Tuesday, December 15, 2009

ಸಾಹಿತ್ಯಲೋಕದ ಸುತ್ತ-ಮುತ್ತ (ಗಿರಡ್ಡಿ ಗೋವಿಂದರಾಜ)

‘ಮನೋಹರ ಗ್ರಂಥಮಾಲಾ’ ಸಂಸ್ಥೆಯು ಗಿರಡ್ಡಿ ಗೋವಿಂದ್ ರಾಜ್ ಬರೆದ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಪುಸ್ತಕವನ್ನು ಇತ್ತೀಚೆಗೆ ಹೊರತಂದಿದೆ. ಇದು ಈ ಸಂಸ್ಥೆಯ ೨೦೦೯ನೆಯ ವರ್ಷದ ನಾಲ್ಕನೆಯ ಪುಸ್ತಕ.
ಗಿರಡ್ಡಿಯವರು ದೀರ್ಘಕಾಲದಿಂದ ಕನ್ನಡ ಸಾಹಿತ್ಯಲೋಕದಲ್ಲಿ ವಿಮರ್ಶಕರೆಂದು ಹೆಸರು ದಾಖಲಿಸಿಕೊಂಡವರು. ಅವರಿಗೆ ಏನು ಉಮೇದಿ ಬಂದಿತೋ, ಪ್ರಬಂಧಸಾಹಿತ್ಯಕ್ಕೆ  ಕೈ ಹಚ್ಚಿದರು. ಎರಡು ವರ್ಷಗಳ ಹಿಂದೆ ಇದೇ ಸಂಸ್ಥೆಯು ಅವರ ಲಲಿತಪ್ರಬಂಧಗಳ ಸಂಕಲನವೊಂದನ್ನು ಪ್ರಕಟಿಸಿತು. ‘ಹಿಡಿಯದ ಹಾದಿ’ ಎಂದು ಅದರ ಹೆಸರು. ಅದನ್ನು ಓದಿದಾಗ ಅನ್ನಿಸಿದ್ದು : ಗಿರಡ್ಡಿಯವರು ಪ್ರಬಂಧಬರಹದ ಈ ಹಾದಿಯನ್ನು ಹಿಡಿಯದಿದ್ದರೇ ಚೆನ್ನಾಗಿತ್ತು.

ಈ ವರ್ಷ(೨೦೦೯) ಇದೇ ಸಂಸ್ಥೆಯು ಗಿರಡ್ಡಿಯವರ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಲೇಖನಸಂಕಲನವೊಂದನ್ನು ಪ್ರಕಟಗೊಳಿಸಿದೆ. ಗಿರಡ್ಡಿಯವರು ತಮ್ಮ ಲೇಖನಗಳಿಗೆ ಪ್ರಸಂಗಸಾಹಿತ್ಯವೆಂದು ಕರೆಯುತ್ತ ಈ ರೀತಿಯಾಗಿ ಹೇಳಿದ್ದಾರೆ:


ಗಿರಡ್ಡಿಯವರ ಸಂಕಲನದ ಉದ್ದೇಶ ಹಾಗು ತಿರುಳು ಅರ್ಥವಾಯಿತೆ? ಸಾಹಿತಿಗಳಿಗೆ ಸಂಬಂಧಿಸಿದ “ಋಣಾತ್ಮಕ ಅಂಶ”ಗಳನ್ನು  ಅವರು ಈ ಸಂಕಲನದಲ್ಲಿಬಣ್ಣಿಸಿದ್ದಾರೆ. “ಋಣಾತ್ಮಕ ಅಂಶ”ಗಳೆಂದರೇನು? ಇದು ಅವರವರ ನಿಲುವು ಹಾಗೂ ವ್ಯಾಖ್ಯಾನದ ಮೇಲೆ ಹೋಗುತ್ತದೆ. ಉದಾಹರಣೆಗೆ ‘ಸುರಾಪಾನ’ವು ಹಿರಿಯ ಕನ್ನಡ ಸಾಹಿತಿಗಳಾದ ಮಾಸ್ತಿ, ಬೇಂದ್ರೆ, ಕುವೆಂಪು, ದೇವುಡು ಹಾಗು ಡಿವಿಜಿ ಇಂಥವರಿಗೆ ಋಣಾತ್ಮಕ ಅಂಶವಾಗಿ ಕಂಡರೆ, ನವ್ಯ ಸಾಹಿತಿಗಳಿಗೆ ಅಂದರೆ ಅನಂತ ಮೂರ್ತಿ, ಗಿರೀಶ ಕಾರ್ನಾಡ ಹಾಗು ಗಿರಡ್ಡಿಯಂಥವರಿಗೆ ಅದು ಧನಾತ್ಮಕ ಅಂಶವಾಗಿ ಕಾಣಬಹುದು. ಹಿರಿಯ ಸಾಹಿತಿಗಳಲ್ಲಿ ಸುರಾಪಾನಿಗಳು ಸಿಗುವದಿಲ್ಲ. ಕೆಲವರಂತೂ ‘ಚಾ-ಪಾಣಿ’ಗಳೂ ಆಗಿರಲಿಕ್ಕಿಲ್ಲ.ಆದುದರಿಂದ ಇವರಲ್ಲಿ ಇರಬಹುದಾದ ಮಾನವಸಹಜ ಕುಂದು ಕೊರತೆಗಳಿಗೆ ಬಣ್ಣ ಕೊಟ್ಟು, ಹಿಗ್ಗಿಸಿ ಬರೆದಾಗ, ಲೇಖನಕ್ಕೆ ‘ಸಂಕೀರ್ಣತೆ’ ಬರುತ್ತದೆ! ಇಂತಹ ಸಂಕೀರ್ಣತೆ ವ್ಯಕ್ತಿಚಿತ್ರಗಳಲ್ಲಿ ಅಥವಾ ಅಭಿನಂದನ ಗ್ರಂಥಗಳಲ್ಲಿ ಸಿಗುವದಿಲ್ಲ ಎನ್ನುವದು ಗಿರಡ್ಡಿಯವರ ಕೊರಗು ಹಾಗು ಅಮೂಲ್ಯ ಅಭಿಪ್ರಾಯ.
ಹೀಗಾಗಿ ತಮ್ಮ ಸಂಕಲನದ ಅನೇಕ ಲೇಖನಗಳನ್ನು ಗಿರಡ್ಡಿಯವರು ಈ ‘ಋಣಾತ್ಮಕ ಸಂಕೀರ್ಣತೆ’ಗಾಗಿಯೇ ಮೀಸಲಿಟ್ಟಿದ್ದಾರೆ. ಅವು ಇಂತಿವೆ:

(೧) ರಾಜೀ ಊಟ 
(ಬೇಂದ್ರೆ-ಕುವೆಂಪು ವೈಮನಸ್ಸು!)
(೨) ಕವಿತೆಯ ಓದು 
(ಸುಮತೀಂದ್ರ ನಾಡಿಗರ ಸ್ವಮೋಹ)
(೩) ಅನ್ನದ ರಿಣ 
(ರಂ.ಶ್ರೀ. ಮುಗಳಿಯವರ ಸ್ವಮೋಹ)
(೪) ಒಂದು ಲೋಟ ನೀರು 
(ಕುವೆಂಪುರವರ unhospitality)
(೫) ಕುರ್ಚಿಯ ಗೌರವ 
(ಗಿರಡ್ಡಿಯವರು ಸರೋಜಿನಿ ಶಿಂತ್ರಿಯವರ ಬಾಲ ಕತ್ತರಿಸಿದ್ದು)
(೬) ಬೀದಿ ಬದಿಯ ರದ್ದಿ ಪುಸ್ತಕಗಳ ಅಂಗಡಿಯಲ್ಲಿ 
( ಹಾ. ಮಾ. ನಾಯಕರ complex)
(೭) ಜಾರೆ ಅಮೃತಮತಿ 
(ಬಿ.ವಿ. ಕಾರಂತರ ಕುಡುಕತನ)
(೮) ಮೈ ಹಿಂದೀ ಮೆ ನಹೀ ಬೋಲೂಂಗಾ 
(ಬಿ.ವಿ. ಕಾರಂತರ ಕುಡುಕತನ)
(೯) ಬಿ. ವಿ. ಕಾರಂತರ ಬಾಥ್ ರೂಮ್ 
(ಬಿ.ವಿ. ಕಾರಂತರ ಕುಡುಕತನ)
(೧೦) ಸಾಲಿ ರಾಮಾಯಣ 
(ಬೇಂದ್ರೆಯವರ ಕ್ಷುಲ್ಲಕತನ ಹಾಗು ಗುಂಪುಗಾರಿಕೆ)
(೧೧) ಒಂದು ಸ್ನೇಹದ ಕಥೆ 
(ಬೇಂದ್ರೆಯವರಿಗೆ ಮಾಸ್ತಿಯವರ ಬಗೆಗಿದ್ದ ಅಸಮಾಧಾನ)
(೧೨) ಯುಗದ ಕವಿ, ಜಗದ ಕವಿ 
(ಬೇಂದ್ರೆಯವರಿಗೆ ಕುವೆಂಪು ಬಗೆಗಿದ್ದ ಅಸೂಯೆ)
(೧೩) ತಂದೆ-ಮಗ 
(ಶ್ರೀರಂಗರ ತಂದೆಗೆ ಶ್ರೀರಂಗರ ಬಗೆಗಿದ್ದ ಅಸಮಾಧಾನ)
(೧೪) ಶಂಬಾ-ಬೇಂದ್ರೆ ಪುರಾಣ 
( ಬೇಂದ್ರೆ-ಶಂ. ಬಾ. ಜೋಶಿಯವರ ಜಗಳ)
(೧೫) ಶಂ.ಬಾ. ಅವರ ಬಲೂನುಗಳು 
(ಶಂ. ಬಾ. ಜೋಶಿಯವರ ತಿಕ್ಕಲುತನ)
(೧೬) ಹದಿನೈದು ಪೈಸೆ ಕಾರ್ಡುಗಳು 
(ಶಂ. ಬಾ. ಜೋಶಿಯವರ ತಿಕ್ಕಲುತನ)

ಒಟ್ಟು ೫೬ ಪ್ರಸಂಗಗಳಲ್ಲಿ ೧೬ ಪ್ರಸಂಗಗಳು ಈ ತರಹದ ಋಣಾತ್ಮಕ ಸಂಕೀರ್ಣತೆಗೆ ಮೀಸಲಾಗಿವೆ. (ವ್ಯವಹಾರದ ಭಾಷೆಯಲ್ಲಿ ಇದಕ್ಕೆ ‘ಛಿದ್ರಾನ್ವೇಷಣೆ’ ಎನ್ನಬಹುದೇನೊ?) ಕೇವಲ ‘ಋಣಾತ್ಮಕ’ ಪ್ರಸಂಗಗಳನ್ನು ವರ್ಣಿಸಿದರೆ ಪುಸ್ತಕವೇ ‘ಋಣಾತ್ಮಕ ಸಂಕಲನ ’ ಎನ್ನುವ ಹೊಗಳಿಕೆಗೆ ಪಾತ್ರವಾಗಬಹುದಲ್ಲವೆ? ಆದುದರಿಂದ ಗಿರಡ್ಡಿಯವರು ಧನಾತ್ಮಕವಾದ, ಪ್ರಶಂಸಾಪೂರ್ವಕವಾದ ಹಲವು ಲೇಖನಗಳನ್ನೂ  ಬರೆದಿದ್ದಾರೆ. ಈ ಲೇಖನಗಳೆಲ್ಲ ಸಂಕಲನದ ಮೊದಲಲ್ಲೇ ಬಂದಿವೆ.  ಆದರೆ ಈ ಪ್ರಶಂಸೆ ಎಲ್ಲ ಸ್ವಪ್ರಶಂಸೆಯಾಗಿರುವದೇ ಓದುಗರಿಗೆ ಮನೋರಂಜನೆಯನ್ನು ಒದಗಿಸಬಹುದು! ಇಂತಹ ಲೇಖನಗಳ ಪಟ್ಟಿ ಇಲ್ಲಿದೆ. ಸಂಕಲನದ ಮೊದಲನೆಯ ಲೇಖನವೇ ಇವರ ‘ಬಾಲ್ಯಪ್ರತಿಭೆ’ಯ ಕೊಂಡಾಟವಾಗಿರುವದನ್ನು ಗಮನಿಸಬೇಕು:

(೧) ಮೂಗಿನ ಕೆಳಗೆ ಮೀಸೆ
(ಬಂಕಾಪುರ ಎನ್ನುವ ಪತ್ರಕರ್ತರು ಗಿರಡ್ಡಿಯವರ ಕಿಶೋರಾವಸ್ಥೆಯ ಲೇಖನ ಮೆಚ್ಚಿಕೊಂಡಿದ್ದು)
(೨) ಕೈತೋಟದ ಎರಡು ಹಗರಣಗಳು
(ಭೈರಪ್ಪನವರು ಇವರ ಕತೆಗಳನ್ನು ಮೆಚ್ಚಿಕೊಂಡಿದ್ದು)
(೩) ಸಾಹಿತ್ಯದ ಕಾಡುವ ಗುಣ
( ಸಾಮಾನ್ಯ ಓದುಗಳೊಬ್ಬಳು ಇವರ ಕತೆ ಮೆಚ್ಚಿಕೊಂಡಿದ್ದು)
(೪) Brilliant Young Man
( ವಿ.ಸೀ.ಯವರು ಇವರ ಲೇಖನ ಮೆಚ್ಚಿಕೊಂಡಿದ್ದು)
(೫) ಹದಿನಾರೂವರೆ ವರ್ಷದ ವಿವೇಕ
(ಕಿಶೋರಾವಸ್ಥೆಯ ವಿವೇಕ ಶಾನಭಾಗ ಇವರ ಕತೆ ಮೆಚ್ಚಿಕೊಂಡಿದ್ದು)
(೬) ಅಜ್ಞಾತದಿಂದ ಒಂದು ಪತ್ರ
(ಲಕ್ಷ್ಮೀನರಸಿಂಹ ಎನ್ನುವ ಅಪರಿಚಿತರು ಇವರ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದು)
(೭) Felicity of Expression
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ  ಕವನಗಳನ್ನು ಮೆಚ್ಚಿಕೊಂಡಿದ್ದು)
(೮) ಸ್ವಾತಂತ್ರ್ಯೋತ್ಸವದ ಆ ದಿನ
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೯) Promising Poet
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೦) ನಿನ್ನ ಕಾವ್ಯಸ್ಫೂರ್ತಿ ಮುಂಬರಿಯಲಾವುದಡ್ಡಿ?
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೧) ಬಾಣದ ಬಿರಸು
(ಗಿರಡ್ಡಿಯವರು ವಿದ್ಯಾರ್ಥಿಯಾಗಿದ್ದಾಗ ಪ್ರೊಫೆಸರ್ ಮಾಳವಾಡರ ಎದುರಿಗೆ ತೋರಿದ ಧೈರ್ಯ)
(೧೨) ಚಮತ್ಕಾರ
(ಗಿರಡ್ಡಿಯವರು ಬೇಂದ್ರೆಯವರನ್ನು ತಮಾಶೆ ಮಾಡಿದ್ದು)

ಈ ರೀತಿಯಾಗಿ ೫೬ ಪ್ರಸಂಗಗಳಲ್ಲಿ ಮೊದಲಿನ ೧೨ ಪ್ರಸಂಗಗಳು ಧನಾತ್ಮಕ ಸಂಕೀರ್ಣತೆಗೂ (ಸ್ವಪ್ರಶಂಸೆಗೂ),ನಂತರದ ೧೬ ಪ್ರಸಂಗಗಳು ಋಣಾತ್ಮಕ ಸಂಕೀರ್ಣತೆಗೂ (ಛಿದ್ರಾನ್ವೇಷಣೆಗೂ) ಮೀಸಲಾಗಿವೆ.ಇಂತಹ ಲೇಖನಗಳನ್ನು ನೋಡಿಯೇ ಚೆನ್ನವೀರ ಕಣವಿಯವರು ಈ ಪುಸ್ತಕಕ್ಕೆ ‘ಅಧಿಕ ಪ್ರಸಂಗಗಳು’ ಎನ್ನುವ ಹೆಸರನ್ನು ಸೂಚಿಸಿರಬಹುದು!  ಉಳಿದ ೨೮ ಪ್ರಸಂಗಗಳು ಅಂದರೆ ಶೇಕಡಾ ೫೦ ಪ್ರಸಂಗಗಳು ಅತಿ ಸಾಮಾನ್ಯವೆನ್ನಿಸಬಹುದಾದ ಲೇಖನಗಳು. ಉದಾಹರಣೆಗೆ ‘ಧಾರವಾಡದಲ್ಲಿ ಕವಿಗಳು’ ಎನ್ನುವ ಲೇಖನ ನೋಡಬಹುದು. ಈ ಲೇಖನವನ್ನು ಗಿರಡ್ಡಿಯವರು ಯಾಕೆ ಬರೆದರೋ ತಿಳಿಯದು. ಮಾಧ್ಯಮಿಕ ಶಾಲೆಯ ಹುಡುಗರು ಇಂತಹ ನಿಬಂಧವನ್ನು ಬರೆಯಬಹುದು. ಓದುಗರು ಈ ನಿಬಂಧದ evaluationಅನ್ನು ಸ್ವತಃ ಮಾಡಲಿ ಎನ್ನುವ ಉದ್ದೇಶದಿಂದ ಲೇಖನದ ಕೊನೆಯಲ್ಲಿ ಆ ನಿಬಂಧವನ್ನು ಅಂದರೆ ಅವರ ಪ್ರತಿಭೆಯ ಒಂದು ಸ್ಯಾಂಪಲ್ ಅನ್ನು ಉದ್ಧರಿಸುತ್ತಿದ್ದೇನೆ. ದಯವಿಟ್ಟು ಕ್ಷಮಿಸಬೇಕು. 

ವ್ಯಕ್ತಿಚರಿತ್ರೆ ಹಾಗು ಆತ್ಮಚರಿತ್ರೆಗಳು ಕನ್ನಡ ಸಾಹಿತ್ಯದಲ್ಲಿ ಅಪರೂಪವೇನಲ್ಲ. ಅದೇ ರೀತಿಯಾಗಿ ನಾಡಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳ ತುಣುಕು ಚರಿತ್ರೆಗಳು, ಪ್ರಸಿದ್ಧರಾಗಿರದಿದ್ದರೂ ಸಹ ಶೀಲವಂತರಾದ ವ್ಯಕ್ತಿಗಳ ತುಣುಕು ಪ್ರಸಂಗಗಳೂ ಸಹ ಕನ್ನಡ ಸಾಹಿತ್ಯದಲ್ಲಿ ಸ್ಥಾನ ಪಡೆದಿವೆ. ಇಂತಹ ಸಾಹಿತ್ಯವನ್ನು ನಿರ್ಮಿಸಿದ ಹಿರಿಯರಲ್ಲಿ ಡಿ. ವ್ಹಿ. ಗುಂಡಪ್ಪನವರು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ವಿ. ಸೀತಾರಾಮಯ್ಯನವರು ಹಾಗು ಸಿದ್ಧವ್ವನಹಳ್ಳಿ ಕೃಷ್ಣಶರ್ಮರು ಪ್ರಮುಖರು. ಗುಂಡಪ್ಪನವರ ‘ಜ್ಞಾಪಕ ಚಿತ್ರಶಾಲೆ’, ಗೊರೂರರ ‘ಹಳ್ಳಿಯ ಹತ್ತು ಸಮಸ್ತರು’, ವಿ.ಸೀ.ಯವರ ‘ವ್ಯಕ್ತಿಚಿತ್ರಸಂಪುಟ’ ಹಾಗು ಕೃಷ್ಣಶರ್ಮರ ‘ದೀಪಮಾಲೆ’ ಕೃತಿಗಳಲ್ಲಿ ಬಾಳಿಗೆ ಬೆಳಕು ಕೊಡುವಂತಹ ವ್ಯಕ್ತಿಚಿತ್ರಣಗಳಿವೆ. ಅದರ ಜೊತೆಗೆ, ಆ ಕಾಲದ ಸಂಸ್ಕೃತಿಯ ಹಾಗು ಜೀವನವಿಧಾನದ ಮಿಂಚು ನೋಟ ಸಹ ಈ ಕೃತಿಗಳಲ್ಲಿ ಚಿತ್ರಿತವಾಗಿದೆ. ಅದರಂತೆ ದೀರ್ಘ ಹಾಗು ಗಾಢವಾದ ವ್ಯಕ್ತಿಚಿತ್ರಗಳ ಬದಲು, ಕೆಲವು ಪ್ರಸಂಗಗಳ ಮೂಲಕ ಕೆಲವಾರು ವ್ಯಕ್ತಿಗಳ ಪಾರ್ಶ್ವನೋಟದ ಚಿತ್ರವನ್ನು ಕೊಡುವ ಸಾಹಿತ್ಯಕೃತಿಗಳೂ ನಮ್ಮಲ್ಲಿ ಸಾಕಷ್ಟಿವೆ. ಹಾ. ಮಾ. ನಾಯಕರು ಬರೆದ ‘ವೆಂಕಣ್ಣಯ್ಯ ಕೆಲ ಪ್ರಸಂಗಗಳು’, ಬೆಳಗೆರೆ ಕೃಷ್ಣಶಾಸ್ತ್ರೀಯವರು ಬರೆದ ‘ಸಾಹಿತಿಗಳ ಸಂಗದಲ್ಲಿ’, ‘ಮರೆಯಲಾದೀತೆ?’, ‘ಎಲೆಮರೆಯ ಅಲರು’, ಬಿ. ಎಸ್. ಕೇಶವರಾವರು ಬರೆದ ‘ಪ್ರಸಂಗಪ್ರವಾಹ’, ‘ನಾ ಕಂಡ ಪುಂಡ ಪಾಂಡವರು’ ಹಾಗು ವಿಷ್ಣು ನಾಯ್ಕರು ಬರೆದ ‘ಅರೆ ಖಾಸಗಿ’ ಕೃತಿಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಒಬ್ಬನೇ ಸಾಹಿತಿಯ ಬಗೆಗೆ ಅನೇಕ ಲೇಖಕರು ಬರೆದ ಅಭಿನಂದನೆಯ ಗ್ರಂಥಗಳು ಅಥವಾ ಸ್ಮರಣೆಯ ಕೃತಿಗಳೂ ಸಹ ಸಾಕಷ್ಟಿವೆ. (ಉದಾಹರಣೆ: ‘ತೇಜಸ್ವಿ ನೆನಪು’). ಲಂಕೇಶರು ತಮ್ಮ ಪತ್ರಿಕೆಯಲ್ಲಿ ಅನೇಕ ಸಾಹಿತಿಗಳನ್ನು ಹಾಗು ತಮ್ಮ ಗೆಳೆಯರನ್ನೇ ಟೀಕಿಸಿದ್ದಾರೆ. ಆದರೆ ಅದು ಸಾಹಿತ್ಯಕ ಹಾಗು ಸಾಮಾಜಿಕ ಕಾರಣಗಳಿಗಾಗಿಯೇ ಹೊರತು, ವೈಯಕ್ತಿಕ ಛಿದ್ರಾನ್ವೇಷಣೆಗಾಗಿ ಅಲ್ಲ.

ಇದಲ್ಲದೆ, ನಮ್ಮ ಪತ್ರಿಕೆಗಳಲ್ಲೂ ಸಹ ಇಂತಹ ಲೇಖನಮಾಲೆಗಳು ಪ್ರಕಟವಾಗಿವೆ. ‘ಪ್ರಪಂಚ’ ವಾರಪತ್ರಿಕೆಯ ಸಂಪಾದಕರಾದ ಶ್ರೀ ಪಾಟೀಲ ಪುಟ್ಟಪ್ಪನವರು ಐದು ದಶಕಗಳಷ್ಟು ಹಿಂದೆಯೇ ತಮ್ಮ ವಾರಪತ್ರಿಕೆಯಲ್ಲಿ ‘ದೊಡ್ಡವರ ಸಣ್ಣತನ’ ಎನ್ನುವ ಸ್ಥಿರಮಾಲಿಕೆಯಲ್ಲಿ ಅನೇಕ ರಾಜಕೀಯ ಮುಂದಾಳುಗಳ ಸಣ್ಣತನದ ಪ್ರಸಂಗಗಳನ್ನು ರೋಚಕವಾಗಿ ಬಣ್ಣಿಸುತ್ತಿದ್ದರು. ಅವರೇ ಮುಂದೆ ‘ಪಾಪು ಪ್ರಪಂಚ’ ಎನ್ನುವ ಪುಸ್ತಕವನ್ನೂ ಹೊರತಂದರು. ತಮ್ಮ  ಲೇಖನಗಳಲ್ಲಿ ಪಾಟೀಲ  ಪುಟ್ಟಪ್ಪನವರು ರಾಜಕಾರಣಿಗಳ ಹುಳಕನ್ನು ಬಯಲಿಗೆಳದಿದ್ದಾರೆ. ಪುಟ್ಟಪ್ಪನವರ ಉದ್ದೇಶ ನಾಗರಿಕಪ್ರಜ್ಞೆಯನ್ನು ಜಾಗೃತಗೊಳಿಸುವದಾಗಿತ್ತೇ ಹೊರತು ಛಿದ್ರಾನ್ವೇಷಣೆಯಾಗಿರಲಿಲ್ಲ.  ಈ ರೀತಿಯಾಗಿ ಎರಡು ಶತಮಾನಗಳ ಕಾಲವನ್ನು  ವ್ಯಾಪಿಸಿದ, ಅದರಂತೆ ಇದೇ ದಶಕದಲ್ಲಿ ಪ್ರಕಟವಾದ ಸಾಹಿತ್ಯಕೃತಿಗಳು ಕನ್ನಡದಲ್ಲಿ ಸಾಕಷ್ಟಿದ್ದರೂ ಸಹ, ಕರ್ನಾಟಕದ ಹೆಮ್ಮೆಯ ಪ್ರಕಾಶನಸಂಸ್ಥೆಯೆಂದು ಹೇಳಿಕೊಳ್ಳುವ ‘ಮನೋಹರ ಗ್ರಂಥಮಾಲಾ’ ಸಂಸ್ಥೆಯ ಮಾಲಕರಾದ ರಮಾಕಾಂತ ಜೋಶಿಯವರಿಗೆ  ಪ್ರಸಂಗಸಾಹಿತ್ಯವು ಇತ್ತೀಚಿನ ಬೆಳವಣಿಗೆಯಂತೆ ಕಾಣುತ್ತಿರುವದು  ಅಚ್ಚರಿಯ ಸಂಗತಿ. (ಪ್ರಕಾಶಕರ ಮಾತು ನೋಡಿರಿ: “ಇತ್ತೀಚೆಗೆ ಸಾಹಿತ್ಯಪ್ರಕಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗತೊಡಗಿದ್ದು, ಶುದ್ಧ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾಹಿತ್ಯ ಲೋಕದ ಆಜೂ ಬಾಜೂ ನಡೆದಿರಬಹುದಾದ, ನಡೆದ ಪ್ರಸಂಗಗಳನ್ನು ಅರಿಯುವ ಕುತೂಹಲ ಓದುಗರಿಗೆ ಹೆಚ್ಚಾಗತೊಡಗಿದೆ.)

ಗಿರಡ್ಡಿಯವರ ಶೈಲಿಯ ಬಗೆಗೆ ಒಂದು ಮಾತು. ತಮ್ಮ ಸ್ವಪ್ರಶಂಸೆಯು ಢಾಳಾಗಿ ಕಾಣಬಾರದೆಂದೊ ಅಥವಾ gentleman image ಇಟ್ಟುಕೊಳ್ಳುವ ಉದ್ದೇಶದಿಂದಲೋ ಗಿರಡ್ಡಿಯವರು ತಮ್ಮ ಲೇಖನಗಳನ್ನು ಸಂಕೋಚಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಆದರೆ ಇದರ ಪರಿಣಾಮ ಹೇಗಾಗಿದೆಯಂದರೆ ಇವರ ಲೇಖನಗಳು ನಿಸ್ಸತ್ವ, ನಿಸ್ಸಾರ ಶೈಲಿಯ ನಿರರ್ಥಕ ಚಿತ್ರಗಳಂತೆ ಕಾಣುತ್ತವೆ. ಪುಸ್ತಕವನ್ನು ಓದಿದ ಬಳಿಕ ಓದುಗನಿಗೆ ತನ್ನ ಸಮಯವು ಹಾಳಾಯಿತಲ್ಲ ಎಂದು ಪರಿತಾಪವಾಗಲಾರದೆ ಇರಲಾರದು. ಗುಜರಿಯಲ್ಲಿ ಬಿಕರಿಯಾಗಬೇಕಾದ ಕೃತಿಯನ್ನು ಮನೋಹರ ಗ್ರಂಥಮಾಲೆಯು ತನ್ನ ಚಂದಾದರರಿಗೆ ಕೊಡಮಾಡಿದೆ ಎನ್ನಲು ವಿಷಾದವಾಗುತ್ತಿದೆ.

ಗಿರಡ್ಡಿಯವರ ನಿಬಂಧ ಇಲ್ಲಿದೆ. ತಾಳ್ಮೆ ಇದ್ದವರು ಓದಬಹುದು. ದಯವಿಟ್ಟು ನನ್ನನ್ನು ಕ್ಷಮಿಸಿರಿ.


Friday, November 27, 2009

ಶೋಷಣೆಯ ವಿವಿಧ ಮುಖಗಳು (ಅಮರೇಶ ನುಗಡೋಣಿ)

ಅನೇಕ ಶತಮಾನಗಳಿಂದ ಭಾರತೀಯ ಸಮಾಜದಲ್ಲಿ ಊಳಿಗಮಾನ್ಯ  ಕೃಷಿ ಸಂಸ್ಕೃತಿಯು (feudal agricultural society) ಭದ್ರವಾಗಿ ಸ್ಥಾಪಿತವಾಗಿತ್ತು. ಈ ಸಂಸ್ಕೃತಿಯಲ್ಲಿ ಜಮೀನುದಾರರ ದಬ್ಬಾಳಿಕೆ ಹಾಗು ಅಸಹಾಯಕರ ಶೋಷಣೆ ನಡದೇ ಇದ್ದವು. ಈ ಕ್ರೌರ್ಯ ಹಾಗು ಮೂಢನಂಬಿಕೆಗಳ ಹೊರತಾಗಿಯೂ, ನಮ್ಮ ಸಾಂಪ್ರದಾಯಕ ಗ್ರಾಮೀಣ ಸಂಸ್ಕೃತಿಯಲ್ಲಿ ಅನೇಕ ಒಳ್ಳೆಯ ಅಂಶಗಳೂ ಇದ್ದವು.  ಗ್ರಾಮೀಣ ಜನರಲ್ಲಿದ್ದ ಮಾನವೀಯ ಸಂಬಂಧಗಳು, ನೈತಿಕ ಶ್ರದ್ಧೆ, ದೈವನಿಷ್ಠೆ ಹಾಗು ಪರಿಸರದ ಜೊತೆಗೆ ಅವರಿಗಿದ್ದ ಅಭಿನ್ನತೆ (symbiosis) ಇವು ಈ ಸಂಸ್ಕೃತಿಯ ಒಳ್ಳೆಯ ಅಂಶಗಳು.

ಔದ್ಯೋಗೀಕರಣದ ಫಲವಾಗಿ ಇದೀಗ ಭಾರತದಲ್ಲಿ ಹಬ್ಬಿಕೊಂಡ ಆಧುನಿಕ, ವ್ಯಾಪಾರೀ ನಾಗರಿಕತೆಯು ಗ್ರಾಮೀಣರ ಶೋಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ; ಜೊತೆಗೇ  ಗ್ರಾಮೀಣ ಸಂಸ್ಕೃತಿಯ ಉತ್ತಮ ಅಂಶಗಳನ್ನು  ನಾಶ ಮಾಡುತ್ತಲಿದೆ. ಅಮರೇಶ ನುಗಡೋಣಿಯವರ  ‘ಸವಾರಿ’ ಹಾಗು‘ಮುಸ್ಸಂಜೆಯ ಕಥಾನಕಗಳು’ ಸಂಕಲನಗಳಲ್ಲಿ ಬರುವ ಕತೆಗಳಲ್ಲಿ ಈ ಸಂಸ್ಕೃತಿವಿನಾಶದ ವಿಧಾನ ಹಾಗು ಇದರ  ಪರಿಣಾಮಗಳು  ಸಮರ್ಥವಾಗಿ ಚಿತ್ರಿಸಲ್ಪಟ್ಟಿವೆ.
ನಗರಗಳಲ್ಲಿ ಹಬ್ಬಿರುವ ನಯವಂಚಕ, ವ್ಯಾಪಾರೀ ನಾಗರಿಕತೆಯ ಹಾಗೂ ಅದಕ್ಕೆ ನಿಧಾನವಾಗಿ ಬಲಿಯಾದ ಗ್ರಾಮೀಣ ಮುಗ್ಧರ ವರ್ಣನೆ “ ದೈವಕ್ಕೆ ಮೊದಲು ಶರಣೆಂಬೆವು” ಕತೆಯಲ್ಲಿ ಬರುತ್ತದೆ.

ಮಾದಪ್ಪ ಹಾಗು ಪಾತವ್ವ ಇವರು ಕೃಷ್ಣಾ ನದಿಯ ನಡುಗಡ್ಡೆಯ ಊರೊಂದರಲ್ಲಿ ಇರುವ ಮುದಿ ದಂಪತಿಗಳು. `ಪಾತಪ್ಪ ದೇವರ' ಕತೆ ಹೇಳುವದೇ ಇವರ ಪಾರಂಪಾರಿಕ ಕಾಯಕ. ಪಾತಪ್ಪ ದೇವರ ಜಾತ್ರೆ ಆದಾಗ ಹಾಗು ಸುತ್ತು ಮುತ್ತಲಿನ ಹಳ್ಳಿಗಳಲ್ಲಿ ಇರುವ ಮನೆಗಳಲ್ಲಿ ಯಾವುದೇ ಒಂದು ಶುಭಕಾರ್ಯ ಜರಗುವ ಮೊದಲು ಈ ದಂಪತಿಗಳಿಂದ ಪಾತಪ್ಪ ದೇವರ ಕತೆ ಹೇಳಿಸುವದು ಅಲ್ಲಿಯ ವಾಡಿಕೆ. ಆ ಊರಿನ ಹುಡುಗನೊಬ್ಬ ಪಟ್ಟಣದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾನೆ. ಆತನ ವಿಷಯ ಜಾನಪದ ಅಧ್ಯಯನ.  ಈ ದಂಪತಿಗಳನ್ನು ಪುಸಲಾಯಿಸಿ, ಇವರಿಂದ ಪಾತಪ್ಪ ದೇವರ ಹಾಡನ್ನು ಹಾಡಿಸಿ, ಟೇಪ್ ಮಾಡಿಕೊಂಡು ಹೋದ ಆ ಹುಡುಗ ತನ್ನ ಪದವಿಗಾಗಿ ಅದನ್ನು ಬಳಸಿಕೊಳ್ಳುತ್ತಾನೆ. ಆ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು ಅದನ್ನೇ ತಮ್ಮ ಸಂಶೋಧನೆ ಎಂದು ತೋರಿಸಿಕೊಳ್ಳುತ್ತಾರೆ. ರೇಡಿಯೋ ಹಾಗು ಟೀವಿಗಳಲ್ಲಿ ಇವರ ಸಂದರ್ಶನಗಳಾಗುತ್ತವೆ. ಇವರ ಹಾಡಿನ ಕ್ಯಾಸೆಟ್ ಹೊರಬರುತ್ತದೆ. ಇವರನ್ನು ಬಳಸಿಕೊಂಡವರು ಸಾಕಷ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಆದರೆ ಅದಾವದೂ ಇವರ ಅರಿವಿಗೇ ಬಂದಿಲ್ಲ. ಅವರು ಬಿಸಾಕಿದ ಸ್ವಲ್ಪ ಹಣವೇ ಮಾದಪ್ಪನಲ್ಲಿ ನವಿರಾದ ಧಿಮಾಕನ್ನು ಹುಟ್ಟಿಸಲು ಕಾರಣವಾಗಿ ಬಿಡುತ್ತದೆ. ತಮ್ಮ ಮನೆಗಳಲ್ಲಿಯ ಶುಭಕಾರ್ಯಗಳಿಗಾಗಿ ಹಾಡಲೆಂದು ಹಳ್ಳಿಗರು ಇವರನ್ನು ಆಹ್ವಾನಿಸಿದಾಗ, ಇವರು ತಮ್ಮ ಪಟ್ಟಣದಲ್ಲಿಯ ಕಾರ್ಯಕ್ರಮಗಳಿಂದಾಗಿ ಹಳ್ಳಿಗರ ಮನೆಗಳಿಗೆ ಹೋಗಲಾರದಂತಹ ಪ್ರಸಂಗಗಳು ನಡೆಯುತ್ತವೆ. ಬೇಸತ್ತ ಹಳ್ಳಿಗರು ಈ ದಂಪತಿಗಳನ್ನು ಜಾತ್ರೆಯಿಂದ ದೂರವಿಡುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಸಲದ ಪಾತಪ್ಪ ದೇವರ ಜಾತ್ರೆಗೆ ಈ ದಂಪತಿಗಳ ಬದಲಾಗಿ, ಹಾಡು ಬಲ್ಲ ಮತ್ತೊಬ್ಬನನ್ನು ಕರೆಯುತ್ತಾರೆ. ಮಾದಪ್ಪ ಹಾಗು ಪಾತಮ್ಮ ಇವರಿಗೆ ಎಲ್ಲಿಯೂ ನೆಲೆ ಇಲ್ಲದಂತಾಗುತ್ತದೆ. ತಮ್ಮ ತಪ್ಪನ್ನು ಅರಿತ ಈ ದಂಪತಿಗಳು ಸಮಸ್ತ ಹಳ್ಳಿಗಳ ದೈವದವರಿಗೆ ದೈನ್ಯದಿಂದ ಮೊರೆ ಇಡುತ್ತಾರೆ. ಆದರೆ ಅದಕ್ಕೆ  ದೈವದವರು ಒಪ್ಪುವದಿಲ್ಲ. ಕೊನೆಗೂ ಈ ದಂಪತಿಗಳು ತಮ್ಮ ತಪ್ಪಿಗೆ ಪಶ್ಚಾತ್ತಾಪರೂಪದಲ್ಲಿ ದೇವರ ಹಾಡು ಹೇಳಲು ಅಲ್ಲಿಗೆ ಬರದೆ ಬಿಡುವದಿಲ್ಲ.  ನಗರ ಸಂಸ್ಕೃತಿಯ  ವಿಷವು ಈ ಮುಗ್ದ ಗ್ರಾಮೀಣರನ್ನು ಬಲಿ ತೆಗೆದುಕೊಂಡ ಬಗೆಯನ್ನು ನುಗಡೋಣಿಯವರು ಈ ಕತೆಯಲ್ಲಿ ಚಿತ್ರಿಸಿದ್ದಾರೆ.
…………………………………………………….
ಜಮೀನುದಾರಿಕೆಯ ವ್ಯವಸ್ಥೆಯಲ್ಲಿ ಶೋಷಣೆಯಿದ್ದರೂ ಸಹ, ಜಮೀನುದಾರನಿಗೆ ಹಾಗೂ ಆತನ ಆಳುಗಳಿಗೆ ವೈಯಕ್ತಿಕ ಹಾಗೂ ಮುಖಾಮುಖಿ ಸಂಬಂಧವಿರುತ್ತಿತ್ತು. ಜಮೀನುದಾರಿಕೆಯ ಬದಲಾಗಿ ಈಗ ಗಣಿಗಾರಿಕೆ ಬಂದಿದೆ. ಜಮೀನುದಾರಿಕೆಗಿಂತಲೂ ಹೆಚ್ಚು ಕ್ರೂರವಾದ ವ್ಯವಸ್ಥೆಯಿದು. ಇಲ್ಲಿ ಶೋಷಕನ ಅಪಾರವಾದ ಧನಬಲದ ಎದುರಿಗೆ ಶೋಷಿತನು ಮುಖವಿಲ್ಲದ ಗುಲಾಮ. ಶೋಷಕರ ಇಂತಹ ಬಕಾಸುರ ರೂಪವನ್ನು ತೋರಿಸುವ  ಕತೆ : “ಒಡಲುಗೊಂಡವರು”.

ಹಳ್ಳಿಯೊಂದರಲ್ಲಿ ಘನತೆಯಿಂದ ಬಾಳಿದ ಕೆಳವರ್ಗದ ಕುಟುಂಬವೊಂದರ ಯಜಮಾನ ತನ್ನ ಒಬ್ಬ ಮಗಳನ್ನು ದೇವರಿಗೆ ಬಿಟ್ಟಿದ್ದಾನೆ. ಅವನ ಕಾಲ ಈಗ ಮುಗಿದಿದೆ. ಹಳ್ಳಿಯ ದುಡಿಮೆಯಿಂದ ಹೊಟ್ಟೆ ತುಂಬದ ಕಾರಣದಿಂದ ಈತನ ಒಬ್ಬ ಮಗ ಹಾಗು ಸೊಸೆ ದುಡಿಯಲು ಗೋವಾಕ್ಕೆ ಹೋಗಿದ್ದಾರೆ. ಈತನ ನಿಧನದ ನಂತರ ಈತನ ಮುದುಕಿ ಹೆಂಡತಿ ತನ್ನ ಕೊನೆಯ ಮಗ ಹರಿಶ್ಚಂದ್ರನ ಜೊತೆಗೆ ಇದ್ದಾಳೆ. ಮಗಳ ಮಗಳಾದ ರೇಣುಕಾಳನ್ನು ಈತ ಮದುವೆ ಮಾಡಿಕೊಳ್ಳಲಿ ಎನ್ನುವದು ಮುದುಕಿಯ ಹಾಗು ಹಿರಿಸೊಸೆಯ ಆಸೆ.  ಹರಿಶ್ಚಂದ್ರನಾದರೋ ಗಣಿದಣಿಗಳ ವಿರುದ್ಧದ ಚಳುವಳಿಯಲ್ಲಿ ಭಾಗವಹಿಸುತ್ತ ಯೂನಿಯನ್ ನಾಯಕರೊಡನೆ ತಿರುಗುತ್ತಿರುತ್ತಾನೆ.  ಇತ್ತ ಮೊಮ್ಮಗಳು ರೇಣುಕಾ ಸಹ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ನಗರದಲ್ಲಿ  ನೌಕರಿಯನ್ನು ಮಾಡುತ್ತಿರುತ್ತಾಳೆ.

ಸಾಯಲಾಗಿದ್ದ ಮುದುಕಿಗೆ ತನ್ನ ಗಂಡನ ಸಮಾಧಿಯ ಪಕ್ಕದಲ್ಲೇ ಮಣ್ಣಾಗುವ ಆಸೆ. ಆದರೆ, ಹರಿಶ್ಚಂದ್ರ ತನ್ನ ಬಂಧುಗಳಾರಿಗೂ ತಿಳಿಯದಂತೆ ಆ ಜಮೀನನ್ನು ಗಣಿಗಾರಿಕೆಗೆ ಮಾರಿಕೊಂಡು ದುಡ್ಡು ಎತ್ತಿ ಹಾಕಿ ಬಿಟ್ಟಿದ್ದಾನೆ. (ಅಹಾ, ಹರಿಶ್ಚಂದ್ರ!) ತನ್ನ ಅವ್ವ ಸತ್ತರೆ ಮಣ್ಣು ಮಾಡಲು ಜಾಗವಿಲ್ಲದ್ದಕ್ಕಾಗಿ ಈತ ಗಣಿಧಣಿಯ ಕಾಲು ಕಟ್ಟಿಕೊಳ್ಳುವದು ಅನಿವಾರ್ಯವಾಗಿದೆ. ಬಡತನದಿಂದಾಗಿ ವ್ಯವಸ್ಥೆಯ ವಿರುದ್ದ ಹೋರಾಡಲಾಗದೆ, ಈತ ಬದುಕಿನಲ್ಲಿ ‘ರಾಜೀ’ ಮಾಡಿಕೊಳ್ಳುತ್ತಲೇ ಇದ್ದಾನೆ.

ಇತ್ತ ರೇಣುಕಾ ಸಹ ತನ್ನ ನೌಕರಿಗಾಗಿ ‘ಸಹಾಯದಾತರ’ ಜೊತೆಗೆ  ರಾಜಿ ಮಾಡಿಕೊಂಡಾಗಿದೆ. ಇಂಥವಳೊಡನೆ ಮದುವೆಯಾಗಲು ಹರಿಶ್ಚಂದ್ರ ಸಿದ್ಧನಿಲ್ಲ. ಅವನಂತಹ ವಂಚಕನೊಡನೆ ಮದುವೆಯಾಗಲು ಅವಳೂ ಸಿದ್ಧಳಿಲ್ಲ.
ಧನಬಲದ ಎದುರು ಬಡವರ ನೈತಿಕತೆ, ಹೋರಾಟ ಹೇಗೆ ಕರಗಿ ಹೋಗುತ್ತದೆ, ಅವರ ಕುಟುಂಬಗಳು ಹೇಗೆ ಒಡೆದು ನುಚ್ಚುನೂರಾಗುತ್ತವೆ ಎನ್ನುವ ಚಿತ್ರಣ ಈ ಕತೆಯಲ್ಲಿದೆ.
..........................................................................................
ಗ್ರಾಮಸಂಸ್ಕೃತಿಯ ವಿನಾಶವು ಅಮರೇಶ ನುಗಡೋಣಿಯವರ ಕತೆಗಳ motif ಎನ್ನಬಹುದು. ಬಳ್ಳಾರಿಯಲ್ಲಿ ನಡೆದಿರುವ ಗಣಿಗಾರಿಕೆಯಿಂದಾಗಿ ಅಲ್ಲಿಯ ಹಳ್ಳಿಗರ ಕೌಟಂಬಿಕ ಜೀವನ ಹೇಗೆ ಛಿದ್ರವಾಗುತ್ತಿದೆ ಹಾಗು ಪರಂಪರಾಗತ ಗ್ರಾಮೀಣ ಸಂಸ್ಕೃತಿ ಹೇಗೆ ಹುಳಹತ್ತಿ ಹೋಗುತ್ತಿದೆ ಎನ್ನುವ ಚಿತ್ರಣವನ್ನು“ದಾಳಿ ನಡೆದಾವೋ ಅಣ್ಣಾ”  ಕತೆಯಲ್ಲಿ ಕಾಣಬಹುದು :

ಚಿಕ್ಕ ಹಳ್ಳಿಯೊಂದರಲ್ಲಿ ಒಕ್ಕಲುತನ ಮಾಡುತ್ತ ಬದುಕು ಸಾಗಿಸುತ್ತಿರುವ  ರೈತ ಮಲ್ಲಯ್ಯನಿಗೆ ತಾನು, ತನ್ನ ಪರಿಸರ ಹಾಗೂ ತನ್ನ ದೈವ ಮೈಲಾರಲಿಂಗ ಇವರಲ್ಲಿ ಭಿನ್ನತೆಯೇ ಇಲ್ಲ. ಈತನ ಎರಡು ಎತ್ತುಗಳಲ್ಲಿ ಒಂದರ ಹೆಸರು ಮಲ್ಲಯ್ಯ ; ಮತ್ತೊಂದರ ಹೆಸರು ಮೈಲಾರ.ಈತನ ತುಂಡು ಹೊಲ ಹಾಗೂ ಗುಡಿಸಿಲಿನ ನಡುವಿನ ಶಿವನಕೊಳ್ಳದಲ್ಲಿ ಒಂದು ಹಳ್ಳ  ಹರಿದಿದೆ. ಒಮ್ಮೆ ಹಳ್ಳ ದಾಟುವಾಗ ಏಕಾಏಕಿ ಪ್ರವಾಹ ಬಂದಾಗ ಈತ ಮೈಲಾರನ ಬಾಲ ಹಿಡಿದುಕೊಂಡೇ  ಹಳ್ಳ ದಾಟಿದ್ದಾನೆ. ಆದರೆ ಮತ್ತೊಂದು ಎತ್ತು ಮಲ್ಲಯ್ಯ ಆ ದುರ್ಘಟನೆಯಲ್ಲಿ ಜೀವ ನೀಗಿತು. ಅಂದಿನಿಂದ ಮಲ್ಲಯ್ಯ ಗಳೇ ಹೂಡಲಿಲ್ಲ.
ಮಲ್ಲಯ್ಯನ ಮಗಳು ಹುಲುಗಮ್ಮ ತನ್ನ ಗಂಡ ಹಾಗೂ ಮಕ್ಕಳೊಡನೆ ತಾಲೂಕು ಸ್ಥಾನದಲ್ಲಿದ್ದಾಳೆ. ಅವಳ ಗಂಡ ಕಾರಖಾನೆಯಲ್ಲಿ ದುಡಿಯುತ್ತಿದ್ದಾನೆ. ಕೆಲಸ ಮಾಡದ ಮಗ ಮೈಲಾರನದೇ ಚಿಂತೆ ಮಲ್ಲಯ್ಯನಿಗೆ. ಗಣಿದಣಿಗಳಿಗೆ ಹೊಲ ಮಾರುವಂತೆ ಮಲ್ಲಯ್ಯ ತನ್ನ ಅಪ್ಪ ಮೈಲಾರನನ್ನು ಪೀಡಿಸುತ್ತಿದ್ದಾನೆ. ಕೊನೆಗೊಮ್ಮೆ ಮಗ ಮನೆಯಿಂದ ಕಾಣದಾದ. ಲಾರಿ ಡ್ರೈವರ ಆಗಿದ್ದಾನೆ ಎಂದು ನೋಡಿದವರು ಹೇಳಿದರು. ಮಗನನ್ನು ನೋಡಲು ಅವನ ತಾಯಿ ನೀಲವ್ವ ಇಡೀ ದಿನವೆಲ್ಲ ಹೆದ್ದಾರಿಯ ಮೇಲೆ ಕಾಯುತ್ತ ನಿಂತಳು. ಬರುವ, ಹೋಗುವ ಲಾರಿಗಳಿಗೆಲ್ಲ ಕೈ ಮಾಡುತ್ತ ನಿಂತಳು. ತನ್ನನ್ನು ಕಂಡರೆ ಮಗ ನಿಲ್ಲಿಸದೆ ಹೋಗಲಾರ ಎನ್ನುವ ಭಾವನೆ ಅವಳದು. ಆದರೆ ಮಗ ಸಿಕ್ಕಿದ್ದು ಹೆಣವಾಗಿ.
ಇತ್ತ ಅಳಿಯ ಕೆಲಸ ಮಾಡುತ್ತಿದ್ದ ಕಾರಖಾನೆ ಮುಚ್ಚಿದ್ದರಿಂದ ಮಗಳ ಬಾಳುವೆಯೂ ಹದಗೆಟ್ಟಿತು. ಮಗಳೂ ಸಹ ಹೊಲ ಮಾರಿಕೊಂಡು ತನ್ನೊಡನೇ ಬಂದು ಇರು ಎಂದು ಅಪ್ಪನಿಗೆ ಹೇಳಿದಳು. ಆದರೆ ಮಲ್ಲಯ್ಯನಿಗೆ ಹೊಲ ಎಂದರೆ ಉಪಜೀವನದ ಸಾಧನ ಅಲ್ಲ ; ಅದೇ ಅವನ ಜೀವನ. ಆದರೆ ಅವನ ಈ ಜೀವನದ ದಾರಿಯನ್ನು ಸಹ ಸರಕಾರದವರು ಮುಚ್ಚಿ ಬಿಟ್ಟಿದ್ದಾರೆ. ತನ್ನ ಹೊಲಕ್ಕೆ ಹೋಗುವ ದಾರಿಯಾದ ಶಿವನಕೊಳ್ಳ ಇಲ್ಲಿಯವರೆಗೂ ಈ ಹಳ್ಳಿಗರ  ನಿತ್ಯಜೀವನದ ಒಂದು ಭಾಗವಾಗಿತ್ತು. ಸರಕಾರವು ಅದನ್ನೀಗ ‘ರೆಸಾ^ರ್ಟ’ ಮಾಡಲು ಯಾರೋ ಖಾಸಗಿಯವರಿಗೆ ನೀಡಿದೆ.

ಅಂತಹ ಮಲ್ಲಯ್ಯನ ಶಿವನಕೊಳ್ಳ ಈಗ ಏನಾಗಿದೆ?
ಮಲ್ಲಯ್ಯನ ಊರ ಜನ ಈಗ ಏನಾಗಿದ್ದಾರೆ?

ಮಲ್ಲಯ್ಯ ಈಗ ಬಳಸುದಾರಿ ಹಿಡಿದು ತನ್ನ ಹೊಲಕ್ಕೆ ಹೋಗಬೇಕು. ಅಲ್ಲಿಂದ ನೋಡಿದಾಗ ಮೈಲಾರಲಿಂಗನ ಬೆಟ್ಟವೆಲ್ಲ ವಿಕಾರಗೊಂಡಿತ್ತು. ಧೂಳಿನಿಂದಾಗಿ ಹಕ್ಕಿಗಳು ದೇಶಾಂತರ ಹೋಗಿದ್ದವು. ಬೆಳೆ ಕುಂಠಿತವಾಗಿತ್ತು. ಹಳ್ಳದ ನೀರು ಕಲುಷಿತವಾಗಿತ್ತು. ನೀರು ಕುಡಿದ ಕೆಲವು ಜಾನುವಾರುಗಳು ಸತ್ತಿದ್ದವು.

ಮಲ್ಲಯ್ಯ ಹಿಂಬದಿಯ ಬೆಟ್ಟ ಹತ್ತಿ ತನ್ನ ಹೊಲಕ್ಕೆ ಬಂದ. ಹೊಲ ಈಗ ಹದಗೊಂಡಿತ್ತು.
ಒಂದು ಮಳೆಯಾದರೆ ಸಾಕು , ಬಿತ್ತಿಗೆ ಮಾಡಬಹುದು ಎಂದುಕೊಂಡ.
ಆದರೆ, ಅವನ ಹೊಲ ಅಲ್ಲಿ ಎಲ್ಲಿತ್ತು?

ಮಲ್ಲಯ್ಯನ ಸಮಸ್ತ ಪ್ರಪಂಚವೇ ಮುಳುಗಿ ಹೋದಂತಾಯಿತು.

ಊಳಿಗಮಾನ್ಯ ಕೃಷಿ ಸಂಸ್ಕೃತಿ ಈಗ ನಮ್ಮ ನಾಡಿನಿಂದ ಮಾಯವಾಗಿರಬಹುದು. ಆದರೆ ಅದಕ್ಕಿಂತ ಭಯಂಕರವಾದ ‘ಹಣ ಸಂಸ್ಕೃತಿ’ ನಮ್ಮ ಸಮಾಜದ ಸತ್ವವನ್ನು ಹಿಂಡಿ ಹಾಕಿದೆ. ಈ ಸಂಸ್ಕೃತಿಯಲ್ಲಿ ಉಳ್ಳವರು ಅನೈತಿಕ ಬಕಾಸುರರಾಗಿದ್ದರೆ, ಇಲ್ಲದವರು faceless zombieಗಳಾಗಿದ್ದಾರೆ. ತಮ್ಮ ಕತೆಗಳ ಮೂಲಕ ಅಮರೇಶ ನುಗಡೋಣಿಯವರು ಈ ದುಷ್ಟ ಸಂಸ್ಕೃತಿಯ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ.

ಒಂದು ಟಿಪ್ಪಣಿ:
ಇಬ್ಬರು ಸಮಕಾಲೀನ ಲೇಖಕರ ಸಾಹಿತ್ಯವನ್ನು ತುಲನೆ ಮಾಡುವದು ಸಾಧುವಲ್ಲ. ಆದರೂ ಸಹ ಕನ್ನಡದ ಇಬ್ಬರು ಶ್ರೇಷ್ಠ ಕತೆಗಾರರಾದ ಅಮರೇಶ ನುಗಡೋಣಿ ಹಾಗು ವಸುಧೇಂದ್ರ ಇವರ ಕತೆಗಳಲ್ಲಿಯ ಸಾಮ್ಯ ಹಾಗು ವೈಷಮ್ಯಗಳ ಬಗೆಗೆ ಒಂದೆರಡು ಸಾಲು ಬರೆಯಲು ತುಂಬಾ temptation ಆಗುತ್ತಿದೆ.

ಇವರಿಬ್ಬರೂ ಲೇಖಕರ ಬಹುತೇಕ ಕತೆಗಳು  ಶೋಷಣೆಯ ಬಗೆಗೆ ಇವೆ. ನುಗಡೋಣಿಯವರ ಕತೆಗಳು ಗ್ರಾಮೀಣ ಹಿನ್ನೆಲೆ ಹೊಂದಿದಂತಹವು;ವಸುಧೇಂದ್ರರ ಬಹುತೇಕ ಕತೆಗಳಿಗೆ ನಗರದ ಹಿನ್ನೆಲೆ ಇದೆ. ನುಗಡೋಣಿಯವರ ಕತೆಗಳ ಪಾತ್ರಗಳು so called ಕೆಳವರ್ಗದ ಪಾತ್ರಗಳು; ವಸುಧೇಂದ್ರರ ಕತೆಗಳಲ್ಲಿ ಕಾಣುವವರು so called ಮೇಲುವರ್ಗದ ಪಾತ್ರಗಳು. ವಸುಧೇಂದ್ರರ ಕತೆಗಳಲ್ಲಿ ಕೌಟಂಬಿಕ ಚೌಕಟ್ಟಿದೆ; ನುಗಡೋಣಿಯವರ  ಕತೆಗಳಿಗೆ ಸಾಮಾಜಿಕ ಚೌಕಟ್ಟಿದೆ. ವಸುಧೇಂದ್ರರ ಕತೆಗಳಲ್ಲಿ ಶೋಷಿತ ವ್ಯಕ್ತಿಗಳು ಶೋಷಣೆಯಲ್ಲಿಯೂ ಸಹ ವೈಯಕ್ತಿಕ ಗೆಲವನ್ನು ಸಾಧಿಸಿದವರು. ನುಗಡೋಣಿಯವರ ಪಾತ್ರಗಳು ದುರಂತ ಪಾತ್ರಗಳು. ವಸುಧೇಂದ್ರರ ಶೈಲಿಯಲ್ಲಿ ರಂಜನೆಯ ಅಂಶವಿದೆ; ನುಗಡೋಣಿಯವರದು ಗಂಭೀರ ಶೈಲಿ.

ಒಟ್ಟಿನಲ್ಲಿ, ಅಮರೇಶ ನುಗಡೋಣಿ ಹಾಗು ವಸುಧೇಂದ್ರ ಇವರೀರ್ವರು ಇಂದಿನ ಕನ್ನಡ ಕಥಾಸಾಹಿತ್ಯದ ಶ್ರೇಷ್ಠ ಪ್ರತಿನಿಧಿಗಳು ಎನ್ನಬಹುದು.

Sunday, November 8, 2009

"ತಮಂಧದ ಕೇಡು"----ಲೇ: ಅಮರೇಶ ನುಗಡೋಣಿ

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ ೧೯೬೦ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು.

ಊಳಿಗಮಾನ್ಯಸಂಸ್ಕೃತಿಯ ಮೂಲರೂಪ ಅರ್ಥಾತ್ classical model of feudal structure ಇದರ ಮುಖ್ಯ ಗುಣವೆಂದರೆ, ಶೋಷಿತನು ತನ್ನ ತನು ಹಾಗು ಮನವನ್ನಷ್ಟೇ ಅಲ್ಲ, ತನ್ನ ಆತ್ಮವನ್ನೂ ಸಹ ತನ್ನ ಯಜಮಾನನ ಊಳಿಗಕ್ಕೆ ಬೇಶರತ್ತಾಗಿ ಒಪ್ಪಿಸಿಬಿಟ್ಟಿರುತ್ತಾನೆ. ಇದಕ್ಕೆ ಪ್ರತಿಯಾಗಿ ಯಜಮಾನನು ದರ್ಪ, ದಬ್ಬಾಳಿಕೆ ಹಾಗು ಸರ್ವಸ್ವಾಮಿತ್ವವನ್ನು ಪ್ರದರ್ಶಿಸುತ್ತಾನೆ. ಇಂತಹ ತಮಂಧದ ಕೇಡಿನಿಂದ ಹೊರಬರಬೇಕಾದರೆ ಶಿಕ್ಷಣದ ಬೆಳಕು ಬೇಕು. ಆದರೆ ಈ ವ್ಯವಸ್ಥೆಯು ಅಂತಹ ಶಿಕ್ಷಿತ ಪ್ರತಿಭಟನಾಕಾರರನ್ನೂ ಸಹ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿ ಬಿಡುತ್ತದೆ.

ನುಗಡೋಣಿಯವರ "ತಮಂಧದ ಕೇಡು" ಎನ್ನುವ ಕತೆಯಲ್ಲಿ ದುರುಗ ಎನ್ನುವ ಜೀತದಾಳಿನ ದುಃಸ್ವಪ್ನದೊಂದಿಗೆ ಕತೆ ಪ್ರಾರಂಭವಾಗುತ್ತದೆ. ತನ್ನ ಒಡೆಯನಾದ ಶಾಂತಗೌಡನ ಜಮೀನಿನಲ್ಲಿರುವ ಎರಡು ದೊಡ್ಡ ಮರಗಳ ನಡುವೆ ಜೋಪಡಿ
ಹಾಕಿಕೊಂಡು, ದುರುಗ ತನ್ನ ಹೆಂಡತಿ ಚಂದವ್ವ ಹಾಗು ಜೋಳಿಗೆ ಕೂಸು ಚೆನ್ನಮಲ್ಲಪ್ಪನೊಂದಿಗೆ ಬದುಕು ಸಾಗಿಸುತ್ತಿದ್ದಾನೆ.
ಒಡೆಯನಿಗೆ ನಿಷ್ಠೆಯಿಂದ ದುಡಿಯುವದರಿಂದ ದುರುಗ ಶಾಂತಗೌಡನ ನೆಚ್ಚಿನ ಆಳಾಗಿದ್ದಾನೆ. ಶಾಂತಗೌಡ ‘ದುರುಗಾ’ ಎಂದು ಕೂಗಿದಾಗ, ದುರುಗನಿಗೆ ಇದು ಪುಣ್ಯದ ಕರೆಯಂತೆ ಕೇಳಿಸುವಷ್ಟು ಈತ ಶಾಂತಗೌಡನ ದಾಸನಾಗಿದ್ದಾನೆ.

ಇಂತಹ ದುರುಗನ ಚಂದದ ಹೆಂಡತಿ ಚಂದಮ್ಮನ ಮೇಲೆ ಶಾಂತಗೌಡನಿಗೆ ಮನಸ್ಸಾಗುತ್ತದೆ.

ಚಂದಮ್ಮ ತನ್ನ ದಣಿಗೆ ಪ್ರತಿಭಟನೆ ಇಲ್ಲದೆ ವಶವಾದಳು. ಆದರೆ ಈ ಕೆಂಡವನ್ನು ಮನದಲ್ಲಿಯೇ ಇಟ್ಟುಕೊಂಡಿರಲು ಅವಳಿಂದ ಸಾಧ್ಯವಾದೀತೆ? ಕೊನೆಗೊಮ್ಮೆ ತನ್ನ ಗಂಡ ದುರುಗನೆದುರಿಗೆ ಅವಳು ತನ್ನ ಸಂಕಟವನ್ನು ಬಿಚ್ಚಿಟ್ಟಳು. ದುರುಗನಾದರೋ ತನ್ನ ತನು, ಮನಗಳನ್ನು ತನ್ನ ದಣಿಗೆ ಒಪ್ಪಿಸಿಬಿಟ್ಟ ಊಳಿಗದಾಳು. ಆತ ಏನು ಮಾಡಿಯಾನು?
ತಪ್ಪು ಮಾಡಿದವನು ದಣಿ. ಆದರೆ ದುರುಗನೇ ಆತನ ಕಾಲಿಗೆ ಬಿದ್ದು ಅತ್ತು ಬಿಡುತ್ತಾನೆ! ತನ್ನ ಹೆಂಡತಿಯನ್ನು ಮರಳಿ ಕರೆ ತರುತ್ತಾನೆ. ಶಾಂತಗೌಡ ದಣಿಯ ಹಕ್ಕನ್ನು ದುರುಗನ ಹೆಂಡತಿಯ ಮೇಲೆ ಮರುಸ್ಥಾಪಿಸುತ್ತಾನೆ. ಇಷ್ಟಾದರೂ ದುರುಗ ಆ ಹಳ್ಳಿಯನ್ನು ಬಿಟ್ಟು, ತನ್ನ ದಣಿಯನ್ನು ಬಿಟ್ಟು ಬೇರೆಲ್ಲೂ ಹೋಗುವದಿಲ್ಲ! ಯಾಕೆಂದರೆ ಆತ ತನ್ನ ದಾಸ್ಯತ್ವವನ್ನು ಕಾಯಾ, ವಾಚಾ, ಮನಸಾ ಒಪ್ಪಿಕೊಂಡು ಬಿಟ್ಟಿದ್ದಾನೆ.
ಇತ್ತ ಚಂದಮ್ಮನೂ ಬಹಳ ದಿನ ಬದುಕುವದಿಲ್ಲ. ದುರುಗನ ಮಗ ಊರ ಮಗನಾಗಿ ಬೆಳೆದವನು ಹೆಚ್ಚಿನ ಕಲಿಕೆಗಾಗಿ ಶಹರಕ್ಕೆ ಹೋಗುತ್ತಾನೆ. ಯಜಮಾನ ಶಾಂತಗೌಡ ತನ್ನ ನೆಚ್ಚಿನ ಬಂಟನ ಮಗನ ಶಿಕ್ಷಣಕ್ಕೆ ಉದಾರವಾಗಿ ನೆರವು ನೀಡುತ್ತಾನೆ. ಚೆನ್ನಮಲ್ಲಪ್ಪ ಆ ಶಹರದ ಶಾಲೆಯಲ್ಲಿಯೇ ಶಿಕ್ಷಕನಾಗುತ್ತಾನೆ.

ಶಾಂತಗೌಡನ ಒಬ್ಬಳೇ ಸಂತಾನವಾದ ಅಕ್ಕಮಹಾದೇವಿ ಕಲಿಯಲೆಂದು ಶಹರದಲ್ಲಿಯೇ ಇದ್ದವಳು ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗುತ್ತಾಳೆ. ಈ ಆಘಾತಕಾರಿ ಸುದ್ದಿ ತನಗೆ ಬಂದು ಮುಟ್ಟಿದೊಡನೆಯೆ ದುರುಗ ನಿರ್ವಿಣ್ಣನಾಗಿ ತನ್ನ ಮಗನಿಗೆ ಬುದ್ಧಿ ಹೇಳುತ್ತಾನೆ. ಆ ಬುದ್ಧಿಮಾತಿನಲ್ಲೂ ಸಹ ಆತನ ದಾಸ್ಯಭಾವ ಹೇಗೆ ಮೇಲುಗೈಯಾಗಿದೆಯೆನ್ನುವದನ್ನು ನೋಡಿರಿ:


"ನನ್ಗ ಇಲ್ಲಿ ಬುಡಾದ ನಂಟದ" ಎಂದು ಹೇಳುವ ದುರುಗನಿಗೆ ಇರುವ ನಂಟು ಎಂತಹದು? ದುರುಗ ಇರುತ್ತಿದ್ದ ಮರಗಳ ನಡುವಿನ ಜೋಪಡಿ ಈಗಿಲ್ಲ. ಮರಮಟ್ಟುಗಳನ್ನು ಮಾಡಿಸಲು ಶಾಂತಗೌಡ ಆ ಮರಗಳನ್ನು ಕಡಿಸಿ ಹಾಕಿದ್ದಾನೆ. ದುರುಗನಿಗೆ ಹಾಗೂ ನೂರಾರು ಹಕ್ಕಿಗಳಿಗೆ ಆಸರೆಯಾಗಿದ್ದ ಆ ಮರಗಳು, ಯಜಮಾನಿಕೆಯ ಉಪಭೋಗಕ್ಕಾಗಿ ನಷ್ಟವಾಗಿವೆ. ದುರುಗ ಹಾಗು ಆ ಮರಗಳ ನಡುವೆ ಭಾವನಾತ್ಮಕ ಸಂಬಂಧವಿತ್ತು. ದುರುಗ ದೈನಾಸಪಡುತ್ತ ಆ ಮರಗಳನ್ನು ಉಳಿಸಲು ಶಾಂತಗೌಡನಿಗೆ ಬೇಡಿಕೊಳ್ಳುವದು ಹೀಗೆ:
ಇದಕ್ಕೆ ಪ್ರತಿಯಾಗಿ ಶಾಂತಗೌಡನಲ್ಲಿರುವದು ದರ್ಪ ಹಾಗು ಸಿಟ್ಟಿನ ಸ್ವಭಾವ. ಎಲ್ಲವೂ ತನಗಾಗಿಯೇ, ತನ್ನ ಉಪಭೋಗಕ್ಕಾಗಿಯೇ ಇರುವದು ಎನ್ನುವ ಅಹಂಭಾವ. (‘ಶಾಂತಗೌಡ’ ಎನ್ನುವ ಹೆಸರಿನ ಅಸಂಗತತೆಯನ್ನು ಗಮನಿಸಿರಿ.) ದುರುಗನ ಮೇಲಿನ ತನ್ನ ಸಿಟ್ಟನ್ನು ಆತ ಇತರ ಆಳುಗಳ ಮೇಲೆ ಹಾಗು ಜಾನುವಾರುಗಳ ಮೇಲೆ ತಿರುಗಿಸುವದರ ವರ್ಣನೆ ಹೀಗಿದೆ:

ಶಾಂತಗೌಡ ಹೊಳೆಯ ಈಚೆಯ ಹಳ್ಳಿಯಲ್ಲಿದ್ದರೆ, ಹೊಳೆಯ ಆಚೆಯ ಬದಿಯಲ್ಲಿ ಅವನ ಅಕ್ಕ ಇದ್ದಾಳೆ. ವಿಧವೆಯಾದ ಮೇಲೆ
ತಾನೇ ಜಮೀನುದಾರಿಕೆಯನ್ನು ಗೌಡತಿಯ ಎಲ್ಲಾ ಗತ್ತಿನೊಂದಿಗೆ ನಡೆಯಿಸಿಕೊಂಡು ಹೋಗುತ್ತಿದ್ದಾಳೆ. ಸೇತುವೆ ಇಲ್ಲಿ ಇಲ್ಲದ್ದರಿಂದ ದುರುಗನೇ ಶಾಂತಗೌಡನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊಳೆ ದಾಟಿಸುತ್ತಿದ್ದ.

ಶಾಂತಗೌಡನ ಮಗಳನ್ನು ತನ್ನ ಸೊಸೆಯನ್ನಾಗಿ ಮಾಡಿಕೊಂಡರೆ, ತಮ್ಮನ ಆಸ್ತಿ ಎಲ್ಲ ತನಗೇ ಬರುವದೆನ್ನುವ ಒಳ ಆಸೆ ಈ ಅಕ್ಕನಿಗಿದೆ. ಆದರೆ ಅಕ್ಕಮಹಾದೇವಿ ಊಳಿಗದ ಆಳಾದ ದುರುಗನ ಮಗ ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗಿದ್ದಾಳೆ. ಶಾಂತಗೌಡನು ದುರುಗನ ಹೆಗಲ ಮೇಲೆ ಸವಾರಿ ಮಾಡಿಕೊಂಡು, ಹೊಳೆ ದಾಟಿ ತನ್ನ ಅಕ್ಕನಿದ್ದಲ್ಲಿಗೆ ಬಂದು ಅವಳೊಡನೆ ಈ ಸಮಸ್ಯೆಯ ಬಗೆಗೆ ಆಪ್ತಾಲೋಚನೆ ಮಾಡುತ್ತಾನೆ.

ಯಜಮಾನಸಂಸ್ಕೃತಿಯ ಪಟ್ಟದಲ್ಲಿರುವ ವ್ಯಕ್ತಿಗೆ ತನ್ನ ಪಟ್ಟದ ಭದ್ರತೆಯೊಂದೇ ಮುಖ್ಯ. ಸ್ವಾರ್ಥಸಾಧನೆಯ ಕ್ರೌರ್ಯ ಈ ವ್ಯಕ್ತಿಯ ಅಂತರಾಳದಲ್ಲಿ ಲಿಂಗಭೇದವಿಲ್ಲದೇ ಹುದುಗಿರುತ್ತದೆ. ತನ್ನ ತಮ್ಮನಿಗೆ ಅವಳು ಕೊಡುವ ಸಲಹೆಯು ಅವಳ ತಮ್ಮನನ್ನೂ ಸಹ ಒಂದು ನಿಮಿಷ ನಡುಗಿಸಿ ಬಿಡುತ್ತದೆ:
ಶಾಂತಗೌಡ ಹಳ್ಳಿಗೆ ಮರಳುವಾಗ ಮತ್ತೆ ದುರುಗನ ಮೇಲೆ ಸವಾರಿ ಮಾಡಿ ಹೊಳೆ ದಾಟಬೇಕು. ಹೊಳೆ ದಾಟುವಾಗ ತನ್ನ ದಣಿಯನ್ನು ಹೊಳೆಯಲ್ಲಿ ಮುಳುಗಿಸಿಬಿಡುವದು ದುರುಗನಿಗೆ ಸುಲಭವಾದ ಕೆಲಸ; ಆದರೆ ಸರಳವಾದ ಕೆಲಸವಲ್ಲ. ಯಾಕೆಂದರೆ ಜೀತದಾಳಾದ ಆತನು ತನ್ನ ಒಡೆಯನ ಕೇಡನ್ನು  ಕನಸುಮನಸಿನಲ್ಲೂ ಎಣಿಸಲಾರ. ದುರುಗನ ಮನದಲ್ಲಿ ನಡೆದ ತುಮುಲದ ವರ್ಣನೆಯನ್ನು ನುಗಡೋಣಿಯವರು ಈ ರೀತಿಯಾಗಿ ಮಾಡಿದ್ದಾರೆ:
ನುಗಡೋಣಿಯವರ ವೈಶಿಷ್ಟ್ಯವೆಂದರೆ, ಅವರು ಶೋಷಿತನ ಬವಣೆಯ ವರ್ಣನೆಗಿಂತ, ಶೋಷಣಾವ್ಯವಸ್ಥೆಯ ಚಿತ್ರಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಇಲ್ಲಿ ದರ್ಪವೇ ಮೂರ್ತಿವೆತ್ತ ಯಜಮಾನ ಹಾಗು ದಾಸ್ಯವೇ ಮೂರ್ತಿವೆತ್ತ ಊಳಿಗದಾಳನ್ನು ಕಾಣುತ್ತೇವೆ.
ಈ ಶೋಷಣಾವ್ಯವಸ್ಥೆಯಲ್ಲಿ ಯಜಮಾನನ ಮನೆತನಕ್ಕೊಬ್ಬ ಹಿತಚಿಂತಕ ಗುರುಗಳೂ ಇರುತ್ತಾರೆ. ಆದರೆ ಬುದ್ಧಿ ಹೇಳುವ ಶಕ್ತಿ ಅವರಿಗಿರುವದಿಲ್ಲ. ಇಂತಹ ಕತೆಗಳ ಅನಿವಾರ್ಯ ದುರಂತವನ್ನು ನಿರ್ಲಿಪ್ತ ಶೈಲಿಯಲ್ಲಿ ಚಿತ್ರಿಸುವದು ನುಗಡೋಣಿಯವರ ಹೆಗ್ಗಳಿಕೆ.

Wednesday, October 14, 2009

ಪತ್ರಿಕಾಪ್ರದೂಷಣ

ಉತ್ತರ ಕರ್ನಾಟಕದಲ್ಲಿ  ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಉದ್ದೇಶದಿಂದ ೧೯೩೩ನೆಯ ಇಸವಿಯಲ್ಲಿ , ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಬೆಳಗಾವಿಯಲ್ಲಿ ಪ್ರಾರಂಭವಾಯಿತು. ಅನೇಕ ವರ್ಷಗಳವರೆಗೆ ಈ ಪತ್ರಿಕೆಯು ತನ್ನ ಆದರ್ಶ ಮತ್ತು ಧ್ಯೇಯಗಳಿಗೆ ಅನುಸಾರವಾಗಿ ಅತ್ಯುತ್ತಮ ಕೆಲಸವನ್ನು ಮಾಡಿತು. ಈ ಪತ್ರಿಕೆಯ ಪೂರ್ವಕಾಲದ ಸಂಪಾದಕರಾದ ಮೊಹರೆ ಹಣಮಂತರಾಯರು, ಹ.ರಾ.ಪುರೋಹಿತರು ಹಾಗು ಸಂಪಾದಕವರ್ಗದಲ್ಲಿದ್ದ ಪಾ.ವೆಂ.ಆಚಾರ್ಯರು ಇವರೆಲ್ಲ ತಮ್ಮ ಶ್ರದ್ಧೆ ಹಾಗು ನಿಷ್ಠೆಯ ಪರಿಶ್ರಮದಿಂದ ಪತ್ರಿಕೆಯನ್ನು ಉನ್ನತ ಮಟ್ಟಕ್ಕೆ ತಲುಪಿಸಿದರು.

ಕನ್ನಡದಲ್ಲಿ ಪತ್ರಿಕೆಗಳು ಬಳಸಬಹುದಾದ ಪ್ರಮಾಣಿತ ಪದಗಳು ಇನ್ನೂ ಇರದಂತಹ ಆ ಸಮಯದಲ್ಲಿ ‘ಸಂಯುಕ್ತ ಕರ್ನಾಟಕ’ವು ಇಂತಹ ಪತ್ರಿಕಾಪದಗಳನ್ನು ಅಂದರೆ standard journalistic terminologyಯನ್ನು ರೂಪಿಸಿತು. ಇದು ಪತ್ರಿಕಾಭಾಷೆಗೆ ‘ಸಂಯುಕ್ತ ಕರ್ನಾಟಕ’ವು ನೀಡಿದ ದೊಡ್ಡ ಕೊಡುಗೆಯಾಗಿದೆ.

ಒಂದು ಕಾಲದಲ್ಲಿ ಪತ್ರಿಕೋದ್ಯಮವು ಲೋಕಶಿಕ್ಷಣದ ಸಾಧನವಾಗಿತ್ತು. ಇಂದು ಅದು ದೊಡ್ಡ ಉದ್ದಿಮೆಯಾಗಿದೆ. ಈ ಉದ್ದಿಮೆಯಲ್ಲಿ ಭಾಷೆಗೆ, ವ್ಯಾಕರಣಕ್ಕೆ ಅಥವಾ ಕಾಗುಣಿತಕ್ಕೆ ಏನೂ ಬೆಲೆ ಇಲ್ಲವೇನೋ ಎನ್ನುವ ಕಳವಳವು ‘ಸಂಯುಕ್ತ ಕರ್ನಾಟಕ’ದ ಓದುಗರನ್ನು ಬಾಧಿಸುತ್ತದೆ. ‘ಸಂಯುಕ್ತ ಕರ್ನಾಟಕ’ದ ನಿಯಮಿತ ಓದುಗನಾದ ನನಗೆ, ಈ ನನ್ನ ಪ್ರಿಯ ಪತ್ರಿಕೆಯಲ್ಲಿ ಐದು ನಮೂನೆಯ ತಪ್ಪುಗಳು ಕಂಡು ಬರುತ್ತಿವೆ. ಇವುಗಳನ್ನು ‘ಪತ್ರಿಕಾಪ್ರಪಂಚದ ಪಂಚ ಮಹಾಪಾತಕ’ಗಳು ಎಂದು ಕರೆದರೆ ತಪ್ಪಿಲ್ಲ. ಇದರಿಂದ ದುಃಖಿತನಾದ ನಾನು ನನ್ನ ಚಡಪಡಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನ್ನ ತಿಳಿವಳಿಕೆಯಲ್ಲಿಯೇ ತಪ್ಪಿದ್ದರೆ, ದಯವಿಟ್ಟು ನನ್ನನ್ನು  ತಿದ್ದಲು ಕೋರಿಕೊಳ್ಳುತ್ತೇನೆ.

(೧) ಕಾಗುಣಿತದ ತಪ್ಪುಗಳು:
ಕಾಗುಣಿತದ ತಪ್ಪುಗಳು ಅತ್ಯಂತ ಪ್ರಾಥಮಿಕ ತಪ್ಪುಗಳು. ಅಚ್ಚುಮೊಳೆಗಳನ್ನು ಜೋಡಿಸಿ ಪತ್ರಿಕೆಗಳನ್ನು ಮುದ್ರಿಸುವ ಕಾಲವೊಂದಿತ್ತು. ಅಂತಹ ಸಮಯದಲ್ಲಿಯೂ ಸಹ ಮುದ್ರಣದೋಷಗಳು ವಿರಳವಾಗಿದ್ದವು. ಗಣಕಯಂತ್ರದ ಬಳಕೆ ಮಾಡುವ ಈ ಕಾಲದಲ್ಲಿ ಕಾಗುಣಿತದ ತಪ್ಪುಗಳು ಹೇರಳವಾಗಿ ಕಂಡುಬರುವದು ಆಘಾತಕರವಾಗಿದೆ. ಒಂದು ಪರಿಚ್ಛೇದದಲ್ಲಿ ಅಥವಾ ಒಂದು ಪುಟದಲ್ಲಿ ಕಾಗುಣಿತದ ಎಷ್ಟು ತಪ್ಪುಗಳು ಕಂಡು ಬರಬಹುದು? ‘ಸಂಯುಕ್ತ ಕರ್ನಾಟಕ’ದ ಒಂದೇ ಪುಟದಲ್ಲಿ ನಾನು ಸ್ವೈಚ್ಛಿಕ ಅವಲೋಕನ ಮಾಡಿದಾಗ ಹನ್ನೊಂದು ತಪ್ಪುಗಳು ಕಂಡು ಬಂದವು. ಇವು ಅಚ್ಚಿನ ದೋಷಗಳಲ್ಲ ; ಆದರೆ ಕಾಗುಣಿತದ ತಪ್ಪುಗಳು ಎನ್ನುವ ಸಂಗತಿಯನ್ನು ನಾನು ವಿಷಾದಪೂರ್ವಕವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನಾನು ತಿಳಿದಂತಹ ಕೆಲವು ತಪ್ಪುಗಳನ್ನು ಉದಾಹರಣೆಗೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ. Standard News Paper ಎಂದು ಭಾವಿಸಲಾದ ಪತ್ರಿಕೆಯಲ್ಲಿ ಇಷ್ಟು ತಪ್ಪುಗಳು ಕಾಣಬಾರದು, ಅಲ್ಲವೆ?

ದಿನಾಂಕ                                ತಪ್ಪು                     ಒಪ್ಪು
೨೩--೯-೦೯                           ಸ್ಕೈಐವಿಂಗ್                   ಸ್ಕೈಡೈವಿಂಗ್
೨೩--೯-೦೯                           ಶೀಖರ                           ಶಿಖರ
೨೬-೯-೦೯                            ವಿಶಿಷ್ಠ                          ವಿಶಿಷ್ಟ
೨೬-೯-೦೯                            ದಿಕ್ಷಿತಲು                        ದೀಕ್ಷಿತರು
೨೬-೯-೦೯                            ಪ್ರೀಟಿ                            ಪ್ರೀತಿ
೨೬-೯-೦೯                            ನಿಗಧಿತ                          ನಿಗದಿತ
೨೬-೯-೦೯                             ಸ್ಕಂಧ್                         ಸ್ಕಂದ
೨೬-೯-೦೯                            ಮಾಲಿದ್ದಾರೆ                  ಮಾಡಲಿದ್ದಾರೆ
೨೬-೯-೦೯                            ಎದು                             ಎಂದು
೨೬-೯-೦೯                            ಪ್ರೊಬೆಷನರಿ                     ಪ್ರೊಬೇಷನರಿ
೨೬-೯-೦೯                             ಪರಿಶಿಷ್ಠ                        ಪರಿಶಿಷ್ಟ
೨೭-೯-೦೯                            ದಿಗ್ಭಂದನ                       ದಿಗ್ಬಂಧನ
೨೭-೯-೦೯                            ಹಲ್ಯೆಯನ್ನು                   ಹಲ್ಲೆಯನ್ನು
೨೭-೯-೦೯                            ಪರೀಶಿಲಿಸಿ                       ಪರಿಶೀಲಿಸಿ
೨೭-೯-೦೯                            ಘಂಟೇಪ್ಪನವರ                ಘಂಟೆಪ್ಪನವರ
೨೭-೯-೦೯                            ಅದಿಕಾರಿಗಳಲ್ಲಿ                 ಅಧಿಕಾರಿಗಳಲ್ಲಿ
೨೭-೯-೦೯                            ವಿಶ್ವಬ್ಯಾಂಕನಂಥ              ವಿಶ್ವಬ್ಯಾಂಕನಂತಹ
೨೯-೯-೦೯                            ಬ್ರೀಜ್                           ಬ್ರಿಜ್
೨೯-೯-೦೯                             ಮಥ                             ಮೃತ
೨೯-೯-೦೯                            ಹರ್ಷೋದ್ಘಾರ                ಹರ್ಷೋದ್ಗಾರ
೨೯-೯-೦೯                            ಸ್ತಬ್ದ                             ಸ್ತಬ್ಧ
೨೯-೯-೦೯                            ಕೈಗೂಳ್ಳುವದಾಗಿ              ಕೈಗೊಳ್ಳುವದಾಗಿ
೨೯-೯-೦೯                            ಅನಿಷ್ಠಾನ                        ಅನುಷ್ಠಾನ
೨೯-೯-೦೯                            ಅಂಕೀತ                            ಅಂಕಿತ
೨೯-೯-೦೯                             ಹರಿಸಿದ್ದಾರೆ                     ಹರಸಿದ್ದಾರೆ.
೨೯-೯-೦೯                            ಶುಭಾಷಯ                       ಶುಭಾಶಯ
೨೯-೯-೦೯                           ವಿಜಯದಶಿಮಿ                    ವಿಜಯದಶಮಿ
೨೯-೯-೦೯                           ಅವ್ವಾಹತವಾಗಿ                  ಅವ್ಯಾಹತವಾಗಿ
೨೯-೯-೦೯                            ಪುನಶ್ಛೇತನ                      ಪುನಶ್ಚೇತನ
೨೯-೯-೦೯                           ವಿಶಿಷ್ಠ                              ವಿಶಿಷ್ಟ
೩೦-೯-೦೯                           ಅನುಷ್ಟಾನ                         ಅನುಷ್ಠಾನ
೩೦-೯-೦೯                            ಮಧ್ಯಾನ್ಹದಿಂದ                 ಮಧ್ಯಾಹ್ನದಿಂದ
೩೦-೯-೦೯                           ಕಾಲ್ಕಿತಿತ್ತು                         ಕಾಲ್ಕಿತ್ತಿತು

(೨) ವ್ಯಾಕರಣದೋಷಗಳು:
ಕಾಗುಣಿತದ ತಪ್ಪುಗಳನ್ನು ಅಚ್ಚಿನ ದೋಷಗಳೆಂದು ಹೇಳಿ ಪಾರಾಗಬಹುದು. ಆದರೆ ವ್ಯಾಕರಣದ ತಪ್ಪುಗಳಿಗೆ ಯಾರು ಹೊಣೆ? ತಮ್ಮಲ್ಲಿ ಪರಿಶೀಲನೆಗೆ ಬಂದಂತಹ ವರದಿಗಳನ್ನು ಸಂಪಾದಕರು ಕಣ್ಣು ಮುಚ್ಚಿಕೊಂಡು ಓದುತ್ತಾರೆಯೆ? ಅಥವಾ ಕನ್ನಡ ವ್ಯಾಕರಣವನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವಾಗ ಇವರಿಗೆ ಏನೂ ನೋವಾಗುವದಿಲ್ಲವೆ? ಇದು ಸಂಪಾದಕರ ಹೊಣೆಗಾರಿಕೆ ಅಲ್ಲವೆ? ವ್ಯಾಕರಣದ ಮೃಗಯಾವಿಹಾರದ ಕೆಲವೊಂದು ಉದಾಹರಣೆಗಳು ಹೀಗಿವೆ:

೨೬-೯-೦೯
(೧)ತಪ್ಪು: ಮಳೆಗೆ ಕೋಟ್ಯಂತರ ಆಸ್ತಿ ನಷ್ಟ
ಒಪ್ಪು: ಮಳೆಯಿಂದ ಕೋಟ್ಯಂತರ ಆಸ್ತಿ ನಷ್ಟ
(೨) ತಪ್ಪು: ಮಿಷಿನ್ ಗಳ
ಒಪ್ಪು: ಮಶೀನುಗಳ
೨೭-೯-೦೯
(೧) ತಪ್ಪು: ಸೂಕ್ತ ಆರೋಪಿಗಳನ್ನು
ಒಪ್ಪು: ನೈಜ ಅಪರಾಧಿಗಳನ್ನು
(ಟಿಪ್ಪಣಿ: ಸೂಕ್ತ ಎಂದರೆ ವಿಧಿ-ವಿಧಾನಗಳಲ್ಲಿ ಹೇಳಿದ ಮೇರೆಗೆ ಎಂದು ಅರ್ಥ.
ಆರೋಪಿಗಳು ಅಪರಾಧಿಗಳಾಗಿರಬೇಕಿಲ್ಲ.)
(೨) ತಪ್ಪು: ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿತ್ತು.
ಒಪ್ಪು: ಬೆಳಗಿನ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸಿತ್ತು.
(೩) ತಪ್ಪು: ಅಂತಾರಾಷ್ಟ್ರೀಯ (=inland)
ಒಪ್ಪು: ಅಂತರರಾಷ್ಟ್ರೀಯ (=international)
೨೯-೯-೦೯
(೧) ತಪ್ಪು: ಪೋಲೀಸ ಠಾಣೆ ಸಂಪರ್ಕಿಸಲು
ಒಪ್ಪು: ಪೋಲೀಸ ಠಾಣೆಯನ್ನು ಸಂಪರ್ಕಿಸಲು
(೨) ತಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿದರು
ಒಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿತು (ಅಥವಾ, ಜನರು .....ಆಚರಿಸಿದರು.)
(೩) ತಪ್ಪು: ಶುಭ್ರವರ್ಣದ ಹೊಸ ಬಟ್ಟೆಗಳನ್ನು
ಒಪ್ಪು: ಶುಭ್ರವಾದ ಹೊಸ ಬಟ್ಟೆಗಳನ್ನು
(ಟಿಪ್ಪಣಿ: ಶುಭ್ರ=ಸ್ವಚ್ಛ. ವರ್ಣ ಶುಭ್ರವಾಗಿರುವದೊ ಅಥವಾ ಬಟ್ಟೆ ಶುಭ್ರವಾಗಿರುವದೊ?)

(೩) ಭಾಷೆಯ ತಪ್ಪುಗಳು:
ವ್ಯಾಕರಣವು ಸಂಪಾದಕರಿಗೆ ಮಹತ್ವದ ವಿಷಯವೆಂದು ಅನ್ನಿಸಿರಲಿಕ್ಕಿಲ್ಲ ಎಂದು ಭಾವಿಸೋಣ. ಆದರೆ ಭಾಷೆಯ ತಪ್ಪು ಮಾತ್ರ ಒಂದು ಪತ್ರಿಕೆಯು ಎಂದೂ ಮಾಡಬಾರದ ತಪ್ಪು. ಓದುಗರನ್ನು ಸುಶಿಕ್ಷಿತರನ್ನಾಗಿ ಮಾಡುವದು ಯಾವುದೇ ಪತ್ರಿಕೆಯ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಪತ್ರಿಕೆಯ ಭಾಷೆಯನ್ನು ಪ್ರಮಾಣಿತ ಭಾಷೆ ಎಂದು ಗ್ರಹಿಸಿಕೊಳ್ಳುವ ಓದುಗರು ಭಾಷಾದೋಷಗಳನ್ನು ಅರಿಯದೇ ಅಂತರ್ಗತಗೊಳಿಸಿಕೊಳ್ಳುತ್ತಾರೆ. ಆ ತಪ್ಪುಗಳನ್ನು ತಾವೂ ಎಲ್ಲೆಡೆ ಹರಡುತ್ತಾರೆ. ಇದರಿಂದ ಾಷಾದೋಷವು ಸರ್ವವ್ಯಾಪಿಯಾಗಿ ಬಿಡುತ್ತದೆ. ‘ಸಂಯುಕ್ತ ಕರ್ನಾಟಕ’ದಲ್ಲಿಯ ಕೆಲವು ಭಾಷಾದೋಷಗಳನ್ನು ಗಮನಿಸೋಣ:
"ಸಾರ್ವಜನಿಕ ಸ್ಥಳದಲ್ಲಿ ಗುಡಿ ನಿರ್ಮಾಣಕ್ಕೆ ಸುಪ್ರೀಂ ನಿರ್ಬಂಧ" ಎನ್ನುವ ಈ ವರದಿಯನ್ನು ನೋಡಿರಿ. ಸಂಯುಕ್ತ ಕರ್ನಾಟಕವು ಹಾಗೂ ಇತರ ಪತ್ರಿಕೆಗಳು ಅನೇಕ ವರ್ಷಗಳಿಂದ ‘ಸರ್ವೋಚ್ಚ ನ್ಯಾಯಾಲಯ’ ಎನ್ನುವ ಪದವನ್ನು ಬಳಸುತ್ತಲೇ ಬಂದಿವೆ. ಈ ಪದವು ಕನ್ನಡ ಓದುಗರಿಗೆ ಅರ್ಥವಾಗುವಂತಹ ಪದವೇ ಆಗಿದೆ. ಏಕಾಏಕಿಯಾಗಿ ಈ ಪದಕ್ಕೆ ಬದಲಾಗಿ  ‘ಸುಪ್ರೀಂ ಕೋರ್ಟ’ ಎನ್ನುವ ಆಂಗ್ಲ ಪದ ಬಳಸುವ ಅನಿವಾರ್ಯತೆಯನ್ನು ಸಂಪಾದಕರೇ ಹೇಳಬೇಕು! ಸರಿ ಬಿಡಿ, ಯಾವುದೋ ಗಡಿಬಿಡಿಯಲ್ಲಿ ಸಂಪಾದಕರು ಕನ್ನಡ ಪದ ನನಪಾಗದೇ ಆಂಗ್ಲ ಪದವನ್ನು ಉಳಿಸಿಕೊಂಡರು ಎಂದುಕೊಳ್ಳೋಣ. ಆದರೆ ಕನ್ನಡ ವಾಕ್ಯದ ಮಧ್ಯಭಾಗದಲ್ಲಿ ಆಂಗ್ಲ ಪದಪುಂಜವನ್ನು ಬಳಸಿಕೊಳ್ಳುವದರ ಕಾರಣವೇನು? ಮನೋರಮೆಯು ಮುದ್ದಣನಿಗೆ ಹೇಳುವಂತೆ ಇದು ಮುತ್ತಿನ ಸರದಲ್ಲಿ ಮೆಣಸನ್ನು ಪೋಣಿಸಿದಂತೆ ಅಲ್ಲವೆ? ಉದಾಹರಣೆಯನ್ನು ನೋಡಿರಿ:
"ಸದಾ ಮಂತ್ರಿಗಳ ಕಾರುಬಾರಿನಲ್ಲಿದ್ದ ವಿಧಾನಸೌಧ ಇಂದು ಫಾರ್ ಎ ಚೇಂಜ್ ಅಧಿಕಾರಿಗಳ ದರ್ಬಾರಿನಲ್ಲಿ ಕಾಲ ಕಳೆಯುವಂತಾಗಿತ್ತು."
ಸಂಪಾದಕರು ಓದುಗರೊಡನೆ ಹರಟೆ ಹೊಡೆಯುವ ಧಾಟಿಯಲ್ಲಿ ಸುದ್ದಿಯನ್ನು ಹೇಳುತ್ತಿದ್ದಾರೆಂದರೆ, ಈ ಶೈಲಿಯನ್ನು ಒಪ್ಪಿಕೊಳ್ಳಬಹುದು. ಆದರೆ ಗಂಭೀರ ವರದಿಗೆ ಇದು ತಕ್ಕ ಧಾಟಿಯೆನಿಸುವದಿಲ್ಲ.

ಅಕ್ಟೋಬರ ೧೧ರಂದು ಪ್ರಕಟವಾದ ವರದಿಯ ಭಾಷೆ ಇನ್ನೂ ವಿಚಿತ್ರವಾಗಿದೆ:
ಈ ವರದಿಯ ಮೊದಲನೆಯ ದೋಷವೆಂದರೆ ‘ಸವದತ್ತಿ’ಯನ್ನು ‘ಸೌಂದತ್ತಿ’ ಎಂದು ಗ್ರಾಮ್ಯವಾಗಿ ಬರೆದಿದ್ದು. ಈ ವರದಿಯ  ಪರಿಚ್ಛೇದ ಒಂದರ ಕೊನೆಯ ಸಾಲು ಹೀಗಿದೆ:
"ಇತ್ತೀಚೆಗೆ ಸುರಿದ ದಾರಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತು ನಿರ್ಲಕ್ಷಿಸಿ ಪ್ರತಿದಿನ ಸ್ಥಳದಲ್ಲಿ ಮಲಗಿಕೊಂಡಿದ್ದರೆ ಆತನ ಕುಟುಂಬಕ್ಕೆ ಇಂದು ಬೆಳಕು ಕಾಣುತ್ತಿರಲಿಲ್ಲ."
ಅರ್ಥವಾಯಿತೆ? ಸ್ವಲ್ಪ ತಿಣುಕಾಡಿದರೆ ಅರ್ಥ ಮಾಡಿಕೊಳ್ಳುವದು ಕಷ್ಟವೇನಲ್ಲ. ಆದರೆ ಸರಿಯಾದ ವಾಕ್ಯ ಹೀಗಿರಬೇಕಿತ್ತು:
"ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತನ್ನು ನಿರ್ಲಕ್ಷಿಸಿ ಪ್ರತಿ ದಿನದಂತೆಯೆ ಮಲಗಿಕೊಂಡಿದ್ದರೆ, ಆತನ ಕುಟುಂಬವು ಇಂದು ಬೆಳಕನ್ನು ಕಾಣುತ್ತಿರುತ್ತಿಲ್ಲ."

(೪) ವರದಿಯ ದೋಷಗಳು:
ವರದಿಯ ದೋಷಗಳಿಗಾಗಿ ಈ ವರದಿಗಳನ್ನು ನೋಡಬಹುದು:
ಮೊದಲನೆಯ ವರದಿ ‘ಸಂಯುಕ್ತ ಕರ್ನಾಟಕ’ದಲ್ಲಿ ಸಪ್ಟಂಬರ ೩೦ರಂದು ಮೂರನೆಯ ಪುಟದಲ್ಲಿ ಪ್ರಕಟವಾಗಿದೆ. ಒಳ್ಳಯ ವರದಿಗೆಬೇಕಾದ ನಿಖರತೆ ಹಾಗೂ ಸಂಕ್ಷಿಪ್ತತೆಯ ಬದಲಾಗಿ ಜೊಳ್ಳು ಜೊಳ್ಳಾದ ವರ್ಣನೆ ಇಲ್ಲಿದೆ ಎಂದು ನನ್ನ ಅನಿಸಿಕೆ.

"ಜಿಲ್ಲೆಯಾದ್ಯಂತ ಇಂದು ಮಧ್ಯಾನ್ಹದಿಂದ ಬಿಟ್ಟುಬಿಡದೇ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರೇ ನೀರು." ಎಂದು ಈ ವರದಿ ಪ್ರಾರಂಭವಾಗುತ್ತದೆ.
ಧಾರವಾಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಕಲಘಟಗಿಯಂತಹ ಮಲೆನಾಡು ಹಾಗೂ ನವಲಗುಂದದಂತಹ ಬಯಲಸೀಮೆ ಈ ಜಿಲ್ಲೆಯಲ್ಲಿವೆ. ಇವುಗಳ ನಡುವಿನ ನೇರ ಅಂತರವು ಸುಮಾರು ೬೦ ಕಿಲೊಮೀಟರುಗಳಷ್ಟಾದರೂ ಇದ್ದೀತು. ’ಇಲ್ಲೆಲ್ಲಾ ಮಳೆ ಇಂದು ಮಧ್ಯಾಹ್ನವೇ ಪ್ರಾರಂಭವಾಯಿತೆ’, ಎನ್ನುವ ಸಂದೇಹ ಓದುಗನಿಗೆ ಬಾರದಿರದು. ಪತ್ರಿಕೆಯು ಇಂತಹ ಸಂದರ್ಭಗಳಲ್ಲಿ ಸಂದಿಗ್ಧ ಭಾಷೆಯನ್ನು ಬಳಸಬಾರದು. ಎರಡನೆಯದಾಗಿ ಮಳೆ ಸುರಿದದ್ದು ಹಿನ್ನೆಲೆಯಾಗುವದಿಲ್ಲ, ಕಾರಣವಾಗುತ್ತದೆ. ಈಗ ಈ ವಾಕ್ಯದ ವ್ಯಾಕರಣದ ತಪ್ಪುಗಳನ್ನಷ್ಟು ಗಮನಿಸಿರಿ: ‘ಮಧ್ಯಾಹ್ನ’ ಪದವನ್ನು ‘ಮಧ್ಯಾನ್ಹ’ ಎಂದು ಬರೆಯಲಾಗಿದೆ. ’ಬಿಟ್ಟೂಬಿಡದೆ’ ಎನ್ನುವದನ್ನು ‘ಬಿಟ್ಟುಬಿಡದೇ’ ಎಂದು ಬರೆಯಲಾಗಿದೆ.

ಈ ಒಂಟಿ ಸಾಲಿನ ಮುಂದಿನ ಪರಿಚ್ಛೇದವನ್ನು ಈಗ ಗಮನಿಸಿರಿ:
"ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ನಂತರ ಮಧ್ಯಾನ್ಹ 2ರ ಸುಮಾರಿಗೆ ಸಣ್ಣಗೆ ಸುರಿಯುತ್ತಿದ್ದ ಮಳೆ ಒಮ್ಮಿಂದೊಮ್ಮೆಲೇ ಜೋರಾಗಿ ಸುರಿಯಲು ಪ್ರಾರಂಭಿಸಿತು. ಮಳೆ ಬೀಳುವ ಸಂದರ್ಭದಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ."
ಮೊದಲನೆಯದಾಗಿ, ವರದಿಗಾರರು ಜಿಲ್ಲೆಯನ್ನು ಬಿಟ್ಟುಕೊಟ್ಟು ಧಾರವಾಡ ಶಹರಕ್ಕೆ ಜಿಗಿದಂತೆ ಭಾಸವಾಗುತ್ತದೆ. ಎರಡನೆಯದಾಗಿ ಸಾಮಾನ್ಯ ಓದುಗನಿಗೆ ನಿಖರವಾದ ಹಾಗೂ ಸಂಕ್ಷಿಪ್ತವಾದ ಮಾಹಿತಿ ಬೇಕಾಗಿರುತ್ತದೆ. ಸಂತೆಯಲ್ಲಿ ಭೆಟ್ಟಿಯಾದ ಜನರು ತಮ್ಮತಮ್ಮಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಜೊಳ್ಳು ಮಾತಿನಲ್ಲಿ ಅವನಿಗೆ ಆಸಕ್ತಿ ಇರುವದಿಲ್ಲ. ಮಳೆ ಒಮ್ಮಿಂದೊಮ್ಮೆಲೆ ಜೋರಾಯಿತೊ ಅಥವಾ ಕಾಲಕ್ರಮೇಣ ಜೋರಾಯಿತೊ ; ಮಳೆ ಬೀಳುವ ಸಂದರ್ಭದಲ್ಲಿ ಗಾಳಿ ಬೀಸುತ್ತಿತ್ತೊ ಇಲ್ಲವೊ ಎನ್ನುವ ಮಾಹಿತಿ ಓದುಗನಿಗೆ ಅನವಶ್ಯಕವಾಗಿದೆ. ಇಂತಿಷ್ಟು ಮಿಲಿಮೀಟರ ಮಳೆ ಆಗಿದೆ ಎಂದು ತಿಳಿಯುವದಷ್ಟೇ ಅವನಿಗೆ ಬೇಕಾಗಿರುತ್ತದೆ.

ಇದರ ಮುಂದಿನ ಪರಿಚ್ಛೇದದಲ್ಲಿ ಅಸ್ಪಷ್ಟತೆ ಇನ್ನೂ ಹೆಚ್ಚಾಗಿದೆ:
"ಸಂಜೆ 4ರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು. ನಂತರ ಐದು ನಿಮಿಷಗಳ ಕಾಲ ಮಳೆ ನಿಂತಿತಾದರೂ ಮತ್ತೆ ಸುರಿಯಲು ಪ್ರಾರಂಬಿಸಿತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಳ್ಳ ತುಂಬಿದ ವರದಿಗಳು ಬಂದಿವೆ. ನಗರದ ತಗ್ಗು ಪ್ರದೇಶಗಳಾದ ಬಾವಿಕಟ್ಟಿ ಪ್ಲಾಟ್, ಜನ್ನತ್ ನಗರ ಮತ್ತು ಲಕ್ಷ್ಮಿಸಿಂಗನ ಕೆರೆಯಲ್ಲಿ ನೀರು ತುಂಬಿವೆಯಾದರೂ ಅನಾಹುತಗಳು ಸಂಭವಿಸಿಲ್ಲ. ನಗರದ ಗಟಾರುಗಳು ತುಂಬಿದ್ದು ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಮಳೆ ಬಿದ್ದ ವರದಿಯಾಗಿವೆ. ಹೊಲಗಳಲ್ಲಿ ನೀರು ಹರಿದಿವೆ. ಹಳ್ಳಗಳಲ್ಲಿ ನೀರು ಬಂದಿವೆಯಾದರೂ ಸಂಚಾರಕ್ಕೆ ಅಡ್ಡಿಯಾಗಿಲ್ಲ."
ವರದಿಯ ಪ್ರಕಾರ ಮೋಡ ಕವಿದ ವಾತಾವರಣ ಮುಂಜಾನೆಯಿಂದಲೇ ಇದೆ. ಮಳೆಯೂ ಸಹ ಬಿಟ್ಟೂಬಿಡದೇ ಬೀಳುತ್ತಿದೆ. ಅಂದ ಮೇಲೆ ಸಂಜೆ ನಾಲ್ಕರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೆಯ ಮೋಡಗಳು ಗೋಚರಿಸುತ್ತಿದ್ದವು ಎಂದು ಹೇಳುವದರ ಔಚಿತ್ಯವೇನು? ಅಲ್ಲದೆ, "ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು" ಎನ್ನುವದು ವ್ಯಾಕರಣದ ಕೊಲೆಯಲ್ಲವೆ?
"ಐದು ನಿಮಿಷಗಳ ನಂತರ ಮಳೆ ಸುರಿಯಲಾರಂಭಿಸಿತು" ಅಂದರೆ, ನಾಲ್ಕು ಹೊಡೆದು ಐದು ನಿಮಿಷಕ್ಕೆ ಮಳೆ ಪ್ರಾರಂಭವಾಯಿತೆ?
ಈ ಸಮಯವು ಇಡೀ ಧಾರವಾಡ ಜಿಲ್ಲೆಗೆ ಅನ್ವಯಿಸುವದೊ ಅಥವಾ ಧಾರವಾಡ ನಗರಕ್ಕೆ ಅನ್ವಯಿಸುವದೊ? ಧಾರವಾಡ ನಗರದಲ್ಲಿಯೇ ಒಂದೆಡೆ ಮಳೆ ಬೀಳುತ್ತಿದ್ದಾಗ, ಇನ್ನೊಂದೆಡೆ ಮಳೆ ಇರುವದಿಲ್ಲ. ಬಹುಶ: ಈ ಮಳೆ ವರದಿಗಾರರ ಮನೆಯ ಮೇಲೆ ಬೀಳುತ್ತಿತ್ತೇನೊ?!

ನಗರದಲ್ಲಿ ಬೀಳುತ್ತಿದ್ದ ಮಳೆಯ ವರದಿ ಒಮ್ಮೆಲೆ ಹಳ್ಳಿಗಳಿಗೆ ಜಿಗಿದು, ಅಲ್ಲಿ ಹಳ್ಳಗಳು ತುಂಬಿದ್ದನ್ನು ಅವಲೋಕಿಸಿ,       ಮತ್ತೆ ನಗರದಲ್ಲಿ ನೀರು ತುಂಬಿದ ಭಾಗಗಳ ವರ್ಣನೆಗೆ ಮರಳುತ್ತದೆ! ಇದರ ಮುಂದಿನ ಪರಿಚ್ಛೇದವಂತೂ ಕನ್ನಡ ಸಾಲೆಯ ಹುಡುಗನ ನಿಬಂಧ(--’ಒಂದು ಮಳೆಗಾಲದ ದಿನ’--)ದಂತೆ ಭಾಸವಾಗುತ್ತದೆ:
"ಇಂದು ಸಂಜೆ ಜನರು ಕೊಡೆ ಹಿಡಿದುಕೊಂಡೇ ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು. ನಗರದಲ್ಲಿ ವಾಹನಗಳು ಪಕ್ಕಕ್ಕೆ ಹಾಯ್ದು ಹೋದರೆ ಅಲ್ಲಿ ನೀರಿನ ಸ್ನಾನ ಮಾಡಿಸುವದಂತೂ ಸತ್ಯವಿತ್ತು."
ವರದಿಯ ಕೊನೆಯ ಸಾಲಿನಲ್ಲಿ ‘ರವಿ ಕರಲಿಂಗಣ್ಣವರ’ ಎಂದು ಬಿಡಿಸಿ ಬರೆಯದೆ, ‘ರವಿಕರಲಿಂಗಣ್ಣವರ’ ಎಂದು ಕೂಡಿಸಿ ಬರೆಯಲಾಗಿದೆ.

ಇದೇ ದಿನಾಂಕದ ಮತ್ತೊಂದು ಪುಟದಲ್ಲಿರುವ ವರದಿ ಹೀಗಿದೆ:
"ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಅಂಕಿ ಅಂಶಗಳ ಪ್ರಕಾರ ಉತ್ತಮವಾಗಿ ಮಳೆ ಸುರಿಯುತ್ತಿದೆ."
"ಅಂಕಿ ಅಂಶಗಳ ಪ್ರಕಾರ ಮಳೆ ಸುರಿಯುತ್ತಿದೆ" ಎಂದು ಹೇಳಿದರೆ, ವಾಸ್ತವದಲ್ಲಿ ಹಾಗಿಲ್ಲ ಎನ್ನುವ ಅರ್ಥ ಹೊಮ್ಮುವದಿಲ್ಲವೆ? ಎರಡನೆಯದಾಗಿ  ಅಂಕಿ ಅಂಶಗಳು ಪತ್ರಿಕೆಯನ್ನು ತಲುಪಿದಾಗ ಮಳೆ ಸುರಿದು ಮುಗಿದಿರುತ್ತಿದೆ. ಆದುದರಿಂದ ‘ಮಳೆ ಸುರಿಯುತ್ತಿದೆ’ ಎಂದು ವರ್ತಮಾನಕಾಲದಲ್ಲಿ ಹೇಳಬಾರದು. ಮೂರನೆಯದಾಗಿ ಈ ಮಳೆ ಜನರಿಗೆ ಬೇಕಾಗಿರಲಿಲ್ಲ. ಆದುದರಿಂದ ‘ಉತ್ತಮವಾಗಿ’ ಎಂದು ವರ್ಣಿಸಬಾರದು ; ‘ಜೋರಾಗಿ’ ಎಂದು ಹೇಳಬಹುದಿತ್ತು.

ಅಕ್ಟೋಬರ ೮ನೆಯ ದಿನಾಂಕದ ೫ನೆಯ ಪುಟದಲ್ಲಿ, ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪದಕವನ್ನು ಪಡೆದ ಶ್ರೀ ರಾಮಕೃಷ್ಣನ್ ವೆಂಕಟರಾಮನ್ ಅವರನ್ನು "ಅಮೆರಿಕ ಮೂಲದ ಭಾರತೀಯ ವಿಜ್ಞಾನಿ" ಎಂದು ಬರೆಯಲಾಗಿದೆ. ಈ ವ್ಯತ್ಯಸ್ತ ವರ್ಣನೆಯನ್ನು ರೋಚಕ ಪ್ರಮಾದವೆಂದು ಭಾವಿಸಿ ಸಮಾಧಾನಪಟ್ಟುಕೊಳ್ಳಬೇಕಷ್ಟೆ!

(೫) ಮಾಹಿತಿಯ ತಪ್ಪುಗಳು:
ಅಕ್ಟೋಬರ ೧೩ನೆಯ ದಿನಾಂಕದ ‘ಸಂಯುಕ್ತ ಕರ್ನಾಟಕ’ದ ‘ರಸಪ್ರಶ್ನೆ’ ವಿಭಾಗದಲ್ಲಿ ಕೇಳಲಾದ ಪ್ರಶ್ನೆ ಹಾಗೂ ಕೊಡಲಾದ ಉತ್ತರ ಹೀಗಿವೆ:
ಪ್ರಶ್ನೆ: ‘ಸಂಸ್ಕಾರ’ ಚಲನಚಿತ್ರದ ನಿರ್ದೇಶಕರು ಯಾರು?
ಕೊಟ್ಟ ಉತ್ತರ: ಗಿರೀಶ್ ಕಾರ್ನಾಡ್.
ಇದು ತಪ್ಪು ಉತ್ತರ. ‘ಸಂಸ್ಕಾರ’ ಚಲನಚಿತ್ರವನ್ನು ನಿರ್ದೇಶಿಸಿದವರು ಪಟ್ಟಾಭಿ ರೆಡ್ಡಿಯವರು. ಅವರ ಹೆಂಡತಿ ಸ್ನೇಹಲತಾ ರೆಡ್ಡಿಯವರು ಈ ಚಿತ್ರದ ಮುಖ್ಯ ಸ್ತ್ರೀ ಪಾತ್ರದಲ್ಲಿ ಹಾಗು ಗಿರೀಶ ಕಾರ್ನಾಡರು ಮುಖ್ಯ ಪುರುಷಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದಲ್ಲಿ ಕಾರ್ನಾಡರ ಪಾಲು ಇದ್ದಿರಬಹುದು. ಆದರೆ ಚಿತ್ರದ ಶೀರ್ಷಿಕೆಗಳ ಪ್ರಕಾರ ಪಟ್ಟಾಭಿಯವರೇ ನಿರ್ದೇಶಕರು.

ಎಪ್ಪತ್ತಾರು ವರ್ಷಗಳ ಇತಿಹಾಸವಿರುವ ‘ಸಂಯುಕ್ತ ಕರ್ನಾಟಕ’ ಯಾಕೆ ಈ ರೀತಿ ಎಡವುತ್ತ ನಡೆಯುತ್ತಿದೆ?

Tuesday, October 6, 2009

‘ನಾ ಕಂಡ ಕರ್ನಾಟಕ’------ಲೇ: ಕೃಷ್ಣಾನಂದ ಕಾಮತ

ಕೃಷ್ಣಾನಂದ ಕಾಮತರು (೧೯೩೪-೨೦೦೨) ಬಹುಮುಖ ಪ್ರತಿಭೆಯ ಅದ್ಭುತ ವ್ಯಕ್ತಿ. ನ್ಯೂಯಾರ್ಕ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಮತರ ಆಸಕ್ತಿಯ ವ್ಯಾಪ್ತಿ ವಿಸ್ತಾರವಾದದ್ದು. ಸಾಹಿತ್ಯ, ಚಿತ್ರಕಲೆ, ಫೋಟೊಗ್ರಾಫಿ ಇವೆಲ್ಲ ವಿಷಯಗಳಲ್ಲೂ ಅವರ ಸಾಧನೆ ಹೆಮ್ಮೆ ಪಡುವಂತಹುದು.

ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ೫೦ ಕೃತಿಗಳನ್ನು ಹೊರತಂದಿದೆ. ಕೃಷ್ಣಾನಂದ ಕಾಮತರ ‘ನಾ ಕಂಡ ಕರ್ನಾಟಕ’ ಎನ್ನುವ ಕೃತಿಯು ಈ ಐವತ್ತು ಕೃತಿಗಳಲ್ಲಿ ಒಂದು. ಈ ಕೃತಿಯಲ್ಲಿ ೨೦ ಬಿಡಿ ಲೇಖನಗಳಿವೆ. ಇವುಗಳಲ್ಲಿ ‘ಕರ್ನಾಟಕದ ಚಿಕಣಿ ಚಿತ್ರಗಳು’ ಎನ್ನುವ ಒಂದು ಲೇಖನವನ್ನು ಬಿಟ್ಟರೆ, ಉಳಿದೆಲ್ಲ ಲೇಖನಗಳು ಈಗಾಗಲೇ ಪತ್ರಿಕೆಗಳಲ್ಲಿ ಮುದ್ರಣ ಕಂಡಂತಹ ಲೇಖನಗಳೇ. ಈ ಗ್ರಂಥದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ. ಮೊದಲ ಭಾಗದ ಹೆಸರು ‘ಕಲಾಪ್ರಪಂಚ’. ‘ಕಲಾಪ್ರಪಂಚ’ದಲ್ಲಿರುವ ಹತ್ತೂ ಲೇಖನಗಳು ಚಿತ್ರಕಲೆಗೆ ಸಂಬಂಧಿಸಿದ ಲೇಖನಗಳು. ಎರಡನೆಯ ಭಾಗದ ಹೆಸರು ‘ಜನಜೀವನ’. ಇದರಲ್ಲಿರುವ ಲೇಖನಗಳು ಮಲೆನಾಡಿನ ಬಗೆಗೆ ಇರುವ ಲೇಖನಗಳು.

ವಿಶಾಲ ಕರ್ನಾಟಕದ ವಿವಿಧ ಸ್ಥಳಗಳಲ್ಲಿರುವ ದೇವಾಲಯಗಳಲ್ಲಿ ಹಾಗು ಮೈಸೂರು ಅರಮನೆಯ ಒಳಾಂಗಣದಲ್ಲಿ ರಚಿಸಲಾದ ಚಿತ್ರಗಳ ಸಮಗ್ರ ದರ್ಶನಕ್ಕೆ ಮೊದಲ ಭಾಗದ ಲೇಖನಗಳು ಮೀಸಲಾಗಿವೆ. ಕಾಮತರು ತಮ್ಮ ಲೇಖನಗಳಲ್ಲಿ ದೇವಾಲಯದ ಇತಿಹಾಸ, ದೇವಾಲಯದಲ್ಲಿಯ ಚಿತ್ರಗಳ ಇತಿಹಾಸ, ಚಿತ್ರಗಳ ರಚನೆಯ ತಂತ್ರ, ಚಿತ್ರಪರಂಪರೆ, ಚಿತ್ರವಿಮರ್ಶೆ, ಚಿತ್ರಗಳ ಮೂಲಕ ಕಲ್ಪಿಸಬಹುದಾದ ಆ ಕಾಲದ ಸಾಮಾಜಿಕ ಹಾಗು ರಾಜಕೀಯ ಸ್ಥಿತಿ ಇವೆಲ್ಲವುಗಳನ್ನು ತಿಳಿಯಾದ ಭಾಷೆಯಲ್ಲಿ ಬಣ್ಣಿಸುತ್ತಾರೆ. ಈ ಚಿತ್ರಗಳ ಸದ್ಯದ ಪರಿಸ್ಥಿತಿ, ಈ ಗ್ರಾಮಗಳಲ್ಲಿ ವೀಕ್ಷಕರಿಗೆ ಸಿಗಬಹುದಾದ ಅಥವಾ ಸಿಗಲಾರದ ಸೌಲಭ್ಯಗಳನ್ನೂ ಸಹ ಓದುಗರ ಅರಿವಿಗೆ ತಂದಿದ್ದಾರೆ.

ಈ ಸಂಕಲನದ ಮೊದಲನೆಯ ಲೇಖನದಲ್ಲಿ ಬರುವ ಲೇಪಾಕ್ಷಿ ದೇವಾಲಯವು ಸದ್ಯದ ಕರ್ನಾಟಕದ ರಾಜಕೀಯ ಗಡಿಯ ಆಚೆಗಿದೆ, ಅಂದರೆ ಈಗಿನ ಆಂಧ್ರ ಪ್ರದೇಶದಲ್ಲಿದೆ. ಲೇಖನದಲ್ಲಿ ಲೇಪಾಕ್ಷಿ ದೇವಾಲಯದ ಈಗಿನ ಸ್ಥಾನಿಕ ವಿವರಗಳನ್ನು ನೀಡುವದಲ್ಲದೇ, ದೇವಾಲಯದ ನಿರ್ಮಾಣಕಾಲ, ಇದರ ಶಿಲ್ಪಿಗಳು, ಕರ್ತೃಗಳು, ಯಜಮಾನಿಕೆ ಇವೆಲ್ಲವುಗಳ ಸಮಗ್ರ ವಿವರಗಳನ್ನು ಲೇಖಕರು ನೀಡಿದ್ದಾರೆ.

ಚಿತ್ರಗಾರರು ಈ ದೇವಾಲಯದ ನಿರ್ಮಾಣದ ಸಮಯದಲ್ಲಿಯೇ ಹಸಿ ಗಾರೆಯ ಮೇಲೆ ಕಪ್ಪುಬಣ್ಣದಿಂದ ರೇಖಾಚಿತ್ರಗಳನ್ನು ಎಳೆದು ಅದರಲ್ಲಿ ಸ್ಥಳೀಯವಾಗಿ ಸಿಗುವ ಹರಳು, ಸಸ್ಯ ಇವುಗಳಿಂದ ಬಣ್ಣವನ್ನು ತುಂಬಿರಬೇಕು ಎಂದು ಲೇಖಕರು ಸಪ್ರಮಾಣವಾಗಿ ಊಹಿಸಿದ್ದಾರೆ. ಅದರಂತೆ ಸ್ಥಿತ ವ್ಯಕ್ತಿಗಳಿಗೆ ಚಲನೆ ಇದ್ದಂತೆ ತೋರಿಸಲು ಕಲಾವಿದರು ಅನುಸರಿಸಿದ ತಂತ್ರವನ್ನು ಲೇಖಕರು ಓದುಗರಿಗೆ ಬಿಚ್ಚಿ ತೋರಿಸುತ್ತಾರೆ.
ಲೇಪಾಕ್ಷಿ ದೇವಾಲಯದ ಚಿತ್ರಗಳು ಅಜಂತಾ, ತಂಜಾವೂರು ಮತ್ತು ವಿಜಯನಗರ ಕಲೆಗಳ ಅನುಕರಣೆಯೆಂದು ಕೆಲವು ಕಲಾತಜ್ಞರು ಸಾಧಿಸಲು ಪ್ರಯತ್ನಿಸಿರುವದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಲೇಖಕರು ಸಾಧಾರವಾಗಿ ಮಂಡಿಸುತ್ತಾರೆ.

ಲೇಪಾಕ್ಷಿ ದೇವಾಲಯದಲ್ಲಿ ರಚಿಸಲಾದ ಭಿತ್ತಿಚಿತ್ರಗಳನ್ನು ೮ ವರ್ಗಗಳಲ್ಲಿ ವಿಭಾಗಿಸಲಾಗಿದೆ:
(೧) ಧಾರ್ಮಿಕ ಚಿತ್ರಗಳು (೨) ವ್ಯಕ್ತಿ ಚಿತ್ರಗಳು (೩) ಸ್ತ್ರೀಯರ ಚಿತ್ರಗಳು (೪) ಪುರುಷರ ಚಿತ್ರಗಳು (೫) ಸಸ್ಯ-ಪ್ರಾಣಿ ಚಿತ್ರಣ (೬) ದೇವದೇವತೆಗಳು ಹಾಗು ಗಣಗಳು.
ಈ ಎಲ್ಲ ವರ್ಗಗಳಲ್ಲಿ ರಚಿಸಲಾದ ಚಿತ್ರಗಳ ವಿವರವಾದ ವರ್ಣನೆ ಹಾಗು ವೈಶಿಷ್ಟ್ಯಗಳನ್ನು ಕಾಮತರು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಜೊತೆಗೇ ಅನೇಕ ಸುಂದರ ಛಾಯಾಚಿತ್ರಗಳೂ ಇಲ್ಲಿವೆ.

ದುರ್ದೈವದಿಂದ ಈ ಚಿತ್ರಗಳ ರಕ್ಷಣೆಯು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಇವುಗಳ ರಕ್ಷಣೆಯ ಹೊಣೆಗಾರಿಕೆಯ ಬಗೆಗೆ ಕಾಮತರ ತಳಮಳ ಹಾಗು ಕನ್ನಡಿಗರಿಗೆ ಅವರು ಕೊಡುವ ಎಚ್ಚರಿಕೆ ಹೀಗಿದೆ:
“ಶತಕಗಳ ಅಲಕ್ಷ್ಯದಿಂದಾಗಿ ಕನ್ನಡಿಗರ ಈ ಕಲಾಸಿರಿ ಕಣ್ಮರೆಯಾಗುವದರಲ್ಲಿದೆ. ಕನ್ನಡ ಸಂಸ್ಕೃತಿ, ಕಲೆಗಳು ಎಲ್ಲಿಯೇ ಇದ್ದರೂ ಅವನ್ನು ಭಾವೀ ಪೀಳಿಗೆಗಾಗಿ ರಕ್ಷಿಸಿಡುವದು ಕರ್ನಾಟಕ ಲಲಿತ ಕಲಾ ಅಕಾಡೆಮಿಯಂಥ ಸಂಸ್ಥೆಗಳ ಹೊಣೆ. ಲೇಪಾಕ್ಷಿಯನ್ನು ಕರ್ನಾಟಕದಲ್ಲಿ ಸೇರಿಸುವದು ಅಸಾಧ್ಯವಾಗಿರಬಹುದು. ಆದರೆ ಕರ್ನಾಟಕದ ಸಂಸ್ಕೃತಿಯ ಪ್ರತೀಕಗಳಾದ ಚಿತ್ರ-ಸಿರಿಯನ್ನು ಛಾಯಾಚಿತ್ರಗಳಲ್ಲಿ, ವಿಡಿಯೋ ರೂಪದಲ್ಲಿ ಸಚಿತ್ರ ಗ್ರಂಥದಲ್ಲಿ ಕಾಯ್ದಿರಿಸುವ ಕೆಲಸ ತ್ವರಿತವಾಗಿ ಆಗಲೇಬೇಕಾಗಿದೆ.”

ಪಕ್ಷಿ ಹಾಗು ಪ್ರಾಣಿಗಳ ಶಿಲ್ಪ ಮತ್ತು ಚಿತ್ರಗಳು ನಮ್ಮ ದೇವಾಲಯಗಳ ವೈಶಿಷ್ಟ್ಯವೆನ್ನಬಹುದು. ಕಾಮತರ ಎರಡನೆಯ ಲೇಖನವು ಈ ರಚನೆಗಳ ಬಗೆಗಿದೆ. ಈ ಶಿಲ್ಪಗಳಲ್ಲಿ ಪ್ರಾಣಿಗಳ ನೈಸರ್ಗಿಕ ಚಿತ್ರಗಳಲ್ಲದೆ, ಚಮತ್ಕಾರಿಕ ಚಿತ್ರಗಳೂ ಇವೆ. ಇಂತಹ ಕೆಲವು ಚಿತ್ರಗಳ ಸುಂದರ ವಿವರಣೆ ಹಾಗೂ ಅವುಗಳ ತದ್ರೂಪ ಚಿತ್ರಗಳು ಇಲ್ಲಿವೆ.

ಕಾಮತರ ಮುಂದಿನ ಲೇಖನವು ಕರ್ನಾಟಕದಲ್ಲಿಯ ತಾಳೆಗರಿಯ ಚಿತ್ರಲೇಖನವನ್ನು ವರ್ಣಿಸುತ್ತದೆ. ತಾಳೆಗರಿಯ ಚಿತ್ರಲೇಖನವು ಕರ್ನಾಟಕದಲ್ಲಿ ಕ್ರಿಸ್ತಪೂರ್ವದಲ್ಲಿಯೇ ಹುಟ್ಟಿದರೂ ಸಹ ಸದ್ಯಕ್ಕೆ ಓಡಿಸಾದಲ್ಲಿ ಮಾತ್ರ ಜೀವಂತವಾಗಿದೆ. ತಾಳೆಗರಿಗಳ ಪೂರ್ವಸಿದ್ಧತೆ, ಚಿತ್ರರಚನೆ ಹಾಗು ಸಂರಕ್ಷಣೆಯ ವೈಜ್ಞಾನಿಕ ತಂತ್ರ ಇವುಗಳನ್ನು ಕಾಮತರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ. ಅಲ್ಲದೆ ತಾಳೆಗರಿಗಳ ಮೇಲೆ ಚಿತ್ರರೂಪದ ಅಕ್ಷರಗಳನ್ನು ಬರೆಯುವ ಪದ್ಧತಿಯು ಕರ್ನಾಟಕದಲ್ಲಿ ತನ್ನದೇ ವಿಧಾನದಲ್ಲಿ ಬಳಕೆಯಲ್ಲಿ ಇತ್ತೆಂಬುದಕ್ಕೆ ಪ್ರಮಾಣ ನೀಡಿದ್ದಾರೆ.

ಕರ್ನಾಟಕದ ಕರಾವಳಿಯ ದೇವಾಲಯದಲ್ಲಿರುವ ಕಾವಿ ಚಿತ್ರಗಳು ರಚನೆ ಹಾಗೂ ಶೈಲಿಯಲ್ಲಿ ಇತರ ಚಿತ್ರಗಳಿಗಿಂತ ತುಂಬ ಭಿನ್ನವಾಗಿವೆ. ಇವುಗಳ ವರ್ಣನೆಯನ್ನು ನಾಲ್ಕನೆಯ ಲೇಖನದಲ್ಲಿ ಮಾಡಲಾಗಿದೆ. ಕರಾವಳಿಯ ಆರ್ದ್ರ ಹವೆಯಿಂದಾಗಿ ವರ್ಣಚಿತ್ರಗಳು ಬೇಗನೇ ಹಾಳಾಗಿ ಹೋಗುತ್ತವೆ. ಆ ಕಾರಣದಿಂದಾಗಿ ಕರಾವಳಿಯ ದೇವಾಲಯ ಹಾಗೂ ಇತರ ಕೆಲವೊಂದು ಕಟ್ಟಡಗಳಲ್ಲಿ ವರ್ಣಚಿತ್ರಗಳ ಬದಲಾಗಿ ಕಾವಿ ಚಿತ್ರಗಳನ್ನು ರಚಿಸಬೇಕಾಯಿತು ಎಂದು ಕಾಮತರು ವಿವರಿಸುತ್ತಾರೆ. ಕಲೆಗೆ ಸಂಬಂಧಿಸಿದಂತೆ ಕಾಮತರ ಸೂಕ್ಷ್ಮಗ್ರಹಣಶಕ್ತಿಯನ್ನು ಹಾಗು ಐತಿಹಾಸಿಕ ಜ್ಞಾನವನ್ನು ಅರಿಯಬೇಕಾದರೆ, ಆ ಲೇಖನದ ಈ ಪರಿಚ್ಛೇದಗಳನ್ನು ಗಮನಿಸಬೇಕು:

“ ಚಿತ್ರಕ್ಕಾಗಿ ಮೀಸಲಿಟ್ಟ ಸ್ಥಳವನ್ನು ಪೂರ್ಣವಾಗಿ ಸದುಪಯೋಗಿಸುವದು ಕಲಾಕಾರನ ಉದ್ದೇಶ. ಅಂತೆಯೇ ಚೂರೂ ಬಿಡದೆ ಗಿಡ-ಮರಗಳನ್ನು ಹೂ ಬಳ್ಳಿಗಳನ್ನು, ಗುಳೋಪು, ಪತಾಕೆ, ನಕ್ಷೆಗಳನ್ನು ಜೋಡಿಸುತ್ತಾನೆ. ಇವುಗಳಲ್ಲಿ ಛಾಯಾಚಿತ್ರಗಳ ವಿವರ ತುಂಬಿಸುವದಕ್ಕಿಂತ, ಸಾಂಕೇತಿಕವಾಗಿ ರೂಪಿಸುವದು ವಾಡಿಕೆ. ವರ್ತುಲ, ಅರೆವರ್ತುಲ, ಲಂಬವರ್ತುಲಗಳನ್ನು ಬಳಸಿ ನಿರ್ಮಿಸಿದ ಗೋಲಕ ಒಂದು ಹೂವನ್ನು ಪ್ರತಿನಿಧಿಸಿದರೆ, ಅದಕ್ಕೊಂದು ಬೊಡ್ಡೆ, ಎಲೆ, ಕಾಯಿ, ಹಣ್ಣು ಜೋಡಿಸಿದರೆ ಮರವಾಗಿ ಬಿಡುತ್ತದೆ….ಕರಾವಳಿಯಲ್ಲಿ ಕುದುರೆಗಳ ಬಳಕೆ ಇರದಿದ್ದರೂ, ಹಲವಾರು ಯೋಧರು, ಸೈನಿಕರು, ಸರದಾರರು ಅಶ್ವಾರೋಹಿಗಳಾಗಿ ಚಿತ್ರಿತವಾಗಿದ್ದಾರೆ. ಬಹುಶಃ ವಿಜಯನಗರದ ಆಳರಸರು ತಮ್ಮ ಸೈನ್ಯಕ್ಕೆ ಬೇಕಾಗುವ ಕುದುರೆಗಳನ್ನು ಅರಬಸ್ತಾನದಿಂದ ಕರಾವಳಿಯ ಈ ಬಂದರುಗಳ ಮೂಲಕವೇ ಆಮದು ಮಾಡಿಸಿಕೊಳ್ಳಲಾರಂಭಿಸಿದ ನಂತರ ಈ ಪರಂಪರೆ ಬೆಳೆದು ಬಂದಿರಬೇಕು.”

ಕೆಲವು ಕಲಾಸಂಶೋಧಕರು ಆತುರದಲ್ಲಿ ಎಸಗುವ ತಪ್ಪುಗಳು ಕಾಮತರ ಸೂಕ್ಷ್ಮ ದೃಷ್ಟಿಗೆ ಬೀಳದೆ ಇಲ್ಲ.ಅದೇ ಲೇಖನದ ಕೆಳಗಿನ ಪರಿಚ್ಛೇದವನ್ನು ಗಮನಿಸಿರಿ:
“ಜರ್ಮನಿಯ ಶಿಷ್ಯವೇತನ ಪಡೆದು ಗೋವಾದ ಕಲೆ ಅಭ್ಯಸಿಸಿದ ಸಂಶೋಧಕಿ ಗ್ರಿಟ್ಲಿ ಯು. ಮಿಟರ್ವಾಲನ್ಳು ಇದು ಮೂಲತಃ ಇಟಾಲಿಯ ಗ್ರಾಫಿಟಿ (ಗೀರುಚಿತ್ರ) ಚಿತ್ರಕಲೆಯಾಗಿದ್ದು, ಪೋರ್ಚುಗೀಜರು ಇದನ್ನು ಭಾರತಕ್ಕೆ ತಂದು, ಚರ್ಚುಗಳಿಗೆ ಹಸ್ತಾಂತರಿಸಿದರೆಂದೂ ಅನಂತರ ಹಿಂದೂಗಳು ಅದನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದಾರೆಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. ಇದೆಂತಹ ಸಂಶೋಧನೆ! ಪೋರ್ಚುಗೀಜರು ಗೋವಾದ ದೇವಾಲಯಗಳ ಧ್ವಂಸ ಕಾರ್ಯವನ್ನು ಪ್ರಾರಂಭಿಸುವ ಮೊದಲೇ ಅಲ್ಲಿಯ ಸಾರಸ್ವತರ ದೇವಾಲಯಗಳ ಮೇಲೆಲ್ಲ ಈ ಚಿತ್ರಗಳು ನಳನಳಿಸುತ್ತಿದ್ದವು. ಆ ಸಂಶೋಧಕಿ, ದಕ್ಷಿಣ ಕನ್ನಡ ನಾಡಿನ ಕರಾವಳಿಯಲ್ಲೂ ರಾರಾಜಿಸುತ್ತಿದ್ದ ಕಾವಿಚಿತ್ರಗಳನ್ನು ಅಭ್ಯಸಿಸಿದ್ದರೆ, ಇವುಗಳಲ್ಲಿರುವ ಮಣ್ಣಿನ ವಾಸನೆ ಅವಳಿಗೂ ಅರಿವಾಗದೇ ಇರುತ್ತಿರಲಿಲ್ಲ. ಆದರೆ ದುರ್ದೈವದಿಂದ ಅಭಿಮಾನ್ಯಶೂನ್ಯರಾದ ನಾವು ಅವುಗಳನ್ನು ಭರದಿಂದ ನಾಶ ಮಾಡಹತ್ತಿದ್ದೇವೆ. ಸರ್ವನಾಶವಾಗುವ ಮೊದಲೇ ಪುಣ್ಯಾತ್ಮ ಕಲಾಪ್ರೇಮಿಗಳು ಅವನ್ನು ಅಭ್ಯಸಿಸಿ, ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು, ಗ್ರಂಥರೂಪದಲ್ಲಿ ಅವನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಿಡುವದರಿಂದ ಈ ಕಲೆಗೆ ಗೌರವ ಸಲ್ಲಿಸಬಹುದಾಗಿದೆ.”

ಕಾಮತರೇ ಇಂತಹ ಅನೇಕ ಚಿತ್ರಗಳನ್ನು ಛಾಯಾಚಿತ್ರಗಳಲ್ಲಿ ಸೆರೆ ಹಿಡಿದು ಕಲಾಸಂರಕ್ಷಣೆಯ ಪುಣ್ಯಕಾರ್ಯವನ್ನು ಮಾಡಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.

ಕಾಮತರ ಮುಂದಿನ ಲೇಖನ ಸೀಬಿ ಎನ್ನುವ ಕುಗ್ರಾಮದಲ್ಲಿಯ ನರಸಿಂಹ ದೇವಾಲಯದ ಭಿತ್ತಿಚಿತ್ರಗಳನ್ನು ವರ್ಣಿಸುತ್ತದೆ. ನರಸಿಂಹ ದೇವಾಲಯದ ಒಳಭಾಗದ ರಚನೆ ಹಾಗು ಹೊರಭಾಗದ ರಚನೆಗಳು ಬೇರೆ ಬೇರೆ ಕಾಲದ ನಿರ್ಮಾಣಗಳೆಂದು ಲೇಖಕರು ಊಹಿಸಿದ್ದಾರೆ. ಸೀಬಿಯ ಚಿತ್ರಗಳ ವರ್ಗೀಕರಣವನ್ನು ಈ ರೀತಿಯಾಗಿ ಮಾಡಲಾಗಿದೆ:
(೧) ಸಾಮಾಜಿಕ (೨) ನೈಸರ್ಗಿಕ (೩) ವ್ಯಕ್ತಿಗತ (೪) ಲೈಂಗಿಕ ಹಾಗು (೫) ಚಾರಿತ್ರಿಕ

ಸೀಬಿಯ ದೇವಾಲಯದ ಈ ಎಲ್ಲ ಚಿತ್ರಗಳನ್ನು ಅಭ್ಯಸಿಸಿ, ವಿವಿಧ ಅಂಶಗಳನ್ನು ಗುರುತಿಸಿದ ನಂತರ ಲೇಖಕರು ಈ ತರಹದ ನಿರ್ಣಯಕ್ಕೆ ಬರುತ್ತಾರೆ:
“……ಇಲ್ಲಿಯ ಕಲಾಶೈಲಿಯು ವಿಜಯನಗರ, ಮಹಾರಾಷ್ಟ್ರ ಮತ್ತು ಪಾಶ್ಚಾತ್ಯ ಪ್ರಭಾವಗಳಿಂದ ಬೆಳೆದು ಬಂದದ್ದು ಎಂದು ಪ್ರತಿಯೊಂದು ಚಿತ್ರವನ್ನು ಕೂಲಂಕಷವಾಗಿ ಅಭ್ಯಸಿಸಿದಾಗ ಅರಿವಾಗುವದು. ಬಹುಮಟ್ಟಿಗೆ ಕ್ರಿ.ಶ. ಸುಮಾರು ೧೭೯೦ರ ವೇಳೆಗೆ ಇವುಗಳು ಅಸ್ತಿತ್ವದಲ್ಲಿ ಬಂದವೆಂದು ಹೇಳಬಹುದು.”

ಸಂಕಲನದ ಏಳನೆಯ ಲೇಖನದ ಶೀರ್ಷಿಕೆ: ‘ಮೈಸೂರು ಅರಸರ ಕಾಲದ ಚಿತ್ರಗಳಲ್ಲಿ ಒಳಾಂಗಣ ದೃಶ್ಯಗಳು’ ಎಂದಿದೆ. ಈವರೆಗಿನ ಪಾರಂಪರಿಕ ಚಿತ್ರಕಲೆಗೂ ಮೈಸೂರು ಒಳಾಂಗಣ ಚಿತ್ರಕಲೆಗೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಗುರುತಿಸಲಾಗಿದೆ. ಅಲ್ಲದೆ ಈ ವ್ಯತ್ಯಾಸದ ಕಾರಣಗಳನ್ನೂ ಇಲ್ಲಿ ನೀಡಲಾಗಿದೆ. ಅವೆಲ್ಲವನ್ನು ಕಾಮತರ ಭಾಷೆಯಲ್ಲಿಯೇ ಓದೋಣ:
“…..ಸಾಂಪ್ರದಾಯಿಕವಾಗಿ ಬಳಸುವ ಕಲ್ಲು ಮತ್ತು ಕಾಡಿಗೆಗಳಿಂದ ತಯಾರಿಸಿದ ವರ್ಣಗಳ ಬದಲಾಗಿ ರಾಸಾಯನಿಕಗಳಿಂದ ಉತ್ಪಾದಿಸಿದ ಪಾಶ್ಚಾತ್ಯ ಬಣ್ಣಗಳನ್ನು ಬಳಸಿದ್ದರಿಂದ ಅವು ಮಳೆ,ಗಾಳಿ,ಬಿಸಿಲುಗಳಿಗೆ ತಮ್ಮತನ ಕಳೆದುಕೊಳ್ಳಲಾರಂಭಿಸಿದವು. ಇದನ್ನು ದಕ್ಷಿಣದ ಪ್ರವಾಸದ ಹೊತ್ತಿಗೆ ಕಂಡುಕೊಂಡ ಗವರ್ನರ ಜನರಲ್ ಡಾಲಹೌಸಿಯು, ಅವುಗಳ ನವೀಕರಣಕ್ಕೆ ಶಿಫಾರಸು ಮಾಡಿದ್ದ……….ಇಂದಿನ ಛಾಯಾಚಿತ್ರಕಾರರು ಕಲಾಕಾರರಾಗಲು ಯತ್ನಿಸಿದರೆ, ಅಂದಿನ ಚಿತ್ರಕಾರರು ಛಾಯಾಚಿತ್ರಗಾರರಾಗಲು ಯತ್ನಿಸಿದ್ದಾರೆ!”

ಮೈಸೂರು ಅರಮನೆಯ ಒಳಾಂಗಣ ಚಿತ್ರಗಳ ವಿವರಗಳನ್ನು ಅಂದರೆ ಆ ಕಾಲದ ವೇಷಭೂಷಣಗಳನ್ನು, ಅಧಿಕಾರಿಗಳನ್ನು-ಸೇವಕರನ್ನು, ಸಂಗೀತ ಉಪಕರಣಗಳನ್ನು ಕಾಮತರು ವಿವರವಾಗಿ ವರ್ಣಿಸಿದ್ದಾರೆ. ಅದರಂತೆ ಶ್ರವಣಬೆಳಗೊಳದ ಜೈನ ಮಠದ, ಮೈಸೂರಿನ ಪರಕಾಲ ಮಠದ ರಸ್ತೆಯಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯದ, ಮೈಸೂರಿನ ಅರಮನೆಯ ಆವಾರದಲ್ಲಿರುವ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದ ಒಳಾಂಗಣ ಚಿತ್ರಗಳನ್ನು ಕಾಮತರು ವಿವರಿಸಿದ್ದಾರೆ. ಈ ಚಿತ್ರಗಳು ನಶಿಸಿ ಹೋಗುತ್ತಿರುವದನ್ನು ಗಮನಿಸಿದ ಕಾಮತರು ಎಚ್ಚರಿಕೆಯನ್ನೂ ನೀಡಿದ್ದಾರೆ:
“ಕರ್ನಾಟಕದಲ್ಲಿ ಶತಕಗಳ ಹಿಂದೆ ವಿರಚಿತವಾಗಿ ಅಳಿದುಳಿದ ಚಿತ್ರಗಳನ್ನೇ ಅಭ್ಯಸಿಸಿ ಗ್ರಂಥರೂಪದಲ್ಲಿ ಪ್ರಕಟಿಸದೇ ಇರುವದು ಅತ್ಯಂತ ಶೋಚನೀಯ. ಅವು ಸಂಪೂರ್ಣ ನಶಿಸಿ ಹೋಗುವ ಮೊದಲು ಈ ಕಾರ್ಯವಾಗಲೇಬೇಕು.”

“ಕರ್ನಾಟಕದ ಚಿಕಣಿ ಚಿತ್ರಗಳು” ಇದು ಈ ಸಂಕಲನದ ಎಂಟನೆಯ ಲೇಖನ. ಉತ್ತರ ಭಾರತದಲ್ಲಿ ಈ ಚಿತ್ರಕಲೆಯನ್ನು ಪ್ರಾರಂಭಿಸಿದವರು ರಜಪೂತರು. ಕರ್ನಾಟಕದಲ್ಲಿ ಅತಿ ಪುರಾತನ ಚಿಕಣಿ ಚಿತ್ರಗಳೆಂದರೆ ಮೂಡಬಿದಿರೆಯ ಜೈನ ಮಠದಲ್ಲಿರುವ ತಾಳೆಗರಿ ಗ್ರಂಥಗಳಲ್ಲಿರುವ ಚಿಕಣಿ ಚಿತ್ರಗಳು. (ಕ್ರಿ.ಶ.೧೧೨೦-೧೧೪೩). ಅದರಂತೆ ವಿಜಾಪುರದ ಸುಲ್ತಾನರ ಗ್ರಂಥಗಳಲ್ಲಿಯೂ ಚಿಕಣಿ ಚಿತ್ರಗಳಿದ್ದು, ಈ ಚಿತ್ರಗಳಲ್ಲಿ ಇರಾನದ ವರ್ಚಸ್ಸು ಕಾಣುತ್ತದೆ ಎನ್ನುವದು ಲೇಖಕರ ಅಭಿಪ್ರಾಯವಾಗಿದೆ.

ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರರು ಅಧಿಕಾರಕ್ಕೆ ಬಂದಬಳಿಕ ಸಾಂಪ್ರದಾಯಕ ಸಚಿತ್ರ ಗ್ರಂಥಗಳಿಗೆ ಪ್ರೋತ್ಸಾಹ ದೊರೆಯಿತು. ಅವರ ಕಾಲದಲ್ಲಿ ರಚಿತವಾದ ‘ತತ್ವನಿಧಿ’ ಎನ್ನುವ ಗ್ರಂಥದಲ್ಲಿ ೨೨೭೫ ಚಿಕಣಿ ಚಿತ್ರಗಳನ್ನು ಬರೆಯಲಾಗಿದೆಯಂತೆ! ಈ ಕೃತಿಯಲ್ಲಿಯ ‘ಗೃಹನಿಧಿ’ ಎನ್ನುವ ಭಾಗದಲ್ಲಿ ಹಕ್ಕಿಗಳಿಂದ ಹಿಡಿದು ಕೀಟಗಳವರೆಗೆ ಸಕಲ ಪ್ರಾಣಿಗಳನ್ನು ಚಿತ್ರಿಸಲಾಗಿದೆ.

ಕಾಮತರು ಈ ಚಿತ್ರಕೋಶವನ್ನು ದೊರಕಿಸಲು ಪ್ರಯತ್ನಪಟ್ಟು ವಿಫಲರಾದ ಕತೆಯನ್ನು ಅವರ ಮಾತಿನಲ್ಲಿಯೇ ಕೇಳಿರಿ:
“ ಈ ಚಿತ್ರಕೋಶವೂ ಮೈಸೂರಿನ ಒರಿಯಂಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರದಲ್ಲಿದ್ದು ಅದರ ಪ್ರಕಾಶನಕ್ಕೆ ಧನಸಹಾಯದ ಕೊರತೆಯ ಜೊತೆಗೆ ಗ್ರಂಥದ ಸ್ವಾಮಿತ್ವ ಯಾರಿಗೆ ಸೇರಿದ್ದು? ಎಂದು ನಿರ್ಧರಿಸಲಾರದೇ, ಕಲಾಪ್ರೇಮಿಗಳಿಗೆ ನಿಲುಕದೇ ಮೂಲೆಗುಂಪಾಗಿದೆ. ಅದನ್ನು ವೀಕ್ಷಿಸಲು ಕಷ್ಟಪಟ್ಟು ಅಪ್ಪಣೆ ಪಡೆದಾಗ ಕೆಲವೇ ಪುಟಗಳ ಮೇಲೆ ಕೆಲನಿಮಿಷ ಕಣ್ಣು ಓಡಿಸಲು ಮಾತ್ರ ಅನುವು ಮಾಡಿಕೊಟ್ಟರು. ಇದರ ಇನ್ನೊಂದು ಪ್ರತಿ ಮೈಸೂರಿನ ಯುವರಾಜ ಶ್ರೀಕಂಠದತ್ತ ಒಡೆಯರ ಒಡೆತನದಲ್ಲಿದೆ ಎಂದು ಅರಿತು,ಅವರಿಂದ ಮುಂಚಿತವಾಗಿ ಅನುಮತಿ ಪಡೆದೇ ಅರಮನೆಗೆ ಹೋದರೆ ಕೀಲಿಕೈಗಳಿಲ್ಲ ಎಂಬ ಕುಂಟ ನೆಪ ಮಾಡಿ ನುಣುಚಿಕೊಂಡರು…..”

ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಇನ್ನಿತರ ಕೃತಿಗಳಾದ ‘ಸೌಗಂಧಿಕಾ ಪರಿಣಯ’ ‘ವೃಷಭೇಂದ್ರ ವಿಜಯ, ಹಾಗು ‘ಬಸವ ಪುರಾಣ’ ಈ ಕೃತಿಗಳ ಹಾಗೂ ಅವುಗಳಲ್ಲಿರುವ ಚಿತ್ರಗಳ ಪರಿಚಯವನ್ನೂ ಕಾಮತರು ಈ ಲೇಖನದಲ್ಲಿ ಮಾಡಿದ್ದಾರೆ. ಇದರಂತೆ ಅನೇಕ ಧಾರ್ಮಿಕ ವ್ಯಕ್ತಿಗಳ, ಉಚ್ಚ ಅಧಿಕಾರಿಗಳ ಹಾಗು ಮೈಸೂರು ಮಹಾರಾಜರ ಭಾವಚಿತ್ರಗಳ ಬಗೆಗೆ ಕಾಮತರು ವಿವರ ನೀಡಿದ್ದಾರೆ. ‘ಸೌಗಂಧಿಕಾ ಪರಿಣಯ’ದ ೧೦೪೩ನೆಯ ಪರಿಚ್ಛೇದದಿಂದ ೧೦೭೨ನೆಯ ಪರಿಚ್ಛೇದದವರೆಗೆ ಸಸ್ಯಶಾಸ್ತ್ರದ ಸಚಿತ್ರ ವಿವರಣೆಯಿರುವದಾಗಿ ಕಾಮತರು ತಿಳಿಸಿದ್ದಾರೆ. ಈ ವಿವರಣೆಗಳಲ್ಲಿ ತಿಳಿಸಲಾದ ಸಾಂಪ್ರದಾಯಿಕ ನಂಬಿಕೆಗಳಲ್ಲಿ ಗಟ್ಟಿ ಅಂಶವೆಷ್ಟು, ಟೊಳ್ಳೆಷ್ಟು ಎನ್ನುವದನ್ನು ನಮ್ಮ ಕೃಷಿಸಂಸ್ಥೆಗಳು ಹಾಗು ವಿಶ್ವವಿದ್ಯಾಲಯಗಳು ಸಂಶೋಧಿಸಬೇಕೆಂದು ಕಾಮತರು ಅಭಿಪ್ರಾಯ ಪಡುತ್ತಾರೆ.

ಚಿಕಣಿ ಚಿತ್ರಗಳಲ್ಲಿ ಮುಖ್ಯವಾದವುಗಳು ರಾಗಮಾಲಾ ಚಿತ್ರಗಳು. ಬಿಜಾಪುರದ ಸುಲ್ತಾನನಾದ ಇಬ್ರಾಹಿಮ್ ಆದಿಲ್ ಶಹಾ ರಚಿಸಿದ ‘ಕಿತಾಬ್-ಏ-ನೌರಸ್’ದಲ್ಲಿರುವ ೯ ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಹಾಗು ‘ಶ್ರೀ ತತ್ವನಿಧಿ’ ಯಲ್ಲಿರುವ ೩೬ ರಾಗ-ರಾಗಿಣಿಯರ ಚಿತ್ರಗಳ ವಿವರಗಳನ್ನು ಕಾಮತರು ನೀಡಿದ್ದಾರೆ.

ಎರಡನೆಯ ಭಾಗವು ಮಲೆನಾಡಿನ ವಿಸ್ತೃತವಾದ ಪರಿಚಯಕ್ಕೆ ಮೀಸಲಾಗಿದೆ. ಈ ಭಾಗದಲ್ಲಿ ಲೇಖಕರು ಮಲೆನಾಡಿನ ಪ್ರಾಕೃತಿಕ ಸಂಪತ್ತಿನ ವಿವರಣೆ ನೀಡಿದ್ದಾರೆ. ಇಲ್ಲಿಯ ಘಟ್ಟಪ್ರದೇಶ, ನದಿಗಳು, ಅವುಗಳ ದ್ವೀಪಗಳು ಇವೆಲ್ಲವುಗಳ ವರ್ಣನೆ ಇಲ್ಲಿದೆ. ಹಾಗೆಂದು ಇದು ಬರಿ ಭೌಗೋಲಿಕ ವರ್ಣನೆ ಅಲ್ಲ! ಇದು ಪಶ್ಚಿಮ ಘಟ್ಟಗಳ ಅವಸಾನದ ಇತಿಹಾಸವೂ ಹೌದು. ಕಾಮತರು ತಾವು ಚಿಕ್ಕವರಿದ್ದಾಗ ಇಲ್ಲಿ ಇದ್ದಂತಹ ಪುಷ್ಟ ಪರಿಸರ ಹಾಗೂ ಈಗಿನ ನಷ್ಟಪರಿಸರವನ್ನು ಮರುಕದಿಂದ ವರ್ಣಿಸಿದ್ದಾರೆ. ಅದು ಈಗ ನಷ್ಟವಾಗುತ್ತಿರುವ ಬಗೆಯನ್ನೂ ವಿವರಿಸಿದ್ದಾರೆ. ಕೇವಲ ನಿಸರ್ಗವರ್ಣನೆಯಿಂದ ತೃಪ್ತರಾಗದ ಕಾಮತರು ಇಲ್ಲಿ ವಾಸಿಸುತ್ತಿರುವ ವಿವಿಧ ಜನಸಮೂಹಗಳ ವರ್ಣನೆಯನ್ನೂ ಮಾಡಿದ್ದಾರೆ. ಈ ಸಮುದಾಯಗಳ ವೈಶಿಷ್ಟ್ಯಗಳನ್ನೂ ವಿವರಿಸಿದ್ದಾರೆ.

ಈ ಭಾಗದ ಒಂದು ಲೇಖನವು ‘ಅಂಜದೀವ್’ ನಡುಗಡ್ಡೆಗೆ ಮೀಸಲಾಗಿದೆ. ಕಾಮತರ ಮೊದಲ ಕುತೂಹಲವೆಂದರೆ ಈ ನಡುಗಡ್ಡೆಗೆ ಅಂಜದೀವ್ ಎನ್ನುವ ಹೆಸರು ಹೇಗೆ ಬಂದಿತು ಎನ್ನುವದು. ಅವರ ಪ್ರಶ್ನೆ ಹೀಗಿದೆ:
“ಉತ್ತರ ಕನ್ನಡ ಜಿಲ್ಲೆಯ ಕರಾವಳಿಗುಂಟ ಇರುವ ಹಲವಾರು ದ್ವೀಪಗಳಿಗೆ ಸ್ಥಾನೀಯರು ‘ಕುರ್ವೆ’(ಮಾವಿನಕುರ್ವೆ, ಮಲ್ಲಿಕುರ್ವೆ, ಕುರುಕುರ್ವೆ, ಪಾವಿನಕುರ್ವೆ)ಗಳೆಂದು ಗುರುತಿಸುವದು ವಾಡಿಕೆ. ಅವುಗಳ ಮೇಲೆ ಕೋಟೆಯಿದ್ದರೆ “ದುರ್ಗ”ವೆಂದು ಕರೆಯುವರು. (ಬಸವರಾಜದುರ್ಗ). ಛತ್ರಪತಿ ಶಿವಾಜಿಯ ವರ್ಚಸ್ಸಿಗೆ ಒಳಗಾದ ಕಾರವಾರದ ತೀರದಲ್ಲಿಯ ಜಲದುರ್ಗಗಳಿಗೆ ‘ಗಡ’ ಎಂಬ ಪ್ರತ್ಯಯ ಜೋಡಿಸುವದು ಪರಿಪಾಠ. ದೇವಗಡ, ಕೂರ್ಮಗಡ, ಮಧುಲಿಂಗಗಡ ಮುಂತಾದವು ಈ ಗುಂಪಿಗೆ ಸೇರಿದವು. ಇವುಗಳ ಜೊತೆಯಲ್ಲೇ ಇದ್ದ ಈ ನಡುಗಡ್ಡೆಗೆ ‘ಅಂಜದೀವ್’ ಎಂಬ ವಿಶಿಷ್ಟ ಹೆಸರು ಯಾಕೆ? ಎಂಬ ಕುತೂಹಲ ಕೆರಳಿತು.”

ಈ ಕುತೂಹಲದ ಬೆನ್ನತ್ತಿ ಹೋದ ಕಾಮತರು ಅಂಜದೀವದ ಇತಿಹಾಸವನ್ನೆಲ್ಲ ಶೋಧಿಸಿದ್ದಾರೆ.
ಆರ್ಯದೇವಿಯ ಸ್ಮರಣಾರ್ಥವಾಗಿ ‘ಆರ್ಯದ್ವೀಪ’ವೆಂದು ಕರೆಯಲಾಗುತ್ತಿದ್ದ ಈ ನಡುಗಡ್ಡೆ ವಿದೇಶಿ ನಾವಿಕರ ಬಾಯಲ್ಲಿ ಅಂಜನಿದ್ವೀಪ ಎಂತಲೂ, ಅನಂತರದ ಮಾಪಿಳ್ಳೆ ನಿವಾಸಿಗಳು ಇದನ್ನು ಅಂಜಿದೀವಾ ಎಂದು ಕರೆದರೆಂದೂ ಕಾಮತರು ಟ್ರೇಸ್ ಮಾಡುತ್ತಾರೆ. ಪೋರ್ತುಗೀಜರು ಇಲ್ಲಿ ನೆಲೆ ಊರಿದಾಗ ಈ ಅಂಜಿದೀವಾವನ್ನು ಅಂಜದೀವ್ ಎಂದು ಮಾರ್ಪಡಿಸಿದರೆಂದು ಕಾಮತರು ವಿವರಿಸುತ್ತಾರೆ.

ಕೊನೆಯ ಭಾಗದಲ್ಲಿ ಕಾಮತರು ಪ್ರಗತಿ ಎನ್ನುವ ಮಾಯಾಮೃಗವು ನಿಸರ್ಗಸಂಪತ್ತಿನ ಮಲೆನಾಡನ್ನು ಹೇಗೆ ಬೋಳು ಮಾಡಿದೆ ಎಂದು ವಿಷಾದದಿಂದ ವಿವರಿಸಿದ್ದಾರೆ.

ಕಾಮತರು ಈ ಕೃತಿಯಲ್ಲಿ ಪ್ರಾಚೀನ ಕರ್ನಾಟಕದ ಕಲಾಪ್ರಪಂಚವನ್ನು, ಜನಜೀವನವನ್ನು ಹಾಗೂ ಆಧುನಿಕ ಕಾಲದ ಪರಿಸರ ನಾಶವನ್ನು ಒಬ್ಬ ಕಲಾರಸಿಕನಂತೆ, ಒಬ್ಬ ಸೌಹಾರ್ದ ಸ್ನೇಹಿತನಂತೆ ಆತ್ಮೀಯವಾಗಿ ವಿವರಿಸಿದ್ದಾರೆ. ಆದರೆ ಕೃತಿಯುದ್ದಕ್ಕೂ ಕಂಡು ಬರುವ ಅವರ ಐತಿಹಾಸಿಕ ಜ್ಞಾನ, ಕಲೆಯ ತಿಳುವಳಿಕೆ, ವಿವಿಧ ವಿಷಯಗಳ ಪಾಂಡಿತ್ಯ ,ಕೊನೆಯರಿಯದ ಪರಿಶ್ರಮ ಹಾಗು ಕಲಾರಕ್ಷಣೆಯ ಕಳಕಳಿ ಇವು ಅಚ್ಚರಿಗೊಳಿಸುವಂತಿವೆ.

ಕಾಮತರ ಬಿಡಿ ಲೇಖನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಸಂಕಲಿಸಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲಕ್ಕೆ ಪ್ರಕಟಣೆಗಾಗಿ ನೀಡಿದವರು ಶ್ರೀಮತಿ ಜ್ಯೋತ್ಸ್ನಾ ಕಾಮತ. ಇಂತಹ ಒಂದು ಸ್ವಾರಸ್ಯಕರ ಕೃತಿಯನ್ನು ಕನ್ನಡಿಗರಿಗೆ ನೀಡಿದ್ದಕ್ಕಾಗಿ ಅವರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.

Saturday, September 5, 2009

ಕವಿಗಳು ಬಳಸುವ ಭಾಷೆ

ಮೈಸೂರೆನ್ನಿ, ಕನ್ನಡವೆನ್ನಿ,
ಮಲ್ಲಿಗೆಯನ್ನಿ ಒಂದೇ.
ಒಡೆಯರ ಮುಕುಟದ ರತ್ನವಿದೆನ್ನಿ
ಒಡೆಯರ ಕನ್ನಡವೆನ್ನಿ
ಇರುಳನು ಕಾಣದ ಕನ್ನಡವೆನ್ನಿ
ಒಡೆಯದ ಕನ್ನಡವೆನ್ನಿ
ಕವಿಗಳು ಬಳಸುವ ಭಾಷೆಯಿದೆನ್ನಿ
ಒಳಗಿನ ಹೂರಣ ಒಂದೇ.

‘ಮೈಸೂರು ಮಲ್ಲಿಗೆ’ಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಕವನಸಂಕಲನದ ಸ್ವಾಗತ ಪುಟದಲ್ಲಿ, ಕನ್ನಡ ಭಾಷೆಯನ್ನು ಬಣ್ಣಿಸುವ ಒಂದು ಪುಟ್ಟ ಕವನವನ್ನು ಬರೆದಿದ್ದಾರೆ. ಆ ಪುಟ್ಟಕವನದಲ್ಲಿ ಅವರು ಕನ್ನಡವನ್ನು ‘ಕವಿಗಳು ಬಳಸುವ ಭಾಷೆ’ ಎಂದು ಕರೆದಿದ್ದಾರೆ. ಕನ್ನಡಕ್ಕೆ ಸಂದಿರಬಹುದಾದ,ಸಲ್ಲಬಹುದಾದ ಅತ್ಯುಚ್ಚ ಪ್ರಶಂಸೆ ಇದು.

ನಮ್ಮ ಕನ್ನಡ ಭಾಷೆ ಅವಿದ್ಯಾವಂತರ ಭಾಷೆ ಅಲ್ಲ. ಇದರಲ್ಲಿ ಅಪಾರ ಪದಸಂಪತ್ತಿದೆ. ಮನಸ್ವಿನಿಯಂತೆ ಬಳುಕಬಲ್ಲ ಸಾಮರ್ಥ್ಯ ಈ ಭಾಷೆಗಿದೆ. ಶಿಷ್ಟರು (elite) ಕಾವ್ಯರಚನೆಗೆ ಬಳಸಲು ಇಷ್ಟಪಡುವ ಭಾಷೆ ಇದು ಎನ್ನುವದು ಕೆ.ಎಸ್. ನರಸಿಂಹಸ್ವಾಮಿಯವರ ಅಭಿಮತ. ಆದರೆ ಈ ಭಾಷೆಯನ್ನು ಶಿಷ್ಟರಷ್ಟೇ ಅಲ್ಲ, ಜಾನಪದ ಕವಿಗಳೂ ಸಹ ಇಷ್ಟಪಟ್ಟೇ ಬಳಸಿದ್ದಾರೆ. ಕನ್ನಡ ಜಾನಪದ ಕಾವ್ಯದ ಮೇಲ್ಮೆ ಶಿಷ್ಟಕಾವ್ಯಕ್ಕಿಂತ ಏನೂ ಕಡಿಮೆ ಇಲ್ಲ.

ಕನ್ನಡ ಭಾಷೆಗೇನೋ ಅಪಾರ ಸಾಮರ್ಥ್ಯವಿದೆ. ಆದರೆ ಬಳಸಿದ ಬಟ್ಟೆಯನ್ನೇ ಬಳಸಿದರೆ ಹಳಸಲು ವಾಸನೆ ಬರಬಹುದು. ಅಲ್ಲದೆ, ಸಾಮಾಜಿಕ ಸ್ಥಿತಿ ಬದಲಾದಂತೆ ಕಾವ್ಯರಚನಾಶೈಲಿಯೂ ಬದಲಾಗಬೇಕಾಗುತ್ತದೆ. ಈ ಬದಲಾವಣೆಯು ಅನೇಕ ಸಲ ಕವಿಯ ಆಂತರಿಕ ಅವಶ್ಯಕತೆಯೂ ಆಗಿರುತ್ತದೆ.

ಸಾವಿರಾರು ವರ್ಷಗಳವರೆಗೆ ಕನ್ನಡ ನಾಡನ್ನು ಆಳುವವರ ಭಾಷೆ ಕನ್ನಡವಾಗಿರಲಿಲ್ಲ. ಹೀಗಾಗಿ ಆ ಕಾಲದಲ್ಲಿ ಸಂಸ್ಕೃತ ಹಾಗೂ ಪ್ರಾಕೃತಗಳೇ ಕವಿಗಳು ಬಳಸುವ ಭಾಷೆಗಳಾಗಿದ್ದವು. ಕನ್ನಡ ನಾಡಿನ ರಾಜರು ಕನ್ನಡವನ್ನು ನುಡಿಯುವವರೇ ಆದಬಳಿಕ ಈ ಪರಿಸ್ಥಿತಿಯು ಬದಲಾಗಲು ಆರಂಭಿಸಿತು. ಕನ್ನಡ ನಾಡಿಗೆ ಸಾಮ್ರಾಜ್ಯದ ಪಟ್ಟ ದೊರೆತ ಕಾಲದಲ್ಲಿ ಕನ್ನಡ ಭಾಷೆಗೂ ರಾಜಭಾಷೆಯ ಸ್ಥಾನಮಾನ ದೊರೆಯಿತು. ಈ ಸಂದರ್ಭದಲ್ಲಿ ಕನ್ನಡ ನಾಡಿನ ಕವಿಗಳು ರಾಜಭಾಷೆಯಾದ ಕನ್ನಡದಲ್ಲಿಯೇ ಕಾವ್ಯರಚನೆಯನ್ನು ಪ್ರಾರಂಭಿಸಿದರು. ಆದರೆ ಕಾವ್ಯಶೈಲಿ ಮಾತ್ರ ಈ ಮೊದಲೇ ಮನ್ನಣೆ ಪಡೆದ ಶಿಷ್ಟಮಾನ್ಯ ಶೈಲಿಯಾಗಿತ್ತು. ಆದುದರಿಂದ ಕನ್ನಡದ ಆದಿಕವಿ ಪಂಪ (ಕ್ರಿ.ಶ.೯೪೦), ಆನಂತರದ ರನ್ನ, ಪೊನ್ನ, ನಾಗಚಂದ್ರ ಮೊದಲಾದವರೆಲ್ಲ ಮಾರ್ಗಶೈಲಿಯಲ್ಲಿಯೇ ಚಂಪೂಕಾವ್ಯರಚನೆ ಮಾಡಿ ಅದ್ಭುತ ಕಾವ್ಯಸೃಷ್ಟಿ ಮಾಡಿದರು. ಕನ್ನಡ ಸಾಮ್ರಾಜ್ಯದ ಉನ್ನತಿಯು ಕನ್ನಡ ಕಾವ್ಯದ ಉನ್ನತಿಗೂ ಕಾರಣವಾಯಿತು. ಈ ಅವಧಿಯನ್ನು ಕನ್ನಡದ Classical Age ಎಂದು ಕರೆಯಬಹುದೇನೊ? ಇಂತಹ ಕಾಲದಲ್ಲಿ ಬರೆದ ಕವಿಗಳು ಮಾರ್ಗ ಶೈಲಿಯಲ್ಲಿಯೇ ಬರೆದರೂ ಸಹ, ಕನ್ನಡದ ದೇಸಿ ಭಾಷೆಯನ್ನು ತಮ್ಮ ಕಾವ್ಯದಲ್ಲಿ ಹದನರಿತು ಬಳಸಿಕೊಂಡಿದ್ದಾರೆ. ಪಂಪನೇ ತನ್ನ ಮಹಾಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಈ ರೀತಿಯಾಗಿ ಹೇಳಿದ್ದಾನೆ:

“ಬಗೆ ಪೊಸತಪ್ಪುದಾಗಿ ಮೃದು ಬಂಧದೊಳೊಂದುವುದೊಂದಿ ದೇಸಿಯೊಳ್
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ, ಕಾವ್ಯಬಂಧಮೊ
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊರೆಯಿಂ ಬಳಲ್ದು ತುಂ
ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್”

ಸಾಮಾಜಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಉದ್ದೇಶವಾಗಿಟ್ಟುಕೊಂಡ ಶರಣಚಳವಳಿಯು (ಕ್ರಿಶ.೧೧೫೦) ಕನ್ನಡಕಾವ್ಯದ ಶೈಲಿಯನ್ನೇ ಬದಲಿಸಿತು. ಕವಿಗಳು ಬಳಸುವ ಭಾಷೆಯು ಸಾಮಾನ್ಯರು ಬಳಸುವ ಭಾಷೆಯಾಯಿತು. ಸಾಮಾನ್ಯ ಜನರಿಗಾಗಿ ಬರೆಯುತ್ತಿದ್ದ ಶರಣರು ಆಡುನುಡಿಯಲ್ಲಿಯೇ ತಮ್ಮ ಅಸಾಮಾನ್ಯ ವಚನಗಳನ್ನು ರಚಿಸಿದರು. ಶರಣರ ಅನೇಕ ವಚನಗಳು ಬೋಧನಾತ್ಮಕ ವಚನಗಳಾಗಿದ್ದವು.
ಉದಾಹರಣೆಗೆ: “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ;
“ಛಲ ಬೇಕು ಶರಣಂಗೆ ಪರಧನವನೊಲೆನೆಂಬ” ಇತ್ಯಾದಿ.
ಆದುದರಿಂದಲೆ ಆ ವಚನಕಾರ ಕವಿಗಳ ಭಾಷೆಯೂ ಸಹ ಸರಳ ಹಾಗೂ ನೇರ ಭಾಷೆಯಾಗಿರುತ್ತಿತ್ತು.

ಜೈನಕವಿಗಳಿಗೆ ಶಿಷ್ಟಮಾನ್ಯ ಕಾವ್ಯ ರಚಿಸುವ ಅವಶ್ಯಕತೆ ಇದ್ದರೆ ವೀರಶೈವ ಕವಿಗಳಿಗೆ ಜನಸಾಮಾನ್ಯರಿಗಾಗಿ ಕಾವ್ಯ ರಚಿಸುವ ಅವಶ್ಯಕತೆ ಇತ್ತು. ಹೀಗಾಗಿ ವಚನಕಾರರ ನಂತರ ಬಂದ ವೀರಶೈವ ಕವಿಗಳು ಬಳಸಿದ ಭಾಷೆಯು ಮಾರ್ಗಶೈಲಿಯ ಚಂಪೂರಚನೆಯನ್ನು ತ್ಯಜಿಸಿ ‘ದೇಸಿ ಶೈಲಿ’ಗೆ ಹೊರಳಿತು. ಹರಿಹರ ಹಾಗೂ ರಾಘವಾಂಕರು ಈ ಬದಲಾವಣೆಯ ನೇತಾರರು.

ಶಿವಭಕ್ತರ ಚರಿತ್ರೆಯನ್ನು ಬರೆಯಲು ಹರಿಹರನು (ಕ್ರಿ.ಶ.೧೨೦೦) ರಗಳೆಗಳ ರೂಪವನ್ನು ಬಳಸಿದನು. ಹರಿಹರನ ರಸಾವೇಶದ ಕಥನಕ್ಕೆ, ವರ್ಣನೆಗಳಿಗೆ, ಅನಿಯಮಿತ ಪಾದಸಂಖ್ಯೆಯುಳ್ಳ ರಗಳೆ ಯೋಗ್ಯ ವಾಹನವಾಯಿತು. ಬಸವಣ್ಣನು ಶಿವಪೂಜೆಗೈಯುತ್ತಿರುವಾಗ ಅವನಲ್ಲಿ ಮೂಡಿದ ಸಾತ್ವಿಕ ಆವೇಶವನ್ನು ಹರಿಹರನು ಬಣ್ಣಿಸುವಾಗ ಚಿಕ್ಕ ಚಿಕ್ಕ ಕ್ರಿಯಾಪದಗಳನ್ನೇ ದ್ವಿರುಕ್ತಿಗೊಳಿಸಿ, ಭಾವಾವೇಷವನ್ನು ಸಾಧಿಸುವ ಬಗೆ ಈ ರೀತಿಯಾಗಿದೆ:

ಮಣಿಮಣಿದು ಕುಣಿಕುಣಿದು ಕಲೆಕಲೆದು ನಲಿದಾಡಿ
ತಣಿತಣಿದು ತಕ್ಕೈಸಿ ಮಿಕ್ಕು ಮಲೆಮಲೆದಾಡಿ
ಆಡುತಾಡುತ್ತಲ್ಲಿ ಪೊಗುಳ್ವದೆ ನೆರೆ ಮರೆತು
ನೋಡನೋಡತ್ತಲ್ಲಿ ನೋಟಮಂ ಮಿಗೆ ಮರೆದು
ಕಣ್ಮುಚ್ಚಿ ಗದಗದಿಸಿ ಜೋಲ್ದು ಜೊಂಪಿಸಿ ಬಿದ್ದು
ಉಣ್ಮುವ ಶಿವಾನಂದರಸದ ಹೊನಲೊಳಗಿದ್ದು
ಈಸಾಡಿ ಗಂಗಾಧರನ ಚರಣಮಂ ಪಿಡಿದು
ಲೇಸಾಗಿ ಚಿತ್ತದೊಳು ಸಂಗನಂ ಸೆರೆ ಹಿಡಿದು

ಹರಿಹರನ ಶಿಷ್ಯನಾದ ರಾಘವಾಂಕನಿಗೆ ಷಟ್ಪದಿಗಳ ಮೊದಲಿಗ ಎನ್ನಬಹುದು. ರಾಘವಾಂಕನ ವಿಸ್ತಾರವಾದ ಕಥನಕ್ಕೆ, ನಾಟಕೀಯ ಸಂಭಾಷಣೆಗಳಿಗೆ ವಾರ್ಧಕ ಷಟ್ಪದಿಯೇ ಯೋಗ್ಯವಾದ ಸಾಧನವಾಯಿತು.
ಉದಾಹರಣೆಗಾಗಿ ಹರಿಶ್ಚಂದ್ರಕಾವ್ಯದಲ್ಲಿ ನಕ್ಷತ್ರಿಕನು ವಿಶ್ವಾಮಿತ್ರನಿಗೆ ಹೇಳುವ ಈ ನುಡಿಯೊಂದನ್ನು ನೋಡಿರಿ:

ಬಿಸಿಲಾಗಿ, ಬಿರುಗಾಳಿಯಾಗಿ, ಕಲು ನೆಲವಾಗಿ,
ವಿಷಮಾಗ್ನಿಯಾಗಿ, ನಾನಾ ಕ್ರೂರಮೃಗವಾಗಿ,
ಮಸಗಿ ಘೋರಾರಣ್ಯವಾಗಿ, ಗರ್ಜಿಸಿ ಕವಿದ ಭೂತಬೇತಾಳರಾಗಿ
ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂ
ಧಿಸಿ ಹುಂ ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ
ಹುಸಿಗೆ ಹುಂ ಕೊಳಿಸುವೆಂ ಭೂಭೂಜನನೆನ್ನಿಂದ ಬಲ್ಲಿದರಾರೆಂದನು

ಷಟ್ಪದಿಯ ದಾರಿಯಲ್ಲಿ ನಡೆದು, ಆಡುನುಡಿಯ ಭಂಡಾರವನ್ನೇ ಸೂರೆಗೈದವನು ಕುಮಾರವ್ಯಾಸ. (ಕ್ರಿ.ಶ. ೧೪೦೦). ಈತನ ಭಾಷೆಯಲ್ಲಿ ಕನ್ನಡದ ದೇಶಿ ಪದಗಳು ಹಾಗೂ ಕನ್ನಡದಲ್ಲಿ ಬೆರೆತ, ಅರಬಿ, ಪಾರಸಿ ಹಾಗೂ ಮರಾಠಿಯಿಂದ ಬಂದಂತಹ ಅನ್ಯದೇಶಿ ಪದಗಳು ಹೇರಳವಾಗಿವೆ. ರಾಘವಾಂಕನ ವಾರ್ಧಕ ಷಟ್ಪದಿಯು ವಿಸ್ತಾರ ಕಥನಕ್ಕೆ ಯೋಗ್ಯವಾಗುತ್ತಿತ್ತು. ಚುಟುಕಾದ ಪದಗಳಲ್ಲಿ ರಸಸೃಷ್ಟಿಯ ಉದ್ದೇಶವಿಟ್ಟುಕೊಂಡ ಕುಮಾರವ್ಯಾಸನು ಬಳಸಿಕೊಂಡದ್ದು ಭಾಮಿನಿ ಷಟ್ಪದಿಯನ್ನು.

ಆನಂತರದ (ಕ್ರಿ.ಶ. ೧೫೦೦) ವೀರಶೈವ ಕವಿಗಳಾದ ನಿಜಗುಣಿ ಶಿವಯೋಗಿ, ಸರ್ಪಭೂಷಣ ಶಿವಯೋಗಿ ಇವರ ಕಾಲದಲ್ಲಿ ಕನ್ನಡ ಭಾಷೆಯು ಹೊಸಗನ್ನಡಕ್ಕೆ ಹತ್ತಿರವಾಗಿತ್ತು. ಉನ್ನತ ತತ್ವಜ್ಞಾನವನ್ನು ಅವರು ಅಚ್ಚಕನ್ನಡದಲ್ಲಿಯೆ ಸರಳವಾಗಿ ಹೇಳಲು ಶಕ್ತರಾಗಿದ್ದರು. ಮುಪ್ಪಿನ ಷಡಕ್ಷರಿಯವರ ಈ ಗೀತೆ ಅದಕ್ಕೆ ಉದಾಹರಣೆಯಾಗಿದೆ:

ಅವರವರ ದರುಶನಕೆ, ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ, ಅವರವರ ಭಕ್ತಿಗೆ
ಅವರವರಿಗೆಲ್ಲ ದೇವ ನೀನೊಬ್ಬನೆ
ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ಎಲೆ ದೇವನೆ!

ಕ್ರಿ.ಶ.೧೭೦೦ರ ಸುಮಾರಿನಲ್ಲಿ ಜೀವಿಸಿದ ಸರ್ವಜ್ಞನು ಲೋಕಹಿತದ ಪದಗಳನು ಬರೆಯುವ ಉದ್ದೇಶದಿಂದ ತನ್ನ ಕಾವ್ಯಕ್ಕೆ ಜನಪದ ಛಂದಸ್ಸಾದ ತ್ರಿಪದಿಯನ್ನು ಬಳಸಿ ಜನಪದ ಕವಿಯೇ ಆದನು. ಇದೇ ಕಾಲದ (ಕ್ರಿ.ಶ.೧೬೭೫) ರಂಗನಾಥನು ಕವಿಗಳು ಬಳಸುವ ಭಾಷೆಯಾದ ಕನ್ನಡದ ಬಗೆಗೆ ಒಂದು ಅಂತಿಮ ನಿರ್ಣಯ ಕೊಟ್ಟಿದ್ದಾನೆ:

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?

ಈ ರೀತಿಯಾಗಿ ಕವಿಗಳು ಬಳಸುವ ಭಾಷೆಯಾದ ಕನ್ನಡವು ಆದಿಕವಿ ಪಂಪನಿಂದ ಸರ್ವಜ್ಞನವರೆಗೆ ವಿವಿಧ ರೀತಿಯಲ್ಲಿ ತನ್ನ ಬೆಡಗನ್ನು ತೋರಿಸಿ ಕನ್ನಡಿಗರನ್ನು ನಲಿಸಿತು. ಹಳೆಗನ್ನಡವು ನಡುಗನ್ನಡಕ್ಕೆ ಹಾಗೂ ನಡುಗನ್ನಡವು ಹೊಸಗನ್ನಡಕ್ಕೆ ಬದಲಾದಂತೆ ಕವಿಗಳಲ್ಲಿ ಕೇವಲ ಭಾಷೆಯ ಬದಲಾವಣೆ ಅಷ್ಟೇ ಅಲ್ಲ, ಸಂಕೇತಗಳಲ್ಲಿಯೂ ಸಹ ಆಶ್ಚರ್ಯಕರ ಬದಲಾವಣೆಗಳಾದವು.

ಉದಾಹರಣೆಗೆ ಮಾರ್ಗಸಂಪ್ರದಾಯದಲ್ಲಿ ವಸಂತ ಋತುವಿನ ಆಗಮನದ ಸಂಕೇತವಾಗಿದ್ದ, ಅಲಂಕಾರಶಾಸ್ತ್ರದ ಪುಟ್ಟ ಒಡವೆಯಾಗಿದ್ದ, ಕನ್ನಡ ಕವಿಗಳಿಗೆ ಪರಮಾಪ್ತವಾದ ಕೋಗಿಲೆಯು, ನಿಜಗುಣಿ ಶಿವಯೋಗಿಗಳ ಕವನದಲ್ಲಿ (“ಕೋಗಿಲೆ, ಚೆಲ್ವ ಕೋಗಿಲೆ”) ಮನಸ್ಸಿನ ಸಂಕೇತವಾಗಿದೆ. ನವೋದಯ ಕಾವ್ಯದಲ್ಲಿ ಬೇಂದ್ರೆಯವರು ತಮ್ಮ ಕವನಗಳಲ್ಲಿ ನಿಜಗುಣಿ ಶಿವಯೋಗಿಗಳನ್ನೇ ಅನುಸರಿಸಿದ್ದಾರೆ. (“ಮನದ ಮಾಮರದ ಕೊನಿಗೆ ಕೋಗಿಲೊಂದು ಕೂಗುತಿತ್ತ”). ಆದರೆ ಕುವೆಂಪು ಕೋಗಿಲೆಯನ್ನು ಕವಿಯ ಸ್ವಾತಂತ್ರ್ಯದ ಸಂಕೇತವಾಗಿ ಬಳಸಿದ್ದಾರೆ. (“ಕೋಗಿಲೆ ಹಾಗು ಸೋವಿಯಟ್ ರಶಿಯಾ”). ನವ್ಯಕಾವ್ಯದಲ್ಲಿ ನಿಸಾರ ಅಹಮದರು ಕಾಗೆಯನ್ನು ಕೋಗಿಲೆಗೆ ಪರ್ಯಾಯ ಸಂಕೇತವಾಗಿ ಬಳಸಿದ್ದಾರೆ. (“ಕಾಗೆ ಕೂಗದ ಮುನ್ನ ಏನಿತ್ತಣ್ಣ ಜಗದಿ?”)

ಹಳೆಯ ಛಂದೋಬದ್ಧ ಕಾವ್ಯಮಾರ್ಗವನ್ನು ತ್ಯಜಿಸಿ, ಕನ್ನಡ ಕಾವ್ಯಕ್ಕೆ ನವೋದಯದ ಮಾರ್ಗವನ್ನು ತೋರಿಸುವ ಅವಶ್ಯಕತೆಯನ್ನು ಕಂಡವರು ಕನ್ನಡದ ಕಣ್ವ ಶ್ರೀ ಬಿ.ಎಮ್. ಶ್ರೀಕಂಠಯ್ಯನವರು. ಇವರ ಸಮಯದಲ್ಲಿ, ಆಂಗ್ಲ ಪ್ರಭುತ್ವವು ತನ್ನ ವಿಚಾರ ಹಾಗು ತನ್ನ ಶಿಕ್ಷಣವನ್ನು ಭಾರತದ ಮೇಲೆ ಹೇರಿತ್ತು. ಹೀಗಾಗಿ ಆಂಗ್ಲ ಸಾಹಿತ್ಯದ ಪ್ರಭಾವವು ಭಾರತೀಯರ ಮೇಲೆ, ಅದರಂತೆ ಕನ್ನಡಿಗರ ಮೇಲೂ ಆಗಿತ್ತು.ಆಂಗ್ಲ ಸಾಹಿತ್ಯದ ಸವಿಯನ್ನು ಉಂಡ ಶ್ರೀಕಂಠಯ್ಯನವರು ಆಂಗ್ಲಭಾಷೆಯ ಭಾವಗೀತೆಗಳ ಸೊಗಸನ್ನು ಕನ್ನಡಕ್ಕೆ ತರಲು ಬಹುವಾಗಿ ಶ್ರಮಿಸಿದರು. ಅವರ ಮಾತಿನಲ್ಲಿಯೇ ಹೇಳುವದಾದರೆ:
“ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ,
ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ.”
ಅದುದರಿಂದ ಇಂದಿನ ಕವಿಗಳು ಬಳಸುವ ಕನ್ನಡ ಭಾಷೆಯು ಶ್ರೀಕಂಠಯ್ಯನವರ ಕೊಡುಗೆ ಎನ್ನಬಹುದು.

ನವೋದಯ ಕಾಲವು ಆದರ್ಶದ ಕಾಲ, ನಿಸರ್ಗಪ್ರೇಮದ ಕಾಲ. ಇದರ ಫಲವಾಗಿ ನವೋದಯದ ಕವಿಗಳು ನಾಡಪ್ರೇಮದ ಬಗೆಗೆ, ನಿಸರ್ಗದ ಬಗೆಗೆ , ಕನ್ನಡದ ಅಭಿಮಾನದ ಬಗೆಗೆ ವಿಪುಲವಾಗಿ ಬರೆದರು. ನವೋದಯ ಕಾಲದ ಪ್ರಮುಖ ಕವಿಗಳೆಂದರೆ ಬೇಂದ್ರೆ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ ಹಾಗೂ ಜಿ.ಪಿ.ರಾಜರತ್ನಮ್. ಈ ನಾಲ್ವರೂ ಕಾವ್ಯರಚನೆಯಲ್ಲಿ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮದೇ ಕವಿಭಾಷೆಯನ್ನು ರೂಪಿಸಿದರು. ಈ ಕವಿಗಳಲ್ಲಿ ಬೇಂದ್ರೆಯವರದು ಸರಳ ಭಾಷೆಯಾದರೆ, ಕುವೆಂಪುರವರದು ಅಲಂಕಾರಿಕ ಭಾಷೆ. ನರಸಿಂಹಸ್ವಾಮಿಯವರದು ಆಪ್ತಭಾಷೆ. ರಾಜರತ್ನಮ್ ಅವರದು ಆಡುನುಡಿಯ ವೇಷವನ್ನು ತೊಟ್ಟ ಭಾಷೆ.

ಬೇಂದ್ರೆಯವರದು ಅತ್ಯಂತ inter active ಸ್ವಭಾವ. ಅವರ ಪಾಂಡಿತ್ಯವೂ ಅಗಾಧವಾದದ್ದು. ಅದರೊಡನೆ ಅವರಿಗೆ ಒಲಿದ ಬಂದ ಮಾತಿನ ಚತುರತೆ. ಹಾಗೆಂದು ಅವರು ಬರೆಯುವವದು ಪಂಡಿತರಿಗಾಗಿ ಅಲ್ಲ. ಸಂತೆಯಲ್ಲಿಯ ಸಾಮಾನ್ಯ ಮನುಷ್ಯನನ್ನು ಗೆಳೆಯನಂತೆ ಗಣಿಸಿ ಹರಟೆ ಹೊಡೆಯುವ ರೀತಿಯ ಕಾವ್ಯಭಾಷೆ ಅವರದು. ಇವೆಲ್ಲಾ ಒಟ್ಟುಗೂಡಿ ಅವರ ಕವನದ ಭಾಷೆಯನ್ನು ರೂಪಿಸಿವೆ.
ಬೇಂದ್ರೆ ಕಾವ್ಯವು ಜನಪದ ಸತ್ವವನ್ನು ಹೀರಿದ ಕಾವ್ಯ. ಅವರು ತಮ್ಮ ಕೇಳುಗರಿಂದ ಬಯಸುತ್ತಿದ್ದದ್ದು ಶ್ರಾವಕನ ಸಹ-ಅನುಭೂತಿಯನ್ನು.
“ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ, ಆ ಸವಿಯ ಹಣಿಸು ನನಗೆ.”, ಎನ್ನುತ್ತಾರೆ ಬೇಂದ್ರೆ.
ಈ ತರಹದ ಕಾವ್ಯದ ಅತ್ಯುತ್ತಮ ಉದಾಹರಣೆಗಳೆಂದರೆ ‘ಬೆಳದಿಂಗಳ ನೋಡs’, ‘ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾವಾ’ ಇತ್ಯಾದಿ.

ಆದರೆ ಈ ಕಾರಣದಿಂದಲೇ ಅವರ ಭಾಷೆ ಕೆಲವೊಮ್ಮೆ ಅತಿ ಸರಳವಾಗಿ ಬಿಡುತ್ತದೆ. ಒಳಗಿನ ಭಾವ ಎಷ್ಟೇ ಸಂಕೀರ್ಣವಾಗಿರಲಿ, ಹೊರಗಿನ ಮುಖಮುದ್ರೆ ಅತಿ ಸರಳ.
ಇದು ಅವರ ಕಾವ್ಯಭಾಷೆಯ ದೋಷವೆಂದೇ ಹೇಳಬೇಕಾಗುತ್ತದೆ.

ಉದಾಹರಣೆಗೆ, ‘ಕರಡಿ ಕುಣಿತ’ವೆನ್ನುವ ಅವರ ಕವನದ ಈ ನುಡಿಯನ್ನು ನೋಡಿರಿ:
“ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ
ಧಣಿ ದಾನ ಕೊಡುವನು ಎಂದಾನೊ.”

ಕರಡಿ ಕುಣಿಸುವವನ ಸಾಧಾರಣ ಮಾತುಗಳಂತೆ ತೋರುವ ಈ ಸಾಲುಗಳಲ್ಲಿ ಹುದುಗಿದ ಅರ್ಥ ಅಸಾಧಾರಣವಾದದ್ದು. ಕಾಡಾಡಿಯಾದ ಮಾನವನು, ತನ್ನ ಆದಿಮಾನವನ ಅವಸ್ಥೆಯಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದವನು, ನಾಗರಿಕತೆ ಬೆಳೆದಂತೆ feudal ವ್ಯವಸ್ಥೆಗೆ ಹೇಗೆ ಬಲಿಯಾದನು ಎನ್ನುವ ವರ್ಣನೆ ಇಲ್ಲಿದೆ.
ಈ ಆದಿಮಾನವ ಸಮಾಜ ಎಷ್ಟು ಹಳೆಯದು ಆತ ಎಷ್ಟು ಸ್ವಚ್ಛಂದವಾಗಿ ಬದಕುತ್ತಿದ್ದ ಎನ್ನುವದನ್ನು ಈ ಮತ್ತೊಂದು ನುಡಿಯಲ್ಲಿ ನೋಡಬಹುದು:

“ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನೋ
ಜಂಬೂನದಿ ದಂಡೀಯ ಜಾಂಬುನೀರಲ ಹಣ್ಣು
ಕಲಿಯುಗದ ಕೊನೆಗೀವ ಉಂಡಾನೋ”

(ಜಾಂಬುವಂತ ಎನ್ನುವ communityಯು ಭಾರತದ ಅತ್ಯಂತ ಹಳೆಯ communityಗಳಲ್ಲಿ ಒಂದು ಎನ್ನುವದನ್ನು ಗಮನಿಸಬೇಕು.)
ಈ ವಿಶೇಷ ಅರ್ಥವು ಕವನದ ಸರಳ ಭಾಷೆಯಲ್ಲಿ ಎದ್ದು ಕಾಣುವದಿಲ್ಲ.

“ಕರಿಮರಿ ನಾಯಿ” ಎನ್ನುವ ಅವರ ಮತ್ತೊಂದು ಕವನದಲ್ಲಿಯೂ ಈ ದೋಷವನ್ನು ಕಾಣಬಹುದು.
“ಕರಿಮರಿ ನಾಯಿ ಕುಂಯ್ ಗುಡುತಿತ್ತು
ಭಟ್ಟರ ಬಾಯಿ ಒಟಗುಡತಿತ್ತು
ಬೆಚ್ಚನ ಮನೆಯ ಹೊಚ್ಚಲದೊಳಗೆ
ನಿಂತರು ಭಟ್ಟರು ಹಣಕುತ ಹೊರಗೆ”

ಈ ನುಡಿಯಲ್ಲಿಯ ‘ಭಟ್ಟರ ಬಾಯಿ ಒಟಗುಡತಿತ್ತು’ ಎನ್ನುವ ಸಾಲಿನಲ್ಲಿ ಅರ್ಥಹೀನ ಪುರೋಹಿತಶಾಹಿಯ ಪ್ರಾಬಲ್ಯವನ್ನೂ, ‘ಬೆಚ್ಚನ ಮನೆಯ ಹೊಚ್ಚಲದೊಳಗೆ’ ಎನ್ನುವ ಸಾಲಿನಲ್ಲಿ ಸುಭದ್ರ ಜೀವನದ ವರ್ಣನೆಯನ್ನೂ ಕಾಣಬಹುದು. ಆದರೆ ‘ಬಂಡಾಯಗಾರರ’ ಕಣ್ಣಿಗೆ ಈ ಸರಳ ಸಾಲುಗಳಲ್ಲಿಯ ವೈಚಾರಿಕತೆ ಕಾಣದೇ ಹೋಗುತ್ತದೆ.

ನವೋದಯ ಯುಗದ ಮತ್ತೊಬ್ಬ ಮಹತ್ವದ ಕವಿ ಎಂದರೆ ಕುವೆಂಪು. ಕುವೆಂಪುರವರ ಕಾವ್ಯಭಾಷೆಯ ವೈಶಿಷ್ಟ್ಯಗಳೆಂದರೆ ಸಂಸ್ಕೃತಭೂಯಿಷ್ಠವಾದ, ವಾಗಾಡಂಬರದ ಪದಸಂಯೋಜನೆ ಹಾಗೂ ಆದೇಶಶೈಲಿ. ಇಂತಹ ಕಾವ್ಯಭಾಷೆಯನ್ನು ಬಳಸಲು ಅವರಿಗಿದ್ದ ಕಾರಣಗಳೇನು? ಅವರ ಕವನಗಳಲ್ಲಿ ಸಂಸ್ಕೃತಪದಗಳ ಬಾಹುಲ್ಯಕ್ಕೆ ಮೂರು ಕಾರಣಗಳಿವೆ. ಮೊದಲನೆಯದು ಕರ್ಣಮಧುರ ಪದಸಂಯೋಜನೆಯ ಉದ್ದೇಶ. ಎರಡನೆಯ ಉದ್ದೇಶವೆಂದರೆ ಕುವೆಂಪುರವರ ಒಂದು ವೈಯುಕ್ತಿಕ ಮನೋಧರ್ಮ. ಅವರ ಕಾದಂಬರಿ (ಕಾನೂರು ಸುಬ್ಬಮ್ಮ ಹೆಗ್ಗಡಿತಿ)ಯ ನಾಯಕನಾದ ಹೂವಯ್ಯನು ಕುವೆಂಪುರವರ ಪ್ರತ್ಯಾತ್ಮ (alter ego)ನಾಗಿದ್ದಾನೆ ಎನ್ನಲಾಗುತ್ತದೆ. ಸಾಮಾನ್ಯ ಜನತೆಯಿಂದ ಹೂವಯ್ಯನು ಮಾನಸಿಕವಾಗಿ ಎಷ್ಟು ದೂರವಿದ್ದನೋ, ಕುವೆಂಪು ಸಹ ಮಾನಸಿಕವಾಗಿ ಅಷ್ಟೇ ದೂರವಿದ್ದರು ಎನ್ನಬಹುದು. ಹೀಗಾಗಿ ಕುವೆಂಪುರವರು ಎಷ್ಟೇ ಜನಪರ ಕವಿಯಾಗಿದ್ದರೂ ಸಹ ಜನತೆಯಿಂದ ಒಂದು ವಿಶಿಷ್ಟ ದೂರವನ್ನು ಕಾಯ್ದುಕೊಳ್ಳಲು ಬಯಸುತ್ತಿದ್ದರು. ಹೀಗಾಗಿ ಆಡುನುಡಿಯ ಶೈಲಿ ಅವರ ಕಾವ್ಯದಲ್ಲಿ ಸಹಸಾ ಕಂಡುಬರುವದಿಲ್ಲ. ಮೂರನೆಯ ಉದ್ದೇಶವೆಂದರೆ ಕುವೆಂಪು ತಮ್ಮ ಕವನಗಳ ಮೂಲಕ ಓದುಗರಿಗೆ ಒಂದು ವಿಚಾರವನ್ನು ತಲುಪಿಸಲು ಬಯಸುತ್ತಿದ್ದರು. ಆದರೆ ಈ ವಿಚಾರವನ್ನು ಸರಳವಾದ ಭಾಷೆಯಲ್ಲಿ ನೀಡುವದು ಸಾಧ್ಯವಿರಲಿಲ್ಲ. ಸರಳವಾದ ಭಾಷೆಯಲ್ಲಿ ವಿಚಾರವನ್ನು ಮಂಡಿಸಿದ ಬೇಂದ್ರೆಯವರ ಕವನಗಳು ಅಯಶಸ್ವಿಯಾಗಿದ್ದನ್ನು ನಾವು ನೋಡಿದ್ದೇವೆ. ಇಂತಹ ತಪ್ಪನ್ನು ಕುವೆಂಪು ಮಾಡಲಿಲ್ಲ.
ಇದಕ್ಕೆ ಉದಾಹರಣೆಯಾಗಿ ಕುವೆಂಪು ಅವರ ಕವನವೊಂದರ ಈ ಸಾಲನ್ನು ನೋಡಿ:
“ಬಾಗಿಲಲಿ ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ”

ಈ ಸಾಲುಗಳಲ್ಲಿ ಕವಿ ಓದುಗನಿಗೆ ‘ನೀನು ಭಾರತೀಯ ಪರಂಪರೆಯ ಈ ಕಲೆಯನ್ನು ಗೌರವಿಸು’ ಎಂದು ಹೇಳಬಯಸುತ್ತಾನೆ. ಆದರೆ ಈ ಆದೇಶವನ್ನು ನೇರನುಡಿಯಲ್ಲಿ, ಆಡುಮಾತಿನಲ್ಲಿ ಹೇಳಲು ಇಷ್ಟಪಡದ ಕವಿ ಸಂಸ್ಕೃತ ಭೂಯಿಷ್ಠ ಭಾಷೆಯ ಮೂಲಕ ಸುತ್ತು ಬಳಸಿ ಹೇಳುತ್ತಿದ್ದಾರೆ.

ಇದರಂತೆ ಅವರ ಮತ್ತೊಂದು ಕವನದ ಕೆಲವು ಸಾಲುಗಳನ್ನು ನೋಡಿರಿ:
“ಓ ನನ್ನ ಚೇತನಾ, ಆಗು ನೀ ಅನಿಕೇತನಾ!”
ತಮ್ಮನ್ನೇ ಸಂಬೋಧಿಸುತ್ತಿರುವಂತೆ ತೋರುವ ಈ ಸಾಲಿನಲ್ಲಿ ಕುವೆಂಪು , ಒಂದು ಸಾರ್ವಜನಿಕ ಕರೆಯನ್ನೇ ನೀಡುತ್ತಿದ್ದಾರೆ: “ನಿಮ್ಮ ಪರಿಮಿತ ಹಾಗೂ ಸ್ವಾರ್ಥಪೂರ್ಣ ಉಪಾಧಿಗಳನ್ನು ತ್ಯಜಿಸಿರಿ” ಎಂದು.
ಹಾಗೆಂದು ಅವರ ಸಂಸ್ಕೃತ ಭೂಯಿಷ್ಠ ಆದೇಶಗಳು ಯಾವಾಗಲೂ ಯಶಸ್ವಿಯಾಗಿವೆ ಅಂತಲ್ಲ.
ಉದಾಹರಣೆಗೆ ಈ ಕವನವನ್ನು ನೋಡಿರಿ:

“ ಪ್ರಿಯ ಬಂಧು ಇದೆ ಹೊತ್ತು ಧ್ಯಾನಕ್ಕೆ: ಹೃದ್ಗ್ರಂಥ
ಪ್ರಳಯಕ್ಕೆ; ಏಳು ಸಮಾಧಿಸ್ಥಾ ವಿಶ್ವದಲ್ಲಿ
ತಲ್ಲೀನವಾಗುವಂ ಛವಿ ಕವಿಯೊಳಾಗುವಂತೆ”.

ಇಲ್ಲಿ ಕವಿ ಬಳಸಿದ ಸಂಸ್ಕೃತ ಭಾಷೆಯೇ ಕೃತಕವಾಗುತ್ತದೆ. ತಲ್ಲೀನತೆ ತಾನಾಗಿ ಬರಬೇಕಲ್ಲದೆ, ಅದನ್ನು ಆಹ್ವಾನಿಸಲಾಗದು.
ಆಡುನುಡಿಯಲ್ಲಿ, ಸರಳ ಕನ್ನಡದಲ್ಲಿ ಆದೇಶವನ್ನು ನೀಡಿದಂತಹ ಕುವೆಂಪುರವರ ಕವನಗಳೂ ಸಹ ಅಯಶಸ್ವಿಯಾಗಿವೆ. ಉದಾಹರಣೆಗೆ ಈ ಕವನವನ್ನು ನೋಡಿರಿ:

“ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ, ಬೇಗ ಸಖಿ
ಬೃಂದಾವನದಿ ಹಾಲನು ಕೊಳ್ಳುವರಾರಿಹರೆ ಹೇಳಿಂದುಮುಖಿ”

ಭಾರತದ ಕೋಗಿಲೆ ಎಂದು ಹೆಸರಾದ ಶ್ರೀಮತಿ ಸರೋಜಿನಿ ನಾಯಡು ಅವರು ಬರೆದ ಕವನವೊಂದನ್ನು ಈ ಕವನವು ಹೋಲುತ್ತದೆ. ಸರೋಜಿನಿ ನಾಯಡು ಅವರ ಆ ಮನೋಹರ ಕವನದಲ್ಲಿ, ಹಾಲು ಮಾರುವ ಗೋಪಿಕಾ ಸ್ತ್ರೀಯಲ್ಲಿ ಕಂಡು ಬರುವುದು ಆತ್ಮಸಮರ್ಪಣೆ ಹಾಗೂ ಸತತ ಕೃಷ್ಣಧ್ಯಾನ. ಆದರೆ ಕುವೆಂಪುರವರ ಕವನದಲ್ಲಿ ಕಂಡುಬರುವದು ದೈಹಿಕ ಶೃಂಗಾರ ಲೋಲುಪತೆ ಹಾಗೂ ಆದೇಶಶೈಲಿ. ಕುವೆಂಪುರವರ ಕವನದ ಗೋಪಸ್ತ್ರೀ ತನ್ನ ಸಖಿಗೆ ಹೇಳುವದು ಹೀಗೆ:
“ತೊಂಡೆಯ ಹಣ್ಣನು ತುಟಿಗಳು ನಗಲಿ,
ವದನವು ಮೀರಲಿ ತಾವರೆಯ”.

‘ಕೃಷ್ಣದರ್ಶನಕ್ಕೆ ಹೋಗುವಾಗ ನಿನ್ನ ತುಟಿಗಳು ತೊಂಡೆಯ ಹಣ್ಣುಗಳಂತೆ ಕೆಂಪಾಗಿ ಕಾಣಿಸಲಿ’ ಎಂದು ಗೋಪಸ್ತ್ರೀ ತನ್ನ ಸಖಿಗೆ ಆದೇಶ ನೀಡುತ್ತಿದ್ದಾಳೆ. ಈ ಆದೇಶದಲ್ಲಿ ಮಹತ್ವವಿರುವದು ದೈಹಿಕ ಸೌಂದರ್ಯಕ್ಕೆ!
ದೈಹಿಕ ಸೌಂದರ್ಯದ ಆರಾಧನೆ ಕುವೆಂಪುರವರ ಕವನಗಳ ಮತ್ತೊಂದು ಲಕ್ಷಣ. ಅವರ ಜನಪ್ರಿಯ ಕವನವಾದ “ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ” ಇದರ ಈ ಸಾಲುಗಳನ್ನು ಗಮನಿಸಿರಿ:

“ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.”

ಈ ಸಾಲುಗಳಲ್ಲಿ “ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ” ಎನ್ನುವ ಪದಗಳು ಸೂಕ್ಷ್ಮಜ್ಞ ಓದುಗನಲ್ಲಿ ತಟಕ್ಕನೆ ಒಂದು ತರಹದ ಅರುಚಿಯನ್ನು ಹುಟ್ಟಿಸುತ್ತವೆ. ‘ಮೂಡುವೆಣ್ಣಿ’ಗೆ ಸರೂಪವಾದ ‘ಬೆಲೆವೆಣ್ಣು’ ಎನ್ನುವ ಪದ ಮಿಂಚಿನಂತೆ ಮನಸ್ಸಿನಲ್ಲಿ ಹೊಳೆದು ಹೋಗುತ್ತದೆ. ಮತ್ತು ಇಂತಹ ಒಂದು ಕಾರಣಕ್ಕಾಗಿ “ಆಕೆಗೆ ಸುಪ್ರಭಾತವ ಬಯಸಿರಿ” ಎನ್ನುವ ಆದೇಶ ಓದುಗನಲ್ಲಿ ಹುಟ್ಟಿದ ಅರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಕವನದ ಕೊನೆಯ ಸಾಲೂ ಸಹ ಆದೇಶದಲ್ಲಿಯೇ ಕೊನೆಯಾಗುತ್ತದೆ: “ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇರಲಿ ಈದಿನ ಇಂದಿಗೆ.”
ಸೂಕ್ಷ್ಮಗ್ರಾಹಿ ಓದುಗನಿಗೆ ಇಂತಹ ಅದೇಶಶೈಲಿ ಹಾಗೂ ದೈಹಿಕ ಶೃಂಗಾರ ಲೋಲುಪತೆ ಸರಿ ತೋರದು. ಇಲ್ಲಿಯೂ ಸಹ ಆಡುನುಡಿಯ ಬಳಕೆಯೇ ಈ ವ್ಯತ್ಯಸ್ತ ಪರಿಸ್ಥಿತಿಗೆ ಕಾರಣವಾಗಿರಬಹುದು. ಆದರೂ ಸಹ ಕುವೆಂಪುರವರ ಈ ಕವನ ತುಂಬ ಜನಪ್ರಿಯವಾಗಿದೆ. ಈ ಕವನದ ಕರ್ಣಮಧುರತೆಯೇ ಅದಕ್ಕೆ ಕಾರಣವಾಗಿರಬಹುದು.

ಅನೇಕ ಸಲ ಕುವೆಂಪುರವರ ಸಂಸ್ಕೃತಭೂಯಿಷ್ಠ ವಾಗಾಡಾಂಬರದ ಭಾಷೆಯು ಅನುಕೂಲಕರ ಪರಿಣಾಮವನ್ನೇ ಉಂಟು ಮಾಡುತ್ತದೆ. ಈ ಭಾಷೆಯ ಅನುಕೂಲವೆಂದರೆ ಸಾಧಾರಣ ಕಾವ್ಯವೂ ಅಸಾಧಾರಣವಾಗಿಯೇ ತೋರುವದು. ಕವನದಲ್ಲಿ ವೈಚಾರಿಕತೆ ಇದ್ದಂತೆ ಭಾಸವಾಗುವದು. ಈ ವಾಗಾಡಂಬರದ (high sounding) ಶಬ್ದಜಾಲದಲ್ಲಿ ಕಾವ್ಯದ ವಾಗರ್ಥವು ಅಳಿಸಿ ಹೋದರೆ ಆಶ್ಚರ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಈ ಮೊದಲು ಉದ್ಧರಿಸಿದ ಅವರ ಕವನವೊಂದರ ಸಾಲುಗಳನ್ನೇ ಮತ್ತೊಮ್ಮೆ ನೋಡಿರಿ:
“ಬಾಗಿಲಲಿ ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ”

“ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ” ಎಂದು ಹೇಳುವಾಗ ಕುವೆಂಪು ಪ್ರಾಸದ ಬಲೆಗೆ ಸಿಕ್ಕು ಬಿದ್ದಿರುವರೆಂದು ಅನ್ನಿಸದೇ ಇರದು. ಅಲ್ಲದೆ ‘ಕಲೆಯ ಬಲೆಯು’ ಅನ್ನುವಾಗ ಕಲೆಯು ಬಲೆಯಾಗಲು ಹೇಗೆ ಸಾಧ್ಯ ಎನ್ನುವ ಸಂದೇಹ ಬಾರದಿರದು. ಈ ದೋಷಗಳ ಹೊರತಾಗಿಯೂ ಸಹ ಈ ಕವನ ಜನಪ್ರಿಯವಾಗಲು ಕಾರಣವೆಂದರೆ (೧) ಕರ್ಣಮಧುರ ಭಾಷೆ (೨) ಆದೇಶಶೈಲಿ (೩) ಹಾಗೂ ವಾಗಾಡಂಬರ.

ತಮ್ಮ ಕಾವ್ಯದಲ್ಲಿ ಇಂತಹ ಭಾಷೆಯನ್ನು ಬಳಸಿದ ಕುವೆಂಪು ತಮ್ಮ ಕಾದಂಬರಿಯಲ್ಲಿ ಬಳಸುವ ಭಾಷೆಯೇ ಬೇರೆ.
ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ನಿಸರ್ಗದ ಮಡಿಲಲ್ಲಿಯೇ ಬೆಳೆದ ಒಂದು ಗಂಡು,ಅಂತಹದೇ ಒಂದು ಹೆಣ್ಣಿನ ಜೊತೆಗೆ ನಿಸರ್ಗದಲ್ಲಿಯೇ ಕೂಡುವ ಒಂದು ಸಂದರ್ಭವನ್ನು ಕುವೆಂಪು ಇಲ್ಲಿ ಬರೆದಿದ್ದಾರೆ. ಇಲ್ಲಿ ಬಳಸಿದ ಭಾಷೆ ಅಚ್ಚಕನ್ನಡ. ಅದಕ್ಕೆ ಕಾರಣವೆಂದರೆ ಕುವೆಂಪು ಯಾವುದು ಸಹಜವೋ ಅದನ್ನು ಸಹಜವೆನ್ನುವಂತೆ ತೋರಿಸಲು ಬಯಸುತ್ತಾರೆ. ಇಲ್ಲಿ ಸಂಸ್ಕೃತ ಭಾಷೆಯ ಪದಗಳನ್ನು ಬಳಸಿದ್ದರೆ, ಈ ಕೂಟವು ಸಹಜಕ್ರಿಯೆ ಆಗುತ್ತಿರಲಿಲ್ಲ. ಬದಲು ಶೃಂಗಾರವರ್ಣನೆ ಆಗುತ್ತಿತ್ತು. ಆದುದರಿಂದ ಇಲ್ಲಿಯ ರತಿಕ್ರೀಡೆಯ ವರ್ಣನೆಯನ್ನು ಓದಿದಾಗ ಅದು ಸಹಜಕ್ರಿಯೆಯಂತೆಯೇ ಭಾಸವಾಗುತ್ತದೆ. ನಿಸರ್ಗದ ಮಕ್ಕಳ ಸಹಜ ಮನಸ್ಸಿನ ಸಹಜಭಾವವು ಅತ್ಯಂತ ಸಹಜವಾಗಿಯೇ ವ್ಯಕ್ತವಾಗುತ್ತದೆ.

ನವ್ಯಕಾವ್ಯದ ಜನಕರಾದ ಗೋಪಾಲಕೃಷ್ಣ ಅಡಿಗರ ನವ್ಯಕಾವ್ಯಭಾಷೆಯು ಬೇಂದ್ರೆಯವರ ಸರಳಭಾಷೆಗೆ ಅತ್ಯಂತ ವಿರುದ್ಧವಾದ ಭಾಷೆ. ಅಡಿಗರು ತಮ್ಮ ಕವನಗಳಲ್ಲಿ ಇಂಗ್ಲಿಶ್, ಸಂಸ್ಕೃತ ಹಾಗೂ ಉರ್ದು/ಹಿಂದಿ ಪದಗಳನ್ನು ಮೋಹಕವಾಗಿ ಪೋಣಿಸುತ್ತಾರೆ.
ಉದಾಹರಣೆಗಳು:

“ಈಡಿಪಸ್ಸಿನ ಗೂಢಪಾಪಲೇಪಿತ ನಾನು;
ಟ್ರ್ಯಾಕ್ಟರನ್ನೇರಿದೆನು; ಉತ್ತೆ, ಸಿಗಿದೆ.
ಬಿತ್ತಿದೆನು, ಬೆಳೆದೆ ಅಟಂಬಾಂಬು ಕಾಳುಗಳ:
ಮಾರಕ ಕ್ರಿಮಿಪೈರ ಗೋರಿ ನಲಿದೆ.”

“ಕುಡಿದು ಬಿಟ್ಟಿದೆ ಕಣೊ ಕಡಲ ಪಡಖಾನೆಯಲಿ
ನೊರೆಗರೆವ ವ್ಹಿಸ್ಕಿ ಸೋಡಾ”

“ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆಯೆ ಮುಟ್ಟೆನೆಂಬುಡಾಫೆ”.

ಆದರೆ, ಬೇಂದ್ರೆಯವರಿಗೆ ಹಾಗೂ ಅಡಿಗರಿಗೆ ಇರುವ ಮುಖ್ಯ ವ್ಯತ್ಯಾಸವು ಭಾಷೆಯ ಶೈಲಿಯಲ್ಲಿ ಇರದೆ, ಕಾವ್ಯೋದ್ದೇಶದಲ್ಲಿ ಇದೆ. ಬೇಂದ್ರೆಯವರ ಕಾವ್ಯಾಂತರಂಗದಲ್ಲಿ ಇರುವದು mystical ಅನುಭವ. ಅಡಿಗರ ಕವನಗಳಲ್ಲಿ ಇರುವದು intellectual revelation. ಬೇಂದ್ರೆಯವರು ತಮ್ಮ ಕಾವ್ಯವನ್ನು mystify ಮಾಡುತ್ತಾರೆ. ಅಡಿಗರು ತಮ್ಮ ಕವನಗಳನ್ನು demystify ಮಾಡುತ್ತಾರೆ.

ನವೋದಯ ಕಾಲದ ಮತ್ತೊಬ್ಬ ಪ್ರಮುಖ ಕವಿ ಎಂದರೆ ಕೆ.ಎಸ್. ನರಸಿಂಹಸ್ವಾಮಿ. ಇವರ ಕಾವ್ಯಕ್ಕೆ ಒಲವೇ ಮೂಲಸ್ರೋತ. ಕನ್ನಡವನ್ನು ‘ಕವಿಗಳು ಬಳಸುವ ಭಾಷೆ’ ಎಂದು ಕರೆದ ಇವರ ಭಾಷೆ ಸುಕೋಮಲ ಭಾಷೆ, ಮೈಸೂರು ಮಲ್ಲಿಗೆಯ ಹಾಗೆ. ಅಡಿಗರು ನರಸಿಂಹಸ್ವಾಮಿಗಳ ಕಾವ್ಯವನ್ನು ‘ತೆಳು ಅನುಭವದ ಕಾವ್ಯ’ ಎಂದು ಟೀಕಿಸಿದ್ದು ದೊಡ್ಡ ತಪ್ಪು ಹಾಗೂ ನರಸಿಂಹಸ್ವಾಮಿಗಳಿಗೆ ಮಾಡಿದ ಅನ್ಯಾಯ. ಇದಕ್ಕೆ ಉತ್ತರವಾಗಿ ನರಸಿಂಹಸ್ವಾಮಿಗಳು ತಮ್ಮ ಭಾಷೆಯು “ಇಬ್ಬರು ಆಪ್ತಮಿತ್ರರು ಸಂಜೆಯ ಸಮಯದಲ್ಲಿ ಜೊತೆಯಾಗಿ ಕುಳಿತು ಮಾತನಾಡಿದಂತೆ” ಎಂದು ತಮ್ಮ ಕವನವೊಂದರಲ್ಲಿ ವರ್ಣಿಸಿದ್ದಾರೆ. ಅಲ್ಲದೆ ಅಡಿಗರ ಕವನವನ್ನು “ಯಕ್ಷಗಾನದ ಅಬ್ಬರ” ಎಂದು ಕರೆದಿದ್ದಾರೆ.

“ರತ್ನನ ಪದಗಳು” ಮೂಲಕ ರಾಜರತ್ನಮ್ ಪ್ರಸಿದ್ಧರಾದರು. ತಮ್ಮ ಕವನಗಳಲ್ಲಿ ಬಳಸಿದ ‘ಕುಡುಕನ ಆಡುಭಾಷೆ’ಯನ್ನು ಅರಿತುಕೊಳ್ಳುವ ಉದ್ದೇಶದಿಂದ ತಾವು ವೇಷ ಮರೆಸಿಕೊಂಡು ಕುಡುಕರ ಅಡ್ಡಾಗಳ ಸುತ್ತಮುತ್ತ ಸುಳಿದದ್ದಾಗಿ ರಾಜರತ್ನಮ್ ಹೇಳುತ್ತಾರೆ. ಆದರೆ, "ರಾಜರತ್ನಮ್ ಅವರ ಭಾಷೆ ನಿಜವಾಗಿಯೂ ಕುಡುಕರ ಆಡುಭಾಷೆ ಅಲ್ಲ, ಇದೊಂದು ಕೃತಕ ಭಾಷೆ" ಎಂದು ಲಂಕೇಶರವರು ಟೀಕಿಸಿದ್ದಾರೆ. ಇದೊಂದು ತುಂಬ ಅನುದಾರವಾದ ಟೀಕೆ.

ನೇರವಾಗಿ ಹೇಳಲಾಗದ್ದನ್ನು ಕುವೆಂಪು ಸಂಸ್ಕೃತಭೂಯಿಷ್ಠ ಭಾಷೆಯನ್ನು ಬಳಸಿ ಹೇಳಿದರು. ರಾಜರತ್ನಮ್ ಸಹ ಅದೇ ಕಾರಣಕ್ಕಾಗಿ ನೇರವಾಗಿ ಹೇಳಲಾಗದ್ದನ್ನು ಕೃತಕ ಆಡುನುಡಿಯ ಮೂಲಕ ಹೇಳಿದರು.
ಬುದ್ಧಿವಂತ ನಾಗರಿಕನು ಹೇಳಿದರೆ ಯಾವುದು ಆಭಾಸವಾಗಿ ಕಾಣುತ್ತದೆಯೊ ಅದನ್ನು ವಿದ್ಯೆಯಿಲ್ಲದ ಕುಡುಕನೇ ಹೇಳಬೇಕಷ್ಟೆ. ನಿಜ ಹೇಳಬೇಕೆಂದರೆ ರತ್ನನ ಪದಗಳ ಭಾಷೆ ಕುಡುಕನ ಭಾಷೆ ಅಲ್ಲ; ಇದೂ ಸಹ ಕವಿಗಳು ಬಳಸುವ ಭಾಷೆಯೇ.
ರಾಜರತ್ನಮ್ ಅವರ ಕವನವೊಂದನ್ನು ನಿದರ್ಶನವೆಂದು ಹಾಗೂ ಈ ಲೇಖನದ ಮಂಗಳಗೀತೆಯೆಂದು ಇಲ್ಲಿ ಕೊಡುತ್ತಿದ್ದೇನೆ.

ಯೆಂಡಾ, ಯೆಡ್ತಿ, ಕನ್ನಡ ಪದಗೋಳ್
ಅಂದ್ರೆ ರತ್ನಂಗ್ ಪ್ರಾಣಾ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ ಪದಗೋಳ್ ಬಾಣಾ!

ಬಗವಂತ್ ಏನಾರ್ ಬೂಮಿಗಿಳ್ದು
ನನ್ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಅವ್ನು
ಬಕ್ತನ್ ಮೇಲ್ ಅವನ್ ಕಣ್ಣು.

‘ಯೆಂಡಾ ಕುಡಿಯಾದ್ ಬುಟ್ಬುಡ್ ರತ್ನಾ’
ಅಂತ ಅವನೇನಾರಂದ್ರೆ
ಮೂಗ್ ಮೂರ್ ಚೂರಾಗ್ ಮುರಸ್ಕೊಂತೀನಿ
ದೇವರ ಮಾತ್ಗಡ್ ಬಂದ್ರೆ!

‘ಯೆಂಡಾ ಬುಟ್ಟೆ, ಎಡ್ತೀನ್ ಬುಟ್ ಬುಡ್’
ಅಂತವನೇನಾರಂದ್ರೆ
ಕಳೆದೊಯ್ತಂತಾ ಕುಣದಾಡ್ತೀನಿ
ದೊಡ್ ಒಂದ್ ಕಾಟಾ ತೊಂದ್ರೆ!

‘ಕನ್ನಡ ಪದಗೋಳ್ನ್ ಆಡೋದ್ನೆಲ್ಲಾ
ನಿಲ್ಲಿಸ್ ಬುಡ್ಬೇಕ ರತ್ನಾ’
ಅಂತವನಂದ್ರೆ ದೇವ್ರಾದ್ರೇನು
ಮಾಡ್ತೇನ್ ಅವಂಗೆ ಖತ್ನಾ

ಆಗ್ನೆ ಮಾಡೋ ಅಯ್ಗೋಳೆಲ್ಲಾ
ದೇವ್ರೆ ಆಗ್ಲಿ ಎಲ್ಲಾ
ಕನ್ನಡ ಸುದ್ದಿಗ್ ಏನಾರ್ ಬಂದ್ರೆ
ಮಾನಾ ಉಳಿಸಾಕಿಲ್ಲ

ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೂ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ ನೀ ಕಾಣೆ!

ಯೆಂಡಾ ಓಗ್ಲಿ, ಯೆಡ್ತಿ ಓಗ್ಲಿ
ಎಲ್ಲಾ ಕೊಚ್ಕೊಂಡ್ ಓಗ್ಲಿ
ಪರ್ಪಂಚ್ ಇರೋ ತನಕಾ ಮುಂದೆ
ಕನ್ನಡ ಪದಗೋಳ್ ನುಗ್ಲಿ!

ಶಿಷ್ಟಮಾರ್ಗದಲ್ಲಿಯೇ ಆಗಲಿ, ದೇಸಿ ರೂಪದಲ್ಲಿಯೇ ಆಗಲಿ, ಜನಪದ ಹಾಡುಗಬ್ಬವೇ ಆಗಲಿ, ಅಥವಾ ಆಧುನಿಕ ಕಾವ್ಯವೇ ಆಗಲಿ ಕನ್ನಡವು ‘ಕವಿಗಳು ಬಳಸುವ ಭಾಷೆ’ಯಾಗಿ ತನ್ನ ಚೆಲವನ್ನು ಮೆರೆದಿದೆ.

Saturday, August 22, 2009

ಬೇಂದ್ರೆಯವರ ‘ಬೆಳಗು’--ಇದು ಬರಿ ಹಾಡಲ್ಲೋ ಅಣ್ಣಾ!

ಬೇಂದ್ರೆಯವರ ಕವನಗಳನ್ನು ಪ್ರತಿ ಸಲ ಓದಿದಾಗಲೂ ಹೊಸ ಅರ್ಥ ‘ಹೊಳೆ’ಯುತ್ತಿರುತ್ತದೆ ಅವರ ಕವನಗಳನ್ನು ಈ ಹೊತ್ತು ನಾವು ಪೂರ್ಣವಾಗಿ ಅರಿತುಕೊಂಡಿದ್ದೇವೆ ಎಂದು ಹೇಳುವದು ಸಾಧ್ಯವಲ್ಲದ ಮಾತು. ಅವರ ಕವನಗಳಲ್ಲಿ ಅರ್ಥವಲ್ಲದೇ ಪರಮಾರ್ಥವೂ ಇರುತ್ತದೆ. ಉದಾಹರಣೆಗೆ ಅವರ ‘ಬೆಳಗು’ ಕವನವನ್ನೇ ತೆಗೆದುಕೊಳ್ಳಿರಿ. ಈ ಕವನದ ಕೊನೆಯ ನುಡಿಯ ಬಗೆಗೆ ಶ್ರೀ ವ್ಯಾಸ ದೇಶಪಾಂಡೆಯವರು ಇದೀಗ ಹೆಚ್ಚಿನ ವಿವರಣೆಯನ್ನು ಈ ರೀತಿಯಾಗಿ ಕೊಟ್ಟಿದ್ದಾರೆ.

ಕವನದ ಕೊನೆಯ ನುಡಿ ಹೀಗಿದೆ:
“ ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ—ಕಾಣsದೋ ಬಣ್ಣಾ
ಶಾಂತೀರಸವೇ ಪ್ರೀತೀಯಿಂದಾ
ಮೈದೋರಿತಣ್ಣಾ
ಇದು ಬರಿ—ಬೆಳಗಲ್ಲೋ ಅಣ್ಣಾ”

ಕವನದ ಮೊದಲಿನ ಐದು ನುಡಿಗಳಲ್ಲಿ ಬೇಂದ್ರೆಯವರು ತಮ್ಮ ಪಂಚೇಂದ್ರಿಯಗಳಿಗಾದ ವಿಸ್ಮಯಭರಿತ ಅನುಭವವನ್ನು ವರ್ಣಿಸಿದ್ದಾರೆ. ಪಂಚೇಂದ್ರಿಯಗಳ ಆ ಅನುಭವವು ಮನಸ್ಸನ್ನು ಹೇಗೆ ‘ವಿಶ್ವಾತ್ಮ’ನಲ್ಲಿ ತನ್ಮಯಗೊಳಿಸಿತು ಎನ್ನುವದನ್ನೂ ಹೇಳಿದ್ದಾರೆ. (‘ದೇವರದೀ—ಮನಸಿನ ಗೇಹಾ’).

ಈ ಕೊನೆಯ ನುಡಿಯಲ್ಲಿ ಅವರು “ಅರಿಯದು ಅಳವು ತಿಳಿಯದು ಮನವು” ಎಂದು ಹೇಳುತ್ತಾರೆ. “ಅಳವು” ಅಂದರೆ ಸಾಮರ್ಥ್ಯ. ಬೇಂದ್ರೆಯವರು ‘ಬೆಳಗಿ’ ನ ಪೂರ್ಣ ಅನುಭವವು ತಮ್ಮ ಪಂಚೇಂದ್ರಿಯಗಳ ಅಳವಿಗೆ ಹೊರತಾದದ್ದು ಎಂದು ಹೇಳುತ್ತಿದ್ದಾರೆ. ಇದು ಮನುಷ್ಯನ ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಮೀರಿದ್ದು. ಆದುದರಿಂದಲೇ ‘ತಿಳಿಯದು ಮನವು’. ತನ್ನ ಪಂಚೇಂದ್ರಿಯಗಳ ಸಂವೇದನೆಯಿಂದಲೇ ಲೋಕವನ್ನು ತಿಳಿಯುವ ಮನಸ್ಸಿಗೆ ‘ಬೆಳಗಿ’ನ ಪೂರ್ಣ ಅನುಭವವನ್ನು ತಿಳಿಯಲು ಸಾಧ್ಯವಾಗುವದಿಲ್ಲ. ಈ ಅನುಭವದ ಬಣ್ಣ ಹೊರಗಣ್ಣಿಗಾಗಲೀ ಒಳಗಣ್ಣಿಗಾಗಲೀ ಕಾಣದು. ಉದಾಹರಣೆಗೆ ಹೊರಗಣ್ಣಿಗೆ ಕಾಣುವದು ಕೇವಲ ಏಳೇ ಬಣ್ಣಗಳು. ಈ ಬಣ್ಣಗಳ ತರಂಗಾಂತರದ ಹೊರಗಿನ ಬಣ್ಣಗಳನ್ನು ನಮ್ಮ ಹೊರಗಣ್ಣು ಗ್ರಹಿಸಲಾರದು. ಆ ಕಾರಣದಿಂದ ನಮ್ಮ ಮನಸ್ಸೂ ಸಹ ಅದನ್ನು ಗ್ರಹಿಸಲಾರದು. ಅದರಂತೆ ಈ ಅನುಭವವೂ ಸಹ ಪಂಚೇಂದ್ರಿಯಗಳ ಹೊರಗಿನ ‘ಅಲೌಕಿಕ’ ಅನುಭವ.

ಉಪನಿಷತ್ತಿನಲ್ಲಿ ಭಗವಂತನನ್ನು ‘ಅತ್ಯತ್ತಿಷ್ಠದ್ದಶಾಂಗುಲಮ್’ ಎಂದು ವರ್ಣಿಸಲಾಗಿದೆ. ಭಗವಂತನು ತನ್ನ ಸೃಷ್ಟಿಯ ಒಳಗಲ್ಲದೆ, ಹೊರಗೂ ಸಹ ಹತ್ತು ಅಂಗುಲದವರೆಗೆ ವ್ಯಾಪಿಸಿದ್ದಾನೆ. ಅದರಂತೆ ಈ ಅನುಭವವೂ ಸಹ ಮನುಷ್ಯನ ಸಂವೇದನೆಯ ಅಳವಿನ ಹೊರಗೂ ವ್ಯಾಪಿಸಿದೆ. ಈ ಅಲೌಕಿಕ ವಿಸ್ಮಯವನ್ನು ಬಣ್ಣಿಸಲೇ ಬೇಕಾದರೆ, “ಶಾಂತೀರಸವೇ ಪ್ರೀತೀಯಿಂದಾ ಮೈದೋರಿತಣ್ಣಾ” ಎಂದಷ್ಟೇ ಹೇಳಬಹುದು.

ಭಗವಂತನು ಶಾಂತಿರಸದ ಅನಂತಸಮುದ್ರವಿದ್ದಂತೆ. ಅವನಲ್ಲಿ ಇರುವ ಪ್ರೀತಿಯೇ ಸೃಷ್ಟಿಯ ರೂಪವಾಗಿ ಮೈದೋರುತ್ತದೆ. ಈ ಮಾಂತ್ರಿಕನ ಪ್ರೀತಿಯ ಜಾದೂದಿಂದಲೇ ಸೃಷ್ಟಿಯ ರೂಪಗಳು ವ್ಯಕ್ತವಾಗುತ್ತವೆ. ಆದುದರಿಂದ ಈ ಬೆಳಗೆನ್ನುವದು ಭಗವಚ್ಚೈತನ್ಯದ ರೂಪ. ಹೀಗಾಗಿ ‘ಇದು ಬರಿ ಬೆಳಗಲ್ಲೊ ಅಣ್ಣಾ!’ ಎಂದು ಬೇಂದ್ರೆಯವರು ಹಾಡುತ್ತಾರೆ.
ಅದೇ ರೀತಿಯಾಗಿ ಬೇಂದ್ರೆಯವರ ಕವನದ ಬಗೆಗೆ ನಾವೂ ಹೇಳಬಹುದಲ್ಲವೆ :
“ಇದು ಬರಿ ಹಾಡಲ್ಲೋ ಅಣ್ಣಾ!”

(ಶ್ರೀ ವ್ಯಾಸ ದೇಶಪಾಂಡೆಯವರಿಗೆ ಕೃತಜ್ಞತೆಗಳು.)

Monday, August 17, 2009

ಕಾವ್ಯದಲ್ಲಿ ವಿಸ್ಮಯರಸ

ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸುವದೇ ವಿಸ್ಮಯರಸದ ಪ್ರಯೋಜನವೆನ್ನಬಹುದು. ಭಾರತೀಯ ಕಾವ್ಯದಲ್ಲಿ ವಿಸ್ಮಯರಸದ ಉಗಮವನ್ನು ಹುಡುಕಿದರೆ, ಅದು ನಮ್ಮ ಪ್ರಪ್ರಥಮ ಮಹಾಕಾವ್ಯದಲ್ಲಿಯೇ ದೊರೆಯುತ್ತದೆ. ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಹನುಮಂತನು ಸಮುದ್ರಲಂಘನೆ ಮಾಡುವದು ಹಾಗು ಲಂಕೆಯಲ್ಲಿ ಅವನು ಮಾಡುವ ಸಾಹಸಗಳು ವಿಸ್ಮಯರಸದ ಉಜ್ವಲ ನಿದರ್ಶನಗಳಾಗಿವೆ.

ನಡುಗನ್ನಡ ಕನ್ನಡಸಾಹಿತ್ಯವನ್ನು ಅವಲೋಕಿಸಿದಾಗ, ಶರಣರ ವಚನಗಳಲ್ಲಿ ವಿಸ್ಮಯರಸದ ಅನೇಕ ನಿದರ್ಶನಗಳು ದೊರೆಯುತ್ತವೆ.
ಬಸವಣ್ಣನವರ ಈ ವಚನವನ್ನೇ ಉದಾಹರಣೆಗೆ ತೆಗೆದುಕೊಳ್ಳಿರಿ:
“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಲದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲ ಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”
ಭಗವಂತನ ಮಹತಿಗೆ ಬೆರಗಾದ ಭಕ್ತನ ಉದ್ಗಾರವನ್ನು ನಾವು ಈ ವಚನದಲ್ಲಿ ಕಾಣುತ್ತೇವೆ.

ಈ ವಿಸ್ಮಯರಸದ ಬಗೆಗೆ ಇತ್ತೀಚೆಗೆ ಕನ್ನಡದ ಖ್ಯಾತ ನಾಟಕಕಾರ ವ್ಯಾಸ ದೇಶಪಾಂಡೆಯವರ ಜೊತೆಗೆ ಚರ್ಚೆ ನಡೆದಾಗ, ಅವರು ಸರ್ವಜ್ಞನ ವಚನವೊಂದರ ವಿವರಣೆಯನ್ನು ನೀಡಿದರು.
ಆ ವಚನ ಹಾಗು ಅವರ ವಿವರಣೆ ಹೀಗಿದೆ:
“ ಎಲುವಿಲ್ಲ ನಾಲಗೆಗೆ, ಬಲವಿಲ್ಲ ಬಡವಂಗೆ
ತೊಲೆ ಕಂಬವಿಲ್ಲ ಗಗನಕ್ಕೆ, ದೇವರಲಿ
ಕುಲ ಗೋತ್ರವಿಲ್ಲ ಸರ್ವಜ್ಞ”

ನಾಲಿಗೆಗೆ ಎಲುವಿಲ್ಲ ಎನ್ನುವದು ಎಲ್ಲರ ಅನುಭವಕ್ಕೂ ಬರುವ ಭೌತಿಕ ಸತ್ಯ. ಅದರಂತೆ ಬಡವನಿಗೆ ಬಲವಿಲ್ಲ ಎನ್ನುವದು ಒಂದು ಲೌಕಿಕ ಸತ್ಯ. ಮೊದಲಿಗೆ ಈ ಎರಡು ಅನುಭವವೇದ್ಯ ಸತ್ಯಗಳನ್ನು ಹೇಳುವ ಸರ್ವಜ್ಞ, ಆ ಬಳಿಕ ’ತೊಲೆ ಕಂಬವಿಲ್ಲ ಗಗನಕ್ಕೆ’ ಎಂದು ಹೇಳುವ ಮೂಲಕ ಒಂದು meta physical ಸತ್ಯವನ್ನು ಹೇಳುತ್ತಾನೆ. ಆ ಬಳಿಕ ‘ಕುಲ ಗೋತ್ರವಿಲ್ಲ ದೇವರಲಿ’ ಎನ್ನುವ ‘ಅ--ಲೌಕಿಕ’ ಸತ್ಯವನ್ನು ಉಸುರುವ ಮೂಲಕ ಕೇಳುಗರನ್ನು ಪ್ರಭಾವಿತರನ್ನಾಗಿ ಮಾಡುತ್ತಾನೆ. ಇದು ವಿಸ್ಮಯರಸದ ಪ್ರಯೋಜನ.

ಕನಕದಾಸರ ಕೀರ್ತನೆಯಲ್ಲಿಯೂ ಸಹ ಇದೇ ರೀತಿಯ ವಿಸ್ಮಯರಚನೆ ಇದೆ:
“ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳೊ ದೇಹವೊ ಹರಿಯೆ”
ದೇಹವನ್ನು ಸೃಷ್ಟಿಸಿದವನು ಭಗವಂತ. ಆದುದರಿಂದ ಭಗವಂತನಲ್ಲಿ ದೇಹವಿದೆ. ಆದರೆ ಅದೇ ದೇಹದಲ್ಲಿ ಭಗವಂತನೂ ಇದ್ದಾನೆ. ಕನಕದಾಸರು ಭಗವಂತನ ಮಹತಿಯನ್ನು ಅನುಭವಿಸಲು, ಅನುಭವಿಸಿದ್ದನ್ನು ಸಾರಲು ಈ ರೀತಿಯಾಗಿ ವಿಸ್ಮಯವನ್ನು ಪ್ರದರ್ಶಿಸುತ್ತಾರೆ.

ಇದೇ ರೀತಿಯಲ್ಲಿ ಪುರಂದರದಾಸರ ಕೆಲವು ಕೀರ್ತನೆಗಳಲ್ಲಿಯೂ ವಿಸ್ಮಯಭಾವನೆಯು ಕಾಣಸಿಗುತ್ತದೆ.
ಉದಾಹರಣೆಗೆ ಅವರ ಈ ಕೀರ್ತನೆಯನ್ನು ನೋಡಿರಿ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು ||ಪಲ್ಲ||
ತೀಡಿದ ಮಾರುತ ಮಂದಗತಿಗೈಯೆ ಬಾಡಿದ ಅರಲು ಫಲಗೊಂಚಲು ಬಿಡೆ
ಪಾಡಲೊಲ್ಲವಳಿಕುಲಗಳು ಬಾಡಿದ ಮಾಮರ ಚಿಗುರೊಡೆಯೆ
................................."
ಕೃಷ್ಣನು ಕೊಳಲು ಊದಿದೊಡನೆ, ಪ್ರಕೃತಿಯು ಹೇಗೆ ಪರವಶವಾಯಿತು ಎನ್ನುವದನ್ನು ಪುರಂದರದಾಸರು ಇಲ್ಲಿ ತೋರಿಸಿದ್ದಾರೆ.
ದೈವೀ ಚೈತನ್ಯದಿಂದ ಜರಗುವ ವಿಸ್ಮಯಸಾಧನೆಯ ವರ್ಣನೆ ಇಲ್ಲಿದೆ.

ಕನ್ನಡದ ನವೋದಯ ಕಾವ್ಯದಲ್ಲಂತೂ ವಿಸ್ಮಯರಸವು ಹೇರಳವಾಗಿ ಸಿಗುತ್ತದೆ. ಜಿ.ಪಿ.ರಾಜರತ್ನಮ್ ಅವರ ಸೃಷ್ಟಿಯಾದ ಯೆಂಡ್ಕುಡುಕ ರತ್ನನ ಈ ಉದ್ಗಾರವನ್ನು ನೋಡಿರಿ:
“ಎಲೆಲೆ ರಸ್ತೆ,
ಏನು ಅವ್ಯವಸ್ಥೆ!”
ಇಲ್ಲಿ ಅವ್ಯವಸ್ಥೆಯಾಗಿರುವದು ಯೆಂಡ್ಕುಡುಕನ ಬುದ್ಧಿ.
ತೋಲಾಡುತ್ತಿರುವ ಅವನಿಗೆ ರಸ್ತೆಯೇ ಅಡ್ಡಾದಿಡ್ಡಿಯಾಗಿ ಕಾಣುತ್ತದೆ.

ಕೆ.ಎಸ್. ನರಸಿಂಹಸ್ವಾಮಿಯವರ ದಾಂಪತ್ಯಗೀತೆಗಳಲ್ಲೂ ಸಹ ವಿಸ್ಮಯರಸದ ಸುರಸ ಸೃಷ್ಟಿಯಾಗಿದೆ.
ಪತಿಪತ್ನಿಯರ ಪರಸ್ಪರ ಒಲವು ನರಸಿಂಹಸ್ವಾಮಿಯವರಿಗೆ ಯಾವಾಗಲೂ ಕಾವ್ಯಸ್ಫೂರ್ತಿಯನ್ನು ಒದಗಿಸಿದೆ.
“ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ,
ನನಗದುವೆ ಕೋಟಿ ರೂಪಾಯಿ”
ಎನ್ನುವ ಸಾಲುಗಳು ಕೊನೆಯ ಪಕ್ಷ ಹೆಂಗಸರಲ್ಲಾದರೂ ವಿಸ್ಮಯ ಹುಟ್ಟಿಸಲಾರವೆ?

ನರಸಿಂಹಸ್ವಾಮಿಯವರ ಮತ್ತೊಂದು ಕವನವನ್ನು ನೋಡಿರಿ:
“ಇವಳು ಯಾರು ಬಲ್ಲೆ ಏನು?
ಇವಳ ದನಿಗೆ ತಿರುಗಲೇನು?
ಇವಳ ಹೆಸರ ಹೇಳಲೇನು?
ಇವಳು ಏತಕೊ, ಎನ್ನ ಬಳಿಗೆ ಸುಳಿದಳು!”
ಈ ಕವನದಲ್ಲಿಯ “ಇವಳು” ಬೇರೆ ಯಾರೂ ಅಲ್ಲ. ಇವಳು ನರಸಿಂಹಸ್ವಾಮಿಯವರ ಹೆಂಡತಿಯೇ.
ಇಲ್ಲಿ ಕವಿಗೆ ವಿಸ್ಮಯವನ್ನು ಹುಟ್ಟಿಸುತ್ತಿರುವದು ಗಂಡಹೆಂಡಿರ ನಡುವಿನ ಒಲವಿನ ಶಕ್ತಿ.
“ಅಂತಿಂಥ ಹೆಣ್ಣು ನೀನಲ್ಲ,
ನಿನ್ನಂಥ ಹೆಣ್ಣು ಇನ್ನಿಲ್ಲ”,
ಎನ್ನುವಾಗಲೂ ಕವಿಯಲ್ಲಿ ಇರುವದು ಬೆರಗಿನ ಭಾವನೆಯೇ.

ಬೇಂದ್ರೆಯವರ ಅನೇಕ ಕವನಗಳನ್ನು ಮನೋಜ್ಞವಾಗಿಸುವ ವಿಶಿಷ್ಟ ಗುಣವೆಂದರೆ ಆ ಕವನಗಳಲ್ಲಿರುವ ವಿಸ್ಮಯಭಾವ.ಬೇಂದ್ರೆಯವರ ಅತ್ಯಂತ ಸರಳ ಕವನದ ಉದಾಹರಣೆಯನ್ನೇ ತೆಗೆದುಕೊಳ್ಳಿರಿ:
‘ಪಾತರಗಿತ್ತಿ ಪಕ್ಕಾ
ನೋಡೀದೇನ ಅಕ್ಕಾ!’
ಈ ಮೊದಲೆರಡು ಸಾಲುಗಳೇ ಕವಿ ಅನುಭವಿಸುತ್ತಿರುವ ಬೆರಗನ್ನು ಓದುಗನಿಗೆ ಹೃದಯಾಂತರಿಸುತ್ತವೆ.
ಕವನದಲ್ಲಿ ಮುಂದುವರೆದಂತೆ ಬೆರಗು ಹುಟ್ಟಿಸುವ ಸಾಲುಗಳಿಗೆ ಏನೂ ಕೊರತೆಯಿಲ್ಲ.
“ ಗಾಳೀ ಕೇನೀಲೇನs
ಮಾಡಿದ್ದಾರ ತಾನ!
ನೂರು ಆರು ಪಾರು
ಯಾರು ಮಾಡಿದ್ದಾರು!”
ಇಂತಹ ಸಾಲುಗಳು ಬೆರಗನ್ನು ಹೆಚ್ಚಿಸುತ್ತಲೇ ಹೋಗುತ್ತವೆ.

ವಿಸ್ಮಯಭಾವವು ಬೇಂದ್ರೆಯವರ ನಿಸರ್ಗಕವನಗಳಿಗೆ ಮಾತ್ರ ಸೀಮಿತವಾಗಿಲ್ಲ.
ಮಕ್ಕಳಾಟವು ಬೇಂದ್ರೆಯವರಲ್ಲಿ ಸಹಜವಾಗಿಯೇ ವಿಸ್ಮಯವನ್ನು ಹುಟ್ಟಿಸುತ್ತಿತ್ತು.
ಆ ಬೆರಗನ್ನು ಅವರು ಸಹೃದಯರೊಡನೆ ಹಂಚಿಕೊಳ್ಳುತ್ತಿದ್ದರು.
“ ಯಾರವ್ವಾ ಇವ ಚೆಲುವಾ
ತನ್ನಷ್ಟಕ್ಕs
ತಾನs ನೋಡಿ ನಲಿವಾ!”
ಎಂದು ಬೇಂದ್ರೆ ನಲಿದಾಡುವ ಶಿಶುವನ್ನು ಕಂಡು ಬೆರಗುಬಡುತ್ತಿದ್ದರು.

ಬೇಂದ್ರೆಯವರ ಪುಟ್ಟ ಮಗಳು ಮಂಗಲಾ ನೀರು ತರಲು ಹೋದಾಗ, ಬೇಲಿಯ ಬದಿಗೆ ಬೆಳೆದಿದ್ದ ಹೂವಿನ ಬಳ್ಳಿಗಳು ಅಚ್ಚರಿಪಟ್ಟವಂತೆ.
ಅವು ಬೆರಗುಗೊಂಡು ತಮ್ಮತಮ್ಮಲ್ಲಿಯೆ ಮಾತನಾಡುವದನ್ನು ಕೇಳಿರಿ :
“ಗುಲಬಾಕ್ಷಿ-ಮಲ್ಲಿಗೆ | ಕೇಳತಾವ ಕಲ್ಲಿಗೆ |
ಕಳಿಸೋದೆ ನೀರಿಗೆ | ಇಂಥ ಸುಕುಮಾರಿಗೆ ||”

ಗೊಂಬೆಯಾಟವಾಡಿ ದಣಿದು ಮಲಗಿಕೊಂಡ ಮಗಳನ್ನು ಕಂಡಾಗ ಬೇಂದ್ರೆಯವರು ವಿಸ್ಮಯಪಡುತ್ತಿದ್ದದ್ದು ಹೀಗೆ:
“ಆಟದ ಗೊಂಬಿ, ನಿಜವೆಂದು ನಂಬಿ
ಮಗ್ಗಲಲಿ ಮಲಗಿಸಿಕೊಂಡ ದಿನವೇಸೊ!”

ವೈರುಧ್ಯಗುಣಗಳುಳ್ಳ ವಸ್ತುಗಳನ್ನು ಒಂದೇ ಕಡೆಯಲ್ಲಿ ಪೋಣಿಸುವದರ ಮೂಲಕ ವಿಸ್ಮಯವನ್ನು ಸೃಷ್ಟಿಸುವದು ವರಕವಿಗಳ ಅಪೂರ್ವ ಸಿದ್ಧಿಗಳಲ್ಲೊಂದು. ಉದಾಹರಣೆಗೆ ಅವರ ‘ಬಾರೊ ಸಾಧನಕೇರಿಗೆ’ ಕವನದಲ್ಲಿ ‘ ಬೇಲಿಗೂ ಹೂ ಬೆರಳಿದೆ ’ ಎನ್ನುವ ಸಾಲು ಬರುತ್ತದೆ.

ಬೇಲಿಯ ಕೆಲಸವೇನು? Job of fence is defense. ಆದುದರಿಂದ ಬೇಲಿಗೆ ಇರಬೇಕಾದದ್ದು ಮುಳ್ಳು. ಆದರೆ ಇಲ್ಲಿ ಬೇಲಿಗೆ ಇದ್ದದ್ದು ‘ ಹೂ ಬೆರಳು ’. ಅಂದರೆ ಇಲ್ಲಿ ಬೇಲಿಯು ನಮ್ಮನ್ನು ಸ್ವಾಗತಿಸುತ್ತಿದೆಯೇ ಹೊರತು ಹೊರಗಿಡುತ್ತಿಲ್ಲ. ಇದು ಬೆರಗನ್ನು ಹುಟ್ಟಿಸುವ ಬೇಂದ್ರೆ ಪರಿ.

ಬೇಂದ್ರೆಯವರ ‘ಬೆಳುದಿಂಗಳ ನೋಡs ’ ಕವನವು ವಿಸ್ಮಯಸೃಷ್ಟಿಯ ಅದ್ಭುತ ಕವನ. ಆ ಕವನದ ಕೆಲವು ಸಾಲುಗಳು ಹೀಗಿವೆ:
“ಮರ ಮರದ ಗೊನೀಗೆ ಕೂತು
ಹಾರಿ ಮೈ ಸೋತು
ತೆಪ್ಪಗs ಗಾsಳಿs
ತೆಪ್ಪಗs ಗಾಳಿ||
ತೂಕಡಸತsದ ತಾನೀಗ
ಜಂಪು ಬಂಧಾಂಗ
ಜಂಪು ಬಂಧಾಂsಗs
ಇದು ಅದರ ತುಪ್ಪಳದ ಗೂsಡs
ಬೆಳುದಿಂಗಳ ನೋಡs ||”

ಈ ಕವನದಲ್ಲಿ ಗಾಳಿಯು ಬೆಳದಿಂಗಳಿನಲ್ಲಿ ಸಮರಸವಾದಂತಹ ಒಂದು ಸಜೀವವಾದ ವಸ್ತುವಾಗುತ್ತದೆ. ಬೆಳದಿಂಗಳು ಈ ಗಾಳಿಯ ತುಪ್ಪಳದ ಗೂಡಾಗುತ್ತದೆ. ನಿರ್ಜೀವ ವಸ್ತುಗಳನ್ನು ಸಜೀವವಾಗಿಸುವ ಮೂಲಕ ಬೇಂದ್ರೆಯವರು ವಿಸ್ಮಯದ ಪರಾಕಾಷ್ಠೆಯನ್ನು ತಲಪುತ್ತಾರೆ.

ವಿಸ್ಮಯಭಾವವನ್ನು ಕವನದಲ್ಲಿ ಹಾಸುಹೊಕ್ಕಾಗಿ ನೇಯ್ದಂತಹ ಅವರ ಉತ್ಕೃಷ್ಟ ಕವನವೆಂದರೆ ‘ಬೆಳಗು’.
ಈ ಕವನದ ಮೊದಲ ಎರಡು ನುಡಿಗಳಲ್ಲಿ ಸೂರ್ಯೋದಯವಾಗುತ್ತಿರುವ ವರ್ಣನೆ ಇದೆ. ಮುಂದಿನ ಮೂರು ನುಡಿಗಳಲ್ಲಿ ಸೂರ್ಯೋದಯದ ಸಮಯದಲ್ಲಿಯ ನಿಸರ್ಗದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಕವಿಯ ಮನಸ್ಸಿನ ಮೇಲಾದ ಪರಿಣಾಮದ ವರ್ಣನೆ ಇದೆ.

ಈ ಕವನದ ಮೊದಲ ಎರಡು ನುಡಿಗಳನ್ನು ನೋಡಿರಿ:
==೧==
ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲು ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ

==೨==
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ನಿದ್ರಿಸುತ್ತಿರುವ ಜಗವು ತನ್ನ ಬಾಗಿಲನ್ನು ತೆರೆದಾಗ, ಬೆಳಕು ಹರಿದು ಬಂದು ಇಡಿ ಜಗತ್ತೇ ಆ ಬೆಳಕಿನಿಂದ ತೊಯ್ದು ಹೋಯಿತು ಎಂದು ಬೇಂದ್ರೆ ಹೇಳುತ್ತಾರೆ. ಬೇಂದ್ರೆಯವರು ತಾನು ಅನುಭವಿಸಿದ ಅಚ್ಚರಿಯನ್ನು ಓದುಗರಿಗೂ ಈ ರೀತಿಯಲ್ಲಿ ನೀಡುತ್ತಿದ್ದಾರೆ.

ಮೊದಲ ನುಡಿಯಲ್ಲಿ ಬೆಳಕು ಮುತ್ತಿನ ನೀರಿನಂತೆ ಸೌಮ್ಯವಾಗಿದ್ದರೆ, ಎರಡನೆಯ ನುಡಿಯಲ್ಲಿ ಅದು ರತ್ನದ ರಸದಂತೆ ಪ್ರಖರವಾಗಿದೆ. ಬೇಂದ್ರೆಯವರು ವಾಸ್ತವತೆಗೆ ಬದ್ಧರಾಗಿರುತ್ತಾರೆ ಎನ್ನುವದಕ್ಕೆ ಇದೊಂದು ನಿದರ್ಶನ.
ಈ ಬೆಳಕು ಹರಡುವ ಕ್ರಮವನ್ನು ಬೇಂದ್ರೆ “ಮುಗಿದ ಮೊಗ್ಗಿ ಪಟಪಟನೆ ಒಡೆದು” ಎಂದು ಬಣ್ಣಿಸುತ್ತಾರೆ.
ಅಂದರೆ ಬೆಳಕು ಕ್ಷಣಕ್ಷಣಕ್ಕೆ ಹೆಚ್ಚುತ್ತಿರುವದರ ವರ್ಣನೆ ಇದು. ವಿಶ್ವನಿಯಾಮಕ ಭಗವಂತನಿಗೆ ಕೈಮುಗಿದು ಹುಟ್ಟುತ್ತಿರುವ ಸೂರ್ಯನು “ಮುಗಿದ ಮೊಗ್ಗಿ” ಇದ್ದಂತೆ. ಹೂವು ತನ್ನ ಪಕಳೆಗಳನ್ನು ಬಿಚ್ಚುವಂತೆ (unfolding in quick succession) ಆತನು ಪಟಪಟನೆ ಒಡೆದು ಬೆಳಕನ್ನು ನೀಡುತ್ತಾನೆ. ಅದ್ಭುತವಾದ ಕ್ರಿಯೆಯನ್ನು ಅದ್ಭುತವಾಗಿ ವರ್ಣಿಸುವ ಈ ಸಾಲುಗಳು ಓದುಗನಲ್ಲಿ ಬೆರಗನ್ನು ಹುಟ್ಟಿಸುತ್ತವೆ.

[ಟಿಪ್ಪಣಿ: ಶ್ರೀ ಪ್ರಭುಶಂಕರ ಅವರು ಕನ್ನಡದ ಖ್ಯಾತ ವಿಮರ್ಶಕರು. ಯಾಕೋ ಏನೊ ಅವರಿಗೆ “ಪಟಪಟನೆ ಒಡೆದು” ಎನ್ನುವ ಸಾಲುಗಳು ಅರ್ಥವಾಗಲಿಲ್ಲ. ಅವರು ತಮ್ಮ ಗುರುಗಳಾದ ಕುವೆಂಪು ಅವರ ಬಳಿಗೆ ಹೋಗಿ “ಬೇಂದ್ರೆಯವರು ‘ಪಟಪಟನೆ ಒಡೆದು’ ಎಂದು ಬರೆದಿದ್ದಾರಲ್ಲ ; ಸೂರ್ಯೋದಯದ ವೇಳೆಗೆ ಪಟಪಟ ಎನ್ನುವ ಶಬ್ದವಾಗುತ್ತದೆಯೆ?” ಎಂದು ಟೀಕಿಸಿದರು. ಅದಕ್ಕೆ ಕುವೆಂಪುರವರು “ದೊಡ್ಡ ಕವಿಗಳಿಗೆ ಹಾಗೆಲ್ಲ ಅನ್ನಬೇಡಿರಿ; ಅದರ ಅರ್ಥ ನಿಮಗೆ ಆಗುವದಿಲ್ಲ” ಎಂದು ಹೇಳಿ ಕಳಿಸಿದರು. ಪ್ರಭುಶಂಕರರು ಹಿರಿಯ ವಿಮರ್ಶಕರು. ಅಂಥವರಿಗೆ ‘ಪಟಪಟನೆ ಒಡೆದು= unfolding in quick succession’ ಎಂದು ಇಂಗ್ಲೀಶಿನಲ್ಲಿ ತಿಳಿಸಬೇಕಾದದ್ದು ಕನ್ನಡಿಗರ ದೌರ್ಭಾಗ್ಯ! ]

‘ಬೆಳಗು’ ಕವನದ ಮೂರನೆಯ ನುಡಿಯನ್ನು ನೋಡಿರಿ:
==೩==
“ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತsದ ಬಿಂದು
ಯಾರಿರಿಸಿರುವರು ಮುಗಿಲs ಮೇಲಿಂ-
ದಿಲ್ಲಿಗೇ ತಂದು
ಈಗ-ಇಲ್ಲಿಗೇ ತಂದು.”

ಎಲೆಗಳ ಮೇಲೆ ಹಾಗೂ ಹೂವುಗಳ ಒಳಗೆ ಕಾಣುವ ಇಬ್ಬನಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಹೋಗುವ ವಸ್ತುಗಳು. ಇವು ಕವಿಗೆ ಅಮೃತದ ಬಿಂದುಗಳಂತೆ ಅಂದರೆ ಶಾಶ್ವತವಾದ ವಸ್ತುಗಳಂತೆ ಕಾಣುವವು. ಇಂತಹ ವೈರುಧ್ಯವು ಕವಿಯಲ್ಲಿ ಪ್ರಕೃತಿಯಲ್ಲಿಯ ಬೆರಗನ್ನು ತೋರಿಸುತ್ತದೆ. ಇದು ದೃಶ್ಯದ ಅನುಭವ.
ಇದರ ಮುಂದಿನ ನುಡಿಯಲ್ಲಿ ಸ್ಪರ್ಶದ ಹಾಗೂ ಗಂಧದ ಅನುಭವವಿದೆ.

=೪=
ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.

ಮುಂಜಾವಿನ ತಂಗಾಳಿ ಬೀಸಿದಾಗ ಹೂವು ಅಲುಗಾಡುತ್ತವೆ. ಇದು ಕವಿಯ ಕಣ್ಣಿಗೆ ಚಾಮರವನ್ನು ಬೀಸಿದಂತೆ ಕಾಣುತ್ತದೆ.
ಹೂವು ಅಲುಗಾಡಿದಾಗ ಅಲ್ಲಿ ಕುಳಿತ ತುಂಬಿಗಳು ಹಾರಿ ಬಿಡುತ್ತವೆ.
ತುಂಬಿಗಳ ಮೈಗೆ ಗಂಧ ಸವರಿ ಹಾರಿಸಿಬಿಟ್ಟರು ಎಂದು ಬೇಂದ್ರೆಯವರು ಹೇಳುತ್ತಾರೆ.
ಹೀಗೆ ಹಾರಿಸಿಬಿಟ್ಟವರು ಯಾರು? ಅದು ನಿಸರ್ಗಚೈತನ್ಯ. ಆ ಚೈತನ್ಯವನ್ನು ಭಗವಂತ ಎಂದು ಕರೆಯಬಹುದು.
ಈ ರೀತಿಯಾಗಿ ನಿಸರ್ಗಚೈತನ್ಯದ ಬಗೆಗೆ ಬೆರಗಿನ ಭಾವವನ್ನು ಬೇಂದ್ರೆಯವರು ಓದುಗನಲ್ಲಿ ಹುಟ್ಟಿಸುತ್ತಾರೆ.
ಇದೇ ರೀತಿಯಲ್ಲಿ ಇದರ ಮುಂದಿನ ನುಡಿಯಲ್ಲಿ ಶ್ರವಣದ ಅನುಭವವಿದೆ:

==೫==
“ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು-ಹಕ್ಕೀಗಳ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು ”
ಹಕ್ಕಿಗಳ ಹಾಡು ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು ಎಂದು ಹೇಳುವ ಮೂಲಕ ಬೇಂದ್ರೆಯವರು ಚರಾಚರ ಪ್ರಕೃತಿಯು ಸಜೀವವಾಗಿ ಎದ್ದು ಬರುವದನ್ನು ಅನುಭವಿಸುತ್ತಾರೆ ಹಾಗು ಹಾಡುತ್ತಾರೆ.
ಈ ರೀತಿಯಲ್ಲಿ ಪಂಚೇಂದ್ರಿಯಗಳ ಅನುಭವವು ಕಾಡಿನ ನಾಡನ್ನು ಗಂಧರ್ವರ ನಾಡನ್ನಾಗಿ ಮಾರ್ಪಡಿಸುತ್ತದೆ. ಆದರೆ ಈ ಎಲ್ಲ ಅನುಭವಗಳನ್ನು ಅನುಭವಿಸಬೇಕಾದದ್ದು ಮನಸ್ಸೇ ತಾನೆ? ಅದು ಎಂತಹ ಮನಸ್ಸು? ದೇವರು ನೀಡಿದ ಮನಸ್ಸು. ಆ ಅನುಭವವು ಆರನೆಯ ನುಡಿಯಲ್ಲಿದೆ.

==೬==
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.

ಈ ರೀತಿಯಾಗಿ ಪಂಚೇಂದ್ರಿಯಗಳ ಮೂಲಕ ಪಡೆದ ಲೌಕಿಕ ಅನುಭವವು ‘ಅ--ಲೌಕಿಕ’ ಅನುಭವವಾಗಿ ಮಾರ್ಪಡುವ ವಿಸ್ಮಯಜನಕ ಕ್ರಿಯೆಯನ್ನು ಕವಿಯು ಅನುಭವಿಸುತ್ತಾನೆ ಹಾಗು ಸಹೃದಯ ಓದುಗರೊಡನೆ ಹಂಚಿಕೊಳ್ಳುತ್ತಾನೆ.
ಆ ‘ಅಲೌಕಿಕತೆ’ಯ ವರ್ಣನೆ ಮುಂದಿನ ನುಡಿಯಲ್ಲಿದೆ.

==೬==
ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ-ಕಾಣsದೋ ಬಣ್ಣಾ.
ಶಾಂತೀರಸವೇ ಪ್ರೀತೀಯಿಂದಾ
ಮೈದೋರಿತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.

ಈ ರೀತಿಯಾಗಿ ಪ್ರಕೃತಿಯಲ್ಲಿಯ ವಿಸ್ಮಯರಸವನ್ನು ತಾವು ಅನುಭವಿಸಿ, ತಮ್ಮ ಕವನದ ಮೂಲಕ ಸಹೃದಯ ಓದುಗನಲ್ಲಿ ರಸಾನುಭವ ಹುಟ್ಟಿಸುವದರ ಮೂಲಕ ಬೇಂದ್ರೆಯವರು ಕನ್ನಡ ಕಾವ್ಯಕ್ಕೆ ಅಪೂರ್ವ ಕಾಣಿಕೆಯನ್ನಿತ್ತಿದ್ದಾರೆಂದು ಹೇಳಬಹುದು.
ಕನ್ನಡ ಕವಿಗಳು ತಮ್ಮ ಕಾವ್ಯದಲ್ಲಿ ವಿಸ್ಮಯರಸವನ್ನು ಬಳಸಿಕೊಂಡು ಸಹೃದಯ ಓದುಗನ ಮನಸ್ಸನ್ನು ಪರವಶಗೊಳಿಸಿದ್ದಾರೆ ಹಾಗೂ ಕನ್ನಡ ಕಾವ್ಯಕ್ಕೆ ವೈಭವ ತಂದುಕೊಟ್ಟಿದ್ದಾರೆ ಎನ್ನಬಹುದು.

(ನನ್ನೊಡನೆ ಚರ್ಚಿಸಿ, ಈ ಲೇಖನಕ್ಕೆ ಕಾರಣರಾದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ಹಾಗು ಲೇಖನ ಸಿದ್ಧಪಡಿಸುವಾಗ ನೆರವು ನೀಡಿದ ನನ್ನ ನಿರಂತರ ವಿಮರ್ಶಕಿಯಾದ ನನ್ನ ಅರ್ಧಾಂಗಿನಿ ಶ್ರೀಮತಿ ವನಮಾಲಾ ಇವರಿಗೆ ಕೃತಜ್ಞನಾಗಿದ್ದೇನೆ.)