,೯,೧೦)

D. ಭಾಷಾಶಾಸ್ತ್ರ:
(೧) ಶಬ್ದಸಾಮ್ರಾಜ್ಯದಲ್ಲಿ ಮಂತ್ರಶಕ್ತಿಯ ಪುನರುಜ್ಜೀವನ  (ಜಯಕರ್ನಾಟಕ, ೧೪-೧)
(೨) ಆರ್ಯ-ದ್ರಾವಿಡ ಭಾಷಾ ಸಮನ್ವಯ (ಜೀವನ, ೧೧-೬,೭)
(೩) ಬೇಂದ್ರೆಯವರ ಭಾಷಾಶಾಸ್ತ್ರವಿಷಯಕ ರೂಪರೇಷೆ (ನಡೆದು ಬಂದ ದಾರಿ, ಸಂಪುಟ ೩)

E.ಇತರ ಲೇಖನಗಳು:
(೧) ಬಾಳು (ಜಯಕರ್ನಾಟಕ, ೨-೮)
(೨) ಬ್ರಾಹ್ಮಣರು (ಜಯಕರ್ನಾಟಕ, ೪-೪,೫)
(೩) ಋಷಿಗಳ ಕಾಲದಲ್ಲಿ (ಶಿವಾನುಭವ, ೧೩-೯,೧೦)
(೪) ವಿಜಯೀ ವಿಶ್ವಾಮಿತ್ರ (ಜಯಕರ್ನಾಟಕ, ೧೪-೫)
(೫) ಋಗ್ವೇದದ ಮುಖ್ಯ ಪಂಚದೇವತೆಗಳು ಹಾಗು ಪಂಚಕ್ಷಿತಿಗಳು (ಜೀವನ, ೧೦-೩)
(೬) ಭಾರತ ಇತಿಹಾಸ ದರ್ಶನ (ಸಮರ್ಪಣ, ಸಂ.೪, ೧೯೫೭)
(೭) ಇತಿಹಾಸ (‘ಸುಳುಹು-ಹೊಳವು’, ಪ್ರಬಂಧಸಂಕಲನ, ಸಂ: ಜಿ.ಬಿ.ಜೋಶಿ, ೧೯೩೯)
(೮) ಸತ್ಯ (ಜಯಕರ್ನಾಟಕ, ೮-೯)
(೯) ಸತ್ಯವೂ ಸಿದ್ಧಿಯೂ (ಶಿವಾನುಭವ, ೬-೪)
(೧೦) ಸತ್ಯದೃಷ್ಟಿ (ಶಿವಾನುಭವ, ೭-೨)
(೧೧) ವಾಙ್ಮಯ ಪರೀಕ್ಷಣ (ಜಯಕರ್ನಾಟಕ, ೧-೯)
(೧೨) ಆಶ್ರಯ ’ಬೆಳಕಿನ ಹೆಜ್ಜೆ’ (ವಿಜಾಪುರ ಜಿಲ್ಲಾ ‘ಅರವಿಂದ ಮಂಡಲ’ದ ಪ್ರಕಟನೆ, ೧೯೬೮)
(೧೩) ನಡೆದಂತೆ ನುಡಿ (ಜಮುನಾಲಾಲ ಎಂಬ ಹೆಸರಿನಿಂದ, ಜಯಕರ್ನಾಟಕ, ೧-೧೨)
(೧೪) ಭಾವಬಂಧನ (ಜಮುನಾಲಾಲ ಎಂಬ ಹೆಸರಿನಿಂದ, ಜಯಕರ್ನಾಟಕ, ೨-೧)
(೧೫) ಕ್ರೈಸ್ತ ವಾಙ್ಮಯ (ಜಮುನಾಲಾಲ ಎಂಬ ಹೆಸರಿನಿಂದ, ಜಯಕರ್ನಾಟಕ, ೨-೯)
(೧೬) ಶಿಲ್ಪಿ (ಅನುವಾದ), (ಜಮುನಾಲಾಲ ಎಂಬ ಹೆಸರಿನಿಂದ, ಜಯಕರ್ನಾಟಕ, ೧-೧೨)
(೧೭) ಕುವಿಚಾರ (ಮರಪಂಡಿತ ಎಂಬ ಹೆಸರಿನಿಂದ, ಜಯಕರ್ನಾಟಕ, ೯-೭)
(೧೮) ಸುವಿಚಾರ (ಮರಪಂಡಿತ ಎಂಬ ಹೆಸರಿನಿಂದ, ಜಯಕರ್ನಾಟಕ, ೯-೯)
(೧೯) ನಿರ್ವಿಚಾರ (ಮರಪಂಡಿತ ಎಂಬ ಹೆಸರಿನಿಂದ, ಜಯಕರ್ನಾಟಕ, ೧೧-೯)
(೨೦) ಹರಟೆ (ಮರಪಂಡಿತ ಎಂಬ ಹೆಸರಿನಿಂದ, ಜಯಕರ್ನಾಟಕ, ೧೧-೧೦)
(೨೧) ಮರ್ಕಟ ವಿಚಾರಗಳು (ಲೇಖನಮಾಲೆ), (ಸ್ವಧರ್ಮ, ೧೯೨೮-೨೯)
……………………………………………………………………….

ಸಾಂಸ್ಕೃತಿಕ ಜೀವನ :
ಮಧುರಚೆನ್ನರು ತಮ್ಮ ಹಳ್ಳಿಯಾದ ಹಲಸಂಗಿಯಲ್ಲಿ ಹೂಡಿದ ಸಾಂಸ್ಕೃತಿಕ  ಕಾರ್ಯಕ್ರಮಗಳು ಇಂತಿವೆ:
(೧) ೧೯೨೨ರಲ್ಲಿ ‘ಹಲಸಂಗಿಯ ಗೆಳೆಯರ ಗುಂಪು’ ರಚನೆ
(೨) ೧೯೨೨ರಲ್ಲಿ ಶಾರದಾ ವಾಚನಾಲಯ ಪ್ರಾರಂಭ:
ಒಂದೇ ವರ್ಷದಲ್ಲಿ ೫೯೧ ಪುಸ್ತಕಗಳ ಸಂಗ್ರಹ ಹಾಗು ೧೭೫೯ ಎರವಲುಗಳು. ಇವುಗಳಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾದ ‘ಕರ್ನಾಟಕ ಕವಿಚರಿತೆ’, ಪದ್ಯಸಾರ, ಗದಾಯುದ್ಧ, ಗದಾಯುದ್ಧ ನಾಟಕಮ್ ಇವೆಲ್ಲ ಅಡಕವಾಗಿವೆ. ಇದಲ್ಲದೆ, ಜಯಕರ್‍ನಾಟಕ, ಸಾಹಿತ್ಯ ಪರಿಷತ್ ಪತ್ರಿಕೆ ಮುಂತಾದ ಪತ್ರಿಕೆಗಳನ್ನೂ ಸಹ ತರಿಸಲಾಗುತ್ತಿತ್ತು.
(೩)ವಾಚನಾಲಯದ ಓದುಗರಿಂದ ‘ಮೊಗ್ಗು’ ಎನ್ನುವ ಕೈಬರಹದ ಪತ್ರಿಕೆಯನ್ನು ಪ್ರತಿ ವರುಷವೂ ಪ್ರಕಟಿಸಲಾಗುತ್ತಿತ್ತು. ‘ಮೊಗ್ಗು’ ನಿಂತ ಬಳಿಕ ‘ವಿಶ್ವಾಮಿತ್ರ’ ಎನ್ನುವ ಕೈಬರಹದ ತ್ರೈಮಾಸಿಕವನ್ನು ಪ್ರಾರಂಭಿಸಲಾಯಿತು.
(೪) ೧೯೩೩ರಲ್ಲಿ ಸಿಂಪಿ ಲಿಂಗಣ್ಣನವರು ವಿಜಯಪುರದ ಶಾಲೆಯಲ್ಲಿ ಗಣೇಶೋತ್ಸವವನ್ನು ಪ್ರಾರಂಭಿಸಿದರು. ಉತ್ಸವದ ಅಂಗವಾಗಿ  ನಾಟಕಗಳನ್ನು ಆಡಲಾಗುತ್ತಿತ್ತು.
(೫) ೧೯೩೬ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮಶತಾಬ್ದಿಯ ಆಚರಣೆ. ಪರಮಹಂಸರ ಬಗೆಗೆ ನಾಟಕ. ಅರವಿಂದ ಗ್ರಂಥಮಾಲೆಯ ಪ್ರಾರಂಭೋತ್ಸವ. ಕಾರಂತ, ಬೇಂದ್ರೆ, ಮುಗಳಿ ಮೊದಲಾದ ಸಾಹಿತ್ಯ ದಿಗ್ಗಜರ ಆಗಮನ.
(೬) ೧೯೩೬ರಲ್ಲಿ ವಿಜಯನಗರ ಸಾಮ್ರಾಜ್ಯಸ್ಥಾಪನೆಯ ೬೦೦ನೆಯ ಸ್ಮಾರಕೋತ್ಸವ.
(೭) ನವರಾತ್ರಿಯಲ್ಲಿ ನಾಡಹಬ್ಬದ ಆಚರಣೆ. ಬೆಳಿಗ್ಗೆ ೫ ಗಂಟೆಗೆ ಕನ್ನಡ ಧ್ವಜದ ಪೂಜೆ, ಮೆರವಣಿಗೆ, ಬೀದಿಬೀದಿಗಳಲ್ಲಿ ಆರತಿ. ಸಾಯಂಕಾಲ ಹಳ್ಳಿಗರಿಂದ ಭಜನೆ, ಧ್ಯಾನ, ಮಧುರಚೆನ್ನರಿಂದ ಅರವಿಂದರ ದಿವ್ಯಜೀವನದ ಗ್ರಂಥವಾಚನ.
(೮) ೧೯೩೮ರಲ್ಲಿ ಮಧುರಚೆನ್ನರಿಗೆ ಪುದುಚೆರಿಯಲ್ಲಿ ಅರವಿಂದರ ದರ್ಶನ ಲಭಿಸಿತು. ಆಬಳಿಕ ೧೯೪೨ರಲ್ಲಿ, ಹಲಸಂಗಿಯಲ್ಲಿ ‘ಅರವಿಂದ ಮಂಡಳ’ದ  ಸ್ಥಾಪನೆಯಾಯಿತು. ಸಪ್ಟಂಬರ ೧೫-೧೬, ೧೯೪೩ರಲ್ಲಿ ಅರವಿಂದ ಮಂಡಳದ ಮೊದಲ ವಾರ್ಷಿಕೋತ್ಸವ ನೆರವೇರಿತು. (೧೯೬೮ರಲ್ಲಿ ಈ ಮಂಡಳವು ತನ್ನ ಸ್ಥಾಪನೆಯ ಬೆಳ್ಳಿಹಬ್ಬದ ನೆನಪಿಗಾಗಿ ‘ಬೆಳಕಿನ ಹೆಜ್ಜೆ’ ಎನ್ನುವ ಸ್ಮರಣಸಂಚಿಕೆಯನ್ನು ಪ್ರಕಟಿಸಿತು.)

ಈ ಹೊತ್ತಿನ ನಮ್ಮ ಸಾಹಿತಿಗಳು ಹಾಗು ಸಾಂಸ್ಕೃತಿಕ ವ್ಯಕ್ತಿಗಳು, ಎಲ್ಲ ಕಾರ್ಯಕ್ರಮಗಳು ಬೆಂಗಳೂರಿನಲ್ಲಿಯೇ ಜರುಗಬೇಕು; ತಮಗೆ ಬೆಂಗಳೂರೇ ವೇದಿಕೆಯಾಗಬೇಕು ಎಂದು ಹಪಾಪಿಸುತ್ತಿರುವಾಗ, ಮಧುರಚೆನ್ನರು ಹಲಸಂಗಿಯಂತಹ ಕೊಂಪೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡದ್ದು; ಅಲ್ಲಿಯ ಗ್ರಾಮೀಣರಿಗೆ ಸಾಹಿತ್ಯಕ, ಸಾಂಸ್ಕೃತಿಕ ಹಾಗು ಆಧ್ಯಾತ್ಮಿಕ ಬೆಳಕನ್ನು ನೀಡಿದ್ದು ಒಂದು ಅದ್ಭುತವಾದ ಹಾಗು ಅನುಕರಣೀಯವಾದ ಸಂಗತಿಯಾಗಿದೆ.

ಮಧುರಚೆನ್ನರು ಸಾಹಿತ್ಯಕ ಹಾಗು ಸಂಶೋಧನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ, ಸಹಜವಾಗಿಯೇ ಇವರಿಗೆ ಅನೇಕ ಸಹಚರರು ದೊರೆತರು. ಅವರೆಲ್ಲರೂ ಇವರಿಗೆ ಆತ್ಮೀಯ ಗೆಳೆಯರಾಗಿದ್ದು, ಮಧುರಚೆನ್ನರ ಮಧುರವಾದ ವ್ಯಕ್ತಿತ್ವವನ್ನು ತೋರಿಸುತ್ತದೆ. ಮಧುರಚೆನ್ನರ ಹಾಗು ಇವರ ಸಂಶೋಧಕ ಗೆಳೆಯರ ನಡುವೆ ನಡೆದಂತಹ ಪತ್ರವ್ಯವಹಾರವನ್ನು ಗಮನಿಸಿದಾಗ, ಈ ಮಾತು ಸ್ಪಷ್ಟವಾಗುತ್ತದೆ:

(೧) ಖ್ಯಾತ ಸಾಹಿತಿ ರಂ.ಶ್ರೀ.ಮುಗಳಿಯವರು ತಮ್ಮ ಪತ್ರಗಳಲ್ಲಿ ಮಧುರಚೆನ್ನರನ್ನು  ‘ಚೆನ್ನಮಲ್ಲ ದೊರೆಯೆ’ ಎಂದು ಸಂಬೋಧಿಸುತ್ತಾರೆ ಹಾಗು ಕೊನೆಯಲ್ಲಿ ‘ರಂಗ’ ಎಂದು ತಮ್ಮಮೊಟಕುಹೆಸರನ್ನು ಬರೆಯುತ್ತಾರೆ.
(೨) ‘ಪ್ರದೀಪ’ ಮಾಸಪತ್ರಿಕೆಯ ಸಂಪಾದಕರಾಗಿದ್ದ ವಿನೀತ ರಾಮಚಂದ್ರರಾಯರು ಇವರನ್ನು ‘ಚೆನ್ನ’ ಎಂದು ಸಂಬೋಧಿಸಿ,  ‘ರಾಮಚಂದ್ರ’ ಎಂದು ತಮ್ಮ ಹೆಸರಿನೊಂದಿಗೆ ಕೊನೆ ಮಾಡುತ್ತಾರೆ.
(೩) ಜ್ಞಾನಪೀಠ ಪ್ರಶಸ್ತಿವಿಜೇತ ವ್ಹಿ.ಕೆ. ಗೋಕಾಕರು ಮಧುರಚೆನ್ನರನ್ನು, ‘ಗೆಳೆಯಾ’ ಎಂದು ಕರೆದು, ವಿನಾಯಕ’ ಎಂದು ಕೊನೆಗಾಣಿಸುತ್ತಾರೆ.
(೪) ಶಂ.ಬಾ.ಜೋಶಿಯವರು ಇವರನ್ನು ‘ಎನ್ನ ಚೆನ್ನಮಲ್ಲ’ ಎಂದು ಕರೆದು,  ‘ಶಂಕರ’ ಎನ್ನುವ ತಮ್ಮ ಅಂಕಿತದೊಂದಿಗೆ ಪತ್ರವನ್ನು ಮುಗಿಸುತ್ತಾರೆ.

ವರಕವಿ ಬೇಂದ್ರೆಯವರು ಮಧುರಚೆನ್ನರ ಆತ್ಮೀಯ ಗೆಳೆಯರಾಗಿದ್ದು, ಇವರ ಬಗೆಗೆ ಅನೇಕ ಕವನಗಳನ್ನು ಬರೆದಿದ್ದಾರೆ.

ಪ್ರಸಿದ್ಧ ಲಾವಣಿಕಾರರಾದ ‘ಹರದೇಶಿ-ನಾಗೇಶಿ’ಯವರು , ಖಾಜಾಸಾಹೇಬರು ಹಾಗು ಓಲೇಕಾರ ರಾಮಚಂದ್ರ ಇವರು ಹಲಸಂಗಿಯವರು. ಖಾಜಾಸಾಹೇಬರು ಮಧುರಚೆನ್ನರ ಪ್ರೇರಣೆಯಿಂದ ‘ಜೀವನಸಂಗೀತ’ ಎನ್ನುವ ಲಾವಣಿಗಳ ಸಂಗ್ರಹವನ್ನು ಹೊರತಂದರು. ಕಾಸೀಮಸಾಹೇಬ ಹುಸೇನಸಾಹೇಬ ಪಟೇಲ ಅಥವಾ ಪಿ. ಧೂಲಾ ಎನ್ನುವವರು ‘ವೀರಪಥಿಕ’ ಎನ್ನುವ ಕವನಸಂಗ್ರಹವನ್ನು ಹೊರತಂದರು.

……………………………………………………………………………..
ಆಧ್ಯಾತ್ಮಿಕ
ಮಧುರಚೆನ್ನರು ಜ್ಯೋತಿಷ್ಯಶಾಸ್ತ್ರದ ಅಧ್ಯಯನವನ್ನು ಸಹ ಮಾಡಿದವರಾಗಿದ್ದರು. ತಮ್ಮ ಆಧ್ಯಾತ್ಮಿಕ ಪ್ರಗತಿಯ ಮಜಲುಗಳನ್ನು ಜ್ಯೋತಿಷ್ಯದ ಮೂಲಕ ಅರಿಯಲು ಪ್ರಯತ್ನಿಸುತ್ತಿದ್ದರು.

೪-೧೨-೨೯ರಂದು ಮಧುರಚೆನ್ನರಿಗೆ ಬಾಗಿಲುಕೋಟೆಯ ಆರೋಗ್ಯಧಾಮದಲ್ಲಿ ದಿವ್ಯ ಪ್ರಸನ್ನ ಅನುಭವವಾಯಿತು. ಆಗ ಇವರಿಗೆ ೨೬ ವರ್ಷ-೪ ತಿಂಗಳು- ೩ ದಿನಗಳು ತುಂಬಿದ್ದವು. ಭಗವದ್ಗೀತೆಯಲ್ಲಿ ಇದನ್ನು ‘ಬ್ರಹ್ಮಸಂಸ್ಪರ್ಶ’ ಎಂದು ಕರೆಯಲಾಗಿದೆ. ಪಾಶ್ಚಾತ್ಯರು ಇದನ್ನು ವಿಶ್ವಪ್ರಜ್ಞೆ (Cosmic Consciousness) ಎಂದಿದ್ದಾರೆ. ಈ ಅನುಭವವನ್ನು ಮಧುರಚೆನ್ನರು ಹೀಗೆ ವರ್ಣಿಸಿದ್ದಾರೆ:

                        ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು
                        ನನ್ನ ನಲ್ಲನ ಕತೆಗೆ ಮರುಳುಗೊಂಡೆ
                        ಇನ್ನೇನು ಹೇಳುವುದು, ಇಂದಿಗಿಪ್ಪತ್ತಾರು
                        ಈಸೊಂದು ದಿನ ಕೊರಗಿ ಗೊತ್ತುಗಂಡೆ.

ಮಧುರಚೆನ್ನರು ಭಗವತ್ ಸಾಕ್ಷಾತ್ಕಾರಕ್ಕಾಗಿ ಅನೇಕ ಮಾರ್ಗಗಳಲ್ಲಿ ಪ್ರಯತ್ನಿಸಿದರು.  ೧೫-೮-೧೯೩೮ರಲ್ಲಿ ಇವರಿಗೆ ಪುದುಚೆರಿಯಲ್ಲಿ ಅರವಿಂದರ ದರ್ಶನವಾಯಿತು. ಆ ಗಳಿಗೆಯಿಂದ ಮಧುರಚೆನ್ನರ ಆತ್ಮಸಂಶೋಧನೆಗೆ ಅರವಿಂದರ ಅನುಭಾವವೇ ದಾರಿದೀಪವಾಯಿತು. ೧೯೪೧ರಲ್ಲಿ ಇವರು ಮತ್ತೊಮ್ಮೆ ಅರವಿಂದರ ದರ್ಶನವನ್ನು ಹಾಗು ಮಹತ್ತಾದ ಅನುಭವವನ್ನು ಪಡೆದರು.

೧೯೪೬ರಲ್ಲಿ ಅಥರ್ಗಾದಲ್ಲಿ ಮಧುರಚೆನ್ನರಿಗೆ ಶ್ರೀ ಗುರಮ್ಮಾತಾಯಿ ಎನ್ನುವ ಯೋಗಿಣಿಯ ಭೆಟ್ಟಿಯಾಗುತ್ತದೆ. ಅವರು ಮಧುರಚೆನ್ನರಿಗೆ ಯೋಗಸಾಧನೆಯನ್ನು ಹೇಳಿ ಕೊಡುವರು. ಅಥರ್ಗಾದಲ್ಲಿಯೇ ಶ್ರೀ ಚೆನ್ನಬಸವಸ್ವಾಮಿಗಳು ಮಧುರಚೆನ್ನರಿಗೆ ಸಾಧನಾಮಾರ್ಗದ ವಿಶೇಷ ತಿಳಿವನ್ನು ಕೊಡುತ್ತಾರೆ. 

೧೯೪೭ರ ನವ್ಹಂಬರದಲ್ಲಿ ಮಧುರಚೆನ್ನರು ರಮಣ ಮಹರ್ಷಿಗಳ ದರ್ಶನ ಪಡೆಯುತ್ತಾರೆ.
ಇಲ್ಲಿ ಇವರಿಗೆ ‘ಜ್ಞಾನಯೋಗ’ ಅಥವಾ ‘ಐಕ್ಯಸ್ಥಲ’ದ ಅನುಭವವಾಗುತ್ತದೆ.

೧೯೪೮ರಲ್ಲಿ ಮಧುರಚೆನ್ನರು ಸಂಪೂರ್ಣ ಸಿದ್ಧಿಯನ್ನು ಪಡೆಯುತ್ತಾರೆ.
೧೯೫೩ ಅಗಸ್ಟ ೧೫ಕ್ಕೆ ಮಧುರಚೆನ್ನರು ಕರ್ತಾರನ ಕಮ್ಮಟವನ್ನು ತ್ಯಜಿಸಿ, ಕರ್ತಾರನಲ್ಲಿ ಐಕ್ಯವಾಗುತ್ತಾರೆ.

ಮಧುರಚೆನ್ನರಿಗೆ ಅರವಿಂದರ ದರ್ಶನವಾದದ್ದು ಅಗಸ್ಟ ೧೫ರಂದು. ಮಧುರಚೆನ್ನರು ದೇಹವಿಟ್ಟದ್ದು ಅಗಸ್ಟ ೧೫ರಂದು. ಈ ದಿನಾಂಕವು ಮಧುರಚೆನ್ನರ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಎನ್ನುವುದು ಇದರಿಂದಾಗಿ ಸ್ಪಷ್ಟವಾಗುತ್ತದೆ.

೧೨ನೆಯ ಶತಮಾನದ ಶಿವಶರಣೆ ಅಕ್ಕಮಹಾದೇವಿಯನ್ನು ನೆನಪಿಸುವ ಏಕೈಕ ಅನುಭಾವಿ ಕವಿ ಎಂದರೆ ಮಧುರಚೆನ್ನರು. ಸಾಕ್ಷಾತ್ಕಾರದ ಮೊದಲು ಅಕ್ಕಮಹಾದೇವಿಯು ಶಿವನಿಗಾಗಿ ವಿಲಪಿಸುವ ಪರಿಯನ್ನು ಹಾಗು ಮಧುರಚೆನ್ನರು ಭಗವಂತನಿಗಾಗಿ ಹಂಬಲಿಸುವ ಪರಿಯನ್ನು ಹೋಲಿಸಿ ನೋಡಬಹುದು:

ಅಕ್ಕಮಹಾದೇವಿಯ ವಚನ:
ಅಳಿಸಂಕುಲವೆ, ಮಾಮರವೆ, ಬೆಳುದಿಂಗಳೆ, ಕೋಗಿಲೆಯೆ
ನಿಮ್ಮೆಲ್ಲರನ್ನು ಒಂದ ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವರ ಕಂಡಡೆ
ಕರೆದು ತೋರಿರೆ.

ಮಧುರಚೆನ್ನರ ಕವನದ ಒಂದು ನುಡಿಯನ್ನು ನೋಡಿರಿ:
ನಿಲ್ಲು ನಿಲ್ಲೆಲೆ ನವಿಲೆ, ನಿನ್ನ ಕಣ್ಣುಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ.
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿಹನೆ
ತಾಳಲಾರದು ಜೀವ ಹೇಳಬಾರೆ!

ಸಾಕ್ಷಾತ್ಕಾರದ ಬಳಿಕ ಅಕ್ಕಮಹಾದೇವಿ ನುಡಿದ ವಚನವನ್ನು ನೋಡಿರಿ:
ಅಕ್ಕ ಕೇಳೌ, ನಾನೊಂದು ಕನಸ ಕಂಡೆ
ಅಕ್ಕಿ, ಅಡಕೆ, ಓಲೆ, ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.

ಮಧುರಚೆನ್ನರ ಕವನದ ನುಡಿಯೊಂದನ್ನು ನೋಡಿರಿ:
ಕನಸು ಬಿತ್ತು ಬಾಲೆಗೆ
ಮನಸಿಗೊಂದು ದೀವಿಗೆ
ಜಡೆಯ ಮುಡಿಯ ತಂದೆಯು
ನೋಡು ಮಗಳೆ ಎಂದನು

ಕಠಿಣ ಸಾಧನೆಯ ಮೂಲಕ, ಮಧುರಚೆನ್ನರು ತಮ್ಮ ಮನದಲ್ಲಿ ಶಿವನ ದೀವಿಗೆಯನ್ನು ಹೊತ್ತಿಸಿದರು. ಆ ದೀವಿಗೆಯನ್ನು ಅವರು ಹಲಸಂಗಿಯಂತಹ ಚಿಕ್ಕ ಹಳ್ಳಿಯಲ್ಲಿ ಸ್ಥಾಪಿಸಿದರು. ಅದರ ಬೆಳಕು ಕರ್ನಾಟಕದಲ್ಲೆಲ್ಲ ಹರಡಿದೆ.